ಜೈನಾಚಾರ್ಯರು ನ್ಯಾಯ, ಕಾವ್ಯ, ಗದ್ಯಮ, ಅಲಂಕಾರ, ಕೋಶ, ಛಂದಸ್ಸು, ಗಣಿತ, ವ್ಯಾಕರಣ ಮೊದಲಾದ ವಿಷಯಗಳ ಬಗೆಗೆ ಗ್ರಂಥಗಳನ್ನು ರಚಿಸಿರುವಂತೆ ಜ್ಯೋತಿಷ್ಯ, ವೈದ್ಯಕೀಯ, ಪಶುವೈದ್ಯ, ಕಾಮಶಾಸ್ತ್ರ, ಸಂಗೀತ, ಸೂಪಶಾಸ್ತ್ರ ಮೊದಲಾದ ಲೌಕಿಕ ಸಾಹಿತ್ಯ ಪ್ರಕಾರಗಳನ್ನು ಸಹ ರಚಿಸಿದ್ದಾರೆ. ಪ್ರಸಿದ್ಧ ಆಚಾರ್ಯರುಗಳಾದ ಪೂಜ್ಯಪಾದರು, ಸಮಂತಭದ್ರರು, ಜಿನಸೇನಗುರು, ಸೋಮದೇವರು, ವೀರದೇವರು, ಶ್ರೀಗುಣ ಭದ್ರರು, ಮೊದಲಾದ ಪಂಡಿತೋತ್ತಮರು ರಚಿಸಿದ ಗ್ರಂಥಗಳನ್ನು ಅವಲೋಕಿಸಿದಾಗ ಅವರು ತಮ್ಮ ಪ್ರಗಲ್ಭಪಾಂಡಿತ್ಯವನ್ನು ಅನೇಕ ವಿಷಯಗಳೆಡಗೆ ವಿಸ್ತರಿಸಿದುದು ಕಂಡುಬರುತ್ತದೆ. ಇದಕ್ಕೆ ಆಯುರ್ವೇದವೇನೂ ಹೊರತಾಗಿಲ್ಲ. ಆರ್ಷ್ಯಪದ್ಧತಿಯ ಚರಕ, ಸುಶ್ರುತ, ವಾಗ್ಭಟ, ಮಾಧವ, ಯೋಗರತ್ನಾಕರರಂತೆ ಸಮಪ್ರತಿಭೆ ತೋರಿದ ಇವರ ಅನೇಕ ಕೃತಿಗಳಿಂದು ಇತಿಹಾಸದ ಗರ್ಭದಲ್ಲಿ ಲೀನವಾಗಿ ಹೋದುದು ನಮ್ಮ ದುರ್ದೈವ. ಇದೀಗ ಅಲ್ಲಲ್ಲಿ ಪಳೆಯುಳಿಕೆಯಾಗಿ ಉಳಿದುಕೊಂಡಿರುವ ವಿಷಯಗಳನ್ನು ಸಂಗ್ರಹಿಸಿ ಅವಕ್ಕೊಂದು ಹೊರ ಜೀವವನ್ನೀಯುವ ಕಾರ್ಯ ಇಂದು ಆಗಬೇಕಾಗಿದೆ.

ಈ ಶಾಸ್ತ್ರವು ಭಗವಾನ್ ಋಷಭನಾಥನಿಂದ ಬೋಧಿಸಲ್ಪಟ್ಟದ್ದಾಗಿದ್ದು ಸರ್ವಜ್ಞತ್ವದ ಸೂಚಕವಾಗಿದೆ. ಅತ್ಯಂತ ವಿಸ್ತೃತ ದೋಷಮುಕ್ತ ಹಾಗೂ ಗಂಭೀರ ವಸ್ತು ವಿವೇಚನೆಯಿಂದ ಕೂಡಿದೆ. ಸ್ವಯಂಭೂ ಆಗಿದ್ದು ಸನಾತನಿಯಾಗಿದೆ. ೨೪ ತೀರ್ಥಂಕರರೂ ಈ ಶಾಸ್ತ್ರವನ್ನೂ ಬೆಳೆಸಿದ್ದಾರೆ. ಇದರ ರಚನೆಯ ಉದ್ದೇಶ ಸಕಲ ಜೀವಿಗಳ ಹಿತ. ಪರಂಪರಾಂಗತ ಶಾಸ್ತ್ರಗಳ ಆಧಾರದಿಂದ ಉಗ್ರದಿತ್ಯಾಚಾರ್ಯರು ’ಕಲ್ಯಾಣಕಾರ’ ಎಂಬ ಗ್ರಂಥವನ್ನು ಸ್ವಪರ ಕಲ್ಯಾರ್ಥವಾಗಿ ತುಂಬ ಕಷ್ಟಪ್ಟು, ತಪಶ್ವರ್ಯೆ ಎಂಬಂತೆ ರಚಿಸಿದ್ದಾರೆ. ಇದರ ಒಂದು ಭಾಗ ಸ್ವಂತಲ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಇದ್ದರೆ ಇನ್ನೊಂದು ವಿವಿಧ ರೋಗಗಳು ಬಂದಾಗ್ಗೆ ಅವುಗಳಿಂದ ಹೇಗೆ ಗುಣಮುಖರಾಗಿ ಮತ್ತೆ ಆರೋಗ್ಯವನ್ನು ಪಡೆದುಕೊಳ್ಳಬೇಕು ಎಂಬುದರ ಬಗೆಗೆ ಇದೆ. ಈ ಶಾಸ್ತ್ರಕಾರರು ಅಹಿಂಸಾ ತತ್ವದ ಆಧಾರದ ಮೇಲೆ ನೂರಾರು ಗ್ರಂಥಗಳನ್ನು ರಚಿಸಿದ್ದಾರೆ.

ಜೈನಾಚಾರ್ಯರ ವೈದ್ಯಕೀಯ ಪರಂಪರೆ ತುಂಬ ದೊಡ್ಡದಿದೆ. ಸಮಂತಭದ್ರಾಚಾರ್ಯರ ಕಾಲ ಕ್ರಿ.ಶ.೪೦೦ರಿಂದ ನಡೆದುಕೊಂಡು ಬಂದು ಪೂಜ್ಯಪಾದರು, ಉಗ್ರದಿತ್ಯಾಚಾರ್ಯರು, ಶಿವಮಾರದೇವ, ಚಂದ್ರರಾಜ, ಕೀರ್ತಿವರ್ಮ, ಜಗದ್ದಳ ಸೋಮನಾಥ, ದೇವೇಂದ್ರಮುನಿ, ಜನ್ನ, ಮಂಗರಸ, ಶ್ರೀಧರದೇವ, ಸಾಳ್ವ, ಲಕ್ಷ್ಮಣ ಪಂಡಿತ, ಪಾತ್ರಕೇಸರಿ,ಮೇಘನಾದ, ಸಿಂಹನಾದ ಹೀಗೆ ೧೮ನೇ ಶತಮಾನದವರೆಗೆ ಅಖಂಡವಾಗಿ ನಡೆದು ಬಂದಿದೆ. ಇವು ಇಂದು ಲಭ್ಯವಿರುವ ವಿವರಗಳು. ಕ್ರಿಸ್ತಪೂರ್ವ ಕಾಲದಲ್ಲೂ ಸಹ ಜೈನರ್ಚಾಯರು ಆಯುರ್ವೇದ ಗ್ರಂಥಗಳನ್ನು ರಚಿಸಿದ್ದಾರೆ ಎಂಬುದಕ್ಕೆ ಆಧಾರಗಳಿವೆ.

ಜೈನರ ಈ ವೈಕ್ಯಕೀಯ ಕೃತಿಗಳಲ್ಲಿ ಆಯುರ್ವೇದದ ಮೂಲ ಸಿದ್ಧಾಂತಗಳನ್ನೇ ಶಾಸ್ತ್ರದ ತಳಹದಿಯನ್ನಾಗಿ ತೆಗೆದುಕೊಳ್ಳಲಾಗಿದೆ. ವಿಷಚಿಕಿತ್ಸೆ, ಆನೆಕಾಲು ರೋಗ, ಮಧುಮೇಹ, ಅರ್ಬುದ, ಮೈಲಿಬೇನೆ, ಕ್ಷಯರೋಗ, ಉಪದಂಶ,ಹೃದ್ರೋಗ, ನಾಡಿ ವ್ರಣ, ಮೂತ್ರಾಶ್ಮರಿ, ಆಂತ್ರವೃದ್ಧಿ, ಗಲಗಂಡ, ಜಲೋದರ, ಮೂಡಗರ್ಭ, ಕಣ್ಣು, ಕಿವಿ, ಮೂಗು,ಗಂಟಲು,ಹಲ್ಲುಗಳು ಮೊದಲಾದ ರೋಗಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗಳನ್ನು ಹೇಳಿದ್ದಾರೆ. ಶರೀರ ಶುದ್ಧಿಗೆ ಪಂಚಕರ್ಮವಿಧಾನ, ಸಸ್ಯರಸೌಷಧಿಗಳು, ಕ್ಷಾರಕರ್ಮ, ಅಗ್ನಿಕರ್ಮ, ಜಲೂಕಾವಿಧಿಗಳನ್ನೂ ಬಳಸಿಕೊಂಡಿದ್ದಾರೆ. ಚಿಕಿತ್ಸೆಯಲ್ಲಿ ಮದ್ಯ, ಮಾಂಸ, ಜೇನುತುಪ್ಪಗಳ ಬಳಕೆಯನ್ನು ಎಲ್ಲೂ ಹೇಳಿಲ್ಲ. ಮಾತ್ರವಲ್ಲದೆ ಆಹಾರ ವಿಹಾರಗಳಲ್ಲಿ ಕೂಡ ಜೈನತತ್ವಗಳ ಸಿದ್ಧಾಂತಗಳ ಲೇಪನವಿದೆ.

ಇಂತಹದೊಂದು ಭವ್ಯ ವೈದ್ಯಕೀಯ ಪರಂಪರೆಯ ಬಗೆಗೆ ಕನ್ನಡದಲ್ಲಿ ಯಾವುದೊಂದು ಗ್ರಂಥವಿರಲಿಲ್ಲ. ಅನೇಕ ಗುರು ಹಿರಿಯರ ಅಭಿಲಾಷೆ, ಪ್ರೋತ್ಸಾಹಗಳಿಂದ ಈ ಕೃತಿಯನ್ನು ರಚಿಸಿದ್ದೇನೆ. ಶ್ರೀಯುತರುಗಳಾದ ಡಾ. ಹಂ.ಪ.ನಾಗರಾಜಯ್ಯ, ಪ್ರೊ.ಸಿ.ವಿ.ಕೆರಮನಿ, ಶ್ರೀ ಎಸ್.ಎನ್. ಅಶೋಕಕುಮಾರ ಹಾಗೂ ಕನಕಗಿರಿ ಕ್ಷೇತ್ರದಲ್ಲಿ ಶ್ರೀ ೧೦೮ ಭುವನಕೀರ್ತಿ ಸ್ವಾಮಿಜೀ ಅವರನ್ನು ಇಲ್ಲಿ ಸ್ಮರಿಸಬೇಕು. ಈ ಗ್ರಂಥದ ಪ್ರಕಟಣೆಗೆ ಮುಂದಾದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಪ್ರಸಾರಾಂಗದ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರುಗಳಿಗೆ ನನ್ನ ನಮನಗಳು.

ಡಾ. ಧನ್ಯಕುಮಾರ ಇಜಾರಿ