ಈ ಸಂಕಲನದ ಪ್ರಬಂಧಗಳಲ್ಲಿನ ನಾಲ್ಕು ಲೇಖಕರು ಇಂದು ಈ ಸಂಕಲನವನ್ನು ನೋಡಲು ನಮ್ಮೊಂದಿಗಿಲ್ಲ ಎಂಬುದು ವಿಷಾದನೀಯ ಮತ್ತು ನನಗೆ ಅತ್ಯಂತ ದುಃಖಕರ ಸಂಗತಿಯಾಗಿದೆ. ಮೊದಲು ಡಿ.ಆರ್.ನಾಗರಾಜ್, ತದನಂತರ ಮುರಾರಿ ಬಲ್ಲಾಳ್ ಅವರ ನಂತರ ಕೆ.ವಿ. ಸುಬ್ಬಣ್ಣ ಮತ್ತು ಇತ್ತೀಚಿಗೆ ಪೂರ್ಣಚಂದ್ರ ತೇಜಸ್ವಿ ನಾವು ನಿರೀಕ್ಷಿಸುವುದಕ್ಕೆ ಮೊದಲೇ ನಮ್ಮನಗಲಿದ್ದಾರೆ. ಅವರ ಕಾಲವಶದಿಂದಾಗಿ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ನನಗೆ ಡಿ.ಆರ್. ನಾಗರಾಜ್ ಮತ್ತು ಮುರಾರಿ ಬಲ್ಲಾಳ್ ಅವರು ವೈಯಕ್ತಿಕವಾಗಿ ಗೊತ್ತಿದ್ದರು. ಈ ಸಂಕಲನದ ಬಗ್ಗೆ ಅವರ ಜೊತೆಯಲ್ಲಿ ಚರ್ಚೆ ಮಾಡಿದ್ದೆ. ಅವರಿಬ್ಬರೂ ಈ ಪ್ರಯತ್ನವನ್ನು ತುಂಬು ಹೃದಯದಂದ ಬೆಂಬಲಿಸಿದ್ದರು. ಕೆ.ವಿ. ಸುಬ್ಬಣ್ಣ ಅವರು ಒಂದು ಟಿಪ್ಪಣಿಯನ್ನು ಬರೆದುದಲ್ಲದೆ ಅವರ ಪ್ರಬಂಧದ ಅನುವಾದಕ್ಕೆ ಅನುಮತಿ ಕೇಳಿ ನನ್ನ ಪತ್ರ ಹೋದ ತಕ್ಷಣ ನನಗೆ ಫೋನು ಮಾಡಿ ಮಾತನಾಡಿದ್ದರು. ನನ್ನ ಈ ಪ್ರಯತ್ನಕ್ಕೆ ಬೆಂಬಲ ನೀಡಿದ್ದ, ಆದರೆ ಕೃತಿಯು ಸಿದ್ಧವಾಗುವುದರೊಳಗೆ ಮೃತರಾದವರಲ್ಲಿ ಮತ್ತೊಬ್ಬ ಮುಖ್ಯರು ಎಂ.ಎನ್. ಶ್ರೀನಿವಾಸ್. ಅವರು ಕನ್ನಡದಲ್ಲಿ ಏನನ್ನೂ ಬರೆಯಲಿಲ್ಲ. ಆದರೆ ಕನ್ನಡ ಜಗತ್ತಿನ ಸಂವೇದನಾ ಶೀಲತೆಯನ್ನು ಮತ್ತು ಸೂಕ್ಷ್ಮತೆಗಳನ್ನು ವಿಶಾಲವಾದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಹೃದಯಿಗಳಿಗೆ ಪರಿಚಯಿಸಿದ್ದಾರೆ. ಈ ನನ್ನ ಪ್ರಯತ್ನಕ್ಕೆ ಬೆಂಬಲ ನೀಡಿದ ಅವರಿಗೆ ವೈಯುಕ್ತಿಕವಾಗಿ ನಾನು ವಿಶೇಷವಾಗಿ ಋಣಿಯಾಗಿದ್ದೇನೆ. ಮೊದಲು ಈ ಯೋಜನೆ ಬಗ್ಗೆ ಚರ್ಚೆ ಮಾಡಿದಾಗ ಯು.ಆರ್. ಅನಂತಮೂರ್ತಿ ಅವರು ಪ್ರೋತ್ಸಾಹದ ಮಾತುಗಳನ್ನಾಡಿದರು ಮತ್ತು ಯೋಜನೆಯ ಬಗ್ಗೆ ಆಗಿಂದಾಗ್ಗೆ ವಿಚಾರಿಸಿಕೊಳ್ಳುತ್ತಿದ್ದರು. ಅವರಿಗೆ ನನ್ನ ವಂದನೆಗಳು. ಆ ಸಂಕಲನಕ್ಕೆ ಆಯ್ಕೆ ಮಾಡಿಕೊಂಡ ಪ್ರಬಂಧಗಳ ಪ್ರಕಟಣೆಗೆ ಅನುಮತಿ ನೀಡಿದ ಎಲ್ಲ ಲೇಖಕರಿಗೆ ಮತ್ತು ಸಹಕಾರ ನೀಡಿದ ಅನುವಾದಕರಿಗೆ ಹಾಗೂ ಕೃತಿಯ ಪ್ರಕಟಣೆ ತಡವಾದರೂ ಸಹಿಸಿಕೊಂಡ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ಸಂಕಲನವು ಅದಕ್ಕೆ ಸಂಬಂಧಿಸಿದ ಎಲ್ಲ ನಿಷ್ಕೃಷ್ಟೆಯನ್ನು ಗೆದ್ದಿದೆ ಎಂದು ಭಾವಿಸಿದ್ದೇನೆ. ಈ ದಿಶೆಯಲ್ಲಿ ಭಾರತೀಯ ಸಮಾಜವಿಜ್ಞಾನಗಳನ್ನು ಕಾಡುತ್ತಿರುವ ವಿವಿಧ ಬಗೆಯ ವಿಭಜನೆಗಳನ್ನು (ಭಾಷಿಕ, ಸಾಂಸ್ಥಿಕ, ಪ್ರಾದೇಶಿಕ, ಸೈದ್ಧಾಂತಿಕ, ಆಚರಣೆ) ಮೀರಿದ ಮೊದಲ ಪ್ರಯತ್ನ ಇದು ಎಂದು ಸಹೃದಯಿಗಳು ಭಾವಿಸುತ್ತಾರೆಂದು ತಿಳಿದಿದ್ದೇನೆ. ಈ ಸಂಕಲನದ ಸಿದ್ಧತೆಯ ಕಾರ್ಯ ಬೆಂಗಳೂರಿನ ನ್ಯಾಷನಲ್ ಇನ್ಸಿಟಿಟ್ಯೂಟ್ ಫಾರ್ ಅಡ್ವಾನ್ಸಡ್ ಸ್ಟಡೀಸ್‌ನಲ್ಲಿ ಆರಂಭವಾಯಿತು. ಪ್ರಕಾಶಕರ ಹುಡುಕಾಟದಲ್ಲಿ ಇದು ಇಲ್ಲಿಯೇ ಕಾಲ ತಳ್ಳುತ್ತಿತ್ತು. ಅನೇಕ ವರ್ಷಗಳ ಕಾಲ ‘ಯೋಜನೆ ಪ್ರಗತಿಯಲ್ಲಿದೆ’ ಎಂಬ ಮಾತನ್ನು ಹೇಳಿಕೊಂಡು ಬರಬೇಕಾಯಿತು. ಈ ನನ್ನ ಕಾರ್ಯಕ್ಕೆ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ ನಮ್ಮ ಸಂಸ್ಥೆಯ ನಿರ್ದೇಶಕರಾದ ಡಾ. ಕೆ. ಕಸ್ತೂರಿರಂಗನ್ ಅವರಿಗೆ ನನ್ನ ವಂದನೆಗಳು ಸಲ್ಲಬೇಕು. ಈ ಯೋಜನೆಯಲ್ಲಿ ಬಹುಮುಖಿ ನೆಲೆಗಳಲ್ಲಿ ಪಾತ್ರ ವಹಿಸಿದ ಮತ್ತು ಅದರ ಸಲಹೆಗಾರರಾಗಿ, ಅನುವಾದಕರಾಗಿ ಮತ್ತು ವಿಮರ್ಶಕರಾಗಿ ಕೆಲಸ ಮಾಡಿದ ಎಂ.ಜಿ. ನರಸಿಂಹನ್ ಅವರನ್ನು ಇದರ ಜಂಟಿ ಸಂಪಾದಕರೆಂದು ಪರಿಗಣಿಸಬಹುದು. ಅವರಿಗೆ ನಾನು ಋಣಿಯಾಗಿದ್ದೇನೆ. ಕ್ಯಾರೊಲ್ ಉಪಾಧ್ಯ ಅವರು ನನ್ನ ಸಹೋದ್ಯೋಗಿಯೂ ಹೌದು ಮತ್ತು ಸ್ನೇಹಿತರೂ ಹೌದು. ಅದರಲ್ಲಿ ಅವರು ಒಂದು ಮಾದರಿ. ಸಾಮಾಜಿಕ ಮಾನವಶಾಸ್ತ್ರದಲ್ಲಿ ಸಂಶೋಧನೆ ಮತ್ತು ಅದರ ಬೋಧನೆಗೆ ಸಂಬಂಧಿಸಿದ ಅನೇಕ ಸವಾಲುಗಳನ್ನು ಎದುರಿಸುವ ಬಗ್ಗೆ ಅವರ ಜೊತೆಯಲ್ಲಿ ಚರ್ಚಿಸಿದ್ದೇನೆ ಮತ್ತು ಕೆಲಸ ಮಾಡಿದ್ದೇನೆ. ‘ಪ್ರಗತಿಯಲ್ಲಿದೆ’ ಎಂಬ ಹಣೆ ಪಟ್ಟಿಯನ್ನು ಹಚ್ಚಿಕೊಂಡಿದ್ದ ಪ್ರಸ್ತುತ ಯೋಜನೆಯ ಹಸ್ತಪ್ರತಿಯನ್ನು ಶೀಘ್ರ ಮುಗಿಸುವಂತೆ ಕಾಲ ಕಾಲಕ್ಕೆ ಒತ್ತಾಯಿಸುತ್ತಿದ್ದ ಸಾರಾ ಜೊಸೆಫ್ ಅವರು ಇವರ ಮೊದಲ ಪರಿಶೀಲಕರಾಗಿದ್ದಾರೆ. ಜಾನಕಿ ನಯ್ಯರ್, ರಮೇಶ್ ಬೈಯಿರಿ, ಗುರುರಾವ್ ಬಾಪಟ್ ಮತ್ತು ಜೆ. ದೇವಿಕಾ ಅವರು ತೀಕ್ಷ್ಣವಾದ ವಿಮರ್ಶೆ ಮಾಡಿದ್ದಾರೆ ಮತ್ತು ಅವರ ಸಲಹೆಗಳು ಈ ಪ್ರಾಸ್ತಾವಿಕ ಪ್ರಬಂಧವನ್ನು ಪರಿಷ್ಕರಿಸುವಲ್ಲಿ ನೆರವಾಗಿವೆ. ಅವರೆಲ್ಲರಿಗೂ ಮತ್ತು ನನ್ನ ಸ್ನೇಹಿತರಾದ ರೀಟಾ ರತ್ನಮ್, ದೀಪ್ತಿ ಪ್ರಿಯಾ ಮಲ್ಹೋತ್ರ, ಡಿ.ಡಿ. ನಂಪೂರ್ತ್ರಿ ಮತ್ತು ಸುಗುತ ಶ್ರೀನಿವಾಸರಾಜು ಅವರಿಗೆ ಪ್ರಸ್ತುತ ಯೋಜನೆಯು ಎಷ್ಟೇ ವಿಳಂಬವಾದರೂ ಮುಂದುವರಿಸುವಂತೆ ಪ್ರೋತ್ಸಾಹ ನೀಡಿದ್ದಕ್ಕೆ ವಂದನೆಗಳನ್ನು ಹೇಳುತ್ತೇನೆ.

ಈ ಸಂಕಲನದ ಇಂಗ್ಲಿಷ್ ಆವೃತ್ತಿಯನ್ನು ಪ್ರಕಟಿಸಿರುವ ನವದೆಹಲಿಯ ದಿ ಬುಕ್ ರಿವಿವ್ಯೂ ಪ್ರೆಸ್‌ನ ಉಮಾ ಅಯ್ಯಂಗಾರ್‌ ಅವರು ಯೋಜನೆಯು ವಿಳಂಭವಾದರೂ ಸಹಿಸಿಕೊಂಡಿದ್ದಾರೆ ಮತ್ತು ಅದರ ಕನ್ನಡ ಆವೃತ್ತಿಯನ್ನು ಪ್ರಕಟಿಸಲು ಅನುಮತಿ ನೀಡಿದ್ದಾರೆ. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಇದರಕನ್ನಡ ಆವೃತ್ತಿಯ ಹಸ್ತಪ್ರತಿಯನ್ನು ತಮ್ಮ ಪ್ರಸಾರಾಂಗಕ್ಕೆ ಸಲ್ಲಿಸಲು ಅನುಮತಿ ನೀಡಿದ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಎ. ಮುರಿಗೆಪ್ಪ ಅವರಿಗೆ ಮತ್ತು ಈ ಪ್ರಾಸ್ತಾವಿಕ ಪ್ರಬಂಧವನ್ನು ಕನ್ನಡಕ್ಕೆ ಅನುವಾದ ಮಾಡಿ ಮತ್ತು ಇದರ ಪ್ರಕಟಣೆಯನ್ನು ಸಾಧ್ಯಮಾಡಿಕೊಟ್ಟ ಡಾ. ಟಿ.ಆರ್. ಚಂದ್ರಶೇಖರ ಅವರಿಗೆ ನಾನು ಆಭಾರಿಯಾಗಿದ್ದೇನೆ. ಈ ಕಾರ್ಯದಲ್ಲಿ ಬೆಂಬಲ ನೀಡಿದ ಗೆಳೆಯರಾದ ಕನ್ನಡ ವಿಶ್ವವಿದ್ಯಾಲಯದ ಡಾ. ರಹಮತ್ ತರೀಕೆರೆ ಡಾ. ಮೊಗಳ್ಳಿ ಗಣೇಶ್, ಡಾ. ಎಚ್.ಡಿ. ಪ್ರಶಾಂತ್ ಮತ್ತು ಕೆ.ಸಿ. ಚನ್ನಮ್ಮ ಅವರಿಗೆ ನನ್ನ ವಂದನೆಗಳು ಸಲ್ಲಬೇಕು. ಸಮಾಜ ತಕ್ಕುದಾದ ರೀತಿಯಲ್ಲಿ ಸಬಲಗೊಳಿಸುವ ನಮ್ಮ ಸಮಷ್ಟೀ ಪ್ರಯತ್ನಕ್ಕೆ ಪ್ರಸ್ತುತ ಸಂಕಲನವು ಕಾಣಿಕೆ ನೀಡುತ್ತದೆ ಎಂದು ನಾನು ಭಾವಿಸಿದ್ದೇನೆ.

ಪ್ರಸಾರಾಂಗ ನಿರ್ದೇಶಕರಾದ ಡಾ. ಎ. ಸುಬ್ಬಣ್ಣ ರೈ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ, ಕಲಾವಿದರಾದ ಶ್ರೀ ಕೆ.ಕೆ. ಮಕಾಳಿ ಮತ್ತು ಅಕ್ಷರ ಸಂಯೋಜಿಸಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್‌ನ ಶ್ರೀಮತಿ ರಶ್ಮಿ ಕೃಪಾಶಂಕರ್‌ಅವರಿಗೆ ಹಾಗೂ ಮುದ್ರಕರಿಗೆ ಕೃತಜ್ಞತೆಗಳು.

.ಆರ್. ವಾಸವಿ
ಬೆಂಗಳೂರು