“ಪತ್ನೀಂ ಮನೋರಮಾಂ ದೇಹಿ
ಮನೋವೃತ್ತಾನುಸಾರಿಣೀಂ
ತಾರಿಣೀಂ ದುರ್ಗಸಂಸಾರ
ಸಾಗರಸ್ಯ ಕುಲೋದ್ಭವಾಂ!”


ಯಾರಿವಳು ಮಲಗಿರುವಳು?
ನನ್ನ ಬಲತೋಳೆ ತಲೆದಿಂಬಾಗಿ
ತನ್ನ ಬಲತೋಳಿನಿಂದೆನ್ನನಪ್ಪಿ
ಯಾರಿವಳು ಮಲಗಿರುವಳು?
ಬೆಳ್ದಿಂಗಳಿನ ಹಣೆಯ ಮೇಲೆ ಕುಂಕುಮದ ಬಿಂದು;
ಮಿರುಗುತಿದೆ ಮೂಗುತಿಯ ಬಜ್ಜರದ ಬಟ್ಟು!
ತನ್ನ ಜೀವವನೆಲ್ಲ ಸೂರೆನೀಡಿ,
ನನ್ನ ಜೀವವನೆಲ್ಲ ಸೂರೆಮಾಡಿ,
ಆನಂದದಲಿ ತೇಲಾಡಿ,
ಬಂಧನದೊಳೋಲಾಡಿ
ಯಾರಿವಳು ಮಲಗಿರುವಳು,
ನನ್ನನಿಂತೊಪ್ಪಿ,
ಬಿಗಿದು ಅಪ್ಪಿ?

“ವಿದ್ಯಾಃ ಸಮಸ್ತಾಃ ತವ ದೇವಿ ಭೇದಾಃ
ಸ್ತ್ರೀಯಃ ಸಮಸ್ತಾಃ ಸಕಲಾ ಜಗತ್ಸು!”


ಭೂಮೆ ತಾನಲ್ಪೆಯಾಗಿ,
ಸರ್ವಜ್ಞೆ ತಾನಜ್ಞೆಯಾಗಿ,
ಪೂರ್ಣಸುಖೆ ತಾಂ ಸುಖದುಃಖೆಯಾಗಿ,
ಅಜ್ಞಾನ ಲೀಲೆಗೊಪ್ಪುತೆ ನನ್ನನುದ್ಧರಿಸಲೆಂದೆನ್ನ
ಅರ್ಧಾಂಗಿಯಾಗಿ,
ಸಂಸಾರಸಾಗರದಿ ಮುಳಗಿ ತೇಲುವ ನನ್ನ
ಬೆನ್ಗೆ ಬೆಂಡಾಗಿ,
ಜನ್ಮಜನ್ಮದಲಿ ಕೃಪೆದೋರಿ ಬೆಂಬಿಡದ
ನಾವೆಯಾಗಿ,
ಯಾರಿವಳು ಮಲಗಿರುವಳು,
ನನ್ನ ಬಲತೋಳು ತಲೆದಿಂಬಾಗಿ
ತನ್ನ ನಳಿತೋಳಿನಿಂದೆನ್ನನಪ್ಪಿ?


ಜಗದ ಜನಗಣಿತಿ ಪಟ್ಟಿಯಲ್ಲಿ
ಇವಳ ಹೆಸರು
ದೇವಂಗಿ ರಾವಣ್ಣಗೌಡರ ಮಗಳು
ಹೇಮಾವತಿ,
ಕುಪ್ಪಳಿಯ ವೆಂಕಟಪ್ಪಗೌಡರ ಮಗನ
ಹೆಂಡತಿ!


ಚೆಲುವು ಮುದ್ದಿನ ಮುದ್ದೆ
ನನ್ನ ತೋಳಿನ ಮೇಲೆ ಮಾಡುತಿರೆ ನಿದ್ದೆ
ಅದ ನೋಡಿ ಸುಖಿಸೆ ನಾನೇನು ಪುಣ್ಯಮಾಡಿದ್ದೆ?
ನಿರಾಕರೆ ಸಾಕಾರೆಯಾಗಿ,
ನಿರ್ಗುಣೆ ಸಗುಣೆಯಾಗಿ,
ಅರೂಪೆ ರೂಪವತಿಯಾಗಿ,
ಚೆಲುವು ಮುದ್ದಿನ ಮುದ್ದೆ,
ನನ್ನ ತೋಳಿನ ಮೇಲೆ ಪವಡಿಸಿರೆ ಕರಿಗುರುಳ
ಚೆಂದುಟಿಯ ನಿದ್ದೆ,
ಅದ ಕಂಡು ಸುಖಿಸೆ ನಾನೇಸು ಪುಣ್ಯಮಾಡಿದ್ದೆ?


ಯೋಗವೇದಿಕೆ ಮಂಚ;
ಭೋಗಾಸನವೆ ಯೋಗಾಸನ.
ಚೆಂದುಟಿಯ ಚುಂಬನವೆ ಧ್ಯಾನಮುದ್ರೆ;
ಹೊಂಗಳಸದಾಲಿಂಗನವೆ ಯೋಗನಿದ್ರೆ.
‘ಓಂ ….. ನ …. ಯ!’
ಇಷ್ಟಮಂತ್ರದ ಜಪದ
ನಿಧುವನಪ್ರಲಯದಲಿ,
ದಿಗಂಬರಾ ಬುದ್ಧಿಯಲಿ
ನಿರ್ವಾಣ ಸಿದ್ಧಿಯಲಿ
ದ್ವೈತ ತಾನದ್ವೈತಿ ಲಯಸಮಾಧಿಯಲಿ!

“ಪ್ರೇಮೈಕ ಬಿಂದುಂ ಚಿರದಗ್ಧ ಚಿತ್ತೇ
ವಿಷಿಂಚ ಚಿತ್ತಂ ಕುರು ನಃ ಸುಶಾನ್ತಂ!”
ಯಾರಿವಳು ಮಲಗಿರುವಳು,
ನನ್ನನಿಂತಪ್ಪಿ,
ಒಪ್ಪಿ?


ಏರಿ ಕಾಣ್‌, ಈ
ಉತ್ತರವೆ ಏಣಿ:
“ನನ್ನ ಚಿನ್ನ!
ನನ್ನ ಹೇಮಿ!
ನನ್ನ ಶ್ರೀಮತಿ!
ನನ್ನ ರಾಣಿ!
ನನ್ನ ಮುದ್ದಿನ ಹೆಂಡತಿ!”

“ನನ್ನ ಸೌಭಾಗ್ಯವತಿ!
ನನ್ನ ಪ್ರಾಣೇಶ್ವರಿ!
ನನ್ನ ಯಜಮಾನಿ!
ನನ್ನ ಗುರುಕೃಪೆ!
ನನ್ನ ಮಹಾಮಾತೆಯ ಶ್ರೀಪಾದಪದ್ಮೆ:”

“ನನ್ನ ದೇವಿ,
ಜಗನ್ಮಾತೆ,
ಆದಿಶಕ್ತಿ,
ಮಹಾಮಾಯೆ,
ಅನುತ್ತರಾ,
ಓಂ! …..”

“ಸರ್ವಮಂಗಲ ಮಾಂಗಲ್ಯೇ
ಶಿವೇ ಸವಾರ್ಥಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ
ನಾರಾಯಣಿ ನಮೋಸ್ತು ತೇ!”