Categories
ವಚನಗಳು / Vachanagalu

ಮೂರುಸಾವಿರ ಮುಕ್ತಿಮುನಿ ವಚನಗಳು

ಅಂತೊಪ್ಪುವ ಸಚ್ಚಿದಾನಂದ ಧ್ಯಾನದಿಂದ,
ನಿಮ್ಮ ಪರಿಪೂರ್ಣ ಪ್ರಸಾದೋದಕಕ್ಕೆ ನಿರೂಪವ ಪಾಲಿಸಬೇಕು ಸ್ವಾಮಿ
ಎಂದು ಬೇಡಿಕೊಂಡು ಅಭಯವಾದ ಮೇಲೆ ಬಂದು
ಮೊದಲಹಾಗೆ ಅಲ್ಲಿ ಮೂರ್ತವ ಮಾಡಿ,
ಆ ಜಂಗಮಮೂರ್ತಿಗಳು ಸಲಿಸಿದೋಪಾದಿಯಲ್ಲಿ
ಅನಾದಿಮೂಲಮಂತ್ರಸೂತ್ರವಿಡಿದು ತಾನು ಸಲಿಸುವುದು.
ಆ ಮೇಲೆ, ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಚಿತ್ಕಲಾಪ್ರಸಾದಿ
ಮೊದಲಾದ ಷಟ್ಸ್ಥಲ ಭಕ್ತ ಮಹೇಶ್ವರರು,
ಅದೇ ರೀತಿಯಲ್ಲಿ ಸಲಿಸುವುದು ಪೂರ್ವಪುರಾತನೋಕ್ತವು.
ಉಳಿದ ತ್ರಿವಿಧ ದೀಕ್ಷೆಗಳರಿಯದೆ,
ಕ್ರಿಯಾಪ್ರಸಾದದ ಕುರುಹ ಕಾಣದೆ, ಷಟ್ಸ್ಥಲಮಾರ್ಗವರಿಯದೆ,
ಇಷ್ಟಲಿಂಗಧಾರಕ ಉಪಾಧಿಗಳು ಆ ಗದ್ದುಗೆಯ ತೆಗೆದು,
ಲಿಂಗಕ್ಕರ್ಪಿಸಿಕೊಳ್ಳಬೇಕಲ್ಲದೆ ಬಟ್ಟಲೆತ್ತಲಾಗದು.
ಅದೇನು ಕಾರಣವೆಂದಡೆ : ಅವರಿಗೆ ತ್ರಿವಿಧದೀಕ್ಷಾನುಗ್ರಹ ಪ್ರಸನ್ನಪ್ರಸಾದ ಷಟ್ಸ್ಥಲಮಾರ್ಗ
ಸರ್ವಾಚಾರಸಂಪತ್ತಿನ ಆಚರಣೆ ಮುಂದಿಹುದರಿಂದ
ಅವರು ಬಟ್ಟಲ ಎತ್ತಲಾಗದು.
ಹೀಂಗೆ ಸರ್ವರು ಸಲಿಸಿದ ಮೇಲೆ
ಕೊಟ್ಟ ಕೊಂಡ ಭಕ್ತ ಜಂಗಮವು ಇರ್ವರೂ ಕೂಡಿ,
ಅನಾದಿ ಮೂಲಮಂತ್ರಸೂತ್ರವಿಡಿದು,
ಮುಕ್ತಾಯವ ಮಾಡಿದಲ್ಲಿಗೆ ದಶವಿಧಲಿಂಗಸಂಬಂಧದಿಂದ
ದಶವಿಧಪಾದೋದಕ ಲಿಂಗೋದಕ ಪ್ರಸಾದೋದಕಂಗಳಲ್ಲಿ
ಪರಿಪೂರ್ಣತೃಪ್ತರೆ ನಿಮ್ಮ ಪ್ರತಿಬಿಂಬರಯ್ಯ
ನಿರವಯಪ್ರಭು ಮಹಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./1
ಅನಂತ ತಪಸ್ಸಿನ ಫಲ ಒದಗಿ,
ಗುರುಕರುಣದಿಂದ ಚಿದ್ಘನಲಿಂಗಾಂಗಸಂಬಂಧ
ವೀರಶೈವೋದ್ಧಾರಕರಾದ ಮಹಾಗಣ ಪ್ರಸನ್ನಪ್ರಸಾದವೆನಿಸುವ
ವಚನಸಾರಾಮೃತನುಭಾವಸುಖಮಂ
ಸವಿಸವಿದುಂಡುಪವಾಸಿ ಬಳಸಿಬ್ರಹ್ಮವಾಗಲರಿಯದೆ
ಒಬ್ಬರಿಗೆ ಹುಟ್ಟಿ,ಒಬ್ಬರಿಗೆ ಹೆಸರಹೇಳಿ,ಶಿವಾಚಾರಮಾರ್ಗಸಂಪನ್ನರೆನಿಸಿ,
ತಮ್ಮ ತಾವರಿಯದೆ, ಹಲವು ಮತದವರ ಎಂಜಲಶಾಸ್ತ್ರವಿಡಿದು,
ಶೈವಕರ್ಮೊಪವಾಸ ಕ್ರಿಯಾಚಾರವಿಡಿದು,
ಜ್ಞಾನವ ಬಳಕೆಯಾಗಿರ್ಪುದೆ ಅಂತರಂಗದ ಚತುರ್ಥಪಾತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./2
ಅನಾದಿ ಪೂರ್ವಪುರಾತನ ಗಣನಾಯಕ
ಹಿರಿದಂಡನಾಥನ ಘನಭಕ್ತಿ ದಾಸೋಹಂಭಾವನೊಲ್ಲೆನೊಲ್ಲೆ,
ಬೇಕು ಬೇಕು,
ಅದೇನು ಕಾರಣವೆಂದಡೆ : ಅಯೋಗ್ಯ ರೂಪು, ಅಕ್ರಿಯೆ, ಅಜ್ಞಾನ,
ಅನಾಚಾರಗಳ ಕಂಡು ಕಣ್ಣಮುಚ್ಚಿ,
ಮಹಾಬೆಳಗಿನ ಷಟ್ಸ್ಥಲದ ಮಾರ್ಗವ ಸೇರದೆ,
ಲಿಂಗಲಾಂಛನಕ್ಕೆ ಶರಣೆಂದು ತನುಮನಧನವನರ್ಪಿಸಿದ
ಪರಿಪೂರ್ಣಗುಪ್ತಭಕ್ತಿ ಎನ್ನಂತರಂಗನಾಥ ಪ್ರಾಣಲಿಂಗಕ್ಕೆ ಅರ್ಪಿತ,
ಎನ್ನ ಬಹಿರಂಗದನಾಥ ಇಷ್ಟಲಿಂಗಕ್ಕೆ ಅನಾರ್ಪಿತ.
ನಿಜಮೋಕ್ಷಸ್ವರೂಪರ ಮಹಾಬೆಳಗಿನ
ನಿಜಭಕ್ತಿಜ್ಞಾನವೈರಾಗ್ಯಾಚಾರ ಕ್ರಿಯಾನುಭಾವವೆಂಬ
ಚಿದ್ಬಿಂದುವ ಬಿತ್ತಿ, ಬೆಳೆಮಾಡಿ, ಭವಸಮುದ್ರಕ್ಕೆ ಹಡಗವ ಹಾಕಿ ದಾಂಟಿ,
ನಿಜದುನ್ಮನಿಯ ಸೇರಿ, ನಿಂದ ಹಲಾಯುಧನಂಬಿಗರ ಚೌಡಯ್ಯನ
ಘನಭಕ್ತಿದಾಸೋಹಂಭಾವ ಬೇಕು ಬೇಕು.
ಅದೇನುಕಾರಣವೆಂದಡೆ : ಘನಕ್ಕೆ ಘನಯೋಗ್ಯ ಸದ್ರೂಪು ಸತ್ಕ್ರಿಯಾ ಸಮ್ಯಜ್ಞಾನ,
ಸದಾಚಾರಗಳ ಕಂಡು ಕಣ್ದೆರೆದು
ತನು ಉಬ್ಬಿ, ಮನ ಉಬ್ಬಿ , ಭಾವಭರಿತನಾಗಿ,
ನಿಜೋಲ್ಲಾಸದಿಂದ ಸರ್ವಾಚಾರ ಷಡುಸ್ಥಲಸಂಪತ್ತಿನ
ನಿಜಾನುಭಾವ ನಡೆನುಡಿ ದೃಢಚಿತ್ತ ಚಿದ್ಘನಲಿಂಗಲಾಂಛನಕ್ಕೆ
ಶರಣು ಶರಣಾರ್ಥಿಯೆಂದು ಸರ್ವಾಂಗಪ್ರಣುತರಾಗಿ,
ನಿರ್ವಂಚಕತ್ವದಿಂದ, ಮಹಿಮಾಪದಭಕ್ತಿಯನುಳಿದು,
ಅರ್ಥಪ್ರಾಣಾಭಿಮಾನ ಸಮರ್ಪಿಸಿದ
ಪರಿಪೂರ್ಣರಹಸ್ಯತ್ವ ಕ್ರಿಯಾಶಕ್ತಿ,
ಎನ್ನಂತರಂಗದೊಡೆಯ ಪ್ರಾಣಲಿಂಗನಾಥ,
ಎನ್ನ ಬಹಿರಂಗದೊಡೆಯ ಇಷ್ಟಲಿಂಗನಾಥರಾದ
ಸಾಕಾರ ನಿರಾಕಾರದಾಚರಣೆಯ ಸಂಬಂಧ ಸತ್ಕ್ರಿಯೆ
ಸಮ್ಯಜ್ಞಾನ ಸಾಕ್ಷಿಯಾಗಿ,
ಅರ್ಪಿತವೆ ಪ್ರಭಾವಿಸಿ, ಸಂದುಸಂಶಯವಿಲ್ಲದೆ ಹೊರೆಯೇರಿ
ಸರ್ವಾಂಗ ಉಕ್ಕಿ, ಕುಂದುಕೊರತೆ ನಿಂದ್ಯಾದಿಗಳಿಗಳುಕದೆ,
ಅನಾಚಾರಕ್ಕೊಯಿರಿಯಾದ ಎನ್ನ
ಗುರುಕರುಣ ವೀರಮಾಹೇಶ್ವರಾಚಾರಕ್ಕೆ
ಮೋಹಿಸಿ ತಲೆಬಾಗಿದ ನಿಜಭಕ್ತಿ ಎನ್ನದೆಂಬೆ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./3
ಅನಾದಿ ಪ್ರಮಥಗಣ ನಿಜೋಪದೇಶ
ಪ್ರಸನ್ನ ಪ್ರಸಾದಾಚಾರ ನಡೆನುಡಿಸಂಬಂಧಗಳಾಚರಣೆಗಳ ಬಳಿವಿಡಿದು,
ಮುಕ್ತಿಸ್ವರೂಪರಾದ ಘನಗುರುಚರಮೂರ್ತಿಗಳು,
ಪ್ರಥಮದಲ್ಲಿ ಗುರುಕರುಣ ಲಿಂಗಧಾರಣಸ್ಥಲವಳವಟ್ಟು,
ಲಿಂಗನಡೆ ಲಿಂಗನುಡಿಯಾಗಿ,
ಪಾತಕಸೂತಕವಳಿದುಳಿದು ನಿಜೋತ್ತಮಂಗೆ
ಕ್ರಿಯೋಪದೇಶದಿಂದ ಶುದ್ಧಪ್ರಸಾದವ ಕೊಟ್ಟು,
ಮಂತ್ರೋಪದೇಶದಿಂದ ಸಿದ್ಧಪ್ರಸಾದವ ಕೊಟ್ಟು,
ವೇದೋಪದೇಶದಿಂದ ಪ್ರಸಿದ್ಧಪ್ರಸಾದವ ಕೊಟ್ಟು,
ಇವ ಮೂರು ಸ್ಥಲವಿದ್ದವರಲ್ಲಿ ಕೊಳಬಲ್ಲಾತನೆ
ಅನಾದಿಪ್ರಮಥಗಣ ಗುರುಮಾರ್ಗಿಕರೆನಿಸುವರು ನೋಡಾ.
ಇವರನರಿಯದೆ ಕ್ರಿಯಾದೀಕ್ಷೆ, ಶುದ್ಧಪ್ರಸಾದದೀಕ್ಷೆ,
ಪಾದೋದಕ ಮಂತ್ರದೀಕ್ಷೆ,
ಸಿದ್ಧಪ್ರಸಾದ ಶಿಕ್ಷಾಪಾದೋದಕದಿರವನರಿಯದೆ
ತನುಶುದ್ಧ ಮನಸಿದ್ಧವಿಲ್ಲದೆ,
ವೇಧಾದೀಕ್ಷೊಪದೇಶ ಪ್ರಸಿದ್ಧಪ್ರಸಾದ ಜ್ಞಾನಪಾದೋದಕದಲ್ಲಿ
ಸಮರಸನಾಚರಿಸುವಾತನ ಯೋಗ್ಯನೆಂಬೆ ನೋಡಾ.
ಪ್ರಸಿದ್ಧ ಪಾದೋದಕ ಪ್ರಸಾದ ಮಂತ್ರವರಿಯದ
ಲಿಂಗಲಾಂಛನಧಾರಿಗಳಿಂದ ಷಟ್ಸ್ಥಲಬ್ರಹ್ಮೋಪದೇಶ ಪಡೆದರೆಂದು,
ಭಕ್ತನಾಗಿ, ಹತ್ತು ಹನ್ನೊಂದರ ಪ್ರಸಾದಿಗಳೆಂದು,
ಸತ್ಕ್ರಿಯೆ ಸಮ್ಯಜ್ಞಾನಾಚಾರದ ಇರವನರಿಯದೆ,
ಸಮರಸದ ಕ್ರಿಯೆಗಳ ಬಳಸಿ
ಉದರವ ಹೊರೆವಾತನಯೋಗ್ಯ ನೆಂಬೆನು ನೋಡಾ.
ಮಲಮೂತ್ರ ವಿಸರ್ಜಿಸಿ, ಸ್ನಾನವಿಲ್ಲದೆ,
ಅನ್ನುದಕ ಹಣ್ಣು ಫಲಾದಿ ಕಬ್ಬು ಕಡಲೆಗಳೆಂದು
ಕೈಗೆಬಂದಂತೆ ತಿಂದು ತೇಗಿ,
ಪ್ರಸಾದಿಯೆಂದು, ತೀರ್ಥವ ಸಲಿಸಿ, ಪ್ರಸಾದವ ಮರೆದೆನೆಂದು ಮತ್ತೆ
ತೀರ್ಥಪ್ರಸಾದವೆಂದು ಕೊಡುಕೊಂಬರಿವರು.
ಚಿದ್ಘನಲಿಂಗಾಂಗಸಂಗವೇ
ಪರಿಪೂರ್ಣಾನಂದ ತೀರ್ಥಪ್ರಸಾದವೆಂದರಿಯದವರು,
ಬಿಂದು ಚಿದ್ಬಿಂದು ಪರಬಿಂದುವ
ಅಯೋಗ್ಯಪರಮುಖದಲ್ಲಿ ಚೆಲ್ಲಾಡುವವರು,
ಚರ್ಮಾಸನ ಚರ್ಮದಲ್ಲಿಟ್ಟಂಥ ರಸದ್ರವ್ಯ
ಲಿಂಗಾಭಿಷೇಕ ಪಾದಾಭಿಷೇಕ ಪಂಚಾಮೃತ
ಪಂಚಕಜ್ಜಾಯ ಪರಮಾನ್ನ ಫಲಹಾರವೆಂದು ಆಡಂಬರವ ಹರಹಿ,
ಲಿಂಗಾರ್ಚನೆ ನೈವೇದ್ಯ ಪಾದಪೂಜೆಯ ನೈವೇದ್ಯಭುಂಜಿಸಿ,
ಮತ್ತೆ ನಾಚಿಕೆಯಿಲ್ಲದೆ ಭಕ್ತ ಜಂಗಮ ಪ್ರಸಾದಿಗಳೆಂಬವರು,
ಹೋಮ ನೇಮ ಭಸ್ಮ ಯಜ್ಞಾದಿ ಕೃತ್ಯವ ಮಾಡಿ
ಅಮಲು ಮೊದಲಾದ ಲಾಹರಿಭುಂಜಕರು,
ಮಂತ್ರತಂತ್ರಯಂತ್ರ ಶಕುನ ವೈದ್ಯಗಾರರು,
ದ್ವಿನೇತ್ರ ಪ್ರಕಾಶದೊಳಗಣ ಕುರುಗಿನರುಹನರಿಯದವರು,
ಅಪಾದಮಸ್ತಕ ಪರಿಯಂತರ ಸತ್ಪ್ರಾಣಿಸಿಕೊಂಡಿರ್ಪನಿಜವನರಿಯದವರು.
ಗುರುಚರಪರಗಣ ಸನ್ಮಾನಿಗಳ ಆಜ್ಞೆಯ ಮೀರಿ
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗ ಬಾಹ್ಯರೆಂಜಲ
ನುಡಿನಡೆಯ ವ್ಯವಹಾರಿಗಳ ಯೋಗ್ಯರಯೋಗ್ಯರೆಂದು
ಗಣಸಾಕ್ಷಿಯಾಗಿ ಗುರುನಿರೂಪಣದಿಂದ
ಡಂಗುರವ ಸಾರಿದೆ ಸಾರಿದೆ ಸಾರಿದೆ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./4
ಅನಾದಿ ಪ್ರಮಥಗಣನಾಯಕ ಶ್ರೀಗುರುಕರಜಾತ
ತ್ರಿವಿಧೋದಕ ತ್ರಿವಿಧಪ್ರಸಾದಸ್ಥಲಸಂಬಂಧೋಪದೇಶ
ಆಚಾರಭಕ್ತಗಣಾರಾಧ್ಯರಿಗೆ ಯೋಗ್ಯವುಳ್ಳ,
ಆಚರಣೆಯೆ ಪ್ರಾಣವಾದ ತ್ರಿವಿಧಾಚಾರ ಸೂತ್ರವದಕ್ಕೆ.
ಹರನಿರೂಪಣ ಸಾಕ್ಷಿ : “ಕ್ರಿಯಾಚಾರೋ ಜ್ಞಾನಾಚಾರಃ ಭಾವಾಚಾರಸ್ತಥೈವ ಚ |
ಸದಾ ಸನ್ಮಾರ್ಗಸಂಪೂಜ್ಯಂ ಆಚಾರಾಂಗಂ ಪ್ರಕೀರ್ತಿತಂ||”
ಸರ್ವೆಂದ್ರಿಗಳಲ್ಲಿ ಆಹ್ವಾನಿಸುವ ಪರಿಣಾಮವೆಲ್ಲ
ತಿಯಕ್ಷರಮೂರ್ತಿ ಇಷ್ಟಲಿಂಗದ ಸೊಮ್ಮು ಸಂತೋಷವೆಂದರಿದು.
ವಿಸರ್ಜಿಸುವ ಪರಿಣಾಮವೆಲ್ಲ ಪಂಚಾಕ್ಷರಮೂರ್ತಿ
ಪ್ರಾಣಲಿಂಗದ ಸೊಮ್ಮು ಸಂತೋಷವೆಂದರಿದು,
ಈ ಎರಡರ ಪರಿಣಾಮವೆಲ್ಲ ಷಡಕ್ಷರಮೂರ್ತಿ
ಭಾವಲಿಂಗದ ಸೊಮ್ಮು ಸಂತೋಷವೆಂದರಿದು,
ತ್ರಿವಿಧಾಚಾರಲಿಂಗಮೂರ್ತಿ ತಾನೇ ತಾನಾಗಿ,
ಜಾಗ್ರದಿಂದ ಕ್ರಿಯಾಘನಗುರುವಚನ ಪ್ರಮಾಣಸಾಕ್ಷಿಯಿಂದ,
ಗುದ ಗುಹ್ಯದ ವಿಸರ್ಜನೆಗಳ ಬಿಡುಗಡೆಯ
ಪರಿಣಾಮ ಪ್ರಕ್ಷಾಲ್ಯವೆ ಸಮ್ಯಜ್ಞಾನಾನಂದವಾಗಿ,
ನಾಸಿಕ ಜಿಹ್ವೆಯ ವಿಸರ್ಜನೆಗಳ ಬಿಡುಗಡೆಯ
ಪರಿಣಾಮ ಪ್ರಕ್ಷಾಲ್ಯವೆ ಸತ್ಕ್ರಿಯಾನಂದವಾಗಿ,
ಇಷ್ಟಲಿಂಗಜಂಗಮದಾರ್ಚನೆಯರ್ಪಿತವಧಾನನುಭಾವಸುಖ ಸಮರತಿ
ವಿಲಾಸದ ಪರಿಣಾಮದಾಹ್ವಾನವೆ ಸಮ್ಯಜ್ಞಾನಾನಂದವಾಗಿ,
ಗುದಗುಹ್ಯಗಳೆರಡು ಕ್ರಿಯಾಶಕ್ತಿ ಜ್ಞಾನಶಕ್ತಿಸ್ವರೂಪವೆನಿಸಿ,
ಪ್ರಮಥಗಣ ಒಪ್ಪಿ ಸೊಪ್ಪಡಗಿದ
ನಿಃಪತಿಯನೈದುವದೆ ಮುಕ್ತಿಸ್ವರೂಪವು.
ಇಷ್ಟಲಿಂಗ ಜಂಗಮರೊಪ್ಪಿತದ ಸುಗಂಧ
ಸುರಸದ್ರವ್ಯಗಳ ಪವಿತ್ರಮುಖವನರಿದು,
ಮಂತ್ರಾಹ್ವಾನದ ನಿಜನಿಷ್ಠೆಯಗಲದೆ,
ಅಲ್ಲಿ ತಟ್ಟಿಮುಟ್ಟುವ ಕಾಯದ ಕೈಯ
ಸುಚಿತ್ತ ಸುಬುದ್ಧಿಯ ಪರಿಣಾಮವೆಲ್ಲ ಸತ್ಕ್ರಿಯಾನಂದವಾಗಿ,
ಇವು ನಾಲ್ಕು ಇಷ್ಟಲಿಂಗಾಲಯವೆಂದರಿದು,
ಗುರುಪೀಠದಾಧಾರ ಸ್ವಾಧಿಷ್ಠಾನದ
ಕ್ರಿಯಾಚಾರದ ಮನೆ ಕಾಣಿರಣ್ಣಗಳಿರಾ.
ಅಲ್ಲಿಂದ ಪಾದ ಪಾಣಿಗಳ ತಟ್ಟುಮುಟ್ಟಿನ ವಿಸರ್ಜನೆಗಳ
ಪ್ರಕ್ಷಾಲ್ಯದ ಪರಿಣಾಮವೆ ಸಮ್ಯಜ್ಞಾನಾನಂದವಾಗಿ,
ನೇತ್ರ ತ್ವಗೇಂದ್ರಿಯದ ವಿಸರ್ಜನೆಗಳ ಪ್ರಕ್ಷಾಲ್ಯದ ಪರಿಣಾಮವೆ
ಸತ್ಕ್ರಿಯಾನಂದವಾಗಿ,
ಪಾದ ಪಾಣಿಗಳೆರಡು ಇಚ್ಛಾಶಕ್ತಿ ಆದಿಶಕ್ತಿಸ್ವರೂಪವೆನಿಸಿ,
ಪ್ರಮಥಗಣ ಒಪ್ಪಿ ಪರಮಾನಂದವನೈದುವುದೆ ಮುಕ್ತಿಸ್ವರೂಪವು.
ಇಷ್ಟಲಿಂಗ ಜಂಗಮಾರೋಪಿತದ
ಸುರೂಪು ಸುಸ್ಪರಿಶನದ್ರವ್ಯಗಳ ಪವಿತ್ರಮುಖವನರಿದು,
ನಿಜದೃಷ್ಟಿ ಮಂತ್ರಾಹ್ವಾನದ ಪರಿಪೂರ್ಣನೈಷ್ಠೆಯಗಲದೆ,
ಅಲ್ಲಿ ತಟ್ಟು ಮುಟ್ಟುವ ಕಾಯಕದ ಕೈಯ
ನಿರಹಂಕಾರ ಸುಮನದ ಪರಿಣಾಮವೆಲ್ಲ ಸತ್ಕ್ರಿಯಾನಂದವಾಗಿ,
ಇವು ನಾಲ್ಕು ಪ್ರಾಣಲಿಂಗಾಲಯವೆಂದರಿದು,
ಚರಪೀಠದ ಮಣಿಪೂರಕನಾಹತದ
ಜ್ಞಾನಾಚಾರದ ಮನೆಯ ಕಾಣಿರಣ್ಣಗಳಿರಾ.
ಅಲ್ಲಿಂದ ವಾಕು ಪಾಯುವಿನ ದುಃಕೃತದ
ತಟ್ಟುಮುಟ್ಟಿನ ವಿಸರ್ಜನೆಗಳ ಪರಮಾನಂದ ಚಿಜ್ಜಲದಿಂ
ಪ್ರಕ್ಷಾಲ್ಯದ ಪರಿಣಾಮವೆ ಸಮ್ಯಜ್ಞಾನಾನಂದವಾಗಿ,
ಶ್ರೋತ್ರದ ಶಬ್ದದ ದುಃಕೃತ್ಯದ ತಟ್ಟುಮುಟ್ಟಿನ
ವಿಸರ್ಜನೆಗಳ ಪರಿಪೂರ್ಣಾನಂದಜಲದಿಂ
ಪ್ರಕ್ಷಾಲ್ಯದ ಪರಿಣಾಮವೆ ಸತ್ಕ್ರಿಯಾನಂದವಾಗಿ,
ವಾಕು ಪಾಯುಗಳೆರಡು ಪರಶಕ್ತಿ ಚಿಚ್ಛಕ್ತಿ ಸ್ವರೂಪವೆನಿಸಿ,
ಪ್ರಮಥಗಣ ಒಪ್ಪಿ, ಪರಮಾನಂದವನೈದುವುದೆ ಮುಕ್ತಿಸ್ವರೂಪವು.
ಇಷ್ಟಲಿಂಗ ಜಂಗಮಾರೋಪಿತದ
ಸುಶಬ್ದ ಸುತೃಪ್ತಿದ್ರವ್ಯಗಳ ಪವಿತ್ರಮುಖವನರಿದು,
ಪರನಾದ ಬಿಂದು ಕಳೆಗಳ ಮಂತ್ರಜ್ಞಾನದ ಪರಿಪೂರ್ಣನೈಷ್ಠೆಯಗಲದೆ,
ಅಲ್ಲಿ ತಟ್ಟುಮುಟ್ಟುವ ಕಾಯದ ಕೈಯಲ್ಲಿ
ಸುಜ್ಞಾನ ಸದ್ಭಾವದ ಪರಿಣಾಮವೆಲ್ಲ ಸತ್ಕ್ರಿಯಾನಂದವಾಗಿ,
ಇವು ನಾಲ್ಕು ಭಾವಲಿಂಗಾಲಯವೆಂದರಿದು,
ಪರಪೀಠದ ವಿಶುದ್ಧಿ ಆಜ್ಞಾಮಂಟಪ ಶೂನ್ಯಸಿಂಹಾಸನದ
ಭಾವದಾಚಾರದ ಮನೆ ಕಾಣಿರಣ್ಣಗಳಿರಾ.
ಇಂತೆಸೆವ ತ್ರಿವಿಧಾಚಾರಸಂಪನ್ನರೆ ಕೂಡೊಂದೊಡಲಾಗಿ,
ಮನದ ಮಾಯಾಪಾಶವ ಕಡಿದು ಕಂಡ್ರಿಸುತ್ತ ,
ತಮ್ಮ ತಾವರಿದು, ನಡೆನುಡಿ ಒಂದಾಗಿ,
ಮಾಯಾಭೋಗಾಪೇಕ್ಷೆಯ ನೆರೆ ನೀಗಿ, ತ್ರಿವಿಧಾಚಾರಬ್ರಹ್ಮವಾಗಿ,
ತ್ರಿಗುಣಗಳಡಿಮೆಟ್ಟಿ ನಿಂದ ನಿಜೋತ್ತಮರಿಗಿದೀಗ
ತಮ್ಮ ಮನಸಂಬಂಧವಾದ ನಿಜಾಲಯಕ್ಕೆ
ಯೋಗ್ಯವಾದ ತ್ರಿವಿಧಾಚಾರದಿರವು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./5
ಅನಾದಿ ಶರಣಲಿಂಗ ಗುರುಭಕ್ತ ಜಂಗಮದ
ಏಕಸಮರಸೈಕ್ಯ ಅಭಿನ್ನರ್ಚನೆಗಳಲ್ಲಿ ತೀರ್ಥಪ್ರಸಾದ ಪೂಜೆಯ ಸಂಬಂಧವೆನಿಸಿ,
ಪೂರ್ವಪುರಾತನೋಕ್ತಿಯಿಂದ ಚಿದ್ಘನಪಾದತೀರ್ಥವ ಪಡಕೊಂಡ
ಶಿವಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣನು
ಕಾಯ-ಕರಣ-ಭಾವಗಳ ಸಂಚಲಗಳನಳಿದುಳಿದು ನಿಃಸಂಚಲನಾಗಿ,
ಕೇವಲ ಕಿಂಕುರ್ವಾಣ ಪರಿಪೂರ್ಣಸಾವಧಾನ ಭಯಭಕ್ತಿಯಿಂದ
ಆ ತೀರ್ಥದ ಬಟ್ಟಲೆತ್ತಿ , ಆ ಜಂಗಮಲಿಂಗಮೂರ್ತಿಗೆ
ಶರಣಾರ್ಥಿಸ್ವಾಮಿ, ಮಹಾಲಿಂಗಾರ್ಪಣವ ಮಾಡಬೇಕೆಂದು
ಅಭಿವಂದಿಸಿದಲ್ಲಿ,
ಆ ಜಂಗಮಲಿಂಗಶರಣನು ಘನಮಹಾಮಂತ್ರಸೂತ್ರವಿಡಿದು,
ಪರಿಪೂರ್ಣಾನಂದ ಸಾವಧಾನಭಕ್ತಿ ಮುಖದಲ್ಲಿ ಸಲಿಸಿದಮೇಲೆ,
ಪೂರ್ವದಂತೆ ಆ ಪ್ರಸನ್ನಪ್ರಸಾದತೀರ್ಥದ ಬಟ್ಟಲ ಗರ್ದುಗೆಯಲ್ಲಿ
ಮೂರ್ತಗೊಳಿಸಿ ಆ ಮೇಲೆ ತಾನು ಗರ್ದುಗೆಯ ಬಿಟ್ಟೆದ್ದು,
ಪರಾತ್ಪರ ಬ್ರಹ್ಮಜ್ಯೋತಿರ್ಮಯಸ್ವರೂಪ ಜಂಗಮಲಿಂಗ ಲಿಂಗಜಂಗಮದ
ಶೇಷೋದಕ ಪರಿಪೂರ್ಣಾನಂದ ತೀರ್ಥ ಸ್ತೋತ್ರವಂ ಮಾಡಿ,
ಸರ್ವಾಂಗಪ್ರಣುತನಾಗಿ ಪೊಡಮಟ್ಟು,
ಹರಹರಾ ಶಿವಶಿವಾ ಜಯಜಯಾ ಕರುಣಾಕರ
ಭಕ್ತವತ್ಸಲ ಭವರೋಗವೈದ್ಯ ಮತ್ಪ್ರಾಣನಾಥ ಮಹಾಲಿಂಗಜಂಗಮವೆಯೆಂದು,
ಅಂತರಂಗದ ಪರಿಪೂರ್ಣರೆ ನಿರವಯಪ್ರಭು ಮಹಾಂತರ
ಘನಶರಣ ಲಿಂಗ ತಾನೆಯೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./6
ಅನಾದಿ ಹರಗಣಮಾರ್ಗದ ಪ್ರಾಣಲಿಂಗಾಚಾರ ನಡೆನುಡಿ ಏಕವಾದ
ಚಿದ್ಬೆಳಗೆ ಅಂತರಂಗವಾಗಿ, ಪರೋಪಕಾರನಿಮಿತ್ಯರ್ಥವಾಗಿ
ಅದೇ ಅಂತರಂಗಸಂಬಂಧವಾದ ನಿಜಚಿತ್ಕಳೆಯ ಪ್ರಭಾವಿಸಿ,
ಮಹದರುವೆಂಬ ಪರಮಗುರುವೆಂಬ ಮಾರ್ಗದ
ಇಷ್ಟಲಿಂಗಾಚಾರ ನಡೆನುಡಿ ಒಂದೊಡಲಾದ
ಚಿದ್ಬೆಳಗೆ ಬಾಹ್ಯರಂಗವಾಗಿ,
ಉಭಯ ಸಂಬಂಧದಾಚರಣೆಗಳಿಂದ ಅಣುಮಾತ್ರ ಹೋದಲ್ಲದೆ
ಬಾಹ್ಯದಲ್ಲಿ ಸತ್ಕ್ರಿಯಾವರ್ತಕ, ಅಂತರಂಗದಲ್ಲಿ ಸಮ್ಯಜ್ಞಾನವರ್ತಕದಿರವಿನ
ಮೂಲಾಧಾರ ಭಾವಲಿಂಗವೆಂಬ ನಿಜಶರಣಜಂಗಮದೇವನ
ಚಿದಂಗ ಚಿದ್ಘನಲಿಂಗದ ಅಖಂಡ ಜ್ಯೋತಿರ್ಮಯಗೋಳಕದ
ಕೊನೆಮೊನೆಯೊಳಗೆ ನೆಲಸಿರ್ಪ ಸತ್ತುಚಿತ್ತಾನಂದ ಪರಬ್ರಹ್ಮದಿರವಿನ,
ಕ್ರಿಯಾಮಂಡಲ ಸುಜ್ಞಾನಮಂಡಲ ಮಹಾಜ್ಞಾನಮಂಡಲವೆಂಬ
ಷಟ್ಪ್ರಕಾರದ ಮನೆಯೊಳ್ ತನ್ನ ತಾನು
ಚುಂಬಿಸಿದಾನಂದದಿರವಿನ ಬೆಳಗ ಕಂಡು,
ಕಣ್ಮುಚ್ಚಿ, ಮನ ಮೈಮರೆದು, ಬಚ್ಚಬರಿಯಾನಂದವಾಗಿ,
ತಮ್ಮ ತಾವರಿದು, ಸುಸಂಗಸಂಗಿಗಳಾಗಿ,
ನಿಜಮೋಕ್ಷದಖಣಿಯೆಂಬ ಮುಕ್ತಿಮಂದಿರವ ಹೊಕ್ಕು ಹೊರಡದ
ಭಾವಭರಿತರೆ ನಿಮ್ಮ ಪ್ರತಿಬಿಂಬರು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./7
ಅನಾದಿಪ್ರಮಥಗಣ ಸನ್ಮಾನಿಗಳಾದವರ ಹೊಂದಿ ಹೊರೆದ
ಪಿತ-ಮಾತೆ, ಸತಿ-ಸುತ, ಸಹೋದರ-ನಂಟರು ಮೊದಲಾದವರಿಗೆ
ಸಲುವಂಥ ಪಂಚಾಚಾರದಿರವಿನ ಸೂತ್ರ.
ಹರನಿರೂಪಣ ಸಾಕ್ಷಿ : “ಗುರುಲಿಂಗಜಂಗಮಶ್ಚೈವ ಪ್ರಸಾದಂ ಪಾದವಾರಿ ಚ |
ಲಿಂಗಬಾಹ್ಯಾನ್ನಜಾನಾತಿ ಅಣುಮಾತ್ರಂ ಚ ಕಾರಯೇತ್ ||
ಲಿಂಗಾಚಾರಸ್ಸದಾಚಾರಃ ಶಿವಾಚಾರಸ್ತಥೈವ ಚ |
ಗಣಾಚಾರಃ ಭೃತ್ಯಾಚಾರೋ ಪಂಚಾಚಾರಾಃ ಪ್ರಕೀರ್ತಿತಾಃ ||”
ತಮ್ಮಾಚಾರ ಗೃಹದಲ್ಲಿ ಕ್ರಿಯಾಭಾಂಡಂಗಳೊಳಗೆ
ಶುಚಿರುಚಿಯಿಂದ ಗುರುಲಿಂಗಜಂಗಮಾರ್ಪಣಕ್ಕೆಂದು
ಭಾವಭರಿತವಾಗಿ ಶೋಧಕತ್ವದಿಂದ ಮಂತ್ರಸ್ಮರಣೆಯಿಂದ
ಪಾಕಂಗೈದು, ಮಧುರ ಒಗರು ಖಾರ ಆಮ್ಲ ಕಹಿ ಲವಣ ಮೊದಲಾದ
ಷಡ್ರಸದ್ರವ್ಯಗಳ ಇಷ್ಟಲಿಂಗ ಬಾಹ್ಯರಿಗೆ ಹಾಕಲಾಗದು.
ಅವರ ಕಣ್ಣಿಗೆ ದರ್ಶನದಿಂದ ಪಾಕದ ಭಾಂಡಗಳ ಕಾಣಗೊಡಲಾಗದು.
ಅವರ ಸಂಭಾಷಣೆಗಳಿಂದ ಪಾಕವ ಮಾಡಲಾಗದು.
ಭಕ್ತಲಿಂಗಜಂಗಮಕ್ಕೆ ಸಂಭಾಷಣೆಯಿಂದ ನೀಡಲಾಗದು.
ತನ್ನ ಶ್ರೀಗುರು ಕರುಣಿಸಿದ ಲಿಂಗದೇವನ ನಿಮಿಷಾರ್ಧವಗಲಿರಲಾಗದು.
ಆ ಲಿಂಗವಲ್ಲದೆ ಅನ್ಯವಾಗಿ ಭೂಪ್ರತಿಷ್ಠಾದಿಗಳ ನೆನೆಯಲಾಗದು,
ಅರ್ಚಿಸಲಾಗದು, ವಂದಿಸಲಾಗದು.
ಜಡನೇಮವ್ರತ ತಿಥಿ ಉಪವಾಸಗಳ ಮಾಡಲಾಗದು.
ದೇಹ ದಂಡಿಸಿದೊಂದು ಕಾಯಕ
ಬೇಡಿತಂದುದೊಂದು ಕಾಯಕವಲ್ಲದೆ
ಅಕೃತ್ಯದಿಂದ ಕಿರಾತರಂತೆ ಗಳಿಕೆಗೊಳಗಾಗಲಾಗದು.
ಶಿವಲಿಂಗಲಾಂಛನಕ್ಕೆ ಅನ್ನುದಕಾದಿವಸ್ತ್ರಪಾವುಡಗಳ
ವಂಚಿಸಿ ವಿಷಯವ್ಯಸನಿಗಳಾಗಲಾಗದು.
ಆಚಾರ್ಯಬಾಹ್ಯವಾದ ನೀಚಾಶ್ರಯಗಳಲ್ಲಿರಲಾಗದು.
ಆಚಾರಬಾಹ್ಯರ ಸಮರಸಕ್ರಿಯಗಳ ಬಳಸಲಾಗದು.
ಸದಾಚಾರ ಭಕ್ತಗಣ ಗುರುಲಿಂಗಜಂಗಮಕ್ಕೆ
ರಾಗದ್ವೇಷದಿಂದ ಗರ್ವಿಸಿ ನುಡಿಯಲಾಗದು.
ಸರ್ವರು ಒಂದೊಡಲಾಗಿ, ಲಿಂಗನಡೆ, ಲಿಂಗನುಡಿ, ದೃಢಚಿತ್ತದಿಂದ
ಸರ್ವಭೋಗವ ನೀಗಿ, ಪಂಚಾಚಾರಬ್ರಹ್ಮವಾಗಿ,
ಆರುವೈರಿಗಳಡಿಮೆಟ್ಟಿನಿಂದ ನಿಜೋತ್ತಮರಿದೀಗ
ತಮ್ಮ ತನುಸಂಬಂಧವಾದ ನಿಜಾಲಯಕ್ಕೆ
ಯೋಗ್ಯವಾದ ಪಂಚಾಚಾರದಿರವು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./8
ಅನಾದಿಪ್ರಮಥಗಣದಿರವನರಿದು,
ಸತ್ಯಶುದ್ಧ ನಡೆನುಡಿದೃಢಚಿತ್ತರಾಗಿ,
ಇಹ ಪರ ಭೋಗಯೋಗದ ಬಯಕೆಯ ನೀಗಿ,
ನಿರವಯಲ ಸೇರಿ, ನಿತ್ಯಮುಕ್ತರಾಗಬೇಕಾದ
ಭಕ್ತ ಜಂಗಮ ಗುರುಲಿಂಗಕ್ಕೆ
ಆಚಾರವೆ ಗುರು, ಆಚಾರವೆ ಲಿಂಗ, ಆಚಾರವೆ ಜಂಗಮ,
ಆಚಾರವೆ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ,
ಭಕ್ತಗಣಪ್ರಸಾದಿ ಶರಣೈಕ್ಯರೆಂದುದು ಗುರುವಚನ;
ಅದು ಕಾರಣವಾಗಿ, ಆಚಾರದ ಕುರುಹ ತಿಳಿದು,
ಆಚರಿಸಿ, ಸಂಬಂಧವಿಟ್ಟು, ತನ್ನ ತಾನಾಗಬಹುದಲ್ಲದೆ,
ಆಚಾರವನುಲ್ಲಂಘಿಸಿ, ಆಚಾರವ ಬಿಟ್ಟು,
ಅನಾಚಾರಸಂಗಸಮರತಿಯ ಬಳಸಿದೊಡೆ
ತನ್ನ ತಾನಾಗಬಾರದೆಂದುದು ಹರಗುರುವಾಕ್ಯವು.
ಇದ ತಿಳಿದ ಮಹಾಂತರು, ಆಚಾರವನಾಚರಿಸಬೇಕು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./9
ಅನಾದಿಪ್ರಮಥಗಣನಾಯಕ ಪರಮಾರಾಧ್ಯ
ಶ್ರೀಗುರುಕರಜಾತ ಏಕವಿಂಶೋಪದೇಶ
ಷಟ್ಪ್ರಸಾದ ಪಾದೋದಕ ಮಂತ್ರಸ್ವರೂಪ ಷಟ್ಸ್ಥಲಸಂಬಂಧವಾದ
ಭಕ್ತ ಮಹೇಶ ಗಣಾರಾಧ್ಯರಿಗೆ ಯೋಗ್ಯವುಳ್ಳ
ತ್ರಿವಿಧಾಚಾರಸಂಬಂಧವೆ ಪ್ರಾಣವಾದ ಸೂತ್ರವದಕ್ಕೆ
ಹರನಿರೂಪಣ ಸಾಕ್ಷಿ: `ಸತ್ಯಾಚಾರಂ ನಿತ್ಯಾಚಾರಂ ಧರ್ಮಾಚಾರಂ ವರಾನನೆ’
ಎಂದುದಾಗಿ,
ಜಾಗ್ರಾವಸ್ಥೆಯ ವಿಶ್ವಪ್ರಪಂಚಿನ ಶಿವಾತ್ಮನ
ಪಾಶಬದ್ಧನಡೆನುಡಿಗಳ ಹೊದ್ದಲೀಯದೆ,
ಕೇವಲ ಗುರುವಾಕ್ಯಪ್ರಮಾಣವಾಗಿ,
ಪೂರ್ವಪುರಾತನೋಕ್ತಿ ವಚನಸಾರಾಮೃತವಿಡಿದು,
ಇಷ್ಟಲಿಂಗದೊಳಗಣ ನವಲಿಂಗಮಂ ಭೇದಿಸಿ,
ಸತ್ಕ್ರಿಯೆ ಸಮ್ಯಜ್ಞಾನ ಸದ್ಭಾವವಿಡಿದು,
ಸತ್ಕ್ರಿಯಾಜಪೋಪದೇಶ ಸಮ್ಯಜ್ಞಾನಜಪೋಪದೇಶ
ಮಹಾಜ್ಞಾನಜಪೋಪದೇಶ ಪರಿಪೂರ್ಣಜ್ಞಾನಜಪೋದೇಶದ ಮಹಾಬೆಳಗನರಿದು,
ಫಲಪದದಾಯುಷ್ಯದ ಭೋಗಯೋಗಮಂ ನೆರೆ ನೀಗಿ,
ಸತ್ಕ್ರಿಯೆ ಘನಗುರುಲಿಂಗಜಂಗಮದ
ಕೃಪಾನಂದದ ನಿರಾಸೆ ನಿರ್ಲಜ್ಜ ನಿರ್ವಿಷಯ ನಿರ್ಮೊಹ
ನಿರಾಪೇಕ್ಷ ನಿರ್ದೆಶ ನಿರಾಶ್ರಯ ನಿರವಯಬ್ರಹ್ಮದ ನಿರಾವರಣನಾಗಿ,
ತನ್ನ ತಾನರ್ಚಿಸಿ ಕೊಡುವಲ್ಲಿ ಕೊಂಬಲ್ಲಿ ನುಡಿವಲ್ಲಿ ನಡೆವಲ್ಲಿ
ಕೈ ಎರಡಾಗದೆ, ನುಡಿ ಎರಡಾಗದೆ,
ಪಾದವಚನಾನಂದದಿಂದ ಶೀಲವ್ರತಾಚಾರ
ನಿತ್ಯನೇಮಂಗಳಲ್ಲಿ ಅಭಿನ್ನಸ್ವರೂಪರಾಗಿ,
ಯಥಾರ್ಥದಿಂದ ಇಹಪರಲೋಕದ
ಭೋಗಮೋಕ್ಷಾಪೇಕ್ಷ ಹೊದ್ದದಿರ್ಪುದೆ
ಮಾರ್ಗಾಚರಣೆಯ ಸತ್ಯದಾಚಾರದಿರವಿನ
ಇಷ್ಟಲಿಂಗ ತಾನೆ ನೋಡಿರಣ್ಣಗಳಿರಾ.
ಅಲ್ಲಿಂದ ಸ್ವಪ್ನಾವಸ್ಥೆಯ ತೈಜಸನ ಪ್ರಪಂಚಿನ ಅಂತರಾತ್ಮನ
ಪಾಶಬದ್ಧ ನಡೆನುಡಿಗಳಂ ಹೊದ್ದಲೀಯದೆ,
ಕೇವಲ ಘನಲಿಂಗವಾಕ್ಯ ಪ್ರಮಾಣವಾಗಿ,
ಪೂರ್ವಪುರಾತನೋಕ್ತಿ ವಚನ ಸಾರಾಮೃತವಿಡಿದು,
ಪ್ರಾಣಲಿಂಗದೊಳಗಣ ನವಲಿಂಗಮಂ ಭೇದಿಸಿ,
ಮಹಾಮಂತ್ರದ ಚಿದ್ಬೆಳಗನರಿದು, ಮಹಾಬೆಳಗಾಗಿ,
ಸುಳಿಗಾಳಿಯಂತೆ ಲಿಂಗಪ್ರದಕ್ಷಿಣದಿಂದ ಸುಳಿದಾಡಿ,
ಪ್ರದಕ್ಷಿಣಮಂ ಮಾಡುತ್ತ, ಹರಗಣ ಸಮ್ಮೇಳಮಂ ಕೂಡಿಕೊಂಡಾಡುತ್ತಂ,
ಭವರೋಗವೈದ್ಯರಾಗಿರ್ಪುದೆ ನಿತ್ಯಾಚಾರದಿರವಿನ
ಪ್ರಾಣಲಿಂಗಸಂಧಾನದ ಮೀರಿದಾಚರಣೆಯ ಚಿದ್ಭ್ರಹ್ಮಮೂರ್ತಿ
ಮಹಾಘನ ಪ್ರಾಣಲಿಂಗ ತಾನೆ ನೋಡಿರಣ್ಣಗಳಿರಾ.
ಅಲ್ಲಿಂದಂ ಸುಷುಪ್ತ ತೂರ್ಯ ತೂರ್ಯಾತೀತ ನಿರವಯನೆಂಬ
ಪ್ರಜ್ಞಾಪರಿಪೂರ್ಣ ಪರಾತ್ಪರ ನಿರಾತಂಕನ ಪ್ರಪಂಚಿನ
ಪರಮಾತ್ಮ ನಿರ್ಮಲಾತ್ಮ ಶುದ್ಧಾತ್ಮ ಆನಂದಾತ್ಮನ
ನಟನಾಟಕ ಕಪಟವೇಷಮಂ ಹೊದ್ದಲೀಯದೆ,
ಕೇವಲ ಪರಿಪೂರ್ಣಾನಂದ ಜ್ಯೋತಿರ್ಮಯನಚಲಾನಂದ
ನಿಃಶಬ್ದ ಚಿದ್ಬ್ರಹ್ಮಮಂ ಕೂಡಿ,
ಭಿನ್ನಭಾವವಿಲ್ಲದೆ, ತಾನೇ ತಾನಾಗಿ,
ಸಕಲನಿರಾಕಾರ ಜಾಗ್ರಸ್ವಪ್ನ ತನುಮನದ
ಅಭೀಷ್ಟಾದಿಗಳಿಗೆ ಚೈತನ್ಯ ತಾನಾಗಿ,
ತನಗೊಂದು ಸುಖ-ದುಃಖ, ಪುಣ್ಯ-ಪಾಪ,
ಸ್ತುತಿ-ನಿಂದ್ಯಾದಿಗಳ ಹೊದ್ದಿಗೆಯಿಲ್ಲದೆ,
ಬೆಳಗಿಂಗೆ ಮಹಾಬೆಳಗಾಗಿ, ಬಯಲೊಳಗೆ ಮಹಾಬಯಲಾಗಿರ್ಪುದೆ
ಭಾವಲಿಂಗಸಂಧಾನದ ಪರಿಪೂರ್ಣಾಚರಣೆಯ
ಸದ್ಧರ್ಮದಾಚಾರದಿರವು ಕಾಣಿರಣ್ಣಗಳಿರಾ.
ಇಂತೆಸೆವ ಜಾಗ್ರಾವಸ್ಥೆಯೆ ಸಾಕಾರವಾದ ಇಷ್ಟಲಿಂಗವಾಗಿ,
ಸ್ವಪ್ನಾವಸ್ಥೆಯೆ ನಿರಾಕಾರವಾದ ಪ್ರಾಣಲಿಂಗವಾಗಿ,
ಸುಷುಪ್ತಾವಸ್ಥೆಯೆ ನಿರವಯವಾದ ಭಾವಲಿಂಗವಾಗಿ
ಈ ತ್ರಿವಿಧಲಿಂಗಸ್ವರೂಪನೆ ಶರಣ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./10
ಅನಾದಿಮೂಲಚಿತ್ತುವಿನ ಚಿದಂಶಿಕನಾದ
ಶಿವಯೋಗಸಂಪೂಜ್ಯರಾದವರು,
ತಮ್ಮ ತನುಮನಪ್ರಾಣೇಂದ್ರಿ ಕರಣಕರ್ಕಶವಿಷಯವ್ಯಾಪಾರ
ಭವಘೋರಸಂಸಾರವೆ ತನ್ನ ತಾನಾಗುವದಕ್ಕೆ
ಕಾಲಕಾಮ ಮಾಯಾಪಾಶದ ತೊಡಕೆಂದರಿದು ನಿರಸನಂ ಮಾಡಿ,
ನರಜೀವಸೂತಕಪಾತಕ ರಿಣಭಾರಕರಡಿಮೆಟ್ಟಿ,
ನಡೆನುಡಿ ಒಡಲಗುಣವಳಿದುಳಿದು,
ದೃಢನೈಷ್ಠಾನುಭಾವರ ಸಂಗಸಮರತಿಯಂ ಸಾಧಿಸಿ ಭೇದಿಸುತ್ತ,
ಷಟ್ಸ್ಥಲೋಪದೇಶ ಕರತಳಾಮಳಕವಾಗಿ,
ಘನಲಿಂಗಮೆಚ್ಚಿ ನಡೆದು, ಘನಲಿಂಗಮೆಚ್ಚಿ ನುಡಿದು,
ಘನಲಿಂಗಮೆಚ್ಚಿ ಒಡಲೊಂದಾಗಿ ಭೋಗಿಸಿ,
ಅಚ್ಚಪ್ರಸಾದಿ ನಿಚ್ಚಪ್ರಸಾದಿ ಚಿತ್ಕಳಾಪ್ರಸಾದಿಗಳಿಗೆ
ಕಿಂಕುರ್ವಾಣಭೃತ್ಯಭಕ್ತಿ ನಿರ್ವಂಚನತೆಯಳವಟ್ಟು ಭಾವಭರಿತವಾಗಿ.
ಈ ಲೀಲಾಸಮಯದೊರಕದೆಂದು,
ಪರಿಪೂರ್ಣಜ್ಞಾನಾನುಭಾವವ ಸಾಧಿಸುತ್ತ ,
ಸರ್ವಾಚಾರಸಂಪದಮಂ ಗ್ರಹಿಸಿ,
ಸಗುಣಾರ್ಚನಾರ್ಪಣ ನಿರ್ಗುಣಾರ್ಚನಾರ್ಪಣಮಂ ನೆರೆಯರಿದು,
ಚಿತ್ಕಲಾಪ್ರಸನ್ನಪ್ರಸಾದ ಬಳಸಿಬ್ರಹ್ಮ ಬಾಲಬ್ರಹ್ಮದ
ವಿರಾಗತಿಯನರಿದಾಚಾರಮೂರ್ತಿ ನಿಜಜಂಗಮಲಿಂಗದೇವನು,
ತನ್ನ ದಯಾನಂದದಿಂದ ತೆರಹಿಲ್ಲದೆ
ದಿನರಾತ್ರಿಗಳಲ್ಲಿ ಒದಗಿಬಂದೊಡೆ,
ಮಹಾಸಂತೋಷ ಪ್ರೀತಿ ಪ್ರೇಮಾನಂದದಿಂದ,
ಅಚ್ಚಪ್ರಸಾದಿಯಾಚರಣೆಯಂತೆ ಹರುಕಾಗದೆ
ಶೋಧಕತ್ವದಿಂದ ಸದ್ರೂಪು ರುಚಿ ತೃಪ್ತಿದ್ರವ್ಯಮಂ
ಕಠಿಣಗಳ ಕಳೆದುಳಿದು ಮೌನಮಂತ್ರದಿಂದ ಪರಿಪೂರ್ಣಲಿಂಗಾರ್ಪಣದ
ವರ್ಮವರಿದು, ಪರಿಣಾಮತಟ್ಟುವಂತೆ
ಮಿಶ್ರಾರ್ಪಣಮಂ ಸಮರ್ಪಿಸಿ,
ಅವರ ಕರುಣಾನಂದ ಚಿದ್ರೂಪು ರುಚಿ ತೃಪ್ತಿ ಶೇಷೋದಕ
ಪ್ರಸಾದಮಂ ಬೆಸಗೊಂಡು,
ಮತ್ತವರ ತೆರಹಿಲ್ಲದೆ ಚರಣಕಮಲಮಂ
ದರುಶನ ಸ್ಪರಿಶನ ಸಂಭಾಷಣೆ ತೀರ್ಥಪ್ರಸಾದಾನುಭಾವಂಗಳಿಂದ
ಸೂತ್ರದೊಳು ಲೋಲುಪ್ತನಾಗುತ್ತ,
ತನುಮನಕರಣೇಂದ್ರಿಯಗಳಲ್ಲಿ ಅಚ್ಚಪ್ರಸಾದಿಸ್ಥಲವಾಗಿ,
ನಿಜನೈಷ್ಠಾನುಭಾವ ಹೊದ್ದಲ್ಲದೆ ಅಲ್ಲಿಂದ ಜಂಗಮಲಿಂಗದೇವನು
ದಿನದಲ್ಲಿ ಒದಗಿ, ರಾತ್ರಿಯಲ್ಲಿ ಒದಗದಿದ್ದರೆ
ನಿಚ್ಚಪ್ರಸಾದಿಯಂತೆ ಸಂಬಂಧದಾಚರಣೆಯನಾಚರಿಸಿ,
ಸತ್ತುಚಿತ್ತಾನಂದ ನಿತ್ಯಪರಿಪೂರ್ಣವಾಗಿ
ಅಲ್ಲಿಂದ ಶರಣಸತಿ ಲಿಂಗಪತಿಯೆಂಬ ರತಿಕೂಟದಿಂದ,
ಕ್ರಿಯಾಘನಗುರುಲಿಂಗಜಂಗಮಸೂತ್ರವಿಡಿದು,
ಬಂದ ಕ್ರಿಯಾಭಸಿತ ಪ್ರಣಮಪ್ರಕಾಶಂಗಳಂ
ಕಣ್ಮನ ಭಾವ ತುಂಬಿ ತುಳುಕಾಡುತ್ತ ,
ದಿನರಾತ್ರಿಗಳೆಂಬ ಸಂದುಸಂಶಯವಳಿದು,
ಕರ ಮನ ಭಾವದ ಕೊನೆಮೊನೆಯೊಳಗೆ
ಬೆಳಗುವ ಮಹಾಜ್ಯೋತಿಯೊಡಗೂಡಿ, ಸಂಬಂಧದಾಚರಣೆಯನಗಲದೆ,
ಪರಿಪೂರ್ಣ ಮಹಾಘನ ಶೇಷ ಪಾದೋದಕ ಪ್ರಸನ್ನಪ್ರಸಾದಪ್ರಣಮಕೂಟಂಗಳಿಂದೆ
ಕ್ರಿಯಾಲೀಲೆಯ ಸಮಾಪ್ತಮಾಡಬಲ್ಲಾತನೆ,
ಜ್ಯೋತಿ ಜ್ಯೋತಿ ಕೂಡಿ ಬಯಲ ಸೇರಿದಂತೆ,
ಶರಣನ ಲಿಂಗಸಂಗಸಮರಸೈಕ್ಯ
ಸಮಯಪ್ರಸಾದಿಯ ಸ್ಥಲದಿರವು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./11
ಅನಾದಿಶರಣ ಜಂಗಮಲಿಂಗದ ಪಾದಪೂಜೆಯನಿಳುಹಿದ ಶರಣನು,
ಪಾದೋದಕ ಸ್ಪರಿಶನೋದಕ ಭಸ್ಮೋದಕ ಸಂಬಂಧವಾದ
ಪಾತ್ರೆಯ ಉದಕದೊಳಗೆ ಮೂಲಪ್ರಣಮವ ಲಿಖಿಸಿ,
ಚಿದ್ಬಿಂದುವನಿಟ್ಟು ಪಡಕೊಂಬುವ ತಟ್ಟೆ ಬಟ್ಟಲೊಳಗೆ
ಷಡಕ್ಷರಪ್ರಣಮವ ಸಪ್ತಕೋಟಿಮಹಾಮಂತ್ರಗಳಿಗೆ ಜನನಸ್ಥಾನವಾದ
ಷಡುಪ್ರಣಮಗಳ ಪ್ರಥಮ ತಟ್ಟೆಯಲ್ಲಿ ,
ಪೂರ್ವಪಶ್ಚಿಮ ಉತ್ತರದಕ್ಷಿಣಕ್ಕೆ ಷಡ್ವಿಧ ರೇಖೆಗಳ ರಚಿಸಿ,
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನಮುಖಸ್ಥಾನವರಿದು,
ಪಂಚದಿಕ್ಕುಗಳಲ್ಲಿ ಪಂಚಪ್ರಣಮವ ಲಿಖಿಸಿ,
ದ್ವಿತೀಯ ಬಟ್ಟಲೊಳಗೆ ಮೂಲಪ್ರಣಮವ ಲಿಖಿಸಿ,
ಪಾದಾಂಗುಷ್ಠದಡಿಯಲ್ಲಿಟ್ಟು, ತನ್ನ ವಾಮಕರದಂಗುಲಿಗಳೊಳಗೆ
ಲಿಂಗಜಂಗಮ ಜಂಗಮಲಿಂಗ ಲಿಂಗಶರಣ ಬಸವಲಿಂಗ ಲಿಂಗಪ್ರಸಾದವೆಂಬ
ಇಪ್ಪತ್ತೈದು ಪ್ರಣಮಗಳೆ ಪ್ರಭುಲಿಂಗಲೀಲೆಯೆಂದು
ಆ ಕರಸ್ಥಲದಿರವ ಗುರುಮುಖದಿಂದರಿದು
ತನ್ನ ತಾ ಮರೆದಿಪ್ಪವರೆ ನಿರವಯಮಹಾಂತರೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ. /12
ಅಯ್ಯಾ, ತನತನಗೆ ಚೈತನ್ಯವಿರ್ದು,
ಉಪಚಾರಗಳನುಗುಣದಿಂದೊದಗಿದಲ್ಲಿ,
ದಿನದಾರ್ಚನೆ ಇಷ್ಟಲಿಂಗಾರೋಪಿತವೆಂದು,
ಭಿನ್ನಭಾವಗಳಿಲ್ಲದೆ ಕ್ರಿಯಾರ್ಚನೆ ನಿಂತಲ್ಲಿ
ತನ್ನ ನಿಜನೈಷ್ಠೆಯೆ ಲಿಂಗಮಂತ್ರದಲ್ಲಚ್ಚೊತ್ತಿ ,
ರೂಪಾದ ಭೋಗವೆಲ್ಲ ತೃಣವೆಂದು ತಿರಸ್ಕರಿಸಿರುವುಳ್ಳಂಥವರಾಗಿ,
ತನ್ನ ಸುಚಿತ್ತವೆ ಸ್ನಾನಾಭಿಷೇಕವಾಗಿ,
ಸುಬುದ್ಧಿಯೆ ಸುಗಂಧಪರಿಮಳವೆನಿಸಿ,
ನಿರಹಂಕಾರವೆ ಅಕ್ಷತವಾಗಿ, ಸುಮನಾದಿ ಪದ್ಮಗಳೆ ಪುಷ್ಪಪತ್ರವೆನಿಸಿ,
ಸುಜ್ಞಾನವೆ ಧೂಪವಾಗಿ, ಸದ್ಭಾವವೆ ದೀಪಾರತಿಯೆನಿಸಿ,
ಸನ್ಮಾನವೆ ನೈವೇದ್ಯವಾಗಿ, ಸಂಪೂರ್ಣವೆ ತಾಂಬೂಲಗೈದು,
ನಿಶ್ಚಿಂತನಿರವಯನಿರಾಲಂಬನಿರ್ಗುಣಾನಂದವೆ ಷೋಡಶೋಪಚಾರವಾಗಿ
ಪರಾತ್ಪರ ಜ್ಯೋತಿರ್ಮಯಪ್ರಮಾಣಲಿಂಗದಲ್ಲಿ ಎರಡಳಿದುಳಿದು
ಲಿಂಗವೆ ಪೂಜ್ಯಪೂಜಕನೆಂದರಿದು,
ಬಚ್ಚಬರಿಯಾನಂದದ ಪರಿಪೂರ್ಣಬ್ರಹ್ಮವಾಗಿ ನಿಂದ ನಿರ್ಧಕರೆ
ನಿರವಯಪ್ರಭು ಮಹಾಂತರು ಮತ್ತಾರುಂಟು ಹೇಳಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ ?/13
ಅಯ್ಯಾ, ತಾನು ತಾನಾದ ಪೂರ್ವಪುರಾತನರ ವಚನಸಾರಾಮೃತಮಂ
ಕರತಳಾಮಳಕವಾಗಿ, ಜ್ಞಾನೋದಯವಾಗಿ,
ಅಡಿಗೆರಗಿ ಬಂದ ಜ್ಞಾನಕಲಾತ್ಮರಿಗೆ ಉಪದೇಶಿಸಿದಲ್ಲಿ ,
ಆ ಜ್ಞಾನಕಲಾತ್ಮರು ನಿಜಾನುಭಾವದಿಂದೆ ಈ ವಚನಸಾರಾಮೃತವನನುಭವಿಸಿ,
ಸುಖಿಸಿದ ಶಿವಯೋಗಿಶ್ವರರಿಗೆ ಪ್ರಸನ್ನತ್ವದ ಬೆಳಗುದೋರಿ,
ಯೋಗಾಂಗವೆಲ್ಲ ನಿರಂಜನಲಿಂಗಜಂಗಮದಲ್ಲಿ ಬಯಲಪ್ಪುದು.
ಭೋಗಾಂಗವೆಲ್ಲ ಶೂನ್ಯಲಿಂಗಜಂಗಮದಲ್ಲಿ ಬಯಲಪ್ಪುದು.
ತ್ಯಾಗಾಂಗವೆಲ್ಲ ನಿಃಕಲಲಿಂಗಜಂಗಮದಲ್ಲಿ ಬಯಲಪ್ಪುದು.
ಮಹದಂಗವೆಲ್ಲ ಮಹಾಲಿಂಗಜಂಗಮದಲ್ಲಿ ಬಯಲಪ್ಪುದು.
ಶೇಷಾಂಗವೆಲ್ಲ ಪರಿಪೂರ್ಣನಿಜಶೇಷಾನಂದಲಿಂಗಜಂಗಮದಲ್ಲಿ ಬಯಲಪ್ಪುದು.
ಚರಾಂಗವೆಲ್ಲ ನಿತ್ಯತೃಪ್ತಾನಂದ ಚರಲಿಂಗಜಂಗಮದಲ್ಲಿ ಬಯಲಪ್ಪುದು.
ಶಿವಾಂಗವೆಲ್ಲ ಸದ್ರೂಪು ಚಿದ್ರೂಪು ಚಿನ್ಮಯರೂಪು
ಶಿವಲಿಂಗಜಂಗಮದಲ್ಲಿ ಬಯಲಪ್ಪುದು.
ಗೌರವಾಂಗವೆಲ್ಲ ಚಿದ್ಘನಜ್ಯೋತಿರೂಪ
ಗುರುಲಿಂಗಜಂಗಮದಲ್ಲಿ ಬಯಲಪ್ಪುದು.
ಆಚಾರಾಂಗವೆಲ್ಲ ಪರಿಪೂರ್ಣಾನಂದ ಕ್ರಿಯಾಂಗಜಂಗಮದಲ್ಲಿ
ಬಯಲಪ್ಪುವುದು ತಪ್ಪುದು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./14
ಅಯ್ಯಾ, ನಾನು-ನೀನು, ಆದಿ-ಅನಾದಿ, ತಂದೆ-ತಾಯಿ,
ಹೆಣ್ಣು-ಗಂಡು, ಪುಣ್ಯ-ಪಾಪ, ಸುಖ-ದುಃಖ,
ಇಹ-ಪರ, ಗುರು-ಶಿಷ್ಯ
ಅಂಗ-ಲಿಂಗ, ಜಾಗ್ರ-ಸ್ವಪ್ನ, ಪೂಜ್ಯ-ಪೂಜಕ, ಜೀವ-ಸಜೀವ,
ಕಾಯ-ಪ್ರಾಣ, ಪೃಥ್ವಿ-ಅಪ್-ತೇಜೋವಾಯು-ಆಕಾಶ, ಸೂರ್ಯ-ಚಂದ್ರ
ಆತ್ಮರಿಲ್ಲದಂದು ಅತ್ತತ್ತಲಾದ ಪರಶಿವಲಿಂಗ ಶರಣಸಂಬಂಧವನರಿದು,
ಭೋಗಯೋಗಾದಿಗಳನಳಿದು ದೇಹಾದಿ
ಕರಣೇಂದ್ರಿಗಳ ಪ್ರಪಂಚನಳಿದು,
ನಡೆನುಡಿಭಿನ್ನವಾಗದೆ ಕೇವಲಲಿಂಗವೆ ಶರಣನಲ್ಲಿ ಬೆರೆದು,
ಶರಣನೆ ಲಿಂಗದಲ್ಲಿ ಬೆರೆದು ಭಿನ್ನದೋರದೆ,
ಕ್ಷೀರ-ಕ್ಷೀರ, ತೈಲ-ತೈಲ, ಘೃತ-ಘೃತ, ನೀರು-ನೀರು, ಜ್ಯೋತಿ-ಜ್ಯೋತಿ
ಪರಿಮಳ-ಪರಿಮಳ, ವರ್ಣ-ವರ್ಣ ಒಂದಾಗಿ ಸಮರಸವನೈದಿದಂತೆ,
ತತ್ವಾತೀತನಾಗಿ ತತ್ತ್ವಮಸಿಯೆಂಬ ಪದತ್ರಯಮಂ ವಿೂರಿ,
ಜ್ಞಾತೃ-ಜ್ಞಾನ-ಜ್ಞೇಯವೆಂಬ ಜ್ಞಾನತ್ರಯಮಂ ಹಿಂಗಿ,
ಪರಾತ್ಪರದ ಬೆಳಗಿನೊಳಗಣ ಮಹಾಬೆಳಗಾಗಿ
ತನಗೊಂದು ತೊಡಕಿಲ್ಲದೆ
ಸರ್ವಾಚಾರ ಸಚ್ಚಿದಾನಂದ ಸುಧಾಮೃತವ ಒಡನೊಡನೆ ಸವಿದುಂಡು
ಕ್ರಿಯಾನಿಷ್ಪತ್ತಿ , ಜ್ಞಾನನಿಷ್ಪತ್ತಿ , ಭಾವನಿಷ್ಪತ್ತಿಯಂ ಸಾಧಿಸಿ, ಭೇದಿಸಿ,
ತಾನುತಾನಾದಾತನೆ ನಿರವಯವಸ್ತುವ ಕೂಡಿದ
ಘನಲಿಂಗಸಂಗಿಗಳೆಂಬೆ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./15
ಅಯ್ಯಾ, ನಿಜವೀರಶೈವೋದ್ಧಾರಕ ವಿಶೇಷ ಭಕ್ತ ಮಹೇಶ್ವರರು
ಮಹಾಲಿಂಗೋದಯವಾದಿಯಾಗಿನಿರವಯಲಿಂಗವಂತ್ಯವಾದಪರಿಯಂತರವು
ಸತ್ತುಚಿತ್ತಾನಂದರೂಪ ಧರಿಸಿ,
ನಿತ್ಯ ಗುರುಲಿಂಗಜಂಗಮ ಕಲ್ಯಾಣೋತ್ಸಹರಾಗಿ,
ಮಾರ್ಗಾಚಾರಂಗಳಲ್ಲಿ ಸತ್ಕ್ರಿಯಾವಧಾನ,
ಮೀರಿದಾಚಾರಂಗಳಲ್ಲಿ ಸಮ್ಯಜ್ಞಾನಾವಧಾನ,
ಸಂಪೂರ್ಣಾನಂದಭರಿತಾಚಾರಂಗಳಲ್ಲಿ ಸ್ವಾನುಭಾವದ ಸದ್ಧರ್ಮ,
ನಡೆ-ನುಡಿಯೊಳಕೊಂಡು ಬೆಳಗುವ ಪರತತ್ವ
ಶಿವಯೋಗಾನುಸಂಧಾನದ ನಿಜಾವಧಾನದಲ್ಲಿ ಸಂತೃಪ್ತರಾಗಿ,
ಬೆಳಗಿಂಗೆ ಮಹಾಬೆಳಗಾಗಿ, ತನ್ನ ತಾನೇ ಮುಕ್ತಿಸ್ವರೂಪ
ನಿರವಯಪ್ರಭು ಮಹಾಂತ ತಾನೇ ನೋಡಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./16
ಅಲ್ಲಿಂದ ಲಿಂಗಾಂಗಸಂಬಂಧದ ಆಚರಣೆಗಳರಿವಿಂ
ಕಟಿಸ್ಥಾನ, ಮಂಡೆಯ ಸ್ಥಾನಗಳಲ್ಲಿ ತೀವಿದ ಲಿಂಗಧ್ಯಾನದಿಂದೆ
ಸರ್ವಾಂಗಸ್ನಾನಂಗೆಯ್ದು, ಪ್ರಕ್ಷಾಲನಂ ಮಾಡಿ,
ಪರಿಣಾಮೋದಕದಲ್ಲಿ ತೊಳೆದಂಥ ಕೌಪ ಮೊದಲಾದ ಮಡಿಗಳನ್ನು
ಪಾದೋದಕ ಲಿಂಗಸ್ಪರಿಶನಗಳಿಂದ ಧಾರಣಂಗೈದು,
ಪರಿಣಾಮವಾದ ದಿಕ್ಕುಗಳಲ್ಲಿ
ನಾರು ರೋಮ ಹುಲ್ಲು ಅರಳೆ ಮೊದಲಾದ್ದರಲ್ಲಿ
ಹುಟ್ಟಿದಂಥಾದ್ದಾವುದಾದರೂ ಪರಿಣಾಮವಾದ ಶಾಟಿಯ ಆಸನವ ರಚಿಸಿ,
ಜಂಗಮವು ತಾವು ಸಮರಸಭಾವದಿಂದೆ
ಉಪಚಾರಗಳೊದಗಿದಂತೆ ನೆರವಿಕೊಂಡು,
ಕರಸ್ಥಲದಲ್ಲಿ ಮೂಲಪ್ರಣಮವನರ್ಚಿಸಿ,
ಕ್ರಿಯಾಭಸಿತವನ್ನು ಕರಸ್ಥಲದಲ್ಲಿ ಇಟ್ಟುಕೊಂಡು,
ಅನಾದಿ ಚಿದ್ಭಸಿತವ ಧ್ಯಾನಿಸಿ,
ಮೂಲಷಡಕ್ಷರವ ಲಿಖಿತಂಗೈದು, ಅರ್ಚಿಸಿ, ಪೂಜೆಯನಿಳುಹಿ,
ಸಮಸ್ತಕಾರಣಕ್ಕೆ ಇದೆ ಚೈತನ್ಯವೆಂದು ಭಾವಭರಿತವಾಗಿ,
ಗುರುಪಾದೋದಕದಿಂದ ತೊಳೆದು,
ಲಿಂಗಪಾದೋದಕಪ್ರಣಮಸಂಬಂಧ ಭಸ್ಮದಿಂದ
ಪವಿತ್ರವಾದ ದ್ರವ್ಯಗಳೆ ಶುದ್ಧಪ್ರಸಾದವೆಂದು ಭಾವಿಸಿ,
ಲಿಂಗಜಂಗಮಾರಾಧನೆಯ ಮಾಡುವುದೊಳಗೆ
ಕ್ರಿಯಾಶಕ್ತಿಯರು ಶುದ್ಧೋದಕದಿಂದ ಪವಿತ್ರಕಾಯರಾಗಿ,
ಲಿಂಗಬಾಹ್ಯರ ಸ್ಪರಿಶನವನುಳಿದು, ಸುಯಿಧಾನದಿಂದ,
ಉದಕವೆ ಮೊದಲು ಧಾನ್ಯ ಕಾಯಿಪಲ್ಯ ಕ್ಷೀರವೆ ಕಡೆಯಾದ
ಸಮಸ್ತ ದ್ರವ್ಯಂಗಳು ಶುಚಿಯಾಗಿ
ಲಿಂಗಜಂಗಮಾರಾಧಕರೆ ನಿರವಯಪ್ರಭು ಮಹಾಂತಗಣಂಗಳೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./17
ಆ ಕಲಕೇತಯ್ಯಗಳು ಗುಪ್ತಪಾತಕಸೂತಕದ
ಅನಾಚಾರದಭ್ರಜಯಾಮಾರುತನಾಗಿ ಕಂಡ್ರಿಸಿ ನುಡಿದ
ನಿರೂಪಣವೆಂಬ ಮೋಡವನೋಡಿಸಿ ಪವಿತ್ರರೆನಿಸುವ
ನಿಮಿತ್ಯಾರ್ಥ ಮೊದಲಾದ ಅರೆಭಕ್ತರೆಲ್ಲ ಒಂದೊಡಲಾಗಿ ಶರಣುಹೊಕ್ಕು,
ಹಸ್ತಾಂಜುಲಿತದೊಳ್ ನಿಂದು, ದೃಢಭಕ್ತಿಯಿಂದ ಹದುಳಿಗರಾಗಿ,
ಮೃದುತರ ಕಿಂಕರನುಡಿಗಳಿಂದ ನುಡಿದ ಪ್ರತ್ಯುತ್ತರ :
ಹರಹರ ಹಿಂದೆ ತಪ್ಪಿ ನಿಮ್ಮ ಘನಾಚಾರ ಸನ್ಮಾರ್ಗವ ಬಿಟ್ಟು,
ಪರಮಪಾತಕ ಸೂತಕವಾಚರಿಸಿದಕ್ಕೆ ಎಡವಿಬಿದ್ದು,
ಪ್ರಮಥಗಣಾಜ್ಞೆಗಳೊಳಗಾಗಿ, ಭವಸಮುದ್ರವ ದಾಂಟಿ,
ನಿಮ್ಮ ನಿಜಮುಕ್ತಿಪದವೆಂಬ ತೊತ್ತುಸೇವೆಗೆ ನಿಂದೆವು.
ಇನ್ನು ತಪ್ಪಿದರೆ ನಮ್ಮ ಪ್ರಮಾಣವೆ ನಮಗೆ ಮೃತ್ಯುವಾಗಿ,
ಸದ್ಧರ್ಮವ ಸೇರದಂತೆ ಅಡ್ಡನಿಂದು, ಭವಾರಣ್ಯಕ್ಕೆ ನೂಂಕಲಿ,
ಅದಕ್ಕೆ ಪ್ರಮಥಗಣವೆ ಸಾಕ್ಷಿಯಾಗಿರುವರು.
ಅವರಾರೆಂದೊಡೆ : ಭಕ್ತಿಸ್ಥಲಕ್ಕೆ ಕಾರಣಿಕರು ಹಿರಿದಂಡನಾಥ,
ಮಹೇಶ್ವರಸ್ಥಲಕ್ಕೆ ಕಾರಣಿಕರು ವೀರಗಂಟೆ,
ಪ್ರಸಾದಿಸ್ಥಲಕ್ಕೆ ಕಾರಣಿಕರು ಮರುಳಶಂಕರತಂದೆಗಳು,
ಪ್ರಾಣಲಿಂಗಿಸ್ಥಲಕ್ಕೆ ಕಾರಣಿಕರು ಮುಗ್ಧಸಂಗಪ್ಪನವರು,
ಶರಣಸ್ಥಲಕ್ಕೆ ಕಾರಣಿಕರು ಚಿಕ್ಕದಂಡನಾಥ,
ಐಕ್ಯಸ್ಥಲಕ್ಕೆ ಕಾರಣಿಕರು ಅಜಗಣ್ಣತಂದೆಗಳು,
ನಿರವಯಸ್ಥಲಕ್ಕೆ ಕಾರಣಿಕರು ಗುಹೇಶ್ವರ ಅಲ್ಲಮಪ್ರಭುಸಾಕ್ಷಿಯಾಗಿ,
ನಿಮ್ಮ ಸರ್ವಾಚಾರಸಂಪದಸ್ಥಲಕ್ಕೆ ಸಲ್ಲದಂತೆ
ಭವಜೀವಿಗಳಾಗಿ ಹೋಗುವುದಕ್ಕೆ,
ನಮ್ಮ ಮೂಲ ಚಿತ್ತುವಿನಲ್ಲುದಯವಾದ
ಚಿದ್ಭ್ರಹ್ಮಮೂರ್ತಿ ಪರಶಿವಲಿಂಗಮಂತ್ರದಿರವು
ತೊಲಗುವುದೆ ಪ್ರಮಾಣು,
ಇದಕ್ಕೆ ಸಂದುಸಂಶಯವಿಲ್ಲವು.
ಅದೇನುಕಾರಣವೆಂದೊಡೆ : ಹಿಂದೆ ಮಾಡಿದಂಥ ಪ್ರಮಥಗಣ ಬಿನ್ನಪದ ಕಕ್ಕಯ್ಯಗಳ
ನಿಜಮೋಕ್ಷದ ಪರಮಾಮೃತಪ್ರಸಾದ,
ದೇವರದಾಸಯ್ಯಗಳ ಮಹದರುವಿನ
ಆಚಾರಪರಿಧಿಯಾದ ಪಾವುಡದ ಸಾಕ್ಷಿ.
ಶಿವಲೆಂಕಮಂಚಣ್ಣಗಳ ಜಪಮಾಲೆಯನೊಳಕೊಂಡರಿವಿನ ಶಿವದಾರ,
ಘಟ್ಟಿವಾಳಪ್ಪನ ಚಿತ್ಪ್ರಭಾಪುಂಜರಂಜಿತಮಾದ
ಶ್ರೀಮದ್ಘನಭಸಿತವೆ ಸಾಕ್ಷಿ ಕಾಣಾ ತಂದೆಗಳಿರಾಯೆಂದು ಶರಣುಹೊಕ್ಕು,
ಶ್ರೀಗುರುಲಿಂಗಜಂಗಮಗಣಾರಾಧ್ಯರಿಗೆ
ಪರಮಾನಂದಪ್ರಸಾದ ಸ್ಥಲಕುಳದನುವರಿದು
ಶರಣಸಂದೋಹದಿಂದ ಎಮ್ಮ ಕಾಯಾರ್ಪಣ
ಕರಣಾರ್ಪಣ ಭಾವಾರ್ಪಣ ಪರಿಣಾಮಾರ್ಪಣ
ಪರಿಪೂರ್ಣಾರ್ಪಣವೆಂಬ
ಅಭಿವೃದ್ಧಿಗೆ ಕಾರಣಕರ್ತರು,
ನೀವೇ ಗತಿ, ನೀವೇ ಮತಿ, ನೀವೇ ಹಿತ, ನೀವೇ ಪಿತ, ನೀವೇ ಮಾತೆ,
ನೀನೆಮಗೆ ಸರ್ವಚೈತನ್ಯವಯ್ಯಾ.
ನೀನೆಮಗೆ ಅಭಿಮಾನವೆಂಬ ದಯಾಂತಃಕರಣವಿಟ್ಟು
ಭವಾರಣ್ಯವೆಂಬ ಪರಿಭವಬಾಧೆಗೆ ಹಿಂದಕ್ಕೆ ತಿರುಗದಂತೆ ಕೃಪೆಮಾಡಿ,
ನಿಮ್ಮಿಷ್ಟಲಿಂಗದಕಳೆ ಕ್ರಿಯಾಚಾರಶುದ್ಧಪ್ರಸಾದ ನಡೆಪರುಷ,
ನಿಮ್ಮ ಪ್ರಾಣಲಿಂಗದಕಳೆ ಜ್ಞಾನಾಚಾರಸಿದ್ಧಪ್ರಸಾದ ನುಡಿಪರುಷ,
ನಿಮ್ಮ ಭಾವಲಿಂಗದಕಳೆ ಭಾವಾಚಾರಪ್ರಸಿದ್ಧಪ್ರಸಾದ ನೋಟರುಷ,
ನಿಮ್ಮಣುಲಿಂಗದಕಳೆ ಧರ್ಮಾಚಾರಪ್ರಸನ್ನಪ್ರಸಾದ ಹಸ್ತಪರುಷ,
ನಿಮ್ಮ ಪರಮಾಣುಲಿಂಗದಕಳೆ ಸರ್ವಾಚಾರ
ಚಿತ್ಪ್ರಭಾಪ್ರಸಾದ ಭಾವಪರುಷ,
ನಿಮ್ಮ ಚಿದ್ಘನಮಹಾನಿರವಯಲಿಂಗದಕಳೆ
ಪರಿಪೂರ್ಣಾಚಾರ ಪರಿಪೂರ್ಣಪ್ರಸಾದದ ಸರ್ವಾಂಗಪರುಷವಿತ್ತು,
ಪರಮಪವಿತ್ರಪ್ರಸಾದವೆನಿಸಿ,
ನೀನರ್ಪಿಸಿದ ನಿಜಶೇಷಪ್ರಸಾದವ ಮಾಡಿ ನಿತ್ಯಮುಕ್ತರೆನಿಸಿರಯ್ಯಾ
ಪ್ರಮಥಗಣವೆ ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮವೆಂದು,
ಪರಿಪೂರ್ಣಭಕ್ತಿಯಿಂದ ಕಿನ್ನರಯ್ಯಗಳೆ ಮೊದಲು
ಇಳೆಹಾಳ ಬ್ರಹ್ಮಯ್ಯಗಳು ಕಡೆಯಾದ
ಮುನ್ನೂರರವತ್ತು ಕಡೆಯಾದ
ಮುನ್ನೂರರವತ್ತು ಗಣಾರಾಧ್ಯರು,
ಕಲಕೇತ ಮೊದಲಾದ ನಿಜವೀರಶೈವ ಸದ್ಧರ್ಮಿಗಳಿಗೆ ಅಭಿವಂದಿಸಿ
ಘನಮನಸಾಕ್ಷಿಯಾಗಿ ಹಸ್ತಾಂಜುಲಿತದೊಳ್ ನಿಂದಿರ್ಪರು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./18
ಆ ಹಿಂದೆ ಭಸಿತಕ್ಕೆಂದು ಮಾಡಿ,
ಗಿಂಡಿಯಲ್ಲಿಟ್ಟಂಥ ಲಿಂಗಪಾದೋದಕಪ್ರಸನ್ನ ಪ್ರಸಾದಿಗಳು,
ಲಿಂಗಾರ್ಪಿತವ ಮಾಡಲಾಗದೆಂದುದು ಗುರುವಚನ.
ಅಲ್ಲಿಂದ ಜಂಗಮಲಿಂಗ ಭಕ್ತಗಣಗಳು
ಹರಗುರುವಚನೋಕ್ತಿಯಿಂದ ರುದ್ರಾಕ್ಷಿಗಳ
ಆದಿ ಅಂತ್ಯಮಂ ಸದ್ಗುರುವಿಂದರಿದು,
ಸ್ಥಾನಸ್ಥಾನಂಗಳೊಳು ಮಂತ್ರಸ್ಮರಣೆಯಿಂದ ಧಾರಣಂಗೈದು,
ತನ್ನ ಮೂಲ ಚಿತ್ತುವಿನ ಚಿದ್ಬೆಳಗೆ ತನಗಾಭರಣವಾಗಿರ್ಪುದೆಂದರಿದ ಶರಣನೆ
ನಿರವಯಪ್ರಭು ಮಹಾಂತ ತಾನೇ ನೋಡಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./19
ಆಚಾರದರುವಿನ ಕುರುಹನರಿಯದೆ,
ಅಂಗಭೋಗವಿರಹಿತನಾದ ಮಲತ್ರಯದೂರ
ಭಕ್ತಿತ್ರಯವನರಿದ ಭಕ್ತಸ್ಥಲ,
ಗುಣತ್ರಯವಳಿದುಳಿದು ದೀಕ್ಷತ್ರಯವನರಿದ ಗುರುಸ್ಥಲ,
ಜೀವತ್ರಯವಳಿದುಳಿದು ಅರ್ಚನತ್ರಯವನರಿದ ಲಿಂಗಸ್ಥಲ,
ಅಜ್ಞಾನತ್ರಯವನಳಿದುಳಿದು ಸುಜ್ಞಾನತ್ರಯವನರಿದ ಜಂಗಮಸ್ಥಲ,
ಮನತ್ರಯವಳಿದುಳಿದು ಪರಮಾನುಭಾವತ್ರಯವರಿದ ಪಾದೋದಕಸ್ಥಲ,
ಭಾವತ್ರಯವಳಿದುಳಿದು ಪರಿಪೂರ್ಣಾರ್ಪಣತ್ರಯವರಿದ ಪ್ರಸಾದಸ್ಥಲ,
ಅವಸ್ಥಾತ್ರಯವಳಿದುಳಿದು ಚಿತ್ಕಳಾತ್ರಯವರಿದ ವಿಭೂತಿಸ್ಥಲ,
ತನುತ್ರಯವಳಿದುಳಿದು ಚಿದ್ಬಿಂದುತ್ರಯವರಿದ ರುದ್ರಾಕ್ಷಿಸ್ಥಲ,
ಪ್ರಾಣತ್ರಯವಳಿದುಳಿದು ಚಿನ್ನಾದತ್ರಯವರಿದ ಮಂತ್ರಸ್ಥಲವೆಂಬ
ಇಪ್ಪತ್ತೇಳುಸ್ಥಲವೆ ಆಚರಣೆಯಾಗಿ,
ಉಳಿದ ಇಪ್ಪತ್ತನಾಲ್ಕುಸ್ಥಲವೆ ಸಂಬಂಧವಾಗಿ,
ತನ್ನಾದಿಮಧ್ಯವಸಾನವರಿದು ಮರೆದು ನಿಜದಲ್ಲಿ ನಿಂದು,
ನಿರ್ವಯಲಾದ ನಿಃಕಳಂಕರೆ ಗುರುಸಾಂಪ್ರದಾಯಕರೆಂಬೆ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./20
ಆತ್ಮತ್ರಯಮಂಡಲಗಳಲ್ಲಿ
ನಿರಾವಲಂಬವ್ಯಾಪಾರದೊಡನೆ ಕೂಡಿ ವರ್ತಿಸುವಂಥ
ಸುಷುಪ್ತನ ನಿಜವಿಶ್ವಾಸವೆಂಬ ಹೃತ್ಪೀಠಮಧ್ಯದಲ್ಲಿ ಮೂರ್ತಿಗೊಂಡಿರುವ
ನಿರಂಜನಬ್ರಹ್ಮ ಭಾವಲಿಂಗದೇವನ,
ನಿರಂಜನಹಸ್ತದಲ್ಲಿ ಮೂರ್ತಿಗೊಳಿಸಿ,
ನಿರವಯವಾದಷ್ಟವಿಧಾರ್ಚನೆ ಷೋಡಶೋಪಚಾರದಿಂದರ್ಚಿಸಿ,
ಎರಡಳಿದು ತಾನೇ ತಾನಾಗಿ,
ಘನಪರಿಪೂರ್ಣ ಮಿಶ್ರಾನಂದಭೋಗದಿಂದ ನಿಶ್ಚಿತಾನಂದನಾಗಿ,
ಅಲ್ಲಿಂದ ಆ ಜಾಗ್ರಸ್ವಪ್ನದಧಿಕಾರಿಗಳಾದ
ಇಷ್ಟಲಿಂಗ ಪ್ರಾಣಲಿಂಗದೇವರ ಪರಮಾನಂದ ಪರಿಪೂರ್ಣಬೆಳಗಿನ
ಸಚ್ಚಿದಾನಂದ ಸಂತೃಪ್ತಿಗೆ ತಾನೆ ಕಾರಣವಾಗಿ ವಿರಾಜಿಸುವಂಥ,
ಆ ಭಾವಲಿಂಗದೇವನ ಇಷ್ಟಲಿಂಗದ ನವತಾರಕಸ್ಥಾನ
ಪ್ರಾಣಲಿಂಗದ ನವತಾರಕಸ್ಥಾನದ ಕೊನೆಮೊನೆಯೆಂಬ ಪಶ್ಚಿಮಾದ್ರಿ
ನವರತ್ನಖಚಿತ ಶೂನ್ಯಸಿಂಹಾಸನದಲ್ಲಿ ಪರಿಪೂರ್ಣಾನುಭಾವದಿಂ
ಮೂರ್ತಿಗೊಳಿಸಿದ ಚಿತ್ಪ್ರಭಾಮಂಡಲದ ಮಹಾಬೆಳಗಿನ ತಿಳುಹಿನಲ್ಲಿ
ಏಕಲಿಂಗನಿಷ್ಠಾಪರದಿಂದ ನಿಂದು,
ಐವತ್ತಕ್ಷರಸ್ವರೂಪವಾದ ಲಿಂಗಮಂತ್ರಗಳ
ಚಿತ್ಪಾದೋದಕ ಚಿತ್ಪ್ರಸಾದಂಗಳಿರವ ತಿಳಿದು,
ತನ್ನ ನಿಜ ಘನಮನೋಲ್ಲಾಸದಿರವು ಹೇಂಗೆ ತೋರಿತ್ತು ಹಾಂಗೆ
ಪ್ರಣಮಲಿಂಗಂಗಳಲ್ಲಿ ತರಹರನಾಗುತ್ತ,
ದಿನರಾತ್ರಿ ಉದಯಾಸ್ತಮಾನವೆಂಬ ಸಂದುಸಂಶಯಮಂ ನೆರೆ ನೀಗುತ್ತ ,
ಸಪ್ತಕೋಟಿ ಮಹಾಮಂತ್ರಂಗಳಂ ವಿೂರಿ ತೋರುತ್ತ ,
ಸದುಹೃದಯಕ್ಕೆ ಬೀರುತ್ತ , ಆತ್ಮತ್ರಯಂ ನೆರೆ ನೀಗುತ್ತ ,
ಘನಲಿಂಗತ್ರಯಮಂತ್ರಮಂ ಇಚ್ಛಿಸುತ್ತ ,
ತನ್ನ ತಾನೇ ಮಹಾಬೆಳಗ ಬೀರುತ್ತಿಪ್ಪುದೆ
ಶರಣಗಣಾರಾಧ್ಯರ ಪರಿಪೂರ್ಣನಿರವಯ ಅಗಣಿತ ಅಪ್ರಮಾಣ
ಅಗೋಚರ ಅಸಾಧ್ಯ ಅಭೇದ್ಯವಾದ ನಿಜಾನಂದ
ನಿರವಯವಾದ ಜಪವೆನಿಸುವುದು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./21
ಇಂತೀ ಪಾತಕಸೂತಕಗಳ ಬಾಹ್ಯಾಂತರಂಗದೊಳ್
ನಿಜಪ್ರಸನ್ನ ಪರಿಪೂರ್ಣಾನಂದ ಶ್ರೀಗುರುಕಟಾಕ್ಷದಿಂದ,
ಮಹಾಜ್ಞಾನವೆಂಬಾಯುಧವಿಡಿದು ಕಡಿದು ಕಂಡರಿಸಿ, ಬಿಡುಗಡೆಚಿತ್ತರಾಗಿ,
ಸತ್ಯಶುದ್ಧ ನಡೆನುಡಿಗೆ ಚೈತನ್ಯವಾದ,
ಮಾರ್ಗಾಚಾರ ಮೀರಿದಾಚಾರಗಳನಾಚರಿಸಬೇಕಾದ ಕಾರಣದಿಂದ
ಮುಂದೆ ಸರ್ವಾಚಾರದ ಘನತೆಯನುಸುರುವೆನು.
ಶ್ರೀಗುರುಕರುಣದೊಳ್ ಆ ನಿಲುಕಡೆಯೆಂತೆಂದೊಡೆ : ಅಯ್ಯಾ ಆಚಾರವೆ ಯೋಗ್ಯ ಗುರು,
ಆಚಾರವೇ ಯೋಗ್ಯಪಾದೋದಕ ಪ್ರಸಾದ,
ಆಚಾರವೆ ಯೋಗ್ಯವಾದ ವಿಭೂತಿ ರುದ್ರಾಕ್ಷಿ ಮಂತ್ರ,
ಆಚಾರವೆ ಯೋಗ್ಯವುಳ್ಳ ಭಕ್ತ ಮಹೇಶ ಪ್ರಸಾದಿ
ಪ್ರಾಣಲಿಂಗಿ ಶರಣೈಕ್ಯ ನಿರವಯವಸ್ತು ನೋಡಾ.
ಆಚಾರವೇ ಭಕ್ತ, ಅನಾಚಾರವೆ ಭವಿ,
ಆಚಾರವೆ ಪ್ರಮಥಗಣಾರ್ಪಿತ, ಅನಾಚಾರವೆ ಪ್ರಮಥಗಣಕ್ಕನಾರ್ಪಿತ,
ಆಚಾರವೆ ಕೈವಲ್ಯಪದ, ಅನಾಚಾರವೆ ಭವದೋಕುಳಿ,
ಆಚಾರವೆ ಪರಶಿವನ ಘನಕ್ಕೆ ಘನಮಾರ್ಗ,
ಅನಾಚಾರವೆ ನರಸುರಹರಿಯಜ ಇಂದ್ರಾದಿಗಳ
ಅಪಮಾನದ ಯೋಗ್ಯಮಾರ್ಗ.
ಈ ಗುರುವಾಕ್ಯವನರಿದು, ಎಚ್ಚರದಳೆದು,
ತಾ ಬಂದ ಮುಕ್ತಿದ್ವಾರ, ತಾನಿರುವ ನಿಜಮುಕ್ತಿಮಂದಿರ,
ತಾ ಬಯಲಾಗಿ ಹೋಗುವ ನಿರಂಜನದುಳುವೆಯ ತಿಳಿದು,
ಮರವೆಯೆಂಬ ಮಾಯಾಪಾಶಕ್ಕೊಳಗಾಗದೆ,
ಮಹದರುವಿನ ಗುರುಮಾರ್ಗದಿರವನರಿದು ನಡೆನುಡಿ ದೃಢಚಿತ್ತರಾಗಿ
ಚಿದ್ಘನಲಿಂಗತನು ಲಿಂಗಮನ ಲಿಂಗಪ್ರಾಣ ಲಿಂಗಭಾವ
ಲಿಂಗಕರಣೇಂದ್ರಿಯ ಭೋಗೋಪಭೋಗ ಲಿಂಗ ಸತಿಸುತ ಪಿತಮಾತೆ
ಲಿಂಗಾರಾಧನೆ ಲಿಂಗಾರ್ಪಣ ಲಿಂಗಾನುಭಾವ ಲಿಂಗೈಕ್ಯನು.
ಸಾರದ ಚಿದ್ಭೆಳಗಿನ ತಿಳುಹು ಅಚ್ಚೊತ್ತಿ
ಪರಮಪಾತಕಸೂತಕವ ಸರ್ವಾವಸ್ಥೆಗಳಲ್ಲಿ ಮರೆದು,
ನಿಮ್ಮ ನಿಜ ಚಿತ್ಕಳೆ ನೀನರಿದರೆ ಅನಾದಿಪ್ರಮಥಗಣದತ್ತ ಬನ್ನಿ.
ನಿಮ್ಮ ನಿಜ ಚಿದ್ಬೆಳಗಿನ ಕಳೆಗಳೊಪ್ಪುವ ಅಷ್ಟಾವರಣವ ಮರೆದರೆ
ಅಜಹರಿಸುರರು ಬದ್ಧಭವದತ್ತ ಹೋಗಿರಯ್ಯಯೆಂದು,
ಕಲ್ಯಾಣದೊಳ್ ಪ್ರಮಥಗಣಸಾಕ್ಷಿಯಾಗಿ
ಕಲಕೇತಯ್ಯಗಳು ನುಡಿದ ಪ್ರಸ್ತಾವದ ವಾಕ್ಯ ಕಾಣಾ
ನಿರವಯಪ್ರಭುಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./22
ಇಂತೆಂಬ ಭಕ್ತ ಜಂಗಮಸ್ಥಲದ ಆದಿ ಅನಾದಿಯನರಿದು,
ಮಾಯಾಭೋಗ ಮರೆದು, ಜಂಗಮಾರಾಧನೆಯಂ ಮಾಡಿ,
ಘನಪಾದತೀರ್ಥವ ಪಡಕೊಂಬುವ ಶಿವಶರಣನು
ಅನಿಮಿಷಾವಲೋಕನ ಪೂರ್ಣದೃಷ್ಟಿಯಿಂದ
ಚಿತ್ಸೂರ್ಯ ಜ್ಯೋತಿರ್ಮಂಡಲಸಂಬಂಧವಾದ
ಬಲದಂಗುಷ್ಠದ ಮೇಲೆ ಚತುರಂಗುಲಿಪ್ರಮಾಣದಿಂದ
ಬಿಂದು ಬಿಂದುಗಳದುರಿದಂತೆ ನೀಡುವಾಗ,
ಆ ಸ್ಥಾನದಲ್ಲಿ ತನ್ನ ದೀಕ್ಷಾಗುರು ಇಷ್ಟಲಿಂಗಮೂರ್ತಿಯ ಧ್ಯಾನಿಸುವುದು.
ಅಲ್ಲಿ ನಾದಬಿಂದುಕಳೆ ಚಿನ್ನಾದಬಿಂದುಕಳೆಗಳ
ದೀರ್ಘಬಿಂದುಗಳು ಕೂಡಿದಲ್ಲಿ ಮೂಲಷಡಕ್ಷರವೆನಿಸುವುದು.
ಆ ಷಡಕ್ಷರಂಗಳ ಆರುವೇಳೆ ಘನಮನಮಂತ್ರವಾಗಿ
ಅಲ್ಲಿಂದ ಚಿಚ್ಚಂದ್ರ ಅಖಂಡ ಜ್ಯೋತಿರ್ಮಂಡಲಸಂಬಂಧವಾದ
ಎಡದಂಗುಷ್ಠದಮೇಲೆ ಮೊದಲಂತೆ ನೀಡುವಾಗ,
ಆ ಸ್ಥಾನದಲ್ಲಿ ತನ್ನ ಶಿಕ್ಷಾಗುರು ಪ್ರಾಣಲಿಂಗಮೂರ್ತಿಯ ಧ್ಯಾನಿಸುವುದು.
ಅಲ್ಲಿ ಸತ್ತುಚಿತ್ತಾನಂದನಿತ್ಯಪರಿಪೂರ್ಣವೆಂಬ ಪಂಚಾಕ್ಷರದೊಳು
ದೀರ್ಘಬಿಂದು ಕೂಡಲಾಗಿ ಪರಮಪಂಚಾಕ್ಷರವೆನಿಸುವುದು.
ಆ ಪರಮಪಂಚಾಕ್ಷರವು ಐದು ವೇಳೆ ಮನಮಂತ್ರಧ್ಯಾನವಾಗಿ
ಅಲ್ಲಿಂದಚಿದಗ್ನಿ ಅಖಂಡಮಹಾಪರಿಪೂರ್ಣಜ್ಯೋತಿರ್ಮಂಡಲಸಂಬಂಧವಾದ
ಉಭಯಾಂಗುಷ್ಠಮಧ್ಯದಲ್ಲಿ ನೀಡುವಂತೆ ನೀಡುವಾಗ್ಗೆ ,
ಆ ಸ್ಥಾನದಲ್ಲಿ ತನ್ನ ಮೋಕ್ಷಗುರು
ಅನಾದಿಭಾವಲಿಂಗಮೂರ್ತಿಯ ಧ್ಯಾನಿಸುವುದು.
ಅವಿರಳಮೂರ್ತಿ ಪರಾತ್ಪರ ಜ್ಯೋತಿರ್ಮಯ
ಅಖಂಡಜ್ಯೋತಿರ್ಮಯ ಅಖಂಡ ಮಹಾಜ್ಯೋತಿರ್ಮಯ
ನಿತ್ಯತೃಪ್ತ ನಿಃಕಳಂಕ ನಿಶ್ಶೂನ್ಯ ನಿರಾತಂಕವೆಂಬ
ನವಮಾಕ್ಷರದೊಳಗೆ ದೀರ್ಘಬಿಂದು ಕೂಡಲಾಗಿ,
ಅನಾದಿಮೂಲದೊಡೆಯ ನವಪ್ರಣಮಮಂತ್ರವೆನಿಸುವುದು.
ಆ ಪ್ರಣಮಂಗಳಂ ಒಂದೆವೇಳೆ
ಪರಿಪೂರ್ಣ ನಿಜದೃಷ್ಟಿಯಿಂದ ಉನ್ಮನಘನಮಂತ್ರವೆ ಧ್ಯಾನವಾಗಿ
ಅಲ್ಲಿಂದ ಮಿಳ್ಳಿಯ ಮುಚ್ಚಿಟ್ಟು ದ್ರವವನಾರಿಸಿ,
ನಿರವಯತೀರ್ಥವ ನಿರವಯಲಿಂಗಜಂಗಮಕ್ಕೆ
ಸ್ಪರಿಶನತೃಪ್ತಿಯ ಸಮರ್ಪಿಸಿದ ಪರಿಣಾಮತೃಪ್ತರೆ
ನಿರವಯಪ್ರಭು ಮಹಾಂತರೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./23
ಇಂತೆಸೆವ ಅಂತರಂಗ ಬಹಿರಂಗ ಪರಿಪೂರ್ಣ ಭಕ್ತಗಣಾರಾಧ್ಯರು,
ಲಿಂಗಜಂಗಮದ ಪಾದಪೂಜೆಯ ಮಾಡುವ ವಿವರವೆಂತೆಂದೊಡೆ :
ಜಂಗಮಮೂರ್ತಿಗಳ ಸಮ್ಮುಖದಲ್ಲಿ ಗದ್ದುಗೆಯ ಹಾಕಿ,
ಗಣಸಮೂಹ ಕೂಡಿದ ಹಾಂಗೆ ಅವರಿಗೆ ಅಘ್ರ್ಯಪಾದ್ಯಾಚಮನವ ಮಾಡಿಸಿ,
ಮೂರ್ತವಮಾಡಿದ ಮೇಲೆ,
ದೀಕ್ಷಾಪಾದೋದಕದಲ್ಲಿ ಚಿದ್ಭಸಿತದಿಂದ ಪಂಚಾಂಗುಲಿಯ ಸ್ಪಶರ್ಿಸಿ
ಚಿನ್ನಾದಪ್ರಣಮವ ಲಿಖಿಸಿದಲ್ಲಿ ,
ಪಾದೋದಕ ಭಸ್ಮೋದಕ ಮಂತ್ರೋದಕವೆನಿಸುವದು.
ಇಂತೆಸೆವ ಪರಮಾನಂದ ಜಲದಿಂ ಲಿಂಗಾಭಿಷೇಕವ ಮಾಡಿಸಿ,
ಆ ಶ್ರೀವಿಭೂತಿ ಪುಷ್ಪ ಪತ್ರಿಗಳ ಶೃಂಗರಿಸಿ, ಉಪಚಾರಗಳ ಕೊಟ್ಟು,
ಅವರು ತಾನು ಅಷ್ಟಾವರಣಸ್ತೋತ್ರಗಳಿಂದ,
ಆ ನಿರಂಜನಜಂಗಮಲಿಂಗಕ್ಕೆ ಹಿಂದೆ ಮುಂದೆ
ಲಿಂಗಮೂರ್ತಿಗಳಿಲ್ಲದಂತೆ ಎಡಬಲ ವಿಚಾರಿಸಿ,
ಕೆಡಪಿದ ದಂಡದಂತೆ ಸರ್ವಾಂಗಪ್ರಣುತನಾಗಿ ಪೊಡಮಟ್ಟು,
ಲಿಂಗಜಂಗಮನಿರೀಕ್ಷಣೆಭರಿತವಾಗಿ ನಿಂದ ನಿತ್ಯಮುಕ್ತರೆ
ನಿರವಯಪ್ರಭು ಮಹಾಂತಂಗೆ ಒಪ್ಪಿದ ಶರಣಗಣವೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./24
ಇಂತೆಸೆವ ಸ್ಥೂಲಾಚಮನಕ್ರಿಯೆಗಳಾದಲ್ಲಿ
ಆ ತಂಬಿಗೆಯ ಪಾವುಡದಿಂದ ಒರೆಸಿ,
ಶುಚಿಯಾದ ವಸ್ತ್ರವ ಎರಡು ಪದರಿನಿಂದ ಶೋಧಿಸಿ,
ಲಿಂಗಬಾಹ್ಯರಿಗೆ ಗೋಪ್ಯವೆನಿಸಿ, ಭಕ್ತ ಜಂಗಮ ಕೂಡಿದಲ್ಲಿ,
ತಾನು ಪಾದವ ಪ್ರಕ್ಷಾಲಿಸಿ, ತನ್ನ ಮನದಲ್ಲಿ ಮೂಲಪಂಚಾಕ್ಷರದ ನೆನಹಿನಿಂದ,
ತನ್ನ ಹಸ್ತದ ಪಂಚಾಂಗುಲ, ಪಾದದ ಪಂಚಾಂಗುಲಗಳು ಸಹ ಸಮರಸವಾಗಿ,
ಅಡಿಪಾದ ಮೂರುವೇಳೆ, ಪಂಚಾಂಗುಲ ಒಂದುವೇಳೆ,
ಉಭಯಪಾದಗಳು ಎಂಟುವೇಳೆ ಸ್ಪರಿಶನವ ಮಾಡಿ,
ಮಂತ್ರಧ್ಯಾನ ಅನಿಮಿಷದೃಷ್ಟಿಯಿಂ ನಿರೀಕ್ಷಿಸಿ ನಮಸ್ಕರಿಸಿದ ಮೇಲೆ,
ತಮ್ಮಿಬ್ಬರ ಮಧ್ಯದಲ್ಲುದಯವಾದ
ಪರಮಾನಂದ ಗುರುಪಾದೋದಕವ ತಾವು ಕುಕ್ಕುಟಾಸನದಲ್ಲಿ
ತೊಡೆಯಮೇಲೆ ಪಾವುಡವ ಹಾಕಿ, ಸೆಜ್ಜೆಯ ಬಿಚ್ಚಿ,
ಲಿಂಗದೇವನ ಮೂಲಮಂತ್ರದೃಷ್ಟಿಯಿಂದ ನಿರೀಕ್ಷಿಸುವುದೆ
ನಿರವಯಪ್ರಭು ಮಹಾಂತನ ನಡೆ ನುಡಿ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./25
ಇತ್ತಲಾಗಿ,ಅದೇ ನಿರಾಕಾರಪರಿಪೂರ್ಣ ಪರಶಿವಮೂರ್ತಿಯೆ
ನಿಜಗುರುಲಿಂಗಜಂಗಮಲೀಲೆಯ ಧರಿಸಿ,
ಪಾವನಾರ್ಥವಾಗಿ ಪಂಚಮಹಾಪಾತಕಸೂತಕಂಗಳ
ಬಾಹ್ಯಾಂತರಂಗಳಲ್ಲಿ ಮಹಾಜ್ಞಾನ ಕ್ರಿಯಾಚರಣದಿಂದ ಕಡಿದು ಕಂಡರಿಸಿ,
ಬಿಡುಗಡೆಯನುಳ್ಳ ಹರಗಣಂಗಳಿಗೆ
ನಿಜೇಷ್ಠಲಿಂಗ ಭಸಿತ ರುದ್ರಾಕ್ಷಿಗಳ ಕಾಯವೆನಿಸಿ,
ಸತ್ಕ್ರಿಯಾಚಾರ ಭಕ್ತಿ ಸಾಧನೆಯ ನಿರ್ವಾಣಪದವಿತ್ತರು ನೋಡಾ.
ಅಲ್ಲಿಂದ ಚಿತ್ಪಾದೋದಕ ಪ್ರಸಾದ ಮಂತ್ರವೆ ಪ್ರಾಣವೆನಿಸಿ,
ಶಿವಯೋಗಾನುಸಂಧಾನದಿಂದ ಮಹಾಜ್ಞಾನದ ಚಿದ್ಬೆಳಗನಿತ್ತರು ನೋಡಾ.
ಆ ಬೆಳಗೆ ತಾವಾದ ಶರಣಗಣಾರಾಧ್ಯ ಭಕ್ತಮಹೇಶ್ವರರು,
ಅನ್ಯಮಣಿಮಾಲೆಗಳ ಧರಿಸಿ, ಅನ್ಯಜಪಕ್ರಿಯೆಗಳ ಮಾಡಲಾಗದು.
ಅದೇನು ಕಾರಣವೆಂದಡೆ : ಹಿಂದೆ ಕಲ್ಯಾಣಪಟ್ಟಣದಲ್ಲಿ ಚೆನ್ನಮಲ್ಲಿಕಾರ್ಜುನಾರಾಧ್ಯರು,
ಉಡುತಡಿ ಮಹಾದೇವಿಗಳು ಪುರುಷನ ಬಿಡುಗಡೆಯ ಮಾಡಿ,
ವೈರಾಗ್ಯದೊಳ್ ಅಲ್ಲಮಪ್ರಭುವಿದ್ದೆಡೆಗೆ ಬಂದು ಶರಣಾಗತರಾಗಲು,
ಆ ಪ್ರಭುಸ್ವಾಮಿಗಳು ಅವರೀರ್ವರ
ಭಕ್ತಿಜ್ಞಾನವೈರಾಗ್ಯ ಸದಾಚಾರಕ್ರಿಯಾವರ್ತನೆಯ ನೋಡಿ ಸಂತೋಷಗೊಂಡು,
ಇಂತಪ್ಪ ಸದ್ಧರ್ಮಿಗಳಂ ದಂಡನಾಥ ಮೊದಲಾಗಿ
ಅಕ್ಕನಾಗಾಂಬಿಕೆಯು ಮೊದಲಾದ ಪ್ರಮಥಗಣಾದ್ಯರಿಗೆ
ದರುಶನ ಸ್ಪರುಶನ ಸಂಭಾಷಣೆ ಪಾದೋದಕ ಪ್ರಸಾದಾನುಭಾವವೆಂಬ
ಷಡ್ರಸಾಮೃತವ ಕೊಡಿಸಬೇಕೆಂದು,
ತಮ್ಮ ಭಾವದ ಕೊನೆಯಲ್ಲಿ ಅಚ್ಚೊತ್ತಿ , ಹರುಷಾನಂದ ಹೊರಚೆಲ್ಲಿ ,
ಆಗವರೀರ್ವರಂ ಕೈವಿಡಿದು ಕಲ್ಯಾಣಪಟ್ಟಣಕ್ಕೆ ಹೋಗಿ,
ಅನಾದಿ ಪ್ರಮಥಗಣಾಧೀಶ್ವರರ ಸಂದರ್ಶನವಾಗಬೇಕೆಂದು ಕರೆದಲ್ಲಿ ,
ಆಗ ಮಹಾದೇವಿಯಮ್ಮನು ಸಂತೋಷಂಗೊಂಡು,
ಹರಹರಾ ಸ್ವಾಮಿ ಅವರಲ್ಲಿ ಸನ್ಮಾರ್ಗ ನಡೆನುಡಿಗಳೇನೆಂದು ಬೆಸಗೊಳಲು,
ಅವರು ಕೇವಲ ಪರಿಪೂರ್ಣಜ್ಯೋತಿರ್ಮಯ
ಲಿಂಗಜಂಗಮದಲ್ಲಿ ಕೂಟಸ್ಥರಾಗಿ,
ಬಾಹ್ಯಾಂತರಂಗದೊಳ್ ಪರಮಪಾತಕ ಸೂತಕ
ಅನಾಚಾರ ಅಜ್ಞಾನ ಅಪಶೈವ ಅಸತ್ಯವಿರಹಿತರಾಗಿ,
ನಿರ್ವಂಚಕ ನಿಃಪ್ರಪಂಚ ನಿರ್ವಾಣ ನಿಃಕಾಮ ಸತ್ಯಶುದ್ಧಕಾಯಕ
ಸದಾಚಾರ ಕ್ರಿಯಾಜ್ಞಾನಾನಂದ ನಡೆನುಡಿಯುಳ್ಳ
ಸದ್ಧರ್ಮ ಅಪಾತ್ರ ಸತ್ಪಾತ್ರವರಿದ ಶಿವಸನ್ಮಾನಿತರು,
ನಿಜಾನಂದಯೋಗತೂರ್ಯರು,
ಕೇವಲ ಪರಶಿವನಪ್ಪಣೆವಿಡಿದು ಚಿಚ್ಛಕ್ತಿಗಳೊಡಗೂಡಿ
ಪಾವನಾರ್ಥ ಅಷ್ಟಾವರಣ ನಿಜವೀರಶೈವಮತೋದ್ಧಾರಕ ಮಹಿಮರ ಚರಣದ
ದರುಶನಮಾತ್ರದಿಂದಿವೆ ಜ್ಯೋತಿರ್ಮಯ
ಕೈವಲ್ಯಪದವಪ್ಪುದು ತಪ್ಪದುಯೆಂದು
ಅಲ್ಲಮನುಸುರಲು, ಆಗ ಸಮ್ಯಕ್ಜ್ಞಾನಿ ಮಹಾದೇವಿಯರು
ಸತ್ಕ್ರಿಯಾಮೂರ್ತಿ ಚೆನ್ನಮಲ್ಲಿಕಾರ್ಜುನಗುರುವರನು ಸಂತೋಷಗೊಂಡು,
ತ್ರಿವಿಧರು ಕಲ್ಯಾಣಕ್ಕೆ ಅಭಿಮುಖವಾಗಲು,
ಆ ಪ್ರಶ್ನೆಯು ಹಿರಿಯ ದಂಡನಾಥಂಗೆ ಲಿಂಗದಲ್ಲಿ ಪ್ರಸನ್ನವಾಗಲು,
ಆಗ ಸಮಸ್ತಪ್ರಮಥರೊಡಗೂಡಿ,
ಆ ಅಲ್ಲಮರು ಸಹಿತ ತ್ರಿವಿಧರು ಬರುವ
ಮಾರ್ಗಪಥದಲ್ಲಿ ಅಡಿಯಿಡುವುದರೊಳಗೆ,
ಇಳೆಯಾಳ ಬ್ರಹ್ಮಯ್ಯನೆಂಬ ಶಿವಶರಣನು
ಈ ತ್ರಿವಿಧರಿಗೆ ಲಿಂಗಾರ್ಚನಾರ್ಪಣಕ್ಕೆ ಶರಣಾಗತನಾಗಿರಲು,
ಅವರು ಅರ್ಚನಾರ್ಪಣಕ್ಕೆ ಬಪ್ಪದೆ ಇರ್ಪಷ್ಟರೊಳಗೆ
ಹಿರಿದಂಡನಾಥ ಪ್ರಮಥರೊಡಗೂಡಿ,
ಅಲ್ಲಮ ಮೊದಲಾದ ತ್ರಿವಿಧರಿಗೆ ವಂದಿಸಿ,
ಲಿಂಗಾರ್ಚನಾರ್ಪಣಕ್ಕೆ ಶರಣುಶರಣಾರ್ಥಿಯೆನಲು,
ಆಗ ಮಹಾದೇವಿಯಮ್ಮನವರು ಒಂದು ಕಡೆಗೆ ಕೇಶಾಂಬರವ ಹೊದೆದು,
ಶರಣುಶರಣಾರ್ಥಿ ನಿಜವೀರಶೈವ ಸದ್ಧರ್ಮ ದಂಡನಾಥ ಮೊದಲಾದ
ಸಮಸ್ತ ಗಣಾರಾಧ್ಯರುಗಳ ಶ್ರೀಪಾದಪದ್ಮಂಗಳಿಗೆಯೆಂದು
ಸ್ತುತಿಸುವ ದನಿಯ ಕೇಳಿ,
ಸಮಸ್ತ ಗಣಸಮ್ಮೇಳವೆಲ್ಲ ಒಪ್ಪಿ ಸಂತೋಷಗೊಂಡು,
ಶರಣೆಗೆ ಶರಣೆಂದು ಬಿನ್ನಹವೆನಲು,
ನಿಮಗಿಂದ ಮೊದಲೆ ಶರಣುಹೊಕ್ಕ ಶಿವಶರಣೆಗೆ ಏನಪ್ಪಣೆ ಸ್ವಾಮಿಯೆನಲು,
ಆಗ ಆ ಬ್ರಹ್ಮಯ್ಯನು ಅಲ್ಲಮಪ್ರಭು
ಚನ್ನಮಲ್ಲಿಕಾರ್ಜುನ ದಂಡನಾಥ ಮೊದಲಾದ
ಸಮಸ್ತಪ್ರಮಥಗಣ ಸಮ್ಮೇಳಕ್ಕೆ ಶರಣುಶರಣಾರ್ಥಿ,
ಈ ತನು-ಮನ-ಧನವು ನಿಮಗೆ ಸಮರ್ಪಣೆಯಾಗಬೇಕೆಂದು ಅಭಿವಂದಿಸಲು,
ಆಗ ಕಲಿಗಣನಾಥ ಕಲಕೇತಯ್ಯಗಳು
ನೀವು ನಿಮ್ಮ ಪ್ರಮಥರು ಅರೆಭಕ್ತಿಯಲ್ಲಾಚರಿಸುತ್ತಿಪ್ಪಿರಿ,
ನಿಮ್ಮ ಗೃಹಕ್ಕೆ ನಿರಾಭಾರಿವೀರಶೈವಸಂಪನ್ನೆ
ಮಹಾದೇವಿಯಮ್ಮನವರು ಬರೋದುಯೆಂಥಾದ್ದೊ ನೀವೆ ಬಲ್ಲಿರಿ.
ಆ ಮಾತ ನೀವೆ ವಿಚಾರಿಸಬೇಕೆಂದು ನುಡಿಯಲು,
ಆಗ ಬ್ರಹ್ಮಯ್ಯಗಳು ತಮ್ಮ ಕರ್ತನಾದ
ಕಿನ್ನರಿಯ ಬ್ರಹ್ಮಯ್ಯನ ಕಡೆಗೆ ದೃಷ್ಟಿಯಿಟ್ಟು ನೋಡಲು,
ಆ ಕಿನ್ನರಿಯ ಬ್ರಹ್ಮಯ್ಯನು
ಹರಹರಾ, ಶರಣುಶರಣಾರ್ಥಿ, ನಮಗೆ ತಿಳಿಯದು,
ನಿಮ್ಮ ಕೃಪೆಯಾದಲ್ಲಿ ನಮ್ಮ ಅರೆಭಕ್ತಿಸ್ಥಲವನಳಿದುಳಿದು,
ನಿಮ್ಮ ಸದ್ಧರ್ಮ ನಿಜಭಕ್ತಿಮಾರ್ಗವ ಕರುಣಿಸಿ,
ದಯವಿಟ್ಟು ಪ್ರತಿಪಾಲರ ಮಾಡಿ
ರಕ್ಷಿಸಬೇಕಯ್ಯಸ್ವಾಮಿಯೆಂದು ಅಭಿವಂದಿಸಲು,
ಅಯ್ಯಾ, ನಿಮ್ಮಿಬ್ಬರಿಂದಲೇನಾಯ್ತು ?
ಇನ್ನೂ ಅನೇಕರುಂಟುಯೆಂದು ಕಲಿಗಣ ಕಲಕೇತರು ನುಡಿಯಲು,
ಹರಹರಾ, ಪ್ರಭುಸ್ವಾಮಿಗಳೆ ನಿಮ್ಮಲ್ಲಿ ನುಡಿ ಎರಡಾಯಿತ್ತು ,
ಅದೇನು ಕಾರಣವೆಂದು ಮಹಾದೇವಿಯಮ್ಮನವರು
ಪ್ರಭುವಿನೊಡನೆ ನುಡಿಯಲು,
ಆಗ ಆ ಪ್ರಭುಸ್ವಾಮಿಗಳು ಅಹುದಹುದು ತಾಯಿ
ನಾವು ನುಡಿದ ನುಡಿ ದಿಟ ದಿಟವು.
ನಿಮ್ಮಂಶವಲ್ಲವಾದಡೆ ನಿಮಗಡಿಯಿಡಲಂಜೆಯೆಂದು ನುಡಿಯಲು,
ಹರಹರಾ, ಹಾಗಾದೊಡೆ ಅವರ ಬಿನ್ನಹಂಗಳ ಕೈಕೊಂಡು
ಅವರಲ್ಲಿರುವ ಅಸತ್ಯಾಚಾರದವಗುಣಗಳ ನಡೆನುಡಿಗಳ ಪರಿಹರಿಸಬೇಕು.
ಮುಸುಂಕೇತಕೆ ಸ್ವಾಮಿಯೆಂದು ಮಹಾದೇವಮ್ಮನವರು ನುಡಿಯಲು,
ಆಗ ಹಿರಿದಂಡನಾಥನು ಹರಹರಾ ನಮೋ ನಮೋಯೆಂದು
ಕಲಿಗಣನಾಥ ಕಲಕೇತರೆ ನಮ್ಮವಗುಣಂಗಳ ಪರಿಹರಿಸಿ,
ನಿಮ್ಮ ಕವಳಿಗೆಗೆ ಯೋಗ್ಯರಾಗುವಂತೆ ಪ್ರತಿಜ್ಞೆಯ ಮಾಡಿ,
ನಮ್ಮ ಬಿನ್ನಪವನವಧರಿಸಿ ಲಿಂಗಾರ್ಚನಾರ್ಪಣಗಳ
ಮಾಡಬೇಕು ಗುರುಗಳಿರಾಯೆಂದು ಅಭಿವಂದಿಸಲು,
ಆ ನುಡಿಗೆ ಸಮಸ್ತಗಣ ಪ್ರಮಥಗಣಾರಾಧ್ಯರೆಲ್ಲ ಅಭಿವಂದಿಸಿ,
ನಮ್ಮರೆಭಕ್ತಿ ನಿಲುಕಡೆಯೇನೆಂದು ಹಸ್ತಾಂಜುಲಿತರಾಗಿ ಇದಿರಿಗೆ ನಿಲಲು,
ಆಗ ಆ ಕಲಿಗಣನಾಥ ಕಲಕೇತಯ್ಯಗಳು ನುಡಿದ ಪ್ರತ್ಯುತ್ತರವು ಅದೆಂತೆಂದೊಡೆ:
ಅಯ್ಯಾ, ಕೈಲಾಸದಿಂದ ಪರಶಿವಮೂರ್ತಿ ನಿಮಗೆ
ಅಷ್ಟಾವರಣ ಪಂಚಾಚಾರ ಸತ್ಯಶುದ್ಧ ನಡೆನುಡಿ
ವೀರಶೈವಮತ ಸದ್ಭಕ್ತಿ ಮಾರ್ಗವ
ಮತ್ರ್ಯಲೋಕದ ಮಹಾಗಣಗಳಿಗೆ ತೋರಿ,
ಎಚ್ಚರವೆಚ್ಚರವೆಂದು ಬೆನ್ನಮೇಲೆ ಚಪ್ಪರಿಸಿ,
ನಿಮ್ಮ ತನುಮನಧನವ ಶ್ರೀಗುರುಲಿಂಗಜಂಗಮಕ್ಕೆ ಸಮರ್ಪಿಸಿ,
ವರಗುರುಲಿಂಗಜಂಗಮದ ಮಹಾಬೆಳಗಿನೊಳಗೆ
ಬನ್ನಿರೆಂದು ಪ್ರತಿಜ್ಞೆಯ ಮಾಡಿ, ಪಂಚಪರುಷವ ಕೊಟ್ಟು,
ಆ ಜಡಶಕ್ತಿಸಮ್ಮೇಳನೆನಿಸಿ ಕಳುಹಿಕೊಟ್ಟಲ್ಲಿ,
ನೀವು ಬಂದು, ಎರಡುತೆರದಭಕ್ತಿಗೆ ನಿಂದುದೆ
ಅರೆಭಕ್ತಿಸ್ಥಲವೆಂದು ನುಡಿಯಲು,
ಆ ಎರಡುತೆರದ ಭಕ್ತಿ ವಿಚಾರವೆಂತೆಂದಡೆ : ಒಮ್ಮೆ ನಿಮ್ಮ ತನು-ಮನ-ಧನ,
ನಿಮ್ಮ ಸತಿಸುತರ ತನುಮನಧನಂಗಳು
ಶೈವಮತದವರ ಭೂಪ್ರತಿಷ್ಠಾದಿಗಳಿಗೆ ನೈವೇದ್ಯವಾಗಿರ್ಪವು.
ಆ ನೈವೇದ್ಯವ ತಂದು ಶ್ರೀಗುರುಲಿಂಗಜಂಗಮಕ್ಕೆ
ನಮ್ಮ ತನುಮನಧನವರ್ಪಿತವೆಂದು ಹುಸಿ ನುಡಿಯ ನುಡಿದು,
ಎರಡು ಕಡೆಗೆ ತನುಮನಧನಂಗಳ ಚೆಲ್ಲಾಡಿ,
ಅಶುದ್ಧವೆನಿಸಿ ಶುದ್ಧಸಿದ್ಧಪ್ರಸಿದ್ಧಪ್ರಸಾದ ನಮ್ಮ ತನುಮನಧನಂಗಳೆಂದು,
ಕಾಯಾರ್ಪಣ ಕರಣಾರ್ಪಣ ಭಾವಾರ್ಪಣವೆಂದು ಒಪ್ಪವಿಟ್ಟು ನುಡಿವಲ್ಲಿ,
ನೀವು ವೀರಶೈವಸಂಪನ್ನರೆಂತಾದಿರಿ ?
ನಿಮ್ಮಲ್ಲಿ ಲಿಂಗಾರ್ಚನಾರ್ಪಣವೆಂತಾಗಬೇಕು ?
ಹೇಳಿರಯ್ಯ ಪ್ರಮಥರೆಯೆಂದು ನುಡಿಯಲು,
ಆಗ್ಯೆ ಏಳುನೂರಾಯೆಪ್ಪತ್ತು ಅಮರಗಣಂಗಳೆಲ್ಲ ಬೆರಗಾಗಿ,
ಆ ಹರಹರಾ ಅಹುದಹುದೆಂದು
ಬಂದ ನುಡಿ ತಪ್ಪಿ ನಡೆದೆವೆಂದು ಒಪ್ಪಿ ಒಡಂಬಟ್ಟು,
ಅರೆಭಕ್ತಿ ಮಾಡುವವರ ವಿಚಾರಿಸಿ,
ಕಡೆಗೆ ತೆಗೆದು ಗಣಿತವ ಮಾಡಿದಲ್ಲಿ,
ಮುನ್ನೂರರವತ್ತು ಗಣಂಗಳಿರ್ಪರು.
ಆ ಗಣಂಗಳ ಸಮ್ಮೇಳವ ಕೂಡಿಸಿ ಒಂದೊಡಲಮಾಡಿ,
ನಿಮ್ಮೊಳಗಣ ಪ್ರೀತಿಯೇನೆಂದು ಮಹಾದೇವಮ್ಮನವರು ನುಡಿದು
ಹಸ್ತಾಂಜುಲಿತರಾಗಿ ಬೆಸಗೊಳಲು,
ಆಗ ಮುನ್ನೂರರವತ್ತು ಗಣಂಗಳು ನುಡಿವ ಪ್ರತ್ಯುತ್ತರ ಅದೆಂತೆಂದಡೆ :
ಹರಹರಾ, ನಾವು ಬಂದ ಬಟ್ಟೆ ಅಹುದಹುದು,
ಇಲ್ಲಿ ನಿಂದ ನಡೆ ಅಹುದಹುದು.
ನಾವು ಕ್ರಿಯಾಮಾರ್ಗವ ಬಿಟ್ಟು
ಮಹಾಜ್ಞಾನಮಾರ್ಗವ ಭಾವಿಸಿದೆವು, ಎಡವಿಬಿದ್ದೆವು,
ತಪ್ಪನೋಡದೆ, ಒಪ್ಪವಿಟ್ಟು ಉಳುಹಿಕೊಳ್ಳಿರಯ್ಯ.
ನಡೆಪರುಷ, ನುಡಿಪರುಷ, ನೋಟಪರುಷ, ಹಸ್ತಪರುಷ, ಭಾವಪರುಷರೆ
ತ್ರಾಹಿ ತ್ರಾಹಿ, ನಮೋ ನಮೋಯೆಂದು ಅಭಿವಂದಿಸಲು,
ಆಗ ಚೆನ್ನಮಲ್ಲಾರಾಧ್ಯರು,
ನೀವು ತಪ್ಪಿದ ತಪ್ಪಿಗೆ ಆಜ್ಞೆಯೇನೆಂದು ನುಡಿಯಲು,
ಆಗ್ಯೆ ಮುನ್ನೂರರವತ್ತು ಗಣಂಗಳು ನುಡಿದ ಪ್ರತ್ಯುತ್ತರವದೆಂತೆಂದೊಡೆ :
ಅಯ್ಯಾ, ನಾವು ತಪ್ಪಿದ ತಪ್ಪಿಂಗೆ ಕ್ರಿಯಾಲೀಲೆಸಮಾಪ್ತಪರ್ಯಂತರವು
ನಾವು ಮುನ್ನೂರರವತ್ತು ಕೂಡಿ,
ನಿತ್ಯದಲ್ಲು ನಿಮಗೆ ಗುರುಲಿಂಗಜಂಗಮಕ್ಕೆ ಆರಾಧನೆಯ ಮಾಡಿ,
ಕೌಪ ಕಟಿಸೂತ್ರ ಹುದುಗು ಶಿವದಾರ ವಿಭೂತಿ ವಸ್ತ್ರ ಪಾವುಡ ರಕ್ಷೆ ಪಾವುಗೆಗಳ
ಪರುಷಕೊಂದು ಬಿನ್ನಹಗಳ ಸತ್ಯಶುದ್ಧ ಕಾಯಕವ ಮಾಡಿ,
ಋಣಪಾತಕರಾಗದೆ,
ನಿಮ್ಮ ತೊತ್ತಿನ ಪಡಿದೊತ್ತೆನಿಸಿರಯ್ಯಯೆಂದು ಅಭಿವಂದಿಸಲು,
ಆಗ ಅಲ್ಲಮಪ್ರಭು ಮೊದಲಾದ ಘನಗಂಭೀರರೆಲ್ಲ ಒಪ್ಪಿ,
ಶೈವಾರಾಧನೆಗಳಂ ಖಂಡಿಸಿ,
ವೀರಶೈವ ಗುರುಲಿಂಗಜಂಗಮ ಭಕ್ತರೆ ಘನಕ್ಕೆ ಮಹಾಘನವೆಂದು
ನುಡಿ ನಡೆ ಒಂದಾಗಿ, ಚೆನ್ನಮಲ್ಲಾರಾಧ್ಯರ ನಿರೂಪದಿಂದ
ದಂಡನಾಥನ ಭಕ್ತಿಪ್ರಿಯರಾದ ಲಕ್ಷದಮೇಲೆ ತೊಂಬತ್ತಾರುಸಾವಿರ
ಘನದೊಳಗೆ ಮಾರ್ಗಕ್ರಿಯೆ ಮೀರಿದ
ಕ್ರಿಯಾಚರಣೆಸಂಬಂಧ ಸ್ವಸ್ವರೂಪ ಜ್ಞಾನಾಚಾರ
ನಡೆನುಡಿ ಅಚ್ಚಪ್ರಸಾದ ನಿಚ್ಚಪ್ರಸಾದ ಸಮಯಪ್ರಸಾದವೆ
ತಮಗೆ ಅಂಗ ಮನ ಪ್ರಾಣವಾಗಿ,
ಮೊದಲಾದ ಚಿತ್ಕಲಾಪ್ರಸಾದ ಸಲ್ಲದ ಗಣಂಗಳ
ಕಲಿಗಣನಾಥ ಕಲಕೇತರು ಖಂಡಿಸಿ
ಆ ಹನ್ನೆರಡುಸಾವಿರಮಂ ತೆಗೆದು ಚೆನ್ನಮಲ್ಲಾರಾಧ್ಯರಿಗೆ ತೋರಲು,
ಅವರು ಗಣಸಮೂಹಂಗಳೆಲ್ಲ
ಸಂತೋಷದಿಂದ ಸನ್ಮತಂಬಟ್ಟು ಒಪ್ಪಿದ ತದನಂತರದೊಳು,
ಪ್ರಭುಸ್ವಾಮಿಗಳು ಅಯ್ಯಾ, ದಂಡನಾಥ ಮೊದಲಾದ
ಅಸಂಖ್ಯಾತ ಪ್ರಮಥಗಣಂಗಳೆ
ಇನ್ನು ಹಿಂದಣ ಅರೆಭಕ್ತಿಸ್ಥಲವ ಮೆಟ್ಟಿದ
ಪುತ್ರ ಮಿತ್ರ ಕಳತ್ರರ ಒಡಗೂಡಿ ಬಳಸಿದೊಡೆ,
ಅಷ್ಟಾವರಣ ಪಂಚಾಚಾರಕ್ಕೆ ಹೊರಗೆಂದು ನಿಮ್ಮ ಗಣ ಮೆಟ್ಟಿಗೆಯಲಿ
ಪಾವುಡವ ಕೊರಳಿಗೆ ಸುತ್ತಿ, ಭವದತ್ತ ನೂಂಕಿ,
ಕಾಮಕಾಲರ ಪಾಶಕ್ಕೆ ಕೊಟ್ಟೆವೆಂದು ನುಡಿಯಲು,
ಆ ಮಾತಿಗೆ ದಂಡನಾಥ ಮೊದಲಾದ
ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ
ಚಿತ್ಕಲಾಪ್ರಸಾದಿಗಣಂಗಳೆಲ್ಲ ಎದ್ದು ,
ಹಸ್ತಾಂಜುಲಿತರಾಗಿ, ಹಸಾದ ಹಸಾದವೆಂದು ಕೈಕೊಂಡು,
ಪರಮಪಾತಕಸೂತಕನಾಚರಂಗಳಂ ವಿಡಂಬಿಸಿ,
ಶಿವಲಿಂಗಲಾಂಛನಯುಕ್ತರಾದ ಶಿವಜಂಗಮದ ಭಿಕ್ಷಾನ್ನದ ಶಬ್ದಮಂ ಕೇಳಿ,
ಕ್ಷುಧೆಗೆ ಭಿಕ್ಷೆ, ಸೀತಕ್ಕೆ ವಸನಮಂ ಸಮರ್ಪಿಸಿ
ಹಿರಿಕಿರಿದಿನ ನೂನಕೂನಂಗಳಂ ನೋಡದೆ ಶಿವರೂಪವೆಂದು ಭಾವಿಸಿ,
ಅಲ್ಲಿ ಚೆನ್ನಮಲ್ಲಿಕಾರ್ಜುನಾರಾಧ್ಯ ಕಲಿಗಣನಾಥ ಕಲಕೇತರು ಖಂಡಿಸಿದ
ಹನ್ನೆರಡುಸಾವಿರ ಪರಶಿವಜಂಗಮದೊಡನೆ
ತೀರ್ಥಪ್ರಸಾದಾನುಭಾವ ಸಮರಸದಾಚರಣೆಯಂ ಬಳಸಿ ಬ್ರಹ್ಮಾನಂದರಾಗಿ,
ಚಿತ್ಕಲಾಪ್ರಸಾದಿ ಜಂಗಮದೊಡವೆರೆದು,
ಅಚ್ಚಪ್ರಸಾದಿಗಳು ಅಚ್ಚಪ್ರಸಾದಿಗಳೊಡವೆರೆದು,
ನಿಚ್ಚಪ್ರಸಾದಿ ನಿಚ್ಚಪ್ರಸಾದಿಗಳೊಡವೆರೆದು,
ಸಮಯಪ್ರಸಾದಿ ಸಮಯಪ್ರಸಾದಿಗಳೊಡವೆರೆದು ಒಂದೊಡಲಾಗಿ,
ಚಿತ್ಕಲಾಪ್ರಸಾದಿಗಳು ತಮ್ಮಾನಂದದಿಂದ
ಅಚ್ಚಪ್ರಸಾದಿಸ್ಥಲವನಾಚರಿಸಿದೊಡೆ ಬಹುಲೇಸು,
ನಿಚ್ಚಪ್ರಸಾದಿ ಸಮಯಪ್ರಸಾದಿಗಳು
ಅಚ್ಚಪ್ರಸಾದಿಸ್ಥಲವನಾಚರಿಸಿದೊಡೆ ಉತ್ತಮಕ್ಕುತ್ತಮ,
ಅಚ್ಚಪ್ರಸಾದಿ ನಿಚ್ಚಪ್ರಸಾದಿಸ್ಥಲಕೆ ನಿಂದಡೆ ಅಯೋಗ್ಯವೆನಿಸುವುದು.
ನಿಚ್ಚಪ್ರಸಾದಿ ಸಮಯಪ್ರಸಾದಿಸ್ಥಲಕೆ ನಿಂದೊಡೆ ಅಯೋಗ್ಯರೆನಿಸುವರು.
ಈ ವರ್ಮಾದಿವರ್ಮಮಂ ತ್ರಿಕರಣದಲ್ಲಿ ಅರಿದು ಮರೆಯದೆ
ಸಾವಧಾನದೆಚ್ಚರದೊಡನೆ ಲಿಂಗಾಂಗಸಮರಸೈಕ್ಯದೊಡನೆ ಕೂಡಿ
ಎರಡಳಿದಿರಬಲ್ಲಾತ ನಿರವಯಪ್ರಭು ಮಹಾಂತ ತಾನೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./26
ಇವೈದು ಬಹಿರಂಗದ ಮನೆಸಂಬಂಧವಾದ
ನರರಾಲಯಗಳಲ್ಲಿ ವರ್ತಿಸಿ
ಲಿಂಗಾಂಗಸಂಬಂಧಿಗಳಲ್ಲಿ ವಿಸರ್ಜನೆಯಾದ
ಸೂತಕಗಳ ಕಂಡಣೆಯ ಹರಗುರುವಾಕ್ಯಪ್ರಮಾಣು.
ಇನ್ನು ತನ್ನ ತಾನರಿದ ಲಿಂಗದೇಹಿಗಳು ವಿಸರ್ಜಿಸಿ ಬಿಡುವ
ನರಗುರಿಗಳಾದ ನಾಮಧಾರಕರ ಕರಣೇಂದ್ರಿಗಳಲ್ಲಿ ವರ್ತಿಸುವ
ಪಂಚಸೂತಕಂಗಳು ಅವಾವೆಂದಡೆ :
ಶ್ರೀ ಗುರುಪರಮಾರಾಧ್ಯ ದೀಕ್ಷಾಕರ್ತನ ಕರುಣಕಟಾಕ್ಷೆಯಿಂದ
ಚಿದ್ಘನಮಹಾನಿಜೇಷ್ಟಲಿಂಗಜಂಗಮ ಜಂಗಮಲಿಂಗ ಬಾಹ್ಯಾಂತರಂಗಳಲ್ಲಿ
ಮೂರ್ತಿಗೊಂಡು ಬೆಳಗುವ ಚಿಜ್ಜ್ಯೋತಿಯ ಕೂಟಸ್ಥವಿಲ್ಲದೆ
ಸ್ತ್ರೀಯಳೆಂಬ ಜಡವನಿತೆಯ ರತಿಕ್ರೀಡಾದಿವಿಲಾಸದ
ಭವಕೂಪದಲಿ ಜಾರಿಬಿದ್ದು
ಭೌತಿಕರಸಾನ್ನ ಪಾನಗಳಿಂದ ಸೇವಿಸಿದಲ್ಲಿ
ಆದಿ ವ್ಯಾಧಿಗಳು ಬಂದು ಪೀಡಿಸುತಿರ್ಪವು.
ಆ ಆದಿ ವ್ಯಾಧಿಗಳಿಗೆ ಅಂಜಿ,
ಹರಿಯೆ ಮೊರೆಯೊಯೆಂದು ಗುರುಮಾರ್ಗಾಚಾರವ ಬಿಟ್ಟು,
ತನುವಿನಿಚ್ಛೆಗೆ ಚರಿಸಿ, ಜಡಶರೀರಿಗಳಾಗಿ,
ಸಂದೇಹದಿಂದ ಸಂಕಲ್ಪ-ವಿಕಲ್ಪ ಮುಂದುಗೊಂಡು
ನರಗುರಿಗಳಂತೆ ಕ್ರಿಯಾಚಾರ ನಡೆನುಡಿಗಳ ಸೇರಲಾರದೆ
ಗಾಢಾಂಧಕಾರ ಕಾವಳ ಮುಸುಕಿ ತನ್ನ ತಾನೇಳಲಾರದೆ,
ಈ ದೇಹಸಂಸಾರ ಭೋಗಾದಿ ರತಿಕೂಟಂಗಳೆಲ್ಲ
ಪರಶಿವನಪ್ಪಣೆಯಿಂದ ಬಂದ ಪರಿಣಾಮಪ್ರಸಾದವೆಂದು ನಿಜವಾಗಿ
ಹಸಿವು ತೃಷೆ ನಿದ್ರೆ ಸಿರಿ ದರಿದ್ರ ಭೋಗ ರೋಗಂಗಳು ಸಮಗಾಣಲಾರದೆ
ಸುಖಸ್ತುತಿ ಲಾಭಕ್ಕೆ ಹಿಗ್ಗಿ, ದುಃಖದ ನಿಂದ್ಯನಷ್ಟಕ್ಕೆ ತಗ್ಗಿ, ಕಂದಿ ಕುಂದಿ,
ಎನ್ನ ದೇಹದ ದುರ್ಗುಣಂಗಳು ಗುರುವಿನಿಂದ ಹೋಗವು,
ಲಿಂಗದಿಂದ ಹೋಗವು, ಜಂಗಮದಿಂದ ಹೋಗವುಯೆಂದು,
ಸಂದೇಹದಿಂದ ಗುರುಭಕ್ತಿಯನುಳಿದು ಲಿಂಗಪೂಜೆಯನುಳಿದು,
ಜಂಗಮದಾಸೋಹವ ಬಿಟ್ಟು,
ಶಿವಗಣಂಗಳ ಪರಮಾನುಭಾವವ ಮರೆದು,
ತನುವಿನಿಚ್ಛೆಗೆ ನಡೆದು, ತನುವಿನಿಚ್ಛೆಗೆ ನುಡಿದು, ತನುವಿನಿಚ್ಛೆಗೆ ಭೋಗಿಸಿ,
ದುರಾಚಾರಸಂಗಸಮರತಿಯಿಂದ ಪ್ರಮಥಗಣಂಗಳ ಲೇಸು ತೊಲಗಿ,
ಅರ್ಥಪ್ರಾಣಾಭಿಮಾನದ ಕುಂದುಕೊರತೆಗೊಳಗಾಗಿ
ಭವದತ್ತ ಮುಖವಾಗಿ, ಅಧೋಕುಂಡಲಿಸರ್ಪನಂ ತೆಗೆದು ಜೀವಿಯಾಗಿರ್ಪುದೆ
ಪ್ರಥಮದಲ್ಲಿ ತನ್ನ ಅಂತರಂಗದ ತನುಸೂತಕವೆಂಬೆ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./27
ಕರ್ಮಕಾಂಡಿಲಿಂಗಬಾಹ್ಯರು ವರ್ತಿಸುವಂಥ
ಎಂಜಲಸೂತಕನಿರಸನದ ವಚನವದೆಂತೆಂದೊಡೆ :
ಶ್ರೀಗುರುವಿನ ಕರುಣಕಟಾಕ್ಷಕೃಪಾನಂದದಿಂದ
ತನುಮನ ಶುದ್ಧ ಸಿದ್ಧವಿಲ್ಲದೆ,
ಬಾಹ್ಯಾಂತರಂಗಳಲ್ಲಿ ಮಾಯೋಚ್ಛಿಷ್ಟವಾದ
ಅನಾರ್ಪಿತ ಭುಂಜಕರಿಗೆ ಎಂಜಲುಂಟಲ್ಲದೆ,
ಪರಮಾರಾಧ್ಯ ನಿಜವೀರಶೈವೋದ್ಧಾರಕ ಶ್ರೀಗುರುವಿನ
ಕರುಣಕಟಾಕ್ಷೆಯಿಂದ
ನಿಜೇಷ್ಟಲಿಂಗಸಂಬಂಧದಿಂದ ತನುಮನಶುದ್ಧವಾದ
ಲಿಂಗಜಂಗಮಪ್ರಸಾದಭೋಗೋಪಭೋಗಿಗಳಿಗೆ
ಎಂಜಲಸೂತಕವೆಲ್ಲಿಹದೋ ?
ಲಿಂಗಾಂಗಸಂಬಂಧಿಗಳಿಗೆ ಎಂಜಲಕಾಯವೆಂದು
ನುಡಿವ ನುಡಿಯೇ ಎಂಜಲವಲ್ಲದೆ,
ಚಿದಂಗ ಚಿದ್ಘನಲಿಂಗಸಂಗಸಮರಸೈಕ್ಯರಿಗೆ,
ಐಕ್ಯಸೂತ್ರರಿಗೆ ಎಂಜಲಸೂತಕ ನಾಸ್ತಿ.
ಈ ನುಡಿಗೆ ಶ್ರೀ ಸಾಂಭವೀಶಕ್ತಿಯರು ಬೆಸಗೊಂಡ ಹರನಿರೂಪಣಮುಂಟು
ಇದ ತಿಳಿದು ಹರಗಣಂಶೋದ್ಧಾರಕ ಶಿವಪ್ರಸಾದಿಗಳು ಆಚರಿಸುವುದು.
ಸಾಕ್ಷಿ : “ಭಾಂಡಸ್ಯ ಭಾಜನಂ ಚೈವ ಭೋಜನೇಪಿ ನಿರಂತರಂ |
ಪ್ರಸಾದೋಯಂ ಅತಸ್ಸೂತ ಮಿಥ್ಯಸ್ಯ ಮಹಿಮಾ ಖಲು ||
ನೇವೇದ್ಯಂ ಪುರತೋ ನ್ಯಸ್ತಂ ಪರಾನ್ನಾದೀಕೃತಂ ಮಯಾ |
ವಸನ್ ಭಕ್ತಸ್ಯ ಜಿಹ್ವಾಗ್ರೇ ಸುರುಚಿಃ ವಸಾಮಿ ಕಮಲೋದ್ಭವ ||
ಭಕ್ತಜಿಹ್ವಾಗ್ರತೋ ಲಿಂಗಂ ಲಿಂಗಜಿಹ್ವಾಗ್ರತೋ ರುಚಿಃ |
ರುಚಿ ಜಿಹ್ವಾ ಪ್ರಸಾದಂ ಚ ಪ್ರಸಾದಂ ಪರಮಂ ಪದಂ ||
ಪ್ರಸಾದಂ ಚ ಪರಂ ಬ್ರಹ್ಮ ಬ್ರಹ್ಮ ಪ್ರಸಾದಮೇವ ಚ |
ಕೇವಲಂ ಶಿವಮಯಂ ಚ ಮನಶ್ಚ ಶಿವಲಿಂಗಕಂ ||
ಪ್ರಸಾದಂ ಗಿರಿಜಾದೇವಿ ಸಿದ್ಧಿದಂ ನರಗುಹ್ಯಕಂ |
ವಿಷ್ಣು ಪ್ರಮುಖದೇವಾನಾಮಗ್ರಗಣ್ಯಮಗೋಚರಂ ||’
ಎಂದುದಾಗಿ,
ಶ್ರೀಗುರುಕರುಣದಿಂದ ಚಿದಂಗಲಿಂಗಸಂಗಸಂಬಂಧಿಯಾದ
ಸದ್ಧರ್ಮ ಸದ್ಭಕ್ತಮಹೇಶ್ವರರ ಕಾಯವೆ
ಪರಂಜ್ಯೋತಿರ್ಮಯ ಪರಶಿವಂಗೆ ದೇವಂಗೆ ರೂಪಾದ ಶುದ್ಧಪ್ರಸಾದ,
ಮನವೆ ರುಚಿಯಾದ ಸಿದ್ಧಪ್ರಸಾದ, ಪ್ರಾಣವೆ ಪ್ರಸಿದ್ಧಪ್ರಸಾದ.
ಸತಿಸುತರ ಬಾಹ್ಯಾಂತರಂಗವೆ ಲಿಂಗಜಂಗಮದಾಪ್ಯಾಯನಪ್ರಸಾದ.
ಸಂಬಂಧದಾಚರಣೆಯ ಪರಶಿವಗಣಂಗಳ
ನಿಜೋಪದೇಶವಿದ್ದುದರಿಂದ ಅಂತಪ್ಪ ಮಹಿಮರಿಗೆ
ಒಬ್ಬರು ಪೂಜಿಸಿದ ಎಂಜಲದೈವವ ಪೂಜಿಸಿ,
ಅಂಧಕರಂಧಕರು ಕೂಡಿದಂತೆ
ನಿಜಸಂಗಮನಾಥನರುಹಿನ ಅರ್ಪಿತ ಮುಖವನರಿಯದೆ
ಪರಮಾಮೃತಶೇಷಾನ್ನವ ಹಾದಿ ಬೀದಿ ಕಲ್ಲು ಮಣ್ಣು ಕಾಷ್ಠಗಳಿಗೆ ಅರ್ಪಿಸಿ,
ಇತ್ತಲಾಗಿ ಶ್ರೀಗುರುವಿತ್ತಲಿಂಗಕೆ ತೋರಿ ತೋರಿ ಭುಂಜಿಸಿ,
ನಾಚಿಕಿಲ್ಲದೆ ಶಿವಲಿಂಗಸಂಗಿಗಳೆಂದು ಬೊಗಳುವವರ ಕೈಬಾಯೆಂಜಲು.
ಭಕ್ತಗಣಸಾಕ್ಷಿಯಿಂದ, ಕಂಭ ಕುಂಭಮಧ್ಯದೊಳ್ ಕಂಕಣವ ಕಟ್ಟಿದ
ತನ್ನ ಸ್ತ್ರೀಯಲ್ಲದೆ, ಒಬ್ಬರು ಭೋಗಿಸಿದ ಉಚ್ಚಿಷ್ಟದ ಪರಸ್ತ್ರೀಯಳ
ಅಯೋಗ್ಯಭವಿಜನಾತ್ಮರು ಭೋಗಿಸಿದಂತೆ,
ಆ ಸ್ತ್ರೀಯಳ ಉಡಿಕೆ ಪಟ್ಟಿ ಸೊಸಿ ವೇಸಿ ದಾಸಿ
ಮೊದಲಾದ ಮೆಚ್ಚಿನ ರಾಣಿಯರೆಂದು
ಲಜ್ಜೆಗೆಟ್ಟು ಬಾಳುವೆಯಿಂದ ಮುಕ್ತಿಯೆಂಬ
ಮುತ್ತೈದೆತನಕ್ಕೆ ಸಲ್ಲದ, ಬಾಲರಂಡೆ ಬಳಸಿದರಂಡೆ ಮುಂಡೆರಾಣಿ
ಹೆಣ್ಣಿನ ಸಂಗವ ಮಾಡುವನ ಸರ್ವಾಂಗಬಾಹ್ಯಾಂತರವೆಲ್ಲವು
ಉಚ್ಛಿಷ್ಟವೆಂದುದು ಗುರುವಚನ.
ಈ ವರ್ಮವ ಕಂಡರಿದು, ಹೊಲಬುದಪ್ಪಿ,
ಪರರ ಹೆಣ್ಣು ಹೊನ್ನು ಮಣ್ಣು ಹಣಗಳ ಅಪಹಾರನಾಗಿ,
ಪ್ರಸಾದ ಪಾದೋದಕ ಸೇವ್ಯರೆಂದು
ಭಕ್ತ ಮಹೇಶ ಪ್ರಸಾದಸ್ತವ ನುಡಿದುಕೊಂಡು,
ಅಸಗ ನೀರಮಿಂದು ತನುಮನ ಮಡಿಯಾಗದೆ
ಊರರುವೆ ಊರ ಸೀರೆಯನುಟ್ಟು
ಅಂದಚೆಂದಗಳಿಂದ ಮಡಿವಾಳರೆಂದಂತೆ,
ನಾಮಧಾರಕ ಗುರು ನಾಮಧಾರಕ ಶಿಷ್ಯಸಂಬಂಧದಾಚರಣೆಯ
ಬೊಗಳುವಂಥದೆ ಚತುರ್ಥಸೂತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./28
ಕರ್ಮಜಡಜೀವ ಭವಿಶೈವ ಪಾಷಂಡಿಗಳು ವರ್ತಿಸುವಂಥ
ರಜಸೂತಕನಿರಸನದ ವಚನಸೂತ್ರವೆಂತೆಂದೊಡೆ :
ಶಿವಾಚಾರಸಂಪನ್ನರಲ್ಲಿ ಜನಿತರಾಗಿ,
ಕ್ರಿಯಾಶಕ್ತಿಯರೆನಿಸಿ, ಪೂರ್ವಜಾತವ ಕಳೆದುಳಿದು,
ಶ್ರೀಗುರುವಿನ ಕಾರುಣ್ಯದಿಂದ ಕರಸ್ಥಲಕ್ಕೆ ಮನಸ್ಥಲಕ್ಕೆ ಭಾವಸ್ಥಲಕ್ಕೆ
ಪ್ರಸನ್ನೋಪದೇಶದಿಂದ ಪ್ರತ್ಯಕ್ಷವಾಗಿ,
ನಿಜೇಷ್ಟಪ್ರಾಣಭಾವಲಿಂಗವ ಬಿಜಯಂಗೈಸಿ,
ಸವಾರ್ಂಗವೆಲ್ಲವನು ಚಿದ್ಘನಲಿಂಗಸ್ಪರಿಶನದಿಂದಾಯತ
ಸ್ವಾಯತ ಸನ್ನಿಹಿತ ಮಾಡಿ
ಲಿಂಗಶರೀರರೆನಿಸಿದ ಬಳಿಕ ಕ್ರಿಯಾಲಿಂಗಾಂಗನೆಯರು
ಕ್ಷೀರದ ಭಾಂಡವು ಅಗ್ನಿಜ್ವಾಲೆಯಿಂದ ಹೊರಸೂಸಿದೋಪಾದಿಯಲ್ಲಿ
ರಜಸ್ಸಾದರೆ ಸಂಕಲ್ಪಕರ್ಮಕ್ರಿಯೆಗಳಿಂದ
ಅಮಲಲಿಂಗಸಂಗಸಂಯೋಗದಿಂದ ನಿರ್ಮಲಕಾಯರಾಗಿ,
ಭವಘೋರಸಂಸಾರಕ್ಕೆ ವಿದೂರರಾದ ಪರಮಪ್ರಸಾದಪ್ರಸನ್ನಕಾಯರಾದೆವೆಂದು,
ನಿಜವೀರಶೈವ ಸದ್ಗುರುಪಾದೋದಕದಿಂದ ಪವಿತ್ರಮಾರ್ಗವನರಿಯದೆ
ಅಪವಿತ್ರ ಅನಾಚಾರಿಗಳ ಸಂಗದಿಂದ ಭಂಗರಾಗಿ,
ತಾ ಬಂದ ಬಟ್ಟೆ, ತಾನಿರುವ ಮುಕ್ತಿಮಂದಿರ,
ತಾ ಬಯಲಾದ ನಿಜನಿವಾಸಸ್ಥಾನವೆ ಲಿಂಗಸಂಗಸಮರಸವೆಂದರಿಯದೆ
ಬರುಕಾಯರಾಗಿ, ಹೊಲೆಗಂಡಿಹೆನೆಂದು
ನಿಜನಿವಾಸ ಕ್ರಿಯೆಯ ಬಿಟ್ಟು ತೊಲಗಲಾಗದು,
ಹೊಲತಿಯಾದರೆ ಲಿಂಗಜಂಗಮಾರಾಧನೆಯ ಮಾಡಲಾಗದು.
ಆ ಲಿಂಗಜಂಗಮವು ಆ ಹೊಲೆಪೂಜೋಪಚಾರ
ಕ್ರಿಯಾರ್ಪಣಗಳ ಕೊಳ್ಳಲಾಗದು.
ಅದೆಂತೆಂದೊಡೆ : ಪಾರ್ವತಿಗೆ ಬೋಧಿಸಿದ ಹರವಾಕ್ಯವು ಸಾಕ್ಷಿ :
“ಲಿಂಗಾರ್ಚನಾರತಾನಾರೀ ಸೂತಕಾ ಚ ರಜಸ್ವಲಾ |
ರವಿರಗ್ನಿರ್ಯಥಾ ವಾಯುಸ್ತಥಾ ಕೋಟಿಗುಣಃ ಶುಚಿಃ ||
ಪೂಜಾಲೋಪೋ ನ ಕರ್ತವ್ಯಃ ಸೂತಕೇ ಮೃತಕೇಪಿ ವಾ |
ಜಲಬುದ್ಬುಧವದ್ದೇಹಂ ತಸ್ಮಾತ್ ಲಿಂಗಂ ಸದಾರ್ಚಯೇತ್ ||”
ಎಂದುದಾಗಿ,
ಇದು ಕಾರಣ ಶ್ರೀ ಗುರುಕೃಪೆಯಿಂದೆ ತೆರಹುಗುಡದೆ
ದಿವರಾತ್ರಿಗಳೆನ್ನದೆ ನಿಮಿಷಾರ್ಧವಗಲದೆ,
ಸರ್ವಾಂಗವೆಲ್ಲ ಪ್ರಸನ್ನತೆ ಪ್ರಸಾದ
ನಿಜೇಷ್ಟಲಿಂಗಸಂಬಂಧದಾಚರಣೆಯಿಂದ
ಕೂಟಸ್ಥವಾದ ಕ್ರಿಯಾಂಗನೆಯರು,
ರಜಸ್ಸಾದಾಕ್ಷಣವೆ, ಉಕ್ಕೇರಿದ ಭಾಂಡವ ಹೆಗಲತೊಳದೋಪಾದಿಯಲ್ಲಿ
ದೀಕ್ಷಾಪಾದೋದಕದಿಂದ ಸ್ನಾನಂಗೈದು, ಲಿಂಗಸಂಗಸುಖಿಗಳಾಗಿ,
ಶ್ರೀಗುರುಕಾರುಣ್ಯದಿಂದ ಲಿಂಗಾಂಗಸಂಗವುಳ್ಳ ಸಂಬಂಧ
ವರದರುಶನ ಸ್ಪರಿಶನ ಸಂಭಾಷಣೆಗಳಿಂದ
ಸತ್ಯಸುದ್ಧ ನಡೆ ನುಡಿಯುಳ್ಳವರಾಗಿರ್ಪುದೆ ಪ್ರಮಥಗಣಮಾರ್ಗವು.
ಇಂತು, ಹರಗಣ ನಡಾವಳಿಯನಳಿದುಳಿದ ಜಡಶೈವಾಯತ ವಾದಿಗಳಂತೆ
ಗುರುವಿತ್ತ ಲಿಂಗವರಿಯದೆ, ಲಿಂಗಾಚಾರ ನಡೆನುಡಿಗಳನರಿಯದೆ,
ಗುರುಹಿರಿಯರ ಮಾನಮನ್ನಣೆಯಿಲ್ಲದೆ,
ಊರ ಮಾರಿಯಂತೆ ಮನಬಂದಲ್ಲಿ ಚರಿಸಿ,
ಸೂತಕ-ಪಾತಕಗಳಿಂದ ಹೊಲೆಕರ್ಮವ ಬಳಸುವ
ದಿಂಡೆ ರಂಡೆಯರ ಸತಿ-ಸುತೆ-ಮಾತೆಯೊಡಹುಟ್ಟಿದವಳೆಂದು
ಒಡಗೂಡಿ ಸಮರತಿಕ್ರಿಯೆಗಳ ಬಳಸಿ,
ನಾಚಿಕೆಯಿಲ್ಲದೆ ವೀರಶೈವಾಚಾರ ಭಕ್ತಮಹೇಶ್ವರರೆಂದು ನಡೆಗೆಟ್ಟು,
ಷಟುಸ್ಥಲಾನುಭಾವವ ಬಳಸಿ, ಕುಂದುನುಡಿಯ ನುಡಿವುದೇ
ತೃತೀಯ ಸೂತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ. /29
ಕರ್ಮಭೂಭಾರಿಗಳಾದಂಥ ಭವಿಶೈವರು ವರ್ತಿಸುವಂಥ
ಜಾತಿಸೂತಕನಿರಸನದ ವಚನಸೂತ್ರವದೆಂತೆಂದೊಡೆ ;
ಜಡಶೈವಕರ್ಮಜಾತವ ಕಳೆದು ಪರಾತ್ಪರ ಪರಮಾಣು
ಪರನಾದಬಿಂದುಕಳಾಚರಿತ್ರಮೂರ್ತಿ ಶ್ರೀಗುರುಲಿಂಗದೇವರು
ಜಡಜೀವಭಾವವನಳಿದು ಶಿವಭಾವ ಮಾಡಿದ
ಕಾರಣಿಕರಾದ ಪುಣ್ಯಸ್ವರೂಪರೊಳ್ ನಿಃಕಳಂಕ ಪರಶಿವಕುಲವಲ್ಲದೆ
ಅನ್ಯಥಾ ಕುಲವುಂಟೆ ಸದ್ಭಕ್ತಶರಣರಿಗೆ ?
ಆವಾಶ್ರಮದಲ್ಲಿ ಅವತರಿಸಿದರೇನು ?
ಪರಿಪೂರ್ಣಮಹಾಜ್ಞಾನವೆಂಬ ಜ್ಯೋತಿರ್ಮಯ
ಮಹಾಘನ ಪ್ರಸನ್ನತಿಪ್ರಸನ್ನದಿಂದ
ಅಂಗ ಮನ ಪ್ರಾಣ ಭಾವೇಂದ್ರಿಕರಣಗಳೊಳು
ಚಿದ್ಘನ ಲಿಂಗಾಯತ ಸ್ವಾಯತ ಸನ್ನಿಹಿತ
ಪರಮಾರಾಧ್ಯ ಚರಪಾದತೀರ್ಥಪ್ರಸಾದ ಮಂತ್ರವಾದ ಶರಣರಲ್ಲಿ
ಜಾತ್ಯಾಶ್ರಮಕುಲವನರಸುವರೆ ?
ಅಯೋನಿಜ ಅಜಡಸ್ವರೂಪಗಣಸಭೆಯಲ್ಲಿ
ಸರ್ವಾಚಾರಸಂಪತ್ತಿನ ಸತ್ಕ್ರಿಯಾಜ್ಞಾನಾನುಭಾವದ
ಸತ್ಯಶುದ್ಧ ನಡೆನುಡಿಯನರಸಬೇಕಲ್ಲದೆ,
ಮಾನವರಂತೆ ಮನುಷ್ಯರೆಂದು ಭಾವಿಸಲಾಗದು
ಸದ್ಭಕ್ತ ಮಹೇಶ ಪ್ರಮಥಗಣಾರಾಧ್ಯರು.
ಇದಕ್ಕೆ ಹರವಾಕ್ಯ ಪ್ರಮಾಣು ಅದೆಂತೆಂದೊಡೆ-ಸಾಕ್ಷಿ :
“ಗ್ರಾಮೀಣಮಲಿನಂ ತೋಯಂ ಯಥಾ ಗಚ್ಛತಿ ಸಾಗರಂ |
ಶಿವಸಂಸ್ಕಾರಸಂಪನ್ನೇ ಜಾತಿಭೇದಂ ನ ಕಾರಯೇತ್ ||
ಯಥಾ ಪಂಕೇ ಸರೋಜಸ್ಯ ಯಥಾ ಕಾಷ್ಠೇ ಹುತಾಶನಃ |
ಯಥಾ ಪಾಷಾಣೇ ಸುವರ್ಣಂ ಭಕ್ತ ಶ್ಚಾಂಡಾಲವಂಶಜಾಃ ||
ಯಥಾ ಕ್ಷೀರಂ ತಥಾ ಘೃತಂ ಯಥಾ ತಿಲಂ ತಥಾ ತೈಲಂ |
ಯಥಾ ಪುಷ್ಪಮ್ ತಥಾ ಗಂಧಃ ಯಥಾ ಜಾತಸ್ತಥಾ ಗುಣಃ ||”
ಎಂದುದಾಗಿ,
ಘನಲಿಂಗಾಂಗಸಂಗಸಮರತಿಯೋಗಾನುಸಂಧಾನ ನಡೆನುಡಿಯುಳ್ಳ
ಸದ್ಭಕ್ತಗಣಾರಾಧ್ಯರಲ್ಲಿ ಜಾತ್ಯಾಶ್ರಮ ಕುಲಗೋತ್ರವನರಸಲಾಗದು.
ಜ್ಯೋತಿರ್ಮಯ ಪರಶಿವಸ್ವರೂಪ ಗುರುಲಿಂಗಜಂಗಮಸಂಬಂಧವನುಳ್ಳ
ಸದ್ಭಕ್ತಗಣಂಗಳೆ ಕೇವಲ ನಿಃಕಲಪರಶಿವಜಾತರು.
ಚಿದ್ಘನಲಿಂಗಪ್ರತಿಬಿಂಬರು, ಅಯೋನಿಸಂಭವರು, ಅಜಾತಚರಿತ್ರರು,
ನಿತ್ಯನಿರ್ಮಲರು ನಿರ್ದೊಷಿಗಳು ನಿಃಕಾಮಿಗಳು ನಿಃಕ್ರೋಧಿಗಳು
ನಿರ್ಲೊಭಿಗಳು ನಿರ್ಮೊಹಿಗಳು ನಿರ್ಮದರು ನಿರ್ಮಚ್ಚರರು
ನಿರೂಪಾಧಿಕರು ನಿಃಕಳಂಕರು ನಿರೋಗಿಗಳು
ನಿತ್ಯಶಿವಾನಂದ ಕಲ್ಯಾಣರು ನಿತ್ಯಶಿವಯೋಗಸಂಪನ್ನರು
ನಿತ್ಯ ದಾಸೋಹ ಪರಮಾನಂದತೃಪ್ತರು,
ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪ
ಸಗುಣ ನಿರ್ಗುಣ ನಿಜಾನಂದಲೋಲುಪ್ತರು,
ಅಂಗದಾಚಾರಕ್ಕೆ ಆಯತವ ಮಾಡಿದವರು,
ಪ್ರಾಣಷಟ್ಸ್ಥಲಕ್ಕೆ ಸ್ವಾಯತವೆಂದೆನಿಸಿದವರು,
ಭಾವದಷ್ಟಾವರಣಕ್ಕೆ ದಾಸನೆಂದೆನಿಸಿದವರು,
ಕರಣೇಂದ್ರಿಯಗಳ ಸತ್ಕ್ರಿಯ ಸಮ್ಯಜ್ಞಾನ
ಜಪತಪೋಪದೇಶದಲ್ಲಿ ಪರಮಾನಂದಭರಿತರು,
ಚಿದ್ಬೆಳಗಿನ ಚಿದ್ಭ್ರಹ್ಮದ ಬೆಳಗಿನಲ್ಲಿ ಘನಮನವೇದ್ಯರು,
ವಾಣಿನಾಲ್ಕರಡಿಮೆಟ್ಟಿನಿಂದ ನಿರ್ವಾಣಪದಪ್ರದಾಯಕರು.
ನಿಜಮುಕ್ತಿಸ್ವರೂಪ ನಿರವಯ ಸಮಾದ್ಯಸ್ತರುವಪ್ಪ
ಶಿವವಂಶೋದ್ಧಾರಕ ಸದ್ಭಕ್ತಗಣಂಗಳಿಗೆ
ಪೂರ್ವಜಾತವ ಕಲ್ಪಿಸಿ ಅವರ ಗೃಹಂಗಳ ವಿಡಂಬಿಸಿ,
ಭೌತಿಕಜಡಾನ್ನ ನೀರಿನ ಶೀಲವ ಹಿಡಿದು,
ಪರದೈವದ ಪೂಜೆ, ಪರಸ್ತ್ರೀಯರ ಗಮನ, ಪರದ್ರವ್ಯಾಪಹಾರ,
ನಿಂದೆ ವಂದನೆ ಪರಜೀವಹಿಂಸೆಯನೆಸಗಿ,
ಗುರುಲಿಂಗಜಂಗಮದ ದೀಕ್ಷೊಪದೇಶವನರಿಯದೆ
ಸತ್ಕ್ರಿಯಾಜ್ಞಾನ ಬಾಹ್ಯರಾಗಿ,
ವಿಷಯಾತುರದಿಂದ ವರ್ತಿಸುವಂಥ ಭವಭಾರಿಗಳ
ಪಿತ-ಮಾತೆ ಗುರು-ಹಿರಿಯರು ಸತಿ-ಸುತರು
ಬಂಧು-ಬಳಗ ಹೆಣ್ಣು-ಗಂಡಿನ ನೆಂಟರೆಂದು ಒಡಗೂಡಿ
ಶಿವಾಚಾರಸಂಪನ್ನರೆಂದು ನುಡಿಗಡಣದಿಂದ
ಕುಲಜಾತಿ ಆಶ್ರಮಕ್ಕೆ ಚಲಗತರಾಗಿರ್ಪುದೆ ದ್ವಿತೀಯ ಸೂತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ. /30
ಕಾಯದ ಕಳವಳದ ವಿಲಾಸವಿಭ್ರಮಣೆಗೊಂಡ
ಮನಸೂತಕದಿರವದೆಂತೆಂದೊಡೆ : ಶ್ರೀ ಗುರುಪರಮಾರಾಧ್ಯ ಶಿಕ್ಷಾಕರ್ತನ ಕರುಣಕಟಾಕ್ಷೆಯಿಂದ
ಮಾರ್ಗಸತ್ಕ್ರಿಯಾಚಾರ ಪ್ರಣಮಜಪಮಾಲೆ
ಮೀರಿದ ಸಮ್ಯಜ್ಞಾನಾಚಾರ ಪ್ರಣಮಜಪಮಾಲೆ
ಪರಿಪೂರ್ಣಾಚಾರ ಮಹಾಜ್ಞಾನ ಪ್ರಣಮಜಪಮಾಲೆ
ಸಚ್ಚಿದಾನಂದ ಸರ್ವಾಚಾರ ಪ್ರಣಮದಿರವಂ ಪಡೆದು
ನವದ್ವಾರದ ನವನಾಳ ನವಚಕ್ರ ನವಕೃತಿ ನವಸ್ಥಾನಂಗಳೊಳ್
ಚಿದ್ವಿಭೂತಿ ಚಿದ್ರುದ್ರಾಕ್ಷಿ ಚಿನ್ಮಂತ್ರಂಗಳಿಂದ
ಕಾಲಮಾರನ ಮಾಯಾಪ್ರಪಂಚಿನಟ್ಟುಳಿಯು
ಇಂದಿಂಗೆ ಹಿಂದಾಗಿ ಸರಿಬಿದ್ದಿತ್ತೆಂಬಂತೆ ನಿಜನೈಷ್ಠೆಯಿಂ ಮರೆದು
ಹುಸಿದೇಹಮಾನವರು ಕೆಟ್ಟ ಭೋಗಾಭಿರತಿಯಿಂದೆ
ಹುಸಿನಡೆಯ ನಡೆದು ಹುಸಿನುಡಿಯ ನುಡಿದು,
ಗಣಸಮ್ಮೇಳಕ್ಕೆ ದೂರಸ್ಥನಾಗಿ,
ತಾನು ಹೀನನೆನಿಸಿ, ಮತ್ತೊಬ್ಬರನು ಹಳಿದು,
ಬರಿದೂಷಣೆಗೊಳಗಾಗಿ, ನಿಜಮುಕ್ತಿಮಂದಿರವೆಂಬ ಗೊತ್ತ ಸೇರದೆ,
ಮರ್ಕಟನಂತೆ ಹಲವು ದೇವತೆ, ಹಲವು ಜಪತಪಾನುಷ್ಠಾನ,
ಹಲವು ಶಾಸ್ತ್ರಾನುಭಾವ, ಹಲವರುಂಡುಟ್ಟು ಬಿಟ್ಟ ಧನಧಾನ್ಯ,
ಹಲವರೆಂಜಲು ಗಂಧ ರಸ ರೂಪ ಸ್ಪರಿಶನ ಶಬ್ದ ಮೊದಲಾದ
ಪಂಚವಿಷಯವೆಂಬ ಅತಿಯಾಸೆ ಆತುರತೆಯಿಂದ ಅಭಿಮಾನಗೆಟ್ಟು
ಮತಿ ಮಸುಳಿಸಿ ಸ್ತುತಿನಿಂದೆಗಳಿಗೊಳಗಾಗಿ,
ಗುರುಲಿಂಗಜಂಗಮ ವಿಭೂತಿ ರುದ್ರಾಕ್ಷಿ ಮಂತ್ರಂಗಳಿಂದ,
ಎನ್ನ ಮನದಭೀಷ್ಟೆ ಕೈಸಾರಲಿಲ್ಲವೆಂದು
ಸತ್ಕ್ರಿಯ ಸಮ್ಯಜ್ಞಾನ ಸದಾಚಾರ ಸದ್ವರ್ತನೆ ಷಟ್ಸ್ಥಲಮಾರ್ಗವ ಬಿಟ್ಟು
ಮನೋವಿಲಾಸಿಯಾಗಿ ಕಳವಳದಿಂದಿಪ್ಪುದೆ
ತನುವಿನೊಳಗಣ ಅಂತರಂಗದ ದ್ವಿತೀಯ ಮನಸೂತಕ ಕಾಣಾ,
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./31
ಗುರುಮಾರ್ಗಾಚಾರ ಲಿಂಗಾಂಗಸಂಗಯೋಗಸಂಪನ್ನರೆಂದು
ಉತ್ರಪತ್ರಂಗಳ ಲಿಖಿತಂಗೈದು,
ತನ್ನ ಗೃಹದಲ್ಲಿ ತನ್ನ ಪಿತ-ಮಾತೆಯಾದ ಗುರುಚರಕ್ಕೆ
ಒಂದು ಪಾಕ, ತನಗೊಂದು ಪಾಕ ಮಾಡಿಸಿಕೊಂಡು,
ಉದರಮಂ ಹೊರೆದು, ಪ್ರಸಾದಿಗಳೆನಿಸಿ,
ಗುರುಚರ ಬಂದಾಗ್ಗೆ ತಂಗಳ ನೀಡಿ, ಅವರಿಲ್ಲದಾಗ ಬಿಸಿಯನುಂಡು,
ಮತ್ತೊಬ್ಬರಿಗೆ ಆಚಾರವ ಹೇಳಿ, ತಾನನಾಚಾರಿಯಾಗಿ
ಸತ್ಕ್ರಿಯಾಸಮ್ಯಜ್ಞಾನವ ಮರೆದು, ಮಹಾಜ್ಞಾನಪರಿಪೂರ್ಣರೆನಿಸಿ,
ತ್ರಿವಿಧಪ್ರಸಾದಪಾದೋದಕವರಿಯದವರಲ್ಲಿ ಸಮರಸಕ್ರಿಯೆಗಳಂ ಬಳಸಿ,
ಡಂಬಕತನದಿಂದೊಡಲುಪಾಧಿವಿಡಿದು,
ತಥ್ಯ ಮಿಥ್ಯ ತಾಗು ದೋಷ ಕಠಿಣ ನುಡಿಗಳ ಬಳಕೆಯಲ್ಲಿರ್ಪುದೆ
ಅಂತರಂಗದ ದ್ವಿತೀಯಪಾತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./32
ಗುರುಮಾರ್ಗಾಚಾರ ಸನ್ಮಾನಿತರೆನಿಸಿ
ಅನಾದಿ ಶರಣಗಣ ಸಮರಸೈಕ್ಯವನುಳ್ಳ
ಶ್ರೀ ರುದ್ರಾಕ್ಷಿಯಾಚರಣೆ ಹಸ್ತಮಣಿಗಳ ಸಂಬಂಧ ಸಗುಣಾನಂದ
ಏಕಾಕ್ಷರ ತ್ರಿಯಾಕ್ಷರ ಪಂಚಾಕ್ಷರ ಷಡಕ್ಷರ ಮೊದಲಾದ
ಮಿಶ್ರಾಮಿಶ್ರಗಳ ಸಂಪದೈಕ್ಯಾನುಭಾವದ ನಿಜೋಪದೇಶವನರಿಯದೆ,
ಶೈವಪಾಷಂಡಿಗಳ ಹಟಕರ್ಮ ಕ್ರಿಯಾಯೋಗಾಭ್ಯಾಸವ ಬಳಸಿ,
ಅನಂತ ಮಣಿಮಾಲೆಗಳಂ ಪಿಡಿದು,
ಕುಟಿಲ-ಕುಹಕ,ಯಂತ್ರ-ತಂತ್ರ, ಜಪ-ತಪ, ಹೋಮ-ನೇಮ ಅನುಷ್ಠಾನವೆಂಬ
ಕಾಂಕ್ಷೆವಿಡಿದು, ಫಲಪದಂಗಳಂ ಬಯಸಿ, ಮಹಿಮಾಪುರುಷರೆನಿಸಿ,
ಉಂಡುಟ್ಟು ಕಂಡಕನಸ ಹೇಳಿ, ಭೋಗದಲ್ಲಿಸಂಪನ್ನನೆನಿಸಿ,
ಬಯಲಭ್ರಾಂತರಾಗಿ, ಒಂದರಲ್ಲಿ ನೈಷ್ಠೆಗಾಣದೆ, ಗುಪ್ತದ್ರೋಹಿಗಳಾಗಿ,
ಸತ್ಯಶುದ್ಧ ಪುರಾತರ ನಡೆನುಡಿಯ ಸಾಧಿಸದೆ,
ಮಲತ್ರಯಮೋಹದಲ್ಲಿ ಅಭಿರತಿಯಿಟ್ಟು
ನಾವು ಸ್ಥಲದ ಭಕ್ತಜಂಗಮವೆಂದು
ನಡೆಗೆಟ್ಟನುಡಿ ನುಡಿವುದೆ ಅಂತರಂಗದ ಪಂಚಮಪಾತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./33
ಘನಕ್ಕೆ ಮಹಾಘನಗಂಭೀರ
ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯ ಸನ್ಮಾನಿತರು,
ನಿರವಯವಸ್ತುವಿನ ಪ್ರತಿಬಿಂಬರಾಗಿ, ತಮ್ಮ ತಾವರಿದು.
ಚತುರ್ವಿಧ ವಿಸರ್ಜನೆಯನರಿದಾಚರಿಸುವುದು.
ಆ ವಿಸರ್ಜನೆಗಳಾವಾವೆಂದಡೆ : ಮಲಮೂತ್ರವೆರಡನು ವಿಸರ್ಜನೆಯಿಂದ ಬಿಡುವಂಥದೆ
ಸ್ಥೂಲಾಚಮನವೆನಿಸುವುದು.
ಕ್ರೀಡಾವಿಲಾಸದಿಂದ ತಮ್ಮರ್ಧಾಂಗವೆಂದು
ಭಕ್ತಗಣಸಾಕ್ಷಿಯಾಗಿ ವಿರಾಜಿಸುವಂಥ ಕ್ರಿಯಾಂಗನೆಯಲ್ಲಿ
ವೀರ್ಯವ ಬಿಡುವಂಥಾದ್ದೊಂದು ಸ್ತೂಲಾಚಮನವೆನಿಸುವುದು.
ಈ ಸ್ಥೂಲಾಚಮನಗಳ ಮಾಡಿದ ವೇಳೆಯಲ್ಲಿ
ದಂತಗಳ್ಮೂವತ್ತೆರಡನು ತೀಡಿ, ಲಿಂಗಾಂಗ ಮಜ್ಜನಂಗೈದು,
ಸವರ್ೊಪಚಾರಂಗಳಿಂ ಕ್ರಿಯಾಜಪ ಜ್ಞಾನಜಪ ಮಹಾಜ್ಞಾನಜಪ
ಪರಿಪೂರ್ಣಾನುಭಾವಜಪಂಗಳೊಳ್
ಲಿಂಗಜಂಗಮ ಜಂಗಮಲಿಂಗಾರ್ಪಣವ ಮಾಡುವುದು.
ಶಿವಶರಣಗಣಾರಾಧ್ಯರು ಲಿಂಗಾಭಿಷೇಕ ಅರ್ಚನಾದಿಗಳ ಮಾಡಿ,
ಅರ್ಪಣ ಸಂಧಿನಲ್ಲಿ ಜಲತೋರಿಕೆಯಾಗಿ ವಿಸರ್ಜಿಸಿ,
ಉದಕವ ಬಳಸಿದ ವೇಳೆಯೊಳು,
ಲಿಂಗಬಾಹ್ಯರಸಂಗಡ ಪ್ರಸಂಗಿಸಿದರೂ ದೀಕ್ಷಾಜಲದಿಂದ
ಆರುವೇಳೆ ಲಿಂಗಸ್ಪರಿಶನದಿಂದ ಜಿಹ್ವೆಯ ಪ್ರಕ್ಷಾಲಿಸಿ,
ಮುಖ ಮಜ್ಜನವಮಾಡಿ,
ಲಿಂಗಾರ್ಚನಾರ್ಪಣವನುಭಾವಗಳ ಮಾಡುವುದು,
ಇದು ಸೂಕ್ಷ್ಮಾಚಮನವೆನಿಸುವುದು.
ಪ್ರಮಾಣಗಳಾದರೂ ಅನುವಲ್ಲದೆ ವಿಪತ್ತಿನ ವೇಳೆಯಾಗಲಿ,
ಜಲ ಪರಿಹರಿಸಿದಲ್ಲಿ ಪರಿಣಾಮಜಲದಿಂದ ಆ ಸ್ಥಾನವ ಪ್ರಕ್ಷಾಲಿಸಿ,
ಹಸ್ತಪಾದವ ತೊಳೆದು ಉದಕವ ಶೋಧಿಸಿ,
ಲಿಂಗಸ್ಪರಿಶನವಗೈದು, ಆರುವೇಳೆ ಜಿಹ್ವೆಯ ಪ್ರಕ್ಷಾಲಿಸಿ,
ಸತ್ಯೋದಕದ ಪರಮಾನಂದಜಲ ಮಹಾಜ್ಞಾನಪ್ರಣಮಪ್ರಸಾದಂಗಳ ಗುಟುಕ
ಲಿಂಗಮಂತ್ರ ನೆನಹಿನೊಡನೆ ಸೇವಿಸುವುದು.
ಲಿಂಗಬಾಹ್ಯರ ಸಂಗಡಪ್ರಸಂಗಿಸಿದೊಡೆ
ಇದೇ ರೀತಿಯಲ್ಲಿ ಮುಖಪ್ರಕ್ಷಾಲನಂಗೈದು ಆಚರಿಸುವುದು.
ಇದಕೂ ಮೀರಿದರೆ ಜಲಬಿಟ್ಟು, ಭವಿಗಳಸಂಗಡ ಪ್ರಸಂಗವ ಮಾಡಿದರೆ
ಆ ಸಮಯದಲ್ಲಿ ಪ್ರಮಾದವಶದಿಂದ ಉದಕವು ದೊರೆಯದಿದ್ದರೆ
ಅಲ್ಲಿ ವಿಸರ್ಜನಸ್ಥಾನವ ದ್ರವವಾರುವಂತೆ
ಶುಚಿಯುಳ್ಳ ಮೃತ್ತಿಕೆ ಪಾಷಾಣ ಕಾಷ್ಠ
ಕಾಡುಕುರುಳು ಪರ್ಣಗಳಿಂದ ಪ್ರಕ್ಷಾಲನಂಗೈದು,
ಜಿಹ್ವಾಗ್ರದಲ್ಲಿ ಸಂಬಂಧವಾದ ಗುರುಲಿಂಗೋದಕದಿಂದ
ಮತ್ತಾ ಜಿಹ್ವೆಯ ಪ್ರಕ್ಷಾಲಿಸಿ, ಆರುವೇಳೆ ತೂವರಂಗೈದು,
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ
ಶ್ರೀಗುರುಬಸವಲಿಂಗಾಯೆಂದು
ಘನಮನವ ಚಿದ್ಘನಲಿಂಗಪ್ರಸನ್ನಧ್ಯಾನದಿಂದ
ನವನಾಳವೆಂಬ ಕವಾಟಬಂಧನಂಗೈದು,
ಪ್ರದಕ್ಷಣವಮಾಡಿ, ಪರಿಪೂರ್ಣ ಚಿದ್ಬೆಳಗಿನೊಳು ಮತ್ತೆಂದಿನಂತೆ
ಅತಿಜಾಗ್ರವೆಂಬ ಮಹಾದರುವಿನೊಳ್ ಸತ್ಕೃತ್ಯ ಸದ್ಧರ್ಮರಾಗಿರ್ಪುದು.
ಮುಂದೆ ಲಿಂಗಾರ್ಚನಾರ್ಪಣಗಳ ಮಾಡಬೇಕಾದರೆ,
ಶುದ್ಧೋದಕದಿಂದ ಲಿಂಗಾಭಿಷೇಕಸ್ನಾನಂಗೈದು,
ಪಾವುಡಗಳ ಮಡಿಮಾಡಿ ಪರಿಣಾಮಾರ್ಪಣ ತೃಪ್ತರಾಗಿರ್ಪುದು.
ಇದಕೂ ಮೀರಿದರೆ, ಜಲವ ಬಿಡುವುದು,
ಭವಿಗಳಸಂಗಡ ಪ್ರಸಂಗಿಸಿದರೆ ಸ್ನಾನಮಾಡುವ ಪರಿಯಂತರ
ಜಿಹ್ವಾಗ್ರದಲ್ಲಿ ಸ್ಥಾಪ್ಯವಾದ ಸತ್ಯಶುದ್ಧ ಗುರುಲಿಂಗೋದಕ
ಮಹಾಪ್ರಣಮಪ್ರಸಾದವೆ ಮೊದಲು
ಕ್ರಿಯಾಘನ ಗುರುಲಿಂಗಜಂಗಮಾರ್ಚನೆ
ತೀರ್ಥಪ್ರಸಾದಸೇವನೆಗಳಂ ಮಾಡಲಾಗದು.
ಇದಕೂ ಮೀರಿದರೆ,
ತನ್ನ ದೀಕ್ಷಾಗುರು ಶಿಕ್ಷಾಗುರು ಮೋಕ್ಷಾಗುರು
ಪರಿಪೂರ್ಣಗುರುಸ್ಮರಣೆ ಧ್ಯಾನದಿಂದ
ಸರ್ವಾವಸ್ಥೆಗಳ ನೀಗಿ, ಮಹಾಬಯಲ ಬೆರೆವುದು.
ಇದಕೂ ಮೀರಿದರೆ,
ತನುವಿಗೆ ಆಯಸದೋರಿ, ಆಪ್ತರಾರೂ ಇಲ್ಲದಂತೆ,
ಪರಿಣಾಮಜಲ ದೊರೆಯದ ವೇಳೆಯೊಳು
ಮಲಮೂತ್ರಗಳೆರಡೂ ತೋರಿಕೆಯಾದರೆ,
ಎಲ್ಲಿ ಪರಿಯಂತರ ಸಂಶಯಗಳುಂಟೊ ಅಲ್ಲಿ ಪರಿಯಂತರವು
ಎರಡನೂ ವಿಸರ್ಜಿಸುವುದು.
ಆ ಸಂಶಯ ತೀರಿದಲ್ಲಿ ಉದಕವಿದ್ದಲ್ಲಿಗೆ ಹೋಗಿ,
ಪೂರ್ವದಂತೆ ಮೃತ್ತಿಕಾಶೌಚಗಳ ಬಳಸಿ,
ನಿರ್ಮಲವಾಗಿ ತೊಳೆದು, ಹಸ್ತಪಾದಗಳ ಪ್ರಕ್ಷಾಲಿಸಿ,
ಆ ಸಮಯದಲ್ಲಿ ಕ್ರಿಯಾಭಸಿತವಿದ್ದರೂ
ರಸಯುಕ್ತವಾದ ಪದಾರ್ಥವಾದರೂ ಪುಷ್ಪಪತ್ರಿಗಳಾದರೂ ಇದ್ದರೆ
ಸತ್ಕ್ರಿಯಾಲಿಂಗಾರ್ಚನಾರ್ಪಣಗಳಿಗೆ ಬಾರವು.
ಆದ್ದರಿಂದ ಅವು ಇದ್ದವು ನಿಕ್ಷೇಪವ ಮಾಡುವುದು.
ಕ್ರಿಯಾಗುರು ಲಿಂಗಜಂಗಮಮುಖದಿಂದ ಶುದ್ಧೋದಕವ ಮಾಡಿ,
ತ್ರಿವಿಧ ಸ್ನಾನಂಗೈದು,
ಪುರಾತನೋಕ್ತಿಯಿಂದ ಜಂಗಮಲಿಂಗದಲ್ಲಿ ಚಿದ್ಭಸಿತವ ಬೆಸಗೊಂಡು,
ಸತ್ಕ್ರಿಯಾರ್ಪಣಗಳನಾಚರಿಸಿ, ನಿತ್ಯಮುಕ್ತರಾಗಿರ್ಪವರೆ
ಪೂರ್ವಾಚಾರ್ಯಸಗುಣಾನಂದಮೂರ್ತಿಗಳೆಂಬೆ ಕಾಣಾ
ನಿರವಯಪ್ರಭು ಮಹಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./34
ಘನಗುರು ಲಿಂಗಜಂಗಮಸೂತ್ರದಿಂದ
ಕ್ರಿಯಾದೀಕ್ಷೆಯಾದಲ್ಲಿ ಶುದ್ಧಪ್ರಸಾದಸಂಬಂಧ.
ಮಂತ್ರದೀಕ್ಷೆಯಾದಲ್ಲಿ ಸಿದ್ಧಪ್ರಸಾದಸಂಬಂಧ.
ವೇಧಾದೀಕ್ಷೆಯಾದಲ್ಲಿ ಪ್ರಸಿದ್ಧಪ್ರಸಾದಸಂಬಂಧ.
ಮತ್ತಂ ಕ್ರಿಯಾದೀಕ್ಷೆಯೊಳಗಿನ ಸಪ್ತವಿಧದೀಕ್ಷೆಯಲ್ಲಿ
ಪ್ರಸಾದಿಯ ಪ್ರಸಾದಸಂಬಂಧ.
ಮಂತ್ರದೀಕ್ಷೆಯೊಳಗಿನ ಸಪ್ತವಿಧದೀಕ್ಷೆಯಲ್ಲಿ
ಪ್ರಸನ್ನಾನುಭಾವ ಪ್ರಸಾದಸಂಬಂಧ.
ವೇಧಾದೀಕ್ಷೆಯೊಳಗಿನ ಸಪ್ತವಿಧದೀಕ್ಷೆಯಾದಲ್ಲಿ
ಪರಿಪೂರ್ಣಪ್ರಸಾದಸಂಬಂಧ.
ಇಂತಪ್ಪ ದೀಕ್ಷೊಪದೇಶದಿಂದ ತ್ರಿವಿಧ ಗುರುಲಿಂಗಜಂಗಮ
ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ
ಮಂತ್ರಾಚಾರ ಕ್ರಿಯಾನುಭಾವ
ಜ್ಞಾನೋಪದೇಶವರಿದಾನಂದದಿಂದ ಕೊಡಕೊಳ್ಳಬಲ್ಲಾತನೆ
ಪೂಜ್ಯಸ್ವರೂಪ ಸಚ್ಚಿದಾನಂದ ಸಾಕಾರಲಿಂಗ ಶರಣನೆಂಬೆ ನೋಡಾ. ಇಂತೆಸೆವ
ಲಿಂಗಶರಣನ ನಿಜನಿಲವನರಿದರ್ಚಿಸಿ ಕೊಡಕೊಳ್ಳಬಲ್ಲಾತನೆ
ಪೂಜ್ಯಕಸ್ವರೂಪ ಸಚ್ಚಿದಾನಂದ ನಿಃಕಳಂಕ
ನಿಃಶೂನ್ಯನಿರಂಜನ ನಿರವಯಪ್ರಭು
ನಿರಾಕಾರ ಶರಣಲಿಂಗನೆಂಬೆ ನೋಡಾ.
ಇಂತೆಸೆವ ಸಾಕಾರಲಿಂಗ ಶರಣನಾಚರಣೆಸಂಬಂಧ
ನಿರಾಕಾರ ಶರಣಲಿಂಗಸಂಬಂಧದಾಚರಣೆಯ ನಿಲವ ತಿಳಿಯದೆ,
ನಾನು ಷಟ್ಸ್ಥಲೋಪದೇಶಿ, ನೀನು ಷಟ್ಸ್ಥಲೋಪದೇಶಿಗಳೆಂದು ಒಪ್ಪವಿಟ್ಟು
ನುಡಿವ ನುಡಿಜಾಣರ ಕಂಡು,
ಎನ್ನ ತನು ಮನ ಭಾವದ ಕೊನೆಮೊನೆಯಲ್ಲಿ ಬೆಳಗುವ
ನಿಜಘನಜ್ಯೋತಿ ನಾಚಿ ಬಯಲಾಯಿತ್ತು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./35
ಚರಲಿಂಗಪ್ರಸನ್ನ ಪ್ರಸಾದಿ ಭಕ್ತ ಮಹೇಶ್ವರರು,
ಶ್ರೀ ವಿಭೂತಿಯ ಕ್ರಿಯಾಧಾರಣ ಮಾಡಬೇಕಾದರೆ,
ಸಾಜವಾದಂಥ ಗಟ್ಟಿಗೆ,
ಆ ಮಡಿಗಿಕೊಂಡಿರ್ದಂಥ ಗುರುಪಾದೋದಕದಿಂದ ಅಭಿಷೇಕಂಗೈದು,
ಅದೇ ಉದಕವನ್ನು ಒಂದು ಬಟ್ಟಲಲ್ಲಿ ಸ್ವಲ್ಪ ಮಾತ್ರ ತೆಗೆದುಕೊಂಡು,
ಮೂಲಮಂತ್ರಧ್ಯಾನದಿಂದ ಆ ಜಂಗಮಮೂರ್ತಿಗಳ
ಉಭಯಾಂಗುಷ್ಠದಡಿಯಲ್ಲಿ ಮಡುಗಿ
ತನ್ನ ನಿಜದೃಷ್ಟಿಯೆ ಅರ್ಚನೆಯಾಗಿ ನಮಸ್ಕರಿಸಿ,
ಇಷ್ಟಲಿಂಗಸಂಬಂಧವಾದ ಅಂಗುಷ್ಠವ ತನ್ನ ತರ್ಜನಿಬೆರಳಿಂದ
ನಾದಬಿಂದುಕಳೆಗಳೆಂಬ ತ್ರಿವಿಧಪ್ರಣಮಗಳ
ಬಿಂದುದೀರ್ಘಾಯುಕ್ತವಾಗಿ ಮೂರುವೇಳೆ
ಘನಮನವೇದ್ಯದಿಂದ ಸ್ಪರಿಶನವಮಾಡಿ,
ಪ್ರಾಣಲಿಂಗಸಂಬಂಧವಾದ ಅಂಗುಷ್ಠವ ಅದರಂತೆ
ಚಿನ್ನಾದ ಬಿಂದು ಕಳೆಗಳೆಂಬ ತ್ರಿವಿಧಪ್ರಣಮಗಳ
ಬಿಂದುದೀರ್ಘಯುಕ್ತವಾಗಿ ಮೂರುವೇಳೆ
ಪರಿಪೂರ್ಣಾನುಭಾವದಿಂದ ಸ್ಪರಿಶನವ ಮಾಡಿ,
ಅಲ್ಲಿಂದ ಭಾವಲಿಂಗಸ್ವರೂಪ ಅಷ್ಟಾವರಣಸಂಬಂಧವಾದ
ಎಂಟು ಅಂಗುಲಿಗಳ ಅಂಗುಷ್ಠಗಳೊಡಗೂಡಿ,
ಪರನಾದ ಬಿಂದು ಕಳೆಗಳೆಂಬ ತ್ರಿವಿಧಪ್ರಣಮಗಳ ಬಿಂದು ದೀರ್ಘಯುಕ್ತವಾಗಿ,
ಒಂದು ವೇಳೆ ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವದಿಂದ
ಸ್ಪರಿಶನವ ಮಾಡಿದಂಥ ಲಿಂಗಪಾದೋದಕವನ್ನು
ಗುರುಪಾದೋದಕದಿಂದಭಿಷೇಕಂಗೈದಿಷ್ಟವಿಭೂತಿಗಟ್ಟಿ ಸುಯಿಧಾನದಿಂದ
ಸಮ್ಮಿಶ್ರಂಗೈದುಳಿದಂಥ ಲಿಂಗಪಾದೋದಕವನ್ನು
ಪ್ರಸಾದಿಸ್ಥಲವಿಲ್ಲದವರು ಒಂದು ಗಿಂಡಿಯಲ್ಲಿ ಮಡುಗಿಕೊಂಡು
ನೆಲದಮೇಲಿಡದೆ ಒಂದಾಸನದಲ್ಲಿಟ್ಟು,
ಸುಯ್ದಾನದಿಂದ ಘನಪಾದತೀರ್ಥ ತನ್ನರ್ಪಿತ
ಸಮಯೋಚಿತಕ್ಕೆ ದೊರೆಯದಿದ್ದರೆ
ಇಷ್ಟಲಿಂಗಾರ್ಪಿತಕ್ಕೆ ಮೂರುವೇಳೆ
ಶಿವಶಿವ ಹರಹರ ಜಯಜಯ ಬಸವಲಿಂಗಯ್ಯಯೆಂದು
ತಾನು ಸ್ವೀಕರಿಸಿ, ಕಂಡಿತಂಗೈದು, ಲಿಂಗಾರ್ಪಿತವ ಮಾಡುವುದು.
ಗುರುದೀಕ್ಷೆಯುಳ್ಳವರು ಆ ಗಿಂಡಿಯೊಳಗಿರುವ ಉದಕವ
ಜಂಗಮಮೂರ್ತಿಗಳು ದೊರೆತ ಸಮಯದಲ್ಲಿ ಕಂಡಿತಂಗೈದು,
ಲಿಂಗದ ಉದುಗದಲ್ಲಿ ದ್ರವವನಾರಿಸಿ, ಆ ಗಿಂಡಿಯಂ ಬೆಳಗಿ,
ಶಿವಪ್ರಸಾದಿಗಳಿಂದ ಶರಣುಹೊಕ್ಕು ಮೊದಲಂತೆ ಪಾದೋದಕವ ಮಾಡಿಟ್ಟು,
ಗಿಂಡಿಯಲ್ಲಿ ತುಂಬಿಟ್ಟುಕೊಂಡು,
ಪ್ರಾಣಾಂತ್ಯಲೀಲೆಸಮಾಪ್ತಪರಿಯಂತರವು ಆಚರಿಸುವುದು.
ಲಿಂಗಪ್ರಸಾದಿಗಳಾದವರು,
ಅಲ್ಲಿಂದ ಗಿಂಡಿ ಒಂದು ತಾವು ಉಳಿದು, ತಾನೊಂದು ಬಳಿಯವಾದಲ್ಲಿ
ಜಂಗಮದ ತೀರ್ಥವ ಪಡೆದು ಸಲಿಸಿ,
ಲಿಂಗಾರ್ಪಿತ ಭೋಗೋಪಭೋಗದಲ್ಲಿರ್ಪವರೆ ಲಿಂಗಾಂಗಿಗಳೆನಿಸುವರು.
ಈ ಎರಡೂ ಇಲ್ಲವಾದೊಡೆ,
ಪ್ರಸಾದಿಸ್ಥಲವುಳ್ಳವರು ಧರಿಸುವ ಕ್ರಿಯಾಭಸಿತದಿಂದ,
ಪರಿಣಾಮೋದಕವನೊಂದು ಬಟ್ಟಲಲ್ಲಿ ಸ್ವಲ್ಪಮಡಗಿಕೊಂಡು,
ಭಸ್ಮಮಿಶ್ರಂಗೆಯ್ದು, ಹಿಂದೆ ಹೇಳಿದ ಸ್ಮರಣೆಯಿಂದೆ ಸಲಿಸಿ,
ಕಂಡಿತಂಗೈದು, ಷಡ್ರಸಾಮೃತಲಿಂಗಭೋಗದಲ್ಲಿರ್ಪುದೆ
ನಿರವಯಪ್ರಭು ಮಹಾಂತನ ಸೂತ್ರಧಾರಿಗಳೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./36
ಚಿದಾವರಣಮೂರ್ತಿ ನಿಜಜಂಗಮಲಿಂಗದೇವನು,
ತಾನು ಪರಿಣಾಮತೃಪ್ತನೆನಿಸಿ
ನಿಂದನಿರಾವಲಂಬಸ್ಥಾನವಾವುದೆಂದೊಡೆ : ನಿಜವೀರಶೈವ ಭಕ್ತಿಜ್ಞಾನವೈರಾಗ್ಯ ಷಟ್ಸ್ಥಲಾನುಭಾವ
ಶ್ರೀಗುರುಲಿಂಗಜಂಗಮದ
ನಿಜಕರಣಾನಂದದ ಚಿತ್ಪ್ರಭಾಪುಂಜರಂಜಿತವಾದ
ನಿಜಕಿರಣವೆ ಕಾಯ ಕರಣ ಭಾವ ಬಯಲಾಗುವುದಕ್ಕೆ
ಕದಳಿಯ ಬೆಳಗಿದೆ ನಿಜಮೋಕ್ಷದ ಮನೆಯೆಂದರಿದು,
ನಡೆ-ನುಡಿ ಒಂದಾಗಿ, ಪೂರ್ವಪುರಾತನ ವಚನಸಾರಾಮೃತವಿಡಿದು
ಸರ್ವಾಚಾರಸಂಪನ್ನನಾದ ಸದ್ಭಕ್ತನಾಶ್ರೈಸಿದ
ಚಿತ್ಪೃಥ್ವಿ ಚಿದಪ್ಪು ಚಿದಗ್ನಿ ಚಿದ್ವಾಯು ಚಿದಾಕಾಶ
ಚಿಚ್ಛಕ್ತಿ ಚಿತ್ತ್ಪುತ್ರ ಮಿತ್ರ ಕಳತ್ರಯಾದಿಯಾಧಾರಮೂರ್ತಿ
ಚಿದ್ಘನಲಿಂಗಮೂರ್ತಿ, ಲಿಂಗಾಚಾರವಿರತಿಯ
ಭಕ್ತಿಯೆಂಬ ಮೋಹಾನಂದವೆ ನಿಜಮೋಕ್ಷದ ಖಣಿಯೆಂದು ನೆರೆನಂಬಿ,
ಅಚಲಾನಂದದಿಂದ ಮಹಾಜ್ಞಾನಭಕ್ತಿರತಿಯಿಟ್ಟು
ಒಳಹೊರಗೊಂದಾಗಿ, ಚಿನ್ನಾದ ಚಿದ್ಬಿಂದು
ಚಿತ್ಕಳಾಮಂತ್ರಮಂ ಧ್ಯಾನಿಸುತ್ತ
ಸರ್ವಮಯಮಂತ್ರವೆಂಬ ದೃಢಲಿಂಗಮಂ ನೋಡುತ್ತ,
ಲಿಂಗಮಂ ಕೂಡುತ್ತ , ಘನಲಿಂಗಾಂಗದೊಳ್ ಮಾತಾಡುತ್ತ,
ತಾನೆ ತಾನಾಗಿ ತನಗೊಂದಾಶ್ರಯವಿಲ್ಲದಿಪ್ಪುದೆ
ನಿಜಜಂಗಮದಿರವು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./37
ಜನನಿಜಠರದಿಂದುಯವಾದಾಕ್ಷಣವೆ,
ಗುರುಕರುಣದಿಂದೆ ಲಿಂಗವೆಂಬ ಪುರುಷಂಗೆ, ಶರೀರವೆಂಬ ಸತಿಯಳಿಗೆ
ರತಿಕ್ರೀಡೆವಿಲಾಸದೋರಿದವೇಳೆಯೊಳು
ತಮ್ಮಾಚಾರನಿಮಿತ್ತವಾಗಿ ಲಿಂಗಮಂ ಧರಿಸಿ,
ಗುರುಪಾದತೀರ್ಥದ ಬಿಂದುವಂ ಜಿಹ್ವಾಗ್ರಕ್ಕೆರೆದು,
ಲಿಂಗಾಂಗವಾಯಿತ್ತೆಂಬ ಜನಸನ್ಮತವಾಗಿರ್ಪ ತದನಂತರದೊಳು
ಮತ್ರ್ಯದೊಳಿರ್ಪ ಶಿವಲಿಂಗಧಾರಕಮತದವರು
ಒಬ್ಬರಿಗೊಬ್ಬರು ನಂಟರಾಗಿ,
ಗಂಡುಹೆಣ್ಣು ಒಂದಾಸನದ ಮೇಲೆ ತಂಡುಲಮಂ ತಳೆದು,
ಗುರು-ಹಿರಿಯರು ಬಂಧು-ಬಳಗ ಕಳಸ-ಕನ್ನಡಿ-
ಮುತ್ತೈದೆರೆಂದು ನೆರೆದು
ಬಾಸಣಿಗೆಯ ಹಾಕಿ, ಸಲೆ ಪುರುಷರೆಂದು ಕೂಡಿದವರೆಲ್ಲ ಕರೆದು,
ಗಣಸಮುದಾಯಕ್ಕೆ ಶರಣುಮಾಡಿಸಿ,
ಮಧ್ಯಕಲ್ಪನೆಯಿಂದ ಹೆಣ್ಣು ಗಂಡಿನವರಿಗೆ
ಯಾವುದಾದರೂ ಒಂದು ಕುಂದುಕೊರತೆ ಬಂದು
ಸಂಕಲ್ಪವಾದರೂ ಸರಿಯೆ,
ಗಂಡಿಗೆ ಆದಿವ್ಯಾಧಿಗಳಿಂದ ಆಯುಷ್ಯ ತೀರಲರಿಯವಾದರೂ ಸರಿಯೆ,
ಆ ಗಂಡಿನಾಭರಣವ ಅವರ ತಂದೆತಾಯಿಗೊಪ್ಪಿಸಿ,
ಆ ಶಕ್ತಿಯೆಂಬ ನಾರಿಯ ಮತ್ತೊಬ್ಬ ಪುರುಷಗೆ ಸಲ್ಲಿಸಿ,
ಹಿಂದಣಂತೆ ಗೊತ್ತುಮಾಡಿದ ತದನಂತರದಲ್ಲಿ ,
ಮಾತು ಎಷ್ಟು ವೇಳೆಯಾದರೂ ಮಿತಿದಪ್ಪಿ,
ಹಿಂದಣಂತೆ ವರ್ತಿಸಿದೊಡೆ ಮುಂದೆ ಅನಾಚಾರಿಯು,
ಕಂಕಣವ ಕಟ್ಟಿ, ಲಗ್ನವ ಮಾಡುವುದಕ್ಕೆ ಯೋಗ್ಯಳೆ ಸಲ್ಲ , ಸಂದೇಹವಿಲ್ಲ.
ಬಾಸಣಿಕೆಯಾದ ತದನಂತರದಲ್ಲಿ ಗುರು-ಹಿರಿಯರು, ಬಂಧು-ಬಳಗ,
ಪುರುಷನುಳ್ಳ ಮುತ್ತೈದೆರೆಲ್ಲ ನೆರೆದು,
ಹಸೆ ಹಂದರ ದಂಡೆ ಬಾಸಿಂಗ ಕಂಭಕುಂಭ ಸಾಕ್ಷಿಯಾಗಿ
ಸೆರಗ ಗಂಟಿಕ್ಕಿ, ಕಂಕಣವ ಕಟ್ಟಿ,
ಸುಮುಹೂರ್ತೆ ಸಾವಧಾನವೆಂದು ಸೇಸೆಯನೆರೆದು,
ಮೇಲೆ ಪುರುಷವಿಯೋಗವಾದ ಮೇಲೆ,
ಆ ಸತಿ ಕಳಸಕನ್ನಡಿ ಸೇವೆಗೆ ಬಾಗಿನ ಮುತ್ತೈದೆಗೆ ಸಲ್ಲುವಳೆ ಸರಿ.
ಅದುಯೇನು ಕಾರಣವೆಂದಡೆ : ಆ ಸತಿಗೆ ಕ್ರಿಯಾಪುರುಷನ ಕಂಕಣ ಒಂದು,
ಜ್ಞಾನಪುರುಷನ ಕಂಕಣ ಒಂದು,
ಈ ತೆರದಿಂದುಭಯಸಂಗವಾದುದರೊಳು
ಒಬ್ಬ ಕ್ರಿಯಾರಮಣಶೂನ್ಯವಾದಲ್ಲಿ ಜ್ಞಾನರಮಣನ ಕೂಡಿ,
ಮುತ್ತೈದೆಯೆನಿಸಿ, ತ್ರಿವಿಧೋಪದೇಶದಿಂದ,
ಅಷ್ಟಾವರಣದಿಂದಲ್ಲಿ ಸಮರಸಭಕ್ತಿ ಸರ್ವೆಂದ್ರಿಗಳಲ್ಲಿ ವಿರಕ್ತಿವಿಡಿದು,
ಅಂತಜ್ಞರ್ಾನ ಬಹಿಕ್ರರ್ಿಯಾಚಾರದಿಂದ ನಡೆನುಡಿ ದೃಢಚಿತ್ತಳಾಗಿ,
ಸರ್ವಾಚಾರಸಂಪದಮನ್ನನುಭವಿಸಿ, ಲೀಲೆ ಸಮಾಪ್ತವಾಗಿ,
ಶೂನ್ಯವ ಹೊಂದುವುದೆ ನಿರೂಪಾಧಿಕ ಷಟ್ಸ್ಥಲ.
ಸದ್ಧರ್ಮನಾಯಕರಾದ ಭಕ್ತಮಹೇಶ್ವರ ಪ್ರಸಾದಸೇವಿತರ
ಯೋಗ್ಯವುಳ್ಳ ಮಾರ್ಗವಿದೀಗ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜನಲಿಂಗೇಶ್ವರ./38
ಜೀವಕ್ಕೆ ಸಂಜೀವನವಾದ ಭಾವಸೂತಕವದೆಂತೆಂದೊಡೆ :
ಶ್ರೀಗುರು ನಿರವಯ ಪರಿಪೂರ್ಣಬ್ರಹ್ಮ
ಸಚ್ಚಿದಾನಂದ ಕರುಣಕಟಾಕ್ಷೆಯಿಂದೆ
ಮಾರ್ಗಕ್ರಿಯಾಚರಣೆಯ ಮೀರಿದ ಕ್ರಿಯಾಚರಣೆ
ಷಟ್ಸ್ಥಲಾನುಭಾವದಾರ್ಚನೆ ಅರ್ಪಣಗಳಿಂದ ಕೂಡಿ
ಒಂದೊಡಲಾಗಿ ಎರಡಳಿದು,
ತಾನೆ ಗುರುಸ್ವರೂಪ, ತಾನೆ ಲಿಂಗಸ್ವರೂಪ,
ತಾನೆ ಜಂಗಮಸ್ವರೂಪ, ತಾನೆ ಪಾದೋದಕಪ್ರಸಾದ,
ತನ್ನ ಚಿತ್ಪ್ರಭೆಗಳ ಚಿದ್ವಿಭೂತಿ ರುದ್ರಾಕ್ಷಿ ಮಂತ್ರ,
ತಾನೆ ಅನಾದಿ ಪರವಸ್ತುವಾದುದರಿಂದ
ಆ ಪರಮಗುರು ಬಂದು ತನುವಿನ ಕೊನೆಮೊನೆಯೊಳಗೆ
ಮಹದರುವಾಗಿ ನೆಲೆಗೊಂಡಿರ್ಪನು.
ಪರಿಪೂರ್ಣಲಿಂಗ ಬಂದು ಸರ್ವೆಂದ್ರಿಗಳಲ್ಲಿ ತುಂಬಿತುಳುಕಾಡುತಿರ್ಪನು.
ಪರಮಾನುಭಾವಜಂಗಮ ಬಂದು ಸತ್ಕರಣಂಗಳಲ್ಲಿ
ಬೆಳಗ ಬೀರುತಿರ್ಪನು.
ಚಿತ್ಪಾದೋದಕಪ್ರಸಾದವ ಜ್ಯೋತಿರ್ಮಯ ಕಳೆಗಳೆ
ಸರ್ವಾಂಗದಿ ತುಂಬಿ ಬಿಂಬಿಸುತಿರ್ಪವುಯೆಂಬ ಬೆಳಗ ಕಂಡ ಮೇಲೆ
ಅಸತ್ಯ ಅನಾಚಾರ ಅಜ್ಞಾನ ಕ್ರಿಯಾಚಾರ
ಭ್ರಷ್ಟರಸಂಗವೆ ಭಯಭಂಗವೆಂಬ
ಹರಗುರು ನಿರೂಪಣವ ಕಂಡು,
ಬಿಡಲಾರದೆ ಅವರೊಡವೆರದು, ಸಮರಸಕ್ರಿಯೆಗಳ ಬಳಸಿ,
ಬಯಲಬ್ರಹ್ಮವಾಗಬೇಕೆಂದು ಭ್ರಾಂತುಭ್ರಮೆಗೊಂಡು,
ಬಯಸಿ ಬಡವಾಗಿರ್ಪುದೆ
ಪಂಚಮದಲ್ಲಿ ಜೀವನೊಳಗಣ ಅಂತರಂಗದ ಭಾವಸೂತಕ ಕಾಣಾ
ನಿರವಯಪ್ರಭುಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./39
ತನುತ್ರಯಮಂಡಲಂಗಳಲ್ಲಿ
ಸಕಲವ್ಯಾಪಾರದೊಡನೆ ಕೂಡಿ ವರ್ತಿಸುವಂಥ ಜಾಗ್ರನ
ನಿಜವಿಶ್ವಾಸವೆಂಬ ಹೃತ್ಪೀಠಮಧ್ಯದಲ್ಲಿ ಮೂರ್ತಿಗೊಂಡಿರುವ
ನಿಃಕಲಬ್ರಹ್ಮ ಇಷ್ಟಲಿಂಗದೇವನ
ನಿಃಕಳಂಕಹಸ್ತದಲ್ಲಿ ಮೂರ್ತಿಗೊಳಿಸಿ,
ಸಾಕಾರವಾದಷ್ಟವಿಧಾರ್ಚನೆ ಷೋಡಶೋಪಚಾರದಿಂದರ್ಚಿಸಿ,
ಎರಡಳಿದು ತಾನೇ ತಾನಾಗಿ,
ಮಿಶ್ರಾನಂದಭೋಗದಿಂದ ಅಚಲಾನಂದನಾಗಿ,
ಅಲ್ಲಿಂದ ನೂರೆಂಟು ಕ್ರಿಯಾಪ್ರಣಮ ಜಪಮಾಲೆಯಂ
ಜಪಮಣಿಗಳಿಂ ಧ್ಯಾನಿಸಿ ನಿಜಜಂಗಮಲಿಂಗದಲ್ಲೊಡವೆರೆದು,
ಭಕ್ತಿಯುಕ್ತಿ ಶ್ರದ್ಧಾತುರ ಕಿಂಕುರ್ವಾಣದಿಂದ
ಸತ್ಯಶುದ್ಧ ನಡೆನುಡಿ ದೃಢಚಿತ್ತಮಂ ಸಾಧಿಸುತ್ತ ,
ಗುರುಮಾರ್ಗಾಚಾರಸಂಪದಮಂ ಭೇದಿಸುತ್ತ ,
ಆ ನಿಃಕಲಬ್ರಹ್ಮವಪ್ಪ ಇಷ್ಟಲಿಂಗದೇವನ ಕಂಗಳು ತುಂಬಿ,
ಮೂಲಚಿತ್ಪ್ರಭೆಗಳ ನೋಡುತ್ತ ,
ಘನಮನದ ಕೊನೆಯಲ್ಲಿ ತುಂಬಿ ತೊನೆಯುತ್ತ ತೂಗುತ್ತ ,
ಸ್ವಾನುಭಾವದಲ್ಲಿ ಸಂತೃಪ್ತನಾಗುತ್ತ ,
ಬೆಳಗಿನೊಳಗೆ ಮಹಾಬೆಳಗಾಗಿ, ಅರುಣೋದಯವೆ ಮೊದಲುವಿಡಿದು,
ಇಪ್ಪತ್ತು ಗಳಿಗೆ ಪರಿಯಂತರವು ಸುಚಿತ್ತದ ಕೊನೆಯಲ್ಲಿ
ಅನಾದಿಮೂಲಪ್ರಣಮ ಒಂದು, ಪಾದೋದಕಪ್ರಣಮ ಎರಡು,
ಪ್ರಸಾದಪ್ರಣಮ ಎರಡು ಕೂಡಲಾಗಿ,
ಚಿತ್ಕಲಾಪ್ರಸಾದಪ್ರಣಮ ಒಂದು ಕೂಡಲಾಗಿ,
ಗುರುಪಂಚಾಕ್ಷರವೆನಿಸುವುದು.
ಆಚಾರಲಿಂಗ ಗುರುಲಿಂಗ ಇಷ್ಟಲಿಂಗಾಯ ನಮಃ
ನಿಮಗೆ ಸಮರ್ಪಣವಯ್ಯಾ ಎಂದು, ಮೂಲಚಿತ್ತುವಿನಿಂದ ಧ್ಯಾನಿಸುತ್ತ ,
ಅಲ್ಲಿಂದ ಮತ್ತಿಪ್ಪತ್ತು ಗಳಿಗೆ ಪರಿಯಂತರವು
ಸುಮನದಕೊನೆಯಲ್ಲಿ ಅನಾದಿಮೂಲಪ್ರಣಮವಿಡಿದು,
ಎರಡನೆಯ ಸಂಬಂಧವಾದ ಪಾದೋದಕಪ್ರಣಮ ಎರಡು,
ಪ್ರಸಾದಪ್ರಣಮ ಎರಡು, ಚಿತ್ಕಲಾಪ್ರಸಾದಪ್ರಣಮ ಒಂದು ಕೂಡಲಾಗಿ
ಶಿವಪಂಚಾಕ್ಷರವೆನಿಸುವುದು.
ಶಿವಲಿಂಗ ಜಂಗಮಲಿಂಗ ಪ್ರಾಣಲಿಂಗಾಯ ನಮಃ
ನಿಮಗೆ ಸಮರ್ಪಣವಯ್ಯಾ ಎಂದು, ಮೂಲಚಿತ್ತುವಿನಿಂದ ಧ್ಯಾನಿಸುತ್ತ ,
ಅಲ್ಲಿಂದ ಮತ್ತಿಪ್ಪತ್ತು ಗಳಿಗೆ ಪರಿಯಂತರವು ಸ್ವಾನುಭಾವದ ಕೊನೆಯಲ್ಲಿ
ಅನಾದಿಮೂಲಪ್ರಣಮವಿಡಿದು
ಮೂರನೆಯ ಸಂಬಂಧವಾದ ಪಾದೋದಕಪ್ರಣಮ ಎರಡು,
ಪ್ರಸಾದಪ್ರಣಮ ಎರಡು, ಚಿತ್ಕಲಾಪ್ರಸಾದಪ್ರಣಮ ಒಂದು ಕೂಡಲಾಗಿ
ಹರಪಂಚಾಕ್ಷರವೆನಿಸುವುದು.
ಪ್ರಸಾದಲಿಂಗ ಮಹಾಲಿಂಗ ಭಾವಲಿಂಗಾಯ ನಮಃ
ನಿಮಗೆ ಸಮರ್ಪಣವಯ್ಯಾ ಎಂದು
ಮೂಲಚಿತ್ತುವಿನಿಂದ ಧ್ಯಾನಿಸುತ್ತ ,
ಘನಕ್ಕೆಘನವಾಗಿ ಮಹದರುವಿನ ಕೊನೆಯಲ್ಲಿ ಧ್ಯಾನಿಸುತ್ತ ,
ಧ್ಯಾನಿಸಿದಲ್ಲಿ ದಿನರಾತ್ರಿಗಳೆರಡಕ್ಕೆ ಅರವತ್ತು ಗಳಿಗೆಯಾಗುವುದು.
ಜಪ ಇಪ್ಪತೊಂದುಸಾವಿರದಾರುನೂರಾಗುವದು.
ಇದೇ ಸಗುಣಾನಂದ ಸಾಕಾರಜಪವೆನಿಸುವುದು.
ಇದೆ ಕರಣಸನ್ಮಾರ್ಗದ ನಿಜಪಂಚಾಕ್ಷರವೆನಿಸುವುದು.
ಇದೆ ನಿಜಜಂಗಮ ಭಕ್ತಗಣಾರಾಧ್ಯರ ಇರವು ಕಾಣಾ,
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./40
ತನ್ನ ವಾಮಕರದಂಗುಲಮಧ್ಯದಲ್ಲಿ ಷಡಕ್ಷರಂಗಳ ಲಿಖಿತಂಗೈದು,
ಸೂಕ್ಷ್ಮದಿಂದರ್ಚಿಸಿ,
ತನ್ಮ ಹೃನ್ಮಂದಿರಾಲಯದಲ್ಲಿ ನೆಲೆಸಿರುವ
ಜ್ಯೋತಿರ್ಮಯ ಇಷ್ಟಮಹಾಲಿಂಗಮಂ ನಿರೀಕ್ಷಿಸಿ,
ಆ ಪರಮಜಂಗಮಲಿಂಗದೇವನ ಚರಣಾಂಗುಷ್ಠಗಳ
ತನ್ನ ವಾಮಕರಸ್ಥಲದಲ್ಲಿ ಸತ್ತುಚಿತ್ತಾನಂದನಿತ್ಯಪರಿಪೂರ್ಣ
ಅವಿರಳಪರಂಜ್ಯೋತಿಸ್ವರೂಪವಾದ ಪ್ರಾಣಲಿಂಗವೆಂದು ಭಾವಿಸಿ,
ಪರಮಾನಂದಾಬ್ಧಿಕರಣಜಲದಿಂ ಗಂಧಾಕ್ಷತೆ ಪುಷ್ಪ ಪತ್ರಿ ಮೊದಲಾದ
ಉಪಚಾರ ಮಾಡಬೇಕಾದರೆ ಲಿಂಗಕ್ಕೆ ತೋರಿ ತೋರಿ
ಪಾದಕ್ಕೆ ಅರ್ಪಿಸಲಾಗದು,
ಅದೇನುಕಾರಣವೆಂದರೆ : ಆ ಪಾದವೆ ನಿರಂಜನಜಂಗಮವಾದ ಕಾರಣ,
ಆ ಭಕ್ತನು ಜಂಗಮಪ್ರಸಾದವ
ಶೂನ್ಯಲಿಂಗದ ಇಷ್ಟಬ್ರಹ್ಮಮೂರ್ತಿಗೆ ಸಮರ್ಪಿಸಿ,
ಆ ಇಷ್ಟಬ್ರಹ್ಮದಿಂದುಳುಮೆಯಾದ ಲಿಂಗಪ್ರಸಾದವನ್ನು
ನಿಃಕಳಂಕಗುರುದೇವನಾದ ಪ್ರಾಣಕಳಾಚೈತನ್ಯ ಅನಿಮಿಷಾರಾಧ್ಯ
ಶ್ರೀಗುರುಮೂರ್ತಿಗೆ ಸಮರ್ಪಿಸಿ,
ಆ ನಿರಂಜನ ಜಂಗಮಲಿಂಗ ಆ ನಿಶ್ಶೂನ್ಯ
ಜಂಗಮಲಿಂಗದಿಂದಾದುಳುಮೆಯಾದ
ಪರಮಾನಂದಪ್ರಸಾದವ, ಆ ಶೂನ್ಯಲಿಂಗವ ಕರಸ್ಥಲದಲ್ಲಿ ,
ಆ ನಿರಂಜನಜಂಗಮವ ಕಂಗಳಾಲಯದಲ್ಲಿ,
ಮಿಶ್ರಮಿಶ್ರಂಗಳೊಡನೆ ಸಂಬಂಧಾಚರಣೆಗಳಿಂದ,
ಚಿದ್ರೂಪ ಚಿದ್ರುಚಿಗಳ ಸಂತೃಪ್ತಿಗಳೊಳ್ ಲೋಲುಪ್ತನಾದ
ನಿಃಕಲಬ್ರಹ್ಮ ಪರಮಗುರುಲಿಂಗಸ್ವಾಮಿಗೆ ಸಮರ್ಪಿಸಿ,
ಆ ನಿರಂಜನ ನಿಶ್ಶೂನ್ಯ ನಿಃಕಳಂಕ ಗುರುಲಿಂಗಜಂಗಮದ
ನಿಜಚಿನ್ಮಯ ಚಿತ್ಕಲಾಪ್ರಸಾದವೆ ಒಬ್ಬುಳಿಯಾಗಿ
ಶರಣಸತಿ ಲಿಂಗಪತಿಯೆಂಬ ಉಭಯವೇಕಸಮರಸದಿಂದ
ಪರಿಣಾಮಕ್ಕೆ ಪರಿಪೂರ್ಣಪ್ರಸಾದಕ್ಕೆ ಪರಿಪೂರ್ಣಪ್ರಸಾದವ
ಜಂಗಮಲಿಂಗ ಲಿಂಗಶರಣನೆಂಬ ಸ್ವಾನುಭಾವಸೂತ್ರವಿಡಿದು,
ತನ್ನ ತಾನರ್ಚಿಸಿ, ತ್ರಿವಿಧಲಿಂಗದೊಳಗೆ ನವಲಿಂಗವ ಹುದುಗಿಸಿ,
ಇದೆ ನಿಶ್ಶೂನ್ಯ ಚಿದ್ರೂಪ ಘನಲಿಂಗಮೂರ್ತಿ ಪ್ರಾಣಲಿಂಗಾರ್ಚನೆಯೆಂದು
ಪರಿಪೂರ್ಣಾನುಭಾವಭರಿತವಾಗಿ,
ಸುಟ್ಟ ಸರವೆಯಂತೆ ಜೀವನವರ್ತನೆಗಳಿಲ್ಲದೆ
ಮಂಗಳಾರತಿಗಳೆತ್ತಿ , ಘನಸಮ್ಮೇಳವೆಲ್ಲ
ಸ್ತೋತ್ರಗಳಿಂದ ನಾದ ಘೋಷಂಗೈದು ತ್ರಿವಿಧಜಪಮಂ ಮಾಡಿ,
ಪುಷ್ಪಾಂಜಳಿಗಳಿಂದ ಪ್ರದಕ್ಷಣದೊಳ್ ನಮಸ್ಕಾರವಂ ಮಾಡಿ
ಚಿದ್ಬೆಳಗಿನೊಳ್ ಮಹಾಬೆಳಗಗೂಡಿ ಎರಡಳಿದೊಂದಾಗಿರಬಲ್ಲರೆ
ನಿರವಯಪ್ರಭು ಮಹಾಂತರು ತಾವೇ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./41
ದೀಕ್ಷಾತ್ರಯಂಗಳಿಗೆ ಕಾರಣಕರ್ತನಾದ
ಘನಗುರುವಾಗಲಿ, ಗುರುಭಕ್ತಿಯುಳ್ಳ ಶಿಷ್ಯನಾಗಲಿ,
ಅರ್ಚನತ್ರಯಂಗಳಿಗೆ ಕಾರಣಕರ್ತ ಘನಲಿಂಗಪತಿಯಾಗಲಿ,
ಲಿಂಗಪತಿಯಭಕ್ತಿಯುಳ್ಳ ಶರಣಸತಿಯಾಗಲಿ,
ಅರ್ಪಣತ್ರಯಕ್ಕೆ ಕಾರಣಕರ್ತನಾದ
ಷಟ್ಸ್ಥಲಾನುಭಾವನಾಯಕ ಘನಜಂಗಮನಾಗಲಿ,
ಆ ಘನಗುರುಲಿಂಗಜಂಗಮಕ್ಕೆ ನಿರ್ವಂಚಕಭಕ್ತನಾಗಲಿ,
ಪರತತ್ವಾನುಭಾವಕ್ಕೆ ಅನರ್ಪಿತವಾದ ಅನಾಚಾರಕ್ರಿಯೆ,
ಅಜ್ಞಾನ ಅಸತ್ಯಕಾಯಕ ಅಯೋಗ್ಯಪಾತಕ ಸೂತಕ ನಡೆನುಡಿಗಳಿದ್ದರೆ,
ಒಳಹೊರಗೆನ್ನದೆ ಬೆಳಗುವ ಘನಲಿಂಗಮಂತ್ರಸಾಕ್ಷಿಯಾಗಿ,
ತ್ರಿಕರಣಾರ್ಪಣಗಳೊಳು ಘನಪಾದತೀರ್ಥಪ್ರಸಾದತ್ರಯಂಗಳ
ಸಮರಸಭೋಜನವ ಮಾಡಲೊಲ್ಲೆ,
ಅವರ ಕೂಡಲ್ಲೊಲ್ಲೆ, ಅವರ ದಯಾನಂದ ಕರುಣವ ಬೇಡಲೊಲ್ಲೆ.
ಅವರ ದರುಶನ ಸ್ಪರಿಶನ ಸಂಭಾಷಣೆಗಳ ಕೊಡಕೊಳ್ಳೆನೆಂಬುದೆ
ಸತ್ಯಂ ಸತ್ಯಂ ನಿತ್ಯಂ ನಿತ್ಯಂ ಯತಾರ್ಥಂ ಎಂದು
ನಿಜಮೋಕ್ಷಸ್ವರೂಪ ಪರಮಾರಾಧ್ಯ ಪರಮಾನುಭಾವನಾಯಕ
ಎನ್ನ ನಿಜಮಹದರುವೆಂಬ ಗುರುಮಾರ್ಗ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./42
ನಿಃಕಳಂಕ ಶ್ರೀಗುರುವಿನ ಕರುಣಕಟಾಕ್ಷದಿಂದ,
ತನು ಶುದ್ಧಪ್ರಸಾದವಾದ ಕ್ರಿಯಾಚಾರ ನಡೆ,
ಮನ ಸಿದ್ಧಪ್ರಸಾದವಾದ ಜ್ಞಾನಾಚಾರ ನುಡಿ,
ಭಾವ ಪ್ರಸಿದ್ಧಪ್ರಸಾದವಾದ ಭಾವಾಚಾರ ದೃಢ,
ಆತ್ಮ ಪರಿಪೂರ್ಣಪ್ರಸಾದವಾದ ಸರ್ವಾಚಾರಸಂಪತ್ತಿನ
ಸುಚಿತ್ತ ಸುಬುದ್ಧಿ ನಿರಂಹಕಾರ ಸುಮನ ಸುಜ್ಞಾನ ಸದ್ಭಾವವೆಂಬ
ಪರಮಪದವಿಯಲ್ಲಿ ಲಿಂಗಭೋಗೋಪಭೋಗ ಸಚ್ಚಿದಾನಂದ ಸನ್ನಿಹಿತ
ಸದ್ಭಕ್ತ ಮಹೇಶ್ವರರಿಗೆ ಎಂಜಲಸೂತಕವೆಂಬುದೆ ಪಾತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./43
ನಿಃಕಳಂಕ ಶ್ರೀಗುರುವಿನ ಚಿದ್ಗರ್ಭೊದಯ
ವೇಧಾಮಂತ್ರಕ್ರಿಯಾದೀಕ್ಷಾನ್ವಿತ ವೀರಶೈವ ಭಕ್ತಮಹೇಶ್ವರರು
ಪ್ರಮಾದವಶದಿಂದ ವಿಘ್ನಾದಿಗಳ ಅಚೇತನದ ವೇಳೆ ಬಂದೊದಗಿ
ಕ್ರಿಯಾಲಿಂಗಾರ್ಪಣ ತಡೆದುನಿಂದಲ್ಲಿ
ಮತ್ತೊಮ್ಮೆ ಒದಗಿದಾಗ್ಗೆ, ನಿನ್ನೆ ನಿಂತ ಕ್ರಿಯೆಗಳೆಂದು
ಎರಡು ಮೂರು ಜಪಗಳ ಮಾಡಿ,
ಎರಡು ಮೂರು ವೇಳೆ ತೀರ್ಥಪ್ರಸಾದಗಳೆಂದು,
ಭಿನ್ನಕ್ರಿಯಾರ್ಪಣಗಳ ಮಾಡಲಾಗದು ಶಿವಪ್ರಸಾದಿಗಳು.
ಸಾಕ್ಷಿ : “ದಿವಾ ನ ಪೂಜಯೇಲ್ಲಿಂಗಂ ರಾತ್ರೌ ಚೈವ ನ ಪೂಜಯೇತ್ |
ಸದಾ ಸಂಪೂಜಯೇಲ್ಲಿಂಗಂ ದಿವಾರಾತ್ರಿ ನಿರೋಧತಃ ||”
ಎಂಬ ಹರನಿರೂಪಪ್ರಮಾಣವಾಗಿ
ಮಾರ್ಗಕ್ರಿಯಾಚರಣೆ ಇಷ್ಟಲಿಂಗಾರೋಪಿತವಾಗಿ,
ಮೀರಿದಕ್ರಿಯಾಚರಣೆಯೇ ಪ್ರಾಣಲಿಂಗಾರೋಪಿತವಾಗಿ,
ಸದಾಸನ್ನಹಿತ ಪರಿಪೂರ್ಣಕ್ರಿಯಾಚರಣೆಯೆ ಭಾವಲಿಂಗಾರೋಪಿತವಾಗಿ,
ತ್ರಿವಿಧ ತನುಮನದ ವಸ್ತುಗಳೆಲ್ಲ
ಲಿಂಗಾಂಗಸಂಗಸಂಯೋಗವಾದ ನಿಜಲಿಂಗೈಕ್ಯಂಗೆ
ದಿವರಾತ್ರಿಗಳ ತೊಡಕೇತಕೆಂದಾತ ನಿರವಯಪ್ರಭು ಮಹಾಂತ ತಾನೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./44
ನಿಜಮೋಕ್ಷಮಂದಿರವ ಸೇರಿ ನಿಂದ ನಿತ್ಯಾನಂದಭರಿತರು,
ಉರಿಯುಂಡಕರ್ಪುರದಂತೆ, ಚಿದ್ಘನಲಿಂಗ ಶರಣರೆ ತಾವಾಗಿ,
ಹಿಂದಮುಂದಣ ಭವಾರಣ್ಯದ ಹಡಿಕೆ ಹಾದಿಯ
ಸಂಭ್ರಮ ಸುಖ-ದುಃಖ, ಪುಣ್ಯ-ಪಾಪ, ಸ್ತುತಿ-ನಿಂದೆ,
ಇಹ-ಪರವೆಂಬುಭಯ ದುರಿತಕರ್ಮಕೃತ್ಯಮಂ ನೆರೆ ನೀಗಿ,
ನಿರವಯಬ್ರಹ್ಮವ ಹೊಂದಿ, ಒಂದೊಡಲಾಗಬೇಕಾದರೆ,
ತನುಭೋಗಭ್ರಾಂತು ಮನಭೋಗಭ್ರಾಂತು ಜೀವಭೋಗಭ್ರಾಂತುವಿನ
ಭವಿಮಾಟಕೂಟದ ವಿಷಯವ್ಯಾಪಾರಮಂ ಕಡಿದು ಕಂಡ್ರಿಸಿ,
ಜಾಗ್ರ ಸ್ವಪ್ನ ಸುಷುಪ್ತಿಗಳಲ್ಲಿ
ಶೂನ್ಯಲಿಂಗಾಂಗಸಂಗಸಂಯೋಗ ಸಮರತಿಯ ಕೂಟವಚ್ಚೊತ್ತಿ
ಭಾವಭರಿತವಾಗಿ ಪರಮಹಂಸನೋಪಾದಿಯಲ್ಲಿ
ಅಯೋಗ್ಯದ ಅನಾರ್ಪಿತಗಳಳಿದುಳಿದು, ಗುಪ್ತಪಾತಕಗಳ ನೆರೆ ನೀಗಿ,
ಚಿದ್ಘನಲಿಂಗ ಭಕ್ತಜಂಗಮ ಗುರುಶಿಷ್ಯಸಂಬಂಧಮಂ
ಹರಗುರುವಾಕ್ಯಂಗಳೊಳು ಸಲುವಷ್ಟು
ಸತ್ಕ್ರಿಯೆ ಸಮ್ಯಜ್ಞಾನಾಚಾರ ನಡೆನುಡಿಗಳ ಸಾಧಿಸುವರೆ
ಪ್ರಸನ್ನಪ್ರಮಥಗಣಮಾರ್ಗದವರೆಂದು,
ತನುಮುಟ್ಟಿ, ಮನಮುಟ್ಟಿ, ಭಾವಭರಿತವಾಗಿ,
ಪರಮಾನಂದಸುಖದಸುಗ್ಗಿಯೊಳು ಪರಿಪೂರ್ಣಮೋಹಾನಂದ
ಕರುಣರಸ ತುಂಬಿ ತುಳುಕಾಡುತ್ತ,
ಲೋಲಾಬ್ಧಿ ದರುಶನ ಸ್ಪರಿಶನ ಸಂಭಾಷಣೆ ಪಾದಾಂಬುಶೇಷ ಪ್ರಸಾದಕ್ಕೆ
ಚೈತನ್ಯ ಚಿದ್ವಿಭೂತಿ ರುದ್ರಾಕ್ಷಿ ಮಂತ್ರಾನಂದದ
ನಿಜಕೂಟಾನುಭಾವ ಪರಿಣಾಮವ ಕೊಟ್ಟು ಕೊಂಬೆನೆಂಬುದೆ
ಎನ್ನ ರಮಣನೊಪ್ಪಿ ಸನ್ಮತವಾದ ಸತ್ಯಶುದ್ಧ ಯತಾರ್ಥ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./45
ನಿಜವಿರತಜಂಗಮಲಿಂಗದೇವನು,
ಸದ್ಭಕ್ತಾಲಯದಲ್ಲಿ, ನಿಜಪಾದೋದಕ ಪಂಚಾಕ್ಷರವ
ಮೂವತ್ತಾರು ತೆರದಲ್ಲಿ ಮೂವತ್ತಾರು ಇಂದ್ರಿಯಗಳಲ್ಲಿ
ತುಂಬಿತುಳುಕಾಡುತ್ತ,
ನಿಜಪ್ರಸಾದವ ಷಡಕ್ಷರವ ಮೂವತ್ತಾರು ತೆರದಲ್ಲಿ
ಮೂವತ್ತಾರು ಕರಣಂಗಳಲ್ಲಿ ತುಂಬಿ ತುಳುಕಾಡುತ್ತ,
ಆ ಪಾದೋದಕ ಪ್ರಸಾದ ಪಂಚಾಕ್ಷರ
ಷಡಕ್ಷರಂಗಳ ನಿಜಕಿರಣದೃಷ್ಟಿಯೆಂಬ
ಸದ್ರೂಪು ಚಿದ್ರೂಪು ಪ್ರಕಾಶಂಗಳ ನಿಜಪ್ರಸನ್ನ ಪ್ರಸಾದವೆ
ತನ್ನ ಪ್ರತಿಬಿಂಬವಾದ ಸದ್ಭಕ್ತನ ತನುದುಂಬಿ ಮನದುಂಬಿ,
ಪುತ್ರಮಿತ್ರಕಳತ್ರರ ತನುಮನಧನದುಂಬಿ
ನೆನಹು ನಿರ್ಧಾರವಾಗಿ, ಪರಿಪೂರ್ಣಾನುಭಾವದಿರವೆ
ನಿಜಜಂಗಮಸ್ಥಲ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./46
ನಿಜವೀರಶೈವ ಸರ್ವಾಚಾರಂಶೋದ್ಧಾರಕ ಪರಿಪೂರ್ಣ
ಗುರುಪಾದತೀರ್ಥ ಲಿಂಗಪಾದತೀರ್ಥ ಚರಪಾದತೀರ್ಥ
ಗಣಶೇಷೋದಕ ಪರಿಪೂಣರ್ೊದಕಾದಿಯಾದ
ಪಾದೋದಕ, ಲಿಂಗೋದಕ, ಜ್ಞಾನೋದಕ,
ಶೇಷೋದಕ, ಸತ್ಯೋದಕವೆಂಬ
ಪರಮಾನಂದಾಬ್ಧಿಯಲ್ಲಿ ಸರ್ವಾಚಾರಕ್ರಿಯಾ ಶುಚಿರುಚಿ ಪಾಕಪ್ರಯತ್ನ
ನಾನಾ ಕ್ರಿಯಾವಿಧಾನ ಪಾನ್ಯಂಗಳಿಂದ
ಬಾಹ್ಯಾಭ್ಯಾಂತರ ಪರಿಪೂರ್ಣ ಶುದ್ಧಸಿದ್ಧಪ್ರಸಿದ್ಧಪ್ರಸನ್ನಪರಾತ್ಪರ
ನಿರ್ಮಲ ನಿರ್ದೆಹ ನಿಃಕಳಂಕ ನಿರ್ಮಾಯಸ್ವರೂಪರಾದ
ಘನಗಂಭೀರ ಶಿವಯೋಗಸನ್ಮಾರ್ಗಿಗಳಿಗೆ
ರಜಸೂತಕವೆಂಬುದೆ ಪಂಚಪಾತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./47
ನಿಜವೀರಶೈವಸಂಪನ್ನರ ಘನವಿರತಿಯಮಾರ್ಗವನರಿಯದೆ,
ಶೈವಮತದ ಇಷ್ಟಲಿಂಗಬಾಹ್ಯರಂತೆ,
ಎನ್ನ ಗಂಡ ಸತ್ತನೆಂದು ರೋದನಗಳಿಂದ
ಗಂಡನ ಸಮಾಧಿಯಲ್ಲಿ ಬಳೆಯ ಒಡೆದು, ತಾಳಿಮಣಿಯ ಹರಿದು,
ನಮ್ಮ ಮುತ್ತೈದೆತನ ಇಂದಿಗೆ ಹೋಯಿತೆಂದು ಸಂದೇಹಿಯಾಗಿ,
ಘನಮಂತ್ರಮೂರ್ತಿ ಚಿದ್ಘನಲಿಂಗವೆಂಬ ನಿಜಪುರುಷನ ಮರೆದು,
ಮುಕ್ತಿಮಂದಿರವ ಸೇರದೆ, ಮತ್ತೊಬ್ಬನ ಕೂಡಿಕೊಂಡು,
ಅಯೋಗ್ಯಪುರುಷರೆನಿಸಿ, ವಿಷಯಭೋಗಿಗಳಾಗಿ,
ಅಷ್ಟಾವರಣ ಪಂಚಾಚಾರವ ಕೂಡದೆ, ಜನ್ಮಜರಾಮರಣಾದಿಗೊಳಗಾಗಿ
ಎಂಬತ್ತುನಾಲ್ಕು ಜೀವಜಂತುವೆನಿಸಿ, ಒಂದರಲ್ಲಿ ಸ್ಥಿರವಾಗದೆ
ತೊಳಲಿ ಬಳಲುವುದೆ ನಿಜಗೆಟ್ಟ ಅಯೋಗ್ಯರ ಮಾರ್ಗ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./48
ನಿಜವೀರಶೈವಾಚಾರ ಭಕ್ತಿ ವಿರಕ್ತಿ ಜ್ಞಾನಾನುಭಾವ
ನಿಜವೈರಾಗ್ಯ ಷಡುಸ್ಥಲಮಾಗರ್ೊದ್ಧಾರಕ ಶ್ರೀಗುರುಸೂತ್ರ
ದೀಕ್ಷೊಪದೇಶ ಸತ್ಯಶುದ್ಧ ನಡೆನುಡಿ ದೃಢಚಿತ್ತಿನ ಚಿದಾಂಶಿಕರಪ್ಪ
ಸದ್ಭಕ್ತ ವಿರಕ್ತ ನಿತ್ಯಮುಕ್ತ ಸಾಧ್ಯಗಣಾರಾಧ್ಯರು ತಮ್ಮರಿವ ತಾವರಿದು,
ಹಿಂದುಮುಂದಣ ಪುಣ್ಯಪಾಪವ ಮರೆದು,
ಯೋಗ್ಯ-ಅಯೋಗ್ಯ, ಅರ್ಪಿತ-ಅನರ್ಪಿತ ಮಾರ್ಗಕ್ರಿಯಾಚರಣೆಸಂಬಂಧದ
ಪೂರ್ವಪುರಾತನರೋಕ್ತಿಯಂ ಕರತಳಾಮಳಕವಾಗಿ,
ಸಾವಧಾನವೆಂಬ ಅತಿಜಾಗ್ರದಿಂದ ತ್ರಿವಿಧಜಪ ಪಂಚಜಪ
ಷಡ್ವಿಧಜಪ ಏಕಜಪ
ಅಗಣಿತ ಅಪ್ರಮಾಣಜಪವೆಂಬ ಶರಣನ ಚಿದ್ವಿಲಾಸದ
ಮಹಾಬೆಳಗಿನ ಪ್ರಭೆ
ಕೊನೆಯ ಮೊನೆಯೊಳಗೆ ನಿಂದು
ಚಿದ್ವಿಭೂತಿ ರುದ್ರಾಕ್ಷಮಾಲಾಲಂಕೃತರಾಗಿ
ಮೂಲಚಿದ್ಬಿಂದು ಚಿತ್ಪ್ರಸಾದಾಮೃತ ಪಾದೋದಕ ಪ್ರಸಾದಮಂ
ಮತ್ತಾ ಮೂಲಚಿದ್ಬಿಂದುಚಿತ್ಪ್ರಸಾದಾಮೃತಸ್ವರೂಪ
ಘನಮಹಾಲಿಂಗಪತಿ ಶರಣನಂಗಸತಿ ಪತಿವ್ರತಭಾವದಿಂದ
ಮೂಲಮೂರ್ತಿ ಚಿತ್ಪಾದೋದಕ ಪ್ರಸಾದ ಪ್ರಣಮದೇವನಾದ
ನಿಜಜಂಗಮನಾಥಂಗೆ ಸಮರ್ಪಿಸಿ,
ಸಾವಯ ನಿರವಯ ನಿರಂಜನ ಜಂಗಮಾರೋಗಣೆಯಿಂದ,
ಭಕ್ತ ಮುಕ್ತ ವಿರಕ್ತರೆಂಬ ತ್ರಿವಿಧಗಣಾರಾಧ್ಯರು
ಹರಹರ ಈ ಗುರುಕರುಣದಿಂದ ಬಹುತಪಸ್ಸಿನಫಲ ಒದಗಿ
ಚಿದಾವರಣ ಚಿದ್ಘನಲಿಂಗಾಂಗಸಂಗವಾದ ತ್ರಿಕೂಟಮಂ ಅರಿದು,
ಅಚ್ಚೊತ್ತಿ , ತ್ರಿವಿಧಾನುಭಾವದಿಂದ ತ್ರಿವಿಧ ಚಿತ್ಪಾದೋದಕ
ಪ್ರಸಾದ ಪ್ರಣಮವ,
ಮತ್ತಾ ಚಿತ್ಪಾದೋದಕ ಪ್ರಸಾದ ಪ್ರಣಮಕ್ಕೆ ತೃಪ್ತಿಯನೈದಿಸಿ,
ಭಕ್ತವಿರಕ್ತಮುಕ್ತರಾಚರಿಸುವ ಪರಿಯೆಂತೆಂದೊಡೆ : ಭಕ್ತನ ಭಕ್ತಿ ವಿರಕ್ತನಲ್ಲಿ , ವಿರಕ್ತನ ಭಕ್ತಿ ಭಕ್ತನಲ್ಲಿ
ಸಮರಸೈಕ್ಯವಾದುದೆ ಆಚರಣೆಯಾಗಿ,
ಇವರಿಬ್ಬರ ಭಕ್ತಿರತಿ ಮುಕ್ತಿಕಾಂತನಾದ
ನಿಜಸಂಗಸಂಯೋಗ ಚಿದ್ಘನಲಿಂಗದಲ್ಲಿ
ಸಮರಸೈಕ್ಯವಾದುದೆ ಸಂಬಂಧವಾಗಿ,
ನಿಲುಕಡೆಯ ತಿಳಿದು ಭಕ್ತವಿರಕ್ತರಿಬ್ಬರು ಕೂಡಿದಂಥ ಸ್ಥಾನದಲ್ಲಿ
ಮೂಲಮೂರ್ತಿಯಲ್ಲಿ ದೃಷ್ಟಿನಟ್ಟು,
ಪರಿಣಾಮತರವಾದ ಶಿವತತ್ವೋದಕವನ್ನು ಶೋಧಕತ್ವದಿಂದ
ಕಠಿಣಮಂ ಕಳೆದುಳಿದು,
ಅನಾದಿನೆನಹಿಂದೆ ಪಾದಾಭ್ಯಂಗನದಿಂದ
ತೊಳೆದಂಥಮಳ ಪಾದೋದಕವನ್ನು ಶಿವತತ್ವ ಲಿಂಗತತ್ವ,
ಆ ಲಿಂಗತತ್ವ ಸಂಬಂಧವಾದ ಪೃಥ್ವಿಜಲಾಗ್ನಿ ಪದಾರ್ಥದ
ಪೂರ್ವಾಶ್ರಯವ ಕಳೆದು,
ಪರಶಿವತತ್ವ ಪದಾರ್ಥಕ್ಕೆ ದ್ರವ್ಯಾರ್ಪಣಕ್ಕೆ ಯೋಗ್ಯವೆನಿಸಿ,
ತನ್ನ ಷಟ್ಪ್ರಣಮ ಸ್ವರೂಪವಾದ ಹಸ್ತದಿಂದ
ಷಟ್ಪ್ರಣಮಸ್ವರೂಪವಾದ ಪಾದದಡಿಮುಡಿಗಳ
ನಾಲ್ಕು ನಾಲ್ಕು ವೇಳೆ ಉಭಯಪಾದವನ್ನು ಸ್ಪರಿಶನಂಗೈದು,
ಭಕ್ತವಿರಕ್ತಗಣಸಮುದಾಯವೆಲ್ಲ ಮುಖಮಜ್ಜನ ಸ್ನಾನ
ಪಾಕಪಚನಾದಿಗಳನಾಚರಿಸಿ, ಲಿಂಗಬಾಹ್ಯರಿಗೆ ಹಾಕದೆ,
ಸುಯ್ದಾನದಿಂದ ಗುರುಪಾದೋದಕದಲ್ಲಿ ಗುರುಭಕ್ತರಾಗಿ,
ಲಿಂಗಪಾದೋದಕದಲ್ಲಿ ಲಿಂಗಭಕ್ತರಾಗಿ,
ಜಂಗಮಪಾದೋದಕದಲ್ಲಿ ಜಂಗಮಭಕ್ತರಾಗಿ,
ಈ ತ್ರಿವಿಧೋದಕದಲ್ಲಿ , ಒಂದೊಂದರಲ್ಲಿ ಒಂಬತ್ತು ,
ಒಂಬತ್ತು ಒಂಬತ್ತು ಅರಿದು ಆಚರಿಸಿದಲ್ಲಿ ಮೂವತ್ತಾರಾಗುವದು.
ಮತ್ತೆ ಒಂದೊಂದರೊಳಗೆ ಹತ್ತುತರದ ಪಾದೋದಕದಲ್ಲಿ
ಮಿಶ್ರಮಿಶ್ರಂಗಳಿಂದ ಮಹಾಜ್ಞಾನಾಚರಣೆಯಲ್ಲಿ ನೂರು ತೆರನಾಗಿ,
ಮಹಾಬಯಲಾಗಿ ತೋರಿತ್ತು ನೋಡಾ.
ಮತ್ತಂ, ಹಸ್ತಸ್ಪರಿಶನವಾದ ಗುರುಪ್ರಸಾದ, ಲಿಂಗಾರ್ಪಣ
ಲಿಂಗಪ್ರಸಾದ ಜಿಹ್ವಾರ್ಪಣ, ಜಂಗಮಪ್ರಸಾದವೆ ಸಹತ್ರಿವಿಧಾರ್ಪಣವಾದಲ್ಲಿ
ಪರಿಪೂರ್ಣಪ್ರಸಾದವಾಗಿರ್ಪುದು.
ಆ ಪ್ರಸಾದವೆ ಹನ್ನೊಂದುತೆರನಾಗಿರ್ಪುದು.
ಆ ಹನ್ನೊಂದುನೂರಾಯಿಪ್ಪತ್ತೊಂದುತೆರನಾಗಿ
ಬಯಲಿಂಗೆ ಮಹಾಬಯಲಾಗಿರ್ಪುದು ನೋಡಾ.
ಈ ವಿವರವ ಜಂಗಮವರಿದಾನಂದಿಸಿ, ಭಕ್ತಂಗೆ ತೋರಿ,
ಮುಕ್ತನೆನಿಸಿ, ಉಭಯವಳಿದೊಂದಾಗಿ,
ಮಹವ ಸಾಧಿಸಬಲ್ಲವರೆ ನಿನ್ನ ಪ್ರತಿಬಿಂಬರು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./49
ನಿರವಯರ್ಪಿತವಾದ ತದನಂತರದೊಳು
ಚಿದ್ಭಸ್ಮಧಾರಣಂಗೈದು, ಸವರ್ೊಪಚಾರವನುಳಿದು,
ಪತ್ರಿ ಪುಷ್ಪಗಳ್ಯಾವುದಾದರೂ ಒಂದೇ ಧರಿಸಿ,
ತನ್ನ ಹೃನ್ಮಂದಿರದಲ್ಲಿ ನೆಲೆಸಿರುವ ವಸ್ತುವು ಬೇರೆ, ನಾ ಬೇರೆಂಬ
ಉಭಯಭಾವಮಂ ಭಾವಸ್ಥಲ ಮನಸ್ಥಲ ಕರಸ್ಥಲ ಪರಿಪೂರ್ಣಸ್ಥಲವ ಕಾಣದೆ
ಇದ್ದಾಗೆ ಸರಿಮಾಡಿ, ಈ ತತ್ಸಮಯವೆಂತಾಯಿತೆಂದೊಡೆ :
ಕ್ಷೀರ ಕ್ಷೀರ ಕೂಡಿದಂತೆ, ಘೃತ ಘೃತ ಕೂಡಿದಂತೆ,
ಜ್ಯೋತಿ ಜ್ಯೋತಿ ಒಂದಾದಂತೆ, ಉದಕ ಉದಕವ ಕೂಡಿದಂತೆ,
ಕೇವಲ ಅಂಗ ಲಿಂಗದಲ್ಲಿ ಲಿಂಗಗುರುಚರಪಾದೋದಕ
ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರವೆಂಬ
ಚಿದಾಬ್ಧಿಸಂಗ ಚಿದ್ಬೆಳಗಿನ ಸಮರಸದಲ್ಲಿ
ಆ ಸಮರಸಪರಮಾಣುಮಹಾಂತದೈಕ್ಯದಲ್ಲಿ
ಆ ಐಕ್ಯ ನಿರವಯಬ್ರಹ್ಮವೆಂಬ ಕುರುಹು ನಷ್ಟವಾಗಿ,
ತಾನೆ ತಾನಾದಂತೆಯೆಂದು, ಒಳಹೊರಗೆನ್ನದೆ,
ಈ ಕೂಟವೆ ನಿರಂಜನ ಚಿನ್ಮಯರೂಪ ಘನಗಂಭೀರ ಜಂಗಮಮೂರ್ತಿ
ಭಾವಲಿಂಗಾರ್ಚನೆ ಇದೆಯೆಂದು,
ಮಹಾಜ್ಞಾನ ಪರಿಪೂರ್ಣಾನುಭಾವದಿಂದ ಪರಮಕಾಷ್ಠಿಯನೈದು,
ಹಿಂದುಮುಂದಣ ಭವಮಂ ನೀಗಿ, ತನ್ನ ಘನಮನೋಲ್ಲಾಸ ನಿಜನೈಷ್ಠೆ ಬೆಳಗೆ,
ಅಷ್ಟವಿಧಾರ್ಚನೆ ಷೋಡಶೋಪಚಾರವಾಗಿ,
ಭಕ್ತಜಂಗಮವೆಂಬುಭಯವಳಿದುಳಿದು ನಿಂದ ನಿರ್ವಾಣಪದಸ್ಥಾನಿಗಳೆ
ನಿರವಯಪ್ರಭು ಮಹಾಂತರೆಂದವರಲ್ಲಿ ಅಚ್ಚೊತ್ತಿದಂತಿರ್ಪರು ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./50
ನಿರಾವಲಂಬಜಂಗಮಲಿಂಗಮೂರ್ತಿಯ
ಚರಣಕಮಲದಡಿಯಲ್ಲಿ ಸ್ಥಾಪ್ಯವಾದ ಹಸ್ತಕಮಲದಲ್ಲಿ
ಶಕ್ತಿಸಂಬಂಧವಾದ ಕಿರಿಬೆರಳು ಶಿವಸಂಬಂಧವಾಗಿ ರಾಜಿಸುವಲ್ಲಿ
ಅಂಗುಷ್ಠವ ಕೂಡಿಸಿ, ತರ್ಜನಿ ಮಧ್ಯ ಅನಾಮಿಕಾಂಗುಲಿಗಳಲ್ಲಿ
ಅನಾದಿವಿಡಿದುಬಂದ ಜ್ಞಾನಗುರುಲಿಂಗಜಂಗಮಸಂಬಂಧವಾಗಿರ್ಪುದು.
ಆ ಜಂಗಮಮೂರ್ತಿಯ ಅಂಗುಷ್ಠವೆರಡು ಮಧ್ಯದಲ್ಲಿ ಕೂಡಿ
ಆದಿವಿಡಿದುಬಂದ ಕ್ರಿಯಾಗುರುಲಿಂಗಜಂಗಮಸಂಬಂಧವಾಗಿರ್ಪುದು.
ಇಂತೆಸೆವ ಸಾಕಾರ ನಿರಾಕಾರದ ನಿಲುಕಡೆಯ
ಗುರುಸ್ವಾನುಭಾವದಿಂದರಿದು ಆನಂದಿಸುವ ನಿಲುಕಡೆಯೆಂತೆಂದೊಡೆ :
ಆ ಜಂಗಮಮೂರ್ತಿಗಳಿಗೆ ಲಿಂಗಜಂಗಮದ ಕ್ರಿಯಾಪಾದೋದಕ
ಪ್ರಸಾದಸೇವನೆ ಮಾಡಿದುದರಿಂದ
ಆ ಜಂಗಮಮೂರ್ತಿಗಳಲ್ಲಿ ಆದಿವಿಡಿದು ಬಂದ
ಕ್ರಿಯಾಗುರುಲಿಂಗಜಂಗಮಸ್ಥಲಸಂಬಂಧವಾಗಿರ್ಪುದು.
ಆ ಸದ್ಭಕ್ತಗಣಂಗಳಲ್ಲಿ ಜಂಗಮಲಿಂಗದ
ಜ್ಞಾನಪ್ರಸಾದ ಪಾದೋದಕಸೇವನೆ ಮಾಡಿದುದರಿಂದ
ಆ ಸದ್ಭಕ್ತಗಣಂಗಳಿಗೆ ಅನಾದಿವಿಡಿದುಬಂದ
ಜ್ಞಾನಗುರುಲಿಂಗಜಂಗಮಸ್ಥಲ ಸಂಬಂಧವಾಗಿರ್ಪುದು.
ಈ ನಿಲುಕಡೆಯನರಿದ ಸಂಗಸಮರಸೈಕ್ಯರೆ
ನಿರವಯಪ್ರಭು ಮಹಾಂತರೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ. /51
ನಿರುಪಮಿತವೆನಿಸಿ, ಷಡ್ವಿಧಶೀಲ ವ್ರತಾಚಾರ ನೇಮನಿತ್ಯ
ಸತ್ಯಸದುಭಾವ ಸನ್ಮಾನಿತ ನಿಜೇಷ್ಟಲಿಂಗಸಂಬಂಧ
ಸದ್ಧರ್ಮಪ್ರಸನ್ನ ತ್ರಿವಿಧಪ್ರಸಾದಿಗಳಿರವದೆಂತೆಂದೊಡೆ:
ತನ್ನ ಸತ್ಕಾಯಕಮುಖದಲ್ಲಿ ಗುರುಕರುಣದಿಂದೊದಗಿದ
ತನುಮನಧನ ಸುಪದಾರ್ಥಗಳ ಘನಪವಿತ್ರಂಗಳಿರವನರಿದು,
ತನ್ನ ಸರ್ವೆಂದ್ರಿಮುಖದಲ್ಲಿ ಪರಿಣಾಮಿಸಬೇಕೆಂದಿಚ್ಛೆದೋರಿದೊಡೆ,
ಅದರೊಳಗೆ ಕ್ರಿಯಾಮುಖ ಜ್ಞಾನಮುಖ
ಮಹಾಜ್ಞಾನ ಮುಖವನರಿದು,
ಕ್ರಿಯಾರ್ಪಣಪದಾರ್ಥವ ಕ್ರಿಯಾಜಂಗಮ
ಲಿಂಗದೇವಂಗೆ ಸಮರ್ಪಿಸಿ,
ಅವರೊಕ್ಕುದ ಮಿಕ್ಕುದ ಬೆಸಗೊಂಡು,
ಇಷ್ಟಲಿಂಗಾರೋಪಿತಮುಖದಲ್ಲಿ ಪ್ರಾಣಲಿಂಗ ಭಾವಲಿಂಗಾರ್ಪಣವೆನಿಸಿ,
ಆ ಕ್ರಿಯಾಲಿಂಗಜಂಗಮಪ್ರಸಾದವೆ ಎನ್ನ ಕಾಯವೆಂದರಿದು,
ತನು ಮೀಸಲಾಗಿ, ಸತ್ಕ್ರಿಯಾ ಸಾಧನೆಯಳವಟ್ಟು,
ಜೀವಾತ್ಮನ ಸಂಚಲನಡಿಮೆಟ್ಟಿ, ನಿಂದ ನಿಲವೆ ತನುಶುದ್ಧಪ್ರಸಾದದಿರವು.
ಜ್ಞಾನಾರ್ಪಣಪದಾರ್ಥವ, ಜ್ಞಾನಜಂಗಮಲಿಂಗದೇವಂಗೆ ಸಮರ್ಪಿಸಿ,
ಅವರೊಕ್ಕುಮಿಕ್ಕ ಸಂತೋಷದಿಂದ ಮಹಾಜ್ಞಾನ ಘನಲಿಂಗಮಂತ್ರಮಯವೆನಿಸಿ,
ಅನಿಮಿಷ ರೂಪು ರುಚಿ ತೃಪ್ತಿಯಾದ ಮಹಾಶೇಷನ ಬೆಸಗೊಂಡು
ಇಷ್ಟಲಿಂಗ ಸೊಮ್ಮುಸಂಬಂಧದಿಂದ
ಪ್ರಾಣಲಿಂಗಾರೋಪಿತಮುಖದಲ್ಲಿ ಇಷ್ಟಲಿಂಗದಲ್ಲಿ ಸಮರಸೈಕ್ಯನಾದ
ಚಿತ್ಪ್ರಣಮ ಪ್ರಾಣಲಿಂಗ ಭಾವಲಿಂಗಾರ್ಪಣವೆನಿಸಿ,
ಆ ಸುಜ್ಞಾನಲಿಂಗಜಂಗಮಪ್ರಸಾದವೆ ಎನ್ನ ಮನವೆಂದರಿದು,
ಮನದ ನುಡಿ ಮೀಸಲಾಗಿ, ಸಮ್ಯಜ್ಞಾನಾಚಾರ ಸಾಧನೆ ಅಳವಟ್ಟು,
ಅಂತರಾತ್ಮನ ಸಂಚಲವನಡಿಮೆಟ್ಟಿ ನಿಂದ ನಿಲವೆ
ಮನ ಸಿದ್ಧಪ್ರಸಾದದಿರವು.
ಮಹಾಜ್ಞಾನಾರ್ಪಣಪದಾರ್ಥವ
ಮಹಾಜ್ಞಾನಜಂಗಮಲಿಂಗದೇವಂಗೆ ಸಮರ್ಪಿಸಿ
ಅವರೊಕ್ಕುಮಿಕ್ಕು ಸಂತೋಷದಿಂದ ಮಹಾಪ್ರಕಾಶಪ್ರಸಾದವೆಂದು
ಪರಿಪೂರ್ಣವೆನಿಸಿ,
ಅನಿಮಿಷಮಹಾವಲೋಕನ ರೂಪು ರುಚಿ ತೃಪ್ತಿಯಾದ
ಮಹಾಘನಚಿತ್ಕಲಾಶೇಷವ ಬೆಸಗೊಂಡು,
ನಿಜೇಷ್ಟಲಿಂಗ ಸೊಮ್ಮುಸಂಬಂಧದಿಂದೆ ಪ್ರಾಣಲಿಂಗಾರೋಪಿತಮುಖದಲ್ಲಿ
ಇಷ್ಟಲಿಂಗದ ಚಿಗ್ಹೃದಯದಲ್ಲಿ ಗೋಪ್ಯಮುಖದೊಳ್ ನೆಲೆಗೊಂಡಿರುವಂಥ
ಚಿತ್ಪ್ರಭಾಪ್ರಾಣಲಿಂಗ ಭಾವಲಿಂಗಾರ್ಪಣವೆನಿಸಿ,
ಆ ಮಹಾಜ್ಞಾನ ಲಿಂಗಜಂಗಮ ಪ್ರಸಾದವೆ ಎನ್ನ ಪ್ರಾಣವೆಂದರಿದು,
ಪ್ರಾಣನ ದೃಢ ನೈಷ್ಠೆ ನೆನಹು ನಿರ್ಧರ ಮೀಸಲಾಗಿ,
ಪರಿಪೂರ್ಣ ಮಹಾಜ್ಞಾನಾನುಭಾವಾಚಾರಸಾಧನೆಯಳವಟ್ಟು,
ಪರಮಾತ್ಮನ ಸಂಚಲವನಡಿಮೆಟ್ಟಿ ನಿಂದ ನಿಲವೆ
ಪ್ರಾಣಪ್ರಸಿದ್ಧ ಪ್ರಸಾದದಿರವುಯೆಂದು ಪೂರ್ವಪುರಾತನೋಕ್ತಿಯುಂಟು.
ಈ ಇರವನರಿಯದೆ,
ದಶವಿಧಪಾದೋದಕ ಏಕಾದಶಪ್ರಸಾದ ಪ್ರಣಮವ ಕಾಣಬಾರದು.
ಈ ನಿರ್ಣಯವನರಿದು, ಹಿಂದೆ ಹೇಳಿದ ಅರ್ಪಿತಾವಧಾನವ ಕಂಡುಂಡುಟ್ಟು,
ನಿತ್ಯತೃಪ್ತರಾದವರೆ ಕೇವಲ ನಿಜಜಂಗಮಪ್ರಾಣಿಯಾದ
ಅಚ್ಚಪ್ರಸಾದಿ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./52
ಪರತತ್ವದಿರವನರಿಯದೆ, ಕಟ್ಟುಕಟ್ಟಳೆಗೆ ಹೊರಗಾಗಿ,
ಬೇಡಿದ ಹಾಂಗೆ ಮುಂದುವರಿದು, ಲಿಂಗಭೋಗಿಗಳಾಗಿ,
ಅರುವೆಂಬ ಗುರುಮಾರ್ಗವ ಮರೆದು,
ಭೂರಿಲಿಂಗಲಾಂಛನಧಾರಕರಾಗಿ ದಂಡನಾಥನ
ಪದಾರ್ಥಕ್ಕೆ ಕಾರಣಿಕರೆನಿಸಿ,
ತುಂಡುಜಂಗಮ, ಮಿಂಡಜಂಗಮ, ಚೋರಜಂಗಮವೆನಿಸಿ,
ಶಿವಸೂತ್ರಶರೀರಿಗಳಾಗಿ, ನೆರೆದಿಪ್ಪ ಜಂಗಮವನಂತರುಂಟು.
ಇದರೊಳಗೆ ಪ್ರಮಥಗಣಂಗಳು ಅರಿದರಿದು,
ಪಾತ್ರ ಅಪಾತ್ರ ಸತ್ಪಾತ್ರವೆಂಬ,
ಪದಾರ್ಥ ಸುಪದಾರ್ಥ ಪ್ರಸಾದಗಳೆಂಬ ತ್ರಿವಿಧವರ್ತಕವಿಡಿದು,
ಸತ್ಕ್ರಿಯಾಚಾರಭಕ್ತಿ , ಸಮ್ಯಜ್ಞಾನಾಚಾರಭಕ್ತಿ ,
ನಡೆನುಡಿಗಳಿಂದ ಒಬ್ಬರಿಗೊಬ್ಬರು ಭೃತ್ಯರಾಗಿ,
ಅನಾದಿಚಿದ್ಭ್ರಹ್ಮವೆ ಸಾಕ್ಷಿಯಾಗಿ,
ಭಕ್ತಮಹೇಶಜಂಗಮಮೂರ್ತಿ ಮೊದಲಾದವರೆಲ್ಲ
ಭಕ್ತಿಯೇ ಮುಕ್ತಿಗೆ ಜೀವನವೆಂದರಿದು,
ಒಬ್ಬರೊಬ್ಬರು ಬಿನ್ನಪಗಳಿಂದೆ
ಆಚಾರದಾಜ್ಞೆಯೆಂಬ ಪಾವುಡದ ಬೋದುವ ಕಟ್ಟಿ,
ಸರ್ವಾಚಾರಸಂಪದವೆಂಬ ಬೆಳೆಯಬೆಳೆದು,
ಅನಾಚಾರವೆಂಬ ಕಸವ ಕಡೆಗೆ ಕಿತ್ತು ಬಿಸುಟಿ,
ಆಚಾರವೆ ಅಂಗ ಮನ ಪ್ರಾಣ ಭಾವ ಕರಣೇಂದ್ರಿಯಗಳಾಗಿ ಆಹ್ವಾನಿಸಿ,
ಅನಾಚಾರವೆ ಮಲಮೂತ್ರವೆಂದು ವಿಸರ್ಜಿಸಿ,
ತಮ್ಮ ನಿಜಚಿದ್ಬೆಳಗ ತಾವರಿದು,
ಮಲಮಾಯಾಭೋಗವ ಮರೆದಿಪ್ಪರು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./53
ಪರತತ್ವಮೂರ್ತಿ ಅಷ್ಟಾವರಣಸ್ವರೂಪ
ಶ್ರೀಗುರುಮಾರ್ಗಾಚಾರ್ಯ ಸದ್ಧರ್ಮೊದ್ಧಾರಕ ಭಕ್ತಗಣಾರಾಧ್ಯರು,
ಹಿಂದೆ ಹೇಳಿದ ಪಂಚಸೂತಕಂಗಳ ಭವಮಾಟಕೂಟದ ಶೈವಶಾಸ್ತ್ರವಿಡಿದು,
ಜ್ಯೋತಿಷ್ಯಕರ್ಮವ ಮಾಡಿ, ತನಗಾ ಪಂಚಾಂಗವೆ ತತ್ಪ್ರಾಣವಾಗಿ,
ಸದಾಚಾರ ಸದ್ಭಕ್ತಮಹೇಶ್ವರರಿಗೆ ಹೇಳುವ
ಕುಂಡಗೋಳಕರೆ ಪರಮಪಾತಕರು ನೋಡಾ.
ಆ ಪರಮಪಾತಕರು ವರ್ತಿಸಿ ನಿಜಗೆಟ್ಟು
ಸೂತಕವೆಂಬ ಪಾತಕಾಬ್ಧಿಯಲ್ಲಿ ಮುಳುಮುಳುಗೇಳುವ ಸೂತಕಗಳಾವಾವೆಂದಡೆ :
ಪ್ರಥಮದಲ್ಲಿ ಜನನಸೂತಕನಿರಸನಮಂ ಪೇಳ್ವೆನು.
ನಿರಂಜನ ನಿಃಶೂನ್ಯ ನಿಃಕಳಂಕ ಹರಗುರು ಲಿಂಗಜಂಗಮಭಕ್ತಮಹೇಶ್ವರರ
ಕ್ರಿಯಾಶಕ್ತಿಯ ಹೃತ್ಕಮಲದಲ್ಲಿ ಉದಯವಾದ ಶಿಶುವು
ಧರಣಿಯ ಮೇಲೆ ಪತನವಾದಾಗಳೆ
ಶ್ರೀಗುರುವಿನ ಆಜ್ಞೋಪದೇಶದಿಂದ ಶಿವಮಂತ್ರವನ್ನುಚ್ಚರಿಸುತ್ತ,
ಲಿಂಗಷಟ್ಸ್ಥಲವನು, ಲಿಂಗ ಛಿನ್ನಭಿನ್ನವನು,
ಲಿಂಗಲಕ್ಷಣವನು ನೋಡಿ, ವಿಚಾರತ್ವದಿಂದ,
ಪ್ರಥಮದಲ್ಲಿ ಆ ಲಿಂಗಾಂಗಕ್ಕೆ ಗೋಮೂತ್ರವ ತಳೆದು,
ಆ ಲಿಂಗಾಂಗಸಂಬಂಧಸೂತ್ರದಿಂದಮಳಪಾದೋದಕದೊಳ್ ಸ್ನಾನಂಗೈದು
ಶ್ರೀಗುರುಹಸ್ತದಿಂದ ವಿಭೂತಿಪಟ್ಟವಂ ಕಟ್ಟಿ,
ಶಿವಪಂಚಾಕ್ಷರಮಂ ಲಿಖಿಸಿ,
ಆ ಶಿಶುವಿನ ನಾಭಿನಾಳಂ ಕೊಯಿವುದೆ ಗಣಮಾರ್ಗವು.
ಸಾಕ್ಷಿ : “ಲಿಂಗಾಂಕಿತಂ ತನುಪ್ರಾಣಂ ಲಿಂಗರೂಪೇಣ ರೂಪಿಣ ಃ |
ಲಿಂಗಭಕ್ತಿಪರಜ್ಞಾನಂ ಪ್ರಾಣಲಿಂಗೀತಿ ಕಥ್ಯತೇ ||”
ಎಂದುದಾಗಿ,
ಇಂತು ಗುರುಮುಟ್ಟಿ ಪೂರ್ವಲಿಖಿತವ ತೊಡೆದು,
ವಿಭೂತಿಪಟ್ಟವಂ ಕಟ್ಟಿ, ಪಂಚಾಕ್ಷರ ಶಿವಲಿಖಿತಮಂ ಮಾಡಿ,
ಆ ಭಕ್ತಶಿಶುವಿನ ಲಿಂಗಾಂಕಿತವ ಮಾಡದೆ
ಶಿವಸೂತ್ರನಾಭಿನಾಳವ ಕೊಯ್ದರಾದಡೆ
ಶಿವದ್ರೋಹಿಗಳೆನಿಸಿಕೊಂಡು ಶಿಕ್ಷೆಗೊಳಗಾಹರು.
ಈ ಮಾರ್ಗವರಿದು ಲಿಂಗಾಂಕಿತವಾದ ಮೇಲೆ,
ಆ ಲಿಂಗಶಿಶುವನೆತ್ತಿಕೊಂಬುದು.
ಇಂತಲ್ಲದೆ, ಲಿಂಗಬಾಹ್ಯರಸಂಗಡ ಜನನಕೃತ್ಯವ ಮಾಡಿಸಿ,
ಹುರಿಯ ಕೊಯಿಸಿ, ಎಣ್ಣೆ ಬೆಣ್ಣೆಗಳ ಹಚ್ಚಿ, ನೀರನೆರೆದುಕೊಂಡು,
ಆ ಭವಿಸಂಸರ್ಗಲಿಂಗಾಂಕಿತಹೀನವಾದ ಶಿಶುವ,
ಭಕ್ತಮಹೇಶ್ವರರ ಕ್ರಿಯಾಂಗನೆಯರೆತ್ತಿ, ಅಮೃತಗುಟುಕಕೊಟ್ಚರೆ
ರೌರವನರಕ ಪಿತ-ಮಾತೆ-ಸುತರಿಗೆಂದುದು ಹರವಾಕ್ಯವು.
ಅದೆಂತೆಂದೊಡೆ : ಸಾಕ್ಷಿ : “ಲಿಂಗಾಂಗಸಂಗಸಂಗಿನಾಂ ಲಿಂಗಬಾಹ್ಯಸತೀಸುತಾಃ |
ಆಲಿಂಗಚುಂಬನಾಚ್ಚೈವ ರೌರವಂ ನರಕಂ ವ್ರಜೇತ್ ||”
ಎಂದುದಾಗಿ,
ಲಿಂಗಬಾಹ್ಯರ ಲಿಂಗಸಮರಸವನುಳಿದು
ಭವಿ ಮಾಟಕೂಟವ ತಿರಸ್ಕರಿಸಿ,
ಶ್ರೀಗುರುಕಾರುಣ್ಯದಿಂದ ಲಿಂಗ ಆಯತ ಸ್ವಾಯತ ಸನ್ನಿಹಿತವೆಂಬ ಭಾವವ
ಸತಿ-ಪತಿ-ಭಕ್ತ-ಮಹೇಶ-ಗಣಾರಾಧ್ಯರಿಗೆ ಸನ್ಮತವಾಗಿ,
ನಿರ್ಧಾರವಾದ ಬಳಿಕ ಲಿಂಗಾಂಗಸಂಬಂಧಿಗಳಿಂದ
ನಿಮಿಷಾರ್ಧವಗಲದಂಥಾ ಲಿಂಗಧಾರಣ ಲಿಂಗಾರ್ಚನಾರ್ಪಣಸ್ಥಲವನರಿದು,
ಲಿಂಗಸ್ಪರಿಶನದಿಂದ ಚರಪಾದೋದಕ
ಲಿಂಗೋದಕಗಳಲ್ಲಿ ಜಳಕವ ಮಾಡಿಸಿ,
ಚರಲಿಂಗಸ್ಪರಿಶನಭೂತಿಯಂ ಮಂತ್ರಸ್ಮರಣೆಯಿಂದ ಧಾರಣಂಗೈದು
ಸಕಲಕ್ರಿಯೆಗಳಿಗೆ ಲಿಂಗಭಸಿತಮಂತ್ರವೆ ಮುಂತಾಗಿ
ಚರಮೂರ್ತಿ ಚರಣಧೂಳನದಿಂದ ಪವಿತ್ರವಾದ
ಲಿಂಗಪ್ರಸಾದದೆಣ್ಣೆ ಬೆಣ್ಣೆ ಮಧುರಸಾಮೃತವನೆರೆದು,
ಘನಲಿಂಗಮೋಹದೊಳ್ ಅತಿ ಪ್ರೇಮದಿಂ ಸಾಕುವುದೆ
ಭಕ್ತಮಹೇಶ್ವರರಿಗೆ ಹೊದ್ದಿತ್ತಿದ್ದಿತ್ತೆಂಬ
ಭ್ರಾಂತುಭ್ರಮೆಗಳಿಲ್ಲದೆ ವಿರಾಜಿಸುವ
ಭವಿಮಾಟಕೂಟವಿರಹಿತವಾದ ಲಿಂಗಾಚಾರಮಾರ್ಗವು.
ಇಂತಪ್ಪ ಘನಲಿಂಗಾಚಾರದ ಹರಗುರುಮಾರ್ಗದ ಕ್ರಮಕಟ್ಟಳೆಯನರಿಯದೆ,
ಭವಜೀವಿ ಭವಿಮಾನವರಂತೆ ಪುತ್ರೇಷಣದ ಭ್ರಾಂತಿನೊಳ್
ಲಿಂಗಶಿಶುವಿಂಗೆ ಈರಲು, ಗಾಳಿಸೋಂಕು, ಮೂವಟ್ಟಲು,
ದೃಷ್ಟಿಪತನ ಬಾಲಗ್ರಹ ಮೊದಲಾದ
ನಾನಾ ಸಂಕಲ್ಪ ಸೂತಕ ಹೊಲೆಕರ್ಮವ ಮಾಡಬೇಕೆಂದು
ಶಕುನಕಾಣಿಕೆಯರಂ ಕೇಳಿ, ಪಂಚಾಂಗದ ಜೋಯಿಸರಂ ಬೆಸಗೊಂಡು,
ಅನಾಚಾರಕೃತ್ಯಗಳಿಂದ ಜನನಸೂತಕ ಭವಕರ್ಮಗಳ ಕಲ್ಪಿಸಿ,
ಮಾಡುವ ಭಕ್ತ ಮಹೇಶಂಗೆ ಆಚಾರವಿಲ್ಲ, ಗುರುವಿಲ್ಲ, ಲಿಂಗವಿಲ್ಲ,
ಜಂಗಮವಿಲ್ಲ, ಪಾದೋದಕಪ್ರಸಾದವಿಲ್ಲ.
ಅವರು ಭಕ್ತಮಹೇಶ್ವರರಲ್ಲ ; ಅವರಿಗೆ ರೌರವನರಕ ತಪ್ಪದು.
ಅದು ಎಂತೆಂದೊಡೆ – ಶಿವಾಗಮ ಸಾಕ್ಷಿ : “ಯದ್ಯಪಿ ಲಿಂಗದೇಹೀನಾಂ ಜಾತಕಾಲೇ ನ ಸೂತಕಃ |
ಪ್ರಮಾದಾತ್ಕುರುತೇ ಯಸ್ತು ನರಕೇ ಕಾಲಮಕ್ಷಯಂ ||
ತಿಥಿ ವಾರಂ ಚ ನ ಭೃತ್ಯಂ ನಕ್ಷತ್ರಾಣಿ ಗಣಯೇತ್ |
ಶ್ರಾವಯಂ ತಿಥಿವಾರಂ ಚ ತದ್ಭಕ್ತಃ ನರಕಂ ವ್ರಜೇತ್ ||”
ಎಂದುದಾಗಿ,
ನಿಜವೀರಶೈವಸಂಪನ್ನರೆನಿಸಿ,
ಈ ಹೆತ್ತ ಹೊಲೆಕರ್ಮವ ಮಾಡುವರು ಭಕ್ತಮಹೇಶ್ವರರಲ್ಲ.
ಆ ಭವಿಕರ್ಮಿಗಳ ಗೃಹದಲ್ಲಿ ಹೊಕ್ಕು
ಲಿಂಗಾರ್ಚನಾರ್ಪಣಗಳ ಮಾಡುವಾತ ಜಂಗಮಸ್ಥಲಕ್ಕೆ ಸಲ್ಲ.
ಈ ಮೂವರಿಗೆ ಸಾಕಾರಸೃಷ್ಟಿಯುಳ್ಳನ್ನಕ್ಕರ
ಗುರುಮಾರ್ಗಾಚಾರದ ಪ್ರಮಥಗಣ ಪರಶಿವತತ್ವಪದ
ದೊರಕೊಳ್ಳದು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./54
ಪರಮಕೈಲಾಸದ ವಡಬಾಗ್ನಿಮಂಟಪದಲ್ಲಿ
ಅನಾದಿಪ್ರಮಥಗಣಾರಾಧ್ಯರು ತಿರಸ್ಕರಿಸಿ
ಮಹಾಜ್ಞಾನಾಗ್ನಿಯಿಂದ ದಹಿಸಿದ ಪಂಚಸೂತಕಮಂ,
ಪರಮೇಶ್ವರನು ಚಿತ್ಕಾಂತೆಯಾದ ಶಾಂಭವಿಗೆ ಉಪದೇಶಿದನು.
ಆಗಮೋಕ್ತ ಸಾಕ್ಷಿ : “ಆದಿಬಿಂದೋದ್ಭವೆ ಬೀಜಂ ಬೀಜಮಧ್ಯಂ ಸ್ಥಿತಂ ಕುಲಃ |
ಬೀಜಃ ನಾಸ್ತಿ ಕುಲೋ ನಾಸ್ತಿ ತಸ್ಮೆ ಗಣಕುಲೋ ಭವೇತ್ ||”
ಎಂದುದಾಗಿ,
ಮಹಾಜ್ಞಾನೋದಯದಿಂದ ಪೂರ್ವಜನ್ಮವಳಿದು
ಪುನರ್ಜಾತನಾದನಾಗಿ,
ಸರ್ವಾಂಗದಲ್ಲಿ ಚಿದ್ರೂಪವಾದ,
ಚಿನ್ಮಯ ಲಿಂಗಾಯತ ಸ್ವಾಯತ ಸನ್ನಹಿತವಾದವಧಾನ
ಸದ್ಧರ್ಮ ಸದ್ಭಕ್ತ ಮಹೇಶ್ವರರಿಗೆ
ಜನನಸೂತಕವೆಂಬುದೆ ಪರಮಪಾತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./55
ಪರಮಗುರು ಲಿಂಗಜಂಗಮವ
ನಿಜವಿಶ್ವಾಸ ನೈಷ್ಠೆಯೊಳ್ ಮೂರ್ತಿಗೊಳಿಸಿ ಅರ್ಚಿಸುವ
ಸುಚಿತ್ತಕಮಲದಳಂಗಳೆಲ್ಲ ಒಂದೊಡಲಾಗಿ,
ಭಕ್ತನ ಕರಕಮಲ, ಜಂಗಮದ ಚರಣಕಮಲ,
ಈ ನಾಲ್ಕರಲ್ಲಿ ಸಂಬಂಧವಾದ ಪ್ರಣಮದೊಳ್ ಕೂಡಿದ
ನೇತ್ರಕಮಲ ಒಂದಾದ,
ಸಮರಸೈಕ್ಯವಾಗಿ ಕೂಡಿದ ತ್ರಿಕೂಟಸಂಗಮಸ್ಥಾನವಿದೆ.
ಅಷ್ಟಾಷಷ್ಟಿವರಕೋಟಿ ತೀರ್ಥಸ್ಥಾನವಿದೆ.
ದೇವಗಂಗೆ ನೀಲಗಂಗೆ ಶಿವಗಂಗಾ ಸರಸ್ವತಿ ಯಮುನಾಸ್ಥಾನವಿದೆ.
ಚಿತ್ಸೂರ್ಯ ಚಂದ್ರಾಗ್ನಿಮಂಡಲವಿದೆ.
ಜ್ಯೋತಿರ್ಮಂಡಲ ಅಖಂಡಜ್ಯೋತಿರ್ಮಂಡಲ
ಅಖಂಡಮಹಾಪರಿಪೂರ್ಣಜ್ಯೋತಿರ್ಮಂಡಲ ಸ್ಥಾನವಿದೆ.
ರೋಷವೆಂಬ ಕಾಲರತಿಕ್ರೀಡಾಭ್ರಾಂತೆಂಬ ಕಾಮ
ಆಸೆ ಆಮಿಷ ಲೋಭ ಮೋಹ ಮದ ಮತ್ಸರವೆಂಬ
ಮಾಯಾ ಸಂಸಾರಸಂಕಲ್ಪ ವಿಕಲ್ಪಂಗಳ ಹಿಂದುಳಿದು,
ಆದ್ಯರು ಭೇದ್ಯರು ವೇದ್ಯರು ಸಾಧ್ಯರುಯೆಂದವತರಿಸಿ,
ಜಿಹ್ವಾತುರ ಗುಹ್ಯಾತುರ ಅರ್ಥಾತುರ
ತ್ಯಾಗಾತುರ ಭೋಗಾತುರ ಯೋಗಾತುರ ಕಡೆಯಾದ
ಅನಂತ ಆತುರಗಳೆಂಬ ಷಡಿಂದ್ರೀಕರಣ ವಿಷಯವ್ಯಾಪಾರಂಗಳ
ಜೊಳ್ಳುಮಾಡಿ ತೂರಿ, ಜಗದಾದಿ ಗಟ್ಟಿಬೀಜವಾಗಿ,
ನಿಂದ ನಿಲುಕಡೆಯ ಉಳಿದ ಉಳುವೆಯ ಮಹಾಘನದುನ್ಮನಿಸ್ಥಾನವಿದೆ.
ಎನ್ನ ಭಕ್ತಿ-ಜ್ಞಾನ-ವೈರಾಗ್ಯ-ಕ್ರಿಯಾಚಾರ
ಸತ್ಯಶುದ್ಧ ನಿಜನಡೆನುಡಿಗಳ ಕರುಣಿಸಿ,
ಅಂಗ-ಮನ-ಪ್ರಾಣ-ಭಾವ-ಕರಣೇಂದ್ರಿಗಳ ಪಾವನವೆನಿಸಿ ಸಲಹಿದ
ಪರಮಾಮೃತಸುಧೆಯಿದೆ.
ಭಕ್ತಸ್ಥಲ ವಿರಕ್ತಸ್ಥಲ ಪ್ರಸಾದಿಸ್ಥಲ ಪ್ರಾಣಲಿಂಗಿಸ್ಥಲ
ಶರಣಸ್ಥಲ ಐಕ್ಯಸ್ಥಲ ನಿಃಕಳಂಕಸ್ಥಲ ನಿರ್ಮಾಯಸ್ಥಲ ನಿರಾಲಂಬಸ್ಥಲ
ನಿಃಪ್ರಪಂಚಸ್ಥಲ ನಿಜಾನಂದಸ್ಥಲ ನಿರೂಪಾಧಿಕಸ್ಥಲ ನಿರ್ನಾಮಕಸ್ಥಲ
ನಿರ್ಗುಣಸ್ಥಲ ಸಗುಣಸ್ಥಲ ನಿತ್ಯತೃಪ್ತಸ್ಥಲ
ಕಾಯಾರ್ಪಣಸ್ಥಲ ಕರಣಾರ್ಪಣಸ್ಥಲ ಭಾವಾರ್ಪಣಸ್ಥಲ
ಪರಿಪೂರ್ಣಾರ್ಪಣಸ್ಥಲ ನಿರವಯಸ್ಥಲವೆ ಕಡೆಯಾದ
ಏಕವಿಂಶತಿ ದೀಕ್ಷಾನುಭಾವ ಏಕವಿಂಶತಿ ಯುಗಂಗಳನೊಳಗೊಂಡು
ಅಣುವಿಂಗೆ ಪರಮಾಣುವಾಗಿ, ಮಹತ್ತಿಂಗೆ ಘನಮಹತ್ತಾಗಿ,
ಸೃಷ್ಟಿ ಸ್ಥಿತಿಲಯಂಗಳಿಗೆ ಕಾರಣಾರ್ಥ
ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಪರಮಾನಂದ
ಪಂಚಪರುಷದ ಖಣಿಯಿದೆಯೆಂದು
ಪೂರ್ಣಾನುಭಾವಭರಿತವಾದ ನಿರ್ದೆಹಿಗಳೆ
ನಿರವಯಪ್ರಭು ಮಹಾಂತಘನವೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./56
ಪರಮಪವಿತ್ರ ಭಕ್ತೋಪಕಾರ ನಿಜವೀರಶೈವೋದ್ಧಾರಕ
ನಿಜವಿರತಿ ಕೌಪ ಕಟಿಸೂತ್ರ ಕಂತೆ ಕಮಂಡಲ
ಮೊದಲಾದ ಲಾಂಛನ ಪರಿಪೂರಿತ
ಷಟ್ಸ್ಥಲೋಪದೇಶ ಮಾಗರ್ೊದ್ಧಾರಕ,
ಸದ್ಭಕ್ತಿ ಜ್ಞಾನಾಚಾರ ಕ್ರಿಯಾನುಭಾವ
ನಿಜವೈರಾಗ್ಯಯೋಗಾನಂದಭರಿತೋಲ್ಲಾಸ,
ಸತ್ಯಶುದ್ಧ ನಡೆನುಡಿ ದೃಢಚಿತ್ತ ಸ್ವಯಚರ
ಪರಸ್ಥಲಕಾರಣವತಾಯ್ರ್ಯರಾಗೊಪ್ಪುವಂಥ,
ನಿಜಜಂಗಮಲಿಂಗಮೂರ್ತಿಗಳಾಚರಿಸಿ,
ಮೂರ್ತಿಸ್ವರೂಪರಾಗಿ ನಿಂದನಿಲುಕಡೆಯೆಂತೆಂದೊಡೆ :
ಸ್ವಯಸ್ಥಲ ಚರಸ್ಥಲ ಪರಸ್ಥಲವನೊಳಕೊಂಡೊಪ್ಪುವ
ಶಕ್ತಿಸಮೇತರಾದ ಘನಲಿಂಗಜಂಗಮಮೂರ್ತಿಗಳಾದರು.
ಕ್ರಿಯಾಶಕ್ತಿವಿರಹಿತರಾದ ಪಟ್ಟದದೇವರು ಅತೀತ ಚರಮೂರ್ತಿಗಳಾದರು.
ಆ ಶಕ್ತಿಸಮೇತವಾದ ಚತುರಾರಾಧ್ಯರು ಲಿಂಗಧಾರಣಸ್ಥಲ
ಶಂಖ ಗಿಳಿಲುವಿಡಿದ ಗುರುಸ್ಥಲ,
ದಂಡಾಗ್ರ ಗಿಳಿಲುವಿಡಿದ ಅತೀತಸ್ಥಲದ
ದೀಕ್ಷಾರ್ಚನಸ್ಥಲ ಮೊದಲಾದ
ತ್ರಿವಿಧಸ್ಥಲವ ಬಿಡುಗಡೆಯುಳ್ಳ ವಿರಕ್ತಿಸ್ಥಲವಿಡಿದವರಾದರು.
ಚತುರ್ವಿಧಸ್ಥಲದಿಂದ ಆಚರಿಸುವ ಜಂಗಮಮೂರ್ತಿಗಳು
ಭಕ್ತರ ವಿಶ್ವಾಸದಿಂದ ದಾಸೋಹನಿಮಿತ್ಯಾರ್ಥವಾಗಿ
ಲಿಂಗಮುದ್ರಾಭೂಮಿಯೆನಿಸಿ ಮಠಮನೆಗಳ ಮಾಡಿದವರಾಗಲಿ,
ಪಂಚಮುದ್ರೆಗಳ ಧರಿಸಿ ನೂರಾರುಮೂರ್ತಿಗಳೊಡಗೂಡಿ,
ವಾಹನಾದಿ ಸಾಹಿತ್ಯಮಾನದಿಂದ ಗ್ರಾಮಾನುಗ್ರಾಮಕ್ಕೆ
ಉತ್ಸಾಹದಿಂದ ದುಷ್ಟನಿಗ್ರಹ ಶಿಷ್ಟಪ್ರತಿಪಾಲನೆಯ ಮಾಡಿ,
ಆಚಾರೋದ್ಧಾರಕ ಗುರುಮಾರ್ಗವಿಡಿದ ಗುರುಸಾಂಪ್ರದಾಯಕರು,
ತೀರ್ಥಪ್ರಸಾದ ಸ್ಥಲಸಂಬಂಧ ಕೊಡುಕೊಂಬುವ
ತ್ರಿವಿಧದೀಕ್ಷೊಪಕಾರಣಿಕರೆಲ್ಲ ತಮ್ಮ ಸ್ಥಲಸ್ಥಲವಿದ್ದಂತೆ
ಕರ್ತೃಭೃತ್ಯಸ್ಥಲದ ವರ್ಮಾದಿವರ್ಮವರಿದು,
ಭಕ್ತಿಜ್ಞಾನವೈರಾಗ್ಯಕೀಲ ತಿಳಿದು, ನಡೆನುಡಿ ಒಂದಾಗಿ,
ಅಂತಜ್ಞರ್ಾನ ಬಹಿಕ್ರರ್ಿಯಾ ಹೋದಲ್ಲದೆ
ಸಪ್ತವಿಧಭಕ್ತಿಗಳಿಂದ ಸಾವಧಾನವಿಡಿದು,
ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿಸ್ಥಲವನಾಚರಿಸುವುದು.
ಸತ್ಯಶುದ್ಧಸನ್ಮಾರ್ಗರ ನಡೆಯುಳ್ಳವರೆ ನಮ್ಮ ಪರಿಪೂರ್ಣಪ್ರಸಾದಿಗಳೆನಿಸುವರು.
ಗುರುಲಿಂಗಜಂಗಮವು ಅಲ್ಲವಾದಡೆ,
ಷಡುಸ್ಥಲಮಾರ್ಗಕ್ಕೆ ಸಲ್ಲರೆಂಬುವುದೆ ಹರಗುರುವಾಕ್ಯ ಪ್ರಮಾಣವು.
ಅದೇನು ಕಾರಣವೆಂದಡೆ : ತಮ್ಮ ಮೂಲಚಿತ್ತುವಿನ ಕೊನೆಮೊನೆಯ ಮೇಲೆ ಉದಯವಾದ
ಅಚ್ಚಪ್ರಸಾದಿಗಳು ನಿಚ್ಚಪ್ರಸಾದಿಗಳು ಸಮಯಪ್ರಸಾದಿಗಳು
ಅದರಿಂದ ಎಲ್ಲಿ ಜನನವಾದಂಥಾದೆಲ್ಲ ಅದೇ ಬೆಳೆಯಾಗಿ
ಲಯವಾಗಬೇಕೆಂಬ ದೃಷ್ಟವನರಿದು ಭಕ್ತಗೆ ಸಲ್ಲುವದು.
ತಮಗೆ ಬೇಕಾದಂಥದ ಕೊಂಬೆವು,
ನಮಗೇತರ ಶೀಲ ವ್ರತಾಚಾರ ನೇಮ ನಿತ್ಯವೆಂದು
ಪ್ರಸಾದ ಪಾದೋದಕ ಪ್ರಸಿದ್ಧಪ್ರಸಾದಸೇವಿತರೆಂದು
ನಡೆಗೆಟ್ಟನುಡಿಯ ನುಡಿದು, ನಾವು ಕೊಂಡುದು ಪ್ರಸಾದ,
ನಿಂದುದು ಓಗರವೆಂದು,
ಮನಸಿಗೆ ಕೈಗೆ ಬಂದಂತೆ ತಿಂದು ತೇಗುವ,
ಪಾದೋದಕಪ್ರಸಾದದ್ರೋಹಿಗಳ ಮೋರೆಯ
ಮೇಲೆ ಪಟಪಟನೆ ಹೊಡೆದು
ಭವಘೋರಸಂಸಾರಸಾಗರಕ್ಕೆ ಹಾಕೆಂದವರು
ನಮ್ಮ ಪೂರ್ವಪುರಾತನ ಗುರು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./57
ಪರಮಪವಿತ್ರ ಹರಗಣಸಾಕ್ಷಿಯಾಗಿ,
ಸೂತ್ರ ಗೋತ್ರ ಪರಿಪೂಜ್ಯತ್ವವುಳ್ಳಂಥ ಕ್ರಿಯಾಶಕ್ತಿಯ
ಸರ್ವೆಂದ್ರಿಮುಖದವಯವಂಗಳನು ಕೂನಗಳ ವಿಚಾರಕತ್ವದಿಂ
ಘನಲಿಂಗಮೂರ್ತಿ ಶ್ರೀಗುರುವಿನ
ಕರುಣಕಟಾಕ್ಷ ಶಿವದೀಕ್ಷೆಗಳಿಂದ ಪವಿತ್ರಕಾಯವೆನಿಸಿ,
ಶಿವಧರ್ಮಾಂತರಾಳವೆಂಬ ದಂಡಕಮಂಡಲಗಳೆ
ಕಂಭ ಕುಂಭ ಹಂದರ ಮುತ್ತೈದೆ ಬಾಸಿಂಗದೆ ಸಾಕ್ಷಿಯಾಗಿ,
ಪಂಚಕಳಸ ಆರಾಧ್ಯಗಣಸಮೂಹವೆಲ್ಲ ಸಂತೋಷಂಗೈದು,
ಇಷ್ಟಲಿಂಗವೆಂಬ ರಮಣಂಗೆ ಪ್ರಾಣಲಿಂಗವೆಂಬ ರಮಣಿಗೆ
ಸುಹಸ್ತಗಳ ಕೂಡಿಸಿ, ಅರ್ಚಿಸಿ, ನವಸೂತ್ರವೆಂಬ ಕಂಕಣವ ಕಟ್ಟಿ,
ಸ್ಥಿರಸೇಸೆಯನೆರೆದು, ಭಾವಭರಿತವಾಗಿ,
ಸಮರಸಾಚರಣೆಗಳಿಂದ ಪರತತ್ವಲಿಂಗಲೋಲುಪ್ತರಾಗಿ,
ಜಂಗಮಾರಾಧನೆ ದಾಸೋಹಂಭಾವದಿಂದ
ಶಿವಯೋಗಸಂಪನ್ನರಾಗಿರಿಯೆಂದು ಅಭಯಕರವಿತ್ತು
ಶರಣಮಹಾರುದ್ರ ಗಂಟೆಹೊಡೆದಂಥ ಕ್ರಿಯಾಶಕ್ತಿಗಳೆಷ್ಟಾದರೂ
ರತಿವಿರತಿಗಳೊಳ್ ಬಳಸಿಬ್ರಹ್ಮವಾಗಿರ್ಪುದೆ ಸತ್ಯಸದ್ಧರ್ಮಿಗಳ ಸನ್ಮಾರ್ಗವು.
ಈ ಸನ್ಮಾರ್ಗವನುಳಿದು, ವಿಷಯಾತುರ ಹೆಚ್ಚಿ,
ಒಬ್ಬರು ಭೋಗಿಸಿದ ಎಂಜಲಸ್ತ್ರೀಯರ ಆಲಿಂಗಿಸಿ,
ತನ್ನ ರಾಣಿಯೆಂದು ನುಡಿಗಣದಿಂದ ಭಾವಿಸುವುದೊಂದು ದುರಾಚಾರ.
ಜಿಹ್ವೆಯಿಂದ ಮಾತುಮಾತಿಗೆ ಹೆಂಡತಿ ಅಕ್ಕ ಅವ್ವ ತಂಗಿಯೆಂದು
ಬೊಗಳುವುದೊಂದು ದುರಾಚಾರ.
ಪರಪುರಷಂಗೆ ರಾಣಿಯಾದ ಸ್ತ್ರೀಯಳ ಹಾವಭಾವ ವಿಲಾಸಗಳ ನೋಡಿ,
ವಿಭ್ರಮಣೆಗೊಂಡು, ಅಂತರಂಗದಲ್ಲಿ ಕಳವಳಿಸಿ,
ಹಾಸ್ಯರಹಸ್ಯವ ಮಾಡಬೇಕೆಂಬುದೊಂದು ದುರಾಚಾರ.
ಇಂತು ತ್ರಿವಿಧರತಿಗಳಿಂದ ವರ್ತಿಸುವುದೆ ದ್ವಿತೀಯಪಾತಕ.
ಇದಕ್ಕೆ ಹರನಿರೂಪ ಸಾಕ್ಷಿ : “ಪರಸ್ತ್ರೀಣಾಂ ಚ ಸಂಸರ್ಗಾತ್ ಮೋಕ್ಷೊ ನಾಸ್ತಿ ವರಾನನೇ |
ಜಪಹಾನಿಃ ತಪೋಹಾನಿಃ ರೌರವಂ ನರಕಂ ವ್ರಜೇತ್ ||”
“ಹರಿಣಪಾದಮಾತ್ರೇಣ ಬಂಧಿತಂ ಚ ಜಗತ್ರಯಂ |
ತತ್ಸುಖಂ ಬಿಂದುಮಾತ್ರೇಣ ದುಃಖಂ ಪರ್ವತಮೇವ ಚ ||”
ಇಂತೆಂಬ ಹರಗುರುವಾಕ್ಯ ಪ್ರಮಾಣವಾಗಿ,
ಸದ್ಭಕ್ತ ಮಹೇಶ್ವರರು ಪರರೆಂಜಲಸ್ತ್ರೀಯಳ ಭೋಗಿಸಿದಡೆ
ಹಿಂದಣ ಭವಪಾಶ ಬೆನ್ನಬಿಡದುಯೆಂದು
ದ್ವಿತೀಯ ಪಾತಕಂಗಳ ನಿರಸನಂಗೈದು, ತ್ರಿಕರಣಶುದ್ಧವಾಗಿ,
ನಡೆದಂತೆ ನುಡಿದು, ನುಡಿದಂತೆ ನಡೆದು, ದೃಢಚಿತ್ತರಾಗಿ,
ಜಾಗ್ರ ಜಾಗ್ರ ಇನ್ನು ತಿರುಗಿ ಭವಕ್ಕೆ ಬಂದಡೆ ನಿಮ್ಮಾಣೆ,
ನಿಮ್ಮ ಪ್ರಮಥರಾಣೆಯೆಂದು ತ್ರಿವಿಧಬಿಂದುಗಳ ತಡೆದು,
ಸಾಕ್ಷಿ : “ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾಃ |
ಜ್ಞಾನರತ್ನಾಪಹಾರಾಯ ತಸ್ಮಾತ್ತ್ವಂ ಜಾಗೃತೋ ಭವ ||”
ಎಂದರಿದು, ಅರುವಿನ ಮಹಾಜ್ಞಾನರತ್ನವ ಕಳೆದು,
ಮತಿಭ್ರಷ್ಟ ಕ್ರಿಮಿಕೀಟ ಜನ್ಮಕ್ಕೆ ಬೀಳದಂತೆ
ನಿಜೇಷ್ಟಲಿಂಗಾಂಗಸಮರತಿಯುಳ್ಳ ನಿಷ್ಟನಾಗಿ,
ಪರರ ಸಂಗವ ಭವಸಂಗವೆಂದರಿದಾನಂದದಿಂದ ಸತ್ಯಶುದ್ಧನಾಗಿ,
ಗುರುಹಿರಿಯರಿಗೆ ಖೊಟ್ಟಿಯಾಗದೆ,
ಕಾಲಕಾಮರಟ್ಟುಳಿಯ ಕಾಡಾರಣ್ಯಕ್ಕೆ ಮಹಾಜ್ಞಾನವೆಂಬ ಕಿಚ್ಚನಿಕ್ಕಿ,
ಚಿತ್ಪ್ರಭಾಬೆಳಗಿಂಗೆ ಮಹಾಬೆಳಗಾಗಿರ್ಪುದು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./58
ಪರಮಪವಿತ್ರನಿರ್ಮಲವೆನಿಸಿ,
ಕ್ರಿಮಿಕೀಟಕ ಮೃತ್ ಕಾಷ್ಠ ಪಾಷಾಣ ಮಸ್ತಕ ದೃಢಬೀಜಗಳು
ಮೊದಲಾದ ಶೋಧಕತ್ವದಿಂದ ಮುಚ್ಚಿ, ಬೈಚಿಟ್ಟು,
ಶುಚಿ-ರುಚಿ ಪಾಕವ, ಸತಿ-ಪತಿ, ಪಿತ-ಮಾತೆ, ಗುರು-ಶಿಷ್ಯ,
ಪುತ್ರ-ಮಿತ್ರ, ಬಂಧು,-ಬಳಗ ಸಹೋದರರೊಂದೊಡಲಾಗಿ,
ಲಿಂಗಜಂಗಮವೆ ತನ್ನ ಮನೆ, ತನ್ನ ಕಾಯಕಂಗಳು,
ತನ್ನ ಕರ ವಾಚಂಗಳಿಗೆ ತತ್ಪ್ರಾಣವಾಗಿ,
ಜಂಗಮಲಿಂಗದ ಪಾದಪೂಜೆಯಾದರೂ ಸರಿಯೆ,
ಲಿಂಗಪೂಜೆಯಾದರೂ ಸರಿಯೆ,
ವಿಭೂತಿ ರುದ್ರಾಕ್ಷಿಗಳ ತನ್ನ ಕರದಲ್ಲಾಗಲಿ,
ತೊಡೆಯಮೇಲಾಗಲಿ ಇಟ್ಟುಕೊಂಡು,
ಲಿಂಗನಿರೀಕ್ಷಣದಿಂದರ್ಚಿಸಿ, ಸ್ನಾನ ಧೂಳನ ಧಾರಣ
ಗುರುಮುಖದಿಂದರಿದು ಮಾಡಿದ ಬಳಿಕ,
ರುದ್ರಾಕ್ಷಿಗಳ ಛಿನ್ನಭಿನ್ನಗಳ ತೆಗೆದು, ನೂನುಕೂನುಗಳ ನೋಡಿ,
ವಿಚಾರತ್ವದಿಂದ ಸಾವಧಾನದೊಳ್ ಸ್ಥಾನಸ್ಥಾನಂಗಳಲ್ಲಿ
ಧಾರಣಂಗೈದು ಚರಿಸುವರೆ
ನಿರವಯಪ್ರಭು ಮಹಾಂತನ ಚಿತ್ಕಳಾಮೂರ್ತಿಯೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./59
ಪರಮಪವಿತ್ರಪರಿಣಾಮೋದಕವನ್ನು
ಕ್ರಿಯಾಜ್ಞಾನಯುಕ್ತವಾದ ಜಂಗಮಮೂರ್ತಿಯು
ಎರಡುಪದರಿನ ಪಾವುಡದಿಂದ ಶೋಧಿಸಿದುದಕವನ್ನು
ಆ ಜಂಗಮದ ಅಡಿಪಾದ ಮೂರುಮೂರುವೇಳೆ,
ಪಂಚಪಂಚಾಂಗುಲಗಳೊಂದೊಂದುವೇಳೆ,
ಮೂಲಪಂಚಾಕ್ಷರಧ್ಯಾನದಲ್ಲಿ ಮನಘನವಾಗಿ ಸ್ಪರಿಶನಂಗೈದು,
ದೀಕ್ಷಾಪಾದೋದಕವನ್ನು
ಚರಲಿಂಗಕ್ಕೆ ಮುಖಮಜ್ಜನವ ಮಾಡಬೇಕು ಸ್ವಾಮಿಯೆಂದಲ್ಲಿ,
ಹರಹರಾಯೆಂದು ಕೈಕೊಂಡು,
ಲಿಂಗಾಭಿಷೇಕ ಮುಖಮಜ್ಜನವ ಮಾಡಿದ ಚರಲಿಂಗದ ಪಾದಕ್ಕೆ
ಪಾವಗೊರಡ ಮೆಟ್ಟಿಸಿ, ಹಸ್ತವ ಹಿಡಿದು,
ಬಹುಪರಾಕು ಎಚ್ಚರವೆಚ್ಚರ ಮಹಾಲಿಂಗದಲ್ಲಿ ಸ್ವಾಮಿಯೆಂದು ಸ್ತುತಿಸುತ್ತ
ಗರ್ದುಗೆಯ ಮೇಲೆ ಮೂರ್ತಮಾಡಿದ ಬಳಿಕ
ಉಭಯಪಾದಾಭಿಷೇಕಂಗೈದುದಕವ
ಲಿಂಗಾಂಗಕ್ಕೆ ಸಂಪ್ರೋಕ್ಷಿಸಿದ ತದನಂತರದಲ್ಲಿ,
ಮುಖಮಜ್ಜನಕ್ಕೆ ಮಾಡಿದಂಥ ಗುರುಪಾದೋದಕ ತಂಬಿಗೆಯನ್ನು
ಭಾಂಡಕ್ಕೆ ಹಸ್ತಸ್ಪರಿಶನ ಧಾರಣವಿದ್ದರೆ
ಆ ಉದಕವ ಶೋಧಿಸಿದ ಭಾಂಡಂಗಳಿಗೆ ಸಮ್ಮಿಶ್ರವ ಮಾಡುವುದು.
ಇಲ್ಲವಾದಡೆ ತಮ್ಮ ಅರ್ಚನ ಅರ್ಪಣಗಳಿಗೆ ಮಡುಗಿಕೊಂಡು,
ದಿವರಾತ್ರಿಗಳೆನ್ನದೆ ಚರಲಿಂಗಪಾದೋದಕಪ್ರಾಣಿಗಳೆ
ನಿರವಯಪ್ರಭು ಮಹಾಂತನ ಪ್ರತಿಬಿಂಬ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ. /60
ಪರಮಬೆಳಗಿನಿಂದೆಸೆವ
ನಿಜವೀರಶೈವ ಭಕ್ತಜಂಗಮಲಿಂಗ ಘನಗಂಭೀರರು
ಪಂಚಾಭಿಷೇಕ ಮೊದಲಾದ ಅನಂತ ಅಭಿಷೇಕ
ಪತ್ರಿ ಪುಷ್ಪ ಫಲಹಾರ ಪಂಚಕಜ್ಜಾಯ ಪರಮಾನ್ನ ಪಾಯಸ
ಮೊದಲಾದ ಕಟ್ಟಳೆಗಳ ಮಾಡದೆ,
ವಾರ ತಿಥಿ ನಕ್ಷತ್ರ ವ್ಯತಿಪಾತ ವೈಧೃತಿ,
ಚಂದ್ರಸೂರ್ಯಗ್ರಹಣ ಹುಣ್ಣಿಮೆ ಅಮವಾಸ್ಯೆ
ಸತ್ತ ಹೆತ್ತ ಕರ್ಮದ ತಿಥಿಗಳು,
ಕಾರ್ತಿಕ ಮಾಘ ಶ್ರಾವಣ ಶಿವರಾತ್ರಿ ನವರಾತ್ರಿ
ಸಂಕ್ರಾಂತಿ ಕತ್ತಲರಾತ್ರಿ ದಿನರಾತ್ರಿಗಳೆಂಬ
ದಿವಾರ್ಚನೆ ಸಾಮಾನ್ಯದಾರ್ಚನೆ ಮೊದಲಾದ
ಶೈವಜಡಕರ್ಮಗಳ ಹೊದ್ದಲೀಯದೆ,
ಸತ್ಯಶುದ್ಧ ನಡೆನುಡಿಯಿಂದ
ಕೇವಲ ನಿಜಗುರುಲಿಂಗಜಂಗಮಮೂರ್ತಿಗಳ
ಬಂದ ಬರವ ನಿಂದ ನಿಲುಗಡೆಯನರಿದು,
ಅಷ್ಟವಿಧಾರ್ಚನೆ ಷೋಡಶೋಪಚಾರಗಳೊದಗಿದಂತೆ
ನಿಜಾನಂದಭರಿತದಿಂದರ್ಚನಂಗೈದು,
ಪರಶಿವಯೋಗಾನುಸಂಧಾನದಿಂದಾಚರಿಸುವುದೇ
ನಿರವಯಪ್ರಭು ಮಹಾಂತನ ಪ್ರತಿಬಿಂಬರೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./61
ಪರಮಾನಂದಲಿಂಗಪಾದೋದಕವ ಭಸ್ಮಮಿಶ್ರಂಗೈದು,
ಕಂಡಿತವ ಮಾಡಿ, ಇಪ್ಪತ್ತೊಂದುಪ್ರಣಮವ ಸಂಬಂಧಿಸಿ,
ತನ್ನ ಚಿದ್ಬೆಳಗಿನ ಚಿತ್ಪ್ರಭೆಯೆಂದರ್ಚಿಸಿ,
ಜಂಗಮಲಿಂಗವು ಇಷ್ಟಲಿಂಗಮಂತ್ರಸ್ನಾನಂಗೆಯ್ದು,
ಪ್ರಾಣಲಿಂಗಮಂತ್ರಧೂಳನಮಂ ಮಾಡಿ,
ಭಾವಲಿಂಗಮಂತ್ರದೊಡನೆ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣಂಗೈದು,
ಮೇಲೆ ತಾನು ಶರಣುಹೊಕ್ಕು,
ಆ ಜಂಗಮಲಿಂಗ ದೇವನೊಕ್ಕುಮಿಕ್ಕ ಮಹಾಶೇಷಭಸಿತಮಂ ಬೆಸಗೊಂಡು ;
ಆ ಹಿಂದೆ ಹೇಳಿದ ನಾದಬಿಂದುಕಳಾಪ್ರಣಮದೊಳ್
ಜಂಗಮಲಿಂಗದಂತೆ ಸ್ನಾನಂಗೈದು,
ಚಿನ್ನಾದ ಚಿದ್ಬಿಂದು ಚಿತ್ಕಳಾಪ್ರಣಮದೊಳ್ ಧೂಳನಂ ಮಾಡಿ,
ಪರನಾದಬಿಂದುಕಳಾಪ್ರಣಮದೊಳ್ ಧ್ಯಾನಾರೂಢನಾಗಿ,
ತಾನನಾದಿಯಲ್ಲಿ ಧರಿಸಿಬಂದ ಮೂಲಪ್ರಣಮಲಿಂಗಾಂಗದ ಷಡುಸ್ಥಾನಗಳ
ಘನಗುರುಮುಖದಿಂದರಿದು,
ಅಷ್ಟವಿಧಸಕೀಲಂಗಳಿಂದ ಜಂಗಮಲಿಂಗದೇವನಂತೆ ಧಾರಣಂಗೈದು,
ಚಿದ್ಬೆಳಗಿನೊಳಗೆ ಮಹಾಬೆಳಗಾಗಿರ್ಪವರೆ,
ನಿರವಯಪ್ರಭು ಮಹಾಂತನ ಪ್ರತಿಬಿಂಬ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ. /62
ಪರಮಾನುಭಾವಜಂಗಮಾರಾಧನೆಗೆಂದು
ಒಂದೆ ಪಶ್ಚಿಮಾದ್ರಿ ಏಕದಳಪದ್ಮವ ಸಮರ್ಪಿಸಿ,
ಬಚ್ಚಬರಿಯಾನಂದಾಬ್ಧಿಯಲ್ಲಿ ಲೋಲುಪ್ತರಾಗಿರ್ಪರು
ಸದ್ಭಕ್ತ ಶರಣಗಣಾರಾಧ್ಯರು.
ಈ ಪೂಜಾಸ್ಥಾನದಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಲ್ಲವು.
ಅದೇನು ಕಾರಣವೆಂದಡೆ : ಸಗುಣ-ನಿರ್ಗುಣ, ಸಾಕಾರ-ನಿರಾಕಾರ,
ಆದಿಲಿಂಗ ಅನಾದಿಶರಣಸಂಬಂಧವಿಡಿದು,
ಸವರ್ೊಪಚಾರಪೂಜೆಗಳೆರಡು ನಿತ್ಯವಾದ
ಅಂತರಂಗದ ಪರಿಪೂರ್ಣದ್ರವ್ಯ ನಿರಂಜನಪೂಜೆಯೆಂದು
ಇಲ್ಲಿಗೆ ಸದ್ರೂಪವಾದ ಗುರು, ಚಿದ್ರೂಪವಾದ ಲಿಂಗ,
ಚಿನ್ಮಯರೂಪವಾದ ಜಂಗಮಾರ್ಚನೆ.
ಈ ಮೂರು ಸಂಬಂಧಾಚರಣೆಯಾಗಿರ್ಪುವು.
ಈ ನಿಲುಕಡೆಯ ಮೀರಿ ಶೈವಭಿನ್ನಕರ್ಮಿಗಳಂತೆ
ತೀರ್ಥದಲ್ಲಿ ಪೂಜೆಯೊಂದ ಮಾಡಲಾಗದು.
ಅದೇನುಕಾರಣವೆಂದಡೆ : ಶರಣನ ಸದ್ರೂಪವಾದ ಚಿತ್ಕಾಯದಲ್ಲಿ ಸಂಬಂಧವಾದ
ನಿಜೇಷ್ಠಲಿಂಗ ವೃತ್ತಗೋಳಕಮುಖಂಗಳಲ್ಲಿ
ದೀಕ್ಷಾಗುರು ಮೋಕ್ಷಾಗುರು ಶಿಕ್ಷಾಗುರುಸ್ಥಲವಾದ
ಸಾಕಾರಗುರುಲಿಂಗಜಂಗಮವಾಗಿ ನೆಲಸಿರ್ಪುದುದರಿಂದ
ಆ ಇಷ್ಟಲಿಂಗಸೂತ್ರವಿಡಿದು,
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡುವುದೆ
ಸಗುಣಾರ್ಚನೆಯೊಳಗಿನ ಕ್ರಿಯಾರ್ಚನೆಯು.
ಇದೀಗ ಅನಾದಿಪ್ರಮಥಗಣ ಸುಕರಾರ್ಚನೆ ಸೂತ್ರವು.
ಶರಣನ ಚಿದ್ರೂಪವಾದ ಚಿತ್ಪ್ರಾಣದಲ್ಲಿ ಸಂಬಂಧವಾದ ಚಿತ್ಪ್ರಾಣಲಿಂಗ
ತಾರಕಾಕೃತಿ, ದಂಡಕಾಕೃತಿ, ಕುಂಡಲಾಕೃತಿ,
ಅರ್ಧಚಂದ್ರಾಕೃತಿ, ದರ್ಪಣಾಕೃತಿ, ಜ್ಯೋತಿರಾಕೃತಿಗಳಲ್ಲಿ
ಕಾಯಾನುಗ್ರಹ ಪ್ರಾಣಾನುಗ್ರಹ ಇಂದ್ರಿಯಾನುಗ್ರಹಸ್ಥಲವಾದ
ನಿರಾಕಾರ ಚಿದ್ವಿಭೂತಿ ರುದ್ರಾಕ್ಷಿ ಮಂತ್ರವಾಗಿ ನೆಲಸಿರ್ಪುದುದರಿಂದ
ಆ ಪ್ರಾಣಲಿಂಗಸೂತ್ರವಿಡಿದು, ಮಂತ್ರ ಧ್ಯಾನ ಜಪಸ್ತೋತ್ರಂಗಳಿಂದ
ಸೂಕ್ಷ್ಮಾರ್ಚನೆಯ ಮಾಡುವುದೆ ಸಗುಣಾರ್ಚನೆಯೊಳಗಿನ ಜ್ಞಾನಾರ್ಚನೆಯು.
ಇದೀಗ ಅನಾದಿಪ್ರಮಥಗಣ ನಿರಾರ್ಚನ ಸೂತ್ರವು.
ಶರಣಚಿನ್ಮಯರೂಪವಾದ ಚಿತ್ಸೂರ್ಯಚಂದ್ರಾಗ್ನಿಮಂಡಲತ್ರಯಂಗಳಲ್ಲಿ
ಪರಮಾಣುಮೂರ್ತಿ ಭಾವಲಿಂಗ ಅಖಂಡಜ್ಯೋತಿರಾಕೃತಿ
ಅಖಂಡಮಹಾಜ್ಯೋತಿರಾಕೃತಿಗಳಲ್ಲಿ ಅಖಂಡಮಹಾಚಿಜ್ಜ್ಯೋತಿರಾಕೃತಿಗಳಲ್ಲಿ
ಕಾಯಾರ್ಪಣ ಕರಣಾರ್ಪಣ ಭಾವಾರ್ಪಣ ಪರಿಣಾಮಾರ್ಪಣಸ್ಥಲವಾದ
ನಿರವಯಚಿತ್ಪಾದೋದಕ ಚಿತ್ಪ್ರಸಾದವಾಗಿ ನೆಲಸಿರ್ಪುವುದರಿಂದ
ಆ ಭಾವಲಿಂಗಸೂತ್ರವಿಡಿದು ಮನೋರ್ಲಯ ನಿರಂಜನವಾದ ಘನಮನದಿಂದ
ಕರಣಾರ್ಚನೆಯ ಮಾಡುವುದೆ ಸಗುಣಾರ್ಚನೆಯೊಳಗಿನ ಮಹಾಜ್ಞಾನಿಯು.
ಇದೀಗ ಅನಾದಿಪ್ರಮಥಗಣ ನಿರವಯಾರ್ಚನೆಯ ಸೂತ್ರವು.
ಈ ನಿಲುಕಡೆಗಳಿಂದ ಪ್ರಮಥಗಣ ಹೋದ ಮಾರ್ಗವ ತಿಳಿದು,
ಸಾಕಾರವಾದ ಕಾಯವಿಡಿದು ಬಂದ
ರೂಪಾದ ಅಷ್ಟವಿರ್ಧಾಚನೆ ಷೋಡಶೋಪಚಾರವ
ಗುರುಲಿಂಗಜಂಗಮಕ್ಕೆ ಮಾಡುವುದೇ ಕಾಯಾರ್ಚನೆಯೆನಿಸುವುದು.
ನಿರಾಕಾರವಾದ ಕರಣವಿಡಿದು ಬಂದ ಚಿದ್ರೂಪವಾದ
ಮಂತ್ರ ಧ್ಯಾನ ಜಪಸ್ತೋತ್ರಂಗಳ
ಚಿದ್ವಿಭೂತಿ ರುದ್ರಾಕ್ಷಿ ಮಂತ್ರಕ್ಕೆ ಮಾಡುವುದೆ ಕರಣಾರ್ಚನೆಯೆನಿಸುವುದು.
ನಿರವಯವಾದ ಭಾವವಿಡಿದು ಬಂದ ಚಿನ್ಮಯರೂಪಾದ
ಮನೋರ್ಲಯ ನಿರಂಜನ ಘನಮನೋಲ್ಲಾಸ ಚಿದ್ಬೆಳಗುಗಳ
ಚಿತ್ಪಾದತೀರ್ಥ ಪ್ರಸಾದಕ್ಕೆ ಮಾಡುವುದೆ ಭಾವಾರ್ಚನೆಯೆನಿಸುವುದು.
ಹೀಂಗೆ ಪೂರ್ವಪುರಾತನೋಕ್ತಿಯಿಂದ ಸಾಕಾರವಾದ ಕಾಯಾರ್ಚನೆಯ
ಕರಸ್ಥಲದ ಇಷ್ಟಲಿಂಗಕ್ಕೆ, ಆ ಇಷ್ಟಲಿಂಗಕ್ಕೆ ಚೈತನ್ಯವಾದ
ಚರಲಿಂಗಪಾದಕ್ಕೆ ಮಾಡುವುದು ಸಾಧ್ಯ.
ಗಣಂಗಳು ನಿರಾಕಾರವಾದ ಕರಣಾರ್ಚನೆಯ
ಚರಜಂಗಮಲಿಂಗದ ಚರಣಾಬ್ಜದ ಕೊನೆಮೊನೆಯೊಳಗೆ
ಮೂಲಮಂತ್ರಮೂರ್ತಿ ಚಿನ್ಮಂಡಲಾಧಿಪತಿ ಪ್ರಾಣಲಿಂಗಸೂತ್ರಂಗಳೊಳ್
ಚಿತ್ಕರಣಂಗಳೊಂದುಗೂಡಿ ಪಶ್ಚಿಮಾದ್ರಿ ಏಕಕುಸಮದೊಳು ಹುದುಗಿ
ನಿಜದೃಷ್ಟಿ ಕಡೆ ಸೂಸಲೀಯದೆ,
ನಿರಂಜನಜಂಗಮಾರ್ಚನೆಯು ಮೊದಲಾದ
ಚಿದ್ವಿಭೂತಿರುದ್ರಾಕ್ಷಿ ಮಂತ್ರಬ್ರಹ್ಮಕ್ಕೆ ಮಾಡುವುದು ಸಾಧ್ಯ.
ಗಣಂಗಳು ನಿರವಯವಾದ ಭಾವಾರ್ಚನೆಯ
ಚರಜಂಗಮ ಜಂಗಮಲಿಂಗ ಲಿಂಗಶರಣ ಶರಣ ವಿಭೂತಿ ರುದ್ರಾಕ್ಷಿ ಮಂತ್ರ,
ಆ ಚಿದ್ವಿಭೂತಿ ರುದ್ರಾಕ್ಷಿ ಮಂತ್ರವೆ
ಪರಮಪರುಷಾಂಬುಧಿ ಪರಮಪರುಷಾನಂದದ ಖಣಿ
ಚಿತ್ಪಾದೋದಕ ಪ್ರಸಾದ.
ಆ ಚಿತ್ಪಾದೋದಕಪ್ರಸಾದ ಮಂತ್ರಮಣಿ ವಿಭೂತಿ
ಶರಣಲಿಂಗಜಂಗಮಚರವೆ ಘನಕ್ಕೆ ಮಹಾಘನವೆಂದಾರಾಧಿಸಿ,
ಕೂಡಿ ಎರಡಳಿದು ಭಕ್ತನೆಂಬೆರಡಕ್ಷರವೆ ಪಾವನಾರ್ಥಚಿದಂಗ,
ಆ ಚಿದ್ಘನಲಿಂಗವೆಂದಷ್ಟಾವರಣಸ್ವರೂಪ.
ಚಿದ್ಘ ನಗುರು ತಾನೆ ತಾನಾದ ಬಯಲಪೂಜೆಗಳರಿದಾನಂದಿಸುವವರೆ
ನಿರವಯಪ್ರಭು ಮಹಾಂತನ ಘನಕ್ಕೆ ಘನವೆಂದವರ ಆಳಿನಾಳಾಗಿರ್ಪೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./63
ಪರಮಾರಾಧ್ಯ ದೀಕ್ಷಾಗುರುದೇವನ
ಮಹದರುವಿನ ಕೊನೆಯ ಮೊನೆಯಲ್ಲಿರುವ
ಪರಂಜ್ಯೋತಿಯೆ ಎನಗೆ ಜನನಸ್ಥಲ.
ಶಿಕ್ಷಾಗುರುದೇವನ ಮಹಾಜ್ಞಾನದ ಬೆಳಗಿನ ತಿಳುಹಿನ ನಿಳಯದ
ಪರಮ ಸುಧಾಬ್ಧಿಯೊಳ್ ಎನಗೆ ಸ್ಥಿತಿಯ ಭೋಗಸ್ಥಲ.
ಮೋಕ್ಷಾಗುರುದೇವನ ಪರಮಾನುಭಾವದ
ಚಿದಾನಂದಮಹಾಪ್ರಕಾಶದ ಮೂಲಪ್ರಣಮಾಲಯವೆ
ಎನಗೆ ಲಯಸ್ಥಾನದ ಮಹಾಮನೆಯ ಐಕ್ಯಸ್ಥಲವೆಂದು
ಭಾವಭರಿತವಾಗಿ ಇಹಪರಂಗಳೆಡೆಯಾಟವ ನೆರೆ ನೀಗಿ,
ಬಚ್ಚಬರಿಯಾನಂದ ನಿತ್ಯಮುಕ್ತಿಸ್ವರೂಪವದೆಂತೆಂದೊಡೆ : ಹರನಿರೂಪ ಸಾಕ್ಷಿ :
“ತಥೈವ ಶಿವಸಂಗಿನಾಂ ಜನನಂ ಗುರುಲಿಂಗಕಂ |
ಚರಲಿಂಗವಿಹಾರಾಚ್ಚ ವಿನಾಶೋ ಲಿಂಗಜಂಗಮಂ ||
ಸದ್ಗುರೊಃಪಾಣಿಜಾತಸ್ಯ ಸ್ಥಿತಿಂ ಸದ್ಭಕ್ತಸಂಗಿನಾಂ |
ಲೀಯತೇ ಚ ಮಹಾಲಿಂಗೇ ವೀರಶೈವೋತ್ತಮಸ್ಮೃತಃ ||”
ಎಂದುದಾಗಿ,
ನಿಜವೀರಶೈವೋತ್ತಮ ಷಟ್ಸ್ಥಲಬ್ರಹ್ಮಿಗಳಿಗೆ
ಮರಣಸೂತಕವೆಂಬುದೆ ಪಾತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./64
ಪರಮಾರಾಧ್ಯಜಂಗಮಾರಾಧನೆಯಂ ಮಾಡಿ, ನಮಸ್ಕಾರವಾದ ಮೇಲೆ,
ಆ ಪ್ರಸಾದ ಗಂಧಾಕ್ಷತೆ ಪುಷ್ಪ ಪತ್ರಿಗಳ
ಲಿಂಗಜಂಗಮ ಜಂಗಮಲಿಂಗಶರಣರು
ಪರಿಣಾಮತೃಪ್ತರಾಗಿ ನಿರ್ಮಾಲ್ಯವ ಮಾಡಿ,
ನಿಕ್ಷೇಪದಿಂದ ಸಮಾಪ್ತವ ಮಾಡಬೇಕಲ್ಲದೆ,
ಉಳಿವಿ ಕಡೆಗಿಟ್ಟು, ತೀರ್ಥವ ಸಲಿಸಿ,
ಪ್ರಸಾದ ಮುಗಿವ ಮಧ್ಯದಲ್ಲಿ ಲಿಂಗಾರ್ಚನೆಗಳ ಮಾಡಲಾಗದು,
ಅಥವಾ ತನಗೆ ಅಷ್ಟವಿಧಾರ್ಚನೆ ಷೋಡಶೋಪಚಾರದ ಭ್ರಾಂತುವಿದ್ದರೆ,
ತೀರ್ಥವ ಪಡೆದುಕೊಂಡ ಸ್ಥಳವ ಬಿಟ್ಟು,
ಏಕಾಂತಸ್ಥಳದಲ್ಲಿ ತಮ್ಮ ಸ್ಥಳವಿದ್ದಂತೆ ಆಚರಿಸುವುದು.
ಆ ಭ್ರಾಂತಿಗಳೆಲ್ಲ ಲಿಂಗಜಂಗಮ ಜಂಗಮಲಿಂಗಶರಣರು
ಪ್ರಸಾದ ಪಾದೋದಕದಲ್ಲಿ ಉಪಚಾರಗಳನಳಿದುಳಿದು,
ನಿಭ್ರಾಂತಗಳಾದೀಶ್ವರರು ಚಮತ್ಕಾರವಾಗಿ,
ಜಂಗಮಪಾದಸ್ಪರಿಶನದಿಂದುದಯವಾದ
ದೀಕ್ಷಾಪಾದೋದಕದಿಂದ ಲಿಂಗಾಂಗಸ್ನಾನಂಗೈದು,
ಚುಳುಕುಮಾತ್ರವಾಗಿ,
ಪಾದೋದಕ ಭಸ್ಮೋದಕ ಶುದ್ಧೋದಕದಿಂದ ಲಿಂಗಮಜ್ಜನವ ಮಾಡಿ,
ಆ ಪ್ರಸಾದಪುಷ್ಪವ ಸ್ವಲ್ಪಮಾತ್ರವ ಧರಿಸಿ,
ಒಂದು ವೇಳೆ ಹಸ್ತಜಪಮಂ ಮಣಿಗಳ ದ್ವಾದಶವನ್ನು ಪ್ರದಕ್ಷಿಸಿ,
ನವಲಿಂಗಮೂರ್ತಿಗಳ ಧ್ಯಾನದಿಂದ ಘನಪಾದತೀರ್ಥಪ್ರಸಾದವ ಮುಗಿದು,
ಪ್ರಸನ್ನಪ್ರಸಾದದಲ್ಲಿ ನಿಜಲೋಲುಪ್ತರಾದವರೆ
ನಿರವಯಪ್ರಭು ಮಹಾಂತಗಣವೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./65
ಪರಶಿವತತ್ವಶರೀರಮಂ ಧರಿಸಿ,
ಪರಿಪೂರ್ಣಜ್ಯೋತಿರ್ಮಯ ನಿಃಕಳಂಕ ಶ್ರೀಗುರುಲಿಂಗಜಂಗಮದ
ನಿಜಪ್ರಸನ್ನಪ್ರಸಾದಪಾದೋದಕಪ್ರಣಮಪ್ರಸನ್ನತೆ
ಪ್ರಸಾದ ಚಿದ್ಬೆಳಗಿನಿಂದ ಮನೆಗಟ್ಟಿ,
ಅಂಗ ಪ್ರಾಣ ಮನ ಭಾವ ಕರಣಂಗಳ ವಿಷಯಾತುರವೆಂಬ
ಪ್ರವೃತ್ತಿಜ್ಞಾನಮಂ ಮರೆದು ನಿವೃತ್ತಿಸುಜ್ಞಾನೋದಯರಾಗಿ,
ಅಭಿರತಿಕ್ರೀಡಾವಿಲಾಸದೊಳ್ ಕೂಡೆರಡಳಿದ ಆದಿಲಿಂಗ ಅನಾದಿಶರಣನ
ಪೂರ್ಣಾನಂದದ ಚಿದಾಬ್ಧಿಯಲ್ಲಿ ಲೋಲುಪ್ತರಾಗಿ,
ಮಹಾಘನಕ್ಕೆ ಘನವೆನಿಸಿ ನಿಂದ ನಿತ್ಯಮುಕ್ತ ಭಕ್ತಗಣಾರಾಧ್ಯರು,
ಬಾಹ್ಯಾಂತರಂಗದಲ್ಲಿ ಬಿಡುಗಡೆಯುಳ್ಳ ಪಂಚಸೂತಕಂಗಳ ನಿರಶನವಾವಾವೆಂದೊಡೆ :
ಜನನಸೂತಕ ಜಾತಿಸೂತಕ ರಜಃಸೂತಕ ಉಚ್ಚಿಷ್ಟಸೂತಕ
ಪ್ರೇತಸೂತಕವೆಂಬಿವಾದಿಯಾದ ಸರ್ವಸೂತಕಂಗಳು.
ಅಂಗಲಿಂಗವೆ ಸದಾಚಾರವಾಗಿ,
ಚಿದಂಗ ಚಿದ್ಘನಲಿಂಗವೆ ಪರಿಪೂರ್ಣ ಆಚರಣೆಯಾಗಿ,
ಪರಿಪೂರ್ಣಾಂಗ ಪರಿಪೂರ್ಣಲಿಂಗವೆ ಸಚ್ಚಿದಾನಂದಸಂಬಂಧವಾಗಿ
ಪರಿಶೋಭಿಸುವ ನಿಜೇಷ್ಟಲಿಂಗಶರಣರಿಗಿಲ್ಲ ನೋಡಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./66
ಪರಾತ್ಪರ ಚಿದ್ಬ್ರಹ್ಮಪರಶಿವಮೂರ್ತಿಯು
ಮನು-ಮುನಿ, ಸಿದ್ಧ-ಸಾಧಕ, ಯಕ್ಷ-ರಾಕ್ಷಸ,
ಯತಿ-ವ್ರತಿ, ಶೀಲ-ನೇಮಗಳ ಭಾವಾಭಾವಕ್ಕೆ ಮೆಚ್ಚಿ,
ಅವರವರ ಕಾಂಕ್ಷೆಗಳಂತೆ ಫಲಪದದಾಯುಷ್ಯಕ್ಕೆ ಯೋಗ್ಯರಾಗಿ,
ಅಷ್ಟಮಹದೈಶ್ವರ್ಯದಿಂದ ಬ್ರಹ್ಮನ ಉತ್ಪತ್ತಿ, ವಿಷ್ಣುವಿನ ಸ್ಥಿತಿ,
ರುದ್ರನ ಲಯ, ಈಶ್ವರನ ತಿರೋಧಾನ, ಸದಾಶಿವನ ಅನುಗ್ರಹಕ್ಕೆ ಕಾರಣರಾಗಿ,
ಶೈವಮಾರ್ಗದಿಂದೆ ನಿಜಮೋಕ್ಷವ ಕಾಣದೆ,
ಅಷ್ಟಾವರಣದ ಚಿದ್ಬೆಳಗ ಸೇರಿದ
ಸದ್ಭಕ್ತಿ-ಜ್ಞಾನ-ವೈರಾಗ್ಯ, ಸತ್ಯ-ಸದಾಚಾರವನರಿಯದೆ,
ಇಹಲೋಕದ ಭೋಗವ ಪರಲೋಕದ ಮೋಕ್ಷಾಪೇಕ್ಷೆಯಿಂದ ಎಡೆಯಾಡುತ್ತ,
ಪುಣ್ಯ-ಪಾಪ, ಸುಖ-ದುಃಖ, ಸ್ತುತಿ-ನಿಂದೆ, ಸಿರಿ-ದರಿದ್ರ.
ಆಶೆ-ಆಮಿಷ, ರೋಗ-ರುಜಿನಗಳಿಂದ,
ಶಿವನೆ ಹರನೆ ಭವನೆಯೆಂದು ಗೋಳಿಡುವವರಿಗೆ,
ನಿರಾಕಾರಪರಿಪೂರ್ಣ ಪರಶಿವನು ಆಗಳು ಹಿಂದಾಗಿ,
ಶಿವಗಣವ ಸೇರುವಂತೆ ಯೋಗಾಭ್ಯಾಸವ ತೋರಿ,
ಅನಂತಮಣಿಮಾಲೆ ಜಪಕ್ರಿಯಾನುಷ್ಠಾನ
ಮಂತ್ರ-ತಂತ್ರ-ಯಂತ್ರ-ಯಜ್ಞಾದಿಗಳ ಹೇಳಿ,
ಪರಮಾರಾಧ್ಯ ನಿರವಯಪ್ರಭು ಮಹಾಂತನ
ಗಣಾಚಾರಕ್ಕೆ ಅಯೋಗ್ಯರೆನಿಸಿರ್ಪರು ಕಾಣಾ
ಸಿದ್ಧಮಲ್ಲಿಕಾರ್ಜುಲಿಂಗೇಶ್ವರ./67
ಪರಿಪೂರ್ಣಜ್ಞಾನಾನುಭಾವ ತಲೆದೊರಿ, ತಾನು ತಾನಾದ
ಶರಣಗಣಾರಾಧ್ಯ ಜಂಗಮಭಕ್ತರೊಂದಾದ ನಿಲುಕಡೆಯೆಂತೆಂದೊಡೆ :
ಜ್ಯೋತಿ ಜ್ಯೋತಿ ಬೆರದಂತೆ, ಉದಕ ಉದಕ ಒಂದಾದಂತೆ,
ಕ್ಷೀರ ಕ್ಷೀರ ಕೂಡಿ ಒಂದೊಡಲಾಗಿ ಪರವನೈದಿದೋಪಾದಿಯಲ್ಲಿ,
ತನುವಿನಲ್ಲಿ ತನು ಬೆರೆದು, ಮನದಲ್ಲಿ ಮನ ಬೆರೆದು,
ಧನದಲ್ಲಿ ಧನ ಬೆರೆದು, ನೆನಹಿನಲ್ಲಿ ನೆನಹು ಬೆರೆದು,
ಭೋಗದಲ್ಲಿ ಭೋಗ ಬೆರೆದು, ಯೋಗದಲ್ಲಿ ಯೋಗ ಬೆರೆದು,
ಭಕ್ತಿಯಲ್ಲಿ ಭಕ್ತಿ ಬೆರೆದು, ವಿರಕ್ತಿಯಲ್ಲಿ ವಿರಕ್ತಿ ಬೆರೆದು,
ಕ್ರಿಯಾಚಾರದಲ್ಲಿ ಕ್ರಿಯಾಚಾರ ಬೆರೆದು,
ಜ್ಞಾನಾಚಾರದಲ್ಲಿ ಜ್ಞಾನಾಚಾರ ಬೆರೆದು,
ಭಾವಾಚಾರದಲ್ಲಿ ಭಾವಾಚಾರ ಬೆರೆದು,
ನಡೆಯಲ್ಲಿ ನಡೆ ಬೆರೆದು, ನುಡಿಯಲ್ಲಿ ನುಡಿ ಬೆರೆದು,
ದೃಢದಲ್ಲಿ ದೃಢ ಬೆರೆದು, ಸಡಗರಸಂಪದದಲ್ಲಿ ಸಡಗರ ಸಂಪದಬೆರೆದು,
ಮಾತು ಮರವೆಯ ಪರಿಧಿಯ ಹರಿದು
ಭವಸಮುದ್ರವ ದಾಂಟಿ, ಭಕ್ತನಲ್ಲಿ ಜಂಗಮರತಿಯಿಟ್ಟು,
ಪರಮವಿರತಿಯಿಂದ ಸಾಕಾರ ನಿರಾಕಾರ ನಿರವಯಮಂ ಭೇದಿಸಿ,
ಆಚರಣೆ ಸಂಬಂಧಮಂ ಖಂಡಿಸಿ, ಪಿಂಡಬ್ರಹ್ಮಾಂಡದ
ತೊಡಕು ವಿರಹಿತರಾಗಿ,
ಶೂನ್ಯ ಶೂನ್ಯದಲ್ಲಿ ಲಯವೆನಿಸಿ,
ನಿರಾಕಾರ ನಿರಾಕಾರದಲ್ಲಿ ಶೂನ್ಯವೆನಿಸಿ,
ನಿರವಯ ನಿರವಯದಲ್ಲಿ ಶೂನ್ಯವೆನಿಸಿ,
ತಾನೇ ತಾನಾದ ಚಿದ್ಭ್ರಹ್ಮದ ಬೆಳಗಿನಿರವ ಉಪಮಿಸಬಾರದು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./68
ಪರಿಪೂರ್ಣಾಂಗ ಲಿಂಗ ಶಕ್ತಿ ಭಕ್ತಿ ಹಸ್ತ ಮುಖ
ಪದಾರ್ಥ ಪ್ರಸಾದವೆಂಬ
ಅಷ್ಟವಿಧಸಕೀಲವೆ ಮೊದಲು,
ಇನ್ನೂರಹದಿನಾರು ಸಕೀಲವೆ ಕಡೆಯಾದ
ಸಮಸ್ತ ಸಕೀಲದ ವರ್ಮಾದಿವರ್ಮವರಿದು,
ಸಚ್ಚಿದಾನಂದಸಾಗರವೆಂಬ ಗುರುಪಾದೋದಕಪ್ರಸಾದಿ,
ಲಿಂಗಪಾದೋದಕಪ್ರಸಾದಿ, ಜಂಗಮಪಾದೋದಕಪ್ರಸಾದಿ,
ಪರಿಪೂರ್ಣಪಾದೋದಕ ಪ್ರಸಾದಿ,
ಚಿತ್ಕಲಾಪಾದೋದಕಪ್ರಸಾದಿಯೆಂಬ ಸ್ಥಲದ ವರ್ಮವರಿದು, ಬೆರಸಿ,
ವಿನೋದಾರ್ಥದಿಂದ ಉಪಾಧಿಯಿಲ್ಲದೆ
ನಿರುಪಾಧಿಶಿವಾರಣ್ಯಕ್ಕೆ ವಿರೋಧಿಸಿ,
ಪರಿಣಾಮಿಸಬೇಕೆಂಬ ನಿಜಶಿವಯೋಗಿಶ್ವರರು,
ಪಂಚಕಸಂಯುಕ್ತವಾದ ಫಲಂಗಳ ಕಂಡು,
ಭಿಕ್ಷಾಂದೇಹಿಯಾಗಿ ತೆಗೆದುಕೊಂಡು,
ಪರಿಣಾಮಜಲವಿದ್ದಲ್ಲಿಗೆ ಹೋಗಿ,
ಅನಾದಿ ಶ್ರೀಗುರುಲಿಂಗಜಂಗಮಸ್ವರೂಪಧ್ಯಾನದಿಂದ,
ಆ ಉದಕದ ಪೂರ್ವಾಶ್ರಯವ ಕಳೆದು, ಪರಮಾನಂದಜಲವೆಂದು,
ನಿತ್ಯನಿತ್ಯವಾಚರಿಸುವ ಕರ್ಮೆಂದ್ರಿಗಳನ್ನು ಶುಚಿಭರ್ೂತವೆನಿಸಿ,
ಕಟಿಸ್ಥಾನ ಕಂಠಸ್ಥಾನ ಮಂಡೆಸ್ಥಾನಗಳ ಪರಿಣಾಮಪರಿಯಂತರವಾಚರಿಸಿ,
ನಾರಿಕೇಳ ಕೂಷ್ಮಾಂಡ ಬಿಲ್ವಾದಿ ಮೃದ್ಭಾಂಡ ಕಡೆಯಾದ
ಕರಂಡ ಕಪಾಲಗಳಲ್ಲಿ ತೀಥರ್ೊದಕ ಶೇಷೋದಕ
ಚಿದಾನಂದೋದಕಗಳ ಪರಿಣಾಮಿಸಿ,
ರಸಫಲಗಳಲ್ಲಿರುವ ಕಠಿಣ ಕಸವ ಕಳೆದುಳಿದು,
ಪಕ್ವಮಾಡಿಟ್ಟು, ರಂಭಾದಿ ವಟಫಲ ಕಡೆಯಾದ
ಪಲಾಶವಂತವಾದ ಪರ್ಣಾದಿಗಳಲ್ಲಿ
ಅರ್ಪಿತವಾದನ್ನದ್ರವ್ಯ ಉದಕಂಗಳು
ಸೂಸಲೀಯದಂತೆ ರಚಿಸಿ,
ಸಂಬಂಧಾಚರಣೆಯ ಮಹಾಜ್ಞಾನಸೂತ್ರದಲ್ಲಿ
ತನ್ನ ತಾನೆ ಪ್ರತಿ ಯಾರೂ ಇಲ್ಲದೆ ಸಾವಧಾನದಿಂದ
ಕ್ರಿಮಿಕೀಟಾದಿಗಳಿಗೆ ಶೇಷಪ್ರಸಾದೋದಕ
ಪ್ರಸಾದಂಗಳು ಬೀಳಗೊಡದಂತೆ
ಓರ್ವರಾಚರಿಸಿ ಲಿಂಗವೆ ಜಂಗಮವೆಂಬ
ಸಚ್ಚಿದಾನಂದನ್ಯಾಯದಿಂದ ಪರಿಣಾಮಿಸುವುದೆ ಏಕಭಾಜನಭೋಜನಸ್ಥಲವು.
ಇದೆ ಸಮಯಪ್ರಸಾದಿಯ ನ್ಯಾಯವು.
ಇಂತಪ್ಪ ಶೇಷಪ್ರಸಾದ ಪಾದೋದಕ ಸೇವಿಸಿದ ಪರ್ಣಂಗಳ
ಭೂನಿಕ್ಷೇಪವ ಮಾಡಿ, ಸುಯಿಧಾನಿಯಾಗಿರ್ಪುದೆ
ಸತ್ಯಶರಣರ ಮಾರ್ಗವು.
ಈ ಮಾರ್ಗವು ಉಭಯಗಣಾಧೀಶ್ವರರು ಆಚರಣೆಯನಾಚರಿಸಿ,
ಅಚ್ಚಪ್ರಸಾದಸ್ಥಲದಿಂದ ಪಡಕೊಂಡು
ಮುಗಿಯಬೇಕೆಂದಡು ಬಂದೀತು.
ಇದು ಬಹುಸಾವಧಾನಿಗಳಾಚರಿಸುವ ನ್ಯಾಯವು.
ಇದಕೇನು ಸಂಶಯವಿಲ್ಲವು ; ಪೂರ್ವಪುರಾತನೋಕ್ತವುಂಟು.
ಪಾದಾರ್ಚನೆಮಾಡಿ ಪಡಕೊಂಡಾತನು
ಪಾದವ ಪಾಲಿಸಿದಾತನು, ಏಕಭಾಜನಭೋಜನವುಂಟು.
ಬಹುಗೋಪ್ಯದಲ್ಲಿ ಆಚರಿಸುವದು, ಇದು ಸಮರಸಜ್ಞಾನಿಗಳ ಮಾತು.
ಭೌಕ್ತಿಕ ಅನ್ನುದಕಾದಿಗಳ ಗುರುವಿತ್ತ ಲಿಂಗಕ್ಕೆ ನೈವೇದ್ಯವ ಮಾಡಿ,
ಲಿಂಗದ ಸೆಜ್ಜೆಯ ಧರಿಸಿ ಭೋಜೆಗಟ್ಟಿ ಭುಂಜಿಸುವರೆಲ್ಲ
ಭಿನ್ನ ಭಾಜನಭೋಜನರೆನಿಸುವರು.
ಇವರಿಗೆ ಸಹಸ್ರಜನ್ಮಕ್ಕೆ ಜ್ಞಾನೋದಯವಾಗುವದು.
ಹಸ್ತಪ್ರಸಾದವಾದ ಶುದ್ಧದ್ರವ್ಯಗಳ ಭಕ್ತಗಣಾರಾಧ್ಯ
ಶಿವಶರಣ ಜಂಗಮಕ್ಕೆ
ಪ್ರೀತಿಪ್ರೇಮದಿಂದ ದಾಸೋಹಂಭಾವದೊಳ್
ಸಾವಧಾನದಿಂದ ತನ್ನ ಕರಸ್ಥಲದಿಷ್ಟಲಿಂಗಮೂರ್ತಿಯ
ಅವರ ಕಂಗಳಾಗ್ರದಲ್ಲರಿದು ಲಿಂಗವ ಕೊಡುವಾತ
ಲಿಂಗವ ಕೊಂಬುವಾತನೆಂಬ ನಿಜನೈಷ್ಠೆಪರನಾಗಿ,
ಸರ್ವಾಂಗಲಿಂಗಸಂಬಂಧದೊಳ್ ಪರಿಪೂರ್ಣ ಭೋಜೆಗಟ್ಟಿ
ನೀಡಿ ಮಾಡಿ ಸಂತೋಷವೆಂಬ ಪರಮಾನಂದ ಶೇಷೋದಕದಲ್ಲಿ
ಸಂತೃಪ್ತರಾಗಿರ್ಪುದೆ ಪ್ರಸಾದಭೋಜನವೆನಿಸುವದು.
ಅಲ್ಲಿಂದ ಆ ಭಕ್ತಗಣಾರಾಧ್ಯ ಶಿವಶರಣಜಂಗಮೂರ್ತಿಗಳೊಕ್ಕುಮಿಕ್ಕ
ಶೇಷೋದಕಪ್ರಸಾದಮಂ, ಕರ ಮನ ಭಾವದ ಕೊನೆಮೊನೆಯೊಳಗಿಪ್ಪ
ಚಿಜ್ಜೊ ್ಯತಿಪ್ರಣಮಲಿಂಗಂಗಳೊಡನೊಡನೆ
ಸದ್ರೂಪು ಚಿದ್ರೂಪು ಆನಂದರೂಪು ರುಚಿತೃಪ್ತಿಗಳ
ಪರಿಣಾಮಿಸುವುದೆ ಸಹಭೋಜನವೆನಿಸಿರ್ಪುದು.
ಈ ತ್ರಿವಿಧವರಿದು ಮರೆಯದಿರ್ದು ತನ್ನ ತಾನರಿದು
ಘನಗಂಭೀರರಿಗೆ ಎತ್ತಿದ ಲೀಲೆ ಪರಿಣಾಮ
ಪರಿಪೂರ್ಣಜ್ಞಾನದ ಬೆಳಗುದೋರಿ
ಬಯಲೊಳಗೆ ಮಹಾಬಯಲಪ್ಪುದು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./69
ಪರಿಪೂರ್ಣಾನಂದ ಜ್ಯೋತಿರ್ಮಯ ಬ್ರಹ್ಮಸ್ವರೂಪನಾದ
ಪರಶಿವಯೋಗೀಶ್ವರನು ನಿವೃತ್ತಿಮಾರ್ಗವನರಿದಾಚರಿಸುತಿರ್ಪುದೆಂತೆಂದೊಡೆ:
ಸದ್ಭಕ್ತನಡಿಯಿಟ್ಟು, ನಿಜದೃಷ್ಟಿಯಿಂ ನೋಡಿ,
ಸುಚಿತ್ತಹಸ್ತದಿಂದ ಮುಟ್ಟಿ ಸ್ಪರಿಶನಂಗೈದಲ್ಲಿ,
ಪೃಥ್ವಿಯಳಿದು ನಿವೃತ್ತಿಯಾಗಿ ಚಿತ್ಪ ೃಥ್ವಿಯೆನಿಸಿರ್ಪುದು.
ಸದ್ವೀರಮಹೇಶ್ವರನಡಿಯಿಟ್ಟು, ನಿಜದೃಷ್ಟಿಯಿಂ ನೋಡಿ,
ಸುಬುದ್ಧಿಹಸ್ತದಿಂದ ಮುಟ್ಟಿ ಸ್ಪರಿಶನಂಗೈದಲ್ಲಿ ,
ಅಪ್ಪುವಳಿದು ನಿವೃತ್ತಿಯಾಗಿ ಚಿದಪ್ಪುವೆನಿಸಿರ್ಪುದು.
ಪರಿಪೂರ್ಣಪ್ರಸಾದಿಯಡಿಯಿಟ್ಟು, ನಿಜದೃಷ್ಟಿಯಿಂ ನೋಡಿ,
ನಿರಹಂಕಾರಹಸ್ತದಿಂದ ಮುಟ್ಟಿ ಸ್ಪರಿಶನಂಗೈದಲ್ಲಿ ,
ಅಗ್ನಿಯಳಿದು ನಿವೃತ್ತಿಯಾಗಿ ಚಿದಗ್ನಿಯೆನಿಸಿರ್ಪುದು.
ಪರಮಾನಂದಪ್ರಾಣಲಿಂಗಿಯಡಿಯಿಟ್ಟು,
ನಿಜದೃಷ್ಟಿಯಿಂ ನೋಡಿ, ಸುಮನಹಸ್ತದಿಂ ಮುಟ್ಟಿ ಸ್ಪರಿಶನಂಗೈದಲ್ಲಿ ,
ವಾಯುವಳಿದು ನಿವೃತ್ತಿಯಾಗಿ, ಚಿದ್ವಾಯುವೆನಿಸಿರ್ಪುದು.
ಸಚ್ಚಿದಾನಂದ ಶರಣನಡಿಯಿಟ್ಟು ನಿಜದೃಷ್ಟಿಯಿಂ ನೋಡಿ,
ಸುಜ್ಞಾನಹಸ್ತದಿಂದ ಮುಟ್ಟಿ ಸ್ಪರಿಶನಂಗೈದಲ್ಲಿ ,
ಆಕಾಶವಳಿದು ನಿವೃತ್ತಿಯಾಗಿ ಚಿದಾಕಾಶವೆನಿಸಿರ್ಪುದು.
ನಿರಾಂತಕ ನಿಜೈಕ್ಯನಡಿಯಿಟ್ಟು, ನಿಜದೃಷ್ಟಿಯಿಂ ನೋಡಿ,
ಸದ್ಭಾವಹಸ್ತದಿಂದ ಮುಟ್ಟಿ ಸ್ಪರಿಶನಂಗೈದಲ್ಲಿ ,
ಆತ್ಮನಳಿದು, ನಿವೃತ್ತಿಯಾಗಿ, ಚಿದಾತ್ಮನೆನಿಸಿರ್ಪುದು.
ನಿರಾವಲಂಬ ನಿರವಯಮೂರ್ತಿಯಡಿಯಿಟ್ಟು,
ನಿಜದೃಷ್ಟಿಯಿಂ ನೋಡಿ,
ಪರಿಣಾಮಹಸ್ತದಿಂದ ಮುಟ್ಟಿ ಸ್ಪರಿಶನಂಗೈದಲ್ಲಿ ,
ಆ ಸೂರ್ಯಚಂದ್ರಾದಿಗಳಳಿದು ನಿವೃತ್ತಿಯಾಗಿ,
ಚಿತ್ಸೂರ್ಯಚಂದ್ರರಾಗಿರ್ಪರು.
ಈ ಮರ್ಮಾದಿವರ್ಮವನರಿದ ಶಿವಯೋಗೀಶ್ವರರು,
ತಮ್ಮಲ್ಲಿ ಸಂಬಂಧವಾದ ಅಷ್ಟತನುಮೂರ್ತಿಗಳ
ನಿಮಿಷನಿಮಿಷಕ್ಕೆ ಪವಿತ್ರರೆನಿಸಿರ್ಪುದು.
ಆ ಮರ್ಮಯೆಂತೆಂದೊಡೆ : ಪೃಥ್ವಿತತ್ವಸಂಬಂಧವಾದ ಕರ್ಮೆಂದ್ರಿಯಂಗಳೆಲ್ಲ
ಸತ್ಕ್ರಿಯಾಚಾರವೆಂಬ ಸದ್ಭಕ್ತನ ಕಿರಣದಿಂದ ಪವಿತ್ರವೆನಿಸುವುದು.
ಅಪ್ಪುತತ್ವಸಂಬಂಧವಾದ ಜ್ಞಾನೇಂದ್ರಿಗಳೆಲ್ಲ
ಸಮ್ಯಜ್ಞಾನಾಚಾರವೆಂಬ ಸದ್ವೀರಮಹೇಶ್ವರನ ಕಿರಣದಿಂದ ಪವಿತ್ರವೆನಿಸುವುದು.
ಅಗ್ನಿತತ್ವಸಂಬಂಧವಾದ ಬುದ್ಧೇಂದ್ರಿಗಳೆಲ್ಲ
ಸದ್ಭಾವಾಚಾರವೆಂಬ ಪರಮಪ್ರಸಾದಿಯ ಕಿರಣದಿಂದ ಪವಿತ್ರವೆನಿಸುವುದು.
ವಾಯುತತ್ವಸಂಬಂಧವಾದ ಪ್ರಾಣಾದಿವಾಯುಗಳೆಲ್ಲ
ಸತ್ಯನಿತ್ಯವಾದ ಸರ್ವಾಚಾರಸಂಪದವೆಂಬ
ಪರಮಾನಂದ ಪ್ರಾಣಲಿಂಗಿಯ ಕಿರಣದಿಂದ ಪವಿತ್ರವೆನಿಸುವುದು.
ಆಕಾಶತತ್ವಸಂಬಂಧವಾದ ಕರಣಾದಿಗಳೆಲ್ಲ
ಸತ್ಯಶುದ್ಧ ನಡೆನುಡಿ ದೃಢನೈಷ್ಠೆಯೆಂಬ
ಸಚ್ಚಿದಾನಂದಶರಣನ ಕಿರಣದಿಂದ ಪವಿತ್ರವೆನಿಸುವುದು.
ಆತ್ಮತತ್ವಸಂಬಂಧವಾದ ಅವಸ್ಥಾದಿಗಳೆಲ್ಲ
ನಿಜವಿರಕ್ತಿ ಭಕ್ತಿಸಂಧಾನವೆಂಬ
ಚಿದಾದಿ ಐಕ್ಯನಕಿರಣದಿಂದ ಪವಿತ್ರವೆನಿಸುವುದು.
ಸೂರ್ಯಚಂದ್ರಾದಿಗಳೆಲ್ಲ ಕಲಾತತ್ವಸಂಬಂಧವಾದ
ರಾಗರಚನೆಭೋಗತ್ಯಾಗಯೋಗಾದಿಗಳೆಲ್ಲ
ತನ್ನ ತಾನಾದ ಮಹಾಬೆಳಗೆಂಬ ಪರಾತ್ಪರತತ್ವಮೂರ್ತಿ
ನಿರವಯನ ಕಿರಣದಿಂದ ಪವಿತ್ರವೆನಿಸುವುದು.
ಪ್ರಮಥಗಣಾರಾಧ್ಯರ ಘನಮಹದರುವಿನೆಚ್ಚರ ಕಾಣಿರಣ್ಣಗಳಿರಾ.
ಈ ವರ್ಮವರಿಯದೆ, ಭಕ್ತ ವಿರಕ್ತ ನಿಜಮುಕ್ತನಾಗಬಾರದು.
ನಿಜಮುಕ್ತನಾದಲ್ಲದೆ, ಬಯಲಬ್ರಹ್ಮದ ಬೆಳಗು ಕಣ್ದೆರವಾಗದು.
ಬಯಲಬ್ರಹ್ಮದ ಬೆಳಗು ಕಣ್ದೆರವಾದಲ್ಲದೆ,
ತನುಮನ ಇಂದ್ರಿಯವೆಂಬ ಮಾಯಾಪಾಶ ಹೆರೆಹಿಂಗದು,
ಮಾಯಾಪಾಶ ಹೆರೆಹಿಂಗಿದಲ್ಲದೆ
ತಾನೆ ತಾನಾದ ಘನಮಹಾಮಂತ್ರಮೂರ್ತಿಯಾಗಿ
ನಿರಂಜನ ವಸ್ತುವಿನಲ್ಲಿ ಕೂಡಲಾರಳವಲ್ಲ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./70
ಪಾವನಾರ್ಥವಾಗಿ ಮಹದರುವೆಂಬ
ಶ್ರೀಗುರುಕರಕಮಲೋದಯದಿಂದ ಚಿದ್ಘನಲಿಂಗಮಂ ಧರಿಸಿ,
ಲಿಂಗಭಕ್ತ ಭಕ್ತಲಿಂಗ ಲಿಂಗಜಂಗಮ ಜಂಗಮಲಿಂಗವೆಂಬುಭಯಲೀಲೆಗಳಿಂದ
ಸರ್ವಾಚಾರಸಂಪದವೆಂಬ ಷಡುಸ್ಥಲಮಾರ್ಗವನೊಡಗೂಡಿ,
ನಿರಾಭಾರಿವೀರಶೈವ ಸತ್ಕ್ರಿಯೆ ಸಮ್ಯಜ್ಞಾನಾನುಭಾವ
ಸದಾಚಾರ ನಡೆನುಡಿ ಭಿನ್ನವಾಗದಂತೆ,
ತಮ್ಮ ತನುಮನಪ್ರಾಣಾನುಭಾವಂಗಳಿಗೆ ಗಣಾಚಾರ ಶರಣ ಸಾಕ್ಷಿಯಾಗಿ,
ಘನಮಾರ್ಗವ ಬಿಟ್ಟಾಚರಿಸಿದೊಡೆ ಭವಬಂಧನ ಬಿಡದು,
ತದನಂತರ ನರಕ ತಪ್ಪದು.
ಅದು ಕಾರಣದಿಂದ ಮಹದರುವೆಂಬ ಪಾವುಡವ ಕೈಕೊಂಡು,
ಪ್ರಸನ್ನಪ್ರಸಾದ ಷಟ್ಸ್ಥಲವರ್ಮದಿ ವರ್ಮವ ಮೆರೆದು,
ದುಷ್ಕೃತ ್ಯದಲ್ಲಿ ಹೋಗುವುದ ಕಂಡು
ಆಪ್ತರಾದ ಗಣಾರಾಧ್ಯರ ಹರಗುರೋಕ್ತಿಯಿಂ,
ನಡೆಯಲ್ಲದ ನಡೆ, ನುಡಿಯಲ್ಲದ ನುಡಿಗಳ ಬಳಸಿ,
ಜನ್ಮ ಜರೆ ಮರಣಗಳೊಳ್ ತೊಳಲಿ ತೊಳಲಿ
ಭವಕ್ಕೆ ಬೀಳುವಂಥ ಅಜ್ಞಾನಮರವೆಯ ವಿಡಂಬಿಸಿ,
ತನುಮನಪ್ರಾಣಭಾವಂಗಳ ಹೊಡೆಹೊಡೆದು,
ಪ್ರತಿಜ್ಞೆ ಪ್ರಮಾಣಗಳೊಳ್ ಬಾಹ್ಯಾಂತರಂಗದಲ್ಲಿ
ಪರಿಪಕ್ವವ ಮಾಡಬಲ್ಲ ಮಹಾಜ್ಞಾನಿಗಳೆ ಪರಮಪವಿತ್ರರೆಂಬೆ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./71
ಪಿಂಡಬ್ರಹ್ಮಾಂಡಾದಿ ಮಾಯಾಭೋಗಯೋಗಮಂ ನೆರೆ ನೀಗಿ,
ಅನಾದಿಮೂಲಚಿತ್ತಿನ ಚಿದಂಶ
ಪ್ರಮಥಗಣದಾಸೋಹಸಮ್ಮೋಹಿತರಾದ,
ಭಕ್ತಿ ಮುಕ್ತಿ ವಿರಕ್ತಿಯೆಂಬ ಬಾಲಬ್ರಹ್ಮದ ಕುರುಹನರಿದು
ಪರಿಭವಸುಖಕ್ಕೀಡಾದ, ಕುಂಡಲತ್ರಯ ಪರಿಪೂರ್ಣಾನಂದಭವನ
ಸುಖಸಮರಸೈಕ್ಯಾನಂದನಿಜಕ್ಕೀಡಾದ,
ಚಿತ್ಕುಂಡಲತ್ರಯವರಿದು ಸುಸಂಗದೊಳು ಕೂಡಿ,
ದುಸ್ಸಂಗವನೀಡಾಡಿ, ಪರಿಪೂರ್ಣ ಗಜಮಾರ್ಗವಿಡಿದು,
ಭವಗುರಿಮಾರ್ಗವ ಹೊದ್ದದೆ, ಸತ್ಯಶುದ್ಧ ನಡೆನುಡಿ
ದೃಢನೈಷ್ಠೆ ಮೂಲಚಿತ್ತುವೆ
ಘನಕ್ಕೆ ಮಹಾಘನವೆಂದರಿದ ಭಕ್ತಗಣಾರಾಧ್ಯರ ಪೂರ್ಣಾನುಭಾವಜ್ಞಾನದಿಂದ,
ಒಪ್ಪತ್ತು ಸತ್ಕಾಯಕದ್ರವ್ಯವ ತೆರಹಿಲ್ಲದೆ ಕೂಡಿ
ಸಂಗಸಮರಸೈಕ್ಯನಾದ ಜಂಗಮ ಪ್ರಾಣಲಿಂಗಾಂಗ
ಮಂತ್ರಾನುಭಾವದಿಂದ ವಿರಾಜಿಸುತ್ತ,
ಗುರುವರಪ್ರಸಾದಿಯಾದ ಅಚ್ಚಪ್ರಸಾದಲಿಂಗೈಕ್ಯಂಗೆ ಕಿಂಕುರ್ವಾಣವಾಗಿ,
ಆ ಮಹಾಶರಣನಂತೆ
ಸತ್ಕ್ರಿಯಾಗುರುಲಿಂಗಜಂಗಮಾರಾಧನಂ ಮಾಡಿ.
ಅವರ ನಿಜಶೇಷಪ್ರಸಾದ ಪಾದೋದಕಮಂ ಬೆಸಗೊಂಡು,
ಸಂತೃಪ್ತಾನಂದಮಯನಾಗಿ,
ಮತ್ತೊಪ್ಪತ್ತು ಆ ಸತ್ಕ್ರಿಯಾ ಘನಗುರುಲಿಂಗಜಂಗಮವ
ಶರಣಸತಿ ಲಿಂಗಪತಿಯೆಂಬುಭಯಸ್ಥಲದೊಳಗರಿದು,
ಪರಿಣಾಮಿಸುವ ಪರಿಯೆಂತೆಂದೊಡೆ :
ದೀಕ್ಷಾಪಾದೋದಕದೊಳಗೆ ಶಿಕ್ಷಾಪಾದೋದಕ ಪ್ರಣಮಸಂಬಂಧವಾದ
ಶ್ರೀಭಸ್ಮೋದಕಮಂ ಮಾಡಿ,
ಚಿತ್ಪ್ರಣಮೋದಕಸಂಬಂಧವಾದ ತ್ರಿವಿಧೋದಕದೊಳಗೆ,
ಚಿತ್ಪ್ರಸಾದ ಅನಾದಿಮೂಲಪ್ರಣಮ ಪರಿಪೂರ್ಣ ಚಿತ್ಪ್ರಸನ್ನಪ್ರಸಾದ
ಅಖಂಡಜ್ಯೋತಿ ಅಖಂಡ ಮಹಾಜ್ಯೋತಿಪ್ರಣಮವೆಂಬ
ತ್ರಿವಿಧಪ್ರಣಮವಂ ಶ್ರೀಗುರುಮುಖದಿಂದರಿದು,
ನೂರೆಂಟು ಪ್ರಸಾದಪಾದೋದಕಪ್ರಣಮಜಪ,
ನೂರೆಂಟು ಪಾದೋದಕಪ್ರಸಾದಪ್ರಣಮಜಪ ಕರತಳಾಮಳಕವಾಗಿ,
ನೂರೆಂಟು ಚಿದಂಗ ಚಿದ್ಘನಲಿಂಗಸ್ಥಾನದ
ಸ್ಥಾನಪ್ರದಕ್ಷಣಪ್ರಣಮದ ಮಹಾಬೆಳಗಿನೊಳ್
ಆಚರಣೆಯ ಪ್ರಥಮ ತಳಿಗೆ ದ್ವಿತೀಯ ಬಟ್ಟಲಾಚರಣೆಯ
ಕಾರಣ ಒದಗಿರ್ದಡೆ,
ಏಕತಟ್ಟೆಬಟ್ಟಲಲ್ಲಿ ಚಿದಾನಂದೋದಕ
ಪರಿಪೂರ್ಣ ಪ್ರಸನ್ನಪ್ರಸಾದ ಸ್ವಯಂಭು ಮಹಾಜ್ಞಾನ
ನಿರಂಜನಜಂಗಮರ ತೀರ್ಥಮಂ ಪಡೆದು
ನಿಜೇಷ್ಟಬ್ರಹ್ಮದ ನವಕೃತಿಗಳಲ್ಲಿ ಬೆಳಗಿ,
ಅಣುವಿಂಗಣು ಪರಮಾಣುವಿಂಗೆ ಪರಮಾಣು,
ಮಹತ್ತಿಂಗೆ ಘನಮಹತ್ತಾಗಿ ವಿರಾಚಿಸುವಂತಾಗಿ,
ನಿಜವಸ್ತುವಂ ಕ್ರಿಯಾದೃಷ್ಟಿ ಜ್ಞಾನದೃಷ್ಟಿ ಮಹಾಜ್ಞಾನದೃಷ್ಟಿಗಳೆಲ್ಲ
ತುಂಬಿ ತುಳುಕಾಡಿ, ಬಿಂಬಿಸುತ್ತ,
ಅಚಲಾನಂದನಾದಿಶರಣನಿರವು ತಾನೇ ತಾನಾದ ಕರಣಾರ್ಥ,
ಕಾಯದ ಕರಸ್ಥಲಮೂರ್ತಿಯ ಮಸ್ತಕದ ಮೇಲೆ
ಬಿಂದು ಬಿಂದು ಸುರಿವಂತೆ,
ಚತುರಂಗುಲಪ್ರಮಾಣವಾಗಿ ಸಮರ್ಪಿಸುವಾಗ
ಅನಾದಿಮೂಲಪ್ರಣಮಮಂ ಧ್ಯಾನಿಸುತ್ತ
ಸದ್ಯೋಜಾತೋದಯ ಷಡಕ್ಷರಸ್ಮರಣೆಯಿಂದ,
ಚತುರ್ವಿಧಧಾತುಲಿಂಗಾಲಯದಲ್ಲಿ ಮೂರ್ತಿಗೊಂಡಿರುವ
ಆಚಾರಸನ್ಮೋಹಿ ಸತ್ಕ್ರಿಯಾಲಿಂಗವೆ ಸ್ಪರಿಶನೋದಕ
ನಿಮಗೆ ಸಮರ್ಪಿತವಯ್ಯ.
ವಾಮದೇವೋದಯ ಷಡಕ್ಷರಸ್ಮರಣೆಯಿಂದ,
ಷಡ್ವಿಧಬಿಂದು ಲಿಂಗಾಲಯದಲ್ಲಿ ಮೂರ್ತಿಗೊಂಡಿರುವ
ಮಂತ್ರಾನಂದಮೋಹಿ ಗುರುಲಿಂಗವೆ ಅವಧಾನೋದಕ
ನಿಮಗೆ ಸಮರ್ಪಿತವಯ್ಯ.
ಅಘೋರಾನಂದೋದಯ ಷಡಕ್ಷರಸ್ಮರಣೆಯಿಂದ
ದಶವಿಧ ಕ್ಷೇತ್ರಲಿಂಗಾಲಯದಲ್ಲಿ ಮೂರ್ತಿಗೊಂಡಿರುವ
ಸದ್ರೂಪು ಚಿದ್ರೂಪು ಚಿನ್ಮಯ
ನಿರೀಕ್ಷಣಾನಂದಮಯನಾದ ಶಿವಲಿಂಗವೆ ಆಪ್ಯಾಯನೋದಕ
ನಿಮಗೆ ಸಮರ್ಪಿತವಯ್ಯ.
ತತ್ಪುರುಷೋದಯ ಷಡಕ್ಷರಸ್ಮರಣೆಯಿಂದ,
ದ್ವಾದಶವಿಕೃತಿಲಿಂಗಾಲಯದಲ್ಲಿ ಮೂರ್ತಿಗೊಂಡಿರುವ
ಯಜನಾದಿ ಪರಿಣಾಮಾನಂದಮಯನಾದ ಚರಲಿಂಗವೆ ಹಸ್ತೋದಕ
ನಿಮಗೆ ಸಮರ್ಪಿತವಯ್ಯ.
ಈಶಾನ್ಯೋದಯ ಷಡಕ್ಷರಸ್ಮರಣೆಯಿಂದ,
ಷೋಡಶಕಳಾಲಿಂಗಾಲಯದಲ್ಲಿ ಮೂರ್ತಿಗೊಂಡಿರುವ
ಇಳಾನಾದಪರಿಣಾಮಾನಂದಮಯನಾದ ಪ್ರಸಾದಲಿಂಗವೆ ಪರಿಣಾಮೋದಕ ನಿಮಗೆ ಸಮರ್ಪಿತವಯ್ಯ.
ಗೋಪ್ಯೋದಯ ಷಡಕ್ಷರಸ್ಮರಣೆಯಿಂದ,
ಉಭಯವಿದ್ಯುಲ್ಲಿಂಗಾಲಯದಲ್ಲಿ ಮೂರ್ತಿಗೊಂಡಿರುವ
ವೇದಾದಿ ಪರಿಣಾಮಾನಂದಮಯನಾದ ಮಹಾಲಿಂಗವೆ
ನಿರ್ನಾಮೋದಕ ನಿಮಗರ್ಪಿತವಯ್ಯ.
ಅಖಂಡಗೋಪ್ಯೋದಯ ಷಡಕ್ಷರಸ್ಮರಣೆಯಿಂದ,
ಸಹಸ್ರ ಶಿವಕಳಾಲಿಂಗಾಲಯದಲ್ಲಿ ಮೂತಿಗೊಂಡಿರುವ
ಪರಿಪೂರ್ಣ ದೀಕ್ಷಾಪರಿಣಾಮಾನಂದಮಯನಾದ
ನಿಃಕಲಾಲಿಂಗವೇ ಆನಂದೋದಕ ನಿಮಗರ್ಪಿತವಯ್ಯ.
ಅಖಂಡಮಹಾಗೋಳಕೋದಯ ಷಡಕ್ಷರಸ್ಮರಣೆಯಿಂದ,
ತ್ರಿವಿಧಚಿತ್ಕಳಾಲಿಂಗಾಲಯದಲ್ಲಿ ಮೂರ್ತಿಗೊಂಡಿರುವ
ಪರಮಾನಂದ ಶಿಕ್ಷಾಪರಿಣಾಮಾನಂದಮಯನಾದ
ನಿಃಶೂನ್ಯಲಿಂಗವೆ ಶಿಕ್ಷಾನಂದೋದಕ ನಿಮಗರ್ಪಿತವಯ್ಯ.
ಅಖಂಡಮಹಾಪರಿಪೂರ್ಣಗೋಳಕೋದಯದ ಷಡಕ್ಷರಸ್ಮರಣೆಯಿಂದ,
ಏಕನಿರಂಜನ ವ್ಯಂಜನಾಲಯದಲ್ಲಿ ಮೂರ್ತಿಗೊಂಡಿರುವ
ಸಚ್ಚಿದಾನಂದ ಮೋಕ್ಷಪರಿಣಾಮಾನಂದಮಯನಾದ
ನಿರಂಜನಲಿಂಗವೆ ಜ್ಞಾನಾನಂದೋದಕ ನಿಮಗರ್ಪಿತವಯ್ಯ
ಅಖಂಡಮಹಾಪರಿಪೂರ್ಣ ನಿರವಯಗೋಳಕೋದಯ ತ್ರಿಯಕ್ಷರಸ್ಮರಣೆಯಿಂದ
ಬಯಲಮಂಟಪ ಚಿದಾಲಯದಲ್ಲಿ ಮೂರ್ತಿಗೊಂಡಿರುವ
ನಿರವಯಾನಂದಮಯನಾದ ಜ್ಯೋತಿರ್ಲಿಂಗವೆ ಸತ್ಯೋದಕ ನಿಮಗರ್ಪಿತವಯ್ಯ.
ಎಂದು ಈ ತೆರದಿಂದ ದಶವಿಧಲಿಂಗಾಂಗಗಳಿಗೆ
ದಶವಿಧಪ್ರಣಮಸ್ಮರಣೆಯಿಂದ ದಶವಿಧಪರಿಪೂರ್ಣ ಚಿತ್ಪ್ರಸಾದೋದಕವ
ಸತಿಪತಿ ಒಂದೆ ಸ್ಥಲವಾದೊಡೆ ತಾ ಸಲಿಸಿದ ಮೇಲೆ
ಸೂಕ್ಷ್ಮಪ್ರಣಮಧ್ಯಾನವ ಕರಿಗೊಳಿಸಿ,
ಅತಿಗೋಪ್ಯದಿಂದ ಕೊಟ್ಟು, ನಿರ್ನಾಮವೆನಿಸಿ,
ತಾ ಸಲಿಸಿದ ಎಡೆಯ ಕೊಡುವುದು ಆಚಾರಸ್ಥಲ : ಬೇರಾದೊಡೆ ಕೊಡಲಾಗದು.
ಮತ್ಯಾರಾದೊಡು ಭಕ್ತಗಣಾರಾಧ್ಯರು ಶರಣೆಂದೊಡೆ
ಕೊಂಡುಕೊಳ್ಳುವುದು ಮಾಡಲಾಗದು, ಮಾಡಿದಡೆ ಪಡಕೊಂಡು
ಮಾರ್ಗಕ್ರಿಯಾ ಭಕ್ತಜಂಗಮಲೀಲೆಯ ಬಳಸುವುದೆ
ಪ್ರಮಥಗಣಾಚಾರ ನ್ಯಾಯವು.
ಇನ್ನು ಹಿಂದೆ ಹೇಳಿದ,ಮಹಾಜ್ಞಾನತೀರ್ಥವ ಸಲಿಸಿದ
ಘನಲಿಂಗ ಶರಣನು
ಜಂಗಮಸೂತ್ರದಿಂದ ಹಸ್ತಸ್ಪರಿಶನವ ಮಾಡಿದ
ಗುರುರೂಪದ್ರವ್ಯ ಇಲ್ಲವಾದ ಸ್ಥಲವಾದೊಡೆ,
ಗುರುಪಂಚಾಕ್ಷರ ಲಿಂಗಪಂಚಾಕ್ಷರವ ಅಂತರಂಗದಲ್ಲಿ ಧ್ಯಾನಿಸಿ,
ವಾಮಕರಸ್ಥಲದಲ್ಲಿ ಚಿದ್ಘನಮಹಾನಿಜೇಷ್ಟಲಿಂಗದೇವನ ಮೂರ್ತಮಾಡಿಸಿಕೊಂಡು,
ಮೂಲಷಡಕ್ಷರ ಪಂಚಾಕ್ಷರ ತ್ರಿಯಕ್ಷರ ಏಕಾಕ್ಷರ ಚಿದ್ಬಿಂದುವೆಂಬ
ಷೋಡಶಚಿತ್ಕಳಾಪ್ರಣಮಸ್ವರೂಪವ ಮಹದರುವಿನ ಕೊನೆಮೊನೆಯಲ್ಲರಿದು,
ಧ್ಯಾನಿಸುತ್ತ, ಕ್ರಿಯಾಭಸಿತಸ್ಪರಿಶನಂಗೈದು,
ದಕ್ಷಿಣಹಸ್ತಮಣಿಗಳೆಲ್ಲ ವ್ಯಾಪಿಸಿ,ಆ ಹಸ್ತಕ್ಕೆ ಪಾವುಡವ ಮರೆಮಾಡಿ,
ಗೋಪ್ಯಮುಖದಲ್ಲಿ ಚಿದ್ಗುರುಲಿಂಗಜಂಗಮವೆಂಬ
ತ್ರಿವಿಧಪ್ರಣಮವ ಪ್ರದಕ್ಷಿಸಿ,
ಶುದ್ಧಪ್ರಸಾದಪ್ರಣಮಬಿಂದು, ಸಿದ್ಧಪ್ರಸಾದಪ್ರಣಮಬಿಂದು,
ಪ್ರಸಿದ್ಧಪ್ರಸಾದಪ್ರಣಮಬಿಂದುಯೆಂಬ
ದ್ವಾದಶಪ್ರಣಮಪ್ರಸಾದ ಮಂತ್ರಮಣಿಗಳಂ ಮುಟ್ಟಿ,
ಮನಘನಮಂತ್ರವಾಗಿ, ಮತ್ತೆಂದಿನಂತೆ ಪ್ರದಕ್ಷಿಸಿ,
ಒಂದೇವೇಳೆ ತನ್ನ ಸರ್ವಾಚಾರಕ್ಕೆ ಕರ್ತೃವಾಗಿ
ಪ್ರಸನ್ನವಾದ ಪವಿತ್ರಮೂರ್ತಿಯ ಚಿದಾಲಯಮಧ್ಯಮಂಟಪ
ಶೂನ್ಯಸಿಂಹಾಸನದ ವರಚೌಕಮಧ್ಯ ಹೃತ್ಕಮಲವೆಂಬ
ಅನಿಮಿಷಸ್ಥಾನದಲ್ಲಿ ಮಹಾಜ್ಞಾನದಿಂದ ಮೂರ್ತಗೊಳಿಸಿ,
ಆತನ ಮಹಾಜ್ಞಾನಚರಣಕ್ಕೆ ಸ್ಪರಿಶನಂಗೈದು
ಸುಚಿತ್ತವೆಂಬ ಕ್ರಿಯಾಕರಸ್ಥಲವ ಚಿದ್ಘನಲಿಂಗದೇವನ ಮಸ್ತಕದಲ್ಲಿಟ್ಟು,
ತನ್ನೆಡೆಗೆ ಶುದ್ಧಪ್ರಸಾದ ಪಂಚಾಕ್ಷರದಿಂದೆ ನೆನಹುನಿರ್ಧಾರವಾಗಿ
ಒಂದುವೇಳೆ ಸ್ಪರಿಶನಂಗೈದು ಸಿದ್ಧಪ್ರಸಾದಪಂಚಾಕ್ಷರದಿಂದ
ಮತ್ತೊಮ್ಮೆ ಸ್ಪರಿಶನಂಗೈದಲ್ಲಿ ,
ಪ್ರಸಿದ್ಧಪ್ರಸಾದತ್ರಿಯಕ್ಷರ ಸ್ಮರಣೆಯಿಂದ
ಮೂಲಮಂತ್ರಮೂರ್ತಿ ಶ್ರೀಗುರುಲಿಂಗಜಂಗಮವೆ ನಮಃ ಎಂದು
ಮತ್ತೊಮ್ಮೆ ಸ್ಪರಿಶನಂಗೈದು
ಪರಮಪವಿತ್ರ ಘನಗುರುಸ್ವರೂಪ ಶುದ್ಧಪ್ರಸಾದವೆನಿಸುವುದು.
ಅಂತಪ್ಪ ಶುದ್ಧಪ್ರಸಾದವನು ನಾಲ್ವತ್ತೆಂಟು ಪರಮಾನಂದಪ್ರಣಮಸ್ಮರಣೆಯಿಂದ,
ಆಯಾಯ ಹಸ್ತಮುಖಲಿಂಗ ದ್ರವ್ಯಪ್ರಸಾದಂಗಳೆಂಬ
ನಿಜಮಿಶ್ರಾರ್ಪಣದೇಕಾದಶಪ್ರಸಾದದಿರವನರಿದು,
ಚಿತ್ಕಲಾಪ್ರಸನ್ನಪ್ರಸಾದವಾಗಿ ಪರಿಶೋಭಿಸುವ ಶರಣಲಿಂಗ
ತಾನೆ ತಾನಾಗಿ, ಸಂತೃಪ್ತಿಯಿಂದ ಘನಕ್ಕೆ ಘನಗಂಭೀರನೆನಿಸಿ,
ಈ ಸನ್ಮಾರ್ಗವು ಗೋಪ್ಯಕ್ಕತಿಗೋಪ್ಯವಾಗಿ,
ಕರುಣಿಸಿದ ಗುರುವು ತನ್ನೊಳಗಾಗಿ, ತಾನು ಗುರುವಿನೊಳಗಾಗಿ,
ಏಕರೂಪವೆನಿಸಿ, ಒಡಲೊಂದಾಗಿ,
ಅಭಿನ್ನನಿಜಯೋಗಾನಂದದಿಂದ ನಡೆನುಡಿ ದೃಢಚಿತ್ತ ಹೊದ್ದಲ್ಲದೆ
ಜ್ಯೋತಿಜ್ಯೋತಿ ಕೂಡಿ ಬಯಲಾದಂತೆ,
ಕೇವಲ ಜಂಗಮಲಿಂಗವ ಒಪ್ಪತ್ತಾಚರಣೆಯಿಂದ
ಅಚ್ಚಪ್ರಸಾದಿಯಂತೆ ತತ್ಪ್ರಾಣವಾಗಿ
ಮತ್ತೊಪ್ಪೊತ್ತು ಒದಗಿದೊಡೆ ಮಹಾಸಂತೋಷದಿಂದ
ಪರಿಣಾಮತೃಪ್ತಿಯಿಂದ ಆಚರಣೆಯ ಅಂಗ ಮನ
ಪ್ರಾಣವಾಗಿ ಪರಿಶೋಭಿಸಿ.
ಒಪ್ಪತ್ತು ಆಚರಣೆ ಒದಗಿ, ಮತ್ತೊಪ್ಪೊತ್ತು ಆಚರಣೆ ನಿಂತು,
ಚತುರ್ವಿಧಸಾರಾಯಸ್ಥಲ ಶೂನ್ಯ ಚಿದಂಗ ಚಿದ್ಘನಲಿಂಗ
ಸಂಗಸಮರಸೈಕ್ಯನಾಗೊಪ್ಪುವ ಉಭಯಸ್ಥಲವಾದಲ್ಲಿ
ಈ ತೆರದಿಂದ ಸಂಬಂಧಾಚರಣೆಯನಾಚರಿಸಿ, ತನ್ನ ತಾನರಿದು,
ಇದಿರಿಟ್ಟ ಭೋಗವ ಮರೆದಾತನೆ ನಿಚ್ಚಪ್ರಸಾದಿಯೆಂಬೆ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./72
ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರಹೇಯಸ್ಥಲ,
ಗುರುಕರುಣಸ್ಥಲ, ಲಿಂಗಧಾರಣಸ್ಥಲ,
ವಿಭೂತಿಸ್ಥಲ, ರುದ್ರಾಕ್ಷಿಸ್ಥಲ, ಪಂಚಾಕ್ಷರಿಸ್ಥಲ,
ಭಕ್ತಿಸ್ಥಲ, ಉಭಯಸ್ಥಲ, ತ್ರಿವಿಧ ಸಂಪದಸ್ಥಲ,
ಚತುರ್ವಿಧಸಾರಾಯಸ್ಥಲ, ಉಪಾಧಿಮಾಟಸ್ಥಲ,
ನಿರೂಪಾಧಿಮಾಟಸ್ಥಲ, ಸಹಜಮಾಟಸ್ಥಲ,
ಮಹೇಶ್ವರಸ್ಥಲ, ಲಿಂಗನಿಷ್ಠಾಸ್ಥಲ, ಪೂರ್ವಾಶ್ರಯನಿರಸನಸ್ಥಲ,
ವಾಗದ್ವೈತ ನಿರಸನಸ್ಥಲ, ಆಹ್ವಾನನಿರಸನಸ್ಥಲ,
ಅಷ್ಟತನುಮೂರ್ತಿನಿರಸನಸ್ಥಲ, ಸರ್ವಗತನಿರಸನಸ್ಥಲ,
ಶಿವಜಗನ್ಮಯಸ್ಥಲ, ಭಕ್ತದೇಹಿಕಲಿಂಗಸ್ಥಲ-
ಎಂಬ ಇಪ್ಪತ್ತುನಾಲ್ಕು ಸ್ಥಲಂಗಳನ್ನು
ಆಚಾರಾಂಗಸ್ವರೂಪದ ಭಕ್ತ , ಗೌರವಾಂಗಸ್ವರೂಪದ ಮಹೇಶ್ವರ,
ತ್ಯಾಗಾಂಗಸ್ಥಲವನೊಳಕೊಂಡು, ಗುರುವಿನಲ್ಲಿ ತಿಳಿದು,
ಆ ಗುರುವನೆ ಅರುವಿನಲ್ಲಿ ಕಂಡು,
ಆ ಅರುವನೆ ಕ್ರಿಯಾಮಂಡಲಂಗಳಲ್ಲಿ ತರಹರವಾಗಿ,
ಅಲ್ಲಿಂದ ದೀಕ್ಷಾಗುರುಸ್ಥಲ, ಶಿಕ್ಷಾಗುರುಸ್ಥಲ, ಜ್ಞಾನಗುರುಸ್ಥಲ,
ಕ್ರಿಯಾಲಿಂಗಸ್ಥಲ, ಜ್ಞಾನಲಿಂಗಸ್ಥಲ, ಭಾವಲಿಂಗಸ್ಥಲ,
ಸ್ವಯಸ್ಥಲ, ಚರಸ್ಥಲ, ಪರಸ್ಥಲ,
ಕ್ರಿಯಾಗಮಸ್ಥಲ, ಜ್ಞಾನಾಗಮಸ್ಥಲ, ಸ್ವಕಾಯಸ್ಥಲ, ಪರಕಾಯಸ್ಥಲ,
ಧರ್ಮಾಚಾರಸ್ಥಲ, ಭಾವಾಚಾರಸ್ಥಲ, ಜ್ಞಾನಾಚಾರಸ್ಥಲವೆಂಬ
ಹದಿನೆಂಟು ಸ್ಥಲಗಳನ್ನು
ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು
ಪರಿಶೋಭಿಸುವಂಥ ಆಚಾರಲಿಂಗ,
ಮೂವತ್ತಾರು ಸಕೀಲಂಗಳನೊಳಕೊಂಡು
ಪರಿಶೋಭಿಸುವಂಥ ಗುರುಲಿಂಗ,
ಭಾವಾಭಾವಸ್ಥಲವನೊಳಕೊಂಡು, ನಿಃಕಳಲಿಂಗದಲ್ಲಿ ತಿಳಿದು
ಆ ನಿಃಕಲಬ್ರಹ್ಮವೆ ತಾನೆ ತಾನಾಗಿ,
ಮೂವತ್ತಾರು ಚಿತ್ಪಾದೋದಕ ಪ್ರಸಾದ ಪ್ರಣಮಂಗಳೆಂಬ
ಮೂಲಮಂತ್ರಸ್ವರೂಪನಾಗಿ ವಿರಾಜಿಸುವಾತನೆ
ಸತ್ಕ್ರಿಯಾಜಂಗಮಭಕ್ತನಾದ ಸಾಕಾರಮೂರ್ತಿ ಇರವು ನೋಡಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./73
ಪೂರ್ವವನಳಿದುಳಿದು ಪುನರ್ಜಾತರಾದ
ಕಿನ್ನರಯ್ಯ ಮೊದಲಾದ ಮುನ್ನೂರರವತ್ತು ಗಣಸಮೂಹದ
ಕಿಂಕುರ್ವಾಣಭಕ್ತಿಬಿನ್ನಹಕ್ಕೆ ಕಲಕೇತ ಕಲಿಗಣರು ಮೊದಲಾದ
ನಾನೂರಹತ್ತು ಗಣಾರಾಧ್ಯರು ಕಂಪನವೇರಿ, ಹದುಳಿಗರಾಗಿ,
ಹರಹರಾ ನಮೋ ನಮೋಯೆಂದು ಹಸ್ತಾಂಜುಳಿತದೊಳ್ ನಿಂದು,
ನಮ್ಮ ಮೇಲೆ ಬಹುಭಾವವ ಹೊರಿಸುವರೆ,
ನೀವು ಕೊಟ್ಟ ಮಹದರುವಿನಾಚಾರ,
ನೀವು ಕೊಟ್ಟ ನಿಜವೀರಶೈವ ಭಕ್ತಿಜ್ಞಾನವೈರಾಗ್ಯದಾಚರಣೆ,
ನೀವು ಕೃಪೆಮಾಡಿದ ಪರಿಪೂರ್ಣ ಪ್ರಸನ್ನ ಹರುಷದ
ನಿಧಿನಿಧಾನ ಸಂಬಂಧಸುಧಾರಸ,
ಶರಣುಶರಣಾರ್ಥಿ, ನಮ್ಮ ಗೃಹವ ಪ್ರಸನ್ನಪ್ರಸಾದಮೂರ್ತಿ
ಶ್ರೀಗುರುಲಿಂಗಜಂಗಮ ಒಡಗೂಡಿ,
ದಯಾಂತಃಕರಣವಿಟ್ಟು ಕೃಪೆಮಾಡಿ,
ನಿಮ್ಮ ಮೋಹದ ಕಂದಗಳೆಂದು ತಪ್ಪ ನೋಡದೆ ಒಪ್ಪವಿಟ್ಟು,
ಪರಿಪೂಜ್ಯರ ಮಾಡಿ ಆರೈವುದೆ ನಿಮ್ಮ ಧರ್ಮವಯ್ಯಾ.
ನಾವು ಅನಂತ ನಡೆನುಡಿ ದೃಢನೈಷ್ಠೆ ತಪ್ಪಿದ ತಪ್ಪುಕರು,
ನಮ್ಮಲ್ಲಿ ಗುಣವ ನೋಡುವರೆ ಅಣುಮಾತ್ರ ಹುರುಳಿಲ್ಲದಜ್ಞಾನಿಗಳು.
ನೀವು ನಾವು ಒಂದೊಡಲಾಗಿ, ಪರಿಪೂರ್ಣ
ನಡೆನುಡಿ ಚೈತನ್ಯವ ಸಾಧಿಸಬೇಕಲ್ಲದೆ,
ನಾವೇನು ಪೂರ್ಣಜ್ಞಾನಿಗಳೆ ನಿಮ್ಮ ವಿಜ್ಞಾಪಿಸುವುದಕ್ಕೆ ?
ಎಂದು ತಮ್ಮ ಗೃಹಂಗಳಿಗೆ ಬಿನ್ನೈಸಿ,
ಮುನ್ನೂರರವತ್ತು ಸಮ್ಮೇಳ ಮೊದಲಾದವರು
ನಾನೂರಹತ್ತು ಗಣಾರಾಧ್ಯರು ಸಹವಾಗಿ
ಏಳನೂರೆಪ್ಪತ್ತು ಅಮರಗಣಂಗಳಲ್ಲಿ
ಚಿಕ್ಕದಂಡನಾಥನ ಸಮಯಾಚಾರ
ಅಚ್ಚಪ್ರಸಾದಿಜಂಗಮ ಮೂರುಸಾವಿರ,
ನಿಚ್ಚಪ್ರಸಾದಿಜಂಗಮ ಮೂರುಸಾವಿರ,
ಸಮಯಪ್ರಸಾದಿಜಂಗಮ ಮೂರುಸಾವಿರ ಕೂಡಿ ಗಣಿತವ ಮಾಡಲಾಗಿ,
ಹನ್ನೆರಡುಸಾವಿರ ಪರಿಪೂರ್ಣಪ್ರಸಾದ ಜಂಗಮ ಮುಂತಾದ
ದಂಡನಾಥನ ಅರ್ಪಿತಾವಧಾನದ ಸಮಯಾಚಾರದಲ್ಲಿ
ಪಾದತೀರ್ಥವ ಲಿಂಗಕ್ಕರ್ಪಿಸಿ, ಲಿಂಗತೀರ್ಥವ ಸ್ವೀಕರಿಸಿ,
ಹಸ್ತಸ್ಪರಿಶನವಾದ ಶುದ್ಧಪ್ರಸಾದವ ಲಿಂಗಕ್ಕರ್ಪಿಸಿ,
ಲಿಂಗದಿಂದುಳುಮೆಯಾದ ಸಿದ್ಧಪ್ರಸಾದವ ಸ್ವೀಕರಿಸಿ,
ಪಾದೋದಕ ಭಸ್ಮೋದಕ ಮಂತ್ರೋದಕಸಂಬಂಧವಾದ
ಪರಮಾನಂದಜಲದಿಂದ ಕಂಡಿತವೆನಿಸಿ,
ಪ್ರಸಿದ್ಧಪ್ರಸಾದಿಗಳಿಗೆ ಕಿಂಕುರ್ವಾಣಭಕ್ತಿಭೃತ್ಯತ್ವದಿಂದ
ಆಚಾರಕ್ರಿಯಾಜ್ಞಾನಗಳ ಬೆಸಗೊಂಡು,
ಪಟ್ಸ್ಥಲಮಾರ್ಗಸಾಧನೆಗಳಿಂದ ಪರಿಶೋಭಿಸುವ
ಶುದ್ಧಸಿದ್ಧಪ್ರಸಿದ್ಧಪ್ರಸಾದಿಜಂಗಮವು
ಇಪ್ಪತ್ತುನಾಲ್ಕುಸಾವಿರ ಕೂಡಿ, ಗಣಿತವ ಮಾಡಲಾಗಿ,
ಮೂವತ್ತಾರುಸಾವಿರ ಜಂಗಮವೆ
ದಂಡನಾಥನರ್ಧಾಂಗಿ ಚಿತ್ಪ್ರಭಾಪುಂಜರಂಜಿತೆ,
ಮಹಾರಾಜಾಧಿರಾಜನಾಯಕಿ ನೀಲಲೋಚನೆಯರ
ಕರಮನಭಾವದ ಕೊನೆಮೊನೆಯಲ್ಲಿ ಬೆಳಗುತಿಪ್ಪರು.
ಇಂತೆಸೆವ ಮೂವತ್ತಾರುಸಾವಿರ ಜಂಗಮವು
ಏಳನೂರೆಪ್ಪತ್ತಮರಗಣಂಗಳೆಲ್ಲ ಒಂದೊಡಲಾಗಿ
ಮಾರ್ಗಾಚಾರ ಕ್ರಿಯಾಕಾಯಾರ್ಪಣದ್ರವ್ಯಗಳ
ಲವಣಮಿಶ್ರಂಗಳೊಳ್ ಪಾಕಂಗೈದು, ಸಾವಧಾನದಿರವನರಿದಂಗವಾಗಿ,
ಲಿಂಗವೆ ತಾನುತಾನಾಗಿರ್ಪ ಆಚಾರವರಿದು,
ಮಿಂದಾಚಾರ ಕ್ರಿಯಾಕರಣಾರ್ಪಣದ್ರವ್ಯಗಳ ಸಾವಧಾನದಿರವನರಿದು,
ಪ್ರಾಣವಾಗಿ, ಪ್ರಾಣಲಿಂಗಾರ್ಪಣವ ಮಾಡಿ,
ಪ್ರಾಣಲಿಂಗಮೂರ್ತಿ ತಾನಾಗಿರ್ಪುದೆ
ಆಚಾರದಿರವು ; ಪರಿಪೂರ್ಣಾಚಾರಕ್ರಿಯೆ.
ಭಾವಾರ್ಪಣದ್ರವ್ಯಗಳ ಸಾವಧಾನದಿರವರಿದು,
ಪೂರ್ಣಾನುಭಾವಮಾಗಿ, ಭಾವಲಿಂಗಾರ್ಪಣವ ಮಾಡಿ,
ಭಾವಲಿಂಗಮೂರ್ತಿ ತಾನಾಗಿರ್ಪುದೆ ಆಚಾರದಿರವು.
ಈ ಆಚಾರಮಾರ್ಗ ಹೊದ್ದದಂತೆ ಘನಮಹದರುವಿನ
ಪ್ರಸನ್ನಪ್ರಸಾದ ಭಕ್ತಿಪಾವುಡವೆಂದು ಕೊಟ್ಟು ಕೊಂಬ
ಭಕ್ತಂಗೆ ಮಾಡಿ ನೀಡುವ ಕಾಯಕ,
ಮಹೇಶಂಗೆ ಬೇಡಿ ನೀಡುವ ಕಾಯಕ,
ಇವರಿಬ್ಬರಿಗೆ ಚೈತನ್ಯವಾಗಿ ಸ್ವಯಜಂಗಮ
ಚರಜಂಗಮ ಪರಜಂಗಮವೆನಿಸಿ,
ನಿಜವಿರಕ್ತಿಯಂ ತಳೆದೊಪ್ಪಿ ಆಚಾರದರುವ
ಎಚ್ಚರವೆಚ್ಚರವೆಂದು ಇಚ್ಛೆಯ ನುಡಿದು,
ಮಲತ್ರಯವೆಂಬ ಬಚ್ಚಲೋಕುಳಿಯಲ್ಲಿ ಬೀಳದೆ
ಪವಿತ್ರವ ಕೊಟ್ಟು, ಪವಿತ್ರವ ಕೊಂಡು,
ಭಕ್ತ ಮಹೇಶ್ವರರಿಗೆ ತತ್ಪ್ರಾಣವಾಗಿರ್ಪುದೆ ಜಂಗಮದಕಾಯಕ.
ಇಂತೀ ಕಾಯಕವೆ ಕೈವಲ್ಯವೆಂದು ನಂಬಿ ನಚ್ಚಿ ಮಚ್ಚಿ,
ತಮ್ಮ ತಾವರಿದು, ದೇಹಾದಿ ಭೋಗಭುಕ್ತಯೋಗಸಾಧನೆ
ಫಲಪದಮೋಕ್ಷಾಪೇಕ್ಷೆಗಳ ಮರೆದಿಪ್ಪವರೆ ಕಾರಣಿಕರು ಕಾಣಾ,
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./74
ಪ್ರಥಮದಲ್ಲಿ ಪೀಠಿಕಾಸೂತ್ರವದೆಂತೆಂದೊಡೆ :
ಶೈವಪಾಷಂಡಿಗಳು ಆಚರಿಸಿದ
ಪಿಪೀಲಿಕಜ್ಞಾನ, ವಿಹಂಗಜ್ಞಾನ, ಮರ್ಕಟಜ್ಞಾನ, ಗಜಜ್ಞಾನ,
ಕುಕ್ಕುಟಜ್ಞಾನ, ಶ್ವಾನಜ್ಞಾನ, ವೇದಾಂತಜ್ಞಾನ, ಸಿದ್ಧಾಂತಜ್ಞಾನ,
ಭಿನ್ನಯೋಗ, ಚರ್ಯಾ-ಕ್ರಿಯಾ-ಕರ್ಮಜ್ಞಾನಂಗಳನ್ನು ತೊರೆದು
ಕೇವಲ ಸುಜ್ಞಾನವೆ ಚಿತ್ಪಿಂಡಾಕೃತಿಯ ಧರಿಸಿ,
ಆ ಪಿಂಡಮಧ್ಯದಲ್ಲಿ ಮಹಾಜ್ಞಾನವೆ ಚಿತ್ಪ್ರಾಣವಾಗಿ ಶೋಭಿಸಿ,
ಅವೆರಡರ ಮಧ್ಯವೆ ಪರಿಪೂರ್ಣ ಸ್ವಾನುಭಾವ,
ಉನ್ಮನಜ್ಞಾನವೇ ಸಾಕಾರಲೀಲೆಯ ಧರಿಸಿ,
ಪರಮಜ್ಞಾನಾಂಜನ ಸದ್ವಾಸನಪರಿಮಳವೆ
ಕ್ರಿಯಾಭಕ್ತಿ, ಜ್ಞಾನಭಕ್ತಿ, ಮಹಾಜ್ಞಾನಭಕ್ತಿ , ನಿರವಯಭಕ್ತಿ ,
ಸಚ್ಚಿದಾನಂದಭಕ್ತಿ, ಪರಿಪೂರ್ಣಭಕ್ತಿ ಮೊದಲಾದ ಷಡ್ವಿಧಭಕ್ತಿ ಯೆ
ಅಂತರಂಗದ ಸುಚಿತ್ತ ಸುಬುದ್ಧಿ ನಿರಹಂಕಾರ ಸುಮನ ಸುಜ್ಞಾನ ಸದ್ಭಾವಂಗಳಲ್ಲಿ,
ಕ್ಷೀರದೊಳು ಘೃತ, ಬೀಜದೊಳು ವೃಕ್ಷ, ಪಾಷಾಣದೊಳಗ್ನಿ ಅಡಗಿಪ್ಪಂತೆ,
ಅಂಗಾಪ್ತಸ್ಥಾನ ಸದ್ಭಾವವೆಂಬ ಚತುರ್ವಿಧಭಕ್ತಿಯೆ ಸಾಕಲ್ಯವಾಗಿ,
ಪುಷ್ಪದೊಳು ಪರಿಮಳ, ಫಲಾದಿಗಳಲ್ಲಿ ಫಳರಸವೆಸೆದಂತೆ,
ಘಟಸರ್ಪ ತನ್ನ ಮಾಣಿಕ್ಯದ ಬೆಳಕಿನಲ್ಲಿ ಆಹಾರವ ಕೊಂಡಂತೆ,
ಸಾಕಾರವಾಗಿ ಪರಿಶೋಭಿಸಿ, ಗುರುಚರಮಾರ್ಗದಿಂದ ಅಷ್ಟವಿಧಭಕ್ತಿವಿಡಿದು
ಬೆಳಗುವ ಮಹಾಲಿಂಗಶರಣನ ವಿವರವೆಂತೆಂದಡೆ : ಮಹದರುವೆಂಬ ಗುರುವಿನಲ್ಲಿ ಶ್ರದ್ಧೆ,
ಮಹಾಜ್ಞಾನವೆಂಬ ಲಿಂಗದಲ್ಲಿ ನೈಷ್ಠೆ ,
ಪೂರ್ಣಾನುಭಾವವೆಂಬ ಜಂಗಮದಲ್ಲಿ ಸಾವಧಾನ,
ಕರುಣಾಮೃತವೆಂಬ ಪಾದೋದಕದಲ್ಲಿ ಅನುಭಾವ,
ಕೃಪಾನಂದರಸವೆಂಬ ಪ್ರಸಾದದಲ್ಲಿ ಆನಂದ,
ಚಿದ್ಬೆಳಗಿನ ಪ್ರಕಾಶವೆಂಬ ಭಸಿತದಲ್ಲಿ ಸಮರಸ,
ದೃಗ್ದೃಷ್ಟಿ ಪುಂಜರಂಜನೆಯೆಂಬ ಮಣಿಮಾಲೆ ಕುಕ್ಷಿಗಳಲ್ಲಿ ,
ನಿಃಕಳಂಕ ಆನಂದಮಯವೆಂಬ ಚಿದ್ಘೋಷ ಮಂತ್ರದಲ್ಲಿ ,
ನಿರವಯಭಕ್ತಿ ಕಡೆಯಾದ ಅಷ್ಟವಿಧಭಕ್ತಿಯೆ ನಿಧಿನಿಧಾನವಾಗಿ,
ಜಗಜಗಿಸಿ ಬೆಳಗುವ ಮಹಾಲಿಂಗಶರಣಚರಗುರುಗಳ
ತನ್ನ ಸ್ವಾನುಭಾವಜ್ಞಾನದಿಂದರಿದು,
ಅಂಗ ಮನಪ್ರಾಣಭಾವನಿಷ್ಠಾಚಾರದಲ್ಲಿ ಸಾಕಾರಲೀಲೆಗೆ ಪಾವನಾರ್ಥವಾಗಿ,
ಷೋಡಶಭಕ್ತಿ ಜ್ಞಾನ ವೈರಾಗ್ಯ ಸ್ಥಳ ಕುಳ ಸಕೀಲ ಸಂಬಂಧಾಚರಣೆಯ
ವೀರಶೈವ ಪರಿವರ್ತನೆ ಅರ್ಪಿತಾವಧಾನ ಕೊಟ್ಟುಕೊಂಬ ನಿಲುಕಡೆ,
ಸಗುಣ ನಿರ್ಗುಣ ಸತ್ಯಶುದ್ಧಕಾಯಕ, ಸದ್ಧರ್ಮ ನಡೆನುಡಿ,
ಘನಗಂಭೀರ ಪರುಷಸೋಂಕುಗಳೆ
ಸಾರಿ ತೋರಿ ಬೀರಿ ಊರಿ ಜಾರಿ ಹಾರಿ ಸೈರೆಮೀರಿ
ಮಹಾಬಯಲೊಳಗೆ ಬಯಲಾಗಿ ತೋರುವ
ನಿಃಕಳಂಕ ನಿರಾಲಂಬ ನಿಃಪ್ರಪಂಚ ನಿರಾತಂಕ ನಿರುಪಾಧಿಕ
ನಿರ್ಭೆದ್ಯ ನಿಶ್ಚಿಂತ ನಿಃಕಾಮ ನಿಃಫಲದಾಯಕ ನಿಃಕ್ರೋಧ
ನಿರಾಸಿಕ ನಿರ್ವಾಣಿ ನಿರ್ಮರಣ ನಿರ್ಜಾತ ನಿಜಾನಂದಭರಿತಚರಿತ
ನಿರಹಂಕಾರ ನಿರ್ದೆಹ ನಿರ್ಲಂಪಟ ನಿರ್ವ್ಯಸನಿ ನಿರ್ಭಾಗ್ಯ
ನಿಃಸಂಸಾರಿ ನಿವ್ರ್ಯಾಪಾರಿ ನಿರ್ಮಲ ನಿಸ್ಸಂಗ ನಿಃಶೂನ್ಯ ನಿರಂಜನ ನಿರವಯ
ಘನಗಂಭೀರ ಪರಾತ್ಪರ ಅಗಮ್ಯ ಅಪ್ರಮಾಣ ಅಗೋಚರ ಅನಾಮಯ
ಅಗಣಿತ ಅಚಲಾನಂದ ಅಸಾಧ್ಯಸಾಧಕ ಅಭೇದ್ಯಭೇದಕ
ಅನಾದಿಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯ
ನಿರವಯಪ್ರಭು ಮಹಾಂತ ತಾನೇ ನೋಡಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./75
ಪ್ರಸಾದಿಸ್ಥಲ, ಗುರುಮಹಾತ್ಮೆಸ್ಥಲ, ಲಿಂಗಮಹಾತ್ಮೆಸ್ಥಲ,
ಜಂಗಮಮಹಾತ್ಮೆಸ್ಥಲ, ಭಕ್ತಮಹಾತ್ಮೆಸ್ಥಲ,
ಶರಣಮಹಾತ್ಮೆಸ್ಥಲ, ಪ್ರಸಾದಮಹಾತ್ಮೆಸ್ಥಲ,
ಪ್ರಾಣಲಿಂಗಿಸ್ಥಲ, ಪ್ರಾಣಲಿಂಗಾರ್ಚನಸ್ಥಲ,
ಶಿವಯೋಗಸಮಾಧಿಸ್ಥಲ, ಲಿಂಗನಿಜಸ್ಥಲ,
ಅಂಗಲಿಂಗಸ್ಥಲವೆಂಬ ಹನ್ನೆರಡು ಸ್ಥಲಂಗಳನ್ನು
ಶಿವಾಂಗಸ್ವರೂಪವಾದ ಪ್ರಸಾದಿ,
ಚರಾಂಗಸ್ವರೂಪವಾದ ಪ್ರಾಣಲಿಂಗಿ,
ಭೋಗಾಂಗಸ್ಥಳವನೊಳಕೊಂಡ ಲಿಂಗದಲ್ಲಿ ತಿಳಿದು
ಆ ಲಿಂಗವನೆ ಮಹಾಜ್ಞಾನದಲ್ಲಿ ಕಂಡು,
ಆ ಮಹಾಜ್ಞಾನವನೆ ಸುಜ್ಞಾನಮಂಡಲದಲ್ಲಿ ತರಹರವಾಗಿ,
ಅಲ್ಲಿಂದ ಕಾಯಾನುಗ್ರಹಸ್ಥಲ, ಇಂದ್ರಿಯಾನುಗ್ರಹಸ್ಥಲ,
ಪ್ರಾಣಾನುಗ್ರಹಸ್ಥಲ, ಕಾಯಾರ್ಪಿತಸ್ಥಲ,ಕರಣಾರ್ಪಿತಸ್ಥಲ,
ಭಾವಾರ್ಪಿತಸ್ಥಲ, ಶಿಷ್ಯಸ್ಥಲ, ಶುಶ್ರೂಷ್ಯಸ್ಥಲ, ಸೇವ್ಯಸ್ಥಲ,
ಜೀವಾತ್ಮಸ್ಥಲ, ಅಂತರಾತ್ಮಸ್ಥಲ, ಪರಮಾತ್ಮಸ್ಥಲ,
ನಿರ್ದಯಾಗಮಸ್ಥಲ, ನಿರ್ಭಾವಾಗಮಸ್ಥಲ, ನಷ್ಟಾಗಮಸ್ಥಲ,
ಆದಿಪ್ರಸಾದಿಸ್ಥಲ, ಅಂತ್ಯಪ್ರಸಾದಿಸ್ಥಲ, ಸೇವ್ಯಪ್ರಸಾದಿಸ್ಥಲವೆಂಬ
ಹದಿನೆಂಟು ಸ್ಥಲಂಗಳನ್ನು
ಮೂವತ್ತಾರು ಇಪ್ಪತ್ತನಾಲ್ಕು ಸಕೀಲಂಗಳನೊಳಕೊಂಡು
ಪರಿಶೋಭಿಸುವಂಥ ಜಂಗಮಲಿಂಗ,
ಸ್ವಯಪರವರಿಯದ ಸ್ಥಲವನೊಳಕೊಂಡ ನಿಃಶೂನ್ಯಲಿಂಗದಲ್ಲಿ ತಿಳಿದು,
ಆ ನಿಃಶೂನ್ಯಬ್ರಹ್ಮವೆ ತಾನೇ ತಾನಾಗಿ,
ಮೂವತ್ತಾರು ಚಿತ್ಪಾದೋದಕಪ್ರಸಾದಪ್ರಣಮಂಗಳೆಂಬ
ಮೂಲಮಂತ್ರಸ್ವರೂಪವಾಗಿ ವಿರಾಜಿಸುವಾತನೆ
ಸಮ್ಯಜ್ಞಾನಜಂಗಮಭಕ್ತನಾದ ನಿರಾಕಾರಮೂರ್ತಿಯಿರವು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./76
ಪ್ರಾಣಕ್ಕೆ ತತ್ಪ್ರಾಣವಾದ ಜೀವಸೂತಕವದೆಂತೆಂದೊಡೆ :
ಶ್ರೀಗುರು ತತ್ಪರಂಜ್ಯೋತಿರ್ಮಯ
ಸಾಕ್ಷಾತ್ನಿರ್ವಾಣಪದನಾಯಕ ಷಟ್ಸ್ಥಲ ಬ್ರಹ್ಮೋಪದೇಶವ
ಕರುಣಕಟಾಕ್ಷೆಯಿಂದ ಲಿಂಗಕ್ಕೆ ಲಿಂಗೋಪದೇಶ,
ಮನಕ್ಕೆ ಮಂತ್ರೋಪದೇಶ, ಪ್ರಾಣಕ್ಕೆ ನಿಜೋಪದೇಶ,
ಜೀವಕ್ಕೆ ಜ್ಞಾನೋಪದೇಶದಿಂದ ಕಾಯ ಶುದ್ಧಪ್ರಸಾದವಾಯಿತ್ತು.
ಮನ ಸಿದ್ಧಪ್ರಸಾದವಾಯಿತ್ತು, ಪ್ರಾಣ ಪ್ರಸಿದ್ಧಪ್ರಸಾದವಾಯಿತ್ತು,
ಜೀವ ಪ್ರಸನ್ನಪ್ರಸಾದವಾಯಿತ್ತು.
ಇನ್ನೆನಗೇತರ ಭಯವೆಂದು ಪರಮಪದದ ದೃಢತೆ ನೆಲೆಗೊಂಡು,
ಹಿಂದಣ ಪಾಪ ಮುಂದಣ ಭೀತಿಯ ಮರೆದು,
ತನ್ನಷ್ಟತನುವೆ ಅಷ್ಟಾವರಣದಲ್ಲಿ,
ಅಷ್ಟಾವರಣವೆ ತನ್ನಷ್ಟಾಂಗದಲ್ಲಿ ಕೂಟಸ್ಥವಾಗಿ,
ಭಿನ್ನದೋರದೆ ತಾನುತಾನಾಗಿ ನಿಜಮುಕ್ತಿಮಂದಿರವ ಹೊಕ್ಕು,
ಮೇಲೆ ಇಹಲೋಕದ ಭೋಗ ಪರಲೋಕದ ಮೋಕ್ಷನಾಗಬೇಕೆಂದು
ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ
ಗುರುಪೂಜೆ ಲಿಂಗಾರಾಧನೆ ಜಂಗಮಾರಾಧನಾರ್ಪಣವ ಮಾಡಬೇಕೆಂದು
ಅರ್ಪಿತಾವಧಾನವ ತೊರೆದು ಉಪಚಾರಗಳಿದ್ದಲ್ಲಿಗೆ ಹೋಗಿ
ಬೇಡಿ ಬೇಡಿ ಕಾಡಿ ಕಾಡಿ, ಕೊಟ್ಟರೆ ಸ್ತುತಿಸಿ,
ಕೊಡದಿದ್ದರೆ ನಿಂದ್ಯಕ್ಕೊಳಗಾಗಿ,
ಹರಿಯೊ ಮೊರೆಯೊಯೆಂದು ರಿಣಪಾತಕರಾಗಿ,
ಆಡಂಬರಾರಾಧನೆಗಳ ಮಾಡಿ,
ಈ ರಿಣ ಎಂದಿಗೆ ಹೋದೀತೋ ಗುರುವೆಯೆಂದು ಜಡೆಮುಡಿಗಳ ಬಿಟ್ಟು
ಕ್ಷೀಣಾತ್ಮರಿಗೆ ಹೇಳಿ ಕರಗಿ ಕೊರಗಿ,
ಶೀತೋಷ್ಣಾದಿಗಳ ಬಾಧೆಗಳ ದೆಸೆಯಿಂದ ಪ್ರಮಥಾಚಾರವ ಮರೆದು
ಭವರೋಗಿಯಾಗಿರ್ಪುದೆ
ಚತುರ್ಥದಲ್ಲಿ ಪ್ರಾಣದೊಳಗಣ ಅಂತರಂಗದ
ಜೀವ ಸಂಕಲ್ಪಸೂತಕವಿದೀಗ ಪೂರ್ವಕರ್ಮಕೃತ್ಯ ಕಾಣಾ
ನಿರವಯಪ್ರಭುಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./77
ಭಕ್ತಿಗೆ ಲಿಂಗಾಚಾರ, ಯುಕ್ತಿಗೆ ಸದಾಚಾರ,
ಮುಕ್ತಿಗೆ ಶಿವಾಚಾರ, ಶಕ್ತಿಗೆ ಗಣಾಚಾರ, ವಿರಕ್ತಿಗೆ ಭೃತ್ಯಾಚಾರ,
ನಡೆಗೆ ಕ್ರಿಯಾಚಾರ,ನುಡಿಗೆ ಜ್ಞಾನಾಚಾರ, ದೃಢಕ್ಕೆ ಭಾವಾಚಾರ,
ತ್ಯಾಗಕ್ಕೆ ಸತ್ಯಾಚಾರ, ಭೋಗಕ್ಕೆ ನಿತ್ಯಾಚಾರ, ಯೋಗಕ್ಕೆ ಧರ್ಮಾಚಾರ,
ನಿಜಕ್ಕೆ ಸರ್ವಾಚಾರವೆಂದು ಪರಶಿವಮೂರ್ತಿಯೆ ಪರಮೇಶ್ವರಿಯೆಂಬ
ತನ್ನ ನಿಜವಲ್ಲಭೆ ಚಿಚ್ಛಕ್ತಿಗೆ ಬೋಧಿಸಿದ ಹರನಿರೂಪ ಸಾಕ್ಷಿ :
“ಸರ್ವಾಚಾರಸುಸಂಪನ್ನೇ ಸದಾ ಸಂಪನ್ನೋ ಹಿತಚ್ಛಿವಃ |
ಲಿಂಗಾವಸಾನಕಾಲೇಷು ದ್ವಾದಶಾಚಾರಕಂ ಶ್ರುಣು ||
ಆಚಾರಂ ಗುರುರೂಪಂ ಚ ಅನಾಚಾರಂ ಪುನರ್ನರಃ |
ಆಚಾರಂ ಗುರುರೂಪಂ ಚ ಆಚಾರಂ ಮುಕ್ತಿರೂಪಕಂ ||
ಆಚಾರಂ ಲಿಂಗರೂಪೇಣ ಆಚಾರಂ ಸದ್ಗುರೋಃ ಪದಂ |
ಗುರುಲರ್ಿಗಂ ಜಂಗಮಶ್ಚ ಪ್ರಸಾದಂ ಪಾದವಾರಿಚ ||
ಭೂತಿ ರುದ್ರಾಕ್ಷಮಂತ್ರೇಣ ಭಕ್ತೋ ಜಗತಿ ಕಥ್ಯತೇ |
ಪೂಜಾಯಾಂ ಧಾರಣಂ ಚೇತಿ ಆಚಾರಂ ಸರ್ವಕಾರಣಂ ||”
ಎಂದುದಾಗಿ,
ಸರ್ವಾಚಾರಸಂಪತ್ತಿನಷ್ಟಾವರಣಸ್ವರೂಪ ತಾನೇ ತಾನಾದ
ಸದ್ಧರ್ಮರೆ ನಿತ್ಯಮುಕ್ತರು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./78
ಮತ್ತಂ, ಅಲ್ಲಿಂದ ಲಿಂಗಮೂರ್ತಿಯ ಕರಸ್ಥಲಕ್ಕೆ ಬಿಜಯಂಗೈಸುವ ವಿವರ :
ಲಿಂಗಮಸ್ತಕದಲ್ಲಿ ಅಂಗುಷ್ಠವನ್ನಿಟ್ಟು,
ಆಧಾರದಲ್ಲಿ ಅನಾಮಿಕ ಮಧ್ಯಾಂಗುಲವ ಮಡುಗಿ,
ಕನಿಷ್ಠತರ್ಜನಿಗಳ ಎಡಬಲಕೆ ನಿಲ್ಲಿಸಿ,
ಲಿಂಗಮೂರ್ತಿಯ ಸಾವಧಾನಭಕ್ತಿಗಳಿಂದ
ವಾಮಕರಸ್ಥಲ ಪಾಣಿತಾಣಕ್ಕೆ ಬಿಜಯಂಗೈಸಿ,
ಆ ಲಿಂಗದೇವನ ಸಮರಸಾನಂದ ನಿಜಾನುಭಾವದಿಂದ
ಹನ್ನೆರಡುವೇಳೆ ಜಿಹ್ವೆಪ್ರಕ್ಷಾಲನಂಗೆಯ್ಸಿ,
ದ್ವಾದಶಾಂಗುಲ ಅಷ್ಟಾಂಗುಲ ಷಡಂಗುಲದೊಳಗೆ
ಮಧುರ ಒಗರು ಖಾರ ಆಮ್ಲ ಕಹಿ ಮೊದಲಾದ
ಕಾಷ್ಠದೊಳಗೆ ಅಯೋಗ್ಯವಾದ ಶುಷ್ಕಕಾಷ್ಠವಂ ಬಿಟ್ಟು,
ಯೋಗ್ಯವಾದಂಥಾದ್ದರೊಳಗೆ ದೊರೆದಂಥಾದ್ದೊಂದು ಕಾಷ್ಠವನು
ಆ ಪಾದೋದಕಸ್ಪರಿಶನದಿಂದೆ ಪವಿತ್ರವೆನಿಸಿ,
ಜಂಗಮಕ್ಕೆ ಕೊಟ್ಟು ತಾ ಕೊಂಡಂಥಾದ್ದೆ ಪ್ರಸಾದವೆನಿಸುವುದು.
ಆ ಪ್ರಸಾದವನ್ನು ಲಿಂಗಸ್ಪರಿಶನದಿಂದೆ ದಂತಪಂಕ್ತಿಗಳ ತೀಡಿ,
ಹಸ್ತಾಂಗುಲಿ ಪಾದಾಂಗುಲಿಗಳಂ ತೀಡಿದ ಮೇಲೆ
ಒಡೆದು ಎರಡು ಭಾಗವ ಮಾಡಿ ಜಿಹ್ವೆಯ ಪವಿತ್ರವಾಗಿ ಹೆರೆದು,
ಆ ನಿರ್ಮಾಲ್ಯವ ನಿಕ್ಷೇಪಸ್ಥಲದಲ್ಲಿ ಹಾಕಿ,
ಮುಖಮಜ್ಜನವ ಮಾಡಿ,
ಬಚ್ಚಬರಿಯಾನಂದಲೋಲಾಬ್ಧಿಯಲ್ಲಿರ್ಪುದೆ
ನಿರವಯಪ್ರಭು ಮಹಾಂತ ತಾನೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./79
ಮನಕ್ಕೆ ಮಂಗಳವಾಗಿ ಚೇತನಕೃತಿಯಿಂದ ವಿರಾಜಿಸುವ
ಪ್ರಾಣಸೂತಕವದೆಂತೆಂದೊಡೆ ವಿಚಾರ :
ಶ್ರೀಗುರುಘನಗಂಭೀರ ಮೋಕ್ಷಕರ್ತನ ಕರುಣಕಟಾಕ್ಷೆಯಿಂದೆ
ಅಣುವಿಂಗಣು ಮಹತ್ತಿಂಗೆ ಮಹತ್ತಾಗಿ ಪರಿಶೋಭಿಸುವಂತೆ
ಚಿದ್ಭ್ರಹ್ಮವ ಒಳಹೊರಗೆನ್ನದೆ
ಸಾಕಾರ ನಿರಾಕಾರ ಆಚರಣೆಸಂಬಂಧಗಳಿಂದ ತುಂಬಿ ತುಳುಕಾಡುತ್ತ
ಲಿಂಗನಡೆ ಲಿಂಗನುಡಿ ಲಿಂಗದೃಢ ಲಿಂಗರತಿ ಲಿಂಗಗತಿಮತಿ,
ಲಿಂಗಾಂಗಸಂಗಸಮರಸಕೂಟದಭಿಮುಖ ಲಿಂಗಾಭಿಮಾನ,
ಲಿಂಗಭೋಗೋಪಭೋಗಂಗಳೊಳ್ ತಾನೆ ತಾನಾಗಿರ್ಪ ಶಿಯೋಗೀಶ್ವರನು.
ಸ್ಥೂಲಸೂಕ್ಷ್ಮವಾದ ವಿಸರ್ಜನೆ ಬಂದೊದಗಿದ ಸಮಯದಲ್ಲಿ ವಿಸರ್ಜಿಸಿ
ಪ್ರಕ್ಷಾಲ್ಯದಿಂದ ಸುಚಿಭರ್ೂತನಾಗಿ, ಪರಿಣಾಮೋದಕವ ಶೋಧಿಸಿ,
ಪವಿತ್ರತೆಯಿಂದ ಹನ್ನೆರಡು ವೇಳೆ ಪ್ರಕ್ಷಾಲನಂಗೈದು
ದಂತಪಕ್ತಿಗಳ ತೀಡಿ, ಮುಕ್ಕುಳೋದಕದಿಂದ ಪರಿಣಾಮಿತನಾಗಿ,
ಒಂದನೇ ವಿಸರ್ಜಿಸಿದಲ್ಲಿ ಉದಕವು ಬಳಸಿ ಪರಿಣಾಮವಾಗಿ,
ಭಾಂಡವಾದರೆ ಬೆಳಗಿ, ಪಾವುಡವ ತೊಳೆದು ಒಣಹಾಕಿ,
ಹಸ್ತಪಾದವ ತೊಳೆದು, ಪವಿತ್ರೋದಕದಿಂದ
ಆರುವೇಳೆ ಗಂಡೂಷಮಂ ಮಾಡಿ
ಜಿಹ್ವೆಯ ತೊಳೆದು, ತದನಂತರದಲ್ಲಿ ಹರಗುರುಸ್ಮರಣೆಯಿಂದ
ಸುಗಂಧಯುಕ್ತವಾದ ಪತ್ರಿಪುಷ್ಪವು,
ಸುರಸಯುಕ್ತವಾದ ಹಣ್ಣು ಕಾಯಿಗಳ ಕೊಯಿದು ಕಂಡ್ರಿಸಿ,
ಭ್ರಮರಾದಿಗಳುಳಿದು ಗುರುಚರಗಣಾರಾಧ್ಯರಿಗೆ
ಕೆಲವು ಕೊಟ್ಟು ಶರಣೆಂದು,
ಉಳಿದಂಥವ ತಮ್ಮ ಗೃಹಕ್ಕೆ ತರುವಂಥದೇ
ಮಾರ್ಗಾಚರಣೆಯ ಕ್ರಿಯಾಚಾರದಿರವೆಂದುದು.
ಇದಲ್ಲದೆ ಸ್ಥೂಲಸೂಕ್ಷ್ಮವ ವಿಸರ್ಜಿಸಿ
ತನಗೆ ಜರೂರು ಇದ್ದರೆ ತಂಬಿಗೆ ಹಸ್ತಪಾದವ
ಮೃತ್ತಿಕಾಶೌಚದಿಂದ ಪ್ರಕ್ಷಾಲನಂಗೈದು ನಿರ್ಮಲವೆನಿಸಿ,
ಶ್ರೀಗುರುಲಿಂಗಜಂಗಮದ ನೆನಹು
ನಿರ್ಧಾರವಾಗಿ ನಿಂದ ಭಕ್ತಮಹೇಶ್ವರರು
ಜಿಹ್ವಾಗ್ರವ ಪ್ರಕ್ಷಾಲ್ಯವಂ ಮುಂದಿಟ್ಟು
ಆ ಜಿಹ್ವಾಗ್ರದಲ್ಲಿ ಚರಿಸುವ ಪರಮಾನಂದಜಲವ ತೂಪಿರಿಸುತ್ತ,
ಸುಗಂಧರಸದ್ರವ್ಯಂಗಳ ಕ್ರಿಮಿಕ್ರಿಮಿಗಳ ಕಂಡ್ರಿಸಿ
ಎಂಜಲವನುಳಿದು ಸುಚಿತ್ತ ಹಸ್ತದಿಂದೆತ್ತಿಕೊಂಬುವುದೆ
ಆಚರಣೆಯೊಳಗಿನ ಸಂಬಂಧವ ಮೀರಿದ ಕ್ರಿಯಾಚರಣೆಯೆನಿಸಿತ್ತು.
ಗಣಾರಾಧ್ಯರಿಗೆ ಈ ನಿರ್ಣಯಗಳನರಿಯದೆ
ತಾ ನಿರ್ಮಲ ಪರಿಪಕ್ವವಾದ ವರ್ಮಾದಿವರ್ಮವಗಾಣದೆ
ಸ್ಥೂಲಸೂಕ್ಷ್ಮವ ವಿಸರ್ಜಿಸಿ, ಹಸ್ತಪಾದವ ತೊಳೆದು,
ತಂಬಿಗೆಯ ಬೆಳಗಿಕೊಂಡು ಬರುವ ಪಥದಲ್ಲಿ ಸುರಸದ್ರವ್ಯವಂ ಕಂಡು
ಕ್ರಯ ವಿಕ್ರಯವ ಮಾಡಿ , ಸೆರಗಿನಲ್ಲಿ ಕಟ್ಟಿ,
ಬರುವಷ್ಟರೊಳಗೆ ಸುಗಂಧಯುಕ್ತವಾದ ಪುಷ್ಪಪತ್ರಿಗಳ ಕಂಡು,
ಅತಿಮೋಹವಿಟ್ಟು, ಸಂಭ್ರಮದಿಂದ ನಿಂದು,
ಜಿಹ್ವಾಗ್ರವ ತೊಳೆಯಲಿಲ್ಲವುಯೆಂದು
ಸಂಕಲ್ಪದಿಂದ ಭ್ರಾಂತುಭ್ರಮೆಚಿತ್ತನಾಗಿ,
ಅಂತರಂಗದಲ್ಲಿ ಬಿಡಲಾರದ ಅತಿಯಾಸೆ, ಕೇಳಲಾರದ ಸಂಶಯಗಳಿಂದ
ತೊಳತೊಳಗಿ ಹೊಯಿದಾಡುತಿರ್ಪುದೆ
ತೃತೀಯದಲ್ಲಿ ಮನದೊಳಗಣ ಅಂತರಂಗದ ಪ್ರಾಣಸೂತಕ ಕಾಣಾ
ನಿರವಯಪ್ರಭುಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./80
ಮನತ್ರಯಮಂಡಲಂಗಳಲ್ಲಿ
ನಿಃಕಲವ್ಯಾಪಾರದೊಡನೆ ಕೂಡಿ ವರ್ತಿಸುವಂಥ,
ಸ್ವಪ್ನ ನಿಜವಿಶ್ವಾಸವೆಂಬ ಹೃತ್ಪೀಠಮಧ್ಯದಲ್ಲಿ ಮೂರ್ತಿಗೊಂಡಿರುವ,
ನಿಶ್ಶೂನ್ಯಬ್ರಹ್ಮಪ್ರಾಣಲಿಂಗದೇವನ,
ನಿಶ್ಶೂನ್ಯಹಸ್ತದಲ್ಲಿ ಮೂರ್ತಿಗೊಳಿಸಿ,
ನಿರಾಕಾರವಾದಷ್ಟವಿಧಾರ್ಚನೆ, ಷೋಡಶೋಪಚಾರದಿಂದರ್ಚಿಸಿ,
ಎರಡಳಿದು, ತಾನೇ ತಾನಾಗಿ,
ಘನಮಿಶ್ರಾನಂದಭೋಗದಿಂದ ಅಚಲಾನಂದನಾಗಿ,
ಅಲ್ಲಿಂದ ಆ ಜಾಗ್ರದ ನೆನಹನೆಲ್ಲ ಕಂಡು ಪರಿಪೂರ್ಣತೃಪ್ತನಾಗಿ,
ಅದೇ ಪ್ರಣಮಲಿಂಗಮೂರ್ತಿಗಳ ಷಟ್ಚಕ್ರಂಗಳಲ್ಲಿ ಸಂಬಂಧವಿಟ್ಟು,
ಅರುಣೋದಯವೆ ಮೊದಲು ಅದಾವುದೆಂದೊಡೆ : ತನ್ನ ಘನಮನದ ಬೆಳಗೆ ಅರುಣೋದಯವೆನಿಸುವುದು.
ಆ ಬೆಳಗಿನಲ್ಲಿ ದೃಢಚಿತ್ತವಾಗಿ,
ಪ್ರಥಮಾಲಯ ಚತುಃಕೋಣೆಯ ಚೌದಳಮಂಟಪದಲ್ಲಿ
ಮೂರ್ತಿಗೊಂಡಿರುವ,
ಚತುಸ್ಸಾರಾಯಸ್ವರೂಪದಿಂದ ಧಾತುಗಳಿಗೆ ದಾತಾರನಾದ
ಆಚಾರಲಿಂಗಮಂ ಪರಿಪೂರ್ಣದ್ರವ್ಯಗಳಿಂದರ್ಚಿಸಿ,
ಘನಕ್ಷರನ್ಯಾಯದಂತೆ, ಎಡಬಲಪ್ರದಕ್ಷಣದಿಂದ
ನಮೋ ನಮೋ ಮತ್ಪ್ರಾಣಕಾಂತರೆ ಭವರುಜೆಗಾದಿವೈದ್ಯ
ಶ್ರೀಗುರುಬಸವದಂಡನಾಥ ಚಿತ್ಪ್ರಭಾಪುಂಜದ ಮಹಾಬೆಳಗೆ,
ನಿಮ್ಮೊಳಗಿಂಬಿಟ್ಟುಕೊಳ್ಳಿರಯ್ಯಾಯೆಂದು
ಶ್ರದ್ಧಾತುರದಿಂದ ಹಾಂಗೆ ದಳಪ್ರಣಮಲಿಂಗಮಂ ಧ್ಯಾನಿಸುತ್ತ ,
ಷಟ್ಕೋಣೆ ದಶಕೋಣೆ ದ್ವಾದಶಕೋಣೆ
ಷೋಡಶಕೋಣೆ ಸಹಸ್ರಕೋಣೆ
ತ್ರಿಕೋಣೆಯೆಂಬಷ್ಟಕುಲ ಗಿರಿಪರ್ವತಗಳೇರಿ,
ಹಿಂದಮುಂದಣ ಕಾಲಕಾಮಕರ್ಮಸಂಸಾರದಟ್ಟುಳಿಯ ನೀಗಿ,
ನಾದ ಬಿಂದು ಕಳೆಗಳಂ ಮರೆದು,
ಚಿನ್ನಾದ ಚಿದ್ಬಿಂದು ಚಿತ್ಕಳೆಗಳಂ ಅರಿದು
ಪರನಾದ ಬಿಂದುವಂ ಕೂಡಿ,
ಧ್ಯಾನವಮಾಡಿದ ಮಂತ್ರಲಿಂಗಜಪವೆಷ್ಟಾಯಿತೆಂದೊಡೆ,
ಒಂದು ದಿನಕ್ಕೆ ದಿನರಾತ್ರಿಗಳೆರಡು, ತಾಸು ಇಪ್ಪತ್ತುನಾಲ್ಕು,
ಗಳಿಗೆ ಅರವತ್ತು , ದಳ ಐವತ್ತು , ಪ್ರದಕ್ಷಣ ಇಪ್ಪತ್ತೊಂದು,
ಸಾವಿರದಾರುನೂರು ಜಪವೆನಿಸಿ, ಮನಮಂತ್ರಸ್ವರೂಪವಾಗಿ,
ಘನವನೊಡಗೂಡಿದಂಥದೆ
ನಿರ್ಗುಣಾನಂದದ ನಿರಾಕಾರಜಪವೆನಿಸುವುದು,
ಇದೇ ಶರಣಸನ್ಮಾರ್ಗದ ಪರಮಪಂಚಾಕ್ಷರದಿರವೆನಿಸುವುದು.
ಇದೇ ನಿಜಜಂಗಮಭಕ್ತಗಣಾರಾಧ್ಯರ ಇರವು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./81
ಮುಕ್ತಿಗೆ ನಿಜಮಂದಿರವಾಗಿ ಸಾಕಾರದ ಲೀಲೆಯಿಂದ
ಚರಿಸುವ ನಿಲುಕಡೆಯೆಂತೆಂದೊಡೆ : ಹೃತ್ಪೀಠ ಏಕಾಂತವಾಸವಾದ ಭಾವಾಪುರದ ನಿಜಾಲಯದಿಂದ
ಗಣಸಮ್ಮೇಳದ ನೆನಹುದೋರಿ, ಚಿನ್ಮಯಲೀಲೆಯಿಂ ಒರ್ವನೆ ಹೊರಟು,
ಕರಣಾಪುರದ ಚಿದ್ರೂಪಮೂರ್ತಿ ವಿಶ್ವಕುಟುಂಬ ಚಿದಾದಿತ್ಯನೊಡಗೂಡಿ,
ಆತನ ಕರಕೊಂಡು, ಅಲ್ಲಿಂದ ಕಾಯಪುರಕ್ಕೆ ಬಂದು,
ಚಿತ್ಸೂರ್ಯ ಚಂದ್ರಬೀದಿಗಳೆಂಬ ಪೂರ್ವ ಪಶ್ಚಿಮ ಉತ್ತರ ದಕ್ಷಿಣ
ನಾಲ್ಕು ಕವಾಟವ ತೆಗೆದವರ ಚೌಕಮಧ್ಯದಲ್ಲಿ ನಿಂದಾಕ್ಷಣವೆ
ಪರನಾದ ಬಿಂದು ಕಳೆಗಳೆಂಬ ಮೂಲಮಂತ್ರಧ್ಯಾನಾರೂಢನಾಗಿ,
ಪರದೆಯ ತೆಗೆದು ಸದ್ರೂಪಮೂರ್ತಿ ಚಿದ್ಘನಮಹಾನಿಜೇಷ್ಠಲಿಂಗದಲ್ಲಿ
ಕ್ರಿಯಾದೃಷ್ಟಿನಷ್ಟ.
ಅನಾದಿ ಗುರುಲಿಂಗಜಂಗಮ ಪ್ರಮಥಗಣಸಮ್ಮೇಳವ ಸ್ತೋತ್ರಂಗೈದು,
ಮಹದರುವೆಂಬ ಸದ್ಭಕ್ತಿರಸದೋರಿ ಹರುಷಾನಂದಶರಧಿ ಮೇರೆದಪ್ಪಿದಂತೆ,
ಹರಶರಣಗಣಾರಾಧ್ಯರಿಗೆ ಕರ ಶಿರ ಮನ ಬಾಗಿ ಶರಣು ಹೊಕ್ಕು,
ಭೃತ್ಯಾಚಾರಿಯಾಗಿ ಘನಮನವೇದ್ಯತ್ವದಿಂದ
ಸ್ಥೂಲ-ಸೂಕ್ಷ್ಮ-ಕಾರಣಾಚಮನಗಳೊದಗಿದಂತೆ ವಿಸರ್ಜನಂಗೈದು,
ಉದಕವ ಬಳಸಿ,
ನಿರ್ಮಲಚಿತ್ತದಿಂದ ಪಾದೋದಕ ಲಿಂಗೋದಕಂಗಳಲ್ಲಿ
ಮುಖಮಜ್ಜನವ ಮಾಡಿ,
ಶುದ್ಧಾಸನದೊಳ್ ಮೂರ್ತಿಗೊಂಡು,
ಕ್ರಿಯಾಭಸಿತ ಪತ್ರಿ ಪುಷ್ಪ ಧೂಪ ದೀಪಾರತಿ ಮೊದಲಾದ
ಪರಿಪೂರ್ಣ ದ್ರವ್ಯಗಳೊದಗಿದಂತೆ ಲಿಂಗಾರ್ಚನೆ
ಜಪಕ್ರಿಯೆಗಳ ಸಮರ್ಪಣವಮಾಡಿ,
ತನ್ನ ತಾನೆ ಬೆಳಗುವಾತ ನಿರವಯಪ್ರಭು ಮಹಾಂತ ತಾನೇ ನೋಡಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./82
ಲೋಕಾರ್ಥದ ಸತಿಪುರುಷರ ಯೋಗ್ಯ ಅಯೋಗ್ಯದ ತೆರನಂತೆ,
ಮಹದರುವೆಂಬ ಶ್ರೀಗುರುಪ್ರಸನ್ನನಾಗಿ,
ಲಿಂಗದಲ್ಲಿ ದೃಷ್ಟಿನಟ್ಟು, ಗುರುಕರುಣವ ಪಡೆದು,
ನಿಜಮುಕ್ತನಾಗಬೇಕೆಂಬ ಮಹಾಜ್ಞಾನತಲೆದೋರುವ ಪರಿಯಂತರವು,
ಸತಿಪುರುಷರಿಗೆ ಬಾಲತ್ವದಲ್ಲಿ ಗುರುವಿತ್ತಲಿಂಗ ಛಿನ್ನಭಿನ್ನವಾದರೆ,
ಆ ಲಿಂಗವ ತೆಗೆದು ಗುರುವಿಗೊಪ್ಪಿಸಿದಲ್ಲಿ,
ಆ ಗುರುದೇವನು ಸೂತ್ರವ ಹರಿಯದೆ
ಮುಂದೆ ಸುಯಿಧಾನದಾಜ್ಞೆಯ ಮಾಡಿ,
ಬಂಧುರವೆನಿಸಿ, ಇಪ್ಪತ್ತೊಂದುಪೂಜೆಯ ಮಾಡದೆ,
ಭಂಡಾರದ ಸೇವಕರಿಂದ ಗೋಮೂತ್ರ ಮೊದಲಾದ ಸಮ್ಮಾರ್ಜನೆ,
ಗೋಕ್ಷೀರ ಮೊದಲಾದ ಪಂಚಾಮೃತ
ಧೂಳಪಾದೋದಕದಿಂದ ಮತ್ತೊಂದು ಲಿಂಗವ ತೊಳೆದು,
ಐದುಪೂಜೆಯೆನಿಸಿ ಪ್ರಸಾದವ ಕೊಡದೆ,
ತೀರ್ಥವೊಂದನೆ ಅರ್ಪಿಸಿ ಮೊದಲು ಸುಯಿಧಾನವ ತಪ್ಪಿದ ಲಿಂಗವ
ಯಾರಾನಾ ಭಕ್ತಗಣಂಗಳು ಲಿಂಗೈಕ್ಯವಾದಾಗ್ಗೆ
ಪ್ರಸಾದ ಪ್ರತಿಪುಷ್ಪದಲ್ಲಿ ಸಮಾಧಿಯೊಳಗೆ
ನಿಕ್ಷೇಪವೆನಿಸುವುದು ಸಾಮಾನ್ಯವು.
ಇದು ಎಲ್ಲಿ ಪರಿಯಂತರವೆಂದಡೆ : ಆ ಶ್ರೀಗುರುಕರುಣದಿಂದೆ ಭಕ್ತಗಣಸಾಕ್ಷಿಯಾಗಿ,
ಇಪ್ಪತ್ತೊಂದು ಪೂಜೆಗಳೊಳು ಅಂಗವೆ ಸತಿ ಲಿಂಗವೆ ಪತಿಯೆಂದು
ಕಂಕಣವ ಕಟ್ಟಿ ಪರಿಯಂತರವು,
ಎಷ್ಟು ವೇಳೆ ಸುಯಿಧಾನತಪ್ಪಿದರೂ ದೀಕ್ಷಾಗುರುಸ್ಥಲಕ್ಕೆ ಸೇರೋತನಕ
ಲಿಂಗಧಾರಣವ ಮಾಡುವುದು, ಶಂಕಿಸಲಾಗದು.
ಗುರುಕರುಣದಿಂದ ಇಪ್ಪತ್ತೊಂದು ಪೂಜೆಯಮಾಡಿ,
ಶುದ್ಧಸಿದ್ಧಪ್ರಸಾದಿಯಾಗಿ, ಶಿವಮಂತ್ರಜಪವ ಮಾಡುವುದು.
ಚಿದ್ಘನಲಿಂಗಾಂಗವರಿದು, ಸತ್ಕ್ರಿಯೆ ಸಮ್ಯಜ್ಞಾನಾಚರಣೆಯಿಂದ
ನಡೆನುಡಿಗಳಿಂ ಪ್ರಮಥಗಣವೊಪ್ಪಿ,
ಪ್ರಸಿದ್ಧಪಾದೋದಕ, ಪ್ರಸಿದ್ಧಪ್ರಸಾದವ ಕೊಂಡು,
ಪ್ರಸಾದಿಯೆನಿಸಿದ ಮೇಲೆ,
ಗುರುವಿತ್ತ ಲಿಂಗ ಭಿನ್ನ ಛಿನ್ನವಾದೊಡೆ ವಿಯೋಗವಾದೊಡೆ,
ಸರ್ವಾಚಾರ ಭಕ್ತ ಮಹೇಶ ಪ್ರಸಾದಿ
ಪ್ರಾಣಲಿಂಗಿ ಶರಣಲಿಂಗೈಕ್ಯಸ್ಥಲದವರು,
ಲಿಂಗಬಾಹ್ಯರು ಪ್ರಸಾದಬಾಹ್ಯರು ಆಚಾರಬಾಹ್ಯರು
ಮೊದಲಾದವರ ಸಮ್ಮುಖದಲ್ಲಿ
ಲಿಂಗಾರ್ಚನಾರ್ಪಣಗಳ ಮಾಡಲಾಗದು.
ಅದೇನು ಕಾರಣವೆಂದಡೆ, ಶಿವಾಗಮಸಾಕ್ಷಿ : “ಅರ್ಚನಾದಿ ಕ್ರಿಯಾಕಾಲೇ ಪ್ರಚ್ಛನ್ನಂ ಪಟಮುತ್ತವಂ |
ಪಾಪೀ ಕೋಪೀ ಪರಿಭ್ರಷ್ಟಃ ದುಮರ್ುಖಶ್ಚಾಪ್ಯ ದೀಕ್ಷಿತಃ ||
ಪ್ರಮಾದಾದ್ಧರ್ಶನಂ ಚೈವ ಪೂಜಾಕ್ರಿಯಾರ್ಪಣಂ ತಥಾ |
ತಥಾಪಿ ನಿಷ್ಫಲಂ ಚೇತಿ ನರಕೇ ಕಾಲಮಕ್ಷಯಂ ||”
ಎಂದುದಾಗಿ,
ಹರಗುರುವಾಕ್ಯವ ಮೀರಿ ಮಾಡಿದೊಡೆ,
ಅವರಂತೆ ಕ್ರಿಯಾಬಾಹ್ಯರಪ್ಪುದು ತಪ್ಪದು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./83
ವೀರಶೈವ ಸನ್ಮಾರ್ಗ ಗುರೂಪದೇಶರೆನಿಸಿ
ತಮ್ಮಯ ನವಸ್ಥಾನದಲ್ಲಿರ್ದು ಮೂರ್ತಿಗೊಂಡಿರ್ಪ
ನವಲಿಂಗಮಂತ್ರಗಳಿಗೆ ಸುಗಂಧ ಸುರಸ ಸುರೂಪು
ಸುಸ್ಪರಿಶನ ಸುಶಬ್ದ ಸುತೃಪ್ತಿ ಅಖಂಡತೃಪ್ತಿ ಮಹಾತೃಪ್ತಿ
ಮಹಾಪರಿಪೂರ್ಣತೃಪ್ತಿ ಕಡೆಯಾದ ನವರಸಾಮೃತಗಳ
ಆ ಲಿಂಗಮಂತ್ರನಿರೀಕ್ಷಣೆಗಳನುಳಿದು,
ಕ್ರಿಯಾರ್ಪಣ ಜ್ಞಾನಾರ್ಪಣ ಮಹಾಜ್ಞಾನಾರ್ಪಣ
ತ್ರಿವಿಧಸಂಬಂಧದಾಚರಣೆಯ ಸಾವಧಾನ ಸಪ್ತವಿಧಭಕ್ತಿಯಿಂ ಮರೆದು,
ಪಂಚಪರುಷಮಂ ಮಾಡದೆ,
ಜಡಜೀವರಂತೆ ಭೌತಿಕಲಿಂಗೋದಕಂಗಳ ಭುಂಜಿಸಿ,
ಅಂಗಭೋಗವಿಷಯಾತುರನಾಗಿರ್ಪುದೆ ಅಂತರಂಗದ
ತೃಪ್ತಿಯ ಪಾತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./84
ವೀರಶೈವಾಚಾರಗುರುಮಾರ್ಗವಿಡಿದು ಬಂದ ಭಕ್ತಗಣಾಧೀಶ್ವರರು
ಕ್ರಿಯಾಜಂಗಮಲಿಂಗದ ಪಾದಪೂಜೆಯ ಮಾಡುವ ವಿವರವದೆಂತೆಂದೊಡೆ :
ಜಂಗಮಲಿಂಗಮೂರ್ತಿಗಳು ತಮ್ಮ ಗೃಹಕ್ಕೆ ಬಂದು,
ಶಿವಲಿಂಗಾರ್ಪಣಕ್ಕೆ ಭಿಕ್ಷಾಯೆಂದಾಕ್ಷಣವೆ,
ಶರಣುಶರಣಾರ್ಥಿ, ಮಹಾಲಿಂಗಾರ್ಪಣಕ್ಕೆ ನಮಸ್ಕಾರವೆಂದು ಅಭಿವಂದಿಸಿ,
ಆಸನವ ರಚಿಸಿದ ಮೇಲೆ ಮೂರ್ತಿಗೊಂಡ ತದನಂತರದೊಳು
ಅವರ ಜಂಘೆಯಾಗೊಪ್ಪುವ ವೃತ್ತಸ್ಥಾನಪರಿಯಂತರವು,
ಬಹುಗುಣದಲ್ಲಿ ತೊಳೆದಂಥ ನಿರ್ಮಾಲ್ಯವ ಧೂಳೋದಕದಿಂದ
ಹೊಸದಾಗಿ ಕಟ್ಟಿದ ಆಲಯ ಬಾವಿ ಧನ ಧಾನ್ಯ ಕಾಯಿಪಲ್ಲೆ ಕಾಷ್ಠ ಮೊದಲಾದ
ಜನನಿಜಠರದಿಂದುದಯವಾದ ಶಿಶುವಿಗೆ,
ಲಿಂಗಾಂಗ ಮುಂತಾದ ಹೊಸ ಅರುವೆ ಆಭರಣ,
ದಗ್ಧದ್ರವ್ಯ ಕಡೆಯಾದವಕ್ಕೆ ಸಂಪ್ರೋಕ್ಷಿಸಿ, ಪವಿತ್ರವೆನಿಸಿ,
ಆಸೆ ಆಮಿಷ ರೋಷಾದಿಗಳಿಲ್ಲದಾಚರಿಸುವುದೆ
ನಿರವಯಪ್ರಭು ಮಹಾಂತನಾಚಾರ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./85
ಶರಣಸ್ಥಲ, ತಾಮಸನಿರಸನಸ್ಥಲ, ನಿರ್ದೆಶನಸ್ಥಲ,
ಶೀಲಸಂಪಾದನಸ್ಥಲ, ಐಕ್ಯಸ್ಥಲ, ಸರ್ವಾಚಾರಸಂಪತ್ತಿನಸ್ಥಲ,
ಮೆಡ್ಲೇರಿ ಶಿವಲಿಂಗನ ವಚನ/86
ಶಿವಲಿಂಗಸಂಗವಾಗಿ, ಆ ಲಿಂಗದ ಕೂಟವನರಿಯದೆ,
ಹಾದರಕೆ ಹುಟ್ಟಿದ ಹೊಲಿಕರ್ಮ ಹಟಜೀವಿ
ಶೈವಪಾಶಂಡಿ ಷಣ್ಮತದವರಂತೆ ವರ್ತಿಸುವರ
ಮರಣಸೂತಕನಿರಸನದ ವಚನಸೂತ್ರವದೆಂತೆಂದೊಡೆ :
ಶ್ರೀಗುರುವಿನ ಹೃತ್ಕಮಲದಲ್ಲಿ ಉದಯವಾಗಿ ಚಿತ್ಪಿಂಡವ ಧರಿಸಿ,
ಜಂಗಮಲಿಂಗ ಲಿಂಗಜಂಗಮಮೂರ್ತಿಯಾದ
ಶಿವಶರಣರಸಂಗದಲ್ಲಿ ಬೆಳೆದು,
ನಿಜೇಷ್ಟಲಿಂಗದಲ್ಲಿ ಲೀಯವಾದ ಗುರುಚರಭಕ್ತಾಂಗನೆಯರು
ತಾವು ಸಾಕಾರಸೃಷ್ಟಿಗೆ ಬರುವಾಗ,
ನಿಃಕಲಪರಶಿವಕೃಪಾನಂದ ಸಾಕಲ್ಯಸಾವಯನಿರವಯವೆಂಬ
ತ್ರಿವಿಧಕೃತಿ ಷಟ್ಕೃತಿಯಾಗಿ, ನಿಜಾನಂದವಿಡಿದು,
ಶ್ರುತಿಗುರುಸ್ವಾನುಭಾವ ವೇಧಾ ಮಂತ್ರ ಕ್ರಿಯದಾಚರಣೆಸಂಬಂಧನಿಲುಕಡೆಗಳೆಂಬ
ಷಟ್ಸ್ಥಲಸಂಪದದ ಸ್ವಾನುಭಾವಸೂತ್ರವಿಡಿದು,
ಘನಗುರು ನಿರೂಪಣದಿಂದ ಸತ್ಯಶುದ್ಧ ನಡೆನುಡಿಸಂಪನ್ನ ಸದ್ಧರ್ಮ
ಸ್ಥೂಲಸೂಕ್ಷ್ಮ ಗಳಡಿಮೆಟ್ಟಿ ನಿಂದ ಕಾರಣಿಕರೆಂದು ಶೈವದಿಂದ ಹೊಗಳಿಸಿ,
ಸಕಲಶಾಸ್ತ್ರಾಗಮ ಪುರಾಣ ಸಾಕ್ಷಿಗಳಾಗಿ,
ಇಹ-ಪರ, ಪುಣ್ಯ-ಪಾಪ, ಸುಖ-ದುಃಖ, ಸ್ತುತಿ-ನಿಂದೆ,
ಧರ್ಮ-ಕರ್ಮ, ವೀರಶೈವ-ಶೈವ, ಭವಿ-ಭಕ್ತ, ಆಚಾರ-ಅನಾಚಾರ,
ಹೆಣ್ಣು-ಗಂಡು, ಸಿರಿ-ದರಿದ್ರ, ಸ್ಥೂಲ-ಸೂಕ್ಷ್ಮಕ್ಕೆ
ಕಾರಣವತಾರ್ಯ ಸಾಕ್ಷಿಕರಾಗಿ,
ಬದ್ಧಮೋಕ್ಷಂಗಳಿಗೆ ಹೊದ್ದಿಯೂ ಹೊದ್ದದೆ,
ಪೂಜಾಪೂಜಕತ್ವವೆಂಬ ಸಂದುಸಂಶಯದಾಲಯವ ಸ್ಥಿರಗೊಳಿಸದೆ
ತಮ್ಮ ತಾವರಿದು ಜನ್ಮ ಜರೆ ಮರಣದ ಕಾಲಕಾವರೆಡೆಯಾಟವ ಮರೆದು,
ನಿತ್ಯಮುಕ್ತಾಂಗನಾಭರಣರಾಗಿ,
ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪವೆಂಬ
ಸಲ್ಲಕ್ಷಣದೊಡನೆ ನಿರವಯ ಅನಾದಿಶರಣ ಚಿದ್ಘನನಿರೂಪಣವಿಡಿದು
ಬಂದ ಮಣಿಹವ ಮತ್ತಾ ಚಿದ್ಘನಗುರುವಿಗೊಪ್ಪಿಸಿ,
ಸಂತೃಪ್ತಿಯಿಂದ ಮತ್ತೆಂದಿನಂತೆ ನಿರವಯ ಲೀಲೆಯ ಧರಿಸುವಾಗ,
ಸಾಕಾರವಾದ ಪಾದೋದಕ ಪ್ರಸಾದ ಮಂತ್ರವೆಂಬ ಅಂಗ,
ನಿರಾಕಾರವಾದ ಪಾದೋದಕ ಪ್ರಸಾದ ಮಂತ್ರವೆಂಬ ಲಿಂಗ,
ಯದೃಷ್ಟಂ ತನ್ನಿಷ್ಟಂ ಎಂಬ ಶ್ರುತಿ ಗುರುಪ್ರಮಾಣದಿಂದ,
ಎಲ್ಲಿ ಹುಟ್ಟಿದಂಥದ್ದೆಲ್ಲ ಅಲ್ಲಿ ಲಯವೆಂಬ ನೀತಿಯೊಳ್
ಸದ್ರೂಪವಾದ ಸಮಾಧಿ, ಚಿದ್ರೂಪವಾದ ನಿರಂಜನಮಂತ್ರದಲ್ಲಿ
ಬಯಲಾದ ಘನಲಿಂಗೈಕ್ಯರ
ಮತ್ತುಳಿದ ಘನಲಿಂಗಸಂಗಿಗಳು ತಮ್ಮಂಗ ಮನ ಪ್ರಾಣವೆಂಬ
ತ್ರಿವಿಧಸ್ಥಾನದಲ್ಲಿ ಸ್ವಾನುಭಾವಜ್ಞಾನಾನಂದದರಿವಿನೊಳು
ಸಗುಣನಿರ್ಗುಣ ಕ್ರಿಯಾಚಾರ ಜ್ಞಾನಾಚಾರ
ಭಾವಾಚಾರವೆಂಬ ಸಾವಧಾನದಿಂದ
ರೂಪಾದ ಕಾಯಸಂಬಂಧ ದ್ರವ್ಯವ ಕ್ರಿಯಾರ್ಪಣವಮಾಡಿ,
ರುಚಿಯಾದ ಕರಣಸಂಬಂಧದ್ರವ್ಯವ ಜ್ಞಾನಾರ್ಪಣವಮಾಡಿ,
ತೃಪ್ತಿಯಾದ ಭಾವಸಂಬಂಧದ ದ್ರವ್ಯವ ಮಹಾಜ್ಞಾನಾರ್ಪಣವಮಾಡಿ,
ಪರಿಪೂರ್ಣಜ್ಯೋತಿರ್ಮಯ ಪರಮಾಣುಲಿಂಗದಲ್ಲಿ
ಸಂದುಸಂಶಯ ಹಿಂದು ಮುಂದಣ ಆಸೆ ಆಮಿಷವನಳಿದುಳಿದು
ಪರಿಪೂರ್ಣಾಂಗ ಲಿಂಗಾಚಾರ ಸಂಧಾನ
ಪರಿಪೂರ್ಣ ಶಕ್ತಿ ಭಕ್ತಿ ಶುಚಿ ರುಚಿ
ಪರಿಪೂರ್ಣ ಸುಹಸ್ತ-ಮುಖ, ನಡೆ-ನುಡಿ
ಪರಿಪೂರ್ಣ ಪದಾರ್ಥ- ಪ್ರಸಾದ
ಪಾದೋದಕ ಪ್ರಸಾದ ಮಂತ್ರಾನಂದದ ಬೆಳಗಿನಲ್ಲಿ
ನಿತ್ಯ ತೃಪ್ತಿ ಭವಭೂಜಕುಠಾರರಾಗಿರ್ಪುದೆ
ಪ್ರಮಥಗಣಂಗಳ ಸದ್ಧರ್ಮಮಾರ್ಗದ ಸತ್ಯಶುದ್ಧ ನಡಾವಳಿಗಳು.
ಇಂತೆಸೆವ ಘನಮಾರ್ಗವನುಳಿದು, ಲೋಕದ ಕರ್ಮಿಗಳಂತೆ
ನಮ್ಮ ಗುರುವು-ಜಂಗಮವು, ತಂದೆ-ತಾಯಿ
ಸತಿ-ಸುತ-ಒಡಹುಟ್ಟಿದರು ಸತ್ತರು
ನಮಗೆ ಗತಿಯಾವುದೆಂದು, ಲಿಂಗಜಂಗಮದಾರ್ಚನಾರ್ಪಣಗಳನುಳಿದು,
ಶೋಕಾಗ್ನಿಯ ಜ್ವಾಲೆಯನೆಬ್ಬಿಸಿ ಮಹಾದುಃಖಾಬ್ಧಿಯಲ್ಲಿ ಮುಳುಗಾಡುತ್ತ
ಅಂದಮಾಡಿ, ಗುಂಟಿಕೆಯನಿಕ್ಕಿ, ಗೂಟವ ಬಡಿದು,
ಶಿವಾನಂದಲೋಲುಪ್ತಿಯೆಂಬ ಸ್ತೋತ್ರಧ್ಯಾನ ಮಂಗಳಾರತಿ ಪುಷ್ಪಪತ್ರಿಯ
ಘನಸನ್ಮಾನ ನಿಜೋತ್ಸಾಹದ ಕೈವಲ್ಯ ಶುಭಸಂತೋಷವನರಿಯದೆ
ಅಯ್ಯಯ್ಯೊ ಅಪ್ಪಪ್ಪ ಅವ್ವವ್ವ ಅಣ್ಣಣ್ಣ ಅಕ್ಕಕ್ಕ
ಮಗಳೆ ಮಗಳೆ ಮಗನೆ ಮಗನೆ ಗುರುವೆ ಗುರುವೆ ಸ್ವಾಮಿ ಸ್ವಾಮಿ
ಹೇಂಗೆ ನಿಮ್ಮ ಕಳಕೊಂಡು ಹೇಂಗೆ ಜೀವಿಸಲೆಂದು
ಲಿಂಗಸಾವಧಾನವನುಳಿದು, ಬೊಬ್ಬೆಯ ಹೊಡೆಹೊಡೆದು,
ಎದೆ ಎದೆಯ ಬಡಿಬಡಿದು, ಕಿರಾತರಂತೆ ಮಣ್ಣಿನೊಳು ಮುಚ್ಚಿ
ಗುಟ್ಟಿಯ ಮಾಡಿ, ಪ್ರತುಮೆಗಳನಿಟ್ಟು ಪೂಜಿಸಿ,
ತಾನನಾದಿಲಿಂಗಮಂತ್ರಭೋಗೋಪಭೋಗದೊಡನೆ ಸಲಿಸುವ
ತೀರ್ಥಪ್ರಸಾದವ ತೋರಿ, ವಸ್ತ್ರಾಭರಣಗಳನಿಟ್ಟು,
ಕುಂಡಗೋಳಕರಂತೆ ನಿಜಸಂಗನ ನಿಲವನರಿಯದೆ
ಸತ್ತದಿನ ಮೂರು ಐದು ಒಂಬತ್ತು ತಿಂಗಳು
ವರುಷ ಹನ್ನೆರಡುವರುಷ ಪರಿಯಲ್ಲಿವಿಡಿದು
ಲಿಂಗಬಾಹ್ಯರಂತೆ ಎಡೆ ಹುಡಿಯನುಟ್ಟು ಪರಮಾನ್ನ ಪಾಯಸಗಳ ಮಾಡಿ,
ಕೊಡಗಳನಿಟ್ಟು ಪೂಜಿಸಿ, ಘನಗುರುಲಿಂಗಜಂಗಮದ ತೀರ್ಥವ ತೋರಿ,
ಸುಳಿಬಾಳೆ ಎಲಿಯ ಹಾಸಿ, ದೇವಾದಿದೇವರದೇವಜಂಗಮಕ್ಕೆ
ಅಲ್ಪಸ್ವಲ್ಪ ನೀಡಿ,
ಆ ಸುಳಿಬಾಳೆ ಎಲಿಯೊಳಗೆ ಮಿತಿತಪ್ಪಿ,
ಪಶುವಿನ ಮುಂದೆ ಇಟ್ಟಹಂಗೆ ಮಡುಗಿ,
ತಮ್ಮ ಹೆತ್ತವರ ಸತ್ತವರ ಹೆಸರುಗೊಂಡು
ಗಂಡ ಗುರುಲಿಂಗಜಂಗಮಪ್ರಸಾದಿಯಾಗಿ,
ಹೆಂಡತಿ ಮಕ್ಕಳೊಡಹುಟ್ಟಿದರೆಲ್ಲ
ಶ್ರೀಗುರುವಿತ್ತ ಲಿಂಗವಿಲ್ಲದವರು ಕೆಲರು,
ಲಿಂಗವ ಕಟ್ಟಿಕೊಂಡವರು ಕೆಲರು,
ಆ ಸತ್ತವರ ನೆನಹಿನಿಂದ ಸಮಸ್ತ ಉಪಚಾರವ ಮಾಡಿ,
ಆ ನೆನಹಿಂದುಳುಮೆಯಾದ ಮನದುಷ್ಟವ
ಒಂದೊತ್ತು ಉಪವಾಸವ ಮಾಡಿ
ಮನವೆಲ್ಲ ಸತ್ತವರೊಡಗೂಡಿ,
ಲಿಂಗನೈವೇದ್ಯವ ಮಾಡಿದೆವೆಂಬುದೆ ಶುದ್ಧ ಅನಾಚಾರಕ್ರಿಯೆಯು.
ಉಳಿದ ಪಿತ ಮಾತೆ ನೆಂಟತನದ ಗುರುಹಿರಿಯರೆಂದು
ಒಡಲುಪಾಧಿವಿಡಿದು, ಉದರಪೋಷಣಕ್ಕೆ ಹೋಗಿ,
ಆ ಸತ್ತ ಹೊಲೆಕರ್ಮದ ಅನಾಚಾರವ ನೋಡಿ, ಅನುಸರಿಸಿ,
ತನ್ನ ಚಿತ್ಪ್ರಭಾಪುಂಜರಂಜಿತ ಪ್ರಸನ್ನತೆ ಪ್ರಸಾದೋದಕವ ಕೊಟ್ಟು
ಏಕಸಮರಸವ ಮಾಡಿ
ಸತ್ಯಶುದ್ಧ ನಡೆನುಡಿಯುಳ್ಳ ಭಕ್ತಗಣಂಗಳಿಗೆ
ಭಿನ್ನ ಬಿಡುಗಡೆಯಿಂದ ಕರೆದೊಯ್ದು,
ಭಾಜನಂಗಳೊಂದೊಂದ ಕಂಚಿನ ಹಿತ್ತಾಳಿಗಳಲ್ಲಿ ಮಾಡಿ,
ಆಚಾರಸಂಪನ್ನರಿಗೆ ತಟ್ಟು ಮುಟ್ಟು ಸೋಂಕುಗಳ ಕಲ್ಪಿಸಿ,
ಅನಾಚಾರಿಗಳ ಭಿನ್ನವಿಲ್ಲದೊಡಗೂಡಿರ್ಪುದೆ
ಭವಕರ್ಮಿಗಳ ನಡಾವಳಿಯು.
ಇವರಿಗೆ ಉಪದೇಶವ ಮಾಡಿ ಲಿಂಗವಕೊಟ್ಟು,
ಭಕ್ತ ಮಹೇಶ ಪ್ರಸಾದಿಗಳೆಂದು ಬೊಗಳುವವರಿಗೆ
ಶ್ರೀ ಮಹಾಘನ ಜ್ಯೋತಿರ್ಮಯ ಗುರುವಿಲ್ಲ,ಲಿಂಗವಿಲ್ಲ, ಜಂಗಮವಿಲ್ಲ,
ಪಾದೋದಕಪ್ರಸಾದ ಮುಕ್ತಿಯೆಂಬುವುದೆಂದಿಗೂ ಇಲ್ಲ.
ನರಕಜೀವಜನ್ಮವೆ ಪ್ರಾಪ್ತಿಯಾಗಿ
ಕಾಲ ಕಾಮ ಮಾಯೋಚ್ಛಿಷ್ಟ ಪ್ರಾಣಿಗಳಾಗಿ,
ದುಃಖಾಬ್ಧಿಯಲ್ಲಿ ವಾಸವಾಗಿರ್ಪುದೆಂದಿಗೂ ಬಿಡದು ಕಂಡ್ಯಾ.
ಶಾಂಭವಿಗೆ ಬೋಧಿಸಿದ ಹರನಿರೂಪಣ ಸಾಕ್ಷಿ : “ಯೋ ಗುರುಃ ಮೃತಭಾವೇನ ಯದಾ ಶೋಚ್ಯತಿ ತದ್ದಿನಂ |
ಗುರುಲಿಂಗಪ್ರಸಾದಂ ಚ ನಾಸ್ತಿ ಯಸ್ಯ ವರಾನನೆ ||
ತದ್ಧಿನಂ ದೂಷಿತಂ ತೇಷಾಂ ಶೋಣಿತಂ ಸುರಾಮಾಂಸಯೋಃ |
ಏಕಭುಕ್ತ್ಯುಪವಾಸೇನ ನರಕೇ ಕಾಲಮಕ್ಷಯಂ ||
ಯದ್ಗೃಹೇ ಅನ್ಯದೇವೋಸ್ತಿ ತದ್ಗೃಹಾಣಿ ಪರಿತ್ಯಜೇತ್ |
ಯದ್ಗೃಹೇಷು ಭವಿಪ್ರಾಪ್ತೇ ಸದ್ಗೃಹಾಣಿ ಪರಿತ್ಯಜೇತ್ ||
ತಿಲಷೋಡಶಭಾಗೇನ ತೃಣಾಗ್ರಬಿಂದುರುಚ್ಯತೇ |
ಅಣುಗಾತ್ರಪ್ರಯೋಗೇನ ರೌರವಂ ನರಕಂ ವ್ರಜೇತ್ ||
ಅಸಂಸ್ಕಾರಿಕೃತಂ ಪಾಕಂ ಶಂಭೋನರ್ೆವೇದ್ಯಮೇವ ಚ |
ಅನಿವೇದಿತಂತು ಭುಂಜಂತಿ ಪ್ರಸಾದಂ ನಿಷ್ಪಲಂ ಭವೇತ್ ||
ಅನಾಚಾರಿಕೃತಂ ಪಾಕಂ ಲಿಂಗನೈವೇದ್ಯ ಕಿಲ್ಬಿಷಂ |
ಲಿಂಗಾಚಾರಿಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ ||
ಭವಿಹಸ್ತಕೃತಂ ಪಾಕಂ ಲಿಂಗನೈವೇದ್ಯಕಿಲ್ಬಿಷಂ |
ಭಕ್ತಹಸ್ತಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ ||”
ಇಂತೆಂದುದಾಗಿ,
ಹರಗುರುವಾಕ್ಯವ ಮೀರಿ,
ಭವಿಶೈವ ಹೊಲೆಕರ್ಮಿಗಳ ಮರಣಸೂತಕದುಃಖಾಬ್ಧಿಯಲ್ಲಿ ಮುಳುಮುಳುಗಾಡಿ,
ಹೇಸಿಕೆಯಲ್ಲದೆ ನಾವು ಷಟ್ಸ್ಥಲಬ್ರಹ್ಮೋಪದೇಶಿಗಳೆಂದು
ಅನಾಚಾರವನನುಸರಿಸಿ, ಒಡಲುಪಾಧಿವಿಡಿದು,
ನಿಜವನರಿಯದೆ, ಭ್ರಾಂತುಭ್ರಮಿತರಾಗಿ,
ತನು ಮನ ಘನ ನೆನಹುಗೆಟ್ಟು ಮತಿ ಮಸಳಿಸಿರ್ಪುದೆ
ಪಂಚಮಸೂತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./87
ಶಿವಶರಣಗಣಾರಾಧ್ಯರು
ನಿರಾಕಾರ ಚಿತ್ಪಾದೋದಕದಾಚರಣೆಯ ಮಾರ್ಗಕ್ರಿಯೆ ಮುಗಿದ ಮೇಲೆ,
ಸಾಕಾರಚಿತ್ಪ್ರಸಾದವ ಆ ಪಾದತೀರ್ಥದಾಚರಣೆಯಂತೆ ತಟ್ಟಿ,
ಬಟ್ಟಲಗಳೊಳ್ ಪರಿಪೂರ್ಣತೃಪ್ತಿಯನೈದುವುದು.
ಆ ನಿಲುಕಡೆಯೆಂತೆಂದೊಡೆ : ನಿರಾಭಾರಿವೀರಶೈವಸಂಪನ್ನ ಸದ್ಭಕ್ತ ಜಂಗಮಮೂರ್ತಿಗಳು
ಪಾದೋದಕದಿಂದ ಅವರ ಭಾಂಡಕ್ಕೆ ಹಸ್ತಸ್ಪರಿಶನವ ಮಾಡುವುದು.
ಉಳಿದ ವಿಶೇಷ ವೀರಶೈವಸನ್ಮಾರ್ಗಿ ಭಕ್ತಜಂಗಮವು
ತಮ್ಮ ತಮ್ಮ ತಂಬಿಗೆ ತಟ್ಟೆ ಬಟ್ಟಲಿಗೆ ಪಾದೋದಕ ಹಸ್ತಸ್ಪರಿಶನವ ಮಾಡಿ,
ಕೇವಲಪರಮಾನಂದದ ಚಿದ್ಗರ್ಭೊದಯ ಶುದ್ಧಪ್ರಸಾದವೆಂದು ಭಾವಿಸಿ,
ಅತಿವಿಶೇಷ ಮಹಾಸುಯ್ದಾನದಿಂದ
ಸಮಸ್ತ ಜಂಗಮ ಭಕ್ತ ಮಹೇಶ್ವರ ಶರಣಗಣಾರಾಧ್ಯರಿಗೆ ಎಡೆಮಾಡಿ,
ಅಷ್ಟಾಂಗ ಹೊಂದಿ, ಎಡಬಲ ಗಣತಿಂತಿಣಿಯ
ಪೂರ್ಣಾನಂದದ ನಿಜದೃಷ್ಟಿಯಿಂ ನೋಡಿ, ನಿರೀಕ್ಷಿಸಿ,
ಶರಣಾರ್ಥಿ ಸ್ವಾಮಿ, ನಿಮ್ಮ ದಯದಿಂದುದಯವಾದ
ಪರಿಪೂರ್ಣರಸಾಮೃತವ ಮಹಾಲಿಂಗಾರ್ಪಣವ ಮಾಡಬೇಕೆಂದು
ಅಭಿವಂದಿಸಿ,
ಪರಮಪತಿವ್ರತತ್ವದಿಂದ ಗುರುಚರವರಸ್ಥಲಕ್ಕೆ
ತನುಮನಧನಂಗಳ ಸಮರ್ಪಿಸುವಲ್ಲಿ ನಿರ್ವಂಚಕವಾಗಿ,
ಭಕ್ತಲಿಂಗಜಂಗಮವೆಂದು ಉಭಯ ನಾಮರೂಪ ಕ್ರಿಯಾಕಾಯವಳಿದು,
ಕ್ಷೀರ ಕ್ಷೀರವ ಕೂಡಿದಂತೆ ಪರುಷ ಮುಟ್ಟಿ ಪರುಷವಾದಂತೆ,
ಪರಮಾನಂದಾಬ್ಧಿ ಚಿದ್ರಸಾಮೃತ ಅಷ್ಟಾವರಣದ
ಸತ್ಕ್ರಿಯಾಜ್ಞಾನಾಚಾರಂಗಳ ಅನುಭಾವದೊಳ್ ಕೂಟಸ್ಥದಿಂದೊಡಲಾಗಿ,
ನಿರಾಕಾರ ನಿಃಶಬ್ದಲೀಲೆಪರ್ಯಂತರವು
ಆ ಗುರುಲಿಂಗಜಂಗಮ ಚಿತ್ಪ್ರಭಾಂಗ ಭಸ್ಮಮಂತ್ರಾದಿಗಳೆ ಮುಂದಾಗಿ,
ಸತ್ಯಶುದ್ಧ ನಡೆನುಡಿ ಕ್ರಿಯಾಜ್ಞಾನಾನುಭಾವ
ಪಾದೋದಕ ಪ್ರಸಾದಸೇವನೆಯೆ ಹಿಂದಾಗಿ,
ಸಮಸ್ತ ಕಾರಣಕ್ಕೂ ಸಾವಧಾನ ಸಪ್ತವಿಧ ಸದ್ಭಕ್ತಿಗಳಿಂದ
ಮಾರ್ಗಾಚಾರವುಳ್ಳ ಕ್ರಿಯಾರ್ಪಣ,
ದ್ರವ್ಯಮೀರಿದಾಚಾರವುಳ್ಳ ಜ್ಞಾನಾರ್ಪಣದ್ರವ್ಯಂಗಳಂ
ಪರಿಪೂರ್ಣಾನುಭಾವದಿಂದ ನಿಜನೈಷ್ಠಾನುಭಾವಸಂಬಂಧಿಗಳೆ
ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಚಿತ್ಕಲಾಪ್ರಸಾದಿ
ಸೇವಿತಕ್ಕೆ ಯೋಗ್ಯರಾದ ಘನಕ್ಕೆ ಘನವೆಂದವರಾಳಿನಾಳಾಗಿರ್ಪೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./88
ಶ್ರೀಗುರು ಪರಮಾರಾಧ್ಯ ಪ್ರಮಥಗಣ ಸಾಕ್ಷಿಯಾಗಿ,
ಮನ ಕೊರಗಿ, ಹಸ್ತ ಪಾದ ಬಳಲಿ,
ತೃಣಕಾಷ್ಠವೆ ಮೊದಲು ನವರತ್ನಂಗಳೆ ಕಡೆಯಾದ ಸಮಸ್ತ ವ್ಯವಹಾರದಿಂದ,
ಸತ್ಯಶುದ್ಧದಿಂದ ಗುರುಹಿರಿಯರಿಗೆ ಖೊಟ್ಟಿಯಾಗದೆ,
ಲಿಂಗನಡೆ ಲಿಂಗನುಡಿ ಲಿಂಗನೋಟ ಲಿಂಗಕೂಟ ಲಿಂಗಬೇಟ
ಲಿಂಗರತಿ ಲಿಂಗಭೋಗ ಲಿಂಗಾಭಿಮಾನ ಲಿಂಗಾರಾಧನೆ
ಲಿಂಗಾರ್ಪಣ ಲಿಂಗಾನುಭಾವ ಲಿಂಗಾಸನ ಲಿಂಗಸೋಂಕು ಲಿಂಗನಂಟು
ಲಿಂಗಗತಿಮತಿ ಲಿಂಗಸತಿಪತಿ ಲಿಂಗಮಾತೆ ಲಿಂಗಪಿತ ಲಿಂಗಬಂಧು
ಲಿಂಗಪದಾರ್ಥ ಲಿಂಗದ್ರವ್ಯ ಲಿಂಗಧನಧಾನ್ಯ ಲಿಂಗಾಭರಣ
ಲಿಂಗಶಿಶುವು ಲಿಂಗಮೋಹ ಲಿಂಗಾಚಾರ ಲಿಂಗಲಯ
ಲಿಂಗಪರೋಪಕಾರಿ ಲಿಂಗದಾಸೋಹ ಲಿಂಗಾಂಗಸಂಗಸಮರತಿಯಿಂದ
ಪರಶಿವಯೋಗಸಂಪನ್ನರಾಗಿ,
ಗುರುಕೃಪಾನಂದದಲ್ಲಿ ಚಿತ್ತವಚ್ಚೊತ್ತಿದಂತೆ ಕಾಯಕವ ಮಾಡಿ,
ಕುಟಿಲ ಕುಹಕಂಗಳಳಿದುಳಿದು,
ಅನಾಚಾರಿಗಳನ್ನೋದಕವ ಕೊಳ್ಳದೆ,
ಉಪಾಧಿ ನಿರುಪಾಧಿ ಸಹಜಜಂಗಮಸ್ಥಲದ ವರ್ಮಾದಿವರ್ಮವನರಿದು,
ಮಾಡಿ ಮಾಟವ ಮರೆದು, ಕೂಡಿ ಕೂಟವ ಕಳೆದುಳಿದು,
ಸತ್ಪಾತ್ರ ಅಪಾತ್ರವ ಎಚ್ಚರದಿಂ ನೋಡಿ,
ತನುಮನಧನ ವಂಚನೆಯಿಲ್ಲದೆ,
ರಿಣಾತುರವೆಂಬ ಹಿಂದಣಮಾರ್ಗವ ಮೆಟ್ಟದೆ,
ಸೋಹಂ ಕೋಹಂ ನಾಹಂಭಾವವಳಿದುಳಿದು,
ಶಿವಾಚಾರಸಮರತಿ ದಾಸೋಹಂಭಾವದಿಂದಾಚರಿಸುವಾತನೆ
ಭವಿಮಾಟಕೂಟವಳಿದುಳಿದು ನಿಜಸದ್ಭಕ್ತ ಆಚಾರಲಿಂಗಪ್ರಸನ್ನಪ್ರಸಾದಿ.
ಇಂತಪ್ಪ ಸದ್ಭಕ್ತನಂಗಳವೆ ಕೈಲಾಸವೆಂದು
ಹರಗುರುವಾಕ್ಯವರಿದು, ಭಾವಭರಿತವಾಗಿ, ಸತ್ವಗುಣವಳಿದುಳಿದು,
ಮಹಾಜ್ಞಾನದಂಡಾಗ್ರಮಂ ಪಿಡಿದು,
ಸತ್ಯಶುದ್ಧ ನುಡಿಯೆಂಬ ಪ್ರಣಮನಾದಗಂಟೆಯಂ ಕಟ್ಟಿ,
ರಜೋಗುಣವ ಹೊದ್ದದೆ, ಮಹದರುವೆಂಬ ಕಮಂಡಲವ ಧರಿಸಿ,
ತಮೋಗುಣ ನಷ್ಟವಾದ ಪರಮಪರುಷರಸದ ಜೋಳಿಗೆಯಂ ಪಿಡಿದು,
ಕರಣೇಂದ್ರಿಗಳ ಹಸಿವು ತೃಷೆ ವಿಷಯ ವ್ಯಸನಗಳ
ಛೇದಿಸಿದ ಜಂಗಿನ ಗೆಜ್ಜೆಗಳಂ ಧರಿಸಿ,
ಪರಮಪಾವನ ನಿಜಮೋಕ್ಷಮಂದಿರವೆಂಬ ಮಂತ್ರಸ್ಮರಣೆಯೊಳ್
`ಶ್ರೀಗುರುಧರ್ಮ ಕೋರಧನಧಾನ್ಯದ
ಭೀಕ್ಷಾ’ಯೆಂದು ಭಕ್ತಗಣಂಗಳಿಂಗಿತವರಿತು,
ಘನಮನ ಕಲಕದಂತೆ ಸುಯಿಧಾನದಿಂದ ಸುಳಿಗಾಳಿಯಂತೆ ಸುಳಿದು,
ಅತಿರತಿಮೋಹದಿಂದ ಪರಮಹರುಷಾನಂದದೊಳ್ ಬೇಡಿತಂದು,
ನಿರ್ವಂಚಕನಾಗಿ, ಸತ್ಯಶುದ್ಧ ದೃಢಚಿತ್ತದಿಂದ,
ಘನಲಿಂಗಸಂಗಸಮಪತಿಗಳೊಳ್ ಕೂಡೆರಡಳಿದುಳಿದು,
ಹಿಗ್ಗು-ಹೆಮ್ಮೆ , ಸಿರಿ-ದರಿದ್ರ, ಸುಖ-ದುಃಖ, ಸ್ತುತಿ-ನಿಂದೆ,
ಪುಣ್ಯ-ಪಾಪ, ಭೋಗ-ಯೋಗ, ಕಾಮ-ಕ್ರೋಧ, ಲೋಭ-ಮೋಹ,
ಮದ-ಮತ್ಸರ, ಆಸೆ-ಆಮಿಷಗಳ, ಹಸಿವು-ತೃಷೆಗಳ ನೀಗಿ,
ಸದ್ಭಕ್ತಗಣಸಮ್ಮೇಳದಿಂದ ಗುರುಚರಪರಕ್ಕೆ ತ್ರಿವಿಧಾರ್ಚನೆಗಳರಿದು,
ಒಂದೂಡಲಾಗಿ, ಪರಿಣಾಮವೆ ಭಕ್ತಿ ವಿರಕ್ತಿ ಜ್ಞಾನಾನುಭಾವ,
ಪರಿಣಾಮವೆ ಚಿದಂಗಲಿಂಗಮುಖ ಶಕ್ತಿ ಶುಚಿರುಚಿ ಹಸ್ತಪದಾರ್ಥಪ್ರಸಾದ,
ಘನಸಮ್ಮತ ವಿಚಾರಮಂ ಅರಿದಾನಂದದಿಂದ
ಪರಿಪೂರ್ಣ ನಡೆನುಡಿ ಕೊಟ್ಟುಕೊಂಬುವ ದಾನಿಯೆ ಸದ್ವೀರಮಹೇಶ್ವರನು.
ಇಂತೆಸೆವ ಪ್ರಮಥಗಣ ಭಕ್ತಮಹೇಶ್ವರರಾಚರಣೆಯ ಘನಮಾರ್ಗವನರಿಯದೆ,
ಆಡಂಬರವೇಷಮಂ ಧರಿಸಿ,
ಕುಟಿಲ ಕುಹಕತನದಿಂದ ಅನಾಚಾರ ರಾಜರನೋಲೈಸಿ,
ಚಾಡಿಚಿತಾರಿಕೆ ಸಾಕ್ಷಿ ವಾದ ಸಹಜವ ಹುಸಿಮಾಡಿ,
ಹುಸಿಯನೆ ಸಹಜವ ಮಾಡಿ,
ಕುಂಟಣಿತನದಿಂದ ಧನಧಾನ್ಯಾಭರಣವ ಗಳಿಸಿ,
ಈಷಣತ್ರಯಮೋಹದಿಂದ ಒಡಲುಪಾಧಿವಿಡಿದು,
ಭಕ್ತಮಹೇಶ್ವರರೆಂದು ಬೊಗಳುವದೊಂದು ದುರಾಚಾರ.
ತಳ್ಳಿ ತಗಾದಿ ಜಾರತನ ಪಂಚಪಕ್ಷ ಮೊದಲಾದ ಗಾರುಡವಿದ್ಯೆಗಳಿಂದ
ಧನ ಧಾನ್ಯ ವಸ್ತ್ರಾಭರಣವ ಗಳಿಸಿ
ಅಕ್ರಿಯೆ ಅನಾಚಾರದಿಂದ ದೇಹವಿಡಿದಿಪ್ಪುದೊಂದು ದುರಾಚಾರ.
ಹಲಾಯುಧನ ಹೊಲಮನೆ ಮೊದಲಾದ ಸಮಸ್ತ ವ್ಯವಹಾರಗಳಲ್ಲಿ
ಆರೂ ಕಾಣದಂತೆ ಅಣುರೇಣುತೃಣಕಾಷ್ಠವಾಗಲಿ,
ಮೋಸಗಾರಿಕೆಯಿಂದ ಒಡಲುಪಾಧಿವಿಡಿದಾಚರಿಸುವದೊಂದು ದುರಾಚಾರ.
ಆಯುಧವ ಕಟ್ಟಿ, ರಣಾಗ್ರಕ್ಕೆ ಹೋಗಿ,
ಜೀವಹಿಂಸೆಗಳಿಂದ ಧನಧಾನ್ಯವಸ್ತ್ರಾಭರಣವ ಗಳಿಸಿ,
ರೂಪಲಾವಣ್ಯದಿಂದ ಒಡಲುಪಾಧಿಹೊರೆವುದೊಂದು
ಅತಿ ಕಠಿಣವಾದೊಂದು ದುರಾಚಾರ.
ಸತ್ಯಶುದ್ಧ ವ್ಯವಹಾರಗಳಲ್ಲಿ ಪತ್ರವ ಬರೆದುಕೊಟ್ಟು,
ಮೃದುನುಡಿಯಿಂದ ಧನಧಾನ್ಯವ ತಂದು, ಪುತ್ರಮಿತ್ರ ಕಳತ್ರಯಕೆ ಮಾಡಿ,
ಮತ್ತವರು ಬೇಡಿದರೆ ತಿರುಗಿ ಹುಸಿನುಡಿಯ ನುಡಿದು,
ಅವರ ಪದಾರ್ಥವ ಚಾಗೆಯ ಮಾಡಿ,
ನಿಂದೆ ಕುಂದು ಕೊರತೆಗಳಿಂದ ದೂಷಿಸುವುದೊಂದು ದುರಾಚಾರ.
ಇಂತು ಪಂಚವಿಧಪಾಶಬದ್ಧರಾಗಿ,
ಅವಿಚಾರದಿಂದ ಭಕ್ತಮಹೇಶ್ವರರೆಂದು ನುಡಿದು,
ಅನಾಚಾರ ನಡೆಯ ನಡೆವುದು ತೃತೀಯ ಪಾತಕವು.
ಇದಕ್ಕೆ ಹರವಾಕ್ಯ ಸಾಕ್ಷಿ : “ಪರದ್ರವ್ಯಂ ಪರಾರ್ಥಂ ಚ ವರ್ಜಯೇತ್ ಭಾವಶುದ್ಧಿಮಾನ್ |
ಪ್ರಮಾದಾತ್ ಸ್ಪರ್ಶನಾಚ್ಚೈವ ರೌರವಂ ನರಕಂ ವ್ರಜೇತ್ ||ಅನ್ನಸ್ಯ ಧನಧಾನ್ಯಸ್ಯ ಲಿಂಗಭಕ್ತಿವಿವರ್ಜಿತಃ |
ತಸ್ಕರಃ ಅಪಹಾರಾತ್ ಶ್ವಾನಜನ್ಮನಿ ಜಾಯತೇ ||
ಸತ್ಯಂ ಧರ್ಮೊ ಯಥಾರ್ಥಂ ಚ ಶಿವಧರ್ಮೆಣ ಸುಖಂ ಭವೇತ್ |
ಅನ್ಯತ್ರ ಚಿಂತಿತಾತ್ ಕಾರ್ಯಾತ್ ಮೋಕ್ಷೊ ನಾಸ್ತಿ ವರಾನನೇ ||
ಉತ್ತಮಾರಣ್ಯಪುಷ್ಪಂ ಚ ಮಧ್ಯಮಂ ವನಪುಷ್ಪಯೋಃ |
ಕನಿಷ್ಠಂ ಯಾಚಿತಂ ಪುಷ್ಪಂ ಚೋರಪುಷ್ಪಂತು ನಿಷ್ಫಲಂ ||”
ಇಂತೆಂದುದಾಗಿ, ಶ್ರೀಗುರುಕಟಾಕ್ಷೆಯಿಂದ ತನ್ನ ತಾನರಿದು
ಸ್ವಾತ್ಮಾನುಭಾವದೊಳ್ ಸತ್ಯಶುದ್ಧನಾಗಿ,
ಪರರೊಡವೆಯೆಂಬುದೆ ಕೇಡು,
ಕಾಯಾರ್ಜಿತವೆಂಬುದೆ ನಿಜಮೋಕ್ಷವೆಂದರಿದಾನಂದದಿಂದ
ಆ ತೃತೀಯಪಾತಕಮಂ ನಿರಸನಂಗೈದು
ದುರಿತಕರ್ಮವಂ ಒರೆದೊರೆದು ಕಂಡ್ರಿಸಿ,
ಕಳೆದುಳಿದ ನಿಜಮುಕ್ತನೆ ಶಿವಯೋಗ ಸನ್ಮಾರ್ಗಿ ಸದ್ಭಕ್ತ ಮಹೇಶ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./89
ಶ್ರೀಗುರುಕರಜಾತರು ಆ ಹಿಂದೆ ಹೇಳಿದ ಪಾತಕಗುಣನಿರಸನಂಗೈದು,
ಅಂತರಂಗದ ಪಾತಕಕ್ಕೆ, ಶಂಕರಿಗೆ ಮೋಹದ ಕಂದನಾದ
ರೇಣುಕಾರ್ಯರಿಗೆ ಉಪದೇಶಿಸಿದರೇನು ?
ಇದಕ್ಕೆ ಹರನಿರೂಪ ಸಾಕ್ಷಿ : “ಅನೃತಂ ಅಸ್ಥಿರಂ ವಾಕ್ಯಂ ವಚನಂ ಪಂಕ್ತಿಭೇದನಂ |
ಔದಾಸೀನ್ಯಂ ನಿರ್ದಯತ್ವಂ ಷಡ್ವಿಧಂ ಭವಿಮಿಶ್ರಿತಂ ||
ಷಡೂರ್ಮಿಷಡ್ವರ್ಗಂ ಚೈವ ಷಡ್ಭಾವ ಷಡ್ಭ್ರಹ್ಮಸ್ತಥಾ |
ಷಡ್ವಿಷಯಾನ್ನರಕಂ ಯಾತಿ ಗುಪ್ತಪಾತಕವಂಶಜಃ ||
ಮಾತೃದ್ರೋಹೀ ಪಿತೃದ್ರೋಹೀ ಲಿಂಗಬಾಹ್ಯಪರಾರ್ಥಕಃ |
ಅನ್ಯದೋಷೇಣನಿಂದ್ಯಸ್ತು ತಸ್ಯ ಚಾಂಡಾಲವಂಶಜಃ ||”
ಇಂತೆಂದುದಾಗಿ,
ಗುರುಮಾರ್ಗಾಚಾರ ಪುತ್ರ ನಿಜಮುಕ್ತಿಸ್ವರೂಪರು
ಅಂತಬರ್ಾಹ್ಯಂಗಳಲ್ಲಿ ಕರ್ಮದಾಗರವೆಂಬ
ಪಂಚಮಹಾಪಾತಕವಾಗೊಪ್ಪುವ ಶಿವನ ಮಾಯಾಂಶಪಾಶವ
ಗುರುಮಾರ್ಗಾಚಾರವೆಂಬ ಹಡಗವನೇರಿ
ಅಸತ್ಯದ ಕಡಲದಾಂಟಿ, ಪರಮಾನಂದಪುರವ ಹೊಕ್ಕು,
ನಿರಂಜನಪ್ರಭುರಾಜನೊಡವೆರೆದು
ಹಿಂದಣಾಸೆ ಮುಂದಣ ಬಯಕೆಯಂ ಮರೆದು,
ನಿಜಾನುಭಾವಪರಶಿವಯೋಗಾನಂದದಲ್ಲಿ ನಿರ್ದೆಹಿಗಳಾಗಿ,
ಸತ್ಯಶುದ್ಧ ನಡೆನುಡಿಯುಳ್ಳವರೆ
ಕಾರಣಾರ್ಥ ಬಂದ ಪರಶಿವಗಣಂಗಳು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./90
ಶ್ರೀಗುರುಕರಜಾತರೆನಿಸಿ, ನಿಜಮೋಕ್ಷಾಪೇಕ್ಷನೆನಿಸಿ,
ಸ್ವಯಚರಪರ ಭಕ್ತಗಣಾರಾಧ್ಯರ ಅರ್ಚನೆ ಪೂಜನೆ ಮಾಡಿ,
ದಾಸೋಹಂಭಾವದಿಂದ ಪರತರಬ್ರಹ್ಮಪರಿಪೂರ್ಣಾನಂದವಸ್ತುವೆಂದು
ಸಮರಸಾಚರಣೆಯಿಂದ ಹತ್ತುಹನ್ನೊಂದು ಕೊಟ್ಟು ಕೊಂಡ ಮೇಲೆ,
ಸಂಕಲ್ಪಭಾವ ತಥ್ಯಮಿಥ್ಯಗಳಿಂದ
ಆಸೆ ಆಮಿಷದ ಪಾಶಬದ್ಧ ಜಡಜೀವಿಗಳ ಹುಸಿಮಾತನಾಲಿಸಿ,
ವಿವೇಕತಪ್ಪಿ, ನಸುಗುನ್ನಿಕಾಯಂತೆ ಮೋರೆಯಾಗಿ,
ತುಮುರೆಕಾಷ್ಠದಂತೆ ನುಡಿಯಾಗಿ, ವಾರೆನೋಟಗಳಿಂದ ಸಮರಸವನುಳಿದು,
ಭಿನ್ನಭಾವದಿಂದ ಕುಂದುನಿಂದ್ಯವ ನುಡಿವುದೊಂದು ದುರಾಚಾರ.
ನುಡಿಸೂಸಿದ ಮೇಲೆ ಒಬ್ಬರೊಬ್ಬರು ಅವಿಚಾರಿಗಳಾಗಿ,
ಬಾಜಾರಕ್ಕೆ ನಿಂತು, ತನಗಿಂದ ಸ್ವಲ್ಪ ಮನುಷ್ಯರನಾಶ್ರಯಿಸಿ,
ಪಂಥಪರಾಕ್ರಮಿಗಳಿಂದ ತಥ್ಯಮಿಥ್ಯವ ನುಡಿದು,
ಅರ್ಚನಾರ್ಪಣಗಳ ತೊರೆದು,
ದೋಷಾರ್ಥಿಯಾಗಿ ವರ್ತಿಸುವುದೊಂದು ದುರಾಚಾರ.
ಭಕ್ತಗಣಂಗಳು ವಾರಬಡ್ಡಿಗಳ ಕೊಟ್ಟು ಕೊಂಡು ವ್ಯವಹರಿಸಿ,
ಈಷಣತ್ರಯದ ಅಂಗವಿಷಯದಿಂದ ದ್ರವ್ಯವ್ಯಾಪಾರಿಯಾಗಿ,
ದುರಾತ್ಮರಂತೆ ಬಾಜಾರಕ್ಕೆ ಬಿದ್ದು
ಕಠಿಣನುಡಿಗಳ ಬಳಸುವುದೊಂದು ದುರಾಚಾರ.
ಹೊನ್ನು ಹೆಣ್ಣು ಮಣ್ಣು ಧಾನ್ಯ ವಸ್ತ್ರಗಳಿಗೆ ಹೊಣೆ ಜಾವಿೂನುಗಳಾಗಿ
ಅಸನ ವಸನದಿಚ್ಛೆಗೆ ಮಿತಿದಪ್ಪಿದಲ್ಲಿ ,
ಸಾಕ್ಷಿ ವಾದಕ್ಕೆ ನಿಂತು, ಆಡಬಾರದ ಮಾತನಾಡುವುದೊಂದು ದುರಾಚಾರ.
ಗುರುಹಿರಿಯ ಪಿತ-ಮಾತೆಗಳಿಗೆ ತಾ ಗಳಿಸಿದ ದ್ರವ್ಯವ ವಂಚಿಸಿ,
ಇದ್ದೂ ಇಲ್ಲಯೆಂದು ಹುಸಿನುಡಿಯ ನುಡಿವುದೊಂದು ದುರಾಚಾರ.
ಗುರುಚರಲಿಂಗಮೂರ್ತಿಗಳು ಹಸಿವಿಗನ್ನ, ಶೀತಕ್ಕೆ ವಸ್ತ್ರ,
ಪಾದಕ್ಕೆ ವಾಹನವಾದುದ ಬೇಡಿದಲ್ಲಿ
ತನಗೆ ತ್ರಾಣಿದ್ದು ಅವರಿಗೆ ಈಗ ದೊರೆಯದೆಂದು
ಪ್ರಪಂಚನುಡಿಯ ನುಡಿವುದೊಂದು ದುರಾಚಾರ.
ಈ ದುರಾಚಾರ ಹುಸಿನುಡಿಗಳನಳಿದುಳಿದು, ಭ್ರಾಂತುಭ್ರಮೆಗಳ ನೀಗಿ,
ತನ್ನ ನಡೆನುಡಿಗಳು ತನಗೆ ಪ್ರಮಾಣವಾಗಿ,
ನಿರ್ವಂಚಕತನದಿಂದ ಶ್ರುತಿಗುರುಸ್ವಾನುಭಾವವಿಡಿದು,
ತಥ್ಯಮಿಥ್ಯವನಡಿಮೆಟ್ಟಿ, ಕಿಂಕರಭಾವದೊಳು
ಗುರುಹಿರಿಯರ ಪ್ರಮಾದವಶದಿಂದ ಪ್ರಮಥಗಣಮಾರ್ಗವ ಬಿಟ್ಟಾಚರಿಸುವದ
ಪರಶಿವಲಿಂಗಮೂರ್ತಿ ಹರಗಣಸಾಕ್ಷಿಯಾಗಿ ತಾನು ಕಂಡಲ್ಲಿ ,
ಅವರನಾಚರಿಸದಾಚಾರದ ಸ್ಥೂಲಸೂಕ್ಷ್ಮವಾದೊಡೆ
ಹರಗಣಂಗಳೊಡನೆ ಅವರಿಗೆ ಶರಣುಹೊಕ್ಕು,
ಹರಗುರುವಾಕ್ಯಪ್ರಮಾಣವಾಗಿ ಮೃದುತರ ನುಡಿಗಳಿಂದ
ತಾವು ಅವರೊಡನೆ ಏಕಭಾವದಿಂದ ಕ್ರಿಯಾಲೀಲೆಯ ಸಮಾಪ್ತವ ಮಾಡುವುದು.
ಇದಕ್ಕೆ ಮೀರಿ ಸ್ಥೂಲವಾದೊಡೆ ಮೌನಧ್ಯಾನದಿಂದ ಪರಶಿವಲಿಂಗಸಾಕ್ಷಿಯಾಗಿ,
ಹರಗಣಕ್ಕೊಪ್ಪಿಸಿ, ಹತ್ತು ಹನ್ನೊಂದರ ಸಮರಸಾನುಭಾವವ ತ್ಯಜಿಸಿ,
ಆಪ್ಯಾಯನಕ್ಕನ್ನ, ಸೀತಕ್ಕೆ ವಸ್ತ್ರ, ಲಾಂಛನಕ್ಕೆ ಶರಣೆಂದು
ಬಯಲಿಗೆ ಬೀಳದೆ ಸುಮ್ಮನಿರ್ಪುದೆ ಪ್ರಮಥಗಣಮಾರ್ಗವು.
ಈ ಸನ್ಮಾರ್ಗವನುಳಿದು ಕಿರಾತರಂತೆ
ಹುಸಿಶಬ್ದ, ಹೊಲೆಶಬ್ದ , ಹೇಸಿಕೆಶಬ್ದ, ವಾಕರಿಕೆಶಬ್ದ, ಬಾಂಡಿಕಶಬ್ದ,
ನೀಚರನುಡಿ, ಷಂಡರಮಾತು, ಕಳ್ಳರನುಡಿ, ಜಾರರನುಡಿ,
ಜೂಜುಗಾರರನುಡಿ, ಆಟಕಾರರನುಡಿ, ಬೇಟೆಗಾರರನುಡಿ,
ಕುಲಛಲಗಾರರನುಡಿ, ಲಾಹರಿಗಾರರನುಡಿ, ಅಶನಘಾತಕರನುಡಿ,
ಲಂಚಗಾರರನುಡಿ, ರಿಣಪಾತಕರನುಡಿ, ಮೋಸಗಾರರನುಡಿ,
ಭ್ರಾಂತರನುಡಿ, ಕೋಪಿಗರನುಡಿ, ಆಚಾರಹೀನ ನಡೆಗೆಟ್ಟರನುಡಿ,
ಬಳ್ಳದತುದಿಹೀನ ಶಬ್ದದಂತೆ ತುಂಟ ತುಡುಗುಣಿ
ಹಲವು ಮಾತುಗಳ ಬಳಕೆಯುಳ್ಳುದೆ ಚತುರ್ಥಪಾತಕವು.
ಇದಕ್ಕೆ ಹರವಾಕ್ಯ ಸಾಕ್ಷಿ : “ಕುಶಬ್ದಂ ಹೀನಶಬ್ದಂ ಚ ಚಾಂಡಾಲಃ ಶ್ವಪಚೋಪಿ ವಾ |
ಹೀನಶಬ್ದಸ್ಯ ಪಾಪಾಚ್ಚ ನರಕೇ ಕಾಲಮಕ್ಷಯಂ ||
ಅನೃತಂ ಚಾಪಶಬ್ದಂ ಚ ನಿಂದಕೋ ಗುರುತಲ್ಪಗಃ |
ಗಣಾದಿವಾದದೂಷ್ಯಶ್ಚ ವೇಶ್ಯಾಪುತ್ರಸ್ತಥೈವ ಚ ||
ಪರನಿಂದಾವಂದನಾಶ್ಚ ಲಿಂಗಸಂಗಿವಿವರ್ಜಿತಂ |
ಪ್ರಮಾದಂ ಕುರುತೇ ವಾಣ್ಯಾ ಮೋಕ್ಷೊ ನಾಸ್ತಿ ಮಹೇಶ್ವರಿ ||
ಅನ್ಯದೋಷೇಣ ನಿಂದ್ಯಮಾಸ್ತು ಸ್ವದೋಷಗುಪ್ತಪಾತಕಃ |
ಗುರುಭ್ರಷ್ಟಸ್ಯ ಚಾಂಡಾಲೋ ರೌರವಂ ನರಕಂ ವ್ರಜೇತ್ ||”
ಇಂತೆಂದುದಾಗಿ, ಪರಮಾರಾಧ್ಯ ಶ್ರೀಗುರುಕಟಾಕ್ಷೆಯಿಂದ ತನ್ನ ತಾನರಿದು,
ಈ ಲಿಂಗಾಂಗಸಂಗಸಂಬಂಧದಾಚರಣೆಯ ಸುಖವು
ಏನು ತಪಸ್ಸಿನ ಫಲವೋಯೆಂದರಿದು ಮರೆದರೆ
ಇನ್ನೀ ನಿಜಮೋಕ್ಷವು ದೊರೆಯದೆಂದು ಗುರುಹಿಯರ ನಡೆನುಡಿಗಳಾಲಿಸಿ,
ನಡೆನುಡಿಭಿನ್ನವಾಗದಂತೆ ಚತುರ್ಥಪರಮದ್ರೋಹದ ಪಾತಕಮಂ ನಿರಸನಂಗೈದು
ನಿಜಪರಶಿವಘನಕ್ಕೆ ಘನವೆನಿಸಿರ್ಪುದು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./91
ಶ್ರೀಗುರುಕರುಣಕಟಾಕ್ಷದೊಳ್
ಚಿದ್ಘನಲಿಂಗ ಅಂಗಸಂಬಂಧದಾಚರಣೆಯ ಸರ್ವಾಚಾರಸಂಪದವೆಂಬ
ಪರಮಾಮೃತಮಂ ಸವಿದುಂಡುಪವಾಸಿ ಬಳಸಿಬ್ರಹ್ಮವಾಗಿ,
ಪರಮಪಾತಕವೆಂಬ ಕಾಲ ಕಾಯ ಮಾಯಾಪಾಶ ಭವಸಾಗರವ ದಾಂಟಿ,
ದೃಢಚಿತ್ತಿನೊಳ್ ನಿಂದ ನಿತ್ಯಸುಖಿಗಳು,
ತಮ್ಮ ನಡೆ ನುಡಿ ತಮಗೆ ಸ್ವಯವಾಗಿ, ಸತ್ಯಶುದ್ಧದಿಂದ ಹಸ್ತಪಾದವ ದುಡಿಸಿ,
ಮಾಡುಂಬ ಭಕ್ತನಾಗಲೀ, ಬೇಡುಂಬ ಮಹೇಶನಾಗಲೀ,
ಅಂಗವಿಕಾರದ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ
ಅವಲಕ್ಷಣಮಂ ಜರಿದು ಮರೆದು ನಿರಾಸತ್ವದಿಂದ,
ದೇಹಮೋಹಮನ್ನಳಿದುಳಿದು,
ಅಪರಾಧ ಪ್ರಾಣಿಗಳಾಗಲಿ, ನಿರಪರಾಧ ಪ್ರಾಣಿಗಳಾಗಲಿ,
ಕೊಲ್ಲದಿರ್ಪುದೆ ಧರ್ಮ, ಗಂಧ ರಸ ಮೊದಲಾದ ಪರದ್ರವ್ಯ ಒಲ್ಲದಿಪ್ಪುದೆ ಶೀಲ,
ಗುರುಹಿರಿಯರುಗಳಿಗೆ ಪ್ರತಿ ಉತ್ತರವ ಕೊಡದಿಪ್ಪುದೆ ವ್ರತ,
ಕ್ಷುತ್ತು ಪಿಪಾಸಾದಿಗಳಿಗೆ ಅಳುಕದಿಪ್ಪುದೆ ನೇಮ,
ಕುಲಾದಿ ಅಷ್ಟಮದಗಳಿಗೆಳಸದಿಪ್ಪುದೆ ನಿತ್ಯ.
ಇಂತೆಸೆವ ಪಂಚಪರುಷವ ಬಾಹ್ಯಾಂತರಂಗದಲ್ಲಿ
ಪರಿಪೂರ್ಣಭಾವದಿಂದ ತುಂಬಿತುಳುಕಾಡುತ,
ಶ್ರಿಗುರುಲಿಂಗಜಂಗಮದ ಷಟ್ಸಾ ್ಥನದಲ್ಲಿ
ಷಡ್ವಿಧಲಿಂಗ ಮಂತ್ರಪ್ರಣಮಂಗಳು ಸಂಬಂಧವಾಗಿಪ್ಪುದ
ಶ್ರುತಿಗುರುಸ್ವಾನುಭಾವದಿಂದರಿದು,
ತನ್ನ ಬಳಿವಿಡಿದು ಬಂದ ಸುಪದಾರ್ಥವ ಆ ಗುರುಚರಪರಕ್ಕೆ
ಪುಷ್ಪ ಮೊದಲಾದ ಸುಗಂಧವ ಪವಿತ್ರಮುಖದಿಂದ ನಿವೇದಿಸಿದಲ್ಲಿ
ಆಚಾರಲಿಂಗಕ್ಕೆ ಸಮರ್ಪಣೆಯಾಗಿಪ್ಪುದು.
ಹಣ್ಣು ಮೊದಲಾದ ಸುರಸದ್ರವ್ಯವ
ಸುಪವಿತ್ರಗಳಿಂದ ಸುಪವಿತ್ರಮುಖದೊಳ್ ಸಮರ್ಪಿಸಿದಲ್ಲಿ
ಗುರುಲಿಂಗಕ್ಕೆ ಸಮರ್ಪಣೆಯಾಗಿಪ್ಪುದು.
ಪೀತ ಶ್ವೇತ ಮೊದಲಾದ ಸಮಸ್ತ ಚಿತ್ರವಿಚಿತ್ರಂಗಳ ಸ್ವರೂಪವನು
ಮಹಾಜ್ಞಾನಸೂತ್ರವಿಡಿದು ಯೋಗ್ಯವೆನಿಸಿ ನಿವೇದಿಸಿದಲ್ಲಿ
ಶಿವಲಿಂಗಕ್ಕೆ ಸಮರ್ಪಣೆಯಾಗಿರ್ಪುದು.
ಕೌಪ ಕಟಿಸೂತ್ರ ಮೊದಲಾದ ವಸ್ತ್ರಾಭರಣಗಳ ಯೋಗ್ಯವೆನಿಸಿ
ತಟ್ಟುವ ಮುಟ್ಟುವ ಶೀತುಷ್ಣಾದಿ ಸತ್ಕ್ರಿಯವಿಡಿದು ಸಮರ್ಪಿಸಿದಲ್ಲಿ
ಚರಲಿಂಗಕ್ಕೆ ಸಮರ್ಪಣೆಯಾಗಿರ್ಪುದು.
ಶಿವಾನುಭಾವಪ್ರಸಂಗ ಘಂಟೆ ತಂತಿ ಚರ್ಮ ಮೊದಲಾದ
ಸುಶಬ್ದಂಗಳ ಸತ್ಯಶುದ್ಧ ತ್ರಿಕರಣವಿಡಿದು ಪವಿತ್ರತೆಯಿಂದ ನಿವೇದಿಸಿದಲ್ಲಿ
ಪ್ರಸಾದಲಿಂಗಕ್ಕೆ ಸಮರ್ಪಣೆಯಾಗಿರ್ಪುದು.
ಈ ಸಕಲ ಸಂತೋಷವಾದ ಮತ್ತೆ ಹೊನ್ನು ಹೆಣ್ಣುಗಳ ಗಣಸಾಕ್ಷಿಯಾಗಿ,
ಸತ್ಯಸಾವಧಾನದಿಂದೆ ಧಾರೆಯನೆರೆದು,
ಶಿವದೀಕ್ಷೊಪದೇಶಗಳಿಂದ ಸುಪವಿತ್ರವೆಂದೆನಿಸಿ ನಿವೇದಿಸಿದಲ್ಲಿ
ಮಹಾಲಿಂಗಕ್ಕೆ ಸಮರ್ಪಣೆಯಾಗಿರ್ಪುದು.
ಈ ಪ್ರಕಾರದಿಂದ ಸತ್ಯಶುದ್ಧಕಾಯಕದೊಳು ತನಗುಳ್ಳ ಸುಪದಾರ್ಥದ್ರವ್ಯವ
ನಿಜೇಷ್ಟಾರ್ಪಣ ಪರದಿಂದೆ ಲಿಂಗಾರ್ಪಣವ ಸಮರ್ಪಿಸಬಲ್ಲಾತನೆ
ಷಟ್ಸ್ಥಲಭಕ್ತ ಮಹೇಶ್ವರರೆಂಬೆನು.
ಈ ಷಡ್ವಿಧ ದ್ರವ್ಯಪದಾರ್ಥಂಗಳು ದೊರೆಯದಿದ್ದರೆ
ಮೂಲಚಿತ್ತ ಮೊದಲಾದ ಅಂಗ ಮನ ಪ್ರಾಣ ಇಂದ್ರಿಯ ಕರಣ ವಿಷಯಂಗಳ
ಆ ಶ್ರೀಗುರುವಿಂಗೆ ಜಂಗಮದ ಸೊಮ್ಮುಸಂಬಂಧದಲ್ಲಿ ನಿಲಿಸುವುದೆ
ಸರ್ವಾಂಗಲಿಂಗಾರ್ಪಣವಾಗಿರ್ಪುದು.
ಇದರೊಳಗೆ ತನು ನೋಯದೆ, ಮನ ಕರಗದೆ, ಭಾವ ಬಳಲಿಸದೆ,
ಅತಿ ಸುಯಿಧಾನದಿಂದ ನಿಃಕಳಂಕ ಪರಶಿವ
ಪಾದೋದಕ ಪ್ರಸಾದ ಮಂತ್ರದ ಪರಶಿವತತ್ವದಲ್ಲಿ ಪರಿಪೂರ್ಣರಾಗಿರ್ಪುದೆ
ಅನಾದಿಪ್ರಮಥಗಣಮಾರ್ಗವು.
ಇಂತೆಸೆವ ಸಚ್ಚಿದಾನಂದದ ಪರಮಾನುಭಾವ ಸನ್ಮಾರ್ಗವನುಳಿದು
ಸರ್ವಾಚಾರಸಂಪನ್ನ ಬಾಹ್ಯರಾದ ಕಿರಾತರಂತೆ,
ಭಂಗಿ ಗಾಂಜಿ ಗುಡಾಕು ತಂಬಾಕದ ಚಿಲುಮೆ
ಕಡ್ಡಿ ಹುಡಿ ನಾಸಿಬುಕುಣಿಯೆಂದು ಭುಂಜಿಸಿ,
ಹುಚ್ಚನಾಯಿ ಎಲುವ ಕಚ್ಚಿದಂತೆ,
ದಿವರಾತ್ರಿಗಳಲ್ಲಿ ಪಾದೋದಕಪ್ರಸಾದದ್ವಾರವಾಗಿ ಪರಿಶೋಭಿಸುವಂತೆ
ಪರಶಿವ ಪ್ರಾಣಲಿಂಗದ ಭೋಗಾಂಗದಲ್ಲಿಟ್ಟುಕೊಂಡು,
ಭ್ರಾಂತು ಭೋಗಿಗಳಾಗಿ, ನಿಜಗೆಟ್ಟು, ತಮ್ಮ ತಾವರಿಯದೆ,
ಪಿಶಾಚಿಮಾನವರಂತೆ ಇಂದ್ರಾದಿ ಹರಿಸುರಬ್ರಹ್ಮಾದಿಗಳು ಹೊಡೆದಾಡಿದ
ಕರ್ಮದೋಕುಳಿಯಲ್ಲಿ ಬಿದ್ದೊದ್ದಾಡಿ ತೊಳಲುವ,
ವನಿತಾದಿ ಆಸೆ, ಭೋಗದ ಆಸೆ ಪಾಶದೋಕುಳಿಯೆಂದರಿದು
ಮರೆದು ನರಗುರಿಗಳಾಗಿ, ಬಾಯಿಗೆ ಬಾಯಿ ಹಚ್ಚಿ
ಬೊಗಳಾಡುವುದೊಂದು ದುರಾಚಾರ.
ರಾಜರಿಗೆ ರೊಕ್ಕವ ಕೊಟ್ಟು, ಯಂತ್ರ ಮಂತ್ರ ತಂತ್ರಗಳಿಂದೋಲೈಸಿ,
ಮಲತ್ರಯವಿದೂರರೆಂದು ಪತ್ರ ಉತ್ರಗಳಲ್ಲಿ ಹೆಮ್ಮೆ ಹಿರಿತನಕ್ಕೆ ಬಿದ್ದು,
ಅಂದಿನವರೆ ಇಂದಿನವರೆಂದು ಒಪ್ಪವಿಟ್ಟು,
ನುಡಿನಡೆಹೀನರಾಗಿ, ಬಿಟ್ಟಿಮಲವನುಸರಿಸಿ,
ತಥ್ಯ ಮಿಥ್ಯ ತಾಗುದ್ವೇಷಗಳಿಂದೆ ದಿವರಾತ್ರಿಗಳಲ್ಲಿ ತ್ರಿವಿಧವಸ್ಥೆಗಳ ಕಳೆದು,
ಒಬ್ಬರೊಬ್ಬರು ಹೊಡೆದಾಡುವುದೊಂದು ದುರಾಚಾರ.
ಇಂತಲ್ಲದೆ, ಮಿಲಂಚರಾಕ್ಷಸರ ಅರವತ್ತುನಾಲ್ಕು ವಿದ್ಯೆ ಬತ್ತೀಸಾಯುಧಗಳ ಕಟ್ಟಿ,
ತಳ್ಳಿತಗಾದಿಗಳಿಂದ ಹೊಲ ಗದ್ದೆ ಬಣಮೆಗಳ ಸುಟ್ಟು, ಅನಂತ ಹಿಂಸೆಗಳ ಮಾಡಿ,
ಊರು ಕೇರಿ ಪೇಟೆ ಪಟ್ಟಣಗಳ ಸುಲಿದು, ಹಾದಿ ಬೀದಿಯ ಬಡಿದು,
ಮತ್ತೆ ನಾಚಿಕೆಯಿಲ್ಲದೆ ನಾವು ವೀರಶೈವಘನದ ಭಕ್ತಮಹೇಶ್ವರರೆಂದು,
ನಡೆಗೆಟ್ಟು ನುಡಿಯ ನುಡಿವುದೊಂದು ಅತಿಕಠಿಣವಾದ ದುರಾಚಾರವು.
ವಿಭೂತಿ ರುದ್ರಾಕ್ಷಿ ಗುಣತ್ರಯಗಳಳಿದುಳಿದ
ಶಿವಲಾಂಛನ ಮುದ್ರಾಧರ್ಮಗಳ ಹೊದೆದು,
ಜಡೆ ಮಕುಟಗಳ ಬಿಟ್ಟು, ಕೌಪ ಕಟಿಸೂತ್ರವ ಧರಿಸಿ,
ನಿಜಮೋಕ್ಷಪದವನರಿಯದೆ,
ಅಥರ್ೆಷಣ ಪುತ್ರೇಷಣ ಧಾರೇಷಣ ಈಷಣತ್ರಯದ ಮೋಹಾಭಿರತಿಯಿಂದ,
ಅಂತಜ್ಞರ್ಾನ ಬಹಿಕ್ರರ್ಿಯಾಚಾರವ ಮೆರೆದು,
ಕಾಲತ್ರಯ ಕಾಮತ್ರಯ ಕರ್ಮತ್ರಯ ದೋಷತ್ರಯ
ಪಾಪತ್ರಯ ರೋಗತ್ರಯ ಅಜ್ಞಾನತ್ರಯ ಅನಾಚಾರತ್ರಯ ಮೊದಲಾದ
ಭವಪಾಶದಲ್ಲಿ ಮುಳುಗುಪ್ಪಿಯಾಗಿ ಭರಿಸುವಂಥಾದ್ದೆ ಐದನೆಯ ಪಾತಕವು.
ಇದಕ್ಕೆ ಹರನಿರೂಪ ಸಾಕ್ಷಿ : “ತಸ್ಕರಂ ಪರದಾರಂಚ ಅನ್ಯದೈವಮುಪಾಸನಂ |
ಅನೃತಂ ಇಂದಕಶ್ಚೆ ವ ತಸ್ಯ ಚಾಂಡಾಲವಂಶಜಃ ||
ಪರಾರ್ಥಹಿಂಸಕಶ್ಚೈವ ಭಕ್ತದ್ರೋಹೀ ಚ ನಿಂದಕಃ |
ಪ್ರಾಣಘಾತಕದೇಹಾನಾಂ ತಸ್ಮಾತ್ಚಾಂಡಾಲವಂಶಜಃ ||
ಅಲ್ಪಜೀವೀ ಭವಪ್ರಾಣೀ ಅಲ್ಪಭೋಗನಿರರ್ಥಕಃ |
ಅಲ್ಪಾಶ್ರಯಂ ನ ಕರ್ತವ್ಯಂ ಮಹದಾಶ್ರಯಃ ||
ಅಜ್ಞಾನಾಚ್ಚ ಕೃತಂ ಪಾಪಂ ಸುಜ್ಞಾನಾಚ್ಚ ವಿನಶ್ಯತಿ |
ಸುಜ್ಞಾನಾಚ್ಚ ಕೃತಾತ್ ಪಾಪಾತ್ ರೌರವಂ ನರಕಂ ವ್ರಜೇತ್ ||”
ಎಂದುದಾಗಿ, ಪರಿಪೂರ್ಣ ಶ್ರೀಗುರುಮಾರ್ಗಾಚಾರ ನಡೆನುಡಿಯಿಂದಾಚರಿಸಿ,
ನಿಜಮುಕ್ತಿಮಂದಿರವ ಸೇರಬೇಕೆಂಬ ಸದ್ಭಕ್ತಮಹೇಶ್ವರರು
ಸತ್ತುಚಿತ್ತಾನಂದ ನಿತ್ಯಪರಿಪೂರ್ಣತ್ವವನೈದಿ,
ಪರಮಪಾತಕಂಗಳಿಗೆ ಮಹಾಜ್ಞಾನಾಯುಧವ ಹಿಡಿದು,
ನಿತ್ಯ ನಿತ್ಯ ಇತರೇತರ ದುಶ್ಚಾಷ್ಟಿ ಬಿಟ್ಟು
ಘನಲಿಂಗಾಂಗಸಮರಸಮನೋಲ್ಲಾಸ ಸದ್ಭಕ್ತಿ ಜ್ಞಾನವೈರಾಗ್ಯ
ನಿಜನಿಷ್ಠಾಪರತ್ವಮಂ ಸಾಧಿಸಿ,
ತಮ್ಮ ತಾವರಿತವರೆ ಪರಶಿವಯೋಗಾನಂದಭರಿತರೆಂಬೆ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./92
ಶ್ರೀಗುರುಕರುಣಕಟಾಕ್ಷೆಯಿಂದ ತಮ್ಮ ತಾವರಿದ
ನಿತ್ಯಮುಕ್ತ ನಿಜೋತ್ತಮ ಸದ್ಭಕ್ತ ಮಹೇಶ್ವರರು,
ಹಿಂದೆ ಹೇಳಿದ ಬಹಿರಂಗ ಪಂಚಪಾತಕಮಂ ನಿರಸನಂಗೈದು
ಮಾರ್ಗಕ್ರಿಯೆ ಶುದ್ಧರೆನಿಸಿ,
ಅಂತರಂಗದ ಗುಪ್ತಪಾತಕಮಂ ನಿರಸನಗೈವ ವಚನಸೂತ್ರವದೆಂತೆಂದೊಡೆ :
ತನಗುಳ್ಳ ಗಂಧ ರಸ ಮೊದಲಾದ ಸುಪದಾರ್ಥದ್ರವ್ಯಗಳ
ಗುರು ಚರ ಪರ ಸ್ಥಿರ ತಂದೆ ತಾಯಿ ಘನಲಿಂಗ ಸಮ್ಮೇಳಕ್ಕೆ ಮಾಡದೆ
ನಿರವಯಪರಿಪೂರ್ಣ ನಿರಂಜನ ಗುರುಲಿಂಗಜಂಗಮ
ಪ್ರಸನ್ನೋದಯವಾದ ಚಿತ್ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ
ಮಹಾಮಂತ್ರ ಕೊನೆಮೊನೆಯಲ್ಲುದಯವಾದ ಮಹದರಿವು
ಮಹಾಜ್ಞಾನ ಮಹಾನುಭಾವಾಚಾರ ಸಂಬಂಧದಾಚರಣೆಗಳೆ
ಕೇವಲ ಎನ್ನ ಜನನಾಂಕುರದ ಮುಕ್ತಿದ್ವಾರವಾಗಿರುವ ಸ್ಥಿತಿಯ ಗೊತ್ತಿನ ಹಕ್ಕೆ,
ನಾ ನಿರವಯಲಾಗುವ ಲಯಸ್ಥಾನದ ಉಳುವೆಯ ಮಹಾಮನೆಯೆಂದು
ಭಾವಭರಿತವಾಗಿ ಹಿಂದುಮುಂದಣ ಫಲಪದದ
ಭೋಗಮೋಕ್ಷದಾಪೇಕ್ಷೆಗಳಂ ನೆರೆನೀಗಿ,
ಬಯಲಬ್ರಹ್ಮದಿರವ ಹೊದ್ದಲೊಲ್ಲದೆ
ಪಾಪದಪುಂಜ, ಕರ್ಮದೋಕುಳಿ, ಮಲದಾಗರ,
ಅನಾಚಾರದಕ್ರಿಯೆ, ಅಜ್ಞಾನ ವಿಷಯಾತುರದ ಭವಜೀವಿಗಳಾಗಿರುವ
ಪರಮಪಾತಕರ ಮೋಹವಿಟ್ಟು, ನನ್ನ ಪೂರ್ವಾಶ್ರಯವೆಂದು,
ಅತಿ ಪ್ರೇಮದಿಂದ ತನುಮನಧನವ ಸವೆದು,
ಅವರೊಡಗೂಡಿ ತೀರ್ಥಯಾತ್ರೆಗಳಂ ಮಾಡಿ,
ತಾ ಸ್ವೀಕರಿಸಿದ ಪ್ರಸಿದ್ಧಪ್ರಸಾದ ಪಾದೋದಕಪ್ರಸಾದಮಂ
ಆ ತ್ರಿವಿಧ ದೀಕ್ಷಾಚಾರಹೀನವಾದ ಭೂಪ್ರತಿಷ್ಠಾದಿಗಳಿಗೆ
ಕೊಟ್ಟು ಕೊಂಬುವ ಭ್ರಷ್ಟ ನಡಾವಳಿಯೆ ಅಂತರಂಗದ ಪ್ರಥಮಪಾತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./93
ಸಚ್ಚಿದಾನಂದ ಬ್ರಹ್ಮೋಪದೇಶ ಭಕ್ತಮಹೇಶ್ವರರು
ಪರಮಪಾತಕಸೂತಕಂಗಳ ಬಾಹ್ಯಾಂತರಂಗದಲ್ಲಿ ಹೊದ್ದದೆ,
ಸತ್ಯಶರಣರು ಮಾಡುಂಡುದೊಂದು ಕಾಯಕ,
ಬೇಡುಂಡುದೊಂದು ಕಾಯಕದಿಂದ ಗಳಿಸಿದಂಥ ಪದಾರ್ಥಗಳ,
ಗುರುಚರಪರಸ್ಥಿರಕ್ಕೆ ಷಟ್ಸ್ಥಲಸಂಬಂಧಗಳಿಂದ,
ಷಡ್ವಿಧಮಂತ್ರಗಳ ಸೊಮ್ಮಿನಿಂ ಸಂತೃಪ್ತರಾಗಿರ್ಪುದು.
ಆ ನಿಲುಕಡೆಯೆಂತೆಂದಡೆ : ಶ್ರುತಿಗುರುಸ್ವಾನುಭವ ಸಾಕ್ಷಿಯಾಗಿ,
ಶ್ರೀಗುರುಲಿಂಗಜಂಗಮವೆ ಪರಾತ್ಪರವೆಂದು ಕಂಡು,
ಷಡುಸ್ಥಲಮಾರ್ಗವಿಡಿದು, ತನ್ನ ನಿಜವ ತಾನರಿಯದೆ,
ಭವಿಶೈವ ಭಿನ್ನ ಕರ್ಮಿಗಳಂತೆ ಭಾವಭ್ರಮೆಗೆಟ್ಟು,
ಹೊಲಬುದಪ್ಪಿ, ಭೋಗಾಪೇಕ್ಷಿತರಾಗಿ,
ಹಲವು ಶಾಸ್ತ್ರೋಪದೇಶವಿಡಿದು,
ಕಾಶಿ ರಾಮೇಶ್ವರ ಕಂಚಿ ಕಾಳಹಸ್ತಿ ಪಂಪಾಕ್ಷೇತ್ರ
ಗೋಕರ್ಣ ಶ್ರೀಶೈಲಾದಿಯಾದ ತೀರ್ಥಯಾತ್ರೆ,
ವೀರಣ್ಣ ಬಸವಣ್ಣ ಮಲ್ಲಣ್ಣ ಹಾವಿಗೆ ದಂಡಾಗ್ರ ಗಿಳಿಲು ಶಂಖ
ಭಸ್ಮಗುಂಟಿಕೆ ತೀರ್ಥದಗುಂಬ ಹಾದಿಬೆನವ ಹಳ್ಳದ ಬೆನವ ವಾಸರದಯ್ಯ
ವಿನಾಯಕ ಶಕ್ತಿ ಗಣೇಶ ಚಂಡಿ ಚಾಮುಂಡಿಯಲ್ಲಿ
ಏಕನಾತಿ ಹಿರಿಹೊಳೆ ಜಟ್ಟಿಂಗ ತೆಪ್ಪದಾರತಿ ಪಂಚಪಾಂಡವರು
ಬನ್ನಿಮಹಾಂಕಾಳಿ ತುಳಸಿ ಬಿಲ್ವವೃಕ್ಷ
ಸಮಾಧಿ ಗದ್ದುಗೆ ಪುರಾಣ ವಚನಾರ್ಥಪುಸ್ತಕ
ಲೆಕ್ಕದ ಓಹಿ ಕತ್ತಿ ಕಂಡೇಪೂಜೆ, ಊರಬೀರ ಪೀರ ಗೋರಿ ಸತ್ತವರ ತಿಥಿ
ಚಿತ್ತಹೊಲೆ ಕರ್ಮದ ಗಂಗೆ ಗುಗ್ಗುಳ ಗೌರೀನೋಂಪಿ ದೀಪಹರಕೆ ಪೂಜೆ
ಕರಿಯಸೀರೆ ಊರ ಮಾರಿದೇವತೆ ಅಂಬಲಿ ಮಜ್ಜಿಗೆ ಕುಂಭ ಹೊಸ್ತಲ
ಮದುವೆಯಕಂಭ ಕುಂಭ ಸರಕಿನಗಂಟು
ಮಹತ್ವ ಮೆರೆದವರ ಪಾದಮುದ್ರೆ ಕಡೆಯಾದವಕ್ಕೆ,
ತನ್ನ ಕಾಯ ವಾಚ ಮನದಲ್ಲಿ ಹೊಳೆದು,
ಪಿತ-ಮಾತೆ ಸತಿ-ಸುತ ಒಡಹುಟ್ಟಿದವರು ಸೇವಕ ಕಡೆಯಾದವರಿಂದೆ
ತನ್ನ ಮನೆಯಲ್ಲಿ ಮಾಡಿದ ಎಡೆ
ವಾರಮೃತ್ಯೋದಕ, ಪಾದೋದಕಸಂಬಂಧವಾದ,
ವಿಭೂತಿ-ಗಂಧಾಕ್ಷತೆ-ಪುಷ್ಪ-ಪತ್ರಿ ಧೂಪ-ದೀಪ ಹಣ್ಣು-ಕಾಯಿ
ವಸ್ತ್ರಾಭರಣ-ಪಂಚಕಳಸ ಕಾಣಿಕೆ ಮೊದಲಾದ ಭಿನ್ನವ
ಕರ್ಮಕ್ರಿಯಾಚಾರಲಿಂಗಬಾಹ್ಯರಾದ
ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರ ಪಾಶುಪತ ಕಾಳಾಮುಖಿ
ಯೋಗಿ-ಜೋಗಿ ಶ್ರವಣ-ಸನ್ಯಾಸಿ ಯತಿ-ವ್ರತಿ ಮನು-ಮುನಿ
ಗರುಡ-ಗಂಧರ್ವ ಯಕ್ಷ-ರಾಕ್ಷಸ ಸಿದ್ಧ-ಸಾಧ್ಯರುಪದೇಶವಿಡಿದು
ಚರಲಿಂಗೋದಯಘನಪಾದತೀರ್ಥವರ್ಪಿಸಿ,
ನೈವೇದ್ಯ ಮಾಡಿಸುವಂಥಾದ್ದೆ ಅನಾಚಾರ.
ಇದೇ ಭವಿಮಾಟಕೂಟ ಅಸತ್ಯದ ನಡೆನುಡಿಯ ವಿಚಾರದ ಪ್ರಥಮಪಾತಕ.
ಇದಕ್ಕೆ ಹರನಿರೂಪ ಸಾಕ್ಷಿ : “ಶಿವಾಚಾರಸುಸಂಪನ್ನಃ ಕೃತ್ವಾನ್ಯದೈವಸ್ಯ ಪೂಜನಂ |
ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್ ||
ಅನಾಚಾರಿಕೃತಂ ಪಾಕಂ ಲಿಂಗನೈವೇದ್ಯಕಿಲ್ಬಿಷಂ |
ಲಿಂಗಾಚಾರಿಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ ||
ತದ್ದಿನಂ ದಿನದೋಷೇಣ ಶೋಣಿತಂ ಸುರಾಮಾಂಸಯೋಃ |
ಏಕಭುಕ್ತೋಪವಾಸೇನ ನರಕೇ ಕಾಲಮಕ್ಷಯಂ ||
ಸೌಮೇ ಭೌಮೇ ವ್ಯತಿಪಾತೇ ಸಂಕ್ರಾಂತಿಶಿವರಾತ್ರಿಯೋ |
ಶೈವಕರ್ಮೊಪವಾಸಿನಾಂ ನರಕೇ ಕಾಲಮಕ್ಷಯಂ ||
ಕಾರ್ತಿಕಮಾಘಶ್ರಾವಣ ಶೈವಪೂಜಾವಿಶೇಷತಃ |
ವೀರಶೈವಸ್ತಥಾ ಕೃತ್ವಾ ಸನ್ತಶ್ಟ ಪ್ರಾಕೃತೈಃ ಸಮಾಃ ||
ಸ್ಥಾವರಾರ್ಪಿತನೈವೇದ್ಯಾತ್ ನ ತೃಪ್ತಿರ್ಮಮ ಪಾರ್ವತಿ |
ಜಂಗಮಾರ್ಪಿತನೈವೇದ್ಯಾತ್ ಮಮ ತೃಪ್ತಿಶ್ಚ ಸರ್ವದಾ ||
ಸತ್ಪಾತ್ರದತ್ತವಿತ್ತಸ್ಯ ತದ್ಧನಂ ಸ್ವಧನಂ ಸುಖಂ |
ಅಪಾತ್ರದತ್ತ ವಿತ್ತಸ್ಯ ತದ್ಧನಂ ಸ್ವಸುಖಂ ಭವೇತ್ ||
ಚರಸ್ಯ ಗಮನೋ ನಾಸ್ತಿ ಭಕ್ತಸ್ಯ ಗೃಹಮಾಚರೇತ್ |
ಅನ್ಯಗೃಹಂ ಗಮಿಷ್ಯಂತಿ ಸದ್ಯೋ ಗೋಮಾಂಸಭಕ್ಷಣಮ್ ||
ಇಷ್ಟಲಿಂಗಮವಿಶ್ವಸ್ಯ ಅನ್ಯದೈವಮುಪಾಸತೇ |
ಶ್ವಾನಯೋನಿ ಶತಂ ಗತ್ವಾ ಚಾಂಡಾಲಗೃಹಮಾಚರೇತ್ ||
ಬಹುಲಿಂಗಪೂಜಕಸ್ಯ ಬಹುಭಾವಗುರುಸ್ತಥಾ |
ಬಹುಪ್ರಸಾದಂ ಭುಂಜಂತಿ ವೇಶ್ಯಾಪುತ್ರಸ್ತಥೈವ ಚ ||
ಅಭಕ್ತಜನಸಂಗಶ್ಚ ಮಂತ್ರಸ್ಯ ಚ ಆಗಮಃ |
ಅನ್ಯದೈವಪರಿತ್ಯಾಗಃ ಲಿಂಗಭಕ್ತಸ್ಯ ಲಕ್ಷಣಂ ||
ಲಿಂಗಧಾರಕಭಕ್ತಾನಾಂ ಲಿಂಗಬಾಹ್ಯಸತೀಸುತಾಃ |
ಆಲಿಂಗಿತಾ ಚುಂಬಿತಾಶ್ಚ ರೌರವಂ ನರಕಂ ವ್ರಜೇತ್ ||”
ಇಂತೆಂಬ ಹರಗುರುವಾಕ್ಯಪ್ರಮಾಣವದಾಗಿ,
ಸದ್ಭಕ್ತಶರಣಗಣಾರಾಧ್ಯರು ಭೂಪ್ರತಿಷ್ಠಾದಿಗಳ ಹೊದ್ದಿದಡೆ,
ಭವಬಂಧನವಪ್ಪದು ತಪ್ಪದು.
ಅದು ಕಾರಣವಾಗಿ ಗುರುಮಾರ್ಗಿಕರು ಹೊದ್ದದೆ,
ಭವಸಾಗರವ ದಾಂಟಿ, ನಿರ್ಧರದಿಂದಿಪ್ಪುದೊಂದು
ನರಗುರಿಗಳ ಪ್ರಥಮಪಾತಕನಿರಸನ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./94
ಸತ್ತುಚಿತ್ತಾನಂದ ನಿತ್ಯಪರಿಪೂರ್ಣಾನುಭವಿಯಾದ
ನಿಜಜಂಗಮ ಲಿಂಗಶರಣ ನಿಂದ ನಿಲುಕಡೆಯ ಇರವೆಂತೆಂದೊಡೆ :
ಕಾಯ ವಾಚ ಮಾನಸ ಮೊದಲಾದ
ಕರಣೇಂದ್ರಿಯವಿಷಯಾದಿಗಳೆಲ್ಲ ಒಬ್ಬುಳಿಯಾಗಿ,
ನಿಜಮೋಕ್ಷಸ್ವರೂಪ ಭಕ್ತವಿರಕ್ತಸ್ಥಲದ ವರ್ಮಮಂ
ಪೂರ್ವಪುರಾತನ ನೂರೊಂದು ವಿರಕ್ತರು,
ನೂತನ ಪುರಾತನ ಗಣಸಮೂಹವೆಲ್ಲ
ಪರಮಪಾತಕಸೂತಕವಿರಹಿತವಾದ
ಮಹದರುವೆಂಬ ಗುರು, ಸರ್ವಾಚಾರವೆಂಬ ಲಿಂಗ,
ಸತ್ಕ್ರಿಯಾಸಮ್ಯಜ್ಞಾನಾನುಭಾವವೆಂಬ ಜಂಗಮಸ್ಥಲವನರಿದವರು
ಲಿಂಗವೆಂಬೆರಡಕ್ಷರ ಸಂಬಂಧವಾದ ಪಿಂಡಬ್ರಹ್ಮಾಂಡಗಳ
ಅನಾಚಾರವ ಕಂಡು ಅವಗಡಿಸಿ ನಿಂದ್ಯನಮಾಡುವುದೆ ಪಾಪದಾಗರ.
ಲಿಂಗವಿದ್ದಸ್ಥಾನವೆಲ್ಲ ನಿಜವೆಂದು, ಅನಾಚಾರವ ಕಂಡು,
ಲಾಂಛನ ವಿಭೂತಿ ರುದ್ರಾಕ್ಷಿಗಳ ನೋಡಿ,
ಭಾವದಲ್ಲಿ ಭರಿತವಿಲ್ಲದೆ ಕೂಡಿ,
ತೀರ್ಥಪ್ರಸಾದಾನುಭಾವಸೇವಿತರೆನಿಸಿ,
ಸ್ತುತಿಮಾಡುವುದೆ ಪುಣ್ಯದಾಗರ.
ಶೈವಮತದವರು ಮೃತ್ತಿಕೆಯ ಲಿಂಗನ ಮಾಡಿ,
ಅಷ್ಟವಿಧಾರ್ಚನೆ ಷೋಡಶೋಪಚಾರದಿಂದರ್ಚಿಸಿ,
ಪುಣ್ಯವ ಪಡೆದು, ಕಡೆಗೆ ಬಿಟ್ಟಲ್ಲಿ ಪಾಪಕೆ ಗುರಿಯಾದಂತೆ,
ಈಗಳಾದರೂ ಗುರುಮಾರ್ಗಾಚಾರಕೋವಿದರು
ಆ ಸತ್ಯವಾದುದ ದೇವರೆಂದು ಪೂಜಿಸಿದೊಡೆ ಒಂದನೆ ಪುಣ್ಯವಯ್ಯ.
ಪೂಜಿಸಿದಂತಾದ್ದು ಅಸತ್ಯವೆಂದು ಬಾಹ್ಯಾಂತರಂಗದಲ್ಲಿ
ಹೊಳೆದೊಡೆ ಎರಡನೆ ಪಾಪವಯ್ಯ.
ಇಂತಪ್ಪ ಪುಣ್ಯಪಾಪವಿರಹಿತನಾಗಿ,
ಶ್ರುತಿಗುರುಸ್ವಾನುಭಾವಕ್ಕೆ ಸನ್ಮತವಾದುದ ಒಡವೆರದು
ಬಳಸಿಬ್ರಹ್ಮ ಉಂಡುಪವಾಸಿಯಾಗಿಯು,
ತನಗೊಂದಾಶ್ರಯವಿಲ್ಲದೆ ತಮ್ಮ ನಿಜವೆ ತನಗಾಶ್ರಯವಾಗಿ,
ನಿರಾಶ್ರಯದಿಂದ ಹೊನ್ನು ಹೆಣ್ಣು ಮಣ್ಣೆಂಬ
ಭ್ರಾಂತುಭ್ರಮೆಯಳಿದು ಪೂರ್ವಪುರಾತನರೊಳಗೆ
ಘನಲಿಂಗದೇವರು ಗುಮ್ಮಳಾಪುರದ ಗೌರಮ್ಮನವರು ಸಹವಾಗಿ
ಹೋದ ಪರಮವಿರಾಗತಿಯ,
ಅಂದಿಂದೆಂಬ ಸಂದೇಹದ ರಜಗೀಲ ಕಳೆದುಳಿದು,
ಧ್ಯಾನ ಮೌನ ನೇಮ ನಿತ್ಯ ಸತ್ಯ ಸದುಭಾವಭರಿತನಾಗಿ,
ಗುರುಮಾರ್ಗಾಚಾರ ಸಮ್ಮೋಹಿತರಾದ
ಅಚ್ಚಪ್ರಸಾದಿ ಭಕ್ತ ಜಂಗಮಾಚರಣೆಯೆ ತನಗಂಗವೆನಿಸಿ,
ನಿಚ್ಚಪ್ರಸಾದಿ ಭಕ್ತಜಂಗಮಾಚರಣೆಯೆ ತನ್ನ ತತ್ಪ್ರಾಣವೆನಿಸಿ,
ಸಮಯ ಪ್ರಸಾದಿ ಭಕ್ತಜಂಗಮಾಚರಣೆಯೆ ತನ್ನ ಭಾವವೆನಿಸಿ,
ಗುರುಪ್ರಸಾದವ ಪಡೆದು,
ಲಿಂಗಪ್ರಸಾದಿ ಭಕ್ತಜಂಗಮಾಚರಣೆಯೆ ತನ್ನ ಹಸ್ತಪಾದವೆನಿಸಿ,
ಈ ಮಾರ್ಗವನರಿಯದೆ ಮೂಢಾತ್ಮ ಲಿಂಗದೇಹಿ ಪರಮಪಾತಕರೆಲ್ಲ
ತನ್ನ ವಿಸರ್ಜನತಾಣವೆಂದರಿದು, ಎಚ್ಚರತಪ್ಪದೆ,
ಸಾವಧಾನ ನಡೆನುಡಿಯಿಂದ ಪರನಾದ ಚಿದ್ಬಂದುಸ್ವರೂಪವಾದ
ವಿಭೂತಿ ರುದ್ರಾಕ್ಷಿ ಪ್ರಣಮ ಪಾದೋದಕ ಪ್ರಸಾದಂಗಳ
ಸಾಕಾರವಾದಿಷ್ಟಲಿಂಗಾರೋಪಿತ,
ನಿರಾಕಾರವಾದ ಪ್ರಾಣಲಿಂಗಾರೋಪಿತ
ನಿರವಯವಾದ ಭಾವಲಿಂಗಾರೋಪಿತಂಗಳಿಂದ
ಪರಿಪೂರ್ಣ ಮಿಶ್ರಾರ್ಪಣದೊರ್ಮಾದಿವರ್ಮವರಿದು
ಮೇಲಾದ ಅಯೋಗ್ಯಾತೀತನಾದ ತ್ರಿಕೂಟದ
ಸಂಗಸಮರತಿಯ ಸರ್ವಾವಸ್ಥೆಗಳೆಲ್ಲ ಅಡಿಮೆಟ್ಟಿ
ಯೋಗ್ಯವಾದ ತ್ರಿಕೂಟದ ಸಂಗಸಮರತಿಯ ಸರ್ವಾವಸ್ಥೆಗಳಲ್ಲಗಲದೆ,
ಎಚ್ಚರಂದಳೆದು, ಮೈಮರೆಯದೆ,
ತ್ರಿವಿಧಗುಹ್ಯಸ್ಥಾನವೆಂಬ ತ್ರಿವಿಧಮನೆಯಲ್ಲಿರ್ಪ
ತ್ರಿವಿಧಬಿಂದುಚಲನಾರಹಿತವಾಗಿ,
ತನ್ನ ತಾ ಸಾಕ್ಷಿಯಿಂದ, ನಿಜನಿವಾಸಕ್ಕೆ ತವರುಮನೆಯೆಂದು,
ಗ್ರಾಮಬಂಧನ ನಿಳಯಬಂಧನ ದ್ರವ್ಯಬಂಧನ ಈಷಣತ್ರಯಬಂಧನವೆಂಬ
ಕಾಲಕಾಮಮಾಯಾಸಂಸಾರಸಾಗರವ ದಾಂಟಿ,
ನಿರ್ಮಾಯ ಕಾಲಕಾಮನಿಃಸಂಸಾರಸಾಗರಮಂ ಅತಿಮೋಹವಿಲ್ಲದೆ,
ಲಿಂಗನಿಮಿತ್ಯವಾಗಿ, ಪರಿಣಾಮದಿಂದ ಯೋಗ್ಯವಾದ
ನಿರ್ಮಲ ನಿಃಕಳಂಕ ದ್ರವ್ಯದ ನಿಃಕಳಂಕಮೂರ್ತಿ ತಾನೇ ತಾನಾಗಿ
ವಿರಾಜಿಸುವವರೆ ಚಿತ್ಕಲಾಪ್ರಸಾದಿ ಭಕ್ತಜಂಗಮ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./95
ಸತ್ಯಶುದ್ಧ ನಡೆ ನುಡಿ ಧೃಡಚಿತ್ತ ಉಳ್ಳಾತನಾಗಿ,
ಅಲ್ಲಿಂದ ಬಹಿರ್ದೆಶಕ್ಕೆ ಹೋಗಿ,
ಶುಚಿಯಾದ ಸ್ಥಳದಲ್ಲಿ ವಾಯುಬೀಸುವ ಕಡೆಗೆ ಮುಖಮಾಡಿ,
ಸ್ಥೂಲ ಸೂಕ್ಷ್ಮವ ವಿಸರ್ಜಿಸಿ, ಮತ್ತೊಂದು ಸ್ಥಲದಲ್ಲಿ ಕುಳಿತು,
ಮೃತ್ತಿಕೆಯಾದರೂ ಸರಿಯೆ,
ಬೂದಿಯಾದರೂ ಒದಗಿದಂತಾದ್ದು ತೆಗೆದುಕೊಂಡು,
ಶ್ಲೋಕ : “ಲಿಂಗೇಕ ಗುಧಃಪಂಚಾನಾಂ ವಾಮಹಸ್ತಾದಶಃ ಶುಚಿಃ |
ಉಭಯ ಕರಸಪ್ತಂ ಚ ಪಾದಂ ಚ ಪಂಚಪಂಚಕಂ |
ಓಷ್ಟ್ರಕಂ ತ್ರಿವಿಧಶ್ಚೈವಾ ಮೃತ್ತಿಕಾ ಶೌಚಲಕ್ಷಣಂ || (?)”
ಈ ಹೀಂಗೆಂದುದಾಗಿ ಹರವಾಕ್ಯಪ್ರಮಾಣಿನಿಂದ,
ಪ್ರಥಮದಲ್ಲಿ ಗುಹ್ಯಕ್ಕೆ ಒಂದು ವೇಳೆ
ಮೃತ್ತಿಕೆಯಿಂದ ಸ್ಪರಿಶನವಮಾಡಿ ತೊಳೆವುದು.
ಮತ್ತಂ, ಗುದಕ್ಕೆ ಐದು ವೇಳೆ ಸ್ಪರಿಶನವ ಮಾಡಿ ತೊಳೆವುದು.
ತೃತೀಯದಲ್ಲಿ ವಾಮಹಸ್ತಕ್ಕೆ ಹತ್ತು ವೇಳೆ ಸ್ಪರಿಶಿಸಿ ತೊಳೆವುದು.
ತಾನೊಬ್ಬನೆ ಗೋಪ್ಯವಾಗಿ ಆಚರಿಸುವುದು.
ಮತ್ತಾ , ಶಕ್ತಿಸಂಬಂಧವಾದ ಮಾರ್ಗಕ್ರಿಯೆ ಮೂರೆನಿಸುವದು.
ಅಲ್ಲಿಂದ ಬಂದು ಉಭಯ ಹಸ್ತವ ಏಳುವೇಳೆ ಸ್ಪರಿಶನವ ಮಾಡಿ
ತೊಳೆವುದೆ ಚತುರ್ಥವೆನಿಸುವುದು.
ಎರಡುಪಾದಗಳ ಐದುವೇಳೆ ಸ್ಪರಿಶನವ ಮಾಡಿ
ತೊಳೆವುದೆ ಪಂಚಮವೆನಿಸುವುದು.
ಆ ತಂಬಿಗೆಯ ಪೂರ್ವದ್ರವವನಾರಿಸಿ,
ಮೂರುವೇಳೆ ಬೆಳಗುವುದೆ ಷಡ್ವಿಧವೆನಿಸುವುದು.
ಇದು ರಹಸ್ಯಮುಖದಲ್ಲಿ ಆಚರಿಸುವುದು.
ಶಿವಸಂಬಂಧವಾದ ಮೀರಿದ ಕ್ರಿಯೆ ಮೂರೆನಿಸುವವು.
ಹೀಂಗೆ ತೊಳೆದಲ್ಲಿ ಷಟಸ್ಥಲಸಂಬಂಧವೆನಿಸುವುದು.
ಇದೆ ಪ್ರಮಥಗಣಮಾರ್ಗದ ವಿಸರ್ಜನೆಯ
ಪರಿಣಾಮದ ಗೊತ್ತು ನೋಡಿರಯ್ಯಾ
ನಿರವಯಪ್ರಭು ಮಹಾಂತನ ಒಡಗೂಡುವ ಸನ್ಮಾರ್ಗ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./96
ಸದಾಚಾರಲಿಂಗನಡೆಯುಳ್ಳ ಸದ್ಭಕ್ತಮಹೇಶ್ವರರಾದ ಬಳಿಕ,
ಅಪಶೈವ ಜಡಕರ್ಮಿ ಭವಿನೇಮಸ್ತರ ಕಳೆದುಳಿದು,
ಸರ್ವಾಚಾರಸಂಪತ್ತಿನ ಷಟ್ಸ್ಥಲಬ್ರಹ್ಮೋಪದೇಶದಿಂದ
ನಿಃಸಂಸಾರ ನಿರಾವಲಂಬ ನಿಃಪ್ರಪಂಚ ನಿತ್ಯಾನಂದ ಮುಕ್ತಿಸ್ವರೂಪ
ಅನಾದಿಪ್ರಮಥಗಣಕುಲವ ಸೇರಿದ ಶಿವಯೋಗಿಗಳಿಗೆ,
ಕುಲಸೂತಕವೆಂಬುದೆ ಪಾತಕ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./97
ಸರ್ವಾಂಗಲಿಂಗಸಂಬಂಧವಾದ ಶಿವಯೋಗೀಶ್ವರರು
ವೈರಿಗಳಡಿಮೆಟ್ಟಿ, ಷಡೂರ್ಮಿ, ಷಡ್ಭ್ರಮೆ,
ಷಡ್ಭಾವವಿಕಾರಮಂ ಕಡೆಗೊದೆದು,
ಷಟ್ಸ್ಥಲಮಾರ್ಗದಲ್ಲಿ ನೆರೆನಂಬಿ,
ಅಷ್ಟಾವರಣದವಧಾನದಿಂದ ಪಾವನಾರ್ಥವಾಗಿ
ತನುವಿನಲ್ಲಿ ಸದ್ರೂಪವಾದ ಗುರು,
ಮನದಲ್ಲಿ ಚಿದ್ರೂಪವಾದ ಲಿಂಗ,
ಭಾವದಲ್ಲಿ ಆನಂದಸ್ವರೂಪವಾದ ಜಂಗಮ,
ಜಿಹ್ವಾಗ್ರದಲ್ಲಿ ನಿತ್ಯವಾದ ಪಾದೋದಕ,
ನಾಸಿಕದಲ್ಲಿ ಪರಿಪೂರ್ಣವಾದ ಪ್ರಸಾದ,
ತ್ವಕ್ಕಿನಲ್ಲಿ ಅವಿರಳವಾದ ಚಿದ್ವಿಭೂತಿ,
ಕಂಗಳಲ್ಲಿ ಪರಂಜ್ಯೋತಿ ಚಿದ್ರುದ್ರಾಕ್ಷಿ,
ಶ್ರೋತ್ರಂಗಳಲ್ಲಿ ಪರನಾದಬ್ರಹ್ಮಮೂರ್ತಿ
ಚಿನ್ನಾದ ಬಿಂದು ಕಳಾಮಂತ್ರಮಂ ಧಾರಣಂಗೈದು
ತನುವೆಂಬ ಕ್ರಿಯಾಲಯಕ್ಕೆ
ಇಷ್ಟಲಿಂಗಪಂಚಾಚಾರಮಂ ತಳೆದೊಪ್ಪಿ,
ಮನವೆಂಬ ಜ್ಞಾನಾಲಯಕ್ಕೆ
ಪ್ರಾಣಲಿಂಗದ ತ್ರಿವಿಧಾಚಾರಮಂ ತಳೆದೊಪ್ಪಿ,
ಭಾವವೆಂಬ ಪರಿಪೂರ್ಣಾಲಯಕ್ಕೆ
ಭಾವಲಿಂಗದ ತ್ರಿವಿಧಾಚಾರಮಂ ತಳೆದೊಪ್ಪಿ,
ಸರ್ವಾವಸ್ಥೆಗಳಲ್ಲಿ ಮಹದರುವಿನ ನಿಜಾನುಭಾವದ ಚಿದ್ಬೆಳಗೆ
ಸರ್ವಾಚಾರಸಂಪತ್ತಿನಿರವೆಂದು ಹೊಳೆವ ಶರಣನೆ
ನಿಜಮೋಕ್ಷಸ್ವರೂಪ ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./98
ಸಾಕಾರವಾದ ಇಷ್ಟಲಿಂಗಸಂಧಾನದ
ಕ್ರಿಯಾರ್ಚನೆ ಜ್ಞಾನಾರ್ಚನೆ ಮಹಾಜ್ಞಾನಾರ್ಚನೆಯ
ಜಪತಪಾನುಸಂಧಾನದ ಸದ್ಗುರುಮಾರ್ಗಮಂ ಎಚ್ಚರದಳೆದು,
ಅಂತರಂಗ ಬಹಿರಂಗ ಒಂದಾಗಿ,
ಭಿನ್ನಕ್ರಿಯಾರ್ಚನಾದಿಗಳನತಿಗಳೆದು ಹೊದ್ದಿಗೆಯ ಹೊದ್ದದೆ,
ಕೇವಲ ಅಭಿನ್ನಕ್ರಿಯಾರ್ಚನೆಗಳಲ್ಲಿ ಸನ್ಮೋಹಿಯಾದ ಸದ್ಭಕ್ತಮಹೇಶ್ವರರು
ನಿರವಯಪ್ರಭುಮಹಾಂತ ನಿಃಕಳಂಕ ಜಂಗಮಲಿಂಗದಲ್ಲಿ
ನೈಷ್ಠೆ ನಿಬ್ಬೆರಗಾಗಿ ನಚ್ಚಿ ಮಚ್ಚಿರ್ಪುದೆ ಘನಕ್ಕೆ ಘನ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./99
ಹರಗುರುಮಾರ್ಗಾಚಾರಸಂಪದ ನಾಯಕ ಗುರುಪುತ್ರರು,
ಹರಿಯಜಸುರಮನುಮುನೀಂದ್ರಾದಿ ನರಗುರಿಗಳ
ಅಂಗಭೋಗದನಾರ್ಪಿತ ಅನಾಚಾರ ಅಕ್ರಿಯೆ ಅಜ್ಞಾನ ಅಸತ್ಯಕಾಯಕ
ಅಯೋಗ್ಯ ಪಾತಕ ಸೂತಕ ಫಲಪದದ
ನಡೆನುಡಿ ಕೊಡುಕೊಳುವದೇನೂ ಬೆರಸಲಾಗದು.
ಅವಾವೆಂದಡೆ : ಶ್ರುತಿ ಗುರುವಚನಾನುಭಾವಗಳೊಳು
ಅಲ್ಲವೆಂದುದ ಕಂಡ್ರಿಸಿ ಬಿಟ್ಟು, ನಿರಶನವ ಮಾಡಿದುದ ಮುಟ್ಟಲಾಗದು,
ಕಾಯಭ್ರಾಂತು ಮನಭ್ರಾಂತುವಿಡಿದು
ತನ್ನ ನಿಜ ತಾ ಕಾಣದೆ ಕರದಲ್ಲೊಂದು ಪಿಡಿದು,
ನುಡಿಯಲ್ಲೊಂದು ಸ್ತುತಿಸಿ, ಮನದಲ್ಲೊಂದು ನಂಬಿ ನಚ್ಚಿ ಮಚ್ಚಿ,
ಪರಾತ್ಪರವಿದೆಂದು, ಪುರಾಣ ಶ್ಮಶಾನ ಪ್ರಸೂತಿ ವೈರಾಗ್ಯದಿಂದ,
ನಿಜಭಕ್ತಜ್ಞಾನ ವೈರಾಗ್ಯದ ಕುರುಹ ತಿಳಿಯದೆ,
ಅಂದಿನ ಗಣವೆಂದು ನುಡಿದಲ್ಲಿ
ಅಂದಿನ ನಡೆನುಡಿ ದೃಢಚಿತ್ತವ ಹೋಗಲಾಡಿಸಿದವರಯೋಗ್ಯ ಅನಾಚಾರಿ
ಅಸತ್ಯರೆಂದುದು ನೋಡಾ ಗುರುವಚನ.
ನೀತಿಯ ಕೈಯಲ್ಲಿ ಪಿಡಿದು, ಅನೀತಿಯ ಪಾದದಲ್ಲಿ ಮೆಟ್ಟಿ.
ನೀತಿಯಾದ ಪಾದೋದಕ ಪ್ರಸಾದವನಿತರಲ್ಲಿ ಕೊಟ್ಟುಕೊಂಡು ಬಳಸಿ
ಅನೀತಿಯಾದನ್ನುದಕಾದಿಗಳ ಅನೀತರಲ್ಲಿ
ಸುರುಚಿಗಳಿಂದ ಕೊಟ್ಟುಕೊಂಡು ಬಳಸಿ,
ಲೌಕಿಕ ಅಲೌಕಿಕ ಸಹಜಲೌಕಿಕ ಅರ್ಥಪದಾರ್ಥ
ಪರಮಾರ್ಥದ ವಿವರ ಭೇದಿಸಿ,
ಗುರುವಚನಪ್ರಮಾಣ ಕ್ರಿಯಾಚಾರ ನಡೆನುಡಿ ದೃಢನಿಷ್ಠೆಯನರಿದು,
ತನು ಮನ ಧನ ಪುತ್ರ ಮಿತ್ರ ಕಳತ್ರ ಅರ್ಥ
ಪ್ರಾಣ ಅಭಿಮಾನ ಮನ್ನಣೆಯೆಂಬ
ಮಲತ್ರಯಪಾಶವ ಮರೆದು, ಪಿಪೀಲಿಕನಂತೆ ಬೇರಿನಲ್ಲಿರಿದು,
ಆ ವೃಕ್ಷವನೇರಿ ಆ ಕೊನೆಯಲ್ಲಿರುವ ಫಲದ ಅಮೃತರಸವ ಸವಿದಂತೆ
ಮಹದರುವೆಂಬ ಗುರುಚರಣಕಮಲದಿರವ
ಘನಮನದೃಷ್ಟಿಯಿಂ ನೋಡಿ, ವಾಸನಂಗೈದು,
ಜ್ಞಾನಾನಂದವೆಂಬ ಪರಿಮಳ ವೇಧಿಸಿ, ಹರುಷಾನಂದವೇರಿ,
ನಿರಾವರಣ ಘನಲಿಂಗಜಂಗಮ ಪಾದೋದಕ ಪ್ರಸಾದ
ವಿಭೂತಿ ರುದ್ರಾಕ್ಷಿಯೆಂಬ ಸರ್ವಾಚಾರವೃಕ್ಷವನೇರಿ,
ಕ್ರಿಯಾಜಪ ಜ್ಞಾನಪಜ ಮಹಾಜ್ಞಾನಜಪಮಂ
ಚಿನ್ನಾದ ಪರನಾದ ಮಹಾನಂದವನೊಳಕೊಂಡು,
ಶೋಭಿಸುವ ಹರೆಹರೆಗಳ ಹಬ್ಬಿ, ಘಟಶಕ್ತಿಯೆಂಬ ಸೆರೆಯಿಂ ಬಿಗಿದಪ್ಪಿ,
ಪರಿಪೂರ್ಣ ಹಸ್ತವ ನಿಗುಚಿ, ತ್ವಾಟಿಯಲ್ಲಿ ಬೀಜವಿಲ್ಲ.
ರೋಗವಿಲ್ಲದಂಥ ತಾನಂಜೂರ ಜ್ಯೋತಿರ್ಮಯವೆಂಬ ಹಣ್ಣು ಕಡಿದು,
ತಾನೇ ತಾನಾಗಿ, ಪರಮಾನಂದರಸವ
ಸವಿದುಂಡುಪವಾಸಿ ಬಳಸಿಬ್ರಹ್ಮವಾಗಿ,
ಇಹಲೋಕದ ಭೋಗ, ಪರಲೋಕದ ಮೋಕ್ಷಕ್ಕೆ ಹೊರಗಾಗಿ,
ನಿರಂಜನಪದ ನಿರ್ವಾಣಫಲದಾಯಕರೆ ನಿಮ್ಮ ಸುಸಂಗಿಗಳು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./100
ಹರಹರ ಶಿವಶಿವ ಜಯಜಯ
ನಮೋ ನಮೋ ತ್ರಾಹಿ ತ್ರಾಹಿ ಕರುಣಾಕರ
ಅಭಯಕರ ಸುಧಾಕರ ಚಿದಾಕರ ಮತ್ಪ್ರಾಣನಾಥ
ಸರ್ವಾಧಾರ ಸರ್ವಚೈತನ್ಯಮೂರ್ತಿ ಶ್ರೀಗುರುಲಿಂಗಜಂಗಮವೆ,
ನಿಮ್ಮ ಘನಪಾದಪೂಜೆಯ ಮಾಡುವುದಕ್ಕೆ
ನಿರೂಪವ ಪಾಲಿಸಬೇಕು ಸ್ವಾಮಿಯೆಂದು ಕೃಪಾನಂದವ ಬೆಸಗೊಂಡು,
ಸಮ್ಮುಖದ ಗರ್ದುಗೆಯಲ್ಲಿ ಮೂರ್ತವಮಾಡಿ,
ನಿಜಾನಂದದಿಂದ ಕ್ರಿಯಾಜಂಗಮಮೂರ್ತಿಯ ಕರಕಮಲದಲ್ಲಿ ನೆಲಸಿರುವ
ಪರಾತ್ಪರ ಜ್ಞಾನಜಂಗಮಲಿಂಗಮೂರ್ತಿಯ ಷಟ್ಕೃತಿ ನವಕೃತಿಗಳಲ್ಲಿ
ಅನಾದಿಜ್ಯೋತಿರ್ಮಯ ಮಹಾಪ್ರಣಮಲಿಂಗಂಗಳ
ಅನಿಮಿಷದೃಷ್ಟಿಯಿಂ ನಿರೀಕ್ಷಿಸಿ ಧ್ಯಾನವಿಟ್ಟು,
ಸಾಕಾರ ನಿರಾಕಾರ ಅಷ್ಟವಿಧಾರ್ಚನೆ ಷೋಡಶೋಪಚಾರಗಳ
ಗಣಸಮೂಹವನೊಡಗೂಡಿ,
ಘನಮನೋಲ್ಲಾಸದಿಂದ ಸಮಾಪ್ತವ ಮಾಡಿ ನಮಸ್ಕರಿಸಿ,
ಇದೆ ನಿಃಕಳಂಕ ಸದ್ರೂಪ ಘನಗುರುಮೂರ್ತಿ
ಇಷ್ಟಲಿಂಗಾರ್ಚನ ಎಂದು ಭಾವಭರಿತವಾಗಿ,
ಎಲೆಗಳೆದ ವೃಕ್ಷದಂತೆ ಕರಣಂಗಳುಲುವಿಲ್ಲದೆ ನಿಂದ ನಿಜೋತ್ತಮರೆ
ನಿರವಯಪ್ರಭು ಮಹಾಂತರೆಂಬೆ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./101