Categories
ವಚನಗಳು / Vachanagalu

ಮುಮ್ಮಡಿ ಕಾರ್ಯೇಂದ್ರ -ಮುಮ್ಮಡಿ ಕಾರ್ಯ ಕ್ಷಿತೀಂದ್ರನ ವಚನಗಳು

ಅಂಗದೊಳಗಿರ್ಪ ಶಕ್ತಿಯಾತ್ಮಸಂಗದಿಂ ಪ್ರಕಾಶಮಾಗಿ,
ಆ ಶರೀರಕ್ಕೂ ತನಗೂ ಭೇದಮೆನಿಸಿಕೊಳ್ಳಲು,
ಅಲ್ಲಿ ಕರ್ಮವು ಉತ್ಪನ್ನಮಾಗಿ,
ಆ ಕರ್ಮಮುಖದಿಂ ಪ್ರಪಂಚವನವಗ್ರಹಿಸಲೋಸುಗ
ಸೃಷ್ಟಿಸ್ಥಿತಿಸಂಹಾರಂಗಳೆಸಗೆ,
ಆ ಶರೀರವು ವ್ಯಯವನೆಯ್ದಿ, ಪೃಥ್ವಿಯ ಚರಿಸುವಂದದಲಿ
ಲಿಂಗದಲ್ಲಿರ್ಪ ಶಿವನಿಂದ ತತ್ವಪ್ರಕಾಶಮಾಗಿ,
ಮನಸ್ಸಿನಲ್ಲಿ ಭೇದತೋರದೆ ಕೂಡಿದಲ್ಲಿ, ಜ್ಞಾನಮುತ್ಪನ್ನಮಾಯಿತ್ತು.
ಜ್ಞಾನಮುಖದಿಂ ಮನ ಮಹವನವಗ್ರಹಿಸಿ,
ಸತ್ತುಚಿತ್ತಾನಂದದಿಂ ಸಾಧಿಸುತ್ತಿರಲು, ಮನವಳಿದು ಲಿಂಗಮಪ್ಪುದು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./1
ಅಖಂಡಕಾಲಾತೀತಮಾದ ಮಹಾಲಿಂಗವೇ
ಆದಿಶಕ್ತಿಯ ಸಂಗದಿಂ ಸೋಮನಾದುದರಿಂ
ಆದಿತ್ಯನೇ ಶಕ್ತಿಯು, ಸೋಮನೇ ಶಿವನು.
ಆದಿತ್ಯ ಸೋಮರಿಂದುದಯಿಸಿದ ಶನಿಯೇ ವಿಷ್ಣುವು, ಶುಕ್ರನೇ ಲಕ್ಷ್ಮಿಯು.
ಆ ಶನಿ ಶುಕ್ರರಿಂದುದಿಸಿದ ಬೃಹಸ್ಪತಿಯೇ ಬ್ರಹ್ಮನು,
ಅದಕೆ ಬುಧನೇ ಶಕ್ತಿ;
ಆ ಬೃಹಸ್ಪತಿ ಬುಧರಿಂದುದಿಸಿದ ಪ್ರಪಂಚವೇ ಮಂಗಳ,
ಸೋಮನೇ ಬ್ರಾಹ್ಮಣನು, ಅದಕೆ ಕ್ಷತ್ರಿಯ ಶಕ್ತಿ,
ಶನಿಯೇ ಕ್ಷತ್ರಿಯನು, ಅದಕೆ ವೈಶ್ಯಶಕ್ತಿ;
ಬೃಹಸ್ಪತಿಯೇ ವೈಶ್ಯನು, ಅದಕೆ ಬ್ರಾಹ್ಮಣಶಕ್ತಿ;
ಅಂಗಾರಕನೇ ಶೂದ್ರನು, ಅದಕೆ ಆತ್ಮಶಕ್ತಿ.
ಇಂತು ಕೃಷ್ಯಾದಿಕರ್ಮಂಗಳಿಗೆ ಕಾರಣಮಾಗಿಹ ಸೋಮನೇ
ಸಪ್ತವಾರಂಗಳೊಳು ಅಂಶವಾದೊಡೆ,
ಆದಿತ್ಯನಲ್ಲಿ ಶನಿರೂಪಮಾಗಿ ತಾನೇ ಜನಿಸುತ್ತಿಹನು.
ಈ ಪ್ರಕಾರದಲ್ಲಿ ಸಪ್ತವಾರಂಗಳು ಒಂದಕ್ಕೊಂದು ಕಾರಣಮಾಗಿಹವು.
ಸೋಮಾದಿತ್ಯ ಶನಿ ಶುಕ್ರಾಂಗಾರಕರು ಉಪಾಸನಾದಿ
ಪೂಜಾಯೋಗ್ಯರಾಗಿಹರು.
ಬೃಹಸ್ಪತಿ ಬುಧರು ಬ್ರಹ್ಮಸರಸ್ವತೀ ಸ್ವರೂಪಿಗಳಾದುದುರಿಂದ
ಉಪಾಸನಾಕರ್ಮಯೋಗ್ಯರಲ್ಲದಿಹರು.
ಪರಮಶಾಂತಿಮಯನಾದ ಶಿವನು ಉಗ್ರಸ್ವರೂಪವಾದ
ಆದಿಶಕ್ತಿಯಂ ಕೂಡಿದುದರಿಂ ತಮೋಗುಣಸ್ವರೂಪಿಯಾಗಿಹನು,
ಉಗ್ರಸ್ವರೂಪವಾದ ವಿಷ್ಣುವು ಶಾಂತಶುಕ್ಲಸ್ವರೂಪಮಾದ
ಲಕ್ಷ್ಮಿಯೊಳಗೆ ಕೂಡಿದುದರಿಂ ಸತ್ವಗುಣಸ್ವರೂಪಿಯಾಗಿಹನು,
ಹೀಗೆ ಈ ಈರ್ವರು ಸಂಸಾರಯುಕ್ತರಾಗಿರಲು,
ಈ ಪ್ರಪಂಚದಲ್ಲಿ ಸಂಸಾರಬದ್ಧನಾದ ನಾನು
ನಿಜವಾಸನೆಯಲ್ಲಿ ಸಂಚರಿಸಬಲ್ಲೆನೇನಯ್ಯಾ?
ಮಿಥ್ಯೆಯಲ್ಲಿ ನನ್ನಂ ಕೂಡಿ ಸತ್ಯಪ್ರಕಟನವಂ ಮಾಡಲಿಲ್ಲೆಂದು
ನನ್ನಂ ಸಾಧಿಸುವುದು ನಿನಗೆ ಯೋಗ್ಯವೇ?
ನಿನ್ನಂತೆ ನನ್ನಂ ನೋಡದಿದರ್ೊಡೆ
ಆತ್ಮವತ್ಸರ್ವಭೂತಾನಿ ಎಂಬ ಶ್ರುತ್ಯರ್ಥಕ್ಕೆ ಹಾನಿ ಬಾರದಿರ್ಪುದೆ?
ಶ್ರುತಿಯಬದ್ಧದಲ್ಲಿ ಕರ್ಮಕ್ಕೆ ಹಾನಿಯಪ್ಪುದು,
ಕರ್ಮನಾಶವೇ ಸಂಸಾರಕಾರಣವು.
ಇದನರಿತು ನನ್ನ ಮಿಥ್ಯಾದುರ್ಗುಣಂಗಳಂ ವಿಚಾರಿಸಿದೆ
ನನ್ನಂ ಪರಿಗ್ರಹಿಸಿ ಕೊಡಿದೊಡೆ, ನಿನ್ನ ಸರ್ವಜ್ಞತ್ವವು ಸಾರ್ಥಕಮಾಗಿ
ನಿನ್ನ ಕ್ರೀಡೆಗೆ ಕೇಡುಬಾರದು ಕಂಡ್ಯಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /2
ಅಖಂಡಪರಿಪೂರ್ಣವಾಗಿ ಸಕಲವೂ ತಾನೇ ಆಗಿರ್ಪ ಸದಾಶಿವನು,
ಸಕಲ ಸುಖದುಃಖಾದ್ಯನುಭವಂಗಳನನುಭವಿಸುತ್ತಾ,
ನಿತ್ಯಾನಂದಮಯನಾಗಿರ್ಪನದೆಂತೆಂದೊಡೆ : ಸ್ತ್ರೀವಂಶಗತನಾದವಂಗೆ ನಖಕ್ಷತ, ದಂತಕ್ಷತ, ತಾಡನ, ಅರ್ಥವ್ಯಯಾದಿ
ಸಕಲ ಸುಖ ದುಃಖಂಗಳು ಸುಖರೂಪಮಾಗಿ ತೋರುತ್ತಿರ್ಪಂತೆ.
ಮಹಾದೇವಿಯೊಡನೆ ಕ್ರೀಡಿಸುತ್ತಿರ್ಪ ಶಿವನಿಗೆ
ಸಕಲಸುಖದುಃಖಂಗಳಾನಂದಜನಕಮಾಗಿರ್ಪವು.
ಜೀವಾಂಶಗಳಾಗಿರ್ಪ ಗುಣಂಗಳು ಆ ಜೀವಸ್ವರೂಪಸ್ವಭಾವವನರಿಯದಿರ್ಪಂತೆ,
ನಿನ್ನ ಮಹಿಮೆಯಂ ಕಿಂಚಿತಜ್ಞನಾದ ನಾನೆತ್ತ ಬಲ್ಲೆನು ?
ಮನವಂ ಜಯಿಸಬಲ್ಲ ಸರ್ವಜ್ಞನಾದ ಜೀವನು
ಗುಣಂಗಳು ಮಾಡಿದ ದುಷ್ಕರ್ಮಂಗಳಂ ಹೊಂದದೆ
ಸ್ವಸ್ವರೂಪದಲ್ಲಿ ಪ್ರಕಾಶಿಸುತ್ತಿರ್ಪಂತೆ,
ಬ್ರಹ್ಮಾದಿ ಸಕಲಪ್ರಪಂಚವಂ ಸಂಹರಿಸಲು ಶಕ್ತನಾದುದರಿಂ
ಜೀವರು ಮಾಡಿದ ದುಷ್ಕರ್ಮಂಗಳು ನಿನ್ನಂ ಹೊಂದದೆ,
ಸಕಲವೂ ನೀನೆಯಾಗಿರ್ಪ ನಿನ್ನ ಮಹಿಮೆಯು
ನನಗೆ ಸಾಧ್ಯಮಪ್ಪಂತೆ ಮಾಡಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./3
ಅಗ್ನಿಯಲ್ಲಿ ಕಾಣಿಸುವ ಛಾಯೆಯು ನಿರಾಕಾರ ತಮೋರೂಪುಳ್ಳದ್ದು,
ಜಲದಲ್ಲಿ ಕಾಣಿಸುವ ಛಾಯೆಯು ಸಾಕಾರಸತ್ವಸ್ವರೂಪುಳ್ಳದ್ದು.
ಅಗ್ನಿಯಲ್ಲಿ ರೂಪುಮಾತ್ರವೇ,
ಜಲದಲ್ಲಿ ರೂಪುರುಚಿಗಳೆರಡೂ ಪ್ರತ್ಯಕ್ಷಮಾಗಿಹವು.
ಸಾಕಾರಛಾಯೆ ನಿಜಮಾಗಿ, ಹಾವಭಾವವಿಲಾಸವಿಭ್ರಮ ಕಾರಣಮಾಗಿಹುದು.
ನಿರಾಕಾರಛಾಯೆ ಜಡಮಾಗಿ ವೈರಭಿನ್ನಮಾಗಿಹುದು.
ಗುರುದತ್ತಲಿಂಗದಿಂದ ತನ್ನ ನಿಜಭಾವಮಂ ತಿಳಿದು,
ಲಿಂಗವೂ ತಾನೂ ಏಕಮೆಂಬ ಭಾವವು ಬಲಿದು
ಭಿನ್ನಭ್ರಮೆಯಳಿದು ಮನಂಗೊಂಡಿರ್ಪುದೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /4
ಆಕಾಶವಿಷಯಕ್ಕೆ ವಾಯುವೇ ಪ್ರಕಾಶಕಾರಣವು,
ಆ ವಾಯುವಿಷಯಕ್ಕೆ ತೇಜಸ್ಸೇ ಪ್ರಕಾಶಕಾರಣವು,
ಆ ಅಗ್ನಿ ವಿಷಯಕ್ಕೆ ಜಲವೇ ಪ್ರಕಾಶಕಾರಣವು,
ಆ ಜಲವಿಷಯಕ್ಕೆ ಪೃಥ್ವಿಯೇ ಪ್ರಕಾಶಕಾರಣವು,
ಆ ಪೃಥ್ವೀವಿಷಯಕ್ಕಾತ್ಮನೇ ಪ್ರಕಾಶಕಾರಣವು,
ಆ ಆತ್ಮನು ಎಲ್ಲಕ್ಕೂ ಪ್ರಕಾಶಕಾರಣನೂ ಆಧಾರಭೂತನೂ ಆಗಿರ್ಪನು.
ಆತನು ವಾಸನೆವಿಡಿದಲ್ಲಿ ಜೀವನಹನು, ವಾಸನೆಯಳಿದಲ್ಲಿ ಪರಮನಹನು,
ಜಪಸ್ಫಟಿಕನ್ಯಾಯದಂತಾ ವಾಸನೆಯ ಫಲ ಕಾರಣ,
ಆ ಫಲವೇ ಸೃಷ್ಟಿ ಸ್ಥಿತಿ ಸಂಹಾರಕಾರಣವು,
ಅದೇ ಸುಖದುಃಖಾನುಭವಕಾರಣಮಾದ ಭವವೆನಿಸಿಕೊಂಬುದು,
ಬೀಜದಲ್ಲಿ ವಾಸನೆಯಡಗಿಪ್ಪಂತೆ ಜೀವನಲ್ಲಿ ವಾಸನೆಯಡಗಿ,
ಕಾಲಕರ್ಮದಿಂದ ಪ್ರಕಾಶಮಾಗಿರ್ಪುದು.
ಅಖಂಡವಾಯೂಪಾಧಿಯಿಂದ ಅಕ್ಷರರೂಪಮಾಗಿ,
ಅಕ್ಷರಂಗಳೊಳಗೆ ಕೂಡಿ, ನಾನಾರ್ಥಂಗಳನ್ನೀವುತ್ತಾ ,
ಶರೀರಂಗಳಳಿದರೆ ಭವಿಷ್ಯಚ್ಛರೀರಂಗಳಂ ಹೊಂದಿ,
ತತ್ತದರ್ಥಕ್ರಿಯಾನುಗುಣಮಾಗಿ ಪ್ರವರ್ತಿಸುವಂತೆ,
ಆತ್ಮನು ವಾಸನೆವಿಡಿದು, ಖಂಡಿತ ಜೀವರೂಪದಲ್ಲಿ ಶರೀರಬದ್ಧನಾಗಿ,
ಒಂದಂ ಬಿಟ್ಟೊಂದಂ ಹಿಡಿದು, ಶರೀರೋಪಾಧಿಯಂ ಬಿಡದಿರ್ಪುದೇ ಭವವು.
ಇಂತಪ್ಪ ಪ್ರಪಂಚವಾಸನೆವಿಡಿದ ಜೀವನಿಗೆ
ಪ್ರಪಂಚದ ಕೂಡ ಅಲ್ಲದೆ ಮೋಕ್ಷವಿಲ್ಲ.
ಸದಾಶಿವಾತ್ಮ ಪಂಚಾಕ್ಷರಮಂತ್ರವೆಲ್ಲ ಆ ಶಿವಸ್ವರೂಪಮಾಗಿ ತೋರ್ಪಂತೆ,
ಲಿಂಗಾತ್ಮವಾದ ಜೀವನ ಭಾವದಲ್ಲೆಲ್ಲ ಲಿಂಗವೇ ಕಾಣುತ್ತಿರ್ಪುದು.
ಮಂತ್ರದಲ್ಲಿ ಶಿವನೂ ಶಿವನಲ್ಲಿ ಮಂತ್ರವೂ ಅಡಗಿಪ್ಪಂತೆ,
ಲಿಂಗದಲ್ಲಿ ಭಕ್ತನೂ, ಭಕ್ತನಲ್ಲಿ ಲಿಂಗವೂ ಅಡಗಿಪ್ಪುದು.
ಅರ್ಥವಂ ತಿಳಿದಾನಂದಿಸುವಾಗಕ್ಷರವಂ ಮರೆವಂತೆ,
ಲಿಂಗವಂ ತಿಳಿದಾನಂದಿಸಿ ತನ್ನಂ ಮರೆದಿರ್ಪುದೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./5
ಆಕಾಶವೇ ಸೂಕ್ಷ್ಮವು, ಪೃಥ್ವಿಯೇ ಸ್ಥೂಲವು,
ಪೃಥ್ವಿಯಲ್ಲಿ ಮನುಷ್ಯರಿಹರು, ಆಕಾಶದಲ್ಲಿ ದೇವತೆಗಳಿಹರು.
ಮನುಷ್ಯರಿಗೆ ತಮೋ ರೂಪಮಾದ ರಾತ್ರಿಯೇ
ದೇವತೆಗಳಿಗೆ ಸತ್ವರೂಪಮಪ್ಪ ದಿವವೇ
ಅಹಸ್ಸಾಗಿ, ಅದರಲ್ಲಿ ಸಂಚರಿಸುತ್ತಿಹರು.
ದಿವದಲ್ಲಿ ಪೃಥ್ವಿಯು ಪ್ರತ್ಯಕ್ಷಮಾಗಿಹುದು,
ರಾತ್ರಿಯಲ್ಲಿ ಆಕಾಶವು ಪ್ರತ್ಯಕ್ಷಮಾಗಿಹುದು.
ಮನುಷ್ಯರಿಗೆ ದೇವಲೋಕವು ಉದ್ದವಾಗಿ,
ದೇವತೆಗಳಿಗೆ ಮನುಷ್ಯಲೋಕವು ಉದ್ದವಾಗಿರ್ಪುದರಿಂದ
ಮನುಷ್ಯರಿಗೆ ಸೂರ್ಯಮಂಡಲವು ಉನ್ನತಮಾಗಿ,
ಆ ಸೂರ್ಯನಿಂದ ಬಂದ ಜ್ಞಾನವೇ ಭೂಮಿಯಲ್ಲಿ ಕರ್ಮವಶಮಾಗಿ,
ಮನುಷ್ಯರಿಗೆ ಬಿಂದುರೂಪದಲ್ಲಿ ಫಲಿಸಿ, ಅದೇ ಜೀವನಮಾಯಿತ್ತು.
ದೇವತೆಗಳಿಗೆ ಚಂದ್ರಮಂಡಲವು ಉನ್ನತಮಾಗಿ,
ಆ ಚಂದ್ರಕಿರಣದಿಂದ ಬಂದ ಅಮೃತವು ಆಕಾಶದಲ್ಲಿ ವ್ಯಾಪಿಸಿ,
ಜ್ಞಾನಮುಖದಲ್ಲಿ ಸದ್ಯಃಫಲವಾಗಿರ್ಪ ಕಳೆಯೇ
ದೇವತೆಗಳಿಗೆ ಜೀವನಮಾಯಿತ್ತು.
ದೇವತೆಗಳಿಗೆ ಶಾಸ್ತ್ರವೇ ಸಿದ್ಧಾಂತಮಾಯಿತ್ತು,
ಮನುಷ್ಯರಿಗೆ ಜ್ಯೋತಿಷ್ಯವೇ ಸಿದ್ಧಾಂತಮಾಯಿತ್ತು.
ದೇವತೆಗಳಿಗೆ ಕಾಲದಲ್ಲಿ ಕರ್ಮವು ಸವೆದುದೇ ಮರಣವು.
ಮನುಷ್ಯರು ಮರಣಾಂತದಲ್ಲಿ ಬ್ರಹ್ಮಾಂಡದಲ್ಲಿರ್ಪ ನರಕವನನುಭವಿಸಿ,
ಪಾತಾಳಲೋಕದಲ್ಲಿ ಕಳಾಮುಖದಲ್ಲಿ ಹೋಗಿ
ದೇವಲೋಕದಲ್ಲಿ ಜನಿಸುತ್ತಿಹರು.
ದೇವತೆಗಳು ಮರಣಾಂತದಲ್ಲಿ ಪಿಂಡಾಂಡ ನರಕವನನುಭವಿಸಿ,
ಸೂಕ್ಷ್ಮ ತ್ರಿಕೋಣಸ್ವರೂಪಮಪ್ಪ ಪಾತಾಳದಲ್ಲಿ
ಬಿಂದುಮುಖದಲ್ಲಿ ಜನಿಸುತ್ತಿಹರು.
ದೇವತೆಗಳೇ ಸತ್ವಸ್ವರೂಪರು, ಮನುಷ್ಯರು ತಮಸ್ವರೂಪರು,
ಮನುಷ್ಯರೂಪಾದ ತಮಸ್ಸನ್ನು ದೇವತೆಗಳು ಆಚರಿಸುತ್ತಿಹರು,
ದೇವತಾರೂಪಮಾದ ಸತ್ವವನ್ನು ಮನುಷ್ಯರು ಆಚರಿಸುತ್ತಿರಲು,
ಈ ಮನುಷ್ಯರು ಆಚರಿಸುವ ಸತ್ವವೇ
ಸತ್ವರೂಪವಾದ ದೇವಲೋಕವಂ ಹೊಂದಿಸುತ್ತದೆ.
ದೇವತೆಗಳು ಆಚರಿಸುವ ತಮಸ್ಸೇ
ತಮೋರೂಪವಾದ ಮತ್ರ್ಯಲೋಕವಂ ಹೊಂದಿಸುತ್ತಿರ್ಪ
ಯಾತಾಯಾತವೇ ಭವವೆನಿಸಿಕೊಂಡಿತ್ತು.
ಇಂತಪ್ಪ ವಿವೇಕವನ್ನು ಗುರುಮುಖದಿಂದ ತಿಳಿದ ಮಹಾಪುರುಷನು
ಸ್ಥೂಲವನ್ನು ಕರ್ಮದಿಂದ ಪರಿಶುದ್ಧಿಮಾಡಿ,
ಸೂಕ್ಷ್ಮವನ್ನು ಜ್ಞಾನದಿಂ ಪರಿಶುದ್ಧವಂ ಮಾಡಿ,
ಎರಡಕ್ಕೂ ಮಧ್ಯದಲ್ಲಿ ತನ್ನ ನಿಜಸ್ವರೂಪಮಾಗಿರ್ಪ
ಶಬ್ದಪ್ರಕಾಶಮಪ್ಪ ಆ ಭಾವದಲ್ಲಿ ಬೆರದು,
ಆ ಭಾವದಿಂದಲೇ ಈ ಸ್ಥೂಲ ಸೂಕ್ಷ್ಮಂಗಳಂ ಭೇದಿಸಿ,
ಆ ಭೇದಿಸುವುದಕ್ಕೆ ಇದೇ ಕಾರಣಮಾಗಿ, ಆ ಭಾವವು ಬಲಿದುಬರಲು,
ಸ್ಥೂಲಸೂಕ್ಷ್ಮಂಗಳಳಿದು ಭಾವದೊಳಗೆ ಲೀನಮಾಗಲು,
ಸ್ವರ್ಗನರಕಂಗಳಳಿದು ಭಾವಸ್ವರೂಪಮಾಗಿರ್ಪುದೇ ನಿಜವು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./6
ಆತ್ಮಧರ್ಮವೇ ತಮಸ್ಸು, ಆತ್ಮನು ಜಡಮಾಗಿರ್ಪನು.
ಆತ್ಮನು ತಮೋವಶನಾದಲ್ಲಿ ಪ್ರಪಂಚವು ಉತ್ಪನ್ನಮಾಗಿರ್ಪುದು.
ತಮಸ್ಸು ಆತ್ಮನೂ ಪ್ರಾಣವು ಶಬ್ದವೂ ಆದಲ್ಲಿ,
ನಿಜವು ಪ್ರಕಾಶಮಾಗಿ ಪ್ರಪಂಚವು ನಷ್ಟಮಾಗಿರ್ಪುದು.
ಜೀವಧರ್ಮವಾಗಿರ್ದ ನಿದ್ರೆಯು ಜೀವನಂ ಬಂಧಿಸಿದಲ್ಲಿ
ಅನೇಕ ಸ್ವಪ್ನಂಗಳುದಿಸಿ ಜೀವಾನುಭವಕಾರಣಮಾಗಿಹುದು.
ಆ ಜೀವನಲ್ಲಿ ನಿದ್ರೆಯು ಲೀನಮಾದಲ್ಲಿ
ಸ್ವಪ್ನವಳಿದು ಜಾಗ್ರದೊಳಗೆ ಬೆರೆವಂತೆ,
ತಮೋಧರ್ಮವಾಗಿರ್ಪ ಪ್ರಪಂಚವು ಪರಮನಂ ಭ್ರಮಿಸುತ್ತಿರ್ಪುದು.
ಹಗಲಿರುಳು ಜಾಗ್ರತ್ಸುಷುಪ್ತಿಗಳು ಹೇಗೋ ಹಾಗೆ
ನಿಜಪ್ರಪಂಚಗಳು ಪರಮನ ಸಹಚರಗಳಾಗಿರ್ಪವು.
ಜೀವಪರಮರಿಗೆ ಸ್ಥೂಲಸೂಕ್ಷ್ಮ ಮಾತ್ರ ಭೇದವಲ್ಲದೆ,
ಕೆರೆಯ ನೀರೂ ಹರವಿಯ ನೀರೂ ಕೂಡಿದಲ್ಲಿ ಏಕವಾಗುವಂತೆ
ವಸ್ತು ಒಂದೇ ಆಗಿರ್ಪುದು.
ಭಿನ್ನಿಸಿದಲ್ಲಿ ನೀಚೋಚ್ಚಗಳು ಕಾಣುತಿರ್ಪವು, ಅವೇ ಸುಖದುಃಖಂಗಳು.
ಅಂತಪ್ಪ ಭೇದವಂ ತೊಲಗಿಸಿ ನನ್ನನ್ನು ನಿನ್ನೊಳಗೇಕಮಾಗಿ ಕೂಡಲಿಟ್ಟು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./7
ಆತ್ಮಾಂಶವೆ ಚೈತನ್ಯ
ಅಂತಃಕರಣಾದಿ ಸಕಲ ಲೋಕದ್ವಿಕಾರ.
ಆ ಚೈತನ್ಯದಿಂ ಶಕ್ತಿ ಪ್ರಕಟನಮಾದಂತೆ
ಆತ್ಮನಿಂದಾಕಾಶ ಪ್ರಕಟನಮಪ್ಪುದು.
ಆ ಶಕ್ತಿಯಿಂ ಕರ್ಮಮುತ್ಪನ್ನಮಪ್ಪಂತೆ
ಆಕಾಶದಿಂ ವಾಯುವುತ್ಪನ್ನಮಪ್ಪುದು.
ಆ ಕರ್ಮದಿಂ ಧರ್ಮ ಜನಿಸುವಂತೆ,
ವಾಯುವಿಂದಗ್ನಿ ಜನಿಸುತ್ತಿಪ್ಪುದು.
ಆ ಧರ್ಮದಿಂ ಫಲಮುದಿಸುವಂತೆ
ಅಗ್ನಿಯಿಂ ಜಲಮುದಿಸುತ್ತಿಪ್ಪುದು.
ಆ ಫಲದಿಂದನುಭವ ಪ್ರತ್ಯಕ್ಷಮಾದಂತೆ
ಜಲದಿಂ ಪೃಥ್ವಿ ಪ್ರತ್ಯಕ್ಷಮಪ್ಪುದು.
ಆ ಅನುಭವದಲ್ಲಿ ಸುಖದುಃಖಂಗಳುದ್ಭವಿಸುವಂತೆ
ಪೃಥ್ವಿಯಲ್ಲಿ ಸ್ಥಾವರ ಜಂಗಮಂಗಳುದ್ಭವಿಸುವವು.
ಆ ಸುಖದುಃಖಂಗಳಲ್ಲಿ ಸ್ವರ್ಗ ನರಕಂಗಳುತ್ಪನ್ನಮಪ್ಪಂತೆ
ಆ ಸ್ಥಾವರ ಜಂಗಮಂಗಳಲ್ಲಿ
ಆಹಾರ ಮೈಥುನಂಗಳುತ್ಪನ್ನಮಪ್ಪವು.
ಅವೇ ಆವಾಹನ ವಿಸರ್ಜನ.
ಅಂತಪ್ಪ ಆವಾಹನ ವಿಸರ್ಜನೆಯೇ
ಹಂಸರೂಪಮಾದ ಚೈತನ್ಯ.
ಅಂತಪ್ಪ ಚೈತನ್ಯರೂಪವಾದ ಶಿವನು
ಸ್ವಶಕ್ತಿ ಪ್ರಕಟನ ನಿಮಿತ್ಯ
ಆಹಾರಮುಖಕ್ಕೆ ಪ್ರಪಂಚವ ಸಂವಹರಿಸುತ್ತಿರ್ಪಂತೆ,
ಆಕಾಶ ಪ್ರಕಟನ ನಿಮಿತ್ಯ
ಆತ್ಮನು ಪ್ರಪಂಚವ ಸಂಹರಿಸುತ್ತಿರ್ಪನು.
ಜೀವನು ಸ್ವಧರ್ಮವನಾಶ್ರಯಿಸಿ ತೊಳಲುತ್ತಿರ್ಪಂತೆ
ಆತ್ಮನು ತೇಜೋಧರ್ಮವನಾಶ್ರಯಿಸಿ
ವ್ಯವಹರಿಸುತ್ತಿರ್ಪನು.
ಆ ಧರ್ಮಪದ ವಿಕ್ಷೇಪಣೆಯೇ ಕಾಲ,
ಆ ಕಾಲವೇ ಸಂಹಾರ ಹೇತು.
ಅಂತಪ್ಪ ಧರ್ಮವೇ ಬಸವ ನಾಮಾಂಕಿತಮುಳ್ಳ
ಮಹಾಗುರು.
ಅಂತಪ್ಪ ಮಹಾಗುರುವಿನ ಪಾದವಿಡಿದು
ಸೃಷ್ಟಿ ರಜೋರೂಪಮಾಗಿರ್ಪ
ಲಲಾಟಬೀಜಾಕ್ಷರಂಗಳನೊರಸಿ ಕೆಡಿಸಿ
ಆ ಪಾದವ ನನ್ನ ಹೃದಯದಲ್ಲಿ ಬರೆದು ಪಟಲಮಾಡಿದಲ್ಲಿ
ಆ ಕಾಲವಳಿದು ಕಾಲಾತೀತನಪ್ಪುದೆ ನಿಜ.
ಅಂತಪ್ಪ ಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ./8
ಆದಿಬಿಂದುವೇ ಶೂನ್ಯಮಾದುದರಿಂ ಸಂಹಾರರೂಪಮಾಯಿತ್ತು.
ಇದು ಜೀವನ ಆದಿಮಧ್ಯಾವಸಾನಗಳನಾಶ್ರೈಸಿರ್ಪುದರಿಂ ಹಂ ಆಯಿತ್ತು.
ವಿಸರ್ಜನರೂಪಮಾದ ಹಕಾರವು ನಿಜಶೂನ್ಯದೊಳ್ಪ್ರತಿಫಲಿಸಲು
ತದ್ರೂಪಮಾದ ಸಕಾರಮಾಯಿತ್ತು.
ಸಂಹಾರರೂಪಮಾದ ಬಿಂದುವೆಂಬ ದರ್ಪಣದಲ್ಲಿ
ಸೃಷ್ಟಿಸ್ಥಿತಿರೂಪಮಾದ ಮಾಯಾಛಾಯೆಯೇ ಜೀವನಮಾಯಿತ್ತು.
ಛಾಯಾಜನಿತವೇ ಭಾವಮಾಯಿತ್ತು,
ಆ ಭಾವವೇ ಜೀವನಿಷ್ಠ ಧರ್ಮವು.
ಅದು ಪ್ರತಿವಸ್ತುವಂ ಪ್ರಕಾಶಪಡಿಸುತ್ತಿರ್ಪುದು,
ಸೃಷ್ಟಿಸ್ಥಿತಿರೂಪಮಾದ ಪ್ರತಿವಸ್ತುವಿನಿಂ
ಸಂಹಾರದಲ್ಲಿ ತಾನುದಿಸಿ ಪ್ರತಿಯಳಿಯಲು,
ತನ್ನ ಜನ್ಮಸ್ಥಾನದಲ್ಲಿ ತಾಂ ಲಯಮಪ್ಪುದೇ ಮೋಕ್ಷವು.
ಆ ಹಮ್ಮೇ ತಾನೆಂಬಹಂಕಾರವು,
ಅಲ್ಲಿ ತೋರುತ್ತಿರ್ಪ ಛಾಯಾಜೀವನೇ ತನ್ನದೆಂಬಲ್ಲಿ,
ತತ್ಸಂಧಿಕಾಲದಲ್ಲಿ ತೋರ್ಪ ಮಮತ್ವವೇ ಮನವು,
ಆ ಜೀವನ ಕಾರ್ಯಕ್ಕದೇ ಕಾರಣಮಾಗಿರ್ಪುದು,
ಅದು ಜೀವನಿಷ್ಠಧರ್ಮವಾದ ಭಾವದೊಳಗೆ ಕೂಡಿ
ಪಾತ್ರಾಪಾತ್ರಗಳಂ ವಿಚಾರಿಸುತ್ತಿರ್ಪುದೇ ಬುದ್ಧಿಯು,
ಆ ವಸ್ತುವಂ ತಿಳಿವ ವಿವೇಕವೇ ಚಿತ್ತವು,
ಈ ಮನೋಬುದ್ಧಿ ಚಿತ್ತಾಹಂಕಾರಗಳೇ ಜೀವನ ಅಂತಃಕರಣಂಗಳು.
ನಾದರೂಪಿಯಾದ ಜೀವನು ಅಕ್ಷರಸ್ವರೂಪಿಯಾದುದರಿಂ
ಮಂತ್ರದಿಂ ಪರಿಶುದ್ಧನಾಗಿ, ಕ್ರಿಯಾಮುಖದಲ್ಲಿ ಕರ್ಮಕ್ಕೆ ಬಂದು,
ಜ್ಞಾನಮುಖದಲ್ಲಿ ಮಹದರ್ಥಕ್ಕೆ ಕಾರಣನಾಗಿಹನು.
ಅವನು ಆ ಜ್ಞಾನಭಾವದೊಳ್ಕೂಡಿ, ಅಕ್ಷರವಂ ಮಹತ್ತಾಗಿ ಪ್ರಕಾಶಿಸಿ,
ಆ ಅಕ್ಷರವಂ ಬಿಟ್ಟು ಅದರರ್ಥವಂ ಭಾವಮುಖದಲ್ಲಿ ಕೊಂಡು,
ಗೂಢಮಾಗಿ ಮಿಥ್ಯಾರೂಪಮಾಗಿರ್ಪ ಅರ್ಥವಂ ಪ್ರಕಾಶಿಸಿ,
ನಿಜಸಿದ್ಧಾಂತವಂ ಮಾಡಿ, ಸಂಶಯಮುಖದಲ್ಲಿ ಪುನರಾಗಮನಕ್ಕೆ ಬಾರದೆ,
ನಿಜಮಾಗಿ ಪರಮಾನಂದದೊಳಗೆ ಹೊಂದಿ,
ಪ್ರಕಾಶಿಸಿ ಸಕಾರವೆಂಬ ಛಾಯಾಯೋಗವನಳಿಯಲು,
ಉಳಿದ ಪದಾರ್ಥವೇ ಮುಕ್ತಿಯು.
ಅಂತಪ್ಪ ಮುಕ್ತಿಸಾಮ್ರಾಜ್ಯಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./9
ಆದಿಯಲ್ಲಿ ಪ್ರಣವಸ್ವರೂಪಮಾದ ಪರಮಾತ್ಮನು
ಅಕಾರ ಉಕಾರ ಮಕಾರವೆಂಬ ಅಕ್ಷರತ್ರಯಸ್ವರೂಪಮಾಗಿ,
ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ;
ಬಿಂದುವೇ ಶರೀರಮಾಗಿ, ನಾದವೇ ಪ್ರಾಣಮಾಗಿ, ಕಳೆಯೇ ಮನಮಾಗಿ ;
ಬಿಂದುಮಯವಾದ ಶರೀರದಲ್ಲಿ ರೂಪು
ನಾದಮಯಮಾದ ಪ್ರಾಣದಲ್ಲಿ ನಾಮ
ಕಳಾಮಯಮಾದ ಮನದಲ್ಲಿ ಕ್ರಿಯೆ
ಇಂತು ನಾಮ-ರೂಪ-ಕ್ರಿಯಾಯುಕ್ತಮಾದ ಪುರುಷನ
ಶರೀರದಲ್ಲಿ ಭಕ್ತಿ, ಪ್ರಾಣದಲ್ಲಿ ಜ್ಞಾನ, ಮನದಲ್ಲಿ ವೈರಾಗ್ಯ ನೆಲೆಗೊಂಡಲ್ಲಿ,
ಬಿಂದುವಿನಲ್ಲಿ ಆಚಾರಲಿಂಗಸಂಬಂಧಮಾಯಿತ್ತು,
ಕಳೆಯಲ್ಲಿ ಶಿವಲಿಂಗಸಂಬಂಧಮಾಯಿತ್ತು.
ಆಚಾರದಿಂದ ಪೂತಮಾದ ಶರೀರವೇ ಜಂಗಮಲಿಂಗಮಾಯಿತ್ತು .
ಗುರುಮಂತ್ರದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು.
ಶಿವಧ್ಯಾನದಿಂದ ಪೂತಮಾದ ಪ್ರಾಣವೇ ಪ್ರಸಾದಲಿಂಗಮಾಯಿತ್ತು .
ಬಿಂದುವಿನಲ್ಲಿ ಕ್ರಿಯಾಶಕ್ತಿ ನೆಲೆಗೊಂಡಲ್ಲಿ,
ಆ ಬಿಂದುವೇ ಆದಿಶಕ್ತಿಮಯಮಾಯಿತ್ತು.
ನಾದದಲ್ಲಿ ಮಂತ್ರಶಕ್ತಿ ನೆಲೆಗೊಂಡಲ್ಲಿ,
ಆ ನಾದವೇ ಪರಾಶಕ್ತಿಯಾಯಿತ್ತು.
ಕಳೆಯಲ್ಲಿ ಇಚ್ಛಾಶಕ್ತಿ ನೆಲೆಗೊಂಡಲ್ಲಿ,
ಆ ಕಳೆಯೇ ಜ್ಞಾನಶಕ್ತಿಯಾಯಿತ್ತು.
ಇಂತು ಶರೀರಮೇ ಜಂಗಮದಿಂದ ಪವಿತ್ರಮಾಗಿ,
ಪ್ರಾಣವು ಗುರುವಿನಿಂದ ಪವಿತ್ರಮಾಗಿ,
ಮನವು ಲಿಂಗದಿಂದ ಪರಿಶುದ್ಧಮಾಗಿರ್ದ ಶಿವಶರಣನು
ಇದ್ದುದೇ ಕೈಲಾಸ, ಅನುಭವಿಸಿದುದೆಲ್ಲಾ ಲಿಂಗಭೋಗ, ಐಕ್ಯವೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./10
ಆಧಾರದಲ್ಲಿ ಆಚಾರಲಿಂಗಕ್ಕೆ ಗೃಹಸ್ಥದಳವೇ ಸ್ಥಾನವು,
ಸ್ವಾಧಿಷ್ಠಾನದಲ್ಲಿ ಗುರುಲಿಂಗಕ್ಕೆ ಅಧ್ಯಾಪನದಳವೇ ಸ್ಥಾನವು,
ಮಣಿಪೂರಕದಲ್ಲಿ ಶಿವಲಿಂಗಕ್ಕೆ ನೇತ್ರದಳವೇ ಸ್ಥಾನವು.
ಇದು ರೂಪನಿಷ್ಠಮಾಗಿರ್ಪುದರಿಂ
ಅಂತಪ್ಪ ರೂಪವೇ ಸದ್ರೂಪಮಾದ ಶಕ್ತಿಯು,
ಅಂತಪ್ಪ ಸದ್ರೂಪಸಂಸರ್ಗದಿಂ ತಮೋಮಧ್ಯದಲ್ಲಿದ್ದು ಗ್ರಹಿಸುವುದರಿಂ
ನೇತ್ರಮಧ್ಯದಲ್ಲಿರ್ಪ ನೀಲಿಮಕ್ಕೆ ತಾರಕವೆಂದು ಹೆಸರು,
ಅದೇ ಶಿವನಿರುವ ಸ್ಥಾನಮಾದುದರಿಂ
ನೇತ್ರೇಂದ್ರಿಯವೇ ಪ್ರಧಾನಮಾಯಿತ್ತು.
ಆ ಈಶ್ವರನ ನಿಜಸ್ಥಾನವೇ ತಾರಕವು.
ಅನಾಹತದಲ್ಲಿ ಜಂಗಮಲಿಂಗಕ್ಕೆ ತನುದಳವೇ ಸ್ಥಾನವು,
ವಿಶುದ್ಧದಲ್ಲಿ ಪ್ರಸಾದಲಿಂಗಕ್ಕೆ ಪ್ರಮಾಣದಳವೇ ಸ್ಥಾನವು,
ಆಜ್ಞೇಯದಲ್ಲಿ ಮಹಾಲಿಂಗಕ್ಕೆ ಪ್ರಾಣದಳವೇ ಸ್ಥಾನವು.
ಪ್ರಾಣದಲ್ಲಿ ಹಂಕಾರವೇ ಬೀಜವು,
ಪ್ರಮಾಣದಲ್ಲಿ ಅಕಾರವೇ ಬೀಜವು,
ತನುವಿನಲ್ಲಿ ಕಕಾರವೇ ಬೀಜವು,
ನೇತ್ರದಲ್ಲಿ `ಣ’ಕಾರವೇ ಬೀಜವು,
ಅಧ್ಯಾಪನದಲ್ಲಿ ಯಕಾರವೇ ಬೀಜವು,
ಗೃಹಸ್ಥದಲ್ಲಿ ವಕಾರವೇ ಬೀಜವು.
ವಿಶುದ್ಧಾಜ್ಞೇಯಗಳಲ್ಲಿರ್ಪ `ಅಹಂ’ಕಾರಗಳೇ ಕಾರಣ,
ಅದು ವಿಪರೀತಿಸಿ ಅನಾಹತಮಣಿಪೂರಕಗಳಲ್ಲಿರ್ಪ `ಕಣ’ವೇ ಸೂಕ್ಷ್ಮ,
ಸ್ವಾಧಿಷ್ಠಾನಾಧಾರಗಳಲ್ಲಿರ್ಪ `ಯಶ’ವೇ ಸ್ಥೂಲ.
ಕಾರಣರೂಪಮಾದ `ಅಹಂ’ಕಾರವೇ ಜೀವನು,
ಶೋಭನರೂಪಮಾಗಿ ಅವಧಿಯಿಲ್ಲದೆ ಗಮಿಸುತ್ತಿರ್ಪ `ಕಣ’ವೇ ಬಿಂದು,
ಗೃಹಸ್ಥಸ್ಥಾನದಲ್ಲಿ ಆಚಾರಮುಖದಲ್ಲಿ ದೊಡ್ಡಿತ್ತಾಗಿಹುದೇ ಯಶ,
ಮಹದ್ಬೀಜವೇ ಪ್ರಾಣ, ಅದಕ್ಕೆ ಪ್ರಾಣವೇ ತನು,
ಆ ತನುವಿಗೆ ನೇತ್ರವೇ ಪ್ರಧಾನ, ಅದಕ್ಕುಪದೇಶವೇ ಪರಿಶುದ್ಧಿ,
ಗೃಹಸ್ಥಧರ್ಮವೇ ಆ ಶರೀರಕ್ಕೆ ಪ್ರಕಾಶವು.
ಅಹಂಕಾರರೂಪಮಾದ ಜೀವನಿಗೆ
ಇಷ್ಟರೂಪಮಾದ `ಕ್ಷ’ ಕಾರವೇ ಸಂಹಾರ,
ಆ `ಹ’ಕಾರರೂಪಮಾದ ಪ್ರಾಣಕ್ಕೆ
ವಿಸರ್ಗರೂಪಮಾದ ನಿಗ್ರಹಸ್ಥಾನವೇ ಸಂಹಾರ,
`ಶ’ಕಾರರೂಪಮಾದ ತನುವಿಗೆ `ಠ’ಕಾರರೂಪಮಾದ ವ್ಯಯವೇ ಸಂಹಾರ,
`ಣ’ಕಾರರೂಪಮಾದ ನೇತ್ರಕ್ಕೆ
`ಪ’ಕಾರರೂಪಮಾದ ಗೋಪ್ಯವೇ ಸಂಹಾರ,
`ಯ’ಕಾರರೂಪಮಾದ ಅಧ್ಯಾಪನೆಗೆ
`ಲ’ಕಾರರೂಪಮಾದ ಪರಿಗ್ರಹವೇ ಸಂಹಾರ,
`ಶ’ಕಾರರೂಪಮಾದ ಗೃಹಸ್ಥಕ್ಕೆ
`ಸ’ಕಾರರೂಪಮಾದ ಸಂನ್ಯಾಸವೇ ಸಂಹಾರ.
ಅಂತಪ್ಪ ಸಂನ್ಯಾಸವೇ ತೂರ್ಯ,
ಅಂತಪ್ಪ ತೂರ್ಯದಲ್ಲಿ ಜೀವನ್ಮುಕ್ತಿಯಪ್ಪ ಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./11
ಆಧಾರಾದಿ ಷಟ್ಚಕ್ರಂಗಳ ವಿವರಮೆಂತೆಂದೊಡೆ :
ಆಚಾರಕ್ಕಾಶ್ರಮಂಗಳೇ ಆಧಾರವು,
ಅದು ಬ್ರಹ್ಮಚರ್ಯಾದಿ ಚತುರ್ದಳಂಗಳಿಂದೊಪ್ಪುತ್ತಿಹುದು.
ತದಾಚಾರಸೇವಕನೇ ಭಕ್ತನು.
ಶ್ರದ್ಧೆಯೇ ಚೈತನ್ಯವು, ಚಿತ್ತವೇ ಹಸ್ತ,
ಚಿತ್ತವೆಂದರೆ ನಿಯಮಜ್ಞಪ್ತಿಜ್ಞಾನ,
ಆಶ್ರಮಂಗಳಿಗೆ ಪೃಥ್ವಿಯೇ ಮೂಲ,
ಇವಕ್ಕೆ ಪ್ರಾಣವೇ ಆಧಾರಮಾಗಿ ನಾಸಿಕವನನುಸರಿಸಿರ್ಪುದು.
ಗುದವೇ ಸ್ಥಾನ, ಇದಕ್ಕೆ ವಾಸಾಂತವೇ ಬೀಜವು.
ಗುರುವಿಗೆ ಷಟ್ಕರ್ಮಗಳೇ ಸ್ವಾಧಿಷ್ಠಾನವು,
ಯಜನಾದಿ ಷಡ್ದಳಂಗಳಿಂದೊಪ್ಪುತ್ತಿಹುದು, ಬಾದಿಲಾಂತವೇ ಬೀಜ,
ತದ್ಗುರುಸೇವಕನೇ ಮಾಹೇಶ್ವರನು
ನಿಷ್ಠೆಯೇ ಚೈತನ್ಯವು, ಬುದ್ಧಿಯೇ ಹಸ್ತವು,
ಕರ್ಮಕ್ಕೆ ಜಲವೇ ಮೂಲವಾದುದರಿಂದ
ಉಪದೇಶಕರ್ತೃವಾದುದರಿಂ ಜಿಹ್ವೆಯನನುಭವಿಸುತ್ತಿರ್ಪುದು.
ಪಾತ್ರಾಪಾತ್ರ ವಿವೇಕಪರಿಶುದ್ಧಿಯಿಂ ಗುಹ್ಯವೇ ಸ್ಥಾನವಾಯಿತ್ತು.
ಶಿವನಿಗೆ ದಶೇಂದ್ರಿಯಂಗಳೇ ಮಣಿಪೂರಕ,
ಡಾದಿಘಾಂತವಾದ ಬೀಜದಿಂ ಶ್ರೋತ್ರಾದಿ
ದಶದಳಂಗಳಿಂದೊಪ್ಪುತ್ತಿರ್ಪುದು,
ತಚ್ಛಿವಪೂಜಕನೇ ಪ್ರಸಾದಿಯು.
ವಿದ್ಯೆಯೇ ಚೈತನ್ಯವು, ಅಹಂಕಾರವೇ ಹಸ್ತವು,
ಇಂದ್ರಿಯಂಗಳಿಗಗ್ನಿಯೇ ಮೂಲ,
ದಿಙ್ಮುಖದಿಂ ಬಂದ ಸಕಲಪದಾರ್ಥಗಳನ್ನು
ಇಂದ್ರಿಯಮುಖಂಗಳಲ್ಲಿ ಪೂಜಿಸುತ್ತಿರ್ಪುದರಿಂ
ನೇತ್ರವನನುಸರಿಸುತ್ತಿರ್ಪುದು.
ಇದಕ್ಕೆ ಉದರವೇ ಸ್ಥಾನ,
ತತ್ಪೂರಣವೇ ಮಣಿಪೂರಕ,
ಮಣಿಪೂರಕವೆಂದರೆ ತೇಜೋಭರಿತ.
ತೇಜಸ್ಸೆಂದರೆ ಕಳಾಪದಾರ್ಥ, ಕಳೆಯೆಂದರೆ ರುಚಿ,
ಭರಿತವೆಂದರೆ ಅನುಭವ, ರುಚ್ಯನುಭವವೇ ಮಣಿಪೂರಕವು.
ಜಂಗಮಕ್ಕೆ ದ್ವಾದಶಭಾವಂಗಳೇ ಅನಾಹತವು,
ತನ್ವಾದಿ ದ್ವಾದಶಭಾವಂಗಳೇ ದಳಂಗಳು,
ಕಠಾಂತವೇ ಬೀಜ, ತಜ್ಜಂಗಮಪೂಜಕನೇ ಪ್ರಾಣಲಿಂಗಿಯು.
ಅನುಭವವೇ ಚೈತನ್ನವು, ಮನವೇ ಹಸ್ತ,
ಪ್ರಾಣವಾಯುವೇ ಮೂಲ,
ದ್ವಾದಶಭಾವಂಗಳು ಅನುಭವಮಾದುದರಿಂದ ತ್ವಕ್ಕನ್ನನುಸರಿಸಿರ್ಪುದು.
ಇದಕ್ಕೆ ಮನೋನಿಗ್ರಹದಿಂ ಹೃದಯವೇ ಸ್ಥಾನವು,
ಉಪದೇಶತತ್ವವೇ ಪ್ರಸಾದವು,
ಆ ಪ್ರಸಾದಕ್ಕೆ ಷೋಡಶಪದಾರ್ಥವೇ ವಿಶುದ್ಧಿ,
ಪ್ರಮಾಣ ಪ್ರಮೇಯಾದಿ ಷೋಡಶಭೇದಂಗಳೇ ದಳಂಗಳು,
ಅಕಾರಾದಿ ಷೋಡಶಸ್ವರಂಗಳೇ ಬೀಜ,
ತತ್ಪ್ರಸಾದಸೇವಕನೇ ಶರಣನು.
ಆನಂದವೇ ಚೈತನ್ಯವು, ಜ್ಞಾನವೇ ಹಸ್ತವು, ಅಕಾರವೇ ಮೂಲ,
ಶಬ್ದಮುಖದಿಂ ತತ್ವವಂ ಗ್ರಹಿಸುತ್ತಿರ್ಪುದರಿಂ ಶ್ರೋತ್ರವನನುಸರಿಸಿರ್ಪುದು.
ತಚ್ಛಬ್ದಂಗಳಿಗೆ ಕಂಠವೇ ಸ್ಥಾನವು,
ಆ ಪರತತ್ವದಿಂ ಪರಿಶುದ್ಧಮಾಗಿರ್ಪುದೇ ವಿಶುದ್ಧವು,
ಮಹಾಪ್ರಕಾಶಕ್ಕೆ ಇಷ್ಟಪ್ರಾಣಂಗಳೇ ಆಜ್ಞೇಯವು,
ಬಹಿರಂತರ್ವ್ಯಾಪಕಂಗಳೇ ದಳಂಗಳು, ಅದಕ್ಕೆ ಹಂ ಕ್ಷವೇ ಬೀಜ,
ತದನುಸಂಧಾನಿಯೇ ಐಕ್ಯನು.
ಸಮರಸವೇ ಚೈತನ್ಯವು, ಭಾವವೇ ಹಸ್ತವು, ಆತ್ಮವೇ ಮೂಲ,
ವಿವೇಕಮುಖದಿಂದಾಚರಿಸುತ್ತಿರ್ಪುದರಿಂ ಮನವನನುಸರಿಸಿರ್ಪುದು.
ಇದಕ್ಕೆ ಲಲಾಟವೇ ಸ್ಥಾನ,
ನಮಸ್ಕಾರ ಭಸ್ಮಧಾರಣ ಕ್ರಿಯೆಗಳಿಗೆ ಕಾರಣಮಾಗಿರ್ಪುದರಿಂದಲೂ
ಬೀಜಾಕ್ಷರಂಗಳಿಗೆ ಸ್ಥಾನಮಾಗಿರ್ಪುದರಿಂದಲೂ ಲಲಾಟವೇ ಕಾರಣವು.
ಅಲ್ಲಿ ಮಹಾಪ್ರಕಾಶವಾಗಿರ್ಪ ಆತ್ಮನನ್ನು
ಚೆನ್ನಾಗಿ ತಿಳಿಯತಕ್ಕದ್ದೇ ಆಜ್ಞೇಯವು,
ಆ ಮಹದಲ್ಲಿ ಚಿಚ್ಛಕ್ತಿ ಬೆರೆಯಲು,
ಆಗ್ನೇಯದಲ್ಲಿ ಇಷ್ಟಪ್ರಾಣಂಗಳೆಂಬ ದ್ವಿದಳಂಗಳು ಪ್ರಕಾಶಮಾದವು.
ಪ್ರಸಾದದೊಳ್ಪರಾಶಕ್ತಿ ಬೆರೆಯಲು,
ಷೋಡಶಪದಾರ್ಥಂಗಳೆಂಬ ಷೋಡಶದಳಂಗಳು ವಿಕಸನಮಾದವು.
ಸ್ಥಾಣುವಾಗಿರ್ಪ ಶಿವನು ಆದಿಶಕ್ತಿಯೊಳಗೆ ಕೂಡಿ ಜಂಗಮರೂಪಾದಲ್ಲಿ
ದ್ವಾದಶಭಾವಂಗಳೆಂಬ ದ್ವಾದಶದಳಂಗಳು ಪರಿಶುದ್ಧಮಾದವು.
ಇಚ್ಛಾಶಕ್ತಿ ಶಿವನೊಳಗೆ ನೆರೆಯಲು,
ದಶೇಂದ್ರಿಯಂಗಳೆಂಬ ದಶದಳಂಗಳು ಪೂರ್ಣಮಾದವು.
ಮಂತ್ರಶಕ್ತಿ ಗುರುವಿನಲ್ಲಿ ನೆರೆಯಲು ಷಟ್ಕರ್ಮಂಗಳು ಚೇತನಮಾದವು.
ಕ್ರಿಯಾಶಕ್ತಿ ಆಚಾರದೊಳಗೆ ಬೆರೆಯಲು,
ಆಶ್ರಮಧರ್ಮಂಗಳು ಸಾಂಗಮಾಯಿತ್ತು.
ಇಂತಪ್ಪ ಆಶ್ರಮಧರ್ಮಕ್ಕೆ ಕರ್ಮವೇ ಕಾರಣವು,
ಆ ಕರ್ಮಕ್ಕೆ ಇಂದ್ರಿಯಂಗಳೇ ಕಾರಣವು,
ಆ ಇಂದ್ರಿಯಂಗಳಿಗೆ ಭಾವವೇ ಕಾರಣವು,
ಆ ಭಾವಕ್ಕೆ ತತ್ವವೇ ಕಾರಣವು,
ಆ ತತ್ವಕ್ಕೆ ಮಹಾಪ್ರಕಾಶವೇ ಕಾರಣವು,
ಆ ಮಹಾಪ್ರಕಾಶಕ್ಕೆ ತತ್ವವೇ ಮೂಲವು,
ಆ ತತ್ವಕ್ಕೆ ಜಂಗಮವೇ ಮೂಲವು,
ಆ ಜಂಗಮಕ್ಕೆ ಲಿಂಗವೇ ಮೂಲವು,
ಲಿಂಗಕ್ಕೆ ಗುರುವೇ ಮೂಲವು,
ಅಂತಪ್ಪ ಗುರುವಿಗೆ ಆಚಾರವೇ ಮೂಲವು.
ಆಚಾರಕ್ಕೆ ನಿವೃತ್ತಿಯೇ ಕಳೆ, ಗುರುವಿಗೆ ಪ್ರತಿಷ್ಠೆಯೇ ಕಳೆ,
ಲಿಂಗಕ್ಕೆ ವಿದ್ಯೆಯೇ ಕಳೆ,
ಜಂಗಮಕ್ಕೆ ಶಾಂತಿಯೇ ಕಳೆ, ಪ್ರಸಾದಕ್ಕೆ ಶಾಂತ್ಯತೀತವೇ ಕಳೆ.
ಮಹಕ್ಕೆ ಉತ್ತರವೇ ಕಳೆ.
ಪೃಥ್ವೀಮೂಲವಾದ ಆಧಾರವೇ ಪಶ್ಚಿಮ,
ಜಲಮೂಲವಾದ ಸ್ವಾಧಿಷ್ಠಾನವೇ ಉತ್ತರ,
ತೇಜೋಮೂಲವಾದ ಮಣಿಪೂರಕವೇ ದಕ್ಷಿಣ,
ವಾಯುಮೂಲವಾದ ಅನಾಹತವೇ ಪೂರ್ವ,
ಸಕಲದಿಕ್ಕುಗಳಲ್ಲಿರ್ಪ ಸಕಲಚಕ್ರಂಗಳಂ ವ್ಯಾಪಿಸಿ
ಆಕಾಶಮೂಲವಾಗಿ ಆಕಾಶದಂತೆ ವಿಶುದ್ಧಮಾಗಿರ್ಪುದೇ ವಿಶುದ್ಧಿಚಕ್ರವು.
ಪೃಥ್ವೀಜಲಗಳೆರಡು ಸೃಷ್ಟಿ,
ಅಗ್ನಿವಾಯುಗಳೆರಡು ಸ್ಥಿತಿ, ಆಕಾಶವೇ ಸಂಹಾರ.
ಇಂತಪ್ಪ ಸೃಷ್ಟಿ ಸ್ಥಿತಿ ಸಂಹಾರಂಗಳಂ ಮೀರಿರ್ಪ ಆತ್ಮನೇ
ಹೃದಯಮಧ್ಯದೊಳಾಗ್ನೇಯದಲ್ಲಿ ಮಹವಾಗಿ ಪ್ರಕಾಶಿಸುತ್ತಿರ್ಪನು.
ಅದೇ ತೂರ್ಯ, ಮಿಕ್ಕವೆಲ್ಲಾ ಅವಸ್ಥಾತ್ರಯಂಗಳಾಗಿರ್ಪವು.
ಪೂರ್ವಪಶ್ಚಿಮ ಚಕ್ರಂಗಳಲ್ಲಿ ಪೂರ್ವಪಶ್ಚಿಮರೂಪವಾಗಿ
ಆದ್ಯಂತಗಳನನುಸರಿಸಿರ್ಪ ಕಠಾಂತ ವಶಾಂತಗಳೇ ಬೀಜಗಳಾದವು.
ಮೊದಲನನುಸರಿಸಿರ್ಪುದೇ ದಕ್ಷಿಣವೂ,
ಕಡೆಯನನುಸರಿಸಿರ್ಪುದೇ ಉತ್ತರವೂ
ಆದುದರಿಂ ದಕ್ಷಿಣೋತ್ತರಂಗಳಲ್ಲಿರ್ಪ ಮಣಿಪೂರಕ ಸ್ವಾಧಿಷ್ಠಾನಂಗಳಿಗೆ
ಡಘಾಂತ ಬಾಲಾಂತವೇ ಬೀಜಂಗಳಾಗಿರ್ಪವು
ದಿಕ್ಕುಗಳಲ್ಲಿ ಕೋಣಗಳು ವ್ಯಾಪ್ತಮಾಗಿರ್ಪಂತೆ,
ವ್ಯಂಜನಂಗಳಲ್ಲಿ ಸ್ವರಂಗಳು ವ್ಯಾಪ್ತಮಾಗಿರ್ಪುದರಿಂ,
ವಿಶುದ್ಧಕ್ಕೆ ಷೋಡಶಸ್ವರಂಗಳೇ ಬೀಜಂಗಳಾಗಿರ್ಪವು.
ಅಂತ್ಯಕ್ಕೂ ಅಂತ್ಯಮಾಗಿ ಅಮೃತಾರ್ಥವಂ ಕೊಡುತ್ತಾ
ಪ್ರಪಂಚಾಕ್ಷರ ಪ್ರವಾಹಂಗಳಲ್ಲಿ ತಾನಿದಿರೇರಿ ಅಂತಮರ್ುಖವಾಗಿ
ಪವಿತ್ರಮಯವಾಗಿ ಸಕಲಮಂತ್ರಬೀಜಮಯವಾಗಿರ್ಪ
ಹಂ ಕ್ಷಕಾರವೇ ಆಗ್ನೇಯ ಬೀಜಮಾಯಿತ್ತು.
ಅಕ್ಷರಂಗಳು ಹೃದಯಮಧ್ಯದಲ್ಲಿ ಚಕ್ರಂಗಳನನುಸರಿಸಿ
ಜಿಹ್ವಾಮುಖದಲ್ಲಿ ಸೃಷ್ಟಿಗೆ ಬರುವಹಾಂಗೆ
ಪಂಚಭೂತಂಗಳನನುಸರಿಸಿ ಪಂಚವರ್ಗಗಳಾಗಿ,
ಸಪ್ತವರ್ಣಂಗಳು ಸಪ್ತಧಾತುಗಳಾಗಿ,
ಷೋಡಶಸ್ವರಂಗಳು ಅವಯವಂಗಳಾಗಿ,
ಆ ಹಂ ಕ್ಷ ವೇ ಜೀವಪರಮರಾಗಿ, ಸಕಾರವು ಚೈತನ್ಯರೂಪಮಾಗಿರ್ಪುದು.
ಹೃದಯವೇ ಪಿಂಡಾಂಡ ಜಿಹ್ವೆಯೇ ಬ್ರಹ್ಮಾಂಡ,
ಪಿಂಡಾಂಡದೊಳ್ಪಂಚಭೂತಂಗಳು ಸಮಾನವಾಗಿರ್ಪಂತೆ,
ಜಿಹ್ವೆಯಲ್ಲಿ ಪಂಚವರ್ಣಗಳು ಸಮಾನವಾಗಿರ್ಪವು.
ಇಂತಪ್ಪ ಮೂರ್ತಿಯೇ ನಾದಪುರುಷನು,
ಇವಂಗೆ ಪ್ರಣವವೇ ಶಿಖೆಯೂ ಶಿವಾಯಾಕ್ಷರತ್ರಯಂಗಳೇ ಉಪವೀತವೂ
ನಮವೇ ದಂಡ ಕಮಂಡಲುಗಳೂ ಆಗಿರ್ಪವು.
ಇಂತು ಪ್ರಣವಪಂಚಾಕ್ಷರಿಯುಕ್ತಮಾದ ನಾದಪುರುಷನೇ ಪರಿಶುದ್ಧಮಾಗಿ,
ಬ್ರಹ್ಮಸ್ವರೂಪಮಾದ ವೇದಪುರುಷನಾಗಿ,
ತನುಮನೋಭಾವಗಳಲ್ಲಿ ಸಂಚರಿಸುತ್ತಿಹನು.
ಆಧಾರದಲ್ಲಾಚಾರರೂಪಮಾಗಿರ್ಪ ಆಶ್ರಮವೇ
ಅನಾಹತದಲ್ಲಿ ಜಂಗಮಪ್ರಕಾಶವಂ ಮಾಡಿತ್ತು .
ಸ್ವಾಧಿಷ್ಠಾನದಲ್ಲಿ ಗುರುರೂಪಮಾದ ಕರ್ಮವೇ
ಮಣಿಪೂರಕದಲ್ಲಿ ಲಿಂಗಪ್ರಕಾಶವಂ ಮಾಡಿತ್ತು .
ವಿಶುದ್ಧದಲ್ಲಿ ಪ್ರಸಾದರೂಪವಾದ ತತ್ವವೇ
ಆಗ್ನೇಯದಲ್ಲಿ ಮಹಾಪ್ರಕಾಶವಂ ಮಾಡಿತ್ತು.
ಇಷ್ಟಪ್ರಾಣಮಧ್ಯದಲ್ಲಿರ್ಪ ಮಹವೇ ಸಹಸ್ರಮುಖವಾಗಿ ತೋರುತ್ತಿರ್ಪ
ಭಾವಮಧ್ಯದಲ್ಲಿ ಪೂರ್ವಪ್ರಕಾಶಮಾಗಿ, ಎಲ್ಲವೂ ಒಂದೆಯಾಗಿ,
ತಾನೂ ಹೊಂದಿರ್ಪುದರಿಂ ಸಹಸ್ರದಳ-
ಕಮಲಮಧ್ಯದಲ್ಲಿರ್ಪ ಭಾವಲಿಂಗಮಾಯಿತ್ತು.
ಉನ್ಮೀಲನಾಕ್ಷಿಗಳಿಂ ನಾಸಿಕಾಗ್ರವನ್ನೀಕ್ಷಿಸಿದಲ್ಲಿ ಬ್ರಹ್ಮಸ್ಥಾನ ಗೋಚರಮಾಗಿ,
ಅಲ್ಲಿ ಭಾವಸಹಸ್ರಭೇದಮಾಗಿ ಬ್ರಹ್ಮವಂ ವಿಚಾರಿಸುವುದರಿಂ
ಸಹಸ್ರದಳಕಮಲಕ್ಕೆ ಶಿರಸ್ಸೇ ಸ್ಥಾನಮಾಯಿತ್ತು.
ಹೃದಯಮಧ್ಯಕ್ಕೂ ಬ್ರಹ್ಮಸ್ಥಾನಕ್ಕೂ ಏಕಮಾಗಿ
ಜ್ಯೋತಿರ್ಮಯವಾಗಿ ಪ್ರಕಾಶಿಸುತ್ತಾ ತತ್ವದಿಂ
ತೋರುವ ಮಹಪ್ರಕಾಶವನ್ನು
ಭಾವಹಸ್ತದಲ್ಲಿ ಗ್ರಹಿಸಿ ಭಾವಪೂಜೆಯಂ ಮಾಡುತ್ತಿರ್ಪುದೇ ಭಾವಲಿಂಗವು.
ಶಿವನನ್ನು ಜ್ಞಾನಹಸ್ತದಲ್ಲಿ ಗ್ರಹಿಸಿ,
ಹೃತ್ಕಮಲಮಧ್ಯದಲ್ಲಿ ಜಂಗಮರೂಪದಲ್ಲಿ
ಧ್ಯಾನಪೂಜೆಯಂ ಮಾಡುತ್ತಿರ್ಪುದೇ ಪ್ರಾಣಲಿಂಗವು.
ಆಚಾರವಿಡಿದು ಗುರುಮುಖದಲ್ಲಿ ಗ್ರಹಿಸಿ,
ಕರ್ಮಪೂಜೆಯಂ ಮಾಡುತ್ತಿರ್ಪುದೇ ಇಷ್ಟಲಿಂಗವು.
ಇಂತಪ್ಪ ಇಷ್ಟಲಿಂಗವಂ ಪೂಜಿಸುವ ಸ್ಥೂಲವೇ ವಿಶ್ವ,
ಪ್ರಾಣಲಿಂಗವಂ ಪೂಜಿಸುವ ಸೂಕ್ಷ್ಮಶರೀರವೇ ತೈಜಸ,
ಭಾವಲಿಂಗವಂ ಪೂಜಿಸುವ ಕಾರಣಶರೀರವೇ ಪ್ರಾಜ್ಞ,
ಪ್ರಾಜ್ಞಕ್ಕೆ ಯೋಗವೇ ಮುಖ,
ಈ ಮುಖದಲ್ಲಾ ಲಿಂಗಕ್ಕರ್ಪಣವಾಗುವುದು.
ತೈಜಸಕ್ಕೆ ಭೋಗವೇ ಮುಖ,
ಈ ಮುಖದಲ್ಲಾ ಲಿಂಗಕ್ಕರ್ಪಣವಾಗುತ್ತಿಹುದು.
ವಿಶ್ವಕ್ಕೆ ತ್ಯಾಗವೇ ಮುಖ, ಈ ಮುಖದಲ್ಲಾ ಲಿಂಗಕ್ಕರ್ಪಣವಾಗುವುದು.
ಆಚಾರ ಗುರು ಶಿವಚರಶೇಷಮಹಸ್ವರೂಪಮಾದ ಇಷ್ಟಲಿಂಗವೇ
ಪ್ರಾಣಲಿಂಗವಾಗಿ ಒಳಗೂ ಹೊರಗೂ ತಾನೇ ಪ್ರಕಾಶಿಸಿ
ಭಾವದಲ್ಲೆಲ್ಲವೂ ಒಂದೆಯಾಗಿ ತೋರುತ್ತಿರ್ಪ
ಪರಿಪೂರ್ಣಾನಂದಮಯ ನಿರ್ವಾಣಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./12
ಇಂದ್ರಿಯಗಳಲ್ಲಿ ಸುಷುಪ್ತಿಜ್ಞಾನವು,
ಮನದಲ್ಲಿ ಸ್ವಪ್ನಜ್ಞಾನವು, ಭಾವದಲ್ಲಿ ಜಾಗ್ರಜ್ಞಾನವು.
ಸುಷುಪ್ತಿಯಂ ಹೊಂದಿದಲ್ಲಿ ಜಾಗ್ರವು ಸ್ವಪ್ನವಾಗಿರ್ಪಂತೆ,
ಜ್ಞಾನೇಂದ್ರಿಯಂಗಳಂ ಹೊಂದಿದಲ್ಲಿ ಭಾವವೇ ಮನಸ್ಸಾಗಿರ್ಪುದು.
ಜಾಗ್ರವಂ ಹೊಂದಿದಲ್ಲಿ ಸ್ವಪ್ನಸುಷುಪ್ತಿಗಳಿಲ್ಲದಿರ್ಪಂತೆ,
ಭಾವಜ್ಞಾನಮುದಯಮಾದಲ್ಲಿ ಮನಸ್ಸಿನಿಂದಿಂದ್ರಿಯಂಗಳಳಿದು,
ನಿಶ್ಚಿಂತಮಾಗಿರ್ಪುದೇ ಕಾರಣವು.
ಇಂತಪ್ಪ ಜಾಗ್ರತ್ಸ್ವಪ್ನ ಸುಷುಪ್ತಿಜ್ಞಾನಂಗಳನ್ನು ಹೊಂದಿ
ಮಹಾಲಿಂಗವು ತಾಂ ತ್ರಿಮೂರ್ತಿಸ್ವರೂಪಮಂ ಧರಿಸಿ ಕ್ರೀಡಿಸುತ್ತಿರ್ಪುದು,
ಜಾಗ್ರದಲ್ಲಿ ನಡೆಸುತ್ತಿರ್ಪುದೇ ರುದ್ರಮೂರ್ತಿಯು,
ಸುಷುಪ್ತಿಯೋಗದಲ್ಲಿ ಆನಂದಿಸುತ್ತಿರ್ಪುದೇ ವಿಷ್ಣುಮೂರ್ತಿಯು,
ಸ್ವಪ್ನದಲ್ಲಿ ಪ್ರಪಂಚಮಂ ಸೃಷ್ಟಿಸುತ್ತಿರ್ಪುದೇ ಬ್ರಹ್ಮಮೂರ್ತಿಯು.
ಆ ಸ್ವಪ್ನವಂ ರಕ್ಷಿಸುತ್ತಿರ್ಪುದೇ ಸುಷುಪ್ತಿಯು,
ಆ ಸ್ವಪ್ನವಂ ಸಂಹರಿಸುತ್ತಿರ್ಪುದೇ ಜಾಗ್ರವು,
ಆ ಸ್ವಪ್ನವಂ ಸೃಷ್ಟಿಸುವುದೇ ಸ್ವಪ್ನವು.
ಸ್ವಪ್ನದಲ್ಲಿರ್ಪವರಿಗೆ ಜಾಗ್ರವು ತಿಳಿಯದಿರ್ಪಂತೆ,
ಪ್ರಪಂಚದಲ್ಲಿರ್ಪವರಿಗೆ ಪರಮನು ತಿಳಿಯದಿರ್ಪನು.
ಸ್ವಪ್ನ ಸುಷುಪ್ತಿಗಳ್ತನ್ನಧೀನಮಾಗಿರ್ಪವು.
ಜಾಗ್ರವು ತನ್ನಂ ಮೀರಿರುವಿದರಿಂ ಮರಣದಲ್ಲಿ ಸ್ವಾತಂತ್ರ್ಯಮಿಲ್ಲಮಾಯಿತ್ತು.
ಇಂತಪ್ಪ ಅವಸ್ಥಾತ್ರಯಂಗಳಲ್ಲಿ ಹೊಂದಿರ್ಪ ಜ್ಞಾನತ್ರಯಂಗಳಂ ಮೀರಿ,
ಜ್ಞಾನ ತೂರ್ಯಾವಸ್ಥೆಯಂ ಹೊಂದಿದಲ್ಲಿ,
ಮಹಾಲಿಂಗನಾದ ನೀನೊಬ್ಬನಲ್ಲದೆ ಮತ್ತಾರೂ ಇಲ್ಲದೆ,
ನೀನೇ ನೀನಾಗಿರ್ಪ ನಿಜಸುಖವಮೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./13
ಇಂದ್ರಿಯಸ್ವರೂಪಮಾದ ತನುವೇ ಜಾಗ್ರವು,
ವಿಷಯಸ್ವರೂಪಮಾದ ಮನವೇ ಸ್ವಪ್ನವು,
ಅನುಭವಸ್ವರೂಪಮಾದ ಜೀವನಲ್ಲಿ ಸುಷುಪ್ತಿಯು.
ಪಾಪವೆಂಬ ಪಂಕದಲ್ಲಿ ಹುಟ್ಟಿ ಆಸೆಯೆಂಬ ಬಿಸದೊಳಗೆ ಕೂಡಿ
ಅಷ್ಟಭೂತಂಗಳೆಂಬಷ್ಟದಳಂಗಳಿಂ ಚಿತ್ತವೆಂಬ ಮೇರುವಿನಿಂ
ಯುಕುತಮಾಗಿರ್ಪ ಹೃತ್ಕಮಲದಲ್ಲಿ ಜೀವನು ಸುಷುಪ್ತಿಯಂ ಹೊಂದಿ,
ತನುವಿನ ಜಾಗ್ರವು ಮನದ ಸ್ವಪ್ನವಲ್ಲದೆ,
ತನ್ನ ನಿಜವೆಲ್ಲವೂ ಸುಷುಪ್ತಿಯಂ ಹೊಂದಿ ತನು ಸೋಂಕಿದಲ್ಲಿ ತಿಳುವುತ್ತಂ,
ಮರಳಿ ನಿದ್ರಾರೂಪದಿಂ ಮರವುತ್ತಲಿರ್ಪ ಜೀವನ ಪರಿಯ ನೋಡಾ.
ಇಂತು ಭವಭವಂಗಳಲ್ಲಿ ತೊಳಲುವ ಜೀವಂಗೆ ಗುರುಸಂಸ್ಕಾರದಿ
ಲಿಂಗವೆಂಬ ಪೂರ್ವಾಚಲದಲ್ಲಿ ಜ್ಞಾನಾಕರ್ೊದಯಮಾಗಿ,
ಭಾವವೆಂಬ ಮೋಹ ಬಯಲಲ್ಲಿ ಗಮಿಸುತ್ತಿರಲು,
ಹೃತ್ಕಮಲಂ ವಿಕಸಿತಮಾಗಿ ಆನಂದಮಕರಂದದೊಡನೆ ಕೂಡಿ,
ಗುರುಮಂತ್ರಮಲಯಾನಿಲನು ನಿಜವಾಸನೆವಿಡಿದು ಬೀಸುತ್ತಿರಲು,
ಜೀವ ಸುಷುಪ್ತಿಭ್ರಾಂತಿಯಳಿದು, ಪರಮಜಾಗ್ರತ್ಸ್ವರೂಪನಪ್ಪ
ಪರಮಾತ್ಮನಾಗಿ,
ತನುವಿನ ಜಾಗ್ರ, ಮನದ ಸ್ವಪ್ನಗಳಳಿದು,
ಪರಮನ ಮಧ್ಯಾವಸ್ಥೆಯಲ್ಲಿ ಲೀನಮಾಗಲು,
ಅಷ್ಟಭೂತಂಗಳುಂ ಅಷ್ಟಾವರಣಂಗಳಾದವದೆಂತೆಂದೊಡೆ : ಪೃಥ್ವಿಯೇ ಭಸ್ಮವು, ಜಲವೇ ಪಾದೋದಕವು,
ಅಗ್ನಿಯೇ ರುದ್ರಾಕ್ಷವು, ವಾಯುವೇ ಪ್ರಸಾದವು,
ಆಕಾಶವೇ ಮಂತ್ರವು, ಅಹಂಕಾರವೇ ಲಿಂಗವು,
ಮಹವೇ ಗುರುವು, ಚಿತ್ತವೇ ಜಂಗಮವು,
ನಿಜವು ಪ್ರಸನ್ನಮಾಗಿ ಮನವೇ ವೃಷಭೇಶ್ವರನಾಗಿ
ತನುವೇ ಕೈಲಾಸಪರ್ವತಮಾಗಿ ಸಕಲ ಗುಣಂಗಳೇ ಶಿವಗಣಂಗಳಾಗಿ;
ಸಕಲಜನ್ಮಕರ್ಮಪ್ರಪಂಚಪರದೊಳಡಗಿತ್ತೆಂತೆಂದೊಡೆ
ಕಾಲದಲ್ಲಿ ಬ್ರಹ್ಮಾಂಡಂಗಳಡಗಿ ರೂಪುದೋರದಿರ್ಪಂತೆ,
ಚಿದಾಕಾಶದಲ್ಲಿ ಲೀನಮಾಗೆ, ತಾನೇ ಶಿವನಾಗಿ,
ಅಭೇದ ಬ್ರಹ್ಮವಾಯಿತ್ತೆಂತೆಂದೊಡೆ : ವಸ್ತುಸ್ವರೂಪಮಾದ ಸುವರ್ಣವ ಕಾಸಿ, ಕರಗಿಸಿ ; ಉಳಿದ ನಿಜಮಂ ತೆಗೆದು,
ಬೆಳುಗಾರ ಮಿಕ್ಕಿ, ಮಹದೊಳಗೆ ಬೆರಸಿ, ಎರಡನ್ನೂ ಒಂದುಮಾಡಿ,
ತಾನದರೊಳಗೆ ಬೆರೆದು ಭೇದದೋರದಿರ್ಪಂತೆ,
ಮನಸ್ಸು ಜೀವ ಪರಮರನೊಂದುಮಾಡಿ, ತಾನದರೊಳಗೆ ಬೆರೆದು,
ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ.
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./14
ಈಶಾನ್ಯ ಕರಕಮಲ ಕೈಲಾಸ ಸ್ಥಾಯಿಯಾಗಿರ್ಪ
ಲಿಂಗಮೆಂಬ ಬ್ರಹ್ಮ ಮಂತ್ರದಿಂದಾವಾಹನಕ್ಕೆ ಬಂದು
ವಾಸನೆಯಲ್ಲುಪಸಂಹಾರಮಾಗಿರ್ಪುದು.
ಆ ವಾಸನೆಯೇ ಜ್ಞಾನರೂಪಮಾಗುತ್ತಿರ್ಪುದೆಂತೆಂದಡೆ : ಪೂರ್ವ ಕರ್ಮವಾಸನೆಯು ಇಹದಲ್ಲಿ
ಜ್ಞಾನರೂಪಮಪ್ಪಂತೆ
ಆ ಲಿಂಗಕ್ಕೆ ಸ್ಪರ್ಶನದಲ್ಲಿ ಆವಾಹನ,
ನೇತ್ರದಲ್ಲಿ ಉಪಸಂಹಾರ
ಶ್ರೋತ್ರದಲ್ಲಿ ಆವಾಹನ, ಮನದಲ್ಲಿ ಉಪಸಂಹಾರ.
ಮಂತ್ರಮುಖದಲ್ಲಿ ಕೂಡಿ
ವಾಸನಾಮುಖದಲ್ಲಿ ಹೃದಯದಲ್ಲಿ ಪ್ರಕಾಶಿಸುತ್ತಿರ್ಪುದೆ ಪ್ರಾಣಲಿಂಗ.
ಸ್ಪರ್ಶನ ಕ್ರಿಯಾ ಮುಖದಲ್ಲಿ ಕೂಡಿ
ನೇತ್ರವಿಷಯಮಾಗಿ ಕಣ್ಣಿನಲ್ಲಿ ಕಟ್ಟಿದಂತಿರ್ಪುದೆ ಇಷ್ಟಲಿಂಗ.
ಶ್ರೋತ್ರ ವಿಷಯದಲ್ಲಿ ಕೇಳಿ
ಆ ಲಿಂಗದ ಮನದಲ್ಲಿ ವಿಚಾರಿಸುತ್ತಿರ್ಪುದೇ ಭಾವಲಿಂಗ.
ಮಂತ್ರವಾಸನೆಯುಳ್ಳುದೆ ಗುರು,
ಕ್ರಿಯಾರೂಪುಳ್ಳುದೆ ಲಿಂಗ,
ತತ್ವವಿಚಾರಮುಳ್ಳುದೆ ಜಂಗಮ.
ಗುರುಮಂತ್ರದಲ್ಲಿ ಹುಟ್ಟಿ ಆಚಾರ ಹೊಂದಿರ್ಪುದೆ ಪ್ರಾಣಲಿಂಗ.
ಜಂಗಮಕರ್ಮದಲ್ಲಿ ಹುಟ್ಟಿ ಶಿವನಲ್ಲಿ ಹೊಂದಿರ್ಪುದೆ ಇಷ್ಟಲಿಂಗ.
ಪ್ರಸಾದದಲ್ಲಿ ಹುಟ್ಟಿ ಮಹದಲ್ಲಿ ಹೊಂದಿರ್ಪುದೆ ಭಾವಲಿಂಗ.
ಆಚಾರವಾಸನೆಯಲ್ಲಿ ನಿಜಮಹದ್ವಿಚಾರದಲ್ಲಿ
ಜ್ಞಾನಕ್ರಿಯಾ ರೂಪದಲ್ಲಿ ಆನಂದ.
ಇಂತಪ್ಪ ಜ್ಞಾನಾನಂದದಿಂ ನಿಜವಾಸನೆಯನೆ
ಜೀವನನುಭವಿಸುತ್ತಿರ್ಪುದರಿಂ
ವಾಸನೆಯೇ ಸತ್ಯಮಾಯಿತ್ತು.
ಇಂತೊಂದು ಲಿಂಗವೆ ಇಷ್ಟದಿ ನವಪ್ರಕಾರದಲ್ಲಿ ಹೆಚ್ಚಿ,
ಆ ಲಿಂಗದೊಳಗೆ ಬೆರದಲ್ಲಿ
ಆ ಒಂಬತ್ತು ಶೂನ್ಯಮಾಗಿ, ಒಂದು ನಿಜಮಾಗಿ,
ಆ ಒಂಬತ್ತಕ್ಕೆ ಆ ಒಂದೆ ಚೈತನ್ಯವಾಗಿ,
ಆ ಒಂದಕ್ಕೆ ಆ ಒಂಬತ್ತೆ ಆಧಿಕ್ಯವಾಗಿ,
ಆ ಒಂಬತ್ತರೊಳಗೆ ಬೆರದು
ಒಂದು ಹತ್ತಾಗಿರ್ಪುದೆಂತೆಂದಡೆ;
ಆ ಲಿಂಗವೆ ತನ್ನ ಇಷ್ಟ ಪದಾರ್ಥದೊಳಗೆ ಬೆರದಲ್ಲಿ [ಅದೆ] ಇಷ್ಟಲಿಂಗ.
ಜೀವನೊಳಗೆ ಸಂಬಂಧಿಸಿದಲ್ಲಿ ಅದೆ ಪ್ರಾಣಲಿಂಗ.
ಭಾವದೊಳಗೆ ಕೂಡಿದಲ್ಲಿ ಅದೆ ಭಾವಲಿಂಗ.
ವಾಸನಾಮುಖದಲ್ಲಿ ಕೂಡಿದಲ್ಲಿ ಅದೆ ಆಚಾರಲಿಂಗ.
ಮಂತ್ರರುಚಿಯಲ್ಲಿ ಸಂಬಂಧಿಸಿದಲ್ಲಿ ಅದೆ ಗುರುಲಿಂಗ.
ರೂಪಿನಲ್ಲಿ ವೇದಿಸಿದಲ್ಲಿ ಅದೇ ಶಿವಲಿಂಗ.
ಸ್ಪರ್ಶನದಲ್ಲಿ ಪ್ರಸನ್ನವಾದಲ್ಲಿ ಅದೆ ಜಂಗಮಲಿಂಗ.
ಶಬ್ದದೊಳಗೆ ನೆರದಲ್ಲಿ ಅದೆ ಪ್ರಸಾದಲಿಂಗ.
ಮನದಲ್ಲಿ ಸಮರಸಮಾದಲ್ಲಿ ಅದೆ ಮಹಾಲಿಂಗ.
ಇಂತಪ್ಪ ಲಿಂಗವೆ ಸಕಲ ಪ್ರಪಂಚದಲ್ಲಿ
ತಾನೊಂಬತ್ತು ಬಗೆಯಾಗಿ ತೋರಿ,
ಆ ಒಂಬತ್ತು ಶೂನ್ಯಮಾಗಿ, ಆ ಒಂದೇ ನಿಜಮಾಗಿ,
ದಶಾಧಿಕ್ಯದಿಂದನಂತಂಗಳಾಗಿ ತೋರುತ್ತಿರ್ಪ
ಮಹತ್ತು ಮಹವಾಗಿರ್ಪ ಲಿಂಗಮಹಿಮೆಯಿಂ
ಇಷ್ಟದಲ್ಲಿ ಸ್ಥೂಲವಡಗಿ, ಪ್ರಾಣದಲ್ಲಿ ಸೂಕ್ಷ್ಮವಡಗಿ,
ಭಾವದಲ್ಲಿ ಕಾರಣವಡಗಿ
ಸೃಷ್ಟಿ ಸ್ಥಿತಿ ಸಂಹಾರಂಗಳುಡುಗಿ,
ಪುಷ್ಪವಾಸನೆಯೂ ತಿಲತೈಲವೂ ಬೆರದು
ಅಭೇದ ಪ್ರಕಾಶವಾಗಿ ಮರಳುದಲೆಯಿಲ್ಲದಿರ್ಪಂತೆ,
ಲಿಂಗವಾಸನೆಯೊಳಗೆ ಅಂಗಕಳೆಯಾಗಿರ್ಪತೆ
ಜೀವನು ಬೆರದು ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡ ದೇಶಿಕಾರ್ಯಪ್ರಭುವೆ./15
ಎಲ್ಲಾ ಮಹಿಮೆಯೂ ತನ್ನಲ್ಲುಳ್ಳ ಮಹಾಸತ್ತೇ ನಿಜವು.
ಅದು ಸಾಕಾರಕ್ಕೆ ಬಪ್ಪಲ್ಲಿ, ಆ ನಿಜವೇ ಜ್ಞಾನರೂಪಮಾದಲ್ಲಿ
ಆ ಮಹಿಮೆಯೇ ಸತ್ವರೂಪಮಾಯಿತ್ತು.
ಆ ಜ್ಞಾನರೂಪನಾದ ಶಿವನು ಸತ್ವಸ್ವರೂಪಮಾದ
ಮಹಾಶಕ್ತಿಯೊಳಗೆ ಕೂಡಿದಲ್ಲಿ ,
ಅಹಂಕಾರವೆಂಬ ರಜೋಮೂರ್ತಿಯುತ್ಪನ್ನಮಾಯಿತ್ತು.
ಅಹಂಕಾರದಲ್ಲಿ ಕಾಮಾದ್ಯರಿಷಡ್ವರ್ಗಂಗಳುದಿಸಿ
ಬಹುವಿಧಕರ್ಮಗಳಂ ಸೃಷ್ಟಿಸಲು,
ಆ ಕರ್ಮಂಗಳಿಂ ಅಜ್ಞಾನ ಕೆಡುತ್ತಿರಲು,
ಶಿಲಾಬದ್ಧ ಪುರುಷರತ್ನದೋಪಾದಿಯಲ್ಲಿ ಹೊದ್ದಿ ಹೊದ್ದದೆ
ಭೇದಿಸಿ ತಿಳಿದಲ್ಲಿ ತನ್ನ ನಿಜಮಹಿಮೆಯೇ ಪ್ರಕಾಶಮಾಗಿ,
ಸಕಲಕ್ಕೂ ತಾನೇ ಲಯಕರ್ತೃವಾಗಿ
ಚ್ಯುತಿಯಿಲ್ಲದಿರ್ಪ ಮಹಾಜ್ಞಾನವೇ ಶಿವನು,
ಆ ಸತ್ವವೇ ವಿಷ್ಣುವು, ಅಹಂಕಾರವೇ ಬ್ರಹ್ಮನು.
ಸತ್ವರೂಪಿಯಾದ ವಿಷ್ಣುವು ಶರೀರ ಕರ್ತೃವೂ,
ಜ್ಞಾನಸ್ವರೂಪನಾದ ಶಿವನು ಜೀವಕರ್ತೃವೂ,
ಅಹಂಕಾರರೂಪನಾದ ಬ್ರಹ್ಮನು ಕರ್ಮಕರ್ತೃವೂ ಆಗಿಹನು.
ಅಹಂಕಾರವು ನಷ್ಟಮಾದಲ್ಲಿ ಕರ್ಮಲಯವೂ
ಸತ್ವವು ನಷ್ಟಮಾದಲ್ಲಿ ಶರೀರಲಯವೂ
ಜ್ಞಾನವಧಿಕವಾದಲ್ಲಿ ಜೀವನಿಗೆ ಲಯವೂ ಆಗುವುದು.
ಅಂತಪ್ಪ ಜೀವನ ಲಯವೇ ಮೋಕ್ಷವು,
ಅಂತಪ್ಪ ಮೋಕ್ಷಸ್ಥಾನದಲ್ಲಿರ್ಪ ದಿವ್ಯಜ್ಞಾನವೇ
ಮಹಾಗುರು ದಕ್ಷಿಣಾಮೂರ್ತಿಸ್ವರೂಪಮಾಗಿ,
ಅಂತಪ್ಪ ಮೂರ್ತಿಯ ಹೃದಯಸ್ಥಾನದಲ್ಲಿ ಬೆಳೆದ ಚಿನ್ನಾದವೇ ಪ್ರಣವವು.
ಅಂತಪ್ಪ ಪ್ರಣವವೇ ಮೂಲಮಾಗಿ,
ಪಂಚಾಕ್ಷರಗಳೆಂಬ ಪಂಚಶಾಖೆಗಳಿಂದಲೂ ಪರ್ಣಫಲಂಗಳಿಂದಲೂ ಕೂಡಿದ
ವೇದವೆಂಬ ಮಹಾವಟವೃಕ್ಷದ ಮೂಲಮಪ್ಪ
ಪ್ರಣವದಲ್ಲಿ ಪ್ರಕಾಶಿಸುತ್ತಿರ್ಪ ಹೃತ್ಕೋಟರದಲ್ಲಿ
ದಿವ್ಯ ವಾಸನೆವಿಡಿದ ಅಷ್ಟದಳಕಣರ್ಿಕಾ ಮಂಗಳಪೀಠದಲ್ಲಿ
ಯೋಗಾಸನಾಸೀನನಾಗೊಪ್ಪುವ ಮಹಾಗುರುವು.
ತನ್ನ ನಿಜಮಹಾತ್ಮ್ಯ ಪ್ರಕಟನನಿಮಿತ್ತಮಾಗಿ ಸಕಲ ಪ್ರಪಂಚಗಳಂ ಸೃಷ್ಟಿಸಿ,
ತನ್ನ ಪಂಚಮಮುಖದಲ್ಲಿ ತಾನು ಈಶಾನ್ಯರೂಪನಾಗಿ,
ಉಳಿದ ನಾಲ್ಕುಮುಖಂಗಳೇ ಚತುರಾಚಾರ್ಯಸ್ವರೂಪನಾಗಿ,
ನಾಲ್ಕಾಶ್ರಮಂಗಳಲ್ಲಿ ನಾಲ್ಕುರೂಪದಲ್ಲಿ ಜೀವರ ದುಃಖಂಗಳನ್ನು ಕಳೆದು,
ಉಪದೇಶಿಸುತ್ತಾ ಅದರಲ್ಲಿ ಪರಿಪಕ್ವವಾದ ಪದಾರ್ಥವನ್ನು
ತಾನು ಪರಿಗ್ರಹಿಸುತ್ತಾ,
ತದ್ವಟಮೂಲವಾಸಿಯಾಗಿರ್ಪ ಮಹಾಗುರುವೇ ಶಿವನು,
ಆ ವಟಪರ್ಣವಾಸಿಯಾಗಿರ್ಪವನೇ ವಿಷ್ಣುವು,
ಆ ವಟಫಲದಳಿತರಸವೆಂಬ ಜಲಪ್ರಳಯದಲ್ಲಿ
ತೇಲುತ್ತಾ ಮುಳುಗುತ್ತಾ ಇರ್ಪವನೇ ಬ್ರಹ್ಮನು.
ಮಹಾವಟವೃಕ್ಷಮೂಲದಲ್ಲಿ ಉಪದೇಶಕರ್ತೃವಾಗಿರ್ಪ
ಮಹಾಗುರುವಿನ ವಾಕ್ಯವೇ ಮಂತ್ರವು.
ಲೀಲಾಸಮಾಪ್ತಿಕಾಲದಲ್ಲಿ ಪ್ರಪಂಚಕಾಮಸಂಹಾರ ಭಸ್ಮವೇ ಭಸ್ಮವು.
ಅಂತಪ್ಪ ಪ್ರಪಂಚವನ್ನು ತನ್ನ ಲಲಾಟದಲ್ಲಿರ್ಪ
ದಿವ್ಯಜ್ಞಾನದೃಷ್ಟಿಯಿಂದ ನೋಡುತ್ತಿರಲು,
ತನ್ನೇತ್ರಾನಂದಕಣಗಳೇ ರುದ್ರಾಕ್ಷಮಣಿರೂಪಮಾಗಿ,
ಆ ಸದಾಶಿವನಿಗೆ ಆಭರಣಮಾಯಿತ್ತು.
ಅಂತಪ್ಪ ಮಹಾಪ್ರಪಂಚವನ್ನು ಕೆಡಿಸುವ ನಟನೆಯಿಂದ
ತಾನೇ ಜಂಗಮಮೂರ್ತಿಯಾಗಿ ಮಹಾನಾಟ್ಯವನ್ನೆಸಗುತ್ತಿರಲಾಗ,
ದಕ್ಷಿಣಪಾದಾಂಗುಷ್ಠಾಗ್ರದಲ್ಲಿ ಶಿರದಲ್ಲಿರ್ಪ ಗಂಗೆ ತುಳುಕಿಬಿದ್ದು
ಧಾರಾರೂಪಮಾಗಿ ಪ್ರವಹಿಸುತ್ತಿರಲದೇ ಪಾದೋದಕಮಾಯಿತ್ತು.
ಅಂತಪ್ಪ ಪಾದೋದಕದಿಂದ ಪೂತಮಾಗಿ ಲಲಾಟಾಗ್ನಿಯಿಂದ ತಪ್ತಮಾಗಿ,
ಪರಿಪಕ್ವಕ್ಕೆ ಬಂದು ದಿವ್ಯರುಚಿಯಿಂ ಕೂಡಿ,
ನಿಜವಾಸನೆವಿಡಿದಿರ್ಪ ಈ ಪ್ರಪಂಚವೆಂಬ ಮಹಾಪ್ರಸಾದವನ್ನು
ಕೃಪಾಕರದಲ್ಲಿ ಪರಿಗ್ರಹಿಸಿಕೊಂಬುದೇ ಮಹಾಪ್ರಸಾದವು.
ಇಂತಪ್ಪ ಪ್ರಸಾದಭೋಗದಿಂ ತೃಪ್ತಿಬಡೆದು,
ಆ ತೃಪ್ತಿಸ್ಥಾನದಲ್ಲಿ ಪರಮಾನಂದ ಮಹಾಲಿಂಗಸ್ವರೂಪಮಾಗಿ,
ಎಲ್ಲಕ್ಕೂ ತಾನೇ ಮೂಲಮಾಗಿರ್ಪ ಆ ಲಿಂಗವನ್ನು ಧರಿಸಿದ ಶಿವಭಕ್ತನಿಗೆ
ಅಷ್ಟಮೂರ್ತಿಸ್ವರೂಪನಾದ ಶಿವನೇ
ಆವರಣರೂಪನಾಗಿರುವಕಾರಣ ಅವನೇ ಪರಮಪವಿತ್ರನು.
ಆ ಭಕ್ತನಿಗೆ ಮಂತ್ರ, ಭಸ್ಮ, ರುದ್ರಾಕ್ಷ,
ಪಾದೋದಕ, ಪ್ರಸಾದಗಳೈದೂ ಐದು ಮುಖಂಗಳು.
ಗುರು, ಲಿಂಗ, ಜಂಗಮ ಈ ಮೂರೂ ಮೂರಂಗಗಳು
ಇಂತಪ್ಪ ಭಕ್ತನು ಗುರುವಿನಲ್ಲಿ ಜಾಗ್ರವನ್ನೂ, ಜಂಗಮನಲ್ಲಿ ಸ್ವಪ್ನವನ್ನೂ,
ಲಿಂಗದಲ್ಲಿ ಪರಮಾನಂದಸುಷುಪ್ತಿಯನ್ನೂ ಹೊಂದಿರ್ಪುದೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./16
ಏಕಮಾಗಿರ್ಪ ಬೀಜಮಧ್ಯದಲ್ಲಿರಿಸಿ ಅಂಕುರಿಸೆ,
ಆ ಬೀಜ ಭಿನ್ನಮಾಗಿ ತೋರ್ಪಂದದಿಂ ಏಕಮೇವನದ್ವಿತೀಯಮಾಗಿ,
ಬ್ರಹ್ಮನಲ್ಲಿ ಮನಸ್ಸು ಅಂಕುರಿಸೆ,
ಶಿವಭಕ್ತಿಸ್ವರೂಪಮಾಗಿ ಉತ್ತರಭಾಗಮೇ ಶಕ್ತಿಯಾಯಿತ್ತು.
ದಕ್ಷಿಣಭಾಗಮೇ ಶಿವನಾಯಿತ್ತು.
ಶಕ್ತಿಯಿಂದ ಪೂರ್ವಭಾಗದಲ್ಲಿ ಕರ್ಮವುತ್ಪನ್ನವಾಯಿತ್ತು.
ಶಿವನಿಂದ ಪಶ್ಚಿಮಭಾಗದಲ್ಲಿ ಧರ್ಮವುತ್ಪನ್ನಮಾಯಿತ್ತು.
ಆ ಕರ್ಮೆಂದ್ರಿಯಂಗಳೈದು ಶಕ್ತಿಮುಖ
ಧರ್ಮೆಂದ್ರಿಯಂಗಳೈದು ಶಿವಮುಖ
ಶಕ್ತಿಸ್ವರೂಪಮಾದ ಉತ್ತರಹಸ್ತವು ಕರ್ಮೆಂದ್ರಿಯಂಗಳಿಗೆ
ತಾನೇ ಕಾರಣಮಾಯಿತ್ತು.
ಶಿವಸ್ವರೂಪಮಾದ ದಕ್ಷಿಣಹಸ್ತವು ಧರ್ಮೇಂದ್ರಿಯಂಗಳಿಗೆ
ತಾನೇ ಕಾರಣಮಾಯಿತ್ತು.
ಧರ್ಮೇಂದ್ರಿಯಂಗಳಲ್ಲಿ ನಾದಹುಟ್ಟಿತ್ತು.
ಕರ್ಮೇಂದ್ರಿಯಂಗಳಿಂದ ಬಿಂದುಹುಟ್ಟಿತ್ತು.
ಬಿಂದುವೇ ಅಧೋಮುಖವಾಗಿ, ನಾದ ಊಧ್ರ್ವಮುಖವಾಗಿ,
ಮಧ್ಯವೊಗೆದ ಮನಸ್ಸಿನಲ್ಲಿ ಕಳೆಯೇ ಪ್ರಕಾಶಮಾಯಿತ್ತು.
ಶಿವಶಕ್ತಿಗಳಿಗೆ ಬುದ್ಧಿಯೇ ಕಾರಣಮಾದಂದದಿ
ನಾದಬಿಂದುಗಳಿಗೆ ಕಳೆಯೇ ಕಾರಣಮಾಯಿತ್ತು.
ಕರ್ಮಮುಖದಿಂ ಬಿಂದುವಂ ಸಾಧಿಸಲು, ಆನಂದಸಾಧ್ಯಮಾಯಿತ್ತು.
ಧರ್ಮಮುಖದಿಂ ನಾದವಂ ಸಾಧಿಸಲು, ಜ್ಞಾನಸಾಧ್ಯಮಾಯಿತ್ತು.
ಕಳಾಯುಕ್ತಮಾದ ಮನಸ್ಸಿನಲ್ಲಿ ನಿಜಮಾಯಿತ್ತು.
ಆನಂದಸ್ವರೂಪಮಾದ ಶಕ್ತಿ ಶಿವನೊಳಗೆ ಬೆರೆದು
ಸಾಕಾರವ ನಿರಾಕಾರವ ಮಾಡುತ್ತಿರಲು,
ಜ್ಞಾನಸ್ವರೂಪನಾದ ಶಿವನು ಶಕ್ತಿಯೊಳಗೆ ಬೆರೆದು
ನಿರಾಕಾರವ ಸಾಕಾರವ ಮಾಡುತ್ತಿರಲು,
ಆ ನಿರಾಕಾರಸ್ವರೂಪನಾದ ಶಿವನೇ
ಆನಂದಶಕ್ತಿಯ ಸಂಗದಿಂ ಬಿಂದುರೂಪಮಾದ ಲಿಂಗಮಾದನು.
ಸಾಕಾರಸ್ವರೂಪಮಾದ ಶಕ್ತಿ ಜ್ಞಾನರೂಪಮಾದ ಶಿವಸಂಗದಿಂ
ನಾದಾಕಾರಮಾದ ನಿರಾಕಾರಮಂತ್ರಶಕ್ತಿಯಾಯಿತ್ತು.
ಪ್ರಾಣಸ್ವರೂಪಮಾದ ಲಿಂಗಕ್ಕೆ
ಮಂತ್ರಸ್ವರೂಪಮಾದ ಶರೀರವೇ ಶಕ್ತಿಯಾಯಿತ್ತು.
ಲಿಂಗದಲ್ಲಿ ಹುಟ್ಟಿದ ಇಂದ್ರಿಯಸುಖ
ಶರೀರದಲ್ಲಿ ಹುಟ್ಟಿದ ವಿಷಯಸುಖಂಗಳು ಲಿಂಗದಲ್ಲಿ ಬೆರೆದು,
ಲಿಂಗಾಂಗಗಳೆರಡು ಮನಸ್ಸಿನಲ್ಲಿ ಶಂಕಿಸುತ್ತಿರಲು, ಲಿಂಗವೇ ಅಂಗವಾಯಿತ್ತು.
ಲಿಂಗಾಂಗಮೆಂಬ ಭೇದಮೆ ತನಗಸಾಧ್ಯಮಾದೊಡೆ,
ಮನಸ್ಸು ಲಿಂಗದಲ್ಲಿ ಲೀನಮಾಯಿತ್ತು.
ಅಂಗದ ಕರ್ಮವಳಿಯಿತ್ತು ಲಿಂಗದ ಜ್ಞಾನವು ಮೆರೆಯಿತ್ತು.
ಮನವಳಿಯೆ ನಿಜಮಾಯಿತ್ತು.
ಅಂಗದಲ್ಲಿರ್ಪ ಬಿಂದು ಲಿಂಗದಲ್ಲಿ ನಿಶ್ಚೈತನ್ಯಮಾಗಿ,
ಲಿಂಗದೊಳಗಿರ್ಪ ನಾದ ಅಂಗದಲ್ಲಿ ನಿಶ್ಶಬ್ದಮಾಗಿ,
ಮನದಲ್ಲಿರ್ಪ ಕಳೆ ಲಿಂಗಾಂಗಲಿಂಗಸಮರಸಮಾಗಿ,
ನಿದ್ರೆಯಲ್ಲಿ ಸ್ವಪ್ನಂ, ಸ್ವಪ್ನದಲ್ಲಿರ್ಪ ನಿಜಂ,
ಜಾಗ್ರದಲ್ಲಿ ಮಿಥ್ಯಮಾಗಿತೋರ್ಪಂತೆ,
ನಿನ್ನ ಲೀಲಾಜಡತ್ವದಲ್ಲಿ ತೋರ್ಪ ಸಕಲಪ್ರಪಂಚವೆಲ್ಲವು
ತನ್ನ ನಿಜದಲ್ಲಿ ಮಿಥ್ಯಮಾಗಿ, ತಾನೇ ನಿಜಮಾಗಿ,
ತನ್ನಿಂದನ್ಯಮೇನೂ ಇಲ್ಲದೆ ಇರ್ಪುದೇ ಶಿವತತ್ವ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./17
ಐಶ್ವರ್ಯದಿಂದ ಶರೀರವು ಪ್ರಕಾಶಿಸುತ್ತಿರ್ಪುದು,
ಮನಸ್ಸಿನಿಂದ ಜೀವನು ಪ್ರಕಾಶಿಸುತ್ತಿರ್ಪನು,
ಶರೀರದ ಸುಖದುಃಖಂಗಳಿಗೆ ಐಶ್ವರ್ಯವೇ ಕಾರಣಮಾಗಿರ್ಪಂತೆ,
ಜೀವನ ಸುಖದುಃಖಕ್ಕೆ ಮನಸ್ಸೇ ಕಾರಣಮಾಗಿರ್ಪುದು.
ಅರ್ಥವಂ ಪ್ರಪಂಚಮುಖದಲ್ಲಿ ವೆಚ್ಚಿಸಿ,
ಅರ್ಥಕ್ಕೆ ತಕ್ಕ ಉಪಾಂಗವಂ ಸಂಪಾದಿಸಿ,
ತದುಪಭೋಗಯುಕ್ತಮಾಗಿರ್ಪ ಶರೀರದಂತೆ
ಮನಸ್ಸನ್ನು ಕರ್ಮಮುಖದಲ್ಲಿ ವೆಚ್ಚಿಸಿ,
ಆ ಮನಸ್ಸನ್ನಟ್ಟಿ, ಸೂಕ್ಷ್ಮಶರೀರವಂ ಸಂಪಾದಿಸುತ್ತಾ
ಅದರಲ್ಲಿ ಜೀವನನುಭವಿಸುತ್ತಿಹನು.
ಪ್ರಾಣವು ಶರೀರದಲ್ಲಿ ಬದ್ಧಮಾಗಿರ್ಪುದು,
ಅರ್ಥದಲ್ಲಿ ಮನಸ್ಸು ಬದ್ಧಮಾಗಿಹುದು,
ಜಡರೂಪಮಾದೈಶ್ವರ್ಯವು ಶರೀರವಂ ಹೊಂದಿ,
ತಾನು ಚೈತನ್ಯರೂಪಮಾಗಿ ಸಕಲಪದಾರ್ಥಗಳನ್ನು
ಶರೀರಮುಖಕ್ಕೊದಗಿಸಿಕೊಡುವಂತೆ
ಜಡರೂಪಮಾದ ಮನಸ್ಸು ಜೀವನಂ ಹೊಂದಿದಲ್ಲಿ,
ಆ ಜೀವನಿಗೂ ಪರಮಚೈತನ್ಯವಿತ್ತು. ತಾನು ಚೈತನ್ಯರೂಪಮಾಗಿ
ಸಂಚರಿಸುತ್ತಾ,
ಅನುಭವಯೋಗ್ಯವಾದ ಪದಾರ್ಥಂಗಳನ್ನು ಜೀವನಿಗೆ
ಸಂಪಾದಿಸಿಕೊಡುತ್ತಿರ್ಪುದು.
ಸಕಲಪ್ರಪಂಚವು ಅರ್ಥವಿದ್ದಲ್ಲಿ ಸೇರಿ,
ಆ ಅರ್ಥವನ್ನೇ ಜೀವನವಂ ಮಾಡಿಕೊಂಡಿರ್ಪಂತೆ,
ಸಕಲಗುಣಂಗಳು ಮನಸ್ಸನ್ನೇ ಸೇರಿ,
ಆ ಮನಸ್ಸನ್ನೇ ಜೀವನವಂ ಮಾಡಿಹನು.
ಆ ಅರ್ಥವುಳ್ಳ ಪುರುಷನು ಸಕಲರಿಗೂ ತಾನೂ ಪ್ರಭುವಾಗಿರ್ಪಂತೆ,
ಮನಸ್ಸುಳ್ಳ ಜೀವನು ಸಕಲಗುಣಂಗಳಿಗೂ ತಾನೇ ಸ್ವಾಮಿಯಾಗಿರ್ಪನು.
ಹೊನ್ನಿನಿಂದ ಹೆಣ್ಣನ್ನೂ ಹೆಣ್ಣಿನಿಂದ ಮಣ್ಣನ್ನು ಸಾಧಿಸಿ,
ಆ ಹೆಣ್ಣು ಮಣ್ಣುಗಳಿಂದ ಹೊನ್ನಂ ಸಾಧಿಸುವಂತೆ,
ಮನದಿಂದ ಅಹಂಬುದ್ಧಿಯು, ಅಹಂಬುದ್ಧಿಯಿಂ ಮನಸ್ಸು ಸಾಧ್ಯಮಪ್ಪದು.
ಐಶ್ವರ್ಯವಿಲ್ಲದೆ ಶರೀರಮೋಕ್ಷ, ಮನಸ್ಸಿಲ್ಲದೆ ಜೀವನ್ಮುಕ್ತಿ.
ಇಂತಪ್ಪ ವಿಚಿತ್ರವನ್ನು ಗುರುಮುಖದಿಂದ ತಿಳಿದ ಮಹಾಪುರುಷನು
ಜಂಗಮರೂಪಿಯಾದ ನಿನಗೆ ಇಂದ್ರಿಯಮುಖದಲ್ಲರ್ಥವನ್ನು ಸಮರ್ಪಿಸಿ,
ಲಿಂಗರೂಪಿಯಾದ ನಿನಗೆ ಭಾವಮುಖದಲ್ಲಿ ಮನಸ್ಸನ್ನು ಸಮರ್ಪಿಸಿದಲ್ಲಿ.
ಆ ಲಿಂಗವೇ ಪ್ರಾಣಮಪ್ಪುದು.
ಅರ್ಥವಂಚನೆಯೂ ಮನೋವಂಚನೆಯೂ
ಲಿಂಗಜಂಗಮಮುಖದಲ್ಲಿ ಲಯಮಪ್ಪುದೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./18
ಒಳಗೆ ಪಾಪವೂ ಹೊರಗೆ ಧರ್ಮವೂ ಮನುಷ್ಯರಿಗೆ,
ಹೊರಗೆ ಪಾಪವೂ ಒಳಗೆ ಧರ್ಮವು ದೇವತೆಗಳಿಗೆ.
ದೇವತೆಗಳು ಬಾಹ್ಯತಮರಾದುದರಿಂದ ಆ ತಮಸ್ಸೇ ಅಶುಚಿಯಾಗಲಾಗಿ,
ಅಶುಚಿಯಲ್ಲಿ ಕಾರಣರೂಪನಾದ ಪರಮಾತ್ಮನು.
ಸತ್ಕರ್ಮದಲ್ಲಿ ಭಜಿಸುವುದಕ್ಕೆ ಯೋಗ್ಯವಲ್ಲವಾಯಿತ್ತು.
ಈ ಮನುಷ್ಯರು ಅಂತಸ್ತಮರೂ ಬಹಿಶ್ಶುಚಿಗಳೂ ಆಗಲಾಗಿ,
ಆ ಕಾರಣರೂಪನಾದ ಶಿವನಲ್ಲಿ ಬಾಹ್ಯಕ್ರಿಯೆಗೆ ಯೋಗ್ಯವಲ್ಲದೆ
ಅಂತಃಕ್ರಿಯೆಗೆ ಯೋಗ್ಯವಲ್ಲವಾಯಿತ್ತು.
ಅದರಂದ ಬಾಹ್ಯರಸಮುಳ್ಳ ಕಾಷ್ಠವೇ ದೇವತೆಗಳು,
ಅಂತರ್ರಸಮುಳ್ಳ ಕಾಷ್ಠವೇ ಮನುಜರು.
ಇಂತಪ್ಪ ಕಾಷ್ಠಭಾವದಲ್ಲಿ ಸುಷುಪ್ತಿಯಂ ಹೊಂದಿರ್ಪ
ಜ್ಞಾನಾಗ್ನಿಯೇ ಕಾರಣಶರೀರವು ;
ಅದು ಪರಮಪವಿತ್ರಮಾಗಿಹುದು.
ಅಂತಪ್ಪ ಕಾರಣಕಲಾಶರೀರಮಾಗಿರ್ಪ ಶಿವನು
ಮಹಾಗುರುಪ್ರಯೋಗಾಂತರದಿಂ ಶರೀರವೆಂಬ ಕಾಷ್ಠದಲ್ಲಿ ಹೊತ್ತಿಸಲು,
ಆ ಕಾಷ್ಠವನೆಡೆವಿಡದೆ ಪ್ರಕಾಶಮಾಗಿದ್ದಲ್ಲಿ,
ಆ ಕಾಷ್ಠದೊಳಗಿರ್ಪ ರಸವಾರಿ, ದಿವ್ಯತೇಜಸ್ಸು ಕಾಷ್ಠದೊಳಗೆ ಪ್ರಕಾಶಮಾಗಿ,
ಆ ಅಗ್ನಿಯೇ ಕಾಷ್ಠದೊಳಹೊರಗೆ ತಾನೆಯಾಗಿರ್ದಲ್ಲಿ,
ಹೊರಗಿರ್ದ ಅಗ್ನಿಯನ್ನು ಪರಿಸಮಾಪ್ತಿಯಂ ಮಾಡಿ,
ತದಗ್ನಿಯನ್ನು ಭಾವದಲ್ಲಿ ವೇದಿಸಹೋದರೆ,
ಅಗ್ನಿಯು ವೇದಿಸಿತಲ್ಲದೆ ಕಾಷ್ಠವು ವೇದಿಸಿತೇನಯ್ಯಾ ?
ಅಗ್ನಿಯಾರಿದ ಕಾಷ್ಠವೇ ಅಪವಿತ್ರವು.
ಆದುದರಿಂದ ಕಾಷ್ಠಕ್ಕೆ ಹೊತ್ತಿಸಿದ ಅಗ್ನಿಯನ್ನು ಆ ಕಾಷ್ಠದೊಳಗಿರ್ಪ
ರಸವಾರದನ್ನಕ್ಕ ಭಿನ್ನಿಸಲಾಗದು.
ಸತ್ಕ್ರಿಯಾಮುಖದಿಂ ಭಿನ್ನಿಸದಿರ್ದಲ್ಲಿ,
ಆ ಕಾಷ್ಠದೊಳಗಿರ್ಪ ರಸವಾರುವುದೇನಯ್ಯಾ ?
ಆ ರಸವಾರಿದಲ್ಲಿ ಬಯಲಪ್ಪುದೇನಚ್ಚರಿಯಯ್ಯಾ.
ಅದಲ್ಲದೆ ಕಾಷ್ಠದೊಳಗಣ ಅಗ್ನಿಯು ಕಾಷ್ಠವಂ ಹತ್ತಿದಲ್ಲಿ,
ಕಾಷ್ಠವಂ ಸೇರಿದ ಕಾಷ್ಠವೆಲ್ಲಾ ಬಯಲಪ್ಪುದಲ್ಲದೆ ಶಿಲೆಬಯಲಪ್ಪುದೇನಯ್ಯಾ ?
ಶಿಲೆಯೊಳಗಿರ್ಪ ಅಗ್ನಿಯು ಕಾಷ್ಠವಂ ಹತ್ತಿದಲ್ಲಿ,
ಕಾಷ್ಠವು ಬಯಲಪ್ಪುದಲ್ಲದೆ ಶಿಲೆಬಯಲಪ್ಪುದೇನಯ್ಯಾ ?
ಶಿಲೆಯೊಳಗಿರ್ಪ ಅಗ್ನಿಯು ಕಾಷ್ಠವಂ ಹತ್ತಿದಲ್ಲಿ,
ಕಾಷ್ಠವು ಬಯಲಪ್ಪುದಲ್ಲದೆ ಶಿಲೆಬಯಲಪ್ಪುದೇನಯ್ಯಾ ?
ಅಂತಪ್ಪ ಗುರುವಜ್ಞಾನಿಯಾಗಿ ಶಿಷ್ಯನು ಜ್ಞಾನಿಯಾದುದೇ ಶಿಲಾಕಾಷ್ಠನ್ಯಾಯವು.
ಗುರುವು ಜ್ಞಾನಿಯಾಗಿ ಶಿಷ್ಯನು ಅಜ್ಞಾನಿಯಾದುದೇ ಕಾಷ್ಠಶಿಲಾನ್ಯಾಯವು.
ಈರ್ವರೂ ಅಜ್ಞಾನಿಗಳಾದುದೇ ಶಿಲಾ ಶಿಲಾನ್ಯಾಯವು.
ಇಬ್ಬರೂ ಜ್ಞಾನಿಗಳಾದುದೇ ಕಾಷ್ಠ ಕಾಷ್ಠನ್ಯಾಯವಾಯಿತ್ತು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./19
ಕರಣಂಗಳೇ ಸ್ಥೂಲರೂಪದ ಶರೀರಮಾಗಿ,
ತತ್ಸಂಬಂಧಮಾದ ವಿಷಯಂಗಳೇ ಕಾರಣಸ್ವರೂಪಮಾದ ಮನವಾಗಿ,
ಇಂತಪ್ಪ ಶರೀರದಲ್ಲಿ ಧಾತುಗಳೂ, ಮನದಲ್ಲಿ ಗುಣಂಗಳೂ ಹುಟ್ಟಿ,
ಧಾತುಗಳು ಗುಣಂಗಳನವಗ್ರಹಿಸಿ, ಗುಣಂಗಳು ಧಾತುಗಳನವಗ್ರಹಿಸಿ,
ಧಾತುಗುಣಂಗಳು ಗುಣಧಾತುಗಳೆಂಬ ನಾಲ್ಕುಭೇದವಡದು,
ಅಂತಃಕರಣಚತುಷ್ಟಯವೆನಿಪ ಸೂಕ್ಷ್ಮಶರೀರದಲ್ಲಿ ಜೀವನು ನೆಲಸಿ,
ಕರಣನಿಕರಂಗಳಿಗೆ ತಾನೇ ಕರ್ತೃವಾಗಿ ಕರಣದಲ್ಲಿ
ಕೂಡಿದಕಾರಣವೇ ಬಾಲ್ಯವಾಗಿ,
ಕಾರಣದಲ್ಲಿ ಕೂಡಿದಕಾರಣವೇ ವಯಸ್ಸಾಗಿ,
ಈ ಎರಡರ ನಷ್ಟವೇ ವಾರ್ಧಕ್ಯವಾಗಿ,
ಅಂತಪ್ಪ ವಾರ್ಧಕ್ಯದಲ್ಲಿ ಧಾತುಗುಣಂಗಳಂ ಬಿಟ್ಟು ಗುಣಧಾತುಗಳನನುಸರಿಸಿ,
ಕರಣಂಗಳಂ ಬಿಟ್ಟು ಕಾರಣಂಗಳೊಳಗೆ ಕೂಡಿ,
ಅಗ್ನಿಮುಖದಲ್ಲಿ ಲಯವನೈದಿ ಪೋದಲ್ಲಿ,
ಮರಳಿ ಸೃಷ್ಟಿಯಪ್ಪ ಪರಿಯೆಂತೆಂದೊಡೆ : ಆ ಕಾರಣವಿಷಯಂಗಳೆಲ್ಲಾ ಜಲಮುಖದಲ್ಲಿ ದ್ರವಿಸಿ,
ಆ ಗುಣಂಗಳಿರ್ಪ ಧಾತುಗಳು ಪ್ರಕಟಮಾಗಿ ತದ್ವಾಸನೆವಿಡಿದು,
ಬಿಂದುಮುಖದಲ್ಲಿ ಶರೀರಿಯಾಗಿ ತೋರುತಿರ್ಪುದೇ ಸೃಷ್ಟಿಯು.
ಇಂತಪ್ಪ ಸೃಷ್ಟಿ ಸಂಹಾರಂಗಳಿಗೆ ತಾನೇ ಕರ್ತೃವಾಗಿ,
ವಿಷಯಂಗಳಿಂದ ಆ ಮನವನ್ನೂ,
ಇಂದ್ರಿಯಂಗಳಿಂದ ತನುವನ್ನೂ ರಕ್ಷಿಸುತ್ತಾ,
ಅಂತಪ್ಪ ನಾದಬಿಂದುಗಳಿಗೆ ತಾನೇ ಕಳಾಸ್ವರೂಪಮಾಗಿರ್ಪ ಜೀವನು
ಅಗ್ನಿಮುಖದಲ್ಲಿ ಲಯವನ್ನೂ,
ಜಲಮುಖದಲ್ಲಿ ಸೃಷ್ಟಿಯನ್ನೂ ಹೊಂದುತ್ತಿರ್ಪ
ಕೋಟಲೆಯಂ ಕಳೆವುದಕ್ಕುಪಾಯಮಂ ಕಾಣದೆ,
ಭವಭವಂಗಳಲ್ಲಿ ಕಳವಳಿಸಿ ಬಳಲುತ್ತಿರಲಾ ಜೀವನಿಗೆ ಪ್ರಸನ್ನವಾಗಿ,
ನಾದರೂಪಮಾದ ಭಾವಲಿಂಗಮಂ ಮನದೊಳಗೆ,
ಬಿಂದುರೂಪಮಾದಿಷ್ಟಲಿಂಗಮಂ ಶರೀರದೊಳಗೆ,
ಗುಣಧಾತುಗಳಲ್ಲಿ ಭಾವಸೆಜ್ಜೆಗಳೊಳಿಟ್ಟು ಧರಿಸಲು,
ಜೀವನು ತಾನು ಇಚ್ಛಾಶಕ್ತಿಯೊಳಗೆ ಕೂಡಿ,
ಕರಣಂಗಳಲ್ಲಿಹ ಕ್ರಿಯಾಶಕ್ತಿಯನ್ನು ಇಷ್ಟಲಿಂಗಕ್ಕೆಕೊಟ್ಟು,
ಕಾರಣದಲ್ಲಿರ್ಪ ಕ್ರಿಯಾಶಕ್ತಿಯನ್ನು ಭಾವಲಿಂಗದೊಳಗೆ ಬೆರಸಿ,
ಆಯಾ ಶಕ್ತಿಮುಖಂಗಳಲ್ಲಿ ಆ ಲಿಂಗಂಗಳಂ ಪ್ರಸನ್ನವಂ ಮಾಡಿಕೊಳ್ಳಲು,
ಇಷ್ಟಲಿಂಗಮುಖದಲ್ಲಿ ಪರಿಶುದ್ಧಮಾದ ಬಿಂದುಪ್ರಸಾದವನ್ನು ತನುಮುಖದಲ್ಲಿ ಸೇರಿಸಲು,
ಧಾತುರೂಪಮಾಗಿ ಧಾತುವಿನೊಳಗಿರ್ಪ ತಮಸ್ಸನ್ನು ಕೆಡಿಸಲು,
ಅಗ್ನಿಮುಖದಲ್ಲಿ ಬರ್ಪ ಲಯವಡಗಿತ್ತು.
ಭಾವಲಿಂಗಮುಖದಲ್ಲಿ ಪರಿಶುದ್ಧಮಪ್ಪ ಶಬ್ದಪ್ರಸಾದವನ್ನು
ಮನೋಮುಖದಲ್ಲಿ ಸೇವಿಸಲು, ಅವೇ ಗುಣಸ್ವರೂಪಮಾಗಿ,
ಗುಣದೊಳಗಿರ್ಪ ತಮಸ್ಸಂ ಕೆಡಿಸಲು,
ಜೀವನಂ ಪರಿವೇಷ್ಟಿಸಿರ್ಪ ಸೂಕ್ಷ್ಮಶರೀರವೇ ತೇಜೋರೂಪಮಾಯಿತ್ತು.
ತದಾಧಾರಮಪ್ಪ ಸ್ಥೂಲಶರೀರವೇ ವಿಶ್ವವಾಯಿತ್ತು.
ತತ್ಕಾರಣಮಪ್ಪ ಕಾರಣಶರೀರವೇ ಪ್ರಾಜ್ಞವಾಯಿತ್ತು.
ಅಂತಪ್ಪ ಕಾರಣದಲ್ಲಿರ್ಪ ಭಾವಲಿಂಗವು ಶರೀರದಲ್ಲಿರ್ಪ ಇಷ್ಟಲಿಂಗವು
ಎಂಬ ಸುವರ್ಣವಸ್ತುಗಳನ್ನು ಧ್ಯಾನಹಸ್ತದಲ್ಲಿ ಗ್ರಹಿಸಿ,
ಹೃದಯಕುಂಡದಲ್ಲಿ ಅಷ್ಟದಳಕನರ್ಿಕೆಯೆಂಬ ಮೂಸೆಯೊಳಗಿಟ್ಟು,
ಕರ್ಮಸಮಿಧೆಯಲ್ಲಿ ಜ್ಞಾನಾಗ್ನಿಯನ್ನು ಹೊತ್ತಿಸಿ,
ತಾನೆಂಬ ಬೆಳುಗಾರದಿಂ ಕರಗಿಸಲು, ಎರಡೂ ಒಂದಾಗಿ,
ಅಲ್ಲಿರ್ಪ ಕಳಂಕವೆಲ್ಲಾ ಜ್ಞಾನಾಗ್ನಿಮುಖದಲ್ಲಿ
ಲಯವಂ ಪೊಂದಿ ಘಟ್ಟಿಗೊಂಡಲ್ಲಿ,
ಆ ಬೆಳುಗಾರವದರೊಳಗೆ ಬೆರೆದು ಕಾಣಬಾರದಿರ್ಪಂತೆ,
ಅಹಂಭಾವವು ಲಿಂಗದೊಳಗಡಗಿ,
ಭೇದದೋರದಿರ್ಪುದೆ ಪ್ರಾಣಲಿಂಗಸ್ಥಲವು.
ಇಂತಪ್ಪ ಸುಖವನ್ನು ನನಗೆ ಸಿದ್ಧಿಯಪ್ಪಂತೆಮಾಡಿ ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./20
ಕರ್ಣದಲ್ಲಿ ಲಯವಂ ಹೊಂದಿ, ಜಿಹ್ವೆಯಲ್ಲಿ ಸೃಷ್ಟಿಯಪ್ಪ ನಾದವೇ
ಸೂಕ್ಷ್ಮಮನೋರೂಪಮಾಗಿಹುದು.
ಜಿಹ್ವೆಯಲ್ಲಿ ಲಯವನ್ನು ಹೊಂದಿ, ಗುಹ್ಯೆಯಲ್ಲಿ ಸೃಷ್ಟಿಯಪ್ಪ ಬಿಂದುವೇ
ಸ್ಥೂಲಶರೀರರೂಪಮಾಗಿಹುದು.
ಬಿಂದುವಿನ ಲಯಕ್ಕೂ ನಾದದ ಸೃಷ್ಟಿಗೂ ಜಿಹ್ವೆಯೇ
ಕಾರಣಕಳಾರೂಪಮಾಗಿಹುದು.
ನಾದದಲ್ಲಿ ಕೂಡಿ ಭಾವದಲ್ಲಿ ಪ್ರಕಾಶಮಾಗಿ
ಬ್ರಹ್ಮಯೋನಿಯಲ್ಲಿ ಬಿಟ್ಟ ದಿವ್ಯತೇಜಸ್ಸೇ ಶರೀರಮಾಗಿ
ತೋರುತ್ತಿರ್ಪುದೇ ಪರಮನು.
ಬಿಂದುವಿನಲ್ಲಿ ಕೂಡಿ ಲಿಂಗಮುಖದಲ್ಲಿ ಪ್ರಕಾಶಮಾಗಿ
ಕರ್ಮಯೋನಿಯಲ್ಲಿ ಬಿಟ್ಟ ತೇಜಸ್ಸೇ
ಶರೀರಮಾಗಿ ತೋರುವನೇ ಜೀವಾತ್ಮನು.
ಇಂತಪ್ಪ ಬಿಂದುವನ್ನು ಕರ್ಮಕಾರಣಮಾದ ಸ್ವಸ್ತ್ರೀಗರ್ಭದಲ್ಲಿ ಬಿಟ್ಟು,
ಆ ಸತ್ಸಂತಾನದಿಂದ ಸ್ವರ್ಗಾದಿ ಭೋಗಂಗಳಂ ಪಡೆವಂದದಿ,
ಜ್ಞಾನಕಾರಣಮಪ್ಪ ಪುರುಷನು ಗರ್ಭದಲ್ಲಿ ವಿವೇಕವೆಂಬ ಪುತ್ರನಂ ಪಡೆದು,
ಅದರಿಂದ ಮೋಕ್ಷಸಾಧನೆಯಂ ಮಾಡಿಕೊಂಬನೇ ಪರಮನು.
ಇಂತಪ್ಪ ಸೂಕ್ಷ್ಮಶರೀರಿಯಾದ ನಾದಮಧ್ಯದಲ್ಲಿರ್ಪ ನಿನಗೂ,
ಸ್ಥೂಲಶರೀರಿಯಾದ ಬಿಂದುಮಧ್ಯದಲ್ಲಿರ್ಪ ನನಗೂ,
ಜಿಹ್ವಾರೂಪಮಪ್ಪ ಮಹಾಗುರುವಿನಕರುಣದಿಂ ಸಂಬಂಧಮಾಗಿ,
ಪಾಣಿಗ್ರಹಣಮಂ ಮಾಡಿಕೊಟ್ಟಬಳಿಕ ನೀನೇ ಪತಿ ನಾನೇ ಸತಿಯಾಗಿ,
ನಿನ್ನ ಪರಮಾನಂದರತಿಸುಖದಲ್ಲಿ ನಾನು ಲೀನನಾದಲ್ಲಿ,
ನನ್ನ ಸಂಬಂಧಮಪ್ಪ ಸ್ಥೂಲದೇಹವೆಲ್ಲಾ
ನಿನ್ನ ಸಂಬಂಧಮಪ್ಪ ಸೂಕ್ಷ್ಮದಲ್ಲಿ ಲೀನಮಪ್ಪುದೇ ಕೈವಲ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./21
ಕಳಾಯುಕ್ತಮಾಗಿ ರೂಪುಳ್ಳ ಹೆಣ್ಣನು ಲಿಂಗಕ್ಕೆ ಕೊಟ್ಟು,
ಬಿಂದುಯುಕ್ತಮಾಗಿ ರುಚಿಯುಳ್ಳ ಮಣ್ಣನು ಗುರುವಿಗೆ ಕೊಟ್ಟು,
ನಾದಯುಕ್ತಮಾಗಿ ತೃಪ್ತಿಯುಳ್ಳ ಹೊನ್ನನು ಜಂಗಮಕ್ಕೆ ಕೊಟ್ಟು,
ಕರಿಯು ನುಂಗಿದ ಕಪಿತ್ಥಫಲದಂತೆ,
ಹೊರಗೆ ಸಾಕಾರಮಾಗಿಯೂ,
ಒಳಗೆ ನಿರಾಕಾರಮಾಗಿಯೂ ಇರ್ಪುದೇ ಭಕ್ತಿಯು ;
ಉಳಿದುದೆಲ್ಲಾ ಅಭಕ್ತಿಯು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./22
ಕಾಮವೆಂತು ಗುಹ್ಯದಲ್ಲಿ ಚಲನವೋ
ಕ್ರೋಧವಂತು ಜಿಹ್ವೆಯಲ್ಲಿ ಚಲನ.
ಸ್ಖಾಲಿತ್ಯದಲ್ಲಿ ಅಪವಿತ್ರವಾದ ಶರೀರಮೆಂತು ಸ್ನಾನಯೋಗ್ಯವೋ
ಕ್ರೋಧ ಸ್ಖಲನಕಾಲದಲ್ಲಿ ಸೂಕ್ಷ್ಮ ಶರೀರ ಮಂತ್ರ[ಸ್ನಾನ]ಯೋಗ್ಯ.
ಇಂತು ಕಾಮ ಕ್ರೋಧಾದಿ ಷಡ್ವರ್ಗಂಗಳು
ಸಕಲ ಗುಣಂಗಳು ಬೇರೆ ಬೇರೆ ತಂದು
ರೂಪ ಭಾವಂಗಳನ್ನು ಶರೀರಮುಖದಲ್ಲಿ ತೋರುತ್ತ
ಜೀವನನಾವರಿಸಿರ್ಪವೆಂತೆಂದರೆ : ಲಹರಿಯ ಕೊಂಡಲ್ಲಿ ಪಿಶಾಚ ಗ್ರಹಣದಲ್ಲಿ
ರೋಗೋಲ್ಬಣದಲ್ಲಿ ತಲ್ಲಕ್ಷಣಂಗಳು
ತೃಟಿ ಕಾಲವು ಎಡೆಬಿಡದೆ ಆಚ್ಛಾದಿಸಿರ್ದುದರಿಂ
ಆ ವಸ್ತುವಿನಲ್ಲಿ ನಿಜ ಪ್ರಕಾಶ ಕಾಣಿಸದೆ
ಆವರಣ ಮುಖದಿಂ ಭಿನ್ನ ಜೀವನಾಗಿರ್ಪುದು.
ಅಂತಪ್ಪ ಜೀವನ ಕರಣವೆ ಮನ.
ಆ ಮನದಲ್ಲಿ ಹುಟ್ಟಿ ಜೀವನಲ್ಲಿ ಹೊಂದಿ
ಸ್ವ ಪ್ರಕಾಶ ವಿವೇಕದಲ್ಲಿ ಲಯವ ಹೊಂದುತಿರ್ಪುದು.
ಅದರಿಂ ಮನೋ ಲಯಕ್ಕೆ ಆವರಣ ನಷ್ಟ.
ಆವರಣ ನಷ್ಟವೆ ಸ್ವ [ಪ್ರ]ಕಾಶ.
ಅಂತು ಸ್ವಪ್ರಕಾಶ ಮನೋಗುಣಂಗಳಿಂ
ನಷ್ಟವಾಗಿ ಕಾಣಿಸದೆ ಲಹರಿ ಮೈಯ್ಯುಂಡ ಪುರುಷನು
ಆ ಲಹರಿಯಿಳಿದು ಸ್ವಭಾವಮಾಗಿರ್ಪುದೆ ವೇದನೆಯಾಗಿರ್ಪಂತೆ,
ಆವರಣವೆ ಅನುಭವಮಾಗಿರ್ಪ ಜೀವನು
ಆವರಣ ಲಯಮಪ್ಪ ತೂರ್ಯಾವಸ್ಥೆಯೆ
ಮರಣವೇದನೆಯಾಗಿರ್ಪುದು.
ಅದು ತನ್ನ ಸ್ವಭಾವವೆಂದು ತಿಳಿದು
ನಿಜವ ಹೊಂದದೆ ಆವರಣ ಮುಖದಲ್ಲಿ ಬೀಳುತಿರ್ಪ
ಭವವನನುಭವಿಸುತ್ತಿರ್ಪುದು.
ಅಂತು ಪರಮನೆ ತನ್ನಿಂದಲೆ ಸೃಷ್ಟಿಸ್ಥಿತಿಗಳಧಿಕಮಾಗಿ
ಅವೆ ತನಗೆ ಆವರಣಂಗಳಾಗಿ ಇರ್ಪವು.
ಶಕ್ತಿ ರಹಿತವಾದ ಬಾಲ್ಯದಲ್ಲಿ ಶರೀರ ಪವಿತ್ರಮಾಗಿರ್ಪಂತೆ
ಆ ಶಕ್ತಿ ಬಲಿಯೆ ಶರೀರ ಮಪವಿತ್ರಮಾಗಿ,
ಕರ್ಮಮುಖದಲ್ಲಿ ಬೀಳುತ್ತಿರ್ಪುದರಿಂ
ಆ ಶಕ್ತಿಯಪವಿತ್ರ, ಆ ಶಿವನೆ ಪವಿತ್ರ.
ಆವರಣರೂಪಮಾದ ಸಾಕಾರದಲ್ಲಿ
ಶಕ್ತಿಯದಲ್ಲದೆ ನಿರಾಕಾರದಲ್ಲಿ ತಾನೊಬ್ಬನೆ.
ಸಾಕಾರದಲ್ಲಿ ತಾನೈದು ಬಗೆಯಾಗಿ,
ತಾ ಧರಿಸಿರ್ಪ ಶಕ್ತಿ ಮೂರು ಬಗೆಯಾಗಿ,
ಸೃಷ್ಟಿ ಸ್ಥಿತಿ ಸಂಹಾರಮುಳ್ಳ ಮುಮ್ಮೊನೆಯುಳ್ಳ ಶಕ್ತಿಯಂ
ಪರಿಗ್ರಹಿಸಿ ತಾ ಚೈತನ್ಯರೂಪನಾಗಿ
ಆ ಶಿವನು ಪರಿಗ್ರಹಿಸಿದಲ್ಲಿ ಚೈತನ್ಯಮಾಗಿ
ಬಿಟ್ಟಲ್ಲಿ ಜಡಮಾಗಿ ಆ ವಸ್ತುವಿನ ಆಧೀನಮಾಗಿರ್ಪುದು.
ಅಂತಪ್ಪ ಸೃಷ್ಟಿ ಸ್ಥಿತಿ ಸಂಹಾರ ಶಕ್ತಿಯುಳ್ಳ ಶಿವನೆ ಪರಬ್ರಹ್ಮ .
ತನ್ನ ಶಕ್ತಿ ಮೂರು ಭೇದಮಾಗಿ
ತಾನೈದು ಭೇದಮಾಗಿರ್ಪುದೆ ಅಷ್ಟಮೂರ್ತಿತ್ವದಳರೂಪಮಾಗಿಹುದು
ನಿರಾಕಾರ ವಿಕಸನವೆ ಸಾಕಾರ
ಸಂಕುಚಿತವೆ ನಿರಾಕಾರ ತಾಂ
ನಿರಾಕಾರಮಹಲ್ಲಿ ಸೃಷ್ಟಿ ಸಂಹಾರರೂಪಮಾದ
ಐಶ್ವರ್ಯ ಶಕ್ತಿಗಳು ಮಿಥ್ಯಮಾಗಿ
ಆ ವಿವೇಕ ಶಕ್ತಿ ತಾನೆ ಶಿವನಾಗಿರ್ಪುದು.
ಸರಸ್ವತಿಯೆ ಶಿವನಸ್ವರೂಪವೆಂತೊ,
ಅಂತು ರುದ್ರನೆ ಪರಬ್ರಹ್ಮಮೆಂಬುದು ನಿಜ.
ವಿವೇಕವೆ ಶಿವನು, ಶಿವನೆ ವಿವೇಕಮಾಗಿರ್ಪುದರಿಂ
ಸರ್ವಜ್ಞನೆ ಶಿವನಾದನು.
ವಿವೇಕವೆಂದರೆ ವಿವಿಚ್ಯ ಜ್ಞಾನ.
ಆ ವಿವೇಕದಿಂದಲೇ ಸಕಲವು ಸೃಷ್ಟಿ ಸ್ಥಿತಿ ಸಂಹಾರಗಳಾಗಿರ್ಪವು.
ಆ ವಿವೇಕವೆ ಬ್ರಹ್ಮ ಅಗ್ನಿಯುಪಾಧಿಯ ಹೊಂದಿ
ಅ[ದ]ರಕೊಡ್ಡಿ ಪ್ರಕಾಶಿಸುತ್ತಿರ್ಪಂತೆ
ವಿವೇಕ ಕರ್ಮವ ಹೊಂದಿ ಜೀವರೂಪಮಾಗಿ
ಅದರ ಕೊಡ್ಡಿ ಪ್ರಕಾಶಿಸುತ್ತಿಹುದು.
ಆ ಜಡರೂಪಮಾದ ಕರ್ಮದಲ್ಲಿ
ಚೈತನ್ಯರೂಪಮಾಗಿ ತಾನು ಪ್ರಕಾಶಿಸುತ್ತಿರ್ಪುದರಿಂ
ಸರ್ವಗತನೆಂಬುದು ಸಹಜಮಾಯಿತ್ತು
ಆವರಣಮಳಿದಲ್ಲಿ ಉಪಾಧಿಯಳಿದ ತೇಜಸ್ಸು
ಸೂರ್ಯನೊಳೈಕ್ಯಮಪ್ಪಂತೆ,
ಉಪಾಧಿಯಳಿದ ವಿವೇಕ ಶಿವನೊಳಗೆ ಐಕ್ಯಮಪ್ಪಲ್ಲಿ
ಭೇದಮಲ್ಲದೆ, ಲಯಮಿಲ್ಲದೆ ಮಹಪ್ರಕಾಶದಲ್ಲಿ ಬೆರದು
ಪ್ರಕಾಶಿಸುತ್ತ ಪುನಃ ಕರ್ಮಕ್ಕೆ ಬಾರದೆ
ಮಹದಲ್ಲೆ ಪ್ರಕಾಶಿಸುತ್ತಿರ್ಪುದೆ ಮೋಕ್ಷವಾದುದರಿಂ
ಸೃಷ್ಟಿ ಸಂಹಾರಂಗಳೆ ತಂತು
ಭೇದಾ ಭೇದಂಗಳೆರಡೂ ಮಿಥ್ಯ.
ಈ ವರ್ತಮಾನಕಾಲದಲ್ಲೆ ಭೂತ ಭವಿಷ್ಯಂಗಳು ಹುಟ್ಟಿ
ಆ ವರ್ತಮಾನವ ಮರೆಗೊಂಡಿಪ್ಪಂತೆ,
ಈ ನಿಜದಲ್ಲೆ ದ್ವೈತಾದ್ವೈತಂಗಳು ಪುಟ್ಟಿ
ಆ ನಿಜಸುಖವ ಮರೆಗೊಂಡಿರ್ಪುದು.
ಅದರಿಂ ವಿವೇಕವೆ ಬ್ರಹ್ಮವಾದುದರಿಂ
ವಿವೇಕವೆ ಜಡರೂಪಮಾದ
ಸೃಷ್ಟಿಮುಖಕಾದಿಯಾಗಿರ್ಪ ಸ್ಖಾಲಿತ್ಯ ಕಾರಣಮಾದ
ಮನದೊಳಗೆ ಕೂಡಿದ ಜ್ಞಾನದಂತೆ
ವಿವೇಕ ಸಾಕಾರೂಪಮಾದ ಸ್ವರೂಪಮಾಗಿ,
ಆದಿ ವರ್ಣವಾಗಿಪ್ಪ ಆಕಾರದೊಳಗೆ ಕೂಡಿ
ಆ ವಿವೇಕವೆ ಅವಿವೇಕಮಾಯಿತ್ತು.
ಅದರಿಂ ಆತ್ಮನಾತ್ಮವೆಂಬ ಶ್ರುತಿವಚನದಿಂ
ಆ ವಿವೇಕವೆ ಆತ್ಮಮಾಗಿರ್ಪುದು, ಅನಾತ್ಮವಾಗಿರ್ಪುದು.
ಗರ್ಭದಲ್ಲಿರ್ಪ ಶಿಶುವು ಕೇವಲವು
ಜಾತಿಸ್ಮರಾದಿತ್ವಾದಿ ವಿವೇಕಮುಂಟಾಗಿರ್ದು
ಭೂಪತನದಲ್ಲಿ ಅಮಂಗಲ ರೋದನ ರೂಪಮಾದ
ಅಕಾರದೊಳಗೆ ಕೂಡಿ ಅವಿವೇಕಿಯಾಗಿಪ್ಪಂತೆ,
ಸಾಕಾರಮಾದಲ್ಲಿ ರುಧಿರದೊಳಗೆ ಕೂಡಿ
ಪಂಚಭೂತ ರೂಪಮಾದ ರುದ್ರನಾಗಿರ್ಪನು.
ನಿರಾಕಾರದಲ್ಲಿ ನಿರುಪಾಧಿಕ ಮಂಗಳಾತ್ಮ ವಿವೇಕಮಾಗಿರ್ಪನು.
ಆತ್ಮ ವಿವೇಕವೆ ಶಿವನಾಗಿರ್ಪುದರಿಂ
ಆತ್ಮ ವಿವೇಕಮುಳ್ಳ ಪುರುಷರ ಶಿವನೆಂದು ತಿಳಿಯಬೇಕು.
ಅಂತಪ್ಪ ವಿವೇಕದಿಂ ಭಾವವನೇಕಮುಖದಿಂ
ಜನಿಸುತ್ತಿರ್ಪುದು ; ಆ ಭಾವದಿಂ ವಿವೇಕಮಧಿಕಮಾಗಿರ್ಪಂತೆ,
ಆ ಶಿವನಲ್ಲಿ ಪ್ರಪಂಚ ಅನೇಕ ಮುಖದಲ್ಲಿ ಜನಿಸುತ್ತಿರ್ಪುದು
ಆ ಪ್ರಪಂಚ ಮುಖದಲ್ಲಿ ಶಿರಮಹಿಮೆಯೆ.
ಅಧಿಕಮಾಗಿರ್ಪ ಮಹಿಮೆಯ ಸ್ವಭಾವಲೀಲೆ.
ಆ ಸ್ವಭಾವಲೀಲೆಯೇ ಆತ್ಮವಿವೇಕ.
ಆತ್ಮವಿವೇಕಮುಳ್ಳ ಪುರುಷನೆ ಶಿವಸ್ವರೂಪು.
ಅಂತಪ್ಪ ಶರಣರ ಚರಣಕಮಲಂಗಳ ಪರಿಮಳದಲ್ಲಿ
ಪರವಶನಾಗಿರ್ಪಂತೆ ಮಾಡಿ ಸಲಹಾ
ಮಹಾಘನ ದೊಡ್ಡ ದೇಶಿಕಾರ್ಯ ಪ್ರಭುವೆ./23
ಕಾಯವೆಂಬ ಪುರನಾಳುವ ಜೀವನೆಂಬರಸು
ನಿಜಬಲದಿಂ ಕರ್ಮವೆಂಬ ರಾಜ್ಯದಲ್ಲಿ ಸಂಪಾದಿಸಿದ
ಸುಕೃತ ದುಷ್ಕೃತಗಳೆಂಬ ದ್ರವ್ಯವನ್ನು ಮನವೆಂಬ ಬೊಕ್ಕಸದೊಳಗಿಟ್ಟು,
ಅಲ್ಲಿಂದ ಶಬ್ದಾಚಾರಮುಖದಿಂದ ನರಕಾದಿ ಯಾತನೆಗಳನ್ನೂ
ಸ್ವರ್ಗಾದಿ ಭೋಗಂಗಳನ್ನೂ ಅನುಭವಿಸುತ್ತಿರ್ಪ ಕೋಟಲೆಗಲಸಿ,
ವೇದಾಂತಸಮುದ್ರದಲ್ಲಿ ಮುಳುಗಿ,
ಅಲ್ಲಿರ್ಪ ಜ್ಞಾನವೆಂಬ ಮಕ್ತಾರತ್ನಮಂ ಕೊಂಡು,
ಪರತತ್ವದೇಶದಲ್ಲಿ ಪರಿಣಾಮಿಸುತ್ತಿರ್ಪ
ಗುರುವೆಂಬ ಮಹಾರಾಜಂಗೆ ಕಾಣಿಕೆಯಂ ಕೊಟ್ಟು,
ಅನಂತಬ್ರಹ್ಮಾಂಡಗಳಂ ತುಂಬಿ, ತಾನನುಭವಿಸಿ,
ಲಿಂಗವೆಂಬಕ್ಷಯನಿಧಾನಮಂ ಪಡೆದು, ಅದನ್ನು ಮನೋಭಂಡಾರದೊಳಿಟ್ಟು,
ಅತಿಜಾಗರೂಕತೆಯಿಂ ತಾನೇ ಕಾಪಾಡುತ್ತಿರಲು,
ಕತಪಯಕಾಲಕ್ಕೆ ಕಾಲದೂತರು ಬಂದು, ಅಂಗಪುರಭಂಗವಂ ಮಾಡಲು,
ತತ್ಪುರವಾಸಿಗಳಾದ ರುದ್ರರು ಕಾಲದೂತರಂ ತರಿದು,
ಯಮನಂ ಪರಿದು, ಲಿಂಗವಿಧಾನಬಲದಿಂ
ಮೋಕ್ಷಸಾಮ್ರಾಜ್ಯಮಂ ಸಂಪಾದಿಸುತ್ತಾ
ಬಾಳುವ ನಿತ್ಯಸುಖವನ್ನು ನನಗೆ ಕೊಟ್ಟು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /24
ಕೇವಲ ವಿವಿಚ್ಚ ಜ್ಞಾನವೇ ಶಿವನು.
ಆ ಶಿವನೆ ಪ್ರಪಂಚ ಸಂಹಾರಮೂರ್ತಿ.
ಆ ಶಿವನು ಪ್ರಪಂಚವ ಸಂಹರಿಸಿದಲ್ಲಿ
ಶೇಷ ವಸ್ತು ತದ್ಭಾವವೇ ಘಟವಳಿದಲ್ಲಿ
ಘಟಭಾವವುಳಿದಂತೆ ಮೊದಲಿಂದಲೂ
ಸಂಹಾರ ಮುಖದಲ್ಲಿ ಅಳಿಯದೆ ಉಳಿದಿಪ್ಪುದರಿಂ
ಆ ಭಾವವೆ ಆದಿಶೇಷಮಾಯಿತ್ತು.
ಆ ವಿವೇಕಕ್ಕೆ ಆ ಭಾವವೆ ಅಲಂಕಾರಮಾದುದರಿಂ
ಶಿವನಿಗೆ ಅದೆ ಆಭರಣಮಾಯಿತು.್ತ
ಸಕಲಸಂಹಾರ ಪ್ರಪಂಚಕ್ಕೂ ಆ ಭಾವ ತಾನೆ ಆಧಾರಮಾಯಿತ್ತು.
ಅದು ವಿಷ್ಣುವಿಗೆ ಶಯ್ಯಮಾಗಿರ್ಪುದೆಂತೆಂದಡೆ : ವಿಷ್ಣುವೆಂದರೆ ವ್ಯಾಪಿಸಲ್ಪಟ್ಟಂಥ ಸ್ವಕರ್ಮ.
ಅದಕ್ಕೆ ಪ್ರಕೃತಿಯೆಂಬ ನಾಮ-
ಉತ್ಕೃಷ್ಟಮಾಗಿ ಮಾಡಲ್ಪಟ್ಟುದುಯೆಂಬುದರ್ಥ.
ಅದು ಪ್ರಪಂಚ ರಕ್ಷಣ ಕಾರಣಮಾಗಿರ್ಪುದರಿಂ
ಪ್ರಪಂಚಮೂಲವೆ ಪ್ರಕೃತಿ, ಪ್ರಪಂಚಲಯಮಾದಲ್ಲಿ
ಪ್ರಪಂಚ ಕರ್ಮದಲ್ಲಿ ಭಾವದಲ್ಲಿ ಸುಷುಪ್ತಿಯ ಹೊಂದಿರ್ಪುದರಿಂ
ಆ ಶೇಷನಲ್ಲಿ ವಿಷ್ಣು ಶಯನಮಾಗಿರ್ಪುದರಿಂ
ಸಾಕಾರದಲ್ಲಿ ಕರ್ಮ, ನಿರಾಕಾರದಲ್ಲಿ ಭಾವ,
ಎರಡಕ್ಕೂ ಭೇದಮಿಲ್ಲದೆ ವಿಷ್ಣುವ್ಯಾಪಕತ್ವವೂ
ಶೀಲಸ್ವಭಾವವೂ ಏಕಮಾಗಿರ್ಪುದು.
ಭಾವಮುಖದಲ್ಲಿ ಪ್ರಕೃತಿಯುಕ್ತಮಾದ
ಸಕಲ ವಿಷಯಂಗಳು ವ್ಯಾಪಿಸಿರ್ಪುದರಿಂ
ಶೇಷಮುಖವೇ ವಿಷಾನ್ವಿತವಾಯಿತ್ತು.
ಶೇಷ ಕ್ಷಣವೆ ಭಾವ ; ಭಾವ ವ್ಯವಹಾರ ಅವ್ಯವಹಾರದಲ್ಲಿ
ಪ್ರಕಾಶಿಸುತ್ತಿರ್ದ ಜ್ಞಾನವೇ ಶಿರೋರತ್ನ.
ಅದು ಅಚೇತನವಚೇತನ ಮಾಡುತಿರ್ಪುದು.
ಆ ಈಶ್ವರ ಭಾವದಲ್ಲಿ ಪರವಶಮಾಗಿರ್ಪ ಪ್ರಕೃತಿ
ತದ್ವಿಚಾರ ಜ್ಞಾನದಿ ಚೇತನಮಾಗಿ
ಕರ್ಮ ರೂಪದಲ್ಲಿ ಪ್ರಪಂಚಮುಖದಲ್ಲಿ
ಪ್ರವಹಿಸುವಲ್ಲಿ ಕಾಲೋಚಿತ ಕರ್ಮ, ಭಿನ್ನ ಕರ್ಮ,
ಉತ್ಕೃಷ್ಟ ಕರ್ಮ ಈ ಮೂರರ್ಥಮುಳ್ಳುದೆ ಪ್ರಕೃತಿ.
ಅದು ಸೃಷ್ಟಿ ಸ್ಥಿತಿ ಸಂಹಾರರೂಪಮಾಗಿರ್ಪುದು.
ಅದರಿಂ ವಿವೇಕವೇ ಶಿವನು, ಪ್ರಕೃತಿಯೇ ವಿಷ್ಣು,
ಅದರಿಂ ಪ್ರಕೃತಿಯೇ ಕರ್ಮ, ವಿವೇಕವೇ ಜ್ಞಾನ,
ಆ ಕರ್ಮಮುಖದಲ್ಲಿ ಹುಟ್ಟುತ್ತಿರ್ಪ ಕಾರ್ಯವೇ ಬ್ರಹ್ಮನು.
ಅದು ಸಾಮ, ದಾನ, ಭೇದ ದಂಡಂಗಳೆಂಬ
ಚತುಮರ್ುಖಗಳಿಂದೊಪ್ಪುತಿಹುದು.
ಆ ಕಾರ್ಯಮುಖದಲ್ಲಿ ಹುಟ್ಟುತ್ತಿರ್ಪ
ಪ್ರಪಂಚವೇ ವಿಶ್ವಪ್ರಪಂಚ.
ಆ ಕಾರ್ಯಕ್ಕೆ ವಿವೇಕವೇ ಶಕ್ತಿಯಾಗಿಹುದು.
ಅದು ವಿವೇಕಕ್ಕೆ ಪ್ರಕೃತಿಯೆ ಶಕ್ತಿಯಾಗಿಹುದು.
ಆ ಪ್ರಕೃತಿಗೆ ಕಾರ್ಯವೇ ಶಕ್ತಿಯಾಗಿಹುದು.
ಆ ಕಾರ್ಯ ಪ್ರಪಂಚವ ಸೃಷ್ಟಿಸುತ್ತಿಹುದು,
ಆ ಕರ್ಮ ಪ್ರಪಂಚವ ರಕ್ಷಿಸುತ್ತಿಹುದು.
ವಿವೇಕ ಇದೆಲ್ಲವನ್ನು ಭಾವದಲ್ಲಿ ಉಪಸಂಹಾರವ ಮಾಡಿದಲ್ಲಿ
ಕಾರ್ಯಕ್ಕೆ ಮೃತಿ, ಕರ್ಮಕ್ಕೆ ಮೂಛರ್ೆ,
ಜ್ಞಾನ ಒಂದೇ ಚೇತನಮಾಗಿಹುದು.
ಅಂತಪ್ಪ ಆದಿ ಭಾವವೇ ಶೇಷನು.
ಅದಕ್ಕೆ ಗರುಡನು ಪಗೆಯಾಗಿರ್ಪುದೆಂತೆಂದಡೆ : ಗಾರುಡ ಮೂಲವೆ ಗರುಡನು ;
ಗಾರುಡವೆಂದರೆ ಪ್ರಪಂಚ.
ತನ್ಮೂಲವಾಗಿರ್ಪ ಮಿಥ್ಯವೇ ಗರುಡನು.
ಅದು ಪ್ರಕೃತಿಗೆ ಆಧಾರಮಾಗಿ
ವಿವೇಕ ಭಾವ ಸಂಹರಿಸುತ್ತಿಹುದು.
ಪ್ರಕೃತಿಯುಕ್ತಭಾವ ಸಂಹರಿಸಲಾರದು.
ಈ ಪ್ರಕೃತಿಯುಕ್ತದಲ್ಲಿ ಭಾವವನಂತವಾಗಿ
ಸಕಲ ಪ್ರಪಂಚವನ್ನು ಬಳಸಿರ್ಪುದರಿಂ
ಕುಂಡಲಿಯಾಯಿತ್ತು.
ಅದು ವಿವೇಕ ಮುಖದಲ್ಲಿ ಒಂದೆಯಾಗಿ
ಜ್ಞಾನಲಿಂಗಕ್ಕೆ ಭಾವವೆ ಆಭರಣಮಾಗಿ
ಆನಂದ ಕಳೆಯೆ ನಿಜಮಾಗಿರ್ಪುದೆ ಮೋಕ್ಷ.
ಅಂತಪ್ಪ ಕೈವಲ್ಯ ಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ./25
ಕೇವಲ ಸದ್ರೂಪಮಾದ ನಿಷ್ಕಳಶಿವತತ್ವವು
ತನ್ನೊಳ್ತಾನೇ ಪ್ರಕಾಶಿಸುತ್ತಿರ್ಪುದರಿಂ ಪರಮಾತ್ಮನೆಂಬ ಸಂಜ್ಞೆಯಿಂ
ತನ್ನ ನಿಜಮಹಾತ್ಮ್ಯ ಪ್ರಕಟನೆಗೋಸುಗ
ತಾನೇ ಆತ್ಮನಾಗಿ, ಆತ್ಮನೇ ಆಕಾಶವಾಗಿ, ಆಕಾಶವೇ ವಾಯುವಾಗಿ,
ವಾಯುವೇ ಅಗ್ನಿಯಾಗಿ, ಅಗ್ನಿಯೇ ಜಲಮಾಗಿ,
ಆ ಜಲವೇ ಪೃಥ್ವೀರೂಪವಾಗಿ ಘಟ್ಟಿಕೊಂಡು
ಆ ಪೃಥ್ವಿಗೆ ಜಲವೇ ಕಾರಣಮಾಗಿ, ಆ ಜಲಕಗ್ನಿಯೇ ಕಾರಣಮಾಗಿ,
ಆ ಅಗ್ನಿಗೆ ವಾಯುವೇ ಕಾರಣಮಾಗಿ,
ಆ ವಾಯುವಿಗೆ ಆಕಾಶವೇ ಕಾರಣಮಾಗಿ,
ಆ ಆಕಾಶಕ್ಕಾತ್ಮನೇ ಕಾರಣಮಾಗಿ, ಆ ಆತ್ಮನಿಗೆ ಪರಮಾತ್ಮನೇ ಕಾರಣಮಾಗಿ,
ಒಂದಕ್ಕೊಂದು ತಮ್ಮಲ್ಲಿಯೇ ತಾವು
ಸೃಷ್ಟಿ ಸ್ಥಿತಿ ಸಂಹಾರಂಗಳಿಗೆ ಕಾರಣಮಾಗಿರ್ಪ,
ಆತ್ಮಾದಿ ಷಡ್ಭೂತಂಗಳಿಗೆ ತಾನೇ ಚೈತನ್ಯ ಸ್ವರೂಪಮಾಗಿರ್ಪ ಪರಮನು
ಆತ್ಮಸಂಗದಿಂ ಜೀವಕೋಟಿಗಳಂ ಸೃಷ್ಟಿಸಿ,
ಕರ್ಮಕ್ಕೆ ಕಾರಣಮಂ ಮಾಡಿ ಕ್ರೀಡಿಸುತ್ತಿರ್ದನದೆಂತೆಂದೊಡೆ: ಜಲವು ತಾನೇ ಪೃಥ್ವೀಸ್ವರೂಪಮಾಗಿ ಬಲಿದು,
ಆ ಪೃಥ್ವಿಯನ್ನೇ ತನಗಾಧಾರವಂ ಮಾಡಿಕೊಂಡು,
ತಾನೇ ಪೃಥ್ವಿಗೆ ಆಧಾರಮಾಗಿ,
ಪೃಥ್ವಿಯಂ ಪರಿವೇಷ್ಠಿಸಿರ್ಪ ಜಲವೇ ಪತಿಯಾಗಿ,
ಪೃಥ್ವಿಯಲ್ಲಿ ಪರಿವ ಜಲವೇ ಸತಿಯಾಗಿರ್ಪ ಆ ಜಲಬಂಧದಿಂ
ಕುಡ್ಯ ಸೌಧ ಗೃಹಾದಿ ನಾನಾಸ್ವರೂಪಂಗಳಾಗಿ ನಿಂತು,
ತನ್ನಲ್ಲಿರ್ಪ ಜಲವಾರಿಹೋಗಲು, ಆ ಸೃಷ್ಟಿಶಕ್ತಿಯಿಂ ತಾಂ ಘಟ್ಟಿಕೊಂಡು,
ಜೀವರಿಗೆ ಜಲಹಿಂಸೆಯಂ ನಿವಾರಣಮಾಡುತ್ತಾ,
ಆ ಜಲದಿಂದಲ್ಲೇ ತಾನು ಲಯವನೈದುತ್ತಿರ್ದಂದದಿ,
ಆ ಪರಮಾತ್ಮನೇ ಆತ್ಮನಂ ಸುತ್ತಿ, ಆತ್ಮನಲ್ಲೇ ಸುಳಿದು,
ತಾನೇ ಶಿವಶಕ್ತಿಸ್ವರೂಪಮಾಗಿ, ತನ್ನಿಂದ ಬುದ್ಧಮಾಗಿರ್ಪ ಆತ್ಮಪದಾರ್ಥದಲ್ಲಿ
ಜೀವಜಾಲಂಗಳಂ ಸೃಷ್ಟಿಸಿ,
ಪೃಥ್ವಿಯಲ್ಲಿ ಬೆಳೆದ ಬೆಳೆಯನ್ನು ಗೃಹದಲ್ಲಿ ತುಂಬಿ,
ಶರೀರದಿಂದ ಅನುಭವಿಸುವಂದದಿ
ಆತ್ಮನಿಂದ ಬೆಳೆದ ಕರ್ಮದ ಬೆಳಸನ್ನು ಜೀವಂಗಳಲ್ಲಿ ತುಂಬಿ,
ತದನುಭವಕ್ಕೆ ತಾನೇ ಕಾರಣಮಾಗಿ,
ನಿಜಮಹಾತ್ಮ್ಯ ಪ್ರಕಟನಮಂ ಮಾಡಿಯಾಡುತಿರ್ಪಭವನೆ
ನಿನ್ನ ಸಂಬಂಧಮಾಗಿರ್ಪುದಂ ಭಾವದಲ್ಲಿ ತಿಳಿದುನೋಡಿದಲ್ಲಿ,
ಎಲ್ಲವೂ ನೀನಾಗಿರ್ಪೆಯಲ್ಲದೆ, ಪೆರೆತೊಂದುಂಟೇನಯಾ?
ನಿನ್ನ ಕ್ರೀಡಾನಿಮಿತ್ತ ನಾನೆಂಬ ಬರಿಯ ಭ್ರನೆಯಂ ಸೃಷ್ಟಿಸಿ,
ಕಷ್ಟಬಡಿಪುದೊಳ್ಳಿತ್ತೇನಯ್ಯಾ?
ಅರಿತವನ ಮುಂದೆ ಇಂದ್ರಜಾಲವಂ ಮಾಡಲು ಪರಿಶೋಭಿಸಬಲ್ಲುದೆ?
ನಿನ್ನ ಮಾಯೆಯೆನಗೆ ಮನೋರಥಮಾಗಬಲ್ಲುದೆ?
ಬೇರ ಬಲ್ಲವಂಗೆ ಎಲೆಯಂ ತೋಋಹೋದರೆ, ಅಪಹಾಸ್ಯಕಾರಣಮಾಗಿಹುದು.
ಇದನರಿತು ನನ್ನಂ ಕಾಡದಿರು ಕಂಡ್ಯಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./26
ಗಣನಾತೀತನಪ್ಪ ಪರಮೇಶ್ವರನು ಲೀಲಾನಿಮಿತ್ತ ಗಣನೆಗೆ ಬಂದಲ್ಲಿ,
ವಿಷಮಗಣನೆಯೇ ಶಿವನಾಯಿತ್ತು, ಸಮಗಣನೆಯೇ ಶಕ್ತಿಯಾಯಿತ್ತು.
ಅವೇ ಇಂದ್ರಿಯಂಗಳಲ್ಲಿ ಬೆರೆದು, ನಾಲ್ವತ್ತೈದು ತತ್ವಂಗಳಾಯಿತ್ತು.
ಆ ಶಿವಶಕ್ತಿಗಳ ಹೆಚ್ಚಿಗೆಯಲ್ಲಿ ಒಂದು ಶೂನ್ಯವು ಹುಟ್ಟಿ,
ತಚ್ಛೂನ್ಯದಲ್ಲಿ ಬೆರದ ಶಿವಶಕ್ತಿಗಳೇ ಅನಂತಗುಣಿತಂಗಳಾಗಿ ಹೆಚ್ಚುತ್ತಿರಲು,
ಅಲ್ಲಿ ಕಾಲ ಕರ್ಮ ಸೃಷ್ಟಿ ಸ್ಥಿತಿ ಸಂಹಾರಾದಿ ಪ್ರಪಂಚಂಗಳುದಿಸಿ,
ಅಲ್ಲಿಯೇ ತೋರುತ್ತಾ ಅಡಗುತ್ತಾ ತೊಳಲುತಿರ್ಪುವು ನೋಡಾ.
ಇಂತಪ್ಪ ಪರಮಾತ್ಮನ ಲೀಲಾಶಕ್ತಿಯನ್ನು ಗುರುಮುಖದಿಂದ ತಿಳಿದ ಮಹಿಮನು
ಶೂನ್ಯವಶೂನ್ಯಮಾಡಲು, ಶಿವಶಕ್ತಿಸ್ವರೂಪಮಾದ ಗಣನೆ ನಿಂದಿತ್ತು.
ಅಂತಪ್ಪ ಇಂದ್ರಿಯವಿಷಯಸ್ವರೂಪಮಾದ ಗಣನೆಯನ್ನು
ತದ್ಗಣನೆಯಿಂದ ಕಳೆಯಲು, ಉಳಿದ ನಿಜಂ ತಾನೊಂದೇ ನಿಂದಲ್ಲಿ
ತಾನೇ ಪರಮಾತ್ಮನಾಯಿತ್ತು.
ಇಂತಪ್ಪ ಸಕೀಲವು ತನಗೆ ಸಾಧ್ಯಮಪ್ಪಂತೆ ಮಾಡಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./27
ಗುರುವಿನ ಹಸ್ತವು ಜಂಗಮದ ಪಾದಾಂಗುಷ್ಠವು
ಘಾತಮೆಂತೆಂದಡೆ : ಗುರುವಿನ ಹಸ್ತ ಕರ್ಮಮೂಲಮಾದುದರಿಂ
ಇಷ್ಟ ಸಾಧ್ಯಮಪ್ಪುದು.
ಜಂಗಮಪಾದ ಜ್ಞಾನ ಮೂಲಮೆಂತೆಂದಡೆ : ತೀರ್ಥಯಾತ್ರೆಗೆ ಜ್ಞಾನವೇ ಮೂಲ
ಅದಕ್ಕೆ ಪಾದವೆ ಕರಣವಾಗಿಹುದು.
ಆ ಪಾದಕ್ಕೆ ಉಂಗುಷ್ಠವೆ ಆಧಾರವಾದುದರಿಂ
ಪರಮ ಪವಿತ್ರ.
ಅಲ್ಲಿ ಪ್ರಾಣಲಿಂಗ ಜನನ.
ಗುರುಹಸ್ತೋದ್ಭೂತೇಷ್ಟಲಿಂಗವೇ ಪೃಥ್ವಿರೂಪು.
ಜಂಗಮ ಪಾದೋದ್ಭವ ಪ್ರಾಣಲಿಂಗವೆ ಜಲರೂಪು.
ಆ ಪೃಥ್ವಿ ಲಿಂಗಕ್ಕೆ ಆ ತೀರ್ಥಲಿಂಗವೆ ಪ್ರಾಣರೂಪು.
ಆ ಇಷ್ಟ ಪ್ರಾಣಲಿಂಗಗಳೆರಡು ಏಕಮಾದಲ್ಲಿ
ತೇಜೋರೂಪಮಾಗಿ, ಭಾವನಾಯೋಗ್ಯವಾಗಿ
ಲಿಂಗಮೆಂದು ಭಾವಿಸಲ್ಪಟ್ಟುದರಿಂ ಭಾವಲಿಂಗಮಾಯಿತ್ತು.
ಅಂತಪ್ಪ ತೇಜೋಲಿಂಗ ಸಂಗದಿಂ
ನನ್ನ ಶರೀರಾದಿ ಕರ್ಮ ಕಾಷ್ಠತ್ರಯಂಗಳು ಭಸ್ಮಮಾದುದರಿಂ
ಶಿವಭಕ್ತ ಶರೀರ ಪುನರ್ದಹನ ಯೋಗ್ಯಮಲ್ಲಮಾಯಿತ್ತು.
ನಾನೆಂಬ ಭಸ್ಮ ನಿನಗೆ ಲೇಪನವಾಗಿರ್ಪುದೆ ಲಿಂಗೈಕ್ಯ.
ಅಂತಪ್ಪ ಲಿಂಗೈಕ್ಯ ಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ./28
ಗುರುವು ಮನದಲ್ಲಿ ಮಂತ್ರವನ್ನೂ, ತನುವಿನಲ್ಲಿ ಲಿಂಗವನ್ನೂ ಸ್ಥಾಪಿಸಿ,
ಕರುಣರಸವನೆರೆಯಲಾಮಂತ್ರವು ಜಿಹ್ವೆಯಲ್ಲಂಕುರಿಸಿ,
ಶರೀರವನಾವರಿಸಲಾ ಶರೀರದ ಭೂತತ್ವವಳಿದು,
ಮಂತ್ರವೇ ಶರೀರವಾಯಿತ್ತು.
ಲಿಂಗವು ನೇತ್ರದಲ್ಲಂಕುರಿಸಿ, ಮನಮನಾವರಿಸಿ,
ಮನದ ಅಹಂಕಾರವಂ ತೊಲಗಿಸಿ, ಆ ಮನವೇ ಲಿಂಗವಾಯಿತ್ತು.
ಮಂತ್ರವೇ ತನುವಾಗಿ ಮನವೇ ಲಿಂಗವಾದಲ್ಲಿ,
ನಾಮಮಧ್ಯದಲ್ಲಿ ಪುರುಷನಿರ್ಪಂತೆ
ಮಂತ್ರಮಧ್ಯದಲ್ಲಿ ಲಿಂಗವಿರ್ಪುದು ಸಹಜಮಾಯಿತ್ತು .
ತನುಮನೋಮಧ್ಯದಲ್ಲಿರ್ಪ ಪ್ರಾಣಲಿಂಗವು ಮಂತ್ರದಲ್ಲಿ ಲೀನಮಾಯಿತ್ತು.
ಮಂತ್ರದಲ್ಲಿ ಜಾಗ್ರ ಲಿಂಗದಲ್ಲಿ ಸುಷುಪ್ತಿ ನೆಲೆಗೊಂಡು,
ಪ್ರಪಂಚವೆಲ್ಲಾ ಸ್ವಪ್ನಸ್ವರೂಪಮಾಗಿ,
ಮಂತ್ರದಲ್ಲಿ ಜ್ಞಾನವು, ಲಿಂಗದಲ್ಲಿ ಆನಂದವು, ಈ ಎರಡರ ಸಂಗವೇ ನಿಜವು,
ನಿಜವೇ ತಾನಾಗಿ, ತನ್ನಿಂದನ್ಯವೇನೂ ಇಲ್ಲದುದೆ
ಕೇವಲ ಕೈವಲ್ಯವೆನಿಸುವುದು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./29
ಗುರುವೇ ಪರಬ್ರಹ್ಮವು.
ಅದೆಂತೆಂದೊಡೆ: ಲಲಾಟದಲ್ಲಿರ್ಪ ಆತ್ಮನಂ ಭಸ್ಮತೇಜೋಮುಖದಿಂ ಕರಗ್ರಸ್ತವಂ ಮಾಡಿ,
ಹಸ್ತಮಸ್ತಕಸಂಗದಿಂ ಬ್ರಹ್ಮಸ್ಥಾನದಲ್ಲಿ ಭಾವಮಧ್ಯದಲ್ಲಿಂಬಿಟ್ಟು
ಆ ವಸ್ತುವೇ ಶಿವನೆಂದು ಕಣರ್ೊಪದೇಶಮಂ ಮಾಡಿ,
ಆ ವಸ್ತು ಹ್ಯಾಂಗಿರ್ಪುದೆಂದರೆ ಹೀಂಗಿರ್ಪುದೆಂದು
ಸಾಕಾರಮೂರ್ತಿಯಾದ ಲಿಂಗಮಂ ಕರದಲ್ಲಿ ಕೊಟ್ಟು,
ಒಳಗಿರ್ಪ ಮಂತ್ರವೂ ಹೊರಗಿರ್ಪ ಲಿಂಗವೂ
ಭಾವದಲ್ಲೊಂದೆಯಾಗಿ ಪ್ರಕಾಶಿಸುವಂತೆ ಮಾಡಿ,
ಅಂತಃಕರ್ಮವು ಮಂತ್ರದಿಂ, ಬಾಹ್ಯಕರ್ಮವು ಲಿಂಗದಿಂ
ಪೂತಮಾಗಿರ್ಪ ವಾಸನೆಯಳಿದು, ಲಿಂಗಪ್ರಸಾದೋಪಭೋಗದಿಂ
ಕರಣಂಗಳೆಲ್ಲಾ ಲಿಂಗದಕಿರಣಂಗಳಾಗಿ ಲಿಂಗಾನುಭವಸುಖದಿಂ
ತನ್ನಂ ಮರೆತು ಲಿಂಗವೇ ತಾನಾಗಿರ್ಪವನೇ ಜಂಗಮವು.
ಲಿಂಗಯಂತ್ರದಲ್ಲಿ ಮಂತ್ರ ಬೀಜಾಕ್ಷರವನಿಂಬಿಟ್ಟು,
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳಿಂ ಪೂಜಿಸುತ್ತಿರ್ಪಾತನೇ ಭಕ್ತನು.
ಗುರುವೆಂಬ ಪರಬ್ರಹ್ಮದಲ್ಲಿ ಜಂಗಮ ಲಿಂಗ ಭಕ್ತರೆಂಬ
ಮೂರು ಮೂರ್ತಿಗಳುತ್ಪನ್ನರಾಗಿ,
ಭಕ್ತನು ಕರ್ಮವಂ ಸೃಷ್ಟಿಸುತ್ತಿರ್ಪನು,
ಲಿಂಗವು ತತ್ಕರ್ಮವಂ ರಕ್ಷಿಸುತ್ತಿರ್ಪುದು,
ಜಂಗಮವು ಆ ಸತ್ಕರ್ಮಮುಖದಿಂ ಬಂದ ಪದಾರ್ಥಗಳನ್ನು
ಉಪಭೋಗವ್ಯಾಜದಿಂ ಸಂಹರಿಸುತ್ತಿರ್ಪನು.
ಸೃಷ್ಟಿಕರ್ತೃವೇ ಸ್ಥೂಲವೂ ಸ್ಥಿತಿಕರ್ತೃವೇ ಸೂಕ್ಷ್ಮವೂ
ಸಂಹಾರಕರ್ತೃವೇ ಕಾರಣವೂ ಆದುದರಿಂದ,
ಸ್ಥೂಲಕ್ಕೆ ಸೂಕ್ಷ್ಮವೇ ಚೈತನ್ಯವು,
ಸೂಕ್ಷ್ಮಕ್ಕೆ ಕಾರಣವೇ ಚೈತನ್ಯವು,
ಆ ಕಾರಣವಿದ್ದಂತಿರ್ಪುದು.
ಸಕಲಶರೀರಕ್ಕೂ ಶಿರಸ್ಸೇ ಕಾರಣಮಾಗಿರ್ಪಂತೆ,
ಲಿಂಗಭಕ್ತರಿಗೆ ಜಂಗಮವೇ ಕಾರಣಮಾಗಿ,
ಜಂಗಮೋಪಭೋಗದಿಂ ಲಿಂಗವು ತೃಪ್ತಿಗೊಳ್ಳುತ್ತಿರ್ಪುದಾದುದರಿಂದ
ಜಂಗಮಪೂಜೆಯೇ ಸಕಲಕ್ಕೂ ಕಾರಣಮಾಯಿತ್ತು.
ಕಾರಣಶರೀರವಂ ಹೊಂದುವದೇ ಸೂಕ್ಷ್ಮವು,
ಅದೇ ಸ್ವರೂಪಜ್ಞಾನವು, ಅದೇ ಅಭೇದವು,
ಅಂತಪ್ಪ ಜಂಗಮನ ಸೇವೆ ಎನಗೆ ಸಾಧ್ಯಮಪ್ಪಂತೆ ಮಾಡಿ ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./30
ಗುರುವೇ, ನಿನ್ನ ಕರದಲ್ಲೆನ್ನಂ ಪುಟ್ಟಿಸಿ,
ಮಂತ್ರವೆಂಬ ಜನನಿಯ ವಿವೇಕವೆಂಬ ಸ್ತನಗಳೊಳ್ ತುಂಬಿರ್ಪ
ಅನುಭವಾಮೃತರಸವನೆರೆದು, ಆಚಾರಕ್ಷೇತ್ರದಲ್ಲಿ ಬೆಳೆಸುತ್ತಿರಲು,
ಅನೇಕ ಕಳೆಗಳಿಂ ಕೂಡಿದ ದಿವ್ಯಜ್ಞಾನವೆಂಬ ಯೌವನಂ ಪ್ರಾದುರ್ಭವಿಸಿ,
ಸತ್ಕರ್ಮವಾಸನೆಯಿಂ ಪೋಷಿತನಾಗಿರ್ಪೆನಗೆ ಮಹಾಲಿಂಗಮೊಲಿದು,
ನಿನ್ನ ಭಾವದಲ್ಲಿ ಬಂದು, ಹೃದಯದಲ್ಲಿ ನಿಂದು ಕೇಳಲು,
ನೀನು ಆ ಲಿಂಗಕ್ಕೆ ಮಂಗಳಸೂತ್ರಮಂ ಕಟ್ಟಿ,
ಕಲಶಕನ್ನಡಿಗಳನ್ನಿಕ್ಕಿ ಪಾಣಿಗ್ರಹಣಮಂ ಮಾಡಿ ಕೊಟ್ಟಬಳಿಕ,
ರತಿಯನನುಭವಿಸಿ, ಲಿಂಗಸುಖವಂ ತನಗೀವುತ್ತಿರ್ಪನಯ್ಯಾ.
ಆ ಮೇಲೆ ತನ್ನ ಮನದ ಹೆದರಿಕೆಯಂ ಬಿಡಿಸಿ,
ಅಂತರಂಗಕ್ಕೆ ಕರೆದುಕೊಂಡುಬಂದು,
ನಿಜಪ್ರಸಾದ ರಸದಂಬುಲವಿತ್ತು,
ತನ್ನೊಡನೆ ಕೂಡುವ ಚಾತುರ್ಯಮಾರ್ಗಂಗಳಂ ಕಲಿಸುತ್ತ,
ಆ ಲಿಂಗಂ ತಾನೇ ತನಗೆ ಗುರುವಾದನಯ್ಯಾ.
ಆ ಮೇಲೆ ಭಾವದಲ್ಲಿ ನನ್ನ ಕೂಡಣ ಚಲ್ಲಾಟದಿಂದ ಸಂಚರಿಸುತ್ತಾ,
ತಾನೇ ಜಂಗಮವಾದನಯ್ಯಾ.
ತನ್ನ ಭಾವದಲ್ಲಿರ್ಪ ಇಂದ್ರಿಯವಿಷಯಂಗಳೆಲ್ಲಾ
ಪುಣ್ಯಕ್ಷೇತ್ರಂಗಳಾದವಯ್ಯಾ.
ಶರೀರವೇ ವಿಶ್ವವಾಯಿತ್ತಯ್ಯಾ, ತಾನೇ ವಿಶ್ವನಾಥನಯ್ಯಾ.
ಪಂಚಭೂತಂಗಳೇ ಪಂಚಕೋಶವಾಯಿತ್ತಯ್ಯಾ.
ಆ ಲಿಂಗಾನಂದವೇ ಭಾಗೀರಥಿಯಾಯಿತ್ತಯ್ಯಾ.
ಆ ಲಿಂಗದೊಳಗಣ ವಿನಯವೇ ಸರಸ್ವತಿಯಾಗಿ,
ಆ ಲಿಂಗದ ಕರುಣವೇ ಯಮುನೆಯಾಗಿ,
ತನ್ನ ಶರೀರವೆಂಬ ದಿವ್ಯ ಕಾಶೀಕ್ಷೇತ್ರದಲ್ಲಿ
ಹೃದಯವೆಂಬ ತ್ರಿವೇಣೀ ಮಣಿಕಣರ್ಿಕಾಸ್ಥಾನದಲ್ಲಿ ನೆಲಸಿ,
ಸಕಲ ಗುಣಂಗಳೆಂಬ ಪುರುಷ ಋಷಿಗಳಿಂದ ಅರ್ಚಿಸಿಕೊಳ್ಳುತ್ತಾ
ನಮ್ಮೊಳಗೆ ನಲಿದಾಡುತ್ತಿರ್ದನಯ್ಯಾ.
ತನ್ನ ನಿಜಮತದಿಂ ವಿಶ್ವಸ್ವರೂಪ ಕಾಶೀಕ್ಷೇತ್ರವನು ರಕ್ಷಿಸುತಿರ್ಪ
ಅನ್ನಪೂರ್ಣಾಭವಾನಿಗೂ ತನಗೂ ಮತ್ಸರಮಂ ಬಿಡಿಸಿ,
ತನಗೆ ಅನ್ನಪೂರ್ಣಭವಾನಿಯೇ ಆಸ್ಪದಮಾಗಿ,
ಆ ಅನ್ನಪೂಣರ್ೆಗೆ ತಾನೇ ಆಸ್ಪದಮಾಗಿರ್ಪಂತನುಕೂಲವಿಟ್ಟು
ನಡಿಸಿದನಯ್ಯಾ.
ಇಂತಪ್ಪ ದಿವ್ಯಕ್ಷೇತ್ರದಲ್ಲಿ ನಿಶ್ಚಿಂತಮಾಗಿ
ಆ ಪರಮನೊಳಗೆ ಅಂತರಂಗದರಮನೆಯಲ್ಲಿ
ನಿರ್ವಾಣರತಿಸುಖವನನುಭವಿಸುತ್ತಾ ಆ ಲಿಂಗದಲ್ಲಿ ಲೀನಮಾಗಿ
ಪುನರಾವೃತ್ತಿರಹಿತ
ಶಾಶ್ವತ ಪರಮಾನಂದರತಿಸುಖದೊಳೋಲಾಡುತ್ತಿರ್ದೆನಯ್ಯಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./31
ಗುರುವೇ, ನೀನು ನನ್ನ ಲಿಂಗಕ್ಕೆ ಮಂಗಳಸೂತ್ರವಂ ಕಟ್ಟಿ ಕೊಟ್ಟಂದಿಂದ
ಅನ್ಯವನರಿಯದೆ, ಆ ಲಿಂಗದಲ್ಲೇ ನಡೆವುತ್ತಿರ್ಪೆನು,
ಆ ಲಿಂಗದಲ್ಲೇ ನುಡಿವುತ್ತಿರ್ಪೆನು,
ಆ ಲಿಂಗದ ನಟನೆಯಂ ನೆನವುತ್ತಿರ್ಪೆನು,
ಆ ಲಿಂಗದ ಮಹಿಮೆಯನೆ ಪಾಡುತ್ತಿರ್ಪೆನು,
ಆ ಲಿಂಗವನೆ ಬೇಡುತ್ತಿರ್ಪೆನು, ಆ ಲಿಂಗವನೆ ಕಾಡುತ್ತಿರ್ಪೆನು,
ಆ ಲಿಂಗವನೆ ಕೊಸರುತ್ತಿರ್ಪೆನು, ಆ ಲಿಂಗವನೆ ಅರಸುತ್ತಿರ್ಪೆನು,
ಆ ಲಿಂಗವನೆ ಬೆರಸುತ್ತಿರ್ಪೆನು, ಆ ಲಿಂಗವಲ್ಲದೆ ಮತ್ತಾರನೂ ಕಾಣೆನು,
ಮತ್ತಾರಮಾತನೂ ಕೇಳೆನು, ಮತ್ತಾರನೂ ಮುಟ್ಟೆನು, ಮತ್ತಾರನೂ ತಟ್ಟೆನು.
ಲಿಂಗವು ನಾನು ಇಬ್ಬರೂ ಇಲ್ಲದ ಕಾರಣ
ಎಲ್ಲವೂ ನನಗೆ ಏಕಾಂತಸ್ಥಾನವಾಯಿತ್ತು.
ಎಲ್ಲೆಲ್ಲಿಯೂ ಯಾವಾಗಲೂ ಎಡೆವಿಡದೆ ಲಿಂಗದಲ್ಲೇ ರಮಿಸುತಿರ್ದೆನು.
ಲಿಂಗದಲ್ಲೇ ಕಾಲವ ಕ್ರಮಿಸುತ್ತಿರ್ದೆನು
ಲಿಂಗದಲ್ಲೇ ಎನ್ನಂಗಗುಣಂಗಳಂ ಕ್ಷಮಿಸುತ್ತಿರ್ದೆನು
ಲಿಂಗದೊಳಗೆ ನನ್ನ, ನನ್ನೊಳು ಲಿಂಗದ ಚಲ್ಲಾಟವಲ್ಲದೆ,
ಬೇರೊಂದು ವಸ್ತುವೆನಗೆ ತೋರಲಿಲ್ಲ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./32
ಗೊಲ್ಲರಹಳ್ಳಿಯಲ್ಲಿ ಭೂವಲ್ಲಭನಿದ್ದರೆ,
ಅಲ್ಲಿನ ಜನರು ಅವಂಗೆ ಕುರಿಯಹಾಲಂ ಕರೆದುಕೊಟ್ಟು,
ನೀಚೋಚ್ಚವರಿಯದ ಮಾತುಗಳನಾಡಿ ನಗಿಸುವರಲ್ಲದೆ,
ರಾಜೋಪಚಾರವಂ ಮಾಡಬಲ್ಲರೇನಯ್ಯಾ ?
ಅಂತು ಜ್ಞಾನಿಯೆಂದರಿತು ನನ್ನ ಹೃದಯದಲ್ಲಿ ನೀಂ ನೆಲಸಿದಲ್ಲಿ,
ನನ್ನಲ್ಲಿಹ ತಮೋಗುಣಗಳಿಂ ಪೂಜಿಸಿ,
ಅಪಶಬ್ದಗಳಿಂ ಸ್ತುತಿಸುವೆನಲ್ಲದೆ,
ನಿಜಭಾವದಿಂದರ್ಚಿಸಿ, ನೈಘಂಟುಕಶಬ್ದಂಗಳಿಂ ಸ್ತುತಿಸಬಲ್ಲೆನೇನಯ್ಯಾ ?
ಇಂತು ನಾನು ಮಾಡುತ್ತಿರ್ಪ ಅಪಚಾರಂಗಳಂ
ನೀನುಪಚಾರಂಗಳಾಗಿ ಕೈಕೊಳ್ಳದಿರ್ದೊಡೆ,
ನಿನ್ನ ಪರಮದಯಾಮಹಿಮೆ ಪ್ರಕಟಮಪ್ಪುದೇನಯ್ಯಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ ?/33
ಗೋಳಕಾಕಾರಮಾದ ಮಹಾಲಿಂಗವೇ ಬೀಜ,
ಅದು ಸಕಲಪ್ರಪಂಚಗಳನ್ನು ತನ್ನೊಳಗಿಟ್ಟುಕೊಂಡು,
ಸಕಲಕ್ಕೂ ತಾನೇ ಕಾರಣಮಾಗಿಹುದು.
ಅಂತಪ್ಪ ಮಹಾಲಿಂಗವು ಗುರುತಂತ್ರದಿಂ
ಭಕ್ತಕ್ಷೇತ್ರದಲ್ಲಿ ತಾನೊಂದೆರಡಾದಲ್ಲಿ,
ಶಿವಶಕ್ತಿಸ್ವರೂಪಮಾದ ವರ್ಣಶಾಖೆಗಳು ಅಭೇದಮಾಗಂಕುರಿಸಿ,
ಪರ್ಣದಿಂದ ಶಾಖೆಯು ಬಲಿದು,
ಶಾಖೆಯಿಂದ ಪರ್ಣವು ಬಲಿದು,
ಅಂತಪ್ಪ ಶಾಖಾರೂಪಮಾದ ಮುಖಂಗಳಿಂದೊಪ್ಪುತಿರ್ಪ ವೃಕ್ಷವೇ ರುದ್ರನು.
ಆ ಪರ್ಣವೇ ವಿಷ್ಣು, ಫಲವೇ ಬ್ರಹ್ಮ,
ಪುಷ್ಪವೇ ಪೃಥ್ವೀ, ಫಲವೇ ಜಲ,
ನನೆಯೇ ಅಗ್ನಿ, ಪರ್ಣವೇ ವಾಯು,
ಆ ವೃಕ್ಷವೇ ಆಕಾಶ, ಬೀಜವೇ ಆತ್ಮ.
ಅಂತಪ್ಪ ಬೀಜಕ್ಕೆ ನಿಂದಲ್ಲಿ ಫಲವರ್ಣಶಾಖೆಗಳು ವಧರ್ಿಸಿ,
ಸುಖವಂ ಕೊಡುತಿರ್ಪವು.
ಲಿಂಗಾರ್ಚನೆಯಂ ಮಾಡಿದಲ್ಲಿ,
ಸಕಲ ದೇವತೆಗಳು ತೃಪ್ತರಾಗಿ ವಧರ್ಿಸುತಿರ್ಪರಾದ ಕಾರಣ,
ವೀರಶೈವಮತದಲ್ಲಿ ಆತ್ಮಸ್ವರೂಪಮಾದ ಬೀಜ
ಒಂದೆರಡಾದುದೇ ಇಷ್ಟ ಪ್ರಾಣಗಳು.
ಫಲಮಧ್ಯದಲ್ಲನಂತರೂಪಮಾಗಿ ಸಕಲ ಪ್ರಪಂಚವಂ ತನ್ನೊಳಗಿಟ್ಟುಕೊಂಡು
ತನ್ನನು ತಿಳಿದು ಸೃಷ್ಟಿಗೆ ತಾನೇ ಕಾರಣಮಾಗಿ,
ಪರಮಾನಂದಮಹೀರುಹವು ಫಲಿಸಿ ತೃಪ್ತಿರೂಪಮಾಗಿ
ಆ ಪ್ರಪಂಚಕ್ಕೆ ತಾನೇ ಕಾರಣಮಾಗಿ,
ಮಿಕ್ಕವೆಲ್ಲಾ ಮಿಥ್ಯವಾಗಿ ತೋರುತ್ತಿರ್ಪುದೇ ಭಾವಲಿಂಗವು.
ಅಂತಪ್ಪ ಭಾವಲಿಂಗಸಂಗದಲ್ಲಿ ನಿಸ್ಸಂಗ ನಿಭರ್ಾವಮಾದ
ನಿತ್ಯಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /34
ಘಟ ಮುದಿಸುತಲೆ ಘಟಮುತ್ಪನ್ನವಾಗುವಂತೆ,
ಸಾಕಾರ ಶರೀರಮುದಿಸುತಲೇ ನಿರಾಕಾರಸ್ವಪ್ನಮುತ್ಪನ್ನಮಾಗಿ,
ಬೀಜ ವೃಕ್ಷನ್ಯಾಯದಂತೆ
ಆದ್ಯಂತಂಗಳು ತಿಳಿಯದೆ
ಒಂದಕ್ಕೊಂದು ಕಾರಣಮಾಗಿರ್ಪುದರಿಂ
ಸಾಕಾರದಲ್ಲಿ ಶರೀರವೇ ಜಾಗ್ರಮಾಗಿ, ಭಾವವೇ ಸ್ವಪ್ನಮಾಗಿ ಇಹುದು.
ನಿರಾಕಾರದಲ್ಲಿ ಭಾವವೇ ಜಾಗ್ರಮಾಗಿ
ಸಾಕಾರಶರೀರವೇ ಸ್ವಪ್ನವಾಗಿ ಇಹುದು.
ತಮಸ್ಸಿನಲ್ಲಿ ಸ್ವಪ್ನ ಶರೀರ ಕಾಣಿಸುತ್ತಿಹುದು.
ಜಾಗ್ರದಲ್ಲಿ ಸ್ಥೂಲಶರೀರ ಕಾಣಿಸುತ್ತಿಹುದೆಂತೆಂದಡೆ : ರಾತ್ರಿಯಲ್ಲಿ ಆಕಾಶವೂ ದಿವದಲ್ಲಿ ಪೃಥ್ವಿಯೂ ಕಾಣಿಸುತ್ತಿಪ್ಪಂತೆ.
ಆ ಸ್ವಪ್ನ ಶರೀರಕ್ಕೂ ಈ ಸ್ಥೂಲ ಶರೀರಕ್ಕೂ
ನಾದ ಬಿಂದು ಕಳಾ ವ್ಯವಹಾರಂಗಳಲ್ಲಿ
ಸಂಬಂಧಮಾಗುತ್ತಿರ್ಪುದೆಂತೆಂದಡೆ : ಸಾಕಾರವಾದ ಇಂದ್ರಿಯಂಗಳಿಗೂ
ನಿರಾಕಾರವಾದ ಮನಸ್ಸಿಗೂ ಸಂಬಂಧಮಾಗಿರ್ಪಂತೆ.
ಆ ಮನಸ್ಸಿಗೆ ಸುಖದುಃಖಂಗಳು
ಇಂದ್ರಿಯ ಮುಖಂಗಳಿಂದಡಸಿದಲ್ಲಿ
ಈ ಇಂದ್ರಿಯಂಗಳು ದ್ರವಿಸಿ, ಕಂಪಿಸಿ
ಘೋಷಿಸಿ, ನಶಿಸಿ, ಪ್ರಕಾಶಿಸಿ
ಅಹಂಕರಿಸುತ್ತಿರ್ಪಂತೆ.
ಆ ಭಾವಮಯಮಾದ ಸ್ವಪ್ನ ಶರೀರದಲ್ಲಿ
ಈ ಶರೀರಕರ್ಮದಿಂದಲೇ ತೋರುವ
ಸುಖ ದುಃಖಂಗಳು ಈ ಶರೀರಕ್ಕೆ ಸಂಬಂಧಮಾಗಿಹವು.
ಜನನದಲ್ಲಿ ಸ್ಥೂಲಶರೀರವೇ ತಥ್ಯ,
ಮರಣದಲ್ಲಿ ಸ್ವಪ್ನ ಶರೀರವೇ ತಥ್ಯ,
ಈ ಸ್ಥೂಲ ಶರೀರ ಕರ್ಮ ಇಂದ್ರಿಯ ಮುಖಂಗಳಲ್ಲಿ
ಆ ಭಾವಶರೀರಕ್ಕೆ ಲೇಪನಮಾಗುತ್ತಿರ್ಪಲ್ಲಿ,
ಅದು ಸ್ಥೂಲಮಾದಲ್ಲಿ, ಇದು ಲಯಮಪ್ಪುದು.
ಇಂದ್ರಿಯಂಗಳು ಈ ಶರೀರದಲ್ಲಿ ಸಾಕಾರಮಾಗಿ
ಆ ಶರೀರದಲ್ಲಿ ನಿರಾಕಾರಮಾಗಿ ಹೊಂದಿರ್ಪವು.
ಇಂದ್ರಿಯ ಸಂಬಂಧಮಾದ ವಿಷಯ ವ್ಯಾಪಾರಂಗಳು
ಮನಸ್ಸಹೊಂದಿ ಅನುಭವಕ್ಕೆ ಬರುತ್ತಿರ್ಪಂತೆ
ಶರೀರಸಂಬಂಧವಾದ ಪುತ್ರ ಕರ್ಮಂಗಳು
ಪರದಲ್ಲಿ ಸ್ವಪ್ನರೂಪಮಾದ ಕಾರಣ
ಶರೀರಕ್ಕೆ ಅನುಭವನೀಯಮಾಗಿ ಇಹುದು.
ಆಕಾಶದಲ್ಲಿ ಇರ್ಪ ಸೂರ್ಯಪ್ರಭೆಯಿಂ
ಪೃಥ್ವಿ ಪ್ರಕಾಶಮಾಗಿರ್ಪಲ್ಲಿ
ಅದೇ ಪೃಥ್ವಿಯಲ್ಲಿರ್ಪ ರಸಪಾನಂಗಳಂ ಮಾಡಿ
ಅದೇ ಜಡಮಯಮಾದ ಮೇಘಮಾದಲ್ಲಿ
ಪೃಥ್ವಿ ಆಕಾಶಂಗಳೊಂದಕ್ಕೊಂದು ಕಾಣಿಸದಿರ್ಪಂತೆ
ಭಾವ ಶರೀರವ ಹೊಂದಿ ತೇಜೋಮಯವಾಗಿ
ಭ್ರಮಿಸುತಿರ್ಪ ಜೀವನ ಪ್ರಕಾಶದಲ್ಲಿ
ಜಾಗ್ರ ಸ್ವಪ್ನಂಗಳೊಂದೆಯಾಗಿಪ್ಪವು.
ಈ ಶರೀರದಲ್ಲಿ ಇಪ್ಪ ಅಶನಾದಿ ರಸಂಗಳ
ಆ ತೇಜಸ್ಸು ಕೊಂಡಲ್ಲಿ ಅದೆ ಜಡರೂಪಮಾದ ತಮಸ್ಸಾಗಿ
ಜೀವನ ಸ್ಥೂಲ ಕಾಣಿಸದೆ ಜೀವನು
ಕಾರಣದಲ್ಲೆ ವರ್ತಿಸುತ್ತಿಹನು.
ಆ ಮೇಲೆ ವ್ಯಾನವಾಯುಮುಖದಿಂ
ಶರೀರಕೂಪಂಗಳಲ್ಲಿ ಆ ರಸವು ವಿಸರ್ಜನದಲ್ಲಿ
ಆವರಣವಳಿದು ಜಾಗ್ರಮಾಗುತ್ತಿರ್ಪುದು.
ಅಂತಪ್ಪ ಸುಷುಪ್ತಿಯ ಹೊಂದಿರ್ಪ ಜೀವನಿಗೆ
ಉಪಾಧಿಯಿಂ ಜಾಗ್ರಮುದ್ಭವಿಸುವದೆಂತೆಂದಡೆ : ಪೃಥ್ವಿರೂಪಮಾದ ವಾಸನೆಯಿಂ ಜಾಗ್ರಮುದಿಸದು,
ವಾಯುರೂಪಮಾದ ಸ್ಪರ್ಶನದಿಂದಲು
ಆಕಾಶರೂಪಮಾದ ಶಬ್ದದಿಂದಲು
ಮುಗುಲು ಹರಿದು ಜಾಗ್ರಮುದಿಸುತ್ತಿರ್ಪುದು.
ಶರೀರದಲ್ಲಿ ಸಾಕಾರರೂಪಮಾದ ಇಷ್ಟಲಿಂಗ,
ಕಾರಣದಲ್ಲಿ ವಿವೇಕರೂಪಮಾದ ಭಾವಲಿಂಗ,
ಸೂಕ್ಷ್ಮದಲ್ಲಿ ಮಂತ್ರರೂಪಮಾದ ಪ್ರಾಣಲಿಂಗ,
ಭಜಿಸಿದಲ್ಲಿ, ಆ ಸೂಕ್ಷ್ಮದಲ್ಲಿರ್ಪ ತಮಸ್ಸೆಂತಳಿವುದೆಂದಡೆ : ವಿಷಯರೂಪಮಾದ ತಮಸ್ಸು
ಮಂತ್ರದಿಂದೆಂತಳಿವುದೊ ಅಂತಳಿದಲ್ಲಿ
ಸಾಕಾರ ನಿರಾಕಾರಂಗಳೊಂದೆಯಾಗಿ,
ಜನನ ಮರಣ ಭ್ರಾಂತಿಯಡಗಿ
ಇದ್ದಂತಿರ್ಪ ಸ್ಥಿತಿಯೆ ಮಹಾಲಿಂಗ.
ಅಂತಪ್ಪ ಮಹಾಲಿಂಗವೆ ನಾನಾಗಿರ್ಪ
ನಿಜಾನಂದ ಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ./35
ಘ್ರಾಣಜಿಹ್ವಾತ್ವಕ್ಫ್ರೋತ್ರಮಾನಸಾದಿ ವಿಷಯೇಂದ್ರಿಗಳಲ್ಲಿ
ಪೃಥ್ವಿವ್ಯಪ್ತೇಜೋವಾಯ್ವಾಕಾಶಾತ್ಮಾದಿ ಷಡ್ಭೂತಂಗಳು
ವಿಪರೀತಸಂಬಂಧಂಗಳಾಗಿ ತೋರುತ್ತಿರ್ಪವೆಂತೆಂದೊಡೆ: ಮನಸ್ಸಿನ ವಿಷಯದಲ್ಲಿ ಪೃಥ್ವಿಯು ಸೃಷ್ಟಿಕಾರಣಮಾಗಿಹುದು.
ಶ್ರೋತ್ರವಿಷಯದಲ್ಲಿ ಜಲವು ಸಂರಕ್ಷಣಕಾರಣಮಾಗಿ ಶುಚಿಯಾಗಿಹುದು.
ತ್ವಗ್ವಿಷಯದಲ್ಲಗ್ನಿಯು ಸಂಹಾರಕಾರಣಮಾಗಿಹುದು.
ನೇತ್ರವಿಷಯದಲ್ಲಿ ವಾಯುವು ಚಂಚಲಕಾರಣಮಾಗಿಹುದು.
ಜಿಹ್ವಾವಿಷಯದಲ್ಲಾಕಾಶವು ಶಬ್ದಕಾರಣಮಾಗಿಹುದು.
ನಾಸಿಕ ವಿಷಯದಲ್ಲಾತ್ಮನು ಚೈತನ್ಯಕಾರಣಮಾಗಿಹನು.
ವಾಯುವಿನೊಳಗೆ ಬೆರೆದ ಆತ್ಮನೇ ಜೀವನು ;
ಆತ್ಮನೊಳಗೆ ಬೆರೆದ ವಾಯುವೆ ಮನಸ್ಸು.
ಪಂಚಭೂತರೂಪಮಾದ ಶರೀರಕ್ಕೆ ಜೀವನು ಕರ್ತನಾದಂದದಿ
ಪಂಚಭೂತಗುಣಗ್ರಾಹಿಗಳಾದ ಇಂದ್ರಿಯಂಗಳಿಗೆ ಮನಸ್ಸೇ ಕರ್ತೃವಾಗಿ,
ಆ ಇಂದ್ರಿಯಂಗಳು ಹೋದಲ್ಲಿಗೆ ಶರೀರವು ಹೋಗುವಂದದಿ,
ಆ ಮನಸ್ಸೇ ಜೀವನಾಗಿ, ಆ ಮನಸ್ಸು ಹೋದಲ್ಲಿಗೆ ಜೀವನು ಹೋಗುತ್ತಿಹನು.
ಅಂತಪ್ಪ ನಿಜಸ್ವರೂಪಮಾದ ಪರಮಾತ್ಮನಾಯಿತ್ತು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./36
ಚಂದ್ರಮಂಡಲಮಧ್ಯಸ್ಥನೇ ಶಿವನು,
ಸೂರ್ಯಮಂಡಲಮಧ್ಯಸ್ಥನೇ ವಿಷ್ಣುವು,
ತಮೋರೂಪಮಪ್ಪ ಸೂರ್ಯನೇ ಗರುಡನು,
ಅದಕ್ಕೆ ದ್ವೈತಾದ್ವೈತಕರ್ಮಗಳೇ ಪಕ್ಷಗಳು,
ಸತ್ವರೂಪಮಪ್ಪ ಚಂದ್ರನೇ ವೃಷಭವು,
ಅಂತಃಕರಣಚತುಷ್ಟಯಂಗಳೇ ಪಾದಂಗಳು.
ಗರುಡನು ರಜೋರೂಪಮಪ್ಪ ಪಾದಂಗಳಲ್ಲಿ ಗ್ರಹಿಸುತ್ತಿರ್ಪನು.
ನಂದೀಶ್ವರನು ತಮೋರೂಪಮಪ್ಪ ಶೃಂಗಂಗಳಿಂದ ಸಂಹರಿಸುತ್ತಿರ್ಪನು.
ಅದಕ್ಕೆ ಚಂದ್ರಮಂಡಲದಲ್ಲಿರ್ಪ ಕಾಳಿಯೂ,
ಸೂರ್ಯಮಂಡಲದಲ್ಲಿರ್ಪ ಲಕ್ಷ್ಮಿಯೂ ಪ್ರತ್ಯಕ್ಷವು.
ಆ ಚಂದ್ರನು ವಿಷ್ಣುರೂಪಮಪ್ಪ ರಾತ್ರಿಯಲ್ಲಿ ಭೇದದಿಂ ವರ್ತಿಸುತ್ತಿಹನು.
ಶಿವಸ್ವರೂಪಮಾದ ಅಹಸ್ಸಿನಲ್ಲಿ ಸೂರ್ಯನು ಅಭೇದದಿಂ ವರ್ತಿಸುತ್ತಿಹನು.
ಅಂತಪ್ಪ ಜಾಗ್ರದಲ್ಲಿ ತಮೋರೂಪಮಪ್ಪ ಬಾಹ್ಯಕರ್ಮವನಾಚರಿಸುತ್ತಿಹರು.
ರಾತ್ರಿಯಲ್ಲಿ ಸತ್ಯಸ್ವರೂಪಮಪ್ಪ ಶರೀರಧರ್ಮವನಾಚರಿಸುತ್ತಿಹರು.
ಧರ್ಮಮುಖದಲ್ಲಿ ಸತ್ಯವಂ ಬಿಡುತ್ತಿಹರು,
ಕರ್ಮಮುಖದಲ್ಲಿ ತಮಸ್ಸಂ ಬಿಡುತ್ತಿಹರು.
ಆ ಸತ್ವವಂ ಬಿಡಿಸುವ ಭಕ್ತಿಯೇ ಶಿವಸ್ವರೂಪು,
ತಮಸ್ಸಂ ಬಿಡಿಸುವ ಜ್ಞಾನವೇ ವಿಷ್ಣುಸ್ವರೂಪು.
ಅಂತಪ್ಪ ಭಕ್ತಿಯ ಬಹಿಮರ್ೂರ್ತಿಯಪ್ಪ ಶಿವನಲ್ಲಿ ಸೇರಿ,
ಅಂತಪ್ಪ ಜ್ಞಾನದ ಅಂತಮರ್ೂರ್ತಿಯಪ್ಪ ವಿಷ್ಣುವಿನಲ್ಲಿ ಸೇರಿ,
ಬಹಿರಂತರ ಶಿವಶಕ್ತಿಸಂಗಮದಲ್ಲಿ ನಿಜಾನಂದಸುಖವು ಪ್ರಕಾಶಮಾಯಿತ್ತು.
ಜ್ಞಾನದಲ್ಲಿ ಜೀವನು ಕೂಡಿ ಅಭೇದಮಾಯಿತ್ತು,
ಭಕ್ತಿಯಲ್ಲಿ ಶರೀರವು ಕೂಡಿ ಭಿನ್ನಚತುರ್ವಿಧ ಫಲಪದವಿಗಳಾಯಿತ್ತು.
ಮೋಕ್ಷದಲ್ಲಿ ಶಿವಭಕ್ತರು ನಿರ್ವಾಣಶಕ್ತಿಸುಖಂಗಳನನುಭವಿಸುತ್ತಿರ್ಪರು,
ಫಲಪದವಿಗಳಲ್ಲಿ ವಿಷ್ಣುಭಕ್ತರು ಅಲಂಕೃತ ಶಿವಗುಣಸುಖಗಳನನುಭವಿಸುತ್ತಿರ್ಪರು.
ವಿಷ್ಣುಗುಣರೂಪಮಪ್ಪ ಪರಲೋಕಕ್ಕೆ ಶಿವನೇ ಅಧಿಪತಿಯಾಗಿಹನು.
ಮನುಷ್ಯರೆಲ್ಲಾ ವಿಷ್ಣುಭಕ್ತರು, ದೇವತೆಗಳೆಲ್ಲಾ ಶಿವಭಕ್ತರು.
ವಿರಕ್ತರಾಗಿರ್ದು ಶಕ್ತಿಯುತರಾಗಬಾರದು,
ಅನಾಯಾಸದಲ್ಲಿ ಶಕ್ತ್ಯೈಶ್ವರ್ಯಸುಖಗಳು ಬಂದರೆ
ಲಿಂಗಮುಖವಾದ ಜಂಗಮಕ್ಕೆ ನೀಡಬೇಕು.
ಕರ್ಮವೇ ವಿಷ್ಣವು, ಧರ್ಮವೇ ಶಿವನು.
ಕರ್ಮಹೀನರು ನರಕವನ್ನನುಭವಿಸುತ್ತಿಹರು.
ವಿಷ್ಣುಭಕ್ತನು ಮನುಷ್ಯರಿಂದ ಪೂಜ್ಯನಪ್ಪ ಮಹಾರಾಜನಾಗಿ ಹುಟ್ಟುವನು.
ಶಿವಭಕ್ತನು ದೇವತೆಗಳಿಂದ ಪೂಜ್ಯನಪ್ಪ
ಸದ್ಗುಣೈಶ್ವರ್ಯಸಂಪನ್ನನಾಗಿ ಹುಟ್ಟುವನು.
ಇಂತೀ ಬಿನ್ನವಿಸಿರ್ಪ ಸ್ಥೂಲಸೂಕ್ಷ್ಮಮಪ್ಪ ಶಿವಭಕ್ತಿಭೇದವನ್ನು
ಕಾರಣಭಾವದಲ್ಲಿ ಭೇದಿಸಿ, ಒಂದೊಂದಾಗಿ ಸಿಕ್ಕುಬಿಡಿಸಿ,
ಆಯಾ ವಸ್ತುಗಳ ಸಂಬಂಧವನ್ನರಿತು ತೆಗೆದು, ಸಂಬಂಧವಸ್ತುಗಳಲ್ಲಿ ಬೆರಸಿ,
ಇದು ಶಕ್ತಿ ಇದು ಶಿವನು ಎಂಬುದನ್ನು ಏರ್ಪಾಟುಮಾಡಿ,
ಶಿವನೇ ಪ್ರಾಣಮಾಗಿ, ಶಕ್ತಿಯೇ ಶರೀರಮಾಗಿ,
ಕಾರಣ ಭಾವದಲ್ಲಿ ಎರಡೂ ಏಕಮಾದಲ್ಲಿ
ರಜೋರೂಪಮಪ್ಪ ಮನವಳಿದು,
ತಮೋರೂಪಮಪ್ಪ ಶಕ್ತಿಯು ಸರ್ವಸ್ವರೂಪಮಪ್ಪ ಶಿವನೊಳಗೆ
ಲೀನಮಾಯಿತ್ತು.
ಅದೆಂತೆಂದೊಡೆ : ಸ್ವಪ್ನವಳಿದು ಸುಷುಪ್ತಿಯು ಜಾಗ್ರದೊಳಗೆ
ಬಿಂದುಭೇದದೋರದಿರ್ಪಂದದಿ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./37
ಚತುಯರ್ುಗಂಗಳು ಪುಂಗವ ರೂಪಾಗಿರ್ಪ
ಧರ್ಮಪದಂಗಳನಾಶ್ರಯಿಸಿರ್ಪುದರಿಂ
ಇವೆಲ್ಲಕ್ಕೂ ಧರ್ಮವೇ ಕಾರಣಮಾಯಿತ್ತು.
ಆದಿಯಲ್ಲಿ ಧರ್ಮಯುಗದಲ್ಲಿ ಕರ್ಮ ಪುಟ್ಟಿ
ಕರ್ಮವಿರಿವಿಗೊಳುತಿರ್ಪುದೆ ಅಧರ್ಮಮಾಗಿ
ಅದಕ್ಕೆ ತಾವುಗೊಟ್ಟು ಧರ್ಮಪಾದವನೆತ್ತುತ್ತಿರಲು
ಅದೇ ಯುಗ ಪ್ರಮಾಣಮಾಗಿ ಧರ್ಮದೊಳಗೆ ಕೂಡಿ
ಕಾಲನಷ್ಟಮಾಗುತ್ತಿರ್ಪುದರಿಂ
ಆದಿ ಯುಗಂಗಳಧಿಕಮಾಗಿ
ಅಂತ್ಯಯುಗಂಗಳು ಸ್ವಲ್ಪಮಾಯಿತ್ತು.
ಧರ್ಮಾಧರ್ಮ ವ್ಯತ್ಯಯವೆ
ಚತುಯರ್ುಗದಲ್ಲಿ ಚತುರ್ವರ್ಣಾತ್ಮಕಮಾಗಿ
ಚತುರ್ವಿಧ ಪುರುಷಾರ್ಥಂಗಳೆ
ಚತುರ್ವಿಧ ಪುರುಷರಾಗಿರ್ಪರು.
ಧರ್ಮವೇ ಶೂದ್ರ, ಅರ್ಥವೇ ವೈಶ್ಯ,
ಕಾಮವೆ ಕ್ಷತ್ರಿಯ, ಮೋಕ್ಷವೆ ಬ್ರಾಹ್ಮಣನಾಯಿತ್ತು.
ಬ್ರಹ್ಮಾಂಡಮಯಮಾಗಿರ್ಪ ಮಹಾಯುಗದಲ್ಲಿ
ಪಿಂಡಾಂಡಮಯವಾಗಿರ್ಪ
ಪುರುಷಾಯುಃ ಪ್ರಮಾಣವು ಧರ್ಮವ
ಯುಗಂಗಳು ಆಶ್ರೈಸಿದಂತೆ,
ಯುಗಂಗಳನಾಯುಷ್ಯಗಳಾಶ್ರೈಸಿ
ಸ್ವಲ್ಪ ಮಾಗುತ್ತಿರ್ಪುದು.
ಅದೆಂತೆಂದಡೆ : ಬ್ರಹ್ಮಾಂಡ ಪುರುಷನ ಜೀವನೆ ಜೀವನಾಗಿ,
ದೇವತೆಗಳೆ ಕರಣಂಗಳಾಗಿರ್ಪರು.
ಅಂತಪ್ಪ ಬ್ರಹ್ಮಾಂಡವೆ ಪಿಂಡಾಂಡಮಾಗಿ,
ಆ ಸ್ಥೂಲವೆ ಸೂಕ್ಷ್ಮವಾಗಿರ್ಪುದರಿಂ
ಬಾರ್ಹಸ್ಪತ್ಯಮಾನವೆ ಆಯು ನಿರ್ಣಯಕಾಲಮಾಯಿತ್ತು.
`ಶತಾಯುಃ ಪುರುಷಶ್ಯತೇಂದ್ರಿಯ’ಯೆಂಬ ಶೃತಿಯಿಂ
ಅಧರ್ಮ ಪದವೆ ಪುರುಷ ರೂಪಮಾಗಿರ್ಪುದರಿಂ
ಅರ್ಧಮವನಾಶ್ರೈಸಿ ಚತುಯರ್ುಗಂಗಳಲ್ಲಿ
ಆಯುಃ ಪ್ರಮಾಣಮಾಯಿತ್ತು.
ಅದರಿಂ ಬಾರ್ಹಸ್ಪತ್ಯಮಾನ ಬ್ರಹ್ಮಾಂಡದಲ್ಲಿ
ನಾಲ್ಕು ಲಕ್ಷವು ಮೂವತ್ತೆರಡು ಸಾವಿರಕ್ಕೂ
ಪಿಂಡಾಂಡದಲ್ಲಿ ನೂರುವರ್ಷಕ್ಕೂ
ಸಂಬಂಧಮಾದುದೆಂತೆಂದಡೆ : ಜೀವನ ಬ್ರಹ್ಮಾಂಡ ಭ್ರಮಣ ಚಕ್ರಗತಿ
ಮುನ್ನೂರರುವತ್ತಾದಡೆ, ಪ್ರಾಗ್ಗತಿ ಐದು ಘಳಿಗೆಯೆಂದರೇರುತಿರ್ಪುದರಿಂ
ಆ ವರುಷಕ್ಕೂ ಐದು ಘಳಿಗೆ ರಾಶಿ ಒಂದೆಯಾಯಿತ್ತು.
ನಾಲ್ಕು ಸಾವಿರದ ಮುನ್ನೂರಿಪ್ಪತ್ತೈದು ಘಳಿಗೆಗಳೆ
ಒಂದು ವರುಷಮಪ್ಪಂತೆ ನೂರುವರುಷವನ್ನು
ನಾಲ್ಕು ಸಾವಿರ ಮುನ್ನೂರಿಪ್ಪತ್ತರಲ್ಲಿ ಹೆಚ್ಚಿಸಲು
ನಾಲ್ಕು ಲಕ್ಷವು ಮೂವತ್ತೆರಡು ಸಾವಿರ ವರುಷವಾಯಿತ್ತು.
ಅದೇ ಧರ್ಮಪುರುಷ ಪ್ರಮಾಣವಾಯಿತ್ತು.
ಕೃತಯುಗದಲ್ಲಿ ನಾಲ್ಕು, ತ್ರೇತೆಯಲ್ಲಿ ಮೂರು,
ದ್ವಾಪರದಲ್ಲಿ ಎರಡು, ಕಲಿಯುಗದಲ್ಲಿ ಒಂದು
ಇಂತು ಚತುರ್ವಿಧ ಪುರುಷತ್ವವೆ
ದಶವಿಧ ಧರ್ಮ ಪುರುಷವಾಗಿ,
ಎಲ್ಲವು ಸಹಸ್ರ ಪುರು[ಷ] ಒಂದೆಯಾಗಿ ಪರಿಣಾಮಿಸಿ
ಹತ್ತೊಂದಾಗಿ, ಒಂದು ಹತ್ತಾಗಿರ್ಪುದೆ ಆಯುಃಪ್ರಮಾಣ.
ಈ ಒಂದು ಹತ್ತಾಗಿರ್ಪನೆ ವಿಷ್ಣು ,
ಹತ್ತೊಂದಾಗಿರ್ಪನೆ ಶಿವನು,
ಇವು ನಾಲ್ಕಾಗಿರ್ಪನೆ ಬ್ರಹ್ಮನು.
ಇಂತಪ್ಪ ತ್ರಿಮೂತ್ರ್ಯಾತ್ಮಕಮಾಗಿರ್ಪ ಆಯುವೆ ಪ್ರಾಣಲಿಂಗ.
ಇಂತಪ್ಪ ಸಹಸ್ರಾಯುವೆ ಸಹಸ್ರ ಮುಖದಲ್ಲಿ ಹೆಚ್ಚುತ್ತಿರಲು
ಅದೇ ಬ್ರಹ್ಮಗೊಂದು ದಿವಸವಾಯಿತ್ತು.
ಜೀವನು ಒಂದು ಮಹಾಯುಗಕ್ಕೆ
ಸಾವಿರ ವರುಷ ಪುರುಷ ಜನ್ಮವೆತ್ತುತ್ತಿಹನು.
ಅದರಿಂ ಶತಾಯುವು ಬದುಕಿದ ಆ ಪುರುಷನಿಗೆ
ನಾಲ್ಕು ಲಕ್ಷವು ಮೂವತ್ತೆರಡು ಸಾವಿರ ವರುಷಪರಿಯಂತವು
ಪುನಃ ಮನುಷ್ಯ ಜನ್ಮವಿಲ್ಲ.
ಅರ್ಧಾಯುಷ್ಯದಲ್ಲಿ ಮಡಿದ ಪುರುಷನು,
ಕಡಿಮೆ ಆಯುಷ್ಯವನನುಭವಿಸುವ ನಿಮಿತ್ಯ ಮನುಷ್ಯ ಜನ್ಮವನೆತ್ತುವನು.
ಆದಿಕಾಲಂಗಳಿಂದ ಅಂತ್ಯಕಾಲ ಅಧರ್ಮಮಯಮಾಗಿರ್ಪುದರಿಂ
ಸ್ವಲ್ಪಾಯುಷ್ಯದಲ್ಲಿ ಮಡಿದವನು
ಅಂತ್ಯಕಾಲಂಗಳಲ್ಲಿ ಜನ್ಮವೆತ್ತುತಿರ್ಪುದರಿಂ
ಸ್ವಲ್ಪಾಯುಷ್ಯವೆ ಹೀನಮಾಯಿತ್ತು.
ಮೊದಲ ಜನ್ಮದಲ್ಲೆ ಕಾಲ ಸವೆದು
ಈ ಜನ್ಮದಲ್ಲಿ ಸ್ವಲ್ಪ ಕಾಲ ಬಾಳುತ್ತಿಪ್ಪ ಪುರುಷನಿಗೆ
ಧರ್ಮವಾಸನೆಯೇ ಸಾಕ್ಷಿ.
ಈ ಜನ್ಮ ದುಷ್ಕರ್ಮದಿಂದಲೇ ಅರ್ಧಾಯುಷ್ಯಮಾಗಿ
ಮುಂದೆ ಹೀನ ಜನ್ಮವನೆತ್ತುತ್ತಿರ್ಪಾತನಿಗೆ
ಅಧರ್ಮವಾಸನೆಯೇ ಸಾಕ್ಷಿ.
ಇಂತಪ್ಪ ಧರ್ಮಾಧರ್ಮ ವಾಸನೆಗೂಡಿ
ಕರ್ಮ ಸಂಪಾದಿತ ಮನುಷ್ಯಜನ್ಮದಲ್ಲಿ
ದಶಲಕ್ಷ ವರುಷ ಜನಿಸುತ್ತಿರಲು
ಆ ಬ್ರಹ್ಮ ಚಕ್ರದಲ್ಲಿ ಅಹಸ್ಸಂ ಸಮೆದು
ಬ್ರಹ್ಮದ ಸುಷುಪ್ತಿ ಚಕ್ರ ಮುಖದಲ್ಲಿ ಬೀಳುತ್ತ
ಅಲ್ಲಿ ದಶಲಕ್ಷ ವರುಷ ಪ್ರೇತಪುರುಷರಾಗಿ
ಸ್ವಪ್ನಚಕ್ರದಲ್ಲಿ ಗಮಿಸುತ್ತಿಪ್ಪವು.
ಆ ಬ್ರಹ್ಮನ ಜಾಗ್ರದಲ್ಲಿ ಪುನಃ ಪ್ರಪಂಚ ಚಕ್ರಕ್ಕೆ ಬೀಳುತ್ತಿರ್ಪವು.
ಇಂತು ಜೀವಂಗಳು ಬ್ರಹ್ಮನ ಜಾಗ್ರ ಸ್ವಪ್ನಂಗಳಲ್ಲಿ
ಇಪ್ಪತ್ತು ಲಕ್ಷ ವರುಷ ಜನ್ಮವೆತ್ತುತ್ತಿರ್ಪುದೆ
ಬ್ರಹ್ಮಗೊಂದು ದಿವಸ.
ಅಂಥ ದಿವಸಂಗಳು ಮೂವತ್ತಾರು ಸಾವಿರಮಾದಲ್ಲಿ
ಬ್ರಹ್ಮಂಗದೆ ಪರಮಾಯು.
ಆ ಬ್ರಹ್ಮನ ಪರಮಾಯುವೆ ವಿಷ್ಣುವಿಗೊಂದು ಸ್ವಪ್ನ.
ಅಂತಪ್ಪ ಸ್ವಪ್ನಂಗಳನಂತಮುಳ್ಳ ವಿಷ್ಣುವಿನ ಪರಮಾಯುವೆ
ರುದ್ರನಿಗೆ ಗನಿಮಿಷ.
ಇಂತು ಅಂತರ ಮಹದಂತರಗಳಲ್ಲಿ
ಪಿಪೀಲಿಕಾ ಬ್ರಹ್ಮಪರಿಯಂತವು ಭ್ರಮಿಸುತ್ತಿರ್ಪ
ಚಕ್ರಗಳಿಗವಧಿಯಿಲ್ಲದಿರ್ಪುದರಿಂ
ಬೀಜ ವೃಕ್ಷ ನ್ಯಾಯದಂತೆ ಕಲಮಲಕ ಜ್ಞಾನಮಾಗಿ
ಒಂದೂ ತಿಳಿಯದೆ ತರ್ಕಮುಖಕ್ಕೆ ಬಿದ್ದಳಿವ ಜೀವನಿಗೆ
ಮೋಕ್ಷವೆಲ್ಲಿಯದು.
ತ್ರಾಸಿನಂದದಿ ಸುನೀತಮಾಗಿರ್ಪ ಚಕ್ರಂಗಳು
ಅಧರ್ಮ ಪಿಂಡಮಾದರು
ಧರ್ಮದಿಂ ಲಕ್ಷಣ ತೀಕ್ಷ ್ಣವಾದರೂ ತನ್ನ ಪ್ರಪಂಚ ಲೀಲೆ
ನಷ್ಟಮಪ್ಪುದೆಂಬುದರಿಂ
ತನ್ನ ಸಮೀಪದಲ್ಲಿರ್ಪ ನಿಜ ಮಹಿಮಾ ಪುರುಷರ
ತತ್ಕಾರ್ಯಕ್ಕೆ ಪ್ರಯೋಗಿಸಲು
ಭ್ರಮಾಯುಕ್ತನಾದ ಜೀವನಿಗೆ
ತಾವು ಜೀವ ರೂಪದಲ್ಲೆ ಸಾಕ್ಷ್ಯಪ ಸಾಕ್ಷ್ಯಗಳ ತೋರಿಸಿ
ಆ ಚಕ್ರಗತಿಗಳು ನ್ಯೂನಾಧಿಕ್ಯಂಗಳಾಗದಂತೆ
ಧರ್ಮಾಧರ್ಮಂಗಳ ಸಮಗೊಳಿಸಿ,
ತಾವು ಬಂದ ಮಣಿಹಗಳ ತೀರಿಸಿ
ತಿರಿಗಿ ಮಹಾಲಿಂಗದಲ್ಲಿ ಬೆರೆವ
ಮಹಾಪುರುಷರಿಗಲ್ಲದೆ ಉಳಿದವರ್ಗುಂಟೆ ?
ಅಂತಪ್ಪ ಪರಮ ಮಂಗಳಮಯ
ದಿವ್ಯ ಪುರುಷರ ಚರಣ ಸೇವೆಯಿಂದ
ನಾನು ಪರಿಶುದ್ಧನಪ್ಪಂತೆ ಮಾಡಿ ಕೂಡಿ ಸಲಹಾ
ಮಹಾಘನ ದೊಡ್ಡ ದೇಶ ಕಾರ್ಯ ಪ್ರಭುವೆ/38
ಚಿತ್ತಿಗೆ ಸತ್ತೇ ತಮೋಗುಣವು,
ಸತ್ತಿಗೆ ಚಿತ್ತೇ ಸತ್ವಗುಣವು.
ಅದೆಂತೆಂದೊಡೆ : ಚಿತ್ತೆಂದರೆ ಪ್ರಕಾಶವು, ಸತ್ತೆಂದರೆ ಅಸ್ತಿತ್ವವು,
ಅದರಿಂದುಂಟಾದ ವಸ್ತುವೇ ಪ್ರಕಾಶಕ್ಕೆ ಮರೆಯಾಗಿ
ಛಾಯಾಮಾಯಾ ಹೇತುವಾಗಿರ್ಪುದರಿಂ
ಆ ಚಿತ್ತಿಗೆ ಆ ಸತ್ತೇ ತಮೋಗುಣಮಾಯಿತ್ತು.
ಅದರಿಂದುಂಟಾದ ವಸ್ತುವೇ ಚಿತ್ಪ್ರಭೆಯಾಗಿ
ಪ್ರಕಾಶಿಸುತ್ತಿರ್ಪುದರಿಂದಾ ಸತ್ತಿಗೆ ಚಿತ್ತೇ ಸತ್ವಗುಣವಾಯಿತ್ತು.
ಈ ಶಿವಶಕ್ತಿಗಳ ಕ್ರೀಡಾನಂದವೇ ರಜೋಗುಣಮಾಗಿ,
ಅದೇ ಸೃಷ್ಟಿಕರ್ತೃವಾಗಿ, ಕರ್ಮಕಾರಣಮಾಗಿ,
ಆ ಕರ್ಮಮುಖದಲ್ಲುತ್ಪನ್ನಮಾಗುವ ವಸ್ತುಗಳೂ ತಾನೆಯಾಗಿ,
ಸಕಲಪ್ರಪಂಚವೂ ಆ ಶಿವಶಕ್ತಿಗಳ ನಟನೆಯಲ್ಲದೆ ಭಿನ್ನಮಿಲ್ಲಮಾಯಿತ್ತು.
ವಿಚಾರಿಸಲು ವಸ್ತು ಒಂದೇ, ಆ ವಸ್ತುವಿನ ಗುಣವೇ ಶಕ್ತಿಯಾಯಿತ್ತು.
ಪುರುಷನ ಗುಣಾನುವರ್ತಿಯೇ ಸ್ತ್ರೀಯಾಗಿ,
ತನ್ಮುಖದಲ್ಲಿ ಸಂಸಾರಪ್ರಪಂಚವೆಲ್ಲವೂ ಉತ್ಪನ್ನವಾಗುವಂತೆ,
ಚಿತ್ತಿನ ಗುಣವಾದ ಸತ್ತಿನಿಂದ ಸಕಲಪ್ರಪಂಚವು ಉತ್ಪನ್ನಮಾಗುತ್ತಿರ್ಪುದು.
ನಿನ್ನ ಗುಣಕ್ಕೆ ನೀನೇ ಗುಣವಾದುದರಿಂ
ಸಕಲಕ್ಕೂ ಕಾರಣಪದಾರ್ಥವು ನೀನೆಯಾಗಿ,
ಮಹಾಸಂಸಾರಿಯಾಗಿ ಭವನೆನಿಸಿರ್ಪ ನೀನು
`ಆತ್ಮಾ ವೈ ಪುತ್ರನಾಮಾಸಿ’ ಎಂಬ ಶ್ರುತಿ ಪ್ರಮಾಣದಿಂ
ನೀನೇ ನಾನಾಗಿ ಜನಿಸಿರ್ಪುದನರಿತು,
ವಿಚಾರಿಸಿ ಪೊರೆಯದಿದ್ದರೆ ಮತ್ತಾರೆನಗೆ ದಿಕ್ಕು ?
ಅದರಿಂ ನಿನಗೆ ಮೊರೆಯಿಡುತಿರ್ಪೆನು, ನೀನೇ ನೋಡಿ ಕೂಡಿ ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./39
ಚಿತ್ತೇ ಶಿವನು, ಸತ್ತೇ ವಿಷ್ಣುವು ಎಂಬುದರಲ್ಲಿ ಪ್ರಮಾಣವೇನೆಂದರೆ :
ಚಿತ್ತೇ ಜ್ಞಾನರೂಪು, ಸತ್ತೇ ಅಸ್ತಿರೂಪು.
ಅಸ್ತಿತ್ವದಿಂ ಜ್ಞಾನವೃದ್ಧಿಯಪ್ಪುದಲ್ಲದೆ ಲಯಮಾಗದು,
ಆ ಜ್ಞಾನದಿಂ ಬಾಹ್ಯಾಸ್ತಿತ್ವಮೆಲ್ಲ ನಷ್ಟಮಪ್ಪುದು,
ನಿಜಾಸ್ತಿತ್ವವು ನಷ್ಟಮಾಗದಿರ್ಪುದರಿಂ ಪಲವಿಧ ಮನಂಗಳುತ್ಪನ್ನಮಾಗುವವು,
`ಚಿತೀ ಸಂಜ್ಞಾನೇ’ ಎಂಬ ಧಾತುವಿನಿಂ ಸುಜ್ಞಾನಮಾತ್ರವೇ ಶಿವನಲ್ಲದೆ,
ಮಿಕ್ಕುದೆಲ್ಲ ಮಿಥ್ಯೆಯು.
ಮಿಥ್ಯೆಯಂ ಸಂಹರಿಸುವುದೇ ಧರ್ಮವೆಂದುದು ಕಾಪಾಲಮತವು.
ಆ ಸುಜ್ಞಾನದಲ್ಲಿರ್ಪ ಅಸ್ತಿತ್ವವೇ ಬ್ರಹ್ಮ,
ಅದೇ ವಿಷ್ಣು, ಅದರಿಂ ಸಕಲಪ್ರಪಂಚವೂ ಉಂಟಾಗಿ,
ಅದಕ್ಕೆ ಅಸ್ತಿತ್ವವೇ ಉಂಟಾಗಿ ವಿಭುವಾಗಿ,
ಇಲ್ಲವೆಂಬುದು ಮಿಥ್ಯಾಭ್ರಮೆಯಾಗಿ,
ಎಲ್ಲವೂ ಇದ್ದಂತಿರ್ಪುದೇ ವೈಷ್ಣವಮತವು.
ಚಿತ್ತಿನಲ್ಲಿ ಸಂಹಾರತಮಸ್ಸು ಸ್ವಪ್ರಕಾಶದಿಂದುಂಟಾಗಿ,
ಆ ತಮಸ್ಸಿನಿಂದಿಲ್ಲಮಾಗಿ ಕ್ಷಣೇ ಕ್ಷಣೇ
ಪ್ರಪಂಚವುಂಟಿಲ್ಲಮಾಗುತ್ತಿರ್ಪುದೆಂಬುದೇ ಸಾಂಖ್ಯಮತವು.
ಕರ್ಮದಿಂ ಭಿನ್ನಗಳಾದ ಜಾತಿಧರ್ಮವರ್ಣಾಶ್ರಮಂಗಳನರಿತು
ದೇವತಾಪ್ರೀತಿಯಂ ಮಾಡುತ್ತಾ ,
ದೇವತಾಮುಖದಿಂ ಸಚ್ಚಿದಾನಂದರೂಪಮಾದ ಪರಮಾತ್ಮನಂ ತೃಪ್ತಿಗೊಳಿಸಿ,
ಚತುರ್ವಿಧಫಲಂಗಳಂ ಹೊಂದಿರ್ಪುದೇ ತ್ರಯಿಮತವು.
ಯಮನಿಯಮಾದ್ಯಷ್ಟಯೋಗಗಳಿಂದ ಸದ್ರೂಪಮಾದ ಶರೀರದಲ್ಲಿ
ಚಿದ್ರೂಪಮಾದ ಪ್ರಾಣವಾಯುವನ್ನು ಮೂಲಾಧಾರದಿಂ
ಬ್ರಹ್ಮಸ್ಥಾನದವರೆಗೂ ಬಂಧಿಸಿ,
ಆ ಬ್ರಹ್ಮಸ್ಥಾನದಲ್ಲಿ ಚಿತ್ತು ಕೂಡೆ
ಪರಮಾನಂದಮಯಮಾಗಿರ್ಪುದೇ ಯೋಗಮತವು.
ಆ ಚಿನ್ಮಧ್ಯದಲ್ಲಿ ಸುತ್ತಿರ್ಪುದರಿಂ ಆ ಸದಾಶಿವನ ಗರ್ಭದಲ್ಲಿ
ಸಕಲಪ್ರಪಂಚಮಿರ್ಪುದೆಂಬುದೇ ನಿಜವು,
ಆ ಚಿತ್ತಿನ ನಿಜವೇ ಸತ್ತಲ್ಲದೆ, ಸತ್ತು ಬೇರೆ ಪದಾರ್ಥವಲ್ಲ.
ತನ್ನಲ್ಲಿ ಹುಟ್ಟಿದ ಗುಣವು ತನ್ನಲ್ಲಿಯೇ ಪ್ರಕಾಶಮಾಗಿ,
ತನ್ನಲ್ಲಿಯೇ ಅಡಗುತ್ತಿರ್ಪುದರಿಂದ ಅದು ತನ್ನ ಸ್ವಭಾವವಲ್ಲದೆ,
ಭಿನ್ನವಲ್ಲವೆಂಬುದೇ ಅದ್ವೈತಮತವು.
ಆ ಸತ್ತೇ ಸಕಲಪ್ರಪಂಚವು, ಚಿತ್ತೇ ಜ್ಞಾನವು,
ಚಿದ್ರೂಪಮಾಗಿರ್ಪುವೇ ಇಂದ್ರಿಯಂಗಳು,
ಸದ್ರೂಪಮಾಗಿರ್ಪುವೇ ವಿಷಯಂಗಳು.
ಸದನುಭವಕ್ಕೆ ಚಿತ್ತೇ ಕಾರಣಮಾಗಿರ್ಪಂತೆ,
ಆ ವಿಷಯಂಗಳಿಗೆ ಇಂದ್ರಿಯಜ್ಞಾನವೇ ಕಾರಣಮಾಗಿರ್ಪುದು.
ಅವೆರಡರ ಸಂಗವೇ ಆನಂದವು,
ಅಂತಪ್ಪ ಚಿದಾನಂದವಿಗ್ರಹವೇ ಮಹಾಲಿಂಗವು.
ಅಂತಪ್ಪ ಮಹಾಲಿಂಗವು ಮಾನಸಾದಿಯಾದ
ಷಡಿಂದ್ರಿಯಂಗಳೊಳ್ಚಿದಾನಂದಮೂರ್ತಿಯಾಗಿ,
ಆಚಾರಾದಿ ಲಿಂಗಂಗಳೆನಿಸಿ,
ಆ ವಿಷಯಮುಖದಿಂ ನಾಮ ರೂಪು ಕ್ರಿಯಗಳಲ್ಲಿ ಬಂದು,
ಆ ವಿಷಯವೇ ಇಷ್ಟಮಾಗಿ, ತದ್ಜ್ಞಾನವೇ ಪ್ರಾಣವಾಗಿ,
ಎರಡೂ ಏಕಮಾಗಿರ್ಪ ಆನಂದವೇ ಭಾವಮಾಗಿ,
ಸಕಲಸುಖವೂ ಲಿಂಗಸುಖಮಾಗಿ, ಅಂಗಭೋಗವೆಂಬ ಮಿಥ್ಯಾಭ್ರಮೆಯಳಿದು,
ಲಿಂಗಭೋಗವೇ ನಿಜಮಾಗಿ, ತಾನೆಂಬ ತಮೋಬಂಧವು
ಅಖಂಡಿತಜ್ಞಾನಚಿತ್ಪ್ರಕಾಶದಿಂ ಖಂಡಿತಮಾಗಿ,
ತನ್ನಂ ಮರೆತು ಲಿಂಗವನರಿದಿರ್ಪುದೇ ವೀರಶೈವಮತವು.
ಅಂತಪ್ಪ ವೀರಶೈವಮತಮಹಿಮೆಯಲ್ಲಿ ಹೊಂದಿ
ಹೊಂದದಂತೆ ಮಾಡಿ ಕೂಡಿ ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./40
ಚಿದ್ರೂಪಮಾದ ಮಹವೆಂದರೆ ಮಹಾಜ್ಞಾನವೆಂದರ್ಥ.
ಸರ್ವಜ್ಞನಾಮವುಳ್ಳ ಅಖಂಡಪರಿಪೂರ್ಣಜ್ಞಾನವೇ ಆತ್ಮನು,
ಅವಂ ನಿಜಭಾವದಲ್ಲಿರ್ಪನು, ಆತ್ಮನೇ ಪರಶಿವನೆಂದು ತಿಳಿವುದು.
ತದಾತ್ಮಾನುಭವವೇ ತತ್ವವು, ಆತ್ಮನಿಂ ಭಿನ್ನಿಸಿದ
ತತ್ವಶೇಷವೇ ಪರರೂಪಮಾದ ಪ್ರಸಾದವು.
ಅದು ಅನುಭವಿಸಿದಲ್ಲಿ ಒಳಗೆ ಪ್ರಕಾಶಿಸುತ್ತಿರ್ಪುದು,
ಸಾಧಿಸಿದಲ್ಲಿ ಹೊರಗೆ ಕಾಣಿಸುತ್ತಿರ್ಪುದು.
ಆಕಾಶಮಯ ಪರಪ್ರಸಾದವೆಂದೊಡೆ ಉತ್ಕೃಷ್ಟವಾಗಿ ಕಾಣಿಸುವುದೆಂದರ್ಥ.
ಅದು ಜ್ಞಾನಿಗೆ ಬಹಿರಂಗದಲ್ಲಿ ಮಲಿನವಾಗಿಯೂ
ಅಂತರಂಗದಲ್ಲಿ ನಿರ್ಮಲವಾಗಿಯೂ ಇರ್ಪುದು.
ಅಂತಪ್ಪ ಆತ್ಮಶೇಷವೇ ಆದಿಜಂಗಮವು.
ನಿರ್ಮಲಾತ್ಮನು ಸಾಕಾರಕ್ಕೆ ಬಪ್ಪಲ್ಲಿ ಚಲನವೇ ಆದಿಶಕ್ತಿಯಾದುದರಿಂ
ಆದಿಶಕ್ತಿಯುಕ್ತವೇ ಜಂಗಮವಾಯಿತ್ತು.
ಆದಿಜಂಗಮವೇ ವಾಯು, ಅದರ ಚಲನವೇ ಇಚ್ಛಾರೂಪಮಾದಲ್ಲಿ
ಇಚ್ಛಾಶೋಭನವೇ ಅಗ್ನಿಯಾದುದರಿಂ
ಇಚ್ಛಾರೂಪಮಾದ ಶಿವನು ಆಯಿತ್ತು.
ಅದೇ ಜೀವೋಪದೇಶವಾಂಛೆಯಿಂ ಮಂತ್ರರೂಪಮಾದ ಗುರುವಾಯಿತ್ತು.
`ಮನನಾ ತ್ತ್ರಾಯತ ಇತಿ ಮಂತ್ರಃ’ ಎಂಬ ವ್ಯುತ್ಪತ್ತಿಯಿಂ ದೊಡ್ಡಿತ್ತಾಗಿ
ಜನರಂ ರಕ್ಷಿಸುವಂಥಾದ್ದೇ ಗುರುಮಂತ್ರವು.
ಆ ಮಂತ್ರವೇ ಕ್ರಿಯೆಯಾದುದರಿಂ ಕ್ರಿಯಾರೂಪವುಳ್ಳ ಆಚಾರಮಾಯಿತ್ತು.
ಕ್ರಿಯೆಯೊಳಗೆ ಕೂಡಿ ರಾಜಿಸುತ್ತಿರ್ಪುದೇ
ಪೃಥ್ವಿಯಾದುದರಿಂ ಕ್ರಿಯಾಚಾರಮಾಯಿತ್ತು.
ಆದುದರಿಂ ಮಹಾಜ್ಞಾನವೇ ಆತ್ಮನು,
ತದುನುಭವತತ್ವವೇ ಪಂಚಭೂತರೂಪಮಾದ ಶಕ್ತಿಯು,
ಪಂಚಭೂತಾಂಶವೇ ಶರೀರವು, ಅಕ್ಷಾಂಶವೇ ಜೀವನು.
ಜೀವನಿಗೆ ಮಹತ್ವದಲ್ಲಿ ಆತ್ಮನೊಳೈಕ್ಯವು,
ಶರೀರವು ಜೀರ್ಣಮಾದಲ್ಲಿ ಭೂತದೊಳೈಕ್ಯವು,
ಶರೀರಮೋಕ್ಷಕ್ಕಿಂತಲೂ ದುಃಖವಿಲ್ಲ, ಜೀವನ್ಮುಕ್ತಿಗಿಂತಲೂ ಸುಖವಿಲ್ಲ,
ಪ್ರಪಂಚವೆಲ್ಲ ಆತ್ಮಶೇಷಮಾದುದರಿಂ ಹೇಯರೂಪಮಾದ ದುಃಖಮಾಯಿತ್ತು.
ಅದೇ ಶಿವನ ಪ್ರಸಾದವೆಂದು ತಿಳಿದು,
ಅದನ್ನು ಶಿವಾರ್ಪಣಮುಖದಲ್ಲಿ ಸೇವಿಸಬಲ್ಲಾತನೇ ಜೀವನ್ಮುಕ್ತನು.
ಅಂತಪ್ಪ ಜೀವನ್ಮುಕ್ತಿಯನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./41
ಜಂಗಮಫಲವೆಲ್ಲವೂ ದೇವತೆಗಳಾಹಾರವು;
ಸ್ಥಾವರಫಲವೆಲ್ಲವೂ ಮನುಷ್ಯರಾಹಾರವು.
ಅದೆಂತೆಂದೊಡೆ : ದೇವತಾಬಿಂದುವಿನಲ್ಲಿ ಮನುಷ್ಯಕೃತ್ಯದಿಂದುದ್ಭವಿಸುವುದೆಲ್ಲ ಸ್ಥಾವರವು;
ಮನುಷ್ಯ ಬಿಂದುವಿನಲ್ಲಿ ದೇವತಾ ಕೃತ್ಯದಿಂದುದ್ಭವಿಸುವುದೆಲ್ಲ ಜಂಗಮವು.
ಮನುಷ್ಯರು ಶೂದ್ರಮುಖದಿಂ ಕೊಂಬುತಿರ್ಪರು.
ದೇವತೆಗಳು ಬ್ರಾಹ್ಮಣಮುಖದಿಂ ಕೊಂಬುತಿರ್ಪರು.
ಪೃಥ್ವಿಯಲ್ಲಿ ಎಂಬತ್ತುನಾಲ್ಕುಲಕ್ಷವಿಧ ಜಂಗಮಗಳು ಹೇಗೋ
ದೇವತೆಗಳಲ್ಲಿಯೂ ಹಾಗೆ.
ದೇವತೆಗಳು ತಮ್ಮ ಕರ್ಮಫಲವು ತೀರಿದೊಡೆ,
ತದ್ಧೋಷ ಕರ್ಮಾನುಸಾರಮಾಗಿ ಪಂಚಾಶಲ್ಲಕ್ಷ ದೇಹಗಳೊಂದಂ ಹೊಂದಿ
ಆಯಾ ಆಹಾರಂಗಳಂ ಭುಂಜಿಸುತ್ತಾ.
ತದಾನುಗುಣ್ಯಮಾಗಿ ಕ್ರೀಡಿಸುತ್ತರ್ಪಂದದಿ,
ಮನುಷ್ಯನು ಇಹಲೋಕಕರ್ಮವು ತೀರಿದಲ್ಲಿ
ಆ ಕರ್ಮಫಲಕ್ಕೆ ತಕ್ಕ ಮರಣವಂ ಹೊಂದಿ,
ದೇವತಾ ಪಿಶಾಚಾಂತಮಾದ ದೇಹಗಳೊಳೊಂದು ದೇಹವನ್ನೆತ್ತಿ,
ಸುಖದುಃಖಗಳನನುಭವಿಸುತ್ತಾ ತನ್ನ ಅಧಿಕಾರಕ್ಕೆ ದೇವತೆಯನ್ನು ಗ್ರಹಿಸಿ,
ಆ ದೇವತಾಮುಖದಿಂ ಆಹಾರಂಗಳಂ ಗ್ರಹಿಸುವಂತೆ,
ಆ ದೇವತೆಗಳು ತಮ್ಮ ಅಧಿಕಾರಕ್ಕನುಗುಣವಾಗಿ ಮನುಷ್ಯರಂ ಗ್ರಹಿಸಿ,
ಆ ಮನುಷ್ಯಮುಖದಿಂ ಆಹಾರಂಗಳಂ ಕೊಂಬುತಿರ್ಪರು.
ದೇವೆತಗಳಿಗೆ ಮಂತ್ರದಿಂದಾವಾಹನೋಚ್ಚಾಟನೆಗಳು,
ಮನುಷ್ಯರಿಗೆ ತಂತ್ರದಿಂದಾವಾಹನೋಚ್ಚಾಟನೆಗಳು.
ಮನುಷ್ಯರಿಗೆ ತಂತ್ರದಿಂ ಕೂಡಿದ ಮಂತ್ರವು,
ದೇವತೆಗಳಿಗೆ ಮಂತ್ರದಿಂ ಕೂಡಿದ ತಂತ್ರವು,
ಇಂತು ಮನುಷ್ಯರೂಪದಿಂದ ಸತ್ತು.
ದೇವತಾರೂಪದಿಂ ಹುಟ್ಟುತ್ತಿರ್ಪ ದಂದುಗವಂ ಬಿಡಿಸಿ,
ನಿನ್ನಲ್ಲಿ ಸತ್ತು ಹುಟ್ಟುತ್ತಿರ್ಪ ನಿಜಸುಖವಂ ಕೊಟ್ಟು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /42
ಜಾಗ್ರ ಶರೀರದಲ್ಲಿ ರಜಸ್ಸು
ಭಾವಸ್ವಪ್ನದಲ್ಲಿ ತಮಸ್ಸು
ಸೂಕ್ಷ್ಮ ಸುಷುಪ್ತಿಯಲ್ಲಿ ಸತ್ವಹೊಂದಿ
ತ್ರಿಮೂರ್ತಿ ಭೇದದೊಲಿರ್ಪುದು.
ಆ ಸುಷುಪ್ತಿಯ ಮಹಿಮೆಯಿಂ
ಆ ಸಾಕಾರ ನಿರಾಕಾರವಲ್ಲದೆ, ದ್ವೈತಾದ್ವೈತವಲ್ಲದೆ,
ಭೂತ ಭವಿಷ್ಯತ್ತಲ್ಲದೆ,
ಜನನ ಮರಣಮಲ್ಲದೆ ವಿಶಿಷ್ಟರೂಪಮಾಗಿ,
ಕೇವಲ ಪ್ರತ್ಯಕ್ಷಮಾಗಿ, ಅಖಂಡಮಯಮಾಗಿರ್ಪ ವಸ್ತುವ
ತತ್ಪ್ರಕೃತಿರೂಪಮಾದ ತಮಸ್ಸು ಮಧ್ಯ ಜನಿಸಿ,
ಭಿನ್ನಿಸಿದಲ್ಲಿ, ದ್ವೈತಾದ್ವೈತ ಸಾಕಾರ ನಿರಾಕಾರಂಗಳೆಂಬ
ಭೇದಂಗಳುದಿಸಿ, ತನ್ಮಧ್ಯ ಆ ಬೀಜ ಮಧ್ಯದಲ್ಲಿ
ಪಲ್ಲವಿಸಿದ ವೃಕ್ಷದಂತೆ, ತಮಸ್ಸು ಪಲ್ಲವಿಸಿದಲ್ಲಿ
ಆ ತಾಮಸಾಗ್ರದಲ್ಲಿ ಅಖಂಡರೂಪಮಾಗಿ
ಅನಂತ ರೂಪಿನಲ್ಲಿ ಫಲಮಧ್ಯದಲ್ಲಿ ಕ್ರೀಡಿಸಿ
ಆ ವೃಕ್ಷವಳಿದು ನಿಂತ ಬೀಜವೇ ಅನ್ನ,
ಅನ್ನವೇ ಪ್ರಾಣರೂಪಮಾಗಿ
`ಅನ್ನಂ ಚ ಬ್ರಹ್ಮ ಅಹಂ ಚ ಬ್ರಹ್ಮ’ವೆಂಬ ಶ್ರುತಿವಚನದಿಂ
ಅಖಂಡಮಯಮಾದ ವಿಶಿಷ್ಟ ಶಿವನೆ ಮಹಾಲಿಂಗ.
ಅಂತಪ್ಪ ಲಿಂಗೈಕ್ಯ ಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ./43
ಜಾಗ್ರದೊಳಗೆ ನಾಲ್ಕರಲ್ಲೊಂದು ಪಾಲು ಸುಷುಪ್ತಿಯು,
ಸುಷುಪ್ತಿಯಲ್ಲಿ ನಾಲ್ಕರಲ್ಲೊಂದುಪಾಲು ಸ್ವಪ್ನವು.
ಅದೆಂತೆಂದೊಡೆ : ಚಂದ್ರ ಸೂರ್ಯರಿಲ್ಲದ ದಿವಸಂಗಳೇ ಸುಷುಪ್ತಿಕಾಲ ಪ್ರಮಾಣವೂ,
ಆ ಕತ್ತಲೆಯೊಳಗಿರ್ಪ ನಕ್ಷತ್ರಪ್ರಕಾಶವೇ ಸ್ವಪ್ನಪ್ರಮಾಣವೂ ಆಗಿ,
ನಾಲ್ಕರಲ್ಲೊಂದುಪಾಲನ್ನು ಕತ್ತಲೆಯು ಜೈಸುತ್ತಿರ್ಪುದು.
ಜಾಗ್ರತ್ಸ್ವರೂಪರಾದ ಚಂದ್ರ ಸೂರ್ಯರು
ನಕ್ಷತ್ರಮಾರ್ಗವನ್ನನುಸರಿಸಿ ತಿರುಗುತ್ತಿರ್ಪಂತೆ,
ಜೀವನು ಜಾಗ್ರದಲ್ಲಿ ಸ್ವಪ್ನಮಾರ್ಗವನನುಸರಿಸಿ ತಿರುಗುತ್ತಿರ್ಪುದರಿಂ
ಜಾಗ್ರದೊಳಗಣ ಸ್ವಪ್ನವೇ ಸಾಕಾರವು,
ಸುಷುಪ್ತಿಯೊಳಗಣ ಸ್ವಪ್ನವೇ ನಿರಾಕಾರವು,
ನಿರಾಕಾರ ಸ್ವಪ್ನದಲ್ಲಿ ಮನಸ್ಸು ಸಾಕಾರವಾಗಿ ತಿರುಗುತ್ತಿರ್ಪುದು,
ಸಾಕಾರಸ್ವಪ್ನದಲ್ಲಿ ಶರೀರಾಕಾರವಾಗಿ ತಿರುಗುತ್ತಿರ್ಪುದು,
ಸ್ವಪ್ನವಿಲ್ಲದ ಜಾಗ್ರ ಸುಷುಪ್ತಿಗಳೇ ಕಾಲಾತೀತವಾಗಿ,
ಪರಮಾನಂದರೂಪಮಾಗೊಂದಕ್ಕೊಂದು ಹೊಂದದೇ ಇಹವು,
ಅವೇ ಶಿವಶಕ್ತಿಸ್ವರೂಪಗಳು.
ತದ್ವಿಯೋಗದಲ್ಲಿ ಬೀಜವೊಡೆದುಮೂಡಿ ಪ್ರಕಾಶಿಸುವ ವೃಕ್ಷದಂತಿರ್ಪುದೇ
ತೂರ್ಯಾವಸ್ಥೆಯು,
ಅಂತಪ್ಪ ಜಾಗ್ರತ್ಸ್ವಪ್ನ ಸುಷುಪ್ತಿಗಳನಳಿದ ತೂರ್ಯವೇ ನಿಜವು,
ನಿಜವೇ ತಾನು, ತನ್ನಂ ತಾನರಿವುದೇ ಮೋಕ್ಷವು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./44
ಜಿಹ್ವೆಯಲ್ಲಿ ಮೃತ್ಯುವೂ, ನೇತ್ರದಲ್ಲಿ ಕಾಲನೂ ಇರಲು,
ನಾಸಿಕದಲ್ಲಿರ್ಪ ಪ್ರಾಣನಿಗೆ ಬದುಕುಂಟೇನಯ್ಯಾ ?
ನೇತ್ರದಲ್ಲಿ ಉನ್ಮೀಲನ ನಿವಿೂಲನವೇ ಕಾಲಸ್ವರೂಪಮಾಯಿತ್ತು.
ಜಿಹ್ವೆಯ ಲಂಪಟವೇ ಮೃತ್ಯುಸ್ವರೂಪಮಾಯಿತ್ತು.
ಮೃತ್ಯುಸ್ವರೂಪಮಾದ ಜಿಹ್ವೆಯಲ್ಲಿ ಸಕಲವನ್ನೂ ಸಂಹರಿಸಿ,
ನರಕಕ್ಕೆ ಹಾಕುತ್ತಿರಲು, ತತ್ಸಂಹಾರದಲ್ಲಿ ಅನೇಕ ವ್ಯಾಧಿಪೀಡೆಗಳುದ್ಭವಿಸಿ,
ಕಾಲನಲ್ಲಿ ಜೀವನಂ ಕಾಡಿ ಕಂಗೆಡಿಸಿ ಸಂಹರಿಸಿ,
ಮೃತ್ಯುವಿಗೆ ತುತ್ತುಮಾಡಿಕೊಡುತ್ತಿರ್ದನಯ್ಯಾ.
ಇಂತು ಕಾಲಮೃತ್ಯುಗಳ ಬಾಧೆಯಲ್ಲಿ
ಕಳವಳಿಸಿ ಸತ್ತು ಹುಟ್ಟುತ್ತಿರುವ ನನಗೆ
ಮಹಾಗುರುವೇ ನೀನು ಅಂಜಬೇಡವೆಂದು
ಅಭಯಕರಮಂ ನನ್ನ ಶಿರದಮೇಲಿಟ್ಟು,
ಕರ್ಣದಲ್ಲಿ ಮಂತ್ರೋಪದೇಶಮಂ ಮಾಡಿ,
ಕರದಲ್ಲಿ ಮಹಾಲಿಂಗಮಂ ಕೊಟ್ಟು ರಕ್ಷಿಸಿದಲ್ಲಿ,
ಆ ಕಾಲಸಂಹಾರಕನಪ್ಪ ಲಿಂಗಮಂ ನೋಡಿ,
ಕಂಗಳಲ್ಲಿರ್ಪ ಕಾಲನಂ ಜೈಸಿದೆನಯ್ಯಾ.
ನೀನು ಉಪದೇಶವಿತ್ತ ಆ ಶಿವಮಂತ್ರವಂ ಜಪಿಸಿ ಜಪಿಸಿ,
ಜಿಹ್ವೆಯಲ್ಲಿರ್ಪ ಮೃತ್ಯುವಂ ಜಯಿಸಿದೆನಯ್ಯಾ.
ಕಾಲಮೃತ್ಯುಗಳಂ ಜಯಿಸಲು, ವ್ಯಾಧಿಪೀಡೆಗಳು ಲಯವಾದವಯ್ಯಾ,
ನರಕವು ಹಾಳಾಯಿತಯ್ಯಾ.
ಜೀವನು ಭಯಭ್ರಾಂತಿಗಳನಳಿದು, ಪರಮಶಾಂತಿಯಂ ಹೊಂದಿ,
ಲಿಂಗಾನಂದದೊಳಗೆ ಲೀನನಾದೆನಯ್ಯಾ ನಿನ್ನದಯೆಯಿಂ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./45
ಜೀವನಿಗೆ ಮನಸ್ಸೇ ಪ್ರಥಮವೇಷ.
ಆ ಮನವಂ ಹಿಡಿದು ಸಕಲಗುಣಂಗಳೂ ಅಕ್ಷಯಗಳಾಗಿ
ಒಂದಕೊಂದಾವರಿಸಿಕೊಂಡಿಹವು.
ಅದೆಂತೆಂದೊಡೆ :
ಜೀವನ ಶರೀರೋಪಧಿಯಿಂದ ಗಂಧವಸ್ತ್ರಾಭರಣ ಸಂಸಾರ
ಗೃಹಕ್ಷೇತ್ರಾದ್ಯಾವರಣಂಗಳಿಂದಲೂ
ನಾನಾವಿಧ ಭ್ರಾಮಕದಿಂದಲೂ ಬುದ್ಧನಾಗಿ,
ಆ ಶರೀರವಂ ಬಿಡಲಾರದೆ, ಆ ಶರೀರವೇ ತಾನಾಗಿ ವ್ಯವಹರಿಸುತ್ತಾ,
ಹಲವು ಗುಣಗಳಿಂ ಬದ್ಧನಾಗಿ,
ಆ ಸೂಕ್ಷ್ಮಶರೀರದಿಂ ಸ್ವರ್ಗಾದಿ ಭೋಗಂಗಳನ್ನೂ
ನರಕಾದಿ ಯಾತನೆಗಳನ್ನೂ ಅನುಭವಿಸುತ್ತಿರ್ಪನು.
ಮಾನಸಾದಿ ಕಾರಣಗಳಿಂ ಬದ್ಧನಾಗಿರ್ಪನೇ ಜೀವನು,
ಅದಕ್ಕೆ ಹೊರಗಾಗಿರ್ಪನೇ ಪರಮನು.
ಅದೆಂತೆಂದೊಡೆ : ದರ್ಪಣದಲ್ಲಿ ಬದ್ಧನಾಗಿರ್ಪ ನಿಜಛಾಯೆಯಂದದಿ
ಆ ದರ್ಪಣವೇ ಮನಸ್ಸು, ಆ ಛಾಯೆಯೇ ಜೀವನು,
ಆ ಛಾಯೆಯಿಂ ತನ್ನ ನಿಜಮಂ ವಿಚಾಸುತಿರ್ಪುದೇ ಭಾವವು.
ಭಾವದಲ್ಲಿ ಬದ್ಧನಾಗಿರ್ಪನೇ ಪರಮನು,
ಸಾಕಾರಮನದಲ್ಲಿ ನಿರಾಕಾರಮಾಗಿರ್ಪನೇ ಜೀವನು,
ನಿರಾಕಾರಭಾವದಲ್ಲಿ ಸಾಕಾರಮಾಗಿರ್ಪನೇ ಪರಮನು.
ಇಂತು ಅನಂತಗಳಾಗಿರ್ಪ ಮಾನಸಾದ್ಯುಪಾಧಿಗಳಲ್ಲಿ
ಒಂದು ವಸ್ತುವೇ ನಾನಾಮುಖದಲ್ಲಿ ಅನಂತಗಳಾಗಿ ಉಪಾಧಿಯಂತಿರ್ದು,
ಉಪಾಧಿಯುಪಾಧಿಯೊಳಗೆ ಕೂಡಿ ಪ್ರತಿಫಲಿಸಿ,
ಛಾಯೆಯಿಂ ಛಾಯೆಯು ಪ್ರತಿಫಲಿಸಿ ಗಣನೆಗೆ ಸಾಧ್ಯಮಾಗದೆ
ಕರತಲಾಮಲಕಮಾಗಿರ್ಪ ನಿನ್ನ ನಿಜಲೀಲಾ ನಟನೆಯಂ
ನಾನೆಂತು ಬಣ್ಣಿಸುವೆನಯ್ಯಾ.
ನಿನ್ನ ನಿಜಪ್ರಕಟನೆಯು ನನ್ನಿಂದಲ್ಲದೆ ಅನ್ಯರಿಂ ಸಾಧ್ಯಮಲ್ಲಮಾಗಿ,
ನಿನಗಿಂತ ಶಿವಭಕ್ತರೇ ಅಧಿಕರಯ್ಯಾ.
ನಿನ್ನಿಂದಲಾದುಪಾಧಿಯು ನಿನ್ನ ಕಾರಣದಿಂದಲೇ ಪರಿಹೃತಮಾದಲ್ಲಿ
ನಾನೆಂಬಹಂಕಾರಮಳಿದು ನೀನು ನೀನಾದಲ್ಲಿ
ನಿನ್ನೊಳಗಿಪ್ಪ ಮತ್ಸರವು ಮುನ್ನವೆ ಅಳಿದು,
ಉನ್ನತಸುಖದೊಳೋಲಾಡುತ್ತಿರ್ಪೆನಯ್ಯಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./46
ಜೀವನು ತನಗೆ ರುದ್ರಸ್ವರೂಪಮಾದ
ಅಗ್ನಿಯು ಆದಿಯಲ್ಲಿ ಪ್ರಸನ್ನಮಾದಲ್ಲಿ
ತಚ್ಛಕ್ತಿಯಿಂ ಪೃಥಿವೀ ಅಪ್ಪುಗಳಂ ಸಂಹರಿಸಿ,
ಅವುಗಳಲ್ಲಿರ್ಪ ಸಾರವಸ್ತುಗಳಿಂದ
ಸ್ವಸ್ಥಾನಮಾಗಿರ್ಪ ಶರೀರಮಂ ಪೋಷಿಸುತ್ತಾ,
ಪ್ರಪಂಚಹೇತುವಾಗಿರ್ಪ ಸೃಷ್ಟಿ ಸ್ಥತಿ ಸಂಹಾರಂಗಳನೆಸಗುತ್ತಾ,
ಅಹಂಕರಿಸುತ್ತಿರ್ಪುದಲ್ಲದೆ,
ಆ ಮಹಾರುದ್ರನಿಂ ತನಗೆ ಬಂದಧಿಕಾರಮಂ ನೆನೆಯದೆ,
ವಿಷ್ಣು ಬ್ರಹ್ಮರ ಬಲೆಗೆ ಸಿಕ್ಕಿ, ಅಪಥ್ಯಾದಿದೋಷಂಗಳನೆಸಗಿದಲ್ಲಿ ,
ಆ ಮಹಾರುದ್ರನ ದಯೆಯು ತಪ್ಪಿ,
ಆ ದೋಷಗಳು ಧಾತುಗಳಂ ಪ್ರವೇಶಿಸಲು,
ತನಗೆ ಪದಾರ್ಥಂಗಳಂ ಸಂಹರಿಸುವುದಕ್ಕೂ ಶರೀರವಂ ರಕ್ಷಿಸುವುದಕ್ಕೂ
ಅಧಿಕಾರವು ತಪ್ಪಿ, ಕಾಯವಂ ಬಿಟ್ಟು ಹೊರಟು,
ಆ ಮಹಾರುದ್ರನ ಆಗ್ರಹಮುಖದಲ್ಲಿ ಯಾತನೆಬಡುತ್ತಾ,
ಮಾಯಾರೂಪವಾದ ಆಕಾಶದಲ್ಲಿ ತೊಳಲುತ್ತಾ,
ತಾನೇ ಪಿಶಾಚರೂಪಮಾಗಿ ತೊಳಲುತ್ತಿರ್ಪನೆಂತೆಂದೊಡೆ : ಯಾವುದಕ್ಕೂ ಅಧಿಕಾರವಿಲ್ಲದ ಮನುಷ್ಯನು
ತನಗೆ ಬೇಕಾದ ಸ್ವಲ್ಪ ಪದಾರ್ಥವನಾದರೂ ಒಬ್ಬರಂ ಹಿಡಿದು ಬಿಡದೆ
ಕಾಡಿ ಬೇಡಿ ಆಗ್ರಹ ನಿಗ್ರಹಂಗಳಿಗೊಳಗಾಗಿ,
ತನಗೊಳಗಾಗದವರಂ ಬಾಧಿಸಿ,
ಅತಿಪ್ರಯಾಸದಲ್ಲಿ ಸ್ವಲ್ಪ ಪದಾರ್ಥವಂ ಕೊಂಡು, ಅನುಭವಿಸುತ್ತಿರ್ಪಂತೆ,
ಈ ಜೀವನು ಪಿಶಾಚತ್ವದಲ್ಲಿ ಭಿನ್ನ ಜೀವರಂ ಗ್ರಹಿಸಿ,
ಅತಿದುಃಖವನ್ನೂ ಸ್ವಲ್ಪ ಸುಖವನ್ನೂ ಅನುಭವಿಸುತ್ತಿರ್ಪನು.
ಆ ಮಹಾರುದ್ರನ ಕೃಪೆಯೊದಗಿದಲ್ಲಿ ,
ಶರೀರಾದಿ ಸಕಲಪ್ರಪಂಚಸುಖಗಳನನುಭವಿಸಿ,
ಅವೆಲ್ಲಕ್ಕೂ ತಾನೇ ಕರ್ತನೆಂದಹಂಕರಿಸುತ್ತಾ ಭವಕೋಟಲೆಗಲಸಿ,
ತನ್ನ ಮಿಥ್ಯಾಹಂಕಾರಮಂ ಬಿಟ್ಟು,
ಎಲ್ಲವೂ ಪರಶಿವನಲೀಲೆಯಲ್ಲದೆ ತಾನಸ್ವತಂತ್ರನೆಂಬುದಂ
ಪರತತ್ವವಿಚಾರದಿಂ ತಿಳಿದಲ್ಲಿ,
ತಾನು ಮಾಡಿದ ಕರ್ಮವೆಲ್ಲಾ ಸದಾಶಿವನಿಗರ್ಪಿತಮಾಯಿತ್ತು,
ತಾಂ ನಿಲರ್ೆಪನಾದನು, ಸದಾಶಿವನು ತೃಪ್ತನಾದಲ್ಲಿ
ಜೀವನ್ಮುಕ್ತನಾದನು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./47
ಜೀವಪಶುಗಳಂ ಕೊಲ್ವ ಕಾಲವ್ಯಘ್ರನಂ ಸಂಹರಿಸಿ,
ತತ್ವರೂಪಮಪ್ಪ ವಿಚಿತ್ರವರ್ಣಮಪ್ಪ ದಿಗ್ವಸನಮುಳ್ಳುದರಿಂ
ವ್ಯಾಘ್ರಚರ್ಮಾಂಬರಧಾರಿಯಾದೆ.
ನಿನ್ನ ಶಿರಸ್ಸಿನ ಮೇಲೆ ಕರ್ಮಕೇಶಂಗಳಿಲ್ಲದೆ
ನವಗ್ರಹಸ್ವರೂಪ ಪುಷ್ಪಗಳಿಂ ಪರಿಶೋಭಿಯಾಗಿರುವುದರಿಂದ
ಗಗನಕೇಶಿಯಾದೆ.
ಅಸ್ಥಿರೂಪಮಾದುದೇ ವಜ್ರವು, ಆವಜ್ರವೇ ಪುರುಷರತ್ನವು,
ಅದು ಚ್ಯುತಿಯಿಲ್ಲದ್ದು,
ರತ್ನಂಗಳೆಂಬ ಆವಯವಂಗಳಗೆ ಶಿರೋರೂಪಮಾಗಿಹುದು,
ಅದೇ ನಿರ್ಮಲಸ್ವರೂಪಮಪ್ಪ ಜ್ಞಾನವೆಂಬ ಭಾವವು.
ಅಂತಪ್ಪ ನಿರ್ಮಲಜ್ಞಾನದಿಂ ಶೋಭಿಸಲ್ಪಟ್ಟುದರಿದಂ ಅಸ್ಥಿಮಾಲಾಧರನಾದೆ.
ಶೇಷನೇ ಮತಿಸ್ವರೂಪ, ಆಮತಿಯೇ ವಿವೇಕವು,
ಅದಕ್ಕೆ ಭಾವವೇ ಶಿರಸ್ಸು,
ಆ ಭಾವಸಹಸ್ರಮುಖದಲ್ಲಿ ಶೋಭಿಸುತ್ತಿರ್ಪ ಜ್ಞಾನರತ್ನಂಗಳಿಂ
ಮನವೆಂಬ ಪೃಥ್ವಿಗಾಧಾರಮಾಗಿರ್ಪ
ವಿವೇಕಸರ್ಪಪ್ರಕಾಶದಿಂದೊಪ್ಪುತಿರ್ಪುದರಿಂ ನಾಗಾಭರಣನಾದೆ.
ಪೃಥಿವ್ಯಾದಿ ಪಂಚಭೂತಂಗಳಿಗೊಡೆಯನಾದುದರಿಂದ ಭೂತಪತಿಯಾದೆ.
ಕಾಲನಿಂ ಕೋಟಲೆಗೊಳುತಿರ್ಪ ಜೀವಂಗಳ ಮೇಲೆ ದಯೆಯಿಂ
ಕಾಲಂಗೆ ಕಾಲರೂಪಮಾದ ನಿನ್ನ ಪ್ರಳಯಕಾಲದಲ್ಲಿ
ಸಕಲಪ್ರಪಂಚಮಂ ಸುಜ್ಞಾನಾಗ್ನಿಯಲ್ಲಿ ದಹಿಸಿ ತದ್ಭಸ್ಮಮಂ ಧರಿಸಿ,
ಪ್ರಾಣಿಗಳ ಭವತಾಪಮಂ ತಣ್ಣನೆಮಾಡಿ,
ತತ್ಪ್ರಪಂಚಸಂಹಾರಾಸ್ಥಾನವಾಸಿಯಾಗಿರ್ಪುದರಿಂ ಭಸ್ಮಧಾರಿಯೂ,
ನಾಲ್ಕು ವೇದಂಗಳು ನಾಲ್ಕುಪಾದಂಗಳಾಗಿ, ಬ್ರಹ್ಮಮುಖದಲ್ಲಿ ಗಮಿಸುತಿರ್ಪ
ನಿರ್ಮಲಧರ್ಮರಥಾರೂಢನಾಗಿರ್ಪುದರಿಂದ ನಂದಿವಾಹನಾರೂಢನಾದೆ.
ಇಂತಪ್ಪ ನಿನ್ನ ಸುಮಂಗಳ ಸ್ವರೂಪಮಂ ನಾನರಿಯದೆ,
ಅಮಂಗಲಗಳನ್ನೇ ಭಾವಿಸಿ, ಅಪರಾಧಿಯಾಗಿರ್ಪೆನ್ನ ದುರ್ಗುಣಂಗಳಂ
ನಿನ್ನಾಗ್ರಹವೆಂಬ ಚಿದಗ್ನಯಿಂ ದಹಿಸಿ,
ಕೋಪಾಂತದಲ್ಲಿಬಪ್ಪ ಪರಮಶಾಂತಿಯೊಳು ನನ್ನನಿಟ್ಟು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /48
ಜ್ಞಾನಪಂಚೇಂದ್ರಿಯ, ಕರ್ಮಪಂಚೇಂದ್ರಿಯಂಗಳಲ್ಲಿ
ಜ್ಞಾನೇಂದ್ರಿಯ ಮೂರಕ್ಕೆ ದ್ವೆ ಧೀಭಾವ,
ಎರಡಕ್ಕೆ ಏಕತ್ವ.
ಕರ್ಮೆಂದ್ರಿಯಂಗಳಲ್ಲಿ
ಎರಡಕ್ಕೆ ದ್ವೆ ದೀ ಭಾವ, ನೂರಕ್ಕೆ ಏಕತ್ವವಾದ
ಪರಿಯೆಂತೆಂದಡೆ : ಜ್ಞಾನವೇ ಸೂಕ್ಷ್ಮ, ಕರ್ಮವೆ ಸ್ಥೂಲ,
ಸ್ಥೂಲ ಕಾರಣಮಾಗಿರ್ಪುದೆ ಅಗ್ನಿ, ವಾಯುವುಗಳಾದುದರಿಂ
ತ್ವಗ್ರಸನಗಳು ಕರ್ಮೆಂದ್ರಿಯಬದ್ಧಮಾಗಿ
ತತ್ಕಾರಣಮಾಗಿರ್ಪುದರಿಂ ಏಕತ್ವಮಾಯಿತ್ತು.
ಪಾಣಿ ಪಾದಗಳು ಜ್ಞಾನೇಂದ್ರಿಯಬದ್ಧಮಾಗಿ
ತತ್ಕಾರಣಮಾಗಿರ್ಪುದರಿಂ ದ್ವಿವಿಧ ಮಾಯಿತ್ತೆಂದಡೆ
ಕರ್ಮೆಂದ್ರಿಯದಲ್ಲಿ ಗುದವೆ ಪೃಥ್ವಿಮೂಲ,
ಗುಹ್ಯವೆ ಜಲಮೂಲ, ಕರ್ಮೆಂದ್ರಿಯ ಬದ್ಧವಾದ
ಜಿಹ್ವೆಯೇ ಅಗ್ನಿಮೂಲ, ತ್ವಗುವೆ ವಾಯುಮೂಲ,
ವಾಕ್ಕೇ ಆಕಾಶಮೂಲ.
ಜ್ಞಾನೇಂದ್ರಿಯಂಗಳಲ್ಲಿ ಶ್ರೋತ್ರವೆ ಆಕಾಶ ಮೂಲ,
ಘ್ರಾಣವೆ ವಾಯುಮೂಲ, ನೇತ್ರವೆ ತೇಜಮೂಲ,
ಆ ಜ್ಞಾನೇಂದ್ರಿಯ ಬದ್ಧವಾದ ಪಾಣಿಯೆ ಜಲಮೂಲ,
ಪಾದವೆ ಪೃಥ್ವಿಮೂಲವಾದುದರಿಂ
ಪೃಥ್ವಿಯಪ್ಪುರೂಪಮಾದ ಪಾದ ಪಾಣಿಗಳು
ಜೀವಬದ್ಧವಾದ ಶರೀರದೋಪಾದಿಯಲ್ಲಿ
ಶ್ರೋತ್ರ ನೇತ್ರಂಗಳನನುಸರಿಸಿ ದ್ವೈದೀಭಾವಮಾಯಿತ್ತು.
ವಾಯುವಗ್ನಿಮೂಲವಾದ ತಗ್ಜಿಂಹೆಗಳು
ಶರೀರಬದ್ಧಮಾದ ಜೀವನೋಪಾದಿಯಲ್ಲಿ
ಕರ್ಮೆಂದ್ರಿಯಬದ್ಧಮಾಗಿ, ಗುದಗುಹ್ಯ ಕಾರಣಮಾಗಿ
ಏಕತ್ವಮಾಯಿತ್ತು .
ಜ್ಞಾನೇಂದ್ರಿಯಕ್ಕೆ ವಾಸನಾಮೂಲವಾದ
ವಾಯುವೆ ಕಾರಣವಾಯಿತ್ತು.
ಕರ್ಮೆಂದ್ರಿಯಕ್ಕೆ ವಾಕ್ಯಮೂಲಮಾದ
ಆಕಾಶವೆ ಕಾರಣಮಾಯಿತ್ತು ;
ಇಂತಪ್ಪ ಸ್ಥೂಲರೂಪವಾದ ಕರ್ಮೆಂದ್ರಿಯಂಗಳೇಕತ್ವ.
ಸೂಕ್ಷ್ಮರೂಪಮಾದ ಜ್ಞಾನೇಂದ್ರಿಯಂಗಳು
ದ್ವಿತ್ವಮಾದಕಾರಣಮೆಂತೆಂದಡೆ : ಸ್ಥೂಲಶರೀರ ಮರ್ತ್ಯದಲ್ಲಿ
ಸುಖದುಃಖಂಗಳ ತಾನೇಕತ್ವವಾಗನುಭವಿಸುವುದರಿಂ
ಸೂಕ್ಷ್ಮ ಶರೀರ ಸ್ವರ್ಗ ನರಕಂಗಳಲ್ಲಿ
ಪಾಪ ಪುಣ್ಯಂಗಳ ದ್ವೈದೀ ಭಾವಮಾಗನುಭವಿಸುತ್ತಿರ್ಪುದರಿಂ
ಕರ್ಮಕ್ಕೆ ಏಕತ್ವವೂ, ಜ್ಞಾನಕ್ಕೆ ದ್ವೈದೀ ಭಾವಮಾಂಯಿತ್ತು.
ಜ್ಞಾನೇಂದ್ರಿಯಂಗಳೆಂಟು ಭೇದಮಾಗಿ
ಕರ್ಮೆಂದ್ರಿಯಗಳೇಳುಭೇದಮಾದುದರಿಂ
ಕೂಡಾ ಹದಿನೈದು ಕಳೆಯಾಯಿತ್ತು ;
ಹದಿನಾರನೆಯ ಕಳೆಯ ಸದಾಶಿವನು ಧರಿಸಿರ್ಪುದರಿಂ
ಆ ಕಳೆ ಗೂಢಮಾಗಿ ಕಾರಣವ ಹೊಂದುತಿರ್ಪುದು.
ಸ್ತ್ರೀಗಳಿಗೆ ಗುಹ್ಯವೇ ದ್ವೈದೀಭಾವವ ಹೊಂದಿರ್ಪುದರಿಂ
ಷೋಡಶ ಕಳೆಯಾಯಿತ್ತು.
ಆ ಸ್ತ್ರೀಯ ಹದಿನಾರನೆಯ ಕಳೆಯೆ
ಸೃಷ್ಟಿಧಾರಣಾಶಕ್ತಿಯುಳ್ಳುದು.
ಅದೇ ಅಧೋಮುಖಮಾದುದರಿಂ
ಪ್ರಪಂಚಮೂಲ ಪುರುಷನ ಹೊಂದಿ,
ಹದಿನಾರನೆಯ ಕಳೆಯೆ ಸಂಹಾರಧಾರಣಶಕ್ತಿಯುಳ್ಳ ಜ್ಞಾನಾಕ್ಷಿ.
ಅದು ಊಧ್ರ್ವಮುಖಮಾಗಿರ್ಪುದರಿಂ ಪರಮಮೂಲ.
ಇದು ನಿರಾಕಾರವ ಗ್ರಹಿಸಿ ಸಾಕಾರಮಾಡುತ್ತಿರ್ಪುದು.
ಅದು ಸಾಕಾರವ ಗ್ರಹಿಸಿ ನಿರಾಕಾರವ ಮಾಡುತ್ತಿರ್ಪುದು.
ಇದು ಸೂತಕಮಯ, ಅದು ಶುಚಿಮಯ.
ಇದು ಶರೀರಮೂಲಮಾಗಿ ಕರ್ಮವನನುಸರಿಸಿರ್ಪುದು.
ಅದು ಮನೋಮೂಲಮಾಗಿ ವಾಕ್ಕನನುಸರಿಸಿರ್ಪುದು.
ಇಂತಪ್ಪ ಮನೋವಾಕ್ಕಾಯ ಕರ್ಮಂಗಳಿಗೆ
ಕರ್ಮದಲ್ಲಿ ಭಕ್ತಿ, ಶರೀರದಲ್ಲಿ ಶಕ್ತಿ,
ವಾಕ್ಯದಲ್ಲಿ ಯುಕ್ತಿ, ಮನದಲ್ಲಿ ಮುಕ್ತಿಯುಳ್ಳ
ಮಹಾಪುರುಷನೆ ಮಹಾಲಿಂಗವೆ ನಿನಗೆ
ಪರಮ ಪ್ರಸಾದಾನುಭವಮಾದ ಭುಕ್ತಿಯಾಗುತ್ತಿರ್ಪೆನು.
ಅಂತಪ್ಪ ಲಿಂಗಾನುಭಾವಮುಳ್ಳ ಮಹಾಪುರುಷನೆ ವಿರಕ್ತನು.
ಆತನೆ ಮಹ [ತ್ತ]ತ್ವದಲ್ಲಿ ಸಂಚರಿಸುವ ಜಂಗಮ.
ಅಂತಪ್ಪ ಜಂಗಮ ಪೂಜೆಯಿಂ ಕಾರಣರೂಪಮಾದ
ಸಂಸಾರ ಶುದ್ಧಿಯಾಗಿ, ಗುರುವಿನಿಂ ಶರೀರ ಶುದ್ಧಿಯಾಗಿ,
ಲಿಂಗದಿಂ ಪ್ರಾಣಶುದ್ಧಿಯಾಗಿ, ಆ ಲಿಂಗ ಪ್ರಾಣಂಗಳಿಗೆ
ವಾಸನಾ ರಸನಂಗಳೆ ಸಂಬಂಧ ಕಾರಣಮಾಗಿ,
ಗುರು ಶರೀರಂಗಳಿಗೆ ರೂಪ ಸ್ಪರ್ಶನಂಗಳೆ ಸಂಬಂಧಂಗಳಾಗಿ,
ಜಂಗಮ ಸಂಸಾರಂಗಳಿಗೆ ತತ್ವಜ್ಞಾನಂಗಳೆ ಸಂಬಂಧಮಾಗಿ,
ಜಂಗಮವೇ ಸಂಸಾರವಾಗಿ, ಶರೀರವೆ ಗುರುವಾಗಿ,
ಲಿಂಗವೆ ಪ್ರಾಣಮಾಗಿ, ಜಂಗಮದಲ್ಲಿ ಹೊಂದಿ
ಸಂಸಾರವ ಮರತು, ಗುರುಸೇವೆಯಿಂ ಶರೀರ ಮರತು
ಲಿಂಗದಲ್ಲಿ ನೆರೆದು ತನ್ನ ತಾ ಮರದಿರ್ಪುದೆ ಲಿಂಗೈಕ್ಯ
ಅಂತಪ್ಪ ನಿತ್ಯಾನಂದ ಲಿಂಗೈಕ್ಯ ಸುಖವನೆನಗಿತ್ತು ಸಲಹಾ
ಮಹಾಘನದೊಡ್ಡ ದೇಶಿಕಾರ್ಯ ಪ್ರಭುವೆ /49
ಜ್ಞಾನವೇ ಮೂಲಮಾಗಿ, ಆನಂದವೇ ಪರಿಪಕ್ವಫಲಮಾಗಿಯೂ ಇರ್ಪ
ಸತ್ಯವೆಂಬ ವೃಕ್ಷವು ಮನವೆಂಬ ನೆಲದೊಳಗೆ ಬೇರಂ ಬಿಟ್ಟು,
ಭಾವವೆಂಬ ಆಕಾಶವನ್ನವಗ್ರಹಿಸಿರಲು,
ಆ ವೃಕ್ಷಮೂಲದಲ್ಲಿರ್ಪ ಶಿವನಿಗೆ ನಿವೇದನಾರ್ಥಮಾಗಿ,
ಶರಣನು ವಿವೇಕಶಾಖೆಯನ್ನೇರಿ, ತತ್ವವಲ್ಲಿಯ ಮರೆಯಲ್ಲಿ ತಾಂ ನಿಂದು,
ಕಾಣಿಸದೆ, ತದಾನಂದಫಲವಂ ಶಿವಾರ್ಪಿತಕ್ಕೆ ಸ್ಪರ್ಶನ ಮಾಡಿದನಿತರೊಳು,
ಆದ್ಯಂತಂಗಳಳಿದು, ಅರ್ಪಣಾನ್ವಿತವಿಶಾಖಾಕಲಿತಮಾಗಿ
ಸ್ಥಾಣುವಾಗಿರ್ಪ ವಿಚಿತ್ರಮಂ ಕಂಡೆ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./50
ತತ್ತ್ವಮಸಿ’ ಎಂದರೆ ಅದೇ ನೀನಾಗುತ್ತಿ ಎಂಬರ್ಥವು.
ಅದೆಂಬುದೆ ನಿಜವು, ಆಗುವುದೆಂಬುದೇ ಸಿದ್ಧಿಯು,
ಆ ಸಿದ್ಧಿಯೇ ಆನಂದವು.
ಪೃಥಿವ್ಯಾದಿ ಪಂಚಭೂತಂಗಳು ತತ್ವಸ್ವರೂಪಮಾಗಿಯೂ
ಪಂಚಬ್ರಹ್ಮಮಯವಾಗಿಯೂ ಇರ್ಪುದರಿಂದಾ
ತತ್ವವೇ ತಾನಾಗುತ್ತಿದ್ದೇನೆಂಬುದರ್ಥ.
ಅಂತಪ್ಪ ಪಂಚತತ್ವಗಳು ರಸಪೂರಿತ ಘಟನೆಗಳೋಪಾದಿಯದಲ್ಲಿ
ಕರ್ಮಪೂರಿತ ಶರೀರಂಗಳಾಗಲಾ ಕರ್ಮಮಧ್ಯದಲ್ಲಿ
ಛಾಯೆಯು ಪ್ರಕಾಶಿಸಲದೇ ತಾನೆಂಬುದೇ ಸತ್ವಗುಣವು,
ಆ ಬ್ರಹ್ಮವೇ ತಾನೆಂಬುದೇ ತಮೋಗುಣವು.
ಆ ಒಂದು ವಸ್ತುವೇ ಎರಡರಲ್ಲಿ ಭಿನ್ನವಾಗಿ
ಆ ಬ್ರಹ್ಮವನೆ ಪ್ರಪಂಚಕ್ಕೆ ತರುತ್ತಾ
ಆ ಜೀವನನ್ನು ಮೋಕ್ಷದೊಳ್ಪೊಂದಿಸುತ್ತಿರ್ಪುದರಿಂ
ತಾನೇ ಕಾರಣಮಾಯಿತ್ತು.
ತತ್ಪ್ರಕಾಶಮಾದೊಡೆ ಛಾಯಾಪ್ರಕಾಶವು,
ಛಾಯಾಪ್ರಕಾಶವೇ ಶಿವಾಲಂಕಾರವು,
ಅಲಂಕಾರಸಮಾಪ್ತಿಯೇ ತತ್ವಮೋಚನವು,
ತತ್ವಮೋಚನೆಯೇ ಛಾಯಾಮೋಕ್ಷವು,
ಛಾಯಾಮೋಕ್ಷವೇ ಲಿಂಗೈಕ್ಯವು.
ಅಂತಪ್ಪ ಲಿಂಗೈಕ್ಯಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./51
ತಿಷ್ಠತೀತಿ ಸ್ಥಾಣುಃ ಎಂಬ ಅರ್ಥದಿಂದ
ಸತ್ತೆಂಬ ನಿಜತತ್ವವೇ ಸ್ಥಾಣುರೂಪದಮಾದ ಶಿವನು.
ಅಂತಪ್ಪ ಪರಶಿವನ ಸ್ವಭಾವದಲ್ಲಿ ನಿಜಕ್ರೀಡಾಪ್ರಕೃತಿಯು ಉತ್ಪನ್ನಮಾಗಿ,
ಪರಮಶಿವತತ್ವಮಂ ತನ್ನ ಶಕ್ತಿಗೆ ತಕ್ಕಂತೆ ಗ್ರಹಿಸಲು,
ಆ ಪ್ರಕೃತಿಘಟಬಂಧದಿಂ ಭಿನ್ನವಾಗಿ ತೋರುತ್ತಿರ್ಪ ತತ್ತತ್ವವೇ
ಚಿದ್ರೂಪಮಪ್ಪ ಜೀವಕೋಟಿಗಳಾಯಿತ್ತು.
ಅದೆಂತೆಂದೊಂಡೆ: ಮನದಲ್ಲಿ ಹುಟ್ಟಿದ ಕಾಮವು ಆಮನವನ್ನೇ ಗ್ರಹಿಸಿ, ಕರ್ಮಕ್ಕೆ ತಂದು,
ಮುಖದಲ್ಲಿ ಆ ಮನೋರೂಪಮಪ್ಪ ತದ್ಗುಣಂಗಳೇ ಅನೇಕವಾಗುದಿಸಿ,
ಆ ಕಾಲದಲ್ಲಿ ಸೃಷ್ಟಿಸ್ಥಿತಿಸಂಹಾರಸುಖದುಃಖಂಗಳಿಗೊಳಗಾಗಿ
ಆ ನಾಮವಳಿಯಲು, ಉಳಿದ ಮನವೊಂದೇ ಆಗಿರ್ಪಂತೆ,
ಲೀಲಾಶಕ್ತಿವಶದಿಂ ಪರಶಿವತತ್ವದಲ್ಲಿ ತತ್ವರೂಪಮಪ್ಪ
ಅನಂತಕೋಟಿ ಜೀವಂಗಳು ಬಹುವಿಧಮಾಗಿ ತೋರಿದಲ್ಲಿ ಜಡಮಯನಾಗಿ,
ಅವಿದ್ಯಾರೂಪಮಪ್ಪ ಶರೀರವಸ್ತ್ರಂಗಳು ಸೃಷ್ಟಿಸುತ್ತಿರಲೀ ಜೀವಂಗಳು
ವಸ್ತ್ರಧಾರಣಕಾರಣ ಪರಶಿವನಿಂದಾ ಕೊಂಡು
ಜ್ಞಾನಜೀವಿತಾರ್ಥವನ್ನು ಆ ಕಾಮನಿಗೆ ಕೊಟ್ಟು,
ಅವನಿಂದಾ ಶರೀರವಸ್ತ್ರಮಂ ತರಿಸಿಕೊಂಡು, ದರಿಸುತ್ತಾ
ತನ್ನನುಭದಿಂದಲೇ ಬಾಲ್ಯ ಯೌವನ ಕೌಮಾರ
ವಾರ್ಧಕ್ಯಗಳೆಂಬವಸ್ಥೆಗಳಿಂದ ಮಲಿನವಾಗಿ,
ಕಾಲನೆಂಬ ರಜಕನ ಕರಫೂತದಿಂ ಜೀರ್ಣವಾಗಿಪೋದ ವಸ್ತ್ರಮಂ ಕಂಡು
ದುಃಖಪಟ್ಟು, ತಿರಿಗಿ ಸಂಧಿಸುವ ಕೋಟಲೆಯೇ ಭವವು.
ಇಂತಪ್ಪ ಭವಕ್ಕೊಳಪಟ್ಟ ಎಲ್ಲಾ ಜೀವರು
ಸ್ಥೂಲಸೂಕ್ಷ್ಮಕಾರಣ ಶರೀರಗಳೆಂಬ ವಸ್ತ್ರಗಳಂ ಧರಿಸಿಹರು.
ನೀನು ಶರೀರವೆಂಬ ವಸ್ತ್ರವ ಧರಿಸಿಬಿಡುವ
ಕೋಟಲೆಯನೊಲ್ಲದೆ ದಿಗಂಬರಾಗಿರ್ಪೆ.
ಅಬ್ಧಿಗಂಭೀರತ್ವವೇ ನಿರ್ವಾಣ, ನಿರ್ವಾಣವೇ ಮುಕ್ತಿ.
ಅಂತಪ್ಪ ನಿರ್ವಾಣಸುಖದೊಳಗೆ ನನ್ನಂ ಕೂಡಿಸಿ,
ಜನ್ಮವಸ್ತ್ರಧಾರಣಜಾಡ್ಯಮಂ ಬಿಡಿಸಿ ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./52
ದಕ್ಷಿಣದಲ್ಲಿರ್ಪ ಯಮನೇ ವಿಷ್ಣುವು;
ಉತ್ತರದಲ್ಲಿರ್ಪ ಕುಬೇರನೇ ಲಕ್ಷ್ಮಿಯು.
ಪಶ್ಚಿಮದಲ್ಲಿರ್ಪ ವರುಣನೇ ವಿಷ್ಣುವು;
ಪೂರ್ವದಲ್ಲಿರ್ಪ ಇಂದ್ರನೇ ಲಕ್ಷ್ಮಿಯು.
ಈಶಾನ್ಯದಲ್ಲಿರ್ಪ ಈಶಾನನೇ ಶಿವನು;
ನೈರುತ್ಯದಲ್ಲಿರ್ಪ ನೈರುತಿಯೇ ಶಕ್ತಿಯು.
ಅಗ್ನೇಯಲ್ಲಿರ್ಪ ಅಗ್ನಿಯೇ ಶಿವನು;
ವಾಯುವ್ಯದಲ್ಲಿರ್ಪ ವಾಯುವೇ ಶಕ್ತಿಯು.
ಇವು ನಿಜನಾಮಸಂಬಂಧಗಳಾಗಿಹವು.
ಅವು ಭಿನ್ನನಾಮಸಂಬಂಧಗಳಾಗಿ ಸಾಕಾರ ನಿರಾಕಾರಮೂರ್ತಿಗಳಾಗಿಹವು.
ಶಿವನು ಸಾಕಾರದಲ್ಲಿ ಸಂಹರಿಸಿ, ನಿರಾಕಾರದಲ್ಲಿ ರಕ್ಷಿಸುತ್ತಿಹನು.
ವಿಷ್ಣವು ಸಾಕಾರದಲ್ಲಿ ರಕ್ಷಿಸಿ, ನಿರಾಕಾರದಲ್ಲಿ ಸಂಹರಿಸುತ್ತಿಹನು.
ಕೆಳಗೆ, ಬಿಂದುಮುಖದಲ್ಲಿ ಸೃಷ್ಟಿಸುವನೇ ಬ್ರಹ್ಮನು,
ಮೇಲೆ, ನಾದ ಮುಖದಲ್ಲಿ ಸೃಷ್ಟಿಸುತ್ತಿರ್ಪಳೇ ಸರಸ್ವತಿಯು.
ಅಷ್ಟದಳಕಮಲದ ಮೂಲವೇ ಬ್ರಹ್ಮನು,
ಅದರಗ್ರದಲ್ಲಿ ತೋರುವ ವಾಸನೆಯು ಸರಸ್ವತಿಯು.
ಆ ಕಮಲದ ಹೃದಯವೇ ಮೇರುವು,
ಆ ಮೇರುಮಧ್ಯದಲ್ಲಿರ್ಪುದೇ ಮಹಾಲಿಂಗವು.
ಅಲ್ಲಿರ್ಪ ಮಹಾಲಿಂಗವಂ ಗುರುವು ಬಾಹ್ಯಕ್ಕೆ ತಂದಿದಿರಿಟ್ಟಲ್ಲಿ,
ಸ್ಫಟಿಕಭಾಂಡದಲ್ಲೊಳಗಿರ್ಪ ವಸ್ತುವೇ ಹೊರಗೆ,
ಹೊರಗಿರ್ಪ ವಸ್ತುವೇ ಒಳಗೆ ತೋರಿ,
ಆ ಭಾಂಡವು ತನ್ನ ನಿಜಗುಣವನಳಿದು
ವಸ್ತುವು ಗುಣರೂಪಮಾಗಿ ತೋರ್ಪಂದದಿ,
ಇಷ್ಟ ಪ್ರಾಣಗಳೇಕಮಾದಲ್ಲಿ, ಶರೀರವು ತನ್ನ ಮುನ್ನಿನ ಗುಣವನಳಿದು,
ಅಗ್ನಿಸ್ವರೂಪಮಾದಿಷ್ಟಲಿಂಗದಲ್ಲಿ ಐಕ್ಯವಾದುದರಿಂ
ದಹನಕ್ಕಯೋಗ್ಯಮಾಯಿತ್ತು.
ನಿರಾಕಾರವಾದ ಪ್ರಾಣವು ಈಶಾನ್ಯಸ್ವರೂಪಮಾದ
ಪ್ರಾಣಲಿಂಗದಲ್ಲಿ ಲೀನಮಾದುದರಿಂ
ಕರ್ಮಸಂಸ್ಕಾರಯೋಗ್ಯಮಲ್ಲಮಾಯಿತ್ತು.
ಆದುದರಿಂದಾ ಶಿವಭಕ್ತನಿಗೆ ದಹನಸಂಸ್ಕಾರಮಿಲ್ಲಮಾಯಿತ್ತು.
ಇಂತಪ್ಪ ಸಾಕಾರ ನಿರಾಕಾರ ಶಿವಶಕ್ತಿಸ್ವರೂಪಗಳೆಲ್ಲವೂ
ಭಾವದಲ್ಲೊಂದೇ ಆಗಿ ಪರಿಪೂರ್ಣತೃಪ್ತಿಯಲ್ಲಿ ನಿಜಸ್ವಭಾವನಾಯಿತ್ತು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /53
ದೀಕ್ಷಿತನು ಯಜನಾರ್ಥಿಯಾಗಿ, ಭೂಶುದ್ಧಿಯಂ ಮಾಡಿ,
ಯೂಪಸ್ತಂಭವಂ ಪ್ರತಿಷ್ಠೆಯಂ ಮಾಡಿ, ಋತ್ವಿಜರಂ ಕೂಡಿ,
ಮಹಾಘೋರಾಟವಿಯಲ್ಲಿ ಕಳಪುಲ್ಲಂ ತಿಂದು ಕೊಳಕುನೀರಂ ಕುಡಿದು
ಅಧೋಮುಖಗಳಾಗಿ ಸಂಚರಿಸುವ ಪಶುಸಮೂಹಗಳೊಳೊಂದು
ಸಲಕ್ಷಣಮಾದ ಪಶುವಂ ಪಿಡಿದು,
ಯೂಪಸ್ತಂಭದಲ್ಲಿ ಹರಿಯದ ಹಗ್ಗದಲ್ಲಿ ಕಟ್ಟಿ,
ಅತಿಖಾತಮಪ್ಪ ಯಜ್ಞಕುಂಡವಂ ಚೆನ್ನಾಗಿ ಸಮೆದು,
ಒಣಗಿಯೊಣಗದ ಕಾಷ್ಠಂಗಳಿಂದಗ್ನಿಯ ಹೊತ್ತಿಸಿ,
ಅತಿಸುಗಂಧಮಾದ ಘೃತಮಂ ಮಂತ್ರಘೋಷದಿಂದಾಹುತಿಗೊಡುತ್ತಿರೆ,
ಅಗ್ನಿಯು ಪಟುವಾಗಿ, ನಿಜವಾಸನಾಧೂಪದಿಂ ಸಕಲದೇವತೆಗಳಂ ತೃಪ್ತಿಬಡಿಸಿ
ಋತ್ವಿಕ್ಕುಗಳನೊಳಕೊಂಡು ದೀಕ್ಷಿತನಂ ವಿೂರಿ,
ಪಾಶಮಂ ದಹಿಸಿ, ಕಂಭದಲ್ಲಿ ಬೆರೆದು ಪರಮಶಾಂತಿಯನೆಯ್ದಿದ ತಾನೇ
ಸೋಮಯಾಜಿಯಾಯಿತು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./54
ನಾಸಿಕದಲ್ಲಿ ಸಂಚರಿಸುತಿರ್ಪ
ಪ್ರಾಣವಾಯುವಿನ ಗಮನಾಗಮನವೇ ಶಕ್ತಿಸ್ವರೂಪು,
ಅದೇ ರೇಚಕಪೂರಕಗಳಾಗಿರ್ಪುದು.
ಇವೆರಡರ ಸಂಗವೇ ಕುಂಭಕವು.
ಅದರ ಸಂಗದಲ್ಲುತ್ಪನ್ನಮಾದ ಮನಸ್ಸೇ ಸೃಷ್ಟಿಕರ್ತೃವಾದುದರಿಂ
ಭ್ರೂಮಧ್ಯವೇ ಸ್ಥಾನವಾಯಿತ್ತು.
ಅದಕ್ಕೆ ಪೂರಕವೇ ನಿಗ್ರಹಕರ್ತೃವೂ
ರೇಚಕವೇ ಸ್ಥಿತಿಕರ್ತೃವೂ ಆದುದರಿಂದ
ತತ್ಸಂಗದಲ್ಲಿ ತತ್ತದ್ವಿಷಯಗ್ರಹಣರೂಪಗಳಾದ
ಪಂಚಜ್ಞಾನಂಗಳು ಪಂಚಲಿಂಗಂಗಳಾಗಿರ್ಪುವು.
ಈ ಪಂಚಜ್ಞಾನಂಗಳು ಮನಸ್ಸಿನಲ್ಲಿ ಒಂದೆಯಾಗಿ
ಪ್ರಕಾಶಿಸುತ್ತಿರ್ಪುದರಿಂದಾ ಮನವೇ ಮಹವೆನಿಸಿಕೊಂಡಿತ್ತು.
ಅಂತಪ್ಪ ಮಹಾಜ್ಞಾನಕ್ಕೆ ತಾನಂಗಮಾಗಿರ್ಪ ಮನವೇ
ಮಹಾಲಿಂಗವಾಯಿತ್ತು.
ಅಂಗಕ್ಕೆ ಪ್ರಾಣವೇ ಚೈತನ್ಯಮಾದಂತೆ,
ಇಂದ್ರಿಯಂಗಳಿಗೆ ಮನಸ್ಸೇ ಚೈತನ್ಯವು,
ಲಿಂಗಂಗಳಿಗೆ ಮಹಿಮೆಯೇ ಚೈತನ್ಯವು.
ಅಂತಪ್ಪ ಮಹಿಮೆಯುಳ್ಳ ಮನವೇ ಮಹಾಲಿಂಗವು.
ಅಂತಪ್ಪ ಮಹಾಲಿಂಗಧಾರಣಶಕ್ತಿಯುಳ್ಳ ಪುರುಷನೇ ಶಿವಭಕ್ತನು.
ಆ ಲಿಂಗವಂ ಪ್ರಪಂಚಸುಕ್ಷೇತ್ರದಲ್ಲಿಟ್ಟು
ನಿಯಮಪೂರ್ವಕವಾಗಿ ಪೂಜಿಸುತಿರ್ಪಾತನೇ ದೇವತಾಪುರುಷನು.
ಅದನಪವಿತ್ರಸ್ಥಾನದಲ್ಲಿಟ್ಟು
ತನ್ನ ಭೋಗವನನುಭವಿಸುತ್ತಿರ್ಪಾತನೇ ಪತಿತನು, ಅವನೇ ಭವಿಯು.
ಒಳಗೂ ಹೊರಗೂ ಲಿಂಗರೂಪಮಾಗಿ ಪರಿಣಾಮಿಸಿ
ಆ ಲಿಂಗಮಧ್ಯದಲ್ಲಿರ್ಪ ತನ್ನಂಗಭೋಗವೇ ಲಿಂಗಭೋಗಮಾಗಿ
ನಾಹಂಭ್ರಮೆಯಳಿದಿರ್ಪಾತನೆ ಲಿಂಗೈಕ್ಯನು.
ಅಂತಪ್ಪ ಲಿಂಗೈಕ್ಯಾನಂದಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./55
ನಿಜಮಹಾತ್ಮ್ಯಪ್ರಕಟನ ಪ್ರಪಂಚ ಕ್ರೀಡಾಕಾರಣಮಾದ
ನಾನೆಂಬುಪಾಧಿಯಂ ಪ್ರಪಂಚಮುಖದಲ್ಲೇ ಕಲ್ಪಸಿ,
ನನ್ನಲ್ಲಿ ತೋರುತ್ತಿರ್ಪ ಪ್ರಪಂಚದಿಂ ನಿಜಾಲಂಕಾರಶೋಭಿಯಾಗಿ
ನನ್ನಲ್ಲುದಿಸಿದ ಪಾಪಮಲಿನಮಂ ಕಾಲರೂಪಮಾಗಿ ಸಂಹರಿಸಿ,
ಪ್ರಪಂಚಪ್ರಕಟನಮಂ ಮಾಡುತಿರ್ಪೆಯಾಗಿ,
ನಿನ್ನ ಮಹಿಮೆಯಂ ಜಡರೂಪಮಾಗಿರ್ಪ ನಾನೆಂತು ಬಲ್ಲೆನಯ್ಯಾ?
ನೀನೇ ಸಂಹಾರಕರ್ತೃವಾಗಿ, ಶಕ್ತಿಯೇ ರಕ್ಷಣಕರ್ತೃವಾಗಿ,
ನಾನೇ ಸೃಷ್ಟಿಕರ್ತೃವಾಗಿರ್ಪೆನಯ್ಯಾ.
ನನ್ನಲ್ಲಿ ಬಾಹ್ಯನೈರ್ಮಲ್ಯವಂ ಅಂತರಂಗದಲ್ಲಿ ಪ್ರಕಾಶವಂ ಮಾಡಿ, ತೋರಿದಲ್ಲಿ,
ನನ್ನಲ್ಲಿರ್ಪ ಮಾಯೆ ನನ್ನಲ್ಲಿಯೇ ಅಡಗಿ,
ನಾನು ನಿರ್ಮಲಸ್ವರೂಪನಾಗಿ, ನನ್ನಲ್ಲಿ ನಾನೇ ಪ್ರಕಾಶಿಸುತ್ತಿರ್ಪೆನು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /56
ನಿನ್ನ ಕಂಗಳಭ್ರಮೆಯೇ ಕಾಲರೂಪಮಾಗಿ
ನನ್ನಂ ಭವಭವಂಗಳಲ್ಲಿ ತೊಳಲಿಸಿ ಬಳಲಿಸುತ್ತಿತ್ತಯ್ಯಾ.
ನಿನ್ನಾನಂದಾಶ್ರುವೇ ದೇವತೆಗಳಿಗೆ ಅಮೃತಮಾಗಿ,
ಮನುಷ್ಯರಿಗೆ ಜೀವನವಾಗಿ ರಕ್ಷಿಸುತ್ತಿತ್ತಯ್ಯಾ.
ನಿನ್ನ ಕಂಗಳ ಕೋಪಾಗ್ನಿಯೇ ಸಂಹರಿಸುತ್ತಿತ್ತಯ್ಯಾ,
ನಿನ್ನ ಕಂಗಳ ಭಾವವೇ ಪಲತೆರಮಾಗಿ ಸೃಷ್ಟಿಸುತ್ತಿತ್ತಯ್ಯಾ.
ಇಂತಪ್ಪ ನಿನ್ನ ಕಂಗಳ ವಿಕಾಸವನ್ನು ಕಡೆಹಾಯ್ದು
ನಿನ್ನ ಕೂಡುವ ಪರಿಯೆಂತಯ್ಯಾ.
ಆದರೆ, ಸ್ಥೂಲದಲ್ಲಿ ನಿನ್ನಲ್ಲಿರ್ಪ ಸಕಲವಿಚಿತ್ರವನ್ನು ಸೂಕ್ಷ್ಮದಲ್ಲಿ ನಿನ್ನಲ್ಲಿಟ್ಟು,
ನೀನು ನನ್ನಂ ಸೃಷ್ಟಿಸಿ, ನನಗೆ ನೀನೇ ಆಧಾರಮಾಗಿ,
ನಿನಗೆ ನಾನೇ ಆಧಾರಮಾಗಿ, ನಿನ್ನ ನೋಟವೂ,
ನನ್ನ ನೋಟವೂ ಏಕಮಾಗಲು,
ಪ್ರಪಂಚವು ಕಾಣಬರುತ್ತಿರಲಾಗಾ ವಿಚಿತ್ರವನ್ನು
ನನ್ನಲ್ಲಿ ನಾನೇ ತಿಳಿದುನೋಡಿ,
ನಿನ್ನ ಭ್ರೂಮಧ್ಯದಲ್ಲಿರ್ಪ ಲಲಾಟಾಕ್ಷಿಯೇ
ನನ್ನ ಭ್ರೂಮಧ್ಯದಲ್ಲಿ ಜ್ಞಾನಾಕ್ಷಿಯಾಗಿರ್ಪುದೆಂದು ತಿಳಿದು,
ಅದಂ ಮುಚ್ಚಿರ್ಪ ತಾಮಸವೆಂಬ ಕಪ್ಪನ್ನು ಭಾವಹಸ್ತದಲ್ಲಿ
ಮೆಲ್ಲಮೆಲ್ಲಗೆ ಸಾಧಿಸಿ ತೆಗೆಯಲು,
ಆ ಕಂಗಳಲ್ಲಿರ್ಪ ಭ್ರಮೆಯಳಿದು, ಜ್ಞಾನಾಗ್ನಿಯು ಪ್ರಕಾಶಮಾಗಿ,
ಕಾಲ ಕಾಮ ಸೃಷ್ಟಿ ಸ್ಥಿತಿ ಸಂಹಾರ ಸಂಸಾರಪ್ರಪಂಚ
ಶರೀರಾದಿ ಸಕಲ ಭಿನ್ನಗುಣಂಗಳನ್ನು ದಹಿಸಿ,
ಆ ಅಗ್ನಿಯು ನನ್ನಲ್ಲಿಯೇ ಪರಮಶಾಂತಿಯಂ
ಪೊಂದಿದಲ್ಲಿ ನಾನೇ ನೀನಾದೆನಯ್ಯಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./57
ನಿನ್ನ ಕಂಗಳಲ್ಲಿ ಕಾಲಮೃತ್ಯುಗಳುದಿಸಿದವಯ್ಯಾ.
ಅವರಲ್ಲಿ ನಾನಾ ವ್ಯಾಧಿಗಳು ಪುಟ್ಟಿದವಯ್ಯಾ.
ನಿನ್ನ ಶಕ್ತಿಯಲ್ಲಿ ಕಾಮರತಿಗಳು ಹುಟ್ಟಿದವಯ್ಯಾ.
ಅವುಗಳಲ್ಲಿ ಮಾಯಾಪ್ರಪಂಚಗಳು ಹುಟ್ಟಿದವಯ್ಯಾ.
ಇವೆಲ್ಲವೂ ಸ್ಥೂಲಸೂಕ್ಷ್ಮಂಗಳನಾವರಿಸಿ,
ಆ ಮಾಯೆಯು ನಿರಾಕಾರಮಾಗಿರ್ಪ ಮನವಂ ಕರಗಿಸಿ,
ತದ್ಬಿಂದುವಿನಿಂದ ಪೃಥ್ವೀಮುಖದಲ್ಲಿ
ಸಾಕಾರವಮಾಡಿ ತೋರುತಿರ್ದವಯ್ಯಾ.
ವ್ಯಾಧಿಗಳು ತನುವಂ ಕರಗಿಸಿ ಆಕಾಶಮುಖದಲ್ಲಿ
ನಿರಾಕಾರವಂ ಮಾಡಿ ಆಡುತ್ತಿರ್ದವಯ್ಯಾ.
ಪ್ರಪಂಚಯುಕ್ತಮಾದ ಕಾಮಸಹಿತಮಾಗಿ ಮುಂದೆ ಶಕ್ತಿಯೂ
ವ್ಯಾಧಿಯುಕ್ತಮಾದ ಕಾಮಸಹಿತಮಾಗಿ ಹಿಂದೆ ನೀನೂ
ಮಧ್ಯಸ್ಥನಾದ ನನ್ನನ್ನೊತ್ತರಿಸಿ ಚೆಲ್ಲಾಟವಾಡುತ್ತಿದರ್ಿರಯ್ಯಾ.
ಗಂಡಹೆಂಡಿರ ಜಗಳದಲ್ಲಿ ಕೂಸುಬಡವಾಯಿತ್ತೆಂಬ
ನ್ಯಾಯವೆನಗೆ ತಪ್ಪದಾಯಿತ್ತಯ್ಯಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./58
ನಿಷ್ಕಳಂಕಾತ್ಮನು ನಿಜಪ್ರಕೃತಿವಶದಿಂ
ಮನ ನೆನಹು ಭಾವದೆ ತ್ರಿವಿಧಸ್ವರೂಪವಾಯಿತ್ತು.
ಆ ಮನವೊಗ್ದಿದುದೆ ನೆನಹಿಗೆ ಬಂದಿತ್ತು.
ಅದೇ ಭಾವದಲ್ಲಿ ತೋರಿತ್ತು ; ಅದೇ ಪ್ರಾಣವಾಯಿತ್ತು ;
ಅದೇ ಚೈತನ್ಯಸ್ವರೂಪಮಾಗಿ ತನುವನೆಳದಾಡಿತ್ತು.
ಅದಕ್ಕೆ ವಾಯುವೇ ಅಂಗವಾಗಿ ಕರ್ಮಾಧೀನಮೆನಿಸಿ,
ತಾನೆಂಬಹಂಕಾರದಿಂ ತನ್ನ ತಾ ಮರೆತು ತೊಳಲಿಬಳಲುತ್ತಿರಲು,
ಅನೇಕಜನ್ಮ ಸಂಚಿತಕರ್ಮ ಸಮೆದು,
ಗುರುಕರುಣ ನೆಲೆಗೊಂಡಲ್ಲಿ ಗಗನಾಂಗಿಯಾಗಿ,
ಆ ಮನಕ್ಕೆ ತಾನೇ ಆಧಾರಮಾಗಿ, ತಾನೇ ಪರಮನಾಗಿ,
ತಾನೇ ಪ್ರಸನ್ನಮಾಗಿರ್ದ ಮಹಾಜ್ಞಾನಶಕ್ತಿಯಂ ಕಂಡದರೊಳಗೆ ಕೂಡಿ,
ಸಾಧಕಕ್ಕೊಳಗಾದ ಮನವೇ ಘನವಾಯಿತ್ತು.
ಆ ಘನವೇ ಲಿಂಗವಾಯಿತ್ತು, ಆ ಲಿಂಗವೇ ಪ್ರಾಣವಾಯಿತ್ತು,
ಆ ಪ್ರಾಣವೇ ಪರಮಾತ್ಮಸ್ವರೂಪಮಾಗಿ
ತತ್ತ್ವಮಸಿಪದದಿಂದತ್ತತ್ತ ಹಮ್ಮನಳಿದು ಸುಮ್ಮನೆಯಾದುದೆ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯ ಗುರುಪ್ರಭುವೆ./59
ನೀರು ತನ್ನೊಳಗಿರುವ ಮಲಿನವಂ ಧರೆಗೆಹತ್ತಿಸಿ ತಾನಾರಿಪೋದಡೆ
ನೀರೊಳಗಿದ್ದು ಅಗಸನೊಗೆದಂತೆ,
ಪ್ರಪಂಚವು ತನ್ನೊಳಗಿರ್ದ ಮಲಿನವಂ ನನಗೆ ಹತ್ತಿಸಿ
ತಾನು ಬಯಲಾಗಿಪೋದಡೆ,
ಆ ಪ್ರಪಂಚದೊಳಗಿರ್ದ ನನ್ನಂ ಕಾಲನು ಕೊಲ್ಲುತಿರ್ಪನಯ್ಯಾ.
ನನಗನುಭವರೂಪಮಾದ ನಾನೆಂಬ ದಿವ್ಯದುಕೂಲವನ್ನು ಹೊದ್ದು,
ಮಾಸಿ, ಒಗೆದು, ಹರಿದುಬಿಡದೆ, ನಿನ್ನ ಪರತತ್ವವೆಂಬ ಭಂಡಾರದಲ್ಲಿ
ಜ್ಞಾನವೆಂಬ ಪೆಟ್ಟಿಗೆಯೊಳಗೆ ಗಳಿಗೆವಡೆಯದಂತೆ,
ಪುರಾತನಕವಳಿಗೆಯೊಳಗೆ ನನ್ನನಿಟ್ಟು ರಕ್ಷಿಸು ಕಂಡ್ಯಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /60
ಪಂಚಭೂತಂಗಳಂ ಮೀರಿರ್ಪಆತ್ಮರಾರೆಂದು ತಿಳಿವುದೆಂತೆಂದೊಡೆ:
ಸಾಮ್ಯವಸ್ತುವಿನಿಂದ ಗೋಚರಮಲ್ಲಮಾಗಿ
ತನ್ನಲ್ಲಿ ತಾನೇ ತಿಳಿಯಬೇಕು.
ಧೈರ್ಯವಂ ತಾಳಿ, ವೈರಾಗ್ಯವೆಂಬ ಖಡ್ಗವಂ ಪಿಡಿದು,
ಆ ಸೂಕ್ಷ್ಮ ಮಾರ್ಗದಲ್ಲಿ ನಿಶ್ಶಂಕೆಯಿಂ ತಾನೊಬ್ಬನೇ ಪ್ರವೇಶಿಸಿ,
ಭಾವವೆಂಬ ಮಹಾಬಯಲೊಳಗೆ ಗಮಿಸುತ್ತಾ,
ಮಿಥ್ಯಾಪ್ರಪಂಚನಡಗಿಸಿ, ನಿಜವಂ ಹೊಂದಿ,
ತತ್ವಾಮೃತವಂ ಪೀರಿ, ನಲಿವುತ್ತಿರ್ಪ ಪ್ರಮಥಗಣಂಗಳಂ
ನೋಡಿ ಪಾಡಿ ಮಣಿದು ಕುಣಿದು ತತ್ಪ್ರಸಾದಾಮೃತವಂ ಸವಿದು,
ಮಹಾತೃಪ್ತಿಸ್ಥಾನದಲ್ಲಿ ಸ್ವಪ್ನದಲ್ಲಿ ತಾನು ಪಟ್ಟ ಭ್ರಮೆಯು
ಜಾಗ್ರದಲ್ಲಿ ತನಗೆ ಅಪಹಾಸ್ಯಮಪ್ಪಂತೆ,
ತನ್ನಲ್ಲಿ ತಾನೇ ಲಯಿಸುತ್ತಾ, ಮಹಾಲಿಂಗವೇ ನಾನಾಗಿರ್ಪ ಸುಖವಂ
ಕಾಲವಿಳಂಬವನೆಸಗದೆ ನನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /61
ಪಂಚೇಂದ್ರಿಯ.
ಕರ್ಮೆಂದ್ರಿಯ ಮಧ್ಯವಾದ ಹೃದಯದಲ್ಲಿರ್ದು
ಕರ್ಮೊಪಭೋಗಿಯಾಗಿ ವಾಯುರೂಪದಲ್ಲಿ
ಶರೀರಧಾರಿಯಾಗಿ, ಆಕಾಶ ಶರೀರಕ್ಕೆ
ಸಕಲ ಪದಾರ್ಥಂಗಳನ್ನು ಹಂಚಿಕೊಡುತ್ತ,
ಕರ್ಮೆಂದ್ರಿಯ ಮುಖದಲ್ಲಿ ಸೃಷ್ಟಿಕರ್ತುವಾಗಿ
ಹೃತ್ಕಮಲದಳಂಗಳಲ್ಲಿ ಭ್ರಮಿಸುತ್ತ
ತ್ವಙ್ನೌಷ್ಟಸ್ಪರಿಶನದಲ್ಲಿ ಶರೀರ ಕರ್ತುವಾಗಿರ್ಪನೆ ಜೀವಾತ್ಮನು.
ಜ್ಞಾನೇಂದ್ರಿಯ ಮಧ್ಯಮಾಗಿರ್ಪ ಲಲಾಟದಲ್ಲಿರ್ದು
ಸೂಕ್ಷ್ಮಶರೀರಕ್ಕೆ ಕರ್ತುವಾಗಿ, ಜ್ಞಾನೋಪಭೋಗಿಯಾಗಿ
ಜ್ಞಾನೇಂದ್ರಿಯ ಚೈತನ್ಯನಾಗಿ, ಗ್ರಹಣಮುಖದಿಂ ರಕ್ಷಣ್ಯಕರ್ತುವಾಗಿ
ಮನೋನಿಷ್ಟ ಸಕಲ ವಿಷಯ ರೂಪನಾಗಿ,
ಸೂಕ್ಷ್ಮಕರ್ತುವಾಗಿ, ಅದೃಷ್ಟಾನುಸಾರಿಯಾಗಿರ್ಪನೆ ಅಂತರಾತ್ಮನು.
ಭಾವೇಂದ್ರಿಯ ಮಧ್ಯದಲ್ಲಿ ಭಾವನಿಷ್ಟನಾಗಿ,
ಭಾವೇಂದ್ರಿಯ ಮಧ್ಯದಲ್ಲಿರ್ಪ ಬ್ರಹ್ಮಸ್ಥಾನ ನಿವಾಸಿಯಾಗಿ.
ಕಾರಣ ಚೈತನ್ಯನಾಗಿ, ಕರ್ಮಮುಖದಲ್ಲಿ ಬಿಂದುಮೂಲವಾಗಿ,
ಶರೀರವ ಸೃಷ್ಟಿಸಲು,
ಜ್ಞಾನಮುಖದಲ್ಲಿ ಬಿಂದುಮಯ ಶರೀರವ ರಕ್ಷಿಸಲು,
ಭಾವಮುಖದಲ್ಲಿ ಈ ಬಿಂದು ನಿಗ್ರಹದಿಂ
ಶರೀರವ ಸಂಹರಿಸುತಿರ್ಪುದರಿಂ ಸಂಹಾರಕರ್ತುವಾಗಿ,
ಭಾವವೊಂದರಲ್ಲಿರ್ಪಾತನೆ ಪರಮಾತ್ಮನು.
ಉತ್ಕೃಷ್ಟಾತ್ಮನೆ ಪರಮಾತ್ಮನು.
ಮಧ್ಯಮಾತ್ಮನೆ ಅಂತರಾತ್ಮನು.
ಅಧಮಾತ್ಮನೆ ಜೀವಾತ್ಮನು.
ಕರ್ಮ ಪಂಚೇಂದ್ರಿಯ-
ಘ್ರಾಣ ಜಿಹ್ವೆ ನೇತ್ರ [ಕರ್ಣ] ತ್ವಗು.
ಅಂತಪ್ಪ ತ್ವಗುವನನುಸರಿಸಿ
ಕರ್ಮೆಂದ್ರಿಯಾದಿ ನವಮಸ್ಥಾನದಲ್ಲಿಪ್ಪಾತನೆ [ಜೀವಾತ್ಮನು]
ಜ್ಞಾನಪಂಚೇಂದ್ರಿಯ-
ಚಿತ್ತ [ಜ್ಞಾನ] ಬುದ್ಧಿ ಅಹಂಕಾರ ಮನದಲ್ಲಿರ್ದು
ಜ್ಞಾನೇಂದ್ರಿಯಾದಿ ನವಮಸ್ಥಾನದಲ್ಲಿರ್ಪಾತನೆ ಅಂತರಾತ್ಮನು.
ಭಾವವೊಂದರಲ್ಲಿ ಏಕಮೇವಾದ್ವಿತೀಯನಾಗಿರ್ಪನೆ ಪರಮಾತ್ಮನು.
ಏಕತ್ವವಾಗಿರ್ಪ ಪರಮನಲ್ಲಿ
ನವಮತ್ವಂಗಳಾಗಿರ್ಪ ಜೀವಾತ್ಮಾಂತರಾತ್ಮಗಳೆರಡೂ
ಶೂನ್ಯಗಳಾಗಿ, ಪರಮನಿಂ ಪ್ರಮಾಣಂಗಳಾಗಿ,
ಶತರೂಪಮಾಗಿ, ಆ ನೂರು ಕೂಡಾ
ಪರಮಾಯುಷ್ಯಮೆನಿಸಿರ್ಪುದು.
ಶರೀರದೊಳಗೆ ಕಾಪಾಡುತಿರ್ಪಾತನೆ ಜೀವಾತ್ಮನು.
ಶರೀರದ ಹೊರಗೆ ಕಾಪಾಡುತಿರ್ಪಾತನೆ ಅಂತರಾತ್ಮನು.
ಒಳ ಹೊರಗೆರಡಕ್ಕೂ ಸಾಕ್ಷಿ ಕಾರಣನಾಗಿರ್ಪಾತನೆ ಪರಮಾತ್ಮನು.
ಪ್ರಪಂಚವ ಜಾಗ್ರವ ಹೊಂದಿಸುತಿರ್ಪಾತನೆ ಜೀವಾತ್ಮನು.
ಸ್ವಪ್ನವ ಹೊಂದಿಸುತಿರ್ಪಾತನೆ ಅಂತರಾತ್ಮನು.
ಸುಷುಪ್ತಿಯ ಹೊಂದಿಸುತಿರ್ಪಾತನೆ ಪರಮಾತ್ಮನು.
ಜೀವಾತ್ಮನನಾವರಿಸಿರ್ಪ ಬಿಂದು
ಇಪ್ಪತ್ತೈದು ಭೇದಮಾಗಿರ್ಪುದು.
ಅಂತರಾತ್ಮನನಾವರಿಸಿರ್ಪ ನಾದ
ಐವತ್ತು ಭೇದಮಾಗಿರ್ಪುದು.
ಪರಮಾತ್ಮನನಾವರಿಸಿರ್ಪ ಕಳೆ
ನೂರು ಭೇದಮಾಗಿರ್ಪುದು.
ಕಳೆಯೆಂದರೆ-ಕಾಲವೆಂಬುದರ್ಥ.
ಜೀವಾತ್ಮನು ತ್ವಕ್ಕಿನಲ್ಲಿರ್ದು ನಾಸಿಕದಲ್ಲಿ ಸಂಚರಿಸುತಿರ್ಪನು.
ಅಂತರಾತ್ಮನು ಮನಸ್ಸಿನಲ್ಲಿರ್ದು ಚಿತ್ತದಲ್ಲಿ ಸಂಚರಿಸುತಿರ್ಪನು.
ಪರಮಾತ್ಮನು ಬ್ರಹ್ಮಸ್ಥಾನದಲ್ಲಿರ್ದು ಭಾವದಲ್ಲಿ ಸಂಚರಿಸುತಿರ್ಪನು
ಇಂತು ಸ್ಪರ್ಶನದಲ್ಲಿರ್ಪ ಜೀವನಿಗೂ
ಸ್ಪರ್ಶನದಲ್ಲಿಯಿಪ್ಪ ಇಷ್ಟಲಿಂಗಕ್ಕೂ ಕರ್ಮವೆ ಸಂಬಂಧ ಕಾರಣ.
ಮನದಲ್ಲಿರ್ಪ ಅಂತರಾತ್ಮನಿಗೂ, ಧ್ಯಾನದಲ್ಲಿಪ್ಪ ಆತ್ಮಲಿಂಗಕ್ಕೂ
ಜ್ಞಾನವೆ ಸಂಬಂಧ ಕಾರಣ.
ಭಾವದಲ್ಲಿಪ್ಪ ಪರಮಾತ್ಮನಿಗೂ
ಆ ಭಾವದಲ್ಲಿರ್ಪ ಭಾವಲಿಂಗಕ್ಕೂ
ಭಾವವೇ ಸಂಬಂಧ ಕಾರಣ.
ಕರ್ಮ ಜ್ಞಾನ ಭಾವಂಗಳಿಂ
ಇಷ್ಟ ಪ್ರಾಣ ಭಾವಲಿಂಗಂಗಳಲ್ಲಿ
ಸ್ಥೂಲ ಸೂಕ್ಷ್ಮ ಕಾರಣಮಾದ
ಜೀವಾತ್ಮ ಅಂತರಾತ್ಮ ಪರಮಾತ್ಮಂಗಳು
ಬೆರದು ಭೇದದೋರದಿರ್ಪುದೆ ಲಿಂಗೈಕ್ಯ.
ಅಂತಪ್ಪ ಲಿಂಗೈಕ್ಯಾನಂದ ಸಕೀಲ ಸಾವಧಾನ ಸುಖ
ಎನಗೆ ಸಾಧ್ಯಮಪ್ಪಂತೆ ಮಾಡಿ ಕೂಡಿ ಸಲಹಾ
ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ./62
ಪರಬ್ರಹ್ಮ ಸೃಷ್ಟಿರೂಪವಾಗಿ ಜನಿಸುವುದಲ್ಲ
ಸಂಹಾರರೂಪಮಾಗಿ ಲಯಮಪ್ಪುದಲ್ಲ,
ಸ್ಥಿತಿರೂಪಮಾಗಿರ್ಪುದು.
ಅದರಿಂ ವಿಷ್ಣುವೆ ಪರಬ್ರಹ್ಮವೆಂಬ
ವೈಷ್ಣವ ಕುಜ ಖಂಡ[ನ]ಪರಶು ಮಹಿಮೆಯಂ ಪೇಳ್ವೆನೆಂತೆಂದಡೆ : ಮನಸ್ಸಿಗೆ ಸತ್ವವೆ ಗುಣವಾಯಿತ್ತು.
ಆ ಸತ್ವಕ್ಕೆ ತಮಸ್ಸೇ ಗುಣಮಾಗಿರ್ಪುದರಿಂ
ಶಿವನೆ ಸತ್ವಮಯಮಾದ ಶುದ್ಧ ಸ್ಫಟಿಕ ಸಂಕಾಶದಿಂ
ವಿಶ್ವ ನಟನೆಯಿಂ ನಟಿಸುತ್ತಿರ್ಪುದರಿಂ
ಶಿವನೆ ಸತ್ವ ಸ್ವರೂಪು ; ವಿಷ್ಣುವೆ ತಮೋ ರೂಪು.
ಆ ತಮಸ್ಸೇ ಮಿಥ್ಯ ; ಸತ್ವವೇ ನಿಜ.
ಆ ಸತ್ಯ ಮಿಥ್ಯಂಗಳೆರಡೆಯಲ್ಲದೆ
ಬೇರೆ ಮತ್ತೊಂದಿಲ್ಲದೆ ಒಂದನೊಂದನಾಶ್ರಯಿಸಿ
ಒಂದಕೊಂದು ಗುಣಮಾಗಿ,
ಅದಕ್ಕದೆ ದೇಹ ಪ್ರಾಣಗಳಾಗಿ
ಪ್ರಕೃತಿ ಪರಮರಾಗಿರ್ಪುದರಿಂ
ಆ ವಿಷ್ಣುವಿಗೆ ಶಿವನೆ ಗುಣ,
ಆ ಶಿವನಿಗೆ ವಿಷ್ಣುವೆ ಗುಣಮಾದುದರಿಂ
ಶಿವನೇ ತಮೋಗುಣಮಾದ
ವಿಷ್ಣುವೆ ಸತ್ವಗುಣಮಾದನೆಂತೆಂದಡೆ : ಸತ್ವ ಮೂರ್ತಿಯಾದ ಪುರುಷನಂ
ತಮೋರೂಪಮಾದ ಸ್ತ್ರೀಸಂಗದಿಂ ಹೀನನಾಗಿರ್ಪಂತೆ
ಆ ಸ್ತ್ರೀ ಪುರುಷಸಂಗದಿಂ ಮಂಗಳಮಯ ಪತಿವ್ರತಾ ಮಹಿಮೆಯುಳ್ಳಂತೆ
ಆ ತಥ್ಯ ಮಿಥ್ಯಂಗಳೆ ಹರ ಹರಿ ರೂಪಂಗಳಾಗಿಹವು.
ಅದರಿಂ ಉಂಟಾಗಿರ್ಪ ವಸ್ತುವೊಂದೆ ಶಿವನು.
ಇಲ್ಲಮಾಗಿರ್ಪ ಪ್ರಕೃತಿಯೆ ವಿಷ್ಣು.
ಈ ತಥ್ಯ ಮಿಥ್ಯ ಸಂಗದಿಂ
ಉಂಟಿಲ್ಲಮಾಗಿರ್ಪ ಸಕಲ ಪ್ರಪಂಚವೆ ಬ್ರಹ್ಮ ಪುರುಷನು.
ತಾ ಸಕಲಕ್ಕೂ ಕರ್ತನಾಗಿರ್ದು ಲೀಲಾಬದ್ಧತ್ವದಿಂ
ಅರ್ಧ ಸತಿಯು ಅರ್ಧ ಸುತನಾಗಿ
ಸ್ವಪ್ರಕಾಶ ನಷ್ಟಮಾಗಿ ಅಸ್ವತಂತ್ರನಾಗಿರ್ಪಂತೆ
ನಿಜಮಾಗಿರ್ಪ ವರ್ತಮಾನ ಭೂತ ಭವಿಷ್ಯಂಗಳಿಂ
ಕಾಣಿಸದಿರ್ಪಂತೆ, ಸ್ಥಿತಿ ವಿಷಮ ವಿಭಾಗದ ಮಧ್ಯದಲ್ಲಿ
ವರ್ತಮಾನವಾಗಿ, ಸ್ಥಿತಿ ರೂಪವಾಗಿ ನಿಲ್ಲುವ ವಸ್ತುವೊಂದು
ಸಮಗಣನಾ ವಿಭಾಗದಲ್ಲಿ ನಿಲ್ಲುವುದು ಶೂನ್ಯ.
ಅದೇ ಶಿವಶಕ್ತಿ ಸ್ವರೂಪು.
ಎರಡೂ ಕೂಡಿದಲ್ಲಿ ದಶಸ್ಥಾನಮಾಗಿ ಹೆಚ್ಚುತಿರ್ಪುದು.
ಆ ಶೂನ್ಯರೂಪಮಾದ ಒಂಬತ್ತು ಆ ಶೂನ್ಯ ಮುಖದಲ್ಲೇ ಹೆಚ್ಚಿ ಎರಗುತ್ತಿರ್ಪುದು.
ಹೆಚ್ಚು ಕುಂದಿಲ್ಲದೆ ಒಂದಾಗಿರ್ಪ ನಿಜ ಸತ್ವವೆ ಶಿವನು
ಕಾಲತ್ರಯಂಗಳಲ್ಲಿ ಉದಯಾಸ್ತಮಾನ ಕಾಲಂಗಳೆ
ಬ್ರಹ್ಮ ವಿಷ್ಣು ರೂಪಮಾಗಿ, ಮಧ್ಯಕಾಲವೆ ಮಹೇಶ್ವರ ರೂಪಮಾಗಿರ್ಪಂತೆ,
ಸ್ಥಿತಿರೂಪಮಾದ ಶಿವನು, ಸೃಷ್ಟಿ ಸಂಹಾರರೂಪಮಾದ
ಬ್ರಹ್ಮ ವಿಷ್ಣುವಿನೊಳಗೆ ಕೂಡಿ ಪಂಚವಕ್ತ್ರನಾದ.
ತನ್ನ ನಾಲ್ಕು ಮುಖವೆ ಬ್ರಹ್ಮನಾಗಿ,
ಒಂದು ಮುಖವೆ ವಿಷ್ಣುವಾಗಿ, ಮೋಕ್ಷಮಯವಾದ
ಅಂತಮರ್ುಖವೆ ತಾನಾಗಿ ದೇಹದ ಮರೆಯಲ್ಲಿ ಪ್ರಕಾಶಿಸುತಿರ್ಪ ಜೀವನಂತೆ,
ಬ್ರಹ್ಮ ವಿಷ್ಣುಗಳೆಂಬ ಮಿಥ್ಯಾ ಪ್ರಕೃತಿಯ ಮರೆಯಲ್ಲಿ
ಪ್ರಕೃತಿ ಚೇತನನಾಗಿರ್ಪಾತನೆ ಶಿವನು.
ಉಂಟಾದುದಿಲ್ಲ ಮಾಡುತಿರ್ಪುದೆ ಸಂಹಾರ,
ಇಲ್ಲದದುಂಟು ಮಾಡುತಿರ್ಪುದೆ ಸೃಷ್ಟಿ,
ಇದ್ದಂತಿರ್ಪುದೆ ಸ್ಥಿತಿ.
ಸ್ಥಿತಿಯೇ ಸತ್ವ, ಆ ಸತ್ವಕ್ಕೆ ಸಂಹಾರವೆ ಶಕ್ತಿ ,
ಆ ಸಂಹಾರವೇ ತಾಮಸ, ಆ ತಾಮಸಕ್ಕೆ ಸೃಷ್ಟಿಯೇ ಶಕ್ತಿ ,
ಆ ಸೃಷ್ಟಿಯೇ ಅಹಂಕಾರ, ಅದಕ್ಕೆ ಸತ್ವವೇ ಶಕ್ತಿ ,
ಶಿವನಿಗೆ ಮಹಾದೇವಿ ರೂಪಮಾದ ವಿಷ್ಣುವೆ ಶಕ್ತಿಯಾದಂತೆ,
ಆ ವಿಷ್ಣುವಿಗೆ ಐಶ್ವರ್ಯರೂಪಮಾದ ಬ್ರಹ್ಮನೆ ಶಕ್ತಿಯಾದಂತೆ,
ಆ ಬ್ರಹ್ಮನಿಗೆ ವಿವೇಕರೂಪಮಾದ ಶಿವನೆ ಶಕ್ತಿ .
ಐಶ್ವರ್ಯ ಶಕ್ತಿಗಳಿಗೆ ಲಯಮಲ್ಲದೆ
ವಿವೇಕಕ್ಕೆ ಲಯಮಿಲ್ಲದಿರ್ಪುದರಿಂ
ಸ್ಥಿತಿಯೇ ಶಿವನಾಯಿತ್ತು.
ಆ ಪ್ರಕೃತಿ ಮುಖದಲ್ಲಿ ಪ್ರಕಾಶಿಸುತ್ತಿರ್ಪ
ಸ್ವಧರ್ಮಮುಳ್ಳ ಪರಮಾತ್ಮನ ಕಿರಣಂಗಳೆ
ಆ ಪ್ರಕೃತಿ ಬದ್ಧದಿಂ ಪ್ರಕೃತಿಮಯಮಾದ,
ಸೃಷ್ಟಿ ಸಂಹಾರ ರೂಪವಾದ ಶರೀರದಲ್ಲಿ
ಸ್ಥಿತಿರೂಪಮಾದ ಜೀವರಾಗಿರ್ಪವು.
ಸ್ವಭಾವಗುಣಮುಳ್ಳ ತೇಜೋರೂಪಮಾದ ಸೂರ್ಯಕಿರಣಂಗಳೆ
ಉದಕ ಮುಖದಲ್ಲಿ ಪ್ರಕಾಶಿಸಿ,
ಜಡರೂಪಮಾಗಿ ಭಿನ್ನಮುಖದಲ್ಲಿ ವರ್ಷಧಾರೆಗಳಾಗಿ,
ಅಪವಿತ್ರಮಾಗಿ, ಪೃಥ್ವಿಮುಖದಲ್ಲಿ ಬಹುತ್ವವೇಕತ್ವಮಾಗಿ,
ಪ್ರವಹಿಸುವಲ್ಲಿ ಪವಿತ್ರಮೆನಿಸಿ ಮತ್ತೆ
ಆ ಸೂರ್ಯ ಕಿರಣಂಗಳಿಂ ಲಯವ ಹೊಂದುತ್ತಿರ್ಪಂತೆ,
ಜೀವನು ಶರೀರಧಾರಿಯಾಗಿ ಸೂರ್ಯಕಿರಣಂಗಳೆಂತಂತೆ
ಸತ್ವ ಸ್ವರೂಪನಾದ ಸಂಹಾರ ಕರ್ತನಾದ
ಶಿವನಿಂದಲೆ ಲಯಮಪ್ಪವು.
ಮನೋವಿಕಾರ ಮನದಿಂದಲೇ,
ಸೃಷ್ಟಿ ಸ್ಥಿತಿ ಸಂಹಾರಂಗಳಾಗುತ್ತಿರ್ಪಂತೆ,
ಆ ಪರಮಾತ್ಮ ಸ್ವರೂಪಮಾದ ತದ್ವಿಕಾರಮಾಗಿರ್ಪ ಜೀವಂಗಳು
ಆ ಪರಮಾತ್ಮನಿಂದಲೇ ಸೃಷ್ಟಿ ಸ್ಥಿತಿ ಸಂಹಾರಂಗಳಾಗುತ್ತಿರ್ಪವು.
ಒಂದು ಬಾಗಿಲಲ್ಲಿ ಹೊರಟು, ಅನಂತ ಮುಖಗಳಲ್ಲಿ ಸಂಚರಿಸಿ,
ತಿರಿಗಿ ಬಂದ ಬಾಗಿಲೊಳಗೆ ಹೊಕ್ಕು ನಿಜಸ್ಥಾನವ ಸೇರುತ್ತಿರ್ಪಂತೆ,
ಸಂಹಾರರೂಪಮಾದ ತಮೋಮುಖದಲ್ಲಿ ಹೊರಟು
ಅನಂತ ಮುಖದಲ್ಲಿ ಸಂಚರಿಸಿ ಬಳಲಿ ಬಾಯಾರಿ
ತಿರಿಗಿ ಸಂಹಾರ ಮುಖದಲ್ಲೆ ನಿಜವ ಹೊಂದುತ್ತಿರ್ಪುದರಿಂ
ಜೀವನ ಸಂಹಾರ ಮೋಕ್ಷ ಅಂತಪ್ಪ ಸ್ವಪ್ರಕಾಶ ಪರಮಾನಂದ
ಮಂಗಳಮಯ ಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡ ದೇಶಿಕಾರ್ಯ ಪ್ರಭುವೆ./63
ಪರಮಾತ್ಮನಿಗೆ ಆದಿಯಲ್ಲಿ
ಶಿವನೆಂಬ ನಾಮ ನಿಜಮಾದುದೆಂತೆಂದಡೆ : ಶವ ಶಬ್ದಕ್ಕೆ ಪೃಷೋದರಾದಿಯಿಂದಿತ್ವ ಬಂದರೆ ಶಿವಶಬ್ದ.
ಶವವೆಂದರೆ ನಿಶ್ಚೆ ತನ್ಯ.
ನಿಜಚೇತನವೆ ಪರಮನವಗ್ರಹಿಸಿದಲ್ಲಿ
ಪ್ರಪಂಚರೂಪಮಾದ ಪ್ರಕೃತಿ.
ನಿಶ್ಚೇತನಮಾಗುತಿರ್ಪುದೆ ಶವ.
ಇಂತು ನಿಶ್ಚೇತನಮಾಗಿರ್ಪ ಪ್ರಪಂಚದಲ್ಲಿ
ಪರಮನು ಹೊಂದಿದಲ್ಲಿ ಆ ಶವವೇ ಶಿವವಾಯಿತ್ತು.
ದರಿದ್ರನಿಗೆ ಧನ ಸಿಕ್ಕಿದರು, ಹೋದ ಒಡವೆ ಕೈಸಾರ್ದರು
ಅದೇ ದಿವ್ಯಮಂಗಳ ಶೋಭನವಾದುದರಿಂ
ಆ ಶಿವ ಶಬ್ದ ಶೋಭನಾರ್ಥವ ಕೊಡುತ್ತಿಹುದು.
ಅದರಿಂ ಪರಮನಿಗೆ ಶಿವನೆಂಬುದನಾದಿ ನಾಮ.
ಪ್ರಪಂಚವೆಲ್ಲವು ಕೂಡಿ ಶಿವನಾದಂತೆ,
ಪ್ರಜೆಯೆಲ್ಲವು ಕೂಡಿ ದೊರೆಯಾದಂತೆ,
ಶಬ್ದವೆಲ್ಲವು ಕೂಡಿ `ಓ’ ಎಂಬ ನಾಮವಾಯಿತ್ತು.
ಅದು `ನಮ’ವೆಂಬ ಅನುಸ್ವಾರದೊಳಗೆ ಕೂಡಿ ಮಹಾಪ್ರಣವವಾಯಿತ್ತು.
ಆ ಪ್ರಣವವನನುಸರಿಸುವುದೆ ಅನುಸ್ವಾರ.
ಆ ಪ್ರಣವರೂಪವಾದ ಪರಮನ
ಆ ನಮಸ್ಕಾರವನನುಸರಿಸುತ್ತಿರ್ಪುದರಿಂ
ನಡುದೊಳಗೆ ಕೂಡಿದ `ಓ’ಕಾರವೇ ಪ್ರಣವ.
ಆ ಪ್ರಣವಕ್ಕೆ ಉತ್ಕೃಷ್ಟವಸ್ತುವಿಗೆ ನಮಸ್ಕಾರವೆಂಬುದರ್ಥ.
ಆ ಪ್ರಣವವೆ- `ಓಂ’ ಎಂದರೆ ನಾನೆಂಬುದರ್ಥ.
`ಬಹುಳಂ ಛಂದಸಿತಿ’ ಹಕಾರ ಲೋಪಮಾದುದರಿಂದ `ಹಂ’ ಎಂದರ್ಥವ
ಕೊಡುತ್ತಿರ್ಪುದರಿಂ ಆದಿಯಲ್ಲಿ ಸಾಕಾರರೂಪವಾದ ವಸ್ತು
ಪ್ರಣವ ಮುಖದಿ ನಾನುಯೆಂದು
ಸಾಕಾರದಿಂ ಶಿವನೆಂಬ ನಾಮವನುಚ್ಚರಿಸುತ್ತಿರ್ಪುದರಿಂ
ನಾನೆ ಶಿವನೆಂಬುದರ್ಥ.
ಆ ಮಹಾ ಘೋಷನಮಸ್ಕಾರಯೋಗ್ಯಕ್ಕೆ
ಸಾಕಾರಮಾದಲ್ಲಿ ಶಿವನೆಂಬ ನಾಮ.
ಅಂಥ ಶಿವನಿಗೋಸ್ಕರ ಉತ್ಕೃಷ್ಟ ಘೋಷದಿಂ
ನಮಸ್ಕರಿಸುವುದೇ ಪ್ರಣವ.
ಪಂಚಾಕ್ಷರಿಮಂತ್ರ ತಾನೆ ಪ್ರಣವಮಾದಲ್ಲಿ
ಪ್ರಣವಕ್ಕೆ ನಿಜವೆ ಅರ್ಥ.
ನಿಜ ಶೋಭನ ಮಹಿಮೆಯನ್ನು ಸ್ವಕೀಯ ವಾಕ್ಯ ಪ್ರಕಟನದಿಂದ
ತಿಳಿಸುತ್ತಿರ್ಪುದರಿಂ ವೇದಂಗಳು ಹುಟ್ಟಿದವು.
`ವೇತ್ತೀತಿ ವೇದಾ’ಯೆಂಬುದರ್ಥ.
ಅಂತಪ್ಪ ಅನಾದಿ ಮೂರ್ತಿ ಸಂಹಾರಸ್ಥಾನದಲ್ಲಿ
ಪೂರ್ವಸಂಹಾರ ಶೇಷರೂಪವಾದುದರಿಂ
ಆ ಸಂಹಾರವೆ ಆ ಕಾಲರುದ್ರನಿಗೆ ವಿಭೂತಿಯಾಯಿತ್ತು.
ಆ ಶಿವನಿಗೆ ಸಂಹಾರಶಕ್ತಿಯನೀವ ಮಹಿಮೆಯುಳ್ಳುದೆ ಭಸ್ಮ.
ಗೋವೆಂದರೆ ಭೂಮಿ.
ಆ ಭೂಮಿ ಸಂಹಾರ ಮಲವೆ ಭಸ್ಮ.
ಅಂತಪ್ಪ ಭಸ್ಮಕ್ಕೆ ಕಾರಣಮಾಗಿ
ಪ್ರಪಂಚ ಸಂಹಾರರೂಪಮಾಗಿ
ಸಂಹಾರವೊಂದೆ ಮುಖಮಾಗಿರ್ಪ
ಲಲಾಟಾಕ್ಷಿಯೇ ರುದ್ರಾಕ್ಷಿ.
ಅಂತಪ್ಪ ಭಸ್ಮ ರುದ್ರಾಕ್ಷಿಗಳಿಂ ಪೂರ್ವವಾಸನೆಯಳಿದು
ಪ್ರಣವ ಶಿವಮಂತ್ರದಿಂ ತಾನೆ ಶಿವನಾಗಿರ್ಪ
ಕೇವಲ ಕೈವಲ್ಯ ಮಂಗಳಮಯ ಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡ ದೇಶಿಕಾರ್ಯ ಪ್ರಭುವೆ./64
ಪರಮಾತ್ಮನು ಸ್ವಲೀಲಾನಿಮಿತ್ತ ಸಾಕಾರಸ್ವರೂಪನಾಗಿ,
ಪಂಚವಕ್ತ್ರ ದಶಭುಜಂಗಳನು ಧರಿಸಿ,
ತನ್ನ ನಿಜಧರ್ಮವನೆ ತನಗಾಧಾರಮಪ್ಪ ವಾಹನಮಂ ಮಾಡಿಕೊಂಡು,
ಪಂಚಮುಖಂಗಳಲ್ಲಿ ಪಂಚಭೂತಂಗಳಂ ಸೃಷ್ಟಿಸಿ,
ಅವನೇ ಬಂದು ಬ್ರಹ್ಮಾಂಡವಂ ಮಾಡಿಕೊಂಡು,
ತನ್ನ ಲೀಲಾಶಕ್ತಿಯ ಸಂಗದಿಂದ ಅನಂತಕೋಟಿ ಜೀವಂಗಳಂ ಸೃಷ್ಟಿಸಿ,
ತನ್ನ ಗೂಢಮಪ್ಪ ಮನೋಭಂಡಾರವಂ ತೆಗೆದು,
ಆ ಜೀವಂಗಳಿಗದನೇ ಜೀವನವಂ ಮಾಡಿ,
ಈ ಬ್ರಹ್ಮಾಂಡವೆಂಬ ತನ್ನ ಪಟ್ಟಣಕ್ಕೂ ಈ ಜೀವಜಾಲಕ್ಕೂ
ನಿಜಮನೋಭಂಡಾರವನೆ ಆಧಾರಮಂ ಮಾಡಿ,
ತಾನೇ ಸೇವ್ಯನಾಗಿ, ಜೀವಂಗಳೇ ಸೇವಕರಾಗಿ ಕ್ರೀಡಿಸುತ್ತಿರಲಾ
ಪರಮಾತ್ಮನಿಂದ ಸಲಿಗೆವಡೆದ ಕೆಲವು ಜೀವಂಗಳು ಅಹಂಕರಿಸಿ,
ಆ ಪರಶಿವನಲ್ಲಿರ್ಪ ಮನೋಭಂಡಾರದಲ್ಲಿ
ತಮ್ಮ ಶಕ್ತಿಗೆ ತಕ್ಕಷ್ಟು ಸತ್ಕರಿಸಿಕೊಂಡು,
ತದ್ವಂಚನಾಮನದಿಂ ಪಂಚಭೂತಂಗಳನ್ನು ಸಾಧಿಸಿ,
ಅದರಿಂದ ಒಂದು ಪಿಂಡಾಂಡವೆಂಬ ಪಟ್ಟಣಮಂ ಮಾಡಿಕೊಂಡು,
ಇಂದ್ರಿಯಂಗಳೆಂಬ ಕೊತ್ತಲಂಗಳಂ ನಿರ್ಮಿಸಿ,
ನವದ್ವಾರಂಗಳೆಂಬ ಹುಲಿಮುಖಂಗಳಿಂದ
ಅಜ್ಞಾನವೆಂಬತಿ ಘಾತಮಾದಗಳಂ ಕಲ್ಪಿಸಿ, ಆಶೆಯೆಂಬಾಳ್ವೇರಿಯಂ ಸೃಜಿಸಿ,
ತನ್ಮಧ್ಯದಲ್ಲಿ ಅಂತರಂಗವೆಂಬುದೊಂದು ಅರಮನೆಯಂ ಕಟ್ಟಿ,
ಅಲ್ಲಿದ್ದುಕೊಂಡು, ಜೀವನು ತನ್ನ ಮನೋವಂಚನಾಭಂಡಾರವಂ ವೆಚ್ಚಿಸುತ್ತಾ,
ವಿಷಯಂಗಳೆಂಬ ಮನ್ನೆಯರಂ ಸಂಪಾದಿಸಿ,
ನಿಜಪುರದ್ವಾರಂಗಳಲ್ಲಿ ಕಾಹನಿಟ್ಟು,
ಅಂತಃಕರಣಚತುಷ್ಟಯವೆಂಬ ಶಿರಃಪ್ರಧಾನರಂ ಸಂಪಾದಿಸಿ,
ತನ್ಮಂತ್ರಾಲೋಚನೆಯಿಂ ಸಾಮ, ಭೇದ, ದಾನ, ದಂಡವೆಂಬ
ಕರಿ, ತುರಗ, ರಥ, ಪದಾತಿಗಳಂ ಕೂಡಲಿಟ್ಟು,
ಕರ್ಮವೆಂಬ ಸೇನಾನಿಗೆ ಪಟ್ಟಮಂ ಕಟ್ಟಿ,
ತನ್ನಲ್ಲಿರ್ಪ ನಾನಾ ದಳಂಗಳಂ ಸೇನಾಪತಿಯ ವಶಮಂ ಮಾಡಿ,
ನಾದ ಬಿಂದು ಕಳೆಗಳೆಂಬ ಶಕ್ತಿಗಳಂ ಪರಿಣಯಮಾಗಿ,
ಜಾಗ್ರತ್ಸ್ವಪ್ನಸುಷುಪ್ತಿಗಳೆಂಬರಮನೆಗಳೊಳಗೆ ಕಳೆಯ ನಾದದಲ್ಲಿ ಕೆಲವುತ್ತಂ,
ಬಿಂದುವಿನಲ್ಲಿ ಫಲಿಸಿ ಫಲಸುಖಂಗಳನನುಭವಿಸುತಿರ್ಪ
ಜೀವನೆಂಬರಸಿನನುಮತವಿಡಿದು,
ಕರ್ಮಸೇನಾನಿಯು ಸಕಲದಳಂಗಳೊಳಗೆ ಕೂಡಿ,
ವಿಷಯಂಗಳೆಂಬ ಮನ್ನೆಯರಂ ಮುಂದುಮಾಡಿಕೊಂಡು,
ಪ್ರಪಂಚವೆಂಬ ರಾಜ್ಯವಂ ಸಾಧಿಸಿ,
ತದ್ರಾಜ್ಯದಲ್ಲಿ ಬಂದ ಪುತ್ರ ಮಿತ್ರ ಕಳತ್ರ ಧನ ಧಾನ್ಯ
ವಸ್ತುವಾಹನಾಲಂಕಾರಾದಿಗಳನ್ನು
ಕಾಯಪುರಕ್ಕೆ ತಂದು, ಜೀವನೆಂಬರಸಿಗೆ ಒಪ್ಪಯಿಸುತ್ತಿರಲು,
ಜೀವನು ಸಂತೋಷಿಸಿ, ತಾನು ಸಂಪಾದಿಸಿದ ಸಕಲದ್ರವ್ಯವನ್ನು
ತನ್ನ ಮೂಲಮನೋಭಂಡಾರದಲ್ಲಿ ಬೆರಸಿ, ಬಚ್ಚಿಟ್ಟು, ಅಹಂಕರಿಸಿ,
ಸಕಲಕ್ಕೂ ತಾನೇ ಕರ್ತೃವೆಂದು ಬೆರತು, ಪರಮಾತ್ಮನಂ ಮರೆತು,
ಸೇವ್ಯಸೇವಕರೆಂಬ ವಿವೇಕವರತು, ಅಧರ್ಮ ವಾಹನಾರೂಢನಾಗಿ,
ತನ್ನ ತಾನರಿಯದೆ, ಕಾಮವಶನಾಗಿ ಸಂಚರಿಸುತಿರ್ಪ
ಈ ಜೀವನ ಅಹಂಕಾರಮಂ ಸಂಹರಿಸುವ ನಿಮಿತ್ತವಾಗಿ
ಪರಮಾತ್ಮನು ಕಾಲನೆಂಬ ಸುಬೇದಾರನಂ ಸೃಷ್ಟಿಸಿ,
ವ್ಯಾಧಿಪೀಡನಗಳೆಂಬ ಬಲಂಗಳಂ ಕೂಡಲಿಟ್ಟು,
ದುಃಖವೆಂಬ ಸಾಮಗ್ರಿಯಂ ಒದಗಿಸಿಕೊಟ್ಟು,
ಕ್ರೋಧವೆಂದು ಮನೆಯಾಳಿಂಗೆ ತಮೋಗುಣಂಗಳೆಂಬ
ಬಲುಗಾರರಂ ಕೂಡಿಕೊಟ್ಟು,
ಈ ಕಾಯಪುರಮಂ ಸಾಧಿಸೆಂದು ಕಳುಹಲು,
ಆ ಸದಾಶಿವನಾಜ್ಞಾಶಕ್ತಿಯಿಂದ ಕಾಲಸುಭೇದಾರನು
ಸಕಲ ಬಲಸಮೇತವಾಗಿ ಬಂದು,
ಕಾಯಪುರಕ್ಕೆ ಸಲುವ ಪ್ರಪಂಚರಾಜ್ಯವಂ ನೆರೆಸೂರೆಮಾಡಲು,
ಕರಣಂಗಳೆಂಬ ಪ್ರಜೆಗಳು ಕೆಟ್ಟೋಡಿಬಂದು,
ಜೀವನೆಂಬ ಅರಸಿಗೆ ಮೊರೆಯಿಡಲು, ಅದಂ ಕೇಳಿ,
ಆಗ್ರಹಪಟ್ಟು, ಕರ್ಮಸೇನಾನಿಗೆ ನಿರೂಪಿಸಲು,
ತತ್ಸೇನಾನಿಯು ಕಾಯಪುರದಲ್ಲಿರ್ಪ ಸಕಲದಳ ಸಮೇತಮಾಗಿ ಬಂದು
ಕಾಲಸುಬೇದಾರನೊಡನೆ ಯುದ್ಧವಂ ಮಾಡಿ, ಜಯಿಸಲಾರದೆ ವಿಮುಖನಾಗಿ
ಉಪಭೋಗಾದಿ ಸಕಲ ಸುಖಂಗಳಂ ಕೋಳುಕೊಟ್ಟು
ಬಂದು ಕೋಟೆಯಂ ಹೊಗಲು,
ಜೀವನು ಪಶ್ಚಾತ್ತಾಪದಿಂ ಸಂಶಯಯುಕ್ತನಾಗಿ ಕಳವಳಿಸುತ್ತಿರಲು,
ಆ ಕಾಲಸುಬೇದಾರನು ಕಾಯಪುರಮಂ ಒತ್ತರಿಸಿ ಮುತ್ತಿಗೆಯಂ ಹಾಕಿ,
ವಿಷಯಮನ್ನೆಯರಂ ಹಸಗೆಡಿಸಿ ಕೊಂದು,
ಕರ್ಮವಂ ನಿಮರ್ೂಲವಂ ಮಾಡಿ,
ಅಂತರಂಗ ಮನೆಯಂ ಕೊಳ್ಳೆಯವಂ ಮಾಡಿ,
ನಾದಬಿಂದುಕಳಾಶಕ್ತಿಯಂ ಸೆರೆವಿಡಿದು,
ಕಾಯಪುರಮಂ ಕಟ್ಟಿಕೊಳ್ಳಲು, ಜೀವನು ಭಯಭ್ರಾಂತನಾಗಿ,
ಆ ಮೂಲಮನೋಭಂಡಾರಮಾತ್ರಮಂ ಕೊಂಡು,
ತತ್ಪುರಮಂ ಬಿಟ್ಟು, ಅನೇಕ ಯಾತನೆಪಟ್ಟು ಓಡಿ,
ಮರಳಿಮರಳಿ ಜೀವನು ಪುರಂಗಳಂ ಸಂಪಾದಿಸಲು,
ತತ್ಸಂಪಾದಿತಪುರಂಗಳಂ ಕಾಲನು ಸಾಧಿಸುತ್ತಿರಲು,
ಜೀವನು ಅಹಂಕಾರವಳಿದು, ಆಸ್ಪದವಿಲ್ಲದೆ,
ತನಗೆ ಕರ್ತೃವಾರೆಂಬುದಂ ಕಾಣದೆ,
ವಿಚಾರಪಟ್ಟು ದುಃಖಿಸುತಿರ್ಪ ಜೀವನಿಗೆ
ಕರುಣದಿಂ ಪರಮಾತ್ಮನು ಜ್ಞಾನದೃಷ್ಟಿಯಂ ಕೊಡಲು,
ತದ್ಬಲದಿಂ ಶಿವನೇ ಕರ್ತೃ ತಾನೇ ಭೃತ್ಯನೆಂಬುದಂ ತಿಳಿದು,
ಶಿವಧ್ಯಾನಪರಾಯಣನಾಗಿ,
ಶಿವಧಾರಣ ಧರ್ಮಪದಮಂ ಪಿಡಿದು ಪಲುಗುತ್ತಿರಲು,
ತದ್ಧರ್ಮಮೇ ಗುರುರೂಪಮಾಗಿ,
ತನ್ನಲ್ಲಿರ್ಪ ಶಿವನಂ ಜೀವಂಗೆ ತೋರಿಸಲು,
ಜೀವಂ ಹಿಗ್ಗಿ, ತಾನು ಸಂಪಾದಿಸಿದ ಪುರವನೆ ಶಿವಪುರಮಂ ಮಾಡಿ,
ಧರ್ಮಾದಿ ಸಕಲವಿಷಯಬಲಂಗಳಂ ಶಿವನ ವಶಮಂ ಮಾಡಿ,
ಆ ಪಟ್ಟಣದೊಳಯಿಂಕೆ ಬಿಜಯಂಗೈಸಿಕೊಂಡು ಹೋಗಿ,
ಅಂತರಂಗದ ಅರಮನೆಯೊಳಗೆ ಜ್ಞಾನಸಿಂಹಾಸನದ ಮೇಲೆ ಕುಳ್ಳಿರಿಸಿ,
ಪಟ್ಟಮಂ ಕಟ್ಟಿ, ತನ್ನ ಸರ್ವಸ್ವಮಂ ಶಿವನಿಗೆ ಸಮರ್ಪಿಸಿ,
ತಾನು ಸತ್ಕರಿಸಿಕೊಂಡುಬಂದ ಮನೋಭಂಡಾರಮಂ ಶಿವನಡಿಯಂ ಸೇರಿಸಲು,
ಸದಾಶಿವನು ಪ್ರಸನ್ನಮುಖನಾಗಿ, ದಯೆಯಿಂ ಪರಿಗ್ರಹಿಸಿ,
ಜೀವನನು ಸಜ್ಜೀವನನಮಾಡಿ ಕೂಡಿಕೊಂಡುದೆ ಲಿಂಗೈಕ್ಯ ಕಾಣಾ |
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./65
ಪಶುಗಳು ಆಹಾರ ಮೈಥುನ ನಿದ್ರೆಗಳನ್ನು
ಕಂಡಲ್ಲಿ, ಬಂದಲ್ಲಿ, ಅನುಭವಿಸುತ್ತಿರ್ಪುದರಿಂ
ಪರಲೋಕದಲ್ಲಿ ಸುಖದುಃಖಾನುಭಗಳಿಲ್ಲದೆ, ಕಾಮಲೇಪವಿಲ್ಲದೆ,
ಮನುಷ್ಯಜನ್ಮದಲ್ಲಿ ಮಾಡಿದ ಕರ್ಮಾನುಭವನಿಮಿತ್ತಮಾಗಿ,
ಮರಳಿ ಮರಳಿ ತಿರ್ಯಗ್ರೂಪಮಾಗಿ ಜನಿಸಿ,
ಆ ಕರ್ಮಾನುಭವವು ತೀರಲು, ಮನುಷ್ಯಜನ್ಮವನೆತ್ತಿ.
ಆಹಾರಾದಿ ಸಕಲಪದಾರ್ಥಂಗಳಂ ದೊರಕಿಲ್ಲನುಭವಿಸದೆ,
ರಾಗ ಲೋಭಯುಕ್ತಗಳಾಗಿ, ತಮ್ಮ ಮಂದಿರಕ್ಕೆ ತಂದು,
ಪುತ್ರ ಮಿತ್ರ ಕಳತ್ರಯುಕ್ತವಾಗನುಭವಿಸಿ,
ಮಿಕ್ಕುದಂ ಕೂಡಲಿಕ್ಕುದರಿಂ ಇಹದಲ್ಲಿ ಮಾಡಿದ
ಕರ್ಮವಂ ಪರದಲ್ಲನುಭವಿಸಬೇಕಾಯಿತ್ತು.
ಆದುದರಿಂದಂದಿಗೆ ದೊರೆತ ಪದಾರ್ಥವನಂದೇ ಅನುಭವಿಸಿ,
ಲೋಭರಾಗಾಭಿಮಾನವಿಲ್ಲದಾತಂಗೆ ಕರ್ಮಲೇಪವಿಲ್ಲ.
ಮನುಷ್ಯರಲ್ಲಿ ಕರ್ಮಲೇಪವಿಲ್ಲದಾತನೇ ವಿರಕ್ತನು, ಆತನೇ ಜೀವನ್ಮುಕ್ತನು.
ಅಂತಪ್ಪ ನಿರ್ಲೇಪಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./66
ಪಶ್ಚಿಮದಲ್ಲಿರ್ಪ ಪೃಥ್ವಿಯೇ ಶರೀರವು,
ಉತ್ತರದಲ್ಲಿರ್ಪ ಜಲವೇ ಅನುಭವವು,
ಪೂರ್ವದಲ್ಲಿರ್ಪ ವಾಯುವೇ ತಾನಾಗಿರ್ಪುದೇ ಜೀವವು,
ದಕ್ಷಿಣದಲ್ಲಿರ್ಪ ಅಗ್ನಿಯೇ ಶರೀರವು,
ಮಧ್ಯದಲ್ಲಿರ್ಪ ಆಕಾಶವೇ ಅನುಭವವು,
ತದಂತನರ್ಿಷ್ಠವಷ್ಟವಪ್ಪ ಆತ್ಮವೇ ನಿಜವಾಗಿರ್ಪುದೇ ಪರಮನು.
ಜೀವರೂಪಮಪ್ಪ ಭಗವತ್ಪೀಠದಲ್ಲಿ
ಪರಮಸ್ವರೂಪಮಪ್ಪ ಲಿಂಗವಂ ಪ್ರತಿಷ್ಠೆಯಂ ಮಾಡಲು,
ತದ್ವಾಯುರೂಪಮಪ್ಪ ಜೀವನು ತೇಜೋಮುಖದಲ್ಲಿ
ಉತ್ತರದಲ್ಲಿರ್ಪ ರಸವಂ ಪರಿಗ್ರಹಿಸಿ, ಪಿಂಡಾಕಾರಮಂ ಮಾಡಿ,
ಪಶ್ಚಿಮದಲ್ಲಿ ಸೃಷ್ಟಿಸಿ, ತತ್ಪೃಥ್ವಿಯಲ್ಲಿ ಶರೀರಾನುಭವಗಳನನುಭವಿಸುತ್ತಿರಲು,
ಜೀವನ ಶರೀರಮಪ್ಪ ಪರಮನ ಶರೀರಮಪ್ಪ ತೇಜಸ್ಸನ್ನೊಳಕೊಂಡು,
ಜೀವಾನುಭವಮಪ್ಪ ಜಲವು ಪರಮಾನುಭವಮಪ್ಪ ಆಕಾಶವನವಗ್ರಹಿಸಿ,
ಜೀವರೂಪಮಪ್ಪ ವಾಯುವು ಪರಮರೂಪಮಪ್ಪ ಆತ್ಮನನೊಳಕೊಂಡು,
ಒಳಗೆ ಶಿವನೂ ಹೊರಗೆ ಜೀವನೂ ಕ್ರೀಡಿಸಿದಲ್ಲಿ,
ತಮೋರೂಪಮಪ್ಪ ಜೀವನು ಸತ್ವರೂಪಮಪ್ಪ
ಪರಮನ ತೇಜಸ್ಸನ್ನವಗ್ರಹಿಸಿ,
ನಿಜಾಂತರ್ರಜೋಮುಖದಿಂ ಬಂಧಿಸಿ ಸೃಷ್ಟಿಸಿದಲ್ಲಿ
ತದ್ರಜೋಮೂರ್ತಿಯೇ ಸೃಷ್ಟಿಕರ್ತೃವಾಯಿತ್ತು.
ಇಂತಪ್ಪ ಸೃಷ್ಟಿ ಸ್ಥಿತಿ ಸಂಹಾರಕರ್ತೃಗಳ ಶಕ್ತಿಮೂಲಮಪ್ಪ
ಜೀವನನಳಲಿಸಿ ಕಾಡುವುದೇ ಭವವು.
ಇಂತಪ್ಪ ಭವದಲ್ಲಿ ಕೋಟಲೆಗೊಳುತ್ತಿರ್ಪ ಜೀವನಿಗೆ
ದಕ್ಷಿಣದಲ್ಲಿರ್ಪ ಗುರುವು ಉತ್ತರಶಕ್ತಿಮುಖದಲ್ಲಿ ಪ್ರಸನ್ನನಾಗಿ,
ಒಳಗಿರ್ಪ ತನ್ನ ನಿಜಲಿಂಗಮೂರ್ತಿಯಂ ಹೊರಗೆ ತಂದು ತೋರಲು,
ಒಳಹೊರಗೆ ಏಕಮಾಯಿತ್ತು.
ನಡುವಿರ್ಪ ಛಾಯೆ ಮಾಯಮಾಯಿತ್ತಾಗಿ,
ಪೃಥ್ವಿಯು ಅಗ್ನಿಯೊಳೈಕ್ಯಮಾಗಿ, ಜಲವಾಕಾಶದೊಳಗೆ ಲೀನಮಾಗಿ,
ಜೀವನು ಆತ್ಮನೊಳಗೆ ಬೆರದು ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./67
ಪುರುಷನ ವೀರ್ಯವೇ ಸ್ತ್ರೀಗೆ ಶಕ್ತಿಯಾಗಿ,
ತದ್ದಾರಣಬಲದಿಂ ಅದೇ ಸಾಕಾರಮಾಗಿ ಸೃಷ್ಟಿಯಾದಲ್ಲಿ,
ಆ ಶಿಶುವನು ರಕ್ಷಿಸುವುದಕ್ಕೆ ಆ ಸತಿಯೇ ಕಾರಣಮಾಗಿರ್ಪಂತೆ,
ಸದಾಶಿವನ ವೀರ್ಯರೂಪಸುವರ್ಣವೇ ವಿಷ್ಣುವಿಗೆ ಶಕ್ತಿಯಾಗಿ,
ತದ್ಧಾರಣಬಲದಿಂದ ತದ್ರೂಪಮಾಗಿರ್ಪ ರಜೋಗುಣಮೂರ್ತಿಯಾದ
ಬ್ರಹ್ಮಾದಿಸಕಲಪಂಚಮಂ ಸೃಷ್ಟಿಸಿ,
ತದ್ರಕ್ಷಣಕ್ಕೆ ತಾನೇ ಕಾರಣಮಾಗಿರ್ಪನು.
ಇಂತಪ್ಪ ಶಿವಶಕ್ತಿಗಳ ಮಹಿಮೆಯಂ ನಾನೆಂಬ
ರಜೋಗುಣವೇ ಮೆರೆಗೊಂಡಿರ್ಪುದು.
ತತ್ಸಂಗಕ್ಕೂ ತಾನೇ ಉಪಾಧಿಕಾರಣಮಾಗಿರ್ಪ ಭೇದಮಂ
ಗುರುಮುಖದಿಂದ ತಿಳಿದು ನೋಡಿದಲ್ಲಿ,
ಅವರಿಬ್ಬರ ಕ್ರೀಡೆಯನ್ನು ನೋಡಿ ನಾನಿಲ್ಲವಾದೆನು,
ನಾನಿಲ್ಲವಾದಲ್ಲಿ ಅವೆರಡೂ ಒಂದೆಯಾಯಿತ್ತು.
ದರ್ಪಣವಿಲ್ಲವಾದಲ್ಲಿಬಿಂಬ ಪ್ರತಿಬಿಂಬಗಳೇಕವಾದಂತೆ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /68
ಪೂರ್ವ ದಕ್ಷಿಣೋತ್ತರದ ಪಶ್ಚಿಮದೇಶಗಳೊಳು
ಆ ಪಶ್ಚಿಮವೇ ಪ್ರಮಥಲೋಕ ;
ಅಲ್ಲಿರ್ಪರೆಲ್ಲಾ ತುರ್ಯಾವಸ್ಥೆಯಲ್ಲಿರ್ಪ ಶಿವಶರಣರು.
ಮುಂದೆ ಮೂರುದಿಕ್ಕುಗಳು ಸ್ವರ್ಗ ಮತ್ರ್ಯ ಪಾತಾಳ
ಸತ್ವರಜಸ್ತಮೋರೂಪಗಳಾದ
ಜಾಗ್ರತ್ಸ್ವಪ್ನ ಸುಷುಪ್ತಿಗಳೊಳಗೆ ಕೂಡಿಹವು.
ಅದಕ್ಕೆ ಬ್ರಹ್ಮ ವಿಷ್ಣು ರುದ್ರಾದಿಗಳಾಗಿ,
ಸೃಷ್ಟಿ ಸ್ಥಿತಿ ಸಂಹಾರಗಳಂ ಮಾಡುತ್ತಿಹರು.
ಪೂರ್ವದಿಗ್ಭರಿತಮಾದ ಮತ್ರ್ಯದಲ್ಲಿಪ್ಪ ಶರೀರಕ್ಕೆ
ಜೀವನು ವಾಯುವ್ಯದಲ್ಲಿ ವಾಯುರೂಪಾಗಿಹನು,
ನೈರುತ್ಯದಲ್ಲಿ ಪಿಶಾಚರೂಪಮಾಗಿಹನು,
ಆಗ್ನೇಯದಲ್ಲಿ ತೇಜೋರೂಪಮಾಗಿಹನು.
ಪ್ರಮಥರಿಗೆ ಪ್ರಾಣವೇ ಶಿವನಾದುದರಿಂದ,
ಶಿವಭಕ್ತರಿಗೆ ಲಿಂಗವೇ ಪ್ರಾಣವಾಯಿತ್ತು.
ಅಂತಪ್ಪ ಈಶ್ವರಸ್ವರೂಪಮಾದ ಲಿಂಗವೇ ಇಷ್ಟ,
ಮಧ್ಯದಲ್ಲಿ ತೋರುತ್ತಿರ್ಪ ಸದಾಶಿವನೇ ಪ್ರಾಣ,
ಊಧ್ರ್ವದಲ್ಲಿರ್ಪ ತೂರ್ಯಾತೀತ ಪರಮತೃಪ್ತಿಸ್ವರೂಪಮಾದ
ಉಪಮಾತೀತನೇ ಭಾವ.
ಕೇವಲನಿಷ್ಕಲಸ್ವರೂಪಮಾದ ಉಪಮಾತೀತಭಾವವು
ಸಕಲನಿಷ್ಕಲಮಾದಸ್ವರೂಪಮಾದ ರುಚ್ಯನುಭವದಿಂ ಭೋಗಲಿಂಗಮಾಗಲು,
ಹೃದಯದಲ್ಲಿರ್ಪ ಸದಾಶಿವನೇ ಪ್ರಾಣ,
ಸಕಲತತ್ವರೂಪಮಾಗಿ ರೂಪಾನುಭವಕಾರಣಮಾಗಿ
ಈಶಾನ್ಯದಿಕ್ಕಿನಲ್ಲಿ ತೋರ್ಪ ಉತ್ತರಾಗ್ರಸ್ಥಿತಮಾದ
ಸಾಕಾರಮೂರ್ತಿಯೇ ಇಷ್ಟ. ಇಂತೀ ಇಷ್ಟಲಿಂಗದ ಕ್ರಿಯಾಪೂಜೆಯಿಂ
ಮತ್ರ್ಯದಲ್ಲಿ ಸೃಷ್ಟಿಹೇತುವಾದ ರುದ್ರನಂ ಜಯಿಸಿ,
ಸೃಷ್ಟಿ ಸ್ಥಿತಿ ಸಂಹಾರಕೋಟಲೆಯಂ ಕಳೆದು,
ತೂರ್ಯಾವಸ್ಥೆಯಲ್ಲಿ ಇಷ್ಟರೂಪಮಾಗಿ ಪ್ರಸನ್ನನಾದ ನಿನ್ನಂ ನೋಡಿ, ಮೋಹಿಸಿ,
ತೂರ್ಯಾತೀತದಲ್ಲಿ ಪ್ರಾಣಲಿಂಗಮಾಗಿರ್ಪ ನಿನ್ನೊಳಗೆ ನಾನು ಕೂಡಿ, ಭೋಗಿಸಿ,
ಭಾವಲಿಂಗಮಾಗಿರ್ಪ ನೀನೇ ನಿಜಸುಖವನಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /69
ಪೂರ್ವಪಶ್ಚಿಮ ದಕ್ಷಿಣೋತ್ತರಗಳಲ್ಲಿ ಕೋಟಲೆಗೊಳುತ್ತಿರ್ಪ
ಸೃಷ್ಟಿ ಸ್ಥಿತಿ ಸಂಹಾರಂಗಳಳಿಗಲಸಿ,
ಪಶ್ಚಿಮದಲ್ಲಿ ಸೇರಿ, ಆಚಾರವಿಡಿದು ಭಕ್ತನಾದಲ್ಲಿ.
ಶಿವನು ಆತನಿಗೆ ಈಶಾನ್ಯದಲ್ಲಿ ಆತ್ಮಭಾವದಿಂ ಪ್ರಕಾಶಿಸುತ್ತಿರ್ಪನು.
ಆತನು ಉತ್ತರದಲ್ಲಿ ಮಹೇಶ್ವರರೂಪದಿಂ
ಗುರುಲಿಂಗವಂ ಪೂಜಿಸಲು,
ಅಗ್ನೇಯದಲ್ಲಿ ಶಿವನು ಸತ್ವಸ್ವರೂಪಮಪ್ಪ ದೇವತಾಮೂರ್ತಿಯಾಗಿ
ಪೂಜಾಯೋಗಯಮಾಗಿಹನು.
ಆತನು ದಕ್ಷಿಣದಲ್ಲಿ ಪ್ರಸಾದರೂಪಿಯಾಗಿ ಶಿವಲಿಂಗಪೂಜೆಯಂ ಮಾಡುವಲ್ಲಿ,
ಶಿವನು ನೈರುತ್ಯದಲ್ಲಿ ಗ್ರಹಸ್ವರೂಪನಾಗಿ, ಆತನ ಮನಸ್ಸಂ ಗ್ರಹಿಸಿ,
ಆತನ ಸುಖದುಃಖಗಳಿಗೆ ಕಾರಣಮಾಗನುಭವಿಸುತ್ತಿಹನು.
ಆತನು ಪೂರ್ವದಿಕ್ಕಿನಲ್ಲಿ ಜಂಗಮಲಿಂಗವಂ ಪೂಜಿಸಿದಲ್ಲಿ,
ವಾಯುವ್ಯದಲ್ಲಿ ಶಿವನು ಆತನಪ್ರಾಣವೇ ತಾನಾಗಿ,
ಆತನನ್ನು ಪ್ರಾಣಲಿಂಗಿಯಂ ಮಾಡಿ,
ಆತನೇ ತಾನೆಂದಭಿಮಾನಿಸಿಹನು.
ಆತನು ಮಧ್ಯದಲ್ಲಿ ಮಂತ್ರಸ್ವರೂಪಮಾದ ಪ್ರಸಾದಲಿಂಗವಂ ಪೂಜಿಸುವಲ್ಲಿ.
ಹೃದಯಮಧ್ಯದಲ್ಲಿ ಪ್ರಸನ್ನನಾಗಿ ಪ್ರಕಾಶಿಸಿ
ತಾನೇ ಪತಿ ಆ ಶರಣನೇ ಸತಿಯಾಗಿ,
ಅಂತರಂಗದ ಭೋಗದಲ್ಲಿ ಆನಂದಿಸುತ್ತಿಹನು.
ಆತನು ಪಂಚಲಿಂಗಂಗಳಂ ಪೂಜಿಸುತ್ತಿರ್ಪಲ್ಲಿ,
ತಾನು ಸರ್ವತೋಮುಖನಾಗಿ ಹೃದಯದಲ್ಲಿ ಮಹಾಲಿಂಗಮೆನಿಸಿ,
ಆತನೇ ತಾನಾಗಿ ಸಮರಸಭಾವದಲ್ಲಿ ಐಕ್ಯನಂ ಮಾಡಿ, ತಾನು ತಾನೇ ಆಗಿರ್ಪ ಈ ಷಟ್ಸ್ಥಲಲಿಂಗಭೋಗವೆನಗೆ
ಸಾಧ್ಯಮಪ್ಪಂತೆ ಮಾಡಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./70
ಪೂರ್ವಾದಿಯಾಗಿ ವಾಯವ್ಯಪರ್ಯಂತವೂ ಸ್ವರ್ಗವು,
ಆಗ್ನ್ಯಾದಿಯಾಗಿ ವರುಣದಿಕ್ಪರ್ಯಂತವೂ ಪಾತಾಳವು,
ಅದೇ ಉತ್ತರ, ಇದೇ ದಕ್ಷಿಣವೆನಿಸಿರ್ಪುದು.
ಮಧ್ಯದೊಳಿರ್ಪ ಮೇರುವಂ ಪರಿವೇಷ್ಟಿಸಿರ್ಪ
ಭೂಮಿಯೇ ಮತ್ರ್ಯಲೋಕವು.
ಇಂತಪ್ಪ ಸ್ವರ್ಗಪಾತಾಳಂಗಳಲ್ಲಿಂದ್ರ ಯಮರು ಕರ್ತೃಗಳಾಗಿ
ಸುಖದುಃಖಂಗಳಿಗೆ ಕಾರಣಮಾಗಿಹರು.
ಮತ್ರ್ಯದಲ್ಲಿ ಜೀವರೇ ಕರ್ತೃಗಳಾಗಿ ಸ್ವತಂತ್ರರಾಗಿ ಕರ್ಮಗಳಂ ಮಾಡಿ
ಪುಣ್ಯಪಾಪಂಗಳಂ ಸಂಪಾದಿಸಿ,
ಉತ್ತರದಕ್ಷಿಣಗಳಲ್ಲಿ ಸುಖದುಃಖಗಳನನುಭವಿಸುತ್ತಿರ್ಪರು
ಅದೆಂತೆಂದೊಡೆ : ಈ ಮತ್ರ್ಯದಲ್ಲಿರ್ಪ ಅನೇಕ ಲಕ್ಷ ಭೇದವಡೆದ ಜೀವಜಾಲಂಗಳೊಳಗೆ
ಮನುಷ್ಯಜನ್ಮವು ಸಂಪಾದ್ಯಕರ್ಮಕಾರಣಮಾಗಿರ್ಪುದು.
ಸತ್ಕರ್ಮಸವೆದ ಹೀನವೂ ದುಷ್ಕರ್ಮಸವೆದ ಶ್ರೇಷ್ಠವೂ ಮನುಷ್ಯಶರೀರಮಪ್ಪುದು.
ಇಂತಪ್ಪ ಸಂಧಿಕಾಲದಲ್ಲತಿಸೂಕ್ಷ್ಮವಾಗಿರ್ಪ ಮನುಷ್ಯಜನ್ಮದಲ್ಲಿ
ಜೀವನು ಸ್ವತಂತ್ರನಾಗಿರುತ್ತಿರಲು,
ಶತ್ರುರೂಪರಾದ ಯಮದೂತರೂ ಮಿತ್ರರೂಪರಾದ ದೇವದೂತರೂ
ದಕ್ಷಿಣೋತ್ತರಪಾಶ್ರ್ವಂಗಳಲ್ಲಿ ಒಬ್ಬೊಬ್ಬರಿಗಿಬ್ಬಿಬ್ಬರಾಗಿದ್ದುಕೊಂಡು,
ಜೀವರು ಮಾಡಿದ ಸತ್ಕರ್ಮ ದುಷ್ಕರ್ಮಗಳಿಗನುಭವನೀಯ
ಕಾರಣರಾಗಿರಲೀ ಸ್ವತಂತ್ರರೂಪಮಾದ ಮನುಷ್ಯಶರೀರವು
ಪೂರ್ವಕರ್ಮದ ಕೂಡ ಲಯಮಾದಲ್ಲಿ,
ಈ ಮನುಷ್ಯಜನ್ಮದಲ್ಲಿ ಮಾಡಿದ ಸತ್ಕರ್ಮ ದುಷ್ಕರ್ಮಂಗಳು
ಅನುಭವಕಾರಣವಾದುದರಿಂ ಆ ಸತ್ಕರ್ಮಂಗಳಿಂ
ಕೂಡಿ ಶರೀರವಂ ಬಿಟ್ಟಲ್ಲಿ,
ಯಾವ ಕರ್ಮವು ಸ್ವಲ್ಪವೋ ಆ ಕರ್ಮವೇ ಜೀವನಿಗೆ ಮುಂದಾಗಿ,
ಅನುಭವಶರೀರವಾಗಿ, ಜೀವನು ಆ ಶರೀರವಂ ಪ್ರವೇಶಿಸಿದಲ್ಲಿ
ಅದು ದೇವಶರೀರಮಾದರೆ,
ಅದನ್ನು ದೇವದೂತರು ಅಪ್ರದಕ್ಷಿಣಮಾಗಿ ದೇವಲೋಕಕ್ಕೆ ಕೊಂಡುಹೋಗಲು,
ಆ ಸುಖಾನುಭವದಿಂದ ಆ ಶರೀರವು ಸಮೆದು,
ದುಷ್ಕರ್ಮಮಯವಾದ ಪ್ರೇತಶರೀರವನಾಂತಲ್ಲಿ
ವಾಯವ್ಯಕ್ಕೆ ಕೊಂಡುಹೋಗಿ ವರುಣದಿಕ್ಕಿನಲ್ಲಿ
ಮುಂದಾಗಿಬಂದು ಕಾದಿರ್ಪ ಯಮದೂತರ ವಶಕ್ಕೆ ಕೊಟ್ಟಲ್ಲಿ
ಆ ದುಷ್ಕರ್ಮವು ತೀರುವವರೆಗೂ ಯಮಯಾತನೆಗಳನನುಭವಿಸಿ,
ಆ ದುಷ್ಕರ್ಮಶೇಷದಿಂದ ಮತ್ರ್ಯಲೋಕದಲ್ಲಿ
ಹೀನಜನ್ಮಗಳನೆತ್ತುತ್ತಾ ಇಹನು.
ಪ್ರೇತಶರೀರವಂ ಮುಂದಾಗಿ ಪ್ರವೇಶಿಸಿದಲ್ಲಿ
ಯಮದೂತರು ಪ್ರದಕ್ಷಿಣಮಾರ್ಗದಲ್ಲಿ ಯಮಲೋಕಕ್ಕೆ ಕೊಂಡುಹೋಗಲು,
ಯಾತನೆಗಳಿಂದಾಶರೀರವು ಸವೆದು,
ಸತ್ಕರ್ಮಮಯಮಾದ ದೇವಶರೀರವನಾಂತಲ್ಲಿ
ವರುಣದಿಕ್ಕಿಗೆ ಕೊಂಡುಹೋಗಿ,
ಮುಂದಾಗಿ ಬಂದು ಕಾದಿರ್ಪ ದೇವದೂತನ ವಶಕ್ಕೆ ಕೊಟ್ಟಲ್ಲಿ
ಆ ಶರೀರವು ದೇವಲೋಕವಂ ಸೇರಿ ಸಕಲ ಸುಖಂಗಳನನುಭವಿಸಿ,
ಮತ್ರ್ಯಲೋಕದೊಳಗೆ ದಿವ್ಯಶರೀರಂಗಳನೆತ್ತುತ್ತಿಹನು.
ಇವೆರಡೂ ತೀರದಲ್ಲಿ ಕರ್ಮಭೂಮಿಯಲ್ಲಿ ಮನುಷ್ಯಶರೀರವನೆತ್ತುತ್ತಲೇ
ದೇವದೂತ ಯಮದೂತರು ಬಂದು ಕಾವುತ್ತಿಹರು.
ಅಪ್ರದಕ್ಷಿಣನಿಗೆ ಸತ್ಕರ್ಮವೇ ಸೂಕ್ಷ್ಮಶರೀರಮಾಗಿ,
ದುಷ್ಕರ್ಮವೇ ಕಾರಣಶರೀರಮಾಗಿಹುದು.
ಪ್ರದಕ್ಷಿಣನಿಗೆ ದುಷ್ಕರ್ಮವೇ ಸೂಕ್ಷ್ಮಶರೀರಮಾಗಿಹುದು.
ಅನುಭವಿಸಿಬಿಟ್ಚುದೇ ಕಾರಣವು, ಅನುಭವಿಸುವುದೇ ಸ್ಥೂಲವು,
ಅನುಭವಿಸತಕ್ಕುದೇ ಸೂಕ್ಷ್ಮವು.
ಇಂತು ಒಂದಕ್ಕೊಂದು ಸ್ಥೂಲ ಸೂಕ್ಷ್ಮ ಕಾರಣಂಗಳಾಗಿ,
ಭೂತಭವಿಷ್ಯದ್ವರ್ತಮಾನ ಕಾಲಂಗಳೊಳಗೆ ಕೂಡಿ,
ಸ್ವರ್ಗ ಮತ್ರ್ಯ ಪಾತಾಳಗಳಲ್ಲಿ ಜೀವನಿಗೆ ಭವರೂಪಮಾಗಿರ್ಪವು.
ಇಂತು ಪ್ರದಕ್ಷಿಣಾಪ್ರದಕ್ಷಿಣಮಾಗಿ
ದೇವಯಮದೂತರೊಡನೆ ಕೂಡಿ ತಿರುಗುತ್ತಿರ್ಪ ಜೀವಗಳಿಗೂ
ಸ್ವರ್ಗ ನರಕಂಗಳಲ್ಲಿ ಸುಖದುಃಖಗಳನನುಭವಿಸುತ್ತಿರ್ಪ ಜೀವಗಳಿಗೂ
ಮತ್ರ್ಯದಲ್ಲಿ ಸೃಷ್ಟಿ ಸ್ಥಿತಿ ಸಂಹಾರಂಗಳಂ ಹೊಂದುತ್ತಿರ್ಪ ಜೀವಗಳಿಗೂ
ನಿಲುಕಡೆಯಿಲ್ಲದೆ ಇರುವುದು.
ಇಂತಪ್ಪ ಸ್ವರ್ಗ ಮತ್ರ್ಯ ಪಾತಾಳಂಗಳಿಗೆ
ಉತ್ತರಾಯಣವಾಗಿ ದಿನರೂಪಮಾಗಿ,
ದಕ್ಷಿಣಾಯನಮಾಗಿ ಆಕಾಶಮಾರ್ಗದಲ್ಲಿ ನಕ್ಷತ್ರಯುಕ್ತಮಾಗಿ ಭ್ರಮಿಸುತ್ತಾ ,
ಆಯಾ ಲೋಕಂಗಳಿಗೆ ಆಯಾ ಕಾಲಂಗಳಂ ಸೃಷ್ಟಿಸುತ್ತಿರ್ಪನೇ ಸೂರ್ಯನು.
ಇಂತು ಪ್ರಥಮದಲ್ಲಿ ಸುಖವೂ,
ಅಂತ್ಯದಲ್ಲಿ ದುಃಖವೂ ಉಳ್ಳ ಅಪ್ರದಕ್ಷಿಣವೇ ಶಕ್ತಿಯು.
ಪ್ರಥಮದಲ್ಲಿ ದುಃಖವೂ ಅಂತ್ಯದಲ್ಲಿ ಸುಖವೂ ಉಳ್ಳ ಪ್ರದಕ್ಷಿಣವೇ ಶಿವನು.
ಇಂತಪ್ಪ ಶಿವಶಕ್ತ್ಯಾತ್ಮಕವೇ ಸಕಲ ಪ್ರಪಂಚವು.
ಅಂತಪ್ಪ ಪ್ರಥಮಾನಂದವುಳ್ಳ ಶಕ್ತಿರೂಪಮಾದ
ಪ್ರಪಂಚಸುಖವನ್ನು ಶಿವನಿಗರ್ಪಿಸಿ,
ಅತ್ಯಾನಂದಜನಕಂಗಳಾದ ವ್ರತ ಪೂಜಾದಿಗಳನ್ನಾಚರಿಸುತ್ತಾ,
ಯಮದೂತ ದೇವದೂತರ ಬಲೆಗೆ ಸಿಕ್ಕದೆ,
ಮಧ್ಯದಲ್ಲಿರ್ಪ ಸೂರ್ಯಮಂಡಲವಂ ಭೇದಿಸಿ ತನ್ಮಾರ್ಗದಲ್ಲಿ ಗಮಿಸಿ,
ತದುಪರಿ ಪ್ರಕಾಶಿಸುತ್ತಿರ್ಪ ಮುಕ್ತಿಸತಿಯಸಂಗದಲ್ಲಿ
ಪರವಶಮಾಗಿರ್ಪುದೇ ಮೋಕ್ಷವು ; ಶಿವನೇ ತಾನಪ್ಪನು.
ಇಂತಪ್ಪ ಸತ್ಕರ್ಮಂಗಳನರಿದರ್ಪಿಸುತ್ತಾ ಚರಿಸುವಂತೆನ್ನಂ ಮಾಡಿ ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./71
ಪೃಥಿವ್ಯಪ್ತೇಜೋವಾಯ್ವಾಕಾಶಂಗಳಲ್ಲಿ
ಪೃಥಿವ್ಯಪ್ತೇಜಸ್ಸುಗಳು ಸಾಕರಾಗಳೂ ವಾಯ್ವಾಕಾಶಂಗಳು ನಿರಾಕಾರಗಳೂ ಆಗಿ,
ಸ್ಥೂಲ ಸೂಕ್ಷ್ಮಕಾರಣಂಗಳಾಗಿಹವು.
ಪೃಥ್ವಿಯಲ್ಲೈದು ಗುಣಗಳೂ ಜಲದಲ್ಲಿ ನಾಲ್ಕು ಗುಣಗಳೂ
ಅಗ್ನಿಯಲ್ಲಿ ಮೂರು ಗುಣಗಳೂ ವಾಯುವಿನಲ್ಲಿರಡು ಗುಣಗಳೂ ಇರ್ಪವು.
ಆಕಾಶದಲ್ಲೊಂದು ಗುಣವಿರ್ಪುದು.
ಆತ್ಮನು ನಿರ್ಗುಣಮಾಗಿ ಸಕಲಗುಣಂಗಳಿಗೂ ತಾನು ಕಾರಣಮಾಗಿಹನು.
ಅದೆಂತೆಂದೊಡೆ :
ನಿರ್ಗುಣಮಾದ ಬಿಂದುಪದಾರ್ಥವು ಸಗುಣರೂಪಮಾದ ಮನುಷ್ಯರಿಗೆ
ತಾನು ಕಾರಣಮಾಗಿರ್ಪಂದದಿ ಆತ್ಮನಿಹನು.
ಪಂಚವರ್ಣಂಗಳು ಸತ್ವರಜಸ್ತಮೋಗುಣಂಗಳು.
ನಾದ ಬಿಂದು ಕಲೆಗಳು ಬಾಲ್ಯ ಯೌವನ ಕೌಮಾರ ವಾರ್ಧಕ್ಯಂಗಳು.
ಇವೆಲ್ಲವೂ ಪ್ರಪಂಚಕ್ಕೆ ಗುಣಂಗಳಲ್ಲದೆ ಆತ್ಮನ ಗುಣವಲ್ಲ.
ಅಂತಪ್ಪ ಆತ್ಮನೇ ಶಿವನು, ಆಕಾಶವೇ ವಿಷ್ಣು, ವಾಯುವೇ ಬ್ರಹ್ಮನು.
ಸಾಕಾರದಲ್ಲಿ ಅಗ್ನಿಯೇ ರುದ್ರನು, ಜಲವೇ ವಿಷ್ಣು. ಪೃಥ್ವಿಯೇ ಬ್ರಹ್ಮನು.
ಇವು ಒಂದಕ್ಕೊಂದು ಸೃಷ್ಟಿ ಸ್ಥಿತಿ ಸಂಹಾರಹೇತುಗಳಾಗಿ,
ಎಲ್ಲವೂ ಆತ್ಮನಲ್ಲಿ ಲಯವನೈದುತ್ತಿಹವು.
ಅಂತಪ್ಪ ಆತ್ಮಸ್ವರೂಪಮೆತೆಂದೊಡೆ : ದೃಷ್ಟಿಗೋಚರಮಲ್ಲ, ಒಂದು ವಸ್ತುವಿನಲ್ಲಿ ಸಾಮ್ಯಗೋಚರಮಲ್ಲ.
ಅದೆಂತೆಂದೊಡೆ : ವಾಯ್ವಾಕಾಶಾತ್ಮಸ್ವರೂಪಿಗಳಾದ ತ್ರಿಮೂರ್ತಿಗಳು.
ವಾಯುರೂಪಮಾದ ಬ್ರಹ್ಮನೇ ಲಕ್ಷ್ಮಿಯು,
ಆಕಾಶರೂಪಮಾದ ವಿಷ್ಣುವೇ ಮಹಾದೇವಿಯು,
ಆತ್ಮರೂಪಮಾದ ಶಿವನೇ ಶಾರದೆಯು.
ವಾಯುರೂಪಮಾದ ಬ್ರಹ್ಮನು ಆತ್ಮರೂಪಮಾದ ಶಾರದೆಯನ್ನು ಕೂಡಿಹನು.
ಆಕಾಶರೂಪಮಾದ ವಿಷ್ಣುವು ವಾಯುರೂಪಮಾದ ಲಕ್ಷ್ಮಿಯಂ ಕೂಡಿಹನು.
ಆತ್ಮರೂಪಮಾದ ಶಿವನು ಆಕಾಶರೂಪಮಾದ ಮಹಾದೇವಿಯಂ ಕೂಡಿಹನು.
ಆತ್ಮನೇ ವಿವೇಕವೆಂದು ತಿಳಿವುದು,
ವಿವೇಕವೇ ಸತ್ಯಜ್ಞಾನಾಂದಸ್ವರೂಪು,
ವಿವೇಕದಿಂದ ಸಕಲಪ್ರಪಂಚವೆಲ್ಲಾ ಮಿಥ್ಯೆಯಾಗಿಹುದು.
ಅಂತಪ್ಪ ಸಕಲಪ್ರಪಂಚಮೆಲ್ಲವೂ ಮಿಥ್ಯವೆಂದು ತಿಳಿದು
ಆ ಪ್ರಪಂಚದಲ್ಲಿ ಹೊಂದಿರ್ಪ ವಿವೇಕವೇ ಮುಕ್ತಿಯು, ಆಮುಕ್ತಿಯೇ ಶಿವನು.
ಅಂತಪ್ಪ ವಿವೇಕದಲ್ಲಿನಾಹಂಭಾವವಡಗಿ,
ಅಂತಪ್ಪ ವಿವೇಕವೇ ಮಹಾಲಿಂಗವು,
ಅಂತಪ್ಪ ವಿವೇಕಮಿರ್ದಲ್ಲಿ ಪಾಪಗಳು ಹೊಂದದೇ ಇಹವು.
ಅದುಕಾರಣ,
ತಾನು ತಾನಾಗಿರ್ಪ ನಿಜಾನಂದಸುಖದೊಳೋಲಾಡುತಿರ್ಪಂತೆ ಮಾಡಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /72
ಪೃಥಿವ್ಯಪ್ತೇಜೋವಾಯ್ವಾಕಾಶಂಗಳೈದು
ಶರೀರಮಹದಹಂಕಾರ ಪ್ರಕೃತಿಗಳೊಳಗೆ ಸೇರಲು,
ಮಹತ್ತೇ ಜೀವ ಪರಮರಾಗಿ, ಪ್ರಕೃತಿಯೇ ಮನ ಬುದ್ಧಿಗಳಾಗಿ,
ಅಹಂಕಾರವೇ ಚಿದಹಂಕಾರವಾಗಲು,
ಮನ ಬುದ್ಧಿ ಚಿತ್ತಹಂಕಾರಂಗಳೇ ಅಂತಃಕರಣಗಳು,
ತದನುಭವಕರ್ತನೇ ಜೀವನು,
ತತ್ಸಾಕ್ಷಿಕಾರಣಮಾಗಿರ್ಪನೇ ಪರಮನು.
ಮನ ಬುದ್ಧಿಗಳು ಉತ್ಕೃಷ್ಟ ಕಾರ್ಯವನೆಸಗುತ್ತಿರ್ಪುದರಿಂ ಅಹಂಕಾರಮೆನಿಸಿತ್ತು.
ಜೀವಪರಮರೆಲ್ಲಕ್ಕೂ ತಾವೇ ಕಾರಣರಾಗಿ,
ತಮಗಿಂತಲೂ ದೊಡ್ಡಿತ್ತಾದ ವಸ್ತುಮತ್ತೊಂದಿಲ್ಲದಿರ್ಪುದರಿಂ ಮಹತ್ತಾಗಿತ್ತು.
ಆ ಮಹತ್ತೇ ಆತ್ಮನು, ಆದುದರಿಂ ಜೀವಾತ್ಮನೇ ಶಿವನು,
ಮನ ಬುದ್ಧಿಗಳೇ ವಿಷ್ಣುವು, ಚಿದಹಂಕಾರಗಳೇ ಬ್ರಹ್ಮನು.
ಆ ಚಿದಹಂಕಾರಗಳೆರಡೂ ಮನ ಬುದ್ಧಿಗಳಿಗೆ ಶಕ್ತಿಯಾಗಿಹವು,
ಆ ಮನಬುದ್ಧಿಗಳೆರಡೂ ಜೀವಪರಮರಿಗೆ ಶಕ್ತಿಯಾಗಿಹವು,
ಆ ಜೀವಪರಮರೇ ಚಿದಹಂಕರಾಗಳಿಗೆ ಶಕ್ತಿಯಾಗಿಹವು,
ಜೀವನೇ ಸಗುಣ, ಪರಮನೇ ನಿರ್ಗುಣ,
ಬುದ್ಧಿಯೇ ಸುಗುಣ, ಮನವೇ ನಿರ್ಗುಣ,
ಜ್ಞಾನವೇ ಸಗುಣ, ಅಹಂಕಾರವೇ ನಿರ್ಗುಣ,
ನಿರ್ಗುಣಂಗಳಲ್ಲಿ ಸಗುಣಂಗಳು ಸೃಷ್ಟಿ ಸ್ಥಿತಿ ಸಂಹಾರಗಳಂ ಹೊಂದುತ್ತಿರ್ಪವು,
ಸಗುಣ ನಿರ್ಗುಣಗಳಿಂ ಸತ್ಕೃತ್ಯ ದುಷ್ಕೃತ್ಯರೂಪಂಗಳಾಗಿಹವು.
ಆ ದುಷ್ಕೃತ್ಯವು ನಿಜವಂ ಹೊಂದದೇ ಇಹುದು.
ಸತ್ಕೃತ್ಯವು ನಿಜವಂ ಹೊಂದಿ ಹೊಂದದೇ ಇಹುದು.
ದುಷ್ಕೃತ್ಯದಿಂ ನಿಜ ಸಾಧ್ಯಮಲ್ಲ. ಸತ್ಕೃತ್ಯದಿಂ ನಿಜವು ಸಾಧ್ಯಮಪ್ಪದು,
ಸಾಧ್ಯಮಾದಲ್ಲಿ ನಿಜವೇ ತಾನಾಗಿಹುದು.
ಅಂತಃಕರಣಂಗಳು ಜೀವಪರಮರ ಭೇದಾಭೇದಂಗಳಿಗೆ
ತಾವು ಸಾಧನಭೂತಂಗಳಾಗಿಹವು;
ಸಾಧ್ಯವಾದಲ್ಲಿ ಸಾಧನದ್ರವ್ಯಂಗಳು ಅಪ್ರಯೋಜಕವಾಗಿರ್ಪಂದದಿ
ಜೀವಪರಮರೇಕಮಾದಲ್ಲಿ ಅಂತಃಕರಣದೋಷಂಗಳು
ಅಪ್ರಯೋಜಕಂಗಳಾಗಿ ಮಿಥ್ಯಾಭೂತಂಗಳಾಗಿಹವು.
ಅಂತಪ್ಪ ಜೀವಪರಮರಸಂಗವೇ ಮೋಕ್ಷವು.
ಅಂತಪ್ಪ ನಿಜಾನಂದ ನಿರ್ವಾಣಸುಖವೆನಗೆ ಸಾಧ್ಯಮಪ್ಪಂತೆ ಮಾಡಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./73
ಪೃಥ್ವಿಗೆ ಮೈಯೆಲ್ಲಾ ಯೋನಿ, ಜಲಕ್ಕೆ ಶರೀರವೆಲ್ಲಾ ಕಾಲು,
ಅಗ್ನಿಗೆ ಶರೀರವೆಲ್ಲಾ ಬಾಯಿ, ವಾಯುವಿಗೆ ತನುವೆಲ್ಲಾ ಮೂಗು,
ಆಕಾಶಕ್ಕೆ ಕಾಯವೆಲ್ಲಾ ಹೊಟ್ಟೆ, ಆತ್ಮನಿಗೆ ಮೈಯೆಲ್ಲಾ ಕಣ್ಣು,
ಪೃಥ್ವಿಗೆ ಘ್ರಾಣವೇ ಇಂದ್ರಿಯ, ಗಂಧವೇ ವಿಷಯ.
ಜಲಕ್ಕೆ ಜಿಹ್ವೆಯೇ ಇಂದ್ರಿಯ, ರುಚಿಯೇ ವಿಷಯ.
ಅಗ್ನಿಗೆ ನೇತ್ರವೇ ಇಂದ್ರಿಯ, ರೂಪೇ ವಿಷಯ.
ವಾಯುವಿಗೆ ತ್ವಕ್ಕೇ ಇಂದ್ರಿಯ, ಸ್ಪರ್ಶನವೇ ವಿಷಯ.
ಆಕಾಶಕ್ಕೆ ಶ್ರೋತ್ರವೇ ಇಂದ್ರಿಯ, ಶಬ್ದವೇ ವಿಷಯ.
ಆತ್ಮನಿಗೆ ಮನಸ್ಸೇ ಇಂದ್ರಿಯ, ಭಾವವೇ ವಿಷಯ.
ಪೃಥ್ವಿಯಲ್ಲಿರ್ಪ ಗಂಧಕ್ಕೆ ಘ್ರಾಣೇಂದ್ರಿಯವೇ ಕಾರಣಮಾಯಿತ್ತು.
ಜಲದೊಳಗಿರ್ಪ ರುಚಿಗೆ ಜಿಹ್ವೇಂದ್ರಿಯದಲ್ಲಿರ್ಪ ಅಗ್ನಿಯೇ ಕಾರಣಮಾಯಿತ್ತು
ಅಗ್ನಿಯಲ್ಲಿರ್ಪ ರೂಪಿಗೆ ನೇತ್ರೇಂದ್ರಿಯದಲ್ಲಿರ್ಪ ಜಲಮೆ ಕಾರಣಮಾಯಿತ್ತು.
ವಾಯುವಿನೊಳಗಿರ್ಪ ಸ್ಪರುಶನಕ್ಕೆ
ತ್ವಗೀಂದ್ರಿಯದಲ್ಲಿರ್ಪ ಪೃಥ್ವಿಯೇ ಕಾರಣಮಾಯಿತ್ತು.
ಆಕಾಶದಲ್ಲಿರ್ಪ ಶಬ್ದಕ್ಕೆ ಶ್ರೋತ್ರೇಂದ್ರಿಯದಲ್ಲಿರ್ಪ ಆತ್ಮನೇ
ಕಾರಣಮಾಯಿತ್ತು.
ಆತ್ಮನಲ್ಲಿರ್ಪ ಭಾವಕ್ಕೆ ಹೃದಯೇಂದ್ರಿಯದಲ್ಲಿರ್ಪ
ಆಕಾಶಮೇ ಕಾರಣಮಾಯಿತ್ತು.
ಇಂತಪ್ಪ ಭಾವದಲ್ಲಿ ಜ್ಞಾನಶಕ್ತಿ ಹುಟ್ಟಲು, ಮನವೇ ಮಹಾಲಿಂಗವಾಯಿತ್ತು.
ಶಬ್ದದಲ್ಲಿ ಪರಾಶಕ್ತಿ ಹುಟ್ಟಲು, ಶ್ರೋತ್ರವೇ ಪ್ರಸಾದಲಿಂಗಮಾಯಿತ್ತು.
ಸ್ಪರ್ಶನದಲ್ಲಿ ಆದಿಶಕ್ತಿ ಹುಟ್ಟಲು, ಘ್ರಾಣವೇ ಆಚಾರಲಿಂಗಮಾಯಿತ್ತು.
ಗ್ರಹಿಸುವುದೇ ಜ್ಞಾನೇಂದ್ರಿಯಮಾಯಿತ್ತು ;
ಬಿಡುವುದೇ ಕರ್ಮೆಂದ್ರಿಯಮಾಯಿತ್ತು.
ಇಂತಪ್ಪ ಇಂದ್ರಿಯಂಗಳೆಲ್ಲಾ ಲಿಂಗಸ್ವರೂಪಗಳಾಗಿ,
ವಿಷಯಂಗಳೇ ಶಕ್ತಿಸ್ವರೂಪಮಾದ ಮಹಾಪುರುಷನಸ್ವರೂಪಿನಲ್ಲಿ
ಇಷ್ಟಲಿಂಗವು ನೆಲೆಗೊಂಡಲ್ಲಿ, ಆ ಲಿಂಗದ ಮೋಹವೇ ಪ್ರಾಣಲಿಂಗಮಾಯಿತ್ತು,
ಆ ಲಿಂಗದ ವಿಚಾರವೇ ಭಾವಲಿಂಗಮಾಯಿತ್ತು.
ಭೂತಂಗಳೇ ಲಿಂಗಕ್ಕೆ ಅಂತರಂಗಂಗಳಾದವು.
ಅಲ್ಲಲ್ಲಿರ್ಪ ಲಿಂಗಂಗಳೇ ಭೂತಂಗಳಿಗೆ ಚೈತನ್ಯಮಾದ ಪ್ರಾಣಂಗಳಾಗಿ,
ಆ ಲಿಂಗಂಗಳೇ ಶರಣನಂಗಂಗಳಾಗಿ, ಲಿಂಗಂಗಳೇ ಶಿವನಾಗಿ,
ಶರಣನೇ ಸತಿ ಲಿಂಗವೇ ಪತಿಯಾಗಿ,
ಇಬ್ಬರ ಸಮರಸಭಾವವೇ ಪರಮಾನಂದರತಿಸುಖಮಾಗಿ,
ಆ ಸುಖದಲ್ಲಿ ಎರಡಂ ಏಕಮಾಗಿ ಭೇದದೋರದೆ
ನಿಶ್ಶಬ್ದಬ್ರಹ್ಮವಾಗಿರ್ಪುದೆ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./74
ಪೃಥ್ವಿಯನನುಸರಿಸಿರ್ಪ ಚಿತ್ತೇ ಪಶ್ಚಿಮ;
ಜಲವನನುಸರಿಸಿರ್ಪ ಬುದ್ಧಿಯೇ ಉತ್ತರ;
ವಾಯುವನನುಸರಿಸಿರ್ಪ ಮನವೇ ಪೂರ್ವ;
ಅಗ್ನಿಯನನುಸರಿಸಿರ್ಪಹಂಕಾರವೇ ದಕ್ಷಿಣ.
ಅಂತಪ್ಪ ಅಹಂಕಾರದಲ್ಲಿ ಧರ್ಮ ಪುಟ್ಟಿ,
ವಾಯವ್ಯವ ಸೇರಿತು.
ಬುದ್ಧಿಯಲ್ಲಿ ಅರ್ಥಪುಟ್ಟಿ, ಆಗ್ನೇಯವಸೇರಿತು.
ಮನದಲ್ಲಿ ಕಾಮಪುಟ್ಟಿ ನೈರುತ್ಯವ ಸೇರಿತು.
ಚಿತ್ತದಲ್ಲಿ ಮೋಕ್ಷಪುಟ್ಟಿ ಈಶಾನ್ಯವ ಸೇರಿತು.
ಅಹಂಕಾರಜನ್ಯ ಧರ್ಮವೇ
ವಾಯವ್ಯದಲ್ಲಿ ವಾಯುರೂಪವಾದ ಜೀವಮಾಯಿತ್ತು.
ಬುದ್ಧಿಜನ್ಯಮಾದ ಆಗ್ನೇಯದಲ್ಲಿ
ತೇಜೋರೂಪಮಾದ ಸತ್ವಗುಣವಾಯಿತ್ತು.
ಚಿತ್ತ ಜನ್ಯವಾದ ಮೋಕ್ಷವೇ ಈಶಾನ್ಯದಲ್ಲಿ
ಆತ್ಮರೂಪವಾದ ಶಿವನಾಯಿತ್ತು.
ಮನೋಜನ್ಯಮಾದ ಕಾಮವೆ
ನೈರುತ್ಯದಲ್ಲಿ ಘೋರರೂಪಮಾದ ತಮವಾಯಿತ್ತು.
ವಾಯವ್ಯದಲ್ಲಿ ಇರ್ಪ ಜೀವನೇ ಜಂಗಮರೂಪು;
ಈಶಾನ್ಯದಲ್ಲಿರ್ಪ ಶಿವನೆ ಸ್ಥಾವರರೂಪು.
ಆ ಸ್ಥಾವರರೂಪಮಾದ ಶಿವನಿಗೆ
ನೈರುತ್ಯದಲ್ಲಿರ್ಪ ತಮಸ್ಸೇ ಗುಣ.
ವಾಯುರೂಪಮಾದ ಜೀವನಿಗೆ
ಆಗ್ನೇಯದಲ್ಲಿರ್ಪ ತೇಜಸ್ಸೇ ಗುಣ.
ತೇಜಸ್ತಿಮಿರಂಗಳೆ ಗುಣಂಗಳಾಗಿ
ಜಂಗಮ ಸ್ಥಾವರಂಗಳೆ ಜೀವಪರಮರಾದರು.
ಸ್ಥಾವರಕ್ಕೆ ಸತ್ವವೆ ಪವಿತ್ರ ರೂಪು;
ಜಂಗಮಕ್ಕೆ ತಮಸ್ಸೇ ಅಪವಿತ್ರರೂಪು.
ಆ ಪರಮನು ತಮಸ್ಸಿನಲ್ಲಿ ಕೂಡಿ ಜೀವನಾಗುತ್ತಿರ್ಪನು;
ಆ ಜೀವನು ಸತ್ವದಲ್ಲಿ ಕೂಡಿ ಪರಮನಾಗುತ್ತಿರ್ಪನು.
ಇಂತಪ್ಪ ಅಷ್ಟದಳ ಕಣರ್ಿಕೆಯಲ್ಲಿ
ಪೂರ್ವದಳದಲ್ಲಿ ಮನೋಗತಮಾಗಿರ್ಪುದೆ `ಕಾ’
ನೈರುತ್ಯದಲ್ಲಿ ತಮೋಗತಮಾಗಿರ್ಪುದೆ `ಮ’
ದಕ್ಷಿಣದಲ್ಲಿ ಅಹಂಕಾರಗತಮಾಗಿರ್ಪುದೆ `ಧ’
ವಾಯವ್ಯದಲ್ಲಿ ಜೀವಗತಮಾಗಿರ್ಪುದೆ `ರ್ಮ’,
ಉತ್ತರದಲ್ಲಿ ಬುದ್ಧಿಗತಮಾಗಿರ್ಪುದೆ `ಅ’
ಆಗ್ನೇಯದಲ್ಲಿ ಸತ್ವಗತಮಾಗಿರ್ಪುದೆ `ರ್ಥ’
ಪಶ್ಚಿಮದಲ್ಲಿ ಚಿತ್ತಗತಮಾಗಿರ್ಪುದೆ `ಮೋ’
ಈಶಾನ್ಯದಲ್ಲಿ ಶಿವಗತಮಾಗಿರ್ಪುದೆ `ಕ್ಷ’
ದಕ್ಷಿಣಾದಿಯಾಗಿ ನೈರುತ್ಯಾಂತಮಾಗಿರ್ಪುದೆ ಅಪ್ರದಕ್ಷಿಣ.
ದಕ್ಷಿಣಾದ್ಯ ಪ್ರದಕ್ಷಿಣದಲ್ಲಿರ್ಪ ಧರ್ಥ ಕಾಕ್ಷ ಅಮ ಮೋರ್ಮ
ಎಂಬ ಬೀಜಾಕ್ಷರಂಗಳಿಗೆ ಅರ್ಥವೆಂತೆಂದಡೆ : `ಧರ್ಥ’ ಧರಿಸಲ್ಪಟ್ಟಂಥಾ, ವಾಂಛೆಯುಳ್ಳ
`ಕಾಕ್ಷ’ ಕುಚ್ಛಿತೇಂದ್ರಿಯಂಗಳ
`ಅಮ’ ತಮಸ್ಸಿನ, `ರಮಾ’ ಕ್ರೀಡೆಯೆ, `ಉಮಾ’ ಶಕ್ತಿ
ಇದೆ ಅಪ್ರದಕ್ಷಿಣ ಶಕ್ತಿ.
ಉತ್ತರಾದಿ ವಾಯುವ್ಯಾಂತವಾದ ಪ್ರದಕ್ಷಿಣದಲ್ಲಿರ್ಪ
`ಅಕ್ಷ’ `ಕಾರ್ಥ’ `ಧಮ’ `ಮೋರ್ಮ’ ಎಂಬ
ಬೀಜಾಕ್ಷರಂಗಳಿಗೆ ಅರ್ಥವೆಂದರೆ
`ಅಕ್ಷ’ ಜಪ್ಯಮಾದ `ಕಾರ್ಥ’ ಬ್ರಹ್ಮಾರ್ಧವ
`ಧಮ’ ಘೋಷವೇ ಶಿವಮಂತ್ರ.
ಅಂತಪ್ಪ ಶಿವಮಂತ್ರಮಯಮಾದ
ಪ್ರದಕ್ಷಣ ಮಹಾಜಪವೇ `ಮೋರ್ಮ’ ಮೋಕ್ಷಲಕ್ಷ್ಮಿ
ಅದೇ ಶಕ್ತಿ.
`ರ್ಮ’ ಎಂಬ ಕಡೆಯಲ್ಲೂ, `ರ್ಥ’ ಎಂಬ ಕಡೆಯಲ್ಲೂ
`ಜಾ’ಣಾದಿ ಕಾಕಾರಾಗಮ
ಪ್ರದಕ್ಷಿಣ ವಾಯವ್ಯದಲ್ಲಿರ್ಪ ಜೀವನಲ್ಲಿ ಮುಕ್ತಿ,
ಅಪ್ರದಕ್ಷಿಣ ನೈರುತ್ಯದಲ್ಲಿರ್ಪ ನರಕರೂಪಮಾದ ಶರೀರದಲ್ಲಿ ಶಕ್ತಿ,
ಭಿನ್ನ ಶರೀರ ಮೋಕ್ಷವೆ ಅಪವಿತ್ರ ದುಃಖರೂಪವಾದ ನರಕ,
ಜೀವನ್ಮುಕ್ತಿಯೆ ಪವಿತ್ರ ಸುಖಮಯವಾದ ಅಭೇದ ಲಿಂಗೈಕ್ಯ.
ಅಂತಪ್ಪ ಲಿಂಗೈಕ್ಯ ನಿರವಧಿಕ ನಿಜಾನಂದ ಸುಖವನೆನಗಿತ್ತು
ಸಲಹಾ ಮಹಾಘನ ದೊಡ್ಡ ದೇಶಿಕಾರ್ಯ ಪ್ರಭುವೆ. /75
ಪೃಥ್ವಿಯಪ್ಪುಗಳಿಂದ ಸ್ಥೂಲ ಶರೀರವು,
ಅಗ್ನಿವಾಯುಗಳಿಂದ ಸೂಕ್ಷ್ಮಶರೀರವು,
ಆಕಾಶಾತ್ಮಗಳಿಂದ ಕಾರಣಶರೀರವು.
ಸ್ಥೂಲಶರೀರದಲ್ಲಿ ಜೀವನು ವಾಯುರೂಪಿಯಾಗಿಹನು,
ಸೂಕ್ಷ್ಮಶರೀರದಲ್ಲಾಕಾಶರೂಪಾಗಿಹನು,
ಕಾರಣಶರೀರದಲ್ಲಿ ಸ್ವಯಂಪ್ರಕಾಶಮಾಗಿಹನು.
ಸ್ಥೂಲಶರೀರವು ಪೂರ್ವಮುಖಮಾಗಿ,
ಸ್ವಲ್ಪಕಾಲ ಸ್ವಲ್ಪಸುಖ ಸ್ವಲ್ಪದುಃಖಗಳನನುಭವಿಸುತ್ತಿಹುದು.
ಕಾರಣಶರೀರವು ಪಶ್ಚಿಮಮುಖವಾಗಿ
ಸುಖದುಃಖಕಾಲಂಗಳಿಲ್ಲದೆ ನಿಜಸುಖನನುಭವಿಸುತ್ತಿಹುದು.
ಸ್ಥೂಲಶರೀರವು ಕ್ರಿಯಾಜನ್ಯವಾದುದು,
ಸೂಕ್ಷ್ಮಶರೀರವು ಕರ್ಮಜನ್ಯವಾದುದು.
ಕಾರಣಶರೀರವು ಜ್ಞಾನಜನ್ಯವಾದುದು.
ಅಂತಪ್ಪ ಕ್ರಿಯಾಜನ್ಯವೇ ಕರ್ಮ, ಕರ್ಮಜನ್ಯವೇ ಜ್ಞಾನ.
ಇಂತು ನಾಲ್ಕು ದಿಕ್ಕುಗಳಲ್ಲಿ ನಾಲ್ಕುಬಗೆಯಾಗಿರ್ಪ
ನನ್ನ ಸ್ಥೂಲಸೂಕ್ಷ್ಮಕಾರಣಂಗಳ ನಡುವೆ
ಪ್ರಕಾಶಿಸುತ್ತಿರ್ಪ ಮಹಾಲಿಂಗವೇ ನೀನು.
ನಾನು ಸುತ್ತಿ ಬಪ್ಪ ತಾವೆಲ್ಲವಂ ನೀನು ಇತ್ತಿಲೆ ತೋರುತಿರ್ಪ.
ಒತ್ತಲಿರ್ಪ ನಿನ್ನ ಕಾಣದೆ ಸುತ್ತಿ ಬಳಲುತ್ತಿರ್ಪ ಕೋಟಲೆಗಲಸಿ,
ಗುರುವೇ ನಿನ್ನ ಕರುಣದಿಂ ಪಶ್ಚಿಮಭಾಗವಂ ಸೇರಿ ನೋಡಿದಲ್ಲಿ,
ಕರತಲಾಮಲಕದಂತೆ ನೀನು ನನಗೆ ಪ್ರಸನ್ನನಾದೆಯಯ್ಯಾ.
ನಿನ್ನ ದಿವ್ಯ ಮಂಗಲಮೂರ್ತಿಯನು
ಕರ್ಮರಹಿತ ಜ್ಞಾನದೃಷ್ಟಿಯಿಂ ನೋಡಿ ನೋಡಿ,
ನಿಜಸುಖದೊಳೋಲಾಡಿಯಾಡಿ,
ನಿನ್ನ ಸಮರಸುಖಾನಂದದೊಳು ಬೆರೆದು ಮರದಿರ್ಪುದೇ ನಿರ್ವಾಣವು.
ಅಂತಪ್ಪ ಕೈವಲ್ಯಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /76
ಪೃಥ್ವಿಯಲ್ಲಿ ಜನನವೂ, ಆಕಾಶದಲ್ಲಿ ಮರಣವೂ,
ಧರೆಯಲ್ಲಿ ಸಂತೋಷವೂ, ಗಗನದಲ್ಲಿ ದುಃಖವೂ,
ಇಳೆಯಲ್ಲಿ ಅಹಂಕಾರವೂ, ಬಯಲಲ್ಲಿ ಜ್ಞಾನವೂ,
ಬಯಲಲ್ಲಿ ಧರ್ಮವೂ, ಧರಣಿಯಲ್ಲಿ ಕರ್ಮವೂ,
ಆಕಾಶದಲ್ಲಿ ಭಕ್ತಿಯೂ, ಧರಣಿಯಲ್ಲಿ ಶಕ್ತಿಯೂ,
ಭೂಮಿಯಲ್ಲಿ ಜಾಗ್ರವೂ, ಆಕಾಶದಲ್ಲಿ ಸುಷುಪ್ತಿಯೂ,
ಅಲ್ಲಿ ನೀನೂ ಇಲ್ಲಿ ನಾನೂ ಇರಲಾಗಿ,
ನೀನೆಂತು ನನಗೊಲಿದೆ ? ನಾನೆಂತು ನಿನ್ನ ಕೂಡುವೆ ?
ಬಯಲಲ್ಲಿರ್ಪ ಗುಣಗಳಂ ನಾನು ಕೊಂಡು,
ಪೃಥ್ವಿಯಲ್ಲಿರ್ಪ ಗುಣಂಗಳಂ ನಿನಗೆ ಕೊಟ್ಟು,
ಅಲ್ಲಿ ಬಂದ ನಿರ್ವಾಣಸುಖಲಾಭವನ್ನು ಪಡೆದರೆ
ನೀನು ಮೆಚ್ಚುವೆ ನಾನು ಬದುಕುವೆ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./77
ಪೃಥ್ವಿಯು ಜಲದಿಂದಲೇ ಪೂತಮಾಗಿ,
ಅದರಿಂದಲೇ ಪೆರ್ಚಿ, ಅದರಿಂದಲೇ ಲಯವಂ ಹೊಂದುವುದು.
ಅಗ್ನಿಯು ವಾಯುವಿನಿಂದಲೇ ಶುಚಿಯಾಗಿ, ಅದರಿಂದಲೇ ಪೆರ್ಚಿ,
ಅದರಿಂದಲೇ ಲಯವಂ ಹೊಂದುವುದು.
ಆಕಾಶವು ಆತ್ಮನಿಂದಲೇ ಶುದ್ಧಮಾಗಿ, ಅದರಿಂದಲೇ ಪೆರ್ಚಿ,
ಅದರಿಂದಲೇ ಲಯವಂ ಹೊಂದುವುದು.
ಆಕಾಶರೂಪಮಾದ ಸಕಲಗುಣಂಗಳು ಆತ್ಮನಿಂದಲೇ ಪೆರ್ಚಿ,
ಆತ್ಮನಿಂದಲೇ ಪವಿತ್ರಮಾಗಿ, ಆತ್ಮನಿಂದಲೇ ಲಯವಂ ಹೊಂದುವಲ್ಲಿ;
ಪೃಥ್ವಿಯು ಲಯಮಪ್ಪನಲ್ಲಿ ಕರ್ಮವು ನಷ್ಟವಪ್ಪಂತೆ,
ಅಂತಪ್ಪ ಪೃಥ್ವಿನಷ್ಟವೇ ಬ್ರಹ್ಮನ ಲಯವು,
ಅಗ್ನಿನಷ್ಟವೇ ರುದ್ರನ ಲಯವು, ಆಕಾಶನಷ್ಟವೇ ವಿಷ್ಣುವಿನ ಲಯವು,
ಅಂತಪ್ಪ ವಿಷ್ಣುವಿನ ಮಾಯೆಯನಳಿದ ನಿರ್ಮಲಾತ್ಮನೇ ಮಹಾಲಿಂಗವು,
ಅಂತಪ್ಪ ಮಹಾಲಿಂಗದಲ್ಲಿ ಜೀವಮೂಲ ದೇಹಮೂಲಗಳಾಗಿರ್ಪ
ಜಲವಾಯುಗಳ ಸುಳುವಡಗಿ,
ನಾಹಂಭ್ರಮೆಯಡುಗಿರ್ಪುದೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./78
ಪೃಥ್ವಿಯೇ ಬಹಿರಂಗ, ಆಕಾಶವೇ ಅಂತರಂಗ,
ಆ ಅಂತರಂಗಮಪ್ಪ ಆಕಾಶದಲ್ಲಿ ನೀನಿರ್ಪೆ,
ಬಹಿರಂಗಮಪ್ಪ ಪೃಥ್ವಿಯಲ್ಲಿ ನಾನಿರ್ಪೆನು.
ಅಂತರಂಗಜ್ಞಾನವು ನಿನಗೆ, ಬಹಿಜ್ಞರ್ಾನವೆನಗೆ.
ನೀನು ಅಂತರಂಗದಲ್ಲಿ ಆನಂದಿಸುತ್ತಿರುವೆ,
ನಾನು ಬಹಿರಂಗದಲ್ಲಿ ಆನಂದಿಸುತ್ತಿರ್ಪೆನು.
ನಿನಗೆ ಅಂತರಂಗಮೇ ನಿಜಮಾಗಿರ್ಪುದು,
ಎನಗೆ ಬಹಿರಂಗಮೇ ನಿಜಮಾಗಿರ್ಪುದು,
ನೀನು ಅಂತರಂಗದಲ್ಲಿ ನಡವುತ್ತಿರ್ಪೆ
ನಾನು ಬಹಿರಂಗದಲ್ಲಿ ನಡವುತ್ತಿರ್ಪೆನು.
ಅಂತರಂಗದಲ್ಲಿ ನೋಟವು ನಿನಗೆ, ಬಹಿರಂಗದಲ್ಲಿ ನೋಟವೆನಗೆ.
ನಿನ್ನ ಸತ್ಯವೆನ್ನ ಬಹಿರಂಗವನಾವರಿಸಿ, ನನ್ನಂ ಮೋಹಿಸುತ್ತಿರ್ಪುದು.
ನನ್ನ ಮನವು ನಿನ್ನ ಅಂತರಂಗವನಾವರಿಸಿ,
ನಿನಗೆ ಆಗ್ರಹವಂ ಪುಟ್ಟಿಸುತ್ತಿಹುದು.
ನಿನಗೆ ಅಂತಶ್ಶಕ್ತಿಯಾದ ಕಾರಣ ನನ್ನ ತಮಸ್ಸನ್ನು ನಿನ್ನ ಕೈವಶಮಾಡಿಕೊಂಡು,
ಅದರಿಂದಲೇ ನನ್ನಂ ಸಂಹರಿಸುತ್ತಿರುವೆ.
ನನಗೆ ಶಕ್ತಿಬಾಹ್ಯವಾದಕಾರಣ ನಿನ್ನ ಸತ್ವಗುಣವಂ ನಾನು ಪರಿಗ್ರಹಿಸಲಾರದೆ,
ಲಯವನೈಯ್ದುತ್ತಿರ್ಪ ಸಕೀಲವನ್ನು ನಿನ್ನಿಂದ ನಾನು ತಿಳಿದಲ್ಲಿ,
ಬಹಿರಂಗದಲ್ಲಿರ್ಪ ಸತ್ವಗುಣವಂ ನಿನ್ನಿಂದ ನಾನು ಕಂಡಲ್ಲಿ,
ನಿನಗೆ ಅಂತರಂಗವಾಗಿರ್ಪವನು ನಾನೆಂದು ನೀನು ಕಂಡಿರಯ್ಯಾ.
ಬಹಿರಂಗದಲ್ಲಿ ನೀನು ಎನಗೆ ಆಧಾರಮಾದಲ್ಲಿ,
ಅಂತರಂಗದಲ್ಲಿ ನಿನಗೆ ನಾನೇ ಆಧಾರಮಾದೆನಯ್ಯಾ.
ಬಹಿರಂಗದಲ್ಲಿ ನೀನೆನಗೆ ಶಕ್ತಿಯಾದಲ್ಲಿ,
ಅಂತರಂಗದಲ್ಲಿ ನಿನಗೆ ನಾನೇ ಶಕ್ತಿಯಾದೆನಯ್ಯಾ.
ತಮೋಗುಣವಂ ಪಿಡಿದು ನನ್ನಂ ನೀನಾಡಿಸಿದೊಡೆ,
ಸತ್ವಗುಣವಂ ಪಿಡಿದು ನಿನ್ನಂ ನಾನಾಡಿಸುತ್ತಿರ್ಪೆನಯ್ಯಾ.
ಕರ್ಪುರವಪ್ಪಿದುರಿಯಾದೆ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./79
ಪೃಥ್ವಿಯೇ ಶೂದ್ರನು, ಜಲವೇ ವೈಶ್ಯನು,
ಅಗ್ನಿಯೇ ಕ್ಷತ್ರಿಯನು, ವಾಯುವೇ ಬ್ರಾಹ್ಮಣನು.
ಸ್ಥೂಲಶರೀರವೇ ಶೂದ್ರನು, ಸೂಕ್ಷ್ಮಶರೀರವೇ ವೈಶ್ಯನು,
ಕಾರಣಶರೀವೇ ಕ್ಷತ್ರಿಯನು, ಜೀವನೇ ಬ್ರಾಹ್ಮಣನು.
ಬ್ರಾಹ್ಮಣರಿಗೆ ಋಗ್ವೇದವು, ಕ್ಷತ್ರಿಯರಿಗೆ ಯಜುವರ್ೇದವು,
ವೈಶ್ಯರಿಗೆ ಸಾಮವೇದವು, ಶೂದ್ರರಿಗೆ ಅಥರ್ವಣವೇದವು.
ಶೂದ್ರರಿಗೆ ಧರ್ಮವು, ವೈಶ್ಯರಿಗೆ ಅರ್ಥವು,
ಕ್ಷತ್ರಿಯರಿಗೆ ಕಾಮವು, ಬ್ರಾಹ್ಮಣರಿಗೆ ಮೋಕ್ಷವು,
ಬ್ರಾಹಣರಿಗೆ ಪೀತವರ್ಣವು, ಕ್ಷತ್ರಿಯರಿಗೆ ಅರುಣವರ್ಣವು,
ವೈಶ್ಯರಿಗೆ ಶ್ಯಾಮವರ್ಣವು, ಶೂದ್ರರಿಗೆ ನೀಲವರ್ಣವು.
ಬ್ರಾಹ್ಮಣರಿಗೆ ಸಾಮವು, ಕ್ಷತ್ರಿಯರಿಗೆ ಭೇದವು,
ವೈಶ್ಯರಿಗೆ ದಾನವು, ಶೂದ್ರರಿಗೆ ದಂಡವು,
ಬ್ರಾಹ್ಮಣರಿಗೆ ಇಂದ್ರನಧಿದೇವತೆಯು,
ಕ್ಷತ್ರಿಯರಿಗೆ ಕಾಲನಧಿದೇವತೆಯು,
ಶೂದ್ರರು ಭಕ್ತರನ್ನೂ, ವೈಶ್ಯರು ಗುರುವನ್ನೂ,
ಕ್ಷತ್ರಿಯರು ಲಿಂಗವನ್ನೂ, ಬ್ರಾಹ್ಮಣರು ಅತಿಥಿಗಳನ್ನೂ ಪೂಜಿಸಬೇಕು.
ಶಿವಭಕ್ತನೇ ಬ್ರಾಹ್ಮಣನು, ವಿಷ್ಣುಭಕ್ತನೇ ಕ್ಷತ್ರಿಯನು,
ನಿಜವಸ್ತುವು ಉತ್ಕೃಷ್ಟತ್ವವಂ ಹೊಂದಿದಲ್ಲಿ ಶ್ರೇಷ್ಠವಪ್ಪುದು;
ಉತ್ಕೃಷ್ಟ ವಸ್ತುವು ನಿಜವಂ ಹೊಂದಿದಲ್ಲಿ ಅದೇ ಪರತತ್ವವು.
ಇಂತಪ್ಪ ಜಾತಿಧರ್ಮಂಗಳನ್ನು ತನ್ನಲ್ಲಿ ತಾನೇ ತಿಳಿದು ಭಕ್ತನಾಗಿ,
ಶೂದ್ರತ್ವಮಂ ಕಳೆದು ಮಾಹೇಶ್ವರನಾಗಿ,
ವೈಶ್ಯತ್ವಮಂ ಕಳೆದು ಪ್ರಸಾದಿಯಾದಿ,
ಕ್ಷತ್ರಿಯತ್ವಮಂ ಕಳೆದು ಪ್ರಾಣಲಿಂಗಿಯಾಗಿ,
ಬ್ರಹ್ಮತ್ವಮಂ ಪಡೆದು ಅಜಾತಮಾಗಿ,
ಆಕಾಶರೂಪಮಾಗಿ, ಶುದ್ಧಸ್ಫಟಿಕಸಂಕಾಶಮಪ್ಪ.
ಪ್ರಸಾದಲಿಂಗದಲ್ಲಿ ಪರಿಣಾಮಿಸುತ್ತಾ.
ಲಿಂಗವೇ ಪತಿ ತಾನೇ ಸತಿಯಾಗಿರ್ಪನೇ ಶರಣನು.
ಈ ಸತಿಪತಿನ್ಯಾವಳಿದು ವಣರ್ಾತೀತನೂ ವಾಗತೀತನೂ ಆಗಿ,
ತಾನುತಾನಾಗಿರ್ಪುದೇ ಐಕ್ಯವು.
ಇಂತಪ್ಪ ಕೇವಲನಿರ್ವಾಣಲಿಂಗೈಕ್ಯಪದವೆನಗೆ ಸಾಧ್ಯಮಪ್ಪಂತೆ ಮಾಡಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./80
ಪೃಥ್ವಿಯೇ ಸ್ಥಾವರ, ಜಲವೇ ಜಂಗಮ,
ಅಗ್ನಿಯೇ ಸ್ಥಾವರ, ವಾಯುವೇ ಜಂಗಮ.
ಆಕಾಶವೇ ಸ್ಥಾವರ, ಜೀವನೇ ಜಂಗಮ.
ಪೃಥ್ವಿಯೇ ಸ್ಥೂಲ, ಜಲವೇ ಸೂಕ್ಷ್ಮ.
ಅಗ್ನಿಯೇ ಸ್ಥೂಲ, ವಾಯುವೇ ಸೂಕ್ಷ್ಮ
ಆಕಾಶವೇ ಸ್ಥೂಲ, ಆತ್ಮನೇ ಸೂಕ್ಷ್ಮ.
ಸ್ಥೂಲವಸ್ತುಗಳಿಂದ ಸೂಕ್ಷ್ಮ ವಸ್ತುಗಳೇ ಪ್ರಾಣಮಾಗಿಹವು.
ತತ್ಸಂಗಂಗಳಿಂ ಬಿಂದುಕಳಾನಾದಗಳು ಸೃಷ್ಟಿಯಾಗುತ್ತಿಹವು.
ಸ್ಥೂಲವಸ್ತುಗಳು ಆ ಸೂಕ್ಷ್ಮವಸ್ತುಗಳಲ್ಲೇ
ಸೃಷ್ಟಿ ಸ್ಥಿತಿ ಸಂಹಾರಂಗಳಂ ಹೊಂದುತ್ತಿಹವು.
ಪೃಥಿವ್ಯಾದಿ ಪಂಚಭೂತಂಗಳೇ ಘ್ರಾಣಾದಿ ಪಂಚೇಂದ್ರಿಯಂಗಳಾಗಿ,
ಆಯಾ ಗುಣಂಗಳಂ ಗ್ರಹಿಸುವಂತೆ ಆತ್ಮನಿಗೆ ಮನಸ್ಸೇ ಇಂದ್ರಿಯಮಾಗಿ,
ಆತ್ಮನ ಗುಣವಂ ತಾನೇ ಗ್ರಹಿಸುತ್ತಿರ್ಪುದು.
ಪರಮಾತ್ಮನಿಗೆ ಭಾವೇಂದ್ರಿಯಮಾಗಿ,
ಆ ಪರಮನ ಗುಣವಂ ತಾನೇ ಗ್ರಹಿಸುತ್ತಿರ್ಪುದು.
ಮುಖಂಗಳಾವುವೆಂದೊಡೆ: ಘ್ರಾಣಕ್ಕೇ ವಾಯುವೇ ಮುಖ, ಜಿಹ್ವೆಗೆ ಅಗ್ನಿಯೇ ಮುಖ,
ನೇತ್ರಕ್ಕೆ ಜಲವೇ ಮುಖ, ತ್ವಕ್ಕಿಗೆ ಪೃಥ್ವಿಯೇ ಮುಖ,
ಶ್ರೋತ್ರಕ್ಕಾತ್ಮವೇ ಮುಖ, ಮನಸ್ಸಿಗೆ ಚಿದಾಕಾಶವೆ ಮುಖ,
ಭಾವಕ್ಕೆ ನಿಜವೇ ಮುಖವಾದಲ್ಲಿ.
ಪಂಚೇದ್ರಿಯಂಗಳು ಪಂಚಭೂತಗುಣಂಗಳಂ ಗ್ರಹಿಸುವಂತೆ,
ಮನಸ್ಸು ಆತ್ಮಗುಣವನ್ನು ಜ್ಞಾನಮುಖದಿಂ ಗ್ರಹಿಸಿ,
ಗುರುದತ್ತಲಿಂಗವೂ ಆತ್ಮನೂ ಏಕಮೆಂದು ತಿಳಿದು,
ತೂರ್ಯಭಾವದಲ್ಲಿ ಸ್ವಭಾವಮಾಗಿ,
ನಿಜಾನಂದ ತೂರ್ಯಾತೀತದಲ್ಲಿ ಎರಕವೆರದಿರ್ಪುದೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /81
ಪೃಥ್ವೀಚಕ್ರಕ್ಕೆ ಶರೀರವೇ ಪೂರ್ವ,
ಶರೀರದೊಳಗಣ ಪೃಥ್ವಿಯೇ ಪಶ್ಚಿಮ,
ಜಿಹ್ವೆಯಲ್ಲಿ ಕೊಂಬ ಆಹಾರಾದಿಪೃಥ್ವಿಯೇ ಉತ್ತರ,
ಅಧೋಮುಖದಲ್ಲಿ ವಿಸರ್ಜನರೂಪಮಾದ ಪುತ್ರಾದಿಪೃಥ್ವಿಯೇ ದಕ್ಷಿಣ,
ಪೂರ್ವರೂಪವಾದ ಶರೀರಕ್ಕೂ ದಕ್ಷಿಣರೂಪವಾದ ಪುತ್ರಾದಿಗಳಿಗೂ
ಸಂಧಿಕಾಲಮಾಗಿರ್ಪ ಅರ್ಥಾದಿಪೃಥ್ವಿಯೇ ಆಗ್ನೇಯ,
ಪುತ್ರಾದಿ ದಕ್ಷಿಣಪೃಥ್ವಿಗೂ ಧಾತುರೂಪಮಾದ ಅಂತಃಪಶ್ಚಿಮಪೃಥ್ವಿಗೂ
ಸಂಧಿಕಾಲಮಾಗಿರ್ಪ ಮಲವಿಸರ್ಜನರೂಪಮಾದ ಪೃಥ್ವಿಯೇ ನೈರುತ್ಯ,
ಆ ಶರೀರದೊಳಗಣ ಪೃಥ್ವಿಗೂ ಆಹಾರರೂಪವಾದ
ಜಿಹ್ವೆಯಲ್ಲಿರ್ಪ ಉತ್ತರಪೃಥ್ವಿಗೂ
ಸಂಧಿಕಾಲದಲ್ಲಿ ಪರಮಪವಿತ್ರಮಾಗಿ ಪರಿಪಕ್ವಮಯವಾಗಿ
ಪ್ರಸಾದರೂಪವಾದ ಅನ್ನಾದಿ ಭೋಜನಕ್ರಿಯೆಯೆಂಬ ಪೃಥ್ವಿಯೇ ಈಶಾನ್ಯ.
ಜಲಚಕ್ರಕ್ಕೆ ಗುಹ್ಯಜಲವೇ ಪೂರ್ವ, ಶರೀರಜಲವೇ ದಕ್ಷಿಣ,
ಜಿಹ್ವಾಜಲವೇ ಪಶ್ಚಿಮ, ನೇತ್ರಜಲವೇ ಉತ್ತರ,
ಗುಹ್ಯದಲ್ಲಿರ್ಪ ಪೂರ್ವಜಲಕ್ಕೂ ಶರೀರದಲ್ಲಿರ್ಪ ದಕ್ಷಿಣಜಲಕ್ಕೂ
ಸಂಧಿಕಾಲದಲ್ಲಿರ್ಪ ಬಿಂದುಜಲವೇ ಆಗ್ನೇಯ,
ಶರೀರದಲ್ಲಿರ್ಪ ದಕ್ಷಿಣಜಲಕ್ಕೂ ಜಿಹ್ವೆಯಲ್ಲಿರ್ಪ ಪಶ್ಚಿಮಜಲಕ್ಕೂ
ಸಂಧಿಯಲ್ಲಿರ್ಪ ವಾತ ಪಿತ್ತ ಶ್ಲೇಷ್ಮಜಲವೇ ನೈರುತ್ಯ,
ಜಿಹ್ವೆಯಲ್ಲಿರ್ಪ ಪಶ್ಚಿಮಜಲಕ್ಕೂ ನೇತ್ರದಲ್ಲಿರ್ಪ ಉತ್ತರಜಲಕ್ಕೂ
ಸಂಧಿಯಲ್ಲಿರ್ಪ ಉಚ್ಛ್ವಾಸವಾಯುಮುಖದಲ್ಲಿ
ದ್ರವಿಸುತ್ತಿರ್ಪ ಜಲವೇ ವಾಯವ್ಯಜಲ,
ನೇತ್ರದಲ್ಲಿರ್ಪ ಜಲಕ್ಕೂ ಗುಹ್ಯದಲ್ಲಿರ್ಪ ಜಲಕ್ಕೂ ಸಂಧಿಯಲ್ಲಿ
ಮನೋಮುಖದಲ್ಲಿ ದ್ರವಿಸುತ್ತಿರ್ಪ ಮೋಹಜಲವೇ ಈಶಾನ್ಯಜಲ.
ಅಗ್ನಿಚಕ್ರಕ್ಕೆ ಗುಹ್ಯದಲಿರ್ಪ ತೇಜೊರೂಪಮಾದ ಆಗ್ನಿಯೇ ಪೂರ್ವ,
ಉದರದಲ್ಲಿರ್ಪ ಅಗ್ನಿಯೇ ದಕ್ಷಿಣ, ನೇತ್ರದಲ್ಲಿರ್ಪ ಆಗ್ನಿಯೇ ಪಶ್ಚಿಮ,
ಹಸ್ತದಲ್ಪಿರ್ಪ ಸಂಹಾರಾಗ್ನಿಯೇ ಉತ್ತರ,
ಗುಹ್ಯದಲ್ಲಿರ್ಪ ಪೂರ್ವಾಗ್ನಿಗೂ ಉದರದಲ್ಲಿರ್ಪ ದಕ್ಷಿಣಾಗ್ನಿಗೂ
ಸಂಧಿಯಲ್ಲಿ ಬೀಜಸ್ಥಾನದಲ್ಲಿರ್ಪ ಕಾಮಾಗ್ನಿಯೇ ಆಗ್ನೇಯಾಗ್ನಿ,
ಉದರದಲ್ಲಿರ್ಪ ಅಗ್ನಿಗೂ ನೇತ್ರದಲ್ಲಿರ್ಪ ಪಶ್ಚಿಮಾಗ್ನಿಗೂ
ಸಂಧಿಯಲ್ಲಿರ್ಪ ಕ್ರೋಧ ಮತ್ಸರ ರೂಪವಾಗಿರ್ಪ
ತಾಮಸಾಗ್ನಿಯೇ ನೈರುತ್ಯಾಗ್ನಿ,
ನೇತ್ರದಲ್ಲಿರ್ಪ ಅಗ್ನಿಗೂ ಹಸ್ತದಲ್ಲಿರ್ಪ ಉತ್ತರಾಗ್ನಿಗೂ
ಸಂಧಿಯಲ್ಲಿ ವಸ್ತುಗ್ರಹಣಚಲನೋದ್ರೇಕಾಗ್ನಿಯೇ ವಾಯವ್ಯಾಗ್ನಿ,
ಆ ಹಸ್ತಕ್ಕೂ ಗುಹ್ಯಕ್ಕೂ ಸಂಧಿಯಲ್ಲಿ
ಧರ್ಮಪ್ರಜಾಸೃಷ್ಟಿನಿಮಿತ್ತ ಪಾಣಿಗ್ರಹಣಮಪ್ಪಲ್ಲಿ
ಸಾಕ್ಷಿರೂಪಮಾದ ಹೋಮಾಗ್ನಿಯೇ ಈಶಾನ್ಯಾಗ್ನಿ.
ವಾಯುಚಕ್ರಕ್ಕೆ ನಾಸಿಕಚಕ್ರದಲ್ಲಿರ್ಪ ಪ್ರಾಣವಾಯುವೇ ಪೂರ್ವವಾಯು,
ಹೃದಯವೇ ಪಶ್ಚಿಮ,
ಚಲನಾತ್ಮಕವಾದ ಚೈತನ್ಯವಾಯುಮುಖವಿಕಸನವೇ ಉತ್ತರವಾಯು,
ಗಂಧವಿಸರ್ಜನೆಯೇ ದಕ್ಷಿಣವಾಯು,
ನಾಸಿಕದಲ್ಲಿರ್ಪ ಪೂರ್ವವಾಯುವಿಗೂ ಗಂಧದಲ್ಲಿರ್ಪ ದಕ್ಷಿಣವಾಯುವಿಗೂ
ಸಂಧಿಯಲ್ಲಿರ್ಪ ಗಂಧವಾಯುವೇ ಆಗ್ನೇಯವಾಯು,
ಗುದದಲ್ಲಿರ್ಪ ವಾಯುವಿಗೂ ಹೃದಯದಲ್ಲಿರ್ಪ ಪಶ್ಚಿಮವಾಯುವಿಗೂ
ಸಂಧಿಯಲ್ಲಿ ಆದ್ಯನಾದಿವ್ಯಾಧಿಗಳಂ ಕಲ್ಪಿಸಿ ದೀಪನಾಗ್ನಿಯಲ್ಲಿ ಕೂಡಿಸಿ
ಅನಂತಮಲವಂ ಮಾಡಿ ಅಧೋಮುಖದಲ್ಲಿ ಕೆಡವುತ್ತಿರ್ಪ
ತಾಮಸವಾಯುವೇ ನೈರುತ್ಯವಾಯು,
ಹೃದಯವಾಯುವಿಗೂ ವದನದಲ್ಲಿರ್ಪ ಉತ್ತರವಾಯುವಿಗೂ
ಸಂಧಿಯಲ್ಲಿರ್ಪ ಕಂಠದಲ್ಲಿ ಹಸನ ರೋದನ ಗರ್ಜನಾದಿಗಳಂ ಮಾಡುತ್ತಿರ್ಪ
ವಾಯುವೇ ವಾಯವ್ಯವಾಯು,
ವದನದಲ್ಲಿರ್ಪ ವಾಯುವಿಗೂ ನಾಸಿಕದಲ್ಲಿರ್ಪ ವಾಯುವಿಗೂ
ಸಂಧಿಯಲ್ಲಿರ್ಪ ಅಕ್ಷರಾತ್ಮಕವಾಯುವೇ ಈಶಾನ್ಯ.
ಆಕಾಶಚಕ್ರಕ್ಕೆ ಶ್ರೋತ್ರದಲ್ಲಿರ್ಪ ಆಕಾಶವೇ ಪೂರ್ವ,
ಶರೀರದಲ್ಲಿರ್ಪ ಆಕಾಶವೇ ಪಶ್ಚಿಮ,
ಪಾದದಲ್ಲಿರ್ಪ ಆಕಾಶವೇ ದಕ್ಷಿಣ, ಜಿಹ್ವೆಯಲ್ಲಿರ್ಪ ಆಕಾಶವೇ ಉತ್ತರ,
ಶ್ರೋತ್ರದಲ್ಲಿರ್ಪ ಪೂರ್ವಾಕಾಶಕ್ಕೂ ಪಾದದಲ್ಲಿರ್ಪ ದಕ್ಷಿಣಾಕಾಶಕ್ಕೂ
ಕಿವಿಯಲ್ಲಿ ಪಾದದಲ್ಲಿ ಗಮಿಸುತ್ತಿರ್ಪಲ್ಲಿ
ಮುಂದೆ ಗಮಿಸುತ್ತಿರ್ಪಾಕಾಶವೇ ಆಗ್ನೇಯಾಕಾಶ,
ಪಾದದಲ್ಲಿರ್ಪ ಆಕಾಶಕ್ಕೂ ಶರೀರದಲ್ಲಿರ್ಪ ಪಶ್ಚಿಮಾಕಾಶಕ್ಕೂ
ಸಂಧಿಯಲ್ಲಿ ಮಲಮೂತ್ರ ವಿಸರ್ಜನಾಕಾಶವೇ ನೈರುತ್ಯಾಕಾಶ,
ಆ ಶರೀರದೊಳಗಿರ್ಪ ಆಕಾಶಕ್ಕೂ ಜಿಹ್ವೆಯಲ್ಲಿರ್ಪ ಉತ್ತರಾಕಾಶಕ್ಕೂ
ಸಂಧಿಯಲ್ಲಿ ಗುಣಗ್ರಹಣವಂ ಮಾಡುತ್ತಿರ್ಪ ಹೃದಯವೇ ವಾಯವ್ಯಾಕಾಶ,
ಜಿಹ್ವೆಯಲ್ಲಿರ್ಪ ಆಕಾಶಕ್ಕೂ ಶ್ರೋತ್ರದಲ್ಲಿರ್ಪ ಆಕಾಶಕ್ಕೂ
ಸಂಧಿಯಲ್ಲಿ ಗುರುವು ಮುಖದಿಂದುಪದೇಶಿಸಲು,
ಶಿಷ್ಯನು ಕರ್ಣಮುಖದಲ್ಲಿ ಗ್ರಹಿಸಲು,
ತನ್ಮಂತ್ರಮಧ್ಯದಲ್ಲಿ ಪ್ರಕಾಶಿಸುತ್ತಿರ್ಪ ಆಕಾಶವೇ ಈಶಾನ್ಯಾಕಾಶ,
ಆತ್ಮಚಕ್ರಕ್ಕೆ ವಾಸನಾಜ್ಞಾನವೇ ಪಶ್ಚಿಮ, ರುಚಿಜ್ಞಾನವೇ ಉತ್ತರ,
ಸ್ಪರ್ಶಜ್ಞಾನವೇ ಪೂರ್ವ, ರೂಪಜ್ಞಾನವೇ ದಕ್ಷಿಣ.
ಸ್ಪರ್ಶನರೂಪಮಾದ ಪೂರ್ವಜ್ಞಾನವೇ ಜೀವನು,
ರೂಪಜ್ಞತ್ವಮುಳ್ಳ ದಕ್ಷಿಣಜ್ಞಾನವೇ ಶರೀರ.
ಸ್ಪರ್ಶನದಲ್ಲಿ ಜೀವನು ವ್ಯಾಪ್ತನಾದಂತೆ
ರೂಪಜ್ಞಾನದಲ್ಲಿ ಶರೀರವು ವ್ಯಾಪ್ತಮಾಗಿರ್ಪುದರಿಂ
ರೂಪಜ್ಞಾನತ್ವವೇ ಶರೀರ, ಸ್ಪರ್ಶನಜ್ಞಾನತ್ವವೇ ಜೀವ.
ತತ್ಸಂಧಿಯಲ್ಲಿ ತೇಜೋವಾಯುರೂಪಮಾಗಿರ್ಪ
ಮನೋಜ್ಞಾನತ್ವವೇ ಆಗ್ನೇಯಾತ್ಮನು.
ಮನೋಜ್ಞಾನಕ್ಕೂ ಪಶ್ಚಿಮದಲ್ಲಿರ್ಪ ವಾಸನಾಜ್ಞಾನಕ್ಕೂ
ಸಂಧಿಯಲ್ಲಿ ಜನ್ಮಾಂತರವಾಸನಾಜ್ಞಾನವೇ ಪರೋಕ್ಷಜ್ಞಾನ,
ರೂಪಜ್ಞಾನವೇ ಪ್ರತ್ಯಕ್ಷಜ್ಞಾನ.
ಈ ಎರಡರ ಮಧ್ಯದಲ್ಲಿ ಭಾವಜ್ಞತ್ವಮಿರ್ಪುದು.
ಜಾಗ್ರತ್ಸ್ವಪ್ನಗಳ ಮಧ್ಯದಲ್ಲಿ ಸುಷುಪ್ತಿಯು ಇರ್ಪಂತೆ
ಸುಷುಪ್ತಿಗೆ ತನ್ನಲ್ಲಿರ್ಪ ಸ್ವಪ್ನವೇ ಪ್ರತ್ಯಕ್ಷಮಾಗಿ
ತನಗೆ ಬಾಹ್ಯಮಾಗಿರ್ಪ ಜಾಗ್ರವು ಪ್ರತ್ಯಕ್ಷಮಾಗಿಹುದು.
ಅಂತು ಭಾವಜ್ಞತ್ವಕ್ಕೆ ರೂಪಜ್ಞಾನಪ್ರತ್ಯಕ್ಷಮಾಗಿ
ವಾಸನಾಜ್ಞಾನಕ್ಕೆ ತಾನೇ ಮರೆಯಾಗಿರ್ಪುದರಿಂ
ಆ ಭಾವಜ್ಞಾನವೇ ನೈರುತ್ಯಾತ್ಮನು.
ಆ ವಾಸನಾಜ್ಞಾನಕ್ಕೂ ಉತ್ತರದಲ್ಲಿರ್ಪ ರುಚಿಜ್ಞಾನಕ್ಕೂ
ಸಂಧಿಯಲ್ಲಿ ರುಚಿಯೆಂದರೆ ಅನುಭವಪದಾರ್ಥ, ತಜ್ಞಾನವೇ ರುಚಿಜ್ಞಾನ.
ವಾಸನಾಜ್ಞಾನವೇ ಪರೋಕ್ಷಜ್ಞಾನ, ಅದೇ ಭೂತಜ್ಞಾನ,
ಆ ರುಚಿಜ್ಞಾನವೇ ಭವಿಷ್ಯಜ್ಞಾನ.
ಅಂತಪ್ಪ ಭೂತಭವಿಷ್ಯತ್ತುಗಳ ಮಧ್ಯದಲ್ಲಿ
ವಾಯುರೂಪಮಾದ ಶಬ್ದಮುಖದಲ್ಲಿ ತಿಳಿವುತ್ತಿರ್ಪ
ಶಬ್ದಜ್ಞಾನವೇ ವಾಯವ್ಯಾತ್ಮನು.
ರುಚಿಜ್ಞಾನಕ್ಕೂ ಸ್ಪರ್ಶನಜ್ಞಾನಕ್ಕೂ ಮಧ್ಯದಲ್ಲಿ
ಜೀವನು ರುಚಿಗಳನನುಭವಿಸುವ ಸಂಧಿಯಲ್ಲಿರ್ಪ
ಶಿವಜ್ಞಾನಮಧ್ಯದಲ್ಲಿರುವನೇ ಈಶಾನ್ಯಾತ್ಮನು.
ಜ್ಞಾನಾನಂದಮೂರ್ತಿಯೇ ಕರಕಮಲದಲ್ಲಿ ಇಷ್ಟಲಿಂಗಮಾಗಿ,
ಆ ಶಿವಜ್ಞಾನವೇ ಹೃತ್ಕಮಲಮಧ್ಯದಲ್ಲಿ
ರುಚ್ಯನುಭವಸಂಧಿಯಲ್ಲಿ ಪ್ರಾಣಲಿಂಗಮಾಗಿ,
ಪ್ರತ್ಯಕ್ಷ ಪರೋಕ್ಷಂಗಳಿಗೆ ತಾನೇ ಕಾರಣವಾಗಿ,
ಆ ಶಿವಜ್ಞಾನಂಗಳು ಭಾವದಲ್ಲೊಂದೇ ಆಗಿ ಪ್ರಕಾಶಿಸಿದಲ್ಲಿ
ಭಾವದಲ್ಲಿರ್ಪ ತಾಮಸವಳಿದು, ಪ್ರತ್ಯಕ್ಷ ಪರೋಕ್ಷಂಗಳೊಂದೇ ಆಗಿ,
ಪರೋಕ್ಷಜ್ಞಾನದಲ್ಲಿ ಪ್ರತ್ಯಕ್ಷಭಾವಂಗಳಳಿದು,
ಭೂತಭವಿಷ್ಯಂಗಳೊಂದೇ ಆಗಿ ಅಖಂಡಮಯಮಾಗಿ
ಎಲ್ಲವೂ ಒಂದೆಯಾಗಿರ್ಪುದೇ ಆಗ್ನೇಯ.
ಅದಕ್ಕೆ ಇಷ್ಟಪ್ರಾಣಂಗಳೆಂಬೆರಡು ದಳಂಗಳು.
ವಿಶುದ್ಧದಲ್ಲಿ ಪ್ರಮಾಣಕ್ಕೆ ಪೂರ್ವಾತ್ಮನಾದ ಜೀವನೇ ಸ್ಥಾನ,
ಸಂಶಯಕ್ಕೆ ಆಗ್ನೇಯಾತ್ಮವಾದ ಮನವೇ ಸ್ಥಾನ,
ದೃಷ್ಟಾಂತಕ್ಕೆ ದಕ್ಷಿಣಾತ್ಮಕವಾದ ಶರೀರವೇ ಸ್ಥಾನ,
ಅವಯವಕ್ಕೆ ನೈರುತ್ಯವಾದ ಭಾವವೇ ಸ್ಥಾನ,
ನಿರ್ಣಯಕ್ಕೆ ಪಶ್ಚಿಮಾತ್ಮಕವಾದ ಶಬ್ದಜ್ಞಾನವೇ ಸ್ಥಾನ,
ಜಲ್ಪಕ್ಕೆ ವಾಯುವ್ಯಾತ್ಮವಾದ ಶಬ್ದಜ್ಞಾನವೇ ಸ್ಥಾನ,
ಹೇತ್ವಭಾವಕ್ಕೆ ರುಚಿಜ್ಞತ್ವವೇ ಸ್ಥಾನ.
ಜಾತಿಯೆಂದರೆ ಪದಾರ್ಥನಿಷ್ಠಧರ್ಮ.
ಆ ಧರ್ಮಕ್ಕೆ ಈಶಾನ್ಯಾತ್ಮನಾದ ಶಿವನೇ ಸ್ಥಾನ,
ಪ್ರಮೇಯಕ್ಕೆ ಶ್ರೋತ್ರದಲ್ಲಿರ್ಪ ವಿಶುದ್ಧರೂಪಮಾದ
ಪೂರ್ವಾಕಾಶವೇ ಸ್ಥಾನ,
ಪ್ರಯೋಜನಕ್ಕೆ ಧಾವತೀರೂಪಮಾದ ಆಗ್ನೇಯಾಕಾಶವೇ ಸ್ಥಾನ,
ಸಿದ್ಧಾಂತಕ್ಕೆ ಪದದಲ್ಲಿರ್ಪ ದಕ್ಷಿಣಾಕಾಶವೇ ಸ್ಥಾನ,
ತರ್ಕಕ್ಕೆ ಮಲವಿಸರ್ಜನರೂಪವಾದ ನೈರುತ್ಯಾಕಾಶವೇ ಸ್ಥಾನ,
ಛಲಕ್ಕೆ ಜಿಹ್ವೆಯಲ್ಲಿ ವಾಗ್ರೂಪಮಾಗಿರ್ಪ ಉತ್ತರಾಕಾಶವೇ ಸ್ಥಾನ,
ನಿಗ್ರಹಕ್ಕೆ ಉಪದೇಶಮಧ್ಯದಲ್ಲಿರ್ಪ ಈಶಾನ್ಯಾಕಾಶವೇ ಸ್ಥಾನ.
ಇಂತು ಆತ್ಮಾಕಾಶಮಾಗಿರ್ಪ ಷೋಡಶದಳಂಗಳಿಂ
ಪ್ರಕಾಶಿಸುತ್ತಿರ್ಪುದೇ ವಿಶುದ್ಧಿಚಕ್ರವು.
ತದ್ಬೀಜಮಾಗಿರ್ಪ ಷೋಡಶಸ್ವರಂಗಳಲ್ಲಿ
ಹ್ರಸ್ವಸ್ವರಂಗಳೆಲ್ಲವೂ ಆತ್ಮಚಕ್ರಬೀಜ
ದೀರ್ಘಸ್ವರಂಗಳೆಲ್ಲವೂ ಆಕಾಶಚಕ್ರಬೀಜ,
ಮುಕುಳನವೇ ಹ್ರಸ್ವ ; ಅದು ಆತ್ಮರೂಪಮಾದ ಸಂಹಾರಮಯಮಾಗಿಹುದು.
ವಿಕಸನವೇ ದೀರ್ಘ; ಅದು ಮಿಥ್ಯಾರೂಪಮಾದ ಸೃಷ್ಟಿಮಯಮಾಗಿಹುದು.
ಇಂತಪ್ಪ ಆತ್ಮಾಕಾಶಚಕ್ರಗಳೆರಡೂ ಏಕಾಕಾರಮಾಗಿರ್ಪುದೇ ವಿಶುದ್ಧಿಚಕ್ರವು.
ಅನಾಹತದಲ್ಲಿ ತನುವಿಗೆ ಪೂರ್ವರೂಪಮಾದ ವಾಯುವೇ ಸ್ಥಾನ,
ನಿಧನಕ್ಕೆ ವಾಸನಾಗ್ರಹಣರೂಪಮಾದ ಆಗ್ನೇಯವಾಯುವೇ ಸ್ಥಾನ,
ಸಹಜವೆಂದರೆ ಪ್ರಕೃತಿ, ಆ ಸಹಜಕ್ಕೆ ದಕ್ಷಿಣರೂಪಮಾದ
ವಿಸರ್ಜನವಾಯುವೇ ಸ್ಥಾನ,
ಸೂಹೃತಿಗೆ ನೈರುತ್ಯರೂಪಮಾದ ಗರ್ಭವಾಯುವೇ ಸ್ಥಾನ,
ಸುತಕ್ಕೆ ಪಶ್ಚಿಮದಲ್ಲಿರ್ಪ ಹೃದಯವಾಯುವೇ ಸ್ಥಾನ,
ರಿಪುವಿಗೆ ಕಂಠದಲ್ಲಿ ವಾಯವ್ಯರೂಪಮಾಗಿರ್ಪ
ಉತ್ಕೃಷ್ಟಘೋಷವಾಯುವೇ ಸ್ಥಾನ,
ಜಾಯಕ್ಕೆ ಉತ್ತರದಲ್ಲಿರ್ಪ ಜಿಹ್ವಾಚಲನವಾಯುವೇ ಸ್ಥಾನವಾಯಿತ್ತು.
ನಾದವಿಸರ್ಜನಸ್ಥಾನವೇ ಜಿಹ್ವಾಚಲನ,
ಬಿಂದುವಿಸರ್ಜನಸ್ಥಾನವೇ ಜಾಯೆ,
ಜಾಯೆಯಿಂದಾದ ಸುತಾದಿ ರೂಪಗಳಿಗೆ
ಜಿಹ್ವಾವಾಯುವಿನಿಂದಾದ ನಾಮವೇ ಕ್ರಿಯಾಸಂಬಂಧಮಾದುದರಿಂದಲೂ
ಪತಿವಾಕ್ಯವನನುಸರಿಸುವುದೇ ಸತಿಗೆ ಧರ್ಮವಾದುದರಿಂದಲೂ
ಜಾಯಿಗೆ ಜಿಹ್ವಾವಾಯುವೇ ಸ್ಥಾನವಾಯಿತ್ತು .
ನಿಧನಕ್ಕೆ ಜಿಹ್ವಾವಾಯುವಿಗೂ ನಾಸಿಕಾವಾಯುವಿಗೂ ಸಂಧಿಯಲ್ಲಿ
ಕ್ಷಯರಹಿತಮಾದ ಅಕ್ಷರವಾಯುವೇ ಸ್ಥಾನವಾಯಿತ್ತು.
ಪೂರ್ವದಲ್ಲಿರ್ಪ ಅನಾಹತಚಕ್ರದಲ್ಲಿ
ಪಶ್ಚಿಮದಲ್ಲಿರ್ಪ ಪೃಥ್ವೀಚಕ್ರದ ನಾಲ್ಕುದಳಂಗಳು ಕೂಡಿರ್ಪುದರಿಂ
ಅನಾಹತನಲ್ಲಿ ಹನ್ನೆರಡು ದಶಗಳಾದವು.
ಅನಾಹತದಲ್ಲಿ ಬೆರೆದ ನಾಲ್ಕು ದಳಂಗಳಾವುವೆಂದರೆ : ಶರೀರರೂಪಮಾದ ಪೂರ್ವಪೃಥ್ವಿಗೂ
ಪುತ್ರಾದಿರೂಪಮಾದ ದಕ್ಷಿಣಪೃಥ್ವಿಗೂ
ಮಧ್ಯದಲ್ಲಿರ್ಪ ಧನರೂಪಮಾದ ಆಗ್ನೇಯಪೃಥ್ವಿಯೇ ಧರ್ಮಸ್ಥಾನಮಾಯಿತ್ತು.
ಪುತ್ರಾದಿದಕ್ಷಿಣಪೃಥ್ವಿಗೂ ಧಾತುರೂಪಮಾದ ಅಂತಃಪಶ್ಚಿಮಪೃಥ್ವಿಗೂ
ಸಂಧಿಕಾಲಮಾಗಿರ್ಪ ನೈರುತ್ಯಪೃಥ್ವಿಯೇ ಕರ್ಮಸ್ಥಾನಮಾಯಿತ್ತು.
ಶೌಚವೇ ಕರ್ಮಕ್ಕೆ ಆದಿಯಾದುದರಿಂದ
ಆ ಶರೀರದೊಳಗಿರ್ಪ ಪೃಥ್ವಿಗೂ ಜಿಹ್ವೆಯಲ್ಲಿರ್ಪ ಆಹಾರೋತ್ತರಪೃಥ್ವಿಗೂ
ಸಂಧಿಯಲ್ಲಿರ್ಪ ವಾಯವ್ಯಪೃಥ್ವಿಯೇ ಲಯಸ್ಥಾನಮಾಯಿತ್ತು.
ಆ ಜಿಹ್ವೆಯಲ್ಲಿರ್ಪ ಪೃಥ್ವಿಗೂ ಶರೀರದಲ್ಲಿರ್ಪ ಪೃಥ್ವಿಗೂ
ಸಂಧಿಯಲ್ಲಿರ್ಪ ಅನ್ನರೂಪಮಾದ ಈಶಾನ್ಯಪೃಥ್ವಿಯೇ ವ್ಯಯಸ್ಥಾನಮಾಯಿತ್ತು.
ಇಂತು ಭಾವರೂಪಮಾದ ದ್ವಾದಶದಳಗಳುಳ್ಳುದೇ ಅನಾಹತಚಕ್ರವು.
ಮಣಿಪೂರಕಚಕ್ರದಲ್ಲಿ ಪೂರ್ವರೂಪಮಾದ ಅಗ್ನಿಯೇ ಸ್ಥಾನವು,
ಅದು ಆದಿಯಲ್ಲಿ ಶ್ರೋತ್ರವಿಷಯದಿಂದುತ್ಪನ್ನಮಾಗುತ್ತಿರ್ಪುದರಿಂ
ಅದಕ್ಕೆ ಶ್ರೋತ್ರವೇ ಸ್ಥಾನಮಾಯಿತ್ತು.
ಗುಹ್ಯೆಯಲ್ಲಿರ್ಪ ಅಗ್ನಿಗೂ ಉದರದಲ್ಲಿರ್ಪ ದಕ್ಷಿಣಾಗ್ನಿಗೂ
ಸಂಧಿಯಲ್ಲಿ ಬೀಜಸ್ಥಾನವಾಗಿ ಪ್ರಕಾಶಿಸುತ್ತಿರ್ಪ
ಕಾಮರೂಪಮಾದ ಆಗ್ನೇಯಾಗ್ನಿಗೆ ತ್ವಕ್ಕೇ ಸ್ಥಾನಮಾಯಿತ್ತು ,
ಉದರದಲ್ಲಿರ್ಪ ದಕ್ಷಿಣಾಗ್ನಿಯು ರೂಪಮಾಗಿಹುದು.
ದೀಪನವೆಂದರೆ ವಾಂಛೆ,
ಅಂತಪ್ಪ ವಾಂಛೆಯು ನೇತ್ರಮೂಲಕಮಾದುದರಿಂದಲೂ
ರೂಪಕ್ಕೆ ನೇತ್ರವೇ ಕಾರಣಮಾದುದರಿಂದಲೂ
ರೂಪಮಾಗಿರ್ಪ ಆಹಾರದಿಂದಾ ದೀಪನವೇ
ನೇತ್ರದಲ್ಲಿರ್ಪ ಪಶ್ಚಿಮಾಗ್ನಿಯಾಗಿ
ನಾಸಿಕಾಗ್ರದಲ್ಲೇಕಮಾಗಿ ಕೂಡುತ್ತಿರ್ಪುದರಿಂದ
ನಾಸಿಕಾಗ್ರದಲ್ಲಿರ್ಪ ಸಮದೃಷ್ಟಿಯು ಸಕಲಯೋಗಕ್ಕೂ ಕಾರಣಮಾಗಿರ್ಪುದರಿಂ
ನೇತ್ರಾಗ್ನಿಗೆ ನಾಸಿಕವೇ ಸ್ಥಾನಮಾಯಿತ್ತು.
ಪಾಣಿಗೂ ಗುಹ್ಯಕ್ಕೂ ಸಂಧಿಕಾಲಮಾಗಿರ್ಪ ಸ್ವಸ್ತ್ರೀ ವಿವಾಹಸಾಕ್ಷಿಕವಾದ
ಈಶಾನ್ಯಹೋಮಾಗ್ನಿಗೂ ಜಾಯಾಪಾದವೇ ಸ್ಥಾನಮಾಯಿತ್ತು.
ಲಾಜಾಹೋಮಕಾಲದಲ್ಲಿ ಜಾಯಾಪಾದದಿಂದಗ್ನಿ ಸಿದ್ಧವಾಗುತ್ತಿರ್ಪುದರಿಂ
ಆ ಹೋಮಾಗ್ನಿಯನ್ನು ಪಾದದಲ್ಲಿ ತಂದು
ಶಿಲೆಯಲ್ಲಿ ಆವಾಹನೆಯಂ ಮಾಡುತ್ತಿರ್ಪುದರಿಂ
ಈಶ್ವರರೂಪಮಾದ ಅಗ್ನಿಗೂ ಗಿರಿಜಾರೂಪಮಾದ ಶಿಲೆಗೂ
ಆ ಪಾದವೇ ಕಾರಣಮಾಗಿರ್ಪುದರಿಂ
ಈಶಾನ್ಯಾಗ್ನಿಗೆ ಪಾದವೇ ಸ್ಥಾನಮಾಯಿತ್ತು .
ಈ ಮಣಿಪೂರಕದಶದಳಗಳಲ್ಲಿ ಅಗ್ನಿದಳಗಳೆಂಟು, ಜಲದಳಗಳೆರಡು,
ಗುಹ್ಯದಲ್ಲಿರ್ಪ ಪೂರ್ವಜಲಕ್ಕೂ ಗುಹ್ಯದಳವೇ ಸ್ಥಾನಮಾಯಿತ್ತು,
ಗುಹ್ಯದಲ್ಲಿರ್ಪ ಪೂರ್ವಜಲಕ್ಕೂ ಶರೀರದಲ್ಲಿರ್ಪ ದಕ್ಷಿಣಜಲಕ್ಕೂ
ಸಂಧಿಯಲ್ಲಿರ್ಪ ಆಗ್ನೇಯಬಿಂದುಜಲಕ್ಕೂ ಗುದವೇ ಸ್ಥಾನಮಾಯಿತ್ತು,
ಆ ಬಿಂದುವು ಗುದಸ್ಥಾನದಲ್ಲಿ ನಿಂತು
ಗುಹ್ಯಮುಖದಲ್ಲಿ ನಿವೃತ್ತಿಯಾಗುತ್ತಿರ್ಪುದರಿಂ
ಆ ಬಿಂದುವಿಗೆ ಗುದವೇ ಸ್ಥಾನಮಾಯಿತ್ತು.
ಇಂತಪ್ಪ ದಶದಳಂಗಳುಳ್ಳುದೇ ಮಣಿಪೂರಕ.
ಸ್ವಾಧಿಷ್ಠಾನದಲ್ಲಿ ಯಜನಕ್ಕೆ ಕರ್ಮಾಯಾಸದಿಂದುತ್ಪನ್ನಮಾಗುವ
ಪೂರ್ವಜಲವೇ ಸ್ಥಾನಮಾಯಿತ್ತು.
ಯಾಜನಕ್ಕೆ ಶರೀರದಲ್ಲಿರ್ಪ ದಕ್ಷಿಣಜಲಕ್ಕೂ
ಜಿಹ್ವೆಯಲ್ಲಿರ್ಪ ಪಶ್ಚಿಮಜಲಕ್ಕೂ
ಮಧ್ಯದಲ್ಲಿರ್ಪ ಜಲವೇ ಸ್ಥಾನಮಾಯಿತ್ತು,
ಜಿಹ್ವೆಯಲ್ಲಿರ್ಪ ಪಶ್ಚಿಮಜಲವೇ ಅಧ್ಯಯನಸ್ಥಾನಮಾಯಿತ್ತು,
ಜಿಹ್ವೆಯಲ್ಲಿರ್ಪ ಜಲಕ್ಕೂ ನೇತ್ರದಲ್ಲಿರ್ಪ ಉತ್ತರಜಲಕ್ಕೂ ಮಧ್ಯದಲ್ಲಿ
ನಾಸಿಕದಲ್ಲಿ ವಾಸನಾಮುಖದಿಂ ದ್ರವಿಸುತ್ತಿರ್ಪ
ವಾಯವ್ಯಜಲವೇ ಅಧ್ಯಾಪನಸ್ಥಾನಮಾಯಿತ್ತು,
ನೇತ್ರದಲ್ಲಿರ್ಪ ಆನಂದಜಲವೇ ದಾನಕ್ಕೆ ಸ್ಥಾನಮಾಯಿತ್ತು,
ನೇತ್ರದಲ್ಲಿರ್ಪ ಜಲಕ್ಕೂ ಗುಹ್ಯೆಯಲ್ಲಿರ್ಪ ಜಲಕ್ಕೂ ಮಧ್ಯದಲ್ಲಿ
ಮನೋಮುಖದಲ್ಲಿ ದ್ರವಿಸುತ್ತಿರ್ಪ ಮೋಹಜಲವೇ
ಪ್ರತಿಗ್ರಹಸ್ಥಾನಮಾಯಿತ್ತು.
ಇಂತಪ್ಪ ಆರುದಳಂಗಳುಳ್ಳುದೇ ಸ್ವಾಧಿಷ್ಠಾನಚಕ್ರವು,
ಆಧಾರದಲ್ಲಿ ಬ್ರಹ್ಮಚರ್ಯಕ್ಕೆ ತನುವೇ ಸ್ಥಾನಮಾಯಿತ್ತು.
ಬ್ರಹ್ಮಚರ್ಯವೆಂದರೆ ಕರ್ಮ.
“ಶರೀರಮಾಧ್ಯಂ ಖಲು ಧರ್ಮಸಾಧನಂ” ಎಂದಿರುವುದರಿಂದ
ಆ ಕರ್ಮಮೂಲವೇ ಶರೀರಮಾದುದರಿಂದದಕ್ಕೆ
ದೇಹವೇ ಸ್ಥಾನಮಾಯಿತ್ತು.
ಪುತ್ರಾದಿ ದಕ್ಷಿಣಪೃಥ್ವಿಯೇ ಗೃಹಸ್ಥಸ್ಥಾನಮಾಯಿತ್ತು.
ಶರೀರದೊಳಗೆ ಮಾಂಸಾದಿಧಾತುರೂಪಮಾಗಿರ್ಪ
ಪಶ್ಚಿಮಪೃಥ್ವಿಯೇ ವಾನಪ್ರಸ್ಥಮಾಯಿತ್ತು.
ಜಿಹ್ವೆಯಲ್ಲಿರ್ಪ ಉತ್ತರಪೃಥ್ವಿಯೇ ಪರಿಶುದ್ಧಮಾಗಿ
ಶಿವಪ್ರಸಾದಕಾರಣಮಾಗಿರ್ಪುದು.
ಜಿಹ್ವೆಯಲ್ಲಿರ್ಪ ಅನ್ನವೇ ದೀಪನಹರಣವೂ ತೃಪ್ತಿಕಾರಣವೂ
ಜ್ಞಾನಾನಂದಕಾರಣವೂ ಆಗಿರ್ಪುದು.
ಅಂತಪ್ಪ ಅನ್ನವೇ ಕೇವಲ ಸತ್ವಸ್ವರೂಪಮಾಗಿ
ರಕ್ಷಣರೂಪಮಾದುದರಿಂದಾ ಸತ್ವವು ಸ್ಥಾನಮಾಗಿರ್ಪುದೇ ಸಂನ್ಯಾಸವು,
ಇಂತಪ್ಪ ಚತುರ್ದಳಂಗಳಿಂದೊಪ್ಪುತ್ತಿರ್ಪುದೇ ಆಧಾರಚಕ್ರವು.
ಪೃಥ್ವಿಗೆ ಈಶಾನ್ಯರೂಪಮಾಗಿರ್ಪ ಅನ್ನವೇ
ಆಧಾರಚಕ್ರದಲ್ಲಿ ಆಚಾರಲಿಂಗಮಾಯಿತ್ತು.
ಆ ಅನ್ನವೇ ಪ್ರಾಣಮಾಗಿರ್ಪುದರಿಂ ನಾಸಿಕವನನುಸರಿಸುತ್ತಿರ್ಪುದು.
ಜಲಕ್ಕೆ ಈಶಾನ್ಯಮಾಗಿರ್ಪ ದಯಾರಸವೇ
ಸ್ವಾಧಿಷ್ಠಾನದಲ್ಲಿ ಗುರುಲಿಂಗಮಾಯಿತ್ತು.
ಅದು ಜಿಹ್ವಾಮುಖದಿಂ ರಕ್ಷಿಸುತ್ತಿರ್ಪುದರಿಂ ಜಿಹ್ವೆಯನನುಸರಿಸುತ್ತಿರ್ಪುದು.
ಅಗ್ನಿಗೆ ಈಶಾನ್ಯವಾದ ಹೋಮಾಗ್ನಿಯೇ
ಮಣಿಪೂರಕದಲ್ಲಿ ಶಿವಲಿಂಗಮಾಯಿತ್ತು.
ಅದು ಯಾವಜ್ಜೀವವೂ ಅಗ್ನಿಗಿಂತಲೂ ಭಿನ್ನಮಾಗದೆ ಪ್ರಕಾಶಿಸುತ್ತಿರುವುದರಿಂ
ತೇಜೋಮಯವಾದ ನೇತ್ರವನನುಸರಿಸುತ್ತಿರ್ಪುದು.
ವಾಯುವಿಗೆ ಈಶಾನ್ಯರೂಪಮಾದ ಅಕ್ಷರಮಯಮಾದ
ಮಂತ್ರವಾಯುವೇ ಅನಾಹತದಲ್ಲಿ ಜಂಗಮಲಿಂಗಮಾಯಿತ್ತು.
ಅದು ಕ್ಷಯವಿಲ್ಲದ್ದು ; ಆ ಮಂತ್ರವು ಶರೀರವನ್ನು ಪವಿತ್ರವಂ ಮಾಡಲು,
ಶರೀರ ಪೂರ್ವವಾಸನೆಯಳಿದು ಮಂತ್ರಮಯಮಾಗಿರ್ಪುದರಿಂ
ತ್ವಕ್ಕನ್ನನುಸರಿಸಿರ್ಪುದು.
ಆಕಾಶಕ್ಕೆ ಈಶಾನ್ಯಮಾದ ಉಪದೇಶಾಕಾಶವೇ
ವಿಶುದ್ಧದಲ್ಲಿ ಪ್ರಸಾದಲಿಂಗಮಾಯಿತ್ತು.
ಅದು ಪರತತ್ವಮಯಮಾಗಿರ್ಪುದರಿಂ ಶ್ರೋತ್ರವನನುಸರಿಸಿರ್ಪುದು.
ಆತ್ಮನಿಗೆ ಈಶಾನ್ಯದಲ್ಲಿರ್ಪ ಶಿವಜ್ಞಾನವೇ
ಆಗ್ನೇಯದಲ್ಲಿ ಮಹಾಲಿಂಗಮಾಯಿತ್ತು .
ಅದು ಮನದೊಳ್ಕೂಡಿ ಪಂಚೇಂದ್ರಿಯಂಗಳಿಗೂ ಮನಸ್ಸೇ ಚೈತನ್ಯಮಾಗಿರ್ಪಂತೆ,
ಪಂಚಲಿಂಗಂಗಳಿಗೆ ತಾನೇ ಚೈತನ್ಯಮಾಗಿ ದೃಷ್ಟವಶದಿಂದುದಿಸಿದ ಕಾರಣ
ಆ ದೃಷ್ಟಕಾರಣಮಾದ ಲಲಾಟವನನುಸರಿಸಿರ್ಪುದು.
ಆ ಶಿವಜ್ಞಾನದಿಂ ಗುರುಮುಖದಿಂದುದಿಸಿದ
ಕರ್ಮಯೋಗ್ಯಮಾದುದೇ ಇಷ್ಟಲಿಂಗವು.
ಆತ್ಮತೇಜಸ್ಸನ್ನೇ ಬಹಿಷ್ಕರಿಸಿ ಹೋಮಾಗ್ನಿಯಂ ಪ್ರಬಲವಂ ಮಾಡಿ
ಇಷ್ಟಲಿಂಗಪ್ರಸಾದಸಾಮಗ್ರಿಯನಾಹುತಿಗೊಟ್ಟು,
ಆ ತೇಜಸ್ಸನ್ನಾತ್ಮಸಮಾರೋಪಣೆಯಂ ಮಾಡಿ,
ತದ್ಯಜನಶೇಷಮಾಗಿರ್ಪ ರುಚಿಮಯದಿವ್ಯತೇಜಸ್ಸೇ
ಶಿವಧ್ಯಾನರೂಪಮಾದ ಪ್ರಾಣಲಿಂಗಾನುಭವವು.
ಆ ಶಿವಧ್ಯಾನದಿಂದ ಗುರೂಪದೇಶಸಿದ್ಧಮಾಗಿರ್ಪ
ಮಹಪ್ರಕಾಶವೇ ಪ್ರಾಣಲಿಂಗವು.
ತೃಪ್ತಿರೂಪಮಾದ ತತ್ವಾನುಭಾವವೇ
ನಿಜಾನುಭವಮಾಗಿರ್ಪುದೇ ಭಾವಲಿಂಗವು.
ಗುರುದತ್ತವಾದಿಷ್ಟಲಿಂಗದಿಂ ಶರೀರವು ಪೂತಮಾಗಿ,
ಜಂಗಮದತ್ತ ಶಿವಧ್ಯಾನತೇಜಸ್ಸಿನಿಂ ಪ್ರಾಣವು ಪವಿತ್ರಮಾಗಿ
ಮಹಾಚಿದ್ರೂಪಮಾದ ಶಿವಜ್ಞಾನನಿಮಿತ್ತಸಿದ್ಧಿಯಿಂ
ಭಾವವು ಪರಿಶುದ್ಧಮಾಗಿ,
ಆ ಶರೀರವೇ ಇಷ್ಟಲಿಂಗಕರಣಮಾಗಿಯೂ
ಪ್ರಾಣವೇ ಧ್ಯಾನಕರಣಮಾಗಿಯೂ
ಭಾವವೇ ಸಿದ್ಧೀಕರಣಮಾಗಿಯೂ
ಆ ಕರಣಂಗಳ್ಗೆ ಶಕ್ತಿಯಾಗಿಯೂ ಇರ್ಪುದರಿಂದಾ
ಲಿಂಗವೇ ಪತಿ ತಾನೇ ಸತಿಯಾಗಿರ್ಪುದರಿಂದೆರಡರಸಂಗವೇ
ಪರಮಾನಂದಮಯಮಾಗಿರ್ಪುದೇ ಪರಿಣಾಮವು.
ಅಂತಪ್ಪ ಲಿಂಗಸಂಗಪರಮಾನಂದರಸದಿಂ
ಪರವಶನಾಗುವಂತೆನ್ನಂ ಮಾಡಿ ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./82
ಪ್ರಜೆಗಳ ಅಲೆಯ ದೊರೆಯು ಒಚರ್ುವನಲ್ಲದೆ,
ದೊರೆಯ ಅಲೆಯ ಪ್ರಜೆಗಳೊಚರ್ುವರೇನಯ್ಯಾ ?
ಮಕ್ಕಳಲೆಯ ತಾಯಿಯೊಚರ್ುವಳಲ್ಲದೆ,
ತಾಯ ಅಲೆಯ ಮಕ್ಕಳೊಚರ್ುವರೇನಯ್ಯಾ ?
ನನ್ನಲೆಯ ನೀನೊರ್ಚಬೇಕಲ್ಲದೆ,
ನಿನ್ನಲೆಯ ನಾನೊಚರ್ುವುದೇನಯ್ಯಾ ?
ತಮದೊಳಗಣ ಜಾಗ್ರವು ನೀನು,
ಜಾಗ್ರದೊಳಗಣ ತಮವು ನಾನು.
ನನಗೆ ನೀನು ಬಾಹ್ಯನೂ ನಿನಗೆ ನಾನು ಬಾಹ್ಯನೂ ಆಗಿರ್ದೊಡೆ,
ನಾನೆಂತು ಸುಖಿಸುವೆ ? ನೀನೆಂತು ಪರಿಗ್ರಹಿಸುವೆ ?
ನನ್ನೊಳಗೆ ನೀನೂ ನಿನ್ನೊಳಗೆ ನಾನೂ ಇರ್ದಲ್ಲದೆ,
ನಿನ್ನ ನನ್ನ ಸಂಬಂಧಸಕೀಲವು ಸಂಘಟಿಸುವುದೇ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ ?/83
ಪ್ರಣವಸ್ವರೂಪಮಾದ ಪರಬ್ರಹ್ಮವೇ
ತಾನು ತನ್ನ ನಿಜಲೀಲಾನಿಮಿತ್ತ ತ್ರಿವರ್ಣರೂಪಕಮಾಗಿ,
ಅದೇ ಹರಿಹರಬ್ರಹ್ಮಸ್ವರೂಪಮಾಗಿ,
ಹರಿಯೇ ಶರೀರಮಾಗಿ, ಹರನೇ ಜೀವಮಾಗಿ, ಬ್ರಹ್ಮನೇ ಮನಸ್ಸಾಗಿ,
ಆ ಬ್ರಹ್ಮಸ್ವರೂಪಮಾದ ಕಲೆಯೇ ಶರೀರಕ್ಕೆ ಶಕ್ತಿಯಾಗಿ,
ಆ ಶರೀರಸ್ವರೂಪಮಾದ ಬಿಂದುವೇ ಪ್ರಾಣಕ್ಕೆ ಶಕ್ತಿಯಾಗಿ,
ಆ ಪ್ರಾಣಸ್ವರೂಪಮಾದ ನಾದವೇ ಮನಶ್ಶಕ್ತಿಯಾಗಿ,
ಆ ಪ್ರಾಣಕ್ಕೆ ನಾಸಿಕವೇ ಸ್ಥಾನಮಾಗಿ,
ಮನಸ್ಸಿಗೆ ಜಿಹ್ವೆಯೇ ಸ್ಥಾನಮಾಗಿ,
ಶರೀರಕ್ಕೆ ನೇತ್ರವೇ ಸ್ಥಾನಮಾಗಿ,
ತನು ಸ್ಪರುಶನಸ್ವರೂಪು, ಮನಸ್ಸು ಶಬ್ದಸ್ವರೂಪು, ಪ್ರಾಣ ಆತ್ಮಸ್ವರೂಪು.
ಈ ತನು ಮನಃಪ್ರಾಣಂಗಳಿಂದೊಗೆದ ಆತ್ಮಾದಿ ಷಡ್ಭೂತಂಗಳಿಗೆ
ಆತ್ಮಾದಿ ಷಡ್ಭೂತವೇ ಕಾರಣಮಾಗಿ,
ಜೀವನದಲ್ಲಿ ಹುಟ್ಟಿದ ಸತ್ವಗುಣವು ಶರೀರವನಾವರಿಸಿ,
ಆ ಜೀವನಿಗೆ ತಾನೇ ಸ್ಥಿತಿಕರ್ತೃವಾಯಿತ್ತು.
ಶರೀರದಲ್ಲಿ ಹುಟ್ಟಿದ ತಮೋಗುಣವು ಜೀವನನಾವರಿಸಿ,
ಆ ಶರೀರಕ್ಕೆ ತಾನೇ ಸಂಹಾರಕರ್ತೃವಾಯಿತ್ತು.
ಆ ಶರೀರ ಜೀವಸಂಗದಿಂದೊಗೆದ ಅಹಂಕಾರಸ್ವರೂಪಮಾದ
ರಜೋಗುಣವು ಮನಮನಾವರಿಸಿ,
ಈ ಎರಡಕ್ಕೂ ತಾನೇ ಸೃಷ್ಟಿಕರ್ತೃವಾಯಿತ್ತು.
ಆ ನಾದವೇ ವಾಗ್ದೇವಿಯಾಗಿ, ಬಿಂದುವೇ ಮಹಾದೇವಿಯಾಗಿ,
ಕಳೆಯೇ ಮಹಾಲಕ್ಷ್ಮಿಯಾಗಿ,
ಈ ತನು ಮನಃಪ್ರಾಣಂಗಳನು ಮರುಳುಮಾಡಿತ್ತು.
ಜಾಗ್ರತ್ಸ್ವಪ್ನಸುಷುಪ್ತ್ಯಾದ್ಯವಸ್ಥೆಗಳೊಳಗೆ ಹೊಂದಿಸಿ,
ಮುಂದುಗಾಣಲೀಯದೆ, ಸೃಷ್ಟಿಸ್ಥಿತಿಸಂಹಾರಂಗಳಲ್ಲಿ ತೊಳಲಿಬಳಲಿಸುತ್ತಿರಲು,
ಆ ಕಳೆಯಲ್ಲಿ ಕೂಡಿ ಶರೀರವು ಉಬ್ಬುತ್ತಾ,
ಆ ನಾದದಲ್ಲಿ ಕೂಡಿ ಮನಸ್ಸು ಕೊಬ್ಬುತ್ತಾ,
ಆ ಶಕ್ತಿಯಲ್ಲಿ ಕೂಡಿ ಪ್ರಾಣ ಬೆಬ್ಬನೆ ಬೆರೆವುತ್ತಾ,
ಭವಭವದೊಳು ತೊಳಲುತ್ತಿರಲು,
ಗುರುಕಟಾಕ್ಷದಿಂ ಕರ್ಮವು ಸಮೆದು ಧರ್ಮವು ನೆಲೆಗೊಳ್ಳಲು,
ಆ ಮೇಲೆ ಮಹಾಜ್ಞಾನಶಕ್ತಿಯಾಯಿತ್ತು
ಆ ಬಿಂದುವೇ ಆನಂದಶಕ್ತಿಯಾಯಿತ್ತು
ಆ ಕಳೆಯೇ ನಿಜಶಕ್ತಿಯಾಯಿತ್ತು
ಇಂತು ಸತ್ಯಜ್ಞಾನಾನಂದಸ್ವರೂಪಮಾದ ಶಕ್ತಿಮಹಿಮೆಯಿಂದ
ಶರೀರವೇ ವಿಷ್ಣುವಾಗಲು,
ಅಲ್ಲಿ ಶ್ರೀಗುರುಸ್ವರೂಪಮಾದ ಇಷ್ಟಲಿಂಗವು ಸಾಧ್ಯಮಾಯಿತ್ತು.
ಆ ಪ್ರಾಣವೇ ರುದ್ರಸ್ವರೂಪವಾಗಲು,
ಜಂಗಮಮೂರ್ತಿಯಾದ ಪ್ರಾಣಲಿಂಗವು ಸಾಧ್ಯವಾಯಿತ್ತು.
ಮನಸ್ಸೇ ಬ್ರಹ್ಮಸ್ವರೂಪವಾಗಲು,
ಲಿಂಗಾಕಾರಮಾದ ಭಾವಲಿಂಗವು ಸಾಧ್ಯಮಾಯಿತ್ತು.
ಆ ಲಿಂಗಗಳೇ ಆತ್ಮಾದಿ ಷಡ್ಭೂತಂಗಳಲ್ಲಿ
ಆಚಾರಾದಿ ಮಹಾಲಿಂಗಂಗಳಾದವು.
ಆ ಶಕ್ತಿಗಳೇ ಕ್ರಿಯಾದಿ ಶಕ್ತಿಯರಾದರು.
ಆ ಶಕ್ತಿಮುಖದಲ್ಲಿ ತಮ್ಮಲ್ಲಿ ಹುಟ್ಟಿದ ನಾನಾವಿಷಯ ಪದಾರ್ಥಂಗಳನ್ನು
ಆಯಾ ಲಿಂಗಂಗಳಿಗರ್ಪಿಸಿ,
ತತ್ಸುಖಾನುಭವದೊಳೋಲಾಡುತ್ತಿರಲು,
ಆ ಶಕ್ತಿಗಳೇ ಲಿಂಗಶಕ್ತಿಗಳಾಗಿ,
ತಾವೇ ಆಯಾ ಲಿಂಗಸ್ವರೂಪ ಶರೀರ ಪ್ರಾಣ ಮನೋಭಾವಂಗಳಳಿದು,
ಲಿಂಗಭಾವ ನೆಲೆಗೊಂಡಲ್ಲಿ, ಸತ್ವರಜಸ್ತಮೋಗುಣಗಳು
ಜ್ಯೋತಿಯೊಳಗಡಗಿದ ಕತ್ತಲೆಯಂತೆ,
ತಮ್ಮ ನಿಜದಲ್ಲಿ ತಾವೇ ಲೀನವಾದವು.
ಬಿಂದು, ಶರೀರದೊಳಗೆ ನಿಂದು ಆನಂದರೂಪಮಾಯಿತ್ತು.
ನಾದವು ಪ್ರಾಣದೊಳಗೆ ಬೆರೆದು ನಿಶ್ಶಬ್ದನಿರೂಪಮಾದ ಜ್ಞಾನಮಾಯಿತ್ತು.
ಕಳೆ ಮನದೊಳಗೆ ಬೆರದು, ಪರಬ್ರಹ್ಮ ಸ್ವರೂಪಮಾಗಿ ನಿಜಮಾಯಿತ್ತು .
ಆ ಆನಂದವೇ ಇಷ್ಟಲಿಂಗರೂಪಮಾಗಿ,
ಜ್ಞಾನವೇ ಪ್ರಾಣಲಿಂಗಸ್ವರೂಪಮಾಗಿ,
ಆ ನಿಜವೇ ಭಾವಲಿಂಗಮೂರ್ತಿಯಾಗಲು,
ಆ ಕರ್ಮ ಧರ್ಮ ವರ್ಮಂಗಳಡಗಿದವು.
ಆತ್ಮಾದಿ ಷಡ್ಭೂತಂಗಳು ಆಚಾರಾದಿ ಮಹಾಲಿಂಗಂಗಳೊಳಗೆ ಲೀನಮಾಗಲು,
ಆ ಆರುಲಿಂಗಂಗಳೇ ಈ ಮೂರುಲಿಂಗಂಗಳೊಳಗೆ ಬೆರೆದು,
ಇಷ್ಟವೇ ಪ್ರಾಣಮಾಗಿ, ಭಾವಸಂಗದೊಳಗೆ ಪರವಶಮಾಗಿ,
ತಾನುತಾನೆಯಾಗಿ, ತನ್ನಿಂದನ್ಯವೇನೂ ಇಲ್ಲದೆ ನಿಬ್ಬೆರಗಾಯಿತ್ತು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./84
ಪ್ರಪಂಚವೆಂಬ ಮಹಾಕಮಲವು
ಸತ್ವರೂಪಮಾದ ಜಾಗ್ರದಲ್ಲಿ ವಿಕಾಸವನ್ನೂ
ತಮೋರೂಪಮಾದ ಸುಷುಪ್ತಿಯಲ್ಲಿ ಮುಕುಳನವನ್ನೂ ಹೊಂದುತಿರ್ಪುದು.
ಸತ್ವರೂಪಮಾದ ಚಿತ್ತಿಗೆ ಕಮಲವೇ ಗುಣವು,
ತಮೋರೂಪಮಾದ ಸತ್ತಿಗೆ ಸತ್ವವೇ ಗುಣವು.
ಪ್ರಪಂಚಕಮಲವೇ ಸದ್ರೂಪು, ತದ್ವಾಸನೆಯೇ ಆನಂದರೂಪು,
ತದನುಭವಕರ್ತೃವೇ ಚಿದ್ರೂಪು.
ಇಂತಪ್ಪ ಕಮಲವು ಚಿದನುಭವ ನಿಮಿತ್ತ ದಿವಸದಲ್ಲಿ ವಿಕಸಿತಮಾಗಿ,
ರಾತ್ರಿಯಲ್ಲಿ ಮುಕುಳಿತಮಾಗಿರ್ಪುದು.
ಮುಕುಳನವು ಅಪವಿತ್ರವೂ
ಅತಿವಿಕಸನವು ಪೂಜಾಯೋಗ್ಯಮಲ್ಲದುದೂ ಆದುದರಿಂದ
ಈಷದ್ವಿಕಸನರೂಪ ಸಂಧಿಕಾಲವೇ ಪೂಜಾಯೋಗ್ಯವಾಯಿತ್ತು.
ಹೃದಯಾದಿ ಇಂದ್ರಿಯಂಗಳೆಂಬ ಕಮಲಂಗಳು
ನಿದ್ರೆಯಲ್ಲಿ ಮುಕುಳಿತಗಳಾಗಿಯೂ
ಜಾಗ್ರದಲ್ಲಿ ವಿಕಸಿತಗಳಾಗಿಯೂ ಇರುತಿರ್ಪುದರಿಂದ,
ಆ ಪ್ರಬೋಧಕಾಲವೇ ಪೂಜಾಯೋಗ್ಯವಾಯಿತ್ತು.
ಅಂತಪ್ಪ ಕಾಲದಲ್ಲಿ ಸುವಾಸನಾಭರಿತಗಳಾದ
ಇಂದ್ರಿಯಕಮಲಗಳಲ್ಲಿ ಪ್ರಪಂಚವಿಚಾರ ಮಲಿನಗುಣಗಳೆಂಬ
ಭ್ರಮರಂಗಳು ಮುಟ್ಟುವುದಕ್ಕೆ ಮುನ್ನವೇ
ಆಚಾರಾದಿಲಿಂಗಂಗಳಂ ಚಿತ್ತಾದಿ ಭಾವಹಸ್ತಂಗಳಿಂದಿರಿಸಿ,
ಶಿವಾರ್ಪಣಸುಖದಿಂ ದ್ರವಿಸುತ್ತಿರ್ಪ ನಿರ್ಮಲಾನಂದ ಜಲದಿಂದಭಿಷೇಕಿಸಿ,
ಆಯಾಲಿಂಗಂಗಳಿಗಾಯಾ ಪದಾರ್ಥಂಗಳಿಂದ
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳಂ ಮಾಡಿ,
ಆ ಶಿವಪ್ರಸಾದವೇ ತಾನಾಗಿ,
ಆ ಶಿವಪ್ರಸಾದಾನುಭಾವದೊಳಗೆ ಸಮರಸಮಾಗಿರ್ಪಾತನೆ ಪ್ರಸಾದಿಯು.
ಅಂತಪ್ಪ ಪುರುಷನೇ ಸತ್ಕರ್ಮಯೋಗ್ಯನು.
ಆತನು ಶಿವನಿರ್ಮಾಲ್ಯವು ಹೇಗೆ ನಮಸ್ಕಾರಯೋಗ್ಯಮಾಗಿ
ಪವಿತ್ರವಾಗಿರ್ಪುದೊ ಹಾಗೆ ಪವಿತ್ರಮಾಗಿರ್ಪನು.
ಆದುದರಿಂದಾಯಾ ಕಾಲಂಗಳಲ್ಲಾಯಾ ಸ್ಥಾನಂಗಳಲ್ಲಾಯಾ
ಲಿಂಗಂಗಳಿಗಾಯಾ ವಿಷಯಪದಾರ್ಥಂಗಳಂ
ಸಾವಧಾನಮಾರ್ಗದಿಂದರ್ಪಿಸಿ,
ತತ್ಪ್ರಸಾದಾನುಭವಸುಖದೊಳಗೆ ಪರವಶನಾಗಿ
ನನ್ನಂ ಮರೆತು ನಿನ್ನನ್ನರಿತಿರ್ಪಂತೆ ಮಾಡಿ ಕೂಡಿ ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./85
ಬಾಲ್ಯವೇ ಬ್ರಹ್ಮಸ್ವರೂಪು, ಯೌವನವೇ ವಿಷ್ಣುಸ್ವರೂಪು,
ವಾರ್ಧಕ್ಯವೇ ಮಹೇಶ್ವರಸ್ವರೂಪು.
ಬಾಲ್ಯದಲ್ಲಿ ಗುರುವೆಂಬ ಆರಂಭಗಾರನು
ತನ್ನಲ್ಲಿ ಬಿತ್ತಿದ ವಿದ್ಯಾಬೀಜಂಗಳು ಯೌವನದಲ್ಲಿ ಬೆಳೆದು ಪಲ್ಲವಿಸಿ,
ವಾರ್ಧಕ್ಯದಲ್ಲಿ ಫಲಿಸಿ ಪರಿಪಕ್ವಮಾಗಿ,
ಶರೀರಾಂತ್ಯದಲ್ಲಿ ಅನುಭವಕ್ಕೆ ಬರುತ್ತಿರ್ಪುದಾದಕಾರಣ,
ಬಾಲ್ಯದಲ್ಲಿ ಹರಿತವರ್ಣ, ಯೌವನದಲ್ಲಿ ಶ್ಯಾಮವರ್ಣ,
ವಾರ್ಧಕ್ಯದಲ್ಲಿ ಪಾಂಡುವರ್ಣವಪ್ಪುದರಿಂ,
ಬಾಲ್ಯ ಯೌವನ ವಾರ್ಧಕ್ಯಂಗಳು ತ್ರಿಮೂರ್ತಿಸ್ವರೂಪಮಾಯಿತ್ತು.
ಬಾಲ್ಯದಲ್ಲಿ ಕಾಲಮಧಿಕಮಾಯಿತ್ತು,
ಯೌವನದಲ್ಲಿ ಕಾಮಮಧಿಕಮಾಯಿತ್ತು,
ಮಹೇಶ್ವರರೂಪಮಾದ ವಾರ್ಧಕ್ಯದಲ್ಲಿ ಲಯವನೈದುತ್ತ್ತಿರ್ಪವಾದಕಾರಣ
ಬ್ರಹ್ಮವಿಷ್ಣುಗಳು ಲಯವನೈದುತ್ತಿಹುದು ನಿಶ್ಚಯಮಾಯಿತ್ತು.
ಬಾಲ್ಯವು ಪಾಪಪುಣ್ಯರಹಿತಮಾಗಿಹುದು,
ಕಾಮೋಪಲಾಲನ ಪಾಪೋತ್ಕೃಷ್ಟಮಪ್ಪ ಯೌವನವೇ ವಿಷ್ಣುವಾದುದರಿಂದ
ತದರ್ಚನೆಯೇ ಪ್ರಾಪಂಚಿಕಮಾಗಿಹುದು.
ಪುಣ್ಯೋತ್ಕೃಷ್ಟಮಪ್ಪ ವಾರ್ಧಕ್ಯವೇ ಶಿವನಾದುದರಿಂದ
ತದರ್ಚನೇಯೇ ಜ್ಞಾನಸ್ವರೂಪಮಾಗಿ ಮೋಕ್ಷಸಾಧನವಹುದು.
ಇಂತಪ್ಪ ಬಾಲ್ಯ ಯೌವನ ವಾರ್ಧಕ್ಯಗಳನ್ನು
ಜಾಗ್ರತ್ಸ್ವಪ್ನ ಸುಷುಪ್ತಿಗಳಲ್ಲಿ ಜೀವನು ಅನುಭವಿಸುತ್ತಾ,
ತನ್ನ ನೈಜಸ್ವರೂಪಮಪ್ಪ ತೂರ್ಯಾವಸ್ಥೆಯಲ್ಲಿ ಲಯವಂ ಹೊಂದುತ್ತಾ,
ಅವಸ್ಥಾತ್ರಯಂಗಳನ್ನು ಅನುಭವಿಸುತ್ತಿರ್ಪನು.
ಅವಸ್ಥಾಕ್ರಮವೆಂತೆಂದೊಡೆ : ಪೃಥ್ವಿಯ ಸೃಷ್ಟಿಯೇ ಸ್ವಪ್ನವು, ಜಲದ ಸ್ಥಿತಿಯೇ ಜಾಗ್ರವು,
ಅಗ್ನಿಯ ಸಂಹಾರವೇ ಸುಷುಪ್ತಿಯು,
ವಾಯುವಿನ ತೂರ್ಯವೇ ಜೀವಂಗೆ ಮರಣವು, ಇದೇ ತೂರ್ಯಮಾಯಿತ್ತು.
ಇಂತಪ್ಪ ಜೀವನು ಗುರುಕರುಣದಿಂ ಆಕಾಶದ ತೂರ್ಯಾತೀತವನೊಂದಿ,
ಲಿಂಗವೇ ಪತಿ ತಾನೇ ಸತಿಯಾಗಿ, ತದಾತ್ಮನಲ್ಲಿ ಬೆರೆದು,
ಭೇದದೋರದಿರ್ಪುದೇ ಲಿಂಗೈಕ್ಯಾವಸ್ಥೆಯು.
ಇಂತಪ್ಪ ಲಿಂಗೈಕ್ಯಾವಸ್ಥೆಯು
ವಾಙ್ಮನಕ್ಕಗೋಚರವಭೇದ್ಯವಸಾಧ್ಯಮೆನಗೂ ಪೊಗಳಲಳವಲ್ಲ,
ಲಿಂಗ ತಾನೇ ಬಲ್ಲ ಕಾಣಾ, ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./86
ಬೀಜದೊಳಗಿಹ ವೃಕ್ಷಫಲವ ಸವಿಯಬಹುದೆ ?
ಬಿಂದುವಿನಲ್ಲಿರ್ಪ ಸತಿಯಸಂಗಭೋಗವು ಸಂಘಟಿಸುವುದೆ ?
ಮಳೆವನಿಯೊಳಿರ್ಪ ಹುರುಮಂಜಿಮುತ್ತುಗಳಂ
ಸರಗೊಳಿಸಿ ಕೊರಳೊಳು ಧರಿಸಬಹುದೆ ?
ಹಾಲೊಳಗಿರ್ಪ ತುಪ್ಪವು ಅರಸಿದರೆ ಸಿಕ್ಕುವುದೆ ?
ಕಬ್ಬಿನೊಳಗಿರ್ಪ ಬೆಲ್ಲವು ಕಣ್ಣಿಗೆ ಕಾಣಿಸುವುದೆ ?
ತನ್ನೊಳಗಿರ್ಪ ಶಿವತತ್ವವು ನೆನೆದಾಕ್ಷಣವೆ ಅನುಭವಕ್ಕೆ ಬರ್ಪುದೆ ?
ಭಾವಿಸಿ ತಿಳಿದು ಮಥಿಸಿ ಪ್ರಯೋಗಾಂತರದಿಂ ಪ್ರಸನ್ನಮಂ ಮಾಡಿಕೊಂಡು,
ತದನುಭವಸುಖದೊಳೋಲಾಡುವುದು
ಅತಿಚತುರನಾದ ಶಿವಶರಣಂಗಲ್ಲದುಳಿದರ್ಗುಂಟೆ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./87
ಬ್ರಹ್ಮಾಂಡವೇ ಸ್ಥಾವರವು, ಪಿಂಡಾಂಡವೇ ಜಂಗಮವು,
ಸದ್ರೂಪಮಾದ ಬ್ರಹ್ಮಾಂಡಡದೊಳಗಿರ್ಪ
ಪಂಚಾಶತ್ಕೋಟಿ ವಿಸ್ತಿರ್ಣಮಾಗಿರ್ಪ ಪೃಥ್ವಿಯಲ್ಲಿ
ಲವಣಸಮುದ್ರಮಧ್ಯದಲ್ಲಿರ್ಪ ಕರ್ಮಭೂಮಿಯನ್ನು
ಮನುಷ್ಯರು ಶುದ್ಧಿಯನ್ನು ಮಾಡಿ,
ಬಿಂದುಬೀಜವನ್ನು ವಸಂತಕಾಲದಲ್ಲಿ ಭಿತ್ತಿ, ವಷರ್ಾಕಾಲದಲ್ಲಿ ಬೆಳೆದು,
ಹೇಮಂತಕಾಲದಲ್ಲಿ ಕೂಡಿಟ್ಟು, ತದ್ರಾಜ್ಯಾಧಿಪತಿಯ ಭಾಗವನ್ನಾತಾಂಗೆ ಕೊಟ್ಟು,
ಉಳಿದುದನ್ನು ಪುತ್ರ ಮಿತ್ರ ಕಳತ್ರರೊಡನೆ ತಾನನುಭವಿಸುತ್ತಿರ್ಪುದಂದದಿ,
ಚಿದ್ರೂಪವಾದ ಅನಂತಕೋಟಿ ಪಿಂಡಾಂಡಗಳಲ್ಲಿ
ಕರ್ಮಕರ್ತೃವಾದ ಮನುಷ್ಯನ ಶರೀರದ ಹೃದಯಮೆಂಬಾಶಮಧ್ಯದಲ್ಲಿರ್ಪ
ಕಲ್ಮಷಂಗಳಂ ಕಳೆದು ಶೋಧಿಸಿ,
ನಾದಬೀಜಮಂ ಜ್ಞಾನಾಗ್ನಿಯ ಹದದಲ್ಲಿ ಬಾಲ್ಯದಲ್ಲಿ ಬಿತ್ತಿ,
ಯೌವನದಲ್ಲಿ ಬೆಳೆಸಿ, ವಾಧರ್ಾಕ್ಯದಲ್ಲಿ ಕೂಡಲಿಟ್ಟು,
ತತ್ಪದಾರ್ಥವನ್ನು ತನ್ಮನೋನಾಥನಪ್ಪ ಶಿವನಿಗೆ ಕೊಟ್ಟು,
ಉಳಿದ ತನ್ಮಂತ್ರಪದಾರ್ಥವನ್ನು ಮಂತ್ರಸ್ವರೂಪಿಗಳಪ್ಪಾ ದೇವತೆಗಳು
ತಾವನುಭವಿಸುತ್ತಿರ್ಪರು,
ಈ ಪಿಂಡಾಂಡ ಬ್ರಹ್ಮಾಂಡಗಳಿಗೆ ಜಿಹ್ವೆಯೇ ಆನಂದಕಾರಣಕಳಾರೂಪಮಾಗಿ
ಬ್ರಹ್ಮಾಂಡಲ್ಲಿರ್ಪ ಬಿಂದುವಸ್ತುವಿನಿಂದ ಪಿಂಡಾಂಡಮಂ ರಕ್ಷಿಸಿ,
ಪಿಂಡಾಂಡದಲ್ಲಿ ಹುಟ್ಟಿದ ನಾನಾ ವಸ್ತುವಿನಿಂದ ಬ್ರಹ್ಮಾಂಡಮಂ ರಕ್ಷಿಸಿ,
ಮನುಷ್ಯರನ್ನು ದೇವತೆಗಳನ್ನಾಗಿಮಾಡಿ, ದೇವತೆಗಳಂ ಮನುಷ್ಯರಂ ಮಾಡಿ,
ಯಾತಾಯಾತನೆಗಳಲ್ಲಿ ಪಿಂಡಾಂಡನರಕವನ್ನು ದೇವತೆಗಳನುಭವಿಸಲು,
ಬ್ರಹ್ಮಾಂಡನರಕವನ್ನು ಮನುಷ್ಯರನುಭವಿಸಿ ದುಃಖಿಸುತ್ತಾ,
ತತ್ಸುಖಾನುಭವಗಳಲ್ಲಿ ನಲಿವುತ್ತಿರ್ಪುದೆಲ್ಲಾ
ಭ್ರಾಮಕನೆಂದು ತಿಳಿದ ಮಹಾಪುರುಷನಿಗೆ
ಬ್ರಹ್ಮಾಂಡವೂ ಪಿಂಡಾಂಡವೂ ಏಕಮಾಯಿತ್ತು.
ದೇವನಮನುಷ್ಯರ ಶರೀರದಲ್ಲಿರ್ಪ ಶಿವಶರಣರ ಪಾದಸೇವೆಯಲ್ಲಿ
ನಾನು ಪರಿಶುದ್ಧನಾಗಿ ಪರಿಣಾಮಿಸುವಂತೆ ಮಾಡಾ
ಮಹಾಘನ ದೊಡ್ಡದೇಶಿಕಾರ್ಯಗುರು ಪ್ರಭವೆ. /88
ಭಂಡಾರದೊಳಗಿರ್ಪ ಸುವರ್ಣವೇ ಪ್ರಾಣಲಿಂಗವಾಗಿ,
ಆಭರಣರೂಪಮಾದ ಸುವರ್ಣವೇ ಇಷ್ಟಲಿಂಗರೂಪಮಾಗಿ
ಸಕಲಪ್ರಪಂಚದಲ್ಲೆಲ್ಲಾ ತಾನೇ ತುಂಬಿ,
ತನ್ನ ಮಹಿಮೆಯಿಂದಲ್ಲೇ ಸಕಲಪ್ರಪಂಚವನಾಡಿಸುವ
ಸುವರ್ಣವೇ ಭಾವಲಿಂಗಮಾಗಿ,
ಪ್ರಪಂಚದಲ್ಲೆಲ್ಲಾ ತುಂಬಿರ್ಪಲ್ಲಿ ಮಹಾಲಿಂಗಮಾಗಿ,
ಅದೇ ಆದಾಯಮುಖದಲ್ಲಿ ಒಮ್ಮುಖಕ್ಕೆ ಬಂದು
ತನಗಿದಿರಿಟ್ಟಲ್ಲಿ ಪ್ರಸಾದಲಿಂಗಮಾಗಿ,
ತನ್ನ ಸಂಸಾರಮುಖದಲ್ಲಿ ಸಂಚರಿಸುತ್ತಾ
ತನಗೆ ಸೇವನಾಯೋಗ್ಯಮಾದಲ್ಲಿ ಜಂಗಮಲಿಂಗಮಾಗಿ,
ಮುಂದೆ ತನ್ನ ಸಂರಕ್ಷಣಕಾರಣ ಕೋಶಭರಿತಮಾದಲ್ಲಿ ಶಿವಲಿಂಗಮಾಗಿ,
ಅದೇ ಅಲಂಕಾರಮುಖದಲ್ಲಿ ದೊಡ್ಡಿತಾದಲ್ಲಿ ಗುರುಲಿಂಗಮಾಗಿ,
ಈ ವಿಧದಲ್ಲೆಲ್ಲವು ತದಾಚರಣೆವಿಡಿದಿರ್ಪುದರಿಂ
ಒಂದು ಸುವರ್ಣವೇ ಹಲವು ರೂಪಮಾಗಿ,
ಪ್ರಪಂಚ ಸೃಷ್ಟಿ ಸ್ಥಿತಿ ಸಂಹಾರಕ್ಕೂ ಬ್ರಹ್ಮಾಂಡಕ್ಕೂ
ತಾನೇ ಕಾರಣಮಾಗಿರ್ಪಂತೆ,
ಒಂದು ಲಿಂಗವೇ ಹಲವು ರೂಪವಾಗಿ,
ಭಕ್ತನ ಸೃಷ್ಟಿ ಸ್ಥಿತಿ ಸಂಹಾರಕ್ಕೂ ಬ್ರಹ್ಮಾಂಡಕ್ಕೂ ತಾನೇ ಕಾರಣಮಾಗಿರ್ಪುದು
, ಪ್ರಪಂಚಕ್ಕೆ ತಾನು ಚೇತನಮಾಗಿ ಪ್ರಪಂಚವನಾಡಿಸುತ್ತಾ,
ಆ ಪ್ರಪಂಚಕ್ಕೆ ತಾನೇ ಸುಖಪ್ರದನಾಗಿರ್ಪಂತೆ,
ಲಿಂಗವು ನಿರ್ಗುಣಮಾದರೂ ಗುಣರೂಪಮಾದ ಭಕ್ತಿನಿಗೆ
ತಾನು ಗುಣಮಾಗಿ, ಭಕ್ತಸುಖಪ್ರದಮಾಗಿರ್ಪುದು.
ಸುವರ್ಣದಿಂ ಸುವರ್ಣವೇ ಜೀವನಮಾಗಿರ್ಪ ಅಧಿಕಬಲಮಂ ಸಂಪಾದಿಸಿ,
ಆ ಬಲದಿಂದ ಶತ್ರುಸಂಹಾರಮಂ ಮಾಡಿ, ರಾಜ್ಯವನ್ನು ಸಂಪಾದಿಸಿ,
ಅದೆಲ್ಲಕ್ಕೂ ತಾನೇ ಕರ್ತೃವಾಗಿ ತನ್ನಧೀನಮಾಗಿರ್ಪ
ಆ ಆರಾಜ್ಯಾದಿಭೋಗವಂ ತಾನನುಭವಿಸುತ್ತಾ ನಿಶ್ಚಿಂತನಾಗಿ,
ಐಶ್ವರ್ಯಕ್ಕೂ ತನಗೂ ಅಭೇದರೂಪಮಾಗಿರ್ಪ ಅರಸಿನಂತೆ,
ಲಿಂಗದಿಂ ಲಿಂಗವೇ ಜೀವಿತಮಾಗಿರ್ಪ ನಿಜಬಲವಂ ಸಂಪಾದಿಸಿ,
ತದ್ಬಲದಿಂ ತಮೋಗುಣ ಶತ್ರುಸಂಹಾರವಂ ಮಾಡಿ,
ಮನೋರಾಜ್ಯಮಂ ಸಾಧಿಸಿ, ಎಲ್ಲಕ್ಕೂ ತಾನೇ ಕರ್ತೃವಾಗಿ,
ತನ್ನಧೀನಮಾಗಿರ್ಪ ಮನೋಮುಖದಿಂದ ಬಂದ ಸುಖವನ್ನು
ಉಪಾಧಿಯಿಲ್ಲದೆ ನಿಶ್ಚಿಂತಮಾಗನುಭವಿಸುತ್ತಾ,
ದೀಪಪ್ರಭೆಯೋಪಾದಿಯಲ್ಲಿ ಲಿಂಗಕ್ಕೂ ತನಗೂ ಭೇದವಿಲ್ಲದೆ,
ಐಶ್ವರ್ಯವಂತನು ತನ್ನ ಮುನ್ನಿನ ಗುಣವಳಿದು
ಐಶ್ವರ್ಯಗುಣವೇ ನಿಜಮುಖ್ಯಗುಣಮಾಗಿ ಸಂಚರಿಸುತ್ತಿರ್ಪಂತೆ,
ಲಿಂಗವಂತನು ತನ್ನ ಪೂರ್ವದ ಗುಣವಳಿದು
ಲಿಂಗದಗುಣಮೆ ನಿಜಗುಣಮಾಗಿರ್ಪುದೇ ಲಿಂಗೈಕ್ಯವು.
ಇಂತಪ್ಪ ಸಕೀಲವೆನಗೆ ಸಾಧ್ಯಮಪ್ಪಂತೆ ಮಾಡಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./89
ಭಕ್ತಿಯೆಂಬ ಪಾಲನ್ನು ಮನದಲ್ಲಿ ಹೆಪ್ಪುಗೊಟ್ಟು,
ಅದರಿಂ ಘಟ್ಟಿಗೊಂಡ ದೃಢಿಮ ದಧಿಯನ್ನು ಶರೀರಮೆಂಬ ಭಾಂಡದಲ್ಲಿ ತುಂಬಿ,
ತತ್ವವೆಂಬ ಮಂತುಗೋಲಿನಿಂದ ಮಥಿಸಲು,
ಲಿಂಗವೆಂಬ ನವನೀತವು ಕಾಣಿಸಲಾಗಿ ಅದಂ ಪರಿಗ್ರಹಿಸಿ,
ಜ್ಞಾನಾಗ್ನಿಯಲ್ಲಿ ಪಕ್ವವಂ ಮಾಡಲು,
ನಿಜವಾಸನೆಯಿಂ ಪ್ರಕಾಶಿಸುತ್ತಿಹ ತದ್ಘೃತಸೇವನಾಬಲದಿಂದ
ಆತ್ಮನೇ ಲಿಂಗಮಾಯಿತ್ತು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./90
ಭಾವಮೆಂಬುದು ಸತ್ವಪದಾರ್ಥವು.
`ಅಸಮನ್ತಾನ್ಮನ್ಯತೇ ಇತ್ಯಾತ್ಮಾ’ ಎಂಬ ವ್ಯುತ್ಪತ್ತಿಯಿಂ
ಚೆನ್ನಾಗಿ ಪ್ರಕಾಶಿಸುತ್ತಿರ್ಪುದೇ ಆತ್ಮನು.
ಪ್ರಕಾಶವೆಂದರೆ ಮಹಾಜ್ಞಾನ, ಅದು ನಿಜವಂ ಹೊಂದಿರ್ಪುದು.
ಭಾ ಎಂದರೆ ಪ್ರಕಾಶ, ವ ಎಂದರೆ ವಹಿಸುವುದು,
ಆ ಪ್ರಕಾಶಾತ್ಮನಂ ವಹಿಸುವುದೇ ಭಾವವಾಯಿತ್ತು.
ಆತ್ಮನು ಅನಾದಿಸಂಸಾರವೇ ತಾನಾಗಿರ್ಪುದರಿಂದಲೂ
ದಿವ್ಯಜ್ಞಾನಪ್ರಕಾಶದಿಂ ಸಕಲರನ್ನು ರಕ್ಷಿಸುತ್ತಿರ್ಪುದರಿಂದಲೂ
`ಭಯಾದವತೀತಿ ಭಾವಃ’ ಎಂಬ ವ್ಯುತ್ಪತ್ತಿಯಿಂ ಭಾವಮಾಯಿತ್ತು.
ವಿಭುವಾದ ಆತ್ಮನ ಕರ್ಮಕ್ಕೆ ತಾನು ಸಂಬಂಧಮಾದುದರಿಂ
ಭಾವವೇ ಕ್ರಿಯಾರೂಪು.
ಜ್ಞಾನರೂಪಿಯಾದ ಶಿವನು ಅಕಾರದೊಳ್ಕೂಡಿ ಆತ್ಮನೆನಿಸಿರ್ಪುದರಿಂ
ಅಕಾರವೆಲ್ಲವೂ ಶಕ್ತಿ, ತಾನೊಬ್ಬನೇ ಶಿವನಾದುದರಿಂ,
ಅಂತಪ್ಪ ಅಕಾರರೂಪಮಾಗಿ ಭಾವಸಂಬಂಧಮಾಗಿರ್ಪುದೇ ಭಾವವು,
ಅಂತಪ್ಪ ಆದಿಶಕ್ತಿಸಂಗದಿಂ ಸಾಕಾರರೂಪಿಯಾದ ಶಿವನೇ ಇಷ್ಟಲಿಂಗವು,
ಅಂತಪ್ಪ ಶಿವಸಂಗದಿಂ ಸಾಕಾರರೂಪವಾದ ಭಾವವೇ ಕ್ರಿಯೆ,
ಆ ಕ್ರಿಯಾರೂಪವಾದ ಭಕ್ತನೇ ಶಕ್ತಿರೂಪಿಯಾದುದರಿಂ
ಲಿಂಗವೇ ಪತಿ, ಶರಣನೇ ಸತಿ, ಈರ್ವರ ಸಮರಸಾನಂದವೇ ಮೋಕ್ಷ.
ಇಂತಪ್ಪ ಸತ್ಯಜ್ಞಾನಾನಂದವೇ ಶಿವಶರಣರ ಸಂಗ,
ಅದೇ ಏಕಮೇವಾದ್ವಿತೀಯಂ ಬ್ರಹ್ಮವು.
ಅಂತಪ್ಪ ಬ್ರಹ್ಮಾನಂದಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./91
ಮನಸ್ಸೇ ಅಂತಃಕರಣವಾಗಿಯೂ ಶರೀರವೇ ಕರಣವಾಗಿಯೂ
ಪ್ರಪಂಚವೇ ಉಪಕರಣವಾಗಿಯೂ ಇರ್ಪ ಜೀವನು,
ಉಪಕರಣದಲ್ಲಿರ್ಪ ಕಳೆಯನ್ನೂ ಕರಣದಲ್ಲಿರ್ಪ ಬಿಂದುವನ್ನೂ
ಅಂತಃಕರಣದಲ್ಲಿರ್ಪ ನಾದವನ್ನೂ ಮಿಥ್ಯದಲ್ಲಿ ವೆಚ್ಚಿಸಿ,
ತದ್ದುಃಖಾನುಭವಕ್ಕೆ ತಾಂ ಕಾರಣಮಾಗಿರಲಾ ಜೀವಂಗೆ,
ಪಂಚವಿಂಶತಿತತ್ವರೂಪವಾದ ಉಪಕರಣಂಗಳೇ ಸ್ಥೂಲವೂ
ಸಪ್ತಧಾತುದಶೇಂದ್ರಿಯರೂಪವಾದ ಕರಣವೇ ಸೂಕ್ಷ್ಮವೂ
ಅಹಂಕಾರಜ್ಞಾನರೂಪವಾದ ಅಂತಃಕರಣವೇ ಕಾರಣವೂ ಆಗಿ,
ಕರಣಕ್ಕುಪಹತಿ ಬಂದರೆ ಉಪಕರಣಂಗಳಂ ಬಿಟ್ಟು,
ಆಯಾ ಕರ್ಮವಾಸನೆಯಂ ಭಾವದಲ್ಲಿ ಗ್ರಹಿಸಿ,
ಮರಳಿ ಸಂಪಾದಿಸೆನು ಎಂಬ ಭ್ರಮೆಯಿಂ
ಕುದಿದುಕೋಟಲೆಗೊಂಡು ತೊಳಲುತ್ತಿರ್ಪುದೇ ಭವವು.
ಇಂತಪ್ಪ ಭವಕೋಟಲೆಗೆ ಹೇಸಿ, ಮಹಾಗುರುವಿನ ಮರೆಹೊಕ್ಕು,
ಆ ಗುರುವಿತ್ತ ಮಹಾಲಿಂಗದಿಂ ಇಂತಪ್ಪ ಕರಣಂಗಳಂ ಶುದ್ಧಿಮಾಡಿ,
ಅಲ್ಲಿರ್ಪ ನಾದ ಬಿಂದು ಕಳೆಗಳಂ ತಲ್ಲಿಂಗಮುಖಮಂ ಮಾಡಿ,
ಅಲ್ಲಿ ಬಂದ ಸುಖವನ್ನು ಲಿಂಗಕ್ಕರ್ಪಿಸಿ,
ತತ್ಪ್ರಸಾದಾನುಭವ ಪ್ರವರ್ಧನಮಾಗುತ್ತಿರಲು,
ನಾಹಂ ಕೋಹಂ ಸೋಹಂ ಭ್ರಮೆಗಳಡಗಿ,
ಸ್ಥೂಲ ಸೂಕ್ಷ್ಮ ಕಾರಣ ತನುತ್ರಯಂಗಳುಡುಗಿ,
ಲಿಂಗವೇ ಅಂಗಮಾಗಿ, ಲಿಂಗೋಪಭೋಗಿಯಾಗಿರ್ಪುದೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./92
ಮನುಷ್ಯರಿಗೆ ಅಂತರಗ್ನಿಯು, ದೇವತೆಗಳಿಗೆ ಬಹಿರಗ್ನಿಯು.
ಅದೆಂತೆಂದೊಡೆ : ಮನುಷ್ಯರು ತಮ್ಮ ಜಠರಾಗ್ನಿಗೆ ಆಹುತಿಯಂ ಕೊಟ್ಟಲ್ಲಿ,
ಧಾತುವರ್ಧನವಾಗಿ ಜೀವನು ತೃಪ್ತಿಪಡುವನು.
ದೇವತೆಗಳು ಬಾಹ್ಯಾಗ್ನಿಯಲ್ಲಿ
ಶುಚಿಯೂ ರುಚಿಯೂ ಆಗಿರ್ಪ ಅಮೃತವನ್ನು ಆಹುತಿಯಂ ಕೊಟ್ಟಲ್ಲಿ,
ಅದರಿಂದ ಬ್ರಹ್ಮಾಂಡದಲ್ಲಿ ಧಾತುವರ್ಧನಮಾಗಿ,
ದೇವತಾಶ್ರೇಷ್ಠನಾದ ಪರಮಾತ್ಮನು ತೃಪ್ತಿಬಡುತ್ತಿರ್ಪನು.
ದುರಾಹಾರವಾದರೂ ಅಗ್ನಿಮಾಂದ್ಯವಾದರೂ
ಶರೀರದಲ್ಲಿ ವ್ಯಾಧಿಯು ಉಲ್ಬಣವಾಗುವಂತೆ,
ತಮೋದ್ರವ್ಯವಾದರೂ ಅಗ್ನಿಪ್ರಕಾಶವಾಗದಿದ್ದರೂ ನ್ಯೂನಾತಿರಿಕ್ತವಾದರೂ,
ಅದರಿಂದ ರಾಕ್ಷಸರು ವಧರ್ಿಸಿ ಬ್ರಹ್ಮಾಂಡವನೆ ಕೆಡಿಸುತ್ತಿಹರು.
ಅಂತರಗ್ನಿಗೂ ಬಹಿರಗ್ನಿಗೂ ಸ್ವಾಹಾಮುಖದಲ್ಲಿ ಆಹುತಿಯಂ ಕೊಡಬೇಕು.
ಏನು ಕಾರಣ ಸ್ವಾಹಾಮುಖದಲ್ಲಿ ಆಹುತಿಯಂ ಕೊಡಬೇಕೆಂದರೆ,
ತಾನು ಸಂಹರಿಸುವುದೇ ಅಗ್ನಿಗುಣವು,
ಆ ಗುಣವೇ ಆತನಿಗೆ ಶಕ್ತಿಯಾಗಿರ್ಪುದು.
ಅದೆಂತೆಂದರೆ : ಸದಾಶಿವನ ಸಂಹಾರಗುಣವೇ ಆ ಶಿವನಿಗೆ ಶಕ್ತಿಯಾಗಿರ್ಪಂತೆಯೂ
ವಿಷ್ಣುವಿನ ರಕ್ಷಣಗುಣವೇ ಆತನಿಗೈಶ್ವರ್ಯಶಕ್ತಿಯಾಗಿರ್ಪಂತೆಯೂ
ಬ್ರಹ್ಮನ ಸೃಷ್ಟಿಗುಣವೇ ಆತನಿಗೆ ವಿವೇಕಶಕ್ತಿಯಾಗಿರ್ಪಂತೆಯೂ
ಅಗ್ನಿಯ ಸ್ವಾಹಾಗುಣವೇ ಅಗ್ನಿಗೆ ಶಕ್ತಿಯಾಗಿರ್ಪುದು.
ಸದಾಶಿವನ ಸಂಹಾರಶಕ್ತಿಯಂ ಸ್ಮರಿಸಿ,
ಮಂತ್ರಂಗಳಿಂದುಪಶಾಂತಿಯಂ ಮಾಡುತಿರ್ಪಂತೆ,
ಸಕಲದೇವತಾಸ್ವರೂಪಮಾದ ಅಗ್ನಿಯ ಗುಣವಂ ಸ್ಮರಿಸಿ
ಆಹುತಿಯಂ ಕೊಡುತಿರ್ಪರು.
ಇಂತಪ್ಪ ಹವಿರಾದಿ ಸಕಲ ಕರ್ಮಗಳನ್ನು ಜ್ಞಾನಮುಖದಲ್ಲಿ ತಿಳಿದು
ಭಾವಜ್ಞನಾಗಾಚರಿಸಿದಲ್ಲಿ ದೇವತಾಪ್ರೀತಿಯಪ್ಪುದು.
ಜ್ಞಾನವಿಲ್ಲದೆ ಮಹಾದಿವ್ಯಜ್ಞಾನಿಪುರುಷರಿಂ ಪ್ರತ್ಯಕ್ಷೊಪದೇಶವಿಲ್ಲದೆ,
ಕೆಲವು ಗ್ರಂಥಂಗಳಂ ನೋಡಿ, ಮಂತ್ರಂಗಳಂ ಕಲಿತು,
ಆ ಪ್ರಕಾರಮಾಡಿದಲ್ಲಿ ಘೋರನರಕವನನುಭವಿಸುವರು.
ಅಂತಪ್ಪ ಜ್ಞಾನಯುಕ್ತವಾದ ಕರ್ಮವಂ ನನಗುಪದೇಶಿಸಿ ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./93
ಮಾನಸಸರೋವರ ಚತುಸ್ಸೋಪಾನವೀಧಿಗಳಿಂ ತುಂಬಿರ್ಪ
ಧೀವರ್ಣದ ರಸದಿಂ ಬೆಂಬಿಡದೆ ತಳದಲ್ಲಿರ್ಪ ನೆಲನೆಲ್ಲಂ ಕೆಸರಾಗೆ,
ಅದನೆ ಆಧಾರಮಾಗಿ ಬೆಳೆದು ನಾನಾ ದಳಂಗಳಿಂ ತೋರ್ಪ
ಕಮಲಂಗಳಿಂ ಸಿಕ್ಕುಬಿದ್ದಿರ್ಪ ಬಿಸಗಳಿಂ
ದೋಷಾಕರೋದಯಕ್ಕೆ ನವಕುಮುದಂಗಳಿಂ ಬಯಸುತ್ತಿರ್ಪ
ಶೈವಾಲಂಗಳಿಂ ಬೀಳುವ ಭೃಂಗಂಗಳ ಮೇಳದಿಂದೊಪ್ಪುವ ತತ್ಸರೋವರವ
ಪಲವರ್ಣದೊಂದು ಹಂಸನಾಶ್ರಯಿಸಿ,
ಅದನೆ ತನಗಾಧಾರಮಂ ಮಾಡಿಕೊಂಡು,
ಫಲಪುಷ್ಪಯುತಮಾದ ವಸಂತಕಾಲದಲ್ಲಿ ಪೃಥ್ವಿಗೆ ಬಂದು,
ಗೂಡಮಾಡಿಕೊಂಡು, ನೀರಕ್ಷೀರಂಗಳಭೇದಮಂ ಪುಟ್ಟಿಸಿ,
ನೀರಂ ಬಿಟ್ಟು ಕ್ಷೀರಮಂ ಕೊಂಡು,
ವರ್ಷಾಕಾಲಗರ್ಜನೆಯಂ ಕೇಳಿ, ಪೃಥ್ವಿಯೊಳಗಿರ್ಪ ಗೂಡಂ ಬಿಟ್ಟು,
ತಿರಿಗಿ ಮುನ್ನಿನ ಸರೋವರಮಂ ಸೇರುತ್ತಂ,
ಮತ್ತಂ , ಪೃಥ್ವಿಯಗೂಡಂ ಸಾರುತ್ತಂ, ಪಕ್ಷದ್ವಯಂಗಳಿಂ ಚರಿಸುತ್ತಿರಲಾ
ಹಂಸನಮೇಲೆ ಕರುಣದಿಂ ಬ್ರಹ್ಮನು ಪ್ರಸ್ನನಾಗಿ
ನಿಜವಾಹನವಂ ಮಾಡಿಕೊಳ್ಳಲು,
ಆ ಬ್ರಹ್ಮಧಾರಣಾಶಕ್ತಿಯಿಂ ಹಂಸಂ ಪಲವರ್ಣಮಳಿದೇಕರ್ಣಮಾಗಿ,
ಸತ್ಯಲೋಕದಲ್ಲಿ ಸಂಚರಿಸುತ್ತಾ,
ಆಕಾಶದಲ್ಲಿ ತೋರ್ಪ ಸುವರ್ಣನದೀಪ್ರವಾಹಮತಿನಿರ್ಮಲಮಾಗಿ
ಘಾತದಲ್ಲಿರ್ಪ ಅನಿಮೇಷಸಂಚಾರಂಗಳು ಸ್ವಚ್ಛ ಜೀವನದಲ್ಲಿ ಕಾಣುತ್ತಿರಲು,
ಅಲ್ಲಿ ನಲಿವುತ್ತಾ ಕೆಲಿವುತ್ತಾ ಅನೇಕ ವರ್ಣಾತ್ಮಕಮಾದ
ಸಹಸ್ರಪತ್ರಕಮಲದ ನಡುನೆತ್ತಿಯಲ್ಲಿ ತೋರ್ಪ
ಅರ್ಕಪ್ರಕಾಶದಿಂ ವಿಕಸಿತಮಾಗಿರಲಲ್ಲಿ ಸಂಚರಿಸುತ್ತಾ,
ಮಾನಸಸರೋವರದ ವಾಂಛೆಯಂ ಬಿಟ್ಟು,
ತನ್ಮಧ್ಯಕನರ್ಿಕಾ ಮಕರಂದಪಾನಮಂ ಮಾಡಿದಾಕ್ಷಣವೇ ಪಕ್ಷಂಗಳುದುರಿ,
ತನ್ನನೇರಿಕೊಂಡಿರ್ಪ ಬ್ರಹ್ಮನಂ ತಾನೇ ನುಂಗಿ
ಹಂಸಮೇ ಲಿಂಗಮಾಯಿತ್ತು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./94
ರಜೋಗುಣದಿಂದ ಶಕ್ತಿಲಯವು,
ತಮೋಗುಣದಿಂದ ಯುಕ್ತಿಲಯವು,
ಸತ್ವಗುಣದಿಂದ ರಕ್ತಿಲಯವು.
ಅಂತಪ್ಪ ರಜೋಗುಣವೇ ಪೃಥ್ವಿಯು,
ತಮೋಗುಣವೇ ವಾಯುವು,
ಪೃಥ್ವಿಯಲ್ಲಿ ಅಗ್ನಿಯು ಹುಟ್ಟಿ,
ತಮೋರೂಪಮಾದ ವಾಯುಜಲಗಳು ಪೃಥ್ವಿಯಗ್ನಿಗಳಲ್ಲಿ ಕೂಡಲು
ರಜೋಗುಣವು ಹೆಚ್ಚುತ್ತಿಹುದು.
ಅಂತಪ್ಪ ಅಗ್ನಿ ವಾಯುಗಳೇಕಮಾಗಿ, ಪೃಥ್ವೀಜಲಗಳೇಕಮಾದಲ್ಲಿ,
ಈ ಪೃಥ್ವಿಯೇ ಮನುಷ್ಯರಿಗೆ ಆಧಾರಮಾಯಿತ್ತು,
ವಾಯುವೇ ದೇವತೆಗಳಿಗೆ ಆಧಾರಮಾಯಿತ್ತು,
ಇವೆಲ್ಲಕ್ಕೂ ಸತ್ವಸ್ವರೂಪಮಾದ ಆಕಾಶವೇ ಕಾರಣಮಾಯಿತ್ತು.
ಮನುಷ್ಯರು ರಜೋರೂಪಮಾದ ಪೃಥ್ವಿಯನಾಶ್ರಯಿಸಿದರಾದಕಾರಣ
ಸ್ವಲ್ಪಕಾಲ ಬಾಳುತ್ತಿರ್ಪರು.
ದೇವತೆಗಳು ತಮೋರೂಪಮಾದ ವಾಯುವನಾಶ್ರಯಿಸಿದ ಕಾರಣ
ದೀರ್ಘಕಾಲ ಬಾಳುತ್ತಿರ್ಪರು.
ಸುಷುಪ್ತಿಯು ಸ್ವಪ್ನದೋಪಾದಿಯಲ್ಲಿ ತೋರುತ್ತಿರ್ಪುದರಿಂದ
ಈ ರಜಸ್ಸಿನಲ್ಲಿ ಕಾಮನೂ ತಮಸ್ಸಿನಲ್ಲಿ ಕಾಲನೂ ತತ್ತದ್ಗುಣಾಧಿದೇವತೆಗಳಾಗಿ,
ಕಾಮನು ಸೃಷ್ಟಿಸಿದ್ದನ್ನು ಕಾಲನು ಸಂಹರಿಸುತ್ತಾ ,
ಕಾಲನು ಸಂಹರಿಸಿದ್ದನ್ನು ಕಾಮನು ಸೃಷ್ಟಿಸುತ್ತಾ ,
ಜೀವನನ್ನು ಭವಕ್ಕೆ ತಂದು ಕೋಟಲೆಗೊಳಿಸುತ್ತಿರ್ಪರು.
ಇಂತಪ್ಪ ರಜೋರೂಪಮಾದ ಪೃಥ್ವಿಯಲ್ಲಿ
ತಮೋರೂಪಮಾದ ಜಲವು ಬೆರೆಯಲು,
ಈ ಎರಡೂ ತಮೋರೂಪಮಾದ ಸ್ಥೂಲಶರೀರಮಾಯಿತ್ತು.
ತಮೋರೂಪಮಾದ ವಾಯುವಿನಲ್ಲಿ ರಜೋರೂಪವಾದ ಅಗ್ನಿಯು
ಬೆರೆಯಲು,
ಇವೆರಡೂ ಸೂಕ್ಷ್ಮಶರೀರಮಾಯಿತ್ತು.
ಸತ್ವಸ್ವರೂಪಮಾದ ಆಕಾಶವೇ ಕಾರಣಶರೀರವು.
ಇಂತಪ್ಪ ಪಂಚಭೌತಿಕಮಾದ ತನುತ್ರಯಂಗಳಲ್ಲಿ
ಆತ್ಮನು ಆಯಾ ಗುಣಂಗಳಲ್ಲಿ ಬದ್ಧನಾಗಿ,
ಸುಖದುಃಖಾನುಭವಕ್ಕೆ ಕಾರಣಮಾಗಿರ್ಪನು.
ಅದೆಂತೆಂದೊಡೆ : ತಮೋರೂಪಮಾದ ಸೂಕ್ಷ್ಮಶರೀರದಲ್ಲಿ ಅಂತರಾತ್ಮನಾಗಿ,
ರಜೋರೂಪಮಾದ ಸ್ಥೂಲಶರೀರದಲ್ಲಿ ಜೀವಾತ್ಮನಾಗಿ,
ಸತ್ವಸ್ವರೂಪಮಾದ ಕಾರಣಶರೀರದಲ್ಲಿ ಪರಮಾತ್ಮನಾಗಿ ಪ್ರಕಾಶಿಸುತ್ತಿರ್ಪನು.
ಇಂತಪ್ಪ ರಜೋಲಹರಿಯ ಸುರತಾನಂದ,
ತಮೋಲಹರಿಯ ನಿದ್ರಾನಂದ, ಸತ್ವಲಹರಿಯ ಜ್ಞಾನಾನಂದ.
ಅಂತಪ್ಪ ಜ್ಞಾನಾನಂದಲಹರಿಯಲ್ಲಿ ಪರಿಣಾಮಿಸಿ ಪರವಶನಾಗಿರ್ಪಂತೆ ಮಾಡಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./95
ರುಚಿಯಲ್ಲಿ ಸಂಹಾರ, ಸ್ಪರುಶನದಲ್ಲಿ ಸೃಷ್ಟಿ, ರೂಪಿನಲ್ಲಿ ಸ್ಥಿತಿ,
ಇಂತು ಸಂಹಾರಕ್ಕೆ ನಾದವೇ ಮೂಲವು,
ಸೃಷ್ಟಿಗೆ ಬಿಂದುವೇ ಮೂಲವು, ಸ್ಥಿತಿಗೆ ಕಳೆಯೇ ಮೂಲವು.
ಸೃಷ್ಟಿಗೆ ಪೃಥ್ವಿಯೇ ಆಧಾರಮಾಯಿತ್ತು ;
ಸ್ಥಿತಿಗೆ ಆತ್ಮನೇ ಆಧಾರಮಾಯಿತ್ತು.
ಸೃಷ್ಟಿಮೂಲಮಪ್ಪ ಸ್ಪರುಶನದಲ್ಲಿ ಆನಂದವೂ
ಸಂಹಾರಮೂಲಮಪ್ಪ ರುಚಿಯಲ್ಲಿ ಜ್ಞಾನವೂ
ಸ್ಥಿತಿಮೂಲಮಪ್ಪ ರೂಪಿನಲ್ಲಿ ನಿಜವೂ ನೆಲೆಗೊಂಡು,
ಸೃಷ್ಟಿಯೆ ಸ್ಥಿತಿಹೇತುವಾಗಿ, ಸ್ಥಿತಿಯೇ ಸಂಹಾರಹೇತುವಾಗಿ,
ಸಂಹಾರವೇ ಸೃಷ್ಟಿಹೇತುವಾಗಿ,
ರುಚಿಗೆ ಅಗ್ನಿಯೂ, ಸ್ಪರುಶನಕ್ಕೆ ಜಲವೂ, ರೂಪಿಗೆ ಪೃಥ್ವಿಯೂ ಕಾರಣಮಾಗಿ,
ಇಂತು ಅವಸ್ತ್ರಮಾಗಿ ತಿರುಗುತ್ತಿರ್ಪ ಪರಶಿವನಾಜ್ಞಾಚಕ್ರವನ್ನು
ಗುರುಮುಖದಿಂದ ವಿಚಾರಿಸಿ ತಿಳಿದ ಮಹಾಪುರುಷನು
ಈ ಚಕ್ರಕ್ಕೆ ತಗಲಿರ್ಪ ಮನವೆಂಬ ಕೀಲನ್ನು
ಗುರುವಿತ್ತ ಲಿಂಗವೆಂಬ ಪರಶುವಿನಿಂ ಭಾವವೆಂಬ ಹಸ್ತದಲ್ಲಿ ಪಿಡಿದು ಖಂಡಿಸಲು,
ಆ ಚಕ್ರದ ಚಲನೆ ನಿಂದಿತ್ತು.
ಸ್ಪರ್ಶನದಲ್ಲಿರ್ಪ ಆನಂದರಸಮಂಗದಲ್ಲಿ ಕೂಡಿ,
ಸಂಹಾರಾಗ್ನಿಯಂ ನಂದಿಸಿತ್ತು.
ಆ ಸಂಹಾರದೊಳಗಿರ್ಪ ಜ್ಞಾನಾಗ್ನಿಯು ಲಿಂಗದೊಳಗೆ ಬೆರದು,
ಸೃಷ್ಟಿಸ್ಥಿತಿರೂಪಮಾದ ಪೃಥ್ವಿ ಅಪ್ಪುಗಳಂ ಸಂಹರಿಸಿತ್ತು.
ಸ್ಥಿತಿಯಲ್ಲಿರ್ಪ ನಿಜಲಿಂಗದಲ್ಲಿ ನಿಜಮಾಯಿತ್ತು.
ಇಂತು ಆ ಚಕ್ರವಳಿಯೆ, ಆತ್ಮಭ್ರಮೆಯಳಿದು,
ಆತ್ಮವೇ ಲಿಂಗಮಾಗಿ, ಆಕಾಶವೇ ಅಂಗವಾಗಿ,
ವಾಯುವೇ ಆ ಎರಡರ ಸಂಗದಲ್ಲಿ ಬೆರದು
ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./96
ಲಿಂಗವನಾಚರಿಸುವ ಅಂಗವೇ ಸ್ಥೂಲದಲ್ಲಿ ಗುರುಲಿಂಗವಾಗಿ,
ಲಿಂಗದಲ್ಲಿ ಸುಖಿಸುವ ಅಂಗವೇ ಸೂಕ್ಷ್ಮದಲ್ಲಿ ಜಂಗಮವಾಗಿ,
ಲಿಂಗವಂ ಪ್ರಸನ್ನಮಾಡಿಕೊಂಬ ಅಂಗವೇ ಕಾರಣದಲ್ಲಿ ಮಹಾಲಿಂಗಮಾಗಿ,
ಲಿಂಗದಲ್ಲಿ ಕ್ರಿಯಾಶಕ್ತಿ ಕೂಡಲು, ಅಂಗದಲ್ಲಿ ಮಂತ್ರಶಕ್ತಿ ಕೂಡಿತ್ತು.
ಲಿಂಗದಲ್ಲಿ ಇಚ್ಛಾಶಕ್ತಿ ನೆರೆಯಲು, ಅಂಗದಲ್ಲಿ ಆದಿಶಕ್ತಿ ನೆರೆಯಿತ್ತು.
ಲಿಂಗದಲ್ಲಿ ಪರಾಶಕ್ತಿ ಬೆರೆಯಲು, ಅಂಗದಲ್ಲಿ ಜ್ಞಾನಶಕ್ತಿ ಬೆರೆಯಿತ್ತು.
ಸ್ಥೂಲದಲ್ಲಿ ಅಂಗಲಿಂಗವೇಕಮಾಗಲು, ಮಂತ್ರಕ್ರಿಯೆಗಳೊಂದಾಯಿತ್ತು.
ಸೂಕ್ಷ್ಮದಲ್ಲಿ ಲಿಂಗಾಂಗವೇಕವಾಗಲು, ವಿವಿಧೇಚ್ಛೆಯೊಂದಾಯಿತ್ತು
ಕಾರಣದಲ್ಲಿ ಲಿಂಗಾಂಗವೇಕವಾಗಲು, ಪರಜ್ಞಾನವೇಕವಾಯಿತ್ತು.
ಲಿಂಗಾಚಾರವೇ ಇಷ್ಟವಾಗಿ, ಲಿಂಗಸುಖವೇ ಪ್ರಾಣವಾಗಿ,
ಲಿಂಗಪ್ರಸಾದವೇ ಭಾವವಾಗಿ, ಪ್ರಸಾದದಲ್ಲಿ ಮನಪರವಶಮಾಗಿ,
ಶಿವಸುಖದಲ್ಲಿ ಪ್ರಾಣಪರವಶಮಾಗಿ,
ಶಿವಾಚಾರದಲ್ಲಿ ಲಿಂಗಪರವಶವಾದುದೆ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ/97
ವಟಮೂಲವಾಸಿಯಪ್ಪ ಗುರುವು
ಮಂತ್ರಶಕ್ತಿಯನಂಗದಲ್ಲಿ ಧರಿಸಲು
ತತ್ಕೃಪಾಬಿಂದುವೇ ಮೂರ್ತಿಗೊಂಡಂತೆ,
ಕರಕಮಲದಲ್ಲಿ ಪ್ರಾದುರ್ಭವಿಸಿದ ಶರಣನು
ತತ್ಪ್ರಸಾದವಾಕ್ಯಾಮೃತವನುಂಡು ಬೆಳೆದು,
ನಿಜವಾಸನೆಯಿಂ ಸ್ವಭಾವ ಯೌವನ ಪ್ರಾರಂಭದಲ್ಲಿ ತನುವೇ ಘನವಾಗಿ,
ಪರಮಪವಿತ್ರತ್ವದಿಂ ಪ್ರಕಾಶಿಸುತ್ತಿರಲು,
ಚಿದಂಬರಮಂ ದೆಶೆವಿಡಿದುಟ್ಟು, ತತ್ವದ ತೊಡವೆಗಳಂ ತೊಟ್ಟು,
ಸರ್ವಾಲಂಕಾರಶೋಭಿನಿಯಾಗಿರ್ಪ ಭಕ್ತಿಸುತೆಯಂ ದೇಶಿಕಂ ನೋಡಿ,
ತದ್ವಟಫಲಾನುಭವಕಾರಣ ಜಂಗಮರೂಪಮಾಗಿ,
ಆದಿಶಕ್ತಿಸಂಗದಿಂ ಪ್ರಕಾಶಿಸುತ್ತಿರ್ಪ ಮಹತ್ಪದದಲ್ಲಿ
ಸ್ವಪ್ರಕಾಶಮೇ ಮೂರ್ತಿಗೊಂಡು ಜನಿಸಿ,
ಭಾವದಲ್ಲಿ ಬೆಳೆದು ತುರ್ಯ ಯೌವನದಲ್ಲಿ ಪರಮಸತ್ವಧೌತಾಂಬರವನುಟ್ಟು,
ಅಹೀನಾಭರಣನಾಗಿರ್ಪ ಲಿಂಗಮಂ ಪ್ರಾರ್ಥಿಸಿ,
ವರದಕ್ಷಿಣೆಯನಿತ್ತು, ಬಿಜಯಂಗೈದ ದೇಶಿಕಾರ್ಯನು
ಲಿಂಗಮೂರ್ತಿಯಪ್ಪ ಜಾಮಾತೃವಿನ ಪಾದಗಳನ್ನರ್ಚಿಸಿ,
ಬಿಂದುಮಧ್ಯದಲ್ಲಿ ನಾದರೂಪನಾಗಿರ್ದ ಲಿಂಗಕ್ಕೆ,
ನಾದಮಧ್ಯದಲ್ಲಿ ಬಿಂದುರೂಪಮಾಗಿರ್ಪ ಭಕ್ತಿಸುತೆಯಂ
ವಿಧ್ಯುಕ್ತವಾಗಿ ಧಾರೆಯನ್ನೆರೆದು, ಪಾಣಿಗ್ರಹಣಮಂ ಮಾಡಿಕೊಡಲು,
ಆ ಶರಣನೇ ಸತಿ ಲಿಂಗವೇ ಪತಿಯಾಗಿ,
ಈರ್ವರಿಗೂ ಯೌವನಕಲೆಗಳೊಂದಾಗಿ,
ಪರಮಾನಂದರತಿಕ್ರೀಡಾ ಪತಿವೃತಾಚರಣೆಯೇ ಕರಣಮಾಗಿರಲಾಶರಣನು
ಉಭಯಕುಲದ ಹಿರಿಯರಿಗೂ ಆತಿಥ್ಯಾದಿಸತ್ಕಾರಮಂ ಮಾಡುತ್ತಾ,
ಉಭಯಕುಲಂಗಳಂ ಸ್ವಧರ್ಮಂಗಳಿಂ ಪರಿಶುದ್ಧಮಂ ಮಾಡುತ್ತಾ,
ಪತಿಯ ಸ್ವಭಾವವನ್ನು ನಿಜಭಾವದಿಂದ ತಿಳಿದು,
ತದನುಕೂಲಕರ್ಮಂಗಳನೆಸಗುತ್ತಾ,
ಸರ್ವಮಂಗಳರೂಪಮಾಗಿ ಅಕಲ್ಮಷಾಂತಃಕರಣದಿಂದಾಚರಿಸುತ್ತಿರಲು,
ಪತಿಯು ಪ್ರಸನ್ನನಾಗಿ, ಅಂತರಂಗದಲ್ಲಿ ನಿರ್ವಾಣರತಿಸುಖದಲ್ಲಿ ಕ್ರೀಡಿಸಿ,
ವೈರಾಗ್ಯವೆಂಬ ಪುತ್ರನಂ ಪಡೆದು, ಅವಂಗೆ ಮೋಕ್ಷಸಾಮ್ರಾಜ್ಯಪಟ್ಟವಂ ಕಟ್ಟಿ,
ತಾವಿಬ್ಬರೊಂದಾಗಿರ್ಪುದೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./98
ವರ್ತಮಾನವೇ ಸ್ಥೂಲವು, ಭೂತಕಾಲವೇ ಸೂಕ್ಷ್ಮವು,
ಭವಿಷ್ಯತ್ಕಾಲವೇ ಕಾರಣವು,
ಇಂತಪ್ಪ ಕಾರಣದಲ್ಲಿ ತಮಸ್ಸೂ,
ವರ್ತಮಾನದಲ್ಲಿ ಸತ್ಯವೂ, ಭೂತದಲ್ಲಿ ರಜಸ್ಸೂ,
ಅಂತಪ್ಪ ತಮೋರೂಪಮಾದ ಭವಿಷ್ಯತ್ತಿನಲ್ಲಿ ಜೀವನೂ ಇದಿರೇರುತ್ತಿರಲು,
ರಜೋರೂಪಮಾದ ಭೂತದಲ್ಲಿ ಮನಸ್ಸು ಇಳಿದುಹೋಗಿ,
ಭೂತದಲ್ಲಿರ್ಪ ಕಾಮನವಶಮಾಯಿತ್ತು.
ಜೀವನಿದಿರೇರಿ ಭವಿಷ್ಯದಲ್ಲಿರ್ಪ ಕಾಲವಶಮಾದಲ್ಲಿ,
ಸತ್ವವಳಿದು ಶರೀರ ಲಯಮಾಯಿತ್ತು.
ಉತ್ತರ ದಕ್ಷಿಣಮುಖವಾಗಿ ಯಾತನೆಬಡುತ್ತಿರ್ಪ ಮನೋಜೀವಗಳು
ಕರ್ಮಾನುಬಂಧದಿಂ ಪೂರ್ವಭೋಗವನನುಸರಿಸಿ ಕೂಡಿ,
ತತ್ಸಂಗಮತ್ವದಿಂ ದ್ರವಿಸುತ್ತಿರ್ಪ ಬಿಂದುವಂ ಹೊಂದಿ,
ಪಶ್ಚಿಮದಲ್ಲಿ ಶರೀರಿಯಾಗಿ ವ್ಯವಹರಿಸುತ್ತಿರ್ಪುದೇ ಭವವು,
ಇಂತಪ್ಪ ವರ್ತಮಾನಕಾಲವನ್ನು ಇಂದ್ರಿಯಂಗಳಿಂದ ತಿಳಿದು.
ಭೂತಕಾಲವನ್ನು ಮನಸ್ಸಿನಿಂದ ತಿಳಿದು,
ಭವಿಷ್ಯತ್ಕಾಲವನ್ನು ಭಾವದಿಂದ ತಿಳಿದು,
ಪುರುಷನು ಭೂತಪದಾರ್ಥವಂ ನಾಶಮಾಡದೆ,
ಭವಿಷ್ಯತ್ಪದಾರ್ಥದೊಳಗೆ ಹೊಂದಿ, ತಾನನುಭವಿಸುತ್ತಿರ್ಪಲ್ಲಿ,
ಆ ಭವಿಷ್ಯತ್ತೇ ವರ್ತಮಾನಮಾಗಿ,
ಆ ವರ್ತಮಾನವೇ ಭವಿಷ್ಯದೊಳಗೆ ಬೆರದು ಭೇದದೋರದಿರ್ಪಲ್ಲಿ,
ಭೂತಜ್ಞಾನವಳಿದು ಮನಸ್ಸು ನಾಶಮಾಯಿತ್ತು.
ವರ್ತಮಾನಜ್ಞಾನವಳಿದಲ್ಲಿ ಶರೀರೋಪಾಧಿಯು ನಷ್ಟಮಾಯಿತ್ತು.
ಭವಿಷ್ಯತ್ಜ್ಞಾನವು ನಷ್ಟಮಾದಲ್ಲಿ ಜೀವನು ಭ್ರಾಂತಿಯಂ ಬಿಟ್ಟು,
ತಾನೇ ಅಖಂಡಪರಿಪೂರ್ಣವಸ್ತುವಾಗಿರ್ಪುದೆ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೇ./99
ವಸಂತಕಾಲವೇ ಸೂಕ್ಷ್ಮಶರೀರವು,
ವರ್ಷಾಕಾಲವೇ ಸ್ಥೂಲಶರೀರವು,
ಹೇಮಂತಕಾಲವೇ ಕಾರಣಶರೀರವು,
ಆಕಾಶಾತ್ಮಗಳು ನಿರ್ಮಲಮಾಗಿ ಕಾಣಪಟ್ಟುದರಿಂದ
ವಸಂತಕಾಲವೇ ಬ್ರಹ್ಮಸ್ವರೂಪಾಗಿ
ರಜೋಗುಣಪ್ರಾಬಲ್ಯಮಾಗಿಹುದು.
ವರ್ಷಾಕಾಲವೇ ವಿಷ್ಣುರೂಪಾಗಿ,
ತಮೋರೂಪಾಗಿ ಸತ್ವಗುಣಪ್ರಧಾನಮಾಗಿಹುದು.
ಹೇಮಂತಕಾಲವೇ ಶಿವಸ್ವರೂಪು ಸತ್ವಸ್ವರೂಪಮಾಗಿ
ತಮೋಗುಣಪ್ರಧಾನಮಾಗಿಹುದು.
ವಸಂತಕಾಲದಲ್ಲಿ ಸೃಷ್ಟಿಯೂ ವರ್ಷಾಕಾಲದಲ್ಲಿ ಸ್ಥಿತಿಯೂ
ಹೇಮಂತದಲ್ಲಿ ಸಂಹಾರವೂ ಆಗುವಕಾರಣ,
ವಸಂತದಲ್ಲಿ ಸೂರ್ಯಪ್ರಕಾಶವು ; ವರ್ಷಾಕಾಲದಲ್ಲಿ ಸೂರ್ಯಚಂದ್ರಮರು
ಅಪ್ರಕಾಶರಾಗಿ ಜಡಸ್ವರೂಪಮಾದ ಮೇಘೋದಯದಿಂದ ತಮಸ್ಸು
ಪ್ರಬಲಮಾಗಿರ್ಪುದರಿಂದ ತಾಮಸಪ್ರಧಾನಮಾಯಿತ್ತು.
ಇಂತಪ್ಪ ಕಾಲತ್ರಯಂಗಳೇ ಜೀವನ ಪರಿಭವಕ್ಕೆ ಕಾರಣಭೂತಗಳಾಗಿರ್ಪುದನರಿತು,
ವಸಂತದಲ್ಲಿ ಇಷ್ಟದೇವತಾಪೂಜೆಯನ್ನೂ
ಹೇಮಂತಕಾಲದಲ್ಲಿ ಭಾವಲಿಂಗಪೂಜೆಯನ್ನೂ
ವರ್ಷಾಕಾಲದಲ್ಲಿ ಪ್ರಾಣಲಿಂಗಪೂಜೆಯನ್ನೂ ಮಾಡಿ,
ಈ ಕಾಲತ್ರಯಂಗಳಂ ಮರತು ಲಿಂಗತ್ರಯಂಗಳೊಳಗೆ ಬೆರದು,
ಇಷ್ಟಪ್ರಾಣಭಾವಸ್ವರೂಪನಾದ ಸದಾಶಿವನಿಗೆ/100
ವಾಕ್ಪಾಣಿಪಾದ ಗುದ ಗುಹ್ಯಗಳೈದು
ಸ್ಥೂಲಜ್ಞಾನ ಪಂಚೇಂದ್ರಿಯ.
ಘ್ರಾಣ ಜಿಹ್ವೆ ನೇತ್ರ ತ್ವಕ್ ಶ್ರೋತ್ರಂಗಳೈದು
ಸೂಕ್ಷ್ಮ ಜ್ಞಾನ ಪಂಚೇಂದ್ರಿಯ.
ಚಿತ್ತ ಬುದ್ಧಿ ಅಹಂಕಾರ ಮನೋಭಾವಂಗಳೈದು
ಕಾರಣ /101
ವಾಚಾತೀತವೂ ಮನೋತೀತವೂ ಭಾವಾತೀತವೂ ಆದ ಮಹಾಲಿಂಗವು
ಸತ್ಯಜ್ಞಾನಾನಂದ ಸ್ವರೂಪಮಾದಲ್ಲಿ,
ಸತ್ಯವೇ ಭಕ್ತ, ಜ್ಞಾನವೇ ಗುರು,
ಆನಂದವೇ ಜಂಗಮಸ್ವರೂಪವಾಗಿ ನಟಿಸುತಿರ್ಪ ಮಹಾಲಿಂಗವು
ತನ್ನ ಲೀಲೆಗೋಸುಗ ಆನಂದವನ್ನು ಮರೆವಿಡಿದು,
ಅದರಲ್ಲಿಯೇ ದುಃಖಸ್ವರೂಪಮಾಗಿ ಮಹಾರುದ್ರನಂ ಸೃಜಿಸಿ,
ಜ್ಞಾನಮಂ ಮರೆವಿಡಿದು, ಅದರಲ್ಲಿಯೇ ಅಜ್ಞಾನವೆಂಬ ವಿಷ್ಣುವಂ ಕಲ್ಪಸಿ,
ಸತ್ಯವಂ ಮರೆವಿಡಿದು, ಅದರಲ್ಲಿ ಮಿಥ್ಯೆಯೆಂಬ ಬ್ರಹ್ಮನು ಕಲ್ಪಿಸಲು,
ಸರ್ಗಸ್ಥಿತಿ ಸಂಹಾರಂಗಳಿಗಿದೇ ಕಾರಣಮಾಗಿ,
ಆ ರುದ್ರನಲ್ಲಿ ಜಾಗ್ರವೂ, ವಿಷ್ಣುವಿನಲ್ಲಿ ಸುಷುಪ್ತಿಯೂ,
ಬ್ರಹ್ಮನಲ್ಲಿ ಸ್ವಪ್ನವೂ ಉತ್ಪನ್ನವಾಗಿ,
ಆ ಜಾಗ್ರದಲ್ಲಿ ತೇಜವೂ, ಸುಷುಪ್ತಿಯಲ್ಲಿ ವಾಯ್ವಾಕಾಶಂಗಳೂ,
ಸ್ವಪ್ನದಲ್ಲಿ ಪೃಥ್ವಿಯಪ್ಪುಗಳೂ ಆಗಿ,
ಅವುಗಳೇ ಒಂದಕ್ಕೊಂದಾವರಣಂಗಳಾಗಿರ್ಪ
ಈ ಪ್ರಪಂಚದಲ್ಲಿ ಕ್ರೀಡಾನಿಮಿತ್ತವಾಗಿ ಜೀವಪರಮರೂಪುಗಳಂ ಧರಿಸಿ,
ಇದಕ್ಕೆ ಹೊರಗಾಗಿ, ತಾನು ಪರಮರೂಪದಲ್ಲಿ ನಿಂದು,
ತನ್ನೊಳ್ತಾನೆ ಕಲ್ಪಿಸಿದ ಜೀವಕೋಟಿಗಳನ್ನು ಇದಕ್ಕೊಳಗುಮಾಡಲು,
ಅವೆಲ್ಲವೂ ಒಂದಕ್ಕೊಂದು ಸುತ್ತಿಮುತ್ತಿ
ಮಿಥ್ಯೆಯೇ ಸ್ಥೂಲಮಾಗಿ, ಅಜ್ಞಾನವೇ ಸೂಕ್ಷ್ಮವಾಗಿ, ದುಃಖವೇ ಕಾರಣಮಾಗಿ,
ಜಾಗ್ರತ್ಸ್ವಪ್ನಸುಷುಪ್ತ್ಯವಸ್ಥೆಗಳನನುಭವಿಸುತ್ತಾ.
ನಿಜವಂ ಮರತು ನಿಜಾವಸ್ಥೆಯಂ ತೊರೆದು,
ತ್ರಿಮೂರ್ತಿಗಳ ಬಲೆಗೆ ಸಿಕ್ಕಿ ದಾಂಟಲಾರದೆ,
ಕೋಟಲೆಗೊಳುತತಿಪ್ರ್ಮದಂ ನೋಡಿ ನೋಡಿ,
ಆನಂದಿಸುತ್ತಿರ್ಪನೆಂತೆಂದೊಡೆ: ಮದ್ದಂ ಮೆಲುವಾತಂಗದೇ ಸಾಧಕಮಾಗಿ,
ಆ ಲಹರಿಯೊಳಗೆ ಕೂಡಿ,
ನಿಜಾವಸ್ಥೆಯಂ ತೊರೆದು, ತದವಸ್ಥೆಯೊಳು ಬದ್ಧನಾಗಿ,
ಆ ಲಹರಿಯಳಿದಲ್ಲಿ ಮರಣವೇ ಕಾರಣಮಾಗಿ,
ತಿರಿಗಿ ಶರೀರಮಂಪೊಂದಿ, ಅವಸ್ಥಾತ್ರಯಂಗಳನನುಭವಿಸುತ್ತಿಪ್ರ್ಮದಂ ನೋಡಿ,
ಪರಮಾನಂದಿಸುತ್ತಿಪುನು.
ಇಂತಪ್ಪ ಭ್ರಮೆಯಂ ಕಳೆದು,
ತನ್ನ ನಿಜಸ್ವರೂಪಮಪ್ಪ ತೂರ್ಯಾವಸ್ಥೆಯಂ ಹೊಂದುವನೆಂದೊಡೆ,
ಹೊಂದತೀರದೆ ಸ್ವಲ್ಪಕಾಲವೇ ಮಹಾತ್ಕಾಲಮಾಗಿ,
ಪೃಥ್ವಿವ್ಯಪ್ತೇಜೋವಾಯ್ವಾಕಾಶಾದಿ ಪಂಚಭೂತಂಗಳು ದಾಂಟಲಾರದೆ,
ಆ ಪಂಚಭೂತಗುಣಗಂಗಳಂ ಪಂಚೇಂದ್ರಿಯಮುಖಗಳಿಂದ
ತನ್ನತಃಕರಣದಿಂ ಕೊಂಡುಂಡು, ಭಾವವಂ ಮುಟ್ಟಲೊಲ್ಲದೆ,
ಪಂಚೇದ್ರಿಯಂಗಳಲ್ಲಿರ್ಪ ಬ್ರಹ್ಮನ,
ಅಂತಃಕರಣದಲ್ಲಿರ್ಪ ವಿಷ್ಣುವಿನ,
ಭಾವದಲ್ಲಿರ್ಪ ರುದ್ರನ ಕಾಟದಲ್ಲಿ ಕೋಟಲೆಗೊಳುತ್ತಿರ್ಪುದಂ
ತಪ್ಪಿಸುವುದಕ್ಕುಪಾಯಮಂ ಕಾಣದಿರ್ಪ ಜೀವನಿಗೆ
ತಾನೇ ದಯೆಯಿಂ ಗುರುರೂಪನಾಗಿ ಬಂದು,
ತನ್ನ ನಿಜವನ್ನೇ ಇದಿರಿಟ್ಟು ತೋರಿದಲ್ಲಿ, ಆ ವಸ್ತುವಂ ನೋಡಿ ನೋಡಿ,
ತನ್ನ ಅಂತರಂಗದಲ್ಲಿರ್ಪ ಅಜ್ಞಾನವು ಹರಿದು,
ಅಲ್ಲೊಂದು ಸೂಕ್ಷ್ಮದ್ವಾರವು ಕಾಣಿಸಲಲ್ಲಿ
ಪ್ರವೇಶಿಸಲೆಸದಿರ್ಪ ಅನೇಕ ದುರ್ಗುಣಗಳಿಗಂಜದೆ
ಆತ್ಮಾನಮಾತ್ಮನಾವೇತ್ತಿ ಎಂಬ ಶ್ರುತಿವಚನದಿಂ
ತನ್ನಿಂದುತ್ಪನ್ನಮಾದ ಪಂಚಭೂತಗಳಲ್ಲಿ ತಾನೇ ಕಾರಣಭೂತಮಾಗಿ ಕೂಡಲು,
ಆ ಗುಣಂಗಳು ಆತ್ಮಸ್ವರೂಪಮಾಗಿ, ಆತ್ಮನಿಂದಲೇ ಉಧ್ಭವಿಸಿ,
ಆತ್ಮನಿಗೆ ಸುಖವನ್ನೂ ವಾಯುರೂಪಮಾದ ಜೀವನಿಗೆ ದುಃಖವನ್ನೂ
ಉಂಟುಮಾಡುತ್ತಿರ್ಪವೆಂತೆಂದೊಡೆ: ಅರಸಿನಲ್ಲಿ ಹುಟ್ಟಿದ ಗ್ರಹವು ಅರಸಿಂಗೆ ಸುಖಮಂ
ಪರರಿಗೆ ದುಃಖಮಂ ಮಾಡುವಂದದಿ,
ಆಧಿಯಲ್ಲಾಕಾಶಾತ್ಮಸಂಗದಿಂ ಜ್ಞಾನವು ಹುಟ್ಟಿ,
ಅದು ಅಭೇದಮಾಗಿರ್ಪ ಆಕಾಶಾತ್ಮಂಗಳಲ್ಲಿ
ಇದಾಕಾಶವಿದಾತ್ಮವೆಂಬ ಭೇದಮಂ ಪುಟ್ಟಿಸಿ,
ಜೀವರ ಸೃಷ್ಟಿ ಸ್ಥಿತಿ ಸಂಹಾರಂಗಳಿಗೆ ಕಾರಣಮಾಯಿತ್ತು.
ಉಳಿದ ನಾಲ್ಕು ಭೂತಂಗಳಲ್ಲಂತಃಕರಣಚತುಷ್ಟಯಂಗಳು ಹುಟ್ಟಿ,
ಅವೇ ನಾಲ್ಕುಮುಖಂಗಳಾಗಿ,
ಜ್ಞಾನವು ಮಧ್ಯಮುಖಮಾಗಿ,
ತದ್ಬಲದಿಂ ಅಹಂ ಬ್ರಹ್ಮವೆಂದಹಂಕರಿಸುತ್ತಿರ್ಪ ಬ್ರಹ್ಮನಂ ನೋಡಿ,
ಆತ್ಮರೂಪಮಾದ ಶಿವನು ಭಾವಹಸ್ತದಲ್ಲಿ
ಅಂತಃಕರಣಮಧ್ಯದಲ್ಲಿರ್ಪ ಜ್ಞಾನವೆಂಬ ಬ್ರಹ್ಮಕಪಾಲವಂ ಪರಿಗ್ರಹಿಸಲು,
ಉಳಿದ ನಾಲ್ಕು ಶಿರಸ್ಸುಗಳಿಂ ಸೃಷ್ಟಿಕರ್ತನಾದ ಬ್ರಹ್ಮನು
ಸಂಹಾರರೂಪಮಾದ ಜ್ಞಾನಮುಖದಲ್ಲಿ
ಸಕಲ ಪದಾರ್ಥಗಳನ್ನು ಪರಿಗ್ರಹಿಸುತ್ತಿರ್ಪನು.
ಅಂತಪ್ಪ ಆತ್ಮರೂಪಮಾದ ಶಿವನೊಳಗೆ ಆಕಾಶಮೆಂತೈಕ್ಯಮಪ್ಪುದೆಂದೊಂಡೆ :
ಆಕಾಶವೂ ವಾಯುರೂಪು.
ಭಸ್ತ್ರಿಯಲ್ಲಿ ಪ್ರವೇಶಿಸಿರ್ಪ ವಾಯುವಿನಿಂದ ಆಕಾಶಮಧಿಕಮಾಗಲು.
ವಾಯುವಡಗಲಾಕಾಶವೂ ಕೂಡ ಅಡಗುವಂದದಿ,
ಅಂತಪ್ಪ ವಾಯುವೇ ಜೀವನು,
ಆ ಜೀವನಿಗವಸಾನಸ್ಥಾನವೇ ಆತ್ಮನು,
ಆ ಆತ್ಮನಲ್ಲಿ ಕೂಡಿ ತನ್ನ ಮುನ್ನಿನ ವಾಯುರೂಪಮಳಿದಲ್ಲಿ
ಅದಕಿಂತ ಮೊದಲೇ ಆಕಾಶವಳಿವುತ್ತಿರ್ಪುದು.
ಅಂತಪ್ಪ ಆತ್ಮಸ್ವರೂಪವೆಂತೆಂದೊಂಡೆ :
ಆತ್ಮವಂ ವಿಚಾರಿಸಿ ಆತ್ಮಸ್ವರೂಪವನರಿಸಿದ ಜೀವನು ತಾನಾತ್ಮನಾಗುತ್ತಿರಲು
ಆತ್ಮಸ್ವರೂಪಮಿತೆಂದು ಮರಳಿಯೋರ್ವರೊಳುಸುರುವುದೆಂತಯ್ಯಾ!
ಸತ್ತವನು ಬಂದು ತನ್ನ ವೃತ್ತಾಂತವಂ ಹೇಳಬಲ್ಲನೆ?
ಉರಿಯೊಳ್ಕೂಡಿದ ಕರ್ಪುರವು ಉರಿಯಪ್ಪುದಲ್ಲದೆ ಕರ್ಪುರವಪ್ಪುದೆ?
ಅಂತಪ್ಪ ಅಭೇದಾನಂದ ಪರಮಾತ್ಮಸಂಗದೊಳೇಕಮಾಗಿರ್ಪಂತೆ ಮಾಡಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /102
ವಿರಾಡ್ರೂಪನಾದ ಗುರುವೇ
ನೀನು ನಿನ್ನ ಬ್ರಹ್ಮಾಂಡಸ್ವರೂಪವನೆನ್ನ
ಪಿಂಡಾಂಡಸ್ವರೂಪವಂ ಮಾಡಿ, ನನ್ನಂ ನಿರ್ಮಿಸಿದಲ್ಲಿ,
ನಿನ್ನ ನಾಭಿಯಿಂದ ಕೆಳಗೆ ಶೂದ್ರತ್ವವೂ, ಗರ್ಭದಲ್ಲಿ ವೈಶ್ಯತ್ವವೂ,
ಭುಜದಲ್ಲಿ ಕ್ಷತ್ರಿಯತ್ವವೂ, ಮುಖದಲ್ಲಿ ಬ್ರಾಹ್ಮಣತ್ವವೂ
ನೆಲೆಗೊಂಡಿತೆಂತೆಂದೊಡೆ : ನಾಭಿಯಿಂದ ಕೆಳಗೆ ಪಾದಂಗಳಾಧಾರನಾಗಿ,
ಊರುಗಳ ಮಧ್ಯದಲ್ಲಿ ಬೀಜದ ಮೂಡೆಗಳನ್ನಿಟ್ಟುಕೊಂಡು,
ನೇಗಿಲ ಮೊನೆಯಲ್ಲಿ ಭೂಮಿಯನುತ್ತು ಬಿತ್ತಿ,
ತಾನೇ ಸೃಷ್ಟಿಸಿದ ಫಲಂಗಳಿಂದ
ತನಗೂ ಸಕಲ ಜಗಕ್ಕೂ ಆಧಾರಮಾಡುತ್ತಿರ್ಪುದೇ ಶೂದ್ರತ್ವವು.
ಕ್ಷತ್ರಿಯಮುಖದಲ್ಲಿ ಬಂದ ಸಕಲ ಪದಾರ್ಥಗಳನ್ನು ತಾನು ಕೊಂಡು,
ಸಕಲ ಜಗಕ್ಕೂ ಅವರವರಿಗೆ ಬೇಕಾದ ವಸ್ತುಗಳನ್ನೇ ಕೊಡುತ್ತಾ,
ಅದರಲ್ಲಿ ಬಂದ ಸುಖಲಾಭವನ್ನು ಪಡೆಯುತ್ತಾ,
ಮಾರದೆ ನಿಂತ ಕೆಟ್ಟ ವಸ್ತುವನ್ನು
ಅಧೋಮುಖದಲ್ಲಿ ಕೆಡವುತ್ತಿರ್ಪುದೆ ವೈಶ್ಯತ್ವವು.
ಭುಜದಲ್ಲಿ ಸಕಲ ಪದಾರ್ಥಂಗಳನ್ನು ಶಕ್ತಿಯಿಂದ ಸಂಹರಿಸಿ ತಂದು
ಅಗ್ನಿಮುಖದಿಂ ಬ್ರಾಹ್ಮಣರಿಗೆ ಕೊಡುತ್ತಾ,
ಬ್ರಾಹ್ಮಣರ ಮುಖದಿಂ ಸಕಲ ಜಗತ್ತನ್ನು ರಕ್ಷಿಸುತ್ತಾ,
ಸಕಲಲೋಕವಂ ಪೂತವಂ ಮಾಡುತ್ತಾ,
ದಕ್ಷಿಣಮುಖದಲ್ಲಿ ಬ್ರಾಹ್ಮಣರನ್ನೂ, ಉತ್ತರಮುಖದಲ್ಲಿ ಶೂದ್ರರನ್ನೂ
ರಕ್ಷಿಸುತ್ತಿರ್ಪುದೇ ಕ್ಷತ್ರಿಯತ್ವವು.
ಮುಖದಲ್ಲಿ ವೇದವು ಮಂತ್ರಕ್ಕೆ ತಾನೇ ಮೂಲವಾಗಿ
ಕ್ಷತ್ರಿಯಮುಖದಿಂದ ಕೊಂಡು,
ಸಕಲ ಪದಾರ್ಥಂಗಳನ್ನು ಮಂತ್ರಯುಕ್ತಮಾಗಿ
ಹೃದಯಕುಂಡದಲ್ಲಿರ್ಪ ಅಗ್ನಿಮುಖಕ್ಕೆ ಆಹುತಿಯಂ ಕೊಟ್ಟು,
ತನ್ಮುಖದಲ್ಲಿ ಭೂತಂಗಳನ್ನು ತೃಪ್ತಿಬಡಿಸಿ,
ದೇವತೆಗಳನ್ನು ತೃಪ್ತಿಬಡಿಸುವುದೇ ಬ್ರಾಹ್ಮಣತ್ವವು.
ಅಂತಪ್ಪ ಬ್ರಾಹ್ಮಣಸ್ವೂರಪವೇ ಶಿವನು ಎಂತೆಂದೊಡೆ :
ಪಂಚೇಂದ್ರಿಯಂಗಳೇ ಪಂಚಮುಖಂಗಳಾಗಿ
ಸಕಲವನ್ನೂ ಸಂಹರಿಸುತ್ತಿರ್ಪುದಾದ ಕಾರಣ.
ಭುಜದಲ್ಲಿರ್ಪ ಕ್ಷತ್ರಿಯತ್ವವೇ ವಿಷ್ಣುವು.
ಅದೆಂತೆಂದೊಡೆ : ಭಿನ್ನವಂ ಸಂಹರಿಸುತ್ತಾ, ನಿಜವಂ ರಕ್ಷಿಸುತ್ತಾ,
ಶಕ್ತಿಗೆ ತಾನೇ ಆಧಾರಮಾಗಿ, ತನಗೆ ಶಕ್ತಿಯೇ ಆಧಾರಮಾಗಿ,
ಶಕ್ತಿಗೂ ತನಗೂ ಭೇದವಿಲ್ಲದಿರ್ಪುದೇ ವಿಷ್ಣುತ್ವವು.
ತನ್ನ ಗರ್ಭದಲ್ಲಿ ಸಕಲವನ್ನೂ ಇಂಬಿಟ್ಟು, ತನ್ನ ಗರ್ಭದಿಂದ
ಸಕಲವನ್ನೂ ಸೃಷ್ಟಿಸುತ್ತಾ,
ಗಮನಾಗಮನ ಸೃಷ್ಟಿ ನರಕಂಗಳೆಂಬ ಚತುಮರ್ುಖಗಳುಳ್ಳುದೇ ಬ್ರಹ್ಮತ್ವವು.
ನಾಭಿಯಿಂದ ಕೆಳಗೆ ಇಂದ್ರತ್ವವೆಂತೆಂದೊಡೆ :
ಸಕಲ ಭೋಗಕ್ಕೂ ತಾನೇ ಕರ್ತೃವಾಗಿ, ಶರೀರವೆಲ್ಲಾ ಯೋನಿರೂಪವಾಗಿ,
ಅಷ್ಟಭೋಗಂಗಳೆಂಬ ಅಷ್ಟದಿಕ್ಕುಗಳನ್ನು ಪಾಲಿಸುತ್ತಾ,
ಆ ಬ್ರಾಹ್ಮಣರು ಅಗ್ನಿಗೆ ಆಹುತಿಗೊಟ್ಟ ಹವಿಸ್ಸನ್ನೇ
ಬಿಂದುರೂಪಮಂ ಮಾಡಿ ಪೃಥ್ವಿಯಲ್ಲಿ ವಷರ್ಿಸುತ್ತಾ,
ಸಕಲ ಗುಣರೂಪಮಾದ ದೇವತರುವು ತನ್ನನಾಶ್ರಯಿಸುತ್ತಿರಲು,
ಅವೆಲ್ಲಕ್ಕೂ ತಾನೇ ಕರ್ತೃವಾಗಿಹುದೇ ಇಂದ್ರತ್ವವು.
ಇಂತಪ್ಪ ಬ್ರಹ್ಮಾಂಡಕ್ಕೂ ಪಿಂಡಾಂಡಕ್ಕೂ ಭೇದದೋರದೆ ಇರಲಾಗಿ,
ನಿನಗೂ ನನಗೂ ಭೇದವುಂಟೇನಯ್ಯಾ ?
ಏನೆಂದೊಡೆ, ನೀನು ಮಹವಾಗಿ ನಾನು ಸ್ವಲ್ಪವಾಗಿರ್ಪುದು
ಕೊರತೆಯಲ್ಲದೆ, ನಾನು ಮಹವಾದಲ್ಲಿ ನಾನೇ ನೀನಪ್ಪೆನು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./103
ಶತಮಾನಃ ಪುರುಷಃ ಶತೇಂದ್ರಿಯ’ ಎಂಬ
ಶ್ರುತಿವಚನದಿಂ ನೂರು ಸಂಖ್ಯೆಯುಳ್ಳ
ಆ ವಿರಾಟ್ಪುರುಷನು
ಅನುಭವಕಾರಣಮಾದ ವಯೋರೂಪಮಾದ
ಷೋಡಶ ಸಂಖ್ಯೆಯೇ ತಾನಾಗಿ
ಉಳಿದ ಚೌರಾಸೀತಿ ಸಂಖ್ಯೆಯೇ ಪಂಚಭೂತಂಗಳೆಂಬ
ಪಂಚಶೂನ್ಯಂಗಳೊಳಗೆ ಕೂಡಿ
ಚೌರಾಶೀತಿ ಲಕ್ಷ ಭೇದಂಗಳಾದ
ಜೀವಜಾಲಂಗಳಾಗಿ ಉಳಿದಂಶವೆ ಪರಮನಾಗಿ,
ಆ ಜೀವಜಾಲಂಗಳಿಗೆ ಆ ಪರಮವೆ ಕಾರಣಮಾಗಿರ್ಪುದು.
ಪಂಚಶೂನ್ಯಂಗಳಾದ್ಯಂತಂಗಳಲ್ಲಿರ್ಪ
ಚೌರಾಶೀತಿ ಲೆಕ್ಕದಲ್ಲಿ ಎಂಬತ್ತುಲಕ್ಷ ಜೀವಂಗಳು
ಆದಿಯಾಗಿರ್ಪಲ್ಲಿ
ಚಾತುರ್ಲಕ್ಷ ಭೇದವಡೆದ ಮನುಷ್ಯ ಜೀವಂಗಳೆ
ಕಡೆಯಾಗಿಪ್ಪವೆಂತೆಂದರೆ : ಸಕಲ ಜನ್ಮಂಗಳಿಗೂ ಮನುಷ್ಯನೇ ಕಡೆ.
ಈ ಮನುಷ್ಯಜನ್ಮದಲ್ಲಿ ಮಾಡಿದ ಕರ್ಮದಿಂ
ಸಕಲ ಜನ್ಮಂಗಳನೆತ್ತಿ ಅನುಭವಿಸುತ್ತಿರ್ಪುದರಿಂ
ಅದೇ ಆದಿ ಇದೇ ಅಂತ್ಯಮಾಯಿತ್ತು.
ಮಧ್ಯೆ ಇರ್ಪ ಪಂಚಭೂತಂಗಳೆಂಬ
ಪಂಚ ಶೂನ್ಯಂಗಳಳಿಯಲು
ಎಂಬತ್ತುನಾಲ್ಕು ಹದಿನಾರರೊಳಗೆ ಕೂಡಿ ನೂರಾಯಿತ್ತು.
ಸೃಷ್ಟಿ ಸ್ಥಿತಿಗಳೆಂಬ ಮಿಥ್ಯ ಶೂನ್ಯಂಗಳೊಳಗೆ ಕೂಡಿದ
ಸಂಹಾರಮೊಂದೆ ನಿಜಮಾಯಿತ್ತು.
ಆ ನೂರ ಹತ್ತರಿಂದ ಕಳೆಯೆ ನಿಂತುದು ಹತ್ತಾಯಿತ್ತು
ಹತ್ತ ಒಂದರಿಂದ ಕಳೆಯೆ ನಿಂತವಸ್ತು ಒಂದೆಯಾಯಿತ್ತು.
ಅದ ಕಳೆವುದಕ್ಕೆ ಒಂದು ವಸ್ತು ಇಲ್ಲದಿರ್ಪುದರಿಂ
ಕೂಡತಕ್ಕವಸ್ತುವಲ್ಲದೆ ಕಳೆಯತಕ್ಕ ವಸ್ತುವಲ್ಲವಾಯಿತ್ತು.
ಕೂಡುವುದೆಲ್ಲ ಮಿಥ್ಯವಾಗಿ
ಕಳೆವುದಕ್ಕೆ ಬೇರೊಂದು ವಸ್ತುವಿಲ್ಲದಿರ್ಪುದರಿಂ
ತಾನೊಂದೆ ನಿಜಮಾಯಿತ್ತು.
ಆ ನಿಜವೊಂದೆ ಉಂಟಾದುದು
ಮಿಕ್ಕುದಿಲ್ಲವಾದುದರಿಂ
ಆ ತಥ್ಯಮಿಥ್ಯಗಳೆರಡೂ ನಿತ್ಯಮಾಯಿತ್ತು.
ಆ ಸತ್ಯದಿಂ ಕಾಣಬರುತ್ತಿರ್ಪುದೆ ಮಿಥ್ಯ.
ಆ ಮಿಥ್ಯದಿಂ ಪ್ರಕಾಶಿಸುತ್ತಿರ್ಪುದೆ ಸತ್ಯ.
ಒಂದರ ಗುಣವನೊಂದು ಪ್ರಕಾಶವಮಾಡುತ್ತಿರ್ಪುದರಿಂ
ಅವಕ್ಕವೆ ಗುಣಂಗಳಾಯಿತ್ತು.
ಅಂತಪ್ಪ ಸತ್ಯವೆ ನಿಜ.
ನಿಜದಲ್ಲಿ ಪ್ರಕಾಶಮಾಗಿರ್ಪುದೆ ಜ್ಞಾನ.
ಸತ್ಯ ಜ್ಞಾನಸಂಗದಲ್ಲಿ ಪರಿಪೂರ್ಣಮಾಗಿ
ಪ್ರಕಾಶಿಸುತ್ತಿರ್ಪುದೆ ಆನಂದ.
ಅಂತಪ್ಪ ಸಚ್ಚಿದಾನಂದಮಯನಾಗಿ
ಮೂರು ಮೂಲೆಯುಳ್ಳ ಒಂದು ವಸ್ತು ತಾನಾಗಿರ್ಪ ಬ್ರಹ್ಮ
ತನ್ನ ಮಹಿಮಾಪ್ರಕಟನ ನಿಮಿತ್ಯ
ತನ್ನಲ್ಲಿಯೇ ಭಿನ್ನಮಾಗಿರ್ಪ.
ನಿಜ ಛಾಯಾಮಿಥ್ಯ ಮಾಯಾ ಸಂಗಮಾದಲ್ಲಿ
ಸತ್ಯ ಮಿಥ್ಯದೊಳಗೆ ಕೂಡಿ
ಉಂಟಾಗಿಯಿಲ್ಲಮಾಗುತ್ತಿರ್ಪ ಶರೀರಮಾಯಿತ್ತು.
ಜ್ಞಾನ ಮಿಥ್ಯದೊಳಗೆ ಕೂಡಲು
ಜ್ಞಾನ ಜ್ಞಾನರೂಪಮಾದ ಜೀವಮಾಯಿತ್ತು.
ಆನಂದ ಮಿಥ್ಯದೊಳಗೆ ಕೂಡಲು
ಸುಖದುಃಖಕಾರಣಮಾದ ಮನಸ್ಸಾಯಿತ್ತು.
ಇಂತಪ್ಪ ಮಿಥ್ಯದೊಳಗೆ ಕೂಡಿ
ಆ ಬ್ರಹ್ಮವೇ ಚಿದ್ರೂಪಮಾದನಂತಗಳಾಗಿ ಹೆಚ್ಚಿ
ಆ ಮಿಥ್ಯಾಕ್ರೀಡೆಗಳನನುಭವಿಸುತ್ತಿರ್ಪ
ಮಿಥ್ಯಾಭವವನ್ನು ಉಪಸಂಹರಿಸಿ ಕಳದು
ಆ ಮಿಥ್ಯವ ಮಿಥ್ಯವ ಮಾಡುವುದಕ್ಕೆ
ತಾನೆ ಕಾರಣಮಾಗಿ ನಿಂತ
ಅಖಂಡ ಸತ್ಯಜ್ಞಾನಾನಂದ ಪದಾರ್ಥ
ತಾನೊಂದೆಯಾಗಿರ್ಪ ಮಹಾಲಿಂಗವೇ ಇಷ್ಟಮಾದಲ್ಲಿ
ಶರೀರ ಮಿಥ್ಯ ಕಳೆದು
ಲಿಂಗದೊಳಗೆ ಬೆರೆದ ತನುವೆ ಸತ್ತಾಯಿತ್ತು.
ಆ ಲಿಂಗವೆ ಪ್ರಾಣಲಿಂಗಮಾದಲ್ಲಿ
ಆ ಪ್ರಾಣದ ಮಿಥ್ಯವಳಿದು
ಆ ಲಿಂಗದೊಳಗೆ ಲೀನಮಾದ
ಜ್ಞಾನವೇ ಚಿತ್ತಾಯಿತ್ತು.
ಎರಡರ ಸಂಗದಿಂದುದಿಸಿದ
ಆನಂದ ಮಹಿಮೆಯೆ ಭಾವಲಿಂಗಮಾದಲ್ಲಿ
ಮನಸ್ಸಿನ ಮಿಥ್ಯವಳಿದು
ಆ ಭಾವಲಿಂಗದಲ್ಲಿ ಬೆರೆದ ಮನವೆ
ಆನಂದರೂಪಮಾಯಿತ್ತು.
ಇಂತಪ್ಪ ಸಚ್ಚಿದಾನಂದ ಮೂರ್ತಿಯಾದ
ಗುರುರೂಪಮಾದ ಮಹಾಲಿಂಗಕ್ಕೆ
ಅಷ್ಟೋತ್ತರ ಶತವಚನಂಗಳೆಂಬ
ಸುವಾಸನೆವಿಡಿದಷ್ಟೋತ್ತರ ಶತದಳಂಗಳಿಂ
ಸುವಾಕ್ಯಂಗಳೆಂಬ ಕೇಸರಂಗಳಂ
ಪಂಚಾಕ್ಷರಿ ಬೀಜಂಗಳಿಂ ಪ್ರಕಾಶಿಸುತ್ತಿಪ್ಪ
ಪ್ರಣವ ಕಣರ್ಿಕೆಯಿಂ ವಿರಾಜಿಸುತ್ತಿರ್ಪ
ಚಿನ್ನದ ಪುಂಡರೀಕ ಭಕ್ತಿರಸ ಪೂರಿತಮಾಗಿರ್ಪ
ಹೃದಯ ಸರಸಿಯೊಳು ವಿವೇಕ ಬಿಸದೊಳಗೆ ಕೂಡಿ ಬೆಳದು
ಮಹಾಗುರೂಪದೇಶವೆಂಬ ಭಾಸ್ಕರೋದಯದಿಂ
ಜಿಹ್ವಾಮುಖದಲ್ಲಿ ವಿಕಸನಮಾಗಿ
ಜಗದ್ಭರಿತಮಾದ ದಿವ್ಯವಾಸನೆಯಿಂ
ಮೀಸಲಳಿಯದ ಪರಮ ಪವಿತ್ರಮಾಗಿರ್ಪ
ದಿವ್ಯ ಕಮಲಮಂ ಮಹಾಲಿಂಗಕರ್ಪಿಸಿ
ತತ್ಕಣರ್ಿಕಾಮಧ್ಯದಲ್ಲಿ ಭಾವಹಸ್ತದಲ್ಲಿ
ತಲ್ಲಿಂಗಮಂ ತಂದು ಪ್ರತಿಷ್ಠೆಯಂ ಮಾಡಿ
ತದ್ವಚನಾಮೃತ ರಸದಿಂದಭಿಷೇಕಮಂ ಮಾಡಿ
ತತ್ ಜ್ಞಾನಾಗ್ನಿಯಿಂ ಮಿಥ್ಯಾಗುಣಂಗಳಂ ದಹಿಸಿ
ಆ ಸತ್ವಸ್ವರೂಪಮಾಗಿರ್ಪ ಭಸ್ಮವಂ ಧರಿಸಿ
ತನ್ಮಹಿಮಾವರ್ಣನೀಯಮಾಗಿರ್ಪಾಭರಣಂಗಳಿಂದಲಂಕರಿಸಿ
ಸತ್ಕೀರ್ತಿಯೆಂಬ ವಸ್ತ್ರಮಂ ಸಮರ್ಪಿಸಿ
ವೈರಾಗ್ಯ ಧರ್ಮವುಳ್ಳ ಹೃದಯವೆಂಬ ಶಿಲೆಯೊಳಗೆ
ವಚನಮೆಂಬ ಸುಗಂಧದ ಕೊರಡಂ ಭಕ್ತಿರಸಯುಕ್ತಮಾಗಿ ತೆಯ್ದು
ಅಲ್ಲಿ ಲಭ್ಯಮಾದ ಪರಮ ಶಾಂತಿಯೆಂಬ ಗಂಧಮಂ ಸಮರ್ಪಿಸಿ
ತದ್ಬೀಜ ರೂಪಮಾಗಿರ್ಪ ತತ್ವವೆಂಬಕ್ಷತೆಯನಿಟ್ಟು
ಮನವೆಂಬ ಕಾಷ್ಠದಲ್ಲಿ ಹೊತ್ತಿರ್ಪ ಜ್ಞಾನಾಗ್ನಿಯಲ್ಲಿ
ಪಲವಿಧ ಗುಣಂಗಳೆಂಬ ದಶಾಂಗಧೂಪಮಂ ಬೆಳಗಿ
ಊಧ್ರ್ವಮುಖಮಾಗಿರ್ಪ ತದ್ವಾಸನಾ ಧೂಪ ಧೂಮಮಂ ಸಮರ್ಪಿಸಿ
ತದ್ವಚನ ಮುಖದಲ್ಲಿ ಸಕಲವು ಅಖಂಡಮಯಮಾಗಿ
ಪ್ರಕಾಶಿಸುತ್ತಿರ್ಪ ಚಿಜ್ಯೋತಿ ನೀಲಾಂಜನಮಂ
ಮಂಗಳಮಯಮಾಗಿ ಬೆಳಗಿ,
ವದನವೆಂಬ ಘಂಟೆಯಲ್ಲಿ ನಾಲಗೆಯೆಂಬ ಕುಡುಹನು
ಮೂಲಾಧಾರಮಾರುತನ ಮೊದಲನು
ಭಾವದಲ್ಲಿ ಪಿಡಿದು ನುಡಿಸಿ
ತನ್ಮುಖದಲ್ಲಿ ಪ್ರಕಾಶಮಾನಮಾಗಿ ಜಗದ್ಭರಿತಮಾದ
ವಚನಾಘೋಷಂಗಳೆಂಬ ಘಂಟಾನಾದಮಂ ಸಮರ್ಪಿಸಿ
ವಚನಾರ್ಥಂಗಳೆಂಬ ಪಲವಿಧ ಶುಚಿರುಚಿಗಳುಳ್ಳ ಪದಾರ್ಥಂಗಳಿಂ
ತನ್ಮಧ್ಯದಲ್ಲಿ ಪ್ರಕಾಶಿಸುತ್ತಿರ್ಪ ಪರಮಾನಂದಾಮೃತವನು
ತೃಪ್ತಿ ಪಾತ್ರೆಯಲ್ಲಿಟ್ಟು ನೈವೇದ್ಯಮಂ ಸಮರ್ಪಿಸಿ
ನಿರ್ಮಳ ಭಕ್ತಿ ರಸವೆಂಬ ಶುದ್ಧೋದಕಮಂ ನಿವೇದಿಸಿ
ತನುಮನಃಪ್ರಾಣಂಗಳೆಂಬ ತಾಂಬೂಲಮಂ
ಸತ್ಯ ಜ್ಞಾನಾನಂದ ರೂಪಮಾದ ಮಹಾಶಿವಲಿಂಗಮುಖದಲ್ಲಿ
ಸಮರಸಾನುರಾಗದಿಂ ಪ್ರಕಾಶಮಾಗಿರ್ಪ
ದಿವ್ಯತಾಂಬೂಲಮಂ ಸಮರ್ಪಿಸಿ
ಲಿಂಗದೊಳಗುಪಭೋಗಿಸುತ್ತಿರ್ಪ
ಅಷ್ಟ ಭೋಗಂಗಳೆ ಅಷ್ಟ ವಿಧಾರ್ಚನಂಗಳಾಗಿ
ಆ ಲಿಂಗದೊಳಗೆ ಬೆರದು ಭೇದದೋರದಿರ್ಪ
ಷೋಡಶ ಕಳೆಗಳೆ ಷೋಡಶೋಪಚಾರವಾಗಿ
ತಲ್ಲಿಂಗ ಸಂಗವೆ ರತಿಯಾಗಿ
ಎರಡೂ ಏಕಮಾಗಿರ್ಪ ನಿರ್ವಾಣ ಸುಖಮೆ ಪರಮಸುಖಮಾಗಿ
ನೀನು ನಾನೆಂಬ ಭೇದವಳಿದು
ಎರಡೂ ಒಂದಾಗಿ ಅಭೇದಾನಂದದಲ್ಲಿ
ಬೇರೆವಾಂಛೆ ಇಲ್ಲಮಾಗಿ, ನೀನಲ್ಲದೆ ನಾನೇನೂವಲ್ಲೆ
ಇದ ಬರದೋದಿ ಕೇಳಿ ಅರ್ಥವಂ ಮಾಡಿ ಆನಂದಿಸುವ
ತದೀಯ ಭಕ್ತರ ವಾಂಛಿತವಂ ಸಲಿಸಿ
ಮಿಥ್ಯಾಭ್ರಮೆಯಂ ನಿವೃತ್ತಿಯಂ ಮಾಡಿ
ಪುನರಾವೃತ್ತಿ ರಹಿತ ಶಾಶ್ವತ ದಿವ್ಯಮಂಗಳಮಯ
ನಿಜಾನಂದ ಸುಖವನಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ/104
ಶಬ್ದಮಧ್ಯದಲ್ಲಿರ್ಪ ಅರ್ಥವೇ ಜೀವನು,
ತಮೋರೂಪಮಾಗಿಹನು.
ಜ್ಞಾನಮಧ್ಯದಲ್ಲಿರ್ಪ ಅರ್ಥವೇ ಪರಮನು,
ಸತ್ವರೂಪಮಾಗಿಹನು.
ಜ್ಞಾನಶರೀರದಲ್ಲಿರ್ಪ ಪರಮಾರ್ಥಭಾವವೆಂಬ ಹಸ್ತದಲ್ಲಿ
ಬುದ್ಧಿಯೆಂಬ ತ್ರಿಗುಣಾತ್ಮಕಮಪ್ಪ ಮುನ್ಮೊನೆಯಲಗಂ ಪಿಡಿದು,
ಆ ಶಬ್ದಶರೀರಂ ಭೇದಿಸಿ, ತನ್ಮಧ್ಯದಲ್ಲಿರ್ಪ ಅರ್ಥವನ್ನು
ಆ ಜ್ಞಾನವು ಗ್ರಹಿಸಿದಲ್ಲಿ,
ಜ್ಞಾನಾರ್ಥದೊಳಗೆ ಬೆರೆದು, ಎರಡೂ ಒಂದಾಗಿ,
ಆ ಅರ್ಥವೇ ಸತ್ಯವಾಗಿ ಆನಂದಮಯಮಪ್ಪುದು.
ಜ್ಞಾನವು ಗ್ರಹಿಸದೇ ಬಿಟ್ಟರೆ ಶಬ್ಧಾರ್ಥವೇ ದುರರ್ಥವಾಗಿ,
ಸೃಷ್ಟಿಸ್ಥತಿಸಂಹಾತಂಗಳಲ್ಲಿ ಕೋಟಲೆಗೊಳ್ಳುತ್ತಿರ್ಪುದೇ ಜೀವನು,
ಅದೇ ಪರಮನು.
ತತ್ಪರಿಗ್ರಹವೇ ಐಕ್ಯಮಾದಲ್ಲಿ ಎರಡೂ ಒಂದೇ ಆಗಿರ್ಪುದೇ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./105
ಶರೀರವೇ ಸ್ಥೂಲವು, ಮನಸ್ಸೇ ಸೂಕ್ಷ್ಮವು,
ಇಂದ್ರಿಯಂಗಳೇ ಶರೀರವು, ವಿಷಯಂಗಳೇ ಮನಸ್ಸು,
ಮನಸ್ಸಿನಲ್ಲಿ ಧರ್ಮವು, ಕರ್ಮಮೂಲದಲ್ಲಿ ಬಿಂದುವು,
ಧರ್ಮಮೂಲದಲ್ಲಿ ಜ್ಞಾನವು, ಕರ್ಮಕರ್ತೃವೇ ಇಷ್ಟವು,
ಧರ್ಮಕರ್ತೃವೇ ಪ್ರಾಣವು, ಕರ್ಮಕರ್ತೃವೇ ಸಗುಣವು,
ಧರ್ಮಕರ್ತೃವೇ ನಿರ್ಗುಣವು, ಕರ್ಮಕರ್ತೃವಿಗೆ ಪೃಥ್ವಿಯೇ ಸ್ಥಾನವು,
ಕರ್ಮಕ್ಕೆ ಜಲವೇ ಸ್ಥಾನವು, ಧರ್ಮಕರ್ತೃವಿಗೆ ಅಗ್ನಿಯೇ ಸ್ಥಾನವು,
ಧರ್ಮಕ್ಕೆ ವಾಯುವೇ ಸ್ಥಾನವು,
ಕರ್ಮಕರ್ತೃವಿನಲ್ಲಿ ರೂಪು, ಧರ್ಮಕರ್ತೃವಿನಲ್ಲಿ ರುಚಿಯು,
ಧರ್ಮಕರ್ತೃ ಶಿವನು, ಕರ್ಮಕರ್ತೃ ಶೈವವು,
ಮನದೊಳಗೆ ಜೀವನು ಲಿಂಗವಂ ಗ್ರಹಿಸಿದಲ್ಲಿ,
ಶರೀರದೊಳಗೆಕೂಡಿ ಲಿಂಗವು ಜೀವನಂ ಗ್ರಹಿಸಿತ್ತು.
ಶರೀರಸುಖವೇ ಮನದಲ್ಲಿ ಪರಿಣಾಮವಾದಂತೆ,
ಇಷ್ಟಮೂರ್ತಿಯೇ ಪ್ರಾಣದಲ್ಲಿ ಸಾಧ್ಯವಾಯಿತ್ತು.
ಇದೇ ಸ್ಥೂಲವು, ಅದೇ ಸೂಕ್ಷ್ಮವು.
ಇವೆರಡರ ಭೇದಕ್ಕೆ ಭಾವವು ತಾನೊಂದೇ ಕಾರಣಮಾಯಿತ್ತು.
ಅಂತಪ್ಪ ಸಹಸ್ರದಳರೂಪಮಪ್ಪ
ಭಾವದಲ್ಲಿ ಇಷ್ಟಪ್ರಾಣಂಗಳೇಕಮಾದಲ್ಲಿ,
ಆಕಾಶಮಾದ ಪ್ರಾಣವೇ ಆತ್ಮಸ್ವರೂಪಮಾದ
ನಿರ್ಮಲ ಲಿಂಗಮಾಯಿತ್ತು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./106
ಶರೀರವೇ ಹೇಯದಮೊಟ್ಟೆ ದುರ್ಗಂಧವೇ ನೈಜ,
ಸುಗಂಧವೆಲ್ಲಾ ಆರೋಪಿತವಲ್ಲದೆ ನಿಜವಲ್ಲವಾಗಿ ಹೇಯವೇ ನೈಜ.
ಮನಸ್ಸೇ ದುಃಖದಮೊಟ್ಟೆ, ಆ ದುಃಖವೇ ನೈಜ, ಸುಖವೇ ಆರೋಪಿತ,
ಶರೀರದಲ್ಲಿರ್ಪ ಹೇಯವು ಪ್ರಬಲಗಳಾದ
ವ್ಯಾಧಿಪೀಡೆಗಳನನುಭವಿಸುತ್ತಿರಲು,
ಅದೇ ಜೀವನಿಗಿಹಲೋಕದಯಾತನೆಯಾಯಿತ್ತು.
ದುಃಖದಮೊಟ್ಟೆಯಾಗಿರ್ಪ ಮನಸ್ಸನ್ನು ದುರ್ಗುಣಂಗಳು ಬಂದು
ಅನುಭವಿಸುತ್ತಿರಲ್ಲದೇ ಜೀವನಿಗೆ ಪರಲೋಕಮಾಯಿತ್ತು.
ಇಂತಪ್ಪ ಶರೀರದಲ್ಲಿ ಬಿಂದುವನ್ನೂ ಮನದಲ್ಲಿ ನಾದವನ್ನೂ
ಇಹಪರಕೃತ್ಯಂಗಳಿಗೆ ಸಾಧಕಭೂತಮಾಗಿ ಪರಮಾತ್ಮನಿಟ್ಟಿರ್ಪನು.
ಅಂತಪ್ಪ ಬಿಂದುವೇ ಆನಂದಸ್ವರೂಪು, ನಾದವೇ ಜ್ಞಾನಸ್ವರೂಪು,
ಆ ಆನಂದಬಿಂದುವು ಶರೀರಕ್ಕೆ ಕಾರಣಮಾಗಿಹುದು,
ಈ ನಾದಬಿಂದುಗಳ ಉತ್ತರಮಾರ್ಗವೇ ಮನಶ್ಶರೀರಗಳಿಗೆ ಸುಖ,
ನಿಜಪ್ರಕಟವಂ ಮಾಡುತ್ತಿರ್ಪುದು.
ದಕ್ಷಿಣಮಾರ್ಗವೇ ದುಃಖ, ಮಿಥ್ಯಾಪ್ರಕಟವಂ ಮಾಡುತ್ತಿಹುದು.
ಇವೆರಡರ ಸಂಬಂಧವಿಲ್ಲದ ವಸ್ತುವಿಗೆ
ಕೋಟಲೆಗೊಂಡು ಕುದಿವುತ್ತಿರ್ಪ ಜೀವನ ಪರಿಯ ನೋಡಾ!
ಜೀವನಿಗೆ ನಿಜವೇ ಭಾವ. ಆ ಭಾವದಲ್ಲಿರ್ಪುದು ಕಳಾಪದಾರ್ಥವು,
ಆ ಕಳಾಮಯವಾಗಿರ್ಪುದು ಸತ್ಯವು.
ಅಂತಪ್ಪ ಸತ್ಯವಂ ಹಿಡಿದು ಈ ಮಿಥ್ಯಾರೂಪಮಾದ
ಸ್ಥೂಲ ಸೂಕ್ಷ್ಮಂಗಳಂ ಬಿಟ್ಟಲ್ಲಿ,
ಜೀವನೇ ಪರಮನಪ್ಪನು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /107
ಶಿವನೇ ಪುರುಷನು, ವಿಷ್ಣುವೇ ಶಕ್ತಿಯು.
ಅದೆಂತೆಂದೊಡೆ : ಸೃಷ್ಟಿ-ಸ್ಥಿತಿನಿಮಿತ್ತಭೂತಳಾದ ಸ್ತ್ರೀಯಲ್ಲಿ ಕಾಮವು ಉತ್ಪನ್ನಮಾದಲ್ಲಿ,
ಆ ಕಾಮೋಪಸಂಹಾರಕನೇ ಪುರುಷನು,
ಆ ಕಾಮಸಂಹಾರವೇ ದಾಂಪತ್ಯಸುಖವು,
ಅದೇ ಪ್ರಪಂಚಸೃಷ್ಟಿಯು,
ಆ ಸೃಷ್ಟಿಯೇ ಶಿವಶಕ್ತಿಸ್ವರೂಪವಾದ ಸ್ತ್ರೀಪುರುಷರು.
ಸ್ಥೂಲಕ್ಕೆ ಸ್ಥೂಲಮಾಗಿರ್ಪನೇ ಶಿವನು,
ಸೂಕ್ಷ್ಮಕ್ಕೆ ಸೂಕ್ಷ್ಮವಾಗಿರ್ಪುದೇ ಶಕ್ತಿಯು, ಮಿಥ್ಯವೇ ಬ್ರಹ್ಮನು.
ಅದೆಂತೆಂದೊಡೆ : ಸ್ವಕೀಯಾನುಭವಯೋಗ್ಯಮಾದುದೆಲ್ಲ ಸೂಕ್ಷ್ಮ, ಅದೇ ರಕ್ಷಣಕರ್ತೃ,
ತತೋಧಿಕಮಾದುದೆಲ್ಲ ಸ್ಥೂಲ, ಅದೇ ಸಂಹಾರಕರ್ತೃ,
ಇಲ್ಲದುದೆಲ್ಲ ಮಿಥ್ಯಾ, ಅದೇ ಸೃಷ್ಟಿಕರ್ತೃ,
ಜಗತ್ಸೃಷ್ಟಿಕಾಲದಲ್ಲಿ ಮಹಾಶಕ್ತಿಯೊಳ್ಮಹಾಕಾಮವನ್ನು ಹುಟ್ಟಿಸಿ,
ವಿರಾಡ್ರೂಪದಲ್ಲಿ ಶಿವಶಕ್ತಿಗಳೇಕಮಾಗಿ,
ಕ್ರೀಡಿಸುತ್ತಿರ್ಪುದೇ ಸ್ಥೂಲಶರೀರವು.
ಅಂತಪ್ಪ ಶಿವಶಕ್ತಿಗಳೇ ಸ್ತ್ರೀಪುರುಷರೂಪಮಾಗಿ,
ಸೃಷ್ಟಿಸ್ಥಿತಿಸಂಹಾರಗಳೆಂಬ ಮಿಥ್ಯಾಪ್ರಭೆಯಲ್ಲಿ
ತಿರುಗುತ್ತಿರ್ಪ ಪ್ರಪಂಚವೇ ಸೂಕ್ಷ್ಮಶರೀರವು.
ಆ ಮಿಥ್ಯೆಯೇ ಪೀಠವಾಗಿ, ಆ ಶಕ್ತಿಯೇ ಪಾಣಿಬಟ್ಟಲಾಗಿ,
ಆ ಶಕ್ತಿಮಧ್ಯದಲ್ಲಿ ಪ್ರಕಾಶಿಸುತ್ತಿರ್ಪ ಮಹಾಲಿಂಗವೇ ಕಾರಣಶರೀರವು.
ಇಂತು ಸ್ಥೂಲ ಸೂಕ್ಷ್ಮ ಕಾರಣರೂಪದಲ್ಲಿ ಕ್ರೀಡಿಸುತ್ತಿರ್ಪ
ನಿನ್ನ ಮಹಾನಟನೆಯಂ ಕಾಣದಿರುವ ಕಷ್ಟಮಲ್ಲದೆ
ನೀನು ನಾನೆಂಬ ಭೇದಮುಂಟೇ ?
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./108
ಶಿವಬಿಂದುವೇ ಚಂದ್ರಸ್ವರೂಪು, ಶಕ್ತಿಬಿಂದುವೇ ಸೂರ್ಯಸ್ವರೂಪು.
ಇವು ಶ್ವೇತರಕ್ತವರ್ಣಂಗಳಾಗಿಹವು.
ಅದೆಂತೆಂದೊಡೆ : ವರ್ಷಕ್ಕೊಂದೊಂದು ಕಳೆಯ ಲೆಕ್ಕದಲ್ಲಿ ಷೋಡಶಕಳಾಪರಿಪೂರ್ಣವಾದಲ್ಲಿ,
ಪುರುಷಂಗೆ ಯೌವನೋದಯಮಾಗಿತ್ತು.
ಸ್ತ್ರೀಗೆ ವರ್ಷಕ್ಕೊಂದೊಂದಾಗಿ ದ್ವಾದಶಮೂರ್ತಿಗಳೇಕಮಾದಲ್ಲಿ
ದ್ವಾದಶಸಂವತ್ಸರದಲ್ಲಿ ಯೌವನೋದಯಮಾಯಿತ್ತು.
ಸ್ತ್ರೀಯಲ್ಲಿ ಹನ್ನೆರಡುಕಳೆಗಳೂ, ಪುರುಷನಲ್ಲಿ ಹದಿನೈದು ಕಳೆಗಳೂ ಕೂಡಿ,
ಈ ಇಪ್ಪತ್ತೆಂಟು ಕಳೆಗಳೇ ಇಪ್ಪತ್ತೆಂಟು ಮಹಾನಕ್ಷತ್ರಂಗಳಾದವು.
ಈ ಎರಡರ ಸಂಗವೇ ಅಮಾವಾಸ್ಯೆಯಾಯಿತ್ತು.
ಸ್ತ್ರೀಗೆ ಶರೀರವೇ ಸೂರ್ಯಸ್ವರೂಪು, ಮನಸ್ಸೇ ಚಂದ್ರಸ್ವರೂಪು.
ಪುರುಷನಿಗೆ ಶರೀರವೇ ಚಂದ್ರಸ್ವರೂಪು, ಮನಸ್ಸೇ ಸೂರ್ಯಸ್ವರೂಪು.
ಸೂರ್ಯಮಂಡಲವು ಕೆಳಗಾಗಿಯೂ, ಚಂದ್ರಮಂಡಲವು ಮೇಲಾಗಿಯೂ
ಇರ್ಪ ದೇವಲೋಕವೇ ಸ್ತ್ರೀ.
ಚಂದ್ರಮಂಡಲವು ಕೆಳಗೂ, ಸೂರ್ಯಮಂಡಲವು ಮೇಲಾಗಿಯೂ
ಇರ್ಪ ಮರ್ತ್ಯಲೋಕವೇ ಪುರುಷನು.
ಈ ಎರಡಕ್ಕೂ ಪಾತಾಳಲೋಕದಲ್ಲಿ ಸಂಬಂಧವುಂಟಾಗಿ ಸೃಷ್ಟಿಯೂ,
ಮತ್ರ್ಯಲೋಕದಲ್ಲಿ ಸ್ಥಿತಿಯೂ, ದೇವಲೋಕದಲ್ಲಿ ಸಂಹಾರವೂ
ಆಗುತ್ತಿರ್ಪ ವಿಚಾರವನ್ನು ಗುರೂಪದೇಶದಿಂದ ತಿಳಿದು,
ಆ ಗುರುಕರುಣದಿಂ ದೇವಲೋಕದೊಳಿರ್ಪ ಜಾಗ್ರವನ್ನೂ
ಮತ್ರ್ಯಲೋಕದಲ್ಲಿರ್ಪ ಸ್ವಪ್ನವನ್ನೂ
ಪಾತಾಳಲೋಕದಲ್ಲಿರ್ಪ ಸುಷುಪ್ತಿಯನ್ನೂ
ಮೀರಿದ ತೂರ್ಯಾತೀತಲಿಂಗಮಂ ಪಡೆದು,
ಮತ್ರ್ಯಲೋಕದ ಸತ್ಕರ್ಮಂಗಳಿಂ ಸ್ವರ್ಗಲೋಕದ ಭೋಗವನ್ನೂ
ಪಾತಾಳಲೋಕದಾನಂದವನ್ನೂ ನಿರಹಂಭಾವದಿಂದರಿದರ್ಪಿಸಿ,
ತಲ್ಲಿಂಗಪ್ರಸಾದೋಪಭೋಗಿಯಾದ ಶರಣನೇ
ನಿಲರ್ೆಪನಾಗಿ ನಿಜಾನಂದನಿಶ್ಚಿಂತಸುಖದೊಳಾಡುತ್ತಿರ್ಪನು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./109
ಸತ್ತೆಂದರೆ ಸತ್ತೇ, ಚಿತ್ತೆಂದರೆ ಚೇತನ,
ಆನಂದವೆಂದರೆ ಸಮ್ಯಕ್ಪ್ರಕಾಶ,
ಆ ಸದ್ಧರ್ಮವೇ ಸತ್ವ, ಆ ಸತ್ವವೇ ರಕ್ಷಣಕಾರಣಮಾಗಿಹುದು,
ಚಿತ್ತೇ ಸಂಹಾರಕಾರಣಮಾಗಿಹುದು.
ರಜಸ್ಸೆಂದರೆ ರಾಗ, ರಾಗವೆಂದರೆ ಆನಂದ.
ಆ ರಜಸ್ಸೇ ಕ್ರೀಡೆಯಲ್ಲಿಗಮಿಸುತ್ತಿರ್ಪುದರಿಂ ಸೃಷ್ಟಿಕಾರಣಮಾಯಿತ್ತು.
ಸಚ್ಚಿತ್ಸಂಗವೇ ಆನಂದಮಾದುದರಿಂ
ಸ್ವತಂತ್ರಧರ್ಮವಿಲ್ಲದೆ ಭಾವಪರವಾಯಿತ್ತು.
ಸತ್ತೇ ಶಕ್ತಿಯು, ಚಿತ್ತೇ ಶಿವನು, ಈ ಎರಡರ ಸಂಗವೇ ಆನಂದವು,
ಸತ್ತೇ ಭಕ್ತಿಯು, ಚಿತ್ತೇ ಜ್ಞಾನವು, ಇವೆರಡರಸಂಗವೇ ಮುಕ್ತಿಯು,
ಆ ಮುಕ್ತಿಯೇ ಆನಂದವು.
ಸದ್ಭಕ್ತಿ ಕರಣವೇ ಕಾಯ, ಜ್ಞಾನಕರಣವೇ ಚೇತಸ್ಸು,
ಮುಕ್ತ್ಯಾನಂದಕರಣವೇ ಭಾವವು.
ಸತ್ತು ಸ್ಥೂಲವಾಗಿಹುದು, ಚಿತ್ತು ಸೂಕ್ಷ್ಮವಾಗಿಹುದು,
ಆನಂದವು, ಕಾರಣಮಾಗಿಹುದು.
ಈ ಆನಂದವು ಕರಮಾರ್ಗದಲ್ಲಿ ಮುಕ್ತಿರೂಪಮಾಗಿಹುದು,
ದಕ್ಷಿಣಮಾರ್ಗದಲ್ಲಿ ಸೃಷ್ಟಿರೂಪಮಾಗಿಹುದು.
ಆ ಸೃಷ್ಟಿಕಾರಣಮೆಂತೆಂದೊಡೆ : ಸತ್ತಿನಲ್ಲಿ ಕಾಮವೂ ಚಿತ್ತದಲ್ಲಿ ಕ್ರೋಧವೂ
ಆನಂದದಲ್ಲಿ ಮೋಹವೂ
ಸತ್ತಿನಲ್ಲಿ ಲೋಭವೂ ಚಿತ್ತಿನಲ್ಲಿ ಮದವೂ
ಆನಂದದಲ್ಲಿ ಮತ್ಸರವೂ ಇರ್ಪುದು.
ಸತ್ತೇ ಬಿಂದುರೂಪು, ಚಿತ್ತೇ ನಾದರೂಪು, ಆನಂದವೇ ಕಳಾರೂಪು.
ಕಾಮಮೋಹಗಳಿಂ ಸತ್ಕರ್ಮವೇ ದುಷ್ಕರ್ಮವಾಯಿತ್ತು,
ಕ್ರೂರ ಮದವೇ ಚಿದ್ಜ್ಞಾನವಾಯಿತ್ತು.
ಲೋಭಮತ್ಸರಗಳಿಂ ನಿರುಪಾಧಿಕಮೋಕ್ಷಾನಂದವೇ
ಸೋಪಾಧಿಕ ಪ್ರಪಂಚಾನಂದಮಾಗಿ ದುಃಖಹೇತುವಾಯಿತ್ತು.
ಮದ ಬಿಂದುವರ್ತಿಯಲ್ಲಿ ಅಖಂಡನಿರುಪಾಧಿಕಚಿಚ್ಚೊ ್ಯತಿಯೊಡನೆ
ಸೋಪಾಧಿಕಮಾಗಿ ಕೂಡಿ ವಿಕಾರಮಾಗಿರ್ಪುದೇ ಜೀವನು,
ನಿತ್ಯ ಭಾಸ್ವರಮಯಮಾಗಿರ್ಪುದೇ ಶಿವನು.
ಅದರ ಸುಖವೇ ತನ್ನ ಸುಖವಾಗಿ, ಅದರ ದುಃಖವೇ ತನ್ನ ದುಃಖವಾಗಿ,
ಅದರ ಮೇಳನವೇ ತನ್ನ ಮೇಳನವಾಗಿ,
ಅದರ ಪ್ರಕಾಶವೇ ತನ್ನ ಪ್ರಕಾಶವಾಗಿ,
ಸ್ಥೂಲ ಸೂಕ್ಷ್ಮ ಕಾರಣವೆಂಬುಪಾಧಿಯೊಳಗೆ ಕೂಡಿ,
ಅದನು ಬಿಡದೆ, ಉಪಾಧಿಯು ಇದ್ದಂತಿರ್ಪುದೇ ಭವವು.
ಇದಕ್ಕೆ ಪರಿಹಾರಮೆಂತೆಂದೊಡೆ : ಚಿತ್ತು ಜ್ಞಾನಮಧ್ಯದಲ್ಲಿರ್ಪ ಮನೋಮಲಿನವನ್ನು
ಸತ್ವರೂಪಮಾದ ಭಕ್ತಿಯಿಂ ಪರಿಹರಿಸಿದಲ್ಲಿ ;
ಆ ಚಿತ್ಪ್ರಭೆಯಿಂ ಜ್ಞಾನಪ್ರಕಾಶವಾದಲ್ಲಿ,
ಆ ಜ್ಞಾನದಿಂ ಸತ್ತಿನಲ್ಲಿರ್ಪ ಕಾಮಾಹಂಗಳಳಿದು, ಶರೀರವು ಪೂತಮಾದಲ್ಲಿ ;
ಸದ್ಭಕ್ತಿಯು ಪ್ರಕಾಶಮಾಗಿ, ಕ್ರೋಧಮದಂಗಳಳಿದು,
ಲೋಭಮತ್ಸರಂಗಳಳಿದು, ಭಕ್ತಿಜ್ಞಾನಗಳಿಂ ಭಾವವು ಶುದ್ಧಮಾದಲ್ಲಿ
ಈ ಭಕ್ತಿಯಿಂದ ಲೋಭವಳಿದುದು,
ಆ ಜ್ಞಾನದಿಂದಾ ಮತ್ಸರವಳಿದು,
ಸ್ವಸ್ವರೂಪವು ಪ್ರಕಾಶಮಾಗಿ, ಶಿವಧ್ಯಾನಪರಾಯಣನಾಗಿರ್ಪಲ್ಲಿ ;
ಸದ್ರೂಪಮಾದ ಗುರುವು ಚಿದ್ರೂಪಮಾದ ಲಿಂಗವಂ
ಆನಂದರೂಪಮಾದ ಜಂಗಮಮುಖದಲ್ಲಿ ಸಾಕಾರಕ್ಕೆ ತಂದು ಕೊಟ್ಟಲ್ಲಿ ;
ಆ ಸತ್ತೇ ಇಷ್ಟಮಾಗಿ, ತನ್ಮಹಿಮೆಯೇ ಆನಂದಭಾವಮಾಗಿ,
ಸದ್ಭಕ್ತಿ ಕ್ರಿಯಾಮುಖದಿಂ ಶರೀರವು ಸಮೆದು,
ಚಿದ್ಜ್ಞಾನೇಚ್ಛಾಮುಖದಿಂ ಮನಸ್ಸಳಿದು,
ಸಚ್ಚಿತ್ಪ್ರಕಾಶಮಾದ ಇಷ್ಟಪ್ರಾಣಂಗಳು ಭಕ್ತಿಜ್ಞಾನಂಗಳನೊಳಕೊಂಡು,
ಆನಂದಮಯವಾದ ಭಾವದಲ್ಲಿ ಒಂದೆಯಾಗಿ,
ಆ ಮೋಕ್ಷಾನಂದದಲ್ಲಿ ಭಾವಂ ನಿರ್ಭಾವಮಾಗಿರ್ಪುದೇ ಲಿಂಗೈಕ್ಯವು.
ಅಂತಪ್ಪ ಮೋಕ್ಷಾನಂದಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./110
ಸತ್ತೇ ಬಿಂದುರೂಪಮಾದ ಶರೀರವು,
ಚಿತ್ತೇ ನಾದರೂಪಮಾದ ಪ್ರಾಣವು,
ಆನಂದವೇ ಕಳಾರೂಪಮಾದ ಮನಸ್ಸು,
ನಾದರೂಪಮಾದ ಚಿತ್ತಿಗೆ ಸತ್ತೇ ಶಕ್ತಿಯು,
ಬಿಂದುರೂಪಮಾದ ಶಕ್ತಿಗೆ ಆನಂದವೇ ಶಕ್ತಿಯು,
ಕಳಾರೂಪಮಾದ ಆನಂದಕ್ಕೆ ಜ್ಞಾನವೇ ಶಕ್ತಿಯು,
ಆನಂದಮಿಲ್ಲದ ಶರೀರವು ವ್ಯರ್ಥವು,
ಜ್ಞಾನಮಿಲ್ಲದ ಮನಸ್ಸು ವ್ಯರ್ಥವು.
ಈ ಶರೀರಕ್ಕೆ ಬಿಂದುಮೂಲ, ಆ ಜೀವನಿಗೆ ನಾದವೇ ಮೂಲ,
ಮನಸ್ಸಿಗೆ ಕಳೆಯೇ ಮೂಲ.
ಬಿಂದುರೂಪಮಾದುದೇ ಸ್ಥೂಲಶರೀರವು,
ನಾದರೂಪಮಾದುದೇ ಸೂಕ್ಷ್ಮಶರೀರವು,
ಕಳಾರೂಪಮಾದುದೇ ಕಾರಣಶರೀರವು.
ಆನಂದಭಕ್ತಿಸಂಗದಿಂ ಬಿಂದುವರ್ತಿಸಿ ಕ್ರಿಯಾಶಕ್ತಿಸಂಗದಿಂ
ಭಿನ್ನರೂಪಮಾದ ಸ್ವಸ್ತ್ರೀಗರ್ಭದಲ್ಲಿ ಬಿದ್ದಲ್ಲಿ,
ಆ ಬಿಂದುವನವಗ್ರಹಸಿ, ಆ ಸ್ತ್ರೀರೇತಸ್ಸೇ ಘನೀಭವಿಸಿ ಪಿಂಡರೂಪಮಾಗಿ,
ಅನೇಕ ಯಾತನೆಬಟ್ಟು, ಪೃಥ್ವಿಯಲ್ಲಿ ಸ್ಥೂಲರೂಪಮಾಗಿ ಜನಿಸುತ್ತಿಹುದು.
ಆನಂದವು ಕ್ರಿಯಾರೂಪಮಾದಂತೆ,
ಸತ್ತೇ ಮಂತ್ರರೂಪಮಾಗಿಹುದು.
ಆ ಸತ್ತೇ ತ್ವಕ್ಕಿನ ಸಂಗದಿಂ ಚಿದ್ರೂಪಮಾದ ನಾದವನನುವರ್ತಿಸಿ
ಸ್ವಶರೀರದಲ್ಲಿ ಜಿಹ್ವಾಮುಖದಲ್ಲಿ ಚೆಲ್ಲಿಸಲು
ಸ್ವಕೀಯಕರ್ಮ ಆನಂದವಂ ಗ್ರಹಿಸಿ
ಘನೀಭವಿಸಿ ತನ್ನಲ್ಲಿಯೇ ಸೂಕ್ಷ್ಮಶರೀರವು ಬೆಳಗುವುದು.
ಸೂಕ್ಷ್ಮಶರೀರವು ಸ್ಥೂಲಶರೀರವಂ ಬಿಟ್ಟು, ವೇದನೆಬಟ್ಟು ಪೋಪುದು.
ಇಹಲೋಕದ ಸುಖದುಃಖಂಗಳಿಗೆ ಸ್ಥೂಲಶರೀರವು ಕಾರಣಮಾಗಿರ್ಪಂತೆ,
ಪರಲೋಕದ ಸುಖದುಃಖಂಗಳಿಗೆ ಸೂಕ್ಷ್ಮಶರೀರವು ಕಾರಣಮಾಗಿರ್ಪುದು.
ಬ್ರಾಹ್ಮಣಾದಿಯಾಗಿ ಚಂಡಾಲಪರ್ಯಂತವಾದ ಮನುಷ್ಯರು ಬಿಂದುರೂಪು,
ಇಂದ್ರಾದಿಯಾಗಿ ಪಿಶಾಚ ಪರ್ಯಂತವಾದ ದೇವತೆಗಳು ನಾದರೂಪು,
ಇವೆರಡಕ್ಕೂ ಜ್ಞಾನಯುಕ್ತವಾದ ಮನಸ್ಸು ಕಾರಣಮಾಗಿಹುದು.
ಮನುಷ್ಯರು ನಾದಕರ್ಮದಿಂ ಬದ್ಧವಾಗಿಹರು,
ದೇವತೆಗಳು ಬಿಂದುಕರ್ಮದಿಂ ಬದ್ಧವಾಗಿಹರು.
ಕಾರಣ ಶರೀರದಲ್ಲಿ ನಿದ್ರೆಯೆ ಕಾರಣಮಾಗಿರ್ಪುದರಿಂ
ಮನುಷ್ಯರಿಗೆ ಆಹಾರವೇ ಕಾರಣವೂ
ದೇವತೆಗಳಿಗೆ ಮೈಥುನವೇ ಕಾರಣವೂ ಆಗಿಹುದು.
ದೇವತೆಗಳು ಮಂತ್ರಪ್ರಸನ್ನರು, ಮನುಷ್ಯರು ತಂತ್ರಪ್ರಸನ್ನರು.
ದೇವತೆಗಳಿಗೆ ಶಬ್ದದಲ್ಲಿರ್ಪ ಅರ್ಥವೇ ಜೀವನವೂ
ಭೂಷಣವೂ ಆಗಿಹುದು,
ಮನುಷ್ಯರಿಗೆ ಬಿಂದುವಿನಲ್ಲಿರ್ಪ ಅರ್ಥವೇ
ಭೂಷಣವೂ ಜೀವನವೂ ಆಗಿಹುದು.
ಬಿಂದುರೂಪಾದ ಅರ್ಥವು ಆನಂದಮಯಮಾಗಿರ್ಪುದು,
ಶಬ್ದದಲ್ಲಿರ್ಪ ಅರ್ಥವು ಸತ್ಯರೂಪಮಾಗಿಹುದು,
ಕಳೆಯಲ್ಲಿರ್ಪ ಅರ್ಥವು ಜ್ಞಾನಸ್ವರೂಪಮಾಗಿಹುದು.
ಸತ್ಯಮುಳ್ಳ ಪುರುಷನು ದೇವತಾಶ್ರೇಷ್ಠನು,
ಜ್ಞಾನಮುಳ್ಳ ಪುರುಷನೇ ಪ್ರಮಥಶ್ರೇಷ್ಠನು,
ಜ್ಞಾನಾನಂದಸಂಗದಿಂ ಕಾರಣಕಳಾರೂಪಮಾದ ಮನಸ್ಸು ಲಯಮಾದಲ್ಲಿ ;
ಸ್ಥೂಲ ಸೂಕ್ಷ್ಮ ಸಂಬಂಧಗಳಳಿದು,
ಸದಾನಂದವೇ ಸ್ಥೂಲವಾಗಿ, ಸಚ್ಚಿತ್ಪ್ರಕಾಶವೇ ಸೂಕ್ಷ್ಮವಾಗಿ,
ಜ್ಞಾನಾನಂದವೇ ಕಾರಣಮಾಗಿ,
ಶರೀರ ಜೀವ ಮನಸ್ಸೆಂಬ ಮಿಥ್ಯಾಭ್ರಮೆಯು ನಷ್ಟಮಾಗಿ,
ಸತ್ಯಜ್ಞಾನಾನಂದರೂಪವೇ ಮಹಾಲಿಂಗವಾಗಿ,
ಇಂತಪ್ಪ ಮಹಾಲಿಂಗದಲ್ಲಿ ತಾನೆಂಬ
ಮಿಥ್ಯಾಭ್ರಮೆಯಳಿದಿರ್ಪುದೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./111
ಸತ್ಯವೇ ಪರಮನು, ಜ್ಞಾನನವೇ ಜೀವನು, ಆನಂದವೇ ಶರೀರವು.
ಅದೆಂತೆಂದೊಡೆ: ಶರೀರಾದಿ ಸಕಲಪ್ರಪಂಚಕ್ಕೂ ಜ್ಞಾನವೇ ಮೂಲವಾಗಿರ್ಪುದು.
ಆನಂದಮುಖದೊಳ್ ಬಿಂದು ಜನಿಸಿ,
ಆ ಬಿಂದುವೇ ಪೃಥ್ವೀರೂಪದಲ್ಲಿ ಘನೀಭವಿಸಿ,
ಪಿಂಡಾಕಾರಮಾಗಿ ಶರೀರಮಪ್ಪಂತೆ,
ಜ್ಞಾನಮುಖದಲ್ಲಿ ವಾಯುವು ಜನಿಸಿ,
ತೇಜೋರೂಪದಲ್ಲಿ ಘನೀಭವಿಸಿ, ಜೀವನಾರ್ಪುದು.
ನಿಜದಲ್ಲಾತ್ಮನು ಜನಿಸಿ, ಆಕಾಶರೂಪದಲ್ಲಿ ಘನೀಭವಿಸಿ ಪರಮನಾಗಿರ್ಪನು.
ಆನಂದಬಿಂದುಮುಖದಿಂದ ಅಹಂಕಾರವು ಜನಿಸಿ,
ಜ್ಞಾನವಾಯುಗಳ ಸಂಗದಿಂ ಮನವು ಪುಟ್ಟಿತ್ತು.
ನಿಜಾತ್ಮಗಳ ಸಂಗದಿಂ ಭಾವವು ಹುಟ್ಟಿತ್ತು.
ತತ್ಸಾಧ್ಯಕ್ಕವೇ ಸಾಧನಗಳಾಗಿರ್ಪುದರಿಂ
ಇವೇ ಕರಣಂಗಳಾಗಿ, ಅವೇ ಕರಣಂಗಳಾಗಿರ್ಪವು.
ಪೃಥ್ವವೀಬೀಜಗಳಸಂಗದಿಂದ ಬೀಜಮಧ್ಯದಲ್ಲಿ ವೃಕ್ಷವು ಜನಿಸಿತ್ತು.
ವೃಕ್ಷವು ಬಲಿದಲ್ಲಿ ಬೀಜವು ನಷ್ಟಮಾಗಿ,
ತದಗ್ರದಲ್ಲಿರ್ಪ ಫಲಮಧ್ಯದಲ್ಲಿ ಅನೇಕಮುಖಮಾಗಿ ತೋರುತ್ತರ್ಪಂತೆ,
ಜ್ಞಾನವಾಯುಗಳಸಂಗದಿಂ ಜ್ಞಾನಮಧ್ಯದಲ್ಲಿ ಮನಸ್ಸು ಹುಟ್ಟಿ,
ಅದು ಬಲಿದಲ್ಲಿ. ಆ ಮೂಲಜ್ಞಾನವಳಿದು,
ತತ್ಫಲರೂಪಮಾದ ಇಂದ್ರಿಯಮಧ್ಯದಲ್ಲಿ ತೋರುತ್ತಿರ್ಪುದು.
ಜಲವು ಆ ಬೀಜವಂ ಭೇದಿಸಿ, ತನ್ಮಧ್ಯದಲ್ಲಿ ವೃಕ್ಷವಂ ನಿರ್ಮಿಸುವಂತೆ,
ಮನಸ್ಸೇ ಜಾಗ್ರತ್ಸ್ವರೂಪದಲ್ಲಿ ಜ್ಞಾನಭಿನ್ನವಂ ಮಾಡಿ,
ತನ್ಮಧ್ಯದಲ್ಲಾನಂದವಂ ನಿರ್ಮಿಸುತ್ತಿರ್ಪುದು.
ಆನಂದವೂ ನಿರಾಕಾರವೂ ಬಿಂದುವು ಸಾಕಾರವೂ ಆದುದರಿಂದ
ಆನಂದವಂ ಬಿಂದುವು ಬಂಧಿಸಿರ್ಪಂತೆ, ವಾಯುವು ಜ್ಞಾನವಂ ಬಂಧಿಸಿರ್ಪುದು.
ಆನಂದವು ಜ್ಞಾನದೊಳ್ಬೆರೆದಲ್ಲಿ ಶರೀರವು ಜೀವನಳೈಕ್ಯಮಾಯಿತ್ತು.
ಆ ಜ್ಞಾನವು ನಿಜದೊಳ್ಬೆರೆದಲ್ಲಿಜೀವನು ಪರಮನೊಳೈಕ್ಯಮಾಯಿತ್ತು.
ನಿಜಾನಂದ ಶಿವಶಕ್ತಿಗಳೇಕಮಾದಲ್ಲಿ ಜ್ಞಾನವದೊರಲಗೆ ಬೆರೆದು,
ಭೇದವಡಗಿ ಅವರೆಡರ ಸಂಯೋಗ ವಿಯೋಗಕ್ಕೆ ತಾನೇ ಕಾರಣಮಾಗಿ,
ನಿಜಾನಂದವೇ ತೋರುತ್ತಾ, ತಾನೊಪ್ಪುತ್ತಿರ್ಪುದೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./112
ಸತ್ಯಸ್ವರೂಪಮಾದ ಬಸವೇಶ್ವರನೇ ಭಕ್ತನು,
ಜ್ಞಾನಸ್ವರೂಪಮಾದ ಚನ್ನಬಸವೇಶ್ವರನೇ ಗುರುವು,
ಆನಂದಸ್ವರೂಪಮಾದ ಅಲ್ಲಮಪ್ರಭುವೇ ಜಂಗಮ.
ಇಂತಪ್ಪ ಗುರು ಜಂಗಮ ಭಕ್ತರೆಂಬ ಮಹಾನದಿಗಳು ತ್ರಿಪಥಗಾಮಿನಿಗಳಾಗಿ,
ಮಚ್ಛರೀರವೆಂಬ ಕಾಶೀಕ್ಷೇತ್ರದಲ್ಲಿ ಪರಿದು ಪವಿತ್ರಮಂ ಮಾಡಿ,
ನನ್ನ ಹೃದಯವೆಂಬ ಮಣಿಕರ್ಣಿಕಾಸ್ಥಾನದೊಳ್ಮೂರೊಂದಾಗಿ ಕುಡಲು,
ಸತ್ಯವೇ ಕಂಠ, ಜ್ಞಾನವೇ ಗೋಮುಖ, ಆನಂದವೇ ಗೋಳಾಕಾರಮಾಗಿರ್ಪ
ಮಹಾಲಿಂಗವೆಂಬ ತ್ರಿವೇಣಿಸಂಗಮದಲ್ಲಿ ನಾಂ ಮುಳುಗಿ,
ನಿರ್ವಾಣದಲ್ಲಿ ಮುನ್ನಿನಂತಿದ್ದೆನು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./113
ಸತ್ವಸ್ವರೂಪನಾದ ಶಿವನೇ ವಿಷ್ಣುಗುಣವು.
ಅಂತಪ್ಪ ಸತ್ವಸ್ವರೂಪನಾದ ಶಿವನಂ ಹೃದಯದಲ್ಲಿ ಧರಿಸಿರ್ಪುದರಿಂದ
ವಿಷ್ಣುವು ಸಂರಕ್ಷಣಕರ್ತೃವಾದನು.
ತಮಸ್ವರೂಪನಾದ ವಿಷ್ಣುವನ್ನು ಹೃದಯದಲ್ಲಿ ಧರಿಸಿರ್ಪುದರಿಂದ
ಶಿವನೇ ಸಂಹಾರಕರ್ತೃವಾದನು.
ಅದೆಂತೆಂದೊಡೆ : ಪುರುಷಧ್ಯಾನದಲ್ಲಿರ್ಪ ಪತಿವ್ರತಾಸ್ತ್ರೀಗೆ
ಅದೇ ಸ್ವಧರ್ಮವಾಗಿ ಮೋಕ್ಷ ಕಾರಣಮಾಯಿತ್ತು .
ಅಂತಪ್ಪ ಸ್ತ್ರೀಯಳ ಧ್ಯಾನದಲ್ಲಿರ್ಪ ಪುರುಷನಿಗೆ
ಅದೇ ಸ್ವಧರ್ಮವಾಗಿ ಪ್ರಪಂಚಕಾರಣಮಾಯಿತ್ತು .
ಇಂತಪ್ಪ ಸತ್ವವೇ ಅಮೃತವು, ತಮಸ್ಸೇ ವಿಷವು.
ಅಮೃತವೇ ಸಕಲರಿಗೂ ಸೇವನಾಯೋಗ್ಯಮಾಗಿ ರಕ್ಷಿಸುತ್ತಿರ್ಪುದು,
ವಿಷವೇ ಸಂಹಾರಕಾರಣಮಾಗಿರ್ಪುದು.
ಅಮೃತವೇ ಎಲ್ಲರಿಗೂ ಅಕ್ಕುದಲ್ಲದೆ,
ವಿಷವಹ್ನಿಯೊಬ್ಬನಿಗಲ್ಲದೆ ಎಲ್ಲರಿಗೂ ಅಕ್ಕುದೇನಯ್ಯಾ ?
ವಿಷಾಹಾರಿಯು ನೀನು ಅಮೃತಾಹಾರಿಯು ನಾನು ಆದುದರಿಂದ
ನನ್ನಲ್ಲಿರ್ಪ ತಮಸ್ಸೆಂಬ ವಿಷವನ್ನು ನೀಂ ಕೊಂಡು,
ನೀನೆಂಬ ಪರಮಾಮೃತವನೆನಗೆ ದಯಪಾಲಿಸಿದರೆ,
ನಾನು ನಿನ್ನ ದಯೆಯಿಂ ನಿತ್ಯನಾಗಿರ್ಪೆನು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./114
ಸಪ್ತಧಾತುಗಳೆಂಬ ಸಪ್ತಪ್ರಕಾರಂಗಳಿಂದಲೂ
ಶಿರವೆಂಬ ಗೋಪುರದಿಂದಲೂ ಭುಜಗಳೆಂಬ ನಂದಿಯ ಧ್ವಜಂಗಳಿಂದಲೂ
ಇಂದ್ರಿಯಮಾರ್ಗಂಗಳೆಂಬ ದ್ವಾರಗಳಿಂದಲೂ
ಉನ್ಮೀಲನ ನಿವಿೂಲನಂಗಳೆಂಬ ಕವಾಟಂಗಳಿಂದಲೂ
ಉಪೇತವಾದ ಕಾಯವೆಂಬ ಶಿವಾಲಯದಲ್ಲಿ
ಮನವೆಂಬ ಗರ್ಭಗೃಹದೊಳಗೆ
ಜ್ಞಾನಪೀಠದಲ್ಲಿ ಅಷ್ಟಾವರಣವೆಂಬಷ್ಟಬಂಧನದಿಂ
ಭಾವಲಿಂಗದೊಳಗಿಂಬಿಟ್ಟು, ಆನಂದಜಲದಿಂದಭಿಷೇಕವಂ ಮಾಡಿ,
ಅಂಗದೇಶದಲ್ಲಿ ಬೆರದ ಸುವಾಸನೆವಿಡಿದ
ನಾನಾಗುಣಂಗಳೆಂಬ ದಿವ್ಯ ಕುಸುಮಂಗಳಂ ತಂದು ಸಮರ್ಪಿಸಿ,
ವೈರಾಗ್ಯವೆಂಬ ಶಿಲೆಯೊಳಗೆ ದೇಹಧರ್ಮವೆಂಬ ಗಂಧದ ಕೊರಡಂ ತೇದು,
ಅದರ ಸಮೇತ ದಿವ್ಯವಾಸನೆವಿಡಿದ ಪರಮಶಾಂತಿಯೆಂಬ ಗಂಧವನ್ನು
ಶಿವಮಂತ್ರವೆಂಬ ಅಕ್ಷತೆಯೊಳಗೆ ಕೂಡಿಸಿ ಸಮರ್ಪಿಸಿ,
ಸ್ವಭಾವವಾಸನೆಯುಳ್ಳ ಕರಣಂಗಳೆಂಬ ಪಲತೆರದ ಧೂಪಂಗಳಂ ತಂದು,
ಜ್ಞಾನಾಗ್ನಿಯಲ್ಲಿ ಹಾಕಿ, ಧೂಪವಾಸನೆಯಂ ಸಮರ್ಪಿಸಿ,
ತತ್ವವೆಂಬ ಬತ್ತಿಯನ್ನು ನಿಜಸುಖತೈಲದೊಳಗೆ ಬೆರಸಿ,
ವೇದಾರ್ಥವೆಂಬ ಪಾತ್ರೆಯೊಳಗಿಟ್ಟು,
ಸ್ವಯಂಪ್ರಕಾಶವಾದ ಜ್ಯೋತಿಯನ್ನು ಹೊತ್ತಿಸಿ, ಮಂಗಳಾರತಿಯಂ ಬೆಳಗಿ,
ನಿರುಪಾಧಿಕ ಮಹಾಪ್ರಣವ ಘೋಷವೆಂಬ ಘಂಟೆಯಂ ಧ್ವನಿಗೈದು,
ಭಕ್ತಿಯೆಂಬ ನೇಪಥ್ಯಮಂ ಕಟ್ಟಿ,
ಅರಿವೆಂಬ ಪಾತ್ರೆಯಲ್ಲಿ ಜ್ಞಾನಾಗ್ನಿಯಲ್ಲಿ ಪರಿಪಕ್ವಮಾದ
ವಿಷಯಪದಾರ್ಥಂಗಳನಿಟ್ಟು,
ಬಿಂದುಕಳೆಗಳೆಂಬ ಘೃತಸೂಪಂಗಳಿಂ ಪ್ರಕಾಶಿಸುತ್ತಿರ್ಪ
ತಾನೆಂಬ ನಿಜಪ್ರಸಾದವನ್ನು ಧ್ಯಾನಹಸ್ತದಿಂ
ಪಿಡಿದು ಆತ್ಮಲಿಂಗಕ್ಕೆ ಸಮರ್ಪಿಸಲು,
ಸದಾಶಿವನು ಪ್ರಸನ್ನನಾಗಿ ಸಕಲ ಗಣತಿಂತಿಣಿಯೊಡನೆ ಕೂಡಿ,
ನಿಜಶಕ್ತಿಯಿಂ ಯುಕ್ತನಾಗಿ ಆರೋಗಣೆಯಂ ಮಾಡಿ,
ತೃಪ್ತಿಸ್ಥಾನದೊಳಗಿಂಬಿಟ್ಟುದೇ ಲಿಂಗೈಕ್ಯವು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./115
ಸೂಕ್ಷ್ಮದಿಂದಲೇ ಸ್ಥೂಲಮಂದಿಸಿ,
ಆ ಸೂಕ್ಷ್ಮವು ಕಾಣಿಸದೇ ಸ್ಥೂಲವು ಕಾಣಿಸುತ್ತಿರ್ಪುದು.
ಸ್ಥೂಲಶರೀರಯಾತನೇ ಬಿಡಿಸಿದಲ್ಲಿ, ಆ ಸ್ಥೂಲಮಂ ಬಿಟ್ಟು
ಸೂಕ್ಷ್ಮ ಗೋಚರಮಾಗಿರ್ಪ ಲಯಂ ತಾನೇ ಗೋಚರಮಾಗಿ,
ತಾನೇ ಪುನಃಸೃಷ್ಟಿಕಾರಣಮಾಗಿರ್ಪುದೆಂತೆಂದೊಡೆ:
ಬೀಜದಿಂದಲೇ ಪೈರು ಪುಟ್ಟಿ, ಆ ಬೀಜಂ ಕಾಣಿಸದೆ ಪೈರೇ ಕಾಣಿಸಿ,
ಆ ಪೈರಂ ಕೊಯ್ದು ತುಳಿದು ಒಕ್ಕಿದಲ್ಲಿ,
ಆ ಪಯರಂ ಬಿಟ್ಟು, ಬೀಜವು ಪ್ರತ್ಯಕ್ಷಮಾಗಿ, ಫಲಯಾತೆನಗೊಳಗಾಗಿ,
ಪುನಸ್ಸೃಷ್ಟಿಕಾರಣಮಾಗಿರ್ಪಂದದಿ,
ಸ್ಥೂಲದೊಳಗೆ ಸೂಕ್ಷ್ಮವು, ಸೂಕ್ಷ್ಮದೊಳಗೆ ಸ್ಥೂಲವೂ ಅಡಗಿ,
ಬಂದು ಕಾಣಿಸಲೊಂದು ಕಾಣಿಸದಿರ್ಪ ಈ ದಂದುಗವಂ ಬಿಡಿಸಿ,
ಸಲಹುವೆಯೋ ಎಂಬೀ ಸಂದೇಹದಿಂ ಹಿಂದುಮುಂದು ತಿಳಿಯದೆ
ಮಂದಮತಿಯಾಗಿರ್ಪೆನ್ನ ಬಂಧನವಂ ಬಿಡಿಸಿ,
ನಿನ್ನಡಿಕೆಂದಾವರೆಯೊಳು ಸಂಬಂಧಿಸುವುದೆಂದಿಗೆ ಹೇಳಾ,
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./116
ಸೂರ್ಯನೇ ತೀರ್ಥವು, ಚಂದ್ರನೇ ಪ್ರಸಾದವು,
ತೀರ್ಥವೇ ಬಿಂದುರೂಪಮಾಗಿಹುದು,
ಪ್ರಸಾದವೇ ಕಳಾರೂಪಮಾಗಿಹುದು.
ತೀರ್ಥವೇ ಕರ್ಮಕರ್ತೃವು, ಪ್ರಸಾದವೇ ಜ್ಞಾನಕರ್ತೃವು,
ತೀರ್ಥದಲ್ಲಿ ಶುಚಿಯು, ಪ್ರಸಾದದಲ್ಲಿ ತೃಪ್ತಿಯು,
ತೀರ್ಥದಲ್ಲಿರ್ಪ ದೀಪನವನ್ನೂ
ಪ್ರಸಾದದಲ್ಲಿರ್ಪ ಕಳಂಕವನ್ನೂ ಲಿಂಗದಲ್ಲಿ ತಿಳಿದು,
ತೀರ್ಥದಲ್ಲಿರ್ಪ ಶುಚಿಯಿಂದ ಪ್ರಸಾದದಲ್ಲಿರ್ಪ ಕಳಂಕವಂ ಕೆಡಿಸಿ,
ಪ್ರಸಾದದಲ್ಲಿರ್ಪ ತೃಪ್ತಿಯಿಂದ ತೀರ್ಥದಲ್ಲಿರ್ಪ ದೀಪನವನ್ನು ಕೆಡಿಸಿ,
ಜ್ಞಾನದಲ್ಲಿ ಪರಿಪಕ್ವಮಾದ ಪ್ರಸಾದವನ್ನೂ
ಕರ್ಮದಲ್ಲಿ ಪರಿಪಕ್ವಮಾದ ತೀರ್ಥವನ್ನೂ
ತನ್ನೊಳಗೆ ತಾನು ತಿಳಿದು ಸೇವಿಸಬಲ್ಲಡೆ ತಾನೇ ಶಿವನಪ್ಪನು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./117
ಸೃಷ್ಟಿ ಕರ್ತುವಾದ ಸ್ತ್ರೀತ್ವಾಧಿದೇವತೆಯಾದಾತನೆ ಬ್ರಹ್ಮನು.
ಸ್ಥಿತಿಕರ್ತುವಾದ ಪುರುಷಾಧಿದೇವತೆಯಾದ ಆದಿಪುರುಷನೆ ವಿಷ್ಣು.
ಇಂತಪ್ಪ ಸ್ತ್ರೀ ಪುರುಷವೇತ್ತಿಗಳುಭಯಪಾಶ್ರ್ವಂಗಳ ಉಳ್ಳ ಲಿಂಗವೇ ನಪುಂಸಕ.
ಪುಂಸ್ತ್ವ ಸ್ತ್ರೀ ಸುಖವನರಿಯದು, ಸ್ತ್ರೀತ್ವ ಪುಂಸುಖವನರಿಯದು.
ಇಂತಪ್ಪ ಸ್ತ್ರೀ ಪುರುಷ ಸುಖ ತಾನೆಯಾಗನುಭವಿಸುವುದೇ ಲಿಂಗ.
ಸ್ತ್ರೀ ಪುರುಷರಲ್ಲಿರ್ಪ ಸೃಷ್ಟಿ ಸ್ಥಿತಿ ಕರ್ತೃತ್ವ ತಾನೆಯಾಗಿ,
ನಪುಂಸಕನಾಗಿ, ಸ್ತ್ರೀ ಪುರುಷ ಸುಖವನನುಭವಿಸುತ್ತ,
ತಾ ತೋರದೆ, ತನ್ನ ಸಂಹಾರಕೃತ್ಯವ ತೋರಿಸುತ್ತ,
ಸ್ತ್ರೀ ಪುಂ ಭಾವವೆಲ್ಲವನ್ನು ತಿಳಿವುತ್ತಿರ್ಪುದರಿಂ
ಸರ್ವಜ್ಞತ್ವದ ಪ್ರಕಟವ ಮಾಡುತ್ತಿರ್ಪುದೆ ಮಹಾಲಿಂಗ.
ಪುರುಷಯಂತ್ರ ಕರ್ತುವಾಗಿಹುದೆ ಲಿಂಗ;
ಸ್ತ್ರೀಯಂತ್ರ ಕರ್ತುವಾಗಿಹುದೆ ಪುರುಷನು.
ಕರ್ಮಕರ್ತುವೆ ಬ್ರಹ್ಮನು, ಜ್ಞಾನಕರ್ತುವೆ ವಿಷ್ಣು,
ಈ ಉಭಯ ಕರ್ತೃತ್ವವೇ ಲಿಂಗ.
ಪರಮಾತ್ಮನ ನಾಲ್ಕು ಮುಖವೆ ಬ್ರಹ್ಮನು,
ಐದನೆಯ ಮುಖವೆ ವಿಷ್ಣು ,ಇಂತು ಐದು ಮುಖದಲ್ಲಿ ಸಾಕಾರವ ತೋರಿ,
ಆ ಸಾಕಾರದ ಸೃಷ್ಟಿ ಸ್ಥಿತಿಯೂ ತಾನೆಯಾಗಿ ತೋರಿ
ಅಂತಮರ್ುಖದಲ್ಲಿ ಸರ್ವಜ್ಞನಾಗಿ,
ಅಂತಮರ್ುಖದಲ್ಲಿ ತಾನು ಹೇಗೆ ಗೂಢವೋ
ತನ್ನ ಸಂಹಾರ ಕೃತ್ಯವ ಹಾಗೇ ಗೂಢವ ಮಾಡಿ ತೋರುತಿರ್ಪಾತನೆ ಮಹಾಲಿಂಗ.
ಶರೀರದಲ್ಲಿ ಸ್ತ್ರೀಪುರುಷ ಭೇದ ಕಾಣಿಸುತ್ತಿಹುದು.
ಜೀವನಲ್ಲಿ ಅಭೇದಮಾಗಿ, ಒಂದೇಯಾಗಿಯಿಹುದರಿಂ ಅದೇ ನಪುಂಸಕ.
ತದ್ಧರ್ಮ ಮನಸ್ಸಿನಲ್ಲಿ ಕಾಣಿಸುತ್ತಿಹುದು,
ಇದೇ ಸಂಸಾರ, ಅದೇ ವಿರಕ್ತಿ.
ಸದ್ಯೋಜಾತ ವಾಮದೇವಾಘೋರ ತತ್ಪುರುಷ ರೂಪಮಾಗಿರ್ಪ
ಪೃಥ್ವಿಯಪ್ಪು ತೇಜೋವಾಯುಗಳೆ ಬ್ರಹ್ಮಸ್ವರೂಪು.
ಈಶಾನರೂಪಮಾದ ಆಕಾಶವೆ ವಿಷ್ಣು ಸ್ವರೂಪು.
`ವಿಷ್ಣುರ್ ವ್ಯಾಪ್ತಾ’ ಯೆಂಬ ಧಾತ್ವರ್ಥಮುಳ್ಳುದೆ ವಿಷ್ಣುಶಬ್ದಮಾದುದರಿಂ
ವಿಷ್ಣುಮಯವೇ ಆಕಾಶ; ಈ ಪಂಚಬ್ರಹ್ಮವೆ ಜಗತ್ತು.
ಅಂತಪ್ಪ ಜಗತ್ತಿಗೆ ಚೈತನ್ಯಮಾಗಿ
ಅಂತರ್ಮಯಮಾಗಿರ್ಪ ಆತ್ಮನೆ ಸದಾಶಿವನು.
ಕರಣೇಂದ್ರಿಯದಲ್ಲಿ ಭಾವರೂಪಮಾಗಿ
ಜ್ಞಾನೇಂದ್ರಿಯದಲ್ಲಿ ನೇತ್ರರೂಪಮಾಗಿ, ಕರ್ಮೆಂದ್ರಿಯದಲ್ಲಿ ಗುಹ್ಯರೂಪಮಾಗಿ,
ಆದಿ ಮಧ್ಯಾವಸಾನಗಳಲ್ಲಿ
ಉತ್ತಮೇಂದ್ರಿಯರೂಪನಾಗಿರ್ಪಾತನೆ ವಿಷ್ಣು ;
ಮಿಕ್ಕಿನಿಂದ್ರಿಯಂಗಳೆ ಬ್ರಹ್ಮವು.
ಆ ಗುಹ್ಯೇಂದ್ರಿಯದಲ್ಲಿ ಆನಂದ ಬಿಂದುರೂಪಮಾಗಿ
ನೇತ್ರೇಂದ್ರಿಯದಲ್ಲಿ ಜ್ಞಾನಕಳಾರೂಪಮಾಗಿ
ಭಾವೇಂದ್ರಿಯದಲ್ಲಿ ನಿಜನಾದರೂಪಮಾಗಿ
ಸತ್ಯಜ್ಞಾನಾನಂದ ಮಹಿಮೆಯಂ ಪ್ರಕಟವಂ ಮಾಡುತ್ತ
ಜೀವಾತ್ಮನಾಗಿ ಹೃದಯದಲ್ಲಿರ್ದು ಸೃಷ್ಟಿಸುತ್ತ
ಅಂತರಾತ್ಮನಾಗಿ ಲಲಾಟದಲ್ಲಿರ್ದು ನೋಡಿ ರಕ್ಷಿಸುತ್ತ
ಪರಮಾತ್ಮನಾಗಿ ಭಾವಬ್ರಹ್ಮ ಸ್ಥಾನದಲ್ಲಿರ್ದು
ತಮೋ ಮುಖದಲ್ಲಿ ಸಂಹರಿಸುತ್ತಿರ್ಪಾತನೆ ಪರಮಾತ್ಮನು.
ಇಂತಪ್ಪ ಭೇದತ್ರಯಮುಳ್ಳ ಅಖಂಡಾತ್ಮನೆ ಶಿವನು.
ಎಲ್ಲದು ಉಳ್ಳುದೆ ಪೃಥ್ವಿ;
ಕೇವಲಮುಳ್ಳುದೆ ಜಲ;
ಧೂಮ ಮಾತ್ರಮುಳ್ಳುದೆ ಅಗ್ನಿ.
ತಾ ನಿರಾಕಾರಮಾಗಿ, ತನ್ನ ಗುಣವ ಸಾಕಾರವಾಗಿ
ತೋರುತಿರ್ಪುದೆ ವಾಯು.
ತಾ ಸಾಕಾರಮಾಗಿ ತನ್ನ ಗುಣವ ಸಾಕಾರ ನಿರಾಕಾರಮಾಗಿ
ತೋರುವುದೆ ಆಕಾಶ.
ತಾನ್ಕೇವಲವು ನಿರಾಕಾರಮಾಗಿ
ತನ್ನ ಗುಣವು ನಿರಾಕಾರಮಾಗಿ
ತನ್ನಲ್ಲಿ ಮತ್ತೊಂದುಯೇನೂ ಇಲ್ಲದೆ
ಪೃಥ್ವಿಗೆ ಹೊರಗೆ ಏನೂ ಏನಿಲ್ಲವೋ
ಹಾಗೆ ಆತ್ಮನ ಒಳಗೆ ಏನೂ ಇಲ್ಲ.
ತನ್ನೊಳಗೆ ಏನೂ ಇಲ್ಲದೆ
ತನ್ನ ಹೊರಗೆ ಎಲ್ಲ ಉಂಟಾಗಿರ್ಪುದೆ ಲಿಂಗವೆಂದರಿದು
ಸಂದಣಿಯೊಳಗಿರ್ಪ ಭವದಂದುಗಕಲಸಿ
ಯಾರೂ ಇಲ್ಲದೆ ಅಭೇದ್ಯಮಾಗಿ
ನಿರ್ಭಯಮಾಗಿರ್ಪ ನಿನ್ನ ಹೃದಯ ಮಧ್ಯದಲ್ಲಿ
ನನ್ನನಿಟ್ಟು ಕಾಲ ಕಾಮರ ಭಯ ಕಳದುಳುಹಿ ಸಲಹು ಕಂಡಾ
ಮಹಾಘನ ದೊಡ್ಡ ದೇಶಿಕಾರ್ಯ ಪ್ರಭುವೇ. /118
ಸೃಷ್ಟಿ ಕರ್ತುವೇ ಸ್ತ್ರೀ, ಸ್ಥಿತಿ ಕರ್ತನೇ ಪುರುಷನು,
ಎರಡರ ಸಂಗವೇ ಸಂಹಾರಕರ್ತನು.
ಆ ಎರಡೂ ಏಕಮಾಗಿರ್ಪುದೆ ದಂಪತಿತ್ವ.
ಅದೇ ವಿಧ್ಯುಕ್ತಮಾದ ಮಂಗಳಮಯ ಕಲ್ಯಾಣ.
ಅದೆ ಶಿವ ಸ್ವರೂಪಮಾದುದರಿಂ
ವಿವಾಹ ಪ್ರತಿಷ್ಠೆಯೆ ಲಿಂಗಪ್ರತಿಷ್ಠಾಫಲ.
ಆ ಫಲ ಅಕ್ಷಯರೂಪಮಾಗಿ
ಪ್ರಪಂಚದಲ್ಲಿ ಅವಧಿರಹಿತಮಾಗಿ ಪೆಚ್ಚುತಿರ್ಪುದು.
ಅಂತಪ್ಪ ಸ್ತ್ರೀ ಸೃಷ್ಟಿಕಾರಣಮಲ್ಲದೆ
ಸೃಷ್ಟಿಯೇ ತಾನಲ್ಲದಂತೆ,
ಪುರುಷನು ಸ್ಥಿತಿಕಾರಣನಲ್ಲದೆ
ಸ್ಥಿತಿಯೇ ತಾನಲ್ಲದಂತೆ,
ದಂಪತಿಗಳು ವ್ಯಯಕಾರಣರಲ್ಲದೆ
ವ್ಯಯವೇ ತಾನಲ್ಲದಂತೆ,
ಸೃಷ್ಟಿ ಸ್ಥಿತಿ ಸಂಹಾರ ಕರ್ತರು
ತದ್ಗುಣಕಾರಣರಲ್ಲದೆ
ಆ ಗುಣಗಳೇ ತಾವಲ್ಲ.
ದೇವನು ಕಲ್ಪಿತ ಸ್ಥಿತಿಯ ಸಂಹರಿಸುವನಲ್ಲದೆ
ನಿಜವ ಸಂಹರಿಸುವನಲ್ಲ.
ವಿಷ್ಣುವು ಸಂಹಾರ ಕಲ್ಪಿತಗಳ ರಕ್ಷಿಸುವನಲ್ಲದೆ
ನಿಜವ ರಕ್ಷಿಸುವನಲ್ಲ.
ಬ್ರಹ್ಮನು ಸಂಹಾರ ಸ್ಥಿತಿಯ ಸೃಷ್ಟಿಸುವನಲ್ಲದೆ
ನಿಜವ ಸೃಷ್ಟಿಸುವನಲ.್ಲ
ಅದರಿಂ ಲಯಮಾಗದುದೆ ಸತ್ಯ,
ಸ್ಥಿತಿಯಾಗದುದೆ ಮಿಥ್ಯಮಾಯಿತು.
ಅಗ್ನಿಯೆ ದಾಹಕ ಗುಣ ನಿಜದಲ್ಲಿ ಶಾಂತಿಯ ಹೊಂದಿರ್ಪಂತೆ,
ಈಶ್ವರ ಸಂಹಾರ ಗುಣ ಸತ್ಯದಲ್ಲಿ ಶಾಂತಿಯ ಹೊಂದಿರ್ಪುದು.
ಸಹಜಮಾಗಿರ್ಪುದರಿಂ ಮಿಥ್ಯಾಮಯದಿಂ
ನಿನ್ನ ಸಂಹಾರ ಮುಖದಲ್ಲಿ ಸಿಕ್ಕಿ ಸಾವ
ಕೋಟಲೆಯ ಬಿಡಿಸಿ ಸತ್ಯಮಯನಾಗಿ
ನಿನ್ನ ಪರಮ ಶಾಂತಿಯೊಳಗೆ ಬೆರದು
ಭೇದದೋರದಿರ್ಪಂತೆ ಮಾಡಿ ಕೂಡಿ ಸಲಹಾ
ಮಹಾಘನ ದೊಡ್ಡ ದೇಶಿಕಾರ್ಯ ಪ್ರಭುವೆ. /119
ಸೃಷ್ಟಿಹೇತುವಾದ ಸಂಸಾರವೇ ಪೃಥ್ವಿಯು,
ತದ್ರಕ್ಷಣಹೇತುವಾದುದೇ ಜಲವು,
ಇವೆರಡನ್ನೂ ಸಂಬಂಧಿಸಿ, ಏಕಮಾಗಿ ಘನೀಭವಿಸುವಂತೆ ಮಾಡಿ,
ತತ್ಸಂಹಾರಕ್ಕೆ ತಾನೇ ಕಾರಣಮಾಗಿರ್ಪ ಮನಸ್ಸೇ ಅಗ್ನಿಯು.
ಆ ಮನಸ್ಸನ್ನು ಪ್ರಕಾಶಗೊಳಿಸಿ ಅದರೊಳಗೆ ಕೂಡಿ
ಅಭೇದಮಾಗಿರ್ಪ ಜೀವನೇ ವಾಯುವು,
ಅಗ್ನಿಯು ಪೃಥ್ವಿಯೊಳಗೆ ಬದ್ಧಮಾಗಿರ್ಪಂತೆ,
ಮನವು ಸಂಸಾರಬದ್ಧಮಾಗಿರ್ಪುದು.
ವಾಯುವು ಜಲದೊಳಗೆ ಬದ್ಧಮಾಗಿರ್ಪಂತೆ,
ಜೀವನು ಶರೀರದಲ್ಲಿ ಬದ್ಧಮಾಗಿರ್ಪನು.
ಜೀವನು ತಾನು ಸಂಸಾರದೊಳ್ಕೂಡಿ ಸ್ಥೂಲವಾಗಿಯೂ
ಮನದೊಳ್ಕೊಡಿ ಸೂಕ್ಷ್ಮವಾಗಿಯೂ ಇರ್ಪನು.
ಸಂಸಾರ ಶರೀರ ಮನೋಜೀವಗಳಿಗಾಧಾರಮಾಗಿರ್ಪ ಕರ್ಮವೇ ಆಕಾಶವು,
ಆ ಕರ್ಮವನಾವರಿಸಿರ್ಪ ಮಹಾಮೋಹವೆಂಬ ಸುಷುಪ್ತಿಯ
ಒಳಹೊರಗೆ ಪ್ರಕಾಶಿಸುತ್ತಿರ್ಪ ಜಾಗ್ರತ್ಸ್ವಪ್ನಜ್ಞಾನಂಗಳೇ ಚಂದ್ರಸೂರ್ಯರು.
ಮನಸ್ಸೆಂಬ ಅಗ್ನಿಯು ಜೀವಾನಿಲನಿಂ ಪಟುವಾಗಿ ಸಂಸಾರಶರೀರಂಗಳಂ ಕೆಡಿಸಿ,
ಕರ್ಮವೆಂಬಾಕಾಶದೊಳಗೆ ಜೀವಾನಿಲನಿಂ ಕೂಡಿ
ಧೂಮರೂಪಮಾಗಿ ಶರೀರಸಂಸಾರಗಳೆಂಬ ಮೇಘಜಲವರ್ಷವಂ ನಿರ್ಮಿಸಿ,
ಜೀವನಿಗವಕಾಶವಂ ಮಾಡಿಕೊಟ್ಟು, ತಾನಲ್ಲಿಯೇ ಬದ್ಧನಾಗಿ,
ಜೀವನಿಂದ ಪ್ರಕಾಶಮಾಗುತ್ತಿರ್ಪುದು.
ಇಂತಪ್ಪ ಕರ್ಮವೆಂಬಾಕಾಶಕ್ಕೆ ಜೀವನೆಂಬ ವಾಯುವೇ ಕಾರಣವು.
ಇವು ಒಂದಕ್ಕೊಂದು ಕಾರಣಮಾಗಿ,
ಒಂದಕ್ಕೊಂದು ಸೃಷ್ಟಿ ಸ್ಥಿತಿ ಸಂಹಾರಹೇತುಗಳಾಗಿ
ತೋರುತ್ತಾ ಅಡಗುತ್ತಾ ಬಳಲುತ್ತಾ ತೊಳಲುತ್ತಿರ್ಪ
ಭವರೋಗದಲ್ಲಿ ಜೂಗುತ್ತಿರ್ಪ ಬಂಧನದ
ಈ ದಂದುಗವಿನ್ನೆಂದಿಗೆ ಪೋಪುದು ಎಂದು
ಮುಂದುಗಾಣದೆ ಇರ್ಪೆನ್ನ ತಾಪವಂ ನೀಂ ದಯೆಯಿಂ ತಣ್ಣನೆ ಮಾಳ್ಪೊಡೆ,
ಸತ್ಯಜ್ಞಾನಾನಂದಮೂರ್ತಿಯಾದ ಪರಮಾತ್ಮನೇ
ಗುರು ಲಿಂಗ ಜಂಗಮ ಸ್ವರೂಪಿಯಾಗಿ,
ಜ್ಞಾನದಿಂದ ನಿಜವೂ ನಿಜದಿಂದಾನಂದವೂ ಪ್ರಕಾಶಮಾಗಿರ್ಪಂತೆ,
ಗುರುವಿನಿಂದ ಲಿಂಗವಂ ಲಿಂಗದಿಂದ ಜಂಗಮವಂ ಕಂಡೆನು.
ಅಂತಪ್ಪಾ ನಿಜಾತ್ಮಲಿಂಗವನು ಕರ್ಮವೆಂಬ ಆಕಾಶದಲ್ಲಿ ಬೆರೆಸಲು,
ಅದೇ ಕಾರಣಮಾಯಿತ್ತು.
ಆ ಕರ್ಮವೆಂಬ ಶಕ್ತಿಯು ಲಿಂಗವೆಂಬ ಶಿವನೊಳಗೆ ಕೂಡಲು,
ಲಿಂಗತೇಜಸ್ಸಿನಿಂ ಕರ್ಮಗರ್ಭದಲ್ಲಿ ಜೀವನಿಗೆ
ಪುನರ್ಭವಮಾದುದರಿಂದ ಪ್ರಾಣಲಿಂಗಮಾಯಿತ್ತು.
ಅದೆಂತೆಂದೊಡೆ : ಲಿಂಗವೆಂಬ ಮಹಾಲಿಂಗದಿಂ ಜನಿಸಿದ ಕರ್ಮವೇ ಪ್ರಸಾದಲಿಂಗವು,
ಆ ಕರ್ಮದಿಂ ಜನಿಸಿದ ಜೀವನೇ ಜಂಗಮಲಿಂಗವು,
ಅಂತಪ್ಪ ಲಿಂಗದಿಂದುಸಿದ ಮನಸ್ಸೇ ಶಿವಲಿಂಗವು,
ಅಂತಪ್ಪ ಮನಸ್ಸಿನಿಂದ ಪರಿಶುದ್ಧಮಾಗಿರ್ಪ ಶರೀರವೇ ಗುರುಲಿಂಗವು.
ಅಂತಪ್ಪ ಗುರುಲಿಂಗಮಾಗಿರ್ಪ
ಶರೀರದಿಂದನುಭವಿಸುತ್ತಿರ್ಪ ಸಂಸಾರವೇ ಆಚಾರಲಿಂಗವು.
ಇಂತು ಸಂಸಾರಶರೀರಂಗಳಿಗೆ ಇಷ್ಟಲಿಂಗವೇ ಕಾರಣವೂ
ಮನೋಜೀವರಿಗೆ ಪ್ರಾಣಲಿಂಗವೇ ಕಾರಣವೂ ಆಗಿ,
ಕರ್ಮಲಿಂಗಂಗಳಿಗೆ ಭಾವಲಿಂಗಂಗಳೇ ಕಾರಣಮಾಗಿ,
ಕಾರಣವೇ ಐಕ್ಯಸ್ಥಾನವಾದುದರಿಂ ಸಂಸಾರ ಶರೀರಂಗಳು ಇಷ್ಟಲಿಂಗದೊಳಗೂ
ಮನೋಜೀವಂಗಳು ಪ್ರಾಣಲಿಂಗದೊಳಗೂ ಐಕ್ಯವಂ ಹೊಂದಿದವು.
ಕರ್ಮಲಿಂಗಗಳು ಭವಲಿಂಗದೊಳಗೈಕ್ಯಮಾಗಿ,
ಪ್ರಾಣವು ಭಾವದೊಳಗೆ ಬೆರೆದು,
ಭೇದವಡಗಿ ತಾನು ತಾನಾಗಿರ್ಪುದೇ ಲಿಂಗೈಕ್ಯ ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./120
ಸ್ಥಾವರದಲ್ಲಿ ಜೀವನು ಜಲರೂಪದಿಂ ಪಾದವನಾಶ್ರಯಿಸಿಹನು.
ಜಂಗಮದಲ್ಲಿ ವಾಯುರೂಪನಾಗಿ ಶಿರಸ್ಸನ್ನಾಶ್ರಯಿಸಿಹನು.
ಶಿರಸ್ಸಿನಿಂ ಅಧೋಮುಖಕ್ಕಿಳಿದು,
ಸರ್ವಾಂಗವಂ ವ್ಯಾಪಿಸಿ, ಅಧಃಫಲಪ್ರದನಾಗಿಹನು.
ಜಲರೂಪಮಾದ ಜೀವನಿಗೆ ಅನಲಾದಿ ತ್ರಿಭೂತಂಗಳು
ಆತ್ಮಛಾಯೆಗೆ ಮರೆಯಾಗಿರ್ಪುದರಿಂ ಜಡಭಾವದಿಂ ಸುಷುಪ್ತಿ
ರೂಪಮಾಯಿತ್ತು.
ವಾಯುರೂಪಮಾದ ಪ್ರಾಣನಿಗೆ ಆಕಾಶಭೂತವೊಂದೇ
ಆತ್ಮಛಾಯೆಗೆ ಮರೆಯಾಗಿರ್ಪುದರಿಂ ಜ್ಞಾನಾಜ್ಞಾನಮಿಶ್ರಮಾಗಿ
ಸುಖದುಃಖಕ್ಕೆ ಕಾರಣಮಾಯಿತ್ತು.
ಆದುದರಿಂ ಜೀವಪ್ರಾಣವೆಂಬೆರಡು ಶಬ್ದಗಳು ಜೀವಾತ್ಮನಪ್ರಕಾಶಗಳಾಯಿತ್ತು.
ಇಂತು ಜೀವನು ಪಂಚಭೂತಂಗಳ ಮಧ್ಯದಲ್ಲಿ ಬದ್ಧನಾಗಿ,
ಸ್ಥಾವರದಲ್ಲಿ ಸುಷುಪ್ತಿರೂಪನಾಗಿ, ಜಂಗಮದಲ್ಲಿ ಸ್ವಪ್ನರೂಪಮಾಗಿರ್ಪನು
ಆತ್ಮನು ಪಂಚಭೂತಂಗಳಂ ಮೆಟ್ಟಿ
“ಅತ್ಯತಿಷ್ಠದ್ದಶಾಂಗುಲಂ” ಎಂಬ ನಾಮದಿಂ ಪ್ರಕಾಶಿಸುತ್ತಿರ್ಪನು.
ಅದೆಂತೆಂದೊಡೆ : ಅಂಗುಲಮೆಂದರೆ ಪ್ರಮಾಣವು.
ಪಂಚಭೂತಗಳೈದೂ ಐದು ಪ್ರಮಾಣವುಳ್ಳದ್ದಾಯಿತ್ತು .
ಈ ಪಂಚಭೂತಂಗಳಿಂದ ಎರಡರಷ್ಟು ಆಧಿಕ್ಯಮಾಗಿ,
ಈ ಪಂಚಭೂತಗಳೊಳಗೆ ತಾನು ದಶಸ್ಥಾನವಾಗಿ,
ಶೂನ್ಯಕಳೆಯಿಂ ಕೂಡಿ, ಷೋಡಶಕಳಾಪರಿಪೂರ್ಣನಾಗಿಹನು.
ಐದು ಬಿಟ್ಟಲ್ಲಿ ಏಕಮೇವಾದ್ವಿತೀಯಂ ಬ್ರಹ್ಮವಾಗಿ ಕೂಡಿದಲ್ಲಿ
ವಿರಾಡ್ರೂಪನಾಗಿ, ಅತ್ಯತಿಷ್ಠದ್ದಶಾಂಗುಲವೆನಿಸಿ,
ಸಕಲನಿಷ್ಕಲತತ್ವಮೂರ್ತಿಯಾಗಿರ್ಪ ಪರಮಾತ್ಮನಿಗೂ ನನಗೂ
ಮರೆಯಾಗಿರ್ಪ ಆಕಾಶರೂಪ ಮಾಯಾಛಾಯಾತಮಸ್ಸನ್ನು
ಆತ್ಮಜ್ಞಾನ ತೇಜಃಪ್ರಕಾಶದಿಂ ತೊಲಗಿಸಿದಲ್ಲಿ, ನೀನೇ ನಾನಾಗಿರ್ಪೆನು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./121
ಸ್ಥೂಲಶರೀರವೇ ಬಹಿರಂಗವು, ಸೂಕ್ಷ್ಮಶರೀರವೇ ಅಂತರಂಗವು.
ಜೀವನು ಉದಯದಲ್ಲಿ ಬಹಿರಂಗಕರ್ಮವ್ಯಾಪಾರದಲ್ಲಿ ಸಂಚರಿಸುತ್ತಿರ್ಪನು.
ಅಸ್ತಮಾನದಲ್ಲಿ ಅಂತರಂಗದ ಅರಮನೆಯಂ ಸೇರಿ
ಅಂತಃಕರ್ಮ ವ್ಯಾಪಾರದಲ್ಲಿದ್ದು
ಬಹಿಃಕರ್ಮವ್ಯಾಪಾರ ಸಮಾಪ್ತಿಗಾಗಿ ಅಂತರಂಗಮಂ ಬಿಟ್ಟು,
ಬಹಿರಂಗಮಪ್ಪ ಸ್ಥೂಲಶರೀರದಲ್ಲಿ ಪ್ರವೇಶಿಸುತ್ತಿರಲು,
ಅಗತ ನಿರ್ಗತಂಗಳೇ ಭವವೆನಿಸುತ್ತಿರ್ಪುದು.
ತದ್ವಾ ್ಯಪಾರಕೋಟಲೆಗಳೆ ಸುಖದುಃಖಗಳೆನಿಸುತ್ತಿರ್ಪವು.
ಇದಕೆ ಇಚ್ಛೆಯೇ ಕಾರಣಮಾಗಿಹುದು.
ಅಂತಪ್ಪ ಇಚ್ಛೆಯೇ ಜ್ಞಾನಸ್ವರೂಪಮಾಗಿ, ಜೀವನು ನೇತ್ರಸ್ವರೂಪಮಾದಲ್ಲಿ
ಅಂತರಂಗದ ಮನೆಯಲ್ಲಿ ಭಾವಪರ್ಯಂಕದಲ್ಲಿ
ಸುಮನಶ್ಚಯಾಮೋದಭರಶುಚಿವಿರಚಿತಶಯನದಲ್ಲಿ ತಜ್ಞಾನಶಕ್ತಿಯೊಳಗೆ
ನಿರ್ವಾಣರತಿಸುಖಾನಂದದೊಳಗೆ ಕ್ರೀಡಿಸುತ್ತಿರ್ಪುದೇ
ಲಿಂಗೈಕ್ಯಾಶ್ರಯಪದವೆನಿಸಿರ್ಪುದು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./122
ಹ ಶಬ್ದಕ್ಕೆ ಹರಣಾರ್ಥವು, ಸ ಶಬ್ದಕ್ಕೆ ಯೋಗಾರ್ಥವು ಇರುವದು.
ಆದುದರಿಂ ಸಂಹಾರಮೂರ್ತಿಯಾದ ರುದ್ರನೇ ಹ ಶಬ್ದ,
ವಿಶ್ವಮೂರ್ತಿಯಾದ ವಿಷ್ಣುವೇ ಸ ಶಬ್ದ,
ಅವೆರಡು ಶಿವಶಕ್ತಿಗಳಾಗಿಹವು.
ಒಂದು ಕೂಡಿಸುತ್ತಿಹುದು, ಒಂದು ಅಗಲಿಸುತ್ತಿಹುದು,
ಎರಡೂ ಕೂಡಿ ಹಸವಾಗಿಹುದು.
ಹಸ ಹಸನೇ ಎಂಬ ಧಾತುವಿನಿಂ, ಹಸ ಎಂದರೆ ಕ್ರೀಡೆ,
ಅವೆರಡರ ಕ್ರೀಡಾಮಧ್ಯದಲ್ಲೊಂದು ಮಿಥ್ಯಾಬಿಂದುವು ಜನಿಸಿತ್ತು.
ಅದು ಒಂದರಲ್ಲಿ ಕೂಡಿದಲ್ಲದೆ ಕಾರ್ಯಕಾರಿಯಾಗದೆ
ಉಚ್ಚಾರಣೆಗೆ ಯೋಗ್ಯವಲ್ಲದಿಹುದು.
ದಶಸ್ಥಾನವೇ ತಾನಾಗಿ ಲೆಕ್ಕಗಳಂ ಸೃಷ್ಟಿಸುತ್ತಿರ್ಪುದರಿಂ
ಬಿಂದುನಾಮವಾದುದರಿಂದದೇ ಸೃಷ್ಟಿಕರ್ತೃವಾಗಿ
ಉತ್ತರಮುಖದಲ್ಲಿ ವ್ಯರ್ಥವಾಗಿ ದಕ್ಷಿಣಮುಖದಲ್ಲರ್ಥವಂ ಕೊಡುತ್ತಿರ್ಪುದರಿಂ
ಹಕಾರದೊಡನೆ ಕೂಡಿ, ಹಂ ಎಂಬುದಾಗಿ,
ರಜೋಮೂರ್ತಿಯಲ್ಲಿ ವಿರಮಿಸಿ ತ್ರಿಮೂತ್ರ್ಯಾತ್ಮಕಮಾದ
ಪರಬ್ರಹ್ಮವೇ ತಾನೆಂದಹಂಕರಿಸುತ್ತಿರ್ಪುದಾದುದರಿಂ
ಹಂಸ ಶಬ್ದಕ್ಕಾ ಮೂತ್ರ್ಯಾತ್ಮಕವೇ ಅರ್ಥವು.
ಸೂರ್ಯನು ತ್ರಿಮೂತ್ರ್ಯಾತ್ಮಕನಾದುದರಿಂ
ಹಂಸವೆಂಬ ನಾಮವಂ ಹೊಂದಿದನು.
ತ್ರಿಗುಣಾತ್ಮಕನಾದುದರಿಂ ಜೀವನಿಗೆ ಹಂಸ ಎಂಬ ನಾಮವಾಯಿತ್ತು.
ಪೂರಕವೇ ಹಕಾರ, ರೇಚಕವೇ ಸಕಾರ, ಕುಂಭಕವೇ ಬಿಂದು.
ಇಂತಪ್ಪ ನಿಜಸ್ವರೂಪಮಾದ ಹಂಸ ಶಬ್ದವನ್ನು
ನಾಸಿಕಾಗ್ರದಲ್ಲಿ ವಾಯುರೂಪಿಯಾದ ಜೀವನು ನಡೆಸುತ್ತಿರ್ಪನು.
ಪೂರಕವು ಆತ್ಮಚಕ್ರವಂ ಭ್ರಮಿಸಿ ಶರೀರವಂ ಸಂಹರಿಸುತ್ತಿರ್ಪುದು,
ರೇಚಕವು ವಿಸರ್ಜನೆಯಂ ಮಾಡಿ ಶರೀರವಂ ರಕ್ಷಿಸುತ್ತಿರ್ಪುದು,
ಕುಂಭಕವು ನಾನಾಗುಣಂಗಳಂ ಸೃಷ್ಟಿಸುತ್ತಿರ್ಪುದು.
ರೇಚಕವು ನಾಸಿಕವಂ ವಿಕಸನಗೊಳಿಸುತ್ತಿರ್ಪುದರಿಂ,
ಪೂರಕವು ಮುಕುಳಿತವನ್ನಾಗಿ ಮಾಡುತ್ತಿರ್ಪುದರಿಂ,
ಆ ರೇಚಕವೇ ವಿಷ್ಣುಸ್ವರೂಪು ಪೂರಕವೇ ಶಿವಸ್ವರೂಪು.
ರೇಚಕವಂ ಬಿಟ್ಟು ಪೂರಕವಂ ಸಾಧಿಸಿದ ಪುರುಷನೇ
ಮಹಾಯೋಗಿಯಾಗಿ ತಾನೇ ಬ್ರಹ್ಮಸ್ವರೂಪಿಯಾಗುವನು.
ನಿನ್ನಂ ಸಾಧಿಸಿದವರು ನಿನ್ನಂತಪ್ಪರು.
ನಿನ್ನನ್ನೇ ಪೂಜಿಸಿ ನಿನ್ನನ್ನೇ ಸಾಧಿಸುತ್ತಿರ್ಪ ಮಹಿಮರು
ನಿನ್ನಂತಪ್ಪುದೇನಚ್ಚರಿಯೇ?
ಇಂತಪ್ಪ ನಿಜಾನಂದಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./123
ಹಕಾರವೇ ಶಿವನು, ಬಿಂದುವೇ ಪ್ರಕೃತಿಯು,
ಇವು ಮಿಥ್ಯಾಮಿಥ್ಯಗಳಾಗಿಹವು.
ಮಿಥ್ಯಾಪ್ರಕೃತಿಯೊಳಗೆ ಕೂಡಿದ ಶಿವನೇ ಹಮ್ಮಾಯಿತ್ತು.
ನಿಶ್ಚೇಷ್ಟಿತವಾದ ಬ್ರಹ್ಮದಲ್ಲಿ ಕಾಲವಶಾದ್ವಿಕಾಸಮುಕುಳನಗಳಾಗುತ್ತಿರ್ಪುದರಿಂ
ಬಿಂದುವಿನ ವಾಸನೆಯೇ ಆ ಪರಮಾತ್ಮಸಂಗದಿಂ ಪ್ರಪಂಚಸೃಷ್ಟಿಕರ್ತೃವಾಗಿ,
ವಿಕಸನವೇ ಸ್ಥಿತಿಕರ್ತೃವಾಗಿ, ಮುಕುಳನವೇ ಸಂಹಾರಕರ್ತೃವಾಗಿ,
ಈ ಸೃಷ್ಟಿ ಸ್ಥಿತಿ ಸಂಹಾರಗಳಿಗಾ ಬಿಂದುವೇ ಕಾರಣಮಾಗಿ,
ಆ ಬ್ರಹ್ಮವೆ ಬಿಂದುರೂಪಮಾದ ಕಾರಣಕ್ಕೆ ತಾಂ ಕಾರಣಮಾಗಿ,
ಆ ಬಿಂದು ಕಾರಣಪ್ರಕೃತಿಯುಕ್ತಮಾಗಿ ಎಡೆಬಿಡದಿರ್ಪುದರಿಂ
ತಾನೇ ಹಂ ಆಯಿತ್ತು .
ಹಕಾರದಲ್ಲಿ ಕಕಾರವೂ, ಬಿಂದುವಿನಲ್ಲಿ ಸಕಾರವೂ
ಪ್ರಪಂಚ ಸೃಷ್ಟಿಸ್ಥಿತಿಸಂಹಾರನಿಮಿತ್ತಮಾಗುತ್ಪನ್ನಮಾಗುತ್ತಿರ್ಪುದರಿಂ
`ಕಸಯೋಯರ್ೊಗೇ ಕ್ಷ’ ಎಂದಾಯಿತ್ತು.
ಹ ಎಂಬುದೇ ಲಿಂಗವು, ಅಕಾರ ಸಕಾರಯೋಗದಲ್ಲಿ
ಸಕಾರವೇ ಹಕಾರಮಾಯಿತ್ತು.
ಆ ಪ್ರಕೃತಿಯೊಳ್ಪುಟ್ಟಿದ ಸಕಾರವೇ ಸ್ತ್ರೀಲಿಂಗಮಾದುದರಿಂ ಶಕ್ತಿಯಾಯಿತ್ತು.
ಹಕಾರದಲ್ಲಿ ಹುಟ್ಟಿದ ಸಕಾರವೇ ಪುಲ್ಲಿಂಗಮಾಯಿತ್ತು.
ಮಧ್ಯದಲ್ಲಿರ್ಪ ಹಂ ಎಂಬ ಪರಬ್ರಹ್ಮದಿಂ
ಭೂತಭವಿಷ್ಯಂಗಳಲ್ಲಿ ಪ್ರಕಾಶಮಾಯಿತ್ತು.
ಆ ಭೂತಗಳಲ್ಲಿರ್ಪ ಸಕಾರದೊಳಗೆ ಕೂಡಿ ಸೋಹಂ ಆಯಿತ್ತು,
ಆ ಭವಿಷ್ಯದೊಳಗಿರ್ಪ ಕಕಾರದೊಳಗೆ ಕೂಡಿ ಕೋಹಂ ಆಯಿತ್ತು,
ಅದೇ ಭಿನ್ನವು ಇದೇ ಅಭಿನ್ನವು.
ಭಿನ್ನವೇ ಇಷ್ಟಲಿಂಗವು, ಅಭಿನ್ನವೇ ಪ್ರಾಣಲಿಂಗವು.
ಭಿನ್ನಾಭಿನ್ನಗಳ ಮಧ್ಯದಲ್ಲಿ ಪ್ರಕಾಶಿಸಿ ಇಷ್ಟಪ್ರಾಣಂಗಳಿಗೆ
ಚೈತನ್ಯಮಾದ ಹಮ್ಮೇ ಭಾವಲಿಂಗವು.
ಮಹದಹಮ್ಮಿನಲ್ಲಿ ನನ್ನ ಹಮ್ಮುಡುಗಿ ಸುಮ್ಮನೆ
ಇರ್ಪಂತೆ ಮಾಡಿ ಕೂಡಿ ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./124
ಹಗಲಿದ್ದಲ್ಲಿ ಕತ್ತಲೆಯಿರ್ಪುದೆ ?
ಕತ್ತಲೆಯಿದ್ದಲ್ಲಿ ಹಗಲಿರ್ಪುದೆ ?
ಜಾಗ್ರವಿದ್ದಲ್ಲಿ ಸ್ವಪ್ನವಿರ್ಪುದೆ ?
ದುಃಖವಿದ್ದಲ್ಲಿ ಆನಂದವಿರ್ಪುದೆ ?
ನೀನು ಪ್ರಸನ್ನಮಾದಲ್ಲಿ ನಾನಿರ್ಪೆನೆ ?
ನಾನು ಪ್ರಸನ್ನಮಾದಲ್ಲಿ ನೀನಿರ್ಪೆಯಾ ?
ನೀನಿದ್ದಲ್ಲಿ ನಾನಿಲ್ಲ ನಾನಿದ್ದಲ್ಲಿ ನೀನಿಲ್ಲ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ./125
ಹೃದಯದಲ್ಲಕ್ಷರಂಗಳಿರ್ಪಂತೆ ಆತ್ಮನಲ್ಲಿ ಪ್ರಪಂಚಮಿರ್ಪುದು,
ಆತ್ಮನಲ್ಲಾಕಾಶವು ಪುಟ್ಟಿ ಆತ್ಮನಲ್ಲಿಯೇ ಅಡಗುವಂತೆ,
ಹೃದಯದಲ್ಲಕ್ಷರಂಗಳು ಪುಟ್ಟಿ, ಹೃದಯದಲ್ಲಡಗುತ್ತಿರ್ಪವು.
ಸ್ವಕೀಯರೂಪಂಗಳಾದ ಅಕ್ಷರಂಗಳಂ
ಜಿಹ್ವಾಮುಖದಲ್ಲಿ ಸೃಷ್ಟಿಸಿ, ಶ್ರೋತ್ರಮುಖದಲ್ಲಿ ರಕ್ಷಿಸಿ,
ತಾನೇ ಉಪಸಂಹಾರವಂ ಮಾಡಿ, ಎಲ್ಲಕ್ಕೂ ತಾನೇ ಕಾರಣಮಾಗಿರ್ಪಂತೆ.
ಪ್ರಪಂಚಕ್ಕೆ ಪರಮನೇ ಕಾರಣಮಾಗಿರ್ಪನು.
ಅಕ್ಷರಂಗಳನೊಡೆದು ಅದರಲ್ಲಿದ್ದರ್ಥವಂ ವಿಚಾರಿಸಿ,
ನಿಸ್ಸಂದೇಹಪದಾರ್ಥವಂ ಗ್ರಹಿಸಿ, ಸಂಶಯಪದಾರ್ಥವಂ ಮಥಿಸಿ,
ಶಬ್ದಮುಖಕ್ಕೆ ಹಾಕುವಂತೆ,
ಶಿವನು ಮುಕ್ತರಂ ಗ್ರಹಿಸಿ ಪ್ರಕೃತಿಯುಕ್ತರಂ ಭವದಲ್ಲಿ ಬೀಳಿಸುತ್ತಿರ್ಪನು.
ಹೃದಯವು ಶಬ್ದಮುಖದಲ್ಲಿ ಭಾವಜ್ಞರಿಗೆ ತೋರುತ್ತಿರ್ಪಂತೆ.
ಪ್ರಪಂಚಮುಖದಲ್ಲಿ ಪರಮನು ದಿವ್ಯಜ್ಞಾನಿಗಳಿಗೆ ತೋರುತ್ತಿರ್ಪನು.
ವಾಕ್ಯದಲ್ಲಿರ್ಪ ಜ್ಯೋತಿಯು ಹೃದಯದಲ್ಲಿರ್ಪ ತಮಸ್ಸಂ ಕೆಡಿಸಿದಲ್ಲಿ ;
ಆ ವಾಕ್ಯವೂ ಹೃದಯವೂ ಏಕಮಾಗಿ ಪ್ರಕಾಶಿಸುತ್ತಿರ್ಪಂತೆ,
ಶಿವಜ್ಞಾನಿಗಳಲ್ಲಿರ್ಪ ಮನಸ್ಸು ಶಿವನಲ್ಲಿ ಲಯವಾದಲ್ಲಿ ;
ಸಕಲಪ್ರಪಂಚವೂ ಶಿವಸ್ವರೂಪಮಾಗಿ, ಎಲ್ಲವೂ ಒಂದೆಯಾಗಿರ್ಪುದು.
ಆ ವಾಕ್ಯದಲ್ಲಿ ಪ್ರಪಂಚವು ಶಬ್ದವಾಗಿರ್ಪಂತೆ,
ಹೃದಯದಲ್ಲಿ ಪರಮನು ಬದ್ಧನಾಗಿರ್ಪನು.
ವಾಕ್ಯದಿಂದ ಕರ್ಮವು ಹುಟ್ಟುತ್ತಿಹುದು.
ಆ ಕರ್ಮಕ್ಕೆ ಪ್ರಪಂಚವೇ ಕಾರಣವಾಗಿರ್ಪಂತೆ,
ಹೃದಯದಲ್ಲಿ ಜ್ಞಾನವು ಪುಟ್ಟುತ್ತಿರ್ಪುದು.
ಆ ಜ್ಞಾನಕ್ಕೆ ಶಿವನೇ ಕಾರಣಮಾಗಿರ್ಪನು.
ದುಷ್ಕರ್ಮದಿಂ ಪ್ರಪಂಚಮುಖದಲ್ಲಿ ಯಾತನೆಬಡುತ್ತಿರ್ಪಂತೆ,
ಅಜ್ಞಾನದಿಂದಾತ್ಮಮುಖದಲ್ಲಿ ಯಾತನೆಬಡುತ್ತಿರ್ಪನು.
ಸತ್ಕರ್ಮದಿಂ ಬಾಹ್ಯಪ್ರಪಂಚದಲ್ಲಿ ಸಕಲೈಶ್ವರ್ಯಗಳನನುಭವಿಸುತ್ತಿರ್ಪಂತೆ,
ಸುಜ್ಞಾನದಿಂ ಹೃದಯಂಗಮಮಾಗಿರ್ಪ ಶಿವಾನಂದಸುಖವನನುಭವಿಸುತ್ತಿರ್ಪನು.
ತಮಸ್ಸನ್ನಳಿದ ಪ್ರಪಂಚವೂ ಪರಮನೂ ಏಕಮಾಗಿರ್ಪಂತೆ,
ಸಂಶಯವಳಿದಲ್ಲಿ ಕರ್ಮಜ್ಞಾನಗಳೊಂದೇ ಆಗಿ ತೋರುತ್ತಿರ್ಪುದು.
ಅಂತಪ್ಪ ಕರ್ಮಕರ್ತೃವಾಗಿ ಮಂತ್ರಚೈತನ್ಯವಾಗಿರ್ಪುದೇ ಇಷ್ಟಲಿಂಗವು,
ಜ್ಞಾನಕರ್ತೃವಾಗಿ ಹೃದಯವೇ ಚೈತನ್ಯಮಾಗಿರ್ಪುದೇ ಪ್ರಾಣಲಿಂಗವು.
ಇಂತಪ್ಪ ಇಷ್ಟ ಪ್ರಾಣ ಕರ್ಮ ಜ್ಞಾನ ಪ್ರಪಂಚಪರಮರೆಂಬ ಭೇದಬುದ್ದಿಯಳಿದು,
ಭಾವದಲ್ಲೊಂದೇ ಅಖಂಡಜ್ಯೋತಿಯಾಗಿ ಪ್ರಕಾಶಿಸುತ್ತಿರ್ಪ
ಅಭೇದಾನಂದ ನಿರ್ವಾಣಸುಖವನೆನಗಿತ್ತು ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ. /126