ಕರ್ನಾಟಕವು ಸಾಹಿತ್ಯ ಮತ್ತು ಸಂಗೀತ ಕಲೆಗಳ ತವರೂರು ಇಲ್ಲಿ ಸಂಗೀತ, ನೃತ್ಯ, ಚಿತ್ರಕಲೆ, ಶಿಲ್ಪಕಲೆ ಮುಂತಾದ ಕ್ಷೇತ್ರಗಳಲ್ಲಿ ಪ್ರಾತಃ ಸ್ಮರಣೀಯರ ಸಾಲಿನಲ್ಲಿ ಸೇರುವ ಅನೇಕ ಮಹನೀಯರಿದ್ದಾರೆ.

ಮೊದಲೇ ಕವಿಗಳು ಹೇಳಿರುವಂತೆ ಗಂಧದ ಗುಡಿ ಇದು ಮೈಸೂರು, ಚಿನ್ನದ ನಾಡಿದು ಮೈಸೂರು, ವೀಣೆಯ ಬೆಡಗಿದು ಮೈಸೂರು, ಸಂಗೀತ ಕಲಿಗಳ ಬೆಡಗಿದು ಮೈಸೂರು.

ಮೈಸೂರಿನ ಮಹಾರಾಜರ ಕೃಪಾಶೀರ್ವಾದದಿಂದ ಎಲ್ಲಾ ಕಲೆಗಳಿಗೂ ಪ್ರೋತ್ಸಾಹ ಸಿಕ್ಕಿ ಅನೇಕ ಕಲಾವಿದರು ಪ್ರಕಾಶಮಾನಕ್ಕೆ ಬಂದರು. ಮೈಸೂರಿನಿಂಧ ಮೂವತ್ತು ಕಿಲೋಮೀಟರ್ ದೂರದಲ್ಲಿರುವ ತ್ರಿವೇಣೇ ಸಂಗಮ ಎಂದು ಕರೆಯಲ್ಪಡುವ ತಿರುಮಕೂಡಲು ನರಸೀಪುರ ಸುಂದರ ಪ್ರಾಕೃತಿಕ ಆಕರ್ಷಕ ತಾಣ. ಸಂಗೀತ, ನೃತ್ಯ ಹಾಗೂ ರಂಗಭೂಮಿ ಕಲಾವಿದರು ಜನಿಸಿದ ಸ್ಥಳವಿದು. ಈ ಗ್ರಾಮವು ಐತಿಹಾಸಿಕವಾಗಿ ಬೆಳೆದ ಗ್ರಾಮ. ಅಗಸ್ತ್ಯ ಮುನಿಗಳು ತಪಸ್ಸು ಮಾಡಿ ಅಗಸ್ತೇಶ್ವರ ಎಂಬ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದರು ಎಂಬುದು ಈ ಊರಿನ ಮಹಿಮೆ.

ಕಾವೇರಿ, ಕಪಿಲ, ಗುಪ್ತಗಾಮಿನಿ ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮದ ದಡದಲ್ಲಿರುವ ಪುಣ್ಯಸ್ಥಳವಿದು.

ಇಲ್ಲಿ ಬ್ರಾಹ್ಮಣ ಹಾಗೂ ರೈತ ಜನ ಅಂದರೆ ಒಕ್ಕಲಿಗರು ಮಾತ್ರ ವಾಸವಾಗಿದ್ದರು.

ಒಕ್ಕಲಿಗರಲ್ಲಿ ಅಗಸ್ತೇಗೌಡರು ಹಾಗೂ ಚೌಡಜಮ್ಮ ಎಂಬ ದೈವಭಕ್ತರೂ, ಸಂಗೀತ ಪ್ರೇಮಿಗಳು ಆಗಿದ್ದ ದಂಪತಿಗಳಿದ್ದರು. ಗುರುಸಾರ್ವಭೌಮ ಶ್ರೀ ರಾಘವೇಂದ್ರರ ಪೂಜಾಫಲದಿಂದ ಸಂಗೀತ ದಿಗ್ಗಜವೊಂದು ಇವರಿಗೆ ಜನಿಸಿತು. ಅವರೇ ಟಿ.ಗುರುರಾಜಪ್ಪನವರು. ನಮ್ಮ ಪೂಜ್ಯ ತಂದೆಯವರು. ೧೯೦೫ ಜುಲೈ ೯ ರಂದು ಜನಿಸಿದರು. ಇವರೊಂದಿಗೆ ಹುಟ್ಟಿದವರು, ನಮ್ಮ ಸೋದರತ್ತೆ ಟಿ. ನಾಗಮ್ಮನವರು ಮತ್ತು ನಮ್ಮ ಚಿಕ್ಕಪ್ಪ ಟಿ. ಚಿಕ್ಕರಾಜು ಅವರು. ಇವರುಗಳಿಗೂ ಕೂಡ ಸಂಗೀತ ರಕ್ತಗತವಾಗಿ ಬಂದಿತ್ತು ಎಂದು ಹೇಳಬೇಕಿಲ್ಲ. ನಮ್ಮ ಅಜ್ಜಿ ಮತ್ತು ತಾತನವರಿಗೆ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆಸಕ್ತಿ ಇದ್ದುದ್ದರಿಂದ ಇವರು ಮೈಸೂರು ನಗರಕ್ಕೆ ಬಂದರು. ಆ ಸಮಯದಲ್ಲಿ ಟಿ. ಗುರುರಾಜಪ್ಪನವರು ತಮ್ಮ ಹತ್ತಿರದ ಸಂಬಂಧಿಯಾದ ಶ್ರೀ ಸುಬ್ಬಣ್ಣನವರ ಹತ್ತಿರ ಪಿಟೀಲು ಅಭ್ಯಾಸವನ್ನು ಮಾಡತೊಡಗಿದರು. ಅವರು ಆಗಿನ ಕಾಲದ ಎಲ್‌.ಎಸ್‌.ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಸಂಗೀತದ ಬಗ್ಗೆ ಹೆಚ್ಚು ಒಲವು ಇದ್ದುದ್ದರಿಂದ ಹೆಸರಾಗಂತ ಕಲಾವಿದರಾದ ಹಾಗೂ ಮೈಸೂರು ಅರಮನೆಯ ಆಸ್ಥಾನ ವಿದ್ವಾಂಸರಾಗಿದ್ದ ಶ್ರೀ ಬಿಡಾರಂ ಕೃಷ್ಣಪ್ಪನವರ ಬಳಿ ಪಿಟೀಲು ಅಭ್ಯಾಸವನ್ನು ಗಂಭೀರವಾಗಿ ಮಾಡತೊಡಗಿದರು. ಶ್ರೀ ಕೃಷ್ಣಪ್ಪನವರ ಪಕ್ಕಾ ಶಿಷ್ಯನಾಗಿ ಅವರೊಂದಿಗೆ ಅನೇಕ ಕಚೇರಿಗಳಲ್ಲಿ ಭಾಗವಹಿಸಿದ್ದರು. ನಮ್ಮ ತಂದೆಯವರಿಗೆ ತುಂಬು ಜೀವನದ ದಾಂಪತ್ಯವನ್ನು ಕಲ್ಪಿಸಿಕೊಟ್ಟವರು ನಮ್ಮ ತಾಯಿ ಚೌಡಮ್ಮನವರು. ಈ ನಡುವೆ ತಮ್ಮ  ಅಣ್ಣನವರಾದ ಸಂಗೀತ ರತ್ನ ಶ್ರೀ ಟಿ.ಚೌಡಯ್ಯನವರೊಂದಿಗೆ ದೇಶಾದ್ಯಂತ ಅನೇಕ ಕಚೇರಿಗಳನ್ನು ನೀಡಿದರು. ೧೯೩೯ನೇ ಇಸವಿಯಲ್ಲಿ ತಿರುಚಿನಾಪಳ್ಳಿ ಆಕಾಶವಾಣಿಯಲ್ಲಿ ‘ಎ’ ದರ್ಜೆಯ ಕಲಾವಿದರಾಗಿ ಸೇರಿದರು.

ಇವರ ಪಿಟೀಲು ನಾದ ಮತ್ತು ನುಡಿಸುವಿಕೆಗೆಕ ಸಾವಿರಾರು ಶ್ರೋತೃಗಳ ಮೆಚ್ಚುಗೆ ಪತ್ರಗಳು ತಿರುಚಿನಾಪಳ್ಳಿಯ ಬಾನುಲಿ ಕೇಂದ್ರಕ್ಕೆ ಬಂದುದರಿಂದ ಅವರಿಗೆ ದೇಶವಿದೇಶಗಳಿಂದ ಕಚೇರಿಗಳಿಗೆ ಆಹ್ವಾನ ಬಂದಿತು. ಅವರು ಸಿಲೋನ್‌, ಸಿಂಗಪುರ್, ಇಂಗ್ಲೆಂಡ್‌ ಮುಂತಾದ ದೇಶಗಳಲ್ಲಿ ಆಗಿನ ಕಾಲದ ಹೆಸರಾಂತ ಚಿತ್ರನಟ ಹಾಗೂ ಸಂಗೀತ ಕಲಾವಿದರಾದ ಶ್ರೀ ಎಂ.ಕೆ. ತ್ಯಾಗರಾಜಭಾಗವತರ್ ಅವರೊಂದಿಗೆ ಅನೇಕ ಕಚೇರಿಗಳನ್ನು ನೀಡಿದರು. ಬಾನುಲಿಕೇಂದ್ರದಿಂದ ಪ್ರಸಾರವಾಗುತ್ತಿದ್ದ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಕ್ಕೆ ಇವರ ಪಿಟೀಲು ಪಕ್ಕ ವಾದ್ಯಕ್ಕಾಗಿ ಅನೇಕ ಹೆಸರಾಂತ ಕಲಾವಿದರಿಂದ ಬೇಡಿಕೆ ಬಂದಿತು.

ಈ ಸಂದರ್ಭದಲ್ಲಿ ಜಿ.ಎನ್‌. ಬಾಲಸುಬ್ರಹ್ಮಣ್ಯಂ, ಅರಿಯಾಕುಡಿ ರಾಮಾನುಜ, ಅಯ್ಯಂಗಾರ್, ಚಂಬೈ, ಪಾಲ್ಘಾಟ್‌ ಲಕ್ಷ್ಮೀನಾರಾಯಣ ಭಾಗವತರ್, ಪಾಲ್ಘಾಟ್‌ ಟಿ.ಎಸ್‌.ಮಣಿ ಅಯ್ಯರ್, ಪಳನಿ ಸುಬ್ರಹ್ಮಣ್ಯ ಪಿಳ್ಳೈ, ರಾಮದಾಸ್‌ ರಾವ್‌, ಈಶ್ವರ್ ಅಯ್ಯರ್, ಆಲತ್ತೂರು ವೆಂಕಟೇಶ್‌ ಅಯ್ಯರ್ ಹಾಗೂ ಅವರ ಮಕ್ಕಳಾದ ಆಲವತ್ತೂರು ಸಹೋದರರು ಹಾಗೂ ಚಿತ್ತೂರ್ ಸುಬ್ರಹ್ಮಣ್ಯ ಪಿಳೈ, ಟಿ.ಕೆ. ರಂಗಾಚಾರ್, ಟಿ.ಕೆ. ಮೂರ್ತಿ ಹೀಗೆ ಹೆಸರಾಂತ ಕಲಾವಿದರ ಕಚೇರಿಗಳಿಗೆ ಪಕ್ಕವಾದ್ಯ ನುಡಿಸಿ ಹೆಸರುವಾಸಿಯಾದರು.

ಇದೇ ಸಂದರ್ಭದಲ್ಲಿ ಬಾನುಲಿಕೇಂದ್ರದ ನಿರ್ದೇಶಕರು ನಮ್ಮ ತಂದೆಯವರಿಗೆ ಅನೇಕ ರೀತಿಯಲ್ಲಿ ನೆರವಾಗಿ ಪ್ರೋತ್ಸಾಹಿಸಿದರು.

ಆಕಾಶವಾಣಿ ಕಾರ್ಯಕ್ರಮದಲ್ಲಿ ನಡೆದ ಮರೆಯಲಾಗದ ಘಟನೆ: ಆಗಿನ ಕಾಲದಲ್ಲಿ ತಿರುಚಿನಾಪಳ್ಳಿ ಆಕಾಶವಾಣಿಯಲ್ಲಿ ರಾತ್ರಿ ಒಂದು ಗಂಟೆ ಕಾಲ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಒಮ್ಮೆ ಎಂ.ಕೆ. ತ್ಯಾಗರಾಜ ಭಾಗವತರ್ ರವರ ಗಾಯನ ಕಚೇರಿ ಏರ್ಪಾಡಾಗಿತ್ತು. ಪಿಟೀಲು ಪಕ್ಕವಾದ್ಯ ತಮ್ಮ ತಂದೆಯವರದ್ದೆ. ಆಕಾಶವಾಣಿಯ ಉದ್ಘೋಷಕರು ಎಂ.ಕೆ.ಟಿ. ಅವರ ಗಾಯನದಲ್ಲಿ ತ್ಯಾಗರಾಜರ ಕಲ್ಯಾಣಿ ರಾಗದ ಕೃತಿ ಏತ ಉನ್ನಾರ ಎಂಬ ಉದ್ಘೋಷಣೆಯನ್ನು ನೀಡಿದರು. ಎಂ.ಕೆ.ಟಿ. ಲರವರು ಮೋಹನರಾಗಾಲಾಪನೆಯನ್ನು ಪ್ರಾರಂಭಿಸಿದರು. ಆದರೆ ನಮ್ಮ ತಂದೆಯವರು ಕೇಂದ್ರದ ಉದ್ಘೋಷಕರು ನೀಡಿದ ಕಲ್ಯಾಣಿ ರಾಗವನ್ನು ಹಾಡಲು ಪ್ರೇರೇಪಿಸಿ ಕೀರ್ತನೆಯನ್ನು ಪೂರ್ಣ ಮಾಡಿದರು. ಈ ಕಾರ್ಯಕ್ರಮವನ್ನು ಕೇಳಿದ ತಮಿಳುನಾಡಿನ ಅನೇಕ ಸಂಗೀತ ಕಲಾಭಿಮಾನಿಗಳು ಆಗ ಪ್ರಕಟವಾಗುತ್ತಿದ್ದ ಪತ್ರಿಕೆಗಳಾದ ಹಿಂದು ಹಾಗೂ ಕೆಲವು ತಮಿಳು ಪತ್ರಿಕೆಗಳಲ್ಲಿ ಕಾಡಿಗೆ ಹೋಗುತ್ತಿದ್ದ ಎಂ.ಕೆ.ಟಿ. ಅವರನ್ನು ಮೈಸೂರು ಟಿ. ಗುರುರಾಜಪ್ಪ ನಾಡಿಗೆ ಕರೆತಂದರು. ಎಂಬುದಾಗಿ ದಪ್ಪ ಅಕ್ಷರಗಳಲ್ಲಿ ಬರೆದು ಕೊಂಡಾಡಿದರು. ಇದರಿಂದಾಗಿ ಆಕಾಶವಾಣಿಯ ಘನತೆಯನ್ನು ನಮ್ಮ ತಂದೆ ಕಾಪಾಡಿದರು. ಈ ಘಟನೆ ನಡೆದ ನಂತರ ಎಂ.ಕೆ.ಟಿ. ಹಾಗೂ ನಮ್ಮ ತಂದೆಯವರ ಸ್ನೇಹ ಅತೀವವಾಗಿ ಎಂ.ಕೆ.ಟಿ. ಅವರು ತಮ್ಮ ಕಚೇರಿಗಳಿಗೆ ನಮ್ಮ ತಂದೆಯವರಲ್ಲದೆ ಬೇರೆಯವರನ್ನ ಆಯ್ಕೆ ಮಾಡುತ್ತಿರಲಿಲ್ಲ. ಇದರಿಂದ ನಮ್ಮ ತಂದೆಯವರ ಸಂಗೀತ ಕಚೇರಿಗಳು ಹೆಚ್ಚಾಗಿ, ಅನಿವಾರ್ಯವಾಗಿ ಒಲ್ಲದ ಮನಸ್ಸಿನಿಂದ ಬಾನುಲಿಕೇಂದ್ರವನ್ನು ಬಿಡಬೇಕಾದ ಪ್ರಸಂಗ ಬಂದಿತು.

ಒಮ್ಮೆ ತಮಿಳುನಾಡಿನ ಚೆಟ್ಟಿನಾಡಿನಲ್ಲಿ ಹೆಸರಾಂತ ಕಲಾವಿದರಾದ ಮಧುರೈ ಮಣಿ ಅಯ್ಯರ್, ಚಂಬೆ ವೈದ್ಯನಾಥ ಭಾಗವತರ್, ಜಿ.ಎನ್‌.ಬಿ. ತಂಜಾವೂರು ಲಕ್ಷ್ಮೀನಾರಾಯಣ ಭಾಗವತರ್, ಅರಿಯಾಕುಡಿ ನಾಗಸ್ವರ ಚಕ್ರವರ್ತಿ ರಾಜರತ್ನಂ ಪಿಳ್ಳೆ, ಅಂಗಪ್ಪ ಪಿಳ್ಳೆ, ಮೃದಂಗ ಕಲಾವಿದರಾದ ಪಳನಿ ಸುಬ್ರಹ್ಮಣ್ಯ ಪಿಳ್ಳೈ, ಪಾಲ್ಘಾಟ್‌ ಟಿ.ಎಸ್‌. ಮಣಿ ಅಯ್ಯರ್, ಟಿ.ಕೆ. ಮೂರ್ತಿ, ಘಟಂ ಕಲಾವಿದರಾದ ಕೋದಂಡರಾಮ ಅಯ್ಯರ್, ಆಲಂಗುಡಿ ರಾಮಚಂದ್ರನ್‌, ನಟೇಶ್‌ ಪಿಳ್ಳೆ ಹೀಗೆ ನಾನಾ ಕಲಾವಿದರ ಸಮ್ಮುಖದಲ್ಲಿ ಅಮೃತಗಾನಂ ಪಿಟೀಲು ವಿದ್ವಾನ್‌ ಟಿ.ಗುರುರಾಜಪ್ಪ ಎಂಬ ಬಿರುದನ್ನು ಮಾತನಾಡಿದ ಚಂಬೆ ವೈದ್ಯನಾಥ ಭಾಗವತರ್ರವರು ಯಾವುದೇ ರಾಗದ ರಾಗಾಲಾಪನೆಯು ಜಿ.ಗುರುರಾಜಪ್ಪನವರ ಪಿಟೀಲು ವಾದನದಲ್ಲಿ ಸೊಗಸಾಗಿ ಮೂಡಿ ಬರುತ್ತದೆ ಎಂದು ಹೊಗಳಿದರು.

ಕನ್ನಡಿಗರಾಗಿ ತಮಿಳುನಾಡಿನಲ್ಲಿ ಹೆಸರುಗಳಿಸಿ ಎಲ್ಲರ ಬಾಯಲ್ಲೂ ಮೈಸೂರು ಚಿನ್ನಣ್ಣ ಎಂದು ಖ್ಯಾತಿ ಪಡೆದರು. ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ವಾಸವಾಗಿದ್ದ ನಮ್ಮ ತಂದೆಯವರ ಮನೆ ತಮಿಳುನಾಡಿನ ಅನೇಕ ಸಂಗೀತ ಕಲಾವಿದರ ತಂಗುದಾಣವಾಗಿತ್ತು. ತಮಿಳುನಾಡಿನ ಹೆಸರಾಂತ ಕಲಾವಿದರನ್ನು ಕರ್ನಾಟಕಕ್ಕೆ ಪರಿಚಯಿಸಿದ ಖ್ಯಾತಿ ನಮ್ಮ ತಂದೆ ಮತ್ತು ನಮ್ಮ ದೊಡ್ಡಪ್ಪನವರಾದ ಮೈಸೂರು ಟಿ.ಚೌಡಯ್ಯರವರಿಗೆ ಸೇರುತ್ತದೆ.

ಆಕಾಶವಾಣಿಯ ರಾಷ್ಟ್ರೀಯ ಸಂಗೀತ ಕಾರ್ಯಕ್ರಮಗಳಲ್ಲಿ ನಮ್ಮ ತಂದೆ ಹಾಗೂ ನಮ್ಮ ದೊಡ್ಡಪ್ಪ ದ್ವಂದ್ವಪಿಟೀಲು ವಾದನಕ್ಕೆ ಬಹಳ ಹೆಸರು ವಾಸಿಯಾದರು .

ನಮ್ಮ ತಂದೆಯವರಿಗೆ ಒಂಭತ್ತು ಜನ ಮಕ್ಕಳು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ೧೯೫೩ನೇ ಇಸವಿಯಲ್ಲಿ ತಿರುಚನಪಳ್ಳಿಯನ್ನು ಬಿಟ್ಟು ಮೈಸೂರಿಗೆ ಬಂದು ನೆಲೆಸಿದರು. ಈ ಸಂಧರ್ಭದಲ್ಲಿ ತಮಿಳುನಾಡಿನ ಅನೇಕ ಶ್ರೀಮಂತರು ಬಂದು ಚಿನ್ನಣ್ಣ ದಯವಿಟ್ಟು ನಮ್ಮನ್ನು ಬಿಟ್ಟು ಮೈಸೂರಿಗೆಕ ಹೋಗಬೇಡಿ. ನಾವು ನಿಮಗೆ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅರಿಮಳ ಚೆಟ್ಟಿಯಾರ್ ಎಂಬ ಒಬ್ಬ ಶ್ರೀಮಂತ ವಜ್ರ ವ್ಯಾಪಾರಿಯು ತನ್ನ ೨೫ ಎಕರೆ ಜಮೀನು ಹಾಗೂ ಒಂದು ದೊಡ್ಡ ಬಂಗಲೆಯನ್ನು ನಮ್ಮ ತಂಧೆಯವರ ಹೆಸರಿಗೆ ರಿಜಿಸ್ಟರ್ ಮಾಡಿಸಿದ ಪತ್ರವನ್ನ ಒಂದು ಲಕೋಟೆಯಲ್ಲಿ ಇಟ್ಟು ಇದನ್ನು ಮೈಸೂರು ಅಣ್ಣನವರಿಗೆ ಕೊಟ್ಟು ಬಿಡಿ ಎಂದು ನಮ್ಮ ತಾಯಿಯವರ ಕೈಯಲ್ಲಿ ಕೊಟ್ಟು ಹೋದರು. ಹೊರ ರಾಜ್ಯದಿಂದ ಕಚೇರಿಯನ್ನು ಮುಗಿಸಿಕೊಂಡು ಬಂದ ನಮ್ಮ ತಂದೆ ಆ ಲಕೋಟೆಯನ್ನು ಒಡೆದು ನೋಡಿದ ನಂತರ ಅರ್ಧಗಂಟೆಗಳ ಕಾಲ ಮಾತನಾಡದೆ, ನಂತರ ಒಂದು ತೀರ್ಮಾನಕ್ಕೆ ಬಂದು ಮಾರನೆಯ ದಿನ ಚೆಟ್ಟಿಯಾರ್ ರವರ ಮನೆಗೆ ಹೋಗಿ ನೋಂದಣಿ ಪತ್ರಗಳನ್ನ ಹಿಂದಿರುಗಿಸಿದರು. ಆಗ ಚೆಟ್ಟಿಯಾರ್ ರವರು ನಮ್ಮ ತಂದೆಯವರಿಗೆ ಐದು ಬೆರಳುಗಳಿಗೂ ೫ ವಜ್ರದ ಉಂಗುರಗಳನ್ನು ತೊಡಿಸಿ ಕಳುಹಿಸಿಕೊಟ್ಟರು. ಇದು ಅಲ್ಲಿಯ ಜನರ ಪ್ರೀತಿ ವಿಶ್ವಾಸಕ್ಕೆ ಒಂದು ಉದಾಹರಣೆ.

ನಮ್ಮ ತಂದೆಯವರು ಕಚೇರಿ ಮಾಡಿ ಬರಿ ಸಂಪಾದನೆಯ ಕಡೆಗೆ ಮನಸ್ಸು ಕೊಡದೆ, ತಮ್ಮ ಮನೆಯಲ್ಲೇ ಗುರುಕುಲವನ್ನು ನಿರ್ಮಾಣಮಾಡಿದ್ದರು. ಈ ಗುರುಕುಲದಲ್ಲಿ ಮಧುರೈ ವೇಣುಗೋಪಾಲ್‌, ಕಿಳಿನಲ್ಲೂರ್ ಜಮೀನ್‌ದಾರ್ ರಂಗಸ್ವಾಮಿ, ಲೂದರಸ್ವಾಮಿ, ನಟರಾಜನ್‌, ವೈದ್ಯನಾಥನ್‌ ಹಾಗೂ ವಿಕ್ಟರ್ ಎಂಬ ಅನೇಕ ಶಿಷ್ಯರನ್ನು ತಯಾರು ಮಾಡಿದರು. ಇವರಲ್ಲಿ ವೈದ್ಯನಾಥನ್‌ ಎಂಬುವರು ಸಿಲೋನ್‌ ಆಕಾಶವಾಣಿಯಲ್ಲಿ ನಿಲಯದ ಪಿಟೀಲು ವಾದಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಸಭಾ ಕಚೇರಿಯಲ್ಲಿ ನಡೆದ ಒಂದು ಪ್ರಸಂಗ: ಒಮ್ಮೆ ಟಿ.ಕೆ. ರಂಗಾಚಾರಿ ಅವರ ಸಂಗೀತ ಕಚೇರಿ ಏರ್ಪಾಡಾಗಿತ್ತು. ನಮ್ಮ ತಂದೆಯವರು ಪಿಟೀಲು, ತಂಜಾವೂರ್ ಟಿ.ಕೆ. ಮೂರ್ತಿ ಅವರು ಮೃದಂಗ ಹಾಗೂ ಆಲಂಗುಡಿ ರಾಮಚಂದ್ರನ್‌ರವರು ಘಟ ನುಡಿಸುತ್ತಿದ್ದರು. ಕಚೇರಿಯ ಮಧ್ಯದಲ್ಲಿ ಟಿ.ಕೆ. ರಂಗಾಚಾರಿಯವರು ಶ್ರುತಿ ನೋಡಿಕೊಳ್ಳಿ ಎಂದು ಹೇಳಿದರು. ನಮ್ಮ ತಂದೆಯವರು ಧೈರ್ಯದಿಂದ ಸಭೆಯಲ್ಲಿ ಎಲ್ಲರಿಗೂ ಕೇಳಿಸುವಂತೆ “ನೀವು ಹೇಳಬೇಕಾದದ್ದು ನನಗಲ್ಲ. ನೀವು ಹಾಡುವಾಗ ಶ್ರುತಿ ವ್ಯತ್ಯಾಸವಾಗುತ್ತಿದೆ ನೀವೇ ನೋಡಿಕೊಳ್ಳಿ” ಎಂದು ಗುಡುಗಿದರು. “ಆಗ ದಯವಿಟ್ಟು ಕ್ಷಮಿಸಿ, ನಿಮ್ಮ ಎಡಗೈಯಲ್ಲಿದ್ದ ವಜ್ರದ ಉಂಗುರವನ್ನು ನೋಡುತ್ತಿದ್ದೆ ಅಷ್ಟೆ” ಎಂದು ರಂಗಾಚಾರ್ ಹೇಳಿದರು. ಆಗ ನಮ್ಮ ತಂದೆಯವರು ಪಿಟೀಲು ನುಡಿಸುವುದನ್ನು ನಿಲ್ಲಿಸಿ, ತಮ್ಮ ಉಂಗುರವನ್ನು ಕಳಚಿ ಕೊಟ್ಟು “ಚೆನ್ನಾಗಿ ನೋಡಿ” ಎಂದು ಹೇಳಿ ಪಿಟೀಲನ್ನು ನುಡಿಸುವುದಕ್ಕೆ ಶುರುಮಾಡಿದರು. ಸಭೆಯಲ್ಲಿ ಸೇರಿದ್ದ ಸಂಗೀತ ಕಲಾಭಿಮಾನಿಗಳು ಚಪ್ಪಾಳೆಯ ಸುರಿಮಳೆಯನ್ನು ಹರಸಿದರು. ನಂತರ ಸಭೆಯಲ್ಲಿ ಟಿ.ಕೆ. ರಂಗಾಚಾರಿಯವರು ಕ್ಷಮೆ ಯಾಚಿಸಿದರು.

ಶಿಸ್ತಿನ ಸಿಪಾಯಿ ಟಿ. ಗುರುರಾಜಪ್ಪ: ನಮ್ಮ ತಂದೆಯವರು ಯಾವುದೇ ಕಾರ್ಯಕ್ರಮಕ್ಕಾಗಲಿ ಅಥವಾ ಕಚೇರಿಗಾಗಲಿ ಅರ್ಧತಾಸು ಮುಂಚಿತವಾಗಿ ಹೋಗುತ್ತಿದ್ದರು. ಇದಲ್ಲದೆ ಯಾವಾಗಲೂ ಶುಭ್ರವಾದ ಬಿಳಿ ಶರ್ಟ್‌, ಮಲ್‌ ಪಂಚೆಯ ಕಚ್ಚೆ, ಶರ್ಟ್‌‌ಮೇಲೆ ಬಿಳಿ ಅಂಗವಸ್ತ್ರವನ್ನು ಧರಿಸುತ್ತಿದ್ದರು. ಎತ್ತರವಾದ ದಷ್ಟಪುಷ್ಟವಾದ ಶರೀರ, ಗೌರವವರ್ಣವನ್ನು ತಮ್ಮ ತಂದೆಯವರು ಹೊಂದಿದ್ದರು. ಅವರು ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರು ಹಾಗೂ ಒಳ್ಳೆಯ ಕಳೆಯಿಂದ ಕೂಡಿದವರಾಗಿದ್ದರು.

ಹೀಗೆ ತಮಿಳುನಾಡಿನಲ್ಲಿ ಹೆಸರಾಂತ ಕಲಾವಿದರಾಗಿ ಹೊರ ಹೊಮ್ಮಿದ್ದ ಅವರು ೧೯೫೫ರಲ್ಲಿ ಮೈಸೂರಿಗೆ ಬಂದು ನೆಲಸಿದರು. ಕರ್ನಾಟಕದಲ್ಲಿ ಅವರನ್ನು ಸರಿಯಾದ ರೀತಿಯಲ್ಲಿ ಗುರುತಿಸದೆ ಇದ್ದದ್ದು ಅವರ ದೌರ್ಭಾಗ್ಯವೆಂದೇ ಹೇಳಬೇಕು. ನಂತರ ೧೯೫೭ರಲ್ಲಿ ಬೆಂಗಳೂರು ಆಕಾಶವಾಣಿ ಇವರ ಅದ್ಭೂತ ಕಲೆಗೆ ಓಗೊಟ್ಟು ಮತ್ತೆ ಕೈಬೀಸಿ ಕರೆಯಿತು. ಅಲ್ಲಿ ಎ ದರ್ಜೆ ಕಲಾವಿದರಾಗಿ ಸೇರಿದರು. ಬೆಂಗಳೂರಿನಿಂದಲೇ ತಮಿಳುನಾಡು, ಆಂಧ್ರ ಹೀಗೆ ಅನೇಕ ರಾಜ್ಯಗಳಿಗೆ ಹೋಗಿ ಕಚೇರಿಗಳನ್ನು ನೀಡಿ ಬರುತ್ತಿದ್ದರು.

ನಮ್ಮ ತಂದೆಯವರಿಗೆ ನಾವು.ಒಂಭತ್ತು ಜನ ಮಕ್ಕಳು ೫ ಗಂಡು ಮಕ್ಕಳು, ೪ ಜನ ಹೆಣ್ಣು ಮಕ್ಕಳು ತಮ್ಮ ಜೀವನದ ಅನುಭವದೊಂದಿಗೆ, ಸಂಗೀತ ಕಲೆಯನ್ನು ಕೂಡ ನಮಗೆಲ್ಲಾ ಧಾರೆಯೆರೆದಿದ್ದಾರೆ. ನಮ್ಮ ಹಿರಿಯ ಅಣ್ಣ ಶಾಲಾಶಿಕ್ಷಕರಾಗಿ ಇದೀಗ ನಿವೃತ್ತಿಯನ್ನು ಹೊಂದಿದ್ದಾರೆ. ನಾನು ಬೆಂಗಳೂರು ಭದ್ರಾವತಿ ಮತ್ತು ಮೈಸೂರು ಆಕಾಶವಾಣಿ ಕೇಂದ್ರಗಳಲ್ಲಿ ಉದ್ಘೋಷಕನಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದೇನೆ. ನಮ್ಮ ತಂದೆಯವರ ಧೀಮಂತ ಸಂಗೀತ ಪರಂಪರೆಯನ್ನು ನನ್ನ ತಮ್ಮ ಟಿ.ಜಿ. ತ್ಯಾಗರಾಜನ್‌ ಮುಂದುವರೆಸಿಕೊಂಡು ಬರುತ್ತಿದ್ದು, ಈಗ ಟ್ರಿಚೂರ್ ಆಕಾಶವಾಣಿ ಕೇಂದ್ರದಲ್ಲಿ ಪಿಟೀಲು ವಾದಕರಾಗಿದ್ದಾರೆ. ಅನೇಕ ಸಂಗೀತ ಕಚೇರಿಗಳಿಗೆ ಪಕ್ಕವಾದ್ಯ ಸಹಕಾರವನ್ನು ನೀಡುತ್ತಿದ್ದಾರೆ. ನನ್ನ ಮತ್ತಿಬ್ಬರು ಸಹೋದರರು ಬೆಂಗಳೂರಿನಲ್ಲಿದ್ದು ಒಬ್ಬರು ಸ್ವಂತ ಉದ್ಯಮವನ್ನು ಮತ್ತೊಬ್ಬರು ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಭಾರತಿಯಲ್ಲೂ ಸೇವೆಯಲ್ಲಿದ್ದಾರೆ.

ನಮ್ಮ ತಂದೆ ೧೯೭೮ರಲ್ಲಿ ಬೆಂಗಳೂರು ಆಕಾಶವಾಣಿಯ ಸೇವೆಯಿಂದ ನಿವೃತ್ತಿ ಹೊಂದಿದರು. ಸಂಗೀತದ ಸಮೃದ್ಧ ಕಲಾ ಪರಂಪರೆಯನ್ನು ವಿಶ್ವಾದ್ಯಂತ ಮೂಲೆ ಮೂಲೆಗೂ ತಲುಪಿಸಿದ ಕೀರ್ತಿ ನಮ್ಮ ತಂದೆಯವರದು. ೧೯೭೨ರ ಮೇ ೨೨ ರಂದು, ನಮ್ಮ ತಂದೆ ಕಾಲನ ಕರೆಗೆ ಓಗೊಡಲೇ ಬೇಕಾಯಿತು. ರಾಗದಲ್ಲಿ ಲೀನವಾಗಿರುವ ಅವರು ಇಂದು ನಮ್ಮೊಡನೆ ಇರದಿದ್ದರೂ, ಅವರ ವೈಯೊಲಿನ್‌ ನಾದದ ಮಾಧುರ್ಯ ಎಲ್ಲರ ಸ್ಮೃತಿ ಪಟಲದಲ್ಲಿ ಇದ್ದೇ ಇದೆ.