ಕಾರ್ಕಳದ ಜೀವಜಲ ಕೇಂದ್ರವಾದ ಆನೆಕೆರೆ. ಈ ಕೆರೆಯನ್ನು ಕ್ರಿ.ಶ.1262ರಲ್ಲಿ ಭೈರರಸ ವಂಶದ ಪಾಂಡ್ಯದೇವ ನಿರ್ಮಿಸಿದ ಎಂದು ಹೇಳಲಾಗಿದೆ. 25 ಏಕರೆ ವಿಸ್ತೀರ್ಣ ಹೊಂದಿದೆ ಈ ಕೆರೆ ನೀರು ಸುತ್ತಮುತ್ತಲಿನ 200ಕ್ಕೂ ಹೆಚ್ಚು ಬಾವಿಗಳಿಗೆ ನೀರಿನ ಮೂಲ ಸೆಲೆ.4-5 ಕಿ.ಮೀ.ವ್ಯಾಪ್ತಿವರೆಗೂ ಜಲಮಟ್ಟವನ್ನು ಈ ಆನೆಕೆರೆ ಕಾಯ್ದುಕೊಂಡು ಪರೋಕ್ಷವಾಗಿ ಕಾರ್ಕಳ ಪಟ್ಟಣಿಗರಿಗೆ ನೀರುಣಿಸುತ್ತದೆ.

ಪ್ರಾಕೃತಿಕ ಪರಿಸರ, ಧಾರ್ಮಿಕ ರಕ್ಷಣೆ ಹೊಂದಿರುವ ಈ ಆನೆಕೆರೆ ಶತಮಾನಗಳಿಂದಲೂ ಜೀವಸಂಕುಲಕ್ಕೆ ಆಶ್ರಯ ನೀಡಿದೆ. 60 ಬಗೆಯ ಜಲೀಯ ಮತ್ತು ಇತರ ಸಸ್ಯಗಳು, 20 ಜಾತಿಯ ಸಿಹಿನೀರ ಮೀನುಗಳು, 14 ಉರಗ ಜಾತಿ, 30ಕ್ಕೂ ಹೆಚ್ಚು ಪಕ್ಷಿ ಸಂಕುಲವನ್ನು ಈ ಕೆರೆಯಲ್ಲಿ ಗುರುತಿಸಲಾಗಿದೆ.

ಪಕ್ಕದಲ್ಲಿ ಇನ್ನೊಂದು ಕೆರೆ ಇದ್ದು ಇದಕ್ಕೆ ಸಿಗಡಿ ಕೆರೆ ಎಂದು ಕರೆಯುತ್ತಾರೆ. ಎರಡು ಕೆರೆಗಳನ್ನು ರಾಜಮಾರ್ಗ  ಪ್ರತ್ಯೇಕಿಸುತ್ತದೆ. ಹಿರಿಯಂಗಡಿ ಅರಮನೆಯಿಂದ ಜೈನಮಠ, ಚತುರ್ಮುಖ ಬಸದಿ, ಗೋಮಟೇಶ್ವರ ಸಂಪರ್ಕಕ್ಕೆ ಈ ರಾಜಮಾರ್ಗ ನಿರ್ಮಿಸಲಾಗಿತ್ತು. (ಈಗ ಕಾರ್ಕಳ-ಮಂಗಳೂರು ರಸ್ತೆಯಾಗಿದೆ.) ಒಂದೇ ಕೆರೆಯನ್ನು ರಾಜಮಾರ್ಗ ಪ್ರತ್ಯೇಕಿಸಿದೆ ಎನ್ನುವ ವಾದ ಇದೆ.

1545ರಲ್ಲಿ  ಜೈನದೊರೆ ಪಾಂಡ್ಯಪ್ಪೊಡೆಯ ಕೆರೆ ಮಧ್ಯಭಾಗದಲ್ಲಿ ಚತುರ್ಮುಖ ಬಸದಿ ನಿರ್ಮಿಸಿದ. ಆನೆಕೆರೆಗೆ ಇದು ಧಾರ್ಮಿಕ ರಕ್ಷಣೆಯನ್ನು ನೀಡಿದೆ, ಕೆರೆಯಿಂದ ಬಸದಿವರೆಗೂ ರಸ್ತೆ ಇದೆ. (ಪ್ರಸಿದ್ಧ ಶಿಲಾಮಯ ಚತುರ್ಮುಖಬಸದಿ ಗೋಮ್ಮಟಬೆ ಟ್ಟಕ್ಕೆ ಅಭಿಮುಖವಾದ ಚಿಕ್ಕಬೆಟ್ಟದ ಮೇಲೆ ನಿರ್ಮಿಸಲಾಗಿದೆ).

ಭೈರರಸರ ಕಾಲದಲ್ಲಿ ರಾಜನ ಭವ್ಯ ಅರಮನೆ, ಇತ್ತು, ಆಸ್ಥಾನಿಕರು ಇದ್ದರು. ಆನೆ, ಕುದುರೆಗಳನ್ನು ಸ್ನಾನಮಾಡಿಸಲು ಈ ಕೆರೆಯನ್ನು ಉಪಯೋಗಿಸುತ್ತಿದ್ದರು,  ಆನೆ ಸ್ನಾನ ಮಾಡುವ ಕೆರೆಯಿಂದಾಗಿ ಆನೆಕೆರೆ ಎಂಬ ಹೆಸರು ಬಂತು ಎನ್ನುವುದು ರೂಢಿ ಮಾತು. ಆನೆ ಮುಳುಗುವಷ್ಟು ಆಳ ಇರುವುದರಿಂದ  ಈ ಹೆಸರು ಬಂತು ಎನ್ನುವ ವಾದವೂ ಇದೆ. ಬಡವರಿಗೆ, ಕೂಲಿಗಳಿಗೆ ಕುಡಿಯಲು ಇದೇ ನೀರು ಉಪಯೋಗವಾಗುತ್ತಿತ್ತು.ಸುತ್ತಮುತ್ತಲಿನ ಹಳ್ಳಿಗಳ ಕೃಷಿಗೂ ಈ ನೀರು ಬಳಕೆಯಾಗುತ್ತಿತ್ತು.

* ಕಾರ್ಕಳ ಪಾಂಡ್ಯನಗರಿ ಹೆಸರಿತ್ತು.ಕರಿ ಬಂಡೆಗಳು ಇರುವ ಕಾರಣ ಕರಿಯ ಕಲ್ಲು ಕಾರ್ಕಳ ಎಂಬ ಹೆಸರು ಬಂತು. ಕರಿಕೊಳ (ಆನೆಕೆರೆ)ಯಿಂದಾಗಿಯೂ ಕಾರ್ಕಳ ಎಂಬ ಹೆಸರು ಬಂತು ಎಂಬ ವಾದವೂ ಇದೆ.

ಈಗಿನ ಸ್ಥಿತಿ:

ಆನೆಕೆರೆಯಲ್ಲಿ ತಾವರೆ ಅಸಂಖ್ಯ. ಬಿಳಿ ತಾವರೆಗಳುವಿಶಾಲ ಕೆರೆಯಲ್ಲಿ ನಳನಳಿಸುವ ದೃಶ್ಯ ಅನನ್ಯ. ಆದರೆ ಇತ್ತೀಚಿನ ಹತ್ತು ವರ್ಷಗಳಲ್ಲಿತಾವರೆಗಳು ಮಾಯವಾಗಿ ಕಳೆಗಿಡಗಳಷ್ಟೇ ಕಾಣುತ್ತಿವೆ.  ಹೂಳು ತುಂಬಿದ ಕೆರೆ ಬೇಸಿಗೆಯಲ್ಲಿ ಬರೀ ಹುಲ್ಲುಹಾಸಿನ ಮೈದಾನದಂತೆ ಕಾಣುತ್ತದೆ. ಕೆರೆ ಒತ್ತುವರಿ, ನಗರೀಕರಣ ಪರಿಣಾಮ ಕೆರೆಯಲ್ಲಿ ಕೆಸರು, ಕೊಚ್ಚೆ ದಟ್ಟವಾಗಿ ತುಂಬುತ್ತಿದೆ. ಬೇಸಾಯಕ್ಕೆ ಸಿಂಪಡಿಸುವವ ಕೀಟನಾಶಕ ಮತ್ತು ಸುತ್ತಲಿಂದ ಬರುತ್ತಿರುವ ಚರಂಡಿ ನೀಡು ಮತ್ತು ಕೊಚ್ಚೆ ಜಲಮಾಲಿನ್ಯ ಹೆಚ್ಚಿಸಿದೆ. ಸಾಲ್ವೀನಿಯಾ ಮೊಲೆಸ್ಟ್ರಾ ಎಂಬ ಅಪಾಯಕಾರಿ ಪರಕೀಯ ಕಳೆಯಿಂದ ಆನೆಕೆರೆ  ಆವೃತ್ತವಾಗಿದೆ. ಇದು ಜೀವಜಲ ಹೀರುವುದಲ್ಲದೆ, ಕೆರೆಯನ್ನು ಸಂಪೂರ್ಣ ಬತ್ತಿಸುವ ಸಾಧ್ಯತೆ ಇದೆ.

ಈ ಕೆರೆ ಉಳಿಸಲು 1999ರ ಆಗಸ್ಟ್ 15ರಿಂದ ಕಾರ್ಕಳ ರೋಟರಿ ಸಂಸ್ಥೆ ನೇತೃತ್ವದಲ್ಲಿ ಶಾಲೆ, ಮಕ್ಕಳು, ಸ್ವಯಸೇವಾಸಂಸ್ಥೆಗಳ ಸಹಯೋಗದೊಂದಿಗೆ ಅಭಿಯಾನ ಆರಂಭಗೊಂಡಿತ್ತು. ರಾಜ್ಯ ಸರಕಾರವೂ ಕಳೆ ಮತ್ತು ಕೆಸರಕೊಳೆ ತೆಗೆಯುವ ಕಾಮಗಾರಿ ನಡೆಸಿದೆ.  ಕಳೆ ತೆಗೆದಂತೆ ತಲೆ ಎತ್ತುತ್ತಿದೆ. 2005ರಿಂದ ಹೂಳೆತ್ತುವ ಕೆಲಸ ಆರಂಭವಾಯಿತು.ಪ್ರಥಮ ಹಂತದ ಕಾಮಗಾರಿಯಲ್ಲಿ 1,800 ಲೋಡ್ ಹೂಳು ತೆಗೆಯಲಾಗಿತ್ತು. ಸುಮಾರು 12 ಸಾವಿರ ಲೋಡ್ ಹೂಳು ಇರಬಹುದು ಎಂದು ತಜ್ಞರ ಅಭಿಪ್ರಾಯ.ಕೆರೆ ಮಧ್ಯಭಾಗದಲ್ಲಿ 9 ಅಡಿ ಹೂಳು ತುಂಬಿರಬಹುದು. ಪೂರ್ಣ ಕೆಸರು ತೆಗೆದರೆ ಕೆರೆ 15 ಅಡಿ ಆಳ ಆಗಬಹುದು. ಹೂಳೆತ್ತಿದರೆ ಕಾರ್ಕಳ ಪಟ್ಟಣಕ್ಕೆ ಮಾತ್ರವಲ್ಲ ಸಮೀಪದ 4-5 ಕಿ.ಮೀ. ವ್ಯಾಪ್ತಿಯಲ್ಲಿ ಜಲಮಟ್ಟ ಹೆಚ್ಚಿ ಕೃಷಿ ಮತ್ತು ಕುಡಿಯುವ ನೀರು ದೊರೆಯಲಿದೆ.

ಆನೆಕೆರೆಗೆ ಪ್ರಥಮಹಂತದಅಭಿವೃದ್ಧಿಕಾರ್ಯ ಯೋಜನೆ ಸಿದ್ಧಪಡಿಸಲಾಗಿದೆ. ಕೆರೆಯಮಧ್ಯದಲ್ಲಿರುವಬಸದಿಯಸುತ್ತ 3 ಮೀ. ಅಗಲದಕಟ್ಟೆ, ದಾನಶಾಲೆರಸ್ತೆಯಬದಿಯಿಂದ‌ಕೆರೆಯವರೆಗೆ 5 ಮೀ. ಅಗಲದರಸ್ತೆನಿರ್ಮಾಣ, ರಸ್ತೆಯ ಪಕ್ಕದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಕೆರೆಯಸುತ್ತ 1 ಕಿ.ಮೀವಿಸ್ತೀರ್ಣದಲ್ಲಿ 3 ಕಿ.ಮೀಅಗಲ, 15 ಅಡಿಎತ್ತರದವಾಕಿಂಗ್‌ಟ್ರಾಕ್ ನಿರ್ಮಾಣ ಅಂದಾಜು ರೂಪಿಸಲಾಗಿದೆ.

* ಪಕ್ಷಿಧಾಮವಾಗಿ ರೂಪುಗಳಿಸುವ ಬಗ್ಗೆ ಪಕ್ಕದ ಸಿಗಡಿಕೆರೆಯಲ್ಲಿ ಪಕ್ಷಿಗಳಿಗಾಗಿಯೇ ಮರಗಿಡಗಳ ದಿನ್ನೆಯನ್ನು ನಿರ್ಮಿಸಲಾಗಿದೆ.

* ಬೆಂಗಳೂರಿನಿಂದ 400 ಕಿ.ಮೀ.ದೂರ. ಉಡುಪಿ ನಗರದಿಂದ 38 ಕಿ.ಮೀ. ದೂರ. ಕಾರ್ಕಳ ನಗರ ಪ್ರದೇಶದಲ್ಲಿ ಆನೆ ಕೆರೆ ಇದೆ.

* (ಪಕ್ಷಿತಜ್ಷ ದಿ.ಡಾ.ಎನ್.ಎ.ಹುಸೇನ್ ಆನೆಕೆರೆ ಕುರಿತ ಪ್ರಾಣಿ, ಪಕ್ಷಿ ಸಂಕುಲ ಬಗ್ಗೆ ಸಂಗ್ರಹಿಸಿದ ಮಾಹಿತಿ).
ಇನ್ನಿತರ ಗ್ರಂಥಗಳು