ನಮ್ಮ ರಾಜ್ಯದ ಜನರಲ್ಲಿ ವಿಜ್ಞಾನವನ್ನು ಪ್ರಚಾರ ಮಾಡಿ ವೈಜ್ಞಾನಿಕ ಮನೋಭಾವದ ಬೆಳವಣೆಗೆಗೆ ಉತ್ತೇಜನ ನೀಡುವುದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮುಖ್ಯ ದ್ಯೇಯ. ರಾಜ್ಯದ ವಿವಿಧ ಸ್ಥಳಗಳಲ್ಲಿ ಸ್ವಯಂಪ್ರೇರಣೆಯಿಂದ ರೂಪುಗೊಂಡಿರುವ ಮುನ್ನೂರಕ್ಕೂ ಹೆಚ್ಚಿನ ಸಂಖ್ಯೆಯ ಪರಿಷತ್ ಘಟಕಗಳು ಸ್ಥಳೀಯವಾಗಿ ಈ ಕೆಲಸದಲ್ಲಿ ನಿರತವಾಗಿವೆ. ಉಪನ್ಯಾಸಗಳು, ವಿಚಾರ ಸಂಕಿರಣಗಳು, ವೈಜ್ಞಾನಿಕ ಪ್ರದರ್ಶನಗಳು ಮುಂತಾದವನ್ನು ಏರ್ಪಡಿಸುವ ಮೂಲಕವೂ ದಿನನಿತ್ಯದ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಜನತೆಗೆ ನೆರವು ನೀಡುವ ಮೂಲಕವೂ ಪರಿಷತ್ತಿನ ಧ್ಯೇಯವನ್ನು ಸಫಲಗೊಳಿಸುವ ಪ್ರಯತ್ನ ನಡೆದಿದೆ. ಪರಿಷತ್ತು ಪ್ರಕಟಿಸಿರುವ ನಿಯತಕಾಲಿಕಗಳೂ, ಕಿರುಹೊತ್ತಿಗೆಗಳೂ, ವೈಜ್ಞಾನಿಕ ಚಲನಚಿತ್ರಗಳೂ ಧ್ವನಿ ಸುರುಳಿಗಳೂ, ಅಲ್ಲಲ್ಲಿ ಸ್ಥಾಪಿಸಲಾಗಿರುವ ವಿಜ್ಞಾನ ಕೇಂದ್ರಗಳೂ, ಪ್ರತಿವರ್ಷ ನಡೆಸುವ ಕನ್ನಡ ವಿಜ್ಞಾನ ಲೇಖಕರ ಹಾಗೂ ವೈಜ್ಞಾನಿಕ ಕಾರ್ಯಕರ್ತರ ಕಾರ್ಯ ಶಿಬಿರಗಳೂ ಆ ಪ್ರಯತ್ನಗಳಿಗೆ ಬೆಂಬಲ ನೀಡುತ್ತಿವೆ. ನಾವು ಹದಿನೇಳು ವರ್ಷದಿಂದ ಪ್ರಕಟಿಸುತ್ತಿರುವ ಬಾಲವಿಜ್ಞಾನ ಮಾಸಪತ್ರಿಕೆ ಈ ದಿಸೆಯಲ್ಲಿ ಸಾಕಷ್ಟು ಯಶಸ್ಸು ಗಳಿಸಿ ಜನಪ್ರಿಯವಾಗಿದೆ. ಹಲವು ವರ್ಷಗಳಿಂದ ಪ್ರಕಟಿಸಲಾಗುತ್ತಿರುವ ‘ವಿಜ್ಞಾನ ದೀಪ’ ಎಂಬ ಗೋಡೆ ಪತ್ರಿಕೆಗೆ ಶಾಲೆಗಳಿಂದ ಸಾಕಷ್ಟು ಉತ್ತೇಜನ ದೊರಕಿದೆ.

ವಿಜ್ಞಾನ ವಿಷಯಗಳನ್ನು ಕುರಿತ ಅಗ್ಗವಾದ ಕಿರುಹೊತ್ತಿಗೆಗಳನ್ನು ಪ್ರಕಟಿಸುವ ಕಾರ್ಯವನ್ನು ಪರಿಷತ್ತು ಪ್ರಾರಂಭಿಸಿ ಕೇವಲ ಹತ್ತು ವರ್ಷಗಳಾಗಿವೆ. ಪ್ರಕಟಣೆಗಳ ಸಂಖ್ಯೆ ಈಗಾಗಲೇ ಎಪ್ಪತ್ತೈದನ್ನು ದಾಟಿದೆ. ಹಲವಾರು ಶೀರ್ಷಿಕೆಗಳು ಮೂರು ನಾಲ್ಕು ಬಾರಿ ಮುರುಮುದ್ರಣವನ್ನು ಕಂಡು ಹತ್ತಾರು ಸಾವಿರ ಸಂಖ್ಯೆಯಲ್ಲಿ ವಿತರಣಗೊಂಡಿವೆ. ಕನ್ನಡ ಪುಸ್ತಕಗಳ ಪ್ರಕಟಣೆಯ ಇತಿಹಾಸದಲ್ಲಿ ಈ ದಾಖಲೆಯನ್ನು ಸ್ಥಾಪಿಸಲು ಸಾಧ್ಯವಾಗಿರುವುದಕ್ಕೆ ಕಾರಣ, ನಮ್ಮ ಜನರ ಅತ್ಯಂತ ಜರೂರು ಅಗತ್ಯವೊಂದನ್ನು ಗುರುತಿಸಿ ಆ ಅಗತ್ಯವನ್ನು ಪೂರೈಸುವ ಯತ್ನವನ್ನು ಪರಿಷತ್ತು ಕೈಗೊಂಡಿರುವುದು.

ಆಕಸ್ಮಿಕ ಆವಿಷ್ಕಾರಗಳೆಂದು ಹೇಳಲಾಗುವ ಸಂಶೋಧನೆಗಳು ಪೂರ್ಣವಾಗಿ ಆಕಸ್ಮಿಕವೆಂದು ಹೇಳಲು ಬರುವುದಿಲ್ಲ. ಅನಿರೀಕ್ಷಿತವಾಗಿ ದೊರೆತ ಸುಳಿವೊಂದರಿಂದ ಸಂಶೋಧನೆಯ ದಿಕ್ಕೂ ಬದಲಾಗಿ ಕ್ರಾಂತಿಕಾರಿಯಾದ ಬದಲಾವಣೆಗಳಿಗೆ ದಾರಿ ಮಾಡಿಕೊಡುವುದು. ಈ ಅನಿರೀಕ್ಷಿತ ತಿರುವು ಓದುಗರಲ್ಲಿ ವಿಜ್ಞಾನದ ಬಗ್ಗೆ ವಿಶೇಷವಾಗಿ ಆಸ್ಥೆ ಮೂಡಿಸುವಂತಹವು. ವಿಜ್ಞಾನದ ಪುಸ್ತಕಗಳ ಅಭಾವವಿರುವ ಕಾಲದಲ್ಲಿ, ಅದರಲ್ಲೂ ವಿಜ್ಞಾನದ ಇತಿಹಾಸದ ಮಾಹಿತಿಯೊದಗಿಸುವ ಈ ಪುಸ್ತಕ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ವಿಜ್ಞಾನಾಸಕ್ತರಿಗೆ ವಿಶೇಷವಾಗಿ ಉಪಯೋಗವಾಗಬಲ್ಲದು. ಈ ಅಂಶವನ್ನು ಗಮನಿಸಿ ಈ ಲೇಖನ ಸರಣಿಯನ್ನು ಬಾಲ ವಿಜ್ಞಾನದಲ್ಲಿ ಪ್ರಕಟಿಸಲಾಯಿತು. ಈ ಲೇಖನಗಳಿಗೆ ದೊರೆತ ಸ್ವಾಗತವನ್ನು ಗಮನಿಸಿ ಪುಸ್ತಕ ರೂಪದಲ್ಲಿ ಇದನ್ನು ಹೊರತರಲಾಗುತ್ತಿದೆ.

ವಿಕಸನಶೀಲವಾದ ವಿಜ್ಞಾನವನ್ನು ಐತಿಹಾಸಿಕವಾಗಿ ಘಟನೆಗಳ ಕಾಲಾನುಕ್ರಮದಲ್ಲಿ ವಿವರಿಸುವುದು ಉಚಿತ ಎಂಬುದು ಶಿಕ್ಷಣವೇತ್ತರ ಅಭಿಪ್ರಾಯ. ಈ ದಿಸೆಯಲ್ಲಿ ಈ ಪುಸ್ತಕ ವಿಶೇಷವಾಗಿ ಉಪಯುಕ್ತ. ಇದಲ್ಲದೆ ವೈಜ್ಞಾನಿಕ ಸಂಶೋಧನೆಯ ಹಿನ್ನೆಲೆ, ಪ್ರಚೋದನೆ, ವೈಜ್ಞಾನಿಕ ವಿಧಾನದ ವಿಶೇಷ ಗುಣ ಎಲ್ಲವನ್ನು ಅರಿಯಲು ಸಂಶೋಧನೆಯನ್ನು ಕೇಂದ್ರವಾಗಿರಿಸಿಕೊಂಡ ಈ ಲೇಖನಗಳು ಅಮೂಲ್ಯವಾಗಬಲ್ಲವು.

ಈ ಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಹಕರಿಸಿದ ಪ್ರೊ.ಜೆ.ಆರ್. ಲಕ್ಷ್ಮಣರಾವ್ ಅವರಿಗೆ  ಮತ್ತು ಪುಸ್ತಕವನ್ನು ಸುಂದರವಾಗಿ ಮುದ್ರಿಸಿಕೊಟ್ಟ ಮಾ ಮುದ್ರಣಾಲಯದ ಸಿಬ್ಬಂದಿ ವರ್ಗಕ್ಕೂ ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತು ಕೃತಜ್ಞತೆಗಳನ್ನು ಅರ್ಪಿಸುತ್ತದೆ.

 

ಡಾ. ಎಸ್. ಜೆ. ನಾಗಲೋಟಿಮಠ
ಅಧ್ಯಕ್ಷರು, ಕರಾವಿಪ
ನವಂಬರ್ 1996
ಬೆಂಗಳೂರು