ಶ್ರೀ ರಾಮಾಯಣ ಪ್ರೇಮಿಗಳಲ್ಲಿ ವಿಜ್ಞಾಪನೆ, ನಮಸ್ಕಾರ.

ನಾವೆಲ್ಲರೂ ಇಂದು ಇಲ್ಲಿ ಒಂದು ಮಹತ್ತರವಾದ ಪೂಜಾ ಕಾರ್ಯಕ್ಕಾಗಿ ನೆರೆದಿದ್ದೇವೆ. ಅದರ ಉತ್ಸವರೂಪ ಅದರ ಭಗವತ್‌ಸ್ವರೂಪವನ್ನು ಮರೆಮಾಡುವುದಿಲ್ಲವೆಂದು ಭಾವಿಸುತ್ತೇನೆ. ಯಾರ ಬದುಕಿನ ಶ್ವಾಸೋಚ್ಛ್ವಾಸ ರಾಮನಾಮದ ಛಂದೋಗತಿಯನ್ನೇ ಅನುಸರಿಸುತ್ತಿತ್ತೋ, ಯಾರು ಜೀವನದ ಸಾರ್ಥಕತೆಯನ್ನೂ ಪರಮಸಿದ್ಧಿಯನ್ನೂ ರಾಮನಾಮದಲ್ಲಿ ಕಂಡರೋ, ಯಾರು ಇರುಳಿನಲ್ಲಿ ಕಂಡ ರಾಮರಾಜ್ಯದ ಕನಸನ್ನು ಹಗಲಿನಲ್ಲಿಯೂ ಕಂಡು ಕಟ್ಟಲು ನಿರಂತರವೂ ನೋಂತರೋ, ಯಾರು ತಮ್ಮ ವೈದ್ಯಕೀಯವಾದ ಸೇವೆಯನ್ನು ಮಾಡುವುದರಲ್ಲಿಯೂ ಕೂಡ. ಆಧುನಿಕ ವೈಜ್ಞಾನಿಕ ಮನೋಧರ್ಮದ ಡಾಕ್ಟರುಗಳು ಬೆಬ್ಬೆರಗಾಗುವಂತೆ, ಎಲ್ಲ ರೋಗಕ್ಕು ಮೊತ್ತಮೊದಲನೆಯ ಔಷಧ ರಾಮನಾಮ ಎಂದು ಸಾರಿದರೋ, ಯಾರ ಮತದ್ವೇಷ ಮತ್ತು ಭ್ರಾಂತಿ ಇವುಗಳಿಂದಾಗಿ ನವಕಾಲಿಯಲ್ಲಿ ಹರಿದ ರಕ್ತಸಮುದ್ರದಲ್ಲಿ ಒಂದು ಕ್ಷೀರಪಥವನ್ನು ರಚಿಸುತ್ತಾ ರಾಮನಾಮದ ಮಹಿಮೆಯನ್ನು ಜಗತ್ತಿಗೆ ಪ್ರದರ್ಶಿಸಿದರೋ, ಕೊನೆಯದಾಗಿ, ಯಾರ ಎದೆಗೆ ಗುಂಡು ತಗುಲಿದಾಗ ‘ಹೇ ರಾಮ್ ರಾಮ್!’ ಎಂದು ರಾಮನಾಮವನ್ನೇ ಜಪಿಸುತ್ತಾ ಕಣ್ಮರೆಯಾದರೋ ಅಂತಹ ವಿಭೂತಿ ಪುರುಷನೊಬ್ಬನ ಜನ್ಮದಿನ ಇದು.

[1] ಆ ವಿಭೂತಿ ಪುರಷನಿಗೂ ರಾಮ, ರಾಮನಾಮ, ರಾಮಾಯಣಕ್ಕೂ ಅತ್ಯಂತ ನಿಕಟವಾದ ಸಂಬಂಧವಿದೆ. ಆಧುನಿಕ ನಾಗರಿಕತೆಯಲ್ಲಿ ಆಧುನಿಕ ಯಂತ್ರ ವೈಜ್ಞಾನಿಕವಾದ ಜಗತ್ತಿಗೆ ರಾಮನ ಮಹಿಮೆಯನ್ನೂ ರಾಮನಾಮದ ಮಹಿಮೆಯನ್ನೂ ಎತ್ತಿಹಿಡಿದು ಸಾರಿ ತೋರಿ ಹೋದ ಮಹಾವಿಭೂತಿ ಆತನು. ಬಹುಶಃ ಆತನ ಆತ್ಮದ ವಿಕಾಸಕ್ಕೆ ರಾಮ, ರಾಮನಾಮ, ರಾಮಾಯಣ ಹೇಗೆ ಕಾರಣವಾದುವೋ ಹಾಗೆಯೆ ರಾಮ, ರಾಮನಾಮ. ರಾಮಾಯಣದ ಪ್ರಕಾಶನಕ್ಕೆ ಆತನ ಜೀವನವೂ ಪ್ರಧಾನಕಾರಣವಾಯಿತು. ಆದ್ದರಿಂದ ಆತನ ಜನ್ಮೋತ್ಸವವನ್ನು ಇದಕ್ಕಿಂತಲೂ ಉತ್ಕೃಷ್ಟವಾಗಿ ಹೇಗೆ ತಾನೆ ನೆರೆವೇರಿಸಿಯೇವು? ಇಂದು ವಯಸ್ಕರ ಶಿಕ್ಷಣ ಸಮಿತಿ ಕೈಗೊಂಡಿ ರುವ ಈ ಜನಪ್ರಿಯ ರಾಮಾಯಣದ ಪ್ರಕಟಣೆ ಮಹಾತ್ಮಾ ಗಾಂಧೀಜಿಗೆ ನಿಜವಾಗಿಯೂ ಪ್ರೀತಿಯಾಗುವಂತೆ ನಾವು ಸಲ್ಲಿಸುವ ಶ್ರೇಷ್ಠವಾದ ಕಾಣಿಕೆ.

ಮಹಾತ್ಮಾ ಗಾಂಧೀಜಿ ರಾಜಕೀಯ ವ್ಯಕ್ತಿಲ್ಲ. ಅವರು ನೂರಕ್ಕೆ ನೂರು ಭಾಗ ಆಧ್ಯಾತ್ಮಿಕ ವ್ಯಕ್ತಿ. ಅಂದರೆ ಅವರ ಅಧ್ಯಾತ್ಮ ಎಲ್ಲವನ್ನೂ ಒಳಗೊಂಡ ಆಧ್ಯಾತ್ಮ. ಅವರು ಕಂಡ ರಾಮರಾಜ್ಯದ ಕನಸು ಬಹುಶಃ ರಾಜಕೀಯ ಶಾಸ್ತ್ರಜ್ಞರಿಗೆ, ವೈಜ್ಞಾನಿಕ ತತ್ತ್ವವೇತ್ತರಿಗೆ ಮತ್ತು ನವನಾಗರಿಕತೆಯೆಂದು ಕರೆಯಲ್ಪಡುವ ಒಂದು ಮನೋಭ್ರಾಂತಿಯನ್ನೆ ಧರ್ಮವಾಗುಳ್ಳ ಮನಸ್ಸುಳ್ಳವರಿಗೆ ವಿಚಿತ್ರವಾಗಿ ತೋರಬಹುದು. ಆದರೆ ರಾಮಾಯಣವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದವರಿಗೆ, ಸ್ವಲ್ಪಮಟ್ಟಿಗಾದರೂ ಧ್ಯಾನ ಯೋಗ ಮೊದಲಾದ ಸಾಧನೆಗಳನ್ನು ಮಾಡಿದವರ ಚರಣತಲದಲ್ಲಿ ಕುಳಿತುಕೊಳ್ಳುವ ಒಂದು ಸೌಭಾಗ್ಯವನ್ನು ಪಡೆದವರಿಗೆ ಅವರು ಕಂಡ ಕನಸು ಸದ್ಯಕ್ಕೆ ಅತೀತವಾಗಿರುವ ಒಂದು ನನಸು ಎನ್ನುವುದು ಗೋಚರಿಸಿದೆ ಇರದು.

ಈ ಕನಸನ್ನು ಮಾನವ ಪ್ರಾರಂಭದಿಂದಲೂ ಕಾಣುತ್ತಿದ್ದಾನೆ. ಏಕೆಂದರೆ ಅವನ ಪ್ರಾರಂಭವೂ ಆ ಮೂಲದಿಂದಲೇ ಆಗಿದೆ. ಅನೇಕ ಪುರಾಣಗಳಲ್ಲಿ ಕಾವ್ಯಗಳಲ್ಲಿ ಈ ಕನಸು ಕಥೆಯ ರೂಪದಲ್ಲಿ, ಕಲ್ಪನೆಯ ರೂಪದಲ್ಲಿ, ಪ್ರತಿಮಿತವಾಗುತ್ತಾ ಬರುತ್ತಿದೆ. ಗಾಂಧೀಜಿ ಕಂಡಿರುವ ಕಟ್ಟಿರುವ ಕನಸು. ಈಗಲೂ ಅವರು ಅದಕ್ಕಾಗಿ ಶ್ರಮಿಸುತ್ತಿರುವ – ಅತೀತಲೋಕಗಳಲ್ಲಿ ಶ್ರಮಿಸುತ್ತಿರುವ ಆ ಕನಸು, ಇಂದಲ್ಲ ಮುಂದೆ ನನಸೇ ಆಗುತ್ತದೆ ಎನ್ನುವ ಅಭಿಪ್ರಾಯವನ್ನೇ ಇಂದಿನ ಪೂರ್ಣಯೋಗಿ ಮಹಾಮಹರ್ಷಿ ಶ್ರೀ ಅರವಿಂದರು ಕೂಡ ತಮ್ಮ ಆಧ್ಯಾತ್ಮಿಕವಾದ ಮತ್ತು ತತ್ತ್ವ ಶಾಸ್ತ್ರೀಯವಾದ ರೀತಿಯಲ್ಲಿ ಪ್ರತಿಪಾದಿಸಿ ಲೋಕಕ್ಕೆ ಸಾರುತ್ತಿದ್ದಾರೆ. ಅವರು ‘The Discent of the Gnostic Being’ ‘The Emergence of the Superman’ ಎಂದುಕೊಳ್ಳುವ, ಅಥವಾ ನಾವು ಗೀತೆಯಲ್ಲಿ ಪ್ರಜ್ಞಾಪ್ರತಿಷ್ಠಿತಾ ಅಥವಾ ಬ್ರಾಹ್ಮೀಸ್ಥಿತಿ ಎನ್ನುವ ಮಾತಿನಲ್ಲಿ, ಅಥವಾ ಕರ್ಮಯೋಗಿ ಎನ್ನುವ ರೂಪದಲ್ಲಿ ಮತ್ತು ಅದರ ಸಂಪೂರ್ಣಾರ್ಥದಲ್ಲಿ ಅದೇ ಸತ್ಯವನ್ನು ಕಾಣುತ್ತೇವೆ. ಅಂದರೇನು? ಈ ರಾಮಾಯಣ ವಾಚನ, ಈ ರಾಮಾಯಣದ ಪ್ರಕಟನೆ, ಈ ರಾಮಾಯಣದ ಆರಾಧನೆ, ರಾಮಾಯಣದ ತತ್ತ್ವಶಕ್ತಿಗಳ ಉಪಾಸನೆ ಮತ್ತು ಸಾಧನೆ, ಇವು ಬರಿಯ ಆಧ್ಯಾತ್ಮಿಕ ಕ್ಷೇಮವನ್ನು ಮಾತ್ರ ತಂದುಕೊಡುತ್ತವೆ ಎಂದಲ್ಲ. ಧರ್ಮ, ಅರ್ಥ, ಕಾಮ, ಎಲ್ಲವನ್ನೂ ನಮಗೆ ತಂದುಕೊಡಬಲ್ಲವು. ಅಂದರೇನು? ರಾಜಕೀಯವಾಗಿ ಹೊಸಹೊದಾಗಿ ಕಾನೂನು ಮೊದಲಾದುವುಗಳನ್ನು ಅಥವಾ ರಾಜ್ಯಾಂಗಘಟನೆಯನ್ನು ನಿರ್ಮಾಣಮಾಡಿದರೆ ಏನು ಕೆಲಸವಾಗುತ್ತದೆಯೊ ಅದಕ್ಕಿಂತಲೂ ಇನ್ನೂ ಅತಿಶಯವಾದ ಕಾರ್ಯ ಇಂತಹ ಮಹಾಕೃತಿಗಳಿಂದ ಆಗಬಲ್ಲದು. ಏಕೆಂದರೆ ನಾವೇನೊ ಈಗ ರಾಜಕೀಯವಾಗಿ ಅಖಿಲ ಭರತಖಂಡವನ್ನು ಒಂದುಮಾಡಿದ್ದೇವೆ ಎಂಬ ಅಭಿಪ್ರಾಯ ಇಟ್ಟುಕೊಂಡಿದ್ದೇವೆ. ಆದರೆ ಈ ರಾಜಕೀಯದ ಅಂತರಾಳದಲ್ಲಿ, ಎಂದರೆ ಅದರ ಮೂಲದಲ್ಲಿ, ಒಂದು ಸಾಂಸ್ಕೃತಿಕ ಐಕ್ಯತೆಯಿಲ್ಲದಿದ್ದರೆ ಎಷ್ಟು ಸೈನ್ಯವನ್ನು ಇಟ್ಟು ಈ ರಾಜಕೀಯ ಭದ್ರತೆಯನ್ನು ರಕ್ಷಿಸಬಲ್ಲಿರಿ? ವಾಲ್ಮೀಕಿ, ವ್ಯಾಸ, ಕಾಳಿದಾಸ, ವೇದ ಉಪನಿಷತ್ತುಗಳು, ದೇಶಭಾಷೆಗಳಲ್ಲಿ ಇವುಗಳನ್ನು ಪ್ರತಿಬಿಂಬಿಸುವ ಮತ್ತು ಪುಷ್ಟಿಗೊಳಿಸುವ ಇತರ ಹಲವಾರು ಕೃತಿಗಳು – ಇವು ನಮ್ಮ ನಿತ್ಯ ಮಂತ್ರಿಮಂಡಲಗಳಾಗಿ, ನಮ್ಮನಿತ್ಯ ಅಧ್ಯಕ್ಷರಾಗಿ ಭರತಖಂಡದ ಐಕ್ಯತೆಯನ್ನು ಸಾಧಿಸುತ್ತಾ ಇವೆ, ರಕ್ಷಿಸುತ್ತಾ ಇವೆ. ಆ ಶಕ್ತಿಗಳ ಪ್ರತೀಕವಾಗಿ ಪ್ರತಿಮೆಗಳಾಗಿ ಮಹಾತ್ಮಾ ಗಾಂಧೀಜಿ, ನೆಹರು ಮೊದಲಾದವರು ಇರಬಹುದು. ಆದರೆ ಆ ಮೂಲಶಕ್ತಿಗಳು ಇಲ್ಲದಿದ್ದರೆ ಪಾಶ್ಚಾತ್ಯ ರಾಜಕೀಯ ಭಾವನೆಗಳಿಂದ ಮಾತ್ರವೇ ಇದನ್ನು ಸಂಘಟಿಸುತ್ತೇವೆ ಎನ್ನುವುದು ಬರಿಯ ಭ್ರಾಂತಿ. ಆದ್ದರಿಂದಲೆ ಮಹಾತ್ಮಾ ಗಾಂಧೀಜಿ ನಮಗೆ ರಾಜಕೀಯ ಸ್ವಾತಂತ್ರ್ಯವನ್ನು ತಂದು ಕೊಡುವುದರಲ್ಲಿ ತಮ್ಮ ಜೀವನದಲ್ಲಿಯೆ ಈ ತತ್ತ್ವಗಳನ್ನು ಸಾಧಿಸಿ ಹೋಗಿದ್ದಾರೆ.

ಬಹುಶಃ ಆ ಶಕ್ತಿಯ ಅನೇಕ ಬಾಹ್ಯಪ್ರಕಾರಗಳಲ್ಲಿ ಒಂದಾಗಿ ಇಂತಹ ರಾಮಾಯಣ ಪ್ರಕಟನೆಗಳು ನಡೆಯುತ್ತಾ ಇವೆ. ಬಹುಶಃ ಇದರ ಅರ್ಥ ಏನು, ವ್ಯಾಪ್ತಿ ಏನು ಎನ್ನುವುದು ವಯಸ್ಕರ ಶಿಕ್ಷಣಸಮಿತಿಗಾಗಲಿ ನನಗಾಗಲಿ ನಿಮಗಾಗಲಿ ಗೊತ್ತಿಲ್ಲದಿರಬಹುದು. ಆದರೆ ಅಪೂರ್ವ ಮುಹೂರ್ತಗಳಲ್ಲಿ ನಮ್ಮ ಕಲ್ಪನಾರೂಪವಾದ ಒಂದು ಮೇಧಾಶಕ್ತಿಗೆ ಆ ಶಕ್ತಿ ಅನುಸರಿಸುತ್ತಿರುವ ರೀತಿ ವ್ಯಾಪಾರಗಳು ಸ್ವಲ್ಪಮಟ್ಟಿಗೆ ಸ್ಫುರಿಸುತ್ತವೆ, ಗೋಚರವಾಗುತ್ತವೆ. ರಾಮಾಯಣದ ಇಂದಿನ ಪ್ರಕಟಣೆ ಬರಿಯ ಒಂದು ಗ್ರಂಥ ಪ್ರಕಟಣೆ ಎಂಬ ಭಾವನೆ ಬೇಡ. ಇದು ಒಂದು ಶಕ್ತಿ ಸಂಸ್ಥಾಪನೆ, ಇದು ಒಂದು ವಿದ್ಯುದಾಗಾರ, ಇದು ಒಂದು ಶಾಂತಿಯ ಪರಮಾಶ್ರಯ, ನೆಲೆ. ಯಾವ ಸೈನ್ಯವೂ ಸಾಧಿಸಲಾರದುದನ್ನು ಇದು ಸಾಧಿಸುತ್ತದೆ, ಯಾವ ರಾಜಕೀಯವೂ ಕೈಗೂಡಿಸಲಾರದುದನ್ನು ಇದು ಬಹುಶಃ ಕೈಗೂಡಿಸುತ್ತದೆ ಎಂಬ ಮನೋ ಭಾವನೆಯಿಂದ ಇಲ್ಲಿ ನೆರೆದಿದ್ದೇವೆ. ಆದ್ದರಿಂದಲೆ ನಾನು ಹೇಳಿದ್ದು ‘ಭುವನ ವಂದನೀಯವಾದ ಪೂಜಾಕಾರ್ಯಕ್ಕಾಗಿ ನೆರೆದಿದ್ದೇವೆ’ ಎಂದು.

ವಯಸ್ಕರಿಗೆ ಅಕ್ಷರ ಕಲಿಸುವುದೆಂದರೆ ಅವರು ಇದುವರೆಗೂ ಪ್ರಕೃತಿ ಸಹಜವಾಗಿಯೆ ಪಡೆದಿದ್ದ ಕೈ ಕಾಲು ಮೂಗು ಬಾಯಿ ಕಣ್ಣು ಕಿವಿ ಮೊದಲಾದ ಇಂದ್ರಿಯಗಳ ಜೊತೆಗೆ, ಅವೆಲ್ಲವನ್ನೂ ಮೀರಿದ ಒಂದು ಅಂತರಿಂದ್ರಿಯದ ಸಂಪಾದನೆಗೆ ಅವರಿಂದ ಗುದ್ದಲಿಪೂಜೆ ಮಾಡಿಸಿದಂತೆ. ವಿದ್ಯಾದಾನದಿಂದ ಮನುಷ್ಯಚೇತನಕ್ಕೆ ಒಂದು ಹೊಸ ನಾಲಗೆ ಸೃಷ್ಟಿಯಾಗುತ್ತದೆ; ಅವನ ಬಾಳಿಗೊಂದು ಹೊಸ ಹಸಿವೆ ಹುಟ್ಟುತ್ತದೆ. ಆ ಹೊಸ ನಾಲಗೆಯಿಂದ ಅವನು ಅದುವರೆಗೂ ಕಾಣದಿದ್ದ, ಕಾಣಲಾರದಿದ್ದ, ಒಂದು ಹೊಸ ರುಚಿಯನ್ನು ಅನುಭವಿಸಲು ಸಮರ್ಥನಾಗುತ್ತಾನೆ. ಮನಸ್ಸಿನ ಆ ಹೊಸ ಹಸಿವೆ ಒಂದು ಹೊಸ ಆಹಾರವನ್ನು ಅಪೇಕ್ಷಿಸುತ್ತದೆ. ಅನ್ನಮಯದ ಹೊಟ್ಟೆ ಅನ್ನವನ್ನು ಬಯಸುವಂತೆ ಮನಸ್ಸಿನ ಹಸಿವು ಮನೋಮಯದ ಆಹಾರವನ್ನು ಹುಡುಕುತ್ತದೆ. ಹೊಸ ರುಚಿಯನ್ನೂ ಹೊಸ ಹಸಿವನ್ನೂ ಹುಟ್ಟಿಸುವಾತನು ಅದಕ್ಕೆ ಅರ್ಹನಾದ ರಸವನ್ನೂ ಅನ್ನವನ್ನೂ ಒದಗಿಸದಿದ್ದರೆ ಲೇಸನೆಸಗಲುಹೋಗಿ ಹೋಗಿ ಕೇಡು ಮಾಡಿದಂತಾಗುತ್ತದೆ. ಏಕೆಂದರೆ ಸವಿಯಬಾರದುದನ್ನು ಸವಿದು, ತಿನ್ನಬಾರದುದನ್ನು ತಿಂದು, ಹೊಸದಾಗಿ ಸಾಕ್ಷರನಾದವನ ಚೇತನ ಮೇಲಕ್ಕೇರುವ ಬದಲು ಕೆಳಕ್ಕಿಳಿದು, ನಾಶವಾಗುವುದರ ಜತೆಗೆ ವಿನಾಶಕರವೂ ಆಗಿ, ರಾಕ್ಷಸವಾಗುವ ಸಂಭವವುಂಟು. ಆದ್ದರಿಂದ ಅಕ್ಷರಪ್ರಚಾರದಷ್ಟೇ ಮುಖ್ಯವಾಗುತ್ತದೆ ಅದಕ್ಕೆ ಅವಶ್ಯಕವೂ ಅರ್ಹವೂ ಅನ್ವಿತವೂ ಆರೋಗ್ಯಕರವೂ ಆಗಿರುವ ಸಾಹಿತ್ಯಸೃಷ್ಟಿ.

ಹೊಸದಾಗಿ ಓದು ಕಲಿತ ನಮ್ಮ ಜನ “ಸ್ವಾಮಿ, ಓದುವುದನ್ನೇನೋ ಕಲಿಸಿಕೊಟ್ಟಿರಿ. ಏನೇನೋ ಪುಸ್ತಕಗಳನ್ನೂ ಓದುವುದಕ್ಕೆ ಕೊಡುತ್ತಿದ್ದೀರಿ. ಆದರೆ ರಾಮಾಯಣ ಮಹಾಭಾರತಗಳನ್ನು ಓದದಿದ್ದ ಮೇಲೆ ಓದನ್ನೇಕೆ ಕಲಿಯಬೇಕು? ಸಂತೋಷದ ಜೊತೆಗೆ ಪುಣ್ಯವೂ ಬರುತ್ತಿತ್ತು ನಮಗೆ. ಓದು ಕಲಿತುದಕ್ಕೆ ನಮ್ಮ ಜನ್ಮ ಸಾರ್ಥಕವಾಗುತ್ತಿತ್ತು” ಎಂದು ಹೇಳಿದರೆಂದು ವಯಸ್ಕರ ಶಿಕ್ಷಣ ಸಮಿತಿಯವರಿಂದ ಕೇಳಿದಾಗ ನಾನು ತುಂಬಾ ಹಿಗ್ಗಿದೆ. ‘ಧನ್ಯ ನಮ್ಮ ಜನ: ಸಾರ್ಥಕ ಅವರ ಬಾಳು!’ ಎಂದುಕೊಂಡು, ಜನಪ್ರಿಯವಾಗು ವಂತೆಯೂ ವಾಲ್ಮೀಕಿ ರಾಮಾಯಣದ ಕಥೆಯ ಮೈ ಒಂದಿನಿತೂ ಅತ್ತ ಇತ್ತ ಇಗಿ ಕೆಡದಂತೆಯೂ ಸಾಧ್ಯವಾದಮಟ್ಟಿಗೆ ಸುಲಭವಾದ ಗದ್ಯದಲ್ಲಿ ರಾಮಾಯಣವನ್ನು ಬರೆಯಲೊಪ್ಪಿದೆ. ಹಲವು ಗೆಳೆಯರ ಹಲವು ತೆರನಾದ ನೆರವಿನಿಂದಾಗಿ ಅದು ‘ಜನಪ್ರಿಯ ವಾಲ್ಮೀಕಿ ರಾಮಾಯಣ’ವಾಗಿ ಈಗ ಸಿದ್ಧವಾಗಿದೆ. ಹೆಸರು ನನ್ನೊಬ್ಬನದೇ ಇದ್ದರೂ ಅವರೆಲ್ಲರ ಉಸಿರೂ ನನ್ನುಸಿರಿಗೆ ಬೆಂಬಲವಾಗಿರುವುದನ್ನು ನಾನು ಮರೆಯಲಾರೆ. ಆ ಕೃತಜ್ಞತೆಯ ಸಂಕೇತವಾಗಿ ಇದರಿಂದ ಒದಗುವ ಎಲ್ಲ ಶ್ರೇಯಸ್ಸನ್ನೂ ಅವರೆಲ್ಲರ ಶ್ರೇಯಸ್ಸಿಗಾಗಿ ಸಮರ್ಪಿಸುತ್ತೇನೆ.

ನಮ್ಮ ಜನರ ಬಾಳು ಮೇಲೆ ಮೇಲೆ ಎಷ್ಟು ಕೆಟ್ಟಂತೆ ಕಾಣುತ್ತಿದ್ದರೂ ಅದರ ಅಂತ ರಾಳದಲ್ಲಿ ಪೂರ್ವಿಕರ ಪುಣ್ಯದ ತಪಃಪ್ರಭಾವದ ನಂದಾದೀಪ ನಂದದೆ ಮಿನುಗುತ್ತಿದೆಯೆಂದು ತೋರುತ್ತದೆ. ಇಲ್ಲದಿದ್ದರೆ ಅಕ್ಷರ ಕಲಿತವರು ಕಾಸಿನಕಾದಂಬರಿಗಳನ್ನೂ ರೋಮಾಂಚಕರವಾದ ನವೀನ ಚಲಚ್ಚಿತ್ರ ಶೃಂಗಾರ ಕಥಾನಕಗಳನ್ನೂ ಅಪೇಕ್ಷಿಸುವ ಬದಲು – ಅಥವಾ ಅಪೇಕ್ಷಿಸುವುದರ ಜೊತೆಗೆ ಎಂದಾದರೂ ಚಿಂತೆಯಿಲ್ಲ – ರಾಮಾಯಣ ಮಹಾಭಾರತಗಳಂತಹ ಹಳೆಯ ‘ಕಗ್ಗದ ಪುರಾಣಕಥೆಗಳನ್ನು’ ಬಯಸುತ್ತಿದ್ದರೆ? ಏನಾದರಾಗಲಿ ಪಟ್ಟಣಿಗ ನಾಗರಿಕರನ್ನು ಮೆಚ್ಚಿ. ಅವರನ್ನು ಎಲ್ಲದರಲ್ಲಿಯೂ ಅನುಕರಿಸಿ ಶ್ರೇಷ್ಠತೆಗೇರಬೇಕೆಂಬ ಗೀಳು ಈ ಒಂದು ವಿಚಾರದಲ್ಲಿ ಹಳ್ಳಿಯವರಿಗಿನ್ನೂ ಸಂಪೂರ್ಣವಾಗಿ ಸೋಂಕಿಲ್ಲ ಎಂದು ಸಮಾಧಾಣವಾಗುತ್ತದೆ. ಅದೂ ಸೋಂಕಾಗಿಬಿಡುವ ಮೊದಲೇ ಅವರು ಹೊಸದಾಗಿ ಪಡೆದ ಓದಿನ ರುಚಿ ಕೆಸರುಹಾದಿಗೆ ಬೀಳದಂತೆ ನೋಡಿಕೊಳ್ಳುವುದು ನಾಡಿನ ಒಳ್ಪಿಗೆ ಅತ್ಯಂತ ಅವಶ್ಯಕ ಕರ್ತವ್ಯ.

ಅಂತಹ ಉತ್ಥಾನದ ಮತ್ತು ಉದ್ಧಾರದ ಕಾರ್ಯಕ್ಕೆ ಆಶೀರ್ವಾದವೂ ಶಕ್ತಿಯೂ ಆಗಿ ನಮಗೆ ನೆರವಾಗುವ ದಿವ್ಯಗ್ರಂಥಗಳಲ್ಲಿ ರಾಮಾಯಣ ಮಹಾಭಾರತಗಳಿಗಿಂತಲೂ ಉತ್ತಮವೂ ಜನಪ್ರಿಯವೂ ಆಗಿರುವ ಚಿರಕೃತಿಗಳು ಮತ್ತಾವಿವೆ?

ರಾಮಾಯಣ ಆದಿಕಾವ್ಯ; ಅದರ ಕವಿ ಆದಿಕವಿ. ಆತನು ಮಹರ್ಷಿಯೂ ಆಗಿರುವುದರಿಂದ ದ್ರಷ್ಟಾರನೂ ಅಹುದು. ಆತನ ಪೂರ್ಣದೃಷ್ಟಿ ಲೋಕಾತಿಕ್ರಾಂತ ಗೋಚರವೂ ಆಗಿರುವುದರಿಂದ ಆತನು ಕ್ರಾಂತದರ್ಶಿ. ಮತ್ತು ಅವನ ಪ್ರತಿಭೆ ನಿತ್ಯಸತ್ಯ ಸಂಸ್ಪರ್ಶಿ. ಆ ಋಷಿಕವಿ ವಾಲ್ಮೀಕಿಯ ಸಮುದ್ರೋಪಮವಾದ ಮಹಾಗಾನಕ್ಕೆ ಜಗತ್ತು ಮಹಾಕಾವ್ಯದ ಪಟ್ಟಕಟ್ಟಿದೆ. ಏಕೆಂದರೆ ರಾಮಾಯಣವು ಪುರಾಣವಾದರೂ ಅದೊಂದು ಬೃಹದ್ ಭಾವಗೀತೆಯಂತಿದೆ. ಅದು ಏಕಕವಿ ಕೃತಿಯೂ ಆಗಿದೆ; ಬಹುಕಾಲದ ಸಂಸ್ಕೃತಿಯ ಬಹು ದೊಡ್ಡ ಜನಾಂಗದ ಮನಃಕೃತಿಯೂ ಆಗಿದೆ. ಮೊದಲನೆಯ ಕಾರಣಕ್ಕಾಗಿ ಅದು ಭಾವಗೀತೆಯಂತಿದ್ದರೆ ಎರಡನೆಯ ಕಾರಣಕ್ಕಾಗಿ ಪುರಣದಂತಿದೆ. ಆದ್ದರಿಂದಲೆ ಅದಕ್ಕೆ ಮಹಾಕಾವ್ಯ ಎಂಬ ಬಿರುದು ಸರ್ವಾಂಗ ಸುಂದರವಾಗಿ ಒಪ್ಪುತ್ತದೆ. ಏಕಾಗ್ರತೆ, ಏಕಮುಖತೆ, ಐಕ್ಯತೆ, ರಾಗತೀಕ್ಷ್ಣತೆ, ಆದರ್ಶ ಪ್ರಿಯತೆ ರಸಾವೇಶ ಇವುಗಳ ದೃಷ್ಟಿಯಿಂದ ಅದೊಂದು ಭಾವಗೀತೆ. ವಿಪುಲತೆ, ಬಹುಳತೆ, ವಿವಿಧತೆ ದೇವತ್ವ, ದೈತ್ಯತ್ವ, ಮಹತ್ವ ಇವುಗಳ ದೃಷ್ಟಿಯಿಂದ ಅದೊಂದು ಪುರಾಣ. ಅದರ ಸೂತ್ರ ಭಾವಗೀತೆಯದು; ಗಾತ್ರ ಪುರಾಣದ್ದು. ಕವಿಕೋಕಿಲ ವಾಲ್ಮೀಕಿಯ ಹೈಮಾಚಲ ಸಂಗೀತದಲ್ಲಿ ಸರೋವರದ ಸೌಂದರ್ಯವಿದೆ: ಸರಿತ್ಪತಿಯ ಗಾಂಭೀರ್ಯವಿದೆ. ಚಾರುಲಾಲಿತ್ಯ ಮತ್ತು ರುಂದ್ರಭವ್ಯತೆ ಎರಡೂ ಸಮನ್ವಯಗೊಂಡಿರುವ ಆ ಮಹತ್ಕತಿ ಲೋಕಪೂಜಾಭಾಜನವಾಗಿರುವುದರಲ್ಲಿ ಏನಾಶ್ಚರ್ಯ?

ಅಂತಹ ಕವಿಯೂ ಅಂತಹ ಕೃತಿಯೂ ನಮಗೆ ಲಭಿಸಿರುವುದು ನಮ್ಮ ಹೆಮ್ಮೆ, ನಮ್ಮ ಪುಣ್ಯ. ಮತ್ತೆ ಭುವನದ ಭಾಗ್ಯ! ಕವಿಯೂ ಕೃತಿಯೂ ಎಂದು ಬೇರೆ ಬೇರೆಯಾಗಿ ಹೇಳಿದರೂ ನಮ್ಮ ಪಾಲಿಗೆ ಅವೆರಡಕ್ಕೂ ಭೇದವಿಲ್ಲ. ಕವಿ ತನ್ನಕೃತಿಯಲ್ಲಿ ಲೀನವಾಗಿಹೋಗಿದ್ದಾನೆ, ಭಗವಂತನು ತನ್ನ ಸೃಷ್ಟಿಯಲ್ಲಿ ಒಂದಾಗಿರುವಂತೆ. ಲೋಕಸಂಗ್ರಹಕ್ಕಾಗಿ ಕವಿಯೇ ಕೃತಿಯಾಗಿ ಅವತರಿಸಿದ್ದಾನೆ. ಕವಿಯ ಜೀವನಕಥೆಯೂ ರಾಮಾಯಣದಲ್ಲಿ ಒಂದಂಶವಾಗಿಬಿಟ್ಟಿದೆ. ಅವನ ಜೀವಿತಕ್ಷೇತ್ರದಿಮದಲೆ ಅದು ಹೊಮ್ಮಿ ಬೆಳೆಯುತ್ತದೆ. ಅವನ ಬಾಳಿನ ಸರ್ವಸ್ವದ ಸಾರಸ್ವರೂಪವಾಗಿ ಅದು ಮೈವೆತ್ತು ನಿಂತಿದೆ. ನಿಷಾದನಾಗಿದ್ದ ಆತನನ್ನು ಮಹರ್ಷಿತ್ವಕ್ಕೆ ಏರಿಸಿದೆ. ವ್ಯಾಧನನ್ನು ಆದಿಕವಿಯನ್ನಾಗಿ ಪರಿವರ್ತಿಸಿದೆ. ವಾಲ್ಮೀಕಿ ರಾಮಾಯಣವನ್ನು ರಚಿಸುತ್ತಿದ್ದಾಗಲೆ ರಾಮಾಯಣವೂ ವಾಲ್ಮೀಕಿಯನ್ನು ಸೃಜಿಸುತ್ತಿತ್ತು, ಕಡೆಯುತ್ತಿತ್ತು ಪಡೆಯುತ್ತಿತ್ತು. ಗುರುವಿನ ಅನುಗ್ರಹವೂ ಭಗವಂತನ ಕೃಪೆಯೂ ದೊರೆತರೆ ಬೇಡನಂತಹ ಸಾಮಾನ್ಯನೂ ಮಹರ್ಷಿಯಂತಹ ಮಹೋನ್ನತಿಗೆ ಏರಬಹುದು ಎಂಬುದಕ್ಕೆ ವಾಲ್ಮೀಕಿಯ ಜೀವನಕಥೆಯ ಒಂದು ಆಶಾದಾಯಕ ಅಗ್ನಿಸಾಕ್ಷಿಯಾಗಿದೆ.

ವಾಲ್ಮೀಕಿ ನಿಷಾದರ ಕುಲದಲ್ಲಿ ಹುಟ್ಟಿದನು.

ನಿಷಾದರು ಅತ್ಯಂತ ಅಜ್ಞರೆಂದಾಗಲಿ ಕ್ರೂರಿಗಳಾದ ಕಾಡುಜನರೆಂದಾಗಲಿ ಭಾವಿಸಬೇಕಾಗಿಲ್ಲ. ಶ್ರೀರಾಮನ ಪ್ರಿಯಸ್ನೇಹಿತನಾದ ಗುಹನೂ ಬೇಡರ ದೊರೆ ಎಂಬುದನ್ನು ಗಮನಿಸಿದರೆ ನಿಷಾದರಿಗೂ ಅವರ ನೆಲದ ಕುಲದ ವಿದ್ಯೆ ಸಂಸ್ಕೃತಿ ಇದ್ದುವೆಂದು ಒಪ್ಪಿಕೊಳ್ಳಬೇಕಾಗುತ್ತದೆ.

ವ್ಯಾಧರ ಕುಲದಲ್ಲಿ ಹುಟ್ಟಿದ ವಾಲ್ಮೀಕಿ ವ್ಯಾಧವೃತ್ತಿಯಿಂದಲೆ ಬಾಳುತ್ತಿದ್ದನೆಂದರ ಅಧರ್ಮವೂ ಅಲ್ಲ, ಆಶ್ಚರ್ಯವೂ ಅಲ್ಲ. ಅರಣ್ಯಗಳಲ್ಲಿ ಬಿಲ್ಲುಬಾಣ ಕತ್ತಿ ಈಟಿಗಳನ್ನು ಹಿಡಿದು ತನ್ನವರ ಕೂಡೆ ನಡೆದು ಹುಲಿ ಸಿಂಹ ಆನೆ ಕಡವೆ ಮಿಗ ಮೊದಲಾದ ವನ್ಯಜಂತುಗಳನ್ನು ಬೇಟೆಯಾಡಿರಬೇಕು; ದಂತ ಚರ್ಮ ಉಗುರು ಮೊದಲಾದುವುಗಳನ್ನು ಶೇಖರಿಸಿರಬೇಕು. ಹೊಳೆ ಕೆರೆಗಳಲ್ಲಿ ಬಲೆ ಬೀಸಿಯೋ ಗಾಳ ಹಾಕಿಯೋ ಸಿಡಿಯೊಡ್ಡಿಯೋ ಮೀನು ಹಿಡಿದಿರಬೇಕು; ಈಸಾಡಿರಬೇಕು. ತರತರದ ಮರಗಳಲ್ಲಿ ತರತರದ ರುಚಿಯ ಹಣ್ಣುಹಂಪಲುಗಳನ್ನು ಕಿತ್ತಿರಬೇಕು; ವಿಧವಿಧವಾದ ಗಿಡಬಳ್ಳಿಗಳನ್ನು ಹುಡುಕಿ ಗೆಡ್ಡೆಗೆಣಸು ಗಳನ್ನು ಅಗೆದು ತನಗೂ ತನ್ನವರಿಗೂ ಆಹಾರ ಒದಗಿಸಿರಬೇಕು. ಬದುಕಿನ ಈ ಎಲ್ಲ ಅನಿವಾರ್ಯವಾದ ಲೌಕಿಕ ನಿಮಿತ್ತಗಳಿಂದಾಗಿ ವಾಲ್ಮೀಕಿ ಪ್ರಕೃತಿದೇವಿಯ ಸೌಂದರ್ಯದ ಸಾಮ್ರಾಜ್ಯದ ವಿವಿಧ ಸಂಪತ್ತುಗಳನ್ನು ವಿವರವಾಗಿ ಹೃದಯಂಗಮವಾಗಿ ಅನುಭವಿಸಿರಬೇಕು.

ಮೊದಲ ಕವಿಯಾಗುವ ತನ್ನ ಮೆಚ್ಚಿನ ಕಂದನನ್ನು ವ್ಯಾಧನನ್ನಾಗಿ ಹುಟ್ಟಿಸುವಂತೆ

ವಾಗ್ದೇವಿ ತನ್ನ ಪತಿಯನ್ನು ಪ್ರೇರಿಸಿದಳು ಎಂದು ತೋರುತ್ತದೆ. ಇಲ್ಲದಿದ್ದರೆ ರಾಮಾಯಣ ಈಗಿರುವುದಕ್ಕಿಂತಲೂ ಸಂಪೂರ್ಣವಾಗಿ ಅನ್ಯಪ್ರಕಾರದಲ್ಲಿ ನಮಗೆ ದೊರೆಯುತ್ತಿತ್ತು ಎಂದು ಧೈರ್ಯವಾಗಿ ಊಹಿಸಬಹುದು. ವಾಲ್ಮೀಕಿಯ ಬಾಲ್ಯ ಮತ್ತು ತಾರುಣ್ಯಕಾಲಗಳ ಅರಣ್ಯ ಪರಿಚಯದ ಪೂರ್ಣಫಲ ಅವನ ದಿವ್ಯಕೃತಿಯಲ್ಲಿ ಪ್ರತಿಫಲಿತವಾಗಿರುವುದನ್ನು ನಾವು ಕಾಣುತ್ತೇವೆ. ಆ ಕಾಡಿನ ಒಲವು, ಆ ಮರಮರದ ಗಿಡಗಿಡದ ಬಳ್ಳಿಬಳ್ಳಿಯ ಆತ್ಮೀಯವಾದ ಪರಿಚಯ, ಹೂವು ಹಕ್ಕಿ ಹಣ್ಣು ಮೊದಲಾದುವುಗಳ ಸೌಂದರ್ಯದಲ್ಲಿರುವ ಆ ಆವೇಶಪೂರ್ಣವಾದ ಆಸಕ್ತಿ, ಅವುಗಳ ಒಂದೊಂದು ವಿವರದಲ್ಲಿಯೂ ನಿಕಟವೂ ದೀರ್ಘವೂ ಆದ ಅನುಭವದಿಂದಲೆ ಒದಗುವ ಆ ರಸರುಚಿ, ಋತುಋತುಗಳಲ್ಲಿ ವ್ಯತ್ಯಸ್ತವಾಗುವ ಪ್ರಕೃತಿಸೌಂದರ್ಯದ ಆ ವಿವರಜ್ಞಾನ – ಇವು ವ್ಯಾಧ ವೃತ್ತಿಗಲ್ಲದೆ ಅಷ್ಟು ಆತ್ಮೀಯವಾಗಿ ಲಭಿಸುವುದು ಸುಲಭವಲ್ಲ. ವಾಲ್ಮೀಕಿಯ ನಾಳನಾಳಗಳಲ್ಲಿ ಬಾನು ಮುಗಿಲು ಬೆಟ್ಟ ಕಾಡು ಮಿಗ ಹಕ್ಕಿ ಮಳೆ ಬಿಸಿಲು ಚಳಿ ಮಂಜು ಬೆಳಗು ಬೈಗು ನೇಸರ ತಿಂಗಳು ಇವೆಲ್ಲವೂ ನೆತ್ತರವಾಗಿ ಹರಿಯುತ್ತಿರುವುದು ಅವನು ನಿಷಾದನಾಗಿ ಸಂಭವಿಸಿದ ಪುಣ್ಯದಿಂದಲ್ಲದೆ ಬೇರೆ ಅಲ್ಲ.

ಹೀಗೆ ಹುಟ್ಟಿನಿಂದಲೆ ಕವಿಯಾಗಿದ್ದ ವ್ಯಾಧರ ತರುಣನಿಗೆ ‘ನಾರದ’ ರಂತಹ ಗುರುವಿನ ಅನುಗ್ರಹವೂ ದೊರೆಯಿತು. ನಾರದ ಎಂಬ ಮಾತಿಗೆ ಜ್ಞಾನವನ್ನು ದಯಪಾಲಿಸುವಾತನು ಎಂಬರ್ಥವಿರುವುದನ್ನು ಗಮನಿಸಿದರೆ ಯಾವ ದಿವ್ಯ ಗುರುವನ್ನಾದರೂ ಕಾವ್ಯದ ಪ್ರತಿಮಾವಿಧಾನ ಆ ಹೆಸರಿನಿಂದ ಕರೆಯುವುದರಲ್ಲಿ ಔಚಿತ್ಯವಿದೆ.

ಗುರುಕೃಪೆ ದೊರೆತ ಮೇಲೆ ಬೇಡರ ತರುಣನು ವಲ್ಮೀಕಾಶ್ರಮದಲ್ಲಿ ಪಾಠ ಪ್ರವಚನ ಅಧ್ಯಯನ ಧ್ಯಾನರೂಪವಾದ ಉಗ್ರತಪಸ್ಯೆಯಲ್ಲಿ ಹಲವು ವರ್ಷಗಳನ್ನು, ಹೆಚ್ಚಾಗಿ ಹೊರಗೆಲ್ಲಿಯೂ ಬಾರದೆ ತೋರದೆ, ಕಳೆದಿರಬೇಕು. ಅವನ ಮೇಲೆ ಹುತ್ತ ಬೆಳೆದಿತ್ತು ಎಂಬ ಪ್ರತಿಮೆಯಲ್ಲಿ ಅದು ಸೂಚಿತವಾಗುತ್ತದೆ. ಗುರುನಾರದರ ಪ್ರಸಾದದಿಂದ ರಾಮಮಂತ್ರ ಮತ್ತು ರಾಮಾಯಣದ ಕಥೆ ಎರಡರ ಸಿದ್ದಿಯೂ ದೊರೆತು ಕೊನೆಗೆ ವಾಕ್ಯವಿಶಾರದನಾದ ವ್ಯಾಧನು ಮಹರ್ಷಿಯಾದನು.

ಅಂತಹ ಅನರ್ಘ್ಯದಿವ್ಯವಾದ ಲೋಕೋತ್ತರ ರಸಭಾರದಿಂದ ಪರಿಪೂರ್ಣವಾಗಿದ್ದ ಅವನ ಕವಿಚೇತನ ಭುವನಭಾಗ್ಯಕಾರಣವಾಗಿ ಕಾವ್ಯ ರೂಪದಲ್ಲಿ ಅವತರಿಸುವುದಕ್ಕೆ ಒಂದು ನಿಮಿತ್ತಮಾತ್ರ ಘಟನೆ ಸಂಭವಿಸಿತು. ಒಮ್ಮೆ ಆತನು ತನ್ನ ಆಶ್ರಮದ ಬಳಿಯ ತಮಸಾನದಿಗೆ ಬೆಳಗಿನ ಹೊತ್ತು ಅಕರ್ದಮವೂ ರಮಣೀಯವೂ ಪ್ರಸನ್ನಾಂಬುವೂ ಆಗಿದ್ದ ತೀರ್ಥದಲ್ಲಿ ಮೀಯಲು ಹೋಗಿದ್ದನು. ಕ್ರೌಂಚ ಪಕ್ಷಿಗಳೆರಡು ಅಲ್ಲಿಯ ವಿಪುಲ ವನವಿಸ್ತೀರ್ಣದ ಮೇಲುಗಡೆ ತಿಳಿಯಾದ ವಾಯುಮಂಡಲದಲ್ಲಿ ಉಲಿದು ಹಾರಾಡುತ್ತಿದ್ದುವು, ತಮ್ಮ ದಾಂಪತ್ಯಮಾಧುರ್ಯವನ್ನು ಲೋಕಕ್ಕೆ ತೋರಿ ಸಾರುವಂತೆ. ವಾಲ್ಮೀಕಿ ರಸಸುಖಪುಲಕಿತನಾಗಿ ಅವುಗಳ ಆನಂದಲ್ಲಿ ಭಾಗಿಯಾಗಿ ನೋಡುನೋಡುತ್ತಿದ್ದಂತೆಯೇ ಮರಗಳ ಮರೆಯಲ್ಲಿ ಹೊಂಚಿದ್ದ ಬೇಡನೊಬ್ಬನು ಬಿಟ್ಟ ಬಾಣಕ್ಕೆ ಗಂಡುಕೊಂಚೆ ಬಲಿಯಾಗಿ ರಕ್ತಮಯವಾಗಿ ಬಾಣಸಹಿತವಾಗಿ ಆತನ ಸಮೀಪದಲ್ಲಿಯೆ ಉರುಳಿತು. ಹೆಣ್ಣು ಹಕ್ಕಿ ಹಾರಾಡಿ ರೋದಿಸತೊಡಗಿತು. ವಾಲ್ಮೀಕಿಗೆ ಕರುಣವುಕ್ಕಿ ಸ್ವರ್ಧರ್ಮಚಾರಿಯಾದ ಆ ಶಬರನನ್ನು ಅಧರ್ಮಚಾರಿಯೆಂದು ಬಗೆದು ಇಂತು ಶಪಿಸಿದನು:

“ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ
ಯತ್ ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್‌!”

“ಹೇ ನಿಷಾದ, ಕಾಮಮೋಹಿತವಾದ ಕ್ರೌಂಚದಂಪತಿಯಲ್ಲಿ ಒಂದನ್ನು ಕೊಂದೆಯಲ್ಲಾ; ಎಂದೆಂದಿಗೂ ನಿನಗೆ ಏಳಿಗೆಯಾಗದಿರಲಿ!”

ಒಡನೆಯೆ ಋಷಿ ತನ್ನ ಕಠಿನವಾಕ್ಯಕ್ಕೆ ತಾನೆ ನೊಂದುಕೊಂಡು ‘ಹಕ್ಕಿಯ ದುಃಖಕ್ಕೆ ಮರುಗಿ ಕೋಪವಶನಾಗಿ ಏನುಮಾಡಿಬಿಟ್ಟೆ!’ ಎಂದು ತನ್ನ ವೈರ ಗ್ರಹಣಬುದ್ಧಿಗಾಗಿ ಪಶ್ಚಾತ್ತಾಪಪಟ್ಟು ಸಮೀಪದಲ್ಲಿದ್ದ ಶಿಷ್ಯನಿಗೆ ತಾನೆಂಬುದು ಶ್ಲೋಕಮಾತ್ರವಾಗಲಿ, ಶಾಪವಾಗುವುದು ಬೇಡ ಎಂಬ ಮನಸ್ಸಿನಿಂದ ಹೀಗೆ ಹೇಳಿದನಂತೆ:

“ಪಾದಬದ್ಧೋsಕ್ಷರ ಸಮಸ್ತಂತ್ರೀ ಲಯ ಸಮನ್ವಿತಃ
ಶೋಕಾರ್ತಸ್ಯ ಪ್ರವೃತ್ತೋ ಮೇ ಶ್ಲೋಕೋ ಭವತು ನಾನ್ಯಥಾ”

ನದೀತೀರ್ಥದಲ್ಲಿ ಯಥಾವಿಧಿಯಾಗಿ ಸ್ನಾಮಾಡಿ ಆಶ್ರಮಕ್ಕೆ ಹಿಂತಿರುಗಿ ಆ ಮಹರ್ಷಿ ಧ್ಯನಕ್ಕೆ ಕುಳಿತನು. ಆಗ ಲೋಕಕರ್ತನೂ ಸ್ವಯಂಪ್ರಭುವೂ ಚತುರ್ಮುಖನೂ ಮಹಾತೇಜನೂ ಆದ ಬ್ರಹ್ಮದೇವನು ಗೋಚರನಾಗಿ ತನ್ನ ಕೋಪಕ್ಕೂ ಕೊಟ್ಟ ಶಾಪಕ್ಕೂ ಚಿಂತಾಕ್ರಾಂತನಾಗಿದ್ದ ಮಹಾಮುನಿಗೆ ಸಮಾಧಾನ ಹೇಳಿ ಇಂತು ಆದೇಶವಿತ್ತನಂತೆ:

“ಶ್ಲೋಕ ಏವ ತ್ವಯಾ ಬದ್ದೋ ನಾತ್ರ ಕಾರ್ಯಾ ವಿಚಾರಣಾ
ಮಚ್ಛಂದಾದೇವ ತೇ ಬ್ರಹ್ಮನ್ ಪ್ರವೃತ್ತೇಯಂ ಸರಸ್ವತೀ
ರಾಮಸ್ಯ ಚರಿತಂ ಕೃತ್ಸ್ನಂ ಕುರು ತ್ವಮೃಷಿಸತ್ತಮ
ಧರ್ಮಾತ್ಮನೋ ಗುಣವತೋ ಲೋಕೇ ರಾಮಸ್ಯ ಧೀಮತಃ
ವೃತ್ತಂ ಕಥಯ ವೀರಸ್ಯ ಯಥಾ ತೇ ನಾರದಾಚ್ಛೃತಮ್
ರಹಸ್ಯಂ ಚ ಪ್ರಕಾಶಂ ಚ ಯದ್ವೃತ್ತಂ ತಸ್ಯ ಧೀಮತಃ
ರಾಮಸ್ಯ ಸಹಸೌಮೀತ್ರೇ ರಾಕ್ಷಸಾನಾಂ ಚ ಸರ್ವಶಃ
ವೈದೇಹ್ಯಾಶ್ಚೈವ ಯದ್ ವೃತ್ತಂ ಪ್ರಕಾಶಂ ಯದಿ ವಾ ರಹಃ
ಯಚ್ಚಾಪ್ಯವಿದಿತಂ ಸರ್ವ ವಿದಿತಂ ತೇ ಭವಿಷ್ಯತಿ
ನ ತೇ ವಾಗನೃತಾ ಕಾವ್ಯೇ ಕಾಚಿದತ್ರ ಭವಿಷ್ಯತಿ
ಕುರು ರಾಮಕಥಾಂ ಪುಣ್ಯಾಂ ಶ್ಲೋಕಬದ್ಧಾಂ ಮನೋರಮಾಮ್
ಯಾವತ್ ಸ್ಥಾಸ್ಯಂತಿ ಗಿರಿಯಃ ಸರಿತಶ್ಚ ಮಹೀತಲೇ
ತಾವತ್ ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ
ಯಾವತ್ ರಾಮಾಯಣಕಥಾ ತ್ವತ್ ಕೃತಾ ಪ್ರಚರಿಷ್ಯತಿ
ತಾವದೂರ್ಧ್ವಮಧಶ್ವ ತ್ವಂ ಮಲ್ಲೋಕೇಷು ನಿವತ್ಸ್ಯಸಿ”

“ನೀನು ಆ ವಿಷಾದನನ್ನು ಕುರಿತೆಂದುದರಲ್ಲಿ ಒಂದು ಶ್ಲೋಕ ರಚಿತವಾಗಿದೆ. ಅದಕ್ಕಾಗಿ ಶೋಕವೇಕೆ? ಆ ನನ್ನ ಛಂದಸ್ವರೂಪಿಣಿ ಸರಸ್ವತಿಯೆ ನನ್ನಲ್ಲಿ ಅವತರಿಸಿದ್ದಾಳೆ. ಧೀಮಂತನೂ ಧರ್ಮಾತ್ಮನೂ ವೀರನೂ ಆ ಚರಿತೆಯಲ್ಲಿ ಲೋಕಕ್ಕೆ ಗೋಚರವಾಗುವಂತೆ ಪ್ರಕಾಶವಾದ ವೃತ್ತವಾಗಲಿ ಯಾರ ಚಿತ್ತವಾಗಲಿ. ಸೀತಾ ರಾಮಲಕ್ಷ್ಮಣರಿಗೆ ಸಂಬಂಧಪಟ್ಟಿರಲಿ ರಾಕ್ಷಸರಿಗೆ ಸಂಬಂಧಪಟ್ಟಿರಲಿ, ಯಾರ ವೃತ್ತವಾಗಲಿ ಯಾರ ಚಿತ್ತವಾಗಲಿ ಎಲ್ಲವೂ ನಿನಗೆ ಸಂಪೂರ್ಣವಾಗಿ ದರ್ಶನ ಪ್ರತ್ಯಕ್ಷವಾಗುತ್ತದೆ. ನಿನ್ನ ವಾಣಿಯಲ್ಲಿ ಅನೃತವೆಂಬುದು ಒಂದಿನಿತೂ ಪ್ರವೇಶಿಸುವುದಿಲ್ಲ. ಪೃಥ್ವಿಯಲ್ಲಿ ಎಲ್ಲಿಯವರೆಗೆ ಗಿರಿನದಿಗಳಿರುತ್ತವೆಯೊ ಆ ವರೆಗೆ ಲೋಕಲೋಕಗಳಲ್ಲಿ ರಾಮಾಯಣ ಕಥೆ ಪ್ರಚುರವಾಗಿರುತ್ತದೆ. ಎಲ್ಲಿಯ ವರೆಗೆ ನಿನ್ನ ರಾಮಾಯಣ ಕಥಾಕೃತಿ ಪ್ರಚುರವಾಗಿರುತ್ತದೆಯೊ ಅಲ್ಲಿಯ ವರೆಗೆ ನೀನು ನನ್ನ ಕೃತಿಯಾಗಿರುವ ಈ ಮೇಲಣ ಮತ್ತು ಕೆಳಗಣ ಹದಿನಾಲ್ಕು ಲೋಕಗಳಲ್ಲಿಯೂ ಸರ್ವವ್ಯಾಪ್ತಿಯಾಗಿ ಸರ್ವತೋಮುಖವಾಗಿ ಸರ್ವೋದಯಕಾರಣನಾಗಿ ಸರ್ವರಸಾನಂದರೂಪನಾಗಿ ಇರುತ್ತೀಯೆ. ”

ಬ್ರಹ್ಮನ ಪ್ರತ್ಯಕ್ಷದ ಮತ್ತು ಆದೇಶದ ಈ ಪ್ರತಿಮೆಯಲ್ಲಿ ಇಂಗಿತವಾಗಿರುವ ದರ್ಶನ ಧ್ವನಿಯನ್ನು ನಾವು ಹೃದಯತಃ ಅರಿಯಬೇಕು. ಬ್ರಹ್ಮನ ಇಚ್ಛೆಯೆ ವಾಲ್ಮೀಕಿಯಲ್ಲಿ ಪ್ರವಹಿಸಿತು ಎಂಬುದರ ಸಂಪೂರ್ಣಾರ್ಥವನ್ನು ಮನನ ಮಾಡಬೇಕು. ಕವಿಕೃತಿ ಬ್ರಹ್ಮಕೃತಿ ಅಲ್ಲದಿದ್ದರೂ ಬ್ರಹ್ಮನು ಸಂಪೂರ್ಣವಾಗಿ ತನ್ನದನ್ನಾಗಿ ಒಪ್ಪಿಕೊಂಡದ್ದು ಎಂಬುದನ್ನು ಗ್ರಹಿಸಬೇಕು. ಅದಕ್ಕೆ, ಎಂದರೆ ಕವಿ ಕೃತಿಗೆ, ಕನಿಷ್ಠವೆಂದರೆ ಬ್ರಹ್ಮಕೃತಿಗೆ ಸಮನಾದ ಗೌರವ ಸಲ್ಲುತ್ತದೆ. ‘ಯಾವತ್ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ ತಾವತ್ ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ’ ಎಂಬಲ್ಲಿ ಬ್ರಹ್ಮಕೃತಿಗಳಾದ ಪರ್ವತಾರಣ್ಯನದಿಗಳಂತೆ ಕವಿಕೃತಿಯಾದ ರಾಮಾಯಣವೂ ಪ್ರಕೃತಿಯ ಸತ್ಯಾಂಶವಾಗಿರುತ್ತದೆ ಎಂಬ ಆಶ್ವಾಸನೆಯಿದೆ. ಅದಕ್ಕಿಂತಲೂ ಅತಿಶಯವಾಗಿ, ಈ ಪೃಥ್ವಿಯ ಪರ್ವತಾರಣ್ಯಗಳ ಸತ್ಯ ಈ ಒಂದು ಲೋಕದಲ್ಲಿ ಮಾತ್ರ ಪ್ರಚುರವಾಗಿರುವುದಾರೆ ಋಷಿಕವಿಕೃತಿಯ ಸತ್ಯ ಅನೇಕಲೋಕಚರವಾಗಿರುತ್ತದೆ ಎಂಬ ಅತೀಂದ್ರಿಯವೂ ಯೌಗಿಕವೂ ಆಗಿರುವ ಸತ್ಯಸ್ಯ ಸತ್ಯವೂ ಪ್ರತಿಬೋಧಿತವಾಗಿರುವಂತೆ ಭಾಸವಾಗುತ್ತದೆ, ‘ಮಹೀತಲೇ’ ‘ಲೋಕೇಷು’ ಎಂಬ ಪದಗಳಲ್ಲಿ ಮುಂದಿನ ಎರಡು ಪಂಕ್ತಿಗಳಲ್ಲಿ ಬ್ರಹ್ಮನಂತೆ ವಾಲ್ಮೀಕಿಯೂ ಲೋಕಲೋಕಾಂತರ ವ್ಯಾಪ್ತನಾಗಿರುತ್ತಾನೆ ಎಂಬ ಧ್ವನಿಯಿದೆ. ರಾಮಾಯಣ ಬರಿಯ ಲೌಕಿಕವಾದ ಚರಿತ್ರೆಯಂತಲ್ಲ ಎಂಬುದು ‘ರಹಸ್ಯಂ ಚ ಪ್ರಕಶಂ ಚ’ ಎಂಬಲ್ಲಿಯೂ ‘ಯಚ್ಚಾಪ್ಯ – ವಿದಿತಂ ಸರ್ವ ವಿದಿತಂ ತೇ ಭವಿಷ್ಯತಿ’ ಎಂಬಲ್ಲಿಯೂ ಸ್ಪಷ್ಟವಾಗುತ್ತದೆ. ಅಲ್ಲದೆ ಅದು ಸತ್ಯಾಧಾರವಿಲ್ಲದ ಬರಿಯ ಬಾಲಿಶ ಕಲ್ಪನಾವಿನೋದದ ಕಟ್ಟು ಕಥೆಯಂತೆ ಅನೃತಸೃಷ್ಟಿಯಲ್ಲ; ಅದೂ ಒಂದು ಋತಚಿದ್ವನ್ಯಾಸ. ವಾಲ್ಮೀಕಿಯ ಕೃತಿಯಲ್ಲಿ ಎಲ್ಲಿಯೂ ಸುಳ್ಳುಹೊಳ್ಳು ಹುಸಿ ಹೋಗುವುದಿಲ್ಲ. ಮಾತ್ರವಲ್ಲ, ಋಷಿಯ ವಾಕ್‌ಶಕ್ತಿ ಬ್ರಹ್ಮನ ವಾಕ್‌ಶಕ್ತಿಯಿಂದ ಸಮನ್ವಿತವಾಗಿರುವುದರಿಂದ ಅದು ಏನನ್ನು ‘ವಚಿಸಿ’ದರೂ ಅದು ‘ರಚಿತ’ವಾಗಿಯೆ ಸತ್ಯವಾಗುತ್ತದೆ. ‘ನ ತೇ ವಾಕ್ ಅನೃತಾ ಕಾವ್ಯೇ ಕಾಚಿದತ್ರ ಭವಿಷ್ಯತಿ’ ‘ಕಾವ್ಯವಾಗುವ ನಿನ್ನ ವಾಕ್ಕಿನಲ್ಲಿ ಅಪ್ಪಿ ತಪ್ಪಿಯೂ ಅನೃತವುಂಟಾಗುವುದಿಲ್ಲ’ ಎಂಬ ಬ್ರಹ್ಮವಾಣಿಯಲ್ಲಿ ಸುಸ್ಪಷ್ಟವಾಗಿದೆ, ಕವಿಕೃತಿಯ ಮೇಲೆ ಸಂಸ್ಥಾಪಿತವಾಗಿರುವ ಸಾಕ್ಷಾತ್ ಬ್ರಹ್ಮಮುದ್ರೆ.

ವಾಲ್ಮೀಕಿಯ ಕೃತಿ ಅದು ಹುಟ್ಟಿದಂದು ‘ಕವಿಕೃತಿ’ಯಾಗಿತ್ತು; ಇಂದು ‘ಪ್ರಕೃತಿ’ ಯಾಗಿದೆ. ಭಾರತೀಯರ ಬಾಳುವೆಯ ಲೋಕದಲ್ಲಿ ಪರ್ವತ, ಅರಣ್ಯ, ಸಮುದ್ರ, ಆಕಾಶಗಳಿರುವಂತೆ ರಾಮಾಯಣವೂ ‘ಇದೆ’. ಬಹುಶಃ ಅವುಗಳಿಗಿಂತಲೂ ಸುಸ್ಥಿರವಾಗಿ, ಸಮಧಿಕವಾಗಿ, ಸತ್ಯತರವಾಗಿ, ಬಾಹ್ಯಾಭ್ಯಂತರಗಳನ್ನೂ ಲೋಕಾಲೋಕಗಳನ್ನೂ ಆಕ್ರಮಿಸಿ, ವ್ಯಾಪಿಸಿ, ಸೃಷ್ಟಿಯ ವಿಕಾಸ ರೂಪವಾದ ಪರಿಣಾಮಪಥದಲ್ಲಿ ಒಂದು ಪರಿವರ್ತನಾಸಮರ್ಥವಾದ ಸಾರಥಿ – ಶಕ್ತಿಯಾಗಿದೆ. ಪ್ರಕೃತಿಯ ಪರ್ವತಾರಣ್ಯಗಳನ್ನು ಯಥಾಶಕ್ತಿಯಾಗಿ ಉಪಯೋಗಿಸಿಕೊಳ್ಳುವಂತೆ ರಾಮಾಯಣವನ್ನೂ ಉಪಯೋಗಿಸಿಕೊಳ್ಳಬಹುದು. ಆ ಪರ್ವತದ ಬಂಡೆಗಳಲ್ಲಿ ಸಾಮರ್ಥ್ಯವಿರುವವರು ಯಾರುಬೇಕಾದರೂ ತಮ್ಮ ತಮ್ಮ ಪ್ರತಿಭೆಯ ಕಲ್ಪನಾಕೃತಿಗಳನ್ನು ಕಾಣಬಹುದು. ಶಿಲ್ಪಕೃತಿಗಳನ್ನು ಕಡೆಯಬಹುದು. ಆ ಅರಣ್ಯದ ಅಂಶದಿಂದ ತಮ್ಮ ತಮ್ಮ ದರ್ಶನಕ್ಕೆ ಅನುರೂಪವಾಗಿ ಎಂತಹ ನಂದನೋದ್ಯಾನಗಳನ್ನು ಬೇಕಾದರೂ ರಚಿಸಿಕೊಳ್ಳಬಹುದು. ವಾಲ್ಮೀಕಿಯ ದಿವ್ಯಕೃತಿ ಪ್ರಕೃತಿಯ ಮೂಲಭೂತ ವಸ್ತುಗಳಂತೆ, ಶಕ್ತಿಗಳಂತೆ, ಅಪೌರುಷೇಯವಾಗಿ ಹೋಗಿದೆ. ಆದ್ದರಿಂದಲೇ ಅದು ವೇದ ಪಟ್ಟಕ್ಕೂ ಏರಿದೆ.

ಕವಿಮಹರ್ಷಿ ಅಂದು ಹಾಡಿದ ರಾಮಾಯಣ ಇಂದು ಮತ್ತೊಮ್ಮೆ ನಮ್ಮಲ್ಲಿ ಮೂಡಿದ ಹೊರತು ಸಾರ್ಥಕವಾಗುವುದಿಲ್ಲ. ಏಕೆಂದರೆ ಕೃತಿಯ ರಸಾಸ್ವಾದನೆಯೂ ಕೃತಿರಚನೆಯಂತೆ ಒಂದು ಸೃಷ್ಟಿಕಾರ್ಯ. ಓದುವ ಅಥವಾ ಆಲಿಸುವ ನಮ್ಮ ಒಬ್ಬೊಬ್ಬರ ಹೃದಯದಲ್ಲಿಯೂ ರಾಮಾಯಣದ ಪುನಃಸೃಷ್ಟಿಯಾಗಬೇಕು. ಹಾಗೆ ಒಂದೊಂದು ಚೇತನದಲ್ಲಿಯೂ ರಾಮಾಯಣಾವತಾರವಾಗುವುದರಲ್ಲಿಯೆ ವಾಲ್ಮೀಕಿಯ ಕೃತಿ ಸಾರ್ಥಕತೆ ಪಡೆಯುತ್ತದೆ; ನಮ್ಮ ಬಾಳುವೆಗೂ ಪುರುಷಾರ್ಥ ಸಿದ್ಧಿಯಾಗುತ್ತದೆ.

ಅಂಹತ ರಸಸಾಧನೆಗೆ ನಮ್ಮ ಬೇಕಾದುದು ಲೌಕಿಕವಾದ ಪ್ರತಿಕೃತಿದೃಷ್ಟಿಯಲ್ಲ. ಸರ್ವಗ್ರಾಹಿಯಾದ ಪ್ರತಿಮಾದೃಷ್ಟಿ. [2] ಏಕೆಂದರೆ ರಾಮಾಯಣವು ಬರಿಯ ಲೌಕಿಕ ಚರಿತ್ರೆಯಲ್ಲ. ಲೀಲಾಸತ್ಯಗಳ ಹಿಂದಿರುವ ನಿತ್ಯಸತ್ಯಗಳನ್ನು ಪ್ರತಿಮಿಸುವ ಅದು ಒಂದು ದರ್ಶನ ಕೃತಿ. [3]

ಒಮ್ಮೆ ಆಗಿಹೋದ ಚರಿತ್ರೆ ಮತ್ತೆ ನಡೆಯಲಾರದು; ಆದರೆ ವಾಲ್ಮೀಕಿಯ ಮಹಾಕೃತಿ ಚರಿತ್ರೆಯಲ್ಲ, ಕಾವ್ಯ. ಅ ಚರಿತ್ರೆ ವಾಲ್ಮೀಕಿಯ ಚಿದ್ರಂಗದಲ್ಲಿ ನಡೆದದ್ದು. ಕಾಲದೇಶಾತೀತವಾಗಿರುವುದರಿಂದ ನಿರಂತರವಾಗಿ ನಡೆಯುತ್ತಿರುವ ಆ ಶಾಶ್ವತ ಘಟನಾಪರಂಪರೆ ಮತ್ತೆ ಇನ್ನಾವ ಸಹೃದಯನ ಚಿದುರಂಗದಲ್ಲಿಯಾದರೂ ಮತ್ತೆ ಮತ್ತೆ ನಡೆಯಬಹುದು.

ಅಕ್ಬರನ ಆಳ್ವಿಕೆಯೊಡನೆ ಆಂಜನೇಯನ ಸಮುದ್ರಲಂಘನವನ್ನು ಚಾರಿತ್ರಕವಾಗಿ ಹೋಲಿಸಿದರೆ ಎಂತಹ ಅವಿವೇಕವಾಗುತ್ತದೆ. ಒಂದು ಚರಿತ್ರೆ, ಮತ್ತೊಂದು ಕಾವ್ಯ. ಚರಿತ್ರೆ ಒಂದು ವೇಳೆ ಕವಿಯ ಅನುಭವವಾಗಿ ಕಾವ್ಯವಾಗಬಹುದು. ಆದರೆ ಕಾವ್ಯ ನಡೆದ ಚರಿತ್ರೆಯಾಗಲಾರದು. ಅದನ್ನು ಚರಿತ್ರೆ ಓದುವ ದೃಷ್ಟಿಯಿಂದ ಓದಬಾರದು. ಹಾಗೆ ಮಾಡಿದರೆ ಚರಿತ್ರೆಯ ಅಧ್ಯಯನದಿಂದ ಒದಗಬಹುದಾದ ಅಭ್ಯುದಯದಿಂದಲೂ ದೂರವಾಗಿ ಕಾವ್ಯಪಾರಾಯಣದಿಂದ ಲಭಿಸುವ ನಿಃಶ್ರೇಯಸದಿಂದಲೂ ವಂಚಿತರಾಗುವ ಉಭಯ ನಷ್ಟಕ್ಕೆ ಪಕ್ಕಾಗುತ್ತೇವೆ.

ವಾಲ್ಮೀಕಿಯ ರಾಮಾಯಣದಲ್ಲಿ ಲೋಕಚರಿತ್ರೆಯನ್ನು ಅರಸಿ ಕಾಣಲೆಳಸುವ ಸಂಶೋಧನೆಯ ವಿದ್ವತ್ತು, ಕಬ್ಬಿನಲ್ಲಿ ದೊಣ್ಣೆಯನ್ನು ಮಾತ್ರ ಕಾಣುವ ಗಾಂಪನಂತೆ, ಮುಖ್ಯ ಪ್ರಯೋಜನದಿಂದ ಸಂಪೂರ್ಣವಾಗಿ ವಂಚಿತವಾಗಿ, ತಾನೂ ದಾರಿತಪ್ಪಿ ದಿಕ್ಕುಗೆಡುವುದಲ್ಲದೆ ಇತರರನ್ನೂ ಕಂಗೆಡಿಸಿ ಹಾನೀಗೇಡು ಮಾಡುತ್ತದೆ. ಕಬ್ಬಿನಕೋಲಿನಲ್ಲಿ ದೊಣ್ಣೆಯತನ ಇಲ್ಲ ಎಂದಲ್ಲ. ಅದನ್ನು ಎಮ್ಮೆ ಹೊಡೆಯುವುದಕ್ಕೆ ಉಪಯೋಗಿಸಲು ಸಾಧ್ಯವಲ್ಲ ಎಂದೂ ಅಲ್ಲ. ಆದರೆ ಕಬ್ಬಿನ ಪ್ರಧಾನೋದ್ದೇಶ ರಸಮಾಧುರ್ಯ. ಅದರ ಮುಖ್ಯ ಸತ್ಯವೂ ಅದರ ಸಿಹಿಯಲ್ಲಿಯೆ ನಿಷ್ಠಿತ. ಬೆಲ್ಲವೆ ಅದರ ಸತ್ಯಸ್ಯ ಸತ್ಯ. ಉಳಿದುದೆಲ್ಲ ಮುಖ್ಯೋದ್ದೇಶ ಮತ್ತು ಪರಮ ಪ್ರಯೋಜನದ ದೃಷ್ಟಿಯಿಂದ ಅಪ್ರಕೃತ; ಹೊರಗೆಸೆಯಬೇಕಾದ ಹಿಪ್ಪೆ; ನೀರು ಕಾಯಿಸಲು ಬಚ್ಚಲೊಲೆಗೆ ಹಾಕಬಹುದಾದ ಅಳ್ಳಟ್ಟೆ. ಕಬ್ಬಿನಲ್ಲಿ ಅಳ್ಳಟ್ಟೆಯ. ಕಬ್ಬಿನಲ್ಲಿ ಅಳ್ಳಟ್ಟೆ ಇಲ್ಲವೆಂದಲ್ಲ; ಆ ಅಳ್ಳಟ್ಟೆ ಉಪಯೋಗಕ್ಕೆ ಬಾರದು ಎಂದೂ ಅಲ್ಲ. ಅದನ್ನೂ ಶೇಖರಿಸಿ ಕಟ್ಟಿಗೆ ಮಾಡಿ ಮಾರುವವರು ಮಾರಲಿ; ಅದಕ್ಕೂ ಬೆಲೆ ಇದೆ. ಆದರೆ ಅಂತಹರು ತಮ್ಮ ಅಳ್ಳಕಟ್ಟೆಯ ಸತ್ಯದಿಂದ ಬೆಲ್ಲವನ್ನು ಮಿಥ್ಯಗೊಳಿಸುವ ಆತ್ಮಹಾನಿಕರವಾದ ನಷ್ಟಕಾರ್ಯಕ್ಕೆ ಕೈ ಹಾಕಬಾರದು. ರಾಮಾಯಣದಲ್ಲಿ ಉತ್ತರ ದಕ್ಷಿಣ ಸಂಸ್ಕೃತಿಗಳ ಸಂಘಟ್ಟಣೆಯನ್ನಾಗಲಿ, ಆರ್ಯದ್ರಾವಿಡ ನಾಗರಿಕತೆಗಳಿಗೆ ಒದಗಿದ ಹೋರಾಟವನ್ನಾಗಲಿ ಕೆದಕುವುದು ವಾಲ್ಮೀಕಿಯ ಕಾವ್ಯೋದ್ದೇಶಕ್ಕೆ ಅನ್ಯ. ಕೈಕೆಯಂತಹರ ವರ್ತನೆಯನ್ನು ನಿರ್ಲಕ್ಷಿಸಿ ಅಯೋಧ್ಯೆಯ ಆರ್ಯರ ಸಾಮಾಜಿಕ ಸಂಸ್ಕೃತಿಯನ್ನು ರಾಮನ ಚಾರಿತ್ರದಿಂದ ಮಾತ್ರವೆ ಅಳೆಯುವುದೂ, ಆಂಜನೇಯನಂತಹರ ಮಹದ್ವ್ಯಕ್ತಿತ್ವವನ್ನು ಗಮನಿಸದೆ ಕಿಷ್ಕಿಂಧೆಯ ವಾನರ ಸಾಮಾಜಿಕ ಸಂಸ್ಕೃತಿಯನ್ನು ವಾಲಿ ತಾರೆಯರ ಚಾರಿತ್ರದಿಂದ ಮಾತ್ರವೆ ನಿರ್ಧರಿಸಲೆಳಸುವುದೂ, ವಿಭೀಷಣನಂತಹರ ಸಾತ್ವಿಕಶ್ರೀಯನ್ನು ಬೆನ್ಮರೆಗೆ ತಳ್ಳಿ ಲಂಕೆಯ ಸಂಸ್ಕೃತಿಯನ್ನು ರಾವಣನ ನಡೆತೆಯಿಂದ ಮಾತ್ರವೆ ನಿರ್ಣಯಿಸುವುದೂ ಲೌಕಿಕವಾದ ಐತಿಹಾಸಿಕ ಸಂಶೋಧನೆಗೂ ಮಾನ ತರುವ ರೀತಿಯಲ್ಲ!

ಒಮ್ಮೆ ದಕ್ಷಿಣೇಶ್ವರದ ಭವತಾರಿಣೀಯ ವಿಗ್ರಹವನ್ನು ಕುರಿತು ಮಾತನಾಡುತ್ತಾ ಅದರ ಅಂದ ಚೆಂದ ಕಲೆಗಳನ್ನು ಪ್ರಶಂಸಿಸುತ್ತಾ ನೆರೆದಿದ್ದ ಭಕ್ತರಲ್ಲೊಬ್ಬರು ಅದನ್ನು ಇಂತಹ ಶಿಲ್ಪಿ ಮಾಡಿದನೆಂದೂ ಆ ಕಲ್ಲುಇಂತಹ ಕಡೆಯಲ್ಲಿ ದೊರೆಯಿತೆಂದೂ ಅದು ಇಂತಹ ಜಾತಿಗೆ ಸೇರಿದ ಶಿಲೆಯೆಂದೂ ಆ ವಿಗ್ರಹದ ಚರಿತ್ರೆಯನ್ನು ವಿವರಿಸಿದರಂತೆ. ಆಲಿಸುತ್ತಾ ಕುಳಿತಿದ್ದ ಪರಮಹಂಸರು “ನನಗದೊಂದೂ ಗೊತ್ತಿಲ್ಲ. ನನಗವಳು ತಾಯಿ, ಜಗನ್ಮಾತೆ, ಚಿನ್ಮಯೀಭಗವತಿ!” ಎಂದು ಭಾವದಿಂದ ಕುಳಿತಲ್ಲಿಂದಲೆ ನಮಿಸಿದರಂತೆ. ಪರಮಹಂಸರಿಗೆ ಆ ವಿಗ್ರಹದ ಚಿನ್ಮಯತೆ ಪ್ರತ್ಯಕ್ಷಾನುಭೂತಿ. ಆದರೆ ಇತರರ ಭಾಗಕ್ಕೆ ಅದು ಅತಿಕ್ರಾಂತಗೋಚರ; ಅವರಿಗೆ ಅದು ಮೃಣ್ಮಯ. ಇತರ ವಸ್ತುಗಳಂತೆ ಅದೂ ಒಂದು ಮೃದ್ವಸ್ತು. ಅದಕ್ಕೊಂದು ಲೋಕಚರಿತ್ರೆಯಿದೆ. ಅದನ್ನೆ ಆ ಭಕ್ತರು ವಿವರಿಸಿದ್ದು. ಆ ವಿವರಣೆ ಅಸತ್ಯವಲ್ಲ. ಆ ಸ್ಥಾನದಲ್ಲಿ, ದೇವಸ್ಥಾನದಲ್ಲಿ ಅಪ್ರಕೃತ, ಅಷ್ಟೆ. ಆ ವಿಗ್ರಹ ಮ್ಯೂಸಿಯಂ ರೀತಿಯ ವಸ್ತು ಸಂಗ್ರಹಶಾಲೆಯಲ್ಲಾಗಲಿ ಅಥವಾ ಕಲಾಪ್ರದರ್ಶನ ಮಂದಿರದಲ್ಲಾಗಲಿ ಇದ್ದಿದ್ದರೆ ಆ ವಿವರಣೆ ಪರಮಸತ್ಯವೂ ಆಗಬಹುದಿತ್ತು. ಏಕೆಂದರೆ ಅಲ್ಲಿ ಆ ವಿಗ್ರಹದ ಉದ್ದೇಶ ಮತ್ತುಪ್ರಯೋಜನ ಅಷ್ಟರಲ್ಲಿಯೆ ಪರ್ಯವಸಾನವಾಗಿ, ಅಷ್ಟರಿಂದಲೆ ಪರಿಸಮಾಪ್ತಿಗೊಳ್ಳುತ್ತಿತ್ತು. ಆದರೆ ಇಲ್ಲಿ ಹಾಗಲ್ಲ. ಆ ವಿಗ್ರಹ ದೇವಸ್ಥಾನದಲ್ಲಿ ಪ್ರತಿಷ್ಠಿತವಾದಂದಿನಿಂದ ಅದರ ಉದ್ದೇಶ ಬೇರೆ, ಪ್ರಯೋಜನ ಬೇರೆ. ಅದು, ಅಲ್ಲ, ಆಕೆ ಚಿನ್ಮಯೀಭಗವತಿ. ಪೂಜೆ ಸಲ್ಲುವುದೂ ಕಲ್ಲಿನ ವಿಗ್ರಹಕಲ್ಲ; ಚಿನ್ಮಯೀಭಗವತಿಗೆ. ಭಕ್ತನು ಕಾಣಬೇಕಾದುದೂ ಕಲ್ಲಿನ ಪ್ರತಿಮೆಯನ್ನಲ್ಲ, ಚಿನ್ಮಯೀ ಮಾತೆಯನ್ನು, ಚಿನ್ಮಹೀ ಮಾತೆಯನ್ನು. ಎಲ್ಲರಿಗೂ ಹಾಗೆ ಕಾಣದಿರಬಹುದು. ಕಾಣಿಸದಿದ್ದಮಾತ್ರಕ್ಕೆ ಅವರು ಕಂಡದ್ದೇ, ಎಂದರೆ ಇಲ್ಲಿ ಕಲ್ಲಿನ ಪ್ರತಿಮೆಯೇ ಪರಮ ಸತ್ಯವಾಗುವುದಿಲ್ಲ. ಚಿನ್ಮಯೀಭಗವತಿಯನ್ನು ಕಾಣುವವರೆಗೂ ಬೆಳೆಯಬೇಕಾದ್ದು ಭಕ್ತನ ಕರ್ತವ್ಯ. ಕಲ್ಲಿನಲ್ಲಿ ಚಿನ್ಮಯೀಭಗವತಿಯನ್ನು ಕಾಣುವುದು ಎಂಬರ್ಥದಲ್ಲಿ ಅಲ್ಲ. ಕಲ್ಲುಕಾಣಲೇಬಾರದು. ಕಲ್ಲುಕಾಣಿಸುವುದೇ ಇಲ್ಲ. ಚಿನ್ಮಯೀಭಗ ವತಿಯೆ ಹೊರತು ಇನ್ನೇನೂ ಇರುವುದೂ ಇಲ್ಲ, ಕಾಣಿಸುವುದೂ ಇಲ್ಲ. ಆ ಅನುಭೂತಿಯ ಸಿದ್ದಿಯೆ ದೇವಸ್ಥಾನದಲ್ಲಿ ಭಗವತಿಯ ವಿಗ್ರಹವನ್ನು ಪ್ರತಿಷ್ಠಿಸಿದುದರ ಮುಖ್ಯೋ ದ್ದೇಶ. ಅದೇ ಪರಮ ಪ್ರಯೋಜನ. ಉಳಿದುದೆಲ್ಲ ಅನ್ಯ, ಅಪ್ರಕೃತ, ಅನರ್ಥ, ವ್ಯರ್ಥ.

ರಾಮಾಯಣದ ಮೂಲವಸ್ತುವಿನಲ್ಲಿ ಲೌಕಿಕವಾದ ಚರಿತ್ರೆ ಭೂಗೋಳಗಳೇನಾದರೂ ಇರಲಿ, ಭವತಾರಿಣಿಯ ವಿಗ್ರಹದ ಕಲ್ಲು ಅದಾವುದೊ ಬೆಟ್ಟದಲ್ಲಿ ಅದಾವುದೊ ಕೆರೆಯ ಪಕ್ಕದಲ್ಲಿ ಅದಾವುದೊ ಮರದ ಬುಡದಲ್ಲಿ ಸಿಕ್ಕಿದಂತೆ. ಆದರೆ ಸಹೃದಯರಾದ ನಮಗೆ ಅದೆಲ್ಲ ಸಂಪೂರ್ಣವಾಗಿ ಅಪ್ರಕೃತ, ಅನಾವಶ್ಯಕ; ರಸಾಸ್ವಾದನೆಯ ದೃಷ್ಟಿಯಿಂದಂತೂ ಅತ್ಯಂತ ತಿರಸ್ಕೃತ; ಮಾತ್ರವಲ್ಲ, ಶ್ರದ್ಧೆಯ ಏಕಾಗ್ರತೆಗೆ ಭಂಗ ತರುವುದರಿಂದ ಹಾನಿಕರ. ಏಕೆಂದರೆ ಲೋಕಧರ್ಮಿಯಾದ ಚರಿತ್ರೆಯ ಒರೆಗಲ್ಲಿಗೆ ಹಚ್ಚಿದರೆ ರಾಮಾಯಣದ ಮುಕ್ಕಾಲುಪಾಲು ಕಥೆ ಮಕ್ಕಳ ಮನೋರಂಜನೆಯ ಕಟ್ಟುಕಥೆಯಾಗುತ್ತದೆ. ಮಾಡಲು ಕೆಲಸವಿರುವ ಬೆಳೆದ ಮನಸ್ಸಿನ ಗೌರವಕ್ಕೂ ಆಸಕ್ತಿಗೂ ಪಾತ್ರವಾಗಲು ಅನರ್ಹವಾಗಲೂ ಬಹುದು. ಪುತ್ರಕಾಮೇಷ್ಠಿಯಲ್ಲಿ ಅಗ್ನಿಪುರುಷನು ಮೈದೋರಿದುದಾಗಲಿ, ದಿವ್ಯಪಾಯಸಸೇವನೆಯಿಂದ ಕೌಸಲ್ಯಾದಿ ಸತಿಯರು ಗರ್ಭಧಾರಣೆ ಮಾಡಿದುದಾಗಲಿ, ಸೀತೆ ಅಯೋನಿಜೆಯಾದ ಭೂಮಿಸಂಭವೆಯೆಂಬುದಾಗಲಿ, ವಿರಾಧಾದಿ ರಾಕ್ಷಸರ ಚಿತ್ರವಾಗಲಿ, ಕಪಿಗಳೂ ಹದ್ದುಗಳೂ ಕರಡಿಗಳೂ ಮಾತನಾಡಿ ಮನುಷ್ಯರಂತೆ ವ್ಯವಹರಿಸಿದುವು ಎಂಬುದಾಗಲಿ, ಕೋತಿಯೊಂದು ಆಕಾಶಕ್ಕೆ ಬೆಳೆದು ಸಮುದ್ರವನ್ನು ನೆಗೆಯಿತು ಎಂಬುದಾಗಲಿ, ಹತ್ತು ತಲೆಯ ರಕ್ಕಸನಿದ್ದನೆಂಬುದಾಗಲಿ, ಒಂದಲ್ಲ ಎರಡಲ್ಲ ಇಂತಹ ನೂರಾರು ಸಂಗತಿಗಳು ಬರಿಯ ಕಲ್ಪನಾವಿನೋದದ ಸ್ವಾರಸ್ಯ ಸೃಷ್ಟಿಗಳಾಗುತ್ತವೆಯೆ ಹೊರತು ನಮ್ಮ ಗಂಭೀರಪ್ರಜ್ಞೆಗೆ ಧ್ಯಾನವಿಷಯಗಳಾಗುವಷ್ಟು ಗೌರವಾಸ್ಪದವಾಗಲಾರವು. ನಮ್ಮ ಹೃತ್ಪೂರ್ವಕವಾದ ಪೂಜೆಗಂತೂ ಬಹು ದೂರವಾಗಿಯೆ ಉಳಿಯುತ್ತವೆ. ಆದ್ದರಿಂದ ನಾವು ವಾಲ್ಮೀಕಿಯ ಶ್ರೀಮದ್ರಾಮಾಯಣವನ್ನೂ ಲೌಕಿಕವಾದ ಪ್ರತಿಕೃತಿಯ ದೃಷ್ಟಿಯಿಂದ ನೋಡುವ ವಿಚಿಕಿತ್ಸೆಗೆ ಹೋಗದೆ ‘ದರ್ಶನ ದ್ವನಿ’ಯ ಪ್ರತಿಮಾದೃಷ್ಟಿಯಿಂದ ಮಾತ್ರ ನೋಡಬೇಕಾಗುತ್ತದೆ. [4]

ನಮ್ಮ ದೇಶಕ್ಕೆ ರಾಜಕೀಯರೂಪವಾದ ಸ್ವಾತಂತ್ರ್ಯಸಿದ್ಧಿಯಾದ ಈ ಸಂಧಿ ಸಮಯದಲ್ಲಿ, ಎಲ್ಲ ವಲಯಗಳಲ್ಲಿಯೂ ಜನರ ಸತ್ಯ ಸೌಜನ್ಯ ನಿಷ್ಠಾಭಕ್ತಿಗಳು ಶಿಥಿಲವಾಗುತ್ತಿವೆ ಎಂಬ ಶಂಕೆಗೆ ಆಸ್ಪದವಾಗುತ್ತಿರುವಲ್ಲಿ, ದೇವರುಸತ್ಯ ಧರ್ಮ ಆತ್ಮ ಕರ್ಮ ಜನ್ಮಾಂತರ ಪುಣ್ಯ ಮೊದಲಾದ ತತ್ವ ಮತ್ತು ಪುರುಷಾರ್ಥಗಳಲ್ಲಿ ನಂಬುಗೆಯೂ ಭರವಸೆಯೂ ಕುಗ್ಗುತ್ತಿರುವ ಈ ದುರಂತ ಸನ್ನಿವೇಶದಲ್ಲಿ, ಸ್ವಪ್ರತಿಷ್ಠೆ ಸ್ವಾರ್ಥಗಳೇ ತಮ್ಮ ಸರ್ವಸ್ವವೋ ಎಂಬಂತೆ ಮುಂದಾಳುಗಳಾಗಿರುವ ಶ್ರೇಷ್ಠರೆಂಬುವರು ಕೂಡ ವರ್ತಿಸುತ್ತಿರುವ ಈ ದುರ್ಮೂಹೂರ್ತದಲ್ಲಿ ರಾಮಾಯಣದ ದಿವ್ಯಹಸ್ತ ನಮ್ಮನ್ನು ನಿಜವಾಗಿಯೂ ಮೇಲೆತ್ತಬಲ್ಲುದು; ಅದರ ಅಮರಸಂಗೀತ ನಮ್ಮ ಶುಷ್ಕಜೀವನದಲ್ಲಿ ಅಮೃತರಸ ಸಂಚಾರ ವಾಗುವಂತೆ ಮಾಡಬಲ್ಲುದು; ನಮ್ಮ ಸ್ವಾರ್ಥದ ದುಷ್ಟವಿರಾಧವನ್ನು ಸಂಹರಿಸಿ ಅವನಿಂದಲೆ ನಮಗೆ ದಾರಿತೋರುವ ಪರಾರ್ಥತೆಯ ಬೃಂದಾರಕನನ್ನು ಮೂಡಿಸಬಲ್ಲುದು; ನಮ್ಮಲ್ಲಿ ಹುದುಗಿರುವ ಆಂಜನೇಯ ಶಕ್ತಿಯನ್ನು ಎಚ್ಚರಿಸಿ, ಉಬ್ಬಿಸಿ, ಸಾಗರೊಲ್ಲಂಘನದ ಸಾಹಸಕ್ಕೆ ಅದನ್ನು ಪ್ರಚೋದಿಸಿ, ಹತ್ತಲ್ಲ ಸಾವಿರ ತಲೆಯ ನಮ್ಮ ಅವಿದ್ಯಾಹಂಕಾರ ರಾವಣನನ್ನು ಕತ್ತರಿಸಿ, ಸೆರೆಸಿಕ್ಕಿ ತತ್ತರಿಸುತ್ತಿರುವ ನಮ್ಮ ಜೀವನದೇವತಾ ಸೀತೆ ತನ್ನ ಶ್ರೀರಾಮನನ್ನು ಮತ್ತೆ ಸೇರುವಂತೆ ಬದುಕನ್ನು ಆಸುರೀಶಕ್ತಿಗಳಿಂದ ಬಿಡಿಸ ದೈವೀಶಕ್ತಿಗಳ ಕಡೆಗೆ ಕೊಂಡೊಯ್ಯಬಲ್ಲುದು. ಕೊನೆಯದಾಗಿ ವ್ಯಕ್ತಿ ವ್ಯಕ್ತಿಯಲ್ಲಿಯೂ ಶ್ರೀರಾಮ ಪಟ್ಟಾಭಿಷೇಕವಾಗುವಂತೆ ಮಾಡಿ, ಸದ್ಯಕ್ಕೆ ನಿತ್ಯಸ್ಥಿತಿಯಲ್ಲಿ ಅತೀತವಾಗಿರುವ ರಾಮರಾಜ್ಯವು ಕ್ರಮ ಕ್ರಮೇಣ ಈ ಲೀಲಾಲೋಕ್ಕೂ ಅವತರಿಸಿ ಇಲ್ಲಿಯ ಉಪಾಧಿಗಳಲ್ಲಿಯೆ ಆ ಋತಶಕ್ತಿ ನಿರುಪಾಧಿಕವಾಗಿ ಆವಿರ್ಭವಿಸಿ. ಮರ್ತ್ಯವನ್ನೆ ಅಮರ್ತ್ಯವನ್ನಾಗಿಯೂ ಭೂಮಿಯನ್ನೆ ವೈಕುಂಠವನ್ನಾಗಿಯೂ ಪರಿವರ್ತಿಸುವ ದೇವತಾ ಕಾರ್ಯದಲ್ಲಿ ದಿವ್ಯಶಿಲ್ಪಿಯಾಗಬಲ್ಲದು. [5]

ಹಿಂದೆ ಊಹೆಗೂ ಮೀರಿ ವಿಸ್ತಾರವಾದಂತಿದ್ದ ಭೂಮಂಡಲವು ವೈಜ್ಞಾನಿಕವಾದ ಪ್ರಗತಿಯಿಂದ ಇಂದು ಮುದುರಿ ಕುಗ್ಗಿ ಕಿರಿದಾಗಿದೆ. ಪ್ರಪಂಚ ನಿಜವಾಗಿಯೂ ಒಂದು ಎಂಬುದು ಹೆಚ್ಚು ಹೆಚ್ಚು ಅನುಭಕ್ಕೆ ಬರುತ್ತಿದೆ. ವಿಮಾನ ರೇಡಿಯೊ ಪತ್ರಿಕೆ ಸಿನಿಮಾ ಮೊದಲಾದ ವೇಗಯಂತ್ರಗಳೂ ಸಲಕರಣೆಗಳೂ ಲೋಕದ ಸುದ್ದಿಯನ್ನೆಲ್ಲ ದಿನಬೆಳಗಾದರೆ ನಮ್ಮ ಮನೆಯ ಬಾಗಿಲಿಗೆ ತಂದು ಹಾಕುತ್ತವೆ. ಜಗತ್ತಿನ ತಾಪತ್ರಯವೆಲ್ಲ ನಮ್ಮ ಸ್ವಂತ ತಾಪತ್ರಯವಾಗತೊಡಗಿದೆ. ಹಿಂದೆ ಒಂದು ಮನೆಯಲ್ಲಿಯೊ, ಒಂದು ಹಳ್ಳಿಯಲ್ಲಿಯೊ, ಒಂದು ಹೋಬಳಿಯಲ್ಲಯೊ, ಹೆಚ್ಚು ಎಂದರೆ ಒಂದು ಸಂಸ್ಥಾನದಲ್ಲಿಯೊ ಸುಳಿದು ಸುತ್ತಿ ತೃಪ್ತಿಪಟ್ಟುಕೊಳ್ಳುತ್ತಿದ್ದ ನಮ್ಮ ಕುತೂಹಲ ಇಂದು ದೇಶವಿದೇಶಗಳಲ್ಲಿ ಖಂಡಖಂಡಗಳಲ್ಲಿ ಕಡಲಾಚೆಯ ಬಹುದೂರದ ಭೂಭಾಗಗಳಲ್ಲಿ ಬಹು ಸುಲಭವಾಗಿ ನಿರಪಾಯವಾಗಿ ಸುಳಿದು ಸುತ್ತಿದರೂ ಸಂತೃಪ್ತಿ ಹೊಂದಲಾರದಷ್ಟು ಕೆರಳಿ ನಿಂತಿದೆ. ಹಿಂದೆ ನಮ್ಮ ಮನಃಶಕ್ತಿ ಒಂದೊ ಎರಡೊ ಮೂರೊ ವಿಷಯಗಳಲ್ಲಿ ನಿಂತು ಅವುಗಳಲ್ಲಿಯೆ ಆಳವಾಗಿ ಪ್ರವೇಶಿಸುತ್ತಿತ್ತು. ಈಗಲಾದರೊ ತಿಳಿಯಬೇಕಾದ ವಿಷಯಗಳ ಸಂಖ್ಯೆಗೆ ಪರಿಮಿತಿಯೆ ಎಂಬಂತೆ ತೋರುತ್ತಿದೆ. ಪರಿಣಾಮವಾಗಿ ಯಾವ ವಿಷಯದಲ್ಲಿಯೂ ಆಳವಾಗಿ ಪ್ರವೇಶಿಸಲು ಸಮಯವಾಗಲಿ ಶಕ್ತಿಯಾಗಲಿ ಆಸಕ್ತಿಯಾಗಲಿ ಬಹುಜನರ ಪಾಲಿಗೆ ಇಲ್ಲದಂತಾಗಿದೆ, ನಶಿಸಿಹೋಗಿದೆ. ನಮ್ಮ ಆಸಕ್ತಿ ಶಾಖೋಪಶಾಖೆಗಳಾಗಿ ಕವಲೊಡೆದು ಬರಲುಬರಲಾಗಿ ನಿಂತಿದೆ. ಯಾವ ಕೊಂಬೆಗೂ ಬಲ್ಪಿಲ್ಲ. ತೊಲೆಯಾಗುವ ತೋರವಿಲ್ಲ; ಕಂಭವಾಗುವ ಭಾರವಿಲ್ಲ; ಹೊರೆಹೊರುವ ಚೈತನ್ಯವಿಲ್ಲ. ಇನ್ನು ಪೂರೈಕೆಯಾಗಲು ಮಾತ್ರ ಅರ್ಹವಾಗಿರುವ ಆ ಬರಲು ಕಡ್ಡಿಗಳಿಂದ ಬದುಕಿಗೆ ಉಪಯೋಗವಾಗುವಂತೆ ನಾಲ್ಕಾರು ಕಾಲ ಬಾಳುವ ಮನೆಯನ್ನಾಗಲಿ ಗುಡಿಯನ್ನಾಗಲಿ ಕಟ್ಟುವುದೆಂತು? ಆ ಬಡಕಲು ಆಸಕ್ತಿಗೂ ತನ್ನ ಸುತ್ತಮುತ್ತಣದರಲ್ಲಿತಾತ್ಸಾರ, ತಿರಸ್ಕಾರ. ವೇಗಸೌಕರ್ಯ ದೊರಕಿರುವುದರಿಂದ ಅದು ಅಜೆಂಟೈನ ಭೂಕಂಪದ ವಿಚಾರದಲ್ಲಿ ಅನುಕಂಪ ತಾಳುವ ಹೊರೆಹೊಣೆಯಿಲ್ಲದ ಕರುಣರಸಾನುಭವದ ಸೊಗಸಿಗೆ ಶರಣಾಗಲು ಇಷ್ಟ ಪಡುತ್ತದೆಯೆ ಹೊರತು ಪತ್ರಿಕೆಗಳಿಗೆ ವಿಷಯವಾಗದ ಅನಾಮಧೇಯರಾದ ನೆರೆಹೊರೆಯವರ ಹತ್ತಿರದವರ ಕಷ್ಟಸಂಕಟಗಳನ್ನು ಅಲಕ್ಷಿಸುತ್ತದೆ. ಮನೆಯ ಹಿಂಭಾಗದ ಗಿರಿನೆತ್ತಿಯಿಂದ ಸೂರ್ಯೋದಯವನ್ನು ಈಕ್ಷಿಸಲಾರದ ಅದು ಯಾವುದೊ ನೂರಾರು ಮೈಲಿ ದೂರವಿರುವ ಬೆಟ್ಟದಮೇಲಿಂದ ಸೂರ್ಯಸ್ತ ನೋಡಲು ಕೃತಕ ರಸಾವೇಶದಿಂದ ಧಾವಿಸುತ್ತದೆ: ಕಾರಣ – ಮೋಟಾರು ಕಾರಿದೆ. ಪೆಟ್ರೋಲಿದೆ! ಸಾಮಾನ್ಯದಲ್ಲಿ ಸಮೀಪದಲ್ಲಿ ಪರಿಚಿತವಾದುದರಲ್ಲಿ ದೈನಂದಿನ ಜೀವನದ ದೃಶ್ಯ ಘಟನೆ ವ್ಯಕ್ತಿ ವ್ಯಾಪಾರಗಳಲ್ಲಿ ನಮ್ಮ ಆಸಕ್ತಿಗೆ ಅರುಚಿಯಾಗಿದೆ. ಇದನ್ನೆಲ್ಲ ಗಮನಿಸಿದರೆ ನಮಗೇನೋ ಒಂದು ಅತೃಪ್ತಿಯ ಅಸ್ವಸ್ಥತೆಯ ಅಶಾಂತಿಯ ಸಾಂಕ್ರಾಮಿಕ ರುಚಿ ತಗುಲಿರುವಂತೆ ಭಾಸವಾಗುತ್ತದೆ.

ಭ್ರಮಾಶೀಲವಾಗಿ ಪರಿಭ್ರಮಿಸುತ್ತಿರುವ ಇಂತಹ ನಮ್ಮ ಚಿತ್ತಕ್ಕೆ ಒಂದು ಸ್ಥೈರ್ಯ, ಒಂದು ಶಮ, ಒಂದು ತುಷ್ಟಿ, ಒಂದು ಪ್ರಸನ್ನತೆ, ಮತಿ ಗೌರವ, ಆತ್ಮ ಪ್ರತ್ಯಯ ಇವುಗಳನ್ನು ಸಂಪಾದಿಸಬೇಕಾದರೆ ರಾಮಾಯಣದಂತಹ ಋಷಿ ಕೃತಿಗಳನ್ನು ನಾವು ಆಶ್ರಯಿಸಬೇಕಾಗುತ್ತದೆ. ಋಷಿದರ್ಶನ ನಮ್ಮ ಚೈತನ್ಯವನ್ನು ದೀಪ್ತಗೊಳಿಸುತ್ತದೆ; ಬರಿಯ ಊರವಾದುದಕ್ಕೆ ಬೆಪ್ಪು ಬೆಪ್ಪಾಗಿ ಮಾರುಹೋಗಿ ಬೆರಗಾಗುವ ಲಘುಚೇತನಕ್ಕೆ ತನ್ನ ದಿವ್ಯ ಗುರುತ್ವವನ್ನು ಅನುಗ್ರಹಿಸುತ್ತದೆ. ಬರಿಯ ರಾಜಕೀಯವಾದ ಪ್ರಖ್ಯಾತಿಯಾಗಲಿ ವೈಭವಕ್ಕಾಗಲಿ ದೀನ ವೃತ್ತಿಯಿಂದ ಸಾಷ್ಟಾಂಗ ನಮಸ್ಕಾರಮಾಡುವ ಗ್ರಾಮೀಣತೆಯಿಂದ ನಮ್ಮನ್ನು ಪಾರುಮಾಡುತ್ತದೆ. ನಮ್ಮ ಆಸಕ್ತಿಯನ್ನು ಸರ್ವತೋಮುಖವನ್ನಾಗಿಯೂ ವಿಶ್ವವ್ಯಾಪಕವನ್ನಾಗಿಯೂ ಮಾಡಿದರೂ ಅಸ್ಥಿರತೆಗೂ ಅನಾವಶ್ಯಕವಾದ ಅಲಸ ಕುತೂಹಲಕ್ಕೂ ಅವಕಾಶವೀಯುವುದಿಲ್ಲ. ಅದನ್ನು ಔಚಿತ್ಯದ ಅಂಕೆಯಲ್ಲಿಟ್ಟು ಆತ್ಮೋದ್ದಾರಕ್ಕೆ ಆತ್ಮವಿಕಾಸಕ್ಕೆ ಆತ್ಮಸಾಕ್ಷಾತ್ಕಾರಕ್ಕೆ ಆತಂಕ ಒದಗದ ರೀತಿಯಲ್ಲಿ ನಮ್ಮನ್ನು ಮುನ್ನಡೆಯಿಸುತ್ತದೆ. ನಿಃಶ್ರೇಯಸಕರವಾದ ಆತ್ಮಶ್ರೀಗೆ ಮೊದಲನೆಯ ಸ್ಥಾನವನ್ನೂ ರಸಪೂರ್ಣವಾದ ಸಂಸ್ಕೃತಿಗೆ ಎರಡನೆಯ ಸ್ಥಾನವನ್ನೂ, ಅಭ್ಯುದಯಕರವಾದ ಸಾಮಾಜಿಕ ನಾಗರಿಕತೆಗೆ ಮೂರನೆಯ ಸ್ಥಾನವನ್ನೂ ಇವು ಮೂರಕ್ಕೂ ಆಧಾರವೂ ನಿವಾಸವೂ ಆಗಿ ಅತ್ಯಂತ ಅವಶ್ಯಕವಾದರೂ ಭಿತ್ತಿಸದೃಶ ಮತ್ತು ಸಾಧನರೂಪಮಾತ್ರವಾಗಿರುವ ರಾಜಕೀಯಕ್ಕೆ ಕೊನೆಯ ನಾಲ್ಕನೆಯ ಸ್ಥಾನವನ್ನೂ ನಿರ್ಣಯಿಸುವ ಪೂರ್ಣದೃಷ್ಟಿಯನ್ನೂ ಅನುಗ್ರಹಿಸಿ, ನಮ್ಮನ್ನು ಪೂರ್ಣಸಿದ್ಧಿಯ ಕಡೆಗೆ ತಪ್ಪದೆ ಕರೆದೊಯ್ಯೊತ್ತದೆ. [6]

ಮೇಲೆ ವರ್ಣಿಸಿದ ಧ್ಯೇಯಸಾಧನೆಯೆ ಎಲ್ಲ ವಿದ್ಯೆಯ ಚರಮೋದ್ದೇಶ. ಅಕ್ಷರ ಪ್ರಚಾರ ಮತ್ತು ವಯಸ್ಕರ ಶಿಕ್ಷಣಗಳೂ ಅದಕ್ಕಾಗಿಯೇ ಸರ್ವಾದರಣೀಯ. ಉಳಿದ ಉಪಯೋಗಗಳೆಲ್ಲ ಅವು ಎಷ್ಟೆ ಅವಶ್ಯಕವಾಗಿರಲಿ ಎಷ್ಟೇ ಅನಿವಾರ್ಯವಾಗಿರಲಿ ಗೌಣ. ಎರಡನೆಯ ಸ್ಥಾನಕ್ಕೆ ಸೇರುತ್ತವೆ. ಬಂದ ನೋಟೀಸನ್ನು ಓದುವುದಾಗಲಿ, ಪತ್ರಿಕ ನೋಡುವುದಾಗಲಿ, ಅರ್ಜಿ ಬರೆಯುವುದಾಗಲಿ ಅಥವಾ ಇನ್ನಾವ ವ್ಯಾವಹಾರಿಕವಾದ ಉಪಯೋಗವಾಗಲಿ ಮೊದಮೊದಲ ಪ್ರಯೋಜನವಾಗಬಹುದೆ ಹೊರತು ಮುಖ್ಯ ಪ್ರಯೋಜನವಾಗಲಾರದು. ಮೂಖ್ಯಪ್ರಯೋಜನ ಹೃದಯವಿಕಾಸಕ್ಕೆ ಸಂಬಂಧಪಟ್ಟುದು, ಅಂತಃ ಸಂಸ್ಕೃತಿಗೆ ಸೇರಿದುದು: ವಿನಯಕ್ಕೆ ಸೌಜನ್ಯಕ್ಕೆ ಶುಚಿಗೆ ಕರುಣೆಗೆ ಭಕ್ತಿಗೆ ನಿಷ್ಠೆಗೆ ಸತ್ಯಕ್ಕೆ ಧರ್ಮಕ್ಕೆ ಆತ್ಮಕಲ್ಯಾಣಕ್ಕೆ. ಅಂತಹ ಪ್ರಜ್ಞೆಯ ಪರಿಪಕ್ವತೆಗೆ, ಅಂತಹ ಕೃತಕೃತ್ಯತೆಯ ದಿವ್ಯಸ್ಥಿತಿಗೆ. ಅಂತಹ ಸಂಪೂರ್ಣ ವ್ಯಕ್ತಿತ್ವದ ಪೂರ್ಣ ಸರ್ವೋದಯಕ್ಕೆ ನಮ್ಮೆಲ್ಲರನ್ನೂ ಏರಿಸಲಿ ಈ ಜನಪ್ರಿಯ ವಾಲ್ಮಿಕಿ ರಾಮಾಯಣ. ಎಲ್ಲ ಕನ್ನಡಿಗರೂ ಅಕ್ಷರಜ್ಞರಾಗಿ ಸುಶಿಕ್ಷಿತರಾಗಿ, ಕರ್ನಾಟಕದ ಮೊದಲ ಚಕ್ರವರ್ತಿಸಾಹಿತಿ ನೃಪತುಂಗನು ಸಾವಿರ ವರ್ಷಗಳ ಹಿಂದೆ ಅಂದಿನವರನ್ನು ಕುರಿತು ಹಾಡಿದುದು ಇಂದಿನವರಿಗೂ ಅನ್ವಯಿಸುವಂತಾಗಲಿ:

“ಪದನ್ ಅಱೆದು ನುಡಿಯಲುಂ, ನುಡಿದುದನ್ ಅಱೆದು ಆರಯಲುಂ ಆರ್ಪರ್ ಆ ನಾಡವರ್ಗಳ್. ಚದುರರ್ ನಿಜದಿಂ. ಕುಱೆತೋದದೆಯುಂ ಕಾವ್ಯ ಪ್ರಯೋಗಪರಿಣತ ಮತಿಗಳ್. ಕುಱೆತವರಲ್ಲದೆ ಮತ್ತಂ ಪೆಱರುಂ ತಂತಮ್ಮ ನುಡಿಯೊಳ್ ಎಲ್ಲರ್ ಜಾಣರ್. ಕಿಱುವಕ್ಕಳುಂ ಆ ಮೂಗುರುಂ ಅಱೆಪಲ್ಕಱೆವರ್ ವಿವೇಕಮಂ ಮಾತುಗಳಂ. ”

ಆ ಕನ್ನಡ ನಾಡಿನವರು ಪದವನ್ನು ಅರಿತು ‘ಹದವರಿತು’ ನುಡಿಯಲೂ, ನುಡಿದುದನ್ನು ಅರಿತು ವಿಚಾರಮಾಡಲೂ ಸಮರ್ಥರು. ಹುಟ್ಟಿನಿಂದಲೂ ಬುದ್ಧಿವಂತರು. ಶಾಸ್ತ್ರೀಯವಾಗಿ ಪಂಡಿತಪ್ರವೀಣರಂತೆ ಸಾಹಿತ್ಯಾಭ್ಯಾಸ ಮಾಡದಿದ್ದರೂ ಅವರ ಹೃದಯ ಉತ್ತಮವಾದ ಕಾವ್ಯಗಳನ್ನು ಓದಿ ರಸಾಸ್ವಾದನೆ ಮಾಡಬಲ್ಲುದಾಗಿತ್ತು. ಶಾಸ್ತ್ರಜ್ಞರಾದ ವಿದ್ವಾಂಸರ ಮಾತಂತಿರಲಿ, ಉಳಿದ ಸಾಮಾನ್ಯರನ್ನು ಪರಿಗಣಿಸಿದರೂ ಸ್ವಭಾಷಾಜ್ಞಾನದಲ್ಲಿ ಜಾಣರಲ್ಲದವರು ಯಾರೊಬ್ಬರೂ ಇಲ್ಲ. ಕಿರಿಮಕ್ಕಳೂ, ಕಡೆಗೆ ಮೂಗರು ಕೂಡ, ವಿವೇಕದ ಮಾತುಗಳನ್ನು ಬೋಧಿಸಬಲ್ಲವರು. – ಅಃ! ನೃಪತುಂಗನ ಈ ವರ್ಣನೆಗೆ ಕನ್ನಡಮ್ಮನ ಮಕ್ಕಳು ಮತ್ತೊಮ್ಮೆ ಪಾತ್ರರಾಗುವ ಪುಣ್ಯಸಮಯ ಬಹು ಬೇಗನೆ ಸಮೀಪಿಸಲಿ! ಕನ್ನಡ ನುಡಿ ನಮ್ಮೆದೆಯ ನುಡಿಯಾಗಿ, ನಮ್ಮರಸುಮುಡಿಯಾಗಿ. ನಮ್ಮ ಬಾಳ್ಗುಡಿಯಾಗಿ ಕನ್ನಡಿಗರ ಹೃದಯ ಭಿನ್ನಭಾವನೆಗಳನ್ನು ತೊರೆದು ಒಂದುಗೂಡಿ, ಕನ್ನಡನಾಡು ಒಂದಾಗಿ, ಕರ್ಣಾಟಕ ಮಾತೆ ತನ್ನಮ್ಮ ಭರತಮಾತೆಗೆ ಸಂತೋಷದಿಂದ ಹೆಮ್ಮೆಯಿಂದ ಸೇವೆ ಸಲ್ಲಿಸುವ ಭಾಗ್ಯದ ಕಾಲ ಬೇಗನೆ ಬರುವಂತಾಗಲಿ.

“ಜೈ ಭಾರತಜನನಿಯ ತನುಜಾತೆ.
ಜಯ ಹೇ ಕರ್ಣಾಟಕಮಾತೆ!”[1] ೨-೧೦-೧೯೫೦ರಲ್ಲಿ ‘ಜನಪ್ರಿಯ ವಾಲ್ಮೀಕಿ ರಾಮಾಯಣ’ದ ಉದ್ಘಾಟನೋತ್ಸವ ಸಂದರ್ಭದಲ್ಲಿ.

[2] ‘ಕುವೆಂಪು’ ಅವರ “ತಪೋನಂದನ” ಗ್ರಂಥದಲ್ಲಿ ‘ಪ್ರತಿಮಾ ಮತ್ತು ಪ್ರತಿಕೃತಿ’ ಎಂಬ ಪ್ರಬಂಧವನ್ನು ನೋಡಿ.

[3] ‘ಕುವೆಂಪು’ ಅವರ “ತಪೋನಂದನ” ಗ್ರಂಥದಲ್ಲಿ ‘ಋಷಿ ವಾಲ್ಮೀಕಿಯ ಕಾವ್ಯಜಾಹ್ನವಿ’ ಎಂಬ ಪ್ರಬಂಧವನ್ನು ನೋಡಿ.

[4] ‘ತಪೋನಂದನ’ದಲ್ಲಿರುವ ಹಿಂದೆ ಹೇಳಿದೆರಡು ಪ್ರಬಂಧಗಳ ಜೊತೆಗೆ ‘ಕಾವ್ಯ ವಿಮರ್ಶೆಯಲ್ಲಿ ಪುರ್ಣದೃಷ್ಟಿ’ ಎಂಬ ಪ್ರಬಂಧವನ್ನೂ ನೋಡಿ.

[5] ಅದೆಂತಹ ಸೈನ್ಯವಾಗಲಿ ಅದೆಂತಹ ರಾಜಕಾರಣನೈಪುಣ್ಯವಾಗಲಿ ಹಿಂದೆಂದೂ ಸಾಧಿಸಿ ರಕ್ಷಿಸಲಾರದಿದ್ದ ಭರತವರ್ಷದ ಅಖಂಡತೆಯನ್ನೂ ಐಕ್ಯತೆಯನ್ನೂ ಶತಶತಮಾನಗಳಿಂದಲೂ ಸಾಧಿಸಿ ರಕ್ಷಿಸಿಕೊಂಡು ಬಂದಿರುವಂತೆಯೆ ಇಂದೂ ಮುಂದು ಸಾಧಿಸಿ ರಕ್ಷಿಸಿಕೊಂಡು ಬರುವುದರಲ್ಲಿ ಸಂದೇಹವಿಲ್ಲ. ಅಲೋಕ ಸಾಮಾನ್ಯವಾದ ಈ ಶ್ರೀರಾಮಾಯಣ ದಿವ್ಯಶಿಲ್ಪಿ.

[6] ಆ ದರ್ಶನವನ್ನು ಕಂಡುಂಡು ಬೆಳೆಯಬೇಕೆಂಬಾಶೆ ಬಲಿತವರು ಮಹಾಛಂಧಸ್ಸಿನ ‘ಶ್ರೀ ರಾಮಾಯಣದರ್ಶನಂ’ ಎಂಬ ಮಹಾಕಾವ್ಯವನ್ನು ಓದಲಿ.