ಎಂಭತ್ತನಾಲ್ಕು ವರ್ಷಗಳ ಸಾರ್ಥಕ ಜೀವನ ನಡೆಸಿ ಸಂಗೀತ ಜಗತ್ತಿಗೆ ಎಂದೆಂದಿಗೂ ಉಳಿಯುವಂತಹ ಕೊಡುಗೆಗಳನ್ನು, ಕೃತಿಗಳ ಮೂಲಕವೂ ಶಿಷ್ಯರನ್ನು ಸುಶಿಕ್ಷಿತ ಸಂಗೀತಗಾರರನ್ನಾಗಿ ಮಾಡುವ ಮೂಲಕವೂ ನೀಡಿರುವ ದೊರೆಸ್ವಾಮಿಯವರ ಜನನ ಸುವಿಖ್ಯಾತ ರುದ್ರಪಟ್ಟಣದಲ್ಲಿ, ಎಳೆತನದಿಂದಲೂ ಸಂಗೀತಾಸಕ್ತಿ ಹೊಂದಿದ್ದ ಇವರ ಪ್ರಥಮ ಗುರುಗಳು ಶ್ರೀನಿವಾಸ ಅಯ್ಯರ್ ಮತ್ತು ಸೇಲಂ ದೊರೆಸ್ವಾಮಿ ಅಯ್ಯಂಗಾರ್. ಧ್ವನಿ ಒಡೆದಾಗ ಗಾಯನವು  ಅಸಾಧ್ಯವೆನಿಸಿದ್ದರಿಂದ ವೀಣಾ ವೆಂಕಟಗಿರಿಯಪ್ಪನವರಲ್ಲಿ ಶಿಷ್ಯ ವೃತ್ತಿ ನಡೆಸಿ ಅಪೂರ್ವ ಸಾಧನೆ ಶಿಸ್ತಿನ ಜೀವನ ಕ್ರಮದಿಂದ ವಿದ್ವಾಂಸವರೇಣ್ಯರ ಸಾಲಿಗೆ ಸೇರುವವರಾದರು. ‘ವೀಣೆಯ ಬೆಡಗಿದು ಮೈಸೂರು’ ಎನ್ನುವುದು ಸಾರ್ಥಕವಾಗುವಂತೆ ನಡೆದುಕೊಂಡ ಮಹಾನ್‌ ವೈಣಿಕರಾದರು.

ಆಕಾಶವಾಣಿಯಿಂದಲೂ ಪ್ರತಿಷ್ಠಿತ ಸಭೆ-ಸಂಸ್ಥೆಗಳ ಆಶ್ರಯದಲ್ಲಿ ದೇಶದ ನಾನಾ ನಗರ-ಊರುಗಳ ವೇದಿಕೆಗಳಿಂದಲೂ ಶ್ರೀಯುತರ ವೀಣಾವಾದನ ನಡೆಯುತ್ತಿತ್ತು. ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿಯೂ ವಿಜೃಂಭಿಸಿದ ದೊರೆಸ್ವಾಮಿಯವರು ಮೈಸೂರು ವಿಶ್ವವಿದ್ಯಾಲಯದ ಲಲಿತಕಲಾ ಕಾಲೇಜಿನ ಸಂಗೀತ ವಿಭಾಗದ ರೀಡರ್ ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಕಲಾಭಿವರ್ಧಿನಿ ಸಭಾದ ಕಾರ್ಯದರ್ಶಿಯಾಗಿ ಆ ಸಂಸ್ಥೆಯ ಮುನ್ನಡೆಗೆ ಕಾರಣರಾದರು.

ವೈಣಿಕ ವಿದ್ಯಾವಾರಿಧಿ, ವೈಣಿಕ ಪ್ರವೀಣ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾ ತಿಲಕ, ಗಾನ ರತ್ನಾಕರ, ಸಂಗೀತ ಕಲಾರತ್ನ, ಚೌಡಯ್ಯ ಪ್ರಶಸ್ತಿ, ಇತ್ಯಾದಿ ಗೌರವಗಳನ್ನು ಪಡೆದ ಶ್ರೀಯುತರು ಅನೇಕ ಲೇಖನಗಳನ್ನೂ, ವರ್ಣ-ಕೃತಿ-ಕೀರ್ತನೆಗಳನ್ನು ಸಂಗೀತ ಕ್ಷೇತ್ರಕ್ಕೆ ಕಾಣಿಕೆಯಾಗಿಸಿ, ೨೦೦೨ರಲ್ಲಿ ಈ ಇಹ ಜೀವನದಿಂದ ಮುಕ್ತರಾದರು.