Categories
ವಚನಗಳು / Vachanagalu

ಮುಕ್ತಾಯಕ್ಕನ ವಚನಗಳು

ಅಂಧಕನ ಕೈಯ ಅಂಧಕ ಹಿಡಿದಂತಿರಬೇಕು.
ಮೂಗನ ಕೈಯಲ್ಲಿ ಕಾವ್ಯವ ಕೇಳಿದಂತಿರಬೇಕು.
ದರ್ಪಣದೊಳಗಣ ಪ್ರತಿಬಿಂಬದಂತೆ
ಹಿಡಿವರಿಗಳವಲ್ಲದಿರಬೇಕು ಅಣ್ಣಾ.
ಕೂರ್ಮನ ಶಿಶುವಿನ ಸ್ನೇಹದಂತೆ ಇರಲೊಲ್ಲದೆ
ಆರೂಢಗೆಟ್ಟೆಯೊ ಅಜಗಣ್ಣಾ./1
ಅಂಬರದಲಾಡುವ ತುಂಬಿಯ ಬಿಂಬದ ಕಂಬನಿಯೊಳಗಣ ರತ್ನದ
ಬಯಕೆಯಾದ್ಯಂತವನೇನೆಂಬೆನಯ್ಯಾ ?
ವೇದ ಶಾಸ್ತ್ರ ಶ್ರುತಿ ಸ್ಮೃತಿಗಳು ಸ್ತುತಿಸಲರಿಯವು.
ನಾದವಲ್ಲ, ಸುನಾದದ ನಿಲವಲ್ಲ
ಭೇದಿಸುವಡೆ ಅಗಮ್ಯ ನೋಡಾ !
ಸೊಲ್ಲಿಲ್ಲದ ಸೊಮ್ಮಿಲ್ಲದ ಘನವನೇನೆಂಬೆನು ?
ಎಂತು ಮರೆವೆನಯ್ಯಾ ಎನ್ನ ಅಜಗಣ್ಣ ತಂದೆಯನು ?/2
ಅದ್ವೈತವ ನೆಲೆಗೊಳಿಸಿ ಎರಡಳಿದೆನೆಂಬವರು
ಶಿಶುಕಂಡ ಕನಸಿನಂತಿರಬೇಕಲ್ಲದೆ,
ನುಡಿದು ಹೇಳುವನ್ನಕ್ಕರ ಬಿನ್ನವಲ್ಲದೇನು ಹೇಳಾ ?
ಅರಿವರತು ಮರಹು ನಷ್ಟವಾಗಿ ಗುರುವ ತೋರಿದೆನೆಂಬರು.
ಇದಿರಿಂಗೆ ಕರುಳಕಲೆಯನರುಹುವ ಪರಿಯೆಂತು ಹೇಳಾ ?
ಮನದ ಕೊನೆಯ ಮೊನೆಯ ಮೇಲಣ ಅರಿವಿನ ಕಣ್ಣಮುಂದೆ
ಸ್ವಯಂಪ್ರಕಾಶ ತೋರುತ್ತಿದ್ದಡೆ ತಾನಾಗಬಲ್ಲನೆ ?
ನೆರೆಯರಿತು ಮರೆಯಬಲ್ಲಡೆ
ಎನ್ನ ಅಜಗಣ್ಣನಂತೆ ಶಬ್ದಮುಗ್ಭನಾಗಿರಬೇಕಲ್ಲದೆ,
ಶಬ್ದಸಂದಣಿಯ ಮಾತು ಸಯವಲ್ಲ ನೋಡಯ್ಯಾ./3
ಅರಿವನಣಲೊಳಗಿಕ್ಕಿ ಅಗಿವುತ್ತಿದೆ ಮರ್ತ್ಯಲೋಕವೆಲ್ಲವು.
ಅರಿವು ಉಳಿಯಲರಿಯದೆ ಕೆಟ್ಟಿತ್ತು ಲೋಕವೆಲ್ಲವು.
ನಾನೆಂತು ಬದುಕುವೆನಣ್ಣಾ ?
ಕತ್ತಲೆ ಬೆಳಗ ಕಾಂಬ ಸಂದೇಹಿ ನಾನೊಬ್ಬಳು.
ಎನ್ನ ಕಣ್ಣ ಕಟ್ಟಿ ಕನ್ನಡಿಯ ತೋರಿತ್ತೊ ಅಜಗಣ್ಣಾ ನಿನ್ನ ಯೋಗ !/4
ಅಲರೊಳಡಗಿದ ಪರಿಮಳದಂತೆ,
ಪತಂಗದೊಳಡಗಿದ ಅನಲನಂತೆ,
ಶಶಿಯೊಳಡಗಿದ ಷೋಡಶಕಳೆಯಂತೆ,
ಉಲುಹಡಗಿದ ವಾಯುವಿನಂತೆ,
ಸಿಡಿಲೊಳಡಗಿದ ಗಾತ್ರದ ತೇಜದಂತೆ
ಇರಬೇಕಯ್ಯಾ ಯೋಗ, ಎನ್ನ ಅಜಗಣ್ಣತಂದೆಯಂತೆ./5
ಅಹುದಹುದು ಶಿವಶರಣರ ಮಹಿಮೆ ಆರಿಗೆಯೂ ಕಾಣಬಾರದು.
ಕಬ್ಬುನ ಉಂಡ ನೀರಿನಂತೆ, ಕಬ್ಬಿಸಿಲುಂಡ ಅರಿಸಿನದಂತೆ,
ಉರಿಯೊಳಡಗಿದ ಕರ್ಪುರದಂತೆ, ಬಯಲನಪ್ಪಿದ ವಾಯುವಿನಂತೆ
ಇಪ್ಪ ನಿಲವು ನುಡಿದು ಹೇಳಿಹೆನೆಂಬ ಮಾತಿಂಗೆ ಅಳವಡುವುದೆ ?
ಅರಿವಡೆ ಮತಿಯಿಲ್ಲ, ನೆನೆವಡೆ ಮನವಿಲ್ಲ
ಎನ್ನ ಅಜಗಣ್ಣ ತಂದೆಯನೊಳಕೊಂಡಿಪ್ಪ ನಿಮ್ಮ ಮಹಿಮೆಗೆ
ನಮೋ ನಮೋ ಎನುತಿರ್ದೆನು./6
ಆರೂ ಇಲ್ಲದವಳೆಂದು ಆಳಿಗೊಳಲುಬೇಡ;
ಆಳಿಗೊಂಡಡೆ ಆನು ಅಂಜುವಳಲ್ಲ.
ಒಲವಿನ ಒತ್ತೆಕಲ್ಲನು ಬೆವರಿಸಬಲ್ಲೆ ಕಾಣಿರೊ !
ಅಪ್ಪಿದವರನಪ್ಪಿದಡೆ ತರಗೆಲೆಯಂತೆ
ರಸವನರಸಿದಡುಂಟೆ ಅಜಗಣ್ಣತಂದೆ ?/7
ಆರೆಂದು ಕುರುಹ ಬೆಸಗೊಳಲು, ಏನೆಂದು ಹೇಳುವೆನಯ್ಯಾ ?
ಕಾಯದೊಳಗೆ ಮಾಯವಿಲ್ಲ;
ಭಾವದೊಳಗೆ ಭ್ರಮೆಯಿಲ್ಲ.
ಕರೆದು ಬೆಸಗೊಂಬಡೆ ಕುರುಹಿಲ್ಲ.
ಒಬ್ಬರಿಗೂ ಹುಟ್ಟದೆ, ಅಯೋನಿಯಲ್ಲಿ ಬಂದು
ನಿರ್ಬುದ್ಭಿಯಾದವಳನೇನೆಂಬೆನಣ್ಣಾ ?
ತಲೆಯಳಿದು ನೆಲೆಗೆಟ್ಟು ಬೆಳಗುವ ಜ್ಯೋತಿ
ಎನ್ನ ಅಜಗಣ್ಣತಂದೆಯ ಬೆನ್ನಬಳಿಯವಳಾನಯ್ಯಾ./8
ಉಟ್ಟುದ ತೊರೆದವಂಗೆ ಊರೇನು, ಕಾಡೇನು ?
ನಷ್ಟಸಂತಾನಕ್ಕೆ ಕುಲವೇನು, ಛಲವೇನು ?
ಹುಟ್ಟುಗೆಟ್ಟಾತಂಗೆ ಪುಣ್ಯವೇನು, ಪಾಪವೇನು ?
ಅದು ಕೆಟ್ಟದು ಕೆಟ್ಟದು.
ನಿನ್ನ ನೀನರಿಯದೆ ಬಟ್ಟಬಯಲಲ್ಲಿ ಬಿದ್ದೆಯಲ್ಲಾ ಅಜಗಣ್ಣತಂದೆ!/9
ಎನ್ನ ಭಾವಕ್ಕೆ ಗುರುವಾದನಯ್ಯಾ ಬಸವಣ್ಣನು.
ಎನ್ನ ನೋಟಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು.
ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು.
ಎನ್ನ ಪರಿಣಾಮಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು.
ಎನ್ನ ಹೃದಯಕ್ಕೆ ಮಂತ್ರವಾದನಯ್ಯಾ ಮಡಿವಾಳಯ್ಯನು.
ಇಂತೀ ಐವರ ಕಾರುಣ್ಯಪ್ರಸಾದವ ಕೊಂಡು
ಬದುಕಿದೆನಯ್ಯಾ ಅಜಗಣ್ಣತಂದೆ./10
ಏಕತತ್ವ ತ್ರಿತತ್ವ ಪಂಚತತ್ವ ಪಂಚವಿಂಶತಿತತ್ವ ಷಟ್ತ್ರಿಂಶತ್ ತತ್ವವ
ಗರ್ಭಿಕರಿಸಿಕೊಂಡಿಪ್ಪಾತನು ಅಜಗಣ್ಣನೆ.
ತತ್ವವೆಲ್ಲಕ್ಕದಿಕವಾಗಿಪ್ಪಾತನು ಅಜಗಣ್ಣನೆ, ಮಹಾತತ್ವವು ಅಜಗಣ್ಣನೆ,
ಶ್ರೀಗುರುತತ್ವವು ಅಜಗಣ್ಣನೆ, ಪರತತ್ವವು ಅಜಗಣ್ಣನೆ.
ಶಿವಶಿವಾ ಹರಹರಾ, ಸಕಲವೇದಶಾಸ್ತ್ರಪುರಾಣಾಗಮ
ಅಷ್ಟಾದಶ ವಿದ್ಯಂಗಳು ಸರ್ವ ವಿದ್ಯಂಗಳು
ಸಪ್ತಕೋಟಿ ಮಹಾಮಂತ್ರಂಗಳು ಉಪಮಂತ್ರವನಂತಕೋಟಿಗಳಿಗೆ
ಮಾತೃಸ್ಥಾನವಾದಾತನು ಅಜಗಣ್ಣನೆ.
ಲಯ ಕಾಲ ಸ್ಥಿತಿಗಳಿಗೆ ಕಾರಣವಾಗಿರ್ಪಾತನು ಅಜಗಣ್ಣನೆ.
ಮಂತ್ರರಾಜನು ಅಜಗಣ್ಣನೆ, ಮೂಲಮಂತ್ರವು ಅಜಗಣ್ಣನೆ.
ಏಕವಾದ ಮಹಾಲಿಂಗವು ಅಜಗಣ್ಣನೆ,
ಮಹಾಲಿಂಗವಾಗಿಪ್ಪಾತನು ಅಜಗಣ್ಣನೆ.
ಮಹಾಸದ್ಭಕ್ತನು ಅಜಗಣ್ಣನವ್ವಾ.
ತತ್ವಜ್ಞಾನ ಅಜಗಣ್ಣನೆ, ತತ್ವಮಯನು ಅಜಗಣ್ಣನೆ.
ಮಹಾಮಂತ್ರ ಮುಖೋದ್ಗತವಾದಾತನು ಅಜಗಣ್ಣನೆ.
ಮಹಾಲಿಂಗೈಕ್ಯನು ಅಜಗಣ್ಣನೆ.
ಆತನೆ ಮಹಾಘನಮಹತ್ತನೊಳಕೊಂಡಿರ್ಪನಾಗಿ
ಶಿವಶಿವಾ, ಸದ್ಭಕ್ತ ಅಜಗಣ್ಣ ಗುರುವಿಂಗೆ ಪೂಜೆ ಅರ್ಚನೆ ಭಜನೆಗಳಿಲ್ಲವಾಗಿ
ಉಪಮಾತೀತ ಅಜಗಣ್ಣನು, ವಾಙ್ಮನಕ್ಕತೀತ ಅಜಗಣ್ಣನು.
ಮಹಾಗುರುವ ಕಾಣದೆ ನಾನೆಂತು ತಾಳುವೆನವ್ವಾ ?
ಬ್ರಹ್ಮರಂಧ್ರದಲ್ಲಿ ಗುರುಮೂರ್ತಿಯಾಗಿಪ್ಪ ಪರಮಾತ್ಮನು ಅಜಗಣ್ಣನೆ.
ಭ್ರೂಮಧ್ಯದಲ್ಲಿಲಿಂಗಮೂರ್ತಿಯಾಗಿಪ್ಪಾತನು ಅಜಗಣ್ಣನೆ.
ಹೃದಯದಲ್ಲಿ ಜಂಗಮಮೂರ್ತಿಯಾಗಿಪ್ಪಾತನು ಅಜಗಣ್ಣನೆ
ಇಂತಪ್ಪ ಅಜಗಣ್ಣನೇನಡಗಿಸಿದನವ್ವಾ.
ಧ್ಯಾನಿಸಿ ನೆನೆದಡೆ ಶೋಕಿಸಿದರೆಂಬರೆಲೆ ಅವ್ವಾ.
ಈ ಅಜಗಣ್ಣತಂದೆಯನಗಲಿ ನಾನೆಂತು ಸೈರಿಸುವೆನೆಲೆ
ಸತ್ಯಕ್ಕ ತಾಯೆ ಆಹಾ ?/11
ಕಣ್ಣ ಮೊದಲಲ್ಲಿ ಕುಳ್ಳಿರ್ದು ಬಣ್ಣದೋರುವ ಪರಿಯ ನೋಡಾ ಅವ್ವಾ.
ಬಣ್ಣವಿಲ್ಲದ ಬಣ್ಣವನುಟ್ಟು ಸುಳಿದನು.
ಈ ಅಜಗಣ್ಣನ ಯೋಗಕ್ಕೆ ಬೆರಗಾದೆನವ್ವಾ.
ಈ ಅರಿವೆಂತುಟೆಲ್ಲವನೊಳಗಿಟ್ಟುಕೊಂಡನು,
ಶಿವಗಣಸಂಚ ಶಿವಯೋಗಿ ಅಜಗಣ್ಣದೇವನು/12
ಕೈಯದು ಕುರುಹು, ಬಾಯದು ಬೊಬ್ಬೆ.
ಉಲಿಯದಿರೊ ಭಾವಾ, ಉಲಿಯದಿರೊ ಭಾವಾ !
ವಾರಿಕಲ್ಲ ಕೊಡನಲ್ಲಿ ಮುತ್ತು ಮಾಣಿಕವ ತುಂಬಿ,
ಎತ್ತುವರಿಲ್ಲದೆ ಸಖಿಯನರಸುತಿಪ್ಪೆ.
ಮನದ ತನುವಿನಲ್ಲಿ, ಆ ತನುವಿನ ಮನದಲ್ಲಿ
ತನಗೆ ತಾನೆತ್ತಿಕೊಂಡಡೆ,
ಮನ ಮೇರೆದಪ್ಪಿ ಕರಗಿ ಉಕ್ಕಿತ್ತು ನಮ್ಮ ಅಜಗಣ್ಣನಯೋಗ./13
ಕ್ರೋಧವೆಂಬ ಹೊಲಗೇರಿಯ ಹೊರವಂಟು,
ಭೇದವೆಂಬೈವರನತಿಗಳೆದನು.
ನಾದಬಿಂದುವೆಂಬ ತೀರ್ಥವನು ಮಿಂದು,
ಆದಿ ಎಂಬ ಅಷ್ಟದಳವಂ ಕಿತ್ತೆತ್ತಿ ಹೋದನು.
ನಾದ ಬಿಂದು ಆದಿ ಬೋಧೆಗೆ ಒಳಗಾದ ಘನವನು
ಸಾದಿಸಿದಂ ಭೋ ಎನ್ನ ಅಜಗಣ್ಣತಂದೆ/14
ಗುರುವಚನದಿಂದಲ್ಲದೆ ಲಿಂಗವನರಿಯಬಾರದು.
ಗುರುವಚನದಿಂದಲ್ಲದೆ ಜಂಗಮವನರಿಯಬಾರದು.
ಗುರುವಚನದಿಂದಲ್ಲದೆ ಪ್ರಸಾದವನರಿಯಬಾರದು.
ಗುರುವಚನದಿಂದಲ್ಲದೆ ತನ್ನ ತಾನರಿಯಬಾರದು.
ಹಿಂದಣ ಜನ್ಮದಲ್ಲಿ ಲಿಂಗವ ಪೂಜಿಸಿ ಇಂದು ಜ್ಞಾನೋದಯವಾದಡೆ
ಗುರುವಿಲ್ಲದ ಮುನ್ನ ಆಯಿತ್ತೆನ್ನಬಹುದೆ ?
ತನ್ನಲ್ಲಿ ತಾನು ಸನ್ನಹಿತನಾದೆಹೆನೆಂದಡೆ ಗುರುವಿಲ್ಲದೆ ಆಗದು ಕೇಳಾ.
ಎನ್ನ ಅಜಗಣ್ಣನೆಂಬ ಗುರುವಿಲ್ಲದೆ
ಆರೂಡಿಯ ಕೂಟ ಸಮನಿಸದು ಕೇಳಾ./15
ಘನಮಹಿಮಶರಣರ ಸಂಗದಿಂದ ಘನಕ್ಕೆ ಘನವೇದ್ಯವಾದ ಬಳಿಕ
ಅರಿಯಲಿಲ್ಲ, ಮರೆಯಲಿಲ್ಲದ ಕೂಡಲಿಲ್ಲ, ಅಗಲಲಿಲ್ಲ.
ಮನ ಮೇರೆದಪ್ಪಿ ನಿರವಯಲಾದ ಸುಖವ
ಶೂನ್ಯ ನಿಶ್ಶೂನ್ಯವೆಂದು ನುಡಿಯಲುಂಟೆ ?
ಶಬ್ದಮುಗ್ಭವಾಗಿ ಎನ್ನ ಅಜಗಣ್ಣತಂದೆಯ ಬೆರಸಿದ ಬಳಿಕ
ಉರಿಯುಂಡ ಕರ್ಪೂರದಂತಾದೆನಯ್ಯಾ./16
ಜಲದ ಚಿತ್ತಾರದ ಕೊರಳಿನಲ್ಲಿ
ದಾರವಿಲ್ಲದ ಮುತ್ತಿನ ಸರವು ನೋಡಾ !
ಚಿತ್ತಾರವಳಿಯದೆ, ಮುತ್ತು ಉಳಿಯದೆ
ನಿಂದ ನಿಲವಿನ ಪರಿಯ ನೋಡಾ !
ಗಮನವಿಲ್ಲದ ಗಂಬಿರ, ಶಬುದವಿಲ್ಲದ ಸಾರಾಯ
ಸಮತೆಯಾಗಿ ನಿಂದ ಅಜಗಣ್ಣಂಗೆ ಇನ್ನಾರು ಸರಿ ಎಂಬೆನು/17
ಜ್ಞಾನಮೂಲ ಗುರುಸೇವೆ ಎಂಬೆನು.
ಐಶ್ವರ್ಯಮೂಲ ಲಿಂಗಾರ್ಚನೆ ಎಂಬೆನು.
ಮೋಕ್ಷಮೂಲ ಘಟಸಂತೃಪ್ತಿ ಎಂಬೆನು ಅಜಗಣ್ಣಲಿಂಗವೆ./18
ತನುವಿಡಿದನಾಗಿ ಅನುವನರಿಯದೆ ಕೆಟ್ಟೆನು.
ಮನವಿಡಿದೆನಾಗಿ ಅರಿವು ಉಳಿಯದೆ ಕೆಟ್ಟೆನು.
ಭಾವದ ಬಯಕೆ ಹಿಂಗದಾಗಿ ವಿಯೋಗಿಯಾಗಿ ಕೆಟ್ಟೆನು.
ಅರಿವ ನುಡಿದು ಮರಹಿಗೊಳಗಾದೆನು.
ಎನ್ನ ಕಾಣದೆ ಬಿನ್ನಜ್ಞಾನಿಯಾದೆನು.
ಅಜಗಣ್ಣನೆಂಬ ಮಹಿಮನು ಘನವೇದ್ಯನಾಗಿ
ಎನ್ನ ಮತಿಗೆ ಮರವೆಯ ಮಾಡಿಹೋದನು./19
ತನುವಿನೊಳಗೆ ತನುವಾಗಿ, ಮನದೊಳಗೆ ಮನವಾಗಿ,
ಪ್ರಾಣದೊಳಗೆ ಪ್ರಾಣವಾಗಿಪ್ಪುದೆಂದಡೆ
ಕೆಲಬರಿಗೆ ಅರಿಯಬಪ್ಪುದೆ ?
ಅಂತರಂಗದೊಳಗೆ ಅದೆ ರಿಂದಡೇನು ?
ಮನ ಮುಟ್ಟುವನ್ನಕ್ಕರ ಕಾಣಬಾರದು.
ಬಹಿರಂಗದಲ್ಲಿ ಅದೆ ರಿಂದಡೇನು ?
ಪೂಜಿಸುವನ್ನಕ್ಕರ ಕಾಣಬಾರದು.
ಸಾಕಾರವಲ್ಲದ ನಿರಾಕಾರ ಲಿಂಗವು
ವ್ಯಾಕುಲವುಳ್ಳನ್ನಕ್ಕರ ಸಾಧ್ಯವಾಗದು.
ರಿನ್ನ ಮನದೊಳಗೆ ಘನವನನುಗೊಳಿಸಿ ತೋರುವರಿಲ್ಲದ ಕಾರಣ
ರಿನ್ನ ಅಜಗಣ್ಣನಿಕ್ಕಿದ ದಸರಿದೊಡಕಿಂಗೆ ಬೆರಗಾದೆ ಕಾಣಾ ಪ್ರಭುವೆ ?/20
ತನ್ನ ತಾನರಿದವಂಗೆ ಅರಿವೆ ಗುರು.
ಅರಿವರತು ಮರಹು ನಷ್ಟವಾದಲ್ಲಿ, ದೃಷ್ಟನಷ್ಟವೆ ಗುರು.
ದೃಷ್ಟನಷ್ಟವೆ ಗುರು ತಾನಾದಲ್ಲಿ,
ಮುಟ್ಟಿ ತೋರಿದವರಿಲ್ಲದಡೇನು ?
ಸಹಜವ ನೆಲೆಗೊಳಿಸುವ ನಿರ್ಣಯ ನಿಷ್ಪತ್ತಿಯೆ ಗುರು ನೋಡಾ.
ಗುರು ತಾನಾದಡೂ ಗುರುವಿಡಿದಿರಬೇಕು ರಿನ್ನ ಅಜಗಣ್ಣನಂತೆ./21
ತೊರೆಯ ಕಟ್ಟೆಯಕಟ್ಟಿ ನಿಲಿಸಲುಬಹುದೆ ?
ನೆರೆ ಮರುಳಿಗೆ ಬುದ್ಧಿಯ ಹೇಳಲುಬಹುದೆ ?
ತರಿಸಲುವೋದವನಿದಿರಿಚ್ಫೆಯನರಿಯದೆ ಮರೆದಿದ್ದಡೆ
ಹಗೆ ಇರಿವುದ ಮಾಣ್ಬನೆ ?
ದೂರದಲ್ಲಿ ಹೋದವ ಊರ ಸುದ್ದಿಯನರಿಯ.
ಹೇಳದೆ ಬಯಲಾದ ಕಾಣಾ, ಎನ್ನ ಅಜಗಣ್ಣತಂದೆ./22
ದೇವ ದೇವ ಶರಣು ಶರಣಾರ್ಥಿ, ಅವಧರಿಸಯ್ಯಾ.
ಕೇಳಿದ ಸುಖ ಕಿವಿಗೆ ಬೇಟವಾಯಿತ್ತು.
ಕಿವಿಗಳ ಬೇಟ ಕಂಗಳಮುಂದೆ ಮೂರ್ತಿಗೊಂಡಿತ್ತು.
ಕಂಗಳಮುಂದೆ ಕಂಡ ಸುಖವು ಮನಕ್ಕೆ ವೇದ್ಯವಾಯಿತ್ತು.
ಶಿವಶರಣರ ದರುಶನದ ಸುಖವನೇನೆಂದೆನಬಹುದು ?
ಮದವಳಿದು ಮಹವನೊಡಗೂಡಿದ ಎನ್ನ ಅಜಗಣ್ಣನನಗಲಿದ ದುಃಖ
ನಿಮ್ಮ ಸಂಗದಲ್ಲಿ ಸಯವಾಯಿತ್ತು ಕಾಣಾ ಪ್ರಭುವೆ./23
ನಡೆದು ನಡೆದು ನಡೆಯ ಕಂಡವರು
ನುಡಿದು ನುಡಿದು ಹೇಳುತ್ತಿಹರೆ ?
ನುಡಿದು ನುಡಿದು ಹೇಳುವನ್ನಕ್ಕರ
ನಡೆದುದೆಲ್ಲಾ ಹುಸಿಯೆಂಬೆನು.
ಮಾತಿನ ಮಥನದಿಂದಾದ ಅರಿವು
ಕರಣಮ ಥನದಿಂದಾದುದಲ್ಲದೆ,
ಅನುಪಮ ಸ್ವರಭೇದವಾದ ಪರಿ ಎಂತು ಹೇಳಾ ?
ಇದಿರ ಗೆಲಬೇಕೆಂದು ನುಡಿದುಕೊಂಡಡೇನು,
ಮನಕ್ಕೆ ಮನವೆ ಸಾಕ್ಷಿಯಾಗಿ ನಿಃಪತಿಯಲ್ಲ ನೋಡಾ ?
ಎನ್ನ ಅಜಗಣ್ಣತಂದೆ ಶಬುದಕ್ಕೆ ಹೇಸಿ ಮುಗುದನಾದನು./24
ನೀರಬೊಂಬೆಗೆ ನಿರಾಳದ ಗೆಜ್ಜೆಯ ಕಟ್ಟಿ,
ಬಯಲಬೊಂಬೆಯ ಕೈಯಲ್ಲಿ ಕೊಟ್ಟು ಮುದ್ದಾಡಿಸುತ್ತಿರ್ದನಯ್ಯಾ.
ಕರ್ಪೂರದ ಪುತ್ಥಳಿಗೆ ಅಗ್ನಿಯ ಸಿಂಹಾಸನವನಿಕ್ಕಿ,
ಅಗ್ನಿ ಕರಗಿ ಕರ್ಪೂರ ಉಳಿದುದಕ್ಕೆ ಬೆರಗಾದೆನಯ್ಯಾ, ರಿನ್ನ ಅಜಗಣ್ಣನ ಯೋಗಕ್ಕೆ./25
ನುಡಿಯ ಹಂಗಿನ್ನೂ ನಿಮಗೆ ಹಿಂಗದು,
ನಡೆಯನೆಂತು ಪರರಿಗೆ ಹೇಳುವಿರಿ ?
ಒಡಲ ಹಂಗಿನ ಸುಳುಹು ಬಿಡದುದ
ಎನ್ನೊಡನೆ ಮತ್ತೇತರ ಅನುಭವವಣ್ಣಾ ?
ತಾನಾದಲ್ಲದೆ ಇದಿರಿಂಗೆ ಹೇಳಬಹುದೆ ?
ಅರಿವ ತೋರಬಲ್ಲಡೆ ತನ್ನನರುಹದೆ ಅರಿವನು ಕಾಣಾ
ಎನ್ನ ಅಜಗಣ್ಣತಂದೆ./26
ನುಡಿಯಲುಬಾರದು ಕೆಟ್ಟನುಡಿಗಳ.
ನಡೆಯಲುಬಾರದು ಕೆಟ್ಟನಡೆಗಳ.
ನುಡಿದಡೇನು ನುಡಿಯದಿರ್ದಡೇನು ?
ಹಿಡಿದವ್ರತ ಬಿಡದಿರಲು, ಅದೆ ಮಹಾಜ್ಞಾನದಾಚರಣೆ
ಎಂಬೆನು ಅಜಗಣ್ಣ ತಂದೆ./27
ನುಡಿಯೆನೆಂಬಲ್ಲಿಯೆ ನುಡಿ ಅದೆ.
ನಡೆಯೆನೆಂಬಲ್ಲಿಯೆ ನಡೆ ಅದೆ.
ಭಾವಿಸೆನೆಂಬಲ್ಲಿಯೆ ಭಾವ ಅದೆ.
ಅರಿದು ಮರೆದೆನೆಂಬಲ್ಲಿಯೆ ಅರಿವು ಮರವೆ ಅದೆ.
ಅಂಗದಲ್ಲಿ ಲಿಂಗ ಲೀಯವಾಯಿತ್ತೆಂದಡೆ
ಅಲ್ಲಿಯೆ ಅಂಗ ಅದೆ.
ಅನಂಗಸಂಗಿಯಾದೆನೆಂಬಲ್ಲಿಯೆ ವಿಷಯಸೂತಕ ಅದೆ.
ನಾನೆ ನಾನಾದೆನೆಂಬಲ್ಲಿಯೆ ನೀನೆಂಬುದು ಅದೆ.
ಅರಿದು ಮರೆದ ಪರಿ ಎಂತು ಹೇಳಾ ?
ಅರಿವು ನಷ್ಟವಾಗಿ, ಮರಹು ಲಯವಾಗಿಪ್ಪಡೆ
ಎನ್ನ ಅಜಗಣ್ಣತಂದೆಯಲ್ಲದೆ ಮತ್ತಾರನೂ ಕಾಣೆ./28
ರವಿಯೊಳಡಗಿದ ಪ್ರತಿಬಿಂಬದಂತೆ
ಹಿಡಿವರಿಗಳವಲ್ಲದಿರಬೇಕು ಅಣ್ಣಾ.
ನಿನ್ನೊಳಡಗಿದ ಭೇದವ ಬಿನ್ನವಮಾಡುವರೆ ಅಣ್ಣಾ ?
ನಿನ್ನ ನುಡಿಯೆಲ್ಲ ಪ್ರತಿಬಿಂಬಗಳಾದವೆ ಅಣ್ಣಾ.
ಕೊಡನೊಳಗಣ ಜ್ಯೋತಿಯ ಅಡಗಿಸಲರಿಯದೆ
ಮಿಗೆವರಿದಂತಾದೆಯೊ ಅಜಗಣ್ಣಾ !/29
ವಾಯುವನುಟ್ಟನೇಕವ್ವಾ ?
ಅಗ್ನಿಗೆ ಆಧಾರವಾಗಿ ಆಕಾಶವ ಹೊದ್ದದೆ ವೈರಾಗ್ಯದಿಂದ ಬಂದು
ಅರಣ್ಯವ ಹೊಕ್ಕು ಕದಳಿಯ ಹೊಕ್ಕನೆಂದು
ಕಥಕುಳಿ ಕದಾಕುಳಿಗಥುತ್ತಿದ್ದೆ, ಹದುಳವೇಕವ್ವಾ ?
ಎಮ್ಮ ಸೋದರಕ್ಕೆ ಬಾಳಿಲ್ಲ.
ಬಾಣಸ ಕೂರಲಗಾಗಿ ಅವನಾಳಿಗೊಂಬ ಶಿವಯೋಗಿ,
ಅವಕ್ಕೇಳಿಗೆಯಾಗಿ ಹೊಕ್ಕನವ್ವಾ ನಮ್ಮ ಅಜಗಣ್ಣತಂದೆ./30
ಸಚ್ಚಿದಾನಂದಸ್ವರೂಪವಾದ, ವಾಙ್ಮನಕ್ಕಗೋಚರವಾದ,
ಜ್ಞಾನಕ್ರೀಯನೊಳಕೊಂಡು ನಿಂದ ಜಂಗಮವೆ ಅಂಗ ಪ್ರಾಣವಾದ,
ಶರಣರನೊಳಕೊಂಡು ಚಿದ್ಘನದೊಳಗೆ ಅವಿರಳೈಕ್ಯವಾದ
ರಿನ್ನ ಅಜಗಣ್ಣತಂದೆಯನರಿದು ಶರಣೆಂಬಾತ
ನೀನಾರು ಹೇಳಯ್ಯಾ ?/31
ಸತ್ಯವುಳ್ಳಲ್ಲಿ ಶಬುದ ಹಿಂಗದು;
ಭಾವವುಳ್ಳಲ್ಲಿ ಭಕ್ತಿ ಹಿಂಗದು.
ಮೂರುಲೋಕದ ಹಂಗಿನ ಶಬುದವೇನಯ್ಯಾ ?
ಮುಕುತಿಯನೇವೆನಯ್ಯಾ
ಎನ್ನ ಯುಕುತಿಯ ಮುಕುತಿಯ ಬಕುತಿಯಪದವನು ಕಂಡು
ನಾಚಿದನಜಗಣ್ಣತಂದೆ./32
ಸಿಡಿಲುಹೊಯ್ದ ಬಾವಿಗೆ ಸೋಪಾನವುಂಟೆ ?
ಷಡುವರ್ಣರಹಿತಂಗೆ ಬಣ್ಣವುಂಟೆ ?
ಕಡಲದಾಂಟಿದವಂಗೆ ಹರುಗೋಲುಂಟೆ ?
ಬಿಡದೆ ಕಟ್ಟಿದ ಒರೆಗೆ ಸಂಧಾನವುಂಟೆ ?
ಒಡಲಿಲ್ಲದವಂಗೆ ಒಡವೆಯುಂಟೆ ?
ನುಡಿಯುಂಟೆ ಎಮ್ಮ ಅಜಗಣ್ಣದೇವಂಗೆ ?/33
ಸಿಡಿಲುಹೊಯ್ದ ಬಾವಿಗೆ ಸೋಪಾನವೇಕೊ ?
ನೆರೆಯರಿದ ಬಳಿಕ ಮತ್ತೆ ಮತಿ ಹುಟ್ಟಲುಂಟೆ ?
ಸೊಡರುಳ್ಳ ಮನೆಗೆ ಮತ್ತೆ ತಮಂಧವೆಂಬುದೇನೊ ?
ತನ್ನಲ್ಲಿ ತಾನು ತದ್ಗತವಾದ ಬಳಿಕ
ಬೊಮ್ಮ ಪರಬೊಮ್ಮವಾದೆನೆಂಬುದಿಲ್ಲ ನೋಡಾ ಎನ್ನ ಅಜಗಣ್ಣತಂದೆಗೆ./34
ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ?
ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ ?
ಮಾಡ ಬನ್ನಿ ದಿನ ಶಿವರಾತ್ರಿಯ, ಕೇಳ ಬನ್ನಿ ಶಿವಾನುಭವವ,
ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ./35
ಸ್ಫಟಿಕಪ್ರಜ್ವಲಜ್ಯೋತಿ ಘಟದೊಳಗೆ ತೋರುತ್ತಿರೆ,
ದಿಟಪುಟವನತಿಗಳೆದು ಸಟೆಯ ಬಳಸುವರೆ ?
ಅಂತರಂಗದ ಶುದ್ಭಿಯ ಬಹಿರಂಗಕ್ಕೆ ತಂದು
ಸಂತೈಸಲರಿಯದೆ ಮರುಳಾದಿರಣ್ಣಾ ?
ಜಂತ್ರದ ಕೀಲಕೂಟದ ಸಂಚದ ಭೇದವು ತಪ್ಪಿ,
ಮಂತ್ರಬಿನ್ನವಾಗಿ ನುಡಿವರೆ ಅಜಗಣ್ಣಾ ?/36
ಹಿಡಿದಾಚಾರವ ಬಿಡದನ್ನಕ್ಕರ,
ಎನ್ನ ಅರಿವ ಮರೆಯದನ್ನಕ್ಕರ,
ಎನ್ನ ಮನವ ಸುಡದನ್ನಕ್ಕರ,
ಎನ್ನ ಬೆಡಗಿನ ಗುರುವ ತೊರೆಯದನ್ನಕ್ಕರ,
ಸುಸರವೆಂತಪ್ಪುದೊ ಹೇಳಾ ?
ಹೋಹ ಬಟ್ಟೆಯನರಿಯದನ್ನಕ್ಕರ
ತಾನಾಗಬಾರದು ಕಾಣಾ, ಎನ್ನ ಅಜಗಣ್ಣತಂದೆಯಂತೆ./37