Categories
ವಚನಗಳು / Vachanagalu

ಷಣ್ಮುಖಸ್ವಾಮಿ ವಚನಗಳು

ಭಾವವೇ ಬ್ರಹ್ಮವಾದ ಬಳಿಕ
ಇನ್ನಾವ ವೇಷವ ತೊಡಲೇತಕೋ ?
ತನುವೇ ಲಿಂಗವಾದ ಬಳಿಕ
ಆವ ಫಲಪದದ ಹಂಗೇತಕೊ ?
ಮನದಲ್ಲಿ ತನಗೆ ತಾನೆ ಸ್ವಾತ್ಮಜ್ಞಾನ ಉದಯವಾದ ಬಳಿಕ
ಇನ್ನು ಹಲವು ಶಾಸ್ತ್ರವನೋದಿ ತಿಳಿಯಬೇಕೆಂಬ ಸಂದೇಹವೇತಕೊ ?
ಒಳಹೊರಗೆ ಸರ್ವಾಂಗದಲ್ಲಿ ಮಹಾಜ್ಞಾನವೆ ತುಂಬಿದ ಬಳಿಕ
ಮುಂದೆ ಮುಕ್ತಿಯ ಪಡೆಯಬೇಕೆಂಬ ಭ್ರಾಮಕವೇತಕೊ ?
ಇದು ಸತ್ಯದ ನಡೆಯಲ್ಲ ; ಶರಣರ ಮೆಚ್ಚಲ್ಲ ;
ನಮ್ಮ ಅಖಂಡೇಶ್ವರನ ಒಲುಮೆ ಮುನ್ನವೆ ಅಲ್ಲ./501
ಭಾಷೆಗಳ್ಳಗೇಕೊ ಸಹಭೋಜನ ?
ದ್ವೇಷಗುಣಿಗೇಕೊ ಸಹಭೋಜನ ?
ವೇಷಧಾರಿಗೇಕೊ ಸಹಭೋಜನ ?
ಹುಸಿಹುಂಡಗೇಕೊ ಸಹಭೋಜನ ?
ಮೋಸ ಮರವೆಯಿಂದೆ
ಈಶನೊಡನೆ ಸಹಭೋಜನ ಮಾಡಿದಡೆ
ಭವದಲ್ಲಿ ಘಾಸಿಯಾಗುತಿರ್ಪರು ನೋಡಾ ಅಖಂಡೇಶ್ವರಾ./502
ಮಡದಿ ಮಕ್ಕಳು, ಪಡೆದ ದ್ರವ್ಯವು ಎನ್ನೊಡವೆ ಎಂದು
ನಚ್ಚಬೇಡಿರೋ ಎಲೆ ಹುಚ್ಚು ಮಾನವರಿರಾ !
ಅವು ನಿಮ್ಮೊಡವೆಯಾದರೆ,
ನೀವು ಮಡಿದು ಹೋಗುವಾಗ ನಿಮ್ಮೊಡನೆ ಬಪ್ಪವೇ ಹೇಳಿರೋ ?
“ಅಸ್ಥಿರ ಜೀವನಂ ಲೋಕೇ ಅಸ್ಥಿರಂ ಧನಯೌವನಂ |
ಅಸ್ಥಿರಾಃ ಪುತ್ರದಾರಾಶ್ಚ ಸತ್ಯಧರ್ಮಃ ಪುನಃ ಸ್ಥಿರಃ||”
ಇದನರಿತು ತಡೆಯದೆ ಮೃಡನ ಸೇವೆಯ ಮಾಡಿದರೆ
ಕಡೆ ಮೊದಲಿಲ್ಲದ ಪದವು ದೊರೆಕೊಂಬುದು ನೋಡಿರೋ
ನಮ್ಮ ಅಖಂಡೇಶ್ವರಲಿಂಗದಲ್ಲಿ./503
ಮಡುವಿನಗ್ಗಣಿ, ಗಿಡದ ಹೂವು, ಒಡಲಿಗೆ ಅನ್ನ,
ನುಡಿನುಡಿಗೆ ಮೃಡನ ಸ್ಮರಣೆ ಇರಲು,
ಜಡರ ಹಂಗೇಕೆ ಹೇಳಾ.
ಶಿವಧ್ಯಾನ ಶಿವಚಿಂತೆ ಭಿಕ್ಷಾಹಾರ
ಏಕಾಂತವಾಸಿಯ ಮಾಡಯ್ಯ ಎನ್ನ ಅಖಂಡೇಶ್ವರಾ./504
ಮತ್ತಂ, ಶಿರಸ್ಸಿನ ಮೇಲುಭಾಗದ ಹನ್ನೆರಡಂಗುಲಪ್ರಮಾಣಿನಲ್ಲಿ
ರಕ್ತ ಪೀತಾದಿ ಸಕಲವರ್ಣಾಕಾರಮಿಲ್ಲದ
ಶುದ್ಧಸಾತ್ವಿಕಮಾದ ಬೆಳಗಿನೊಬ್ಬುಳಿಯನು ಲಕ್ಷಿಪುದೇ
ಬಹಿರ್ಲಕ್ಷ್ಯವಯ್ಯಾ ಅಖಂಡೇಶ್ವರಾ./505
ಮತ್ತೆ ಕೇಳಿರೋ, ಸತ್ಪಾತ್ರಜಂಗಮಕ್ಕೆ ಇತ್ತ ಪುಣ್ಯವು
ಸಾವಿರಕೊಡವಾಲು ದಾನದ ಫಲವು,
ಮಲಹರಜಂಗಮಕ್ಕೆ ತುತ್ತು ಭಿಕ್ಷವ ನೀಡಿದಲ್ಲುಂಟು ನೋಡಿರೋ!
ನೂರುಕೊಡ ತುಪ್ಪದ ದಾನದ ಫಲವು,
ಮಲಹರಜಂಗಮಕ್ಕೆ ತುತ್ತು ಭಿಕ್ಷವ ನೀಡಿದಲ್ಲುಂಟು ನೋಡಿರೋ!
ಕೋಟಿಯಜ್ಞಂಗಳ ಮಾಡಿದ ಫಲವು,
ಮಲಹರಜಂಗಮಕ್ಕೆ ತುತ್ತು ಭಿಕ್ಷವ ನೀಡಿದಲ್ಲುಂಟು ನೋಡಿರೋ !
ಅದೆಂತೆಂದೊಡೆ :
“ಕ್ಷೀರಕುಂಭಸಹಸ್ರೇಣ ಘೃತಕುಂಭಶತೈರಪಿ|
ಭಸ್ಮಾಂಗಿಭಿಕ್ಷಮಾತ್ರೇಣ ಕೋಟಿಯಜ್ಞಫಲಂ ಭವೇತ್ ||”
ಎಂದುದಾಗಿ,
ಜಂಗಮಕ್ಕೆ ನೀಡಿ ನಮ್ಮ ಅಖಂಡೇಶ್ವರಲಿಂಗವನೊಲಿಸಿರೋ./506
ಮನ ಮಹಾಘನವಾಯಿತ್ತು.
ಭಾವ ನಿರ್ಭಾವವಾಯಿತ್ತು.
ಖಂಡಿತ ಅಖಂಡಿತವಾಯಿತ್ತು.
ಬೆರಗು ನಿಬ್ಬೆರಗಾಯಿತ್ತು.
ನೆನಹು ನಿಷ್ಪತ್ತಿಯಾಯಿತ್ತು.
ಅರುಹು ಕರಗಿ ನಿರವಯಲಾಗಿತ್ತಾಗಿ
ಅಖಂಡೇಶ್ವರನೆಂಬ ಶಬ್ದ ಮುಗ್ಧವಾಯಿತ್ತು./507
ಮನಕ್ಕೆ ಮನೋಹರವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ.
ಕಂಗಳಿಗ ಮಂಗಳವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ.
ಪ್ರಾಣಕ್ಕೆ ಪರಿಣಾಮವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ.
ತನುವಿಂಗೆ ತರಹರವಾದ ದೇವನ ಕಂಡೆನಯ್ಯ ಎನ್ನ ಕರಸ್ಥಲದಲ್ಲಿ.
ಅಗಮ್ಯ ಅಗೋಚರನಾದ ಅಖಂಡೇಶ್ವರನೆಂಬ ಲಿಂಗಯ್ಯನ
ಕಂಡೆನಯ್ಯ ಎನ್ನ ಕರಸ್ಥಲದಲ್ಲಿ./508
ಮನದಲ್ಲಿ ಆಸೆ ಮೊಳೆದೋರಿ ಮತ್ತೆ ಮತ್ತೆ ಬೇಕೆಂಬಲ್ಲಿ
ಎನ್ನ ಮನ ಕಿರಿದಾಯಿತ್ತು.
ನುಡಿಯಲ್ಲಿ ಉಪಾಧಿಕೆ ಮೊಳೆದೋರಿ
ಸರ್ವರನು ಕೊಡು ಕೊಡು ಎಂದು ಬೇಡಿದಲ್ಲಿ
ಎನ್ನ ನುಡಿ ಕಿರಿದಾಯಿತ್ತು.
ಲಿಂಗದ ನೆನಹ ಜಂಗಮದ ಸೇವೆಯ-
ತೊರೆದು ಅಂಗವಿಕಾರಕ್ಕೆ ಹರಿದಲ್ಲಿ
ಎನ್ನ ನಡೆ ಕಿರಿದಾಯಿತ್ತು.
ಇಂತೀ ತ್ರಿಕರಣಶುದ್ಧವಿಲ್ಲದೆ ಅಬದ್ಧಪಾಪಿ
ಚಾಂಡಾಲ ದ್ರೋಹಿಗೆ
ಅಖಂಡೇಶ್ವರನು ಎಂತೊಲಿವನೊ ಎನಗೆ?/509
ಮನದಲ್ಲಿ ಒಂದು, ಮಾತಿನಲ್ಲಿ ಎರಡಾಗಿ
ನುಡಿವನಲ್ಲ ಶರಣ.
ನೀತಿಗೆಟ್ಟು ನಿಜವ ಬಿಟ್ಟು ನಡೆವನಲ್ಲ ಶರಣ.
ಭೂತದೇಹಿಯಂತೆ ಸೋತು ಸುಖದಲ್ಲಿ ಬೀಳುವನಲ್ಲ ಶರಣ.
ಜಾತಿಸೂತಕವಿಡಿದು ಹೊಡೆದಾಡಿ
ಮಡಿದು ಹೋಗುವನಲ್ಲ ಶರಣ ನೋಡಾ
ಅಖಂಡೇಶ್ವರಾ./510
ಮನದಲ್ಲಿ ನಂಬಿಗೆ, ಮಾತಿನಲ್ಲಿ ಕಿಂಕುರ್ವಾಣ ಬಿಡದೆ
ಲಿಂಗ ಜಂಗಮ ಒಂದೇ ಎಂದು ಭಾವಿಸಿ
ಪೂಜಿಸುವಾತನೇ ಸದ್ಭಕ್ತನು ನೋಡಾ
ಅಖಂಡೇಶ್ವರಾ./511
ಮನದೊಡೆಯ ಮನವ ನೋಡುವೆನೆಂದು
ನಾಲ್ದೆಸೆಯಲ್ಲಿ ಭಯವನೊಡ್ಡಿದಡೆ
ಹೆದರದಿರು ಮನವೆ, ಹೆದರಿ ಹಿಮ್ಮೆಟ್ಟದಿರು ಮನವೆ.
ಕಳವಳಗೊಳ್ಳದೆ ಸಂಚಲವಳಿದು ಅತಿ ಕಲಿವಂತನಾದೆಯಾದಡೆ
ಅಘಹರ ಅಖಂಡೇಶ್ವರ ನಗುತ ಬಂದೆತ್ತಿಕೊಂಡು ಮುದ್ದಾಡಿ
ತನ್ನೊಳಗಿಟ್ಟುಕೊಂಬನು ಕೇಳಾ ಎಲೆ ಮನವೆ./512
ಮನವ ನಿಲಿಸಿಹೆನೆಂದು ನುಡಿವ ಅಣ್ಣಗಳ
ಕಣ್ಣಗೆಡಿಸಿ ಬಣ್ಣಗುಂದಿಸಿ ಬಂಧನಕ್ಕೊಳಗುಮಾಡಿ
ಭವದಲ್ಲಿ ಸೆರೆಹಿಡಿದಿರ್ಪುದು ನೋಡಾ ಮನವು.
ಅದೆಂತೆಂದೊಡೆ :
ವ್ರತವುಳ್ಳವರ ಭ್ರಾಂತುಗೆಡಿಸಿತ್ತು ನೋಡಾ ಮನವು.
ಯತಿಗಳೆಂಬವರ ಮತಿಹೀನರ ಮಾಡಿತ್ತು ನೋಡಾ ಮನವು.
ಕಣ್ಣುಮುಚ್ಚಿ ಧ್ಯಾನಿಸುವ ಅಣ್ಣಗಳ
ಕಳವಳಗೊಳಿಸಿತ್ತು ನೋಡಾ ಮನವು.
ಏಕಾಂತವಾಸಿಗಳೆಲ್ಲರ ಹಿಡಿತಂದು
ಲೋಕದ ಮಧ್ಯದೊಳಗಿರಿಸಿ
ಕಾಕುತನದಲ್ಲಿ ಕಾಡಿ ಏಡಿಸಿತ್ತು ನೋಡಾ ಮನವು.
ಯೋಗಿಗಳೆಂಬವರ ಭೋಗಕ್ಕೊಳಗುಮಾಡಿ
ಕಾಡಿತ್ತು ನೋಡಾ ಮನವು.
ಇಂತೀ ಮನವ ನಿಲಿಸಿಹೆವೆಂದು ನುಡಿದು
ಮತಿಗೆಟ್ಟು ಮಣ್ಣುಮಸಿಯಾಗಿ ಹೋದರು ನೋಡಾ ಹಲಕೆಲಬರು.
ಅವರಂತಿರಲಿ.
ಇನ್ನು ಮನವ ನಿಲಿಸುವ ಭೇದವ ಹೇಳಿಹೆ ಕೇಳಿರೆ.
ಆದಿ-ಅನಾದಿ, ಸುರಾಳ-ನಿರಾಳ, ಶೂನ್ಯ-ನಿಃಶೂನ್ಯ,
ಸಾಕಾರ-ನಿರಾಕಾರ, ಸಗುಣ-ನಿರ್ಗುಣ, ಮೂರ್ತಿ-ಅಮೂರ್ತಿ,
ಶಿವ-ಶಕ್ತಿ, ನಾಮ-ರೂಪು-ಕ್ರಿಯೆ ಸಕಲ ಬ್ರಹ್ಮಾಂಡ ಸಚರಾಚರಾದಿ
ನಾನಾ ತೋರಿಕೆಯೆಲ್ಲವು ತಾನೆ ಎಂದು ತಿಳಿಯಲು
ಆ ತಿಳಿದಮಾತ್ರದಲ್ಲಿಯೆ ಮನದ ಕಲ್ಪಿತವಳಿದು
ಕಾಯಿ ಹಣ್ಣಾದಂತೆ,
ಆ ಮನವು ಮಹಾಘನಪರಬ್ರಹ್ಮವೆ ಅಪ್ಪುದು.
ಆ ಮನವು ಮಹಾಘನವಾದಲ್ಲಿಯೆ
ಶರಣನ ಹುಟ್ಟು ಹೊಂದು ನಷ್ಟವಾಗಿರ್ಪುದು.
ಆ ಶರಣನ ಹುಟ್ಟು ಹೊಂದು ನಷ್ಟವಾದಲ್ಲಿಯೆ
ಅಖಂಡೇಶ್ವರನೆಂಬ ಕುರುಹು ನಿರ್ವಯಲು ನೋಡಾ./513
ಮನವು-ಘನವ ನುಂಗಿ, ಘನವು ಮನವ ನುಂಗಿ,
ಮನಘನವೆರಡನು ಪರಬ್ರಹ್ಮವು ನುಂಗಿದ ಬಳಿಕ,
ನಾನೆಂಬುವದೆಲ್ಲಿಯದಯ್ಯ ಅಖಂಡೇಶ್ವರಾ !/514
ಮನವೆಂಬ ಒರಳಿಗೆ
ಸಕಲಕರಣಂಗಳೆಂಬ ತಂಡುಲವ ಹಾಕಿ,
ಸುಜ್ಞಾನವೆಂಬ ಒನಕೆಯ ಪಿಡಿದು
ಪರಮಪರಿಣಾಮದೊಳಗೋಲಾಡುತ್ತ ಕುಟ್ಟಿ,
ಅಜ್ಞಾನವೆಂಬ ತೌಡ ಕೇರಿ
ಚಿತ್ಕರಣಂಗಳೆಂಬ ಅಕ್ಕಿಯ ತೆಗೆದುಕೊಂಡು
ಸದ್ಭಾವವೆಂಬ ಭಾಂಡದಲ್ಲಿ ತುಂಬಿ
ಪರಮಾನಂದ ಜಲವೆಂಬ ಎಸರನಿಟ್ಟು,
ತ್ರಿಪುಟಿಯೆಂಬ ಒಲೆಯ ಹೂಡಿ
ಚಿದಗ್ನಿಯೆಂಬ ಬೆಂಕಿಯ ಪುಟವನಿಕ್ಕಿ
ಅರಿಷಡ್ವರ್ಗಗಳೆಂಬ ಸೌದೆಯ ಹೊತ್ತಿಸಿ,
ಮಹಾಜ್ಞಾನವೆಂಬ ಪಾಕವ ಮಾಡಿ
ಪರಿಪೂರ್ಣವೆಂಬ ಪರಿಯಾಣದಲ್ಲಿ ಗಡಣಿಸಿಕೊಂಡು,
ಅಖಂಡಪರಿಪೂರ್ಣ ಮಹಾಘನಲಿಂಗಕ್ಕೆ
ಸಲಿಸಬಲ್ಲಾತನೆ ಶರಣನು.
ಆತನೆ ನಿಜಾನುಭಾವಿ, ಆತನೆ ಲಿಂಗೈಕ್ಯನು.
ಇಂತೀ ಭೇದವನರಿಯದೆ ಮಣ್ಣಪರಿಯಾಣ, ಲೋಹಪಾತ್ರೆಯಲ್ಲಿ
ಮನಬಂದ ಪರಿಯಲ್ಲಿ ಹಾಯ್ಕಿ ಹಾಯ್ಕಿ ಒಟ್ಟಿಸಿಕೊಂಡು
ಬಾಯಿಗೆ ಬಂದಂತೆ ತಿಂಬುವ ಜೀವಗಳ್ಳ ಭವಭಾರಕರಿಗೆ
ಏಕಭಾಜನವೆಲ್ಲಿಯದಯ್ಯಾ ಅಖಂಡೇಶ್ವರಾ./515
ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ,
ಇಂದ್ರಿಯಂಗಳೆಂಬ ಶಾಖೆಶಾಖೆಗೆ ಹಾರಿ,
ವಿಷಯಂಗಳೆಂಬ ಹಣ್ಣು ಫಲಂಗಳ ಗ್ರಹಿಸಿ,
ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ !
ಈ ಮನವೆಂಬ ಮರ್ಕಟನ, ನಿಮ್ಮ ನೆನಹೆಂಬ ಪಾಶದಲ್ಲಿ ಕಟ್ಟಿ,
ಎನ್ನನುಳುಹಿಕೊಳ್ಳಯ್ಯ ಅಖಂಡೇಶ್ವರಾ./516
ಮನೆಗೆ ಬಂದ ಜಂಗಮವ ಕಂಡು
ಮನದಲ್ಲಿ ಉದಾಸೀನವ ತಾಳಿ
ಮೋರೆಯನಡ್ಡನಿಕ್ಕಿದರೆ
ಜಾರಿಹೋಯಿತ್ತು ನೋಡಾ ಹಿಂದೆ ಮಾಡಿದ ಭಕ್ತಿ.
ಪಙ್ತಿಯಲ್ಲಿ ಕುಳಿತ ಜಂಗಮಕ್ಕೆ
ಒಂದ ನೀಡಿ ತಾನೊಂದನುಂಡರೆ
ಹುಳುಗೊಂಡದಲ್ಲಿಕ್ಕುವ ನೋಡಾ
ನಮ್ಮ ಅಖಂಡೇಶ್ವರ./517
ಮಹದೈಶ್ವರ್ಯವು ಕೈಗೂಡುವಡೆ
ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ.
ಪರಮಪವಿತ್ರನೆನಿಸಬೇಕಾದಡೆ
ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ.
ಸರ್ವೈಶ್ವರ್ಯ ಸರ್ವಸಿದ್ಧಿ ದೊರೆಕೊಂಬುವಡೆ
ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ.
ಮಹಾಪುಣ್ಯದ ಫಲವು ಪ್ರಾಪ್ತಿಸುವಡೆ
ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ.
ದಿನದಿನಕ್ಕೆ ಪಾಪ ಪಲ್ಲಟವಪ್ಪಡೆ
ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ.
ಅಂಗಕ್ಕೆ ಶ್ರೀ ವಿಭೂತಿಯೇ ಶೃಂಗಾರ ನೋಡಾ.
ಅದೆಂತೆಂದೊಡೆ :
“ ಶ್ರೀಕರಂ ಚ ಪವಿತ್ರಂ ಚ ಹಾರಾದ್ಯಾಭರಣಂ ತಥಾ |
ಲೋಕವಶ್ಯಕರಂ ಪುಣ್ಯಂ ಪಾಪನಾಶಂ ದಿನೇ ದಿನೇ ||”
ಎಂದುದಾಗಿ,
ಇಂತಪ್ಪ ಶ್ರೀ ವಿಭೂತಿಯ
ಅಂತರಂಗದಲ್ಲಿ ವಿಶ್ವಾಸ ತುಂಬಿ ಧರಿಸಿದ ಮನುಜರಿಗೆ
ಅನಂತಕೋಟಿ ಪಾತಕಂಗಳು ಪರಿಹಾರವಾಗಿ
ಮುಂದೆ ಶಿವಸಾಯುಜ್ಯಪದವು ದೊರೆಕೊಂಬುದು ನೋಡಾ
ಅಖಂಡೇಶ್ವರಾ./518
ಮಹಾಂತನ ಕೂಡಿದ ದೇವರುಗಳೆಂಬ
ಭ್ರಾಂತಿಗುಣದ ಭ್ರಷ್ಟರನೇನೆಂಬೆನಯ್ಯಾ.
ಮಹಾಂತೆಂದಡೆ,
ಗುರುಮಹಾತ್ಮೆ, ಲಿಂಗಮಹಾತ್ಮೆ ,
ಜಂಗಮಮಹಾತ್ಮೆ , ಪಾದೋದಕಮಹಾತ್ಮೆ ,
ಪ್ರಸಾದಮಹಾತ್ಮೆ, ವಿಭೂತಿಮಹಾತ್ಮೆ ,
ರುದ್ರಾಕ್ಷಿಮಹಾತ್ಮೆ, ಮಂತ್ರಮಹಾತ್ಮೆ ,
ಎಂಬ ಅಷ್ಟಾವರಣದ ಘನಮಹಾತ್ಮೆಯನರಿದು,
ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೆ ಪ್ರಾಣವಾಗಿ,
ಅನಂತ ಸ್ಥಳಕುಳಂಗಳನೊಳಕೊಂಡು
ಪರಬ್ರಹ್ಮವ ಕೂಡುವ
ಸಮರಸಭಾವ ಸಕೀಲದ ಭೇದವನರಿಯದೆ,
ಆಶಾಕ್ಲೇಶಂಗಳಲ್ಲಿ ಕಟ್ಟುವಡೆದು
ಕಾಸು ವಿಷಯ ಮಠ ಮನೆಗೆ ಬಡಿದಾಡುವ ಭಾಷೆಭ್ರಷ್ಟರಿಗೆ
ಮಹಾಂತಿನ ಘನವಿನ್ನೆಲ್ಲಿಯದೊ ?
ಇಂತಪ್ಪ ಮಹಾಂತಿನ ಅರುಹು ಕುರುಹಿನ ಘನವನರಿಯದೆ
ನಾನು ಮಹಾಂತಿನ ಕೂಡಿದ ದೇವರೆಂದು
ಹೊರಗೆ ಆಡಂಬರ ವೇಷವ ತಾಳಿ ಜಡೆಯ ಬಿಟ್ಟಡೇನು ?
ಆಲದ ಮರಕ್ಕೆ ಬೇರಿಳಿದಂತೆ.
ಸರ್ವಾಂಗಕ್ಕೆ ಭಸ್ಮವ ಹೂಸಿದಡೇನು ?
ಚಪ್ಪರದ ಮೇಲೆ ಕಗ್ಗುಂಬಳಕಾಯಿ ಬಿದ್ದಂತೆ.
ಸ್ಥಾನ ಸ್ಥಾನಕ್ಕೆ ರುದ್ರಾಕ್ಷಿಯನಲಂಕರಿಸಿದಡೇನು ?
ಹೇರಂಡಲಗಿಡ ಗೊನೆಯ ಬಿಟ್ಟಂತೆ ಕಾಣಾ ಅಖಂಡೇಶ್ವರಾ. /519
ಮಹೇಂದ್ರಜಾಲದಂತೆ ಕಣ್ಣಮುಂದೆ ಒಡ್ಡಿದ
ಹುಸಿಯ ಸಂಸಾರದಲ್ಲಿಯೇ ಎಡ್ಡಾಗಬೇಡಿರೋ ಎಲೆ ಎಡ್ಡ ಪ್ರಾಣಿಗಳಿರಾ!
ಅಡ್ಡದಾಸೆಗೆ ದುಡ್ಡಿನ ಲಾಭವ ಕಳೆವರೇ ?
ಗುರುಲಿಂಗಜಂಗಮದ ಸೇವೆಯ ತೊರೆದು ಸಂಸಾರದಲ್ಲಿ ಬೆರೆದರೆ
ಮುಂದೆ ನರಕದಲ್ಲಿಕ್ಕುವ ನಮ್ಮ ಅಖಂಡೇಶ್ವರ./520
ಮಾಡಬಾರದು ಮಾಡಬಾರದು
ಮಾನಹೀನ ಮತಿಭ್ರಷ್ಟರ ಸಂಗವ.
ಮಾಡಬಾರದು ಮಾಡಬಾರದು
ಪಾಶಬದ್ಧ ಕ್ಲೇಶಜೀವರ ಸಂಗವ.
ಮಾಡಬಾರದು ಮಾಡಬಾರದು
ಹುಸಿಡಂಭಕ ಹುಸಿಹುಂಡರ ಸಂಗವ.
ಮಾಡಿದಡೆ ಭವದಲ್ಲಿ ಘಾಸಿಯಲ್ಲದೆ
ಮುಕ್ತಿಯ ಲೇಸಿಲ್ಲವಯ್ಯ ಅಖಂಡೇಶ್ವರಾ./521
ಮಾಡಲಾಗದು ಭವಿಯ ಸಂಪರ್ಕವ.
ನೋಡಲಾಗದು ಭವಿಯ ದೃಷ್ಟಿಪೂರಿತವಾಗಿ
ನಡೆಯಲಾಗದು ಭವಿಯಸಂಗಡ ಬಟ್ಟೆಯ.
ಕುಳ್ಳಿರಲಾಗದು ಭವಿಯಸಹಿತ ಗರ್ದುಗೆಯ ಮೇಲೆ.
ಶಯನವ ಮಾಡಲಾಗದು ಭವಿಯಿರ್ದ ಹಾಸಿಗೆಯಲ್ಲಿ.
ಭೋಜನವ ಮಾಡಲಾಗದು ಭವಿಯು ಕಾಣುವಂತೆ.
ಅದೆಂತೆಂದೊಡೆ :
“ಆಸನೇ ಶಯನೇ ಯಾನೇ ಸಂಪರ್ಕಿ ಸಹಭೋಜನೇ |
ಸಂಚರಂತಿ ಮಹಾಘೋರೇ ನರಕೇ ಕಾಲಮಕ್ಷಯಮ್ ||”
ಎಂದುದಾಗಿ,
ಇಂತಪ್ಪ ಭವಿಯ ಸಮ್ಮಿಶ್ರವ ಮಾಡಿದ ಭಕ್ತನು
ಚಂದ್ರಸೂರ್ಯರುಳ್ಳ ಪರ್ಯಂತರವಾಗಿ
ಮಹಾ ಘೋರ ನರಕದ ಕುಳಿಯಲ್ಲಿ ಬಿದ್ದು
ಮುಳುಗುತ್ತೇಳುತ್ತ ತಡಿಯ ಸೇರಲರಿಯದೆ
ಬಾಧೆಪಡುತ್ತಿರ್ಪನಯ್ಯ ಅಖಂಡೇಶ್ವರಾ./522
ಮಾಡಿದ ಮಾಟವ ಮರೆದೆನಯ್ಯ ನಿಮ್ಮೊಳಗೆ.
ನೋಡಿದ ನೋಟವ ಮರೆದೆನಯ್ಯ ನಿಮ್ಮೊಳಗೆ.
ಕೂಡಿದ ಕೂಟವ ಮರೆದೆನಯ್ಯ ನಿಮ್ಮೊಳಗೆ.
ಕರ್ಪುರದಗಿರಿಯ ಉರಿ ಉಂಡಂತಾದೆನಯ್ಯ
ನಿಮ್ಮೊಳಗೆ, ಅಖಂಡೇಶ್ವರಾ./523
ಮಾಡುವ ತನುವು ನೀವೇ ಆದಿರಿ.
ಕೂಡುವ ಮನವು ನೀವೇ ಆದಿರಿ.
ನೀಡುವ ಧನವು ನೀವೇ ಆದಿರಿ.
ಅಖಂಡೇಶ್ವರಾ, ನಾನೂ ಇಲ್ಲ , ನೀವೂ ಇಲ್ಲ , ಏನೇನೂ ಇಲ್ಲ. /524
ಮಾಡುವ ಭಕ್ತ ನೀನೆಯೆಂದರಿದೆ ;
ಮಾಡಿಸಿಕೊಂಬ ದೇವ ನೀನೆಯೆಂದರಿದೆ.
ಇದು ಕಾರಣ, ಅಖಂಡೇಶ್ವರಾ,
ನಾ ನಿಮ್ಮ ಫಲಪದವ ಬೇಡಲಿಲ್ಲ ;
ನೀವೊಲಿದು ಎನಗೆ ಕೊಡಲಿಲ್ಲ./525
ಮಾತಿನಲ್ಲಿ ಕರ್ಕಶ, ಮನದಲ್ಲಿ ಘಾತಕತನವುಳ್ಳವನ
ಕನಿಷ್ಠನೆಂಬರು.
ಮಾತಿನಲ್ಲಿ ಎಲ್ಲೆ, ಮನದಲ್ಲಿ ಕತ್ತರಿಯುಳ್ಳವನ
ಮಧ್ಯಮನೆಂಬರು.
ಮಾತಿನಲ್ಲಿ ಮೃದು, ಮನದಲ್ಲಿ ಪ್ರೀತಿಯುಳ್ಳವನ
ಉತ್ತಮನೆಂಬರು ನೋಡಾ ಜಗದವರು.
ಮಾತಿನಲ್ಲಿ ಮಂತ್ರ ಮನದಲ್ಲಿ ಮಹಾನುಭಾವ
ಆತ್ಮದಲ್ಲಿ ಜ್ಯೋತಿಯ ಬೆಳಗುತಿಪ್ಪನಾಗಿ
ಉತ್ತಮನಲ್ಲ ಮಧ್ಯಮನಲ್ಲ ಕನಿಷ್ಠನಲ್ಲ ನೋಡಾ,
ಅಖಂಡೇಶ್ವರಾ ನಿಮ್ಮ ಶರಣನು./526
ಮಾತಿನಲ್ಲಿ ಶುದ್ಧವಿಲ್ಲದವರು ಶರಣರೆ ?
ಮನದಲ್ಲಿ ನಿಜವಿಲ್ಲದವರು ಶರಣರೆ ?
ಇಂದ್ರಿಯಂಗಳಿಗೆ ಮೈಗೊಡುವವರು ಶರಣರೆ ?
ವಿಷಯಕ್ಕೆ ಮುಂದುವರಿವವರು ಶರಣರೆ ? ಅಲ್ಲಲ್ಲ,
ಹಿಂದಣ ಮರವೆ ಮುಂದಣ ಎಚ್ಚರಿಕೆಯನರಿತು
ಜಾಗ್ರ ಸ್ವಪ್ನ ಸುಷುಪ್ತಿಯ ಹರಿದು,
ನಿರಾಳಲಿಂಗದಲ್ಲಿ ನಿಂದಾತ ಶರಣನಲ್ಲದೆ,
ಬಣ್ಣಗಾರ ಬಾಯಬಡುಕ ಭವದುಃಖಿಗಳ ಶರಣರೆಂದಡೆ
ನಗುವರಯ್ಯಾ ನಿಮ್ಮ ಶರಣರು ಅಖಂಡೇಶ್ವರಾ./527
ಮಾದಾರ ಚನ್ನಯ್ಯನ ಬಾಯ ತಾಂಬೂಲವ ಮೆಲುವೆ.
ಡೋಹರ ಕಕ್ಕಯ್ಯನ ಒಕ್ಕುಮಿಕ್ಕುದನುಂಬೆ.
ಚೋಳಿಯಕ್ಕನ ಊಳಿಗದವನಾಗುವೆ.
ಶ್ವಪಚಯ್ಯನ ಆಳಾಗಿರುವೆ.
ಇನ್ನುಳಿದ ಸಕಲಗಣಂಗಳ ತೊತ್ತು ಬಂಟ ಲೆಂಕನಾಗಿ
ರಾಜಾಂಗಣ ಬಳಿಯುವೆನಯ್ಯಾ ಅಖಂಡೇಶ್ವರಾ./528
ಮುಕ್ತಿಗೆ ಸದಾ ಸಂಧಾನವಾದ
ಮಹಾಜ್ಞಾನ ಶಿವಕ್ಷೇತ್ರವೆಂಬ
ಶಾಂಭವಿಯಚಕ್ರವಿವರವೆಂತೆಂದೊಡೆ:
ಅಗ್ನಿಮಂಡಲದ ಪೂರ್ವದಿಕ್ಕಿನ ಸಕಾರವೇ ವಾಮೆ,
ಷಕಾರವೇ ಜೇಷ್ಠೆ, ಶಕಾರವೇ ರೌದ್ರಿ, ವಕಾರವೇ ಕಾಳಿ.
ಅಗ್ನಿಮಂಡಲದ ನೈಋತ್ಯದಳಕ್ಕೆ ಆಧಾರಚಕ್ರಸಂಬಂಧವು.
ಅದರ ಮುಂದಣ ಲಕಾರವೇ ಬಾಲೆ, ರಕಾರವೇ ಬಲಪ್ರಮಥಿನಿ,
ಯಕಾರವೇ ಸರ್ವಭೂತದಮನಿ, ಮಕಾರವೇ ಮನೋನ್ಮನಿ.
ಇನ್ನು ಸೂರ್ಯಮಂಡಲದ ಬಕಾರ ಭಕಾರಗಳೆರಡು ಕೂಡಿ
ಅಗ್ನಿಮಂಡಲದ ಈಶಾನ್ಯದಳಕ್ಕೆ ಸ್ವಾಧಿಷ್ಠಾನಚಕ್ರಸಂಬಂಧವು.
ಮುಂದೆ ಚಂದ್ರಮಂಡಲದ ವಿವರವೆಂತೆಂದೊಡೆ:
ಅಃ ಎಂಬುದೇ ಷಣ್ಮುಖಿ, ಅಂ ಎಂಬುದೇ ಭವ,
ಔಕಾರವೇ ಶರ್ವ, ಓಕಾರವೇ ರುದ್ರ,
ಐಕಾರವೇ ಮಹಾದೇವ, ಏಕಾರವೇ ಸೋಮ,
ಲೂೃಕಾರವೇ ಭೀಮ, ಲೃಕಾರವೇ ಉಗ್ರ,
ೂಕಾರವೇ ಪಶುಪತಿ, ಋಕಾರವೇ ಉಮೇಶ್ವರ,
ಊಕಾರವೇ ಚಂಡೇಶ್ವರ, ಉಕಾರವೇ ನಂದೀಶ್ವರ,
ಈಕಾರವೇ ಮಹಾಕಾಳ, ಇಕಾರವೇ ಭೃಂಗಿರಿಟಿ,
ಆಕಾರವೇ ಗಣೇಶ್ವರ, ಅಕಾರವೇ ವೃಷಭೇಶ್ವರ,
ಚಂದ್ರಮಂಡಲದಲ್ಲಿ ವಿಶುದ್ಧಿಚಕ್ರಸಂಬಂಧವು.
ಇನ್ನು ಮುಂದೆ ಸೂರ್ಯಮಂಡಲವೆಂತೆಂದೊಡೆ:
ಪೂರ್ವದಳದ ಕಕಾರವೇ ಅನಂತ, ಖಕಾರವೇ ಸೂಕ್ಷ್ಮ,
ಗಕಾರವೇ ಶಿವೋತ್ತಮ, ಘಕಾರವೇ ಏಕನೇತ್ರ,
ಙಕಾರವೇ ಏಕರುದ್ರ.
ಚಕಾರವೇ ತ್ರಿಮೂರ್ತಿ, ಛಕಾರವೇ ಶ್ರೀಕಂಠ,
ಜಕಾರವೇ ಶಿಖಂಡಿ, ಝಕಾರವೇ ಇಂದ್ರ, ಞಕಾರವೇ ಅಗ್ನಿ.
ಟಕಾರವೇ ಯಮ, ಠಕಾರವೇ ನೈಋತ್ಯ.
ಸೂರ್ಯಮಂಡಲದ ನೈಋತ್ಯದಳಕ್ಕೆ ಅನಾಹತಚಕ್ರಸಂಬಂಧವು.
ಡಕಾರವೇ ವರುಣ, ಢಕಾರವೇ ವಾಯುವ್ಯ,
ಣಕಾರವೇ ಕುಬೇರ, ತಕಾರವೇ ಈಶಾನ್ಯ,
ಥಕಾರವೇ ಧರಾ, ದಕಾರವೇ ಧ್ರುವ,
ಧಕಾರವೇ ಸೋಮ, ನಕಾರವೇ ಅಪ್ಪು,
ಪಕಾರವೇ ಅನಿಲ, ಫಕಾರವೇ ಅನಲ,
ಸೂರ್ಯಮಂಡಲದ ವರುಣದಳದಿಂದೆ ಈಶಾನ್ಯದಳಕ್ಕೆ
ಮಣಿಪೂರಕಚಕ್ರ ಸಂಬಂಧವು.
ಈಶಾನ್ಯ ಇಂದ್ರ ಮಧ್ಯದ ಬಕಾರ ಭಕಾರಂಗಳ ಪೆಸರು,
ಬಕಾರವೇ ಪ್ರತ್ಯೇಶ, ಭಕಾರವೇ ಪ್ರಭವ,
ಇವೆರಡು ಸ್ವಾಧಿಷ್ಠಾನಚಕ್ರದವು.
ಇನ್ನು ಅಕಾರ ಹಕಾರಂಗಳಿಗೆ ಭೇದವಿಲ್ಲದ ಕಾರಣ
ಚಂದ್ರಮಂಡಲದ ಅ ಎಂಬಕ್ಷರವು
ಅಗ್ನಿಮಂಡಲದ ಲಂಬಕ್ಷರವು
ಇವೆರಡು ಆಜ್ಞಾಚಕ್ರಸಂಬಂಧವಾಗಿಹವು.
ಈ ಷಟ್ಚಕ್ರಂಗಳು ಶಾಂಭವಿಚಕ್ರದಲ್ಲಿ ಸಂಬಂಧವಾಗಿಹವು.
ಇನ್ನು ಅಷ್ಟದಳಂಗಳಿಗೆ ಹಂಚಿಹಾಕುವ ವಿವರವೆಂತೆಂದೊಡೆ:
ವಾಮ, ಗಣೇಶ್ವರ, ವೃಷಭೇಶ್ವರ, ಅನಂತ,
ಸೂಕ್ಷ್ಮ, ಶಿವೋತ್ತಮ, ಇಂದ್ರ, ಸತ್ಯ, ಭೃಂಗಿ, ಅಂತರ್ಲಕ್ಷ
ಈ ಹತ್ತು ಇಂದ್ರದಳದಲ್ಲಿ ಸಂಬಂಧವು.
ಜೇಷ್ಠ, ಮಹಾಕಾಳ, ಭೃಂಗರೀಟಿ, ಏಕನೇತ್ರ,
ಏಕರುದ್ರ, ತ್ರಿಮೂರ್ತಿ, ಅಗ್ನಿ, ಪೂಷನ್, ವಿಧಿ, ದಮ
ಈ ಹತ್ತು ಅಗ್ನಿದಳದಲ್ಲಿ ಸಂಬಂಧವು.
ರೌದ್ರಿ, ನಂದೀಶ್ವರ, ಚಂಡೇಶ್ವರ, ಶ್ರೀಕಂಠ, ಶಿಖಂಡಿ,
ಇಂದ್ರ ಯಮ, ಭಾಸ್ಕರ, ಪುಷ್ಪದತ್ತ , ಬಲಾಟ
ಈ ಹತ್ತು ಯಮದಳದಲ್ಲಿ ಸಂಬಂಧವು.
ಕಾಳಿ, ಉಮೇಶ್ವರ, ಪಶುಪತಿ,
ಅಗ್ನಿ, ಯಮ, ನೈಋತ್ಯ, ದೌವಾರಿಕ, ಸುಗ್ರೀವ, ಆವರಣ
ಈ ಹತ್ತು ನೈಋತ್ಯದಳದಲ್ಲಿ ಸಂಬಂಧವು.
ಬಾಲೆ, ಉಗ್ರ, ಭೀಮ, ವರುಣ, ಏಕನೇತ್ರ, ಕುಬೇರ,
ಅರುಣ, ಅಸುರ, ಗಂಹ್ವರ, ವೇಗ,
ಈ ಹತ್ತು ವರುಣದಳದಲ್ಲಿ ಸಂಬಂಧವು.
ಬಲಪ್ರಮಥಿನಿ, ಸೋಮ, ಅಪನಿಲ, ಮಹಾದೇವ,
ಈಶಾನ್ಯ, ಧರಾ, ಧ್ರುವ, ವಾಯು, ನಾಗಮುಖ, ಸೋಮ,
ಈ ಹತ್ತು ವಾಯುವ್ಯದಳದಲ್ಲಿ ಸಂಬಂಧವು.
ಸರ್ವಭೂತದಮನಿ, ರುದ್ರ, ಶರ್ವ, ಸೋಮ,
ಅಪ್ಪು, ನೀಲ, ಕುಬೇರ, ಅಘೋರ, ದಿತಿ, ಅದಿತಿ,
ಈ ಹತ್ತು ಕುಬೇರದಳದಲ್ಲಿ ಸಂಬಂಧವು.
ಮನೋನ್ಮನಿ, ಭವ, ಷಣ್ಮುಖಿ, ನಳ, ಪ್ರತ್ಯೇಶ,
ಪ್ರಭವ, ಈಶಾನ್ಯ, ಪರ್ಜನ್ಯ, ಜಯಂತ, ಸಂಕರ,
ಈ ಹತ್ತು ಈಶಾನ್ಯದಳದಲ್ಲಿ ಸಂಬಂಧವು.
ಇಲ್ಲಿಗೆ ಅಷ್ಟದಳದ ವಿವರ ಮುಗಿಯಿತು.
ಇನ್ನು ಮುಂದೆ ಚೌದಳದ ವಿವರವೆಂತೆಂದೊಡೆ :
ಇಂತಪ್ಪ ಅಷ್ಟದಳವನೊಳಕೊಂಡು
ಅಂಬಿಕೆ, ಗಣಾನಿ, ಈಶ್ವರಿ, ಮನೋನ್ಮನಿ ಎಂಬ
ಚತುರ್ದಳ ಶಕ್ತಿಯರಿರ್ಪರು.
ಪೂರ್ವದಳದ ಸಕಾರವೇ ಅಂಬಿಕೆ.
ದಕ್ಷಿಣದಳದ ಅಕಅರವೇ ಗಣಾನಿ.
ಪಶ್ಚಿಮದಳದ ವಿಕಾರವೇ ಈಶ್ವರಿ.
ಉತ್ತರದಳದ ಕ್ಷಕಾರವೇ ಮನೋನ್ಮನಿ.
ಇಂತೀ ಚತುರ್ವಿಧಶಕ್ತಿಯನೊಳಕೊಂಡಿರ್ಪಳು ಹ್ರೀಂಕಾರಶಕ್ತಿ.
ಹ್ರೀಂಕಾರಶಕ್ತಿ ಎಂದಡೂ ಮೂಲಜ್ಞಾನ ಚಿತ್ತು ಎಂದಡೂ
ಚಿದಾತ್ಮ ಎಂದಡೂ ಪರ್ಯಾಯ ನಾಮವು.
ಇಂತಪ್ಪ ಹ್ರೀಂಕಾರಶಕ್ತಿಗೆ ಆಶ್ರಯವಾಗಿರ್ಪುದು ನಿಷ್ಕಲಲಿಂಗವು.
ನಿಷ್ಕಲಲಿಂಗವೆಂದಡೂ ಶುದ್ಧಪ್ರಸಾದವೆಂದಡೂ
ಹಕಾರಪ್ರಣವವೆಂದಡೂ ಪರ್ಯಾಯ ನಾಮಂಗಳು.
ಇಂತಪ್ಪ ನಾಮಂಗಳನೊಳಕೊಂಡು
ಪಿಂಡ ಬ್ರಹ್ಮಾಂಡಗಳೊಳಹೊರಗೆ ಪರಿಪೂರ್ಣವಾಗಿ ತುಂಬಿ
ತೊಳಗಿ ಬೆಳಗುತಿರ್ಪುದು ನೋಡಾ ನಿಷ್ಕಲಲಿಂಗವು.
ಇಂತಪ್ಪ ಅನಾದಿ ನಿಷ್ಕಲ ಪರಶಿವಬ್ರಹ್ಮದ ನಿಜದ ನಿಲವನು
ಶ್ರುತಿಗುರುವಚನ ಸ್ವಾನುಭಾವಂಗಳಿಂದರಿದು
ತನ್ನೊಳಗೆ ಗಭರ್ಿಕರಿಸಿಕೊಂಡು ಸುಳಿವ ಮಹಾಶರಣರ
ಶ್ರೀಚರಣಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ./529
ಮುಕ್ತಿಯ ಪಡೆವೆನೆಂದು ಯುಕ್ತಿಗೆಟ್ಟು
ಸಕಲ ತೀರ್ಥಕ್ಷೇತ್ರಂಗಳಿಗೆಡೆಯಾಡಿ
ತೊಟ್ಟನೆ ತೊಳಲಿ ಬಳಲಿ ಬೆಂಡಾಗಲೇತಕೊ ?
ಒಬ್ಬ ಶಿವಭಕ್ತನ ಅಂಗಳದಲ್ಲಿ ಎಂಬತ್ತೆಂಟುಕೋಟಿ ಕ್ಷೇತ್ರಂಗಳಿರ್ಪವು.
ಆತನ ಬಚ್ಚಲಲ್ಲಿ ಅರವತ್ತಾರು ಕೋಟಿ ತೀರ್ಥಂಗಳಿರ್ಪವು.
ಆತನ ಕಾಯವೇ ಕೈಲಾಸ.
ಆತನಂಗದಮೇಲಿರ್ಪ ಲಿಂಗವೇ ಅನಾದಿಪರಶಿವನು.
ಇದು ಕಾರಣ, ಅಂತಪ್ಪ ಸದ್ಭಕ್ತನ ಗೃಹಮಂ ಪೊಕ್ಕು,
ಆತನ ದರ್ಶನ ಸ್ಪರ್ಶನವಾದಾತಂಗೆ
ಅನಂತಕೋಟಿ ಭವಪಾತಕಂಗಳು ಪರಿಹಾರವಪ್ಪವು ನೋಡಾ !
ಆತನ ಒಕ್ಕುಮಿಕ್ಕುದ ಕೊಂಡಾತಂಗೆ
ಮುಂದೆ ಮುಕ್ತಿಯಪ್ಪುದು ತಪ್ಪದು ನೋಡಾ
ಅಖಂಡೇಶ್ವರಾ./530
ಮುನ್ನ ಪಡೆಯದೆ ಇನ್ನು ಬೇಡಿದರೆ ಬರ್ಪುದೆ
ಎಂದು ನುಡಿಯುತಿರ್ಪರೆಲ್ಲ.
ಮುನ್ನ ಶ್ರೀಗುರುಲಿಂಗಜಂಗಮವ ಮರೆತ ಕಾರಣ
ಇನ್ನು ಕೆಟ್ಟರಲ್ಲ ನಮ್ಮ ಅಖಂಡೇಶ್ವರಲಿಂಗವನರಿಯದೆ./531
ಮುನ್ನ ಮಹಾನಂದಿನಿಯೆಂಬ ವೇಶ್ಯಾಂಗನೆಯ ದೆಸೆಯಿಂದೆ
ಕುಕ್ಕಟ ವಾನರ ರುದ್ರಾಕ್ಷಿಯ ಧರಿಸಿ
ರಾಜಪದವಿಯ ಪಡೆದುವು ನೋಡಾ.
ಮುನ್ನ ಬೇಂಟೆಗಾರನ ದೆಸೆಯಿಂದೆ
ಶುನಿಯು ರುದ್ರಾಕ್ಷಿಯ ಧರಿಸಿ ರುದ್ರಪದವಿಯಲ್ಲಿ ನಿಂದಿತ್ತು ನೋಡಾ.
ಮುನ್ನ ಹರದನ ದೆಸೆಯಿಂದೆ ಕತ್ತೆ ರುದಾಕ್ಷಿಯ ಪೊತ್ತು
ಕರ್ತೃ ಶಿವನ ಸಾಯುಜ್ಯಪದವ ಸಾರಿತ್ತು ನೋಡಾ.
ಮುನ್ನ ಚೇರಮರಾಯನು ರುದ್ರಾಕ್ಷಿಯ ಧರಿಸಿ
ಹರನ ಕೈಲಾಸಕ್ಕೆ ದಾಳಿವರಿದನು ನೋಡಾ ಅಖಂಡೇಶ್ವರಾ./532
ಮುನ್ನ ವಿಟ ಶ್ವೇತನು ಶಿವ ಎಂಬ ಶಬ್ದದಿಂದೆ
ಕಾಲನ ಕಂಟಕವ ಗೆಲಿದು ನೀಲಲೋಹಿತನ ಓಲಗದಲ್ಲಿರಲಿಲ್ಲವೆ ?
ಮುನ್ನ ಸುಕುಮಾರನು ಪರಶಿವಲಿಂಗದರ್ಶನದಿಂದೆ
ಯಮನಪುರಿಯ ಬಾಧೆಯ ನೀಗಿ ಹರನ ರಜತಾದ್ರಿಯಲ್ಲಿರಲಿಲ್ಲವೆ ?
ಮುನ್ನ ಮಾರ್ಕಂಡೇಯನು ಪರಬ್ರಹ್ಮಲಿಂಗವ ಪೂಜಿಸಿ,
ಯಮನ ಉರಹರಿದು ಹರನ ಕೈವಲ್ಯವ ಪಡೆಯಲಿಲ್ಲವೆ ?
ಇದನರಿತು ಸ್ಥಿರವಾಗಿ ಪೂಜಿಸಿ ವರನ ಬೇಡಿರೋ
ನಮ್ಮ ಅಖಂಡೇಶ್ವರ ಲಿಂಗದೇವನ./533
ಮುನ್ನ ಶ್ರೀಗುರುಸ್ವಾಮಿ ಕರುಣಿಸಿ ಕೊಟ್ಟ ಇಷ್ಟಲಿಂಗದಲ್ಲಿ
ನೆಟ್ಟನೆ ಅಂಗ ಮನ ಪ್ರಾಣಂಗಳು ಸಂಗಿಸಬೇಕು.
ಬಳಿಕ ನಡೆನುಡಿಯಲ್ಲಿ
ಆ ಲಿಂಗ ಸನ್ನಿಹಿತವಾಗಿರಬೇಕಲ್ಲದೆ ಹಿಂಗಿರಲಾಗದು.
ಕೊಡುಕೊಂಬ ವ್ಯವಹಾರದಲ್ಲಿ ಆ ಲಿಂಗ
ಸನ್ನಿಹಿತವಾಗಿರಬೇಕಲ್ಲದೆ ಹಿಂಗಿರಲಾಗದು.
ಜಾಗ್ರಸ್ವಪ್ನಸುಷುಪ್ತಿಗಳಲ್ಲಿ
ಆ ಲಿಂಗ ಸನ್ನಿಹಿತವಾಗಿರಬೇಕಲ್ಲದೆ ಹಿಂಗಿರಲಾಗದು.
ಅದೆಂತೆಂದೊಡೆ :
“ಗಚ್ಛನ್ ತಿಷ್ಠನ್ ಸ್ವಪನ್ ಜಾಗ್ರನ್ ಉನ್ಮಿಷನ್ ನಿಮಿಷನ್ನಪಿ |
ಶುಚಿರ್ವಾಪ್ಯಶುಚಿರ್ವಾಪಿ ಲಿಂಗಂ ಸರ್ವತ್ರ ಧಾರಯೇತ್ ||”
ಎಂದುದಾಗಿ,
ಸರ್ವಾವಸ್ಥೆಯಲ್ಲಿ ಲಿಂಗಸನ್ನಿಹಿತವಾಗಿರಬೇಕಲ್ಲದೆ,
ನಿಮಿಷಾರ್ಧ ಲಿಂಗವನಗಲಿದರೆ
ಕುಂಭೀಪಾತಕ ನಾಯಕನರಕ ತಪ್ಪದು ನೋಡಾ ಅಖಂಡೇಶ್ವರಾ./534
ಮೂರ್ತಿಯಿಲ್ಲದ ಬಯಲು, ಅಮೂರ್ತಿಯಿಲ್ಲದ ಬಯಲು,
ಸಗುಣವಿಲ್ಲದ ಬಯಲು, ನಿರ್ಗುಣವಿಲ್ಲದ ಬಯಲು,
ಅಖಂಡೇಶ್ವರನೆಂಬ ಮಹಾಬಯಲೊಳಗೆ
ನಾನೆತ್ತ ಹೋದೆನೆಂದರಿಯೆ./535
ಮೇರುವಿನ ಮಂದಿರದಲ್ಲಿ ಆರೈದು ನೋಡಿದರೆ
ಭೇರಿ ಮೃದಂಗದ ಧ್ವನಿ ಭೋರಿಡುತಿರ್ಪುವು.
ಮಾರಾರಿಯ ಮಂಗಳಸಭೆಯ
ಕಂಗಳು ನುಂಗಿತ್ತು ನೋಡಾ ಅಖಂಡೇಶ್ವರಾ./536
ಮೊಟ್ಟೆ ಮೊಟ್ಟೆ ಪತ್ರಿ ಪುಷ್ಪವ ತಂದು
ಒಟ್ಟಿ ಒಟ್ಟಿ ಲಿಂಗವ ಪೂಜಿಸಿದಡೇನು,
ತನುಮನದ ಕೆಟ್ಟತನವ ಹಿಂಗದನ್ನಕ್ಕರ ?
ಹುಸಿ ಕಳವು ಪರದಾರ ವ್ಯವಹಾರದಲ್ಲಿ
ಹರಿದಾಡುವ ದುರುಳಬುದ್ಧಿಯ ದುರಾಚಾರಿಗಳಿಗೆ
ದೂರನಾಗಿರ್ಪನು ನೋಡಾ ನಮ್ಮ ಅಖಂಡೇಶ್ವರನು./537
ಯೋಗ ಯೋಗವೆಂದು ನುಡಿಯುತಿರ್ಪರೆಲ್ಲರು ;
ಯೋಗದೊಳಗಣ ಯೋಗವನಾರೂ ಅರಿಯರಲ್ಲ !
ಮಂತ್ರಯೋಗ, ಲಯಯೋಗ, ಹಠಯೋಗ, ರಾಜಯೋಗವೆಂದು
ಯೋಗ ಚತುರ್ವಿಧದೊಳಗೆ,
ಮೊದಲು ಮಂತ್ರಯೋಗದ ಭೇದವೆಂತೆಂದೊಡೆ :
ಆವನಾನೊಬ್ಬ ಯೋಗಸಿದ್ಧಿಯ ಪಡೆವಾತನು
ಪಕ್ಷಿಗಳುಲಿಯದ ಮುನ್ನ, ಪಶುಗಳು ಕೂಗದ ಮುನ್ನ,
ಪ್ರಕೃತಿ ಆತ್ಮರು ಸುಳಿಯದ ಮುನ್ನ,
ಶುಭಮುಹೂರ್ತದಲ್ಲಿ ಶಿವಧ್ಯಾನಮಂ ಮಾಡುತೆದ್ದು
ಶೌಚಾಚಮನ ದಂತಧಾವನಂಗಳಂ ಮಾಡಿ ಜಲಸ್ನಾನಂಗೈದು,
ಏಕಾಂತಸ್ಥಳದಲ್ಲಿ ಕಂಬಳಾಸನದಿ ಗದ್ದುಗೆಯಲ್ಲಿ
ಪೂರ್ವಮುಖವಾಗಲಿ ಉತ್ತರಮುಖವಾಗಲಿ
ತನಗಿಷ್ಟಾಸನದಲ್ಲಿ ಕುಳ್ಳಿರ್ದು, ಭಸ್ಮಸ್ನಾನಂಗಳನಾಚರಿಸಿ
ಆಗಮೋಕ್ತದಿಂದೆ ಈಶ್ವರಾರ್ಚನೆಯಂ ಮಾಡಿ
ಬಳಿಕ ಅಂತರಾಳಹೃದಯಕಮಲ ಕರ್ಣಿಕಾಸ್ಥಲದಲ್ಲಿಹ
ಹಕಾರವೆಂಬ ಬೀಜಾಕ್ಷರಮಧ್ಯದಲ್ಲಿ
ಮೂರ್ತಿಧ್ಯಾನಂ ಮಾಡುವುದೆಂತೆನೆ :
ಶುದ್ಧಪದ್ಮಾಸನನಾಗಿ ಚಂದ್ರಕಲಾಧರನಾದ
ಪಂಚಮುಖ ತ್ರಿನೇತ್ರಂಗಳುಳ್ಳ
ಶೂಲ ವಜ್ರ ಖಡ್ಗ ಪರಶು ಅಭಯಂಗಳಾಂತ
ಪಂಚ ದಕ್ಷಿಣಹಸ್ತಂಗಳುಳ್ಳ
ನಾಗ ಪಾಶ ಘಂಟೆ ಅನಲ ಅಂಕುಶಂಗಳಾಂತ
ಪಂಚ ವಾಮಕರಂಗಳುಳ್ಳ
ಕಿರೀಟಾದ್ಯಾಭರಣಂಗಳಿಂದಲಂಕೃತನಾದ
ಸ್ಫಟಿಕದ ಕಾಂತಿಮಯನಾದ ಸದಾಶಿವಮೂರ್ತಿಯ ಧ್ಯಾನಿಸುತ್ತೆ ,
“ಓಂ ಅಸ್ಯ ಶ್ರೀಷಡಕ್ಷರಮಂತ್ರಸ್ಯ ವಾಮದೇವ ಋಷಿಃ
ಪಂಕ್ತಿಃ ಛಂದಃ ಶ್ರೀಸದಾಶಿವೋ ದೇವತಾ
ಓಂ ಬೀಜಂ ಉಮಾಶಕ್ತಿಃ ಉದಾತ್ತಸ್ವರಃ
ಶ್ವೇತವರ್ಣಃ ಸದಾಶಿವಪ್ರೀತ್ಯರ್ಥೆ ಜಪೇ ವಿನಿಯೋಗಃ|”
ಎಂಬ ಷಡಕ್ಷರಮಂತ್ರಾನುಷ್ಠಾನಾದಿ ಅಖಿಳಮಂತ್ರಗಳಿಂದೆ
ಕರಶಿರಾದಿ ಷಡಂಗನ್ಯಾಸಂಗಳಂ ಮಾಡಿ
ನಿತ್ಯಜಪಾನುಷ್ಠಾನಮಂ ಮೋಕ್ಷಾರ್ಥಿಯಾದಾತನು
ರುದ್ರಾಕ್ಷಿ ನೂರೆಂಟರಿಂದಾದಡೂ ಇಪ್ಪತ್ತೈದರಿಂದಾದಡೂ
ಆಗಮೋಕ್ತಮಾರ್ಗದಿಂದೆ ಜಪಮಾಲಿಕೆಯಿಂದೆ
ಅಂಗುಷ್ಠಮಧ್ಯಮೆಗಳಿಂದೆ ಉಪಾಂಶುರೂಪದಿಂದೆ
ಧ್ಯಾನಪೂರ್ವಕದಿಂ ಜಪವಂ ಮಾಡುವುದೆ
ಮಂತ್ರಯೋಗವೆನಿಸಿತ್ತು ಅಖಂಡೇಶ್ವರಾ./538
ರಾಜಯೋಗದಲ್ಲಿ ನಿಶ್ಚಿಂತನಾದ ಯೋಗೀಶ್ವರನ
ಸಹಜವರ್ತನಧರ್ಮವೆಂತೆನೆ :
ಅಧರ್ಾವಲೋಚನವೆನಿಸುವ ಅರೆಮುಗಿದ ನೇತ್ರವುಳ್ಳಾತನಾಗಿ,
ಸಕಲ ಸಂಶಯಂಗಳ ಬಿಟ್ಟ ಮನವುಳ್ಳಾತನಾಗಿ,
ಮತ್ತಾ ಮನವು ಸುಷುಪ್ತಿಯಲ್ಲಿ ಮರೆಯದಂತೆ
ಜಾಗ್ರದಲ್ಲಿ ಕೆದರದಂತೆ ನಿಶ್ಚಲಮಂ ಮಾಡಿ,
ಭ್ರೂಮಧ್ಯಲಕ್ಷ್ಯದಲ್ಲಿರಲದೇ ಉನ್ಮನಿಯ ಸ್ವರೂಪವು.
ಅದೇ ಪರಮಪದವು; ಅದೇ ಜ್ಞಾನವು; ಅದೇ ಮೋಕ್ಷವು;
ಅದೇ ಪರಮರಹಸ್ಯಮಾದ ಶಿವಯೋಗವು.
ಅದರಿಂದೆ ಅನ್ಯಮಾದ ಅರ್ಥಮಂ ಪೇಳ್ವ
ಗ್ರಂಥವಿಸ್ತಾರವೆಲ್ಲವು ವ್ಯರ್ಥಮಪ್ಪುದಾಗಿ
ಈ ಉನ್ಮನಿಯ ಸಾಧಿಸುವಾತನೆ ಜೀವನ್ಮುಕ್ತ ನೋಡಾ
ಅಖಂಡೇಶ್ವರಾ./539
ರಾಜಯೋಗಾನುಸಂಧಾನದಿಂದೆ ಕಾಣಿಸುವ ವಿಚಿತ್ರ ಪ್ರಭಾಮಂಡಲಕ್ಕೆ
ದಿವ್ಯಾನಂದ ನಿಧಿನಿಕ್ಷೇಪಭೂಮಿಯಪ್ಪ
ಪರಮ ಹೃದಯವೆನಿಸುವ ಲೋಚನಂಗಳೆ ಮುಖ್ಯವಾಗಿರ್ಪುವು.
ಆ ಲೋಚನಂಗಳ ಮಧ್ಯದಲ್ಲಿ ಅಭೇದ್ಯ ಪರವಸ್ತುವನರಿವುದೆ
ತಾರಕಯೋಗ ನೋಡಾ ಅಖಂಡೇಶ್ವರಾ./540
ರುದ್ರಾಕ್ಷಿಯೆಂದೊಡೆ ಸಾಕ್ಷಾತ್ ಪರಶಿವನು ತಾನೇ ನೋಡಾ.
ಅಗ್ರಜನಾಗಲಿ ಅಂತ್ಯಜನಾಗಲಿ,
ಮೂರ್ಖನಾಗಲಿ ಪಂಡಿತನಾಗಲಿ,
ಸುಗುಣಿಯಾಗಲಿ ದುರ್ಗುಣಿಯಾಗಲಿ
ಆವನಾದಡೇನು ? ರುದ್ರಾಕ್ಷಿಯ ಧರಿಸಿದಾಕ್ಷಣದಲ್ಲಿಯೆ
ಆತ ಇಹಲೋಕದಲ್ಲಿಯೂ ರುದ್ರನೆನಿಸುವನು ;
ಪರಲೋಕದಲ್ಲಿಯೂ ರುದ್ರನೆನಿಸುವನು.
ಅದೆಂತೆಂದೊಡೆ :ಶಿವಧರ್ಮೆ-
“ರುದ್ರಾಕ್ಷಾಣಿ ಸ್ವಯಂ ರುದ್ರೋ ಭವೇತ್ ರುದ್ರಾಕ್ಷಧಾರಕಂ |
ರುದ್ರಾಕ್ಷಂ ಧಾರಯೇತ್ ತಸ್ಮಾದಿಹ ರುದ್ರಃ ಪರತ್ರ ಚ ||
ಬ್ರಾಹ್ಮಣೋ ವಾಪಿ ಚಾಂಡಾಲೋ ದುರ್ಗುಣಃ ಸುಗುಣೋಪಿ ವಾ |
ತಸ್ಮಾತ್ ರುದ್ರಾಕ್ಷಕಂಠೇನ ದೇಹಾಂತೇ ತು ಶಿವಂ ವ್ರಜೇತ್ ||”
ಎಂದುದಾಗಿ,
ಇದು ಕಾರಣ ರುದ್ರಾಕ್ಷಿಯ ಮಹಿಮೆಯನು ಹೇಳುವಡೆ
ವೇದಶಾಸ್ತ್ರ ಪುರಾಣಗಳಿಗೆ ಅಗೋಚರವಾಗಿಪ್ಪುದಯ್ಯ
ಅಖಂಡೇಶ್ವರಾ./541
ಲಿಂಗ ಛಿನ್ನ ಭಿನ್ನವಾದಡೆ ಸ್ಥೂಲಸೂಕ್ಷ್ಮವನರಿಯಬೇಕು.
ಸ್ಥೂಲವಾವುದು ಸೂಕ್ಷ್ಮವಾವುದು ಎಂದಡೆ :
ಲಿಂಗದ ಶಕ್ತಿಪೀಠದಲ್ಲಿ
ಅಕ್ಕಿಯ ತೂಕ ಮೇಣವನೊತ್ತಿ ನೋಡಿದಲ್ಲಿ
ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೆಚ್ಚಾದಡೆ ಸೂಕ್ಷ್ಮ
ಮತ್ತಂ,
ಲಿಂಗದ ಕಟಿಯಲ್ಲಿ ಅರ್ಧ ಅಕ್ಕಿಯ ತೂಕ ಮೇಣವನು ಒತ್ತಿ ನೋಡಿದಲ್ಲಿ
ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೆಚ್ಚಾದಡೆ ಸೂಕ್ಷ್ಮ.
ಮತ್ತಂ, ಲಿಂಗದ ವತರ್ುಳ ಗೋಮುಖದಲ್ಲಿ
ಅರ್ಧ ಅಕ್ಕಿಯ ಸರಿಭಾಗವ ಮಾಡಿದಲ್ಲಿ ಗಿರ್ದವೆನಿಸಿತ್ತು.
ಆ ಗಿರ್ದ ಅಕ್ಕಿಯ ತೂಕ ಮೇಣವನ್ನು ಒತ್ತಿ ನೋಡಿದಲ್ಲಿ
ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೆಚ್ಚಾದಡೆ ಸೂಕ್ಷ್ಮ.
ಮತ್ತಂ, ಲಿಂಗದ ನಾಳ ಗೋಳಕದಲ್ಲಿ
ಎಳ್ಳಿನ ತೂಕ ಮೇಣವನ್ನು ಒತ್ತಿ ನೋಡಿದಲ್ಲಿ
ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೊರಗಾದಡೆ ಸೂಕ್ಷ್ಮ.
ಮತ್ತಂ, ಲಿಂಗದ ಮಸ್ತಕದಿಂದೆ ಕೆಳಗಣ ಪೀಠಪರಿಯಂತರವಾಗಿ
ಕೂದಲು ಮುಳುಗುವಷ್ಟು ಸೀಳಿದಡೆ ಸ್ಥೂಲ,
ಆ ಕೂದಲು ಹೆಚ್ಚಾದಡೆ ಸೂಕ್ಷ್ಮ.
ಈ ಉಭಯಾರ್ಥವ ತಿಳಿದು
ಸೂಕ್ಷ್ಮವಾದಡೆ ಮುನ್ನಿನಂತೆ ಧರಿಸಿಕೊಳ್ಳಬೇಕು.
ಸ್ಥೂಲವಾದಡೆ ಆ ಲಿಂಗದಲ್ಲಿ ಐಕ್ಯವಾಗಬೇಕು.
ಅದೆಂತೆಂದೊಡೆ:
“ವ್ರೀಹಿ ವ್ರೀಹ್ಯರ್ಧ ವಿಚ್ಛಿನ್ನಂ ಕೇಶಗ್ರಾಹ್ಯಂ ಪ್ರಮಾದತಃ |
ಪೀಠಾದಿ ಲಿಂಗಪರ್ಯಂತಂ ತ್ಯಜೇತ್ ಪ್ರಾಣಾನ್ ನಗಾತ್ಮಜೇ ||”
ಮತ್ತಂ;
“ತಂಡುಲಾರ್ಧಂ ಪೀಠಮಧ್ಯಂ ತದರ್ಧಂ ವೃತ್ತಗೋಮುಖಂ |
ತಿಲಮಾತ್ರ ಯೋನಿಲಿಂಗಂ ತದಾಧಿಕ್ಯಂ ತ್ಯಜೇದಸೂನ್ ||”
ಎಂದುದಾಗಿ,
ಇಂತಪ್ಪ ಲಿಂಗೈಕ್ಯರಾದ ಮಹಾಶರಣರು
ಮೂರುಲೋಕಕ್ಕೆ ಅಧಿಕರು ನೋಡಾ ಅಖಂಡೇಶ್ವರಾ./542
ಲಿಂಗ ಜಂಗಮಕ್ಕೆ ಮಾಡಿದ ಭಕ್ತಿ
ಮನಕೆ ಮನವೇ ಸಾಕ್ಷಿಯಾಗಿರಬೇಕಲ್ಲದೆ,
ಇದಿರಿಟ್ಟು ನುಡಿಯಲಾಗದು.
ಅದೇನು ಕಾರಣವೆಂದರೆ :
ಬಡವಂಗೆ ಭಾಗ್ಯ ದೊರೆಕೊಂಡಂತಿರಬೇಕಲ್ಲದೆ,
ಎನ್ನ ಪದಾರ್ಥವ ನಾನು ಮಾಡಿದೆನು ಅವರು ಕೈಕೊಂಡರೆಂದು
ತನ್ನ ಖ್ಯಾತಿ ಭಕ್ತಿಯನು
ಮನ ಹಿಗ್ಗಿ ಅನ್ಯರೊಡನೆ ಹೇಳಿಕೊಂಡರೆ
ಶಿವನೊಪ್ಪಿಕೊಳ್ಳನು, ಪುರಾತನರು ಮೆಚ್ಚರು.
ಅಂತಪ್ಪ ಖ್ಯಾತಿಭಕ್ತನ ಡಂಭಕದ ಭಕ್ತಿಯೆಂತಾಯಿತ್ತೆಂದರೆ,
ಹಾವಸಗಲ್ಲ ಮೆಟ್ಟಿ ಜಾರಿ ಬಿದ್ದು
ಕೊಡನೊಡೆದಂತಾಯಿತ್ತು ಕಾಣಾ ಅಖಂಡೇಶ್ವರಾ./543
ಲಿಂಗಕ್ಕೆ ಅರ್ಪಿಸಿದ ಪದಾರ್ಥವು ಕರ್ತವ್ಯವಲ್ಲ,
ಜಂಗಮಕ್ಕೆ ಅರ್ಪಿಸಿದ ಪದಾರ್ಥವು ಕರ್ತವ್ಯವು.
ಸ್ಥಾವರಕ್ಕೆ ಅರ್ಪಿಸಿದ ಪದಾರ್ಥವು ಕರ್ತವ್ಯವಲ್ಲ,
ಜಂಗಮಕ್ಕೆ ಅರ್ಪಿಸಿದ ಪದಾರ್ಥವು ಕರ್ತವ್ಯವು.
ಅದೆಂತೆಂದೊಡೆ :ಪರಮರಹಸ್ಯ-
“ಲಿಂಗಾರ್ಪಿತಂ ನ ಕರ್ತವ್ಯಂ ಕರ್ತವ್ಯಂ ಜಂಗಮಾರ್ಪಿತಂ |
ಮಯ ತೃಪ್ತಿರುಮಾದೇವಿ ಮಮ ಶ್ರೇಷ್ಠಂತು ಜಂಗಮ ||”
ಮತ್ತಂ,
“ಯಥಾ ಭೇರುಂಡಪಕ್ಷೀ ತು ದ್ವಿ ಮುಖೇನ ಪ್ರಭುಂಜತೇ |
ತಥಾ ಚ ಉಮಯಾದೇವಿ ಮಮ ತೃಪ್ತಿಸ್ತು ಜಂಗಮಃ ||”
ಎಂದುದಾಗಿ,
ಸ್ಥಾವರಕ್ಕೆ ಅರ್ಪಿಸಿದ ನೈವೇದ್ಯವು ಶಿವನಿಗೆ ತೃಪ್ತಿಯಾಗದು.
ಜಂಗಮಕ್ಕೆ ಅರ್ಪಿಸಿದ ನೈವೇದ್ಯವು
ಶಿವನಿಗೆ ಸದಾಕಾಲದಲ್ಲಿಯೂ ತೃಪ್ತಿಯಹುದು ನೋಡಾ ಅಖಂಡೇಶ್ವರಾ. /544
ಲಿಂಗಕ್ಕೆ ಸಮರ್ಪಿಸಿದ ಸಕಲದ್ರವ್ಯಂಗಳನು
ಲಿಂಗ ಸಹಿತವಾಗಿ ಭೋಗಿಸಬೇಕು.
ಅನರ್ಪಿತವ ಮುಟ್ಟದಿರಬೇಕು.
ಲಿಂಗದಲ್ಲಿ ಅತಿ ಸಾವಧಾನಭಕ್ತಿ ನೆಲೆಗೊಂಡಿರಬೇಕು.
ಅದೆಂತೆಂದೊಡೆ :
“ಲಿಂಗಾರ್ಪಿತಪ್ರಸಾದಸ್ಯ ಸುಭೋಗೀ ಲಿಂಗಸಹಿತಃ |
ಅನರ್ಪಿತಪರಿತ್ಯಾಗೀ ಪ್ರಸಾದಿಸ್ಥಲಮುತ್ತಮಮ್ ||”
ಎಂದುದಾಗಿ,
ಇಂತಪ್ಪ ಪರಮಪ್ರಸಾದಿಗಳ ಶ್ರೀಚರಣಕ್ಕೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./545
ಲಿಂಗಘ್ರಾಣದಲ್ಲಿ ಲಿಂಗಕ್ಕೆ ಲಿಂಗಗಂಧವನರ್ಪಿಸಿ,
ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ.
ಲಿಂಗಜಿಹ್ವೆಯಲ್ಲಿ ಲಿಂಗಕ್ಕೆ ಲಿಂಗರುಚಿಯನರ್ಪಿಸಿ
ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ.
ಲಿಂಗನೇತ್ರದಲ್ಲಿ ಲಿಂಗಕ್ಕೆ ಲಿಂಗರೂಪನರ್ಪಿಸಿ
ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ.
ಲಿಂಗತ್ವಕ್ಕಿನಲ್ಲಿ ಲಿಂಗಕ್ಕೆ ಲಿಂಗಸ್ಪರ್ಶವನರ್ಪಿಸಿ
ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ.
ಲಿಂಗಶ್ರೋತ್ರದಲ್ಲಿ ಲಿಂಗಕ್ಕೆ ಲಿಂಗಶಬ್ದವನರ್ಪಿಸಿ
ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ.
ಲಿಂಗಹೃದಯದಲ್ಲಿ ಲಿಂಗಕ್ಕೆ ಲಿಂಗತೃಪ್ತಿಯನರ್ಪಿಸಿ
ಲಿಂಗಪ್ರಸಾದವ ಗ್ರಹಿಸುತಿರ್ಪನಯ್ಯಾ ನಿಮ್ಮ ಪ್ರಸಾದಿ.
ಇಂತೀ ಒಳಹೊರಗೆ ತೆರಹಿಲ್ಲದೆ
ಲಿಂಗಕ್ಕೆ ಲಿಂಗವನರ್ಪಿಸಿ, ಲಿಂಗಪ್ರಸಾದವ ಗ್ರಹಿಸಿ,
ಘನಲಿಂಗವಾಗಿರ್ಪ ಮಹಾಪ್ರಸಾದಿಗಳ ಶ್ರೀಚರಣಕ್ಕೆ
ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ./546
ಲಿಂಗದ ನಡೆ, ಲಿಂಗದ ನುಡಿ,
ಲಿಂಗದ ನೋಟ, ಲಿಂಗದ ಬೇಟ, ಲಿಂಗದ ಕೂಟ,
ಲಿಂಗದಲ್ಲಿ ಮನವಡಗಿರ್ದ, ಲಿಂಗಾನುಭಾವಿಗಳ
ಸಂಗದಲ್ಲಿರಿಸಿ ಸಲಹಯ್ಯಾ ಎನ್ನ ಅಖಂಡೇಶ್ವರಾ./547
ಲಿಂಗದ ನಡೆಯಂತೆ ನಡೆವನಲ್ಲದೆ,
ಲೋಕದ ನಡೆಯಂತೆ ನಡೆವನಲ್ಲ ನೋಡಾ ನಿಮ್ಮ ಶರಣ.
ಲಿಂಗದ ನುಡಿಯಂತೆ ನುಡಿವನಲ್ಲದೆ,
ಲೋಕದ ನುಡಿಯಂತೆ ನುಡಿವನಲ್ಲ ನೋಡಾ ನಿಮ್ಮ ಶರಣ.
ಲಿಂಗದ ಮಚ್ಚಿನಲ್ಲಿ ಸುಳಿವನಲ್ಲದೆ,
ಲೋಕದ ಮಚ್ಚಿನಲ್ಲಿ ಸುಳಿವನಲ್ಲ ನೋಡಾ ನಿಮ್ಮ ಶರಣ.
ಲಿಂಗದ ವ್ಯವಹಾರದಲ್ಲಿರುತ್ತಿಹನಲ್ಲದೆ,
ಲೋಕದ ವ್ಯವಹಾರದಲ್ಲಿರುತ್ತಿಹನಲ್ಲ ನೋಡಾ ನಿಮ್ಮ ಶರಣ.
ಇಂತಪ್ಪ ಲಿಂಗಾಂಗಸಂಗಸಮರಸವನರಿದ ಶಿವಶರಣನ
ಶಿವನೆನಬೇಕಲ್ಲದೆ,
ಲೋಕದವರೆಂದು ನುಡಿವ ಸೂತಕದೇಹಿಗಳಿಗೆ
ಪಾತಕ ತಪ್ಪದಯ್ಯಾ ಅಖಂಡೇಶ್ವರಾ./548
ಲಿಂಗದೊಡನೆ ಸಹಭೋಜನ ಮಾಡುವ
ಲಿಂಗವಂತರೆಲ್ಲ ನೀವು ಕೇಳಿರೊ !
ನಿಮ್ಮ ತನು ಸಂಸಾರವಿಷಯಪ್ರಪಂಚಿನಲ್ಲಿ ಮುಳುಗಿರ್ಪುದು.
ನಿಮ್ಮ ಮನ ಮಾಯಾ ಮಲತ್ರಯಂಗಳಲ್ಲಿ ಸುತ್ತಿರ್ಪುದು.
ನಿಮ್ಮ ಜೀವ ಭವಭವದಲ್ಲಿ ತೊಳಲುತಿರ್ಪುದು.
ನೀವಿಂತು ಮಲಮಾಯಾಸ್ವರೂಪರಾಗಿರ್ದು
ಭಯವಿಲ್ಲದೆ ಅಮಲಲಿಂಗದೊಡನೆ ಸಹಭೋಜನವ ಮಾಡಿದಡೆ
ಅಘೋರ ನರಕದಲ್ಲಿಕ್ಕದೆ ಮಾಣ್ಬನೆ ನಮ್ಮ ಅಖಂಡೇಶ್ವರನು ?/549
ಲಿಂಗಪೂಜಕನಾದಡೆ ಜಂಗಮವನರ್ಚಿಸಬೇಕು.
ಲಿಂಗನಿಷ್ಠಾಪರನಾದಡೆ ಜಂಗಮದಲ್ಲಿ ವಿಶ್ವಾಸವನಿಡಬೇಕು.
ಲಿಂಗವ ಪೂಜಿಸಿ ಜಂಗಮವ ಮರೆತಡೆ
ಶಿರವಿಲ್ಲದ ದೇಹದಂತೆ ಕಾಣಾ ಅಖಂಡೇಶ್ವರಾ./550
ಲಿಂಗಪ್ರೇಮವುಳ್ಳವಂಗೆ ಭವಬಂಧನವಿಲ್ಲ ;
ಜಂಗಮಪ್ರೇಮವುಳ್ಳವಂಗೆ ಸಂಸಾರದ ತೊಡಕಿಲ್ಲ.
ಪ್ರಸಾದಪ್ರೇಮವುಳ್ಳವಂಗೆ ಇಹಪರದ ಎಡೆಯಾಟವಿಲ್ಲ.
ತಾನಿಲ್ಲದೆ ಮಾಡುವ ಭಕ್ತಂಗೆ
ಆವಾವ ಫಲಪದದ ಹಂಗಿಲ್ಲವಯ್ಯ ಅಖಂಡೇಶ್ವರಾ./551
ಲಿಂಗಪ್ರೇಮಿಗಳನಂತರುಂಟು ಜಗದೊಳಗೆ,
ಜಂಗಮಪ್ರೇಮಿಗಳಾರನೂ ಕಾಣೆನಯ್ಯ.
ಲಿಂಗಪೂಜಕರನಂತರುಂಟು ಜಗದೊಳಗೆ,
ಜಂಗಮಪೂಜಕರಾರನೂ ಕಾಣೆನಯ್ಯ.
ಲಿಂಗಪ್ರಾಣಿಗಳನಂತರುಂಟು ಜಗದೊಳಗೆ,
ಜಂಗಮಪ್ರಾಣಿಗಳಾರನೂ ಕಾಣೆನಯ್ಯ.
ಲಿಂಗದ ಬಾಯಿ ಜಂಗಮವೆಂದರಿದು
ಮಾಡಿ ಮನವಳಿದು ಘನವಾದ ಸಂಗನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./552
ಲಿಂಗಭಕ್ತನಾದ ಬಳಿಕ,
ತನ್ನಂಗದಲ್ಲಿ ಧರಿಸಿರ್ಪ ಲಿಂಗ ಒಂದಲ್ಲದೆ
ಅನ್ಯವನರಿಯದಿರಬೇಕು.
ಆ ಲಿಂಗದಲ್ಲಿ ನೈಷ್ಠಿಕಭಾವ ಇಂಬುಗೊಂಡಿರಬೇಕು.
ಆ ಲಿಂಗವೆ ಪತಿ ತಾನೆ ಸತಿಯೆಂಬ ದೃಢಬುದ್ಧಿ ನಿಶ್ಚಲವಾಗಿರಬೇಕು.
ಹೀಂಗಲ್ಲದೆ,
ತನ್ನ ದೇಹದ ಮೇಲೆ ಇರುತಿರ್ಪ ಲಿಂಗವ ಸಾಮಾನ್ಯವ ಮಾಡಿ,
ಕಂಡ ಕಂಡ ದೇಗುಲದೊಳಗಣ ಕಲ್ಲ
ದೇವರೆಂದು ಭಾವಿಸಿ ಪೂಜಿಸುವ
ಗಾವಿಲ ಮೂಳ ಹೊಲೆಯರ ಮುಖವ ನೋಡಲಾಗದಯ್ಯ
ಅದೆಂತೆಂದೊಡೆ :ವೀರಶೈವಸಂಗ್ರಹ
“ಇಷ್ಟಲಿಂಗಮವಿಶ್ವಾಸಂ ಸ್ಥಾವರಲಿಂಗೇನ ಪೂಜನಂ |
ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್ ||”
ಎಂದುದಾಗಿ,
ಇಂತಪ್ಪಂತ್ಯಜರನೇನೆಂಬೆನಯ್ಯಾ ಅಖಂಡೇಶ್ವರಾ./553
ಲಿಂಗವನರಿಯದ ಅಂಗವಿಕಾರಿಗೇತಕೋ ಶಿವಪ್ರಸಾದ ?
ಜಂಗಮವನರಿಯದ ಭಂಗಗೇಡಿಗೇತಕೋ ಶಿವಪ್ರಸಾದ ?
ಜ್ಞಾನವನರಿಯದ ಅಜ್ಞಾನಿಗೇತಕೋ ಶಿವಪ್ರಸಾದ ?
ನೀತಿಯನರಿಯದ ಆತ್ಮಸುಖಿಗೇತಕೋ ಶಿವಪ್ರಸಾದ ?
ಆಚಾರವನರಿಯದ ಅನಾಚಾರಿಗೇತಕೋ ಶಿವಪ್ರಸಾದ ಅಖಂಡೇಶ್ವರಾ?/554
ಲಿಂಗಾಂಗಸಾಮರಸ್ಯವನರಿಯದೆ
ಖಂಡಿತ ಬುದ್ಧಿಯಿಂದೆ ಲಿಂಗವ ಬೇರಿಟ್ಟುಕೊಂಡು
ಸಕಲಭೋಗೋಪಭೋಗವನು ಅರ್ಪಿಸಿದೆವೆಂಬ
ಭಂಗಗೇಡಿಗಳ ಮಾತ ಕೇಳಲಾಗದು.
ಅದೆಂತೆಂದೊಡೆ :
ಆ ಲಿಂಗಕ್ಕೆ ಶರಣನಂಗದ ಮಜ್ಜನಸುಖವಲ್ಲದೆ
ಬೇರೆ ಮಜ್ಜನಸುಖವುಂಟೆ ?
ಆ ಲಿಂಗಕ್ಕೆ ಶರಣನ ಲಲಾಟದ
ಶ್ರೀವಿಭೂತಿ ಗಂಧಾಕ್ಷತೆಯ ಶೃಂಗಾರವಲ್ಲದೆ
ಬೇರೆ ಶೃಂಗಾರವುಂಟೆ ?
ಆ ಲಿಂಗಕ್ಕೆ ಶರಣನ ಕರ್ಣದಲ್ಲಿಯ
ಪಂಚಮಹಾವಾದ್ಯದ ಕೇಳಿಕೆಯಲ್ಲದೆ ಬೇರೆ ಕೇಳಿಕೆಯುಂಟೆ ?
ಆ ಲಿಂಗಕ್ಕೆ ಶರಣನ ಜಿಹ್ವೆಯಲ್ಲಿಯ
ಷಡುರಸಾನ್ನದ ನೈವೇದ್ಯವಲ್ಲದೆ ಬೇರೆ ನೈವೇದ್ಯವುಂಟೆ ?
ಆ ಲಿಂಗಕ್ಕೆ ಶರಣನ ಕಂಗಳಲ್ಲಿಯ
ನಾನಾ ವಿಚಿತ್ರರೂಪಿನ ವಿನೋದವಲ್ಲದೆ ಬೇರೆ ವಿನೋದವುಂಟೆ ?
ಆ ಲಿಂಗಕ್ಕೆ ಶರಣನ ತ್ವಕ್ಕಿನಲ್ಲಿಯ
ವಸ್ತ್ರಾಭರಣದ ಅಲಂಕಾರವಲ್ಲದೆ ಬೇರೆ ಅಲಂಕಾರವುಂಟೆ ?
ಆ ಲಿಂಗಕ್ಕೆ ಶರಣನ ಘ್ರಾಣದಲ್ಲಿಯ
ಸುಗಂಧ ಪರಿಮಳವರ್ಪಿತವಲ್ಲದೆ ಬೇರೆ ಅರ್ಪಿತವುಂಟೆ ?
ಆ ಲಿಂಗಕ್ಕೆ ಶರಣನ ಪರಮ ಹೃದಯಕಮಲವೆ
ನಿಜವಾಸವಲ್ಲದೆ ಬೇರೆ ನಿಜವಾಸವುಂಟೆ ?
ಇಂತೀ ಶರಣಸನ್ನಿಹಿತಲಿಂಗ, ಲಿಂಗಸನ್ನಿಹಿತ ಶರಣನೆಂಬುದನರಿಯದೆ
ಅನಂತಕಾಲ ಲಿಂಗವ ಧರಿಸಿಕೊಂಡು ಲಿಂಗಾಂಗಿಯೆನಿಸಿಕೊಂಡಡೇನು ?
ಅದು ಪಶುವಿನ ತೊಡೆಯಲ್ಲಿ ಬರೆದ ಮುದ್ರೆಯಂತೆ ಕಂಡೆಯಾ
ಅಖಂಡೇಶ್ವರಾ./555
ಲಿಂಗಾರ್ಚನೆಯ ಮಾಡಿದ ಬಳಿಕ
ಜಂಗಮಾರ್ಚನೆಯ ಮಾಡಲೇಬೇಕು.
ಜಂಗಮದ ಪಾದೋದಕ ಪ್ರಸಾದವ ಕೊಳ್ಳಲೇಬೇಕು.
ನಿಚ್ಚ ನಿಚ್ಚ ಲಿಂಗದರ್ಚನೆಯ ಮಾಡಿ
ನಿಚ್ಚ ನಿಚ್ಚ ಜಂಗಮದರ್ಚನೆ ಪಾದೋದಕ ಪ್ರಸಾದವಿಲ್ಲದ ಬಳಿಕ
ಆ ಲಿಂಗಾರ್ಚನೆ ಎಂತಾಯಿತ್ತೆಂದಡೆ,
ಮೂಗಕೊಯ್ದ ಮೋರೆಯಂತೆ ನೋಡಾ ಅಖಂಡೇಶ್ವರಾ./556
ಲಿಂಗಾರ್ಚನೆಯಿಂದ ಜಂಗಮಾರ್ಚನೆಯಧಿಕ ನೋಡಾ.
ಅದೆಂತೆಂದೊಡೆ :
ಆದಿಯಲ್ಲಿ ಲಿಂಗಾರ್ಚನೆಯಮಾಡಿದ
ತಾರಜ ತಂಡಜ ರೋಮಜರಿಗೆ ಪ್ರಳಯವಾಯಿತ್ತು.
ಆದಿಯಲ್ಲಿ ಲಿಂಗಾರ್ಚನೆಯಮಾಡಿದ
ನವಕೋಟಿಬ್ರಹ್ಮರಿಗೆ ಪ್ರಳಯವಾಯಿತ್ತು.
ಆದಿಯಲ್ಲಿ ಲಿಂಗಾರ್ಚನೆಯಮಾಡಿದ
ಶತಕೋಟಿ ನಾರಾಯಣರಿಗೆ ಪ್ರಳಯವಾಯಿತ್ತು.
ಆದಿಯಲ್ಲಿ ಲಿಂಗಾರ್ಚನೆಯಮಾಡಿದ
ಅನಂತಕೋಟಿ ರುದ್ರರಿಗೆ ಪ್ರಳಯವಾಯಿತ್ತು.
ಇದು ಕಾರಣ ಲಿಂಗಾರ್ಚನೆ ಪ್ರಳಯಕ್ಕೊಳಗು,
ಜಂಗಮಾರ್ಚನೆ ಪ್ರಳಯಾತೀತವೆಂದರಿದು
ಜಂಗಮವೇ ಪ್ರಾಣವೆಂದು ನಂಬಿ,
ಅನಂತಕೋಟಿ ಪ್ರಳಯಂಗಳ ಮೀರಿ,
ಪರಬ್ರಹ್ಮವನೊಡಗೂಡಿದ ಸಂಗನಬಸವಣ್ಣನ ಶ್ರೀಪಾದಕ್ಕೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./557
ವಿದ್ಯೆಯ ಬಹಳ ಕಲಿತಡೇನು ಭಕ್ತಿಯಲ್ಲಿ ಶುದ್ಧನಲ್ಲದವನು.
ಬುದ್ಧಿಯಲ್ಲಿ ವಿಶೇಷವೆನಿಸಿದಡೇನು ಭಕ್ತಿಯಲ್ಲಿ ಬಡವನಾದನು.
ಅರ್ಥದಲ್ಲಿ ಅಧಿಕನಾದಡೇನು ಕರ್ತೃಶಿವನ ನೆನೆಯದವನು.
ಮದ್ದುಗುಣಿಕೆಯ ತಿಂದ ಮದೋನ್ಮತ್ತರ
ಎನ್ನತ್ತ ತೋರದಿರಯ್ಯ ಅಖಂಡೇಶ್ವರಾ./558
ವಿರಕ್ತ ವಿರಕ್ತರೆಂದು ನುಡಿದುಕೊಂಬ ಅಣ್ಣಗಳಿರಾ.
ನಿಮ್ಮ ವಿರಕ್ತಿಯ ಪರಿಯೆಂತುಂಟು ಹೇಳಿರೋ ?
ಅರಿಯದಿರ್ದಡೆ ನೀವು ಕೇಳಿರೊ.
ವಿರಕ್ತನಾದ ಬಳಿಕ
ಅಶನ ವ್ಯಸನ ವಿಷಯ ವಿಕಾರಕ್ಕೆ ದೂರನಾಗಿರಬೇಕು.
ವಿರಕ್ತನಾದ ಬಳಿಕ
ತಾ ಮುನ್ನ ಹೇಸಿ ಬಿಟ್ಟ ಹೊನ್ನು ಹೆಣ್ಣು ಮಣ್ಣು ಮರಳಿ ಮುಟ್ಟದಿರಬೇಕು.
ವಿರಕ್ತನಾದ ಬಳಿಕ ಆಶಾಪಾಶ ತಾಮಸವ ತೊಲಗಿಸಬೇಕು.
ವಿರಕ್ತನಾದ ಬಳಿಕ
ಅಷ್ಟಮದಂಗಳ ಅರಿಷಡ್ವರ್ಗವ ನಷ್ಟಮಾಡಬೇಕು.
ವಿರಕ್ತನಾದ ಬಳಿಕ ಹಮ್ಮು ಬಿಮ್ಮು ಗರ್ವ ಅಹಂಕಾರವ ಕೆಡೆಮೆಟ್ಟಬೇಕು.
ವಿರಕ್ತನಾದ ಬಳಿಕ ಅಂಗ ಮನ ಪ್ರಾಣೇಂದ್ರಿಯಂಗಳಲ್ಲಿ ಮುಸುಕಿದ
ಅಜ್ಞಾನ ಕತ್ತಲೆಯ ಕಳೆಯಬೇಕು.
ವಿರಕ್ತನಾದ ಬಳಿಕ ಸರ್ವಾವಸ್ಥೆಯಲ್ಲಿ ಲಿಂಗವನಪ್ಪಿರಬೇಕು.
ವಿರಕ್ತನಾದ ಬಳಿಕ ಸಂಕಲ್ಪ ವಿಕಲ್ಪವನಳಿದು
ಮನವು ಮಹಾಲಿಂಗದಲ್ಲಿ ನಿಕ್ಷೇಪವಾಗಿರಬೇಕು.
ವಿರಕ್ತನಾದ ಬಳಿಕ ಚಿಂತೆ ಭ್ರಾಂತುಗಳನಳಿದು
ಭಾವ ನಿರ್ಭಾವವಾಗಿ ಮಹಾಬಯಲ ನಿಜವಾಸಿಯಾಗಿರಬೇಕು.
ಇಷ್ಟುಳ್ಳಡೆ ಪರಮವಿರಕ್ತನೆಂಬೆನು,
ಪಾಶವಿರಹಿತನೆಂಬೆನು, ವೀರಮಾಹೇಶ್ವರನೆಂಬೆನು.
ಹೀಂಗಲ್ಲದೆ ಭ್ರಾಂತಿಬುದ್ಧಿಯಿಂದೆ
ಪರರೊಡವೆ ಪರಸ್ತ್ರೀ ಪರದಾರಗಮನಂಗಳಲ್ಲಿ ಹರಿದಾಡುವ
ಸಂತೆಯ ಸೂಳೆಯ ಮಕ್ಕಳ ವಿರಕ್ತರೆಂದರೆ
ನಗುವರಯ್ಯ ನಿಮ್ಮ ಶರಣರು ಅಖಂಡೇಶ್ವರಾ./559
ವಿರಕ್ತಂಗೆ ಕಾಮಕ್ರೋಧಂಗಳುಂಟೆ ?
ವಿರಕ್ತಂಗೆ ಲೋಭಮೋಹಂಗಳುಂಟೆ ?
ವಿರಕ್ತಂಗೆ ಮದಮತ್ಸರಂಗಳುಂಟೆ ?
ವಿರಕ್ತಂಗೆ ಆಶಾರೋಷಂಗಳುಂಟೆ ?
ವಿರಕ್ತಂಗೆ ಕ್ಲೇಶತಾಮಸಂಗಳುಂಟೆ ?
ವಿರಕ್ತಂಗೆ ದೇಹಪ್ರಾಣಾಭಿಮಾನಂಗಳುಂಟೆ ?
ವಿರಕ್ತಂಗೆ ಇಹಪರದ ತೊಡಕುಂಟೆ ?
ವಿರಕ್ತಂಗೆ ನಾನು ನನ್ನದೆಂಬ ಪಕ್ಷಪಾತವುಂಟೆ ?
ಇಂತೀ ಭೇದವನರಿಯದ ವಿರಕ್ತಂಗೆ
ಎಂತು ಮಚ್ಚುವನಯ್ಯಾ ನಮ್ಮ ಅಖಂಡೇಶ್ವರ ?/560
ವಿರಕ್ತನೆನಿಸುವಂಗಾವುದು ಚಿಹ್ನೆವೆಂದೊಡೆ :
ವಿಷಯವಿಕಾರವ ಸುಟ್ಟಿರಬೇಕು.
ಬಯಕೆ ನಿರ್ಬಯಕೆಯಾಗಿರಬೇಕು.
ಸ್ತ್ವರಜತಮವೆಂಬ ತ್ರೈಗುಣಂಗಳನಿಟ್ಟೊರಸಿರಬೇಕು.
ಅದೆಂತೆಂದೊಡೆ :
“ವಿಕಾರಂ ವಿಷಯಾತ್ದೂರಂ ರಕಾರಂ ರಾಗವರ್ಜಿತಂ |
ತಕಾರಂ ತ್ರೈಗುಣಂ ನಾಸ್ತಿ ವಿರಕ್ತಸ್ಯ ಸುಲಕ್ಷಣಂ ||”
ಇಂತಪ್ಪ ವಿರಕ್ತನ ಶ್ರೀಪಾದಕ್ಕೆ ನಮೋ ನಮೋ
ಎಂಬೆನಯ್ಯಾ ಅಖಂಡೇಶ್ವರಾ./561
ವಿಶ್ವತೋ ಮುಖ ವಿಶ್ವತೋ ಪಾದ
ವಿಶ್ವತೋ ಬಾಹು ವಿಶ್ವತೋ ಚಕ್ಷು
ವಿಶ್ವತೋ ವ್ಯಾಪಕನೆನಿಸಿ ಬಂದಿರಯ್ಯ
ಎನ್ನ ಕರಸ್ಥಲಕ್ಕೆ ಅಖಂಡೇಶ್ವರಾ./562
ವಿಶ್ವದೊಳಗೆಲ್ಲ ನೀನೇ ದೇವ
ವಿಶ್ವಭರಿತನು ನೀನೇ ದೇವ.
ವಿಶ್ವರೂಪನು ನೀನೇ ದೇವ.
ವಿಶ್ವಪತಿ ನೀನೇ ದೇವ.
ವಿಶ್ವಾತೀತನು ನೀನೇ ದೇವ ಅಖಂಡೇಶ್ವರಾ./563
ವಿಶ್ವಾಸನೋಟ ಜಾರಿದಡೆ ಜಾರುವನಯ್ಯಾ ಶ್ರೀಗುರುವು.
ವಿಶ್ವಾಸನೋಟ ಜಾರಿದಡೆ ಜಾರುವನಯ್ಯಾ ಶಿವಲಿಂಗವು.
ವಿಶ್ವಾಸನೋಟ ಜಾರಿದಡೆ ಜಾರುವನಯ್ಯಾ ಪರಮಜಂಗಮವು.
ವಿಶ್ವಾಸನೋಟ ಜಾರಿದಡೆ ಜಾರುವವಯ್ಯಾ
ಪಾದೋದಕ ಪ್ರಸಾದಂಗಳು.
ಇಂತೀ ಪಂಚವಿಧವು ಪರಬ್ರಹ್ಮವೆಂದು
ನಂಬಿದ ಭಕ್ತರ ಹೃದಯದಲ್ಲಿ
ಹೆರೆಹಿಂಗದೆ ನಿರಂತರ ನೆಲೆಸಿರ್ಪನು ನಮ್ಮ ಅಖಂಡೇಶ್ವರನು./564
ವಿಷಯವೆಂಬ ಕಾಳಗಿಚ್ಚಿನ ಜ್ವಾಲೆಯಲ್ಲಿ
ಈರೇಳುಲೋಕವೆಲ್ಲ ಹತವಾಗುತಿರ್ಪುದು ನೋಡಾ !
ಅದೆಂತೆಂದೊಡೆ :
ಕುಂಡಲಿಯೆಂಬ ಮಾಯಾಸರ್ಪನು
ತನ್ನ ಬಾಲವ ಬ್ರಹ್ಮರಂಧ್ರಕ್ಕೇರಿಸಿ,
ನಾಭಿಚಕ್ರವ ಸುತ್ತಿಕೊಂಡು,
ಅಧೋಮುಖವಾಗಿ ಇಂದ್ರಿಯವಿಷವ ಕಾರುತಿಪ್ಪುದು ನೋಡಾ !
ಆ ವಿಷದ ನಂಜು ತಲೆಗೇರಿದಲ್ಲಿ
ಅಸಿಯಜವ್ವನೆಯರ ಸಂಗಸುಖ ಬಹುಸವಿಯೆಂದು
ತಲೆದೂಗುತ್ತಿಪ್ಪುದು ನೋಡಾ ಸಕಲ ಪ್ರಾಣಿಗಳು.
ಇದು ಪಶುಪತಿಯುಮಾಡಿದ
ಮಾಯದ ವಿಧಿಯೆಂದು ತಿಳಿಯದೆ
ಹಸಗೆಟ್ಟುಹೋಯಿತ್ತು ನೋಡಾ ಮೂಜಗವೆಲ್ಲ ಅಖಂಡೇಶ್ವರಾ./565
ವೀರಶೈವ ಭಕ್ತಮಾಹೇಶ್ವರರು
ಅಂಗಲಿಂಗದೊಳೊಡಗೂಡುವನ್ನಬರ,
ಶೀಲ ವ್ರತ ನೇಮಂಗಳ ಸೀಮೆಯ ಕಟ್ಟಿ
ನಡೆಯಬೇಕೆಂದು ನುಡಿಯುತಿರ್ಪರು.
ಎನಗೆ ಶೀಲ ವ್ರತ ನೇಮಂಗಳು ಆವಾವವೆಂದಡೆ :
ಪರಧನ ಪರಸ್ತ್ರೀಯರ ಮುಟ್ಟೆನೆಂಬುದೆ ಎನ್ನ ಶೀಲ.
ಒಡಲುಪಾಧಿಕೆಯವಿಡಿದು
ಅನ್ಯರ ಅನ್ನ ವಸ್ತ್ರಂಗಳ ಬಾಯ್ದೆರದು ಬೇಡೆನೆಂಬುದೆ ಎನ್ನ ವ್ರತ.
ಸಕಲ ಪದಾರ್ಥಂಗಳ ಲಿಂಗಕ್ಕೆ ಕೊಡದೆ
ಎನ್ನ ಅಂಗದಿಚ್ಛೆಗೆ ಕೊಳ್ಳೆನೆಂಬುದೆ ಎನ್ನ ನೇಮ.
ಇಂತೀ ಶೀಲ ವ್ರತನೇಮಂಗಳಳವಡಿಸಿಕೊಂಡು,
ಎನ್ನೊಡೆಯ ಅಖಂಡೇಶ್ವರಲಿಂಗವನೊಡಗೂಡಿ
ಮರಳಿಬಾರೆನೆಂಬುದೆ ಎನ್ನ ಅರುಹಿನ ಗೊತ್ತು./566
ವೇದ ಶಾಸ್ತ್ರ ಆಗಮ ಪುರಾಣ ತರ್ಕ
ವ್ಯಾಕರಣ ಇತಿಹಾಸಂಗಳ
ಓದಿ ಕೇಳಿ ಹೇಳುವಾತ ಜಾಣನೆ ? ಅಲ್ಲಲ್ಲ.
ಜಾತಿಗೊಂದು ಮಾತು ಕಲಿತು
ಸರ್ವರಿಗೆ ನೀತಿ ಹೇಳುವಾತ ಜಾಣನೇ ? ಅಲ್ಲಲ್ಲ.
ಮತ್ತಾರು ಜಾಣರೆಂದಡೆ :
ಮತ್ತಮತಿಯೆಂಬ ಕತ್ತಲೆಯ ಕಳೆದು,
ತಥ್ಯಮಿಥ್ಯ ರಾಗದ್ವೇಷವನಳಿದು
ನಿತ್ಯ ಲಿಂಗದಲ್ಲಿ ಚಿತ್ತವಡಗಿರ್ಪ
ಚಿನ್ಮಯಶರಣನೇ ಜಾಣನಯ್ಯಾ ಅಖಂಡೇಶ್ವರಾ./567
ವೇದ ಶಾಸ್ತ್ರಾಗಮ ಪುರಾಣಂಗಳನೋದಿ
ಆದಿಯ ಪಥವ ಸಾಧಿಸಬೇಕೆಂಬ ಭೇದಬುದ್ಧಿಯ
ಭ್ರಾಂತಜ್ಞಾನಿಯಲ್ಲ ನೋಡಾ ಲಿಂಗೈಕ್ಯನು.
ಷಟ್ದರ್ಶನಂಗಳ ಶೋಧಿಸಿ ಕಡುಮುಕ್ತಿಯ ಪಡೆವೆನೆಂಬ
ಜಡಮತಿಯವನಲ್ಲ ನೋಡಾ ಲಿಂಗೈಕ್ಯನು.
ಕುಟಿಲವ್ಯಾಪಾರದಿಂದೆ ಸಟೆಯನೆ ಸಂಪಾದಿಸಿ
ಘಟವ ಹೊರೆವನಲ್ಲ ನೋಡಾ ಲಿಂಗೈಕ್ಯನು.
ಕಾಕುಮನದ ಕಳವಳನಡಗಿಸಿ ಲೋಕರಂಜನೆಯನುಡುಗಿಸಿ
ಕುರುಹಿಲ್ಲದ ಬ್ರಹ್ಮದಲ್ಲಿ ತೆರಹಿಲ್ಲದಿರ್ಪನು ನೋಡಾ
ಅಖಂಡೇಶ್ವರಾ ನಿಮ್ಮ ನಿಜಲಿಂಗೈಕ್ಯನು./568
ವೇದಂಗಳಿಗಭೇದ್ಯವಾದ ಶಿವನ
ಭೇದಿಸಿ ಕಂಡರು ನೋಡಾ ಶರಣರು.
ಶಾಸ್ತ್ರಂಗಳಿಗಸಾಧ್ಯವಾದ ಶಿವನ
ಸಾಧಿಸಿ ಕಂಡರು ನೋಡಾ ಶರಣರು.
ಆಗಮಂಗಳಿಗತಿರಹಸ್ಯವಾದ ಶಿವನ
ಅರಿದು ಕಂಡರು ನೋಡಾ ಶರಣರು.
ಅಗಮ್ಯ ಅಪ್ರಮಾಣವಾದ
ಪರಶಿವನ ಪ್ರಮಾಣಿಸಿ ಕಂಡು
ಒಳಪೊಕ್ಕು ಬೆರಸಿದರು ನೋಡಾ
ನಮ್ಮ ಅಖಂಡೇಶ್ವರನ ಶರಣರು./569
ವೇದಂಗಳು ನಿಮ್ಮ ಭೇದಿಸಲರಿಯವು ನೋಡಾ !
ಆಗಮಂಗಳು ನಿಮ್ಮ ಹೊಗಳಲರಿಯವು ನೋಡಾ !
ಶ್ರುತಿತತಿಗಳು ನಿಮ್ಮ ಸ್ತುತಿಸಲರಿಯವು ನೋಡಾ !
ಶಾಸ್ತ್ರಂಗಳು ನಿಮ್ಮ ಸಾಧಿಸಲರಿಯವು ನೋಡಾ ಅಖಂಡೇಶ್ವರಾ./570
ವೇದಂಗಳು ನಿಮ್ಮ ಭೇದಿಸಿ ಕಂಡಿಹೆವೆಂದು
ಕಾಣಲರಿಯದೆ ಬಳಲಿಬೆಂಡಾಗಿ ಹೋದುವು.
ಶಾಸ್ತ್ರಂಗಳು ನಿಮ್ಮ ಸಾಧಿಸಿ ಕಂಡಿಹೆವೆಂದು
ಕಾಣಲರಿಯದೆ ಸಂದೇಹಕ್ಕೊಳಗಾಗಿ ಹೋದುವು.
ಆಗಮಂಗಳು ನಿಮ್ಮನರಿದು ಕಂಡಿಹೆವೆಂದು
ಕಾಣಲರಿಯದೆ ಮೂಗರಾಗಿ ಹೋದುವು.
ಇಂತೀ ವೇದ ಶಾಸ್ತ್ರ ಆಗಮಂಗಳನೋದಿ ನಿಮ್ಮ
ಕಂಡಿಹೆನೆಂಬವರೆಲ್ಲ ಇನ್ನೆಂತು ಕಾಂಬುವರಯ್ಯಾ ಅಖಂಡೇಶ್ವರಾ. ?/571
ವೇದವನೋದಿದ ವೇದಜ್ಞಾನಿಗಳು ಸರಿಯಲ್ಲ.
ಶಾಸ್ತ್ರವನೋದಿದ ಶಾಸ್ತ್ರಜ್ಞಾನಿಗಳು ಸರಿಯಲ್ಲ.
ಆಗಮವನೋದಿದ ಆಗಮಜ್ಞಾನಿಗಳು ಸರಿಯಲ್ಲ.
ಆದಿಯನಾದಿಯಿಂದತ್ತತ್ತವಾದ
ಮಹಾಘನವಸ್ತುವನೊಡಗೂಡಿದ ಶರಣಂಗೆ
ಇವರಾರೂ ಸರಿಯಲ್ಲವಯ್ಯಾ ಅಖಂಡೇಶ್ವರಾ./572
ಶರಣ ಗಮನಿಯಾದಡೆ ಕಿರಿದೆಂಬರು,
ಶರಣ ನಿರ್ಗಮನಿಯಾದಡೆ ಹಿರಿದೆಂಬರು,
ನಾವಿದನರಿಯೆವಯ್ಯಾ.
ಶರಣ ಆಶ್ರಮವಂತನಾದಡೆ ಕಿರಿದೆಂಬರು,
ಶರಣ ನಿರಾಶ್ರಮವಂತನಾದಡೆ ಹಿರಿದೆಂಬರು,
ನಾವಿದನರಿಯೆವಯ್ಯಾ
ಶರಣ ಸರ್ವವ್ಯಾಪಾರಿಯಾದಡೆ ಕಿರಿದೆಂಬರು,
ಶರಣ ನಿವ್ರ್ಯಾಪಾರಿಯಾದಡೆ ಹಿರಿದೆಂಬರು,
ನಾವಿದನರಿಯೆವಯ್ಯಾ.
ಶರಣ ಸಕಲಭೋಗೋಪಭೋಗಿಯಾದಡೆ ಕಿರಿದೆಂಬರು,
ಶರಣ ನಿಭರ್ೊಗಿಯಾದಡೆ ಹಿರಿದೆಂಬರು,
ನಾವಿದನರಿಯೆವಯ್ಯಾ.
ಹುರಿದ ಬೀಜ ಮರಳಿ ಹುಟ್ಟಬಲ್ಲುದೆ ?
ಬೆಂದ ನುಲಿ ಮರಳಿ ಕಟ್ಟುವಡೆವುದೆ ?
ಹುಟ್ಟುಗೆಟ್ಟ ಶರಣ ಸಟೆಯ ದೇಹವ ಧರಿಸಿ
ಸಾಕಾರವೆನಿಸಿ ಲೋಕದೊಳಡಗಿರ್ದಡೇನು
ಲೋಕದಂತಾತನೆ ? ಅಲ್ಲಲ್ಲ.
ಆತನ ಪರಿ ಬೇರೆ ಕಾಣಿರೊ
ಅದೆಂತೆಂದೊಡೆ :
ಬಿರಿಸಿನೊಳಗಣ ಮದ್ದು ಅಗ್ನಿಯ ಸೋಂಕಿ
ಅಗ್ನಿಯ ಸ್ವರೂಪವಾಗಿ ತೋರುವಂತೆ,
ಆ ಶರಣನ ತನುಮನಭಾವ ಸರ್ವಕರಣೇಂದ್ರಿಯಗಳೆಲ್ಲ
ಲಿಂಗವನಪ್ಪಿ ಲಿಂಗಮಯವಾಗಿ ತೋರುತಿರ್ಪವಾಗಿ,
ಆತ ಆವಾವ ಕ್ರಿಯೆಯಲ್ಲಿರ್ದಡೇನು, ಆವಾವ ಆಚಾರದಲ್ಲಿರ್ದಡೇನು,
ಆವಾವ ಭೋಗದಲ್ಲಿರ್ದಡೇನು,
ಕುಂದು ಕೊರತೆಯಿಲ್ಲ, ಹಿಂದೆ ಶಂಕೆಯಿಲ್ಲ, ಮುಂದೆ ಜನ್ಮವಿಲ್ಲ.
ಆ ಶರಣನು ಎಂತಿರ್ದಂತೆ ಸಹಜಪರಬ್ರಹ್ಮವೆ ಆಗಿರ್ಪನು ನೋಡಿರೊ
ನಮ್ಮ ಅಖಂಡೇಶ್ವರಲಿಂಗದಲ್ಲಿ./573
ಶರಣನ ಕಂಗಳೆ ಕಾಮಧೇನುವಿನ ಹಿಂಡು.
ಶರಣನ ಹಸ್ತಂಗಳೆ ಕಲ್ಪವೃಕ್ಷದ ವನ.
ಶರಣನ ಪಾದಂಗಳೆ ಚಿಂತಾಮಣಿಯ ರಾಶಿ.
ಶರಣನ ಬಾಯೆ ಸಂಜೀವನದ ಬಣವೆ.
ನೀವೊಲಿದ ಶರಣನ ಮನವೆ
ಪರುಷದ ಪರ್ವತವು ನೋಡಾ ಅಖಂಡೇಶ್ವರಾ. /574
ಶರಣನ ಚರಣದಲ್ಲಿ ನಡೆಪರುಷ.
ಶರಣನ ಕರದಲ್ಲಿ ಹಸ್ತಪರುಷ.
ಶರಣನ ಜಿಹ್ವೆಯಲ್ಲಿ ರುಚಿಪರುಷ.
ಶರಣನ ನೇತ್ರದಲ್ಲಿ ನೋಟಪರುಷ.
ನಮ್ಮ ಅಖಂಡೇಶ್ವರನ ಶರಣನ ಮನದಲ್ಲಿ
ಭಾವಪರುಷವಿರ್ಪುದು ನೋಡಿರೊ./575
ಶರಣನ ತನುವೆ ಕೈಲಾಸ ತಾನೆ ನೋಡಾ.
ಶರಣನ ಮನವೆ ಸಾಕ್ಷಾತ್ ಪರಶಿವಲಿಂಗವು ತಾನೆ ನೋಡಾ.
ಶರಣನ ಕರಣಂಗಳೆಲ್ಲ ಸಕಲಪ್ರಮಥಗಣಂಗಳು ತಾನೆ ನೋಡಾ.
ನಮ್ಮ ಅಖಂಡೇಶ್ವರನ ಚಾರಿತ್ರದಲ್ಲಿ ಸುಳಿವ
ಶರಣನ ಸುಳುಹೆಲ್ಲ ಜಗತ್ಪಾವನವು ತಾನೆ ನೋಡಾ./576
ಶರಣನಾದಡೆ ಮುರಿದ ಬಂಗಾರವ
ಬೆಳಗಾರದಲ್ಲಿ ಬೆಚ್ಚಂತಿರಬೇಕು ಲಿಂಗದಲ್ಲಿ,
ಶರಣನಾದಡೆ ಶುಭ್ರವಸ್ತ್ರಕ್ಕೆ ಅಚ್ಚೊತ್ತಿದಂತಿರಬೇಕು ಲಿಂಗದಲ್ಲಿ.
ಶರಣನಾದಡೆ ಕರಕುಕಟ್ಟಿರದ
ಲೋಹದ ಪುತ್ಥಳಿಯಂತಿರಬೇಕು ಲಿಂಗದಲ್ಲಿ.
ಇಂತೀ ಸಮರಸಭಾವವನರಿಯದೆ
ಹುಸಿಹುಂಡನಂತೆ ವೇಷವ ಧರಿಸಿ
ಗ್ರಾಸಕ್ಕೆ ತಿರುಗುವ ವೇಷಗಳ್ಳರ
ಎನಗೊಮ್ಮೆ ತೋರದಿರಯ್ಯಾ ಅಖಂಡೇಶ್ವರಾ./577
ಶರಣನಿರ್ದಲ್ಲಿ ಸಕಲರ್ತಿರ್ಥಕ್ಷೇತ್ರಂಗಳಿರ್ಪವು.
ಶರಣನಿರ್ದಲ್ಲಿ ಕೈಲಾಸ ಮೇರು ಮಂದರ ಕುಲಶೈಲಂಗಳಿರ್ಪವು.
ಶರಣನಿರ್ದಲ್ಲಿ ಈರೇಳುಭುವನ ಹದಿನಾಲ್ಕು ಲೋಕಂಗಳಿರ್ಪವು.
ನಮ್ಮ ಅಖಂಡೇಶ್ವರನ ಶರಣನಿರ್ದಲ್ಲಿ
ಅನಂತಕೋಟಿ ಬ್ರಹ್ಮಾಂಡಗಳಿರ್ಪವು ನೋಡಾ./578
ಶರಣಭರಿತ ಶಿವನು ಶಿವಭರಿತ ಶರಣನೆಂಬುದು ನಿಜವಲ್ಲದೆ,
ಜಗಭರಿತ ಶಿವನು ಶಿವಭರಿತ ಜಗವೆಂಬುದು ಹುಸಿ ನೋಡಾ !
ಅದೇನು ಕಾರಣವೆಂದೊಡೆ :
ಜಗಕ್ಕೆ ಪ್ರಳಯ ಮಹಾಪ್ರಳಯಂಗಳುಂಟು.
ಇದು ಕಾರಣ, ಪ್ರಳಯಾತೀತ ಶರಣಸನ್ನಿಹಿತ ನಮ್ಮ
ಅಖಂಡೇಶ್ವರ./579
ಶರಣರ ಸಂಗದಿಂದೆ ತನು ಶುದ್ಧವಪ್ಪುದು ನೋಡರೆ.
ಶರಣರ ಸಂಗದಿಂದೆ ಮನ ನಿರ್ಮಲವಪ್ಪುದು ನೋಡಿರೆ.
ಶರಣರ ಸಂಗದಿಂದೆ ಸಕಲೇಂದ್ರಿಯಂಗಳು
ಲಿಂಗಮುಖವಪ್ಪುವು ನೋಡರೆ.
ನಮ್ಮ ಅಖಂಡೇಶ್ವರನ ಶರಣರ ಸಂಗದಿಂದೆ
ಮುಂದೆ ಸತ್ಪಥವು ದೊರೆಕೊಂಬುದು ತಪ್ಪದು ನೋಡಿರೆ./580
ಶರಣಲಿಂಗಕ್ಕೆ ನೋಡುವ ಕಣ್ಣು
ಒಂದಲ್ಲದೆ ಎರಡಿಲ್ಲ ಕಾಣಿರೊ.
ಶರಣಲಿಂಗಕ್ಕೆ ಕೇಳುವ ಶ್ರೋತ್ರ
ಒಂದಲ್ಲದೆ ಎರಡಿಲ್ಲ ಕಾಣಿರೊ.
ಶರಣಲಿಂಗಕ್ಕೆ ವಾಸಿಸುವ ನಾಸಿಕ
ಒಂದಲ್ಲದೆ ಎರಡಿಲ್ಲ ಕಾಣಿರೊ.
ಶರಣಲಿಂಗಕ್ಕೆ ರುಚಿಸುವ ಜಿಹ್ವೆ
ಒಂದಲ್ಲದೆ ಎರಡಿಲ್ಲ ಕಾಣಿರೊ.
ಶರಣಲಿಂಗಕ್ಕೆ ಸೋಂಕುವ ತ್ವಕ್ಕು
ಒಂದಲ್ಲದೆ ಎರಡಿಲ್ಲ ಕಾಣಿರೊ.
ಶರಣಲಿಂಗಕ್ಕೆ ನೆನೆವ ಮನ
ಒಂದಲ್ಲದೆ ಎರಡಿಲ್ಲ ಕಾಣಿರೊ.
ನಮ್ಮ ಅಖಂಡೇಶ್ವರನಲ್ಲಿ ಒಡವೆರೆದ
ಶರಣಲಿಂಗಕ್ಕೆ ಅಂಗ ಪ್ರಾಣಂಗಳೊಂದಲ್ಲದೆ
ಎರಡಿಲ್ಲ ಕಾಣಿರೊ. /581
ಶರಣಸ್ಥಲದ ಕುರುಹಿನ ಮಾರ್ಗವನರಿಯದೆ,
ನಾನು ಶರಣ ತಾನು ಶರಣನೆಂದು ನುಡಿವ
ಕರ್ಮಜೀವಿಗಳ ಮುಖವ ನೋಡಲಾಗದು.
ಅದೇನು ಕಾರಣವೆಂದೊಡೆ :
ತಾವು ಶರಣರಾದಡೆ
ತಮ್ಮ ಚಿತ್ತಿನ ಕೊನೆಯಲ್ಲಿ ಮುಸುಕಿದ ಕತ್ತಲೆಯ ಕಳೆಯಬೇಕು.
ತಾವು ಶರಣರಾದಡೆ
ತಮ್ಮ ಆತ್ಮನ ಸುತ್ತಿದ ಅಷ್ಟಮದಂಗಳ ಕತ್ತರಿಗಡಿಯಬೇಕು.
ತಾವು ಶರಣರಾದಡೆ
ತಮ್ಮ ಲಿಂಗದಲ್ಲಿ ಅತ್ತಿತ್ತ ಹರಿದಾಡುವ ಮನವ ನಿಕ್ಷೇಪವ ಮಾಡಬೇಕು.
ತಾವು ಶರಣರಾದಡೆ
ನಿತ್ಯಾನಿತ್ಯವನರಿದು ತತ್ತಾ ್ವತತ್ತ್ವಂಗಳ ವ್ಯಕ್ತೀಕರಿಸಿ
ಮಹಾಜ್ಞಾನದ ಮೊತ್ತದಲ್ಲಿ ಸುಳಿಯಬೇಕು.
ಇಂತೀ ಭೇದವನರಿಯದೆ ತುತ್ತು ಸವಿಯೆಂದುಂಡು
ಮರ್ತ್ಯದ ವಿಷಯಪ್ರಪಂಚಿನ ಸುಖದಲ್ಲಿ ವ್ಯವಹರಿಸಿ,
ಅಜ್ಞಾನದ ಕತ್ತಲೆಯಲ್ಲಿ ಸೆರೆಯ ಸಿಕ್ಕಿ ಮುಂದುಗಾಣದೆ
ಮುಕ್ತಿಯ ಹೊಲಬುದಪ್ಪಿ ಹೋಗುವ ವ್ಯರ್ಥಪ್ರಾಣಿಗಳ ಕಂಡು
ನಗುತಿರ್ದನು ನೋಡಾ ನಮ್ಮ ಅಖಂಡೇಶ್ವರ./582
ಶಿವ ಶಿವಾ ಮಹಾಪ್ರಸಾದ
ಎನ್ನ ಮನದಾಳಾಪವನವಧರಿಸಯ್ಯ ಸ್ವಾಮಿ.
ಎನಗೆ ಹೊನ್ನು ಬೇಡ, ಎನಗೆ ಹೆಣ್ಣು ಬೇಡ, ಎನಗೆ ಮಣ್ಣು ಬೇಡ,
ಎನಗೆ ಇಹಲೋಕದ ಭೋಗ ಬೇಡ,
ಪರಲೋಕದ ಮೋಕ್ಷ ಬೇಡ,
ಎನಗೆ ಆವಾವ ಫಲಪದವು ಬೇಡ.
ನಿಮ್ಮ ಶ್ರೀಚರಣವನೊಡಗೂಡುವ
ಅವಿರಳ ಸಮರಸ ಭಕ್ತಿ ಜ್ಞಾನ
ಪರಮವೈರಾಗ್ಯದ ಪದವನೆ ಕರುಣಿಸಿ,
ಮತ್ರ್ಯದತ್ತ ಮರಳಿ ಬಾರದಂತೆ ಮಾಡಯ್ಯ ಎನ್ನ
ಅಖಂಡೇಶ್ವರಾ, ನಿಮ್ಮನಿಂತು ಬೇಡಿಕೊಂಬೆನು./583
ಶಿವ ಶಿವಾ, ನೀ ನಡೆಸಿದಂತೆ ನಡೆವೆ.
ಶಿವ ಶಿವಾ, ನೀ ನುಡಿಸಿದಂತೆ ನುಡಿವೆ.
ನಿಮ್ಮ ಊಳಿಗವ ಮಾಡುವೆ.
ನೀವಿರಿಸಿದಲ್ಲಿ ಇರುವೆನಯ್ಯ ಅಖಂಡೇಶ್ವರಾ./584
ಶಿವಂಗೆ ಐದುಮುಖವಿರ್ಪುದ ಸಕಲರು ಬಲ್ಲರು.
ಭಕ್ತಂಗೆ ಐದುಮುಖವಿರ್ಪುದನಾರೂ ಅರಿಯರಲ್ಲ.
ಆ ಭಕ್ತಂಗೆ ಗುರು ಒಂದು ಮುಖ,
ಲಿಂಗ ಒಂದು ಮುಖ, ಜಂಗಮ ಒಂದು ಮುಖ,
ಪಾದೋದಕ ಒಂದು ಮುಖ, ಪ್ರಸಾದ ಒಂದು ಮುಖ.
ಇಂತೀ ಪಂಚಮುಖವನುಳ್ಳ ಸದ್ಭಕ್ತನೇ
ಸಾಕ್ಷಾತ್ ಪರಶಿವನು ತಾನೆ ನೋಡಾ ಅಖಂಡೇಶ್ವರಾ./585
ಶಿವನ ಕೂಡಿರ್ಪ ಶರಣರ ಶೀಲವನೇನೆಂಬೆನಯ್ಯಾ !
ನೀರು ನೀರ, ಕ್ಷೀರವು ಕ್ಷೀರ ಬೆರೆದಂತೆ.
ತನುಮನಧನಂಗಳು ಗುರುಲಿಂಗಜಂಗಮದಲ್ಲಿ ಭರಿತವಾದ
ಮಹಾಶರಣರ ನೀವೇ ಬಲ್ಲಿರಯ್ಯಾ ಅಖಂಡೇಶ್ವರಾ. /586
ಶಿವನೆ ಗುರುವೆಂದು ಗುರುವಿಂಗೆ ತನುವನರ್ಪಿಸಿ,
ಶಿವನೆ ಲಿಂಗವೆಂದು ಲಿಂಗಕ್ಕೆ ಮನವನರ್ಪಿಸಿ,
ಶಿವನೆ ಜಂಗಮವೆಂದು ಜಂಗಮಕ್ಕೆ ಧನವನರ್ಪಿಸಿ,
ಆ ಗುರುಲಿಂಗಜಂಗಮದ ಘನಪ್ರಸಾದವ ಪಡೆದು
ನಿಜಮುಕ್ತಿಯನೈದಲರಿಯದೆ,
ನನ್ನ ಶೀಲ ಹೆಚ್ಚು ತನ್ನ ಶೀಲ ಹೆಚ್ಚೆಂದು
ಕುಲಸೂತಕ ಛಲಸೂತಕದಿಂದೆ
ಒಬ್ಬರನೊಬ್ಬರು ಹಳಿದಾಡುವ
ದುಃಶೀಲವಂತರ ಮೆಚ್ಚುವನೆ ನಮ್ಮ ಅಖಂಡೇಶ್ವರ. /587
ಶಿವನೇ ಗುರುವೆಂದು ತಿಳಿದು
ವಿಶ್ವಾಸಭಾವತುಂಬಿರಬೇಕು ಗುರುವಿನಲ್ಲಿ.
ಶಿವನೇ ಲಿಂಗವೆಂದು ತಿಳಿದು
ವಿಶ್ವಾಸಭಾವತುಂಬಿರಬೇಕು ಲಿಂಗದಲ್ಲಿ.
ಶಿವನೇ ಜಂಗಮವೆಂದು ತಿಳಿದು
ವಿಶ್ವಾಸಭಾವತುಂಬಿರಬೇಕು ಜಂಗಮದಲ್ಲಿ.
ಶಿವನೇ ಪಾದೋದಕಪ್ರಸಾದವೆಂದು ತಿಳಿದು
ವಿಶ್ವಾಸಭಾವತುಂಬಿರಬೇಕು ಪಾದೋದಕಪ್ರಸಾದದಲ್ಲಿ.
ಇಂತಿವರಲ್ಲಿ ವಿಶ್ವಾಸಭಾವವಿಲ್ಲದವಂಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ,
ಪಾದೋದಕಪ್ರಸಾದವಿಲ್ಲ.
ಮುಕ್ತಿ ಎಂಬುದು ಮುನ್ನವೇ ಇಲ್ಲ.
ಅವರೆಷ್ಟು ದಿನವಿದ್ದಡೂ ವ್ಯರ್ಥ ಕಾಣಯ್ಯಾ.
ಅದೆಂತೆಂದೊಡೆ :ಶಿವರಹಸ್ಯ-
“ಜೀವಿತಂ ಶಿವಭಕ್ತಾನಾಂ ವರಂ ಪರಂ ಚ ದಿನಾನಿ ಚ |
ಅಜಕಲ್ಪಸಹಸ್ರೇಭ್ಯೋ ಭಕ್ತಿಹೀನಂತು ಶಾಂಕರಿ ||”
ಇದು ಕಾರಣ, ವಿಶ್ವಾಸಹೀನರ ಎನಗೊಮ್ಮೆ
ತೋರದಿರಯ್ಯಾ ಅಖಂಡೇಶ್ವರಾ./588
ಶಿವಪಾದೋದಕವ ನಂಬಿ ಕೊಂಡಡೆ
ಮಲ ಮಾಯಾ ಕರ್ಮಂಗಳೆಲ್ಲ ಕಡೆಗಾಗಿರ್ಪುವು ನೋಡಾ !
ಶಿವಪಾದೋದಕವ ನಂಬಿಕೊಂಡಡೆ
ಆಧಿವ್ಯಾಧಿ ವಿಪತ್ತು ರೋಗರುಜೆ
ಜನನ ಮರಣಂಗಳು ದೂರವಾಗಿರ್ಪುವು ನೋಡಾ !
ಶಿವಪಾದೋದಕವ ನಂಬಿ ಕೊಂಡಡೆ
ಅನಂತಕೋಟಿ ಪಾಪಂಗಳು ಪಲ್ಲಟವಾಗಿರ್ಪುವು ನೋಡಾ !
ಶಿವಪಾದೋದಕವ ನಂಬಿ ಕೊಂಡಡೆ
ಭಕ್ತಿ ಜ್ಞಾನ ವೈರಾಗ್ಯ ಮುಕ್ತಿಪದವು ದೊರೆಕೊಂಬುದು ನೋಡಾ !
ಅದೆಂತೆಂದೊಡೆ :ವಾತುಲಾಗಮೇ –
“ಅವಿದ್ಯಾ ಮೂಲಹರಣಂ ಜನ್ಮಕರ್ಮನಿವಾರಣಮ್ |
ಜ್ಞಾನವೈರಾಗ್ಯಫಲದಂ ಗುರುಪಾದೋದಕಂ ಶುಭಮ್ ||
ಅಕಾಲಮೃತ್ಯುಮಥನಂ ಸರ್ವವ್ಯಾಧಿವಿನಾಶನಂ |
ಸರ್ವಪಾಪೋಪಶಮನಂ ಶಂಭೋಃ ಪಾದೋದಕಂ ಶುಭಂ ||”
ಎಂದುದಾಗಿ,
ಇಂತಪ್ಪ ಶಿವಪಾದೋದಕವನು ನಂಬಿ ಅಂತರಂಗದಲ್ಲಿ ನಿಶ್ಚೈಸಿದ ನರನು
ಹರನಪ್ಪುದು ತಪ್ಪದು ನೋಡಾ ಅಖಂಡೇಶ್ವರಾ./589
ಶಿವಪ್ರಸಾದವನಾರೋಗಣೆಯ ಮಾಡುವಲ್ಲಿ
ಕರಣಂಗಳು ಕಡೆಗೆ ತುಳುಕದಿರಬೇಕು.
ಚಿತ್ತವು ಅತ್ತಿತ್ತ ಹರಿಯದಿರಬೇಕು.
ಶಿವಧ್ಯಾನಪರಾಯಣನಾಗಿರಬೇಕು.
ಶಿವಪ್ರಸಾದದಲ್ಲಿ ಮನವು ಮಗ್ನವಾಗಿರಬೇಕು.
ಪ್ರಸಾದವೆ ಪರಬ್ರಹ್ಮವೆಂಬ ಭಾವ ಬಲಿದಿರಬೇಕು.
ತುತ್ತುತುತ್ತಿಗೆ ಶಿವಮಂತ್ರವ ಉಚ್ಚರಿಸುತಿರಬೇಕು.
ಶಿವಪ್ರಸಾದದ ಘನವ ಕಂಡು ಮನವು ಹಿಗ್ಗಿ
ಪರಮಪರಿಣಾಮದೊಳಗೋಲಾಡುತಿರಬೇಕು.
ಇಂತೀ ಭೇದವನರಿಯಬಲ್ಲಾತನೆ
ಅಚ್ಚಪ್ರಸಾದಿಯಯ್ಯ ಅಖಂಡೇಶ್ವರಾ./590
ಶಿವಭಕ್ತನೆನಿಸುವಾತಂಗೆ ಆವುದು ಚಿಹ್ನವೆಂದೊಡೆ :
ಸದಾಚಾರದಲ್ಲಿ ನಡೆವುದು, ಶಿವನಲ್ಲಿ ಭಕ್ತಿಯಿಂದಿರುವುದು,
ಲಿಂಗಜಂಗಮ ಒಂದೆಯೆಂದು ಕಾಂಬುದು.
ವಿಭೂತಿ ರುದ್ರಾಕ್ಷಿ ಲಿಂಗಧಾರಣ ಮುಂತಾದ
ಶಿವಲಾಂಛನವನುಳ್ಳ ಶಿವಶರಣರಲ್ಲಿ
ಅತಿಭಕ್ತಿಯಾಗಿರ್ಪಾತನೇ ಸದ್ಭಕ್ತ ನೋಡಾ !
ಅದೆಂತೆಂದೊಡೆ :
“ಸಾದಾಚಾರಃ ಶಿವೇ ಭಕ್ತಿರ್ಲಿಂಗೇ ಜಂಗಮ ಏಕಧೀಃ|
ಲಾಂಛನೇ ಶರಣೇ ಭಕ್ತಿಃ ಭಕ್ತಸ್ಥಲಮನುತ್ತಮಮ್ ||”
ಎಂದುದಾಗಿ,
ಇಂತಪ್ಪ ಸಹಜ ಭಕ್ತರ ತೋರಿ ಬದುಕಿಸಯ್ಯ
ಎನ್ನ ಅಖಂಡೇಶ್ವರಾ./591
ಶಿವಭಕ್ತಿ ಶಿವಜ್ಞಾನ ಶಿವನಲ್ಲಿ ವಿಶ್ವಾಸವಮಾಡಿದ
ಲಿಂಗಾಂಗಸಂಬಂಧವನುಳ್ಳ ಸದ್ಭಕ್ತಮಹೇಶ್ವರರು
ಇದ್ದ ಠಾವೆಲ್ಲ ಶಿವಕ್ಷೇತ್ರ,
ಅವರು ಸುಳಿದ ಸುಳಿವೆಲ್ಲ ಜಗತ್ಪಾವನ,
ಅವರು ನಿಮಿಷ ನಿಮಿಷಾರ್ಧ ಕುಳಿತ ನೆಲವೆಲ್ಲ
ಶಿವನ ಕೈಲಾಸ ನೋಡಾ !
ಅದೆಂತೆಂದೊಡೆ :ಸ್ಕಂದಪುರಾಣೇ-
“ಯತ್ರ ತಿಷ್ಠತಿ ಲಿಂಗಾಂಗಸಂಬಂಧೀಶಪರಾಯಣಃ |
ನಿಮಿಷಂ ನಿಮಿಷಾರ್ಧಂ ವಾ ತತ್ ಶಿವಕ್ಷೇತ್ರಮುಚ್ಯತೇ ||”
ಮತ್ತಂ,
“ಪಾದಾಗ್ರರೇಣವೋ ಯತ್ರ ಪತಂತಿ ಶಿವಯೋಗಿನಾಮ್ |
ತದೇವ ಸದನಂ ಪುಣ್ಯಂ ಪಾವನಂ ಶಿವಮಂದಿರಮ್ ||”
ಎಂದುದಾಗಿ,
ಇಂತಪ್ಪ ಸದ್ಭಕ್ತ ಮಹೇಶ್ವರರ ಘನವ
ನಾನೇನೆಂಬೆನಯ್ಯ ಅಖಂಡೇಶ್ವರಾ./592
ಶಿವಮಂತ್ರವೆನಗೆ ಕಾಮಧೇನುವಯ್ಯ.
ಶಿವಮಂತ್ರವೆನಗೆ ಕಲ್ಪವೃಕ್ಷವಯ್ಯ.
ಶಿವಮಂತ್ರವೆನಗೆ ಚಿಂತಾಮಣಿಯಯ್ಯ.
ಶಿವಮಂತ್ರವೆನಗೆ ಪರುಷದ ಖಣಿಯಯ್ಯ.
ಶಿವಮಂತ್ರವೆನಗೆ ಮನಃಪ್ರಾಣಮೂಲಿಕೆಯಯ್ಯ
ಅಖಂಡೇಶ್ವರಾ !/593
ಶಿವಶಿವಾ ! ಶಿವಭಕ್ತನಿರ್ದ ಹಳ್ಳಿಯಾದಡಾಗಲಿ,
ಪಟ್ಟಣವಾದಡಾಗಲಿ ಹೊರಗೇರಿಯಾದಡಾಗಲಿ,
ಶ್ರೇಷ್ಠಭೂಮಿಯಾದಡಾಗಲಿ ಕನಿಷ್ಠಭೂಮಿಯಾದಡಾಗಲಿ,
ಆತನಿರ್ದ ಸ್ಥಾನವೇ ಶಿವಲೋಕವೆನಿಸಿತ್ತು.
ಆತನಿರ್ದ ಮನೆಯೇ ಶಿವಮಂದಿರವೆನಿಸಿತ್ತು.
ಆತನಿರ್ದ ದೇಶಕ್ಕೆ ಹಸಿವು ತೃಷೆ ದುರ್ಭಿಕ್ಷವಿಲ್ಲ.
ಆಧಿ ವ್ಯಾಧಿ ರೋಗ ರುಜೆ ವಿಪತ್ತುಗಳಿಲ್ಲ ನೋಡಾ !
ಅದೆಂತೆಂದೊಡೆ :ಲಿಂಗಪುರಾಣೇ-
“ರುದ್ರಾಧ್ಯಾಯೀ ವಸೇದ್ಯಸ್ತು ಗ್ರಾಮೇ ವಾ ನಗರೇಪಿ ವಾ |
ನ ತತ್ರ ಕ್ಷುತ್ ಪಿಪಾಸಾದ್ಯಾ ದುರ್ಭಿಕ್ಷಂ ವ್ಯಾಧಯೋಪಿ ವಾ ||”
ಮತ್ತಂ,
“ಚಾಂಡಾಲವಾಟಿಕಾಯಾಂ ಶಿವಭಕ್ತಃ ಸ್ಥಿತೋ ಯದಿ |
ತದ್ಭೂಮಿಃ ಶಿವಲೋಕಸ್ತು ತದ್ಗೃಹಂ ಶಿವಮಂದಿರಮ್ ||”
ಎಂದುದಾಗಿ, ಇಂತಪ್ಪ ಪರಮಶಿವಭಕ್ತನ ದರ್ಶನವು
ಪುಣ್ಯದಪುಂಜವು ನೋಡಾ ಅಖಂಡೇಶ್ವರಾ./594
ಶಿವಶಿವಾ ಎಂದು ಶಿವನ ಕೊಂಡಾಡಿ
ಭವಪಾಶವ ಹರಿದೆನಯ್ಯ.
ಹರಹರಾ ಎಂದು ಹರನ ಕೊಂಡಾಡಿ
ಹರಗಣತಿಂತಿಣಿಯೊಳಗೆ ನಿಂದೆನಯ್ಯ.
ಇದು ಕಾರಣ ಹರಾಯ ಶಿವಾಯ ಶ್ರೀ ಮಹಾದೇವಾಯ
ಓಂ ನಮಃಶಿವಾಯ ಎಂದೆನುತಿರ್ದೆನಯ್ಯ
ಅಖಂಡೇಶ್ವರಾ./595
ಶಿವಶಿವಾ ಎಂದು ಶಿವನ ಕೊಂಡಾಡುತ್ತ
ಶ್ರೀ ವಿಭೂತಿಯ ಧರಿಸಿ,
ಶ್ರೀ ಮಹಾದೇವನ ಪೂಜಿಸುವಾತನ ಕಾಯವೇ ಕೈಲಾಸ.
ಆತನ ನಡೆಯೇ ಪಾವನ, ಆತನ ನುಡಿಯೇ ಆಗಮ.
ಆತನ ದರುಶನ ಸ್ಪರುಶನವೇ
ಸಕಲ ಪ್ರಾಣಿಗಳಿಗೆ ಸಾಲೋಕ್ಯಪದವು ನೋಡಾ !
ಆ ಮಹಾತ್ಮನಿಂದಧಿಕರು ಮೂಲೋಕದೊಳಗಿಲ್ಲ
ನೋಡಾ ಅಖಂಡೇಶ್ವರಾ./596
ಶಿವಶಿವಾ ಎಂದು ಶಿವನ ನೆನೆದು, ಭವದ ಬೇರ ಕಿತ್ತೊಗೆಯಿರೋ.
ಪರಶಿವಮೂರ್ತಿ ಪರಬ್ರಹ್ಮಲಿಂಗವ ಪೂಜಿಸಿ,
ಹರಿ ಹತ್ತು ಭವವ ನೀಗಿದ ! ಅಜ ಅನಂತಕಲ್ಪವ ಮೀರಿದ,
ಸುಜನ ಮುನಿಗಳು ನಿಜಪದವನೈದಿದರು ನೋಡಿರೋ
ನಮ್ಮ ಅಖಂಡೇಶ್ವರಲಿಂಗದಲ್ಲಿ !/597
ಶಿವಶಿವಾ ಎನ್ನಿರೋ ! ಶಿವನ ಧ್ಯಾನಕ್ಕೆ ತನ್ನಿರೊ !
ಶಿವನು ಕೈಲಾಸ ಮೇರು ಮಂದಿರದಲ್ಲಿಲ್ಲ ನೋಡಿರೊ !
ಶಿವನು ಭಕ್ತಿಗೆ ಸೋತು ನಿಮ್ಮೊಳಗಿಪ್ಪನು ಕಾಣಿರೋ !
ಅದೆಂತೆಂದೊಡೆ :ಶಿವನ ವಾಕ್ಯ –
“ನಾಹಂ ವಸಾಮಿ ಕೈಲಾಸೇ ನ ಮೇರೌ ನ ಚ ಮಂದರೇ |
ಮದ್ಭಕ್ತಾ ಯತ್ರ ತಿಷ್ಠಂತಿ ತತ್ರ ತಿಷ್ಠಾಮಿ ಪಾರ್ವತಿ ||”
ಎಂದುದಾಗಿ,
ಆಲಸ್ಯವಿಲ್ಲದೆ ಒಲಿಸಿರೋ ನಮ್ಮ ಅಖಂಡೇಶ್ವರನೆಂಬ
ಪರಶಿವನ. /598
ಶಿವಶಿವಾ ಪ್ರಸಾದಭಕ್ತರ ತೋರಿಸಯ್ಯಾ.
ಹರಹರಾ ಪ್ರಸಾದವೇ ಪ್ರಾಣವಾಗಿರ್ಪ
ಪರಮಭಕ್ತರ ತೋರಿಸಯ್ಯಾ.
ಅಖಂಡೇಶ್ವರಾ, ಪ್ರಸಾದೈಕ್ಯರ ತೋರಿಸಯ್ಯ
ನಿಮ್ಮ ಧರ್ಮ, ನಿಮ್ಮ ಧರ್ಮ./599
ಶಿವಶಿವಾ ಮಹಾಪ್ರಸಾದ
ಎನ್ನ ಚರಣವು ನಿಮ್ಮ ಶಿವಾಚಾರಮಾರ್ಗದಲ್ಲಲ್ಲದೆ
ಅನ್ಯಮಾರ್ಗದಲ್ಲಿ ಚರಿಸದಂತೆ ಮಾಡಯ್ಯ.
ಎನ್ನ ಹಸ್ತವು ನಿಮ್ಮನಲ್ಲದೆ ಅನ್ಯವ ಮುಟ್ಟದಂತೆ ಮಾಡಯ್ಯ.
ಎನ್ನ ಕಂಗಳು ನಿಮ್ಮನಲ್ಲದೆ ಅನ್ಯವ ನೋಡದಂತೆ ಮಾಡಯ್ಯ.
ಎನ್ನ ಶ್ರೋತ್ರವು ನಿಮ್ಮ ಕಿರ್ತನೆಯನಲ್ಲದೆ
ಅನ್ಯವ ಕೇಳದಂತೆ ಮಾಡಯ್ಯ.
ಎನ್ನ ಜಿಹ್ವೆಯು ನಿಮ್ಮನಲ್ಲದೆ ಅನ್ಯರ ಹೊಗಳದಂತೆ ಮಾಡಯ್ಯ.
ಎನ್ನ ಮನವು ನಿಮ್ಮನಲ್ಲದೆ ಅನ್ಯವ ಬಯಸದಂತೆ
ಮಾಡಯ್ಯ ಅಖಂಡೇಶ್ವರಾ./600
ಶಿವಶಿವಾ ಮಹಾಪ್ರಸಾದ
ಎನ್ನ ಮನವು ನಿಮ್ಮಲ್ಲಿ ಒಂದ ಬಯಸಿ
ಬಡವಾಗುತಿರ್ಪುದು ಅವಧರಿಸಯ್ಯ ದೇವ.
ಶಿವನಡೆ ಶಿವನುಡಿ ಶಿವನೋಟ ಶಿವಭಾವ
ಶಿವಾಚಾರ ಶಿವಭಕ್ತಿ ಶಿವಜ್ಞಾನ ಶಿವಾನುಭಾವ
ಶಿವಶರಣರಸಂಗ ಇವನೆ ಕರುಣಿಸಿ
ಬದುಕಿಸಯ್ಯ ಎನ್ನ ಅಖಂಡೇಶ್ವರಾ./601
ಶಿವಶಿವಾ ಮಹಾಪ್ರಸಾದದ ಮಹಿಮೆಯನೇನೆಂಬೆನಯ್ಯ ?
ಕಿನ್ನರ ಕಿಂಪುರುಷರಿಗಗಣಿತವಾಗಿರ್ಪುದು ನೋಡಾ !
ಹರಿಸುರಬ್ರಹ್ಮಾದಿಗಳಿಗೆ ಅಗೋಚರವಾಗಿರ್ಪುದು ನೋಡಾ !
ಸಿದ್ಧಸಾಧಕರಿಗೆ ಅಸಾಧ್ಯವಾಗಿರ್ಪುದು ನೋಡಾ !
ದೇವ ದಾನವ ಮಾನವರಿಗೆ ಅಭೇದ್ಯವಾಗಿರ್ಪುದು ನೋಡಾ !
ಅದೆಂತೆಂದೊಡೆ :ಶಿವರಹಸ್ಯೇ-
“ಪ್ರಸಾದಂ ಗಿರಿಜಾದೇವಿ ಸಿದ್ಧಕಿನ್ನರಗುಹ್ಯಕ |
ವಿಷ್ಣುಪ್ರಮುಖದೇವಾನಾಮಗ್ರಗಣ್ಯಮಗೋಚರಮ್ ||”
ಎಂದುದಾಗಿ,
ಇಂತಪ್ಪ ಪರಮಪ್ರಸಾದವೆ ನೀವೆಯಯ್ಯ ಅಖಂಡೇಶ್ವರಾ./602
ಶಿವಶಿವಾ, ಎನ್ನ ಮನದಾಳಾಪವನವಧರಿಸಯ್ಯ ಸ್ವಾಮಿ.
ಎನಗೆ ಭಕ್ತಿ ಬೇಡ, ಎನಗೆ ಜ್ಞಾನ ಬೇಡ,
ಎನಗೆ ವೈರಾಗ್ಯ ಬೇಡ, ಎನಗೆ ವಿರತಿಯು ಬೇಡ,
ನಿಮ್ಮ ಶರಣರು ಉಟ್ಟ ಮೈಲಿಗೆಯ ಬಟ್ಟೆ
ಉಗುಳಿದ ತಾಂಬೂಲ, ಒಕ್ಕು ಮಿಕ್ಕ ಪ್ರಸಾದವನೆ ಕರುಣಿಸಿ,
ಅವರ ಪಡುಗ ಪಾದರಕ್ಷೆಯನೆ ಹಿಡಿವುದಕ್ಕೆ ಯೋಗ್ಯನ ಮಾಡಿ,
ಅವರ ಕಡೆಯ ಬಾಗಿಲನೆ ಕಾಯುವಂತೆ
ಮಾಡಯ್ಯ ಎನ್ನ ಅಖಂಡೇಶ್ವರಾ./603
ಶಿವಶಿವಾ, ಎನ್ನ ಮನವು ನಿಮ್ಮ ನೆನೆಯಲೊಲ್ಲದೆ
ಅನ್ಯಕ್ಕೆ ಹರಿವುತಿರ್ಪುದು ನೋಡಾ.
ಗುರು ಚರ ಲಿಂಗದ ಸೇವೆಯೆಂದೊಡೆ
ಹಿಂದುಳಿವುತಿರ್ಪುದು ನೋಡಾ.
ಅನ್ಯರ ಒಡವೆಯಾದ ಹೊನ್ನು ಹೆಣ್ಣು ಮಣ್ಣೆಂದೊಡೆ
ಮುಂದುವರಿದು ಓಡುತಿರ್ಪುದು ನೋಡಾ.
ಈ ಮನದ ಉಪಟಳವು ಘನವಾಯಿತ್ತು.
ಇನ್ನೇನು ಗತಿಯಯ್ಯ ಎನಗೆ ಅಖಂಡೇಶ್ವರಾ./604
ಶಿವಶಿವಾ, ಏನೆಂಬೆನಯ್ಯಾ ಶಿವಶರಣರ ಘನವನು !
ಶಿವಶರಣರ ಮಹಿಮೆಯನು, ಶಿವಶರಣರ ಚಾರಿತ್ರವನು,
ಶಿವನೇ ಬಲ್ಲನಲ್ಲದೆ ಉಳಿದವರದನೆಂತು ತಿಳಿವರಯ್ಯಾ ?
ಹೊರಗಣ ಕ್ರಿಯೆಯು ಹಲವು ಪ್ರಕಾರವಾದಡೂ
ಒಳಗೆ ನೀರು ನೀರ ಕೂಡಿದಂತೆ, ಕ್ಷೀರ ಕ್ಷೀರವ ಬೆರೆದಂತೆ,
ಮಾರುತಾಂಬರ ಸಂಯೋಗವಾದಂತೆ, ಶಿಖಿಕರ್ಪುರದ ನಿಷ್ಪತ್ತಿಯಂತೆ,
ಸಚ್ಚಿದಾನಂದಪರಬ್ರಹ್ಮವ ಕೂಡಿ
ಬಿಚ್ಚಿ ಬೇರಾಗದಿರ್ಪ ಭವರಹಿತ ಶರಣರೆ
ಕೇವಲಜ್ಞಾನಸ್ವರೂಪರು, ಜೀವನ್ಮುಕ್ತರು.
ಅವರೇ ನಿಮ್ಮ ಶರಣರು,
ಅವರೇ ಮಹಾಜ್ಞಾನಘನವ ನುಂಗಿದ
ಮಹಾಂತರು ನೋಡಾ ಅಖಂಡೇಶ್ವರಾ./605
ಶಿವಶಿವಾ, ನೀವೆನ್ನ ನಡೆಯೊಳಗೆ ನಡೆರೂಪವಾಗಿರ್ದು
ನಡೆಪರುಷವ ಕರುಣಿಸಯ್ಯ ದೇವ.
ಎನ್ನ ನುಡಿಯೊಳಗೆ ನುಡಿರೂಪಾಗಿರ್ದು
ನುಡಿಪರುಷವ ಕರುಣಿಸಯ್ಯ ದೇವ.
ಎನ್ನ ನೋಟದೊಳಗೆ ನೋಟರೂಪಾಗಿರ್ದು
ನೋಟಪರುಷವ ಕರುಣಿಸಯ್ಯ ದೇವ.
ಎನ್ನ ಹಸ್ತದೊಳಗೆ ಹಸ್ತರೂಪಾಗಿರ್ದು
ಹಸ್ತಪರುಷವ ಕರುಣಿಸಯ್ಯ ದೇವ.
ಎನ್ನ ಮನದೊಳಗೆ ಮನರೂಪಾಗಿರ್ದು
ಮನಪರುಷವ ಕರುಣಿಸಯ್ಯ ದೇವ.
ಎನ್ನ ಭಾವದೊಳಗೆ ಭಾವರೂಪಾಗಿರ್ದು
ಭಾವಪರುಷವ ಕರುಣಿಸಯ್ಯ ದೇವಾ ಅಖಂಡೇಶ್ವರಾ./606
ಶೀಲ ಶೀಲವೆಂದು ನುಡಿವುತಿರ್ಪರೆಲ್ಲರು.
ಶೀಲದ ಹೊಲಬನಾರೂ ಅರಿಯರಲ್ಲ.
ಕೆರೆ ಬಾವಿ ಹಳ್ಳ ಕೊಳ್ಳ ಹೊಳೆಗಳ ನೀರ ಬಳಸದಿರ್ದಡೆ ಶೀಲವೆ ?
ಕೊಡಕ್ಕೆ ಪಾವಡವ ಹಾಕಿ
ಚಿಲುಮೆಯ ಶೀತಳವ ತಂದಡೆ ಶೀಲವೆ ?
ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಟ್ಟಡೆ ಶೀಲವೆ ?
ಬೆಳೆದ ಬೆಳೆಸು ಕಾಯಿಹಣ್ಣುಗಳ ಬಿಟ್ಟಡೆ ಶೀಲವೆ ?
ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು
ಅಡಿಕೆ ಬೆಲ್ಲಗಳ ಬಿಟ್ಟಡೆ ಶೀಲವೆ ?
ಪರಪಾಕವ ಬಿಟ್ಟು ಸ್ವಯಪಾಕದಲ್ಲಿರ್ದಡೆ ಶೀಲವೆ ? ಅಲ್ಲಲ್ಲ.
ಭವಿಕಾಣಬಾರದಂತಿರ್ದಡೆ ಶೀಲವೆ ? ಅಲ್ಲಲ್ಲ.
ಅದೇನು ಕಾರಣವೆಂದೊಡೆ :
ಇಂತಿವೆಲ್ಲವು ಹೊರಗಣ ವ್ಯವಹಾರವು.
ಇನ್ನು ಅಂತರಂಗದ ಅರಿಷಡ್ವರ್ಗಂಗಳೆಂಬ ಭವಿಯ ಕಳೆಯಲಿಲ್ಲ.
ಮಾಯಾಮೋಹವೆಂಬ ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಡಲಿಲ್ಲ.
ಸಂಸಾರವಿಷಯರಸವೆಂಬ ಹಳ್ಳ ಕೊಳ್ಳ ಕೆರೆ ಬಾವಿಗಳ ನೀರ ನೀಗಲಿಲ್ಲ.
ಅಷ್ಟಮದಂಗಳೆಂಬ ಉಪ್ಪು ಎಣ್ಣೆ ತುಪ್ಪ ಹಾಲು
ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಡಲಿಲ್ಲ.
ಸಕಲ ಕರಣಂಗಳೆಂಬ ಬೆಳಸು ಫಲಂಗಳ ಬಿಡಲಿಲ್ಲ.
ಮನವೆಂಬ ಕೊಡಕ್ಕೆ ಮಂತ್ರವೆಂಬ ಪಾವಡವ ಮುಚ್ಚಿ
ಚಿತ್ಕೋಣವೆಂಬ ಚಿಲುಮೆಯಲ್ಲಿ ಚಿದಾಮೃತವೆಂಬ ಶೀತಳವ ತಂದು
ಚಿನ್ಮಯಲಿಂಗಕ್ಕೆ ಅಭಿಷೇಕವ ಮಾಡಲಿಲ್ಲ.
ಇಂತೀ ಅಂತರಂಗದ ಪದಾರ್ಥಂಗಳ ಬಿಟ್ಟು
ಮುಕ್ತಿಯ ಪಡೆವೆನೆಂಬ ಯುಕ್ತಿಗೇಡಿಗಳಿಗೆ
ಭವಬಂಧನಂಗಳು ಹಿಂಗಲಿಲ್ಲ, ಜನನಮರಣಂಗಳು ಜಾರಲಿಲ್ಲ,
ಸಂಸಾರದ ಮಾಯಾಮೋಹವ ನೀಗಲಿಲ್ಲ.
ಇಂತಪ್ಪ ಅಜ್ಞಾನಜೀವಿಗಳ ವಿಧಿಯೆಂತಾಯಿತ್ತೆಂದಡೆ :
ಹುತ್ತದೊಳಗಣ ಹಾವ ಕೊಲುವೆನೆಂದು ಮೇಲೆ ಹುತ್ತವ ಬಡಿದ
ಅರೆಮರುಳನಂತಾಯಿತ್ತು ನೋಡಾ ಅಖಂಡೇಶ್ವರಾ./607
ಶೀಲವಂತ ಶೀಲವಂತರೆಂದು
ಶೀಲಸಂಪಾದನೆಯ ಮಾಡುವ ಕರ್ಮಿಗಳನೇನೆಂಬೆನಯ್ಯಾ !
ಗುರುಭಕ್ತಿಯಿಂದೆ ತನುಶುದ್ಧವಾಗಲಿಲ್ಲ.
ಲಿಂಗಭಕ್ತಿಯಿಂದೆ ಮನಶುದ್ಧವಾಗಲಿಲ್ಲ.
ಜಂಗಮದಾಸೋಹದಿಂದೆ ಧನಶುದ್ಧವಾಗಲಿಲ್ಲ.
ಸಟೆಯ ಸಂಸಾರಶರಧಿಯೊಳಗೆ ಮುಳುಗಿ
ಕುಟಿಲವ್ಯಾಪಾರವನಂಗೀಕರಿಸಿ,
ನಾವು ದಿಟದ ಶೀಲವಂತರೆಂದು ನುಡಿದುಕೊಂಬ
ಫಟಿಂಗ ಭಂಡರ ವಿಧಿ ಎಂತಾಯಿತ್ತೆಂದರೆ,
ಹೆಂಡದ ಮಡಕೆಗೆ ವಿಭೂತಿಮಂಡಲವ ಬರೆದಂತಾಯಿತ್ತು
ಕಾಣಾ ಅಖಂಡೇಶ್ವರಾ./608
ಶುದ್ಧ ಸುಯಿಧಾನ ಭಯ ವಿಶ್ವಾಸವಿರಬೇಕು ಗುರುವಿನಲ್ಲಿ.
ಶುದ್ಧ ಸುಯಿಧಾನ ಭಯ ವಿಶ್ವಾಸವಿರಬೇಕು ಲಿಂಗದಲ್ಲಿ.
ಶುದ್ಧ ಸುಯಿಧಾನ ಭಯ ವಿಶ್ವಾಸವಿರಬೇಕು ಜಂಗಮದಲ್ಲಿ.
ಶುದ್ಧ ಸುಯಿಧಾನ ಭಯ ವಿಶ್ವಾಸವಿರಬೇಕು
ಪಾದೋದಕ ಪ್ರಸಾದಂಗಳಲ್ಲಿ.
ಇಂತಿವರಲ್ಲಿ ಶುದ್ಧ ಸುಯಿಧಾನ ಭಯ ವಿಶ್ವಾಸವಿಲ್ಲದವರು
ಸಲ್ಲರಯ್ಯಾ ನಿಮ್ಮ ನಿಜಪದಕ್ಕೆ ಅಖಂಡೇಶ್ವರಾ./609
ಶುದ್ಧಪದ್ಮಾಸನದಲ್ಲಿ ಕುಳ್ಳಿರ್ದು ಊಧ್ರ್ವಲೋಚನನಾಗಿ,
ಉಲಿವ ಕರಣಂಗಳನೆಲ್ಲ ಉನ್ಮನಿಯ ಸ್ಥಾನದಲ್ಲಡಗಿಸಿ,
ಮನವನೊಮ್ಮನವ ಮಾಡಿ ಅನಾಹತಕರ್ಣದಲ್ಲಿ ಲಾಲಿಸಲು,
ಸಹಸ್ರದಳಕಮಲಮಧ್ಯದಲ್ಲಿ ಉದ್ಘೋಷಿಸುತ್ತಿರ್ಪುದು ಸುನಾದಬ್ರಹ್ಮವು.
ಅಂತಪ್ಪ ಸುನಾದಬ್ರಹ್ಮದಲ್ಲಿ ಮನವಡಗಿ
ಮೈಯ್ಮರೆದಿಪರ್ಾತನೆ ಘನಲಿಂಗಯೋಗಿಯಯ್ಯಾ ಅಖಂಡೇಶ್ವರಾ./610
ಶೈವಸಿದ್ಧಾಂತಿಗಳೆಂಬ ಅಬದ್ಧ ಭವಿಗಳ
ಮುಖವ ನೋಡಲಾಗದು.
ಅದೇನು ಕಾರಣವೆಂದೊಡೆ :
ಸಾಂಗೋಪಾಂಗ ಶುದ್ಧಶರೀರಿಯಾಗಿ
ಉನ್ನತಾಸನ ಗದ್ದುಗೆಯಲ್ಲಿ ಕುಳಿತು ಕಣ್ಣುಮುಚ್ಚಿ
ಅಂತರಂಗದಲ್ಲಿ ಪರಮಾತ್ಮನ ಕಳೆಯ ಧ್ಯಾನಿಸಿ
ಮನಸ್ಸಿನಲ್ಲಿ ಕಟ್ಟಿ ದೃಷ್ಟಿಗೆ ತಂದು,
ಆ ದೃಷ್ಟಿಯಿಂದ ಪುಷ್ಪದಲ್ಲಿ ತುಂಬಿ
ಮೃತ್ತಿಕೆ ಪಾಷಾಣಾದಿ ನಾನಾ ತರಹದ
ಲಿಂಗಾಕಾರದ ಮೂರ್ತಿಯ ಸ್ಥಾಪಿಸಿ, ದೇವರೆಂದು ಭಾವಿಸಿ,
ಜಲ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲಾದಿ
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳನೆ ಮಾಡಿ,
ಆ ಪೂಜಾಂತ್ಯದಲ್ಲಿ ಎನ್ನ ಮಲಿನ ದೇಹದಲ್ಲಿ ನೀನು
ನಿರ್ಮಲವಾದ ವಸ್ತುವು ಇರಬೇಡ ಹೋಗೆಂದು
ತನ್ನ ದೇವರ ಬಾವಿ ಕೆರೆ ಹಳ್ಳ ಕೊಳ್ಳಾದಿ ಸ್ಥಾನಂಗಳಲ್ಲಿ ಹಾಕಿ ಬಿಡುವ
ಶಿವದ್ರೋಹಿಗಳಿಗೆ ಕುಂಭೀಪಾತಕ
ನಾಯಕ ನರಕ ತಪ್ಪದಯ್ಯ ಅಖಂಡೇಶ್ವರಾ./611
ಶ್ರೀ ವಿಭೂತಿಯ ಘನಮಹಿಮೆಯ ಹೇಳುವಡೆ
ಬ್ರಹ್ಮಂಗಸದಳ, ವಿಷ್ಣುವಿಂಗಸಾಧ್ಯ, ರುದ್ರಂಗಗೋಚರ ನೋಡಾ!
ಅದೆಂತೆಂದೊಡೆ :ಮತ್ಸ್ಯಪುರಾಣ
“ ಬ್ರಹ್ಮಣಾ ವಿಷ್ಣುನಾ ಚಾಪಿ ರುದ್ರೇಣ ಚ ಮುನೀಶ್ವರೈಃ |
ಭಸ್ಮಧಾರಣಮಹಾತ್ಮ್ಯಂ ನ ಶಕ್ಯಂ ಪರಿಭಾಷಿತಮ್ || ”
ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯೆಂಬ
ಪರತರ ಪರಂಜ್ಯೋತಿಸ್ವರೂಪು ನೀವಾದಿರಾಗಿ
ಅಖಂಡೇಶ್ವರಾ, ಎನಗೆ ಶ್ರೀ ವಿಭೂತಿಯ ಸರ್ವಸಿದ್ಧಿಯಯ್ಯಾ. /612
ಶ್ರೀಗುರು ಕರುಣಿಸಿ ಕರಸ್ಥಲಕ್ಕೆ ಕೊಟ್ಟ ಇಷ್ಟಲಿಂಗವನು
ಶುದ್ಧಸಾವಧಾನದಿಂದೆ ಧರಿಸಿಕೊಂಡು,
ಆ ಲಿಂಗವೆ ಪತಿ ತಾನೆ ಸತಿ ಎಂಬ ಭಾವದಿಂದೆ ಆಚರಿಸುವ ಕಾಲದಲ್ಲಿ
ಆ ಲಿಂಗವು ಮೋಸದಿಂದೋಸರಿಸಿ ಹೋದಡೆ
ಅರಸಿ ನೋಡಿಕೊಂಡು,
ಸಿಕ್ಕಿದಲ್ಲಿ ಸೂಕ್ಷ್ಮ ವಿಚಾರವ ತಿಳಿದು
ಮುನ್ನಿನಂತೆ ಧರಿಸಿಕೊಂಬುವುದು.
ಮತ್ತಾ ಲಿಂಗವು
ವೃತ್ತ ಕಟಿ ವತರ್ುಳ ಗೋಮುಖ ನಾಳ ಗೋಳಕ ಎಂಬ
ಷಟ್ಸ್ಥಾನಂಗಳಲ್ಲಿ ಭಿನ್ನವಾದಡೆಯೂ
ಕಣ್ಣಿಗೆ ಕಾಣಿಸಿಕೊಳ್ಳದೆ ಹೋದಡೆಯೂ
ಲಿಂಗಕ್ಕೆ ತನ್ನ ಪ್ರಾಣವನು ತ್ಯಾಗಮಾಡಬೇಕಲ್ಲದೆ,
ಅಲ್ಲಿ ಹಿಂದು ಮುಂದು ನೋಡಲಾಗದು.
ಇದಕ್ಕೆ ಶಿವನ ವಾಕ್ಯವೆ ಸಾಕ್ಷಿ :
“ಗುರುಣಾ ದತ್ತಲಿಂಗಂ ತು ಸಾವಧಾನೇನ ಧಾರಯೇತ್ |
ಪ್ರಮಾದಾತ್ಪತಿತೇ ಲಿಂಗೇ ಪ್ರಾಣಾನಪಿ ಪರಿತ್ಯಜೇತ್ ||
ವೃತ್ತನಾಲಸಮಂ ಪೀಠಂ ಗೋಲಕಂ ಮಧ್ಯಗೋಮುಖಂ |
ಭಿನ್ನಂ ಷಡ್ವಿಧಸ್ಥಾನೇನ ಪ್ರಾಣಾಂ ಸ್ತ್ಯಕ್ತ್ವಾ ಶಿವಂ ವ್ರಜೇತ್ ||”
-ಸಿದ್ಧಾಂತ ಶಿಖಾಮಣಿ
ಇಂತಪ್ಪ ಲಿಂಗೈಕ್ಯವಾದ ಶರಣರ
ನೀನೆಂದೇ ಕಾಂಬೆನಯ್ಯಾ ಅಖಂಡೇಶ್ವರಾ./613
ಶ್ರೀಗುರುವಿನ ಕರಗರ್ಭದಲ್ಲಿ ಉದಯವಾದ
ಶರಣಸತಿ ನಾನು.
ಶ್ರೀಗುರುವಿನ ಹೃದಯಗರ್ಭದಲ್ಲಿ ಉದಯವಾದ ಲಿಂಗಪತಿಗೆ
ಎನ್ನ ಮದುವೆಯ ಮಾಡುವ ಕಾಲದಲ್ಲಿ
ಸಹಸ್ರದಳಕಮಲವೆಂಬ ಸಾವಿರಕಂಬದ ಮಂಟಪವ ರಚಿಸಿ,
ಆ ಮಂಟಪದ ಮಧ್ಯದಲ್ಲಿ
ಪಂಚಪಾತ್ರವೆಂಬ ಪಂಚಮುದ್ರೆಯ ರಂಗವಲ್ಲಿಯ ತುಂಬಿ,
ಆ ಪಂಚಮುದ್ರೆಯಲ್ಲಿ ಪಂಚಪ್ರಣವೆಂಬ ಪಂಚಕಲಶವ ಹೂಡಿ,
ಆ ಪಂಚಕಲಶಂಗಳಿಗೆ ಸ್ವಾನುಭಾವಜ್ಞಾನವೆಂಬ ಸುರಗಿಯ ಸುತ್ತಿ,
ಆ ಮಧ್ಯದಲ್ಲಿ ಎನಗೆ ಶೃಂಗಾರವ ಮಾಡಿದರೆಂತೆನಲು,
ಸರ್ವಾಚಾರಸಂಪತ್ತೆಂಬ ಸೀರೆಯನುಡಿಸಿ,
ಸುಜ್ಞಾನವೆಂಬ ಕುಪ್ಪಸವ ತೊಡಿಸಿ,
ಸದ್ಭಕ್ತಿಯೆಂಬ ಬಳೆಯನಿಡಿಸಿ,
ಏಕಭಾವದ ನಿಷ್ಠೆಯೆಂಬ ತಾಳಿಯ ಕಟ್ಟಿ,
ನಿಜಮುಕ್ತಿಯೆಂಬ ಮೂಗುತಿಯನಿಟ್ಟು
ಶಿವಮಂತ್ರವೆಂಬ ಕರ್ಣಾಭರಣವ ಧರಿಸಿ,
ಸತ್ಕ್ರಿಯೆಯೆಂಬ ಪಾದಾಭರಣವ ಧರಿಸಿ,
ಪರಮೇಶ್ವರನ ಚಿತ್ಪ್ರಕಾಶವೆಂಬ ಚಿದ್ವಿಭೂತಿಯನೆ ತಂದು,
ಎನ್ನ ಲಲಾಟದಲ್ಲಿ ಪಟ್ಟವ ಕಟ್ಟಿ,
ಸತಿಸಂಗವಗಲಬೇಡವೆಂದು
ಎನ್ನ ಪತಿಯ ಸೆರಗ ತಂದು ಎನ್ನ ಸೆರಗಿಗೆ ಕೂಡಿಸಿ,
ಷಟ್ಸ್ಥಲಬ್ರಹ್ಮಗಂಟನಿಕ್ಕಿ,
ಪತಿಭಕ್ತಿಯಗಲದಿರೆಂದು ಎನ್ನ ಮುಂಗೈಯಲ್ಲಿ
ಸಕಲಗಣಂಗಳ ಸಾಕ್ಷಿಯಾಗಿ ಬಿರುದಿನ ವೀರಕಂಕಣವ ಕಟ್ಟಿ,
ಜಂಗಮದ ಪಾದತೀರ್ಥ ಪ್ರಸಾದವೆಂಬ ಭೂಮವನುಣಿಸಿ,
ಮದುವೆಯ ಮಾಡಿದರಂದು.
ಇಂದು ಎನಗೆ ಯೌವನವಾಯಿತ್ತು.
ಏಳುನೆಲೆಯ ಮೇಲುಪ್ಪರಿಗೆಯ ಮೇಲೆ
ಲೀಲೆಯಿಂದ ಕೂಡಿ ಸುಖಿಸಯ್ಯಾ ಎನ್ನ ಅಖಂಡೇಶ್ವರಾ./614
ಶ್ರೀಗುರುವಿನಿಂದಧಿಕರು ಆವ ಲೋಕದೊಳಗಿಲ್ಲವಯ್ಯಾ.
ಶ್ರೀಗುರುವಿನಂತೆ ಪರೋಪಕಾರಿಗಳ ಮತ್ತಾರನೂ ಕಾಣೆನಯ್ಯಾ.
ಅದೆಂತೆಂದೊಡೆ :
ಎನ್ನ ಕಂಗಳ ಭಕ್ತರ ಮಾಡಿದನಯ್ಯಾ ಶ್ರೀಗುರು
ಪರಮಶಿವಲಿಂಗಕ್ಕೆ.
ಎನ್ನ ಕಿವಿಗಳ ಭಕ್ತರ ಮಾಡಿದನಯ್ಯಾ ಶ್ರೀಗುರು
ಪರಮಶಿವಲಿಂಗಕ್ಕೆ.
ಎನ್ನ ನಾಸಿಕ ನಾಲಗೆಗಳ ಭಕ್ತರ ಮಾಡಿದನಯ್ಯಾ ಶ್ರೀಗುರು
ಪರಮಶಿವಲಿಂಗಕ್ಕೆ.
ಎನ್ನ ಕರಚರಣಂಗಳ ಭಕ್ತರ ಮಾಡಿದನಯ್ಯಾ ಶ್ರೀಗುರು
ಪರಮಶಿವಲಿಂಗಕ್ಕೆ.
ಎನ್ನ ತನುಮನಪ್ರಾಣಂಗಳ ಭಕ್ತರ ಮಾಡಿದನಯ್ಯಾ ಶ್ರೀಗುರು
ಪರಮಶಿವಲಿಂಗಕ್ಕೆ.
ಎನ್ನ ಸಕಲಕರಣೇಂದ್ರಿಯಂಗಳ ಭಕ್ತರ ಮಾಡಿದನಯ್ಯ ಶ್ರೀಗುರು
ಪರಮಶಿವಲಿಂಗಕ್ಕೆ.
ಇಂತಿವು ಮೊದಲಾಗಿ ಎನ್ನ ಸರ್ವ
ಅವಯವಂಗಳನೆಲ್ಲ ಸದ್ಭಕ್ತರ ಮಾಡಿ
ಲಿಂಗಾರ್ಪಿತಕ್ಕೆ ಅನುಗೊಳಿಸಿದ ಶ್ರೀಗುರುವಿನ
ಮಹಾಘನ ನಿಲವಿಂಗೆ ನಮೋ ನಮೋ ಎಂಬೆನಯ್ಯಾ
ಅಖಂಡೇಶ್ವರಾ./615
ಶ್ರೀಗುರುವೇ ತಂದೆ ತಾಯಿಗಳಲ್ಲದೆ,
ಬೇರೆ ಮತ್ತೆ ತಂದೆತಾಯಿಗಳಿಲ್ಲವಯ್ಯ ಎನಗೆ.
ಶಿವಶರಣರೇ ಬಂಧುಬಳಗವಲ್ಲದೆ,
ಬೇರೆ ಮತ್ತೆ ಬಂಧುಬಳಗವಿಲ್ಲವಯ್ಯ ಎನಗೆ.
ಶಿವಕುಲವೆ ಮಹಾಕುಲವಲ್ಲದೆ,
ಬೇರೆ ಮತ್ತೆ ಕುಲವಿಲ್ಲವಯ್ಯ ಎನಗೆ.
ಅಖಂಡೇಶ್ವರಾ, ನೀವೆನ್ನ ಕುಲದೈವ ಮನೆ ದೈವವಲ್ಲದೆ
ಬೇರೆ ಮತ್ತೆ ಕುಲದೈವ ಮನೆದೈವ ಇಲ್ಲವಯ್ಯ ಎನಗೆ./616
ಶ್ರೀಗುರುಸ್ವಾಮಿ ಕರುಣಿಸಿಕೊಟ್ಟ ಇಷ್ಟಲಿಂಗವನು
ಉರದಲ್ಲಿ ಧರಿಸಿಕೊಂಡು ಅದು ದೇವರೆಂದು ನಂಬದೆ
ಧರೆಯ ಮೇಲಣ ಕಂಡ ಕಂಡ ಕಲ್ಲ, ದೇವರೆಂದು ಕಲ್ಪಿಸಿ
ಹರಿದಾಡುವ ಭಂಡ ಮಾದಿಗರ ಭಕ್ತರೆಂದಡೆ
ಅಘೋರನರಕ ತಪ್ಪದಯ್ಯ ಅಖಂಡೇಶ್ವರಾ./617
ಶ್ರೀಗುರುಸ್ವಾಮಿ ಮಾಡಿದಡಾಯಿತ್ತು
ಜಗದುತ್ಪತ್ಯ ಸದಾಚಾರಂಗಳೆಲ್ಲ.
ಶ್ರೀಗುರುಸ್ವಾಮಿ ಮಾಡಿದಡಾಯಿತ್ತು
ತತ್ತಾ ್ವತತ್ವ ಸಕಲಸ್ಥಲಕುಲಂಗಳೆಲ್ಲ.
ಶ್ರೀಗುರುಸ್ವಾಮಿ ಮಾಡಿದಡಾಯಿತ್ತು
ನಿಗಮಾಗಮ ಸಕಲಶಾಸ್ತ್ರಜಾಲಂಗಳೆಲ್ಲ.
ಶ್ರೀಗುರುಸ್ವಾಮಿ ಮಾಡಿದಡಾಯಿತ್ತು ಅಖಂಡೇಶ್ವರಾ,
ನಾನು ನೀನೆಂಬ ಉಭಯದ ತೊಡರುಗಳೆಲ್ಲ./618
ಶ್ರೇಷ್ಠ ಶ್ರೀಗುರುಸ್ವಾಮಿ
ಇಷ್ಟಲಿಂಗವೆ ನಿನ್ನ ಪ್ರಾಣವೆಂದು ನಿರೂಪಿಸಿದನು.
ಆ ನಿರೂಪವನು ಮಹಾಪ್ರಸಾದವೆಂದು ಕೈಕೊಂಡು
ಇಷ್ಟಲಿಂಗದಲ್ಲಿ ನಿಷ್ಠೆ ನಿಬ್ಬೆರಗಾಗಿ ಆಚರಿಸುವಲ್ಲಿ
ಆ ಇಷ್ಟಲಿಂಗದ ಗೋಳಕವು
ತನ್ನ ಹಸ್ತದಿಂದಾದಡು ಪರಹಸ್ತದಿಂದಾದಡು ಕಿತ್ತುಬಂದಡೆ,
ಸಂದೇಹಗೊಳಲಾಗದು.
ಮರಳಿ ಮುನ್ನಿನಂತೆ ಧರಿಸಿಕೊಂಬುವುದು.
ಇದು ನಿರಾಳದ ಅಚ್ಚು, ವೀರಶೈವದ ಗಚ್ಚು,
ಪುರಾತನರ ಮಚ್ಚು, ಸರ್ವಗಣಂಗಳಿಗೆ ಸಮ್ಮತ.
ಅದೆಂತೆಂದೊಡೆ ;
“ವಿಯೋಗೇ ಶಿವಭಕ್ತಶ್ಚ ಶಂಕಾ ವೀರಶೈವಿನಾಂ |
ಪುನರ್ಬಂಧಂ ತಥಾ ಕೃತ್ವಾ ತಲ್ಲಿಂಗಂ ಧಾರಯೇತ್ ಸುಧೀಃ ||
ಹಸ್ತೇನ ಲಿಂಗಮುತ್ಪಾತಂ ಪುನರ್ಬಂಧೇನ ಧಾರಯೇತ್ |
ಸಂದೇಹೋ ನಾಸ್ತಿ ವೀರಾಣಾಮಿತ್ಯಾಹ ಪರಮೇಶ್ವರಃ ||”
-ಭೀಮಾಗದಲ್ಲಿ ಪರಮೇಶ್ವರನ ವಾಕ್ಯ.
ಇಂತಪ್ಪ ಶಿವನ ವಾಕ್ಯವನು ಮೀರಿ
ಸಂದೇಹಗೊಂಡು ಸಾಯಬೇಕೆಂಬ ಸೂತಕಮನದ
ಪಾತಕ ಹೊಲೆಯರ ಮುಖವ ನೋಡಲಾಗದಯ್ಯ
ಅಖಂಡೇಶ್ವರಾ. /619
ಷಡೀಂದ್ರಿಯ ಸಪ್ತಧಾತುಗಳಲ್ಲಿ
ಸಂಭ್ರಮಿಸಿ ತುಂಬಿರ್ಪುದು ಒಂದೇ ಪರವಸ್ತುವೆಂದರಿಯರು.
ಷಡ್ಭೂತ ಷಟ್ಚಕ್ರಂಗಳಲ್ಲಿ
ಇಡಿದು ತುಂಬಿರ್ಪುದು ಒಂದೇ ಪರವಸ್ತುವೆಂದರಿಯರು.
ತನುತ್ರಯ ಮನತ್ರಯ ಭಾವತ್ರಯಂಗಳಲ್ಲಿ
ಭರಿತವಾಗಿರ್ಪುದು ಒಂದೇ ಪರವಸ್ತುವೆಂದರಿಯರು.
ಒಳಹೊರಗೆ ತೆರಹಿಲ್ಲದೆ
ಪರಿಪೂರ್ಣವಾಗಿ ತುಂಬಿರ್ಪುದು ಒಂದೇ ಪರವಸ್ತುವೆಂದರಿಯರು.
ವಿಪರೀತ ಭ್ರಾಂತಿಜ್ಞಾನದಿಂದೆ
ಒಳಗೆ ಬೇರೆ ಪರವಸ್ತು ಉಂಟೆಂದು
ಕಣ್ಣಮುಚ್ಚಿ ನೋಡಿ ಕಳವಳಗೊಂಡು
ಪ್ರಳಯಕ್ಕೊಳಗಾಗಿ ಹೋದವರ ಕಂಡು
ನಗುತಿರ್ಪನು ನಮ್ಮ ಅಖಂಡೇಶ್ವರನು./620
ಷಡುವರ್ಗಂಗಳ ಸಡಲಿಸಿ ಒಡಲುಪಾಧಿಯನರುಹಿ,
ಷಡುಸ್ಥಲದನುವನರಿದು, ಷಟ್ಬ್ರಹ್ಮದ ಸಂಯೋಗವನರಿಯದೆ
ಪೊಡವಿಯ ಪ್ರಪಂಚಿನಲ್ಲಿ ಸಿಲ್ಕಿ
ಹೊಡೆದಾಡಿ ಹೊತ್ತುಗಳೆದು
ಮಡಿದು ಹೋಗುವ ಕಡುಪಾತಕರ
ವಿರಕ್ತರೆನ್ನಬಹುದೆ ಅಯ್ಯ ಅಖಂಡೇಶ್ವರಾ ?/621
ಸಂಗ ಲೇಸು ಸಾಧುಮಹಾಪುರುಷರ.
ಸಂಗ ಲೇಸು ಸದ್ಭಕ್ತಶರಣಜನಂಗಳ.
ಸಂಗ ಲೇಸು ಸುಜ್ಞಾನಸಹವಾಸಿಗಳ.
ಸಂಗ ಲೇಸು ಅಖಂಡೇಶ್ವರಲಿಂಗವನೊಡಗೂಡಿದ ಸದ್ಭೋಗಿಗಳ./622
ಸಂಗನಬಸವಣ್ಣನಂತೆ ಸದ್ಭಕ್ತನೆಂದೆನಿಸಯ್ಯ ಎನ್ನ.
ಮಡಿವಾಳಮಾಚಯ್ಯಗಳಂತೆ
ವೀರಮಾಹೇಶ್ವರನೆಂದೆನಿಸಯ್ಯ ಎನ್ನ.
ಚೆನ್ನಬಸವಣ್ಣನಂತೆ ಪರಮಪ್ರಸಾದಿಯೆಂದೆನಿಸಯ್ಯ ಎನ್ನ.
ಸಿದ್ಧರಾಮನಂತೆ ಶುದ್ಧಪ್ರಾಣಲಿಂಗಿಯೆಂದೆನಿಸಯ್ಯ ಎನ್ನ.
ಉರಿಲಿಂಗಪೆದ್ದಯ್ಯಗಳಂತೆ ಉರುತರದ ಶರಣನೆಂದೆನಿಸಯ್ಯ ಎನ್ನ.
ಅಜಗಣ್ಣತಂದೆಗಳಂತೆ ನಿಜಲಿಂಗೈಕ್ಯನೆಂದೆನಿಸಯ್ಯ ಎನ್ನ.
ನಿಜಗುಣಯೋಗಿಗಳಂತೆ ಪರಮ ಆರೂಢನೆಂದೆನಿಸಯ್ಯ ಎನ್ನ.
ಅಕ್ಕಮಹಾದೇವಿಯಂತೆ ನಿಷ್ಕಾಮಿಯೆಂದೆನಿಸಯ್ಯ ಎನ್ನ.
ಪ್ರಭುದೇವರಂತೆ ಪರಿಪೂರ್ಣನೆಂದೆನಿಸಯ್ಯ ಎನ್ನ.
ಇಂತಿವರ ಕಾರುಣ್ಯದ ನಿಲವನೇ ಕರುಣಿಸಿ
ನಿಮ್ಮ ಗಣಂಗಳ ಸಮ್ಮೇಳನದಲ್ಲಿರಿಸಯ್ಯ ಎನ್ನ ಅಖಂಡೇಶ್ವರಾ./623
ಸಂಚಲಗುಣವಳಿದು ಶ್ರೀ ವಿಭೂತಿಯ
ಪಂಚಸ್ಥಾನದಲ್ಲಿ ಪಂಚಬ್ರಹ್ಮಮಂತ್ರದಿಂದೆ ಧರಿಸಲು,
ಪಂಚಮಹಾಪಾತಕಂಗಳು ಪಲ್ಲಟವಪ್ಪುವು ನೋಡಾ.
ಸರ್ವಾಂಗವನು ಧೂಳನವ ಮಾಡಲು
ಸರ್ವವ್ಯಾಧಿಗಳು ಪರಿಹರವಪ್ಪುವು ನೋಡಾ.
ಇದು ಕಾರಣ ಇಂತಪ್ಪ ಶ್ರೀ ವಿಭೂತಿಯ
ಲಲಾಟಾದಿ ಮೂವತ್ತೆರಡು ಸ್ಥಾನಗಳಲ್ಲಿ ಧರಿಸಿ,
ನಿತ್ಯ ಲಿಂಗಾರ್ಚನೆಯ ಮಾಡುವಾತ ಸತ್ಯಶಿವನಲ್ಲದೆ
ಬೇರಲ್ಲವಯ್ಯ ಅಖಂಡೇಶ್ವರಾ./624
ಸಂದೇಹಿಸೂತಕಿಯಲ್ಲ ಶರಣ,
ಬಂದಿತೊ ಬಾರದೊ ಎಂಬ ತಥ್ಯಮಿಥ್ಯ
ರಾಗದ್ವೇಷಿಯಲ್ಲ ಶರಣ.
ಸ್ತುತಿ ನಿಂದೆಗೆ ಹಿಗ್ಗಿ ಕುಗ್ಗುವನಲ್ಲ ಶರಣ.
ಇದು ಕಾರಣ, ಅಖಂಡೇಶ್ವರಾ, ನಿಮ್ಮ ಶರಣನ ಪರಿ
ಆವ ಲೋಕದೊಳಗೆ ಇಲ್ಲ ನೋಡಾ./625
ಸಂಸಾರದೊಳಗಿರ್ದ ಸದ್ಭಕ್ತನು
ಲಿಂಗದೊಡನೆ ಸಹಭೋಜನವ ಮಾಡಬೇಕಾದಡೆ
ಜಂಗಮಪ್ರಸಾದವ ಕೈಕೊಂಡು ತನ್ನ ಲಿಂಗಕ್ಕರ್ಪಿಸಿ
ಆ ಲಿಂಗದೊಡನೆ ಸಹಭೋಜನವ ಮಾಡಬೇಕಲ್ಲದೆ,
ಜಂಗಮಪ್ರಸಾದವಿಲ್ಲದೆ
ಲಿಂಗದೊಡನೆ ಸಹಭೋಜನವ ಮಾಡಲಾಗದು.
ಅದೇನು ಕಾರಣವೆಂದೊಡೆ :
ಜಂಗಮಪ್ರಸಾದವು ಲಿಂಗಕ್ಕೆ ಪರಮಜೀವಕಳೆಯಾದ ಕಾರಣ.
ಅಂತಪ್ಪ ಜಂಗಮದಲ್ಲಿ ರೂಪು ಕುರೂಪು ಕುಲಛಲವ ನೋಡಲಾಗದು.
ಆ ಜಂಗಮದಲ್ಲಿ ವಿದ್ಯೆ ಶಾಸ್ತ್ರ ಬುದ್ಧಿವರ್ಧನ
ಜ್ಞಾನ ಆಚಾರ ಮಾತಿನ ಜಾಣ್ಮೆಯ ಹುಡುಕಲಾಗದು.
ಆ ಜಂಗಮದಲ್ಲಿ ಉಚ್ಚನೀಚವನರಸಲಾಗದು.
ಆ ಜಂಗಮದಲ್ಲಿ ಹಾಸ್ಯ ರಹಸ್ಯ
ಉದ್ದೇಶ ಉದಾಸೀನಂಗಳ ಮಾಡಲಾಗದು.
ಆ ಜಂಗಮದಲ್ಲಿ ಪಂಕ್ತಿಭೇದ, ಪಾಕಭೇದವ ಮಾಡಲಾಗದು.
ಆ ಜಂಗಮದಲ್ಲಿ ಮದಮತ್ಸರಂಗಳಿಂದೆ
ಹಗೆತನವ ಸಾಧಿಸಬಾರದು.
ಆ ಜಂಗಮದ ಮೇಲೆ ಮಿಥ್ಯಾಲಾಪದಿಂದೆ
ಇಲ್ಲದ ಅಪವಾದವ ಕಲ್ಪಿಸಬಾರದು.
ಆ ಜಂಗಮಕ್ಕೆ ಕೋಪಾಟೋಪದ ಉದ್ರೇಕದಿಂದೆ
ನಿಷ್ಠುರವಾಕ್ಯ ನುಡಿಯಲಾಗದು.
ಆ ಜಂಗಮವ ಹಾದಿ ಮಾರ್ಗ ಬೀದಿ ಬಾಜಾರಂಗಳಲ್ಲಿ ಕಂಡು
ಗರ್ವ ಅಹಂಕಾರದಿಂದೆ ಬೀಗಿ ಬೆರೆತುಕೊಂಡು ಹೋಗಲಾಗದು.
ಆ ಜಂಗಮದ ಸನ್ನಿಧಿಯಲ್ಲಿ ಆನೆ ಕುದುರೆ
ಅಂದಳ ಪಲ್ಲಕ್ಕಿಗಳ ಏರಲಾಗದು.
ಆ ಜಂಗಮವು ಬರುವ ಇದಿರಿನಲ್ಲಿ
ತೂಗುದೊಟ್ಟಿಲು, ಚಪ್ಪರಮಂಚ,
ಗಗನದುಪ್ಪರಿಗೆ ಉನ್ನತ ಚೌಕಿಯ ಮೇಲೆ ಕುಳ್ಳಿರಲಾಗದು.
ಆ ಪರಮಜಂಗಮವು ತಮ್ಮ ಕರುಣದಿಂದೆ ಲಿಂಗಾರ್ಪಿತಕ್ಕೆ
ಜಂಘೆಯನಿಟ್ಟು ನಡೆದು ಮನೆಗೆ ಬಂದಲ್ಲಿ
ಕಂಡು ಅಡ್ಡಮೋರೆಯನ್ನಿಕ್ಕಲಾಗದು.
ಇಂತೀ ಭೇದಗುಣಂಗಳ ಜಂಗಮದಲ್ಲಿ
ಮಾಡುವ ತಾಮಸಭಕ್ತರಿಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ,
ಪಾದೋದಕ ಪ್ರಸಾದವು ಮುನ್ನವೇ ಇಲ್ಲ.
ಮುಕ್ತಿಯೆಂಬುದು ಎಂದೆಂದಿಗೂ ಇಲ್ಲ.
ಇಂತಪ್ಪ ಅಜ್ಞಾನ ತಾಮಸಭಕ್ತನು
ಲಿಂಗದೊಡನೆ ಸಹಭೋಜನವ ಮಾಡಿದಡೆ
ಶುನಿ ಸೂಕರ ಕುಕ್ಕುಟ ಬಸುರಲ್ಲಿ ಬಂದು ಬಂದು
ಸೂರ್ಯಚಂದ್ರರುಳ್ಳನ್ನಕ್ಕರ
ಹೊಲೆಯರ ಬಾಗಿಲ ಕಾಯ್ದುಕೊಂಡಿರ್ಪುದು
ತಪ್ಪದು ನೋಡಾ ಅಖಂಡೇಶ್ವರಾ./626
ಸಕಲ ಗಣಂಗಳು ಸಾಕ್ಷಿಯಾಗಿ
ಶ್ರೀಗುರುದೇವನು ಕರಸ್ಥಲಕ್ಕೆ ಕರುಣಿಸಿಕೊಟ್ಟ
ಇಷ್ಟಲಿಂಗದಲ್ಲಿ ನಿಷ್ಠೆನಿಬ್ಬೆರಗಾಗಿ,
ಶರಣಸತಿ ಲಿಂಗಪತಿ ಭಾವಬಿಡದೆ
ಆಚರಿಸುವ ಲಿಂಗವು ಓಸರಿಸಿ ಹೋದಡೆ,
ಆ ಲಿಂಗದಲ್ಲಿ ತನ್ನ ಪ್ರಾಣತ್ಯಾಗವ ಮಾಡಬೇಕಲ್ಲದೆ
ಜೀವನ ಕಕ್ಕುಲಾತಿಯಿಂದುಳಿಯಲಾಗದು.
ಮರಳಿ ಮತ್ತೊಂದು ಲಿಂಗವ ಧರಿಸಲಾಗದು.
ಅದೇನು ಕಾರಣವೆಂದಡೆ :
ಕಾಷ್ಠದಲ್ಲಿ ಅಗ್ನಿಯಿರ್ಪುದಲ್ಲದೆ
ಕರಿಗೊಂಡ ಇದ್ದಲಿಯಲ್ಲಿ ಅಗ್ನಿಯಿರ್ಪುದೇ ?
ಇಂತೀ ದೃಷ್ಟದಂತೆ,
ಮುನ್ನ ಗುರೂಪದೇಶವಿದ್ದ ದೇಹದಲ್ಲಿ ಶಿವಕಳೆಯಿರ್ಪುದಲ್ಲದೆ,
ಗುರೂಪದೇಶವಾಗಿ ಲಿಂಗವ್ರತವನಾಚರಿಸಿ
ಮರಳಿ ಲಿಂಗಬಾಹ್ಯ ವ್ರತಗೇಡಿಯಾದ ದೇಹದಲ್ಲಿ
ಪರಮಶಿವಕಳೆಯೆಲ್ಲಿಯದೊ ?
ಆ ಶಿವಕಳೆಯಿಲ್ಲದ ದೇಹಕ್ಕೆ
ಮರಳಿ ಲಿಂಗಧಾರಣವಾದಡೆಯು ಆ ಲಿಂಗ ಪ್ರೇತಲಿಂಗವು ;
ಅವ ಭೂತಪ್ರಾಣಿ.
ಆ ಲಿಂಗದ ಪೂಜೆಯ ಎಷ್ಟು ದಿನ ಮಾಡಿದಡೆಯು ಫಲವಿಲ್ಲ;
ಮುಂದೆ ಮುಕ್ತಿಯಿಲ್ಲ.
ಅವಗೆ ರಾಜನರಕ ಪ್ರಾಪ್ತಿಯಾಗಿರ್ಪುದು ನೋಡಾ.
ಇದಕ್ಕೆ ಸಾಕ್ಷಿ:
“ಲಿಂಗಬಾಹ್ಯಾತ್ ವ್ರತಭ್ರಷ್ಟಃ ಪುನರ್ಲಿಂಗಂ ನ ಧಾರಯೇತ್ |
ತತ್ಪೂಜಾ ನಿಷ್ಫಲಾ ಚೈವ ರೌರವಂ ನರಕಂ ವ್ರಜೇತ್ ||
ಮತ್ತಂ,
“ಪ್ರೇತಲಿಂಗೇನ ಸಂಸ್ಕಾರೇ ಭೂತಪ್ರಾಣೇ ನ ಜಾಯತೇ |
ಪ್ರಭಾತೇ ತನ್ಮುಖಂ ದೃಷ್ಟ್ವಾ ಕೋಟಿ ಜನ್ಮಸು ಸೂಕರಃ ||”
ಎಂದುದಾಗಿ,
ಇಂತಪ್ಪ ಲಿಂಗಬಾಹ್ಯ ವ್ರತಭ್ರಷ್ಟನ ಮುಖವ
ಪ್ರಾತಃಕಾಲದಲ್ಲಿ ನೊಡಿದಾತಂಗೆ
ಕೋಟಿವೇಳೆ ಶುನಿ ಸೂಕರನ ಬಸುರಲ್ಲಿ
ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ./627
ಸಕಲ ಗಣಂಗಳು
ತಮ್ಮ ವಚನಾನುಭಾವವೆಂಬ ಪರಮಾಮೃತವನು
ಎನ್ನ ಕರ್ಣವೆಂಬ ಕುರುಹ ಕಟ್ಟಿ ಎರಕವೆರೆಯಲು,
ಅದು ಮನದಲ್ಲಿ ಮೂರ್ತಿಯಾಗಿ
ಒಳಗೆ ಪ್ರಾಣಲಿಂಗವಾಯಿತ್ತು ; ಹೊರಗೆ ಇಷ್ಟಲಿಂಗವಾಯಿತ್ತು.
ಎನ್ನೊಳಹೊರಗೆ ಭರಿತವಾದ
ಅಖಂಡೇಶ್ವರನೆಂಬ ಪರಶಿವನು
ನುಡಿಸಿದಂತೆ ನುಡಿದೆನಲ್ಲದೆ
ಎನ್ನ ಮನಕ್ಕೆಬಂದಂತೆ ನುಡಿಯಲಿಲ್ಲ ಕೇಳಿರೆ. /628
ಸಕಲ ವಿಸ್ತಾರದ ರೂಪು ನಿಮ್ಮೊಳಗಿರ್ಪುದು :
ನೀವೆನ್ನ ಮನದಲ್ಲಿ ಅಡಗಿರ್ಪಿರಿ.
ಅದೆಂತೆಂದೊಡೆ :
ಕರಿ ಕಣ್ಣಾಲಿಯೊಳಗಡಗಿದಂತೆ,
ನೀವು ಭಕ್ತಜನಮನೋವಲ್ಲಭನಾದ ಕಾರಣ
ಎನ್ನ ಮನದ ಕೊನೆಯಮೊನೆಯಲ್ಲಿ ಅಡಗಿರ್ದಿರಯ್ಯಾ ಅಖಂಡೇಶ್ವರಾ./629
ಸಕಲ ವಿಸ್ತಾರದೊಳಗೆಲ್ಲ ಲಿಂಗವ ತೋರಿದ.
ಆ ಲಿಂಗದೊಳಗೆ ಎನ್ನ ತೋರಿದ.
ಎನ್ನೊಳಗೆ ತನ್ನ ತೋರಿದ
ಮಹಾಗುರುವಿಂಗೆ ನಮೋ ನಮೋ ಎಂಬೆನಯ್ಯ
ಅಖಂಡೇಶ್ವರಾ./630
ಸಕಲ ವ್ಯಾಪಾರವ ಬಿಟ್ಟು ನಿಮಗೆ ನಾನು ಮರುಳಾಗಿರ್ಪೆನಯ್ಯಾ.
ಸಕಲ ವ್ಯಾಪಾರವ ಬಿಟ್ಟು ನನಗೆ ನೀವು ಮರುಳಾಗಿರ್ಪಿರಯ್ಯಾ
ನಿಮಿಷ ನಿಮಿಷಾರ್ಧ ನಾ ನಿಮ್ಮನಗಲದಿರ್ಪೆನಯ್ಯಾ.
ನೀವೆನ್ನ ನಿಮಿಷ ನಿಮಿಷಾರ್ಧವಗಲದಿರ್ಪಿರಯ್ಯಾ.
ಚಿನ್ನ ಬಣ್ಣದಂತೆ ನಾವಿಬ್ಬರು ಕೂಡಿ
ಎಂದೆಂದಿಗೂ ಅಗಲದಂತಿರ್ಪೆವಯ್ಯಾ
ಅಖಂಡೇಶ್ವರಾ./631
ಸಕಲ ಸಾಧನಂಗಳಿಲ್ಲದೆ ಬಹುಪ್ರಯಾಸವಿಲ್ಲದೆ
ಅತಿ ಸುಲಭದಲ್ಲಿಯೆ ಜೀವನ್ಮುಕ್ತಿಯನೀವ ಅಮನಸ್ಕಯೋಗವೆಂತೆನೆ :
ಅಂತರಂಗದ ಮನಮಂ ನೆನೆಯದಂತೆ ಮುದ್ರಿಸಿ
ನಿರ್ಲಕ್ಷ್ಯದೊಳ್ನಿಲುವುದೆ ಅಮನಸ್ಕರಾಜಯೋಗ ನೋಡಾ
ಅಖಂಡೇಶ್ವರಾ./632
ಸಕಲಮೂರ್ತಿಯಾಗಿ ಇಷ್ಟಲಿಂಗವಾಯಿತ್ತು.
ನಿಷ್ಕಲಮೂರ್ತಿಯಾಗಿ ಪ್ರಾಣಲಿಂಗವಾಯಿತ್ತು.
ಕೇವಲ ನಿರವಯಮೂರ್ತಿಯಾಗಿ ಭಾವಲಿಂಗವಾಯಿತ್ತು.
ಸಕಲಮೂರ್ತಿಗೆ ಕ್ರಿಯೆ, ನಿಷ್ಕಲಮೂರ್ತಿಗೆ ಜ್ಞಾನ,
ಕೇವಲ ನಿರವಯಮೂರ್ತಿಗೆ ಆನಂದ,
ಸ್ಥೂಲವೇ ಕಾಯ, ಸೂಕ್ಷ್ಮವೇ ಪ್ರಾಣ, ಕಾರಣವೇ ವಸ್ತು.
ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯವೆಂಬವು
ಸೂಕ್ಷ್ಮದ ಷಡ್ವಿಧಲಿಂಗವು.
ಇವಕ್ಕೆ `ಓಂ ನಮಃಶಿವಾಯ’ ಎಂಬುದೇ ತೃಪ್ತಿ.
ಸಂತೋಷವೇ ಕಾರಣ, ಮಹಾಕಾರಣವೇ ಪರಿಣಾಮ.
ತೂರ್ಯಾತೀತವಾಗಿ ಸರ್ವಕೇಳಿಕೆಯಂ ಕೇಳಿ
ನಿಜಾನಂದವಾಗಿಹುದು.
ವಿರಾಟವೇ ಸುನಾದವಾಗಿ ಹೊರಬಿದ್ದು ನುಡಿದು
ಭೇರಿನಾದದಂತೆ ಆಕಾಶಧ್ವನಿಯಂತೆ ತನಗೆ ತಾನೇ ಕೇಳುವುದು.
ಹಿರಣ್ಯಗರ್ಭಬಿಂದುವಿನ ಮನೆಯಲ್ಲಿ
ಗಾಳಿಪಟಕ್ಕೆ ಬೇರಬಿರಿಕೆಯ ಕಟ್ಟಿ ನುಡಿಸುವ ತೆರದಂತೆ ತೇಜವಾಗಿ
ಶಂಖದ ಧ್ವನಿಯಂತೆ ತೋರುತಿರ್ಪ ಸುನಾದಕ್ಕೆ
ಎರಡಂಗುಲದ ಮೇಲೆ ತೇಜವಿಹುದು.
ಅದು ತುಂಬಿದ ಹುಣ್ಣಿಮೆಯ ಬೆಳದಿಂಗಳಂತೆ,
ಚಂದ್ರಜ್ಯೋತಿಯ ಪ್ರಭೆಯಂತೆ, ಹೂಬಿಸಿಲಿನಂತೆ ತೋರುತಿರ್ಪುದು.
ಕಳೆಯ ಮನೆಯಲ್ಲಿ ಎರಡಂಗುಲ ಪ್ರಮಾಣ.
ಮೂಲಪ್ರಕೃತಿ ಮೂಗಿನಮೇಲೆ ಭ್ರೂಮಧ್ಯ ಪ್ರಣವದಲ್ಲಿ
ಓಂಕಾರಧ್ವನಿಯ ಝೇಂಕಾರದಂತೆ, ಘಂಟೆಯ ಬಾರಿಸಿದಂತೆ,
ತಟತಟನೆ ಹಾರಿ ಅದು ಭ್ರೂಮಧ್ಯಸ್ಥಾನದಲ್ಲಿ ತೋರುವುದು.
ನಾದವೇ ಶಬ್ದ, ನಿಃಶಬ್ದವೇ ಬಿಂದುಮಯ.
ನಾದದೊಳಗಿರ್ದ ನಾದವೇ ಓಂಕಾರ.
ಚಿಜ್ಜ್ಯೋತಿಯ ಪ್ರಕಾಶ ಭ್ರೂಮಧ್ಯದ ಪಣೆಯ ಮೇಲೆ
ಎರಡಂಗುಲದಲ್ಲಿ ಕಾಣಿಸುತ್ತಿಹುದು.
ಅದು ಮನದಿಂದೆ ಕಂಡಿತೋ ಕಣ್ಣಿನಿಂದ ಕಂಡಿತೋ ಎಂದಡೆ,
ನೆನಹು ಎಂಬ ಅಂತಃಕರಣ
ಓಂ ನಮಃಶಿವಾಯ ಎಂಬ ಪ್ರಣವಜ್ಯೋತಿಯ ತೋರಿತ್ತು.
ಚಿತ್ತದ ತೋರಿಕೆ
ಅರವತ್ತಾರುಕೋಟಿ ಪ್ರಣವಜ್ಯೋತಿಯ ಕಿರಣದಲ್ಲಿ
ತೇರಿನ ಬದಿಯ ಬಿರಿಸಿನೋಪಾದಿಯ
ನೆನಹು ಮಾತ್ರಕ್ಕೆ ತೋರುತ್ತಿಹುದು.
ಹೊರದೃಷ್ಟಿಯ ಒಳಗಿಟ್ಟು, ಒಳದೃಷ್ಟಿಯ ಹೊರಗಿಟ್ಟು ಪರಿಪೂರ್ಣವಾಗಲು,
ಒಳಹೊರಗೆ ನೋಡುವ ಶಿವಶರಣರ ಮನ ಭಾವಕ್ಕೆ
ಆನಂದವೇ ತೋರುತ್ತಿಹುದು.
ದಿನಕರನ ಕಾಂತಿ, ಮಧ್ಯಾಹ್ನದ ಬಿಸಿಲು, ಅಂತರಂಗದ ಛಾಯೆಯಂತೆ,
ನಿರ್ಮಲವಾದ ದರ್ಪಣದ ಪ್ರತಿಬಿಂಬದಂತೆ,
ತನ್ನ ರೂಪಂಗಳ ತಾನೆ ನೋಡಿದಾತನು ಜೀವನ್ಮುಕ್ತನು.
ಆತ ಭವದಬಳ್ಳಿಯ ಹರಿದು
ನಿತ್ಯಾನಂದ ನಿರ್ಮಳ ನಿರಾವರಣ ನಿಜ ಚಿನ್ಮಯನಾಗಿಹನು.
ಇನ್ನು `ಓಂ ನಮಃಶಿವಾಯ’ ಎಂಬ ಊಧ್ರ್ವಪ್ರಣವ.
ಅಳ್ಳನೆತ್ತಿಯ ಸ್ಥಾನದಲ್ಲಿ ಅರುಹಿನ ಮನೆಯುಂಟು.
ಅದಕ್ಕೆ ತಟಿಮಂತ್ರ.
ಅಂತರಂಗದ ಬಾಯಲ್ಲಿ ಎಡಬಲವು ಎರಡು ಕರ್ಣದ್ವಾರಂಗಳಲ್ಲಿ
ನುಡಿಯ ಕೇಳಿದಡೆ ಸುನಾದವಾಯಿತ್ತು.
ಅದು ದಶನಾದಂಗಳಿಂದೆ
ಶರಧಿ ನಿರ್ಝರ ಮೇಘ ಮುರಜ ಭೇರಿ ಕಹಳೆ
ಘಂಟೆ ಶಂಖ ವೀಣೆ ಭ್ರಮರನಾದಂಗಳೆಂಬ ದಶನಾದಂಗಳನು
ಗುರುಮುಖದಿಂದರಿತು ಹಗಲಿರುಳು ಆ ದಶನಾದಂಗಳೊಳಗಾದ
ಸುನಾದವನು
ಎಡೆದೆರಹಿಲ್ಲದೆ ಲಾಲಿಸಿ ಕೇಳುವುದು ಶಿವಯೋಗೀಶ್ವರರು.
ಅದು ಪ್ರಸಾದಲಿಂಗಸ್ಥಲ, ವಿಶುದ್ಧಿಯ ಮನೆ ; ಶರಣಸ್ಥಲ.
ಆ ಸ್ಥಲದಲ್ಲಿ ನಾದವ ಕೇಳಿದವರಿಗೆ
ಜಾಗ್ರ ಸ್ವಪ್ನ ಸುಷುಪ್ತಿಗಳೆಂಬ ಮೂರವಸ್ಥೆಗಳು, ತನುತ್ರಯಂಗಳು
ತೂರ್ಯದಲ್ಲಿ ಹರಿದುಹೋಗುವವು.
ಸುನಾದದಲ್ಲಿ ಮನಸ್ಸಿಟ್ಟಡೆ
ಓಂ ನಮಃಶಿವಾಯ ಎಂಬ ಪ್ರಣವನಾದವ ಕೇಳಿದವರಿಗೆ
ಸ್ವಪ್ನವು ಎಂದಿಗೂ ತೋರದು.
ಇರುಹೆ ಸುಳಿದಡೆ ಎಚ್ಚರಿಕೆ,
ದಿಗಿಲುಭುಗಿಲೆಂದಡೆ ನೀನಾರೆಲಾ ಎಂದು ಮಾತನಾಡಿಸಿಬಿಡುವನು.
ಆ ಪ್ರಣವಘೋಷ ಸತ್ತೆನೆಂಬಂತೆ ದಿವಸ ಹನ್ನೆರಡು ತಾಸಿನೊಳಗೆ
ತನುವ ಬಿಡುವ ಸಮಯದಲ್ಲಿ,
ಆ ಘೋಷ ನಿಘರ್ೊಷವಾಗಿ ನಾದ ನುಡಿಯದು.
ಅದು ಲಕ್ಷವಿಟ್ಟು ನೋಡಿದಡೆ ತೋರುವುದು.
ಅಂಗುಲ ಪ್ರಮಾಣವಾಗಿ ವಸ್ತುವು ಅಂಗುಷ್ಟಕ್ಕೆ ಬರುವುದು.
ವೃಕ್ಷವನೇರಿದ ಸರ್ಪನಂತೆ ಬ್ರಹ್ಮರಂಧ್ರದ ಕೊನೆಗೇರುವುದು.
ಹೆದ್ದುಂಬಿಯ ಕೊಳವಿಯೋಪಾದಿಯಲ್ಲಿ
ವಸ್ತುವು ಅಳ್ಳಿನೆತ್ತಿಯ ಸ್ಥಾನದಲ್ಲಿ ಏರಿ ಹೋಗುವುದು.
ಈ ಮನೆಯ ಶಿವಶರಣ ಬಲ್ಲ.
ಇದು ಹನ್ನೆರಡು ತಾಸು ಪುರಸತ್ತಿಗೆಯ ಹೇಳಿದ ಅರುಹು.
ಇಂತಪ್ಪ ವಸ್ತುವಿನ ನಿಲುಕಡೆಯ ಬಲ್ಲ ಶರಣನು.
ತನ್ನವಸಾನಕಾಲದ ಎಚ್ಚರಿಕೆಯನರಿದು,
ಗೋವು ಮಲಗುವಷ್ಟು ಧರಣಿಯ ಸಾರಣಿಯ ಮಾಡುವುದು.
ಗೋಮಯ ಗೋಮೂತ್ರ ಗೋಕ್ಷೀರ ಗೋದಧಿ
ಗೋಘೃತ ಗೋರೋಚನ ಎಂಬ ಷಡುಸಮ್ಮಾರ್ಜನೆಯ ಮಾಡುವುದು.
ಶಿವಜಂಗಮದ ಧೂಳಪಾದಾರ್ಚನೆಯ ಉದಕಮಂ ನೀಡಿ
ಸಮ್ಮಾರ್ಜನೆಯ ಮಾಡುವುದು.
ರಂಗವಲ್ಲಿಯ ತುಂಬುವುದು, ಭಸ್ಮವ ತಳೆವುದು.
ಪಾದೋದಕ ಪ್ರಸಾದಮಂ ಸಲಿಸಿ,
ಶಿವಗಣಂಗಳಿಗೆ ವಂದನೆಯ ಮಾಡಿ,
ಆ ಸಮ್ಮಾರ್ಜನೆಯ ಮಾಡಿದ ಗದ್ಗುಗೆಯ ಮೇಲೆ ಮುಹೂರ್ತವ ಮಾಡಿ,
`ಓಂ ನಮಃಶಿವಾಯ’ ಎಂಬ ಪ್ರಣವಸ್ಮರಣೆಯ ಮಾಡುವುದು.
ಹಸ್ತದಲ್ಲಿ ಇಷ್ಟಲಿಂಗವ ಹಿಡಿದುಕೊಂಡು
ಇರವಂತಿಗೆ ಸೇವಂತಿಗೆ ಮೊಲ್ಲೆ ಮಲ್ಲಿಗೆ
ಜಾಜಿ ಕರವೀರ ಸುರಹೊನ್ನೆ ಸಂಪಿಗೆ
ಮರುಗ ಪಚ್ಚೆ ದವನ ಬಿಲ್ವಪತ್ರೆ
ಮೊದಲಾದ ಸಮಸ್ತ ಪುಷ್ಪ ಪತ್ರೆಗಳ ಧರಿಸಿ,
ಆ ಶಿವಲಿಂಗವನು ಮನವೊಲಿದು ಕಂಗಳ ತುಂಬಿ ನೋಡುತ್ತ,
ದೇವಭಕ್ತರು ಬಂದಡೆ ಶರಣಾರ್ಥಿ ಎಂದು,
ಮಜ್ಜನವ ನೀಡಿಸಿ, ವಿಭೂತಿಯ ಧರಿಸಿ,
ಪುಷ್ಪಪತ್ರೆಗಳ ಧರಿಸಿ ಎಂದು ಅವರ ಪಾದವಿಡಿದು,
ಶರಣಾರ್ಥಿ ಸ್ವಾಮಿಗಳಿಗೆ ಎಂದು ಹೇಳಿ,
ಶಿವಾರ್ಪಣವ ಮಾಡಿ ಎಂದು ಬಿನ್ನಹವ ಮಾಡುವುದು.
ಮದುವೆ ಮಾಂಗಲ್ಯ ಅರ್ತಿ ಉತ್ಸಾಹ ಶಿಶುವಿನ ಹೆಸರಿಡುವ ಹಾಗೆ
ಹರುಷ ಪರುಷ ಧೈರ್ಯವೇ ಭೂಷಣವಾಗಿ ನಿರೋಧಂಗಳ ಮಾಡದೆ
“ಓಂ ನಮಃಶಿವಾಯ’ ಎಂಬ ಮಂತ್ರ ಭೋರ್ಗರೆಯೆ
ನಿರ್ಮಲ ನೈಷ್ಠಿಕದಿಂದೆ
ಶಿವಜಂಗಮದ ಪಾದವನು ಮಸ್ತಕದ ಮೇಲೆ ಇಡಿಸುವುದು.
ಹಿತವಂತರಾದವರು ವೀರಶೈವ ಪರಮವಚನಂಗಳಂ ಕೇಳಿಸುವುದು.
ಎಡಬಲದಲ್ಲಿರ್ದ ಸಕಲ ಭಕ್ತರು ಮಹೇಶ್ವರರು
`ಓಂ ನಮಃಶಿವಾಯ’ ಎಂಬ ಶಿವಮಂತ್ರವನ್ನು
ಆ ಶರಣನ ಕರ್ಣಂಗಳಲ್ಲಿ ಉಚ್ಚರಿಸುವುದು.
ಈ ಹಡಗದ ಹಗ್ಗವ ಮತ್ತೊಂದು ಹಡಗಕ್ಕೆ ಹಾಕಿ ಬಿಗಿದಡೆ,
ಹಡಗಕ್ಕೆ ಹಡಗ ಕೂಡಿ, ಸಮುದ್ರದ ತೆರೆಯೋಪಾದಿಯಲ್ಲಿ
ಹಡಗವ ಬಿಟ್ಟು ಪ್ರತಿಹಡಗದೊಳಗೆ ಮೂರ್ತವ ಮಾಡಿದಂತೆ,
ಮಂತ್ರಮಂತ್ರವು ಸಂಬಂಧವಾಗಿ,
ಉರಿ ಕರ್ಪುರ ಕೊಂಡಂತಾಯಿತ್ತು ಶರಣನ ದೇಹಪ್ರಾಣವು.
ಇದು ಗುಹ್ಯಕ್ಕೆ ಗುಹ್ಯ, ಗೋಪ್ಯಕ್ಕೆ ಗೋಪ್ಯ,
ರಹಸ್ಯಕ್ಕೆ ಅತಿ ರಹಸ್ಯ ನೋಡಾ ಅಖಂಡೇಶ್ವರಾ./633
ಸಕಲವೇದಶಾಸ್ತ್ರಾಗಮ ಪುರಾಣಂಗಳೆಲ್ಲ
ಶಿವಮಂತ್ರದಲ್ಲಿ ಜನಿಸಿದುವಯ್ಯ.
ಸಕಲತತ್ವಶಕ್ತಿಮೂರ್ತಿಗಳೆಲ್ಲ ಶಿವಮಂತ್ರದಲ್ಲಿ ಜನಿಸಿದುವಯ್ಯ.
ಸಕಲಭುವನ ಬ್ರಹ್ಮಾಂಡ ಸಚರಾಚರಂಗಳೆಲ್ಲ
ಶಿವಮಂತ್ರದಲ್ಲಿಯೇ ಜನಿಸಿದುವಯ್ಯ.
ವೃಕ್ಷಬೀಜನ್ಯಾಯದಂತೆ ಸಕಲವಿಸ್ತಾರವನೊಳಗೊಂಡಿರ್ಪ
ಪರಮ ಶಿವಮಂತ್ರವ ನೆನೆನೆನೆದು ಎನ್ನ ಮನದ ಮುಂದಣ
ಮರವೆಯ ಹರಿದು ಭವಸಾಗರವ ದಾಂಟಿದೆನಯ್ಯ
ಅಖಂಡೇಶ್ವರಾ./634
ಸಕಲೇಂದ್ರಿಯಂಗಳ ಪ್ರಪಂಚು ನಾಸ್ತಿಯಾಗಿರಬಲ್ಲಡೆ
ಕಕ್ಷದಲ್ಲಿ ಧರಿಸುವುದಯ್ಯಾ ಶಿವಲಿಂಗವ.
ಕಾಂಚನಕ್ಕೆ ಕೈಯಾನದಿರ್ದಡೆ ಕರಸ್ಥಲದಲ್ಲಿ ಧರಿಸುವುದಯ್ಯ ಶಿವಲಿಂಗವ.
ಪರಸ್ತ್ರೀಯರ ಅಪ್ಪುಗೆ ಇಲ್ಲದಿರ್ದಡೆ
ಉರಸ್ಥಲದಲ್ಲಿ ಧರಿಸುವುದಯ್ಯ ಶಿವಲಿಂಗವ.
ಎಂದೆಂದೂ ಹುಸಿಯನಾಡದಿರ್ದಡೆ
ಜಿಹ್ವಾಪೀಠದಲ್ಲಿ ಧರಿಸುವುದಯ್ಯ ಶಿವಲಿಂಗವ.
ಅನ್ನಪಾನಂಗಳಿಗೆ ಬಾಯ್ದೆರೆಯದಿರ್ದಡೆ
ಅಮಳೋಕ್ಯದಲ್ಲಿ ಧರಿಸುವುದಯ್ಯ ಶಿವಲಿಂಗವ.
ಅನ್ಯರಾಜರಿಗೆ ತಲೆವಾಗದಿರ್ದಡೆ
ಉತ್ತಮಾಂಗದಲ್ಲಿ ಧರಿಸುವುದಯ್ಯ ಶಿವಲಿಂಗವ.
ಇಂತೀ ಷಡ್ವಿಧಾಚಾರ ನೆಲೆಗೊಂಡು
ಷಡ್ವಿಧ ಸ್ಥಾನದಲ್ಲಿ ಶಿವಲಿಂಗವ ಧರಿಸಬಲ್ಲಡೆ,
ಭಕ್ತನೆಂಬೆನು, ಮಹೇಶ್ವರನೆಂಬೆನು, ಪ್ರಸಾದಿಯೆಂಬೆನು,
ಪ್ರಾಣಲಿಂಗಿಯೆಂಬೆನು, ಶರಣನೆಂಬೆನು, ಐಕ್ಯನೆಂಬೆನು.
ಇಂತೀ ಭೇದವನರಿಯದೆ ಲಿಂಗವ ಧರಿಸಿದಡೆ
ಮಡಿಲಲ್ಲಿ ಕಲ್ಲ ಕಟ್ಟಿಕೊಂಡು ಕಡಲ ಬಿದ್ದಂತಾಯಿತ್ತು
ಕಾಣಾ ಅಖಂಡೇಶ್ವರಾ./635
ಸಗುಣನಲ್ಲ ನಿರ್ಗುಣನಲ್ಲ ನೋಡಾ ಲಿಂಗೈಕ್ಯನು.
ಸಾಕಾರನಲ್ಲ ನಿರಾಕಾರನಲ್ಲ ನೋಡಾ ಲಿಂಗೈಕ್ಯನು.
ಶೂನ್ಯನಲ್ಲ ನಿಃಶೂನ್ಯನಲ್ಲ ನೋಡಾ ಲಿಂಗೈಕ್ಯನು.
ಜ್ಞಾನಿಯಲ್ಲ ಅಜ್ಞಾನಿಯಲ್ಲ ನೋಡಾ ಲಿಂಗೈಕ್ಯನು.
ಕಾಮಿಯಲ್ಲ ನಿಃಕಾಮಿಯಲ್ಲ ನೋಡಾ ಲಿಂಗೈಕ್ಯನು.
ದ್ವೈತಿಯಲ್ಲ ಅದ್ವೈತಿಯಲ್ಲ ನೋಡಾ ಲಿಂಗೈಕ್ಯನು.
ಕರ್ತೃವಲ್ಲ ಭೃತ್ಯನಲ್ಲ ನೋಡಾ ಲಿಂಗೈಕ್ಯನು.
ಇಂತು ಈ ತೆರದಲ್ಲಿ ತೋರುವ ತೋರಿಕೆಗಳೆಲ್ಲವು ತಾನೆಯಾಗಿ
ಇಹಪರದ ಗತಿಗೆಡಿಸಿ ಪರಿಪೂರ್ಣಬ್ರಹ್ಮದಲ್ಲಿ ತನ್ನ ಕುರುಹಡಗಿ
ನಿರ್ವಯಲಾಗಿರ್ಪ ನಿಜಲಿಂಗೈಕ್ಯನ
ಏನೆಂದು ಉಪಮಿಸಬಹುದಯ್ಯಾ ಅಖಂಡೇಶ್ವರಾ ?/636
ಸಚ್ಚಿದಾನಂದ ನಿತ್ಯಪರಿಪೂರ್ಣ ಗುರುವೇ ನಮೋ ನಮೋ.
ಸತ್ಯಸದಮಲ ಸಂಜ್ಞೇಯ ಸೂಚಕ ಗುರುವೇ ನಮೋ ನಮೋ.
ಭಕ್ತಿಬೆಳಗಿನ ಮುಕ್ತಿಸ್ವರೂಪ ಗುರುವೇ ನಮೋ ನಮೋ.
ಅಖಂಡೇಶ್ವರನೆಂಬ ಬಚ್ಚಬರಿಯ
ಬಯಲಬ್ರಹ್ಮವಾದ ಗುರುವೆ ನಮೋ ನಮೋ./637
ಸಚ್ಚಿದಾನಂದ ಪರಶಿವನ ಸದ್ಯೋಜಾತಮುಖದಿಂದ
ಪೃಥ್ವಿತತ್ತ್ವ ಪುಟ್ಟಿತ್ತು.
ಆ ತತ್ವದಿಂದೆ ನಿವೃತ್ತಿ ಎಂಬ ಕಲೆ ಪುಟ್ಟಿತ್ತು.
ಆ ಕಲೆಯಿಂದೆ ಕಪಿಲವರ್ಣದ ನಂದಿನಿಯೆಂಬ ಗೋವು ಪುಟ್ಟಿತ್ತು.
ಆ ಗೋವಿನ ಗೋಮಯದಿಂದೆ
ಮಹದೈಶ್ವರ್ಯವನ್ನುಂಟುಮಾಡುವಂಥ ಭೂತಿ ಎಂಬ
ವಿಭೂತಿ ಪುಟ್ಟಿತ್ತು.
ಮತ್ತಂ,
ಸಚ್ಚಿದಾನಂದ ಪರಶಿವನ ವಾಮದೇವಮುಖದಿಂದೆ
ಅಪ್ಪುತತ್ವ ಪುಟ್ಟಿತ್ತು.
ಆ ತತ್ವದಿಂದೆ ಪ್ರತಿಷ್ಠೆಯೆಂಬ ಕಲೆ ಪುಟ್ಟಿತ್ತು.
ಆ ಕಲೆಯಿಂದೆ ಕೃಷ್ಣವರ್ಣದ ಭದ್ರೆಯೆಂಬ ಗೋವು ಪುಟ್ಟಿತ್ತು.
ಆ ಗೋವಿನ ಗೋಮಯದಿಂದೆ ದಿವ್ಯಪ್ರಕಾಶದಿಂ ಬೆಳಗುವಂಥ
ಭಸಿತವೆಂಬ ವಿಭೂತಿ ಪುಟ್ಟಿತ್ತು.
ಮತ್ತಂ,
ಸಚ್ಚಿದಾನಂದ ಪರಶಿವನ ಅಘೋರಮುಖದಿಂದೆ
ಅಗ್ನಿತತ್ವ ಪುಟ್ಟಿತ್ತು.
ಆ ತತ್ವದಿಂದೆ ವಿದ್ಯೆಯೆಂಬ ಕಲೆ ಪುಟ್ಟಿತ್ತು.
ಆ ಕಲೆಯಿಂದೆ ರಕ್ತವರ್ಣದ ಸುರಭಿಯೆಂಬ ಗೋವು ಪುಟ್ಟಿತ್ತು.
ಆ ಗೋವಿನ ಗೋಮಯದಿಂದೆ ಸಮಸ್ತ ಪಾತಕಂಗಳ ಭಕ್ಷಿಸುವಂಥ
ಭಸ್ಮವೆಂಬ ವಿಭೂತಿ ಪುಟ್ಟಿತ್ತು.
ಮತ್ತಂ,
ಸಚ್ಚಿದಾನಂದ ಪರಶಿವನ ತತ್ಪುರುಷಮುಖದಿಂದೆ
ವಾಯುತತ್ವ ಪುಟ್ಟಿತ್ತು.
ಆ ತತ್ವದಿಂದೆ ಶಾಂತಿಯೆಂಬ ಕಲೆ ಪುಟ್ಟಿತ್ತು.
ಆ ಕಲೆಯಿಂದೆ ಶ್ವೇತವರ್ಣದ ಸುಶೀಲೆಯೆಂಬ ಗೋವು ಪುಟ್ಟಿತ್ತು.
ಆ ಗೋವಿನ ಗೋಮಯದಿಂದೆ ಸಕಲ ವ್ಯಾಧಿಗಳ ಕೆಡಿಸುವಂಥ
ಕ್ಷಾರವೆಂಬ ವಿಭೂತಿ ಪುಟ್ಟಿತ್ತು.
ಮತ್ತಂ,
ಸಚ್ಚಿದಾನಂದ ಪರಶಿವನ ಈಶಾನ್ಯಮುಖದಿಂದೆ
ಆಕಾಶತತ್ವ ಪುಟ್ಟಿತ್ತು.
ಆ ತತ್ವದಿಂದೆ ಶಾಂತ್ಯತೀತವೆಂಬ ಕಲೆ ಪುಟ್ಟಿತ್ತು.
ಆ ಕಲೆಯಿಂದೆ ಚಿತ್ರವರ್ಣದ ಸುಮನೆಯೆಂಬ ಗೋವು ಪುಟ್ಟಿತ್ತು.
ಆ ಗೋವಿನ ಗೋಮಯದಿಂದೆ ಭೂತ ಪ್ರೇತ ಪಿಶಾಚಿ
ಬ್ರಹ್ಮರಾಕ್ಷಸ ಚೋರ ಸರ್ವವ್ಯಾಘ್ರಾದಿಗಳ ಭಯವ ಕೆಡಿಸುವ
ರಕ್ಷೆಯೆಂಬ ವಿಭೂತಿ ಪುಟ್ಟಿತ್ತು.
ಅದೆಂತೆಂದೊಡೆ :ಜಾಬಾಲೋಪನಿಷದಿ :
“ ಸದ್ಯೋಜಾತಾತ್ ಪೃಥಿವೀ ತಸ್ಯಾಃ ನಿವೃತ್ತಿಃ
ತಸ್ಯಾಃ ಗೋಮಯೇನ ವಿಭೂತಿರ್ಜಾತಾ ||
ವಾಮದೇವಾದುದಕಂ ತಸ್ಮಾತ್ ಪ್ರತಿಷ್ಠಾ
ತಸ್ಯಾಃ ಕೃಷ್ಣವರ್ಣಾ ಭದ್ರಾ
ತಸ್ಯಾಃ ಗೋಮಯೇನ ಭಸಿತಂ ಜಾತಂ ||
ಅಘೋರಾದ್ ವಹ್ನಿಃ ತಸ್ಮಾತ್ ವಿದ್ಯಾ
ತಸ್ಯಾಃ ರಕ್ತವರ್ಣಾ ಸುರಭೀ
ತಸ್ಯಾಃ ಗೋಮಯೇನ ಭಸ್ಮ ಜಾತಂ||
ತತ್ಪುರುಷಾದ್ ವಾಯುಃ ತಸ್ಮಾತ್ ಶಾಂತಿಃ
ತಸ್ಯಾಃ ಶ್ವೇತವರ್ಣಾ ಸುಶೀಲಾ
ತಸ್ಯಾಃ ಗೋಮಯೇನ ಕ್ಷಾರಂ ಜಾತಂ||
ಈಶಾನಾದಾಕಾಶಃ ತಸ್ಮಾತ್ ಶಾಂತ್ಯತೀತಾ
ತಸ್ಯಾಶ್ಚಿತ್ರವರ್ಣಾ ಸುಮನಾ
ತಸ್ಯಾಃ ಗೋಮಯೇನ ರಕ್ಷಾ ಜಾತಾ||”
“ ವಿಭೂತಿರ್ಭಸಿತಂ ಭಸ್ಮ | ಕ್ಷಾರಂ ರಕ್ಷೇತಿ ಭಸ್ಮನಃ|
ಭವಂತಿ ಪಂಚನಾಮಾನಿ| ಪಂಚಭಿರ್ನಾಮಭಿಭರ್ೃಶಮ್||”
“ ಐಶ್ವರ್ಯಕಾರಣಾದ್ಭೂತಿರ್ಭಾಸನಾದ್ಭಸಿತಂ ತಥಾ
ಸರ್ವಾಘಭಕ್ಷಣಾದ್ಭಸ್ಮ ಆಪದಾಂ ಕ್ಷಾರಣಾತ್ ಕ್ಷಾರಂ
ಭೂತ-ಪ್ರೇತ-ಪಿಶಾಚ ಬ್ರಹ್ಮರಾಕ್ಷಸಾಪಸ್ಮಾರ
ಭವಭೀತಿಭ್ಯೋಭಿರಕ್ಷಣಾತ್ ರಕ್ಷೇತಿ”
ಎಂದುದಾಗಿ,
ಇಂತಪ್ಪ ಶ್ರೀ ವಿಭೂತಿಯ ನಿರಂತರ ಸಾವಧಾನಭಕ್ತಿಯಿಂದ
ನಾನು ಸರ್ವಾಂಗದಲ್ಲಿ ಧರಸಿ ಶುದ್ಧನಿರ್ಮಲ
ಪರಮಪವಿತ್ರ ಕಾಯನಾದೆನಯ್ಯ ಅಖಂಡೇಶ್ವರಾ./638
ಸಚ್ಚಿದಾನಂದ ಸದ್ಗುರು ತೋರಿದರೆ
ಕಂಡೆನಯ್ಯಾ ಸತ್ಯಸದಾಚಾರವ.
ಸಚ್ಚಿದಾನಂದ ಸದ್ಗುರು ತೋರಿದರೆ
ಕಂಡೆನಯ್ಯಾ ಭಕ್ತಿ ಜ್ಞಾನ ವೈರಾಗ್ಯವ.
ಸಚ್ಚಿದಾನಂದ ಸದ್ಗುರು ತೋರಿದರೆ
ಕಂಡೆನಯ್ಯ ನಿತ್ಯಲಿಂಗಾಂಗಸಂಗಸಮರಸವ.
ಸಚ್ಚಿದಾನಂದ ಸದ್ಗುರು ತೋರಿಸಿದರೆ
ಕಂಡೆನಯ್ಯಾ ಅಖಂಡೇಶ್ವರಾ ನಿಮ್ಮ ಶ್ರೀಚರಣಕಮಲವ. /639
ಸಟೆಯನಾಡದಾತ ಭಕ್ತ.
ಕುಟಿಲ ಕುಹಕವ ಮರೆದಾತ ಭಕ್ತ.
ನಿಟಿಲಾಕ್ಷನ ಧ್ಯಾನದಲ್ಲಿ ಇದ್ದಾತ ಭಕ್ತ.
ನಮ್ಮ ಅಖಂಡೇಶ್ವರನ ಭಕ್ತಿಭಾವದಲ್ಲಿದ್ದಾತನೇ ಸದ್ಭಕ್ತ ನೋಡಾ./640
ಸತ್ಕಾಯಕದಿಂದ ತಂದ ದ್ರವ್ಯಂಗಳ
ಅಂದಂದಿಗೆ ಗುರುಲಿಂಗಜಂಗಮಕ್ಕೆ ಸವೆಸಿ,
ಹಿಂದುಮುಂದನೆಣಿಸದೆ ಇಂದಿಗೆ ನೂರು ತುಂಬಿತ್ತೆಂಬ
ಆನಂದಭಕ್ತರ ತೋರಿ ಎನ್ನ ಬದುಕಿಸಯ್ಯ ಅಖಂಡೇಶ್ವರಾ./641
ಸತ್ಚಿತ್ತಾನಂದ ನಿತ್ಯ ಪರಿಪೂರ್ಣವಾದ ಪರವಸ್ತುವು
ಪ್ರತ್ಯಕ್ಷವಾಗಿ ಎನ್ನ ಕರಸ್ಥಲಕ್ಕೆ ಬಂದಿರಲು,
ಬಳಿಕ ಇನ್ನೆಲ್ಲಿಯದಯ್ಯ ಎನಗೆ ಜಪತಪದ ಚಿಂತೆ ?
ಇನ್ನೆಲ್ಲಿಯದಯ್ಯ ಎನಗೆ ನೇಮನಿತ್ಯದ ಚಿಂತೆ ?
ಇನ್ನೆಲ್ಲಿಯದಯ್ಯ ಎನಗೆ ಮೌನಮುದ್ರೆಯ ಚಿಂತೆ ?
ಅಖಂಡೇಶ್ವರಲಿಂಗವು ಎನ್ನೊಳಹೊರಗೆ ತಾನಾದ ಬಳಿಕ
ಇನ್ನೆಲ್ಲಿಯದಯ್ಯ ಎನಗೆ ಬೇರೆ ತತ್ವವನರಿಯಬೇಕೆಂಬ ಚಿಂತೆ ?/642
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣ ಅಖಂಡವೆಂಬ
ಆರು ಲಕ್ಷಣಯುಕ್ತವಾದ ಮಹಾಲಿಂಗವೇ ಪತಿ, ನಾನೇ ಶರಣಸತಿ
ಎಂಬ ದೃಢಬುದ್ಧಿ ನಿಶ್ಚಲವಾಗಿರಬೇಕು.
ಮತ್ತೆ ತಾನೇ ಸರ್ವಾಧಾರ ಪರಮಸ್ವತಂತ್ರನು
ಎಂಬ ಭಾವ ಇಂಬುಗೊಂಡಿರಬೇಕು.
ಅಂಗಭೋಗೋಪಭೋಗಂಗಳೆಲ್ಲ ಹಿಂದುಳಿದಿರಬೇಕು.
ಲಿಂಗಭೋಗೋಪಭೋಗಂಗಳೆಲ್ಲ ಮುಂದುಗೊಂಡಿಪರ್ಾತನೆ
ಶರಣ ನೋಡಾ !
ಅದೆಂತೆಂದೊಡೆ :
“ಪತಿರ್ಲಿಂಗಂ ಸತೀಚಾಹಂ ಹೃದಿಯುಕ್ತಃ ಸ್ವಯಂ ಪ್ರಭುಃ |
ಪಂಚೇಂದ್ರಿಯ ಸುಖಂ ನಾಸ್ತಿ ಶರಣಸ್ಥಲಮುತ್ತಮಮ್ ||”
ಎಂದುದಾಗಿ, ಇಂತಪ್ಪ ಮಹಾಶರಣರ ಸಂಗದಲ್ಲಿರಿಸಿ
ಸಲಹಯ್ಯ ಎನ್ನ ಅಖಂಡೇಶ್ವರಾ./643
ಸತ್ತು ಹುಟ್ಟುವನಲ್ಲ ನೋಡಾ ಮಹೇಶ್ವರನು.
ಹುಟ್ಟಿ ಸಾವವನಲ್ಲ ನೋಡಾ ಮಹೇಶ್ವರನು.
ಇಹಲೋಕದ ಭೋಗವ ಬಯಸುವನಲ್ಲ ನೋಡಾ ಮಹೇಶ್ವರನು.
ಪರಲೋಕದ ಮೋಕ್ಷವ ಬಯಸುವನಲ್ಲ ನೋಡಾ ಮಹೇಶ್ವರನು.
ಇಹಪರವ ಹೊದ್ದದ ಧೀರನು.
ಹಿಂದುಮುಂದೆಂಬ ದ್ವಂದ್ವಕರ್ಮಂಗಳ ಮೀರಿದ
ಅಖಂಡೇಶ್ವರಾ./644
ಸತ್ತು ಹೋಗುವರೆಲ್ಲ ಸ್ವರ್ಗಪದಸ್ಥರೆ ? ಅಲ್ಲಲ್ಲ.
ಕೈದುವ ಪಿಡಿವರೆಲ್ಲ ಮಹಾಕಲಿಗಳೆ ? ಅಲ್ಲಲ್ಲ.
ಲಿಂಗವ ಧರಿಸುವರೆಲ್ಲ ಲಿಂಗಪ್ರಾಣಿಗಳೆ ? ಅಲ್ಲಲ್ಲ.
ಅದೇನು ಕಾರಣವೆಂದಡೆ :
ಕಪಿಯ ಕೈಯಲ್ಲಿ ರತ್ನವ ಕೊಟ್ಟಡೆ
ಅದು ಹಣ್ಣೆಂದು ಕಡಿದು ನೋಡಿ ಕಲ್ಲೆಂದು ಬಿಸುಟುವುದಲ್ಲದೆ,
ಆ ರತ್ನದ ದಿವ್ಯಬೆಳಗನರಿವುದೆ ಅಯ್ಯಾ ?
ಇಂತೀ ದೃಷ್ಟದಂತೆ
ಮಡ್ಡಜೀವಿಗಳ ಕೈಯಲ್ಲಿ ದೊಡ್ಡಲಿಂಗವಿರ್ದಡೇನು ?
ಆ ಲಿಂಗದಲ್ಲಿ ಮಹಾಘನ ಪರಮಕಲೆಯನರಿಯದ ಬಳಿಕ
ಅದು ಒಡ್ಡುಗಲ್ಲಿನಂತೆ ಕಂಡೆಯಾ ಅಖಂಡೇಶ್ವರಾ ?/645
ಸತ್ಯದ ಮನೆಯಲ್ಲಿ ಶಿವನಿರ್ಪನಲ್ಲದೆ
ಅಸತ್ಯದ ಮನೆಯಲ್ಲಿ ಶಿವನಿರ್ಪನೆ ?
ಇಲ್ಲಿಲ್ಲ ನೋಡಿರೊ.
ಇದು ಕಾರಣ, ನಮ್ಮ ಅಖಂಡೇಶ್ವರಲಿಂಗವನೊಲಿಸಬೇಕಾದಡೆ
ಸತ್ಯವ ಸಾಧಿಸಬೇಕು ಕಾಣಿರೋ./646
ಸತ್ಯನೆಂದೆನಿಸಯ್ಯ ಎನ್ನ ; ನಿತ್ಯನೆಂದೆನಿಸಯ್ಯ ಎನ್ನ ;
ಭಕ್ತನೆಂದೆನಿಸಯ್ಯ ಎನ್ನ ; ಮುಕ್ತನೆಂದೆನಿಸಯ್ಯ ಎನ್ನ ;
ನಿಮ್ಮ ಪೂರ್ಣ ಒಲುಮೆಯ
ಲೆಂಕನೆಂದೆನಿಸಯ್ಯ ಎನ್ನ ಅಖಂಡೇಶ್ವರಾ./647
ಸತ್ಯವ ನುಡಿಯದು, ಸದಾಚಾರದಲ್ಲಿ ನಡೆಯದು,
ಭಕ್ತಿಯ ಪಿಡಿಯದು, ಮುಕ್ತಿಯ ಪಡೆಯದು,
ಸುಡು ಸುಡು ಈ ಮನದ ಯುಕ್ತಿಯ.
ಅಖಂಡೇಶ್ವರಾ, ನಿಮ್ಮ ಭಕ್ತಿಯ ಭಾವದಲ್ಲಿರಿಸಿ
ಸಲಹಯ್ಯ ಎನ್ನ, ನಿಮ್ಮ ಧರ್ಮ ನಿಮ್ಮ ಧರ್ಮ./648
ಸತ್ಯವಚನವ ನುಡಿಯಬಲ್ಲರೆ ಶರಣನೆಂಬೆನು.
ಸದಾಚಾರದಲ್ಲಿ ನಡೆಯಬಲ್ಲರೆ ಶರಣನೆಂಬೆನು.
ವೃತ್ತಿಜ್ಞಾನವಳಿದು ಚಿತ್ತದ ಕೊನೆಯ ಮೊನೆಯಲ್ಲಿ
ನಿತ್ಯಲಿಂಗದ ನೆನಹು ತುಂಬಿ ಸುಳಿಯಬಲ್ಲರೆ
ಅಚ್ಚ ಶರಣನೆಂಬೆನಯ್ಯ ಅಖಂಡೇಶ್ವರಾ./649
ಸತ್ಯವಚನವ ನುಡಿವಾತನೇ ಸದ್ಭಕ್ತನು.
ಸದಾಚಾರದಲ್ಲಿ ನಡೆವಾತನೇ ಸದ್ಭಕ್ತನು.
ತಥ್ಯ ಮಿಥ್ಯ ರಾಗದ್ವೇಷವನಳಿದಾತನೇ
ಸದ್ಭಕ್ತನಯ್ಯ ಅಖಂಡೇಶ್ವರಾ./650
ಸತ್ಯಸದಾಚಾರಿಯಯ್ಯಾ ನಿಮ್ಮ ಶರಣ .
ನಿತ್ಯನಿರುಪಮನಯ್ಯಾ ನಿಮ್ಮ ಶರಣ .
ಭಕ್ತಿಭಾವಕನಯ್ಯಾ ನಿಮ್ಮ ಶರಣ .
ಯುಕ್ತಿವಿಚಾರನಯ್ಯಾ ನಿಮ್ಮ ಶರಣ .
ಮುಕ್ತಿಮೂಲಿಗನಯ್ಯಾ ನಿಮ್ಮ ಶರಣ .
ಅಖಂಡೇಶ್ವರಾ, ನಿಮ್ಮ ಶರಣನ ಘನವ ನೀವೇ ಬಲ್ಲಿರಲ್ಲದೆ
ಲೋಕದ ಕುನ್ನಿಮಾನವರೆತ್ತ ಬಲ್ಲರಯ್ಯಾ ./651
ಸತ್ಯಾಸತ್ಯವೆಂದು ವಿವರಿಸಿ ತಿಳಿದು
ಅಸತ್ಯವ ಕಳೆದು ಸತ್ಯವ ಸಾಧಿಸಬಲ್ಲಡೆ
ಘನಲಿಂಗದೇವರೆಂಬೆನು.
ನಿತ್ಯಾನಿತ್ಯವೆಂದು ವಿವರಿಸಿ ತಿಳಿದು
ಅನಿತ್ಯವ ಕಳೆದು ನಿತ್ಯವ ಹಿಡಿಯಬಲ್ಲಡೆ
ಘನಲಿಂಗದೇವರೆಂಬೆನು.
ಪುಣ್ಯಪಾಪವೆಂದು ವಿವರಿಸಿ ತಿಳಿದು
ಪಾಪವ ಕಳೆದು ಪುಣ್ಯವ ಗ್ರಹಿಸಬಲ್ಲಡೆ
ಘನಲಿಂಗದೇವರೆಂಬೆನು.
ಧರ್ಮಕರ್ಮವೆಂದು ವಿವರಿಸಿ ತಿಳಿದು
ಕರ್ಮವ ಕಳೆದು ಧರ್ಮವ ಬಿಡದಿರಬಲ್ಲಡೆ
ಘನಲಿಂಗದೇವರೆಂಬೆನು.
ಆಚಾರ ಅನಾಚಾರವೆಂದು ವಿವರಿಸಿ ತಿಳಿದು
ಅನಾಚಾರವ ಕಳೆದು ಆಚಾರಸಂಪನ್ನನಾಗಬಲ್ಲಡೆ
ಘನಲಿಂಗದೇವರೆಂಬೆನು.
ಇಂತೀ ಉಭಯದ ನ್ಯಾಯವನರಿಯದೆ
ಸಟೆಯನೆ ದಿಟವ ಮಾಡಿ ದಿಟವನೆ ಸಟೆಯಮಾಡಿ
ಘಟವ ಹೊರೆವ ಕುಟಿಲ ಕುಹಕರ
ತುಟಿಯತನಕ ಮೂಗಕೊಯ್ದು
ಕಟವಾಯ ಸೀಳಿ ಕನ್ನಡಿಯ ತೋರಿ
ಕಷ್ಟಜನ್ಮದಲ್ಲಿ ಹುಟ್ಟಿಸದೆ ಬಿಡುವನೆ ನಮ್ಮ ಅಖಂಡೇಶ್ವರ ?/652
ಸದ್ಗುರುಕಾರುಣ್ಯವ ಪಡೆದು ಲಿಂಗಾಂಗಸಮರಸವುಳ್ಳ
ವೀರಶೈವ ಭಕ್ತ ಮಹೇಶ್ವರರೆನಿಸಿಕೊಂಡ ಬಳಿಕ
ತಮ್ಮಂಗದ ಮೇಲಣ ಲಿಂಗವು ಷಟ್ಸ್ಥಾನಂಗಳಲ್ಲಿ ಭಿನ್ನವಾದಡೆ
ಆ ಲಿಂಗದಲ್ಲಿ ತಮ್ಮ ಪ್ರಾಣವ ಬಿಡಬೇಕಲ್ಲದೆ,
ಮರಳಿ ಆ ಭಿನ್ನವಾದ ಲಿಂಗವ ಧರಿಸಲಾಗದು.
ಅದೇನು ಕಾರಣವೆಂದಡೆ :
ತಾನು ಸಾಯಲಾರದೆ ಜೀವದಾಸೆಯಿಂದೆ
ಆ ಭಿನ್ನವಾದ ಲಿಂಗವ ಧರಿಸಿದಡೆ
ಮುಂದೆ ಸೂರ್ಯಚಂದ್ರರುಳ್ಳನ್ನಕ್ಕರ
ನರಕಸಮುದ್ರದಲ್ಲಿ ಬಿದ್ದು ಮುಳುಗಾಡುವ ಪ್ರಾಪ್ತಿಯುಂಟಾದ ಕಾರಣ,
ಇದಕ್ಕೆ ಸಾಕ್ಷಿ :
“ಶಿರೋ ಯೋನಿಗರ್ೊಮುಖಂ ಚ ಮಧ್ಯಂ ವೃತ್ತಂ ಚ ಪೀಠಕಂ |
ಷಟ್ಸ್ಥಾನೇ ಛಿದ್ರಯೋಗೇ ತು ತಲ್ಲಿಂಗಂ ನೈವ ಧಾರಯೇತ್ |
ತಥಾಪಿ ಧಾರಣಾತ್ ಯೋಗೀ ರೌರವಂ ನರಕಂ ವ್ರಜೇತ್ ||”
-ಸೂಕ್ಷ್ಮಾ ಗಮ.
ಇಂತಪ್ಪ ನರಕಜೀವಿಗಳ ಎನ್ನತ್ತ ತೋರದಿರಯ್ಯಾ ಅಖಂಡೇಶ್ವರಾ./653
ಸದ್ಗುರುಪ್ರಸಾದದಿಂದೊಗೆದ ತಾರಕಬ್ರಹ್ಮದ ಅಭ್ಯಾಸವೆಂತೆನೆ;
ಈ ತಾರಕಬ್ರಹ್ಮವು ನಾದವೆಂದು ಕಲೆಯೆಂದು ಬಿಂದುವೆಂದು
ಮೂರುಪ್ರಕಾರಮಪ್ಪುದು.
ಅವರೊಳಗೆ ಆ ಕಲೆಯೆ ಕಮಲತಂತುವಿನಂತೆ
ಪರಮಸೂಕ್ಷ್ಮವಾಗಿ, ಹರಿಹಂಚಿಲ್ಲದೆ
ಬ್ರಹ್ಮರಂಧ್ರಸ್ಥಾನದಲ್ಲಿ ದಿವ್ಯಪ್ರಕಾಶರೂಪದಿಂದಿಹುದು.
ಮತ್ತಾ ಕಲೆಯೆ ಬಲಿದು
ಅಂಗುಷ್ಠಮಾತ್ರಮಾದ ದ್ವೀಪಜ್ವಾಲೆಯಾಕರದಿಂ
ಭ್ರೂಮಧ್ಯಸ್ಥಾನದಲ್ಲಿ ಕಾಣಿಸಲು ಅದೇ ನಾದವೆನಿಸುವುದು.
ಬಳಿಕಾ ನಾದವೆ ಬಲಿದು
ಚಂದ್ರಸೂರ್ಯರ ಪ್ರಭಾಮಂಡಲಂಗಳನೊಳಕೊಂಡು
ನೇತ್ರಮಧ್ಯದೊಳಿರಲು
ಅದೇ ಬಿಂದುವೆನಿಸುವುದಯ್ಯಾ ಅಖಂಡೇಶ್ವರಾ./654
ಸದ್ಭಕ್ತನ ಸಹಜಸ್ವಭಾವದನಡೆ ಹೇಗಿರಬೇಕೆಂದಡೆ,
ಮನೆಗೆ ಬಂದ ಜಂಗಮವ ಕಂಡು
ಮನದಲ್ಲಿ ಸಂತೋಷವ ತಾಳಬೇಕು.
ಮದುವೆ ಮಾಂಗಲ್ಯ ಒಸಗೆ ಉತ್ಸಾಹದಂತೆ
ಹರ್ಷಾಬ್ಧಿ ತುಂಬಿ ತುಳುಕಿ ಹೊರಸೂಸಬೇಕು.
ಇಂದು ಎಮ್ಮ ಮನೆಗೆ ಮಹಾಪುಣ್ಯದ ಫಲವು ಬಂದು ತುಂಬಿತೆಂದು
ಕುಣಿಕುಣಿದು ನೋಡಿ ಹಾಡಿ ಹರಸಬೇಕು.
ಸತಿಸುತರು ಸಹವಾಗಿ ಒಡಗೂಡಿ ಭಕ್ತಿಯ ಮಾಡಿ
ನಮ್ಮ ಅಖಂಡೇಶ್ವರಲಿಂಗವನೊಲಿಸಬೇಕು./655
ಸದ್ಭಕ್ತನಾದಾತನು ಸತ್ಪಾತ್ರದಾನಯುಕ್ತನಾಗಿರಬೇಕಲ್ಲದೆ
ಅಪಾತ್ರದಾನವ ಮಾಡಲಾಗದು ನೋಡಾ.
ಅಪಾತ್ರವೆಂದೊಡೆ :ನಾಲ್ಕು ವೇದವನೋದಿನ ಬ್ರಾಹ್ಮಣನಾದಡಾಗಲಿ,
ಶಿವಭಕ್ತಿಯಿಲ್ಲದವಂಗೆ ಗೋದಾನ ಭೂದಾನ ಸುವರ್ಣದಾನ
ಕನ್ನಿಕಾದಾನಂಗಳ ಕೊಟ್ಟರೆ ಮುಂದೆ ನರಕ ತಪ್ಪದು ನೋಡಾ.
ಅದೆಂತೆಂದೊಡೆ :ಲಿಂಗಪುರಾಣೇ-
“ಚತುರ್ವೆದಧರೋ ವಿಪ್ರಃ ಶಿವಭಕ್ತಿವಿವರ್ಜಿತಃ |
ತಸ್ಮೈ ಕಾಂಚನದಾನೇನ ದಾತಾರು ನರಕಂ ವ್ರಜೇತ್ ||”
ಎಂದುದಾಗಿ, ಅಪಾತ್ರದಾನ ನಾಯಕನರಕ ನೋಡಾ ಅಖಂಡೇಶ್ವರಾ/656
ಸದ್ಭಕ್ತರಾದವರು ಸ್ಥಾವರಲಿಂಗದ ಭಜನೆಯ ಮಾಡಲಾಗದು.
ಮನದಲ್ಲಿ ಸ್ಥಾವರ ಘನವೆಂದು ನೆನೆಯಲಾಗದು.
ಅದೇನು ಕಾರಣವೆಂದೊಡೆ :
ಆದಿ ಅನಾದಿಯಿಂದತ್ತತ್ತಲಾದ ಮಹಾಘನಪರವಸ್ತುವನು
ಶ್ರೀಗುರುಸ್ವಾಮಿ ಭೇದಿಸಿ ತಂದು,
ಇಷ್ಟಲಿಂಗವೆನಿಸಿ ಕರಸ್ಥಲದಲ್ಲಿ ಕೊಟ್ಟ ಬಳಿಕ
ಆ ಲಿಂಗದಲ್ಲಿ ಸಕಲ ತೀರ್ಥ,
ಸಕಲ ಕ್ಷೇತ್ರಂಗಳುಂಟೆಂದು ಭಾವಿಸಿ,
ಮುಕ್ತಿಯ ಪಡೆಯಲರಿಯದೆ
ಖಂಡಿತ ಬುದ್ಧಿಯಿಂದ ಬೇರೆ ಮುಕ್ತಿಯ ಪಡೆವೆವೆಂದು
ಕಂಡ ಕಂಡ ತೀರ್ಥ ಕ್ಷೇತ್ರಂಗಳಿಗೆಡೆಯಾಡಿ
ತೊಳಲಿ ಬಳಲುವ ಭ್ರಷ್ಟಭವಿಗಳಿಗೆ
ನರಕವೇ ಪ್ರಾಪ್ತಿಯಯ್ಯಾ ಅಖಂಡೇಶ್ವರಾ,/657
ಸದ್ಭಕ್ತರೇ ಎನ್ನ ತಂದೆ ತಾಯಿಗಳಯ್ಯ.
ಸದ್ಭಕ್ತರೇ ಎನ್ನ ಬಂಧು ಬಳಗವಯ್ಯ.
ಸದ್ಭಕ್ತರೇ ತಮ್ಮ ಒಕ್ಕುಮಿಕ್ಕುದನಿಕ್ಕಿ ಸಲಹಿದರಾಗಿ
ಅಖಂಡೇಶ್ವರಾ, ನಾ ನಿಮ್ಮ ಕಡೆಯ ಬಾಗಿಲ ಕಾಯ್ವುದಕೆ
ಯೋಗ್ಯನಾದೆನಯ್ಯ./658
ಸಪ್ತಸಾಗರದಷ್ಟು ಪಾದೋದಕವ
ವಿಶ್ವಾಸವಿಲ್ಲದೆ ಕೊಳ್ಳಲೇತಕೊ ?
ವಿಶ್ವಾಸದಿಂದೆ ತೃಣದ ತುದಿಯ ಉದಕದಷ್ಟು ಕೊಂಡಡೆ ಸಾಲದೆ ?
ಸಪ್ತಪರ್ವತದಷ್ಟು ಪ್ರಸಾದವ
ಆತ್ಮವಿಶ್ವಾಸವಿಲ್ಲದೆ ಕೊಳ್ಳಲೇತಕೊ ?
ವಿಶ್ವಾಸದಿಂದೆ ಎಳ್ಳಿನ ಹದಿನಾರು ಭಾಗದೊಳಗೊಂದು
ಭಾಗವ ಕೊಂಡಡೆ ಸಾಲದೆ ?
ಅದೆಂತೆಂದೊಡೆ :
“ತಿಲಷೋಡಶಭಾಗಸ್ಯ ತೃಣಾಗ್ರಾಂಬುಕಣೋಪಮಂ |
ಪಾದೋದಕಪ್ರಸಾದಸ್ಯ ಸೇವನಾತ್ ಮೋಕ್ಷಮಾಪ್ನುಯಾತ್ ||”
ಎಂದುದಾಗಿ,
ವಿಶ್ವಾಸದಿಂದೆ ಕೊಂಡಡೆ ಈಶ್ವರ ತಾನೇ ನೋಡಾ ಅಖಂಡೇಶ್ವರಾ./659
ಸರ್ವಗತ ಶಿವನೆಂದು ಹೇಳುವ
ಮರುಳು ಮಾನವರ ಮಾತ ಕೇಳಲಾಗದು.
ಅದೆಂತೆಂದೊಡೆ :
ಸರ್ವಜೀವರುಗಳಂತೆ
ವನಿತಾದಿ ವಿಷಯಪ್ರಪಂಚಿನಲ್ಲಿ ಮಗ್ನವಾಗಿರ್ಪನೆ ಶಿವನು ?
ಸರ್ವಜೀವರುಗಳಂತೆ
ತಾಪತ್ರಯಾಗ್ನಿಯಲ್ಲಿ ನೊಂದು ಬೆಂದು ಕಂದಿ ಕುಂದುವನೆ ಶಿವನು ?
ಸರ್ವಜೀವರುಗಳಂತೆ
ಪುಣ್ಯಪಾಪ ಸುಖದುಃಖ ಸ್ವರ್ಗನರಕಂಗಳೆಂಬ
ದ್ವಂದ್ವಕರ್ಮಂಗಳ ಹೊದ್ದಿರ್ಪನೆ ಶಿವನು ?
ಸರ್ವಜೀವರುಗಳಂತೆ
ಉತ್ಪತ್ತಿ ಸ್ಥಿತಿ ಪ್ರಳಯಂಗಳೆಂಬ ಕಷ್ಟ ಬಂಧನಗಳಲ್ಲಿ ಸಿಲ್ಕಿ
ಹೊದಕುಳಿಗೊಂಬನೆ ಶಿವನು ?
ಇಂತೀ ಭೇದವನರಿಯದೆ ಸರ್ವಗತ ಶಿವನೆಂದು ನುಡಿದ
ಕಡುಪಾತಕ ಜಡಜೀವಿಗಳ ಎನಗೊಮ್ಮೆ
ತೋರದಿರಯ್ಯ ಅಖಂಡೇಶ್ವರಾ./660
ಸರ್ವಜಗದಲ್ಲಿ ಶಿವನಿಲ್ಲವೆಂದಡೆ
ಆ ಜಗವು ಶಿವನಿಂದಲ್ಲದೆ ಬೇರೆ ತೋರಲರಿಯದಾಗಿ,
ಪದ್ಮಪತ್ರಜಲದಂತೆ ವಿಶ್ವಪರಿಪೂರ್ಣನಾಗಿ
ಹೊದ್ದಿಯೂ ಹೊದ್ದದಿರ್ಪನು ನಮ್ಮ ಅಖಂಡೇಶ್ವರ./661
ಸರ್ವಜ್ಞನು ನೀನೇ ಅಯ್ಯಾ.
ಸವರ್ೆಶ್ವರನು ನೀನೇ ಅಯ್ಯಾ.
ಸರ್ವಾಂತರ್ಯಾಮಿ ನೀನೇ ಅಯ್ಯಾ.
ಸರ್ವಗತನು ನೀನೇ ಅಯ್ಯಾ.
ಸರ್ವಕಳಾಭರಿತನು ನೀನೇ ಅಯ್ಯಾ.
ಸರ್ವಗುಣಸಂಪನ್ನನು ನೀನೇ ಅಯ್ಯಾ ಅಖಂಡೇಶ್ವರಾ./662
ಸರ್ವಲೋಕೋಪಕಾರವಾಗಿ ಶಿವನೇ ಜಂಗಮವಾಗಿ
ಬಂದನೆಂದರಿಯದವನ ಮುಖವ ನೋಡಲಾಗದು.
ಸರ್ವಲೋಕ ಪಾವನ ಮಾಡಲೋಸುಗ ಶಿವನೇ ಜಂಗಮವಾಗಿ
ಬಂದನೆಂದು ನಂಬದವನ ಅಂಗಳವ ಮೆಟ್ಟಲಾಗದು.
ಅದೆಂತೆಂದೊಡೆ :
“ಸರ್ವಲೋಕೋಪಕಾರಾಯ ಯೋ ದೇವಃ ಪರಮೇಶ್ವರಃ |
ಚರತ್ಯತಿಥಿರೂಪೇಣ ನಮಸ್ತೇ ಜಂಗಮಾತ್ಮನೇ ||”
ಎಂದುದಾಗಿ,
ಇಂತಪ್ಪ ಜಂಗಮದ ಘನವರಿಯದ ಭಂಗಗೇಡಿಗಳ
ಭಕ್ತರೆಂದಡೆ ಭವಹಿಂಗದಯ್ಯ ಅಖಂಡೇಶ್ವರಾ./663
ಸರ್ವಾಚಾರಸಂಪತ್ತನರಿದಲ್ಲದೆ
ನಿರವಯಲಪದವ ಕಾಣಬಾರದು ನೋಡಾ ಆರಿಗೆಯು.
ಸರ್ವಾಚಾರಸಂಪತ್ತು ಎಂತೆನಲು,
ಷಡ್ಭೂತಂಗಳಲ್ಲಿ ಷಡ್ವಿಧ ಮಂತ್ರಂಗಳ ನೆಲೆಗೊಳಿಸಿ,
ಆ ಷಡ್ವಿಧ ಮಂತ್ರಂಗಳನೆ ಷಡ್ವಿಧಚಕ್ರಂಗಳೆಂದು ತಿಳಿದು,
ಆ ಷಡ್ವಿಧ ಚಕ್ರಂಗಳಿಗೆ ಷಡ್ವಿಧ ಅಧಿದೈವಂಗಳನೆ
ಷಡ್ವಿಧ ಅಂಗವೆಂದಾಧಾರಗೊಳಿಸಿ,
ಆ ಷಡ್ವಿಧ ಅಂಗಕ್ಕೆ ಷಡ್ವಿಧ ಕರಣಂಗಳನೆ
ಷಡ್ವಿಧ ಹಸ್ತಂಗಳೆಂದು ಅರಿದಳವಡಿಸಿಕೊಂಡು,
ಆ ಷಡ್ವಿಧ ಹಸ್ತಂಗಳಿಗೆ ಷಡ್ವಿಧ ಲಿಂಗಂಗಳನಳವಡಿಸಿಕೊಂಡು,
ಆ ಷಡ್ವಿಧ ಲಿಂಗಕ್ಕೆ ಷಡ್ವಿಧೇಂದ್ರಿಯಂಗಳನೆ
ಷಡ್ವಿಧ ಪದಾರ್ಥಂಗಳೆಂದರಿದು,
ಆ ಷಡ್ವಿಧ ಪದಾರ್ಥಂಗಳನು ಷಡ್ವಿಧ ಭಕ್ತಿಯಿಂದೆ
ಷಡ್ವಿಧ ಲಿಂಗಮುಖಂಗಳಿಗೆ ಸಮರ್ಪಿಸಲು,
ಒಳಹೊರಗೆಲ್ಲ ಆ ಷಡ್ವಿಧ ಲಿಂಗದ ಬೆಳಗು ತುಂಬಿ
ತೊಳಗಿ ಬೆಳಗುತಿರ್ಪುದು ನೋಡಾ.
ಎಡೆದೆರಹಿಲ್ಲದೆ ಆ ಷಡ್ವಿಧ ಲಿಂಗದ ಬೆಳಗಿನೊಳಗೆ
ತನ್ನ ಷಡ್ವಿಧಾಂಗದ ಕಳೆಗಳನೆಲ್ಲವನಡಗಿಸಿ,
ತಾನೆಂಬ ಕುರುಹುದೋರದಿರ್ದಡೆ ಅದೇ ಸರ್ವಾಚಾರಸಂಪತ್ತು ನೋಡಾ.
ಇಂತಪ್ಪ ಸರ್ವಾಚಾರಸಂಪತ್ತು
ನಿಮ್ಮ ಪೂರ್ಣ ಒಲುಮೆಯ ಶರಣರಿಗಲ್ಲದೆ
ಉಳಿದವರಿಗಳವಡದಯ್ಯಾ ಅಖಂಡೇಶ್ವರಾ ?/664
ಸಲ್ಲರು ಸಲ್ಲರಯ್ಯ ಶಿವಪಥಕ್ಕೆ
ದುರ್ಮತಿ ದುರಾಚಾರಿಗಳು.
ಸಲ್ಲರು ಸಲ್ಲರಯ್ಯ ಶಿವಪಥಕ್ಕೆ
ದುರ್ನಿತಿ ದುರ್ಗುಣಿಗಳು.
ಸಲ್ಲರು ಸಲ್ಲರಯ್ಯ ಶಿವಪಥಕ್ಕೆ
ದುರ್ಬುದ್ಧಿ ದುರ್ಭಾವಿಗಳು ಅಖಂಡೇಶ್ವರಾ./665
ಸಹಸ್ರದಳ ಕಮಲಮಧ್ಯದಲ್ಲಿ ಪಂಚಪತ್ರ.
ಆ ಪಂಚಪತ್ರದ ಮಧ್ಯದಲ್ಲಿ ಮಂಡಲತ್ರಯ.
ಆ ಮಂಡಲತ್ರಯ ಮಧ್ಯದಲ್ಲಿ ಪ್ರಣವಪೀಠ.
ಆ ಪ್ರಣವಪೀಠದ ಮೇಲೆ ಮೂರ್ತಿಗೊಂಡು ಬೆಳಗುವ
ನಿಮ್ಮ ದಿವ್ಯ ಮೂರ್ತಿಯ ಕಂಡು ಹರುಷಿತನಾದೆನಯ್ಯಾ
ಅಖಂಡೇಶ್ವರಾ./666
ಸಾಕಾರವಿಲ್ಲದ ಬಯಲು, ನಿರಾಕಾರವಿಲ್ಲದ ಬಯಲು,
ಪ್ರವೃತ್ತಿಯಿಲ್ಲದ ಬಯಲು, ನಿವೃತ್ತಿಯಿಲ್ಲದ ಬಯಲು,
ಅಖಂಡೇಶ್ವರನೆಂಬ ಮಹಾಬಯಲೊಳಗೆ
ನಾನೆತ್ತ ಹೋದೆನೆಂದರಿಯೆ./667
ಸಾಕುಮಾಡದು ಭವಬಂಧನಂಗಳ,
ನೂಕಿಬಿಡದು ಸಕಲಸಂಸಾರವ,
ಬೇಕೆಂದೆಳಸುವುದು ವಿಷಯಭೋಗಕ್ಕೆ,
ಶಿವಶಿವಾ, ಈ ಕಾಕುಮನಕ್ಕೆ ಏನುಮಾಡಲಿ ?
ಹರಹರಾ, ಈ ಕಳ್ಳಮನಕ್ಕೆ ಎಂತುಮಾಡಲಿ ?
ಅಖಂಡೇಶ್ವರಾ, ನಿಮ್ಮ ಕೃಪಾವಲೋಕನದಿಂದ ನೋಡಿ
ಪಾಲಿಪುದಯ್ಯ ಎನ್ನ, ನಿಮ್ಮ ಧರ್ಮ ನಿಮ್ಮ ಧರ್ಮ./668
ಸಾಲೋಕ್ಯವಿದೆ, ಸಾಮೀಪ್ಯವಿದೆ,
ಸಾರೂಪ್ಯವಿದೆ, ಸಾಯುಜ್ಯವಿದೆ,
ಚತುರ್ವಿಧಫಲಪುರುಷಾರ್ಥವಿದೆ.
ಸುರತರುವಿದೆ ಸುರಧೇನುವಿದೆ.
ವರಚಿಂತಾಮಣಿಯಿದೆ, ಪರುಷದ ವಾರಿಧಿಯಿದೆ.
ಸಂಜೀವನವಿದೆ ಜ್ಞಾನವಿದೆ,
ಮೋಕ್ಷವಿದೆ, ಪರತರ ಪರಮಪದವಿದೆ.
ಪರಶಿವ ಪರಂಜ್ಯೋತಿ ಬ್ರಹ್ಮವಿದೆ.
ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡ
ಅಖಂಡೇಶ್ವರಲಿಂಗವಿದೆ./669
ಸಾವಯವ ನಿರವಯವನಲ್ಲ ನೋಡಾ ಲಿಂಗೈಕ್ಯನು.
ಗಮನಿಯಲ್ಲ ನಿರ್ಗಮನಿಯಲ್ಲ ನೋಡಾ ಲಿಂಗೈಕ್ಯನು.
ಸುಮನಸಾರಾಯ ಸುಜ್ಞಾನಭರಿತನು ನೋಡಾ ಲಿಂಗೈಕ್ಯನು.
ಅಮಲಬ್ರಹ್ಮದ ಕೂಟದ ಅಚಲಿತ ಅಭೇದ್ಯನು
ನೋಡಾ ಲಿಂಗೈಕ್ಯನು.
ಅದ್ವಯಭಾವ ಅಗಣಿತ ಮಹಿಮನು ನೋಡಾ
ಅಖಂಡೇಶ್ವರಾ ನಿಮ್ಮ ನಿಜಲಿಂಗೈಕ್ಯನು./670
ಸಾಸಿರ ಕಂಬದ ಮಂಟಪದೊಳಗೆ
ಈಶ್ವರನ ಓಲಗದ ಸೋಜಿಗವನೇನ ಹೇಳುವೆನಯ್ಯಾ |
ಮೂಜಗದವರೆಲ್ಲ ಮೈಮರೆದಿರ್ಪರು.
ಭಾಸ್ಕರಕೋಟಿ ಬೆಳಗು ಕಂಗಳ ತುಂಬಿತ್ತು ನೋಡಾ
ಅಖಂಡೇಶ್ವರಾ./671
ಸಿಂಹದ ಮೊಲೆವಾಲು ಸಿಂಹದ ಮರಿಗಲ್ಲದೆ,
ಸೀಳು ನಾಯಿಗೆ ಯೋಗ್ಯವೆ ಅಯ್ಯ ?
ಶಿವಪ್ರಸಾದದ ಒಲುಮೆ ಶಿವಶರಣರಿಗಲ್ಲದೆ
ಉಳಿದ ಭವಭಾರಿಗಳಿಗೆ ಅಳವಡುವುದೆ ಅಯ್ಯ
ಅಖಂಡೇಶ್ವರಾ ?/672
ಸಿರಿ ಬಂದೊದಗಿತ್ತೆಂದು ಹಿರಿದಾಗಿ ಹಿಗ್ಗಬೇಡ.
ಸಿರಿಯೆಂಬುದು ಕನಸಿನಪರಿಯಂತೆ ಕಂಡೆಯಾ ಎಲೆ ಮರಳು ಮಾನವಾ.
ಇದನರಿತು ನಂಬಿ ಶ್ರೀ ಮಹಾದೇವನ ಪೂಜಿಸಿದರೆ
ಸ್ಥಿರವಾದ ಪದವನೀವ ನಮ್ಮ ಅಖಂಡೇಶ್ವರ./673
ಸಿರಿವಂತರೆಂದು ಹೇಳುವವರ ದರಿದ್ರಕ್ಕೆ ಒಳಗುಮಾಡಿ
ಕಾಡಿತ್ತು ನೋಡಾ ನಿಮ್ಮ ಮಾಯೆ.
ನಿಃಕಾಮಿಗಳೆಂದು ಹೇಳುವವರ ಕಾಮದಕತ್ತಲೆಯಲ್ಲಿ ಕೆಡಹಿ
ಕಾಡಿತ್ತು ನೋಡಾ ನಿಮ್ಮ ಮಾಯೆ.
ಪುರುಷನ ಕಣ್ಣ ಮುಂದೆ ಸ್ತ್ರೀಯಾಗಿ ಸುಳಿದಾಡಿ
ಕಾಡಿತ್ತು ನೋಡಾ ನಿಮ್ಮ ಮಾಯೆ.
ಸ್ತ್ರೀಯ ಕಣ್ಣಮುಂದೆ ಪುರುಷನಾಗಿ ಸುಳಿದು
ಕಾಡಿತ್ತು ನೋಡಾ ನಿಮ್ಮ ಮಾಯೆ.
ಸತ್ಯವಂತರೆಂದು ಹೇಳುವವರ ಅಸತ್ಯಕ್ಕೆ ಒಳಗು ಮಾಡಿ
ಕಾಡಿತ್ತು ನೋಡಾ ನಿಮ್ಮ ಮಾಯೆ.
ಹಿರಿಯರೆಂದು ಹೇಳುವವರ ಕಿರಿಯತನಕ್ಕೆ ಒಳಗು ಮಾಡಿ
ಕಾಡಿತ್ತು ನೋಡಾ ನಿಮ್ಮ ಮಾಯೆ.
ನಿತ್ಯವೆಂದು ಹೇಳುವವರ ಅನಿತ್ಯಕ್ಕೆ ಒಳಗು ಮಾಡಿ
ಕಾಡಿತ್ತು ನೋಡಾ ನಿಮ್ಮ ಮಾಯೆ.
ಇಂತೀ ಜಗವೆಲ್ಲವ ನುಂಗಿ ಜಾಳಿಸುತಿರ್ಪ
ನಿಮ್ಮ ಮಾಯದೇಳಿಗೆಯ ಗೆಲುವಡೆ ಆರಳವಲ್ಲ
ಅಖಂಡೇಶ್ವರಾ, ನೀವು ಕರುಣೆಹುಟ್ಟಿ ಒಲಿಯದನ್ನಕ್ಕ./674
ಸುಖ ಬಂದಲ್ಲಿ ನಿಮ್ಮ ಹಾಡಿಹರಸುವೆನಯ್ಯ.
ದುಃಖ ಬಂದಲ್ಲಿ ನಿಮ್ಮ ಕೋಪಿಸಿ ಬಯ್ವೆನಯ್ಯ.
ಅದೇನು ಕಾರಣವೆಂದೊಡೆ :
ಎನ್ನ ಸುಖದುಃಖಂಗಳಿಗೆ ನೀವೆ ಆಧಾರವಾದ ಕಾರಣ,
ನಿಮ್ಮನೆ ಹಾಡುವೆನಯ್ಯ; ನಿಮ್ಮನೆ ಹೊಗಳುವೆನಯ್ಯ.
ನಿಮ್ಮ ಮುಂದೆ ಎನ್ನ ಒಡಲ
ಕಡು ದುಃಖವನೀಡಾಡುವೆನಯ್ಯ ಅಖಂಡೇಶ್ವರಾ./675
ಸುಡುಸುಡು ಈ ದೇಹದ ರೂಪು;
ನೋಡಿದಡೇನೂ ಹುರುಳಿಲ್ಲವಯ್ಯ.
ಎಲವು ಚರ್ಮ ನರ ಮಾಂಸ ಮಲಮೂತ್ರಯುಕ್ತವಾದ
ಅನಿತ್ಯದೇಹವ ನಚ್ಚಿ ನಿಮ್ಮ ನಿಜವ ಮರೆದು
ಭವಧಾರಿಯಾದೆನಯ್ಯ ಅಖಂಡೇಶ್ವರಾ./676
ಸುರಚಾಪದಂತೆ ತೋರಿ ಅಡಗುವ ತನುವ ನೆಚ್ಚಬೇಡರೋ !
ಸಚ್ಚಿದಾನಂದ ಗುರುಲಿಂಗಜಂಗಮದ ಪೂಜೆಯ ನಿಚ್ಚ ನಿಚ್ಚ ಮಾಡಿದರೆ
ಮಚ್ಚಿ ಮಹಾಪದವಿಯನೀವ ನಮ್ಮ ಅಖಂಡೇಶ್ವರ./677
ಸೂರ್ಯಮಂಡಲದಲ್ಲಿ ವೀರಗಣಂಗಳ ವಿಪರೀತವಿದೇನೋ ?
ಚಂದ್ರಮಂಡಲದಲ್ಲಿ ನಂದಿವಾಹನರ ಸಂದಣಿಯಿದೇನೋ ?
ಅಗ್ನಿಮಂಡಲದಲ್ಲಿ ಪ್ರಾಜ್ಞಗಣಂಗಳ ಸಂಜ್ಞೆಯಿದೇನೋ ?
ಇಂತೀ ಮಂಡಲತ್ರಯದ ಮಧ್ಯದಲ್ಲಿ ಮೂರ್ತಿಗೊಂಡಿರ್ಪ
ಅಖಂಡಾದ್ವಯ ಅವಿರಳ ಪರಿಶಿವನ ಅತಿಶಯ ಬೆಳಗಿನೊಳಗೆ
ತಾನು ಮರೆದು ಪರಶಿವನಾಗಿರ್ದನಯ್ಯಾ ಅಖಂಡೇಶ್ವರಾ./678
ಸೃಷ್ಟಿ ಸ್ಥಿತಿ ಪ್ರಳಯಂಗಳ ನೇಮವ ವಿೂರಿ,
ಕಾಯ ಜೀವದ ಕಷ್ಟಗುಣಂಗಳು ನಷ್ಟವಾಗಿ,
ಇಷ್ಟಲಿಂಗದಲ್ಲಿ ನೆಟ್ಟನೆ ಮನವಡಗಿ
ತೊಟ್ಟುಬಿಟ್ಟ ಹಣ್ಣಿನಂತೆ ಸುಳಿವ
ಶ್ರೇಷ್ಠ ಶರಣರ ಶ್ರೀಪಾದಕ್ಕೆ
ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ./679
ಸೊಕ್ಕಿದ ಜವ್ವನದ, ಕಕ್ಕಸಕುಚದ,
ಸಡಲಿದ ಸೋಮರ್ುಡಿಯ,
ಬಡನಡುವಿನ, ಬಳಕುವ ಹೆಣ್ಣಿನ ಕಡುಸ್ನೇಹವನಗಲಿ
ಕಡೆಗೆ ಹೋಗುವುದು, ಇದು ಎಂಥ ವಿಗಡ ಚಾರಿತ್ರವೆ ಅವ್ವಾ!
ಅಖಂಡೇಶ್ವರನೆಂಬ ನಲ್ಲನ ಚಿಂತೆಯಿಂದೆ,
ಮನವು ಸಣ್ಣಿಸಿ, ತನುವು ಕರಗಿ ಹೋಯಿತ್ತು ನೋಡಿರವ್ವಾ. /680
ಸೋಹಂ ಎಂದಡೆ ಅಂತರಂಗದ ಗರ್ವ;
ಶಿವೋಹಂ ಎಂದಡೆ ಬಹಿರಂಗದ ಅಹಂಕಾರ ;
ಈ ಉಭಯವನಳಿದು ದಾಸೋಹಂ ಎಂದಡೆ ಪರಮಪದವು.
ಇದು ಕಾರಣ, ಎನಗೆ ದಾಸೋಹಂ ಭಾವವನೆ
ಕರುಣಿಸಿ ಬದುಕಿಸಯ್ಯ ಅಖಂಡೇಶ್ವರಾ./681
ಸ್ಥಲಂಗಳಾಗಿ,
ಅನಾಹತಚಕ್ರದಲ್ಲಿ ಸಂಬಂಧವಾಗಿರ್ಪುವು.
ಶರಣಸ್ಥಲ, ತಾಮಸನಿರಸನಸ್ಥಲ, ನಿರ್ದೆಶಸ್ಥಲ, ಶೀಲಸಂಪಾದನಾಸ್ಥಲ,
ಈ ನಾಲ್ಕು ಶರಣಸ್ಥಲಂಗಳು.
ಕ್ರಿಯಾನಿಷ್ಪತ್ತಿಸ್ಥಲ, ಭಾವನಿಷ್ಪತ್ತಿಸ್ಥಲ, ಜ್ಞಾನನಿಷ್ಪತ್ತಿಸ್ಥಲ,
ಪಿಂಡಾಕಾಶಸ್ಥಲ, ಬಿಂದ್ವಾಕಾಶಸ್ಥಲ, ಮಹದಾಕಾಶಸ್ಥಲ,
ಕ್ರಿಯಾಪ್ರಕಾಶಸ್ಥಲ, ಭಾವಪ್ರಕಾಶಸ್ಥಲ, ಜ್ಞಾನಪ್ರಕಾಶಸ್ಥಲ,
ಈ ಒಂಬತ್ತು ಪ್ರಸಾದಿಲಿಂಗಸ್ಥಲಂಗಳು.
ಇಂತೀ ಉಭಯಸ್ಥಲವು ಕೂಡಿ /682
ಸ್ಥಲಂಗಳಾಗಿ,
ಆಜ್ಞಾಚಕ್ರದಲ್ಲಿ ಸಂಬಂಧವಾಗಿರ್ಪುವು.
ಇಂತೀ /683
ಸ್ಥಲಂಗಳಾಗಿ,
ಆಧಾರಚಕ್ರದಲ್ಲಿ ಸಂಬಂಧವಾಗಿರ್ಪುವು.
ಮಹೇಶ್ವರಸ್ಥಲ, ಲಿಂಗನಿಷ್ಠಾಸ್ಥಲ, ಪೂರ್ವಾಶ್ರಯನಿರಸನಸ್ಥಲ,
ವಾಗದ್ವೈತನಿರಸನಸ್ಥಲ, ಆಹ್ವಾನನಿರಸನಸ್ಥಲ,
ಅಷ್ಟತನುಮೂರ್ತಿನಿರಸನಸ್ಥಲ, ಸರ್ವಗತನಿರಸನಸ್ಥಲ,
ಶಿವಜಗನ್ಮಯಸ್ಥಲ, ಭಕ್ತದೇಹಿಕಸ್ಥಲ,
ಈ ಒಂಬತ್ತು ಮಹೇಶ್ವರಸ್ಥಲಂಗಳು.
ಕ್ರಿಯಾಗಮಸ್ಥಲ, ಭಾವಾಗಮಸ್ಥಲ, ಜ್ಞಾನಾಗಮಸ್ಥಲ,
ಸಕಾಯಸ್ಥಲ, ಅಕಾಯಸ್ಥಲ, ಪರಕಾಯಸ್ಥಲ,
ಧರ್ಮಾಚಾರಸ್ಥಲ, ಭಾವಾಚಾರಸ್ಥಲ, ಜ್ಞಾನಾಚಾರಸ್ಥಲ,
ಈ ಒಂಬತ್ತು ಗುರುಲಿಂಗಸ್ಥಲಂಗಳು.
ಇಂತೀ ಉಭಯಸ್ಥಲವು ಕೂಡಿ /684
ಸ್ಥಲಂಗಳಾಗಿ,
ಮಣಿಪೂರಕಚಕ್ರದಲ್ಲಿ ಸಂಬಂಧವಾಗಿರ್ಪುವು.
ಪ್ರಾಣಲಿಂಗಿಸ್ಥಲ, ಪ್ರಾಣಲಿಂಗಾರ್ಚನಾಸ್ಥಲ,
ಶಿವಯೋಗಸಮಾಧಿಸ್ಥಲ,ಲಿಂಗನಿಜಸ್ಥಲ, ಅಂಗಲಿಂಗಸ್ಥಲ,
ಈ ಐದು ಪ್ರಾಣಲಿಂಗಿಸ್ಥಲಂಗಳು,
ಜೀವಾತ್ಮಸ್ಥಲ,ಅಂತರಾತ್ಮಸ್ಥಲ, ಪರಮಾತ್ಮಸ್ಥಲ,
ನಿರ್ದೆಹಾಗಮಸ್ಥಲ, ನಿರ್ಭಾವಾಗಮಸ್ಥಲ, ನಷ್ಟಾಗಮಸ್ಥಲ,
ಆದಿಪ್ರಸಾದಿಸ್ಥಲ, ಅಂತ್ಯಪ್ರಸಾದಿಸ್ಥಲ, ಸೇವ್ಯಪ್ರಸಾದಿಸ್ಥಲ,
ದೀಕ್ಷಾಪಾದೋದಕಸ್ಥಲ, ಶಿಕ್ಷಾಪಾದೋದಕಸ್ಥಲ,
ಜ್ಞಾನಪಾದೋದಕಸ್ಥಲ,
ಈ ಹನ್ನೆರಡು ಜಂಗಮಲಿಂಗಸ್ಥಲಂಗಳು.
ಇಂತೀ ಉಭಯಸ್ಥಲವು ಕೂಡಿ /685
ಸ್ಥಲಂಗಳಾಗಿ,
ವಿಶುದ್ಧಿಚಕ್ರದಲ್ಲಿ ಸಂಬಂಧವಾಗಿರ್ಪುವು.
ಐಕ್ಯಸ್ಥಲ, ಸರ್ವಾಚಾರಸಂಪತ್ತಿಸ್ಥಲ,
ಏಕಭಾಜನಸ್ಥಲ, ಸಹಭೋಜನಸ್ಥಲ,
ಈ ನಾಲ್ಕು ಐಕ್ಯಸ್ಥಲಂಗಳು.
ಕೊಂಡುದು ಪ್ರಸಾದಿಸ್ಥಲ, ನಿಂದುದೋಗರಸ್ಥಲ, ಚರಾಚರನಾಸ್ತಿಸ್ಥಲ,
ಭಾಂಡಸ್ಥಲ, ಭಾಜನಸ್ಥಲ, ಅಂಗಲೇಪನಸ್ಥಲ,
ಸ್ವಯಪರಜ್ಞಾನಸ್ಥಲ, ಭಾವಾಭಾವನಷ್ಟಸ್ಥಲ, ಜ್ಞಾನಶೂನ್ಯಸ್ಥಲ,
ಈ ಒಂಬತ್ತು ಮಹಾಲಿಂಗಸ್ಥಲಂಗಳು.
ಇಂತೀ ಉಭಯಸ್ಥಲವು ಕೂಡಿ /686
ಸ್ಥಲಂಗಳಾಗಿ,
ಸ್ವಾಧಿಷ್ಠಾನಚಕ್ರದಲ್ಲಿ ಸಂಬಂಧವಾಗಿರ್ಪುವು.
ಪ್ರಸಾದಿಸ್ಥಲ, ಗುರುಮಹಾತ್ಮೆಸ್ಥಲ, ಲಿಂಗಮಹಾತ್ಮೆಸ್ಥಲ,
ಜಂಗಮಮಹಾತ್ಮೆಸ್ಥಲ, ಭಕ್ತಮಹಾತ್ಮೆಸ್ಥಲ,
ಶರಣಮಹಾತ್ಮೆಸ್ಥಲ, ಪ್ರಸಾದಮಹಾತ್ಮೆಸ್ಥಲ,
ಈ ಏಳು ಪ್ರಸಾದಿಸ್ಥಲಂಗಳು.
ಕಾಯಾನುಗ್ರಹಸ್ಥಲ, ಇಂದ್ರಿಯಾನುಗ್ರಹಸ್ಥಲ, ಪ್ರಾಣಾನುಗ್ರಹಸ್ಥಲ,
ಕಾಯಾರ್ಪಿತಸ್ಥಲ, ಕರಣಾರ್ಪಿತಸ್ಥಲ, ಭಾವಾರ್ಪಿತಸ್ಥಲ,
ಶಿಷ್ಯಸ್ಥಲ, ಶುಶ್ರೂಷಾಸ್ಥಲ, ಸೇವ್ಯಸ್ಥಲ,
ಈ ಒಂಬತ್ತು ಶಿವಲಿಂಗಸ್ಥಲಂಗಳು.
ಇಂತೀ ಉಭಯಸ್ಥಲವು ಕೂಡಿ /687
ಸ್ಥಲಕುಳಂಗಳು
ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ,
ಎಂಬ ಆರು ಚಕ್ರಂಗಳಲ್ಲಿ ಸಂಬಂಧಿಸಿ,
ಆ ಆರು ಚಕ್ರಂಗಳನು
ನಿಃಷ್ಕಲಶೂನ್ಯನಿರಂಜನವೆಂಬ ಮೂರು ಚಕ್ರಂಗಳಲ್ಲಿ ಅಡಗಿಸಿ,
ಆ ಮೂರು ಚಕ್ರಂಗಳೆಂಬ ಮಂಟಪದಲ್ಲಿ
ಗುರುಲಿಂಗಜಂಗಮವ ಕುಳ್ಳಿರಿಸಿ,
ನಿಷ್ಕಲಶೂನ್ಯ ನಿರಂಜನ ಭಕ್ತಿಯಿಂದರ್ಚಿಸಿ,
ಆ ಗುರುಲಿಂಗಜಂಗಮದ ಘನಪ್ರಸಾದವ ಪಡೆದು
ಆ ಗುರುಲಿಂಗಜಂಗಮವು ಒಂದಾದ
ಮಹಾಘನ ಪರಬ್ರಹ್ಮದಲ್ಲಿ ಮನವಡಗಿ ಭಾವ ನಿಷ್ಪತ್ತಿಯಾಗಿ
ಶರಧಿಯಲ್ಲಿ ಮುಳುಗಿದ ಪೂರ್ಣಕುಂಭದಂತಿರ್ಪ
ಮಹಾಶರಣರ ಪರಮಗುರು ಬಸವರಾಜದೇವರ
ದಿವ್ಯ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ./688
ಸ್ಥಾವರವು ಜಂಗಮವು ಒಂದೆ ಎಂಬಿರಿ,
ಮಂದಮತಿ ಮಾನವರಿರಾ, ನೀವು ಕೇಳಿರೋ !
ಸ್ಥಾವರವು ನಿಃಶಬ್ದಮಯವು, ಜಂಗಮವು ಮಂತ್ರಶಬ್ದಮಯವು.
ಸ್ಥಾವರವು ಅಚೇತನವು, ಜಂಗಮವು ಚೇತನಸ್ವರೂಪವು.
ಎಂದು ಮಾಡಿದ ಭಕ್ತಿಗೆ ಒಲಿದು, ನೀಡಿದ ಪದಾರ್ಥವ ಕೈಕೊಂಡು
ಮುಕ್ತಿಯ ಕೊಡುವ ಮಹಾ ಘನಜಂಗಮವೆ ಅಧಿಕವೆಂದರಿಯದೆ,
ಬರಿದೆ ಸ್ಥಾವರ ಘನವೆಂಬ ಬಿನುಗುಜೀವರನೇನೆಂಬೆನಯ್ಯ
ಅಖಂಡೇಶ್ವರಾ. /689
ಸ್ನೇಹ ಸಮರಸ ಮೋಹವಿರಬೇಕು ಗುರುವಿನಲ್ಲಿ.
ಸ್ನೇಹ ಸಮರಸ ಮೋಹವಿರಬೇಕು ಲಿಂಗದಲ್ಲಿ.
ಸ್ನೇಹ ಸಮರಸ ಮೋಹವಿರಬೇಕು ಜಂಗಮದಲ್ಲಿ.
ಸ್ನೇಹ ಸಮರಸ ಮೋಹವಿರಬೇಕು ಪಾದೋದಕ ಪ್ರಸಾದದಲ್ಲಿ.
ಸ್ನೇಹ ಸಮರಸ ಮೋಹವಿರಬೇಕು ಶರಣಜನ ಶಿವಭಕ್ತರಲ್ಲಿ.
ಇಂತಿವರಲ್ಲಿ ಸ್ನೇಹಸಮರಸ ಮೋಹವನುಳ್ಳ
ಸದ್ಭಕ್ತರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ./690
ಸ್ವರ್ಗಕ್ಕೆ ಏಳು ಸೋಪಾನವಿರ್ಪುದನು ಆರೂ ಅರಿಯರಲ್ಲ !
ಅದು ಹೇಗೆಂದೊಡೆ :
ಜಂಗಮವ ಕಾಣುತ್ತ ಸದ್ಭಕ್ತನು ಕುಳಿತಾಸನವ ಬಿಟ್ಟು
ಇದಿರೆದ್ದು ನಡೆವುದೇ ಒಂದನೆಯ ಸೋಪಾನ.
ಮನಕರಗಿ ತನು ಉಬ್ಬಿ ಕಂಗಳಲ್ಲಿ ಪರಿಣಾಮಜಲವುಕ್ಕಿ
ಅವರ ಚರಣಕಮಲದ ಮೇಲೆ ಸುರಿವಂತೆ
ಸಾಷ್ಟಾಂಗದಿಂದೆ ನಮಸ್ಕರಿಸುವುದೇ ಎರಡನೆಯ ಸೋಪಾನ.
ಆ ಜಂಗಮವ ತನ್ನ ಮಠಕ್ಕೆ ಬಿಜಯಂಗೈಸಿ
ಉನ್ನತಾಸನದ ಗದ್ದುಗೆಯ ಮೇಲೆ ಕುಳ್ಳಿರಿಸಿ
ಪಾದಪ್ರಕ್ಷಾಲನವ ಮಾಡುವುದೇ ಮೂರನೆಯ ಸೋಪಾನ.
ಆ ಜಂಗಮದೇವರ ಅಷ್ಟವಿಧಾರ್ಚನೆ –
ಷೋಡಶೋಪಚಾರಗಳಿಂದರ್ಚಿಸಿ,
ಪಾದಿತೀರ್ಥವ ಕೊಂಬುವುದೇ ನಾಲ್ಕನೆಯ ಸೋಪಾನ.
ಆ ಜಂಗಮಕ್ಕೆ ಮೃಷ್ಟಾನ್ನಪಾನಂಗಳಿಂದೆ
ತೃಪ್ತಿಪಡಿಸುವುದೇ ಐದನೆಯ ಸೋಪಾನ.
ಆ ಜಂಗಮದ ಒಕ್ಕುಮಿಕ್ಕಪ್ರಸಾದವ ಕೊಂಬುವುದೇ
ಆರನೆಯ ಸೋಪಾನ.
ಆ ಜಂಗಮದಲ್ಲಿ ಅನುಭಾವವ ಬೆಸಗೊಂಬುವುದೇ
ಏಳನೆಯ ಸೋಪಾನ.
ಇಂತೀ ಸಪ್ತಸೋಪಾನಂಗಳ ಬಲ್ಲ ಸದ್ಭಕ್ತಂಗೆ
ಕೈಲಾಸ ಕರತಾಳಮಳಕವಲ್ಲದೆ
ತನುವ ಸವೆಸದೆ, ಮನವ ದಂಡಿಸದೆ,
ಧನವ ಸಮರ್ಪಿಸದೆ,
ಮಿಥ್ಯಾಸಂಸಾರದಲ್ಲಿ ಸಿಲ್ಕಿ ಹೊತ್ತುಗಳೆದು
ಹೊಡೆದಾಡಿ ಸತ್ತು ಹೋಗುವ
ವ್ಯರ್ಥಜೀವಿಗಳಿಗೆ ಇನ್ನೆತ್ತಣ ಕೈಲಾಸವಯ್ಯ ಅಖಂಡೇಶ್ವರಾ ?/691
ಹಗಲಿರುಳ್ಗಳಿಲ್ಲದಂದು,
ಯುಗಜುಗಂಗಳು ಮರಳಿ ಮರಳಿ ತಿರುಗದಂದು,
ಗಗನ ಮೇರು ಕೈಲಾಸಂಗಳಿಲ್ಲದಂದು,
ಖಗ ಮೃಗ ಶೈಲ ವೃಕ್ಷಂಗಳಿಲ್ಲದಂದು,
ಅಜಹರಿಸುರಾಸುರ ಮನುಮುನಿಗಳಿಲ್ಲದಂದು,
ಜಗದ ಲೀಲಾವೈಭವಂಗಳೇನೂ ಇಲ್ಲದಂದು,
ಅಖಂಡೇಶ್ವರಾ, ನಿಮ್ಮ ನೀವರಿಯದೆ
ಅನಂತಕಾಲವಿರ್ದೆರಂದು./692
ಹಗಲು ಹನ್ನೆರಡುತಾಸು ತನ್ನ ಹಂಬಲದಲ್ಲಿ
ವೇಳೆಕಳೆವುತಿರ್ದೆನವ್ವಾ.
ಇರುಳು ಹನ್ನೆರಡುತಾಸು ತನ್ನನೇ
ಎದ್ದೆದ್ದು ನೋಡುತಿರ್ದೆನವ್ವಾ.
ಅಖಂಡೇಶ್ವರನೆಂಬ ನಲ್ಲನ ಹಂಬಲದಿಂದೆ
ಸರ್ವಸಂಗವ ತೊರೆದೆನು ನೋಡಿರವ್ವಾ./693
ಹತ್ತು ದಿಕ್ಕಿನ ಒಳಹೊರಗೆ ಸುತ್ತಿ ಸುಳಿದಾಡುವ
ಎನ್ನ ಮನವು ನಿಲುವುದಕ್ಕೆ ನೀವೇ ಗೊತ್ತಲ್ಲದೆ
ಬೇರೆ ಮತ್ತೆ ಸ್ಥಾನ ಉಂಟೆ ಅಯ್ಯ ?
ಗಾಳಿ ಗಂಧವನಪ್ಪಿದಂತೆ,
ನಿಮ್ಮ ಮುಟ್ಟಿದ ಚಿತ್ತ ಎತ್ತೆತ್ತ ಹರಿದಾಡಿದಡೇನು
ಅತ್ತತ್ತ ನೀವೇ ಅಲ್ಲದೆ ಬೇರೆ ಮತ್ತೆ ಅನ್ಯವಿಲ್ಲವಯ್ಯ ಅಖಂಡೇಶ್ವರಾ./694
ಹರಹರಾ ಎಂದು ಹರನೊಳಗೈಕ್ಯರಾದ
ಶರಣರ ತೋರಿಸಯ್ಯ.
ಶಿವಶಿವಾ ಎಂದು ಶಿವನ ಅಚ್ಚೊತ್ತಿಗೊಂಡ
ಶರಣರ ತೋರಿಸಯ್ಯ.
ಶ್ರೀಗಿರಿ ಕೈಲಾಸವ ಸೂರೆಗೊಂಡ
ಶರಣರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ./695
ಹರಹರಾ, ಎನ್ನ ಬಡಮನದ ಅಳಿಯಾಸೆಯ ನೋಡಾ !
ಸುರಧೇನುವಿದ್ದು ಬರಡಾಕಳಿಗೆ ಆಸೆಮಾಡುವಂತೆ,
ಕಲ್ಪವೃಕ್ಷವಿದ್ದು ಕಾಡಮರಕ್ಕೆ ಕೈಯಾನುವಂತೆ,
ಚಿಂತಾಮಣಿಯಿದ್ದು ಗಾಜಿನಮಣಿಯ ಬಯಸುವಂತೆ,
ಎನ್ನ ಕರ ಮನ ಭಾವದಲ್ಲಿ ನೀವು ಭರಿತರಾಗಿರ್ದುದ
ಮರೆತು ನರರಿಗಾಸೆಯ ಮಾಡಿ ಕೆಟ್ಟೆನಯ್ಯ ಅಖಂಡೇಶ್ವರಾ./696
ಹರಿ ಹರಗೆ ಸರಿಯೆಂಬ
ಎಲೆ ನೀಚ ಪರವಾದಿಗಳಿರಾ ನೀವು ಕೇಳಿರೊ.
ಹರಿ ಹತ್ತು ಭವದಲ್ಲಿ ಹುಟ್ಟಿ ಬಂದು
ನಮ್ಮ ಹರನ ಶ್ರೀಚರಣವನರ್ಚಿಸಿ ವರವ ಪಡೆದನಲ್ಲದೆ
ನಮ್ಮ ಹರನು ಆವ ಭವದಲ್ಲಿ ಹುಟ್ಟಿದ ?
ಆವ ದೇವರ ಪೂಜಿಸಿ ಆವ ಆವ ಫಲಪದವ ಪಡೆದನು
ಬಲ್ಲರೆ ನೀವು ಹೇಳಿರೊ ?
ಇದನರಿಯದೆ ಹರಿ ಹರಗೆ ಸರಿಯೆಂಬ
ಪರವಾದಿಗಳ ಬಾಯ ಕೆರಹಿನಟ್ಟೆಯಲ್ಲಿ ಹೊಯ್ದಲ್ಲದೆ
ಎನ್ನ ಸಿಟ್ಟು ಮಾಣದು ನೋಡಾ ಅಖಂಡೇಶ್ವರಾ./697
ಹರಿಕುಲದ ವಿಪ್ರರು ಶ್ರೀ ವಿಭೂತಿಯ ಧರಿಸದೆ
ಮೋಕ್ಷಮಾರ್ಗಕ್ಕೆ ತಪ್ಪುಗರಾದರು ನೋಡಾ.
ಸಕಲವೇದಂಗಳು ಶ್ರೀ ವಿಭೂತಿಯೇ ಘನವೆಂದು
ಕರವೆತ್ತಿ ಕೂಗುತಿಪ್ಪುವು ನೋಡಾ.
ಸಕಲಶ್ರುತಿಗಳು ಶ್ರೀ ವಿಭೂತಿಯ ಮಹತ್ವವನೆ
ಹೊಗಳುತಿಪ್ಪುವು ನೋಡಾ.
ಸಕಲಸ್ಮೃತಿಗಳು ಶ್ರೀ ವಿಭೂತಿಯ ಮಹಿಮೆಯನೆ
ಉಗ್ಗಡಿಸುತಿಪ್ಪುವು ನೋಡಾ.
ಅಖಿಲ ಪುರಾಣಂಗಳು ಶ್ರೀ ವಿಭೂತಿಯೇ ಅಧಿಕವೆಂದು
ಹೊಗಳುತಿಪ್ಪುವು ನೋಡಾ.
ಅದೆಂತೆಂದೊಡೆ :ಗಾರುಡೇ
“ಶ್ರುತಯಃ ಸ್ಮೃತಯಃ ಸರ್ವಾಃ ಪುರಾಣಾನ್ಯಖಿಲಾನ್ಯಪಿ |
ವದಂತಿ ಭೂತಿಮಹಾತ್ಮ್ಯಂ ತತಸ್ತಾಂ ಧಾರಯೇತ್ ದ್ವಿಜಃ ||
ಎಂದುದಾಗಿ,
ಇಂತಪ್ಪ ಶ್ರೀ ವಿಭೂತಿಯ ಧರಿಸಲೊಲ್ಲದೆ
ಮಣ್ಣು ಮಟ್ಟಿಯ ಹಣೆಗಿಟ್ಟುಕೊಂಬ ಮಧ್ವಮತದ
ಚಾಂಡಾಲ ಹೊಲೆಯ ವಿಪ್ರ ಹಾರುವರೆಂಬ
ಅಧಮ ಮಾದಿಗರನೆನಗೊಮ್ಮೆ ತೋರದಿರಯ್ಯ
ಅಖಂಡೇಶ್ವರಾ./698
ಹರಿನಯನವ ಚರಣಕಮಲದಲ್ಲಿ ಧರಿಸಿ,
ಶಿರಮಕುಟದಲ್ಲಿ ಹರಿವ ಗಂಗೆಯ ತಾಳಿ,
ಅಸುರರ ಶಿರಗಳ ಕೊರಳ ಹಾರವ ಮಾಡಿ,
ಅಜಶಿರಪಾತ್ರೆಯ ಕರಮಧ್ಯದೊಳಗಿರಿಸಿ,
ಗಜಚರ್ಮಾಂಬರ ಭುಜಗಭೂಷಣನೆನಿಸಿ,
ತ್ರಿಜಗವ ಪಾಲಿಸುತ್ತ ಬಂದಿರಯ್ಯ ಎನ್ನ ಕರಸ್ಥಲಕ್ಕೆ ಅಖಂಡೇಶ್ವರಾ./699
ಹರಿಯ ಹತ್ತು ಭವದಲ್ಲಿ ಬರಿಸಿತ್ತು ಮಾಯೆ.
ಬ್ರಹ್ಮನ ತಲೆಯ ಹೋಳುಮಾಡಿತ್ತು ಮಾಯೆ.
ಇಂದ್ರಚಂದ್ರರಂಗಕ್ಕೆ ಭಂಗವಿಕ್ಕಿತ್ತು ಮಾಯೆ.
ಗರುಡ ಗಂಧರ್ವರ ಬರಡುಮಾಡಿತ್ತು ಮಾಯೆ.
ಕಿನ್ನರ ಕಿಂಪುರುಷರ ಚುನ್ನವಾಡಿತ್ತು ಮಾಯೆ.
ಸಿದ್ಧಸಾಧಕರಿಗೆಲ್ಲ ಗುದ್ದಾಟವನಿಕ್ಕಿತ್ತು ಮಾಯೆ.
ಮನುಮುನಿಗಳನೆಲ್ಲರ ಮನವ ಸೆಳಕೊಂಡು
ಮರಣಕ್ಕೊಳಗುಮಾಡಿತ್ತು ಮಾಯೆ.
ಸ್ವರ್ಗಮರ್ತ್ಯಪಾತಾಳಗಳೆಂಬ ಮೂರು ಲೋಕದವರನ್ನೆಲ್ಲ
ಯೋನಿಮುಖದಲ್ಲಿ ಹರಿಹರಿದು ನುಂಗಿ ತೊತ್ತಳದುಳಿದಿತ್ತು ಮಾಯೆ.
ಮುಕ್ಕಣ್ಣಾ, ನೀ ಮಾಡಿದ ಮಾಯವ ಕಂಡು
ಬೆಕ್ಕನೆ ಬೆರಗಾದೆನಯ್ಯ ಅಖಂಡೇಶ್ವರಾ./700
ಹರಿವಿರಂಚಿಗಳಿಗೆ ನಿಲುಕದ ಪರಬ್ರಹ್ಮಪ್ರಸಾದ.
ನರ ಸುರ ಯಕ್ಷ ರಾಕ್ಷಸರಿಗೆ ಸಿಲುಕದ ತ್ರಿಯಕ್ಷಪ್ರಸಾದ.
ಮನುಮುನಿಗಳಿಗೆ ಒಲಿಯದ ಮಹಾಪ್ರಸಾದ.
ಅಖಂಡೇಶ್ವರನ ಘನಗಂಭೀರ ಪ್ರಸಾದ ಎನಗೊದಗಿತ್ತು ನೋಡಾ !/701
ಹಲವು ವೇಷವ ಧರಿಸಿ
ಹಲವು ಭಾಷೆಯ ಕಲಿತು
ಹಲವು ದೇಶಕ್ಕೆ ಹರಿದಾಡಿದಡೇನು ?
ಕಾಲಾರಿಯಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ.
ಅದೇನು ಕಾರಣವೆಂದೊಡೆ :
ತನುವಿನ ಆಶೆಯಾಮಿಷ ಹಿಂಗದಾಗಿ.
ಊರಾಶ್ರಯವ ಬಿಟ್ಟು ಕಾಡಾಶ್ರಮ ಗಿರಿಗಂಹರದಲ್ಲಿರ್ದಡೇನು ?
ಹಗಲು ಕಣ್ಣುಕಾಣದ ಗೂಗೆಯಂತಲ್ಲದೆ
ನಿಜವಿರಕ್ತಿಯಿಲ್ಲ ನೋಡಾ.
ಅದೇನು ಕಾರಣವೆಂದೊಡೆ :
ಮನದ ಮಾಯವಡಗದಾಗಿ.
ಹಸಿವು ತೃಷೆಯ ಬಿಟ್ಟು ಮಾತನಾಡದೆ ಮೌನವಾಗಿರ್ದಡೇನು ?
ಕಲ್ಲು ಮರ ಮೋಟು ಗುಲ್ಮಂಗಳಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ.
ಅದೇನು ಕಾರಣವೆಂದೊಡೆ :
ವಿಷಯವ್ಯವಹಾರ ಹಿಂಗದಾಗಿ.
ನಿದ್ರೆಯ ತೊರೆದು ಎದ್ದು ಕುಳ್ಳಿರ್ದಡೇನು ?
ಕಳ್ಳ ಊರಹೊಕ್ಕು ಉಲುಹು ಅಡಗುವನ್ನಬರ
ಮರೆಯಲ್ಲಿ ಕುಳಿತಂತಲ್ಲದೆ ನಿಜವಿರಕ್ತಿಯಿಲ್ಲ ನೋಡಾ.
ಅದೇನು ಕಾರಣವೆಂದೊಡೆ:
ಅಂತರಂಗದ ಘನಗಂಭೀರ ಮಹಾಬೆಳಗಿನ
ಶಿವಸಮಾಧಿಯನರಿಯದ ಕಾರಣ.
ಇಂತಪ್ಪ ಹೊರವೇಷದ ಡಂಭಕ ಜೊಳ್ಳುಮನದವರ
ವಿರಕ್ತರೆಂದಡೆ ಮಚ್ಚರಯ್ಯ ನಿಮ್ಮ ಶರಣರು ಅಖಂಡೇಶ್ವರಾ./702
ಹಸಿವು ತೃಷೆಯಂಡಲೆಯಾವರಿಸಿ,
ಕುಸಿವುತಿರ್ಪುದು ನೋಡಾ ತನುವು.
ವಿಷಯವಿಕಾರದಂಡಲೆಯಾವರಿಸಿ,
ದೆಸೆದೆಸೆಗೆ ನುಸುಳುತಿಪ್ಪುದು ನೋಡಾ ಮನವು.
ಈ ತನುಮನದಲ್ಲಿ ಮುಸುಕಿದ ಮಾಯಾವಾಸನೆಯ ಕಳೆದು
ನಿಮ್ಮ ಭಕ್ತಿಯ ಲೇಸು ತೋರಿಸಿ ಬದುಕಿಸಯ್ಯ ಎನ್ನ
ಅಖಂಡೇಶ್ವರಾ./703
ಹಾಡಿದರೆ ಹಾಡುವೆನಯ್ಯ ಶಿವಶರಣರ ಮನವೊಲಿದು.
ನೋಡಿದರೆ ನೋಡುವೆನಯ್ಯ ಸದ್ಭಕ್ತಸ್ತ್ರೀಯರ
ಎನ್ನ ಹೆತ್ತ ತಾಯಿಗಳೆಂದು.
ಬೇಡಿದರೆ ಬೇಡುವೆನಯ್ಯ ಎನ್ನ ಶ್ರೀಗುರುವಿನಲ್ಲಿ
ನಿತ್ಯ ನಿಜಮುಕ್ತಿಯ.
ಕೂಡಿದರೆ ಕೂಡುವೆನಯ್ಯ ಅಖಂಡೇಶ್ವರಾ,
ನಿಮ್ಮ ಶ್ರೀಚರಣವನೊಡಗೂಡುವ
ಅವಿರಳ ಸಮರಸಭಕ್ತಿಯಲ್ಲಿ./704
ಹಾಡಿದರೆ ಹಾಡುವೆನಯ್ಯಾ ನಿಮ್ಮ ಪರಮಪ್ರಸಾದವನೆ.
ನೋಡಿದರೆ ನೋಡುವೆನಯ್ಯಾ ನಿಮ್ಮ ಪರಮಪ್ರಸಾದವನೆ.
ಬೇಡಿದರೆ ಬೇಡುವೆನಯ್ಯಾ ನಿಮ್ಮ ಪರಮಪ್ರಸಾದವನೆ.
ಕೂಡಿದರೆ ಕೂಡುವೆನಯ್ಯಾ ನಿಮ್ಮ ಪರಮಪ್ರಸಾದವನೆ,
ಅಖಂಡೇಶ್ವರಾ./705
ಹಾಡಿರೋ ಜಿಹ್ವೆದಣಿಯದೆ ಲಿಂಗವ.
ನೋಡಿರೋ ಕಂಗಳುದಣಿಯದೆ ಲಿಂಗವ.
ಮಾಡಿರೋ ಪೂಜೆಯ ಹಸ್ತದಣಿಯದೆ ಲಿಂಗವ.
ಬೇಡಿರೋ ವರವ ಮನಬಂದ ಪರಿಯಲ್ಲಿ
ನಮ್ಮ ಅಖಂಡೇಶ್ವರಲಿಂಗವ./706
ಹಾಡುವೆನಯ್ಯ ನಿಮ್ಮ ,
ನೋಡುವೆನಯ್ಯ ನಿಮ್ಮ ,
ಪೂಜೆಯ ಮಾಡುವೆನಯ್ಯ ನಿಮ್ಮ ,
ಭಕ್ತಿಯ ಬೇಡುವೆನಯ್ಯ ನಿಮ್ಮ ,
ಎರಡಳಿದು ಕೂಡುವೆನಯ್ಯ ನಿಮ್ಮ ಅಖಂಡೇಶ್ವರಾ/707
ಹಾಲ ಹರವಿಯ ಮೇಲೆ ಮಜ್ಜಿಗೆಯ ತುಂಬಿರಿಸಿದಡೇನು
ಹೆಪ್ಪಾಗಬಲ್ಲುದೆ ಅಯ್ಯಾ, ಸಮ್ಮಿಶ್ರದಿಂದಲ್ಲದೆ.
ಅಂಗದ ಮೇಲೆ ಲಿಂಗಧಾರಣವಾದಡೇನು
ಸಮರಸವಾಗಬಲ್ಲುದೆ ಅಯ್ಯಾ, ಶಿವಜ್ಞಾನವಿಲ್ಲದೆ ಅಖಂಡೇಶ್ವರಾ./708
ಹಿಂದಣ ಜನ್ಮದಲ್ಲಿ ಗುರುಲಿಂಗಜಂಗಮವ
ಶಿವನೆಂದರಿದು ನಂಬಿ ಪೂಜಿಸಿದ ಕಾರಣ
ಮುಂದೆ ಹುಟ್ಟುವನು ಸತ್ಕುಲಜ ಬಲವಂತನಾಗಿ,
ಧನಧಾನ್ಯ ಸಕಲ ಭೋಗೈಶ್ವರ್ಯ ಉಳ್ಳವನಾಗಿ,
ಸಕಲಲೋಕಕ್ಕೆ ಮನ್ನಣೆ ಉಳ್ಳವನಾಗಿ,
ವಿದ್ಯೆಬುದ್ಧಿಯಲ್ಲಿ ವಿಶೇಷನಾಗಿ,
ಸತ್ಯ ಸದಾಚಾರ ಭಕ್ತಿಜ್ಞಾನ ಉಳ್ಳವನಾಗಿ,
ನಮ್ಮ ಅಖಂಡೇಶ್ವರನ
ಪೂರ್ಣ ಒಲುಮೆ ಉಳ್ಳವನಾಗಿರ್ಪನು ನೋಡಿರೋ./709
ಹಿಂದಣ ಶಂಕೆಯ ಹರಿದು, ಮುಂದಣ ಭವವ ಮರೆದು,
ಉಭಯ ಸಂದುಗಡಿದು, ಅಖಂಡಬ್ರಹ್ಮವೆ ತಾನಾದ ಶರಣಂಗೆ
ಜನನವಿಲ್ಲ, ಮರಣವಿಲ್ಲ ; ಕಾಲವಿಲ್ಲ , ಕಲ್ಪಿತವಿಲ್ಲ ;
ಸುಖವಿಲ್ಲ, ದುಃಖವಿಲ್ಲ ; ಪುಣ್ಯವಿಲ್ಲ, ಪಾಪವಿಲ್ಲ ;
ಪ್ರಳಯ ಮಹಾಪ್ರಳಯಂಗಳು ಮುನ್ನವೇ ಇಲ್ಲ.
ಇದು ಕಾರಣವಾಗಿ,
ಅನಂತಕೋಟಿ ಅಜಾಂಡಂಗಳು ಅಳಿದುಹೋದಡೆಯೂ
ಅಖಂಡೇಶ್ವರಾ, ನಿಮ್ಮ ಶರಣ ನಿತ್ಯನಾಗಿ ಉಳಿದಿಹನು./710
ಹಿಂದಣಜನ್ಮದ ಸಂಸಾರವ ಮರೆದು,
ಮುಂದಣ ಭವಬಂಧನಂಗಳ ಜರಿದು,
ಸಂದೇಹ ಸಂಕಲ್ಪಗಳ ಹರಿದು,
ನಿಮ್ಮ ಅವಿರಳಭಕ್ತಿಯ ಬೆಳಗಿನಲ್ಲಿ ಬೆರೆದು
ಓಲಾಡುವ ಮಹಾಮಹಿಮರ ತೋರಿ
ಬದುಕಿಸಯ್ಯ ಎನ್ನ ಅಖಂಡೇಶ್ವರಾ./711
ಹಿಂದೆ ಗುರುಭಕ್ತಿ ಲಿಂಗಪೂಜೆ
ಜಂಗಮದಾಸೋಹವನರಿಯದ ಕಾರಣ
ಮುಂದೆ ಹುಟ್ಟುಗುರುಡನಾಗಿ ಕುಂಟನಾಗಿ ಕುಬ್ಜನಾಗಿ ನಪುಂಸಕನಾಗಿ
ದರಿದ್ರನಾಗಿ ಕುಲಹೀನನಾಗಿ ದೇಶಗೇಡಿಯಾಗಿ
ಬಹುರೋಗಿಯಾಗಿ ಮಹಾದುಃಖವಂಬಡುತಿರ್ಪರು ನೋಡಾ
ಅಖಂಡೇಶ್ವರಾ ನಿಮ್ಮನರಿಯದ ಮನುಜರು./712
ಹಿಡಿದುದ ಬಿಡುವವನಲ್ಲ ; ಬಿಟ್ಟುದ ಹಿಡಿವವನಲ್ಲ.
ನಡುಮಧ್ಯದಲ್ಲಿ ಬಡತನ ಎಡರು ಕಂಟಕ ಬಂದಲ್ಲಿ,
ಕಡುದುಃಖಿಯಾಗಿ ಬಳಲುವವನಲ್ಲ.
ಅಡಿಗಡಿಗೆ ಲಿಂಗಪೂಜೆಯ,
ಅಡಿಗಡಿಗೆ ಜಂಗಮದಾಸೋಹವ ಮರೆವವನಲ್ಲ,
ಇದು ಕಾರಣ ಅಖಂಡೇಶ್ವರಾ,
ನಿಮ್ಮ ಮಹೇಶ್ವರನ ಚಾರಿತ್ರವು ಇಹಲೋಕದೊಳಗಿಲ್ಲಾ./713
ಹೀನಜಾತಿಯಲ್ಲಿ ಹುಟ್ಟಿದ ಮಾನವನಾದಡಾಗಲಿ
ಶಿವಧ್ಯಾನದಿಂದ ನೊಸಲಲ್ಲಿ ಶ್ರೀ ವಿಭೂತಿಯ ಧರಿಸಿದಾತನ
ಏನೆಂದು ಉಪಮಿಸಬಹುದಯ್ಯ ?
ಆತನಲ್ಲಿ ಜ್ಞಾನಪರೀಕ್ಷೆಯ ಮಾಡಲಾಗದು.
ಆತನಲ್ಲಿ ವ್ರತದ ಪರೀಕ್ಷೆಯ ಮಾಡಲಾಗದು.
ಆತನು ಮಹಾಪೂಜ್ಯನು ನೋಡಾ !
ಅದೆಂತೆಂದೊಡೆ :
“ತಸ್ಮಿನ್ ಜ್ಞಾನಂ ಪರೀಕ್ಷೇತ ನ ಕುಲಂ ನ ವ್ರತಂ ತಥಾ |
ತ್ರಿಪುಂಡ್ರಾಂಕಿತಭಾಲೇನ ಪೂಜ್ಯ ಏವ ಹಿ ನಾರದ ||”
ಎಂದುದಾಗಿ,
ಆ ಘನಮಹಿಮ ಇಹಪರಕೆ ಶ್ರೇಷ್ಠನು
ನೋಡಾ ಅಖಂಡೇಶ್ವರಾ./714
ಹುಲಿಯಬಾಯಲ್ಲಿ ಸಿಲ್ಕಿದ ಹುಲ್ಲೆಯಂತೆ,
ಸರ್ಪನಬಾಯಲ್ಲಿ ಸಿಲ್ಕಿದ ಕಪ್ಪೆಯಂತೆ,
ಸಕಲ ಲೋಕಾದಿಲೋಕಂಗಳು ಮಾಯೆಯಬಲೆಯಲ್ಲಿ ಸಿಲ್ಕಿ,
ಸೆರೆಹೋಗುವುದ ಕಂಡು ನಾನಂಜಿ
ನಿಮ್ಮ ಮೊರೆಹೊಕ್ಕೆ, ಕಾಯಯ್ಯ ಕಾರುಣ್ಯನಿಧಿಯೇ
ಅಖಂಡೇಶ್ವರಾ./715
ಹುಸಿ ಕಳವು ಪರದಾರ ಪರಹಿಂಸೆಯ ಬಿಟ್ಟು
ಲೋಕದ ನಚ್ಚು ಮಚ್ಚು ಸುಟ್ಟು,
ಸಚ್ಚಿದಾನಂದಲಿಂಗದಲ್ಲಿ ಮನವು ಬೆಚ್ಚಂತಿರ್ಪ
ಅಚ್ಚ ಮಹೇಶ್ವರರ ತೋರಿ ಬದುಕಿಸಯ್ಯ ಎನ್ನ
ಅಖಂಡೇಶ್ವರಾ./716
ಹೊನ್ನಿನಾಶೆಯ ಮಾಡುವವನಲ್ಲ ಭಕ್ತ.
ಹೆಣ್ಣು ತನ್ನದೆಂಬುವವನಲ್ಲ ಭಕ್ತ.
ಮಣ್ಣಿಂಗೆ ಮನಸೋಲುವವನಲ್ಲ ಭಕ್ತ.
ಅಖಂಡೇಶ್ವರಾ, ನಿಮ್ಮ ಭಕ್ತರ ಮಹಿಮೆಯ ನೀವೇ ಬಲ್ಲಿರಿ./717
ಹೊನ್ನಿನಾಸೆ ಉಳ್ಳನ್ನಕ್ಕರ ಸಂಚಿತಕರ್ಮ ಬಿಡದು.
ಮಣ್ಣಿನಾಸೆ ಉಳ್ಳನ್ನಕ್ಕರ ಪ್ರಾರಬ್ಧಕರ್ಮ ಬಿಡದು.
ಹೆಣ್ಣಿನಾಸೆ ಉಳ್ಳನ್ನಕ್ಕರ ಆಗಾಮಿಕರ್ಮ ಬಿಡದು.
ಇಂತೀ ತ್ರಿವಿಧದಾಸೆ ಉಳ್ಳನ್ನಕ್ಕರ ಭಕ್ತನಲ್ಲ,
ಮಹೇಶ್ವರನಲ್ಲ, ಪ್ರಸಾದಿಯಲ್ಲ, ಪ್ರಾಣಲಿಂಗಿಯಲ್ಲ,
ಶರಣನಲ್ಲ, ಐಕ್ಯನಲ್ಲ ನೋಡಾ ಅಖಂಡೇಶ್ವರಾ./718
ಹೊನ್ನು ಬ್ರಹ್ಮನ ಹಂಗು, ಹೆಣ್ಣು ವಿಷ್ಣುವಿನ ಹಂಗು,
ಮಣ್ಣು ರುದ್ರನ ಹಂಗು.
ಇಂತೀ ತ್ರಿಮೂರ್ತಿಗಳ ಹಂಗು ಜರಿದು
ಲಿಂಗವೇ ಗೂಡಾಗಿರ್ಪ ಮಹಾಶರಣರ ಸಂಗದಲ್ಲಿರಿಸಿ
ಸಲಹಯ್ಯ ಎನ್ನ ಅಖಂಡೇಶ್ವರಾ./719
ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು
ತನುವೆನ್ನದು ಮನವೆನ್ನದು ಧನವೆನ್ನದು ಎಂದು
ಭಿನ್ನಭಕ್ತಿಯ ಮಾಡಿ
ಬಡ್ಡಿಕಾರನಂತೆ ಒಂದು ಕೊಟ್ಟು ಎರಡು ಪಡೆವ
ಜಡಜೀವಿಗಳ ಭಕ್ತರೆನ್ನಬಹುದೇನಯ್ಯ ಅಖಂಡೇಶ್ವರಾ ?/720
ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು
ಮನೆಯೆನ್ನದು ಮಕ್ಕಳೆನ್ನವರೆಂದು ಭಿನ್ನಭಾವದಲ್ಲಿರ್ದು,
ಸನ್ನಿಹಿತಜಂಗಮದೊಡನೆ ಸಹಭೋಜನವ ಮಾಡಿದಡೆ
ಕುನ್ನಿ ಕುಕ್ಕುಟನ ಬಸುರಲ್ಲಿ ಬಪ್ಪುದು ತಪ್ಪದು ನೋಡಾ
ಅಖಂಡೇಶ್ವರಾ./721
ಹೊರಗಣ ಒಂಬತ್ತು ಬಾಗಿಲವ ಮುಚ್ಚಿ
ಒಳಗಣ ಅಂಬರದ ಬಾಗಿಲ ಬೀಗವ ತೆಗೆದು
ಒಳಹೊಕ್ಕು ನೋಡಲು,
ಗಂಗೆ ಸರಸ್ವತಿ ಯಮುನೆಯೆಂಬ ತ್ರಿನದಿಗಳು ಕೂಡಿದ ಠಾವಿನಲ್ಲಿ
ಸಂಗಮಕ್ಷೇತ್ರವೆಂಬ ರಂಗಮಂಟಪವುಂಟು.
ಆ ರಂಗಮಂಟಪದಲ್ಲಿ
ರವಿಕೋಟಿಪ್ರಭೆಯಿಂದೆ ರಾಜಿಸುವ ಮಹಾಲಿಂಗವ ಕಂಡು,
ಆ ಮಹಾಲಿಂಗಕ್ಕೆ ತನ್ನಾತ್ಮಸಂಬಂಧವಾದ ದ್ರವ್ಯಂಗಳಿಂದರ್ಚಿಸಿ,
ಆ ಮಹಾಲಿಂಗದ ಬೆಳಗನು
ಕಂಗಳು ತುಂಬಿ ನೋಡಿ ಮನ ಸಂತೋಷಗೊಂಡು,
ಅಲ್ಲಿಂದತ್ತ ಪಶ್ಚಿಮದಿಕ್ಕಿನಲ್ಲಿ ಮಹಾಕೈಲಾಸವಿರ್ಪುದನು
ತನ್ನ ಸ್ವಾತ್ಮಜ್ಞಾನದಿಂದ ತಿಳಿದು ನೋಡಿ,
ಎಡಬಲದ ಬಟ್ಟೆಯ ಮೆಟ್ಟದೆ
ನಟ್ಟನಡುಮಧ್ಯಮಾರ್ಗವಿಡಿದು ಹೋಗಿ,
ಕೈಲಾಸದ ಪೂರ್ವದಿಕ್ಕಿನ ಹೆಬ್ಬಾಗಿಲ
ಉಪ್ಪರ ಗೋಪುರವ ಕಂಡು ಒಳಹೊಕ್ಕು ಹೋಗಿ
ಕಂಗಳಿಗೆ ಮಂಗಳವಾದ ಶಿವಮಹಾಸಭೆಯ ಕಂಡು,
ಅಲ್ಲಿ ಹೊಡೆವ ಭೇರಿಯನಾದ, ತುಡುಮು ತಾಳ ಮದ್ದಳೆಯನಾದ,
ಗಡಗಡ ಝಲ್ಲೆಂಬ ಸಮಾಳ ಕರಡಿ ಕೌಸಾಳನಾದ
ನುಡಿಸುವ ವೀಣೆ ಕಿನ್ನರಿ ಸ್ವರಮಂಡಲ ತಂಬೂರಿ ಕಾಮಾಕ್ಷಿಯನಾದ,
ಭೋರಿಡುವ ಶಂಖ ಘಂಟೆಯನಾದ,
ಸ್ವರಗೈವ ನಾಗಸ್ವರ ಕೊಳಲು ಸನಾಯದ ನಾದ,
ಕೂಗಿಡುವ ಕಹಳೆ ಹೆಗ್ಗಹಳೆ ಚಿನಿಕಹಳೆ ಕರಣೆಯನಾದ,
ಇಂತಿವು ಮೊದಲಾದ ನಾನಾ ತೆರದ ನಾದಂಗಳನು
ಕಿವಿದುಂಬಿ ಕೇಳಿ ಮನದುಂಬಿ ಸಂತೋಷಿಸಿ,
ಅಲ್ಲಿಂದ ಮುಂದಕ್ಕೆ ಹೋಗಿ ಸೂರ್ಯವೀಥಿಯ ಕಂಡು ಪೊಕ್ಕು,
ಅಲ್ಲಿ ನಿಂದು ಓಲಗಂಗೊಡುವ ಮೂವತ್ತೆರಡು
ತೆರದ ತೂರ್ಯಗಣಂಗಳಂ ಕಂಡು,
ಅಲ್ಲಿಂದ ಮುಂದಕ್ಕೆ ಹೋಗಿ ಸೋಮವೀಥಿಯ ಕಂಡು ಪೊಕ್ಕು,
ಅಲ್ಲಿ ನಿಂದು ಓಲಗಂಗೊಡುವ ಹದಿನಾರು ತೆರದ ಪ್ರಮಥಗಣಂಗಳ ಕಂಡು
ಅಲ್ಲಿಂದ ಮುಂದಕ್ಕೆ ಹೋಗಿ ಅನಲವೀಥಿಯ ಕಂಡು ಪೊಕ್ಕು,
ಅಲ್ಲಿ ಅಷ್ಟದಿಕ್ಕುಗಳಲ್ಲಿ ನಿಂದು ಓಲಗಂಗೊಡುವ
ಅಷ್ಟ ತೆರದ ಅಮರಗಣಂಗಳ ಕಂಡು,
ಅಲ್ಲಿಂದ ಮುಂದೆ ಹೋಗಿ ಚತುರ್ದಿಕ್ಕಿನಲ್ಲಿ ನಿಂದು ಓಲಗಂಗೊಡುವ
ಚತುಃಶಕ್ತಿಯರ ಸಮ್ಮೇಳವ ಕಂಡು,
ಅಲ್ಲಿಂದ ಮುಂದಕ್ಕೆ ಹೋಗಿ
ನಟ್ಟನಡುವಿರ್ದ ಶೃಂಗಾರಮಂಟಪದ ಮಹಾಸದರಿನಲ್ಲಿ
ಮೂರ್ತಿಗೊಂಡಿರ್ದ ನಿಷ್ಕಲ ಪರಶಿವನ ಕಂಡು ತನು ಉಬ್ಬಿ ಮನ ಕರಗಿ,
ಕಂಗಳಲ್ಲಿ ಪರಿಣಾಮಜಲ ಉಕ್ಕಿ ಕಡೆಗೋಡಿವರಿವುತ್ತ,
ಉರಿಕರ್ಪುರ ಸಂಯೋಗದಂತೆ
ಆ ನಿಷ್ಕಲಪರಶಿವನೊಡನೆ ಬೆರೆದು ಪರಿಪೂರ್ಣವಾದ
ಮಹಾಶರಣರ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ. /722
ಹೊರಗೆ ಹೊನ್ನ ಬಿಟ್ಟೆನೆಂದು ನುಡಿವುತಿರ್ಪೆನಲ್ಲದೆ
ಒಳಗೆ ಬಿಟ್ಟು ನಿಶ್ಚಿಂತನಲ್ಲವಯ್ಯ ನಾನು.
ಹೊರಗೆ ಹೆಣ್ಣ ಬಿಟ್ಟೆನೆಂದು ನುಡಿವುತಿರ್ಪೆನಲ್ಲದೆ,
ಒಳಗೆ ಬಿಟ್ಟು ನಿಶ್ಚಿಂತನಲ್ಲವಯ್ಯ ನಾನು.
ಹೊರಗೆ ಮಣ್ಣ ಬಿಟ್ಟೆನೆಂದು ನುಡಿವುತಿರ್ಪೆನಲ್ಲದೆ,
ಒಳಗೆ ಬಿಟ್ಟು ನಿಶ್ಚಿಂತನಲ್ಲವಯ್ಯ ನಾನು.
ಇಂತಪ್ಪ ಏಕಾಂತದ್ರೋಹಿ ಗುಪ್ತಪಾತಕಂಗೆ-
ಅಖಂಡೇಶ್ವರನು ಒಲಿ ಎಂದೊಡೆ ಎಂತೊಲಿವನಯ್ಯ ಎನಗೆ ?/723