Categories
ವಚನಗಳು / Vachanagalu

ಷಣ್ಮುಖಸ್ವಾಮಿ ವಚನಗಳು

ಅಂಗ ಆಪ್ತ ಸ್ಥಾನ ಸದ್ಭಾವ ಎಂಬ
ಚತುರ್ವಿಧಭಕ್ತಿಯಿಂದೆ
ಗುರುವಿಂಗೆ ತನುವ ಸವೆಸಿದಡೆ
ಆ ತನುವಿನಲ್ಲಿ ದೀಕ್ಷಾ ಶಿಕ್ಷಾ ಸ್ವಾನುಭಾವಜ್ಞಾನಸ್ವರೂಪವಾದ
ಶ್ರೀಗುರುದೇವನು ನೆಲೆಗೊಂಬನು ನೋಡಾ.
ಮಂತ್ರ ಜ್ಞಾನ ಜಪ ಸ್ತೋತ್ರವೆಂಬ ನಾಲ್ಕು ತೆರದ ಭಕ್ತಿಯಿಂದೆ
ಲಿಂಗಕ್ಕೆ ಮನವ ಸವೆಸಿದಡೆ
ಆ ಮನದಲ್ಲಿ ಇಷ್ಟ ಪ್ರಾಣ ಭಾವಸ್ವರೂಪವಾದ
ಪರಶಿವಲಿಂಗವು ನೆಲೆಗೊಂಬುದು ನೋಡಾ.
ಅನ್ನ ವಸ್ತ್ರ ಆಭರಣಾದಿ ಹದಿನೆಂಟು ತೆರದ ಭಕ್ತಿಯಿಂದೆ
ಜಂಗಮಕ್ಕೆ ಧನವ ಸವೆಸಿದಡೆ
ಆ ಧನದಲ್ಲಿ ಸ್ವಯ ಚರ ಪರಸ್ವರೂಪವಾದ
ಮಹಾಘನ ಜಂಗಮವು ನೆಲೆಗೊಂಬುದು ನೋಡಾ.
ಇಂತೀ ತ್ರಿವಿಧಸಂಪತ್ತು ನಿಮ್ಮ ಶರಣರಿಗಲ್ಲದೆ
ಉಳಿದವರಿಗಳವಡದಯ್ಯ ಅಖಂಡೇಶ್ವರಾ./1
ಅಂಗಕ್ಕೆ ಆಚಾರವೆ ಚೆಲುವು.
ಮನಕ್ಕೆ ಮಹಾನುಭಾವವೆ ಚೆಲುವು.
ಆತ್ಮಂಗೆ ಅರುಹೆ ಚೆಲುವು.
ಅಖಂಡೇಶ್ವರನೆಂಬ ನಿಜವಿಂಬುಗೊಂಡವಂಗೆ
ಶರಣರ ಸಂಗವೆ ಚೆಲುವು. /2
ಅಂಗಕ್ಕೆ ಇಷ್ಟಲಿಂಗದ ಸತ್ಕ್ರಿಯವನಳವಡಿಸಿಕೊಂಡು
ಪ್ರಾಣಕ್ಕೆ ಪ್ರಾಣಲಿಂಗದ ಸಮ್ಯಕ್ಜ್ಞಾನಾಚಾರವ ಸಂಬಂಧಿಸಿ,
ಅಂಗಲಿಂಗವೆಂಬ ಭಿನ್ನಭಾವವಳಿದು
ಒಳಹೊರಗೆಲ್ಲ ಅಖಂಡಜ್ಞಾನ ಸತ್ಕ್ರಿಯಾಚಾರಮಯವಾದ ಶರಣಂಗೆ
ವಾರ ತಿಥಿ ಲಗ್ನ ವಿಘ್ನಂಗಳಿಲ್ಲ, ಶುಭಾಶುಭಂಗಳಿಲ್ಲ,
ಸ್ತುತಿನಿಂದೆಗಳಿಲ್ಲ, ಪೂಜ್ಯಾಪೂಜ್ಯಂಗಳಿಲ್ಲವಾಗಿ,
ಅಖಂಡೇಶ್ವರಾ, ನಿಮ್ಮ ಶರಣ ಎಂತಿರ್ದಂತೆ
ಸಹಜಬ್ರಹ್ಮವೆ ಆಗಿರ್ಪನು./3
ಅಂಗದ ಗುಣವಳಿಯದೆ, ಪ್ರಾಣದ ಪ್ರಪಂಚು ಹಿಂಗದೆ,
ಭಾವದ ಭ್ರಮೆಯುಡುಗದೆ, ಮನದ ಮಾಯವಡಗದೆ,
ಆತ್ಮನ ಅಹಂಮಮತೆ ಕೆಡದೆ,
ಲಿಂಗಕ್ಕೆ ತಮಗೆ ಏಕಭಾಜನವೆಂದು ನುಡಿವ
ಕಾಕುಮಾನವರನೇನೆಂಬೆನಯ್ಯಾ ಅಖಂಡೇಶ್ವರಾ./4
ಅಂಗವಿಕಾರಿಗೇಕೊ ಲಿಂಗದೊಡನೆ ಏಕಭಾಜನ ?
ಆತ್ಮಸುಖಿಗೇಕೊ ಲಿಂಗದೊಡನೆ ಏಕಭಾಜನ ?
ಹುಸಿ ಡಂಭಕಗೇಕೊ ಲಿಂಗದೊಡನೆ ಏಕಭಾಜನ ?
ಜಾರಚೋರಂಗೇಕೊ ಲಿಂಗದೊಡನೆ ಏಕಭಾಜನ ?
ನಮ್ಮ ಅಖಂಡೇಶ್ವರನ ನಿಜವನರಿಯದವರಿಗೇಕೊ
ಪರಮ ಶಿವಲಿಂಗದೊಡನೆ ಏಕಭಾಜನ ?/5
ಅಂಜನಗಿರಿಯಲ್ಲಿ ಅರ್ಕನ ಉದಯವ ಕಂಡೆ.
ಸಂಜೆಯ ಮಬ್ಬು ಅಂಜಿ ಓಡಿದುದ ಕಂಡೆ.
ಕುಂಜರನ ಮರಿಗಳ ಕೋಳಿ ನುಂಗಿದುದ ಕಂಡು
ಬೆರಗಾದೆನಯ್ಯಾ ಅಖಂಡೇಶ್ವರಾ !/6
ಅಂಜನದ ಬಲದಿಂದೆ ನೆಲದ ಮರೆಯ
ದ್ರವ್ಯವ ಕಾಣುವಂತೆ,
ಎನ್ನ ಚಿತ್ತಿನ ಮಧ್ಯದಲ್ಲಿ
ನಿತ್ಯ ಶಿವಜ್ಞಾನಾಂಜನವು ಪ್ರಜ್ವಲಿಸಲಾಗಿ,
ತತ್ವಾತತ್ತ್ವಂಗಳು ವ್ಯಕ್ತವಾದವು.
ಅಖಂಡೇಶ್ವರನೆಂಬ ಪರವಸ್ತುವು ಹೂಳಿರ್ದ ಗೊತ್ತು ಕಾಣಬಂದಿತ್ತು./7
ಅಂಜನಸಿದ್ಧಿಯ ಸಾಧಿಸುವ ಅಣ್ಣಗಳ ಕಣ್ಮನಕ್ಕೆ
ಮಂಜುಗವಿಸಿ ಹೊರಗಾದನು ನೋಡಾ ಪರಶಿವನು.
ಘುಟಿಕಾಸಿದ್ಧಿಯ ಸಾಧಿಸುವ ಅಣ್ಣಗಳ ಕಣ್ಮನಕ್ಕೆ
ಸಟೆಯ ತೋರಿಸಿ ಹೊರಗಾದನು ನೋಡಾ ಪರಶಿವನು.
ಯಂತ್ರ ಮಂತ್ರ ತಂತ್ರ ಸಿದ್ಧಿ ವಾದ ವಶ್ಯವ ಸಾಧಿಸುವ ಅಣ್ಣಗಳ ಕಣ್ಮನಕ್ಕೆ
ಗಾಢ ಕತ್ತಲೆಗವಿಸಿ ಹೊರಗಾದನು ನೋಡಾ ಪರಶಿವನು.
ಭಕ್ತಿಸಿದ್ಧಿಯ ಸಾಧಿಸುವ ಅಣ್ಣಗಳ ಮನಕ್ಕೆ ಮುಕ್ತಿಯ ಬೆಳಗನೇ ತೋರಿ
ಒಳಗಾಗಿರ್ಪನು ನೋಡಾ ನಮ್ಮ ಅಖಂಡೇಶ್ವರನೆಂಬ ಪರಶಿವನು. /8
ಅಂಜುವೆನಂಜುವೆನಯ್ಯ ಅಡಿಗಡಿಗೆ
ಗುರುವಿನಾಣೆ ಇಡಲಮ್ಮದೆ.
ಅಂಜುವೆನಂಜುವೆನಯ್ಯ ಅಡಿಗಡಿಗೆ
ಲಿಂಗದಾಣೆ ಇಡಲಮ್ಮದೆ.
ಅಂಜುವೆನಂಜುವೆನಯ್ಯ ಅಡಿಗಡಿಗೆ
ಜಂಗಮದಾಣೆ ಇಡಲಮ್ಮದೆ.
ಅಂಜುವೆನಂಜುವೆನಯ್ಯ ಅಡಿಗಡಿಗೆ
ನಿಮ್ಮ ಶರಣರಾಣೆ ಇಡಲಮ್ಮದೆ ಅಖಂಡೇಶ್ವರಾ./9
ಅಂಡಜ ಇಪ್ಪತ್ತೊಂದು ಲಕ್ಷ, ಪಿಂಡಜ ಇಪ್ಪತ್ತೊಂದು ಲಕ್ಷ,
ಉದ್ಬಿಜ ಇಪ್ಪತ್ತೊಂದು ಲಕ್ಷ, ಜರಾಯುಜ ಇಪ್ಪತ್ತೊಂದು ಲಕ್ಷ,
ಇಂತು ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೊಳಗೆ
ಒಂದೊಂದು ಜನ್ಮದೊಳಗೆ ಸಹಸ್ರ ಸಹಸ್ರವೇಳೆ ಹುಟ್ಟಿಬಂದ
ಅನೇಕ ದುಃಖವಂತಿರಲಿ.
ಮುಂದೆ ಮನುಷ್ಯದೇಹವಿಡಿದು ಬಂದ ದುಃಖಮಂ ಪೇಳ್ವೆನದೆಂತೆನೆ :
ತಂದೆಯ ವಿಕಾರದದೆಸೆಯಿಂದೆ ಬಂದು ಬಿಂದುರೂಪಾಗಿ,
ತಾಯಿಯ ಬಸುರಲ್ಲಿ ನಿಂದು ಒಂಬತ್ತುತಿಂಗಳ ಪರಿಯಂತರ
ಅವಯವಂಗಳು ಬಲಿದು ಪಿಂಡವರ್ಧನವಾಗಿ,
ಕದ್ದ ಕಳ್ಳನ ಹೆಡಗೈಯಕಟ್ಟಿ ಸೆರೆಮನೆಯಲ್ಲಿ ಕುಳ್ಳಿರಿಸುವಂತೆ,
ಗರ್ಭವೆಂಬ ಸೆರೆಮನೆಯಲ್ಲಿ ಶಿಶುವು
ಮುಚ್ಚಿದ ಕಣ್ಣು, ಮುಗಿದ ಬಾಯಾಗಿ, ಕುಕ್ಕುಟಾಸನದಲ್ಲಿ ಕುಳ್ಳಿರ್ದು,
ಕಡಿವ ಜಂತುಜಂಗುಳಿಯ ಬಾಧೆ,
ಸುಡುವ ಜಠರಾಗ್ನಿಯ ಬಾಧೆ,
ಎಡದಲ್ಲಿ ಮೂತ್ರದ ತಡಿಕೆಯ ಬಾಧೆ,
ಬಲದಲ್ಲಿ ಅಮೇಧ್ಯದ ಹಡಿಕೆಯ ಬಾಧೆ,
ಇಂತಿವು ಮೊದಲಾದನಂತಕೋಟಿ ಬಾಧೆಗಳಿಂದೆ
ದಿನದಿನಕ್ಕೆ ದುಃಖಮಂಬಡುತಿರ್ದು,
ಆ ಮೇಲೆ ಜಾತಿಸ್ಮರತ್ವ ಉದಯವಾಗಿ,
ತನ್ನ ಹಿಂದಣ ಧರ್ಮಕರ್ಮಂಗಳ ಪುಣ್ಯಪಾಪಂಗಳ
ಅರಹು ಮರಹುಗಳನಾರೈದು ನೋಡಿ,
ಹಿಂದರಿಯದ ಪಾಪದ ದೆಸೆಯಿಂದೆ ಈ ಗರ್ಭನರಕಕ್ಕೆ ಬಂದೆ,
ಇನ್ನು ಮುಂದೆ ತೆರನೇನೆಂದು ತನ್ನೊಳಗೆ ತಾನೆ ಚಿಂತಿಸಿ
ಸರ್ವರಿಗೆ ಪರಮೇಶ್ವರನೇ ಕರ್ತನು,
ಸರ್ವರ ಭವಪಾಶಂಗಳ ಛೇದಿಸುವಾತನು ಪರಮೇಶ್ವರನೆಂದರಿದು,
ಮನದಲ್ಲಿ ನಿಶ್ಚೈಸಿಕೊಂಡು ಆ ಪರಮೇಶ್ವರಂಗೆ ಶಿವಧೋ ಶಿವಧೋ
ಎಂದು ಮೊರೆಯಿಡುತ್ತ ಶಿವಧ್ಯಾನಮಂ ಮಾಳ್ಪ ಸಮಯದಲ್ಲಿ
ಕೋಟಿಸಿಡಿಲು ಹೊಯ್ದಂತೆ ವಿಷ್ಣುಪ್ರಸೂತಿಯೆಂಬ ಗಾಳಿ ಬೀಸಲು,
ಅದಕಂಡು ಥರಥರನೆ ನಡುಗಿ ಧ್ಯಾನಪಲ್ಲಟವಾಗಿ
ದಿಗ್ಭ್ರಮಣೆಗೊಂಡು ಊಧ್ರ್ವಮುಖವಾಗಿ ಕುಳಿತಿರ್ದ ಶಿಶುವು
ಗಿರ್ರನೆ ತಿರುಗಿ ತಲೆಕೆಳಗಾಗಿ
ಕರ್ತಾರನ ಕಂಬೆಚ್ಚಿನಲ್ಲಿ ಚಿನ್ನದ ಸಲಾಕೆ ತೆಗವಂತೆ,
ಬಚ್ಚಲಹುಳುವಿನಂದದಿ ಯೋನಿಯೆಂಬ
ಸೂಕ್ಷ್ಮದ್ವಾರದಿಂದೆ ಪೊರಮಟ್ಟು ಹುಟ್ಟಿದಲ್ಲಿ
ಕೋಟಿಬಾಧೆಗಳಿಂದ ನೊಂದು ಹವ್ವನೆ ಹಾರಿ ಕಡುದುಃಖಮಂಬಟ್ಟು
ಪಿಂದಣ ಜಾತಿಸ್ಮರತ್ವ ಕೆಟ್ಟು, ಮತಿ ಮಸುಳಿಸಿ,
ತನ್ನ ಮಲಮೂತ್ರಂಗಳಲ್ಲಿ ತಾ ಹೊರಳಾಡಿ
ಬಾಲಲೀಲೆಯ ಸುಖದುಃಖಂಗಳನನುಭವಿಸಿ,
ಆ ಬಾಲಲೀಲೆಯು ಹಿಂದುಳಿದ ಮೇಲೆ ಯೌವನದ ವಯಸ್ಸೊದಗಿದಲ್ಲಿ,
ಕಾಮದಲ್ಲಿ ಕರಗಿ ಕ್ರೋಧದಲ್ಲಿ ಕೊರಗಿ
ಮದಮತ್ಸರಂಗಳಲ್ಲಿ ಮುಂದುಗೆಟ್ಟು
ನಾನಾ ವ್ಯಾಪಾರವನಂಗೀಕರಿಸಿ
ಬಂದ ಯೋನಿಯೆಂದರಿಯದೆ, ಉಂಡ ಮೊಲೆಯೆಂದರಿಯದೆ,
ಕಾಮವಿಕಾರ ತಲೆಗೇರಿ ವಿಷಯಾತುರನಾಗಿ,
ಈಳಿಗಾರನ ದೆಸೆಯಿಂದ ಈಚಲಮರ ನಿಸ್ಸಾರವಾದಂತೆ,
ಸ್ತ್ರೀಯರ ಸಂಗದಿಂದೆ ದೇಹದೊಳಗಣ ಊರ್ಧ್ವಬಿಂದು
ಜಾರಿ ಜಾರಿ ಇಳಿದು ಸೋರಿ ಸೋರಿ ಹೋಗಿ ದೇಹವು ನಿಸ್ಸಾರವಾಗಿ,
ಯೌವನದ ಬಲಗೆಟ್ಟು ಮುಪ್ಪಾವರಿಸಿ ಅಚೇತನಗೊಂಡು
ಸರ್ವಾಂಗವೆಲ್ಲ ನೆರೆತೆರೆಗಳಿಂದ ಮುಸುಕಲ್ಪಟ್ಟಾತನಾಗಿ,
ಆಧಿ ವ್ಯಾಧಿ ವಿಪತ್ತು ರೋಗ ರುಜೆಗಳಿಂದೆ ಬಹು ದುಃಖಬಟ್ಟು,
ಎದೆ ಗೂಡುಗಟ್ಟಿ, ಬೆನ್ನು ಬಾಗಿ, ಕಣ್ಣು ಒಳನಟ್ಟು,
ಶರೀರ ಎಳತಾಟಗೊಂಡು, ಕಾಲಮೇಲೆ ಕೈಯನೂರಿ
ಕೋಲವಿಡಿದು ಏಳುತ್ತ, ನಾನಾ ತೆರದ ದುಃಖಧಾವತಿಯಿಂದೆ
ಆತ್ಮ ಕೆಟ್ಟು ನಷ್ಟವಾಗಿ ಹೋಯಿತ್ತು ನೋಡಾ.
ಇದ ಕಂಡು ನಾನಂಜಿ ಮರಳಿ ಜನ್ಮಕ್ಕೆ ಬರಲಾರದೆ
ನಿಮ್ಮ ಮೊರೆಹೊಕ್ಕೆನಯ್ಯಾ ಅಖಂಡೇಶ್ವರಾ./10
ಅಂಡಾಭರಣರು ಘನವೆಂಬೆನೆ ? ಅಂಡಾಭರಣರು ಘನವಲ್ಲ.
ರುಂಡಾಭರಣರು ಘನವೆಂಬೆನೆ ? ರುಂಡಾಭರಣರು ಘನವಲ್ಲ.
ಗಂಗಾಧರರು ಘನವೆಂಬೆನೆ ? ಗಂಗಾಧರರು ಘನವಲ್ಲ.
ಗೌರೀವಲ್ಲಭರು ಘನವೆಂಬೆನೆ ? ಗೌರೀವಲ್ಲಭರು ಘನವಲ್ಲ.
ಚಂದ್ರಶೇಖರರು ಘನವೆಂಬೆನೆ ? ಚಂದ್ರಶೇಖರರು ಘನವಲ್ಲ.
ನಂದಿವಾಹನರು ಘನವೆಂಬೆನೆ ? ನಂದಿವಾಹನರು ಘನವಲ್ಲ.
ತ್ರಿಯಂಬಕರು ಘನವೆಂಬೆನೆ ? ತ್ರಿಯಂಬಕರು ಘನವಲ್ಲ.
ತ್ರಿಪುರವೈರಿ ಘನವೆಂಬೆನೆ ? ತ್ರಿಪುರವೈರಿ ಘನವಲ್ಲ.
ಪಂಚಮುಖರು ಘನವೆಂಬೆನೆ ? ಪಂಚಮುಖರು ಘನವಲ್ಲ.
ಫಣಿಕುಂಡಲರು ಘನವೆಂಬೆನೆ ? ಫಣಿಕುಂಡಲರು ಘನವಲ್ಲ.
ಶೂಲಪಾಣಿಗಳು ಘನವೆಂಬೆನೆ ? ಶೂಲಪಾಣಿಗಳು ಘನವಲ್ಲ.
ನೀಲಲೋಹಿತರು ಘನವೆಂಬೆನೆ ? ನೀಲಲೋಹಿತರು ಘನವಲ್ಲ.
ಅದೇನು ಕಾರಣವೆಂದೊಡೆ,
ಇಂತಿವರಾದಿಯಾಗಿ ಅನಂತಕೋಟಿ ರುದ್ರಗಣಂಗಳು
ಶರಣನ ಸರ್ವಾಂಗದಲ್ಲಿ ಅಡಗಿಹರಾಗಿ
ಅಖಂಡೇಶ್ವರಾ, ನಿಮ್ಮ ಶರಣ ಘನಕ್ಕೆ ಘನವೆಂಬೆನಯ್ಯಾ./11
ಅಂತರಂಗದಲ್ಲಿ ಅಖಂಡ ಪರಿಪೂರ್ಣ
ಜ್ಞಾನದ ನಿಲವನರಿದು,
ಬಹಿರಂಗದಲ್ಲಿ ಸತ್ಯ ಸದಾಚಾರವನಳವಡಿಸಿಕೊಂಡು,
ಹಿಂದು ಮುಂದಣ ಶಂಕೆಯ ಹರಿದು,
ಆನಂದವೇ ಒಡಲಾಗಿ ಅಭೇದ್ಯಲಿಂಗದ ಬೆಳಗಿನಲ್ಲಿ ಸುಳಿವ
ಅಪ್ರಮಾಣ ಶರಣರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ./12
ಅಂತರಂಗದಲ್ಲಿ ಅರುಹಿನ ಶುದ್ಧಿಯನರಿಯದೆ,
ಬಹಿರಂಗದಲ್ಲಿ ಕಂಥೆ ಕರ್ಪರ ದಂಡ ಕಮಂಡಲು
ಭಸ್ಮದಗುಂಡಿಗೆ ಎಂಬ ಪಂಚಮುದ್ರೆಗಳ ಧರಿಸಿ,
ಧರೆಯ ಮಂಡಲದೊಳಗೆ ಚರಿಸುವ
ಅಣ್ಣಗಳ ಕಂಡು ಬೆರಗಾದೆನಯ್ಯಾ.
ಅದೇನು ಕಾರಣವೆಂದೊಡೆ :
ಪುರಜನರ ಮೆಚ್ಚಿಸುವೆನೆಂದು ಜಾತಿಕಾರನು
ಓತು ವೇಷವ ಧರಿಸಿ ಒಡಲ ಹೊರೆವಂತೆ,
ಕೊಡುಕೊಂಬುವ ಭಕ್ತನ ಮೆಚ್ಚಿಸುವೆನೆಂದು
ಮೃಡನ ವೇಷವ ಧರಿಸಿ, ಒಡಲ ಕಕ್ಕುಲತೆಗೆ ತಿರುಗುವ
ಕಡುಪಾತಕ ಜಡಜೀವಿಗಳ ಮುಖವ
ನೋಡಲಾಗದಯ್ಯಾ ಅಖಂಡೇಶ್ವರಾ. /13
ಅಂದಿನ ಶರಣರಿಗೆ ಇಂದಿನವರು ಸರಿಯಲ್ಲವೆಂದು ನುಡಿವ
ಸಂದೇಹ ಸೂತಕ ಹೊಲೆಯರ ಮಾತ ಕೇಳಲಾಗದು.
ಆ ಪಂಚಮಹಾಪಾತಕರ ಮುಖವ ನೋಡಲಾಗದು.
ಅದೆಂತೆಂದೊಡೆ :
ತಾ ಮೂಕೊರೆಯನೆಂದರಿಯದೆ ಕನ್ನಡಿಗೆ ಮೂಗಿಲ್ಲೆಂಬಂತೆ.
ತಾ ಕುಣಿಯಲಾರದೆ ಅಂಗಳ ಡೊಂಕೆಂಬಂತೆ,
ತನ್ನಲ್ಲಿ ನಡೆನುಡಿ ಸಿದ್ಧಾಂತವಿಲ್ಲದೆ
ಇತರವ ಹಳಿವ ಅಧಮ ಮಾದಿಗರನೇನೆಂಬೆನಯ್ಯಾ !
ಅಷ್ಟಾವರಣ ಪಂಚಾಚಾರವು
ಅಂದೊಂದು ಪರಿ ಇಂದೊಂದು ಪರಿಯೇ ?
ಷಟ್ಸ್ಥಲ ಸ್ವಾನುಭಾವವು
ಅಂದೊಂದು ಪರಿ ಇಂದೊಂದು ಪರಿಯೇ ?
ಭಕ್ತಿ ವಿರಕ್ತಿ ಉಪರತಿ ಜ್ಞಾನ ವೈರಾಗ್ಯ
ಅಂದೊಂದು ಪರಿ ಇಂದೊಂದು ಪರಿಯೇ ?
ನಡೆನುಡಿ ಸಿದ್ಧಾಂತವಾದ ಶರಣರ ಘನವು
ಅಂದೊಂದು ಪರಿ ಇಂದೊಂದು ಪರಿಯೇ ?
ಇಂತೀ ವಿಚಾರವನರಿಯದೆ
ಪರಸಮಯವನಾದಡೂ ಆಗಲಿ,
ಶಿವಸಮಯವನಾದಡೂ ಆಗಲಿ,
ವರ್ಮಗೆಟ್ಟು ನುಡಿವ ಕರ್ಮಜೀವಿಗಳ ಬಾಯಲ್ಲಿ
ಬಾಲ್ವುಳ ಸುರಿಯದೆ ಮಾಣ್ಬುವೆ ಹೇಳಾ ಅಖಂಡೇಶ್ವರಾ ?/14
ಅಂದೊಬ್ಬ ದೇವ, ಇಂದೊಬ್ಬ ದೇವನೆಂದು
ಸಂದೇಹಗೊಳಬೇಡ ಎಲೆ ಮನವೆ.
ಅಂದು ಕೈಲಾಸದಲ್ಲಿ ಮನುಮುನಿ ದೇವದಾನವರಿಂದ
ಓಲಗವ ಕೊಂಬ ದೇವ ಇಂದು ಎನ್ನ ಕರಸ್ಥಲದಲ್ಲಿದ್ದಾನೆ ;
ಇಲ್ಲಿಯೇ ನೋಡು ಎಲೆ ಮನವೆ.
ಅಂದು ಚೋಳಾದಿಗೊಲಿದ ದೇವ ಇಂದು ಎನ್ನ ಕರಸ್ಥಲದಲ್ಲಿದ್ದಾನೆ;
ಇಲ್ಲಿಯೇ ನೋಡು ಎಲೆ ಮನವೆ.
ಅಂದು ಅರವತ್ತುಮೂರು ಪುರಾತನರಿಗೊಲಿದು
ಶಾಂಭವಪುರಕ್ಕೊಯ್ದ ದೇವ
ಇಂದು ಎನ್ನ ಕರಸ್ಥಲದಲ್ಲಿದ್ದಾನೆ ;
ಇಲ್ಲಿಯೇ ನೋಡು ಎಲೆ ಮನವೆ.
ಅಂದು ಬಸವಣ್ಣ ಮೊದಲಾದ ಅಸಂಖ್ಯಾತ ಪ್ರಮಥಗಣಂಗಳ
ತನ್ನೊಳಗೆ ಗರ್ಭಿಕರಿಸಿಕೊಂಡ ದೇವ
ಇಂದು ಎನ್ನ ಕರಸ್ಥಲದಲ್ಲಿದ್ದಾನೆ ;
ಇಲ್ಲಿಯೆ ನೋಡು ಎಲೆ ಮನವೆ.
ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡು ಬೆಳಗುವ
ಪರಶಿವನ ನಂಬಿ ನಿಶ್ಚಯಿಸಿಕೊಂಡೆಯಾದಡೆ
ನಮ್ಮ ಅಖಂಡೇಶ್ವರಲಿಂಗದಲ್ಲಿ
ನಿನ್ನಿಂದ ಬಿಟ್ಟು ಸುಖಿಗಳಾರಿಲ್ಲ ನೋಡಾ ಎಲೆ ಮನವೆ./15
ಅಂಧಕಂಗೆ ಕಣ್ಣು ಬಂದಂತೆ, ಹೆಳವಂಗೆ ಕಾಲು ಬಂದಂತೆ,
ಬಂಜೆಗೆ ಮಗನಾದಂತೆ, ನಿರ್ಧನಿಕಂಗೆ ನಿಧಾನವು ಸೇರಿದಂತೆ,
ಮರಣವುಳ್ಳವಂಗೆ ಮರುಜೇವಣಿಗೆ ದೊರೆಕೊಂಡಂತೆ,
ಅಖಂಡೇಶ್ವರಾ, ನೀವೆನ್ನ ಕರಸ್ಥಲಕ್ಕೆ ಬಂದ ಫಲವು ಇಂತುಟಯ್ಯ./16
ಅಂಬರದೇಶದ ಕುಂಭ ಕೋಣೆಯೊಳಗೆ
ಜಂಬುಲಿಂಗಪೂಜೆಯ ಸಂಭ್ರಮವ ನೋಡಾ !
ಅಂಬುಜಮುಖಿಯರು ಆರತಿಯನೆತ್ತಿ
ಶಂಭು ಶಿವಶಿವ ಹರಹರ ಎನುತಿರ್ಪರು ನೋಡಾ !
ತುಂಬಿದ ಹುಣ್ಣಿಮೆಯ ಬೆಳದಿಂಗಳು
ಒಂಬತ್ತು ಬಾಗಿಲಲ್ಲಿ ತುಂಬಿ ಹೊರಸೂಸುತಿರ್ಪುದು ನೋಡಾ !
ಈ ಸಂಭ್ರಮವನೇನ ಹೇಳುವೆನಯ್ಯಾ ಅಖಂಡೇಶ್ವರಾ !/17
ಅಂಬರದೊಳಗಣ ಅಮೃತದ ಕೊಣನುಕ್ಕಿ
ಕುಂಭಿನಿಯ ಮೇಲೆ ಸೂಸಲು,
ಅಲ್ಲಿದ್ದ ಸಕಲ ಜನವೆಲ್ಲ
ಅಮೃತವ ಕಂಡು ದಣಿಯಲುಂಡು,
ಅನಿತ್ಯದ ಭೋಗವ ಮರೆದು
ಮರ್ತ್ಯದ ಹಂಗು ಹರಿದು
ನಿತ್ಯಮುಕ್ತರಾಗಿರ್ದರಯ್ಯಾ ಅಖಂಡೇಶ್ವರಾ./18
ಅಕುಲಜ ಅಧಮ ಮೂರ್ಖನಾದಡಾಗಲಿ
ಮುಕ್ಕಣ್ಣ ಹರನ ಭಕ್ತಿಯ ಹಿಡಿದಾತನು
ಸಿಕ್ಕಬಲ್ಲನೇ ಯಮನಬಾಧೆಗೆ ?
ಆತನು ದೇವ ದಾನವ ಮಾನವರೊಳಗೆ ಪೂಜ್ಯನು ನೋಡಾ !
ಅದೆಂತೆಂದೊಡೆ :ಶಿವಧರ್ಮೆ-
“ಅಂತ್ಯಜೋ ವಾಧಮೋ ವಾಪಿ ಮೂರ್ಖೊ ವಾ ಪಂಡಿತೋಪಿ ವಾ |
ಶಿವಭಾವಂ ಪ್ರಪನ್ನಶ್ಚೇತ್ ಪೂಜ್ಯಸ್ಸರ್ವೆ ಸ್ಸುರಾಸುರೈಃ ||”
ಎಂದುದಾಗಿ,
ಶಿವಭಕ್ತನೇ ಶ್ರೇಷ್ಠನು ನೋಡಾ ಅಖಂಡೇಶ್ವರಾ./19
ಅಖಂಡಜ್ಞಾನಭರಿತ ಶರಣಂಗೆ ಪೃಥ್ವಿಯೆ ಖಟ್ವಾಂಗ,
ಆಕಾಶವೇ ಕಿರೀಟ, ಮೇಘಾದಿಗಳೆ ಮಜ್ಜನ,
ನಕ್ಷತ್ರಂಗಳೆ ಪುಷ್ಪಮಾಲೆಗಳು, ವೇದಂಗಳೆ ಮುಖಂಗಳು,
ಶಾಸ್ತ್ರಂಗಳೆ ಅವಯವಂಗಳು,
ಸೋಮಸೂರ್ಯಾಗ್ನಿಗಳೆ ನಯನಂಗಳು,
ದಶದಿಕ್ಕುಗಳೆ ಹೊದಿಕೆಗಳು, ಬ್ರಹ್ಮಾಂಡವೆ ಒಡಲಾದ
ಮಹಾಮಹಿಮನ ಏನೆಂದು ಉಪಮಿಸಬಹುದಯ್ಯಾ ಅಖಂಡೇಶ್ವರಾ. ?/20
ಅಗ್ನಿಯ ಸಂಗದಿಂದೆ ಕಾನನ ಕೆಟ್ಟಂತೆ,
ಜ್ಯೋತಿಯ ಸಂಗದಿಂದ ಕತ್ತಲೆ ಕೆಟ್ಟಂತೆ,
ಪರುಷದ ಸಂಗದಿಂದ ಕಬ್ಬಿಣ ಕೆಟ್ಟಂತೆ,
ಲಿಂಗಾನುಭಾವಿಗಳ ಸಂಗದಿಂದೆ
ಎನ್ನ ಹುಟ್ಟು ಹೊಂದುಗಳು ನಷ್ಟವಾಗಿ
ಕೆಟ್ಟುಹೋದುವು ನೋಡಾ ಅಖಂಡೇಶ್ವರಾ. /21
ಅಗ್ನಿಯೆ ಅಂಗವಾದ ಪ್ರಸಾದಿಗೆ ನಿರಹಂಕಾರವೆ ಹಸ್ತ.
ಆ ಹಸ್ತಕ್ಕೆ ಇಚ್ಛಾಶಕ್ತಿ, ಆ ಶಕ್ತಿಗೆ ಶಿವಲಿಂಗ,
ಆ ಶಿವಲಿಂಗಕ್ಕೆ ನೇತ್ರೇಂದ್ರಿಯವೆ ಮುಖ,
ಆ ಮುಖಕ್ಕೆ ಸುರೂಪುಪದಾರ್ಥ ; ಆ ಪದಾರ್ಥವನು
ನೇತ್ರದಲ್ಲಿಹ ಶಿವಲಿಂಗಕ್ಕೆ ಸಾವಧಾನಭಕ್ತಿಯಿಂದರ್ಪಿಸಿ,
ಆ ಸುರೂಪುಪ್ರಸಾದವನು ಪಡೆದು ಸುಖಿಸುವಾತನೆ
ಪ್ರಸಾದಿಯಯ್ಯಾ ಅಖಂಡೇಶ್ವರಾ./22
ಅಜಹರಿಸುರರೆಲ್ಲ ಆವ ದೇವನ ಶ್ರೀಚರಣವನರ್ಚಿಸಿ
ಫಲಪದವ ಪಡೆದರು ತಿಳಿದು ನೋಡಿರೋ
ಮಾಯಾವಾದಿಗಳು ನೀವೆಲ್ಲ.
ಮನು ಮುನಿಗಳು ಮರುಳತಾಂಡವರು
ಅಷ್ಟದಿಕ್ಪಾಲಕರೆಲ್ಲ ಆವ ದೇವನ ಶ್ರೀ ಚರಣವನರ್ಚಿಸಿ
ಫಲಪದವ ಪಡೆದರು ತಿಳಿದು ನೋಡಿರೋ
ಮಾಯಾವಾದಿಗಳು ನೀವೆಲ್ಲ.
ಕಾಲ ಕಾಮ ದಕ್ಷಾದಿಗಳು ಆವ ದೇವನಿಂದ ಅಳಿದು ಹೋದರು
ತಿಳಿದು ನೋಡಿರೊ ಮಾಯಾವಾದಿಗಳು ನೀವೆಲ್ಲ.
ವೇದ ಶಾಸ್ತ್ರ ಆಗಮ ಪುರಾಣ ಶ್ರುತಿ ಸ್ಮೃತಿಗಳೆಲ್ಲ
ಆವ ದೇವನ ಹೊಗಳುತಿರ್ಪುವು ಹೇಳಿರೋ
ಮಾಯಾವಾದಿಗಳು ನೀವೆಲ್ಲ.
ಇಂತೀ ಭೇದವ ಕೇಳಿ ಕಂಡು ತಿಳಿದು ನಂಬಲರಿಯದೆ
ದಿಂಡೆಯ ಮತದ ಡಂಬಕ ಮೂಳ ಹೊಲೆಯರಂತಿರಲಿ.
ಕಾಕು ದೈವದ ಗಂಡ ಲೋಕಪತಿ ಏಕೋದೇವ
ನಮ್ಮ ಅಖಂಡೇಶ್ವರನಲ್ಲದೆ ಅನ್ಯದೈವವಿಲ್ಲವೆಂದು
ಮುಂಡಿಗೆಯನಿಕ್ಕಿ ಹೊಯ್ವೆನು ಡಂಗುರವ ಮೂಜಗವರಿವಂತೆ. /23
ಅಡವಿಯಲ್ಲಿರ್ದ ಗೋವು ಮನೆಯಲ್ಲಿರ್ದ
ಕರುವಿಂಗೆ ಚಿಂತಿಸಿ ಬಂದು
ಹಾಲನೂಡಿ ಮೋಹಮಾಡುವುದಲ್ಲದೆ,
ಆ ಕರುವೆತ್ತ ಬಲ್ಲುದಯ್ಯ !
ನಾನು ಕರ್ಮದೇಹವಿಡಿದು ಪರಿಭವದಲ್ಲಿ ತೊಳಲುತ್ತಿರಲು,
ನೀನು ದಯಹುಟ್ಟಿ ಎನ್ನ ಮರವೆಯ ಸಂಸಾರವ ತೊಲಗಿಸಿ
ಕರುಣದಿಂದ ಸಲಹಬೇಕೆಂಬ ಚಿಂತೆ ನಿನಗಲ್ಲದೆ
ನಾನೇನಬಲ್ಲೆನಯ್ಯ ಅಖಂಡೇಶ್ವರಾ ?/24
ಅಡಿಮುಡಿಯಿಲ್ಲದ ಪ್ರಸಾದ, ನಡುಕಡೆಯಿಲ್ಲದ ಪ್ರಸಾದ,
ಎಡೆಬಿಡುವಿಲ್ಲದ ಪ್ರಸಾದ,
ಅಖಂಡೇಶ್ವರನೆಂಬ ಮಹಾಘನ ಪರಾತ್ಪರ
ಪರಿಪೂರ್ಣಪ್ರಸಾದದೊಳಗೆ ಮನವಡಗಿ
ನೆನಹುನಿಷ್ಪತ್ತಿಯಾಗಿ ಏನೆಂದರಿಯದಿರ್ದೆನಯ್ಯಾ./25
ಅಣುವಿಂಗೆ ಅಣು ಮಹತ್ತಿಂಗೆ ಮಹತ್ತಾದ
ಮಹಾಲಿಂಗದೊಳಗೆ ಶರಣನಿರ್ಪನು.
ಆ ಶರಣನೊಳಹೊರಗೆಲ್ಲ ಮಹಾಲಿಂಗವೆ ಭರಿತವಾಗಿರ್ಪುದಾಗಿ,
ನಮ್ಮ ಅಖಂಡೇಶ್ವರನ ಶರಣನ
ಮೂರ್ತಿ ಸಣ್ಣದಾದಡು ಕೀರ್ತಿ ಜಗದಗಲಿರ್ಪುದು ನೋಡಾ./26
ಅಣುವಿಂಗೆ ಅಣು ಮಹತ್ತಿಂಗೆ ಮಹತ್ತೆಂದೆನಿಸುವ
ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ.
ಉಪಮಾತೀತ ವಾಙ್ಮನಕ್ಕಗೋಚರನೆಂದೆನಿಸುವ
ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ.
ಶ್ರುತಿತತಿಯ ಶಿರದ ಮೇಲೆ
ಅತ್ಯತಿಷ್ಠದ್ದಶಾಂಗುಲನೆಂದೆನಿಸುವ
ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ.
ಭಾವಭರಿತ ಜ್ಞಾನಗಮ್ಯನೆಂದೆನಿಸುವ
ಲಿಂಗದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ.
ಅಖಂಡೇಶ್ವರನೆಂಬ ಅನಾದಿಪರಶಿವನ
ಕಂಡೆನಯ್ಯ ಎನ್ನ ಕರಸ್ಥಲದಲ್ಲಿ./27
ಅನಂತಕಾಲ ಎನ್ನ ಒಡಲ ಮರೆಯೊಳಗೆ ಅಡಗಿರ್ದು
ಎನಗೆ ಕಾಣಿಸದೆ ಇದ್ದುದು ಇದೇನು ನಿಮ್ಮ ಗಾರುಡವಯ್ಯಾ !
ನೀವು ನಿಮ್ಮ ಕರುಣದಿಂದೆ ಎನ್ನ ಒಡಲ ಮರವೆಯ ಒಡೆದು,
ಎನ್ನ ಕಣ್ಣ ಮುಂದಣ ಸತ್ತ್ವ-ರಜ-ತಮದ ಪರದೆಯ ಹರಿಯಲೊಡನೆ
ನಿಮ್ಮ ನಿತ್ಯದ ನಿಲವ ಕಂಡೆನಯ್ಯ ಅಖಂಡೇಶ್ವರಾ./28
ಅನಂತಕೋಟಿ ಬ್ರಹ್ಮಾಂಡಗಳನೊಳಕೊಂಡ
ಮಹಾಘನಲಿಂಗದಲ್ಲಿ
ತನ್ನ ಅಂಗ ಮನ ಪ್ರಾಣೇಂದ್ರಿಯ ವಿಷಯ ಕರಣಂಗಳ ಹೂಳಿ,
ತಾನಿಲ್ಲದೆ ನಡೆವುತ್ತೆ , ತಾನಿಲ್ಲದೆ ನುಡಿವುತ್ತೆ ,
ತಾನಿಲ್ಲದೆ ಹಿಡಿವುತ್ತೆ, ತಾನಿಲ್ಲದೆ ಬಿಡುತ್ತೆ,
ತಾನಿಲ್ಲದೆ ನೋಡುತ್ತೆ, ತಾನಿಲ್ಲದೆ ಆಡುತ್ತೆ
ಬಯಲ ಬೊಂಬೆಯಂತೆ ಸುಳಿವ ಮಹಾಶರಣರ ತೋರಿಸಿ
ಬದುಕಿಸಯ್ಯಾ ಎನ್ನ ಅಖಂಡೇಶ್ವರಾ./29
ಅನಂತಕೋಟಿ ಯಜ್ಞಂಗಳ ಮಾಡಿ
ತೊಳಲಿ ಬಳಲಲದೇಕೊ ?
ಆ ಯಜ್ಞಂಗಳ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ
ದೊರೆಕೊಂಬುದು ನೋಡಾ !
ಅನಂತಕಾಲ ತಪವಮಾಡಿ ತೊಳಲಿ ಬಳಲಲದೇಕೊ ?
ಆ ತಪಸ್ಸಿನ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ
ದೊರೆಕೊಂಬುದು ನೋಡಾ !
ಅನಂತಕಾಲ ದಾನವಮಾಡಿ ತೊಳಲಿ ಬಳಲಲದೇಕೊ ?
ಆ ದಾನದ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ
ದೊರೆಕೊಂಬುದು ನೋಡಾ !
ಅನಂತಕಾಲ ವೇದಾಭ್ಯಾಸವಮಾಡಿ ತೊಳಲಿ ಬಳಲಲದೇಕೊ ?
ಆ ವೇದಾಭ್ಯಾಸದ ಫಲವು ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೇ
ದೊರೆಕೊಂಬುದು ನೋಡಾ !
ಅದೆಂತೆಂದೊಡೆ :ಪದ್ಮಪುರಾಣದಲ್ಲಿ-
“ಸರ್ವಯಜ್ಞತಪೋದಾನವೇದಾಭ್ಯಾಸೈಶ್ಚ ಯತ್ಫಲಮ್ |
ತತ್ಫಲಂ ಲಭತೇ ಸದ್ಯೋ ರುದ್ರಾಕ್ಷಸ್ಯ ತು ಧಾರಣಾತ್ ||”
ಎಂದುದಾಗಿ,
ಇಂತಪ್ಪ ರುದ್ರಾಕ್ಷಿಯ ಧರಿಸಿದ ಮಹಾತ್ಮನು
ವಿಶ್ವಾಧಿಕನು ವಿಶ್ವಾತೀತನು ತಾನೇ ನೋಡಾ
ಅಖಂಡೇಶ್ವರಾ./30
ಅನಂತಕೋಟಿ ಹೀನ ಭವಿಜನ್ಮವ ನೀಗಿ ಶಿವಜನ್ಮಕ್ಕೆ ಬಂದು,
ಶ್ರೀಗುರುಕಾರುಣ್ಯವ ಪಡೆದು ಪರಮ ಪವಿತ್ರಕಾಯನೆನಿಸಿ,
ಶಿವಭಕ್ತನಾದ ಬಳಿಕ ಮರಳಿ ಭವಿಸಂಗವ ಮಾಡಲಾಗದು.
ಅದೇನು ಕಾರಣವೆಂದೊಡೆ :
ಹಿಂದಣ ಕ್ರಿಮಿ ಕೀಟಕ ಸುನಿ ಸೂಕರಜನ್ಮ ಬಪ್ಪುದಾಗಿ
ಮುಂದೆ ಎಚ್ಚರದಲ್ಲಿ ನಡೆಯಬೇಕು.
ಎಚ್ಚರದಪ್ಪಿ ಅರುಹುಮರಹಿನಿಂದೆ
ಭವಿಸಂಗವ ಮಾಡುವ ಭಕ್ತನ ವಿಧಿ ಎಂತಾಯಿತ್ತೆಂದಡೆ :
ದೇವರಿಗೆಂದು ನೇಮಿಸಿ ಮಾಡಿಸಿದ ಮೀಸಲೋಗರವ
ಶ್ವಾನ ಮುಟ್ಟಿದಂತಾಯಿತ್ತಯ್ಯ ಅಖಂಡೇಶ್ವರಾ./31
ಅನಂತಸಾಧಕಂಗಳ ಕಲಿತ ಆಯಗಾರನು,
ಅಭ್ಯಾಸಿಗಳಿಗೆ ಸಾಧಕವ ಕಲಿಸುವನಲ್ಲದೆ
ತಾ ಮರಳಿ ಅಭ್ಯಾಸವ ಮಾಡುವನೆ ಅಯ್ಯಾ ?
ಅಖಂಡಪರಿಪೂರ್ಣಬ್ರಹ್ಮವನೊಡಗೂಡಿದ
ಮಹಾಘನ ಪರಮ ಶಿವಶರಣನು,
ಸತ್ಕ್ರಿಯವನಾಚರಿಸಿದಡೂ
ಲೋಕೋಪಕಾರವಾಗಿ ಆಚರಿಸುವನಲ್ಲದೆ
ಮರಳಿ ತಾನು ಫಲಪದದ ಮುಕ್ತಿಯ
ಪಡೆವೆನೆಂದು ಆಚರಿಸುವನೆ ಅಯ್ಯಾ ?
ಇದು ಕಾರಣ,
ನಿಮ್ಮ ಶರಣನು ಎಷ್ಟು ಸತ್ಕ್ರಿಯವನಾಚರಿಸಿದಡು
ಘೃತಸೋಂಕಿದ ರಸನೆಯಂತೆ, ಕಾಡಿಗೆ ಹತ್ತಿದ ಆಲಿಯಂತೆ,
ಹುಡಿ ಹತ್ತದ ಗಾಳಿಯಂತೆ
ನಿಲರ್ೆಪನಾಗಿರ್ಪನಯ್ಯಾ ಅಖಂಡೇಶ್ವರಾ. /32
ಅನಾದಿ ಪರವಸ್ತುವು ತನ್ನ
ಸ್ವಲೀಲಾಸ್ವಭಾವದಿಂದೆ
ತಾನೇ ಅಂಗವಾದುದು.
ತಾನೇ ಲಿಂಗವಾದುದು.
ತಾನೇ ಸಂಗವಾದುದು.
ತಾನೇ ಸಮರಸವಾದುದು.
ಎಂಬ ಭೇದವ ನಿಮ್ಮ ಶರಣ ಬಲ್ಲನಲ್ಲದೆ
ಉಳಿದ ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರಯ್ಯಾ
ಅಖಂಡೇಶ್ವರಾ ?/33
ಅನಾದಿ ಶಿವಾಂಶಿಕರಾದ ಶಿವಶರಣರಿಗಲ್ಲದೆ
ವೇದ್ಯವಾಗದು ನೋಡಾ ಭಕ್ತಿ ಜ್ಞಾನ ವೈರಾಗ್ಯವು.
ಅನಾದಿ ಶಿವಾಂಶಿಕರಾದ ಶಿವಶರಣರಿಗಲ್ಲದೆ
ವೇದ್ಯವಾಗದು ನೋಡಾ ಶಿವಾಚಾರ ಸತ್ಪಥವು.
ಅನಾದಿ ಶಿವಾಂಶಿಕರಾದ ಶಿವಶರಣರಿಗಲ್ಲದೆ
ವೇದ್ಯವಾಗದು ನೋಡಾ ಶಿವಾನುಭಾವವು.
ಅನಾದಿ ಶಿವಾಂಶಿಕರಾದ ಶಿವಶರಣರಿಗಲ್ಲದೆ
ವೇದ್ಯವಾಗದು ನೋಡಾ ನಿರ್ಧರ ನಿಷ್ಪತ್ತಿಯು.
ಅನಾದಿ ಶಿವಾಂಶಿಕರಾದ ಶಿವಶರಣರಿಗಲ್ಲದೆ ವೇದ್ಯವಾಗದು
ಅಖಂಡೇಶ್ವರಾ, ನಿಮ್ಮ ನಿಜೈಕ್ಯಪದವು./34
ಅನುಪಮ ಶರಣನ ನೆನಹಿನ ಕೊನೆಯಲ್ಲಿ ಘನಲಿಂಗವು.
ಆ ಘನಲಿಂಗದ ನೆನಹಿನ ಕೊನೆಯಲ್ಲಿ ನಿರವಯವು.
ಆ ನಿರವಯದ ನೆನಹಿನ ಕೊನೆಯಲ್ಲಿ ನಿರಾಲಂಬವು.
ಆ ನಿರಾಲಂಬದ ನೆನಹಿನ ಕೊನೆಯಲ್ಲಿ ನಿರಾಳವು.
ಆ ನಿರಾಳದ ನೆನಹಿನ ಕೊನೆಯಲ್ಲಿ ಆದಿಮಹಾಲಿಂಗವು.
ಆ ಆದಿ ಮಹಾಲಿಂಗದ ನೆನಹಿನ ಕೊನೆಯಲ್ಲಿ ಚಿತ್ಶಕ್ತಿ.
ಆ ಚಿತ್ಶಕ್ತಿಯ ನೆನಹಿನ ಕೊನೆಯಲ್ಲಿ ಪರಮೇಶ್ವರನು.
ಆ ಪರಮೇಶ್ವರನ ನೆನಹಿನ ಕೊನೆಯಲ್ಲಿ ಪರಾಶಕ್ತಿ.
ಆ ಪರಾಶಕ್ತಿಯ ನೆನಹಿನ ಕೊನೆಯಲ್ಲಿ ಸದಾಶಿವನು.
ಆ ಸದಾಶಿವನ ನೆನಹಿನ ಕೊನೆಯಲ್ಲಿ ಆದಿಶಕ್ತಿ.
ಆ ಆದಿಶಕ್ತಿಯ ನೆನಹಿನ ಕೊನೆಯಲ್ಲಿ ಈಶ್ವರನು.
ಆ ಈಶ್ವರನ ನೆನಹಿನ ಕೊನೆಯಲ್ಲಿ ಇಚ್ಛಾಶಕ್ತಿ.
ಆ ಇಚ್ಛಾಶಕ್ತಿಯ ನೆನಹಿನ ಕೊನೆಯಲ್ಲಿ ಮಹೇಶ್ವರನು.
ಆ ಮಹೇಶ್ವರನ ನೆನಹಿನ ಕೊನೆಯಲ್ಲಿ ಜ್ಞಾನಶಕ್ತಿ.
ಆ ಜ್ಞಾನಶಕ್ತಿಯ ನೆನಹಿನ ಕೊನೆಯಲ್ಲಿ ಶ್ರೀರುದ್ರಮೂರ್ತಿ.
ಆ ಶ್ರೀರುದ್ರಮೂರ್ತಿಯ ನೆನಹಿನ ಕೊನೆಯಲ್ಲಿ ವಿಷ್ಣುವು.
ಆ ವಿಷ್ಣುವಿನ ನೆನಹಿನ ಕೊನೆಯಲ್ಲಿ ಮಹಾಲಕ್ಷ್ಮಿ.
ಆ ಮಹಾಲಕ್ಷ್ಮಿಯ ನೆನಹಿನ ಕೊನೆಯಲ್ಲಿ ಬ್ರಹ್ಮನು.
ಆ ಬ್ರಹ್ಮನ ನೆನಹಿನ ಕೊನೆಯಲ್ಲಿ ಸರಸ್ವತಿ.
ಆ ಸರಸ್ವತಿಯ ನೆನಹಿನ ಕೊನೆಯಲ್ಲಿ ಸಕಲ ಚರಾಚರಂಗಳು.
ಇಂತಿವೆಲ್ಲವು ಶರಣನ ನೆನಹುದೋರಿದಲ್ಲಿಯೇ ತೋರುತಿರ್ಪವು,
ಆ ಶರಣನ ನೆನಹು ನಿಂದಲ್ಲಿಯೇ ಅಡುಗುತಿರ್ಪುವಾಗಿ,
ಅಖಂಡೇಶ್ವರಾ, ನಿಮ್ಮ ಶರಣನು ಘನಕ್ಕೆ ಘನಮಹಿಮ,
ವಾಙ್ಮನಕ್ಕಗೋಚರನು, ಉಪಮೆಗೆ ಉಪಮಾತೀತನು ನೋಡಾ./35
ಅನುಪಮಲಿಂಗದಲ್ಲಿ ಅಂಗ ಮನ ಪ್ರಾಣಂಗಳನಡಗಿಸಿ
ಅವಿರಳ ಸಮರಸದಿಂದಿರ್ಪ ಮಹಾಶರಣನ
ಅರುಹಿನ ಪಂಚಮುದ್ರೆಗಳು ಆವುವೆಂದಡೆ :
ಸರ್ವಾಚಾರಸಂಪತ್ತೆಂಬ ಕಂಥೆ, ಅನಾದಿಯೆಂಬ ಕರ್ಪರ,
ಅಖಂಡವೆಂಬ ದಂಡ, ಅಜಾಂಡವೆಂಬ ಕಮಂಡಲು,
ಪರಿಪೂರ್ಣಮಹಾಜ್ಞಾನವೆಂಬ ಭಸ್ಮದಗುಂಡಿಗೆ,
ಇಂತೀ ಅರುಹಿನ ಪಂಚಮುದ್ರೆಗಳ ಅಂತರಂಗದಲ್ಲಿ ಧರಿಸಿ
ಹೊರಗೆ ಬಹಿರಂಗದ ಮೇಲೆ ಮುನ್ನಿನ ಮಾರ್ಗಕ್ರಿಯೆಯಂತೆ
ಪಂಚಮುದ್ರೆಗಳ ಧರಿಸಿಕೊಂಡು,
ಮಾಯಾವಿರಹಿತವೆಂಬ ಹಾವಿಗೆಯ ಮೆಟ್ಟಿಕೊಂಡು,
ಅಂಗ ಮನ ಪ್ರಾಣಂಗಳಲ್ಲಿ
ಕ್ಷಮೆ ದಮೆ ಶಾಂತಿ ಸೈರಣೆ ಕರುಣ
ಹಷರ್ಾನಂದವ ತುಂಬಿಕೊಂಡು,
ಲೋಕಪಾವನವ ಮಾಡುತ್ತ ಭಕ್ತಿಭಿಜಿಕ್ಷಾಂದೇಹಿಯಾಗಿ ಸುಳಿವ
ಮಹಾಘನ ಪರಮಮಹಾಂತಿನ ಜಂಗಮದ
ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ./36
ಅನುಭಾವ ಅನುಭಾವವೆಂದು ನುಡಿವುತಿರ್ಪರೆಲ್ಲರು.
ಅನುಭಾವದ ಕೀಲವನಾರೂ ಅರಿಯರಲ್ಲ !
ಅನುಭಾವವೆಂದೊಡೆ, ಅಂತರಂಗದ ಹೃದಯಕಮಳದ
ಅಷ್ಟದಳಂಗಳ ಮೆಟ್ಟಿ ಚರಿಸುವ ಜೀವಹಂಸನ ಕೊಂದು,
ಇಂದ್ರದಿಕ್ಕಿನ ಎಸಳಿನಲ್ಲಿ ತೋರುವ ಭಿನ್ನಭಕ್ತಿಯನಳಿದು,
ಅಗ್ನಿದಿಕ್ಕಿನ ಎಸಳಿನಲ್ಲಿ ತೋರುವ ಜಡನಿದ್ರೆಯ ಮರ್ದಿಸಿ,
ಯಮದಿಕ್ಕಿನ ಎಸಳಿನಲ್ಲಿ ತೋರುವ ವ್ಯಸನವಿಕಾರವ ಮಸುಳಿಸಿ,
ನೈಋತ್ಯದಿಕ್ಕಿನ ಎಸಳಿನಲ್ಲಿ ತೋರುವ
ಪಾಪದ ದುಷ್ಕೃತವ ಪಲ್ಲಟಿಸಿ,
ವರುಣದಿಕ್ಕಿನ ಎಸಳಿನಲ್ಲಿ ತೋರುವ
ಮಂದಗಮನವ ಪರಿಹರಿಸಿ,
ವಾಯುವ್ಯದಿಕ್ಕಿನ ಎಸಳಿನಲ್ಲಿ ತೋರುವ ದುಷ್ಟಾಚಾರವ ದೂರಮಾಡಿ,
ಕುಬೇರದಿಕ್ಕಿನ ಎಸಳಿನಲ್ಲಿ ತೋರುವ
ದ್ರವ್ಯಾಪೇಕ್ಷೆಯ ಧಿಕ್ಕಿರಿಸಿ, ಈಶಾನ್ಯದಿಕ್ಕಿನ ಎಸಳಿನಲ್ಲಿ ತೋರುವ
ವನಿತಾದಿ ವಿಷಯ ಪ್ರಪಂಚುಗಳ ಈಡಾಡಿ ನೂಂಕಿ,
ಇಂತೀ ಅಷ್ಟದಳಂಗಳ ಹಿಡಿದು ತೋರುವ ಪ್ರಕೃತಿಗುಣಂಗಳ ನಷ್ಟಮಾಡಿ,
ನಟ್ಟನಡು ಚೌದಳಮಧ್ಯದಲ್ಲಿರ್ದ ಪರಬ್ರಹ್ಮವನು
ನೆಟ್ಟನೆ ಕೂಡಿ, ಅಷ್ಟಾವಧಾನಿಯಾಗಿ,
ಅಚಲಿತಜ್ಞಾನದಲ್ಲಿ ಸುಳಿಯಬಲ್ಲಡೆ
ಆತನೆ ನಿಜಾನುಭಾವಿ, ಆತನೆ ನಿತ್ಯಮುಕ್ತನು, ಆತನೆ ನಿಭರ್ೆದ್ಯನು.
ಇಂತೀ ಭೇದವನರಿಯದೆ, ಮಾತುಕಲಿತ ಭೂತನಂತೆ
ಆ ಮಾತು ಈ ಮಾತು ಹೋ ಮಾತುಗಳ ಕಲಿತು
ಕಂಡಕಂಡಲ್ಲಿ ನಿಂದನಿಂದಲ್ಲಿ ಮುಂದುವರಿದು ಹರಟೆಗುಟ್ಟುವ
ಒಣ ಹರಟೆಗಾರರ ಶಿವಾನುಭಾವಿಗಳೆಂತೆಂಬೆನಯ್ಯಾ ಅಖಂಡೇಶ್ವರಾ ?/37
ಅನುಭಾವಿಗಳ ಸಂಗ ಕೀಟಕ ಭ್ರಮರವಾದಂತೆ ಕಾಣಿರೊ.
ಅನುಭಾವಿಗಳ ಸಂಗ ಲೋಹ ಪರುಷವಾದಂತೆ ಕಾಣಿರೊ.
ನಮ್ಮ ಅಖಂಡೇಶ್ವರಲಿಂಗದೊಡನೆ
ನೆರೆದ ಅನುಭಾವಿಗಳ ಸಂಗ
ಕಪರ್ೂರದಜ್ಯೋತಿಯಂತೆ ಕಾಣಿರೊ./38
ಅನುಭಾವಿಯಾದಡೆ ತಿರುಳುಕರಗಿದ
ಹುರಿದ ಬೀಜದಂತಿರಬೇಕು.
ಅನುಭಾವಿಯಾದಡೆ ಸುಟ್ಟ ಸರವೆಯಂತಿರಬೇಕು.
ಅನುಭಾವಿಯಾದಡೆ ದಗ್ಧಪಟದಂತಿರಬೇಕು.
ಅನುಭಾವಿಯಾದಡೆ ದರ್ಪಣದೊಳಗಣ ಪ್ರತಿಬಿಂಬದಂತಿರಬೇಕು.
ಅನುಭಾವಿಯಾದಡೆ ಕಡೆದಿಳುಹಿದ ಕಪ್ಪುರದ ಪುತ್ಥಳಿಯಂತಿರಬೇಕು.
ಇಂತಪ್ಪ ಮಹಾನುಭಾವಿಗಳು
ಆವ ಲೋಕದೊಳಗೂ ಅಪೂರ್ವವಯ್ಯಾ ಅಖಂಡೇಶ್ವರಾ./39
ಅಪ್ಪುವೆ ಅಂಗವಾದ ಮಹೇಶ್ವರಂಗೆ ಬುದ್ಧಿಯೆ ಹಸ್ತ.
ಆ ಹಸ್ತಕ್ಕೆ ಜ್ಞಾನಶಕ್ತಿ , ಆ ಶಕ್ತಿಗೆ ಗುರುಲಿಂಗ,
ಆ ಗುರುಲಿಂಗಕ್ಕೆ ಜಿಹ್ವೇಂದ್ರಿಯವೆಂಬ ಮುಖ,
ಆ ಮುಖಕ್ಕೆ ಸುರಸವೆ ಪದಾರ್ಥ ; ಆ ಪದಾರ್ಥವನು
ಜಿಹ್ವೆಯಲ್ಲಿಹ ಗುರುಲಿಂಗಕ್ಕೆ ನೈಷ್ಠಿಕಭಕ್ತಿಯಿಂದರ್ಪಿಸಿ,
ಆ ಸುರಸ ಪ್ರಸಾದವನು ಪಡೆದು ಸುಖಿಸುವಾತನೇ
ಮಹೇಶ್ವರನು ನೋಡಾ ಅಖಂಡೇಶ್ವರಾ./40
ಅಯ್ಯಾ ಎನಗೆ ರುದ್ರಾಕ್ಷಿಯೇ ಪುಣ್ಯದ ಪುಂಜ ನೋಡಾ.
ಅಯ್ಯಾ ಎನಗೆ ರುದ್ರಾಕ್ಷಿಯೇ ಭಾಗ್ಯದ ನಿಧಿಯು ನೋಡಾ.
ಅಯ್ಯಾ ಎನಗೆ ರುದ್ರಾಕ್ಷಿಯೇ ಸತ್ಯದ ಸದನ ನೋಡಾ.
ಏಕಭಾಜನಸ್ಥಲ, ಸಹಜಭೋಜನಸ್ಥಲಯೆಂಬ ಎಂಟು ಸ್ಥಲಂಗಳನ್ನು
ಶೇಷಾಂಗಸ್ವರೂಪವಾದ ಶರಣ
ಮಹದಂಗಸ್ವರೂಪವಾದೈಕ್ಯ ಯೋಗಾಂಗಸ್ಥಲವನೊಳಕೊಂಡು,
ಜಂಗಮದಲ್ಲಿ ತಿಳಿದು, ಆ ಜಂಗಮವ
ಪರಿಪೂರ್ಣಜ್ಞಾನಾನುಭಾವದಲ್ಲಿ ಕಂಡು,
ಆ ಪರಿಪೂರ್ಣಜ್ಞಾನಾನುಭಾವವನೆ
ಮಹಾಜ್ಞಾನಮಂಡಲಂಗಳಲ್ಲಿ ತರಹರವಾಗಿ,
ಅಲ್ಲಿಂದ ದೀಕ್ಷಾಪಾದೋದಕಸ್ಥಲ, ಶಿಕ್ಷಾಪಾದೋದಕಸ್ಥಲ,
ಜ್ಞಾನಪಾದೋದಕಸ್ಥಲ,
ಕ್ರಿಯಾನಿಷ್ಪತ್ತಿಸ್ಥಲ, ಭಾವನಿಷ್ಪತ್ತಿಸ್ಥಲ, ಜ್ಞಾನನಿಷ್ಪತ್ತಿಸ್ಥಲ,
ಪಿಂಡಾಕಾಶಸ್ಥಲ, ಬಿಂದ್ವಾಕಾಶಸ್ಥಲ, ಮಹದಾಕಾಶಸ್ಥಲ,
ಕ್ರಿಯಾಪ್ರಕಾಶಸ್ಥಲ, ಭಾವಪ್ರಕಾಶಸ್ಥಲ, ಜ್ಞಾನಪ್ರಕಾಶಸ್ಥಲ,
ಕೊಂಡುದು ಪ್ರಸಾದಿಸ್ಥಲ, ನಿಂದುದು ಓಗರಸ್ಥಲ,
ಚರಾಚರನಾಸ್ತಿಸ್ಥಲ, ಭಾಂಡಸ್ಥಲ, ಭಾಜನಸ್ಥಲ,
ಅಂಗಲೇಪನಸ್ಥಲವೆಂಬ ಹದಿನೆಂಟುಸ್ಥಲಂಗಳನ್ನು
ಮೂವತ್ತಾರು ಸಕೀಲಂಗಳನೊಳಕೊಂಡು
ಪರಿಶೋಭಿಸುವಂಥ ಮಹಾಲಿಂಗ.
ಜ್ಞಾನಶೂನ್ಯಸ್ಥಲವನೊಳಕೊಂಡು, ನಿರಂಜನಲಿಂಗದಲ್ಲಿ ತಿಳಿದು,
ಆ ನಿರಂಜನಬ್ರಹ್ಮವೇ ತಾನೇ ತಾನಾಗಿ,
ಮೂವತ್ತಾರು ಚಿತ್ಪಾದೋದಕಪ್ರಸಾದಪ್ರಣಮಂಗಳೆಂಬ
ಮೂಲಮಂತ್ರಸ್ವರೂಪನಾಗಿ ವಿರಾಜಿಸುವಾತನೆ
ಪರಿಪೂರ್ಣಾನುಭಾವಜಂಗಮಭಕ್ತನಾದ
ನಿರವಯಮೂರ್ತಿಯಿರವು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ./41
ಅಯ್ಯಾ, ನಿಮ್ಮನೆನ್ನ ಕರಸ್ಥಲದಲ್ಲಿ ನೋಡಿದಡೆ
ನೀವೆನ್ನ ಕಂಗಳ ಕೊನೆಯಲ್ಲಿ ತೋರುತಿರ್ಪಿರಿ :
ಇದೇನು ನಿಮ್ಮ ಗಾರುಡವಯ್ಯಾ !
ಅಯ್ಯಾ, ನಿಮ್ಮನೆನ್ನ ಕಂಗಳ ಕೊನೆಯಲ್ಲಿ ನೋಡಿದಡೆ
ನೀವೆನ್ನ ಮನದ ಕೊನೆಯಲ್ಲಿ ತೋರುತಿರ್ಪಿರಿ :
ಇದೇನು ನಿಮ್ಮ ಗಾರುಡವಯ್ಯಾ !
ಅಯ್ಯಾ, ನಿಮ್ಮನೆನ್ನ ಮನದ ಕೊನೆಯಲ್ಲಿ ನೋಡಿದಡೆ
ನೀವೆನ್ನ ಪಂಚಮುಖದಲ್ಲಿ ತೋರುತಿರ್ಪಿರಿ :
ಇದೇನು ನಿಮ್ಮ ಗಾರುಡವಯ್ಯಾ !
ಅಯ್ಯಾ, ನಿಮ್ಮನೆನ್ನ ನೆನಹಿನ ಪಂಚಮುಖದಲ್ಲಿ ನೋಡಿದಡೆ
ನೀವೆನ್ನ ನವಚಕ್ರದಲ್ಲಿ ತೋರುತಿರ್ಪಿರಿ :
ಇದೇನು ನಿಮ್ಮ ಗಾರುಡವಯ್ಯಾ !
ಅಯ್ಯಾ, ನಿಮ್ಮನೆನ್ನ ನವಚಕ್ರದಲ್ಲಿ ನೋಡಿದಡೆ
ನೀವೆನ್ನ ಸರ್ವಾಂಗದಲ್ಲಿ ತೋರುತಿರ್ಪಿರಿ :
ಇದೇನು ನಿಮ್ಮ ಗಾರುಡವಯ್ಯಾ ಅಖಂಡೇಶ್ವರಾ !/42
ಅರಸನ ಕಾಣದಬಳಿಕ ಹರುಷವಿಲ್ಲವ್ವಾ ಎನಗೆ.
ಅರಸು ಅಖಂಡೇಶ್ವರನೆಂಬ
ಪರಶಿವನ ಬೆರಸದ ಬಳಿಕ
ಸರಸವೆಲ್ಲಿಯದವ್ವಾ ಎನಗೆ ?/43
ಅರಳಿಯ ಮರದೊಳಗಿರುವ ಅರಗಿಳಿಗಳಿರಾ,
ನಮ್ಮ ಅಖಂಡೇಶ್ವರನ ಕಂಡರೆ ಹೇಳಿರೆ !
ಮಾವಿನ ಮರದೊಳಗೆ ಕೂಗುವ ಕೋಗಿಲೆ ಹಿಂಡುಗಳಿರಾ,
ನಮ್ಮ ನಾಗಭೂಷಣನ ಕಂಡಡೆ ಹೇಳಿರೆ!
ಕೊಳನ ತೀರದಲಾಡುವ ಕಳಹಂಸಗಳಿರಾ,
ನಮ್ಮ ಎಳೆಯಚಂದ್ರಧರನ ಕಂಡಡೆ ಹೇಳಿರೆ!
ಮೇಘಧ್ವನಿಗೆ ಕುಣಿವ ನವಿಲುಗಳಿರಾ,
ನಮ್ಮ ಅಖಂಡೇಶ್ವರನೆಂಬ
ಅವಿರಳಪರಶಿವನ ಕಂಡಡೆ ಹೇಳಿರೆ!/44
ಅರಿದರಿದು ಗುರುಭಕ್ತಿಯು ನೆಲೆಗೊಂಬುದು.
ಅರಿದರಿದು ಲಿಂಗಭಕ್ತಿಯು ನೆಲೆಗೊಂಬುದು.
ಅರಿದರಿದು ಜಂಗಮಭಕ್ತಿಯು ನೆಲೆಗೊಂಬುದು.
ಇಂತೀ ತ್ರಿವಿಧಭಕ್ತಿಯು ನೆಲೆಗೊಂಡು
ಭಿನ್ನಭಾವವನಳಿದ ಸದ್ಭಕ್ತನು
ಮೂರು ಲೋಕದೊಳಗೆ ಅಪೂರ್ವವಯ್ಯ ಅಖಂಡೇಶ್ವರಾ./45
ಅರಿದಲ್ಲಿ ಶರಣ ಮರೆದಲ್ಲಿ ಮಾನವನೆಂದು ನುಡಿವ
ಅಜ್ಞಾನಿಗಳ ಮಾತ ಕೇಳಲಾಗದು.
ಅದೇನು ಕಾರಣವೆಂದೊಡೆ :
ಜಗದಗಲದ ಗುರಿಯ ಹೂಡಿ ಮುಗಿಲಗಲದ ಬಾಣವನೆಸೆದಡೆ
ತಪ್ಪಿ ಕಡೆಗೆ ಬೀಳುವ ಸ್ಥಾನವುಂಟೆ ?
ಒಳಹೊರಗೆ ಸರ್ವಾಂಗಲಿಂಗವಾದ ಶರಣನಲ್ಲಿ
ಅರುಹುಮರಹುಗಳು ತೋರಲೆಡೆಯುಂಟೆ ?
ಇದು ಕಾರಣ,
ನಮ್ಮ ಅಖಂಡೇಶ್ವರನ ಶರಣನಲ್ಲಿ ತೋರುವ ತೋರಿಕೆಯೆಲ್ಲ
ಲಿಂಗವು ತಾನೆ ಕಾಣಿರೊ./46
ಅರಿಯದೆ ಒಂದು ವೇಳೆ `ಓಂ ನಮಃಶಿವಾಯ’ ಎಂದಡೆ
ಮರೆದು ಮಾಡಿದ ಹಿಂದೇಳುಜನ್ಮದ
ಕರ್ಮದಕಟ್ಟು ಹರಿದು ಹೋಯಿತ್ತು ನೋಡಾ !
ಅರಿದೊಂದು ವೇಳೆ `ಓಂ ನಮಃಶಿವಾಯ’ ಎಂದಡೆ
ದುರಿತಸಂಕುಳವೆಲ್ಲ ದೂರಾಗಿಹವು ನೋಡಾ !
ಇದು ಕಾರಣ `ಓಂ ನಮಃಶಿವಾಯ, ಓಂ ನಮಃಶಿವಾಯ’
ಎಂಬ ಶಿವಮಂತ್ರವನು ಜಪಿಸಿ,
ನಾನಾ ಭವದ ಬಳ್ಳಿಯ ಬೇರ ಕಿತ್ತೊಗೆದೆನಯ್ಯ
ಅಖಂಡೇಶ್ವರಾ./47
ಅರ್ಥ ಗುರುವಿನಲ್ಲಿ ಸವೆದು, ಪ್ರಾಣ ಲಿಂಗದಲ್ಲಿ ಸವೆದು,
ಅಭಿಮಾನ ಜಂಗಮದಲ್ಲಿ ಸವೆದು, ಆ ಗುರುಲಿಂಗಜಂಗಮವೇ
ತನ್ನ ಪ್ರಾಣವೆಂದು ತಿಳಿಯಬಲ್ಲಾತನೇ
ಸದ್ಭಕ್ತನು ನೋಡಾ ಅಖಂಡೇಶ್ವರಾ./48
ಅಲ್ಲದುದ ಹಿಡಿವನಲ್ಲ ಶರಣ.
ಇಲ್ಲದುದ ನುಡಿವನಲ್ಲ ಶರಣ.
ಗೆಲ್ಲ ಸೋಲಿಂಗೆ ಹೋರುವವನಲ್ಲ ಶರಣ.
ಬಲ್ಲೆನೆಂದು ತನ್ನ ಬಲ್ಲತನವ ಎಲ್ಲರೊಳು
ಬೀರುವನಲ್ಲವಯ್ಯ ಅಖಂಡೇಶ್ವರಾ ನಿಮ್ಮ ಶರಣ./49
ಅಶ್ವವ ಕೊಂದವನಾದಡಾಗಲಿ,
ಪಶುವ ಕೊಂದವನಾದಡಾಗಲಿ,
ಬ್ರಾಹ್ಮಣನ ಕೊಂದವನಾದಡಾಗಲಿ,
ಶಿಶುವ ಕೊಂದವನಾದಡಾಗಲಿ,
ಸ್ತ್ರೀಯ ಕೊಂದವನಾದಡಾಗಲಿ,
ಅನಂತ ಪಾತಕಂಗಳ ಮಾಡಿದವನಾದಡಾಗಲಿ,
ಶಿವಲಿಂಗದ ದರ್ಶನವಾದಾಕ್ಷಣದಲ್ಲಿಯೇ
ಆ ಪಾತಕಂಗಳು ಪಲ್ಲಟವಾಗಿಹವು ನೋಡಾ.
ಅದೆಂತೆಂದೊಡೆ :
“ಅಭಕ್ಷ್ಯಭಕ್ಷಕೋ ವಾಪಿ ಬ್ರಹ್ಮಹಾ ಯದಿ ಮಾತೃಹಾ |
ಪಿತೃಹಾ ಬಾಲಘಾತೀ ಚ ಗೋಘ್ನಃ ಸ್ತ್ರೀ ಶೂದ್ರಘಾತಕಃ ||
ವಕ್ತಾಚ ಪರದೋಷಸ್ಯ ಪರಸ್ಯ ಗುಣದೂಷಕಃ |
ಕೃಪಣೋನೃತವಾದೀ ಚ ಮಣಿರತ್ನಾಪಹಾರಕಃ |
ಸರ್ವಪಾಪಮಯಃ ಪೂತೋ ಮುಚ್ಯತೇ ಲಿಂಗದರ್ಶನಾತ್ ||”
ಎಂದುದಾಗಿ,
ಪರಮಪದವಿಯನೈದುತಿಹನಯ್ಯ ಅಖಂಡೇಶ್ವರಾ. /50
ಅಷ್ಟಮೂರ್ತಿಗಳು ದೇವರೆಂಬ
ಭ್ರಷ್ಟಭವಿಗಳ ಮಾತ ಕೇಳಲಾಗದು.
ಅದೇನು ಕಾರಣವೆಂದೊಡೆ :
ಪೃಥ್ವಿದೇವರಾದಡೆ, ಅಪ್ಪುವಿನ ಪ್ರಳಯದಲ್ಲಿ ಕರಗುವುದೆ ?
ಅಪ್ಪು ದೇವರಾದಡೆ, ಅಗ್ನಿಯ ಪ್ರಳಯದಲ್ಲಿ
ಅರತು ಹೋಗುವುದೆ ?
ಅಗ್ನಿ ದೇವರಾದಡೆ, ವಾಯುವಿನ ಪ್ರಳಯದಲ್ಲಿ
ಆರಿ ಹೋಗುವುದೆ ?
ವಾಯು ದೇವರಾದಡೆ, ಆಕಾಶದ ಪ್ರಳಯದಲ್ಲಿ ಲಯವಪ್ಪುದೆ ?
ಆಕಾಶ ದೇವರಾದಡೆ ಆತ್ಮನಲ್ಲಿ ಅಡಗಿಹೋಗುವುದೆ ?
ಆತ್ಮದೇವರಾದಡೆ, ದ್ವಂದ್ವಕರ್ಮಂಗಳನುಂಡು
ಜನನಮರಣಂಗಳಲ್ಲಿ ಬಂಧನವಡೆವನೆ ?
ಚಂದ್ರಸೂರ್ಯರು ದೇವರಾದಡೆ
ಭವಬಂಧನದಲ್ಲಿ ಸಿಲ್ಕಿ ತೊಳಲಿ ಬಳಲುವರೆ ?
ಇದು ಕಾರಣ ಇಂತೀ ಅಷ್ಟತನುಗಳು
ಎಂತು ದೇವರೆಂಬೆನು ?
ದೇವರದೇವ ಮಹಾದೇವ ಮಹಾಮಹಿಮ
ಎನ್ನೊಡೆಯ ಅಖಂಡೇಶ್ವರ ಒಬ್ಬನೆ ದೇವನಲ್ಲದೆ
ಉಳಿದವರೆಲ್ಲ ಹುಸಿ ಹುಸಿ ಎಂಬೆನು ನೋಡಾ !/51
ಅಹುದೆನಲಮ್ಮೆ, ಅಲ್ಲೆನಲಮ್ಮೆ,
ಇಲ್ಲೆನಲಮ್ಮೆ, ಉಂಟೆನಲಮ್ಮೆ,
ಬೇಕೆನಲಮ್ಮೆ, ಬೇಡೆನಲಮ್ಮೆ
ಅಖಂಡೇಶ್ವರಾ, ನೀವೆಂತಿರ್ದಂತೆ ಸಹಜವಾಗಿರ್ಪೆನಯ್ಯಾ./52
ಆಕಾಶದಲ್ಲಿ ತೋರಿದ ಇಂದ್ರಧನು ಅಡಗುವುದಕ್ಕೆ
ಆಕಾಶವೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ?
ಗಾಳಿಯಲ್ಲಿ ತೋರಿದ ಸುಳಿಗಾಳಿ ಅಡಗುವುದಕ್ಕೆ
ಆ ಗಾಳಿಯೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ?
ಅಗ್ನಿಯಿಂದ ತೋರಿದ ಕಿಡಿಗಳು ಅಡಗುವುದಕ್ಕೆ
ಆ ಅಗ್ನಿಯೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ?
ಸಮುದ್ರದಲ್ಲಿ ತೋರಿದ ನೊರೆತೆರೆ ತುಂತುರ್ವನಿ ಅಡಗುವುದಕ್ಕೆ
ಆ ಸಮುದ್ರವೆ ಆಶ್ರಯವಲ್ಲದೆ ಬೇರೆ ಆಶ್ರಯವುಂಟೆ ಅಯ್ಯಾ ?
ಆದಿ ಅನಾದಿಯಿಂದತ್ತತ್ತಲಾದ ಮಹಾಘನವಸ್ತುವಿನಲ್ಲಿ
ರೂಪಿಸಿ ತೋರಿದ ನಿಜೈಕ್ಯನಡಗುವುದಕ್ಕೆ
ಆ ಪರವಸ್ತುವೆ ಆಶ್ರಯವಲ್ಲದೆ,
ಬೇರೆ ಆಶ್ರಯವುಂಟೆ ಅಯ್ಯಾ ಅಖಂಡೇಶ್ವರಾ./53
ಆಕಾಶಮಂಡಲದೊಳಗೆ ಲೋಕೇಶನ
ಪಟ್ಟಣವಿರ್ಪುದು ನೋಡಾ.
ಆ ಪಟ್ಟಣಕ್ಕೆ ನಾಲ್ಕು ಬಾಗಿಲು, ಎಂಟು ಬೀದಿ,
ಹದಿನಾರು ಚದುರಂಗದ ಚಾವಡಿ,
ಮೂವತ್ತೆರಡು ಕೇರಿ.
ಕೇರಿಗಳೊಳಗೆ ಪರಿಕಾರರ ಕಟ್ಟಳೆ ನೋಡಾ !
ಆಕಾಶಮಂಡಲವನಡರಿ, ಲೋಕೇಶನ ಕಂಡಾತಂಗಲ್ಲದೆ
ಆ ಪಟ್ಟಣವು ಆರಿಗೂ ಸಾಧ್ಯವಿಲ್ಲ ನೋಡಾ ಅಖಂಡೇಶ್ವರಾ./54
ಆಚಾರ ವಿಚಾರವೆಂದರಿಯರು.
ಅಂತರಂಗ ಬಹಿರಂಗವೆಂದರಿಯರು.
ಸತ್ಕ್ರಿಯೆ ಸಮ್ಯಕ್ಜ್ಞಾನವೆಂದರಿಯರು.
ಕಾಯಜೀವದ ಕರ್ಮಕತ್ತಲೆಯಲ್ಲಿ ಬಿದ್ದು
ಕರಣಮಥನ ಕರ್ಕಶದಿಂದೆ ಹೊಡೆದಾಡಿ ಹೊತ್ತುಗಳೆದು
ಹೊಲಬುದಪ್ಪಿ ಸತ್ತುಹೋಗುವ ವ್ಯರ್ಥಜೀವಿಗಳ
ಭಕ್ತಮಾಹೇಶ್ವರರೆಂದಡೆ ಭವ ಹಿಂಗದಯ್ಯ ಅಖಂಡೇಶ್ವರಾ./55
ಆಚಾರಲಿಂಗವಾಗಿ ಬಂದೆನ್ನ
ಘ್ರಾಣೇಂದ್ರಿಯವನೊಳಕೊಂಡಿರ್ಪಿರಯ್ಯ ನೀವು.
ಗುರುಲಿಂಗವಾಗಿ ಬಂದೆನ್ನ
ಜಿಹ್ವೇಂದ್ರಿಯವನೊಳಕೊಂಡಿರ್ಪಿರಯ್ಯ ನೀವು.
ಶಿವಲಿಂಗವಾಗಿ ಬಂದೆನ್ನ
ನಯನೇಂದ್ರಿಯವನೊಳಕೊಂಡಿರ್ಪಿರಯ್ಯ ನೀವು.
ಜಂಗಮಲಿಂಗವಾಗಿ ಬಂದೆನ್ನ
ತ್ವಗೀಂದ್ರಿಯವನೊಳಕೊಂಡಿರ್ಪಿರಯ್ಯ ನೀವು.
ಪ್ರಸಾದಲಿಂಗವಾಗಿ ಬಂದೆನ್ನ
ಶ್ರೋತ್ರೇಂದ್ರಿಯವನೊಳಕೊಂಡಿರ್ಪಿರಯ್ಯ ನೀವು.
ಮಹಾಲಿಂಗವಾಗಿ ಬಂದೆನ್ನ
ಹೃದಯವನೊಳಕೊಂಡಿರ್ಪಿರಯ್ಯ ನೀವು.
ಇಷ್ಟಲಿಂಗವಾಗಿ ಬಂದೆನ್ನ
ತನುವನೊಳಕೊಂಡಿರ್ಪಿರಯ್ಯ ನೀವು.
ಪ್ರಾಣಲಿಂಗವಾಗಿ ಬಂದೆನ್ನ
ಮನವನೊಳಕೊಂಡಿರ್ಪಿರಯ್ಯ ನೀವು.
ಭಾವಲಿಂಗವಾಗಿ ಬಂದೆನ್ನ
ಆತ್ಮವನೊಳಕೊಂಡಿರ್ಪಿರಯ್ಯ ನೀವು.
ಇಂತೆನ್ನ ಸರ್ವೆಂದ್ರಿಯಂಗಳು ನಿಮ್ಮಲ್ಲಿ
ಸಮರಸವಾದುವಾಗಿ
ನಾನು ನೀನೆಂಬುದಕ್ಕೆ ಭಿನ್ನವಿಲ್ಲವಯ್ಯ ಅಖಂಡೇಶ್ವರಾ./56
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ
ಮಲತ್ರಯಂಗಳಲ್ಲಿ ಬಿದ್ದು ಒದ್ದಾಡುವಾತ ಗುರುವಲ್ಲ.
ಅಷ್ಟವಿಧಾರ್ಚನೆ ಷೋಡಶೋಪಾಚಾರಂಗಳ ಮಾಡಿ
ಭಿನ್ನಫಲಪದವ ಪಡೆದು ಅನುಭವಿಸುವ
ಉಪಾಧಿಭಕ್ತನ ಹಿಂದೆ ಭವಭವದಲ್ಲಿ
ಎಡೆಯಾಡುವುದು ಲಿಂಗವಲ್ಲ.
ಅಂಗ ಮನ ಪ್ರಾಣೇಂದ್ರಿಯಂಗಳಲ್ಲಿ ಮುಸುಕಿದ
ಅಜ್ಞಾನಾಂಧಕಾರದಲ್ಲಿ ಮುಂದುಗಾಣದೆ
ನಡೆವಾತ ಜಂಗಮವಲ್ಲ.
ಇವರು ದೇವರೆಂದು ನಂಬಿ ಪೂಜಿಸುವಾತ ಭಕ್ತನಲ್ಲ.
ಅದೇನು ಕಾರಣವೆಂದೊಡೆ :
ಅಂಧಕನ ಕೈಯ ಅಂಧಕ ಹಿಡಿದಂತೆ
ಅರುಹು ಆಚಾರಹೀನವಾದ ಗುರುಲಿಂಗಜಂಗಮವ
ದೇವರೆಂದು ಪೂಜಿಸುವ ಭಕ್ತಂಗೆ
ಭವರಾಟಾಳದಲ್ಲಿ ಸತ್ತು ಸತ್ತು
ಹುಟ್ಟಿ ಬಪ್ಪುದು ತಪ್ಪದಯ್ಚ ಅಖಂಡೇಶ್ವರಾ./57
ಆತನ ಆಳಾಪದಿಂದೆ ಹಗಲಾದುದನರಿಯೆನವ್ವಾ !
ಆತನ ಆಳಾಪದಿಂದೆ ಇರುಳಾದುದನರಿಯೆನವ್ವಾ !
ಅಖಂಡೇಶ್ವರನೆಂಬ ಪ್ರಾಣದೊಲ್ಲಭನ
ಕೂಡಬೇಕೆಂಬ ಭ್ರಾಂತಿಯಿಂದೆ
ಹೋದುದ ಬಂದುದನರಿಯೆನವ್ವಾ !/58
ಆತನ ದಿವ್ಯರೂಪು ನೋಡಿ ಎನ್ನ ಕಂಗಳು ದಣಿಯವು.
ಆತನ ಲಲ್ಲೆವಾತ ಕೇಳಿ ಎನ್ನ ಕಿವಿಗಳು ದಣಿಯವು.
ಆತನ ಜಿಹ್ವೆಯ ಚುಂಬಿಸಿ ಎನ್ನ ಬಾಯಿ ದಣಿಯದು.
ಆತನ ಸರ್ವಾಂಗವನಪ್ಪಿ ಎನ್ನ ತನು ದಣಿಯದು.
ಆ ಅಖಂಡೇಶ್ವರ ಕೂಡಿ ಒಳಪೊಕ್ಕು
ಪರಿಣಾಮ ಸೂರೆಗೊಂಡು
ಎನ್ನ ಮನ ದಣಿಯದು ನೋಡಿರವ್ವಾ./59
ಆತ್ಮವೆ ಅಂಗವಾದ ಐಕ್ಯಂಗೆ ಸದ್ಭಾವನೆ ಹಸ್ತ.
ಆ ಹಸ್ತಕ್ಕೆ ಚಿಚ್ಛಕ್ತಿ , ಆ ಶಕ್ತಿಗೆ ಮಹಾಲಿಂಗ,
ಆ ಲಿಂಗಕ್ಕೆ ಹೃದಯೇಂದ್ರಿಯವೆ ಮುಖ,
ಆ ಮುಖಕ್ಕೆ ಸುತೃಪ್ತಿ ಪದಾರ್ಥ; ಆ ಪದಾರ್ಥವನು
ಹೃದಯದಲ್ಲಿಹ ಮಹಾಲಿಂಗಕ್ಕೆ ಸಮರಸಭಕ್ತಿಯಿಂದರ್ಪಿಸಿ,
ಆ ಪದಾರ್ಥವನು ಹೃದಯಲ್ಲಿಹ ಮಹಾಲಿಂಗಕ್ಕೆ ಸಮರಸ ಭಕ್ತಿಯಿಂದರ್ಪಿಸಿ
ಆ ಸುತೃಪ್ತಿಪ್ರಸಾದವನು ಪಡೆದು ಸುಖಿಸುವಾತನೆ
ಐಕ್ಯನು ನೋಡಾ ಅಖಂಡೇಶ್ವರಾ./60
ಆದಿಪ್ರಸಾದ, ಅನಾದಿಪ್ರಸಾದ,
ವೇದಕ್ಕೆ ನಿಲುಕದ ಅಭೇದ್ಯಪ್ರಸಾದ !
ಅಖಂಡೇಶ್ವರನ ಅವಿರಳಪ್ರಸಾದ
ಎನಗೆ ಸಾಧ್ಯವಾಯಿತ್ತು ನೋಡಾ !/61
ಆದಿಮಯ ಗುರು, ಅನಾದಿಮಯ ಗುರು,
ವೇದಮಯ ಗುರು, ನಾದಮಯ ಗುರು,
ಅಭೇದ್ಯಮಯ ಗುರು, ಸಾಧುಸಜ್ಜನ ಸದ್ಗುರುವಿಂಗೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./62
ಆದಿಯ ಭಕ್ತ ಅನಾದಿಯ ಜಂಗಮ
ಮಧ್ಯದಲ್ಲಿ ಹುಟ್ಟಿದ ಪದಾರ್ಥ
ಈ ಮೂರು ಬೀಜವೃಕ್ಷಫಲದ ಹಾಗೆ ಒಂದೆಯೆಂದು ಕಾಂಬ
ಮಹಾಭಕ್ತರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ./63
ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಬ್ರಹ್ಮಂಗೆ
ಬ್ರಹ್ಮಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ವಿಷ್ಣುವಿಂಗೆ
ವಿಷ್ಣುಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ದೇವತೆಗಳಿಗೆ
ದೇವಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿ ಸ್ನಾನವ ಮಾಡಿದ ಋಷಿಗಳಿಗೆ
ಋಷಿಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಗಂಧರ್ವರುಗಳಿಗೆ
ಗಂಧರ್ವಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ರುದ್ರಗಣರಿಗೆ
ರುದ್ರಗಣಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಯಕ್ಷರಿಗೆ
ಯಕ್ಷಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಕಿನ್ನರರಿಗೆ
ಕಿನ್ನರಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಅಮರಗಣರಿಗೆ
ಅಮರಗಣಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಪಿತೃಗಣರಿಗೆ
ಪಿತೃಗಣಪದವಾಯಿತ್ತು.
ಆದಿಯಲ್ಲಿ ಶ್ರೀ ವಿಭೂತಿಯ ಸ್ನಾನವ ಮಾಡಿದ ಭೂತಗಣರಿಗೆ
ಭೂತಗಣಪದವಾಯಿತ್ತು.
ಅದೆಂತೆಂದೊಡೆ :
“ಬ್ರಹ್ಮವಿಷ್ಣ್ವಾದಿದೇವಾ ಋಷಯೋ ಗಂಧರ್ವಾ ಯಕ್ಷಕಿನ್ನರಾಃ |
ಮರುದ್ಗಣಾಃ ಪಿತೃಗಣಾಃ ಸರ್ವೇ ಭೂತಗಣಾ ಅಪಿ |
ನಿತ್ಯಂ ಚ ಸರ್ವಯತ್ನೇನ ಭಸ್ಮಸ್ನಾನಂ ಪ್ರವರ್ತತೇ ||”
ಎಂದುದಾಗಿ,
ಇಂತಪ್ಪ ಶ್ರೀ ವಿಭೂತಿಯ ಮಹತ್ವವ ಕಂಡು ಕೇಳಿ ನಂಬಲರಿಯದೆ
ಗರ್ವದಿಂದೆ ಮುಂದುಗೆಟ್ಟ ಮರುಳಮಾನವರಿಗೆ
ಭವರಾಟಾಳದಲ್ಲಿ ಸತ್ತು ಸತ್ತು ಹುಟ್ಟಿ ಹುಟ್ಟಿ ಬಪ್ಪುದು
ತಪ್ಪದು ನೋಡಾ ಅಖಂಡೇಶ್ವರಾ./64
ಆದಿಯಲ್ಲಿಯು ನೀನೇ ದೇವನು ನಾನೇ ಭಕ್ತನಯ್ಯ ;
ಅನಾದಿಯಲ್ಲಿಯು ನೀನೇ ದೇವನು ನಾನೇ ಭಕ್ತನಯ್ಯ ;
ಆದಿಯನಾದಿಯಿಂದತ್ತಲು ನೀನೇ ದೇವನು ನಾನೇ ಭಕ್ತನಾಗಿ
ನಿಮ್ಮೊಳಗೆ ಅಡಗಿರ್ದೆನಯ್ಯಾ ಅಖಂಡೇಶ್ವರಾ./65
ಆದಿಯಾಧಾರವಿಲ್ಲದ ಮುನ್ನ,
ನಾದ ಬಿಂದು ಕಲೆಗಳಿಲ್ಲದ ಮುನ್ನ,
ಭೇದಾಭೇದಂಗಳಿಂದೆ ತೋರುವ ಬ್ರಹ್ಮಾಂಡ
ಕೋಟಾನುಕೋಟಿಗಳಿಲ್ಲದ ಮುನ್ನ.
ಸರ್ವಶೂನ್ಯ ನಿರಾಕಾರವಾದ-ಪರವಸ್ತುವು ಸಾಕಾರವಿಡಿದು
ಸರ್ವಲೋಕಂಗಳ ಪಾವನವ ಮಾಡುವ ಪರಮ ಜಂಗಮದಲ್ಲಿ
ಹದಿನಾಲ್ಕು ಲೋಕಂಗಳಡಗಿರ್ಪವು ನೋಡಾ.
ಅದೆಂತೆಂದೊಡೆ :
ಪಾದತಳದಲ್ಲಿ ಅತಳಲೋಕ, ಪಾದೋಧ್ರ್ವದಲ್ಲಿ ವಿತಳಲೋಕ,
ಜಂಘೆಯಲ್ಲಿ ಸುತಳಲೋಕ, ಜಾನುವಿನಲ್ಲಿ ಮಹಾತಳಲೋಕ,
ಉರುವಿನಲ್ಲಿ ತಳಾತಳಲೋಕ, ಗುಹ್ಯೆಯಲ್ಲಿ ರಸಾತಳಲೋಕ,
ಕಟಿಯಲ್ಲಿ ಪಾತಾಳಲೋಕ, ನಾಭಿಯಲ್ಲಿ ಭೂಲೋಕ,
ಕುಕ್ಷಿಯಲ್ಲಿ ಭುವಲರ್ೊಕ, ಹೃದಯದಲ್ಲಿ ಸ್ವರ್ಗಲೋಕ,
ವಕ್ಷದಲ್ಲಿ ಮಹಲರ್ೊಕ, ಕಂಠದಲ್ಲಿ ಜನಲರ್ೊಕ,
ಲಲಾಟದಲ್ಲಿ ತಪಲರ್ೊಕ, ಮೂರ್ನಿಯಲ್ಲಿ ಸತ್ಯಲೋಕ.
ಇಂತೀ ಈರೇಳುಲೋಕಂಗಳ ತನ್ನೊಳಗಿಂಬಿಟ್ಟುಕೊಂಡು
ವಿಶ್ವಪರಿಪೂರ್ಣವಾಗಿ ಭಕ್ತಿಹಿತಾರ್ಥವಾಗಿ
ಮತ್ರ್ಯಲೋಕದಲ್ಲಿ ಸುಳಿವ ಕರ್ತೃ ಜಂಗಮದ ಶ್ರೀಪಾದಕ್ಕೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./66
ಆದಿಯಾಧಾರವಿಲ್ಲದ ಮುನ್ನ,
ನಾದಬಿಂದುಕಳೆಗಳಿಲ್ಲದ ಮುನ್ನ,
ಭೇದಾಭೇದ ಬ್ರಹ್ಮಾಂಡಕೋಟಿಗಳಿಲ್ಲದ ಮುನ್ನ,
ಬಸವನೆಂಬ ಬೀಜದ ಮಧ್ಯದಲ್ಲಿ
ಲಿಂಗವೆಂಬ ಅಂಕುರ ಉದಯವಾಯಿತ್ತು.
ಆ ಲಿಂಗಾಂಕುರವೆ
ಸಕಲತತ್ವ ತೋರಿಕೆಯೆಂಬ ಶಾಖೆ ಪರ್ಣಂಗಳು ಪಸರಿಸಿ,
ವೃಕ್ಷ ಪಲ್ಲವಿಸಿತ್ತು,
ಇಂತಪ್ಪ ಚಿದ್ಬ್ರಹ್ಮವೃಕ್ಷವೆಂಬ ಪರಮಗುರು ಸಂಗನಬಸವಣ್ಣನ
ಶ್ರೀಪಾದಕಮಲದಲ್ಲಿ ಭ್ರಮರನಾಗಿರಿಸಯ್ಯಾ ಅಖಂಡೇಶ್ವರಾ./67
ಆದಿಯಾಧಾರವಿಲ್ಲದಂದು,
ನಾದ ಬಿಂದು ಕಲೆಗಳಿಲ್ಲದಂದು,
ವೇದಶಾಸ್ತ್ರಾಗಮ ತರ್ಕತಂತ್ರಗಳಿಲ್ಲದಂದು,
ಚೌಷಷ್ಠಿ ವಿದ್ಯಾಕಲೆಗಳಿಲ್ಲದಂದು,
ಭೇದಾಭೇದಗಳಿಂದೆ ತೋರುವ
ತೋರಿಕೆಗಳೇನೂ ಇಲ್ಲದಂದು,
ಅಖಂಡೇಶ್ವರಾ, ನಿಮ್ಮ ನೀವರಿಯದೆ
ಅನಂತಕಾಲವಿರ್ದೆರಂದು./68
ಆದಿಯಿಲ್ಲದ ಬಯಲು, ಅನಾದಿಯಿಲ್ಲದ ಬಯಲು,
ಶೂನ್ಯವಿಲ್ಲದ ಬಯಲು, ನಿಃಶೂನ್ಯವಿಲ್ಲದ ಬಯಲು,
ಸುರಾಳವಿಲ್ಲದ ಬಯಲು, ನಿರಾಳವಿಲ್ಲದ ಬಯಲು,
ಸಾವಯವಿಲ್ಲದ ಬಯಲು, ನಿರಾವಯವಿಲ್ಲದ ಬಯಲು,
ಅಖಂಡೇಶ್ವರನೆಂಬ ಬಯಲಿನ ಬಯಲು
ಮಹಾಘನ ಬಚ್ಚಬರಿಯ ಬಯಲೊಳಗೆ
ಎಚ್ಚರವಡಗಿ ನಾನೆತ್ತ ಹೋದೆನೆಂದರಿಯೆನು./69
ಆಧಾರದಲ್ಲಿ ಗುರುಸಂಬಂಧವು.
ಸ್ವಾಧಿಷ್ಠಾನದಲ್ಲಿ ಲಿಂಗಸಂಬಂಧವು.
ಮಣಿಪೂರಕದಲ್ಲಿ ಜಂಗಮಸಂಬಂಧವು.
ಅನಾಹತದಲ್ಲಿ ಪಾದೋದಕಸಂಬಂಧವು.
ವಿಶುದ್ಧಿಯಲ್ಲಿ ಪ್ರಸಾದಸಂಬಂಧವು.
ಆಜ್ಞೇಯದಲ್ಲಿ ಅರುಹುಸಂಬಂಧವು.
ಈ ಅರುಹುವಿಡಿದು ಗುರುವ ಕಂಡು,
ಲಿಂಗವ ನೋಡಿ, ಜಂಗಮವ ಕೂಡಿ,
ಪಾದೋದಕ ಪ್ರಸಾದದ ಘನವ ಕಾಂಬುದೆ ಅಂತರಂಗವೆನಿಸುವುದು.
ಈ ಅಂತರಂಗದ ವಸ್ತುವು
ಭಕ್ತಹಿತಾರ್ಥವಾಗಿ ಬಹಿರಂಗಕ್ಕೆ ಬಂದಲ್ಲಿ,
ಗುರುಭಕ್ತಿ, ಲಿಂಗಪೂಜೆ, ಜಂಗಮಾರಾಧನೆ,
ಪಾದೋದಕಪ್ರಸಾದ ಸೇವನೆಯ
ಪ್ರೇಮವುಳ್ಳಡೆ ಬಹಿರಂಗವೆನಿಸುವುದು.
ಇಂತೀ ಅಂತರಂಗ ಬಹಿರಂಗದ ಮಾಟಕೂಟವ ಬಿಡದಿರ್ಪ
ಪರಮಪ್ರಸಾದಿಗಳ ಒಳಹೊರಗೆ ಭರಿತನಾಗಿರ್ಪನು
ನಮ್ಮ ಅಖಂಡೇಶ್ವರನು./70
ಆನೆಗಳೆಂಟನು ಒಂದು ಮೌನದ ಚಿಕ್ಕಾಡು ನುಂಗಿತ್ತು.
ಕಾನನದೆರಳೆಯ ಕಪ್ಪೆ ನುಂಗಿತ್ತು.
ಮಾನಿನಿಯ ಮಸ್ತಕದಲ್ಲಿ
ಭಾನುಶತಕೋಟಿ ತೇಜದ ಕಳೆ ಮೊಳೆದೋರಿತ್ತು.
ಇದೇನು ಸೋಜಿಗ ಹೇಳಾ ಅಖಂಡೇಶ್ವರಾ ?/71
ಆರೂ ಸಾಧಿಸಬಾರದ ವಸ್ತುವ ಸಾಧಿಸಿ ತಂದುಕೊಟ್ಟನಯ್ಯ
ಶ್ರೀಗುರುವೆನ್ನ ಕರಸ್ಥಲಕ್ಕೆ.
ಆರೂ ಭೇದಿಸಬಾರದ ವಸ್ತುವ ಭೇದಿಸಿ ತಂದುಕೊಟ್ಟನಯ್ಯ
ಶ್ರೀಗುರುವೆನ್ನ ಕರಸ್ಥಲಕ್ಕೆ.
ಆರೂ ನೋಡಬಾರದ ವಸ್ತುವ ನೋಡೆಂದು ತಂದುಕೊಟ್ಟನಯ್ಯ
ಶ್ರೀಗುರುವೆನ್ನ ಕರಸ್ಥಲಕ್ಕೆ.
ಆರೂ ಹಾಡಬಾರದ ವಸ್ತುವ ಹಾಡೆಂದು ತಂದುಕೊಟ್ಟನಯ್ಯ
ಶ್ರೀಗುರುವೆನ್ನ ಕರಸ್ಥಲಕ್ಕೆ.
ಆರೂ ಕೂಡಬಾರದ ವಸ್ತುವ ಕೂಡೆಂದು ತಂದುಕೊಟ್ಟನಯ್ಯ
ಶ್ರೀಗುರುವೆನ್ನ ಕರಸ್ಥಲಕ್ಕೆ.
ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡು ಬೆಳಗುವ ಪರಬ್ರಹ್ಮವ
ಎನ್ನ ಕಂಗಳು ತುಂಬಿ ನೋಡಿ, ಕೈಮುಟ್ಟಿ ಪೂಜಿಸಿ,
ಜಿಹ್ವೆತುಂಬಿ ಕೊಂಡಾಡಿ, ಮನತುಂಬಿ ಅಪ್ಪಿ,
ಅಗಲದೆ ಇಪ್ಪೆನಯ್ಯ ನಿಮ್ಮ ಅಖಂಡೇಶ್ವರಾ./72
ಆಲಸ್ಯವೇತಕೋ ಲಿಂಗಪೂಜೆಮಾಡುವುದಕ್ಕೆ ?
ಆಲಸ್ಯವೇತಕೋ ಜಂಗಮವನರ್ಚಿಸುವುದಕ್ಕೆ ?
ಆಲಸ್ಯವೇತಕೋ ನಮ್ಮ ಅಖಂಡೇಶ್ವರಲಿಂಗವನೋಲಿಸುವುದಕ್ಕೆ ?/73
ಆವ ಕಾರ್ಯಕ್ಕಾದಡೂ ಶ್ರೀ ವಿಭೂತಿಯೇ ಬೇಕು.
ಆವ ಕ್ರಿಯೆಗಾದಡೂ ಶ್ರೀ ವಿಭೂತಿಯೇ ಬೇಕು.
ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ವೇದವನೋದಿದಡೇನು ?
ಆತನೋದಿದ ವೇದಂಗಳು ವ್ಯರ್ಥ ಕಾಣಿರೋ !
ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ಯಜ್ಞಂಗಳ ಮಾಡಿದಡೇನು ?
ಆತ ಮಾಡಿದ ಯಜ್ಞಂಗಳು ವ್ಯರ್ಥ ಕಾಣಿರೋ !
ಆವನೊಬ್ಬ ಶ್ರೀವಿಭೂತಿಯ ದಾನಂಗಳ ಮಾಡಿದಡೇನು ?
ಆತ ಮಾಡಿದ ದಾನಂಗಳು ವ್ಯರ್ಥ ಕಾಣಿರೋ !
ಆವನೊಬ್ಬ ಶ್ರೀ ವಿಭೂತಿಯ ಧರಿಸದೆ ತಪವ ಮಾಡಿದಡೇನು ?
ಆತ ಮಾಡಿದ ತಪ ವ್ಯರ್ಥ ಕಾಣಿರೋ !
ಆವನೊಬ್ಬ ಶ್ರೀ ವಿಭೂತಿಯ ಧರಿಸದೆ
ನಿತ್ಯ ನೇಮ ವ್ರತ ಉಪವಾಸಂಗಳಂ ಮಾಡಿದಡೇನು ?
ಆತ ಮಾಡಿದ ನಿತ್ಯ ನೇಮ ವ್ರತ ಉಪವಾಸಂಗಳು ವ್ಯರ್ಥ ಕಾಣಿರೋ !
ಅದೆಂತೆಂದೊಡೆ :ಬೋಧಾಯನ ಸ್ಮೃತೌ-
“ವೃಥಾ ವೇದಾ ವೃಥಾ ಯಜ್ಞಾ ವೃಥಾ ದಾನಂ ವೃಥಾ ತಪಃ |
ವೃಥಾ ವ್ರತೋಪವಾಸೌ ತು ತ್ರಿಪುಂಡ್ರಂ ಯೋ ನ ಧಾರಯೇತ್ ||”
ಎಂದುದಾಗಿ,
ಸಕಲಕ್ಕೆ ಶ್ರೀ ವಿಭೂತಿಯೇ ಆಧಾರವಯ್ಯ ಅಖಂಡೇಶ್ವರಾ./74
ಆವ ಜಾತಿಯಲ್ಲಿ ಹುಟ್ಟಿದವನಾದಡಾಗಲಿ,
ಶ್ರೀಮಹಾದೇವನ ನೆನೆವಾತನಧಿಕ ನೋಡಾ.
ಆತನಿಂದಧಿಕ ಕಂಗಳು ತುಂಬಿ ನೋಡುವಾತ.
ಆತನಿಂದಧಿಕ ಕೈಮುಟ್ಟಿ ಪೂಜಿಸುವಾತ.
ಅದೆಂತೆಂದಡೆ, ಶಿವಧರ್ಮೇ-
“ಲಿಂಗಸ್ಯ ದರ್ಶನಂ ಪುಣ್ಯಂ ದರ್ಶನಾತ್ ಸ್ಪರ್ಶನಂ ಶುಭಂ |
ಶಿವಲಿಂಗಂ ಮಹಾಪುಣ್ಯಂ ಸರ್ವದೇವ ನಮಸ್ಕೃತಂ |
ಯಃ ಸ್ಪೃಶೇದಪಿ ಪಾಣಿಭ್ಯಾಂ ನ ಸ ಪಾಪೈಃ ಪರಿಲಿಪ್ಯತೇ ||”
ಎಂದುದಾಗಿ,
ಅಂತಪ್ಪ ಶಿವಲಿಂಗವನು ಹೆರೆಹಿಂಗದೆ ಅಂಗದ ಮೇಲೆ
ನಿರಂತರ ಧರಿಸಿಕೊಂಡಿಪ್ಪಾತನೆ ಎಲ್ಲರಿಂದಧಿಕ ನೋಡಾ
ಅಖಂಡೇಶ್ವರಾ./75
ಆವನೊಬ್ಬನ ಹೃದಯದಲ್ಲಿ `ಓಂ ನಮಃ ಶಿವಾಯ’
ಎಂಬ ಮಂತ್ರವು ನಿಶ್ಚಲವಾಗಿರಲು
ಆತಂಗೆ ಸಕಲಮಂತ್ರಂಗಳ ಸಕಲತಂತ್ರಂಗಳ ಹಂಗಿಲ್ಲ :
ಆತಂಗೆ ಸಕಲಶಾಸ್ತ್ರಂಗಳ ಸಕಲವಿದ್ಯಂಗಳ
ಅಭ್ಯಸಿಸಬೇಕೆಂಬ ಭ್ರಾಮಕವಿಲ್ಲ.
ಆತನಿರ್ದಲ್ಲಿ ಸಕಲಭುವನ ಸಕಲತತ್ತ್ವಂಗಳಿರ್ಪುವು.
ಆತ ನಿರಾವರಣ ನಿರುಪಮ ನಿರಾಲಂಬ
ನಿಜಮುಕ್ತನು ನೋಡಾ ಅಖಂಡೇಶ್ವರಾ !/76
ಆವನೊಬ್ಬನು ಉಪಪಾತಕ ಮಹಾಪಾತಕಂಗಳ ಮಾಡಿ,
ಶ್ರೀ ರುದ್ರಾಕ್ಷಿಯ ನಾಮೋಚ್ಚರಣೆಯ ಮಾಡಿದಡೆ
ಆ ಪಾತಕಂಗಳು ಪರಿಹಾರವಾಗಿ
ಹತ್ತುಸಾವಿರ ಗೋದಾನದ ಫಲವು ಕೈಸಾರುತಿಪ್ಪುದು ನೋಡಾ.
ಆ ರುದ್ರಾಕ್ಷಿಯ ಸ್ವರೂಪವನು ಕಂಗಳು ತುಂಬಿ ನೋಡಿದಡೆ
ಶತಕೋಟಿ ಪುಣ್ಯದ ಫಲವು ಕೈಸಾರುತಿಪ್ಪುದು ನೋಡಾ.
ಆ ರುದ್ರಾಕ್ಷಿಯ ಮುಟ್ಟಿ ಮುಟ್ಟಿ ಪೂಜಿಸಿದಡೆ
ಸಹಸ್ರಕೋಟಿ ಪುಣ್ಯದ ಫಲವು ಕೈಸಾರುತಿಪ್ಪುದು ನೋಡಾ.
ಆ ರುದ್ರಾಕ್ಷಿಯ ತತ್ ಸ್ಥಾನಂಗಳಲ್ಲಿ ಭಕ್ತಿಯಿಂದೆ ಧರಿಸಿದಡೆ
ಲಕ್ಷಕೋಟಿ ಪುಣ್ಯದ ಫಲವು ಕೈಸಾರುತಿಪ್ಪುದು ನೋಡಾ.
ಆ ರುದ್ರಾಕ್ಷಿಯ ಮಣಿಗಳಿಂದೆ ಜಪವ ಮಾಡಿದಡೆ
ಅನಂತಕೋಟಿ ಪುಣ್ಯದ ಫಲವು ಕೈಸಾರುತಿಪ್ಪುದು ನೋಡಾ.
ಅದೆಂತೆಂದೊಡೆ :
“ಸಪ್ತಕೋಟಿಶತಂ ಪುಣ್ಯಂ ಲಭತೇ ಧಾರಣಾತ್ ನರಃ |
ಲಕ್ಷಕೋಟಿಸಹಸ್ರಾಣಿ ಲಕ್ಷಕೋಟಿಶತಾನಿ ಚ |
ತಜ್ಜಪಾತ್ ಲಭತೇ ಪುಣ್ಯಂ ನಾತ್ರ ಕಾರ್ಯವಿಚಾರಣಾ ||’
ಎಂದುದಾಗಿ,
ಇಂತಪ್ಪ ರುದ್ರಾಕ್ಷಿಯ ಧರಿಸಿದ ಫಲಕ್ಕೆ
ಇನ್ನಾವ ಫಲವು ಸರಿಯಿಲ್ಲವೆಂದು
ಸಕಲಾಗಮಂಗಳು ಸಾರುತಿಪ್ಪವು ನೋಡಾ
ಅಖಂಡೇಶ್ವರಾ./77
ಆಸೆವಿಡಿದು ಹಲವು ದೇಶಕ್ಕೆ ಹರಿದಾಡಿದೆನಲ್ಲದೆ
ನಿರಾಶೆವಿಡಿದು ನಿಜವಿರಕ್ತನಾಗಿ ಚರಿಸಲಿಲ್ಲವಯ್ಯ ನಾನು.
ವೇಷಾಡಂಬರದಲ್ಲಿ ಅಧಿಕನೆನಿಸಿ
ಲೌಕಿಕ ಮೆಚ್ಚಿ ನಡೆದೆನಲ್ಲದೆ
ಭಾಷೆಯಲ್ಲಿ ಅಧಿಕನೆನಿಸಿ ಲಿಂಗಮೆಚ್ಚಿ ನಡೆಯಲಿಲ್ಲವಯ್ಯ ನಾನು.
ಮಾತಿನಲ್ಲಿ ವಿರಕ್ತನೆಂದು
ಠಕ್ಕುತನದ ಕೀಳುಗಾರಿಕೆಯ ಸುಳ್ಳನೇ ನುಡಿದೆನಲ್ಲದೆ
ಮನದಲ್ಲಿ ಸರ್ವಸಂಗ ಪರಿತ್ಯಾಗಿಯಾದ
ಪರಮ ವಿರಕ್ತನಲ್ಲವಯ್ಯ ನಾನು.
ಇಂತಪ್ಪ ಹುಸಿಹುಂಡ ಹುಸಿಡಂಭಕ
ದುರ್ಮತಿ ಬರುಕಾಯನಿಗೆ
ಅಖಂಡೇಶ್ವರ ಎಂತು ಮೆಚ್ಚುವನು ಎನಗೆ?/78
ಆಳವಿಲ್ಲದ ನಿರಾಳನಾಟವನೇನೆಂಬೆ,
ಸೀಮೆಯಿಲ್ಲದ ನಿಸ್ಸೀಮನ ಸಂಗವನೇನೆಂಬೆ,
ಖಂಡಿತವಿಲ್ಲದ ಅಖಂಡೇಶ್ವರನ ಕೂಟವನೇನೆಂಬೆನಯ್ಯ ?/79
ಇಂದಿನ ಇರುಳಿನಲ್ಲಿ
ನಲ್ಲನು ಚಲ್ಲವಾಡುತ ಬಂದು
ಮೆಲ್ಲನೆ ಎನ್ನ ಕೈವಿಡಿದನವ್ವಾ.
ಅಲ್ಲಿ ಉಟ್ಟ ಸೀರೆಯ ನಿರಿಗಳು ಸಡಲಿ ಬಿದ್ದುವವ್ವಾ.
ತೊಟ್ಟ ರವಕೆಯ ಗಂಟು ಬಿಚ್ಚಿ ಕಡೆಗಾದುವವ್ವಾ.
ಅಖಂಡೇಶ್ವರನೆಂಬ ನಲ್ಲನು ಎನ್ನ
ಬಿಗಿಯಪ್ಪಿ ತಕ್ಕೆ ಸಿಕೊಂಡು
ಕೂಡಿದ ಸುಖವ ಇದಿರಿಟ್ಟು ಹೇಳಲಾರೆನವ್ವಾ./80
ಇಂದು ಎನ್ನ ಮನೆಯಲ್ಲಿ ದೇವರಹಬ್ಬ
ಘನವಾಯಿತ್ತು.
ನಿಮಗೆ ಹೋಗಲು ಎಡೆಯಿಲ್ಲ.
ಹೋಗಿರೆಲೆ ಕಾಲ ಕಾಮ ಮಾಯಾದಿಗಳಿರಾ.
ಮುಂಬಾಗಿಲಲ್ಲಿ ಕಾಲಾಂತಕನೆಂಬ ದೇವರ ಕುಳ್ಳಿರಿಸಿ
ಪೂಜಿಸುತಿರ್ಪರು ಎಮ್ಮವರು.
ಹಿಂಬಾಗಿಲಲ್ಲಿ ಕಾಮಾಂತಕನೆಂಬ ದೇವರ ಕುಳ್ಳಿರಿಸಿ
ಪೂಜಿಸುತಿರ್ಪರು ಎಮ್ಮವರು.
ಮೇಲು ಮನೆಯಲ್ಲಿ ಮಾಯಾಕೋಳಾಹಳನೆಂಬ
ದೇವರ ಕುಳ್ಳಿರಿಸಿ ಪೂಜಿಸುತಿರ್ಪರು ಎಮ್ಮವರು.
ಇಂತಿದನರಿಯದೆ ನೀವು ನಿಮ್ಮ ಹಳೆಯ ವಿಶ್ವಾಸದಿಂದ
ನಮ್ಮ ಮನೆಯತ್ತ ಸುಳಿದಿರಾದಡೆ
ನಮ್ಮಾಳ್ದ ಅಖಂಡೇಶ್ವರ ಕಂಡರೆ ಸೀಳಿ ಬಿಸಾಟುವನು.
ಹೋಗಿರಲೆ ನಿಮ್ಮ ಬಾಳುವೆಯ ಉಳುಹಿಸಿಕೊಂಡು./81
ಇಂದು ನಾಳೆಯೆಂಬ ಮಂದಬುದ್ಧಿಗೆ ಸಂದುಗೊಡದಿರಣ್ಣಾ.
ಅನಿತ್ಯಕಾಲವನರಿದು ಶ್ರೀ ಮಹಾದೇವನ ಪೂಜಿಸಿರಣ್ಣಾ.
ನೀರುಗುಳ್ಳೆಯಂತೆ ತೋರಿ ಅಡಗುವ ಅನಿತ್ಯಶರೀರದ ಭೋಗವು
ನಿತ್ಯವೆಂದು ನಚ್ಚಿ ಹೊತ್ತುಗಳೆದು ವ್ಯರ್ಥವಾಗಿ ಸತ್ತುಹೋಗದಿರಣ್ಣಾ.
ಕರ್ತೃ ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನಂಗಳ ಸವೆಸಿ
ನಿತ್ಯಪದವ ಸಾಧಿಸಿರಣ್ಣ ನಮ್ಮ ಅಖಂಡೇಶ್ವರಲಿಂಗದಲ್ಲಿ./82
ಇಂದ್ರಚಂದ್ರರು ಪ್ರಳಯವಾಗಿ ಹೋದಡು
ಶರಣನೇನೆಂದರಿಯನು.
ಹರಿವಿರಿಂಚಿಗಳು ಪ್ರಳಯವಾಗಿ ಹೋದಡು
ಶರಣನೇನೆಂದರಿಯನು.
ದೇವ ದಾನವ ಮಾನವರು ಪ್ರಳಯವಾಗಿ ಹೋದಡು
ಶರಣನೇನೆಂದರಿಯನು.
ಮನುಮುನಿಗಳು ಪ್ರಳಯವಾಗಿ ಹೋದಡು
ಶರಣನೇನೆಂದರಿಯನು.
ಪಂಚತತ್ತ್ವ ಬ್ರಹ್ಮಾಂಡಕೋಟಿಗಳು ಪ್ರಳಯವಾಗಿ ಹೋದಡು
ಅಖಂಡೇಶ್ವರಾ, ನಿಮ್ಮ ಶರಣನೇನೆಂದರಿಯನಯ್ಯಾ./83
ಇಂದ್ರಿಯಂಗಳಿಚ್ಛೆಯಲ್ಲಿ ಇರಿಸದಿರಯ್ಯ ಎನ್ನ.
ಕರಣಂಗಳ ಕತ್ತಲೆಯಲ್ಲಿ ಕೆಡಹದಿರಯ್ಯ ಎನ್ನ.
ಕಾಯಜೀವ ಸಂಸಾರದಲ್ಲಿ ಕಳವಳಸಿ
ಮುಂದುಗೆಡಿಸದಿರಯ್ಯ ಎನ್ನ.
ಮನದ ಮರವೆಯಲ್ಲಿ ಸುಳಿಸದಿರಯ್ಯ ಎನ್ನ.
ಭಾವದ ಭ್ರಮೆಯಲ್ಲಿ ಬಳಲಿಸದಿರಯ್ಯ ಎನ್ನ.
ಅಖಂಡೇಶ್ವರಾ, ನಿಮ್ಮ ನಾ ಸೆರಗೊಡ್ಡಿ ಬೇಡಿಕೊಂಬೆನು./84
ಇಕ್ಕಿದೆನು ಮುಂಡಿಗೆಯ ದೇವರದೇವನೆಂದು.
ಇಕ್ಕಿದೆನು ಮುಂಡಿಗೆಯ ದೇವಶಿಖಾಮಣಿಯೆಂದು.
ಇಕ್ಕಿದೆನು ಮುಂಡಿಗೆಯ ದೇವದೇವೇಶ್ವರನೆಂದು.
ಇಕ್ಕಿದೆನು ಮುಂಡಿಗೆಯ ಭಾವಜವೈರಿಯೆಂದು.
ಇಕ್ಕಿದೆನು ಮುಂಡಿಗೆಯ ಭಾಳಲೋಚನನೆಂದು.
ಇಕ್ಕಿದೆನು ಮುಂಡಿಗೆಯ ಜಗದವಲ್ಲಭನೆಂದು
ಇಕ್ಕಿದೆನು ಮುಂಡಿಗೆಯ ಜಂಗುಳಿದೈವದ ಗಂಡ ಅಖಂಡೇಶ್ವರನೆಂದು./85
ಇಕ್ಕಿದೆನು ಮುಂಡಿಗೆಯ
ಹರಿಕುಲದ ವಿಪ್ರರು ಬೆಕ್ಕನೆ ಬೆರಗಾಗುವಂತೆ.
ಇಕ್ಕಿದೆನು ಮುಂಡಿಗೆಯ
ಸೊಕ್ಕಿದ ರಕ್ಕಸರ ಸಂಹರಿಸಿದ ಶಿವನೇ ಅಧಿಕನೆಂದು.
ಇಕ್ಕಿದೆನು ಮುಂಡಿಗೆಯ
ಹರಿಯಜಸುರಾಸುರರೆಲ್ಲ ಹರನ ಆಳುಗಳೆಂದು.
ಇಕ್ಕಿದೆನು ಮುಂಡಿಗೆಯ ದಿಕ್ಕು ದಿಕ್ಕಿನೊಳಗೆ
ಅಖಂಡೇಶ್ವರನೆಂಬ ಮುಕ್ಕಣ್ಣ ಪರಶಿವನೆ ಘನ ಘನವೆಂದು./86
ಇದಿರ ಹಳಿದು ತನ್ನ ಬಣ್ಣಿಸುವನ್ನಕ್ಕರ
ಶಿವಜ್ಞಾನಿ ಎಂತಪ್ಪನಯ್ಯಾ ?
ಹಮ್ಮು ಬಿಮ್ಮು ಹೆಮ್ಮೆ ಹಿರಿತನವುಳ್ಳನ್ನಕ್ಕರ
ಶಿವಜ್ಞಾನಿ ಎಂತಪ್ಪನಯ್ಯಾ ?
ಉದಮದ ಗರ್ವ ಅಹಂಕಾರ ಮಮಕಾರವುಳ್ಳನ್ನಕ್ಕರ
ಶಿವಜ್ಞಾನಿ ಎಂತಪ್ಪನಯ್ಯಾ ?
ಆಸೆ ಆಮಿಷ ಕ್ಲೇಶ ತಾಮಸವುಳ್ಳನ್ನಕ್ಕರ
ಶಿವಜ್ಞಾನಿ ಎಂತಪ್ಪನಯ್ಯಾ ?
ಇಂತೀ ಗುಣಂಗಳುಳ್ಳನ್ನಕ್ಕರ
ಶಿವಾನುಭಾವಿಯೆಂತಪ್ಪನಯ್ಯಾ ಅಖಂಡೇಶ್ವರಾ ?/87
ಇದಿರಿನಲ್ಲಿ ಜಂಗಮವು ಬರುವುದು ಕಂಡು
ಸದರನಿಳಿದು ನಡೆದು ಹೋಗಿ,
ಚರಣಕ್ಕೆರಗುವುದೆ ಉತ್ತಮಭಕ್ತಿ ಎನಿಸಿತ್ತು.
ಇದ್ದ ಸ್ಥಾನದಲ್ಲಿಯೇ ಎದ್ದು ನಿಲ್ಲುವುದೆ
ಮಧ್ಯಮಭಕ್ತಿ ಎನಿಸಿತ್ತು.
ಕುಳಿತಲ್ಲಿಯೇ ಕರಮುಗಿಯುವುದೆ
ಕನಿಷ್ಠಭಕ್ತಿಯೆನಿಸಿತ್ತು.
ಈ ಮೂರುತೆರದ ಭಕ್ತಿಯಿಲ್ಲದೆ
ಗರ್ವದಿಂದ ಬೆರತುಕೊಂಡು ಕುಳಿತರೆ
ಮುಂದೆ ಹಿರಿಯ ಶೂಲದ ಮೇಲೆ ಕುಳ್ಳಿರಿಸುವನು
ನೋಡಾ ನಮ್ಮ ಅಖಂಡೇಶ್ವರ./88
ಇನ್ನು ಆಸನದ ಭೇದವೆಂತೆಂದೊಡೆ:
ಒಂದು ಹಿಮ್ಮಡದಿಂ ಯೋನಿಸ್ಥಾನವನೊತ್ತಿ ,
ಮತ್ತೊಂದು ಹಿಮ್ಮಡಮಂ ಮೇಢ್ರದ ಮೇಲಿರಿಸಿ,
ಏಕಚಿತ್ತನಾಗಿ ಋಜುಕಾಯನಾಗಿ,
ಭ್ರೂಮಧ್ಯದಲ್ಲಿ ದೃಷ್ಟಿಯುಳ್ಳಾತನಾಗಿಹುದೇ ಸಿದ್ಧಾಸನವೆನಿಸುವುದು.
ಎರಡು ತೊಡೆಗಳ ಮೇಲೆ
ಎರಡು ಪಾದಂಗಳ ಮೇಲುಮುಖವಾಗಿರಿಸಿ,
ಎರಡು ಕರತಳಂಗಳನು ನಡುವೆ ಮೇಲುಮುಖವಾಗಿರಿಸಿ,
ರಾಜದಂತಗಳನಡುವೆ ರಸನಾಗ್ರವನಿಟ್ಟು,
ನಾಸಾಗ್ರದೃಷ್ಟಿಯಿಂದಿಹುದೆ ಪದ್ಮಾಸನವೆನಿಸುವುದು.
ಎರಡು ತೊಡೆ ಕಿರಿದೊಡೆಗಳ ಸಂದಿಗಳಲ್ಲಿ
ಎರಡು ಪಾದಂಗಳನಿರಿಸಿ,
ಋಜುಕಾಯನಾಗಿಹುದೇ ಸ್ವಸ್ತಿಕಾಸನವೆನಿಸುವುದು.
ಮೇಢ್ರದ ಮೇಲೆ ಎಡದ ಹಿಮ್ಮಡವನಿರಿಸಿ,
ಅದರ ಮೇಲೆ ಬಲದ ಹಿಮ್ಮಡವನಿರಿಸಿ,
ಋಜುಕಾಯನಾಗಿಹುದೆ ಮುಕ್ತಾಸನವೆನಿಸುವುದು.
ಬಲದ ಹಿಮ್ಮಡಮಂ ಎಡದ ಪೊರವಾರಿನೊಳಿಟ್ಟು
ಎಡದ ಹಿಮ್ಮಡಮಂ ಬಲದ ಪೊರವಾರಿನೊಳಿಟ್ಟು
ಜಾನುಗಳೆರಡನು ಗೋಮುಖಾಕಾರಮಂ ಮಾಳ್ಪುದೇ
ಗೋಮುಖಾಸನವೆನಿಸುವುದು.
ಈ ಸಕಲ ಆಸನಗಳಿಂದೆ ಯೋಗಮಂ ಸಾಧಿಸುವುದೇ
ಆಸನಯೋಗ ನೋಡಾ ಅಖಂಡೇಶ್ವರಾ./89
ಇನ್ನು ತಾರಕಯೋಗದ ಲಕ್ಷಣಮಂ ಪೇಳ್ವೆನೆಂತೆನೆ :
ಮಂತ್ರಯೋಗ ಲಯಯೋಗ ಹಠಯೋಗಕ್ಕೆ
ಉತ್ತರೋತ್ತರ ವಿಶಿಷ್ಟವಾದ ರಾಜಯೋಗವೇ
ಸಾಂಖ್ಯಯೋಗವೆಂದು ತಾರಕಯೋಗವೆಂದು ಅಮನಸ್ಕಯೋಗವೆಂದು
ಮೂರು ಪ್ರಕಾರವಾಗಿರ್ಪುದು.
ಆ ಮೂರರೊಳಗೆ ಮೊದಲು ಸಾಂಖ್ಯಯೋಗವೇ
ತತ್ವಜ್ಞಾನರೂಪವಪ್ಪುದರಿಂದೆ, ಆ ತತ್ವಂಗಳೆಂತೆನೆ :ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ
ಪಂಚತತ್ವಂಗಳಿಂದೆ ಜನಿತಮಾದ
ವಾಗಾದಿ ಕರ್ಮೆಂದ್ರಿಯಂಗಳೈದು, ಶಬ್ದಾದಿ ವಿಷಯಂಗಳೈದು,
ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು, ಪ್ರಾಣಾದಿ ವಾಯುಗಳೈದು,
ಜೀವನಗೂಡಿ ಮಾನಸಾದಿ ಅಂತಃಕರಣಂಗಳೈದು,
ಇಂತೀ ಪಂಚವಿಂಶತಿ ತತ್ವಂಗಳು ನಾನಲ್ಲ,
ಅವು ನನ್ನವಲ್ಲವೆಂದು ವಿಭಾಗಿಸಿ ಕಳೆದು,
ಪರಾತ್ಪರವಾದ ಪರಶಿವಬ್ರಹ್ಮವೆ ನಾನೆಂದು ತಿಳಿವುದೇ
ಸಾಂಖ್ಯಯೋಗ ನೋಡಾ ಅಖಂಡೇಶ್ವರಾ./90
ಇನ್ನು ತಾರಕಯೋಗದ ಲಕ್ಷಣವೆಂತೆನೆ:
ವೇದ ಶಾಸ್ತ್ರಾಗಮ ಪುರಾಣ ಕವಿತ್ವಗಳೆಂಬ
ನುಡಿಗಳಿಂದೆ ವಾಚಾಳಕರಾದವರಿಗೆ
ತಾರಕಬ್ರಹ್ಮವು ಸಾಕ್ಷಾತ್ಕಾರವಾಗದು.
ಬ್ರಹ್ಮಚಾರಿ ಗೃಹಸ್ಥ ವಾನಪ್ರಸ್ಥ ಯತಿಗಳೆಂಬ
ಚತುರಾಶ್ರಮಗರ್ವಿತರಿಗೆ
ತಾರಕಬ್ರಹ್ಮವು ಸಾಕ್ಷಾತ್ಕಾರವಾಗದು.
ಜ್ಞಾನಖಾಂಡಿ ಕರ್ಮಖಾಂಡಿಗಳೆಂಬ ವೇದಾಂತಿ ಸಿದ್ಧಾಂತಿಗಳಿಗೆ
ತಾರಕಬ್ರಹ್ಮವು ಸಾಕ್ಷಾತ್ಕಾರವಾಗದು.
ಶ್ರೀ ಗುರುಕಟಾಕ್ಷದಿಂದಲ್ಲದೆ ತಾರಕಬ್ರಹ್ಮವು
ಆರಾರಿಗೂ ಸಾಕ್ಷಾತ್ಕಾರವಾಗದಯ್ಯಾ ಅಖಂಡೇಶ್ವರಾ./91
ಇನ್ನು ಧಾರಣಯೋಗದ ಲಕ್ಷಣವೆಂತೆನೆ :
ಸಂಕಲ್ಪ ವಿಕಲ್ಪಾತ್ಮಕವಾದ ಮನಸ್ಸು
ಕಾಕಾಕ್ಷಿಯಂತೆ ಬಾಹ್ಯಾಭ್ಯಂತರಗಳಿಗೆ ತಾನೇ ಕಾರಣವಪ್ಪುದರಿಂದೆ
ಆ ಮನಮಂ ಮುದ್ರಾಕರಣಬಂಧಂಗಳಿಂದಂತಮರ್ುಖಮಂ ಮಾಡಿ,
ಅನವಚ್ಛಿನ್ನ ತೈಲಧಾರೆಯಂತೆ ಶಿವಧ್ಯಾನಮಂ ಮಾಡುತಿರಲು
ಆ ಧ್ಯಾನಾಕಾರದಿಂ ಕರಿಗೊಂಡ ವಸ್ತುವಿನೊಳು
ಆ ಮನವು ನಿಶ್ಚಲಮಾಗಲದೇ ಧಾರಣಯೋಗ ನೋಡಾ
ಅಖಂಡೇಶ್ವರಾ./92
ಇನ್ನು ಪ್ರತ್ಯಾಹಾರದ ಭೇದವೆಂತೆನೆ :
ಯೋಗಾಭ್ಯಾಸವ ಮಾಡುವಲ್ಲಿ
ಆಲಸ್ಯವಾದ ಮಂದಸ್ವರೂಪವಾದ ಅತಿ ಉಷ್ಣವಾದ
ಅತಿ ಶೀತಲವಾದ ಅತಿ ಕಟುವಾದ ಅತಿ ಆಮ್ಲವಾದ
ಅಪವಿತ್ರವಾದ ಅನ್ನಪಾನಂಗಳಂ ಬಿಟ್ಟು,
ಯೋಗೀಶ್ವರರಿಗೆ ಸ್ವೀಕರಿಸಲು ಯೋಗ್ಯವಾದ
ಗೋದುವೆ ಶಾಲಿ ಜವೆ ಹೆಸರು ಹಾಲು ತುಪ್ಪ ಜೇನುತುಪ್ಪ
ಮುಂತಾದ ಪವಿತ್ರ ಅನ್ನಪಾನಂಗಳು
ಬಹು ಬಹುಳವಲ್ಲದೆ, ಬಹು ಸೂಕ್ಷ್ಮವಲ್ಲದೆ,
ಸುಪ್ರಮಾಣದಲ್ಲಿ ಸ್ವೀಕರಿಸುವುದೆ ಪ್ರತ್ಯಾಹಾರವೆನಿಸುವುದು.
ಅಂತುಮಲ್ಲದೆ ಬಾಹ್ಯಾರ್ಥಂಗಳಲ್ಲಿ ಎರಗುವ ಚಿತ್ತಮಂ
ಹೃದಯಾಕಾಶದಲ್ಲಿ ನಿಲಿಸುವುದೆ ಪ್ರತ್ಯಾಹಾರವು.
ಮತ್ತೆ ಹೃದಯಸ್ಥಾನದಿಂ ಚಲಿಸುವ ಮನಮಂ ಮರಳಿ ಮರಳಿ
ಅಲ್ಲಿಯೇ ಸ್ಥಾಪಿಸುವುದೇ ಪ್ರತ್ಯಾಹಾರವಯ್ಯಾ ಅಖಂಡೇಶ್ವರಾ./93
ಇನ್ನು ಪ್ರಾಣಾಯಾಮದ ಲಕ್ಷಣವೆಂತೆಂದೊಡೆ :
ಪ್ರಾಕೃತಪ್ರಾಣಾಯಾಮವೆಂದು, ವೈಕೃತಪ್ರಾಣಾಯಾಮವೆಂದು,
ಆ ಎರಡರಿಂ ಪೊರತಾದ ಕೇವಲ ಕುಂಭಕವೆಂದು,
ಮೂರು ಪ್ರಕಾರವಾಗಿರ್ಪುದದೆಂತೆನೆ :
ದಿನವೊಂದಕ್ಕೆ ಇಪ್ಪತ್ತೊಂದು ಸಾವಿರದ ಆರುನೂರು
ಹಂಸ ಹಂಸವೆಂದುಚ್ಚರಿಸುವ
ಅಹಂಕಾರಾತ್ಮಕವಾದ ಜೀವಜಪವೇ
ಪ್ರಾಕೃತ ಪ್ರಾಣಾಯಾಮವೆನಿಸುವುದು.
ಮತ್ತಾ ಜೀವಜಪವನು ಗೂರೂಪದೇಶದಿಂದೆ ಲೋಪವಮಾಡಿ
ಸೋಹಂ ಸೋಹಂ ಎಂಬ ಮಂತ್ರಸಂಸ್ಕಾರದಿಂದುಚ್ಚರಿಸುವುದೆ
ವೈಕೃತಪ್ರಾಣಾಯಾಮವೆನಿಸುವುದು.
ಆ ವೈಕೃತಪ್ರಾಣಾಯಾಮವೆ
ಇನ್ನೊಂದು ಪ್ರಕಾರವಾಗಿ ಪೇಳಲ್ಪಡುವುದದೆಂತೆನೆ :
ಕನಿಷ್ಠೆ ಅನಾಮಿಕೆಗಳಿಂದೆ ಈಡನಾಡಿಯಂ ಬಲಿದು,
ಪಿಂಗಳನಾಡಿಯಿಂದೆ ದೇಹಾಂತರ್ಗತ ವಾಯುಮಂ
ಅಕಾರೋಚ್ಚರಣದಿಂ ಪನ್ನೆರಡು ಮಾತ್ರೆ ರಚಿಸಿ,
ಮತ್ತೆ ಪಿಂಗಳನಾಡಿಯಂ ಅಂಗುಷ್ಠದಿಂ ಬಲಿದು,
ಈಡಾನಾಡಿಯಿಂದೆ ಪನ್ನೆರಡು ಮಾತ್ರೆ ಉಕಾರೋಚ್ಚರಣದಿಂ ಪೂರಿಸಿ,
ನಾಭಿ ಹೃದಯ ಕಂಠವೆಂಬ ತ್ರಿಸ್ಥಾನದೊಳೊಂದರಲ್ಲಿ
ಪನ್ನೆರಡು ಮಾತ್ರೆ ಮಕಾರೋಚ್ಚರಣದಿಂ ತುಂಬಿಪುದೆ
ಕನಿಷ್ಠಪ್ರಾಣಾಯಾಮವೆನಿಸುವುದು.
ಅದೆಂತೆಂದೊಡೆ :
ಶೀಘ್ರವಲ್ಲದೆ ವಿಳಂಬವಲ್ಲದೆ ಜಾನುಪ್ರದಕ್ಷಿಣಮಂ ಮಾಡಿ,
ಅಂಗುಲಿಸ್ಫೋಟನಮಂ ಮಾಡಿದರೆ ಒಂದು ಮಾತ್ರೆ ಎನಿಸುವುದು.
ಇಂತಹ ಮಾತ್ರೆ ಪನ್ನೆರಡು ಆದರೆ ಕನಿಷ್ಠವೆನಿಸುವುದು.
ಮತ್ತಾ ಮಾತ್ರೆ ಇಪ್ಪತ್ತು ನಾಲ್ಕಾದರೆ ಮಧ್ಯಮವೆನಿಸುವುದು.
ಬಳಿಕಾ ಮಾತ್ರೆ ಮೂವತ್ತಾರಾದರೆ ಉತ್ತಮವೆನಿಸುವುದು.
ಇಂತೀ ಮೂವತ್ತಾರು ಮಾತ್ರೆಗಳು
ಮಂತ್ರ ಸ್ಮರಣೆ ಧ್ಯಾನ ಸಹಿತಮಾಗಿ ಮಾಳ್ಪುದೆ
ಪ್ರಾಣಾಯಾಮದಲ್ಲಿ ಉತ್ತಮ ಪ್ರಾಣಾಯಾಮವೆನಿಸುವುದು.
ಇನ್ನು ಕೇವಲ ಕುಂಭಕವೆಂತೆನೆ :
ವಾಮಭಾಗದ ಈಡಾನಾಡಿಯೇ ಚಂದ್ರನಾಡಿಯೆಂದು
ಯಮುನಾನದಿ ಎಂದು ಪೇಳಲ್ಪಡುವುದು.
ದಕ್ಷಿಣಭಾಗದ ಪಿಂಗಳನಾಡಿಯೇ ಸೂರ್ಯನಾಡಿಯೆಂದು
ಗಂಗಾನದಿಯೆಂದು ಪೇಳಲ್ಪಡುವುದು.
ಸುಷುಮ್ನೆಯೆಂಬ ಮಧ್ಯನಾಡಿಯೇ ಅಗ್ನಿಯೆಂದು
ಸರಸ್ವತಿನದಿಯೆಂದು ಪೇಳಲ್ಪಡುವುದಾಗಿ,
ಆ ನದಿತ್ರಯಂಗಳ ಸಂಬಂಧದಿಂ ತ್ರಿವೇಣಿಯೆಂಬ ಯೋಗಸ್ಥಲಕೆ
ತ್ರಿಕೂಟವೆಂದು, ಮಧ್ಯಹೃದಯವೆಂದು, ಕಾಶಿಕ್ಷೇತ್ರವೆಂದು,
ಕೂರ್ಚವೆಂದು ಆಜ್ಞಾಚಕ್ರವೆಂದು, ಪರ್ಯಾಯ ನಾಮಂಗಳನುಳ್ಳ
ಶಿವಧ್ಯಾನಕ್ಕೆ ರಹಸ್ಯವಾದ ಭ್ರೂಮಧ್ಯಸ್ಥಾನದಲ್ಲಿ
ಮನೋಮಾರುತಂಗಳನೈದಿಸಿ ಯೋಗಮಂ ಸಾಧಿಸಲ್ತಕ್ಕುದೇ
ಪ್ರಾಣಾಯಾಮಾಭ್ಯಾಸ ನೋಡಾ ಅಖಂಡೇಶ್ವರಾ./94
ಇನ್ನು ಯೋಗೀಶ್ವರರ ಧ್ಯಾನಯೋಗಕ್ಕೆ ಸ್ಥಾನಂಗಳಾವುವೆನೆ :
ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ
ಆಜ್ಞೇಯ ಭ್ರೂಮಧ್ಯಾದಿ ಸ್ಥಾನಂಗಳಲ್ಲಿ
ಬಂಧಮುದ್ರೆಗಳಿಂದೆ ಧ್ಯಾನಮಂ ಮಾಳ್ಪುದೆಂತೆನೆ :
ಆಧಾರಚಕ್ರಗಳ ನಾಲ್ಕೆಸಳಮಧ್ಯದಲ್ಲಿ
ಇಷ್ಟಾರ್ಥಮಂ ಕೊಡುವ ಸುವರ್ಣ ಕಾಂತಿಯನುಳ್ಳ
ಆಧಾರಶಕ್ತಿಯಂ ಧ್ಯಾನಿಸುವುದು.
ಸ್ವಾಧಿಷ್ಠಾನಚಕ್ರ ಆರೆಸಳಮಧ್ಯದಲ್ಲಿ ಸಕಲವರ್ಣದಿಂ
ಲಿಂಗಸ್ವರೂಪನಾದ ಶಿವನಂ ಧ್ಯಾನಿಸುವುದು.
ಮಣಿಪೂರಕಚಕ್ರ ಹತ್ತೆಸಳಮಧ್ಯದಲ್ಲಿ
ಸುಪ್ತ ಸಪರ್ಾಕಾರದ ಮಿಂಚಿಗೆ ಸಮಾನದೀಪ್ತಿಯುಳ್ಳ
ಸಕಲಸಿದ್ಧಿಗಳಂ ಕೊಡುವ ಕುಂಡಲಿಶಕ್ತಿಯಂ ಧ್ಯಾನಿಸುವುದು.
ಅನಾಹತಚಕ್ರ ಹನ್ನೆರಡೆಸಳಮಧ್ಯದಲ್ಲಿ
ಜ್ಯೋತಿರ್ಮಯಲಿಂಗಮಂ ಧ್ಯಾನಿಸುವುದು.
ವಿಶುದ್ಧಿಚಕ್ರ ಷೋಡಶದಳಮಧ್ಯದಲ್ಲಿ
ಸುಸ್ಥಿರಮಾದ ಆನಂದರೂಪಿಣಿಯಾದ
ಸುಷುಮ್ನೆಯಂ ಧ್ಯಾನಿಸುವುದು.
ಆಜ್ಞಾಚಕ್ರ ದ್ವಿದಳಮಧ್ಯದಲ್ಲಿ ವಾಕ್ಸಿದ್ಧಿಯಂ ಕೊಡುವ
ದೀಪದ ಜ್ವಾಲೆಗೆ ಸಮಾನವಾದ ಜ್ಞಾನನೇತ್ರವೆನಿಸುವ
ಶುದ್ಧಪ್ರಸಾದಜ್ಯೋತಿಯಂ ಧ್ಯಾನಿಸುವುದೇ
ಧ್ಯಾನಯೋಗ ನೋಡಾ ಅಖಂಡೇಶ್ವರಾ./95
ಇನ್ನು ಸಮಾಧಿಯೋಗವೆಂತೆಂದೊಡೆ :
ಸುಖದುಃಖ ಪುಣ್ಯಪಾಪ ಪೂಜಾಪೂಜಂಗಳು
ಸಂಕಲ್ಪವಿಕಲ್ಪಂಗಳೇನೂ ತೋರದೆ,
ತಾನೆಂಬ ಅಹಂಭಾವವಳಿದು
ಅಖಂಡಪರಿಪೂರ್ಣಮಾದ ಪರಬ್ರಹ್ಮದಲ್ಲಿ ಕೂಡಿದ
ಸಮರಸಭಾವವೇ ಸಮಾಧಿಯಯ್ಯಾ ಅಖಂಡೇಶ್ವರಾ./96
ಇನ್ನು ಹಠಯೋಗಕ್ಕೆ ಸಾಧನಮಾದ
ಬಂಧತ್ರಯಂಗಳ ಭೇದವೆಂತೆಂದೊಡೆ :
ವಾಮಪಾದದ ಹಿಮ್ಮಡದಿಂ ಯೋನಿಸ್ಥಾನವನೊತ್ತಿ
ಬಲಪಾದಮಂ ನೀಡಿ,
ಎರಡು ಹಸ್ತಗಳಿಂದೆ ಅಂಗುಷ್ಠಮಂ ಪಿಡಿದು,
ಕಂಠಸ್ಥಾನದಲ್ಲಿ ಚುಬುಕವನಿರಿಸಿ,
ವಾಯುಧಾರಣಮಂ ಮಾಡುವುದೆ ಜಾಲಂಧರಬಂಧವೆನಿಸುವುದು.
ವಾಮಪಾದದ ಹಿಮ್ಮಡದಿಂದಾಧಾರವನೊತ್ತಿ ,
ಎಡದ ತೊಡೆಯ ಮೇಲೆ ಬಲದ ಪಾದವನಿರಿಸಿ
ವಾಯುಪೂರಣಮಂ ಮಾಡಿ,
ಜಾಲಂಧರಮಂ ಬಂಧಿಸುವುದೆ ಮಹಾಬಂಧವೆನಿಸುವುದು.
ನಾಭಿಯ ಊಧ್ರ್ವ ಅಧೋಭಾಗಂಗಳನು
ಬಲಾತ್ಕಾರದಿಂ ಬಂಧಿಪುದೆ ಉಡ್ಯಾಣಬಂಧವೆನಿಸುವುದು.
ಈ ಬಂಧತ್ರಯಂಗಳಿಂದೆ
ಛೇದನ ಚಾಲನ ದೋಹನಾದಿ ಕ್ರೀಯಂಗಳಿಂದೆ
ಪೆಚ್ಚಿರ್ದ ಜಿಹ್ವೆಯನು ಭ್ರೂಮಧ್ಯಸ್ಥಾನಕ್ಕೇರಿಸಿ
ಸ್ಥಿರದೃಷ್ಟಿಯಾಗಿಹುದೇ ಹಠಯೋಗ ನೋಡಾ ಅಖಂಡೇಶ್ವರಾ./97
ಇಮ್ಮನ ಭಕ್ತಂಗೆ ಕರ್ಮದ ವಿಧಿ ಕಾಡುತ್ತಿರ್ಪುದು ನೋಡಾ !
ಆ ಇಮ್ಮನವಳಿದು ಒಮ್ಮನವಾಗಿ ನಿಮ್ಮ ನರಿತರೆ
ಕರ್ಮದವಿಧಿ ಬಿಟ್ಟೋಡಿತ್ತು ನೋಡಾ ಅಖಂಡೇಶ್ವರಾ./98
ಇಷ್ಟಲಿಂಗ ಪ್ರಾಣಲಿಂಗ ಒಂದೆಯೆಂದರಿಯದೆ
ಭಿನ್ನವಿಟ್ಟು ನುಡಿವ ಭ್ರಾಂತರ ಮಾತ ಕೇಳಲಾಗದು.
ಅದೇನು ಕಾರಣವೆಂದೊಡೆ :
ತಿಳಿದುಪ್ಪ ಗಟ್ಟಿಗೊಂಡು ಹೆರೆದುಪ್ಪವಾದಂತೆ,
ನಿರಾಕಾರ ಪರಬ್ರಹ್ಮವ ಸಾಕಾರಗೊಳಿಸಿ,
ಶ್ರೀಗುರುಸ್ವಾಮಿ ಕರುಣಿಸಿ
ಕರಸ್ಥಲಕ್ಕೆ ಇಷ್ಟಲಿಂಗವೆನಿಸಿ ಕೊಟ್ಟಬಳಿಕ,
ಆ ಲಿಂಗದಲ್ಲಿ ನಿಷ್ಠೆ ಬಲಿಯಲು
ಬಾಹ್ಯ ಕರಣಂಗಳು ತರಹರವಾಗಿ,
ಆ ಲಿಂಗದ ಚಿತ್ಕಳೆ ದೃಷ್ಟಿಸೂತ್ರದಿಂದೆ
ತನ್ನ ಅಂತರಂಗಕ್ಕೆ ವೇಧಿಸಿ ಪ್ರಾಣಲಿಂಗವೆನಿಸುವುದು.
ಸ್ಫಟಿಕದ ಘಟದಲ್ಲಿರಿಸಿದ ಜ್ಯೋತಿಯಂತೆ
ಒಳಹೊರಗೆ ತೋರುತಿರ್ಪುದು ಒಂದೇ ಲಿಂಗವೆಂದರಿಯದೆ,
ಭ್ರಾಂತಿಜ್ಞಾನದಿಂದೆ
ಅಂತರಂಗದಲ್ಲಿ ಬೇರೆ ಪ್ರಾಣಲಿಂಗವುಂಟೆಂದು
ಇಷ್ಟಲಿಂಗದಲ್ಲಿ ಅವಿಶ್ವಾಸಮಾಡುವ
ಭ್ರಷ್ಟಭವಿಗಳ ಮುಖವ ನೋಡಲಾಗದಯ್ಯ ಅಖಂಡೇಶ್ವರಾ./99
ಇಷ್ಟಲಿಂಗಕ್ಕೆ ತನುವೆ ಭಾಜನ.
ಪ್ರಾಣಲಿಂಗಕ್ಕೆ ಮನವೆ ಭಾಜನ.
ಭಾವಲಿಂಗಕ್ಕೆ ಜೀವವೆ ಭಾಜನವೆಂದರಿಯದ
ಮರುಳು ಮಾನವರಿಗೆ
ಭವಬಂಧನ ಪ್ರಾಪ್ತಿಯಯ್ಯಾ ಅಖಂಡೇಶ್ವರಾ./100
ಇಷ್ಟಲಿಂಗಕ್ಕೆ ರೂಪುಪದಾರ್ಥವನರ್ಪಿಸಿ,
ಆ ಇಷ್ಟಲಿಂಗದಮುಖದಲ್ಲಿಯೇ
ರೂಪುಪ್ರಸಾದವ ಪಡೆಯಬಲ್ಲಡೆ ಶಿವಪ್ರಸಾದಿಯೆಂಬೆನು.
ಪ್ರಾಣಲಿಂಗಕ್ಕೆ ರುಚಿಪದಾರ್ಥವನರ್ಪಿಸಿ,
ಆ ಪ್ರಾಣಲಿಂಗದಮುಖದಲ್ಲಿಯೇ
ರುಚಿಪ್ರಸಾದವ ಪಡೆಯಬಲ್ಲಡೆ ಶಿವಪ್ರಸಾದಿಯೆಂಬೆನು.
ಭಾವಲಿಂಗಕ್ಕೆ ತೃಪ್ತಿಪದಾರ್ಥವನರ್ಪಿಸಿ,
ಆ ಭಾವಲಿಂಗದಮುಖದಲ್ಲಿಯೇ
ತೃಪ್ತಿಪ್ರಸಾದವ ಪಡೆಯಬಲ್ಲಡೆ ಶಿವಪ್ರಸಾದಿಯೆಂಬೆನು.
ಇಂತೀ ಭೇದವನರಿಯದೆ
ಒಡಲಕಕ್ಕುತಲೆಗೆ ಒಗುಮಿಗೆ ಒಟ್ಟಿಸಿಕೊಂಡು
ಬಾಯಿಗೆ ಬಂದಂತೆ ತಿಂದು ತನು ಕೊಡಹಿ, ಮನ ಹೇಸಿ,
ರಣಭೂತನಂತೆ ಕಂಡಕಂಡತ್ತ ಚೆಲ್ಲುವ
ದಿಂಡೆಯ ಮೂಳ ಬಂಡ ಹೊಲೆಯರಿಗೆ
ಶಿವಪ್ರಸಾದದ ಒಲುಮೆಯೆಲ್ಲಿಯದಯ್ಯ ಅಖಂಡೇಶ್ವರಾ./101
ಇಷ್ಟಲಿಂಗದ ನಿಜವನರಿಯದೆ ಪ್ರಾಣಲಿಂಗದ ಮಾತನುಡಿವ
ನೀತಿಹೀನರ ನಾನೇನೆಂಬೆನಯ್ಯ ?
ಹೆತ್ತ ತಂದೆಯನರಿಯದೆ ಮುತ್ತ್ಯಾನ ಪ್ರತಾಪವ ಹೇಳುವ
ಕತ್ತೆ ಮೂಳರನೇನೆಂಬೆನಯ್ಯ ಅಖಂಡೇಶ್ವರಾ ?/102
ಇಷ್ಟಲಿಂಗದಲ್ಲಿ ತನುವ ಸವೆಯದೆ,
ಪ್ರಾಣಲಿಂಗದಲ್ಲಿ ಮನವ ಸವೆಯದೆ,
ಭಾವಲಿಂಗದಲ್ಲಿ ಧನವ ಸವೆಯದೆ,
ಬರಿದೆ ನಾನು ಜಂಗಮ, ತಾನು ಜಂಗಮವೆಂದು
ತಮ್ಮ ಅಗಮ್ಯವ ನುಡಿದುಕೊಂಡು
ಭಕ್ತಿಯ ಮರೆದು ಯುಕ್ತಿಶೂನ್ಯರಾಗಿ
ಮುಕ್ತಿಯ ಹೊಲಬು ತಪ್ಪಿ
ಆಣವ ಮಾಯಾ ಕಾರ್ಮಿಕವೆಂಬ
ಮಲತ್ರಯಂಗಳ ಕಚ್ಚಿ ಮೂತ್ರದ ಕುಳಿಯೊಳು ಮುಳುಗಾಡುತಿರ್ಪ
ಮೂಳ ಹೊಲೆಯರ ಮುಖವ ನೋಡಲಾಗದಯ್ಯ ಅಖಂಡೇಶ್ವರಾ./103
ಇಷ್ಟಲಿಂಗದಲ್ಲಿ ತನುವನಡಗಿಸಿ,
ಪ್ರಾಣಲಿಂಗದಲ್ಲಿ ಮನವನಡಗಿಸಿ,
ಭಾವಲಿಂಗದಲ್ಲಿ ಜೀವನನಿಕ್ಷೇಪಿಸಿ,
ಆ ಇಷ್ಟ ಪ್ರಾಣ ಭಾವಲಿಂಗವು ಒಂದಾದ
ಮಹಾಘನ ಪರಬ್ರಹ್ಮದಲ್ಲಿ ತಾನೆಂಬ ನೆನಹಡಗಿ,
ದ್ವಂದ್ವಕರ್ಮಂಗಳ ನೀಗಿ,
ಆ ಪರಿಪೂರ್ಣ ಪರಬ್ರಹ್ಮವೆ ತಾನಾದುದು
ಮಹಾಶೀಲವಯ್ಯಾ ಅಖಂಡೇಶ್ವರಾ./104
ಇಷ್ಟಲಿಂಗದಲ್ಲಿ ನೈಷ್ಠೆ ಬಲಿಯರು.
ಪ್ರಾಣಲಿಂಗದಲ್ಲಿ ಪ್ರತಿಷ್ಠೆಯನರಿಯರು.
ಬರಿದೆ ಇಷ್ಟಲಿಂಗಸಂಬಂಧವ
ಪ್ರಾಣಲಿಂಗದ ನಿರ್ದೆಶವ ಬಲ್ಲೆವೆಂಬ
ಭ್ರಷ್ಟರನೇನೆಂಬೆನಯ್ಯ ಅಖಂಡೇಶ್ವರಾ !/105
ಇಷ್ಟಲಿಂಗವಾಗಿ ಎನ್ನ ಸ್ಥೂಲತನುವಿಗೆ
ಅರಸನಾಗಿಪ್ಪನಯ್ಯಾ ಬಸವಣ್ಣನು.
ಪ್ರಾಣಲಿಂಗವಾಗಿ ಎನ್ನ ಸೂಕ್ಷ್ಮತನುವಿಗೆ
ಅರಸನಾಗಿಪ್ಪನಯ್ಯಾ ಚೆನ್ನಬಸವಣ್ಣನು.
ಭಾವಲಿಂಗವಾಗಿ ಎನ್ನ ಕಾರಣತನುವಿಗೆ
ಅರಸನಾಗಿಪ್ಪನಯ್ಯಾ ಪ್ರಭುರಾಯನು.
ಇದು ಕಾರಣ,
ಎನಗೆ ರಾಜಯೋಗದ ಮನ್ನೆಯವು ದೊರಕಿತಯ್ಯಾ ಅಖಂಡೇಶ್ವರಾ./106
ಈ ಲಕ್ಷ್ಯತ್ರಯಂಗಳನರಿದ ಯೋಗೀಶ್ವರನು
ಮುಂದೆ ಮುದ್ರಾತ್ರಯಂಗಳನರಿಯಬೇಕೆಂತೆನೆ :
ಶಿವಧ್ಯಾನದಲ್ಲಿ ಕುಳ್ಳಿರ್ದು
ನವದ್ವಾರಂಗಳಂ ಬಲಿವುದೆ ಷಣ್ಮುಖೀಮುದ್ರೆ.
ಈ ಷಣ್ಮುಖೀಮುದ್ರೆಯಿಂದೆ ಒಳಗೆ
ನಾದಾನುಸಂಧಾನದಲ್ಲಿ ಮನೋಮಾರುತಂಗಳು ನಿಶ್ಚಲಮಾಗಿರ್ಪುದೆ
ಖೇಚರೀಮುದ್ರೆ ಎನಿಸುವುದು.
ನೇತ್ರಂಗಳ ತುದಿಯ ಸೂಕ್ಷ್ಮರಂಧ್ರವನುಳ್ಳ
ಕೃಷ್ಣತಾರಾಮಂಡಲದಮಧ್ಯದಲ್ಲಿ ಶುದ್ಧಚಿತ್ತದಿಂದೆ
ನಿಶ್ಚಲಮಾದ ಪರಮಾತ್ಮಜ್ಯೋತಿಸ್ವರೂಪಮಪ್ಪ
ದಿವ್ಯಲಿಂಗಮಂ ಕಾಣ್ಬುದೇ
ಶಾಂಭವೀಮುದ್ರೆಯೆನಿಸುವುದಯ್ಯಾ ಅಖಂಡೇಶ್ವರಾ./107
ಈ ಶಿವಷಡಕ್ಷರಮಂತ್ರದಿಂದೆ ಸಾನಂದಋಷಿಯು
ನರಕಜೀವಿಗಳನ್ನೆಲ್ಲ ಹರನ ಓಲಗದಲ್ಲಿರಿಸಿದನು ನೋಡಾ.
ಈ ಶಿವಷಡಕ್ಷರಮಂತ್ರದಿಂದೆ ತಿರುಜ್ಞಾನಸಂಬಂಧಿಗಳು
ಕೂನಪಾಂಡ್ಯನ ವಾದವ ಗೆದ್ದರು ನೋಡಾ.
ಈ ಷಡಕ್ಷರಮಂತ್ರದಿಂದೆ ಶಿವಜಾತಯ್ಯನ ಶಿಷ್ಯ ಮಂತ್ರಜಾತಯ್ಯನು
ಮಹಾಬಯಲನೈದಿದನು ನೋಡಾ.
ಈ ಶಿವಷಡಕ್ಷರಮಂತ್ರದಿಂದೆ ಅಜಗಣ್ಣ ತಂದೆಗಳು
ನಿಜಲಿಂಗೈಕ್ಯರಾದರು ನೋಡಾ.
ಇಂತಪ್ಪ ಶಿವಷಡಕ್ಷರಮಂತ್ರವನು ಎನ್ನಂತರಂಗದ
ಅರುಹಿನ ಮನೆಯಲ್ಲಿ ಬಚ್ಚಿಟ್ಟುಕೊಂಡು
ಓಂ ನಮಃಶಿವಾಯ, ಓಂ ನಮಃಶಿವಾಯ,
ಓಂ ನಮಃಶಿವಾಯ ಎಂದೆನುತಿರ್ದೆನಯ್ಯ ಅಖಂಡೇಶ್ವರಾ./108
ಈ ಹಠಯೋಗಕ್ಕೆ ನಿಜದಂಗವಾಗಿರ್ಪ
ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ
ಧ್ಯಾನ ಧಾರಣ ಸಮಾಧಿಗಳೆಂಬ ಅಷ್ಟಾಂಗಯೋಗದೊಳಗೆ
ಮೊದಲು ಯಮಯೋಗದ ಲಕ್ಷಣವೆಂತೆಂದೊಡೆ :
ಪರಸ್ತ್ರೀಯರ ಸಂಗವಿರಹಿತವಾಗಿಹುದು.
ಪರದ್ರವ್ಯವನಪಹರಿಸದಿಹುದು.
ಪರಹಿಂಸೆಯ ಮಾಡದಿಹುದು.
ದುಃಖಿತರಿಗೆ ಹಿತವ ಚಿಂತಿಸುವುದು.
ಶೋಕಭೀತಿಗಳಿಲ್ಲದಿಹುದು, ಅಲ್ಪಾಹಾರಿಯಾಗಿಹುದು.
ಕುಟಿಲತೆಯಿಲ್ಲದಿಹುದು, ಕಾರ್ಪಣ್ಯವಿಲ್ಲದಿಹುದು.
ಸತ್ಯವಚನವ ನುಡಿವುದು.
ಜಲಸ್ನಾನ ಭಸ್ಮಸ್ನಾನಾದಿಗಳನಾಚರಿಸುವುದು.
ಯಮಯೋಗವೆನಿಸುವುದಯ್ಯಾ ಅಖಂಡೇಶ್ವರಾ./109
ಈಡಾ ಪಿಂಗಳೆಯಲ್ಲಿ ತುಂಬಿ ಸೂಸುವ
ಹಂಸರೂಪವಾದ ಪ್ರಕೃತಿಪ್ರಾಣವಾಯುವನು
ಸೋಹಂಭಾವದಿಂದೆ ವೈಕೃತಪ್ರಾಣನಂ ಮಾಡಿ
ಧ್ಯಾನಮೂರ್ತಿಯಲಾದಡೂ
ಪ್ರಾಣಾತ್ಮಕವಾದ ಸುನಾದದಲಾದಡೂ ಲಕ್ಷ್ಯಂಗಳಲಾದಡೂ
ಮನೋಮಾರುತಂಗಳೊಳಗೂಡಿ ಲಯಿಸುವುದೆ
ಲಯಯೋಗ ನೋಡಾ ಅಖಂಡೇಶ್ವರಾ./110
ಈಶನ ಮರೆಯಲ್ಲಿ ವೇಷವ ತೊಟ್ಟಾಡುವರೆಲ್ಲ
ಜಂಗಮವೇ ? ಅಲ್ಲಲ್ಲ.
ಅದೇನು ಕಾರಣವೆಂದೊಡೆ :ತಮ್ಮ ನಿಲವ ತಾವು ಕಾಣರು.
ಮುನ್ನ ಹೋದ ಪುರಾತನರ ಬಟ್ಟೆಯನರಿಯರು.
ಭಿನ್ನ ಪ್ರಪಂಚಿನಲ್ಲಿ ಮನ ಮಗ್ನವಾಗಿರ್ಪ ಭಿನ್ನ ಜೀವಿಗಳಂತಿರಲಿ.
ಇನ್ನು ನಿಜಜಂಗಮದ ನಿಲವೆಂತೆಂದೊಡೆ :
ತಥ್ಯಮಿಥ್ಯ ರಾಗದ್ವೇಷವನಳಿದು ಸ್ತುತಿ ನಿಂದೆ ಸಮವಾಗಿ,
ಇಹಪರದ ಗತಿಯ ಕೆಡಿಸಿ, ದ್ವೈತಾದ್ವೈತಂಗಳ ನೀಗಿ,
ಸತ್ಯಸದಾಚಾರವೆ ಅಂಗವಾಗಿ, ಭಕ್ತಿ ಜ್ಞಾನ ವೈರಾಗ್ಯವೆ ಭೂಷಣವಾಗಿ,
ಅಂಗ ಮನ ಪ್ರಾಣ ಸಕಲ ಕರಣೇಂದ್ರಿಯಂಗಳೆಲ್ಲ ಲಿಂಗದಲ್ಲಿ ನಿಕ್ಷೇಪವಾಗಿ,
ಸ್ಫಟಿಕದ ಘಟದಲ್ಲಿ ಜ್ಯೋತಿಯನಿರಿಸಿದಂತೆ,
ತನ್ನೊಳಹೊರಗೆ ಮಹಾಜ್ಞಾನವೇ ತುಂಬಿ ತೊಳಗಿ ಬೆಳಗುತ್ತ
ಒಡಲುಪಾಧಿಕೆಯನುರುಹಿ `ಭಕ್ತಿ ಭಿಕ್ಷಾಂದೇಹಿ’ ಎಂದು ಸುಳಿವ
ಪರಮ ಜಂಗಮದ ಸುಳುಹೆಲ್ಲ ಜಗತ್ಪಾವನ.
ಆತನ ನುಡಿಗಡಣವೆಲ್ಲ ಪರಮಬೋಧೆ.
ಆತನ ದರ್ಶನ ಸ್ಪರ್ಶನವೆಲ್ಲ ಮಹಾಪುಣ್ಯವು.
ಆತನು ಕೃಪೆಯಿಂದೆ ನೋಡಿದ ನೋಟವೆಲ್ಲ
ಸಕಲ ಪ್ರಾಣಿಗಳಿಗೆ ಸಾಲೋಕ್ಯಪದವು.
ಇಂತಪ್ಪ ಮಹಾಘನ ಪರಾತ್ಪರವಾದ ಪರಮಜಂಗಮದ
ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./111
ಉತ್ತರಗಿರಿಯ ಚಿತ್ರಮಂಟಪದೊಳಗೆ
ರತ್ನದ ತೋರಣದ ಪರಿಯ ನೋಡಾ !
ಮುತ್ತಿನ ಗದ್ದುಗೆಯ ಮೇಲೆ
ಛತ್ತೀಸಕೋಟಿ ಚಂದ್ರಸೂರ್ಯರ ಬೆಳಗನೊಳಕೊಂಡ
ನಿತ್ಯಪರಿಪೂರ್ಣವಸ್ತುವ ಕೂಡಬಲ್ಲಾತನೆ
ಕರ್ತೃ ಶಿವ ತಾನೆ ನೋಡಾ ಅಖಂಡೇಶ್ವರಾ./112
ಉನ್ಮನಿಯ ಮಂಟಪದಲ್ಲಿ ಉಮೆಯಾಣ್ಮನ ಉಗ್ಗಡಣೆಯ ನೋಡಾ !
ಪರಿಪರಿಯ ಗಣಂಗಳು ತರತರದಲ್ಲಿ ನೆರೆದು ನಿಂದು
ಉಘೇ ಉಘೇ ಎನುತಿರ್ಪರು ನೋಡಾ ಅಖಂಡೇಶ್ವರಾ./113
ಉಪಾಧಿಯನಳಿದು, ನಿರುಪಾಧಿಯ ತಿಳಿದು,
ಸಹಜಮಾಟದಲ್ಲಿ ಸುಳಿದು,
ಜಾತಿಸೂತಕ ಪ್ರೇತಸೂತಕ ಜನನಸೂತಕ ಉಚ್ಚಿಷ್ಟಸೂತಕ
ರಜಸ್ಸೂತಕವೆಂಬ ಪಂಚಸೂತಕಂಗಳ ಕಳೆದು,
ಸದಾಚಾರ ಲಿಂಗಾಚಾರ ಶಿವಾಚಾರ ಗಣಾಚಾರ
ಭೃತ್ಯಾಚಾರವೆಂಬ ಪಂಚಾಚಾರಂಗಳಳವಟ್ಟು
ಪಂಚಭೂತಂಗಳ ಪರಿಹರಿಸಿ,
ಪಂಚಪ್ರಾಣವಾಯುಗಳ ಸಂಚಲಗುಣವಳಿದು
ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಂಗಳ ಪ್ರತಿಷ್ಠಿಸಿ,
ಪಂಚಬ್ರಹ್ಮದ ಮೂಲವನರಿದು,
ಮೂಲೋಕದೊಡೆಯನಲ್ಲಿ ಮನವಡಗಿರ್ಪ
ಮಹಾಶರಣರ ಶ್ರೀಪಾದಕ್ಕೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./114
ಎಂದು ಅಷ್ಟತನುಗಳು ನಿರ್ಮಿತವಾಗಿ ಪಿಂಡಾಂಡವಾದುವು,
ಅಂದು ಇಂದು ಪರಿಯಂತರ ಬಂದೆನಯ್ಯ ಬಹುಜನ್ಮಂಗಳಲ್ಲಿ ,
ನೊಂದೆನಯ್ಯ ಸುಖದುಃಖಂಗಳಲ್ಲಿ.
ಬೆಂದೆನಯ್ಯ ಸಂಸಾರದಳ್ಳುರಿಯಲ್ಲಿ ;
ಈ ಸಂಸಾರದಂದುಗವ ತೊಲಗಿಸಿ ನಿಮ್ಮತ್ತ
ಎಳೆದುಕೊಳ್ಳಯ್ಯ ಎನ್ನ,
ಅಖಂಡೇಶ್ವರಾ ನಿಮ್ಮ ಧರ್ಮ ನಮ್ಮ ಧರ್ಮ./115
ಎಂಬತ್ತುನಾಲ್ಕುಲಕ್ಷ ಮಂಡಲದೊಳಗೆ
ಒಂದೊಂದು ಜನ್ಮದಲ್ಲಿ ಸಹಸ್ರವೇಳೆ ಸತ್ತು ಹುಟ್ಟಿ ಸುತ್ತಿಸುಳಿದು
ಸುಖದುಃಖಗಳಿಂದೆ ನೊಂದು ಬೆಂದು
ತೊಳಲಿ ಬಳಲುವ ಜೀವಂಗೆ,
ಬಡವಂಗೆ ಕಡವರ ದೊರೆಕೊಂಡಂತೆ,
ಮನುಷ್ಯದೇಹವು ದೊರೆಕೊಂಡಲ್ಲಿ,
ಶಿವಕೃಪೆಯಿಂದ ಗುರುಕಾರುಣ್ಯವಾಗಿ
ಅಂಗದ ಮೇಲೆ ಲಿಂಗಧಾರಣವಾದ ಬಳಿಕ
ಆ ಲಿಂಗದ ಮೇಲೆ ಪ್ರಾಣಪ್ರತಿಷ್ಠೆಯಂ ಮಾಡಿ
ನಿಮಿಷ ನಿಮಿಷಾರ್ಧವಗಲದಿರಬೇಕು.
ಮತ್ತಂ, ಆ ಲಿಂಗದಲ್ಲಿ ಐಕ್ಯವಾಗುವನ್ನಬರ
ಸತ್ಕ್ರಿಯಾ ಸಮ್ಯಕ್ಜ್ಞಾನವ ಬಿಡದಿರಬೇಕು.
ಇಷ್ಟುಳ್ಳಾತಂಗೆ ಶಿವನಲ್ಲಿ ಸಮರಸವಲ್ಲದೆ,
ಅಂತರಂಗದಲ್ಲಿ ಅಂತಃಪ್ರಾಣಲಿಂಗದ ಪರಿಪೂರ್ಣ ಬೆಳಗಕಂಡೆವು.
ಇನ್ನು ಇಷ್ಟಲಿಂಗದ ಹಂಗು ಏತಕೆಂದು
ಆ ಇಷ್ಟಲಿಂಗವ ಕಡೆಗೆ ತೆಗೆದು ಹಾಕಿ
ಲಿಂಗಬಾಹ್ಯನಾಗಿ ವ್ರತಗೇಡಿಯಾದಾತನು
ಒಂದುಕೋಟಿ ಕಲ್ಪಾಂತರವು ನರಕದೊಳಗಿರ್ದು
ಅಲ್ಲಿಂದತ್ತ ಎಂಬತ್ತುನಾಲ್ಕುಲಕ್ಷ ಜನ್ಮದಲ್ಲಿ
ಬಂಧನಬಡುತಿರ್ಪನಲ್ಲದೆ ಶಿವನಲ್ಲಿ
ಅವಿರಳ ಸಮರಸವಿಲ್ಲ ನೋಡಾ !
ಅದೆಂತೆಂದೊಡೆ :
“ಅಂಗೇ ಚ ಲಿಂಗಸಂಬಂಧಃ ಲಿಂಗಂಚ ಪ್ರಾಣಸಂಯುತಂ |
ನಿಮಿಷಾರ್ಧಂ ಪ್ರಾಣವಿಯೋಗೇನ ನರಕೇ ಕಾಲಮಕ್ಷಯಂ||”
ಎಂದುದಾಗಿ, ಇಂತಪ್ಪ ಅದ್ವೈತ ಹೀನಮಾನವರ
ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ./116
ಎಚ್ಚರವಿರಬೇಕು ನಡೆನುಡಿಯಲ್ಲಿ.
ಮಚ್ಚರವಿರಬೇಕು ಭವಸಂಸಾರದಲ್ಲಿ.
ಹುಚ್ಚನಾಗಿರಬೇಕು ಜನರ ಕಣ್ಣಿನಲ್ಲಿ.
ಮನ ಅಚ್ಚೊತ್ತಿದಂತಿರಬೇಕು ಲಿಂಗದಲ್ಲಿ.
ಇಂತೀ ಗುಣವುಳ್ಳಾತನೇ ಅಚ್ಚ ಶರಣನು ನೋಡಾ ಅಖಂಡೇಶ್ವರಾ./117
ಎನಗೆ ನೀನೇ ಚಿದ್ಭಾಂಡವಯ್ಯಾ;
ನಿನಗೆ ನಾನೇ ಚಿದ್ಭಾಂಡವಯ್ಯಾ.
ಎನಗೆ ನೀನೇ ಚಿದ್ಭಾಜನವಯ್ಯಾ;
ನಿನಗೆ ನಾನೇ ಚಿದ್ಭಾಜನವಯ್ಯಾ.
ಎನಗೆ ನೀನೇ ಸಕಲ ದ್ರವ್ಯ ಪದಾರ್ಥವಯ್ಯಾ ;
ನಿನಗೆ ನಾನೇ ಸಕಲದ್ರವ್ಯಪದಾರ್ಥವಯ್ಯ.
ನಾನು ನೀನು ಒಂದೇ ಹರಿವಾಣದಲ್ಲಿ
ಸಹಭೋಜನ ಮಾಡುತಿರ್ದೆವಾಗಿ,
ಅಖಂಡೇಶ್ವರಾ, ನಾನು ನೀನೆಂಬುಭಯದ
ಕೀಲು ಕಳಚಿತ್ತು ನೋಡಾ./118
ಎನ್ನ ಆಧಾರಚಕ್ರವೆ ಶ್ರೀಶೈಲಕ್ಷೇತ್ರ :
ಅಲ್ಲಿರ್ಪ ಆಚಾರಲಿಂಗವೇ ಶ್ರೀಮಲ್ಲಿಕಾರ್ಜುನದೇವರು.
ಎನ್ನ ಸ್ವಾಧಿಷ್ಠಾನಚಕ್ರವೆ ಸೇತುಬಂಧಕ್ಷೇತ್ರ;
ಅಲ್ಲಿರ್ಪ ಗುರುಲಿಂಗವೆ ರಾಮೇಶ್ವರನು.
ಎನ್ನ ಮಣಿಪೂರಕ ಚಕ್ರವೇ ಪಂಪಾಕ್ಪೇತ್ರ;
ಅಲ್ಲಿರ್ಪ ಶಿವಲಿಂಗವೆ ವಿರೂಪಾಕ್ಷೇಶ್ವರನು.
ಎನ್ನ ಅನಾಹತಚಕ್ರವೇ ಹಿಮವತ್ಕೇದಾರಕ್ಷೇತ್ರ;
ಅಲ್ಲಿರ್ಪ ಜಂಗಮಲಿಂಗವೆ ಹಿಮಗಿರೀಶ್ವರನು.
ಎನ್ನ ವಿಶುದ್ಧಿಚಕ್ರವೆ ಅವಿಮುಕ್ತಿಕ್ಷೇತ್ರ:
ಅಲ್ಲಿರ್ಪ ಪ್ರಸಾದಲಿಂಗವೆ ವಿಶ್ವೇಶ್ವರನು.
ಎನ್ನ ಆಜ್ಞಾಚಕ್ರವೆ ಸಂಗಮಕ್ಷೇತ್ರ:
ಅಲ್ಲಿರ್ಪ ಮಹಾಲಿಂಗವೆ ಸಂಗಮೇಶ್ವರನು.
ಇಂತಿವು ಮೊದಲಾದ ಸಕಲಕ್ಷೇತ್ರಂಗಳನೊಳಕೊಂಡ
ಎನ್ನ ಬ್ರಹ್ಮಚಕ್ರವೆ ಮಹಾಕೈಲಾಸ.
ಅಲ್ಲಿರ್ಪ ನಿಷ್ಕಲಲಿಂಗವೆ ಅನಾದಿ ಪರಶಿವನು
ನೀನೇ ಅಯ್ಯಾ ಅಖಂಡೇಶ್ವರಾ./119
ಎನ್ನ ಆಧಾರದಲ್ಲಿ
ಅರವತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು
ಬೆಳಗುತಿರ್ಪಿರಯ್ಯಾ ನೀವು.
ಎನ್ನ ಸ್ವಾಧಿಷ್ಠಾನದಲ್ಲಿ
ಎಪ್ಪತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು
ಬೆಳಗುತಿರ್ಪಿರಯ್ಯಾ ನೀವು.
ಎನ್ನ ಮಣಿಪೂರಕದಲ್ಲಿ
ಎಂಬತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು
ಬೆಳಗುತಿರ್ಪಿರಯ್ಯಾ ನೀವು.
ಎನ್ನ ಅನಾಹತದಲ್ಲಿ
ತೊಂಬತ್ತುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು
ಬೆಳಗುತಿರ್ಪಿರಯ್ಯಾ ನೀವು.
ಎನ್ನ ವಿಶುದ್ಧಿಯಲ್ಲಿ
ನೂರುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು
ಬೆಳಗುತಿರ್ಪಿರಯ್ಯಾ ನೀವು.
ಎನ್ನ ಆಜ್ಞೇಯದಲ್ಲಿ
ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು
ಬೆಳಗುತಿರ್ಪಿರಯ್ಯಾ ನೀವು.
ಎನ್ನ ಬ್ರಹ್ಮರಂಧ್ರದಲ್ಲಿ
ಅಗಣಿತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಕೊಂಡು
ಬೆಳಗುತಿರ್ಪಿರಯ್ಯಾ ನೀವು.
ಎನ್ನ ಶಿಖಾಚಕ್ರದಲ್ಲಿ
ಅಖಂಡ ಬೆಳಗನೊಳಕೊಂಡು
ಬೆಳಗುತಿರ್ಪಿರಯ್ಯಾ ನೀವು.
ಇಂತು ಎನ್ನೊಳಗೆ ಥಳಥಳಿಸಿ ಬೆಳಗುವ
ಬೆಳಗಿನ ಬೆಳಗು ಮಹಾಬೆಳಗಿನೊಳಗೆ ಮುಳುಗಿ
ಎನ್ನಂಗದ ಕಳೆಯಳಿದಿರ್ದೆನಯ್ಯಾ ಅಖಂಡೇಶ್ವರಾ./120
ಎನ್ನ ಆಧಿವ್ಯಾಧಿಗಳೆಲ್ಲ ಪ್ರಸಾದವಯ್ಯಾ.
ಎನ್ನ ಆಗುಹೋಗುಗಳೆಲ್ಲ ಪ್ರಸಾದವಯ್ಯಾ.
ಎನ್ನ ತಾಗು ನಿರೋಧಗಳೆಲ್ಲ ಪ್ರಸಾದವಯ್ಯಾ.
ಎನ್ನ ಅರಹುಮರಹುಗಳೆಲ್ಲ ಪ್ರಸಾದವಯ್ಯಾ.
ಎನ್ನ ಸುಖದುಃಖಂಗಳೆಲ್ಲ ಪ್ರಸಾದವಯ್ಯಾ.
ಎನ್ನ ಮಾನಾಪಮಾನಂಗಳೆಲ್ಲ ಪ್ರಸಾದವಯ್ಯಾ.
ಎನ್ನ ಹಾನಿವೃದ್ಧಿಗಳೆಲ್ಲ ಪ್ರಸಾದವಯ್ಯಾ.
ಎನ್ನ ಭಯಭೀತಿಗಳೆಲ್ಲ ಪ್ರಸಾದವಯ್ಯಾ.
ಎನ್ನ ಲಜ್ಜೆಮೋಹಗಳೆಲ್ಲ ಪ್ರಸಾದವಯ್ಯಾ.
ಎನ್ನ ಸಜ್ಜನಸಮತೆಗಳೆಲ್ಲ ಪ್ರಸಾದವಯ್ಯಾ.
ಎನ್ನ ಸುಳುಹು ಸಂಚಾರಗಳೆಲ್ಲ ಪ್ರಸಾದವಯ್ಯಾ.
ಎನ್ನ ಚಿತ್ತಸುಚಿತ್ತಗಳೆಲ್ಲ ಪ್ರಸಾದವಯ್ಯಾ.
ಎನ್ನ ಬುದ್ಧಿಸುಬುದ್ಧಿಗಳೆಲ್ಲ ಪ್ರಸಾದವಯ್ಯಾ.
ಎನ್ನ ಅಹಂಕಾರನಿರಹಂಕಾರಗಳೆಲ್ಲ ಪ್ರಸಾದವಯ್ಯಾ.
ಎನ್ನ ಸುಮನ ವ್ಯಾಕುಲಗಳೆಲ್ಲ ಪ್ರಸಾದವಯ್ಯಾ.
ಎನ್ನ ಜ್ಞಾನ ಸುಜ್ಞಾನಗಳೆಲ್ಲ ಪ್ರಸಾದವಯ್ಯಾ.
ಎನ್ನ ಭಾವ ಸದ್ಭಾವಗಳೆಲ್ಲ ಪ್ರಸಾದವಯ್ಯಾ.
ಎನ್ನ ತತ್ವ ತೋರಿಕೆಗಳೆಲ್ಲಾ ಪ್ರಸಾದವಯ್ಯಾ.
ಎನ್ನ ಕರಣೇಂದ್ರಿಯಂಗಳೆಲ್ಲ ಪ್ರಸಾದವಯ್ಯಾ.
ಎನ್ನ ಒಳಹೊರಗುಗಳೆಲ್ಲ ಪ್ರಸಾದವಯ್ಯಾ.
ಎನ್ನ ಕೀಳುಮೇಲುಗಳೆಲ್ಲ ಪ್ರಸಾದವಯ್ಯಾ.
ಎನ್ನ ಎಡಬಲಂಗಳೆಲ್ಲ ಪ್ರಸಾದವಯ್ಯಾ.
ಇಂತಾಗಿ ಅಖಂಡೇಶ್ವರಾ,
ನೀನೆಂಬ ಪ್ರಸಾದಶರಧಿಯೊಳಗೆ
ನಾನೆಂಬುದು ಮುಳುಗಿ ನೆಲೆದಪ್ಪಿಹೋದೆನಯ್ಯಾ./121
ಎನ್ನ ಆರುಚಕ್ರಂಗಳಲ್ಲಿ ಪೂರೈಸಿ ತುಂಬಿರ್ಪ
ಪರಮಾತ್ಮನು ನೀನೇ ಅಯ್ಯಾ.
ಎನ್ನ ನರನಾಳಂಗಳಲ್ಲಿ ಹೊಳೆದು ಸುಳಿವ
ಪರವಸ್ತುವು ನೀನೇ ಅಯ್ಯಾ.
ಎನ್ನ ಕರ ಮನ ಭಾವದ ಒಳಹೊರಗೆ ತೊಳಗಿ ಬೆಳಗುವ
ಪರಬ್ರಹ್ಮವು ನೀನೇ ಅಯ್ಯಾ.
ಎನ್ನ ಬ್ರಹ್ಮರಂಧ್ರದ ಸಹಸ್ರದಳಕಮಲಮಧ್ಯದಲ್ಲಿ
ನಿರಂತರ ಬೆಳಗುವ ಪರಂಜ್ಯೋತಿ
ನೀನೇ ಅಯ್ಯಾ ಅಖಂಡೇಶ್ವರಾ./122
ಎನ್ನ ಕಂಗಳ ಮುಂದಣ ಕಾಮವ ಕಳೆದು
ನಿಮ್ಮ ಮಂಗಳಸ್ವರೂಪವ ತೋರಿಸಯ್ಯ ದೇವಾ.
ಎನ್ನ ಮನದ ಮುಂದಣ ಆಸೆಯ ಬಿಡಿಸಿ
ನಿಮ್ಮ ಮಂತ್ರದ ನೆನಹ ನೆಲೆಗೊಳಿಸಯ್ಯ ದೇವಾ.
ಎನ್ನ ಪ್ರಾಣದ ಮುಂದಣ ಪ್ರಪಂಚವ ಕೆಡಿಸಿ
ನಿಮ್ಮ ಪ್ರಸಾದವ ನೆಲೆಗೊಳಿಸಯ್ಯ ದೇವಾ.
ಎನ್ನ ತನುವ ಮುಸುಕಿದ ತಾಮಸವ ಕಳೆದು
ನಿಮ್ಮ ಭಕ್ತಿಯ ಅನುವ ತೋರಿಸಿ ಬದುಕಿಸಯ್ಯ ದೇವಾ
ಅಖಂಡೇಶ್ವರಾ./123
ಎನ್ನ ಕಂಗಳು ನಿಮ್ಮ ನೋಡಲಿಚ್ಛಿಸುತಿರ್ಪುವು.
ಎನ್ನ ಮನವು ನಿಮ್ಮ ನೆನಹ ಹಾರೈಸುತಿರ್ಪುದು.
ಎನ್ನ ಭಾವವು ನಿಮ್ಮ ಬಯಕೆಯ
ಬಯಸುತಿರ್ಪುದಯ್ಯ ಅಖಂಡೇಶ್ವರಾ./124
ಎನ್ನ ಕರಕಮಲಮಧ್ಯದಲ್ಲಿ ಪರಮ ಶಿವಲಿಂಗವ ತುಂಬಿ,
ಆ ಲಿಂಗದ ಮಧ್ಯದಲ್ಲಿ ಕಂಗಳ ತುಂಬಿ,
ಆ ಕಂಗಳ ಮಧ್ಯದಲ್ಲಿ ಮನವ ತುಂಬಿ,
ಆ ಮನದ ಮಧ್ಯದಲ್ಲಿ ಭಾವವ ತುಂಬಿ
ಪರವಶನಾಗಿರ್ದೆನಯ್ಯ ನಿಮ್ಮೊಳಗೆ ಅಖಂಡೇಶ್ವರಾ./125
ಎನ್ನ ಕರಕಮಲಮಧ್ಯದಲ್ಲಿ
ಪರಮನಿರಂಜನದ ಕುರುಹ ತೋರಿದ.
ಆ ಕುರುಹಿನ ಮಧ್ಯದಲ್ಲಿ ಅರುಹಿನ ಕಳೆಯ ತೋರಿದ.
ಆ ಕಳೆಯ ಮಧ್ಯದಲ್ಲಿ ಮಹಾಜ್ಞಾನದ ಬೆಳಗ ತೋರಿದ.
ಆ ಬೆಳಗಿನ ನಿಲವಿನೊಳಗೆ ಎನ್ನ ತೋರಿದ.
ಎನ್ನೊಳಗೆ ತನ್ನ ತೋರಿದ.
ತನ್ನೊಳಗೆ ಎನ್ನನಿಂಬಿಟ್ಟುಕೊಂಡ ಮಹಾಗುರುವಿಂಗೆ
ನಮೋ ನಮೋ ಎನುತಿರ್ದೆನಯ್ಯ ಅಖಂಡೇಶ್ವರಾ./126
ಎನ್ನ ಕರಸ್ಥಲದಲ್ಲಿ ಲಿಂಗಮೂರ್ತಿಯಾಗಿ
ನೆಲೆಗೊಂಡನಯ್ಯ ಶ್ರೀಗುರುದೇವನು.
ಎನ್ನ ಜಿಹ್ವಾಸ್ಥಲದಲ್ಲಿ ಮಂತ್ರಮೂರ್ತಿಯಾಗಿ
ನೆಲೆಗೊಂಡನಯ್ಯ ಶ್ರೀಗುರುದೇವನು.
ಎನ್ನ ಮನಸ್ಥಲದಲ್ಲಿ ಸ್ವಾನುಭಾವಜ್ಞಾನಮೂರ್ತಿಯಾಗಿ
ನೆಲೆಗೊಂಡನಯ್ಯ ಶ್ರೀಗುರುದೇವನು ಅಖಂಡೇಶ್ವರಾ. /127
ಎನ್ನ ಕಾಯದ ಕಠಿಣವ ಕಳೆಯಯ್ಯ,
ಎನ್ನ ಜೀವನುಪಾಧಿಯನಳಿಯಯ್ಯ,
ಎನ್ನ ಪ್ರಾಣಪ್ರಪಂಚುವ ತೊಲಗಿಸಯ್ಯ,
ಎನ್ನ ಭಾವದಭ್ರಮೆಯ ಕೆಡಿಸಯ್ಯ,
ಎನ್ನ ಮನದ ವ್ಯಾಕುಲವ ಮಾಣಿಸಯ್ಯ,
ಎನ್ನ ಕರಣೇಂದ್ರಿಯಗಳ ಕಷ್ಟಗುಣವ ನಾಶಮಾಡಯ್ಯ,
ಎನ್ನೊಳಗೆ ನಿಮ್ಮ ಕರುಣಾಮೃತವ ತುಂಬಯ್ಯ ಗುರುವೇ
ಅಖಂಡೇಶ್ವರಾ./128
ಎನ್ನ ಕಾಲಕಲ್ಪಿತಂಗಳು ಹೊರಗಾದುವಯ್ಯಾ.
ಎನ್ನ ಭವಬಂಧನಂಗಳು ಹೊರಗಾದುವಯ್ಯಾ.
ಎನ್ನ ಉತ್ಪತ್ತಿ ಸ್ಥಿತಿಲಯಂಗಳು ಹೊರಗಾದುವಯ್ಯಾ.
ಎನ್ನ ಪ್ರಳಯ ಮಹಾಪ್ರಳಯಂಗಳು ಹೊರಗಾದುವಯ್ಯಾ.
ಇಂತಿವೆಲ್ಲವು ಹೊರಗಾಗಿ ಹೋದುವಾಗಿ
ಅಖಂಡೇಶ್ವರಾ, ನಾನೊಬ್ಬನೆ ನಿಮ್ಮೊಳಗಾದೆನಯ್ಯಾ./129
ಎನ್ನ ಗರ್ವ ಅಹಂಕಾರವ ಕೆಡಿಸಯ್ಯ
ಎನ್ನ ಮನ ಪ್ರಾಣಂಗಳ ಸುತ್ತಿದ
ಆಶಾಪಾಶದ ತೊಡರ ಗಂಟ ಬಿಡಿಸಯ್ಯ.
ಎನ್ನ ಸತ್ಯ ಸದಾಚಾರದಲ್ಲಿ ನಡೆಸಯ್ಯ.
ಎನ್ನ ಪರಮಶಿವಾನುಭಾವವ ನುಡಿಸಯ್ಯ.
ಎನಗೆ ಭಕ್ತಿ ಜ್ಞಾನ ವೈರಾಗ್ಯವೆಂಬ ಭೂಷಣವ ತೊಡಿಸಿ
ನಿಮ್ಮ ಕರುಣದ ಕಂದನೆಂದು ಸಲುಹಯ್ಯ ಎನ್ನ ಅಖಂಡೇಶ್ವರಾ. /130
ಎನ್ನ ಘ್ರಾಣ ಗಂಧವ ಗ್ರಹಿಸುವುದಕ್ಕೆ ಮೊದಲೆ
ನಿಮಗರ್ಪಿತವಾಯಿತ್ತಯ್ಯಾ.
ಎನ್ನ ಜಿಹ್ವೆ ರುಚಿಯ ಗ್ರಹಿಸುವುದಕ್ಕೆ ಮೊದಲೆ
ನಿಮಗರ್ಪಿತವಾಯಿತ್ತಯ್ಯಾ.
ಎನ್ನ ನೇತ್ರ ರೂಪವ ಗ್ರಹಿಸುವುದಕ್ಕೆ ಮೊದಲೆ
ನಿಮಗರ್ಪಿತವಾಯಿತ್ತಯ್ಯಾ.
ಎನ್ನ ತ್ವಕ್ಕುಸ್ಪರ್ಶನವ ಗ್ರಹಿಸುವುದಕ್ಕೆ ಮೊದಲೆ
ನಿಮಗರ್ಪಿತವಾಯಿತ್ತಯ್ಯಾ.
ಎನ್ನ ಶ್ರೋತ್ರ ಶಬ್ದವ ಗ್ರಹಿಸುವುದಕ್ಕೆ ಮೊದಲೆ
ನಿಮಗರ್ಪಿತವಾಯಿತ್ತಯ್ಯಾ.
ಇದು ಕಾರಣ ಅಖಂಡೇಶ್ವರಾ,
ನಾ ನಿಮಗರಿದು ಕೊಡಬೇಕೆಂಬ
ಖಂಡಿತಭಾವವು ಅಖಂಡಿತವಾಯಿತ್ತಯ್ಯಾ./131
ಎನ್ನ ಘ್ರಾಣ ಸಮರಸವಾಯಿತ್ತಯ್ಯಾ
ನಿಮ್ಮ ಗಂಧಪ್ರಸಾದವ ಗ್ರಹಿಸಿ ನಿಮ್ಮೊಳಗೆ.
ಎನ್ನ ಜಿಹ್ವೆ ಸಮರಸವಾಯಿತ್ತಯ್ಯಾ
ನಿಮ್ಮ ರುಚಿಪ್ರಸಾದವ ಗ್ರಹಿಸಿ ನಿಮ್ಮೊಳಗೆ.
ಎನ್ನ ನೇತ್ರ ಸಮರಸವಾಯಿತ್ತಯ್ಯಾ
ನಿಮ್ಮ ರೂಪುಪ್ರಸಾದವ ಗ್ರಹಿಸಿ ನಿಮ್ಮೊಳಗೆ.
ಎನ್ನ ತ್ವಕ್ಕು ಸಮರಸವಾಯಿತ್ತಯ್ಯಾ
ನಿಮ್ಮ ಸ್ಪರ್ಶನಪ್ರಸಾದವ ಗ್ರಹಿಸಿ ನಿಮ್ಮೊಳಗೆ.
ಎನ್ನ ಶ್ರೋತ್ರ ಸಮರಸವಾಯಿತ್ತಯ್ಯಾ
ನಿಮ್ಮ ಶಬ್ದಪ್ರಸಾದವ ಗ್ರಹಿಸಿ ನಿಮ್ಮೊಳಗೆ.
ಎನ್ನ ಹೃದಯ ಸಮರಸವಾಯಿತ್ತಯ್ಯಾ
ನಿಮ್ಮ ತೃಪ್ತಿಪ್ರಸಾದವ ಗ್ರಹಿಸಿ ನಿಮ್ಮೊಳಗೆ.
ಎನ್ನ ಸರ್ವಾಂಗ ಸಮರಸವಾಯಿತ್ತಯ್ಯಾ
ನಿಮ್ಮ ಮಹಾಪ್ರಸಾದವ ಗ್ರಹಿಸಿ ನಿಮ್ಮೊಳಗೆ ಅಖಂಡೇಶ್ವರಾ./132
ಎನ್ನ ಘ್ರಾಣದ ಕೊನೆಯಲ್ಲಿ ಕುಳ್ಳಿರ್ದು
ಷಡ್ವಿಧಗಂಧವೆಂಬ ಭಕ್ತಿಪದಾರ್ಥವ ಕೈಕೊಂಡು
ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ.
ಎನ್ನ ಜಿಹ್ವೆಯ ಕೊನೆಯಲ್ಲಿ ಕುಳ್ಳಿರ್ದು
ಷಡ್ವಿಧರಸವೆಂಬ ಭಕ್ತಿಪದಾರ್ಥವ ಕೈಕೊಂಡು
ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ.
ಎನ್ನ ನೇತ್ರದ ಕೊನೆಯಲ್ಲಿ ಕುಳ್ಳಿರ್ದು
ಷಡ್ವಿಧರೂಪವೆಂಬ ಭಕ್ತಿಪದಾರ್ಥವ ಕೈಕೊಂಡು
ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ.
ಎನ್ನ ತ್ವಕ್ಕಿನ ಕೊನೆಯಲ್ಲಿ ಕುಳ್ಳಿರ್ದು
ಷಡ್ವಿಧಸ್ಪರ್ಶನವೆಂಬ ಭಕ್ತಿಪದಾರ್ಥವ ಕೈಕೊಂಡು
ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ.
ಎನ್ನ ಶ್ರೋತ್ರದ ಕೊನೆಯಲ್ಲಿ ಕುಳ್ಳಿರ್ದು
ಷಡ್ವಿಧಶಬ್ದವೆಂಬ ಭಕ್ತಿಪದಾರ್ಥವ ಕೈಕೊಂಡು
ಎನಗೆ ಮುಕ್ತಿಪ್ರಸಾದವ ಕುರಣಿಸುವಾತನು ನೀನೆ ಅಯ್ಯಾ.
ಎನ್ನ ಹೃದಯದ ಕೊನೆಯಲ್ಲಿ ಕುಳ್ಳಿರ್ದು
ಷಡ್ವಿಧ ತೃಪ್ತಿಯೆಂಬ ಭಕ್ತಿಪದಾರ್ಥವ ಕೈಕೊಂಡು,
ಎನಗೆ ಮುಕ್ತಿಪ್ರಸಾದವ ಕರುಣಿಸುವಾತನು ನೀನೆ ಅಯ್ಯಾ
ಅಖಂಡೇಶ್ವರಾ./133
ಎನ್ನ ಘ್ರಾಣದ ಕೊನೆಯಲ್ಲಿ
ನೀವು ಗಂಧಪದಾರ್ಥವ ಗ್ರಹಿಸುತಿರ್ಪಿರಿ:
ನಿಮ್ಮ ಘ್ರಾಣದ ಕೊನೆಯಲ್ಲಿ
ನಾನು ಗಂಧಪ್ರಸಾದವ ಗ್ರಹಿಸುತಿರ್ಪೆನಯ್ಯಾ.
ಎನ್ನ ಜಿಹ್ವೆಯ ಕೊನೆಯಲ್ಲಿ
ನೀವು ರುಚಿಪದಾರ್ಥವ ಗ್ರಹಿಸುತಿರ್ಪಿರಿ:
ನಿಮ್ಮ ಜಿಹ್ವೆಯ ಕೊನೆಯಲ್ಲಿ
ನಾನು ರುಚಿಪ್ರಸಾದವ ಗ್ರಹಿಸುತಿರ್ಪೆನಯ್ಯಾ.
ಎನ್ನ ನೇತ್ರದ ಕೊನೆಯಲ್ಲಿ
ನೀವು ರೂಪುಪದಾರ್ಥವ ಗ್ರಹಿಸುತಿರ್ಪಿರಿ:
ನಿಮ್ಮ ನೇತ್ರದ ಕೊನೆಯಲ್ಲಿ
ನಾನು ರೂಪುಪ್ರಸಾದವ ಗ್ರಹಿಸುತಿರ್ಪೆನಯ್ಯಾ.
ಎನ್ನ ತ್ವಕ್ಕಿನ ಕೊನೆಯಲ್ಲಿ
ನೀವು ಸ್ಪರ್ಶನಪದಾರ್ಥವ ಗ್ರಹಿಸುತಿರ್ಪಿರಿ:
ನಿಮ್ಮ ತ್ವಕ್ಕಿನ ಕೊನೆಯಲ್ಲಿ
ನಾನು ಸ್ಪರ್ಶನಪ್ರಸಾದವ ಗ್ರಹಿಸುತಿರ್ಪೆನಯ್ಯಾ.
ಎನ್ನ ಶ್ರೋತ್ರದ ಕೊನೆಯಲ್ಲಿ
ನೀವು ಶಬ್ದಪದಾರ್ಥವ ಗ್ರಹಿಸುತಿರ್ಪಿರಿ:
ನಿಮ್ಮ ಶ್ರೋತ್ರದ ಕೊನೆಯಲ್ಲಿ
ನಾನು ಶಬ್ದಪ್ರಸಾದವ ಗ್ರಹಿಸುತಿರ್ಪೆನಯ್ಯಾ.
ಎನ್ನ ಹೃದಯದ ಕೊನೆಯಲ್ಲಿ
ನೀವು ತೃಪ್ತಿಪದಾರ್ಥವ ಗ್ರಹಿಸುತಿರ್ಪಿರಿ:
ನಿಮ್ಮ ಹೃದಯದ ಕೊನೆಯಲ್ಲಿ
ನಾನು ತೃಪ್ತಿ ಪ್ರಸಾದವ ಗ್ರಹಿಸುತಿರ್ಪೆನಯ್ಯಾ.
ಇಂತೆನ್ನ ಷಡಿಂದ್ರಿಯಂಗಳ ಸುಖವು ನಿಮಗರ್ಪಿತವಾಯಿತ್ತು.
ನಿಮ್ಮ ಷಡಿಂದ್ರಿಯಂಗಳು ಎನಗೆ ಪ್ರಸನ್ನಪ್ರಸಾದವಾಯಿತ್ತಾಗಿ
ಎನ್ನ ಜೀವಭಾವದ ಶನಿ ಹಾಳಾಗಿ ಹೋಯಿತ್ತಯ್ಯಾ
ಅಖಂಡೇಶ್ವರಾ./134
ಎನ್ನ ಘ್ರಾಣದ ಪರಿಣಾಮ ನಿಮಗರ್ಪಿತವಯ್ಯಾ.
ಎನ್ನ ಜಿಹ್ವೆಯ ಪರಿಣಾಮ ನಿಮಗರ್ಪಿತವಯ್ಯಾ.
ಎನ್ನ ನೇತ್ರದ ಪರಿಣಾಮ ನಿಮಗರ್ಪಿತವಯ್ಯಾ.
ಎನ್ನ ತ್ವಕ್ಕಿನ ಪರಿಣಾಮ ನಿಮಗರ್ಪಿತವಯ್ಯಾ.
ಎನ್ನ ಶ್ರೋತ್ರದ ಪರಿಣಾಮ ನಿಮಗರ್ಪಿತವಯ್ಯಾ.
ಎನ್ನ ಹೃದಯದ ಪರಿಣಾಮ ನಿಮಗರ್ಪಿತವಯ್ಯಾ.
ಎನ್ನ ಸರ್ವಾಂಗದ ಪರಿಣಾಮ ನಿಮಗರ್ಪಿತವಯ್ಯಾ ಅಖಂಡೇಶ್ವರಾ./135
ಎನ್ನ ಚಿತ್ತ ಸುಚಿತ್ತವಾಯಿತ್ತಯ್ಯಾ.
ಎನ್ನ ಬುದ್ಧಿ ಸುಬುದ್ಧಿಯಾಯಿತ್ತಯ್ಯಾ.
ಎನ್ನ ಅಹಂಕಾರ ನಿರಹಂಕಾರವಾಯಿತ್ತಯ್ಯಾ.
ಎನ್ನ ಮನ ಸುಮನವಾಯಿತ್ತಯ್ಯಾ.
ಎನ್ನ ಜ್ಞಾನ ಸುಜ್ಞಾನವಾಯಿತ್ತಯ್ಯಾ.
ಎನ್ನ ಭಾವ ಸದ್ಭಾವವಾಯಿತ್ತಯ್ಯಾ.
ನಿಮ್ಮ ಮಹಾಜ್ಞಾನದ ಸಂಗದಿಂದೆ
ಎನ್ನ ಸಕಲ ಕರಣಂಗಳು ನಿಮ್ಮಲ್ಲಿ ತರಹರವಾದವಾಗಿ
ಅಖಂಡೇಶ್ವರಾ, ನಿಮ್ಮ ಪರಮಪ್ರಸಾದವು
ಎನಗೆ ಸಾಧ್ಯವಾಯಿತ್ತಯ್ಯಾ./136
ಎನ್ನ ಜನನ ಸೂತಕ ಹೋಯಿತ್ತು
ಶ್ರೀಗುರುವಿನ ಪಾಣಿಪದ್ಮದಲ್ಲಿ ಜನಿಸಿದೆನಾಗಿ.
ಎನ್ನ ಜಾತಿಸೂತಕ ಹೋಯಿತ್ತು ಅಜಾತ ಲಿಂಗಸಂಗದಿಂದ.
ಎನ್ನ ಕುಲಸೂತಕ ಹೋಯಿತ್ತು ಶಿವನಲ್ಲದೆ
ಅನ್ಯದೈವವನರಿಯೆನಾಗಿ.
ಎನ್ನ ಛಲಸೂತಕ ಹೋಯಿತ್ತು ಜೀವಭಾವವಿಲ್ಲವಾಗಿ.
ಎನ್ನ ಮನಸೂತಕ ಹೋಯಿತ್ತು ನಿಮ್ಮ ನಾಮವ ನೆನೆನೆನೆದು.
ಎನ್ನ ಕಂಗಳ ಸೂತಕ ಹೋಯಿತ್ತು
ನಿಮ್ಮ ಮಂಗಳಸ್ವರೂಪವ ನೋಡಿ ನೋಡಿ.
ಎನ್ನ ಕೈಯಸೂತಕ ಹೋಯಿತ್ತು
ನಿಮ್ಮ ಮುಟ್ಟಿ ಪೂಜಿಸಿ ಪೂಜಿಸಿ.
ಎನ್ನ ಕಿವಿಯ ಸೂತಕ ಹೋಯಿತ್ತು
ನಿಮ್ಮ ಕೀರ್ತಿಯ ಕೇಳಿ ಕೇಳಿ.
ಎನ್ನ ಜಿಹ್ವೆಯ ಸೂತಕ ಹೋಯಿತ್ತು
ನಿಮ್ಮ ಪರಮಪ್ರಸಾದವ ಸವಿಸವಿದು.
ಇಂತೀ ಸರ್ವಸೂತಕವ ಹರಿದು, ಪೂರ್ವಕಲ್ಪಿತಂಗಳ ಮೀರಿ.
ನಿಮ್ಮೊಳಗೆ ನಿಜನಿಶ್ಚಿಂತನಿವಾಸಿಯಾಗಿರ್ದೆನಯ್ಯ ಅಖಂಡೇಶ್ವರಾ./137
ಎನ್ನ ಜನನಮರಣಂಗಳೆಲ್ಲ ಜಾರಿಹೋದವಯ್ಯ
ನಿಮ್ಮ ನೆನಹಿನ ಬಲದಿಂದೆ.
ಎನ್ನ ಪುಣ್ಯಪಾಪಂಗಳೆಲ್ಲ ಪಲ್ಲಟವಾದವಯ್ಯ
ನಿಮ್ಮ ನೆನಹಿನ ಬಲದಿಂದೆ.
ಎನ್ನ ಪಂಚೇಂದ್ರಿಯ ಸಪ್ತವ್ಯಸನಂಗಳೆಲ್ಲ ಸಣ್ಣಿಸಿ ಹೋದವಯ್ಯ
ನಿಮ್ಮ ನೆನಹಿನ ಬಲದಿಂದೆ.
ಎನ್ನ ಅಷ್ಟಮದ ಅರಿಷಡ್ವರ್ಗಂಗಳೆಲ್ಲ ನಷ್ಟವಾದವಯ್ಯ
ನಿಮ್ಮ ನೆನಹಿನ ಬಲದಿಂದೆ.
ಎನ್ನ ತನುಕರಣೇಂದ್ರಿಯಂಗಳೆಲ್ಲ ತರಹರವಾದವಯ್ಯ
ನಿಮ್ಮ ನೆನಹಿನ ಬಲದಿಂದೆ.
ಎನ್ನ ಮನ ಪ್ರಾಣ ಭಾವಂಗಳೆಲ್ಲ ಬರಿದಾಗಿ ಹೋದವಯ್ಯ
ನಿಮ್ಮ ನೆನಹಿನ ಬಲದಿಂದೆ ಅಖಂಡೇಶ್ವರಾ./138
ಎನ್ನ ಜೀವಭಾವಿಯೆಂದೆನಿಸದೆ
ಶಿವಭಾವಿಯೆಂದೆನಿಸಿದ ಗುರುವೆ ನಮೋ ನಮೋ.
ಎನ್ನ ಕಾಯಕಲ್ಪಿತವನಳಿದು ಎನ್ನೊಳಗೆ
ಮೂಲಮಂತ್ರವ ತೋರಿದ ಗುರುವೇ ನಮೋ ನಮೋ.
ಎನ್ನ ತನುತ್ರಯಂಗಳಲ್ಲಿ ಮುಸುಕಿದ ಮಲತ್ರಯಂಗಳ ಕಳೆದು
ಲಿಂಗತ್ರಯಂಗಳ ನೆಲೆಗೊಳಿಸಿದ ಗುರುವೇ ನಮೋ ನಮೋ.
ಎನ್ನ ಭವಿಜನ್ಮವಳಿದು ಭಕ್ತನಮಾಡಿ
ಮುಕ್ತಿಪಥವ ತೋರಿದ ಗುರುವೆ ನಮೋ ನಮೋ.
ಅಖಂಡೇಶ್ವರನೆಂಬ ಅನಾದಿ ಮಹಾಗುರುವೆ ನಮೋ ನಮೋ/139
ಎನ್ನ ತನು ಅಡಗುವುದಕ್ಕೆ
ನಿಮ್ಮ ಪ್ರಸಾದವೆ ಆಶ್ರಯವಾಗಿರ್ಪುದು.
ಎನ್ನ ಮನ ಅಡಗುವುದಕ್ಕೆ
ನಿಮ್ಮ ಪ್ರಸಾದವೇ ಆಶ್ರಯವಾಗಿರ್ಪುದು.
ಎನ್ನ ಕರಣೇಂದ್ರಿಯ ಸಕಲ ಅವಯವಗಳು ಅಡಗುವುದಕ್ಕೆ
ನಿಮ್ಮ ಪ್ರಸಾದವೇ ಆಶ್ರಯವಾಗಿರ್ಪುದು.
ಇದು ಕಾರಣ ಅಖಂಡೇಶ್ವರಾ,
ನಿಮ್ಮ ಪ್ರಸಾದದಲ್ಲಿ ಹುಟ್ಟಿ ನಿಮ್ಮ ಪ್ರಸಾದದಲ್ಲಿ ಬೆಳೆದು
ನಿಮ್ಮ ಪ್ರಸಾದದಲ್ಲಿ ಅಡಗುತಿರ್ಪೆನಾಗಿ
ನಿಮ್ಮ ಪ್ರಸಾದವೆನಗೆ ಪ್ರಾಣವಾಗಿರ್ಪುದಯ್ಯಾ./140
ಎನ್ನ ತನು ಎನ್ನ ಧನ ಎನ್ನ ಮನೆ
ಎನ್ನ ಸತಿ ಸುತರೆಂಬ ಮನಕ್ಕೆ
ಈಶ್ವರಭಕ್ತಿ ಭಿನ್ನವಾಯಿತ್ತು ನೋಡಾ!
ತನ್ನಮರೆದು ಇದಿರನರಿದು
ಒಡವೆಯಾತಂಗೆ ಒಡವೆಯ ಒಪ್ಪಿಸಿದೆಯಾದರೆ
ಕೂಡಿಕೊಂಡಿರ್ಪನು ನೋಡಾ ನಮ್ಮ ಅಖಂಡೇಶ್ವರನು./141
ಎನ್ನ ತನು ನಿಮ್ಮ ಪ್ರಸಾದವನೆ ಸೋಂಕುತಿರ್ಪುದಯ್ಯಾ.
ಎನ್ನ ಮನ ನಿಮ್ಮ ಪ್ರಸಾದವನೆ ನೆನೆಯುತಿರ್ಪುದಯ್ಯಾ.
ಎನ್ನ ಪ್ರಾಣ ನಿಮ್ಮ ಪ್ರಸಾದವನೆ ಹಾರಯಿಸುತಿರ್ಪುದಯ್ಯಾ.
ಎನ್ನ ಭಾವ ನಿಮ್ಮ ಪ್ರಸಾದವನೆ ಬಯಸುತಿರ್ಪುದಯ್ಯಾ.
ಎನ್ನ ಕರಣೇಂದ್ರಿಯಂಗಳು ನಿಮ್ಮ ಪ್ರಸಾದವನೆ
ಗ್ರಹಿಸುತಿರ್ಪುವಯ್ಯಾ ಅಖಂಡೇಶ್ವರಾ./142
ಎನ್ನ ತನುವ ತನ್ನ ತನುವ ಮಾಡಿದನಯ್ಯ
ಶ್ರೀಗುರುದೇವನು.
ಎನ್ನ ಮನವ ತನ್ನ ಮನವ ಮಾಡಿದನಯ್ಯ
ಶ್ರೀಗುರುದೇವನು.
ಎನ್ನ ಪ್ರಾಣವ ತನ್ನ ಪ್ರಾಣವ ಮಾಡಿದನಯ್ಯ
ಶ್ರೀಗುರುದೇವನು.
ಎನ್ನ ಜೀವಕಳೆಯ ತನ್ನ ಜೀವಕಳೆಯ ಮಾಡಿದ ಶ್ರೀಗುರುದೇವಂಗೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./143
ಎನ್ನ ತನುವ ಶೋಧಿಸಿ
ಚಿನುಮಯಲಿಂಗವ ಮಾಡಿ ತೋರಿದನಯ್ಯ ಸದ್ಗುರು.
ಎನ್ನ ಮನವ ಶೋಧಿಸಿ
ಮನಘನಲಿಂಗವ ಮಾಡಿ ತೋರಿದನಯ್ಯ ಸದ್ಗುರು.
ಎನ್ನ ಭಾವವ ಶೋಧಿಸಿ
ಭಾವಭರಿತಲಿಂಗವ ಮಾಡಿ ತೋರಿದನಯ್ಯ ಸದ್ಗುರು.
ಎನ್ನ ಕರಣಂಗಳ ಕಳೆದು ಲಿಂಗಕರಣಂಗಳ ಮಾಡಿದ
ಸದ್ಗುರುದೇವಂಗೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./144
ಎನ್ನ ತನುವಿನ ಮರೆಯಲ್ಲಿರ್ದ ಚಿನುಮಯನ
ಅರಸುವ ಬನ್ನಿರೇ,
ಎನ್ನ ಮನದ ಮರೆಯಲ್ಲಿರ್ದ ಮಹಾಘನವಸ್ತುವ
ಹುಡುಕುವ ಬನ್ನಿರೇ,
ಎನ್ನ ಪ್ರಾಣದ ಮರೆಯಲ್ಲಿರ್ದ ಪರಬ್ರಹ್ಮವೆಂಬ
ಅಖಂಡೇಶ್ವರನ ನೋಡುವ ಬನ್ನಿರೇ./145
ಎನ್ನ ತನುವಿನೊಳಗೆ ತನುರೂಪಾಗಿರ್ದಿರಯ್ಯಾ ನೀವು.
ಎನ್ನ ಮನದೊಳಗೆ ಮನರೂಪಾಗಿರ್ದಿರಯ್ಯಾ ನೀವು.
ಎನ್ನ ಪ್ರಾಣದೊಳಗೆ ಪ್ರಾಣರೂಪಾಗಿರ್ದಿರಯ್ಯಾ ನೀವು.
ಎನ್ನ ಭಾವದೊಳಗೆ ಭಾವರೂಪಾಗಿರ್ದಿರಯ್ಯಾ ನೀವು.
ಎನ್ನ ಇಂದ್ರಿಯಂಗಳೊಳಗೆ ಇಂದ್ರಿಯಂಗಳ ರೂಪಾಗಿರ್ದಿರಯ್ಯಾ ನೀವು.
ಎನ್ನ ವಿಷಯಂಗಳೊಳಗೆ
ವಿಷಯಂಗಳ ರೂಪಾಗಿರ್ದಿರಯ್ಯಾ ನೀವು.
ಎನ್ನ ತನು ಮನ ಪ್ರಾಣ ಭಾವ ಇಂದ್ರಿಯಂಗಳೆಲ್ಲವು ನಿಮ್ಮವಾಗಿ
ಇಂತು ಎನ್ನೊಳಗೆ ನೀವು ಈ ಪರಿಯಲ್ಲಿರ್ದಿರಾಗಿ
ನಾ ನಿಮ್ಮೊಳಗೆ ಚಿನ್ನಬಣ್ಣದಂತೆ
ರತ್ನದೀಪ್ತಿಯಂತೆ ಜ್ಯೋತಿಪ್ರಭೆಯಂತಿರ್ದೆನಯ್ಯಾ ಅಖಂಡೇಶ್ವರಾ./146
ಎನ್ನ ತನುವಿನೊಳಗೆ ನಿಮ್ಮ ತನುವಡಗಿರ್ಪುದು ;
ನಿಮ್ಮ ತನುವಿನೊಳಗೆ ಎನ್ನ ತನುವಡಗಿರ್ಪುದು.
ಎನ್ನ ಮನದೊಳಗೆ ನಿಮ್ಮ ಮನವಡಗಿರ್ಪುದು ;
ನಿಮ್ಮ ಮನದೊಳಗೆ ಎನ್ನ ಮನವಡಗಿರ್ಪುದು.
ಎನ್ನ ಪ್ರಾಣದೊಳಗೆ ನಿಮ್ಮ ಪ್ರಾಣವಡಗಿರ್ಪುದು ;
ನಿಮ್ಮ ಪ್ರಾಣದೊಳಗೆ ಎನ್ನ ಪ್ರಾಣವಡಗಿರ್ಪುದು.
ಎನ್ನ ಜೀವದೊಳಗೆ ನಿಮ್ಮ ಜೀವವಡಗಿರ್ಪುದು ;
ನಿಮ್ಮ ಜೀವದೊಳಗೆ ಎನ್ನ ಜೀವವಡಗಿರ್ಪುದು.
ಎನ್ನ ಭಾವದೊಳಗೆ ನಿಮ್ಮ ಭಾವವಡಗಿರ್ಪುದು ;
ನಿಮ್ಮ ಭಾವದೊಳಗೆ ಎನ್ನ ಭಾವವಡಗಿರ್ಪುದು.
ಎನ್ನ ಕರಣಂಗಳೊಳಗೆ ನಿಮ್ಮ ಕರಣಂಗಳಡಗಿರ್ಪುವು ;
ನಿಮ್ಮ ಕರಣಂಗಳೊಳಗೆ ಎನ್ನ ಕರಣಂಗಳಡಗಿರ್ಪುವು.
ಎನ್ನ ಇಂದ್ರಿಯಂಗಳೊಳಗೆ ನಿಮ್ಮ ಇಂದ್ರಿಯಂಗಳಡಗಿರ್ಪುವು ;
ನಿಮ್ಮ ಇಂದ್ರಿಯಂಗಳೊಳಗೆ ಎನ್ನ ಇಂದ್ರಿಯಂಗಳಡಗಿರ್ಪುವು.
ಎನ್ನ ವಿಷಯಂಗಳೊಳಗೆ ನಿಮ್ಮ ವಿಷಯಂಗಳಡಗಿರ್ಪುವು ;
ನಿಮ್ಮ ವಿಷಯಂಗಳೊಳಗೆ ಎನ್ನ ವಿಷಯಂಗಳಡಗಿರ್ಪುವು.
ನಾನು ನೀನೆಂಬ ಭಿನ್ನಭಾವವಳಿದು
ಪುಷ್ಪಪರಿಮಳದಂತೆ, ರೂಪುರುಚಿಯಂತೆ
ಅವಿರಳ ಸಮರಸವಾಗಿರ್ದೆಯ್ಯಾ ಅಖಂಡೇಶ್ವರಾ./147
ಎನ್ನ ತನುವು ನಿಮ್ಮ ಚರಣವ ಪೂಜಿಸಲೊಲ್ಲದೆ
ಹಸಿವು ತೃಷೆ ವಿಷಯದಲ್ಲಿ ಹತವಾಗುತಿರ್ಪುದು ನೋಡಾ!
ಎನ್ನ ಮನವು ನಿಮ್ಮ ದಿವ್ಯನಾಮವ ನೆನೆಯಲೊಲ್ಲದೆ
ಬಿನುಗು ವಿಷಯಕ್ಕೆ ಹರಿಯುತಿರ್ಪುದು ನೋಡಾ!
ಶಿವಶಿವಾ, ಈ ತನುಮನದ ದುರ್ಗುಣದ ವರ್ತನೆಯನೇನೆಂಬೆನಯ್ಯ?
ಹಂದಿ ಹಡಿಕೆಯ ನೆನೆಸಿ ಹಾಳಗೇರಿಗೆ ಹೋಗುವಂತೆ
ಪ್ರಪಂಚಿನತ್ತ ಓಡಾಡುತಿರ್ಪುವಯ್ಯ
ಎನ್ನ ದುರ್ಗುಣಂಗಳು ಅಖಂಡೇಶ್ವರಾ./148
ಎನ್ನ ತನುವೆ ಬಸವಣ್ಣನು.
ಎನ್ನ ಮನವೆ ಚೆನ್ನಬಸವಣ್ಣನು.
ಎನ್ನ ಪ್ರಾಣವೆ ಪ್ರಭುದೇವರು.
ಎನ್ನ ಸರ್ವಕರಣಂಗಳೆಲ್ಲ ಅಸಂಖ್ಯಾತ-
ಮಹಾಗಣಂಗಳಾಗಿರ್ಪರಾಗಿ,
ಅಖಂಡೇಶ್ವರಾ, ನಿಮ್ಮೊಳಗೆ ನಿಜವು
ಸಾಧ್ಯವಾಯಿತ್ತಯ್ಯಾ ಇಂದೆನಗೆ./149
ಎನ್ನ ತನುವೆ ಶ್ರೀಗುರುಸ್ಥಾನವಯ್ಯ,
ಎನ್ನ ಮನವೆ ಲಿಂಗಸ್ಥಾನವಯ್ಯ,
ಎನ್ನ ಆತ್ಮವೆ ಜಂಗಮಸ್ಥಾನವಯ್ಯ,
ಎನ್ನ ಪ್ರಾಣವೆ ಪ್ರಸಾದಸ್ಥಾನವಯ್ಯ,
ಎನ್ನ ಭಾವವೇ ಪಾದೋದಕಸ್ಥಾನವಯ್ಯ,
ಎನ್ನ ಲಲಾಟವೇ ವಿಭೂತಿಸ್ಥಾನವಯ್ಯ,
ಎನ್ನ ಗಳವೇ ರುದ್ರಾಕ್ಷಿಸ್ಥಾನವಯ್ಯ,
ಎನ್ನ ಜಿಹ್ವೆಯೇ ಶಿವಮಂತ್ರಸ್ಥಾನವಯ್ಯ,
ಎನ್ನ ಕಂಗಳೇ ಲಿಂಗಾಚಾರಸ್ಥಾನವಯ್ಯ,
ಎನ್ನ ಶ್ರೋತ್ರವೇ ಶಿವಾಚಾರಸ್ಥಾನವಯ್ಯ,
ಎನ್ನ ವಾಕ್ಯವೇ ಭೃತ್ಯಾಚಾರಸ್ಥಾನವಯ್ಯ,
ಎನ್ನ ಹಸ್ತವೇ ಗಣಾಚಾರಸ್ಥಾನವಯ್ಯ,
ಎನ್ನ ಚರಣವೇ ಸದಾಚಾರಸ್ಥಾನವಯ್ಯ,
ಎನ್ನ ಷಡ್ಭೂತಂಗಳೇ ಷಟ್ಸ್ಥಲಸ್ಥಾನಂಗಳಯ್ಯ,
ಎನ್ನ ಸುಜ್ಞಾನವೇ ಶಿವಾನುಭಾವಸ್ಥಾನವಯ್ಯ.
ಇಂತೀ ಅಷ್ಟಾವರಣ ಪಂಚಾಚಾರ ಷಟ್ಸ್ಥಲ
ಶಿವಾನುಭಾವವನೊಳಕೊಂಡ ಎನ್ನ ಚಿದಂಗವೇ
ಮಹಾ ಕೈಲಾಸವಯ್ಯ ನಿಮಗೆ ಅಖಂಡೇಶ್ವರಾ./150
ಎನ್ನ ನಡೆನುಡಿ ಚೈತನ್ಯವೇ ನೀವೆಂದರಿದೆ.
ಎನ್ನ ಒಡಲೇಂದ್ರಿಯಂಗಳೆಲ್ಲ ನಿಮ್ಮವೆಂದರಿದೆ.
ನೀವು ಭಕ್ತದೇಹಿಕ ದೇವನೆಂದು ನಿಮ್ಮ ನಂಬಿದಬಳಿಕ,
ಎನ್ನ ಕಡೆಗೆ ನೂಂಕದಿರಯ್ಯ ಅಖಂಡೇಶ್ವರಾ./151
ಎನ್ನ ನಡೆವ ನಡೆಗಳೆಲ್ಲ ನಿಮ್ಮ ನಡೆಗಳಯ್ಯಾ.
ಎನ್ನ ನುಡಿವ ನುಡಿಗಳೆಲ್ಲ ನಿಮ್ಮ ನುಡಿಗಳಯ್ಯಾ.
ಎನ್ನ ನೋಡುವ ನೋಟವೆಲ್ಲ ನಿಮ್ಮ ನೋಟವಯ್ಯಾ.
ಎನ್ನ ಕೇಳುವ ಕೇಳಿಕೆಯೆಲ್ಲ ನಿಮ್ಮ ಕೇಳಿಕೆಯಯ್ಯಾ.
ನಾನು ಆವಾವ ಪರಿಯಲ್ಲಿ ಆಡುವ ಆಟಗಳೆಲ್ಲಾ
ನಿಮ್ಮ ಬೆಡಗಿನ ರೀತಿಯಯ್ಯಾ ಅಖಂಡೇಶ್ವರಾ./152
ಎನ್ನ ನೇತ್ರ ಪ್ರಸಾದವಾಯಿತ್ತಯ್ಯಾ.
ಎನ್ನ ಶ್ರೋತ್ರ ಪ್ರಸಾದವಾಯಿತ್ತಯ್ಯಾ.
ಎನ್ನ ಘ್ರಾಣ ಪ್ರಸಾದವಾಯಿತ್ತಯ್ಯಾ.
ಎನ್ನ ಜಿಹ್ವೆ ಪ್ರಸಾದವಾಯಿತ್ತಯ್ಯಾ.
ಎನ್ನ ತ್ವಕ್ಕು ಪ್ರಸಾದವಾಯಿತ್ತಯ್ಯಾ.
ಎನ್ನ ತನು ಪ್ರಸಾದವಾಯಿತ್ತಯ್ಯಾ.
ಎನ್ನ ಮನ ಪ್ರಸಾದವಾಯಿತ್ತಯ್ಯಾ.
ಎನ್ನ ಪ್ರಾಣ ಪ್ರಸಾದವಾಯಿತ್ತಯ್ಯಾ.
ಎನ್ನ ಭಾವ ಪ್ರಸಾದವಾಯಿತ್ತಯ್ಯಾ.
ಎನ್ನ ಜೀವ ಪ್ರಸಾದವಾಯಿತ್ತಯ್ಯಾ.
ಎನ್ನ ಸಕಲಕರಣೇಂದ್ರಿಯಂಗಳೆಲ್ಲ ಪ್ರಸಾದವಾಗಿ,
ಅಖಂಡೇಶ್ವರಾ, ನಿಮ್ಮ ಮಹಾಪ್ರಸಾದದ
ಬೆಳಗಿನೊಳಗೆ ಓಲಾಡುತ್ತಿದ್ದೆನಯ್ಯಾ./153
ಎನ್ನ ನೇತ್ರವು ನಿಮ್ಮ ಪ್ರಸಾದವನೆ ನೋಡುತಿರ್ಪುದು.
ಎನ್ನ ಶ್ರೋತ್ರವು ನಿಮ್ಮ ಪ್ರಸಾದವನೆ ಕೇಳುತಿರ್ಪುದಯ್ಯ.
ಎನ್ನ ನಾಸಿಕವು ನಿಮ್ಮ ಪ್ರಸಾದವನೆ ವಾಸಿಸುತಿರ್ಪುದು.
ಎನ್ನ ಜಿಹ್ವೆಯು ನಿಮ್ಮ ಪ್ರಸಾದವನೆ ಪಾಡುತಿರ್ಪುದು.
ಎನ್ನ ಸರ್ವಾಂಗವು ನಿಮ್ಮ ಪ್ರಸಾದವನೆ ಸ್ಪಶರ್ಿಸುತಿರ್ಪುದು
ಅಖಂಡೇಶ್ವರಾ./154
ಎನ್ನ ಪೃಥ್ವಿತತ್ತ್ವದಲ್ಲಿ ಆಧಾರಚಕ್ರವಿರ್ಪುದು.
ಆ ಚಕ್ರವೇ ಭಕ್ತಸ್ಥಲ.
ಆ ಸ್ಥಲವ ಬಸವಣ್ಣನಿಂಬುಗೊಂಡನಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಅಪ್ಪುತತ್ತ್ವದಲ್ಲಿ ಸ್ವಾಧಿಷ್ಠಾನಚಕ್ರವಿರ್ಪುದು.
ಆ ಚಕ್ರವೇ ಮಹೇಶ್ವರಸ್ಥಲ.
ಆ ಸ್ಥಲವ ಮಡಿವಾಳಮಾಚಯ್ಯಗಳಿಂಬುಗೊಂಡರಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಅಗ್ನಿತತ್ತ್ವದಲ್ಲಿ ಮಣಿಪೂರಕಚಕ್ರವಿರ್ಪುದು.
ಆ ಚಕ್ರವೆ ಪ್ರಸಾದಿಸ್ಥಲ.
ಆ ಸ್ಥಲವ ಚೆನ್ನಬಸವಣ್ಣನಿಂಬುಗೊಂಡನಾಗಿ
ಎನಗಾಸ್ಥಲ ಬಯಲಾಯಿತ್ತು .
ಎನ್ನ ವಾಯುತತ್ತ್ವದಲ್ಲಿ ಅನಾಹತಚಕ್ರವಿರ್ಪುದು.
ಆ ಚಕ್ರವೆ ಪ್ರಾಣಲಿಂಗಿಸ್ಥಲ.
ಆ ಸ್ಥಲವ ಸಿದ್ಧರಾಮಯ್ಯದೇವರಿಂಬುಗೊಂಡರಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಗಗನತತ್ತ್ವದಲ್ಲಿ ವಿಶುದ್ಧಿಚಕ್ರವಿರ್ಪುದು.
ಆ ಚಕ್ರವೆ ಶರಣಸ್ಥಲ.
ಆ ಸ್ಥಲವ ಉರಿಲಿಂಗಪೆದ್ದಿದೇವರಿಂಬುಗೊಂಡರಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಜೀವತತ್ತ್ವದಲ್ಲಿ ಅಜ್ಞಾನಚಕ್ರವಿರ್ಪುದು.
ಆ ಚಕ್ರವೆ ಐಕ್ಯಸ್ಥಲ.
ಆ ಸ್ಥಲವ ಅಜಗಣ್ಣತಂದೆಗಳಿಂಬುಗೊಂಡರಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಬ್ರಹ್ಮಚಕ್ರವೆ ಪರಮ ಆರೂಢಸ್ಥಲ.
ಆ ಸ್ಥಲವ ನಿಜಗುಣಯೋಗಿಗಳಿಂಬುಗೊಂಡರಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಶಿಖಾಚಕ್ರವೆ ನಿತ್ಯನಿರುಪಮಸ್ಥಲ.
ಆ ಸ್ಥಲವ ಅಕ್ಕಮಹದೇವಿಯರಿಂಬುಗೊಂಡರಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಪಶ್ಚಿಮಚಕ್ರವೆ ಪರಮನಿರಂಜನಸ್ಥಲ.
ಆ ಸ್ಥಲವ ಪ್ರಭುಸ್ವಾಮಿಗಳಿಂಬುಗೊಂಡರಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಒಳಹೊರಗೆ ತೋರುವ ಎಲ್ಲ ಸ್ಥಳಕುಳಂಗಳನು
ಉಳಿದ ಸಕಲಗಣಂಗಳು ಇಂಬುಗೊಂಡರಾಗಿ
ಎನಗೆ ಎಲ್ಲ ಸ್ಥಲಂಗಳು ಬಯಲಾದುವು.
ಇದು ಕಾರಣ, ಆದಿ ಅನಾದಿಯಿಂದತ್ತತ್ತಲಾದ
ಘನಕೆ ಘನವಾದ ಮಹಕೆ ಮಹವಾದ
ಮಹಾಸ್ಥಲವನಿಂಬುಗೊಂಡಿರಯ್ಯಾ ಎನಗೆ ಅಖಂಡೇಶ್ವರಾ./155
ಎನ್ನ ಭವಪಾಶಂಗಳ ಹರಿದು ಶಿವಸಂಸ್ಕಾರಿಯ ಮಾಡಿದ
ಶ್ರೀಗುರುವಿಂಗೆ ನಮೋ ನಮೋ ಎಂಬೆನಯ್ಯ,
ಎನ್ನ ಪೂರ್ವಜನ್ಮವಳಿದು ಪುನರ್ಜಾತನ ಮಾಡಿದ
ಶ್ರೀಗುರುವಿಂಗೆ ನಮೋ ನಮೋ ಎಂಬೆನಯ್ಯ.
ಎನ್ನ ಭೂತಕಾಯವ ಕಳೆದು ಮಂತ್ರಶರೀರವ ಮಾಡಿದ
ಶ್ರೀ ಗುರುವಿಂಗೆ ನಮೋ ನಮೋ ಎಂಬೆನಯ್ಯ.
ಎನ್ನ ಹಣೆಯ ದುರ್ಲಿಖಿತವ ತೊಡೆದು
ಶಿವಮಂತ್ರವ ಸಂಬಂಧಿಸಿದ
ಶ್ರೀ ಗುರುವಿಂಗೆ ನಮೋ ನಮೋ ಎಂಬೆನಯ್ಯ.
ಎನ್ನ ವಾಯುಪ್ರಾಣಿಯೆಂದೆನಿಸದೆ ಲಿಂಗಪ್ರಾಣಿಯೆಂದೆನಿಸಿದ
ಶ್ರೀ ಗುರುವಿಂಗೆ ನಮೋ ನಮೋ ಎಂಬೆನಯ್ಯ
ಅಖಂಡೇಶ್ವರಾ./156
ಎನ್ನ ಭವಭವದಲ್ಲಿ ತೊಳಲಿಸಿ ಬಳಲಿಸಿದ ಕಾರಣವೇನಯ್ಯ ?
ಎನ್ನ ಸಂಸಾರಶರಧಿಯಲ್ಲಿ ಮುಳುಗಿಸಿ
ಏಳುಗೊಡದೆ ಇರಿಸಿದ ಕಾರಣವೇನಯ್ಯ ?
ನಾನು ಮಾಡಿದ ಅಪರಾಧವೇನಯ್ಯ ?
ನೀವು ಮಾಡಲಾನಾದೆನಲ್ಲದೆ ಎನಗೆ ಬೇರೆ
ಸ್ವತಂತ್ರವೇ ಹೇಳಾ ಅಖಂಡೇಶ್ವರಾ ?/157
ಎನ್ನ ಭಾವವ ಸಿಂಹಾಸನವ ಮಾಡಿದನಯ್ಯ
ಶ್ರೀಗುರು ಪರಮಶಿವಲಿಂಗಕ್ಕೆ.
ಎನ್ನ ಮನವ ಸಿಂಹಾಸನವ ಮಾಡಿದನಯ್ಯ
ಶ್ರೀಗುರು ಪರಮಶಿವಲಿಂಗಕ್ಕೆ.
ಎನ್ನ ಕಂಗಳ ಸಿಂಹಾಸನವ ಮಾಡಿದನಯ್ಯ
ಶ್ರೀಗುರು ಪರಮಶಿವಲಿಂಗಕ್ಕೆ.
ಎನ್ನ ಕರಸ್ಥಲವ ಸಿಂಹಾಸನವ ಮಾಡಿದನಯ್ಯ
ಶ್ರೀಗುರು ಪರಮಶಿವಲಿಂಗಕ್ಕೆ.
ಎನ್ನ ಸರ್ವಾಂಗವ ಸಿಂಹಾಸನವ ಮಾಡಿದ,
ಎನ್ನ ಪರಿಭವವ ತಪ್ಪಿಸಿದ ಶ್ರೀಗುರುವಿಂಗೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./158
ಎನ್ನ ಮಾನಾಪಮಾನವೆಲ್ಲ ನಿಮ್ಮದಯ್ಯ.
ಎನ್ನ ಹಾನಿವೃದ್ಧಿಗಳೆಲ್ಲ ನಿಮ್ಮವಯ್ಯ.
ಅಖಂಡೇಶ್ವರಾ, ನೀವು ಭಕ್ತದೇಹಿಕ ದೇವರಾದಿರಾಗಿ
ಎನ್ನ ಸರ್ವಸುಖ ಪರಿಣಾಮವೆಲ್ಲ ನಿಮ್ಮವೆಂದರಿದೆನಯ್ಯ./159
ಎನ್ನ ಷಡ್ಧಾತುಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಎನ್ನ ಷಡ್ದ್ರಿಯಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಎನ್ನ ಷಡ್ಭಾವಂಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಎನ್ನ ಷಡೂರ್ಮೆಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಎನ್ನ ಷಡ್ವರ್ಗಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಎನ್ನ ಷಟ್ಕರಣಂಗಳೆಲ್ಲ ಷಡಕ್ಷರಮಂತ್ರಸ್ವರೂಪವಾಗಿ
ತೋರುತಿಪ್ಪುವಯ್ಯ.
ಇದು ಕಾರಣ `ಓಂ ನಮಃಶಿವಾಯ’ `ಓಂ ನಮಃಶಿವಾಯ’
`ಓಂ ನಮಃಶಿವಾಯ’ ಎಂಬ ನಿಮ್ಮ ನಾಮಾಮೃತವನುಂಡು
ನಿತ್ಯಮುಕ್ತನಾದೆನಯ್ಯ ಅಖಂಡೇಶ್ವರಾ./160
ಎನ್ನ ಸ್ಥೂಲತನುವಿನ ಜಾಗ್ರಾವಸ್ಥೆಯಲ್ಲಿ
ಸಕಲ ದೃಶ್ಯದ ಲೀಲೆಯನಾಡುವಾತನು ನೀನೆ ಅಯ್ಯಾ.
ಎನ್ನ ಸೂಕ್ಷ್ಮತನುವಿನ ಸ್ವಪ್ನಾವಸ್ಥೆಯಲ್ಲಿ
ದೃಶ್ಯಾದೃಶ್ಯದ ಲೀಲೆಯನಾಡುವಾತನು ನೀನೆ ಅಯ್ಯಾ.
ಎನ್ನ ಕಾರಣತನುವಿನ ಸುಷುಪ್ತ್ಯಾವಸ್ಥೆಯಲ್ಲಿ
ಕೇವಲ ನಿರವಯ ಲೀಲೆಯನಾಡುವಾತನು
ನೀನೆ ಅಯ್ಯಾ ಅಖಂಡೇಶ್ವರಾ./161
ಎನ್ನ ಸ್ಥೂಲತನುವೆಂಬ ಕೈಲಾಸದ ಮೇಲೆ
ಕಂಗಳ ಮಂಟಪದಲ್ಲಿ ಕುಳ್ಳಿರ್ದು
ದೃಶ್ಯಾದೃಶ್ಯದ ಲೀಲೆಯನಾಡುವಾತ ನೀನೇ ಅಯ್ಯಾ.
ಎನ್ನ ಸೂಕ್ಷ್ಮತನುವೆಂಬ ಕೈಲಾಸದ ಮೇಲೆ
ಮನೋಮಂಟಪದಲ್ಲಿ ಕುಳ್ಳಿರ್ದು
ದೃಶ್ಯಾದೃಶ್ಯದ ಲೀಲೆಯನಾಡುವಾತನು ನೀನೇ ಅಯ್ಯಾ.
ಎನ್ನ ಕಾರಣತನುವೆಂಬ ಕೈಲಾಸದ ಮೇಲೆ
ಭಾವಮಂಟಪದಲ್ಲಿ ಕುಳ್ಳಿರ್ದು
ಕೇವಲ ಅದೃಶ್ಯಲೀಲೆಯನಾಡುವಾತನು ನೀನೆ ಅಯ್ಯಾ.
ಎನ್ನ ಮಹಾಕಾರಣತನುವೆಂಬ ಕೈಲಾಸದ ಮೇಲೆ
ಮಹಾಜ್ಞಾನಮಂಟಪದಲ್ಲಿ ಕುಳ್ಳಿರ್ದು
ಅಖಂಡಪರಿಪೂರ್ಣ ನಿರವಯಲೀಲೆಯನಾಡುವಾತನು
ನೀನೇ ಅಯ್ಯಾ ಅಖಂಡೇಶ್ವರಾ./162
ಎನ್ನ ಸ್ಥೂಲತನುವೆಂಬ ಮನೆಯಲ್ಲಿ
ಲಿಂಗವೆಂಬ ಜ್ಯೋತಿಯ ತುಂಬಿದೆನಯ್ಯ.
ಎನ್ನ ಸೂಕ್ಷ್ಮ ತನುವೆಂಬ ಮನೆಯಲ್ಲಿ
ಮಂತ್ರವೆಂಬ ಜ್ಯೋತಿಯ ತುಂಬಿದೆನಯ್ಯ.
ಎನ್ನ ಕಾರಣತನುವೆಂಬ ಮನೆಯಲ್ಲಿ
ಜ್ಞಾನವೆಂಬ ಜ್ಞೋತಿಯ ತುಂಬಿದೆನಯ್ಯ.
ಎನ್ನ ಒಳಹೊರಗೆ ತುಂಬಿ ಬೆಳಗುವ
ಜ್ಯೋತಿಯ ಬೆಳಗಿನೊಳಗೆ ಸುಳಿಯುತಿರ್ದೆನಯ್ಯ
ಅಖಂಡೇಶ್ವರಾ./163
ಎನ್ನಂಗದ ಮಧ್ಯದೊಳಗೆ ಮಂಗಳಾಂಗನ ಬೆಳಗು
ಥಳಥಳಿಸಿ ಹೊಳೆಯುತಿರ್ಪುದಾಗಿ,
ಎನ್ನ ಕಂಗಳ ಕಳವಳಿಕೆ ಕಡೆಗಾಯಿತ್ತು.
ಎನ್ನ ಮನದ ಮುಂದಣ ಮರವೆ ಹಾರಿಹೋಯಿತ್ತು.
ಅಖಂಡೇಶ್ವರನ ನಿಲವು ನಿಶ್ಚಲವಾಗಿ ಕಾಣಬಂದಿತ್ತು. /164
ಎನ್ನಂತರಂಗದ ಆರು ಭುವನದ ಮೇಲೆ ತೋರುತಿರ್ಪ
ಮಹಾಕೈಲಾಸದ ಮೂರು ಮಂಡಲದಲ್ಲಿ
[ನಾಲ್ಕು] ಎಂಟು ಹದಿನಾರು ಮೂವತ್ತೆರಡು ತಂಡದಲ್ಲಿ
ನಿಂದು ಓಲಗಂಗೊಡುತಿರ್ಪರು ಸಕಲಗಣಂಗಳು ನಿಮಗೆ.
ಎನ್ನ ಮನ ಬುದ್ದಿ ಚಿತ್ತ ಅಹಂಕಾರಂಗಳು
ನಿಮ್ಮ ಮಂತ್ರಿ ಪ್ರಧಾನಿಗಳಾಗಿರ್ಪರು.
ಎನ್ನ ದಶವಾಯುಗಳು ನಿಮಗೆ ಹಸನಾಗಿ ಗಾಳಿಯ ಢಾಳಿಸುತಿರ್ಪರು.
ಎನ್ನ ಅರಿಷಡ್ವರ್ಗಂಗಳು ನಿಮ್ಮ ಹೊಗಳುವ ಭಟಾಳಿಗಳಾಗಿ
ನಿಮ್ಮ ನಾಮಮಂತ್ರಂಗಳ ಕೊಂಡಾಡುತಿರ್ಪರು.
ಎನ್ನ ಚರಣಂಗಳು ನಿಮ್ಮ ಪ್ರದಕ್ಷಿಣೆಯ ಮಾಡುತಿರ್ಪವು.
ಎನ್ನ ಹಸ್ತಂಗಳು ನಿಮ್ಮ ಶ್ರೀಪಾದವ ಪೂಜಿಸುತ್ತಿರ್ಪವು.
ಎನ್ನ ಗುಹ್ಯ ನಿಮಗಾನಂದಸ್ಥಾನವಾಗಿರ್ಪುದು.
ಎನ್ನ ಪಾಯು ನಿಮಗೆ ವಿಸರ್ಜನ ಕೃತ್ಯಕ್ಕನುವಾಗಿರ್ಪುದು.
ಎನ್ನ ತ್ವಕ್ಕು ನಿಮಗೆ ಹಾಸಿಗೆಯ ಸುಖವನುಂಟುಮಾಡುತಿರ್ಪುದು.
ಎನ್ನ ಕರ್ಣವು ನಿಮಗೆ ನಾದವ ಕೇಳಿಸುತಿರ್ಪುದು.
ಎನ್ನ ಕಂಗಳು ನಿಮಗೆ ನಾನಾ ವಿಚಿತ್ರ ರೂಪವ ತೋರುತಿರ್ಪವು.
ಎನ್ನ ಘ್ರಾಣವು ನಿಮಗೆ ಗಂಧ ಪರಿಣಾಮ ಮುಡಿಸುತಿರ್ಪುದು.
ಎನ್ನ ಜಿಹ್ವೆ ನಿಮಗೆ ಷಡುರಸ ಪಂಚಕಜ್ಜಾಯಗಳ ದ್ರವ್ಯವ
ಭೋಜನಕೆ ಎಡೆ ಮಾಡುತಿರ್ಪುದು.
ಎನ್ನ ಸಕಲ ಕರಣಂಗಳು
ನಿಮ್ಮ ನಿಜ ಸೇವೆಯನೆ ಮಾಡುತಿರ್ಪವು.
ಇಂತೀ ನಾನಾ ತೆರದಿಂದಾಗುವ ನಿಮ್ಮ
ಓಲಗದ ಒಡ್ಡವಣೆಯ ಕಂಡು,
ಹೋದುದ ಬಂದುದನರಿಯದೆ
ಸಂಪಿಗೆಯ ಪುಷ್ಪಕ್ಕೆರಗಿದ ಭ್ರಮರನಂತೆ
ನಿಮ್ಮೊಳಗೆ ಪರವಶವಾಗಿರ್ದೆನಯ್ಯಾ ಅಖಂಡೇಶ್ವರಾ./165
ಎನ್ನೊಡಲೊಳಗೆ ತೋರಿ ತೋರಿ ಅಡಗುವ
ನಿಮ್ಮ ಬೆಡಗು ಬಿನ್ನಾಣವ ತಿಳಿಯಬಾರದು.
ಭಕ್ತಕಾಯ ಮಮಕಾಯ ಭಕ್ತಪ್ರಾಣ ಮಮಪ್ರಾಣವೆಂಬ
ನಿಮ್ಮ ನುಡಿ ಸೂಚಿಸುತ್ತದೆ.
ಇದು ಕಾರಣ, ಎನ್ನ ತನುವೆಂಬ ಗುಡಿಯೊಳಗೆ
ಮನೋಮೂರ್ತಿಲಿಂಗವಾಗಿ
ಇನಕೋಟಿ ಪ್ರಭೆಯನೊಳಕೊಂಡು
ಹೆರೆಹಿಂಗದೆ ನಿರಂತರ ಬೆಳಗುತ್ತಿರಬೇಕಯ್ಯಾ ನೀವು ಅಖಂಡೇಶ್ವರಾ./166
ಎಲೆ ಶಿವನೆ ನಿಮ್ಮಲ್ಲಿ ನಾನೊಂದ ಬೇಡಿಕೊಂಬೆನು,
ನೀವೊಲಿದು ಕರುಣಿಸಯ್ಯಾ ಎನಗೆ.
ನಿಮ್ಮ ಶರಣರ ಸಚ್ಚರಿತ್ರದ ಘನಮಹಿಮೆಯ ಕೇಳುವಲ್ಲಿ
ಎನ್ನ ಹೃದಯಕಮಲವು ಅರಳುವಂತೆ ಮಾಡಯ್ಯಾ.
ನಿಮ್ಮ ಶರಣರ ನಿಜಮೂರ್ತಿಗಳ ಕಂಡಲ್ಲಿ
ಎನ್ನ ಸರ್ವಾಂಗವು ಗುಡಿಗಟ್ಟಿ ಕಂಗಳಲ್ಲಿ ಪರಿಣಾಮಜಲವುಕ್ಕಿ
ಅವರ ಚರಣಕಮಲದ ಮೇಲೆ ಸುರಿವಂತೆ ಮಾಡಯ್ಯಾ.
ನಿಮ್ಮ ಶರಣರು ಶಿವಾನುಭವಸಂಪಾದನೆಯ ಮಾಡುವಲ್ಲಿ
ಎನ್ನ ಕರ್ಣದ್ವಯದಲ್ಲಿ ಸಕಲಕರಣಂಗಳು
ನಾ ಮುಂಚೆ ತಾ ಮುಂಚೆ ಎಂದಾಗ್ರಹಿಸುವಂತೆ ಮಾಡಯ್ಯಾ.
ನಿಮ್ಮ ನಿಜವನಿಂಬುಗೊಂಡ ಶರಣರ ಸಂಗದಲ್ಲಿ
ಹೆರೆಹಿಂಗದಿರುವಂತೆ ಮಾಡಯ್ಯಾ ಎನ್ನ ಅಖಂಡೇಶ್ವರಾ. /167
ಎಲೆ ಶಿವನೆ, ನೀನು ಎನ್ನ ಮೆಚ್ಚಿ ಕೈವಿಡಿದ ಕಾರಣ
ಎಮ್ಮವರು ಸಕಲಗಣಂಗಳ ಸಾಕ್ಷಿಯಮಾಡಿ
ನಿನಗೆ ಎನ್ನ ಮದುವೆಯಮಾಡಿಕೊಟ್ಟರು.
ನೀನು ಎನ್ನನಗಲಿದಡೆ ಗುರುದ್ರೋಹಿ.
ಆನು ನಿನ್ನನಗಲಿದಡೆ ಸಮಯಕ್ಕೆ ಹೊರಗು.
ಅದೆಂತೆಂದೊಡೆ :
ಮುನ್ನ ಶ್ರೀಗುರುಸ್ವಾಮಿ
ಎನ್ನ ಪ್ರಾಣದೊಳಗೆ ನಿನ್ನ ಪ್ರಾಣವ ಹುದುಗಿಸಿ,
ನಿನ್ನ ಪ್ರಾಣದೊಳಗೆ ಎನ್ನ ಪ್ರಾಣವ ಹುದುಗಿಸಿ
ಎಂದೆಂದೂ ಅಗಲಬೇಡೆಂದು ನಿರೂಪಿಸಿದನು.
ಆ ನಿರೂಪವನು ಮಹಾಪ್ರಸಾದವೆಂದು ಕೈಕೊಂಡ ಬಳಿಕ
ನಾವಿಬ್ಬರು ಎಂದೆಂದಿಗೂ ಅಗಲದಿರಬೇಕಯ್ಯಾ ಅಖಂಡೇಶ್ವರಾ./168
ಎಲೆ ಶಿವನೆ, ನೀವು ಭಕ್ತದೇಹಿಕದೇವನೆಂಬುದು
ಎನಗೆ ನಿಶ್ಚಲವಾಗಿ ಕಾಣಬಂದಿತ್ತು.
ಅದೇನು ಕಾರಣವೆಂದೊಡೆ :
ಎನ್ನ ತನುವೆ ನಿಮ್ಮ ತನುವಾಯಿತ್ತಾಗಿ.
ಈ ತನುವಿಡಿದು ಗುರುವ ಕಂಡೆ.
ಈ ತನುವಿಡಿದು ಲಿಂಗವ ಕಂಡೆ.
ಈ ತನುವಿಡಿದು ಜಂಗಮವ ಕಂಡೆ.
ಈ ತನುವಿಡಿದು ಪಾದತೀರ್ಥ ಪ್ರಸಾದವ ಕಂಡೆ.
ಈ ತನುವಿಡಿದು ವಿಭೂತಿ ರುದ್ರಾಕ್ಷಿಯ ಕಂಡೆ.
ಈ ತನುವಿಡಿದು ಮಂತ್ರದ ಮೂಲವ ಕಂಡೆ.
ಈ ತನುವಿಡಿದು ನಿಮ್ಮ ಶರಣರ ಮಹಾನುಭಾವವ ಕಂಡೆ.
ಈ ತನುವಿಡಿದು ನೀವೇ ನಾನಾದ ಪರಿಯ ಕಂಡು
ಬೆರಗಾದೆನಯ್ಯ ಅಖಂಡೇಶ್ವರಾ./169
ಎಲ್ಲರಂತಲ್ಲ ನೋಡಿರೆ ನನ್ನ ನಲ್ಲ.
ಬಲ್ಲಿದ ನಾರಾಯಣ ಬ್ರಹ್ಮರ ಕೂಡೆ
ಮೆಲ್ಲನೆ ಸೇವೆಯ ಕೊಂಬನು.
ಖುಲ್ಲ ದನುಜರನೆಲ್ಲ ನಿಲ್ಲದೆ ಸಂಹರಿಸಿದನು.
ಕಲ್ಲುಕಲ್ಲಲಿ ಹೊಡೆಸಿಕೊಂಡನು.
ಭಕ್ತಿಗೆ ಮೆಚ್ಚಿ ಬಿಲ್ಲಲಿ ಹೊಯಿಸಿಕೊಂಡನು.
ಭಾವಕ್ಕೆ ಮೆಚ್ಚಿ ಸೊಲ್ಲಿಗೆ ಸೋತು ಶಿಶುವಾದನು ಅಮ್ಮವ್ವೆಗೆ.
ಮಲ್ಲಮಲ್ಲರ ಗಂಡನೆಂಬ ಬಿರುದು ನೋಡಿರೆ
ನಮ್ಮ ಅಖಂಡೇಶ್ವರನೆಂಬ ನಲ್ಲನಿಗೆ./170
ಎಲ್ಲಿ ನೋಡಿದಡಲ್ಲಿ ನೀನೇ ದೇವ.
ಎಲ್ಲಿ ಮುಟ್ಟಿದಡಲ್ಲಿ ನೀನೇ ದೇವ.
ಎಲ್ಲಿ ನೆನೆದಡಲ್ಲಿ ನೀನೇ ದೇವ.
ಎಲ್ಲಿ ಭಾವಿಸಿದಡಲ್ಲಿ ನೀನೇ ದೇವ.
ಎಲ್ಲೆಡೆಯಲ್ಲಿ ನಿಮ್ಮ ಮಹಾಪ್ರಭೆ ಮುಸುಕಿತ್ತಾಗಿ
ಅಖಂಡೇಶ್ವರಾ, ನಾನು ನೀನೆಂಬುದಕ್ಕೆ ತೆರಹಿಲ್ಲ ದೇವಾ./171
ಏನೆಂಬೆನೇನೆಂಬೆನಯ್ಯ ಒಂದು ಎರಡಾದುದ.
ಏನೆಂಬೆನೇನೆಂಬೆನಯ್ಯ ಎರಡು ಒಂದಾದುದ.
ಏನೆಂಬೆನೇನೆಂಬೆನಯ್ಯಾ ಸರ್ವತೋರಿಕೆ ನಿರವಯಲಾದುದ.
ಏನೆಂಬೆನೇನೆಂಬೆನಯ್ಯಾ ಅಖಂಡೇಶ್ವರಾ
ನಿಮ್ಮೊಳಗೆನಗೆ ಸಮರಸೈಕ್ಯಸಂಬಂಧವಾದುದ./172
ಏಳುಕೋಟಿ ಮಹಾಮಂತ್ರಗಳ
ಉಪಮಂತ್ರ ಕೋಟ್ಯಾನುಕೋಟಿಗಳ
ಕಲಿತು ತೊಳಲಿ ಬಳಲುವುದೇಕೋ ?
ಭಾಳಾಕ್ಷನ ಮೂಲಮಂತ್ರ ಒಂದೇ ಸಾಲದೇ !
ಸಕಲವೇದಂಗಳ ಮೂಲವಿದು, ಸಕಲಶಾಸ್ತ್ರಂಗಳ ಸಾರವಿದು,
ಸಕಲಾಗಮಂಗಳ ಅರುಹಿದು, ಸಕಲಮಂತ್ರಂಗಳ ಮಾತೆಯಿದು.
ಇಂತಪ್ಪ ಶಿವಮಂತ್ರವೆಂಬ ಸಂಜೀವನವು ಎನ್ನಂಗಕ್ಕೆ ಸಂಗಿಸಲಾಗಿ
ಎನಗೆ ಮರಣದ ಭಯ ಹಿಂಗಿತಯ್ಯಾ ಅಖಂಡೇಶ್ವರಾ !/173
ಒಂದು ವೇಳೆ ಲಿಂಗಕ್ಕೆ ಕೊಟ್ಟು
ಮತ್ತೊಂದು ವೇಳೆ ಲಿಂಗವ ಬಿಗಿಬಿಗಿದು ಕಟ್ಟಿಕೊಂಡು,
ಬಂದ ಬಂದ ಪದಾರ್ಥವ ತನ್ನೊಡಲಿಚ್ಛೆಗೆ ಕೊಂಡಡೆ,
ಅಮೇಧ್ಯವನು ಕಿಲ್ಬಿಷವನು ಕೂಡಿಸಿ ತಿಂದಂತಾಯಿತ್ತು.
ಒಂದುವೇಳೆ ಪ್ರಸಾದವೆಂದು ಕೊಂಡು
ಮತ್ತೊಂದುವೇಳೆ ಎಂಜಲೆಂದು ಚೆಲ್ಲಿದಡೆ ಪ್ರಸಾದದ್ರೋಹಿ.
ಅದೆಂತೆಂದೊಡೆ :
“ಅಂಗಭೋಗಮನರ್ಪಿತಂ ಲಿಂಗಭೋಗಃ ಪ್ರಸಾದಂ |”
ಎಂದು ಗುರುವಚನ.
ಇಂತಪ್ಪ ಪಂಚಮಹಾಪಾತಕರುಭಯಭ್ರಷ್ಟರ
ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ./174
ಒಂಬತ್ತುನಾಳದೊಳಗೆ ತುಂಬಿಸೂಸುವ ಮನಪವನಂಗಳ
ಒಂದೇ ಮಾರ್ಗದಲ್ಲಿ ನಡೆಸಿ,
ಶಂಕಿನಿನಾಳವನಡರಿ, ಪಶ್ಚಿಮದ್ವಾರವ ಪೊಕ್ಕು,
ಆ ಬ್ರಹ್ಮರಂಧ್ರವ ನುಸುಳಿ,
ಶಿಖಾಗ್ರಂಥಿಯನೊಡೆದು
ಆ ನಿರಂಜನಪೀಠವ ಮೆಟ್ಟಿ,
ಮಹಾಬೆಳಗಿನ ಪ್ರಭಾಪುಂಜದಿಂದೆ ರಂಜಿಸುವ
ನಿರಂಜನಸಮಾಧಿಯೊಳಗೆ
ನಿರಂತರ ಬೆಳಗುತಿರ್ದೆನಯ್ಯಾ ಅಖಂಡೇಶ್ವರಾ./175
ಒಬ್ಬರು ನಡೆದಾಚರಣೆಯಲ್ಲಿ ನಡೆಯರು.
ಒಬ್ಬರು ಹಿಡಿದ ಶೀಲವ ಹಿಡಿಯರು.
ಒಬ್ಬರು ನುಡಿದ ಭಾಷೆಯ ನುಡಿಯರು.
ಅದೇನು ಕಾರಣವೆಂದೊಡೆ :
ತಮ್ಮ ಲಿಂಗಮಚ್ಚಿ ನಡೆವರು.
ತಮ್ಮ ಲಿಂಗಮಚ್ಚಿ ಹಿಡಿವರು.
ತಮ್ಮ ಲಿಂಗಮಚ್ಚಿ ನುಡಿವರು.
ಇದು ಕಾರಣ.
ಅಖಂಡೇಶ್ವರಾ, ನಿಮ್ಮ ಶರಣರು ಪರಮ ಸ್ವತಂತ್ರಶೀಲರು. /176
ಒಬ್ಬರೊಬ್ಬರ ಸಂಗವ ಬಯಸುತಿರ್ಪವರು ನೀವು ಕೇಳಿರೋ !
ಮನಕ್ಕೆ ಮನ ತಾರ್ಕಣೆಯಾಗದವರ ಸಂಗವದೇತರ ಸಂಗ ?
ಬುದ್ಧಿ ಬುದ್ಧಿ ಕೂಟಸ್ಥವಾಗದವರ ಸಂಗವದೇತರ ಸಂಗ ?
ಶೀಲ ಶೀಲ ಒಂದಾಗದವರ ಸಂಗವದೇತರ ಸಂಗ ?
ಭಾವ ಭಾವ ಏಕಾರ್ಥವಾಗದವರ ಸಂಗವದೇತರ ಸಂಗ ?
ದುಸ್ಸಂಗವಲ್ಲದೆ ಇಂತಪ್ಪ ದುಸ್ಸಂಗಿಗಳ ಸಂಗ
ದೋಷಕ್ಕೆ ಈಡು ಮುಕ್ತಿಯ ಕೇಡು ಕಂಡೆಯಾ ಅಖಂಡೇಶ್ವರಾ. /177
ಒಮ್ಮೆ ಜ್ಞಾನಿಯೆನಿಸಿ ಮತ್ತೊಮ್ಮೆ ಅಜ್ಞಾನಿಯೆನಿಸಿ
ಎನ್ನನೇತಕೆ ಕಾಡುವೆ ಹೇಳಯ್ಯಾ ?
ಒಮ್ಮೆ ಸಂತೋಷದಲ್ಲಿರಿಸಿ ಮತ್ತೊಮ್ಮೆ ಚಿಂತೆಯಲ್ಲಿರಿಸಿ
ಎನ್ನನೇತಕೆ ಕಾಡುವೆ ಹೇಳಯ್ಯಾ ?
ಮರ್ಕಟನಂತೆ ಎನ್ನ ಮನವ ವ್ಯಾಕುಲದಲ್ಲಿ ಹುಚ್ಚುಗೊಳಿಸಿ
ಎನ್ನನೇತಕೆ ಕಾಡುವೆ ಹೇಳಯ್ಯಾ ?
ನಿಮಗೆ ಹೊತ್ತು ಹೋಗದೆ, ಮತ್ತೊಂದು ವ್ಯಾಪಾರವಿಲ್ಲದೆ
ಎನ್ನ ಕೂಡೆ ಹದರು ಚದುರಿನಿಂದೆ
ವೇಳೆಯವ ಕಳೆವರೆ ಹೇಳಾ ಅಖಂಡೇಶ್ವರಾ./178
ಒಮ್ಮೆ ಜ್ಞಾನಿಯೆನಿಸಿ, ಒಮ್ಮೆ ಅಜ್ಞಾನಿಯೆನಿಸಿ,
ಒಮ್ಮೆ ವಿಕಲನೆನಿಸಿ, ಒಮ್ಮೆ ನಿಃಕಲನೆನಿಸಿ,
ಒಮ್ಮೆ ಭ್ರಾಂತನೆನಿಸಿ, ಒಮ್ಮೆ ನಿಭ್ರಾಂತನೆನಿಸಿ,
ನಾನಾ ತೆರದಿಂದೆ ಎನ್ನ ಹುಸಿದಿಟವ ಮಾಡಿಕಾಡದಿರಯ್ಯ.
ನೀವು ದಯಾನಿಧಿ ಎಂದು ನಂಬಿದೆನಯ್ಯ.
ನಿಮ್ಮ ಕರುಣಕಟಾಕ್ಷದಿಂದೆ ನೋಡಿ ಸಲಹಯ್ಯ ಎನ್ನ ಅಖಂಡೇಶ್ವರಾ./179
ಒಮ್ಮೆ ನೀ ದೇವನಾದಲ್ಲಿ ನಾ ಭಕ್ತನಾಗಿರ್ಪೆನು.
ಮತ್ತೊಮ್ಮೆ ನಾ ದೇವನಾದಲ್ಲಿ ನೀವು ಭಕ್ತರಾಗಿರ್ಪಿರಿ.
ಅದೆಂತೆಂದೊಡೆ :
ಎನ್ನ ತನು ಮನ ಪ್ರಾಣೇಂದ್ರಿಯಂಗಳು ನಿಮಗರ್ಪಿತವಾದವು.
ನಿಮ್ಮ ಮಹಾಪ್ರಸಾದವೆನ್ನೊಳಗಾಯಿತ್ತಾಗಿ
ಅಖಂಡೇಶ್ವರಾ, ನೀವೇ ಪದಾರ್ಥ ನಾನೇ ಪ್ರಸಾದವಯ್ಯಾ./180
ಒಲ್ಲನು ಒಲ್ಲನಯ್ಯ ಶಿವಭಕ್ತಿ ಇಲ್ಲದವರ.
ಒಲ್ಲನು ಒಲ್ಲನಯ್ಯ ಶಿವಜ್ಞಾನ ಇಲ್ಲದವರ.
ಒಲ್ಲನು ಒಲ್ಲನಯ್ಯ ಶಿವಭಾವ ಇಲ್ಲದವರ.
ಒಲ್ಲನು ಒಲ್ಲನಯ್ಯ ಶಿವಚಿಂತನೆ ಇಲ್ಲದವರ.
ಒಲ್ಲನು ಒಲ್ಲನಯ್ಯ ನಮ್ಮ ಅಖಂಡೇಶ್ವರನು
ಶಿವಾಚಾರವಿಲ್ಲದ ಭವಪಾತಕರ./181
ಒಲ್ಲೆನಯ್ಯ ಜಗದ ಹಂಗಿನ ಭೋಗೋಪಭೋಗವನು.
ಅದೇನು ಕಾರಣವೆಂದೊಡೆ :
ಹಿಂದೆ ಅರಿಯದೆ ಮರೆದು
ಜಗದ ಭೋಗವನು ಆಸೆ ಮಾಡಿ,
ಮತ್ರ್ಯಲೋಕದಲ್ಲಿ ಹುಟ್ಟಿ ನೊಂದು ಬೆಂದು ಕಂದಿ ಕುಂದಿದೆನಯ್ಯಾ.
ಇದು ಕಾರಣ ಇನ್ನು ಮುಂದೆ ಬಯಸಿದೆನಾದಡೆ
ಅಖಂಡೇಶ್ವರಾ, ನಿಮ್ಮಾಣೆ ನಿಮ್ಮ ಪ್ರಮಥರಾಣೆ./182
ಒಳಗೆ ಕೂಡಿ ಹೊರಗೆ ಮರೆದಿರ್ಪೆನಯ್ಯಾ.
ಹೊರಗೆ ಕೂಡಿ ಒಳಗೆ ಮರೆದಿರ್ಪೆನಯ್ಯಾ.
ಒಳಹೊರಗೆಂಬ ಸಂದು ಸಂಶಯವನಳಿದು
ತೆರಹಿಲ್ಲದೆ ನಿಮ್ಮೊಳಗೆ ಏನೇನು ಅರಿಯದಂತಿರ್ದೆನಯ್ಯಾ
ಅಖಂಡೇಶ್ವರಾ./183
ಒಳಗೆ ತಿಳಿಯದೆ ಹೊರಗೆ ಮಾಡುವ ಮಾಟವೆಲ್ಲ
ಅಜ್ಞಾನದ ಗಡಣದೊಳಗು.
ಒಳಗೆ ಗುರುಲಿಂಗಜಂಗಮದ ಪಾದತೀರ್ಥಪ್ರಸಾದವ ಕೊಂಡೆವೆಂದು
ಹೊರಗೆ ಮಾಡುವ ಭಕ್ತಿಯ ಬಿಟ್ಟರೆ
ಮುಂದೆ ಒದಗುವ ಮುಕ್ತಿಯ ಕೇಡು.
ಅದೆಂತೆಂದೊಡೆ :
ಅಸಲು ಕಳೆದ ಬಳಿಕ ಲಾಭವುಂಟೇ ?
ಇಲ್ಲ ಇಲ್ಲ, ಮಾಣು.
ಒಳಗಣ ಕೂಟ, ಹೊರಗಣ ಮಾಟವನರಿಯದೆ
ಕೆಟ್ಟರು ನೋಡಾ ಹಿರಿಯರೆಲ್ಲರು ಅಖಂಡೇಶ್ವರಾ./184
ಒಳಗೆ ನೋಡಿದಡೆ ನಿಮ್ಮನೆ ನೋಡುವೆನಯ್ಯಾ.
ಹೊರಗೆ ನೋಡಿದಡೆ ನಿಮ್ಮನೆ ನೋಡುವೆನಯ್ಯಾ.
ಒಳಗೆ ಪೂಜಿಸಿದಡೆ ನಿಮ್ಮನೆ ಪೂಜಿಸುವೆನಯ್ಯಾ.
ಹೊರಗೆ ಪೂಜಿಸಿದಡೆ ನಿಮ್ಮನೆ ಪೂಜಿಸುವೆನಯ್ಯಾ.
ಒಳಗೆ ಧ್ಯಾನಿಸಿದಡೆ ನಿಮ್ಮನೆ ಧ್ಯಾನಿಸುವೆನಯ್ಯಾ.
ಹೊರಗೆ ಧ್ಯಾನಿಸಿದಡೆ ನಿಮ್ಮನೆ ಧ್ಯಾನಿಸುವೆನಯ್ಯಾ.
ನೀವು ಭಕ್ತ್ಯನುಕಂಪಿತರಾದ ಕಾರಣ
ಎನ್ನ ಭಾವವು ಎಲ್ಲಿ ನಿಂದಿಹುದು ಅಲ್ಲಿ
ನಿಮ್ಮ ನಿಲವೆ ತುಂಬಿರ್ಪುದಯ್ಯಾ ಅಖಂಡೇಶ್ವರಾ./185
ಒಳಗೆ ಬೋಳಾಗಲರಿಯದೆ ಹೊರವೇಷದ ಬೋಳಿನಲ್ಲಿ
ಸುಳಿದಾಡುವ ಅಣ್ಣಗಳ ಕಂಡು ಬೆರಗಾದೆನಯ್ಯ.
ಅದೇನು ಕಾರಣವೆಂದೊಡೆ :
ತನು ಕರಣೇಂದ್ರಿಯ ವಿಷಯಾದಿಗಳು
ಘನಮಹಾಲಿಂಗದಲ್ಲಿ ತರಹರವಾಗಿರಬಲ್ಲಡೆ ಬೋಳು.
ಹಮ್ಮು ಬಿಮ್ಮು ಗರ್ವ ಅಹಂಕಾರವನಳಿದು
ಆದಿ ಅನಾದಿಯಿಂದತ್ತತ್ತಲಾದ ಅನುಪಮಲಿಂಗದಲ್ಲಿ
ಮನವಡಗಿರಬಲ್ಲಡೆ ಬೋಳು.
ಮನ ಪ್ರಾಣ ಭಾವಂಗಳು ಅನುಪಮಲಿಂಗದಲ್ಲಿ
ನಿಕ್ಷೇಪವಾಗಿರಬಲ್ಲಡೆ ಬೋಳು.
ಅನಂತಕೋಟಿ ಬ್ರಹ್ಮಾಂಡಗಳ ಒಳಹೊರಗೆ ತುಂಬಿ
ತೊಳಗಿ ಬೆಳಗುವ ಅಖಂಡ ಪರಿಪೂರ್ಣವಾದ ಪರಬ್ರಹ್ಮದಲ್ಲಿ
ಭಾವ ತುಂಬಿರಬಲ್ಲಡೆ ಬೋಳು.
ಇಂತೀ ಬೋಳಿನ ಘನವನರಿಯದೆ
ಗಂಡುದೊತ್ತಿನಂತೆ ಮಂಡೆಯ ಬೋಳಿಸಿಕೊಂಡು
ದಿಂಡೆಯತನದಿಂದೆ ಕಂಡಕಂಡವರಲ್ಲಿ ಕೆಲೆದಾಡುತ್ತ
ಮದ ಮತ್ಸರಂಗಳ ಮುಂದುಗೊಂಡು ಚರಿಸುತ್ತ
ಬಂದ ಭವಂಗಳಲ್ಲಿ ಮುಳುಗಾಡುತಿರ್ಪವರ
ಬೋಳುಗಳೆಲ್ಲ ಜಾಳು ಬೋಳು ನೋಡಾ ಅಖಂಡೇಶ್ವರಾ./186
ಒಳಗೆ ಲಿಂಗದ ಕೂಟದಲ್ಲಿ ಮನವಡಗಿರಬೇಕು.
ಹೊರಗೆ ಜಂಗಮದ ಮಾಟದಲ್ಲಿ ತನುವಿಡಿದಿರಬೇಕು.
ಈ ಉಭಯವ ಒಂದರೊಳಗೊಂದು ಛೇದಿಸಿಕೊಂಡು
ತಾನಳಿದು ಮಾಡುವ ಭಕ್ತನ ಕೂಡಿಕೊಂಡಿರ್ಪನು ನೋಡಾ
ಅಖಂಡೇಶ್ವರಾ./187
ಒಳಗೆಂಬುದನರಿಯೆ, ಹೊರಗೆಂಬುದನರಿಯೆ,
ಸ್ವಾನುಭಾವ ಜ್ಞಾನಾಮೃತವನುಂಡು
ಏನೇನು ಅರಿಯದಂತಿರ್ದೆನಯ್ಯಾ ಅಖಂಡೇಶ್ವರಾ./188
ಓಂ ನಮಃಶಿವಾಯ’ ಎಂಬುದೇ ಎನಗೆ ಧರ್ಮ ನೋಡಾ !
`ಓಂ ನಮಃಶಿವಾಯ’ ಎಂಬುದೇ ಎನಗೆ ಅರ್ಥ ನೋಡಾ !
`ಓಂ ನಮಃಶಿವಾಯ’ ಎಂಬುದೇ ಎನಗೆ ಕಾಮ ನೋಡಾ !
`ಓಂ ನಮಃಶಿವಾಯ’ ಎಂಬುದೇ ಎನಗೆ ಮೋಕ್ಷ ನೋಡಾ !
`ಓಂ ನಮಃಶಿವಾಯ’ ಎಂಬುದೇ ಎನಗೆ ಸರ್ವಕಾರಣ ನೋಡಾ
ಅಖಂಡೇಶ್ವರಾ./189
ಓಂಕಾರವೆಂಬ ಮರಕ್ಕೆ ಷಟ್ಕೃತಿಯೆಂಬ ಶಾಖೆ ಪಸರಿಸಿ,
ಷಡಕ್ಷರಗಳೆಂಬ ತಳಿರು ಕೊನರಿ,
ಷಟ್ಸ್ಥಲಗಳೆಂಬ ಕುಸುಮಂಗಳಾಗಿ,
ಷಡುಲಿಂಗಂಗಳೆಂಬ ಮೋಕ್ಷದ ಮಧುರಫಲಂಗಳ
ತಳೆದಿರ್ಪುದು ನೋಡಾ !
ಇದನು ನಾನು ಶ್ರುತಿಗುರುವಚನಸ್ವಾನುಭಾವಂಗಳಿಂದರಿದು
ಓಂಕಾರವೆಂಬ ವೃಕ್ಷವನೇರಿ `ಓಂ ನಮಃಶಿವಾಯ’
`ಓಂ ನಮಃಶಿವಾಯ’ `ಓ ನಮಃಶಿವಾಯ’ ಎಂದು
ಆ ಷಡುಲಿಂಗಂಗಳೆಂಬ ಮೋಕ್ಷದ ಮಧುರಫಲಂಗಳನು
ಸವಿದು ನಿತ್ಯತೃಪ್ತನಾದೆನಯ್ಯ ಅಖಂಡೇಶ್ವರಾ./190
ಕಂಡರೆ ಸಂತೋಷ, ಕಾಣದಿರ್ದರೆ ಕಡುದುಃಖವೆನಗೆ
ಹಿಂಡುದೈವದ ಗಂಡ ಮಂಡಲಾಧಿಪತಿ ಅಖಂಡೇಶ್ವರನು
ನಿಮಿಷವಾದಡೂ ತಡೆದರೆ ಪ್ರಾಣ ಉಳಿಯದವ್ವಾ. /191
ಕಟ್ಟಿದ ಬುತ್ತಿ ಎಷ್ಟು ದಿನ ಈಡೇರಲಾಪುದು.
ಬಿರಿದ ಕೊಡದಲ್ಲಿ ಅಮೃತವ ತುಂಬಿದರೆ
ಎಷ್ಟು ಹೊತ್ತು ಇರಲಾಪುದು.
ಖ್ಯಾತಿಯ ಭಕ್ತಿ, ಕಲಿಕೆಯ ವಿರಕ್ತಿ ಅದರಂತೆ ಕಂಡಯ್ಯ.
ಸದ್ಗುರುನಾಥ ಉದ್ಯೋಗಿಸಿ ಕೊಟ್ಟುದು ನಿಜವಲ್ಲದೆ
ಉಳಿದುದೆಲ್ಲ ಅಬದ್ಧವೆಂಬೆನಯ್ಯ ಅಖಂಡೇಶ್ವರಾ./192
ಕಟ್ಟಿದೆನು ಬಿರಿದು ಶಿವನಲ್ಲದೆ ಬೇರೆದೇವರಿಲ್ಲವೆಂದು.
ಕಟ್ಟಿದೆನು ಬಿರಿದು ಶಿವಾಚಾರದಿಂದೆ ಬೇರೆ ಘನವಿಲ್ಲವೆಂದು.
ಕಟ್ಟಿದೆನು ಬಿರಿದು ಶಿವಶರಣರಲ್ಲದೆ ಬೇರೆ ಹಿರಿಯರಿಲ್ಲವೆಂದು
ಅಖಂಡೇಶ್ವರಾ ನೀ ಸಾಕ್ಷಿಯಾಗಿ./193
ಕಡಲಮಧ್ಯದಲ್ಲಿ ವಡವಾಗ್ನಿ ಹುಟ್ಟಿ,
ಆ ಕಡಲ ಸುಡುವುದ ಕಂಡೆ.
ನಡುರಂಗದ ಜ್ಯೋತಿ ಸೊಡರಳಿದು
ಎಡಬಲದಲ್ಲಿ ಕುಡಿವರಿದು
ಬೆಳಗುತಿರ್ಪುದ ಕಂಡೆನಯ್ಯಾ ಅಖಂಡೇಶ್ವರಾ./194
ಕನಕ ಕಾಮಿನಿ ಭೂಮಿಗಾಗಿ ಹೊಡೆದಾಡಿ ಕೆಟ್ಟಿತೀ ಜಗವೆಲ್ಲ.
ಇದ ಕಂಡು ಕೇಳಿ ನೀನೇತಕೆ ಇಚ್ಛಿಸುವೆ ಎಲೆ ಹುಚ್ಚು ಮನವೆ !
ಹಗಲು ಕಂಡ ಕಮರಿಯ ಇರುಳು ಬೀಳುವರೆ ?
ಎಲೆ ಮರುಳು ಮನವೆ ಕೆಡಬೇಡ ಕೆಡಬೇಡ.
ನಿನಗೊಂದು ಉಪಾಯವ ಹೇಳುವೆ ಕೇಳು ಎಲೆ ಮರುಳುಮನವೆ.
ಜಗದ ಆಗು ಹೋಗನರಿತು
ಜಗದೀಶ ಅಖಂಡೇಶ್ವರನ ನೆರೆನಂಬಿದೆಯಾದಡೆ
ನಿನಗೆ ಜನನ ಮರಣಂಗಳು ವಿರಹಿತವಾಗಿ
ಪರಮಪದವು ದೊರೆಕೊಂಬುದು ನೋಡಾ ಎಲೆ ಮನವೆ./195
ಕನ್ನಡಿಯ ನೋಡುವಲ್ಲಿ ಪ್ರತಿರೂಪು ಕಾಣುತಿರ್ಪುದು.
ಆ ನೋಟವನುಳಿದಲ್ಲಿ ಆ ಪ್ರತಿರೂಪು
ನಿಜರೂಪಿನಲ್ಲಿ ಅಡಗುವಂತೆ
ಅನುಪಮಬ್ರಹ್ಮದಲ್ಲಿ ನೆನಹುದೋರಿ ಚಿತ್ತೆನಿಸಿತ್ತು.
ಆ ಚಿತ್ತಿನಿಂದೆ ಚಿನ್ನಾದ ಚಿದ್ಬಿಂದು
ಚಿತ್ಕಳೆಗಳೊಗೆದುವು.
ಆ ಚಿನ್ನಾದ ಚಿದ್ಬಿಂದು ಚಿತ್ಕಳೆಗಳು
ಆ ಮೂಲ ಚಿತ್ಸ್ವರೂಪನಾದ ಶರಣಂಗೆ ದೇಹ ಪ್ರಾಣಾತ್ಮಂಗಳಾಗಿ
ಲಿಂಗಕ್ಕೆ ಪದಾರ್ಥಂಗಳಾಗಿರ್ಪವು.
ಆ ಪದಾರ್ಥಂಗಳು ಲಿಂಗಮುಖಕ್ಕೆ ಸಮವೇಧಿಸಿ
ಆ ಚಿತ್ತು ಚಿತ್ಘನವ ಬೆರೆಯಲೊಡನೆ
ಮುನ್ನಿನಂತೆ ಏಕವಾಯಿತ್ತಯ್ಯಾ ಅಖಂಡೇಶ್ವರಾ./196
ಕಪ್ಪೆಯ ಶಿರದ ಮೇಲೆ ಎಪ್ಪತ್ತೆರಡು ಪುರವಿರ್ಪುವು.
ಆ ಪುರದೊಳಗೆ ಒಬ್ಬ ನಾರಿಯಿರ್ಪಳು.
ಆ ನಾರಿಯ ಕೈಯಲ್ಲಿ ಒಂದು ನಾರಿವಾಣದ ಸಸಿಯಿರ್ಪುದು.
ಈ ನಾರಿವಾಣದ ಸಸಿಯ ಮೂಲದಲ್ಲಿ
ಮೂರುಲೋಕಂಗಳಡಗಿರ್ಪುವು.
ಇಂತಪ್ಪ ಬೆಡಗಿನ ಕೀಲವ ಬಲ್ಲಾತನೆ
ಪ್ರಾಣಲಿಂಗಸಂಬಂಧಿಯಯ್ಯಾ ಅಖಂಡೇಶ್ವರಾ./197
ಕಮಲದ ಸಾಲುಗಳೊಳಗೆ
ಭ್ರಮರದ ಹಿಂಡು ಝೇಂಕರಿಸುತಿರ್ಪುದು ನೋಡಾ !
ವಿಮಲಚಿತ್ತದಿಂದೆ ಲಾಲಿಸಲು
ಅದು ತನ್ನ ಸುಮನ ಸುಜ್ಞಾನದ ನಿಲವು ನೋಡಾ ಅಖಂಡೇಶ್ವರಾ./198
ಕರಸ್ಥಲದ ಲಿಂಗವನು ಮನಸ್ಥಲದಲ್ಲಿ ಕುಳ್ಳಿರಿಸಿ,
ಘ್ರಾಣವೆಂಬ ಭಾಜನದಲ್ಲಿ ಸುಗಂಧ ಪದಾರ್ಥವ ಗಡಣಿಸಿ
ಸುಚಿತ್ತವೆಂಬ ಹಸ್ತದಿಂದರ್ಪಿಸಿ,
ಆ ಸುಗಂಧ ಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ.
ಜಿಹ್ವೆಯೆಂಬ ಭಾಜನದಲ್ಲಿ ಸುರಸಪದಾರ್ಥವ ಗಡಣಿಸಿ
ಸುಬುದ್ಧಿಯೆಂಬ ಹಸ್ತದಿಂದರ್ಪಿಸಿ,
ಆ ಸುರಸಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ.
ನೇತ್ರವೆಂಬ ಭಾಜನದಲ್ಲಿ ಸುರೂಪುಪದಾರ್ಥವ ಗಡಣಿಸಿ,
ನಿರಹಂಕಾರವೆಂಬ ಹಸ್ತದಿಂದರ್ಪಿಸಿ,
ಆ ಸುರೂಪುಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ.
ತ್ವಕ್ಕೆಂಬ ಭಾಜನದಲ್ಲಿ ಸುಸ್ಪರ್ಶನ ಪದಾರ್ಥವ ಗಡಣಿಸಿ,
ಸುಮನವೆಂಬ ಹಸ್ತದಿಂದರ್ಪಿಸಿ,
ಆ ಸುಸ್ಪರ್ಶನಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ.
ಶ್ರೋತ್ರವೆಂಬ ಭಾಜನದಲ್ಲಿ ಸುಶಬ್ದಪದಾರ್ಥವ ಗಡಣಿಸಿ,
ಸುಜ್ಞಾನವೆಂಬ ಹಸ್ತದಿಂದರ್ಪಿಸಿ,
ಆ ಸುಶಬ್ದಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ.
ಹೃದಯವೆಂಬ ಭಾಜನದಲ್ಲಿ ಸುತೃಪ್ತಿ ಪದಾರ್ಥವ ಗಡಣಿಸಿ,
ಸದ್ಭಾವವೆಂಬ ಹಸ್ತದಿಂದರ್ಪಿಸಿ,
ಆ ಸುತೃಪ್ತಿಪ್ರಸಾದವ ಗ್ರಹಿಸಬಲ್ಲಾತನೆ ಪ್ರಸಾದಿ.
ಇಂತೀ ಷಡಿಂದ್ರಿಯಂಗಳೆಂಬ ಷಡ್ವಿಧ ಭಾಜನದಲ್ಲಿ
ಷಡ್ವಿಧ ಪದಾರ್ಥವ ಗಡಣಿಸಿ ಷಡ್ವಿಧ ಹಸ್ತದಿಂದರ್ಪಿಸಿ,
ಷಡ್ವಿಧ ಪ್ರಸಾದವ ಗ್ರಹಿಸಲರಿಯದೆ
ಬರಿದೆ ಪ್ರಸಾದಿಗಳೆಂದಡೆ ನಗುವನಯ್ಯಾ ನಮ್ಮ ಅಖಂಡೇಶ್ವರನು./199
ಕರ್ಮಸಾದಾಖ್ಯಸ್ವರೂಪವಾದ ಆಚಾರಲಿಂಗದಲ್ಲಿ
ನಕಾರಮಂತ್ರಸ್ವರೂಪವಾದ ಘ್ರಾಣೇಂದ್ರಿಯ ಸಂಯೋಗವ
ಮಾಡಬಲ್ಲಾತನೆ ಪ್ರಾಣಲಿಂಗಿ.
ಕರ್ತೃಸಾದಾಖ್ಯಸ್ವರೂಪವಾದ ಗುರುಲಿಂಗದಲ್ಲಿ
ಮಕಾರಮಂತ್ರಸ್ವರೂಪವಾದ ಜಿಹ್ವೇಂದ್ರಿಯಸಂಯೋಗವ
ಮಾಡಬಲ್ಲಾತನೆ ಪ್ರಾಣಲಿಂಗಿ.
ಮೂರ್ತಿಸಾದಾಖ್ಯಸ್ವರೂಪವಾದ ಶಿವಲಿಂಗದಲ್ಲಿ
ಶಿಕಾರಮಂತ್ರಸ್ವರೂಪವಾದ ನೇತ್ರೇಂದ್ರಿಯಸಂಯೋಗವ
ಮಾಡಬಲ್ಲಾತನೆ ಪ್ರಾಣಲಿಂಗಿ.
ಅಮೂರ್ತಿಸಾದಾಖ್ಯಸ್ವರೂಪವಾದ ಜಂಗಮಲಿಂಗದಲ್ಲಿ
ವಕಾರಮಂತ್ರಸ್ವರೂಪವಾದ ತ್ವಗಿಂದ್ರಿಯಸಂಯೋಗವ
ಮಾಡಬಲ್ಲಾತನೆ ಪ್ರಾಣಲಿಂಗಿ.
ಶಿವಸಾದಾಖ್ಯಸ್ವರೂಪವಾದ ಪ್ರಸಾದಲಿಂಗದಲ್ಲಿ
ಯಕಾರಮಂತ್ರಸ್ವರೂಪವಾದ ಶ್ರವಣೇಂದ್ರಿಯಸಂಯೋಗವ
ಮಾಡಬಲ್ಲಾತನೆ ಪ್ರಾಣಲಿಂಗಿ.
ಮಹಾಸಾದಾಖ್ಯಸ್ವರೂಪವಾದ ಮಹಾಲಿಂಗದಲ್ಲಿ
ಓಂಕಾರಮಂತ್ರಸ್ವರೂಪವಾದ ಹೃದಿಂದ್ರಿಯಸಂಯೋಗವ
ಮಾಡಬಲ್ಲಾತನೆ ಪ್ರಾಣಲಿಂಗಿ.
ಇಂತೀ ಷಡ್ವಿಧಲಿಂಗದಲ್ಲಿ ಷಡಿಂದ್ರಿಯಂಗಳ ಸಂಯೋಗಮಾಡಿ,
ಆ ಷಡ್ವಿಧ ಲಿಂಗಂಗಳೊಂದಾದ ಮಹಾಘನವೆ ತಾನಾಗಿ
ಸುಳಿಯಬಲ್ಲಾತನೆ ಪ್ರಾಣಲಿಂಗಸಂಬಂಧಿಯಯ್ಯಾ
ಅಖಂಡೇಶ್ವರಾ./200
ಕಲ್ಪತರು ಕಾಡಮರನಾಗಬಲ್ಲುದೇನಯ್ಯಾ ?
ಕಾಮಧೇನು ಕಾಡಪಶುವಾಗಬಲ್ಲುದೇನಯ್ಯಾ ?
ಸಿಂಹದಮರಿ ಸೀಳ್ನಾಯಿಯಾಗಬಲ್ಲುದೇನಯ್ಯಾ ?
ಪರಮ ಶ್ರೀಗುರುವಿನ ಕರಕಮಲದಲ್ಲಿ ಉದಯವಾದ
ಮಹಾಶರಣರು ಮರಳಿ ನರರಾಗಬಲ್ಲರೆ ಹೇಳಾ ಅಖಂಡೇಶ್ವರಾ ?/201
ಕಾಮದ ಕಳವಳದಲ್ಲಿ ಕಂಗೆಡುವನಲ್ಲ ಶರಣ.
ಜೀವನುಪಾಧಿಕೆಯ ಹೊದ್ದವನಲ್ಲ ಶರಣ.
ಭಾವದ ಭ್ರಮೆಯಲ್ಲಿ ಸುಳಿವನಲ್ಲ ಶರಣ.
ಮನದ ಮರವೆಯಲ್ಲಿ ಮಗ್ನನಲ್ಲ ಶರಣ.
ಕರಣಂಗಳ ಕತ್ತಲೆಯಲ್ಲಿ ಸುತ್ತಿ ಬೀಳುವನಲ್ಲ ಶರಣ.
ಇಂದ್ರಿಯಂಗಳ ವಿಕಾರದಲ್ಲಿ ಹರಿದಾಡುವನಲ್ಲ ಶರಣ.
ಪರತರಲಿಂಗದ ಬೆಳಗಿನೊಳಗೆ ಬೆರೆದು
ತೆರಹಿಲ್ಲದೆ ಬೆಳಗುವ ಪರಮಗಂಭೀರ
ಶರಣನ ನಿಲವಿಂಗೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ./202
ಕಾಮವುಳ್ಳಂಗೆ ಲಿಂಗದಪ್ರೇಮವಿನ್ನೆಲ್ಲಿಯದೊ ?
ಕ್ರೋಧವುಳ್ಳವಂಗೆ ಜಂಗಮದಪ್ರೇಮವಿನ್ನೆಲ್ಲಿಯದೊ ?
ಮದಮತ್ಸರವುಳ್ಳವಂಗೆ ಪ್ರಸಾದದಪ್ರೇಮವಿನ್ನೆಲ್ಲಿಯದೊ ?
ಇಂತೀ ಗುಣವರತಲ್ಲದೆ ಸಹಜಭಕ್ತಿ
ನೆಲೆಗೊಳ್ಳದಯ್ಯ ಅಖಂಡೇಶ್ವರಾ./203
ಕಾಯಕಲ್ಪಿತಕ್ಕೆ ದೂರನು ನೋಡಾ ಲಿಂಗೈಕ್ಯನು.
ಕರ್ಮವಿರಹಿತನು ನೋಡಾ ಲಿಂಗೈಕ್ಯನು.
ಸೋಲುಗೆಲ್ಲಕ್ಕೆ ಹೋರುವನಲ್ಲ ನೋಡಾ ಲಿಂಗೈಕ್ಯನು.
ಶೀಲ ವ್ರತ ನೇಮದ ಸೀಮೆಯ ಮೆಟ್ಟಿ ನಡೆವನಲ್ಲ ನೋಡಾ ಲಿಂಗೈಕ್ಯನು.
ಅಖಂಡೇಶ್ವರಾ, ನಿಮ್ಮ ನಿಜಲಿಂಗೈಕ್ಯನ ಘನವ ನೀವೇ ಬಲ್ಲಿರಿ./204
ಕಾಯಜೀವದ ಕೀಲವನರಿದು
ಜನನ ಮರಣಂಗಳಾಯಾಸವಳಿದು
ಅಂಗಲಿಂಗದೊಳಗೇಕಾರ್ಥವ ಮಾಡುವ ಭೇದವೆಂತೆಂದಡೆ :
ಪಂಚಭೂತಂಗಳ ಪೂರ್ವಾಶ್ರಯವನಳಿದು
ಪಂಚಕರಣಂಗಳ ಹಂಚುಹರಿಮಾಡಿ,
ಕರ್ಮಬುದ್ಧೀಂದ್ರಿಯಂಗಳ ಮರ್ದಿಸಿ,
ದಶವಾಯುಗಳ ಹಸಗೆಡಿಸಿ
ಕರಣಚತುಷ್ಟಯಂಗಳ ಕಾಲಮುರಿದು
ಪಂಚವಿಂಶತಿ ತತ್ತ್ವಂಗಳ ವಂಚನೆಯನಳಿದು
ಹತ್ತುನಾಡಿಗಳ ವ್ಯಕ್ತೀಕರಿಸಿ
ಅಷ್ಟತನು ಅಷ್ಟಾತ್ಮಂಗಳ ನಷ್ಟಮಾಡಿ
ಅಂತರಂಗದ ಅಷ್ಟಮದಂಗಳ ಸಂತರಿಸಿ,
ಬಹಿರಂಗದ ಅಷ್ಟಮಂದಗಳ ಬಾಯಟೊಣೆದು,
ಅಷ್ಟಮೂರ್ತಿಮದಂಗಳ ಹಿಟ್ಟುಗುಟ್ಟಿ
ಸಪ್ತಧಾತು ಸಪ್ತವ್ಯಸನಂಗಳ ಸಣ್ಣಿಸಿ
ಷಡೂರ್ಮೆ ಷಡ್ವರ್ಗಂಗಳ ಕೆಡೆಮೆಟ್ಟಿ
ಷಡ್ಭ್ರಮೆ ಷಡ್ಭಾವವಿಕಾರಂಗಳ ಗಂಟಸಡಲಿಸಿ,
ಪಂಚಕೋಶ ಪಂಚಕ್ಲೇಶಂಗಳ ಪರಿಹರಿಸಿ
ಅಂಗಚತುಷ್ಟಯಂಗಳ ಶೃಂಗಾರವಳಿದು
ಗುಣತ್ರಯಂಗಳ ಗೂಡಮುಚ್ಚಿ
ಅಹಂಕಾರತ್ರಯಂಗಳ ಶಂಕೆಗೊಳಗುಮಾಡಿ
ತಾಪತ್ರಯಂಗಳ ತಲ್ಣಣಗೊಳಿಸಿ
ತನುತ್ರಯಂಗಳ ತರಹರಮಾಡಿ
ಜೀವತ್ರಯಂಗಳ ಜೀರ್ಣಿಕರಿಸಿ, ಆತ್ಮತ್ರಯಂಗಳ ಧಾತುಗೆಡಿಸಿ,
ಅವಸ್ಥಾತ್ರಯಂಗಳ ಅವಗುಣವಳಿದು,
ತ್ರಿದೋಷಂಗಳ ಪಲ್ಲಟಗೊಳಿಸಿ, ಭಾವತ್ರಯಂಗಳ ಬಣ್ಣಗೆಡಿಸಿ ,
ದುರ್ಭಾವತ್ರಯಂಗಳ ದೂರಮಾಡಿ,
ಮನತ್ರಯಂಗಳ ಮರ್ದನಮಾಡಿ, ತ್ರಿಕರಣಂಗಳ ಛಿದ್ರಗೊಳಿಸಿ,
ಪಂಚಾಗ್ನಿಗಳ ಸಂಚಲವನತಿಗಳೆದು,
ಇಂತೀ ಅಂಗ ಪ್ರಕೃತಿಗುಣಂಗಳೆಲ್ಲ ನಷ್ಟವಾಗಿ
ಸರ್ವಾಂಗದಲ್ಲಿ ಸರ್ವಾಚಾರ ನೆಲೆಗೊಂಡು
ಬಹಿರಂಗದ ಮೇಲಿದ್ದ ಇಷ್ಟಲಿಂಗದಲ್ಲಿ ನೈಷ್ಠಿಕಭಾವಂಬುಗೊಂಡು,
ಅನಿಮಿಷದೃಷ್ಟಿ ಅಚಲಿತವಾಗಿ ಭಾವಬಲಿದಿರಲು,
ಆ ಲಿಂಗವು ಅಂತರಂಗಕ್ಕೆ ವೇಧಿಸಿ ಪ್ರಾಣಲಿಂಗವೆನಿಸಿಕೊಂಡು
ಷಡಾಧಾರಚಕ್ರಂಗಳಲ್ಲಿ ಷಡ್ವಿಧ ಲಿಂಗವಾಗಿ ನೆಲೆಗೊಂಬುದು.
ಆ ಷಡ್ವಿಧ ಲಿಂಗಕ್ಕೆ
ಷಡಿಂದ್ರಿಯಗಳನೆ ಷಡ್ವಿಧಮುಖಂಗಳೆನಿಸಿ,
ಆ ಷಡ್ವಿಧ ಮುಖಂಗಳಿಗೆ ಷಡ್ವಿಧವಿಷಯಂಗಳನೆ
ಷಡ್ವಿಧ ದ್ರವ್ಯಪದಾರ್ಥವೆನಿಸಿ,
ಆ ಪದಾರ್ಥಂಗಳು ಷಡ್ವಿಧಲಿಂಗಕ್ಕೆ
ಷಡ್ವಿಧ ಭಕ್ತಿಯಿಂದೆ ಸಮರ್ಪಿತವಾಗಲು,
ಅಂಗವೆಂಬ ಕುರುಹು ಅಡಗಿ
ಒಳಹೊರಗೆಲ್ಲ ಮಹಾಘನಲಿಂಗದ ದಿವ್ಯಪ್ರಕಾಶವೆ ತುಂಬಿ
ತೊಳಗಿ ಬೆಳಗುತ್ತಿರ್ಪುದು.
ಇಂತಪ್ಪ ಘನಲಿಂಗದ ಬೆಳಗನೊಳಗೊಂಡಿರ್ಪ
ಚಿದಂಗವೆ ಚಿತ್ಪಿಂಡವೆನಿಸಿತ್ತು.
ಇಂತಪ್ಪ ಅತಿಸೂಕ್ಷ್ಮವಾದ ಚಿತ್ಪಿಂಡದ ವಿಸ್ತಾರವನು
ಚಿದ್ಬ್ರಹ್ಮಾಂಡದಲ್ಲಿ ವೇಧಿಸಿ ಕಂಡು,
ಆ ಚಿದ್ಬ್ರಹ್ಮಾಂಡದ ಅತಿಬಾಹುಲ್ಯವನು
ಆ ಚಿತ್ಪಿಂಡದಲ್ಲಿ ವೇಧಿಸಿ ಕಂಡು,
`ಪಿಂಡಬ್ರಹ್ಮಾಂಡಯೋರೈಕ್ಯಂ’ ಎಂಬ ಶ್ರುತಿ ಪ್ರಮಾಣದಿಂದ
ಆ ಪಿಂಡಬ್ರಹ್ಮಾಂಡಗಳು ಒಂದೇ ಎಂದು ಕಂಡು,
ಆ ಪಿಂಡಬ್ರಹ್ಮಾಂಡಂಗಳಿಗೆ ತಾನೇ ಆಧಾರವೆಂದು ತಿಳಿದು
ಆ ಪಿಂಡಬ್ರಹ್ಮಾಂಡಗಳ ತನ್ನ ಮನದ ಕೊನೆಯಲ್ಲಿ ಅಡಗಿಸಿ,
ಆ ಮನವ ಭಾವದ ಕೊನೆಯಲ್ಲಿ ಅಡಗಿಸಿ,
ಆ ಭಾವವ ಜ್ಞಾನದ ಕೊನೆಯಲ್ಲಿ ಅಡಗಿಸಿ,
ಆ ಜ್ಞಾನವ ಮಹಾಜ್ಞಾನದಲ್ಲಿ ಅಡಗಿಸಿ,
ಆ ಮಹಾಜ್ಞಾನವನು ಪರಾತ್ಪರವಾದ
ಪರಿಪೂರ್ಣ ಬ್ರಹ್ಮದಲ್ಲಿ ಅಡಗಿಸಿ,
ಆ ಪರಬ್ರಹ್ಮವೆ ತಾನಾದ ಶರಣಂಗೆ ದೇಹಭಾವವಿಲ್ಲ.
ಆ ದೇಹಭಾವವಿಲ್ಲವಾಗಿ ಜೀವಭಾವವಿಲ್ಲ.
ಆ ಜೀವಭಾವವಿಲ್ಲವಾಗಿ ಫಲಪದಂಗಳ ಹಂಗಿಲ್ಲ.
ಫಲಪದದ ಹಂಗಿಲ್ಲವಾಗಿ ಭವಬಂಧನಂಗಳು ಮುನ್ನವೆ ಇಲ್ಲ.
ಭವಬಂಧನಂಗಳು ಇಲ್ಲವಾಗಿ,
ಆ ಶರಣನು ತಾನು ಎಂತಿರ್ದಂತೆ ಪರಬ್ರಹ್ಮವೆ ಆಗಿ
ಆತನ ಹೃದಯಾಕಾಶವು ಬಚ್ಚಬರಿಯ ಬಯಲನೈದಿಪ್ಪುದು.
ಇದು ಕಾರಣ,
ಆ ಶರಣನು ದೇಹವಿದ್ದು ಸುಟ್ಟಸರವಿಯಂತೆ
ನಿರ್ದೆಹಿಯಾದ ಕಾರಣ
ಉಪಮಾತೀತ ವಾಙ್ಮನಕ್ಕಗೋಚರನಾಗಿರ್ಪನಯ್ಯಾ
ಅಖಂಡೇಶ್ವರಾ./205
ಕಾಯದ ಕಳವಳದಲ್ಲಿ ಕಂಗೆಟ್ಟು,
ಜೀವನುಪಾಧಿಯಲ್ಲಿ ಸುಳಿದು,
ಪಂಚೇಂದ್ರಿಯಂಗಳಲ್ಲಿ ಸಂಚರಿಸಿ,
ಅರಿಷಡ್ವರ್ಗಂಗಳಲ್ಲಿ ಹರಿದಾಡಿ,
ಅಷ್ಟಮದಂಗಳಲ್ಲಿ ಕಟ್ಟುವಡೆದು,
ಇಂತೀ ಅಂಗಪ್ರಕೃತಿಯ ಅಜ್ಞಾನದಲ್ಲಿ ಮಗ್ನವಾಗಿರ್ದು
ಮಹಾಘನಲಿಂಗದೊಡನೆ ಸಹಭೋಜನವ ಮಾಡುವ
ಮರವೆಯ ಹೀನಮಾನವರೆಲ್ಲರು ಕಲ್ಪಕಲ್ಪಾಂತರ
ನರಕಸಮುದ್ರದಲ್ಲಿ ಮುಳುಗಾಡುತಿರ್ಪರು ನೋಡಾ
ಅಖಂಡೇಶ್ವರಾ./206
ಕಾಯದ ಕೈಮುಟ್ಟಿ ಇಷ್ಟಲಿಂಗಕ್ಕೆ ರೂಪವನರ್ಪಿಸಿದಲ್ಲಿ
ಶುದ್ಧಪ್ರಸಾದವೆನಿಸಿತ್ತು.
ಮನದ ಕೈಮುಟ್ಟಿ ಪ್ರಾಣಲಿಂಗಕ್ಕೆ ರುಚಿಯನರ್ಪಿಸಿದಲ್ಲಿ
ಸಿದ್ಧಪ್ರಸಾದವೆನಿಸಿತ್ತು.
ಭಾವದ ಕೈಮುಟ್ಟಿ ಭಾವಲಿಂಗಕ್ಕೆ ತೃಪ್ತಿಯನರ್ಪಿಸಿದಲ್ಲಿ
ಪ್ರಸಿದ್ಧಪ್ರಸಾದವೆನಿಸಿತ್ತು.
ಇಂತೀ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದಗ್ರಾಹಕರ ತೋರಿ,
ಬದುಕಿಸಯ್ಯಾ ಎನ್ನ ಅಖಂಡೇಶ್ವರಾ./207
ಕಾಯದೊಳಗಣ ಮನಸ್ಸು
ಕಂಗೆಟ್ಟು ಹೊರಬಿದ್ದು ಕರಣೇಂದ್ರಿಯಂಗಳನೆ ಕೂಡಿ,
ಆಯಾಸಂಗೊಂಡು ಧಾವತಿಯಿಂದೆ ಸಾಯುತಿರ್ಪುದು ನೋಡಾ ಜಗವೆಲ್ಲ.
ಆ ಕಾಯದ ಕಳವಳ ಹಿಂಗಿ
ಮನವು ಮಹಾಘನದಲ್ಲಿ ಅಡಗಲು,
ಸಾವು ತಪ್ಪಿತ್ತು ನೋಡಾ ಅಖಂಡೇಶ್ವರಾ./208
ಕಾಯವ ದಂಡಿಸಿ, ಕಂಡ ಕಂಡ ಕ್ಷೇತ್ರಂಗಳಿಗೆ ಹೋಗಿ
ತೊಳಲಿ ಬಳಲಿದಡಿಲ್ಲ.
ಜಪತಪ ಹೋಮ ನೇಮ ನಿತ್ಯಂಗಳ ಮಾಡಿದಡಿಲ್ಲ.
ಅಶನ ವಸನ ವಿಷಯ ವಿಕಾರಂಗಳ ತೊರೆದಡಿಲ್ಲ.
ಅಖಂಡೇಶ್ವರಾ, ನೀವು ಒಲಿದು ಸಲಹದನ್ನಕ್ಕರ
ಏನು ಮಾಡಿದಡೇನು ಫಲವಿಲ್ಲವಯ್ಯ./209
ಕಾಯವಿಲ್ಲದ ಪುರುಷನು ಕಸವಿಲ್ಲದ ಭೂಮಿಯಲ್ಲಿ
ಕಾಮಿತವಿಲ್ಲದ ಬೀಜವ ಬಿತ್ತಲು
ಅದು ಅಂಕುರಿಸಿ ಎಲೆ ಎರಡಾಯಿತ್ತು.
ಶಾಖೆ ಮೂರಾಯಿತ್ತು, ತಳಿರು ಆರಾಯಿತ್ತು,
ಕುಸುಮ ಮೂವತ್ತಾರಾಯಿತ್ತು,
ಕಾಯಿ ಇನ್ನೂರಹದಿನಾರಾಯಿತ್ತು,
ಹಣ್ಣು ವಿಶ್ವಪರಿಪೂರ್ಣವಾಯಿತ್ತು .
ಅದು ಅಖಂಡ ರಸತುಂಬಿ ಬಟ್ಟಬಯಲಲ್ಲಿ ತೊಟ್ಟುಬಿಟ್ಟಿತ್ತು.
ಆ ಹಣ್ಣ ನಾನು ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಮುಟ್ಟಿ,
ಬಾಯಿಲ್ಲದೆ ಸವಿದು, ಮನವಿಲ್ಲದೆ ಪರಿಣಾಮಿಸಿದೆನಾಗಿ,
ಅಖಂಡೇಶ್ವರನು ತನ್ನೊಳಗೆ ಇಂಬಿಟ್ಟುಕೊಂಡನು./210
ಕಾಯವಿಲ್ಲದ ಭಕ್ತ, ಜೀವವಿಲ್ಲದ ಭಕ್ತ ,
ಭಾವವಿಲ್ಲದ ಭಕ್ತ ,
ಅಖಂಡೇಶ್ವರಾ, ನಿಮ್ಮನೊಡಗೂಡಿದ ಮಹಾಭಕ್ತನು
ಉಪಮೆಗೆ ಉಪಮಾತೀತನು ನೋಡಾ./211
ಕಾಯವೇ ಕೈಲಾಸವಾಗಿ,
ಮನವೇ ಮಹಾಲಿಂಗವಾಗಿ,
ಭಾವವೇ ಅವಿರಳಪುಷ್ಪದ ಪೂಜೆಯಾಗಿ,
ಅಖಂಡ ಪರಿಪೂರ್ಣಜ್ಞಾನದ ಬೆಳಗಿನೊಳಗೆ ಸುಳಿವ
ಮಹಾಶರಣರ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ./212
ಕಾರ್ಯವಿಲ್ಲದ ಪ್ರಸಾದ, ಕಾರಣವಿಲ್ಲದ ಪ್ರಸಾದ,
ಭಾವವಿಲ್ಲದ ಪ್ರಸಾದ, ಬಯಕ್ಕೆಯಿಲ್ಲದ ಪ್ರಸಾದ,
ಸೀಮೆಯಿಲ್ಲದ ಪ್ರಸಾದ, ನಿಸ್ಸೀಮೆಯಿಲ್ಲದ ಪ್ರಸಾದ,
ಅಖಂಡೇಶ್ವರನೆಂಬ ಮಹಾಘನಪ್ರಸಾದದೊಳಗೆ
ನಾನೆತ್ತ ಹೋದೆನೆಂದರಿಯೆ./213
ಕಾಲಕಲ್ಪಿತಂಗಳಿಲ್ಲದಂದು,
ಲೀಲೆ ಇಪ್ಪತ್ತೈದ ನಟಿಸದಂದು,
ಬಾಲಚಂದ್ರನ ಸೂಡದಂದು,
ಸಾಲುಮಸ್ತಕಮಾಲೆಯ ಧರಿಸದಂದು,
ಕಾಲ ಕಾಮ ಮಾಯೆ ದಕ್ಷಾದಿಗಳಿಲ್ಲದಂದು,
ಅಖಂಡೇಶ್ವರಾ, ನಿಮ್ಮ ನೀವರಿಯದೆ
ಅನಂತಕಾಲವಿರ್ದೆರಂದು./214
ಕಾಲನೆಂಬ ಜಾಲಗಾರನು ಕರ್ಮವೆಂಬ ಬಲೆಯ ಬೀಸಿ,
ಸಂಸಾರಶರಧಿಯಲ್ಲಿರ್ಪ ಸಕಲಪ್ರಾಣಿಗಳೆಂಬ
ಮೀನುಗಳ ಹಿಡಿದು ಕೊಲ್ಲುತಿದ್ದಾನೆ.
ಕಾಮನೆಂಬ ಬೇಂಟೆಗಾರನು ಕಂಗಳ ತೋಹಿನಲ್ಲಿ ನಿಂದು,
ಕಳವಳದ ಬಾಣವನೆಸೆದು ಭವವೆಂಬ ಬಲೆಯಲ್ಲಿ
ಸಕಲಪ್ರಾಣಿಗಳ ಕೆಡಹಿಕೊಂಡು ಕೊಲ್ಲುತಿದ್ದಾನೆ.
ಮಾಯೆಯೆಂಬ ರಕ್ಕಸಿ ಸಕಲ ಪ್ರಾಣಿಗಳ ಸಾರವ ಹೀರಿ
ಹಿಪ್ಪೆಯ ಮಾಡಿ ಉಃಫೆಂದು ಊದುತಿದ್ದಾಳೆ.
ಇಂತೀ ತ್ರಿವಿಧಮುಖದಲ್ಲಿ ಕಾಡುವ
ನಿಮ್ಮ ಮಾಯೆಯ ಗೆಲುವಡೆ ಆರಳವಲ್ಲವಯ್ಯಾ
ಅಖಂಡೇಶ್ವರಾ, ನೀವು ಕರುಣಿಸದನ್ನಕ್ಕ./215
ಕಾಲಲ್ಲಿ ಕಣ್ಣು ಮೂಡಿತ್ತ ಕಂಡೆ.
ನೆತ್ತಿಯ ಕುಂಭವನೊಡೆದು ಸುಧೆ ಸರ್ವಾಂಗದಲ್ಲಿ ತುಂಬಿತ್ತ ಕಂಡೆ.
ಕತ್ತಲೆ ಬೆಳಗಾಯಿತ್ತ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ./216
ಕಾಲಿಲ್ಲದ ನಡೆ, ಒಡಲಿಲ್ಲದ ರೂಪು,
ಕಂಗಳಿಲ್ಲದ ನೋಟ,
ಮನವಿಲ್ಲದ ಬೇಟ;
ಭಾವವಿಲ್ಲದ ತೃಪ್ತಿ , ಜೀವವಿಲ್ಲದ ಶರಣನ
ಸುಳುಹ ಕಂಡು
ಬೆರಗಾದೆನಯ್ಯಾ ಅಖಂಡೇಶ್ವರಾ./217
ಕಾಲಿಲ್ಲದೆ ನಡೆಯಬಲ್ಲಡೆ ಶಿವಯೋಗಿಯೆಂಬೆನಯ್ಯಾ.
ಕೈಯಿಲ್ಲದೆ ಮುಟ್ಟಬಲ್ಲಡೆ ಶಿವಯೋಗಿಯೆಂಬೆನಯ್ಯಾ.
ಕಣ್ಣಿಲ್ಲದೆ ನೋಡಬಲ್ಲಡೆ ಶಿವಯೋಗಿಯೆಂಬೆನಯ್ಯಾ.
ಕಿವಿ ಇಲ್ಲದೆ ಕೇಳಬಲ್ಲಡೆ ಶಿವಯೋಗಿಯೆಂಬೆನಯ್ಯಾ.
ನಾಲಿಗೆ ಇಲ್ಲದೆ ಸವಿಯಬಲ್ಲಡೆ ಶಿವಯೋಗಿಯೆಂಬೆನಯ್ಯಾ.
ನಾಸಿಕವಿಲ್ಲದೆ ವಾಸಿಸಬಲ್ಲಡೆ ಶಿವಯೋಗಿಯೆಂಬೆನಯ್ಯಾ.
ಮನವಿಲ್ಲದೆ ನೆನೆಯಬಲ್ಲಡೆ ಶಿವಯೋಗಿಯೆಂಬೆನಯ್ಯಾ.
ತಾನಿಲ್ಲದೆ ಕೂಡಬಲ್ಲಡೆ ಶಿವಯೋಗಿಯೆಂಬೆನಯ್ಯಾ.
ಇಂತೀ ಭೇದವನರಿಯದೆ ವೇಷವ ಧರಿಸಿ ತಿರುಗುವರೆಲ್ಲರು
ಭವರೋಗಿಗಳೆಂಬೆನಯ್ಯಾ ಅಖಂಡೇಶ್ವರಾ./218
ಕಾಷ್ಠದಲ್ಲಿ ಅಗ್ನಿ ಉಂಟೆಂದಡೆ,
ಆ ಕಾಷ್ಠದ ರೂಪ ಸುಡಲರಿಯದು ನೋಡಾ !
ದೇಹಮಧ್ಯದಲ್ಲಿ ಪರವಸ್ತು ಉಂಟೆಂದಡೆ,
ಹರಿಯದು ನೋಡಾ ಆ ದೇಹದ ಜಡಭಾವ !
ಅದೆಂತೆಂದೊಡೆ :
ಕಾಷ್ಠದ ಮಧ್ಯದಲ್ಲಿ ಅಡಗಿರ್ದ ಮಂದಾಗ್ನಿ
ಮಥನದಿಂದೆ ಬಹಿಷ್ಕರಿಸಿ ಆ ಕಾಷ್ಠವ ಸುಡುವಂತೆ,
ದೇಹದ ಮಧ್ಯದಲ್ಲಿ ಅಡಗಿರ್ದ ಪರವಸ್ತುವನು
ಶ್ರೀಗುರುಸ್ವಾಮಿ ತನ್ನ ಕ್ರಿಯಾಶಕ್ತಿಯ ಮಥನದಿಂದೆ ಬಹಿಷ್ಕರಿಸಿ
ಬಹಿರಂಗದ ಮೇಲೆ ಇಷ್ಟಲಿಂಗವಾಗಿ ಧರಿಸಲು,
ಆ ಲಿಂಗದ ಸತ್ಕ್ರಿಯಾ ಪೂಜೆಯಿಂದೆ
ಸ್ಥೂಲಾಂಗದ ಕಾಷ್ಠಗುಣಧರ್ಮಂಗಳೆಲ್ಲ ನಷ್ಟವಾಗಿ
ಆ ಲಿಂಗದ ಚಿತ್ಕಳೆಯು ಸರ್ವಾಂಗಕ್ಕೆ ವೇಧಿಸಿ
ಅಂತರಂಗ ಬಹಿರಂಗವೊಂದಾಗಿ ಆತ್ಮನ ಅಹಂಮಮತೆ ಕೆಟ್ಟು,
ಶಿಖಿಕರ್ಪುರ ಸಂಯೋಗದಂತೆ ಪರತತ್ವವನೊಡಗೂಡಿದ
ಮಹಾತ್ಮನ ಕಾಯ ನಿರವಯಲಪ್ಪುದಲ್ಲದೆ
ಬರಿಯ ಒಣ ವಾಗದ್ವೈತದಿಂದೆ ಅಹಂ ಬ್ರಹ್ಮವೆಂದು ನುಡಿದು
ದೇಹ ಪ್ರಾಣಂಗಳ ಪ್ರಕೃತಿವರ್ತನೆಯಲ್ಲಿ
ನಡೆದು ನಿತ್ಯರಾದೇವೆಂಬುವರೆಲ್ಲ
ಭವಾಂಬುಧಿಯಲ್ಲಿ ಬಿದ್ದು ಮುಳುಗುತ್ತೇಳುತ್ತ
ತಡಿಯ ಸೇರಲರಿಯದೆ ಕೆಟ್ಟುಹೋದರು ನೋಡಾ ಅಖಂಡೇಶ್ವರಾ./219
ಕಾಷ್ಠದಲ್ಲಿ ಬೊಂಬೆಯ ಮಾಡಿ,
ಪಟ್ಟುನೂಲ ಸೂತ್ರವ ಹೂಡಿ,
ತೆರೆಯ ಮರೆಯಲ್ಲಿ ನಿಂದು,
ಸೂತ್ರಿಕನು ಕುಣಿಸಿದಡೆ ಕುಣಿಯುತಿರ್ಪುದಲ್ಲದೆ
ಆ ಅಚೇತನ ಬೊಂಬೆ ತನ್ನ ತಾನೆ ಕುಣಿವುದೆ ಅಯ್ಯಾ ?
ಎನ್ನ ತನುವೆಂಬ ಅಚೇತನ ಬೊಂಬೆಗೆ
ಪ್ರಾಣವಾಯುವೆಂಬ ಜೀವಸೂತ್ರವ ಹೂಡಿ
ಮನವೆಂಬ ತೆರೆಯ ಮರೆಯಲ್ಲಿ ನಿಂದು
ನೀನಾಡಿಸಿದಡೆ ನಾನಾಡುತಿರ್ಪೆನಲ್ಲದೆ
ಎನಗೆ ಬೇರೆ ಸ್ವತಂತ್ರವೆ ಹೇಳಾ ಅಖಂಡೇಶ್ವರಾ ?/220
ಕಿಸುಕುಳದ ಕೀವುರಕ್ತದ, ಒಸೆದು ತುಂಬಿದ ಮಲಮೂತ್ರದ
ರಂಜನ ಮುಸುಕಿದ ಮಾಂಸ ಅಸ್ಥಿಗಳ
ಸುತ್ತಿನ ಹಸನಾದ ಚರ್ಮದ ಹೊದಿಕೆಯ
ಹುಸಿಯ ತನುವ ಮೆಚ್ಚಿ, ಪಶುಪತಿ,
ನಿಮ್ಮ ನಾನು ಮರೆದೆನಯ್ಯ ಅಖಂಡೇಶ್ವರಾ./221
ಕುಂಡಲಿಯ ಬಾಗಿಲಲ್ಲಿ ಕೆಂಡವ ಪುಟಮಾಡಿ,
ಉದ್ದಂಡವಿಕಾರದ ಉಪಟಳವನುರುಹಿ,
ತಂಡತಂಡದ ನೆಲೆಗಳ ದಾಟಿ ದಂಡನಾಳವ ಪೊಕ್ಕು
ಮಂಡಲತ್ರಯದ ಮೇಲೆ
ಚಂಡ ರವಿಕೋಟಿಪ್ರಭೆಯಿಂದೆ ಬೆಳಗುವ
ಅಖಂಡಮೂರ್ತಿಯ ಕಂಡು ಕೂಡಬಲ್ಲಾತನೆ
ಪ್ರಚಂಡ ಪ್ರಾಣಲಿಂಗಿಯೆಂಬೆನಯ್ಯಾ ಅಖಂಡೇಶ್ವರಾ./222
ಕುಂಭಸಹಸ್ರ ಉದಕದೊಳಗೆ
ಬಿಂಬಿಸಿ ತೋರುವ ಸೂರ್ಯನೊಬ್ಬನಲ್ಲದೆ,
ಮತ್ತೆ ಹಲಬರುಂಟೆ ಅಯ್ಯಾ ?
ಸಕಲ ದೇಹದೊಳಗೆ ಸಂಭ್ರಮಿಸಿ ತುಂಬಿರ್ಪ
ಪರವಸ್ತು ನೀನೊಬ್ಬನಲ್ಲದೆ,
ಮತ್ತಾರನು ಕಾಣೆನಯ್ಯಾ ಅಖಂಡೇಶ್ವರಾ./223
ಕುಚಿತ್ತವಳಿದು ಸುಚಿತ್ತ ನೆಲೆಗೊಂಡು
ಆಚಾರಲಿಂಗದಲ್ಲಿ ಅವಿರಳ
ಸಮರಸೈಕ್ಯವನರಿಯಬಲ್ಲಡೆ
ಭಕ್ತನೆಂಬೆನು.
ಕುಬುದ್ಧಿಯಳಿದು ಸುಬುದ್ಧಿ ನೆಲೆಗೊಂಡು
ಗುರುಲಿಂಗದಲ್ಲಿ ಅವಿರಳ ಸಮರಸ್ಯೆಕ್ಯವನರಿಯಬಲ್ಲಡೆ
ಮಹೇಶ್ವರನೆಂಬೆನು.
ಅಹಂಕಾರವಳಿದು ನಿರಹಂಕಾರ ನೆಲೆಗೊಂಡು
ಶಿವಲಿಂಗದಲ್ಲಿ ಅವಿರಳ ಸಮರಸೈಕ್ಯವನರಿಯಬಲ್ಲಡೆ
ಪ್ರಸಾದಿಯೆಂಬೆನು.
ಕುಮನವಳಿದು ಸುಮನ ನೆಲೆಗೊಂಡು
ಜಂಗಮಲಿಂಗದಲ್ಲಿ ಅವಿರಳ ಸಮರಸೈಕ್ಯವನರಿಯಬಲ್ಲಡೆ
ಪ್ರಾಣಲಿಂಗಿಯೆಂಬೆನು.
ಅಜ್ಞಾನವಳಿದು ಸುಜ್ಞಾನ ನೆಲೆಗೊಂಡು
ಪ್ರಸಾದಿಲಿಂಗದಲ್ಲಿ ಅವಿರಳ ಸಮರಸೈಕ್ಯವನರಿಯಬಲ್ಲಡೆ
ಶರಣನೆಂಬೆನು.
ದುರ್ಭಾವವಳಿದು ಸದ್ಭಾವ ನೆಲೆಗೊಂಡು
ಮಹಾಲಿಂಗದಲ್ಲಿ ಅವಿರಳ ಸಮರಸೈಕ್ಯವನರಿಯಬಲ್ಲಡೆ
ನಿಜೈಕ್ಯನೆಂಬೆನು.
ಇಂತೀ ಷಡ್ವಿಧಬ್ರಹ್ಮವನೊಡಗೂಡಿದ
ಮಹಾಶರಣನ ಶ್ರೀಪಾದಕ್ಕೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./224
ಕುರುಹು ಉಂಟೇ ಮರುಳೆ ಲಿಂಗಕ್ಕೆ ?
ತೆರಹು ಉಂಟೇ ಮರುಳೆ ಲಿಂಗಕ್ಕೆ ?
ಎಲ್ಲೆಡೆಯೊಳು ಪರಿಪೂರ್ಣವಾದ
ಪರಾತ್ಪರಲಿಂಗದ ನಿಲವನರಿಯದೆ
ಹುಸಿಯನೆ ಕಲ್ಪಿಸಿ, ಹುಸಿಯನೆ ಪೂಜಿಸಿ,
ಹುಸಿಯ ಫಲಪದವನುಂಡು
ಹುಸಿಯಾಗಿ ಹೋದವರ ಕಂಡು
ನಸುನಗುತಿಪ್ಪನಯ್ಯ ನಮ್ಮ ಅಖಂಡೇಶ್ವರನು./225
ಕೆಟ್ಟೆಕೆಟ್ಟೆನಯ್ಯ ಒಡಲುಪಾಧಿಯ ಹಿಡಿದು,
ಕೆಟ್ಟೆಕೆಟ್ಟೆನಯ್ಯ ಒಡಲ ದುರ್ಗುಣದೊಡನಾಡಿ,
ಕೆಟ್ಟೆಕೆಟ್ಟೆನಯ್ಯ ನಿಮ್ಮಡಿಯ ಭಕ್ತಿಯ ಮರೆದು
ಅಖಂಡೇಶ್ವರಾ./226
ಕೇಳಿ ಕೇಳಿರಯ್ಯಾ ಮತ್ರ್ಯಲೋಕದ ಮಹಾಗಣಂಗಳು ನೀವೆಲ್ಲ.
ನಾವು ನಮ್ಮ ಲಿಂಗದೊಳಗೆ
ಅಂಗಸಹಿತ ಐಕ್ಯವಾಗುವ ಠಾವ ಹೇಳಿಹೆವು ಕೇಳಿರಯ್ಯಾ !
ಕೇಳಿರಯ್ಯಾ, ಏಕಚಿತ್ತರಾಗಿ ಲಾಲಿಸಿರಯ್ಯಾ.
ಷಣ್ಮುಖನೆಂಬ ಗಣೇಶ್ವರನ ಹೃದಯಕಮಲದಲ್ಲಿ
ಸದಾನಂದನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು.
ಆ ಸದಾನಂದನೆಂಬ ಗಣೇಶ್ವರನ ಹೃದಯಕಮಲಕರ್ಣಿಕದಲ್ಲಿ
ವಿಶ್ವತೋಮುಖನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು.
ಆ ವಿಶ್ವತೋಮುಖನೆಂಬ ಗಣೇಶ್ವರನ ಹೃದಯಕಮಲದಲ್ಲಿ
ಆದಿನಾಥನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು.
ಆ ಆದಿನಾಥನೆಂಬ ಗಣೇಶ್ವರನ ಹೃದಯಕಮಲದಲ್ಲಿ
ಅನಾದಿನಾಥನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು.
ಆ ಅನಾದಿನಾಥನೆಂಬ ಗಣೇಶ್ವರನ ಹೃದಯಕಮಲದಲ್ಲಿ
ಗೋಳಕನಾಥನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು.
ಆ ಗೋಳಕನಾಥನೆಂಬ ಗಣೇಶ್ವರನ ಹೃದಯಕಮಲದಲ್ಲಿ
ಅಗಮ್ಮೇಶ್ವರನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು.
ಆ ಅಗಮ್ಮೇಶ್ವರನೆಂಬ ಗಣೇಶ್ವರನ ಹೃದಯಕಮಲದಲ್ಲಿ
ಅಖಂಡೇಶ್ವರನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು.
ಆ ಅಖಂಡೇಶ್ವರನೆಂಬ ಗಣೇಶ್ವರನ ಹೃದಯಕಮಲದಲ್ಲಿ
ಜ್ಯೋತಿರ್ಮಯನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು.
ಆ ಜ್ಯೋತಿರ್ಮಯನೆಂಬ ಗಣೇಶ್ವರನ ಹೃದಯಕಮಲದಲ್ಲಿ
ಅಭೇದ್ಯನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು.
ಆ ಅಭೇದ್ಯನೆಂಬ ಗಣೇಶ್ವರನ ಹೃದಯಕಮಲದಲ್ಲಿ
ಅಪ್ರಮಾಣನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು.
ಆ ಅಪ್ರಮಾಣನೆಂಬ ಗಣೇಶ್ವರನ ಹೃದಯಕಮಲದಲ್ಲಿ
ಅವಾಚ್ಯಾತ್ಮಕನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು.
ಆ ಅವಾಚ್ಯಾತ್ಮಕನೆಂಬ ಗಣೇಶ್ವರನ ಹೃದಯಕಮಲದಲ್ಲಿ
ಸರ್ವಶೂನ್ಯ ನಿರಾಲಂಬನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು.
ಆ ಸರ್ವಶೂನ್ಯ ನಿರಾಲಂಬನೆಂಬ ಗಣೇಶ್ವರನ ಹೃದಯಕಮಲಮಧ್ಯದ
ಮಹಾಬಯಲೊಳಗೆ ನಮ್ಮ ಅಖಂಡೇಶ್ವರಲಿಂಗಸಹಿತ ನಿರವಯಲಾಗಿ
ಮರಳಿ ಇತ್ತ ಬಾರದಿರ್ಪೆವು ಕೇಳಿರಯ್ಯಾ./227
ಕೇಳಿ ಕೇಳಿರವ್ವಾ ನಮ್ಮ ಮನೆಯಾತನ
ಒಂದು ಬೆಡಗು ಬಿನ್ನಾಣವ.
ಎನ್ನ ಕಟ್ಟಿದ ಮುಡಿಯ ಸಡಿಲಿಸಿದ.
ಎನ್ನ ಉಟ್ಟುದ ಸೆಳೆದುಕೊಂಡ.
ಎನ್ನ ತೊಟ್ಟುದ ಬಿಡಿಸಿದ.
ಎನ್ನ ಲಜ್ಜೆನಾಚಿಕೆಯ ತೊರೆಸಿದ.
ಎನ್ನ ಮೌನದಲ್ಲಿರಿಸಿ ಎನ್ನ ಕರವಿಡಿದು ಕರೆದುಕೊಂಡು,
ತಾನುಂಬ ಪರಿಯಾಣದಲ್ಲಿ
ಎನ್ನ ಕೂಡಿಸಿಕೊಂಡು ಉಂಡನು ಕೇಳಿರವ್ವಾ
ನಮ್ಮ ಅಖಂಡೇಶ್ವರನು./228
ಕೇಳಿ, ಕೇಳಿರಯ್ಯಾ ಶಿವಭಕ್ತಶರಣಜನಂಗಳು ನೀವೆಲ್ಲ.
ನೂರೊಂದು ಸ್ಥಲದ ನಿರ್ಣಯವನು ಆರುಸ್ಥಲದಲ್ಲಡಗಿಸಿ,
ಆರುಸ್ಥಲದ ನಿರ್ಣಯವನು ಮೂರುಸ್ಥಲದಲ್ಲಡಗಿಸಿ,
ಆ ಮೂರುಸ್ಥಲ ಒಂದಾದ ಮೂಲಬ್ರಹ್ಮದಲ್ಲಿ
ಶರಣನ ಕುರುಹು ಅಡಗಿ ನಿರ್ಮಾಯವಾದ ಭೇದಮಂ ಪೇಳ್ವೆ.
ಅದೆಂತೆನಲು :
ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರಹೇಯಸ್ಥಲ,
ಗುರುಕರುಣಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ,
ರುದ್ರಾಕ್ಷಿಸ್ಥಲ, ಪಂಚಾಕ್ಷರಿಸ್ಥಲ, ಭಕ್ತಿಸ್ಥಲ,
ಉಭಯಸ್ಥಲ, ತ್ರಿವಿಧಸಂಪತ್ತಿಸ್ಥಲ, ಚತುರ್ವಿಧಸಾರಾಯಸ್ಥಲ,
ಉಪಾಧಿಮಾಟಸ್ಥಲ, ನಿರುಪಾಧಿಮಾಟಸ್ಥಲ, ಸಹಜಮಾಟಸ್ಥಲ,
ಈ ಹದಿನೈದು ಭಕ್ತಸ್ಥಲಂಗಳು.
ದೀಕ್ಷಾಗುರುಸ್ಥಲ, ಶಿಕ್ಷಾಗುರುಸ್ಥಲ, ಜ್ಞಾನಗುರುಸ್ಥಲ,
ಕ್ರಿಯಾಲಿಂಗಸ್ಥಲ, ಭಾವಲಿಂಗಸ್ಥಲ, ಜ್ಞಾನಲಿಂಗಸ್ಥಲ,
ಸ್ವಯಸ್ಥಲ, ಚರಸ್ಥಲ, ಪರಸ್ಥಲ,
ಈ ಒಂಬತ್ತು ಆಚಾರಲಿಂಗಸ್ಥಲಂಗಳು.
ಇಂತೀ ಉಭಯ ಸ್ಥಲವು ಕೂಡಿ /229
ಕೇಳಿರೇ ಕೇಳಿರವ್ವಾ ಕೆಳದಿಯರೆಲ್ಲ.
ಮನಕ್ಕೆ ಮನೋಹರವಾದ,
ಕಂಗಳಿಗೆ ಮಂಗಳವಾದ,
ಶೃಂಗಾರದ ಸೊಬಗಿನ ನಲ್ಲ ಬಂದು
ಎನ್ನ ತನ್ನೊಳಗೆ ಮಾಡಿಕೊಂಡ
ಒಂದು ವಿಪರೀತವ ಹೇಳುವೆ
ಚಿತ್ತವೊಲಿದು ಲಾಲಿಸಿರವ್ವಾ.
ಎನ್ನ ತನುವಿನೊಳಗೆ ತನ್ನ ತನುವನಿಟ್ಟು
ಮಹಾತನುವಮಾಡಿದ.
ಎನ್ನ ಮನದೊಳಗೆ ತನ್ನ ಮನವನಿಟ್ಟು
ಘನಮನವಮಾಡಿದ.
ಎನ್ನ ಪ್ರಾಣದೊಳಗೆ ತನ್ನ ಪ್ರಾಣವನಿಟ್ಟು
ಚಿತ್ಪ್ರಾಣವಮಾಡಿದ.
ಎನ್ನ ಜೀವದೊಳಗೆ ತನ್ನ ಜೀವವನಿಟ್ಟು
ಸಂಜೀವನವಮಾಡಿದ.
ಎನ್ನ ಭಾವದೊಳಗೆ ತನ್ನ ಭಾವವನಿಟ್ಟು
ಸದ್ಭಾವವಮಾಡಿದ.
ಎನ್ನ ಕರಣಂಗಳೊಳಗೆ ತನ್ನ ಕರಣಂಗಳನಿಟ್ಟು
ಚಿತ್ಕರಣಂಗಳಮಾಡಿದ.
ಎನ್ನ ಇಂದ್ರಿಯಂಗಳೊಳಗೆ ತನ್ನ ಇಂದ್ರಿಯಂಗಳನಿಟ್ಟು
ಚಿದಿಂದ್ರಿಯಂಗಳಮಾಡಿದ.
ಎನ್ನ ವಿಷಯಂಗಳೊಳಗೆ ತನ್ನ ವಿಷಯಂಗಳನಿಟ್ಟು
ನಿರ್ವಿಷಯಂಗಳ ಮಾಡಿದನಾಗಿ,
ಅಖಂಡೇಶ್ವರನೆಂಬ ನಲ್ಲನೊಳಗೆ
ಕರ್ಪುರವೆಣ್ಣು ಉರಿಪುರುಷನನಪ್ಪಿ
ರೂಪಳಿದಂತಾದೆನು ಕೇಳಿರವ್ವಾ. /230
ಕೇಳು ಕೇಳಯ್ಯ ಪ್ರಾಣನಾಥನೆ,
ಎನ್ನ ಪ್ರಾಣಪೂಜೆಯ ಬಗೆಯ ಬಣ್ಣಿಸುತಿರ್ಪೆನು
ಅವಧರಿಸಯ್ಯಾ ಸ್ವಾಮಿ.
ಎನ್ನ ಕಾಯವೆ ಕೈಲಾಸವಯ್ಯ ನಿಮಗೆ.
ಎನ್ನ ಮನವೆ ಶೃಂಗಾರಮಂಟಪವಯ್ಯ ನಿಮಗೆ.
ಎನ್ನ ಭಾವವೆ ಶೂನ್ಯಸಿಂಹಾಸನವಯ್ಯಾ ನಿಮಗೆ.
ಎನ್ನ ಪರಮಾನಂದವೆ ಮಜ್ಜನವಯ್ಯಾ ನಿಮಗೆ.
ಎನ್ನ ಪರಮಶಾಂತಿಯೆ ಗಂಧವಯ್ಯಾ ನಿಮಗೆ.
ಎನ್ನ ನಿರಹಂಕಾರವೆ ಅಕ್ಷತೆಯಯ್ಯಾ ನಿಮಗೆ.
ಎನ್ನ ಅವಿರಳವೆ ಪುಷ್ಪದ ಮಾಲೆಯಯ್ಯಾ ನಿಮಗೆ.
ಎನ್ನ ಸ್ವಾನುಭಾವವೆ ಧೂಪವಯ್ಯಾ ನಿಮಗೆ.
ಎನ್ನ ದಿವ್ಯಜ್ಞಾನವೆ ದೀಪದ ಗಡಣವಯ್ಯಾ ನಿಮಗೆ.
ಎನ್ನ ಸುಚರಿತ್ರವೆ ಸರ್ವವಸ್ತ್ರವಯ್ಯಾ ನಿಮಗೆ.
ಎನ್ನ ಸುವಿವೇಕವೆ ಸಕಲಾಭರಣವಯ್ಯಾ ನಿಮಗೆ.
ಎನ್ನ ಆತ್ಮವೆ ಪರಮಾಮೃತದ ನೈವೇದ್ಯವಯ್ಯಾ ನಿಮಗೆ.
ಎನ್ನ ಪರಿಣಾಮವೆ ಹಸ್ತೋದಕವಯ್ಯಾ ನಿಮಗೆ.
ಎನ್ನ ಸದ್ಭಕ್ತಿರಾಗರಸವೆ ತಾಂಬೂಲವಯ್ಯಾ ನಿಮಗೆ.
ಎನ್ನ ನಿರ್ಮಲವೆ ದರ್ಪಣವಯ್ಯಾ ನಿಮಗೆ.
ಎನ್ನ ಸತ್ಯವೆ ಘಂಟೆಯಯ್ಯಾ ನಿಮಗೆ.
ಎನ್ನ ಸದಾನಂದವೆ ಶಂಖವಾದ್ಯವಯ್ಯಾ ನಿಮಗೆ.
ಎನ್ನ ಸಮತೆಯೆ ಚಾಮರವಯ್ಯಾ ನಿಮಗೆ.
ಎನ್ನ ಕ್ಷಮೆಯೆ ಆಲವಟ್ಟವಯ್ಯಾ ನಿಮಗೆ.
ಎನ್ನ ಸುಮನವೆ ವಾಹನವಯ್ಯಾ ನಿಮಗೆ.
ಎನ್ನ ಸುಬುದ್ಧಿಯೆ ಜಗಜಂಪನವಯ್ಯಾ ನಿಮಗೆ.
ಎನ್ನ ಸುಚಿತ್ತವೆ ನಂದಿಧ್ವಜವಯ್ಯಾ ನಿಮಗೆ.
ಎನ್ನ ಸುಜ್ಞಾನವೆ ಶೃಂಗಾರದ ಪಲ್ಲಕ್ಕಿಯಯ್ಯಾ ನಿಮಗೆ.
ಎನ್ನ ನುಡಿಗಡಣವೆ ಮಂಗಳಸ್ತೋತ್ರವಯ್ಯಾ ನಿಮಗೆ.
ಎನ್ನ ಸುಳುಹಿನ ಸಂಚಾರವೆ ಪ್ರದಕ್ಷಿಣೆಯಯ್ಯಾ ನಿಮಗೆ.
ಎನ್ನ ಮಂತ್ರೋಚ್ಚರಣವೆ ನಮಸ್ಕಾರವಯ್ಯಾ ನಿಮಗೆ.
ಎನ್ನ ಸಕಲಕರಣಂಗಳಿಂದೆ ಮಾಡುವ ಸೇವೆಯೆ
ನಾನಾ ತೆರದ ಉಪಚಾರವಯ್ಯಾ ನಿಮಗೆ.
ಇಂತೀ ಪ್ರಾಣಪೂಜೆಯ ನಿರಂತರ ತೆರಹಿಲ್ಲದೆ ನಿಮಗಳವಡಿಸಿ
ನಾ ನಿಮ್ಮೊಳಡಗಿರ್ದೆನಯ್ಯಾ ಅಖಂಡೇಶ್ವರಾ./231
ಕೇಳು ಕೇಳಯ್ಯಾ ಕರುಣಿ,
ನೀವು ಎನ್ನ ಮತ್ರ್ಯಲೋಕಕ್ಕೆ ಕಳುಹಿದಿರಾಗಿ,
ನಾನು ಮರವೆಯ ತನುವ ತಾಳಿ ಅರುಹ ಮರೆತು,
ಧರಣಿಯ ವ್ಯಾಪಾರದಲ್ಲಿ ದಿಕ್ಕುಗೆಟ್ಟೆನಯ್ಯಾ.
ಭಕ್ತದೇಹಿಕದೇವನೆಂಬ ಶ್ರುತಿಯ ಮರೆಯಲಾಗದಯ್ಯಾ.
ನಿನ್ನ ಕಂದನೆಂದು ಎನ್ನ ಕರವಿಡಿದು ತಲೆದಡಹಿ
ಪೂರ್ಣಜ್ಞಾನದ ಕಣ್ಣುದೆರೆಸಯ್ಯಾ ಅಖಂಡೇಶ್ವರಾ./232
ಕೇಳುವ ಸಂಗೀತ, ನೋಡುವ ಸುರೂಪುಗಳ
ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು.
ವಾಸಿಸುವ ಸುಗಂಧ, ರುಚಿಸುವ ಸುರಸಂಗಳ
ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು.
ತಟ್ಟು ಮುಟ್ಟು ತಾಗು ನಿರೋಧ ಸೋಂಕು ಸಂಬಂಧಗಳ
ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು.
ಹಲ್ಲುಕಡ್ಡಿ ದರ್ಪಣ ಮೊದಲಾದ ಪದಾರ್ಥಂಗಳ
ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು.
ಚಳಿ ಮಳೆ ಗಾಳಿ ಬಿಸಿಲು ಸಿಡಿಲು ಮಿಂಚು ನೀರು ನೆಳಲುಗಳ
ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು.
ಪೃಥ್ವಿ ಗಗನ ತತ್ತ್ವತೋರಿಕೆ ಸೂರ್ಯ ಚಂದ್ರ ಅಗ್ನಿ ತಾರೆ ಪ್ರಕಾಶಂಗಳ
ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು.
ಇಂತೀ ಲಿಂಗಾರ್ಪಿತ ಸಕೀಲವನರಿಯದೆ ಬರಿದೆ ಪ್ರಸಾದಿಗಳೆಂದು
ನುಡಿವ ನುಡಿಜಾಣರ ಕಂಡು ನಾಚಿದೆನಯ್ಯಾ ಅಖಂಡೇಶ್ವರಾ./233
ಕೋಳಿ ಕೂಗುವುದು ಬೆಳಗಿನ ವೇಳೆಯನರಿದು.
ಕತ್ತೆ ಕೂಗುವುದು ತನ್ನ ಹೊತ್ತಿನ ಗೊತ್ತನರಿದು.
ಶಿವಭಕ್ತನಾದ ಬಳಿಕ ತನ್ನ ಅರುಹು ಕುರುಹಿನ
ಭಕ್ತಿ ಮುಕ್ತಿಯ ಗೊತ್ತನರಿಯದ ಬಳಿಕ
ಆ ಕೋಳಿ ಕತ್ತೆಗಳಿಂದ ಕರಕಷ್ಟ ನೋಡಾ
ಅಖಂಡೇಶ್ವರಾ./234
ಕ್ರಿಯವೇ ಅಧಿಕವೆಂಬ
ಗೊಡ್ಡು ಸಿದ್ಧಾಂತಿಗಳ ಮಾತು ಸೊಗಸದಯ್ಯಾ ಎನಗೆ.
ಜ್ಞಾನವೇ ಅಧಿಕವೆಂಬ
ದಡ್ಡ ವೇದಾಂತಿಗಳ ಮಾತು ಸೊಗಸದಯ್ಯ ಎನಗೆ.
ಅದೇನು ಕಾರಣವೆಂದೊಡೆ :
ಆವುದಾನೊಂದು ಪಕ್ಷಿಯು
ಉಭಯ ರೆಕ್ಕೆಯಿಂದ ಗಗನಕ್ಕೆ ಹಾರುವಂತೆ
ಅಂತರಂಗದಲ್ಲಿ ಸಮ್ಯಕ್ಜ್ಞಾನ
ಬಹಿರಂಗದಲ್ಲಿ ಶಿವಸತ್ಕ್ರಿಯಾಸನ್ನಿಹಿತವಿಲ್ಲದೆ
ಪರವಸ್ತುವ ಕೂಡಬಾರದಾಗಿ.
ಇದು ಕಾರಣ,
ಸತ್ಕ್ರಿಯಾ ಸಮ್ಯಕ್ಜ್ಞಾನಸಂಪನ್ನರಾದ
ಮಹಾಶರಣರ ತೋರಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ./235
ಕ್ರಿಯಾದೀಕ್ಷೆಯಿಂದೆ ಇಷ್ಟಲಿಂಗದಲ್ಲಿ
ಎನ್ನ ತನುವ ಸಂಯೋಗವ ಮಾಡಿದನಯ್ಯಾ ಶ್ರೀಗುರುವು.
ಮಂತ್ರದೀಕ್ಷೆಯಿಂದೆ ಪ್ರಾಣಲಿಂಗದಲ್ಲಿ
ಎನ್ನ ಮನವ ಸಂಯೋಗವ ಮಾಡಿದನಯ್ಯ ಶ್ರೀಗುರುವು.
ವೇಧಾದೀಕ್ಷೆಯಿಂದೆ ಭಾವಲಿಂಗದಲ್ಲಿ
ಎನ್ನ ಜೀವನ ಸಂಯೋಗವ ಮಾಡಿದನಯ್ಯ ಶ್ರೀಗುರುವು.
ಇಂತೀ ತ್ರಿವಿಧಲಿಂಗದ ಪ್ರಸನ್ನಪ್ರಸಾದದಲ್ಲಿ
ಎನ್ನ ಪ್ರಾಣವ ಸಂಯೋಗವ ಮಾಡಿದ ಶ್ರೀಗುರುವಿಂಗೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./236
ಕ್ರಿಯೆಯಲ್ಲಿ ಬಲ್ಲಿದರು, ಜ್ಞಾನದಲ್ಲಿ ಸಂಪನ್ನರು
ಎಂದು ಹೇಳಲೇತಕೋ ?
ನಡೆನುಡಿಯಲ್ಲಿ ಕಾಣಬಹುದು.
ನಡೆನುಡಿ ಶುದ್ಧವಿಲ್ಲದವರಲ್ಲಿ
ಇರಲೊಲ್ಲ ನೋಡಾ ನಮ್ಮ ಅಖಂಡೇಶ್ವರ./237
ಕ್ಷೀರದ ರುಚಿಯ ಹಂಸಬಲ್ಲುದಲ್ಲದೆ,
ನೀರೊಳಗಿರ್ಪ ನೀರಗೋಳಿ ಎತ್ತಬಲ್ಲುದಯ್ಯಾ ?
ಕಬ್ಬಿನ ಸ್ವಾದವ ಮದಗಜಬಲ್ಲುದಲ್ಲದೆ,
ಸೋಗೆಯ ತಿಂಬ ಕುರಿ ಎತ್ತಬಲ್ಲುದಯ್ಯಾ ?
ಪುಷ್ಪದ ಪರಿಮಳವ ಭೃಂಗಬಲ್ಲುದಲ್ಲದೆ,
ಮರಕಡಿಯುವ ಗುಂಗೆಯಹುಳ ಎತ್ತ ಬಲ್ಲುದಯ್ಯಾ ?
ಆದಿಸ್ಥಳಕುಳದ ನಿರ್ಣಯವ ಅನಾದಿಶರಣ ಬಲ್ಲನಲ್ಲದೆ
ಈ ಲೋಕದ ಗಾದೆಯ ಮನುಜರು ಎತ್ತ ಬಲ್ಲರಯ್ಯಾ ಅಖಂಡೇಶ್ವರಾ ?/238
ಕ್ಷುತ್ ಪಿಪಾಸೆ ಶೋಕ ಮೋಹ ಜನನ ಮರಣವೆಂಬ
ಷಡೂರ್ಮೆಗಳ ಹುಡಿಮಾಡಿ ಸುಟ್ಟುರುಹಿ,
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ
ಅರಿಷಡ್ವರ್ಗಂಗಳ ಬೇರ ಕಿತ್ತು ಬಿಸುಟು.
ಇಷ್ಟಲಿಂಗಕ್ಕೆ ನೈಷ್ಠೆಯಿಂದ ಜಲ ಗಂಧಾಕ್ಷತೆ
ಧೂಪ ದೀಪ ನೈವೇದ್ಯ ತಾಂಬೂಲವೆಂಬ
ಅಷ್ಟವಿಧಾರ್ಚನೆಯ ಮಾಡಿ,
ಮತ್ತಾ ಲಿಂಗವನು ಧ್ಯಾನಮುಖದಿಂದೆ ಅಂತರಂಗಕ್ಕೆ ಬಿಜಯಂಗೈಸಿ,
ಹೃದಯಕಮಲಕರ್ಣಿಕಾಸ್ಥಾನದಲ್ಲಿ ಕುಳ್ಳಿರಿಸಿ,
ಪ್ರಾಣಾಯಾಮ ನಿರ್ಗುಣದ ಅಷ್ಟವಿಧಾರ್ಚನೆಯ ಮಾಡಿ,
ಚಿತ್ತ ಸ್ವಸ್ಥಿರವಾಗಿ,
ಭಾವವು ಬಯಲಬ್ರಹ್ಮದಲ್ಲಿ ಹೂಳಿಹೋಗಿ
ತಾನಿದಿರೆಂಬುದನಳಿದು,
ಉರಿ ಕರ್ಪುರದಂತೆ ಅವಿರಳ ಸಮರಸವಾಗಿಪರ್ಾತನೆ ನಿಜೈಕ್ಯನು ನೋಡಾ.
ಅದೆಂತೆಂದೊಡೆ :
“ಷಡೂರ್ಮಯಶ್ಚ ಷಡ್ವಗರ್ೊ ನಾಸ್ತಿ ಚಾಷ್ಟವಿಧಾರ್ಚನಂ |
ನಿರ್ಭಾವಂ ನಿಜಲಿಂಗೈಕ್ಯಂ ಶಿಖಿಕಪರ್ೂರಯೋಗವತ್”||
ಎಂದುದಾಗಿ, ಇಂತಪ್ಪ ನಿಜಲಿಂಗೈಕ್ಯರ ಮಹಾಘನ ನಿಜದ ನಿಲವಿಂಗೆ
ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ./239
ಖಂಡಿತಭಾವವಳಿದು ಅಖಂಡಬ್ರಹ್ಮದಲ್ಲಿ
ಅವಿರಳ ಸಮರಸದಿಂದಡಗಿದ ಶರಣಂಗೆ
ಜ್ಞಾನಕ್ರಿಯೆಯೆಂಬುದೇನೊ ?
ಧ್ಯಾನಮೌನವೆಂಬುದೇನೊ ?
ನೇಮ ನಿತ್ಯವೆಂಬುದೇನೊ ?
ಜಪತಪವೆಂಬುದೇನೊ ?
ಅರುಹು ಆಚಾರವೆಂಬುದೇನೊ ?
ಕುರುಹು ಪೂಜೆಯೆಂಬುದೇನೊ ?
ಇಂತೀ ಮೇರೆಯುಳ್ಳನ್ನಕ್ಕರ ಭಿನ್ನಫಲಪ್ರಾಪ್ತಿಯಲ್ಲದೆ,
ಮುಂದೆ ಅವಿರಳ ಸಮರಸ ನಿಜೈಕ್ಯ ನಿರವಯಲ ಪದವಿನ್ನೆಲ್ಲಿಯದೊ ?
ಇದನರಿದು ಇಂತಿವೆಲ್ಲವು ಹಾಳು ಸಂಕಲ್ಪ,
ವಿಪರೀತ ಭ್ರಾಂತಿ, ಅಜ್ಞಾನವೆಂದು ತಿಳಿದು,
ಇವನೆಲ್ಲವ ವಿಭಾಗಿಸಿ ಕಳೆದು,
ಬಚ್ಚಬರಿಯ ಬಯಲಬ್ರಹ್ಮವೆ ತನ್ನ ನಿಜದ ನಿಲವೆಂದು ತಿಳಿದು,
ದಗ್ಧಪಟನ್ಯಾಯದಂತೆ ದೇಹವಿರ್ದು ನಿರ್ದೆಹಿಯಾಗಿರ್ದನಯ್ಯಾ
ನಿಮ್ಮ ಶರಣ ಅಖಂಡೇಶ್ವರಾ. /240
ಗಂಡನುಳ್ಳ ಗರತಿಯರೆಲ್ಲರು
ನಿಮ್ಮ ಗಂಡನ ಕುರುಹ ನೀವು ಹೇಳಿರೆ ;
ನೀವರಿಯದಿರ್ದಡೆ
ನಾವು ನಮ್ಮ ಗಂಡರ ಕುರುಹ ಹೇಳಿಹೆವು ಕೇಳಿರೆ.
ಹೊಳೆವ ಕೆಂಜೆಡೆಗಳ, ಬೆಳಗುವ ಭಾಳಲೋಚನದ,
ಥಳಥಳಿಪ ಸುಲಿಪಲ್ಲಿನ,
ಕಳೆದುಂಬಿ ನೋಡುವ ಕಂಗಳ ನೋಟದ,
ಸೊಗಸಿಂದೆ ನಗುವ ಮುಗುಳುನಗೆಯ,
ರತ್ನದಂತೆ ಬೆಳಗುವ ರಂಗುದುಟಿಯ,
ಚಂಪಕದ ನಗೆಯಂತೆ ಸೊಂಪಾದ ನಾಸಿಕದ,
ಶಶಿಯಂತೆ ಬೆಳಗುವ ಎಸೆವ ಕದಪಿನ,
ಮಿಸುಪ ಎದೆ ಭುಜ ಕಂಠದ,
ಶೃಂಗಾರದ ಕುಕ್ಷಿಯ, ಸುಳಿದೆಗೆದ ನಾಭಿಯ,
ತೊಳಪ ತೊಡೆಮಣಿಪಾದಹರಡಿನ,
ನಕ್ಷತ್ರದಂತೆ ಹೊಳೆವ ನಖದ ಪಂಕ್ತಿಯ
ಚರಣಕಮಲದಲ್ಲಿ ಹರಿಯ ನಯನದ ಕುರುಹಿನ.
ಸಕಲಸೌಂದರ್ಯವನೊಳಕೊಂಡು
ರವಿಕೋಟಿಪ್ರಭೆಯಂತೆ ರಾಜಿಸುವ ರಾಜಾಧಿರಾಜ
ನಮ್ಮ ಅಖಂಡೇಶ್ವರನೆಂಬ ನಲ್ಲನ ಕುರುಹು ಇಂತುಟು ಕೇಳಿರವ್ವಾ./241
ಗಂಡಸತ್ತನೆಂದು ಗಂಡನೊಡನೆ ಕೆಂಡವ ಬೀಳುವೆನೆಂದು
ಪುಂಡವೀರಮಾಸ್ತಿ ತಾನು ದಂಡೆಯ ಕಟ್ಟಿಕೊಂಡು
ಖಂಡೆಯವ ಪಿಡಿದು ತಂಡತಂಡದ ಜನರ ಮುಂದೆ
ಮೆರೆದುಕೊಂಡು ಬಂದು,
ಕಿಚ್ಚಿನ ಹೊಂಡವ ಕಂಡು ಹೆದರಿ ಹಿಮ್ಮೆಟ್ಟಿದಡೆ,
ಅವಳಿಗದೇ ಭಂಗವಲ್ಲದೆ ಶೃಂಗಾರಮೆರೆವುದೇ ಅಯ್ಯ ?
ಪತಿ ಲಿಂಗ, ಸತಿ ಶರಣ.
ತನ್ನ ಪತಿವ್ರತಾ ಭಾಷೆಯ ನುಡಿದು ನಡೆಯಲ್ಲಿ ತಪ್ಪಿದಡೆ,
ಅವನ ಭಂಗಕ್ಕೆ ತುದಿ ಮೊದಲಿಲ್ಲ ನೋಡಾ ಅಖಂಡೇಶ್ವರಾ. /242
ಗಗನಮಂಟಪದಲ್ಲಿ
ಅಘಹರನ ಪೂಜೆ ಒಗುಮಿಗಿಲಾಗುತಿರ್ಪುದು ನೋಡಾ !
ಅಲ್ಲಿ ದಿಗಿಭುಗಿಲೆಂಬ ಶಬ್ದದ ಸೊಗಸು ನೋಡಾ
ಅಖಂಡೇಶ್ವರಾ./243
ಗಗನವೆ ಅಂಗವಾದ ಶರಣಂಗೆ ಸುಜ್ಞಾನವೆ ಹಸ್ತ.
ಆ ಹಸ್ತಕ್ಕೆ ಪರಾಶಕ್ತಿ, ಆ ಶಕ್ತಿಗೆ ಪ್ರಸಾದಲಿಂಗ,
ಆ ಲಿಂಗಕ್ಕೆ ಶ್ರವಣೇಂದ್ರಿಯವೆ ಮುಖ,
ಆ ಮುಖಕ್ಕೆ ಸುಶಬ್ದಪದಾರ್ಥ; ಆ ಪದಾರ್ಥವನು
ಕರ್ಣದಲ್ಲಿಹ ಪ್ರಸಾದಲಿಂಗಕ್ಕೆ ಆನಂದಭಕ್ತಿಯಿಂದರ್ಪಿಸಿ,
ಆ ಸುಶಬ್ದಪ್ರಸಾದವನು ಪಡೆದು ಸುಖಿಸುವಾತನೆ
ಶರಣನು ನೋಡಾ ಅಖಂಡೇಶ್ವರಾ./244
ಗರ್ವಾಹಂಕಾರವಳಿದು ಸರ್ವಕರಣಂಗಳು ತರಹರವಾಗಿ
ಸರ್ವಾಂಗದಲ್ಲಿ ಸರ್ವಾಚಾರ ನೆಲೆಗೊಂಡ ಲಿಂಗೈಕ್ಯಂಗೆ
ಅಖಂಡಪರಿಪೂರ್ಣ ಮಹಾಲಿಂಗವೆ ಭಾಜನವಾಗಿ,
ಆ ಘನಮಹಾಲಿಂಗಕ್ಕೆ ಆ ನಿಜಲಿಂಗೈಕ್ಯನೆ ಭಾಜನವಾಗಿ,
ಅಂಗಲಿಂಗವೆಂಬ ಉಭಯಭಾವವಳಿದು
ಕ್ಷೀರ ಕ್ಷೀರವ ಬೆರೆದಂತೆ
ಅವಿರಳ ಸಮರಸವಾಗಿರ್ಪ ಲಿಂಗೈಕ್ಯಂಗೆ ಏಕಭಾಜನವಲ್ಲದೆ
ಉಳಿದವರಿಗೆಲ್ಲಿಯದಯ್ಯಾ ಅಖಂಡೇಶ್ವರಾ ?/245
ಗಾಳಿ ಬೀಸುವ ವೇಳೆಯಲ್ಲಿ ತೂರಿಕೊಳ್ಳಿರೋ ಬೇಗ ಬೇಗ !
ಗಾಳಿ ನಿಮ್ಮಿಚ್ಛೆಯಲ್ಲ ಕೇಳಿರೋ ಜಾಳಮನುಜರಿರಾ.
ಅಂಗಕ್ಕೆ ಅಳಿವು ಬರುವುದು ದೂರವಿಲ್ಲ ನೋಡಿರೋ.
“ತ್ವರಿತಂ ಜೀವಿತಂ ಯಾತಿ ತ್ವರಿತಂ ಯಾತಿ ಯೌವನಮ್ |
ತ್ವರಿತಂ ಯಾತಿ ಪ್ರಖ್ಯಾತಿಃ ತಸ್ಮಾತ್ಪೂಜಯ ಶಂಕರಮ್ ||”
ಇದನರಿದು ಬೇಗ ಬೇಗ ಲಿಂಗವ ಪೂಜಿಸಿರೊ !
ಬೇಗ ಬೇಗ ಜಂಗಮವನೊಲಿಸಿರೋ !
ಅರುವುಳ್ಳ ಕಾಲಕ್ಕೆ ಬೇಗ ಬೇಗ
ನಮ್ಮ ಅಖಂಡೇಶ್ವರಲಿಂಗವ ಕೂಡಿರೋ./246
ಗುರು ಕರುಣಿಸಿಕೊಟ್ಟ ಮಂತ್ರವೆ
ಸಕಲಬಯಕೆಯನುಂಟುಮಾಡುವುದಲ್ಲದೆ,
ತನ್ನ ತಾ ನೆನೆದ ಮಂತ್ರವು ಸಿದ್ಧಿಯನುಂಟುಮಾಡದು ನೋಡಾ !
ಗುರುಕೊಟ್ಟ ಲಿಂಗವೆ ಮುಕ್ತಿಯನೀವುದಲ್ಲದೆ,
ತನ್ನ ತಾನೆ ಕಟ್ಟಿಕೊಂಡ ಲಿಂಗವು
ಮುಕ್ತಿಯನೀಯದು ನೋಡಾ !
ಇದು ಕಾರಣ, ಗುರೂಪದೇಶವ ಪಡೆಯಲರಿಯದೆ
ಬರಿದೆ ಭಕ್ತರೆನಿಸಿಕೊಂಬ ಶೈವಮತದ ಭವಿಗಳಿಗೆ
ಭವಜಾಲದಲ್ಲಿ ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ./247
ಗುರುಕರಜಾತನಾದೆನಾಗಿ,
ಆಣವಮಲ ಹೋಯಿತ್ತಯ್ಯ ಎನಗೆ.
ಭಕ್ತಜನಬಂಧುತ್ವವಾಯಿತ್ತಾಗಿ,
ಮಾಯಾಮಲ ಹೋಯಿತ್ತಯ್ಯ ಎನಗೆ.
ದ್ರವ್ಯವ ತ್ರಿಲಿಂಗದ ಸೊಮ್ಮೆಂದರಿದೆನಾಗಿ,
ಕಾರ್ಮಿಕಮಲ ಹೋಯಿತ್ತಯ್ಯ ಎನಗೆ.
ಇಂತೀ ಮಲತ್ರಯಂಗಳ ಬಲೆಯ ಹರಿದು
ನಿಮ್ಮ ಕರುಣದ ಕಂದನಾದೆನಯ್ಯ
ಅಖಂಡೇಶ್ವರಾ./248
ಗುರುಕಾರುಣ್ಯವ ಪಡೆದು
ಅಂಗದ ಮೇಲೆ ಲಿಂಗಧಾರಣವಾಗಿ,
ಶ್ರೀ ವಿಭೂತಿಯ ಧರಿಸಿದ ಮಹಾತ್ಮನು
ಮುಂದೆ ಶಿವನ ಜ್ಞಾನಚಕ್ಷುವಿನಿಂದುದಯಿಸಿದ
ರುದ್ರಾಕ್ಷಿಯ ಧರಿಸುವ ಭೇದವೆಂತೆಂದೊಡ ಃ
ಶಿಖಾಸ್ಥಾನದಲ್ಲಿ ಏಕಮುಖವನುಳ್ಳಂಥ ಒಂದು ರುದ್ರಾಕ್ಷಿಯ
“ ಓಂ ಸದಾಶಿವಾಯ ನಮ ಃ ”
ಎಂಬ ಮಂತ್ರದಿಂದ ಧಾರಣಮಾಡುವುದು.
ಮಸ್ತಕದಲ್ಲಿ ಎರಡುಮುಖ ಮೂರುಮುಖ
ಹನ್ನೆರಡುಮುಖಂಗಳನುಳ್ಳಂಥ ಮೂರು ರುದ್ರಾಕ್ಷಿಗಳ
“ ಓಂ ವಹ್ನಿಸೂರ್ಯಸೋಮಾಧಿಪಾಯ ಶಿವಾಯ ನಮಃ ”
ಎಂಬ ಮಂತ್ರದಿಂದ ಧಾರಣಮಾಡುವುದು.
ಶಿರವ ಬಳಸಿ ಹನ್ನೊಂದುಮುಖಂಗಳನುಳ್ಳಂಥ
ಮೂವತ್ತಾರು ರುದ್ರಾಕ್ಷಿಗಳ
“ಓಂ ಷಟ್ತ್ರಿಂಶತತ್ತಾ ್ವತ್ಮಕಾಯ ಪರಶಿವಾಯ ನಮಃ ”
ಎಂಬ ಮಂತ್ರದಿಂದ ಧಾರಣಮಾಡುವುದು.
ಕರ್ಣಯುಗದಲ್ಲಿ ಐದುಮುಖ ಹತ್ತುಮುಖ
ಏಳುಮುಖಂಗಳನುಳ್ಳಂಥ ಒಂದೊಂದು ರುದ್ರಾಕ್ಷಿಯ
“ಓಂ ಸೋಮಾಯ ನಮಃ”
ಎಂಬ ಮಂತ್ರದಿಂದ ಧಾರಣಮಾಡುವುದು.
ಕಂಠಸ್ಥಾನದಲ್ಲಿ ಎಂಟುಮುಖ, ಆರುಮಖಂಗಳನುಳ್ಳಂಥ
ಮೂವತ್ತೆರಡು ರುದ್ರಾಕ್ಷಿಗಳ
“ಓಂ ತ್ರಿಯಂಬಕಕಲಾತ್ಮನೇ ಶ್ರೀಕಂಠಾಯ ನಮಃ”
ಎಂಬ ಮಂತ್ರದಿಂದ ಧಾರಣಮಾಡುವುದು.
ಉರಸ್ಥಾನದಲ್ಲಿ ನಾಲ್ಕುಮುಖಂಗಳನುಳ್ಳಂಥ
ಐವತ್ತುನಾಲ್ಕು ರುದ್ರಾಕ್ಷಿಗಳ
“ಓಂ ಶ್ರೀಕಂಠಾದಿಮುಕ್ತ್ಯಾತ್ಮಕಾಯ ಶ್ರೀ ಸರ್ವಜ್ಞಾಯ ನಮಃ”
ಎಂಬ ಮಂತ್ರದಿಂದ ಧಾರಣಮಾಡುವುದು.
ಬಾಹುದ್ವಯದಲ್ಲಿ ಹದಿಮೂರುಮುಖಂಗಳನುಳ್ಳಂಥ
ಹದಿನಾರು ಹದಿನಾರು ರುದ್ರಾಕ್ಷಿಗಳ
“ಓಂ ಸುಖಾಸನಾದಿ ಷೋಡಶಮೂರ್ತ್ಯಾತ್ಮಕಾಯ ಶ್ರೀಕಂಠಾಯ ನಮಃ”
ಎಂಬ ಮಂತ್ರದಿಂದ ಬಲದ ತೋಳಿನಲ್ಲಿ ಧಾರಣಮಾಡುವುದು.
“ಓಂ ಸೋಮಕಲಾತ್ಮಕಾಯ ಸೋಮಾಯ ನಮಃ”
ಎಂಬ ಮಂತ್ರದಿಂದ ಎಡದ ತೋಳಿನಲ್ಲಿ ಧಾರಣಮಾಡುವುದು.
ಮುಂಗೈ ಎರಡರಲ್ಲಿ ಒಂಬತ್ತು ಮುಖಂಗಳನುಳ್ಳಂಥ
ಹನ್ನೆರಡು ಹನ್ನೆರಡು ರುದ್ರಾಕ್ಷಿಗಳ
“ಓಂ ದ್ವಾದಶಾದಿತ್ಯಾಕ್ಷಾಯ ಶ್ರೀ ಮಹಾದೇವಾಯ ನಮಃ”
ಎಂಬ ಮಂತ್ರದಿಂದ ಬಲದ ಮುಂಗೈಯಲ್ಲಿ ಧಾರಣಮಾಡುವುದು.
“ಓಂ ಕೇಶವಾದಿತ್ಯಾಯ ಉಮಾಪತಯೇ ನಮಃ”
ಎಂಬ ಮಂತ್ರದಿಂದ ಎಡದ ಮುಂಗೈಯಲ್ಲಿ
ಧಾರಣಮಾಡುವುದು.
ಕಕ್ಷಸ್ಥಾನದಲ್ಲಿ ಯಜ್ಞೋಪವೀತರೂಪವಾಗಿ
ಹದಿನಾಲ್ಕುಮುಖಂಗಳನುಳ್ಳಂಥ ನೂರೆಂಟು ರುದ್ರಾಕ್ಷಿಗಳ
“ಓಂ ಶತರುದ್ರವಿದ್ಯಾಸ್ವರೂಪಾತ್ಮಕಾಯ
ಶ್ರೀ ವಿಶ್ವೇಶ್ವರಾಯ ನಮಃ”
ಎಂಬ ಮಂತ್ರದಿಂದ ಧಾರಣಮಾಡುವುದು.
ಇಂತೀ ಸ್ಥಾನಗಣನೆ ಮುಖಮಂತ್ರಂಗಳ ಭೇದವನರಿದು,
ಶ್ರೀ ರುದ್ರಾಕ್ಷಿಯ ಧರಿಸಿದ ಶರಣ ತಾನೇ
ಸಾಕ್ಷಾತ್ ಪರಶಿವನಲ್ಲದೆ ಬೇರಲ್ಲವಯ್ಯ.
ಅದೆಂತೆಂದೊಡೆ :ಪರಮರಹಸ್ಯದಲ್ಲಿ-
“ಭಾಲೇ ತ್ರೈಪುಂಡ್ರಕಂ ಯಸ್ಯ ಗಲೇ ರುದ್ರಾಕ್ಷಮಾಲಿಕಾ |
ವಕ್ತ್ರೇ ಷಡಕ್ಷರಂ ಮಂತ್ರಂ ಶಿವಃ ನಾ ಸಂಶಯಃ ||”
ಎಂದುದಾಗಿ,
ಅಂತಪ್ಪ ಮಹಿಮಂಗೆ ಶರಣೆಂದವರೆ ಧನ್ಯರಯ್ಯ
ಅಖಂಡೇಶ್ವರಾ./249
ಗುರುಚರಣವ ಪೂಜಿಸಿ
ಎನ್ನ ಹಸ್ತಂಗಳು ಪರುಷವಾದವು.
ಗುರುಚರಣವ ನೋಡಿ
ಎನ್ನ ಕಂಗಳು ಪರುಷವಾದವು.
ಗುರುಚರಣವ ಹಾಡಿ ಹರಸಿ
ಎನ್ನ ಜಿಹ್ವೆ ಪರುಷವಾಯಿತ್ತು.
ಗುರುಚರಣವ ನೆನೆದು
ಎನ್ನ ಮನ ಪರುಷವಾಯಿತ್ತು.
ಗುರುಚರಣವ ಧ್ಯಾನಿಸಿ
ಎನ್ನ ಭಾವ ಪರುಷವಾಯಿತ್ತು ನೋಡಾ ಅಖಂಡೇಶ್ವರಾ./250
ಗುರುದೀಕ್ಷೆಯಿಲ್ಲದ ಲಿಂಗವು ಧರೆಯ ಕಲ್ಲೆನಿಸಿತ್ತು.
ಗುರುದೀಕ್ಷೆಯಿಲ್ಲದ ನರನು ಶರಣರ ಸಮಯಕ್ಕೆ ಸಲ್ಲ.
ಅದೆಂತೆಂದೊಡೆ :
ಸುಟ್ಟ ಮಡಿಕೆಯಲ್ಲಿ ನೀರ ತುಂಬಿದಡೆ ದಿಟವಾಗಿ ನಿಲ್ಲುವುದಲ್ಲದೆ,
ಹಸಿಯಮಡಿಕೆಯಲ್ಲಿ ನೀರತುಂಬಿದಡೆ ದಿಟವಾಗಿ ನಿಲ್ಲುವುದೆ ಹೇಳಾ ?
ಇದು ಕಾರಣ,
ಗುರುದೀಕ್ಷೆಯಿಲ್ಲದವ ಎಷ್ಟು ಜ್ಞಾನಿಯಾದಡು
ಅವನ ಜ್ಞಾನವು ಪ್ರಯೋಜನಕ್ಕೆಬಾರದು.
ಅವನು ಎಷ್ಟು ಕ್ರಿಯೆಯನಾಚರಿಸಿದಡು
ಅವನ ಕ್ರಿಯೆಯು ನಿಷ್ಫಲ ನೋಡಾ ಅಖಂಡೇಶ್ವರಾ./251
ಗುರುಪಾದೋದಕವ ಕೊಂಡು
ಎನ್ನ ಸಂಚಿತಕರ್ಮ ನಾಸ್ತಿಯಾಯಿತ್ತು.
ಲಿಂಗಪಾದೋದಕವ ಕೊಂಡು
ಎನ್ನ ಪ್ರಾರಬ್ಧಕರ್ಮ ನಾಸ್ತಿಯಾಯಿತ್ತು.
ಜಂಗಮಪಾದೋದಕವ ಕೊಂಡು
ಎನ್ನ ಆಗಾಮಿಕರ್ಮ ನಾಸ್ತಿಯಾಯಿತ್ತು.
ಇಂತೀ ತ್ರಿಮೂರ್ತಿಗಳ ತ್ರಿವಿಧಪಾದೋದಕವ ಕೊಂಡು
ಎನ್ನ ತ್ರಿಕರ್ಮಂಗಳು ನಾಸ್ತಿಯಾದುವಾಗಿ,
ಅಖಂಡೇಶ್ವರಾ, ಎನ್ನ ಹುಟ್ಟುಹೊಂದುಗಳು ನಷ್ಟವಾದುವಯ್ಯಾ./252
ಗುರುಪ್ರಸಾದವ ಕೊಂಡು ಎನ್ನ ತನು
ಶುದ್ಧಪ್ರಸಾದವಾಯಿತ್ತು.
ಲಿಂಗಪ್ರಸಾದವ ಕೊಂಡು ಎನ್ನ ಮನ
ಸಿದ್ಧಪ್ರಸಾದವಾಯಿತ್ತು.
ಜಂಗಮಪ್ರಸಾದವ ಕೊಂಡು ಎನ್ನ ಪ್ರಾಣವು
ಪ್ರಸಿದ್ಧಪ್ರಸಾದವಾಯಿತ್ತು.
ಇಂತೀ ತ್ರಿವಿಧಪ್ರಸಾದವ ಕೊಂಡು
ಎನ್ನ ಭವ ನಾಸ್ತಿಯಾಗಿತ್ತಾಗಿ,
ಅಖಂಡೇಶ್ವರಾ, ಇನ್ನೆನಗೆ ಆವಾವ ಭಯವಿಲ್ಲವಯ್ಯ./253
ಗುರುಪ್ರಸಾದವ ಕೊಂಬ ನೇಮವಿರ್ದ ಬಳಿಕ,
ಗುರುನಿಂದೆಯ ಕೇಳಲಾಗದು.
ಲಿಂಗಪ್ರಸಾದವ ಕೊಂಬ ನೇಮವಿರ್ದ ಬಳಿಕ,
ಲಿಂಗನಿಂದೆಯ ಕೇಳಲಾಗದು.
ಜಂಗಮಪ್ರಸಾದವ ಕೊಂಬ ನೇಮವಿರ್ದ ಬಳಿಕ,
ಜಂಗಮನಿಂದೆಯ ಕೇಳಲಾಗದು.
ಇಂತೀ ನೇಮವುಳ್ಳ ಸದ್ಭಕ್ತನು
ಅನ್ಯರಿಂದೆ ಬಂದ ಕುಂದು ನಿಂದ್ಯವ ಕೇಳಿ ಸುಮ್ಮನಿರ್ದಡೆ
ತಾನು ಹಿಂದೆ ಕೊಂಡ ಪ್ರಸಾದವೆಲ್ಲ
ಕಾಳಕೂಟವಿಷವ ಕೊಂಡಂತಾಯಿತ್ತು ಕಾಣಾ ಅಖಂಡೇಶ್ವರಾ./254
ಗುರುಪ್ರಸಾದವನರಿಯದವಂಗೆ ಲಿಂಗಪ್ರಸಾದವಿಲ್ಲ.
ಲಿಂಗಪ್ರಸಾದವನರಿದವಂಗೆ ಜಂಗಮಪ್ರಸಾದವಿಲ್ಲ.
ಜಂಗಮಪ್ರಸಾದವನರಿಯದವಂಗೆ ಅರುಹು ಆಚಾರವಿಲ್ಲ.
ಅರುಹು ಆಚಾರವನರಿಯದವಂಗೆ ಇಹಪರವಿಲ್ಲ.
ಇಹಪರವನರಿಯದವಂಗೆ ಬಂದ ಭವದಲ್ಲಿ
ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ./255
ಗುರುಪ್ರಸಾದಿಯಾದಡೆ,
ಗುರುಭಕ್ತಿಯಿಂದೆ ಗುರುವಿಂಗೆ ತನುವ ಸಮರ್ಪಿಸಬೇಕು.
ಲಿಂಗಪ್ರಸಾದಿಯಾದಡೆ,
ಲಿಂಗಭಕ್ತಿಯಿಂದೆ ಲಿಂಗಕ್ಕೆ ಮನವ ಸಮರ್ಪಿಸಬೇಕು.
ಜಂಗಮಪ್ರಸಾದಿಯಾದಡೆ,
ಜಂಗಮಭಕ್ತಿಯಿಂದೆ ಜಂಗಮಕ್ಕೆ ಧನವ ಸಮರ್ಪಿಸಬೇಕು.
ಇಂತೀ ತ್ರಿವಿಧ ಭಕ್ತಿಯಿಲ್ಲದೆ
ಕಂಡವರ ಕಂಡು ಕೈವೊಡ್ಡಿ ಇಕ್ಕಿಸಿಕೊಂಡು ಅವಿಶ್ವಾಸದಿಂದೆ ಕೊಂಡಡೆ
ಅದು ಕೆಂಡದಂತಿರ್ಪುದಯ್ಯಾ ಅಖಂಡೇಶ್ವರಾ./256
ಗುರುಪ್ರಸಾದಿಯಾದಡೆ,
ಗುರುವೇ ಹರನಿಂದಧಿಕವೆಂಬ
ಗುರುವಾಕ್ಯವ ಮೀರದಿರಬೇಕು.
ಲಿಂಗಪ್ರಸಾದಿಯಾದಡೆ,
ತನ್ನಂಗದಮೇಲಿರ್ಪ ಲಿಂಗವಲ್ಲದೆ
ಅನ್ಯದೈವಂಗಳಿಗೆರಗದಿರಬೇಕು.
ಜಂಗಮಪ್ರಸಾದಿಯಾದಡೆ,
ತಾನು ತನ್ನದೆಂಬ ಅಹಂ ಮಮತೆ ಕೆಟ್ಟು
ತಾನು ತಾನಾಗಬೇಕು.
ಇಂತೀ ತ್ರಿವಿಧಪ್ರಸಾದವನು ಕೊಂಬ
ನಡೆವಳಿಯನರಿಯದೆ
ಪಂಕ್ತಿಯಲ್ಲಿ ಕುಳಿತು ಕಂಡಕಂಡವರ ಕಂಡು
ಒತ್ತಿಗೆ ಕೈಯೊಡ್ಡಿ ಇಕ್ಕಿಸಿಕೊಂಡು
ಅಂತರಂಗದಲ್ಲಿ ವಿಶ್ವಾಸವಿಲ್ಲದೆ
ಮನಸ್ಸಿಗೆಬಂದಂತೆ ಮುಗಿವ ಸಂತೆ ಸೂಳೆಯಮಕ್ಕಳಿಗೆ
ಶಿವಪ್ರಸಾದದ ಒಲುಮೆ ಇನ್ನೆಲ್ಲಿಯದಯ್ಯಾ ಅಖಂಡೇಶ್ವರಾ ?/257
ಗುರುಪ್ರಸಾದಿಯಾದಡೆ
ಬಡತನ ಎಡರು ಕಂಟಕಂಗಳು ಬಂದು ತಾಗಿದಲ್ಲಿ
ಧೈರ್ಯಗುಂದದಿರಬೇಕು.
ಲಿಂಗಪ್ರಸಾದಿಯಾದಡೆ
ಉಪಾಧಿಯಿಂದ ಪರರಿಗೆ ಬಾಯ್ದೆರೆಯದಿರಬೇಕು.
ಜಂಗಮಪ್ರಸಾದಿಯಾದಡೆ ಅಂಗಕ್ಕೆ ವ್ಯಾಧಿ ಸಂಘಟಿಸಿದಲ್ಲಿ
ನಾರು ಬೇರು ವೈದ್ಯವ ಕೊಳ್ಳದಿರಬೇಕು.
ಇಂತೀ ಪ್ರಸಾದದ ಘನವನರಿಯದ ಸಂತೆಯ ಸೂಳೆಯ ಮಕ್ಕಳಿಗೆ
ಎಂತು ಮೆಚ್ಚುವನಯ್ಯ ನಮ್ಮ ಅಖಂಡೇಶ್ವರ./258
ಗುರುಭಕ್ತನಾದ ಬಳಿಕ ಗುರುವಿಂಗೆ
ಪ್ರತ್ಯುತ್ತರವ ಕೊಡದಿರಬೇಕು.
ಲಿಂಗಭಕ್ತನಾದ ಬಳಿಕ ಲಿಂಗವೇ ಪ್ರಾಣವಾಗಿರಬೇಕು.
ಜಂಗಮಭಕ್ತನಾದ ಬಳಿಕ ಜಂಗಮದಲ್ಲಿ
ಅತಿಪ್ರೇಮ ವಿಶ್ವಾಸವ ಬಳಸಬೇಕು ನೋಡಾ ಅಖಂಡೇಶ್ವರಾ/259
ಗುರುಭಕ್ತರಾದವರು
ತ್ರಿಕಾಲದಲ್ಲಿ ಹರಸ್ಮರಣೆಯಲ್ಲದೆ
ಹರಿಯೆಂದು ನುಡಿಯಲಾಗದು.
ಹರಿ ಶಬ್ದವ ಕೇಳಲಾಗದು, ಹರಿಯ ರೂಪವ ನೋಡಲಾಗದು.
ಅದೇನು ಕಾರಣವೆಂದೊಡೆ :
ಪೂರ್ಣಾಯುಷ್ಯವು, ವಿಮಲಮತಿಯು,
ಸತ್ಕೀರ್ತಿಯು, ಮಹಾಬಲವು, ಕೆಟ್ಟು ಹೋಗುತ್ತಿಹುದು ನೋಡಾ !
ಅದೆಂತೆಂದೊಡೆ :ಬ್ರಹ್ಮಾಂಡಪುರಾಣೇ
“ನ ಪ್ರದೋಷೇ ಹರಿಂ ಪಶ್ಯೇತ್ ಯದಿ ಪಶ್ಯೇತ್ ಪ್ರಮಾದತಃ |
ಚತ್ವಾರಿ ತಸ್ಯ ನಶ್ಯಂತಿ ಆಯುಃ ಪ್ರಜ್ಞಾ ಯಶೋ ಬಲಮ್ ||”
ಎಂದುದಾಗಿ,
ಸತ್ತು ಹುಟ್ಟುವ ಹರಿಗೆ ಇನ್ನೆತ್ತಣ ದೇವತ್ವ ಹೇಳಾ ಅಖಂಡೇಶ್ವರಾ ?/260
ಗುರುಭಕ್ತಿಯ ಮಾಡಿದ ಬಳಿಕ
ಸರ್ವ ಅವಗುಣಂಗಳು ಹಿಂಗಿರಬೇಕು.
ಲಿಂಗಪೂಜೆಯ ಮಾಡಿದ ಬಳಿಕ
ಅಂಗದ ಪ್ರಕೃತಿ ಹಿಂಗಿರಬೇಕು.
ಜಂಗಮಾರ್ಚನೆಯ ಮಾಡಿದ ಬಳಿಕ
ಸಂಸಾರದಲ್ಲಿ ಮೋಹವ ತೊಲಗಿರಬೇಕು.
ಪಾದೋದಕ ಪ್ರಸಾದವ ಕೊಂಡ ಬಳಿಕ
ಇಹಪರ ಭೋಗ ಮೋಕ್ಷಂಗಳ ಬಯಕೆ ಅರತಿರಬೇಕು
ಇದೇ ನಮ್ಮ ಅಖಂಡೇಶ್ವರಲಿಂಗದ ಕೂಟ./261
ಗುರುಭಕ್ತಿಯ ಮಾಡಿದರೆ ಮಾಡಬಹುದು ;
ಲಿಂಗಭಕ್ತಿಯ ಮಾಡಬಾರದಯ್ಯ ಆರಿಗೆಯೂ.
ಲಿಂಗಭಕ್ತಿಯ ಮಾಡಿದರೆ ಮಾಡಬಹುದು ;
ಜಂಗಮಭಕ್ತಿಯ ಮಾಡಬಾರದಯ್ಯ ಆರಿಗೆಯೂ.
ಜಂಗಮಭಕ್ತಿಯ ಮಾಡಿದರೆ ಮಾಡಬಹುದು,
ಪ್ರಸಾದಭಕ್ತಿಯ ಮಾಡಬಾರದಯ್ಯ ಆರಿಗೆಯೂ.
ಇಂತೀ ಚತುರ್ವಿಧ ಭಕ್ತಿಯ ಭೇದವನರಿದು
ಇಂಬುಗೊಂಡ ಸಂಗನಬಸವಣ್ಣನೆಂಬ ಸದ್ಭಕ್ತಂಗೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./262
ಗುರುಲಿಂಗಜಂಗಮದಲ್ಲಿ ಭಯ ಭಕ್ತಿ
ಕರುಣ ಕಿಂಕುರ್ವಾಣ ನಯನುಡಿ
ನಮಸ್ಕಾರ ಕ್ಷಮೆ ದಮೆ ಶಾಂತಿ ಸರಣೆ
ದಯಾಗುಣ ವಿಶ್ವಾಸ ನಂಬುಗೆ ನಿಷ್ಠೆ ಸಮರಸವನುಳ್ಳ
ಸದ್ಭಕ್ತರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ./263
ಗುರುವ ನೋಡಿರೋ, ಲಿಂಗವ ಹಾಡಿರೋ,
ಜಂಗಮಕ್ಕೆ ನೀಡಿರೋ,
ಅಂಗಜವೈರಿ ಅಖಂಡೇಶ್ವರನ ಕೂಡಿರೋ./264
ಗುರುವಚನದಿಂದಲ್ಲದೆ ಭವಪಾಶ ಹರಿಯದು.
ಗುರುವಚನದಿಂದಲ್ಲದೆ ಜಾತಿಭೇದ ಮಾಣದು.
ಗುರುವಚನದಿಂದಲ್ಲದೆ ಸೂತಕಪಾತಕಂಗಳು ಕೆಡದಿಹವು.
ಗುರುವಚನದಿಂದಲ್ಲದೆ ಅಂಗ ಮನ ಪ್ರಾಣಂಗಳು ಶುದ್ಧವಾಗಲರಿಯವು.
ಗುರುವಚನದಿಂದಲ್ಲದೆ ಲಿಂಗಕ್ಕೆ ಕಳೆವೆರಸದು.
ಗುರುವಚನದಿಂದಲ್ಲದೆ ಸದ್ಭಕ್ತಿ ನೆಲೆಗೊಳ್ಳದು.
ಗುರುವಚನದಿಂದಲ್ಲದೆ ನಿಜಮುಕ್ತಿ ಕಾಣಬಾರದು.
ಇದು ಕಾರಣ ಗುರುಮುಟ್ಟಿ ಗುರುವಾದ
ಪರಮಶರಣರ ಶ್ರೀ ಚರಣಕ್ಕೆ ಶರಣು ಶರಣೆಂಬೆನಯ್ಯ
ಅಖಂಡೇಶ್ವರಾ./265
ಗುರುವಿಂಗಾದಡೂ ಅರುಹು ಆಚಾರ ಸತ್ಕ್ರಿಯವೇ ಬೇಕು.
ಲಿಂಗಕ್ಕಾದಡೂ ಅರುಹು ಆಚಾರ ಸತ್ಕ್ರಿಯವೇ ಬೇಕು.
ಜಂಗಮಕ್ಕಾದಡೂ ಅರುಹು ಆಚಾರ ಸತ್ಕ್ರಿಯವೇ ಬೇಕು.
ಅದೆಂತೆನಲು :ವೀರಮಾಹೇಶ್ವರಸಂಗ್ರಹ ಗ್ರಂಥ
“ಜ್ಞಾನಮಾಚಾರಹೀನೇಷು ವೇದಾಗಮೇನ ಪಾರಗಃ |
ದುಷ್ಟಚಾಂಡಾಲಭಾಂಡೇಷು ಯಥಾ ಭಾಗೀರಥೀಜಲಂ||”
ಎಂದುದಾಗಿ,
ಅರುಹು ಆಚಾರ ಸತ್ಕ್ರಿಯಾಹೀನರಿಗೆ
ಶಿವನು ಸ್ವಪ್ನದಲ್ಲಿ ಸುಳಿಯನು ನೋಡಾ.
ಅರುಹು ಆಚಾರ ಸತ್ಕ್ರಿಯಾಸಂಪನ್ನರಾದವರಲ್ಲಿ ಪರಶಿವನಿರ್ಪನಾಗಿ,
ಅರುಹುಗೆಟ್ಟು ಆಚಾರತಪ್ಪಿ ಸತ್ಕ್ರಿಯಾಹೀನರಾಗಿರ್ಪವರು
ಸಲ್ಲರಯ್ಯ ಶಿವಪಥಕ್ಕೆ ಅಖಂಡೇಶ್ವರಾ./266
ಗುರುವಿಂಗೆ ತನುವನರ್ಪಿಸಿದಲ್ಲದೆ
ತನುವಿನ ವಾಸನೆ ಹರಿಯದು.
ಲಿಂಗಕ್ಕೆ ಮನವನರ್ಪಿಸಿದಲ್ಲದೆ ಮನದ ವಾಸನೆ ಹರಿಯದು.
ಜಂಗಮಕ್ಕೆ ಧನವನರ್ಪಿಸಿದಲ್ಲದೆ ಧನದ ವಾಸನೆ ಹರಿಯದು.
ಇದು ಕಾರಣ ತ್ರಿವಿಧಕ್ಕೆ ತ್ರಿವಿಧವನರ್ಪಿಸಿ
ತ್ರಿವಿಧ ವಾಸನೆಯ ಹರಿದು,
ತ್ರಿವಿಧವು ಒಂದಾದ ಘನವನೊಡಗೂಡಬಲ್ಲಡೆ
ಸದ್ಭಕ್ತನೆಂಬೆನಯ್ಯ ಅಖಂಡೇಶ್ವರಾ./267
ಗುರುವಿಡಿದು ಕುರುಹಕಾಣಬೇಕು.
ಕುರುಹುವಿಡಿದು ಅರುಹಕಾಣಬೇಕು.
ಅರುಹುವಿಡಿದು ಆಚಾರವಕಾಣಬೇಕು.
ಆಚಾರವಿಡಿದು ನಿಜವಕಾಣಬೇಕು.
ನಿಜವಿಡಿದು ನಮ್ಮ ಅಖಂಡೇಶ್ವರಲಿಂಗವ ಕೂಡಬೇಕು./268
ಗುರುವಿನಲ್ಲಿ ಗುಣವನರಸಿದಡೆ ಒಂದನೆಯ ಪಾತಕ.
ಲಿಂಗದಲ್ಲಿ ಶಿಲೆಯನರಸಿದಡೆ ಎರಡನೆಯ ಪಾತಕ.
ಜಂಗಮದಲ್ಲಿ ಕುಲವನರಸಿದಡೆ ಮೂರನೆಯ ಪಾತಕ.
ಪಾದೋದಕದಲ್ಲಿ ಸೂತಕವನರಸಿದಡೆ ನಾಲ್ಕನೆಯ ಪಾತಕ.
ಪ್ರಸಾದದಲ್ಲಿ ರುಚಿಯನರಸಿದಡೆ ಐದನೆಯ ಪಾತಕ.
ಇಂತೀ ಪಂಚಮಹಾಪಾತಕರ ಎನಗೊಮ್ಮೆ
ತೋರದಿರಯ್ಯ ಅಖಂಡೇಶ್ವರಾ./269
ಗುರುವಿನಲ್ಲಿ ಭಕ್ತಿಯಿಲ್ಲ, ಲಿಂಗದಲ್ಲಿ ನಿಷ್ಠೆಯಿಲ್ಲ,
ಜಂಗಮದಲ್ಲಿ ವಿಶ್ವಾಸವಿಲ್ಲ, ಪಾದೋದಕ ಪ್ರಸಾದದಲ್ಲಿ ಪ್ರೇಮವಿಲ್ಲ.
ಬರಿದೆ ಭಕ್ತರೆಂಬ ಭವಭಾರಿಗಳ ಮುಖವ
ನೋಡಲಾಗದಯ್ಯ ಅಖಂಡೇಶ್ವರಾ./270
ಗುರುವಿನೊಡನೆ ಸಹಭೋಜನ ಮಾಡಬೇಕಾದಡೆ,
ಚತುರ್ವಿಧಭಕ್ತಿಯಿಂದೆ ಗುರುವಿನೊಳಗೆ ತನುವಡಗಿರಬೇಕು.
ಲಿಂಗದೊಡನೆ ಸಹಭೋಜನ ಮಾಡಬೇಕಾದಡೆ,
ಸಂಕಲ್ಪ ವಿಕಲ್ಪ ಸೂತಕ ಪಾತಂಕಗಳಳಿದು
ಲಿಂಗದೊಳಗೆ ಮನವಡಗಿರಬೇಕು.
ಜಂಗಮದೊಡನೆ ಸಹಭೋಜನ ಮಾಡಬೇಕಾದಡೆ,
ಮಜ್ಜನ ಭೋಜನ ಕುಸುಮ ಗಂಧಾನುಲೇಪನ
ಅನ್ನ ವಸ್ತ್ರ ಮಣಿ ರತ್ನಾಭರಣ ಗೀತ ವಾದ್ಯ ನೃತ್ಯ
ಹಾಸುಮಂಚ ಸ್ತ್ರೀಭೋಗ ಮೊದಲಾದ
ಅನೇಕ ಭಕ್ತಿಯಿಂದೆ ಜಂಗಮಕ್ಕೆ ಧನವ ಸಮರ್ಪಿಸಬೇಕು.
ಇಂತೀ ತ್ರಿವಿಧ ಭಕ್ತಿಯ ನಿರ್ಣಯವನರಿಯದೆ,
ತನು ಮನ ಧನಂಗಳ ಹಿಂದಿಟ್ಟುಕೊಂಡು
ಮಾತಿನ ಬಣಬೆಯ ಮುಂದಿಟ್ಟುಕೊಂಡು
ನೀತಿಹೀನರು ಸಹಭೋಜನ ಕವಳ ಪ್ರಸಾದವ ಕೊಟ್ಟು ಕೊಂಡಡೆ
ಹುಳುವಿನ ಕೊಂಡದಲ್ಲಿ ಮುಳುಗಿಸಿಬಿಡುವನು ನೋಡಾ
ನಮ್ಮ ಅಖಂಡೇಶ್ವರಾ./271
ಗುರುವೆ ಪರತತ್ವವು ತಾನೆ ನೋಡಾ.
ಗುರುವೆ ಪರವಸ್ತುವು ತಾನೆ ನೋಡಾ.
ಗುರುವೆ ಪರಬ್ರಹ್ಮವು ತಾನೆ ನೋಡಾ.
ಗುರುವೆ ಪರಶಿವನು ತಾನೆ ನೋಡಾ.
ಗುರುವಿನಿಂದೆ ಪರವಿಲ್ಲವೆಂದು ಸಕಲ ಶ್ರುತಿಗಳು
ಹೊಗಳುತಿಪ್ಪುವು ನೋಡಾ.
ಇಂತಪ್ಪ ಶ್ರೀಗುರುವಿಂಗೆ ನಮೋ ನಮೋ ಎಂಬೆನಯ್ಯ
ಅಖಂಡೇಶ್ವರಾ./272
ಗುರುವೆ ಲಿಂಗವೆಂದರಿದೆನಾಗಿ, ಲಿಂಗದಲ್ಲಿ ನಿಲವ ಕಂಡೆ.
ಲಿಂಗವೆ ಜಂಗಮವೆಂದರಿದೆನಾಗಿ,
ಜಂಗಮದಲ್ಲಿ ಲಿಂಗದ ನಿಲವ ಕಂಡೆ.
ಜಂಗಮವೇ ನೀವೆಂದರಿದೆನಾಗಿ, ನಿಮ್ಮಲ್ಲಿ ಜಂಗಮದ ನಿಲವ ಕಂಡೆ.
ನೀವೇ ಪ್ರಸಾದವೆಂದರಿದೆನಾಗಿ, ಪ್ರಸಾದದಲ್ಲಿ ನಿಮ್ಮ ನಿಲವ ಕಂಡೆ.
ಪ್ರಸಾದವೇ, ನಾನೆಂದರಿದೆನಾಗಿ,
ಎನ್ನೊಳಗೆ ನಿಮ್ಮ ಮಹಾಪ್ರಸಾದದ ನಿಲವ ಕಂಡೆನಯ್ಯ
ಅಖಂಡೇಶ್ವರಾ./273
ಗುರುವೆನಲು ಕೊರೆವುದು ಜನನ ಮರಣದ ಬೇರ ನೋಡಾ.
ಗುರುವೆನಲು ಸುಡುವುದು ಭವಾರಣ್ಯವ ನೋಡಾ.
ಗುರುವೆನಲು ಕಡಿವುದು ಭವಕುಜಲತೆಗಳ ನೋಡಾ.
ಇಂತಪ್ಪ ಸದ್ಗುರುದೇವಂಗೆ ನಮೋ ನಮೋ ಎಂಬೆನಯ್ಯ
ಅಖಂಡೇಶ್ವರಾ./274
ಗುರುಶಿಷ್ಯ ಸಂಬಂಧವೆಂದು ನುಡಿಯುತಿರ್ಪರೆಲ್ಲರು;
ಗುರುಶಿಷ್ಯ ಸಂಬಂಧವನಾರೂ ಅರಿಯರಲ್ಲ !
ಗುರುಶಿಷ್ಯ ಸಂಬಂಧವೆಂತೆಂದೊಡೆ ಹೇಳಿಹೆವು ಕೇಳಿರೋ
ಸದ್ಭಕ್ತ ಶರಣಜನಂಗಳೆಲ್ಲರು.
ಶ್ರೀಗುರು ಶಿಷ್ಯಂಗೆ ಉಪದೇಶವ ಮಾಡುವ ಕಾಲದಲ್ಲಿ
ಆ ಶಿಷ್ಯನ ಸ್ಥೂಲತನು ಸೂಕ್ಷ್ಮತನು ಕಾರಣತನುವೆಂಬ
ತನುತ್ರಯಂಗಳಲ್ಲಿ ಮುಸುಕಿದ
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ
ಮಲತ್ರಯಂಗಳ ಕಳೆದು,
ಮಾಯಾಪ್ರಕೃತಿಕಾಯದ ಪೂರ್ವಾಶ್ರಯವನು
ಚಿದಗ್ನಿಯಿಂದೆ ಸುಟ್ಟು ಚಿತ್ಕಾಯವೆಂದೆನಿಸಿ,
ಆ ಚಿತ್ಕಾಯಸ್ವರೂಪವಾದ ಶಿಷ್ಯನ ಮಸ್ತಕದ ಮೇಲೆ
ಹಸ್ತವನಿರಿಸಿ ಮಥನವ ಮಾಡಿ,
ಶಿಷ್ಯನ ಭಾವದ ಘಟ್ಟಿಯನೆ ಕರದಲ್ಲಿ ಕೊಡುವುದು.
ಅದೆಂತೆಂದೊಡೆ :
“ಜ್ವಲತ್ಕಾಲಾನಲಾಭಾಸಾ ತಟಿತ್ಕೋಟಿ ಸಮಪ್ರಭಾ |
ತಚ್ಚೋಧ್ರ್ವಂತು ಶಿಖಾ ಸೂಕ್ಷ್ಮಾ ಚಿದ್ರೂಪಾ ಪರಮಾ ಕಳಾ ||
ಯಥಾಕಲಾಸ್ತಥಾಭಾವೋ ಯಥಾಭಾವಸ್ತಥಾ ಮನಃ |
ಯಥಾಮನಸ್ತಥಾ ದೃಷ್ಟಿಃ ಯಥಾದೃಷ್ಟಿಸ್ತಥಾ ಸ್ಥಲಂ ||
ಏವಂ ಭೇದಾಃ ಕಳಾದೇವಿ ಸದ್ಗುರುಶಿಷ್ಯಮಸ್ತಕೇ |
ಹಸ್ತಾಬ್ಜಮಥನಗ್ರಾಹ್ಯಂ ತಸ್ಯ ಭಾವಃ ಕರೋದಿತಃ ||
ಏತೇ ಗುರುಕರಾಜಾಜತಾಃ ಲಿಂಗಭಕ್ತಾ ವಿಭೇದತಃ |
ನಾದಬಿಂದುಕಳಾತೀತಂ ಗುರೂಣಾಂ ಲಿಂಗಮುದ್ಭವಂ ||”
-ಪರಮರಹಸ್ಯ
ಎಂಬ ಶಿವಾಗಮೋಕ್ತವಾಗಿ,
ಆ ಶಿಷ್ಯನ ಪಶ್ಚಿಮದಿಶೆಯಲ್ಲಿ ಬೆಳಗುತಿರ್ಪ
ನಿತ್ಯನಿರಂಜನ ಪರಮಕಳೆಯ ಧ್ಯಾನಿಸಿ ಭಾವಸ್ಥಲಕ್ಕೆ ತಂದು,
ಆ ಭಾವಸ್ಥಲದಿಂದೆ ಮನಸ್ಥಲಕ್ಕೆ ತಂದು,
ಆ ಮನಸ್ಥಲದಿಂದೆ ದೃಷ್ಟಿಸ್ಥಲಕ್ಕೆ ತಂದು,
ಆ ದೃಷ್ಟಿಸ್ಥಲದಿಂದೆ ಕರಸ್ಥಲಕ್ಕೆ ತಂದು,
ಸಾಕಾರಲಿಂಗಮೂರ್ತಿಯಲ್ಲಿ ತುಂಬಿ
ಇಷ್ಟಲಿಂಗವೆನಿಸಿ ಕರಸ್ಥಲದಲ್ಲಿ ಮೂರ್ತಿಗೊಳಿಸಿ
ಆ ಲಿಂಗಕ್ಕೆ ಜಂಗಮದ ಪಾದತೀರ್ಥ ಪ್ರಸಾದವನೆ
ಪ್ರಾಣಕಳೆಯೆಂದರ್ಪಿಸಿ,
ಮತ್ತಂ, ಆ ಇಷ್ಟಲಿಂಗವೆ
ಅನಿಷ್ಟಪಂಚಕಂಗಳೆಂಬ ಕತ್ತಲೆಯನೋಡಿಸುವುದಕ್ಕೆ
ಚಿತ್ಸೂರ್ಯನೆಂದು ನಂಬುಗೆಯನಿಂಬುಗೊಳಿಸಿ,
ಮತ್ತಮಾಲಿಂಗದಲ್ಲಿ
ವೃತ್ತ ಕಟಿ ವತರ್ುಳ ಗೋಮುಖ ನಾಳ ಗೋಳಕವೆಂಬ
ಆರು ಸ್ಥಾನಂಗಳ ತೋರಿ,
ಆ ಆರು ಸ್ಥಾನಂಗಳಲ್ಲಿ
ನಕಾರ ಮಕಾರ ಶಿಕಾರ ವಕಾರ ಯಕಾರ ಓಂಕಾರ
ಎಂಬ ಆರು ಪ್ರಣವಂಗಳನೆ ಬೋಧಿಸಿ,
ಆ ಆರು ಪ್ರಣವಂಗಳನೆ
ಆಚಾರಲಿಂಗ ಗುರುಲಿಂಗ ಶಿವಲಿಂಗ
ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ
ಎಂಬ ಆರು ಲಿಂಗಗಳೆಂದರುಹಿ,
ಆ ಆರು ಲಿಂಗಂಗಳಿಗೆ
ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯ
ಎಂಬ ಆರು ಇಂದ್ರಿಯಂಗಳನೆ ಆರು ಮುಖಗಳೆಂದು ತಿಳುಹಿ,
ಆ ಆರು ಮುಖಂಗಳಿಗೆ
ಗಂಧ ರುಚಿ ರೂಪು ಸ್ಪರ್ಶನ ಶಬ್ದ ತೃಪ್ತಿ
ಎಂಬ ಆರು ಪದಾರ್ಥಂಗಳನು
ಶ್ರದ್ಧೆ ನಿಷ್ಠೆ ಸಾವಧಾನ ಅನುಭಾವ ಆನಂದ ಸಮರಸ
ಎಂಬ ಆರು ಭಕ್ತಿಗಳಿಂದರ್ಪಿಸುವ
ಸಕೀಲದ ವಿವರವ ತೋರಬಲ್ಲಾತನೇ ಗುರು.
ಆ ಗುರುವಿನ ಕರುಣದಿಂದೆ ಪಡೆದ ಇಷ್ಟಲಿಂಗವನು
ಕರಸ್ಥಲ ಮನಸ್ಥಲ ಭಾವಸ್ಥಲಮಂಟಪದಲ್ಲಿ ಮೂರ್ತಿಗೊಳಿಸಿ,
ಸಗುಣಪೂಜೆ ನಿರ್ಗುಣಪೂಜೆ ಕೇವಲ ನಿರ್ಗುಣಪೂಜೆಯ ಮಾಡಿ,
ಆ ಲಿಂಗದ ಮಹಾಬೆಳಗಿನೊಳಗೆ ತನ್ನಂಗದ ಕಳೆಯನಡಗಿಸಿ,
ಉರಿ-ಕರ್ಪುರ ಸಂಯೋಗದಂತೆ
ಅವಿರಳ ಸಮರಸವಾಗಿಪರ್ಾತನೆ ಶಿಷ್ಯನು.
ಇಂತೀ ಅರುಹು ಆಚಾರಸನ್ನಿಹಿತ ಗುರುಶಿಷ್ಯರಿಬ್ಬರು
ಬಯಲು ಬಯಲ ಬೆರದಂತೆ
ನಿರವಯಲ ಪರಬ್ರಹ್ಮದಲ್ಲಿ ನಿಷ್ಪತ್ತಿಯನೈದಿರ್ಪರು ನೋಡಾ !
ಇಂತೀ ಅರುಹಿನ ವಿಚಾರವನರಿಯದೆ
ಮಾಡುವ ಮಾಟವೆಲ್ಲ ಅಜ್ಞಾನಗಡಣದೊಳಗು.
ಈ ಅಜ್ಞಾನಗುರುಶಿಷ್ಯರ ವಿಧಿಯೆಂತಾಯಿತ್ತೆಂದಡೆ,
ಹುಟ್ಟುಗುರುಡನ ಕೈಯ ಕೆಟ್ಟಗಣ್ಣವ ಹಿಡಿದು
ಬಟ್ಟೆಯ ಕಾಣದೆ ಕಮರಿಯ ಬಿದ್ದು ಸತ್ತಂತಾಯಿತ್ತು
ಕಾಣಾ ಅಖಂಡೇಶ್ವರಾ./275
ಗುರುಸೇವೆಯಲ್ಲಿ ತನು ಸವೆದು,
ಲಿಂಗಪೂಜೆಯಲ್ಲಿ ಮನ ಸವೆದು,
ಜಂಗಮದಾಸೋಹದಲ್ಲಿ ಧನ ಸವೆದು,
ಇಂತೀ ತ್ರಿವಿಧಸಂಪತ್ತು ನೆಲೆಗೊಂಡ ಸದ್ಭಕ್ತಂಗೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./276
ಗುರುಸ್ಥಲದ ಗಂಭೀರವಸ್ತುವ ಕೂಡಬಲ್ಲಡೆ
ಗುರುಸ್ಥಲದವರೆಂಬೆನು.
ಚರಸ್ಥಲದ ಚಿನ್ಮಯಶಿವನ ಕೂಡಬಲ್ಲಡೆ
ಚರಸ್ಥಲದವರೆಂಬೆನು.
ಪರಸ್ಥಲದ ಪರಾತ್ಪರ ಪರಬ್ರಹ್ಮವ ಕೂಡಬಲ್ಲಡೆ
ಪರಸ್ಥಲದವರೆಂಬೆನು.
ಇಂತೀ ಭೇದವನರಿಯದೆ
ಹರನ ವೇಷವ ಧರಿಸಿ ನರನ ಓಲೈಸುವ
ಬರಿ ಮೂರ್ಖರನೇನೆಂಬೆನಯ್ಯಾ ಅಖಂಡೇಶ್ವರಾ ?/277
ಗುರುಹರ ವಚನ ಪ್ರಮಾಣದಿಂದೆ ಹಿಡಿದ
ವ್ರತಶೀಲನೇಮಂಗಳ ಕಡೆತನಕ ಬಿಡದಿರಬೇಕು.
ಜಾತಿ ವರ್ಣ ಆಶ್ರಮ ಕುಲ ಗೋತ್ರಂಗಳೆಂಬ
ತನ್ನ ಪೂರ್ವಾಶ್ರಮ ಪದ್ಧತಿಯ ಮರೆಯಬೇಕು.
ಇಂದಿಗೆ ಬೇಕು ನಾಳಿಗೆ ಬೇಕೆಂಬ
ಆಸೆಯಾಮಿಷವ ಜರೆಯಬೇಕು.
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ
ಮಲತ್ರಯಂಗಳ ಬಲೆಯ ಹರಿಯಬೇಕು.
ಅರುಹು ಆಚಾರ ಸತ್ಕ್ರಿಯಾಸಂಪನ್ನನಾಗಿರಬೇಕು.
ಇಂತೀ ವರ್ಮವನರಿಯದೆ ಬರಿದೆ ದೇವಭಕ್ತರೆನಿಸಿಕೊಂಬ
ಭವಪಾತಕರ ಎನಗೊಮ್ಮೆ ತೋರದಿರಯ್ಯ ಅಖಂಡೇಶ್ವರಾ./278
ಗೋಸುಂಬೆ ಹುಳದಂತೆ ಬಹುವೇಷಧಾರಿಯಲ್ಲ ಶರಣ.
ಇಂದ್ರಧನುವಿನಂತೆ ಚಂದದ ಬಣ್ಣಕ್ಕೆ ಮೋಹಿಯಲ್ಲ ಶರಣ.
ಹಿಂದುಮುಂದಣ ನೆನೆವ ಹಾರುವನಲ್ಲ ಶರಣ.
ಆನಂದಭರಿತ ಶರಣನ ಏನೆಂದುಪಮಿಸಬಹುದಯ್ಯಾ ಅಖಂಡೇಶ್ವರಾ./279
ಘನಕ್ಕೆ ಘನವಾದ ಮಹಾಘನವಸ್ತುವಿನಲ್ಲಿ
ಮನವಡಗಿದ ಮಹಾಮಹಿಮಂಗೆ
ಮರಳಿ ನೆನೆಯಬೇಕೆಂಬುದಿಲ್ಲ.
ನೆನೆದು ಧ್ಯಾನಿಸಬೇಕೆಂಬುದಿಲ್ಲ.
ಧ್ಯಾನಿಸಿ ಕಾಣಬೇಕೆಂಬುದಿಲ್ಲ.
ಕಂಡು ಕೂಡಬೇಕೆಂಬುದಿಲ್ಲ.
ಅಖಂಡೇಶ್ವರಾ, ನಿಮ್ಮನೊಡಗೂಡಿದ
ಶರಣಂಗೆ ಏನೆಂದೆನಲಿಲ್ಲ. /280
ಘನಗಂಭೀರ ಮಹಾಘನ ಬೆಳಗಿನೊಳಗೆ
ನಾನೆಂಬುದನರಿಯದಿರ್ದೆನಯ್ಯಾ.
ನೀನೆಂಬುದನರಿಯದಿರ್ದೆನಯ್ಯಾ.
ಏನೇನೂ ಅರಿಯದೆ ಮೌನದಿಂದೆ
ಮರೆದಿರ್ದೆನಯ್ಯಾ ಅಖಂಡೇಶ್ವರಾ./281
ಘನತರದಿಷ್ಟಲಿಂಗದಲ್ಲಿ ಅನಿಮಿಷದೃಷ್ಟಿ ಬಲಿದು,
ಮನ ಕರಗಿ, ತನು ಉಬ್ಬಿ, ಹೃದಯಕಮಲ ಪಸರಿಸಿ,
ಸವಾರ್ಂಗವು ಗುಡಿಗಟ್ಟಿ
ಕಂಗಳಲ್ಲಿ ಪರಿಣಾಮಜಲ ಉಕ್ಕಿ ಹೊರಸೂಸುತ್ತ ,
ಪರಮಕಾಷ್ಠೆಯಂತೆ ಚಿತ್ರದ ರೂಹಿನಂತೆ
ಪರಬ್ರಹ್ಮಲಿಂಗದಲ್ಲಿ ಬೆರೆದು ಪರವಶಗೊಂಡಿರ್ಪ
ಮಹಾಶರಣರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ./282
ಘನಮಹಾಲಿಂಗಕ್ಕೆ
ಮನವೆ ಪೀಠವಾಗಿ, ತನುವೆ ಶಿವಾಲಯವಾಗಿ,
ನೆನವೆ ಪೂಜೆಯಾಗಿ, ಧ್ಯಾನವೆ ತೃಪ್ತಿಯಾಗಿ,
ಅಂಬುಧಿಯೊಳಗೆ ಮುಳುಗಿದ ಪೂರ್ಣಕುಂಭದಂತೆ,
ನಿಮ್ಮ ಅವಿರಳ ದಿವ್ಯ ಮಹಾಬೆಳಗಿನೊಳಗೆ ಮುಳುಗಿ,
ನಾನು ನೀನೆಂಬುಭಯದ ಕುರುಹ ಮರೆದು
ಏನೇನೂ ಅರಿಯದಿರ್ದೆನಯ್ಯಾ ಅಖಂಡೇಶ್ವರಾ./283
ಘನಲಿಂಗದೇವರು ಘನಲಿಂಗದೇವರೆಂದು
ನುಡಿದುಕೊಂಬ ಬಿನುಗು ಹೊಲೆಯರನೇನೆಂಬೆನಯ್ಯಾ !
ಹೊಟ್ಟೆಯಕಿಚ್ಚಿಗೆ ಒಟ್ಟಿದ ಬಣವೆಯ ಸುಟ್ಟಾತ
ಘನಲಿಂಗದೇವರೆ ?
ಕೊಟ್ಟಾತ ಒಳಗು, ಕೊಡದಾತ ಹೊರಗೆಂದು
ಕಟ್ಟಿದಲಿಂಗವ ಮೆಟ್ಟಿ ಮೆಟ್ಟಿ ಹರಿವಾತ ಘನಲಿಂಗದೇವರೆ ?
ಒಡೆಯನ ವೇಷವ ಧರಿಸಿ
ಒಡಲ ಕಿಚ್ಚಿಗೆ ತುಡುಗನಾಯಂತೆ
ಕಡಿದು ಕನ್ನವನಿಕ್ಕುವಾತ ಘನಲಿಂಗದೇವರೆ ?
ಅಹುದಾದುದನಲ್ಲಮಾಡಿ ಅಲ್ಲವಾದುದ ಅಹುದುಮಾಡಿ
ಅಧರ್ಮ ಅನ್ಯಾಯದಲ್ಲಿ ಹೊಡೆದಾಡಿ
ಹೊಲಬುದಪ್ಪಿ ಮಡಿದುಹೋಗುವ
ಬಾಯಬಡಕ ಭ್ರಷ್ಟಮಾದಿಗರ ಘನಲಿಂಗದೇವರೆಂದಡೆ
ಅಘೋರನರಕ ತಪ್ಪದಯ್ಯಾ ಅಖಂಡೇಶ್ವರಾ ?/284
ಘುಲ್ಲುಘುಲ್ಲೆಂದಡೆ ನಲ್ಲ ಬರುತಾನೆಂದು
ಎಲ್ಲ ಹಾದಿಯ ಮೆಟ್ಟಿ ನೋಡುತಿರ್ದೆನವ್ವಾ.
ನಲ್ಲನ ಸೊಲ್ಲನಾಲಿಸಿ ಕೇಳುತಿರ್ದೆನವ್ವಾ.
ಅಖಂಡೇಶ್ವರನೆಂಬ ನಲ್ಲನ ಕಂಡರೆ
ಮಹಾಸಂತೋಷವು,
ಕಾಣದಿರ್ದರೆ ಕಡುದುಃಖ ಕೇಳಿರವ್ವಾ ಎನಗೆ./285
ಘ್ರಾಣೇಂದ್ರಿಯವಿಷಯದಿಂದೆ ಭ್ರಮರ ಕೆಡುವುದು
ಸಂಪಿಗೆಯ ಪುಷ್ಪದಲ್ಲಿ.
ರಸನೇಂದ್ರಿಯವಿಷಯದಿಂದೆ ಮತ್ಸ್ಯಕೆಡುವುದು
ಜಾಲಗಾರನ ಬಲೆಯಲ್ಲಿ.
ನಯನೇಂದ್ರಿಯವಿಷಯದಿಂದೆ ಪತಂಗ ಕೆಡುವುದು
ದೀಪದ ಜ್ವಾಲೆಯಲ್ಲಿ
ತ್ವಗೀಂದ್ರಯವಿಷಯದಿಂದ ಗಜ ಕೆಡುವುದು
ರಾಜನ ಕೃತಕದಲ್ಲಿ.
ಶ್ರವಣೇಂದ್ರಿಯವಿಷಯದಿಂದೆ ಎರಳೆ ಕೆಡುವುದು
ಬೇಟೆಗಾರನ ಸರಳಿನಲ್ಲಿ.
ಇಂತೀ ಪ್ರಾಣಿಗಳು ಒಂದೊಂದು ವಿಷಯದಿಂದೆ
ಬಂಧನಕ್ಕೊಳಗಾದವು.
ಇಂತಪ್ಪ ಪಂಚೇಂದ್ರಿಯವಿಷಯವ್ಯಾಪಾರದಲ್ಲಿ
ಲಂಪಟರಾದ ಮನುಜರು
ಕೆಟ್ಟ ಕೇಡನೇನೆಂಬೆನಯ್ಯ ಅಖಂಡೇಶ್ವರಾ ?/286
ಚಂದ್ರಶಿಲೆಯ ಮಂಟಪದೊಳಗೆ
ಇಂದುಧರನ ಪೂಜೆಯ ವಿಸ್ತಾರವ ನೋಡಾ !
ಬಂದು ನೆರೆದಿರ್ಪರು ಸಕಲ ಗಣಂಗಳು.
ಚಂದ್ರಜ್ಯೋತಿಯ ಸಾಲುಸಾಲಿನ ಸೊಬಗು ನೋಡಾ !
ಅಲ್ಲಿ ಚಂದಚಂದದ ದುಂದುಭಿನಾದ ಮೊಳಗುತಿರ್ಪುವು.
ಇದರಂದವನೇನ ಹೇಳುವೆನಯ್ಯಾ ಅಖಂಡೇಶ್ವರಾ !/287
ಚಂದ್ರಸಾಲೆಯಲ್ಲಿ ಬಂದು ನಿಂದವನಾರೆಂದು
ನೋಡಹೋದಡೆ.
ಅಲ್ಲಿ ಹೊಂದಿ ಎನ್ನ ನೆರೆದನವ್ವಾ.
ಆತನ ಸೌಂದರ್ಯ ಕೋಟಿಕಂದರ್ಪರಂತಿರ್ದುದವ್ವಾ.
ಆತನಂಗದ ಬೆಳಗು
ಅನಂತಕೋಟಿ ಸೂರ್ಯರ ಪ್ರಭೆಯಂತಿರ್ದುದವ್ವಾ.
ಅಖಂಡೇಶ್ವರನೆಂಬ ನಲ್ಲನ ಅಂಗಶೃಂಗಾರದ ಬೆಳಗ
ನೋಡಲಮ್ಮದೆ ಕಂಗಳ ಮುಚ್ಚಿ ನೆರೆದೆನವ್ವಾ. /288
ಚಂದ್ರಸೂರ್ಯರೆನಿಸುವ
ವಾಮದಕ್ಷಿಣ ನೇತ್ರಂಗಳಮಧ್ಯದಲ್ಲಿ ತಾರಕಂಗಳಾಗಿರ್ದ
ಊಧ್ರ್ವಮುಖವಪ್ಪುದರಿಂದೆ ಚಲಿಸದೆ ಜಪಿಸುತಿರ್ಪ
ಜೀವಚೈತನ್ಯಸೂತ್ರಕ್ಕೆ ಮುಖ್ಯವಾದ
ಪರಮಸೂಕ್ಷ್ಮದ್ವಾರಗಳಿಂ ಕೂಡಿದ
ನೀಲಬಿಂದುಗಳೆರಡನು ಶ್ರೀಗುರೂಪದೇಶದಿಂದೆ ಲೇಸಾಗಿ ತಿಳಿದು
ಆ ತಾರಕಬ್ರಹ್ಮವನಭ್ಯಾಸಂಗೈವಾತನೆ
ರಾಜಯೋಗಿ ನೋಡಾ ಅಖಂಡೇಶ್ವರಾ./289
ಚತುಭರ್ೂತಂಗಳನೊಳಕೊಂಡು
ನೀಲಲೋಹಿತಾದಿ ವರ್ಣಂಗಳಿಲ್ಲದಿಹುದೆ ಭೂತಾಕಾಶವೆನಿಸುವುದು.
ಅದನೊಳಗೊಂಡುದು ನೀಲವರ್ಣಮಾದ ಸ್ಥೂಲಾಕಾಶವೆನಿಸುವುದು.
ಅದನೊಳಗೊಂಡುದು ಅರುಣವರ್ಣಮಾದ ಮಹದಾಕಾಶವೆನಿಸುವುದು.
ಅದನೊಳಗೊಂಡುದು ಶ್ವೇತವರ್ಣಮಾದ ತತ್ತ್ವಾಕಾಶವೆನಿಸುವುದು.
ಈ ಚತುರ್ವಿಧದಾಕಾಶವನೊಳಗೊಂಡುದು
ಕೋಟಿಸೂರ್ಯಪ್ರಕಾಶಮಾದ ಬಿಂದ್ವಾಕಾಶವೆನಿಸುವುದಾಗಿ,
ಕಣ್ಣಮುಂದಣ ಬಯಲಿನೊಳಗೆ
ಕ್ರಮದಿಂದಾಯಾಯ ಆಕಾಶಂಗಳನು ಕಾಣ್ಬುದೆ
ಮಧ್ಯಲಕ್ಷ್ಯ ನೋಡಾ ಅಖಂಡೇಶ್ವರಾ./290
ಚತುರ್ವೆದಿಗಳಾದ ಶತಕೋಟಿ ಬ್ರಾಹ್ಮಣರಿಗೆ
ನಿತ್ಯ ಭೋಜನ ಮಾಡಿಸಿದ ಫಲವು,
ಒಬ್ಬ ಜಂಗಮಕ್ಕೆ ತುತ್ತು ಭಿಕ್ಷವ ನೀಡಿದ ಫಲಕ್ಕೆ ಸರಿಯಿಲ್ಲ ನೋಡಿರೋ !
ಸಪ್ತಕೋಟಿ ಕೆರೆಯ ಕಟ್ಟಿಸಿದ ಫಲವು,
ಒಬ್ಬ ಜಂಗಮಕ್ಕೆ ತುತ್ತು ಭಿಕ್ಷವ ನೀಡಿದ ಫಲಕ್ಕೆ ಸರಿಯಿಲ್ಲ ನೋಡಿರೋ !
ಅಶ್ವಯಜ್ಞಂಗಳ ಸಹಸ್ರಕೋಟಿ ಮಾಡಿದ ಫಲವು,
ಒಬ್ಬ ಜಂಗಮಕ್ಕೆ ತುತ್ತು ಭಿಕ್ಷವ ನೀಡಿದ ಫಲಕ್ಕೆ ಸರಿಯಿಲ್ಲ ನೋಡಿರೋ !
ಅದೆಂತೆಂದೊಡೆ :
“ಶತಕೋಟಿ ವೇದವಿಪ್ರಾಣಾಂ ತಟಾಕ ಸಪ್ತಕೋಟಿನಾಮ್ |
ವಾಜಿಕೋಟಿ ಸಹಸ್ರಾಣಾಮೇಕಭಿಕ್ಷಾ ಸಮರ್ಪಣಮ್||”
ಎಂದುದಾಗಿ,
ನಮ್ಮ ಅಖಂಡೇಶ್ವರಸ್ವರೂಪವಾದ ನಿಜಜಂಗಮಕ್ಕೆ ನೀಡಿದ ಫಲಕ್ಕೆ
ಇನ್ನಾವ ಫಲವು ಸರಿಯಿಲ್ಲ ನೋಡಿರೊ !/291
ಚರಣದೊಳಗೆ ಚರಣವಿಟ್ಟು ನಡೆವ ಭೇದವು
ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ.
ಕರದೊಳಗೆ ಕರವನಿಟ್ಟು ಮುಟ್ಟುವ ಭೇದವು
ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ.
ಘ್ರಾಣದೊಳಗೆ ಘ್ರಾಣವನಿಟ್ಟು ವಾಸಿಸುವ ಭೇದವು
ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ.
ಜಿಹ್ವೆಯೊಳಗೆ ಜಿಹ್ವೆಯನಿಟ್ಟು ರುಚಿಸುವ ಭೇದವು
ನಿಮ್ಮ ಶರಣರಿಗಲ್ಲದ ಉಳಿದವರಿಗಳವಡದು ನೋಡಾ.
ಕಂಗಳೊಳಗೆ ಕಂಗಳನಿಟ್ಟು ನೋಡುವ ಭೇದವು
ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ.
ಕಿವಿಯೊಳಗೆ ಕಿವಿಯನಿಟ್ಟು ಕೇಳುವ ಭೇದವು
ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ.
ಮನದೊಳಗೆ ಮನವನಿಟ್ಟು ನೆನೆವ ಭೇದವು
ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದು ನೋಡಾ.
ಭಾವದೊಳಗೆ ಭಾವವನಿಟ್ಟು ಸುಳಿವ ಭೇದವು
ನಿಮ್ಮ ಶರಣ ಸಂಗನಬಸವಣ್ಣ ಪ್ರಭುವಿನ
ಸಂತತಿಗಳಿಗಲ್ಲದೆ ಉಳಿದವರಿಗಳವಡದು ನೋಡಾ ಅಖಂಡೇಶ್ವರಾ./292
ಚಿತ್ತ ನಿರ್ಮಲವಾದಾತ್ಮನು ಭಕ್ತಿಯಿಂದೆ
ಸತ್ಯಶರಣರಲ್ಲಿ ತತ್ವಾನುಭಾವವ ಬೆಸಗೊಂಡರೆ
ನಿತ್ಯ ಶಿವಪದ ಘಟಿಸುವುದಕ್ಕೆ ತಡವಿಲ್ಲವಯ್ಯಾ ಅಖಂಡೇಶ್ವರಾ./293
ಚಿತ್ತದೊಲ್ಲಭನ ಕಾಣದೆ
ಚಿಂತೆಗೊಂಡಿತ್ತು ನೋಡಾ ಎನ್ನ ಮನವು.
ಹೊತ್ತಿನ ಗೊತ್ತಿಗೆ ಬಾರದಿರ್ದಡೆ
ಹೊತ್ತು ಹೋಗದು ಕೇಳಿರೆ.
ಕರ್ತೃ ಅಖಂಡೇಶ್ವರನು ಬಾರದಿರ್ದಡೆ
ಕತ್ತಲೆಯ ಕಳೆಯಲಾರೆನವ್ವಾ./294
ಛಲವಿರಬೇಕು ಶಿವಭಕ್ತಿಯ ಮಾಡುವಲ್ಲಿ ಹಿಡಿದುಬಿಡೆನೆಂಬ.
ಛಲವಿರಬೇಕು ನಿತ್ಯನೇಮದಲ್ಲಿ ಹಿಡಿದು ಬಿಡೆನೆಂಬ.
ಛಲವಿರಬೇಕು ಶೀಲವ್ರತದಲ್ಲಿ ಹಿಡಿದು ಬಿಡೆನೆಂಬ.
ಛಲವಿರಬೇಕು ನಮ್ಮ ಅಖಂಡೇಶ್ವರಲಿಂಗವ ಕೂಡಿ
ಎಂದೆಂದೂ ಅಗಲಬಾರದೆಂಬ ನೈಷ್ಠೆಯಲ್ಲಿ./295
ಜಂಗಮ ಜಂಗಮವೆಂದು ನುಡಿಯುತಿರ್ಪರೆಲ್ಲರು,
ಜಂಗಮದ ಘನವನಾರು ಅರಿಯರಲ್ಲ.
ಜಂಗಮವೆಂದಡೆ ನಿನರ್ಾಮ ನಿರ್ದೆಹಿ ;
ಜಂಗಮವೆಂದಡೆ ನಿರ್ಜಡ ನಿರಾವರಣ ;
ಜಂಗಮವೆಂದಡೆ ನಿಃಸೀಮ ನಿರ್ಜಾತ ;
ಜಂಗಮವೆಂದಡೆ ನಿರುಪಮ ನಿಭರ್ೆದ್ಯ ;
ಜಂಗಮವೆಂದಡೆ ನಿರಾಳ ನಿರಾಲಂಬ ;
ಜಂಗಮವೆಂದಡೆ ನಿರಂಜನ ನಿರ್ವಯಲು.
ಇಂತಪ್ಪ ಸಚ್ಚಿದಾನಂದ ನಿತ್ಯಪರಿಪೂರ್ಣ ಜಂಗಮದ
ಪರಮಪ್ರಸಾದವ ಕೊಂಡು
ಎನ್ನ ಪ್ರಾಣದ ತೊಡಕ ಹರಿದೆನಯ್ಯ ಅಖಂಡೇಶ್ವರಾ./296
ಜಂಗಮಕ್ಕೆ ನೀಡಿದ ತೃಪ್ತಿ ಜಗಕೆಲ್ಲ ತೃಪ್ತಿಯಾಯಿತ್ತು ಕಾಣಿರೋ !
ಜಂಗಮಕ್ಕೆ ನೀಡಿದ ತೃಪ್ತಿ
ಹರಿ ಸುರ ಬ್ರಹ್ಮಾದಿಗಳಿಗೆಲ್ಲ ತೃಪ್ತಿಯಾಯಿತ್ತು ಕಾಣಿರೋ !
ಜಂಗಮಕ್ಕೆ ನೀಡಿದ ತೃಪ್ತಿ ಸ್ವರ್ಗ ಮತ್ರ್ಯ ಪಾತಾಳ
ಸಚರಾಚರಂಗಳಿಗೆಲ್ಲ ತೃಪ್ತಿಯಾಯಿತ್ತು ನೋಡಿರೋ !
ಜಂಗಮಕ್ಕೆ ನೀಡಿದ ತೃಪ್ತಿ
ಸಾಕ್ಷಾತ್ಪರಬ್ರಹ್ಮ ಪರಶಿವಂಗೆ ತೃಪ್ತಿಯಾಯಿತ್ತು ನೋಡಿರೋ !
ಅದೆಂತೆಂದೊಡೆ :
“ಸುರತೃಪ್ತಂ ಬುಧಸ್ತೋಮಂ ಮಮ ತೃಪ್ತಂತು ವೈಷ್ಣವಮ್ |
ಜಂಗಮಂತು ಜಗತ್ ತೃಪ್ತಂ ಶಿವತೃಪ್ತಂ ತು ಪದ್ಮಿನಿ ||”
ಎಂದುದಾಗಿ,
ಇಂತಪ್ಪ ಜಂಗಮ ತೃಪ್ತಿಯಾದಡೆ
ನಮ್ಮ ಅಖಂಡೇಶ್ವರಲಿಂಗ ತೃಪ್ತಿಯಾಯಿತ್ತು ನೋಡಿರೋ !/297
ಜಂಗಮಕ್ಕೆ ಮಾತಾಪಿತರಿಲ್ಲ.
ಜಂಗಮಕ್ಕೆ ಜಾತಿಬಂಧುಗಳಿಲ್ಲ.
ಜಂಗಮಕ್ಕೆ ನಾಮರೂಪುಗಳಿಲ್ಲ.
ಜಂಗಮಕ್ಕೆ ಸೀಮೆಸಂಗಗಳಿಲ್ಲ.
ಜಂಗಮಕ್ಕೆ ಕುಲಗೋತ್ರಗಳಿಲ್ಲ.
ಜಂಗಮಕ್ಕೆ ಮಲಮಾಯೆಗಳಿಲ್ಲ ನೋಡಾ ಅಖಂಡೇಶ್ವರಾ./298
ಜಂಗಮದ ಘನವನು, ಜಂಗಮದ ನಿಲವನು
ಅರಿಯದೆ ಕೆಟ್ಟರಲ್ಲ ಶಿವಶಿವಾ !
ಜಂಗಮವೆಂದಡೆ ನಿಷ್ಕಳಂಕನು ನೋಡಾ !
ಜಂಗಮವೆಂದಡೆ ನಿರಪೇಕ್ಷನು ನೋಡಾ !
ಜಂಗಮವೆಂದಡೆ ನಿರ್ದೊಷನು ನೋಡಾ !
ಜಂಗಮವೆಂದಡೆ ನಿಸ್ಪೃಹನು ನೋಡಾ !
ಜಂಗಮವೆಂದಡೆ ಅಕ್ರೋಧ ಸತ್ಯವಚನನು ನೋಡಾ !
ಜಂಗಮವೆಂದಡೆ ದಯಾಪರನು ಧರ್ಮಗುಣನು ನೋಡಾ.
ಜಂಗಮವೆಂದಡೆ ಶಾಂತ ಶಿವಜ್ಞಾನಮೂರ್ತಿ
ತಾನೆ ನೋಡಾ ಅಖಂಡೇಶ್ವರಾ./299
ಜಂಗಮದ ದರ್ಶನ ಸ್ಪರ್ಶನದಿಂದೆ
ಎನ್ನ ತನುಶುದ್ಧವಾಯಿತ್ತು.
ಜಂಗಮದ ಪಾದೋದಕ ಪ್ರಸಾದದಿಂದೆ
ಎನ್ನ ಪ್ರಾಣ ಶುದ್ಧವಾಯಿತ್ತು.
ಜಂಗಮದ ಜ್ಞಾನಾನುಭಾವದಿಂದೆ
ಎನ್ನ ಮನ ಶುದ್ಧವಾಯಿತ್ತು.
ಜಂಗಮವೇ ಎನ್ನ ಪ್ರಾಣವೆಂದರಿದೆನಾಗಿ
ಅಖಂಡೇಶ್ವರಾ, ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ./300
ಜಂಗಮದ ಪಾದತೀರ್ಥವು ಭವರೋಗವೈದ್ಯವಯ್ಯಾ.
ಜಂಗಮದ ಪಾದತೀರ್ಥವು ಶಿವಸಾಯುಜ್ಯವಯ್ಯಾ.
ಜಂಗಮದ ಪಾದತೀರ್ಥವು ಜೀವನ್ಮುಕ್ತಿಯಯ್ಯಾ.
ಜಂಗಮದ ಪಾದತೀರ್ಥವು ಆಧಿ ವ್ಯಾಧಿ ವಿಪತ್ತು
ರೋಗರುಜಿನಂಗಳ ಶೋಧಿಸಿ ಕಿತ್ತು ಬಿಸುಟುವುದಯ್ಯಾ.
ಜಂಗಮದ ಪಾದತೀರ್ಥವು ಅಂಗದ ಅವಗುಣವ ಕಳೆವುದಯ್ಯಾ.
ಜಂಗಮದ ಪಾದತೀರ್ಥವು ಲಿಂಗಕ್ಕೆ ಕಳೆಯನಿಪ್ಪುದಯ್ಯಾ.
ಇಂತಪ್ಪ ಜಂಗಮದ ಪಾದತೀರ್ಥಕ್ಕೆ
ಭಕ್ತನಾದಡೂ ಆಗಲಿ ಮಹೇಶ್ವರನಾದಡೂ ಆಗಲಿ
ಆರಾದಡೇನು ಅಡಿಯಿಟ್ಟು ನಡೆದು ಬಂದು
ಭಯಭಕ್ತಿಯಿಂದೆ ಅಡ್ಡಬಿದ್ದು,
ಜಂಗಮದ ಪಾದತೀರ್ಥವನು
ಶುದ್ಧ ಸಾವಧಾನದಿಂದೆ
ತನ್ನ ಲಿಂಗಕ್ಕೆ ಅರ್ಪಿಸಿ, ಅಂಗಕ್ಕೆ ಕೊಳ್ಳಬಲ್ಲಡೆ,
ಆ ಮಹಾತ್ಮನೆ ಆದಿಪುರಾತನನೆಂಬೆ;
ಅಭೇದ್ಯ ಭೇದಕನೆಂಬೆ.
ಹೀಗಲ್ಲದೆ ಭಕ್ತಿಹೀನನಾಗಿ, ಯುಕ್ತಿಶೂನ್ಯನಾಗಿ,
ಗರ್ವದ ಪರ್ವತವನೇರಿ ಹೆಮ್ಮೆ ಹಿರಿತನವು ಮುಂದುಗೊಂಡು
ಆ ಜಂಗಮದ ಪಾದತೀರ್ಥವನು
ಕಾಲಿಲ್ಲದ ಹೆಳವನಂತೆ ತಾನಿದ್ದಲ್ಲಿಗೆ ತರಿಸಿಕೊಂಡು
ಅವಿಶ್ವಾಸದಿಂದೆ ಕೊಂಬ ಜೀವಗಳ್ಳರ
ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ./301
ಜಂಗಮದಲ್ಲಿ ರೂಪು ಕುರೂಪವ ನೋಡಲಾಗದು.
ಜಂಗಮದಲ್ಲಿ ಉತ್ತಮ ಮಧ್ಯಮವ ನೋಡಲಾಗದು.
ಜಂಗಮದಲ್ಲಿ ಕುಲಶೀಲವ ನೋಡಲಾಗದು.
ಜಂಗಮದಲ್ಲಿ ಉಚ್ಚ ನೀಚವ ನೋಡಲಾಗದು.
ಜಂಗಮದಲ್ಲಿ ಹಿರಿದು ಕಿರಿದು ಮಾಡುವ ಭಕ್ತಂಗೆ
ಭವ ಹಿಂಗದಯ್ಯ ಅಖಂಡೇಶ್ವರಾ./302
ಜಂಗಮಲಿಂಗವೇ ನಮೋ ನಮೋ.
ಜಂಗಮವ ನಿರ್ಮಿಸಿದ
ಪರಮಜಂಗಮಲಿಂಗವೆ ನಮೋ ನಮೋ.
ಜಗದ ಪ್ರಪಂಚುವನು ಹೊದ್ದದ
ಪರಮಜಂಗಮಲಿಂಗವೆ ನಮೋ ನಮೋ.
ಜಗವ ಪಾವನಮಾಡುವ
ಪರಮಜಂಗಮಲಿಂಗವೆ ನಮೋ ನಮೋ.
ಜಗದಾರಾಧ್ಯನಾದ ಪರಮಜಂಗಮಲಿಂಗವೆ ನಮೋ ನಮೋ.
ಅಗಮ್ಯ ಅಗೋಚರ ಅಪ್ರಮಾಣನಾದ ಅಖಂಡೇಶ್ವರನೆಂಬ
ಅನಾದಿ ಪರಮಜಂಗಮಲಿಂಗವೇ ನಮೋ ನಮೋ./303
ಜಂಗಮವ ಕಂಡು ವಂದನೆಯ ಮಾಡಿದರೆ
ಮುಂದೆ ಭಕ್ತಿ ಮುಕ್ತಿ ಪುಣ್ಯದ ಫಲವು ದೊರೆಕೊಂಬುದು ನೋಡಾ !
ಜಂಗಮವ ಕಂಡು ನಿಂದೆಯ ಮಾಡಿದರೆ
ಮುಂದೆ ಬಂಧನಕ್ಕೊಳಗಪ್ಪುದು ತಪ್ಪದು ನೋಡಾ
ಅಖಂಡೇಶ್ವರಾ./304
ಜಂಗಮವೇ ಜಗದೀಶನೆಂದು ನಂಬದವನ
ಜನ್ಮವ ಸುಡುಸುಡು !
ಜಂಗಮವೇ ಜಗಭರಿತನೆಂದು ನಂಬದವನ
ಜನ್ಮ ವ್ಯರ್ಥಜನ್ಮ !
ಜಂಗಮವೇ ಶಿವನೆಂದು ನಂಬದವನ
ಮನೆ ಸುಡುಗಾಡು ನೋಡಾ
ಅಖಂಡೇಶ್ವರಾ./305
ಜಂಗಮವೇ ಜಗದ್ಭರಿತನು ನೋಡಾ.
ಜಂಗಮವೇ ಜಗದೀಶ್ವರನು ನೋಡಾ.
ಜನನನಾಶ ಮರಣ ವಿರಹಿತನಾದ
ಒಬ್ಬ ಪರಮಜಂಗಮನ ದರ್ಶನವ ಮಾಡಿದರೆ
ಒಂದು ಕೋಟಿ ಲಿಂಗಂಗಳ ದರ್ಶನವಾದಂತೆ ನೋಡಾ.
ಆ ಜಂಗಮದ ಚರಣಕಮಲದ ಮೇಲೆ ಲಲಾಟವನ್ನಿಟ್ಟು
ಶರಣುಮಾಡಿದರೆ ಶತಕೋಟಿ ದೋಷ ಪರಿಹಾರ ನೋಡಾ.
ಅದೆಂತೆಂದೊಡೆ :
“ಪ್ರಭಾತೇ ಜಂಗಮೇ ದೃಷ್ಟೇ ಕೋಟಿಲಿಂಗಸ್ಯ ದರ್ಶನಮ್ |
ಲಲಾಟೇ ಚರಣಮಧ್ಯೇತು ಕೋಟಿಕರ್ಮ ವಿನಶ್ಯತಿ ||”
ಎಂದುದಾಗಿ, ಇಂತಪ್ಪ ಪರತರ ಪರಂಜ್ಯೋತಿ ಜಂಗಮವು
ನೀನೇ ಅಯ್ಯ ಅಖಂಡೇಶ್ವರಾ./306
ಜಗದ ಮಧ್ಯದಲ್ಲಿ ಶರಣ ಜನಿಸಿದಡೇನು
ಆ ಜಗದ ಸ್ವರೂಪನೆ ? ಅಲ್ಲಲ್ಲ.
ಅದೇನು ಕಾರಣವೆಂದೊಡೆ :
ಕೋಗಿಲೆಯ ತತ್ತಿಯನೊಡೆದು
ಕಾಗೆ ಮರಿಯಮಾಡಿ ಸಲಹಿದಡೇನು
ಅದು ತನ್ನ ಕೋಗಿಲೆಯ ಹಿಂಡ ಕೂಡುವುದಲ್ಲದೆ
ಮರಳಿ ಕಾಗೆಯ ಹಿಂಡ ಬೆರೆವುದೆ ಹೇಳಾ ?
ಲೋಕದ ಮಧ್ಯದಲ್ಲಿ ಅನಾದಿಶರಣನು
ಲೋಕೋಪಕಾರಕ್ಕಾಗಿ ಜನಿಸಿದಡೇನು
ತನ್ನ ಮುನ್ನಿನ ಶಿವತತ್ವವನೆ ಬೆರೆವನಲ್ಲದೆ
ಮರಳಿ ಲೋಕವ ಬೆರೆಯನು ನೋಡಾ,
ನಿಮ್ಮನರಿದ ಶಿವಜ್ಞಾನಿಶರಣನು ಅಖಂಡೇಶ್ವರಾ./307
ಜಗದೊಳಹೊರಗೆಲ್ಲ ತೆರಹಿಲ್ಲದೆ
ಸಂಭ್ರಮಿಸಿ ತುಂಬಿಕೊಂಡಿರ್ಪ ಪರವಸ್ತುವ
ಆಹ್ವಾನಿಸಿ ಕರೆದು ವಿಸರ್ಜಿಸಿ
ಬಿಡುವುದಕ್ಕೆ ಇಂಬುಂಟೇನೋ ಮರುಳೆ ?
ಇಂತೀ ಅಖಂಡ ಪರಿಪೂರ್ಣವಾದ
ಪರಬ್ರಹ್ಮದ ನಿಲವನರಿಯದೆ
ಖಂಡಿತಬುದ್ಧಿಯಿಂದ ಕಲ್ಪಿಸಿ
ಪೂಜಿಸಿ ಕರ್ಮದ ಬಲೆಯಲ್ಲಿ ಸಿಲ್ಕಿ
ಕಾಲಂಗೆ ಗುರಿಯಾಗಿ ಹೋದವರ
ಕಂಡು ಬೆರಗಾದೆನಯ್ಯ ಅಖಂಡೇಶ್ವರಾ./308
ಜಗವನೊಳಕೊಂಡ ಲಿಂಗವು
ಸೊಗಸಿಂದೆ ಎನ್ನ ಕರಸ್ಥಲಕ್ಕೆ ಬಂದಿರಲು,
ಕಂಡು ಹಗರಣವಾಯಿತ್ತೆನಗೆ.
ಗುರುಲಿಂಗಜಂಗಮಸ್ವರೂಪವಾಗಿ ಮೂರ್ತಿಗೊಂಡಿತ್ತು ನೋಡಾ.
ಆಹಾ ಎನ್ನ ಪುಣ್ಯವೇ ! ಆಹಾ ಎನ್ನ ಭಾಗ್ಯವೇ !
ಆಹಾ ಅಖಂಡೇಶ್ವರಾ, ನಿಮ್ಮ ಘನವ ಕಂಡು
ಎನ್ನ ಮನಕ್ಕೆ ಮಂಗಳವಾಯಿತ್ತು ನೋಡಾ./309
ಜಗವಾಗಬಲ್ಲ ನೋಡಿರೊ ನಮ್ಮ ಶಿವನು.
ಜಗವಾಗಲರಿಯದೆ ಇರಬಲ್ಲ ನೋಡಿರೊ ನಮ್ಮ ಶಿವನು.
ಅನಂತಕೋಟಿ ಬ್ರಹ್ಮಾಂಡಗಳ
ನಿಮಿಷಮಾತ್ರದಲ್ಲಿ ಪುಟ್ಟಿಸಬಲ್ಲ ನೋಡಿರೊ ನಮ್ಮ ಶಿವನು.
ಆ ಬ್ರಹ್ಮಾಂಡಗಳ ನಿಮಿಷ ಮಾತ್ರದಲ್ಲಿ
ಕೆಡಿಸಬಲ್ಲ ನೋಡಿರೊ ನಮ್ಮ ಶಿವನು.
ಇಂತಪ್ಪ ಶ್ರೀ ಮಹಾದೇವನ ಘನವನರಿಯದೆ
ಬರಿದೆ ದೇವರು ಉಂಟೆಂದು ಬೊಗಳುವ
ಭವಭಾರಿಗಳ ಮುಖವ
ನೋಡಲಾಗದಯ್ಯ ಅಖಂಡೇಶ್ವರಾ./310
ಜಗವೆಲ್ಲ ಮುನಿದಡಂಜೆ.
ಆದಿವ್ಯಾಧಿಗಳು ಬಂದು ತನುವನಂಡಲೆದಡಂಜೆ.
ರಾಜಭಯ, ಚೋರಭಯ, ಮೃಗಭಯ,
ಗ್ರಹಭಯಂಗಳು ಬಂದು
ನಾಲ್ದೆಸೆಯಲ್ಲಿ ಮುಸುಕಿದಡಂಜೆ.
ಮತ್ತೊಂದಕ್ಕಂಜಿ ಅಳುಕುವೆನಯ್ಯ,
ಪರರೊಡವೆ ಪರಸ್ತ್ರೀ ಪರಧನವ ಮುಟ್ಟಲಮ್ಮದೆ
ಅಖಂಡೇಶ್ವರಾ, ನೀ ಸಾಕ್ಷಿಯಾಗಿ./311
ಜಡೆ ಬೋಳು ಲೋಚು ದಿಗಂಬರವನು
ಅಳವಡಿಸಿಕೊಂಡು ನಟಿಸುವ ಅಣ್ಣಗಳಿರಾ.
ನಿಮ್ಮ ಜಡೆಯಾವುದು, ಬೋಳಾವುದು ?
ಲೋಚವಾವುದು, ದಿಗಂಬರವಾವುದು ?
ಬಲ್ಲರೆ ಹೇಳಿರೋ, ಅರಿಯದಿರ್ದಡೆ ನೀವು ಕೇಳಿರೋ.
ಭಕ್ತಿ ಜ್ಞಾನ ವೈರಾಗ್ಯದ ಪುಂಜವೇ ಜಡೆ.
ತನುವಿನ ಆಸೆ ಮನದ ವಾಸನಾ ಧರ್ಮವಳಿದುದೇ ಬೋಳು.
ಸಚರಾಚರ ಪ್ರಾಣಿಗಳ ಮೇಲಣ ಕರುಣವೇ ಲೋಚು.
ಸೃಷ್ಟಿ ಸ್ಥಿತಿ ಪ್ರಳಯಂಗಳು ನಷ್ಟವಾದುದೇ ದಿಗಂಬರ.
ಇಂತೀ ಭೇದವನರಿಯದೆ ತನುವಿನ ವ್ಯಸನ ಧರಿಸಿ
ಮನದ ಪ್ರಕೃತಿಯಲ್ಲಿ ಹರಿದಾಡುವ
ಬಿನುಗು ಜೀವಗಳ್ಳರ ಎನಗೊಮ್ಮೆ ತೋರದಿರಯ್ಯ
ಅಖಂಡೇಶ್ವರಾ./312
ಜನನವಿಲ್ಲದ ಶರಣ, ಮರಣವಿಲ್ಲದ ಶರಣ,
ಕಾಲನ ಬಾಧೆಗೆ ಹೊರಗಾದ ಶರಣ, ಕರ್ಮವಿರಹಿತ ಶರಣ,
ಮಾಯಾಮೋಹದ ಬೇರ ಕೊರೆದ ಶರಣ,
ಭವಜಾಲವ ಹರಿದ ಶರಣ,
ಅಖಂಡೇಶ್ವರಾ, ನಿಮ್ಮ ಶರಣನ ಮಹಿಮೆಯ
ನೀವೇ ಬಲ್ಲಿರಲ್ಲದೆ ಉಳಿದ ಕೀಟಕಪ್ರಾಣಿಗಳೆತ್ತ ಬಲ್ಲರಯ್ಯಾ./313
ಜಾತಿ ಧರ್ಮ ನೀತಿಯ ಬಿಟ್ಟು
ವಿಜಾತಿಗಳ ಎಂಜಲುತಿಂಬ ಪಾಪಕರ್ಮಿಗಳಾದಡಾಗಲಿ,
ಸರ್ವಪಾಪವ ಬಿಟ್ಟಾತನಾದಡಾಗಲಿ,
ರುದ್ರಾಕ್ಷಿಮಾಲೆಯ ಕೊರಳಲ್ಲಿ ಧರಿಸಿದರೆ
ಪರಮಪವಿತ್ರನೆನಿಸಿ ಹರನ ಕೈಲಾಸದಲ್ಲಿಪ್ಪನು ನೋಡಾ.
ಅದೆಂತೆಂದೊಡೆ :ಸ್ಕಂದಪುರಾಣೇ-
“ರುದ್ರಾಕ್ಷಮಾಲಿಕಾಂ ಕಂಠೇ ಧಾರಯೇತ್ ಭಕ್ತಿವರ್ಧಿತಃ |
ಪಾಪಕರ್ಮಾಪಿ ಯೋ ಮರ್ತ್ಯೋ ರುದ್ರಲೋಕೇ ಮಹೀಯತೇ ||
ಸೋಚ್ಛಿಷ್ಟೋ ವಾಪಿ ಕರ್ಮಸ್ಥೋ ಯುಕ್ತೋ ವಾ ಸರ್ವಪಾತಕೈ ಃ |
ಮುಚ್ಯತೇ ಸರ್ವಪಾಪೇಭ್ಯೋ ನರೋ ರುದ್ರಾಕ್ಷಧಾರಣಾತ್ ||”
ಎಂದುದಾಗಿ,
ಇಂತಪ್ಪ ರುದ್ರಾಕ್ಷಿಯು ನೀನೆ ಅಯ್ಯ ಅಖಂಡೇಶ್ವರಾ./314
ಜಾತಿಪೂರ್ವಾಶ್ರಯವ ಕಳೆದು, ಸೂತಕ ಪಾತಕಂಗಳನಳಿದು,
ಅಂಗತ್ರಯಗಳಲ್ಲಿ ಮುಸುಕಿದ ಅಜ್ಞಾನ ತಾಮಸವ ಜರಿದು,
ಲಿಂಗತ್ರಯಂಗಳ ಸಂಗಸಮರಸವನರಿದ ಶರಣಂಗೆ
ಉತ್ಪತ್ತಿ-ಸ್ಥಿತಿ-ಲಯಂಗಲಿಲ್ಲ ನೋಡಾ !
ಅದೇನು ಕಾರಣವೆಂದೊಡೆ :
ಇಷ್ಟಲಿಂಗದಲ್ಲಿ ಉತ್ಪತ್ತಿ, ಪ್ರಾಣಲಿಂಗದಲ್ಲಿ ರಕ್ಷಣೆ,
ಭಾವಲಿಂಗದಲ್ಲಿ ಬಯಲನೈದಿದ ಮಹಾಶರಣಂಗೆ
ಹುಟ್ಟುಹೊಂದುಗಳು ನಷ್ಟವಾದುವಯ್ಯ ಅಖಂಡೇಶ್ವರಾ./315
ಜೀವದೊಡೆಯನನಗಲಿ ಜೀವಿಸಲಾರೆನವ್ವಾ.
ನಿಮಿಷ ನಿಮಿಷಾರ್ಧವಾದಡೂ ಬಾಳಲಾರೆನವ್ವಾ.
ಹೇಳಲಿನ್ನೇನ ? ಸಾವು ಬಂದಿತ್ತವ್ವಾ.
ಕಂಡಡೆ ಹೇಳಿರವ್ವಾ.
ನಮ್ಮ ತಂಗಿಯ ಭಾವನ ಕರೆದು ತೋರಿರವ್ವಾ
ಅಖಂಡೇಶ್ವರನೆಂಬ ನಲ್ಲನ./316
ಜೀವಭಾವದಿಂದೆ ಜೀವನ ತಿಂದು
ಜೀವಿಸಿ ಜನನ ಮರಣಂಗಳಿಂದೆ
ದುಃಖಬಡುತಿರ್ಪುವು ನೋಡಾ ಸಕಲಪ್ರಾಣಿಗಳು.
ಅದೆಂತೆಂದೊಡೆ :
“ಪೃಥ್ವಿಬೀಜಂ ತಥಾ ಮಾಂಸಂ ಅಪ್ದ್ರವ್ಯಂ ಸುರಾಮಯಂ |
ಆತ್ಮ ಜೀವಸಮಾಯುಕ್ತಃ ಜೀವಃ ಜೀವೇನ ಭಕ್ಷ್ಯತೇ ||”
ಎಂದುದಾಗಿ,
ಇಂತಪ್ಪ ಜೀವಮಯವಾದ ಪದಾರ್ಥವನು ಶುದ್ಧಸಂಸ್ಕಾರವ ಮಾಡಿ,
ಲಿಂಗಜಂಗಮದ ಮುಖದಲ್ಲಿ ಸಮರ್ಪಿಸಿ,
ಲಿಂಗಜಂಗಮದ ಮುಖದಲ್ಲಿ ಒದಗಿದ
ಪರಮಪ್ರಸಾದವನು ಭೋಗಿಸುವ ಸದ್ಭಕ್ತಂಗೆ
ಜನನಮರಣಂಗಳು ದೂರವಾಗಿರ್ಪುವಯ್ಯಾ ಅಖಂಡೇಶ್ವರಾ. /317
ಜ್ಞಾನದಿಂದಾದಡಾಗಲಿ ಅಜ್ಞಾನದಿಂದಾದಡಾಗಲಿ,
ಭೀತಿಯಿಂದಾದಡಾಗಲಿ ನಿರ್ಭಿತಿಯಿಂದಾದಡಾಗಲಿ,
ಸದ್ಭಾವದಿಂದಾದಡಾಗಲಿ ದುರ್ಭಾವದಿಂದಾದಡಾಗಲಿ,
ಆವ ಪರಿಯಿಂದಾದಡಾಗಲಿ ಪರಮಶಿವಲಿಂಗದರ್ಶನಮಾತ್ರದಿಂದ
ಜಾತಿಸ್ಮರತ್ವ ಮಹದೈಶ್ವರ್ಯ ಪರಮಾಯುಷ್ಯ ಶುದ್ಧವಿದ್ಯಂಗಳು
ಸಮ್ಯಕ್ಜ್ಞಾನ ಸಕಲಸಂಪತ್ತುಗಳು ದೊರೆಕೊಂಬುವು
ನೋಡಾ ಅಖಂಡೇಶ್ವರಾ./318
ತಂದೆ ಕೇಳಯ್ಯಾ ಲಿಂಗವೆ.
ನಾನು ಹಿಂದಣ ಕರ್ಮವಾಸನೆಯಿಂದೆ ಹುಟ್ಟಿದೆನೋ ?
ನಿನ್ನ ಚಿದಂಶಿಕನಾಗಿ ಹುಟ್ಟಿದೆನೋ ?
ಎನಗೆ ಈ ಉಭಯದ ಕೀಲ ತಿಳಿಯಬಾರದು.
ನೀನೊಲಿದು ಕರುಣಿಸಯ್ಯಾ ಶಿವನೆ.
ಎನ್ನ ಮನದ ಸಂಕಲ್ಪದ ಅನುಮಾನವ ಪರಿಹರಿಸಯ್ಯಾ
ಅಖಂಡೇಶ್ವರಾ./319
ತಂದೆ ನೀನೆ ಅಯ್ಯ ಎನಗೆ,
ತಾಯಿ ನೀನೆ ಅಯ್ಯ ಎನಗೆ,
ಬಂಧು ನೀನೆ ಅಯ್ಯ ಎನಗೆ,
ಬಳಗ ನೀನೆ ಅಯ್ಯ ಎನಗೆ,
ಗತಿಯು ನೀನೆ ಅಯ್ಯ ಎನಗೆ,
ಮತಿಯು ನೀನೆ ಅಯ್ಯ ಎನಗೆ,
ಸಕಲ ಚೈತನ್ಯವು ನೀನೆ ಅಯ್ಯ ಎನಗೆ.
ಅಖಂಡೇಶ್ವರಾ, ನೀನೆ ದಿಕ್ಕಲ್ಲದೆ
ಮತ್ತಾರೂ ಇಲ್ಲವಯ್ಯ ಎನಗೆ./320
ತಂದೆ-ತಾಯಿ, ಬಂಧು-ಬಳಗ, ಹೆಂಡಿರು-ಮಕ್ಕಳು,
ತೊತ್ತು-ಬಂಟರುಗಳಿಗೆ ಒಬ್ಬನೆ ಗುರುವು.
ಒಂದೇ ದೀಕ್ಷೆಯಾದಡೆ ಅತ್ಯಂತ ಉತ್ತಮ ನೋಡಾ
“ಪತಿಪತ್ನೀಭ್ರಾತೃಪುತ್ರದಾಸ್ಯೋ ಗೃಹಚರಾಶ್ಚ ಯೇ |
ಏಕ ಏವ ಗುರುಸ್ತೇಷಾಂ ದೀಕ್ಷೈಕಾ ತು ವಿಶೇಷ್ಯತೇ ||”
ಇದಲ್ಲದೆ ಬಹುಮುಖದ ಗುರು, ಬಹುಮುಖದ ದೀಕ್ಷೆಯಾದಡೆ,
ಅಘೋರನರಕ ತಪ್ಪದಯ್ಯ ಅಖಂಡೇಶ್ವರಾ./321
ತನು ಗುರುವಾದುವೆ ಶೀಲ.
ಮನ ಲಿಂಗವಾದುದೆ ಶೀಲ.
ಧನ ಜಂಗಮವಾದುದೆ ಶೀಲ.
ಅಖಂಡೇಶ್ವರನೆಂಬ ಪರಶಿವನು
ತಾನೆ ಆಗಿ ಸುಳಿವುದೆ ಮಹಾಶೀಲ ನೋಡಿರಣ್ಣಾ. /322
ತನು ನಿಮ್ಮದಾದ ಬಳಿಕ
ಎನಗೆ ಬೇರೆ ತನುವಿಲ್ಲವಯ್ಯಾ.
ಮನ ನಿಮ್ಮದಾನ ಬಳಿಕ
ಎನಗೆ ಬೇರೆ ಮನವಿಲ್ಲವಯ್ಯಾ.
ಧನ ನಿಮ್ಮದಾದ ಬಳಿಕ
ಎನಗೆ ಬೇರೆ ಧನವಿಲ್ಲವಯ್ಯಾ ಅಖಂಡೇಶ್ವರಾ./323
ತನು ಲಿಂಗವಾದ ಶರಣಂಗೆ ತಾಪತ್ರಯಂಗಳಿಲ್ಲ.
ಮನ ಲಿಂಗವಾದ ಶರಣಂಗೆ ಮಾಯಾವಾಸನಂಗಳಿಲ್ಲ.
ಪ್ರಾಣ ಲಿಂಗವಾದ ಶರಣಂಗೆ ಪ್ರಪಂಚಿನ ಕುರುಹಿಲ್ಲ.
ಸರ್ವಾಂಗಲಿಂಗವಾದ ಶರಣಂಗೆ
ಗರ್ವ ಅಹಂಕಾರವಿಲ್ಲ ನೋಡಾ ಅಖಂಡೇಶ್ವರಾ./324
ತನುವ ಕೊಟ್ಟು ನಿಮ್ಮನೊಲಿಸಿಹೆನೆಂದಡೆ,
ಆ ಭಾವವೆನಗೆ ತಿಳಿಯದು.
ಮನವ ಕೊಟ್ಟು ನಿಮ್ಮನೊಲಿಸಿಹೆನೆಂದಡೆ,
ಆ ಭಾವವೆನಗೆ ತಿಳಿಯದು.
ಧನವ ಕೊಟ್ಟು ನಿಮ್ಮನೊಲಿಸಿಹೆನೆಂದಡೆ,
ಆ ಭಾವವೆನಗೆ ತಿಳಿಯದು.
ಸತಿ ಇದ್ದ ಮನೆಗೆ ಪತಿಯೊಲಿದು ಬರುವಂತೆ
ನೀವೇ ಒಲಿದು ಬಂದು ಎನ್ನ ತನು ಮನ ಧನದಲ್ಲಿ
ಭರಿತನಾಗಯ್ಯ ಅಖಂಡೇಶ್ವರಾ./325
ತನುವ ಗುರುವಿಂಗೆ ಕೊಟ್ಟು ಗುರುಭಕ್ತನಾಗಬೇಕು.
ಮನವ ಲಿಂಗಕ್ಕೆ ಕೊಟ್ಟು ಲಿಂಗಭಕ್ತನಾಗಬೇಕು.
ಧನವ ಜಂಗಮಕ್ಕೆ ಕೊಟ್ಟು ಜಂಗಮಭಕ್ತನಾಗಬೇಕು.
ಇಂತೀ ತ್ರಿವಿಧಭಕ್ತಿಯ ವರ್ಮವನರಿಯದವರ ಮೆಚ್ಚ
ನಮ್ಮ ಅಖಂಡೇಶ್ವರ./326
ತನುವ ನಿಮಗೆ ಸಮರ್ಪಿಸಿಹೆನೆಂದಡೆ ತನುವಿಲ್ಲವಯ್ಯ ಎನಗೆ.
ಅದೇನುಕಾರಣವೆಂದೊಡೆ,
ನೀವು ಗುರುವಾಗಿ ಬಂದೆನ್ನ ತನುವನೊಳಕೊಂಡಿರ್ಪಿರಾಗಿ.
ಮನವ ನಿಮಗರ್ಪಿಸಿಹೆನೆಂದಡೆ ಮನವಿಲ್ಲವಯ್ಯ ಎನಗೆ.
ಅದೇನುಕಾರಣವೆಂದೊಡೆ,
ನೀವು ಲಿಂಗವಾಗಿ ಬಂದೆನ್ನ ಮನವನೊಳಕೊಂಡಿರ್ಪಿರಾಗಿ.
ಧನವ ನಿಮಗರ್ಪಿಸಿಹೆನೆಂದಡೆ ಧನವಿಲ್ಲವಯ್ಯ ಎನಗೆ.
ಅದೇನುಕಾರಣವೆಂದೊಡೆ,
ನೀವು ಜಂಗಮವಾಗಿ ಬಂದೆನ್ನ ಧನವನೊಳಕೊಂಡಿರ್ಪಿರಾಗಿ.
ಅದು ಕಾರಣ ಎನ್ನ ತನುವೆ ಗುರು, ಮನವೇ ಲಿಂಗ,
ಧನವೇ ಜಂಗಮವಾಯಿತ್ತಾಗಿ,
ಅಖಂಡೇಶ್ವರಾ, ನಾ ನಿಮ್ಮೊಳಡಿಗಿರ್ದೆನಯ್ಯ./327
ತನುವ ನಿಮಗೊಪ್ಪಿಸಿ ತನುಶುದ್ಧನಾಗಲರಿಯೆನಯ್ಯ ನಾನು.
ಮನವ ನಿಮಗೊಪ್ಪಿಸಿ ಮನಶುದ್ಧನಾಗಲರಿಯೆನಯ್ಯ ನಾನು.
ಧನವ ನಿಮಗೊಪ್ಪಿಸಿ ಧನಶುದ್ಧನಾಗಲರಿಯೆನಯ್ಯ ನಾನು.
ಈ ತನುಮನಧನದಲ್ಲಿ ಶುದ್ಧನಲ್ಲದ ಪ್ರಪಂಚಿನ
ಡಂಭಕ ನಾನಯ್ಯ ಅಖಂಡೇಶ್ವರಾ./328
ತನುವಂಚನೆಯಿಲ್ಲದೆ ಮಾಡುವಾತನೇ ಭಕ್ತ ;
ಮನವಂಚನೆಯಿಲ್ಲದೆ ಕೂಡುವಾತನೇ ಭಕ್ತ ;
ಧನವಂಚನೆಯಲ್ಲಿದೆ ನೀಡುವಾತನೇ
ಸದ್ಭಕ್ತ ನೋಡಾ ಅಖಂಡೇಶ್ವರಾ./329
ತನುವಿನ ಕೈಯಲ್ಲಿ ಮೂರ್ತಿಗೊಂಡಿರ್ದ
ಘನಮಹಾಲಿಂಗದೊಡನೆ
ಮನ ಬಂದು ಬೇಟವ ಮಾಡಲು
ತನುಮನವೆರಡು ಉರಿನುಂಗಿನ ಕರ್ಪುರದಂತೆ ಕಾಣಾ
ಅಖಂಡೇಶ್ವರಾ./330
ತನುವಿನ ಕೈಯಲ್ಲಿರ್ದ ಘನಲಿಂಗವನು
ಮನೋಮಂಟಪದಲ್ಲಿ ಕುಳ್ಳಿರಿಸಿ
ನೆನಹಿನ ಪರಿಣಾಮವ ಕೊಡಬಲ್ಲಾತನೆ ಶರಣನು.
ಮತ್ತಾ ಲಿಂಗವನು ಕರ್ಣಮಂಟಪದಲ್ಲಿ ಕುಳ್ಳಿರಿಸಿ
ಶಬ್ದ ಪರಿಣಾಮವ ಕೊಡಬಲ್ಲಾತನೆ ಶರಣನು.
ಲಿಂಗವನು ಘ್ರಾಣಮಂಟಪದಲ್ಲಿ ಕುಳ್ಳಿರಿಸಿ
ಗಂಧಪರಿಣಾಮವ ಕೊಡಬಲ್ಲಾತನೆ ಶರಣನು.
ಲಿಂಗವನು ಜಿಹ್ವಾಮಂಟಪದಲ್ಲಿ ಕುಳ್ಳಿರಿಸಿ
ರುಚಿಪರಿಣಾಮವ ಕೊಡಬಲ್ಲಾತನೆ ಶರಣನು.
ಲಿಂಗವನು ಸರ್ವಾಂಗಮಂಟಪದಲ್ಲಿ ಕುಳ್ಳಿರಿಸಿ
ಸರ್ವಪರಿಣಾಮವನು ಕೊಡಬಲ್ಲಾತನೆ ಶರಣನು.
ಅಲ್ಲದೆ ಉಳಿದ ಅಂಗವಿಕಾರ ಆತ್ಮಸುಖಿಗಳೆಲ್ಲ
ಭವದ ಕುರಿಗಳಯ್ಯಾ ಅಖಂಡೇಶ್ವರಾ./331
ತನುವಿನ ಕೊನೆಯಲ್ಲಿ ನೇತ್ರದ ಅನುವ ಕಂಡೆನಯ್ಯಾ
ಆ ನೇತ್ರದ ಕೊನೆಯಲ್ಲಿ ಮನದ ಸುಳುಹು ಕಂಡೆನಯ್ಯಾ.
ಆ ಮನದ ಕೊನೆಯಲ್ಲಿ ಘನಮಹಾಶಿವನ ಕಂಡೆನಯ್ಯಾ.
ಆ ಶಿವನೊಳಗೆ ಅನಂತಕೋಟಿಬ್ರಹ್ಮಾಂಡಗಳಡಗಿರ್ಪುದ ಕಂಡು
ಬೆರಗಾದೆನಯ್ಯಾ ಅಖಂಡೇಶ್ವರಾ./332
ತನುವಿನ ಪ್ರಕೃತಿಯಳಿದು, ಮನದ ಮಾಯವಡಗಿ,
ಆತ್ಮನ ಅಹಂಮಮತೆ ಕೆಟ್ಟು, ತಾನೆ ತಾನಾಗಿ ಮಾಡಿ ಮೈಮರೆದ,
ಮಹಾಮಹಿಮರ ತೋರಿಸಿ ಬದುಕಿಸಯ್ಯ
ಎನ್ನ ಅಖಂಡೇಶ್ವರಾ./333
ತನುವಿನ ಮಧ್ಯದಲ್ಲಿ ಹೂಳಿರ್ದ ಇಷ್ಟಲಿಂಗದಲ್ಲಿ
ತನುವನಿಕ್ಷೇಪವ ಮಾಡಬಲ್ಲರೆ ಅನುಭಾವಿಯೆಂಬೆನು.
ಮನದ ಮಧ್ಯದಲ್ಲಿ ಹೂಳಿರ್ದ ಪ್ರಾಣಲಿಂಗದಲ್ಲಿ
ಮನವ ನಿಕ್ಷೇಪವ ಮಾಡಬಲ್ಲರೆ ಅನುಭಾವಿಯೆಂಬೆನು.
ಜೀವನ ಮಧ್ಯದಲ್ಲಿ ಹೂಳಿರ್ದ ಭಾವಲಿಂಗದಲ್ಲಿ
ಜೀವನ ನಿಕ್ಷೇಪವ ಮಾಡಬಲ್ಲರೆ ಅನುಭಾವಿಯೆಂಬೆನು.
ಇಂತೀ ಅನುಭಾವದ ಅನುವನರಿಯದೆ
ತನುವಿನ ಕೈಯಲ್ಲಿ ಘನಲಿಂಗವ ಹಿಡಿದಿರ್ದಡೇನು
ಅದು ಹುಟ್ಟುಗುರುಡನ ಕೈಯ್ಯ ಕನ್ನಡಿಯ
ಕೊಟ್ಚಂತೆ ಕಾಣಾ ಅಖಂಡೇಶ್ವರಾ./334
ತನುವಿನ ವಿಕಾರದ ಕತ್ತಲೆಯಲ್ಲಿ ಸಿಲ್ಕಿ,
ಕಂಗೆಟ್ಟು ಕಳವಳಿಸಿ ತೊಳಲಿ ಬಳಲಿದೆನಯ್ಯ.
ಮನದ ವಿಕಾರದ ಮರವೆಯಲ್ಲಿ ಸಿಲ್ಕಿ,
ಮಣ್ಣುಮಸಿಯಾಗಿ ಬಣ್ಣಗೆಟ್ಟೆನಯ್ಯ.
ಈ ತನುಮನದ ವಿಕಾರವ ಮಾಣಿಸಿ,
ನಿಮ್ಮ ಭಕ್ತಿಯ ವಿಕಾರದಲ್ಲಿರಿಸಿ ಸಲಹಯ್ಯ ಎನ್ನ ಅಖಂಡೇಶ್ವರಾ./335
ತನುವಿನಲ್ಲಿ ಗುರುಭಕ್ತಿಯಿಂಬುಗೊಂಡು,
ಮನದಲ್ಲಿ ಲಿಂಗಭಕ್ತಿಯಿಂಬುಗೊಂಡು,
ಆತ್ಮದಲ್ಲಿ ಜಂಗಮಭಕ್ತಿಯಿಂಬುಗೊಂಡು,
ಪ್ರಾಣದಲ್ಲಿ ಪ್ರಸಾದಭಕ್ತಿಯಿಂಬುಗೊಂಡು,
ಇಂತೀ ಚತುರ್ವಿಧಸ್ಥಾನದಲ್ಲಿ ಚತುರ್ವಿಧಭಕ್ತಿ
ನೆಲೆಗೊಂಡ ಮಹಾಭಕ್ತರ ತೋರಿಸಿ ಬದುಕಿಸಯ್ಯಾ ಎನ್ನ
ಅಖಂಡೇಶ್ವರಾ./336
ತನುವಿನವಗುಣಂಗಳ ತರಿದೊಟ್ಟಿ,
ಮನದ ಮಾಯಾವಿಕಾರದ ಬಾಯ ಟೊಣೆದು,
ಕರಣಂಗಳ ಕತ್ತಲೆಯ ಕಡೆಗೊದ್ದು ಎಡಬಲಂಗಳ ತಡಹಿ,
ನಡುಮಧ್ಯಮಾರ್ಗವಿಡಿದು ಸುಷುಮ್ನಗಿರಿಯನಡರಿ,
ಕಡೆಮೊದಲಿಲ್ಲದೆ ಬೆಳಗಿನೊಳಗಡಗಿ ಬೆಳಗುತಿರ್ದೆನಾಗಿ
ನಾನು ಪರಮಶಿವಯೋಗಿಯಾದೆನಯ್ಯಾ ಅಖಂಡೇಶ್ವರಾ./337
ತನುವಿಲ್ಲದೆ ಮಾಡಿ,
ಧನವಿಲ್ಲದೆ ಮನವಿಲ್ಲದೆ ಕೂಡಬಲ್ಲಾತನೆ
ಮಹಾಭಕ್ತನು ನೋಡಾ ಅಖಂಡೇಶ್ವರಾ./338
ತನುವಿಹ ಪರಿಯಂತರ ನಿಮ್ಮ ಪೂಜಿಸಿದೆನಯ್ಯಾ.
ಮನವಿಹ ಪರಿಯಂತರ ನಿಮ್ಮ ನೆನೆದೆನಯ್ಯಾ.
ಭಾವವಿಹ ಪರಿಯಂತರ ನಿಮ್ಮ ಬಯಸಿದೆನಯ್ಯಾ.
ಇಂತಿವೆಲ್ಲವು ನಿಮ್ಮಲ್ಲಿ ಸಯವಾದ ಬಳಿಕ
ಗಜಭುಕ್ತಕಪಿತ್ಥದಂತಿರ್ದೆನಯ್ಯಾ ಅಖಂಡೇಶ್ವರಾ. /339
ತನುವೆ ಗುರುವೆಂದರಿದ ಬಳಿಕ
ಬಿಡದೆ ಗುರುಭಕ್ತಿಯ ಮಾಡಲೇಬೇಕು.
ಮನವೆ ಲಿಂಗವೆಂದರಿದ ಬಳಿಕ
ಬಿಡದೆ ಲಿಂಗಪೂಜೆಯ ಮಾಡಲೇಬೇಕು.
ಧನವೆ ಜಂಗಮವೆಂದರಿದ ಬಳಿಕ
ಬಿಡದೆ ಜಂಗಮಕ್ಕೆ ಬೇಡಿದ ಪದಾರ್ಥವನೀಯಲೇಬೇಕು.
ಇಂತಪ್ಪ ಸದ್ಭಕ್ತನ ತೋರಿ ಬದುಕಿಸಯ್ಯ ಎನ್ನ
ಅಖಂಡೇಶ್ವರಾ./340
ತನುವೆಂಬ ಗುಡಿಯೊಳಗೆ, ಮನವೆಂಬ ಸಿಂಹಾಸನವನಿಕ್ಕಿ,
ಘನಮಹಾಲಿಂಗವ ಮೂರ್ತಿಗೊಳಿಸಿ,
ಸಕಲ ಕರಣಂಗಳಿಂದೆ ಪೂಜೋಪಚಾರವ ಶೃಂಗರಿಸಬಲ್ಲರೆ
ಘನಕ್ಕೆ ಘನಮಹಿಮನೆಂಬೆನಯ್ಯಾ ಅಖಂಡೇಶ್ವರಾ./341
ತನ್ನ ಎಡೆಯಲ್ಲಿ ಕತ್ತೆ ಸತ್ತುಬಿದ್ದುದನರಿಯದೆ
ಪರರೆಡೆಯಲ್ಲಿ ನೊಣವನರಸುವ ಮರುಳಮಾನವನಂತೆ,
ತನ್ನಂಗಮನದ ಅವಗುಣಂಗಳ ತೊಲಗಿ ನೂಕಲರಿಯದೆ
ಅನ್ಯರಲ್ಲಿ ಅವಗುಣವ ಸಂಪಾದನೆಯ ಮಾಡುವ
ಕುನ್ನಿಗಳ ಎನಗೊಮ್ಮೆ ತೋರದಿರಯ್ಯ ಅಖಂಡೇಶ್ವರಾ. /342
ತನ್ನ ತಾನರಿಯದೆ ಅನ್ಯರ ಗುಣಾವಗುಣಗಳ
ಎತ್ತಿ ಎಣಿಸುವನ್ನಕ್ಕ ಶಿವಶರಣನೆಂತಪ್ಪನಯ್ಯ ?
ಸಜ್ಜನ ಸದ್ಭಾವಿ ಸತ್ಪುರುಷರುಗಳ ಮನನೋವಂತೆ
ಹಳಿದು ಹಾಸ್ಯವ ಮಾಡಿ ದೂಷಿಸುವನ್ನಕ್ಕ ಶಿವಶರಣನೆಂತಪ್ಪನಯ್ಯ ?
ಗರ್ವಾಹಂಕಾರವೆಂಬ ಹಿರಿಯ ಪರ್ವತವನೇರಿ
ಮರವೆಯಿಂದೆ ಮುಂದುಗಾಣದೆ ಮನದ ಪ್ರಪಂಚಿನಲ್ಲಿ ನಡೆದು
ಜನನ ಮರಣಂಗಳೆಂಬ ಭವಜಾಲದಲ್ಲಿ ಸಿಲ್ಕಿ
ದುಃಖವ ಪಡುವನ್ನಕ್ಕ ಶಿವಶರಣನೆಂತಪ್ಪನಯ್ಯ ಅಖಂಡೇಶ್ವರಾ./343
ತನ್ನನಲ್ಲದೆ ಅನ್ಯವ ನೋಡೆನವ್ವಾ.
ತನ್ನನಲ್ಲದೆ ಅನ್ಯವ ಮುಟ್ಟೆನವ್ವಾ.
ತನ್ನನಲ್ಲದೆ ಅನ್ಯವ ನೆನೆಯೆನವ್ವಾ.
ತನ್ನನಲ್ಲದೆ ಅನ್ಯವ ಬಯಸೆನವ್ವಾ.
ತನ್ನನಗಲಿ ಇನ್ನೆಂತು ಬದುಕುವೆನವ್ವಾ ?
ಅಖಂಡೇಶ್ವರನೆಂಬ ನಲ್ಲನ ಮುನಿಸನು ತಿಳುಹಿರವ್ವಾ. /344
ತಮ್ಮೊಳಗೆ ತಾವು ತಿಳಿಯಲರಿಯರು,
ಪರವಾಗಿ ಹೇಳಿದರೆ ಗ್ರಹಿಸರು,
ದುರುಳಬುದ್ಧಿಯಿಂದ ನಡೆವ
ದುರಾಚಾರಿಗಳ ಮುಖವ ನೋಡಲಾಗದಯ್ಯ ಅಖಂಡೇಶ್ವರಾ./345
ತಾ ಒಳ್ಳೆಯವನಾದಡೆ ಸರ್ವರೂ ತನಗೆ
ಒಳ್ಳೆಯವರಾಗಿರ್ಪರು.
ತಾ ಹೀನನಾದಡೆ ಸರ್ವರೂ ತನಗೆ ಹೀನರಾಗಿರ್ಪರು.
ತಾ ಒಳ್ಳೆಯವನಾಗಿ ಸರ್ವರೂ ತನಗೆ ಹೀನರಾದಡೆ
ಅದು ತನ್ನ ಪೂರ್ವದ ಕರ್ಮ.
ತಾ ಹೀನನಾಗಿ ಸರ್ವರೂ ತನಗೆ ಒಳ್ಳೆಯವರಾದಡೆ
ಅದು ತನ್ನ ದೈವದ ಬಲವು ನೋಡಾ ಅಖಂಡೇಶ್ವರಾ./346
ತಾನೇ ಗುರುವಾಗಿ ಗುರುಭಕ್ತಿಯ ಮಾಡುತಿರ್ಪನು.
ತಾನೇ ಲಿಂಗವಾಗಿ ಲಿಂಗಪೂಜೆಯ ಮಾಡುತಿರ್ಪನು.
ತಾನೇ ಜಂಗಮವಾಗಿ ಜಂಗಮದಾಸೋಹವ ಮಾಡುತಿರ್ಪನು.
ತಾನೇ ಪಾದೋದಕ ಪ್ರಸಾದವಾಗಿ
ಪಾದೋದಕ ಪ್ರಸಾದವ ಸೇವನೆಯ ಮಾಡುತಿರ್ಪನು.
ತಾನೇ ವಿಭೂತಿ ರುದ್ರಾಕ್ಷಿಯಾಗಿ ವಿಭೂತಿ ರುದ್ರಾಕ್ಷಿಯ ಧರಿಸುತಿರ್ಪನು.
ತಾನೇ ಮಂತ್ರವಾಗಿ ಶಿವಮಂತ್ರವ ಜಪಿಸುತಿರ್ಪನು.
ಇಂತೀ ಅಷ್ಟಾವರಣವೇ ಅಂಗವಾಗಿ, ಅಷ್ಟಾವರಣವೆ ಲಿಂಗವಾಗಿ,
ಅಷ್ಟಾವರಣವೇ ಸಂಗವಾಗಿ, ಅಷ್ಟಾವರಣವೇ ಸಮರಸವಾಗಿರ್ಪ
ಸದ್ಭಕ್ತನು ಸಾಕ್ಷಾತ್ ಪರವಸ್ತುವು ತಾನೇ ಅಯ್ಯಾ ಅಖಂಡೇಶ್ವರಾ./347
ತಾಮಸಗುಣಂಗಳಲ್ಲಿ ಬಿದ್ದು,
ತ್ವರಿತದ ವಿಷಯದಲ್ಲಿ ಹರಿದಾಡಿ,
ಭವಜಾಲದಲ್ಲಿ ಸತ್ತು ಹುಟ್ಟುವಾತ
ಗುರುಸ್ಥಲಕ್ಕೆ ಸಲ್ಲ, ಚರಸ್ಥಲಕ್ಕೆ ಸಲ್ಲ, ಪರಸ್ಥಲಕ್ಕೆ ಸಲ್ಲ.
ಗುರುಸ್ಥಲವೆಂದಡೆ ಘನಲಿಂಗಸ್ಥಲವು.
ಚರಸ್ಥಲವೆಂದಡೆ ಅತೀತಸ್ಥಲವು.
ಪರಸ್ಥಲವೆಂದಡೆ ವಿರಕ್ತಿಸ್ಥಲವು.
ಇಂತೀ ತ್ರಿವಿಧಸ್ಥಲದ ನಿರ್ಣಯವ ಬಲ್ಲಾತನೆ
ಗುರುಸ್ಥಲಕ್ಕೆ ಯೋಗ್ಯನೆಂಬೆನು ;
ಚರಸ್ಥಲಕ್ಕೆ ಯೋಗ್ಯನೆಂಬೆನು ;
ಪರಸ್ಥಲಕ್ಕೆ ಯೋಗ್ಯನೆಂಬೆನು.
ಇಂತೀ ತ್ರಿವಿಧನಿರ್ಣಯವನರಿಯದೆ
ತ್ರಿವಿಧಮಲದಲ್ಲಿ ಭಂಗಿತರಾದವರ
ಎನಗೊಮ್ಮೆ ತೋರದಿರಯ್ಯಾ
ಅಖಂಡೇಶ್ವರಾ ನಿಮ್ಮ ಧರ್ಮ./348
ತಾರಕಾಕೃತಿ, ನಕಾರಪ್ರಣಮ, ಆಧಾರಚಕ್ರ,
ಸದ್ಭಕ್ತನೆ ಅಂಗ, ಸುಚಿತ್ತವೆ ಹಸ್ತ, ಆಚಾರಲಿಂಗ,
ಘ್ರಾಣವೆಂಬ ಮುಖ, ಕ್ರಿಯಾಶಕ್ತಿ,
ಶ್ರದ್ಧಾಭಕ್ತಿ, ಸುಗಂಧಪದಾರ್ಥ,
ಗಂಧಪ್ರಸಾದ, ನಿವೃತ್ತಿಕಲೆ,
ಕರ್ಮಸಾದಾಖ್ಯ, ಸತ್ತುವೆಂಬ ಲಕ್ಷಣ,
ಪರವೆಂಬ ಸಂಜ್ಞೆ, ಋಗ್ವೇದ-
ಇಂತಿವೆಲ್ಲವು ಇಷ್ಟಲಿಂಗದ ವೃತ್ತದಲ್ಲಿ ಸಂಬಂಧವು.
ದಂಡಕಾಕೃತಿ, ಮಕಾರಪ್ರಣಮ, ಸಾಧಿಷ್ಠಾನಚಕ್ರ,
ಮಹೇಶ್ವರನೆ ಅಂಗ, ಸುಬುದ್ಧಿಯೆ ಹಸ್ತ,
ಗುರುಲಿಂಗ, ಜಿಹ್ವೆಯೆಂಬ ಮುಖ, ಜ್ಞಾನಶಕ್ತಿ,
ನೈಷ್ಠಿಕಭಕ್ತಿ , ಸುರಸಪದಾರ್ಥ, ರಸಪ್ರಸಾದ, ಪ್ರತಿಷ್ಠಾಕಲೆ,
ಕರ್ತೃಸಾದಾಖ್ಯ, ಚಿತ್ತುವೆಂಬ ಲಕ್ಷಣ,
ಗೂಢವೆಂಬ ಸಂಜ್ಞೆ, ಯುಜುವರ್ೆದ
ಇಂತಿವೆಲ್ಲವು ಇಷ್ಟಲಿಂಗದ ಕಟಿಯಲ್ಲಿ ಸಂಬಂಧವು.
ಕುಂಡಲಾಕೃತಿ, ಶಿಕಾರಪ್ರಣಮ, ಮಣಿಪೂರಕಚಕ್ರ, ಪ್ರಸಾದಿಯೆ ಅಂಗ,
ನಿರಹಂಕಾರವೆ ಹಸ್ತ , ಶಿವಲಿಂಗನೇತ್ರವೆಂಬ ಮುಖ, ಇಚ್ಛಾಶಕ್ತಿ ,
ಸಾವಧಾನಭಕ್ತಿ , ಸುರೂಪುಪದಾರ್ಥ, ರೂಪುಪ್ರಸಾದ, ವಿದ್ಯಾಕಲೆ,
ಮೂರ್ತಿಸಾದಾಖ್ಯ, ಆನಂದವೆಂಬ ಲಕ್ಷಣ,
ಶರೀರಸ್ಥವೆಂಬ ಸಂಜ್ಞೆ, ಸಾಮವೇದ-
ಇಂತಿವೆಲ್ಲ ಇಷ್ಟಲಿಂಗದ ಗೋಳಕದಲ್ಲಿ ಸಂಬಂಧವು.
ಅರ್ಧಚಂದ್ರಾಕೃತಿ, ವಕಾರಪ್ರಣಮ, ಅನಾಹತ ಚಕ್ರ,
ಪ್ರಾಣಲಿಂಗಿಯೆ ಅಂಗ, ಸುಮನವೆ ಹಸ್ತ , ಜಂಗಮಲಿಂಗ,
ತ್ವಗೀಂದ್ರಿಯವೆಂಬ ಮುಖ, ಆದಿಶಕ್ತಿ , ಅನುಭಾವಭಕ್ತಿ ,
ಸುಸ್ಪರ್ಶನಪದಾರ್ಥ, ಸ್ಪರ್ಶನಪ್ರಸಾದ, ಶಾಂತಿಕಲೆ,
ಅಮೂರ್ತಿಸಾದಾಖ್ಯ, ನಿತ್ಯವೆಂಬ ಲಕ್ಷಣ,
ಲಿಂಗಕ್ಷೇತ್ರಸಂಜ್ಞೆ, ಅಥರ್ವಣವೇದ-
ಇಂತಿವೆಲ್ಲ ಇಷ್ಟಲಿಂಗದ ಗೋಮುಖದಲ್ಲಿ ಸಂಬಂಧವು.
ದರ್ಪಣಾಕೃತಿ, ಯಕಾರಪ್ರಣಮ, ವಿಶುದ್ಧಿ ಚಕ್ರ, ಶರಣನೆ ಅಂಗ,
ಸುಜ್ಞಾನವೆ ಹಸ್ತ, ಪ್ರಸಾದಲಿಂಗ,
ಶ್ರೋತ್ರವೆಂಬ ಮುಖ, ಪರಾಶಕ್ತಿ , ಆನಂದ ಭಕ್ತಿ , ಸುಶಬ್ದಪದಾರ್ಥ,
ಶಬ್ದಪ್ರಸಾದ, ಶಾಂತ್ಯತೀತಕಲೆ,
ಶಿವಸಾದಾಖ್ಯ, ಪರಿಣಾಮವೆಂಬ ಲಕ್ಷಣ,
ಅನಾದಿವತ್ ಎಂಬ ಸಂಜ್ಞೆ, ಅಜಪೆವೇದ-
ಇಂತಿವೆಲ್ಲ ಇಷ್ಟಲಿಂಗದ ನಾಳದಲ್ಲಿ ಸಂಬಂಧವು.
ಒಂಕಾರಾಕೃತಿ, ಒಂಕಾರಪ್ರಣಮ,
ಆಜ್ಞೇಯಚಕ್ರ, ಐಕ್ಯನೆ ಅಂಗ,
ಸದ್ಭಾವಹಸ್ತ, ಮಹಾಲಿಂಗ,
ಹೃದಯವೆಂಬ ಮುಖ, ಚಿಚ್ಛಕ್ತಿ ,
ಸಮರಸಭಕ್ತಿ , ಸುತೃಪ್ತಿಪದಾರ್ಥ,
ತೃಪ್ತಿಪ್ರಸಾದ, ಶಾಂತ್ಯತೀತೋತ್ತರಕಲೆ,
ಮಹಾಸಾದಾಖ್ಯ, ಅಖಂಡವೆಂಬ ಲಕ್ಷಣ, ಮಹಾಸಂಜ್ಞೆ,
ಗಾಯತ್ರಿಯೆಂಬ ವೇದ-
ಇಂತಿವೆಲ್ಲ ಇಷ್ಟಲಿಂಗದ ಮಸ್ತಕದಲ್ಲಿ ಸಂಬಂಧವು.
ಇಂತೀ ತೊಂಬತ್ತಾರು ಸಕೀಲಗಳನೊಳಕೊಂಡ
ಮಹಾಘನ ಪರಾತ್ಪರವಾದ ಇಷ್ಟಲಿಂಗವನೆ
ಕರ ಮನ ಭಾವದೊಳಗೆ ಕುಳ್ಳಿರಿಸಿ ಅರ್ಚಿಸಿ,
ಧ್ಯಾನಿಸಿ ಕೂಡಿ ಎರಡಳಿದ ಮಹಾಘನ ಶರಣರ ಶ್ರೀಪಾದಕ್ಕೆ
ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ./349
ತೆಂಗಿಗೆ ನೀರನೆರೆದರೆ ಅಂಗೈಯಲ್ಲಿ ಫಲವು ಕಾಣುವಂತೆ
ಜಂಗಮಕ್ಕೆ ಅನ್ನ ಉದಕಂಗಳ ನೀಡಿದ ಫಲವು
ಮೇರುಪರ್ವತಕ್ಕೆ, ಸಪ್ತಸಮುದ್ರಕ್ಕೆ ಸಮಾನವಹುದು.
ಅದಲ್ಲದೆ ಒಂದೊಂದು ಅಗುಳಿಗೆ
ಕೋಟ್ಯನುಕೋಟಿ ಯಜ್ಞಂಗಳ ಮಾಡಿದ ಫಲವಹುದು.
ಅದೆಂತೆಂದೊಡೆ :
“ಕ್ಷಿಪ್ತಂ ಕ್ಷಿಪ್ತಂ ಮಹಾದೇವಿ ಕೋಟಿಯಜ್ಞಫಲಂ ಭವೇತ್ |
ಅಲ್ಪಬೀಜಾತ್ ಮಹಾವೃಕ್ಷೊ ಯಥಾ ಭವತಿ ಪಾರ್ವತೀ ||”
ಮತ್ತಂ,
“ಅನ್ನಂ ವಾ ಜಲಮಾತ್ರಂ ವಾ ಯದ್ ದತ್ತಂ ಲಿಂಗಧಾರಿಣೇ |
ತದನ್ನಂ ಮೇರುಸದೃಶಂ ತಜ್ಜಲಂ ಸಾಗರೋಪಮಮ್ ||”
ಎಂದುದಾಗಿ,
ಜಂಗಮದಲ್ಲಿ ನಮ್ಮ ಅಖಂಡೇಶ್ವರಲಿಂಗದ ತೃಪ್ತಿ ನೋಡಾ. /350
ತೆರಹಿಲ್ಲ ತೆರಹಿಲ್ಲವಯ್ಯಾ ನಡೆನೋಟಕ್ಕೆ.
ತೆರೆಹಿಲ್ಲ ತೆರಹಿಲ್ಲವಯ್ಯಾ ನುಡಿಗಡಣಕ್ಕೆ.
ತೆರಹಿಲ್ಲ ತೆರಹಿಲ್ಲವಯ್ಯಾ ಮನಜ್ಞಾನಕ್ಕೆ.
ತೆರಹಿಲ್ಲ ತೆರಹಿಲ್ಲವಯ್ಯಾ ಭಾವಭಾವಕ್ಕೆ.
ಅಖಂಡೇಶ್ವರಾ, ಎಲ್ಲವು ನೀವೆ ಆದಿರಿ.
ನಿಮ್ಮೊಳಗೆ ನೀವೆ ಸುಳಿಯುತಿರ್ಪಿರಿ.
ನಿಮ್ಮ ನೀವೆ ಅರಿಯುತಿರ್ಪಿರಯ್ಯಾ./351
ತೊತ್ತಿಂಗೆ ಒಡತಿಯ ಬಲವಯ್ಯ.
ಬಡವಂಗೆ ಬಲ್ಲಿದನ ಬಲವಯ್ಯ.
ಆಳಿಂಗೆ ಅರಸನ ಬಲವಯ್ಯ.
ನನಗೆ ನಮ್ಮ ಗುರುಲಿಂಗಜಂಗಮದ ಬಲವಯ್ಯ
ಅಖಂಡೇಶ್ವರಾ./352
ತ್ರಿಕರಣಂಗಳು ಶುದ್ಧನಾಗಿ
ತ್ರಿವಿಧ ಪದಾರ್ಥವನು ತ್ರಿವಿಧಲಿಂಗಕ್ಕೆ ಸಮರ್ಪಿಸಿ
ತ್ರಿವಿಧ ಪ್ರಸಾದಗ್ರಾಹಕನಾಗಿಪರ್ಾತನೆ
ತ್ರಿಜಗದೊಡೆಯನಯ್ಯಾ ಅಖಂಡೇಶ್ವರಾ./353
ತ್ರಿಕೂಟಗಿರಿಯಲ್ಲಿ ತ್ರಿಣಯನ ಕುಳ್ಳಿರಿಸಿ
ತ್ರಿಕಾಲ ಪೂಜೆಯ ಮಾಡಬಲ್ಲಾತನೆ
ತ್ರಿಲೋಕದೊಡೆಯನಯ್ಯಾ ಅಖಂಡೇಶ್ವರಾ./354
ತ್ರಿಕೂಟವೆಂಬ ಭ್ರೂಮಧ್ಯಸ್ಥಾನದಲ್ಲಿ
ನಿರಂತರ ಬೆಳಗುವ ಪರಂಜ್ಯೋತಿಯೊಳ್ ಮನವು ನಿಶ್ಚಲವಾಗಿರ್ಪುದೇ
ಅಮನಸ್ಕರಾಜಯೋಗ ನೋಡಾ ಅಖಂಡೇಶ್ವರಾ./355
ದಕ್ಷಿಣಜ್ಯೋತಿಮಂಡಲದ ಮಧ್ಯದಲ್ಲಿ
ಪ್ರತ್ಯಕ್ಷನಾಗಿರ್ಪ ಪರಮಾತ್ಮನೆ ಪತಿ,
ವಾಮಜ್ಯೋತಿಮಂಡಲಮಧ್ಯದಲ್ಲಿ
ಬೆಳಗುತಿರ್ಪ ಜೀವಾತ್ಮನೆ ಸತಿ.
ಈ ಮಂಡಲಗಳ ಯೋಗವೇ
ತತ್ವಮಸಿಯೆಂಬ ಮಹಾವಾಕ್ಯಾರ್ಥಮಾದ
ಜೀವಪರಮರೈಕ್ಯವದೇ ಲಿಂಗಾಂಗಸಂಯೋಗವದೇ
ಶಿವಾತ್ಮರ ಸಮರಸವದೇ ನೋಡಾ ಅಖಂಡೇಶ್ವರಾ./356
ದಯವಿರಬೇಕು ಸಕಲಪ್ರಾಣಿಗಳಲ್ಲಿ,
ಭಯವಿರಬೇಕು ಗುರುಲಿಂಗಜಂಗಮದಲ್ಲಿ,
ಸ್ವಯವಿರಬೇಕು ಸಕಲಗುಣಂಗಳಲ್ಲಿ,
ನಯವಿರಬೇಕು ನುಡಿಗಡಣದಲ್ಲಿ.
ಇಂತೀ ಗುಣವಿಲ್ಲದವರ ಕಂಡರೆ
ಸೊಗಸದಯ್ಯ ಎನಗೆ ಅಖಂಡೇಶ್ವರಾ./357
ದರ್ಪಣದೊಳಗಣ ರೂಹಿಗೆ ಚೇಷ್ಟಾಭಾವ ಉಂಟೆಂದಡೆ
ನೋಡುವಾತನ ಚೇತನದಿಂದಲ್ಲದೆ,
ಅದಕ್ಕೆ ಬೇರೆ ಚೇತನ ಉಂಟೆ ಅಯ್ಯ ?
ಎನ್ನ ಕರಣೇಂದ್ರಿಯಂಗಳು ಚೇಷ್ಟಿಸಿದುವೆಂದಡೆ ,
ನಿಮ್ಮ ಚೇತನದಿಂದಲ್ಲದೆ ಅವಕೆ ಬೇರೆ ಚೇತನ ಉಂಟೆ ಅಯ್ಯ ?
ಸೂತ್ರದ ಬೊಂಬೆಯಂತೆ ನೀನಾಡಿಸಿದಂತೆ
ನಾನಾಡುತಿರ್ದೆನಯ್ಯ ಅಖಂಡೇಶ್ವರಾ./358
ದುರ್ಗುಣಿ ದುರಾಚಾರಿಯಯ್ಯ ನಾನು.
ದುರ್ಬುದ್ಧಿ ದುರ್ನಿತಿಯುಳ್ಳವನಯ್ಯ ನಾನು.
ದುಷ್ಟಾತ್ಮ ದುಷ್ಕರ್ಮಿಯಯ್ಯ ನಾನು.
ತಿಪ್ಪೆಯ ಕೆದರಿದಂತೆ ಶತಕೋಟಿ
ಕೆಟ್ಟ ಗುಣದವನಯ್ಯ ನಾನು.
ಎನ್ನಲ್ಲಿ ಸದ್ಗುಣವನರಸಿದಡೇನು ಹುರುಳಿಲ್ಲವಯ್ಯ.
ಮನದಲ್ಲಿ ವಿಕಾರ ಹುಟ್ಟಿ ತನುವನಂಡಲೆದು
ವಿಷಯಾತುರನಾಗಿ ತಲೆಹುಳಿತ ಶ್ವಾನನಂತೆ
ದೆಸೆದೆಸೆಗೆ ಹರಿದಾಡಿದೆನಲ್ಲದೆ,
ನಿಮ್ಮನರಿವುತ್ತ ಬೆರೆವುತ್ತ ಭಕ್ತಿಜ್ಞಾನವೈರಾಗ್ಯದಲ್ಲಿ
ಸುಳಿಯಲಿಲ್ಲವಯ್ಯ ನಾನು ಅಖಂಡೇಶ್ವರಾ./359
ದೇವರದೇವ ಮಹಾಪ್ರಸಾದ ತ್ರಿಕರಣಶುದ್ಧವಾಗಿ
ಎನ್ನ ಭಾವದ ನಂಬಿಗೆಯ ಬಣ್ಣಿಸುತಿರ್ಪೆನಯ್ಯ,
ಅವಧರಿಸಯ್ಯ ಸ್ವಾಮಿ.
ಗುರುಲಿಂಗಜಂಗಮದ ಪರಮಪ್ರಸಾದವನು ಪರಬ್ರಹ್ಮವೆಂದು ನಂಬಿ
ಪರಮಾನಂದದಿಂ ಕೈಕೊಂಡು ಪರಿಣಾಮ ತುಂಬಿ
ಆರೋಗಣೆಯ ಮಾಡುವಾಗ,
ಆ ಪ್ರಸಾದದಲ್ಲಿ ಉಪ್ಪು ಸಪ್ಪೆ ಹುಳಿ ಕಹಿ ಒಳಿತು ಹೊಲ್ಲ
ಉಚ್ಚ ನೀಚವನರಸಿದೆನಾದಡೆ ನಿಮ್ಮಾಣೆಯಯ್ಯಾ.
ಮುಂದಿರ್ದ ಶಿವಪ್ರಸಾದದ ಘನವ ಮರೆದು
ಎನ್ನೊಡಲ ಕಕ್ಕುಲತೆಗೆ ಮನವೆಳಸಿದೆನಾದಡೆ
ಅಖಂಡೇಶ್ವರಾ, ನಿಮ್ಮಾಣೆಯಯ್ಯಾ, ನಿಮ್ಮ ಪ್ರಮಥರಾಣೆಯಯ್ಯ./360
ದೇಹದ ವಾಸನೆ ಹರಿದು
ಆತ್ಮನ ಭವಬಂಧನದ ಕೀಲಮುರಿದು
ಪರಾತ್ಪರವಾದ ಪ್ರಾಣಲಿಂಗವನೊಡಗೂಡುವುದಕ್ಕೆ
ಆವುದು ಸಾಧನವೆಂದೊಡೆ :
ಎಲ್ಲ ಗಣಂಗಳು ತಿಳಿವಂತೆ ಹೇಳುವೆ ಕೇಳಿರಯ್ಯಾ.
ಎಂಬತ್ತೆಂಟು ಆಸನದೊಳಗೆ ಮುಖ್ಯವಾಗಿರ್ಪುದು ಶಿವಸಿದ್ಧಾಸನವು.
ಆ ಸಿದ್ಧಾಸನದ ವಿವರವೆಂತೆಂದೊಡೆ : ಗುದಗುಹ್ಯಮಧ್ಯಸ್ಥಾನವಾದ ಯೋನಿಮಂಡಲವೆಂಬ
ಆಧಾರದ್ವಾರಕ್ಕೆ ಎಡದ ಹಿಮ್ಮಡವನಿಕ್ಕಿ,
ಬಲದಹಿಮ್ಮಡವ ಮೇಢ್ರಸ್ಥಾನದಲ್ಲಿರಿಸಿ,
ಅತ್ತಿತ್ತಲುಕದೆ ಬೆನ್ನೆಲವು ಕೊಂಕಿಸದೆ ನೆಟ್ಟನೆ ಕುಳ್ಳಿರ್ದು
ಉಭಯಲೋಚನವನೊಂದು ಮಾಡಿ ಉನ್ಮನಿಯ ಸ್ಥಾನದಲ್ಲಿರಿಸಿ,
ಘ್ರಾಣ ಜಿಹ್ವೆ ನೇತ್ರ ಶ್ರೋತ್ರ ತ್ವಕ್ ಹೃದಯವೆಂಬ
ಆರು ದ್ವಾರಂಗಳನು ಆರಂಗುಲಿಗಳಿಂದೊತ್ತಲು
ಮೂಲಾಧಾರದಲ್ಲಿರ್ದ ಮೂಲಾಗ್ನಿ ಪಟುತರಮಾಗಿ,
ಪವನವನೊಡಗೂಡಿ ಮನವ ಸುತ್ತಿಕೊಂಡು ಊಧ್ರ್ವಕ್ಕೆ ಹೋಗಿ,
ಉಭಯದಳದಲ್ಲಿರ್ದ ಮಹಾಲಿಂಗವನೊಡಗೂಡಿ
ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವನೊಳಗೊಂಡು
ಅತಿಸೂಕ್ಷ್ಮವಾಗಿ ಅಂಗುಲಪ್ರಮಾಣವಾಗಿ ಶುದ್ಧತಾರೆಯಂತೆ
ಕಂಗಳ ನೋಟಕ್ಕೆ ಕರತಲಾಮಲಕವಾಗಿ ಕಾಣಿಸುತಿರ್ಪ ಪ್ರಾಣಲಿಂಗದಲ್ಲಿ
ಪ್ರಾಣನ ಸಂಯೋಗವ ಮಾಡಬಲ್ಲಾತನೆ ಪ್ರಾಣಲಿಂಗಸಂಬಂಧಿ.
ಆತನೇ ಪ್ರಳಯವಿರಹಿತನಯ್ಯಾ ಅಖಂಡೇಶ್ವರಾ./361
ದೇಹವೆಂಬ ದೇಗುಲದೊಳಗೆ
ಭಾವಸಿಂಹಾಸನವ ಮಾಡಿ,
ಜೀವದೊಡೆಯನ ಪೂಜಿಸಬಲ್ಲಡೆ
ದೇವರಿಗೆ ದೇವರೆಂಬೆನಯ್ಯಾ ಅಖಂಡೇಶ್ವರಾ !/362
ದ್ವೀಪ ಏಳರೊಳಗೆ ವ್ಯಾಪಿಸಿಕೊಂಡಿರ್ಪುದು
ಒಂದೇ ಜ್ಯೋತಿ ನೋಡಾ.
ಅದು ರೂಪಲ್ಲ ನಿರೂಪಲ್ಲ.
ಸರ್ವವ್ಯಾಪಾರವ ಹೊದ್ದದ ಸ್ವಯಂಜ್ಯೋತಿ ನೋಡಾ.
ಅದೇ ಎನ್ನ ಪ್ರಾಣಲಿಂಗವೆಂಬ
ಪರತರ ಪರಂಜ್ಯೋತಿ ಪರಮಾನಂದ ನೋಡಾ
ಅಖಂಡೇಶ್ವರಾ./363
ಧರ್ಮ ಅರ್ಥ ಕಾಮ ಮೋಕ್ಷವೆಂಬ
ಚತುರ್ವಿಧ ಫಲಪದಂಗಳ ನಾನೊಲ್ಲೆನಯ್ಯಾ.
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ
ಚತುರ್ವಿಧ ಫಲಪದಂಗಳ ನಾನೊಲ್ಲೆನಯ್ಯಾ.
ಅಣಿಮಾದ್ಯಷ್ಟಸಿದ್ಧಿಗಳ ನಾನೊಲ್ಲೆನಯ್ಯಾ.
ಎಲೆ ಶಿವನೆ ನಾನೊಂದ ಬೇಡುವೆನಯ್ಯ.
ನಿಮ್ಮ ಶರಣರು ಉಂಡುಳಿದುದ ಕೊಂಡು ಮಿಕ್ಕಿದ
ಪರಮಪ್ರಸಾದಕ್ಕೆ ಯೋಗ್ಯನ ಮಾಡಿ
ಬದುಕಿಸಯ್ಯ ಎನ್ನ ಅಖಂಡೇಶ್ವರಾ./364
ಧರ್ಮಾರ್ಥವಾಗಿ ದೀಕ್ಷೆಯ ಮಾಡಬೇಕಲ್ಲದೆ,
ಆಶಾರ್ಥವಾಗಿ ದೀಕ್ಷೆಯ ಮಾಡಲಾಗದಯ್ಯ.
ಜ್ಞಾನಾರ್ಥವಾಗಿ ಶಾಸ್ತ್ರವನೋದಬೇಕಲ್ಲದೆ,
ವಾದಾರ್ಥವಾಗಿ ಶಾಸ್ತ್ರವನೋದಲಾಗದಯ್ಯ.
ಮೋಕ್ಷಾರ್ಥವಾಗಿ ಶಿವಪೂಜೆಯ ಮಾಡಬೇಕಲ್ಲದೆ,
ಡಂಭಾರ್ಥವಾಗಿ ಶಿವಪೂಜೆಯ ಮಾಡಲಾಗದಯ್ಯ.
ಅದೆಂತೆಂದೊಡೆ :
“ಆಶಾರ್ಥಂ ದೀಯತೇ ದೀಕ್ಷಾ ದಂಭಾರ್ಥಂ ಪೂಜ್ಯತೇ ಶಿವಃ |
ವಾದಾರ್ಥಂ ಪಠ್ಯತೇ ವಿದ್ಯಾ ಮೋಕ್ಷೊ ನಾಸ್ತಿ ವರಾನನೇ ||
ಧರ್ಮಾರ್ಥಂ ದೀಯತೇ ದೀಕ್ಷಾ ಮೋಕ್ಷಾರ್ಥಂ ಪೂಜ್ಯತೇ ಶಿವಃ |
ಜ್ಞಾನರ್ಥಂ ಪಠ್ಯತೇ ವಿದ್ಯಾ ಮೋಕ್ಷಸಿದ್ಧಿರ್ವರಾನನೇ ||”
ಎಂದುದಾಗಿ, ಇಂತಪ್ಪ ಖ್ಯಾತಿ ಕೀರ್ತಿಯ, ಕಡೆಗೆ ನೂಂಕಿ
ನೀತಿಯ ನಿಜವನು ಅಂಗೀಕರಿಸಿ ಶಿವನನೊಲಿಸುವ ಭಾವವನರಿಯದೆ
ಸಂತೆಯ ಪಸಾರದಂತೆ ಸರ್ವರು ಮೆಚ್ಚಲೆಂದು ಹಾರೈಸಿ
ಹರಹಿಕೊಂಡು ಮಾಡುವ ಡಂಭಕನ ಪೂಜೆ
ಶಂಭುವಿಂಗೆ ಮುಟ್ಟಲರಿಯದು ನೋಡಾ ಅಖಂಡೇಶ್ವರಾ./365
ನಂಜು ಅಮೃತವಾದುದ ಕಂಡೆ.
ಮಂಜೂರ ಸುಟ್ಟುದ ಕಂಡೆ.
ಮಂಜಿನ ಮನೆ ಕರಗಿ
ಕುರುಹಿಲ್ಲದೆ ನಿಷ್ಪತ್ತಿಯಾದುದ ಕಂಡೆ.
ಬಂಜೆಯ ಬಸುರಲ್ಲಿ ನಂಜುಗೊರಳನೆಂಬ ಶಿಶುಹುಟ್ಟಿ
ಅಂಜದೆ, ಅರುವತ್ತಾರು ಕೋಟಿ ದೈತ್ಯರ ಕೊಂದುದ
ಕಂಡೆನಯ್ಯಾ ಅಖಂಡೇಶ್ವರಾ./366
ನಂದಿವಾಹನನಾಗಿ,
ಚಂದ್ರಸೂರ್ಯಾಗ್ನಿ ನೇತ್ರದ ಅಂದ ಉಳ್ಳಾತನಾಗಿ,
ಸಂದಣಿಯಾಗಿ ನೆರೆದ ಪ್ರಮಥಗಣವೃಂದ ಉಳ್ಳಾತನಾಗಿ,
ನಿಂದು ಓಲೈಸುವ ದೇವಸಭೆಯ ಮುಂದೆ ಉಳ್ಳಾತನಾಗಿ,
ದುಂದುಭಿಯ ನಾದ ಮೊಳಗುತ್ತ
ಕೋಟಿಕಂದರ್ಪನ ಸೌಂದರ್ಯವನೊಳಕೊಂಡು ಬಂದಿರಯ್ಯ
ಎನ್ನ ಕರಸ್ಥಲಕ್ಕೆ ಅಖಂಡೇಶ್ವರಾ./367
ನಂಬಿರೊ ನಂಬಿರೊ ಶಿವನ ಪಾದತೀರ್ಥದ
ಮಹಿಮೆಯ ತಿಳಿದು.
ನಂಬಿರೊ ನಂಬಿರೊ ಶಿವನ ಪ್ರಸಾದದ ಘನವ ತಿಳಿದು.
ಮುನ್ನ ಜಂಗಮದ ಪಾದಜಲ ಸೋಂಕಿದ ಸರ್ಪನು ಹೋಗಿ
ಕಳ್ಳನ ಕಾಲ ಕಚ್ಚಲು, ಆ ಕಳ್ಳಂಗೆ ಕೈವಲ್ಯಪದವಾಯಿತ್ತು ನೋಡಾ !
ಜಂಗಮಪ್ರಸಾದ ಸೋಂಕಿದ ಮೀನ ಹಿಡಿದುಕೊಂಡು ಹೋಗಿ
ಜಾಲಗಾರ ಭಕ್ಷಿಸಲು, ಆ ಜಾಲಗಾರಂಗೆ
ಶಿವಸಾಲೋಕ್ಯಪದವಾಯಿತ್ತು ನೋಡಾ !
ಅದೆಂತೆಂದೊಡೆ :ವಾತುಲಾಗಮೇ-
“ಮಹೇಶ್ವರಪದೋಚ್ಛಿಷ್ಟಂ ಜಲಬಿಂದುಸಮನ್ವಿತಮ್ |
ಮಾರುತಂ ಭುಂಜತೇ ಸರ್ಪಶ್ಚೋರೋ ದಷ್ಟಸ್ತು ಮುಕ್ತವಾನ್ ||
ಜಂಗಮಸ್ಯ ಪ್ರಸಾದೇನ ಮತ್ಸ್ಯಭಕ್ಷಸ್ತು ಧೀವರಃ |
ಅಹೋ ಯಾತಿ ಚ ಕೈವಲ್ಯಂ ಪುನರ್ಜನ್ಮ ನ ವಿದ್ಯತೇ ||”
ಎಂದುದಾಗಿ,
ಇಂತಪ್ಪ ಪಾದತೀರ್ಥ ಪ್ರಸಾದವನು ನಂಬಿ ಕೊಂಡರೆ
ಶಂಭುವಿನ ಕೈಲಾಸ ಕರತಳಾಮಳಕ ನೋಡಾ ಅಖಂಡೇಶ್ವರಾ. /368
ನಡೆದು ತಪ್ಪುವರಲ್ಲ ಶರಣರು.
ನುಡಿದು ಹುಸಿವರಲ್ಲ ಶರಣರು.
ಒಡಲುಪಾಧಿಯ ಹೊದ್ದುವರಲ್ಲ ಶರಣರು.
ಅಖಂಡೇಶ್ವರಾ, ನಿಮ್ಮ ಶರಣರ ಪರಿಯ
ನೀವೇ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯ ?/369
ನಡೆಯೊಳಗೆ ನುಡಿತುಂಬಿ,
ನುಡಿಯೊಳಗೆ ನಡೆತುಂಬಿ,
ನಡೆನುಡಿ ಎರಡು ಪರಿಣಾಮದಲ್ಲಿ ತುಂಬಿ,
ಲಿಂಗವ ಕೂಡಬಲ್ಲಾತನೇ ಶರಣ ನೋಡಾ ಅಖಂಡೇಶ್ವರಾ. /370
ನಡೆವ ಕಾಲದಲ್ಲಿ ನಿಮ್ಮ ಕೂಡೆ ನಡೆವೆನಯ್ಯಾ.
ನುಡಿವ ಕಾಲದಲ್ಲಿ ನಿಮ್ಮ ಕೂಡೆ ನುಡಿವೆನಯ್ಯಾ.
ಹಿಡಿವ ಕಾಲದಲ್ಲಿ ನಿಮ್ಮ ಕೂಡೆ ಹಿಡಿವೆನಯ್ಯಾ.
ಬಿಡುವ ಕಾಲದಲ್ಲಿ ನಿಮ್ಮ ಕೂಡೆ ಬಿಡುವೆನಯ್ಯಾ.
ನೋಡುವ ಕಾಲದಲ್ಲಿ ನಿಮ್ಮ ಕೂಡೆ ನೋಡುವೆನಯ್ಯಾ.
ಕೇಳುವ ಕಾಲದಲ್ಲಿ ನಿಮ್ಮ ಕೂಡೆ ಕೇಳುವೆನಯ್ಯಾ.
ಸೋಂಕುವ ಕಾಲದಲ್ಲಿ ನಿಮ್ಮ ಕೂಡೆ ಸೋಂಕುವೆನಯ್ಯಾ.
ವಾಸಿಸುವ ಕಾಲದಲ್ಲಿ ನಿಮ್ಮ ಕೂಡೆ ವಾಸಿಸುವೆನಯ್ಯಾ.
ರುಚಿಸುವ ಕಾಲದಲ್ಲಿ ನಿಮ್ಮ ಕೂಡೆ ರುಚಿಸುವೆನಯ್ಯಾ.
ನೆನೆವ ಕಾಲದಲ್ಲಿ ನಿಮ್ಮ ಕೂಡೆ ನೆನೆವೆನಯ್ಯಾ.
ಮರೆವ ಕಾಲದಲ್ಲಿ ನಿಮ್ಮ ಕೂಡೆ ಮರೆವೆನಯ್ಯಾ.
ಅರಿವ ಕಾಲದಲ್ಲಿ ನಿಮ್ಮ ಕೂಡೆ ಅರಿವೆನಯ್ಯಾ.
ಇನಮಂಡಲಕಿರಣದಂತೆ
ಸಕಲ ತೋರಿಕೆಯ ತೋರುವ ಕಾಲದಲ್ಲಿ
ನಿಮ್ಮ ಕೂಡೆ ತೋರುವೆನಾಗಿ,
ಅಖಂಡೇಶ್ವರಾ, ನಿಮ್ಮಲ್ಲಿ ಎನಗೆ
ಸಹಭೋಜನವು ಸಮನಿಸಿತ್ತು ನೋಡಾ. /371
ನಡೆವ ಗತಿಯಲ್ಲಿ ಲಿಂಗದ ನಡೆಯ ತುಂಬಿ
ನಡೆಯಬಲ್ಲಡೆ ವಿರಕ್ತರೆಂಬೆನು.
ನುಡಿಯ ಕೊನೆಯಲ್ಲಿ ಲಿಂಗದ ನುಡಿಯ ತುಂಬಿ
ನುಡಿಯಬಲ್ಲಡೆ ವಿರಕ್ತರೆಂಬೆನು.
ಕಂಗಳ ಕೊನೆಯಲ್ಲಿ ಲಿಂಗದ ನೋಟವ ತುಂಬಿ
ನೋಡಬಲ್ಲಡೆ ವಿರಕ್ತರೆಂಬೆನು.
ಮನದ ಕೊನೆಯಲ್ಲಿ ಲಿಂಗದ ನೆನಹು ತುಂಬಿ
ನೆನೆಯಬಲ್ಲಡೆ ವಿರಕ್ತರೆಂಬೆನು.
ಭಾವದ ಕೊನೆಯಲ್ಲಿ ಲಿಂಗದ ಬೆಳಗ ತುಂಬಿ
ಸುಳಿಯಬಲ್ಲಡೆ ವಿರಕ್ತರೆಂಬೆನು.
ಇಂತೀ ಲಿಂಗಾಂಗಸಂಗಸಮರಸದ ಪರಮಸುಖವನರಿಯದೆ
ಅರುಹುಹೀನವಾಗಿ ಮರಹು ಮುಂದುಗೊಂಡು
ದುರಾಚಾರದಲ್ಲಿ ನಡೆವ ಭವಭಾರಿಗಳ ಮುಖವ
ನೋಡಲಾಗದಯ್ಯ ಅಖಂಡೇಶ್ವರಾ./372
ನದಿ ನದಿಯ ಕೂಡಿದಂತೆ, ಬಯಲು ಬಯಲ ಬೆರೆದಂತೆ,
ಮಾತು ಮಾತ ಕಲೆತಂತೆ, ಜ್ಯೋತಿ ಜ್ಯೋತಿ ಒಂದಾದಂತೆ
ಅಖಂಡೇಶ್ವರಾ, ನಿಮ್ಮೊಳೊಡವೆರೆದ
ನಿಜೈಕ್ಯನ ಕುರುಹು ಇಂತುಟಯ್ಯಾ./373
ನಲ್ಲನ ಕಾಣದೆ
ತಲ್ಲಣಗೊಳತಿರ್ಪುದು ನೋಡಾ ಎನ್ನ ಮನವು.
ಜಾಗ್ರಾವಸ್ಥೆಯಲ್ಲಿ
ನಲ್ಲನ ಚಿಂತೆಯಿಂದ ಸುಳಿವುತಿರ್ದೆನವ್ವಾ.
ಸ್ವಪ್ನಾವಸ್ಥೆಯಲ್ಲಿ
ನಲ್ಲನ ಚಿಂತೆಯಿಂದೆ ಕಳವಳಿಸುತಿರ್ದೆನವ್ವಾ.
ಸುಷುಪ್ತಾವಸ್ಥೆಯಲ್ಲಿ
ನಲ್ಲನ ಚಿಂತೆಯಿಂದೆ ಮೈಮರೆದಿರ್ದೆನವ್ವಾ.
ಸರ್ವಾವಸ್ಥೆಯಲ್ಲಿ
ಅಖಂಡೇಶ್ವರನೆಂಬ ನಲ್ಲನ ಕೂಡಬೇಕೆಂಬ ಭ್ರಾಂತಿಯಿಂದೆ
ಬಡವಾಗುತಿರ್ದೆನವ್ವಾ./374
ನಲ್ಲನ ಕೂಡಿದ ಸುಖವೆಲ್ಲವ
ಮೆಲ್ಲನೆ ಉಸುರುವೆ ಕೇಳಿರವ್ವಾ.
ಏಳು ನೆಲೆಯ ಮಣಿಮಾಡದ ಮಾಣಿಕ್ಯಮಂಟಪದುಪ್ಪರಿಗೆಯ ಮೇಲೆ
ಚಪ್ಪರ ಮಂಚವ ಹಾಸಿ,
ಒಪ್ಪುವ ಊಟವ ನೀಡಿ, ಕಪರ್ೂರವೀಳ್ಯವ ಕೊಟ್ಟು,
ಲಜ್ಜೆಗೆಟ್ಟು ನಾಚಿಕೆಯ ತೊರೆದು, ತನು ಜಜ್ಜರಿತವಾಗಿ,
ತೆಕ್ಕೆ ಚುಂಬನಾದಿಗಳಿಂದ ಅಮರ್ದಪ್ಪಿ
ಅಸ್ಥಿಗಳು ನುಗ್ಗುನುರಿಯಾಗಿ
ಮನದ ಪರಿಣಾಮ ಹೊರಹೊಮ್ಮಿ
ಪರಮಾನಂದ ಮಹಾಪರಿಣಾಮದ ಸುಗ್ಗಿಯೊಳಗೆ
ಪರವಶಗೊಂಡಿರ್ದೆನು ಅಖಂಡೇಶ್ವರನೆಂಬ ನಲ್ಲನ ಕೂಡಿ./375
ನವಖಂಡ ಮಂಡಲದೊಳಗೊಂದು
ಪುಂಡರೀಕವೆಂಬ ಹುತ್ತವಿರ್ಪುದು.
ಆ ಹುತ್ತದೊಳಗೊಂದು ವಿಚಿತ್ರ ಸರ್ಪವಿರ್ಪುದು.
ಆ ಸರ್ಪನ ಬಾಯೊಳಗೊಂದು ಬೆಲೆಯಿಲ್ಲದ ರತ್ನವಿರ್ಪುದು.
ಈ ರತ್ನದ ಬೆಳಗಿನೊಳಗೆ
ಈರೇಳುಲೋಕದ ಸುಳುಹಿರ್ಪುದನಾರೂ ಅರಿಯರಲ್ಲ !
ಆ ಹತ್ತುವ ಕೆಡಿಸದೆ ಸರ್ಪನ ಕೊಂದು
ರತ್ನವ ಸಾಧ್ಯಮಾಡಿಕೊಂಡಾತನೆ
ಮುಕ್ತಿರಾಜ್ಯಕ್ಕೆ ಅರಸನಪ್ಪನಯ್ಯಾ ಅಖಂಡೇಶ್ವರಾ./376
ನವನಾಳಂಗಳ ಬಲಿದು ಶಿವಧ್ಯಾನದಲ್ಲಿ ಕುಳ್ಳಿರ್ದು
ಭಾವದ ದೃಕ್ಕಿನಿಂದ ನವಲಿಂಗಗಳ ನೋಡಿ ಪೂಜಿಸಿ,
ಕದಡುವ ಭೇದವೆಂತೆಂದೊಡೆ :
ಆಧಾರಚಕ್ರವೆಂಬ ರಂಗಮಂಟಪದಲ್ಲಿ
ಮೂರ್ತಿಗೊಂಡಿರ್ದ ಆಚಾರಲಿಂಗಕ್ಕೆ
ಶಿವಾನಂದ ಜಲದಿಂ ಮಜ್ಜನಕ್ಕೆರೆದು
ಪೃಥ್ವಿ ನಿವೃತ್ತಿಯಾದ ಗಂಧವ ಧರಿಸಿ,
ಚಿತ್ತ ಸುಚಿತ್ತವಾದ ಅಕ್ಷತೆಯನಿಟ್ಟು,
ಅಲ್ಲಿಯ ಚತುರ್ದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ,
ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ,
ಅಲ್ಲಿಯ ಪೀತವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ,
ಅಲ್ಲಿಯ ಜಾಗ್ರಾವಸ್ಥೆಯೆಂಬ ನವೀನ ವಸ್ತ್ರವ ಹೊದಿಸಿ,
ನಿಷ್ಕಾಮವೆಂಬ ಆಭರಣವ ತೊಡಿಸಿ,
ಸುಗಂಧವೆಂಬ ನೈವೇದ್ಯವನರ್ಪಿಸಿ,
ಶ್ರದ್ಧೆಯೆಂಬ ತಾಂಬೂಲವನಿತ್ತು,
ಇಂತು ಆಚಾರಲಿಂಗದ ಅಷ್ಟವಿಧಾರ್ಚನೆಯ ಮಾಡಿ,
ಕೋಟಿಸೂರ್ಯಪ್ರಭೆಯಂತೆ ಬೆಳಗುವ
ಆಚಾರಲಿಂಗವನು ಕಂಗಳು ತುಂಬಿ ನೋಡಿ
ಮನದಲ್ಲಿ ಸಂತೋಷಂಗೊಂಡು
ಆ ಆಚಾರಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ
ಓಂ ನಂ ನಂ ನಂ ನಂ ನಂ ನಂ ಎಂಬ
ನಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ,
ಆ ಆಚಾರಲಿಂಗವನು ಕೂಡಿ ಎರಡಳಿದು
ಅಲ್ಲಿಂದ ಮುಂದಕ್ಕೆ ಹೋಗಿ,
ಸ್ವಾಧಿಷ್ಠಾನಚಕ್ರವೆಂಬ ರಂಗಮಂಟಪದಲ್ಲಿ
ಮೂರ್ತಿಗೊಂಡಿರ್ದ ಗುರುಲಿಂಗಕ್ಕೆ
ಪರಿಣಾಮವೆಂಬ ಜಲದಿಂ ಮಜ್ಜನಕ್ಕೆರೆದು,
ಅಪ್ಪು ನಿವೃತ್ತಿಯಾದ ಗಂಧವ ಧರಿಸಿ
ಬುದ್ಧಿ ಸುಬುದ್ಧಿಯಾದ ಅಕ್ಷತೆಯನಿಟ್ಟು
ಅಲ್ಲಿಯ ಷಡುದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ,
ಅಲ್ಲಿಯ ಕಮಲ ಸದ್ವಾಸನೆಯ ಧೂಪವ ಬೀಸಿ,
ಅಲ್ಲಿಯ ನೀಲವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ
ಅಲ್ಲಿಯ ಸ್ವಪ್ನಾವಸ್ಥೆಯೆಂಬ ವಸ್ತ್ರವ ಹೊದಿಸಿ
ನಿಃಕ್ರೋಧವೆಂಬ ಆಭರಣವ ತೊಡಿಸಿ
ಸುರುಚಿಯೆಂಬ ನೈವೇದ್ಯವನರ್ಪಿಸಿ, ನಿಷ್ಠೆಯೆಂಬ ತಾಂಬೂಲವನಿತ್ತು,
ಇಂತು ಗುರುಲಿಂಗದ ಅಷ್ಟವಿಧಾರ್ಚನೆಯ ಮಾಡಿ,
ಕೋಟಿಸೂರ್ಯಪ್ರಭೆಯಂತೆ ಬೆಳಗುವ
ಗುರುಲಿಂಗವನು ಕಂಗಳು ತುಂಬಿ ನೋಡಿ
ಮನದಲ್ಲಿ ಸಂತೋಷಂಗೊಂಡು
ಆ ಗುರುಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ,
ಓಂ ಮಂ ಮಂ ಮಂ ಮಂ ಮಂ ಮಂ ಎಂಬ
ಮಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ,
ಆ ಗುರುಲಿಂಗವನು ಕೂಡಿ ಎರಡಳಿದು
ಅಲ್ಲಿಂದ ಮುಂದಕ್ಕೆ ಹೋಗಿ
ಮಣಿಪೂರಕವೆಂಬ ರಂಗಮಂಟಪದಲ್ಲಿ
ಮೂರ್ತಿಗೊಂಡಿರ್ದ ಶಿವಲಿಂಗಕ್ಕೆ
ಪರಮಾನಂದವೆಂಬ ಜಲದಿಂ ಮಜ್ಜನಕ್ಕೆರೆದು,
ಅಗ್ನಿನಿವೃತ್ತಿಯಾದ ಗಂಧವ ಧರಿಸಿ
ಅಹಂಕಾರ ನಿರಹಂಕಾರವಾದ ಅಕ್ಷತೆಯನಿಟ್ಟು
ಅಲ್ಲಿಯ ದಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ
ಅಲ್ಲಿ ಕಮಲ ಸದ್ವಾಸನೆಯ ಧೂಪವ ಬೀಸಿ
ಅಲ್ಲಿಯ ಕೆಂಪುವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ
ಅಲ್ಲಿಯ ಸುಷುಪ್ತಾವಸ್ಥೆಯೆಂಬ ವಸ್ತ್ರವ ಹೊದಿಸಿ
ನಿಲರ್ೊಭವೆಂಬ ಆಭರಣವ ತೊಡಿಸಿ
ಸುರೂಪವೆಂಬ ನೈವೇದ್ಯವನರ್ಪಿಸಿ
ಸಾವಧಾನವೆಂಬ ತಾಂಬೂಲವನಿತ್ತು,
ಇಂತು ಶಿವಲಿಂಗದ ಅಷ್ಟವಿಧಾರ್ಚನೆಯ ಮಾಡಿ
ಕೋಟಿಸೂರ್ಯಪ್ರಭೆಯಂತೆ ಬೆಳಗುವ
ಶಿವಲಿಂಗವನು ಕಂಗಳು ತುಂಬಿ ನೋಡಿ
ಮನದಲ್ಲಿ ಸಂತಸಂಗೊಂಡು
ಆ ಶಿವಲಿಂಗದ ಪೂಜೆಯ ನಿರ್ಮಾಲ್ಯಮಂ ಮಾಡದೆ,
ಓಂ ಶಿಂ ಶಿಂ ಶಿಂ ಶಿಂ ಶಿಂ ಶಿಂ ಎಂಬ
ಶಿಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ,
ಆ ಶಿವಲಿಂಗವನು ಕೂಡಿ ಎಡರಳಿದು,
ಅಲ್ಲಿಂದ ಮುಂದಕ್ಕೆ ಹೋಗಿ
ಅನಾಹತಚಕ್ರವೆಂಬ ರಂಗಮಂಟಪದಲ್ಲಿ
ಮೂರ್ತಿಗೊಂಡಿರ್ದ ಜಂಗಮಲಿಂಗಕ್ಕೆ
ಶಾಂತಿಯೆಂಬ ಜಲದಿಂ ಮಜ್ಜನಕ್ಕೆರೆದು
ವಾಯುನಿವೃತ್ತಿಯಾದ ಗಂಧವ ಧರಿಸಿ
ಮನ ಸುಮನವಾದ ಅಕ್ಷತೆಯನಿಟ್ಟು
ಅಲ್ಲಿಯ ದ್ವಾದಶದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ,
ಅಲ್ಲಿಯ ಕಮಲ ಸದ್ವಾಸನೆಯ ಧೂಪವ ಬೀಸಿ
ಅಲ್ಲಿಯ ಮಾಂಜಿಷ್ಟವರ್ಣವನೆ ಕರ್ಪುರದಜ್ಯೋತಿಯೆಂದು ಬೆಳಗಿ,
ಅಲ್ಲಿಯ ತೂರ್ಯಾವಸ್ಥೆಯೆಂಬ ವಸ್ತ್ರವ ಹೊದಿಸಿ
ನಿಮರ್ೊಹವೆಂಬ ಆಭರಣವ ತೊಡಿಸಿ
ಸುಸ್ಪರ್ಶನವೆಂಬ ನೈವೇದ್ಯವನರ್ಪಿಸಿ
ಅನುಭಾವವೆಂಬ ತಾಂಬೂಲವನಿತ್ತು
ಇಂತು ಜಂಗಮಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡಿ,
ಕೋಟಿಸೂರ್ಯಪ್ರಭೆಯಂತೆ ಬೆಳಗುವ
ಜಂಗಮಲಿಂಗವನು ಕಂಗಳು ತುಂಬಿ ನೋಡಿ
ಮನದಲ್ಲಿ ಸಂತೋಷಂಗೊಂಡು
ಆ ಜಂಗಮಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ
ಓಂ ವಾಂ ವಾಂ ವಾಂ ವಾಂ ವಾಂ ವಾಂ ಎಂಬ
ವಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ,
ಆ ಜಂಗಮಲಿಂಗವನು ಕೂಡಿ ಎರಡಳಿದು,
ಅಲ್ಲಿಂದ ಮುಂದಕ್ಕೆ ಹೋಗಿ
ವಿಶುದ್ಧಿಚಕ್ರವೆಂಬ ರಂಗಮಂಟಪದಲ್ಲಿ
ಮೂರ್ತಿಗೊಂಡಿರ್ದ ಪ್ರಸಾದಲಿಂಗಕ್ಕೆ
ಕ್ಷಮೆಯೆಂಬ ಜಲದಿಂ ಮಜ್ಜನಕ್ಕೆರೆದು
ಗಗನನಿವೃತ್ತಿಯಾದ ಗಂಧವ ಧರಿಸಿ,
ಜ್ಞಾನ ಸುಜ್ಞಾನವಾದ ಅಕ್ಷತೆಯನಿಟ್ಟು,
ಅಲ್ಲಿಯ ಷೋಡಶದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ,
ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ,
ಅಲ್ಲಿಯ ಕೃಷ್ಣವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ,
ಅಲ್ಲಿಯ ತೂರ್ಯಾತೀತಾವಸ್ಥೆಯೆಂಬ ವಸ್ತ್ರವ ಹೊದಿಸಿ
ನಿರ್ಮದವೆಂಬ ಆಭರಣವ ತೊಡಿಸಿ
ಸುಶಬ್ದವೆಂಬ ನೈವೇದ್ಯವನರ್ಪಿಸಿ
ಆನಂದವೆಂಬ ತಾಂಬೂಲವನಿತ್ತು,
ಇಂತು ಪ್ರಸಾದಲಿಂಗದ ಅಷ್ಟವಿಧಾರ್ಚನೆಯ ಮಾಡಿ
ಕೋಟಿ ಸೂರ್ಯಪ್ರಭೆಯಂತೆ ಬೆಳಗುವ
ಪ್ರಸಾದಲಿಂಗವನು ಕಂಗಳು ತುಂಬಿ ನೋಡಿ
ಮನದಲ್ಲಿ ಸಂತೋಷಂಗೊಂಡು
ಆ ಪ್ರಸಾದಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ
ಓಂ ಯಂ ಯಂ ಯಂ ಯಂ ಯಂ ಯಂ ಎಂಬ
ಯಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ,
ಆ ಪ್ರಸಾದಲಿಂಗವನು ಕೂಡಿ ಎರಡಳಿದು,
ಅಲ್ಲಿಂದ ಮುಂದಕ್ಕೆ ಹೋಗಿ
ಆಜ್ಞಾಚಕ್ರವೆಂಬ ರಂಗಮಂಟಪದಲ್ಲಿ
ಮೂರ್ತಿಗೊಂಡಿರ್ದ ಮಹಾಲಿಂಗಕ್ಕೆ
ಸಂತೋಷವೆಂಬ ಜಲದಿಂ ಮಜ್ಜನಕ್ಕೆರೆದು
ಆತ್ಮನಿವೃತ್ತಿಯಾದ ಗಂಧವ ಧರಿಸಿ,
ಭಾವ ಸದ್ಭಾವವಾದ ಅಕ್ಷತೆಯನಿಟ್ಟು,
ಅಲ್ಲಿಯ ದ್ವಿದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ,
ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ
ಅಲ್ಲಿಯ ಮಾಣಿಕ್ಯವರ್ಣವನೆ ಕರ್ಪುರದಜ್ಯೋತಿಯೆಂದು ಬೆಳಗಿ,
ಅಲ್ಲಿಯ ನಿರಾವಸ್ಥೆಯೆಂಬ ವಸ್ತ್ರವ ಹೊದಿಸಿ
ನಿರ್ಮಲವೆಂಬ ಆಭರಣವ ತೊಡಿಸಿ
ಸುತೃಪ್ತಿಯೆಂಬ ನೈವೇದ್ಯವನರ್ಪಿಸಿ
ಸಮರಸವೆಂಬ ತಾಂಬೂಲವನಿತ್ತು,
ಇಂತು ಮಹಾಲಿಂಗದ ಅಷ್ಟವಿಧಾರ್ಚನೆಯ ಮಾಡಿ
ಕೋಟಿಸೂರ್ಯಪ್ರಭೆಯಂತೆ ಬೆಳಗುವ
ಮಹಾಲಿಂಗವನು ಕಂಗಳು ತುಂಬಿ ನೋಡಿ
ಮನದಲ್ಲಿ ಸಂತೋಷಂಗೊಂಡು
ಆ ಮಹಾಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ,
ಓಂ ಒಂ ಒಂ ಒಂ ಒಂ ಒಂ ಒಂ ಎಂಬ
ಓಂಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ,
ಆ ಮಹಾಲಿಂಗವನು ಕೂಡಿ ಎರಡಳಿದು
ಅಲ್ಲಿಂದ ಮುಂದಕ್ಕೆ ಹೋಗಿ
ಬ್ರಹ್ಮರಂಧ್ರವೆಂಬ ಸಹಸ್ರದಳಮಂಟಪದಲ್ಲಿ
ಮೂರ್ತಿಗೊಂಡಿರ್ದ ನಿಷ್ಕಳಲಿಂಗಕ್ಕೆ
ಅನುಪಮವೆಂಬ ಜಲದಿಂ ಮಜ್ಜನಕ್ಕೆರೆದು
ಅನಾದಿಯೆಂಬ ಗಂಧವ ಧರಿಸಿ,
ಅಗಮ್ಯವೆಂಬ ಅಕ್ಷತೆಯನಿಟ್ಟು
ಅವಿರಳವೆಂಬ ಪುಷ್ಪದ ಮಾಲೆಯ ಧರಿಸಿ,
ಅಪ್ರಮಾಣವೆಂಬ ಧೂಪವ ಬೀಸಿ
ಅಖಂಡವೆಂಬ ಜ್ಯೋತಿಯ ಬೆಳಗಿ
ಸತ್ಯವೆಂಬ ವಸ್ತ್ರವ ಹೊದಿಸಿ
ಸದಾನಂದವೆಂಬ ಆಭರಣವ ತೊಡಿಸಿ
ನಿತ್ಯವೆಂಬ ನೈವೇದ್ಯವನರ್ಪಿಸಿ
ನಿರುಪಮವೆಂಬ ತಾಂಬೂಲವನಿತ್ತು,
ಇಂತು ನಿಷ್ಕಲಲಿಂಗದ ಅಷ್ಟವಿಧಾರ್ಚನೆಯ ಮಾಡಿ
ಅನಂತಕೋಟಿಸೂರ್ಯಪ್ರಭೆಯಂತೆ ಬೆಳಗುವ
ನಿಷ್ಕಲಲಿಂಗವನು ಕಂಗಳು ತುಂಬಿ ನೋಡಿ
ಮನದಲ್ಲಿ ಸಂತೋಷಂಗೊಂಡು
ಆ ನಿಷ್ಕಲಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ
ಅಗಣಿತವೆಂಬ ನಮಸ್ಕಾರಮಂ ಮಾಡಿ,
ಆ ನಿಷ್ಕಲಲಿಂಗವನು ಕೂಡಿ ಎರಡಳಿದು,
ಅಲ್ಲಿಂದ ಮುಂದಕ್ಕೆ ಹೋಗಿ
ಶಿಖಾಚಕ್ರವೆಂಬ ತ್ರಿದಳಮಂಟಪದಲ್ಲಿ
ಮೂರ್ತಿಗೊಂಡಿರ್ದ ಶೂನ್ಯಲಿಂಗಕ್ಕೆ
ನಿರ್ಭಾವವೆಂಬ ಜಲದಿಂ ಮಜ್ಜನಕ್ಕೆರೆದು,
ನಿರ್ಜಾತವೆಂಬ ಗಂಧವ ಧರಿಸಿ
ನಿರ್ಜಡವೆಂಬ ಅಕ್ಷತೆಯನಿಟ್ಟು
ನಿಧ್ರ್ವಂದ್ವವೆಂಬ ಪುಷ್ಪದಮಾಲೆಯ ಧರಿಸಿ
ನಿರ್ಲಜ್ಜೆಯೆಂಬ ಧೂಪವ ಬೀಸಿ
ನಿರಾಭಾರವೆಂಬ ಜ್ಯೋತಿಯ ಬೆಳಗಿ
ನಿರಾಮಯವೆಂಬ ವಸ್ತ್ರವ ಹೊದಿಸಿ
ನಿಸ್ಪೃಹವೆಂಬ ಆಭರಣವ ತೊಡಸಿ
ನಿರಾಳವೆಂಬ ನೈವೇದ್ಯವನರ್ಪಿಸಿ
ನಿರಾಲಂಬವೆಂಬ ತಾಂಬೂಲವನಿತ್ತು,
ಇಂತು ಶೂನ್ಯಲಿಂಗದ ಅಷ್ಟವಿಧಾರ್ಚನೆಯಂ ಮಾಡಿ,
ಅಗಣಿತ ಕೋಟಿಸೂರ್ಯ ಪ್ರಭೆಯಂತೆ ಬೆಳಗುವ
ಶೂನ್ಯಲಿಂಗವನು ಕಂಗಳು ತುಂಬಿ ನೋಡಿ
ಮನದಲ್ಲಿ ಸಂತೋಷಂಗೊಂಡು
ಆ ಶೂನ್ಯಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ
ನಿಭರ್ೆದ್ಯವೆಂಬ ನಮಸ್ಕಾರಮಂ ಮಾಡಿ
ಆ ಶೂನ್ಯಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ,
ಪಶ್ಚಿಮಚಕ್ರವೆಂಬ ಏಕದಳಮಂಟಪದಲ್ಲಿ
ಮೂರ್ತಿಗೊಂಡಿರ್ದ ನಿರಂಜನಲಿಂಗಕ್ಕೆ
ನಿನರ್ಾಮವೆಂಬ ಜಲದಿಂ ಮಜ್ಜನಕ್ಕೆರೆದು
ನಿಷ್ಕಾರಣವೆಂಬ ಗಂಧವ ಧರಿಸಿ
ನಿಃಸಂಗವೆಂಬ ಅಕ್ಷತೆಯನಿಟ್ಟು
ನಿಸ್ಸಾರವೆಂಬ ಪುಷ್ಪವ ಧರಿಸಿ
ನಿರುಪಾಧಿಕವೆಂಬ ಧೂಪವ ಬೀಸಿ
ನಿಷ್ಕಳೆಯೆಂಬ ಜ್ಯೋತಿಯ ಬೆಳಗಿ
ನಿಶ್ಚಲವೆಂಬ ವಸ್ತ್ರವ ಹೊದಿಸಿ
ನಿರ್ವಾಸನೆಯೆಂಬ ಆಭರಣವ ತೊಡಿಸಿ
ನಿಃಶೂನ್ಯವೆಂಬ ನೈವೇದ್ಯವನರ್ಪಿಸಿ
ನಿರವಯವೆಂಬ ತಾಂಬೂಲವನಿತ್ತು,
ಇಂತು ನಿರಂಜನಲಿಂಗದ ಅಷ್ಟವಿಧಾರ್ಚನೆಯ ಮಾಡಿ
ತೆರಹಿಲ್ಲದೆ ಬೆಳಗಿನ ಮಹಾಬೆಳಗನೊಳಕೊಂಡು ಬೆಳಗುವ
ನಿರಂಜನಲಿಂಗವನು ಕಂಗಳು ತುಂಬಿ ನೋಡಿ,
ಮನದಲ್ಲಿ ಸಂತೋಷಂಗೊಂಡು
ಆ ನಿರಂಜನಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ,
ನಿಃಶಬ್ದವೆಂಬ ನಮಸ್ಕಾರಮಂ ಮಾಡಿ
ಆ ನಿರಂಜನಲಿಂಗವನು ಕೂಡಿ ಎರಡಳಿದು
ಅಲ್ಲಿಂದ ಮುಂದೆ ನೋಡಲು
ಬಚ್ಚಬರಿಯ ಬಯಲಿರ್ಪುದ ಕಂಡು
ಆ ಬಯಲೆ ತನ್ನ ನಿಜನಿವಾಸವೆಂದು ತಿಳಿದು
ಆ ನಿಜವಾಸದಲ್ಲಿ ತಾ ನಿಂದು
ತನ್ನಿಂದ ಕೆಳಗಣ ನವಚಕ್ರಂಗಳಲ್ಲಿರ್ದ
ನವಲಿಂಗಗಳ ಪೂಜೆಯ ನಿರಂತರದಲ್ಲಿ ಮಾಡುವ
ಶಿವಯೋಗಿಗೆ ಭವಬಂಧನವಿಲ್ಲ.
ಆ ಭವಬಂಧನವಿಲ್ಲವಾಗಿ
ಜೀವಕಲ್ಪಿತವು ಮುನ್ನವೇ ಇಲ್ಲ.
ಆ ಜೀವಕಲ್ಪಿತವಿಲ್ಲವಾಗಿ
ಆತನು ಪರಿಪೂರ್ಣನಾಗಿ ಪರಾತ್ಪರನಾಗಿ
ಪರಶಿವಬ್ರಹ್ಮವೇ ಆಗಿ ಇರ್ಪನಯ್ಯಾ ಅಖಂಡೇಶ್ವರಾ./377
ನಳಿನಾಸನದಲ್ಲಿ ಕುಳ್ಳಿರ್ದು ಅತ್ತಿತ್ತ ಕಳವಳಿಸದೆ
ತುಳುಕುವ ಇಂದ್ರಿಯಂಗಳ ಬಂಧಿಸಿ,
ಸುಳಿವ ಕರಣಂಗಳ ಬಲಿದು ಒಬ್ಬುಳಿಗೊಳಿಸಿ,
ಉನ್ಮನಿಯ ಮಂಟಪದಲ್ಲಿ ನಿರಂತರ
ಬೆಳಗುವ ಪ್ರಾಣಲಿಂಗದಲ್ಲಿ ಮನಪವನಾಗ್ನಿಗಳೊಂದಾಗಿ,
ಸಾವಿರ ಕಿರಣಸಹಿತ ಒಡೆದುಮೂಡಿದ
ಪ್ರಭಾಕಾಲದ ಸೂರ್ಯನಂತೆ,
ಮಹಾಬೆಳಗಿನ ಪ್ರಭಾಪಟಲದಿಂದೆ
ಥಳಥಳಿಸಿ ಬೆಳಗುವ ಪ್ರಾಣಲಿಂಗವನು
ಕಂಗಳು ತುಂಬಿ ನೋಡಿ, ಮನ ತುಂಬಿ ಸಂತೋಷಿಸಿ,
ಸರ್ವಾಂಗ ಗುಡಿಗಟ್ಟಿ, ಪರಮ ಪರಿಣಾಮ ತಲೆದೋರಿ,
ಮಹಾಪರಿಣಾಮದೊಳಗೆ ಓಲಾಡಬಲ್ಲರೆ
ಅದೇ ಪ್ರಾಣಲಿಂಗಸಂಬಂಧ ನೋಡಾ ಅಖಂಡೇಶ್ವರಾ./378
ನಾದ ನಿಜವೆಂಬೆನೆ ? ನಾದ ನಿಜವಲ್ಲ.
ಬಿಂದು ನಿಜವೆಂಬೆನೆ ? ಬಿಂದು ನಿಜವಲ್ಲ.
ಕಳೆ ನಿಜವೆಂಬೆನೆ ? ಕಳೆ ನಿಜವಲ್ಲ.
ಆ ನಾದ ಬಿಂದು ಕಳೆಗಳಿಂದೊಗೆದ
ಜಗವು ನಿಜವೆಂಬೆನೆ ? ಜಗವು ನಿಜವಲ್ಲ.
ಆ ಜಗದ ಮಧ್ಯದಿ ತೋರುವ ಲೀಲೆ ನಿಜವೆಂಬೆನೆ ?
ಲೀಲೆ ನಿಜವಲ್ಲ.
ಇನ್ನಾವುದು ನಿಜವೆಂದೊಡೆ :
ಅಲ್ಲ-ಅಹುದು, ಇಲ್ಲ-ಉಂಟು, ಬೇಕು-ಬೇಡ
ಎಂಬ ಭಾವಕ್ಕೆ ಇಂಬಿಲ್ಲದೆ
ತಾನಿದಿರೆಂಬ ಶಂಕೆದೋರದೆ,
ಅಖಂಡ ಪರಿಪೂರ್ಣವಾದ ಮಹಾಘನವೆ
ನಿಮ್ಮ ನಿಜದ ನಿಲವಯ್ಯಾ ಅಖಂಡೇಶ್ವರಾ./379
ನಾದಬಿಂದುಕಳಾತೀತವಾದ ಪರವಸ್ತುವೆ
ಮಹಾಂತು ನೋಡಾ.
ಶ್ರುತಿತತಿಗಸಾಧ್ಯವಾದ ಪರವಸ್ತುವೆ
ಮಹಾಂತು ನೋಡಾ.
ಆದಿ ಮಧ್ಯಾಂತವಿಲ್ಲದ ಪರವಸ್ತುವೆ
ಮಹಾಂತು ನೋಡಾ.
ಉಪಮಾತೀತ ವಾಙ್ಮನಕ್ಕಗೋಚರವಾದ
ಪರವಸ್ತುವೆ ಮಹಾಂತು ನೋಡಾ.
ಇಂತಪ್ಪ ಮಹಾಂತಿನ ಅತೀತ ಘನಮಹಾಜಂಗಮದ
ಶ್ರೀಪಾದವ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ. /380
ನಾನಾ ವರ್ಣದ ಕಾಷ್ಠವ ಸುಟ್ಟಲ್ಲಿ
ಏಕವರ್ಣದ ಬೂದಿಯಪ್ಪುದಲ್ಲದೆ
ಅಲ್ಲಿ ಕಾಷ್ಠದ ಕುಲ ಉಂಟೇ ಅಯ್ಯ ?
ತೊಟ್ಟು ಬಿಟ್ಟ ಹಣ್ಣು ಮರಳಿ ತೊಟ್ಟ ಹತ್ತಬಲ್ಲುದೇ ಅಯ್ಯ ?
ಕಷ್ಟಜನ್ಮದಲ್ಲಿ ಹುಟ್ಟಿದಾತನಾದಡಾಗಲಿ
ನೆಟ್ಟನೆ ಶ್ರೀಗುರುಕಾರುಣ್ಯವ ಪಡೆದು ಇಷ್ಟಲಿಂಗಸಂಬಂಧಿಯಾಗಿ,
ಆಚಾರ ಕ್ರಿಯಾಸಂಪನ್ನನಾದ ಶರಣನ
ಜಾತಿಪೂರ್ವವ ಎತ್ತಿ ದೂಷಿಸುವ ಪಾತಕರ ಬಾಯಲ್ಲಿ
ಬಾಲಹುಳುಗಳು ಸುರಿಯದೆ ಮಾಣ್ಬವೆ ಹೇಳಾ
ಅಖಂಡೇಶ್ವರಾ ?/381
ನಾನಾದೇಶವ ತಿರುಗಿದಡಿಲ್ಲ.
ನಾನಾ ವ್ಯಾಪಾರವ ಮಾಡಿದಡಿಲ್ಲ.
ಏನು ಮಾಡಿದಡೇನು ಹುರುಳಿಲ್ಲ.
ಅಖಂಡೇಶ್ವರಾ, ನೀವು ದಯೆ ಹುಟ್ಟಿ
ಒಲಿದು ನೋಡಿ ಕರುಣಿಸಿ ಸಲಹದನ್ನಕ್ಕರ
ಉಳಿದುದೆಲ್ಲ ವ್ಯರ್ಥ ನೋಡಾ./382
ನಾನಿಹ ಪರಿಯಂತರ ನೀನುಂಟು ;
ನೀನಿಹ ಪರಿಯಂತರ ನಾನುಂಟು.
ನಾನು ನೀನೆಂಬುಭಯದ ಸಂದು ಹೂಳಿದ ಬಳಿಕ,
ಇನ್ನೇನುಂಟು ಹೇಳಾ ಅಖಂಡೇಶ್ವರಾ ?/383
ನಾನೇನೆಂದೆನೆ ? ತಾನೇತಕೆ ಮುನಿದನೆ ?
ಮಾನಿನಿ ಹೋಗಿ ಕರೆದು ತಾರೇ
ಅಖಂಡೇಶ್ವರನೆಂಬ ಇನಿಯನ./384
ನಾಲ್ಕು ವರ್ಣ ಹದಿನೆಂಟು ಜಾತಿ
ನೂರೊಂದು ಕುಲದಲ್ಲಿ ಹುಟ್ಟಿದವನಾದಡಾಗಲಿ,
ಅಧಮನಾದಡಾಗಲಿ, ಮೂರ್ಖನಾದಡಾಗಲಿ, ವಿದ್ವಾಂಸನಾದಡಾಗಲಿ,
ಚಿದ್ರೂಪ ಶಿವಮಂತ್ರವನು ಶುದ್ಧಸಾವಧಾನದಿಂದೆ ಸ್ಮರಿಸಲು
ಹೊದ್ದಿರ್ದ ಪಾಪದ ಪಡೆಯೆಲ್ಲ
ಬಿದ್ದೋಡಿ ಹೋಗುವದು ನೋಡಾ.
ಅದೆಂತೆಂದೊಡೆ :
“ಅಂತ್ಯಜೋವಾಧಮೋ ವಾಪಿ ಮೂರ್ಖೊ ವಾ ಪಂಡಿತೋಪಿ ವಾ |
ಜಪೇತ್ ಪಂಚಾಕ್ಷರೀಂ ವಿದ್ಯಾಂ ಜಪತಃ ಪ್ರಾಪ್ನು ಯಾಚ್ಛಿವಂ ||”
ಎಂದುದಾಗಿ,
ಇಂತಪ್ಪ ಪಂಚಾಕ್ಷರಿಯ ಮಹಿಮೆಯನೇನೆಂಬೆನಯ್ಯ
ಅಖಂಡೇಶ್ವರಾ./385
ನಾಸಿಕಾಗ್ರದಿಂ ಮುಂದೆ ನಾಲ್ಕಂಗುಲಪ್ರಮಾಣದಲ್ಲಿ
ನೀಲವರ್ಣಮಾದಾಕಾಶವನು,
ಆರಂಗುಲದಲ್ಲಿ ಧೂಮವರ್ಣಮಾದ ವಾಯುವನು,
ಎಂಟಂಗುಲದಲ್ಲಿ ರಕ್ತವರ್ಣಮಾದ ಅಗ್ನಿಯನು,
ಹತ್ತಂಗುಲದಲ್ಲಿ ತೆರೆಗಳ ವರ್ಣಮಾದ ಅಪ್ಪುವನು,
ಹನ್ನೆರಡಂಗುಲದಲ್ಲಿ ಹೊಂಬಣ್ಣಮಾದ ಪೃಥ್ವಿಯನು
ಲಕ್ಷಿಪುದೆ ಬಹಿರ್ಲಕ್ಷ್ಯ ನೋಡಾ ಅಖಂಡೇಶ್ವರಾ./386
ನಿಚ್ಚ ನಿಚ್ಚ ಶರಣಂಗೆ ಹಬ್ಬ ಆವಾಸಗಿರಿ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಶುದ್ಧಶಿವರಾತ್ರಿ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಜಾತ್ರೆ ಉತ್ಸವ ತಾನೆ ಕಾಣಿರೊ.
ನಿಚ್ಚ ನಿಚ್ಚ ಶರಣಂಗೆ ಪರಮಾನಂದದೋಕುಳಿ ತಾನೆ ಕಾಣಿರೊ.
ನಿಚ್ಚ ನಿಚ್ಚ ನಮ್ಮ ಅಖಂಡೇಶ್ವರನ ಶರಣಂಗೆ
ಒಸಗೆ ವೈಭವಂಗಳು ತಾನೆ ಕಾಣಿರೊ. /387
ನಿತ್ಯ ಗುರುಲಿಂಗಜಂಗಮಕ್ಕೆ ಪೂಜೆಯ ಮಾಡಿ
ನಿತ್ಯ ಮುಕ್ತಿಯ ಪಡೆಯಲರಿಯದೆ,
ಮತ್ತತನದಿಂದೆ ಅನಿತ್ಯ ಫಲಭೋಗವ ಪಡೆದು
ಮರ್ತ್ಯದ ಭವಜಾಲದಲ್ಲಿ ಸುತ್ತಿ ಸುತ್ತಿ ಸುಳಿದು ತೊಳಲಿ ಬಳಲುವ
ವ್ಯರ್ಥರ ನೋಡಿ ನಗುತಿರ್ದನು ನಮ್ಮ ಅಖಂಡೇಶ್ವರನು./388
ನಿತ್ಯ ಲಿಂಗಾರ್ಚನೆಯ ಮಾಡುವೆ.
ಸತ್ಯ ಸದ್ಭಕ್ತರ ಮಠವನರಸಿಕೊಂಡು ಹೋಗಿ,
ಲಿಂಗ ಮುಂತಾಗಿ ಭಕ್ತಿಭಿಕ್ಷೆಯ ಬೇಡುವೆ.
ಅವರು ಇಕ್ಕಿದ ಪದಾರ್ಥವ ಚಿತ್ತಶುದ್ಧವಾಗಿ ಕೈಕೊಂಡು
ಎನ್ನೊಡೆಯ ಅಖಂಡೇಶ್ವರಲಿಂಗ ಸಹಿತವಾಗಿ ಭೋಗಿಸುವೆ. /389
ನಿತ್ಯನಿರಂಜನ ಜಂಗಮವ ಭಕ್ತಿಯಿಂ ಬಿಜಯಂಗೈಸಿ
ಮುಕ್ತಿಸಿಂಹಾಸನದ ಮೇಲೆ ಕುಳ್ಳಿರಿಸಿ,
ಸತ್ಯೋದಕದಿಂದೆ ಪಾದಪ್ರಕ್ಷಾಲನವ ಮಾಡಿ
ಆ ಜಂಗಮದ ಜ್ಞಾನಕ್ರಿಯಂಗಳೆಂಬ ಶ್ರೀಚರಣಯುಗಳವನು
ಸುಚಿತ್ತವೆಂಬ ಹಸ್ತದ ಮಧ್ಯದಲ್ಲಿ ಮೂರ್ತಿಗೊಳಿಸಿ,
ಸದ್ಭಾವನೆಂಬ ಹಸ್ತದಿಂದ ಚಿತ್ಪ್ರಕಾಶವೆಂಬ ವಿಭೂತಿಯ ಧರಿಸಿ,
ಚಿತ್ಕರಣಂಗಳೆಂಬ ಪುಷ್ಪದ ಮಾಲೆಯ ಶೃಂಗರಿಸಿ
ಸ್ವಾನುಭಾವವೆಂಬ ಧೂಪವನರ್ಪಿಸಿ
ಸಮ್ಯಕ್ಜ್ಞಾನವೆಂಬ ದೀಪವ ಬೆಳಗಿ
ನಿಃಶೂನ್ಯವೆಂಬ ಕೊಣದಲ್ಲಿರ್ದ ನಿರವಯ ಉದಕದ ತಂದು,
ಆ ನಿರಂಜನಜಂಗಮದ ಪಾದಾಭಿಷೇಕವ ಮಾಡಿ,
ನಿರಾಳವೆಂಬ ಬಟ್ಟಲಲ್ಲಿ ಗಡಣಿಸಿಕೊಂಡು
ಪೂಜೆಯಂ ಸಂಪೂರ್ಣಂಗೈದು,
ಬಳಿಕ ಆ ತೀರ್ಥವನು ಆ ಜಂಗಮವು
ತಮ್ಮ ಲಿಂಗಕ್ಕೆ ಅರ್ಪಿಸಿ, ಆ ಲಿಂಗಸಹಿತ ಭೋಗಿಸಿ,
ಉಳಿದ ಮಹಾಜ್ಞಾನತೀರ್ಥವನು
ಅವಿರಳಭಕ್ತಿಯಿಂದೆ ಕೈಕೊಂಡು
ತನ್ನ ಲಿಂಗಸಹಿತ ಸಲಿಸುವಾತನೆ ಅನಾದಿಭಕ್ತನು.
ಇಂತಪ್ಪ ಅನಾದಿಭಕ್ತನ ಘನಕ್ಕೆ
ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ./390
ನಿತ್ಯಲಿಂಗಾರ್ಚನೆಯ ಮಾಡುತ್ತ ಸದ್ಭಕ್ತರನರಸುತ್ತ
ಭಕ್ತಿಭಿಕ್ಷವ ಬೇಡುವೆನೆಂದು ಬರುವಾಗ
ಗ್ರಾಮದ ಬಾಗಿಲಲ್ಲಿ ತಡೆವಂತೆ ಮಾಡಯ್ಯ ಎನ್ನ.
ಆರಾರು ತಡೆಯದಿರ್ದಡೆ ಆ ಗ್ರಾಮವ ಹೊಕ್ಕು
ಮನೆ ಮನೆ ತಿರಿವಂತೆ ಮಾಡಯ್ಯ ಎನ್ನ.
ಮನೆ ಮನೆ ತಿರಿದಡೆ ಎನ್ನ ಕಂಡು
ಸರ್ವರು ಅಡ್ಡಮೋರೆಯನಿಕ್ಕುವಂತೆ ಮಾಡಯ್ಯ ಎನ್ನ.
ಆ ಗ್ರಾಮವನುಳಿದು ಮತ್ತೊಂದು ಗ್ರಾಮವನರಸಿಕೊಂಡು
ಬರುವ ಬಟ್ಟೆಯಲ್ಲಿ ಜಳತಗುಲಿ ಕಳೆಕುಂದಿ ಮುಖಬಾಡಿ
ಒಡಲೊಳಗಣ ಕ್ಷುಧಾಗ್ನಿ ಢಾಳಿಸಿ ತನು ಸುಟ್ಟು ನಡೆವ ಗತಿಗೆಟ್ಟು,
ದ್ರವಗುಂದಿ ಧರೆಗೆ ಬೀಳುವಂತೆ ಮಾಡಯ್ಯ ಎನ್ನ.
ಆ ಸಮಯದಲ್ಲಿ ನಿಮ್ಮ ನೆನಹು ಮರೆದು
ಜಗದಭೋಗವ ಆಸೆ ಮಾಡಿದೆನಾದಡೆ
ಅಖಂಡೇಶ್ವರಾ, ನಿಮ್ಮ ಶ್ರೀಪಾದಕ್ಕೆ
ದೂರಸ್ಥನ ಮಾಡಯ್ಯ, ಎನ್ನ ದೇವರದೇವ./391
ನಿಮ್ಮ ತೊತ್ತಿನ ತೊತ್ತು ಪಡಿದೊತ್ತೆಂದು
ಎನ್ನ ಕೈವಿಡಿದು ತಲೆದಡಹಿ ವರದಭಯಹಸ್ತವ ಕೊಟ್ಟು
ಮತ್ರ್ಯಲೋಕಕ್ಕೆ ಎನ್ನ ಕಳುಹಿದಿರಾಗಿ,
ನೀನೇ ಕರ್ತನು ನಾನೇ ಭೃತ್ಯನು ;
ನೀನೇ ಒಡೆಯನು ನಾನೇ ಬಂಟನು ;
ನೀನೇ ಆಳ್ದನು ನಾನೇ ಆಳು ;
ನೀನೇ ದೇವನು ನಾನೇ ಭಕ್ತನಾಗಿ,
ನೀನು ಮಾಡೆಂದ ಮಣಿಹವ ಮಾಡುತಿರ್ಪೆನು ;
ನೀನು ಬೇಡೆಂದ ಮಣಿಹವ ಬಿಡುತಿರ್ಪೆನು;
ನೀನು ಹೇಳಿದ ತೊತ್ತು ಸೇವೆಯ ಮಾಡುತಿಪ್ಪೆನಯ್ಯ
ಅಖಂಡೇಶ್ವರಾ./392
ನಿಮ್ಮ ನೋಡಿ ನೋಡಿ ಎನ್ನ ಕಂಗಳು ದಣಿಯವಯ್ಯ.
ನಿಮ್ಮ ಹಾಡಿ ಹಾಡಿ ಎನ್ನ ಜಿಹ್ವೆ ದಣಿಯದಯ್ಯ.
ನಿಮ್ಮ ಪೂಜೆಯ ಮಾಡಿ ಮಾಡಿ ಎನ್ನ ಕೈಗಳು ದಣಿಯವಯ್ಯ.
ನಿಮ್ಮ ನೆನೆನೆನೆದು ಎನ್ನ ಮನವು ದಣಿಯದಯ್ಯ
ಅಖಂಡೇಶ್ವರಾ./393
ನಿಮ್ಮ ಪೂಜಿಸಿಹೆನೆಂದಡೆ ತನುವಿಲ್ಲವಯ್ಯಾ ಎನಗೆ.
ಅದೇನು ಕಾರಣವೆಂದೊಡೆ,
ಆ ಪೂಜಿಸುವ ತನು ನೀವೆ ಆದಿರಾಗಿ.
ನಿಮ್ಮ ನೆನೆದಿಹೆನೆಂದಡೆ ಮನವಿಲ್ಲವಯ್ಯಾ ಎನಗೆ.
ಅದೇನು ಕಾರಣವೆಂದೊಡೆ,
ಆ ನೆನೆವ ಮನ ನೀವೆ ಆದಿರಾಗಿ.
ನಿಮ್ಮ ಅರಿದಿಹೆನೆಂದಡೆ ಅರುಹುವಿಲ್ಲವಯ್ಯಾ ಎನಗೆ.
ಅದೇನು ಕಾರಣವೆಂದೊಡೆ,
ಆ ಅರುಹು ನೀವೇ ಆದಿರಾಗಿ.
ಅಖಂಡೇಶ್ವರಾ, ನಿಮ್ಮೊಳಗೆ ನಾನು
ಉರಿಯುಂಡ ಕರ್ಪುರದಂತಿರ್ದೆನಯ್ಯಾ ದೇವರದೇವಾ./394
ನಿಮ್ಮ ಪ್ರಸಾದವೆನಗೆ ತನುವಾಯಿತ್ತು.
ನಿಮ್ಮ ಪ್ರಸಾದವೆನಗೆ ಮನವಾಯಿತ್ತು.
ನಿಮ್ಮ ಪ್ರಸಾದವೆನಗೆ ಪ್ರಾಣವಾಯಿತ್ತು.
ನಿಮ್ಮ ಪ್ರಸಾದವೆನಗೆ ಜೀವವಾಯಿತ್ತು.
ನಿಮ್ಮ ಪ್ರಸಾದವೆನಗೆ ಕರಣೇಂದ್ರಿಯ ವಿಷಯಂಗಳಾದವು.
ಇದು ಕಾರಣ, ಅಖಂಡೇಶ್ವರಾ,
ನಿಮ್ಮ ಮಹಾಪ್ರಸಾದದ ನಿಲುವಿನೊಳಗೆ
ಎರಡಳಿದು ಪರಮಸುಖಿಯಾಗಿರ್ದೆನಯ್ಯಾ./395
ನಿಮ್ಮ ಸ್ವಲೀಲೆಯಿಂದೆ
ಹಲವು ನಾಮರೂಪುಕ್ರಿಯೆಯಿಂದೆ ಸಾಕಾರವೆನಿಸಿ
ನೀವು ಆಚಾರಲಿಂಗವಾದಲ್ಲಿ ,
ನಾನು ಭಕ್ತನೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ಗುರುಲಿಂಗವಾದಲ್ಲಿ ,
ನಾನು ಮಹೇಶ್ವರನೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ಶಿವಲಿಂಗವಾದಲ್ಲಿ ,
ನಾನು ಪ್ರಸಾದಿಯೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ಜಂಗಮಲಿಂಗವಾದಲ್ಲಿ ,
ನಾನು ಪ್ರಾಣಲಿಂಗಿಯೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ಪ್ರಸಾದಲಿಂಗವಾದಲ್ಲಿ ,
ನಾನು ಶರಣನೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ಮಹಾಲಿಂಗವಾದಲ್ಲಿ ,
ನಾನು ಐಕ್ಯನೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ನಿಷ್ಕಲಲಿಂಗವಾದಲ್ಲಿ ,
ನಾನು ಮೂಲಜ್ಞಾನಚಿತ್ತೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ಶೂನ್ಯಲಿಂಗವಾದಲ್ಲಿ ,
ನಾನು ಮಹಾಜ್ಞಾನಶಕ್ತಿಯೆಂಬಂಗವಾಗಿ ನಿಮ್ಮೊಳಗೇಕವಾಗಿರ್ದೆನಯ್ಯಾ.
ನೀವು ನಿರಂಜನಲಿಂಗವಾದಲ್ಲಿ ,
ನಾನು ಅಖಂಡ ಪರಿಪೂರ್ಣಮಹಾಕಳೆಯೆಂಬಂಗವಾಗಿ
ನಿಮ್ಮೊಳಗೇಕವಾಗಿರ್ದೆನಯ್ಯಾ .
ನೀವು ಆವಾವ ರೂಪುಧರಿಸಿದಲ್ಲಿ ನಾನು ಆಯಾಯ ರೂಪಿಂಗೆ ತಕ್ಕಂಗವಾಗಿ
ನಿಮ್ಮೊಳಗೇಕವಾಗಿರ್ದೆನಯ್ಯಾ ಅಖಂಡೇಶ್ವರಾ./396
ನಿರುಪಮ ನಿರಾಳನು ನೋಡಾ ಲಿಂಗೈಕ್ಯನು.
ನಿಸ್ಸೀಮ ನಿರ್ಜಡನು ನೋಡಾ ಲಿಂಗೈಕ್ಯನು.
ನಿಃಕಳಂಕ ನಿಃಶಬ್ದನು ನೋಡಾ ಲಿಂಗೈಕ್ಯನು.
ನಿರಾವರಣ ನಿರಂಜನನು ನೋಡಾ
ಅಖಂಡೇಶ್ವರಾ ನಿಮ್ಮ ನಿಜಲಿಂಗೈಕ್ಯನು./397
ನಿರುಪಮ ಬಸವಣ್ಣನ ನಿರಾಳ ಬೆಳಗಿನೊಳಗೆ
ನಿರಂತರ ಬೆಳಗುತಿರ್ದೆನಯ್ಯಾ.
ಅದೆಂತೆಂದೊಡೆ :
ಬಕಾರವೇ ಎನ್ನ ಸ್ಥೂಲತನು,
ಸಕಾರವೇ ಎನ್ನ ಸೂಕ್ಷ್ಮತನು,
ವಕಾರವೇ ಎನ್ನ ಕಾರಣತನು.
ಮತ್ತಂ,
ಬಕಾರವೇ ಎನ್ನ ಜೀವಾತ್ಮನು,
ಸಕಾರವೆ ಎನ್ನ ಅಂತರಾತ್ಮನು,
ವಕಾರವೆ ಎನ್ನ ಪರಮಾತ್ಮನು.
ಮತ್ತಂ,
ಬಕಾರವೆ ಗುರುವಾಗಿ ಬಂದೆನ್ನ
ತನುವನೊಳಕೊಂಡಿತ್ತು.
ಸಕಾರವೆ ಲಿಂಗವಾಗಿ ಬಂದೆನ್ನ
ಮನವನೊಳಕೊಂಡಿತ್ತು.
ವಕಾರವೆ ಜಂಗಮವಾಗಿ ಬಂದೆನ್ನ
ಧನವನೊಳಕೊಂಡಿತ್ತು.
ಮತ್ತಂ,
ಬಕಾರವೆ ಇಷ್ಟಲಿಂಗವಾಗಿ ಬಂದೆನ್ನ
ಸ್ಥೂಲತನುವನೊಳಕೊಂಡಿತ್ತು.
ಸಕಾರವೆ ಪ್ರಾಣಲಿಂಗವಾಗಿ ಬಂದೆನ್ನ
ಸೂಕ್ಷ್ಮತನುವನೊಳಕೊಂಡಿತ್ತು.
ವಕಾರವೆ ಭಾವಲಿಂಗವಾಗಿ ಬಂದೆನ್ನ
ಕಾರಣತನುವನೊಳಕೊಂಡಿತ್ತು.
ಮತ್ತಂ,
ಬಕಾರವೆ ಶುದ್ಧಪ್ರಸಾದವಾಗಿ ಬಂದೆನ್ನ
ಜೀವಾತ್ಮನನೊಳಕೊಂಡಿತ್ತು.
ಸಕಾರವೇ ಸಿದ್ಧಪ್ರಸಾದವಾಗಿ ಬಂದೆನ್ನ
ಅಂತರಾತ್ಮನನೊಳಕೊಂಡಿತ್ತು.
ವಕಾರವೆ ಪ್ರಸಿದ್ಧಪ್ರಸಾದವಾಗಿ ಬಂದೆನ್ನ
ಪರಮಾತ್ಮನನೊಳಕೊಂಡಿತ್ತು.
ಮತ್ತಂ,
ಬಕಾರವೆ ಸತ್ಕ್ರಿಯೆಯಾಗಿ ಬಂದೆನ್ನ
ಬಹಿರಂಗವ ಅವಗ್ರಹಿಸುತಿರ್ಪುದು.
ಸಕಾರವೆ ಸಮ್ಯಕ್ಜ್ಞಾನವಾಗಿ ಬಂದೆನ್ನ
ಅಂತರಂಗವ ಅವಗ್ರಹಿಸುತಿರ್ಪುದು.
ವಕಾರವೆ ಮಹಾಜ್ಞಾನವಾಗಿ ಬಂದೆನ್ನ
ಒಳಹೊರಗನೆಲ್ಲ ಅವಗ್ರಹಿಸುತಿರ್ಪುದು.
ಇಂತೀ ಬಸವಾಕ್ಷರಕತ್ರಯಂಗಳಲ್ಲಿ ನಾನು ನಿಕ್ಷೇಪವಾಗಿರ್ದು
ಬಸವ ಬಸವ ಬಸವ ಎಂದು ಬಸವಣ್ಣನ ನಾಮತ್ರಯವನು
ಎನ್ನ ಮನದಣಿವಂತೆ ತಣಿಯಲುಂಡು
ಭವಸೂತ್ರವ ಹರಿದು ಶಿವಸ್ವರೂಪನಾದೆನಯ್ಯಾ ಅಖಂಡೇಶ್ವರಾ. /398
ನೀನೊಲಿದಡೆ ಕಲ್ಲೆಲ್ಲ ಕನಕವಯ್ಯ.
ನೀನೊಲಿದಡೆ ಹುಲ್ಲೆಲ್ಲ ರಾಜಾನ್ನವಯ್ಯ.
ನೀನೊಲಿದಡೆ ಕೊರಡೆಲ್ಲ ಕಲ್ಪವೃಕ್ಷವಯ್ಯ.
ನೀನೊಲಿದಡೆ ಬರಡೆಲ್ಲ ಕಾಮಧೇನುವಯ್ಯ.
ನೀನೊಲಿದಡೆ ಏನುಂಟು ಏನಿಲ್ಲವಯ್ಯ ಅಖಂಡೇಶ್ವರಾ./399
ನೀನೊಲಿದಡೆ ಜಗವೆಲ್ಲ ಕೊಂಡಾಡುತಿರ್ಪುದು ನೋಡಾ ;
ನೀನೊಲಿಯದಿರ್ದಡೆ ಜಗವೆಲ್ಲ ಹೊತ್ತುಗಲ್ಲ
ಹೊತ್ತಿರ್ಪುದು ನೋಡಾ.
ನೀನೊಲಿದಡೆ ವೈರಿಗಳೆಲ್ಲ ಸಖರಪ್ಪರು ನೋಡಾ ;
ನೀನೊಲಿಯದಿರ್ದಡೆ ಸಖರೆಲ್ಲ ವೈರಿಗಳಾಹರು ನೋಡಾ.
ನೀನೊಲಿದಡೆ ಬಾರದ ಪದಾರ್ಥ ಬಪ್ಪುದು ನೋಡಾ;
ನೀನೋಲಿಯದಿರ್ದಡೆ ಬರ್ಪುದು ಬಾರದೆ ಹೋಹುದು ನೋಡಾ.
ಇದು ಕಾರಣ,
ನಿಮ್ಮ ಒಲುಮೆಯಿಂದ ಘನವು ಆವುದು ಇಲ್ಲ ನೋಡಾ
ಅಖಂಡೇಶ್ವರಾ./400
ನೀರ ಮಂಟಪದೊಳಗೊಂದು
ನಿರಾಳ ಕಮಲವಿರ್ಪುದ ಕಂಡೆ.
ಆ ಕಮಲಮಧ್ಯದೊಳಗೊಂದು
ನಿರಾಲಂಬ ಕೋಶವಿರ್ಪುದ ಕಂಡೆ.
ಆ ಕೋಶಮಧ್ಯದೊಳಗೊಂದು
ನಿರುಪಮ ಮಾಣಿಕ್ಯದ ಸಿಂಹಾಸನವ ಕಂಡೆ.
ಆ ಸಿಂಹಾಸನದ ಮೇಲೆ ಮೂರ್ತಿಗೊಂಡು ಬೆಳಗುವ
ನಮ್ಮ ಅಖಂಡೇಶ್ವರನೆಂಬ
ನಿರವಯ ಪರಬ್ರಹ್ಮವ ಕಂಡು
ಪರಮಸುಖಿಯಾಗಿರ್ದೆನು./401
ನೀರಿಲ್ಲದ ಭೂಮಿಯಲ್ಲಿ ಬೇರಿಲ್ಲದ ವೃಕ್ಷಹುಟ್ಟಿತ್ತ ಕಂಡೆ.
ಆ ವೃಕ್ಷ ಎಲೆಯಿಲ್ಲದೆ ಹಣ್ಣು ತಳೆದಿರ್ಪುದ ಕಂಡೆ.
ಆ ಹಣ್ಣನು ಒಂದು ಕಾಲಿಲ್ಲದ ಇರುವೆ ಬಂದು ನುಂಗಿತ್ತ ಕಂಡೆ.
ಆ ಇರುವೆಯಗರ್ಭದಲ್ಲಿ ಇಬ್ಬರು ಸತ್ತುದ ಕಂಡೆ.
ಈ ವಿಚಿತ್ರವ ಹೇಳುವಡೆ ನಾನಿಲ್ಲ ,
ಕೇಳುವಡೆ ನೀನಿಲ್ಲವಯ್ಯಾ ಅಖಂಡೇಶ್ವರಾ./402
ನೀರು ಗಟ್ಟಿಗೊಂಡು ಮುತ್ತಪ್ಪುದಲ್ಲದೆ ಮುತ್ತು ನೀರಪ್ಪುದೇ ಅಯ್ಯ ?
ಹಾಲು ಹೆಪ್ಪುಗೊಂಡು ತುಪ್ಪವಪ್ಪುದಲ್ಲದೆ
ತುಪ್ಪ ಹಾಲಪ್ಪುದೇ ಅಯ್ಯ ?
ಹೀನಜಾತಿಯಲ್ಲಿ ಜನಿಸಿದ ನರನು
ಗುರುವಿನ ಕಾರುಣ್ಯದಿಂದ ಶಿವಜಾತಶರಣನಾದ ಬಳಿಕ
ಮರಳಿ ನರನಪ್ಪನೇ ಅಯ್ಯ ಅಖಂಡೇಶ್ವರಾ./403
ನೀವು ನಿಮ್ಮ ಸ್ವಲೀಲೆಯಿಂದೆ
ಜಗದಲೀಲಾ ವೈಭವಂಗಳ ನಟಿಸಬೇಕೆಂದು
ನಿಮ್ಮಲ್ಲಿ ನೆನಹುದೋರಲು,
ಆ ನೆನಹು ನಿರ್ಧರಿಸಿ, ಚಿತ್ತೆನಿಸಿತ್ತು.
ಆ ಚಿತ್ತಿನಿಂದೆ ಚಿನ್ನಾದ ಚಿದ್ಬಿಂದು ಚಿತ್ಕಳೆಗಳೊಗೆದವು.
ಆ ಚಿನ್ನಾದ ಚಿದ್ಬಿಂದು ಚಿತ್ಕಳೆ
ಆ ಮೂಲಚಿತ್ತು ಸಹವಾಗಿ ಗಟ್ಟಿಗೊಂಡು
ಅಖಂಡ ಗೋಳಕಾಕಾರ ತೇಜೋಮೂರ್ತಿಯಪ್ಪ ಮಹಾಲಿಂಗವಾಯಿತ್ತು.
ಆ ಮಹಾಲಿಂಗವೇ ಪಂಚಮುಖವನೈದಿಹ ಸದಾಶಿವನೆಂದೆನಿಸಿತ್ತು.
ಆ ಸದಾಶಿವನಿಂದೆ ಬ್ರಹ್ಮ-ವಿಷ್ಣು-ರುದ್ರರೆಂಬ ತ್ರೈಮೂರ್ತಿಗಳುದಿಸಿದರು.
ಆ ತ್ರೈಮೂರ್ತಿಗಳಿಂದೆ ಸ್ವರ್ಗ-ಮತ್ರ್ಯ-ಪಾತಾಳಂಗಳೆಂಬ
ತ್ರೈಲೋಕಂಗಳು ಜನಿಸಿದವು.
ಆ ತ್ರೈಲೋಕಂಗಳ ಮಧ್ಯದಲ್ಲಿ ಸಚರಾಚರ ಹೆಣ್ಣುಗಂಡು
ನಾಮ ರೂಪ ಕ್ರಿಯಾದಿ ಸಕಲ ವಿಸ್ತಾರವಾಯಿತ್ತು.
ಇಂತಿವೆಲ್ಲವೂ ನಿಮ್ಮ ನೆನಹುಮಾತ್ರದಿಂದಾದವಯ್ಯ ಅಖಂಡೇಶ್ವರಾ./404
ನುಡಿದಂತೆ ನಡೆ ಇಲ್ಲವಯ್ಯ ಎನ್ನಲ್ಲಿ.
ನಡೆದಂತೆ ನುಡಿ ಇಲ್ಲವಯ್ಯ ಎನ್ನಲ್ಲಿ.
ನುಡಿಹೀನ ಕಡುಪಾಪಿಯಯ್ಯ ನಾನು.
ಮನಹೀನ ಮಹಾಪರಾಧಿಯಯ್ಯ ನಾನು.
ಎನ್ನೊಳಗೆ ಸುಗುಣವನರಸಿದಡೇನೂ ಹುರುಳಿಲ್ಲವಯ್ಯ
ನೀವೇ ಕರುಣಿಸಿ ಪಾಲಿಪುದಯ್ಯ ಎನ್ನ,
ಅಖಂಡೇಶ್ವರಾ, ನಿಮ್ಮಧರ್ಮ, ನಿಮ್ಮಧರ್ಮ./405
ನುಡಿಯಬೇಕು ಸತ್ಯಸದಾಚಾರವುಳ್ಳವರೊಡನೆ
ಅನುಭಾವವ.
ನುಡಿಯಬೇಕು ಭಕ್ತಿಯುಕ್ತಿ
ಮುಕ್ತಿಯುಳ್ಳವರೊಡನೆ ಅನುಭಾವವ.
ನುಡಿಯಬೇಕು ಸಾಧು ಸಜ್ಜನ ಸದ್ಭಕ್ತ
ಶರಣರೊಡನೆ ಅನುಭಾವವ.
ನುಡಿಯಬೇಕು ನಮ್ಮ ಅಖಂಡೇಶ್ವರಲಿಂಗವ
ಕೂಡಬೇಕೆಂಬ ಬಯಕೆಯುಳ್ಳವರೊಡನೆ
ಶಿವಾನುಭಾವವ./406
ನುಡಿಯಲಾಗದು ನುಡಿಯಲಾಗದು
ನಯನುಡಿಯಿಲ್ಲದವರೊಡನೆ.
ನುಡಿಯಲಾಗದು ನುಡಿಯಲಾಗದು
ದಯಗುಣವಿಲ್ಲದವರೊಡನೆ.
ನುಡಿಯಲಾಗದು ನುಡಿಯಲಾಗದು
ಭಯಭಕ್ತಿಯಿಲ್ಲದವರೊಡನೆ.
ನುಡಿಯಲಾಗದು ನುಡಿಯಲಾಗದು
ಸ್ವಯಜ್ಞಾನವಿಲ್ಲದವರೊಡನೆ ಶಿವಾನುಭಾವವ !
ಅದೇನು ಕಾರಣವೆಂದೊಡೆ :
ತನ್ನ ಅರುಹಿಂಗೆ ಹಾನಿ, ಮಹಾ ಪರಿಣಾಮ ಕೆಡುವುದು.
ಇದು ಕಾರಣ ಕಡುಪಾತಕ ಜಡಜೀವಿಗಳೊಡನೆ
ಲಕ್ಷಕ್ಕೊಮ್ಮೆ ಕೋಟಿಗೊಂದುವೇಳೆಯಾದಡೂ
ನುಡಿಯಲಾಗದಯ್ಯ ಅಖಂಡೇಶ್ವರಾ./407
ನುಡಿಯಲ್ಲಿ ಎರಡು ನುಡಿಯನು; ನಡೆಯಲ್ಲಿ ಎರಡು ನಡೆಯನು;
ನುಡಿಯಂತೆ ನಡೆ ವಿಸ್ತರಿಸುವ; ನಡೆಯಂತೆ ನುಡಿ ವಿಸ್ತರಿಸುವ ;
ಹಿಡಿವನು ಗುರುಲಿಂಗಜಂಗಮ ದಾಸೋಹವ.
ಬಿಡುವನು ಹೊನ್ನು ಹೆಣ್ಣು ಮಣ್ಣೆಂಬ ತ್ರಿಮಲದಾಸೆಯ.
ಇಂತಪ್ಪ ವೀರಮಾಹೇಶ್ವರನನೇನೆಂಬೆನಯ್ಯ
ಅಖಂಡೇಶ್ವರಾ./408
ನುಡಿಯಲ್ಲಿ ಕರ್ಕಶವಿಲ್ಲದೆ ನಡೆಯಲ್ಲಿ ಬೀಸರವಾಗದೆ,
ಹಿಡಿದ ಭಕ್ತಿಯ ಕಡೆತನಕ ಬಿಡದೆ,
ಬಡತನ ಎಡರು ಕಂಟಕ ಬಂದಲ್ಲಿ
ಚಿಂತೆಯಿಂದ ಕಾಂತಿಗುಂದದೆ
ಅಡಿಗಡಿಗೆ ಶಿವನೆಂಬ ನುಡಿಯ ಮರೆಯದೆ
ಇರ್ಪ ಸದ್ಭಕ್ತಂಗೆ ಬೇಡಿದ ಪದವ ಕೊಡುವ ನಮ್ಮ ಅಖಂಡೇಶ್ವರ./409
ನೆನಹಿಗೆಬಾರದ ವಸ್ತುವ ನೆನವಪರಿ ಇನ್ನೆಂತೋ !
ಭಾವಕ್ಕೆಬಾರದ ವಸ್ತುವ ಭಾವಿಸುವಪರಿ ಇನ್ನೆಂತೋ !
ನೆನೆಯದೆ ಭಾವಿಸದೆ ಎನ್ನೊಳಗೆ ಬಯಲುರೂಪವಾಗಿ
ತೋರಿದನು ನೋಡಾ ಅಖಂಡೇಶ್ವರ./410
ನೆರೆಹೊಲ್ಲ ದುರಾಚಾರಿಗಳ, ನೆರೆಹೊಲ್ಲ ಜಾರಚೋರರ,
ನೆರೆಹೊಲ್ಲ ಬ್ರಹ್ಮೇತಿಕಾರರ, ನೆರೆಹೊಲ್ಲ ಸುರೆಭುಂಜಕರ,
ನೆರೆಹೊಲ್ಲ ಗುರುತಪ್ಪಕರ, ನೆರೆಹೊಲ್ಲ ಹುಸಿಡಂಭಕರ,
ಅದೇನು ಕಾರಣವೆಂದೊಡೆ :
ಬಿರುಗಾಳಿಯ ಸಂಗದಿಂದೆ ಜ್ಯೋತಿ ಅಳಿದು ಹೋಗುವಂತೆ,
ಇಂತಪ್ಪ ಪಂಚಮಹಾಪಾತಕರ ನೆರೆಹೊರೆಯ ಸಂಗದಲ್ಲಿರ್ದವಂಗೆ
ಅನಂತಕಾಲ ಮಾಡಿದ ಪುಣ್ಯವು ಕೆಟ್ಟು ಹೋಗಿ
ಮುಂದೆ ಪಾಪವು ಬೆಂಬತ್ತಿ ಕಾಡುವುದಯ್ಯ ಅಖಂಡೇಶ್ವರಾ./411
ನೇತ್ರದ ಸೂತ್ರದಲ್ಲಿ
ಸಕಲ ವಿಸ್ತಾರದ ರೂಪಿರ್ಪುದನಾರೂ ಅರಿಯರಲ್ಲ !
ಅದೆಂತೆಂದೊಡೆ :“ನೇತ್ರದೇವೋ ನ ಚ ಪರಃ”
ಎಂಬ ಶ್ರುತಿ ಸಾಕ್ಷಿಯಾಗಿ ನೇತ್ರವೆ ಶಿವನೆಂದರಿದು,
ಆ ಶಿವನಿರ್ದಲ್ಲಿಯೆ ಕೈಲಾಸ ಮೇರು ಮಂದರವಿರ್ಪುವು.
ಆ ಶಿವನಿರ್ದಲ್ಲಿಯೆ ಸಕಲಪ್ರಮಥಗಣಂಗಳಿರ್ಪರು.
ಆ ಶಿವನಿರ್ದಲ್ಲಿಯೆ ಸಕಲತೀರ್ಥಕ್ಷೇತ್ರಂಗಳಿರ್ಪುವು.
ಆ ಶಿವನಿರ್ದಲ್ಲಿಯೆ ಸಕಲವೇದವೇದಾಂತಗಳಿರ್ಪುವು.
ಆ ಶಿವನಿರ್ದಲ್ಲಿಯೆ ಸಕಲ ಸಚರಾಚರಂಗಳಿರ್ಪುವು.
ಇಂತೀ ಸಕಲವಿಸ್ತಾರವನೊಳಕೊಂಡ
ನೇತ್ರದ ನಿಲವು ನೀನೇ ಅಯ್ಯಾ ಅಖಂಡೇಶ್ವರಾ./412
ನೇತ್ರವೆಂಬ ಸುವರ್ಣದ ಕೊಡದಲ್ಲಿ
ಪರಿಣಾಮವೆಂಬ ಉದಕವ ತುಂಬಿ,
ಅಭಿಷೇಕವ ಮಾಡುವೆನಯ್ಯಾ ನಿಮಗೆ.
ನೇತ್ರವೆಂಬ ದಿವ್ಯ ಪುಷ್ಪದ ಮಾಲೆಯ
ಧರಿಸುವೆನಯ್ಯಾ ನಿಮಗೆ.
ನೇತ್ರದ ಸ್ನೇಹ ನೋಟದಿಂದೆ
ಮನಕ್ಕೆ ಮನೋಹರವ ಮಾಡುವೆನಯ್ಯಾ ನಿಮಗೆ.
ನೇತ್ರವೆಂಬ ಅರಮನೆಯಲ್ಲಿ ಪಟ್ಟಮಂಚದಮೇಲೆ
ಸುಪ್ಪತ್ತಿಗೆಯ ಹಾಸುಗೆಯ ಮಾಡುವೆನಯ್ಯಾ ನಿಮಗೆ.
ನೇತ್ರಸೂತ್ರದಿಂದೆ ಕೂಡುವೆನಯ್ಯಾ ನಿಮ್ಮ ಅಖಂಡೇಶ್ವರಾ./413
ನೇಮವಿರಬೇಕು ಗುರುಪ್ರಸಾದವಲ್ಲದೆ
ಅನ್ಯವ ಮುಟ್ಟೆನೆಂಬ.
ನೇಮವಿರಬೇಕು ಲಿಂಗಪ್ರಸಾದವಲ್ಲದೆ ಅನ್ಯವ ಮುಟ್ಟೆನೆಂಬ,
ನೇಮವಿರಬೇಕು ಜಂಗಮಪ್ರಸಾದವಲ್ಲದೆ ಆನ್ಯವಮುಟ್ಟೆನೆಂಬ,
ಇಂತೀ ನೇಮವುಳ್ಳ ಭಕ್ತಂಗೆ
ಗುರುವುಂಟು, ಲಿಂಗವುಂಟು, ಜಂಗಮವುಂಟು,
ಪಾದೋದಕಪ್ರಸಾದವುಂಟು, ಭಕ್ತಿಯುಂಟು, ಮುಕ್ತಿಯುಂಟು.
ಇಂತೀ ನೇಮದ ಕಟ್ಟಳೆಯಿಲ್ಲದೆ ಬಾಯಿಗೆ ಬಂದಂತೆ ಪರಿಣಾಮಿಸುವಾತಂಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕಪ್ರಸಾದವಿಲ್ಲ,
ಭಕ್ತಿಯಿಲ್ಲ, ಮುಕ್ತಿಯು ಮುನ್ನವೇ ಇಲ್ಲ ನೋಡಾ ಅಖಂಡೇಶ್ವರಾ./414
ನೈಷ್ಠಿಕಭಾವ ನಂಬುಗೆ ಇಲ್ಲದ ಬಳಿಕ,
ಎಷ್ಟು ಓದಿದಡೇನು ? ಎಷ್ಟು ಕೇಳಿದಡೇನು ?
ಎಷ್ಟು ಪೂಜೆಯ ಮಾಡಿದಡೇನು ?
ಅದು ನಷ್ಟವಲ್ಲದೆ ದೃಷ್ಟಕ್ಕೆ ಸಂಧಾನವಲ್ಲ ನೋಡಾ.
ಇದು ಕಾರಣ, ನೈಷ್ಠೆ ಬಲಿದು ಭಾವತುಂಬಿ
ನಂಬುಗೆ ಇಂಬುಗೊಂಡು ಮಾಡುವುದೆ ದೇವರಪೂಜೆ.
ಅದೇ ನಮ್ಮ ಅಖಂಡೇಶ್ವರಲಿಂಗದ ಒಲುಮೆ./415
ನೈಷ್ಠೆನೆಲೆಗೊಳ್ಳಬೇಕು ಗುರುಭಕ್ತಿಯ ಮಾಡುವಲ್ಲಿ.
ನೈಷ್ಠೆನೆಲೆಗೊಳ್ಳಬೇಕು ಲಿಂಗಪೂಜೆಯ ಮಾಡುವಲ್ಲಿ.
ನೃಷ್ಠೆನೆಲೆಗೊಳ್ಳಬೇಕು ಜಂಗಮವನರ್ಚಿಸುವಲ್ಲಿ,
ನೈಷ್ಠೆನೆಲೆಗೊಳ್ಳಬೇಕು ಪಾದೋದಕ ಪ್ರಸಾದವ ಕೊಂಬುವಲ್ಲಿ.
ನೈಷ್ಠೆನೆಲೆಗೊಳ್ಳಬೇಕು ನಮ್ಮ
ಅಖಂಡೇಶ್ವರಲಿಂಗವನೊಲಿಸುವಲ್ಲಿ./416
ನೈಷ್ಠೆಯೆಂಬುದು ತನುವಿನ ಪ್ರಕೃತಿಯ ಕೆಡಿಸುವುದು.
ನೈಷ್ಟೆಯೆಂಬುದು ಮನದ ಮಾಯವನಳಿವುದು.
ನೈಷ್ಠೆಯೆಂಬುದು ಜ್ಞಾನದ ಬಟ್ಟೆಯ ತೋರುವುದು.
ನೈಷ್ಠೆಯೆಂಬುದು ಅಖಂಡೇಶ್ವರಲಿಂಗವನೊಲಿಸುವುದು./417
ನೋಟ ಭಂಗ ಪರಸತಿಯರ.
ಬೇಟ ಭಂಗ ಪರಸತಿಯರ.
ಕೂಟ ಭಂಗ ಪರಸತಿಯರ.
ಅದೇನು ಕಾರಣವೆಂದೊಡೆ :
ಮುನ್ನ ಅರಿಯದೆ ಕೆಟ್ಟರು ಕೀಚಕ ರಾವಣ ದೇವೇಂದ್ರರು.
ಇನ್ನು ಬಯಸುವವರಿಗೆ ಅದೇ ವಿಧಿ ನೋಡಾ
ಅಖಂಡೇಶ್ವರಾ./418
ನೋಡಬಾರದು ಪರಸತಿಯರ.
ಮಾಡಬಾರದು ಸುಗುಣವಿಲ್ಲದವರಿಗುಪಚಾರವ.
ಬೇಡಬಾರದು ಸದ್ಭಕ್ತರಲ್ಲದವರ.
ಹಾಡಬಾರದು ಶಿವನಲ್ಲದೆ ಅನ್ಯದೈವಂಗಳ.
ಅದೇನು ಕಾರಣವೆಂದೊಡೆ :
ಮುಂದೆ ಭವಬಂಧನದ ತೊಡಕು ಉಂಟಾದ ಕಾರಣ.
ಅಖಂಡೇಶ್ವರಾ, ನಿಮ್ಮನಲ್ಲದೆ ಅನ್ಯವನರಿಯದಂತೆ ಮಾಡು ಎನ್ನ,
ನಿಮ್ಮ ನಾ ಬೇಡಿಕೊಂಬೆನು./419
ನೋಡಲಿಲ್ಲದ ಬಯಲು, ಸೂಡಲಿಲ್ಲದ ಬಯಲು,
ಕೂಡಲಿಲ್ಲದ ಬಯಲು,
ನಾಮವಿಲ್ಲದ ಬಯಲು, ಸೀಮೆಯಿಲ್ಲದ ಬಯಲು,
ಕಾರ್ಯವಿಲ್ಲದ ಬಯಲು, ಕಾರಣವಿಲ್ಲದ ಬಯಲು,
ಅಖಂಡೇಶ್ವರನೆಂಬ ಬಯಲಿನ ಬಯಲು
ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ./420
ನೋಡಿರೆ ನೋಡಿರೆ ಒಂದು ವಿಚಿತ್ರವ.
ಶಿಷ್ಯನೆಂಬ ಹೆಂಡತಿಯ ಶ್ರೀಗುರುವೆಂಬ ಗಂಡನು
ಹಸ್ತಮಸ್ತಕಸಂಯೋಗವೆಂಬ ಕೂಟವ ಕೂಡಲು,
ಜಿಹ್ವೆಯೆಂಬ ಮೇಢ್ರದಲ್ಲಿ
ಷಡಕ್ಷರಮಂತ್ರವೆಂಬ ವೀರ್ಯವು ಚಲನೆಯಾಗಿ,
ಆ ಶಿಷ್ಯನೆಂಬ ಹೆಂಡತಿಯ ಕರ್ಣವೆಂಬ ಗರ್ಭಪ್ರವೇಶವಾಗಲು,
ಮನ ಬಸುರಾಗಿ, ಕಂಗಳೆಂಬ ಯೋನಿಯಲ್ಲಿ ಲಿಂಗವೆಂಬ ಮಗನ ಹಡೆದು,
ಅಂಗೈಯೆಂಬ ತೊಟ್ಟಿಲಲ್ಲಿಕ್ಕಿ
ಮಂಗಳಸ್ತೋತ್ರವೆಂಬ ಜೋಗುಳವ ಹಾಡಿ,
ಅಖಂಡೇಶ್ವರನೆಂಬ ಹೆಸರಿಟ್ಟರು ನೋಡಾ !
ಇದು ಕಾರಣ, ನೀವೀಗವೆನಗೆ ಮಗನಾದಿರಿ,
ನಾ ನಿಮಗೆ ತಾಯಾದೆನಯ್ಯಾ ಅಖಂಡೇಶ್ವರಾ./421
ನೋಡು ನೋಡಯ್ಯಾ ಗಂಡನೆ,
ಎನ್ನ ಕಂಗಳುಪ್ಪರಿಗೆಯ ಮೇಲೆ ಕುಳ್ಳಿರ್ದು ಸಕಲ ವಿಚಿತ್ರವ.
ಆಡು ಆಡಯ್ಯಾ ಗಂಡನೆ, ಎನ್ನ ಮನದ ಕೊನೆಯಲ್ಲಿ
ಮಹಾಜ್ಞಾನದುಯ್ಯಾಲೆಯ ಕಟ್ಟಿ.
ಮನಬಂದ ಪರಿಯಲ್ಲಿ
ಕೂಡು ಕೂಡಯ್ಯಾ ಗಂಡನೆ ಎನ್ನ
ಸತ್ಕಲೆಗಳಿಂದ ಸವಿದೋರಿಸಿ ಅಖಂಡೇಶ್ವರಾ. /422
ಪಂಚಪ್ರಾಣವಾಯುಗಳ ಸಂಚಲಗುಣವನಳಿದಿರಬೇಕು.
ಮುಂಚುವ ಕರಣಂಗಳ ವಂಚನೆಯನತಿಗಳೆದಿರಬೇಕು.
ಚಿತ್ತವು ಲಿಂಗದಲ್ಲಿ ಅಚ್ಚೊತ್ತಿದಂತಿರಬೇಕು.
ಪ್ರಾಣ ಲಿಂಗದಲ್ಲಿ ಕೂಡಿ, ಲಿಂಗ ಪ್ರಾಣದಲ್ಲಿ ಕೂಡಿ,
ಭಿನ್ನವಿಲ್ಲದೆ ಏಕಸಮರಸವಾಗಿರಬೇಕು.
ಸುಖದುಃಖ ನಾಸ್ತಿಯಾಗಿರಬೇಕು.
ಇಷ್ಟುಳ್ಳಾತನೆ ಪ್ರಾಣಲಿಂಗಿ.
ಅದೆಂತೆಂದೊಡೆ :
“ವಾಯುಪ್ರಾಣಗುಣೇ ಲಿಂಗೇ ಲಿಂಗಪ್ರಾಣೇ ಸಮಾಹಿತಃ|
ಸುಖದುಃಖಭಯಮ್ ನಾಸ್ತಿ ಪ್ರಾಣಲಿಂಗಿಸ್ಥಲಂ ಭವೇತ್ || ”
ಎಂದುದಾಗಿ, ಇಂತಪ್ಪ ಪ್ರಾಣಲಿಂಗಿಗಳ ಶ್ರೀಪಾದಕ್ಕೆ
ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ./423
ಪಂಚಮಹಾಪಾತಕಂಗಳ ಮಾಡಿದವನಾದಡಾಗಲಿ,
ಉಪಪಾತಕಂಗಳ ಕೋಟ್ಯನುಕೋಟಿ ಮಾಡಿದವನಾದಡಾಗಲಿ,
ಹತ್ತುಸಾವಿರ ಬ್ರಹ್ಮಹತ್ಯವ ಮಾಡಿದವನಾದಡಾಗಲಿ,
ಒಬ್ಬ ಶಿವಭಕ್ತನ ದರ್ಶನವಾದಲ್ಲಿ
ಆ ಪಾತಕಂಗಳು ಬೆಂದು ಭಸ್ಮವಾಗಿ ಹೋಗುವವು ನೋಡಾ !
ಅದೆಂತೆಂದೊಡೆ :ಲಿಂಗಪುರಾಣೇ-
“ಉಪಪಾತಕ ಕೋಟೀಶ್ಚ ಬ್ರಹ್ಮಹತ್ಯಾಯುತಾನಿ ಚ |
ದಹತ್ಯಶೇಷಪಾಪಾನಿ ಶಿವಭಕ್ತಸ್ಯ ದರ್ಶನಂ ||”
ಎಂದುದಾಗಿ, ಶಿವಭಕ್ತನೇ ಶಿವನು ನೋಡಾ ಅಖಂಡೇಶ್ವರಾ. /424
ಪಂಚಮುಖ ದಶಪಂಚನೇತ್ರ
ದಶಭುಜ ಎಸೆವ ಕೆಂಜೆಡೆಗಳ ಶಶಿಮೌಳಿ ದಶದಿಗ್ಭರಿತ
ಅಗ್ರಗಣ್ಯ ಅಗೋಚರ ವ್ಯಾಘ್ರಚರ್ಮಾಂಬರ
ಭರ್ಗೋದೇವನೆನಿಸಿ ಬಂದಿರಯ್ಯ ಎನ್ನ ಕರಸ್ಥಲಕ್ಕೆ ಅಖಂಡೇಶ್ವರಾ./425
ಪಂಚಾಕ್ಷರಿಯೆಂದಡೆ ಪರತತ್ವವು ತಾನೆ ನೋಡಾ.
ಪಂಚಾಕ್ಷರಿಯೆಂದಡೆ ಪರವಸ್ತುವು ತಾನೆ ನೋಡಾ.
ಪಂಚಾಕ್ಷರಿಯೆಂದಡೆ ಪರಬ್ರಹ್ಮವು ತಾನೆ ನೋಡಾ.
ಪಂಚಾಕ್ಷರಿಯೆಂದಡೆ ಪರಮೇಶ್ವರನ ನಿಜನಾಮವು ತಾನೆ ನೋಡಾ.
ಪಂಚಾಕ್ಷರಿಯೆಂದಡೆ ಸಾಕ್ಷಾತ್ ಪರಶಿವನು ತಾನೆ ನೋಡಾ.
ಇಂತಪ್ಪ ಪಂಚಾಕ್ಷರಿಮಂತ್ರವ ಹಗಲಿರುಳೆನ್ನದೆ
ಸದಾ ಸನ್ನಿಹಿತನಾಗಿ ಜಪಿಸಿದಾತನು ಅನಂತ ಪಾತಕಂಗಳ ವಿೂರಿ
ಪರಮಪದವನೈದುತಿಪ್ಪನು ನೋಡಾ ಅಖಂಡೇಶ್ವರಾ !/426
ಪರತರ ಪರಮ ಸಮರಸಸ್ವರೂಪವಾದ ತಾರಕಬ್ರಹ್ಮವು
ಅಂತರ್ಲಕ್ಷ್ಯವೆಂದು ಬಹಿರ್ಲಕ್ಷ್ಯವೆಂದು ಮಧ್ಯಲಕ್ಷ್ಯವೆಂದು
ತ್ರಿವಿಧಮಪ್ಪುದು.
ಅದರಲ್ಲಿ ಮೊದಲು ಅಂತರ್ಲಕ್ಷ್ಯವೆಂತೆನೆ :
ಮೂಲಾಧಾರದಿಂದೆ ಬ್ರಹ್ಮರಂಧ್ರ ಪರಿಯಂತರಮಾಗಿ
ಕೋಟಿಮಿಂಚುಗಳಿಗೆ ಸದೃಶವಾದ ಬಿಂದುವನು
ಮನಸ್ಸಿನಿಂದ ಧ್ಯಾನಿಸುವುದು.
ಮತ್ತಂ, ಗೋಲಾಟಮಂಡಲವೆನಿಸುವ ಲಲಾಟದುಪರಿಭಾಗದಲ್ಲಿ
ಮಿನುಗುತಿರ್ದ ನಕ್ಷತ್ರಾಕಾರವನು ಮನಸ್ಸಿನಿಂದೆ ಸ್ಮರಿಸುವುದು.
ಮತ್ತಂ, ಶ್ರವಣಂಗಳೆರಡನು ಬೆರಳಿನಿಂದೆ ಮಿಗಿಲಾಗಿ ಒತ್ತಲಾಗಿ
ಕಪಾಲಕುಹರದಲ್ಲಿ ಘಮುಘಮುಧ್ವಾನಸ್ವರೂಪಮಾದ
ಪ್ರಣವಘೋಷವನಾಲಿಪುದು.
ಮತ್ತಂ, ಲೋಚನಂಗಳ ಮಧ್ಯದ
ಕರಿಯ ನಕ್ಷತ್ರರೂಪಮಂ ಲಕ್ಷಿಪುದೇ
ಅಂತರ್ಲಕ್ಷ್ಯವಯ್ಯಾ ಅಖಂಡೇಶ್ವರಾ./427
ಪರದೈವವ ಪೂಜಿಸುವಾತ ಸದ್ಭಕ್ತನೆ ?
ಅಲ್ಲಲ್ಲ.
ಪರಸಮಯವ ಬಳಸುವಾತ ಸದ್ಭಕ್ತನೆ ? ಅಲ್ಲಲ್ಲ.
ಪರಸ್ತ್ರೀಯರಿಗಳಪುವಾತ ಸದ್ಭಕ್ತನೆ ? ಅಲ್ಲಲ್ಲ.
ಪರರೊಡವೆಯ ಅಪಹರಿಸಿಕೊಂಬಾತ ಸದ್ಭಕ್ತನೆ ? ಅಲ್ಲಲ್ಲ.
ಇಂತೀ ದುರಾಚಾರದಲ್ಲಿ ನಡೆದು ದುಃಖಕ್ಕೆ ಈಡಾಗಿ ಹೋಗುವ
ಕತ್ತೆ ಮೂಳ ಹೊಲೆಯರ ಸತ್ಭಕ್ತರೆಂದಡೆ
ಭವ ಹಿಂಗದಯ್ಯ ಅಖಂಡೇಶ್ವರಾ./428
ಪರಧನ ಪರಸ್ತ್ರೀಯರ ಬಿಟ್ಟಡೆ
ಗುರುಲಿಂಗ ಜಂಗಮವು ಸಾಧ್ಯವು ನೋಡಾ.
ಇಹಪರ ಭೋಗಮೋಕ್ಷದ ಬಯಕೆಯ ಬಿಟ್ಟಡೆ
ಚರಶೇಷವು ಸಾಧ್ಯವು ನೋಡಾ.
ಕರಣಾದಿ ಗುಣಂಗಳಿಗೆ ಹರಿಯದಿರ್ದಡೆ
ಅರುಹು ಸಾಧ್ಯವು ನೋಡಾ.
ತಾನಿದಿರೆಂಬುಭಯವಳಿದಡೆ
ನಿಜವು ಸಾಧ್ಯವು ನೋಡಾ ಅಖಂಡೇಶ್ವರಾ./429
ಪರಧನವ ಹಿಡಿಯದೆ,
ಪರಸ್ತ್ರೀಯರ ಮುಟ್ಟದೆ,
ಪರದೈವವ ಪೂಜಿಸದೆ,
ಪರಹಿಂಸೆಯ ಮಾಡದೆ,
ಪರಲೋಕದ ಫಲಪದವ ಬಯಸದೆ,
ಪರನಿಂದೆಯ ಕೇಳದೆ,
ಗರ್ವಾಹಂಕಾರದಲ್ಲಿ ಬೆರೆಯದೆ,
ಕರಣಾದಿ ಗುಣಂಗಳಲ್ಲಿ ಹರಿಯದೆ,
ಗುರುಭಕ್ತಿ ಲಿಂಗಪೂಜೆ
ಜಂಗಮದಾಸೋಹವ ಮರೆಯದೆ,
ಸತ್ಯಸದಾಚಾರವ ತೊರೆಯದೆ,
ಸರ್ವಾಚಾರಸಂಪನ್ನನಾದ ಮಹಾತ್ಮನೆ
ಅನಾದಿಗುರುಪಟ್ಟಕ್ಕೆ ಯೋಗ್ಯನು.
ಆ ಮಹಾತ್ಮನೆ ಪರಮಘನಲಿಂಗದೇವರೆಂಬೆನು
ಆ ಮಹಾತ್ಮನೆ ಭವಕೆ ಘನವಾದ
ಮಹಾಘನ ಪರಶಿವಮೂರ್ತಿಯೆಂಬೆನಯ್ಯಾ ಅಖಂಡೇಶ್ವರಾ. /430
ಪರಮನಪ್ಪಣೆಯಿಂದೆ ಧರೆಗಿಳಿದು ಬಂದು
ಗುರುಲಿಂಗಜಂಗಮದ ಭಕ್ತಿಯನಳವಡಿಸಿಕೊಂಡು,
ಷಟ್ಸ್ಥಲಬ್ರಹ್ಮದ ಅನುವನರಿದು
ನೂರೊಂದು ಸ್ಥಳಕುಳಂಗಳ ಕರತಳಾಮಳಕವಾಗಿ ತಿಳಿದು,
ನಿಜೈಕ್ಯಪಥದಲ್ಲಿ ನಿರ್ವಯಲಾದರು ಬಸವಣ್ಣ ಮೊದಲಾದ
ಅಸಂಖ್ಯಾತ ಮಹಾಗಣಂಗಳು.
ಅದೆಂತೆಂದೊಡೆ :
ಸಂಗನಬಸವಣ್ಣನು ಕಪ್ಪಡಿಯಸಂಗಯ್ಯನೊಳಗೆ ಬಯಲಾದನು.
ಅಕ್ಕಮಹಾದೇವಿ, ಪ್ರಭುದೇವರು
ಶ್ರೀಶೈಲ ಕದಳಿಯ ಜ್ಯೋತಿರ್ಮಯಲಿಂಗದೊಳಗೆ ಬಯಲಾದರು.
ಹಡಪದಪ್ಪಣ್ಣ, ನೀಲಲೋಚನೆತಾಯಿ ಮೊದಲಾದ
ಕೆಲವು ಗಣಂಗಳು ತಮ್ಮ ಲಿಂಗದಲ್ಲಿ ಬಯಲಾದರು.
ಚೆನ್ನಬಸವಣ್ಣ, ಮಡಿವಾಳ ಮಾಚಿದೇವ,
ಕಿನ್ನರಿಯ ಬ್ರಹ್ಮಿತಂದೆ ಮೊದಲಾದ
ಉಳಿದ ಗಣಂಗಳು ಉಳಿವೆಯ ಮಹಾಮನೆಯಲ್ಲಿ
ಮಹಾಘನಲಿಂಗದೊಳಗೆ ಬಯಲಾದರು.
ಇಂತಪ್ಪ ಸಕಲಗಣಂಗಳಿಗೆ ಆಯಾಯ ಸ್ಥಾನದಲ್ಲಿ
ನಿರವಯಲಪದವ ಕರುಣಿಸಿಕೊಟ್ಟಾತ ನೀನೊಬ್ಬನಲ್ಲದೆ
ಮತ್ತಾರನು ಕಾಣೆನಯ್ಯಾ.
ಇಂತಪ್ಪ ಸಕಲಗಣಂಗಳ ತೊತ್ತಿನಮಗನೆಂದು
ಎನ್ನನೆತ್ತಿಕೊಂಡು ಸಲಹಿದಿರಾಗಿ
ಎನಗೆ ನಿಜೈಕ್ಯ ನಿರವಯಲಪದವೆಲ್ಲಿಹುದೆಂದೊಡೆ :
ಉತ್ಪತ್ತಿ ಸ್ಥಿತಿ ಪ್ರಳಯಂಗಳಿಗೆ ಹೊರಗಾದ
ನಿಮ್ಮ ಪರಾತ್ಪರ ಪರಮ ಹೃದಯಕಮಲಕರ್ಣಿಕಾವಾಸಮಧ್ಯ
ಸೂಕ್ಷ್ಮಬಯಲೊಳಗೆನ್ನ
ನಿರವಯಲ ಮಾಡಿಕೊಳ್ಳಯ್ಯಾ ಅಖಂಡೇಶ್ವರಾ./431
ಪರಸ್ತ್ರೀಯರ ಮುಟ್ಟದಿರಬೇಕು.
ಪರಧನವನಪಹರಿಸದಿರಬೇಕು.
ಪರದೈವವ ಪೂಜಿಸದಿರಬೇಕು.
ಪರಹಿಂಸೆಯ ಮಾಡದಿರಬೇಕು.
ಪರಲೋಕದ ಫಲಪದವ ಬಯಸದಿರಬೇಕು.
ಮನವು ನಿರ್ವಯಲಾಗಿ ಇಷ್ಟಲಿಂಗದಲ್ಲಿ ನಿಷ್ಠೆಬಲಿದಿರಬೇಕು.
ಕಷ್ಟಜನ್ಮಂಗಳ ಕಡೆಗೊಡ್ಡಿರ್ಪಾತನೇ ವೀರಮಾಹೇಶ್ವರನು ನೋಡಾ.
ಅದೆಂತೆಂದೊಡೆ :
“ಪರಸ್ತ್ರೀಯಂ ಪರಾರ್ಥಂ ಚ ವರ್ಜಯೇತ್ ಭಾವಶುದ್ಧಿಮಾನ್ |
ಲಿಂಗನಿಷ್ಠಾನಿಯುಕ್ತಾತ್ಮಾ ಮಾಹೇಶ್ವರಮಹಾಸ್ಥಲಂ ||”
ಎಂದುದಾಗಿ, ಇಂತಪ್ಪ ಪರಮ ಮಾಹೇಶ್ವರನ ಶ್ರೀಪಾದಕ್ಕೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./432
ಪರಾತ್ಪರವಾದ ಪರಶಿವಬ್ರಹ್ಮವನೊಡಗೂಡುವ
ಅವಿರಳ ಸಮರಸ ಸದ್ಭಕ್ತಿಯಿಲ್ಲದೆ
ನಾನು ಬ್ರಹ್ಮವು ತಾನು ಬ್ರಹ್ಮವು ಎಂದು
ಪರಬ್ರಹ್ಮದ ನಿಲವನರಿಯದೆ
ಕೆಟ್ಟರು ನೋಡಾ ಹಲಬರು ಕೆಲಬರು.
ಅವರಾರೆಂದೊಡೆ :
ಅಹಂ ಬ್ರಹ್ಮವೆಂದು ನುಡಿದ ಸನತ್ಕುಮಾರಂಗೆ
ಒಂಟೆವಿಧಿಯಾಯಿತ್ತು.
ಅಹಂ ಬ್ರಹ್ಮವೆಂದು ನುಡಿದ ಹರಿವಿರಿಂಚಿಗಳಿಗೆ
ಭವಬಂಧನವಾಯಿತ್ತು.
ಅಹಂ ಬ್ರಹ್ಮವೆಂದು ನುಡಿದ ಇಂದ್ರಚಂದ್ರರಿಗೆ
ಅಂಗದ ಕೊರತೆಯಾಯಿತ್ತು.
ಅಹಂ ಬ್ರಹ್ಮವೆಂದು ನುಡಿದ ಮನುಮುನಿಗಳಿಗೆಲ್ಲ
ಮರಣವಾಯಿತ್ತು.
ಇದನರಿತು ಹಮ್ಮುಬಿಮ್ಮುವನಳಿದು,
ಹೆಮ್ಮೆ ಹಿರಿತನವ ನೀಗಿ, ಪರಬ್ರಹ್ಮವನೊಡಗೂಡಿ
ಸುಖಿಯಾಗಿರ್ಪರಯ್ಯ ನಿಮ್ಮ ಶರಣರು
ಅಖಂಡೇಶ್ವರಾ. /433
ಪರಾತ್ಪರವಾದ ವಸ್ತುವನೊಡಗೂಡಿದ ಪ್ರಾಣಲಿಂಗಿಯ
ಒಡಲ ಬೆಡಗಿನ ಗಡಣವೆಂತಿರ್ಪುದೆಂದಡೆ :
ಸ್ಫಟಿಕದ ಘಟದೊಳಗೆ ಜ್ಯೋತಿಯನಿರಿಸಿದಂತೆ,
ಕತ್ತಲೆಯ ಮನೆಯಲ್ಲಿ ರತ್ನವ ಹರಡಿದಂತೆ
ರನ್ನದ ಗಿರಿಗೆ ರವಿಕೋಟಿ ಕಿರಣಂಗಳು ಮುಸುಕಿದಂತೆ,
ಬೆಳಗು ಹಳಚಿದ ಮಹಾಬೆಳಗಿನೊಬ್ಬುಳಿಯನೊಳಕೊಂಡು
ಘನಗಂಭೀರವಾದ ಪ್ರಾಣಲಿಂಗಿಗಳ ಪಾದಕಮಲದಲ್ಲಿ
ಸದಮಲ ತುಂಬಿಯಾಗಿರಿಸಯ್ಯಾ ಎನ್ನ ಅಖಂಡೇಶ್ವರಾ./434
ಪರಿಪಾಕವಾದ ಸಕಲಪದಾರ್ಥಂಗಳ ಹಸ್ತಪರುಷದಿಂದೆ
ಶುದ್ಧಸಂಸ್ಕಾರವ ಮಾಡಿದಲ್ಲದೆ ಲಿಂಗಕ್ಕೆ ಅರ್ಪಿಸಲಾಗದು.
ಅದೇನು ಕಾರಣವೆಂದಡೆ :
ಹಸ್ತಪರುಷವಿಲ್ಲದ ಪದಾರ್ಥ ಉಚ್ಛಿಷ್ಟವೆನಿಸಿತ್ತು.
ಹಸ್ತಪರುಷವಿಲ್ಲದ ಪದಾರ್ಥ ಪಂಚಭೂತ ಪ್ರಕೃತ ಜೀವಮಯವೆನಿಸಿತ್ತು.
ಹಸ್ತಪರುಷವಿಲ್ಲದ ಪದಾರ್ಥ ಜೀರ್ಣಗೋಮಾಂಸವೆನಿಸಿತ್ತು.
ಹಸ್ತಪರುಷವಿಲ್ಲದ ಪದಾರ್ಥ ಅಶುದ್ಧ ಕಿಲ್ಬಿಷವೆನಿಸಿತ್ತು.
ಅದೆಂತೆಂದೊಡೆ :
“ಜಂಗಮಸ್ಯ ಕರಸ್ಪಶರ್ಾತ್ ಸರ್ವದ್ರವ್ಯಂ ಚ ಶುದ್ಧ್ಯತೇ |
ಹಸ್ತಸ್ಪರ್ಶಂ ವಿನಾ ಪಾಕಂ ಕಿಲ್ಬಿಷಂ ಪ್ರೋಚ್ಯತೇ ಬುಧೈಃ ||”
ಎಂದುದಾಗಿ, ಇಂತಪ್ಪ ಪದಾರ್ಥದ ಪೂರ್ವಾಶ್ರಯವನು
ಶಿವಮಂತ್ರ ಶ್ರೀ ವಿಭೂತಿಯಿಂದೆ ಕಳೆದು,
ಶುದ್ಧಸಂಸ್ಕಾರವೆನಿಸಿ ಶಿವನೇತ್ರದಿಂದೆ ನೋಡಿ, ಶಿವಹಸ್ತದಿಂದೆ ಮುಟ್ಟಿ,
ಶಿವಲಿಂಗಕ್ಕೆ ಅರ್ಪಿಸಿದಲ್ಲಿ ಶಿವಪ್ರಸಾದವೆನಿಸಿತ್ತು.
ಆ ಶಿವಪ್ರಸಾದವನು ಶಿವಲಿಂಗಸನ್ನಿಹಿತನಾಗಿ
ಶಿವಜಿಹ್ವೆಯಲ್ಲಿ ಭೋಗಿಸುವಾತನೆ ಶಿವಶರಣನು.
ಆತನೆ ಶಿವಪ್ರಸಾದಿ, ಆತನೆ ಶಿವಾನುಭಾವಿ.
ಇಂತಪ್ಪ ಭೇದವನರಿಯದೆ ಮಾಡುವ ಮಾಟವೆಲ್ಲವು
ಜೀವಗಡಣದೊಳಗಯ್ಯಾ ಅಖಂಡೇಶ್ವರಾ./435
ಪರುಷಲೋಹದಂತೆ ಮಾಡಿತ್ತೆನ್ನ
ಶ್ರೀಗುರುವಿನ ಉಪದೇಶ.
ಉರಿಯುಂಡ ತೃಣದಂತೆ ಮಾಡಿತ್ತೆನ್ನ
ಶ್ರೀಗುರುವಿನ ಉಪದೇಶ.
ಕರ್ಪುರದ ಜ್ಯೋತಿಯಂತೆ ಮಾಡಿತ್ತೆನ್ನ
ಶ್ರೀಗುರುವಿನ ಉಪದೇಶ.
ಕೀಡಿ ಕುಂಡಲಿಯಂತೆ ಮಾಡಿತ್ತೆನ್ನ
ಶ್ರೀಗುರುವಿನ ಉಪದೇಶ.
ವಾರಿಕಲ್ಲ ಪುತ್ಥಳಿ ಅಪ್ಪುವನೊಡಗೂಡಿದಂತೆ ಮಾಡಿತ್ತೆನ್ನ
ಅಖಂಡೇಶ್ವರಾ, ನಿಮ್ಮ ವಚನೋಪದೇಶ./436
ಪವನವೆ ಅಂಗವಾದ ಪ್ರಾಣಲಿಂಗಿಗೆ ಸುಮನವೆ ಹಸ್ತ.
ಆ ಹಸ್ತಕ್ಕೆ ಆದಿಶಕ್ತಿ, ಆ ಶಕ್ತಿಗೆ ಜಂಗಮಲಿಂಗ,
ಆ ಲಿಂಗಕ್ಕೆ ತ್ವಗಿಂದ್ರಿಯವೆ ಮುಖ,
ಆ ಮುಖಕ್ಕೆ ಸ್ಪರ್ಶನಪದಾರ್ಥ; ಆ ಪದಾರ್ಥವನು
ತ್ವಕ್ಕಿನಲ್ಲಿಹ ಜಂಗಮಲಿಂಗಕ್ಕೆ ಅನುಭಾವಭಕ್ತಿಯಿಂದರ್ಪಿಸಿ,
ಆ ಸುಸ್ಪರ್ಶನ ಪ್ರಸಾದವನು ಪಡೆದು ಸುಖಿಸುವಾತನೆ
ಪ್ರಾಣಲಿಂಗಿಯಯ್ಯಾ ಅಖಂಡೇಶ್ವರಾ./437
ಪಶ್ಚಿಮದ ಗಿರಿಯಲ್ಲಿ ಚಿತ್ಸೂರ್ಯನುದಯವಾದುದ ಕಂಡೆ.
ಸುತ್ತಿ ಮುತ್ತಿದ ಕತ್ತಲೆಯೆಲ್ಲ ಅತ್ತಿತ್ತ ಹರಿದು ಹೋದುದ ಕಂಡೆ.
ಹತ್ತು ದಿಕ್ಕಿನ ಒಳಹೊರಗೆಲ್ಲ ಬೆಳಗಿನ
ಮೊತ್ತವೇ ತುಂಬಿದುದ ಕಂಡೆ.
ಮುಚ್ಚಿದ ಕಮಲಂಗಳೆಲ್ಲ ಬಿಚ್ಚಿ ಅರಳಾಗಿ
ಹೊಚ್ಚ ಹೊಸ ಗಂಧ ದೆಸೆದೆಸೆಗೆ ಎಸೆದುದ ಕಂಡೆ.
ಇಂತಿದರ ಕುಶಲವ ಕಂಡು ಬೆರಗಾದೆನಯ್ಯಾ ಅಖಂಡೇಶ್ವರಾ./438
ಪಾದತೀರ್ಥವೆಂದಡೆ ಪರಾತ್ಪರವು ತಾನೆ ನೋಡಾ.
ಪಾದತೀರ್ಥವೆಂದಡೆ ಪರಬ್ರಹ್ಮವು ತಾನೆ ನೋಡಾ.
ಪಾದತೀರ್ಥವೆಂದಡೆ ಪರಿಪೂರ್ಣ ಮಹಾಜ್ಞಾನವು ತಾನೆ ನೋಡಾ.
ಪಾದತೀರ್ಥವೆಂದಡೆ ಪರಾತ್ಪರವಾದ ಪರವಸ್ತುವು ತಾನೆ ನೋಡಾ.
ಪಾದತೀರ್ಥವೆಂದಡೆ ನಿತ್ಯನಿರವಯ ನಿರಂಜನಬ್ರಹ್ಮವು ತಾನೆ ನೋಡಾ.
ಪಾದತೀರ್ಥವೆಂದಡೆ ಮಹಾಘನ ಪರತರ ಪರಂಜ್ಯೋತಿ ತಾನೆ ನೋಡಾ.
ಪಾದತೀರ್ಥವೆಂದಡೆ ಸಾಕ್ಷಾತ್ ಪರಶಿವನು ತಾನೆ ನೋಡಾ.
ಇಂತಪ್ಪ ಪಾದತೀರ್ಥದ ಘನವ ಕಂಡು
ತನುಕರಗಿ ಮನಹಿಗ್ಗಿ ಹೃದಯ ಪಸರಿಸಿ
ಅಂತರಂಗದಲ್ಲಿ ವಿಶ್ವಾಸ ತುಂಬಿ,
ಬಹಿರಂಗದ ಭಕ್ತಿಯಿಂದೆ ಸಾಷ್ಟಾಂಗ ನಮಸ್ಕರಿಸಿ,
ಆ ಮಹಾಘನ ಪರಾತ್ಪರವಾದ ಪಾದತೀರ್ಥವನು
ಹದುಳಿಗಚಿತ್ತನಾಗಿ ಹಷರ್ಾನಂದದಿಂ ಸೇವನೆಯಮಾಡಿ
ಭವಸಾಗರವ ದಾಂಟಿ, ಕಾಯಜೀವದ ಸಂಸಾರವ ನೀಗಿ,
ಪರಮಪವಿತ್ರ ಶಿವಮಯನಾಗಿರ್ದೆನಯ್ಯಾ ಅಖಂಡೇಶ್ವರಾ./439
ಪಿಂಡದೊಳಗೆ ಪ್ರಾಣವಿರ್ಪುದ ಎಲ್ಲರೂ ಬಲ್ಲರಲ್ಲದೆ,
ಪ್ರಾಣದೊಳಗೆ ಶಬ್ದವಿರ್ಪುದನಾರೂ ಅರಿಯರಲ್ಲ.
ಪ್ರಾಣದೊಳಗೆ ಶಬ್ದವಿರ್ಪುದ ಎಲ್ಲರೂ ಬಲ್ಲರಲ್ಲದೆ,
ಶಬ್ದದೊಳಗೆ ನಾದವಿರ್ಪುದನಾರೂ ಅರಿಯರಲ್ಲ.
ಶಬ್ದದೊಳಗೆ ನಾದವಿರ್ಪುದ ಎಲ್ಲರೂ ಬಲ್ಲರಲ್ಲದೆ,
ನಾದದೊಳಗೆ ಮಂತ್ರವಿರ್ಪುದನಾರೂ ಅರಿಯರಲ್ಲ.
ಮಂತ್ರದೊಳಗೆ ಶಿವನಿರ್ಪುದ ಎಲ್ಲರೂ ಬಲ್ಲರಲ್ಲದೆ,
ಶಿವನ ಕೂಡುವ ಅವಿರಳಸಮರಸವನಾರೂ
ಅರಿಯರಲ್ಲ ಅಖಂಡೇಶ್ವರಾ./440
ಪಿಂಡದೊಳಗೊಂದು ಅಖಂಡಜ್ಯೋತಿ
ಥಳಥಳಿಸಿ ಬೆಳಗುತಿರ್ಪುದು ನೋಡಾ.
ಆ ಅಖಂಡಜ್ಯೋತಿಯನೊಡಗೂಡಿ
ಅವಿರಳ ಶಿವಯೋಗಿಯಾದೆನಾಗಿ,
ಪಿಂಡದ ಖಂಡಿತವು ಕಡೆಗಾಯಿತ್ತು ನೋಡಾ ಅಖಂಡೇಶ್ವರಾ. /441
ಪುರುಷನಿಲ್ಲದ ಬಳಿಕ ಸ್ತ್ರೀಗೆ ಗರ್ಭವಿನ್ನೆಲ್ಲಿಯದೊ ?
ಬೀಜವಿಲ್ಲದ ಬಳಿಕ ವೃಕ್ಷವಿನ್ನೆಲ್ಲಿಯದೊ ?
ಹಾಲಿಲ್ಲದ ಬಳಿಕ ತುಪ್ಪವಿನ್ನೆಲ್ಲಿಯದೊ ?
ಪರಮ ಶ್ರೀಗುರುವಿನುಪದೇಶವಿಲ್ಲದ ಬಳಿಕ
ಲಿಂಗಕ್ಕೆ ಪರಮಶಿವಕಳೆಯಿನ್ನೆಲ್ಲಿಯದೊ ?
ಇದು ಕಾರಣ,
ಉಪದೇಶವಿಲ್ಲದ ಲಿಂಗ ಜಡಪಾಷಾಣವೆಂದೆನಿಸಿತ್ತು .
ಆ ಜಡಪಾಷಾಣವ ಅನಂತಕೋಟಿವರ್ಷ
ಪೂಜೆಯ ಮಾಡಿದರು ವ್ಯರ್ಥವಲ್ಲದೆ ಸಾರ್ಥವಿಲ್ಲ ನೋಡಾ !
ಇಂತೀ ಭೇದವನರಿಯದೆ
ಮೂಢಮತಿಯಿಂದೆ ಜಡಪಾಷಾಣವ ಪೂಜಿಸಿ
ಈಷಣತ್ರಯವೆಂಬ ಸಂಕೋಲೆಯಲ್ಲಿ ಬಂಧನವಡೆದು
ಭವದಲ್ಲಿ ಘಾಸಿಯಾಗುವ ಹೇಸಿಮೂಳರ ಕಂಡು
ನಾಚಿತ್ತಯ್ಯಾ ಎನ್ನ ಮನವು ಅಖಂಡೇಶ್ವರಾ./442
ಪುರುಷನೆಂದು ಕರೆವುತಿರ್ಪುದು ಜಗದವರೆಲ್ಲ ಎನ್ನ ;
ನಾನು ಪುರುಷನಲ್ಲವಯ್ಯಾ.
ಅದೆಂತೆಂದೊಡೆ :
ಹೊರಗಣ ಸಾಕಾರವೆ ನೀನು, ಒಳಗಣ ನಿರಾಕಾರವೆ ನಾನು.
ಹೊರಗಣ ಸಾಕಾರದ ಪುರುಷರೂಪೇ ನೀವಾಗಿ,
ಒಳಗಣ ನಿರಾಕಾರ ಸ್ತ್ರೀರೂಪೇ ನಾನಾಗಿ,
ನಿಮಗೆ ರಾಣಿವಾಸವಾದೆನಯ್ಯಾ ಅಖಂಡೇಶ್ವರಾ. /443
ಪೃಥ್ವಿ ಅಡಗುವುದಕ್ಕೆ ಅಪ್ಪುವೆ ಆಶ್ರಯವಾಗಿರ್ಪುದು.
ಆ ಅಪ್ಪು ಅಡಗುವುದಕ್ಕೆ ಅಗ್ನಿಯೆ ಆಶ್ರಯವಾಗಿರ್ಪುದು.
ಆ ಅಗ್ನಿ ಅಡಗುವುದಕ್ಕೆ ವಾಯುವೆ ಆಶ್ರಯವಾಗಿರ್ಪುದು.
ಆ ವಾಯು ಅಡಗುವುದಕ್ಕೆ ಆಕಾಶವೆ ಆಶ್ರಯವಾಗಿರ್ಪುದು.
ಆ ಆಕಾಶ ಅಡಗುವುದಕ್ಕೆ ಆತ್ಮವೆ ಆಶ್ರಯವಾಗಿರ್ಪುದು.
ಆ ಆತ್ಮ ಅಡಗುವುದಕ್ಕೆ ಆದಿಯೆ ಆಶ್ರಯವಾಗಿರ್ಪುದು.
ಆ ಆದಿ ಅಡಗುವುದಕ್ಕೆ ಅನಾದಿಯೆ ಆಶ್ರಯವಾಗಿರ್ಪುದು.
ಆ ಅನಾದಿ ಅಡಗುವುದಕ್ಕೆ ಶೂನ್ಯವೆ ಆಶ್ರಯವಾಗಿರ್ಪುದು.
ಆ ಶೂನ್ಯ ಅಡಗುವುದಕ್ಕೆ ನಿರವಯವೆ ಆಶ್ರಯವಾಗಿರ್ಪುದು.
ಆ ನಿರವಯ ಅಡಗುವುದಕ್ಕೆ ನಿಜವೆ ಆಶ್ರಯವಾಗಿರ್ಪುದು.
ಆ ನಿಜ ಅಡಗುವುದಕ್ಕೆ ಅಖಂಡೇಶ್ವರಾ, ನಿಮ್ಮ ಶರಣನ
ಪರಮ ಹೃದಯಕಮಲವೆ ಆಶ್ರಯವಾಗಿರ್ಪುದಯ್ಯಾ./444
ಪೃಥ್ವಿ ಆಕಾಶಂಗಳಿಲ್ಲದಂದು,
ದಿಕ್ಕುವಿದಿಕ್ಕುಳಿಲ್ಲದಂದು,
ಸಪ್ತದ್ವೀಪ ಸಪ್ತಸಮುದ್ರಂಗಳಿಲ್ಲದಂದು,
ತತ್ತ್ವಮಸ್ಯಾದಿ ವಾಕ್ಯಂಗಳಿಲ್ಲದಂದು,
ನಿತ್ಯಾನಿತ್ಯಂಗಳೇನೂ ಇಲ್ಲದಂದು
ಅಖಂಡೇಶ್ವರಾ, ನಿಮ್ಮ ನೀವರಿಯದೆ
ಅನಂತಕಾಲವಿರ್ದೆರಂದು./445
ಪೃಥ್ವಿ ಆಕಾಶಮಧ್ಯದಲ್ಲಿ ಉತ್ಪತ್ತಿಯಾದ
ಸಕಲ ಪ್ರಾಣಿಗಳ ಶಿವನೆಂದು ಭಾವಿಸಲಾಗದು.
ಅದೇನು ಕಾರಣವೆಂದೊಡೆ :
ಆ ಸಕಲ ಪ್ರಾಣಿಗಳು ಶಿವನಾದಡೆ
ಮದಮತ್ಸರಂಗಳಿಂದೆ ಒಂದನೊಂದು ಕೊಂದು ಕೂಗಿ
ತಿಂದು ತೇಗಲೇತಕೊ ?
ಆ ಸಕಲ ಪ್ರಾಣಿಗಳು ಶಿವನಾದಡೆ
ಜಾತಿ ವರ್ಣಾಶ್ರಮ ಕುಲಗೋತ್ರ ನಾಮಸೀಮೆ
ಬಂದ ಬಟ್ಟೆಗೆ ಬಡಿದಾಡಲೇತಕೊ ?
ಆ ಸಕಲ ಪ್ರಾಣಿಗಳು ಶಿವನಾದಡೆ
ಹಮ್ಮು ಬಿಮ್ಮು ಗರ್ವ ಅಹಂಕಾರ ಹೆಮ್ಮೆ ಹಿರಿತನಕೆ
ಹೊಡೆದಾಡಿ ಮಡಿದು ಹೋಗಲೇತಕೊ ?
ಆ ಸಕಲ ಪ್ರಾಣಿಗಳು ಶಿವನಾದಡೆ
ಮಲತ್ರಯಂಗಳ ಬಲೆಯಲ್ಲಿ ಸಿಲ್ಕಿ
ಭವಭವಂಗಳಲ್ಲಿ ತೊಳಲಿ ಬಳಲಿ ಬೆಂಡಾಗಲೇತಕೊ ?
ಇದು ಕಾರಣ,
ಅನಾದಿಸಂಸಿದ್ಧವಾದ ಪರಮ ಜಂಗಮಲಿಂಗವೇ ಶಿವನಲ್ಲದೆ
ಭವಭವಂಗಳಲ್ಲಿ ಸತ್ತು ಹುಟ್ಟುವ ಸಕಲ ಪ್ರಾಣಿಗಳ ಶಿವನೆಂದಡೆ
ಅಘೋರನರಕ ತಪ್ಪದಯ್ಯ ಅಖಂಡೇಶ್ವರಾ./446
ಪೃಥ್ವಿ ದೇವರೆಂಬೆನೆ ಪೃಥ್ವಿ ದೇವರಲ್ಲ.
ಅಪ್ಪು ದೇವರೆಂಬೆನೆ ಅಪ್ಪು ದೇವರಲ್ಲ.
ಅಗ್ನಿ ದೇವರೆಂಬೆನೆ ಅಗ್ನಿ ದೇವರಲ್ಲ.
ವಾಯು ದೇವರೆಂಬೆನೆ ವಾಯು ದೇವರಲ್ಲ.
ಆಕಾಶ ದೇವರೆಂಬೆನೆ ಆಕಾಶ ದೇವರಲ್ಲ.
ಆತ್ಮ ದೇವರೆಂಬೆನೆ ಆತ್ಮ ದೇವರಲ್ಲ.
ಸೂರ್ಯ ದೇವರೆಂಬೆನೆ ಸೂರ್ಯ ದೇವರಲ್ಲ.
ಚಂದ್ರ ದೇವರೆಂಬೆನೆ ಚಂದ್ರ ದೇವರಲ್ಲ.
ಅದೇನು ಕಾರಣವೆಂದೊಡೆ :
ಪೃಥ್ವಿ ಶಿವನ ಸದ್ಯೋಜಾತಮುಖದಲ್ಲಿ ಪುಟ್ಟಿತ್ತು.
ಅಪ್ಪು ಶಿವನ ವಾಮದೇವಮುಖದಲ್ಲಿ ಪುಟ್ಟಿತ್ತು.
ತೇಜ ಶಿವನ ಅಘೋರಮುಖದಲ್ಲಿ ಪುಟ್ಟಿತ್ತು.
ವಾಯು ಶಿವನ ತತ್ಪುರುಷಮುಖದಲ್ಲಿ ಪುಟ್ಟಿತ್ತು.
ಆಕಾಶ ಶಿವನ ಈಶಾನ್ಯಮುಖದಲ್ಲಿ ಪುಟ್ಟಿತ್ತು.
ಆತ್ಮ ಶಿವನ ಗೋಪ್ಯಮುಖದಲ್ಲಿ ಪುಟ್ಟಿತ್ತು.
ಸೂರ್ಯ ಶಿವನ ನಯನದಲ್ಲಿ ಪುಟ್ಟಿತ್ತು.
ಚಂದ್ರ ಶಿವನ ಮನಸ್ಸಿನಲ್ಲಿ ಪುಟ್ಟಿತ್ತು.
“ಯತ್ ದೃಷ್ಟಮ್ ತತ್ ನಷ್ಟಮ್” ಎಂದು,
ಇಂತೀ ಅಷ್ಟತನುಗಳಿಗೆ ಹುಟ್ಟು ಹೊಂದು ಉಂಟಾದ ಕಾರಣ
ಇವು ಕಲ್ಪಿತವೆಂದು ಕಳೆದು
ನೀನೊಬ್ಬನೆ ನಿತ್ಯ ಪರಿಪೂರ್ಣನೆಂದು
ತಿಳಿದು ಉಳಿದೆನಯ್ಯ ಅಖಂಡೇಶ್ವರಾ./447
ಪೃಥ್ವಿಯಾಕಾಶದೊಳಗೆಲ್ಲ
ನಿಮ್ಮ ಪ್ರಸಾದದ ಬೆಳಗು ತುಂಬಿರ್ಪುದಯ್ಯಾ.
ಸಚರಾಚರದೊಳಗೆಲ್ಲ
ನಿಮ್ಮ ಮಹಾಪ್ರಸಾದದ ಬೆಳಗು ತುಂಬಿರ್ಪುದಯ್ಯಾ.
ಪಿಂಡಬ್ರಹ್ಮಾಂಡದೊಳಹೊರಗೆಲ್ಲ
ನಿಮ್ಮ ಮಹಾಪ್ರಸಾದದ ಬೆಳಗು ತುಂಬಿರ್ಪುದಯ್ಯಾ.
ಎಲ್ಲೆಡೆಯಲ್ಲಿ ನಿಮ್ಮ ಮಹಾಪ್ರಸಾದದ ಬೆಳಗೆ ತುಂಬಿರ್ಪುದಾಗಿ,
ಇಲ್ಲ ಉಂಟು ಎಂಬುದಕ್ಕೆ ತೆರಹಿಲ್ಲವಯ್ಯಾ ಅಖಂಡೇಶ್ವರಾ./448
ಪೃಥ್ವಿಯೆ ಅಂಗವಾದ ಭಕ್ತಂಗೆ ಚಿತ್ತವೆ ಹಸ್ತ.
ಆ ಹಸ್ತಕ್ಕೆ ಕ್ರಿಯಾಶಕ್ತಿ, ಆ ಶಕ್ತಿಗೆ ಆಚಾರಲಿಂಗ,
ಆ ಲಿಂಗಕ್ಕೆ ಘ್ರಾಣೇಂದ್ರಿಯವೆಂಬ ಮುಖ,
ಆ ಮುಖಕ್ಕೆ ಸುಗಂಧವೆ ಪದಾರ್ಥ ;
ಆ ಪದಾರ್ಥವನು ಘ್ರಾಣದಲ್ಲಿಹ ಆಚಾರಲಿಂಗಕ್ಕೆ
ಶ್ರದ್ಧಾಭಕ್ತಿಯಿಂದರ್ಪಿಸಿ,
ಆ ಸುಗಂಧದ ಪ್ರಸಾದವನು ಪಡೆದು,
ಸುಖಿಸುವಾತನೆ ಸದ್ಭಕ್ತನು ನೋಡಾ ಅಖಂಡೇಶ್ವರಾ./449
ಪೃಥ್ವಿಯೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು,
ಭಿನ್ನಗಂಧದ ಹಂಗುಹರಿದು,
ಆಚಾರಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಘ್ರಾಣವು.
ಅಪ್ಪುವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು,
ಭಿನ್ನರುಚಿಯ ಹಂಗುಹರಿದು,
ಗುರುಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಜಿಹ್ವೆಯು.
ಅಗ್ನಿಯೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು,
ಭಿನ್ನರೂಪದ ಹಂಗುಹರಿದು,
ಶಿವಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ನೇತ್ರವು.
ಪವನವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು,
ಭಿನ್ನಸ್ಪರ್ಶದ ಹಂಗುಹರಿದು,
ಜಂಗಮಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಸರ್ವಾಂಗವು.
ಆಕಾಶವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು,
ಭಿನ್ನಶಬ್ದದ ಹಂಗುಹರಿದು,
ಪ್ರಸಾದಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಕರ್ಣವು.
ಆತ್ಮವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು,
ಭಿನ್ನತೃಪ್ತಿಯ ಹಂಗುಹರಿದು,
ಮಹಾಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಹೃದಯವು.
ಇಂತೀ ಷಡ್ವಿಧ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು,
ಷಡ್ವಿಧ ಭಿನ್ನಪದಾರ್ಥದ ಹಂಗುಹರಿದು
ಷಡ್ವಿಧ ಇಂದ್ರಿಯಂಗಳು ಷಡ್ವಿಧಲಿಂಗಕ್ಕೆ ಷಡ್ವಿಧ ವದನಂಗಳಾಗಿ
ಅಖಂಡೇಶ್ವರಾ, ನಾನೆ ನೀನಾದೆನಯ್ಯಾ./450
ಪ್ರಕೃತಿ ವಿಕೃತಿಗಳಿಲ್ಲದಂದು,
ಮಹಾಶೇಷ ಕಮಠ ದಿಗ್ಗಜಂಗಳಿಲ್ಲದಂದು,
ಅಷ್ಟತನು ಕುಲಗಿರಿಗಳಿಲ್ಲದಂದು,
ಷಡಧ್ವ ಷಡುಋತುಗಳಿಲ್ಲದಂದು,
ಶಶಿರವಿಗಳ ಬೆಳಗು ಪಸರಿಸದಂದು,
ಅಖಂಡೇಶ್ವರಾ, ನಿಮ್ಮ ನೀವರಿಯದೆ
ಅನಂತಕಾಲವಿರ್ದೆರಂದು./451
ಪ್ರಸಾದಿ ಪ್ರಸಾದಿಗಳೆಂದು ನುಡಿದುಕೊಂಬ
ಪರಮದ್ರೋಹಿಗಳನೇನೆಂಬೆ ?
ಪ್ರಸಾದಿಗೆ ಪರಸ್ತ್ರೀಯರ ಅಪ್ಪುಗೆಯುಂಟೆ ?
ಪ್ರಸಾದಿಗೆ ಪರದೈವದ ಪೂಜೆಯುಂಟೆ ?
ಪ್ರಸಾದಿಗೆ ಪರದೈವದ ಪ್ರೇಮವುಂಟೆ ?
ಪ್ರಸಾದಿಗೆ ಪ್ರಪಂಚಿನ ವ್ಯವಹಾರ ಉಂಟೆ ?
ಇಂತೀ ತಥ್ಯಮಿಥ್ಯದ ಹೋರಾಟದಲ್ಲಿದ್ದು
ತೊತ್ತಿನೆಂಜಲ ತಿಂಬ ತೊನ್ನ ಹೊಲೆಯರಿಗೆ
ಉನ್ನತ ಪ್ರಸಾದವೆಲ್ಲಿಯದಯ್ಯ ಅಖಂಡೇಶ್ವರಾ./452
ಪ್ರಸಾದಿಯಾದಡೆ ಚೇಳಿಯಕ್ಕನಂತಿರಬೇಕು.
ಪ್ರಸಾದಿಯಾದಡೆ ಮಾದಾರ ಚೆನ್ನಯ್ಯನಂತಿರಬೇಕು.
ಪ್ರಸಾದಿಯಾದಡೆ ಬೇಡರ ಕಣ್ಣಪ್ಪನಂತಿರಬೇಕು.
ಪ್ರಸಾದಿಯಾದಡೆ ಬಿಬ್ಬಿ ಬಾಚಯ್ಯಗಳಂತಿರಬೇಕು.
ಪ್ರಸಾದಿಯಾದಡೆ ಡೋಹರ ಕಕ್ಕಯ್ಯನಂತಿರಬೇಕು.
ಪ್ರಸಾದಿಯಾದಡೆ ಪರಮಗುರು ಚೆನ್ನಬಸವಣ್ಣನಂತಿರಬೇಕು.
ಅಲ್ಲದೆ ಪ್ರಾಣನ ಹಸಿವೆಗೆಂದು ಬಾಯಿಗೆ ಬಂದಂತೆ ತಿಂಬ
ಜೀವಗಳ್ಳರಿಗೆಲ್ಲಿಯ ಪ್ರಸಾದವಯ್ಯಾ ಅಖಂಡೇಶ್ವರಾ ?/453
ಪ್ರಸಾದಿಯೊಳಗಣ ಭಕ್ತಸ್ಥಲವನಿಂಬುಗೊಂಡರು
ಬಸವಣ್ಣನವರು.
ಪ್ರಸಾದಿಯೊಳಗಣ ಮಹೇಶ್ವರಸ್ಥಲವನಿಂಬುಗೊಂಡರು
ಮಡಿವಾಳಸ್ವಾಮಿಗಳು.
ಪ್ರಸಾದಿಯೊಳಗಣ ಪ್ರಸಾದಿಸ್ಥಲವನಿಂಬುಗೊಂಡರು
ಚೆನ್ನಬಸವಣ್ಣನವರು.
ಪ್ರಸಾದಿಯೊಳಗಣ ಪ್ರಾಣಲಿಂಗಿಸ್ಥಲವನಿಂಬುಗೊಂಡರು
ತಂಗಟೂರ ಮಾರಯ್ಯನವರು.
ಪ್ರಸಾದಿಯೊಳಗಣ ಶರಣಸ್ಥಲವನಿಂಬುಗೊಂಡರು
ಗಜೇಶಮಸಣಯ್ಯನವರು,
ಪ್ರಸಾದಿಯೊಳಗಣ ಐಕ್ಯಸ್ಥಲವನಿಂಬುಗೊಂಡರು
ಬಿಬ್ಬಿಬಾಚಯ್ಯನವರು.
ಇಂತೀ ಪ್ರಸಾದಿ ಷಟ್ಸ್ಥಲವನಿಂಬುಗೊಂಡ
ಶರಣರ ಪ್ರಸನ್ನವ ಮಾಡಿಕೊಡಯ್ಯಾ ಎನಗೆ
ಅಖಂಡೇಶ್ವರಾ./454
ಪ್ರಾಣನ ಹಸಿವೆದ್ದು ದೇಹವನಂಡಲೆವಾಗ
ಬಾಯ ಸವಿಯನುಂಬರಲ್ಲದೆ
ಲಿಂಗದೇವನ ನೆನಹು ಎಲ್ಲಿಯದೊ ?
ಆ ಲಿಂಗದ ನೆನಹ ಮರೆದು ಅಂಗಕ್ಕೆ ಕೊಂಡರೆ
ಅದೇ ಎಂಜಲು ನೋಡಾ.
ಅಂತಹ ಎಂಜಲೋಗರವ ಮರಳಿ
ಲಿಂಗಕ್ಕೆ ಕೊಡಲಾಗದು ನೋಡಾ.
ಅದೇನು ಕಾರಣವೆಂದೊಡೆ :
ಕಂಡವರ ಕಂಡು ತಾನುಂಡು ಎಂಜಲವ ಮರಳಿ ಮರಳಿ
ಭೋಜಿಯ ಕಟ್ಟಿ ಲಿಂಗಕ್ಕೆ ತೋರಿದಡೆ
ಹುಳುಗೊಂಡದಲ್ಲಿಕ್ಕುವನು ನೋಡಾ ನಮ್ಮ ಅಖಂಡೇಶ್ವರನು./455
ಪ್ರಾಣನಾಯಕನ ಕಾಣದೆ
ಕ್ಷೊಣಿಯೊಳಗೆ ಬದುಕಲಾರೆನವ್ವಾ.
ಏಣಾಂಕಧರನು ಏಕೆ ಬಾರನೇ ?
ಜಾಣೆ ಪ್ರವೀಣೆ ಕರೆದುತೋರೆ
ಅಖಂಡೇಶ್ವರನೆಂಬ ನಲ್ಲನ./456
ಪ್ರಾಣಲಿಂಗ ಪ್ರಾಣಲಿಂಗವೆಂದು
ಪ್ರಾಣಲಿಂಗನ ನುಡಿಗಡಣವ ಕಲಿತು ನುಡಿವರೆಲ್ಲ
ಪ್ರಾಣಲಿಂಗದ ನೆಲೆಯನರಿಯರು ;
ಪ್ರಾಣಲಿಂಗದ ನಿಲವನರಿಯರು ;
ಪ್ರಾಣಲಿಂಗದ ಹೊಲಬನರಿಯರು;
ಪ್ರಾಣಲಿಂಗದ ಸ್ಥಲವನರಿಯರು ;
ಪ್ರಾಣಲಿಂಗದ ಬೆಳಗನರಿಯರು ;
ಪ್ರಾಣಲಿಂಗದ ಕಳೆಯನರಿಯರು ;
ಪ್ರಾಣಲಿಂಗದ ಘನವನರಿಯರು ;
ಪ್ರಾಣಲಿಂಗದ ಘನವ
ಅನಾದಿ ಸಂಸಿದ್ಧವಾದ ನಿಮ್ಮ ಪ್ರಾಣಲಿಂಗಿಯೆ ಬಲ್ಲನಲ್ಲದೆ
ಉಳಿದ ಪ್ರಪಂಚದೇಹಿಗಳೆತ್ತ ಬಲ್ಲರಯ್ಯಾ ಅಖಂಡೇಶ್ವರಾ./457
ಪ್ರಾಣಲಿಂಗಸಂಬಂಧಿಗಳೆಂದು ನುಡಿಯುವವರು ಅನೇಕರುಂಟು:
ಪ್ರಾಣಲಿಂಗದ ಕಳೆಯನಾರೂ ಅರಿಯರಲ್ಲ !
ಪ್ರಾಣಲಿಂಗದ ಕಳೆ ಎಂತೆಂದಡೆ :
ಆಧಾರದಲ್ಲಿ ಎಳೆಯ ಸೂರ್ಯನಂತೆ
ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಸ್ವಾಧಿಷ್ಠಾನದಲ್ಲಿ ಪೂರ್ಣಚಂದ್ರನಂತೆ
ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಮಣಿಪೂರಕದಲ್ಲಿ ಮಿಂಚಿನಲತೆಯಂತೆ
ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಅನಾಹತದಲ್ಲಿ ಸ್ಫಟಿಕದ ಸಲಾಕೆಯಂತೆ
ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ವಿಶುದ್ಧಿಯಲ್ಲಿ ಮೌಕ್ತಿಕದ ಗೊಂಚಲದಂತೆ
ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಆಜ್ಞೇಯದಲ್ಲಿ ರತ್ನದ ದೀಪ್ತಿಯಂತೆ
ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಬ್ರಹ್ಮರಂಧ್ರದಲ್ಲಿ ಸ್ವಯಂಜ್ಯೋತಿಯಂತೆ
ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಶಿಖೆಯಲ್ಲಿ ಶುದ್ಧತಾರೆಯಂತೆ
ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಪಶ್ಚಿಮದಲ್ಲಿ ಉಳುಕ ನಕ್ಷತ್ರದಂತೆ
ಬೆಳಗುತಿರ್ಪುದು ನೋಡಾ ಪ್ರಾಣಲಿಂಗವು.
ಇಂತಪ್ಪ ಪ್ರಾಣಲಿಂಗದ ಕಳೆಯನರಿಯದೆ
ಪ್ರಾಣನ ಸಂಯೋಗಿಸಿ ಪ್ರಳಯವ ಗೆಲಲರಿಯದೆ
ಮಾತಿನ ಮಾಲೆಯ ನುಡಿದು
ನೀತಿಶಾಸ್ತ್ರ ಘಾತಕದ ಕಥೆಗಳ ಕಲಿತು
ಓತು ಎಲ್ಲರೊಡನೆ ಹೇಳಿ ಚಾತುರ್ಯನೆನಿಸಿಕೊಂಡು
ಒಡಲ ಹೊರೆವ ಉದರಘಾತಕರ
ಪ್ರಾಣಲಿಂಗಸಂಬಂಧಿಗಳೆಂತೆಂಬೆನಯ್ಯಾ ಅಖಂಡೇಶ್ವರಾ./458
ಪ್ರಾಣವು ಲಿಂಗವ ನುಂಗಿತ್ತೋ,
ಲಿಂಗವು ಪ್ರಾಣವ ನುಂಗಿತ್ತೋ ಎಂದರಿಯೆನಯ್ಯ.
ಭಾವವು ಲಿಂಗದಲ್ಲಿ ತುಂಬಿತ್ತೋ,
ಲಿಂಗವು ಭಾವದಲ್ಲಿ ತುಂಬಿತ್ತೋ ಎಂದರಿಯೆನಯ್ಯ.
ಮನವು ಲಿಂಗದಲ್ಲಿ ಮುಳುಗಿತ್ತೊ ,
ಲಿಂಗವು ಮನದಲ್ಲಿ ಮುಳುಗಿತ್ತೋ ಎಂದರಿಯೆನಯ್ಯ.
ಅಖಂಡೇಶ್ವರಾ, ನಿಮ್ಮ ಕೂಡುವ ವಿಕಳಾವಸ್ಥೆಯಲ್ಲಿ
ಏನೇನೂ ಅರಿಯದಿರ್ದೆನಯ್ಯ./459
ಫಲಪದ ಮುಕ್ತಿಯ ಬಯಸಿ ಯುಕ್ತಿಗೆಟ್ಟು
ಸಕಲ ತೀರ್ಥಕ್ಷೇತ್ರಂಗಳಿಗೆ ಎಡೆಮಾಡಿ
ತೊಟ್ಟನೆ ತೊಳಲಿ ಬಳಲಿ ಬೆಂಡಾಗಲೇತಕೋ ?
ಆ ಸಕಲ ತೀರ್ಥಕ್ಷೇತ್ರಂಗಳಲ್ಲಿ ಒದಗುವ ಮುಕ್ತಿಫಲಪದಂಗಳು
ಒಬ್ಬ ಪರಮ ಜಂಗಮದ ತೀರ್ಥಪ್ರಸಾದವಕೊಂಡ
ನಿಮಿಷಮಾತ್ರದಲ್ಲಿ ದೊರೆಕೊಂಬುದು ಹುಸಿಯಲ್ಲ ನೋಡಾ !
ಅದೆಂತೆಂದೊಡೆ :
“ಪಾದತೀರ್ಥೆ ಸರ್ವತೀರ್ಥಾನಿ ಪ್ರಸಾದೇ ಕೋಟಿಲಿಂಗಕಂ |
ನಿತ್ಯಂ ಸೇವಿತಭಕ್ತಾನಾಂ ಮಮ ರೂಪಂ ತು ಪಾರ್ವತಿ ||”
ಎಂದುದಾಗಿ,
ಇಂತಪ್ಪ ಪಾದತೀರ್ಥಪ್ರಸಾದವನು
ಸದಾ ಸನ್ನಿಹಿತನಾಗಿ ಕೊಂಬ ಸದ್ಭಕ್ತನು
ಸಾಕ್ಷಾತ್ ಪರಶಿವಬ್ರಹ್ಮ ತಾನೆ ನೋಡಾ ಅಖಂಡೇಶ್ವರಾ./460
ಫಲಪದವಿಯ ಬಯಸಿ ಮಾಡಲಾಗದು ಗುರುಭಕ್ತಿಯ.
ಫಲಪದವಿಯ ಬಯಸಿ ಮಾಡಲಾಗದು ಲಿಂಗಪೂಜೆಯ.
ಫಲಪದವಿಯ ಬಯಸಿ ಮಾಡಲಾಗದು ಜಂಗಮಾರ್ಚನೆಯ.
ಅದೇನು ಕಾರಣವೆಂದೊಡೆ :
ಬಯಕೆಯ ಭಕ್ತಿಯ, ಪೂರ್ವಪುರಾತನರು ಮಚ್ಚರು.
ನಮ್ಮ ಅಖಂಡೇಶ್ವರದೇವನು ಹಂಗಿನ ಭಕ್ತರನೊಲ್ಲ ನೋಡಾ./461
ಬಂಧನಕ್ಕೊಳಗಾದ ಹುಲಿಗೆ ಬಲಾತ್ಕಾರ ಉಂಟೆ ಅಯ್ಯ ?
ಸಂಸಾರದಂದುಗದಲ್ಲಿ ತೊಳಲುವ ಜೀವನಿಗೆ
ಮುಂದೆ ಮುಕ್ತಿಯನರಸುವ ಜ್ಞಾನ ಉಂಟೆ ಅಯ್ಯ
ಅಖಂಡೇಶ್ವರಾ ?/462
ಬಚ್ಚಬರಿಯ ಬಯಲೊಳಗೊಂದು
ಅಚ್ಚ ಅಂಕುರ ಹುಟ್ಟಿ ಅಣುಚಕ್ರವೆನಿಸಿತ್ತು.
ಆ ಅಣುಚಕ್ರದಿಂದಾಯಿತ್ತು ಪಶ್ಚಿಮಚಕ್ರ.
ಆ ಪಶ್ಚಿಮಚಕ್ರದಿಂದಾಯಿತ್ತು ಶಿಖಾಚಕ್ರ.
ಆ ಶಿಖಾಚಕ್ರದಿಂದಾಯಿತ್ತು ಬ್ರಹ್ಮಚಕ್ರ.
ಆ ಬ್ರಹ್ಮಚಕ್ರದಿಂದಾಯಿತ್ತು ಆಜ್ಞಾಚಕ್ರ.
ಆ ಆಜ್ಞಾಚಕ್ರದಿಂದಾಯಿತ್ತು ವಿಶುದ್ಧಿಚಕ್ರ.
ಆ ವಿಶುದ್ಧಿಚಕ್ರದಿಂದಾಯಿತ್ತು ಅನಾಹತಚಕ್ರ.
ಆ ಅನಾಹತಚಕ್ರದಿಂದಾಯಿತ್ತು ಮಣಿಪೂರಕಚಕ್ರ.
ಆ ಮಣಿಪೂರಕಚಕ್ರದಿಂದಾಯಿತ್ತು ಸ್ವಾಧಿಷ್ಠಾನಚಕ್ರ.
ಆ ಸ್ವಾಧಿಷ್ಠಾನಚಕ್ರದಿಂದಾಯಿತ್ತು ಆಧಾರಚಕ್ರ.
ಆ ಆಧಾರಚಕ್ರಕ್ಕೆ ಚತುರ್ದಳ.
ಆ ಚತುರ್ದಳದಲ್ಲಿ ಚತುರಕ್ಷರಂಗಳು.
ಆ ಚತುರಕ್ಷರಂಗಳ ಮಧ್ಯ ಬೀಜಾಕ್ಷರವೇ ನಕಾರಪ್ರಣವ.
ಆ ನಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಆಚಾರಲಿಂಗ.
ಅದರಿಂದ ಮೇಲೆ ಸ್ವಾಧಿಷ್ಠಾನಚಕ್ರವಿರ್ಪುದು.
ಆ ಚಕ್ರಕ್ಕೆ ಷಡುದಳ.
ಆ ಷಡುದಳಂಗಳಲ್ಲಿ ಷಡಕ್ಷರಂಗಳು.
ಆ ಷಡಕ್ಷರಂಗಳ ಮಧ್ಯ ಬೀಜಾಕ್ಷರವೇ ಮಕಾರಪ್ರಣವ.
ಆ ಮಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಗುರುಲಿಂಗ.
ಅದರಿಂದ ಮೇಲೆ ಮಣಿಪೂರಕಚಕ್ರವಿರ್ಪುದು.
ಆ ಚಕ್ರಕ್ಕೆ ದಶದಳ.
ಆ ದಶದಳಂಗಳಲ್ಲಿ ದಶಾಕ್ಷರಂಗಳು.
ಆ ದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶಿಕಾರಪ್ರಣವ.
ಆ ಶಿಕಾರ ಪ್ರಣವ ಪೀಠದ ಮೇಲೆ ಬೆಳಗುತಿರ್ಪುದು ಶಿವಲಿಂಗ.
ಅದರಿಂದ ಮೇಲೆ ಅನಾಹತಚಕ್ರವಿರ್ಪುದು.
ಆ ಚಕ್ರಕ್ಕೆ ದ್ವಾದಶದಳ.
ಆ ದ್ವಾದಶದಳಂಗಳಲ್ಲಿ ದ್ವಾದಶಾಕ್ಷರಂಗಳು.
ಆ ದ್ವಾದಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ವಕಾರಪ್ರಣವ.
ಆ ವಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಜಂಗಮಲಿಂಗ.
ಅದರಿಂದ ಮೇಲೆ ವಿಶುದ್ಧಿಚಕ್ರವಿರ್ಪುದು.
ಆ ಚಕ್ರಕ್ಕೆ ಷೋಡಶದಳ.
ಆ ಷೋಡಶದಳಂಗಳಲ್ಲಿ ಷೋಡಶಾಕ್ಷರಂಗಳು.
ಆ ಷೋಡಶಾಕ್ಷರಂಗಳ ಮಧ್ಯ ಬೀಜಾಕ್ಷರವೇ ಯಕಾರಪ್ರಣವ.
ಆ ಯಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಪ್ರಸಾದಲಿಂಗ.
ಅದರಿಂದ ಮೇಲೆ ಆಜ್ಞಾಚಕ್ರವಿರ್ಪುದು.
ಆ ಚಕ್ರಕ್ಕೆ ದ್ವಿದಳ.
ಆ ದ್ವಿದಳಂಗಳಲ್ಲಿ ದ್ವಯಾಕ್ಷರಂಗಳು.
ಆ ದ್ವಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಒಂಕಾರಪ್ರಣವ.
ಆ ಓಂಕಾರಪ್ರಣವಪೀಠದ ಮೇಲೆ ಬೆಳಗುತಿರ್ಪುದು ಮಹಾಲಿಂಗ.
ಅದರಿಂದ ಮೇಲೆ ಬ್ರಹ್ಮಚಕ್ರವಿರ್ಪುದು.
ಆ ಚಕ್ರಕ್ಕೆ ಸಹಸ್ರದಳ.
ಆ ಸಹಸ್ರದಳಂಗಳಲ್ಲಿ ಸಹಸ್ರಾಕ್ಷರಂಗಳು.
ಆ ಸಹಸ್ರಾಕ್ಷರಂಗಳ ಮಧ್ಯ ಬೀಜಾಕ್ಷರವೇ ನಿಷ್ಕಲಪ್ರಣವ.
ಆ ನಿಷ್ಕಲಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿಷ್ಕಲಲಿಂಗ.
ಅದರಿಂದ ಮೇಲೆ ಶಿಖಾಚಕ್ರವಿರ್ಪುದು.
ಆ ಚಕ್ರಕ್ಕೆ ತ್ರಿದಳ.
ಆ ತ್ರಿದಳಂಗಳಲ್ಲಿ ತ್ರಯಾಕ್ಷರಂಗಳು.
ಆ ತ್ರಯಾಕ್ಷರಂಗಳ ಮಧ್ಯ ಬೀಜಾಕ್ಷರವೇ ಶೂನ್ಯಪ್ರಣವ.
ಆ ಶೂನ್ಯಪ್ರಣವಪೀಠದ ಮೇಲೆ ಬೆಳಗುತಿರ್ಪುದು ಶೂನ್ಯಲಿಂಗ.
ಅದರಿಂದ ಮೇಲೆ ಪಶ್ಚಿಮಚಕ್ರವಿರ್ಪುದು.
ಆ ಚಕ್ರಕ್ಕೆ ಏಕದಳ.
ಆ ಏಕದಳದಲ್ಲಿ ಸರ್ವರಂಜನೆಯನೊಳಕೊಂಡು
ವಾಚಾತೀತವೆನಿಸುವ ನಿರಂಜನಪ್ರಣವ.
ಆ ನಿರಂಜನ ಪ್ರಣವಪೀಠದ ಮೇಲೆ ಬೆಳಗುತಿರ್ಪುದು ನಿರಂಜನಲಿಂಗ.
ಇಂತೀ ತರುವಾಯದಿಂದೆ
ಆಧಾರ ಸ್ವಾಧಿಷ್ಠಾನದಲ್ಲಿ ಲಯ,
ಆ ಸ್ವಾಧಿಷ್ಠಾನ ಮಣಿಪೂರಕದಲ್ಲಿ ಲಯ.
ಆ ಮಣಿಪೂರಕ ಅನಾಹತದಲ್ಲಿ ಲಯ.
ಆ ಅನಾಹತ ವಿಶುದ್ಧಿಯಲ್ಲಿ ಲಯ.
ಆ ವಿಶುದ್ಧಿ ಆಜ್ಞೆಯಲ್ಲಿ ಲಯ.
ಆ ಆಜ್ಞೆ ಬ್ರಹ್ಮಚಕ್ರದಲ್ಲಿ ಲಯ.
ಆ ಬ್ರಹ್ಮಚಕ್ರ ಶಿಖಾಚಕ್ರದಲ್ಲಿ ಲಯ.
ಆ ಶಿಖಾಚಕ್ರ ಪಶ್ಚಿಮಚಕ್ರದಲ್ಲಿ ಲಯ.
ಆ ಪಶ್ಚಿಮಚಕ್ರ ಅಣುಚಕ್ರದಲ್ಲಿ ಲಯ.
ಆ ಅಣುಚಕ್ರ ನಿರವಯಲಲ್ಲಿ ಲಯ.
ಆ ನಿರವಯಲು ನಿಜವ ಕೂಡಿ ಸಹಜವಾದಲ್ಲಿ
ಅಖಂಡೇಶ್ವರನೆಂಬ ಶಬ್ದ ಮುಗ್ಧವಾಯಿತ್ತು./463
ಬಣ್ಣದಚರ್ಮದ ಹೆಣ್ಣಿನಂಗಸಂಗದಕೂಟಸುಖ ಸವಿಯೆಂದು
ಮನವೆಳಸುವ ಕಣ್ಣುಗೆಟ್ಟಣ್ಣಗಳು ನೀವು ಕೇಳಿರೋ !
ಶುನಿ ಎಲುವ ಕಡಿವಲ್ಲಿ
ತನ್ನ ಬಾಯ ಲೋಳೆ ತನಗೆ ಸವಿದಟ್ಟುತಿಪ್ಪುದಲ್ಲದೆ,
ಆ ಎಲುವಿನೊಳಗೇನು ಸಾರಸವಿಯುಂಟೆ ?
ತನ್ನ ಊಧ್ರ್ವಬಿಂದು ಮಾಯಾವಶದಿಂದೆ ಅಧೋಗತಿಗಿಳಿದು
ಮೂತ್ರನಾಳ ತಗುಲಿ ಕಿಂಚಿತ್ಸುಖ ಉಂಟಾಗುತಿಪ್ಪುದಲ್ಲದೆ
ಆ ಹೆಣ್ಣಿನಿಂದೇನು ಸುಖವುಂಟೆ ? ಎಡ್ಡ ಪ್ರಾಣಿಗಳಿರಾ !
ಇಂತೀ ದೃಷ್ಟವ ತಿಳಿದು ಭೇದಿಸಿ ಕಾಣಲರಿಯದೆ
ಹೇಸಿಕೆಯ ಕಿಸುಕುಳದ ಕೀವುತುಂಬಿ ಒಸರುವ
ಹಸಿಯತೊಗಲಿನ ಹಳೆಯಗಾಯದಲ್ಲಿ
ವಿಷಯಾತುರದಿಂದೆ ಬಿದ್ದು ಮತಿಮಸುಳಿಸಿ ಮುಂದುಗಾಣದೆ
ಮುಳುಗಾಡುತಿಪ್ಪುದು ನೋಡಾ
ಮೂಜಗವೆಲ್ಲ ಅಖಂಡೇಶ್ವರಾ./464
ಬಣ್ಣವಿಲ್ಲದ ಪಕ್ಷಿ
ಕಣ್ಣಿನ ಕೊನೆಯಲ್ಲಿ ಸಣ್ಣಗೂಡನಿಕ್ಕಿ ಸುಳಿವುದ ಕಂಡೆ.
ಬಣ್ಣ ಮೂವತ್ತಾರ ನುಂಗಿತ್ತ ಕಂಡೆ.
ಬಯಲ ಸೀಮೆಯ ವಾಸವಾಗಿರ್ಪ ಪಕ್ಷಿ
ಹೆಣ್ಣೋ ಗಂಡೋ ಎಂದು ಕುರುಹವಿಡಿವ
ಅಣ್ಣಗಳನಾರನೂ ಕಾಣೆನಯ್ಯಾ ಅಖಂಡೇಶ್ವರಾ./465
ಬಯಲ ಸ್ತ್ರೀಯಳ ನಿರವಯಲ ಪುರುಷ ಬಂದು ಕೂಡಲು
ಚಿದ್ಬಯಲೆಂಬ ಶಿಶು ಹುಟ್ಟಿತ್ತು.
ಆ ಶಿಶುವನು ಮಹಾಬಯಲೆಂಬ ತೊಟ್ಟಿಲಲ್ಲಿ ಮಲಗಿಸಿ
ನಿರಾಳ ನಿಃಶೂನ್ಯವೆಂಬ ನೇಣ ಕಟ್ಟಿ ತೂಗಿ ಜೋಗುಳವಾಡಲು,
ಆ ಶಿಶುವು ತನ್ನಿಂದ ತಾನೇ ತಂದೆ ತಾಯಿಗಳಿಬ್ಬರನೂ ನುಂಗಿತ್ತು.
ಆ ತಂದೆ ತಾಯಿಗಳ ನುಂಗಲೊಡನೆ ಜೋಗುಳದ ಉಲುಹು ಅಡಗಿತ್ತು.
ಆ ಜೋಗುಳದ ಉಲುಹು ಅಡಗಿದೊಡನೆ
ನಿರಾಳ ನಿಃಶೂನ್ಯವೆಂಬ ನೇಣು ಹರಿಯಿತ್ತು.
ಆ ನಿರಾಳ ನಿಃಶೂನ್ಯವೆಂಬ ನೇಣು ಹರಿಯಲೊಡನೆ
ಆ ಶಿಶು ತೊಟ್ಟಿಲಸಹವಾಗಿ ಬಟ್ಟಬಯಲಾಯಿತ್ತು.
ಆ ಶಿಶು ತೊಟ್ಟಿಲಸಹವಾಗಿ ಬಟ್ಟಬಯಲಾಗಲೊಡನೆ
ಅಖಂಡೇಶ್ವರನೆಂಬ ಬಯಲಿನ ಬಯಲ ಬಚ್ಚಬರಿಯ
ಘನಗಂಭೀರ ಮಹಾಬಯಲೊಳಗೆ ನಾನೆತ್ತ ಹೋದೆನೆಂದರಿಯೆ./466
ಬಯಲು ಬಯಲು ಬೆರೆದಲ್ಲಿ ಮೇರೆಯುಂಟೆ ಅಯ್ಯಾ ?
ಕ್ಷೀರ ಕ್ಷೀರವ ಕೂಡಿದಲ್ಲಿ ಪದರುಂಟೆ ಅಯ್ಯಾ ?
ಉರಿಕರ್ಪುರಸಂಯೋಗ ನಿಷ್ಪತ್ತಿಯಾದಲ್ಲಿ
ಮರಳಿ ರೂಪಿಸಿ ಹಿಡಿಯಲುಂಟೆ ಅಯ್ಯಾ ?
ನಿಮ್ಮೊಳೊಡವೆರೆದ ನಿಜೈಕ್ಯನ ಕುರುಹ
ಮರಳಿ ತೋರಲುಂಟೆ ಅಯ್ಯಾ ಅಖಂಡೇಶ್ವರಾ ?/467
ಬಲ್ಲರೆ ಬಲ್ಲರೆಂಬೆನು, ಲಿಂಗಜಂಗಮ
ಒಂದೇ ಎಂದು ತಿಳಿದು ನಡೆಯಬಲ್ಲರೆ.
ಬಲ್ಲರೆ ಬಲ್ಲರೆಂಬೆನು, ಅಂಗಲಿಂಗದ ಕೀಲವನರಿದು ಕೂಡಬಲ್ಲರೆ.
ಬಲ್ಲರೆ ಬಲ್ಲರೆಂಬೆನು, ಜ್ಞಾನ ಸುಜ್ಞಾನದ ನೆಲೆಯನರಿಯಬಲ್ಲರೆ.
ಬಲ್ಲರೆ ಬಲ್ಲರೆಂಬೆನು, ನಿತ್ಯಾನಿತ್ಯವ
ಬೇರ್ಪಡಿಸಿ ನಿಜವ ಹಿಡಿಯಬಲ್ಲರೆ.
ಇಂತೀ ಬಲ್ಲವಿಕೆಯ ಬಗೆಯನರಿಯದೆ ಸೊಲ್ಲು ಸೊಲ್ಲಿಗೆ ಮಚ್ಚರಿಸಿ
ಕರಣಮಥನ ಕರ್ಕಶದಿಂದೆ ಹೋರುವವರು
ಸಲ್ಲರೆಂಬೆನಯ್ಯ ನಿಜಪಥಕ್ಕೆ ಅಖಂಡೇಶ್ವರಾ./468
ಬಲ್ಲವರು ಬೆಸಗೊಂಡಡೆ ಸೊಲ್ಲನಾರೈದು
ಮೆಲ್ಲನೆ ನುಡಿಯಬೇಕು.
ಕಲ್ಲಿಗೆ ಕಲ್ಲು ತಾಗಿದಂತೆ ಸೊಲ್ಲು ಬಿಗಿಯಾದಡೆ
ಅಲ್ಲಿ ನಿಲ್ಲನಯ್ಯ ನಮ್ಮ ಅಖಂಡೇಶ್ವರ./469
ಬಸವಣ್ಣನೆ ಗುರುವೆನಗೆ,
ಬಸವಣ್ಣನೆ ಲಿಂಗವೆನಗೆ,
ಬಸವಣ್ಣನೆ ಜಂಗಮವೆನಗೆ,
ಬಸವಣ್ಣನೆ ಪಾದೋದಕವೆನಗೆ,
ಬಸವಣ್ಣನೆ ಪ್ರಸಾದವೆನಗೆ,
ಬಸವಣ್ಣನೆ ವಿಭೂತಿಯೆನಗೆ,
ಬಸವಣ್ಣನೆ ರುದ್ರಾಕ್ಷಿಯೆನಗೆ,
ಬಸವಣ್ಣನೆ ಮೂಲಮಂತ್ರವೆನಗೆ,
ಬಸವಣ್ಣನೆ ಅಷ್ಟಾವರಣವೆನಗೆ,
ಬಸವಣ್ಣನೆ ಪಂಚಾಚಾರವೆನಗೆ,
ಬಸವಣ್ಣನೆ ಷಟ್ಸ್ಥಲಬ್ರಹ್ಮವೆನಗೆ,
ಬಸವಣ್ಣನೆ ಸರ್ವಾಚಾರಸಂಪತ್ತಾದನಾಗಿ
ಬಸವಣ್ಣನ ಹಾಸಿಕೊಂಡು, ಬಸವಣ್ಣನ ಹೊದ್ದುಕೊಂಡು,
ಬಸವಣ್ಣನ ಸುತ್ತಿಕೊಂಡು, ಬಸವಣ್ಣನ ಧರಿಸಿಕೊಂಡು,
ಬಸವಣ್ಣನ ಚಿದ್ಗರ್ಭದೊಳಗೆ ಕುಳ್ಳಿರ್ದು
ನಾನು ಬಸವ ಬಸವ ಬಸವಾ ಎನುತಿರ್ದೆನಯ್ಯಾ ಅಖಂಡೇಶ್ವರಾ./470
ಬಸವನ ನಾಮವು ಕಾಮಧೇನು ಕಾಣಿರೊ.
ಬಸವನ ನಾಮವು ಕಲ್ಪವೃಕ್ಷ ಕಾಣಿರೊ.
ಬಸವನ ನಾಮವು ಚಿಂತಾಮಣಿ ಕಾಣಿರೊ.
ಬಸವನ ನಾಮವು ಪರುಷದಖಣಿ ಕಾಣಿರೊ.
ಬಸವನ ನಾಮವು ಸಂಜೀವನಮೂಲಿಕೆ ಕಾಣಿರೊ.
ಇಂತಪ್ಪ ಬಸವನಾಮಾಮೃತವು
ಎನ್ನ ಜಿಹ್ವೆಯತುಂಬಿ ಹೊರಸೂಸಿ ಮನವ ತುಂಬಿತ್ತು.
ಆ ಮನವತುಂಬಿ ಹೊರಸೂಸಿ ಸಕಲಕರಣೇಂದ್ರಿಯಂಗಳ ತುಂಬಿತ್ತು.
ಆ ಸಕಲ ಕರಣೇಂದ್ರಿಯಂಗಳ ತುಂಬಿ ಹೊರಸೂಸಿ
ಸರ್ವಾಂಗದ ರೋಮಕುಳಿಗಳನೆಲ್ಲ ವೇಧಿಸಿತ್ತಾಗಿ
ನಾನು ಬಸವಾಕ್ಷರವೆಂಬ ಹಡಗವೇರಿ
ಬಸವ ಬಸವ ಬಸವಾ ಎಂದು
ಭವಸಾಗರವ ದಾಟಿದೆನಯ್ಯಾ ಅಖಂಡೇಶ್ವರಾ./471
ಬಹುಕ್ರಿಯೆಯ ನಟಿಸದೆ, ಬಹುಶಾಸ್ತ್ರಕ್ಕೆ ಮುಖವಾಗದೆ,
ಬಹುವ್ಯಾಪಾರದಲ್ಲಿ ತೊಳಲದೆ, ಬಹುಭಾಷಾವಂತನಾಗದೆ,
ಹುಸಿ ಕಳವು ಪರದಾರ ಹಿಂಸೆಗೆ ಚಿತ್ತವೆಳಸದೆ,
ಸುಖದುಃಖಕ್ಕೆ ಚಿಂತಿಸದೆ ನಿಂದೆಸ್ತುತಿಗಳಿಗೆ ಹಿಗ್ಗಿಕುಗ್ಗದೆ,
ಹಿಂದುಮುಂದನೆಣಿಸದೆ, ಹಿರಿಯತನಕ್ಕೆ ಹೋಗದೆ,
ಶಿವಜ್ಞಾನಸಂಪನ್ನನಾಗಿ, ಶಿವಮಂತ್ರಸುಯಿಧಾನಿಯಾಗಿ,
ಶಿವಧ್ಯಾನಪರಾಯಣನಾಗಿ, ಏಕಾಂತವಾಸಿಯಾಗಿ, ಭಿಕ್ಷಾಹಾರಿಯಾಗಿ,
ಅಂಗ ಮನದಾಸೆಯು ಹಿಂದುಳಿದು, ಲಿಂಗದ ನೆನಹು ಮುಂದುಕೊಂಡು,
ಶಿವನಾಣತಿಯಿಂದೆ ಬಂದ ಬಂದ ಪದಾರ್ಥವ ಲಿಂಗಾರ್ಪಿತವ ಮಾಡಿ,
ಲಿಂಗದ ನಡೆ, ಲಿಂಗದ ನುಡಿ, ಲಿಂಗದ ನೋಟ
ಸರ್ವಾಂಗದಲ್ಲಿ ಭರಿತವಾಗಿ,
ಕರ್ಪುರವು ಉರಿಯನಪ್ಪಿ ನಿರ್ವಯಲಾದಂತೆ,
ತನುವು ಇಷ್ಟಲಿಂಗವನಪ್ಪಿ
ಮನವು ಪ್ರಾಣಲಿಂಗವನಪ್ಪಿ
ಭಾವವು ಅಖಂಡ ಬಯಲಬ್ರಹ್ಮವನಪ್ಪಿ
ತಾನು ತಾನಾದ ಮಹಾಘನ ಪರಮ ವಿರಕ್ತನ ಶ್ರೀಪಾದಪದ್ಮಕ್ಕೆ
ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ./472
ಬಳಿಕ ನಿಯಮದ ಲಕ್ಷಣವೆಂತೆಂದೊಡೆ :
ಸಕಲ ವಿಷಯಂಗಳಲ್ಲಿ ಉದಾಸೀನತ್ವವು.
ಶಿವಾಗಮೋಕ್ತಂಗಳಲ್ಲಿ ವಿಶ್ವಾಸವು.
ಸತ್ಕೃತ್ಯದಲ್ಲಿ ಎರಕತೆಯು.
ದೇಹಶೋಷಣರೂಪವಾದ ತಪವು.
ನಾನಾರು ಮೋಕ್ಷವೆಂತಪ್ಪುದು ಎಂಬಾಲೋಚನೆಯು.
ಭಸ್ಮನಿಷ್ಠಾದಿ ವ್ರತವು, ಶಿವಲಿಂಗಾರ್ಚನೆಯು.
ಪ್ರಣವ ಪಂಚಾಕ್ಷರಾದಿ ಮಂತ್ರಜಪವು.
ಲೋಕವಿರುದ್ಧ ವೇದವಿರುದ್ಧವಾದ
ಮಾರ್ಗಂಗಳಲ್ಲಿ ಮನವೆರಗದಿಹುದು.
ಯೋಗಶಾಸ್ತ್ರಂಗಳ ಕೇಳುವುದು.
ಸತ್ಪಾತ್ರದಾನಯುಕ್ತವಾಗಿಹುದು
ನಿಯಮಯೋಗ ನೋಡಾ ಅಖಂಡೇಶ್ವರಾ./473
ಬಳಿಕೀ ಪ್ರಕಾರಮಾದ ಹಠಯೋಗರೂಪಮಪ್ಪ
ಅಷ್ಟಾಂಗಗಳಂ ನಿರಾಲಸ್ಯದಿಂ ಎಡೆಬಿಡುವಿಲ್ಲದೆ ಮಾಡಿದಾತಂಗೆ
ಆಗುವ ಸಿದ್ಧಿಪ್ರಕಾರಗಳೆಂತೆನೆ :
ಮೊದಲನೆಯ ವರ್ಷದಲ್ಲಿ
ನಿರೋಗಿಯಾಗಿ ಸಕಲಜನ ಪ್ರೀತನಾಗುವನು.
ಎರಡನೆಯ ವರ್ಷದಲ್ಲಿ
ಸುಸಂಸ್ಕೃತ ಭಾಷೆಯಿಂದ ಕವಿತ್ವವಂ ಮಾಡುವನು.
ಮೂರನೆಯ ವರ್ಷದಲ್ಲಿ
ಸಪರ್ಾದಿ ದುಷ್ಟಪ್ರಾಣಿಗಳಿಂದೆ ಬಾಧಿಸಿಕೊಳ್ಳುತಿರನು.
ನಾಲ್ಕನೆಯ ವರ್ಷದಲ್ಲಿ
ಹಸಿವು ತೃಷೆ ವಿಷಯ ನಿದ್ರೆ ಶೋಕ ಮೋಹಾದಿಗಳಂ ಬಿಡುವನು.
ಐದನೆಯ ವರ್ಷದಲ್ಲಿ
ದೂರಶ್ರವಣ ವಾಕ್ಸಿದ್ಧಿ ಪರಕಾಯಪ್ರವೇಶಾಧಿಕವುಳ್ಳಾತನಹನು.
ಆರನೆಯ ವರ್ಷದಲ್ಲಿ
ವಜ್ರಾದ್ಯಾಯುಧಗಳಿಂದೆ ಭೇದಿಸಲ್ಪಡದಾತನಾಗಿ,
ಶೀಘ್ರಗಾಮಿಯಾಗಿ ದೂರದರ್ಶನವುಳ್ಳಾತನಾಗುವನು.
ಏಳನೆಯ ವರ್ಷದಲ್ಲಿ ಖೇಚರಗಾಮಿಯಾಗುವನು.
ಎಂಟನೆಯ ವರ್ಷದಲ್ಲಿ
ಅಣಿಮಾದಿ ಅಷ್ಟಮಹದೈಶ್ವರ್ಯಸಂಪನ್ನನಾಹನು.
ಒಂಬತ್ತನೆಯ ವರ್ಷದಲ್ಲಿ ಸ್ವೇಚ್ಛಾಗಮನಿಯಾಗಿ ವಜ್ರಶರೀರಿಯಾಹನು.
ಹತ್ತನೆಯ ವರ್ಷದಲ್ಲಿ
ಮನೋಯೋಗಿಯಾಗಿ ಇಚ್ಛಾವಿಷಯಂಗಳ ಪಡೆಯುವನು.
ಹನ್ನೊಂದನೆಯ ವರ್ಷದಲ್ಲಿ
ಸಕಲ ಲೋಕಂಗಳಿಗೆ ಆಜ್ಞಾಕರ್ತೃವಾಹನು.
ಹನ್ನೆರಡನೆಯ ವರ್ಷದಲ್ಲಿ
ಶಿವನ ಸಮಾನವಾಗಿ ಸೃಷ್ಟಿಸ್ಥಿತಿಲಯಂಗಳಂ ಮಾಡುತಿರ್ಪುದೇ
ಹಠಯೋಗಸಿದ್ಧಿ ನೋಡಾ ಅಖಂಡೇಶ್ವರಾ./474
ಬಾಯೊಳಗೆ ಬಾಯನಿಕ್ಕಿ
ಎದೆಗೆ ಎದೆಯ ತರ್ಕಿಸಿ
ಮೈಗೆ ಮೈಯ ಹೊಂದಿಸಿ ಕೂಡಿದ
ಅಖಂಡೇಶ್ವರನ ಸುಖವು
ಜೇನುಸಕ್ಕರೆ ಸವಿದಂತಾಯಿತ್ತು ನೋಡಿರವ್ವಾ. /475
ಬಾರನೇತಕವ್ವಾ ನಮ್ಮನೆಯಾತ ?
ತೋರನೇತಕವ್ವಾ ತನ್ನ ದಿವ್ಯರೂಪವ ?
ಬೀರನೇತಕವ್ವಾ ಅತಿಸ್ನೇಹವ ?
ಇನ್ನೆಂತು ಸೈರಿಸುವೆನವ್ವಾ.
ಹೇಗೆ ತಾಳುವೆನವ್ವಾ.
ತನು ತಾಪಗೊಳ್ಳುತ್ತಿದೆ, ಮನ ತಲ್ಲಣವಾಗುತ್ತಿದೆ.
ಅಖಂಡೇಶ್ವರನೆಂಬ ನಲ್ಲನ ತೋರಿಸಿ
ಎನ್ನ ಪ್ರಾಣವನುಳುಹಿಕೊಳ್ಳಿರವ್ವಾ. /476
ಬಾರಯ್ಯ ಬಾರಯ್ಯ ಗಂಡನೆ,
ಇನ್ನೇತಕೆ ನಾಚುವೆ ನಾನು ಸರಿಮಿಂಡಿಯಾದ ಬಳಿಕ.
ಇನ್ನೇತಕೆ ದಿನಕಾಲ ಹೋಗಲಾಡುವೆ,
ತುಂಬಿದ ಜವ್ವನ ಸಡಿಲಿಹೋಗುತ್ತಿದೆ.
ಸುರತಸಂಭ್ರಮದ ಚುಂಬನಂಗಳಿಂದ ಕೂಡಿ
ಪರಿಣಾಮಗೊಳ್ಳಯ್ಯಾ ಎನ್ನ ಅಖಂಡೇಶ್ವರಾ. /477
ಬಾರಯ್ಯ ಬಾರಯ್ಯ ಗಂಡನೆ,
ಎನ್ನ ಘ್ರಾಣವೆಂಬ ಭಾಜನದಲ್ಲಿ
ಸುಗಂಧಪದಾರ್ಥವೆಂಬ ಸುಯಿಧಾನವ ಗಡಣಿಸಿ
ನಿಮಗೆ ಉಣಲಿಕ್ಕುವೆ.
ಬಾರಯ್ಯ ಬಾರಯ್ಯ ಗಂಡನೆ,
ಎನ್ನ ಜಿಹ್ವೆಯೆಂಬ ಭಾಜನದಲ್ಲಿ
ಸುರುಚಿಪದಾರ್ಥವೆಂಬ ಸುಯಿಧಾನವ ಗಡಣಿಸಿ
ನಿಮಗೆ ಉಣಲಿಕ್ಕುವೆ.
ಬಾರಯ್ಯ ಬಾರಯ್ಯ ಗಂಡನೆ,
ಎನ್ನ ನೇತ್ರವೆಂಬ ಭಾಜನದಲ್ಲಿ
ಸುರೂಪುಪದಾರ್ಥವೆಂಬ ಸುಯಿಧಾನವ ಗಡಣಿಸಿ
ನಿಮಗೆ ಉಣಲಿಕ್ಕುವೆ.
ಬಾರಯ್ಯ ಬಾರಯ್ಯ ಗಂಡನೆ,
ಎನ್ನ ತ್ವಕ್ಕೆಂಬ ಭಾಜನದಲ್ಲಿ
ಸುಸ್ಪರ್ಶನಪದಾರ್ಥವೆಂಬ ಸುಯಿಧಾನವ ಗಡಣಿಸಿ
ನಿಮಗೆ ಉಣಲಿಕ್ಕುವೆ.
ಬಾರಯ್ಯ ಬಾರಯ್ಯ ಗಂಡನೆ,
ಎನ್ನ ಶ್ರೋತ್ರವೆಂಬ ಭಾಜನದಲ್ಲಿ
ಸುಶಬ್ದಪದಾರ್ಥವೆಂಬ ಸುಯಿಧಾನವ ಗಡಣಿಸಿ
ನಿಮಗೆ ಉಣಲಿಕ್ಕುವೆ.
ಬಾರಯ್ಯ ಬಾರಯ್ಯ ಗಂಡನೆ,
ಎನ್ನ ಮನವೆಂಬ ಭಾಜನದಲ್ಲಿ
ನೆನಹೆಂಬ ಸುಯಿಧಾನವ ಗಡಣಿಸಿ
ಉಣಲಿಕ್ಕುವೆನಯ್ಯಾ ನಿಮಗೆ ಅಖಂಡೇಶ್ವರಾ./478
ಬಾರಯ್ಯ ಬಾರಯ್ಯ ಭಕ್ತದೇಹಿಕದೇವನೆ.
ಬಾರಯ್ಯ ಬಾರಯ್ಯ ಭಕ್ತವತ್ಸಲನೆ.
ಬಾರಯ್ಯ ಬಾರಯ್ಯ ಭಕ್ತಜನಪ್ರಿಯನೆ.
ಬಾರಯ್ಯ ಬಾರಯ್ಯ ಭಕ್ತಜನಬಂಧುವೆ.
ಬಾರಯ್ಯ ಬಾರಯ್ಯ ಭಕ್ತಜನ ಮನೋವಲ್ಲಭನೆ.
ಬಾರಯ್ಯ ಬಾರಯ್ಯ ಅಖಂಡೇಶ್ವರಾ
ನೀ ಎನ್ನ ಪರಮ ಹೃದಯಮಂದಿರಕ್ಕೆ./479
ಬಾಳೆಯ ಎಲೆಯ ಮೇಲೆ ತುಪ್ಪವ ತೊಡೆದಂತೆ
ಒಪ್ಪವಿಟ್ಟು ವಚನವ ನುಡಿದೆನಲ್ಲದೆ,
ನಡೆಯಲ್ಲಿ ಒಪ್ಪವಿಟ್ಟು ನಡೆಯಲಿಲ್ಲವಯ್ಯ ನಾನು.
ನುಡಿಹೀನ, ನಡೆತಪ್ಪುಗ, ಜಡದೇಹಿ ಕಡುಪಾತಕಂಗೆ,
ಒಡೆಯ ಅಖಂಡೇಶ್ವರಲಿಂಗವು
ಸ್ವಪ್ನದಲ್ಲಿ ಸುಳಿಯಲಿಲ್ಲವಯ್ಯ ಎನಗೆ./480
ಬೀಜದ ಮರೆಯಲ್ಲಿ ಅಡಗಿರ್ದ ಅಂಕುರವು
ಬಹಿರ್ಗತವಾದಂತೆ,
ಮುಗಿಲಮರೆಯಲ್ಲಿ ಅಡಗಿರ್ದ
ಕ್ಷಣಿತವು ಸ್ಫುರಿಸಿದಂತೆ,
ಎನ್ನ ಮನದ ಮಧ್ಯದಲ್ಲಿ ಅಡಗಿರ್ದ ಮಹಾಘನವು
ತನ್ನ ಲೀಲೆಯಿಂದೆ ತಾನೇ ಉದಯವಾಗಲು
ನಿಮ್ಮ ಆದಿಯನಾದಿಯ ನಿಲವ ಕಂಡೆನಯ್ಯಾ ಅಖಂಡೇಶ್ವರಾ./481
ಬೀಜದಿಂದ ಹುಟ್ಟಿದ ವೃಕ್ಷವು ಬೀಜವ ಹೋಲುವಂತೆ,
ತಾಯಿಯಿಂದ ಹುಟ್ಟಿದ ಮಕ್ಕಳು ತಾಯಿಯ ಹೋಲುವಂತೆ,
ಧಾನ್ಯಗಳಿಂದ ಬೆಳೆದ ಬೆಳಸು ಧಾನ್ಯಂಗಳ ಹೋಲುವಂತೆ,
ಗುರುವಿನಿಂದ ಹುಟ್ಟಿದ ಶಿಷ್ಯನು ಗುರುರೂಪವಲ್ಲದೆ
ಬೇರೊಂದು ರೂಪವಲ್ಲವಯ್ಯ ಅಖಂಡೇಶ್ವರಾ./482
ಬೀಜದೊಳಗೆ ಅಂಕುರವಿರ್ಪುದು.
ಅಂಕುರದೊಳಗೆ ಬೀಜವಿರ್ಪುದು.
ಅಂಕುರ ಬೀಜವೆಂದು ಹೆಸರು ಎರಡಾದಡೇನು ?
ಒಳಗಿರ್ಪ ಸಾರವು ಒಂದೇ ಆಗಿರ್ಪಂತೆ
ಬಸವಣ್ಣನೆ ಶಿವನು, ಶಿವನೆ ಬಸವಣ್ಣನು.
ಬಸವಣ್ಣ ಶಿವನೆಂಬ ಹೆಸರೆರಡಾದಡೇನು ?
ಅಖಂಡವಸ್ತು ಒಂದೇ ಆದಕಾರಣ,
ನಿಮ್ಮ ಅಖಂಡೇಶ್ವರನೆಂದು ಹೆಸರಿಟ್ಟು ಕರೆದೆನಯ್ಯಾ
ದೇವರದೇವಾ./483
ಬುದ್ಧಿಗೂಡದು ನಿದ್ರೆಬಾರದು ಎನಗೆ, ಸುದ್ದಿ ಹೇಳಿರೆ ಆತಗೆ.
ಸದ್ದಿಲ್ಲದೆ ಎದ್ದು ಹೋದನು ನೋಡಿರೆ,
ಮುದ್ದಿಸಿ ಮುನಿಸು ತಿಳುಪಿ
ಇದ್ದಲ್ಲಿಗೆ ಕರೆದು ತನ್ನಿರೆ ಅಖಂಡೇಶ್ವರನೆಂಬ ಶಿವನ./484
ಬೇಕೆಂಬನಲ್ಲವಯ್ಯ ನಿಮ್ಮ ಶರಣ.
ಬೇಡೆಂಬನಲ್ಲವಯ್ಯ ನಿಮ್ಮ ಶರಣ.
ಲೋಕದ ನಡೆಯಂತೆ ನಡೆಯನಯ್ಯ ನಿಮ್ಮ ಶರಣ.
ಕಾಕುನುಡಿ ಸಟೆ ಕುಟಿಲ ಕುಹಕ ವ್ಯಾಪಾರವ
ಹೊದ್ದನಯ್ಯ ನಿಮ್ಮ ಶರಣ.
ಏಕಲಿಂಗನಿಷ್ಠಾಪರನಾಗಿ ಆವಾವ ಪ್ರಪಂಚವನರಿಯನಯ್ಯ
ನಿಮ್ಮ ಶರಣ ಅಖಂಡೇಶ್ವರಾ./485
ಬ್ರಹ್ಮ ದೇವನಾದಡೆ
ಹಮ್ಮಿನಿಂದ ಹೋದ ತಲೆಯ
ಗಮ್ಮನೆ ಪಡೆಯಲರಿಯನೇತಕೊ ?
ವಿಷ್ಣು ದೇವನಾದಡೆ ಸುಟ್ಟು ಹೋದ ಮನ್ಮಥನ ಪ್ರಾಣವ
ನೆಟ್ಟನೆ ಕೊಡಲರಿಯನೇತಕೊ ?
ಇದನರಿಯದೆ,
ಹುಟ್ಟಿಸುವಾತ ಬ್ರಹ್ಮ ರಕ್ಷಿಸುವಾತ ವಿಷ್ಣುವೆಂದು ನುಡಿವ,
ಭ್ರಷ್ಟ ವಿಪ್ರರೆಂಬ ಹೊಲೆಮನದ ಹಾರುವರ
ಮೆಟ್ಟಿ ಮೆಟ್ಟಿ ತುಳಿತುಳಿದು ಹೊಟ್ಟೆ ಹರಿಯಲೊದೆಯೆಂದಾತ
ನಮ್ಮ ಅಖಂಡೇಶ್ವರನು./486
ಬ್ರಾಹ್ಮಣನ ದರ್ಶನ ಪಾಪದ ಪುಂಜ ನೋಡಾ.
ಬ್ರಾಹ್ಮಣನಿಗೆ ಕೊಟ್ಟದಾನ ಅಪಾತ್ರ ದೋಷದಾರಿದ್ರ್ಯತೆ ನೋಡಾ.
ಶಿವಭಕ್ತಿಯಿಲ್ಲದ ಬ್ರಾಹ್ಮಣನಿಗೆ ವಂದನೆಯ ಮಾಡಿದರೆ
ಮುಂದೆ ಶುನಿಶೂಕರ ಬಸಿರಲ್ಲಿ ಬಪ್ಪುದು ತಪ್ಪದು ನೋಡಾ.
ಅಂದೆಂತೆಂದೊಡೆ :
“ಶಿವಭಕ್ತಿವಿಹೀನಸ್ಯ ಬ್ರಾಹ್ಮಣಸ್ಯ ತು ದರ್ಶನಮ್ |
ಕೃತ್ವಾ ತು ಮಾನವೋ ಯಾತಿ ಕೀಟಜನ್ಮ ಪದೇ ಪದೇ ||”
ಎಂದುದಾಗಿ, ಇಂತಪ್ಪ ಹರಿಕುಲದ ಹಾರುವರ ಮುಖವ
ನೋಡಲಾಗದಯ್ಯ ಅಖಂಡೇಶ್ವರಾ./487
ಬ್ರಾಹ್ಮಣನಾಗಲಿ ಕ್ಷತ್ರಿಯನಾಗಲಿ ವೈಶ್ಯನಾಗಲಿ ಶೂದ್ರನಾಗಲಿ
ಆವಜಾತಿಯಲ್ಲಿ ಹುಟ್ಟಿದಾತನಾದಡಾಗಲಿ,
ಗುರುಕಾರುಣ್ಯವ ಪಡೆದು ಅಂಗದ ಮೇಲೆ ಲಿಂಗಧಾರಣವಾಗಿ
ಆಚಾರಕ್ರಿಯಾಸಂಪನ್ನನಾದ ಮಹಾತ್ಮನೇ ಮೂರುಲೋಕಕ್ಕಧಿಕ ನೋಡಾ !
ಅದೆಂತೆಂದೊಡೆ :
“ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಶೂದ್ರೋ ವಾಪ್ಯಂತ್ಯಜೋಪಿ ವಾ |
ಶಿವಭಕ್ತಃ ಸದಾ ಪೂಜ್ಯಃ ಸರ್ವಾವಸ್ಥಾಂ ಗತೋಪಿ ವಾ ||”
ಎಂದುದಾಗಿ,
ಇಂತಪ್ಪ ಪರಮ ಶಿವಭಕ್ತನು ಶರಣ ನೋಡಾ ಅಖಂಡೇಶ್ವರಾ./488
ಭಕ್ತನ ನಡೆ ಶುದ್ಧ , ಭಕ್ತನ ನುಡಿ ಶುದ್ಧ ,
ಭಕ್ತನ ತನು ಶುದ್ಧ , ಭಕ್ತನ ಮನ ಶುದ್ಧ ,
ಭಕ್ತನ ಭಾವ ಶುದ್ಧ , ಭಕ್ತನ ಸರ್ವಕ್ರಿಯೆಯೆಲ್ಲ ಶುದ್ಧ
ಅಖಂಡೇಶ್ವರಾ, ನೀ ಒಲಿದ ಸದ್ಭಕ್ತನ
ಕಾಯವೇ ಕೈಲಾಸವಯ್ಯ./489
ಭಕ್ತನಾಗಬೇಕು ಭವವ ಹರಿದು.
ಭಕ್ತನಾಗಬೇಕು ಸಕಲ ಪ್ರಪಂಚವ ಮರೆದು.
ಭಕ್ತನಾಗಬೇಕು ಆಶಾಪಾಶವ ಹರಿದು.
ಭಕ್ತನಾಗಬೇಕು ನಮ್ಮ ಅಖಂಡೇಶ್ವರನ ದಿವ್ಯಪಾದವ ನಂಬಿ./490
ಭಕ್ತನಾದಡೆ ಚಿತ್ತ ನಿಶ್ಚಲವಾಗಿ ಸದ್ಭಕ್ತಿ ನೆಲೆಗೊಂಡಿರಬೇಕು.
ಮಹೇಶ್ವರನಾದಡೆ ಸಕಲಕರ್ಮವು ಕ್ಷಯವಾಗಿರಬೇಕು.
ಪ್ರಸಾದಿಯಾದಡೆ ಶಿವಜ್ಞಾನಪರಾಯಣನಾಗಿರಬೇಕು.
ಪ್ರಾಣಲಿಂಗಿಯಾದಡೆ ನಿತ್ಯಾನಿತ್ಯವಿಚಾರವನರಿದಿರಬೇಕು.
ಶರಣನಾದಡೆ ಗರ್ವ ಅಹಂಕಾರದ ಮೊಳೆಯ ಮುರಿದಿರಬೇಕು.
ಐಕ್ಯನಾದಡೆ ಭಿನ್ನಭಾವವನಳಿದು ಮಹಾಜ್ಞಾನದೊಳಗೆ ಓಲಾಡಬೇಕು.
ಅದೆಂತೆಂದೊಡೆ :
“ಭಕ್ತಿಃ ಕರ್ಮಕ್ಷಯೋ ಬುದ್ಧಿರ್ವಿಚಾರೋ ದರ್ಪಸಂಕ್ಷಯಃ |
ಸಮ್ಯಗ್ಜ್ಞಾನಮಿತಿ ಪ್ರಾಜ್ಞೆ ಃ ಸ್ಥಲಷಟ್ಕಮುದಾಹೃತಮ್ ||”
ಎಂದುದಾಗಿ,
ಇಂತಪ್ಪ ಷಟ್ಸ್ಥಲವೇದ್ಯರಾದ ಮಹಾಶರಣರ ಒಕ್ಕುಮಿಕ್ಕ
ಪ್ರಸಾದವನೇ ಕರುಣಿಸಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ./491
ಭಕ್ತನಾದಡೆ ನಿರ್ವಂಚಕಭಾವದಿಂದೆ
ತ್ರಿವಿಧಕ್ಕೆ ತ್ರಿವಿಧಪದಾರ್ಥವನರ್ಪಿಸಬೇಕು.
ಮಹೇಶ್ವರನಾದಡೆ ತ್ರಿವಿಧವ ಬಯಸದಿರಬೇಕು.
ಪ್ರಸಾದಿಯಾದಡೆ ಹುಲ್ಲುಕಡ್ಡಿ ದರ್ಪಣ ಮೊದಲಾದ
ಸಕಲಪದಾರ್ಥಂಗಳ ಲಿಂಗಕ್ಕೆ ಕೊಟ್ಟಲ್ಲದೆ ಕೊಳ್ಳದಿರಬೇಕು.
ಪ್ರಾಣಲಿಂಗಿಯಾದಡೆ ಪ್ರಪಂಚ ನಾಸ್ತಿಯಾಗಿರಬೇಕು.
ಶರಣನಾದಡೆ ಸಕಲ ಭೋಗೋಪಭೋಗಂಗಳನು
ತಾನಿಲ್ಲದೆ ಲಿಂಗಮುಖವನರಿದು ಕೊಡಬೇಕು.
ಐಕ್ಯನಾದಡೆ ಸರ್ವವೂ ತನ್ನೊಳಗೆಂದರಿದು
ಸರ್ವರೊಳಗೆಲ್ಲ ತನ್ನನೆ ಕಾಣಬೇಕು.
ಇಂತೀ ಷಟ್ಸ್ಥಲದ ಅನುವನರಿದು ಆಚರಿಸುವ
ಮಹಾಶರಣರ ಆಳಿನ ಆಳು ನಾನಯ್ಯ ಅಖಂಡೇಶ್ವರಾ./492
ಭಕ್ತನಾದಡೆ ಲಿಂಗನಿಷ್ಠಾಪರನಾಗಿರಬೇಕು.
ಭಕ್ತನಾದಡೆ ಜಂಗಮವೆ ಪ್ರಾಣವಾಗಿರಬೇಕು.
ಭಕ್ತನಾದಡೆ ಅರ್ಥಪ್ರಾಣಾಭಿಮಾನಂಗಳು
ಶಿವನ ಕೂಡಿರಬೇಕು ನೋಡಾ ಅಖಂಡೇಶ್ವರಾ./493
ಭಕ್ತಿಗೆ ಮುಖವಾದಾತನೇ ಸದ್ಭಕ್ತನು.
ಯುಕ್ತಿಗೆ ವಿಚಾರದಲ್ಲಿದ್ದಾತನೇ ಸದ್ಭಕ್ತನು.
ಮುಕ್ತಿಗೆ ಮುಂದುವರಿದು ನಡೆವಾತನೇ ಸದ್ಭಕ್ತನು.
ನಮ್ಮ ಅಖಂಡೇಶ್ವರನ ಮಚ್ಚಿಸುವಾತನೇ
ಮಹಾ ಸದ್ಭಕ್ತನು./494
ಭಕ್ತಿಯ ಮರ್ಮವನರಿಯೆ, ಜ್ಞಾನದ ಕುರುಹನರಿಯೆ,
ವೈರಾಗ್ಯದ ದೃಢವನರಿಯೆ, ವಿರತಿಯ ಹೊಲಬನರಿಯೆ,
ಮುಕ್ತಿಯ ಪಥವನರಿಯೆ, ಭಕ್ತಿ ಜ್ಞಾನ ವೈರಾಗ್ಯ ವಿರತಿಗಳಿಂದೆ
ಮುಕ್ತರಾದ ಮಹಾಶರಣರ ತೊತ್ತಿನ ಮಗ ನಾನಯ್ಯ
ಅಖಂಡೇಶ್ವರಾ./495
ಭಕ್ತಿಯ ಸ್ಥಳಕುಳವನರಿಯದೆ ಬರಿದೆ ಭಕ್ತರೆನಿಸಿಕೊಂಬ
ಮುಕ್ತಿಗೇಡಿಗಳನೇನೆಂಬೆನಯ್ಯ.
ಅನಾದಿಪರಶಿವನು ತನ್ನ ಲೀಲೆಯಿಂದೆ
ತಾನೆ ಗುರುಲಿಂಗಜಂಗಮವಾಗಿ ಬಂದನೆಂದರಿದು
ತನುಮನಧನವ ಸಮರ್ಪಿಸಿ ಘನಮುಕ್ತಿಯ ಪಡೆಯಲರಿಯದೆ,
ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ
ಮಲತ್ರಯಂಗಳನೆ ಭುಂಜಿಸಿ,
ಸಂಸಾರವಿಷಯರಸವೆಂಬ ನೀರನೆ ಕುಡಿದು,
ಮಾಯಾಮೋಹವೆಂಬ ಮದವು ತಲೆಗೇರಿ
ಸೊಕ್ಕಿದೆಕ್ಕಲನಂತೆ ತಿರುಗುವ ನರಕಜೀವಿಗಳ
ಭಕ್ತರೆನಬಹುದೇ ಅಖಂಡೇಶ್ವರಾ ?/496
ಭಯವಿಲ್ಲದ ಪ್ರಸಾದ, ನಿರ್ಭಯವಿಲ್ಲದ ಪ್ರಸಾದ,
ಶೂನ್ಯವಿಲ್ಲದ ಪ್ರಸಾದ, ನಿಶ್ಶೂನ್ಯವಿಲ್ಲದ ಪ್ರಸಾದ,
ಸುರಾಳವಿಲ್ಲದ ಪ್ರಸಾದ, ನಿರಾಳವಿಲ್ಲದ ಪ್ರಸಾದ,
ಅಖಂಡೇಶ್ವರನೆಂಬ ಅನಾದಿಯಿಂದತ್ತತ್ತವಾದ
ಅನುಪಮ ಪ್ರಸಾದದೊಳಗೆ ಮುಳುಗಿ ನಾನೆತ್ತ ಹೋದೆನೆಂದರಿಯೆ./497
ಭವಕ್ಕೆ ಬೀಜವಾದುದು ತನುವೊ ? ಮನವೊ ?
ಎಂದು ವಿವರಿಸಿ ನೋಡಲು ಮನವೆ ಕಾರಣವಾಗಿಪ್ಪುದರಿಂದೆ,
ಈ ಕೆಟ್ಟಮನದ ಸಂಗದಿಂದೆ ಮತ್ರ್ಯಲೋಕದಲ್ಲಿ ಹುಟ್ಟಿ
ತಾಪತ್ರಯಾಗ್ನಿಯಿಂದೆ ಕಂದಿ ಕುಂದಿ ನೊಂದು ಬೆಂದೆನಯ್ಯ.
ಈ ಮನದ ಸಂಗದಿಂದೆ ಭವಭವಂಗಳಲ್ಲಿ ತೊಳಲಿ ಬಳಲಿದೆನಯ್ಯ.
ಈ ಮನದ ಸಂಗದಿಂದೆ ಅನಂತ ಮರವೆಯ
ಚೋಹಂಗಳಲ್ಲಿ ಸೆರೆಸಿಕ್ಕಿದೆನಯ್ಯ.
ಈ ಮನದ ಸಂಗವ ಬಿಡಿಸಿ ನಿಮ್ಮ ನೆನಹಿನ ಸಂಗದಲ್ಲಿರಿಸಿ
ಸಲಹಯ್ಯ ಎನ್ನ ಅಖಂಡೇಶ್ವರಾ./498
ಭಾವವಿಲ್ಲದ ಬಯಲಮೂರ್ತಿಯಾದವ ಭಕ್ತ.
ಆ ಭಕ್ತನ ಹೃದಯದಲ್ಲಿ ಮೂರ್ತಿಗೊಂಡಾತ ಜಂಗಮ.
ಆ ಜಂಗಮದ ಅಂಗೈಯೊಳಿರ್ಪುದು ಲಿಂಗ.
ಆ ಲಿಂಗದ ಗರ್ಭದೊಳಗೆ ಸಕಲ
ಸ್ಥಲಕುಳಂಗಳಿರ್ಪವು ನೋಡಾ ಅಖಂಡೇಶ್ವರಾ./499
ಭಾವವಿಲ್ಲದ ಬಯಲು, ಜೀವವಿಲ್ಲದ ಬಯಲು,
ಮನವಿಲ್ಲದ ಬಯಲು, ಮನನವಿಲ್ಲದ ಬಯಲು,
ಅಖಂಡೇಶ್ವರನೆಂಬ ಮಹಾಬಯಲೊಳಗೆ
ನೆನಹಡಗಿ ನಿಷ್ಪತ್ತಿಯಾಗಿರ್ದೆನು. /500