Categories
ವಚನಗಳು / Vachanagalu

ಮೈದುನ ರಾಮಯ್ಯನ ವಚನಗಳು

1413
ಆಲಿಕಲ್ಲ, ನೀರೊಳಗೆ ಬೆರಸಿದಂತೆ,
ಉಪ್ಪಿನ ಹರಳ, ಉದಕದೊಳಗೆ ಹಾಕಿದಂತೆ,
ಕರ್ಪುರದ ಹಣತೆಯಲ್ಲಿ, ಜ್ಯೋತಿಯ ಬೆಳಗ ಬೆರಸಿದಂತೆ,
ಮಹಾಲಿಂಗ ಚೆನ್ನ ರಾಮೇಶ್ವರಲಿಂಗದಲ್ಲಿ ಬೆರಸಿ,
ಎರಡಳಿದಡಗಿದ ನಿಜಲಿಂಗೈಕ್ಯನು.

1414
ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ಭಂಡಾರಿ ಬಸವಣ್ಣನೆ.
ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ನಂಬಿಯಣ್ಣನೆ.
ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ಜಗದೇವನೆ.
ಎನಗೆ ನೀ ಕಟ್ಟಿದೊರೆಯೆಂಬಲ್ಲಿಗೆ ಕೇಳು, ಚೆನ್ನಬಸವಣ್ಣನೆ.
ಆನೆ ಮುರಿದಲ್ಲಿ ಸುಂಡಾಳವೆ ಹೇಳಾ?
ನಾನಿಲ್ಲದಿರ್ದಡೆ ನೀನಿಲ್ಲ, ನೀನಿಲ್ಲದಿರ್ದಡೆ ನಾನಿಲ್ಲ.
ನಾನು ನೀನೆಂಬುದಂತಿರಲಿ.
ಹಿಡಿಯೊ, ಮುಡಿಯೊ ಮಾಡಿದಂತೆಯಪ್ಪೆನು.
ನಗುವುದು ಕೆಲಕಡೆ ನೋಡಾ.
ಸಾತ್ವಿಕ ಸಜ್ಜನ ಸದ್ಗುರುವಿನಿಂದ ಬದುಕಿದೆ ನಾನು,
ನಿನಗಂಜೆ ಮಹಾಲಿಂಗ ಚೆನ್ನರಾಮಾ.

1415
ಮಳಲಲ್ಲಿ ರಸ ಉಂಟೆ? ನೆಳಲಿಗೆ ತಡೆ ಉಂಟೆ?
ರಣದಲ್ಲಿ ತಪ ಉಂಟೆ?
ನೇಹ ತಪ್ಪಿದಲ್ಲಿ ಮೋಹವನರಸಲುಂಟೆ?
ಮಹಾಲಿಂಗ ಚೆನ್ನರಾಮ,
ಮನ ಮುರಿದ ಬಳಿಕ, ಕಂಗಳಿಗೆ ವಿಷವಯ್ಯಾ.

1416
ಶಿವಶರಣರ ಬರವ ಕಂಡು
ಶಿರಬಾಗಿ, ಕರ ಮುಗಿದಂಜಲೇಬೇಕು.
ಶರಣೆನ್ನಲೊಲ್ಲದೀ ಮನವು.
ಆಗಿನ ಸಧ್ಯಃಫಲದ ಲಾಭದ ಭಕ್ತಿಯನರಿಯದಾಗಿ,
ಶರಣೆನ್ನಲೊಲ್ಲದೀ ಮನವು.
ಆಳ್ದರೆಂದು ನಂಬಿಯೂ ನಂಬಲೊಲ್ಲದಾಗಿ,
ಮಹಾಲಿಂಗ ಚೆನ್ನರಾಮೇಶ್ವರನೆನ್ನ ಕಡೆಗೆ ನೋಡಿ, ನಗು[ತ್ತಲೈದಾನೆ]

1417
ಹುಸಿಯಂಕುರವಾಯಿತ್ತು, ಡೊಂಬ ಡೋಹರರಲ್ಲಿ.
ಹುಸಿ ಎಲೆ ಹೂವಾಯಿತ್ತು, ದಾಸಿ ವೇಶಿಯರಲ್ಲಿ.
ಹುಸಿ ಕಾಯಿ ಹಣ್ಣಾಯಿತ್ತು, ಭವಿಭಕ್ತರಲ್ಲಿ.
ಹುಸಿ ಕೊಳತಿತ್ತು, ಜಂಗಮದಲ್ಲಿ.
ಹುಸಿ ಮರಣವಾಯಿತ್ತು ಸತ್ಪುರುಷರಲ್ಲಿ.
ಇಂತಪ್ಪ ಹುಸಿಯ ಬಿಟ್ಟಾತನೆ ಪಶುಪತಿಯಾಗಿರ್ದ ಕಾಣಾ,
ಮಹಾಲಿಂಗ ಚೆನ್ನರಾಮಾ.

1418
ಹೊನ್ನು ಪ್ರಾಣನಾಯಕ, ಹೆಣ್ಣು ಜೀವರತ್ನ,
ಮಣ್ಣು ಮೈಸಿರಿಯ ಕೇಡು.
ಈ ಮೂರು, ಮಹಾಲಿಂಗ ಚೆನ್ನರಾಮಯ್ಯಂಗೆ ಸಲ್ಲಲಿತವಲ್ಲ.