Categories
ಶರಣರು / Sharanaru

ಮೇದರ ಕೇತಯ್ಯ

ಅಂಕಿತ: ಗವರೇಶ್ವರಲಿಂಗ
ಕಾಯಕ: ಬುಟ್ಟಿಹೆಣೆಯುವುದು (ಗವರಿಗೆ)

ಬುಟ್ಟಿ ಹೆಣೆಯುವ ಕಾಯಕವನ್ನು ಕೈಕೊಂಡಿದ್ದ ಈತನ ಸ್ಥಳ ಬೇಲೂರ ಸಮೀಪದ ಉಳವಿಬೆಟ್ಟ. ಹೆಂಡತಿ ಸಾತವ್ವ. ಕಾಲ-1160. ‘ಗವರೇಶ್ವರ’ ಅಂಕಿತದಲ್ಲಿ ರಚಿಸಿದ 11 ವಚನಗಳು ದೊರೆತಿವೆ. ಅವುಗಳಲ್ಲಿ ಸಮಕಾಲೀನ ಶರಣರ ಸ್ತುತಿ, ತನ್ನ ಕಾಯಕದ ರೀತಿ-ನೀತಿ-ಮಹತ್ವ, ಅದರ ಮೂಲಕ ಪಡೆದುಕೊಂಡ ಲಿಂಗಾಂಗ ಸಾಮರಸ್ಯದ ಸುಖವನ್ನು ಬಣ್ಣಿಸಲಾಗಿದೆ.

ಮೊರದ ಹೊಲಿಗೆ ಗವರ ನಾನು `ಎಂದು ತನ್ನ ಬಗ್ಗೆ ಹೇಳಿಕೊಂಡಿರುವನು. ಲಿಂಗ ಕೆಳಗೆ ಬಿದ್ದಾಗ ನಿಂದಿಸಿ ನುಡಿದ ದ್ರೋಹಿಗಳ ಮಾತನ್ನು ಕೇಳಲಾಗದು ಎಂದಿರುವನು. ಭಕ್ತನಾದವನಿಗೆ ಸುಖ-ದುಃಖ, ಉರಿ-ಸಿರಿ ಎರಡೂ ಸಮಾನ ಎನ್ನದಿದ್ದರೆ ಭಕ್ತನಿಗೆ ಅದೇ ಹಾನಿ ಎನ್ನುವನು. ತನ್ನ ಭಕ್ತಿ ಬಸವಣ್ಣನಲ್ಲಿ, ಜ್ಞಾನ ಚನ್ನಬಸವಣ್ಣನಲ್ಲಿ, ವೈರಾಗ್ಯ ಪ್ರಭುದೇವರಲ್ಲಿ ಬಯಲಾಯಿತ್ತು. ಹೀಗೆ ಮೂವರೂ ಒಂದೊಂದನ್ನು ಬಯಲು ಮಾಡಿದ್ದರಿಂದ ಗವರೇಶ್ವರಲಿಂಗದಲ್ಲಿ ಮನ ನಿಶ್ಚಿಂತವಾಯಿತ್ತು ಎಂದಿರುವನು. ಬಸವಣ್ಣನ ಸ್ತುತಿ ಹಲವು ವಚನಗಳಲ್ಲಿ ಬಂದಿದೆ.