ಸ್ವಾಗತ ನಿನಗೆಲೆ ಕಂದಯ್ಯ
ನಮ್ಮೆದೆ ಬಾನಿನ ಚಂದಯ್ಯ!

ನಮ್ಮಾತ್ಮದ ಅಮೃತತ್ವದ ಬಿಂದುವೆ,
ನಮ್ಮಿಬ್ಬರ ಚಿರಸುಖರಸ ಸಿಂದುವೆ,
ಆ ಸಿಂದುವನುಕ್ಕಿಪ ಪೂರ್ಣೇಂದುವೆ,
ಸ್ವಾಗತ ನಿನಗೆಲೆ ಕಂದಯ್ಯ!
ನಮ್ಮಾತ್ಮದ ಜನ್ನಾಂತರ ಬಂಧುವೆ,
ನಮ್ಮಿಬ್ಬರ ಕಲ್ಪಾಂತರ ಬಂಧವೆ,
ಮಂಗಳ ನಿನಗೋ ಜೀವಾನಂದವೆ,
ನಮ್ಮೆದೆ ಬಾನಿನ ಚಂದಯ್ಯ!

ಶೃಂಗಾರ ಸಾಗರ ಸಾಕ್ಷಾತ್ಕಾರ,
ಸಂಸಾರ ಪ್ರೇಮದ ನವಶೃಂಗಾರ,
ಸ್ವಾಗತ ನಿನಗೆಲೆ ಮುದ್ದು ಕುಮಾರ,
ಪೂರ್ಣ ಸುಧಾಕಾರ ತೇಜಸ್ವಿ!
ಸುಂದರ ಪೃಥ್ವಿಗೆ ಸ್ವಾಗತವಯ್ಯ,
ಪುಣ್ಯಭಾರತಕೆ ಸ್ವಾಗತವಯ್ಯ
ನನ್ನ ಕನ್ನಡಕೆ ಸ್ವಾಗತವಯ್ಯ,
ಗುರುದೇವ ಕೃಪಾ ಓಜಸ್ವಿ!

ನಾವ್ ಮರೆಯುತ್ತಿಹ ತವರೂರಿಂದೆ
ಸಾವಿನ ತೆರೆಯೋಸರಿಸುತೆ ಬಂದೆ;
ನೆನಹಿನ ಉರಿಗೋಲ್ ನೀನೈತಂದೆ
ಮುದ್ದು ಕಂದನಾ ತೆರದಿಂದೆ!
ಆ ಉರಿಮಿಹದ ಮೈ ಹೊಸತಿನ್ನೂ;
ದೇವರು ಮುತ್ತೊತ್ತಿದ ಮೊಗವಿನ್ನೂ
ರಸದೋಕುಳಿಯಾಗಿದೆ! ನೀನಿನ್ನೂ
ಸಿವಪೊರೆಗಳಚಿಲ್ಲವೊ, ತಂದೆ!

ಭೋಗಿಯೊ, ಯೋಗಿಯೊ? ಮುಕ್ತನೊ, ಬದ್ಧನೊ?
ರಾಮನೊ? ಕೃಷ್ಣನೊ? ಕ್ರಿಸ್ತನೊ? ಬುದ್ಧನೊ?
ಯಾರೋ ಬೇರೆಯ ಕವಿಯೋ ಸಿದ್ಧನೊ?
ಯಾರನು ಕಳುಹಿಸಿದನೊ ಕಾಣೆ!
ಯಾರಾದರು ಆಗದಕೇನಂತೆ?
ನಮ್ಮೊಲುಮೆಯ ಕುಡಿ ನಮಗೆಮ್ಮಂತೆ:
ಕಂದಾ, ನೀನೆಮಗಿಂಪಿನ ಸಂತೆ;
ಸಲಹುತ್ತೊಲಿವೆವೊ, ಶಿವನಾಣೆ!

ಆ ಲೋಕದ ನೆನೆದಳದಿರೊ, ಕಂದ.
ಕೀಳೇನ್? ಈ ಲೋಕವಿದೂ ಚಂದ:
ರವಿ, ಶಶಿ, ಗಗನಂ, ತಾರಾ ವೃಂದ,
ಸಾಗರ, ನದಿ, ವನ, ಗಿರಿಧಾತ್ರಿ,
ಕವಿಕೃತಿ, ಕನ್ನಡ ನುಡಿ, ನಿನ್ನಮ್ಮ,
ತಂಬೆಲರ್, ಆನ್, ಅಲರ್, ಅಂತೆಯೆ ನಮ್ಮ
ಗಾಂಧಿಜಿಯಿರುವರೊ! ಅಳದಿರೊ, ತಮ್ಮಾ,
ಕೊನೆಗಾಣವುದೋ ಈ ರಾತ್ರಿ!

ಮೂಡಲಿ ನಿನ್ನಿಂದೊಳ್ಪಿಗೆ ಕೋಡು;
ತಿಳಿಯಲಿ, ಹೊಳೆಯಲಿ, ನಮ್ಮಿ ನಾಡು;
ತೊಲಗಲಿ ಕತ್ತಲೆ, ಬತ್ತಲೆ, ಕೇಡು;
ಮಂಗಳನಾಯ್ ಲೋಕಕ್ಕೆ!

ಸ್ವಾಗತ ನಿನಗಿದೊ ಕಂದಯ್ಯಾ ಬಾ;
ಬಾಳಿಂಗಡಲಿನ ಚಂದಯ್ಯ ಬಾ;
ಶಿವನಾತ್ಮದಿ ಮಿಂದಯ್ಯ ಬಾ; ಬಾ
ಪಿತೃ ಮಾತಾ ಪ್ರಿಯ ಮೋಹಕ್ಕೆ!

ನಮ್ಮೆದೆ ಬಾನಿನ ಚಂದಯ್ಯ,
ಸ್ವಾಗತ ನಿನಗೆಲೆ ಕಂದಯ್ಯ!