ಯಾವುದೇ ವೈಚಾರಿಕ ಕೃತಿಯನ್ನು ರಚನೆ ಮಾಡುವಾಗ ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ವಿಷಯಗಳನ್ನು ಜತೆಗೆ ಜೀವನದ ಬಗೆಗೆ ನಾನಾ ಬಗೆಯ ಪ್ರಶ್ನೆಗಳನ್ನು ಗಂಭೀರವಾಗಿ, ಆಳವಾದ ಅಧ್ಯಯನದ ಮೂಲಕ ಪರಿಶೀಲಿಸುವುದು, ಪರಾಮರ್ಶೆ ಮಾಡುವುದು, ನಿಕಷಕ್ಕೆ ಒಡ್ಡುವುದು ಅಗತ್ಯವಾಗಿ ಕೈಕೊಳ್ಳುವ ಕಾರ್ಯವಾಗುತ್ತದೆ. ಆ ಚಿಂತನಶೀಲ ಲೇಖಕನಲ್ಲಿ ವ್ಯಾಪಕವಾದ ಜೀವನ ದೃಷ್ಟಿಯಿರಬೇಕಾಗುತ್ತದೆ. ಇದನ್ನು ಓದುವವನೂ ಗಂಭೀರ ಪ್ರವೃತ್ತಿಯ ವಾಚಕನಾಗಿರಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಈ ಬಗೆಯ ಕೃತಿಗಳನ್ನು ಚಿಸುವ ಚಿಂತಕರ ದೊಡ್ಡ ಪಡೆಯೇ ಇದೆ. ರಾಜವಾಡೆ, ಆಗರಕರ, ಲೋಹಿಕವಾದಿ, ಚಿಪಳೂಣಕರ, ಸಾವರಕರ, ತಿಲಕರಂತವರು ಮರಾಠಿ ಗದ್ಯ ಸಾಹಿತ್ಯಕ್ಕೆ ವೈಚಾರಿಕ ಪ್ರತಿಷ್ಠೆಯನ್ನು ತಂದುಕೊಟ್ಟರು. ಇವರಲ್ಲಿ ಪುಲೇ, ಅಂಬೇಡ್ಕರ‍ರ ಕೊಡುಗೆಯನ್ನು ಮರೆಯುವಂತಿಲ್ಲ.

ಆನಂತರದ ಕಾಲದಲ್ಲಿ ನರಹರ ಕುರಂದಕರ, ಗಂ.ಬಾ. ಸರದಾರ, ಇರಾವತಿ ಕರ್ವೆಯಂತಹವರು ಮರಾಠಿ ವಿಚಾರ ಸಾಹಿತ್ಯಕ್ಕೆ ಹೊಸ ಆಯಾಮವನ್ನು ತಂದುಕೊಟ್ಟರು. ವಸಾಹತೋತ್ತರ ಕಾಲದಲ್ಲಿ ಭಾಲಚಂದ್ರ ನೇಮಾಡೆ, ದಿಲೀಪಚಿತ್ರೆ, ಸದಾನಂದ ಮೋರೆ, ಆ.ಹ. ಸಾಳುಂಖೆಯವರು ಆಧುನಿಕ ಮತ್ತು ನಿಖರವಾದ ಸಾಮಾಜಿಕ ಆಯಾಮವನ್ನು ನೀಡಿದರು. ಈ ಚಿಂತಕರು ಸಂತರ ಸಾಹಿತ್ಯದ ಮೇಲೆ ಹೊಸ ಬೆಳಕು ಚೆಲ್ಲಿದರು.

‘ಕ್ರಾಂತಿಕಾರಿ ತುಕಾರಾಮ’ ಕೃತಿ ರಚಿಸಿದ ಡಾ. ಆ.ಹ. ಸಾಳುಂಖೆಯವರು ಮಹಾರಾಷ್ಟ್ರದ ಮಹತ್ವ ವಿಚಾರವಂತರಲ್ಲಿ ಒಬ್ಬರು. ತುಕಾರಾಮನ ಕುರಿತು ಹಲವು ಚಿಂತಕು ಬೇರೆ, ಬೇರೆ ರೀತಿಯಲ್ಲಿ ಕೃತಿ ರಚನೆ ಮಾಡಿದ್ದಾರೆ. ಡಾ. ಸಾಳುಂಖೆಯವರ ದೃಷ್ಟಿಕೋನ ಇವರೆಲ್ಲರಿಗಿಂತ ಲೋಕಭಿನ್ನ. ಅವರು ಈಗಾಗಲೇ ತುಕಾರಾಮನ ಬಗ್ಗೆನೆ ಬಂದ ವೈಚಾರಿ ನಿಯಮವನ್ನು ಪರೀಕ್ಷೆಗೊಳಪಡಿಸುತ್ತಾರೆ. ತಪ್ಪಾಗಿ ಅರ್ಥೈಸಿದ ಹೇಳಿಕೆಯನ್ನು ಖಂಡಿಸುತ್ತಾರೆ. ಜತೆಗೆ ತಾವು ಗ್ರಹಿಸಿದ ವಿಚಾರವನ್ನು ದಾಖಲೆ ಸಹಿತ ವಿವರಿಸುತ್ತಾರೆ. ಡಾ. ಸಾಳುಂಖೆಯವರ ಬರಹದಲ್ಲಿ ನಮಗೆ ಎಲ್ಲಿಯೂ ವೈಭವೀಕರಣ ಕಾಣುವುದಿಲ್ಲ. ಅತಿಶಯೋಕ್ತಿಯ ಹೇಳಿಕೆಗಳೂ ಸಿಗುವುದಿಲ್ಲ. ತಮ್ಮ ವೈಚಾರಿಕ ನಿಲುವನ್ನು ಉಳಿದ ವಿಚಾರವಂತರ ಜತೆಗಿಟ್ಟು ತೂಗಿನೋಡುತ್ತಾರೆ. ಆ ಬಳಿಕವೇ ಖಚಿತವಾದ ನಿರ್ಣಯಕ್ಕೆ ಬರುತ್ತಾರೆ. ಇದು ಡಾ. ಸಾಳುಂಖೆಯವರ ಬರಹದ ವೈಶಿಷ್ಟ್ಯ. ಅವರ ವೈಚಾರಿಕ ಬರಹದಲ್ಲಿ ಕಾಳಿದಾ-ಭವಭೂತಿಯ ಕಾವ್ಯದ ಲಾಲಿತ್ಯದ ಮೆರಗಿದೆ.

ಡಾ. ಸಾಳುಂಖೆಯವರು ಸಂಸ್ಕೃತ ಮತ್ತು ಮರಾಠಿ ಸಾಹಿತ್ಯದ ಆಳವಾದ ಅಧ್ಯಯನ ಕೈಕೊಂಡರು. ಮರಾಠಿ ‘ಸಂತ ಸಾಹಿತ್ಯ’ಕ್ಕೆ ಹೊಸ ಪರಿಭಾಷೆಯನ್ನು ನೀಡಿದರು. ಮರುವ್ಯಾಖ್ಯಾನಕ್ಕೆ ಒಳಪಡಿಸಿದರು. ಸಾಂಪ್ರದಾಯಿಕ ಪರಂಪರೆಯನ್ನು ಮುರಿದು ಹೊಸ ನೋಟ, ಹೊಸ ತಿರುವು ನೀಡಿದರು. ಪುರೋಹಿತಶಾಹಿ ನಿರ್ಮಿಸಿದ ಗುಲಾಮಗಿರಿಯನ್ನು ಕಿತ್ತೊಗೆಯಲು ಸತತ ಪರಿಶ್ರಮ ಪಟ್ಟರು. ಮಹಾರಾಷ್ಟ್ರದ ಉದ್ದಗಲಕ್ಕೂ ಸಂಚರಿಸಿ, ವೈಚಾರಿಕ ಕ್ರಾಂತಿಯ ಮೂಲಕ ಜನಜಾಗೃತಿ ಕೈಕೊಂಡರು. ಹಲವು ಬಾರಿ ‘ವಿದ್ರೋಹಿ ಚಳುವಳಿ’ಯ ನಾಯಕತ್ವವನ್ನು ವಹಿಸಿಕೊಂಡರು. ಚಾರ್ವಾಕನ ಐಹಿಕತೆಯನ್ನು, ಬುದ್ಧನ ಮಾನವೀಯತೆಯನ್ನು ಪುರಸ್ಕರಿಸಿದರು. ಧಾರ್ಮಿಕ ಪದ್ಯದಲ್ಲಿ, ಆಚರಣೆಯಲ್ಲಿ ‘ಮಾನವೀಯತೆ’ ಯನ್ನು ಗುರುತಿಸುವುದು, ತನ್ಮೂಲಕ ಸಾಮಾಜಿಕ ಜಾಗೃತಿಯನ್ನು ಕೈಕೊಳ್ಳವುದೇ ಅವರ ಬರಹದ ಚಳುವಳಿಯ, ಆಂದೋಲನದ ಮುಖ್ಯ ಉದ್ದೇಶ. ಅವರು ಪುಲೇ, ಅಂಬೇಡ್ಕರ್ ಮತ್ತು ಶಾಹು ಮಹಾರಾಜರ ವೈಚಾರಿಕ ‘ಸಮತಾವಾದ’ ವನ್ನು ಮುನ್ನಡೆಸಿದರು.

ಡಾ. ಆ.ಹ. ಸಾಳುಂಖೆಯವರು ಈವರೆಗೆ ಸುಮಾರು ಹದಿನಾಲ್ಕು ಸಂಶೋಧನೆ ಗ್ರಂಥಗಳನ್ನು ರಚಿಸಿದ್ದಾರೆ. ಪುರಾಣಗಳ ಮೇಲೆ ವೇದ ಉಪನಿಷತ್ತಿನ ಮೇಲೆ, ಹಿಂದೂ ಸಂಸ್ಕೃತದ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ. ಅವರು ಮೌಖಿಕ ಪರಂಪರೆಯ ಪುರಸ್ಕೃತರೂ ಹೌದು. ಅವರ ಸಂಶೋಧನೆ ಕಾರ್ಯಕಂಡು ಮಹಾರಾಷ್ಟ್ರ ಸರಕಾರವು ಹಲವು ಪ್ರಶಸ್ತಿ ನೀಡಿ ಗೌರವಿಸಿದೆ. ಮಹಾರಾಷ್ಟ್ರ ರಾಜ್ಯ ಪುರಸ್ಕರ, ಮಹಾರಾಷ್ಟ್ರ ಘೋಡನ ಫೌಂಡೇಶನ್, ಮಾಧವರಾವ ಬಾಗಲ ಪುರಸ್ಕಾರ ಅತ್ಯಂತ ಮಹತ್ವದ್ದು.

‘ಕ್ರಾಂತಿಕಾರಿ ತುಕಾರಾಮ’ (ವಿದ್ರೋಹಿ ತುಕಾರಾಮ) ಮತ್ತು ‘ಭೂಮಿಪುತ್ರ ಗೌತಮ ಬುದ್ಧ’ ಇವರ ಮೇರು ಕೃತಿಗಳು ತುಂಬ ಚರ್ಚೆಗೊಳಗಾಗಿವೆ.

ಇಂಥದೊಂದು ಮಹತ್ವದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಲು ಅನುಮತಿ ನೀಡಿದ ಡಾ. ಸಾಳುಂಖೆಯವರಿಗೂ, ಇದನ್ನು ಪ್ರಕಟಿಸಿದ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಡಾ. ಎ. ಮುರಿಗೆಪ್ಪ, ಮಾನ್ಯ ಕುಲಸಚಿವ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ್ ಅವರಿಗೆ ಮತ್ತು ಸಿಬ್ಬಂದಿಗಳಿಗೆ, ಹಲವು ರೀತಿಯಲ್ಲಿ ಸ್ವೀಕರಿಸಿದ ಡಾ. ಅಮರೇಶ ನುಗಡೋಣಿ ಮತ್ತು ಸಲಹಾ ಸಮಿತಿ ಸದಸ್ಯರಾದ ಡಾ. ವೀಣಾ ಶಾಂತೇಶ್ವರ, ಡಾ. ಎಚ್.ಎನ್. ಮುರಳೀಧರ ಅವರಿಗೆ ಈ ಅನುವಾದಕ ಋಣಿಯಾಗಿದ್ದಾನೆ.

ಚಂದ್ರಕಾಂತ ಪೋಕಳೆ