Categories
ವಚನಗಳು / Vachanagalu

ಮಾದಾರ ಧೂಳಯ್ಯನ ವಚನಗಳು

ಅಂಗ ಪ್ರಾಣ ಸಂಗವುಳ್ಳನ್ನಕ್ಕ,
ಲಿಂಗಪೂಜೆಯೆಂಬ ದಂದುಗ ಬಿಡದು.
ಈ ಹೊರಗು ಒಳಗಾಗಿಯಲ್ಲದೆ,
ಪ್ರಾಣಲಿಂಗಿಯೆಂಬ ಸಂಬಂಧಿಯಲ್ಲ.
ಲಿಂಗಕ್ಕೆ ಪ್ರಾಣ, ಪ್ರಾಣಕ್ಕೆ ಲಿಂಗ
ಉಭಯಸಂಬಂಧವಾದಲ್ಲಿ,
ಉರಿ ಕೊಂಡ ಕರ್ಪುರಕ್ಕೆ ತೊಡರುವುದಕ್ಕೆ ಠಾವಿಲ್ಲ,
ಕಾಮಧೂಮ ಧೂಳೇಶ್ವರಾ./1
ಅಂಗಕ್ಕೆ ಲಿಂಗ, ಮನಕ್ಕೆ ಅರಿವಾಗಬೇಕೆಂದು
ಸಂದೇಹಗೊಂಬುದು ಅರಿವೋ, ಆತ್ಮನೋ ?
ಅಂಗಕ್ಕೆ ಅರಿವೆಂಬುದೊಂದು ಜೀವ,
ಜೀವಕ್ಕೆ ಕೊಡುವುದೊಂದು ಬೆಳಗು.
ತನ್ನಲ್ಲಿ ತೋರುವ ಘಟಬಿಂಬದ ಛಾಯೆ
ಹಲವು ತೆರನಾದಂತೆ,
ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮವಾಗಿ
ಹೆಚ್ಚು ಕುಂದಿಲ್ಲದೆ ತೋರುವ ತೋರಿಕೆ,
ಘಟದ ಗುಣವೋ, ಬಿಂಬದ ಗುಣವೋ ?
ಎಂಬುದ ತಾನರಿತಲ್ಲಿ, ಉಭಯದ ಸೂತಕಕ್ಕೆ ಹೊರಗು.
ಹೊರಗೆಂಬ ಭಾವವ ಅರಿದಲ್ಲಿ,
ಕಾಮಧೂಮ ಧೂಳೇಶ್ವರನೆಲ್ಲಿಯೂ ತಾನೆ./2
ಅಂಗದಲ್ಲಿ ಲೀಯವಾಗಿ ತೋರುವುದೆಲ್ಲ
ರೂಪೋ, ವಿರೂಪೋ ? ಎಂಬುದ ತಾನರಿತಲ್ಲಿ,
ಅಂಗ ಅರಿಯಿತ್ತೋ, ಆತ್ಮ ಅರಿಯಿತ್ತೋ ?
ಇಂತೀ ಉಭಯದ ಸಂದಣಿಯಲ್ಲಿ ಗೊಂದಳಗೊಳಲಾರದೆ,
ಆರಾರೆಂದಂತೆ ಆರೈಕೆಯಲ್ಲಿದ್ದು ; ತಾನು ತಾನಾದವಂಗೆ
ಮತ್ತೇನೂ ಎನಲಿಲ್ಲ, ಕಾಮಧೂಮ ಧೂಳೇಶ್ವರಾ./3
ಅಂಗದಲ್ಲಿ ಸೋಂಕಿದ ಸೋಂಕ ಲಿಂಗವೆಂದು
ಪ್ರಮಾಣಿಸಿ ಕೊಟ್ಟೆಹೆನೆಂಬುದು,
ಆ ಅಂಗ ಲಿಂಗದಂಗವೋ ? ಲಿಂಗ ಅಂಗದಂಗವೋ ?
ಉಭಯದಂಗ ಬೇರೊಂದು ಆತ್ಮನ ಸಂಗವೋ ?
ಅದು ವಾರಿಯ ಶಿಲೆಯಂತೆ, ನೋಡನೋಡಲಿಕ್ಕೆ ನೀರಾಯಿತ್ತು.
ನೀರು ಕಲ್ಲಾದ ಭೇದ, ಕಲ್ಲು ನೀರಾದ ಭೇದ.
ಈ ಉಭಯದಲ್ಲಿಯೆ ದೃಷ್ಟ ನಿರ್ಲೆಪ,
ಕಾಮಧೂಮ ಧೂಳೇಶ್ವರಾ./4
ಅಂಗಲಿಂಗವೆಂಬನ್ನಕ್ಕರ ಕಾಯದ ಸೂತಕ.
ಪ್ರಾಣಲಿಂಗವೆಂಬನ್ನಕ್ಕರ ಅರಸುವುದೆ ಜನನಸೂತಕ.
ಮರೆವುದೆ ಮರಣಸೂತಕ.
ಸೂತಕವ ಹಿಂಗಿ ಅಜಾತನಾಗಬಲ್ಲಡೆ,
ಆತಂಗೆ ಏತರ ಬಂಧವೂ ಇಲ್ಲ, ಕಾಮಧೂಮ ಧೂಳೇಶ್ವರಾ./5
ಅಗ್ನಿಯ ದೃಷ್ಟಿಯಂತೆ, ವಾಯುವಿನ ಆತ್ಮನಂತೆ,
ಬೆಳಗಿನ ಕಳೆಯಂತೆ, ಕಳೆಯ ಕಾಂತಿಯಂತೆ,
ಕಾಂತಿಯ ಬೆಳಗಿನಂತೆ, ಆ ಬೆಳಗಿನ ಬಳುವಳಿಯ ಸುಳುಹಿನಲ್ಲಿ
ಒಳಗಾಯಿತ್ತು, ನಿಜಾತ್ಮನ ನಿರ್ಲೆಪಭಾವ,
ಕಾಮಧೂಮ ಧೂಳೇಶ್ವರಾ. /6
ಅಟ್ಟೆಯ ಚುಚ್ಚುವ ಉಳಿಯ ಮೊನೆಯಲ್ಲಿ,
ಪ್ರತ್ಯಕ್ಷವಾದ ಪರಮೇಶ್ವರನ ಕಂಡು,
ಇತ್ತಲೇಕಯ್ಯಾ, ಕಾಯದ ತಿತ್ತಿಯ ಹೊತ್ತಾಡುವನ ಮುಂದೆ ?
ನಿನ್ನ ಭಕ್ತರ ಠಾವಿನಲ್ಲಿಗೆ ಹೋಗಿ ಮುಕ್ತಿಯ ಮಾಡು.
ನೀ ಹೊತ್ತ ಬಹುರೂಪ[ದಿ] ತಪ್ಪದೆ
ರಜತಬೆಟ್ಟದ ಮೇಲಕ್ಕೆ ಹೋಗು,
ನಿನ್ನ ಭಕ್ತರ ಮುಕ್ತಿಯ ಮಾಡು.
ಕಾಮಧೂಮ ಧೂಳೇಶ್ವರನ ಕರುಣದಿಂದ ನೀನೆ ಬದುಕು./7
ಅಣುವಿಂಗಣು, ಮಹತ್ತಿಂಗೆ ಮಹತ್ತಪ್ಪ ಘನವನರಿತಲ್ಲಿ,
ಮಣಿಮಾಲೆಯ ತಿರುಹಿ ತೊಳಲಲೇತಕ್ಕೆ ?
ಅತ್ಯತಿಷ್ಠದ್ದಶಾಂಗುಲ ವಸ್ತುವಿಪ್ಪ ನೆಲೆಯನರಿತ ಮತ್ತೆ,
ಹತ್ತಿಹಿತ್ತು ಹಾವಸೆಯೆಂದು ಒರಸಲೇತಕ್ಕೆ ?
ಉತ್ತರಕಕ್ಷೆಯ ತಿಳಿದು, ಪೂರ್ವಕಕ್ಷೆಯನರಿತು,
ಹೆಚ್ಚುಕುಂದೆಂಬ ಭಾವ ಅಚ್ಚೊತ್ತಿದಂತೆ ನಿಂದ ಮತ್ತೆ,
ಕತರ್ೃ ಭೃತ್ಯತ್ವವೆಂಬ ಉಭಯದ ಸೂತಕ ಅಳಿದಲ್ಲಿಯೆ,
ಕಾಮಧೂಮ ಧೂಳೇಶ್ವರನೆಂದೆನಲಿಲ್ಲ./8
ಅಪ್ಪು ಉಳ್ಳನ್ನಕ್ಕ ತೊಪ್ಪೆ ಕಿಚ್ಚಿಗೊಳಗಪ್ಪುದೆ ?
ಅಪ್ಪುವಾರಿ, ಕಿಚ್ಚು ಮುಟ್ಟಿದ ಮತ್ತೆ
ತೊಪ್ಪೆಯೆಂಬ ನಾಮ ಎತ್ತಹೋಯಿತ್ತು ?
ಈ ಕಷ್ಟವ ಮುಟ್ಟಿದ್ದ ತನು, ದೃಷ್ಟವ ಕಂಡಿದ್ದ ಚಿತ್ತ,
ಈ ಉಭಯದ ಗೊತ್ತ ಕಂಡು,
ಈ ಗುಣ ಮುಕ್ತಿಯಹ ಭೇದವೆಂದು ಅರಿದ ಮತ್ತೆ,
ಕಟ್ಟಿ ಬಿಟ್ಟು ನೋಡಿ, ವಸ್ತುವ ಕಂಡೆಹೆನೆಂಬುದು
ಎತ್ತಣ ಶುದ್ಧಿ ಹೇಳಾ, ಕಾಮಧೂಮ ಧೂಳೇಶ್ವರಾ ?/9
ಅರಿದು ಕಂಡೆಹೆನೆಂಬನ್ನಬರ,
ಅರಿವಿಂಗೆ ಮುನ್ನವೆ ಪರಿಪೂರ್ಣವಸ್ತು.
ಬೇರೊಂದ ಕುರುಹಿನಿಂದ ಅರಿದೆಹೆನೆಂದಡೆ,
ಆ ಅರಿವಿನಿಂದ ಕುರುಹಿನ ಕುಲ ಹರಿಯಬೇಕು.
ಉತ್ತರ ಪೂರ್ವವೆಂಬ ಉಭಯದ ರಕ್ಷೆಯ ಸೂತಕ ಹರಿದು,
ನಿಶ್ಚಯವಾದ ಪರಿಪೂರ್ಣಂಗೆ ಹೆಚ್ಚು ಕುಂದೆಂಬುದಿಲ್ಲ,
ಕಾಮಧೂಮ ಧೂಳೇಶ್ವರಾ./10
ಅರಿದು ಚುಚ್ಚುವರೆಲ್ಲರೂ ದನದಟ್ಟೆ.
ಮರೆದು ಚುಚ್ಚುವರೆಲ್ಲರೂ ದನದಟ್ಟೆ.
ನಾ ಚುಚ್ಚುವುದೆಲ್ಲ ಸತ್ತ ಜೀವದನದಟ್ಟೆ.
ಅಟ್ಟೆಯ ಕೊಯ್ದು ಮೆಟ್ಟಿಸಿದ ಸತ್ಯರಿಗೆಲ್ಲಕ್ಕೂ
ಎನಗೆ ಬಟ್ಟಬಯಲ ತೋರಬೇಕೆಂದು.
ನಿಮ್ಮ ಬಟ್ಟೆಯಲ್ಲಿ ನೀವೆ ಹೋಗಿ,
ಎನ್ನ ಬಟ್ಟೆ ಕಾಮಧೂಮ ಧೂಳೇಶ್ವರನ ಬಟ್ಟೆಯೇ ಸಾಕು./11
ಅರಿದು ಮರೆದು ಎಚ್ಚತ್ತೆನೆಂಬಲ್ಲಿ ಅರಿವುಂಟೆ ?
ತೊಳಗಿ ಬೆಳಗಿ ಪ್ರಜ್ವಲಿಸಿ ಉರಿವ ಬೆಳಗು ಕೆಡುವಲ್ಲಿ,
ಉಡುಗುತ್ತಿದ್ದೇನೆ ಎಂದು ನುಡಿಯಿತ್ತೆ ?
ಇಂತಿವ ಹಿಡಿವಲ್ಲಿ, ಬಿಡುವಲ್ಲಿ, ಮಿಕ್ಕಾದವ ಒಡಗೂಡುವಲ್ಲಿ,
ಅಡಿಯೇರಿದ ಮತ್ತೆ ಪುನರಪಿ ಅಡಿ ಉಂಟೆ ?
ತೊಟ್ಟು ಬಿಟ್ಟ ಹಣ್ಣಿಂಗೆ ಮತ್ತಾ ಬುಡದಾಸೆಯೇಕೆ ?
ನಿಶ್ಚಯವೆಂಬುದು ನಷ್ಟವಾದಲ್ಲಿ,
ಕಾಮಧೂಮ ಧೂಳೇಶ್ವರನೆಂಬ ಲಕ್ಷವೇತಕ್ಕೆ ?/12
ಅರಿದೆಹೆ ಅರುಹಿಸಿಕೊಂಡೆಹೆನೆಂಬ ಉಭಯವುಳ್ಳನ್ನಕ್ಕ,
ಆ ಗುಣ ಅರಿವೋ, ಮರವೆಯೋ ಎಂಬುದ ತಿಳಿವುದು ಅದೇನು ಹೇಳಾ ?
ಕ್ರೀ ಉಳ್ಳನ್ನಕ್ಕ ನಿಃಕ್ರೀ ಕುರುಹುಗೊಂಡಿತ್ತು.
ಅರಿವುಳ್ಳನ್ನಕ್ಕ ಅಜ್ಞಾನ ಒಡಲುಗೊಂಡಿತ್ತು.
ತಮವುಳ್ಳನ್ನಕ್ಕ ಆ ಬೆಳಗು ತಮಕ್ಕೊಳಗಾಯಿತ್ತು.
ಅದೆಂತೆಂದಡೆ: ವಾಯುವ ಬೆಂಬಳಿಯಲ್ಲಿ ಗಂಧಸ್ವರೂಪವಾದಂತೆ,
ಆವಾವ ಕುಸುಮದ ಗಂಧವ ವಾಯು ತಾ ಬೆರೆದಲ್ಲಿ,
ಬಂಧವಿಲ್ಲದ ತೆರದಂತೆ.
ಅರಿವುದು, ಅರುಹಿಸಿಕೊಂಬುದು ಎರಡಳಿದಲ್ಲಿ,
ಕುರುಹೆಂದು ಪ್ರಮಾಣಿಸುವುದಕ್ಕೆ, ಅರಿವೆಂದು ಕೂಡುವುದಕ್ಕೆ,
ಆ ಉಭಯದ ಎಡೆಯ ಹೇಳಾ.
ಕ್ರೀಯಿಂದ ಕಾಬ ಮುಕ್ತಿ, ಜ್ಞಾನದಿಂದ ಕಾಬ ನಿರವಯ.
ಆ ಗುಣ, ಶುಕ್ತಿಯಲ್ಲಿ ಅಡಗಿಪ್ಪ ಅಪ್ಪುವಿನಂತೆ,
ಒಪ್ಪಕ್ಕೆ ತಾನಾಗಿ ಕುಕ್ಕಿದಡೆ,
ಅಪ್ಪುವೆಂಬ ನಾಮಕ್ಕೆ ಸಿಕ್ಕಿಲ್ಲದೆ ನಿಶ್ಚಯವಾದುದು.
ನೀರು ಸಾರ ಕೂಡಿದಲ್ಲಿ,
ಏರ ಕಾಸಲಿಕ್ಕೆ ನೀರರತು ಸಾರ ಉಳಿದಂತೆ,
ಸಾರ ನೀರಿಂದ ಕುರುಹುಗೊಂಡಿತ್ತು.
ಆ ನೀರೆ ಸಾರವಾದಲ್ಲಿ, ಕೂಡಿ ಸವಿಯೆಂಬ ನಾಮವಾಯಿತ್ತು.
ಸವಿ ಸಾರ ಕೂಡಿ ಅಂಗದ ಮೇಲೆ ರೂಪವಾಯಿತ್ತು.
ನುಂಗಿದ ಮತ್ತೆ ಸವಿಸಾರ ಒಂದೂ ಇಲ್ಲ.
ಅಂಗವೆಂಬನ್ನಕ್ಕ ಲಿಂಗ, ಲಿಂಗವೆಂಬನ್ನಕ್ಕ ಅಂಗ.
ಉಭಯದ ಸಂಗವ ಜಡನೆಂದು ನುಂಗಿದ ಮತ್ತೆ,
ಆತ್ಮಂಗೆ ಬಂಧ ಮೋಕ್ಷವೆಂಬುದೊಂದೂ ಇಲ್ಲ.
ಕಾಮಧೂಮ ಧೂಳೇಶ್ವರನೆಂದು ಎನಲಿಲ್ಲ. /13
ಅರಿವು ಅರಿದಲ್ಲದೆ ಲಿಂಗವೆಂಬ ರೂಪಿಲ್ಲ.
ಅರಿವು ಅರಿದಲ್ಲದೆ ಜೀವಭಾವ ಹಿಂಗದು.
ಅರಿವೆಂಬ ಸೂತಕ ಹೆರೆಹಿಂಗುವನ್ನಬರ,
ನಾ ನೀನೆಂಬನ್ನಕ್ಕ ಒಡಲು.
ಅದೇನು ಕಾರಣ ಹೇಳಾ , ಕಾಮಧೂಮ ಧೂಳೇಶ್ವರಾ./14
ಅರಿವು ಮರವೆಯೆಂಬ ಉಭಯದ ಭೇದವ ತಿಳಿದಲ್ಲಿ,
ಅಕ್ಷಿಯ ಮುಚ್ಚಿದಲ್ಲಿ ಬಯಲು, ಬಿಟ್ಟಲ್ಲಿ ಒಡಲುಗೊಂಡಿತ್ತು.
ಉಭಯದೃಷ್ಟವೆಂಬುದು ಇಷ್ಟಲ್ಲದಿಲ್ಲ.
ಇಷ್ಟವ ಹಿಡಿದಲ್ಲಿ ಕ್ರೀ, ಬಿಟ್ಟಲ್ಲಿ ಜ್ಞಾನವೆಂಬ ಕಟ್ಟಣೆವುಂಟೆ ?
ಕಾಷ್ಠವ ಹಿಡಿದ ಅಗ್ನಿಗೆ, ಅಗ್ನಿಯಲ್ಲಿ ನಷ್ಟವಾದ ಕಾಷ್ಠಕ್ಕೆ,
ಕೆಟ್ಟ ಮತ್ತೆ ಕೆಂಡವೆಂಬುದಿಲ್ಲ.
ನಷ್ಟವಾದ ಮತ್ತೆ ಕಟ್ಟಿಗೆಯೆಂಬುದಿಲ್ಲ.
ಕ್ರೀ ಭಾವ ಅಳವಟ್ಟು, ಭಾವ ಶೂನ್ಯವಾದಲ್ಲಿ
ಕಾಮಧೂಮ ಧೂಳೇಶ್ವರ ತಾನೂ ತಾನೆ. /15
ಅಲಗು ಮೊನೆಧಾರೆ ಕಟ್ಟುಳ್ಳವ ರಣಕ್ಕಂಜುವನೆ ?
ಮಲತ್ರಯದೂರ ಹಲವ ಕೆಲವರ ಒಲವರಕ್ಕೆ ಸಿಕ್ಕುವನೆ ?
ವಿರಳವೆಂಬುದ ಕಂಡು, ಅವಿರಳವೆಂಬುದನರಿತು,
ಶ್ರುತದೃಷ್ಟ ಅನುಮಾನಂಗಳ ಕಳೆದುಳಿದ ಮತ್ತೆ,
ಅರ್ಚಿಸಿ, ಪೂಜಿಸಿ ಕಂಡೆಹೆನೆಂಬುದು ಇತ್ತಲೆ ಉಳಿಯಿತ್ತು,
ಕಾಮಧೂಮ ಧೂಳೇಶ್ವರನತ್ತಲೈದಾನೆ./16
ಆಕಾಶ ಆಕಾರವಾಗಿ ತೋರಿಯಡಗುವನ್ನಬರ,
ಬಯಲು ಬೆಳಗ ನುಂಗಿ, ಒಳಗಾಗಹನ್ನಬರ,
ವಾಯು ಗಂಧವ ಕೂಡುವನ್ನಬರ,
ಕಾಯದ ಇಷ್ಟವ ಜೀವವರಿವನ್ನಬರ,
ಆವ ಭಾವವನೂ ಆಡಿ ಭಾವಜ್ಞರೆನಿಸಿಕೊಂಬರಲ್ಲದೆ
ಭಾವದ ಸೂತಕವುಳ್ಳನ್ನಕ್ಕ,
ಜೀವ ಆವಾವ ಭಾವಂಗಳಲ್ಲಿ ಬಹುದು ತಪ್ಪದು.
ಇದಕ್ಕೆ ಎನಗಿನ್ನಾವುದು ಬಟ್ಟೆ, ಕಾಮಧೂಮ ಧೂಳೇಶ್ವರಾ./17
ಆಕಾಶದ ನೀರಿಂಗೆ, ಮತ್ತೇತರಲ್ಲಿಯೂ
ತಿಳಿದಿಹೆನೆಂಬ ಸೂತಕವುಂಟೆ ?
ಪೃಥ್ವಿಯ ಸಂಗವ ಕೂಡಿದ ಅಪ್ಪುವಿಂಗಲ್ಲದೆ
ನಿಶ್ಚಯದ ಸುಜಲಕ್ಕುಂಟೆ ?
ಕರ್ಮದ ಕಪಟ, ನಿಶ್ಚಯವಾದ ನಿಜತತ್ವಭಾವಿಗೆ
ಮೇಲೊಂದು ಹತ್ತುವ ಹಾವಸೆ ಒಂದೂ ಇಲ್ಲ,
ಕಾಮಧೂಮ ಧೂಳೇಶ್ವರಾ./18
ಆತ್ಮಕ್ಕೂ ಇಂದ್ರಿಯಕ್ಕೂ ಭಿನ್ನ ಉಂಟು, ಇಲ್ಲಾ ಎಂಬಲ್ಲಿ
ಆ ಆತ್ಮಂಗೆ ಇಂದ್ರಿಯಂಗಳು ತುಷಕಂಬು ತಂಡುಲದಂತೆ.
ಆತ್ಮದ ಇಂದ್ರಿಯದಲ್ಲಿ, ಹೊರೆ ಹೊರೆಯಲ್ಲಿ,
ನಿಂದು ನೋಡಲಿಕ್ಕೆ ಆತ್ಮ ಎಂದಿನ ನಿಜ ?
ತಾ ಬಂದ ಸ್ವಯದಂತೆ, ಕಾಮಧೂಮ ಧೂಳೇಶ್ವರನು./19
ಆತ್ಮನ ಅರಿವು ಜೀವ ಭಾವವೆಂಬುದು ಅದೇತರ ಕೂಟಸ್ಥ ?
ಕಾಯದ ಸಂಸರ್ಗವೆಂದಡೆ, ಅದು ವಿಭೇದರೂಪು.
ಕರಣಂಗಳ ಸಂಸರ್ಗದಿಂದ ಎಂದಡೆ,
ಆ ಇಂದ್ರಿಯಂಗಳು ಸ್ವತಂತ್ರಗಳಲ್ಲ.
ಜೀವಾತ್ಮ ಭಾವಾತ್ಮ ಪರಮಾತ್ಮನೆಂದಲ್ಲಿ,
ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ
ಕಂಡು ಕೂಡಿ ಅರಿದು ಮರೆದುದೇನೊ ?
ಎಂಬ ತ್ರಿವಿಧವ ತಿಳಿದು ಸಂಧಿಸಿ, ಕಂಡೆಹೆನೆಂಬ ಸಂದನಳಿದು,
ಅಳಿದೆನೆಂಬ ಸಂದೇಹ ನಿಂದಲ್ಲಿ, ಅದಾವ ಬೆಂಬಳಿಯ ಹೊಲಬು ?
ಅದು ನಾಮ ರೂಪು ಭಾವ ಬಯಲು, ಕಾಮಧೂಮ ಧೂಳೇಶ್ವರಾ./20
ಆಧ್ಯಾತ್ಮಿಕದಿಂದಾವ ದೇಹವ,
ವ್ಯಾಧಿ ಬಾಧಿಸುವದಕ್ಕೆ ಮುನ್ನವೆ
ಬೇಗ ಬೇಗ ಶಿವನ ಭಜಿಸಿರೊ.
ದೇಹಧರ್ಮವು ಆರ ವಶವಲ್ಲ.
ದೇವ ದಾನವ ಮಾನವಾದಿಗಳಾದಡೂ
ಆವುದಾನೊಂದು ವ್ಯಾಧಿ ಬಿಡವು.
‘ತೇನ ವಿನಾ ತೃಣಾಗ್ರಮಪಿ ನ ಚಲತಿ’
ಎಂದುದಾಗಿ, ಅಂದಂದಿಗೆ ದಿನ ತುಂಬಿದಂತೆ ನಿಶ್ಚೈಸಿ,
ಕಾಮಧೂಮ ಧೂಳೇಶ್ವರನನೊಲಿಸಲೋಸುಗ
ಬಂದ ಬಳಿಕ ಮರೆಯದಿರಿರೊ./21
ಆವಾವ ವಾದ್ಯ ಘಟಭೇದಂಗಳಲ್ಲಿಯೂ
ಭಾವಶುದ್ಧವಾಗಿಪ್ಪುದು ನಾದ.
ಆರಾರ ವಿಶ್ವಾಸದ ಭಾವದಲ್ಲಿಯೂ
ದೈವಶುದ್ಧವಾಗಿಪ್ಪುದು ವಸ್ತು.
ಸ್ಥೂಲಕ್ಕೆ ಸ್ಥೂಲ, ಸೂಕ್ಷ್ಮಕ್ಕೆ ಸೂಕ್ಷ್ಮ ತನ್ಮಯವಾಗಿ,
ವರುಣನ ಕಿರಣದಂತೆ, ತನಗೆ ಮರೆಯಾದಲ್ಲಿ ನಿಂದು,
ಮರೆಗೆ ಹೊರಗಾದಲ್ಲಿ
ತನ್ನಿರವು ಎಲ್ಲಾ ಎಡೆಯಲ್ಲಿ ಪರಿಪೂರ್ಣವಾದಂತೆ.
ನೆನೆವರ ಮನದ ಕೊನೆಯಲ್ಲಿ, ಮರೆದವರ ಮರೆಯಲ್ಲಿ,
ಎಡೆದೆರಪಿಲ್ಲದ ವಸ್ತು ನೀನೆ, ಕಾಮಧೂಮ ಧೂಳೇಶ್ವರಾ./22
ಆವುದ ಹಿಡಿದು ಬೀಸಿದಲ್ಲಿಯೂ ಗಾಳಿ ತಪ್ಪದು.
ಏನ ಹಿಡಿದು ನುಡಿದಿಹೆನೆಂಬನ್ನಕ್ಕ ಮನದ ಸೂತಕ ಮೊದಲು.
ಒಂದು ಕಂಡು ಒಂದರಲ್ಲಿ ಕೂಡಿಹೆನೆಂಬನ್ನಬರ,
ಅರಿವಿನ ಸೂತಕ ಬಿಡದು.
ದೀಪವ ಕೆಡಿಸಿದ ಸೆರಗಿನಂತೆ,
ಅನಲನಾಹುತಿಗೊಂಡ ಸಾರದಂತೆ,
ಬಯಲು ಬಯಲ ಕೂಡಿದ ನಿರಾಳಕ್ಕೆ ಲಕ್ಷವುಂಟೆ ?
ಅರಿವುದಕ್ಕೆ ಮುನ್ನವೆ ಅರಿದ ಅರಿವನು,
ಕರಿಗೊಂಡಲ್ಲಿಯೆ ಲೋಪ, ಕಾಮಧೂಮ ಧೂಳೇಶ್ವರಾ./23
ಇಂತಿವನೆಲ್ಲವನರಿತು, ಕ್ರೀಯೊಳಗೆ ನೀನಿದ್ದಿಹೆಯೆಂಬ
ತೊಳಲಿಕೆಯೇಕೆ ಬಿಡದು ?
ನಾ ನೀನೆಂಬ ಸಂದೇಹ ಅದೇನು ಹೇಳಾ ?
ಹಾಂಗೆಂಬ ಕುರುಹು ಅರಿತು, ಅರಿವು ನಷ್ಟವಾಗಿ,
ಕುರುಹೆಂಬ ನಾಮ ನಿರ್ನಾಮವಾಯಿತ್ತು,
ಕಾಮಧೂಮ ಧೂಳೇಶ್ವರಾ./24
ಇಂದ್ರಿಯಂಗಳ ಹಿಂಗಿ ನೋಡಿಹೆನೆಂಬ ಎಡೆಯಲ್ಲಿ,
ಇಂದ್ರಿಯಂಗಳ ಕೂಡಿ, ಸನ್ಮತನಾಗಿ ನಿಂದು ನೋಡಿಹೆನೆಂದಡೆ,
ತಿಲ ತೈಲದಂತೆ ಅಂಗವಳಿದು, ಆ ತಿಲದ ಬಿಂದು ದ್ವಂದ್ವವಳಿದು,
ಈಚೆಯಲ್ಲಿ ಬಂದು ನಿಂದಲ್ಲಿ,
ಅಂಗದ ಕರ್ಮ, ಇಂದ್ರಿಯಂಗಳ ಸಂದು,
ಆತ್ಮನ ಸಂದೇಹದ ಗುಣವೆಂಬೀ ಭೇದವ ತಿಳಿದಲ್ಲಿ,
ಕಾಮಧೂಮ ಧೂಳೇಶ್ವರನು ನಿರಂಗದ ಭಾವ./25
ಇಷ್ಟಗುಟ್ಟೆಂಬುದು, ನಿಶ್ಚಯ ವಸ್ತುವೆಂಬುದು,
ಆತ್ಮನೇಕವೆಂಬುದು, ಇಂದ್ರಿಯಂಗಳು ಹಲವೆಂಬುದು,
ಅರಿವು ಹಿಂಗಲಿಕೆ ಒಂದೆಂಬುದು,
ಅಣೋರಣೀಯಾನ್ಮಹತೋ ಮಹೀಯಾನ್ ಎಂಬುದು,
ಎಲ್ಲಾ ದೃಷ್ಟದ ಲಕ್ಷದಲ್ಲಿ ಉಂಟೆಂಬುದು,
ಉಭಯಭಾವದಲ್ಲಿ ತೋರಿ ಹರಿದಾಡುವುದು,
ಅದು ಚಿತ್ತೋ, ಚಿದಾದಿತ್ಯನೋ, ವಸ್ತು ಭಾವವೋ ?
ಇಂತೀ ಲಕ್ಷ ಅಲಕ್ಷಂಗಳೆಂಬ ಗೊತ್ತ ಮೆಟ್ಟಿ, ಬಟ್ಟಬಯಲಾದ
ಕಾಮಧೂಮ ಧೂಳೇಶ್ವರನೊಳಗಾದೆ, ಆಗೆನೆಂಬ ಭಾವ ನಿಂದಲ್ಲಿ./26
ಇಷ್ಟದಲ್ಲಿ ಲಕ್ಷಿಸಿ ನೋಡಿಹೆನೆಂಬುದು,
ಭಾವದಲ್ಲಿ ಭ್ರಮೆಯಳಿದು ಕಂಡೆಹೆನೆಂಬುದು,
ಭೂತ ಭವಿಷ್ಯದ್ವರ್ತಮಾನಂಗಳ ನಿರಾಕರಿಸಿ
ಕಂಡೆಹೆನೆಂಬುದು ಅದೇತರ ಚಿಹ್ನ ?
ಈ ತೆರದ ಭೇದಂಗಳಲ್ಲಿ
ದೃಕ್ಕಿನ ಸೂತ್ರದ ಬೊಂಬೆಯಂತೆ,
ತಾ ಕಂಡು ತನ್ನ ಕಾಣಿಸಿಕೊಂಬಂತೆ,
ಇದಿರ ದೃಶ್ಯಕ್ಕೆ ತಾನೊಳಗಾಗಿ,
ತನ್ನ ದೃಶ್ಯ ತನ್ನೊಳಗಾದ ಮತ್ತೆ
ಅನ್ಯಭಿನ್ನವೆಂಬ ಉಭಯವಡಗಿತ್ತು,
ಕಾಮಧೂಮ ಧೂಳೇಶ್ವರನಲ್ಲಿ. /27
ಇಷ್ಟಾರ್ಥವ ಬಯಸಿ, ಮುಟ್ಟಿ ಪೂಜಿಸುವಲ್ಲಿ,
ಬ್ರಹ್ಮನ ಉತ್ಪತ್ಯಕ್ಕೆ ಒಳಗು,
ಮಾಡಿ ನೀಡಿ ಕೊಟ್ಟೆಹೆನೆಂಬುದೆಲ್ಲ,
ವಿಷ್ಣುವಿನ ಆಗುಚೇಗೆಗೆ ಒಳಗು.
ಅರ್ಚನೆ ಪೂಜನೆಯಿಂದ ಕೃತ್ಯ ತಪ್ಪದೆ ಮಾಡಿಹೆನೆಂಬುದೆಲ್ಲ,
ರುದ್ರನ ಗಿರಿಯ ತಪ್ಪಲಿನೊಳಗು.
ತಪ್ಪಲ ಕಾಯ್ದು ಸಾಯದ ಮುನ್ನವೆ ನಿಶ್ಚಯಿಸಿಕೊಳ್ಳಿ,
ಕಾಮಧೂಮ ಧೂಳೇಶ್ವರನನರಿಯಬಲ್ಲಡೆ./28
ಉಂಟೆಂಬಲ್ಲಿಯೆ ಜ್ಞಾನಕ್ಕೆ ದೂರ.
ಇಲ್ಲಾ ಎಂಬಲ್ಲಿಯೆ ಸಮಯಕ್ಕೆ ದೂರ.
ತನುವಿಗೆ ಬಂದ ಪ್ರಾಪ್ತಿಯ ಅನುಭವಿಸುವುದಕ್ಕೆ ಒಡಲಾಯಿತ್ತು.
ಪ್ರಾಪ್ತಿಯನುಂಬುದು ಘಟವೋ, ಆತ್ಮನೋ ?
ಒಂದನಹುದು, ಒಂದನಲ್ಲಾ ಎನಬಾರದು.
ಇಲ್ಲಾ ಎಂದಡೆ ಕ್ರೀವಂತರಿಗೆ ಭಿನ್ನ.
ಅಹುದೆಂದಡೆ ಅರಿದಾತಂಗೆ ವಿರೋಧ.
ತೆರಪಿಲ್ಲದ ಘನವ ಉಪಮಿಸಲಿಲ್ಲ.
ಕಾಮಧೂಮ ಧೂಳೇಶ್ವರನ ಮುಂದೆ ಹೋಗಲಿಲ್ಲ,
ಹಿಂದೆ ಉಳಿಯಲಿಲ್ಲ./29
ಉಂಡು ಉಪವಾಸಿಯಾದನಾಗಿ, ಬಳಸಿ ಬ್ರಹ್ಮಚಾರಿಯಾದನಾಗಿ,
ಕಂಡೂ ಕಾಣದಂತೆ ಇದ್ದನಾಗಿ.
ಅಂಗವೆಂಬ ಭಾವ, ಲಿಂಗವೆಂಬ ಕುರುಹು, ನಿರಂಗವೆಂಬ ಅರಿವು,
ತ್ರಿವಿಧದ ಕುರುಹು ಅಲ್ಲಿಯೆ ಅಡಗಿತ್ತು.
ಉರಿಯ ತುದಿಯ ಕರ್ಪುರದಂತೆ, ಅಡಗಿದ ಭೇದವ ಸಡಗರಿಸಿದಲ್ಲಿ,
ಕಾಮಧೂಮ ಧೂಳೇಶ್ವರನೆಂಬ ಭಾವ ಕಲ್ಪಿತವಿಲ್ಲ./30
ಉತ್ಪತ್ಯ ಪಿಂಡವೆಲ್ಲಕ್ಕೂ ಜನನವೊಂದೆ ಭೇದ.
ಲಯವಹ ಘಟಕ್ಕೆ ಹಲವು ತೆರನುಂಟು.
ಹಲವು ತೆರದ ಲಯವ ಬಲ್ಲಡೆ,
ಬೇರೊಂದು ಕುಲಹೊಲೆಸೂತಕವೆಂಬುದುಂಟೆ ?
ಬಂದ ಯೋನಿಯ ಹೊಂದುವ ಘಟದ ಉಭಯಸಂಧಿಯಲ್ಲಿ ಸಿಕ್ಕದೆ,
ನಿಂದ ನಿಜವೆ ತಾನಾದವಂಗೆ
ಬೇರೊಂದು ಇಲ್ಲಾ ಎಂದೆ, ಕಾಮಧೂಮ ಧೂಳೇಶ್ವರಾ. /31
ಎನ್ನ ತನುವ ನಿರ್ಮಲ ಮಾಡಿದನಯ್ಯಾ,
ಬಸವಣ್ಣನು.
ಎನ್ನ ಮನವ ನಿರ್ಮಲ ಮಾಡಿದನಯ್ಯಾ,
ಚೆನ್ನಬಸವಣ್ಣನು.
ಎನ್ನ ಪ್ರಾಣವ ನಿರ್ಮಲ ಮಾಡಿದನಯ್ಯಾ,
ಪ್ರಭುದೇವರು.
ಇಂತೆನ್ನ ತನುಮನಪ್ರಾಣವ ನಿರ್ಮಲ ಮಾಡಿ,
ತಮ್ಮೊಳಿಂಬಿಟ್ಟುಕೊಂಡ ಕಾರಣ,
ಕಾಮಧೂಮ ಧೂಳೇಶ್ವರಾ ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿದರ್ೆನು./32
ಎಸಳು ಬಿಟ್ಟು, ಕುಸುಮ ಉದುರಿ, ನಸುಫಲ ನಿಂದಲ್ಲಿ,
ಹಣ್ಣಿನ ಎಸಕದ ರಸ ಎಲ್ಲಿ ಇದ್ದಿತ್ತು ?
ಆ ವೃಕ್ಷದ ಬೇರಿನ ಸಾರದಲ್ಲಿ ಇದ್ದಿತ್ತು.
ಬೇರಿನ ಸಾರ ಒಣಗೆ, ಹಣ್ಣಿನ ಸಾರ ಅಲ್ಲಿಯೆ ಅಡಗಿತ್ತು.
ಆ ಗುಣವ ನೀ ತಿಳಿ, ಕಾಮಧೂಮ ಧೂಳೇಶ್ವರನಲ್ಲಿಯೆ./33
ಓಗರವಿಲ್ಲದಿರ್ದಡೆ ಓಂ ನಮಃ ಶಿವಾಯ ಎಂಬ ನುಡಿಯಿಲ್ಲ.
ಕಾಮವಿಲ್ಲದಿರ್ದಡೆ ಪ್ರೇಮವಿಲ್ಲ.
ಭೂಮಿಯಿಲ್ಲದಿರ್ದಡೆ ಜೀವನಿಗೆ ಜನ್ಮವಿಲ್ಲ.
ಇದ ಮಹಾಮಹಿಮರು ಬಲ್ಲರಲ್ಲದೆ ಮಹಿಮರರಿಯರು.
ಕಾಮಧೂಮ ಧೂಳೇಶ್ವರಲಿಂಗದ ಶರಣರ ಕಂಡೆ,
ಬಲ್ಲೆನೆಂಬವರಂತಿರಲಿ./34
ಕಂಗಳ ಸೂತಕದಿಂದ ಕಾಣಿಸಿಕೊಂಬುದು,
ಮನದ ಸೂತಕದಿಂದ ನೆನೆಯಿಸಿಕೊಂಬುದು,
ಕಾಯದ ಸೂತಕದಿಂದ ಮುಟ್ಟಿಸಿಕೊಂಬುದು,
ಮೂರರ ಸೂತಕದಲ್ಲಿ ಗಾರಾಗುತ್ತ,
ಮೀರಿ ಕಾಬ ಅರಿವು ಸೂರೆಯೇ ?
ನೆನಹಿಂಗೆ ಮುನ್ನವೆ ನೆನೆಯಿಸಿಕೊಂಡು,
ಅರಿವುದಕ್ಕೆ ಮುನ್ನವೆ ಅರುಹಿಸಿಕೊಂಡು,
ಬಂದುದನರಿಯದೆ ಕುರುಹಿನ ಹಾವಸೆಯಲ್ಲಿ
ಮರೆದು ಒರಗುತ್ತಿಹರ ಕಂಡು,
ಮರೆ ಮಾಡಿದೆಯಲ್ಲಾ, ಕಾಮಧೂಮ ಧೂಳೇಶ್ವರಾ. /35
ಕಂಗಳಲ್ಲಿ ನೋಡಿ ದೃಕ್ಕಿಂಗೆ ಒಳಗಪ್ಪುದದೇನು ಹೇಳಾ.
ನಾಸಿಕದಲ್ಲಿ ವಾಸಿಸಿ ಲೇಸಾಯಿತ್ತೆಂಬುದದೇನು ಹೇಳಾ.
ಕರ್ಣದಲ್ಲಿ ಕೇಳಿ ಜೊಂಪಿಸಿ ತಲೆದೂಗುವುದು ಅದೇನು ಹೇಳಾ.
ಜಿಹ್ವೆಯಲ್ಲಿ ಚಪ್ಪಿರಿದು ಪರಿಭಾವ
ಪರಿಪೂರ್ಣವಾಯಿತ್ತೆಂಬುದದೇನು ಹೇಳಾ.
ಕೈಯಲ್ಲಿ ಮುಟ್ಟಿ ಮೃದು ಕಠಿನವಾಯಿತ್ತೆಂಬುದದೇನು ಹೇಳಾ.
ಇಂತೀ ಗುಣ, ಐದರ ಸೂತಕವೋ ?
ತಾನರಿದೆ ಮರದೆನೆಂಬ ಭಾವದ ಸೂತಕವೋ?
ಒಂದು ಆತ್ಮನೆಂದಲ್ಲಿ,
ಇಂದ್ರಿಯಂಗಳು ಒಂದು ಬಿಟ್ಟು ಒಂದರಿಯವಾಗಿ.
ಹಲವೆಡೆ ಉಂಟೆಂದಲ್ಲಿ, ಆತ್ಮನ ಹೊಲಬುದಪ್ಪಿದಲ್ಲಿ,
ಆ ಕಳೆಯೆಲ್ಲಿ ಅಡಗಿತ್ತು ಹೇಳಾ ?
ಇಂತೀ ರೂಪು ಘಟಭಿನ್ನ ಹಲವು ಚೇತನಂಗಳಲ್ಲಿ ಚೇತನಿಸುವುದು
ಅದೇತರ ಗುಣವೆಂದು ಅರಿತಲ್ಲಿ,
ಅರಿವು ಸೂತಕ ಭ್ರಾಂತಿ ನಿಂದಲ್ಲಿ,
ಕಾಮಧೂಮ ಧೂಳೇಶ್ವರನೆಂಬುದಕ್ಕೆ ಠಾವಾವುದಯ್ಯಾ ?/36
ಕಂಡು ಅರ್ಪಿಸುವುದು ಬ್ರಹ್ಮತತ್ವ.
ಸಂದೇಹದಲ್ಲಿ ಅರ್ಪಿಸುವುದು ವಿಷ್ಣುತತ್ವ.
ಬಂಧಮೋಕ್ಷಕರ್ಮಗಳಿಲ್ಲವೆಂದು ಅರ್ಪಿಸುವುದು ರುದ್ರತತ್ವ.
ತತ್ವಂಗಳ ಗೊತ್ತ ಮುಟ್ಟದೆ ನಿಶ್ಚಯವಾದ ಪರಿಪೂರ್ಣಂಗೆ
ಉತ್ಪತ್ತಿ ಸ್ಥಿತಿ ಲಯವೆಂಬುದು ಇತ್ತಲೇ ಉಳಿಯಿತ್ತು,
ಕಾಮಧೂಮ ಧೂಳೇಶ್ವರನ ಮುಟ್ಟಲಿಲ್ಲವಾಗಿ./37
ಕಟ್ಟಿದೆ ಘಟದಟ್ಟೆಯ ಹೊಲಿದು,
ಇಕ್ಕಿದೆ ಚತುವರ್ಿಧದ ನಾಲ್ಕು ಗುಂಟವ ಬಲಿದು.
ಗುಂಟದ ದ್ವಾರದಲ್ಲಿ, ಉಭಯಸಂಚದ ಬಾರ ತೆಗೆದು,
ತೊಡಕು ಬಂಧವನಿಕ್ಕಿ,
ಅಡಿಯ ಬಿಡದಂತೆ, ಹಿಂದಣ ಮಡ
ಮುಂದಣ ಉಂಗುಷ್ಠಕ್ಕೆ ಒಂದನೊಂದು ಜಾರದಂತೆ ಬಂಧಿಸಿ,
ಸಕಲೇಂದ್ರಿಯವೆಂಬ ಉಭಯವ ಸಂಧಿಸಿ ಕುಣಿಕೆಯನಿಕ್ಕಿ,
ಕಾಮದ ಒಡಲ ಮಾದಿಗ ಬಂದೆ,
ಘಟ ತೋಕುಳು ತೊಗಲು ಹದಬಂದಿತ್ತು.
ಹೊತ್ತು ಹೋದಿಹಿತಣ್ಣಾ.
ಮೆಟ್ಟಡಿಯ ಕೊಂಡ ರೊಕ್ಕವ ಕೊಡಿ.
ಒಪ್ಪಿದರಿರಲಿ, ಒಪ್ಪದಿದ್ದಡೆ
ಮೂರು ಮುಖದಪ್ಪಗೆ ಕೊಟ್ಟೆಹೆ.
ತಪ್ಪಡಿಯ ಮೆಟ್ಟೆ ಹೋಗುತ್ತಿದ್ದೇನೆ,
ಚನ್ನಯ್ಯಪ್ರಿಯ ಧೂಳನ ಧೂಳಿಗೊಳಗಾಗಿ./38
ಕರಚರಣಾದಿ ದೇಹಂಗಳಲ್ಲಿ ಹೊಕ್ಕು,
ಒಳಗಡಗಿ, ಹೊರಗಣ ಬಾಹ್ಯವ ಹಿಡಿವುದದೇನೋ ?
ಹೊರಗಣ ಅರ್ಪಿತವ ಒಳಗೆ ಕೊಟ್ಟು, ಅರ್ಪಿಸುವುದದೇನೋ ?
ಆ ಒಳಗು ಹೊರಗೆಂಬ ಉಭಯವ ತಿಳಿದಲ್ಲಿ,
ಅನಲಂಗೆ ಕೀಳು ಮೇಲೆಂಬುದುಂಟೆ ?
ನೆರೆ ಅರಿದ ಆತ್ಮಂಗೆ, ಒಳಹೊರಗೆಂಬ
ಉಭಯದ ಸೂತಕವಿಲ್ಲ, ಕಾಮಧೂಮ ಧೂಳೇಶ್ವರಾ. /39
ಕಾಮವೆಂದಡೆ ಕುರಿತು ಕಾಬುದೊಂದು.
ಧೂಮವೆಂದಡೆ ಅದರಲ್ಲಿ ಉದಿಸಿ ತೋರುವ ತಮ.
ಇಂತೀ ಕಾಮ ಧೂಮವೆಂಬೀ ಎರಡ ಪುಡಿಗಟ್ಟಿ,
ಧೂಳಿ ಧೂಳೇಶ್ವರನಾದ./40
ಕಾಮಿಗೆ ಯೋನಿಯೆಲ್ಲವೂ ಸರಿ.
ಕ್ರೋಧಿಗೆ ಕೊಲೆ ಸರ್ವಜೀವವೆಲ್ಲವೂ ಸರಿ.
ಲೋಭಿಗೆ ಜಯ ಅಪಜಯದಿಂದ ಬಂದ ದ್ರವ್ಯವೆಲ್ಲವೂ ಸರಿ.
ಪಾತಕಂಗೆ ಪಾಪಪುಣ್ಯವೆಂಬುದಿಲ್ಲ.
ಇಂತೀ ಜಗದ ಸೂತಕಕ್ಕೆ ಹೊರಗಾಗಿ,
ತ್ರಿಕರಣಸೂತಕಕ್ಕೆ ಒಳಗಲ್ಲದೆ,
ಕಾತು ಕರ್ಮವನರಿಯದೆ, ಜೀವ ಭವವ ನುಣ್ಣದೆ,
ಆವ ಠಾವಿನಲ್ಲಿಯೂ ಕಲೆ ನಿಷ್ಪತ್ತಿಯಾದ ಮತ್ತೆ
ಕಾಯಕ್ಕೆ ಕುರುಹಿಲ್ಲ, ಜೀವಕ್ಕೆ ಭಯವಿಲ್ಲ,
ಅರಿವಿಂಗೆ ಮರವೆಯಿಲ್ಲದೆ ತೋರದ ನಿರಾಳ,
ಕಾಮಧೂಮ ಧೂಳೇಶ್ವರ ತಾನೂ ತಾನೆ./41
ಕಾಲಿಗೆ ಕೋಳ, ಕೈಗೆ ಸಂಕಲೆ,
ಕೊರಳಿಗೆ ಪಾಶ ಪಾಷಂಡಿಗಳಾಗುತ್ತ,
ಮತ್ತಾ ಅರಿವಿನ ಹೊಲಬೆಲ್ಲ ಅಡಗಿತ್ತು.
ಅಂಗದ ಕ್ರೀ, ಲಿಂಗದ ಕೂಟ, ನಿರಂಗದ ಸುಖವೆಂಬುದು
ಆ ಮೂರರ ಬಂಧದಲ್ಲಿ ಅಡಗಿತ್ತು.
ಬೇರೊಂದು ಸಂಗವೆಲ್ಲಿದ್ದಿತ್ತು ಹೇಳಾ ?
ನಿರಂಗವೆಂಬ ನಾಮವಿಲ್ಲದನೆ
ಕಾಮಕ್ಕೇಕೆ ಕೂಟವಾದೆ ? ದುರ್ಮುಖಕ್ಕೇಕೆ ಆತ್ಮನಾದೆ ?
ಕಾಮಧೂಮ ಧೂಳೇಶ್ವರನೆಂಬುದಕ್ಕೆ
ಕುರುಹಿಲ್ಲದ ನೆರೆ ನಾಮವಾದೆಯಲ್ಲಾ./42
ಕುಂಭಘಟಕ್ಕೆ ಒಳಗೂ ಬಯಲು, ಹೊರಗು ಬಯಲು.
ಮೀರಿ ತಾ ನೋಡಿದಲ್ಲಿಯೂ ಬಯಲು.
ಶುಕ್ಲ ಶೋಣಿತದಾದ ಘಟಕ್ಕೆ, ಬಯಲೆಂಬುದಕ್ಕೆ ತೆರಪಿಲ್ಲ,
ಚೇತನಕ್ಕೆ ಒಳಗಾಗಿದ್ದುದಾಗಿ.
ಪೃಥ್ವಿ ಪೃಥ್ವಿಯ ಕೂಡುವನ್ನಬರ,
ಅಪ್ಪು ಅಪ್ಪುವ ಕೂಡುವನ್ನಬರ,
ತೇಜ ತೇಜವ ಕೂಡುವನ್ನಬರ,
ವಾಯು ವಾಯುವ ಕೂಡುವನ್ನಬರ,
ಆಕಾಶ ಆಕಾಶವ ಕೂಡುವನ್ನಬರ,
ಪಂಚತತ್ವಂಗಳು ತತ್ವವನೆಯ್ದಿದಲ್ಲಿ,
ಆತ್ಮಂಗೆ ಬಂಧಮೋಕ್ಷವೆಂಬ ಅಂದವಾವುದು ?
ಉಂಟೆಂಬುದು ತನ್ನಿಂದ, ಇಲ್ಲಾ ಎಂಬುದು ತನ್ನಿಂದ,
ತನ್ನಿಂದನ್ಯವಪ್ಪುದೊಂದಿಲ್ಲವಾಗಿ.
ಸ್ಥಾಣು ಚೋರನಂತೆ, ರಜ್ಜು ಸರ್ಪನಂತೆ,
ತಿಳಿದು ನೋಡಲಿಕೆ ಮತ್ತೇನೂ ಇಲ್ಲ.
ಕಾಮಧೂಮ ಧೂಳೇಶ್ವರನೆಂಬಲ್ಲಿ ಏನೂ ಇಲ್ಲ./43
ಕುಸುಮದೊಳಗಡಗಿದ ಸುವಾಸನೆಯಂತೆ,
ರಸಿಕನಲ್ಲಿ ಅಡಗಿದ ಎಸಕದಂತೆ,
ಕೇಶದಲ್ಲಿ ಅಡಗಿದ ರಸರಂಜನೆಯಂತೆ,
ಅರಿದು, ಅರುಹಿಸಿಕೊಂಬುದು.
ಎರಡಳಿದು ಪರಿಪೂರ್ಣವಾದಲ್ಲಿ,
ಹಲವುಮಾತಿನ ಹೊಲಬಿನ ಸೂತಕವೇತಕ್ಕೆ
ಕಾಮಧೂಮ ಧೂಳೇಶ್ವರಾ ?/44
ಕೆಂಡ ಕೆಟ್ಟು ಕೆಂಡವಾಗಬಲ್ಲುದಲ್ಲದೆ,
ಬೂದಿಯಾಗಿ ಬೂದಿ ಹೊತ್ತಬಲ್ಲುದೆ ?
ಸೂತಕ ಸೂತಕಕ್ಕೊಳಗಪ್ಪುದಲ್ಲದೆ,
ಭಸ್ಮ ಮೇಲೆ, ಕೆಂಡ ಒಳಗಡಗಿದುದುಂಟೆ ?
ಅರಿದ ಅರಿವು ಮರವಿಂಗಪ್ಪುದೆ ?
ಅರಿವೆ ಶೂನ್ಯವಾಗಿ ಸುಖದುಃಖಕ್ಕೆ ಹೊರಗಾಗಬೇಕು,
ಕಾಮಧೂಮ ಧೂಳೇಶ್ವರಾ. /45
ಕ್ರಿಯಾದ್ವೈತ, ಭಾವಾದ್ವೈತ, ಅಧ್ಯಾತ್ಮಾದ್ವೈತ, ಅದ್ವೈತಂಗಳೆಂದು
ದಂಪತಿ ಸಂಬಂಧವಾಗಿ ನುಡಿವ ವಾಗ್ವಿಲಾಸಿತರೆಲ್ಲರು
ಜ್ಞಾನಾದ್ವೈತಸಂಬಂಧಿಗಳಾದರು.
ಸ್ಥೂಲದಿಂದ ಕಂಡು, ಸೂಕ್ಷ್ಮದಿಂದ ಅರಿದು,
ಕಾರಣದಲ್ಲಿ ಲಯವಾದ ಮತ್ತೆ, ತೋರಿಕೆ ದ್ವೈತವಾಯಿತ್ತು.
ದ್ವೈತ ಲೇಪವಾದಲ್ಲಿ, ಕುರುಹಿನ ಸೂತಕ ಅಲ್ಲಿಯೇ ಅಡಗಿತ್ತು,
ಕಾಮಧೂಮ ಧೂಳೇಶ್ವರನೆಂಬಲ್ಲಿಯೆ./46
ಕ್ರೀಯೆಂದು ಕಲ್ಪಿಸುವಲ್ಲಿ, ನಿಃಕ್ರೀಯೆಂದು ಆರೋಪಿಸುವಲ್ಲಿ,
ಆ ಗುಣ ಭಾವವೋ, ನಿರ್ಭಾವವೋ ?
ಕ್ರೀಯಲ್ಲಿ ಕಾಬ ಲಕ್ಷ, ನಿಃಕ್ರೀಯಲ್ಲಿ ಕಾಬ ಚಿತ್ತ,
ಉಭಯದ ಗೊತ್ತು ಅದೇನು ಹೇಳಾ.
ಬೀಜದ ಸಸಿಯ ಒಳಗಣ ಬೇರಿನಂತೆ,
ಅದಾವ ಠಾವಿನ ಕುರುಹು ಹೇಳಾ.
ಲಕ್ಷ ನಿರ್ಲಕ್ಷವೆಂಬುದು ಅದೆಂತೆ ಇದ್ದಿತ್ತು
ಅಂತೆ ಇದ್ದಿತ್ತು, ಕಾಮಧೂಮ ಧೂಳೇಶ್ವರನು. /47
ಖಂಡಿತರಿಗೆ ಖಂಡಿತನಾಗಿ, ಅಖಂಡಿತರಿಗೆ ಪರಿಪೂರ್ಣನಾಗಿ,
ಕರಿ ಮುಕುರದೊಳಗಡಗಿ ತೋರುವಂತೆ,
ಚಿತ್ತಶುದ್ಧವುಳ್ಳವರಲ್ಲಿ ಅಚ್ಚೊತ್ತಿದಂತೆ ಅಡಗಿದೆಯಲ್ಲಾ,
ಕಾಮಧೂಮ ಧೂಳೇಶ್ವರಾ./48
ಗುರುವೆಂಬ ಸೂತಕ, ಅರಿವಿನಿಂದ ಹರಿಯಬೇಕು.
ಲಿಂಗವೆಂಬ ಸೂತಕ, ಅರಿವಿನಿಂದ ಹರಿಯಬೇಕು.
ಅರಿವೆಂಬ ಸೂತಕಕ್ಕೆ ಮುಂದೆ ಒಂದ ಕಂಡೆಹೆನೆಂಬ
ಒಡಲಸೂತಕ ಹರಿಯಬೇಕು.
ಸೂತಕ ನಿಹಿತವಾದಲ್ಲಿ, ಕಾಮಧೂಮ ಧೂಳೇಶ್ವರ
ಎಂದೂ ಏನೂ ಎನಲಿಲ್ಲ. /49
ಜಲದಿಂದ ಮಲವ ತೊಳೆಯಬೇಕೆಂಬಲ್ಲಿ,
ಆ ಮಲ ಜಲದ ಸಾರದಿಂದ ಕೆಸರಾದಂತೆ.
ಅದು ಉಭಯದ ಕೂಟದಿಂದ ಪಂಕವಾದ ಸಂಚವನರಿಯಬೇಕು.
ತಿಳಿದು ನಿಂದಲ್ಲಿ, ಪಂಕವಡಿ ತಾ ಮೇಲಾದ ಶಂಕೆಯನರಿಯಬೇಕು.
ಈ ಉಭಯದ ಘನ ಕಿರಿದಿನಲ್ಲಿ,
ಮಲವೇತರಿಂದ ಆಯಿತ್ತೆಂಬ ಒಲವರವನರಿದಲ್ಲಿ,
ಆತ ಆತ್ಮನ ನೆಲೆಯ ಬಲ್ಲನೆಂಬೆ, ಕಾಮಧೂಮ ಧೂಳೇಶ್ವರಾ./50
ಜಾಗ್ರದಲ್ಲಿ ವ್ಯಾಪಾರ, ಸ್ವಪ್ನದಲ್ಲಿ ಕೂಟಸ್ಥ,
ಸುಷುಪ್ತಿಯಲ್ಲಿ ಮಗ್ನತೆ ಆಯಿತ್ತೆಂಬುದು ಅದೇನು ಹೇಳಾ.
ಸ್ಥೂಲತನುವಿನಲ್ಲಿ ಕೂಟಸ್ಥ, ಸೂಕ್ಷ್ಮತನುವಿನಲ್ಲಿ ಏಕಾರ್ಥ,
ಕಾರಣತನುವಿನಲ್ಲಿ ಲೇಪವಾಯಿತ್ತೆಂಬ ಭಾವವದೇನು ನೋಡಾ.
ಇಂತೀ ಜೀವಾತ್ಮ ಭಾವಾತ್ಮ ಪರಮಾತ್ಮ.
ಇಂತೀ ತ್ರಿವಿಧಾತ್ಮದಲ್ಲಿ ತಿರುಗುವ ಆತ್ಮ ಅದೇನು ಹೇಳಾ.
ಮೂರೆಂಬುದು, ಬೇರೊಂದು ಭಾವವೆಂಬುದು,
ಅವ ಕೂಡಿ ನಿರ್ಭಾವವೆಂಬುದು,
ಆ ಗುಣ ಇದಿರದೋ, ತನ್ನದೋ ? ಎಂಬುದನರಿದು ಮರೆದಲ್ಲಿ,
ಕಾಮಧೂಮ ಧೂಳೇಶ್ವರನು ಭಿನ್ನರೂಪನಲ್ಲ./51
ಜಾತ, ಅಜಾತ, ನಿರ್ಜಾತನೆಂಬುದು ಅದೇತರ ಭಾವ ?
ಅದು ತನ್ನ ಭ್ರಾಂತಿನ ಕಲೆ.
ಸತ್ತೆನೆಂದು ಹೇಳುತಿಪ್ಪುದೆ ಹೆಣ ?
ಆ ನಿಶ್ಚಯವೆಂಬುದು ಹುಟ್ಟುಗೆಟ್ಟಲ್ಲಿ,
ಮತ್ತೆ ಬಟ್ಟಬಯಲೆಂಬ ದೃಷ್ಟವಿಲ್ಲ,
ಕಾಮಧೂಮ ಧೂಳೇಶ್ವರಾ. /52
ತನ್ನ ಗುಣವ ತಾನರಿತೆನೆಂಬಲ್ಲಿ, ಇದಿರಿನಲ್ಲಿ,
ಭಿನ್ನಗುಣವ ಸಂಪಾದಿಸಲುಂಟೆ ?
ಕರಿ ಮುಕುರದ ಇರವು, ಆ ಗುಣವ ಪರಿಹರಿಸಿ ನಿಂದಲ್ಲಿ,
ಉಭಯಭಾವಕ್ಕೆ ಹೊರಗು, ಕಾಮಧೂಮ ಧೂಳೇಶ್ವರಾ./53
ತಾನೆಂಬುದ ಅರಿದೆನೆಂದರಿತಲ್ಲಿ,
ಇಷ್ಟಲಿಂಗದ ಪೂಜೆಯ ಗೊತ್ತು.
ಆ ಇಷ್ಟವ ನೆನೆವ ಚಿತ್ತ,
ಕರ್ಪುರದ ಘಟ್ಟಿಯ ಉರಿ ಕೊಂಡಂತೆ.
ತೊಳೆವ, ಹಿಳಿಕ ಸೂತಕ ನಿಂದಲ್ಲಿ,
ಪ್ರಾಣಲಿಂಗಸಂಬಂಧವೆಂಬ ಸಮಯಸೂತಕ ನಿಂದಲ್ಲಿ,
ಕಾಮಧೂಮ ಧೂಳೇಶ್ವರ ಏನೂ ಎನಲಿಲ್ಲ./54
ತಿಲದೊಳಗಣ ತೈಲ, ಫಲದೊಳಗಣ ರಸ,
ಹೇಮದೊಳಗಣ ಬಣ್ಣ, ಮಾಂಸದೊಳಗಣ ಕ್ಷೀರ,
ಇಕ್ಷುದಂಡದ ಸಾರದ ಸವಿ,
ಒಳಗು ಹೊರಗಾಗಿಯಲ್ಲದೆ ಕುಲದ ಸೂತಕ ಬಿಡದು.
ಇಷ್ಟದಲ್ಲಿ ತೋರುವ ವಿಶ್ವಾಸ ದೃಷ್ಟವಾಗಿಯಲ್ಲದೆ,
ಶಿಲೆಕುಲದ ಸೂತಕ ಬಿಡದು.
ಬಿಡುವನ್ನಕ್ಕ ಜ್ಞಾನಶೂನ್ಯವಿಲ್ಲ, ಕಾಮಧೂಮ ಧೂಳೇಶ್ವರಾ./55
ಧರೆಯ ಮೇಲೆ ನಿಂದು ಹೊಡೆವಡಿಸಿಕೊಂಬ
ದೈವದ ಕುರುಹು ಎಲ್ಲಿ ಇದ್ದಿತ್ತು ಹೇಳಿರಣ್ಣಾ ?
ಶರೀರದ ಮೇಲೆ ಕಟ್ಟಿ, ಕರ ಚರಣಾದಿ ಅವಯವಂಗಳು ಮುಂತಾದ
ಹಲವು ಪರಿಭ್ರಮಣದಿಂದ ಪೂಜಿಸಿಕೊಂಬುದು, ಅದಾವ ಲಿಂಗವಣ್ಣಾ ?
ಸರ್ವರೆಲ್ಲರ ಕೈಯಲ್ಲಿ, ಇದು ವಸ್ತು ಅಲ್ಲ, ಅಹುದೆಂದು
ಗೆಲ್ಲ ಸೋಲಕ್ಕೆ ಹೋರುವುದು, ಅದಾವ ವಸ್ತುವಿನ ಕುರುಹಣ್ಣಾ ?
ಇಂತೀ ಸ್ಥಾವರ ಚರ ಅರಿವಿನ ಕುರುಹೆಂಬುದೊಂದು ಸೆರಗ ತೋರಾ ?
ಅದು ನುಡಿವಡೆ ಸಮಯಕ್ಕೆ ದೂರ.
ಅದು ಮುನ್ನವೆ ಅರಿದರಿವ ಈಗ ಕುರುಹಿಡುವಲ್ಲಿ,
ಅದು ಪರಿಭ್ರಮಣ ಭ್ರಾಂತಿ.
ಇಂತೀ ಕರ್ಮಕಾಂಡ, ಇಂತಿವನರಿದು ಬೆರೆದೆನೆಂಬ ಜ್ಞಾನಕಾಂಡ.
ಸುಮುದ್ರಿತವಾಗಿ, ಆ ಸುಮುದ್ರೆಯಲ್ಲಿ ಸೂತಕ ನಿಂದು,
ಅದೇತಕ್ಕೂ ಒಡಲಿಲ್ಲದಿಪ್ಪುದು,
ಕಾಮಧೂಮ ಧೂಳೇಶ್ವರ ತಾನು ತಾನೆ./56
ಧೀರೆಯಾದ ಮಾಸ್ತಿಗೆ ವೀರತ್ವವಲ್ಲದೆ,
ಧಾರುಣಿಯ ಜನರೆಲ್ಲರೂ ಹೇಡಿ ಮಾಸ್ತಿ ಎಂದ ಬಳಿಕ,
ವೀರತ್ವ ಎಲ್ಲಿಯದೋ ?
ಧೀರೆಯಾದ ಮಾಸ್ತಿಯ ವೀರರಾಗಿದ್ದವರು
ಮುಡಿಯಲರ, ಹಿಡಿದ ನಿಂಬೆಯ ಹಣ್ಣ ಬೇಡಿದಂತೆ ಕೊಡುವಳು.
ದೃಢವುಳ್ಳ ವೀರರು ತರುವರು, ದೃಷ್ಟವ ನೋಡಿರಣ್ಣಾ.
ಕೊಡುವಾಕೆ ದಹನವಾದಳು, ಕೊಂಬಾತ ರೂಪಾದ.
ಈತ ಬೇಡಿದ ಇಷ್ಟವ ಕೊಟ್ಟಾ ತನು
ಯಾತವೋ, ಆತ್ಮನೋ ? ಬಲ್ಲಡೆ ನೀವು ಹೇಳಿರಣ್ಣಾ.
ನಿಮ್ಮ ಜ್ಞಾನದ ಮುಸುಕ ತೆರೆದು.
ನಿಮ್ಮ ಬಲ್ಲಂತಿಕೆಯ ಕಾಣಬಹುದು.
ಕಾಮಧೂಮ ಧೂಳೇಶ್ವರಲಿಂಗವನರಿವುದಕ್ಕೆ
ಇದೇ ದೃಷ್ಟ./57
ನಡೆವಾತನ ಕಾಲ ತರಿದು, ಕೊಡುವಾತನ ಕೈಯ ಮುರಿದು,
ನುಡಿವಾತನ ನಾಲಗೆಯ ಕಿತ್ತು, ನೋಡುವಾತನ ಕಣ್ಣ ಕಳೆದು,
ಅರಿದೆಹೆನೆಂಬ ಸೂತಕವ ಮುನ್ನವೆ ಮರೆದು, ಅರಿದ ಮತ್ತೆ
ತರುವಿನ ಶಾಖೆಯಲ್ಲಿ ತೋರುವ ಅರಗಿನ ಉರಿಯ ಯೋಗದಂತೆ,
ತನುವಿನ ಮೇಲಣ ಕುರುಹು, ಮನದ ಮೇಲಣ ಸೂತಕ.
ನೆನಹು ನಿಷ್ಪತ್ತಿಯಾದಲ್ಲಿ,
ಕಾಮಧೂಮ ಧೂಳೇಶ್ವರ, ಏನೂ ಎನಲಿಲ್ಲ./58
ನಾನಾ ಚಿತ್ರ ವಿಚಿತ್ರ, ನಾನಾ ದೃಷ್ಟವಿದ್ಯಂಗಳಲ್ಲಿ
ಕಾಯಸಿದ್ಧಿ ಲೋಹಸಿದ್ದಿ ಅಂಜನಸಿದ್ಧಿ ಒಳಗಾದ
ಸಂದೇಹಸಿದ್ಧಿವುಳ್ಳವರುಂಟು.
ಭಾವ ನಿರ್ಭಾವಸಿದ್ಧಿವಂತರನಾರನೂ ಕಾಣೆ.
ಅವರು ಕಂಡಲ್ಲಿಯೆ ನಾನೆಂಬ ಪ್ರತಿರೂಪು,
ಆ ಭಾವದಲ್ಲಿಯೆ ಲೇಪವಾಯಿತ್ತು,
ಕಾಮಧೂಮ ಧೂಳೇಶ್ವರನೆಂಬುದು ಭಾವ ಲೇಪವಾದಲ್ಲಿ./59
ನಾನಾ ಜೀವದ ನೋವು ಒಂದೆಂದಲ್ಲಿ,
ಮರಣಕ್ಕೆ ನಾನಾ ಭೇದಂಗಳುಂಟು.
ಯೋನಿಯ ಕೂಟದ ಸುಖವೊಂದೆಂದಲ್ಲಿ,
ಯೋಗ ನಾನಾ ಭೇದಂಗಳುಂಟು.
ನಾನಾ ಸ್ಥಳಂಗಳ ಭೇದಿಸಿ, ವೇಧಿಸಿ, ಮೆಟ್ಟಿ ನೋಡಲಿಕ್ಕೆ
ಇಂದ್ರಿಯಂಗಳಿಗೆ ಭಿನ್ನರೂಪಾಗಿ ತೋರುತ್ತಿಹವು.
ಅದೇತರ ಗುಣವೆಂದು ನಿರಾಕರಿಸಿ ನೋಡಲಿಕ್ಕೆ ಅದಂತೆ ಇದ್ದಿತ್ತು.
ಅಂತೆಯಿದ್ದ ಮೇಲೆ ಅಂತೆಯಿಂತೆಯೆನಲಿಲ್ಲ
ಆ ಗುಣ ಚಿಂತನೆಗೆ ಹೊರಗು, ಕಾಮಧೂಮ ಧೂಳೇಶ್ವರನು./60
ನಾನಾ ಶಬ್ದಂಗಳ ಮುಟ್ಟುವ ಕೈ,
ಮುಟ್ಟಿಸಿಕೊಂಬ ವಾದ್ಯ,
ಈ ಉಭಯದ ತಂತ್ರವನರಿದು ಮುಟ್ಟುವ ಆತ್ಮಂಗೆ
ಮನ ನೆನೆದು ಮುಟ್ಟಿ, ವಾದ್ಯ ರಚನೆಯಾಗಿ,
ಕಳಾಸ ಕಡೆಗೇರಿದ ಮತ್ತೆ,
ತ್ರಿವಿಧದ ಗೊತ್ತು, ಸೂತಕ ಇತ್ತಲೆ ಉಳಿಯಿತ್ತು,
ಕಾಮಧೂಮ ಧೂಳೇಶ್ವರಾ./61
ನಿಶ್ಚಯಿಸಿಕೊಂಡಲ್ಲಿಯೆ ನಿಜತತ್ವ.
ಉತ್ತರ ಪೂರ್ವ ಉಭಯದ ಕಕ್ಷೆಯ ಬಿಟ್ಟಲ್ಲಿಯೆ ನಿತ್ಯತ್ವ.
ಅನಿತ್ಯತ್ವವೆಂಬ ಗೊತ್ತ ಮರೆದಲ್ಲಿಯೆ,
ಕಾಮಧೂಮ ಧೂಳೇಶ್ವರನು ಸಚ್ಚಿದಾನಂದ. /62
ನುಡಿದಡೆ ಮಿಥ್ಯ, ಸುಮ್ಮನಿದ್ದಡೆ ತಥ್ಯವಲ್ಲ.
ಈ ಉಭಯದ ಹೆಚ್ಚು ಕುಂದ ಹೊತ್ತುಹೋರಿಯಾಡುತ್ತ,
ಮತ್ತೆ ನಿಶ್ಚಯವಂತ ನಾನೆಂದು,
ಹೆಚ್ಚು ಕುಂದಿನೊಳಗೆ ಬೇವುತ್ತ,
ಮತ್ತೆ ನಿಶ್ಚಯಕ್ಕೆ ದೃಷ್ಟವ ಕೇಳಲಿಲ್ಲ.
ಕಾಮಧೂಮ ಧೂಳೇಶ್ವರನು ನಿತ್ಯಾನಿತ್ಯದವನಲ್ಲ. /63
ನೆನೆವುದು ನೆನೆಹಿಸಿಕೊಂಬುದು ಜಡನೆಂದು ಮತ್ತೆ,
ನಾ ನೀನೆಂಬುದಿಲ್ಲ.
ಬಾಳೆಯ ಫಲದಂತೆ, ಚೇಳಿಗೆ ಗರ್ಭವಾದಂತೆ,
ವೇಣುವಿಗೆ ಅಕ್ಕಿ ಹುಟ್ಟಿದ ಮತ್ತೆ ಬಾಳುವೆ ಉಂಟೆ ?
ನೀನೆಂಬುದ ತಾನರಿದಲ್ಲಿ, ನಾ ನೀನೆಂಬ ಭಾವವೇನೂ ಇಲ್ಲ.
ಕಾಮಧೂಮ ಧೂಳೇಶ್ವರ ಏನೂ ಎನಲಿಲ್ಲ. /64
ನೋಡುವುದಕ್ಕೆ ಮುನ್ನವೆ ಕಂಡು,
ಕಾಬುದಕ್ಕೆ ಮೊದಲೆ ಕೂಡಿ,
ಕೂಡುವುದಕ್ಕೆ ಮೊದಲೆ
ಶೂನ್ಯವೆಂಬ ಭಾವವೇನೂ ಕಲೆದೋರದೆ,
ನಿರಾಳ ಸುರಾಳವಾಯಿತ್ತು, ಕಾಮಧೂಮ ಧೂಳೇಶ್ವರಾ./65
ಪಂಚೇಂದ್ರಿಯಂಗಳಲ್ಲಿ ಒಂದರ ಗುಣವ ಒಂದರಿಯದಿರೆ,
ಹಿಂಗಿ ಲಿಂಗಕ್ಕರ್ಪಿತವಾದ ಮುಖವಿನ್ನೆಂತೊ ?
ತದ್ಭಾವಂಗಳ ತದ್ಭಾವದಿಂದಲ್ಲದೆ ಅರಿಯಬಾರದು.
ಕೊಡುವ ಅಂಗಭೇದ ಹಲವಲ್ಲದೆ ಅರಿವಾತ್ಮ ಒಂದೆ ಭೇದ.
ತಾ ತನ್ನ ಮರೆದಲ್ಲಿ ಮರಣ, ತಾ ತನ್ನನರಿದಲ್ಲಿ ಜನನ.
ನಾ ನೀನೆಂಬ ಭಾವದ ಭ್ರಮೆ ಹರಿದಲ್ಲಿ,
ತಟ್ಟುವ ಮುಟ್ಟುವ ಕೃತ್ಯದ ಸೂತಕ ಇತ್ತಲೆ ಉಳಿಯಿತ್ತು.
ಕಾಮಧೂಮ ಧೂಳೇಶ್ವರನತ್ತಲೈದಾನೆ./66
ಪೂಜಿಸಿಕೊಂಬುದು, ಪೂಜಿಸಿಹೆನೆಂಬುದು,
ಉಭಯದ ಸೂತಕವುಳ್ಳನ್ನಕ್ಕ ಪರಿಪೂರ್ಣ ಜ್ಞಾನವುಂಟೆ ?
ನಾನೆಂಬನ್ನಕ್ಕ ವಿಚಾರಿಸಿಕೊಂಡು,
ನೀನೆಂಬನ್ನಕ್ಕ ಪರಿಪೂರ್ಣವಸ್ತುವೆಂಬುದುಂಟೆ ?
ಕಾಯದ ಸುಳುಹು ನಿಂದು, ಜೀವನ ಪ್ರಕೃತಿ ಹಿಂಗಿ
ಮೇಲೊಂದ ಕಂಡೆಹೆನೆಂಬುದು ಜೀವನಲ್ಲದೆ ಪರಮನಲ್ಲ.
ಕಂಡೆಹೆನೆಂಬುದೆ ಜೀವ, ಕಾಣಿಸಿಕೊಂಡೆಹೆನೆಂಬುದೆ ವಸ್ತು.
ಉಭಯಶೂನ್ಯವಾಗಿ ನಿಂದುದು,
ಕಾಮಧೂಮ ಧೂಳೇಶ್ವರನೆಂಬುದು ತಾನೆ./67
ಪೂಜೆ ಪುಣ್ಯಕ್ಕೆ ಒಡಲು, ಜ್ಞಾನ ಶೂನ್ಯಕ್ಕೆ ಒಡಲು.
ಉಂಟು, ಇಲ್ಲ ಎಂಬುದು ಸಂದೇಹಕ್ಕೆ ಒಡಲು.
ಇಂತೀ ಒಡಲಳಿದು, ಕೊಡುವ ಕೊಂಬ ಎಡೆಯಾಟ ನಿಂದು,
ಜಿಡ್ಡೆಂಬ ಜಿಗುಡು ಹರಿದು, ಶೂನ್ಯವೆಂಬ ಸುಳುಹು ಸತ್ತು,
ಮತ್ತಾವುದೂ ಕಲೆದೋರದೆ ನಿಂದ ನಿಜ, ತಾನು ತಾನೆ,
ಕಾಮಧೂಮ ಧೂಳೇಶ್ವರಾ. /68
ಪೃಥ್ವಿ ಅಪ್ಪು ತೇಜ ವಾಯು ಆಕಾಶಂಗಳ ಕಲ್ಪಿಸಿದಾತ,
ಒಬ್ಬ ವಸ್ತು ಎಂದಲ್ಲಿ,
ಆ ಕಲ್ಪನೆಗೆ ಆ ವಸ್ತು ತೀತವೋ, ಅತೀತವೋ ?
ಆ ಪಂಚಭೂತಿಕಕ್ಕೆ ಆ ವಸ್ತು ಒಳಗೋ, ಹೊರಗೋ ?
ಒಳಗೆಂದಲ್ಲಿ ಆ ಭಾವಕ್ಕೆ ಭ್ರಮೆ,
ಹೊರಗೆಂದಲ್ಲಿ ಉಭಯದ ಶಂಕೆ ನಿಜಯೆಂತಿದ್ದಿತ್ತು,
ಅರಿವ ಆತ್ಮನಂತೆಯಿದ್ದಿತ್ತು.
ಉಭಯದ ಕಾಂತಿ ಅಡಗಿದಲ್ಲಿ,
ಕಾಮಧೂಮ ಧೂಳೇಶ್ವರನ ಲಕ್ಷ್ಯ ನಿರ್ಲಕ್ಷ್ಯವಾಗಿತ್ತು./69
ಬಂದ ಮಣಿಹ ಹಿಂಗಿತ್ತು.
ಎದೆಯಲ್ಲಿದ್ದ ಲಿಂಗದ ಕುರುಹೇಕೆ ಅಡಗದು ?
ಸಂದಣಿಸಿ ಸಂಶಯವ ಮಾಡುವ
ನಿರಂಗದ ನಿಜವೇಕೆ ಉಡುಗದು ?
ಹಾಗೆಂಬುದಕ್ಕೆ ಮುನ್ನವೆ
ಕಾಯದ ಕುರುಹು ಶೂನ್ಯವಾಗಿ,
ಭಾವ ಭಾವಿಸುವುದಕ್ಕೆ ಇಂಬಿಲ್ಲದೆ,
ಉಭಯ ನಿರ್ಮಾಣ ನಿರಾಳವಾಯಿತ್ತು,
ಕಾಮಧೂಮ ಧೂಳೇಶ್ವರಾ./70
ಬಣ್ಣವನರಿಯದ ಬಯಲಿನಂತೆ,
ಭಿನ್ನ ಅಭಿನ್ನವನರಿಯದ ಬೆಳಗಿನಂತೆ,
ಛಿನ್ನ ವಿಚ್ಫಿನ್ನವನರಿಯದ ಪರಿಪೂರ್ಣದಂತೆ,
ಅವಧಿಗೊಡಲಿಲ್ಲದ ಭಾವವಿರಹಿತನಾದೆಯಲ್ಲಾ.
ಸುಳುಹುಗೆಟ್ಟು ಸೂಕ್ಷ್ಮವರತು,
ಬೆಳಗೆಂಬ ಕಳೆನಾಮ ನಷ್ಟವಾಗಿ,
ಅದೆಂತೆಯಿದ್ದಿತ್ತು, ಅಂತೆ ಆದೆಯಲ್ಲಾ
ಕಾಮಧೂಮ ಧೂಳೇಶ್ವರಾ./71
ಬತ್ತೀಸ ಆಯುಧದಲ್ಲಿ ಕಾದಿ ಕೊಂದಡೂ
ಪ್ರಾಣಕ್ಕೆ ಕೈದುವಿನ ಹೆಚ್ಚುಗೆ ತಗ್ಗುಂಟೆ ?
ನಿಶ್ಚಯಿಸಿ ನಿಜತತ್ವವನರಿದವಂಗೆ
ಮತ್ತೆ ಹತ್ತುವ ಹಾವಸೆಯುಂಟೆ ?
ಉಂಟೆಂಬ ಭಾವ, ಇಲ್ಲಾ ಎಂಬ ಶಂಕೆ ನಿಶ್ಶಂಕೆಯಾದಲ್ಲಿ,
ಅರಿದೆ, ಮರೆದೆನೆಂಬ ಆ ತೆರದ ಸೂತಕವಿಲ್ಲ.
ಕಾಮಧೂಮ ಧೂಳೇಶ್ವರ ಎಂದೂ ಏನೂ ಎನಲಿಲ್ಲ. /72
ಬಯಲು ಬಯಕೆಗೆ ಒಳಗಾದಲ್ಲಿ ಇಕ್ಕುವರಿನ್ನಾರೊ ?
ಅರಿವ ಆತ್ಮ ಪ್ರಕೃತಿ ರೂಪಾದಲ್ಲಿ ಬೇಡಾ ಎಂದು ಬಿಡಿಸುವರಾರೊ ?
ದೀಪವೊಂದರಲ್ಲಿ ಉದಿಸಿ, ಹಲವು ಜ್ಯೋತಿಯ ಕುರುಹಿಟ್ಟಂತೆ,
ಆತ್ಮವೊಂದರಲ್ಲಿ [ಉದಿಸಿ] ಹಲವು ಇಂದ್ರಿಯಂಗಳಾದ ಸಂದನರಿಯದೆ,
ಅವ ಬಂದಬಂದಂತೆ ಆಡುವ ಸಂದೇಹಿಗಳಿಗುಂಟೆ, ನಿಜಾಂಗದ ನಿಜ ?
ಈ ದ್ವಂದ್ವವನಳಿದು ಒಂದೆಂದಲ್ಲಿ, ಅದು ನಿಜದ ಸಂಗ.
ಆ ಸಂಗವ ಹಿಂಗಿದಲ್ಲಿ, ಕಾಮಧೂಮ ಧೂಳೇಶ್ವರನು ಒಂದರವನೂ ಅಲ್ಲ./73
ಬಯಲೊಳಗಣ ಬಣ್ಣದಂತೆ, ನೀರಿನೊಳಗಣ ಸಾರದಂತೆ,
ಅನಲ ಅನಿಲನ ಸಂಗದಿಂದ ಲಯವಾದ ಸಾಕಾರದಂತೆಯಿಪ್ಪಾತನಿರವು
ಎಂತಿದ್ದಿತ್ತು, ಅಂತೆ ಇರಬಲ್ಲಡೆ ಆತ್ಮಯೋಗಸಂಬಂಧ.
ಈ ಸಂಬಂಧದ ಸಮೂಹ ನಿಂದಲ್ಲಿ,
ಕಂಡೆಹೆ, ಕಾಣಿಸಿಕೊಂಡೆಹೆನೆಂಬ ದಂದುಗ ನಿಂದಿತ್ತು,
ಕಾಮಧೂಮ ಧೂಳೇಶ್ವರಾ./74
ಬಲ್ಲವ ತಾನಾದೆನೆಂಬಲ್ಲಿ,
ಮಿಕ್ಕಾದವರಲ್ಲಿ ಗೆಲ್ಲ ಸೋಲಕ್ಕೆ ಹೋರಿಹೆನೆಂಬಲ್ಲಿ,
ಆ ಬಲ್ಲತನವಲ್ಲಿಯೆ ನಿಂದಿತ್ತು.
ಈ ಉಭಯದಲ್ಲಿ ಎಲ್ಲಿಯೂ ತಾನಿಲ್ಲದೆ,
ಆ ಭಾವದ ಸೊಲ್ಲಿಗೆ ಸಿಕ್ಕದೆ, ನಿಜವರಿತವರೆಲ್ಲರಲ್ಲಿ
ಪರಿಪೂರ್ಣನಲ್ಲಿಯೆ, ಕಾಮಧೂಮ ಧೂಳೇಶ್ವರಾ./75
ಬಸವಣ್ಣನ ಡಿಂಗರಿಗನಯ್ಯಾ,
ಚನ್ನಬಸವಣ್ಣನ ಹಳೆಯನಯ್ಯಾ,
ಪ್ರಭುದೇವರ ಬಂಟನಯ್ಯಾ,
ಮಡಿವಾಳಯ್ಯನ ಲೆಂಕನಯ್ಯಾ,
ಸಿದ್ಭರಾಮಯ್ಯನ ಭೃತ್ಯನಯ್ಯಾ.
ಇಂತೀ ಐವರ ಒಕ್ಕು ಮಿಕ್ಕ ಶೇಷಪ್ರಸಾದವನುಂಡು,
ಬದುಕಿದೆನಯ್ಯಾ.
ಕಾಮಧೂಮ ಧೂಳೇಶ್ವರಾ.
ನಿಮ್ಮ ಶರಣರೆನ್ನ ಪಾವನವ ಮಾಡಿದ ಪರಿಣಾಮವ,
ಅಂತಿಂತೆನಲಮ್ಮದೆ ನಮೋ ನಮೋ ಎನುತಿದರ್ೆನು. /76
ಬೆಳಗೆಂದಡೂ ಒಂದರಲ್ಲಿ ಪ್ರಜ್ವಲಿಸಿ
ತೋರುವುದಕ್ಕೆ ಒಡಲಾಯಿತ್ತು,
ಆರಿವೆಂದಡೂ ಒಂದ ಕುರಿತು ಒಂದಿಲ್ಲ
ಎಂಬುದಕ್ಕೆ ಬುಡವಾಯಿತ್ತು.
ಇಂತೀ ನಿಶ್ಚಯವ ತಿಳಿದು ನಿಬಿಡನಾದವಂಗೆ
ಗಜಬಜೆ, ಕೂಜನ ಒಂದೂ ಇಲ್ಲವೆಂದೆ,
ಕಾಮಧೂಮ ಧೂಳೇಶ್ವರಾ./77
ಬೇರು ಮೇಲಾದ ವೃಕ್ಷದ ತುದಿಯಲ್ಲಿ,
ನಾದ ಬಿಂದು ಕಳೆಯಿಲ್ಲದ ಹಣ್ಣು ತಲೆದೋರಿತ್ತು.
ವಿಭೇದವಿಲ್ಲದ ಪಕ್ಷಿ ಸುನಾದವಿಲ್ಲದೆ ಎರಗಿತ್ತು.
ಎರಗಿ ಮುಟ್ಟುವುದಕ್ಕೆ ಮುನ್ನವೆ,
ಹಣ್ಣು ತೊಟ್ಟಬಿಟ್ಟು ಬಟ್ಟಬಯಲಾಯಿತ್ತು,
ಕಾಮಧೂಮ ಧೂಳೇಶ್ವರ ಭಾವವಿಲ್ಲದವನಾಗಿ. /78
ಬ್ರಹ್ಮ ಪ್ರಳಯವಾದಲ್ಲಿ, ವಿಷ್ಣು ಪ್ರಳಯವಾದಲ್ಲಿ,
ರುದ್ರ ಅರ್ಧನಾರೀಶ್ವರನಾಗಿ,
ದೇವಕಾಂತಿ ಕಾಂತೆಯರಲ್ಲಿ ಉಳಿಯಿತ್ತು.
ತ್ರಿವಿಧಮೂರ್ತಿ ತ್ರಿವಿಧದಿಂದ ಕೆಟ್ಟ ಮತ್ತೆ ಅರಿವಲ್ಲಿ,
ಆದಿಶೂನ್ಯ ಬ್ರಹ್ಮಪದವಾಯಿತ್ತು,
ಭೇದಶೂನ್ಯ ವಿಷ್ಣುಪದವಾಯಿತ್ತು.
ಅನಾದಿಶೂನ್ಯ ರುದ್ರಪದವಾಗಿ ಭೇದಿಸಿ ತಿರುಗುವಲ್ಲಿ,
ಸ್ಥೂಲದಲ್ಲಿ ತೋರುವ ಶೂನ್ಯ ಅಂಧಕಾರವಾಗಿಪ್ಪುದು.
ಸೂಕ್ಷ್ಮದಲ್ಲಿ ತೋರುವ ಶೂನ್ಯ,
ದಿವಾರಾತ್ರೆಯಂತೆ ಉಭಯವ ಕೂಡಿಕೊಂಡಿಪ್ಪುದು.
ಕಾರಣದಲ್ಲಿ ತೋರುವ ಶೂನ್ಯ,
ಘಟಪಟವ ಗಭರ್ಿಕರಿಸಿಕೊಂಡಿಪ್ಪುದು.
ಇಂತೀ ಶೂನ್ಯ ನಾಮರೂಪ ನಿಃಶೂನ್ಯ ನಿರಾಲಂಬ
ಕುಂದದ ಬೆಳಗು ನುಂಗಿತ್ತು.
ನುಂಗಿದ ಘನಲಿಂಗವೆಂದು ಪ್ರಮಾಣಿಸಲಿಲ್ಲ,
ಕಾಮಧೂಮ ಧೂಳೇಶ್ವರವೆಂದೆನಲಿಲ್ಲ. /79
ಮನವಚನಕಾಯ ತ್ರಿಕರಣಶುದ್ಧವಾಗಿ
ಭಕ್ತಂಗೆ ಸತ್ಯ, ವಿರಕ್ತಂಗೆ ಜ್ಞಾನವೆಂದು
ತತ್ತುಗೊತ್ತನಿಕ್ಕಿ ಹಚ್ಚಿ ಹಾ[ಕಿ]ದಲ್ಲಿ,
ಈ ಉಭಯದ ಚಿತ್ತದಲ್ಲಿ ವೇಧಿಸುವ ವಸ್ತು ಆವುದು ?
ಭಕ್ತಿಗೂ ಜ್ಞಾನ, ವಿರಕ್ತಿಗೂ ಜ್ಞಾನ.
ಅದು ತನ್ನ ಬೆಳಗಿನಲ್ಲಿ ತನ್ನ ಕಾಣಿಸಿಕೊಂಬಂತೆ
ಆ ಗುಣ ಉಭಯಭಿನ್ನವಿಲ್ಲ.
ಕಾಮಧೂಮ ಧೂಳೇಶ್ವರನೆಂಬುದಕ್ಕೆ ಎಡೆದೆರಪಿಲ್ಲ. /80
ಮರದಲ್ಲಿ ಉರಿ ಹುಟ್ಟಿ, ಅಡಗಿ ಸುಡದ ಭೇದವ ಬಲ್ಲಡೆ,
ಕಾಯದ ಲಿಂಗದ ಸೂತಕವಿಲ್ಲ.
ಕಲ್ಲಿನಲ್ಲಿ ಕಿಡಿ ಹುಟ್ಟಿ, ಅಲ್ಲಿ ಉರಿಯದೆ,
ಆಚೆಯಲ್ಲಿ ಸಾಕಾರವ ಮುಟ್ಟಿ ಉರಿವಂತೆ,
ಆ ನಿಹಿತವನರಿದಲ್ಲಿ ಪ್ರಾಣಲಿಂಗವೆಂಬ ಮನಸೂತಕವಿಲ್ಲ.
ಸೂತಕ ಪ್ರಸೂತಕವಾಗಿ, ಏತಕ್ಕೂ ಒಡಲಿಲ್ಲದಿಪ್ಪುದು,
ಅದೇ ಅಜಾತತ್ವ, ಕಾಮಧೂಮ ಧೂಳೇಶ್ವರಾ./81
ಮರೀಚಿಕಾಜಲವ ಮೊಗೆದವರುಂಟೆ ?
ಸುರಚಾಪವ ಹಿಡಿದು ಎಸೆದವರುಂಟೆ ?
ವಾರಿಯ ಮಣಿಗೆ ದಾರವನೇರಿಸಿದವರುಂಟೆ ?
ಬಯಲೊಳಗಡಗಿದ ಬ್ರಹ್ಮ,
ಶಿಲೆಯೊಳಗಾಡುವ ಸಲೆ ನೆಲೆಯರಿಯದ ಸೂತಕರಿಗೆ
ಮಹಾಘನದ ಹೊಲಬೇತಕ್ಕೆ ಕಾಮಧೂಮ ಧೂಳೇಶ್ವರಾ ?/82
ಯುಕ್ತಿಯಿಂದ ಚಿತ್ರಾರ್ಥವ ಕಾಬ ಆತ್ಮನು
ತನ್ನ ಹೆಚ್ಚುಗೆ ತಗ್ಗನರಿಯದೆ, ಮತ್ತತ್ವದಿಂದ ಕೆಲವನಾಡಿ,
ಎಚ್ಚತ್ತಲ್ಲಿ ಚಿತ್ರವನಾಡುವುದು.
ಅದು ಸಚ್ಚಿತ್ತ, ಒಂದೋ, ಎರಡೋ ?
ಕೆಟ್ಟಲ್ಲಿ ಕೆಂಡವಾಗಿ, ಉರಿದಲ್ಲಿ ಬೆಂಕಿಯಾಗಿ,
ಉಭಯಕ್ಕೆ ಬೇರೊಂದೊಡಲುಂಟೆ ?
ಕಾಷ್ಠವುಳ್ಳನ್ನಕ್ಕ ಹೊತ್ತಿ, ಕಾಷ್ಠ ಹಿಂಗಿದ ಮತ್ತೆ ಹೊತ್ತಬಲ್ಲುದೆ ?
ದೃಷ್ಟದ ಇಷ್ಟ ಚಿತ್ತದಲ್ಲಿ ಲೋಪವಾದ ಮತ್ತೆ,
ಕಟ್ಟಿಬಿಟ್ಟೆನೆಂಬುದು ಇತ್ತಲೆ ಉಳಿಯಿತ್ತು,
ಕಾಮಧೂಮ ಧೂಳೇಶ್ವರಾ./83
ರೂಪುರಹಿತ ಶೂನ್ಯ, ರೂಪುವಿರಹಿತ ನಿಶ್ಶೂನ್ಯ.
ರೂಪುರಹಿತ ಲಿಂಗ, ರೂಪುವಿರಹಿತ ಆತ್ಮ.
ರೂಪುರಹಿತ ಜೀವ, ರೂಪುವಿರಹಿತ ಪರಮ.
ಸಮಯರಹಿತ ಲೋಕ, ಸಮಯವಿರಹಿತ ಶರಣ.
ಉಭಯವಿರಹಿತವಾಗಿ ನಿಂದ ನಿಲವು,
ಸರ್ವತೂಕಕ್ಕೆ ಹೊರಗು, ಕಾಮಧೂಮ ಧೂಳೇಶ್ವರಾ. /84
ರೂಪುವಿಡಿದು ಭಾವಿಸುವನ್ನಕ್ಕ ಸಂದೇಹಕ್ಕೊಡಲು.
ನಿರವಯದಲ್ಲಿ ಕಂಡೆಹೆನೆಂದಡೆ ಲಕ್ಷವಿಲ್ಲದ ಒಪ್ಪ.
ರೂಪು ನಿರೂಪೆಂಬ ಸಂಕಲ್ಪದ ಸೂತಕವ ಹರಿದು,
ರೂಪೆಂಬ ಅಂಗವ ತಿಳಿದು, ನಿರೂಪೆಂಬ ಆತ್ಮನನರಿದು,
ಜೀವ ಪರಮನೆಂಬ ಶಂಕೆ ಹರಿದಲ್ಲಿ,
ಕಾಮಧೂಮ ಧೂಳೇಶ್ವರ ತಾನು ತಾನೆ. /85
ಲಿಂಗದಿಂದ ಅರಿವನರಿದೆಹೆನೆಂದಡೆ, ಆತ್ಮಂಗೆ ಸೂತಕ.
ಅರಿವಿನಿಂದ ಉಭಯವ ಕಂಡೆಹೆನೆಂದಡೆ, ಅರಿವಿಂಗೆ ಸೂತಕ.
ಅರಿದ ಅರಿವು, ಆ ಅರಿವುದಕ್ಕೆ ಮುನ್ನವೆ ಕುರುಹುಗೊಂಡ ಮತ್ತೆ
ಅರಿವುದಕ್ಕೆ ಒಡಲಿಲ್ಲ, ಮರೆವುದಕ್ಕೆ ತೆರಹಿಲ್ಲ.
ಆದಿಶೂನ್ಯಕ್ಕೆ ಮೊದಲೆ, ನಾದಶೂನ್ಯವಾದ ಮತ್ತೆ
ಕಾಮಧೂಮ ಧೂಳೇಶ್ವರನೆಂದೆನಲಿಲ್ಲ./86
ಲಿಂಗದಿಂದ ಕಂಡೆಹೆನೆಂಬುದು, ಮನದ ಸೂತಕ.
ಮನದಿಂದ ಅರಿದೆಹೆನೆಂಬುದು, ಅರಿವಿನ ಸೂತಕ.
ಅರಿವಿನಿಂದ ಅರಿದೆಹೆನೆಂಬುದು, ಮಹತ್ತಪ್ಪ ಘನದ ಸೂತಕ.
ಕಾಯದಿಂದ ಕರ್ಮವ ಮಾಡಿ,
ಲಿಂಗವನರಿದೆಹೆನೆಂಬುದು ಭಾವದ ಭ್ರಮೆ.
ಭ್ರಮೆಯಳಿದು, ಅರಿವನರಿದೆಹೆನೆಂಬುದು ಉಭಯದ ಬೀಜ.
ಬೀಜ ನಷ್ಟವಾಗಿ, ಅಂಕುರ ಮಳೆದೋರದೆ,
ಶಂಕೆಯೆಂಬ ಸಂದೇಹ ನಂದಿದಲ್ಲಿ,
ಅದೇ ನಿಸ್ಸಂಗದ ಇರವೆಂದೆ, ಕಾಮಧೂಮ ಧೂಳೇಶ್ವರಾ./87
ವಾದ್ಯಕ್ಕೆ ಬಂಧವಲ್ಲದೆ, ನಾದಕ್ಕೆ ಬಂಧವುಂಟೆ ?
ಅರಿವಿಂಗೆ ಬಂಧವಲ್ಲದೆ, ಅರುಹಿಸಿಕೊಂಬವಂಗುಂಟೆ ಬಂಧ ?
ಅರಿದೆಹೆನೆಂಬ ಭ್ರಮೆ, ಅರುಹಿಸಿಕೊಂಡೆಹೆನೆಂಬ ಕುರುಹು,
ಉಭಯನಾಸ್ತಿಯಾಗಿಯಲ್ಲದೆ ಭಾವಶುದ್ಧವಿಲ್ಲ,
ಕಾಮಧೂಮ ಧೂಳೇಶ್ವರಾ./88
ವಾರಿ ತೆಂಗಿನ ಮರದಲ್ಲಿ ಏರಿತ್ತೊ ?
ಅಲ್ಲಾ, ಬೇರೊಂದು ಮಂತ್ರದಲ್ಲಿ ತುಂಬಿತ್ತೊ ?
ಅಲ್ಲಾ ವೃಕ್ಷದ ಸಹಜ ಬೀಜವೊ ?
ನೀರು ಬಲಿದು ಅದರೊಳಗೆ ಅರತು, ಆ ಸಾರವೆ ಕಾಯಾದಲ್ಲಿ,
ಆ ಕಾಯ ತುಷಾರ ಹಿಂಗಿ, ನೆರೆ ಬಲಿತು, ಹಣ್ಣು ಎಣೆಯಾದಲ್ಲಿ,
ನೀರೆಲ್ಲಿ ಅಡಗಿತ್ತು? ಹಿಪ್ಪೆ, ಕವಚವೆಲ್ಲಿದ್ದಿತ್ತು ?
ಇಂತೀ ಕಾಯ ಆತ್ಮ ಮೇಲೆಂದರಿವೆಂಬ ಕುರುಹೆಲ್ಲಿದ್ದಿತ್ತು ?,
ಎಂಬುದನರಿವುದಕ್ಕೆ ಪುರಾಣವ ಪೋಷಿಸಿಕೊಳ್ಳಿ,
ಶಾಸ್ತ್ರವ ಸಂದಣಿಸಿಕೊಳ್ಳಿ, ವೇದದ ಆದ್ಯಂತವ ಸಾಧಿಸಿಕೊಳ್ಳಿ,
ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡುಕೊಳ್ಳಿ,
ಇಂತೀ ಚಿದಾತ್ಮನು ಬಂಧಮೋಕ್ಷಕರ್ಮಂಗಳಲ್ಲಿ ದ್ವಂದಿತನೋ ?
ಆ ಅಂಗಭಾವ ವಿರಹಿತನೋ ?
ಈ ಉಭಯದ ಸಂದೇಹವುಳ್ಳನ್ನಕ್ಕ
ಕರ್ಮವ ಮಾಡುವಂಗೆ, ನಿರ್ಮಲವೊಂದುಂಟೆಂದು ಅರಿವಂಗೆ,
ಇಂತೀ ಭೇದಂಗಳನರಿತು,
ನಿರವಯದ ಸಮ್ಮಾನದ ಸುಖಿಯಾದೆನೆಂಬವಂಗೆ,
ಅದು ಭಿನ್ನರೂಪೋ, ಅಭಿನ್ನರೂಪೋ ?
ಆ ನಿಜದ ನೆಲೆಯ ನೀವೇ ಬಲ್ಲಿರಿ.
ಕಾಮಧೂಮ ಧೂಳೇಶ್ವರನಲ್ಲಿ
ಕಾಳಿಕೆ ಹಿಂಗಿದ ಕಣ್ಣಿನವಂಗಲ್ಲದೆ ಕಾಣಬಾರದು./89
ವಿದ್ಯುಲ್ಲತೆಯಂತೆ, ಆಕಾಶದ ಗರ್ಜನೆಯಂತೆ,
ಬೊಬ್ಬುಳಿಕೆಯಂತೆ, ಸ್ವಪ್ನದಲ್ಲಿ ತೋರುವ ವಿದ್ರುಮ ಸೌಭಾಗ್ಯದಂತೆ,
ಇಂತಿವು ಹೊದ್ದದ ನಿಲವು ತನ್ನಾತ್ಮನೊಲು.
ಕ್ಷುದ್ರದ ಸೂತಕವ ಹರಿದು ನಿಂದ ಅಬದ್ಧಭವಿ ಅನಾಚಾರಿಗೆ
ಆರ ಹೊದ್ದಿಗೆಯೂ ಇಲ್ಲ, ಕಾಮಧೂಮ ಧೂಳೇಶ್ವರಾ. /90
ವಿದ್ಯೆ ಅವಿದ್ಯೆಯಾದಲ್ಲಿ, ಆ ಅರಿವ ಹೊದ್ದುವ ಬಂಧವಾವುದು ?
ಕ್ಷುದ್ರ ಇಂದ್ರಿಯಂಗಳೆಂಬ ಸಂದುಸಂಶಯವಾವುದು ?
ಅದು ಒಡೆದ ಕುಂಭದ ನೀರಿನ ನೆಳಲಿನಂತೆ,
ಅದು ಕುಂಭವ ಹಿಂಗಲಿಕೆ, ಆ ಬಿಂಬ ಅಲ್ಲಿಯೆ ಅಡಗಿತ್ತು,
ಮತ್ತೆ ಕುಂಭವ ನೋಡಲಿಕ್ಕೆ ಒಂದೂ ಇಲ್ಲ.
ಆ ಅಂಗ ಲಕ್ಷದ ಕುಂಭದಲ್ಲಿ, ಇಂಗಿಹೋದ ಆತ್ಮಂಗೆ
ಬಂಧಮೋಕ್ಷಕರ್ಮಂಗಳು, ಒಂದೂ ಇಲ್ಲ,
ಕಾಮಧೂಮ ಧೂಳೇಶ್ವರನೆಂಬ ಭಾವಸಂದೇಹ ನಂದಿತ್ತಾಗಿ./91
ವೇದಕ್ಕೆ ಉತ್ತರದವನಲ್ಲ, ಶಾಸ್ತ್ರಕ್ಕೆ ಸಂತೆಯವನಲ್ಲ.
ಪುಣ್ಯಕ್ಕೆ ಪುಣ್ಯವಂತನಲ್ಲ, ವಚನದ ರಚನೆಗೆ ನಿಲ್ಲ.
ವಾಙ್ಮನ ಅಗೋಚರಕ್ಕೆ ಸಲ್ಲ, ಪ್ರಮಾಣು ಅಪ್ರಮಾಣುವೆಂಬುದಕ್ಕೆ ನಿಲ್ಲ.
ಇಂತೀ ಭೇದ ಅಭೇದ್ಯಂಗಳಲ್ಲಿ ವೇದ್ಯವಿಲ್ಲ,
ಕಾಮಧೂಮ ಧೂಳೇಶ್ವರನು./92
ವೇದನೆಯಿಂದ ವಸ್ತುವ ವೇದಿಸಿ ಕಾಣಬೇಕೆಂಬುದು ಅದೇನು ಹೇಳಾ.
ಸವರ್ೆಂದ್ರಿಯಂಗಳ ಸಂಚವ ಬಿಟ್ಟು,
ಏಕೇಂದ್ರಿಯದಲ್ಲಿ ವಸ್ತುವ ಆಚರಿಸಬೇಕೆಂಬುದು ಅದೇನು ಹೇಳಾ.
ಅಲ್ಲ ಅಹುದು, ಉಂಟು ಇಲ್ಲ ಎಂಬುದು
ಗೆಲ್ಲ ಸೋಲಕ್ಕೆ ಹೋರುವುದು ಅದೇನು ಹೇಳಾ.
ಅದು ಪಂಚಲೋಹದ ಸಂಚದಂತೆ ಹಿಂಚು ಮುಂಚಿನ ಭೇದ.
ಅರಿದೆ ಮರೆದೆನೆಂಬುದು ಪರಿಭ್ರಮಣದ ಭೇದ.
ಅರಿಯಲಿಲ್ಲ ಮರೆಯಲಿಲ್ಲ ಎಂಬುದು ಅದು ಪರತತ್ವದ ಭೇದ.
ಇಂತೀ ಗುಣ ಭಾವಂಗಳ ಲಕ್ಷಿಸಿ, ದೃಷ್ಟಿ ಉಂಟೆಂದಲ್ಲಿ ಆತ್ಮ,
ದೃಷ್ಟ ನಷ್ಟವಾಯಿತ್ತೆಂಬಲ್ಲಿಯೆ ಪರಮ.
ಉಭಯದ ತೊಟ್ಟು ಬಿಟ್ಟಲ್ಲಿ,
ನಿಜ ನಿಶ್ಚಯ ಅದೆಂತು ತಾನಂತೆ, ಕಾಮಧೂಮ ಧೂಳೇಶ್ವರನು./93
ವ್ಯೋಮದಲ್ಲಿ ತೋರುವ ತೋರಿಕೆ,
ಸಾಮವ ಮುಟ್ಟಿ ಬೆರಸಬಲ್ಲುದೆ ?
ಸಾಗರ ಸಂಬಂಧಕ್ಕೆ ಕಟ್ಟು ಒಡೆವುದೆ ?
ಮಹದಲ್ಲಿ ಬೆರಸಿದ ಮಹಾಯೋಗಿ,
ಸಂಸಾರಸಾಗರದ ಸಂಬಂಧಕ್ಕೆ ಒಳಗಪ್ಪನೆ ?
ಇಂತೀ ಸೂತಕವಳಿದ ಅಜಾತಂಗೆ
ಏತರಲ್ಲಿ ನಿಂದು ನೋಡಿದಡೂ
ನಿರ್ಜಾತ ಶೂನ್ಯ ಕಾಮಧೂಮ ಧೂಳೇಶ್ವರಾ. /94
ಶಂಕೆಯ ಹರಿದು ನುಡಿದೆಹೆನೆಂದಡೆ
ಸಕಲಗುಣಂಗಳ ಸಂಕೇತದಲ್ಲಿದ್ದೆಹೆನೆ ?
ಆತ್ಮನ ಬಿಂಕವ ಹರಿದೆಹೆನೆಂದಡೆ
ಚಲುವರ್ಿಧಫಲಪದದ ಅಂಕದಲ್ಲಿ ಸಿಕ್ಕಿ ಇದ್ದೆಹೆನೆ ?
ಶಂಕೆಯ ಸೂತಕ ಇನ್ನೆಂದಿಗೆ ಹರಿವುದು,
ಕಾಮಧೂಮ ಧೂಳೇಶ್ವರಾ ? /95
ಶರೀರದ ಮಧ್ಯದಲ್ಲಿ ನಿರವಯವಪ್ಪ ಆತ್ಮ,
ಸುಖದುಃಖಗಳಲ್ಲಿ ಅನುಭವಿಸುವುದು,
ಅರಿವೋ ? ಆತ್ಮನೋ? ಬೇರಿಪ್ಪುದೊಂದು ಕುರುಹೋ?
ಅರಿದಡೆ ಕುರುಹೆಂಬುದೊಂದು ತೆರನಿಲ್ಲ.
ಶಿಲೆಯಿಂದ ಹಲವು ರೂಪು ಮಾಡಿ,
ತಮ್ಮ ತಮ್ಮ ಒಲವರಕ್ಕೆ ಬಲುಹೆಂಬುದು ಶಿಲೆಯೋ ? ಮನವೋ ?
ಈ ಹೊಲಬನರಿತಲ್ಲಿ, ವಿಶ್ವರೂಪಂಗೆ
ನೆಲೆ ಹೊಲೆ ಕುಲ ಛಲ ಭಾವ ಭ್ರಮೆ ಮತ್ತೇನೂ ಇಲ್ಲ,
ಕಾಮಧೂಮ ಧೂಳೇಶ್ವರಾ. /96
ಷಡುವರ್ಣ ದಶವಾಯು ಚತುಷ್ಟಯಂಗಳು
ಪಂಚೇಂದ್ರಿಯ ಅಷ್ಟಮದಂಗಳೆಂದು, ಷೋಡಶಕಳೆಗಳೆಂದು,
ತ್ರಿವಿಧ ಶಕ್ತಿಯೆಂದು, ತ್ರಿವಿಧ ಆತ್ಮನೆಂದು,
ತ್ರಿವಿಧ, ಭೂತಿಕವೆಂದು,
ಪಂಚವಿಂಶತಿತತ್ವಂಗಳೆಂದು, ಪಿಂಡಪಿಂಡಭಾವವೆಂದು,
ಜ್ಞಾನಜ್ಞಾನ ಸಂಬಂಧವೆಂದು
ಇಂತೀ ಭೇದಂಗಳ ಸಂಕಲ್ಪಿಸಿ ನುಡಿವುದು ಅದೇನು ಹೇಳಾ.
ಅದು ಅರಿವಿನ ಮರವೆಯೋ ?
ಮರೆದು ಅರಿದ ಎಚ್ಚರಿಕೆಯೋ ?
ಇಂತೀ ಭೇದವ ತೆರೆದು ಕಂಡೆನೆಂಬ ಸೂತಕವ ಮರೆದಲ್ಲಿ,
ಆ ಗುಣ ಎಂತೆಯಿದ್ದಿತ್ತು ಅಂತೆ ವಸ್ತು,
ಕಾಮಧೂಮ ಧೂಳೇಶ್ವರನು./97
ಸಕಲದ್ರವ್ಯಂಗಳೆಂದು ಕಲ್ಪಿಸಿ,
ಇದಿರಿಟ್ಟು ಅರ್ಪಿಸಿಕೊಂಬುದು,
ಅರ್ಪಿಸಿಹೆನೆಂಬುದು, ಅದಾವ ಚಿತ್ತ ?
ಅದು ಉದಕ ವರ್ಣದ ಭೇದ, ವರ್ಣಕೂಟದ ಭಾವ.
ಲೆಪ್ಪವ ಲಕ್ಷಿಸಿದಂತೆ,
ಅದೆಂತೆಯಿದ್ದಿತ್ತು ಚಿತ್ತವಂತೆ ಇದ್ದಿತ್ತು,
ಕಾಮಧೂಮ ಧೂಳೇಶ್ವರಾ. /98
ಸತ್ತು ಸಾಯದುದ ಕಂಡು, ಸಾಯದುದ ಸತ್ತಿತ್ತೆಂಬುದನರಿದು,
ಈ ಉಭಯದ ಗೊತ್ತಿನಲ್ಲಿ ಲಕ್ಷ್ಯದ ಭಾವ ನಷ್ಟವಾಗಿ,
ಉರಿ ಸಾರವ ಕೊಂಡು ಉರಿದಂತೆ,
ಆ ಉರಿ ನಂದಿದಲ್ಲಿ, ಉಭಯ ನಿರವಯವಾಯಿತ್ತು,
ಕಾಮಧೂಮ ಧೂಳೇಶ್ವರಾ. /99
ಸತ್ಯಶುದ್ಧಕಾಯಕವ ಮಾಡಿ ತಂದು,
ವಂಚನೆಯಿಲ್ಲದೆ ಪ್ರಪಂಚಳಿದು,
ನಿಚ್ಚಜಂಗಮಕ್ಕೆ ದಾಸೋಹವ ಮಾಡುವ
ಸದ್ಭಕ್ತನ ಹೃದಯದೊಳಗೆ ಅಚ್ಚೊತ್ತಿದಂತಿಪ್ಪ,
ಕಾಮಧೂಮ ಧೂಳೇಶ್ವರ. /100
ಸರ್ವಘಟಂಗಳಲ್ಲಿ ಸುಖದುಃಖ ಅನುಭವಿಸುವ
ಆ ಆತ್ಮ ಒಂದೋ, ಎರಡೋ?
ಸರ್ವಯೋನಿಗಳಲ್ಲಿ ಕೂಡುವ ಶಿಶ್ನೆಯ ಸುಖ ಒಂದೋ, ಎರಡೋ ?
ಆತ್ಮ ಒಂದೆಂದಡೆ ಘಟಭೇದಕ್ಕೆ ಬಿನ್ನವಾಗಿಪ್ಪುದು.
ಆತ್ಮ ಹಲವೆಂದಡೆ ಚೇತನ ಸ್ವಭಾವ ಏಕವಾಗಿಪ್ಪುದು.
ಆ ಘಟ ಆತ್ಮನ ಕೂಟ ಎಂತೆಯಿದ್ದಿತ್ತು ಅಂತೆ ಸುಖವಿದ್ದಿತ್ತು.
ಯೋನಿಯ ಘಟ ಸಾಕಾರ ಎಂತೆಯಿದ್ದಿತ್ತು ಅಂತೆಯಿದ್ದಿತ್ತು ಶಿಶ್ನೆಯ ಯೋಗ.
ಆತ್ಮನ ಘಟಸಂಗ ಜಾತಿಯ ಸುಜಾತಿಯ ಕೂಟಸ್ಥ
ವಿಶ್ವಾಸದ ಭ್ರಾಂತಿಯ ಭ್ರಾಮಕಯೆಂತಿದ್ದಿತ್ತು ಅಂತೆಯಿದ್ದಿತ್ತು ಆತ್ಮ.
ಇಂತೀ ಘಟದ ಸಾಕಾರವಡಗಿ ತೋರುವ ಆತ್ಮನ ಪರಿ.
ಭಿನ್ನ ಇಂದ್ರಿಯಂಗಳ ಹಲವು ಸಂಚಿನ ಯೋನಿ.
ಅದ ಸಂಧಿಸಿ ಕೂಡಿಹೆನೆಂಬ ಅರಿಕೆಯ ತೃಷ್ಣೆಯ ಶಿಶ್ನೆ ತಲಹಗೆಟ್ಟಲ್ಲಿ,
ಭ್ರಾಂತಿನ ಭ್ರಮೆಯ ಸೂತಕ ಹೋಯಿತ್ತು,
ಕಾಮಧೂಮ ಧೂಳೇಶ್ವರನ ತಾನು ತಾನಾದ ಕಾರಣ./101
ಸುಳಿವ ಅನಿಲಂಗೆ ಮೈಯೆಲ್ಲ ಕೈ.
ಸುಡುವ ಅನಲಂಗೆ ಭಾವವೆಲ್ಲ ಬಾಯಿ.
ಹಲಿವ ನೀರಿಂಗೆ ತನ್ಮಯವೆಲ್ಲ ಅಡಿ.
ಅರಿಯದೆ ಮರೆಯದೆ ಮುಟ್ಟಿಹಂಗೆ
ಕಡೆ ನಡು ಮೊದಲೆಂದು ಅರ್ಪಿತವಿಲ್ಲ.
ಇಲ್ಲಾ ಎಂಬ ಸೂತಕಕ್ಕೆ ಮುನ್ನವೆ ಇಲ್ಲ,
ಕಾಮಧೂಮ ಧೂಳೇಶ್ವರನು./102
ಹಲವು ಚಿತ್ರವ ನೆನೆವ ಮನಕ್ಕೆ ಬೇರೆ ಸಲೆ ವಸ್ತು,
ಒಂದೆಂದು ನೆಲೆಯಲ್ಲಿ ನಿಲಬಲ್ಲುದೆ ?
ಜಲವ ತಪ್ಪಿದ ಮತ್ಸ್ಯ, ಬಿಲವ ತಪ್ಪಿದ ಸರ್ಪ,
ನೆಲೆಯ ತಪ್ಪಿದ ಆತ್ಮ ಬೇರೊಂದಕ್ಕೆ ಒಲವರವುಂಟೆ ?
ಕಳನನೇರಿಯಿಳಿದ ಮತ್ತೆ, ಒಡೆಯನ ಹೊಲಬಿಲ್ಲಾ ಎಂದೆ,
ಕಾಮಧೂಮ ಧೂಳೇಶ್ವರಾ./103