ಈ ಧಾರೆಯಲ್ಲಿ ಡಿ.ಎನ್. ಶಂಕರ್ ಭಟ್, ಷ. ಶೆಟ್ಟರ್, ಕೆ.ವಿ.ನಾರಾಯಣ, ಎಂ.ಚಿದಾನಂದಮೂರ್ತಿ, ಷೆಲ್ಡನ್ ಪೋಲಾಕ್ ಮೊದಲಾದವರ ಮಾದರಿಗಳನ್ನು ಚರ್ಚಿಸಬೇಕೆನಿಸುತ್ತದೆ. ಇವರ ‘ಸಂಶೋಧನೆ’ಗಳಿಗೆ ಒಂದು ಭಿನ್ನ ಪಂಥವಾಗಬಲ್ಲ ಸ್ವರೂಪವಿದೆ. ಕನ್ನಡ ನಾಡು – ನುಡಿ ಕುರಿತ ಸಂಶೋಧನೆ (ಅಧ್ಯಯನ) ಎಂದು ಇದನ್ನು ಕರೆದುಕೊಳ್ಳಬಹುದು. ಚಿಂತನಾ ಪ್ರಧಾನವಾದ ಮತ್ತು ಅನ್ವಯಿಕವಾದ ಆಚಾರವಾದಿ ಸಂಶೋಧನೆಯಿದು. ಹಾಗೆ ನೋಡಿದರೆ ಈ ಧಾರೆಯಲ್ಲಿ ಥಿಯರಿಟಿಕಲ್ ರಿಸರ್ಚ್ – ಮತ್ತು ಪಾಲಿಸಿ ರಿಸರ್ಚ್‌ಗಳೆರಡೂ ಕಲಸಿಕೊಂಡಿವೆ. {ಸಂಶೋಧನೆಯನ್ನು ತಾತ್ವಿಕ ಸಂಶೋಧನೆ ಮತ್ತು ಅನ್ವಯಿಕ ಸಂಶೋಧನೆ (ಐಡಿಯಲಾಜಿಕಲ್ ರಿಸರ್ಚ್ ಮತ್ತು ಪಾಲಿಸಿ ರಿಸರ್ಚ್) ಎಂದು ಎರಡು ರೀತಿಯಾಗಿ ವರ್ಗೀಕರಿಸಿಕೊಳ್ಳುವುದುಂಟು.} ಅಸ್ಮಿತೆಯ ಹುಡುಕಾಟ, ಸ್ವಯದ ಮಂಡನೆ ಮತ್ತು ಚರಿತ್ರೆಯ ಮರುಕಟ್ಟುವಿಕೆ ಈ ಮೂರೂ ಈ ಧಾರೆಯಲ್ಲಿ ಮುಪ್ಪುರಿಗೊಂಡಿವೆ. ೧೯೭೦ರಿಂದ ಶಂಕರಭಟ್ಟರು ಬರೆಯುತ್ತ ಬಂದಿದ್ದಾರೆ. ಇವರ ಚಿಂತನೆಗಳು ಭಾಷೆಯನ್ನು ಚಾರಿತ್ರಿಕವಾಗಿ ಕಟ್ಟಿಕೊಳ್ಳುವ ಜೊತೆಗೆ ಅದರ ಸಾಮಾಜಿಕತೆ, ಅನನ್ಯತೆ, ಮತ್ತು ಪ್ರಜಾಪ್ರಭುತ್ವೀಯ ಬಳಕೆಯ ಬಗ್ಗೆ ಅನ್ವಯಿಕ ಸೂತ್ರಗಳನ್ನು ಮಂಡಿಸುತ್ತವೆ. ಈಗಾಗಲೆ ರಚಿತವಾಗಿರುವ ಕನ್ನಡ ಭಾಷೆಯ ಚರಿತ್ರೆಯನ್ನು ಶಂಕರಭಟ್ಟರು ಕಲ್ಪಿತ ಮತ್ತು ರಚಿತ ಎರಡೂ ನೆಲೆಯಿಂದ ಮರುಕಟ್ಟಿದ್ದಾರೆ. ಸಂಸ್ಕೃತದ ಯಾಜಮಾನ್ಯದಿಂದ ಕನ್ನಡ ಕಲಿಕೆ ಮತ್ತು ಬಳಕೆಯನ್ನು ಬಿಡುಗಡೆಗೊಳಿಸುವ ದೊಡ್ಡ ಇರಾದೆ ಇವರ ಅಧ್ಯಯನಗಳಿಗೆ ಇದೆ. ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ ಎನ್ನುವುದು ಕೇವಲ ಬೇಡಿಕೆ ಆಗದೆ ಅದನ್ನು ತಾವೆ ಆಗುಮಾಡುವ ದೃಷ್ಟಿಯಿಂದ ಕನ್ನಡ ಸೊಲ್ಲರಿಮೆ – ೧, ೨ನ್ನು ಭಟ್ಟರು ಬರೆದಿದ್ದಾರೆ. ಅದು ಇನ್ನೂ ಮುಗಿದಿಲ್ಲ. (ಈ ಹಿನ್ನೆಲೆಯಲ್ಲಿ ಸ್ವತಃ ಶಂಕರಭಟ್ಟರೆ ತಮ್ಮ ತತ್ವಗಳನ್ನು ಆಚರಣೆ ಮಾಡುತ್ತಿದ್ದಾರೆ.) ಇದೇ ನೆಲೆಯಲ್ಲಿ ಇವರು ಪ್ರತಿಪಾದಿಸಿರುವ ಕನ್ನಡ ಲಿಪಿಬಳಕೆಯ ಸೂತ್ರಗಳು ಮತ್ತು ಕನ್ನಡ ವ್ಯಾಕರಣದ ಶೈಕ್ಷಣಿಕ ಕಲಿಕೆ ಹಾಗೂ ಬಳಕೆ ಇವನ್ನು ನಮ್ಮ ಸಮಾಜ ಇನ್ನೂ ಮುಕ್ತ ಮನಸ್ಸಿನಿಂದ ಒಪ್ಪಿಕೊಂಡಿಲ್ಲ. ಅದಕ್ಕೆ ಹಲವು ರೀತಿಯ ಅಪಸ್ವರಗಳು ಎದ್ದಿವೆ. (ಶಂಕರಭಟ್ಟರ ಪುಸ್ತಕಗಳ ಪಟ್ಟಿಗೆ ನೋಡಿ; ಅನುಬಂಧ – ೩)

ಕನ್ನಡದ ಸೊಲ್ಲರಿಮೆಯ (ಭಾಷಾವಿಜ್ಞಾನದ) ಕಟ್ಟುವಿಕೆಯಲ್ಲಿ ಶಂಕರಭಟ್ಟರು ಕೆಲವು ಹೊಸ ಪದಗಳನ್ನು ಬಳಸಿದ್ದಾರೆ. ಕೆಲವನ್ನಿಲ್ಲಿ ಉದಾಹರಣೆಯಾಗಿ ನೋಡಬಹುದು;

೧. ಭಾಷಾಂತರ, (ಅನುವಾದ, ತರ್ಜುಮೆ)=ನುಡಿಮಾರಿಕೆ, ೨) ವಾಕ್ಯ+ಮಾತು+ಬರಹ+ಪದ+ಭಾಷೆ=ಸೊಲ್ಲು, ೩) ವ್ಯಾಕರಣ=ಸೊಲ್ಲರಿಮೆ, ೪) ಕ್ರಿಯಾಪದ=ಎಸಕಪದ, ೫) ನಾಮಪದ=ಹೆಸರುಪದ, ೬) ಸಮಾಸ=ಜೋಡುಪದ, ೭) ವಿಶೇಷಣ=ಪರಿಚೆ, ೮) ವಿಭಕ್ತಿ=ಎಸಕಪತ್ತುಗೆ, ೯) ಒಟ್ಟು=ಪ್ರತ್ಯಯ, ೧೦) ಉದಾಹರಣೆ=ಎತ್ತುಗೆ, ೧೧) ರಚನೆ=ಇಟ್ಟಳ, ೧೨) ಪಾರಿಭಾಷಿಕ ಪದ=ಅರಿಮೆಯ ಪದ, ೧೩) ಕಾಲ=ಹೊತ್ತು, ಭೂತಕಾಲ=ಹಿಂಬೊತ್ತು, ವರ್ತಮಾನಕಾಲ=ಈಪೊತ್ತು, ಭವಿಷ್ಯತ್‌ಕಾಲ=ಮುಂಬೊತ್ತು, ೧೪) ಅಕ್ಷರ=ಬರಿಗೆ, ವರ್ಣಮಾಲೆ=ಬರಿಗೆ ಪಟ್ಟಿ, ೧೫) ಪ್ರಶ್ನೆ=ಕೇಳ್ವಿ. ೧೬) ಅರ್ಥ=ಹುರುಳು, ೧೭) ಏಕವಚನ, ಬಹುವಚನ=ಓರೆಣಿಕೆ, ಹಲವೆಣಿಕೆ, ೧೮) ಧ್ವನಿ=ಉಲಿ, ಸ್ವರ=ತೆರೆಯುಲಿ, ವ್ಯಂಜನ=ಮುಚ್ಚುಲಿ, ಮಹಾಪ್ರಾಣ=ಊದುಲಿ, ಅನುನಾಸಿಕ=ಮೂಗುಲಿ, ಊಷ್ಮ=ಉಜ್ಜುಲಿ, ಸ್ಪರ್ಶ=ತಡೆಯುಲಿ, ಮೂರ್ಧನ್ಯ=ಮಡಚುಲಿ, ಘೋಷ=ಗುನುಗುನಿಸುವ ಉಲಿ, ರೇಫ=ಹೊಡೆಯುಲಿ, ೧೯) ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ=ಗಂಡುಗುರ‍್ತ, ಹೆಣ್ಣುಗುರ‍್ತ, ಉಳಿಕೆಗುರ‍್ತ, ೨೦) ಉತ್ತಮಪುರುಷ=ಆಡುಗ, ಮದ್ಯಮ ಪುರುಷ=ಕೇಳುಗ, ಪ್ರಥಮಪುರುಷ=ಪೆರತು – ಹೆರತು (ಇತರೆ), ೨೧) ನಿಷೇಧಾರ್ಥಕ=ಅಲ್ಲಗಳೆತ, ೨೨) ವಿಗ್ರಹವಾಕ್ಯ=ಒಳನುಡಿತ, ೨೩) ವಿಧ್ಯರ್ಥಕ=ಅರಿಕೆರೂಪ, ೨೪) ನಾಮಪದ=ಹೆಸರುಪದ, ಕ್ರಿಯಾಪದ=ಕೆಲಸಪದ ಹೀಗೆ ಈ ಪದಗಳು ಕೂಡ ಅರ್ಥವಾಗುವುದಿಲ್ಲ. ಇವೂ ಕೂಡ ಪಾರಿಭಾಷಿಕ ಹೊರೆಯನ್ನು ಹೆಚ್ಚಿಸುತ್ತವೆ ಎಂಬ ಆಪಾದನೆ ಇವರ ಮೇಲೆ ಇದೆ. ಈ ಆಪಾದನೆ ಕೆ.ವಿ.ನಾರಾಯಣರ ಮೇಲೂ ಇದೆ. ಈ ಪದಗಳು ಮೇಲ್ನೋಟಕ್ಕೆ ನೋಡಲು ಅಪರಿಚಿತವಾಗಿ ಕಾಣುತ್ತವೆ. ಯಾಕೆಂದರೆ ಪ್ರಮಾಣ ಕನ್ನಡ – ಸಂಸ್ಕೃತಗನ್ನಡವನ್ನು ಮೀರಿ ನಮ್ಮದೆ ಕನ್ನಡವನ್ನು ಬಳಸಲು ತೊಡಗಿದಾಗ ಅಪರಿಚಿತವಾಗಿ ಕಾಣುವುದು ಸಹಜ. ಆದರೆ ಹೋಗುತ್ತ ಹೋಗುತ್ತ ಎಲ್ಲ ಸರಿಹೋಗುತ್ತದೆ. ಮತ್ತು ನಾವು ತುಳಿಯಬೇಕಾದ ಹಾದಿ ಇದೇ ಅಲ್ಲವೆ? ಇಷ್ಟಕ್ಕು ಕೇಳು ಪದದಿಂದ ಕೇಳ್ವಿ ಪದವನ್ನು ರೂಪಿಸಿಕೊಂಡರೆ, ಕೆಲವು ಪದಗಳು ಕೆಸವನ್ನು ಸೂಚಿಸುವುದರಿಂದ ಅವನ್ನು ಕೆಲಸಪದಗಳು ಎಂದರೆ ಹೆಸರನ್ನು ಸೂಚಿಸುವ ಪದಗಳನ್ನು ಹೆಸರುಪದ ಎಂದು ನೇರವಾಗಿ ಕರೆದುಕೊಂಡರೆ ತಪ್ಪೇನು? ಇದು ಹೊರೆಯನ್ನು ತಪ್ಪಿಸಿದಂತೆಯೆ ಅಲ್ಲವೆ?

ಕೆ.ವಿ.ನಾರಾಯಣ ಅವರ ಎಲ್ಲ ಕೃತಿಗಳನ್ನು ಇತ್ತೀಚೆಗೆ ತೊಂಡು ಮೇವು ಹೆಸರಿನಲ್ಲಿ ೯ ಕಂತೆಗಳಾಗಿ ಪ್ರಕಟಿಸಲಾಗಿದೆ. ಅವುಗಳಲ್ಲಿ ತೊಂಡು ಮೇವು: ಕಂತೆ – ೧,೬,೭. (೨೦೧೦), ಮತ್ತು ಕನ್ನಡ ಜಗತ್ತು ಅರ್ಧ ಶತಮಾನ (೨೦೦೭), ಭಾಷೆಯ ಸುತ್ತ ಮುತ್ತ (೧೯೯೮), ನಮ್ಮೊಡನೆ ನಮ್ಮ ನುಡಿ (೨೦೦೫), ಸಂಸ್ಕೃತ ಪದಗಳಿಗೆ ಕನ್ನಡ ಪದಗಳು (?) ಎಂಬ ಪುಸ್ತಕಗಳನ್ನು ಮತ್ತು ಕನ್ನಡಿಗಳು ಇನ್ನು ಸಾಕು, ಕನ್ನಡದ ಕೆಸರುಗದ್ದೆಯಲ್ಲಿ ಇಂಗ್ಲಿಶಿನ ವೈಹಾಳಿ, ಕರ್ನಾಟಕ ಓದು, ಭಾಷಾ ಯೋಜನೆ, ಇಂತಹ ಲೇಖನಗಳನ್ನು ಮುಖ್ಯವಾಗಿ ಈ ಧಾರೆಯಲ್ಲಿ ಗಮನಿಸಬಹುದಾಗಿದೆ. ಇವು ಭಾಷೆ, ಸಾಹಿತ್ಯ, ಮಾನವಿಕ ಇಂತಹ ಭೇದಗಳನ್ನು ನಿರಾಕರಿಸುತ್ತವೆ. ನಿರಾಕರಿಸುತ್ತಲೆ ಸಮಾಜದಲ್ಲಿ ನಮ್ಮ ಚಿಂತನೆ ಸಂಶೋಧನೆಗಳನ್ನು ಹೇಗೆ ಅನ್ವಯಿಕ ಶಿಸ್ತುಗಳನ್ನಾಗಿ ರೂಪಿಸಬಹುದು ಎಂದು ವಿವರಿಸುತ್ತವೆ. ಫಲಿತಗಳನ್ನು ಅನ್ವಯಿಸಲು ಯತ್ನಿಸುತ್ತವೆ ಕೂಡ. ಕೆ.ವಿ.ಎನ್. ತಮ್ಮ ಕರ್ನಾಟಕ ಓದು ಕಲ್ಪನೆಯನ್ನು ತಮ್ಮದೆ ತಂಡ ಕಟ್ಟಿ ಕರ್ನಾಟಕದಲ್ಲಿ ಆಗುಮಾಡಲು ಪ್ರಯೋಗಿಸುತ್ತಿದ್ದಾರೆ. ಹೀಗಾಗಿ ತಮ್ಮ ತತ್ವಗಳನ್ನು ಇವರೂ ಕೂಡ ಬಾಳುತ್ತಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ತತ್ವಗಳನ್ನು ಹೇಳುವುದು ಮತ್ತು ಬಾಳುವುದು ಇವೆರಡನ್ನು ಮಾಡುವವರಲ್ಲಿ ನಮ್ಮಲ್ಲಿಂದು ಶಂಕರಭಟ್ಟರು ಮತ್ತು ಕೆ.ವಿ.ನಾರಾಯಣರು ಎರಡು ಮುಖ್ಯ ಉದಾಹರಣೆಗಳಾಗಿದ್ದಾರೆ.

ಇವರಿಬ್ಬರ ಚಿಂತನೆಗಳು ನಮ್ಮ ವಿದ್ವತ್ ಸಾಗರದಲ್ಲಿ ಹಲವು ರೀತಿಯ ತರಂಗಗಳನ್ನು ಎಬ್ಬಿಸಿವೆ. ಕನ್ನಡಕ್ಕೆ ಕನ್ನಡದ್ದೆ ವ್ಯಾಕರಣ ಇದ್ದರೆ ಸಾಕೆ? ಕನ್ನಡದ್ದೆ ಛಂದಸ್ಸು, ಕನ್ನಡದ್ದೆ ಕಾವ್ಯಮೀಮಾಂಸೆ, ದಲಿತರದ್ದೆ, ವಚನಕಾರರದ್ದೆ, ಮಹಿಳೆಯರದ್ದೆ ಸಾಹಿತ್ಯ ಚರಿತ್ರೆ, ಮೀಮಾಂಸೆ ಬೇಕು ಎಂಬ ತಿಳುವಳಿಕೆ ಮತ್ತು ಅದರ ಹುಡುಕಾಟ ನಮ್ಮಲ್ಲಿ ಈಗಾಗಲೆ ಮೊದಲುಗೊಂಡಿದೆ. ಕನ್ನಡದ್ದೆ ವ್ಯಾಕರಣ ಕಟ್ಟಿಕೊಳ್ಳುವ ಹಾಗೆ; ಕನ್ನಡದ್ದೆ ಛಂದಸ್ಸು ಕಟ್ಟಿಕೊಳ್ಳುವ ಹಾಗೆ ಕನ್ನಡದ್ದೆ ಕಾವ್ಯಮೀಮಾಂಸೆಯನ್ನೂ ಕಟ್ಟಿಕೊಳ್ಳಬಹುದೋ? ವ್ಯಾಕರಣವನ್ನು ಕಟ್ಟಿಕೊಳ್ಳುವ ಬಗೆಗೂ ಕಾವ್ಯಮೀಮಾಂಸೆಯನ್ನು ಕಟ್ಟಿಕೊಳ್ಳುವ ಬಗೆಗೂ ವ್ಯತ್ಯಾಸಗಳಿಲ್ಲವೆ? ಈ ಮೂರನ್ನೂ ಒಂದೇ ಗ್ರಹಿಕೆಯ ಮೂಲಕ ಕಟ್ಟಲು ಹೋದರೆ ಏನೇನು ತೊಡಕುಗಳಾಗಬಹುದು? ಈ ಎಲ್ಲ ಪ್ರಶ್ನೆಗಳೂ ಕೇಳಲ್ಪಟ್ಟಿವೆ. ಶಂಕರಭಟ್ಟರು ಸಂಸ್ಕೃತದಿಂದ ಬಿಡುಗಡೆಗೊಳ್ಳಬೇಕು ಎನ್ನುತ್ತಾರೆ. ಕೆ.ವಿ.ನಾರಾಯಣ ಅವರು ಕನ್ನಡದ ಕೆಸರುಗದ್ದೆಯಲ್ಲಿ ಇಂಗ್ಲಿಷಿನ ವೈಹಾಳಿ ಕೂಡದು; ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮನಸ್ಶಾಸ್ತ್ರ, ಸಾಹಿತ್ಯಗಳ ನಡುವಿನ ಗೋಡೆಗಳು ಇಲ್ಲವಾಗಬೇಕು. ಎಲ್ಲವನ್ನು ಕನ್ನಡದಲ್ಲೆ – ಕನ್ನಡದ ಕಣ್ಣಲ್ಲೆ ಕಾಣಬೇಕು ಎನ್ನುತ್ತಾರೆ. ಹೀಗೆ ಇವರ ಚಿಂತನೆಗಳು ಅಸ್ಮಿತೆಯ ಹುಡುಕಾಟದ ಫಲಿತಗಳಾಗಿವೆ. ಸ್ವಯದ ಮಂಡನೆ ಮತ್ತು ಚರಿತ್ರೆಯ ಮರುಕಟ್ಟುವಿಕೆಯ ಮೂಲಕ ವರ್ತಮಾನ – ಭವಿಷ್ಯತ್ತುಗಳ ಕನ್ನಡತನದ ಕಟ್ಟಾಣಿಕೆ ಕೂಡ ಈ ಸಂಶೋಧನೆಗಳ ಹಿನ್ನೆಲೆಗೆ ಇದೆ.

ಚಿದಾನಂದಮೂರ್ತಿ ಬಳಗದ ಕನ್ನಡ ನಾಡುನುಡಿ ಚಿಂತನೆಯ ಸ್ವರೂಪ ಬೇರೆ ಥರದ್ದು. ಇದು ಕನ್ನಡ – ಕನ್ನಡಿಗ – ಕರ್ನಾಟಕ ಚಿಂತನೆಯನ್ನು ಫೆನಟಿಕ್ಕಾಗಿ (ಭಾವಾವೇಶದಿಂದ ಅಂಧರಾಗಿ) ಮಂಡಿಸುವಂಥದ್ದು ಮತ್ತು ತೀವ್ರ ಸ್ವರೂಪದ ‘ಆತಂಕಿತ ಚಿಂತನೆ’ಯಿದು. ಕನ್ನಡ ನಾಶವಾಗ್ತಾ ಇದೆ; ಸಾಯ್ತಾ ಇದೆ; ಕನ್ನಡಿಗರಿಗೆ ಸ್ವಾಭಿಮಾನ ಇಲ್ಲ ಎಂಬ ಜೋರು ದನಿಯ ಆತಂಕಿತ ಚಿಂತನೆ ಇದು. ಕೆ.ವಿ.ನಾರಾಯಣ ಮತ್ತು ಶಂಕರಭಟ್ಟರ ಚಿಂತನೆ ಕೂಡ ಆತಂಕಿತ ಚಿಂತನೆಯೆ. ಆದರೆ ಅವರ ಚಿಂತನೆಯ ಸ್ವರೂಪ ಫೆನೆಟಿಕ್ ಅಥವಾ ಧರ್ಮಾಂಧ – ಭಾಷಾಂಧ ಅಲ್ಲ. ಇಲ್ಲೆ ಷ.ಶೆಟ್ಟರ ಶಂಗಂ ತಮಿಳಗಂ ಕನ್ನಡ ನಾಡು ನುಡಿ ಕೃತಿಯನ್ನು ಚರ್ಚಿಸಬೇಕು. ಇವರದ್ದು ಕೂಡ ಆತಂಕಿತ ಚಿಂತನೆ ಅಲ್ಲ. ಪರ‍್ಯಾಯ ಚಿಂತನೆ. ‘ದಕ್ಷಿಣಪೂರ್ವ ಏಷ್ಯಾ’ ಎಂಬ (ಅಮೆರಿಕನ್ ಅಕಡೆಮಿಕ್ಸ್ ಕಲ್ಪಿತ ಭೌಗೋಳಿಕತೆ ಏನಿದೆ ಈ) ಕಲ್ಪಿತ ಭೌಗೋಳಿಕತೆಯ ಭಿತ್ತಿಯಲ್ಲಿ ದೇಶಭಾಷೆ (ಪ್ರಭುತ್ವ ನುಡಿಗಳಲ್ಲದ ದೇಶ ಭಾಷೆಗಳು) ಮತ್ತು ಸಂಸ್ಕೃತದ ನಡುವಿನ ಸಂಬಂಧಗಳನ್ನು ಚರ್ಚಿಸಿದ ಷೆಲ್ಡನ್ ಪೋಲಾಕನ ಮಾದರಿಗಿಂತ ಭಿನ್ನವಾದ ಸಂಸ್ಕೃತಿ ಚರಿತ್ರೆಯ ಶೋಧನೆ ಶೆಟ್ಟರದ್ದು. ಅತ್ತ ಚಿದಾನಂದಮೂರ್ತಿ ಬಳಗದ ಆತಂಕಿತ ಚಿಂತನೆಯೂ ಅಲ್ಲದ ಇತ್ತ ಪೋಲಾಕ್ ಬಳಗದ ವರ‍್ನಾಕ್ಯುಲರ್ ಚಿಂತನೆಯೂ ಅಲ್ಲದ ಭಿನ್ನವಾದ ಚಿಂತನೆ ಇವರದ್ದು. ಚಿ.ಮೂ. ಅವರ ಸಂಶೋಧನೆಗಳಲ್ಲಿ ಲಿಂಗಾಯತ ಧಾರ್ಮಿಕತೆ ಮತ್ತು ಹಿಂದೂ ಮೂಲಭೂತವಾದ ಹಾಗೂ ಕನ್ನಡ ಮತ್ತು ಅನ್ಯ; ಕನ್ನಡ – ತಮಿಳು; ಕನ್ನಡ – ಇಂಗ್ಲಿಶ್, ಕನ್ನಡ – ಮಾರವಾಡಿ ಎಂಬಿತ್ಯಾದಿ ಬೈನರಿ (ಅವಳಿ, ದ್ವಿಮಾನ ಅಂದರೆ, ಅದು ಇಲ್ಲವೇ ಇದು ಎಂದು ಜೋಡಿಗಳಲ್ಲಿ ವರ್ಗೀಕರಿಸುವ ಪದ್ಧತಿ) ವೈರಿ ಚಹರೆಗಳು ಹುರಿಗೊಂಡಿವೆ. ಆದರೆ ಷ ಶೆಟ್ಟರಲ್ಲಿ ಇದು ಚಾರಿತ್ರಿಕವಾಗಿ ರಾಜಕೀಯ ಪಲ್ಲಟಗಳನ್ನು ಕಂಡುಕೊಳ್ಳಲು; ಭಾಷಿಕ – ಸಾಮಾಜಿಕ ಅಸ್ಮಿತೆಗಳನ್ನು ಕಂಡುಕೊಳ್ಳಲು ಭಾಷೆ ಸಾಹಿತ್ಯಗಳನ್ನು ಸಾಮಗ್ರಿಗಳನ್ನಾಗಿ ಬಳಸುವ ಅಧ್ಯಯನವಾಗಿದೆ. ಇವರಲ್ಲಿ ಫೆನಟಿಸಂ ಇಲ್ಲದ ತರ್ಕಬದ್ಧ ವಿಶ್ಲೇಷಣೆ ಮೂಲಕ ಚರಿತ್ರೆಯ ಮರುರಚನೆ ಮಾಡುವ ಯತ್ನಗಳಿವೆ. (ವಿವರಗಳಿಗೆ ನೋಡಿ ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ – ಷ. ಶೆಟ್ಟರ್)

ಪಶ್ಚಿಮದ ಇಂಡಾಲಜಿಕಲ್ – ಓರಿಯಂಟಲ್ ಅಧ್ಯಯನ ಕ್ರಮಗಳಿಗಿಂತ ಬೇರೆಯಾದ ನೆಲೆಯಲ್ಲಿ ಶೆಟ್ಟರ್ ತಮ್ಮ ಸಂಶೋಧನೆಯನ್ನು ಮಂಡಿಸುತ್ತಾರೆ. ಇವರಿಗೂ ಕೂಡ ಶಂಕರಪ್ಪ ತೋರಣಗಲ್ ಎಂಬ ಇಂಜಿನಿಯರು ಕೆಲವು ಪ್ರಶ್ನೆಗಳನ್ನು ಎತ್ತಿ ಚರ್ಚಿಸಿದ್ದಾರೆ. (ನೋಡಿ; ತಮಿಳಗಂ ಶಂಗಂ; ಎಷ್ಟು ಪ್ರಾಚೀನ? ೨೦೦೯) ಆರ್ಯ – ದ್ರಾವಿಡ, ಸಸ್ಕೃತ – ಕನ್ನಡ, ಪೂರ್ವ – ಪಶ್ಚಿಮ ದೃಷ್ಟಿಗಳನ್ನು ದಾಟಿ ಕರಹಾಟ, ಮರಾಠ, ಲಾಟ (ಗುಜರಾತ)ಗಳ ನಡುವಿನ ಸಂಬಂಧಗಳನ್ನು ಚರ್ಚಿಸಿದ ಶಂಬಾ ಅವರಿಗಿಂತ ಭಿನ್ನವಾಗಿ; ಶೆಟ್ಟರ್ (ಬ್ರಾಹ್ಮಿ – ಪಾಲಿ – ಪ್ರಾಕೃತ, ಜೇನುಕುರುಬ, ಸೋಲಿಗ, ಇರುಳ ಇತ್ಯಾದಿಗಳ ಜೊತೆ ಕನ್ನಡ ಸಂಬಂಧವನ್ನು ಚರ್ಚಿಸದೆ) ತಮಿಳಿನ ಜೊತೆ ಕನ್ನಡ ನಾಡಿನ ಅಂತಃಸಂಬಂಧಗಳನ್ನು ಚರ್ಚಿಸಿದ್ದಾರೆ. ಇದೆ ಸಂದರ್ಭದಲ್ಲಿ ಕಲಬುರ್ಗಿಯವರ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’, ಕೆ.ವಿ. ಸುಬ್ಬಣ್ಣನವರ ‘ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು’; ಎಸ್. ಚಂದ್ರಶೇಖರ್ ಅವರ ‘ದಕ್ಷಿಣಭಾರತ ವಸಾಹತುಶಾಹಿ ಇತಿಹಾಸ’; ರಾಜಾರಾಮ ಹೆಗಡೆಯವರ “ಗತಕಥನ; ಲೌಕಿಕ ಅಲೌಕಿಕ’ ಮತ್ತು ಜಿ.ಎನ್. ಉಪಾಧ್ಯ ಅವರ ‘ಗೋದಾವರಿವರಂ ಇರ್ದ ಕನ್ನಡ ನಾಡು’ (೨೦೦೧), ಹಾಗೂ ಆಗುಂಬೆ ನಟರಾಜ್ ಅವರ ‘ಹೊರನಾಡಿನ ಮೂರು ಕರ್ನಾಟಕ ರಾಜ್ಯಗಳು’ (೨೦೦೯) (ಈ ಕೃತಿಯು ಬಿಹಾರದ ಮಿಥಿಲಾ, ಬಂಗಾಳದ ಕೃಷ್ಣನಗರ್ ಹತ್ತಿರದ ನಬೋದ್ವೀಪ ಹಾಗೂ ತಮಿಳುನಾಡಿನ ಕಣ್ಣಾನೂರು ಜಿಲ್ಲೆಗಳಲ್ಲಿ ಆಳಿದ ಕನ್ನಡ ರಾಜರುಗಳ ಇತಿಹಾಸವನ್ನು ಪರಿಚಯಿಸುತ್ತದೆ. ಚಿದಾನಂದಮೂರ್ತಿಯವರ ಸ್ಕೂಲಿಗೇ ಸೇರುವ ಈ ಕೃತಿಯು ಪ್ರವಾಸ ಸಾಹಿತ್ಯ, ಚರಿತ್ರೆ ಬರವಣಿಗೆ ಮತ್ತು ಸಂಶೋಧನೆ ಈ ಮೂರೂ ಕಲಸಿಕೊಂಡ ಕೃತಿಯಾಗಿದೆ), ಮತ್ತು ಚಿದಾನಂದಮೂರ್ತಿ ಅವರ ‘ಭಾಷಿಕ ಬೃಹತ್ ಕರ್ನಾಟಕ’ ‘ಕರ್ನಾಟಕ ನೇಪಾಳ ಸಂಬಂಧಗಳು’ ಮೊದಲಾದ ಕೃತಿಗಳು ಸ್ಮರಣಾರ್ಹ. ಇವೆಲ್ಲವುಗಳೂ ಸರಿಸುಮಾರು ಕನ್ನಡ ನಾಡು – ನುಡಿಯನ್ನು ಮರುಮಂಡಿಸುವ; ಸಾಂಸ್ಕೃತಿಕ ಚರಿತ್ರೆಗಳನ್ನು ಭಿನ್ನ ಆಕರ ಮತ್ತು ಮಾರ್ಗಗಳಿಂದ ಮರುಕಟ್ಟುವ ಕೆಲಸಗಳನ್ನು ಮಾಡುತ್ತವೆ. ಆದರೆ ಇವೆಲ್ಲವುಗಳಿಗಿಂತ ಭಿನ್ನವಾಗಿ ಕರ್ನಾಟಕದ ಎರಡು ಸಾವಿರ ವರ್ಷಗಳ ನೆನ್ನೆಗಳ ಮರುಪರಿಶೀಲನೆಯನ್ನು ಮನು ದೇವದೇವನ್ ಅವರ ‘ಪೃಥ್ವಿಯಲೊದಗಿದ ಘಟವು..’ (೨೦೦೯) ಪುಸ್ತಕ ನಡೆಸುತ್ತದೆ. ಆ ಮೂಲಕ ನಮ್ಮ ಸಾಹಿತ್ಯ ವಿಶ್ಲೇಷಣೆ ಮತ್ತು ಅಸ್ಮಿತೆಗಳ ಹುಡುಕಾಟದ ಹಿಂದಿನ ತಾತ್ವಿಕತೆಗಳನ್ನು ಶೋಧಿಸುತ್ತದೆ. ಕನ್ನಡದಲ್ಲಿ ನಡೆದಿರುವ ಇದುವರೆಗಿನ ಸಂಶೋಧನೆಗಳೆಲ್ಲ ನಾಲ್ಕನೆ ದರ್ಜೆಯ ಸಂಶೋಧನೆಗಳು ಎಂಬಂತಹ ಬೀಸು ಹೇಳಿಕೆಗಳನ್ನು ಒಳಗೊಂಡಿರುವ ಮನು ಅವರ ಈ ಕೃತಿಯು ಆರ್ಥಿಕ ನೆಲೆಗಟ್ಟಿನಿಂದಲೆ ಕರ್ನಾಟಕದ ಚರಿತ್ರೆಯನ್ನು ವ್ಯಾಖ್ಯಾನಿಸುತ್ತದೆ.

ಶೆಲ್ಡನ್ ಪೊಲಾಕ್ ಮತ್ತು ಷ.ಶೆಟ್ಟರ್ ಇಬ್ಬರೂ ಸಂಪನ್ಮೂಲಗಳ ರಾಜಕಾರಣವನ್ನು ಗಮನಿಸದೆ ಕೇವಲ ಭಾಷೆಯನ್ನು ಮಾತ್ರವೆ ನಾಡಿನ ನಿರೂಪಣೆಗೆ ಬಳಸಿದ್ದಾರೆ. ನಾಡು ಎಂಬ ಅಸ್ಮಿತೆಯನ್ನು ರೂಪಿಸಿದ ಸಾರವೆಂದರೆ ಭಾಷೆಯೆ ಎಂದು ಇವರಿಬ್ಬರು ಭಾವಿಸಿದ್ದಾರೆ. ಆದರೆ ಇವರ ಈ ನಿಲುವನ್ನು ಒಪ್ಪಲಾಗುವುದಿಲ್ಲ ಎಂದು ದೇವದೇವನ್ ತಮ್ಮ ಕೃತಿಯಲ್ಲಿ ವಾದಿಸಿದ್ದಾರೆ. ಕರ್ನಾಟಕ, ತಮಿಳುನಾಡು, ಆಂದ್ರ  ಎಂಬಿತ್ಯಾದಿ ಪ್ರಾದೇಶಿಕ ಅಸ್ಮಿತೆಗಳು ಕ್ರಿ.ಶ. ೭೦೦ರಿಂದ ೯೦೦ರ ನಡುವೆ ರೂಪಗೊಂಡವು. ಇವುಗಳು ರೂಪಗೊಂಡದ್ದು ಭಾಷಿಕ ‘ಸ್ವ’ ತನದಿಂದ ಅಲ್ಲ; ಭೌತಿಕ ಸಂಪನ್ಮೂಲಗಳ ಮೇಲೆ ನಾಡುಗಳು (ರಾಜಸತ್ತೆಗಳು) ನಡೆಸಿದ ಪೈಪೋಟಿಯ ಮೂಲಕವೇ ಈ ಪ್ರಾದೇಶಿಕ ಅಸ್ಮಿತೆಗಳು ರೂಪಗೊಂಡವು ಎಂದು ಈ ಕೃತಿಯಲ್ಲಿ ಪ್ರತಿಪಾದಿಸಲಾಗಿದೆ. ಇಷ್ಟೇ ಅಲ್ಲದೆ ಹತ್ತು ಹಲವು ಇಂತಹದ್ದೆ ನಿಲುವುಗಳನ್ನು ಈ ಕೃತಿಯಲ್ಲಿ ಮಂಡಿಸಲಾಗಿದೆ. ಆದರೆ ಮನು ಅವರು ಮಂಡಿಸುವ ನಿಲುವುಗಳಿಗೆ ಸಮರ್ಥವಾದ ಸಮರ್ಥನೆಗಳು ಈ ಕೃತಿಯಲ್ಲಿ ಇಲ್ಲದಿರುವುದು ಇಲ್ಲಿನ ದೊಡ್ಡ ದೌರ್ಬಲ್ಯವಾಗಿದೆ.

[1] ಅಲ್ಲದೆ ಈಗಾಗಲೇ ಕನ್ನಡ ಲಿಪಿವಾಙ್ಞಯದಲ್ಲಿ ಬಳಕೆಯಲ್ಲಿರುವ ಭಾಷೆ ಮತ್ತು ಪರಿಭಾಷೆಯ ಬಗ್ಗೆ ದೇವದೇವನ್ ಅವರಿಗೆ ಅಷ್ಟಾಗಿ ತಿಳುವಳಿಕೆ ಇದ್ದಂತೆ ಕಾಣುವುದಿಲ್ಲ. ಅವರು ಬಳಸುವ ಹಲವಾರು ಪದಗಳು ಕನ್ನಡದಲ್ಲಿ ಈಗಾಗಲೇ ಬೇರೆ ರೂಪದಲ್ಲಿ ಬಳಕೆಯಾಗುತ್ತಿವೆ. ಎಲ್ಲ ಭಾಷೆಗಳಲ್ಲಿಯೂ ಆಯಾಯ ಶಿಸ್ತುಗಳಿಗೇ ವಿಶಿಷ್ಟವಾದ ಭಾಷೆ ಮತ್ತು ಪರಿಭಾಷೆ ರೂಪಗೊಂಡಿರುತ್ತದೆ. ಅದರ ಪರಿಜ್ಞಾನ ಸರಿಯಾಗಿ ಇಲ್ಲದಿರುವಾಗ ಭಿನ್ನವಾದ ಮತ್ತು ಅನಗತ್ಯವಾದ ಹೊಸ ಪರಿಭಾಷೆಗಳು ಸೃಷ್ಟಿಯಾಗುತ್ತವೆ. ಆಗ ಭಾಷೆಯೇ ಅನುವಾದದಂತೆ ಕಾಣತೊಡಗುತ್ತದೆ. ದೇವದೇವನ್ ಅವರ ಕೃತಿಯಲ್ಲೂ ಹೀಗೇ ಆಗಿದೆ.[2]

ಈ ಧಾರೆಯಲ್ಲಿ ಕಿರುಲೇಖನಗಳು: ಲೇಖನ ಸಂಕಲನಗಳು: ಕನ್ನಡ ಕನ್ನಡಿಗ ಕರ್ನಾಟಕ ಎಂಬ ನೆಲೆಯಲ್ಲು, ಏನ್ ಗುರು ಕಾಫಿ ಆಯ್ತಾ ಎಂಬ ನೆಲೆಯಲ್ಲೂ ಹಲವು ಪ್ರಕಟವಾಗಿವೆ. ಇವುಗಳಿಗಿಂತ ಭಿನ್ನವಾಗಿ ಆಧುನಿಕ ಭಾರತೀಯ – ಜಾಗತಿಕ ವಿದ್ಯಮಾನಗಳ ಭಿತ್ತಿಯಲ್ಲಿ ಕನ್ನಡತನದ ಚಹರೆಗಳ ಕಾರಣ, ಪರಿಣಾಮ, ಸ್ವರೂಪಗಳನ್ನು ಚರ್ಚಿಸುವ ಲೇಖನಗಳ ಸಂಕಲನವಾಗಿ ಡಿ.ಎಸ್.ನಾಗಭೂಷಣರ ಕನ್ನಡ ಕರ್ನಾಟಕ ಸಂಕಥನಗಳು (೨೦೦೯) ಸಂಕಲನವನ್ನು ನೋಡಬಹುದು. ಇದೇ ನೆಲೆಯಲ್ಲಿ ರಾಜೇಂದ್ರ ಚೆನ್ನಿ ಅವರ ಮತ್ತು ಕೆ.ವಿ.ತಿರುಮಲೇಶರ ಹಲವು ಲೇಖನಗಳನ್ನೂ ನೋಡಬಹುದು.

ಮೀಮಾಂಸಾ ಧಾರೆ: ಕನ್ನಡದ ಕಾವ್ಯತತ್ವಗಳಿಂದ ಸಾಹಿತ್ಯಮೀಮಾಂಸೆ, ಜೀವನಮೀಮಾಂಸೆಯ ಕಡೆಗೆ

ಭಾರತೀಯ ಕಾವ್ಯ ಮೀಮಾಂಸೆ ಎಂಬ ಆಚಾರ್ಯ ಕೃತಿಯು ಕನ್ನಡ ಕಾವ್ಯ ಮೀಮಾಂಸೆಯನ್ನು ಸಂಸ್ಕೃತದ ನೆರಳಾಗಿಯೇ ನೋಡುವಂತೆ ಮಾಡಿದರೆ; ಇನಾಂದಾರರ ಪಾಶ್ಚಾತ್ಯ ಕಾವ್ಯ ಮೀಮಾಂಸೆ ಮತ್ತು ಎಚ್.ತಿಪ್ಪೇರುದ್ರಸ್ವಾಮಿಯವರ ತೌಲನಿಕ ಕಾವ್ಯಮೀಮಾಂಸೆ ಕೃತಿಗಳು ಪಶ್ಚಿಮದ ತತ್ವಗಳನ್ನು ಆಮದು ಮಾಡಿಕೊಳ್ಳುವಂತೆ ಪ್ರೇರೇಪಿಸಿದವು. ಇದಕ್ಕೆ ಪರ್ಯಾಯವೆಂಬಂತೆ ನಮ್ಮಲ್ಲಿ ‘ಕನ್ನಡ ಕಾವ್ಯತತ್ವ – ಕೆ.ಕೃಷ್ಣಮೂರ್ತಿ’, ‘ಭಾರತೀಯ ಕಾವ್ಯಮೀಮಾಂಸೆಗೆ ಕನ್ನಡ ಕವಿಗಳ ಕೊಡುಗೆ – ಸಂ.ಎಂ.ವಿ.ಸೀ.’ ಕನ್ನಡ ಕವಿಗಳ ಕಾವ್ಯತತ್ವ – ಜಿ.ಎಸ್.ಎಸ್. ಇತ್ಯಾದಿ ಕೃತಿಗಳು ಹುಟ್ಟಿಕೊಂಡವು. ನಮ್ಮಲ್ಲಿ ಇದುವರೆಗೆ ಸಾಹಿತ್ಯ ಮೀಮಾಂಸೆಯ ವಲಯದಲ್ಲಿ ನೂರಕ್ಕೂ ಹೆಚ್ಚು ಕೃತಿಗಳು ಬಂದಿವೆ. (ನೋಡಿ: ತೊಂಡು ಮೇವು – ೧ ಪು.೩೪೫) ಇವುಗಳಲ್ಲಿ ಈ ದಶಕದಲ್ಲಿ ಬಂದ ಎಸ್.ಎಂ.ಹಿರೇಮಠ, ವೀರಣ್ಣ ದಂಡೆ, ವಿಜಯಕುಮಾರಿ ಕರಿಕಲ್ ಇಂಥವರ ಸಂಶೋಧನಾ ಕೃತಿಗಳು ಸಂಸ್ಕೃತದ ಚೌಕಟ್ಟುಗಳಿಂದ ಹೊರಬಂದಿಲ್ಲ. ಇವರ ಕೃತಿಗಳು ಶಂಕರಭಟ್ಟರ ಕನ್ನಡಕ್ಕೆ ಬೇಕು ಕನ್ನಡದ್ದೆ ವ್ಯಾಕರಣ ಎಂಬ ಸ್ವಂತಿಕೆಯ ತತ್ವವನ್ನು ಮೀಮಾಂಸೆಯಲ್ಲು ಹುಡುಕಲು ಹೊರಟಿವೆ. ಸಂಸ್ಕೃತದಲ್ಲಿ ಇರುವುದೆಲ್ಲ ಕನ್ನಡದಲ್ಲು ಇದೆ ಎಂದು ಸಾಬೀತು ಮಾಡಲು ಪ್ರಯತ್ನಿಸಿವೆ. ದಂಡೆಯವರ ‘ವಚನಸಾಹಿತ್ಯ ಮೀಮಾಂಸೆ’ (೨೦೦೭) ಕೃತಿ ಸ್ವಲ್ಪ ಭಿನ್ನ. ಇದು ಬೇರೆ ಬೇರೆ ವಿಮರ್ಶಕರ ಮೀಮಾಂಸಾ ನೆಲೆಯ ಬರಹಗಳನ್ನು ಸಂಪಾದಿಸಿ ಒಂದೆಡೆ ನೀಡುತ್ತದೆ. ಇದರಿಂದ ವಚನಗಳನ್ನು ಸಾಹಿತ್ಯಸೌಂದರ್ಯ – ಮೀಮಾಂಸೆಗಳ ನೆಲೆಯಿಂದ ನೋಡಿರುವ ವಿಮರ್ಶೆಗಳ ಆಯ್ದ ಚಾರಿತ್ರಿಕ ಅವಲೋಕನ ಇಲ್ಲಿ ಸಾಧ್ಯವಾಗಿದೆ.

ರಹಮತ್ ತರೀಕೆರೆಯವರ ೧) ಕನ್ನಡ ಸಾಹಿತ್ಯ ಮೀಮಾಂಸೆ ಮತ್ತು ೨) ಇಲ್ಲಿ ಯಾರೂ ಮುಖ್ಯರಲ್ಲ ಎಂಬ ಎರಡು ಕೃತಿಗಳು ಕೂಡ ಇಲ್ಲಿ ಉಲ್ಲೇಖಾರ್ಹ. ಇವು ಕನ್ನಡ ಕಾವ್ಯ ತತ್ವವನ್ನು ಸಾಹಿತ್ಯ ಮೀಮಾಂಸೆಯಾಗಿ ಕಾಣುತ್ತವೆ. ಕನ್ನಡ ಸಾಹಿತ್ಯದಲ್ಲಿ ವ್ಯಕ್ತವಾಗಿರುವ ಮೀಮಾಂಸೆಯ ವಿಚಾರಗಳನ್ನು ಮಂಡಿಸುತ್ತವೆ. ಮೊದಲ ಕೃತಿ (೨೦೦೧) ಬೇರೆ ಬೇರೆ ಚಿಂತಕರ ಚಿಂತನೆಗಳನ್ನು ಒಂದೆಡೆ ಕಲೆ ಹಾಕುತ್ತದೆ. ತಾತ್ವೀಕರಿಸುವುದಿಲ್ಲ. ತನ್ನದೇ ಸಿದ್ಧಾಂತಗಳನ್ನು ಮಂಡಿಸುವುದಿಲ್ಲ. ಆದರೆ ಎರಡನೇ ಕೃತಿ (೨೦೦೫) ವಿವರಗಳ ಮೂಲಕ ತಾತ್ವೀಕರಣಕ್ಕೆ ಯತ್ನಿಸಿದೆ. ಆದರೂ ಇದು ಕೂಡ ಸಂಸ್ಕೃತದ ಮೀಮಾಂಸಾ ನೆರಳಿನಿಂದ ಪೂರ್ತ ಬಿಡಿಸಿಕೊಂಡಿಲ್ಲ. ಇವರ ಜೊತೆಯಲ್ಲೆ ೧.ಕಥನಶಾಸ್ತ್ರ (ಆಮೂರ), ೨.ಕಾದಂಬರಿ ವಸ್ತು ಮತ್ತು ತಂತ್ರ (ಗಿರಡ್ಡಿ), ೩.ಕಾದಂಬರಿ ಸ್ವರೂಪ (ಆಮೂರ), ೪.ಮಹಾಕಾವ್ಯ ಲಕ್ಷಣ (ವೆಂಕಟಾಚಲಶಾಸ್ತ್ರಿ), ೫.ಸಂಶೋಧನ ಪ್ರಜ್ಞೆ (ಹೇರಂಜೆ ಕೃಷ್ಣಭಟ್ಟ), ೬.ಸಾಹಿತ್ಯ ವಿಮರ್ಶೆ (ಸಿ.ಎನ್. ರಾಮಚಂದ್ರನ್) ಈ ರೀತಿಯ ಕೃತಿಗಳನ್ನು ಕೂಡ ಇಲ್ಲಿ ಗಮನಿಸಬಹುದು. ಆಧುನಿಕ ಸಂದರ್ಭದಲ್ಲಿ ಕನ್ನಡ ಕಾವ್ಯತತ್ವವು ಸಾಹಿತ್ಯತತ್ವವಾಗಿ, ಕಾವ್ಯಮೀಮಾಂಸೆಯು ಸಾಹಿತ್ಯಮೀಮಾಂಸೆಯಾಗಿ ಹೊರಳಿಕೊಂಡಿರುವುದನ್ನು ಈ ಎಲ್ಲ ಕೃತಿಗಳ ಅವಲೋಕನದಿಂದ  ತಿಳಿಯಬಹುದು. ಅಲ್ಲದೆ ಪಶ್ಚಿಮಮುಖಿ (ಇಂಗ್ಲಿಶ್ ಮಂಡಿತ) ಸಿದ್ಧಾಂತಗಳನ್ನು ಕನ್ನಡದಲ್ಲಿ ಮರುನಿರೂಪಿಸುವ ಮತ್ತು ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಅನ್ವಯೀಕರಿಸಿ ಆ ಮೂಲಕ ಕನ್ನಡ ಸಾಹಿತ್ಯವನ್ನು ಪರೀಕ್ಷಿಸುವ ಕೆಲಸ ಕೂಡ ಇಲ್ಲೆಲ್ಲ ಧಾರಾಳವಾಗಿ ಆಗಿದೆ.

ಸಾಹಿತ್ಯ ಮೀಮಾಂಸೆ – ಸಾಹಿತ್ಯ ವಿಮರ್ಶೆ ಈ ಎರಡೂ ಸಮಾನಾರ್ಥಕಗಳಾಗಿ ಇಂದು ಬಳಕೆ ಆಗುತ್ತಿರುವಂತೆ ಕಾಣುತ್ತವೆಯಾದರೂ ಹಾಗಲ್ಲ. ಸಾಹಿತ್ಯ ಮೀಮಾಂಸೆ ತತ್ವದ ಭಾಗವಾದರೆ ಸಾಹಿತ್ಯ ವಿಮರ್ಶೆ ಆಚರಣೆಯ ಭಾಗವಾಗಿದೆ. ವಿಮರ್ಶೆ – ಮೀಮಾಂಸೆ ಇಂದು ಬೇರೆಯೇ ಸಾಹಿತ್ಯ ಪ್ರಕಾರಗಳಾಗಿ ಬೆಳೆದಿವೆ. ಹೀಗಾಗಿ ಈ ವಲಯದ ಕೃತಿಗಳನ್ನು ಶುದ್ಧಾಂಗವಾಗಿ ಸಂಶೋಧನೆಗಳು ಎನ್ನಲು ಬರುವುದಿಲ್ಲ. ಆದರೂ ಸಂಶೋಧನೆ – ವಿಮರ್ಶೆಗಳು ಎರಡೂ ಕಲಸಿಕೊಂಡು; ವಿಮರ್ಶಾತ್ಮಕ ಅಧ್ಯಯನವಾಗಿ ಸಂಶೋಧನೆಯು ರೂಪುಗೊಂಡಿರುವುದಕ್ಕೆ ಇವೂ ಉದಾಹರಣೆಗಳಾಗಿವೆ. (ವಿಮರ್ಶೆ ಅಥವಾ ಮೀಮಾಂಸೆಯ ತತ್ವ ಮಂಡನೆ ಸಾಹಿತ್ಯ ಸಂಶೋಧನೆ ಅಲ್ಲ. ಆದರೆ ತತ್ವಗಳ ಅಧ್ಯಯನ ಮತ್ತು ಕ್ರೋಡೀಕರಣ ಕಾರ್ಯ ಸಂಶೋಧನೆಯೆ ಅಲ್ಲವೆ?) ಇಲ್ಲೆ ನಟರಾಜ ಬೂದಾಳು ಅವರ ಬೌದ್ಧ ಸೌಂದರ್ಯ ಮೀಮಾಂಸೆಯ ಕುರಿತ ಲೇಖನಗಳನ್ನೂ ಚರ್ಚಿಸಬೇಕು. ಸಾಹಿತ್ಯ ಮೀಮಾಂಸೆಯು ಹೇಗೆ ಜೀವನದರ್ಶನ ಮತ್ತು ತತ್ವಶಾಸ್ತ್ರಗಳ ಜೊತೆಗೆ ಸಂಬಂಧ ಹೊಂದಿದೆ ಎಂಬುದು ಇವರ ಈ ಬರಹಗಳಿಂದ ತಿಳಿಯುತ್ತದೆ.[3] ಕಾವ್ಯಮೀಮಾಂಸೆಯನ್ನು ಸೌಂದರ್ಯಮೀಮಾಂಸೆಯ ಮತ್ತು ಜೀವನಮೀಮಾಂಸೆಯ ಅವಿನಾಭಾವ ಅಂಗವೆಂಬಂತೆ ಇಲ್ಲಿ ಚರ್ಚಿಸಲಾಗಿದೆ. ಹಾಗೆಯೆ ನಾಗಾರ್ಜುನ ಪ್ರಣೀತ ಬೌದ್ಧ ಚಿಂತನೆಯನ್ನು ಕನ್ನಡಕ್ಕೆ ಪರಿಚಯಿಸುವ ಕೆಲಸ ಮಾಡಲಾಗಿದೆ. ಇವರ ಅಲ್ಲಮಪ್ರಭು ಮತ್ತು ನಾಗಾರ್ಜುನರ ತೌಲನಿಕ ಅಧ್ಯಯನ ಕೂಡ ಈ ಹಿನ್ನೆಲೆಯಲ್ಲಿ ಗಮನಾರ್ಹ. (ಜೊತೆಗೆ ಮುಂದೆ ನೋಡಿ; ದರ್ಶನ ಪಾಂಥಿಕ ಧಾರೆ ಮತ್ತು ಸಂಶೋಧನಾ ಮೀಮಾಂಸೆಯ ಧಾರೆ)

ಹಲವು ಉಪಯುಕ್ತ ಅಧ್ಯಯನಗಳ ಭಾಷಾಂತರಗಳು ನಮ್ಮಲ್ಲಿ ನಡೆದಿರುವಂತೆಯೆ ತೌಲನಿಕ ಅಧ್ಯಯನಗಳು ನಡೆದಿರುವಂತೆಯೆ ತೌಲನಿಕ ಅಧ್ಯಯನದ ತಾತ್ವಿಕತೆ, ಭಾಷಾಂತರದ ತಾತ್ವಿಕತೆ, ಸಂಶೋಧನೆಯ ತಾತ್ವಿಕತೆ ಕುರಿತ ಅಧ್ಯಯನಗಳೂ ನಡೆದಿವೆ. ಸಾಹಿತ್ಯ ಮೀಮಾಂಸೆ ಎಂಬ ಪರಿಭಾಷೆಯನ್ನು ಅನುಸರಿಸಿ ಇವನ್ನೂ ಭಾಷಾಂತರ ಮೀಮಾಂಸೆ, ತೌಲನಿಕ ಮೀಮಾಂಸೆ, ಸಂಶೋಧನಾ ಮೀಮಾಂಸೆ ಎಂದೇ ಕರೆದುಕೊಳ್ಳಬಹುದು. (ಸಂಶೋಧನೆಯ ಮೀಮಾಂಸೆಯ ಅಧ್ಯಯನವನ್ನು ಇಲ್ಲಿ ಪ್ರತ್ಯೇಕವಾಗಿಯೆ ಗಮನಿಸಲಾಗಿದೆ) ಇದಕ್ಕೆ ವಿ.ಬಿ.ತಾರಕೇಶ್ವರ್ ಅವರ ವಸಾಹತುಶಾಹಿ ಮತ್ತು ಭಾಷಾಂತರ ಮೈಸೂರು ಮತ್ತು ಕನ್ನಡದ ಪ್ರಕರಣಗಳು (೨೦೦೬), ಮೋಹನ್ ಕುಂಟಾರ್ ಅವರ ಭಾಷಾಂತರದ ವಿಭಿನ್ನ ನೆಲೆಗಳು (೨೦೧೦) (ಖಚಿತವಾಗಿ ಭಾಷಾಂತರ ಮೀಮಾಂಸೆಯನ್ನು ಮಾತ್ರ ಒಳಗೊಂಡಿರುವ ಕೃತಿ ಇದಲ್ಲ. ಭಾಷಾಂತರದ ಸುತ್ತ ಮುತ್ತ ಎಂಬ ಕೃತಿ ಇದು. ಇಲ್ಲಿ ಮೀಮಾಂಸೆಯ ವಿಚಾರಗಳೂ ಇವೆ), ಮಲ್ಲೇಪುರಂ ವೆಂಕಟೇಶ ಅವರು ಸಂಪಾದಿಸಿರುವ ತೌಲನಿಕ ಸಾಹಿತ್ಯಾಧ್ಯಯನ ತತ್ವ ವ್ಯಾಪ್ತಿ ಜಿಜ್ಞಾಸೆ (೨೦೦೮), ಕೆ.ಸಿ.ಶಿವಾರೆಡ್ಡಿ ಮತ್ತು ರಾಮಲಿಂಗಪ್ಪ ಟಿ.ಬೇಗೂರು ಅವರು ಸಂಪಾದಿಸಿರುವ (ಅನು) ಸೂಸಾನ್ ಬಾಸ್ನೆಟ್ ಅವರ ತೌಲನಿಕ ಸಾಹಿತ್ಯ (೨೦೦೮) ಈ ಕೆಲವನ್ನು ಉದಾಹರಣೆಗಳಾಗಿ ನೋಡಬಹುದು.

ಮೀಮಾಂಸೆಯ ಬಗೆಗೆ ಹೇಗೋ ಹಾಗೆಯೆ ನಮ್ಮಲ್ಲಿ ಸಾಹಿತ್ಯ ವಿಮರ್ಶೆಯ ತಾತ್ವಿಕತೆಯ ಬಗೆಗೂ ಸಾಕಷ್ಟು ಅಧ್ಯಯನಗಳು ನಡೆದಿವೆ. ವಿಮರ್ಶೆಯ ಪ್ರಕಾರಗಳಾದ ಪ್ರಾಯೋಗಿಕ ವಿಮರ್ಶೆ, ಮಾರ್ಕ್ಸ್‌ವಾದಿ ವಿಮರ್ಶೆ, ಸ್ತ್ರೀವಾದಿ ವಿಮರ್ಶೆ, ನಿರಚನವಾದ ಇತ್ಯಾದಿಗಳ ಬಗೆಗೆ ಪ್ರತ್ಯೇಕವಾದ ತಾತ್ವಿಕ ಅಧ್ಯಯನಗಳು ನಡೆದಿರುವಂತೆಯೆ ಕನ್ನಡ ವಿಮರ್ಶೆಯ ತಾತ್ವಿಕತೆ, ಪಾಶ್ಚಾತ್ಯ ವಿಮರ್ಶೆಯ ಪಕ್ಷಿನೋಟ ಇಂತಹ ಅಧ್ಯಯನಗಳೂ ನಡೆದಿವೆ. ಭಿನ್ನ ಸಂದರ್ಭಗಳಲ್ಲಿ ಬರೆ ಲೇಖನ ಸಂಕಲನಗಳು, ಸಂಪಾದಿತ ಕೃತಿಗಳು – ವಿಚಾರ ಸಂಕರಣಗಳ ಸಂಪಾದನೆಗಳು ಮತ್ತು ಅನುವಾದಗಳು ಎಂದು ಇವನ್ನು ಸ್ಥೂಲವಾಗಿ ನಾಲ್ಕು ಬಗೆಯಾಗಿ ವರ್ಗೀಕರಿಸಬಹುದು. ಮೊದಲ ಬಗೆಗೆ ಉದಾಹರಣೆಯಾಗಿ ರಾಮಲಿಂಗಪ್ಪ ಟಿ.ಬೇಗೂರು ಅವರ ‘ಕನ್ನಡ ವಿಮರ್ಶೆಯ ವಿನ್ಯಾಸ ಮತ್ತು ತಾತ್ವಿಕತೆ’ (೨೦೦೯), ಎಂ.ಶಂಕರ ಅವರ ಕನ್ನಡದಲ್ಲಿ ಪ್ರಾಯೋಗಿಕ ವಿಮರ್ಶೆಯ ಅಧ್ಯಯನ (೨೦೦೮), ಸುಜಾತಾ ಲಕ್ಷ್ಮೀಪುರ ಅವರ ಕನ್ನಡ ನವೋದಯ ವಿಮರ್ಶೆಯ ತಾತ್ವಿಕತೆ, (೨೦೦೮), ಮೊದಲಾದ ಅಧ್ಯಯನಗಳನ್ನು ನೋಡಬಹುದು. ಎರಡನೆ ಬಗೆಗೆ ಉದಾಹರಣೆಯಾಗಿ ಜಿ.ಎಸ್.ಆಮೂರ ಅವರ ಆಧುನಿಕ ಕನ್ನಡ ವಿಮರ್ಶೆ ಪ್ರಕಾರ ಮತ್ತು ಪ್ರಯೋಗ ( (೨೦೦೮), ಎಚ್.ತಿಪ್ಪೇರುದ್ರಸ್ವಾಮಿ ಅವರ ಸಾಹಿತ್ಯ ವಿಮರ್ಶೆಯ ತತ್ವಗಳು (೨೦೧೦) ಮೊದಲಾದ ಕೃತಿಗಳನ್ನು ನೋಡಬಹುದು. ಮೂರನೆ ಬಗೆಗೆ ಉದಾಹರಣೆಯಾಗಿ ಕನಾಟಕ ಸಾಹಿತ್ಯ ಅಕಾಡೆಮಿಯ ಎಲ್ಲ ವಾರ್ಷಿಕ ಸಂಕಲನಗಳೂ ಬರುತ್ತವೆ. ಜೊತೆಗೆ ಆಮೂರರ ಅಭಿನಂದನ ಗ್ರಂಥವಾದ ‘ಸಹೃದಯ ಸಂವಾದ ಕನ್ನಡ ವಿಮರ್ಶೆಯ ಪರಂಪರೆ’ (೨೦೦೫), ಎಚ್.ದಂಡಪ್ಪ ಮತ್ತು ಬಿ.ಎನ್.ಸುಮಿತ್ರಾಬಾಯಿ ಅವರು ಸಂಪಾದಿಸಿರುವ ‘ಸುವರ್ಣ ಸಾಹಿತ್ಯ ವಿಮರ್ಶೆ’ (೨೦೦೬), ಅರವಿಂದ ಮಾಲಗತ್ತಿ ಅವರು ಸಂಪಾದಿಸಿರುವ ‘ವಿಮರ್ಶೆಯ ಮಾರ್ಗ’ (೨೦೦೪), ಎಚ್.ಟಿ.ಕೃಷ್ಣಮೂರ್ತಿ ಅವರು ಸಂಪಾದಿಸಿರುವ ಆಧುನಿಕ ಕನ್ನಡ ವಿಮರ್ಶೆ (೧೦೦೬) ಮೊದಲಾದ ಕೃತಿಗಳನ್ನು ಗಮನಿಸಬಹುದು. ಇನ್ನು ನಾಲ್ಕನೆ ಬಗೆಗೆ ಪ್ರೊ.ಜಿ.ಶಂಕರಯ್ಯನವರು ಅನುವಾದಿಸಿರುವ ಪಾಶ್ಚಿಮಾತ್ಯ ಸಾಹಿತ್ಯ ವಿಮರ್ಶೆಯ ಪಕ್ಷಿನೋಟ (೨೦೦೩), ಯರವಿನತೆಲಿ ಮಠ ಅವರು ಅನುವಾದಿಸಿರುವ ಪಾಶ್ಚಾತ್ಯ ವಿಮರ್ಶೆಯ ವಾದಗಳು? ಮೊದಲಾದ ಕೃತಿಗಳನ್ನು ಗಮನಿಸಬಹುದು.

ಇವೆಲ್ಲಕ್ಕಿಂತ ಭಿನ್ನವಾದ ಪ್ರಯೋಗವೊಂದು ಕೂಡ ನಮ್ಮಲ್ಲಿ ಜರುಗಿದೆ. ಇಂಗ್ಲಿಶಿನಿಂದ ಎರವಲಾಗಿ ಬಂದಿರುವ ಓದಿನ ದಾರಿಗಳಾದ ನಿರಚನವಾದ, ಮಾರ್ಕ್ಸವಾದ, ಸ್ತ್ರೀವಾದ, ವಾಚಕ ಸ್ಪಂದನ ಸಿದ್ಧಾಂತ ಇತ್ಯಾದಿ ದಾರಿಗಳ ಮೂಲಕ ಕನ್ನಡ ಸಾಹಿತ್ಯ ಕೃತಿಗಳನ್ನು ಓದುವ ಪ್ರಯೋಗವಿದು. ಹೀಗೆ ಓದುವ ಮೂಲಕ ಆಯಾ ಓದಿನ ದಾರಿಗಳನ್ನು ಕನ್ನಡದಲ್ಲಿ ಪ್ರಯೋಗಿಸಿ ನೋಡುವ, ಪರೀಕ್ಷಿಸಿ ನೋಡುವ ಹಾಗೆಯೆ ಆಯಾ ದಾರಿಗಳ ಇತಿಮಿತಿಗಳನ್ನು ಕಂಡುಕೊಳ್ಳುವ ಪ್ರಯತ್ನವಾಗಿ ಈ ಪ್ರಯೋಗ ನಡೆದಿದೆ. ಇದೊಂದು ರೀತಿಯಲ್ಲಿ ಇಂಗ್ಲಿಶಿನ ಓದಿನ ದಾರಿಗಳನ್ನು ಕನ್ನಡದಲ್ಲಿ ಅನ್ವಯಿಸಿ ನೋಡುವ ಪ್ರಯೋಗವಾಗಿದೆ. ಹಾಗೆಯೇ ಈಗ ಇರುವ ಪರಿಭಾಷೆ ಸಿದ್ಧಾಂತಗಳಿಗೆ ಇನ್ನಷ್ಟು ಆಂಗ್ಲ ಪರಿಭಾಷೆ, ಸಿದ್ಧಾಂತಗಳನ್ನು ಒಳಸೇರಿಸುವ ಯತ್ನವಾಗಿದೆ. ಡಾ. ಗಿರಡ್ಡಿ ಗೋವಿಂದರಾಜ ಸಂಪಾದಿಸಿರುವ ‘ಓದುವ ದಾರಿಗಳು’ (೨೦೦೨)  ಕೃತಿಯು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗಿದೆ.

ಈ ಎಲ್ಲ ಅಧ್ಯಯನಗಳಲ್ಲಿ ಕನ್ನಡ ವಿಮರ್ಶೆಯ ಇತಿಹಾಸವನ್ನು ಕ್ರೋಡೀಕರಿಸಿಕೊಳ್ಳುವ ಮತ್ತು ತಾತ್ವೀಕರಿಸಿಕೊಳ್ಳುವ ಯತ್ನಗಳು; ಕನ್ನಡ ವಿಮರ್ಶೆಯ ತತ್ವಗಳನು ಕ್ರೋಡೀಕರಿಸಿಕೊಳ್ಳುವ ಮತ್ತು ರೂಪಿಸಿಕೊಳ್ಳುವ ಯತ್ನಗಳು; ಭಿನ್ನ ಕನ್ನಡ ವಿಮರ್ಶಕರ ವಿಮರ್ಶೆಯ ಸ್ವರೂಪ ಮತ್ತು ವಿಧಾನಾದಿಗಳನ್ನು ಕಂಡುಕೊಳ್ಳುವ ಯತ್ನಗಳು; ತಾವು ಶ್ರೇಷ್ಠವೆಂದು ಭಾವಿಸಿದ ವಿಮರ್ಶಾ ಲೇಖನಗಳನ್ನು ಸಂಕಲಿಸುವ ಮೂಲಕ ವಿಮರ್ಶೆಯ ಮುಖ್ಯ ವಿನ್ಯಾಸ ಮತ್ತು ಸಂವೇದನೆಗಳನ್ನು ಮಂಡಿಸುವ ಯತ್ನಗಳು; ಕನ್ನಡ ವಿಮರ್ಶೆಯ ಮುಖ್ಯ ಧಾರೆಗಳು, ಮಾರ್ಗಗಳು, ಸ್ಕೂಲುಗಳನ್ನು ಗುರ್ತಿಸಿಕೊಳ್ಳುವ ಯತ್ನಗಳು; ಜಾಗತಿಕವಾಗಿ ಇಂಗ್ಲಿಶಿನಲ್ಲಿ ಮಂಡಿತವಾಗಿರುವ ವಿಚಾರಗಳನ್ನು ಕನ್ನಡಕ್ಕೆ ತಂದುಕೊಳ್ಳುವ – ಅನ್ವಯಿಸುವ – ಆ ಮೂಲಕ ಕನ್ನಡವನ್ನು ತೂಗಿ ನೋಡುವ ಯತ್ನಗಳು; ಕನ್ನಡದ್ದೆ ಆದ ವಿಮರ್ಶಾ ಆಚಾರಗಳಲ್ಲಿ ಬಳಕೆಯಾಗಿರುವ ಓದಿನ ಕ್ರಮ, ಸಾಹಿತ್ಯ ಅನುಸಂಧಾನ ಕ್ರಮಗಳನ್ನು ಕಟ್ಟಿಕೊಳ್ಳುವ ಮತ್ತು ಮೌಲ್ಯಮಾಪನ ನಡೆಸುವ ಯತ್ನಗಳು; ಪಂಪ – ಕುವೆಂಪು – ಬೇಂದ್ರೆ ಇತ್ಯಾದಿ ಕವಿಗಳ ಬಗೆಗೆ ಬಂದಿರುವ ವಿಮರ್ಶೆಗಳನ್ನು ಕೇಂದ್ರವಾಗಿ ಇರಿಸಿಕೊಂಡು ಅವಗಳ ತಾತ್ವಿಕತೆಗಳನ್ನು ಚರ್ಚಿಸುವ ಯತ್ನಗಳು ಹೀಗೆ ಹತ್ತು ಹಲವು ಬಗೆಯ ಯತ್ನಗಳು ಇಲ್ಲೆಲ್ಲ ನಡೆದಿವೆ. ನಡೆಯುತ್ತಿವೆ.

ಇಂಗ್ಲಿಶಿನ ದಾರಿಗಳನ್ನು ಕನ್ನಡಕ್ಕೆ ಅನ್ವಯಿಸಿ ನೋಡುವ ಕ್ರಮಗಳು ಮತ್ತು ಆಧುನಿಕ ಸಾಹಿತ್ಯ ಘಟ್ಟಗಳಾದ ನವೋದಯ, ನವ್ಯ ಮೊದಲಾದ ಕಂಪಾರ್ಟ್‌ಮೆಂಟುಗಳಲ್ಲೆ ವಿಮರ್ಶೆಯನ್ನು ನಿರ್ವಚಿಸುವ ಕ್ರಮಗಳು ಇಲ್ಲಿನ ಮುಖ್ಯ ಮಿತಿಗಳಾಗಿವೆ.

ಆಕರ ಶಾಸ್ತ್ರೀಯ ಅಧ್ಯಯನಗಳು – ಪೂರಕ ಶಾಸ್ತ್ರೀಯ ಅಧ್ಯಯನಗಳು (ಚರಿತ್ರೆರಚನೆ – ಗ್ರಂಥಸಂಪಾದನೆ – ಕೋಶರಚನೆ – ಛಂದಸ್ಸು – ಭಾಷಾಧ್ಯಯನ – ಸ್ಥಳನಾಮ ಅಧ್ಯಯನ.)

ಸಾಹಿತ್ಯದ ಅದ್ಯಯನಕ್ಕೆ – ಚರಿತ್ರೆಯ ರಚನೆಗೆ – ಶಿಕ್ಷಣ ಪಠ್ಯಗಳಿಗೆ ಹೀಗೆ ಹಲವು ಉದ್ದೇಶಗಳಿಗಾಗಿ ಸಾಹಿತ್ಯದ ಆಕರಗಳನ್ನು ನಿರ್ಮಾಣ ಮಾಡುವುದನ್ನು ಸಂಶೋಧನೆ ಎಂದೇ ನಮ್ಮಲ್ಲಿ ಭಾವಿಸುತ್ತ ಬರಲಾಗಿದೆ. ಶಾಸನ, ಹಸ್ತಪ್ರತಿ, ಜಾನಪದ ಪಠ್ಯಗಳನ್ನು ಮುದ್ರಿತ ಪಠ್ಯಗಳನ್ನಾಗಿ ಪರಿವರ್ತಿಸುವುದನ್ನೂ ಸಂಶೋಧನೆ ಎಂದೆ ಪರಿಗಣಿಸುತ್ತ ಬರಲಾಗಿದೆ. ಪ್ರಾಚೀನ ಕನ್ನಡ ಗ್ರಂಥ ಸಂಪಾದನೆ (೨೦೦೨) – ಬಿ.ಎಸ್. ಸಣ್ಣಯ್ಯ, ಕನ್ನಡ ನಿಘಂಟುರಚನೆ (೨೦೦೩) – ಎಸ್.ಎಸ್. ಅಂಗಡಿ, ನುಡಿಗಟ್ಟುಗಳ ಕೋಶ (೨೦೦೬) – ಸುಧಾಕರ, ಕನ್ನಡ ಪದನಿಧಿ (೨೦೦೭) ಪ್ರಶಾಂತ್ ಮಾಡ್ತ, ದ್ರಾವಿಡ ಛಂದಸ್ಸು (೨೦೦೨) – ಕುಕ್ಕಿಲ ಕೃಷ್ಣಭಟ್ಟ, ಹಳಗನ್ನಡ ಪದಸಂಪದ (೨೦೦೭) – ಪಿ.ವಿ.ನಾರಾಯಣ, ಕನ್ನಡ ಛಂದೋ ಮೀಮಾಂಸೆ (೨೦೦೩) – ಟಿ.ವಿ.ವೆಂಕಟಾಚಲಶಾಸ್ತ್ರಿ, ತಮಿಳು ಕನ್ನಡ ದ್ವಿಭಾಷಾ ನಿಗಂಟು (೨೦೦೬) ಸಂ. ಪಾ.ಶ.ಶ್ರೀನಿವಾಸ, ಲಿಪಿಯ ಹುಟ್ಟು ಮತ್ತು ಬೆಳವಣಿಗೆ (೨೦೦೨) – ದೇವರ ಕೊಂಡಾರೆಡ್ಡಿ, ಸ್ಥಳ ನಾಮಗಳ ಅಧ್ಯಯನ (೨೦೦೮) – ಸಂ. ಡಿ.ಲಿಂಗಯ್ಯ, ಚಕ್ಕೆರೆ ಶಿವಶಂಕರ ಇಂತಹ ಕೃತಿಗಳನ್ನು ನೋಡಿದರೆ ನಮ್ಮ ಅಕರಶಾಸ್ತ್ರೀಯ ಸಂಶೋಧನೆಗಳು ಮುಗಿದಿಲ್ಲ; ಅವುಗಳು ಸಮರ್ಥವಾಗಿ ಮುಂದುವರಿದಿವೆ. ಎನ್ನಿಸುತ್ತದೆ. ಯಾವುವೂ ಇಲ್ಲವಾಗುವುದಿಲ್ಲ; ರೂಪಾಂತರವಾಗಬಹುದು ಎಂಬ ತತ್ವ ಇವುಗಳನ್ನು ನೋಡಿದರೆ ತಿಳಿಯುತ್ತದೆ.

ಇಲ್ಲಿ ಕೆಲವು ಉದಾಹರಣೆಗಳನ್ನು ಮಾತ್ರವೆ ನೀಡಲಾಗಿದೆ. ಆದರೆ ಈ ವಲಯದಲ್ಲಿ ಸಾಕಷ್ಟು ಕೆಲಸ ಆಗಿದೆ. ಸಾಹಿತ್ಯದ ಅಧ್ಯಯನದ ಪ್ರಾಚೀನ ನಡೆಗಳನ್ನು ವಿವರಿಸುತ್ತಲೆ ವಿಸ್ತರಿಸುವ ಮತ್ತು ಪ್ರಾಚೀನ ಸಾಹಿತ್ಯವನ್ನು ಅಧ್ಯಯನ ಮಾಡಲು ಬೇಕಾದ ಆಕರಗಳನ್ನು ನಿರ್ಮಿಸಿಕೊಡುವ ಕೆಲಸವನ್ನು ಇವು ಮಾಡುತ್ತವೆ. ಆದಾಗ್ಯೂ ನಮ್ಮ ನಿಘಂಟುಶಾಸ್ತ್ರವು ಹೆಚ್ಚಾಗಿ ಪ್ರಾಚೀನ ನಿಘಂಟುಗಳು ಮತ್ತು ಪ್ರಾಚೀನ ಲಿಖಿತ ಪಠ್ಯಗಳನ್ನು ಮಾತ್ರವೆ ಆಧರಿಸಿ ನಿರ್ಮಿತವಾಗಿವೆ. ಪ್ರಾದೇಶಿಕ ಭೇದ, ಉಪಭಾಷಿಕ ಭೇದ, ಮೌಖಿಕ ಪಠ್ಯಗಳ ಪದಕೋಶಗಳು, ಆಧುನಿಕ ಸಾಹಿತ್ಯಪಠ್ಯಗಳ ನಿಘಂಟುಗಳು ಹೀಗೆ ಈ ಕ್ಷೇತ್ರದಲ್ಲಿ ಅಪಾರವಾದ ಕೆಲಸ ಬಾಕಿ ಇದೆ. (ಕನ್ನಡ ವಿ.ವಿ.ಯಲ್ಲಿ ವೃತ್ತಿ ಪದಕೋಶ, ಪ್ರಾದೇಶಿಕ ಪದಕೋಶಗಳನ್ನು ತಯಾರಿಸಿ ಪ್ರಕಟಿಸುವ ಕೆಲಸ ಸ್ವಲ್ಪ ಮಟ್ಟಿಗೆ ಆಗಿದೆ. ಮೈಸೂರಿನ ಸಿ.ಐ.ಐ.ಎಲ್, ಕರ್ನಾಟಕ ಜಾನಪದ ವಿ.ವಿ, ಮಂಗಳೂರು ವಿ.ವಿ. ಮೊದಲಾದುವು ಪ್ರಾದೇಶಿಕ ಮತ್ತು ಆಡುನುಡಿ (ಬಳಕೆಯ) ಪದಕೋಶಗಳನ್ನು ರಚಿಸಲು ತೊಡಗಿವೆ. ಇನ್ನೂ ಈ ಕಾರ್ಯ ಮುಗಿದಿಲ್ಲ) ಪ್ರಶಾಂತ್ ಮಾಡ್ತ ಅವರ ‘ಕನ್ನಡ ಪದನಿಧಿ’ ಕೋಶವು ೧೯ ರೀತಿಯಲ್ಲಿ ಪದಗಳನ್ನು ವರ್ಗೀಕರಿಸಿಕೊಂಡಿದೆ. ಪ್ರತಿ ಪರಿಕಲ್ಪನೆಗಳ ಕೊನೆಯಲ್ಲಿ ನುಡಿಗಟ್ಟು, ಪಡೆನುಡಿಗಳನ್ನೂ ನೀಡಲಾಗಿದೆ. ಕನ್ನಡ ಸಮಾನಾರ್ಥಕ, ಸಮೀಪಾರ್ಥಕ, ವಿರುದ್ಧಾರ್ಥಕ ಹಾಗೂ ಸಂಬಂಧಿತ ಪದಗಳ ಕೋಶ ಆಗಿರುವ ಇದು ಕನ್ನಡದ ತೆಸಾರಸ್ಸಿನ ಕೊರತೆಯನ್ನು ಬಹುಮಟ್ಟಿಗೆ ನೀಗಿಸಬಲ್ಲದು.[4]

ನಿಘಂಟಿನ ಪರಿವಾರಕ್ಕೇ ಸೇರಿದ ಪರಭಾಷಾ ಕೋಶಗಳೂ ನಮ್ಮಲ್ಲಿ ರಚನೆಯಾಗಿವೆ. ವಿಸ್ತಾರವಾದ ಅಧ್ಯಯನ, ಮಾಹಿತಿ ಸಂಗ್ರಹ ಮತ್ತು ಸಂಯೋಜನೆಗಳಿಂದ ರಚಿತವಾಗಿರುವ ಕೋಶಗಳಿವು. ೧೯೯೮ರಲ್ಲೆ ಪ್ರಕಟವಾದರೂ ಓ.ಎಲ್.ನಾಗಭೂಷಣಸ್ವಾಮಿ ಅವರ ವಿಮರ್ಶೆಯ ಪರಿಭಾಷೆಯನ್ನು ಇಲ್ಲಿ ಸ್ಮರಿಸಬೇಕು. ಇದು ಭಾರತೀಯ, ಕನ್ನಡ, ಜಾಗತಿಕ ಹೀಗೆ ಈ ಮೂರೂ ವಲಯದ ಸಾಹಿತ್ಯ ವಿಮರ್ಶೆ, ಮೀಮಾಂಸೆ, ರಂಗಭೂಮಿ ಇತ್ಯಾದಿಗಳ ಪರಿಭಾಷೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಕೋಶ. ಇದರ ಮುಂದುವರೆದ ರೂಪದಂತೆ ‘ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು’ (೨೦೧೦) ಎಂಬ ಅನುವಾದಿತ ಮತ್ತು ಸಂಪಾದಿತ ಕೋಶವು ಪ್ರಕಟವಾಗಿದೆ. ಶಿಕ್ಷಣ, ಯಾಹೂ, ಸೇನೆ, ನಿರಾಶ್ರಿತರು ಹೀಗೆ ಇಲ್ಲಿ ಹಲವಾರು ಆಧುನಿಕ ಪರಿಭಾಷೆಗಳ ಬಗೆಗೆ ಬೇರೆ ಬೇರೆಯವರು ಬರೆದ ಲೇಖನರೂಪಿ ಜಿಜ್ಞಾಸೆಯ ಬರಹಗಳನ್ನು ಸಂಪಾದಿಸಲಾಗಿದೆ. ಜ್ಞಾನಕಾರಣ, ಅರ್ಥಕಾರಣಗಳನ್ನು (ಜ್ಞಾನಾರ್ಥ ರಾಜಕಾರಣಗಳನ್ನು) ಒಡೆಯುವ; ೨೧ನೆ ಶತಮಾನದ ಬೌದ್ಧಿಕ ತಿಳುವಳಿಕೆಗಳ ಹಿಂದಿನ ಹುನ್ನಾರಗಳನ್ನು ವಿಷ್ಲೇಶಿಸುವ ಕೆಲಸವನ್ನು ಈ ಕೋಶವು ಮಾಡಿದೆ. ಮತ್ತು ಆ ಹಿನ್ನೆಲೆಯಲ್ಲಿ ಯೋಚಿಸಬೇಕಾದ ತಿಳುವಳಿಕೆಯನ್ನು ಕಟ್ಟಿಕೊಡುವ ಪರಿಕಲ್ಪನೆಗಳ ಒಂದು ತೆರನಾದ ಕೈಮ ಗೊಜ್ಜನ್ನು ಇಲ್ಲಿ ತಯಾರಿಸಲಾಗಿದೆ. ಪಶ್ಚಿಮ ದೃಷ್ಟಿಯನ್ನು ಒಡೆಯುವ ಈ ಕೃತಿಯಲ್ಲಿ ಅಷ್ಟೇ ಬಲವಾದ ಉತ್ತರಭಾರತೀಯ – ‘ಭಾರತೀಯ’ ದೃಷ್ಟಿಯೊಂದು ಮಂಡಿತವಾಗಿದೆ. ಬಿ.ಎಂ.ಶ್ರೀ ಅವರ ಭಾರತೀಯ ಕಾವ್ಯಮೀಮಾಂಸೆ, ಇನಾಂದಾರರ ಮತ್ತು ತಿಪ್ಪೇರುದ್ರಸ್ವಾಮಿ ಅವರ ತೌಲನಿಕ, ಪಾಶ್ಚಾತ್ಯ ಕಾವ್ಯಮೀಮಾಂಸೆಗಳು ಉಂಟುಮಾಡಿದ ಬಿಕ್ಕಟ್ಟುಗಳ ಮುಂದುವರೆದ ರೂಪಗಳಂತೆ ಈ ಎಲ್ಲ ಕೋಶಗಳೂ ಇವೆ. (ವಚನ ಪರಿಭಾಷಾ ಕೋಶ, ದಾಸ – ಕೀರ್ತನ ಪರಿಭಾಷಾ ಕೋಶಗಳಂತಹ ಅಕಡೆಮಿಕ್ ಸಾಹಿತ್ಯ ಓದಿನ ಸಹಾಯಕ ಕೋಶಗಳೂ ಇಲ್ಲಿ ಗಮನಾರ್ಹ)

ಆಕರಶಾಸ್ತ್ರವು ನಮ್ಮ ಪ್ರಾಚೀನತೆ ಪಠ್ಯಗಳ ಅನುಸಂಧಾನದ ವಾಸನೆಯಿಂದ ಇನ್ನೂ ಬಿಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಆಕರಶಾಸ್ತ್ರದಲ್ಲಿ ೧. ಚಾರಿತ್ರಿಕ ಅವಲೋಕನ, ೨. ತೌಲನಿಕ ಅಧ್ಯಯನ ಮತ್ತು ೩. ಲಕ್ಷಣ ನಿರ್ವಚನ ಹೀಗೆ ಸಾಮಾನ್ಯವಾಗಿ ಮೂರು ಬಗೆಗಳಿರುತ್ತವೆ. ಈಗಾಗಲೇ ಇರುವ ಶಾಸ್ತ್ರಗಳನ್ನು ಪರಿಚಯಿಸುವ ಅಥವಾ ವ್ಯಾಖ್ಯಾನಿಸುವ ಲಕ್ಷಣನಿರ್ವಚನ ಮಾರ್ಗದಿಂದ ಏನೂ ಪ್ರಯೋಜನವಿಲ್ಲ. ಶಾಸ್ತ್ರದ ಪರಿಧಿಗಳನ್ನೇ ವಿಸ್ತರಿಸುವ ಕೆಲಸ ಮಾಡುವುದಿದ್ದರೆ ಆಗ ಅದು ಸರಿ. ಆದರೆ ನಮ್ಮಲ್ಲಿ ಅಂಥ ಕೆಲಸ ಅಷ್ಟಾಗಿ ನಡೆದಿಲ್ಲ. ಸಣ್ಣಯ್ಯ, ಅಂಗಡಿ, ಇವರುಗಳು ಚಾರಿತ್ರಿಕ ಅವಲೋಕನ ಮಾರ್ಗದಲ್ಲಿ ತಮ್ಮ ಸಂಶೋಧನೆಗಳನ್ನು ಸಶಕ್ತವಾಗಿ ಮಂಡಿಸಿದ್ದಾರೆ. ಸುಧಾಕರ ನಿಘಂಟು ಕ್ಷೇತ್ರದಲ್ಲಿ ಇದುವರೆಗೆ ಆಗಿಲ್ಲದ ಜನಪದ ನುಡಿಗಟ್ಟುಗಳ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಕನ್ನಡ ವಿ.ವಿ.ಯ ಭಾಷಾ ವಿಭಾಗದಲ್ಲಿ ವೃತ್ತಿಪದಕೋಶಗಳನ್ನು ಹಾಗೂ ‘ದಿನದಿನ’ ಮಾದ್ಯಮಗಳಲ್ಲಿ ಬಳಸಿದ ಬಳಕೆಯ ಪದಕೋಶಗಳನ್ನು ಕಟ್ಟಿಕೊಡಲಾಗಿದೆ. ಹಾಗೆಯೇ ಛಂದಸ್‌ಶಾಸ್ತ್ರವನ್ನು ವೆಂಕಟಾಚಲಶಾಸ್ತ್ರಿಗಳು ಭಿನ್ನ ನೆಲೆಯಲ್ಲಿ ವಿಸ್ತರಿಸಲೂ ಯತ್ನಿಸಿದ್ದಾರೆ. ನಾದ ಮತ್ತು ಛಂದಸ್ಸು, ಭಾವಾಭಿವ್ಯಕ್ತಿ ಮತ್ತು ಛಂದಸ್ಸು ಹಾಗೂ ಕವಿತೆಗಳ ಸಂಬಂಧಗಳನ್ನು ತಮ್ಮ ಕೃತಿಯಲ್ಲಿ (೨೦೦೩) ಚರ್ಚಿಸಿದ್ದಾರೆ. ಅಂಗಡಿಯವರು ನಿಘಂಟುಶಾಸ್ತ್ರದಲ್ಲಿ ತಂತ್ರಜ್ಞಾನ ಬಳಕೆ ಮಾಡುವ ಸಾಧ್ಯತೆಯನ್ನು ಕರಿತೂ ಚರ್ಚಿಸಿದ್ದಾರೆ. ಆದರೂ ಆಕರಶಾಸ್ತ್ರವು ನಮ್ಮ ಪ್ರಾಚೀನತೆ ಪಠ್ಯಗಳ ಅನುಸಂಧಾನದ ವಾಸನೆಯಿಂದ ಇನ್ನೂ ಬಿಡಿಸಿಕೊಂಡಂತೆ ಕಾಣಿಸುತ್ತಿಲ್ಲ.

ಕನ್ನಡದಲ್ಲಿ ಆದಿಯಲ್ಲಿ ಸಂಶೋಧನೆ ಜನಿಸಿದ್ದೆ ಹಸ್ತಪ್ರತಿ – ಶಾಸನಗಳ ಸಂಪಾದನೆ ಮತ್ತು ವ್ಯಾಖ್ಯಾನಗಳಿಂದ. ಸಾಹಿತ್ಯ ಚರಿತ್ರೆಗಳ ನಿರ್ಮಾಣದಿಂದ. ಈ ಧಾರೆಯಲ್ಲಿ ಪರಂಪರೆಯ ನಿರ್ವಚನ, ನಿರ್ಮಾಣ ಮತ್ತು ಸಾಹಿತ್ಯಕ ಇತಿಹಾಸಗಳ ಕಟ್ಟಿಕೊಳ್ಳುವಿಕೆಗಳು ಆದಿಯಿಂದ ಇಂದಿನತನಕ ನಡೆಯುತ್ತಲೇ ಬಂದಿವೆ. ಸಂಪಾದನೆ, ಚರಿತ್ರೆರಚನೆ ಮತ್ತು ಸಂಶೋಧನೆಗಳ ನಡುವೆ ಒಂದು ಅನ್ಯೋನ್ಯ ಸಂಬಂಧ ಎಂದಿನಿಂದಲೂ ಇದ್ದೇ ಇದೆ. ಅಥವಾ ಸಂಪಾದನೆ ಮತ್ತು ಸಾಹಿತ್ಯ ಚರಿತ್ರೆಗಳ ರಚನೆಯನ್ನೆ ಸಂಶೋಧನೆ ಎಂದೂ ನಮ್ಮಲ್ಲಿ ಭಾವಿಸುತ್ತ ಬರಲಾಗಿದೆ. ರೈಸ್, ಮುಗಳಿ, ಆರ್. ನರಂಸಿಂಹಾಚಾರ್, ಬಿ.ಎಂ.ಶ್ರೀ, ಎಂ.ಎ.ರಾಮಾನುಜ ಐಯ್ಯಂಗಾರ್, ಮರಿಯಪ್ಪಭಟ್ಟ, ತ.ಸು.ಶಾಮರಾಯ ಮೊದಲಾದವರು ಪ್ರತಿಷ್ಠಿತ ಸಾಹಿತ್ಯ ಚರಿತ್ರೆಯನ್ನು ಮಾತ್ರವೆ ಸಾಹಿತ್ಯ ಚರಿತ್ರೆ ಎಂದು ಭಾವಿಸಿದ್ದಾರೆ. ಅಲ್ಲದೆ ಶೈಕ್ಷಣಿಕ ಓದಿಗೆ ಅನುಕೂಲವಾಗುವಂತೆ ಸಾಹಿತ್ಯ ಚರಿತ್ರೆಯನ್ನು ವಿಭಾಗೀಕರಣ ಮಾಡುವುದರಲ್ಲೆ ಬಸವಳಿದು ಹೋಗಿದ್ದಾರೆ. ಇದ್ದದ್ದರಲ್ಲಿ ಇವರೆಲ್ಲರಿಗಿಂತ ಭಿನ್ನವಾಗಿ ಸಾಹಿತ್ಯ ಚರಿತ್ರೆಯ ಭಿನ್ನ ಎತ್ತರಗಳನ್ನು ಒಳಗೊಳ್ಳುವ ಕೆಲಸವನ್ನು ಮೊದಲಿಗೆ ಕುರ್ತಕೋಟಿ ಮಾಡಿದ್ದಾರೆ. ಇವರ “ಸಾಹಿತ್ಯ ಸಂಗಾತಿ’ ಇಂತಹ ಒಂದು ಪ್ರಯತ್ನ. ಇಲ್ಲಿ ಸಾಹಿತ್ಯದ ಭಿನ್ನ ಹೈಟುಗಳನ್ನು ಚರ್ಚಿಸಲಾಗಿದೆ. ಸಂಗ್ಯಾಬಾಳ್ಯಾ,  ಶಾಕುಂತಲಾ, ಶ್ರೀಕೃಷ್ಣ ಪಾರಿಜಾತ, ಗೋವಿನ ಹಾಡು ಇತ್ಯಾದಿಗಳನ್ನು ಇಲ್ಲಿ ಸಾಹಿತ್ಯ ಚರಿತ್ರೆಯ ಭಾಗವಾಗಿ ಒಳಗೊಳ್ಳಲಾಗಿದೆ. ಅನುದ್ದಿಶ್ಯವಾಗಿ – ಅಪ್ರಜ್ಞಾಪೂರ್ವಕವಾಗಿ ಅಥವಾ ಸಾಹಿತ್ಯ ಚರಿತ್ರೆಯ ಅಪಕಲ್ಪನೆಯಿಂದಾಗಿ ಯಾವ ವಲಯಗಳನ್ನು ಚರಿತ್ರೆಯ ಹೊರಗೆ ಇಡಲಾಗಿತ್ತೋ ಅವುಗಳಲ್ಲಿ ಕೆಲವನ್ನಾದರೂ ಕುರ್ತಕೋಟಿ ಒಳಗೊಳ್ಳುವ ಯತ್ನವನ್ನು ಇಲ್ಲಿ ಮಾಡಿದ್ದಾರೆ. ಹಾಗೆಯೆ ಇಡೀ ಪ್ರತಿಷ್ಠಿತ ಸಾಹಿತ್ಯ ಚರಿತ್ರೆಯನ್ನೆ ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ಮರುನಿರೂಪಿಸಿರುವ ಸಿ.ವೀರಣ್ಣವನರದ್ದು ಕುರ್ತಕೋಟಿಯವರಿಗಿಂತ ಭಿನ್ನವಾದ ಪ್ರಯತ್ನ. (ಸಿ.ವೀರಣ್ಣ ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ – ೨) ಈ ಕುರ್ತಕೋಟಿ ಮತ್ತು ವೀರಣ್ಣನವರ ಪರಂಪರೆಯನ್ನು ಮುರಿದುಹಾಕುವಂತೆ ಮತ್ತು ಹಳೆಯ ಮುಗಳಿ ಪರಂಪರೆಯನ್ನು ಮರುಸ್ಥಾಪಿಸುವಂತೆ ಹೊಸಗನ್ನಡ ಸಾಹಿತ್ಯ ಚರಿತ್ರೆ ರಚನೆ ಮಾಡಿರುವವರು ಎಲ್.ಎಸ್.ಶೇಷಗಿರಿರಾಯರು. (ಹೊಸಗನ್ನಡ ಸಾಹಿತ್ಯ ಚರಿತ್ರೆ – ೧೯೭೫, ೨೦೦೨) ಬಸವರಾಜ ಸಾದರ್ ಸಂಪಾದನೆಯ ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು, ಜಿ.ಎಚ್.ನಾಯಕರ ಸಂಪಾದನೆಯ ಶತಮಾನದ ಸಾಹಿತ್ಯ – ೧ ಮತ್ತು ೨, ವಿ.ಮುನಿವೆಂಕಟಪ್ಪನವರ ದಲಿತ ಚಳವಳಿಯ ಚರಿತ್ರೆ ಮೊದಲಾದ ಕೃತಿಗಳು ಶೇಷಗಿರಿರಾಯರ ಮುಂದುವರಿಕೆಗಳೇ ಆಗಿವೆ. ಇದ್ದದ್ದರಲ್ಲಿ ಜಿ.ಎಚ್.ನಾಯಕರ ಸಂಪಾದಿತ ಚರಿತ್ರೆ ಕಾಲಬದ್ಧವಾಗಿ ಹಲವರು ಬರೆದ ಬರಹಗಳ ಸಂಪಾದನೆ ಆಗಿರುವುದರಿಂದ ಒಳಗೊಳ್ಳುವ ಕಾಳಜಿ ಇಲ್ಲಿ ಸ್ವಲ್ಪಮಟ್ಟಿಗೆ ಪ್ರಕಟವಾಗಿದೆ. ಹಾಗೆ ನೋಡಿದರೆ ಆಧುನಿಕ ಸಂದರ್ಭದಲ್ಲಿ ಚರಿತ್ರೆ ರಚನೆಗಳು ಕವಲೊಡೆದಿವೆ. ದಲಿತ ಸಾಹಿತ್ಯ ಚರಿತ್ರೆ, ಮಹಿಳಾ ಸಾಹಿತ್ಯ ಚರಿತ್ರೆ, ಮೌಖಿಕ ಸಾಹಿತ್ಯ ಚರಿತ್ರೆ, ಮುಸ್ಲಿಂ ಸಾಹಿತ್ಯ ಚರಿತ್ರೆ, ಬ್ಯಾರಿ ಸಾಹಿತ್ಯ ಚರಿತ್ರೆ, ಕಾದಂಬರಿ ಸಾಹಿತ್ಯ ಚರಿತ್ರೆ, ಮಹಾಕಾವ್ಯ ಅಧ್ಯಯನ, ಮೌಖಿಕ ಮಹಾಕಾವ್ಯ ಅಧ್ಯಯನ, ತಾಲ್ಲೂಕು ಸಾಹಿತ್ಯ ಚರಿತ್ರೆ, ಜಿಲ್ಲಾ ಸಾಹಿತ್ಯ ಚರಿತ್ರೆ ಇತ್ಯಾದಿಯಾಗಿ ಇವು ಕವಲೊಡೆದಿವೆ. ಇನ್ನೂ ಮುಂದೆ ಒಕ್ಕಲಿಗ ಸಾಹಿತ್ಯ ಚರಿತ್ರೆ, ಲಿಂಗಾಯತ ಸಾಹಿತ್ಯ ಚರಿತ್ರೆ, ಕುರುಬ ಸಾಹಿತ್ಯ ಚರಿತ್ರೆ ಇತ್ಯಾದಿಯಾಗಿ ಇದು ಕವಲೊಡೆದರೂ ಅಚ್ಚರಿಪಡಬೇಕಾಗಿಲ್ಲ. ಅಂತೂ ಚರಿತ್ರೆ ರಚನೆ ಮತ್ತು ಸಂಪಾದನೆಗಳು ನಿರಂತರವಾದ ಪ್ರಕ್ರಿಯೆಗಳು ಎಂಬುದನ್ನು ಇವೆಲ್ಲವೂ ಸಾಬೀತು ಪಡಿಸಿವೆ. ಸಾಹಿತ್ಯಕ್ಕೆ ಮಾತ್ರವಲ್ಲ ಛಂದಸ್ಸು, ಭಾಷೆ, ಮೀಮಾಂಸೆ, ನಿಘಂಟು ಹೀಗೆ ಹಲವು ಆಕರಶಾಸ್ತ್ರಗಳಿಗು ಚರಿತ್ರೆಯನ್ನು ರಚಿಸುವ ಕೆಲಸ ಈ ದಶಕದಲ್ಲಿ ಸಶಕ್ತವಾಗಿ ನಡೆದಿದೆ. ಒಂದೊಂದು ಶಿಸ್ತುಗಳಿಗು ಅವುಗಳದ್ದೆ ಆದ ಚರಿತ್ರೆಯನ್ನು ಗುರ್ತಿಸಿ ಕಟ್ಟಿಕೊಳ್ಳುವ ಚಾರಿತ್ರಿಕ ಸಂಶೋಧನೆ ಕೆಲಸ ನಮ್ಮಲ್ಲಿ ಬಲವಾಗಿ ಇಂದಿಗು ತಪ್ಪದೆ ನಡೆಯುತ್ತಿದೆ. ಇವನ್ನೆಲ್ಲ ಆಕರಶಾಸ್ತ್ರೀಯ ಸಂಶೋಧನ ಧಾರೆ ಎಂಬ ಒಂದೇ ವರ್ಗದಲ್ಲಿ ಗುರ್ತಿಸಿಕೊಳ್ಳಬಹುದು. ಆದರೆ ಹಳೆಯ ಕಾಲದ ಕವಿ, ಕೃತಿಗಳ ಕಾಲ, ಧರ್ಮ, ಸ್ಥಳ ಇತ್ಯಾದಿಗಳ ಚರ್ಚೆ ಇಂದು ಆಧುನಿಕ ಸಂದರ್ಭದಲ್ಲಿ ಅಪರೂಪವಾಗಿದೆ ಅಷ್ಟೆ. (ಇದರ ಜೊತೆಗೆ ನೋಡಿ: ಪರಂಪರೆಯ ನಿರ್ವಚನ ಮತ್ತು ವಿಸರ್ಜನ ಧಾರೆಗಳು)

ಶಾಸನಗಳ ಅಧ್ಯಯನದಲ್ಲಿ ಅಂತಹ ಬದಲಾವಣೆಗಳು ಆಗಿಲ್ಲ. ಅದದೇ ಹಳೆಯ ಮಾದರಿಗಳನ್ನೆ ಮುಂದುವರೆಸುತ್ತ ಬರಲಾಗಿದೆ. ಈ ದಶಕದ ಮತ್ತು ಹಿಂದಿನ ಎಂಬಂತೆ ವರ್ಗೀಕರಣ ಮಾಡುವುದೇ ಒಂದು ಸಮಸ್ಯೆ. ಷ ಶೆಟ್ಟರ್, ಕಲಬುರ್ಗಿ, ವೆಂಕಟಾಚಲಶಾಸ್ತ್ರಿ, ಆರ್.ಶೇಷಶಾಸ್ತ್ರಿ ಮೊದಲಾದವರು ಹಲವು ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ಎಂಜಿ.ಮಂಜುನಾಥ, ನಾಗಭೂಷಣ, ಪರಮಶಿವಮೂರ್ತಿ ಮೊದಲಾದ ಹೊಸ ಪೀಳಿಗೆಯವರು ಇವರೊಂದಿಗೆ ಕೈಜೋಡಿಸಿದ್ದಾರೆ. ಹೀಗಾಗಿ ದಶಕಗಳು ಮತ್ತು ತಲೆಮಾರುಗಳ ನಡುವೆ ಅಂತಹ ವ್ಯತ್ಯಾಸವೇನೂ ಇಲ್ಲವಾಗಿದೆ. ರೈಸ್, ನರಸಿಂಹಾಚಾರ್ ಮೊದಲಾದವರ ಸಂಗ್ರಹ ಮತ್ತು ಪ್ರಕಟಣೆಯನ್ನು ಆನಂತರವೂ ಹಲವಾರು ಜನ ಮುಂದುವರಿಸಿಕೊಂಡು ಬಂದಿದ್ದಾರೆ. ಚರಿತ್ರೆಯ ಆಕರಗಳನ್ನಾಗಿ ಶಾಸನಗಳನ್ನು ಅಧ್ಯಯನ ಮಾಡುವ ದೊಡ್ಡ ಪರಂಪರೆಯೆ ನಮ್ಮಲ್ಲಿದೆ. ಸಾಹಿತ್ಯ ಚರಿತ್ರೆಯ ಆಕರಸಾಮಗ್ರಿಯನ್ನಾಗಿ ಬಳಸುವಂತೆಯೆ ಸಾಹಿತ್ಯ ಕೃತಿಗಳನ್ನಾಗಿ ಕೂಡ ಶಾಸನಗಳನ್ನು ಅಧ್ಯಯನಕ್ಕೆ ನಮ್ಮಲ್ಲಿ ಗುರಿಪಡಿಸಲಾಗಿದೆ. ಬಾ.ರಾ.ಗೋಪಾಲ್, ರಿತ್ತಿ, ಕೆ.ವಿ.ರಮೇಶ್, ಶೆಟ್ಟರ್ ಮೊದಲಾವರು ಚಾರಿತ್ರಿಕವಾಗಿ ಅಧ್ಯಯನ ಮಾಡಿರುವುದಕ್ಕೆ ನಿದರ್ಶನವಾದರೆ, ಕಲಬುರ್ಗಿ, ಚಿದಾನಂದಮೂರ್ತಿ, ನೇಗಿನಹಾಳ ಮೊದಲಾದವರು ಸಾಹಿತ್ಯಕವಾಗಿ ಅಧ್ಯಯನ ಮಾಡಿರುವುದಕ್ಕೆ ಮಾದರಿಗಳಾಗಿದ್ದಾರೆ.

ಇಲ್ಲು ಹಲವು ಕವಲುಗಳಿವೆ. ಜಿಲ್ಲಾವಾರು ಸಂಗ್ರಹಣೆ ಮತ್ತು ಪ್ರಕಟಣೆಗೆ ದೇವರಕೊಂಡಾರೆಡ್ಡಿ ಮತ್ತಿತರು ಶ್ರಮಿಸಿದ್ದಾರೆ. ಚಿದಾನಂದಮೂರ್ತಿ ಅವರ ಕರ್ನಾಟಕ ಶಾಸನಗಳ ಸಾಂಸ್ಕೃತಿಕ ಅಧ್ಯಯನ ಶಾಸನಗಳ ಅಧ್ಯಯನದಲ್ಲಿ ಒಂದು ಹೊಸ ಮೈಲಿಗಲ್ಲು ನಿರ್ಮಿಸಿದ ಕೃತಿ. ಭಾಷಿಕ ಮತ್ತು ಸಾಹಿತ್ಯಿಕ ನೆಲೆಗಳಲ್ಲಿ ಆನಂತರ ನೇಗಿನಹಾಳರು ಶಾಸನಗಳನ್ನು ಅಧ್ಯಯನ ಮಾಡಲು ಇದು ಪರಂಪರೆಯನ್ನು ಹಾಕಿಕೊಟ್ಟಿತು. ಬಿ.ಜಿ.ಎಲ್. ಸ್ವಾಮಿ ಅಂತಹವರು ಕೂಡ ಶಾಸನಗಳಲ್ಲಿ ಗಿಡಮರಗಳು ಎಂಬ ಬರಹ ಬರೆದಿದ್ದಾರೆ. ಚೆನ್ನಕ್ಕ ಪಾವಟೆ ಅವರು ಸ್ತ್ರೀಯರ ಜೀವನದ ಬಗೆಗೆ ಶಾಸನಗಳು ಪ್ರಕಟಿಸುವ ಸಂಗತಿಗಳನ್ನು ಅಧ್ಯಯನ ಮಾಡಿದ್ದಾರೆ. ಎಂ.ಜಿ.ಮಂಜುನಾಥ ಅವರು ಶಾಸನಗಳನ್ನು ಪರಿಚಯಾತ್ಮಕವಾಗಿ ವಿವರಿಸುವ ಅಧ್ಯಯನ ಮಾಡಿದ್ದಾರೆ. ಹೀಗೆ ಇಲ್ಲಿ ಸಾಂಸ್ಕೃತಿಕ ಅಧ್ಯಯನ, ಸಾಹಿತ್ಯಕ ಅಧ್ಯಯನ, ಭಾಷಿಕ ಅಧ್ಯಯನ, ಸ್ತ್ರೀವಾದಿ ಅಧ್ಯಯನ, ಪ್ರಾದೇಶಿಕ ಪರಿಸರವಾದಿ ಅಧ್ಯಯನ, ಪರಿಚಯಾತ್ಮಕ ಅಧ್ಯಯನ, ಶಿಲ್ಪ – ಶಿಲ್ಪಿ – ವಾಸ್ತು, ಸ್ಥಳೀಯ ಚರಿತ್ರೆ ಅಧ್ಯಯನಗಳು, ಇತ್ಯಾದಿಯಾಗಿ ಹಲವು ಕವಲುಗಳು ನಿರ್ಮಾಣವಾಗಿವೆ. ಈ ಎಲ್ಲ ಕವಲುಗಳು ಈ ದಶಕದಲ್ಲೂ ಮುಂದುವರೆದಿವೆ. ಏನೆಲ್ಲ ದೃಷ್ಟಿಕೋನಗಳಿಂದ ಶಾಸನಗಳನ್ನು ವಸ್ತು, ಭಾಷೆ, ಕಾಲ ಪ್ರದೇಶ ಇತ್ಯಾದಿ ನೆಲೆಗಳಿಂದ ನೋಡಬಹುದೋ ಆ ಎಲ್ಲ ನೆಲೆಗಳಿಂದ ನಮ್ಮಲ್ಲಿ ಶಾಸನಗಳ ಅಧ್ಯಯನಗಳು ನಡೆದಿವೆ. ಸಂಪಾದನೆ, ಸಮೀಕ್ಷೆ, ಮರುಸಂಯೋಜನೆ, ವಿಶ್ಲೇಷಣೆ, ಚರಿತ್ರೆಯ ಆಕರಗಳಾಗಿ ಶಾಸನಗಳ ಮರುವ್ಯಾಖ್ಯಾನ ಇತ್ಯಾದಿ ರೂಪಗಳಲ್ಲಿ ಈ ಅಧ್ಯಯನವು ಸಾಗುತ್ತಿದೆ. ಪದವಿ ನಿಮಿತ್ತವಾಗಿ ನಡೆಯುವ ಸಂಶೋಧನಾ ಅಧ್ಯಯನಗಳಲ್ಲಿ ಶಾಸನ ಕ್ಷೇತ್ರದಲ್ಲಿ ಅಧ್ಯಯನಗಳು ತೀರಾ ಕಡಿಮೆ ನಡೆದಿವೆ.  ಈ ಕ್ಷೇತ್ರಕ್ಕೆ ಹೊಸ ಪೀಳಿಗೆ ಬರುವುದು ಕಡಿಮೆಯಾಗಿದೆ. ಚರಿತ್ರೆ ಮತ್ತು ಸಾಹಿತ್ಯಗಳ ಅಂತರ್‌ಶಿಸ್ತೀಯ ಅಧ್ಯಯನ ವಲಯವಾಗಿಯೆ ಇತ್ತೀಚೆಗೆ ಶಾಸನ ಕ್ಷೇತ್ರದಲ್ಲಿ ಹೆಚ್ಚು ಅಧ್ಯಯನಗಳು ನಡೆಯುತ್ತಿವೆ.

ಇಂದಿನ ಮಾಹಿತಿ ಕ್ರಾಂತಿ ಮತ್ತು ಅಂತರ್ಜಾಲ ಕ್ರಾಂತಿಯ ಕಾಲದಲ್ಲಿ ಕನ್ನಡ ಎದುರಿಸುತ್ತಿರುವ ತಂತ್ರಜ್ಞಾನದ ಸಮಸ್ಯೆಗಳು; ಕನ್ನಡದ ಆಧುನೀಕರಣ: ಜಾಗತೀಕರಣದ ಸವಾಲುಗಳಿಗೆ ಕನ್ನಡವನ್ನು ಸಜ್ಜುಗೊಳಿಸುವುದು ಇದೆಲ್ಲವೂ ಬೇರೆಯದೇ ವಲಯ ಆಗಿದೆ. ಇಲ್ಲಿನ ಬಹು ಮುಖ್ಯ ಕಂದರ ಎಂದರೆ ತಂತ್ರಜ್ಞಾನ ತಿಳಿದ ಟೆಕ್ಕಿಗಳಿಗೆ ಸಾಹಿತ್ಯ ಮತ್ತು ಭಾಷಾವಿಜ್ಞಾನದ ತಿಳುವಳಿಕೆ ಕಡಿಮೆಯಿದೆ. ಹಾಗೇ ಸಾಹಿತ್ಯಜ್ಞರಿಗೆ ತಂತ್ರಜ್ಞಾನದ ತಿಳುವಳಿಕೆ ಕಡಿಮೆ ಇದೆ. ಇನ್ನು ಫೆನಟಿಕ್ ಕನ್ನಡಾಭಿಮಾನಿಗಳಿಗೋ ಅವರ ದಾರಿ ಮತ್ತು ಗುರಿಗಳೇ ಬೇರೆಯಾಗಿವೆ. ಕೆಲವರಂತೂ ಕರ್ನಾಟಕ ಹಿತರಕ್ಷಣೆಯ ಹೆಸರಿನಲ್ಲಿ ಸ್ವಹಿತರಕ್ಷಣೆ, ರೋಲ್‌ಕಾಲ್ ರಾಜಕೀಯ ಮಾಡುತ್ತಿದ್ದಾರೆ. ಹೀಗಾಗಿ ಆಧುನಿಕ ತಂತ್ರಜ್ಞಾನದ ಬೇಡಿಕೆಗಳಿಗೆ ತಕ್ಕಂತೆ ಮತ್ತು ಜಾಗತೀಕರಣದ ಒತ್ತಡಗಳಿಗೆ ತಕ್ಕಂತೆ ಕನ್ನಡವನ್ನು ಸಜ್ಜುಗೊಳಿಸುವ ಕೆಲಸವು ಹಿಂದೆ ಬಿದ್ದಿದೆ. ಆಕರ ನಿರ್ಮಾಣದ ಸಂಶೋಧನೆಯ ವಲಯದ ಕುರಿತಂತೆ ಈ ಮಾತು ನಿಜ. ‘ಹಳಗನ್ನಡ’ ಸಾಹಿತ್ಯದ ಆಚೆಗೆ ನಿಘಂಟುಶಾಸ್ತ್ರ, ಛಂದಸ್‌ಶಾಸ್ತ್ರ, ಸಂಪಾದನಾ ಶಾಸ್ತ್ರಗಳ ವಲಯದಲ್ಲಿ ಕಂಪ್ಯೂಟರ್ – ಅಂತರ್ಜಾಲವನ್ನು ಬಳಸಿಕೊಂಡು ಸಂಶೋಧನೆ ನಡೆಸುವ ಪ್ರಯತ್ನಗಳು ತೀರಾ ಕಡಿಮೆ ಎಂದೇ ಹೇಳಬೇಕು. ಎಸ್.ಎಸ್.ಅಂಗಡಿ ಈ ನಿಟ್ಟಿನಲ್ಲಿ ಸ್ವಲ್ಪ ಕೆಲಸ ಮಾಡಿದ್ದಾರೆ. ಶ್ರೀನಿವಾಸ ಹಾವನೂರರು ದಾಸಸಾಹಿತ್ಯದ ಕುರಿತಂತೆ ಈ ಬಗ್ಗೆ ಸ್ವಲ್ಪ ಕೆಲಸ ಮಾಡಿದ್ದಾರೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಈ ವಲಯಗಳನ್ನು ತಂತ್ರಜ್ಞಾನಕ್ಕೆ ಒಡ್ಡುವ ಕೆಲಸ ಆಗಿಲ್ಲ ಮಾತ್ರ. (ಮಾಹಿತಿಯನ್ನು ಅಂತರ್ಜಾಲಕ್ಕೆ ತುಂಬಿಸುವ ನೆಲೆಯಲ್ಲಿ ಅಲ್ಪ ಸ್ವಲ್ಪ ಕೆಲಸ ಆಗಿದೆ, ಆಗುತ್ತಿದೆ)

ಪ್ರಾಚೀನ ಸಾಹಿತ್ಯದ ಅಧ್ಯಯನ, ಪ್ರಸ್ತುತೀಕರಣ ಧಾರೆ

ನಮ್ಮ ಹಳೆಯ ತಲೆಮಾರಿನ ಸಾಹಿತ್ಯ ಸಂಶೋಧನೆಗಳ ಕೊಂಡಿಯಾಗಿರುವ ವಿದ್ವಾಂಸರಲ್ಲಿ ಕಲಬುರ್ಗಿ, ಎಲ್. ಬಸವರಾಜು, ಹಂ.ಪ.ನಾಗರಾಜಯ್ಯ ಮುಂತಾದವರುಗಳು ಚರ್ಚಾರ್ಹರು. ಹಂಪನಾ ಅವರ ಚಂದ್ರಕೊಡೆ ಮತ್ತಿತರ ಕೃತಿಗಳು ಕಲಬುರ್ಗಿಯವರ ಮಾರ್ಗ ಮತ್ತಿತರ ಕೃತಿಗಳು; ಎಲ್. ಬಸವರಾಜು ಅವರ ಇತ್ತೀಚಿನ ಸೊನ್ನಲಾಪುರದ ಸಂತ ಸಿದ್ಧರಾಮನ ನಿಜವಚನಗಳು, ಪ್ರಭುದೇವರ ಶೂನ್ಯಸಂಪಾದನೆ ಮತ್ತಿತರ ಕೃತಿಗಳು ಪ್ರಾಚೀನ ಸಾಹಿತ್ಯವನ್ನು ವರ್ತಮಾನಕ್ಕೆ ಪ್ರಸ್ತುತ ಪಡಿಸುವ ಮತ್ತು ಪ್ರಸ್ತುತಗೊಳಿಸುವ ಎರಡೂ ರೀತಿಯ ಕೆಲಸಗಳನ್ನು ಮಾಡುತ್ತಿವೆ. ಪ್ರಾಚೀನ ಸಾಹಿತ್ಯವನ್ನು ಆಧುನಿಕ ಬೇಡಿಕೆಗಳಿಗೆ ತಕ್ಕಂತೆ ಮರುಸಂಯೋಜಿಸಿ ಪ್ರಸ್ತುತಪಡಿಸುವ ಕೆಲಸವನ್ನು ಎಲ್ ಬಸವರಾಜು ವಿಶೇಷವಾಗಿ ಮಾಡಿದರೆ, ಅದರ ಮೂಲಚೂಲಗಳನ್ನು – ಅರ್ಥವಿಸ್ತಾರಗಳನ್ನು, ಕಾಲದೇಶಾದಿ ವಿಚಾರಗಳನ್ನು ಹೆಚ್ಚಾಗಿ ಕಲಬುರ್ಗಿ ಚರ್ಚಿಸುತ್ತಾರೆ. ಜೈನ ಸಾಹಿತ್ಯದ ವಿಮರ್ಶೆ ಮತ್ತು ಸಂಶೋಧನೆಗಳೆರಡನ್ನು ಹೆಚ್ಚು ಕೇಂದ್ರೀಕರಿಸಿ ಹಂಪನಾ ಕೆಲಸ ಮಾಡುತ್ತಿದ್ದಾರೆ. ಛಂದಸ್ಸು, ವ್ಯಾಕರಣ ಕ್ಷೇತ್ರಗಳನ್ನು ಕೇಂದ್ರೀಕರಿಸಿ ವೆಂಕಟಾಚಲಶಾಸ್ತ್ರಿಗಳು ಕೆಲಸ ಮಾಡುತ್ತಿದ್ದಾರೆ.

ಪ್ರಾಚೀನ ಸಾಹಿತ್ಯವನ್ನು ನಿರಂತರವಾಗಿ ಮೌಲ್ಯಮಾಪನ ಮಾಡುವದಕ್ಕಿಂತ ಅರ್ಥವ್ಯಾಖ್ಯಾನ ಮಾಡುವ, ನವೀನ ರೀತಿಯಲ್ಲಿ ಸಂಪಾದಿಸಿ – ಸಂಯೋಜಿಸಿ ಮರುನಿರೂಪಿಸುವ ಕೆಲಸವನ್ನು ಇವರೆಲ್ಲರು ಮಾಡುತ್ತಿದ್ದಾರೆ. ಹೀಗಾಗಿ ಇವರೆಲ್ಲರೂ ಆಕರಶಾಸ್ತ್ರವನ್ನು ಕನ್ನಡದಲ್ಲಿ ಇನ್ನಷ್ಟು ಸಮೃದ್ಧಗೊಳಿಸಿದ್ದಾರೆ. ಪ್ರಾಚೀನ ಕನ್ನಡ ಸಾಹಿತ್ಯದ ಅಧ್ಯಯನ, ವಿಶ್ಲೇಷಣೆ, ಮರುನಿರೂಪಣೆಗಳು ನಿರಂತರ ನಡೆಯಬೇಕು ಮತ್ತು ಇಂದಿನ ಜಾಗತೀಕರಣದ ಬಿಕ್ಕಟ್ಟುಗಳನ್ನು ಮತ್ತು ಸ್ಥಳೀಯ ಕೋಮುವಾದಿ ಇಕ್ಕಟ್ಟುಗಳನ್ನು ಮೀರಲು ಪ್ರಾಚೀನರ ನಡೆ ನುಡಿಗಳಲ್ಲಿ ಕೈ ಮಾರ್ಗಗಳಿವೆ ಎಂದು ಇವರ ಅಧ್ಯಯನಗಳು ಭಾವಿಸುತ್ತವೆ. ಪ್ರಾಚೀನ ಸಾಹಿತ್ಯ ಸಂಶೋಧಕರಿಗೆ ನಮ್ಮಲ್ಲಿ ಲಿಂಗಾಯತ, ಜೈನ, ವೈಷ್ಣವ ಹೀಗೆ ಜನಾಂಗೀಯ ಚಹರೆಗಳೂ ಕೂಡ ತಗಲಿಕೊಂಡಿವೆ. ಹಂಪನಾರನ್ನು ಜೈನ ಸಾಹಿತ್ಯ ವಿದ್ವಾಂಸ ಎಂದೇ ಗುರ್ತಿಸುವ ಮಟ್ಟಿಗೆ ಅವರ ಇಮೇಜು ಬೆಳೆದಿದೆ. ಜೈನ ವಾಜ್ಞಯವನ್ನು ಜೈನರೂ, ಬ್ರಾಹ್ಮಣ ವಾಜ್ಞಯವನ್ನು ಬ್ರಾಹ್ಮಣರೂ, ಶೈವ ವಾಙ್ಞಯವನ್ನು ಶೈವರೂ ಪ್ರೀತಿಸುವ – ಪೋಷಿಸುವ ವಾತಾವರಣ ಕೂಡ ನಮ್ಮಲ್ಲಿ ಇರುವಂತೆ; ಆಯಾ ವಿದ್ವಾಂಸರನ್ನೂ ಅವರವರೆ ಪ್ರೀತಿಸುವ, ಪೋಷಿಸುವ ವಾತಾವರಣವೂ ಇದೆ. ಎಂಥ ಜಾಗತೀಕರಣ ಬಂದರೂ ಭಾರತದ ಮತಧರ್ಮ – ಜಾತಿಗಳನ್ನು ಅಲ್ಲಾಡಿಸುವುದು ಅಷ್ಟು ಸುಲಭವಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಕಲ್ಬುರ್ಗಿ ಮಾರ್ಗ ಬರೆದಾಗ, ಪಿ.ವಿ. ನಾರಾಯಣ ಧರ್ಮ ಕಾರಣ ಬರೆದಾಗ,  ಎಚ್,ಎಸ್,ಶಿವಪ್ರಕಾಶ್ ಮಹಾಚೈತ್ರ ಬರೆದಾಗ, ಬಂಜಗೆರೆ ಆನು ದೇವಾ ಹೊರಗಣವನು ಬರೆದಾಗ ಇಲ್ಲಿ ಕೃತಿಗಳನ್ನು ನಿಷೇಧಿಸಲಾಗಿದೆ. ಸಾಹಿತ್ಯ ಕೃತಿಗಳ ವಿರುದ್ಧ ಕೋರ್ಟಿನಲ್ಲೂ ದಾವೆ ಹೂಡಲಾಗಿದೆ. ಧಾರ್ಮಿಕ – ಜನಾಂಗಿಕ ಭಾವನೆಗಳಿಗೆ ಘಾಸಿಯಾದಾಗ ಭಾರೀ ಪ್ರತಿಭಟನೆಗಳು ನಮ್ಮಲ್ಲಿ ನಡೆದಿವೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಬಾರದು ಎಂಬ ಅಭಿಮತವೇ ಯಥಾಸ್ಥಿತಿವಾದಿಯಾದುದು. ಮತ್ತು ಇಂತಹ ವಾದ ಮಾಡುವವರು ಯಾವಾಗಲೂ ಜಾತಿ – ಮತಧರ್ಮಗಳನ್ನು ಸ್ಥಿರೀಕರಿಸುವವರೇ ಆಗಿರುತ್ತಾರೆ. ಸಂಶೋಧನೆ ನಮ್ಮ ಜಾತಿ – ಧರ್ಮ ಭಾವನೆಗಳಿಗೆ ಧಕ್ಕೆ ಉಂಟುಮಾಡಬಾರದು ಎಂದರೆ ಏನರ್ಥ?

ಬೇಡರು ವಾಲ್ಮೀಕಿಯನ್ನು, ಕುರುಬರು ಕನಕನನ್ನು, ವೀರಶೈವರು ಬಸವಣ್ಣನನ್ನು, ಒಕ್ಕಲಿಗರು ಕುವೆಂಪುವನ್ನು ತಮ್ಮ ಭಾವ ಕೋಶದ ಅಂಗಗಳನ್ನಾಗಿ ಈಗಾಗಲೇ ಮಾಡಿಕೊಂಡಿದ್ದಾರೆ. ಅವರ ತತ್ವಗಳಿಗಿಂತ ವ್ಯಕ್ತಿಗಳೇ ಅವರಿಗೆ ಪೂಜ್ಯರಾಗಿದ್ದಾರೆ. ಹಾಗಾಗಿ ಅವರ ಕುರಿತ ಸಂಶೋಧನೆ – ವಿಮರ್ಶೆಗಳು ವಿವರಣಾತ್ಮಕವಾಗಿಯೂ, ಮೆಚ್ಚುಗೆ ಧಾಟಿಯಲ್ಲಿಯೂ ಇರಬೇಕೆಂದು ನಮ್ಮಲ್ಲಿ ಅಪೇಕ್ಷಿಸಲಾಗುತ್ತದೆ. ವಿಮರ್ಶೆಯೇ ಆಗಲಿ, ಸಾಹಿತ್ಯವೇ ಆಗಲಿ ಯಾವುದೂ ನಿರ್ವಾತದಲ್ಲಿ ಸಂಭವಿಸುವುದಿಲ್ಲ. ಎಲ್ಲಕ್ಕೂ ಸಾಮಾಜಿಕ ಒತ್ತಡಗಳು ಇದ್ದೇ ಇರುತ್ತವೆ. ಹಾಗಾಗಿ ಸಂಶೋಧನೆಗಳಿಗೂ ಕೂಡ ಇಂತಹ ಒತ್ತಡಗಳು ನಮ್ಮಲ್ಲಿ ಇದ್ದೇ ಇವೆ. (ಜೊತೆಗೆ ವ್ಯಕ್ತಿಕೇಂದ್ರಿತ ಅಧ್ಯಯನಗಳು ಮತ್ತು ಕುವೆಂಪು ಕುರಿತ ಸಂಶೋಧನೆಗೆಳ ಪಟ್ಟಿಗೆ ನೋಡಿ; ಅನುಬಂಧ – ೪)

ಇತ್ತೀಚೆಗೆ ಸಿ.ಮಹದೇವಪ್ಪ ಅವರು ಉದಯಾದಿತ್ಯನ ಆಶ್ರಯದಲ್ಲಿ ಇದ್ದ ನಾಗವರ್ಮನೆ ಛಂದೋಂಬುಧಿಯನ್ನೂ ‘ಕಾದಂಬರಿ’ಯನ್ನೂ ಕಾವ್ಯಾವಲೋಕನವನ್ನೂ ಛಂದೋವಿಚಿತಿಯನ್ನೂ ಬರೆದಿದ್ದಾನೆ. ನಮ್ಮಲ್ಲಿ ಇಬ್ಬರು ನಾಗವರ್ಮರಿಲ್ಲ. ಇರುವವನು ಒಬ್ಬನೇ ನಾಗವರ್ಮ, ಉದಯಾದಿತ್ಯ ನಾಗವರ್ಮರಿಬ್ಬರೂ ಆಂದ್ರದ ತಾಡಪತ್ರಿಯವರು, ‘ಕಾದಂಬರಿ’ ಬರೆದ ಬಾಣಕವಿ ಕೂಡ ತಾಡಪತ್ರಿಯವನು, ಉದಯಾದಿತ್ಯನಲ್ಲಿ ನಾಗವರ್ಮ ಕಟಕಾಚಾರ್ಯನಾಗಿದ್ದ ಅಲ್ಲದೆ ಉದಯಾದಿತ್ಯ ನಾಗವರ್ಮರದು ಗುರುಶಿಷ್ಯರ ರೀತಿಯ ಸಂಬಂಧ, ಯಶೋಧರ ಚರಿತೆಯನ್ನು ಬರೆದ ಜನ್ನನು ನಾಗವರ್ಮನ ಶಿಷ್ಯನಾಗಿದ್ದ ಎಂದೆಲ್ಲ ಸಂಶೋಧಿಸಿದ್ದಾರೆ. ಈ ಕುರಿತು ಪುಸ್ತಕವನ್ನೂ ಪ್ರಕಟಿಸಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಚರ್ಚೆ ಆದಂತಿಲ್ಲ. ಪ್ರಮಾಣೀಕೃತ ಪ್ರಾಚೀನ ಸಾಹಿತ್ಯ ಚರಿತ್ರೆ ಎಷ್ಟು ಬಲವಾಗಿ ಮುಗಳಿಯವರಿಂದ ಸ್ಥಾಪಿತವಾಗಿದೆ ಎಂದರೆ ಅದರ ಅರೆಕೊರೆಗಳನ್ನು ಎಷ್ಟೇ ಎತ್ತಿ ಹೇಳಿದರೂ ಅದನ್ನು ಕೇಳಿಸಿಕೊಳ್ಳದ; ಕೇಳಿಸಿಕೊಂಡರೂ ಮಾನ್ಯ ಮಾಡದ ಸ್ಥಿತಿ ಉಂಟಾಗಿ ಬಿಟ್ಟಿದೆ. ಹೀಗಾಗಿ ಮಹದೇವಪ್ಪ ಅವರ ಪ್ರತಿಪಾದನೆ ಬಗೆಗೆ ನಮ್ಮಲ್ಲಿ ಚರ್ಚೆ ನಡೆದಿಲ್ಲ. (ಜೊತೆಗೆ ನೋಡಿ ಸಾಹಿತ್ಯಚರಿತ್ರೆಗಳ ಚರ್ಚೆ)[5][1] ನೋಡಿ ಪುಟ ೩೬ – ೩೭, ಪೃಥ್ವಿಯಲ್ಲೊದಗಿದ ಘಟವು – ಮನು ವಿ, ದೇವದೇವನ್, ಅಕ್ಷರ ಪ್ರಕಾಶನ, ಸಾಗರ, ೨೦೦೯.

[2] ಉದಾಹರಣೆಗೆ ನೋಡಿ ಇವರು ಬಳಸುವ ಕೆಲವು ಪರಿಭಾಷೆಗಳು ಹೀಗಿವೆ; ನೆಲೆ ಎಂಬುದಕ್ಕೆ ಆವಾಸಸ್ಥಾನ (ಪು – ೮) ಎಂದೂ, ಕಟ್ಟಿದ ಅಥವಾ ನಿರ್ಮಿತ ಎಂಬುದಕ್ಕೆ ಅಸಹಜ (ಪು – ೧೦) ಎಂದೂ, ಸುಟ್ಟ ಅಥವಾ ಆವಿಮಣ್ಣಿನ ಎಂಬುದಕ್ಕೆ ಪಾಕಮಾಡಿದ (ಪು – ೧೦) ಎಂದೂ, ತಯಾರಿಕೆ ಎಂಬುದಕ್ಕೆ ಪ್ರಸಾಧನ (ಪು – ೧೦) ಎಂದೂ, ಹೆಚ್ಚುಗಾರಿಕೆ ಅಥವಾ ಅತಿಶಯ ಎಂಬುದಕ್ಕೆ ಅನಿತರ (ಪು – ೧೫) ಎಂದೂ, ಬೇಸಾಯ ಅಥವಾ ಕೃಷಿ ಎಂಬುದಕ್ಕೆ ಕಾರ್ಷಿಕ (ಪು – ೨೧) ಎಂದೂ, ಮುದ್ರಣ ಬಂಡವಾಳಶಾಹಿ ಎಂಬುದಕ್ಕೆ ಬಂಡವಾಳ ಮೂಲದ ಮುದ್ರಣ ವ್ಯವಸ್ಥೆ ಎಂದೂ (ಪು – ೪೧), ಚೀನಾದ ಮಹಾಗೋಡೆ ಎಂಬುದಕ್ಕೆ ಹೆಗ್ಗೋಡೆ (ಪು – ೪೨) ಎಂದೂ ಹೀಗೆ ಹತ್ತಾರು ಪದಗಳನ್ನು ಬಳಸಿದ್ದಾರೆ. ಇಂಥಹ ಪದಗಳ ನಿರ್ಮಾಣ ಮತ್ತು ಬಳಕೆಯಲ್ಲಿ ಸಂಸ್ಕೃತದ ನೆರಳು ಇರುವುದನ್ನು ಗಮನಿಸಬಹುದು. ಈಗಾಗಲೆ ಚಾಲ್ತಿಯಲ್ಲಿ ಇರುವ ಪರಿಭಾಷೆಯನ್ನು ತಿಳಿಯದೆ ಅವಕ್ಕೆ ಬದಲಾಗಿ ಅಪರಿಚಿತ – ಅಸಮರ್ಪಕ ಪರಿಭಾಷೆಯನ್ನು ಸೃಷ್ಟಿಸುವುದು ಎಷ್ಟರಮಟ್ಟಿಗೆ ಸರಿ? ನುಡಿ ಬಳಕೆ ಮತ್ತು ಉತ್ಪಾದಕತೆಯ ದೃಷ್ಟಿಯಿಂದ ಇವರು ಡಿ.ಎನ್.ಶಂಕರಭಟ್ಟರಿಗೆ ತದ್ವಿರುದ್ಧ.

[3] ನೋಡಿ; ಇಂದೂಧರ ಹೊನ್ನಾಪುರ ಸಂಪಾದಿತ ಸಂವಾದದಲ್ಲಿ ೨೦೦೯ – ೧೦ರಲ್ಲಿ ಪ್ರಕಟವಾದ ಲೇಖನ ಮಾಲಿಕೆ – ಬೌದ್ಧ ಸೌಂದರ್ಯ ಮೀಮಾಂಸೆ – ಎಸ್.ನಟರಾಜ ಬೂದಾಳು.

[4] ೧೮೯೫ರಲ್ಲೆ ಬೋಳಾರು ರಾಮಕೃಷ್ಣಯ್ಯ ಎಂಬುವವರು ನಾನಾರ್ಥ ಮತ್ತು ಸಂಜ್ಞಾರ್ಥಗಳ ಶಬ್ದಕೋಶವನ್ನು ರಚಿಸಿದ್ದಾರೆ. ೧೯೭೪ರಲ್ಲಿ ಜಿ.ಎಂ.ಹನಸೋಗೆ ಅವರು ಸಮಾನಾರ್ಥ ಕೋಶವನ್ನು ರಚಿಸಿದ್ದಾರೆ. ೧೯೮೭ರಲ್ಲಿ ಇವರೇ ಕನ್ನಡ ವಿರುದ್ಧಾರ್ಥ ಪದಕೋಶ ರಚಿಸಿದ್ದಾರೆ. ೨೦೦೦ದಲ್ಲಿ ಪ್ರಕಟವಾಗಿರುವ ಬಿ.ಆರ್. ಪ್ರಕಾಶ್ ಮತ್ತು ಮಧುಸೂದನ್ ಪ್ರಕಟಿಸಿರುವ ‘ಪದಸಂಚಯ’ ಎಂಬ ಕೋಶವು ತೆಸಾರಸ್‌ನ ಕೊರತೆಯನ್ನು ಸ್ವಲ್ಪಮಟ್ಟಿಗೆ ನೀಗಿಸಿದೆ.

[5] ನಾಗವರ್ಮನ ಚಂದ್ರರಾಜ – ಸಿ.ಮಹದೇವಪ್ಪ, ಬೆಂಗಳೂರು ಸಂಶೋಧನಾ ಕೋಟಿ, ಬೆಂಗಳೂರು, ೨೦೧೧. ಕಾವ್ಯ ಏವ ಕವಿಚರಿತೆ, ಇದೇ ಲೇಖಕರು, ೨೦೦೮.