ಅದೊ ಬಂದ, ಇವನೊಂದು ಕಿರಿಯ ಬಿರುಗಾಳಿ !
ಮನೆಯ ಒಳಗೂ ಹೊರಗು ಇವನದೇ ಧಾಳಿ,
ಇದ್ದುದೊಂದೆಡೆ ಇರದು ಇವನ ರಾಜ್ಯದಲಿ
ತುಂಟತನಕಿನ್ನೆರಡು ಕಾಲ್ ಬಂದ ತೆರದಿ
ಬಂದುವಿವನಿಗೆ ಎರಡು ಪುಟ್ಟ ಕಾಲು
ಮನೆಯ ವಸ್ತುಗಳೆಲ್ಲ ದಿಕ್ಕುಪಾಲು !

ತುಂಬು ಕಿತ್ತಲೆ ಕೆನ್ನೆ, ನಗೆ ಮಿಂಚುಗಳ ಕುವರ
ಕ್ರಾಂತಿಕಾರ !
ಹೊಳೆವೆಳೆಯ ಕಂಗಳಲಿ ಬೆಳುದಿಂಗಳನು ತುಂಬಿ
ತಂದು ಮನೆಯಂಗಳಕೆ ಸುರಿವ ಧೀರ.
ಇವನು ಎದ್ದರೆ ಮನೆಯ ಮೈಯೆಲ್ಲ ಎಚ್ಚರ
ಇವನು ಮಲಗಲು ಮನೆಗೆ ಕವಿಯುವುದು ಮಂಪರ !

“ಕೊಳಲಿನಿದು, ವೀಣೆಯು ಇನಿದು ಎನ್ನುವರು
ಮಕ್ಕಳ ಸೊಲ್ಲನಾಲಿಸದ ಜನರು”
ಎಂದೊರೆದ ತಮಿಳು ಕವಿ ; ಅವನ ಮಾತಿನ ಸತ್ಯ
ಅನುಭವಕೆ ಬರುತಿಹುದು ಇವನ ಎದುರು !
ಇವನ ಮಾತಿನ ಅರ್ಥ ದೇವರೇ ಬಲ್ಲ
ಭಾವಗೀತಗಳಂತೆ ಅಸ್ಪಷ್ಟವೆಲ್ಲ !

ಚಂದುಮಾಮನ ಅಳಿಯ, ಬೆಕ್ಕು ನಾಯಿಯ ಗೆಳೆಯ,
ನಮ್ಮ ಲೋಕದ ತಿಳಿವಿನಾಚೆಯವನು
ಅವನ ನೀತಿಯೆ ಬೇರೆ, ಅವನ ನಿಯತಿಯೆ ಬೇರೆ
ದೇವಲೋಕದ ಬೆಳಕ ಹಿಡಿಯುವವನು

ಮಹ ಮಹಾ ಪಂಡಿತರ ಉದ್‌ಗ್ರಂಥಗಳನೆಲ್ಲ
ನೆಕ್ಕಿ ರುಚಿ ನೋಡುವನು ರಸನೆಯಿಂದ !
ಎಷ್ಟಾದರೂ ಎಲ್ಲ ಬರಿಯ ನೀರಸವೆಂದು
ಹರಿದೆಸೆದು ಬಿಸುಡುವನು ತಾತ್ಸಾರದಿಂದ !

ಮನೆಗೆ ಮನೆಯೇ ಇವನ ಜೊತೆಗೂಡಿ ಆಡುವುದು
ಒಲವಿನಿಂದ
ನಮಗಡ್ಡಲಾಗಿರುವ ವರುಷಗಳ ಕರಿ ತೆರೆಯ
ಸರಿಸಿ ಬಾಲ್ಯದ ಚೆಲುವ ತಂದು ಕೊಡುವನು ಇವನು
ತನ್ನ ಒಂದೇ ಒಂದು ಮೃದುಹಾಸದಿಂದ.

ಸಿಟ್ಟುಬಂದರೆ ಇವನ ತಡೆಯುವವರಾರುಂಟು ?’
ರುದ್ರಾವತಾರ !
ನಕ್ಕು ನಗಿಸುವ ಚಿಣ್ಣ, ಎದೆಯ ಒಲವಿನ ಹಿರಿಯ
ಸೂರೆಕಾರ.
ನನಗು ಅವಳಿಗು ನಡುವೆ ವ್ಯಕ್ತಪ್ರೇಮದ ಸೇತು ;
ಇವ ಮಾಯಕಾರ
ಎರಡು ಬಾಳನು ಬೆಸೆದ ಸೂತ್ರಧಾರ !