ಚಿತ್ರಾಂಗದೆಯ ಕಥೆ ವ್ಯಾಸಭಾರತದ ಮಹಾಸಾಗರದಲ್ಲಿ ಬಿಂದು ಮಾತ್ರವಾಗಿ ಕಾಣಿಸಿಕೊಂಡಿದೆ. ‘ಕನ್ನಡ ಜೈಮಿನಿಭಾರತ’ದಲ್ಲಿ ಅರ್ಜುನ ಬಭ್ರುವಾಹನರ ಕಾಳಗವನ್ನು ವರ್ಣಿಸುವಾಗ ಲಕ್ಷ್ಮೀಶನು ಪ್ರಾಸಂಗಿಕವಾಗಿ ಆಕೆಯ ಪಾತ್ರವನ್ನು ನಮ್ಮ ಮುಂದೆ ತರುತ್ತಾನೆ. ಅಲ್ಲಿ ನಮ್ಮ ಮುಂದೆ ಬರುವವಳು ಬಭ್ರುವಾಹನನ ತಾಯಿ. ಅಲ್ಲಿಯ ಆಕೆಯ ಚಿತ್ರವನ್ನು ‘ಉತ್ತರ ಚಿತ್ರಾಂಗದಾ’ ಎಂದು ಕರೆಯಬಹುದು. ವಂಗ ಕವಿ ರವೀಂದ್ರನಾಥ ಠಾಕೂರರ ಇಂಗ್ಲಿಷಿಗೆ ಭಾಷಾಂತರವಾಗಿರುವ ‘ಚಿತ್ರಾ’ ನಾಟಕದಲ್ಲಿ ಚಿತ್ರಾಂಗದೆಯ ಪೂರ್ವಜೀವನವನ್ನು ಚಿತ್ರಿಸಿದ್ದಾರೆ. ಅಲ್ಲಿ ಆಕೆಯನ್ನು ಶೃಂಗಾರದ ಪರಿಪೂರ್ಣತೆಯಲ್ಲಿ ಚಿರಸ್ಥಾಯಿಯನ್ನಾಗಿ ಮಾಡಿದ್ದಾರೆ. ಅವರ ಚಿತ್ರವನ್ನು ‘ಪೂರ್ವ ಚಿತ್ರಾಂಗದಾ’ ಎಂದು ಕರೆಯಬಹುದು. ಈ ಕನ್ನಡ ಕಾವ್ಯದಲ್ಲಿ ಸೃಷ್ಟಿಯಾಗಿರುವ ಚಿತ್ರಾಂಗದೆಯ ಮೈಯಲ್ಲಿ ಲಕ್ಷ್ಮೀಶ ಮತ್ತ ಠಾಕೂರರ ಚಿತ್ರಾಂಗದೆಯರ ನೆತ್ತರು ಕೊಂಚಮಟ್ಟಿಗೆ ಹರಿಯುತ್ತಿರುವುದಾದರೂ ವಂಶಪಾರಂಪರ್ಯವೊಂದು ವಿನಾ ಮತ್ತೆ ಬಹು ವಿಷಯಗಳಲ್ಲಿ ಈಕೆ ಬೇರೆಯಾಗಿದ್ದಾಳೆ. ಇಲ್ಲಿ ಲಕ್ಷ್ಮೀಶನ ಕೃತಿಯಲ್ಲಿರುವಂತೆ ಅತಿಮಾನುಷ ಪೌರಾಣಿಕತೆಯಿಂದ ಪಾರಾಗುವ ಅನುಕೂಲವಿಲ್ಲ; ಠಾಕೂರರ ಕೃತಿಯಲ್ಲಿರುವಂತೆ ತಾರುಣ್ಯದ ಸಂಯಮರಹಿತ ವ್ರತಭ್ರಷ್ಟತೆಗೆ ಪ್ರಾಯಶ್ಚಿತ್ತ ವಿಹೀನವಾದ ಭೋಗಕಿರೀಟವನ್ನಿಟ್ಟು ಪ್ರೇಮದ ಮಂಗಳಾರತಿಯೆತ್ತುವುದಕ್ಕೂ ಸಾಧ್ಯವಾಗಿಲ್ಲ.

‘ಪೂರ್ವ ಚಿತ್ರಾಂಗದೆ’ಯನ್ನು ಚಿತ್ರಿಸುವ ಕೆಲವು ಸನ್ನಿವೇಶಗಳಿಗೆ ಈ ಕಾವ್ಯ ಠಾಕೂರರಿಗೆ ಋಣಿಯಾಗಿದೆ. ಮದನನು ವರವನ್ನೀಯುವುದರಲ್ಲಿಯೂ, ಆತನಿಗೂ ಚಿತ್ರಾಂಗದೆಗೂ ನಡೆಯುವ ಸಂಭಾಷಣೆಯಲ್ಲಿಯೂ ಓದುಗರು ಅದನ್ನು ಚೆನ್ನಾಗಿ ಗುರುತಿಸಬಹುದು. ‘ಉತ್ತರ ಚಿತ್ರಾಂಗದೆ’ಯ ಚಿತ್ರದಲ್ಲಿ ಲಕ್ಷ್ಮೀಶನ ಋಣ ಅಷ್ಟು ಮೇಲೆದ್ದು ಕಾಣದಿದ್ದರೂ ಮೇಧಾವಿಯಾದ ಓದುಗನಿಂದ ಅದು ತಪ್ಪಿಸಿಕೊಳ್ಳಲಾರದೆಂದು ತೋರುತ್ತದೆ. ಆದರೂ ಈ ಚಿತ್ರಾಂಗದೆ ಆ ಚಿತ್ರಗಳೆರಡನ್ನೂ ಕೂಡಿಸಿ ತಯಾರಾದವಳಲ್ಲ, ಅವುಗಳಿಂದ ಮೂಡಿ ಸೃಷ್ಟಿಯಾಗಿದ್ದಾಳೆ. ಗಣಿತ ಕರ್ಮವಾಗಿಲ್ಲ; ಕಲಾಕೃತಿಯಾಗಿದ್ದಾಳೆ.

ಈ ದೀರ್ಘಕಾವ್ಯವನ್ನು ಸರಳರಗಳೆಯಲ್ಲಿ

[1] ಬರೆದಿದ್ದೇನೆ. ಕೈಲಾದಮಟ್ಟಿಗೆ ರಗಳೆಯಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದೇನೆ. ಪ್ರಯತ್ನಿಸಿದ್ದೇನೆ ಎಂಬುದರ ಸಂಪೂರ್ಣಾರ್ಥ ತಿಳಿದವರಿಗೆ ತಿಳಿಯುತ್ತದೆ.

ರಾಗರಹಿತವಾದ ಧೀರಶೈಲಿಯಿಂದ ಓದುವುದಕ್ಕೆ ಸಾಧ್ಯವಾಗುವಂತೆಯೆ ರಾಗ ಸಹಿತವಾಗಿ ಭಾರತವೋದಿದಂತೆ ಓದಲೂ ಸಾಧ್ಯ ಎಂಬುದನ್ನು ಗಮಕಿವರ್ಯರಲ್ಲೊಬ್ಬರಾಗಿರುವ ಶ್ರೀಮಾನ್ ಕೆ. ಕೃಷ್ಣರಾಯರು ಮನೋಹರವಾಗಿ ನಿದರ್ಶಿಸಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತದೆ.

ಕಾವ್ಯದಲ್ಲಿ ಅಲ್ಲಲ್ಲಿ ಬರುವ ಮಿಶ್ರೋಪಮೆ ಮಹೋಪಮೆಗಳು ಪಾಶ್ಚಾತ್ಯ ಸಾಹಿತ್ಯಗಳ ಪುರಾಣಕಾವ್ಯಗಳನ್ನು ಓದಿರುವವರಿಗೆ ಹೊಸದಲ್ಲವಾದರೂ ಕನ್ನಡದಲ್ಲಿ ಇದೇ ಮೊತ್ತಮೊದಲನೆಯ ಸಾಹಸವೆಂದು ನಂಬುತ್ತೇನೆ. ಆದ್ದರಿಂದ ಜನಮನದ ದೃಷ್ಟಿಯಲ್ಲಿ ಈ ಕಾವ್ಯಕ್ಕೆ ಯಾವ ಸ್ಥಾನಮಾನಗಳು ಲಭಿಸುತ್ತವೆ ಎಂಬ ವಿಚಾರದಲ್ಲಿ ಕಾವ್ಯಕರ್ತೃವಿನ ಮನಸ್ಸು ತೂಗುಯ್ಯಾಲೆಯಾಗಿದೆ. ಮಹತ್ತಾಗಿ ಸೋಲುವುದೂ ಗೆಲುವಿನ ಮಹತ್ತಿಗಿಂತ ಕೀಳಲ್ಲವಷ್ಟೆ!

ಕುವೆಂಪು
ಮೈಸೂರು,
೬-೧೦-೧೯೩೬


[1] “ಶ್ರೀ ರಾಮಾಯಣ ದರ್ಶನಂ” ಎಂಬ ಮಹಾಕಾವ್ಯದ ರಚನೆಯಲ್ಲಿ ಸಿದ್ಧವಾದ ಮಹಾಛಂದಸ್ಸಿಗೆ ಹೊಂದಿಕೊಳ್ಳುವಂತೆ ಈ ಮುದ್ರಣದಲ್ಲಿ ಅಲ್ಲಲ್ಲಿ ಹಲವು ಬದಲಾವಣೆಗಳಾಗಿವೆ.