ಪ್ರಾಚೀನ ಕನ್ನಡ ಸಾಹಿತ್ಯದ ಕೆಲವು ಕಾವ್ಯಗಳೂ ಪುರಾಣಗಳೂ ಒಂದಕ್ಕಿಂತ ಹೆಚ್ಚು ಸಲ ಸಂಪಾದಿತವಾಗಿ ಪ್ರಕಟವಾಗಿರುವುದು, ಹಾಗೆ ಪ್ರಕಟವಾದವು ಪ್ರಚಾರದಲ್ಲಿರುವುದು ತಿಳಿದ ಸಂಗತಿಯೇ ಆಗಿದೆ. ಆದರೆ ಬಹುಮಟ್ಟಿಗೆ ಎಲ್ಲವೂ ಮಿಶ್ರಪಾಠಸಂಪ್ರದಾಯದ ಪರಿಷ್ಕರಣಗಳಾಗಿ (composite versions) ಸಿದ್ಧವಾಗಿರುವುದೂ ಕಾರಣವಾಗಿ, ಬೇರೆ ಬೇರೆ ಅರೆಕೊರೆಗಳಿಂದಾಗಿ ತೃಪ್ತಿಕರ ಪರಿಷ್ಕರಣಗಳಾಗಿಲ್ಲವೆನ್ನುವುದು ಕೂಡ ತಿಳಿದ ಸಂಗತಿಯೇ. ಇದಕ್ಕೆ ಅನೇಕ ಕಾರಣಗಳಿವೆ.

‘ಚಾವುಂಡರಾಯಪುರಾಣ’, ‘ಸಮಯಪರೀಕ್ಷೆ’ (ಧಾರವಾಡ), ‘ಧರ್ಮನಾಥಪುರಾಣ’(ಮಧುರಕವಿ ಕೃತ), ‘ಸಾಳ್ವಭಾರತ’ ಇಂತಹ ಕೆಲವು ವಾಚನಕ್ಕೆ ಒದಗದ ರೀತಿಯಲ್ಲಿ, ಅಭಿಪ್ರಾಯವೇ ವಿಶದವಾಗದ ರೀತಿಯಲ್ಲಿ ಹೇಗೋ ಒಂದು ರೀತಿಯಲ್ಲಿ ಮುದ್ರಣಗೊಂಡಿವೆ. ಸಂಪಾದಕೀಯ ವಿಚಕ್ಷಣೆಯ ಕೊರತೆ ಎದ್ದು ತೋರುತ್ತದೆ. ಇಂಥವು ನಿಸ್ಸಂಶಯವಾಗಿ ಶುದ್ಧರೂಪದಲ್ಲಿ ಎದ್ದು ನಿಲ್ಲಬೇಕಾಗಿವೆ.

ಜನ್ನನ ‘ಅನಂತನಾಥ ಪುರಾಣ’, ರನ್ನನ ‘ಅಜಿತಪುರಾಣ’ ‘ಗದಾಯುದ್ಧ’ಗಳು, ನೇಮಿಚಂದ್ರನ ‘ಅರ್ಧನೇಮಿ ಪುರಾಣ’ ಈ ಕೆಲವು ಮೇಲೆ ಹೇಳಿದವುಗಳಂತಲ್ಲದೆ ಇದ್ದರೂ, ಅನೇಕ ಕಡೆಗಳಲ್ಲಿ ಅಭಿಪ್ರಾಯವಿಶದತೆ ಸಾಳದೆ ಬಗೆಬಗೆಯ ಪಾಠಸಮಸ್ಯೆಗಳನ್ನು ಎಬ್ಬಿಸುತ್ತಿವೆ. ಕೆಲವು ಕೃತಿಗಳಿಗೆ ಹೊಸಗನ್ನಡ ಗದ್ಯರೂಪಗಳನ್ನು ಬರಸಲು ಕನ್ನಡಸಾಹಿತ್ಯ ಪರಿಷತ್ತಿನ ಹಳಗನ್ನಡ ಕಾವ್ಯಗಳ ಪ್ರಕಟನೆಯ ಯೋಜನಾಸಮಿತಿಗೆ ಸಾಧ್ಯವಾಗದೆ ಹೋಗಿರುವುದೂ ಈ ಕಾರಣದಿಂದಲೇ ಎನ್ನಬೇಕು. ಈ ಗುಂಪಿನ ಕೃತಿಗಳಲ್ಲಿ ನೇರ್ಪಡಬೇಕಾದ ಅಂಶಗಳಲ್ಲಿ ಱ ರಕಾರ ೞ ಳಗಳ ಅವ್ಯವಸ್ಥೆ, ಮುದ್ರಣಸ್ಖಾಲಿತ್ಯ, ಪ್ರಕ್ಷೇಪಗಳು, ನಷ್ಟಪ್ರಾಯ ಮತ್ತು ಕ್ಲಿಷ್ಟ ಶಬ್ದಗಳ ಪ್ರಚುರತೆ, ಆಧಾರಪ್ರತಿಯ ಆಯ್ಕೆಯಲ್ಲಿ ವಿಚಕ್ಷಣೆ ಇಲ್ಲದಿರುವುದು, ಕಥಾಸಂದರ್ಭಗಳೇ ಸರಿಯಾಗಿ ಅರ್ಥವಾಗದಿರುವುದು, ಛಂದಸ್ಸುಗಳನ್ನು ಸರಿಯಾಗಿ ಗುರುತಿಸದಿರುವುದು ಇತ್ಯಾದಿಗಳೆಲ್ಲ ಸೇರಿವೆ. ಅಲ್ಲದೆ ಈಗ ಉಕ್ತವಾದ ಈ ಯಾವ ಕೃತಿಗೂ ಸರಿಯಾದ ಪೀಠಿಕೆಯನ್ನು ಬರೆಯಲಾಗಿಲ್ಲವೆನ್ನುವುದನ್ನೂ ಗಮನಿಸಬೇಕು.

ಪ್ರತ್ಯೇಕವಾಗಿ ‘ಕುಮಾರವ್ಯಾಸಭಾರತ’ ಹಾಗೂ ಸರ್ವಜ್ಞನ ವಚನಗಳ ಸವಿಮರ್ಶ ಪರಿಷ್ಕರಣಗಳ ಬಗ್ಗೆ ಇಲ್ಲಿ ಹೇಳಬೇಕು:

ಸಂಕ್ಷಿಪ್ತ ಹಾಗೂ ವಿಸ್ತೃತಪಾಠಗಳಿರುವ ಈ ಎರಡು ಶ್ರೇಷ್ಠ ಸಾಹಿತ್ಯಕೃತಿಗಳ ಬಗೆಗೆ, ಹಾಗೆಯೇ ಹಲವು ತೆರನ ಪಾಠಸಮಸ್ಯೆಗಳ ವಿಷಯವಾಗಿ ಚರ್ಚೆ ನಡೆದಿರುವ ಆ ಕೃತಿಗಳ ಬಗೆಗೆ ಗಾಢವಾದ ಚಿಂತನೆ, ಅಭ್ಯಾಸ, ಪರಿಶ್ರಮಗಳ ಅನ್ವಯ ಅವಶ್ಯವಾಗಿದೆ. ‘ಕುಮಾರವ್ಯಾಸಭಾರತ’ದ ಹಲವು ಪರಿಷ್ಕರಣಗಳು ಪ್ರಚಲಿತವಿದ್ದು, ಇವುಗಳಲ್ಲಿ ಹೆಚ್ಚಿನವು ಒಂದು ತೆರನಾಗಿ ಜನಪ್ರಿಯ ಆವೃತ್ತಿಗಳೆಂದು ಹೇಳುವಂಥವು. ‘ಕುಮಾರವ್ಯಾಸಭಾರತ’ದ ಪರಿಷ್ಕರಣಗಳ ಬಗೆಗೆ ಹಾಗೂ ಸವಿಮರ್ಶಪರಿಷ್ಕರಣದ ಅಗತ್ಯ ಮತ್ತು ರೂಪರೇಖೆಗಳ ಬಗೆಗೆ ಪ್ರತ್ಯೇಕವಾಗಿ, ವಿಸ್ತೃತವಾಗಿ ಈಗಾಗಲೇ ಚರ್ಚಿಸಿದೆ (ನೋಡಿ: ‘ಶಾಸ್ತ್ರೀಯ’-೧, ೧೯೯೯, ಪುಟ ೧೪೫-೧೫೪, ೧೫೫-೧೬೯). ಇವನ್ನು ಪರಿಶೀಲಿಸಿ, ಅಲ್ಲಿಯ ಸಲಹೆ ಸೂಚನೆಗಳನ್ನು ಸೂಕ್ತವಾಗಿ ಅನ್ವಯಿಸಿ ಈ ಕೆಲಸದಲ್ಲಿ ಮುಂದುವರಿಯುವುದು ಸಾಧ್ಯವಿದೆ.

ಸವಿಮರ್ಶಪರಿಷ್ಕರಣದ ಚಿಕಿತ್ಸೆ ಬೇಕಾಗಿರುವ ಇನ್ನೊಂದು ಕೃತಿಯೆಂದರೆ, ಸರ್ವಜ್ಞರನ ಪದಗಳು. ಇಲ್ಲಿ ಪಾಠಭೇದ, ಪಾಠಮಿಶ್ರಣ, ಪಾಠಯೋಜನೆ, ಪಾಠವಿಸ್ತರಣೆ ಇತ್ಯಾದಿ ಹಲವು ವಿಧದ ತೊಡಕುಗಳನ್ನು ಪರಿಹರಿಸಿಕೊಂಡು ಪಾಠನಿರ್ಣಯವನ್ನು ಮಾಡಬೇಕಾಗಿರುತ್ತದೆ; ಅಂಕಿತದ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾಗಿದೆ. ಈಗಾಗಲೇ ಹಲವು ಸಂಪಾದಕರ ಪರಿಷ್ಕರಣಗಳು ಸಿದ್ಧವಾಗಿದ್ದರೂ, ಸರ್ವಜ್ಞನ ಪದಗಳ ಅಧಿಕೃತ ಆವೃತ್ತಿ ಇದೇ ಎಂದು ಹೇಳುವ ಮಟ್ಟಿಗೆ ಯಾವುದೂ ಮನ್ನಣೆಗೆ ಪಾತ್ರವಾಗಿಲ್ಲ. ಪ್ರಾದೇಶಿಕತೆ, ಪ್ರಾಚೀನತೆ (ಹಸ್ತಪ್ರತಿಯ ಸಿದ್ಧತೆ), ಭಾಷೆ ಛಂದಸ್ಸುಗಳು ಮೊದಲಾದ ಸಂಗತಿಗಳನ್ನು ಆಧರಿಸಿ, ಪದಗಳ ನೈಜ ಛಂದಸ್ಸಿನ ಆಕೃತಿಯ ನಿರ್ಣಯದೊಂದಿಗೆಈ ಕೆಲಸ ಮಾಡಬೇಕಾಗಿದೆ. ಛಂದಸ್ಸಿನ ಆಕೃತಿ ಎಂದರೆ ಸರ್ವಜ್ಞನ ಪದಗಳು ಅಂಶಛಂಧಸ್ಸಿನವೇ, ಮಾತ್ರಾಛಂದಸ್ಸಿನವೇ ಎಂಬುದರ ಸ್ವರೂಪನಿರ್ಣಯ.