Categories
ಶರಣರು / Sharanaru

ಸಂಗಮೇಶ್ವರ ಅಪ್ಪಣ್ಣ

ಅಂಕಿತ: ಬಸವಪ್ರಿಯ ಕೂಡಲ ಚೆನ್ನಸಂಗಮದೇವ

ಹೆಸರಿನ ಹಿಂದೆ ಸೇರಿದ ‘ಸಂಗಮೇಶ್ವರ’ (ಕೂಡಲಸಂಗಮ) ಈತನ ಸ್ಥಳವಾಗಿರಬೇಕು. ಕಾಲ-೧೧೬೦. ವಚನಗಳಲ್ಲಿ ಉಕ್ತವಾದ ಹೇರಳ ಸಂಸ್ಕೃತ ಉದ್ಧರಣೆಗಳು ಈತನ ಪಾಂಡಿತ್ಯವನ್ನು ಸಾಬೀತುಪಡಿಸುತ್ತವೆ.

‘ಬಸವಪ್ರಿಯ ಕೂಡಲಚೆನ್ನಸಂಗಮದೇವ’ ಅಂಕಿತದಲ್ಲಿ ೧೦೨ ವಚನಗಳು ದೊರೆತಿವೆ. ಎಲ್ಲವೂ ತಾತ್ವಿಕವಾಗಿವೆ. ಅನ್ಯಮತ ಖಂಡನೆ, ಶಿವಪಾರಮ್ಯ ಸ್ಥಾಪನೆಗೆ ವಿಶೇಷ ಸ್ಥಾನ ಸಂದಿದೆ. ಶರಣಸ್ತುತಿ, ಶೂನ್ಯಸಿಂಹಾಸನ, ಅನುಭವ ಮಂಟಪಗಳ ಉಲ್ಲೇಖ, ಪ್ರಭುದೇವರು ಕಲ್ಯಾಣಕ್ಕೆ ಬಂದ ಪ್ರಸಂಗ ಮತ್ತು ಆರೋಗಣೆ ನಡೆಸಿದ ಸಂದರ್ಭಗಳನ್ನು ಪ್ರಸ್ತಾಪಿಸುವುದು ಮಹತ್ವದ ಅಂಶಗಳೆನಿಸಿವೆ. ತುಂಬ ದೀರ್ಘವಾಗಿದ್ದು ಗದ್ಯಲಕ್ಷಣವನ್ನು ಹೊಂದಿದ ರಚನೆಗಳ ಜೊತೆಗೆ ಮುಕ್ತಕ ರೂಪದ ವಚನಗಳೂ ಸಮಾವೇಶಗೊಂಡಿವೆ.

ಶಾಸ್ತ್ರಜ್ಞಾನ ಸಂಗಮೇಶ್ವರ ಅಪ್ಪಣ್ಣನಿಗೆ ಅಪಾರವಾಗಿದೆ. ಸಂಸ್ಕೃತ ಶ್ಲೋಕಗಳನ್ನು ಸಮಯೋಚಿತವಾಗಿ ಬಳಸಿ ವಿವರಣೆ ನೀಡಿರುವನು. ತರ್ಕ ಶಕ್ತಿ ಅಗಾಧವಾಗಿದೆ. ಲಿಂಗಾಯತ ತತ್ತ್ವ ಪ್ರತಿಪಾದನೆ ವಿಶೇಷವಾಗಿ ಕಂಡು ಬರುತ್ತದೆ. ಶಿವಪಾರಮ್ಯ, ಅನ್ಯಮತ ಖಂಡನೆ, ಬ್ರಾಹ್ಮಣರ ಕರ್ಮಠತನದ ಖಂಡನೆ, ಅಷ್ಟಾವರಣ, ಪಂಚಾಚಾರಗಳ ವಿವರಣೆ ಇವನ ವಚನಗಳಲ್ಲಿ ಬಂದಿದೆ.