Categories
ಶರಣರು / Sharanaru

ಮಾದಾರ ಧೂಳಯ್ಯ

ಅಂಕಿತ: ಕಾಮಧೂಮ ಧೂಳೇಶ್ವರ
ಕಾಯಕ: ಚರ್ಮದ ಕಾಯಕ

ಪಾದರಕ್ಷೆ ಸಿದ್ಧಪಡಿಸುವ ಕಾಯಕವನ್ನು ಕ್ಯಕೊಂಡಿದ್ದ ಈತನ ತಂದೆ- ಕಕ್ಕಯ್ಯ, ತಾಯಿ-ನುಲಿದೇವಿ, ಹೆಂಡತಿ-ದಾರುಕಿ, ಕಾಲ-೧೧೬೦. ಬ್ರಾಹ್ಮಣನೊಬ್ಬನ ಕುಷ್ಠರೋಗವನ್ನು ನಿವಾರಿಸಿದನೆಂಬ ಸಂಗತಿ ಈತನ ಚರಿತ್ರೆಯಿಂದ ತಿಳಿದುಬರುತ್ತದೆ. ಕಾಯಕದಲ್ಲಿಯೇ ಶಿವನನ್ನು ಸಾಕ್ಷಾತ್ಕರಿಸಿಕೊಂಡ ನಿಷ್ಠಾವಂತ ಭಕ್ತನೀತ. ‘ಕಾಮಧೂಮ ಧೂಳೇಶ್ವರ’ ಅಂಕಿತದಲ್ಲಿ ೧೦೬ ವಚನಗಳನ್ನು ರಚಿಸಿದ್ದಾನೆ. ಕಾಯಕದ ಮಹತ್ವ, ಜ್ಞಾನ-ಮೋಕ್ಷಗಳ ಸ್ವರೂಪ, ಭಕ್ತಿಯ ಶ್ರೇಷ್ಠತೆಯನ್ನು ಅವು ತಿಳಿಸುತ್ತವೆ. ವೃತ್ತಿ ಪರಿಭಾಷೆ, ಬೆಡಗಿನ ಭಾಷೆ, ಅಲಂಕಾರಿಕ ಶೈಲಿ ಇವುಗಳ ವಿಶೇಷತೆ ಎನಿಸಿದೆ.

ಈತ ಸಂಸ್ಕ್ರತವನ್ನು ಆಧಾರವಾಗಿ ಕೊಟ್ಟು ತನ್ನ ಚಿಂತನೆಗಳನ್ನು ವಿವರಿಸಬಲ್ಲ ವಿದ್ವಾಂಸ-ವಾಸ್ತವವಾದಿ. ಕಾಯಕದಲ್ಲಿ ನಿರತನಾದ ತನಗೆ ಕೈಲಾಸದ ಅಗತ್ಯವಿಲ್ಲವೆನ್ನುವ ಧ್ಯೇಯವಾದಿ ಈತ. ಅರಿವು-ಮರವೆಯ ಬಗೆಗಿನ ಇವನ ಆಲೋಚನೆಗಳು ಚಿಂತನಾರ್ಹವಾಗಿವೆ. ಎನ್ನ ತನುವ ಮನವ, ಪ್ರಾಣವ ನಿರ್ಮಲ ಮಾಡಿದವರು ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರು ಎನ್ನುವಲ್ಲಿ ಅವರ ಬಗೆಗಿನ ಗೌರವ ತನಗೆ ತಾನೇ ಪ್ರಕಟಗೊಳ್ಳುತ್ತದೆ. ತನ್ನ ಕಾಯಕವನ್ನು ಹೇಳುತ್ತಲೇ ಅದನ್ನು ಬೇರೊಂದು ಅರ್ಥವಲಯಕ್ಕೆ ತೆಕ್ಕೆ ಹಾಕುವ ಗುಣವಿಶೇಷ ಇವನಲ್ಲಿ ಕಂಡುಬರುತ್ತದೆ.