ಸೂ. ರಾಯ ಕಟಕಾಚಾರ‍್ಯನಾ ತರು
ವಾಯ ಸೇನಾಪಟ್ಟವನು ರಾ
ಧೇಯನಲಿ ರಚಿಸಿದನು ಮುದದಲಿ ಕೌರವರ ರಾಯ

ಕೇಳು ಜನಮೇಜಯ ಧಿರಿತ್ರೀ
ಪಾಲ ತೆಗೆದವು ಬಲವೆರಡು ನಿಜ
ಪಾಳಯಕೆ ಪರಿತೋಷ ಖೇದಸ್ತಿಮಿತವಿಕ್ರಮರು
ಕೋಲಗುರುವಿನ ಮರಣವಾರ್ತಾ
ಕಾಲಸರ್ಪನ ತಂದು ಸಂಜಯ
ಹೇಳಿಗೆಯನೀಡಾಡಿದನು ಧೃತರಾಷ್ಟ್ರನಿದಿರಿನಲಿ ೧

ಬೆದರಿತಾಯಾಸ್ಥಾನ ಧಿಗಿಲೆಂ
ದುದು ಧರಾಧೀಶ್ವರನ ತಂದೆಯ
ಹೃದಯದಲಿ ಹುರುಳೇನು ಬಳಿಕುಳಿದವರ ಮೋರೆಗಳ
ಕದಡಿತಂತಃಕರಣವರಸನ
ಕದಪು ಕೈಯಲಿ ಕೀಳಿಸಿತು ಹೇ
ಳಿದನು ಸಂಜಯ ಮತ್ತೆ ಮೇಲಣ ರಣದ ವಾರ್ತೆಯನು ೨

ಗುಡಿಯ ಕಟ್ಟಿಸು ಜೀಯ ಬರತುದು
ಕಡಲು ಮುರಿದುದು ಮೇರು ತಿರುಗಿತು
ಪೊಡವಿ ಬಿದ್ದುದು ಭಾನುಮಂಡಲವಹಹ ವಿತಳದಲಿ
ಮಡಿದುದೈ ನಿನ್ನಾನೆ ನಿನ್ನು
ಗ್ಗಡದ ಭಟ ಬೀಳ್ಕೊಂಡನೈ ಕಡಿ
ವಡೆದನೈ ಕಲಿ ಕರ್ಣನೊಸಗೆಯ ಮಾಡಹೇಳೆಂದ ೩

ಮೊದಲಲಿದ್ದುದು ಜೀವಕಳೆ ಹೃದ
ಯದಲಿ ಹೃದಯವನೊಡೆದು ಮಿಗೆ ಕಂ
ಠದಲಿ ಕವಿದುದು ಮಂಚದಲಿ ಮೈಮರೆದು ಮಲಗಿದನು
ಕೆದರಿತಲ್ಲಿಯದಲ್ಲಿ ರಾಯನ
ಹದನನರಿದೊಳಗೊಳಗೆ ರಾಣಿಯ
ರೊದರಲಂತಃಪುರದಲುಕ್ಕಿತು ಶೋಕರಸ ಜಲಧಿ ೪

ಬಾಯ ಬಸುರಿನ ನೊಸಲ ಹೊಯ್ಲಿನ
ರಾಯನರಸಿಯರರಸನಿದಿರಲಿ
ಹಾಯಿದರು ಭಿತ್ತಿಗಳನೊದರಿದರೊಡನೆ ದೆಸೆಯೊದರೆ
ರಾಯನಾವೆಡೆ ಜೀಯ ಕಲಿ ರಾ
ಧೇಯನಾವೆಡೆ ನೂರು ಮಕ್ಕಳು
ಬೀಯವಾದರೆ ಮಾವ ಎಂದರು ಸೊಸೆಯರಡಗೆಡೆದು ೫

ರವಕುಳವ ನಾನೇನ ಹೇಳುವೆ
ನವನಿಪತಿಯಾ ಕರ್ಣ ಮೊದಲಾ
ದವರ ರಾಣೀವಾಸ ಬಹಳಾಕ್ರಂದನಧ್ವನಿಯ
ಕವಿದುದೊಳಸೂರೆಗರು ಕೋಟೆಯ
ತವಕಿಗರು ಗುಜುಗುಜಿಸೆ ಬಿಗಿದವು
ಭವನ ಭವನ ಕವಾಟ ತತಿಗಾಳಾಯ್ತು ಗಜನಗರ ೬

ನೆರೆದುದಲ್ಲಿಯದಲ್ಲಿ ಸೂರೆಗೆ
ಹರಿದುದಲ್ಲಿಯದಲ್ಲಿ ಮನ ಮ
ತ್ಸರದ ಜಗಳಕೆ ಸೂಳುಬಂಟರು ಹೊಯ್ದರೊಳಗೊಳಗೆ
ಅವರಮನೆಯಲಾ ಬೊಬ್ಬೆ ಹಸ್ತಿನ
ಪುರದಲೀ ಬೊಬ್ಬಾಟವಿನ್ನುಳಿ
ದರಸುಗಳ ಪಾಡಾವುದೆಂದನು ಮುನಿ ನೃಪಾಲಂಗೆ ೭

ಸೂರೆ ಹೋದುದು ನಗರಿ ಖಳರಿಗೆ
ಮಾರಿದರು ಪಟ್ಟಣವನಕಟಾ
ಕಾರುಮದ್ದಿಗೆ ಹೋಹುದೇ ಕೈಮಸಕವವನಿಪನ
ನೂರುಮಕ್ಕಳನಿಕ್ಕಿ ಸಾಧಿಸ
ಲಾರನೇ ಜಯಸಿರಿಯನೆಂದುರೆ
ಮೀರಿ ನುಡಿದುದು ಮಂತ್ರಿಗಳು ಧೃತರಾಷ್ಟ್ರನಿದಿರಿನಲಿ ೮

ಎರಡು ಗಲ್ಲದ ನಯನವಾರಿಯ
ಹರಿಕುಣಿಯ ನಿಲಿಸಿದನು ಸಂಜಯ
ನರಸನನು ಕುಳ್ಳಿರಿಸಿ ಬೆನ್ನಿಗೆ ಚಾಚಿದನು ಮಲಗ
ಅರಸ ಹದುಳಿಸು ನಿನ್ನ ಸೊಸೆಯರ
ಕರೆದು ಸಂತೈಸಕಟ ಹಸ್ತಿನ
ಪುರದ ಗಾವಳಿಗಜಬಜಕೆ ಡಂಗುರವ ಹೊಯ್ಸೆಂದ ೯

ಬೀದಿ ಬೀದಿಗಳೊಳಗೆ ಡಂಗುರ
ನಾದವೆಸೆದವು ಕೇರಿ ಕೇರಿಗೆ
ಕೈದುಕಾರರು ನೆರೆದು ನಿಂದರು ಸೂರೆಗರ ಕೆಡಹಿ
ಸುಯ್ದನಡಿಗಡಿಗೊಲೆದೊಲೆದು ಪರಿ
ಖೇದ ಶೋಕಜ್ವಲನಜನಿತ
ಸ್ವೇದ ಸಲಿಲ ಸ್ತಿಮಿತ ಕಾಯನು ರಾಯನಿಂತೆಂದ ೧೦

ಹೇಳು ಸಂಜಯ ನಮ್ಮ ಭಾಗ್ಯದ
ಶಾಳಿವನ ಫಲವಾಯ್ತಲಾ ಕೈ
ಮೇಳವಿಸಿದನೆ ಕರ್ಣನಮರಸ್ತ್ರೀ ಕದಂಬದಲಿ
ಹೇಳು ಹೇಳೆನ್ನಾಣೆ ಮಾತಿನ
ಜಾಳಿಗೆಯ ಮರೆ ಬೇಡ ಕುರುಪತಿ
ಕಾಳೆಗದೊಳಸ್ತಮಿಸಿದನೆ ನುಡಿಯಂಜಬೇಡೆಂದ ೧೧

ಸಾವೆನಾನೆಂದಂಜದಿರು ಕ
ರ್ಣಾವಸಾನವ ಕೇಳಿ ತನ್ನಯ
ಜೀವವಿದಲಾ ದೇಹದಲಿ ಬೇರಿನ್ನು ಕೆಲಬರಲಿ
ಸಾವೆನೇ ತಾನಕಟ ಕೌರವ
ಜೀವಿಸಲಿ ಮೇಣಳಿಯಲೆಮಗಿ
ನ್ನಾವ ತೊಡಕಿಲ್ಲಿನ್ನು ವಜ್ರಶರೀರ ತಾನೆಂದ ೧೨

ಘಾಯವಡೆದನು ಭೀಷ್ಮ ಬಳಿಕಿನೊ
ಳಾಯುಧದ ಗುರು ತೊಡಬೆಗಳಚಿದ
ನೀಯವಸ್ಥೆಗೆ ನಮ್ಮ ತಂದನು ಭಾನುನಂದನನು
ಸಾಯನೇ ಮಗನಿನ್ನು ಸಾಕಾ
ನಾಯ ನುಡಿಯಂತಿರಲಿ ಕರ್ಣಂ
ಗಾಯಿತೇ ಕಡೆ ಶೋಕವನು ವಿಸ್ತರಿಸಿ ಹೇಳೆಂದ ೧೩

ಸರಳ ಕೊರತೆಯೊ ಸಾರಥಿಯ ಮ
ತ್ಸರವೊ ರಥದ ವಿಘಾತಿಯೋ ದು
ರ್ಧರ ಧನುರ್ಭಂಗವೊ ಮಹಾಸ್ತ್ರವ್ಯಥೆಯೊ ರವಿಸುತನ
ಹುರುಳುಗೆಡಿಸಿದರೆಂತು ರಿಪು ರಾ
ಯರಿಗೆ ನಾವ್ ಗೋಚರವೆ ದುರಿತೋ
ತ್ಕರುಷವೈಸಲೆ ನಮ್ಮ ಕೆಡಿಸಿತು ಶಿವಶಿವಾ ಎಂದ ೧೪

ಹರುಹುಗೆಟ್ಟುದು ತೇರು ಸಾರಥಿ
ಹುರುಳುಗೆಡಿಸಿಯೆ ನುಡಿದನಂಬಿನ
ಕೊರತೆ ತಾ ಮುನ್ನಾಯ್ತು ದೈವದ್ರೋಹಿಗಳು ನಿಮಗೆ
ಅರಿವಿಜಯವೆಲ್ಲಿಯದು ನೀವ್ ಮನ
ಬರಡರೈ ನಿಮ್ಮನ್ವಯವ ಸಂ
ಹರಿಸಿದಿರಿ ಸಾಕೆಂದು ಸಂಜಯ ತೂಗಿದನು ಶಿರವ ೧೫

ಸುರ ನರೋರಗರರಿಯೆ ನಾವ್ ಬಾ
ಹಿರರು ಭಂಗಿಸಬೇಡ ಸಾಕಂ
ತಿರಲಿ ಕರ್ಣಾಹವದ ಕರ್ಣಾಮೃತವ ಸುರಿ ಸಾಕು
ಅರಿಗಳಭ್ಯುದಯವನು ನಮ್ಮಪ
ಸರಣವನು ಕಿವಿಯಾರೆ ಕೇಳುವ
ಪರಮ ಸುಕೃತಿಗಳಾವು ನೀ ಹೇಳಂಜಬೇಡೆಂದ ೧೬

ಹೇಳಿದನು ಬಳಿಕೆರಡು ಥಟ್ಟಿನೊ
ಳಾಳು ಕುದುರೆಯ ಗಜ ರಥವ ಭೂ
ಪಾಲರಳಿದುಳಿದವರ ಲೆಕ್ಕವನೈದೆ ವಿಸ್ತರಿಸಿ
ಕೇಳು ನಿನ್ನಾತನ ವಿನೋದದ
ಖೂಳ ಬೋಳೆಯತನದಲೊದಗಿದ
ಬಾಳಿಕೆಯ ಬೀಸರವನೆಂದನು ಸಂಜಯನು ನಗುತ ೧೭

ತೊಡರ ತೆಗೆದರು ಕೈಯಡಾಯ್ದವ
ಜಡಿಯಲಮ್ಮರು ಹೊತ್ತ ದುಗುಡದ
ನಿಡು ಮುಸುಕುಗಳ ಬಿಗಿದ ಬೆರಗಿನ ಬಿಟ್ಟಾ ಕಣ್ಣುಗಳ
ಒಡೆಯನಿದಿರಲಿ ಕುಳ್ಳಿರದೆ ಕೆಲ
ಕಡೆಯ ಕೈದೀವಿಗೆಯ ಮರೆಯಲಿ
ಮಿಡುಕದಿರ್ದುದು ರಾಯನೋಲಗದೊಳಗೆ ಪರಿವಾರ ೧೮

ಸಾಲ ಸಾವಿರ ದೀವಿಗೆಯ ಹರಿ
ದಾಳಿಗಳುಕದೆ ನೃಪರ ಮೋರೆಗ
ಳೋಳಿಗಳ ನೆರೆ ಹೊದ್ದಿ ಕತ್ತಲೆ ನಿಂದುದಲ್ಲಲ್ಲಿ
ಹೇಳಲೇನದ ಬಹಳ ದುಗುಡದ
ಪಾಳೆಯವೊ ನಿನ್ನಾತನೋಲಗ
ಶಾಲೆಯೋ ನಾವರಿಯೆವೆಂದನು ಸಂಜಯನು ನೃಪಗೆ ೧೯

ಎಲೆ ಮಿಡುಕದಾಸ್ಥಾನ ವೀಳೆಯ
ದೆಲೆಯ ಮಡಿಸುವ ರಭಸವಿಲ್ಲೊಳ
ಗೊಳಗೆ ಸನ್ನೆಗಳೋರೆಗೊರಳುಗಳೌಡುಗಚ್ಚುಗಳ
ಹಳಸಿದಗ್ಗಳಿಕೆಗಳ ಮೀಸಲು
ಗಳೆದ ಬಿರುದಿನ ಮಾನಭಂಗದ
ಕಳವಳದ ಕನಸುಗಳಲಿದ್ದುದು ರಾಯನಾಸ್ಥಾನ ೨೦

ಕೆತ್ತು ಕೊಂಡಿರಲೇಕೆ ನೀವಿ
ನ್ನುತ್ತ ರಾಯಿಗಳೆಮ್ಮ ಭಾಗ್ಯದ
ಬಿತ್ತು ಹುರಿದರೆ ಬಿರುದ ಭಟರದ್ದೇನಮಾಡುವರು
ಮೆತ್ತಿದಂಬಿನ ಮೆಯ್ಯ ಭೀಷ್ಮನು
ಹೊತ್ತ ಕೈದುವ ಬಿಸುಟ ಕಳಶಜ
ನುತ್ತಮಿಕೆಗಳ ಮೆರೆದರೆಂದನು ಕೌರವರ ರಾಯ ೨೧

ಬಿಗಿದ ತಿಮಿರದ ಕೆಚ್ಚು ಸೂರ‍್ಯನ
ಸೊಗಡು ಹೊಯ್ದರೆ ಮುರಿಯದೇ ಕಾ
ಳೆಗಕೆ ಕರ್ಣನ ಕೈದು ಭಂಡಾರಿಸಿದುದಿನ್ನಬರ
ತೆಗೆಸುವೆವು ನಾಳಿನಲಿ ನಿಮ್ಮಯ
ಮೊಗದ ದುಗುಡದ ದಡ್ಡಿಯನು ಮೈ
ದೆಗೆಯದಿರಿ ಕಲಿಯಾಗಿಯೆಂದನು ನೃಪತಿ ಸುಭಟರಿಗೆ ೨೨

ಜೀಯ ಸಂಶಯವಿಲ್ಲ ಗುರು ಗಾಂ
ಗೇಯರಳುಕಿದರೇನು ಕಲಿ ರಾ
ಧೇಯನೇ ವಜ್ರಾಂಗಿಯಲ್ಲಾ ನಮ್ಮ ಮೋಹರಕೆ
ರಾಯ ನೀ ಪತಿಕರಿಸಿದರೆ ಚ
ಕ್ರಾಯುಧನ ಚಾತುರ‍್ಯ ಕೊಳ್ಳದು
ಜೀಯ ಕರ್ಣನ ಮುಂದೆಯೆಂದುದು ನಿಖಿಳ ಪರಿವಾರ ೨೩

ಬೇರೆ ತನಗಗ್ಗಳಿಕೆಯೋಲೆಯ
ಕಾರತನವೇ ರಾಯ ಮನವೊಲಿ
ದೇರಿಸಿದರೇರುವುದು ದೊರೆ ಮನಮುರಿಯೆ ಕುಂದುವುದು
ತೋರಿ ನುಡಿದರೆ ಭೀಷ್ಮ ದ್ರೋಣರು
ಜಾರಿಸಿದ ರಣವೆಮಗೆ ಸದರವೆ
ದೂರುವವರಾವಲ್ಲವೆಂದನು ಭಾನುಸುತ ನಗುತ ೨೪

ಸಾಕದಂತಿರಲಿನ್ನು ಥಟ್ಟಿಂ
ಗಾಕೆವಾಳರ ಮಾಡು ಸಾಕಾ
ಸ್ತೋಕಪುಣ್ಯರ ಮಾತದೇತಕೆ ಗುರುನದೀಸುತರ
ಸಾಕಿ ಸಲಹಿದೆ ಕರ್ಣನನು ಹುರು
ಡೇಕೆ ಗುಣದೊಳಗೀತ ಸೇನಾ
ನೀಕಭಾರದ ಹೊರಿಗೆಗಹನೆಂದನು ಕೃಪಾಚಾರ‍್ಯ ೨೫

ಎಮ್ಮ ತೋರಿಸಬೇಡ ಸುಖದಲಿ
ನಿಮ್ಮ ಚಿತ್ತಕೆ ಬಹುದ ಮಾಡುವು
ದೆಮ್ಮ ಹೃದಯ ವ್ಯಥೆಯ ನಾವಿನ್ನಾಡಿ ಫಲವೇನು
ಎಮ್ಮ ಪುಣ್ಯದ ಬೆಳೆಗಳೊಣಗಿದ
ಡಮ್ಮಿ ಮಾಡುವುದೇನು ಕರ್ಣನು
ನಮ್ಮ ದಳವಾಯೆಂದನಶ್ವತ್ಥಾಮನರಸಂಗೆ ೨೬

ಆ ಮಹಾರಥ ಭೀಷ್ಮನೇ ಸ್ವೇ
ಚ್ಛಾಮರಣಿಯಾಚಾರ‍್ಯಚಾಪ
ವ್ಯೋಮಕೇಶನು ಹೊಕ್ಕು ಕಾಣರು ಹಗೆಗೆ ಹರಿವುಗಳ
ಆ ಮಹಾ ನಾರಾಯಣಾಸ್ತ್ರದ
ಸೀಮೆ ಸೀದುದು ಮಿಕ್ಕ ಭಟರು
ದ್ದಾಮರೇ ಸಾಕಿನ್ನು ಸೇನಾಪತಿಯ ಮಾಡೆಂದ ೨೭

ಕರಸಿದನು ಭೂಸುರರನೌದುಂ
ಬರದ ಮಣಿ ಮಡಿವರ್ಗ ದೂರ್ವಾಂ
ಕುರ ಸಿತಾಕ್ಷತ ಧವಳಸರ್ಷಪ ವರಫಲಾವಳಿಯ
ತರಿಸಿದನು ಹೊಂಗಳಶ ತತಿಯಲಿ
ವರ ನದೀವಾರಿಗಳನಾಡಂ
ಬರದ ಲಗ್ಗೆಯಲೊದರಿದವು ನಿಸ್ಸಾಳಕೋಟಿಗಳು ೨೮

ವಿರಚಿಸಿತು ಪಟ್ಟಾಭಿಷೇಕೋ
ತ್ಕರುಷ ಮಂತ್ರಾಕ್ಷತೆಯ ಮಳೆಗಳ
ಕರೆದರವನೀಸುರರು ಜಯರವಮೇಘಘೋಷದಲಿ
ಗುರುಸುತಾದಿ ಮಹಾಪ್ರಧಾನರು
ದರುಶನವ ನೀಡಿದರು ಕರ್ಣನ
ಬಿರುದಿನುಬ್ಬಟೆಲಹರಿ ಮಸಗಿತು ವಂದಿಜಲಧಿಯಲಿ ೨೯

ಅರಳಿತರಸನ ವದನ ಶಕುನಿಯ
ಹರುಷಮಿಗೆ ದುಶ್ಶಾಸನಂಗು
ಬ್ಬರಿಸೆ ರೋಮಾವಳಿ ವಿಕರ್ಣಾದಿಗಳ ಮನ ನಲಿಯೆ
ಗುರುಜ ಕೃಪ ಕೃತವರ‍್ಮ ಶಲ್ಯಾ
ದ್ಯರಿಗೆ ಹೂಸಕದೊಲಹು ಮಿಗಿಲಾ
ಯ್ತಿರುಳು ಕರ್ಣಗೆ ಪಟ್ಟವಾಯಿತು ಭೂಪ ಕೇಳೆಂದ ೩೦