Categories
ವಚನಗಳು / Vachanagalu

ಶಿವನಾಗಮಯ್ಯನ ವಚನಗಳು

133
ಅಂಗದ ಮೇಲೆ ಲಿಂಗವಿದ್ದ ಬಳಿಕ, ಲಿಂಗಹೀನರ ಬೆರಸಲಾಗದು.
ಅಂಗದ ಮೇಲೆ ಲಿಂಗವಿದ್ದ ಬಳಿಕ,
ಲಿಂಗ ಮುಂತಾಗಿ ಎಲ್ಲಾ ಕ್ರೀಗಳನೂ ಗಮಿಸಬೇಕಲ್ಲದೆ,
ಅಂಗ ಮುಂತಾಗಿ ಗಮನಿಸಲಾಗದು.
ಲಿಂಗಸಂಬಂಧಿಯಾಗಿ ಅಂಗ ಮುಂತಾಗಿಪ್ಪವರು ಲಿಂಗಕ್ಕೆ ದೂರವಯ್ಯಾ,
ನಾಗಪ್ರಿಯ ಚೆನ್ನರಾಮೇಶ್ವರಾ.

134
ಘನಸುಖ ಮಹಾಸುಖವ ಮುಟ್ಟಲು, ಸಮಸುಖಂಗಳ ಸುಖಿಸಬಲ್ಲ,
ಸುಖವನಲ್ಲಿಯೇ ಕೊಯ್ದು ಸೂಡ ಕಟ್ಟಬಲ್ಲ,
ನಾಗಪ್ರಿಯ ಚೆನ್ನರಾಮೇಶ್ವರಾ,
ನಿಮ್ಮ ಶರಣನು ಸುಖಿಸಬಲ್ಲ ಸುಖವನು.

135
ಹುಟ್ಟಿದಾಕ್ಷಣವೆ ಲಿಂಗಸ್ವಾಯತವ ಮಾಡಿ,
ಶಿಶುವ ತನ್ನ ಶಿಶುವೆಂದು ಮುಖವ ನೋಡುವದು ಸದಾಚಾರ.
ಅದಲ್ಲದೆ, ಬರಿಯ ವಿಭೂತಿಯ ಪಟ್ಟವ ಕಟ್ಟಿ,
ಗುರುಕಾರುಣ್ಯವಾಯಿತ್ತೆಂದು
ಅನುಸರಣೆಯಲ್ಲಿ ಆಡಿಕೊಂಬುದು ಕ್ರಮವಲ್ಲ.
ಅದೇನು ಕಾರಣವೆಂದಡೆ, ತಾ ಲಿಂಗದೇಹಿಯಾದುದಕ್ಕೆ ಕುರುಹು.
ಲಿಂಗವುಳ್ಳವರೆಲ್ಲರ ತನ್ನವರೆನ್ನಬೇಕಲ್ಲದೆ,
ಲಿಂಗವಿಲ್ಲದವರ ತನ್ನವರೆಂದಡೆ, ತನ್ನ ಸದಾಚಾರಕ್ಕೆ ದ್ರೋಹಬಹುದು,
ಸಮಯಾಚಾರಕ್ಕೆ ಮುನ್ನವೇ ಸಲ್ಲ.
ಇದು ಕಾರಣ, ಲಿಂಗಸ್ವಾಯತವಾಗಿಹುದೆ ಪಥವಯ್ಯಾ,
ನಾಗಪ್ರಿಯ ಚೆನ್ನರಾಮೇಶ್ವರಾ.