ಇದೊ ಗಂಗೊತ್ರಿ,
ಹೇ ಮಾನಸಯಾತ್ರಿ!
ಇದು ನಕ್ಷತ್ರೇಕ್ಷು
ಸೂಸಿದ ರಸಧಾರೆಗೆ ಸಂಭವಿಸಿಹ ಶೃಂಗಸರೋವರ ಚಕ್ಷು!
ಮಾನಸ ಅತಿಮಾನಸಕೇರುವೆಡೆ;
ಅತಿಮಾನಸ ಮಾನಸಕಿಳಿಯುವೆಡೆ;
ಅಧಿಮಾನಸ ಮೈದೋರುವೆಡೆ
ಏ ಈ ಗಂಗೋತ್ರಿ;
ಭೂಮಂಡಲ ಶತ ಶತ ಆಕಾಂಕ್ಷೆ,
ನರ ನರ ಹೃದಯದ ಕೋಟಿ ಅಭೀಪ್ಸೆ
ಹರಚರಣಕೆ ಏರುವ ಊರ್ಧ್ವಾಶೆ
ಈ ತೀರ್ಥ ಕ್ಷೇತ್ರಕೆ ಚಿರಯಾತ್ರಿ!
ಎಲ್ಲತತ್ತ್ವಗಳ ಮೂಲನಿಧಿ,
ಎಲ್ಲಚಿಂತನದ ವಾರಿನಿಧಿ,
ಎಲ್ಲ ನಂಬುಗೆಯ ಅಂಭೋಧಿ
ಈ ಮಧು ಗಂಗೋತ್ರಿ!

ಯಮುನಾ ಗಂಗಾ,
ಕೃಷ್ಣಾ, ತುಂಗಾ,
ಮಿಸಿಸಿಪಿ, ಅಮಜಾನ್,
ಥೇಂಮ್ಸ್ , ಡಾನ್,
ಎಲ್ಲನದಿಗಳಿಗೂ ಇಲ್ಲಿಯೆ ಉಗಮ:
ಎಲ್ಲ ಸಮುದ್ರಗಳೆಲ್ಲ ಶಿಖರಗಳಿಗಿಲ್ಲಿಯೆ ಸಂಗಮ:
ಈ ಋತಚಿದ್ ಗಂಗೋತ್ರಿ!
ಇಲ್ಲಿಂದಲೆ ಸಂಭವಿಸುತ ಹರಿಯುತ್ತಿದೆ ಗಾಯತ್ರಿ,
ಮರ್ತ್ಯಚೇತಸದ ಹೃದಯ ಹೃದಯದೊಳೂ
ತಾನಾಗುವವರೆಗೂ ಚಿರಯಾತ್ರಿ!
ಇದೆ ಮಧುಗಂಗೋತ್ರಿ,

ಹೇ ಮಾನಸಯಾತ್ರಿ!
ಧ್ನಾನಿಸಿ ನಿಲ್ಲಿಲ್ಲಿ;
ಸಾಧಿಸಿ ನಿಲ್ಲಿಲ್ಲಿ:
ಆ ಲೋಕವನೀ ಲೋಕಕೆ
ಸೆಳೆವ ಭಗೀರಥನಾಗಿಲ್ಲಿ!
ಈ ಲೋಕವನಾ ಲೋಕಕೆ
ಸೇದುವ ಸೇತುವೆಯಾಗಿಲ್ಲಿ!
ಅದನಿದಕೂ ಇದನದಕೂ
ಬಂಧಿಸಿ ನೆಯ್ದೊಂದಾಗಿಪ
ಋಷಿಮಾನವ ರಸಚೆತನ
ವಿದ್ಯುದ್ ವಾಹಕವಾಗಿಲ್ಲಿ!

೧೨-೨-೫೬