ಪ್ರತಿಯೊಂದು ಊರಿನಲ್ಲೂ ಒಂದೊಂದು ಆಚರಣೆ-ಸಂಪ್ರದಾಯವಿರುತ್ತದೆ, ಯಾಕೆಂದರೆ ನಮ್ಮದು ಬಹು ಭಾಷೆ, ಹಲವು ಸಂಸ್ಕೃತಿಯ ನೆಲೆಬೀಡು. ಈ ನೆಲೆಯಲ್ಲಿ ಕರಾವಳಿಯ ಹಲವು ವಿಶಿಷ್ಠ ಆಚರಣೆಗಳಲ್ಲಿ ಒಂದು ಮೀನು ಹಿಡಿಯುವ ಜಾತ್ರೆ.ಅಂತೆಯೇ ಮಂಗಳೂರು ಸಮೀಪದ ಚೇಳಾಯಿರು ಖಂಡಿಗೆಯಲ್ಲೂ ಇಂಥ ಮೀನು ಹಿಡಿಯುವ ಜಾತ್ರೆ ನಡೆಯುತ್ತದೆ. ಇಲ್ಲಿ ಜಾತ್ರೆ ಮುಗಿದರೆ ಮತ್ತೆ ಕರಾವಳಿಯಲ್ಲಿ ಕೊಡಿಯೇರಿ (ನಿಶಾನೆ ಆರೋಹಣ) ಜಾತ್ರೆ ಅಥವಾ ದೈವಗಳಿಗೆ ನೇಮೋತ್ಸವ ನಡೆಯುವುದಿಲ್ಲ.

‘ಎರ್ಮಾಳ್ ಜಪ್ಪು-ಖಂಡೇವು ಅಡೆಪು’ ಎನ್ನುವುದು ಇಲ್ಲಿ ಪ್ರಚಲಿತವಿರುವ ತುಳು ಭಾಷೆಯ ನುಡಿಗಟ್ಟು. ಎರ್ಮಾಳ್ ಅಂದರೆ ಈಗ ಉಡುಪಿ ಜಿಲ್ಲೆಯಲ್ಲಿರುವ ಗ್ರಾಮ. ಖಂಡೇವು ಅಂದರೆ ಮಂಗಳೂರು ಹೊರವಲಯದ ಚೇಳಾಯಿರು ಗ್ರಾಮದ ಉಳ್ಳಾಯ ಧರ್ಮರಸು ಕ್ಷೇತ್ರ. ಎರ್ಮಾಳಿನಲ್ಲಿ ಜಾತ್ರೆಗಳಿಗೆ ಚಾಲನೆ ಸಿಗುತ್ತದೆ. ಖಂಡೇವು ಅಡೆಪು (ನೀರನ್ನು ಅಡ್ಡಗಟ್ಟು ಅಥವಾ ಬಂದ್ ಮಾಡು ಎಂದರ್ಥ)ಮೂಲಕ ಕರಾವಳಿಯ ಗ್ರಾಮಗಳಲ್ಲಿ ಕೊಡಿಯೇರಿಸಿ ನಡೆಯುವ ಜಾತ್ರೆ-ನೇಮೋತ್ಸವಗಳಿಗೆ ತೆರೆ ಬೀಳುತ್ತದೆ.

ಚೇಳಾಯಿರು ಗ್ರಾಮದ ಧರ್ಮರಸು ಕ್ಷೇತ್ರದ ಖಂಡೇವು ನೇಮೋತ್ಸವಕ್ಕೆ ತೆರೆ ಬೀಳುವುದು ಖಂಡೇವು ಕೆರೆಯಲ್ಲಿ ಮೀನು ಹಿಡಿದು ಕೆರೆಯ ನೀರಿಗೆ ಅಡ್ಡಕಟ್ಟೆ ಕಟ್ಟಿದ ಮೇಲೆ. ಇದನ್ನೇ ಖಂಡೇವು ಅಡೆಪು ಎನ್ನುವುದು.

ನಂದಿನಿ ನದಿಯ ಶಾಖೆ ಧರ್ಮರಸು ಕ್ಷೇತ್ರದ ಪಕ್ಕದಲ್ಲಿ ಕೆರೆಯರೂಪ ತಾಳಿದೆ. ಈ ಕೆರೆಯಲ್ಲಿ ವರ್ಷಕ್ಕೊಮ್ಮೆ ಮಾತ್ರ ಮೀನು ಹಿಡಿಯಲು ಅವಕಾಶ. ನೇಮೋತ್ಸವ ಸಂದರ್ಭದಲ್ಲಿ ಮೀನು ಹಿಡಿದರೆ ಮತ್ತೆ ಮುಂದಿನ ವರ್ಷ ಈ ಕೆರೆಯಲ್ಲಿ ಮೀನು ಹಿಡಿಯಲು ಅವಕಾಶ. ಇದನ್ನು ಧರ್ಮರಸು ಬೋಂಟೆ (ಧರ್ಮರಸು ಮೀನಿನ ಬೇಟೆ) ಎನ್ನಲಾಗುತ್ತದೆ. ಈ ಅಚರಣೆಯ ಹಿಂದೆ ಕತೆಯಿದೆ. ಈ ಕ್ಷೇತ್ರದಿಂದ ಪೂರ್ವಕ್ಕೆ ಅರಬ್ಬಿ ಸಮುದ್ರವಿದೆ. ಸಸಿಹಿತ್ಲು ಎಂಬ ಗ್ರಾಮದ ಮೀನುಗಾರರು ಮೀನು ಹಿಡಿಯಲು ಸಮುದ್ರಕ್ಕೆ ಹೋಗಿ ವಾಪಸಾಗುತ್ತಿದ್ದಾಗ ಬಲವಾದ ಗಾಳಿಯ ಅಬ್ಬರಕ್ಕೆ ಸಿಲುಕಿ ಮೀನುಗಾರರಿದ್ದ ಪಡವು (ದೊಡ್ಡ ದೋಣಿ) ಸಂಕಷ್ಟಕ್ಕೆ ಸಿಲುಕಿದಾಗ ಧರ್ಮರಸು ದೈವದ ದೃಷ್ಟಿ ಆ ದೋಣಿಯಮೇಲೆ ಬಿದ್ದಾಗ ಮೀನುಗಾರರು ಸಂಕಷ್ಟದಿಂದ ಪಾರಾದರಂತೆ. ಆನಂತರ ಸಸಿಹಿತ್ಲು ಗ್ರಾಮದ ಮೊಗವೀರರು (ಮೀನುಗಾರರು) ಚೇಳಾಯಿರು ಧರ್ಮರಸು ಬೋಂಟೆಗೆ ಬರುವುದು ಸಂಪ್ರದಾಯವಾಗಿ ಬೆಳೆದು ಬಂತು ಎನ್ನುವುದು ಕತೆ. ಆದ್ದರಿಂದ ಸಸಿಹಿತ್ಲು ಗ್ರಾಮಸಹಿತ ಸುತ್ತಮುತ್ತಲಿನ ಗ್ರಾಮಸ್ಥರು ಜಾತಿಮತ ಭೇದವಿಲ್ಲದೆ ಖಂಡೇವು ಬೋಂಟೆಗೆ ಬರುತ್ತಾರೆ.

ಬೆಳಕು ಹರಿವ ಮೊದಲೇ ಖಂಡೇವು ಕೆರೆಗೆ ನೂರಾರು ಮಂದಿ ಮೀನು ಹಿಡಿಯಲು ಇಳಿಯುತ್ತಾರೆ. ವರ್ಷವಿಡೀ ಕೆರೆಯಲ್ಲಿ ಬೆಳೆಯುವ ದಪ್ಪ ದಪ್ಪದ ಮೀನುಗಳು ಒಂದು ದಿನ ಬಲೆಗೆ ಬೀಳುತ್ತವೆ. ಇಲ್ಲಿನ ಮೀನುಗಳನ್ನು ವರ್ಷಕ್ಕೊಮ್ಮೆ ತಿಂದರೆ ಒಳ್ಳೆಯದು ಎನ್ನುವ ನಂಬಿಕೆಯೂ ಇದೆ. ಆದ್ದರಿಂದಲೇ ಖಂಡೇವು ಮೀನುಗಳಿಗೆ ಅಂದು ಭಾರಿ ಬೆಲೆ. ಒಂದು ಮೀನಿಗೆ ಸಾವಿರ ರೂಪಾಯಿಯಾದರೂ ಸರಿ ಖಂಡೇವು ಮೀನು ತಿನ್ನುವವರಿದ್ದಾರೆ.

ಖಂಡೇವು ಬೊಂಟೆ ಮೀನಿಗೆ ಭಾರಿ ಬೆಲೆ ಸಿಗುವುದರಿಂದ ಹಲವು ಮಂದಿಗೆ ಈದಿನ ಭಾರೀ ಸಂಪಾದನೆಯೂ ಆಗುತ್ತೆ. ನಂಬಿಕೆ-ಆಚರಣೆಯ ಜೊತೆಗೆ ಒಂದು ಸಂಸ್ಕೃತಿ ಕೂಡಾ ಇಲ್ಲಿ ಥಳುಕು ಹಾಕಿಕೊಂಡಿದೆ.