ಬಡವನೊಬ್ಬನು ಇರುತ ಸುಖದಲಿ
ಮಡದಿ ಮಕ್ಕಳ ಕೂಡೆ ನಲಿಯುತ
ನುಡಿದ ಭಾಶೆಗೆ ಎರಡು ಬಗೆಯದೆ
ಪಡೆದನಚ್ಯತ ಪದವಿಯ. ||||

ಕಡಿದು ಕಷ್ಟದಿ ತರುಗಳೆಲ್ಲವ
ಒಡೆದು ಬುಡಗಳ ಚದುರ ಕೈಯಲಿ
ಬಡವನಾದರು ಪಡುತ ಸುಖವನು
ಪಡೆದನಚ್ಯುತ ಪದವಿಯ. ||||

ರವಿಯು ಮಿನುಗುವ ಮುನ್ನ ಏಳುತ
ಸವಿಯ ಗಂಜಿಯನುಂಡು ಸುಖದಲಿ
ಲವ ಲವಿಕೆಯಿಂದಲಿ ಹೊರಟವಾ
ಕವಿದ ಮಂಜಿನ ಮಧ್ಯದಿ. ||||

ಕೊಡಲಿಯೊಂದನು ಹೆಗಲೊಳೇರಿಸಿ.
ಪೊಡವಿಯೊಡೆಯನ ನುತಿಸಿ ಪಾಡುತ,
ಅಡಿಗಡಿಗೆ ಹಿಂದಿರುಗಿ ನೋಡುತ,
ಬಿಡುತ ಎಲ್ಲರ ಹೊರಟನು. ||||

ತನಯರೆಲ್ಲರು ಆಶೆಯಿಂದಲಿ
ಮನೆಯ ಹೊಸಲಿನ ಮೇಲೆ ಸೇರುತ
ಬನದಡೆಗೆ ಪೋರಮಡುವ ತಂದೆಯ
ಮನದಿ ನೋಡುತ ನಿಂತರು. ||||

ಉದಯ ಕಾಲದ ಅಲರನೆಲ್ಲವ
ಮುದದಿ ಕೊಯ್ಯುತ ಮಡದಿಗೋಸುಗ
ಚದುರ ಗೋಪನ ಮನದಿನೆನೆಯುತ
ಮಧುರ ಕಂಠದಿ ಪಾಡಿದ. ||||

ನರರ ಕಾಯ್ವನೆ ಕಾಯು ನನ್ನನು;
ಸುರರ ಪೊರೆವನೆ ಸಲಹು ಸಕಲರ;
ಕರಗಳೆರಡನು ಮುಗಿದು ಬೇಡುವೆ;
ನಿರುತ ನಿನ್ನನು ಪೊಗಳುವೆ. ||||

ದೇವಪೂಜಿತ ಅಸುರನಿಂದಿತ
ಸೇವೆಗೈವರಿಗೆಲ್ಲ ಸೇವಕ
ಹಾವೆ ಹಾಸಿಗೆಯಾದ ದೇವನೆ
ಕಾವುದೆಲ್ಲರ ನಿತ್ಯವು. ||||

ರವಿಯ ರೂಪದಿ ಬರುವ ದೇವನೆ,
ನವಿಲು ಗರಿಯಿಂ ಮೆರೆವ ಲೋಲನೆ,
ಭುವನ ಪಾಲಕ, ಭುವನ ನಾಶಕ,
ಪವಿಯ ರೂಪನೆ ರಕ್ಷಿಸೈ. ||||

ಪುಷ್ಪಶೋಭಿತ ಪುಷ್ಪ ರೂಪನೆ
ಪುಷ್ಪಕೇಶದ ಪುಷ್ಪ ಲೋಲನೆ
ಪುಷ್ಪನಾಭನೆ ಪುಷ್ಪನೇತ್ರನೆ
ಪುಷ್ಪಭಕ್ತನ ಕಾಯಲೈ! ||೧೦||

ಚಂದರೂಪನೆ ನಂದಗೋಪನೆ,
ಇಂದುಮುಖಿಯರ ರಮ್ಯ ರಮಣನೆ
ಬಂಧನಾಶನೆ ಮಂದಹಾಸನೆ
ವಂದಿಪೆನು ನಾ ರಕ್ಷಿಸೆ. ||೧೧||

ರಾಮಕೃಷ್ಣನೆ ಪರಮಹಂಸನೆ
ಸೋಮ ತೇಜ ವಿವೇಕನಂದನೆ
ವ್ಯೋಮರೂಪನೆ ಬೀಮಕಾಯನೆ,
ಕಾಮದಾಹನೆ ರಕ್ಷಿಸೈ. ||೧೨||

ಪಾಲನೇತ್ರನೆ ಕಾಲಹೇತುವೆ
ಕಾಲಕಾರಣ ಕ್ಷೇತ್ರಕಾರಣ
ಕಾಲರೂಪನೆ ಕಾಲಪಾಲನೆ,
ಪಾಲಿಸೈ ಮಹದೇವನೆ. ||೧೩||

ವಿಶ್ವರೂಪನೆ ವಿಶ್ವಜ್ಞಾನಿಯೆ
ವಿಶ್ವನಂದನೆ ವಿಶ್ವಲೋಲನೆ
ವಿಶ್ವಕರುಣಾ ವಿಶ್ವಸಾಗರ
ವಿಶ್ವಹೇತುವೆ ಪಾಲಿಸೈ. ||೧೪||

ರೂಪರಹಿತನೆ ರೂಪಸಹಿತನೆ
ರೂಪಿನೊಳಗತಿಚೆಲ್ವರೂಪನೆ
ಪಾಪನಾಶನೆ ಕಾಲಪಾಶನೆ
ಗೋಪಿ ಲೋಲನೆ ಕಾಯೆಲೈ. ||೧೫||

ಗಿರಿಜೆ ಲೋಲನೆ ಗೌರಿ ನಾಥನೆ
ಪರಿಘ ಪಾಣಿಯೆ ಶೌರಿ ಮಿತ್ರನೆ
ಶಿರದಿ ಇಂದುವ ಧರಿಸಿದಾತನೆ
ಹರನೆ ಕರುಣಿಸಿ ಕಾಯೆಲೈ. ||೧೬||

ಗೌರಿಶಿಖರದಿ ಮೆರೆವ ದೇವನೆ,
ಗೌರಿರಾಗದ ಪಣೆಯ ನೇತ್ರನೆ,
ಗೌರಿಕಾಯನೆ ಗೌರಿನಾಥನೆ,
ಗೌರಿಲೋಲನೆ ರಕ್ಷಿಸೈ. ||೧೭||

ಇನಿತು ಪಾಡುವಕಾವ ದೇವನ
ವನದ ಸೊಬಗನು ನೋಡಿ ಪೊಗಳುತ
ಮನದಿ ಸಂತಸ ತುಂಬಿ ತುಳುಕುತ
ಬನದಿ ನಡೆದನು ಅಮಲನು. ||೧೮||

ಎಲ್ಲಿ ನೋಡಿದರಲ್ಲಿ ಕೊಂಬೆಯು
ಮಲ್ಲಿಗೆಯ ಸೊಬಗಿಂದ ಮಿನುಗುತ
ಸಲ್ಲಲಿತ ಪರಿಮಳವ ಬೀರುವ
ಎಲ್ಲರೊಡೆಯನ ತೋರಿತು! ||೧೯||

ಲಲಿತ ಗಂಧವನಿತ್ತು ಎಸೆಯುವ
ಹಳದಿ ಸೇವಂತಿಗೆಯು ಸೊಬಗನು
ಆಲರು ಅರಳಿದ ಪೂಗಳಿಂದಲಿ
ಹಲವು ಬಗೆಯಿಂ ಬೀರಿತು. ||೨೦||

ಮಧುರ ಕಂಪನು ಕೊಡಲು ಸಂಪಗೆ,
ಅದರ ರಸವನು ಬಿಡುತ ತುಂಬಿಯು
ಬೆದರಿ ಮರಣಕೆ ಬೇರೆ ಪೂಗಳ
ಚದುರತನದಲಿ ಹೀರಿತು. ||೨೧||

ಮುಳ್ಳು ಗಿಡದಲಿ ಎಸೆವ ಜಾಜಿಯ
ಕಳ್ಳತನದಲಿ ಏರಿ ಗಿಡವನು,
ಹಳ್ಳಿಕುಂಚನು ಬರಿದೆ ಕೀಳುತ
ಹುಲ್ಲು ಹಸುರೊಳು ಬಿಸುಟನು. ||೨೨||

ಎಲ್ಲಿ ನೋಡಿದರಲ್ಲಿ ಪೂಮಯ!
ಬಲ್ಲಿದರು ನೋಡಿದೊಡೆ ಚಿನುಮಯ!
ನಲ್ಲನಹ ನೋಟಕ್ಕೆ ಸತಿಮಯ!
ಎಲ್ಲಿಯಂ ಮಯವೆಸೆದುದು! ||೨೩||

ಹರಡಿ ಮಾರುತ ವನದಲೆಲ್ಲಿಯು
ಸರಸವಾಡುತ ಅಲರ ಜೊತೆಯಲಿ
ಪರಿಮಳವ ಸೊಬಗಿಂದ ಬೀರುತ
ಸರಿಸದಲಿ ನಲಿದಾಡಿದ! ||೨೪||

ಕಷ್ಟವೆಲ್ಲವ ಮರೆತು ಅಮಲನು
ಇಷ್ಟದೇವನ ಪಾಡಿ ಪೊಗಳುತ
ಶಿಷ್ಟಮನದಲಿ ಪೋಗುತಿರಲೂ
ಅಷ್ಟರಲಿ ರವಿ ಬೆಳಗಿದ! ||೨೫||