ಸಾಮಾನ್ಯವಾಗಿ ಕಾಯಿಲೆ ಎಲ್ಲರಿಗೂ ಬರುತ್ತದೆ. ಕಾಯಿಲೆ ಬಂದಾಗ ಏನು ಮಾಡಬೇಕು, ಏನು ಮಾಡಬಾರದು, ಬೇಗ ಗುಣ ಮುಖರಾಗಲು ಯಾವ ಕ್ರಮ ಅನುಸರಿಸಬೇಕು ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಅಲ್ಲದೆ ಎಷ್ಟೋ ಸಾಮಾನ್ಯ ಕಾಯಿಲೆಗಳನ್ನು ಬರದಂತೆ ತಡೆಗಟ್ಟಲೂಬಹುದು. ಆದರೆ ಜನಸಾಮಾನ್ಯರು ಕಾಯಿಲೆ ಬಂದಾಗ ಅಸಹಾಯಕರಾಗುತ್ತಾರೆ. ವೈದ್ಯರ ಮೊರೆ ಹೋಗಿ, ಔಷಧ ಸೂಚಿಮದ್ದುಗಳನ್ನು ಸೇವಿಸುತ್ತಾರೆ. ಆಸ್ಪತ್ರೆಯಲ್ಲಿ ದಾಖಲಾಗುತ್ತಾರೆ. ತಮ್ಮ ಕಾಯಿಲೆಯನ್ನು ಗುಣಮಾಡುವುದು ವೈದ್ಯ ಸಿಬ್ಬಂದಿಯ ಕೆಲಸ ಎಂದು ತಿಳಿಯುತ್ತಾರೆ. ಕಾಯಿಲೆ ಬೇಗ ಅಥವಾ ಪೂರ್ತಿ ವಾಸಿಯಾಗದಿದ್ದರೆ, ಬೇರೆ ವೈದ್ಯರನ್ನು, ಆಸ್ಪತ್ರೆಗಳನ್ನು ಸಂದರ್ಶಿಸುತ್ತಾ ಅಲೆದಾಡುತ್ತಾರೆ. ತಮ್ಮ ಹಣ, ವೇಳೆ ಮತ್ತು ಅಳಿದುಳಿದ ಆರೋಗ್ಯ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ.

ನಮ್ಮ ರಾಜ್ಯದಲ್ಲಿ ಈಗ ಸಾಕಷ್ಟು ವೈದ್ಯಕೀಯ ಕಾಲೇಜುಗಳಿವೆ. ವರ್ಷಕ್ಕೆ ಸುಮಾರು ಎರಡು ಸಾವಿರಕ್ಕೂ ಮೇಲ್ಪಟ್ಟು ವೈದ್ಯರು ತಯಾರಾಗುತ್ತಿದ್ದಾರೆ. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಬೀದಿಗೊಂದು ನರ್ಸಿಂಗ್ ಹೋಂ, ಗಲ್ಲಿಗೆರಡು ಕ್ಲಿನಿಕ್‌ಗಳಿವೆ. ಇದೊಂದು ಮುಖವಾದರೆ, ಜನಸಂಖ್ಯೆಯ ಶೇಕಡಾ ೭೫ರಷ್ಟು ಮಂದಿ ವಾಸಿಸುವ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯ ಸೌಲಭ್ಯಗಳು ಬಹಳ ಕಿಡಮೆ ಅಥವಾ ಇಲ್ಲವೇ ಇಲ್ಲ. ಪ್ರತಿ ೩೦,೦೦೦  ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿರಬೇಕು. ಪ್ರತಿ ೫೦೦೦ ಜನಸಂಖ್ಯೆಗೆ ಒಬ್ಬ ಪುರುಷ ಮತ್ತು ಸ್ತ್ರೀ ಆರೋಗ್ಯ ಕಾರ್ಯಕರ್ತರಿರಬೇಕು ಎಂದು ಸರಕಾರ ನಿಗದಿ ಮಾಡಿಕೊಂಡು ಕಾರ್ಯೋನ್ಮುಖವಾಗಿದ್ದರೂ ಅನೇಕ ಕಾರಣಗಳಿಂದ ಪ್ರಾಥಮಿಕ ಆರೋಗ್ಯ ಸೇವಾವ್ಯವಸ್ಥೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಹಣಕಾಸಿನ ಅಭಾವ, ನುರಿತ ವೈದ್ಯ-ವೈದ್ಯೇತರ ಸಿಬ್ಬಂದಿಯ ಕೊರತೆ, ಉದ್ಯೋಗದಲ್ಲಿರುವವರಲ್ಲಿ ಸೇವಾಮನೋಭಾವ ಅಭಾವ, ಜನಗಳಲ್ಲಿ ತಲೆತಲಾತರದಿಂದ ಉಳಿದು ಬಂದಿರುವ ಅಜ್ಞಾನ, ಭಯ, ತಪ್ಪು ಆಚರಣೆಗಳು ಇದಕ್ಕೆ ಕಾರಣವೆನ್ನಬಹುದು. ಕೇಂದ್ರ ಸರಕಾರ ೧೯೭೭ರಲ್ಲಿ ಸಮುದಾಯ ಆರೋಗ್ಯ ಸ್ವಯಂ ಸೇವಕರ ಯೋಜನೆಯನ್ನು ಜಾರಿಗೆ ತಂದರೂ ಈ ಯೋಜನೆ ಬಾಲಗ್ರಹಪೀಡಿತವಾಗಿ ಸರಿಯಾಗಿ ಅನುಷ್ಠಾನಕ್ಕೆ ಬರಲೇ ಇಲ್ಲ. ಹೀಗಾಗಿ ನಮ್ಮ ದೇಶದಲ್ಲಿರುವ ೫೦೦ ಜನಸಂಖ್ಯೆಗಿಂತಲೂ ಕಡಿಮೆ ಇರುವ ಸುಮಾರು ಮೂರು ದಶಲಕ್ಷ ಹಳ್ಳಿಗಳಲ್ಲಿ ರೋಗಗ್ರಸ್ತ ಜನರಿಗೆ ಸೂಕ್ತ ಕಾಲದಲ್ಲಿ ಪ್ರಾಥಮಿಕ ಆರೋಗ್ಯ ಸೇವೆ ದೊರೆಯುವುದು ದುರ್ಲಭವಾಗಿದೆ.

ಪರಿಸ್ಥಿತಿ ಹೀಗಿರುವಾಗ ಪ್ರತಿಯೊಬ್ಬ ವ್ಯಕ್ತಿ, ತನ್ನ ಕುಟುಂಬಕ್ಕೆ ತಾನೇ ಆರೋಗ್ಯ ಸಹಾಯಕನಾಗಬೇಕಾಗುತ್ತದೆ. ತನ್ನ ಕುಟುಂಬದ ಸದಸ್ಯರೆಲ್ಲರ ಆರೋಗ್ಯವನ್ನು ಕಾಪಾಡುವುದು, ಹೇಗೆ, ಆರೋಗ್ಯವನ್ನು ವೃದ್ಧಿಸುವುದು ಹೇಗೆ ಹಾಗೂ ಕಾಯಿಲೆ ಕಾಣಿಸಿಕೊಂಡಾಗ ಅದನ್ನು ಬೇಗ ಗುರುತಿಸಿ ಹತೋಟಿಗೆ ತರುವುದು ಹೇಗೆ ಎಂಬುದನ್ನು ಕಲಿತಿರಬೇಕಾಗುತ್ತದೆ. ಹಾಗೆಯೇ ಸ್ವಯಂ ಪ್ರೇರಣೆಯಿಂದ ತನ್ನ ನೆರೆಹೊರೆಯುವರ, ತನ್ನ ಊರಿನವರ ಆರೋಗ್ಯದ ಕಡೆಗೂ ಗಮನ ಕೊಡಬೇಕಾಗುತ್ತದೆ. ನಮ್ಮ ಸಮಾಜದಲ್ಲಿ ಸಾಮಾನ್ಯ ರೋಗವಾಹಕಗಳಾದ ಕಲುಷಿತ ನೀರು, ಗಾಳಿ, ಮಣ್ಣು, ಕ್ರಿಮಿಕೀಟ ಪ್ರಾಣಿಗಳು ಹಾಗೂ ಬೇಜವಾಬ್ದಾರಿಯಿಂದ ವರ್ತಿಸುವ ಜನರನ್ನು ಸರಿಪಡಿಸುವ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.

ಈ ದಿಸೆಯಲ್ಲಿ ಶ್ರೀ ಡೇವಿಡ್ ವರ್ನರ್ ಅವರ Where there is no Doctor ಒಂದು ಅನುಪಮ ಮಾರ್ಗದರ್ಶಿ ಪುಸ್ತಕ. ನಾನು ಇದನ್ನು ಕೆಲವು ವರ್ಷಗಳ ಹಿಂದೆ ಓದಿದಾಗ ಈ ಪುಸ್ತಕ ಕನ್ನಡಕ್ಕೆ ಭಾಷಾಂತರಗೊಂಡರೆ ಎಷ್ಟು ಚೆಂದ ಎಂದುಕೊಂಡೆ. ಈ ಉಪಯುಕ್ತ ಕೆಲಸವನ್ನು ಶ್ರೀಮತಿ ಶಾರದಾ ಗೋಪಾಲ ಮತ್ತು ಡಾ. ಗೋಪಾಲ ದಾಬಡೆ ಅವರು ಮಾಡಿ ಕನ್ನಡಿಗರಿಗೆ ಮಹದುಪಕಾರ ಮಾಡಿದ್ದಾರೆ. ಭಾಷಾಂತರ ಎಷ್ಟು ಚೆನ್ನಾಗಿದೆ ಎಂದರೆ ಪುಸ್ತಕವನ್ನು ಪ್ರಥಮವಾಗಿ ಕನ್ನಡದಲ್ಲೇ ರಚಿಸಿದ್ದಾರೋ ಎನ್ನುವಷ್ಟು ಸರಳವಾಗಿದೆ. ಅರ್ಥಪೂರ್ಣವಾಗಿದೆ ಮತ್ತು ನಮ್ಮ ಸಾಮಾಜಿಕ ಸಾಂಸ್ಕೃತಿಕ ಪರಿಸರಕ್ಕೆ ಹೊಂದುವಂತಿದೆ. ಈ ಅಪೂರ್ವ ಕೆಲಸಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.

ಡಾಕ್ಟರ್ ಇಲ್ಲದೆಡೆ ಪುಸ್ತಕ ಕನ್ನಡ ನಾಡಿನ ಮೂಲೆ ಮೂಲೆಗಳನ್ನು ತಲುಪಲಿ. ಪ್ರತಿಯೊಬ್ಬ ವೈದ್ಯರ, ವೈದ್ಯೇತರ ಸಿಬ್ಬಂದಿ ಹಾಗೂ ಆರೋಗ್ಯ ಸ್ವಯಂ ಸೇವಕರ ಮಾರ್ಗದರ್ಶಿ ಕೈಪಿಡಿಯಾಗಲಿ. ಜನಸಾಮಾನ್ಯರ ಕೈಪಿಡಿಯಾಗಲಿ, ಜನಸಾಮಾನ್ಯರ ಮನೆ ಮನೆಯಲ್ಲಿ ಈ ಪುಸ್ತಕದ ಉಪಯೋಗವಾಗಲಿ ಎಂದು ಮನಃ ಪೂರ್ವಕವಾಗಿ ಹಾರೈಸುತ್ತೇನೆ.

ಡಾ. ಸಿ.ಆರ್. ಚಂದ್ರಶೇಖರ್
ಮನೋವೈದ್ಯ, ನಿಮ್ಹಾನ್ಸ್ ಬೆಂಗಳೂರು – ೨೯