Categories
e-ದಿನ

ಏಪ್ರಿಲ್-23

ದಿನಾಚರಣೆಗಳು:

ವಿಶ್ವ ಪುಸ್ತಕ ದಿನ.

ಏಪ್ರಿಲ್ 23 ದಿನವನ್ನು ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಓದುವ ಹವ್ಯಾಸ, ಪ್ರಕಟಣೆ, ಕೃತಿ ಸ್ವಾಮ್ಯಗಳನ್ನು ವ್ಯಾಪಕಗೊಳಿಸುವ ಆಶಯದಿಂದ ಯುನೆಸ್ಕೋ ಕರೆಕೊಟ್ಟಿರುವ ಈ ಆಚರಣೆಯು ಮೊದಲ ಬಾರಿಗೆ 1955ರ ವರ್ಷದಲ್ಲಿ ಆಚರಣೆಗೊಂಡಿತು.

ಪ್ರಮುಖಘಟನಾವಳಿಗಳು:

1635: ಅಮೆರಿಕದ ಪ್ರಥಮ ಸಾರ್ವಜನಿಕ ಶಾಲೆಯಾದ ಬೋಸ್ಟನ್ ಲ್ಯಾಟಿನ್ ಸ್ಕೂಲ್ ಆರಂಭಗೊಂಡಿತು.

1914: ಮೊದಲ ಬೇಸ್ ಬಾಲ್ ಪಂದ್ಯವು ಚಿಕಾಗೋದ ರಿಗ್ಲಿ ಫೀಲ್ಡ್ ಎಂಬಲ್ಲಿ ನಡೆಯಿತು.

1967: ರಷ್ಯಾದ ಮೊದಲ ಮಾನವ ಬಾಹ್ಯಾಕಾಶ ಯಾತ್ರೆಯ ವಾಹನವಾದ ಸೋಯುಜ್ 1 ಉಡ್ಡಯನಗೊಂಡಿತು. ಸೋವಿಯತ್ ಗಗನಯಾತ್ರಿ ವ್ಲಾಡಿಮೀರ್ ಕೊಮಾರೋವ್ ಇದರ ಯಾತ್ರಿಯಾಗಿದ್ದರು.

1971: ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನದ ಸೇನೆ ಮತ್ತು ರಜಾಕರುಗಳಿಂದ ಬಾಂಗ್ಲಾದೇಶದಲ್ಲಿದ್ದ ಸುಮಾರು 3000 ಹಿಂದೂ ವಲಸೆಗಾರರ ಹತ್ಯೆ.

1978: 50ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಜಿ.ಪಿ. ರಾಜರತ್ನಂ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ಆರಂಭಗೊಂಡಿತು.

1985: ಶಾ ಬಾನೊ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಭಾರತದ ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಬಡ, ಅನಕ್ಷರಸ್ಥ ಮುಸ್ಲಿಂ ಮಹಿಳೆ ಶಾ ಬಾನೊ ತನ್ನ ವಿಚ್ಛೇದಿತ ಪತಿ ಮಹಮ್ಮದ್ ಅಹ್ಮದನಿಂದ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದಳು. ಆಕೆಯ ಪರವಾಗಿ ತೀರ್ಪು ನೀಡಿದ ಮಧ್ಯಪ್ರದೇಶ ಹೈಕೋರ್ಟ್, ವಿಚ್ಛೇದಿತ ಮಹಿಳೆಗೆ ಬದುಕಿಗೆ ಯಾವುದೇ ಆದಾಯ ಇಲ್ಲದಿದ್ದರೆ ಆಕೆಯ ಮರುಮದುವೆ ಅಥವಾ ಮರಣದವರೆಗೆ ಯಾವುದೇ ಧರ್ಮದ ಭೇದವಿಲ್ಲದೆ ಜೀವನಾಂಶ ನೀಡಬೇಕು ಎಂದು ಹೇಳಿತ್ತು.

1985: ಕೊಕಾ-ಕೋಲ ಕಂಪೆನಿಯು ತನ್ನ ತಯಾರಿಕಾ ಸೂತ್ರವನ್ನು ಬದಲಿಸಿ ಹೊಸ ಕೋಕ್ ಬಿಡುಗಡೆ ಮಾಡಿತು. ಇದಕ್ಕೆ ಪ್ರತಿಕ್ರೆಯೆ ತೀವ್ರತರವಾಗಿ ನಕಾರಾತ್ಮಕವಾಗಿದಿದ್ದರಿಂದ ಕೇವಲ ಮೂರೇ ತಿಂಗಳುಗಳಲ್ಲಿ, ಅದು ತನ್ನ ಹಿಂದಿನ ಸೂತ್ರಕ್ಕೇ ಹಿಂದಿರುಗಿತು.

2007: ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆಗಸಕ್ಕೆ ಚಿಮ್ಮಿದ ಪಿ ಎಸ್ ಎಲ್ ವಿ-ಸಿ8 ಗಗನನೌಕೆಯು, ಇಟಲಿಯ ‘ಅಗೈಲ್’ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಯಲ್ಲಿ ಪ್ರತಿಷ್ಟಾಪಿಸಿತು. ಇದು ಮೊದಲ ಬಾರಿಗೆ ವಾಣಿಜ್ಯಿಕ ಉದ್ದೇಶಕ್ಕಾಗಿ ಇಸ್ರೋ ಮಾಡಿದ ವಿದೇಶೀ ಉಪಗ್ರಹ ಉಡಾವಣೆಯಾಗಿದೆ.

ಪ್ರಮುಖಜನನ/ಮರಣ:

1858: ಜರ್ಮನ್ ಭೌತವಿಜ್ಞಾನಿ ಮ್ಯಾಕ್ಸ್ ಪ್ಲಾಂಕ್ ಅವರು ಕೀಲ್ ಎಂಬಲ್ಲಿ ಜನಿಸಿದರು. ಎನರ್ಜಿ ಕ್ವಾಂಟಾ ಕುರಿತಾದ ಸಂಶೋಧನೆಗಾಗಿ ಇವರಿಗೆ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1867: ನೊಬೆಲ್ ಪುರಸ್ಕೃತ ವೈದ್ಯಶಾಸ್ತ್ರಜ್ಞ ಜೋಹಾನೆಸ್ ಫಿಬಿಗರ್ ಅವರು ಡೆನ್ಮಾರ್ಕಿನ ಸಿಲ್ಕೆಬೋರ್ಗ್ ಎಂಬಲ್ಲಿ ಜನಿಸಿದರು. ಪೆಥಲಾಜಿಕಲ್ ಅನಾಟಮಿ ವಿಶೇಷಜ್ಞರಾದ ಅವರಿಗೆ 1926ರ ವರ್ಷದ ನೊಬೆಲ್ ವೈದ್ಯಕೀಯ ಪುರಸ್ಕಾರ ಸಂದಿತು. ಅವರು ಇಲಿಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ಜೀವಕಣಗಳನ್ನು ಗುರುತಿಸಿದ್ದರು.

1899: ಸ್ವೀಡಿಷ್ ಅರ್ಥಶಾಸ್ತ್ರಜ್ಞ ಬೆರ್ಟಿಲ್ ಒಹ್ಲಿನ್ ಅವರು ಸ್ಕೇನ್ ಕೌಂಟಿ ಬಳಿಯ ಕಿಪ್ಪನ್ ಎಂಬಲ್ಲಿ ಜನಿಸಿದರು. ಇವರಿಗೆ 1977 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತ್ತು.

1902: ಐಸ್ಲ್ಯಾಂಡ್ ದೇಶದ ಬರಹಗಾರ ಹಾಲ್ಡಾರ್ ಲ್ಯಾಕ್ಸ್ನೆಸ್ ಅವರು ರೈಕ್ ಜಾವೆಕ್ ಎಂಬಲ್ಲಿ ಜನಿಸಿದರು. ಇವರಿಗೆ 1955 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತ್ತು.

1913: ಸುಪ್ರಸಿದ್ಧ ಹಾಸ್ಯ ಬರಹಗಾರ ಬೀchi ಬಳ್ಳಾರಿ ಜಿಲ್ಲೆಯ ಹರಪನಹಳಿಯಲ್ಲಿ ಜನಿಸಿದರು. ವಿವಿಧ ರೀತಿಯ ಸಾಹಿತ್ಯಗಳಲ್ಲಿ ಕೈಯಾಡಿಸಿದ ಇವರ ಕೃತಿಗಳಲ್ಲಿ ಪ್ರಹಸನ ರೂಪದ ಹಾಸ್ಯದ ಹೊನಲು ತನ್ನ ನಿರಂತರ ಪ್ರವಹಿನಿಯನ್ನು ಹರಿಸಿದೆ. 1980ರಲ್ಲಿ ನಿಧನರಾದ ಇವರ ‘ತಿಂಮನ ತಲೆ’ ಕೃತಿಗೆ ಮದರಾಸು ಸರಕಾರದ ಪ್ರಶಸ್ತಿ ಮತ್ತು ‘ಚಿನ್ನದ ಕಸ’ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿಗಳು ಸಂದಿದ್ದವು.

1938: ಪ್ರಸಿದ್ಧ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೇಪಲ್ಲೇ ಎಂಬ ಗ್ರಾಮದಲ್ಲಿ ಜನಿಸಿದರು. ನಾಲ್ಕು ಬಾರಿ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಒದಿಶಾ ರಾಜ್ಯದ ಪ್ರಶಸ್ತಿಗಳೂ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ. ಪದ್ಮ ಪ್ರಶಸ್ತಿಗಳ ವಿಚಾರದಲ್ಲಿ ಪ್ರಾದೇಶಿಕ ಅಸಮಾನತೆ ಇರುವುದನ್ನು ವಿರೋಧಿಸಿದ ಅವರು ತಮಗೆ ಸಂದ ಪದ್ಮಭೂಷಣ ಪ್ರಶಸ್ತಿಯನ್ನು ಒಪ್ಪಿಕೊಳಲಿಲ್ಲ.

1977: ಭಾರತೀಯ-ಅಮೇರಿಕನ್ ನಟ ‘ಕಲ್ ಪೆನ್’ ಎಂದು ಪ್ರಸಿದ್ಧರಾದ ಕಲ್ಪೇನ್ ಸುರೇಶ್ ಮೋದಿ ಅವರು ನ್ಯೂಜೆರ್ಸಿಯ ಮಾಂಟ್ ಕ್ಲೈರ್ ಎಂಬಲ್ಲಿ ಜನಿಸಿದರು.

1992: ನಿರ್ದೇಶಕ, ನಿರ್ಮಾಪಕ, ಚಿತ್ರಕತೆಗಾರ, ಸಂಗೀತ ಸಂಯೋಜಕ, ಕತೆಗಾರ ಮತ್ತು ಕಲಾ ವಿನ್ಯಾಸಕ – ಈ ಎಲ್ಲವೂ ಒಂದುಗೂಡಿದ್ದ ಅತ್ಯದ್ಭುತ ಪ್ರತಿಭೆಎನಿಸಿದ್ದ ಸತ್ಯಜಿತ್ ರೇ ಕೋಲ್ಕತ್ತಾದಲ್ಲಿ ನಿಧನರಾದರು. 1978ರ ವರ್ಷದಲ್ಲಿ ಬರ್ಲಿನ್ ಚಿತ್ರೋತ್ಸವದ ನಿರ್ವಾಹಕ ಸಮಿತಿಯು ಸತ್ಯಜಿತ್ ರೇ ಅವರನ್ನು ವಿಶ್ವದ ಮೂರು ಶ್ರೇಷ್ಠ ನಿರ್ದೇಶಕರಲ್ಲೊಬ್ಬರು ಎಂದು ಕೊಂಡಾಡಿತು. 1992ರ ವರ್ಷದಲ್ಲಿ ಅವರಿಗೆ ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಿತಿಯು ಜೀವಮಾನದ ಸಾಧನೆಯ ಗೌರವವನ್ನು ನೀಡಿತು. ಅವರಿಗೆ ಸಂದಿರುವ ಇತರ ಪ್ರಶಸ್ತಿಗಳೆಂದರೆ ಪ್ರಾನ್ಸ್ ದೇಶದ ಪ್ರತಿಷ್ಟಿತ ‘ಲೆಜೆನ್ ಡಿ ಹಾನರ್’ ಮತ್ತು ನಮ್ಮ ದೇಶದ ‘ಭಾರತರತ್ನ’ ಪ್ರಶಸ್ತಿಗಳು.

2007: ಸೋವಿಯತ್ ಒಕ್ಕೂಟದ ವಿಭಜನೆಯ ನಂತರದ ರಷ್ಯಾದ ಪ್ರಥಮ ಚುನಾಯಿತ ಅಧ್ಯಕ್ಷರಾಗಿದ್ದ ಬೋರಿಸ್ ಯೆಲ್ಸಿನ್ ತಮ್ಮ 76ನೆಯ ವಯಸ್ಸಿನಲ್ಲಿ ನಿಧನರಾದರು.