Categories
e-ದಿನ

ಜನವರಿ-12

ರಾಷ್ಟ್ರೀಯ ಯುವ ದಿನ
ಭಾರತ ಸರ್ಕಾರವು 1984ರ ವರ್ಷದಲ್ಲಿ, ವಿಶ್ವಕ್ಕೆ ಭಾರತೀಯ ಸನಾತನ ಧರ್ಮವನ್ನು ಮನಮುಟ್ಟುವಂತೆ ತಿಳಿಸಿಕೊಟ್ಟ ಸ್ವಾಮಿ ವಿವೇಕಾನಂದರು ಜನಿಸಿದ ಜನವರಿ 12 ದಿನವನ್ನು ‘ರಾಷ್ಟ್ರೀಯ ಯುವದಿನ’ ಎಂದು ಘೋಷಿಸಿತು.

ಪ್ರಮುಖಘಟನಾವಳಿಗಳು:

1554: ದಕ್ಷಿಣಪೂರ್ವಾ ಏಷ್ಯಾದ ಅತ್ಯಂತ ದೊಡ್ಡ ಚಕ್ರಾಧಿಪತ್ಯವನ್ನು ಸ್ಥಾಪಿಸಿದ ಹೆಗ್ಗಳಿಕೆಗೆ ಪಾತ್ರರಾದ ಬಯಿನ್ನೌಂಗ್ ಅವರು ಬರ್ಮಾದ ರಾಜ ಸಿಂಹಾಸನವನ್ನೇರಿದರು.

1848: ಮಾರ್ಕ್ವೆಸ್ ಡಾಲ್ ಹೌಸಿ ಅವರು ಭಾರತದ ಗವರ್ನರ್ ಜನರಲ್ ಆದರು.  ಇವರು ಯುದ್ಧ ಮತ್ತು ಸಂಧಾನಗಳ ಮೂಲಕ ವಿವಿಧ ರಾಜ್ಯಗಳನ್ನು ಸೇರಿಸಿ ಭಾರತದ ನಕ್ಷೆಯನ್ನು ರೂಪಿಸಿದ ವ್ಯಕ್ತಿ  ಎಂದು ಪರಿಗಣಿತರಾಗಿದ್ದಾರೆ.

1866: ಲಂಡನ್ನಿನಲ್ಲಿ ‘ದಿ ರಾಯಲ್ ಏರೋನಾಟಿಕಾಲ್ ಸೊಸೈಟಿ’ ಸ್ಥಾಪನೆಗೊಂಡಿತು.

1895: ಯುನೈಟೆಡ್ ಕಿಂಗ್ಡಂನಲ್ಲಿ ‘ದಿ ನ್ಯಾಷನಲ್ ಟ್ರಸ್ಟ್’ ಆರಂಭಗೊಂಡಿತು. ಐತಿಹಾಸಿಕ ಸ್ಮಾರಕಗಳು  ಮತ್ತು ಪ್ರಾಕೃತಿಕ ಸೊಬಗನ್ನು ಸಂರಕ್ಷಿಸುವುದು ಈ ಸಂಸ್ಥೆಯ ಪ್ರಧಾನ ಆಶಯವಾಗಿದೆ.

1908: ಐಫೆಲ್ ಗೋಪುರದಿಂದ  ಪಥಮ ಬಾರಿಗೆ  ರೇಡಿಯೋ ದೂರ ಸಂದೇಶವನ್ನು ಭಿತ್ತರಿಸಲಾಯಿತು.

1915: ಅಮೇರಿಕದ ಪ್ರತಿನಿಧಿ ಸಭೆಯಾದ ‘ಯುನೈಟೆಡ್ ಸ್ಟೇಟ್ಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’   ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಲು ನಿರಾಕರಿಸಿತು.

1932: ಹಟ್ಟೀ ಕಾರವೇ ಅವರು ಅಮೆರಿಕದ ಸೆನೆಟ್ಟಿಗೆ ಆಯ್ಕೆಗೊಂಡ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು.

1934: ಚಿತ್ತಗಾಂಗ್ ಶಸ್ತ್ರಾಗಾರ ದಾಳಿಯಲ್ಲಿ ವಹಿಸಿದ ಪಾತ್ರಕ್ಕಾಗಿ ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸೂರ್ಯಸೇನ್ ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು. ಮೂಲತಃ ಶಿಕ್ಷಕರಾಗಿದ್ದ ಅವರನ್ನು ಜನ ಪ್ರೀತಿಯಿಂದ ಮಾಸ್ಟರ್ ದಾ ಎಂದು ಸಂಬೋಧಿಸುತ್ತಿದ್ದರು.

1986: ಅಮೇರಿಕದ ಕಾಂಗ್ರೆಸ್ಸಿಗರಾದ ಬಿಲ್ ನೆಲ್ಸನ್ ‘ಎಸ್.ಟಿ.ಎಸ್-61-ಕಾಸಾ’ ಯೋಜನೆಯ ವಿಶೇಷ ತಜ್ಞರಾಗಿ ಕೊಲಂಬಿಯಾ ಗಗನ ನೌಕೆಯನ್ನೇರಿ ಬಾಹ್ಯಾಕಾಶಕ್ಕೆ ಚಿಮ್ಮಿದರು.

1991: ಕುವೈತಿನಿಂದ  ಇರಾಕ್ ಪಡೆಗಳನ್ನು ಹೊರಗಟ್ಟಲು, ತನ್ನ ಮಿಲಿಟರಿ ಬಲವನ್ನು ಬಳಸುವ ವಿಧೇಯಕಕ್ಕೆ  ಅಮೇರಿಕದ ಕಾಂಗ್ರೆಸ್ ಅಂಗೀಕಾರ ನೀಡಿತು.

1992: ದಾವಣಗೆರೆಯಲ್ಲಿ  ಡಾ. ಜಿ. ಎಸ್. ಶಿವರುದ್ರಪ್ಪನವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಾಲ್ಕು ದಿನ ನಡೆದ 61ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಮಾರೋಪಗೊಂಡಿತು.

1998: ‘ಹ್ಯೂಮನ್ ಕ್ಲೋನಿಂಗ್’ ವೈಜ್ಞಾನಿಕ ಪ್ರಯೋಗಗಳನ್ನು ನಡೆಸದಿರಲು 19 ಐರೋಪ್ಯ ರಾಷ್ಟ್ರಗಳು ಸಾಮಾಹಿಕವಾಗಿ ನಿರ್ಧರಿಸಿದವು.

2001: ಡೌನ್ ಟೌನ್ ಡಿಸ್ನಿ ಸಂಸ್ಥೆ, ಕ್ಯಾಲಿಫೋರ್ನಿಯಾದ ಅನಹೀಮ್ ಪ್ರದೇಶದಲ್ಲಿ ‘ಡಿಸ್ನೀ ಲ್ಯಾಂಡ್ ರೆಸಾರ್ಟ್’ ಒಂದನ್ನು  ಸಾರ್ವಜನಿಕರಿಗೆ ತೆರೆಯಿತು.

2004: ವಿಶ್ವದ ಅತಿದೊಡ್ಡ ಓಶನ್ ಲೈನರ್ ಎಂಬ ಹೆಗ್ಗಳಿಕೆಗೆ ಪಾತ್ರವಾದ  ‘ಆರ್.ಎಮ್.ಎಸ್. ಕ್ವೀನ್ ಮೇರಿ 2’  ನೌಕೆ, ತನ್ನ ಚೊಚ್ಚಲ ಸಮುದ್ರಯಾನವನ್ನು ಆರಂಭಿಸಿತು.

2005: ‘ನಾಸಾ’ ಸಂಸ್ಥೆ ತನ್ನ  ‘ಡೀಪ್ ಇಂಪ್ಯಾಕ್ಟ್’ ಸ್ಪೇಸ್ ಪ್ರೋಬ್ ಅನ್ನು, ಕೇಪ್ ಕೆನಾವರೆಲ್ ಕೇಂದ್ರದಿಂದ, ಡೆಲ್ಟಾ ಆಲ್  ರಾಕೆಟ್ ಮೂಲಕ ಉಡಾಯಿಸಲಾಯಿತು.

2006: ಸೌದಿ ಅರೇಬಿಯಾದ ಹಜ್ ಯಾತ್ರೆಯ ಕೊನೆಯ ದಿನ,  ಸೈತಾನನಿಗೆ ಕಲ್ಲೆಸೆಯುವ ಧಾರ್ಮಿಕ ವಿಧಿ ಆಚರಣೆ ಸಂದರ್ಭದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ 362 ಯಾತ್ರಿಕರು ಮೃತರಾದರು.

2007: ಸಂಸತ್ತಿನ ಮೇಲೆ ದಾಳಿ ಮಾಡಿದ ಸಂಚಿಗಾಗಿ ಮರಣದಂಡನೆಗೆ ಗುರಿಯಾದ ಮೊಹಮ್ಮದ್ ಅಫ್ಜಲ್ ಗುರುವಿನ ಕ್ಷಮಾದಾನ ಕೋರಿಕೆ ಮೇಲ್ಮನವಿಯನ್ನು ವಜಾಮಾಡಿದ ಸುಪ್ರೀಂಕೋರ್ಟ್, ಈ ಹಿಂದೆ  ಹೈಕೋರ್ಟ್ ನೀಡಿರುವ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿಯಿತು.

2010: ಹೈಟಿಯಲ್ಲಿ ಉಂಟಾದ ಭೀಕರ ಭೂಕಂಪದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸಾವಿಗೀಡಾದರಲ್ಲದೆ, ಅದರ ರಾಜಧಾನಿ ಪೋರ್ಟ್-ಔ-ಪ್ರಿನ್ಸ್ ಬಹುತೇಕ ನಾಶಗೊಂಡಿದೆ.

ಪ್ರಮುಖಜನನ/ಮರಣ:

1591: ಸ್ಪಾನಿಷ್ ಚಿತ್ರಗಾರ ‘ಜುಸೆಪೆ ಡಿ ರಿಬೆರಾ’ ಅವರು ಸ್ಪೈನಿನ ವೆಲೆನ್ಸಿಯಾ ಬಳಿಯ ಕ್ಸಟಿವ ಎಂಬಲ್ಲಿ ಜನಿಸಿದರು.  ಮೂಲತಃ ಅವರ ಚಿತ್ರಗಳು ಸ್ಪಾನಿಷ್ ಕಲೆಯನ್ನು ಬಿಂಬಿಸಿದರೂ, ಅವರ ಬಹುತೇಕ ಚಿತ್ರಗಳು ಇಟಲಿಯಲ್ಲಿ ಮೂಡಿಬಂತು.

1822: ‘ಎಟಿಯನ್ ಲೆನಾಯರ್’ ಅವರು ಬೆಲ್ಜಿಯಂ ದೇಶದ ಮುಸ್ಸಿ-ಲಾ-ವಿಲ್ಲೆ ಎಂಬಲ್ಲಿ ಜನಿಸಿದರು.  ಇವರು  ಪ್ರಥಮ ಬಾರಿಗೆ ಇಂಟರ್ನಲ್ ಕಂಬಷನ್ ಇಂಜಿನ್ ತಯಾರಿಸಿದರು.  ಇಂಜಿನ್ನಿನ ಒಳಗೆ ಹರಿಯುವ ತೈಲಕ್ಕೆ, ಇದರಲ್ಲಿ  ಹರಿಯುವ ಗಾಳಿಯು ಶಾಖವನ್ನು ಸೃಜಿಸಿ,   ಬಿರುಸಿನ ಒತ್ತಡದ ಅನಿಲವನ್ನು ಹೊರಹೊಮ್ಮಿಸುತ್ತದೆ.  ಆ ಅನಿಲದ ಒತ್ತಡವನ್ನು ಪಿಸ್ಟನ್ಗಳು, ಟರ್ಬೈನ್ಗಳು, ರೋಟಾರುಗಳಲ್ಲಿ  ಅಳವಡಿಸಿಕೊಳ್ಳುವುದರಿಂದ   ವಿವಿಧ ರೀತಿಯ ಉಪಯೋಗೀ  ಯಂತ್ರಗಳಿಗೆ ಚಾಲನಾ ಶಕ್ತಿಯನ್ನು ಒದಗಿಸಿಕೊಳ್ಳುವ ಸಾಧ್ಯತೆಗಳು ತೆರೆದುಕೊಂಡವು.

1849: ಫ್ರೆಂಚ್ ಚಿತ್ರಕಾರ ಜೀನ್ ಬೆರಾಡ್ ಅವರು ಸೈಂಟ್ ಪೀಟರ್ಸ್ ಬರ್ಗ್ ಎಂಬಲ್ಲಿ ಜನಿಸಿದರು.  ಪ್ಯಾರಿಸ್ ನಗರದ ಜೀವನವನ್ನು ಅದ್ಭುತವಾಗಿ ಚಿತ್ರಿಸಿರುವುದು ಇವರ ಕಲೆಯ ವಿಶೇಷತೆ.  ಇವರು ಧಾರ್ಮಿಕ ಚಿತ್ರಗಳನ್ನು ಸಹಾ ಸಮಕಾಲೀನ ಹಿನ್ನೆಲೆಗಳಲ್ಲಿ ಚಿತ್ರಿಸಿದ್ದಾರೆ.

1863: ನರೇಂದ್ರನಾಥ ದತ್ತ ಎಂಬ ಹುಟ್ಟು ಹೆಸರು ಪಡೆದಿದ್ದ ಸ್ವಾಮಿ ವಿವೇಕಾನಂದರು ಕಲ್ಕತ್ತಾದಲ್ಲಿ ಜನಿಸಿದರು.  ಚಿಕ್ಕವಯಸ್ಸಿನಿಂದಲೂ ಯಾವುದೇ ಪೂರ್ವಾಗ್ರಹವಿಲ್ಲದ ಮುಕ್ತ ವೈಚಾರಿಕ ಮನೋಭಾವದಲ್ಲಿ, ದೇವರ ಅಸ್ತಿತ್ವದಂತಹ ವಿಚಾರಗಳನ್ನು ಶೋಧಿಸಿ ಹೊರಟ ಅವರಿಗೆ ಶ್ರೀ ರಾಮಕೃಷ್ಣ ಪರಮಹಂಸರ ಸನ್ನಿಧಾನದಲ್ಲಿ ಆ ಎಲ್ಲ ಪ್ರಶ್ನೆಗಳಿಗೂ ಸ್ಪಷ್ಟತೆ ದೊರೆಯಿತು.  ಶ್ರೀ ರಾಮಕೃಷ್ಣ ಮಿಷನ್ ಸ್ಥಾಪಿಸಿ, ಭಾರತದಾದ್ಯಂತ ಪರ್ಯಟನೆ ನಡೆಸಿದ ಅವರು ತಮ್ಮ ವಿಚಾರಧಾರೆಯಿಂದ  ಜನಸಾಮಾನ್ಯರಿಂದ ರಾಜಮಹಾರಾಜರುಗಳವರೆಗೆ ಎಲ್ಲರನ್ನೂ  ಆಕರ್ಷಿಸಿದರು. ಅಮೆರಿಕದ  ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಿಂದ ಸಮಸ್ತ ವಿಶ್ವಕ್ಕೆ, ಭಾರತೀಯ ಸಂಸ್ಕೃತಿಗೆ ಗೌರವ ತರುವಂತಹ ಸುಸ್ಪಷ್ಟ ಒಳನೋಟವನ್ನು ತೋರಿಸಿಕೊಟ್ಟರು.

1869: ಭಗವಾನ್ ದಾಸ್ ಅವರು ವಾರಣಾಸಿಯಲ್ಲಿ ಜನಿಸಿದರು. ಸ್ವಾತಂತ್ಯ್ರ ಹೋರಾಟಗಾರರಾಗಿ,  ಥಿಯೋಸೊಪಿಸ್ಟರಾಗಿ, ಹಿಂದೂಸ್ಥಾನಿ ಕಲ್ಚರ್ ಸೊಸೈಟಿಯ ಕ್ರಿಯಾಶೀಲ ಸದಸ್ಯರಾಗಿ, ಬ್ರಿಟಿಷ್ ಆಡಳಿತದಲ್ಲಿ ಕೇಂದ್ರೀಯ ಲೆಜಿಸ್ಲೇಟಿವ್ ಅಸೆಂಬ್ಲಿ ಸದಸ್ಯರಾಗಿ ವಿವಿಧ ರೀತಿಯಲ್ಲಿ ಅವರು ಕಾರ್ಯ ನಿರ್ವಹಿಸಿದ್ದರು.  ಅನ್ನಿ ಬೆಸೆಂಟ್ ಅವರೊಂದಿಗೆ ಸೆಂಟ್ರಲ್ ಹಿಂದೂ ಶಾಲೆ ಆರಂಭಿಸಿದ ಅವರು  ಮುಂದೆ ಕಾಶಿ ವಿದ್ಯಾಪೀಠ ಸ್ಥಾಪಿಸಿದರು.  1955ರಲ್ಲಿ ಅವರಿಗೆ ಭಾರತರತ್ನ ಪ್ರಶಸ್ತಿ ಸಂದಿತು.

1899: ರಸಾಯನ ಶಾಸ್ತ್ರಜ್ಞನರಾದ ಪಾಲ್ ಹರ್ಮನ್ ಮುಲ್ಲರ್  ಸ್ವಿಟ್ಜರ್ಲ್ಯಾಂಡ್ ದೇಶದ, ಸೊಲೋಟರ್ನ್ ಬಳಿಯ ಓಲ್ಟೆನ್ ಎಂಬಲ್ಲಿ ಜನಿಸಿದರು. ಡಿ.ಡಿ.ಟಿ ಯಲ್ಲಿರುವ  ಕೀಟನಾಶಕ ಗುಣಗಳನ್ನು ಸಂಶೋಧಿಸಿದ ಅವರು, ಇದನ್ನು  ಕ್ರಿಮಿಗಳು ಹರಡುವ ರೋಗಗಳಾದ ಮಲೇರಿಯಾ ಜಾಂಡೀಸ್ ಮುಂತಾದವುಗಳ ನಿವಾರಣೆಗೆ ಬಳಸಬಹುದೆಂದು ತೋರಿಸಿಕೊಟ್ಟರು.  ಈ ಸಂಶೋಧನೆಗಾಗಿ ಅವರಿಗೆ 1948ರ ನೊಬೆಲ್ ಪುರಸ್ಕಾರ ಸಂದಿತು.

1918: ಪಾಶ್ಚಿಮಾತ್ಯ ದೇಶಗಳಲ್ಲಿ  ಭಾರತೀಯ ಯೋಗ ಮತ್ತು ಧ್ಯಾನಪದ್ದತಿಗಳನ್ನು ಪಸರಿಸಿದ  ಗುರು ಮಹರ್ಷಿ ಮಹೇಶ್ ಯೋಗಿ ಅವರು, ಜಬಲ್ಪುರದಲ್ಲಿ ಜನಿಸಿದರು.  ಮನಸ್ಸಿನ ನಿಯಂತ್ರಣ ಮತ್ತು  ಏಕಾಗ್ರತೆ ಸಾಧಿಸುವ ಟ್ರಾನ್ಸಿಡೆಂಟಲ್ ಮೆಡಿಟೇಷನ್ ಯೋಗ ಪದ್ಧತಿಯಿಂದ ಅವರು ಪ್ರಸಿದ್ಧರಾದರು.  1968ರಲ್ಲಿ, ಭಾರತದ ಇವರ ಆಶ್ರಮಕ್ಕೆ ರಾಕ್ ಮತ್ತು ಪಾಪ್ ಗಾಯಕರು ಭೇಟಿ ಕೊಟ್ಟು, ಇವರ ಶಿಷ್ಯರಾದ ಮೇಲೆ, ಇವರಿಗೆ ಬೀಟಲ್ಸ್ ಗುರು ಎಂಬ ಪ್ರಖ್ಯಾತಿ ಬಂತು. ಮಾದಕ ವ್ಯಸನಗಳಿಗೆ ಬಲಿಯಾದ ರಾಕ್ ಗಾಯಕರಿಗೆ ಇವರ ಯೋಗ ಪದ್ಧತಿಯ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. 2008, ಫೆಬ್ರುವರಿ 5ರಂದು ನಿಧನರಾದರು.

1920: ಅಮೆರಿಕದ ಚಳುವಳಿಗಾರ ಮತ್ತು ರಾಜಕೀಯ ನಾಯಕರಾಗಿದ್ದ ಜೇಮ್ಸ್ ಫಾರ್ಮರ್ ಅವರು ಟೆಕ್ಸಾಸಿನ ಮಾರ್ಷಲ್ ಎಂಬಲ್ಲಿ ಜನಿಸಿದರು.  ಇವರು ಇತರರೊಂದಿಗೆ ಸ್ಥಾಪಿಸಿ ಅಧ್ಯಕ್ಷತೆ ವಹಿಸಿದ್ದ ಅಮೆರಿಕದಲ್ಲಿರುವ ಆಫ್ರಿಕನ್ ಮೂಲದವರ ‘ಕಾಂಗ್ರೆಸ್ ಫಾರ್ ರೇಸಿಯಲ್ ಈಕ್ವಾಲಿಟಿ’ ಸಂಘಟನೆಯು, ಅಲ್ಲಿ ನಡೆದ  ‘ಸಾರ್ವಜನಿಕ ಹಕ್ಕುಗಳ ಚಳುವಳಿಯಲ್ಲಿ’  (ಸಿವಿಲ್ ರೈಟ್ಸ್ ಮೂವ್ಮೆಂಟ್ನಲ್ಲಿ ) ಪ್ರಮುಖ ಪಾತ್ರವಹಿಸಿತ್ತು.

1929: ಕನ್ನಡದ ವಿದ್ವಾಂಸ ಮತ್ತು ಸಂಶೋಧಕರಾದ ಶ್ರೀನಿವಾಸ ಹಾವನೂರ್ ಅವರು ಹಾವೇರಿ ಜಿಲ್ಲೆಯ ಹಾವನೂರಿನಲ್ಲಿ ಜನಿಸಿದರು. ಅರವತ್ತಕ್ಕೂ ಹೆಚ್ಚು ಮಹತ್ವದ ಸಂಶೋಧನಾ ಕೃತಿಗಳನ್ನು ರಚಿಸಿದ ಡಾ. ಶ್ರೀನಿವಾಸ ಹಾವನೂರು ಅವರು, ಕರ್ನಾಟಕದ ಇತಿಹಾಸ, ಸಾಹಿತ್ಯಗಳ ಸಂಶೋಧನೆಗಾಗಿ ಕಂಪ್ಯೂಟರ್‌ ಅನ್ನು ಬಳಸಿದವರಲ್ಲಿ ಮೊದಲಿಗರು.  2010ರ ವರ್ಷದಲ್ಲಿ ನಿಧನರಾದ ಇವರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳಿಗೆ ಭಾಜನರಾಗಿದ್ದರು.

1964: ಪ್ರಸಿದ್ಧ ಅಮೆಜಾನ್.ಕಾಂ ಸಂಸ್ಥೆಯ ಸಂಸ್ಥಾಪಕ, ಕಂಪ್ಯೂಟರ್ ವಿಜ್ಞಾನಿ ಮತ್ತು ವ್ಯಾಪಾರಸ್ಥ ಜೆಫ್ ಬೆಸೋಸ್ ಅವರು ಅಮೆರಿಕ ದೇಶದಲ್ಲಿನ,  ನವ ಮೆಕ್ಸಿಕೋದ, ಆಲ್ಬುಕರ್ಕ್ ಎಂಬಲ್ಲಿ ಜನಿಸಿದರು.  ಅವರು ಸ್ಥಾಪಿಸಿರುವ ಅಮೆಜಾನ್ ಸಂಸ್ಥೆ ಪ್ರಸಕ್ತದಲ್ಲಿ ವಿಶ್ವ ವ್ಯಾಪೀ ಅಂತರಜಾಲದಲ್ಲಿನ ಅತ್ಯಂತ ದೊಡ್ಡ  ವಹಿವಾಟು ಸಂಸ್ಥೆಯಾಗಿದೆ.

1705:  ಇಟಲಿಯ ಪ್ರಸಿದ್ಧ ವರ್ಣ ಚಿತ್ರಕಾರ ಲುಕಾ ಜಿಯಾರ್ಡಾನೋ ನೇಪಲ್ಸ್ ನಗರದಲ್ಲಿ ನಿಧನರಾದರು.  ನೇಪಲ್ಸ್, ರೋಮ್, ಫ್ಲಾರೆನ್ಸ್, ವೆನಿಸ್ ಮತ್ತು ಸ್ಪೈನ್ಗಳಲ್ಲಿ ಅವರು ಪ್ರಸಿದ್ಧ ಚಿತ್ರಗಳನ್ನು ರಚಿಸಿದರು.

1934: ಚಿಟ್ಟಗಾಂಗ್ ಶಸ್ತ್ರಾಗಾರ ದಾಳಿಯಲ್ಲಿ ವಹಿಸಿದ ಪಾತ್ರಕ್ಕಾಗಿ ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸೂರ್ಯಸೇನ್ ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು. ಮೂಲತಃ ಶಿಕ್ಷಕರಾಗಿದ್ದ ಅವರನ್ನು ಜನ ಪ್ರೀತಿಯಿಂದ ಮಾಸ್ಟರ್ ದಾ ಎಂದು ಸಂಬೋಧಿಸುತ್ತಿದ್ದರು.

1976: ಪ್ರಸಿದ್ಧ ಇಂಗ್ಲಿಷ್ ಪತ್ತೇದಾರಿ ಕಾದಂಬರಿಗಾರ್ತಿ, ಕಥೆಗಾರ್ತಿ ಮತ್ತು ನಾಟಕ ರಚನಕಾರ್ತಿ  ಅಗಾಥಾ ಕ್ರಿಸ್ತಿ ಅವರು, ಇಂಗ್ಲೆಂಡಿನ ‘ಆಕ್ಸ್ ಫೋರ್ಡ್ ಷೈರಿನ’ ವಿಂಟರ್ಬ್ರೂಕ್ ಎಂಬಲ್ಲಿ  ನಿಧನರಾದರು.

1992:  ಹಿಂದೂಸ್ಥಾನಿ ಸಂಗೀತದ ಮೇರು ಕಲಾವಿದ ಕುಮಾರ ಗಂಧರ್ವ ಅವರು ದೇವಸ್ ಎಂಬಲ್ಲಿ ನಿಧನರಾದರು. ಬೆಳಗಾವಿಯ ಸುಳ್ಳೇಬಾವಿ ಎಂಬ ಗ್ರಾಮದಲ್ಲಿ ಜನಿಸಿದ ಇವರ ಬಾಲ್ಯದ ಹೆಸರ   ಶಿವಪುತ್ರ ಕೊಂಕಾಳಿಮಠ.  ಇವರು ಆರು ವರ್ಷದ ಬಾಲಕರಾಗಿದ್ದಾಗ ಇವರ  ಅದ್ಭುತ ಗಾಯನ ಕೇಳಿದ ಗುರುಕಲ್ಮಠದ ಶಾಂತವೀರ ಸ್ವಾಮಿಗಳು “ಓಹೋ! ಇವನು ಕುಮಾರ ಗಂಧರ್ವ” ಎಂದು ಉದ್ಗರಿಸಿದ್ದು ಅವರ ಹೆಸರೇ ಆಯ್ತು. ಇವರಿಗೆ   ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಪದ್ಮವಿಭೂಷಣ, ಕಾಳಿದಾಸ ಸಮ್ಮಾನ್  ಮುಂತಾದ ಅನೇಕ  ಗೌರವಗಳು ಸಂದಿದ್ದವು.

2001: ಪ್ರಸಿದ್ಧ ತಂತಜ್ಞ ಮತ್ತು ವಿಶ್ವಪ್ರಸಿದ್ಧ ಕಂಪ್ಯೂಟರ್ ತಂತ್ರಜ್ಞಾನ ಸಂಸ್ಥೆಗಳಾದ  HP (ಹೆವ್ಲೆಟ್ ಪ್ಯಾಕರ್ಡ್), ಎಗಿಲೆಂಟ್ ಟೆಕ್ನಾಲಜೀಸ್, ಕೀ ಸೈಟ್ ಮುಂತಾದ ಸಂಸ್ಥೆಗಳ ಸ್ಥಾಪಕರಲ್ಲಿ ಒಬ್ಬರಾದ  ‘ವಿಲಿಯಂ ರೆಡಿಂಗ್ ಟನ್ ಹೆವ್ಲೆಟ್’  ಅವರು ಕ್ಯಾಲಿಫೋರ್ನಿಯಾದ ಪಾಲೋ ಆಲ್ಟೊ ಎಂಬಲ್ಲಿ ನಿಧನರಾದರು.