ಒಂದು ಪಟ್ಟಣವನ್ನು ಅವಿವೇಕಿ ರಾಜ ಆಳುತ್ತಿದ್ದ. ಅವಿವೇಕಿ ರಾಜನಿಗೆ ಒಬ್ಬ ಅಜ್ಞಾನಿ ಮಂತ್ರಿ ಇದ್ದ. ಆದ್ದರಿಂದ ಆ ಪಟ್ಟಣದಲ್ಲಿ ಎಲ್ಲದಕ್ಕೂ ಒಂದೇ ದರ; ಒಂದೇ ಮಾತು. ಯಾವುದೇ ಅಂಗಡಿಯಲ್ಲಿ ಏನೇ ಪದಾರ್ಥ ಕೊಂಡರೂ ಕಾಸಿಗೊಂದು ಸೇರು ಸಿಗುತ್ತಿತ್ತು. ಕಸ್ತೂರಿಯೂ ಕಾಸಿಗೊಂದು ಸೇರು. ಅಕ್ಕಿಯೂ ಕಾಸಿಗೊಂದು ಸೇರು.

ಹೀಗಿರಲಾಗಿ ಆ ಪಟ್ಟಣಕ್ಕೆ ಒಬ್ಬ ಸನ್ಯಾಸಿ ಶಿಷ್ಯನೊಂದಿಗೆ ಬಂದ. ಧರ್ಮಶಾಲೆಯಲ್ಲಿ ಅನುಕೂಲವಿತ್ತು. ಅಲ್ಲೇ ಇಳಿದುಕೊಂಡರು. ಸನ್ಯಾಸಿ ತನ್ನ ಶಿಷ್ಯನಿಗೆ ಒಂದು ರೂಪಾಯಿ ಕೊಟ್ಟು “ಅಡಿಗೆಯ ಪದಾರ್ಥ ಕೊಂಡು ತಾ’’ ಎಂದು ಕಳಿಸಿದ. ಒಂದು ರೂಪಾಯಿಗೆ ಅದೇನು ಅಡಿಗೆಯ ಪದಾರ್ಥ ಬಂದಾವೆಂದು ಅನುಮಾನದಿಂದಲೇ ಶಿಷ್ಯ ಪೇಟೆಗೆ ಹೋದ.

ಆದರೆ ಅಂಗಡಿಯಲ್ಲಿ ದರ ಕೇಳಿದರೆ ಕಾಸಿಗೊಂದು ಸೇರು! ಈ ಅಂಗಡಿಯವನಿಗೆ ಹುಚ್ಚಿರಬೇಕೆಂದು ಇನ್ನೊಂದು ಅಂಗಡಿಯಲ್ಲಿ ವಿಚಾರಿಸಿದ. ಅವನೂ ಹಾಗೇ ಹೇಳಿದ. ಇವನು ಚೇಷ್ಟೆ ಮಾಡುತ್ತಿರಬೇಕೆಂದು ಮೊತ್ತಂದು ಅಂಗಡಿಯಲ್ಲಿ ವಿಚಾರಿಸಿದ. ಅಲ್ಲೂ ಕಾಸಿಗೊಂದು ಸೇರು! ಈಗ ಶಿಷ್ಯನಿಗೆ ನಂಬಿಕೆಯಾಯಿತು. ಆನಂದವೂ ಆಯಿತು. ಈ ಊರನ್ನು ಯಾವ ಮಹಾರಾಯ ಆಳುತ್ತಿರುವನೋ ಅವನ ಹೊಟ್ಟೆ ತಣ್ಣಗಿರಲಿ ಎಂದು ಹಾರೈಸಿದ. ಕಾಸಿಗೊಂದು ಸೇರಿನಂತೆ ಅಕ್ಕಿ, ಬೇಳೆ, ತುಪ್ಪ, ಸಕ್ಕರೆ, ರವೆ, ಬೆಲ್ಲ, ತರಕಾರಿ ಕೊಂಡು ಮೂಟೆ ಕಟ್ಟಿಕೊಂಡು ಗುರುವಿನ ಹತ್ತಿರ ಹೋದ. “ಒಂದೇ ರೂಪಾಯಿಗೆ ಇಷ್ಟೊಂದು ಪದಾರ್ಥ ಹೇಗೆ ತಂದೆ?’’ ಎಂದು ಸನ್ಯಾಸಿ ಕೇಳಿದ. “ಇಲ್ಲಿ ಎಲ್ಲಾ ಪದಾರ್ಥಗಳಿಗೂ ಕಾಸಿಗೊಂದು ಸೇರು’’ ಎಂದು ಶಿಷ್ಯ ಹೇಳಿದ. ವಿವರವಾಗಿ ಎಲ್ಲವನ್ನೂ ಕೇಳಿಕೊಂಡ ಮೇಲೆ ಸನ್ಯಾಸಿಗೂ ಆಶ್ಚರ್ಯವಾಯಿತು. ಇದು ಅಪಾಯಕಾರಿಯಾದ ಸ್ಥಳವೆಂದು ತೋರುತ್ತದೆ, ಇಲ್ಲಿಂದ ಬೇಗನೆ ಹೊರಡುವುದೇ ಮೇಲೆಂದು ಸನ್ಯಾಸಿ ಹೇಳಿದ. ಆದರೆ ಒಂದೇ ರೂಪಾಯಿಯಲ್ಲಿ ಅನೇಕ ದಿನ ಉಂಡುಟ್ಟು ಸುಖವಾಗಿರಬಹುದಾದ ಸ್ಥಳ. ಬೇಗನೆ ಬಿಟ್ಟು ಹೋಗಲು ಶಿಷ್ಯನಿಗೆ ಮನಸ್ಸಾಗಲಿಲ್ಲ. ಒತ್ತಾಯ ಮಾಡಿ ಗುರುಗಳನ್ನು ಒಲಿಸಿದ, ಅಲ್ಲಿಯೇ ಅನೇಕ ದಿನ ಉಳಿದರು.

ಹೀಗಿರಲು ಒಂದು ದಿನ ರಾತ್ರಿ ಒಬ್ಬ ಕಳ್ಳ ಕಳ್ಳತನ ಮಾಡಲು ಶ್ರೀಮಂತನ ಮನೆಗೆ ಹೋದ. ಯಾರಿಗೂ ಗೊತ್ತಾಗದಂತೆ ಮನೆಯ ಹಿಂಬದಿಯ ಗೋಡೆ ಒಡೆದ. ಇನ್ನೇನು ಒಳಗೆ ನುಗ್ಗಬೇಕೆನ್ನುವಷ್ಟರಲ್ಲಿ ಬಿರಿದ ಗೋಡೆ ಅವನ ಮೇಲೆಯೇ ಬಿತ್ತು. ಕಳ್ಳ ಅಲ್ಲೇ ಸತ್ತುಬಿದ್ದ. ಸುದ್ದಿ ತಿಳಿದು ಕಳ್ಳನ ಹೆಂಡತಿ ರಾಜನ ಬಳಿಗೆ ಅಳುತ್ತ ಹೋದಳು.

“ರಾಜರೇ, ರಾಜರೇ, ನನಗೆ ನ್ಯಾಯ ಕೊಡಿ’’ ಎಂದಳು. ರಾಜ ಸಮಾಧಾನದಿಂದ “ಯಾಕಮ್ಮಾ, ನಿಗೇನು ಅನ್ಯಾಯವಾಗಿದೆ?’’ ಎಂದ ಕೇಳಿದ.

“ನಿನ್ನೆ ನನ್ನ ಗಂಡ ಶ್ರೀಮಂತನ ಮನೆಗೆ ಕಳ್ಳತನಕ್ಕೆ ಹೋಗಿದ್ದ. ಗೋಡೆ ಒಡೆದು ಒಳಗೆ ನುಗ್ಗುವಾಗ ಗೋಡೆ ಬಿದ್ದು ಸತ್ತುಹೋದ. ಇದು ಅನ್ಯಾಯವಲ್ಲವೆ? ಗೋಡೆ ಸರಿಯಾಗಿದ್ದಿದ್ದರೆ ಅದು ಬೀಳುತ್ತಿತ್ತೆ? ಅದು ಬೀಳದಿದ್ದರೆ ನನ್ನ ಗಂಡ ಸಾಯುತ್ತಿದ್ದನೆ? ನಾನು ಗಂಡನನ್ನು ಕಳೆದುಕೊಂಡೆ. ಇನ್ನು ನನಗೆ ಯಾರು ದಿಕ್ಕು? ಹೋ!’’ ಎಂದು ತಲೆ ಜಜ್ಜಿಕೊಂಡು ಅಳತೊಡಗಿದಳು. ರಾಜ ಕರಗಿಹೋದ.

“ನನ್ನ ಪಟ್ಟಣದಲ್ಲಿ ಈ ರೀತಿ ಅನ್ಯಾಯವಾಗುವುದು ಸರಿಯಲ್ಲ. ಸಡಿಲು ಗೋಡೆ ಕಟ್ಟಿ ನಿನ್ನ ಗಂಡನ ಪ್ರಾಣ ತಕ್ಕೊಂಡ ಆ ಶ್ರೀಮಂತನಿಗೆ ಈಗಲೇ ಮರಣ ದಂಡನೆ ಕೊಡುತ್ತೇನೆ, ತಾಳು’’ ಎಂದು ಹೇಳಿ ಶ್ರೀಮಂತನನ್ನು ಕರೆಯಲು ಸೇವಕರನ್ನು ಕಳಿಸಿದ.

ಶ್ರೀಮಂತ ನಡುಗುತ್ತಲೇ ಬಂದ. ರಾಜ ಗುಡುಗಿದ-

“ಎಲವೋ ಶ್ರೀಮಂತ, ನಿನ್ನೆ ನಿನ್ನ ಮನೆಯ ಗೋಡೆ ಬಿದ್ದು ಆ ಕಳ್ಳ ಸತ್ತದ್ದು ಸರಿಯೋ?’’

“ಸರಿ ಸ್ವಾಮಿ. ಕಳ್ಳತನಕ್ಕೆ ಒಳ್ಳೆ ಶಿಕ್ಷೆ ತಾನಾಗೇ ಸಿಕ್ಕಿದೆ.’’

“ಕಳ್ಳತನ ಮಾಡೋದು ಕಳ್ಳನ ಕೆಲಸ. ಕಳ್ಳತನ ಮಾಡಿಸಿಕೊಳ್ಳೋದು ಶ್ರೀಮಂತನ ಕೆಲಸ. ಹೀಗಿರುವಾಗ ಶಿಕ್ಷೆ ಯಾಕೆ?’’

“ಹಾಗಲ್ಲ ಪ್ರಭು, ಕಳ್ಳತನ ಕೆಟ್ಟ ಕೆಲಸ. ಅದಕ್ಕೇ ಅವನಿಗೆ ಆ ಗೋಡೆಯೇ ಶಿಕ್ಷೆ ಕೊಟ್ಟಿತು.’’

ಅವಿವೇಕಿ ರಾಜನಿಗೆ ಸಿಟ್ಟು ಬಂತು ಪಟ್ಟಣದ ರಾಜನಾದ ತನಗೆ ಈ ರೀತಿ ಬುದ್ಧಿವಾದ ಹೇಳುವುದೇ?

“ಎಲವೋ ಮೂರ್ಖ, ಕಳ್ಳತನ ಕೆಟ್ಟ ಕೆಲಸ ನಿಜ. ಹಾಗಂತ ಕಲ್ಲಿನ ಗೋಡೆ ಶಿಕ್ಷೆ ಕೊಡೋದು ಸರಿಯೇ? ಗೋಡೆಯೇ ಶಿಕ್ಷೆ ಕೊಡೋದಾದರೆ ರಾಜನಾಗಿ ನಾನು ಯಾಕಿರಬೇಕು? ಸಡಿಲು ಗೋಡೆ ಕಟ್ಟಿಸಿ ಕಳ್ಳನ ಪ್ರಾಣ ತಕ್ಕೊಂಡೆ. ಆದ್ದರಿಂದ ಅವನ ಹೆಂಡತಿ ವಿಧವೆಯಾದಳು. ಈಗ ನಿನ್ನ ಪ್ರಾಣ ತಕ್ಕೊಂಡು ನಿನ್ನ ಹೆಂಡತಿಯೂ ವಿಧವೆಯಾಗುವಂತೆ ಮಾಡುತ್ತೇನೆ. ಎಲವೋ ಯಾರಲ್ಲಿ? ಇವನನ್ನು ಗಲ್ಲಿಗೇರಿಸಿ’’ ಎಂದು ರಾಜ ಆಜ್ಞೆ ಮಾಡಿಬಿಟ್ಟ.

ಶ್ರೀಮಂತನಿಗೆ ತಾನು ಮಾತಾಡಿದ ತಪ್ಪಿನ ಅರಿವಾಯಿತು. ತಡ ಮಾಡಿದರೆ ಅಪಾಯವೆಂದು ತಕ್ಷಣ ರಾಜನ ಕಾಲಿಗೆ ಬಿದ್ದು, “ಮಹಾಪ್ರಭು, ತಮ್ಮಂಥ ನ್ಯಾಯನಿಷ್ಠರ ರಾಜ್ಯದಲ್ಲಿ ನನ್ನಂಥವನಿಗೆ ಅನ್ಯಾಯವಾಗುವುದು ತರವಲ್ಲ. ಆ ಗೋಡೆ ಕಟ್ಟಿದವನು ನಾನಲ್ಲ; ಉಪ್ಪಾರ. ಅವನೇ ಆ ಗೋಡೆಯನ್ನು ಸರಿಯಾಗಿ ಕಟ್ಟಿದ್ದರೆ ಕಳ್ಳ ಸಾಯುತ್ತಿರಲಿಲ್ಲ. ಈ ತಪ್ಪು ಆ ಉಪ್ಪಾನರದು. ಶಿಕ್ಷೆ ಸಲ್ಲಬೇಕಾದ್ದು ಅವನಿಗೆ ಪ್ರಭು’’ ಎಂದ. ಹೌದಲ್ಲ, ಅನ್ಯಾಯವಾಗಿ ಶ್ರೀಮಂತನಿಗೆ ಮರಣ ದಂಡನೆ ಆಗುತ್ತಿತ್ತಲ್ಲ ಎನ್ನಿಸಿತು ರಾಜನಿಗೆ.

“ಎಲವೋ, ಇವನನ್ನು ಬಿಟ್ಟು ಆ ಉಪ್ಪಾರನ್ನು ಎಳೆದುಕೊಂಡು ಬನ್ನಿರಿ’’ ಎಂದು ಆಜ್ಞೆ ಮಾಡಿದ.

ಆ ಉಪ್ಪಾರನನ್ನು ಎಳೆದು ತಂದರು.

“ಎಲವೋ, ಈ ಶ್ರೀಮಂತನ ಮನೆ ಕಟ್ಟಿದವನು ನೀನೇ ತಾನೆ?’’

“ಹೌದು ಸ್ವಾಮಿ.’’

“ಆ ಮನೆಯ ಗೋಡೆ ಸಡಿಲು ಕಟ್ಟಿದ್ದರಿಂದ ಅದು ಬಿದ್ದು ಕಳ್ಳನ ಪ್ರಾಣ ಹೋಯ್ತು. ಆದ್ದರಿಂದ ನಿನಗೆ ಮರಣ ದಂಡನೆ ವಿಧಿಸಿದ್ದೇನೆ. ಈತನನ್ನು ಎಳೆದೊಯ್ಯಿರಿ.’’

– ಎಂದು ರಾಜ ಆಜ್ಞೆ ಮಾಡಿದ. ಉಪ್ಪಾರ ತಬ್ಬಿಬ್ಬಾದ. ಈಗ ತಡ ಮಾಡಿದರೆ ಅಪಾಯವೆಂದುಕೊಂಡು ಕೂಡಲೇ ರಾಜನ ಕಾಲು ಹಿಡಿದು ಹೇಳಿದ,

“ಸ್ವಾಮಿ, ನಾನು ಸಡಿಲುಗೋಡೆ ಕಟ್ಟಿದ್ದು ನಿಜ. ಆದರೆ ಅದಕ್ಕೆ ಕಾರಣವಿದೆ. ನಾನು ಗೋಡೆ ಕಟ್ಟುವ ಕಾಲಕ್ಕೆ ಈ ಊರಿನ ನರ್ತಕಿ ಅಲ್ಲೇ ಹಾದುಹೋಗುತ್ತಿದ್ದಳು. ಅವಳ ಮೇಲೆ ನನ್ನ ದೃಷ್ಟಿ ಬಿದ್ದುದರಿಂದ ಗೋಡೆಯ ಕಡೆ ನೋಡಲಾಗಲಿಲ್ಲ. ಅವಳೇ ಅಲ್ಲಿ ಹಾಯದಿದ್ದರೆ ನಾನು ಅವಳ ಕಡೆ ನೋಡುತ್ತಿರಲಿಲ್ಲ. ಗೋಡೆ ಸಡಿಲಾಗುತ್ತಿರಲಿಲ್ಲ. ಆದ್ದರಿಂದ ತಪ್ಪು ಅವಳದೆ. ಶಿಕ್ಷೆ ಆಗಬೇಕಾದದ್ದು ಅವಳಿಗೆ. ನ್ಯಾಯವೆಂದರೆ ಇದಲ್ಲವೆ ಸ್ವಾಮಿ?’’

ರಾಜನಿಗೆ ಉಪ್ಪಾರನ ಮಾತು ಸರಿಯೆನ್ನಿಸಿತು. ಕೂಡಲೇ ಅವನನ್ನು ಬಿಡಿಸಿ ಆ ನರ್ತಕಿಯನ್ನು ಕರೆದು ತರಲು ಆಜ್ಞೆ ಮಾಡಿದ.

ನರ್ತಕಿಗೆ ದಾರಿಯಲ್ಲೇ ಎಲ್ಲ ವಿಷಯ ಗೊತ್ತಾಯಿತು. ಓಡಿ ಬಂದು ರಾಜನಿಗೆ ಅಡ್ಡ ಬಿದ್ದು ಹೇಳಿದಳು: “ಪ್ರಭು, ಈ ಉಪ್ಪಾರ ಗೋಡೆ ಕಟ್ಟುವಲ್ಲಿ ನಾನು ಹಾದುಹೋಗುತ್ತಿದ್ದುದು ನಿಜ. ಆದರೆ ಅದಕ್ಕೆ ಕಾರಣ ಇದೆ. ಅಕ್ಕಸಾಲಿಯ ಹತ್ತಿರ ನಾನೊಂದು ಆಭರಣ ಮಾಡಿಸಲಿಕ್ಕೆ ಕೊಟ್ಟಿದ್ದೆ. ಅವನು ಈಗ ಬಾ, ಆಗ ಬಾ, ನಾಳೆ ಬಾ ಅಂತ ಅಲೆದಾಡಿಸುತ್ತಿದ್ದ. ಅವನೇ ಹೇಳಿದ ಸಮಯಕ್ಕೆ ಆಭರಣ ಕೊಟ್ಟಿದ್ದರೆ ನಾನಲ್ಲಿ ಹಾಯುತ್ತಿರಲಿಲ್ಲ. ನಾನು ಹಾಯದಿದ್ದರೆ ಉಪ್ಪಾರ ಸರಿಯಾಗಿ ಗೋಡೆ ಕಟ್ಟುತ್ತಿದ್ದ. ಗೋಡೆ ಸರಿಯಾಗಿದ್ದಿದ್ದರೆ ಅದು ಬೀಳುತ್ತಿರಲಿಲ್ಲ. ಕಳ್ಳ ಸಾಯುತ್ತಿರಲಿಲ್ಲ. ಈ ತಪ್ಪು ಅಕ್ಕಸಾಲಿಯದಲ್ಲವೇ ಪ್ರಭು?’’

ರಾಜನಿಗೆ ನರ್ತಕಿಯ ಮಾತು ಸರಿದೋರಿತು. ಕೂಡಲೇ ಅಕ್ಕಸಾಲಿಗೆ ಕರೆ ಹೋಯಿತು.

ಅಕ್ಕಸಾಲಿಗೂ ದಾರಿಯಲ್ಲೇ ವಿಷಯ ಗೊತ್ತಾಯಿತು. ಅವನೂ ಓಡಿ ಬಂದು ರಾಜನಿಗೆ ಅಡ್ಡಬಿದ್ದು ಹೇಳಿದ: “ಮಹಾ ಪ್ರಭು, ಆ ನರ್ತಕಿಯ ಆಭರಣವನ್ನು ನಾನು ಹೇಳಿದ ಸಮಯಕ್ಕೆ ಕೊಡಲಿಲ್ಲ ನಿಜ. ಆದರೆ ಅದಕ್ಕೆ ಕಾರಣ ಇದೆ. ಇದ್ದಿಲು ಕೊಡುವವನು ಸಕಾಲಕ್ಕೆ ಇದ್ದಿಲು ಪೂರೈಸಲಿಲ್ಲ. ಅವನೇ ಸಕಾಲಕ್ಕೆ ಇದ್ದಿಲು ಕೊಟ್ಟಿದ್ದರೆ ನಾನು ಹೇಳಿದ ಸಮಯಕ್ಕೆ ಆಭರಣ ಕೊಡುತ್ತಿದ್ದೆ. ಆಭರಣ ಕೊಟ್ಟಿದ್ದರೆ ಅವಳು ಅಲ್ಲಿ ಹಾಯುತ್ತಿರಲಿಲ್ಲ. ಉಪ್ಪಾರ ಅವಳನ್ನು ನೋಡದೆ ಗೋಡೆ ಸರಿಯಾಗಿ ಕಟ್ಟುತಿದ್ದ. ಗೋಡೆ ಸರಿಯಾಗಿದ್ದಿದ್ದರೆ ಅದು ಬೀಳುತ್ತಿರಲಿಲ್ಲ. ಕಳ್ಳ ಸಾಯುತ್ತಿರಲಿಲ್ಲ. ಹೀಗಾಗಿ ತಪ್ಪು ಆ ಇದ್ದಿಲು ಕೊಡುವವನದು. ಆದ್ದರಿಂದ ಶಿಕ್ಷೆ ಆಗಬೇಕಾದ್ದು ಅವನಿಗಲ್ಲವೆ ಪ್ರಭು?’’ ರಾಜನಿಗೆ ಅಕ್ಕಸಾಲಿಯ ವಾದವೂ ಸರಿಯೆನಿಸಿತು. ಕೂಡಲೇ ಇದ್ದಿಲು ಮಾರುವವನನ್ನು ಕರೆತರಲು ಆಳುಗಳನ್ನು ಅಟ್ಟಿದ.

ಆದರೆ, ಅವನೋ ಅರೆಹುಚ್ಚ ಬಡಕಲು ಶರೀರದವ, ಇದ್ದಿಲು ವರ್ಣದವ. ಹೀಗಾಗಿ ತನ್ನ ತಪ್ಪನ್ನು ಇನ್ನೊಬ್ಬರ ಮೇಲೆ ಹಾಕಿ ಪಾರಾಗುವುದು ಅವನಿಗೆ ಸಾಧ್ಯವೇ ಇರಲಿಲ್ಲ. ರಾಜನ ಆಳುಗಳು ಹಿಡಿದು ತಂದಾಗ ಹರಕೆಯ ಕುರಿಯ ಹಾಗೆ ಸುಮ್ಮನೆ ಬಂದ. ರಾಜನ ಮುಂದೆ ನಿಂತ ಈತ ರಾಜ ಕೇಳಿದ ಯಾವ ಪ್ರಶ್ನೆಗೂ ಉತ್ತರ ಕೊಡಲಿಲ್ಲ. ಶಿಕ್ಷೆಗೆ ಇವನೇ ಯೋಗ್ಯನೆಂದು ತೀರ್ಮಾನಿಸಿ ರಾಜ ಇವನಿಗೇ ಗಲ್ಲಿನ ಶಿಕ್ಷೆ ಕೊಟ್ಟ. ಗಲ್ಲುಗಂಬಕ್ಕೆ ಇವನನ್ನು ಸೇವಕರು ಎಳೆದೊಯ್ದರು.

ಆದರೆ ಇದ್ದಿಲು ಮಾರುವವನ ಸುದೈವವೋ ಸುದೈವ. ಅಷ್ಟರಲ್ಲಿ ಅಲ್ಲಿಗೆ ಅಜ್ಞಾನಿ ಮಂತ್ರಿ ಬಂದ. ಇವನು ಗಲ್ಲಿಗೇರುವುದನ್ನು ನೋಡಲು ಬಂದ ರಾಜನ ಬಳಿಗೆ ಧಾವಿಸಿ “ಪ್ರಭು, ಇದೇನು ಮಾಡುತ್ತಿರುವಿರಿ? ಇವನೋ ಇದ್ದಿಲು ವರ್ಣದ ನರಪೇತಲ. ನಮ್ಮ ರಾಜರು ಈ ತನಕ ಏನೇ ಮಾಡಿದರೂ ಚಂದ ಚಂದದ ಕೆಲಸಗಳನ್ನೇ ಮಾಡಿದರು. ಈಗ ಈ ಕರಿಯನನ್ನು ಗಲ್ಲಿಗೆ ಹಾಕುವುದು ತಮಗೆ ಎಷ್ಟೂ ಶೋಭಿಸುವುದಿಲ್ಲ. ಆದ್ದರಿಂದ ಈತನ ಬದಲು, ದಷ್ಟಪುಷ್ಟವಾಗಿ ಕೊಬ್ಬಿದವರನ್ನು ಗಲ್ಲಿಗೇರಿಸಿದರೆ ಚಂದವಲ್ಲವೆ ಪ್ರಭು?’’ ಎಂದ.

ರಾಜನಿಗೆ ಮಂತ್ರಿಯ ಮಾತೇ ಯೋಗ್ಯವೆಂದು ತೋರಿತು. ಸಕಾಲಕ್ಕೆ ತನಗೆ ತನ್ನ ರಾಜ್ಯದ ಸತ್ಸಂಪ್ರದಾಯ ನೆನಪಿಸಿದ್ದಕ್ಕೆ ಕೃತಜ್ಞತೆ ಹೇಳಿದ. ಕೂಡಲೇ ಸೇವಕರಿಗೆ ದಷ್ಟಪುಷ್ಟವಾದ ಧಾಂಡಿಗನನ್ನು ಹಿಡಿದು ತರಲು ಆಜ್ಞೆ ಮಾಡಿದ.

ಸೇವಕರು ಹುಡುಕತ್ತ ಹೊರಟರು. ಧರ್ಮಶಾಲೆಯಲ್ಲಿ ಕಾಸಿಗೊಂದು ಸೇರಿನ ಅಡಿಗೆ ಉಂಡುಂಡು ಗೂಳಿಯಂತೆ ಕೊಬ್ಬಿದ ಶಿಷ್ಯನಿದ್ದನಲ್ಲ, ಬಂದು ಅವನನ್ನೇ ಹಿಡಿದರು. ಶಿಷ್ಯನಿಗೆ ದಿಕ್ಕೇ ತೋಚದಾಯಿತು. ಗುರುಗಳೇ ಇದೇನೆಂದು ಸನ್ಯಾಸಿಯನ್ನು ಕೇಳಿದ. ಸನ್ಯಾಸಿ ನಗುತ್ತಾ “ಇದು ಕಾಸಿಗೊಂದು ಸೇರಪ್ಪಾ’’ ಎಂದ. ಶಿಷ್ಯನನ್ನು ಹೇಗಾದರೂ ಮಾಡಿ ಉಳಿಸಬೇಕೆಂದು ಸನ್ಯಾಸಿ ಶಿಷ್ಯನ ಕಿವಿಯಲ್ಲಿ ಒಂದು ಉಪಾಯ ಹೇಳಿದ. ಶಿಷ್ಯನನ್ನು ಎಳೆದೊಯ್ದರು.

ಕೊನೆಗೂ ಒಬ್ಬ ಕೊಬ್ಬಿದ ಆಸಾಮಿಯೇ ಸಿಕ್ಕನಲ್ಲಾ ಎಂದು ರಾಜ, ಮಂತ್ರಿ ಇಬ್ಬರಿಗೂ ಸಂತೋಷವಾಯಿತು. ಗುರು ಉಪಾಯ ಹೇಳಿಕೊಟ್ಟಿದ್ದರಿಂದ ಶಿಷ್ಯ ನಿಶ್ಚಿಂತನಾಗೇ ಇದ್ದ. ಅವನ ನೆಮ್ಮದಿ ನೋಡಿ ರಾಜನಿಗೆ ಇನ್ನೂ ಆನಂದವಾಯಿತು. ಇಂಥಾ ಬುದ್ಧಿ ತನ್ನ ಪ್ರಜೆಗಳಿಗೆ ಎಂದು ಬರುವುದೋ ಎಂದುಕೊಂಡ.

 ಗಲ್ಲಿಗೇರಿಸುವ ಸುದ್ದಿ ತಿಳಿದು ನೋಡುವುದಕ್ಕೆ ಜನ ಸೇರಿದರು. ಇನ್ನೇನು ಶಿಷ್ಯನನ್ನು ಗಲ್ಲಿಗೇರಿಸಬೇಕು, ಅಷ್ಟರಲ್ಲಿ ಜನರನ್ನು ಆಚೀಚೆ ತಳ್ಳಿ ಸನ್ಯಾಸಿ ಬಂದ. ರಾಜರ ಮುಂದೆ ಕೈ ಮುಗಿದು “ಪ್ರಭು, ದಯಮಾಡಿ ನನ್ನನ್ನು ಮೊದಲು ಗಲ್ಲಿಗೇರಿಸಿ’’ ಎಂದ.

ಶಿಷ್ಯ ಕೋಪಗೊಂಡಂತೆ ನಟಿಸುತ್ತ “ಸಾಧ್ಯವಿಲ್ಲ. ನೀವು ಹಿಡಿದು ತಂದದ್ದು ನನ್ನನ್ನು. ನನ್ನನ್ನೇ ಮೊದಲು ಗಲ್ಲಿಗೇರಿಸಿ ಪ್ರಭು’’ ಎಂದು ಅವಸರ ಮಾಡಿದ.

ಹೀಗೆ ಗುರುಶಿಷ್ಯರಿಬ್ಬರೂ ನಾ ಮೊದಲು ತಾ ಮೊದಲು ಎಂದು ಜಗಳಾಡತೊಡಗಿದರು. ಒಬ್ಬರನ್ನೊಬ್ಬರು ಹಿಂದೆ ತಳ್ಳಿ ಗಲ್ಲಿಗೆ ಕತ್ತು ಕೊಡಲು ಪ್ರಯತ್ನಿಸತೊಡಗಿದರು. ರಾಜ, ಮಂತ್ರಿ ಇಬ್ಬರಿಗೂ ದಿಗಿಲಾಯಿತು. ಸಾಮಾನ್ಯವಾಗಿ ಗಲ್ಲಿಗೇರುವಾಗ ಜನ ಅಳುತ್ತಾರೆ. ಇಲ್ಲಾ ಪಾರಾಗಲು ಪ್ರಯತ್ನಿಸುತ್ತಾರೆ. ಇವರು ಹೀಗೆ ನಾ ಮುಂದೆ ತಾ ಮುಂದೆ ಎಂದು ಜಗಳಾಡುತ್ತಾರಲ್ಲಾ, ಏನು ಕಾರಣವಿದ್ದೀತೆಂದು ರಾಜ ಕೇಳಿದ.

ಅದಕ್ಕೆ ಸನ್ಯಾಸಿ “ಪ್ರಭು, ಈ ದಿನ ಯಾರು ಮೊದಲು ಗಲ್ಲಿಗೇರಿ ಸಾಯುವರೋ ಅವರು ಮುಂದಿನ ಜನ್ಮದಲ್ಲಿ ನಿಮ್ಮ ಮಗನಾಗಿ ಹುಟ್ಟಿ ರಾಜರಾಗುತ್ತಾರೆ. ಅನಂತರ ಗಲ್ಲಿಗೇರಿದವನು ಮಂತ್ರಿಯಾಗುತ್ತಾರೆ. ಇವ ನೋಡಿ, ನನ್ನ ಶಿಷ್ಯ, ಗುರುವಿನ ಬಗ್ಗೆ ಸ್ವಲ್ಪವಾದರೂ ಗೌರವ ಭಾವನೆ ಬೇಡವೆ? ತಾನೇ ರಾಜನಾಗಬೇಕೆನ್ನುತ್ತಾನೆ. ನೀವಾದರೂ ಬುದ್ಧಿ ಹೇಳಿ’’ ಎಂದ.

ಅವಿವೇಕಿ ರಾಜನ ತಲೆಯಲ್ಲಿ ತಕ್ಷಣ ಮಿಂಚು ಹೊಳೆಯಿತು. “ಎಲಾ ಮಂತ್ರಿ, ನೋಡಿದೆಯಾ ಈ ಗುರುಶಿಷ್ಯರ ಕುತಂತ್ರವನ್ನ? ತನ್ನ ತರುವಾಯ ಇನ್ನೊಬ್ಬರೇಕೆ ರಾಜನಾಗಬೇಕು? ನಾನೇ ನನ್ನ ಮಗನಾಗಿ ಹುಟ್ಟಿ ಮತ್ತೆ ನಾನೇ ರಾಜನಾಗುತ್ತೇನೆ. ನನ್ನನ್ನೇ ಮೊದಲು ಗಲ್ಲಿಗೇರಿಸಿ’’ ಎಂದ. ಮಂತ್ರಿಯೇನು ಕಡಿಮೆ? ಅಜ್ಞಾನಿ ತಾನೆ?

“ನಮ್ಮ ರಾಜರೇ ಮುಂದಿನ ಜನ್ಮದಲ್ಲಿ ರಾಜರಾಗುವುದಾದರೆ, ನಾನೇ ಮುಂದಿನ ಜನ್ಮದಲ್ಲಿ ಮಂತ್ರಿಯಾಗುತ್ತೇನೆ. ರಾಜರ ತರುವಾಯ ನನ್ನನ್ನು ಗಲ್ಲಿಗೇರಿಸಿ’’ ಎಂದ.

ಸರಿ, ರಾಜಾಜ್ಞೆಯಂತೆ ಮೊದಲು ರಾಜನನ್ನೂ ಆಮೇಲೆ ಮಂತ್ರಿಯನ್ನೂ ಗಲ್ಲಿಗೇರಿಸಿದರು. ಅವರಿಬ್ಬರೂ ಈ ರೀತಿ ಸತ್ತು ಹೋದ ಮೇಲೆ ಸನ್ಯಾಸಿಯೇ ರಾಜನಾದ. ಶಿಷ್ಯನೇ ಮಂತ್ರಿಯಾದ. ಜನ ಸುಖವಾಗಿದ್ದರು.

ಅಲ್ಲಿ ಅವರು ಸುಖವಾಗಿದ್ದರು.

ನಾವಿಲ್ಲಿ ಹೀಗಿದ್ದೀವಿ.

* * *