Categories
e-ದಿನ

ಜನವರಿ-10

ಪ್ರಮುಖಘಟನಾವಳಿಗಳು:

ಕ್ರಿಸ್ತ ಪೂರ್ವ 49: ಜೂಲಿಯಸ್ ಸೀಸರನು ರುಬಿಕಾನ್ ಅನ್ನು ದಾಟಿ, ಅಂತರ್ ಯುದ್ಧದ ಮುನ್ಸೂಚನೆ ನೀಡಿದ.

1645: ಟವರ್ ಆಫ್ ಲಂಡನ್ನಿನಲ್ಲಿ ಆರ್ಚ್ ಬಿಷಪ್ ವಿಲಿಯಂ ಲಾಡ್ ಅವರ ಶಿರಃಛೇದನ ಮಾಡಲಾಯಿತು.

1776: ಪ್ರಸ್ಸಿದ್ಧ ತತ್ವಜ್ಞಾನಿ, ಅಮೆರಿಕದ ಕ್ರಾಂತಿಕಾರಿ ಹೋರಾಟದ ಪ್ರಮುಖಪಾತ್ರಧಾರಿಗಳಲ್ಲಿ ಒಬ್ಬರಾಗಿದ್ದ ಥಾಮಸ್ ಪೈನ್ ಅವರು ‘ಕಾಮನ್ ಸೆನ್ಸ್’ ಎಂಬ ಕರಪತ್ರವನ್ನು ಪ್ರಕಟಿಸಿದರು. ಅತ್ಯಂತ ಕ್ಷಿಪ್ರವಾಗಿ ಬಹು ಮಾರಾಟವಾದ ಈ ಕರಪತ್ರವನ್ನು ಪ್ರತಿಯೋರ್ವ ಹೋರಾಟಗಾರನೂ ಓದಿ ಅಥವಾ ಕೇಳಿ ಪ್ರಭಾವಿಯಾದದ್ದರಿಂದ ಅಮೇರಿಕನ್ ಕ್ರಾಂತಿ ಹೆಚ್ಚು ಶಕ್ತಿಯುತವಾಯ್ತು ಎಂಬುದು ಇತಿಹಾಸಜ್ಞರ ಅಭಿಪ್ರಾಯವಾಗಿದೆ.

1839: ಬ್ರಿಟನ್ನಿನಲ್ಲಿ ಮೊತ್ತ ಮೊದಲ ಬಾರಿಗೆ ‘ಭಾರತೀಯ ಚಹಾ’ದ ಹರಾಜು ನಡೆಯಿತು.

1863:  ವಿಶ್ವದ ಅತಿ ಹಳೆಯ ಭೂತಳದ ‘ಲಂಡನ್ ಅಂಡರ್ ಗ್ರೌಂಡ್’ ರೈಲು ಸಂಚಾರ ವ್ಯವಸ್ಥೆ, ‘ಲಂಡನ್ ಪ್ಯಾಡಿಂಗ್ ಟನ್’ ಮತ್ತು ‘ಫರಿಂಗ್ ಟನ್’ ನಡುವೆ ಪ್ರಾರಂಭಗೊಂಡಿತು.

1870: ಬಾಂಬೆಯ ಚರ್ಚ್ ಗೇಟ್ ನಿಲ್ದಾಣ ರೈಲ್ವೆ ಸಂಚಾರಕ್ಕಾಗಿ ತೆರೆದುಗೊಂಡಿತು. ಇದು ಪಶ್ಚಿಮ ಮುಂಬೈ ರೈಲ್ವೆ ಸಂಪರ್ಕ ವ್ಯವಸ್ಥೆಯಲ್ಲಿನ ಪ್ರಪ್ರಥಮ ರೈಲು ನಿಲ್ದಾಣವಾಗಿದೆ.

1870: ‘ಸ್ಟ್ಯಾಂಡರ್ಡ್ ಆಯಿಲ್’ ಅಮೆರಿಕದ ತೈಲ ಉತ್ಪಾದನೆ, ಸಾಗಣೆ, ಸಂಸ್ಕರಣಾ, ಮತ್ತು ಮಾರಾಟ ಸಂಸ್ಥೆಯಾಗಿದೆ. 1870ರ ವರ್ಷದಲ್ಲಿ ಇದನ್ನು ಜಾನ್ ಡಿ. ರಾಕ್ ಫೆಲರ್ ಅವರು ಓಹಿಯೋದಲ್ಲಿ ಪ್ರಾರಂಭಿಸಿದರು. ಅಂದಿನ ದಿನಗಳಲ್ಲಿ ಇದು ಜಗತ್ತಿನ ಅತ್ಯಂತ ದೊಡ್ಡ ತೈಲ ಸಂಸ್ಕರಣಾ ಸಂಸ್ಥೆಯಾಗಿತ್ತು.

1920: ಪ್ರಥಮ ವಿಶ್ವಮಹಾಯುದ್ಧವನ್ನು ಅಧಿಕೃತವಾಗಿ ಅಂತ್ಯಗೊಳಿಸುವ ‘ವರ್ಸೈಲ್ಸ್ ಒಪ್ಪಂದ’(ಟ್ರೀಟಿ ಆಫ್ ವರ್ಸೈಲ್ಸ್) ಏರ್ಪಟ್ಟಿತು. ಇದರಿಂದಾಗಿ ಜರ್ಮನಿ ಮತ್ತು ಇತರ ರಾಷ್ಟ್ರಗಳ ಒಕ್ಕೂಟದ ನಡುವಿನ ಪ್ರಥಮ ಮಹಾಯುದ್ಧ ಅಧಿಕೃತವಾಗಿ ಕೊನೆಗೊಂಡಿತು.

1920: ಪ್ರಥಮ ಮಹಾಯುದ್ಧವಾದ ನಂತರದಲ್ಲಿ ಪ್ಯಾರಿಸ್ ಸಮಾವೇಶದಲ್ಲಿ ಅಂತರ ಸರ್ಕಾರಗಳ ಸಂಸ್ಥೆಯಾಗಿ ‘ಲೀಗ್ ಆಫ್ ನೇಷನ್ಸ್’ ಸ್ಥಾಪನೆಗೊಂಡಿತು. ವಿಶ್ವಶಾಂತಿಯನ್ನು ಕಾಪಾಡುವ ಮೂಲೋದ್ದೇಶವನ್ನು ಹೊಂದಿದ್ದ ಇದರ ಕೇಂದ್ರವನ್ನು ಸ್ವಿಡ್ಜರ್ಲ್ಯಾಂಡಿನ ಜಿನೀವಾದಲ್ಲಿ ಸ್ಥಾಪಿಸಲಾಯಿತು. ಯುದ್ಧವನ್ನು ತಡೆಗಟ್ಟುವಲ್ಲಿ ಈ ಸಂಸ್ಥೆ ವಿಫಲವಾಗಿ ‘ಎರಡನೆ ವಿಶ್ವ ಮಹಾಯುದ್ಧ’ ನಡೆದದ್ದರಿಂದ 1946ರಲ್ಲಿ ಈ ‘ಲೀಗ್ ಆಫ್ ನೇಷನ್ಸ್’ ಮುಚ್ಚಿ ವಿಶ್ವಸಂಸ್ಥೆ ರೂಪುಗೊಂಡಿತು.

1927: ಫ್ರಿಟ್ಜ್ ಲ್ಯಾಂಗ್ ಅವರ ಮೆಟ್ರೊಪೊಲಿಸ್ ಚಿತ್ರ ಜರ್ಮನಿಯಲ್ಲಿ ಪ್ರದರ್ಶಿತಗೊಂಡಿತು. ಅಂದಿನ ದಿನಗಳಲ್ಲಿನ ಕಾಲ್ಪನಿಕ ವಿಜ್ಞಾನ ಕಥೆಯ ಮಹತ್ವದ ಚಿತ್ರವೆಂದು ಇದು ಪ್ರಸಿದ್ಧವಾಗಿದೆ.

1929: ‘ಹೆರ್ಗೆ’ ಎಂದು ಖ್ಯಾತರಾದ ರೆಮಿ ಜಾರ್ಜಸ್ ಅವರ ಪ್ರಸಿದ್ಧ ‘ಟಿನ್ ಟಿನ್’ ಕಾಮಿಕ್ ಬರಹ, ‘ಲೆ ವಿಂಗ್ ಟಿಯೇಮ್’ ಎಂಬ ಪತ್ರಿಕೆಯಲ್ಲಿ ಪ್ರಥಮ ಬಾರಿಗೆ ಮೂಡಿಬಂತು.

1946: ವಿಶ್ವಸಂಸ್ಥೆಯ ಮೊದಲ ಮಹಾ ಅಧಿವೇಶನ ‘ಜನರಲ್ ಅಸೆಂಬ್ಲಿ’ ಲಂಡನ್ನಿನಲ್ಲಿ ನಡೆಯಿತು. 51 ದೇಶಗಳ ಪ್ರತಿನಿಧಿಗಳು ಈ ಅಧಿವೇಶನದಲ್ಲಿ ಭಾಗವಹಿಸಿದ್ದರು.

1946: ‘ಪ್ರಾಜೆಕ್ಟ್ ಡಯಾನ’ ಎಂಬುದು ‘ಯು.ಎಸ್. ಆರ್ಮಿ ಸಿಗ್ನಲ್ಸ್ ಕಾರ್ಪ್ಸ್’ ತಂಡದ ಯಶಸ್ವೀ ಪ್ರಾಯೋಗಿಕ ಯೋಜನೆ. ಚಂದ್ರನ ಮೇಲೆ ರೇಡಾರ್ ಸಂಕೇತಗಳನ್ನು ಚಿಮ್ಮಿಸಿ ಅವುಗಳಿಗೆ ಪ್ರತಿಫಲನ ಪಡೆಯುವುದು ಈ ಕಾರ್ಯಯೋಜನೆಯ ಉದ್ದೇಶವಾಗಿತ್ತು. ಇದು ‘ರಾಡಾರ್ ಅಸ್ಟ್ರಾನಮಿ’ಯಲ್ಲಿನ ಪ್ರಥಮ ಪ್ರಯೋಗ ಎನಿಸಿದ್ದು, ಭೂಮಿಯ ಆಚೆಗಿನ ಕಾಯದ ಜೊತೆಗಿನ ಪ್ರಥಮ ಸಂಪರ್ಕ ಸಾಧನೆಯ ಯತ್ನವೆಂದು ಭಾವಿಸಲಾಗಿದೆ. ಇದು ಮುಂದೆ ಮೂಡಿಬಂದ ಭೂಮಿ ಮತ್ತು ಚಂದ್ರರ ನಡುವೆ ಉಂಟಾದ EME (Earth-Moon-Earth) ಸಂಪರ್ಕ ತಂತ್ರಜ್ಞಾನಗಳಿಗೆ ಪ್ರೇರಣೆ ಒದಗಿಸಿತು.

1962: ನಾಸಾ ಸಂಸ್ಥೆಯು ತನ್ನ ಅಪೋಲೋ ಕಾರ್ಯಯೋಜನೆಯಲ್ಲಿ ‘ಸಿ-5’ ರಾಕೆಟ್ ಬಾಹ್ಯಾಕಾಶ ವಾಹನ ನಿರ್ಮಾಣವನ್ನು ಪ್ರಕಟಿಸಿತು. ಮುಂದೆ ಇದು ‘ಸಾಟರ್ನ್ 5’ ಎಂದು ಹೆಸರು ಪಡೆದುಕೊಂಡು ‘ಅಪೋಲೋ ಚಂದ್ರ ಯೋಜನೆಯ’ (ಅಪೋಲೋ ಮೂನ್ ಮಿಷನ್) ಎಲ್ಲ ಉಡಾವಣೆಗಳಿಗೂ ವಾಹನ ವ್ಯವಸ್ಥೆಯಾಗಿ ರೂಪುಗೊಂಡಿದೆ.

1966: ಭಾರತದ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಮತ್ತು ಪಾಕಿಸ್ಥಾನದ ಅಧ್ಯಕ್ಷ ಅಯೂಬ್ ಖಾನ್ ಅವರು ರಷ್ಯಾದ ತಾಷ್ಕೆಂಟಿನಲ್ಲಿ, ಭಾರತ- ಪಾಕಿಸ್ಥಾನ ನಡುವಣ 17ದಿನಗಳ ಸಮರವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ಉಭಯ ರಾಷ್ಟ್ರಗಳೂ ತಮ್ಮ ತಮ್ಮ ಸೇನೆಗಳನ್ನು ಸಮರಭೂಮಿಯಿಂದ ಹಿಂತೆಗೆದುಕೊಂಡು ರಾಜತಾಂತ್ರಿಕ ಬಾಂಧವ್ಯದ ಮರುಸ್ಥಾಪನೆಗೆ ಒಪ್ಪಿಕೊಂಡವು. ಇದಾದ ಮರುದಿನ ಲಾಲ್ ಬಹಾದುರ್ ಶಾಸ್ತ್ರಿ ಅವರ ಸಾವು ಸಂಭವಿಸಿತು.

1987: ಕರ್ನಲ್ ಟಿ.ಪಿ.ಎಸ್. ಚೌಧರಿ ಅವರ ನೇತೃತ್ವದಲ್ಲಿ ವಿಶ್ವಪರ್ಯಟನೆಯನ್ನು ಕೈಗೊಂಡ ‘ತೃಷ್ಣಾ’ ವಿಹಾರ ನೌಕೆಯು, ತನ್ನ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿ ಮುಂಬೈಗೆ ಬಂದಿಳಿಯಿತು. ಈ ನೌಕೆಯು 37 ಅಡಿ ಉದ್ದ ಮತ್ತು 10.5 ಟನ್ ತೂಕವುಳ್ಳದ್ದಾಗಿದ್ದು, ಫೈಬರ್ ಗಾಜಿನಿಂದ ರೂಪುಗೊಂಡಿತ್ತು.

1972: ಒಂಬತ್ತು ವರ್ಷ ಜೈಲಿನಲ್ಲಿ ಕಳೆದ ಷೇಕ್ ಮುಜೀಬುರ್ ರೆಹಮಾನ್ ಅವರು ಬಾಂಗ್ಲಾದೇಶಕ್ಕೆ ಅಧ್ಯಕ್ಷರಾಗಿ ಹಿಂದಿರುಗಿದರು.

1990: ಟೈಮ್ ಇನ್ಕಾರ್ಪೋರೇಷನ್ ಮತ್ತು ವಾರ್ನರ್ ಕಂಮ್ಯೂನಿಕೆಶನ್ ಸಂಸ್ಥೆಗಳು ಸಂಗಮಗೊಂಡು ‘ಟೈಮ್ ವಾರ್ನರ್’ ಎಂಬ ಸಂಸ್ಥೆಯಾಯಿತು.

2006: ಜನಪ್ರಿಯ ಕಾದಂಬರಿಕಾರರಾದ ಡಾ. ಎಸ್.ಎಲ್. ಭೈರಪ್ಪ ಅವರನ್ನು 2005ನೇ ಸಾಲಿನ ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ಗೆ ಆಯ್ಕೆ ಮಾಡಲಾಯಿತು.

2006: ಯಾವ ವಿಚಾರಣೆಯನ್ನೂ ನಡೆಸದೆ ಲಾಲುಂಗ್ ಎಂಬಾತನನ್ನು 54 ವರ್ಷಗಳ ಕಾಲ ಬಂಧನದಲ್ಲಿ ಇಟ್ಟ ತಪ್ಪಿಗಾಗಿ ಅಸ್ಸಾಂ ಸರ್ಕಾರ, ಆತನಿಗೆ 3 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತು. ಆತ ಯಾರ ಮೇಲೋ ಹಲ್ಲೆ ನಡೆಸಿದ ಆರೋಪದ ಮೇಲೆ1950 ವರ್ಷದಲ್ಲಿ ಜೈಲಿಗೆ ಬಂದಿದ್ದನಾದರೂ, ಯಾವುದೇ ದಾಖಲೆಯನ್ನೂ ಹೊಂದಿಲ್ಲದ ಪೋಲೀಸ್ ವ್ಯವಸ್ಥೆ ಆತನನ್ನು ಇಷ್ಟು ಸುದೀರ್ಘ ಕಾಲ ಜೈಲಿನಲ್ಲಿರಿಸಿತ್ತು.

2006: ಮರಾಠಾ ನಾಯಕ ಶಿವಾಜಿಯ ತೇಜೋವಧೆ ಮಾಡುವಂತಹ ವಿಷಯಗಳನ್ನು ಒಳಗೊಂಡಿದೆ ಎಂಬ ಕಾರಣದಿಂದ ಅಮೆರಿಕದ ‘ಜೇಮ್ಸ್ ಲೇನ್’ ವಿರಚಿತ `ಎಪಿಕ್ ಆಫ್ ಶಿವಾಜಿ’ ಪುಸ್ತಕವನ್ನು ಮಹಾರಾಷ್ಟ್ರ ಸರ್ಕಾರ ನಿಷೇಧಿಸಿತು. ಜೇಮ್ಸ್ ಲೇನ್ ಅವರ ಹಿಂದಿನ ಪುಸ್ತಕ ‘ಶಿವಾಜಿ- ಹಿಂದೂ ಕಿಂಗ್ ಇನ್ ಇಸ್ಲಾಮಿಕ್ ಇಂಡಿಯಾ’ ಪುಸ್ತಕವನ್ನು ಸಹಾ 2004ರಲ್ಲಿ ನಿಷೇಧಿಸಲಾಗಿತ್ತು.

2007: ಸದನದಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ದುರ್ನಡತೆಗಾಗಿ ಲೋಕಸಭೆಯ 10 ಮಂದಿ ಮತ್ತು ರಾಜ್ಯ ಸಭೆಯ ಇಬ್ಬರು ಸದಸ್ಯರನ್ನು ಉಚ್ಛಾಟಿಸಿದ ಸಂಸತ್ತಿನ ಐತಿಹಾಸಿಕ ನಿರ್ಣಯವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ತಪ್ಪೆಸಗಿದ ಸಂಸತ್ ಸದಸ್ಯರನ್ನು ಸದನದಿಂದ ಉಚ್ಛಾಟಿಸುವ ಅಧಿಕಾರ ಸಂಸತ್ತಿಗೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ನೇತೃತ್ವದ ಪಂಚಸದಸ್ಯ ಪೀಠವು 4-1ರ ಬಹುಮತದಿಂದ ತೀರ್ಪು ನೀಡಿತು.

2007: ಭಾರತೀಯ ‘ಪಿ.ಎಸ್.ಎಲ್.ವಿ–ಸಿ7’ ಬಾಹ್ಯಾಕಾಶ ಉಪಗ್ರಹ ವಾಹನವು ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಚಿಮ್ಮಿ, ನಾಲ್ಕು ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸಿತು.

2008: ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ರತನ್ ನಾವಲ್ ಟಾಟಾ ಅವರು ‘ನ್ಯಾನೋ’ ಹೆಸರಿನ ಕಡಿಮೆ ಬೆಲೆಯ ಕಾರ್ ಬಿಡುಗಡೆ ಮಾಡಿದರು. ಮೂರು ಮಾದರಿಗಳಲ್ಲಿ ಬಿಡುಗಡೆಗೊಂಡ ಈ ‘ನ್ಯಾನೋ’ ಕಾರಿನ ಮೂಲ ಬೆಲೆ (ತೆರಿಗೆ ಮತ್ತು ಇತರ ವೆಚ್ಚಗಳನ್ನು ಹೊರತು ಪಡಿಸಿ) 1 ಲಕ್ಷ ರೂಪಾಯಿ ಇತ್ತು.

2009: ರಂಗಕರ್ಮಿ ಮತ್ತು ನಟಿ ಅರುಂಧತಿ ನಾಗ್, ಸಂಗೀತ ಸಾಧಕ ಮೈಸೂರಿನ ಆರ್.ಸತ್ಯನಾರಾಯಣ್ ಮತ್ತು ಕೀರ್ತನಕಾರ ತುಮಕೂರಿನ ಲಕ್ಷ್ಮಣ್‌ದಾಸ್ ಅವರುಗಳು 2008ನೇ ಸಾಲಿನ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರೊ.ಆರ್.ಸತ್ಯನಾರಾಯಣ ಅವರಿಗೆ ಸಂಗೀತ ಕ್ಷೇತ್ರದಲ್ಲಿನ ಕೊಡುಗೆಗಾಗಿ, ಅರುಂಧತಿ ನಾಗ್ ಅವರಿಗೆ ನಾಟಕ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಹಾಗೂ ಲಕ್ಷ್ಮಣದಾಸ್ ಅವರಿಗೆ ಕೀರ್ತನ ಕ್ಷೇತ್ರದ ಕೊಡುಗೆಗಾಗಿ ಈ ಪ್ರಶಸ್ತಿ ಸಂದಿದೆ.

2009: ವಿಶ್ವದ ಅತಿ ಎತ್ತರ ವ್ಯಕ್ತಿ ಚೀನಾದ ಬಾವೊ ಕ್ಸಿಶುನ್ ಅವರು ಪ್ರಚಾರ ರಾಯಭಾರಿಯಾಗಿ ಹಾಂಕಾಂಗ್‌ನ ಶಾಪಿಂಗ್ ಮಾಲ್‌ನಲ್ಲಿ ಕಾಣಿಸಿಕೊಂಡರು. ಇವರ ಎತ್ತರ 7 ಅಡಿ 8.95 ಅಂಗುಲ!!!

ಪ್ರಮುಖಜನನ/ಮರಣ:

1654: ಇತಿಹಾಸಜ್ಞ ಮತ್ತು ವಿದ್ವಾಂಸ ಬರಹಗಾರ ಜೊಶುವಾ ಬರ್ನೆಸ್ ಲಂಡನ್ನಿನಲ್ಲಿ ಜನಿಸಿದರು. ಅವರ ‘ಗೆರಾನಿಯಾ’- ‘ಪಿಗ್ಮಿಸ್ ಎಂದು ಕರೆಯಲ್ಪಡುತ್ತಿದ ಪುಟ್ಟ ವ್ಯಕ್ತಿಗಳ ಸಾಹಸ ಕಥೆ’ ಪ್ರಸಿದ್ಧವಾಗಿದೆ. ಇತಿಹಾಸಕ್ಕೆ ಸಂಬಂಧ ಪಟ್ಟ ಹಲವು ಗ್ರಂಥಗಳನ್ನೂ ರಚಿಸಿದ್ದ ಇವರಿಗೆ ಫೆಲೋ ಆಫ್ ರಾಯಲ್ ಸೊಸೈಟಿ ಗೌರವ ಸಂದಿತ್ತು.

1802: ಯೂರೋಪಿನ ಪರ್ವತಪ್ರದೇಶಗಳಲ್ಲಿ ನಿರ್ಮಾಣಗೊಂಡ ಪ್ರಥಮ ರೈಲು ಹಾದಿ ಎನಿಸಿರುವ, ಆಸ್ಟ್ರಿಯಾದಲ್ಲಿರುವ ‘ಸೇಮ್ಮೆರಿಂಗ್’ ರೈಲ್ವೆಯ ವಿನ್ಯಾಸಕಾರ ‘ಕಾರ್ಲ್ ರಿಟ್ಟರ್ ಆಫ್ ಘೇಗ’ ಇಟಲಿಯ ವೆನಿಸ್ ನಗರದಲ್ಲಿ ಜನಿಸಿದರು. ಇವರು ತಮ್ಮ ಕಾಲದ ಶ್ರೇಷ್ಠ ರೈಲ್ವೆ ತಂತ್ರಜ್ಞಾನಿ ಮತ್ತು ವಿನ್ಯಾಸಕಾರರೆನಿಸಿದ್ದರು.

1916: ಸ್ವೀಡಿಷ್ ಜೈವಿಕ ವಿಜ್ಞಾನಿ ಸುನೆ ಬರ್ಗ್ ಸ್ಟ್ರಾಮ್ ಅವರು ಸ್ವೀಡನ್ನಿನ ಸ್ಟಾಕ್ ಹೋಮ್ ನಗರದಲ್ಲಿ ಜನಿಸಿದರು. ಫಿಸಿಯಾಲಜಿ ಅಥವಾ ಮೆಡಿಸಿನ್ ಕ್ಷೇತ್ರದಲ್ಲಿ ‘ಪ್ರೊಸ್ಟಾ ಗ್ಲಾಂಡಿಸ್ ಮತ್ತು ಅವುಗಳ ಅಂಶಗಳ’ ಕುರಿತಾದ ಸಂಶೋಧನೆಗಾಗಿ ಅವರಿಗೆ 1982ರ ವರ್ಷದಲ್ಲಿ ನೊಬೆಲ್ ಪ್ರಶಸ್ತಿ ಸಂದಿತು.

1936: ಖಗೋಳ ಶಾಸ್ತ್ರಜ್ಞ ಮತ್ತು ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ರಾಬರ್ಟ್ ವುಡ್ರೋ ವಿಲ್ಸನ್ ಅವರು ಅಮೆರಿಕದ ಟೆಕ್ಸಾಸಿನ ಹೌಸ್ಟನ್ ಎಂಬಲ್ಲಿ ಜನಿಸಿದರು. ಅಮೋ ಅಲನ್ ಪೆನ್ಸಿಯಾಜ್ ಅವರೊಂದಿಗೆ ಜೊತೆಗೂಡಿ ‘ಕಾಸ್ಮಿಕ್ ಮೈಕ್ರೋವೇವ್ ಬ್ಯಾಗ್ರೌಂಡ್ ರೇಡಿಯೇಷನ್’ ಕುರಿತಾಗಿ ಇವರು ನಡೆಸಿದ ಮಹತ್ವದ ಸಂಶೋಧನೆಗಾಗಿ 1978ರಲ್ಲಿ ನೊಬೆಲ್ ಪ್ರಶಸ್ತಿ ಸಂದಿತ್ತು. ಬಿಗ್ ಬ್ಯಾಂಗ್ ಥಿಯರಿಗೆ ಈ ಅನ್ವೇಷಣೆ ಮಹತ್ವದ ಪ್ರಾರಂಭ ಒದಗಿಸಿತು.

1920: ಜಾನಪದ ವಿದ್ವಾಂಸ, ಸಂಪಾದಕ, ಸಾಹಿತಿ, ಶಿಕ್ಷಣ ತಜ್ಞ ಎಂ.ಎಸ್. ಸುಂಕಾಪುರ ಮುಳಗುಂದದಲ್ಲಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ಪೀಠ ಕಟ್ಟುವಲ್ಲಿ ಇವರು ಆರ್. ಸಿ. ಹಿರೇಮಠ ಅವರೊಂದಿಗೆ ಅಹರ್ನಿಶಿ ದುಡಿದಿದ್ದರು. ಕೆಲವರ್ಷ ಗುಲಬರ್ಗ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಇವರು, ನಂತರದಲ್ಲಿ ನಿವೃತ್ತಿಯವರೆಗೂ ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಪೀಠದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಶೋಭಮಾಲ ಸ್ವತಂತ್ರ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. 1992ರ ವರ್ಷದಲ್ಲಿ ನಿಧನರಾದ ಇವರು ಗ್ರಂಥ ಸಂಪಾದನೆಯಲ್ಲಿ ಹಗಲಿರುಳೂ ದುಡಿದು ಕನ್ನಡದ ಪ್ರಾಚೀನ ಸಾಹಿತ್ಯ, ವಚನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯದ ಮೇಲೆ ಬೆಳಕು ತಂದುದಲ್ಲದೆ, ಹಾಸ್ಯ ಸಾಹಿತ್ಯದಲ್ಲೂ ಪ್ರಸಿದ್ಧರಾಗಿದ್ದರು.

1940: ಕರ್ನಾಟಕ ಸಂಗೀತ ಗಾಯಕ, ವಿದ್ವಾಂಸ ಮತ್ತು ಚಲನಚಿತ್ರ ಹಿನ್ನೆಲೆ ಗಾಯಕರಾದ ಕೆ.ಜೆ. ಏಸುದಾಸ್ ಕೇರಳದ ಕೊಚ್ಚಿಯಲ್ಲಿ ಜನಿಸಿದರು. ವಿಶ್ವದಾದ್ಯಂತ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ನಡೆಸಿಕೊಡುತ್ತಿರುವುದರ ಜೊತೆಗೆ ಭಾರತೀಯ ಬಹುತೇಕ ಭಾಷೆಗಳು, ಮಲಯ, ರಷ್ಯನ್, ಅರಬ್ಬಿ, ಲ್ಯಾಟಿನ್ ಭಾಷೆಗಳಲ್ಲಿ ಅವರು 40,000ಕ್ಕೂ ಹೆಚ್ಚು ಹಾಡುಗಳನ್ನು ಅವರು ಧ್ವನಿ ಮುದ್ರಿಸಿದ್ದಾರೆ. ಪದ್ಮಶ್ರೀ, ಪದ್ಮ ಭೂಷಣ, ಏಳು ಬಾರಿ ಶ್ರೇಷ್ಠ ಚಲನಚಿತ್ರ ಹಿನ್ನೆಲೆ ಗಾಯಕ ರಾಷ್ಟ್ರೀಯ ಪ್ರಶಸ್ತಿಗಳ ಜೊತೆಗೆ ಇನ್ನಿತರ ಹಲವಾರು ಪ್ರಶಸ್ತಿಗಳು ಅವರಿಗೆ ಸಂದಿವೆ.

2007: ನಾಟ್ಯಾಚಾರ್ಯ ಯು.ಎಸ್. ಕೃಷ್ಣರಾವ್ ಅವರು ತಮ್ಮ 92ನೆಯ ವಯಸ್ಸಿನಲ್ಲಿ ಮಂಗಳೂರಿನಲ್ಲಿ ನಿಧನರಾದರು. ಕರ್ನಾಟಕ ಕಲಾ ತಿಲಕ, ನಾಟ್ಯರಾಣಿ ಶಾಂತಲಾ ಪ್ರಶಸ್ತಿ, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವಗಳಿಗೆ ಭಾಜನರಾಗಿದ್ದ ಯು.ಆರ್. ಕೃಷ್ಣರಾವ್ ಅವರು ಇಂತದ್ದೇ ಅನುರೂಪ ಸಾಧನೆ ಮಾಡಿದ ತಮ್ಮ ಪತ್ನಿ ಚಂದ್ರ ಭಾಗಾದೇವಿ ಅವರೊಂದಿಗೆ ಸೇರಿ ನಾಟ್ಯಕಲೆಗೆ ಮಹತ್ವದಕೊಡುಗೆ ನೀಡಿದವರೆನಿಸಿದ್ದಾರೆ.