Categories
ಶರಣರು / Sharanaru

ಮುಕ್ತಾಯಕ್ಕ

ಅಂಕಿತ: ಅಜಗಣ್ಣತಂದೆ

ಈಕೆ ಅನುಭಾವಿಕ ನೆಲೆಯ ತುಂಬ ಎತ್ತರದ ಶರಣೆ. ಈಕೆಯ ತವರೂರು ಲಕ್ಕುಂಡಿ, ಗಂಡನೂರು ಮಸಳಿಕಲ್ಲು. ಶರಣ ಅಜಗಣ್ಣ ಈಕೆಯ ಸಹೋದರ ಮತ್ತು ಗುರು. ಈತನ ಲಿಂಗೈಕ್ಯ ಸಂದರ್ಭದಲ್ಲಿ ದು:ಖಿಯಾದ ಈಕೆಯನ್ನು ಅಲ್ಲಮಪ್ರಭು ಅರಿವಿನ ಕಣ್ಣು ತೆರೆಸುವ ಮೂಲಕ ಸಾಂತ್ವನಪಡಿಸುತ್ತಾನೆ. ಕಾಲ-೧೧೬೦.
‘ಅಜಗಣ್ಣ ತಂದೆ’ ಅಂಕಿತದಲ್ಲಿ ರಚಿಸಿದ ೩೨ ವಚನಗಳು ದೊರೆತಿವೆ. ಇವೆಲ್ಲ ಅಣ್ಣನ ಅಗಲಿಕೆಯ ಸಂದರ್ಭದಲ್ಲಿ ವ್ಯಕ್ತಪಡಿಸಿದ ಶೋಕಗೀತೆಗಳಂತಿವೆ. ಅಲ್ಲಮಪ್ರಭುವಿನ ಜೊತೆ ನಡೆಸಿದ ಆಧ್ಯಾತ್ಮ ಸಂವಾದದಲ್ಲಿ ಮೂಡಿ ಬಂದ ಅನುಭಾವ ಗೀತೆಗಳೆನಿಸಿವೆ. ಶೂನ್ಯ ಸಂಪಾದನೆಯಲ್ಲಿ ಮೂಡಿದ ಈ ಸಂವಾದ ತುಂಬ ಪ್ರಸಿದ್ಧವಾಗಿದೆ.

ಈಕೆಯ ಸೋದರ ಅಜಗಣ್ಣನೂ ವಚನಕಾರನಾಗಿದ್ದು ಅವನ ಅಂಕಿತ ಮಹಾಘನ ಸೋಮೇಶ್ವರಾ’ ಎಂಬುದಾಗಿದೆ. ಕನ್ನಡದ ಶ್ರೇಷ್ಠ ಅನುಭಾವಿ ಅಲ್ಲಮನ ಜೊತೆಗಿನ ಸಂವಾದವನ್ನು ಗಮನಿಸಿದಾಗ ಬಹುದೊಡ್ಡಜ್ಞಾನಿ ಎಂದು ವೇದ್ಯವಾಗುತ್ತದೆ.