Categories
ಶರಣರು / Sharanaru

ಷಣ್ಮುಖಸ್ವಾಮಿ

ಅಂಕಿತ: ಅಖಂಡೇಶ್ವರ
ಕಾಯಕ: ವಿರಕ್ತಮಠದ ಅಧಿಪತಿ

ಈತ ಬಸವೋತ್ತರ ಯುಗದ ಮತ್ತೊಬ್ಬ ಮಹತ್ವದ ವಚನಕಾರ. ತಂದೆ ಮಲ್ಲಶೆಟ್ಟೆಪ್ಪ, ತಾಯಿ ದೊಡ್ಡಮಾಂಬೆ, ಸ್ಥಳ ಗುಲಬರ್ಗಾ ಜಿಲ್ಲೆಯ ಜೇವರಗಿ. ಗುರು ಅಖಂಡೇಶ್ವರ. ಜೀವಿತ ಕಾಲಾವಧಿ ೧೬೩೯ ರಿಂದ ೧೭೧೧. ಮೂಲತ: ಭಕ್ತನಾಗಿದ್ದ ಈತ ಗುರುಗಳ ತರುವಾಯು ಜೇವರಗಿ ವಿರಕ್ತಮಠದ ಅಧಿಪತಿಯಾದ. ಲೋಕ ಸಂಚಾರ ಕೈಕೊಂಡು ಧರ್ಮತತ್ವ ಬೋಧೆ ಮಾಡಿ, ಕೊನೆಗೆ ಜೇವರಗಿಯಲ್ಲಿಯೇ ಐಕ್ಯನಾದ. ಷಣ್ಮುಖಸ್ವಾಮಿಗಳು ೭೧೭ ವಚನ, ‘ಅಖಂಡೇಶ್ವರ ಜೋಗುಳ ಪದ’ (೪೧ ಚೌಪದಿ), ‘ಪಂಚ ಸಂಜ್ಞೆಗಳಪದ’ (೭ ಪರಿವರ್ಧಿನಿ ಷಟ್ಪದಿ), ‘ನಿರಾಳ ಸದ್ಗುರು ಸ್ತೋತ್ರ’ (ಭಾಮಿನಿ ಷಟ್ಪದಿ)- ಎಂಬ ಕೃತಿಗಳನ್ನು ರಚಿಸಿದ್ದಾರೆ.

ವಚನಗಳು ಸ್ಥಲಾನುಗುಣವಾಗಿ ಸಂಕಲನಗೊಂಡಿವೆ. ‘ತೂರ್ಯ ನಿರಾಲಂಬ ಶರಣನ ಅರುಹಿನ ಷಟ್-ಸ್ಥಲ ವಚನ’ ಎಂಬುದು ಈ ಕೃತಿಯ ಹೆಸರು. ಇದು ಮುಖ್ಯವಾಗಿ ಷಟ್-ಸ್ಥಲತತ್ವವನ್ನು ನಿರೂಪಿಸುವ ಗ್ರಂಥ. ಈಗಾಗಲೇ ರೂಢಿಗತವಾಗಿ ನಡೆದುಬಂದ ಈ ತತ್ವವನ್ನು ಪರಂಪರೆಯ ಜಾಡಿನಲ್ಲಯೇ ಹಚ್ಚು ವ್ಯವಸ್ಥಿತವಾಗಿ, ಅಷ್ಟೇ ಖಚಿತವಾಗಿ ಹೇಳುತ್ತ ಸಾಗಿದ್ದಾರೆ. ಅನುಭಾವ-ತತ್ವ ಸಾಹಿತ್ಯ ಈ ಮೂರು ಈ ವಚನಗಳಲ್ಲಿ ಮುಪ್ಪುರಿಗೊಂಡಿವೆ.

ವಚನ ವಾಗ್ಮಯದ ಮೂರನೆ ಘಟ್ಟದ ಪ್ರಮುಖರಿವರು, ಸಂಸ್ಕೃತ-ಕನ್ನಡಗಳೆರಡರಲ್ಲೂ ಸಮಾನ ಪಾಂಡಿತ್ಯವಿದ್ದವರು, ನಿಶ್ಚಿತ ಶಾಸ್ತ್ರಜ್ಞಾನ ಯೋಗಸಿದ್ಧಿ, ಅನುಭಾವದ ದಿವ್ಯ ತೇಜಸ್ಸನ್ನು ಹೊಂದಿದ್ದಿಇವರು ಜೇವರಗಿ ವಿರಕ್ತಮಠದ ಅಧಿಪತಿಗಳಾಗಿ ವಚನಗಳನ್ನು ಸ್ಥಲಾನುಸರಿಯಾಗಿ ಬರೆದಿರುವರು, ಇವರ ವಚನಗಳು ಮುಖ್ಯವಾಗಿ ಷಟ್ಸ್ಥಲ ತತ್ತ್ವವನ್ನು ನಿರೂಪಿಸುತ್ತದೆ. ಈ ತತ್ತ್ವಗಳು ಪರಂಪರೆಯ ಜಾಡಿನಲ್ಲಿ ಹೆಚ್ಚು ವ್ಯವಸ್ಥಿತವಾಗಿ ಬಂದಿದೆ. ಒಟ್ಟು 14 ಸ್ಥಲಗಳಲ್ಲಿ ವಚನಗಳು ವಿಂಗಡಣೆಗೊಂಡಿವೆ. ಅವರ ವಚನಗಳಲ್ಲಿ ಅನುಭಾವ ತತ್ತ್ವ- ಸಾಹಿತ್ಯ ಮುಪ್ಪರಿಗೊಂಡಿದೆ.