Categories
ವಚನಗಳು / Vachanagalu

ಮೇದರ ಕೇತಯ್ಯ ವಚನಗಳು

ಅರಿವಿನ ಕುಳವನರಿಯೆ, ಮರಹಿನ ತೆರನನರಿಯೆ.
ಅರಿವು, ಮರಹಳಿದ ಗವರೇಶ್ವರಲಿಂಗಕ್ಕೆ
ಅರಿವೇ ಅರ್ಪಿತ, ಮರವೇ ಅನರ್ಪಿತ.
ಮೊರನ ಹೆಣೆವ ಗೌರ, ನಾನೆತ್ತ ಬಲ್ಲೆನಯ್ಯಾ./1
ಇಂದ್ರಿಯಂಗಳ ಕೊಂದೆಹೆನೆಂದಡೆ, ಅವು ಕಂದರ್ಪನ ಹಂಗು.
ಕಂದರ್ಪನ ಕೊಂದೆಹೆನೆಂದಡೆ, ಅವು ಕಂಗಳ ಲಾಭ.
ಕಂಗಳು ಮುಚ್ಚಿಯಲ್ಲದೆ ಲಿಂಗವ ಕಾಣಬಾರದು.
ಅದು ನಿರಂಗಂಗಲ್ಲದೆ, ಜಗದ ಹಂಗಿನವರಿಗಿಲ್ಲಾ ಎಂದೆ, ಗವರೇಶ್ವರಾ./2
ಎನ್ನ ಆಧಾರಚಕ್ರದಲ್ಲಿ ಅಪಾನವಾಯುವು ಆಚಾರಲಿಂಗವಾದಾತ ಬಸವಣ್ಣ.
ಎನ್ನ ಸ್ವಾಧಿಷ್ಠಾನಚಕ್ರದಲ್ಲಿ ವ್ಯಾನವಾಯುವು ಗುರುಲಿಂಗವಾದಾತ ಬಸವಣ್ಣ.
ಎನ್ನ ಮಣಿಪೂರಕಚಕ್ರದಲ್ಲಿ ಸಮಾನವಾಯುವು ಶಿವಲಿಂಗವಾದಾತ ಬಸವಣ್ಣ.
ಎನ್ನ ಅನಾಹುತಚಕ್ರದಲ್ಲಿ ಪ್ರಾಣವಾಯುವು ಜಂಗಮಲಿಂಗವಾದಾತ ಬಸವಣ್ಣ.
ಎನ್ನ ವಿಶುದ್ಧಿ ಚಕ್ರದಲ್ಲಿ ಉದಾನವಾಯುವು ಪ್ರಸಾದಲಿಂಗವಾದಾತ ಬಸವಣ್ಣ.
ಎನ್ನ ನಿಃಪ್ರಪಂಚದಲ್ಲಿ ಮಹಲಿಂಗವಾದಾತ ಬಸವಣ್ಣ.
ಇಂತಿದನರಿದೆನಾಗಿ ಗವರೇಶ್ವರಲಿಂಗದಲ್ಲಿರ್ದೆನಯ್ಯಾ. /3
ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾದಾತ ಬಸವಣ್ಣ.
ಎನ್ನ ಸ್ವಾಧಿಷ್ಠಾನಚಕ್ರದಲ್ಲಿ ಗುರುಲಿಂಗವಾದಾತ ಬಸವಣ್ಣ.
ಎನ್ನ ಮಣಿಪೂರಕ ಚಕ್ರದಲ್ಲಿ ಶಿವಲಿಂಗವಾದಾತ ಬಸವಣ್ಣ.
ಎನ್ನ ಪಾಣಿಯಲ್ಲಿ ಜಂಗಮಲಿಂಗವಾದಾತ ಬಸವಣ್ಣ.
ಎನ್ನ ವಾಕ್ಕಿನಲ್ಲಿ ಪ್ರಸಾದಲಿಂಗವಾದಾತ ಬಸವಣ್ಣ.
ಎನ್ನ ನಿಃಪ್ರಪಂಚದಲ್ಲಿ ಮಹಲಿಂಗವಾದಾತ ಬಸವಣ್ಣ.
ಇಂತಿದನರಿದೆನಾಗಿ. ಗವರೇಶ್ವರಲಿಂಗದಲ್ಲಿರ್ದೆನಯ್ಯಾ./4
ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾದಾತ ಬಸವಣ್ಣ.
ಎನ್ನ ಸ್ವಾಧಿಷ್ಠಾನಚಕ್ರದಲ್ಲಿ ಗುರುಲಿಂಗವಾದಾತ ಬಸವಣ್ಣ.
ಎನ್ನ ಮಣಿಪೂರಕಚಕ್ರದಲ್ಲಿ ಶಿವಲಿಂಗವಾದಾತ ಬಸವಣ್ಣ.
ಎನ್ನ ಅನಾಹುತಚಕ್ರದಲ್ಲಿ ಜಂಗಮಲಿಂಗವಾದಾತ ಬಸವಣ್ಣ.
ಎನ್ನ ವಿಶುದ್ಧಿಚಕ್ರದಲ್ಲಿ ಪ್ರಸಾದಲಿಂಗವಾದಾತ ಬಸವಣ್ಣ.
ಎನ್ನ ಆಜ್ಞಾಚಕ್ರದಲ್ಲಿ ಮಹಲಿಂಗವಾದಾತ ಬಸವಣ್ಣ.
ಇಂತಿದನರಿದೆನಾಗಿ ಗವರೇಶ್ವರಲಿಂಗದಲ್ಲಿರ್ದೆನಯ್ಯಾ./5
ಎನ್ನ ಕಾಯದ ಕಳವಳವ ನಿಲಿಸಿ, ಗುರುಲಿಂಗವ ತೋರಿದ,
ಎನ್ನ ಮನದ ವ್ಯಾಕುಳವ ನಿಲಿಸಿ, ಜಂಗಮಲಿಂಗವ ತೋರಿದ,
ಇಂತು ಅಂತರಂಗ ಬಹಿರಂಗದಲ್ಲಿ ತಾನೆಯಾಗಿ, ಎನ್ನ ಪಾವನವ ಮಾಡಿದ,
ಅಮರಗಣಂಗಳು ಮುನಿದು ಎನ್ನ ಕೈಲಾಸಕ್ಕೆ ಒಯ್ದಡೆ,
ಸದ್ಯೋನ್ಮುಕ್ತಿಯ ತೋರಲೆಂದು ಮತ್ರ್ಯಕ್ಕೆ ಮರಳಿ ತಂದ
ಸಂಗನಬಸವಣ್ಣನೆ ಗುರುವೆನಗೆ, ಸಂಗನಬಸವಣ್ಣನೆ ಪರವೆನಗೆ.
ಸಂಗನಬಸವಣ್ಣನ ಕರುಣದಿಂದ, ಘನಕ್ಕೆ ಘನಮಹಿಮ ಅಲ್ಲಮಪ್ರಭುವಿನ
ಶ್ರೀಪಾದವ ಕಂಡು ಬದುಕಿದೆನು ಕಾಣಾ, ಗವರೇಶ್ವರಾ./6
ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡನಯ್ಯಾ, ಬಸವಣ್ಣನು.
ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡನಯ್ಯಾ, ಚನ್ನಬಸವಣ್ಣನು
ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡನಯ್ಯಾ,
ಘಟ್ಟಿವಾಳ ಮುದ್ದಯ್ಯನು.
ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡನಯ್ಯಾ, ಸಿದ್ಧರಾಮಯ್ಯನು.
ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡನಯ್ಯಾ,
ಮರುಳಶಂಕರದೇವರು,
ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡನಯ್ಯಾ, ಪ್ರಭುದೇವರು.
ಎನ್ನ ಸವರ್ಾಂಗದಲ್ಲಿ ಮೂರ್ತಿಗೊಂಡರು ಪ್ರಮಥರು.
ಗವರೇಶ್ವರಲಿಂಗದಲ್ಲಿ ಸುಖಿಯಾಗಿ ಬದುಕಿದೆನು ಕಾಣಾ,
ಮಡಿವಾಳ ಮಾಚಯ್ಯ./7
ಎನ್ನ ಚಿತ್ತಕ್ಕೆ ಆಚಾರಲಿಂಗವಾದಾತ, ಬಸವಣ್ಣ.
ಎನ್ನ ಬುದ್ಧಿಗೆ ಗುರುಲಿಂಗವಾದಾತ, ಬಸವಣ್ಣ.
ಎನ್ನ ಅಹಂಕಾರಕ್ಕೆ ಶಿವಲಿಂಗವಾದಾತ, ಬಸವಣ್ಣ.
ಎನ್ನ ಮನಕ್ಕೆ ಜಂಗಮಲಿಂಗವಾದಾತ, ಬಸವಣ್ಣ.
ಎನ್ನ ಜೀವಕ್ಕೆ ಪ್ರಸಾದಲಿಂಗವಾದಾತ, ಬಸವಣ್ಣ.
ಎನ್ನ ಅರುವಿಂಗೆ ಮಹಾಲಿಂಗವಾದಾತ, ಬಸವಣ್ಣ.
ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ, ಬಸವಣ್ಣ.
ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾದಾತ, ಬಸವಣ್ಣ.
ಎನ್ನ ಕಾರಣತನುವಿಂಗೆ ತೃಪ್ತಿಲಿಂಗವಾದಾತ, ಬಸವಣ್ಣ.
ಇಂತೆಂದರಿದೆನಾಗಿ, ಗವರೇಶ್ವರಲಿಂಗದಲ್ಲಿ ಆನು ಸುಖಿಯಾಗಿರ್ದೆನಯ್ಯಾ/8
ಎನ್ನ ಪ್ರಾಣಕ್ಕೆ ಆಚಾರಲಿಂಗವಾದಾತ ಬಸವಣ್ಣ.
ಎನ್ನ ಜಿಹ್ವೆಗೆ ಗುರುಲಿಂಗವಾದಾತ ಬಸವಣ್ಣ.
ಎನ್ನ ನೇತ್ರಕ್ಕೆ ಶಿವಲಿಂಗವಾದಾತ ಬಸವಣ್ಣ.
ಎನ್ನ ಶ್ರೋತ್ರಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ.
ಎನ್ನ ಹೃದಯಕ್ಕೆ ಮಹಲಿಂಗವಾದಾತ ಬಸವಣ್ಣ.
ಇಂತಿದನರಿದೆನಾಗಿ ಗವರೇಶ್ವರಲಿಂಗದಲ್ಲಿರ್ದೆನಯ್ಯಾ./9
ಎನ್ನ ಭಕ್ತಿ, ಬಸವಣ್ಣನಲ್ಲಿ ಬಯಲಾಯಿತ್ತು.
ಎನ್ನ ಜ್ಞಾನ, ಚೆನ್ನಬಸವಣ್ಣನಲ್ಲಿ ಬಯಲಾಯಿತ್ತು.
ಎನ್ನ ವೈರಾಗ್ಯ, ಪ್ರಭುದೇವರಲ್ಲಿ ಬಯಲಾಯಿತ್ತು.
ಇಂತೀ ಮೂವರು ಒಬ್ಬರೊಂದ ಬಯಲಮಾಡಿದರಾಗಿ,
ಗವರೇಶ್ವರಲಿಂಗದಲ್ಲಿ ನಿಶ್ಚಿಂತವಾಯಿತ್ತು./10
ಒಂದು ಬಿದಿರಿಂಗೆ ಕವೆ ಮೂರು, ಆ ಕವೆಯ ಒಳಗೆ ಲಕ್ಕ ಸಿಬಿರು.
ಮೂರು ಕವೆಯ ಕೊಚ್ಚಿಸಿ, ಬಿಲ್ಲ ಸಿಕ್ಕ ಬಿಡಿಸಿ, ಸೀಳಿದ ಬಿದಿರ
ಹೊರೆಹೊರೆಯಲ್ಲಿ ನೆಯಿದೆ, ತೊಟ್ಟಿಲ ಸಂದ ಕಾಣದಂತೆ.
ನಾಲ್ಕು ಕಾಲನಿಕ್ಕಿ, ಅಂದಅಂದವಾದ ತೊಟ್ಟಿಲ ದಂಡೆಯನಿಕ್ಕಿ,
ಕಟ್ಟುವದಕ್ಕೆ ಶ್ರುತ ದೃಷ್ಟವೆಂಬೆರಡು ದಾರದಲ್ಲಿ ತೊಟ್ಟಿಲ ಕಟ್ಟಿ,
ಗವರೇಶ್ವರಲಿಂಗಕ್ಕೆ ಹುಟ್ಟುಗೆಟ್ಟು ಹೋಗೋ ಎಂದು ಜೋಗುಳವಾಡಿದೆ. /11
ಕರಣದ ಶರಣ[ನ]ನು ಕಂಡಿಹೆ, ಕೇಳಿಹೆ,
ಉಂಡುಟ್ಟುದ್ದವಾಗಿ ಹೇಳಿ ಜೋಗೈಸಿಹೆನೆಂಬ
ಬಾಲರಿಗಿನ್ನೆಲ್ಲಿಯ ಅನುಭಾವ,
ಪರಮ ಗುರುವೆ, ಗವರೇಶ್ವರಾ./12
ಗುರು ಹುಸಿ, ಲಿಂಗ ದಿಟವೆನಲಿಲ್ಲ.
ಲಿಂಗ ಹುಸಿ, ಜಂಗಮ ದಿಟವೆನಲಿಲ್ಲ.
ಜಂಗಮ ಹುಸಿ, ಪಂಚಾಚಾರ ದಿಟವೆನಲಿಲ್ಲ.
ಇಂತಿವರಂಗವನು ಗವರೇಶ್ವರ ಬಲ್ಲ./13
ಪ್ರಾಣಸ್ಥಾನದಲ್ಲಿ ಆಪ್ಯಾಯನವಾಯಿತ್ತು, ಲಿಂಗಜಂಗಮ.
ತನುಸ್ಥಾನದಲ್ಲಿ ಆಪ್ಯಾಯನವಾಯಿತ್ತು,
ಆಚಾರಲಿಂಗಸ್ಥಲ, ಗುರುಲಿಂಗಸ್ಥಲ.
ಈ ಉಭಯಸ್ಥಲ ನಿಃಸ್ಥಲವಾಗಿ,
ತಾನೊಂದೇ ತೋರುತ್ತಿದರ್ಿತ್ತು.
ಈ ತೋರುವ ತೋರಿಕೆಯೆ ಬಸವಣ್ಣನೆನಗೆ.
ಆ ಬಸವಣ್ಣನ ಕರುಣದಿಂದ ಪ್ರಭುದೇವರ ಶ್ರೀಪಾದವ ಕಂಡು,
ನಾನು ಬದುಕಿದೆನು ಕಾಣಾ, ಗವರೇಶ್ವರಾ./14
ಭಕ್ತಂಗೆ ಸುಖವೂ ಸರಿ, ದುಃಖವೂ ಸರಿ,
ಉರಿ ಸಿರಿ ಉಭಯವೂ ಸರಿ ಎನ್ನದಿರ್ದಡೆ ಭಕ್ತನಿಗದೇ ಹಾನಿ.
ಜಂಗಮವೆಂದು ಪ್ರಮಾಣಿಸಿ,
ತನ್ನ ಕಂಗಳ ಮುಂದೆ ಕಂಡವರ ಭಂಜಿಸಲಿಕ್ಕೆ,
ತನ್ನಂಗವ ಹೊರೆದಡೆ ತೀರ್ಥಪ್ರಸಾದಕ್ಕೆ ಅವನಂದೇ ಹೊರಗು, ಗವರೇಶ್ವರಾ./15
ಮೊದಲಿಲ್ಲದೆ ಲಾಭವುಂಟೆ?
ನಿರೀಕ್ಷಣೆಯಿಲ್ಲದೆ ಪರೀಕ್ಷೆಯುಂಟೆ?
ಗುರುವಿಲ್ಲದೆ ಲಿಂಗವುಂಟೆ ?
ಇಂತೀ ವೇಷದ ಭಾಷೆಗೆ ಹೇಸಿದೆನು ಕಾಣಾ, ಗವರೇಶ್ವರಾ./16
ಮೊದಲು ಹುಸಿ, ಲಾಭ ದಿಟವೆ?
ನಿರೀಕ್ಷಣೆಯಿಲ್ಲದೆ ಪರೀಕ್ಷೆ ಉಂಟೆ?
ಈ ಯಾವ ಸರದಂಗವ, ಗವರೇಶ್ವರಲಿಂಗ ನೀನೇ ಬಲ್ಲೆ?/17
ಮೊರನ ಹೊಲಿವ ಗವರ ನಾನೆತ್ತ ಬಲ್ಲೆನು?
ಕಟ್ಟಿಕೊಂಡಾತ ಭಕ್ತನಪ್ಪನೆ, ಕೆಡಹಿದಾತ ದ್ರೋಹಿಯಪ್ಪನೆ?
ಆ ಲಿಂಗವು ಕಟ್ಟಲಿಕೆ, ತನ್ನ ಕೈಯಲ್ಲಿಪ್ಪುದೆ?
ಕೆಡಹಲಿಕೆ, ಬೀಳಲು ಬಲ್ಲುದೆ?
ಆ ಲಿಂಗ ಬಿದ್ದ ಬಳಿಕ, ಜಗತ್ತು ಉಳಿಯಬಲ್ಲುದೆ.
ಆ ಪ್ರಾಣಲಿಂಗ ಬಿದ್ದಬಳಿಕ, ಆ ಪ್ರಾಣ ಉಳಿಯಬಲ್ಲುದೆ.
ಆ ಲಿಂಗ ಬಿದ್ದಿತ್ತೆಂಬ ಸೂತಕದ ಶಬ್ದ ಭ್ರಾಂತುವಿನ ಪುಂಜ
ಅಂತು ಅದ ಕೇಳಲಾಗದು.
ಯುಗಜುಗಂಗಳು ಗತವಹವಲ್ಲದೆ, ಲಿಂಗಕ್ಕೆ ಗತ ಉಂಟೆ?
ಲಿಂಗ ಬಿದ್ದಿತ್ತೆಂದು ನಿಂದಿಸಿ ನುಡಿವ ದ್ರೋಹಿಗಳ
ಮಾತ ಕೇಳಲಾಗದು, ಗವರೇಶ್ವರಾ./18