Categories
ವಚನಗಳು / Vachanagalu

ಶಿವಲೆಂಕ ಮಂಚಣ್ಣನ ವಚನಗಳು

ಅಂಗ ಮುಟ್ಟಿ ಅಪ್ಪಿ, ಕಂಗಳು ತುಂಬಿ ನೋಡಿ,
ಕೈಯಾಟ ಹೆರೆಹಿಂಗದೆ ಪೂಜಿಸಿ,
ಮನಕ್ಕೆ ತೆರಪಿಲ್ಲದೆ ಅರಿದು, ಎಡೆಬಿಡುವಿಲ್ಲದ ಸುಖ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವ ಕೂಡುವ ಕೂಟ. /1
ಅಂಗ ಲಿಂಗವ ಪೂಜಿಸಿ, ಪ್ರಾಣ ಜ್ಞಾನವ ಕಂಡು,
ಅಂಗ ಲಿಂಗ ಹಿಂಗಿ, ಪ್ರಾಣಲಿಂಗವಾಗಿ.
ಆ ಪ್ರಾಣ ಲಿಂಗದಲ್ಲಿ ನಿಂದು, ಜ್ಞಾನಲಿಂಗವಾಯಿತ್ತು.
ಲಿಂಗಭಾವವಳಿದು ಮಹದೊಡಗೂಡಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ /2
ಅಂಗ ಶಿರದ ಮಲಿನವ ಕಳೆದಲ್ಲಿ, ಮನಕ್ಕೆ ಲಂಘನೆಯಾದಂತೆ,
ಶಿವಲಿಂಗಪೂಜೆಯ ಕೈಕೊಂಡನ್ನಬರ, ಕಂಗಳ ಜಲ ತುಂಬುವನ್ನಬರ,
ಮನಮೂರ್ತಿ ಧ್ಯಾನ ಜಾಹೆ ಅಹನ್ನಬರ,
ಅಂಗಕ್ಕೆ ತೆರಪಿಲ್ಲದೆ, ಮನಕ್ಕೆಡೆಯಿಲ್ಲದೆ,
ಅರಿವುದಕ್ಕೆ ಹೆರೆಹಿಂಗದೆ, ಪೂಜಾಲೋಲನಾಗಿರಬೇಕು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ./3
ಅಂಗಕ್ಕೆ ಲಿಂಗವ ಕೊಟ್ಟವ ಆಚಾರ್ಯನಾದ.
ಮನಕ್ಕರಿವ ತೋರಿದಾತ ಮೋಕ್ಷ ಆಚಾರ್ಯನಾದ.
ಮೋಕ್ಷ ವಿಮೋಕ್ಷವಾಗಿ ಉಭಯದ ಗೊತ್ತ ತೋರಿ,
ಕಾಯದ ಕರ್ಮವ ಕೆಡಿಸಿ, ಜೀವನ ಭವವ ಛೇದಿಸಿ,
ತದ್ರೂಪ ತೋರಿದ ಜ್ಞಾನಗುರು.
ಆತ ಪ್ರಕಾಶ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ./4
ಅಂಗದ ಮೇಲಣ ಲಿಂಗ,
ಪ್ರಾಣದ ಮೇಲೆ ಬಂದು ನಿಲುವನ್ನಕ್ಕ ಪೂಜಿಸಬೇಕು.
ಪ್ರಾಣದ ಮೇಲಣ ಅರಿವು ಕರಿಗೊಂಬನ್ನಕ್ಕ ನೆನೆಯಬೇಕು.
ನೆನಹು ನಿಃಪತಿಯಾದ ಮತ್ತೆ,
ಈಶಾನ್ಯಮೂರ್ತಿ ಮ ಲ್ಲಿಕಾರ್ಜುನಲಿಂಗವೆಂಬ ನಾಮವಡಗಿತ್ತು./5
ಅಂಗದಲ್ಲಿ ಅರಿದು ನಡೆವ ಆಚರಣೆ,
ನೆನಹಿನಲ್ಲಿ ಕುರುಹುಗೊಂಡು ನಿಂದು,
ಆ ನೆನಹೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ
ಸಲೆ ಸಂದುದು./6
ಅಂಗದಲ್ಲಿ ಸೋಂಕಿದ ಸುಳುಹ ಮನವರಿದು,
ಅಲ್ಲ ಅಹುದೆಂದು ಸಂದೇಹ ಬಿಟ್ಟಲ್ಲಿ ಅರ್ಪಿತವಲ್ಲದೆ,
ಬಂದುದ ಬಂದಂತೆ, ಕಂಡುದ ಕಂಡಂತೆ,
ದೃಕ್ಕಿಂಗೊಳಗಾದುದೆಲ್ಲವು ಲಿಂಗಾರ್ಪಿತವುಂಟೆ ?
ಅರ್ಪಿಸಬಲ್ಲಡೆ ಅಲ್ಲ ಅಹುದೆಂಬುದ ಮುನ್ನವೆ ಅರಿದು,
ಆ ಮನ ಲಿಂಗದೊಳಗಡಗಿ,
ಅಂಬಿನ ಕಣೆಯಂತೆ ಮನ ಲಿಂಗದ ಅನು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನದ ಘನ/7
ಅಂಗದೇಹಿ ಲಿಂಗೋದಕವ ಕೊಳಲಾಗದು.
ಪ್ರಕೃತಿಜೀವಿ ಪಾದೋದಕವ ಕೊಳ್ಳಲಾಗದು.
ಭವಜೀವ ಪ್ರಸಾದೋದಕವ ಕೊಳಲಾಗದು.
ಇಂತೀ ತ್ರಿವಿಧಭೇದಂಗಳಲ್ಲಿ ತ್ರಿವಿಧಶುದ್ಧವಾಗಿ ಕೊಳಬಲ್ಲಡೆ,
ತ್ರಿವಿಧೋದಕ ಸಮರ್ಪಣ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಅರ್ಪಿತ./8
ಅಂಗವನಳಿವನ್ನಕ್ಕ ಶಿವಲಿಂಗಪೂಜೆಯ ಮಾಡಬೇಕು.
ಆತ್ಮನ ಕ್ಷುಧೆಯುಳ್ಳನ್ನಕ್ಕ ಬಂದ ಪದಾರ್ಥವ ಲಿಂಗಾರ್ಪಿತ ಮಾಡಬೇಕು.
ಇದು ಅರಿವಿನ ಭಿತ್ತಿ , ಜ್ಞಾನದ ಗೊತ್ತು, ಸರ್ವಮಯದ ಯುಕ್ತಿ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವ ಶಕ್ತಿ./9
ಅಂದಳ ಸತ್ತಿಗೆ ಕರಿ ತುರಗಂಗಳಿಂದ ಮನಗುಂದದೆ,
ಗುರುಚರವೆಂದು ಪ್ರಮಾಣಿಸಿ,
ಪರಿಯನರಿದೆನೆಂದು ಓಸರಿಸಿದಲ್ಲಿಯೆ, ಸರಿಯಿತ್ತು ಸತ್ಯ.
ಮತ್ತೇನ ಮಾಡಿಯೂ ಪರಿಹರಿಸುವುದಿಲ್ಲ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಅವರಿಗೆ ಒಲವರವಿಲ್ಲ./10
ಅಕಾರತತ್ವ ಆಕಾಶದೊಡಲಾಯಿತ್ತು.
ಇಕಾರತತ್ವ ನಿರಾಕಾರದೊಡಲಾಯಿತ್ತು.
ಉಕಾರತತ್ವ ನಾದದೊಳಗಾಗಿ ಒಡಗೂಡಿತ್ತು.
ತ್ರಿವಿಧರೂಪು ಲೇಪ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ/11
ಅಪ್ಪು ಮೂಲಾಧಾರವಾಗಿ ಬೀಜದ ಮೇಲೆ ಬೀಳೆ,
ಪೃಥ್ವಿ ಗರ್ಭ ಬೆಸನಾಯಿತ್ತು.
ತ್ರಿವಿಧದ ಆದಿಯಿಂದ ಗುರುವಾಯಿತ್ತು,
ತ್ರಿವಿಧದ ಭೇದದಿಂದ ಲಿಂಗವಾಯಿತ್ತು,
ತ್ರಿವಿಧವನಳಿದು ಜಂಗಮವಾಯಿತ್ತು.
ಜಂಗಮವಳಿದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು
ಸ್ವಯಂಭುವಾಯಿತ್ತು./12
ಅಪ್ಪು ಲವಣವೆಲ್ಲವು ಸರಿ, ಪರಿಪಾಪಕವೆಲ್ಲವು ಸರಿ.
ಇವೆಲ್ಲಾಯೆಂದು ಬಿಟ್ಟ ಮತ್ತೆ,
ಲೌಕಿಕಕ್ಕೆ ದೂರಸ್ತನಾಗಿ, ಪರಮಾರ್ಥಕ್ಕೆ ಸಂಪದನಾಗಿ,
ತನಗೆ ಕರ್ತುವಾದ ಗುರುಚರದಲ್ಲಿ ಭೃತ್ಯನಾಗಿರಬೇಕು.
ಗೆಲ್ಲಸೋಲಕ್ಕೆ ಹೊತ್ತುಹೋರದೆ,
ಶರಣರ ಸಮೂಹದಲ್ಲಿ ಅಲ್ಲ ಅಹುದೆನದಿಪ್ಪುದೆ ?
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ನೇಮ ಸಂದಿತ್ತು./13
ಅರಿವನರಿತೆನೆಂಬಲ್ಲಿ ಮರೆದುದೇನು ಅರಿವೋ ಮರವೆಯೋ ?
ಉಭಯದಲ್ಲಿ ಶರೀರ ನಿಂದು ಇಪ್ಪುದು,
ಬಿಂದುವೋ ? ನಾದವೋ ? ಕಳೆಯೋ ? ಎಂಬುದನರಿದಲ್ಲಿ
ಅರಿವಿನ ಸಂದೇಹ ನಿಂದಿತ್ತು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ. /14
ಅರ್ಚನೆ ಪೂಜೆಯ ಕುರಿತು ಮಾಡಿದಲ್ಲಿ,
ಚತುವರ್ಿಧಫಲಪದಂಗಳೆಂಬವು ತನ್ನ ಹಿತ್ತಿಲ ಬೆಳೆ.
ಇಷ್ಟಾರ್ಥ ಮೋಕ್ಷ್ಯಾರ್ಥ ಕಾಮ್ಯಾರ್ಥವೆಂಬಿವು, ತನ್ನ ಬಾಗಿಲ ನೆಟ್ಟ ಸ್ಥಾಣು.
ಇವು ಹೊರಗಾಗಿ ಮೀರಿ ಕಂಡ ತೆರ,
ಉರಿ ಕೊಂಡ ಕಪರ್ುರದಂತೆ, ಇಂತೀ ಉಭಯ ನಿಶ್ಚಯ ಪೂಜೆ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಎರವಿಲ್ಲದ ಭಾವ./15
ಅರ್ತಿ ಅಭ್ಯಾಸ ಮಚ್ಚು ಕಾರಣದಿಂದ ಮಾಡುವ ಭಕ್ತಿ ,
ದ್ರವ್ಯದ ಕೇಡಾಯಿತ್ತು.
ಮನ ನೆಮ್ಮಿದ ಅರ್ತಿ, ಘನವ ನೆಮ್ಮಿದ ಅಭ್ಯಾಸ,
ಎಡೆಬಿಡುವಿಲ್ಲದ ಮಚ್ಚು, ಘನಲಿಂಗವ ಕೂಡುವುದೊಂದಚ್ಚು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವ ಕೂಡುವ ಸುಚಿತ್ತದ ಗೊತ್ತು./16
ಅರ್ತಿಯಿಂದ ಮಾಡುವ ಭಕ್ತಿ , ಕತರ್ಾರನ ಕಮ್ಮಟಕ್ಕೊಳಗಾಯಿತ್ತು.
ಸತ್ಯದಿಂದ ಮಾಡುವ ಭಕ್ತಿ, ಕತರ್ಾರನ ಕಮ್ಮಟಕ್ಕೆ ಹೊರಗಾಯಿತ್ತು.
ಅರ್ತಿ ಲೌಕಿಕಕ್ಕೆ, ಸತ್ಯ ಪರಮಾರ್ಥಕ್ಕೆ.
ಉಭಯದ ಗೊತ್ತನರಿದು ಮಾಡುವನ ಭಕ್ತಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕರ್ಪಿತವಾಯಿತ್ತು. /17
ಅರ್ಥಪ್ರಾಣವ ಕೊಟ್ಟಲ್ಲಿ,
ಅಪಮಾನಕ್ಕೆ ಮುಚ್ಚಳನಿಕ್ಕುವ ಲೆಂಕನುಂಟೆ ಅಯ್ಯಾ ?
ತಲೆಯ ಮಾರಿದವಂಗೆ ಕಣ್ಣು ಹೊರಗಾದುದುಂಟೆ ?
ಭಕ್ತನಾದಲ್ಲಿ ಸತ್ಯ ಬೇಕಾದಡೆ,
ಅರ್ಥ ಪ್ರಾಣ ಅಪಮಾನಕ್ಕೆ ಹೊರಗಾಗಬೇಕು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ./18
ಅರ್ಪಿತ ಅವಧಾನವನರಿವ ಸತ್ಯನ ನಿತ್ಯನ ಇರವು,
ಮಯೂರನ ಜಾಹೆಯಂತೆ, ಪಟುಭಟನ ಎಚ್ಚರಿಕೆಯಂತೆ,
ಗತಿವಾದ್ಯದಲ್ಲಿ ಮುಟ್ಟಿ ತೋರುವ ಅಂಗುಲ ಆತ್ಮದಂತೆ,
ಶಿವಲಿಂಗದಲ್ಲಿ ಹಿಂಗದ ಭಾವ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ,
ಸಲೆಸಂದ ಭಾವ ಹೀಗಿರಬೇಕು./19
ಆದಿವಸ್ತು, ಅನಾದಿವಸ್ತುವೆಂದು ಭೇದವ ಮಾಡಿದಲ್ಲಿ,
ತನ್ನಿರವಿನ ಭೇದವೊ ? ವಸ್ತುವಿನ ಸ್ವಯರೂಪದಂಗವೊ ?
ಇಕ್ಷುದಂಡಕ್ಕೆ ಕಡೆ ನಡು ಮೊದಲಲ್ಲದೆ ಸಕ್ಕರೆಗುಂಟೆ?
ಆದಿ ಅನಾದಿ ವಸ್ತು ವೆಂಬುದು ತನ್ನಯ ಚಿತ್ತದ ಗೊತ್ತಲ್ಲದೆ ಅದು ನಿಶ್ಚಯ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಏಕಮೂರ್ತಿ ಸ್ವಯಂಭು./20
ಆದಿಶಕ್ತಿ ರೂಪಾಗಿ, ಅನಾದಿಶಕ್ತಿ ಪ್ರಾಣವಾಗಿ,
ಚಿದಾದಿತ್ಯದ ಬೆಳಗು ಅರಿವಾಗಿ,
ಎನ್ನ ಹೃತ್ಕಮಲಮಧ್ಯದಲ್ಲಿ ತೊಳಗಿ ಬೆಳಗುತ್ತಿರಯ್ಯಾ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ./21
ಆರುಸ್ಥಲವಿಟ್ಟು ಬೇರೆ ಕರೆದ ಭಾವವಾವುದಯ್ಯಾ ?
ಸಕಲಗುಣಂಗಳನರತು,
ಸರ್ವಜೀವಕ್ಕೆ ದಯಾಪರನಾಗಿಪ್ಪುದು, ಭಕ್ತಿಸ್ಥಲ.
ಸಕಲದೇಹಭಾವಂಗಳಲ್ಲಿ ಕಲೆದೋರದಿಪ್ಪುದು, ಗುರುಸ್ಥಲ.
ಉತ್ಪತ್ಯ ಸ್ಥಿತಿ ಲಯಕ್ಕೆ ಹೊರಗಾದುದು, ಲಿಂಗಸ್ಥಲ.
ಆ ಮೂರ ಹೆರೆಹಿಂಗಿ ನಿಂದುದು, ಜಂಗಮಸ್ಥಲ.
ಆ ಚತುವರ್ಿಧವನೊಳಕೊಂಡದುದು, ಶರಣಸ್ಥಲ.
ಆ ಅಯಿದನವಗವಿಸಿ ನಿಂದುದು, ಐಕ್ಯಸ್ಥಲ.
ಇಂತೀ ಷಡುಸ್ಥಲದ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ
ಶರಣ ಐಕ್ಯನೆಂದು ನಿಂದುದು, ಒಂದೆ ಸ್ಥಲ.
ಮರೆದು ಅರಿದಲ್ಲಿ ಆಯಿತ್ತು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು,
ಷಡಂಗಲೇಪವಾಗಿ ಸ್ವಯಂಭುವಾಯಿತ್ತು./22
ಇಚ್ಛಾಶಕ್ತಿ ಮರ್ಕಟರೂಪಾದಲ್ಲಿ, ಕ್ರಿಯಾಶಕ್ತಿ ವಿಹಂಗರೂಪಾದಲ್ಲಿ,
ಜ್ಞಾನಶಕ್ತಿ ಪಿಪೀಲಿಕಾರೂಪಾದಲ್ಲಿ , ತ್ರಿವಿಧಮಾರ್ಗರೂಪಾಯಿತ್ತು.
ಕಾಬುದು, ಕಾಣಿಸಿಕೊಂಬುದು ಕಂಡೆನೆಂದು ನಿಶ್ಚಯವಾದಲ್ಲಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು,
ಮಹದಾಕಾಶದಲ್ಲಿ ವಾಸಿತನಾಗಿದ./23
ಈಶ್ವರರೂಪ ತಾಳಿ ಜಗ ಜೀವಾಳರುಗಳ ಬಾಗಿಲಲ್ಲಿ
ಬೆಳುಗರೆವನ್ನಬರ ಹೋಯಿತ್ತು, ವೇಷವಾಟದಲ್ಲಿ .
ಈ ಆಸೆಯ ಬಿಟ್ಟು, ಈಶನ ರೂಪ ತಾಳಿದ ವಸ್ತು,
ಆತ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ./24
ಉಂಡಿಗೆಯನೆತ್ತಿದವನ ಮನದಂಗದಂತೆ, ಮತ್ತುಂಟೆ ಹಸಿಗೆಯ ತೋಟಿ ?
ಹಿಡಿದ ವ್ರತಕ್ಕೆ, ಅರಿದ ಮನಕ್ಕೆ, ಮರೆದ ಮತ್ತೆ ಒಲಿವುದೆ ಲಿಂಗ ?
ಅದು ಸಲೆ ನೆಲೆಯಲ್ಲ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಒಲವರವಲ್ಲ./25
ಉತ್ತರಕ್ಷೆಯನರಿತು, ಪೂರ್ವಕಕ್ಷೆಯನರಿತು,
ಘಟಪಟಕಕ್ಷೆಯಲ್ಲಿ ತಿಳಿದು, ದಿಟಪುಟವಾಗಿ
ಚತುವರ್ಿಧ ಮಠವ ಬಲ್ಲಡೆ, ನಿರ್ಧರ ಅರ್ಪಿತ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ
ಸರ್ವ ಅವಧಾನದಲ್ಲಿ ಅರ್ಪಿತ./26
ಉಭಯವನರಿವ ಚಿತ್ತಕ್ಕೆ ಅರಿವೆ ಇಷ್ಟಲಿಂಗಕ್ಕೆ ಗೊತ್ತು.
ಉಭಯದಂಗ ಏಕೀಕರವಾದಲ್ಲಿ ಜಲ ಬಲಿದು ಶುಕ್ತಿಯಾದಂತೆ,
ಕರಂಡಗರ್ಭದಲ್ಲಿ ಬಲಿದು ಕರಂಡವನೊ[ಡೆ]ದರಿದಂತೆ,
ಅಂಗದಲ್ಲಿದ್ದರಿದು, ಘನಲಿಂಗವನರಿಯಬೇಕು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬ ಕುರುಹಾಯಿತ್ತು. /27
ಏಕಮಯ ವಸ್ತು ತನ್ಮಯ ರೂಪಾದಲ್ಲಿ ,
ಪಂಚಭೂತಿಕಂಗಳು ನಾಮರೂಪಾಯಿತ್ತು.
ಆ ಪರಬ್ರಹ್ಮ ಪರವಸ್ತುವಾದಲ್ಲಿ, ಪರವಶವಾಯಿತ್ತು ಪಂಚಬ್ರಹ್ಮ.
ಆ ಬ್ರಹ್ಮ ಬ್ರಹ್ಮನ ಕುಕ್ಷಿಗೆ ಹೊರಗಾದಲ್ಲಿ, ವಸ್ತು ನಿರ್ಧರವಾಯಿತ್ತು ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ./28
ಐವತ್ತೊಂದು ಶಾಖೆಯಲ್ಲಿ, ಮೂವತ್ತೊಂದು ಬಿಂದುವಿನಲ್ಲಿ,
ಇಪ್ಪತ್ತೈದು ತತ್ವದಲ್ಲಿ, ಹೊತ್ತುಹೋರಿಯಾಡುತ್ತಿಪ್ಪುದು ಜಗ.
ಸ್ಥೂಲದಲ್ಲಿ ಸಂಬಂಧವಾಗಿ, ಸೂಕ್ಷ್ಮದಲ್ಲಿ ಲೇಪವಾಗಿ, ಕಾರಣದಲ್ಲಿ ಸ್ವಯವಾಗಿ,
ತ್ರಿವಿಧದ ಉಳುಮೆಯ ಜಾರಿ ನಿಂದುದು ಸ್ವಯಂಜ್ಯೋತಿ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ/29
ಕಂಗಳ ಮುಂದೆ ಬಂದು ನಿಂದು, ಕಂಡುದೆಲ್ಲವು ಲಿಂಗಾರ್ಪಿತವೆ ?
ಫಲಾದಿಗಳಲ್ಲಿ ಪಾಕವಾದ ಕಡ್ಡಿ ತೊಟ್ಟು ಬಿತ್ತು ಮೊದಲಾದ
ತುಷ ಪಾಷಾಣ ಬೋನದೊಳಗಾದ ಸಮೂಹವೆಲ್ಲವು,
ಲಿಂಗನೈವೇದ್ಯ ಸಮರ್ಪಣವೆ ?
ಸಾರೂಪ ದ್ರವ್ಯಂಗಳಲ್ಲಿ ಅರೋಚಕವ ಕಳೆದು,
ಮನದಲ್ಲಿ ನೇಮಿಸಿ, ಇಷ್ಟಲಿಂಗಕ್ಕೆ ಇದಿರಿಟ್ಟು,
ಪದಾರ್ಥವ ಕೊಡುವಲ್ಲಿ, ಪ್ರಾಣಲಿಂಗಕ್ಕೆ ನಾನಾ ರಸಂಗಳ ಸಾಗಿಸುವಲ್ಲಿ,
ಅರ್ಪಿತ ಅನರ್ಪಿತವೆಂಬ ಉಭಯದ ಗೊತ್ತ ಮುಟ್ಟಿ ಅರ್ಪಿಸಬಲ್ಲಡೆ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಅರ್ಪಿತವಾಯಿತ್ತು./30
ಕಂಡು ತವಕ ಸಂಗದಿಂದಳಿವಂತೆ,
ನಿನ್ನ ನೋಡುವ ನೋಟ,
ಎನ್ನಯ ಮನದ ಕೂಟದಿಂದ ಹರಿಯಿತ್ತು.
ಮತ್ತೆ ನಿಮ್ಮಾಸೆ ಮುಟ್ಟುವ ಭೇದ ಬಿಡದು.
ನೀವು ರೂಪಾಗಿ, ನಾ ಸಾಕಾರವಾಗಿ ಉಭಯವುಳ್ಳನ್ನಕ್ಕ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ವಾಸ ರೂಪಾದೆ./31
ಕಂಡೆಹೆನೆಂಬನ್ನಕ್ಕ ಆತುರ ಕಂಡು ಮನ ನಿಂದಲ್ಲಿ,
ಹಿಂದಣ ಇರುವ, ಮುಂದಣ ಬಯಲ, ಉಭಯದ ಸಂದನಳಿಯಬೇಕು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ./32
ಕಲ್ಲ ತಾಗಿದ ಕಠಿಣಸರದಂತೆ, ವಲ್ಲಭನೊಲ್ಲದ ಸತಿಯಂತೆ,
ಬಲ್ಲವರು ಹೇಳಿದ ಮಾತ, ಕಲ್ಲೆದೆಯವ ಕಾಣದಂತೆ,
ಮಾತು ಮನಸ್ಸು ಸಿಕ್ಕಿ,
ಭವವ್ಯಾಕುಲದಲ್ಲಿ ಅದೇತರ ಪೂಜೆ ?
ಅದೇತರ ಅರ್ಪಿತ ? ಅದೇತರ ಯಾಚಕತ್ವ ?
ಅವ ನೇತಿಗಳೆದಲ್ಲಿ ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದುದು./33
ಕಾಮದಿಂದ ಕಾಬುದೆಲ್ಲವು ಗುರುವಿಂಗೊಳಗಾಗಿ.
ಮೋಹದಿಂದ ಕಾಬುದೆಲ್ಲವು ಲಿಂಗಕ್ಕೊಳಗಾಗಿ.
ಲೋಭದಿಂದ ಕಾಬುದೆಲ್ಲವು ಜಂಗಮಕ್ಕೊಳಗಾಗಿ.
ಇಂತೀ ತ್ರಿವಿಧದಲ್ಲಿ ಮುಟ್ಟಿಪ್ಪನ ಸತ್ಯ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದ
ಉಭಯವಳಿದ ಕುರುಹಿನ ಗೊತ್ತು. /34
ಕಾಮವೆಂಬುದು ಕಂಗಳ ಮುಂದೆ ಸುಳಿದಾಡುತ್ತಿದೆ.
ಕ್ರೋಧವೆಂಬುದೆ ಮನದ ಮುಂದೆ ಇಕ್ಕಿ ಹರಿದಾಡುತ್ತಿದೆ.
ಲೋಭವೆಂಬುದೆ ಸರ್ವವೆಲ್ಲರಲ್ಲಿ ಬೆರಸಿ ಕುಕ್ಕುಳಗುದಿವುತ್ತಿದೆ.
ಆಮಿಷ ತಾಮಸ ರಾಗದಿಂದ ಬರಿಹೊರೆ ಹೋಗುತ್ತಿದೆ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿಯದೆ./35
ಕಾಯ ಜೀವವನರಿದಲ್ಲಿ , ಇಷ್ಟ ಪೂಜೆಯ ಮರೆದಿರಬೇಕು.
ದಿವದಲ್ಲಿ ನಡೆಯದೆ, ರಾತ್ರಿಯಲ್ಲಿ ಒರಗದೆ,
ಉಭಯವನಳಿದಿದ್ದಲ್ಲಿ, ಅರ್ಪಿತವಿಲ್ಲದಿರಬೇಕು.
ಸ್ತುತಿ ನಿಂದೆಗೆ ಹೊರಗಾದಲ್ಲಿ, ಋತು ಕಾಲವ ಮರೆದಿರಬೇಕು.
ಮಾತಿನಲ್ಲಿ ಶೂನ್ಯ, ಆತ್ಮನಲ್ಲಿ ಆಸೆಯ ಪಾಶ.
ಇಂತೀ ವೇಷದ ಚೋರರನೊಪ್ಪ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು. /36
ಕಾಯ ಲಿಂಗದರುಶನವನರಿದಲ್ಲಿ, ಮನವನರಿದು ತನುವೊಪ್ಪುವಂತೆ,
ತನು ಸೋಂಕಿದ ಸುಖವ, ಆತ್ಮನರಿದು ಅರ್ಪಿಸುವಂತೆ,
ಜಾಹೆಯಲ್ಲಿ ಮರೆದೊರಗಿರಲಾಗಿ,
ತನುವ ತಟ್ಟಿದಡೆ, ಆತ್ಮನೆಚ್ಚರುವಂತೆ ಇಪ್ಪುದು,
ಇಷ್ಟಪ್ರಾಣಸಂಬಂಧಯೋಗ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದಲ್ಲಿ. /37
ಕಾಯಕವೆಂದು ಕಾಯವ ಬಳಲಿಸದೆ, ತನು ಕರಗದೆ, ಮನ ನೋಯದೆ,
ಕಾಡಿ ಬೇಡಿ ಮಾಡುವುದು ದಾಸೋಹವೆ ?
ಆವ ಕಾಯಕವು ಪ್ರಾಣವೆ ಕಡೆಯಾಗಿ, ದ್ರವ್ಯ ಮೊದಲಾಗಿ,
ಚಿತ್ತ ಶುದ್ಧದಲ್ಲಿ ಗುರುಚರಕ್ಕೆ ಮುಯ್ಯಾಂತು ಬಂದುದಕ್ಕೆ ಸರಿಗಂಡು,
ಲಿಂಗದೇಹಿಗಳಿಗೆಲ್ಲಾ ಒಂದೇ ಪ್ರಮಾಣದಲ್ಲಿ ಸಂದುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ತೃಪ್ತಿ./38
ಕಾಯದಲ್ಲಿ ಪರಿಪೂರ್ಣನಾಗಿ ಜೀವನಿಪ್ಪ ಭೇದವ,
ಜೀವದಲ್ಲಿ ಜ್ಞಾನಪರಿಪೂರ್ಣವಾಗಿಪ್ಪ ಭೇದವ,
ಜ್ಞಾನದಲ್ಲಿ ಬೆಳಗು ಬಿಂಬಿಸುತಿಪ್ಪ ಭೇದವ [ಅರಿಯಬೇಕು.]
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು,
ಜ್ಯೋತಿರ್ಮಯವಾಗಿಪ್ಪುದು. /39
ಕಾಯಭ್ರಮೆಯಿಂದ ಮಾಡುವುದು ದೇವಪೂಜೆಯಲ್ಲ.
ಜೀವಭ್ರಮೆಯಿಂದ ಅರ್ಪಿಸುವುದು ಲಿಂಗಾರ್ಪಿತವಲ್ಲ.
ಕಾಯದ ಸೂತಕವನಳಿದು ಪೂಜಿಸಿ, ಜೀವನ ಪ್ರಕೃತಿಯ ಮರೆದರ್ಪಿಸಿ,
ಉಭಯವನರಿಯಬಲ್ಲಡೆ, ಕಾಯವೆ ಒಡೆಯ, ಪ್ರಾಣವೆ ಲೆಂಕ.
ಇಂತೀ ಉಭಯ ಲೇಪವಾದಲ್ಲಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ. /40
ಕಾಯವ ಮರೆದು ಜೀವವನರಿಯಬೇಕು.
ಜೀವವ ಮರೆದು ಜ್ಞಾನವನರಿಯಬೇಕು.
ಜ್ಞಾನವ ಮರೆದು ಬೆಳಗನರಿಯಬೇಕು.
ಬೆಳಗಿನ ಮರೆಯ
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿಯಬೇಕು./41
ಕಾಯವಿದಲ್ಲದೆ ಜೀವಕ್ಕೆ ಬೆಲೆಯಿಲ್ಲ, ಜೀವವಿದ್ದಲ್ಲದೆ ಜ್ಞಾನಕ್ಕೆ ಕುರುಹಿಲ್ಲ.
ಜ್ಞಾನವಿದ್ದಲ್ಲದೆ ಬೆಳಗಿಗೆ ಒಡಲಿಲ್ಲ.
ಒಂದಕ್ಕೊಂದ ಹಿಂಗಿ ಕಾಬ ಠಾವ ಹೇಳಾ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ./42
ಕಾಯವಿದ್ದು ಕಾಬುದು ಗುರುಸ್ಥಲ, ಜೀವವಿದು ಕಾಬುದು ಲಿಂಗಸ್ಥಲ,
ಭಾವವಿದ್ದು ಕಾಬುದು ಜಂಗಮಸ್ಥಲ,
ತ್ರಿವಿಧವ ಒಡಗೂಡಿ ಕಾಬುದು ಭಕ್ತಿಸ್ಥಲ.
ಭಕ್ತಿ ನಿಶ್ಚಯವಾಗಿ ನಿಂದಲ್ಲಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ ನಿಶ್ಚಯವಾದ ಸ್ಥಲ. /43
ಕಾಯವೆ ದೇಗುಲವಾಗಿ, ಕುರುಹಿಟ್ಟು ಕೊಟ್ಟ ಕುರುಹೆ ದೇವರಾಗಿ,
ನೋಡುವ ಕಣ್ಣೆ ಪೂಜಿಸುವ ಹೂವಾಗಿ,
ಆನಂದಾಶ್ರುಗಳೆ
ಸಕಲಭೋಗ ಅಷ್ಟವಿಧಾರ್ಚನೆ ಷೋಡಶೋಪಚರಿಯವಾಗಿ,
ಅರತುದೆ ಅಡ್ಡವಣಿಗೆ ಪರಿಯಾಣವಾಗಿ, ಪರಿಣಾಮವೆ ನೈವೇದ್ಯವಾಗಿ,
ಅಖಂಡಭಕ್ತಿರತಿಯೆ ತಾಂಬೂಲವಾಗಿ ಪೂಜಿಸುತಿದರ್ೆನಯ್ಯಾ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ
ಎನ್ನ ಪ್ರಾಣಪೂಜೆಯ ನಿಮಗೆ./44
ಕಾರುಕ ಮುಟ್ಟಿ ಗುರುವಿನ ಕೈಗೆ ಬಂದುದಲ್ಲ.
ಮನಮುಟ್ಟಿ ನೆನಹಿಂಗೆ ಈಡಾದುದಲ್ಲ.
ಅರಿದರುಹಿಸಿಕೊಂಬುದಲ್ಲ, ಮರೆದು ನೆನಹಿಸಿಕೊಂಬುದಲ್ಲ.
ಪರುಷರಸದಂತೆ ಮಾಟಕ್ಕೊಳಗಲ್ಲ.
ಅದು ಮುಟ್ಟಿ ಲೋಹ ಶುದ್ಧವಲ್ಲದೆ ಪುನರಪಿ ಶುದ್ಧವಾದುದಿಲ್ಲ.
ಇಂತೀ ಭೇದಂಗಳಲ್ಲಿ ನಿಂದು ನಿಶ್ಚಯವಾದುದು ಜೀವನ್ಮುಕ್ತಿಲಿಂಗ.
ಅದು, ಈಶಾನ್ಯ ಮೂರ್ತಿ ಮಲ್ಲಿಕಾರ್ಜುನಲಿಂಗ ಸ್ವಯಂಭುವಾಗಿಹುದು/45
ಕಾರುಕನ ಕೈ ಮುಟ್ಟುವುದಕ್ಕೆ ಮುನ್ನವೆ,
ಗುರುವಿನ ಕರ ಮುಟ್ಟುವುದಕ್ಕೆ ಮುನ್ನವೆ,
ಮನಸಿಜನ ಮನ ಮುಟ್ಟುವುದಕ್ಕೆ ಮುನ್ನವೆ,
ನಾಮ ರೂಪು ಬಹುದಕ್ಕೆ ಮುನ್ನವೆ, ಅದಾವ ರೂಪು ಎಂದರಿತಡೆ,
ಆ ವಸ್ತು ಪ್ರಮಾಣಕ್ಕೆ ರೂಪಹ ಪರಿಯಿನ್ನೆಂತುಂಟು ?
ಅದು ಭಾವಕ್ಕೆ ಅಗೋಚರ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು./46
ಕಾಲಿನಲ್ಲಿ ನಡೆವುದು, ಕೈಯಲ್ಲಿ ಮುಟ್ಟುವುದು,
ಕಣ್ಣಿನಲ್ಲಿ ನೋಡುವುದು, ಕಿವಿಯಲ್ಲಿ ಕೇಳುವುದು,
ಮೂಗಿನಲ್ಲಿ ವಾಸಿಸುವುದು. ಬಾಯಲ್ಲಿ ಉಂಬ ಭೇದದಿಂದ
ಅಯಿದರಾಟಿ, ಆರರ ಕೂಟ, ಏಳರ ಬೇಟ,
ಎಂಟರ ಮದ, ಹದಿನಾರರ ಕಳೆ. ಇಂತಿವೆಲ್ಲವು ಮೂರ ಮರೆದಲ್ಲಿ ನಿಂದವು.
ಮೂರನರಿದಲ್ಲಿ ಸಂದವು. ಇಂತಿವು ಉಳ್ಳನ್ನಕ್ಕ ಪೂಜಿಸಬೇಕು.
ನಾ ನೀನೆಂಬನ್ನಕ್ಕ ಅರ್ಪಿಸಬೇಕು. ಅದಳಿಯೆ ಮತ್ತೇನೂ ಎನಲಿಲ್ಲ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬದಕ್ಕೆ ಎಡೆಯಿಲ್ಲ. /47
ಕಿರಾತಂಗೆ ಪಿಸಿತದ ಅರೋಚಕವುಂಟೆ?
ಪುಳಿಂದಂಗೆ ಶಿಶು ಬಲುಜೀವವೆಂದು ಒಲವರವುಂಟೆ?
ಬೇಡುವ ಯಾಚಕಂಗೆ,
ಕಾಡುವ ಗುರುಚರವೆಂದು ಹೊಟ್ಟೆಯ ಹೊರೆವಾತಂಗೆ,
ಭಕ್ತ ವಿರಕ್ತರ ಆಗುಚೇಗೆಯ ಬಲ್ಲನೆ?
ಇಂತೀ ಕಷ್ಟರ, ದುಷ್ಟರನೊಲ್ಲ
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು./48
ಕ್ರೀಯ ಮರೆದಲ್ಲಿ, ಅರಿವು ಹೀನವಾಗಿಪ್ಪುದು.
ಅರಿವ ಮರೆದಲ್ಲಿ, ಜ್ಞಾನ ಹೀನವಾಗಿಪ್ಪುದು.
ಜ್ಞಾನವ ಮರೆದಲ್ಲಿ, ಬೆಳಗಿನ ಕಳೆ ಹೋಯಿತ್ತು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು
ಅವರಿಗೆ ಮರೆಯಾಗಿ ತೊಲಗಿದ. /49
ಗಂಗೆವಾಳುಕ ರುದ್ರರೆಲ್ಲರು ಅಂಗವರತು ಲಿಂಗವನರಿದಲ್ಲದೆ,
ಅಂಗಗುಣವರಿಯದೆ, ಲಿಂಗತ್ರಯವೆಂಬುದ ಸಂಘಟಿಸಲರಿಯದೆ,
ನಿಂದು ಕಾಬ ನೆಲೆಯಿನ್ನೆಂತು ? ಮಾತ ಕಂಡಾಡಿದಲ್ಲಿ ವಾಗದ್ವೈತಿ.
ಬಳಗನರಿದು ಪೂಜಿಸುವಲ್ಲಿ ಡಂಬಕಧಾರಿ.
ಏನ ಮುಟ್ಟಿದಲ್ಲಿ ಕೇಡಿಲ್ಲಾ ಎಂದು
ಮನ ಬ್ರಹ್ಮವನಾಡಿ, ಮನುಜರಂತೆ ಹರಿದಾಡುತ್ತ,
ಗಂಪವ ಕೂಡಿಕೊಂಡು, ಶಂಕೆಯಿಲ್ಲಾಯೆಂದು
ನಿಶ್ಶಂಕೆಯ ನುಡಿಯಬಹುದೆ ಅಯ್ಯಾ ?
ನಡೆ ನುಡಿ ಸಿದ್ಧಾಂತವಾದಲ್ಲಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು
ಅವರಲ್ಲಿ ಪ್ರಸಿದ್ಧವಾಗಿಪ್ಪನು./50
ಗುರು ಮೂರು ಕೂಡಿ ಗುರುವಾದಲ್ಲಿ,
ಬಿಂದು ಅಯಿದು ಕೂಡಿ ಲಿಂಗವಾದಲ್ಲಿ,
ವಿಂಶತಿ ಆರು ಕೂಡಿ ವಿಸರ್ಜನವಾದಲ್ಲಿ, ಜಂಗಮವಾಯಿತ್ತು.
ಆ ಜಂಗಮ, ಜಾಯತೇ ಭಾವವಳಿದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾಯಿತ್ತು./51
ಗುರು ವೈಭವಕ್ಕೆ ಸಿಕ್ಕಿದಾಗಲೆ ಶಿಷ್ಯಂಗೆ ನರಕ ಪ್ರಾಪ್ತಿ .
ಲಿಂಗ ಭಜನೆಗೆ ಸಿಕ್ಕಿದಾಗಲೆ ಮರಣಕ್ಕೊಳಗು.
ಜಂಗಮ ಜಂಗುಳಿಯಾಗಿ,
ಕಂಡಕಂಡವರಂಗಳಕ್ಕೆ ಜಂಘೆಯನಿಕ್ಕಲಾಗಿ, ನಿರಂಗಕ್ಕೆ ಹೊರಗು.
ಇಂತೀ ಇವರು ನಿಂದುದಕ್ಕೆ ಬಂಧವಿಲ್ಲದಿರಬೇಕು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ./52
ಗುರುಪ್ರಸಾದವ ಲಿಂಗಕ್ಕೆ ಕೊಡಲಿಲ್ಲ,
ಜಂಗಮಪ್ರಸಾದವ ಲಿಂಗಕ್ಕೆ ಕೊಡಲಿಲ್ಲ.
ಅದೆಂತೆಂಡಡೆ : ಆ ಗುರುವಿಗೂ ಲಿಂಗಪ್ರಾಣ, ಆ ಜಂಗಮಕ್ಕೂ ಲಿಂಗಪ್ರಾಣ.
ಆ ಲಿಂಗಬಾಹ್ಯವಾಗಿ ಗುರುವಾಗಬಲ್ಲಡೆ,
ಆ ಲಿಂಗಬಾಹ್ಯವಾಗಿ ಜಂಗಮವಾಗಬಲ್ಲಡೆ,
ಉಭಯಪ್ರಸಾದವ ಲಿಂಗಕ್ಕೆ ಕೊಡಬಹುದು.
ಇದನರಿಯದೆ ಉದೇಶಿಸಿ ನುಡಿವ ಭೇದಹೀನರಿಗೆ ತ್ರಿವಿಧವಿಲ್ಲಾ ಎಂದೆ.
ಅವರು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ದೂರ./53
ಗುರುಲಿಂಗ ಬ್ರಹ್ಮರೂಪವಾಯಿತ್ತು. ಚರಲಿಂಗ ವಿಷ್ಣುರೂಪಾಯಿತ್ತು.
ಸ್ಥಾವರಲಿಂಗ ರುದ್ರರೂಪಾಯಿತ್ತು.
ಗುರುಚರಲಿಂಗರೂಪು ತ್ರಿವಿಧಮಲ ಕಾರಣವಾಯಿತ್ತು.
ಆ ಮಲಗುಣ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು
ನಾಮಕ್ಕೆ ಹೊರಗಾದ. /54
ಗುರುವಿರೆ ಲಿಂಗಪ್ರಸಾದವ ಕೊಳಲಾಗದು.
ಲಿಂಗವಿರೆ ಜಂಗಮಪ್ರಸಾದವ ಕೊಳಲಾಗದು.
ಜಂಗಮವಿರೆ ಉಭಯಪ್ರಸಾದವ ಕೊಳಲಾಗದು.
ಇಂತೀ ಪ್ರಸಾದದ ವಿವರವನರಿತಲ್ಲಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಪ್ರಸನ್ನ ಪ್ರಸಾದವಾದ./55
ಗುರುವೆಂದಡೂ ಕಾಯವುಳ್ಳನ್ನಕ್ಕ, ದೋಷಕ್ಕೆ ಹೊರಗಾಗಬೇಕು.
ಲಿಂಗವೆಂದಡೂ ಪೀಠಕ್ಕೆ ಸಿಕ್ಕಹನ್ನಕ್ಕ,
ಜಗದ ಆಗುಚೇಗೆಯನರಿಯಬೇಕು.
ಜಂಗಮವೆಂದಡೂ ಸುಖದುಃಖವುಳ್ಳನ್ನಕ್ಕ,
ಕಾಯವಿಡಿದು ಇಹ ಕಾರಣ, ಪಾಪ ತಾಪಕ್ಕೆ ಹೊರಗಾಗಬೇಕು.
ಶೂನ್ಯವಾದಡೂ ಆ ಕುರುಹುಳ್ಳನ್ನಕ್ಕ, ಸುಖದುಃಖಕ್ಕೊಳಗು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾದಡೂ ಮರೆದಲ್ಲಿ ಭವಕ್ಕೆ ಬೀಜ./56
ಗುರುವೆಂಬ ಅಂಗವ ಧರಿಸಿದಡೇನು?
ಚಿತ್ರದ ಸತಿಯ ಕೈಯ ದೀಪಕ್ಕೆ ಮೊತ್ತದ ತಮ ಹರಿದುದುಂಟೆ?
ನಿಃಕಳೆಯ ಲಿಂಗವ ಧರಿಸಿದಲ್ಲಿ ಫಲವೇನು?
ಮೃತ್ತಿಕೆಯ ಬೊಂಬೆಯ ಕೈಯಲ್ಲಿ
ನಿಶ್ಚಯದ ಖಂಡೆಯವಿರೆ, ಕುಟ್ಟಬಲ್ಲುದೆ?
ವಿಧಾಂತ ರೂಪು ಲಾಂಛನದ ತೊಟ್ಟು, ಬಹುರೂಪಿಯಾದಲ್ಲಿ
ನೆರೆ ಈಶನ ಯುಕ್ತಿಯ ವಿರಕ್ತಿ ಜಂಗಮವಾಗಬಲ್ಲನೆ?
ಇಂತೀ ಮಾತಿನ ಬಳಕೆಯ ವೇಷವ ಬಿಟ್ಟು,
ನಿಜತತ್ವದ ಸಾಕಾರವೆ ಮೂರ್ತಿಯಾದ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ. /57
ಗುರುಸೇವೆಯಲ್ಲಿ ತನು ಕರಗಿ, ಲಿಂಗಸೇವೆಯಲ್ಲಿ ಮನ ಕರಗಿ,
ಜಂಗಮಸೇವೆಯಲ್ಲಿ ಧನ ಕರಗಿ, ಮಹಾಘನವನರಿದಲ್ಲಿ ಪ್ರಕೃತಿ ಕರಗಿ,
ನಿಜ ನಿಶ್ಚಯವಾಗಿ ನಿಂದಾತನೆ ಸದ್ಭಕ್ತನು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ./58
ಘಟದಲ್ಲಿದ ಗಂಧ ಅಡಗುವುದಲ್ಲದೆ, ಸಂಚಾರವ ನೆಮ್ಮಿದ ಗಂಧ ಅಡಗುವುದೆ?
ಮನ ಕ್ರೀಯಲ್ಲಿ ನಿಂದು, ಅಂಗ ಆಚಾರವನರಿದು,
ಅಂಗ ಮನಸ್ಸು ಕೂಡಿದಲ್ಲಿ, ಘನಲಿಂಗದ ಸಂಗ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಎರವಿಲ್ಲದ ಕೂಟ./59
ಚಚ್ಚೆಗೊಟ್ಟಿಯಿಂದ ಒಡೆಯತನ ಹುಚ್ಚಾಗಿ ಕೆಟ್ಟಿತ್ತು.
ಪ್ರತ್ಯುತ್ತರದಿಂದ ಭೃತ್ಯತನವಡಗಿತ್ತು.
ಮೂರರ ಗೊತ್ತಿನ ಆಸೆಯಿಂದ ಗುರುಚರಪರವೆಂಬ ಹರವರಿ ನಿಂದಿತ್ತು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಈ ಗುಣ ದೂರವಾಯಿತ್ತು./60
ಜಂಗಮದ ಪಾದತೀರ್ಥವ ಲಿಂಗಕ್ಕೆ ಮಜ್ಜನವ ಮಾಡಲಾಗಿ,
ಲಿಂಗತೀರ್ಥವಾಯಿತ್ತು.
ಜಂಗಮದ ಪ್ರಸಾದವ ಲಿಂಗಕ್ಕರ್ಪಿಸಲಾಗಿ, ಲಿಂಗಪ್ರಸಾದವಾಯಿತ್ತು.
ಶುದ್ಧ ಗುರುವಿನಲ್ಲಿ, ಸಿದ್ಧ ಲಿಂಗದಲ್ಲಿ, ಪ್ರಸಿದ್ಧ ಜಂಗಮದಲಾದ ಮತ್ತೆ ,
ಸಿಕ್ಕಿತ್ತು ಪ್ರಸಿದ್ಧ ಸಂಖ್ಯೆಯಲ್ಲಿ.
ಇದನರಿತು ಅರ್ಪಿಸಬಲ್ಲಡೆ, ಆತನೇ ಪ್ರಸಾದಕಾಯ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ ಅರ್ಪಿತ ಅವಧಾನಿ. /61
ಜಗಕ್ಕೆ ಹೊರಗಾಗಿ ಅರಿವ ಠಾವಿಲ್ಲ, ಜಗಕ್ಕೆ ಒಳಗಾಗಿ ಮರೆವ ಠಾವಿಲ್ಲ ,
ಒಳಹೊರಗೆಂಬುದು ಒಂದೇ ಭೇದವಾದ ಕಾರಣ
ಕುಡಿಕೆಯ ಘೃತ ಅಗಲಿಕೆ ಬಂದಂತೆ, ಅದು ಮುಂದಣ ಬಯಕೆ.
ಇದು ಇಂದಿನ ಇರವು ಎಂಬುದನರಿದಲ್ಲಿ,
ಉಂಟು, ಇಲ್ಲಾ ಎಂಬ ಸಂದೇಹ ಹರಿಯಿತ್ತು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದಲ್ಲಿ. /62
ಜಲ ಕೆಯ್ಯಿ ಭಾಜನ ವಾಸ ಇವು ಮುಂತಾಗಿ
ಭವಿಸಂಗ ಭವಿ ನಿರೀಕ್ಷಣೆ, ಲೌಕಿಕಕ್ಕೆ ಇವ ಬಿಟ್ಟು, ಮನ ಭಾವದಲ್ಲಿ ಶುದ್ಧವಾಗಿ,
ಪೂಜಿಸುವ ಲಿಂಗದಲ್ಲಿ, ಪ್ರಮಾಣಿಸುವ ಜಂಗಮದಲ್ಲಿ,
ಆರಾಧಿಸುವ ಗುರುವಿನಲ್ಲಿ ಪಂಚಾಚಾರ ಶುದ್ಧವಾಗಿ,
ಮನ ವಚನ ಕಾಯ ತ್ರಿಕರಣದಲ್ಲಿ ಶುದ್ಧಾತ್ಮನಾಗಿಪ್ಪುದೆ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸರ್ವವ್ರತ ಸಂದಿತ್ತು./63
ಜಲದಲ್ಲಿ ಹುಟ್ಟಿದ ಚೇತನ, ಜಲವುಳಿದು ಜೀವಿಸಬಲ್ಲುದೆ ?
ಅರಿವನರಿದಲ್ಲಿ, ಕುರುಹಿನ ಮರೆಯಲ್ಲಿ,
ಇದೆಯೆಂದು ತೋರಿದ ಮತ್ತೆ ,
ಕುರುಹುನುಳಿದು, ಅರಿವ ಪರಿಯಿನ್ನೆಂತೊ ?
ಆ ಉಭಯ, ಆತ್ಮದೃಷ್ಟಿಯಂತೆ.
ಶಿವಲೆಂಕನ ಮಾತು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ
ಉಂಟು ಇಲ್ಲಾ ಎಂಬಲ್ಲಿ ಹಾಕಿದ ಮುಂಡಿಗೆ./64
ಜಲದೊಳಗಣ ಮತ್ಸ್ಯ, ವನದೊಳಗಣ ಮರ್ಕಟ, ಆಕಾಶದ ಪಕ್ಷಿ,
ಇವು ಕೂಡಿ ಮಾತನಾಡುವಲ್ಲಿ,
ಶಬರ ಮತ್ಸ್ಯವ ನೋಡಿ, ಜೋಗಿ ವನಚರವ ಕಂಡು,
ಅಂಟಿನ ಡೊಂಬ ಹಕ್ಕಿಯ ಕಂಡು,
ಇಂತೀ ಮೂವರ ಹಡಹ ಕೆಡಿಸಿತ್ತು.
ಕಾರಮಳೆ ಸೋನೆಯೆದ್ದು ಸುರಿಯಿತ್ತು. ಇಂತಿನ್ನಾರ ಕೇಳುವೆ ?
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ ನೀನೆ ಬಲ್ಲೆ./65
ಜ್ಞಾನವುಳ್ಳನ್ನಕ್ಕ ಅರಿವು, ಅರಿವುಳ್ಳನ್ನಕ್ಕ ಆತ್ಮ ,
ಆತ್ಮವುಳ್ಳನ್ನಕ್ಕ ಜೀವ, ಜೀವವುಳ್ಳನ್ನಕ್ಕ ಕಾಯ,
ಕಾಯವುಳ್ಳನ್ನಕ್ಕ ಸಕಲಸುಖಭೋಗಂಗಳು.
ಅದೆಂತೆಂದಡೆ : ಬೀಜಳಿದು ಬೆಳೆದು ಪುನರಪಿ ಬೀಜವಾದಂತೆ.
ಅದರ ಆಗುಚೇಗೆಯನರಿದಲ್ಲಿ, ಇಷ್ಟಪ್ರಾಣಯೋಗ ಕ್ರಿಯಾದ್ವೈತ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದುದು./66
ಜ್ಞಾನಾದ್ವೈತದ ಹೆಚ್ಚುಗೆ, ಭಾವಾದ್ವೈತಕ್ಕೆ ಸಂಬಂಧವಾಗಿಹುದು.
ಭಾವಾದ್ವೆ ತದ ಹೆಚ್ಚುಗೆ, ಕ್ರಿಯಾದ್ವೈತವ ಸಂಬಂಧಿಸಿಕೊಂಡಿಹುದು.
ಕ್ರಿಯಾದ್ವೈತದ ಹೆಚ್ಚುಗೆ,
ಸರ್ವಮಯವಾಗಿ ಘನಲಿಂಗವ ಗಭರ್ಿಕರಿಸಿಕೊಂಡಿಪ್ಪುದು.
ಇಂತೀ ಭೇದ.
ಕ್ರೀ ಜ್ಞಾನಕ್ಕೆ ಒಡಲಾಗಿ, ಮಥನದಿಂದ ವಹ್ನಿ ಕುರುಹಿಗೆ ಬಂದಂತೆ,
ಕ್ರೀಯಿಂದ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು,
ಸ್ವಯಂಭುವಾಯಿತ್ತು. /67
ತನುವಿಂಗೆ ಕುರುಹಾದಲ್ಲಿ, ಅರ್ಚನೆ ಆವರಿಸಬೇಕು.
ಪೂಜೆ ಪುಣ್ಯವನರಿಯಬೇಕು.
ಅರಿದರಿವು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವ ಕುರುಹಿಡಬೇಕು. /68
ತನುವಿಂಗೆ ಗುರುಲಿಂಗ, ಮನಕ್ಕೆ ಆಚಾರಲಿಂಗ,
ಆಚಾರಕ್ಕೆ ಅರಿವೆ ಲಿಂಗವಾಗಿ,
ಅರಿವೇ ಈಶಾನ್ಯಮೂರ್ತಿ
ಮಲ್ಲಿಕಾರ್ಜುನಲಿಂಗವೆಂಬುದಕ್ಕೆ ಕುರುಹಾಯಿತ್ತು ./69
ತನುವಿಗೆ ರುಜೆಯಡಸಿದಲ್ಲಿ ಆತ್ಮಕ್ಕೆ ಅವಗಡೆ ಬಂದಿತ್ತು.
ಅದು ಉಭಯದ ಕೇಡೊ ? ಒಂದರ ಕೇಡೊ ? ಎಂಬುದನರಿತಲ್ಲಿ ,
ಲಿಂಗ ಜಂಗಮದ ಪ್ರಸಾದವೊಂದೆಯಾಯಿತ್ತು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿಯಲಾಗಿ,
ಸ್ವಯಂಭವಾಯಿತ್ತು./70
ತನುವಿನಲ್ಲಿ ಮನೋಮೂರ್ತಿಯಾಗಿ,
ಜಿಹ್ವೆಯಲ್ಲಿ ರುಚಿಸುವವ ನೀನಾಗಿ,
ಕರ್ಣದಲ್ಲಿ ಆದರಿಸಿ ಕೇಳುವವ ನೀನಾಗಿ,
ನಯನದಲ್ಲಿ ಎವೆ ಹಳಚದೆ ನೋಡುವವ ನೀನಾಗಿ,
ನಾಸಿಕದಲ್ಲಿ ಸುವಾಸನೆಯ ಗ್ರಹಿಸುವವ ನೀನಾಗಿ,
ಪಾದ ಪ್ರಾಣಿಗಳಲ್ಲಿ ಸರ್ವಾಂಗಮುಖವಾಗಿ,
ಸಕಲಸುಖಿಯಾಗಿ, ಭೋಗಮೂರ್ತಿಯಾದೆಯಲ್ಲಾ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ. /71
ತಮಕ್ಕೂ ದಿವಕ್ಕೂ ಸೂರ್ಯನಾದ ಮತ್ತೆ,
ದಿನ ಮಾಸಂಗಳೆಂಬವು ನಷ್ಟವಾಯಿತ್ತು.
ಭಕ್ತನೂ ನಾನೆ, ವಿರಕ್ತನೂ ನಾನೆ ಎಂದಲ್ಲಿ, ಕೈಲಾಸದ ಬಟ್ಟೆ ಕಟ್ಟಿತ್ತು .
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಎತ್ತ ಹೋದರೆಂದರಿಯು./72
ತರ್ವಾಯಕ್ಕೆ ಸಿಕ್ಕಿದಲ್ಲಿ ವೇದಾಂತಿಯಾದ.
ಆಗುಚೇಗೆಯನಾಡೆಹೆನೆಂದು ಆಗಮಿಕನಾದ.
ಹಿಂದುಮುಂದಣ ನಿಂದ ಹರಟೆಯ ಹೇಳಿಹೆನೆಂದು ಪುರಾಣಿಕನಾದ.
ಇಂತಿವು ಪಂಚವಿಂಶತಿತತ್ವದ ಶಾಖೆಯಲ್ಲಿ ಅದ ಜಾಳಿಸುವ ವಾದರ್ಿಕ ಪರ್ಣ.
ಇಂತಿವ ನೇತಿಗಳೆದು ನಿಂದುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ ಸ್ವಯಂಭುವಾದ./73
ತುಷವಿದ್ದಲ್ಲಿ ಭತ್ತವಾಯಿತ್ತು, ತುಷ ಹೆರಹಿಂಗೆ ತಂಡುಲವಾಯಿತ್ತು,
ತಂಡುಲ ದಗ್ಧವಾಗಿ ಬ್ರಹ್ಮವಾಯಿತ್ತು,
ಈ ಗುಣ ಒಂದನೊಂದ ಬಿಟ್ಟು ನಿಂದುದನರಿತಲ್ಲಿ,
ಜಂಗಮಪ್ರಸಾದ ಲಿಂಗಕ್ಕರ್ಪಿತ.
ಈಶಾಮ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಅರಿತಲ್ಲಿಯೆ ಅರ್ಪಿತ./74
ತ್ರಿವಿಧಕ್ಕೆ ಮನ ಎಷ್ಟರಾಸೆ ಉಂಟು
ಅಷ್ಟು ಬೇಕು ಗುರುಲಿಂಗಜಂಗಮವ ಪೂಜಿಸುವುದಕ್ಕೆ.
ಬಾಳೆಗೆ ಫಲ ಕಡೆಯಾದಂತೆ, ಚೇಳಿಗೆ ಗರ್ಭವುದಯಿಸಿದಂತೆ,
ಭಕ್ತಂಗೆ ಅಂದಂದಿಗೆ ಸಂದುದೆ ಸರಿಯಾಗಿ ನಿಂದ ಭಕ್ತನಿರವು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಿರವೆ ತಾನಾಗಿ./75
ಧರೆ ಆಕಾಶವಿಲ್ಲದಿರೆ, ಆಡುವ ಘಟಪಟ, ಚರಸ್ಥಾವರ,
ಆಡುವ ಚೇತನಾದಿಗಳಿರಬಲ್ಲವೆ ?
ವಸ್ತುವಿನ ಸಾಕಾರವೆ ಭೂಮಿಯಾಗಿ,
ಆ ವಸ್ತುವಿನ ಆಕಾಶವೆ ಶಲಾಕೆ ರೂಪಾಗಿ,
ಸಂಘಟಿಸಲಾಗಿ ಜೀವಕಾಯವಾಯಿತ್ತು.
ಇಂತೀ ರೂಪಿಂಗೆ ರೂಪುಪೂಜೆ, ಅರಿವಿಂಗೆ ಜ್ಞಾನಪೂಜೆ.
ಉಭಯವು ನಿಂದಲ್ಲಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಏನೂ ಎನಲಿಲ್ಲ./76
ಧರೆಯ ಕೃಷಿ ಶುದ್ಧವಾಗಿಯಲ್ಲದೆ, ಸಸಿ ಶುದ್ಧವಿಲ್ಲ.
ಅರ್ಚನೆ ಅರ್ಪಿತ ಮೂರ್ತಿಧ್ಯಾನದಿಂದಲ್ಲದೆ, ಚಿತ್ತ ಶುದ್ಧವಿಲ್ಲ.
ಇದು ನಿಶ್ಚಯ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ./77
ಧ್ಯಾನ ಧಾರಣ ಸಮಾಧಿ ಯೋಗಂಗಳಿಂದ ಕಾಬುದು ತನುಪ್ರಾಪ್ತಿ ಐಸೆ ?
ಅದು ಸ್ಥೂಲ ಸೂಕ್ಷ್ಮ ಕಾರಣಕ್ಕೆ ಘಟಯೋಗಸಂಬಂಧ.
ಅದು ಬ್ರಹ್ಮನ ಭಿತ್ತಿ, ವಿಷ್ಣುವಿನ ಆಗು, ರುದ್ರನ ಚೇಗೆ,
ಅದು ಗುರು ಚರ ಪರಕ್ಕೆ ಕೊಟ್ಟ ಹಸಿಗೆ.
ಸಾಕಾರದಲ್ಲಿ ಕಂಡು, ನಿರಾಕಾರದಲ್ಲಿ ಅರಿದು,
ಬೆಳಗಿನ ಬಯಲಲ್ಲಿ ನಿರವಯಾಂಗನಾಗಿ ಇರಬೇಕು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವನರಿವುದಕ್ಕೆ./78
ನಡೆದು ನಡೆಯದವನ ಕಂಡು, ನುಡಿದು ನುಡಿಯದವನ ಕಂಡು,
ಅರಿದು ಅರಿಯದವನ ಕಂಡು,
ತ್ರಿವಿಧ ಭೇದಂಗಳಲ್ಲಿ ಭೇದಿಸಿ ಛೇದಿಸಿ ನಿಂದುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ನಿಂದ ವಾಸ./79
ನಾದವಿಲ್ಲದೆ ಬಿಂದುವಿಲ್ಲ, ಬಿಂದುವಿಲ್ಲೆದ ಕಳೆಯಿಲ್ಲ,
ಕಳೆಯಿಲ್ಲದೆ ಲಿಂಗವಿಲ್ಲ.
ಇಂತೀ ತ್ರಿವಿಧಭೇದಂಗಳಲ್ಲಿ ಗುರುವಿನ ಆದಿಯನರಿತು,
ಲಿಂಗದ ಭೇದವನರಿತು, ಜಂಗಮದ ಪೂರ್ವವನರಿತು,
ತಾ ಪುನಜರ್ಾತನಾಗಬೇಕು. ಇಂತೀ ಅರ್ಪಿತಭೇದ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿತಲ್ಲದಾಗದು./80
ನಿತ್ಯ ಚಿಲಮೆಯ ನೋಡುವಾತಂಗೆ ಉಚ್ಚೆಯ ಬಚ್ಚಲ ತೋಡಲಾಗದು.
ಭಕ್ತರನಲ್ಲದೆ ಭವಿಗಳ ಬೇಡೆನೆಂಬಾತಂಗೆ
ಅಚ್ಚೊತ್ತಿದ ಲಕ್ಷ್ಮಿಯ ಮುದ್ರೆಯ ಹಿಡಿಯಲಾಗದು.
ಕೊಂಡ ವ್ರತಕ್ಕೆ ಸಂದೇಹ ಕುಳ್ಳಿರೆ, ಅಂಗವ ಹೊರಲಾಗದು.
ಇಂತಿವನರಿಯದೆ,
ನಾ ವ್ರತಸ್ಥನೆಂದು ಕೊಂಡಾಡುತಿಪ್ಪ ಭಂಡರನೊಪ್ಪ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನವು./81
ನೀ ಹಾಕಿದ ಮುಂಡಿಗೆ ಎನಗೂ ಸರಿ, ನಿನಗೂ ಸರಿ.
ನಾ ಹಾಕಿದ ಮುಂಡಿಗೆ ನಿನ್ನ ಕೇಡು, ಎನ್ನ ಕೇಡು.
ಗರ್ಭವ ಹೊತ್ತಿದ ಸ್ತ್ರೀ ಅಳಿದಂತೆ.
ಶಿವಲೆಂಕನ ಮಾತು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಹಾಕಿದ ಮುಂಡಿಗೆ. /82
ಪರಧನವನೊಲ್ಲದಿಪ್ಪುದೆ ವ್ರತ, ಪರಸ್ತ್ರೀಯರ ಕೂಡದಿಪ್ಪುದೆ ಶೀಲ.
ಸರ್ವಜೀವವ ಕೊಲ್ಲದಿಪ್ಪುದೆ ನೇಮ.
ತಥ್ಯಮಿಥ್ಯವನಳಿದಿಪ್ಪುದೆ ನೇಮ.
ಇದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸಂದೇಹವಿಲ್ಲದ ವ್ರತ./83
ಪರಶಿವಮೂರ್ತಿಯ ರೂಪತಾಳಿ,
ಎನ್ನ ಶಿವಭಕ್ತರ ಕುಲ ಬಳಗಂಗಳ ಪವಿತ್ರವ ಮಾಡಿಹೆನೆಂದು ನೀ ಬಂದು,
ಅಪವಿತ್ರವ ಮುಟ್ಟಲೇತಕ್ಕೆ ?
ನಿನ್ನ ಕೃಪೆ ಎನಗೆ, ಎನ್ನ ಹೃತ್ಕಮಲಮಧ್ಯ ನಿನಗೆ.
ಎನಗೂ ನಿನಗೂ ತ್ರಿವಿಧದ ಹಂಗಿಲ್ಲ.
ನಾ ನೀನಲ್ಲದೆ ಬೇರೊಂದ ಎಣಿಸಿದಡೆ,
ನೀ ನಾನಲ್ಲದೆ ಬೇರೊಂದ ಮುಟ್ಟಿದಡೆ,
ನಿನ್ನ ಸತ್ಯಕ್ಕೆ, ಎನ್ನ ಭಕ್ತಿಗೆ, ಉಭಯಕ್ಕೂ ನೀನೆ ಮುಂಡಿಗೆ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ./84
ಪರಸ್ತ್ರೀಯರ ಬಿಟ್ಟಾಗಲೆ ಗುರುವಿನ ಇರವು ಸಾಧ್ಯವಾಯಿತ್ತು.
ಪರಧನವ ಬಿಟ್ಟಾಗಲೆ ಲಿಂಗದ ಇರವು ಅಂಗದಲ್ಲಿ ಸಲೆ ಸಂದಿತ್ತು.
ನಿಂದೆಯೆಂಬುದು ನಿಂದಾಗಲೆ, ಜಂಗಮಭಕ್ತಿ ಸಾಧ್ಯವಾಯಿತ್ತು.
ಇಂತೀ ತ್ರಿವಿಧದಲ್ಲಿ ತಟ್ಟದಿಪ್ಪಾತನು,
ಈಶಾನ್ಯಮೂರ್ತಿ ಮಲ್ಲಿಕಾರ್ಜು ಲಿಂಗವ ಮುಟ್ಟಿಪ್ಪನು./85
ಪಾತಕ ಹೊಲೆಯೆಂದರಿದು ಬಿಟ್ಟಲ್ಲಿ, ಮತ್ತಾ ಗುಣ ಸ್ವೀಕರಿಸಬಹುದೆ ?
ಇವೆಲ್ಲ ಅಲ್ಲಾ ಎಂದು ಬಲ್ಲತನವ ತಾನರಿದು,
ಮತ್ತೆಲ್ಲರಲ್ಲಿ ಬೆರಸಬಹುದೆ ?
ಒಡೆದ ಹಂಚಿಂಗೆ, ಹಿಡಿದು ಬಿಟ್ಟ ವ್ರತಕ್ಕೆ,
ಮತ್ತಿವ ಒಡಗೂಡಬಹುದೆ ?
ಇಂತೀ ಬಿಡುಗಡೆಯನರಿದಲ್ಲಿ, ಅನುಸರಣೆಯ ಮಾಡಿದಡೆ,
ಎನ್ನೊಡೆಯ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾದಡೂ
ಹರಶರಣರಿಗೆ ದೂರ./86
ಪಾದತೀರ್ಥವ ಕೊಂಡಲ್ಲಿ ತೃಷೆಯರತು.
ಪ್ರಸಾದವ ಕೊಂಡಲ್ಲಿ ಹಸಿವರತು,
ಭೃತ್ಯಭಾವವಾದಲ್ಲಿ ಪ್ರತ್ಯುತ್ತರವಿಲ್ಲದೆಯಿಪ್ಪುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಲೆಂಕತ್ವಭಾವ./87
ಪಿಪೀಲಿಕ ಮಧುರವ ಕಾಂಬಂತೆ, ಮರ್ಕಟ ಲಂಘನವ ಕಾಂಬಂತೆ,
ವಿಹಂಗ ಆಕಾಶವನಡರುವಂತೆ, ತ್ರಿವಿಧದ ಭೇದ.
ಜ್ಞಾನವನರಿತು, ಕಾಯಬಿಂದು, ಜೀವಬಿಂದು, ಜ್ಞಾನಬಿಂದು,
ತ್ರಿವಿಧಬಿಂದುವಿನಲ್ಲಿ ನಿಂದು ಕಂಡು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ, ಸ್ವಯಂಭುವನರಿಯಬೇಕು./88
ಪೂಜಿಸಿ ಕಾಬುದು ಗುರುವಿನ ಭೇದ, ಧ್ಯಾನಿಸಿ ಕಾಬುದು ಲಿಂಗದ ಭೇದ,
ಉಭಯದಲ್ಲಿ ನಿಂದು ವಿಚಾರಿಸಿ ಕಾಬುದು ಜಂಗಮದ ಭೇದ.
ಜ ಎಂದಲ್ಲಿ ಜನನ ನಾಸ್ತಿ , ಗ ಎಂದಲ್ಲಿ ಗಗನ ನಾಸ್ತಿ ,
ಮ ಎಂದಲ್ಲಿ ಮರಣ ನಾಸ್ತಿ . ತ್ರಿವಿಧ ನಾಸ್ತಿಯಾಗಿ ನಿಂದುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ನಿಂದ ನಿಲವು./89
ಪೂಜೆ ಅರತಲ್ಲಿ, ಎಲೆ ಉದುರಿದ ವೃಕ್ಷ ಉಲುಹಡಗಿದಂತಿರಬೇಕು.
ಜಲವಿಲ್ಲದ ತಟಾಕದ ಕೆಳೆಯಲ್ಲಿ, ಬೆಳೆಯ ಬಿತ್ತಿದಂತಿರಬೇಕು.
ವಾರಣಸಿದ ಕುಂಭದಲ್ಲಿ, ವಾರಿಯ ತುಂಬಿಸಿದಂತಿರಬೇಕು.
ಬಯಲ ಬಡಿವಡೆದ ಪಾಣಿ ಅಸಿಯಂತಿರಬೇಕು.
ಸುರಚಾಪದಂತೆ, ಮಾರುತ ಧ್ವನಿಯಂತೆ,
ನಾಮರೂಪಿಂಗೆ ಹೊರಗಾದ ಮತ್ತೆ, ಏನೂ ಎನಲಿಲ್ಲ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂದೆನಲಿಲ್ಲ./90
ಪೃಥ್ವಿ ರೂಪಾದಲ್ಲಿ ಸದ್ಯೋಜಾತನಾದ,
ಅಪ್ಪು ರೂಪಾದಲ್ಲಿ ವಾಮದೇವನಾದ
ಅಗ್ನಿ ರೂಪಾದಲ್ಲಿ ಅಘೋರನಾದ, ವಾಯು ರೂಪಾದಲ್ಲಿ ತತ್ಪುರುಷನಾದ,
ಗಗನ ರೂಪಾದಲ್ಲಿ ಈಶಾನ್ಯನಾದ.
ಇಂತೀ ಪಂಚಕೋಶಂಗಳಲ್ಲಿ ನಿಂದು, ಜಗಕ್ಕೆ ಶಾಂತಿಯನಿತ್ತು,
ತಾ ಸ್ವಯಂಜ್ಯೋತಿಯಾಗಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ./91
ಪೃಥ್ವಿ ಸಾಕಾರವ ಮಾಡಿದಲ್ಲಿ, ಅಪ್ಪು ಆಸ್ತಿಕವಾದಲ್ಲಿ,
ತೇಜ ಸ್ವರೂಪವ ಛೇದಿಸಿದಲ್ಲಿ, ವಾಯು ನಿರ್ಗಮನವಾದಲ್ಲಿ,
ಆಕಾಶವ ಬಯಲೊಳಕೊಂಡಲ್ಲಿ,
ಈಶಾನ್ಯಮುರ್ತಿ ಮಲ್ಲಿಕಾರ್ಜುನಲಿಂಗವು,
ರೂಪಿಗೆ ಬಂದ ಪರಿಯಿನ್ನೆಂತುಂಟೊ ?/92
ಪ್ರಸಾದವ ನೆಮ್ಮಿದ ಭಕ್ತನಲ್ಲಿ, ಪರಶಿವನು ಪ್ರಸನ್ನನಾಗಿರ್ಪನು.
ಪಾದತೀರ್ಥವನರಿದು ವಿಶ್ವಾಸಿಸಿಕೊಂಬ ಭಕ್ತನಲ್ಲಿ,
ಆ ಪರಶಿವನು ಪರಂಜ್ಯೋತಿ ಪ್ರಕಾಶವಾಗಿಪ್ಪನು.
ಸಲುವ ಸೈದಾನದ ತೆರಪನರಿದು ಬಹ ಗುರುಚರದ ಅನುವನರಿದು,
ಬಂದುದಕ್ಕೂ ಸಂದುದಕ್ಕೂ ಸಂದಿಲ್ಲದೆ ನಿಂದ ಭಕ್ತನ ಅಂಗಳವೆ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನನ ಮಂಗಳವಾಸ./93
ಬಂಗಾರದ ರೂಪಿದ್ದಲ್ಲದೆ ಬಣ್ಣ ವನವಗವಿಸದು.
ಬಣ್ಣ ರಂಜನೆಯಾಗಿ ರಂಜಿಸುತ್ತಿರೆ ಎಲ್ಲರ ಕಣ್ಣಿಗೆ ಮಂಗಲ.
ಇಂತೀ ಕಾಯ ಜೀವ ಜ್ಞಾನದ ಬೆಳಗು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದ ಒದಗು./94
ಬರಿಹುಂಡನ ಗಡಿವಾಡದಲ್ಲಿರಿಸಿದಂತೆ,
ಒಡೆಯರಿಲ್ಲದ ಮನೆಯ ತುಡುಗುಣಿ ಹೊಕ್ಕು, ಗಡಬಡಿಯ ಮಾಡಿದಂತೆ,
ಅಂಗಕ್ಕೆ ಕುರುಹಿಲ್ಲದೆ, ಮನಕ್ಕರಿವಿಲ್ಲದೆ
ತ್ರಿಭಂಗಿಯಲ್ಲಿ ನೊಂದವಂಗೆ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಿಲ್ಲಾ ಎಂದೆ./95
ಬಹುರೂಪಕ್ಕೆ ಭಾಷಾಂಗವಿಲ್ಲದಿರೆ ಮೆಚ್ಚದು ಜಗ.
ಗುರುಚರರೂಪ ತಾಳಲ್ಲಿ, ಗುರುವಿಂಗೆ ಗಂಭೀರತೆ, ಚರಕ್ಕೆ ನಿಸ್ಪೃಹತ್ವ.
ಇಂತೀ ಉಭಯಮೂರ್ತಿ ಅಪೇಕ್ಷೆವಿರಹಿತವಾಗಿ ನಿಂದುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ./96
ಬಾಹ್ಯವ್ರತ, ಭ್ರಮೆವ್ರತ, ಸೀಮೋಲ್ಲಂಘನವ್ರತ,
ಉಪಚರಿಯಕೂಟಸ್ಥವ್ರತ, ಸಮಕ್ರೀ ಭೋಜನವ್ರತ,
ಇಷ್ಟಸಂಬಂಧಕೂಟವ್ರತ, ದ್ರವ್ಯ ಉಪಚರಿಯ ಸಂಪದವ್ರತ,
ಅಹುದಲ್ಲವೆಂಬ ಸಂದೇಹ ಸಂಕಲ್ಪವ್ರತ,
ತಿಲ ಮಧುರ ಕ್ರಮಕ ಲವಣ ಪರಿಪಾಕ ವಿಸರ್ಜನವ್ರತ,
ಗಮನ ಸುಮನ ಸಮತೆ ನೇಮ ಸಂತೋಷವ್ರತ.
ಇಂತೀ ಸೀಮೆಯೊಳಗಾದ ಅರುವತ್ತನಾಲ್ಕು ಶೀಲವನರಿದಡೇನು?
ಪರವಧುವಿಂಗೆ ಪಲ್ಲಟಿಸದೆ, ಪರಧನಕ್ಕೆ ಕೈದುಡುಕದೆ,
ಅನರ್ಪಿತಕ್ಕೆ ಮನ ಮುಟ್ಟದೆ, ತಾ ಕೊಂಡ ಸೀಮೆಯಲ್ಲಿ ಭಾವಭ್ರಮೆಯಿಲ್ಲದೆ,
ಮನ ವಚನ ಕಾಯದಲ್ಲಿ ಕೊಂಡ ವ್ರತಕ್ಕೆ ಪೂಜಿಸುವ.
ಗುರುಲಿಂಗಜಂಗಮಕ್ಕೆ ಉಭಯದೋರದೆ ನಿಂದುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸಂದುದು./97
ಭಕ್ತ ನಾನೆ ಎಂದು ತನ್ನ ತಾನೆ ನಿಶ್ಚೆ ಸುವನ್ನಬರ,
ವಿರಕ್ತ ನಾನೆ ಎಂದು ತನ್ನ ತಾನೆ ಬೀಗುವನ್ನಬರ,
ಅಂಧಕಸಮೂಹದಲ್ಲಿದ್ದು, ನಗೆಯ ಕೇಳಿ ತಾ ಕಾಣದೆ ನಗುವಂತೆ,
ಉಭಯದಿರವ ಮೆಚ್ಚ ಶಿವಲೆಂಕನೊಡೆಯ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು. /98
ಭಕ್ತನ ಭಾಷೆ ಗುರುಲಿಂಗಜಂಗಮವಲ್ಲ.
ತ್ರಿವಿಧ ಕತರ್ೃವಿನ ಭಾಷೆ,
ತನ್ನ ಮುಟ್ಟಿ ಪೂಜಿಸುವ ಭಕ್ತನಲ್ಲ.
ಇಂತೀ ಉಭಯದ ಭಾಷೆ, ಕತರ್ೃ ಭೃತ್ಯಂಗಲ್ಲ [ವೆ]?
ಶಿವಲೆಂಕನ ಮಾತು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಹಾಕಿದ ಮುಂಡಿಗೆ. /99
ಭಕ್ತನಾಗಿದ್ದಲ್ಲಿ, ಗುರುಲಿಂಗಜಂಗಮ
ಪಾದತೀರ್ಥಪ್ರಸಾದ ಪಂಚಾಚಾರ ಶುದ್ಧಕ್ಕೆ ನಿರತನಾಗಿರಬೇಕು.
ಗುರುಚರವಾದಲ್ಲಿ, ಅಪರಕ್ಕೆ ದೂರನಾಗದೆ ಇರಬೇಕು.
ಈ ಉಭಯ ನಿಧಾನಿಸಿ ನಿಂದಲ್ಲಿ,
ಶಿವಲೆಂಕನೊಡೆಯ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ./100
ಮಡಿಕೆಗೆ ಮುಸುಕು, ತಮಗೆ ಗುಹ್ಯಕ್ಕೆ ದಶಾವಸ್ಥೆ.
ಬಾಹ್ಯದಲ್ಲಿ ಶೀಲ, ಅಂತರ್ಯಾಮಿಯಲ್ಲಿ ದುಶ್ಶೀಲ.
ಹೊರಗೆ ವ್ರತ, ಒಳಗೆ ಗದಕ.
ಮಾಡಿಕೊಂಡ ವಿಧಿಯನೀಸುವುದಕ್ಕೆ ವಾದ್ಯದ ಒತ್ತೆಯ ಹಿಡಿದ ದಾಸಿಯಂತೆ,
ಇನ್ನಾರಿಗೆ ಹೇಳುವೆ ?
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ ನೀನೆ ಬಲ್ಲೆ./101
ಮಣ್ಣು ಮೂರು, ಹೆಣ್ಣು ಆರು, ಹೊನ್ನು ಒಂಬತ್ತು ,
ಇವಾದಿಯಾದ ಸಕಲಪ್ರಪಂಚಿನ ಜವನಿಕೆಯನರಿದು ಹರಿಯಬೇಕು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ./102
ಮಧುರ ದಂಡ ಒರಳಿಗೆ ಬಂದು,
ಮರಳಿ ಬೆಂದು, ತ್ರಿಗುಣದಲ್ಲಿ ಹೊಂದಿ, ಕಡೆಯಾಣೆಯಾದಂತೆ,
ಒಂದನೊಂದು ಕಂಡು ಸಂದನಳಿದು ನಿಂದುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ. /103
ಮನ ಅರೋಚಕವಾದಲ್ಲಿ,
ಲವಣ ವಾರಿ ಪರಿಪಾಕ ಮುಂತಾದ ರಸದ್ರವ್ಯವನೊಲ್ಲದೆಯಿಪ್ಪುದು ವ್ರತವೆ ?
ಅಲ್ಲ, ಅದು ಸೌಕರಿಯವಲ್ಲದೆ.
ಅದೆಂತೆಂದಡೆ: ಪರದ್ರವ್ಯ ಪರಸತಿ ಹುಸಿ ಕೊಲೆ ಕಳವು ಅತಿಕಾಂಕ್ಷೆಯಂ ಬಿಟ್ಟು,
ಬಂದುದ ನಿಂದಂತೆ ಕಂಡು, ಬಾರದುದಕ್ಕೆ ಕಾಂಕ್ಷೆಯ ಮಾಡದಿಪ್ಪುದೆ,
ಅರುವತ್ತನಾಲ್ಕು ವ್ರತ, ಅಯಿವತ್ತಾರು ಶೀಲ,
ಮೂವತ್ತೆರಡು ನೇಮ ಸಂದಿತ್ತು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ ಸ್ವಯಂಭುವಾಯಿತ್ತು. /104
ಮನಸಿಜನ ಇರವುಳ್ಳನ್ನಕ್ಕ ಶೃಂಗಾರವ ಹಾರಬೇಕು.
ಅವರಂಗವುಳ್ಳನ್ನಕ್ಕ ಅಂಗನೆಯರ ಸಂಗಬೇಕು.
ಸಂಗಸುಖಕ್ಕೊಡಲಹನ್ನ ಬರ ಶಿವಲಿಂಗ ಪೂಜೆಯ ಮಾಡಬೇಕು.
ಅದು ಅರುವಿನ ಗೊತ್ತು, ಜ್ಞಾನದ ಚಿತ್ತು,
ಪರಬ್ರಹ್ಮದ ಕೂಟ, ಶಿವಪೂಜೆಯ ಮಾಟ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವುದಕ್ಕೆ./105
ಮರೀಚಿಕಾಜಲದಂತೆ ತೋರುತ್ತಿಹ ವಸ್ತು
ನಾದಬಿಂದುವಿನಲ್ಲಿ ಒಡಗೂಡುವ ಪರಿಯಿನ್ನೆಂತೊ ?
ನಾದ ದೀರ್ಘವಾಗಿ, ಬಿಂದು ವರ್ತುಳವಾಗಿ,
ಕಳೆ ಪರಿಪೂರ್ಣವಾಗಿ, ಅವಗವಿಸಲ್ಲದೆ ಉಭಯನಾಮವಡಗದು.
ಅಡಗಿದ ಮತ್ತೆ ಈಶಾನ್ಯಮೂರ್ತಿ ಅಮೂರ್ತಿಯಾಯಿತ್ತು,
ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ./106
ಮಹಾರ್ಣವವುರಿದು ಬೇವಲ್ಲಿ, ಕರಗದ ಜಲಕ್ಕೆ ಹೊಡೆಗೆಡೆವುದೆ ?
ಮಹಾಪಾತಕಕ್ಕೆ ಒಳಗಾದಂಗ,
ಮಾತಿನ ಬಣಬೆಯಲ್ಲಿ ನೀತಿಯಾಗಿ ನುಡಿದಡೆ,
ಅಜಾತನ ಶರಣರು ಒಪ್ಪುವರೆ ? ಅದು ನಿಹಿತವಲ್ಲ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಇಂತೀ ಕಾಕರನೊಲ್ಲ/107
ಮಾಟ ಕೂಟವ ಮಾಡುವನ್ನಬರ
ಮನ ನಲಿದು, ತನು ಕರಗಿ ಮಾಡುವ ದ್ರವ್ಯಕ್ಕೆ
ಕೇಡಿಲ್ಲದಂತೆ ಮಾಡುತ್ತಿಪ್ಪ ಭಕ್ತನ ಅಂಗವೆ
ಎನ್ನ ಹೃದಯಾಲಯ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಅಲ್ಲ್ಲಿ ತಾನಾಗಿಪ್ಪನು. /108
ಮೇಲು ಹೇಮದಲ್ಲಿ ಕೀಳುಕೊಡೆ,
ಅದು ತನ್ನಯ ಕೀಳು ಕೊಡೆ ಮೇಲುಮಟ್ಟವ ಮರಸಿತ್ತು.
ಜಂಗಮದ ಪ್ರಸಾದವ ಲಿಂಗಕ್ಕೆ ಕೊಡಲಾಗಿ,
ಪ್ರಸಿದ್ಧಪ್ರಸಾದ ಸಿದ್ಧಪ್ರಸಾದವಾಯಿತ್ತು.
ಒಡೆದ ಕ್ಷೀರಕ್ಕೆ ಹೆಪ್ಪನಿಕ್ಕಿದಡೆ ದಧಿಯಾಗಬಲ್ಲುದೆ ?
ಅರಿಯದವನ ಅರ್ಪಿತ, ಶರಧಿಯ ಹೊಯಿದ ಕರವಾಳಿನಂತಾಯಿತ್ತು.
ಇಂತೀ ವಿವರದಲ್ಲಿ ಅರ್ಪಿತವನರಿಯಬೇಕು.
ಈಶಾನ್ಯಮೂರ್ತಿ ಮಲ್ಲಿಕಾರ್ಜುಲಿಂಗವು,
ಇಂತೀ ಅರ್ಪಿತವನರಿಯದಲ್ಲದೊಲ್ಲನು./109
ರಸವನರಿವುದಕ್ಕೆ ಜಿಹ್ವೆಯಾಗಿ ಬಂದು,
ಗಂಧವನರಿವುದಕ್ಕೆ ನಾಸಿಕವಾಗಿ ಬಂದು,
ರೂಪವನರಿವುದಕ್ಕೆ ಅಕ್ಷಿಯಾಗಿ ಬಂದು,
ಶಬ್ದವನರಿವುದಕ್ಕೆ ಶ್ರೋತ್ರವಾಗಿ ಬಂದು,
ಸ್ಪರುಶನವನರಿವುದಕ್ಕೆ ತತ್ವಕ್ಕಾಗಿ ಬಂದು,
ಇಂತೀ ಘಟದ ಮಧ್ಯದಲ್ಲಿ ನಿಂದು ಪಂಚವಕ್ತ್ರನಾದೆಯಲ್ಲಾ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ./110
ರೂಪಿನಲ್ಲಿ ಉಂಟೆಂದು ಹೋರುವಾಗ, ಅದು ಅಚೇನಮೂರ್ತಿ.
ನಿರೂಪಿನಲ್ಲಿ ಕಂಡೆನೆಂದು ಹೇಳುವಾಗ, ಅದು ನಾಮಕ್ಕೆ ಬಾರದ ಬಯಲು.
ಉಭಯದಲ್ಲಿ ವಿಚಾರಿಸಿ ಕಾಬುದೊಂದೆ ತನ್ನಯ ದೃಢಚಿತ್ತ.
ಆ ಚಿತ್ತ ಒಪ್ಪಿನಿಂದಲ್ಲಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ನಿಶ್ಚಯವಾಗಿರ್ಪನು./111
ರೂಪು ರುಚಿ ಚಿತ್ತ, ಈ ಮೂರು ಏಕವಾಗಿ ನಿಂದಲ್ಲಿ, ಲಿಂಗಾರ್ಪಿತ.
ರೂಪ ಭಾವಿಸದೆ, ರುಚಿಯ ಭಿನ್ನವನರಿಯದೆ,
ಚಿತ್ತದ ಗೊತ್ತ ಮುಟ್ಟದೆ, ಅದೆತ್ತಣ ಅರ್ಪಿತ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ?/112
ಲಿಂಗವಸ್ತುವಾದಲ್ಲಿ, ನಂಬುವ ಮನ ವಿಶ್ವಾಸವಾಗಬೇಕು.
ಆಸೆವಿರಹಿತ ಗುರುವಾದಲ್ಲಿ, ಪಾಶವಿರಹಿತ ಪೂಜಿಸುವ ಶಿಷ್ಯನಾಗಬೇಕು.
ಸರ್ವದೋಷನಾಶನನಾಗಿ, ಆಸೆಯೆಂಬುದು ಎಳ್ಳನಿತು ತೋರದಿದ್ದಡೆ,
ಆತ ಈಶಾನ್ಯಮೂರ್ತಿ ಪೂಜಿಸುವಾತ, ಅಜಾತ ಶಂಭು.
ಇಂತೀ ಉಭಯ ಏಕಮಯ
ಈಶಾನ್ಯಮೂರ್ತಿ ಮಲ್ಲಿಕಾರ್ಜುನ ಲಿಂಗವು ತಾನೆ./113
ವಟವೃಕ್ಷದ ಘಟದ ಮಧ್ಯದಲ್ಲಿ ಒಂದು ಮಠವಿಪ್ಪುದು.
ಆ ಮಠಕ್ಕೆ ಹಿಂದೆಸೆಯಿಂದ ಬಂದು, ಮುಂದಳ ಬಾಗಿಲ ತೆಗೆದು,
ವಿಚ್ಛಂದದ ಕೋಣೆಯ ಕಂಡು, ಕಿಡಿ ನಂದದೆ ದೀಪವ ಕೊಂಡು ಹೊಕ್ಕು,
ನಿಜದಂಗದ ಓಗರದ ಕುಂಭವ ಕಂಡು,
ಬಂಧವಿಲ್ಲದ ಓಗರವನುಂಡು, ಸದಮಲಲಿಂಗವೆ ತಾನಾದ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ./114
ವಾಗದ್ವೈತದಲ್ಲಿ ನಿಂದು, ಸ್ವಯಾದ್ವೆ ತವನರಿಯಬೇಕು.
ಆ ಗುಣ ಸ್ವಯವಾಗಿ ನಿಂದು, ಗುರುಮೂರ್ತಿಯಾಗಬೇಕು.
ಗುರುಮೂರ್ತಿ ನಿಶ್ಚಯವಾಗಿ ನಿಂದು,
ಚರಲಿಂಗದಲ್ಲಿ ನಿಃಪತಿಯಾಗಿ ನಿಂದುದು ದ್ವೈತ.
ಎರಡಳಿದು ಒಂದೆನಿಸಿ ನಿಂದುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ. /115
ವಾಸದ ದೀಪಕ್ಕೆ ವಾಯು ವಿರೋಧವಲ್ಲದೆ
ಮಹಾಹೇತುವಿನ ವಹ್ನಿಗೆ ಅದು ಪ್ರೀತಿಯ ಸಂಗ.
ನೀತಿಯಲ್ಲಿ ನಡೆವನ ವಿರಕ್ತಿ, ಭಕ್ತಿ ಕುಲ ಅಜಾತಂಗೆ ಸಂಗ.
ಮಿಕ್ಕಾದ ದೂಷಣದ ಅಪಸರೆಯ ಮತ್ರ್ಯರ ವಿರೋಧ.
ಇಂತೀ ದ್ವಯ ಭೇದದಲ್ಲಿ ಅರಿದು ನಿಂದ
ಪರಮಪರಿಣಾಮಿಗೆ ಸ್ತುತಿ ನಿಂದೆಯೆಂಬುದಿಲ್ಲ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ ಸ್ವಯಂಭುವಾದವಂಗೆ. /116
ವಿಶ್ವಮಯ ರೂಪು ನೀನಾಗಿ, ಅರಿವ ಆತ್ಮ ಒಬ್ಬನಲ್ಲಿಯೇ ಅಡಗಿದೆಯಲ್ಲಾ!
ಬೀಗದ ಎಸಳು ಹಲವಾದಡೇನು,
ಒಂದು ದ್ವಾರದಲ್ಲಿ ಅಡಗಿ ಓತಂತೆ ಇಪ್ಪ ತೆರ ನೀನಾಗಿ,
ಭಕ್ತರ ಚಿತ್ತದಲ್ಲಿ ನಿಶ್ಚಯನಾದೆ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ./117
ವೇದ ಅಪರವನರಸಿತ್ತು, ಪುರಾಣ ಪುಣ್ಯವ ಬಯಸಿತ್ತು.
ಶಾಸ್ತ್ರ ಗೆಲ್ಲ ಸೋಲಕ್ಕೊಳಗಾದಲ್ಲಿ, ಶ್ರುತಿ ನಾದದೊಳಗೆ ಸಿಲ್ಕಿತ್ತು.
ನಾದ ಶ್ರುತಿ ಬಿಂದುವಿನಲ್ಲಿ ನಿಂದು ಗೋಳಕಾಕಾರವಾದಲ್ಲಿ,
ತ್ರಿವಿಧಕ್ಕೆ ಹೊರಗಾಯಿತ್ತು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ./118
ವ್ಯಾಧನ ಚಿತ್ತದಂತೆ, ಸಾಧನೆಯಯ್ಯನ ಮೈ ಲಾಗಿನಂತೆ,
ಭೇದಿಸಿಯೈದುವ ಪನ್ನಗನಂತೆ,
ಇಡುವ ತೊಡುವ, ಕೊಡುವ ಕೊಂಬಲ್ಲಿ, ಲಿಂಗಪ್ಪನ ಒಡಗೂಡಬೇಕು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಬೆಚ್ಚಂತಿರಬೇಕು. /119
ವ್ರತಸ್ಥನಾದಲ್ಲಿ,
ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಂಗಳಲ್ಲಿ ತಲೆದೋರದೆ,
ತನ್ನ ಆತ್ಮ ಸತಿ, ಲಿಂಗ ಪುರುಷನಾಗಿ,
ತನ್ನ ಸುಕಾಯಕದಿಂದಾದ ದ್ರವ್ಯಂಗಳ
ಗುರುಲಿಂಗಜಂಗಮದ ಮುಂದಿಟ್ಟು ಅರ್ಪಿತವಹನ್ನಕ್ಕ,
ದೃಕ್ಕು ತುಂಬಿ ನೋಡಿ, ಮನದಣಿವನ್ನಕ್ಕ ಹರುಷಿತನಾಗಿ,
ಮಿಕ್ಕ ಶೇಷವ, ಇಷ್ಟಪ್ರಾಣಲಿಂಗಕ್ಕೆ ತೃಪ್ತಿಯ ಮಾಡಿಪ್ಪ ಮಹಾಭಕ್ತಂಗೆ,
ಸಂಸಾರವೆಂಬ ತೊಟ್ಟು ಹರಿಯಿತ್ತು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು
ವ್ರತವೆಂಬ ನಾಮಕ್ಕೆ ಒಳಗಾಯಿತ್ತು. /120
ವ್ರತಾಚಾರವ ಹಿಡಿದು ಬಿಟ್ಟಲ್ಲಿ, ಗುರುವಾದಡೂ ಪರಿಹರಿಸಬಾರದು.
ಲಿಂಗವಾದಡೂ ಪರಿಹರಿಸಬಾರದು, ಜಂಗಮವಾದಡೂ ಪರಿಹರಿಸಬಾರದು.
ರತ್ನದ ಗುಂಡೆಂದಡೆ, ಶಿರದ ಮೇಲೆ ಹಾಕಿದಡೆ ಒಡೆಯದೆ ?
ನೀನೊಡೆಯನಾದಡೂ ಆ ಲೆಂಕನಾದಡೂ ಈ ಗುಣವಡಗಿಯಲ್ಲದೆ,
ಮೃಡಶರಣರ ಸಂಗಕ್ಕೊಳಗಲ್ಲ.
ಅಂಗದ ಮಲಿನವ, ಕೈ ಹಿಂಗಿ ಒರಸಿದಡೆ ಭಂಗವುಂಟೆ ?
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾದಡೂ ಆಗಲಿ,
ಲೆಂಕನ ಬಿನ್ನಹಕ್ಕೆ ಸಂಕಲ್ಪವಿಲ್ಲ. /121
ಶಿಲೆ ಕಾಷ್ಠದಲ್ಲಿ ಪಾವಕ ಜನಿಸುವ ಭೇದದಂತೆ,
ಮಾಡುವ ಸತ್ಕ್ರೀ ಭೇದ.
ಶಿಲೆಯ ವಹ್ನಿ ತಲೆದೋರಿ ಉಭಯವನುಳುಹಿದಂತೆ,
ಗುರು ಚರದ ಯುಕ್ತಿ.
ಕಾಷ್ಠದ ವಹ್ನಿ ತನ್ನಯ ಇರವ ಸುಟ್ಟು, ಹಲವು ಕಡೆಗೆ ಪರಿವಂತೆ,
ಆತ್ಮನ ಭೇದ.
ಇಂತೀ ನಾನಾ ವರ್ತಕಂಗಳಲ್ಲಿ ಕ್ರೀ ಶುದ್ಧವಾಗಿ ನಿಂದುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿದುದು./122
ಶಿವಭಕ್ತಂಗೆ ಭೃತ್ತಾಚಾರವಳವಟ್ಟಲ್ಲಿ, ಸದಾಚಾರವಿಪ್ಪುದು.
ಸದಾಚಾರ ಸನ್ನದ್ಧವಾದಲ್ಲಿ,
ಸಮಯೋಚಿತ ಸತ್ಕ್ರಿಯೆಗಳ ಬಲ್ಲ ಸದ್ಭಕ್ತಯೆಲ್ಲಿರ್ದ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಅಲ್ಲಿಪ್ಪನು./123
ಸಕಲ ಗಂಧಕ್ಕೆ ವಾಯುವೆ ಬೀಜ, ಸಕಲ ಉತ್ಪತ್ಯಕ್ಕೆ ಅಪ್ಪುವೆ ಬೀಜ.
ಸಕಲ ಪ್ರಕೃತಿಗೆ ಜೀವವೆ ಬೀಜ.
ಇಂತೀ ಭೇದವನರಿತಲ್ಲಿ,
ಆತ್ಮನ ವಿವರ ಹೆರೆಹಿಂಗಿದಲ್ಲದೆ, ನಿಜತತ್ವ ಪರಮನಲ್ಲ.
ಪರಮ ಪರತತ್ವವ ಕೂಡಿ ಬೆರಸಿದಲ್ಲಿ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ./124
ಸಕಲ ಬಹುಕೃತವೆಂಬ ಗಹನದಲ್ಲಿ,
ಜೀವವೆಂಬ ದಂತಿ ತಿರುಗಾಡುತ್ತಿರಲಾಗಿ,
ಅರಿವೆಂಬ ಕೇಸರಿ ಅದ ಕಂಡು ಒದಗಿಯೈದಿ,
ಮಸ್ತಕದ ಕುಂಭಸ್ಥಲವನೊಡೆದು ಸೇವಿಸುತ್ತಿರಲಾಗಿ,
ಶಾದರ್ೂಲ ಹೋಯಿತ್ತು, ಕೇಸರಿ ಬಿಟ್ಟಿತ್ತು ,
ಗಜ ಬದುಕಿತ್ತು, ಶಾದರ್ೂಲ ಶಂಕೆಯ ಹರಿಯಿತ್ತು .
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು,
ಲೀಲೆಗೆ ಹೊರಗಾಗಿ ಸ್ವಯಂಭುವಾಯಿತ್ತು. /125
ಸಾರಿದುದ ಕಂಡು, ಕೇಳಿ ಮೀರಿ ನಡೆದಡೆ,
ಅವನ ಗಾರುಮಾಡಿದಡೆ, ಕೇಡುಂಟೆ ಅಯ್ಯಾ ?
ದೃಷ್ಟದಿಂದ, ಶರಣರ ಸಂಗದಿಂದ, ಶ್ರುತಿಸ್ಮೃತಿತತ್ವಂಗಳಿಂದ,
ಪಾಪಪುಣ್ಯಗಳೆಂಬುದನರಿದು ಮರೆಯಬಹುದೆ ?
ಗುರುವಿಗೂ ಆಚರಣೆ, ಲಿಂಗಕ್ಕೂ ಆಚರಣೆ, ಜಂಗಮಕ್ಕೂ ಆಚರಣೆ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೂ ಆಚರಣೆ,/126
ಸುಖದುಃಖಾದಿಗಳ ಮೀರುವ ಎನ್ನವರ ಕಾಣೆ.
ಸುಖದುಃಖಾದಿಗಳ ಮೀರುವ ನಿನ್ನವರ ಕಾಣೆ.
ಇನ್ನೇನು ಹೇಳುವೆ ? ನಡುಹೊಳೆಯಲ್ಲಿ ಹರುಗೋಲ ಹರಿದಂತೆ,
ಅಂಬಿಗನ ಕೊರಳ ಸುತ್ತಿ ಬಂದವರೆಲ್ಲರೂ
ಉಭಯವು ಹೊಂದಿದಂತಾಯಿತ್ತು.
ನೀ ಎನ್ನ ಬಟ್ಟೆ, ನಾ ನಿನ್ನ ಬಟ್ಟೆ.
ಉಭಯವು ಬಂದ ಬಟ್ಟೆಯಾದೆವಲ್ಲ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ. /127
ಸ್ತ್ರೀಲಿಂಗ ನಾಸ್ತಿಯಾಗಿರಬೇಕು ಗುರುವಿನಿರವು.
ಪುಲ್ಲಿಂಗ ನಾಸ್ತಿಯಾಗಿರಬೇಕು ಲಿಂಗದಿರವು.
ನಪುಂಸಕಲಿಂಗ ನಾಸ್ತಿಯಾಗಿರಬೇಕು ಜಂಗಮದಿರವು.
ತ್ರಿವಿಧಬಿಂದು ಲಿಂಗ ನಾಸ್ತಿ.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು,
ನಾದ ಬಿಂದು ಕಳೆಗೆ ಹೊರಗಾಯಿತ್ತು./128
ಸ್ವಯಂಪಾಕದಲ್ಲಿ ಆದ ದ್ರವ್ಯವ,
ಪರರು ಕಂಡಹರೆಂದು ಮರೆಮಾಡಿಕೊಂಡಿಪ್ಪ ಪರಿಯಿನ್ನೆಂತೊ ?
ಮಹಾಘನವನಾ ಧರಿಸಿ ನುಡಿವುತ್ತಿಪ್ಪ ನಾಲಗೆ,
ಛಂಡತಾಂಬೂಲ ಮೊದಲಾದ ಭಾವವನೆಲ್ಲರೂ ಕಾಣುತ್ತ,
ವ್ರತದ ಠಾವೆಲ್ಲಿ ಸಿಕ್ಕಿತ್ತು ?
ಮೊಲೆಯ ಮುಚ್ಚಿ, ಸೀರೆಯ ತೆಗೆದಂತಾಯಿತ್ತು.
ಇಂತಿವನರಿದು, ಇದಿರಿಚ್ಛೆಯ ಮರೆದು, ತನ್ನ ಸ್ವಯಿಚ್ಛೆಯನರಿದುದು,
ತನ್ನ ಮುಚ್ಚು, ಘನಲಿಂಗದ ಅಚ್ಚು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದ
ವ್ರತಾಚಾರಕ್ಕೆ ಇಕ್ಕದ ಗೊತ್ತು. /129
ಹಲವಾಡುವಂತೆ ಕೆಲೆದಾಡಲಿಲ್ಲ.
ಕಂಡವರ ಕಂಡು, ಕೈಕೊಂಡು,
ಅವರು ನಿಂದನಿಂದ ವ್ರತಕ್ಕೆ ತಾ ನಿಂದೆಹೆನೆಂದು ಕೊಂಡಾಡಲಿಲ್ಲ.
ಕೂಲಿಗೆ ಹಾವ ಕಚ್ಚಿಸಿಕೊಂಡಡೆ, ಆದಾರ ಹರಣವಳಿವುದು ?
ತನು ಶುದ್ಧತೆಯಿಲ್ಲದೆ, ಮನ ಆಚಾರದ ಅನುವನರಿಯದೆ,
ನಡೆವರ ಬೆಂಬಳಿಯಲ್ಲಿ
ಗುಡಿಗಟ್ಟಿ ಹರಿದಾಡುವ ಸುರಿಗುಡಿಗಳನೊಪ್ಪ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು. /130
ಹೇರನೊಪ್ಪಿಸಿದವಂಗೆ ಸುಂಕವ ಬೇಡಿ ಗಾರುಮಾಡಲೇತಕ್ಕೆ ?
ಮೊದಲು ತ್ರಿವಿಧವ ಎನಗೆಂದು ಕೊಟ್ಟು ಮತ್ತೆ ;
ನೀ ಬೇಡಿದಡೆ ನಿನಗಿತ್ತ ಮತ್ತೆ ,
ಎನ್ನಡಿಯ ನೋಡುವ ಬಿಡುಮುಡಿ ಯಾವುದು ?
ನಿನಗೆ ಶಿವಲೆಂಕ ಹಾಕಿದ ಮುಂಡಿಗೆಯ
ನೀನೆತ್ತಲಮ್ಮದೆ, ಎನ್ನ ಕೈಯೊಳಗಾದೆಯಲ್ಲಾ ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ. /131
ಹೊರಗೆ ಚಿಲಮೆ, ಒಳಗೆ ಮೂತ್ರದ ಕುಳಿ.
ಹೊರಗೆ ಸ್ವಯಂಪಾಕ, ಒಳಗೆ ಅಧರಪಾಕ.
ಹೊರಗೆ ಭವಿ ನಿರಸನ, ಒಳಗೆ ಭವಿಸಂಗ ಕೂಟ.
ಇಂತಿವೆಲ್ಲವು, ಆಡುವ ವಿಧಾಂತ, ನೇಮವ ಹಿಡಿದಂತಾಯಿತ್ತು.
ಇಂತೀ ಗುಣವನೊಪ್ಪ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು./132