ಕೈಗಾ ಅಣು ವಿದ್ಯುತ್ ಸ್ಥಾವರ :

ದೂರ ಎಷ್ಟು?
ತಾಲೂಕು : ಕಾರವಾರ
ತಾಲೂಕಿನಿಂದ :  ೬೪ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೬೪ ಕಿ.ಮೀ

ಕಾರವಾರದಿಂದ ಜೋಯಿಡಾ ಮಾರ್ಗವಾಗಿ ಸಾಗುವಾಗ ಕದ್ರಾ ಜಲ ವಿದ್ಯುತ್ ಯೋಜನೆಯನ್ನು ಕಾಣಬಹುದು. ಕದ್ರಾದಿಂದ ಎಡಕ್ಕೆ ೨೦ ಕಿ.ಮೀ ಮುಂದೆ ಕೊಡಸಳ್ಳಿ ಜಲಾಶಯ ಇದೆ. ಕದ್ರಾದಿಂದ ಬಲಕ್ಕೆ ೨೦ ಕಿ.ಮೀ ಸಾಗಿದಾಗ ಕೈಗಾ ಅಣು ವಿದ್ಯುತ್ ಸ್ಥಾವರವಿದೆ.

 

ಅಂಕೋಲಾ

ದೂರ ಎಷ್ಟು?
ತಾಲೂಕು : ಅಂಕೋಲಾ
ತಾಲೂಕಿನಿಂದ :  ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೩೩ ಕಿ.ಮೀ.

೧೯೩೧ರ ಉಪ್ಪಿನ ಸತ್ಯಾಗ್ರಹದಿಂದಾಗಿ ಕರ್ನಾಟಕದ ‘ಬಾರ್ಡೋಲಿ’ ಎಂದು ಪ್ರಖ್ಯಾತಿ ಹೊಂದಿದ ನಾಡು ಅಂಕೋಲಾ. ಚುಟುಕು ಬ್ರಹ್ಮ ದಿನಕರ ದೇಸಾಯಿಯವರು ಜನಿಸಿದ ಊರು. ಕಲೆ, ಸಾಹಿತ್ಯ, ಜಾನಪದ ಕಲೆಗಳಿಗೆ ಇಲ್ಲಿನ ಜನರ ಕೊಡುಗೆ ಅಪಾರ. ಕರಿ ಇಷಾಡು ಮಾವಿನ ಹಣ್ಣಿನ ಖ್ಯಾತಿಯ ನಾಡು,  ಸಾಲು ಸಾಲು ದೇವಾಲಯಗಳ ಬೀಡು. ಇದನ್ನು ವೀಕ್ಷಿಸುವದೇ ಐಭೋಗ.

ಸ್ವಾತಂತ್ರ್ಯ ಹೋರಾಟದ ಅತಿ ಮುಖ್ಯವಾದ ಕಾಲಘಟ್ಟದಲ್ಲಿ (೧೯೨೦-೪೭) ತಮ್ಮ ಬದುಕನ್ನು ದೇಶ ಸೇವೆಗಾಗಿ ಸಮರ್ಪಿಸಿಕೊಂಡು ಅದ್ಭುತ ಚರಿತ್ರೆ ನಿರ್ಮಿಸಿದವರು ಅಂಕೋಲೆಯ ಜನ. ಆ ಯಶೋಗಾಥೆಯ ಶಾಶ್ವತ ನೆನಪಿಗಾಗಿ ‘ಸ್ವಾತಂತ್ರ್ಯ ಸಂಗ್ರಾಮ ಭವನ’ ಎಂಬ ಕಟ್ಟಡ ಸಂಕೀರ್ಣವು ರಾಷ್ಟ್ರೀಯ ಸೌಧದ ರೂಪದಲ್ಲಿ ವಿಧಾಯಕ ಕಾರ್ಯಚಟುವಟಿಕೆಗಳ ಕೇಂದ್ರ ಸ್ಥಾನವಾದ ಗಾಂಧಿಮೈದಾನದಲ್ಲಿ ತಲೆಯೆತ್ತಿ ನಿಂತಿದೆ. ಅಂಕೋಲಾ ಮಂಜಗುಣಿ ಮಾರ್ಗದಲ್ಲಿ ೮ ಕಿ. ಮೀ. ದೂರದಲ್ಲಿರುವ ಹನಿಬೀಚ್, ಬೇಲೇಕೇರಿ ಸಮುದ್ರ ತೀರಗಳೂ ಕೂಡ ವಿದೇಶಿ ಪ್ರವಾಸಿಗರ ಆಕರ್ಷಣೆಯ ತಾಣವಾಗಿವೆ.

 

ಶಾಂತಾದುರ್ಗಾ ದೇವಾಲಯ

ದೂರ ಎಷ್ಟು?
ತಾಲೂಕು : ಅಂಕೋಲಾ
ತಾಲೂಕಿನಿಂದ :  ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೩೩ ಕಿ.ಮೀ

ಶಾಂತಾದುರ್ಗಾ ದೇವಿಯು ಅಂಕೋಲಾದ ಜನರಿಗೆ ಗ್ರಾಮ ದೇವತೆಯಾಗಿದೆ. ಇಲ್ಲಿನ ಬಂಡಿಹಬ್ಬವು ಧಾರ್ಮಿಕ ಆಚರಣೆಯ ಪ್ರಮುಖ ಉತ್ಸವವಾಗಿದೆ.

ಅಷ್ಟೇ ಅಲ್ಲದೇ ಹತ್ತಿರದಲ್ಲಿ ನಡೆಯುವ ಕೊಗ್ರೆ ಬಂಡಿಹಬ್ಬವೂ ಪ್ರಮುಖವಾಗಿದೆ.

 

ಕ್ಯಾತಾಯಿನಿ ಬಾನೇಶ್ವರ ದೇವಾಲಯ

ದೂರ ಎಷ್ಟು?
ತಾಲೂಕು           : ಅಂಕೋಲಾ
ತಾಲೂಕಿನಿಂದ :  ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೨೪ ಕಿ.ಮೀ

ಕಾತ್ಯಾಯಿನಿ ಬಾಣೇಶ್ವರ ದೇವಾಲಯ ಅಂಕೋಲಾದಿಂದ ೧೦ ಕಿ.ಮೀ ಹಾಗೂ ಕಾರವಾರ – ಅಂಕೋಲಾ ಮಾರ್ಗವಾಗಿ ೨೪ ಕಿ.ಮೀ ದೂರದಲ್ಲಿ ಡಬ್ಬು ಮಲಗಿಸಿದ ಹಡಗಿನ ಆಕಾರದಲ್ಲಿದ್ದು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಇವೇ ಅಲ್ಲದೇ ಅಂಕೋಲಾದಲ್ಲಿರುವ ಮಹಾಮಾಯಾ ದೇವಾಲಯ, ವೆಂಕಟರಮಣ ದೇವಾಲಯ, ಮಾಂಗಟೇ ಗುಡ್ಡ ಇವೆಲ್ಲವೂ ಪ್ರವಾಸಿಗರ ಆಕರ್ಷಣೀಯ ಕೇಂದ್ರಗಳಾಗಿವೆ.

 

ಕುಮಟಾ

ದೂರ ಎಷ್ಟು?
ತಾಲೂಕು           : ಕುಮಟಾ
ತಾಲೂಕಿನಿಂದ :  ೨೪ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೭೬ ಕಿ.ಮೀ

ಬೈರವೇಶ್ವರ ಶಿಖರ

ಯಾಣ : ಕುಮಟಾ ತಾಲ್ಲೂಕಿನ ಸುಪ್ರಸಿದ್ಧ ಚಾರಣ ಸ್ಥಳ.

ಕುಮಟಾದಿಂದ ೨೪ ಕಿ.ಮೀ.ದೂರದಲ್ಲಿ ದೇವಿಮನೆ ಮತ್ತು ವಡ್ಡಿ ಪಾಲ್ಸ್ ಮದ್ಯದಲ್ಲಿರುವ ಅತ್ಯಂತ ರಮ್ಯ ತಾಣ. ಹರಿಟೆ ವರೆಗೆ ಸಾಗಿ ಮುಂದೆ ಕಚ್ಚಾ ರಸ್ತೆಯಲ್ಲಿ ಸಾಗಿದರೆ ಯಾಣದ ಹಚ್ಚ ಹಸಿರು ಕಾಡು ನಿಸರ್ಗದ ಸವಿ ಉಣಬಡಿಸುವುದು.

ಜಗನ್ಮೋಹಿನಿ ಶಿಖರ ಇದರ ಎತ್ತರ ೩೦೦ ಅಡಿಗಳು ಇದಕ್ಕೆ ಚಂಡಿಕಾ ದೇವಾಲಯ ಮತ್ತುದುರ್ಗಾ ದೇವಾಲಯ ಎಂದು ಹೆಸರು. ಮುಂದೆ ಸಾಗಿದಾಗ (ಚಿತ್ರದಲ್ಲಿ)  ಗೋಚರಿಸುವದು ಭೈರವೇಶ್ವರ ಶಿಖರ. ಈ ಬೃಹತ್ ಬಂಡೆಯ ಒಂದು ಸೀಳು ಯಾಣದ ದೇಗುಲ, ಅಲ್ಲಿರುವವನೆ ಭೈರವೇಶ್ವರ. ೮ ಅಡಿ ಎತ್ತರದಿಂದ ಶಿವನ ತಲೆಯ ಮೇಲೆ ಸದಾ ನೀರು ಸುರಿಯುತ್ತಲಿರುತ್ತದೆ.

 

ಗೋಕರ್ಣ

ದೂರ ಎಷ್ಟು?
ತಾಲೂಕು           : ಕುಮಟಾ
ತಾಲೂಕಿನಿಂದ :  ೨೯ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೫೭ ಕಿ.ಮೀ

 

ಶ್ರೀ ಕ್ಷೇತ್ರ ಗೋಕರ್ಣ

ದಕ್ಷಿಣದ ಕಾಶಿ ಎಂದು ಪ್ರಖ್ಯಾತಿಯನ್ನು ಹೊಂದಿರುವ ಇದು ಕಾಶಿ ಮತ್ತು ರಾಮೇಶ್ವರಗಳಿಗೆ ಸಮನಾದ ಸಿದ್ಧಿ ಕ್ಷೇತ್ರಗಳಲ್ಲೊಂದು. ಅಗಸ್ತ್ಯ ಮುಂತಾದ  ಋಷಿಗಳ   ತಪೋ ಭೂಮಿ ಇದಾಗಿತ್ತು. ತ್ರೇತಾಯುಗದಿಂದಲೂ ಈ ಕ್ಷೇತ್ರ ಪ್ರಸಿದ್ಧಿ ಪಡೆದಿದೆ. ಕರ್ನಲ್ ಮೆಕೆಂಜಿ (೧೭೫೩-೧೮೨೧) ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಗ್ರಹಿಸಿದ ಕೈಫಿಯತ್ತಿನಲ್ಲಿ ಗೋಕರ್ಣ ಕ್ಷೇತ್ರದ ಮಹಿಮೆ ಇದೆ.

ರಾವಣ ಉಗ್ರ ತಪಸ್ಸನ್ನು ಆಚರಿಸಿ ಶಿವನಿಂದ ಪಡೆದ ಆತ್ಮಲಿಂಗವನ್ನು ಒಯ್ಯುತ್ತಿರುವಾಗ ಗಣಪತಿ ಉಪಾಯದಿಂದ ಇಲ್ಲಿ ಪ್ರತಿಷ್ಠಾಪಿಸಿದನೆಂದು ಸ್ಥಳಪುರಾಣವಿದೆ.  ಇದರಿಂದಾಗಿಯೇ ಈ ಸ್ಥಳಕ್ಕೆ ಭೂಕೈಲಾಸ ಎಂಬ ಹೆಸರು ಬಂತು. ಸೀತೆ, ಲಕ್ಷ್ಮಣ ಇವರೊಂದಿಗೆ ರಾಮ ಇಲ್ಲಿಗೆ ಬಂದು ಶಿವನನ್ನು ಆರಾಧಿಸಿ ತೀರ್ಥವನ್ನು ಕಲ್ಪಿಸಿದನೆಂಬುದು ಇನ್ನೊಂದು ಐತಿಹ್ಯ. ಗೋಕರ್ಣದ ನೆಲ ಆಕಳ ಕರ್ಣದಂತೆ (ಕಿವಿ) ಇರುವುದರಿಂದ ಗೋಕರ್ಣ ಎಂಬ ಹೆಸರು ಬಂತೆಂದು ಹೇಳಲಾಗಿದೆ. ಗೋಕರ್ಣದಲ್ಲಿ ಅನೇಕ ದೇವ ದೇವತೆಗಳ ಗುಡಿಗಳಿವೆ. ಇಲ್ಲಿಯ ವಿಶೇಷ ಆಕರ್ಷಣೆ, ಗೋಕರ್ಣದ ಮಹಾಬಲೇಶ್ವರ  ದೇವಾಲಯದ ಸಭಾಮಂಟಪದಲ್ಲಿರುವುದು ಪಾರ್ವತಿ, ನಂದಿ ಮತ್ತು ಗಣಪತಿಯ ಮೂರ್ತಿಗಳು.  ಗಣಪತಿ ದೇವರ ಗರ್ಭಗುಡಿಯ ಮೇಲೆ ಅಷ್ಟದಿಕ್ಪಾಲಕರು, ನಾಗ ಮತ್ತು ದಶಾವತಾರ ಪಡೆದು ಸ್ಥಾಪಿಸಿದ ಆತ್ಮಲಿಂಗ ಸಾಲಿಗ್ರಾಮ ಪೀಠದ ಮಧ್ಯದಲ್ಲಿದೆ. ನಮಗೆ ತೋರುವುದು ಅಂಗುಷ್ಟಗಾತ್ರದ ಲಿಂಗ ಮಾತ್ರ. ಮಹಾಬಲೇಶ್ವರ ದೇವಾಲಯದಲ್ಲಿ ಸುಂದರ ಶಿಲ್ಪಗಳೂ ಇವೆ.

ಊರೊಳಗಿನ ಕೋಟಿತೀರ್ಥ ಒಂದು ದೊಡ್ಡ ಕೆರೆ. ಕೆರೆಯ ಮಧ್ಯದಲ್ಲಿರುವುದು ಸಪ್ತಕೋಟೀಶ್ವರ ಲಿಂಗ. ಹಿಂದೆ ಅದರ ಎದುರು ಎರಡು ಸಂದಿಗಳಿದ್ದವು. ಕೆರೆಯ ಸುತ್ತಲೂ ದೇವದೇವತೆಗಳ ಗುಡಿಗಳಿವೆ. ದಕ್ಷಿಣಕ್ಕೆ ಕಾಲಭೈರವ, ಪೂರ್ವದಲ್ಲಿ ಶಂಕರ ನಾರಾಯಣ ದೇವಾಲಯಗಳಿವೆ. ಆಗ್ನೇಯದಲ್ಲಿ ಪಟ್ಟದ ವಿನಾಯಕ ಇದ್ದಾನೆ. ದಕ್ಷಿಣ ಮತ್ತು ಉತ್ತರದಲ್ಲಿ ಸ್ವರ್ಣವಳ್ಳಿ ಮತ್ತು ರಾಮಚಂದ್ರಾಪುರ ಮಠಗಳಿವೆ. ಗೋಕರ್ಣ ಗ್ರಾಮದ ಅಧಿದೇವತೆ ಭದ್ರಕಾಳಿ ಗೋಕರ್ಣ ಪ್ರವೇಶಿಸುವಾಗಲೇ ಈ ಗುಡಿ ಕಾಣಿಸುವುದು. ಈ ದೇವಿಗೆ ದಸರೆಯಲ್ಲಿ ವಿಶೇಷ ಉತ್ಸವ. ಇಲ್ಲಿ ನಡೆಯುವ ಅಮ್ಮ ನವರ ಕಲಶ, ಬಂಡಿ ಹಬ್ಬ ವಿಶೇಷವಾದದ್ದು.

 

ಬೀಚ್

ದೂರ ಎಷ್ಟು?
ತಾಲೂಕು : ಕುಮಟಾ
ತಾಲೂಕಿನಿಂದ :  ೩೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೫೭ ಕಿ.ಮೀ

ಗೋಕರ್ಣದಲ್ಲಿ ಮನಮೋಹಕವಾದ ಐದು ಸಮುದ್ರ ಕಿನಾರೆಗಳನ್ನು  (ಬೀಚ್) ಕಾಣಬಹುದಾಗಿದೆ. ಗೋಕರ್ಣ ಬೀಚ್, ಗೋಕರ್ಣದಿಂದ ೩ ಕಿ.ಮೀ ದೂರದಲ್ಲಿ ಕೂಡ್ಲೆ

ಬೀಚ್, ೫ ಕಿ.ಮೀ ದೂರದಲ್ಲಿ ದೇವನಾಗರಲಿಪಿಯ ಓಂ ಅಕ್ಷರದಂತೆ ಕಾಣುವ ಸುಂದರ ಮನಮೋಹಕ ಓಂ ಬೀಚ್, ಅರ್ಧ ಚಂದ್ರನಂತೆ ಕಾಣುವ ಹಾಫ್ ಮೂನ್ ಬೀಚ್, ಸ್ವರ್ಗದಂತಿರುವ ಪ್ಯಾರಾಡಾಯ್ಸ ಬೀಚ್ ಹೀಗೆ ಬೀಚ್‌ಗಳ ಸಾಲೇ ಇದೆ. ಇಲ್ಲಿಗೆ ಬಹಳಷ್ಟು ವಿದೇಶಿ ಪ್ರವಾಸಿಗರೂ ಭೇಟಿ ನೀಡುತ್ತಾರೆ.

 

ಮಿರ್ಜಾನ ಕೋಟೆ

ದೂರ ಎಷ್ಟು?
ತಾಲೂಕು : ಕುಮಟಾ
ತಾಲೂಕಿನಿಂದ :  ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೫೮ ಕಿ.ಮೀ

ಪುರಾಣದಲ್ಲಿ ಈ ಊರಿಗೆ ಇದ್ದ ಹೆಸರು ಮಿಡಜಿ. ಇಂಗ್ಲೀಷರು ಕರೆದದ್ದು ಮಿರಜಿ, ಬಿಜಾಪುರದ ಸುಲ್ತಾನ ನಿರ್ಮಿಸಿದ ಕೋಟೆಯೊಂದು ಇಲ್ಲಿದೆ. ಸರ್ಪಮಲ್ಲಿಕ ಎಂಬುವನು ಇದನ್ನು ಗೆದ್ದುಕೊಂಡು ಅಂಕೋಲೆಯವರೆಗಿನ ಪ್ರದೇಶವನ್ನು ಆಳಿದ. ಸರ್ಪಮಲ್ಲಿಕನಿಗೆ ಸಂಬಂಧಿಸಿದಂತೆ ಇಲ್ಲೊಂದು ದಂತ ಕಥೆಯಿದೆ.

ಅವನು ಈ ಕೋಟೆಯನ್ನುಕಟ್ಟಿಸಿ ಅದಕ್ಕೆ ಮೇರಿಜಾನ್ ಎಂದು ಹೆಸರಿಟ್ಟನೆಂದೂ, ಮುಂದೆ ಅದು ರೂಪಾಂತರಗೊಂಡು ಮಿರ್ಜಾನ ಆಯಿತೆಂದೂ ಹೇಳಲಾಗಿದೆ.

ಇತರ ಪ್ರೇಕ್ಷಣೀಯ ಸ್ಥಳಗಳು :

ಬಾಡ :  ಇಲ್ಲಿ ಕಾಂಚಿಕಾಪರಮೇಶ್ವರಿ ದೇವಾಲಯ ಸಮುದ್ರದ ತಟದಿಂದ ಎತ್ತರದಲ್ಲಿದೆ. ಪ್ರತಿ ವರ್ಷ ಮೇ ತಿಂಗಳಲ್ಲಿ ಆಗುವ ತೇರು ಪ್ರಸಿದ್ಧ.

ಸಾಣಿಕಟ್ಟಾ : ಬೃಹತ್ ಪ್ರಮಾಣದಲ್ಲಿ ಉಪ್ಪು ತಯಾರಿಸುತ್ತಾರೆ. ಇದು ಕರ್ನಾಟಕದಲ್ಲೇ ಉಪ್ಪು ತಯಾರಿಕೆಯ ಬಹುದೊಡ್ಡ ಕೇಂದ್ರ.

ತದಡಿ: ಕುಮಟಾದಿಂದ ೨೯ ಕಿ.ಮೀ ದೂರದಲ್ಲಿರುವ ತದಡಿ ಸಣ್ಣ ಮೀನುಗಾರಿಕಾ ಬಂದರು, ಅಘನಾಶಿನಿ ನದಿಯು ಸಂಗಮಿಸುವ ಈ ಪ್ರದೇಶ ಅತ್ಯಂತ ರಮ್ಯವಾದ ತಾಣ

ಮೇದಿನಿ ಕೋಟೆ : ಸಾಂತಗಲ್‌ನ ಆಗ್ನೇಯಕ್ಕೆ ೧೮ ಕಿ.ಮೀ ಚೂರದಲ್ಲಿದೆ. ದಟ್ಟ ಅರಣ್ಯದಲ್ಲಿರುವ ಇಲ್ಲಿ ಶಿಲಾ ಶಾಸನಗಳು ಇವೆ. ಹಲವಾರು ಔಷಧಿ ಸಸ್ಯಗಳು ಇಲ್ಲಿವೆ. ದೊರೆಯುತ್ತದೆ.

 

ಹೊನ್ನಾವರ

ದೂರ ಎಷ್ಟು?
ತಾಲೂಕು : ಹೊನ್ನಾವರ
ತಾಲೂಕಿನಿಂದ : ೧೮ಕಿ.ಮೀ
ಜಿಲ್ಲಾಕೇಂದ್ರದಿಂದ: ೧೦೮ಕಿ.ಮೀ.

 

ಶ್ರೀ ಕ್ಷೇತ್ರ ಇಡಗುಂಜಿ

ಹೊನ್ನಾವರ ತಾಲೂಕಿನಲ್ಲಿರುವ ಇಡಗುಂಜಿಯು, ಶ್ರೀ ಮಹಾಗಣಪತಿ ದೇವರ ಪ್ರಸಿದ್ಧ ತಾಣ. ಇಡಗುಂಜಿ ,ಇಡಕುಂಜ ಮತ್ತು ಕುಂಜವನ ಎಂಬ ಹೆಸರುಗಳಿಂದಲೂ ಪುರಾಣ ಪ್ರಸಿದ್ಧ.

ಸ್ಥಳದಲ್ಲೇ ದೊರೆತ ಕ್ರಿ.ಶ ೧೩೪೮ ರ ಶಾಸನದಲ್ಲಿ ಇಡುಗುಂಜಿ ಎಂದೂ, ಇನ್ನೊಂದು ಶಾಸನದಲ್ಲಿ ಯಿಡುಗುಂದಿ ಎಂದೂ ಉಲ್ಲೇಖಿಸಲಾಗಿದೆ. ಹೀಗೆ ಚಾರಿತ್ರಿಕ ದಾಖಲೆಗಳಲ್ಲಿ ಉಲ್ಲೇಖಿಸಲ್ಪಟ್ಟ ಈ ಕ್ಷೇತ್ರವು ಕರಾವಳಿ ತೀರದ ಪುರಾತನ ದೇವಾಲಯವಾಗಿದೆ.

ಇಲ್ಲಿಯ ಅಖಂಡ ದ್ವಿಭುಜ ಮಹಾಗಣಪತಿಯ ಮೂರ್ತಿಯು ಭಕ್ತರ ಆಕರ್ಷಣೆಯ ಕೇಂದ್ರ .ಬಲಗೈಯಲ್ಲಿ ತಾವರೆಯ ಮೊಗ್ಗು, ಎಡಗೈಯಲ್ಲಿ ಮೋದಕ ಧರಿಸಿರುವ ಗಣಪತಿಯ ದರ್ಶನಕ್ಕೆ ನಿತ್ಯವೂ ದೂರದ ಊರುಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ತ್ರೇತಾ ಯುಗದಲ್ಲಿ ನಾರದರಿಂದ ಪ್ರತಿಷ್ಠಾಪಿಸಲ್ಪಟ್ಟು ಇಂದಿನವರೆಗೂ ಐತಿಹಾಸಿಕ ಅಂಶಗಳನ್ನು ಕಾಲಕಾಲಕ್ಕೆ ಉಳಿಸಿಕೊಂಡು ಬಂದಿದೆ. ಪ್ರತಿವರ್ಷ ರಥಸಪ್ತಮಿಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಭಾದ್ರಪದ ಶುಕ್ಲ ಚವತಿಯಂದು ಇಲ್ಲಿ ವಿಶೇಷ ಉತ್ಸವವೂ ನಡೆಯುತ್ತದೆ.

 

ಅಪ್ಸರಕೊಂಡ ಜಲಪಾತ

ದೂರ ಎಷ್ಟು?
ತಾಲೂಕು  : ಹೊನ್ನಾವರ
ತಾಲೂಕು ಕೇಂದ್ರದಿಂದ :೮ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೯೮ ಕಿ.ಮೀ

 

ಸುರಂಗ ಮಾರ್ಗವಾಗಿ ಬರುತ್ತಿರುವ ಕೊಂಕಣ ರೈಲು

“ಹೊನ್ನಾವರದ ದಕ್ಷಿಣಕ್ಕೆ ಸಮುದ್ರದ ಅಬ್ಬರಕ್ಕೆ ತಾನೂ ದನಿಗೊಡುತ್ತಿದೆಯೇನೊ ಎನ್ನುವಂತೆ ಎತ್ತರದಿಂದ ನೀರು ಧುಮುಕುವ ಸ್ಥಳವೇ ಅಪ್ಸರಕೊಂಡ. ಅಪ್ಸರೆಯರು ಸ್ನಾನ ಮಾಡಿದ ಸರೋವರ ಇದಾದ ಕಾರಣ ಅಪ್ಸರಕೊಂಡವೆಂಬ ಹೆಸರು ಬಂದಿತೆಂದು ಕಥೆ ಇದೆ.

ಇಲ್ಲಿಯ ಗುಡ್ಡದ ಮೇಲೆ ಅನೇಕ ಗುಹೆಗಳಿವೆ. ಅವುಗಳನ್ನು ಪಾಂಡವರ ಗುಹೆಗಳೆಂದು ಕರೆಯುತ್ತಾರೆ. ಕಣ್ಮನಸೆಳೆಯುವ ನೀರಧಾರೆ, ಸೂರ್ಯಾಸ್ತದ ಹೊಂಬೆಳಕಿನ ರಮಣೀಯ ದೃಶ್ಯ, ಪ್ರವಾಸಿಗರನ್ನಾಕರ್ಷಿಸುವ ವಿಶಾಲವಾಗಿ ಹರಡಿಕೊಂಡಿರುವ ಸಮುದ್ರ ತೀರದ ಸೌಂದರ್ಯ ಸವಿಯುವ ಸುಂದರ ತಾಣ ಇದು.

 

ಗೇರುಸೊಪ್ಪ :

ದೂರ ಎಷ್ಟು ?
ತಾಲೂಕು : ಹೊನ್ನಾವರ
ತಾಲೂಕಿನಿಂದ : ೨೪ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೨೨ ಕಿ.ಮೀ.

 

ಜೈನ ಬಸದಿ - ಗೇರುಸೊಪ್ಪ

ಕಾಡಿನಿಂದ ನಿಬಿಡವಾಗಿ ಶೋಭಿಸುವ ಗೇರುಸೊಪ್ಪೆಯು, ಹೊನ್ನಾವರ ತಾಲೂಕಿನಲ್ಲಿ ಇತಿಹಾಸದ ಪ್ರಾಮುಖ್ಯತೆಯನ್ನು ಪಡೆದ ಅತ್ಯಂತ ಶ್ರೇಷ್ಠ ಸ್ಥಳವಾಗಿದೆ. ಕ್ರಿ.ಶ. ೧೪೦೯ ರಿಂದ ೧೬೧೦ರವರೆಗೆ ಗೇರುಸೊಪ್ಪೆಯು ಜೈನ ಅರಸರ ರಾಜಧಾನಿಯಾಗಿತ್ತು. ರಾಣಿ ಚೆನ್ನಭೈರಾದೇವಿ ಮೆಣಸಿನಕಾಳಿನ ರಾಣಿಯೆಂದೇ ಪ್ರಸಿದ್ಧಿ ಪಡೆದಿದ್ದಳು.  ಕಲೆ, ಸಾಹಿತ್ಯ, ಧರ್ಮ ಸಂಸ್ಕೃತಿಯ ನೆಲೆವೀಡಾಗಿ ಮೆರೆದ ಪ್ರದೇಶ ಇದಾಗಿದೆ. ಗೇರುಸೊಪ್ಪೆಯಿಂದ ಸುಮಾರು ೨ ಕಿ.ಮೀ ಅಂತರದಲ್ಲಿ ಚತುರ್ಮುಖ ಬಸದಿ ಇದೆ. ಕರ್ನಾಟಕದ ಶಿಲ್ಪಕಲಾ ಕ್ಷೇತ್ರಕ್ಕೆ ಇದೊಂದು ಅತ್ಯುಚ್ಛ ಕೊಡುಗೆಯಾಗಿದೆ.

ಈ ಬಸದಿಗೆ ೪ ದಿಕ್ಕುಗಳಲ್ಲಿಯೂ ಬಾಗಿಲುಗಳಿವೆ. ಅಲ್ಲದೇ ೪ ದಿಕ್ಕುಗಳಲ್ಲಿಯೂ ಹೆಬ್ಬಾಗಿಲು, ಹೆಬ್ಬಾಗಿಲುಗಳ ಎಡ ಬಲ ಗೋಡೆಗಳಲ್ಲಿ ಒಂದೇ ತೆರನಾದ ಶಿಖರಗಳುಳ್ಳ ಮಂಟಪಗಳು ಆಕರ್ಷಕ ಕೆತ್ತನೆಯಿಂದ ಮನಸೆಳೆಯುತ್ತವೆ.

ಗೇರುಸೊಪ್ಪದ ಸಮೀಪದ ಹೈಗುಂದ ಹೊನ್ನಾವರ ತಾಲೂಕಿನ ಇತಿಹಾಸದ ದೃಷ್ಟಿಯಿಂದ ಅತೀ ಪ್ರಾಚೀನ ಸ್ಥಳ ಎಂದು ಹೆಸರಾದದ್ದು. ನಡುಗಡ್ಡೆಯಾಗಿರುವ ಇಲ್ಲಿಯ ಕಲಾತ್ಮಕವಾದ ಯಕ್ಷ ಶಿಲ್ಪ ಶೈಲಿಯನ್ನು  ನೋಡಿದರೆ ಹತ್ತನೆಯ ಶತಮಾನಕ್ಕಿಂತ ಹಿಂದಿನದ್ದಿರಬೇಕು ಎನ್ನುತ್ತಾರೆ.

ಗೇರುಸೊಪ್ಪದ ಸಮೀಪವಿರುವ ಬಂಗಾರಮಕ್ಕಿಯ ವೀರಾಂಜನೇಯ ದೇವಾಲಯವೂ ಸಹ ಮುಖ್ಯವಾದ ಕ್ಷೇತ್ರವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುವ ಕೇಂದ್ರವಾಗಿದೆ.

 

ಶರಾವತಿ ಟೇಲರಿಸ್: ಗೇರಸಪ್ಪಾ ಡ್ಯಾಮ್

ದೂರ ಎಷ್ಟು ?
ತಾಲೂಕು : ಹೊನ್ನಾವರ
ತಾಲೂಕಿನಿಂದ  : ೩೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೨೦ ಕಿ.ಮೀ

ಜೋಗಜಲಪಾತವಾಗಿ ಧುಮುಕುವ ಶರಾವತಿ, ಮಹಾತ್ಮಾಗಾಂಧಿ ವಿದ್ಯುದ್ದಾ ಗರದಲ್ಲಿ ವಿದ್ಯುತ್ ಉತ್ಪಾದನೆಯ ನಂತರ ಹರಿದು ಬರುವ ನೀರನ್ನು ಗೇರುಸೊಪ್ಪ ಸಮೀಪ ಆಣೆಕಟ್ಟಿನಲ್ಲಿ ಸಂಗ್ರಹಿಸಿ ಪುನಃ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ.

 

ರಾಮತೀರ್ಥ

ದೂರ ಎಷ್ಟು?
ತಾಲೂಕು : ಹೊನ್ನಾವರ
ತಾಲೂಕಿನಿಂದ : ೩ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೮೭ ಕಿ.ಮೀ

ಹೊನ್ನಾವರದಿಂದ ಈಶಾನ್ಯಕ್ಕೆ ಎರಡು ಮೈಲಿ ದೂರದಲ್ಲಿರುವ ರಾಮತೀರ್ಥವು ಪವಿತ್ರವಾದ ತೀರ್ಥಕ್ಷೇತ್ರವಾಗಿದೆ.  ಮಳೆಗಾಲ ಬೇಸಿಗೆ ಕಾಲವೆನ್ನದೆ ಎಲ್ಲಾ ಕಾಲಗಳಲ್ಲೂ ಗುಡ್ಡದೊಳಗಿನಿಂದ ರಭಸವಾಗಿ ಹರಿದು ಬರುವ ಎರಡು ನೀರಿನ ಧಾರೆಗಳಿವೆ.  ದೊಡ್ಡ ನೀರಿನ ಧಾರೆಯನ್ನು ರಾಮತೀರ್ಥವೆಂದೂ, ಚಿಕ್ಕದನ್ನು ಲಕ್ಷ್ಮಣತೀರ್ಥವೆಂದೂ ಕರೆಯುತ್ತಾರೆ.

 

ಕರಿಕಾನಮ್ಮ

ದೂರ ಎಷ್ಟು?
ತಾಲೂಕು  : ಹೊನ್ನಾವರ
ತಾಲೂಕಿನಿಂದ   : ೧೬ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೧೦೧ ಕಿ.ಮೀ

ಹೊನ್ನಾವರದಿಂದ ಈಶಾನ್ಯಕ್ಕೆ ಸುಮಾರು ಏಳು ಮೈಲಿ ಅಂತರದಲ್ಲಿ ನೂರಾರು ಅಡಿ ಎತ್ತರದ ಬೆಟ್ಟದ ಮೇಲೆ ಇರುವ ಕರಿಕಾನ ಪರಮೇಶ್ವರಿ ದೇವಾಲಯವು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ದವಾಲಯದ ಎದುರು ನಿಂತರೆ ಕಡಲ ತೀರದ ರಮ್ಯನೋಟವು ನೋಡುವ ಕಣ್ಣುಗಳಿಗೆ ಆನಂದದ ಹಬ್ಬವನ್ನುಂಟು ಮಾಡುತ್ತದೆ.  ಅಷ್ಟು ಎತ್ತರದ ಶಿಖರದ ಮೇಲೂ ಸವಿಯಾದ, ತಂಪಾದ ನೀರಿರುವುದು ಇನ್ನೊಂದು ಸೋಜಿಗದ ಸಂಗತಿ.