Categories
ವಚನಗಳು / Vachanagalu

ಸಗರದ ಬೊಮ್ಮಣ್ಣನ ವಚನಗಳು

ಅಂಗವಳಿದು ಸುಸಂಗವಾಗಲಾಗಿ,
ಸಂದೇಹಿಗಳ ಸಂದೇಹ ಬಿಟ್ಟಿತ್ತು, ನಿಸ್ಸಂದೇಹವಾಯಿತ್ತು.
ಅದೆಂತೆಂದಡೆ;
ತೋರುವ ತೋರಿಕೆ ತಾನೆಯಾದ ಕಾರಣ.
ಸಕಲದೊಳಗಿದರ್ು ನಿಃಕಲದ ರೂಪ ನಿರ್ಧರವೆಂದು ಭಾವಿಸಿ,
ಅರಿದರುಹಿಸಿಕೊಂಬವ ತಾನು ತಾನೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./1
ಅಡುವಳ ಕೈ ಉಳಿದು, ಅಡದವಳ ಕೈ ಬೆಂದಿತ್ತು.
ಮನೆಯೊಡೆಯ ನೆರವಿಗನಾಗಿ, ಪರವನೊಡೆಯನಾದ.
ಅನ್ನಿಗ ತನ್ನವನಾದ, ತನ್ನ ತಾನರಿತ ಕಾರಣ.
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರ ಲಿಂಗವನರಿತ ಕಾರಣ./2
ಅದು ಹುಸಿ,, ಕಚ್ಚಿದಡೆ ವಿಷವೇರಿತ್ತಲ್ಲದೆ, ವಿಷಕ್ಕೆ ಹಾಹೆ ಇಲ್ಲ.
ಇರಿದವನಿದ್ದಂತೆ ಅಂಬಿಗೆ ಮುನಿವರೆ ?
ಹಾವಿದ್ದಂತೆ ವಿಷವ ಕೊಲಬಹುದೆ ?
ಎಲ್ಲರಲ್ಲಿ ಲೇಪ ನೀನಾಗಿದ್ದು, ಕರಣಂಗಳ ಹೋರಾಟವೇಕೆ ಎನಗೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ ? /3
ಅನ್ಯರು ಮಾಡಿದ ಸುರೆಯ ಕೊಂಡು, ಜಗ ತನ್ನ ತಾನರಿಯದಿರೆ,
ತನ್ನಲ್ಲಿ ಒದಗಿದ ಮೂರು ಸುರೆಯ ಕೊಂಡು, ಸುರನಾಥನನರಿಯದಿರೆ,
ತ್ರಿವಿಧದ ಸುರತಕ್ಕೊಳಗಾಹ ಸುರಭಾವಿಗಳ ಹರಹಿಗೆ ಸಿಕ್ಕ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು./4
ಅಯ್ಯಾ, ಸಕಲವ ನೇತಿಗಳೆದು ನಿಂದ ಅಕ್ಷತೆಯನಿಡುವೆನಯ್ಯಾ.
ವಿಕಳಭಾವರೂಪಿಲ್ಲದ ಗಂಧವ ಧರಿಸುವೆನಯ್ಯಾ.
ಸಕಲಭಾವ ಸಂಚರಿಸದೆ ನಿರುತವಾಗಿ ನಿಂದ ಧೂಪವ ಕೈಕೊಳ್ಳಯ್ಯಾ.
ಇಂತೀ ಮನಘನ ಭಾವಪೂಜೆ ನಿಮಗರ್ಪಿತವಯ್ಯಾ.
ಸಗರದ ಬೊಮ್ಮನೊಡೆಯ ಎನ್ನ ತನುಮನ ಸಂಗದಲ್ಲಿ ನಿಂದು,
ನಿಸ್ಸಂಗವಾದಲ್ಲಿಯೆ ನಿಮಗೆ ಪೂಜೆಯಯ್ಯಾ./5
ಆಗರದಲ್ಲಿ ಅಡಕೆ ಸಣ್ಣಾದಾಗ ತೋಟದ ಎಲೆ ಉದುರಿತ್ತು.
ಉದುರುವುದಕ್ಕೆ ಮೊದಲೆ ಸುಣ್ಣವ ಸುಡುವವ ಸತ್ತ.
ಇವರ ಮೂವರ ಹಂಗಿಗತನ ಬಿಟ್ಟಿತ್ತು,
ಬಾಯ ಹಂಬಲಿಲ್ಲದೆ, ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗವು ಮೂರರ ಹಂಗ ಬಿಟ್ಟ ಕಾರಣ. /6
ಇಷ್ಟ ಕೈಯಲ್ಲಿ ಬಂದು ನಿಂದಿರೆ, ದೃಷ್ಟಿಯ ಭಾವ ಚಿತ್ತದ ಕೈಯಲ್ಲಿ ಕೂಡಿ,
ಅರಿವು ಆತ್ಮನಲ್ಲಿ ಸ್ವಸ್ಥ ಕರಿಗೊಂಡು,
ತನು ಅರಿವ ಮನಕ್ಕೂ ಅರುಹಿಸಿಕೊಂಬ ನೆರೆ ವಸ್ತುವಿಗೂ ಬೇರೊಂದೆಡೆಯಿಲ್ಲದೆ,
ಅಂಗ ಮನ ಪ್ರಾಣ ಒಂದಕ್ಕೊಂದು ಹಿಂಗಲಾಗಿ, ನಿಜಸಂಗವನರಿ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದಲ್ಲಿ./7
ಈ ಧರೆಯ ಮಡಕೆಯಲ್ಲಿ, ಹೋದಬಾರಿಯ ಅಕ್ಕಿಯ ಹೊಯಿದು,
ಬಹಬಾರಿಯ ಬೆಂಕಿಯ ಹಾಕಿ, ಅನಾಗತ ಸಂಸಿದ್ಧಿಯೆಂಬ ಒಲೆಯಲ್ಲಿ
ಉಸುರುಸಾ ಉಪ್ಫೆಂದು ಉರುಹಲಾಗಿ, ಮಡಕೆ ಒಡೆದು, ಓಗರ ಬೆಂದಿತ್ತು.
ಉಂಬ ಅಣ್ಣ ಓಗರವನೊಲ್ಲದೆ ಗಂಜಿಯ ಕುಡಿದು ಗಂಟಲು ಸಿಕ್ಕಿತ್ತು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ./8
ಈರೇಳುಲೋಕ, ಹದಿನಾಲ್ಕು ಭುವನವಳಯದಲ್ಲಿ
ಜಂಬೂದ್ವೀಪ ನವಖಂಡ ಪೃಥ್ವಿ ಹಿಮಸೇತು ಮಧ್ಯದೊಳಗಾದ
ಖಂಡಮಂಡಲ ಯುಗಜುಗಂಗಳು, ಪಂಚಭೌತಿಕ
ಪಂಚವಿಂಶತಿತತ್ವ ಸಕಲವಾಸಂಗಳೆಲ್ಲವು ತನ್ನ ಸಾಕಾರದಲ್ಲಿ ತೋರುವುದು.
ಉತ್ತಮ ಕನಿಷ್ಠ ಮಧ್ಯಮವೆಂಬ ಸುಕ್ಷೇತ್ರವಾಸ,
ತನ್ನಂಗದಲ್ಲಿ ಸುಳಿದಾಡುವ ಮಂಗಳಮಯದಿರವ,
ಸಕಲೇಂದ್ರಿಯವ ಬಂಧಿಸದೆ ಕೂಡಿ,
ಅವರವರ ಅಂಗದ ಮುಖದಲ್ಲಿ ಲಿಂಗಕ್ಕೆ ಕೊಟ್ಟು,
ಸುಸಂಗಿಯಾಗಿ ವಸ್ತುವಿನ ಅಂಗದಲ್ಲಿ ಬೆರಸು.
ನೀನರಿದನೆಂಬುದಕ್ಕೆ ಬೇರೊಂದು ಕಡೆಯಿಲ್ಲ.
ನೀ ಮರೆದನೆಂಬುದಕ್ಕೆ ಬೇರೊಂದು ಮನವಿಲ್ಲ.
ವಸ್ತು ದ್ರವ್ಯವ ತೋರಿ ಅಳಿದ ಮತ್ತೆ ವಸ್ತುವ ಕೂಡಿದಂತೆ,
ಜಗಕ್ಕೆ ಭಕ್ತಿಯ ತೋರಿ ವಸ್ತು ಲೇಪ,
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗವು ಐಕ್ಯಲೇಪವಾದ./9
ಉದಕದ ಕೈಯ ಕರಗದಲ್ಲಿ ಬೆಂಕಿಯ ಸುಜಲವ ತುಂಬಿ,
ಆರಂಗ ಮೂರಂಗನ ಕೂಡೆ ನಿಂದುದೆ ಮಜ್ಜನ ಪಾತ್ರೆ.
ತೋರಲಿಲ್ಲದ ಪದಾರ್ಥವ
ಘನಮುಕ್ತಿಯೆಂಬ ಕೈಯಿಂದ ನಿಮಗರ್ಪಿತವ ಮಾಡುವೆನಯ್ಯಾ.
ಸಗರದ ಬೊಮ್ಮನೊಡೆಯ
ಎನ್ನ ತನುಮನ ಅಂಗಲಿಂಗವಸ್ತು ನಿಮಗರ್ಪಿತವಯ್ಯಾ./10
ಉಪ್ಪಿನ ಸಮುದ್ರದೊಳಗೊಂದು ಚಿಕ್ಕಬಾವಿ ಹುಟ್ಟಿತ್ತು.
ಬಾವಿಯ ತಳದಲ್ಲಿ ನೀರಿಲ್ಲ.
ಬಾವಿ ನೀರಿನೊಳಗೆ ಹುಟ್ಟಿತ್ತು, ಸ್ವಾದೋದಕವಾಯಿತ್ತು.
ಉದಕವ ನೋಡಿದವ ಕೆಟ್ಟ, ಕುಡಿದವ ಸತ್ತ.
ಆ ನೀರ ಹಿಡಿದವ ಬದುಕಿದ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ./11
ಎನ್ನ ಮನೆ ಮಾಳವಾಯಿತ್ತಯ್ಯಾ, ಎನ್ನ ಹೊಲ ಬೆಳೆಗೆಟ್ಟಿತ್ತಯ್ಯಾ.
ಎನ್ನ ಭಕ್ತಿಯಭಕ್ತಿಯಾಯಿತ್ತಯ್ಯಾ, ಸತ್ತು ಚಿತ್ತು ಹೆಣದಂತಾಯಿತ್ತಯ್ಯಾ.
ನಿಮ್ಮೊಳಾನು ಬೆರೆದು ಬೇರಿಲ್ಲದೆ ನೆಲೆಗೆಟ್ಟೆನಯ್ಯಾ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./12
ಒಂದಾಡಿನ ಕಣ್ಣಿನಲ್ಲಿ ಬಂದವು ಮೂರು ಸಿಂಹ.
ಆ ಸಿಂಹದ ಬಾಯ ಸೀಳಿ ಹುಟ್ಟಿದವೈದು ಮದಗಜ.
ಗಜದೊಡಲೊಡೆದು ಬರಿ ಕೈಯಲ್ಲಿ ನರಿ ಹುಟ್ಟಿತ್ತು.
ನರಿಯ ಉದರದಲ್ಲಿ ಮೊಲ ಹುಟ್ಟಿ, ಆ ಮೊಲ ಮೂವರ ಮೊಲೆಯ ತಿಂದಿತ್ತು.
ಮೊಲೆ ಹಲುದಾಗಿ ಮೊಲೆ ಮೊದಲುಗೆಟ್ಟಿತ್ತು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು,
ಜಗದೊಡಲು ತಾನಾದ ಕಾರಣ./13
ಒನಕೆಯ ಕಣ್ಣಿನಲ್ಲಿ ಒಂದು ಬೆನಕ ತಲೆದೋರಿತ್ತು.
ತಲೆಯಲ್ಲಿ ಹೊಟ್ಟೆ, ಬಾಯಲ್ಲಿ ಕಣ್ಣು, ಬಾಲೆಯರ ನಳಿತೋಳಲ್ಲಿ ಕಾಲು.
ಹೆಣ್ಣುಟ್ಟ ಬಣ್ಣ ಸೆರಗಿನಲ್ಲಿ ಅದೆ.
ಬೆನಕನ ಹೊತ್ತವನ ಅಪ್ಪ ಸತ್ತು, ಒನಕೆಯ ಕಣ್ಣೊಡೆದು,
ನಳಿತೋಳು ಮುರಿದು, ಬಣ್ಣ ಹರಿದು, ಅವರ ಅಣ್ಣನ ಮಗಳ ಗಂಡ ಬಿಣ್ಣಿದ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./14
ಒಳಗನರಿತು, ಹೊರಗನರಿದಡೆ, ಹೊರಗು ಶುದ್ಧವಲ್ಲ.
ಹೊರಗನರಿತು ಒಳಗೆ ನುಡಿದಡೆ, ಅದು ಕಾಣಬಾರದ ಬಯಲು.
ಕಣ್ಣಿನಲ್ಲಿ ನೋಡಿ, ಮನದಲ್ಲಿ ಅಪ್ಪಿ, ಉಭಯದೃಷ್ಟವಾಗಿಯಲ್ಲದೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರನಾಗ./15
ಕಂಗಳಸೂತಕ ಹೋಯಿತ್ತು, ನಿಮ್ಮಂಗದ ದರ್ಶನದಿಂದ.
ಮನದ ಸೂತಕ ಹೋಯಿತ್ತು, ನಿಮ್ಮ ನೆನಹು ವೇಧಿಸಿ.
ಸಕಲಸೋಂಕಿನ ಭ್ರಾಂತು ಬಿಟ್ಟಿತ್ತು, ನಿಮ್ಮ ಹಿಂಗದ ಅರಿಕೆಯಲ್ಲಿ.
ಇಂತೀ ನಾನಾವಿಧದ ಭೇದೋಪಭೇದಂಗಳೆಲ್ಲವು,
ನಿಮ್ಮ ಕಾರುಣ್ಯದಲ್ಲಿಯೆ ಲಯ,
ಸಗರದಬೊಮ್ಮನೊಡೆಯ ತನುಮನ ಸಂಗಮೇಶ್ವರಾ./16
ಕಂಚಿನ ಮಂಜುಳದಲ್ಲಿ ತೋರುವ ನಂಜು, ಕೊಲುವರಿಗೆ ಬಿಂದು.
ಸಾಕಾರ ನಿಂದಲ್ಲಿ ಆತ್ಮಂಗೊಡಲೆ ?
ಆ ಒಡಲೊಡೆದು, ಒಡಲೊಡೆಯನನರಿತಡೆ,
ಅದು ಸಂಸಾರಕ್ಕೆ ಬಿಡುಗಡೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./17
ಕಂಡಮಂಡಲ ರಣಭೂಮಿಯಲ್ಲಿ ಅಖಂಡಿತಮಯರು ಕಡಿದಾಡಿ,
ಹಿಡಿಖಂಡದ ಕರುಳ ಖಂಡಿಸಿ, ಶಿರ ತಂಡತಂಡದಲ್ಲಿ ದಿಂಡುರುಳಿತ್ತು.
ಅಖಂಡಿತನ ಮನ ಖಂಡೆಹದ ಬೆಂಬಳಿಯ ಗಾಯದಲ್ಲಿ ಸುಖಿತನು.
ರಣಭೂಮಿಯಲ್ಲಿ ಅಖಂಡಿತ ಗೆದ್ದ.
ಸಗರದ ಬೊಮ್ಮನೊಡೆಯ ತನುಮನ ಕೂಡಿ ಸಂಗದ ಸಂಗಸುಖಿಯಾದ./18
ಕಂಡೆ, ಆಕಾಶದಲ್ಲಿ ಒಂದು ಉಡುಪತಿಯ.
ಅದು ಅರ್ಧ ನಿಜರೂಪು, ಅರ್ಧ ತಮರೂಪು.
ಅದು ಜಗಕ್ಕೆ ಉಡುಪತಿ, ಎನಗದು ಸಮಧಿಪತಿ.
ಅದರ ತೊಡಿಗೆಯ ಗಡಣ ಉಭಯಮಾರ್ಗ.
ಅದರಸುವಿನ ಉಡುವ ಗಡಣವನರಿ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ. /19
ಕಣ್ಣಿನ ಬಾವಿಯಲ್ಲಿ ಕಾಣದ ಕಣ್ಣಿಯ ಬಿಟ್ಟು,
ಮಹೀತಳವ ನೆಮ್ಮಿ ಪಾತಾಳಕ್ಕೆ ಬಿಡಲು,
ಆಕಾಶದುದಕ ಬಂದು ತುಂಬಿತ್ತು.
ಸಗರದ ಬೊಮ್ಮನೊಡೆಯ ತನುಮನ ಸಂಗವಾದಲ್ಲಿಯೆ
ಎನ್ನ ಪ್ರಾಣಲಿಂಗಕ್ಕೆ ಮಜ್ಜನವಾಯಿತ್ತು./20
ಕಪ್ಪೆ ಕಚ್ಚಿ ಹಾವು ಸತ್ತಿತ್ತು.
ಹಾವಾಡಿಗ ಬಂದು ನೋಡಲಾಗಿ, ಆ ಹಾವಿದೆ.
ಹಾವು ಸತ್ತಿತ್ತು, ಇದೇನು ಗುಣವೆಂದೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./21
ಕರಣಂಗಳ ಕಾಳಿಕೆಯಳಿದುದೆ ನಿರಂಜನದ ಬೆಳಗಯ್ಯಾ.
ಊಧ್ರ್ವಮಧ್ಯದಲ್ಲಿ ತಿರುಗಾಡುವ ಹಂಸನ ಶಂಕೆಯ ಹರಿದುದೆ,
ಅಖಂಡಿತದ ಕಡ್ಡಿವತ್ತಿಯ ತುದಿವೆಳಗಯ್ಯಾ.
ಒಂಕಾರವೆ ದಿವ್ಯಸಂಚಾರವಯ್ಯಾ.
ಶ್ರುತಿಸ್ಮೃತಿತತ್ವವೆ ಸಕಲನಾದಪೂಜೆಯಯ್ಯಾ.
ಎನ್ನ ಸಕಲೇಂದ್ರಿಯ ಭಾವಚ್ಛೇದನವೆ ನಿಮಗಾಲವಟ್ಟವಯ್ಯಾ.
ಎನ್ನ ಚಿತ್ತ ಸುಚಿತ್ತವಾದುದೆ ನಿಮಗೆ ಛತ್ರವಯ್ಯಾ.
ಪ್ರಕೃತಿ ಪ್ರಪಂಚುಭಾವ ತಲೆದೋರದೆ ಸೂಸದೆ,
ಘನ ಒಲೆದಾಡುವುದೆ ಚಾಮರವಯ್ಯಾ.
ನಿಮಗೆನ್ನ ಚತುಷ್ಟಯ ಭಾವಹಿಂಗಿ ನಿಬ್ಬೆರಗಾದುದೆ ಆಭರಣವಯ್ಯಾ.
ಒಬ್ಬುಳಿಯ ತನುಭಾವ ಕೂಡಿದುದೆ ಲಿಂಗಸುಖವಾಸದ ವಸ್ತ್ರವಯ್ಯಾ.
ಇಂತೀ ಪೂಜೆ, ಸಗರದ ಬೊಮ್ಮನೊಡೆಯ
ನೀ ನಾನೆಂಬುಭಯವನರಿದು ಮರೆದಲ್ಲಿಯೆ,
ಸದಮಲಾನಂದ ಪೂಜೆಯಯ್ಯಾ./22
ಕರೆವ ಕಾಮಧೇನು ಒಂದು ಕರುವನೀದು, ಕರೆಯದೆ ಹೋಯಿತ್ತು.
ಆ ಕರು ಅರಿದು, ತನ್ನ ತಾಯನೀದು, ಕರುವಿಂಗೆ ತಾಯಿ ಕರುವಾಗಿ,
ಎಡೆಬಿಡುವಿಲ್ಲದೆ ಕರೆವುತ್ತಿದೆ.
ಹಾಲಿನ ಮಧುರ ತಲೆಗೇರಿ ಅಳಿಯಿತ್ತು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವ
ವೇದಿಸಿದ ಕಾರಣ. /23
ಕಲ್ಪಿತವಿಲ್ಲದ ಭೂಮಿಯಲ್ಲಿ, ಅಕಲ್ಪಿತದ ಕಲ್ಲು ಹುಟ್ಟಿತ್ತು.
ಕಲ್ಲಿನ ಹೊರೆಯಲ್ಲಿ ಮೂರು ಬೆಲ್ಲ ಹುಟ್ಟಿತ್ತು.
ಬೆಲ್ಲವ ಮೆದ್ದವರಲ್ಲಿಯೇ ಕಲ್ಲು ಮೆದ್ದವರು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದಲ್ಲಿಗೆ./24
ಕಾಡುಗುರಿ ಈಯಿತ್ತೊಂದು ಮೂದೇವರ ಮುಲ್ಲನ ಮರಿಯ.
ಅದಕ್ಕೆ ಮೇಹಿಲ್ಲ, ಹಾಲನೊಲ್ಲದು.
ಅದು ಬಾಲೆಯರ ಬಣ್ಣದ ಲೋಲಮರಿ.
ಸಾಲುಗಾಲಿನಲ್ಲಿ ಹರಿದಾಡುತ್ತಿದೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು,
ಒಲಿದು ಒಲ್ಲದ ಕಾರಣ./25
ಕಾಯಕ್ಕೆ ಲಿಂಗವ ಕಟ್ಟುವಾಗ, ಆ ಕಾಯವ ಬಾಧೆಗೆ ಹೊರಗುಮಾಡಬೇಕು.
ಮನಕ್ಕೆ ಅರಿವ ಪೇಳುವಾಗ, ಕರಣಂಗಳ ಮರಣವ ಮಾಡಬೇಕು.
ಇದು ಕಾರಣ, ಅಂಗಕ್ಕೆ ಕ್ರೀ, ಮನಕ್ಕೆ ಮರವೆಯಿಲ್ಲದೆ ಕೂಡಲಾಗಿ,
ಸಂಗವಾಯಿತ್ತು, ಸಗರದ ಬೊಮ್ಮನೊಡೆಯ ತನುಮನ
ಸಂಗಮೇಶ್ವರಾ./26
ಕಾಯಗುಣದಲ್ಲಿದ್ದು ಕರಣಂಗಳಂತಾಡದಿದ್ದಡೆ, ಕಾಯದ ಸಂಗವೇ ಲೇಸು,
ಇಂದ್ರಿಯಂಗಳ ಸಂಸರ್ಗದಲ್ಲಿದ್ದು ಮುಟ್ಟುವ ಸಂಗವ ಬಲ್ಲಡೆ,
ಇಂದ್ರಿಯಂಗಳ ಸಂಗವೇ ಲೇಸು.
ಅವಗುಣದಲ್ಲಿದ್ದು ಅರತು, ತನ್ನಯ ಸಾವರಿತಡೆ, ಸಾವಯವ ಲೇಸು,
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗವು ಕೂಡಿ ಕೂಟವಾದ ಮತ್ತೆ. /27
ಕಾಯದ ಕಾನನದಲ್ಲಿ ಭಾವದ ನವಿಲು ನಲಿದಾಡುತ್ತಿರೆ,
ಒಂದು ಹಾವಿನ ಮರಿ ಬಂದು ಹಾಯಿತ್ತು.
ನವಿಲಂಜಿ ಹೋಗುತ್ತಿರಲಾಗಿ, ಹಾವಿನ ಮರಿಯ ನವಿಲಗರಿ ನುಂಗಿತ್ತು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು,
ಚೋದ್ಯವಾದ ಕಾರಣ./28
ಕಾಯದ ಮೇಲಿಹ ಲಿಂಗ ಕೈಬಿಡುವನ್ನಕ್ಕ ಕೈಗೆ ಭಿನ್ನ.
ವಸ್ತ್ರವ ಬಿಟ್ಟು ನೋಡಿ ಕಾಬನ್ನಕ್ಕ ಕಂಗಳಿಗೆ ಭಿನ್ನ.
ಕಂಗಳು ಕಂಡು ಮನದಲ್ಲಿ ಬೇಧಿಸುವನ್ನಕ್ಕ ರೂಪಿಂಗೆ ಭಿನ್ನ.
ಉಭಯಗುಣವಳಿದು, ಎರಡರ ಅಭಿಸಂದಿಯ ಕಾಣಿಕೆ ಹಿಂಗಿ,
ನಿಜವ ಕಾಣಿಸಿಕೊಂಬುದು.
ತಾನಾಗಿ ಕಂಡಲ್ಲಿಯೆ ಇದಿರಿಡುವುದು, ನಾಮನಷ್ಟ.
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು
ತಾನು ತಾನೆ./29
ಕಾಯದೊಳಗಣ ಕೂಟವ ಬಿಟ್ಟು, ಕಣ್ಣಿನೊಳಗಣ ನೋಟವ ಬಿಟ್ಟು,
ಮನದೊಳಗಣ ಜಗದಾಟವ ಬಿಟ್ಟು,
ಏತರಲ್ಲಿದ್ದೊ ಕಲೆದೋರದೆ, ಕಂಜಪತ್ರದ ಅಂಬುವಿನಂತೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರನು./30
ಕಾರುಕನ ಹೃದಯದ ಕಪಟ, ಕಣಿಲೆಂದು ಕೈಯ ಕಲ್ಲು,
ತನು ಕಟ್ಟಳೆಹೀನನ ಹೊಗುತೆ, ಸೈರಣೆಯವಳೊಳುಪಿನ ಮಾತು,
ಇವು ಸಾರದ ಪ್ರಸ್ಥದಂತೆ,
ವೇಷಡಂಬಕನ ಚಾತುರಿಯದ ಗೀತ[ದಂತೆ].
ಇಂತೀ ಘಾತುಕತನದ ವೇಷವ ಬಿಟ್ಟು, ನುಡಿ ನಡೆ ಸಿದ್ಧಾಂತವಾಗಬೇಕು.
ಸಗರದ ಬೊಮ್ಮನೊಡೆಯ ಇವರಿಗೆ ಸದರವೆ ಹರಿ,
ಕುಟಿಲ ಬಿಟ್ಟು ಅರಿ, ತನುಮನ ಸಂಗಮೇಶ್ವರಲಿಂಗವ./31
ಕಾಲಕಣ್ಣಿನಲ್ಲಿ ಒಬ್ಬ ಬಾಲೆ ಹುಟ್ಟಿದಳು.
ಆ ಬಾಲೆಗೆ ಮೊಲೆ ಒಂದೆ, ಉಂಬ ಮಕ್ಕಳು ಐವರು.
ಅವಳ ಗಂಡ ಶಿಖಂಡಿ, ಮಕ್ಕಳು ಹುಟ್ಟಿದ ಭೇದವ ಹೇಳಾ.
ಮಕ್ಕಳು ಅಪ್ಪಾ ಎಂಬುವುದಕ್ಕೆ ಮೊದಲೆ ಸತ್ತ, ಹೆತ್ತ ತಂದೆ.
ಅವನ ಹೆಂಡತಿ ಅವನೊಂದಾಗಿ ಹೊಂದಲೊಲ್ಲದೆ, ಮಿಂಡನೊಂದಿಗೆ ಹೊಂದಿದ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./32
ಕಾಲಾಂಧರ ಸಂಹಾರಕ್ಕೆ ಮೊದಲೇ ಲೀಲೆ.
ಉಮಾಪತಿಗೆ ಮೊದಲೆ ನಾ ನೀನೆಂಬುದಕ್ಕೆ ನೀ ಕುರುಹಾಗಿ.
ನಾನರಿವುದಕ್ಕೆ ಮೊದಲೆ ನಿನ್ನಿರವಾವುದು ಹೇಳು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?/33
ಖಂಡಿತ ಖಾಂಡದಲ್ಲಿ ಮೂರು ಮುಖದ ಹಾರುವ ಮಂಡಲ ಹುಟ್ಟಿತ್ತು.
ಅದು ಗಾರುಡಕ್ಕಸಾಧ್ಯ
ಮಂತ್ರದ ಮನವ ಕೇಳುವುದಕ್ಕೆ ಕರ್ಣದ್ವಾರವಿಲ್ಲ.
ಅದಕ್ಕೆ ಮಂತ್ರಮನೋನಾದಮಂಡಲವೆಂದಡೆ,
ಇಳಿಯಿತ್ತು, ವಿಷ ಹಾರಿತ್ತು.
ಮಂಡಲವ ಮಂತ್ರಿಸುವಣ್ಣ ಹಿಂಡಿ ಬಿಂಡಿ ಬಿರಿದ,
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗದ ಸಂಗದಲ್ಲಿ./34
ಗುರಿ ಒಂದಕ್ಕೆ ಧನು ಮೂರು, ಸರ ಹದಿನಾರು.
ಒಂದೆ ಬಿಡುಮುಡಿಯಲ್ಲಿ ಎಸಲಿಕ್ಕೆ,
ಗುರಿತಪ್ಪಿ ಎಚ್ಚವನಂಗ ಬಟ್ಟಬಯಲಾಯಿತ್ತು,
ಅದು ತಪ್ಪಿಹೋದ ಕಾರಣ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವೆ ಗುರಿ,
ಅರಿವ ಮನ ಸರವಾದ ಕಾರಣ./35
ಗೆಲ್ಲ ಸೋಲಬಲ್ಲವರಿಗೇಕೆ ? ಅದು ಬೆಳ್ಳರ ಗುಣ.
ಪಥವೆಲ್ಲರಲ್ಲಿ ನಿಹಿತನಾಗಿ, ಅತಿಶಯದ ವಿಷಯದಲ್ಲಿ ಗತನಾಗದೆ,
ಸರ್ವವನರಿತು, ಗತಮಯಕ್ಕೆ ಅತೀತನಾಗು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./36
ಗೋಡೆಯ ಮರೆಯಲ್ಲಿ ನಿಂದು, ಕಾದುವರಿಗೇನು ಭೀತಿ ?
ಅದೆ ನೆಲೆಯಿದಂತೆ ನೋಟದ ಬರುಬರಿಗೇನು ಭೀತಿ ?
ಎನ್ನ ಸುಖದುಃಖಕ್ಕೆ ಮುಯ್ಯಾಂತು,
ನೀ ಮುಂಚು, ನಾ ಹಿಂಚಾಗಿಯಿದ್ದ ಮತ್ತೆ
ಎನಗೆ ಬಂದ ಉಬ್ಬಸವಾವುದು ?
ಆಳಿನಪಮಾನ ಆಳ್ದಂಗೆ ಆದಂತೆ
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ,
ನೀನಿರ್ದಂತೆ ಎನಗಾವ ಭೀತಿ ?/37
ಗೋವ ಕುದುರೆಯ ಕಾಣದೆ,
ಗೊಲ್ಲ ಕುರಿಯ ಕಾಣದೆ, ಗೋವಳ ಗೋವ ಕಾಣದೆ,
ಗೊಲ್ಲನ ಕೇಳೆ, ಗೊಲ್ಲ ಗೋವನ ಕೇಳೆಂದು ಬೆಸಸೆ,
ಕುರಿ, ಕುದುರೆ, ಗೋವು ತಮ್ಮಡಿಯಲ್ಲಿ ನಿಂದುವೆಂದು ಹೇಳೆ,
ಚೋದ್ಯವಾಯಿತ್ತೆಂದು ಅಡಗಿದ.
ಸಗರದ ಬೊಮ್ಮನೊಡೆಯ ತನುವಿನ ಮಧ್ಯದಲ್ಲಿ
ನಿಸ್ಸಂಗ ಸಂಗಮೇಶ್ವರನಾದ./38
ಘಟವೃಕ್ಷದ ಕುಕ್ಷಿಯಲ್ಲಿ ಮೂರುಸರ್ಪನ ಹೇಳಿಗೆ.
ಸರ್ಪ ಸತ್ತು ಹೇಳಿಗೆಯ ಮುಳ್ಳು ತೆಗೆಯಬಾರದು.
ಆ ಖಂಡಿಯಲ್ಲಿ ಖಂಡಿಸಿ ಹೊಯಿತ್ತು, ಸರ್ಪನ ಶುಕ್ಲ ಶ್ರೋಣಿತ.
ಹೇಳಿಗೆಯ ಒಪ್ಪವಿನ್ನಿಲ್ಲ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./39
ಚತುವರ್ಿಧಫಲಪದಂಗಳಲ್ಲಿ ಹೊಣೆಯ ಹೊಗದೆ,
ಸುಖದುಃಖ ಆತುರಂಗಳಲ್ಲಿ ಭೇದಿಸಿಕೊಳ್ಳದೆ,
ಸಕಲಯುಕ್ತಿ ಸಂಪೂರ್ಣದವವಾಗಿ ನಿರ್ಭಾವದಲ್ಲಿರು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./40
ಚಿತ್ತು ಘಟವ ಹೊತ್ತು ಇಹಾಗ, ನಿತ್ಯಾನಿತ್ಯವನರಿದುದಿಲ್ಲ.
ಸತ್ವ ರಜ ತಮವ ಹೊತ್ತಾಡುವಲ್ಲಿ, ಭವಲೇಪ ನಿಶ್ಚಯವನರಿಯಬೇಕು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./41
ಜಂಬೂದ್ವೀಪದಲ್ಲಿ ಹುಟ್ಟಿದವೈದು ಒಂಟೆ.
ಒಂಟೆಯ ಕೊರಳೊಳಗೆ ಘಂಟೆಗೆ ನಾದವಿಲ್ಲ,
ಆ ಘಂಟೆಯ ಒಳಗಣ ನಾಲಗೆ ನಾಶವಾದ ಕಾರಣ.
ಆ ಒಂಟೆಯ, ಘಂಟೆಯ, ಆ ಜಂಬೂದ್ವೀಪವ
ಒಂದು ಗಿಳಿಯ ಕಂಟಕ ನುಂಗಿತ್ತು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./42
ಜೀವವಳಿದು ಪರಮನಾಗಬೇಕೆಂಬರು:
ಜೀವವೆಲ್ಲಿ ಅಳಿವುದು ? ಪರಮನೆಲ್ಲಿ ಅಹುದು ?
ಅಳಿವುದು ಬೇರೊಂದು.
ಈ ಉಭಯದ ಅಳಿವ ಉಳಿವ ಮನೆಯ ಹೇಳಾ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./43
ತನು ನಷ್ಟವಾದಲ್ಲಿ, ಉಸುರಿಗೆ ಒಡಲಿಲ್ಲ.
ಮನ ನಷ್ಟವಾದಲ್ಲಿ, ಅರಿವಿಂಗೆ ತೆರಪಿಲ್ಲ.
ಅರಿವು ನಷ್ಟವಾದಲ್ಲಿ, ಉಭಯವ ಭೇದಿಸುವದಕ್ಕೆ ಅಪ್ರಮಾಣು.
ರೂಪು ರುಚಿ ದೃಷ್ಟವಾಗಬೇಕು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?/44
ತನು ಹೇಳಿಗೆ, ಮನ ಸರ್ಪನಾಗಿ,
ತನ್ನಯ ವಿಲಾಸಿತದಿಂದ ಹೆಡೆಯೆತ್ತಿ ಆಡುತ್ತಿರಲಾಗಿ,
ನಾನಾರೂಪು ತೋ[ರುವ] ಆಕಾಶದ ಮಧ್ಯದಲ್ಲಿ,
ಉಭಯನಷ್ಟವಾದ ಚಿದ್ಘನರೂಪಿನ ಹದ್ದು ಬಂದು,
ಹೊಯ್ಯಿತ್ತು ಸರ್ಪನ.
ಆ ಸರ್ಪ ಹದ್ದಿನ ಕೊರಳ ಸುತ್ತಿ,
ಬಾಯ ಬಿಟ್ಟು ಕಚ್ಚದಂತೆ ಹೆಡೆಯೊಳು ಮುಚ್ಚಿ, ಹದ್ದೆದ್ದಾಡದಂತಿರಲು,
ಆ ಬುದ್ಧಿಯ ನೆನೆದು ಒದ್ದು, ತನ್ನ ಸಖದ ಉಗುರಿನಲ್ಲಿ ಹೆಡೆ ಉಡುಗಿ,
ಹಾವಿನ ತೆಕ್ಕೆ ಬಿಟ್ಟು ಹದ್ದೆದ್ದಿದಿತ್ತು ಮಹದಾಕಾಶಕ್ಕೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದಲ್ಲಿ. /45
ತನುವಿನ ಒಳಗಣ ಕಣ್ಣಿನಲ್ಲಿ ನೋಡುವನಾರೊ ?
ನಾನೆಂಬಲ್ಲಿ ಅದೇನು ಹೇಳು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?/46
ತನುವಿನ ಮಹಾಮನೆಯಲ್ಲಿ ಮಾಡುವ ಮಾಟ,
ಘನಕ್ಕೆ ಘನವೆಂದು ಎದ್ದಿತ್ತು ಉಪ್ಪರಗುಡಿ
ಲೀಲೋಲ್ಲಾಸವೆಂಬ ಕಳೆ ನೆಟ್ಟಿತ್ತು , ಭವವಿರಹಿತನೆಂಬ ಗುಡಿಗಟ್ಟಿತ್ತು ,
ಮಾಡುವ ದಾಸೋಹಕ್ಕೆ ಕೇಡಿಲ್ಲಾ ಎಂದು.
ಕಾಯ ಸವೆದು ಮನಮುಟ್ಟಿ, ಭಾವನಿಶ್ಚಯವಾಗಿ ಮಾಟಕೂಟಸಂದಿತ್ತು ,
ಮಹಾಮನೆ ಮಹವನೊಡಗೂಡಿತ್ತು ,
ಕಾಯದ ಕಣೆ ಹಿಂಗಿತ್ತು, ಭಾವಗೂಡಿ ಅಳಿಯಿತ್ತು
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗವು ತಾನಾದಲ್ಲಿ ,/47
ತನುವಿನೊಳಗಣ ತನುವಿನಲ್ಲಿ ಕೂಡಿದವನಾರೊ ?
ಮನದೊಳಗಣ ನೆನಹಿನಲ್ಲಿ ನೆನೆಹಿಸಿಕೊಂಬವನಾರೊ ?
ಬಾಯೊಳಗಣ ಬಾಯಲ್ಲಿ ಉಂಬವನಾರೊ ?
ಕಣ್ಣಿನೊಳಗಣ ಕಣ್ಣಿನಲ್ಲಿ ನೋಡುವನಾರೊ ?
ನಾ ನೀನೆಂಬಲ್ಲಿ ಅದೇನು ಹೇಳಾ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./48
ದಧಿಯ ಕಡೆವಾಕೆಯ ತುದಿಗಂಡವ ಕೊಯಿದು,
ಮಂತಿನ ಅಂಡಿನಲ್ಲಿ ಒಸರಿ ದಧಿ ಧರೆಗೆ ಇಳಿದು,
ಅಂಡಿನವ್ವೆಯ ಹಂಗ ಬಿಟ್ಟು ಮಂತು ಮರಣವಾಯಿತ್ತು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು
ಹುಟ್ಟಿದ ಬಟ್ಟೆಯ ಮೆಟ್ಟದ ಕಾರಣ./49
ಧ್ಯಾನ ಧಾರಣ ಸಮಾಧಿಯೆಂಬೀ ಮೂರು, ಕರ್ಮಕಾಂಡ.
ಚಿಚ್ಛಕ್ತಿ ಚಿದ್ಘನ ಸುಶಕ್ತಿ ಚಿದಾದಿತ್ಯಸಂಪದ ತ್ರಿವಿಧಭೇದ, ಜ್ಞಾನಕಾಂಡ.
ಇಂತೀ ಭಾವ, ನಿಜವ ನೆಮ್ಮಿ ಕುರುಹುದೋರದೆ,
ಭಾವ ನಿರ್ಭಾವವಾಗಿ ನಿಂದುದು ಪ್ರಾಣಲಿಂಗಸಂಬಂಧ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./50
ನಾನಾಕೋಶವಾಸ ಕಳಾಧರ ಸಮಖಂಡನ ದಿಗ್ವಳಯ ರಣಭೂಮಿಯಲ್ಲಿ
ಒಂದು ಅರಿದ ತಲೆ ಬಂದಿತ್ತು.
ಪಂಚಾಶತ್ಕೋಟಿ ವಿಸ್ತೀರ್ಣದವರಿಗೆ ಮುಂಡವಿಲ್ಲದೆ ಬಂದೆನೆಂದು ಹೇಳುತ್ತಿದೆ.
ಮುಂಡ ತಲೆಯೊಳಡಗಿ, ತಲೆ ಮುಂಡವೆರಡೂ ಒಂದೆಲೆಯೊಳಗಡಗಿತ್ತು.
ಆ ಎಲೆಗೆ ತೊಟ್ಟು, ಮೊನೆ ನಾರಿಲ್ಲಾ ಎಂದು,
ನಾ ಬಂದೆ ಹೊಂದಿದೆನೆಂದು ನಸುನಗುತ್ತಿದ್ದಿತ್ತು ತಲೆ !
ತಲೆಹದಲ್ಲಿ ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗದಲ್ಲಿ ಕುರುಹಿಲ್ಲದ ಶರಣಂಗೆ. /51
ಪರಮಜ್ಞಾನ ಪರತತ್ವ ಆ ಪರಶಿವಮೂರ್ತಿ ನೀನಾಗಿ,
ಸಕಲತಂತ್ರ ಸೂತ್ರ ಯಂತ್ರ ನೀನಾಗಿ,
ಶ್ರವದ ಬೊಂಬೆ ಸಾಕಾರ ನಾನಾಗಿ, ನೀನಾಡಿಸಿದಂತೆ ನಾನಾಡುತ್ತಿದೆ.
ಸಂಜ್ಞೆಯನರಿದ ತಂಡಿನಂತೆ, ನಿವೇದಿಸಿದುದ ನಾ ಸಾಗಿಸಿದೆ.
ನೀ ಬೈಚಿಟ್ಟ ಬಯಕೆಯ ನಿನಗಿತ್ತೆ. ನೀ ಕಳುಹಿದ ಮಣಿಹ ನಿನಗೆ ಸಂದಿತ್ತು.
ಸಗರ ಸಾಕಾರದೊಡೆಯ ತನುಮನಘನದಲ್ಲಿ,
ಸುಸಂಗ ಸಂಗನಿರಂಗ ಸಂಗಮೇಶ್ವರಲಿಂಗಾ, ಸಮರ್ಪಣ./52
ಪಾತಾಳಲೋಕದಲ್ಲಿ ಪಾದವಿಲ್ಲದ ಪಕ್ಷಿ ಹುಟ್ಟಿತ್ತು.
ಅದು ಅನೇಕ ವರ್ಣ, ಬಹುಕೃತ ವೇಷ.
ರಟ್ಟೆಯಿಲ್ಲದೆ ಹಾರುವುದು, ಕೊಂಬಿನ ಮೇಲೆ ಇರದು.
ಆಕಾಶದಲ್ಲಿ ಆಡುವುದು, ಭೂವಳಯದಲ್ಲಿ ಬಳಸಿ ಬಪ್ಪುದು.
ವಿಹಂಗನ ಗುಣವಹುದು, ಪಕ್ಷಿಯ ಜಾತಿ ಗೋತ್ರವಲ್ಲ.
ಪಕ್ಷಿಯೆಂಬುದಕ್ಕೆ ಮೊದಲೇ ಹಾರಿ ಹೋಯಿತ್ತು.
ಎತ್ತಲೆಂದರಿಯೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./53
ಪಾರದ್ವಾರವ ಮಾಡಬಂದವ ಅಬೆಯ ಗಂಡಗೆ ಕೂಪನೆ ?
ಅವಳು ತನ್ನ ಪತಿಗೆ ಓಪಳೆ ?
ಈ ಉಭಯದ ಮಾರ್ಗ ಅರಿವ ಅರಿವಿಂಗೆ,
ಹೇಸಿ ತಿಂಬ ಕರಣಕ್ಕೆ ಒಡಗೂಡಿದ ಸ್ನೇಹವುಂಟೆ ?
ಇದನರಿ, ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗವನರಿವುದಕ್ಕೆ./54
ಪಿಂಡ ಬಲಿದು ಹುಟ್ಟಿದಲ್ಲಿ ಮೂರು ಸಂದಾಯಿತ್ತು..
ಆ ಮೂರು ಸಂದಿನೊಳಗೆ ಕೂಡಿದ ಕೀಲು ಕೂಟ.
ಅಂದು ಇಂದು ಎಂದೆಂದಿಂಗೆ ಬೆಂಬಳಿ ಬಿಡದು.
ಇದರ ಸಂಗವೇನಯ್ಯಾ ?
ಸಗರದ ಬೊಮ್ಮನೊಡೆಯ ತನುಮನದಲ್ಲಿ ಸುಸಂಗನಾಗಯ್ಯಾ. /55
ಪೂಜೆ ಪುಣ್ಯದೊದಗೆಂದು ಮಾಡುತ್ತಿದ್ದಲ್ಲಿ, ಮತ್ತಿನ್ನಾರುವ ಕೇಳಲೇಕೆ ?
ಇಕ್ಕಿ, ಕೊಟ್ಟು ಮುಕ್ತಿಯ ಬಟ್ಟೆಯುಂಟೆಂದು ಇನ್ನೊಬ್ಬರ ದೃಷ್ಟವ ಕೇಳಲೇಕೆ ?
ಇಹಪರದವನಲ್ಲಾ ಎಂದು, ತತ್ವಕ್ಕೆ ನಾ ಕರ್ತನೆಂದು
ಮತ್ತೊಬ್ಬರ ಬಾಗಿಲ ಕಾಯಲೇಕೆ ?
ಬಿದ್ದಿತ್ತು ಬೆಲ್ಲ ಅಶುದ್ಧದೊಳಗೆ, ಬುದ್ಧಿ ಇನ್ನಾವುದು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?/56
ಬಂಗಾರವನೊರೆದು ಬಣ್ಣವ ಕಾಣಬೇಕಲ್ಲದೆ,
ಬಣ್ಣವನೊರೆದು ಬಂಗಾರದ ಇರವನರಿಯಬಹುದೆ ?
ಜೀವವರಿದು ಜ್ಞಾನವ ಕಾಣಬೇಕಲ್ಲದೆ ಜೀವವಳಿದು ಜ್ಞಾನಕ್ಕೆ ಉಳಿವುಂಟೆ ?
ಅದು ಜ್ಯೋತಿಯ ಮೇಲಣ ತಮವದೆ,
ಕೆಳಗೆ ಬೆಳಗು, ತುದಿಯಲ್ಲಿ ಸಮವದೆ ತಿಳಿದು ನೋಡಿ.
ಆ ಪರಿಯ ಇರವು ಜೀವಪರಮನ ಕಲೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ. /57
ಬಂದೆ ಗುಡಿಯ ಹೊತ್ತು, ಡೊಂಬರ ಹಿಂದೆ ಹೋದೆ ಸುತ್ತಿ.
ಸೂಳೆಯ ಮಚ್ಚಿ ನಾಣುಗೆಟ್ಟೆ.
ಕಾಯವೆಂಬ ಗುಡಿ, ಮೋಹವೆಂಬ ಸೂಳೆ.
ಅರಿವ ಮನ ಅರಿಯದೆ ಡೊಂಬರಾಟವೆಂಬ ಬಂಧದಲ್ಲಿ ಹೊಕ್ಕು ನೊಂದೆ.
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವೆ,
ನಿನ್ನೊಂದಾಗಿ ಕೊಂಡಾಡಲಂಜುವೆ./58
ಬಚ್ಚಣೆಯ ಬೊಂಬೆ ನೀರಾಗಲಾಗಿ, ನಿಶ್ಚಯಿಸಿಕೊಳ್ಳಬಲ್ಲದೆ ?
ಉಚ್ಚೆಯ ಬಚ್ಚಲ, ಕೊಚ್ಚೆಯ ಠಾವು, ಪೂಜಿಸುವ ನಿಶ್ಚಯರಿಗೆ,
ಮರೆಮಾಡುವ ಮೆಚ್ಚುನುಂಗಿಗೇಕೆ ನಿಶ್ಚಯದ ಅರಿವು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?/59
ಬಾಳೆಗೆ ಮುಳ್ಳು ಹುಟ್ಟಿ, ಕಿತ್ತಳೆ ಹಲಸಾಗಿ,
ಹಲಸಿನ ಹಣ್ಣು ಹೊಲಸು ಹುಟ್ಟಿತ್ತು.
ಬಿತ್ತು ಕಹಿಯಾಯಿತ್ತು. ಉಳಿದ ಹಾರೆ ಸವಿಯಾಯಿತ್ತು.
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./60
ಬೆಂಕಿಗೆ ಚಳಿ ಬಂದು, ಉದಕವ ಕಾಯಲಾಗಿ, ಹಿಮಹಿಂಗಿ ಜ್ವರ ಬಂದಿತ್ತು.
ಜ್ವರದ ತಾಪಕಾರದೆ ಅರುಹಿರಿಯರೆಲ್ಲರು ಮಡಿದರು.
ಅಜ ಕುಡಿಕೆಯ ನೀರಿನಲ್ಲಿ, ಆ ಕುಡಿಕೆಯ ಒಡೆಯದೆ ಒಡೆದು,
ಹಿಮ್ಮಡಿಯಲ್ಲಿ ಒಡನೋಡಿ, ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗವನರಿಯಬಲ್ಲಡೆ./61
ಭಾನುವಿನ ಅಂಗಮಧ್ಯದಲ್ಲಿ ಒಂದು ಏಣಿ.
ಏಣಿಗೆ ಮೂರು ಕಾವು, ಮೆಟ್ಟಿ ಹತ್ತುವುದಕ್ಕೆ ಮೆಟ್ಟು ಎಂಬತ್ತುನಾಲ್ಕುಲಕ್ಷ.
ಅದ ತಾಳಲಾರದೆ ಏಣಿ ಜಾರಿತ್ತು, ಕಾವು ಮುರಿಯಿತ್ತು.
ಹಲ್ಲು ಎಲ್ಲಿಗೆ ಹೋದವೆಂದು ಕಾಣಬಾರದು,
ಸಗರದ ಬೊಮ್ಮನೊಡೆಯ
ತನುಮನ ಸಂಗವಾಗಿ ಕುರುಹಡಗಿದ ಕಾರಣ./62
ಭಾವಸಮುದ್ರದಲ್ಲಿ ಮನಮನೋಹರವೆಂಬ ಮಕರ ತಿರುಗಾಡುತ್ತಿರಲು,
ತಾನಿದುದು ಒಂದೆ, ತನಗೆ ಆಹಾರವಿಲ್ಲ.
ತನ್ನ ವಂಶವ ಭಕ್ಷಿಸುವುದಕ್ಕೆ ಪ್ರತಿರೂಪಿಲ್ಲ.
ಅದು ಗಾಣಕ್ಕೆ, ಘಟದ ಬಲೆಗೆ ಗೋಚರವಲ್ಲ.
ಸಾಕಾರದ ಕೂಳಿಗೆ ಸಿಕ್ಕದು. ಅದು ಹಿಡಿವ ಪುಳಿಂದ ನೀನೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./63
ಭೂಮಿಯಿಲ್ಲದ ಧರೆಯಲ್ಲಿ, ಒಂದು ಮಹಾಮೇರುವೆಯ ಬೆಟ್ಟ ಹುಟ್ಟಿತ್ತು.
ಅದರ ತಳ ಒಂದಂಡ, ಮೇಲೆ ಮೂರಂಡ
ಮೂರರ ಮೇಲೆ ಹಾರಿಬಂದಿತ್ತು ಕಾಗೆ.
ಬಂದ ಕಾಗೆ ತುದಿಯಲ್ಲಿ ಅಂತರಿಸಲಾಗಿ, ಮೇರುವೆ ಕುಸಿಯಿತ್ತು.
ಕೆಳಗಣ ಅಂಡ ನಿಂದು, ಮೇಲಣ ಮೇರುವೆ ಒಡೆಯಿತ್ತು.
ಮೂರಂಡವನೊಡಗೂಡಿದ ಕಾಗೆ ಹಾರಿತ್ತು ,
ಬೆಟ್ಟ ಬಟ್ಟಬಯಲು ಬೊಮ್ಮನೊಡೆಯ
ತನುಮನ ಸಂಗಮೇಶ್ವರಲ್ಲಿ ಒಡಗೂಡಿದವಂಗೆ./64
ಮಗ ತಂದೆಯ ಕೊಂದು, ತಮ್ಮವ್ವೆಗೆ ಮೊಲೆನೀರ ಮಿಂದ.
ತಾಯ ಶಿಶು ತಿಂದು, ಅವ್ವೆಯ ಮೊಲೆಯನರಸಿ ಅಳುತ್ತಿದ್ದಿತ್ತು.
ಶಿಶುವಿನ ಹೊಟ್ಟೆಯಲ್ಲಿದ್ದ ಶಿಶು ತಾಯ ಬೆಸೆಯಿತ್ತು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವನರಿತಲ್ಲಿ,/65
ಮನ ಮಲೆಯ ಮಂದಿರದಲ್ಲಿ, ಹೊಲಬಿನ ಹಾದಿಯ ತಪ್ಪಿದರೆಲ್ಲರು.
ಕಾಯವೆಂಬ ಪಟ್ಟಣ ಜೀವಸುಪಾಯವೆಂಬ ಪಥ.
ಪಯಣದಲ್ಲಿ ಹೊಲಬುದಪ್ಪಿ,
ವಿಷಯವೆಂಬ ಗಹನದಲ್ಲಿ ಬಳಸಿ ಆಡುತ್ತಿದ್ದಾರೆ.
ಎನಗಿನ್ನು ಅಸುವಿನ ಪಥವ ಹೇಳು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./66
ಮನವೆಂಬ ವಿಧಾಂತನು ಕಾಯವೆಂಬ ಕಣೆಯ ನೆಟ್ಟು,
ನಾನಾ ಬಹುವಿಷಯಂಗಳೆಂಬ ಸುತ್ತ ನೇಣ ಕಟ್ಟಿ,
ನೋಡುವ ಕರಣಂಗಳು ಮೆಚ್ಚುವಂತೆ
ಕಾಮದ ಕತ್ತಿಯ ತಪ್ಪಿ, ಕ್ರೋಧದ ಇಟ್ಟಿಯ ತಪ್ಪಿ,
ಮೋಹದ ಕಠಾರಿಯ ತಪ್ಪಿ, ಮೆಟ್ಟಿದ ಮಿಳಿಗೆ ತಪ್ಪದೆ ಲೆಂಗಿಸಿ,
ಸುತ್ತಣ ಕೈದ ತಪ್ಪಿಸಿ, ಚಿತ್ತ ಅವಧಾನವೆಂದು ಹಾಯ್ದುಳಿದು,
ಮನವೆಂಬ ವಿಧಾಂತನಾಡಿ, ಗೆದ್ದ ಜಗಲೋಲ ಡೊಂಬರ.
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗದ ಬಹುವಿಷಯ ಹಿಂಗಿದ ಕೂಟ./67
ಮನೆ ಬೇಕಾದಡೆ ಮನೆಯ ಸುಡು.
ಮಣ್ಣು ಬೇಕಾದಡೆ ಒಲ್ಲದಿರು.
ಹೊನ್ನು ಬೇಕಾದಡೆ ಹಿಡಿಯದಿರು.
ಹೆಣ್ಣು ಬೇಕಾದಡೆ ಕೂಡದಿರು.
ಹಸಿವಿಲ್ಲದಡುಣ್ಣು, ಈ ಹುಸಿಯ ದಿಟ ಮಾಡು,
ಸಗರದ ಬೊಮ್ಮನೊಡೆಯ
ತನಮನ ಸಂಗಮೇಶ್ವರಲಿಂಗವನರಿಯಬಲ್ಲಡೆ./68
ಮಸಣ ಮನೆಯಾಯಿತ್ತು, ಮನೆ ಮಸಣವಾಯಿತ್ತು.
ಹುಸಿಯ ನುಡಿದವ ಪಶುಪತಿಯ ಗೆದ್ದ.
ದಿಟವ ನುಡಿದವ ಸರ್ವಪಾಪಕ್ಕೆ ಗತನಾದ.
ಈ ಉಭಯದ ಕುಟಿಲವ ಹೇಳಾ, ಎನಗದು ಭೀತಿ |
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./69
ಮಾಡುವ ಮಾಟದವರೆಲ್ಲರೂ ಆರೈಕೆಗೊಂಬವರಿಲ್ಲದಿರೆ,
ಕೋಡಗ ಸತ್ತ ಜೋಗಿಯಂತಾದರು.
ಆಗಮ ಹೇಳುವ ಅಣ್ಣಗಳೆಲ್ಲರೂ ಕೊಡುವರಿಲ್ಲದಿರೆ,
ಹಾವ ಹಿಡಿದ ಕೋಡಗದಂತಾದರು.
ನಾನಿನ್ನಾರ ಕೇಳುವೆ, ಇನ್ನಾರಿಗೆ ಹೇಳುವೆ.
ನಾನಂಜುವೆ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./70
ಮೋಹಮನವೆಂಬ ಒಂದಾಗರದಲ್ಲಿ ಬಾಳೆ ಹುಟ್ಟಿತ್ತು.
ಕಣ್ಣೆಲೆ ಒಂದು, ಹೊಡೆ ಮೂರಾಗಿ ಮೂಡಿ,
ಹೂವಿನ ಎಲೆ ಬಿಳಿದು, ಕುಸುಮ ಉದುರದು,
ಚಿಪ್ಪು ಲೆಕ್ಕಕ್ಕೆ ಬಾರದು, ಬಾಳೆಯ ಸಾಕಿದಣ್ಣ ಬಾಳಲಾರ.
ಬಾಳೆ ತರಿವುದಕ್ಕೆ ಮೊದಲೆ ಕೊಳೆಯಿತ್ತು,
ಅಂಗನಷ್ಟಕ್ಕೆ ಮೊದಲೆ ಮನನಷ್ಟವಾಯಿತು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗಾ./71
ಯುಗಜುಗಂಗಳು ಮಹಾಪ್ರಳಯವಾದಲ್ಲಿ
ಉಳಿಯಿತ್ತೊಂದು ಮಲಯಜದ ಬೇರು.
ಬೇರಿನಲ್ಲಿ ಮಣ್ಣು ಸಿಕ್ಕಿ, ಮಣ್ಣಿನ ಸಾರಕ್ಕೆ ಬೇರು ಚಿಗಿತು,
ಮೂರು ಕೊನರಾಯಿತ್ತು.
ಮೂರು ಕೊನರು ಬಲಿದು, ಐದು, ಕೊಂಬಾಯಿತ್ತು.
ಐದು ಕೊಂಬಿನ ತುದಿಯಲ್ಲಿ ಆರೆಲೆ ಚಿಗಿತು,
ಆರೆಲೆಯ ಅಡಿಯಲ್ಲಿ ಮೂರು ಹೂದೋರಿತ್ತು.
ಹೂ ಮೀರಿ ಬಲಿವುದಕ್ಕೆ ಮೊದಲೆ, ಮರ ಬಲಿದು ಹಣ್ಣಾಯಿತ್ತು.
ಹಣ್ಣಿನ ಬೀಜ ರಸವನುಂಡು, ಕಾದಿದ ಅಣ್ಣಂಗೆ ಇಲ್ಲವಾಯಿತ್ತು,
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗವು ನಿಃಪತಿಯನೈದಿದ ಕಾರಣ./72
ರಜವೆಂಬ ಹೂವಿನ ಗಿಡುವಿನಲ್ಲಿ, ನಿರ್ಜರವೆಂಬ ಕುಸುಮ ಹುಟ್ಟಿತ್ತು.
ನಿರವಯವೆಂಬ ಗಂಧ ಸಂಭ್ರಮಿಸಿತ್ತು.
ಕೈಯುಗುರಿನಲ್ಲಿ ಮುಟ್ಟದೆ, ಮನದ ನಖದ ಕೊನೆಯಲ್ಲಿ ಎತ್ತಿ,
ನಿರೂಪವ ಮಂಡೆಯ ಮೇಲಿರಿಸಲು,
ಎನ್ನ ಸಗರದ ಬೊಮ್ಮನೊಡೆಯ ತನುಮನ ಸಂಗವಾದಲ್ಲಿ,
ಅಭೇದ್ಯವಾದ ಪ್ರಾಣಲಿಂಗಕ್ಕೆನ್ನ ಪ್ರಾಣಪೂಜೆಯಾಯಿತ್ತಯ್ಯಾ./73
ರೂಪಿನ ದರ್ಪಣವ ಹಿಡಿದು, ತನ್ನಯ ರೂಪ ನೋಡಿದಲ್ಲಿ,
ನಿಹಿತದ ಇರವಾಯಿತ್ತು.
ಆ ರೂಪ ಕಂಡ ನಿರೂಪಿನ ದೃಷ್ಟಿ,
ಅದರೊಳಗೆ ಕೂರ್ತು ತೋರುವ ಬೆಳಗಿನ ಮರೆ.
ಉಭಯವ ಹಿಡಿದು ನೋಡುವ ಘಟಪಟನ್ಯಾಯ, ಉಪದೃಷ್ಟಭೇದ.
ಹಿಡಿದ ಇಷ್ಟಾಚರಣೆ ಕುರುಹಿನ ಲಕ್ಷಣ.
ಪಡಿಭಿನ್ನ ಭೇದವಿಲ್ಲದೆ ತೋರಿ ತೋರದಿಪ್ಪ ಉಭಯ ಅಂಗವು ನೀನೆ,
ಸಗರದ ಬೊಮ್ಮನೊಡೆಯ
ತನುಮನ [ಸಂಗ]ಮೇಶ್ವರಲಿಂಗದಲ್ಲಿ ಲೇಪವಾದ ಶರಣಂಗೆ./74
ರೂಪುಸಹಿತ ಭಕ್ತ, ರೂಪುವಿರಹಿತ ಶರಣ.
ಶರಣಭಾವವಿರಹಿತ ಸಮ್ಯಜ್ಞಾನಿ.
ಇಂತೀ ತ್ರಿವಿಧಗುಣವ ಕಳೆದಲ್ಲಿ, ಉಳಿದ ಶೇಷ ಸಂಭವಸಂಯುಕ್ತ.
ಅದರ ಬೆಂಬಳಿಯನರಿ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./75
ವಿಷ ಕೊಲುವಲ್ಲಿ, ಹಾವೇನ ಮಾಡುವುದು ?
ಉಂಬ ಅಶನ ನಂಜಾಗಿಹಲ್ಲಿ, ಇಕ್ಕಿದವಳಿಗೆ ಅಂಜಿಕೆಯುಂಟೆ ?
ತನ್ನ ಇಂದ್ರಿಯ ತನ್ನ ತಿಂಬಲ್ಲಿ,
ವಸ್ತುವಿನ ಮೇಲೆ ಹಂಗ ಹಾಕುವ ಭಂಡರಿಗೆ ಇಲ್ಲಾಯೆಂದೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು./76
ಶಕ್ತಿಯಂಗದ ಯೋನಿಯಲ್ಲಿ ಶುಕ್ಲ ಸೋರಿ,
ಬೆಚ್ಚು ಪುತ್ತಳಿಯಾದ ಠಾವಾವುದು ?
ಕೂಡಿದನಪ್ಪ, ಕೂಡಿಸಿಕೊಂಡಳವ್ವೆ.
ಉಭಯದ ಯೋಗದಿಂದಾದ ಮತ್ತೆ ಬ್ರಹ್ಮನ ಅಗಡವೇಕೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?/77
ಶುಕ್ತಿ ಅಪ್ಪುವಿಲ್ಲದಿರ್ದಡೆ ಕಟ್ಟೆಯಲ್ಲದೆ ಕಟ್ಟಾಣಿಯಲ್ಲ,
ಯುಕ್ತಿವಿದಂಗೆ ಸುಪಥ ದೊರಕಿದಡೆ ವಿರಕ್ತನಾಗಬೇಕು.
ಮಾತಿನ ಘಾತಕದಲ್ಲಿ ನಿಹಿತದ ಆಚಾರವ ನುಡಿದಡೆ,
ಏತದ ಕುಂಭದಲ್ಲಿ ಜಲವ ತುಂಬಿ ಅನಾಥವೃಕ್ಷಕ್ಕೆ ಎರೆದಂತೆ.
ಅರಿವುಹೀನನ ಮಾತು ನೆರೆ ಕೊರತೆಯೆಂದೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ/78
ಶೂಲದಲ್ಲಿ ಏರಿಸಿದ ಹೆಣ, ಆಲುತ್ತ ಮಾತನಾಡುತ್ತದೆ.
ಹೆಣ ಹೆಣಂ ತಾಗೆ ಶೂಲವನೊಡಗೂಡಿತ್ತು.
ಶೂಲ ಕೊಲ್ಲದೆ ಆರೈವುತ್ತದೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು,
ಅಂಗವ ತಾಳಿದ ಕಾರಣ./79
ಸಂಸಾರವನರಿತಲ್ಲಿ, ಸಂಶಯವಿಲ್ಲದ ಸಾರವೆ ಅರಿವು.
ಅರಿವು ಮರೆಯದೆ ಹೆರೆಹಿಂಗಿ, ಕುರಿತಿದ ಸಂಸಾರದ ಸಾರ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./80
ಸಕಲ ಆಗಮಂಗಳ ಕಲಿತು, ಸರ್ವಜನಕ್ಕೆ ಹೇಳಿ, ತಾ ನಿಃಕರುಣಿಯಾಗಿ,
ತ್ರಿವಿಧಮಲಕ್ಕೆ ಹೊರಗಾಗೆಂದು ತಾನೊಳಗಾಗಿ,
ಬರಿಮಾತಿನ ಭಟನಂತೆ ಅದರಾರೈಕೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./81
ಸರ್ಪನ ಹೆಡೆಯ ಮೇಲಣ ಮಾಣಿಕ್ಯ ಬೇಕಾದಡೆ.
ಸರ್ಪನ ಕೊಂದಲ್ಲದೆ ಮಾಣಿಕ್ಯವಿತ್ತಬಾರದು.
ಸರ್ಪನ ಕೊಂದಲ್ಲದೆ ಮಾಣಿಕ್ಯವ ಒಪ್ಪದಲ್ಲಿ ತೆಗೆಯಬಲ್ಲಡೆ,
ಅದು ವಿರಕ್ತನ ಸತ್ವ.
ತ್ರಿವಿಧದಲ್ಲಿ ಬೆಚ್ಚಂತಿರದೆ, ಹುಡಿಯೊಳಗಣ ಲೇಖದಂತೆ,
ತೊಡೆದಡೆ ಕುರುಹಿಲ್ಲದಂತಿರಬೇಕು.
ತ್ರಿವಿಧವನೊಡಗೂಡಿಯಿದ್ದಾತಂಗೆ ಆತನ ಎಡೆಬಿಡುವಿಲ್ಲದೆ ಅರಿ.
ಸಗರದ ಬೊಮ್ಮನೊಡೆಯ
ತನುಮನ ಸಂಗಮೇಶ್ವರಲಿಂಗವೆಂದೆ ಪ್ರಮಾಣಿಸು./82
ಸೃಷ್ಟಿಯ ಮೇಲಣ ನರಪಟ್ಟಣದ ಹಾದಿಯಲ್ಲಿ, ಕಟ್ಟಿದರೈವರು ಕಳ್ಳರು.
ಇರಿಯುವುದಕ್ಕೆ ಕೈದಿಲ್ಲ, ಹೊಯ್ವುದಕ್ಕೆ ಡೊಣ್ಣೆಯಿಲ್ಲ.
ಅವರು ಕಳ್ಳರಲ್ಲಾ ಎಂದು ಬೆಳ್ಳರು
ಸಿಕ್ಕಿದರು ಕಳ್ಳರ ಕೈಯ ಕರಟದಲ್ಲಿ.
ಕಳ್ಳಿಯ ಹಾಲು ಕಳ್ಳರ ಕಣ್ಣಿನಲ್ಲಿ ಹೊಯ್ದು, ಬೆಳ್ಳರೆಲ್ಲಿ ಹೋದರೆಂದರಿಯೆ.
ಸಗರದ ಬೊಮ್ಮನೊಡೆಯ ತನುಮನ ಸಂಗವಾಗಿ ನಿಸ್ಸಂಗಿಯಾದ./83
ಸ್ಥಿತಿ ಹರಿಯದಾದಡೆ, ಹರಹರಿಸುವಲ್ಲಿ ಪರಿಹರಿಸಿಕೊಂಡುದಿಲ್ಲ.
ಲಯಕ್ಕೆ ರುದ್ರನಾದಡೆ, ತನ್ನೊಲುಮೆಯ ಸತಿಯ, ಲಯವ ಮಾಡಿದುದಿಲ್ಲ.
ಇದನಿನ್ನಾರಿಗೆ ಹೇಳುವೆ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ ?/84
ಸ್ಥೂಲ ಕೂಡುವಲ್ಲಿ, ಸೂಕ್ಷ್ಮ ಆಡುವಲ್ಲಿ, ಕಾರಣ ಕೂಡುವಲ್ಲಿ,
ತ್ರಿವಿಧದ ಒಡಲಾವುದೆಂದರಿತು, ವಸ್ತುವಿನ ಕೂಟದ ಭೇದವ ಘಟಿಸಿ,
ಮನ ತನುವಿನಲ್ಲಿ ಭಿನ್ನ ಭೇದವಿಲ್ಲದೆ, ಗಂಧ ಕುಸುಮದಂತೆ,
ಹೆರೆಹಿಂಗದ ಲಿಂಗಸಂಗಸುಖವನರಿ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./85
ಹಗೆ ನಿದ್ರೆಗೈವಲ್ಲಿ ಕೊಲುವ ಅರಿ ಬಂದು, ಮರೆದೊರಗಿದನೆಯೆಂದು ಎಬ್ಬಿಸಿ,
ನಿನ್ನ ನಾ ಕೊಲಬಂದೆ ಎಂದನೆ.
ಅರಿ ನೋಡಿ, ಕೊಲಬಂದವನಲ್ಲಾ ಎಂದು ಎನ್ನನುಳುಹಿದೆ.
ಎನಗೂ ನಿನಗೂ ಹಗೆಯಿಲ್ಲ.
ಎನ್ನೆಡೆ ನಿನ್ನೆಡೆಗೆ ತಂದು ಹಾಕಿದವರೆ ಹಗೆ,
ನಾನೂ ನೀನೂ ಕೂಡಿ ಹಗೆಯನರಸಿ [ಕೊಲ್ಲುವ],
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದಲ್ಲಿ./86
ಹಾರುವ ಹಕ್ಕಿಯ ತಲೆಯ, ಕುಳಿತಿದ ಗೂಗೆ ನುಂಗಿತ್ತು,
ಕುಳಿತಿದ ಗೂಗೆಯ ಕಣ್ಣ, ಕಾಗೆಯ ಮರಿ ಕುಡುಕಿತ್ತು.
ಕಾಗೆಯ ಮರಿಯ, ಕೋಗಿಲ ಕಂಡು, ಅದ ಬೇಡಾ ಎಂದಡೆ,
ಗಿಳಿ ಹಾಗಹುದೆಂದು ಹಾರಿ ಹೋಯಿತ್ತು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರನು
ಘಟಪಂಜರವನೊಲ್ಲದೆ./87
ಹಾಲಿನ ಗಡಿಗೆಯಲ್ಲಿ ಮೂರೆಡಗೊತ್ತಿ, ಮರಿಯನೀದುದ ಕಂಡೆ,
ಮರಿ ಹಾಲಾಗಿ, ಕುಡಿಕೆ ಕೊತ್ತಿಯಾಗಿ,
ಮನೆಯೊಡೆಯ ಇಲಿಯಾಗಿ, ಬೆಕ್ಕ ಗಕ್ಕನೆ ಹಿಡಿದ.
ಸಿಕ್ಕಿತ್ತು ಸಂಸಾರದ ವಿಷಯದಲ್ಲಿ ಮನ.
ಎನಗಪ್ಪದ ಹೇಳು,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./88
ಹುಟ್ಟಿ ಹೋಟಾರದಲ್ಲಿ ಒಂದಾವೆ, ಕೋಟಿ ಮರಿಯನಿಕ್ಕಿತ್ತು
ಅವಕ್ಕೆ ಊಟ ಎಲ್ಲಿಂದ ಬಹವು ಎಂಬುದನರಿತಲ್ಲಿ, ಲಿಂಗಮೂರ್ತಿಯ ಧ್ಯಾನ.
ಆ ಕೂರ್ಮ ತನ್ನೂಟ, ಅವರಸುವಿನಾಟ.
ಸಗರದ ಬೊಮ್ಮನೊಡೆಯ ತನುಮನದಲ್ಲಿ ಕೂರ್ತು ಸಂಗವಾಗಿರು./89
ಹೂವ ಕೊಯ್ಯುವರಲ್ಲದೆ, ಹೂವಿನ ಗಂಧವ ಕೊಯ್ದವರುಂಟೆ ಅಯ್ಯಾ?
ಮಾತನಾಡುವರಲ್ಲದೆ, ಮಾತಿನ ಭೇದದ ವಾಸನೆಯ ಕಂಡವರುಂಟೆ ಅಯ್ಯಾ?
ಇದು ನೀತಿಯ ಒದಗು,
ಕ್ರೀಯ ನಿಹಿತವಾಗಿ ಮಾಡುವಲ್ಲಿ ಭಾವಶುದ್ಧವಾಗಿರಬೇಕು.
ಮಾತನರಿದಾಡುವಲ್ಲಿ, ಮಾತಿನ ರೀತಿಗೆ ತಾ ಒದಗು ನಿಹಿತವಾಗಿರಬೇಕು.
ಅದು ಕೂಟಸ್ಥ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ./90

ಹೊಯಿದಡೆ ಅಂಗದ ಮೇಲಣ ನೋವ, ಮನವರಿವಂತೆ,
ಬಾಹ್ಯ ಉಪಚರಣೆಯ ಪೂಜೆ, ನಿನಗೆ ಹೊರಗಾದುದುಂಟೆ ? ಆ ತೆರನನರಿ,
ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು,
ಒಳಗೂ ತಾನೆ, ಹೊರಗೂ ತಾನೆ./91