ತುಂಬಿ ಹರಿಯುತ್ತಿರುವ ಗಂಗಾನದಿ. ದಡದಲ್ಲಿ ಒಬ್ಬ ವಯಸ್ಸಾದ ಮನುಷ್ಯ. ಆಗತಾನೆ ಹುಟ್ಟುತ್ತಿರುವ ಸೂರ್ಯನಿಗೆ ಕೈ ಜೋಡಿಸಿ ನಮಸ್ಕಾರ ಮಾಡಿದ. ಎಂದಿನಂತೆ ಪ್ರಾರ್ಥನೆ ಮಾಡಿದ:

“ಭಗವಾನ್ ಸೂರ್ಯನಾರಾಯಣ, ಜಗತ್ತಿಗೆಲ್ಲ ಬೆಳಕು ಕೊಡುವವನೆ! ಮಕ್ಕಳಿಲ್ಲದೆ ನನ್ನ ಜನ್ಮ ದುಃಖದಿಂದ ತುಂಬಿದ. ನನ್ನ ಮೇಲೆ ಕೃಪೆ ಮಾಡು. ನನಗೆ ಮಕ್ಕಳನ್ನು ಅನುಗ್ರಹಿಸು. ನನ್ನ ಬಾಳಿನಲ್ಲಿ ಬೆಳಕು ಹರಿಸು.”

ತೇಲಿಬಂದ ಭಾಗ್ಯ

ಪ್ರಾರ್ಥನೆ ಮುಗಿಯುತ್ತಿದ್ದಂತೆ ಅಧಿರಥನ ಕಣ್ಣಲ್ಲಿ ನೀರು ತುಂಬಿತು ಇದೇನು ಮೊದಲ ಸಲವಲ್ಲ. ದಿನವೂ ಅವನು ಹೀಗೆ ಪ್ರಾರ್ಥಿಸುತ್ತಿದ್ದ. ಅವನಿಗೆ ಆಗಲೇ ಮಯಸ್ಸಾಗುತ್ತ ಬಂದಿತ್ತು. ತನ್ನ ಮೊರೆ ದೇವರಿಗೆ ಕೇಳಲೇ ಇಲ್ಲವೇನೋ ಎಂದುಕೊಂಡ.

ಅಧಿರಥ ಇನ್ನೇನು ಹೊರಡಬೇಕು, ನದಿಯಲ್ಲಿ ಏನೋ ತೇಲಿ ಬರುತ್ತಿರುವುದು ಕಂಡಿತು. ಅಧಿರಥ ಅಲ್ಲೇ ನಿಂತ. ಅವನು ಇದ್ದ ದಿಕ್ಕಿಗೇ ಅದು ತೇಲಿ ಬರುತ್ತಿತ್ತು. ಹತ್ತಿರ ಬಂದಾಗ ಅಧಿರಥ ನೋಡುತ್ತಾನೆ, ಅದೊಂದು ದೊಡ್ಡ ಬುಟ್ಟಿ. ಅದರೊಳಗೆ ಮೆತ್ತನೆ ಬಟ್ಟೆಯ ಮೇಲೆ ಒಂದು ಮಗು. ಅದರ ಮೈಯಲ್ಲಿ ನಿಗಿನಿಗಿ ಹೊಳೆಯುವ ಕವಚ; ಕಿವಿಯಲ್ಲಿ ಕುಂಡಲ. ಮಗುವಂತೂ ತುಂಬ ಸುಂದರವಾಗಿದೆ; ಮರಿಸೂರ್ಯನೋ ಎನ್ನುವಂತೆ ಶೋಭಿಸುತ್ತಿದೆ.

ಅಧಿರಥನಲ್ಲಿ ಆಶ್ಚರ್ಯ, ಕನಿಕರ, ಸಂತೋಷ ಎಲ್ಲ ಒಟ್ಟೆಗೇ ಉಕ್ಕಿಬಂತು. ಕೂಡಲೇ ಆ ಮಗುವನ್ನು ಬುಟ್ಟಿಯಿಂದ ಎತ್ತಿಕೊಂಡ. ಅವನ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯಿತು. ಎಂಥ ವಿಚಿತ್ರ! ತಾನು ಕೇಳುತ್ತಿದ್ದುದಕ್ಕೆ ಸರಿಯಾಗಿ ಅದೇ ಜಾಗದಲ್ಲಿಯೇ ತನಗೆ ಒಂದು ಮಗು ಸಿಗಬೇಕೆ? ಹಾಗಾದರೆ ದೇವರಿಗೆ ತನ್ನ ಕೂಗು ಕೇಳಿಸಿತೆ? ಯಾರ ಮಗುವೋ ಪಾಪ! ಯಾರದಾದರೆ ಏನು? ಇದು ಮಾತ್ರ ತನ್ನದೇ.

ಅಧಿರಥ ಆನಂದದಿಂದ ಮಗುವನ್ನು ಎತ್ತಿಕೊಂಡು ಮನೆಕಡೆ ಹೊರಟ.

ಅಧಿರಥನ ಹೆಂಡತಿಯ ಹೆಸರು ರಾಧೆ. ಗಂಡನಂತೆ ಅವಳೂ ಮಕ್ಕಳಿಗಾಗಿ ಹಂಬಲಿಸುತ್ತಿದ್ದಳು. ಮಗುವನ್ನು ಕಂಡು ಅವಳಿಗೆ ಹಿಡಿಸಲಾಗದಷ್ಟು ಸಂತೋಷವಾಯಿತು. ಇಬ್ಬರೂ ಮಗುವನ್ನೂ ಪ್ರೀತಿಯಿಂದ ಸಾಕಿದರು. ಜಾತಕರ್ಮಗಳನ್ನು ಮಾಡಿಸಿದರು, ವಸುಷೇಣ ಎಂದು ಹೆಸರಿಟ್ಟರು. ಆದರೆ ಆ ಮಗುವಿಗೆ ಕರ್ಣ ಎಂಬ ಹೆಸರು ನಿಂತುಹೋತಯಿತು.

ಇವರ ಶಿಷ್ಯನಾಗಬೇಕು

ಕರ್ಣ ಬೆಳೆದು ಹುಡುಗನಾದ. ತನ್ನ ಜೊತೆಯ ಉಳಿದ ಹುಡುಗರಿಗಿಂತ ಅವನು ತುಂಬ ಬುದ್ಧಿಶಾಲಿ, ಶಕ್ತಿವಂತ, ದೃಢಸ್ವಭಾವದವನು. ಚಿಕ್ಕವನಾಗಿರುವಾಗಲೇ ಬಿಲ್ಲುಬಾಣ ಎಂದರೆ ಬಹಳ ಇಷ್ಟ. ಬಾಣ ಬಿಡುವುದರಲ್ಲಿ, ಗುರಿ ಹೊಡೆಯುವುದರಲ್ಲಿ ಅವನು ಎಲ್ಲರನ್ನೂ ಮೀರಿಸುತ್ತಿದ್ದ. ನೋಡುವವರಿಗೆಲ್ಲ ಆಶ್ಚರ್ಯ. ಎಲಾ! ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಷ್ಟು ಬುದ್ಧಿ, ಎಂಥ ಗುರಿ ಎಂದು ಎಲ್ಲ ಹೊಗಳುವವರೇ.

ಕರ್ಣನಿಗೆ ದನುರ್ವಿದ್ಯೆಯನ್ನು ಇನ್ನೂ ಚೆನ್ನಾಗಿ ಕಲಿಯುವ ಆಸೆ. ಎಲ್ಲರಿಗಿಂತ ತಾನು ದೊಡ್ಡ ಬಿಲ್ಲುಗಾರನಾಗಬೇಕು, ದೇಶದಲ್ಲಿಯೇ ದೊಡ್ಡ ವೀರ ಎನ್ನಿಸಿಕೊಳ್ಳಬೇಕು ಎನ್ನುವ ಹಂಬಲ. ಅದನ್ನೆಲ್ಲ ಕಲಿಸಿ ಕೊಡಲು ಒಬ್ಬ ಗುರು ಬೇಕು ತಾನೇ? ಅಂಥ ಗುರುವಿಗಾಗಿ ಅವನು ಕಾಯುತ್ತಿದ್ದ.

ಒಮ್ಮೆ ಅವನು ಯಾರ ಜೊತೆಗೋ ಮಾತಾಡುತ್ತಿದ್ದಾಗ ಪರಶುರಾಮನ ವಿಚಾರ ಬಂತು. ಕರ್ಣ ಕೇಳಿದ:

“ಪರಶುರಾಮನು ಯಾರು?”

“ಅವರು ಜಮದಗ್ನಿ ಋಷಿಗಳ ಮಗ. ಋಷಿಯಾದರೂ ಬಹಳ ಪರಾಕ್ರಮಿ.”

“ಅದು ಹೇಗ?”

“ಅವರು ಇಪ್ಪತ್ತೊಂದು ಸಲ ಇಡೀ ದೇಶವನ್ನೇ ಸುತ್ತಿದ್ದಾರೆ. ಕ್ಷತ್ರಿಯರಲ್ಲಿ ಯಾರೂ ಅವರನ್ನು ಗೆಲ್ಲಲಾರದೆ ಹೋದರು. ಅವರು ಬಿಲ್ಲು ಹಿಡಿದು ನಿಂತರೆ ಇಡೀ ಲೋಕವೇ ತಲ್ಲಣಿಸಿಹೋಗುತ್ತದೆ. ಧನುರ್ವಿದ್ಯೆಯ ರಹಸ್ಯವೆಲ್ಲ ಅವರಿಗೆ ಗೊತ್ತಿದೆ. ಎಲ್ಲ ಏನು ಹೇಳುತ್ತಾರೆ ಗೊತ್ತೆ?”

“ಏನು?”

“ಅವರು ಸಾಕ್ಷಾತ್‌ ಧನುರ್ವಿದ್ಯೆಯ ಅವತಾರ. ಅನ್ಯಾಯವನ್ನು ತೊಡೆದುಹಾಕಲು ಜನಿಸಿದ ಭಗವಂತನ ಅಂಶ.”

ಇದನ್ನು ಕೇಳಿ ಕರ್ಣನಿಗೆ ಪರಶುರಾಮರ ಬಗ್ಗೆ ಅಪಾರವಾದ ಅಭಿಮಾನ, ಗೌರವ ಹುಟ್ಟಿತು. ತಾನು ಅಂಥ ಮಹಾನುಭಾವರ ಶಿಷ್ಯನಾಗಬೇಕು, ಅವರಿಂದಲೇ ಧನುರ್ವಿದ್ಯೆ ಕಲಿಯಬೇಕು ಎಂಬ ಆಸೆ ಉಂಟಾಯಿತು. ಅವರು ತನ್ನನ್ನು ಶಿಷ್ಯ ಎಂದು ಒಪ್ಪಯಾರೇ ಎಂಬ ಅಳುಕು ಬೇರೆ.

ಪರಶುರಾಮರ ಶಿಷ್ಯ

ಧೈರ್ಯ ಮಾಡಿ ಕರ್ಣ ಪರಶುರಾಮರು ಇದ್ದ ಆಶ್ರಮವನ್ನು ಹುಡುಕಿಕೊಂಡು ಹೋದ. ಅವರನ್ನು ಕಂಡು ಪಾದಗಳಿಗೆ ವಂದಿಸಿದ. ಪರಶುರಾಮರು ಕೇಳಿದರು:

“ನೀನು ಯಾರು ಮಗೂ?”

“ನನ್ನನ್ನು ಕರ್ಣ ಎಂದು ಕರೆಯುತ್ತಾರೆ.”

“ನನ್ನ ಹತ್ತಿರಕ್ಕೆ ಏಕೆ ಬಂದೆ?”

“ನೀವು ಲೋಕದಲ್ಲೇ ಮಹಾ ಪರಾಕ್ರಮಿ ಎನ್ನಿಸಿಕೊಂಡವರು; ಧನುರ್ವಿದ್ಯೆಯ ಮರ್ಮವನ್ನೆಲ್ಲ ತಿಳಿದವರು. ನನಗೆ ನಿಮ್ಮ ಶಿಷ್ಯನಾಗಬೇಕು ಅಂತ ಆಸೆ. ನನ್ನ ಕೈ ಬಿಡಬೇಡಿ.”

ಕರ್ಣನ ವಿನಯ, ವಿದ್ಯೆಯ ಮೇಲಿನ ಪ್ರೀತಿ ಕಂಡು ಪರಶುರಾಮರ ಮನಸ್ಸು ಕರಗಿತು. ಅವರ ಅಪ್ಪಣೆಯಂತೆ ತನಗೆ ಗೊತ್ತಿದ್ದ ಎಲ್ಲ ರೀತಿಯ ಬಾಣ ಪ್ರಯೋಗಗಳನ್ನು ಉತ್ಸಾಹದಿಂದ ಪ್ರದರ್ಶಿಸಿದ. ಅವನ ಕೈಚಳಕ, ಮನಸ್ಸಿನ ಏಕಾಗ್ರತೆ ಕಂಡು ಪರಶುರಾಮರಿಗೆ ಆಶ್ಚರ್ಯವಾಯಿತು. ಇವನದು ವಯಸ್ಸಿಗೆ ಮೀರಿದ ವಿದ್ಯೆ ಎನಿಸಿತು. ತಮ್ಮ ಶಿಷ್ಯನಾಗಲು ಇವನೇ ತಕ್ಕವನು ಎನಿಸಿತು. ಅವನಿಗೆ ಧರ್ನುವಿದ್ಯೆ ಕಲಿಸಲು ಒಪ್ಪಿದರು. ಕರ್ಣನ ಸಂತೋಷಕ್ಕೆ ಪಾರವೇ ಇಲ್ಲ.

ಆಗಿನ ಕಾಲದಲ್ಲಿ ಗುರುವಿನ ಬಳಿ ಇದ್ದು ಧನುರ್ವಿದ್ಯೆ ಕಲಿಯಲು ಕ್ಷತ್ರಿಯರಿಗೆ ಮತ್ತು ಬ್ರಾಹ್ಮಣರಿಗೆ ಮಾತ್ರ ಅವಕಾಶವಿತ್ತು. ಪರಶುರಾಮರಿಗೆ ಕ್ಷತ್ರಿಯರ ತಲೆ ಕಂಡರೇ ಆಗುತ್ತಿರಲಿಲ್ಲ. ಆದ್ದರಿಂದ ಅವರು ಈ ವಿದ್ಯೆಯನ್ನು ಬ್ರಾಹ್ಮಣರಿಗೆ ಮಾತ್ರ ಕಲಿಸುವುದಾಗಿ ಸಂಕಲ್ಪ ಮಾಡಿದ್ದರು. ಕರ್ಣ ಬ್ರಾಹ್ಮಣ ಎಂದು ಅವರು ಬಾವಿಸಿಕೊಂಡರು. ಕರ್ಣ ತಾನು ಬ್ರಾಹ್ಮಣನಲ್ಲವೆಂದು ಹೇಳುವ ಪ್ರಸಂಗಕ್ಕೇ ಹೋಗಲಿಲ್ಲ.

ಕರ್ಣನ ಅಭ್ಯಾಸ ನಿರಾಂತಕವಾಗಿ ಸಾಗಿತು. ಗುರುಗಳು ಹೇಳಿದ್ದನ್ನು ಅವನು ಒಂದೇ ಸಲಕ್ಕೆ ಗ್ರಹಿಸುವನು. ಅದನ್ನು ಒಂದೇ ಪ್ರಯೋಗದಲ್ಲಿ ಸಾಧಿಸಿ ತೋರಿಸುವನು. ಹೀಗೆ ಕರ್ಣ ಗುರುವಿನಿಂದ ಧನುರ್ವಿದ್ಯೆಯ ತಿರುಳನ್ನೆಲ್ಲ ಗ್ರಹಿಸಿದ. ದಿನವೂ ಪ್ರೀತಿಯಿಂದ ಗುರುವಿನ ಸೇವೆ ಮಾಡುತ್ತಿದ್ದ. ಬಹಳ ಕಾಲ ಹೀಗೇ ಸಾಗಿತು.

ಪರಶುರಾಮರ ಶಾಪ!

ಒಂದು ಮಧ್ಯಾಹ್ನ ಪರಶುರಾಮರು ಸ್ವಲ್ಪ ಬಳಲಿದ್ದರು. ವಿಶ್ರಮಿಸಿಕೊಳ್ಳಲು ಬಳಿಯಲ್ಲಿದ್ದ ಕರ್ಣನ ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದರು. ಹಾಗೇ ನಿದ್ರೆ ಹತ್ತಿತ್ತು.

ಆ ಹೊತ್ತಿಗೆ ಎಲ್ಲಿಂದಲೋ ಒಂದು ದುಂಬಿ ಹಾರಿ ಬಂತು. ಅಲ್ಲಿ ಇಲ್ಲಿ ಹಾರುತ್ತ ಅದು ಕರ್ಣನ ತೊಡೆಯ ಮೇಲೆ ಕುಳಿತಿತು. ಸ್ವಲ್ಪ ಹೊತ್ತಿಗೆ ಅವನ ತೊಡೆಯನ್ನೇ ಕೊರೆಯಲು ಶುರುಮಾಡಿತು. ಕರ್ಣ ಅದನ್ನು ಓಡಿಸಲು ಪ್ರಯತ್ನ ಮಾಡುವಂತಿಲ್ಲ. ಸ್ವಲ್ಪ ತೊಡೆ ಅಲುಗಿದರೂ ಸಾಕು, ಗುರುಗಳ ನಿದ್ರೆ ಕೆಡುತ್ತದೆ. ತಾನು ಬಾಧೆಪಟ್ಟರೂ ಚಿಂತೆಯಿಲ್ಲ, ಗುರುಗಳ ನಿದ್ರೆಗೆ ಭಂಗ ಬರಬಾರದು ಎಂದು ತುಂಬ ನೋವಾಗುತ್ತಿದ್ದರೂ ತಾಳಿಕೊಂಡು ಹಾಗೇ ಕುಳಿತ. ದುಂಬಿ ಕರ್ಣನ ತೊಡೆಯನ್ನು ಕೊರೆಯುತ್ತಲೇ ಹೋಯಿತು. ತೊಡೆಯಿಂದ ರಕ್ತ ಹರಿಯಲು ಶುರುವಾಯಿತು. ರಕ್ತ ಪರಶುರಾಮರ ಕೆನ್ನೆಗೆ ತಗಲಿತು. ಅವರಿಗೆ ಎಚ್ಚರವಾಯಿತು. ಅವರು ಚಕಿತರಾಗಿ ಕೇಳಿದರು:

“ಇದೇನು ಮಗೂ, ಎಲ್ಲಿಂದ ಬಂತು ಇಷ್ಟು ರಕ್ತ?”

ನಡೆದ ಸಂಗತಿಯನ್ನು ಕರ್ಣ ವಿವರಿಸಿದ.

ಪರಶುರಾಮರು ಕೇಳಿದರು: “ಇಷ್ಟು ನೋವನ್ನು ತುಟಿ ಪಿಟ್ಟೆನ್ನದೆ ಸಹಿಸಿದೆಯಾ?”

“ಇದೇನು ಅಂಥ ಸಹಿಸಲಾರದ ನೋವು ಎನ್ನಿಸಲಿಲ್ಲ”

ಪರಶುರಾಮರಿಗೆ ಆಶ್ಚರ್ಯವಾಯಿತು. ಅವರು ಕರ್ಣನನ್ನು ಒಮ್ಮೆ ಅಡಿಯಿಂದ ಮುಡಿವರೆಗೆ ದಿಟ್ಟಿಸಿ ನೋಡಿದರು. ಕರ್ಣ ಒಬ್ಬ ಬ್ರಾಹ್ಮಣ ಹುಡುಗ ಎಂದೇ ಅವರು ತಿಳಿದಿದ್ದರು. ಆದರೆ ಇಷ್ಟು ನೋವಾಗುವಾಗ ಅದನ್ನು ತಾಳಿಕೊಳ್ಳುವುದು, ಮೆತ್ತನೆ ಮೈಯ ಬ್ರಾಹ್ಮಣನಿಂದ ಸಾಧ್ಯವಿಲ್ಲ. ಕರ್ಣ ಖಂಡಿತ ಬ್ರಾಹ್ಮಣನಲ್ಲ. ಕ್ಷತ್ರಿಯನೇ ಇರಬೇಕು ಎಂದು ಬಲವಾದ ಅನುಮಾನ ಬಂದು ಬಿಟ್ಟಿತು. ಕೋಪದಿಂದ ಅವರು ಕರ್ಣನನ್ನು ಕ್ರೂರವಾಗಿ ಕೇಳಿದರು:

“ಎಲೋ ಕರ್ಣ!”

“ಏನು ಗುರುಗಳೇ?”

“ನಿಜ ಹೇಳು, ನೀನು ಯಾರು? ನೀನು ನನ್ನಿಂದ ಏನೋ ವಿಷಯ ಮುಚ್ಚಿಟ್ಟಿರುವೆ ಅಲ್ಲವೇ?”

“ಏನೋ ಮುಚ್ಚಿಟ್ಟಿದ್ದೇನೆ, ತಿಳಿಯುತ್ತಿಲ್ಲ.”

“ನೀನು ಬ್ರಾಹ್ಮಣ ಹುಡುಗನೆ? ಹೇಳು, ನಿಜ ಹೇಳು.”

ಕರ್ಣ ಈ ಮಾತಿಗೆ ಉತ್ತರ ಕೊಡಲಿಲ್ಲ. ತಲೆ ತಗ್ಗಿಸಿ ನಿಂತ. ತನ್ನ ಸಾಕುತಂದೆ ಅಧಿರಥನನ್ನೇ ಅವನು ತನ್ನ ನಿಜವಾದ ತಂದೆ ಎಂದು ತಿಳಿದಿದ್ದ. ಅಧಿರಥ ಒಬ್ಬ ಸೂತ, ತಾನು ಸೂತನ ಮಗ, ಕ್ಷತ್ರಿಯನೂ ಅಲ್ಲ, ಬ್ರಾಹ್ಮಣನೂ ಅಲ್ಲ. ಹೀಗಿರುವಾಗ ಅವನು ಗುರುಗಳಿಗೆ ಏನು ಉತ್ತರ ಕೊಡಬಲ್ಲ? ದಿಕ್ಕು ತೋರದೆ ಕಳವಳಪಡುತ್ತ ಸುಮ್ಮನೆ ನಿಂತು. ಕರ್ಣನ ಮೌನ ನೋಡಿ ಪರಶುರಾಮರಿಗೆ ತಮ್ಮ ಅನುಮಾನ ನಿಜ ಎಂದು ಖಚಿತವಾಯಿತು. ಕರ್ಣನ ವಿನಯ, ಶೌರ್ಯ, ಗುರುಭಕ್ತಿ, ವಿದ್ಯಯ ಮೇಲಿನ ಪ್ರೀತಿ ಎಲ್ಲವೂ ಅವರ ಉಗ್ರ ಕೋಪದಲ್ಲಿ ತೇಲಿಹೋಯಿತು. “ಎಲೋ ಹುಡುಗ! ಗುರುವನ್ನು ವಂಚಿಸಿ ವಿದ್ಯೆ ಕಲಿತೆ ಅಲ್ಲವೆ? ನಾನು ನಿನಗೆ ಕಲಿಸಿದ ಮಹಾಸ್ತ್ರಗಳೆಲ್ಲ ನಿನಗೆ ಅಗತ್ಯವಾದ ಸಮಯದಲ್ಲಿ ಮರೆತುಹೋಗಲಿ” ಎಂದು ಭಯಂಕರವಾದ ಶಾಪ ಕೊಟ್ಟು ಬಿಟ್ಟರು.

ಕರ್ಣನಿಗೆ ನಿಂತ ನೆಲವೇ ಕುಸಿದಂತಾಯಿತು. ತನ್ನಿಂದ ಗುರುಗಳ ಮನಸ್ಸಿಗೆ ನೋವಾಯಿತು. ಅಲ್ಲದೆ ಕಲಿತ ವಿದ್ಯೆ ಸಮಯದಲ್ಲಿ ವ್ಯರ್ಥವಾಗುವ ಶಾಪ ಬೇರೆ ಬಂತು. ಏನು ಮಾಡಲೂ ತೋಚದೆ ದುಃಖದಿಂದ ಅವನು ಪರಶುರಾಮರ ಆಶ್ರಮ ಬಿಟ್ಟು ಹೊರಟುಹೋದ.

ಹಸ್ತಿನಾವತಿಯಲ್ಲಿ

ರಾಜಕುಮಾರರಾದ ಕೌರವರ ಮತ್ತು ಪಾಂಡವರ ಅಸ್ತ್ರಶಿಕ್ಷಣ ಆಗಷ್ಟೆ ಮುಗಿದಿತ್ತು. ಅವರ ಅಸ್ತ್ರ ಕೌಶಲವನ್ನು ಜನರಿಗೆಲ್ಲ ತೋರಿಸುವ ಸಲುವಾಗಿ ಹಸ್ತಿನಾವತಿಯಲ್ಲಿ ಒಂದು ಅಸ್ತ್ರ ಪ್ರದರ್ಶನ ಏರ್ಪಾಟಾಗಿತ್ತು. ಕರ್ಣನ ಕಿವಿಗೂ ಅದರ ಸುದ್ದಿ ಮುಟ್ಟಿತು.

ರಾಜಕುಮಾರರು ಏನೇನು ಅಸ್ತ್ರಪ್ರಯೋಗ ಕಲಿತಿದ್ದಾರೋ ನೋಡಬೇಕು ಎನ್ನುವ ಕುತೂಹಲದಿಂದ ಅವನೂ ಅಲ್ಲಿಗೆ ಹೊರಟ.

ರಾಜಧಾನಿಯಾದ ಹಸ್ತಿನಾವತಿ ನಗರದ ಹೊರ ಭಾಗದಲ್ಲಿ ಒಂದು ದೊಡ್ಡ ಬಯಲು. ಅಲ್ಲಿ ಹೊಸದಾಗಿ ಒಂದು ಕ್ರೀಡಾಗಾರವನ್ನು ಕಟ್ಟಿದ್ದರು. ನಡುವೆ ವಿಶಾಲವಾದ ರಂಗಸ್ಥಳ. ಉಳಿದ ಕಡೆಯಲೆಲ್ಲ ನೋಡಲು ಜನ ಕಿಕ್ಕಿರಿದು ಸೇರಿದ್ದರು. ರಾಜಪರಿವಾರದವರೂ ಬಂದಿದ್ದರು.

ಪ್ರದರ್ಶನ ಶುರುವಾಯಿತು. ರಾಜಕುಮಾರರು ಕುದುರೆಗಳ ಮೇಲೆ ವೇಗವಾಗಿ ಸವಾರಿ ಮಾಡಿದರು. ಚಿತ್ರ ವಿಚಿತ್ರ ರೀತಿಗಳಲ್ಲಿ ಅವುಗಳನ್ನು ಓಡಿಸಿದರು. ರಥಗಳಲ್ಲಿ ಕುಳಿತು ಅವುಗಳನ್ನು ನಡೆಸಿದರು. ಆನೆಯ ಮೇಲೆ ಕುಳಿತು ಕಾಳಗ ಮಾಡಿದರು. ಬಗೆಬಗೆಯಾಗಿ ಖಡ್ಗ ತಿರುಗಿಸಿ ನಾನಾ ವರಸೆಗಳನ್ನು ತೋರಿಸಿದರು. ಅರ್ಜುನ ಒಬ್ಬನೇ ಶರವಿದ್ಯೆಯ ನಾನಾ ಪ್ರಯೋಗಗಳನ್ನು ಲೀಲಾಜಾಲವಾಗಿ ಮಾಡಿ ತೋರಿಸಿದ. ಮಹಾಸ್ತ್ರಗಳನ್ನೆಲ್ಲ ಪ್ರದರ್ಶಿಸಿ ಸಭೆ ಬೆರಗಾಗುವಂತೆ ಮಾಡಿ ಬಿಟ್ಟ. ಎಲ್ಲರೂ, ‘ಅರ್ಜುನನ ಸಮ ಯಾರೂ ಇಲ್ಲ. ಬಿಲ್ಲು ವಿದ್ಯೆಯಲ್ಲಿ ಇವನು ಎಲ್ಲರಿಗಿಂತ ಶ್ರೇಷ್ಠ’ ಎಂದು ಹೊಗಳತೊಡಗಿದರು.

ಪಾರ್ಥ, ಉಬ್ಬಿಹೋಗಬೇಡ

ಅಷ್ಟರಲ್ಲಿ ಬಾಗಿಲ ಕಡೆಯಿಂದ ಸಿಡಿಲಿನಂಥ ಶಬ್ದ ಕೇಳಿಸಿತು. ಜನ ಅತ್ತ ತಿರುಗಿ ನೋಡುತ್ತಾರೆ. ಒಬ್ಬ ಯುವಕ ತೋಳು ತಟ್ಟಿಕೊಂಡು ಸವಾಲು ಹಾಕುವಂತೆ ಬರುತ್ತಿದ್ದಾನೆ. ಅವನ ತೇಜಸ್ಸು, ದೃಢವಾದ ಮೈಕಟ್ಟು, ಎತ್ತರವಾದ ನಿಲುವು, ಝಗಝಗಿಸುವ ಕವಚ, ಕುಂಡಲ — ಎಲ್ಲ ಕಂಡು ಜನ ದಂಗುಬಡಿದು ಹೋದರು. ಎಲ್ಲ ಕಡೆ ಗುಜುಗುಜು ಶಬ್ದ ಶುರುವಾಯಿತು.

 

(ಚಿತ್ರ ೧)
ನೀನು ಏನು ಕೌಶಲ ತೋರಿಸಿದೆಯೋ ಅದನ್ನು ನಾನು ಚೆನ್ನಾಗಿ ಮಾಡಿ ತೋರಿಸುತ್ತೇನೆ.

 

ಬಂದವನು ಬೇರೆ ಯಾರೂ ಅಲ್ಲ, ಕರ್ಣ. ಅವನು ರಂಗಸ್ಥಳಕ್ಕೆ ಬಂದವನೇ ಅರ್ಜುನನನ್ನು ನೋಡಿ, “ಅಯ್ಯಾ ಪಾರ್ಥ, ನನಗಿಂತ ದೊಡ್ಡ ಬಿಲ್ಲುಗಾರ ಇಲ್ಲ ಎಂದು ಸಂಭ್ರಮದಿಂದ ಉಬ್ಬಿಹೋಗಬೇಡ. ನೀನು ಈಗ ಧನುರ್ವಿದ್ಯೆಯಲ್ಲಿ ಏನು ಕೌಶಲ ತೋರಿಸಿದೆಯೋ ಅದನ್ನೆಲ್ಲ ನಾನು ಇನ್ನೂ ಚೆನ್ನಾಗಿ ಮಾಡಿ ತೊರಿಸುತ್ತೇನೆ” ಎಂದು ಹೇಳಿ ಅವನ್ನೆಲ್ಲ ಮಾಡಿ ತೋರಿಸಿದ. ಪರ್ಜನ್ಯಾಸ್ತ್ರ ಪ್ರಯೋಗಿಸಿ ಮೇಘಗಳನ್ನು ಬರಿಸಿದ; ವಾಯುವ್ಯಾಸ್ತ್ರ ಬಿಟ್ಟು ಗಾಳಿಯಿಂದ ಅವನ್ನು ಚದುರಿಸಿದ. ಆಗ್ನೇಯಾಸ್ತ್ರದಿಂದ ಬೆಂಕಿ ಎಬ್ಬಿಸಿ, ವಾರುಣಾಸ್ತ್ರದಿಂದ ಅದನ್ನು ಆರಿಸಿದ. ವೇಗವಾಗಿ ತಿರುಗುತ್ತಿದ್ದ ಲೋಹದ ಹಂದಿಯ ಬಾಯಲ್ಲಿ ಏಕಕಾಲಕ್ಕೆ ಐದು ಬಾಣಗಳನ್ನು ಹೊಡೆದು ತೂರಿಸಿದ. ಅಂತರ್ಧಾನಾಸ್ತ್ರ ಎಸೆದು ಮಾಯವಾದ. ಇದ್ದಕ್ಕಿದ್ದಂತೆ ರಂಗದ ಇನ್ನೊಂದು ಬದಿಯಲ್ಲಿ ಕಾಣಿಸಿಕೊಂಡ. ಈ ಚಮತ್ಕಾರಗಳೆಲ್ಲ ಮುಗಿದ ಮೇಲೆ ಗದೆ ಹಿಡಿದು ಅದನ್ನು ನಾನಾ ನಡಿಗೆಯಲ್ಲಿ ತಿರುಗಿಸಿ ತೋರಿಸಿದ. ಈ ಅದ್ಭುತ ಶಕ್ತಿಯನ್ನು ಕಂಡು ಜನ ತಬ್ಬಿಬ್ಬಾಗಿ ಹೋದರು. ಎಲ್ಲ ಕಡೆ ಕೋಲಾಹಲ ಎದ್ದಿತು.

ಅಂಗರಾಜ

ಕರ್ಣನ ಪ್ರದರ್ಶನ ಮುಗಿದ ಕೂಡಲೇ ದುರ್ಯೋಧನ ರಂಗಸ್ಥಳಕ್ಕೆ ಓಡಿ ಬಂದು ಅವನನ್ನು ತಬ್ಬಿಕೊಂಡು ಹೇಳಿದ, “ಅಯ್ಯಾ, ಅಪ್ರತಿಮ ವೀರ, ನಿನ್ನ ಶೌರ್ಯ, ವಿದ್ಯಾಕೌಶಲ ಕಂಡು ನಾನು ಮಾರು ಹೋಗಿದ್ದೇನೆ. ಇಗೋ, ನಾನು ನನ್ನ ರಾಜ್ಯ ಎಲ್ಲ ನಿನ್ನ ಅಧೀನ. ನಿನ್ನ ಮನಸ್ಸಿನಲ್ಲಿ ಏನು ಅಪೇಕ್ಷೆ ಇದೆ ತಿಳಿಸು. ಅದನ್ನು ಈ ಕೂಡಲೆ ನಡೆಸಿಕೊಡಲು ಬಯಸುತ್ತೇನೆ.”

ಅದಕ್ಕೆ ಕರ್ಣ, “ಮಹಾರಾಜ, ನನಗೆ ಬೇರೆ ಏನೂ ಬೇಡ. ನಿನ್ನ ಸ್ನೇಹ ಮತ್ತು ಅರ್ಜುನನ ಜೊತೆ ಬಾಣಯುದ್ಧ ಇವೆರಡೇ ನನಗೆ ಬೇಕಾದದ್ದು” ಎಂದನು. “ಹಾಗಿದ್ದರೆ ಅವು ಈ ಕೂಡಲೆ ನಿನಗೆ ದೊರೆತ ಹಾಗೆಯೇ. ಇಂದಿನಿಂದ ನೀನು ನನ್ನ ಆಪ್ತಮಿತ್ರ; ನನಗೆ ಸರಿಸಮಾನ. ನನಗೆ ಇನ್ನು ಯಾರ ಭಯ?” ಎಂದನು ದುರ್ಯೋಧನ.

ಈ ಮಾತೆಲ್ಲ ಅಲ್ಲೆ ಇದ್ದ ಅರ್ಜುನನ ಮನಸ್ಸಿಗೆ ಚುಚ್ಚಿತು. ಅವನು, “ಎಲವೋ ಕರ್ಣ! ನಾವು ನಿನ್ನನ್ನು ಕರೆಯಲಿಲ್ಲ, ಆದರೂ ಬಂದೆ. ನಾವು ಕೇಳಲಿಲ್ಲ; ಆದರೂ ಅತಿಯಾಗಿ ಮಾತು ಆಡುತ್ತಿದ್ದೀಯೆ. ಶಾಂತವಾಗಿದ್ದ ಸಭೆಯಲ್ಲಿ ಗೊಂದಲ ಹುಟ್ಟಿಸಿದ್ದೀಯೆ. ನಿನ್ನನ್ನು ಈಗಲೇ ಯಮಲೋಕಕ್ಕೆ ಅಟ್ಟುತ್ತೇನೆ. ಬಿಲ್ಲು ಹಿಡಿ, ಕಾಳಗಕ್ಕೆ ಸಿದ್ಧನಾಗು” ಎಂದನು.

ಇದನ್ನು ಕೇಳಿ ಕರ್ಣ ಕಿಡಿಕಿಡಿಯಾದ, “ಎಲವೋ ಅರ್ಜುನ! ಈ ರಂಗಸ್ಥಳ ನಿನಗೆ ಮಾತ್ರ ಮೀಸಲಾದದ್ದಲ್ಲ. ಅದು ಸಾರ್ವಜನಿಕ ಸ್ಥಳ. ಬಿಲ್ಲುವಿದ್ಯೆ ಗೊತ್ತಿರುವವರು ಯಾರೇ ಇರಲಿ, ಅವರು ಅದನ್ನು ಇಲ್ಲಿ ಪ್ರದರ್ಶಿಸಬಹುದು. ಅದಕ್ಕೆ ನಿನ್ನ ಅಡ್ಡಿ ಏನು? ನೀನು ನನ್ನನ್ನು ನಿಂದಿಸುತ್ತಿದ್ದೀಯೆ. ವೀರನಾದವನು ಬಾಯಿಗೆ ಬಂದಂತೆ ಹರಟುತ್ತಾನೆಯೆ? ಬಾ ಯದ್ದಕ್ಕೆ, ನಿನ್ನನ್ನು ಇಲ್ಲೇ ನನ್ನ ಬಾಣಕ್ಕೆ ಬಲಿ ಕೊಡುತ್ತೇನೆ” ಎಂದನು.

ಇಬ್ಬರೂ ಕಾಳಗಕ್ಕೆ ಸಿದ್ಧವಾದರು. ದ್ರೋಣಾಚಾರ್ಯರೂ ಇದಕ್ಕೆ ಒಪ್ಪಬೇಕಾಯಿತು. ಸಭೆಯೆಲ್ಲ ಗೊಂದಲದಿಂದ ತುಂಬಿಹೋಯಿತು. ಕರ್ಣಾರ್ಜುನರಿಗೆ ಯುದ್ಧವಾಗುವ ಸುದ್ಧಿ ಕೇಳಿ ಕುಂತಿ ಮೂರ್ಛೆ ಹೋದಳು.

ಅಷ್ಟು ಹೊತ್ತಿಗೆ ಕೃಪಾಚಾರ್ಯರು ಎದ್ದು ರಂಗಸ್ಥಳಕ್ಕೆ ಬಂದರು. ದ್ವಂದ್ವಯುದ್ಧದ ಕ್ರಮ ಅವರಿಗೆ ಚೆನ್ನಾಗಿ ಗೊತ್ತಿತ್ತು. ಅವರು ಕರ್ಣನನ್ನು ಕೇಳಿದರು:

“ನೋಡು ಕರ್ಣ. ನಿನ್ನ ಮೇಲೆ ಕಾಳಗಕ್ಕೆ ನಿಂತಿರುವ ಈತ ಅರ್ಜುನ. ಇವನು ಚಂದ್ರವಂಶದ ರಾಜಕುಮಾರ, ಪಾಂಡು ಮಹಾರಾಜನ ಮಗ. ಇವನ ಮೇಲೆ ಯುದ್ಧ ಮಾಡುವವನು ಈ ಎಲ್ಲದರಲ್ಲಿಯೂ ಇವನಿಗೆ ಸಮನಾಗಿರಬೇಕು. ಈಗ ನೀನು ಯಾರ ಮಗ? ಯಾವ ಕುಲದವನು? ಯಾರ ಶಿಷ್ಯ? ಸಭೆಗೆ ತಿಳಿಸು.

ಕರ್ಣ ನಾಚಿಕೆ, ವ್ಯಸನಗಳಿಂದ ತಲೆ ತಗ್ಗಿಸಿದ. ತಾನು ಸೂತನ ಮಗ. ಆದ್ದರಿಂದ ಕೀಳು ಕುಲದವನಂತೆ. ಇವರು ಅದನ್ನೇ ದೊಡ್ಡದು ಮಾಡುತ್ತಿದ್ದಾರೆ. ತಾನು ಯಾರಾದರೆ ಏನು? ಗಂಡಸಾದವನಿಗೆ ಶೌರ್ಯ ಮುಖ್ಯ ಅಲ್ಲವೇ? ಎನಿಸಿತು. ಆದರೂ ಆ ಕಾಲದ ನಡವಳಿಕೆಯೇ ಹಾಗಿತ್ತು. ಏನು ಮಾಡುವುದು? ಕರ್ಣ ಸುಮ್ಮನೆ ನಿಂತ.

ಈ ಪ್ರಸಂಗ ನೋಡಿ ದುರ್ಯೋಧನನಿಗೆ ರೇಗಿತು. “ಕೃಪಾಚಾರ್ಯರೇ, ಇದು ಎಂಥ ಮಾತು? ಅರ್ಜುನ ರಾಜಕುಮಾರ, ಇವನು ಅಲ್ಲ ಎಂದು ನಿಮ್ಮ ಅಭಿಪ್ರಾಯ ಅಲ್ಲವೇ? ಹಾಗಿದ್ದರೆ ಇಗೋ ಈಗಲೇ ನಾನು ಕರ್ಣನನ್ನು ರಾಜನನ್ನಾಗಿ ಮಾಡುತ್ತೇನೆ. ಆಗ ಅವನು ಅರ್ಜುನನ ಜೊತೆ ಯುದ್ಧಮಾಡಬಹುದಲ್ಲವೇ?” ಹೀಗೆ ಹೇಳಿ ಅವನು ಕರ್ಣನಿಗೆ ಅಲ್ಲೇ ಅಂಗ ರಾಜ್ಯದ ಪಟ್ಟ ಕಟ್ಟಿಬಿಟ್ಟ. ಇದನ್ನು ನೋಡಿ ಜನ ಜಯ ಜಯಕಾರ ಮಾಡಿದರು. ಕರ್ಣನ ಮನಸ್ಸು ಕೃತಜ್ಞತೆಯಿಂದ ತುಂಬಿಬಂತು. “ಮಹಾರಾಜ, ನಿನ್ನ ಈ ಉಪಕಾರಕ್ಕೆ ಪ್ರತಿಯಾಗಿ ನಾನು ಏನು ತಾನೆ ಕೊಡಬಲ್ಲೆ?” ಎಂದು ಕೇಳಿದ. “ಕರ್ಣ, ನಿನ್ನ ಸ್ನೇಹಭಾಗ್ಯ ನನಗೆ ಎಲ್ಲದಕ್ಕಿಂತ ದೊಡ್ಡದು. ಅದು ಸದಾ ನನ್ನ ಪಾಲಿಗೆ ಇರಲಿ” ಎಂದು ಹೇಳಿ ದುರ್ಯೋಧನ ಅವನನ್ನು ತಬ್ಬಿಕೊಂಡ.

ಇನ್ನೇನು ಅರ್ಜುನ ಮತ್ತು ಕರ್ಣ ಕಾಳಗ ಆರಂಭಿಸಬೇಕು. ಅಷ್ಟು ಹೊತ್ತಿಗೆ ಅಧಿರಥ ತನ್ನ ಮಗ ರಾಜನಾದದ್ದು ಕೇಳಿ ಅಲ್ಲಿಗೆ ಬಂದ. ಕರ್ಣ ಅವನ ಬಳಿಗೆ ಹೋಗಿ ಕಾಲಿಗೆ ನಮಸ್ಕಾರ ಮಾಡಿದ. ಅಧಿರಥ ಸಂತೋಷದಿಂದ ಮಗನನ್ನು ಆಲಂಗಿಸಿಕೊಂಡು, “ಮಗೂ, ಹೀಗೇ ಯಶೋವಂತನಾಗು” ಎಂದು ಆಶೀರ್ವಾದ ಮಾಡಿದ. ಇದನ್ನು ಗಮನಿಸಿದ ಭೀಮನಿಗೆ ಕರ್ಣ ಅಧಿರಥನ ಮಗ ಎಂದು ಗೊತ್ತಾಯಿತು. ಅವನು ತಿರಸ್ಕಾರದ ದನಿಯಲ್ಲಿ, “ಎಲವೋ ಕರ್ಣ, ನೀನು ಸೂತನಾದ ಈ ಅಧಿರಥನ ಮಗ ಅಲ್ಲವೇ? ನೀನು ಚಂದ್ರವಂಶದಲ್ಲಿ ಹುಟ್ಟಿದ ಅರ್ಜುನನಿಗೆ ಹೇಗೆ ಸಮನಾದೀಯೆ? ಅಗ್ನಿಯ ಪಕ್ಕದಲ್ಲಿ ಇದ್ದ ಮಾತ್ರಕ್ಕೆ ನಾಯಿಗೆ ಹವಿಸ್ಸು ತಿನ್ನುವ ಹೋಗ್ಯತೆ ಬರುತ್ತದೆಯೇ? ನಿನಗೆ ಅಂಗ ರಾಜ್ಯಕ್ಕೂ ಅರ್ಹತೆಯಿಲ್ಲ; ಯುದ್ಧದಲ್ಲಿ ಅರ್ಜುನನಿಂದ ಕೊಲೆಗೂ ಅರ್ಹನಲ್ಲ” ಎಂದು ನಿಂದಿಸಿದನು. ದುರ್ಯೋಧನನಿಗೆ ಈ ಮಾತು ಕೇಳಿ ಕೋಪ ಬಂತು. ಅವನು ಭೀಮನನ್ನು ನೋಡಿ, “ನಿನ್ನ ಮಾತು ಕ್ಷತ್ರಿಯರಿಗೆ ಹೇಳಿಸಿದ್ದಲ್ಲ. ಕ್ಷತ್ರಿಯನಿಗೆ ಸಾಹಸವೇ ಎಲ್ಲಕ್ಕಿಂತ ದೊಡ್ಡದು. ಕರ್ಣನ ಕುಲ ಕಟ್ಟಿಕೊಂಡು ನಮಗೆ ಏನಾಗಬೇಕು? ಇಂದ್ರನ ವಜ್ರಾಯುಧ ಆದದ್ದು ದಧೀಚಿ ಋಷಿಯ ಮೂಳೆಯಿಂದ; ದ್ರೋಣಾಚಾರ್ಯರು ಹುಟ್ಟಿದ್ದು ಕಲಶದಿಂದ; ಕೃಪಾಚಾರ್ಯರ ಜನನ ದರ್ಭೆಯ ಕಂತೆಯಲ್ಲಿ ಎನ್ನುತ್ತಾರೆ. ಹುಟ್ಟನ್ನು ಕಟ್ಟಿಕೊಂಡು ಏನು? ಕರ್ಣ ಕವಚಕುಂಡಲ ಸಮೇತ ಹುಟ್ಟಿ ಬಂದವನು. ಸೂರ್ಯನಂತೆ ತೇಜಸ್ವಿ. ಇಂಥವನು ಅಂಗ ರಾಜ್ಯಕ್ಕೆ ಹೇಗೆ ಅರ್ಹನಲ್ಲ? ನಾನು ಪಟ್ಟ ಕಟ್ಟಿದ್ದನ್ನು ಯಾರು ಒಪ್ಪುವುದಿಲ್ಲವೋ ಅವರು ಕರ್ಣನ ಜೊತೆ ಯುದ್ಧ ಮಾಡಿ ಗೆಲ್ಲಲಿ” ಎಂದು ಅಬ್ಬರಿಸಿದ.

ಸಭೆಯಲ್ಲಿ ಕೋಲಾಹಲ ಎದ್ದಿತು. ಅಷ್ಟು ಹೊತ್ತಿಗೆ ಕತ್ತಲಾಗುತ್ತ ಬಂದಿದ್ದರಿಂದ ಸಭೆ ಅಲ್ಲಿಗೆ ಮುಗಿಯಿತು. ಜನರೆಲ್ಲ ಕರ್ಣನ ಪರಾಕ್ರಮವನ್ನು ಕೋಂಡಾಡುತ್ತ ಮನೆಗೆ ತೆರಳಿದರು.

ದುರ್ಯೋಧನನ ಪ್ರಾಣಸಖ

ದುರ್ಯೋಧನ ಮತ್ತು ಕರ್ಣರ ಸ್ನೇಹ ದಿನೇದಿನೇ ಹೆಚ್ಚುತ್ತ ಹೋಯಿತು. ತಾನು ಚಕ್ರವರ್ತಿ, ಕರ್ಣ ತನಗಿಂತ ಕಡಿಮೆ ಎಂದು ದುರ್ಯೋಧನ ಎಂದೂ ಯೋಚಿಸಲಿಲ್ಲ. ಅವನು ಸದಾ ಕರ್ಣನ ಜೊತೆಯಲ್ಲಿರುತಿದ್ದ. ಅವನ ಹತ್ತಿರ ಎಲ್ಲ ವಿಷಯ ಹೇಳಿಕೊಳ್ಳುತ್ತಿದ್ದ. ವಂದಿಮಾಗಧರು ತನ್ನ ಬಿರುದು ಹೊಗಳಿ ಪರಾಕು ಹೇಳಲು ಹೊರಟರೆ ಅದನ್ನು ನಿಲ್ಲಿಸಿ ಕರ್ಣನ ಬಿರುದನ್ನು ಹೊಗಳಿಸಿ, ಪರಾಕು ಹೇಳಿಸಿ ಕೇಳುತ್ತಿದ್ದ. ದಿನವೂ ಕರ್ಣನಿಗೆ ಉತ್ತಮ ವಸ್ತುಗಳನ್ನು ಉಡುಗೊರೆಯಾಗಿ ಕೊಡುತ್ತಿದ್ದ. ಕರ್ಣನ ಗುಣ, ಬಲ, ಸತ್ಯನಿಷ್ಠೆ, ಔದಾರ್ಯಗಳನ್ನು ಅವನು ತುಂಬ ಮೆಚ್ಚಿಕೊಂಡಿದ್ದ.

ಕರ್ಣನಿಗೂ ಅಷ್ಟೆ. ದುರ್ಯೋಧನ ಎಂದರೆ ಪಂಚಪ್ರಾಣ. ಅವನ ಸಲುವಾಗಿ ಕರ್ಣ ತನ್ನ ತಲೆ ಕೊಡಲೂ ಸಿದ್ಧವಾಗಿದ್ದ. ಉಳಿದವರು ತನ್ನನ್ನು ಸೂತಪುತ್ರ ಎಂದು ಹೀಯಾಳಿಸುತ್ತಿದ್ದಾಗ ದುರ್ಯೋಧನ ಮಾತ್ರ ತನ್ನನ್ನು ಸಮಾನವಾಗಿ ಕಂಡದ್ದರಿಂದ ಅವನಿಗೆ ದುರ್ಯೋಧನನ ಬಗ್ಗೆ ಅಪಾರವಾದ ಕೃತಜ್ಞತೆ ಮತ್ತು ಸ್ನೇಹ ಇತ್ತು.

ಕರ್ಣ ದಾನ ಮಾಡುವುದರಲ್ಲಿ ಎತ್ತಿದಕೈ. ಹಾಗೆಯೇ ಆಡಿದ ಮಾತನ್ನು ನಡೆಸುವುರಲ್ಲಿ ಸಹ. ನೂರಾರು ಜನ ಬಡವರು ಅವನ ಬಳಿಗೆ ಬರುತ್ತಿದ್ದರು. ಕರ್ಣ ಅವರಿಗೆ ಹಣವನ್ನೋ ಬೇಕಾದ ವಸ್ತ್ರಗಳನ್ನೋ ನಗುನಗುತ್ತ ಕೊಟ್ಟುಬಿಡುತ್ತಿದ್ದ. ಅವನು ಎಷ್ಟು ದೊಡ್ಡ ವೀರನೋ ಅಷ್ಟೇ ದೊಡ್ಡ ದಾನಿ ಎನಿಸಿಕೊಂಡ. ಅವನಿಗೆ ‘ದಾನಶೂರ’ ಎಂಬ ಹೆಸರು ಬಂದಿತು.

ಕೌರವರೂ ಪಾಂಡವರೂ ಅಣ್ಣ ತಮ್ಮಂದಿರು ಮಕ್ಕಳು. ರಾಜ್ಯದ ಸಲುವಾಗಿ ಅವರ ಮಧ್ಯೆ ಸದಾ ಕಲಹ ಇದ್ದೇ ಇತ್ತು. ಇಂಥ ಸಂದರ್ಭದಲ್ಲೆಲ್ಲ ಕರ್ಣ ಕೌರವರಲ್ಲಿ ಹಿರಿಯವನಾದ ದುರ್ಯೋಧನನ ಪರ ಹಿಡಿಯುತ್ತಿದ್ದ. ಅವನಿಗಾಗಿ ಹೋರಾಡಬೇಕು. ಅವನ ಶತ್ರುಗಳಾದ ಪಾಂಡವರನ್ನು ಮುಂದೆ ಯುದ್ಧದಲ್ಲಿ ಕೊಲ್ಲಬೇಕು. ಅದರಲ್ಲೂ ಅವರಲ್ಲಿ ಬಹಳ ಬಲಿಷ್ಠನಾದ ಅರ್ಜುನನನ್ನು ತಾನು ತೆಗೆಯಲೇಬೇಕು. ಅದರಿಂದ ದುರ್ಯೋಧನನಿಗೆ ಸಂತೋಷವಾಗುತ್ತದೆ. ಇದೇ ಅವನ ಧ್ಯೇಯ. ಭೀಷ್ಮ, ದ್ರೋಣ ಮೊದಲಾದವರೆಲ್ಲ ಕೌರವನ ಕೈಬಿಟ್ಟರೂ ತಾನು ಕೌರವನನ್ನು ರಕ್ಷಿಸುತ್ತೇನೆ ಎಂಬ ಕೆಚ್ಚು ಅವನಿಗಿತ್ತು. ದುರ್ಯೋಧನನು ಪಾಂಡವರ ಬಲವನ್ನು ನೆನೆದು ಚಿಂತಿಸುವಾಗ ಕರ್ಣ ಅವನಿಗೆ ಸಮಾಧಾನ ಹೇಳುತ್ತಿದ್ದ. “ನೀನೂ ಏನೂ ಯೋಚಿಸಬೇಡ. ನಮಗೂ ಪಾಂಡವರಿಗೂ ಯುದ್ಧವೊಂದು ನಡೆಯಲಿ, ನೋಡುತ್ತಿರು. ಅವರನ್ನೆಲ್ಲ ನಾನು ಸದೆಬಡಿಯುತ್ತೇನೆ” ಎಂದು. ಇದನ್ನು ಕೇಳಿ ದುರ್ಯೋಧನನಿಗೆ ಧೈರ್ಯ ಬರುತ್ತಿತ್ತು.

ಕರ್ಣ ಬಾ, ಚಕ್ರವರ್ತಿಯಾಗು

ಕೌರವರೂ ಪಾಂಡವರೂ ರಾಜ್ಯಕ್ಕಾಗಿ ಯುದ್ಧ ಮಾಡಲು ನಿಶ್ಚಯ ಮಾಡಿದರಷ್ಟೆ. ಯುದ್ಧ ಮಾಡಲು ನಿಶ್ಚಯ ಮಾಡಿದರಷ್ಟೆ. ಯುದ್ಧ ತಪ್ಪಿಸಿ ಇಬ್ಬರಿಗೂ ಸಂಧಿ ಮಾಡಿಸಲು ಕೃಷ್ಣ ಹಸ್ತಿನಾವತಿಗೆ ಬಂದ. ರಾಜಸಭೆಯಲ್ಲಿ ದುರ್ಯೋಧನನಿಗೆ ಯುದ್ಧ ಮಾಡಬೇಡ ಎಂದು ಬುದ್ಧಿ ಹೇಳಿದ. ಅವನು ಕೇಳಲಿಲ್ಲ. ಹಸ್ತಿನಾವತಿಯಿಂದ ವಾಪಸ್ಸು ಹೊರಟಾಗ ಕೃಷ್ಣ ಕರ್ಣನೊಬ್ಬನನ್ನೇ ಸ್ವಲ್ಪ ದೂರ ತನ್ನ ಜೊತೆಯಲ್ಲಿ ಕರೆದುಕೊಂಡು ಹೋದ. ರಥದಲ್ಲಿ ಅವನನ್ನು ತನ್ನ ಪಕ್ಕದಲ್ಲೇ ಕೂರಿಸಿಕೊಂಡ. ಕರ್ಣನಿಗೆ ಏನೋ ಅಳುಕು, ಮುಜುಗರ ಉಂಟಾಯಿತು. ಕೃಷ್ಣ ಒಬ್ಬ ಮಹಾಪುರಷ. ಅವನೆಲ್ಲಿ, ಕೀಳು ಕುಲದವನಾದ ನಾನೆಲ್ಲಿ! ನನ್ನನ್ನು ಹೀಗೆ ತನ್ನ ಜೊತೆಯಲ್ಲಿ ಕೂರಿಸಿಕೊಳ್ಳುತ್ತಿದ್ದಾನಲ್ಲ ಎಂದು ಅವನಿಗೆ ವಿಸ್ಮಯ. ಕೃಷ್ಣನಿಗೆ ಇದು ಗೊತ್ತಾಯಿತು. ಅವನು ನಗುತ್ತ ಹೇಳಿದ:

“ಕರ್ಣ, ನಿನ್ನ ಸಂಕೋಚಕ್ಕೆ ಕಾರಣವಿಲ್ಲ. ನೀನು ಸೂತಪುತ್ರ ಎಂದು ತಿಳಿದುಕೊಂಡಿದ್ದೀಯೆ ಅಲ್ಲವೆ? ಖಂಡಿತ ಅಲ್ಲ. ಅಧಿರಥ ನಿನ್ನ ಸಾಕು ತಂದೆ. ನಿಜವಾದ ತಂದೆಯಲ್ಲ. ನೀನು ಕುಂತಿಯ ಮಗ. ಕುಂತಿ ಕನ್ಯೆಯಾಗಿದ್ದಾಗ ನಿನ್ನನ್ನು ಹೆತ್ತಳು. ಜನ ನಿಂದಿಸುತ್ತಾರೆ ಎಂದು ಹೆದರಿ ನಿನ್ನನ್ನು ಒಂದು ಬುಟ್ಟಿಯಲ್ಲಿಟ್ಟು ಗಂಗೆಯಲ್ಲಿ ತೇಲಿಬಿಟ್ಟಳು. ನೀನು ಅಧಿರಥನ ಕೈಗೆ ಸಿಕ್ಕಿದೆ. ಕರ್ಣ, ನೀನು ಸೂರ್ಯ ಮಂತ್ರದಿಂದ ಜನಿಸಿದವನು, ಕ್ಷತ್ರಿಯರಾದ ಪಾಂಡವರ ಅಣ್ಣ. ನನ್ನ ಸೋದರತ್ತೆ ಕುಂತಿಯ ಮಗನಾದುದರಿಂದ ನನಗೂ ಸಂಬಂಧಿ. ನನ್ನ ಜೊತೆ ಬಂದುಬಿಡು. ನಾನು ಪಾಂಡವರಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ಕೌರವ, ಪಾಂಡವರೆಲ್ಲರಿಗೆ ಹಿರಿಯನಾದುದರಿಂದ ಕೌರವ ಸಾಮ್ರಾಜ್ಯಕ್ಕೆ ನೀನೇ ಚಕ್ರವರ್ತಿ ಆಗುತ್ತಿಯೇ. ನೀನು ಅಣ್ಣ ಎಂದು ತಿಳಿದರೆ ಪಾಂಡವರು ಸಹ ತುಂಬ ಸಂತೋಷಪಡುತ್ತಾರೆ. ದುರ್ಯೋಧನ, ಧರ್ಮರಾಯ ಇಬ್ಬರೂ ನಿನ್ನನ್ನು ಚಕ್ರವರ್ತಿ ಎಂದು ಒಪ್ಪಿಕೊಳ್ಳುತ್ತಾರೆ. ಯುದ್ಧ ತಪ್ಪಿ ಸಾವಿರಾರು ಜನ ಬದುಕಿಕೊಳ್ಳುತ್ತಾರೆ. ಇಷ್ಟು ದೊಡ್ಡ ಕುಲದಲ್ಲಿ ಹುಟ್ಟಿ ಎಲ್ಲರಿಂದ ಸೂತಪುತ್ರ ಎಂದು ಕರೆಸಿಕೊಂಡದ್ದು ಸಾಕು. ಕೌರವರು, ಪಾಂಡವರು, ಯಾದವರು ಎಲ್ಲರಿಗೂ ಚಕ್ರವರ್ತಿಯಾಗಿ ಬಾಳಬೇಕಾದ ನೀನು ದುರ್ಯೋಧನನ ಅನ್ನಕ್ಕೆ ಕೈಯೊಡ್ಡಿ ಬದುಕುತ್ತಿದ್ದೀಯೇ?”

ದುರ್ಯೋಧನನೇ ಸರ್ವಸ್ವ

ಕೃಷ್ಣನ ಮಾತುಗಳನ್ನು ಕೇಳಿ ಕರ್ಣನಿಗೆ ಆಶ್ಚರ್ಯ ಸಂತೋಷ, ದುಃಖ ಎಲ್ಲ ಒಟ್ಟಿಗೇ ಉಕ್ಕಿ ಬಂತು. ಕೊರಳು ಕಟ್ಟಿಕೊಂಡಿತು. ಮಾತನಾಡುವುದೇ ಕಷ್ಟವಾಯಿತು. ಅವನು ಹೇಳಿದ: “ಕೃಷ್ಣ, ಕುಂತಿ ನನ್ನನ್ನು ಹೆತ್ತ ತಾಯಿ ಎಂದು ಹೇಳುತ್ತಿದ್ದೀಯೆ. ಆಗಲಿ. ಅವಳು ಮಾತ್ರ ನನ್ನನ್ನು ಹುಟ್ಟಿದ ಗಳಿಗೆಯಲ್ಲಿಯೇ ತೊರೆದುಬಿಟ್ಟಳು. ಆದರೆ ಅಧಿರಥ ನನ್ನನ್ನು ಕಂಡೊಡನೆ ಪ್ರೀತಿಯಿಂದ ಮನೆಗೆ ಎತ್ತಿಕೊಂಡು ಹೋದ. ತಾಯಿ ರಾಧೆ ನನಗೆ ಹಾಲುಣಿಸಿದ್ದಾಳೆ. ಅಧಿರಥ ಹೊಟ್ಟೆಯಲ್ಲಿ ಹುಟ್ಟಿದ ಮಗನಿಗಿಂತ ಹೆಚ್ಚಾಗಿ ನನ್ನನ್ನು ಕಂಡಿದ್ದಾನೆ. ನನಗೆ ಜಾತಕರ್ಮಗಳನ್ನು ಮಾಡಿಸಿ, ಪ್ರೀತಿಯಿಂದ ಸಾಕಿ, ದೊಡ್ಡವನಾದ ಮೇಲೆ ನನಗೆ ವಿವಾಹ ಮಾಡಿದ್ದಾನೆ. ನನಗೆ ಮಕ್ಕಳು, ಮೊಮ್ಮಕ್ಕಳು ಕೂಡ ಇದ್ದಾರೆ. ಇಷ್ಟು ಪ್ರೀತಿಯಿಂದ ಕಂಡ ತಂದೆತಾಯಿಗಳನ್ನು ನೀನು ಏನು ಕಟ್ಟರು ತಾನೆ ನಾನು ಬಿಟ್ಟುಬಂದೇನು! ಇನ್ನು ದುರ್ಯೋಧನ. ಅವನಂತೂ ನನ್ನ ಇನ್ನೊಂದು ದೇಹ ಎಂಬಂತೆ ಇದ್ದಾನೆ. ಇಡೀ ಲೋಕ ನನ್ನನ್ನು ಕೀಳು ಕುಲದವನು ಎಂದು ಗೇಲಿ ಮಾಡುತ್ತಿದ್ದಾಗ ಅವನು ನನ್ನನ್ನು ಆದರಿಸಿದ. ದಾರಿಹೋಕನಂತೆ ಹೋದ ನನಗೆ ರಾಜ್ಯವನ್ನು ಕೊಟ್ಟ. ಅರೆಕೊರೆಯಿಲ್ಲದ ಅಖಂಡ ಸ್ನೇಹವನ್ನು ಕೊಟ್ಟ. ಏನು ಮಾಡಿದರೆ ತಾನೆ ಅವನ ಉಪಕಾರ ತೀರಿಸಬಲ್ಲೆ? ಅವನು ಈಗ ನನ್ನನ್ನೇ ನೆಚ್ಚಿಕೊಂಡು ಪಾಂಡವರ ಜೊತೆಯಲ್ಲಿ ಯುದ್ಧ ಹೂಡಿದ್ದಾನೆ. ಪಾಂಡವರ ಕಡೆ ಸೇರಿ ಅವನಿಗೆ ಮೋಸ ಮಾಡಲೆ? ಇಲ್ಲ ಕೃಷ್ಣ. ದುರ್ಯೋಧನ ನನಗೆ ಅನ್ನ ಕೊಟ್ಟ ಧಣಿ. ಅವನೇ ನನ್ನ ಸ್ವಾಮಿ, ಸರ್ವಸ್ವ. ಅವನ ಪರ ನಿಂತು ಪಾಂಡವರೊಡನೆ ಹೋರಾಡುತ್ತೇನೆ. ಗೆದ್ದರೆ ಸ್ವಾಮಿಕಾರ್ಯ ಸಾಧಿಸಿದ ತೃಪ್ತಿ, ಸತ್ತರೆ ಕೀರ್ತಿ. ಇದೇ ನನ್ನ ನಿಶ್ಚಯ. ನೀನು ಇನ್ನು ಹೊರಡು ಎಂದು.

 

(ಚಿತ್ರ ೩)
ಗೆದ್ದರೆ ಸ್ವಾಮಿಕಾರ್ಯ ಸಾಧಿಸಿದ ತೃಪ್ತಿ, ಸತ್ತರೆ ಕೀರ್ತಿ.

 

ಕರ್ಣನ ಮಾತು ಕೇಳಿ ಕೃಷ್ಣ ಮನಸ್ಸಿನಲ್ಲೇ ತುಂಬ ಮೆಚ್ಚಿಕೊಂಡ. ‘ಭಲೇ ಕರ್ಣ! ಸ್ವಾಮಿನಿಷ್ಠ ಎಂದರೆ ನೀನೇ’ ಎಂದುಕೊಂಡ. ಆದರೆ ಹೊರಗೆ ಅದನ್ನು ತೋರಿಸಿಕೊಳ್ಳದೆ ಹೊರಟುಹೋದ.

ಐದು ಮಕ್ಕಳ ತಾಯಿಯಾಗಿರು

ಮಾರನೆಯ ದಿನ ಕರ್ಣ ನದಿಯ ದಡದಲ್ಲಿ ಸೂರ್ಯನಿಗೆ ಅರ್ಘ್ಯ ಕೊಡುತ್ತಿದ್ದ. ಆಗ ಕುಂತಿ ಅಲ್ಲಿಗೆ ಬಂದಳು. ಕೃಷ್ಣನೇ ಅವಳನ್ನು ಅಲ್ಲಿಗೆ ಕಳಿಸಿದ್ದ. ಪಾಂಡವರನ್ನು ಕೊಲ್ಲುವುದಿಲ್ಲ ಎಂದು ಕರ್ಣನಿಂದ ಮಾತು ತೆಗೆದುಕೊಳ್ಳುವಂತೆ ಅವಳಿಗೆ ತಿಳಿಸಿದ್ದ. ಕುಂತಿಯನ್ನು ಕಂಡ ಕೂಡಲೇ ಕರ್ಣ ಅವಳ ಪಾದಕ್ಕೆ ನಮಸ್ಕಾರ ಮಾಡಿದ. ಕುಂತಿ ಹೇಳಿದಳು: “ಮಗೂ, ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗ. ಪಾಂಡವರು ನಿನ್ನ ತಮ್ಮಂದಿರು. ಇದು ನಿನಗೆ ತಿಳಿಯದು. ತಮ್ಮಂದಿರನ್ನೇ ಶತ್ರುಗಳೆಂದು ಭಾವಿಸಿದ್ದೇಯೆ. ಅವರನ್ನು ಕೊಲ್ಲುವುದಾಗಿ ಸಂಕಲ್ಪ ಮಾಡಿದ್ದೀಯೆ. ಹಾಗೆ ಮಾಡಬೇಡ. ಕೌರವರ ಪಕ್ಷ ಬಿಡು. ನಿನ್ನ ತಮ್ಮಂದಿರ ಜೊತೆ ಸೇರಿಕೊ. ನಾನು ನಿನ್ನ ತಾಯಿಯಲ್ಲವೆ? ನನ್ನ ಮಾತನ್ನು ಕೇಳು ಕರ್ಣ. ತಂದೆತಾಯಿಗಳ ಮಾತು ನಡೆಸುವುದು ಮಕ್ಕಳ ಧರ್ಮವಲ್ಲವೆ?”

ಕರ್ಣ ಹೇಳಿದ: “ಅಮ್ಮ, ನೀನು ನನ್ನ ತಾಯಿ, ನಿಜ. ಆದರೆ ಈವರೆಗೂ ಅದು ಜನಕ್ಕೆ ತಿಳಿಯದು. ಇಷ್ಟು ದಿನ ನನ್ನನ್ನು ಸಾಕಿ ಸಲಹಿದವರು ಸಹ ನನ್ನ ತಂದೆತಾಯಿಗಳು. ಅವರನ್ನು ನಾನು ಹೇಗೆ ಬಿಡಲಿ? ಇದು ಯುದ್ಧದ ಸಮಯ. ದುರ್ಯೋದನನ ಉಪ್ಪು ಉಂಡವರು ಅವನಿಗಾಗಿ ಪ್ರಾಣದ ಹಂಗು ತೊರೆದು ಹೋರಾಡಬೇಕಾದ ಕಾಲ. ಕಳೆದ ಹದಿಮೂರು ವರ್ಷ ನಾನು ಅವನ ಜೊತೆ ಎಲ್ಲ ರಾಜಭೋಗ ಅನುಭವಿಸಿದ್ದೇನೆ. ಅದೆಲ್ಲ ಅವನ ಸ್ನೇಹದಿಂದ ನನಗೆ ದೊರೆತದ್ದು. ಆಗ ಅಣ್ಣತಂಮ್ಮಂದಿರ ವಿಷಯವನ್ನೇ ಎತ್ತದವನು ಈಗ ಯುದ್ಧದ ಸಮಯದಲ್ಲಿ ಅದನ್ನೆಲ್ಲ ಹೇಳಿ ಪಾಂಡವರ ಕಡೆ ಸೇರಿಕೊಂಡರೆ ಲೋಕ ನನ್ನನ್ನು ಸ್ವಾಮೀದ್ರೋಹಿ ಎಂದು ಕರೆದೀತು. ಆದ್ದರಿಂದ ನಾನು ಪಾಂಡವರ ಪಕ್ಷಕ್ಕೆ ಬರುವುದು ಸಾಧ್ಯವೇ ಇಲ್ಲ. ಆದರೆ ಅಮ್ಮ, ನೀನು ಹೇಳಿದ ಒಂದು ಮಾತನ್ನು ನಡೆಸುತ್ತೇನೆ. ಪಾಂಡವರನ್ನು ಕೊಲ್ಲಬೇಡ ಎಂದು ನೀನು ಹೇಳಿದೆ. ಆಗಲಿ; ಅರ್ಜುನ ಒಬ್ಬನನ್ನು ಬಿಟ್ಟು ಉಳಿದ ನಾಲ್ಕು ಜನ ಪಾಂಡವರನ್ನು ನಾನು ಕೊಲ್ಲುವುದಿಲ್ಲ. ಅರ್ಜುನ ನನ್ನನ್ನು ಕೊಂದರೂ ಸರಿಯೆ, ನಿನಗೆ ಐದು ಜನ ಮಕ್ಕಳಂತೂ ಉಳಿದೇ ಉಳಿಯುತ್ತೇವೆ. ಇನ್ನು ನೀನು ಹೋಗಿ ಬಾ.” ಹೀಗೆ ಹೇಳಿ ಕರ್ಣ ತನ್ನ ತಾಯಿಗೆ ನಮಸ್ಕಾರ ಮಾಡಿ ಅವಳನ್ನು ಕಳಿಸಿಕೊಟ್ಟ.

ಈಗ ಯುದ್ಧ ಮಾಡಲೊಲ್ಲೆ

ಯುದ್ಧಕ್ಕಾಗಿ ಕೌರವರ ಮತ್ತು ಪಾಂಡವರು ಸೈನ್ಯಗಳು ಸಿದ್ಧವಾದವು. ಕೌರವರ ಸೈನ್ಯಕ್ಕೆ ಭೀಷ್ಮರು ಸೇನಾಧಿಪತಿಗಳಾದರು. ಅವರು ತಮ್ಮ ಕಡೆ ಮತ್ತು ಪಾಂಡವರ ಕಡೆ ಯಾರುಯಾರು ಅತಿರಥರು, ಮಹಾರಥರು ಎನ್ನುವುದನ್ನು ಹೇಳುತ್ತಿದ್ದರು. ಕರ್ಣನ ವಿಷಯ ಬಂದಾಗ ಅವನನ್ನು ನಿಂದಿಸಿ ಮಾತನಾಡಿದರು. “ಈ ಕರ್ಣ ಅತಿರಥನಲ್ಲ: ಪೂರ್ಣರಥನೂ ಅಲ್ಲ. ವಿದ್ಯೆ ಕಲಿಸಿದ ಗುರುವೇ ಇವನನ್ನು ಶಪಿಸಿದ್ದಾರೆ. ಅಲ್ಲದೆ ಹುಟ್ಟಿದಂದಿನಿಂದ ಇದ್ದ ಸಹಜವಾದ ಕವಚ ಕುಂಡಲಗಳನ್ನು ಬೇರೆಯವರಿಗೆ ದಾನ ಮಾಡಿಬಿಟ್ಟಿದ್ದಾನೆ. ಇದರಿಂದ ಇವನ ಶಕ್ತಿ ಕುಂದಿದೆ. ಇವನು ಅರ್ಧರಥ ಅಷ್ಟೇ” ಎಂದರು. ಅಲ್ಲೇ ಇದ್ದ ದ್ರೋಣಾಚಾರ್ಯರೂ,
“ಹೌದು, ಹೌದು, ಇವನಿಗೆ ಗರ್ವ ಹೆಚ್ಚು. ಇವನು ಅರ್ಧರಥನೇ ನಿಜ” ಎಂದರು.

ಇದನ್ನು ಕೇಳಿ ಕರ್ಣನಿಗೆ ತುಂಬ ನೋವಾತಯಿತು. ವಿಪರೀತ ಸಿಟ್ಟು ಬಂತು. “ಭೀಷ್ಮರೆ, ನಿಮಗೆ ನನ್ನನ್ನು ಕಂಡರೆ ಏಕೆ ಇಷ್ಟು ದ್ವೇಷ? ನಾನು ನಿರಪರಾಧಿ. ಆದರೂ ಸದಾ ನನ್ನನ್ನು ಚುಚ್ಚು ಮಾತಿನಿಂದ ತಿವಿಯುತ್ತೀರಿ. ನೀವು ಸೇನಾಧಿಪತಿಗಳು. ಸೈನ್ಯದಲ್ಲಿಯೇ ಜಗಳ ತಂದು ಹಾಕುತ್ತಾರೆಯೇ? ಸೇನಾಧಿಪತಿಯ ಜವಾಬ್ದಾರಿ ನಿಮಗೆ ಗೊತ್ತಿದೆ ಎಂದು ಯಾರು ತಾನೇ ಹೇಳಿಯಾರು? ನಿಮಗೆ ತುಂಬ ವಯಸ್ಸಾಗಿ ಹೋಗಿದೆ; ಅರಳು ಮರಳು. ಅದಕ್ಕೇ ಹೀಗೆಲ್ಲ ಮಾತನಾಡುತ್ತೀರಿ” ಎಂದನು. ದುರ್ಯೋಧನನ ಕಡೆಗೆ ತಿರುಗಿ, “ಮಿತ್ರ, ಇವರು ತಮ್ಮನ್ನು ಬಿಟ್ಟರೆ ಜಗತ್ತಿನಲ್ಲಿ ಬೇರೆ ವೀರರಿಲ್ಲ ಎಂದು ತಿಳಿದಿದ್ದಾರೆ. ನಾನು ಒಬ್ಬನೇ ಪಾಂಡವರನ್ನು ಸೈನ್ಯ ಸಮೇತ ನಾಶಮಾಡಬಲ್ಲೆ. ಆದರೆ ಇವರು ನನ್ನನ್ನು ಹೀಗೆಲ್ಲ ಧಿಕ್ಕರಿಸುವಾಗ ನಾನೇಕೆ ಯುದ್ಧ ಮಾಡಲಿ? ಶತ್ರುಗಳನ್ನು ನಾನೇ ಕೊಂದರೂ ಅದರ ಕೀರ್ತಿ ಈ ಸೇನಾಧಿಪತಿಗೇ ಹೋಗುತ್ತದೆ. ಅದು ನನಗೆ ಇಷ್ಟವಿಲ್ಲ. ಇವರು ಹೇಗೂ ಯುದ್ಧದಲ್ಲಿ ಸೋಲುತ್ತಾರೆ. ಆಮೇಲೆ ನಾನು ಯುದ್ಧಮಾಡಿ ಶತ್ರುಗಳನ್ನು ಕೊಲ್ಲುತ್ತೇನೆ” ಎಂದು ಹೇಳಿ ಕರ್ಣ ಯುದ್ಧವನ್ನು ತ್ಯಜಿಸಿ ಹೊರಟುಹೋದನು.

ಪಿತಾಮಹ ಕ್ಷಮಿಸಿ

ಯುದ್ಧ ಶುರುವಾಯಿತು. ಭೀಷ್ಮರು ಸೇನಾಧಿಪತಿಯಾಗಿ ಹತ್ತು ದಿನ ಪಾಂಡವರ ಸೈನ್ಯದ ಜೊತೆ ಯುದ್ಧ ಮಾಡಿದರು. ಸಹಸ್ರಾರು ಜನ ಯೋಧರನ್ನು ಕೊಂದರು. ಮಹಾಬಲಶಾಲಿಯಾದ ಅರ್ಜುನನಿಗೆ ಸಹ ಅವರನ್ನು ತಡೆಯುವುದು ಕಷ್ಟವಾಯಿತು. ಹೀಗೆ ಹತ್ತು ದಿನ ಯುದ್ಧ ಮಾಡಿದ ಮೇಲೆ ಮೈಯೆಲ್ಲ ಬಾಣ ನೆಟ್ಟು ಭೀಷ್ಮರು ಕೆಳಗುರುಳಿದರು.

ಭೀಷ್ಮರು ತನ್ನನ್ನು ನಿಂದಿಸಿದ್ದರಿಂದ ಕರ್ಣನಿಗೆ ಅವರ ಮೇಲೆ ಕೋಪ ಇತ್ತು; ನಿಜ. ಆದರೆ ಅವರ ಪರಾಕ್ರಮ ಕಂಡು ಅದೆಲ್ಲ ಆರಿಹೋಯಿತು. ಅವನ ಸ್ವಭಾವವೇ ಅಂಥದು. ತನ್ನ ಶತ್ರುಗಳೇ ಆದರೂ ಅವರಲ್ಲಿ ಒಳ್ಳೆಯ ಗುಣ ಕಂಡರೆ ಮೆಚ್ಚಿಕೊಳ್ಳುತ್ತಿದ್ದ, ಗೌರವಿಸುತ್ತಿದ್ದ. ಭೀಷ್ಮರ ಸಾಹಸ ಕಂಡು ಅವನಿಗೆ ಅವರಲ್ಲಿ ಗೌರವ ಹುಟ್ಟಿತು. ಬಾಣದ ಮಂಚದಲ್ಲಿ ಒರಗಿದ್ದ ಅವರನ್ನು ನೋಡಲು ಹೋದ. “ಭೀಷ್ಮರೆ, ನಾನು ಕರ್ಣ, ನಿಮ್ಮನ್ನು ನೋಡಿ ಗೌರವ ಸಲ್ಲಿಸಲು ಬಂದಿದ್ದೇನೆ” ಎಂದು ಹೇಳಿ ಅವರ ಕಾಲಿಗೆ ನಮಸ್ಕರಿಸಿದ.

ಭೀಷ್ಮರ ಕಣ್ಣಲ್ಲಿ ಪ್ರೀತಿಯಿಂದ ನೀರು ಚಿಮ್ಮಿತು. ತಂದೆ ಮಗನನ್ನು ತಬ್ಬಿಕೊಳ್ಳುವಂತೆ ಕರ್ಣನನ್ನು ತಬ್ಬಿಕೊಂಡರು. “ಕರ್ಣ, ನನಗೆ ನಿನ್ನಲ್ಲಿ ದ್ವೇಷವೆಂದು ಭಾವಿಸಿರುವೆ ಅಲ್ಲವೆ? ಇಲ್ಲ ಮಗೂ, ನನಗೆ ನಿನ್ನಲ್ಲಿ ಖಂಡಿತ ವೈರ ಇಲ್ಲ. ನೀನು ಮಹಾಶೂರ ಎಂದು ನನಗೆ ಚೆನ್ನಾಗಿ ಗೊತ್ತು. ನೀನು ದೇವತೆಯಂಥವನು. ಶೌರ್ಯದಲ್ಲಿ, ದಾನದಲ್ಲಿ ನಿನಗೆ ಮೀರಿದ ಮನುಷ್ಯರೇ ಇಲ್ಲ. ಯುದ್ಧವಿದ್ಯೆಯಲ್ಲಿ ನೀನು ಕೃಷ್ಣಾರ್ಜುನರಿಗೆ ಸಮನಾದವನು. ಆದರೆ ನಿನಗೆ ನಿನ್ನ ಶಕ್ತಿಯ ಬಗ್ಗೆ ಬಹಳ ಹೆಮ್ಮೆ. ಅದನ್ನು ಒಂದು ಮಿತಿಯಲ್ಲಿಡಬೇಕೆಂದು ನಾನು ನಿನಗೆ ಆಗಾಗ ಕಠಿಣವಾದ ಮಾತನಾಡುತ್ತಿದ್ದೆ ಅಷ್ಟೆ” ಎಂದರು.

ಇದನ್ನು ಕೇಳಿ ಕರ್ಣನಿಗೂ ವಿಶ್ವಾಸದಿಂದ ಕಂಠ ಕಟ್ಟಿಬಂತು. “ಪಿತಾಮಹ, ಕೋಪದಿಂದ ಅಥವಾ ಬುದ್ಧಿ ಸಾಲದೆ ನಾನು ನಿಮಗೆ ಕೆಟ್ಟ ಮಾತನಾಡಿದ್ದರೆ ಅದನ್ನು ಕ್ಷಮಿಸಿ ನನ್ನನ್ನು ಆಶೀರ್ವದಿಸಿ” ಎಂದನು. ಭೀಷ್ಮರು ಅವನು ಕುಂತಿಯ ಮಗ ಎನ್ನುವುದನ್ನು ತಿಳಿಸಿ, “ಕರ್ಣ, ಕೌರವರು ಯುದ್ಧದಲ್ಲಿ ಗೆಲ್ಲುವುದು ಸಾಧ್ಯವಿಲ್ಲ. ನೀನು ಪಾಂಡವರನ್ನು ಸೇರಿಕೊ. ಕೌರವನಿಗೆ ಯುದ್ಧ ನಿಲ್ಲಿಸಲು ಹೇಳು. ಎಲ್ಲರೂ ಒಟ್ಟಾಗಿ ಬಾಳಿ” ಎಂದರು.

ಕರ್ಣ, “ನಾನು ಪಾಂಡವರನ್ನು ಸೇರುವುದು ಸಾಧ್ಯವಿಲ್ಲ. ಸೋಲೋ ಗೆಲುವೋ ದೈವದ ಇಚ್ಛೆ ಇದ್ದಂತಾಗಲಿ. ನನ್ನನ್ನು ನೆಚ್ಚಿರುವ ಕೌರವನಿಗಾಗಿ ಕಡೆತನಕ ಹೋರಾಡುತ್ತೇನೆ” ಎಂದು ಹೇಳಿ ಭೀಷ್ಮರಿಗೆ ನಮಸ್ಕರಿಸಿ ಹಿಂತಿರುಗಿದನು.

ಭೀಷ್ಮರ ಅನಂತರ ದ್ರೋಣರು ಕೌರವ ಸೇನೆಗೆ ಸೇನಾಧಿಪತಿಯಾದರು. ಅವರು ಸೇನಾನಿಯಾದ ನಾಲ್ಕನೆಯ ದಿನ ಪಂಜು ಬೆಳಕಿನಲ್ಲಿ ರಾತ್ರಿಯೂ ಯುದ್ಧ ನಡೆಯಿತು. ಭೀಮನ ಮಗನಾದ ಘಟೋತ್ಕಚ ಆ ರಾತ್ರಿ ಭಯಂಕರವಾದ ಯದ್ಧಮಾಡಿದ. ಅವನು ರಾಕ್ಷಸಿಯಾದ ಹಿಡಿಂಬೆಯ ಮಗ. ಬಹಳ ಶೂರ. ಜೊತೆಗೆ ಮಾಯಾವಿ ಬೇರೆ. ಕೌರವ ಸೈನ್ಯ ಅವನ ಮಹಾಯುದ್ಧಕ್ಕೆ ತತ್ತರಿಸಿ ಹೋಯಿತು. ಇದನ್ನು ಕಂಡು ಕರ್ಣ ಅವನನ್ನು ಎದರಿಸಿದ. ಮುಂದೆ ಅರ್ಜುನನನ್ನು ಕೊಲ್ಲುವುದಕ್ಕೆಂದು ಇಟ್ಟುಕೊಂಡಿದ್ದ ವೈಜಯಂತಿ ಎಂಬ ಅಸ್ತ್ರವನ್ನು ಪ್ರಯೋಗಿಸಿ ಘಟೋತ್ಕಚನನ್ನು ಸೀಳಿ ಹಾಕಿದ. ಕೌರವ ಸೈನ್ಯಕ್ಕೆ ಕರ್ಣನ ಸಾಹಸ ಕಂಡು ಅಪಾರ ಸಂತೋಷವಾಯಿತು. ಕರ್ಣ ವೈಜಯಂತಿ ಅಸ್ತ್ರವನ್ನು ಪ್ರಯೋಗಿಸಿ ಆಯಿತು ಎಂದು ಕೇಳಿ ಕೃಷ್ಣಾರ್ಜುನರಿಗೂ ಎಷ್ಟೋ ನೆಮ್ಮದಿಯಾಯಿತು.

ಸೇನಾಧಿಪತಿ ಕರ್ಣ

ಐದು ದಿನ ಯುದ್ಧಮಾಡಿ ದ್ರೋಣರು ಮಡಿದರು. ಅನಂತರ ಕರ್ಣ ಸೇನಾಧಿಪತಿಯಾದ. ಮೊದಲನೆ ದಿನವೇ ಅವನು ಪಾಂಡವರಲ್ಲಿ ಒಬ್ಬನಾದ ನಕುಲನನ್ನು ಕಾಳಗದಲ್ಲಿ ಹಣ್ಣು ಹಣ್ಣು ಮಾಡಿಬಿಟ್ಟ. ನಕುಲನನ್ನು ಕೊಂದೇ ಬಿಡಬಹುದಾಗಿತ್ತು. ಆದರೆ ಕುಂತಿಗೆ ಕೊಟ್ಟ ಮಾತು ನೆನಪಾಗಿ ಅವನನ್ನು ಬಿಟ್ಟುಬಿಟ್ಟ.

ಕರ್ಣನಿಗೆ ಅರ್ಜುನನನ್ನು ಕೊಲ್ಲುವ ಆತುರ. ಎಲ್ಲದರಲ್ಲೂ ಅವನು ಅರ್ಜುನನನ್ನು ಮೀರಿಸಿದ್ದ. ಆದರೆ ಒಂದು ದೊಡ್ಡ ಕೊರತೆ ಇತ್ತು. ಅರ್ಜುನನಿಗೆ ಇದ್ದ ಕೃಷ್ಣನಂಥ ಬುದ್ಧಿವಂತ ಸಾರಥಿ ಕರ್ಣನಿಗೆ ಇರಲಿಲ್ಲ. ಕರ್ಣ ದುರ್ಯೋಧನನ ಮೂಲಕ ಹೇಳಿಸಿ ಶೂರನಾದ ಶಲ್ಯನನ್ನು ತನ್ನ ಸಾರಥಿಯಾಗಲು ಒಪ್ಪಿಸಿದ. ಅದರಿಂದ ಕರ್ಣನಿಗೆ ಅನ್ಯಾಯವೇ ಆಯಿತು. ಶಲ್ಯ ಪಾಂಡವರ ಸೋದರಮಾವ. ಕೌರವರ ಸೈನ್ಯದಲ್ಲಿ ಇದ್ದರೂ ಅವನಿಗೆ ಪಾಂಡವರ ಮೇಲೆ ಪ್ರೀತಿಯಿತ್ತು. ‘ನೀನು ಕರ್ಣನಿಗೆ ಸಾರಥಿಯಾದರೆ ಅವನ ಉತ್ಸಾಹ ಕುಗ್ಗುವಂತೆ ಮಾತನಾಡು’ ಎಂದು ಪಾಂಡವರು ಶಲ್ಯನಿಗೆ ಗುಟ್ಟಾಗಿ ಹೇಳಿದ್ದರು.

ಶಲ್ಯ ಹಾಗೆಯೇ ಮಾಡಿದ. ಕರ್ಣನ ಎದುರು ಅರ್ಜುನನನ್ನು ತುಂಬ ಹೊಗಳಲು ತೊಡಗಿದ. ಅರ್ಜುನ ನಿನಗಿಂತ ಶೂರ ಎನ್ನುವಂತೆ ಮಾತನಾಡುತ್ತಿದ್ದ. ಇದರಿಂದ ಕರ್ಣನ ಉತ್ಸಾಹ ಕುಗ್ಗುತ್ತಿತ್ತು. ಪಾಪ! ಅವನ ದುರದೃಷ್ಟ. ಸಹಾಯ ಮಾಡಬೇಕಾದ ಸಾರಥಿಯೇ ಸೋಲು ಹಾರೈಸುತಿದ್ದ. ಅಲ್ಲದೆ ಆ ದಿನವೇ ಅವನು ಯುದ್ಧದಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡ.

ಒಡೆಯನ ಸೇವೆಯಲ್ಲಿ ಪ್ರಾಣಾರ್ಪಣೆ

ಆದರೆ ಕರ್ಣ ಎದೆಗುಂದಲಿಲ್ಲ. ಆ ದಿನ ಅವನಿಗೂ ಅರ್ಜುನನಿಗೂ ಘೊರ ಕಾಳಗ ನಡೆಯಿತು. ಕರ್ಣ ಎರಡೂ ಸೈನ್ಯ ಭಲೇ ಎನ್ನುವಂತೆ ಯುದ್ಧಮಾಡಿದ. ಕೃಷ್ಣ, ಭೀಮ ಎಲ್ಲರೂ “ಇದೇನು ಅರ್ಜುನ, ಹೀಗೆ ಸಪ್ಪೆ ಯುದ್ಧ ಮಾಡುತ್ತಿದ್ದೀಯೆ? ಕರ್ಣ ನಿನ್ನ ಎಲ್ಲ ಅಸ್ತ್ರಗಳನ್ನು ಹೊಡೆದುಹಾಕುತ್ತಿದ್ದಾನೆ. ಇನ್ನಷ್ಟು ಜೋರಾಗಿ ಯದ್ಧ ಮಾಡು” ಎಂದು ಅರ್ಜುನನನ್ನು ಹುರಿದುಂಬಿಸುತ್ತಿದ್ದರು. ಏನು ಮಾಡಿದರೂ ತನ್ನ ಕೈ ಸಾಗದಿರಲು ಅರ್ಜುನ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದ. ಅದನ್ನು ನೋಡಿ ಕೌರವ ಸೈನ್ಯವೆಲ್ಲ ಹಾಹಾಕಾರ ಮಾಡಿ ಓಡಲು ಶುರುಮಾಡಿತು. ಆದರೆ ಕರ್ಣ ಸ್ವಲ್ಪವೂ ಚಲಿಸಲಿಲ್ಲ. ನಗುನಗುತ್ತ ದಿವ್ಯಾಸ್ತ್ರ ಉಪಯೋಗಿಸಿ ಅದನ್ನು ತಡೆದುಬಿಟ್ಟ. ಅಷ್ಟಕ್ಕೇ ನಿಲ್ಲಿಸದೆ ಅರ್ಜುನನಿಗೆಂದು ಕಾದಿರಿಸಿದ್ದ ಸರ್ಪಾಸ್ತ್ರವನ್ನು ಧನುಸ್ಸಿಗೆ ಹೂಡಿದ. ಅದರ ತೇಜಸ್ಸಿನಿಂದ ಎಲ್ಲೆಲ್ಲೂ ಬೆಳಕಾಯಿತು. ಉರಿಯುವ ಬೆಂಕಿಯಂತೆ ಧಾವಿಸಿದ ಅಸ್ತ್ರ ಅರ್ಜುನನನ್ನು ಕೊಂದೇಬಿಡುತ್ತಿತ್ತು. ಆದರೆ ಕೃಷ್ಣ ಸಮಯಕ್ಕೆ ಸರಿಯಾಗಿ ಅರ್ಜುನನ ರಥವನ್ನು ಕಾಲಿನಿಂದ ಒತ್ತಿ ಐದು ಅಂಗುಲ ಕೆಳಕ್ಕೆ ತಳ್ಳಿದ. ಅರ್ಜುನನ ತಲೆಗೆ ಬೀಳಬೇಕಾಗಿದ್ದ ಸರ್ಪಾಸ್ತ್ರ ಅವನ ಕಿರೀಟಕ್ಕೆ ಬಿತ್ತು. ಕಿರೀಟ ಕೆಳಕ್ಕೆ ಉರುಳಿಹೋಯಿತು.

ಹೀಗೆ ಸರ್ಪಾಸ್ತ್ರ ವ್ಯರ್ಥವಾಯಿತು. ಕರ್ಣ ಮಹಾಸ್ತ್ರವನ್ನು ಪ್ರಯೋಗಿಸಲು ನೋಡಿದ. ಆದರೆ ಪರಶುರಾಮ ಕೊಟ್ಟಿದ್ದ ಶಾಪದಿಂದ ಎಷ್ಟು ನೆನಪಿಸಿಕೊಂಡರೂ ಅದು ಮರೆತೇ ಹೋಯಿತು. ಸಾಲದ್ದಕ್ಕೆ ಅವನ ರಥದ ಎಡಚಕ್ರ ನೆಲದಲ್ಲಿ ಹೂತುಹೋಯಿತು. ರಥ ಹೊರಳಿತು. ಕುದುರೆಗಳು ಮುಗ್ಗರಿಸಿದವು. ಕರ್ಣನ ದುರದೃಷ್ಟಕ್ಕೆ ಕೊನೆಯೇ ಇಲ್ಲ ಎನ್ನುವಂತೆ ಎಲ್ಲ ಆಪತ್ತುಗಳು ಒಟ್ಟಿಗೆ ಕವಿದವು.

 

(ಚಿತ್ರ ೨)
ಕರ್ಣ ಎಷ್ಟು ಪ್ರಯತ್ನ ಪಟ್ಟರೂ ಚಕ್ರ ಏಳಲೇ ಇಲ್ಲ

 

ಕರ್ಣ ಅರ್ಜುನನನ್ನು ಕುರಿತು, ‘ಅಯ್ಯಾ ಅರ್ಜುನ, ನನ್ನ ರಥದ ಚಕ್ರ ಹೂತುಹೋಗಿದೆ. ಒಂದು ಕ್ಷಣ ಯುದ್ಧ ನಿಲ್ಲಿಸು. ಅದನ್ನು ಎತ್ತಿ ರಥ ಸರಿಮಾಡಿಕೊಳ್ಳುತ್ತೇನೆ. ಆನಂತರ ಯುದ್ಧ ಮಾಡೋಣ. ನಾನು ರಥದಿಂದ ಇಳಿದಿರುವಾಗ, ಕೈಯಲ್ಲಿ ಬಿಲ್ಲು ಇಲ್ಲದಿರುವಾಗ ನನ್ನ ಮೇಲೆ ಬಾಣ ಬಿಡಬೇಡ. ವೀರನಾದ ನಿನಗೆ ಇದು ಸರಿಯಲ್ಲ” ಎಂದನು. ಅರ್ಜುನ ಅದಕ್ಕೆ ಒಪ್ಪುತ್ತಿದ್ದನೇನೋ! ಆದರೆ ಕೃಷ್ಣ ಅಡ್ಡಿ ಮಾಡಿದ. “ಅರ್ಜುನ, ನಿನಗೆ ಇದೇ ಸಮಯ. ಈಗ ಹಿಂದೆಮುಂದೆ ನೋಡಿದರೆ ಆಮೇಲೆ ಇವನನ್ನು ಕೊಲ್ಲಲಾರೆ. ದಾಕ್ಷಿಣ್ಯ ಪಡದೆ ಹೊಡಿ” ಎಂದ. ಕರ್ಣ ರಥದಿಂದ ಕೆಳಕ್ಕೆ ಹಾರಿ ತನ್ನ ಬಲವನ್ನೆಲ್ಲ ಬಿಟ್ಟು ಚಕ್ರವನ್ನು ಎತ್ತಲು ಪ್ರಯತ್ನಿಸಿದ. ಅವನ ದುರ್ವಿಧಿ. ಅಂಥ ಬಲಶಾಲಿ ಎಷ್ಟು ಪ್ರಯತ್ನ ಪಟ್ಟರೂ ಅದು ಏಳಲೇ ಇಲ್ಲ. ಅಷ್ಟು ಹೊತ್ತಿಗೆ ಅರ್ಜುನ ಕೃಷ್ಣ ಹೇಳಿದಂತೆ ಅಂಜಲಿಕವೆಂಬ ಬಾಣವನ್ನು ಕರ್ಣನ ಮೇಲೆ ಪ್ರಯೋಗಿಸಿದ. ಆಕಾಶದಿಂದ ಸೂರ್ಯಮಂಡಲ ಕೆಳಕ್ಕೆ ಉರುಳಿತೋ ಎಂಬಂತೆ ತೇಜಸ್ವಿಯಾದ ಕರ್ಣನ ಶಿರಸ್ಸು ಕೆಳಗುರುಳಿತು. ಹೀಗೆ ಸ್ನೇಹಿತನೂ ಸ್ವಾಮಿಯೂ ಆದ ದುರ್ಯೋಧನನಿಗಾಗಿ ಕರ್ಣ ತನ್ನ ಪ್ರಾಣವನ್ನೇ ಧಾರೆಯೆರೆದ; ಸತ್ಯನಿಷ್ಠೆ, ಸ್ವಾಮಿನಿಷ್ಠೆಗಳಿಗೆ ಒಂದು ಆದರ್ಶ ಎನಿಸಿಕೊಂಡ.