|| ಶ್ರೀ ||

ನಮಿಸಿ ನಾರಾಯಣನ ನರನ ಪುರುಷೋತ್ತಮನ
ವ್ಯಾಸ ವಾಗ್ದೇವಿಯರ ಬಳಿಕ ಪೇಳ್ವುದು ಜಯವ

ಕನ್ನಡ ಸಾಹಿತ್ಯ ಒಂದು ಸಾವಿರ ವರ್ಷಗಳಿಂದ ಬೆಳೆದು ಬಂದಿದೆ. ಅನೇಕ ಕವಿ ಕೃತಿಗಳಿಂದ ವ್ಯೆವಿಧ್ಯ ರಮಣೀಯವಾಗಿದೆ. ಆ ಸಾಹಿತ್ಯ ಕ್ಷೇತ್ರದಲ್ಲಿ ಮೂರು ಪ್ರಬಲವಾದ ಪರಿವರ್ತನೆಯ ಘಟ್ಟಗಳನ್ನು ಗುರುತಿಸಬಹುದು. ಅಥವಾ ಆಧುನಿಕ ಕಾಲವನ್ನೂ ಗಮನಿಸಿ ಹೇಳುವುದಾದರೆ ನಾಲ್ಕು ಘಟ್ಟಗಳನ್ನು ಗುರುತಿಸಬಹುದು. ಒಂದನೆಯದು ಹತ್ತನೆಯ ಶತಮಾನದಲ್ಲಿ; ಎರಡನೆಯದು ಹನ್ನೆರಡನೆಯ ಶತಮಾನದಲ್ಲಿ; ಮೂರನೆಯದು ಹದಿನಾಲ್ಕು ಹದಿನೈದನೆಯ ಶತಮಾನಾವಧಿಯಲ್ಲಿ; ನಾಲ್ಕನೆಯದು ಹತ್ತೊಂಬತ್ತು ಇಪ್ಪತ್ತನೆಯ ಶತಮಾನಾವಧಿಯಲ್ಲಿ. ಪ್ರಥಮ ನವೋದಯದಲ್ಲಿ ಜೈನಧರ್ಮರೂಪದಿಂದ ಆವಿರ್ಭೂತವಾದ ಆ ಚೇತನಶಕ್ತಿ ಕನ್ನಡಕ್ಕೆ ಆದಿಕವಿಯಾದ ಪಂಪನ ಕೃತಿಗಳಲ್ಲಿ ತನ್ನ ಭವ್ಯ ಸ್ಮಾರಕ ಸ್ತೂಪವನ್ನು ನಿರ‍್ಮಿಸಿಕೊಂಡಿದೆ. ದ್ವಿತೀಯ ನವೋದಯದಲ್ಲಿ ವೀರಶೈವಧರ್ಮರೂಪದಲ್ಲಿ ಮೈದೋರಿದ ಆ ಶಕ್ತಿ ಹರಿಹರ ರಾಘವಾಂಕರ ಕೃತಿಸಮಷ್ಟಿಯಲ್ಲಿ ತನ್ನ ಚಿರಸ್ಮೃತಿಮಂದಿರವನ್ನು ಸ್ಥಾಪಿಸಿಕೊಂಡಿದೆ. ತೃತೀಯ ನವೋದಯದಲ್ಲಿ ವೈಷ್ಣವಭಕ್ತಿರೂಪದಲ್ಲಿ ಪುನರುತ್ಥಾನವಾದ ಆ ರಸಸ್ಫೂರ್ತಿ ಕುಮಾರವ್ಯಾಸ ಬಿರುದಿನ ನಾರಣಪ್ಪನ ಮಹಾಕೃತಿಯಲ್ಲಿ ತನ್ನ ವಿಯಚ್ಚುಂಬಿಯಾದ ಬೃಹದ್ ಗೋಪುರವನ್ನು ಕಂಡರಿಸಿಕೊಂಡಿದೆ.

ಈ ನಾರಣಪ್ಪನೆ ನಮ್ಮ ಸದ್ಯದ ಅವಗಾಹನೆಗೆ ಬೇಕಾದವನು.  ಕನ್ನಡ ಕಾವ್ಯವೃಷ್ಟಿಯ ಕಾಮನಬಿಲ್ಲಿನಲ್ಲಿ ಈತನ ನೆಲೆ ನಟ್ಟನಡು, ನೆತ್ತಿಯಮುಡಿ. ಹಳೆಯ, ಹೊಸ ಕನ್ನಡದ ತಲೆಯ ಕಿರೀಟ. ಹಳ್ಳಿ ಹಳ್ಳಿಯಲ್ಲಿ ಅಂದೂ ಇಂದೂ ಗಮಕಶಿರೋಮಣಿಗಳಿಂದ ನಾಡು ನಾಡೇ ಮೊಳಗಿ ರೋಮಾಂಚನಗೊಳ್ಳುವಂತೆ ರಸವನ್ನ, ಇಂಪನ್ನ, ಲಯವನ್ನ, ತಾನವನ್ನ, ಮಾತಿನ ಹರಹನ್ನ, ಛಂದಸ್ಸಿನ ಕುಣಿತವನ್ನ ಲೀಲಾಜಾಲವಾಗಿ ಹೊಮ್ಮಿಸಿ ಹರಿಯಿಸಿದ ಮಾಟಗಾರ. ಕನ್ನಡದ ಹೊಸಹುಟ್ಟಿನಲ್ಲಿ ಹೊಸ ಮಾರ್ಗಕ್ಕೆ ಹೊಸ ಶಕ್ತಿಗೆ ದಿಕ್ಸೂಚಿ, ಧ್ರುವತಾರೆ. ವೇದವ್ಯಾಸರ ಪ್ರೇಮಕುಮಾರ, ಕುಮಾರವ್ಯಾಸನೆಂದರೂ ಸರಿ-ವೀರನಾರಾಯಣನ ಪ್ರೇಮಕಿಂಕರ, ನಮ್ಮ ನಚ್ಚಿನ ನಾರಣಪ್ಪನೆಂದರೂ ಸರಿ.

ಮಹತ್ತಿನೊಡನೆ ಜನಪ್ರಿಯತೆಯನ್ನೂ ಪಡೆದಿರುವ ವಿರಲ ಸುಯೋಗವುಳ್ಳ ಕವಿಗಳಲ್ಲಿ ಈತ ಗಣ್ಯನು.  ಕಲಿಯದವರಿಗೂ ಕಾಮಧೇನುವಾಗಿ ಕನ್ನಡ ನಾಡಿನ ಜನಜೀವನದ ಹೃದಯವೇದಿಕೆಯಲ್ಲಿ ಅಗ್ರಸ್ಥಾನಸ್ಥ ಮಹಾಧ್ಯಕ್ಷನಾಗಿದ್ದಾನೆ.  ಒದ್ದೆ ಬಟ್ಟೆಯುಟ್ಟು ವೀರನಾರಾಯಣನ ಮುಂದೆ ಕುಳಿತು ಭಕ್ತಿರಸಾವೇಶದಿಂದ ಆಡುತ್ತಾ ಹಾಡುತ್ತಿದ್ದ ಆ ಭಕ್ತ ಕವಿಯನ್ನು ನೋಡಿರಲ್ಲಿ! ಮೈಮರೆತು ಹಾಡುತ್ತಿದ್ದಾನೆ. ಜನ ಮೈಮರೆತು ಕೇಳುತ್ತಿದ್ದಾರೆ. ಅವನು ಉಟ್ಟ ಬಟ್ಟೆಯ ತೇವ ಆರಿದಂತೆಲ್ಲಾ ಅವನ ಆವೇಶವೂ ಬತ್ತುತ್ತಾ ಹೋಗುತ್ತಿದೆ. ಆದರೂ ಜನ ನಿಷ್ಪಂದರಾಗಿ ಕೇಳುತ್ತಲೇ ಇದ್ದಾರೆ . . . .

ದಂತಕಥೆಯಾದರೂ ಇದು ಭಾವಪೂರ್ಣವಾಗಿದೆ. ಕುಮಾರವ್ಯಾಸನ ಕಾವ್ಯ ಸಹ್ಯಾದ್ರಿಯ ಏರಿಳಿತಗಳಲ್ಲಿ ತಲ್ಲೀನತೆಯಿಂದ ರಸಯಾತ್ರೆಯನ್ನು ಕೈಗೊಂಡ ಸಹೃದಯ ಚೇತನಕ್ಕೆ ಆ ದಂತಕಥೆಯು ಧ್ವನಿಪೂರ್ಣವಾಗಿ ತೋರುತ್ತದೆ. ದರ್ಶನ ಪ್ರತಿಭಾವಶಿಯಾಗಿ ಭಗವಾನ್ ವೀರನಾರಾಯಣ ಕೃಪಾಸೂತ್ರ ಚಾಲಿತನಾಗಿ ಹಾಡಿದ ಆ ಭಕ್ತ ಕವೀಶ್ವರನಿಗೆ ಈ ಮಾತು ಒಪ್ಪುವಂತೆ ಬೇರೆ ಎಲ್ಲರಿಗೂ ಒಪ್ಪದು.

ನಾಡಿನ ಜನ ಶತಮಾನಗಳಿಂದ ಹಾಡಿ, ಹಾಡಿಸಿ ಕೇಳುತ್ತಲೇ ಇರುವ ಈ ಕವಿ ನಿಶ್ಚಿತವಾಗಿ ಯಾವ ಶತಮಾನದಲ್ಲಿದ್ದ ಎಂಬುದೇ ಸ್ಪಷ್ಟವಾಗಿ ತಿಳಿಯದಾಗಿದೆ. ಹದಿಮೂರನೆಯ ಶತಮಾನದಿಂದ ಹದಿನೈದನೆಯ ಶತಮಾನದ ತನಕ ಅವನ ಕಾಲ ತೇಂಕಾಡುತ್ತಿದೆ. ಮಹಿಮಾವಂತನಾದುದರಿಂದಲೊ ಏನೊ, ಆ ಎಲ್ಲ ಶತಮಾನಗಳಲ್ಲೂ ಅವನಿದ್ದನೆಂಬ ದಂತಕಥೆಗಳು ಬೆಳೆದುಕೊಂಡಿವೆ. ಶ್ರೀಮಾನ್ ಮಂಜೇಶ್ವರ ಗೋವಿಂದ ಪೈಗಳವರು ಆತ ಸುಮಾರು ೧೨೩೦-೩೫ರೊಳಗೆ ಇದ್ದಿರಬೇಕೆಂದು ಸಾಧಿಸಿದ್ದಾರೆ. ಕವಿಚರಿತಕಾರರು ಸುಮಾರು ೧೪೩೦ ಎಂದು ನಿರ್ಧರಿಸಿದ್ದಾರೆ. ವಿಜಯನಗರದ ಕೃಷ್ಣದೇವರಾಯನ ಕಾಲದಲ್ಲಿ, ಎಂದರೆ ೧೫೩೦ರಲ್ಲಿದ್ದಿರಬೇಕೆಂದು ಕೆಲವರು ವಾದಿಸಿದ್ದಾರೆ. ಒಟ್ಟಿನಲ್ಲಿ ಏಕಾಭಿಪ್ರಾಯವಿಲ್ಲ. ಈಗ ಸದ್ಯಕ್ಕೆ ನಮಗೆ ತಿಳಿದಿರುವಂತೆ ಕುಮಾರವ್ಯಾಸನನ್ನು ಭಾಸ್ಕರಕವಿ ಬಹಳವಾಗಿ ಅನುಕರಣೆ ಮಾಡಿರುವುದರಿಂದ (ಈ ವಿಚಾರದಲ್ಲಿ ಸಂಶಯವೇ ಇಲ್ಲ,) ೧೪೨೩ಕ್ಕಿಂತ ಮುಂಚೆಯೇ ನಾರಣಪ್ಪನು ಪ್ರಸಿದ್ಧನಾಗಿದ್ದಿರಬೇಕು ಎಂಬುದರಲ್ಲಿ ಸಂದೇಹಬಾರದು.

ತನ್ನ ಕಾಲವನ್ನು ಕುಲಗೋತ್ರವನ್ನು ಬಿರುದಾಂಕಿತಗಳನ್ನು ಕುಮಾರವ್ಯಾಸನೇ ಹೇಳಿಕೊಳ್ಳಲಿಲ್ಲ. ತಮತಮಗೆ ತೋರಿದಂತೆ, ತಮ್ಮ ತಮ್ಮ ಆಸೆಗೆ ತಕ್ಕಂತೆ ಕೆಲವರು ಅವನಿಗೆ ಲಾಂಛನವಿತ್ತು ಆ ಕಾರಣಕ್ಕಾಗಿಯೇ ಅವನಿಗೆ ತಮಗೆ ಬೇಕಾದುದೊಂದು ಕಾಲವನ್ನಿತ್ತರು. ಕಾಲವನ್ನೇನೋ ನಿರ್ಧರಿಸಲೇಬೇಕು. ಆದರೆ ಇಂತಹ ಮಹಾಕವಿ ಯಾವ ಕುಲಕ್ಕೆ ಸೇರಿದವನೆಂದು ಬೇರು ಅಗೆಯುವುದಾದರೂ ಏಕೆ?  ಆತ ದೊಡ್ಡ ಕವಿ: ಮತತ್ವದಿಂದಲ್ಲ, ಕವಿತ್ವದಿಂದ !  ಆತನ ಹಣೆಯ ಮೇಲೆ ಯಾವ ಲಾಂಛನವಿದ್ದರೇನು : ನಮಗೆ ನಮ್ಮ ಈ ದಿವ್ಯಕವಿ ನಮ್ಮವನು ; ಕನ್ನಡಿಗನು ; ಕನ್ನಡಿಗರ ಕುಲವನ್ನು ಒಂದಾಗಿ ಬೆಸೆಯುವವನು : ಕನ್ನಡಿಗರ ದೊಡ್ಡ ಹೆಮ್ಮೆ; ದೊಡ್ಡ ಕಣ್ಣು ; ಮಹಾತ್ಮ.

ಕವಿಯ ಕಾವ್ಯ:- ಕುಮಾರವ್ಯಾಸ ಭಾರತವು ಕಲಿಯದವರಿಗೂ ಕಾಮಧೇನು ಎಂದು ಹಿಂದೆಯೆ ಹೇಳಿದೆವು. ಇನ್ನು ಕಲಿತವರಿಗೆ ಕೇಳಬೇಕೆ? ‘ಕಾವ್ಯಕೆ ಗುರು ’. ಆ ಗುರು ಕಾವ್ಯವನ್ನು ಓದಿ ಹುಚ್ಚಾಗದ ಸಹೃದಯರಿಲ್ಲ.

ಕುಮಾರವ್ಯಾಸನು ಹಾಡಿದನೆಂದರೆ
ಕಲಿಯುಗ ದ್ವಾಪರವಾಗುವುದು
ಭಾರತ ಕಣ್ಣಲಿ ಕುಣಿವುದು! ಮೈಯಲಿ
ಮಿಂಚಿನ ಹೊಳೆ ತುಳುಕಾಡುವುದು!

ಕವಿಯ ಕಾವ್ಯವನ್ನು ಓದುವ ಮೊದಲು ಈ ಮಾತುಗಳನ್ನು ಕೇಳಿದರೆ ಕಾವ್ಯಸೌಂದರ‍್ಯಕ್ಕಾಗಿ ಅವನ್ನು ಮೆಚ್ಚಿಕೊಳ್ಳುತ್ತೇವೆ. ಆದರೆ ಕುಮಾರವ್ಯಾಸನ ಕಾವ್ಯ ಕುರುಕ್ಷೇತ್ರದಲ್ಲಿ ನಡೆಯುವ ಆ ವಿದ್ಯುದ್‌ಘರ್ಷಣವನ್ನು ಕಂಡಾಗ, ಕಂಡು ಉಂಡಾಗ, ಅವನ ಪ್ರತಿಭಾ ವಿದ್ಯುತ್ಪ್ರವಾಹದಲ್ಲಿ ಮುಳುಗಿ ಮೇಲೆದ್ದು ಈಜಿ ಬಂದಾಗ ಮೇಲಿನಮಾತು ಸುಂದರಸತ್ಯವಾಗುತ್ತದೆ.

ಇಂತಹ ಈ ಕಾವ್ಯವನ್ನು ಬರೆದ ಕವಿ ತನ್ನನ್ನು ಬರಿಯ ‘ಲಿಪಿಕಾರ’ನೆಂದುಕೊಳ್ಳುತ್ತಾನೆ. ದರ್ಶನಪ್ರತಿಭೆಗೆ ತನ್ನನ್ನು ತಾನು ಲಿಪಿಕಾರನನ್ನಾಗಿ ಮಾಡಿಕೊಂಡರೆ ಮಾತ್ರ ಮಹಾಕಾವ್ಯ ಮೂಡಿಬರುತ್ತದೆ ಎಂಬುದಕ್ಕೆ ಕುಮಾರವ್ಯಾಸನೆ ಸಾಕ್ಷಿ. ಹಾಗಾಗಿ ಭಗವದಭಿವ್ಯಕ್ತಿಗೆ ಪಾತ್ರಮಾತ್ರನಾಗುತ್ತಾನೆ. ಅಂತಹವನಿಗೆ ಕಾವ್ಯ ‘ರಮಣೀಯಾರ್ಥ ಪ್ರತಿಪಾದಕಃ ಶಬ್ದಃ’ ಮಾತ್ರವಲ್ಲ. ಕುಮಾರವ್ಯಾಸನೆ ಹೇಳಿದ್ದಾನೆ: ‘ಚಾರುಕವಿತೆಯ ಬಳಕೆಯಲ್ಲ, ವಿಚಾರಿಸುವೊಡಳವಲ್ಲ’ ಎಂದು. ಕಲೆಗಾಗಿ ಕಲೆ ಎಂಬುದು ಅವನಿಗೆ ಒಲ್ಲದ ಮಾತು. ವ್ಯಾಸಭಾರತವನ್ನು ಕುರಿತು ‘ದುರಿತವ್ಯಾಳವಿಷಜಾಂಗುಳಿಕ’ ‘ದುರಿತದುರ್ಗ ವಿಭೇದಕರ’ ‘ಕಾಯಕಲ್ಮಷ ಹರವಖಿಳ ನಿಶ್ಶ್ರೇಯಸದ ಸದ್ರೂಪುವಿನ ಸಂದಾಯಕ’ ‘ಪುಣ್ಯಸ್ತೋಮತರುಗಳಿಗೆ ಈ ಮಹಾ ಭಾರತ ಕಥಾಮೃತ ರಾಮಣೀಯಕ ಫಲವಲಾ’ ಎಂದೆಲ್ಲ ಹಾಡಿದ ಕವಿಗೆ ತನ್ನ ಭಾರತವಾದರೂ ಏನಾಗಬೇಕೆಂಬುದು ಕಾಣದಿರಲಿಲ್ಲ.

ಆದರೆ ಈ ಭಾರತ ಆ ಭಾರತದ ಪ್ರತಿಕೃತಿಯಲ್ಲ. ಇದು ಪಂಪನ ಪ್ರತಿಚ್ಛಾಯೆಯೂ ಅಲ್ಲ. ಮಹರ್ಷಿವ್ಯಾಸರ ಕಾವ್ಯವನ್ನು ಕನ್ನಡದಲ್ಲಿ ಪಂಪನಂತಹ ಮಹಾಕವಿ ರಚಿಸಿದ ಮೇಲೆ ಮತ್ತೊಬ್ಬ ಕವಿ ಆ ಕಾವ್ಯವನ್ನು ಹೆಚ್ಚು ಸಮರ್ಪಕವಾಗಿ, ನವೋನವ್ಯವಾಗಿ ಮಾಡುತ್ತೇನೆಂದು ಹೊರಡುವುದು ಸಾಹಸದ ಮಾತೇ ಸರಿ. ಕುಮಾರವ್ಯಾಸ ಆ ಮಹಾಸಾಹಸವನ್ನು, ಸಾಹಸವೆಂದೇ ಭಾವಿಸದೆ, ಕೈಗೊಂಡಿದ್ದಾನೆ. ಪಂಪನನ್ನು ಓದಿಯೇ ಇಲ್ಲವೇನೋ ಎನ್ನುವಷ್ಟುಮಟ್ಟಿಗೆ ಹೊಸ ಕಾವ್ಯವನ್ನು ಸೃಷ್ಟಿಸಿದ್ದಾನೆ, ಎಂದರೆ ಯಾರೂ ಆಶ್ಚರ‍್ಯಗೊಳ್ಳಬೇಕಾಗಿಲ್ಲ. ಪಂಪ ಶ್ರೇಷ್ಠತಮವಾಗಿ ಸೃಷ್ಟಿಸಿರುವ ಭಾಗಗಳನ್ನೂ ಇವನು ಅದಕ್ಕೆ ಸರಿಮಿಗಿಲಾಗುವಂತೆ, ತಾನು ಅವನನ್ನು ಓದಿಲ್ಲದೆ ಬರೆಯುತ್ತಿರುವಂತೆ ಸೃಷ್ಟಿಸಿರುವುದನ್ನು ನೋಡಬಹುದು. ಕೃಷ್ಣ ಕರ್ಣರ ಸಂವಾದ ಪ್ರಸಂಗವೆ ಇದಕ್ಕೆ ಉದಾಹರಣೆಯಾಗಬಲ್ಲದು. ಪಂಪನ ಪ್ರತಿಭಾಶ್ವೇತಚ್ಛತ್ರದಲ್ಲಿ ತನ್ನ ಕಾವ್ಯಸೀಮೆಯನ್ನು ವಿಸ್ತರಿಸಿಕೊಂಡ ‘ಸಾಮಂತ ಚೂಡಾಮಣಿ’ ಕವಿ ರನ್ನನನ್ನೂ ಸರ್ವಸ್ವತಂತ್ರವಾದ ಅವಧೂತ ರಾಜ್ಯವನ್ನು ನಿರ್ಮಾಣಮಾಡಿಕೊಂಡ ಕವಿ ಕುಮಾರವ್ಯಾಸನನ್ನೂ ಹೋಲಿಸಿ ನೋಡಿದಾಗ ಗೊತ್ತಾಗುತ್ತದೆ – ಈ ನಾರಾಣಪ್ಪನ ಮಹಾಪ್ರತಿಭೆಯ ಶಕ್ತಿ.

ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಅವನ ಕಾವ್ಯ ಹಾಗೆಯೆ ವಿಶಿಷ್ಟ ಸ್ವತಂತ್ರ. ಪ್ರಾರಂಭದ ಪರ್ವಗಳಲ್ಲಿ ಹೆಚ್ಚು ಕಡಿಮೆ ವ್ಯಾಸರನ್ನೆ ಹಿಂಬಾಲಿಸಿಕೊಂಡು ಹೊರಟ ಈತ ಯುದ್ಧಪರ್ವಗಳು ಬಂದಾಗ ತನ್ನ ದಾರಿಯನ್ನು ತಾನು ಹಿಡಿದುಕೊಂಡು ಹೋಗುತ್ತಾನೆ. ಒಟ್ಟಿನಲ್ಲಿ ಕಥೆಗಾಗಿ ಇವನು ವ್ಯಾಸರನ್ನು ಆಶ್ರಯಿಸಿದ್ದಾನೆಯೇ ಹೊರತು ಪಂಪನನ್ನಲ್ಲ. ರೀತಿಯ ದೃಷ್ಟಿಯಲ್ಲಂತೂ ತನ್ನನ್ನೇ ಅಭಿವ್ಯಕ್ತಗೊಳಿಸಿ ಕೊಂಡಿದ್ದಾನೆ. ಕಥೆಯ ದೃಷ್ಟಿಯಲ್ಲಿ ಪಂಪನಿಗೂ ಇವನಿಗೂ ಬಹಳ ಅಂತರವಿದ್ದುದರಿಂದಲೂ ಈ ‘ರೀತಿ’ಯ ಅನನ್ಯತೆಯಿಂದಲೂ ಕುಮಾರವ್ಯಾಸ ಭಾರತ ಕನ್ನಡದಲ್ಲಿ ವಿಶಿಷ್ಟ ಸ್ವತಂತ್ರ ಕೃತಿಯಾಗಿದೆ.

ಪಂಪನಿಗೆ ಭಾರತ ಲೌಕಿಕ ಕಾವ್ಯವಾಯಿತು. ಕುಮಾರವ್ಯಾಸನಿಗೆ ಭಗವದ್ವಿಲಾಸ ಭೂಮಿಕೆಯಾಯಿತು. ಪಂಪನಿಗೆ ಅದು ತನ್ನ ಕಾವ್ಯ ಪ್ರತಿಭೆಯ ಪ್ರಕಾಶನದ ಒಂದು ಪ್ರಕಾರವಾಯಿತು. ಕುಮಾರವ್ಯಾಸನಿಗೆ ಆತ್ಮಪ್ರಕಾಶನದ ಏಕೈಕಪ್ರಕಾರವಾಯಿತು. ಹೀಗಾಗಿ ಪಂಪನ ಪ್ರತಿಭೆ ಇಕ್ಕಡಿಯಾಗಿ ಅವನ ಎರಡು ಕಾವ್ಯಗಳಲ್ಲಿ ವ್ಯಕ್ತವಾದರೆ, ಇವನ ಪ್ರತಿಭೆ ಒಂದೇ ಕೃತಿಯಲ್ಲಿ ಏಕೀಭವಿಸಿ ಜಾಜ್ವಲ್ಯಮಾನವಾಯಿತು. ಪಂಪ ತನ್ನ ಪ್ರಜ್ಞೆಯನ್ನು ಲೌಕಿಕ ಕಾವ್ಯಪ್ರಜ್ಞೆಯನ್ನಾಗಿ ಒಂದೆಡೆಯೂ, ಧರ್ಮಕಾವ್ಯಪ್ರಜ್ಞೆಯನ್ನಾಗಿ ಮತ್ತೊಂದೆಡೆಯೂ ಮಾಡಿಕೊಂಡದ್ದರಿಂದ ಅವನ ವ್ಯಕ್ತಿತೆಯಲ್ಲಿ ಇಮ್ಮೊಗವನ್ನು ಕಾಣುತ್ತೇವೆ. ಕುಮಾರವ್ಯಾಸ ತನ್ನ ಕಾವ್ಯಯೋಗವನ್ನು ಆತ್ಮಯೋಗದಿಂದ ಬೇರೆಂದು ಎಂದೂ ಭಾವಿಸದೆ ಇದ್ದುದರಿಂದ ತನ್ನ ಸಮಗ್ರ ವ್ಯಕ್ತಿತೆಯ ಅಖಂಡ ಸ್ವರೂಪವನ್ನು ಅವನು ಪ್ರತಿಮಿಸುವುದು ಸಾಧ್ಯವಾಯಿತು. ಈ ದೃಷ್ಟಿಯಿಂದ ಕುಮಾರವ್ಯಾಸ ಅದ್ವಿತೀಯ.

ಕುಮಾರವ್ಯಾಸನ ಕಾವ್ಯರೀತಿಯ ವಿಚಾರವಾಗಿ ಒಂದೆರಡು ಮಾತನ್ನು ಹೇಳದಿದ್ದರೆ ತಪ್ಪಾಗುತ್ತದೆ. ಸಾಮಾನ್ಯವಾಗಿ ಕುಮಾರವ್ಯಾಸನನ್ನು ಭಾಮಿನೀಷಟ್ಪದಿಕಾರ ಎಂದು ಹೇಳುವುದರಿಂದ ಗುರುತಿಸುವುದೂ ಉಂಟು. ಆದರೆ ಇದೇ ಅವನ ರೀತಿಯಲ್ಲ. ಆ ‘ರೀತಿ’ಯ ಕೊನೆಯ ‘ಅವಸ್ಥಾ ’ಮಾತ್ರ ಅದು. ಅವನ ರೀತಿ ಮಹಾಕವಿಯ ರೀತಿ, ಮಹಾಪ್ರಾಜ್ಞನ ರೀತಿ, ಆದೇ ರೂಪಕ ರೀತಿ. ಱUಜಿobಟಞ omಛಿZho ಜ್ಟಿoಠಿ ಜ್ಞಿ ಜಿಞZಜಛಿoೞೞ  U.ಆ. ಛಿZಠಿo ಎನ್ನುವ ಮಾತುಗಳನ್ನು ಇಲ್ಲಿ ನೆನೆದುಕೊಳ್ಳಬಹುದು. ಕುಮಾರವ್ಯಾಸ ಕಾಣುವುದು ರೂಪಕಗಳನ್ನು, ಮಾತನಾಡುವುದು ರೂಪಕಗಳನ್ನು, ಅಷ್ಟೇ ಏಕೆ, ಅವನ ಸಾಧಾರಣತಮ ಭಾಷೆಯೂ ರೂಪಕದಿಂದ ದೀಪ್ತಗೊಂಡಿರುತ್ತದೆ. ಈ ಭೂಮಿಕೆಯಲ್ಲಿ ಇವನನ್ನು ಸರಿಗಟ್ಟುವ ಕವಿ ಕನ್ನಡದಲ್ಲಿಲ್ಲವೇ ಇಲ್ಲ. ಅವನನ್ನು ‘ರೂಪಕಸಾಮ್ರಾಜ್ಯ ಚಕ್ರವರ್ತಿ ‘ ಎಂದು ಕರೆದ ಮಾತು ಗಾದೆಯಾಗಿದೆ. ಉದಾಹರಣೆಗಾಗಿ, ಒಂದೆರಡು ರೂಪಕಗಳನ್ನು ನೋಡಬಹುದು: ‘ಶಿವನ ಕಾರುಣ್ಯಾಯುಧವೆ ಮಸೆದುದು ಸುರೇಂದ್ರ ಸ್ನೇಹ ಸಾಣೆಯಲಿ’, ‘ಮುನಿಯ ಮಾತಿನ ಬಲೆಗೆ ಸಿಲುಕಿತು ಜನಪತಿಯ ಚೈತನ್ಯಮೃಗ ’, ‘ನಮ್ಮ ಭಾಗ್ಯದ ಬಾಣಸಿಗ ವಿಧಿ ವಿಷವಬೆರೆಸುವೊಡಾರು ಕಾವರು’, ‘ಬಂಧುಗಳ ದರುಶನ ಫಲವಲಾ ಸಂಸಾರ ತರುವಿಂಗೆ’, ‘ಅಪಕೀರ‍್ತಿ ನಾರಿಯ ಸೆರಗ ಹಿಡಿದರು’, ಹೀಗೆ ಅವನು ನುಡಿಯುವ ಭಾಷೆಯೇ ರೂಪಕವಾಗುತ್ತದೆ. ರೂಪಕವನ್ನು ಆ ನುಡಿಯಿಂದ ಬಿಡಿಸಿ ತೆಗೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಯಾರನ್ನಾದರೂ ಅನುವಾದ ಮಾಡಬಹುದು. ಕುಮಾರವ್ಯಾಸನನ್ನು ಅನುವಾದ ಮಾಡುವುದು ಎಂದೆಂದಿಗೂ ದುಸ್ಸಾಧ್ಯ. ಕಾರಣ ಅವನ ಪ್ರತಿಭೆ ಭಾಷೆಯಲ್ಲಿ ಆವಿರ್ಭವಿಸಿದೆ. ಆದುದರಿಂದಲೇ ಅವುಗಳಲ್ಲಿ ಅವಿಭಾಜ್ಯವಾದ ಶಕ್ತಿ ಪ್ರಜ್ವಲಿಸುತ್ತದೆ. ‘ಬವರವಾದರೆ ಹರನವದನಕೆ ಬೆವರ ತಹೆ’, ‘ಮೃತ್ಯು ಮರೆಹೊಕ್ಕಳು ಮಹೇಶ್ವರನ’, ‘ಕಾಲದಂಡವ ತಿರುಹಿ ಭುವನದಲೂಳಿಗವ ಮಾಡುವ ಕೃತಾಂತನ ಹೋಲುವೆಯ ಹೊಸಬಿಗನು ಹೊಕ್ಕನು ಭೀಮನುರವಣಿಸಿ’, ‘ಹಡಗು ಜಲಧಿಯಳೋಡಿ ಗಿರಿಗಳನೆಡಹಿ ನುಗ್ಗಾದಂತೆ’, ‘ಆಲಿಕಲುಗಳ ಕಡಿವೊಡುಕ್ಕಿನ ಚೀಲಣದ ಹಂಗೇಕೆ?’, ‘ಕಾಳಕೂಟದ ಕಮಲ ತುಂಬಿಗೆ ಪಥ್ಯವಲ್ಲ’, ‘ಪಲಾಯನ ತವನಿಧಿ’, ‘ನರಶರದ ಜುಂಜುವೊಳೆಯಲಿ ಜಾರುವನೆ ಜಾಹ್ನವೀಧರ’, ‘ಸೀಳಬಹುದೇ ಸೀಸದುಳಿಯಲಿ ಶೈಲವನು?’ ‘ಬತ್ತಿದ ಕೆರೆಯೊಳಗೆ ಬಲೆಯೇಕೆ?’ ‘ವರುಣಶರ ಬಾಯರತು ನೀರಡಸಿದುದು’, ‘ಸುರಧೇನು ನೆರೆಗೊಡ್ಡಾಯ್ತು’, ‘ಕೋಲಗುರುವಿನ ಮರಣವಾರ್ತಾ ಕಾಲಸರ್ಪನ ತಂದು ಸಂಜಯ ಹೇಳಿಗೆಯನೀಡಾಡಿದನು ಧೃತರಾಷ್ಟ್ರನಿದಿರಲಿ’, ‘ಕೆಂಡದ ಮಳೆಯ ತಡೆವವೆ ಕೊಡೆ?’ ‘ಬೆಳುದಿಂಗಳಲಿ ಮೈ ಬೆವರುವುದೆ?’ ‘ಪಡುವಣ ಶೈಲ ವಿಪುಲಸ್ತಂಭ ದೀಪಿಕೆಯಂತೆ ರವಿ ಮೆರೆದ’, ‘ರುಧಿರದ ತಿಲಕನಾದನಲೈ ಧರಾಂಗನೆಗೆ’, ‘ನುಡಿಗಳ ಕಾಳಕೂಟವ ಬಡಿಸುವೆನು ಕಿವಿಯಾರ ಸವಿಯೆಂದ’, ‘ಮುಂದಣ ಕಾಳಗದ ಕರ್ಣಾಮೃತದ ಮಳೆಗಾಲ ಮಾದುದು ವಿಲೋಚನದ ಮಳೆಗಾಲವಾಯ್ತೆಂದ’, ‘ಘನಶೋಕವಹ್ನಿಯ ಮೇಹುಗಾಡಿನ ಮನ’, ‘ಅರಿವಿನ ಸೆರಗು ಹಾರಿತು’, ‘ಅಂಬುನಿಧಿ ಮಕರಂದವಾದರೆ ತುಂಬಿಯಾಗನೆ ವಡಬ?’ ‘ಸಿಡಿಲು ಸಿಗುರೆದ್ದಂತೆ!’ ‘ರೋಷವೀರೆಲೆಯಾಯ್ತು’, ‘ಮಾತು ಹೊಲಸಿನ ಗಂಧವಾಗಿದೆ’ – ಇಂತಹವು ನೂರಲ್ಲ, ಸಹಸ್ರಾರು ಉದಾಹರಣೆಗಳನ್ನು ಕೊಡಬಹುದು. ಈ ಒಂದೊಂದು ರೂಪಕದ ಸಿಡಿಲಕುಡಿಯನ್ನು ಹಿಡಿದು ಅನುಭವಿಸಿರಿ! ಪ್ರಾಸಕ್ಕಾಗಿ ಬೇರೆಯ ಕವಿಗಳು ಪ್ರಯತ್ನಿಸಿದರೆ ಈ ಕವಿಗೆ ಪ್ರತಿಯೊಂದು ಪ್ರಾಸಸ್ಥಾನವೂ ಒಂದೊಂದು ಹೊಸ ಹೊಸ ರೂಪಕವನ್ನು ತಂದುಕೊಡುವುದುಂಟು.

‘ಅರೆದುದೋ ಪರಬಲವ, ಕಾಲನ
ಹೊರೆದುದೋ, ಮಾರಣದ ಮಂತ್ರವ
ಬರೆದುದೋ, ಬವರಕ್ಕೆ ಬಲುಗೈಗಳನು ಕೈ ನೆಗಹಿ
ಕರೆದುದೋ, ಬಲವೆಲ್ಲ ನೀರಲಿ
ನೆರೆದುದೋ, ಮಾರ್ಬಲದ ವೀರರ
ಹರೆದುದೋ! . . . . . ’

ಇಷ್ಟು ಶ್ರೀಮಂತನಾದ ಕುಮಾರವ್ಯಾಸ ವ್ಯಾಸ ಪಂಪರಾದ ಮೇಲೆ ಬಂದರೇನಂತೆ? ಇದಕ್ಕೆ ಒಂದೇ ಉದಾಹರಣೆಯನ್ನು ಕೊಡಬಹುದು. ಪಂಪಕವಿ ಒಂದು ಪ್ರಸಂಗವನ್ನು ವರ್ಣಿಸುವಾಗ ‘ವಿಷಮೊಳ್ಳೆಗುಳ್ಳೊಡಮದೊಳ್ಳೆಯೆ ಕಾಳಿಯ ನಾಗನಾಗದು’ ಎಂದು ಹೇಳಿದ್ದರೆ ಕುಮಾರವ್ಯಾಸ ಹೇಳಿದ ರೀತಿ ಇದು : ‘ಬೆಳುದಿಂಗಳಿನ ಬಿರುಸಾರ ಸುಡುವುದು’. ಈ ರೂಪಕ ಶಕ್ತಿಯಲ್ಲಿ ಪಂಪ ನಾರಣಪ್ಪರಿಗೆ ಸಮಾನತೆ ಇಲ್ಲ. ಅವನ ರುದ್ರಶಕ್ತಿಗೆ ಏನು ಸಿಕ್ಕಿದರೂ ರೂಪಕಾಹಾರವಾಗಿ ಬಿಡುತ್ತದೆ. ಆದ್ದರಿಂದ ಅನ್ಯಕವಿಗಳು ಅಗಿದು ಸಿದ್ಧಗೊಳಿಸಿಟ್ಟುಕೊಂಡ ಆಹಾರ ಅವನಿಗೆ ಎಂಜಲು.

‘ಆರ ದೀಪನ ಚೂರ್ಣ ಬಲದಲಿ ವೀರ ರುದ್ರನು ಜಗವ ನುಂಗುವ’

ಎನ್ನುವ ಮಾತು ಅವನ ರೂಪಕರುದ್ರ ಶಕ್ತಿಗೆ ಎತ್ತಿದ ಮಂಗಳಾರತಿಯಾಗಿದೆ. ಇಂತಹ ಶಕ್ತನಾದದ್ದರಿಂದಲೇ ಕುಮಾರವ್ಯಾಸ ಅಷ್ಟು ಮಾತಾಳಿಯಾಗಿದ್ದರೂ ದುಸ್ಸಹ್ಯನಾಗಿಲ್ಲ. ಈ ಕವಿ ತನ್ನ ಶಕ್ತಿಯನ್ನು ಹೇಳಿಕೊಳ್ಳುತ್ತ ‘ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಪದವಿಟ್ಟಳುಪದೊಂದಗ್ಗಳಿಕೆ’, ಎಂದುಕೊಂಡಿದ್ದಾನೆ. ಇವನ ರೂಪಕ ನಟರಾಜ ಶಕ್ತಿಯನ್ನು ಕಂಡಾಗ ಈ ಮಾತುಗಳು ಉತ್ಪ್ರೇಕ್ಷೆಯಲ್ಲ ಎನಿಸುತ್ತಿದೆ  . ಆದರೆ ಒಮ್ಮೊಮ್ಮೆ ಅನಿಸುತ್ತದೆ :  ಈ ಒಂದು ಶಕ್ತಿಯೆ ದೋಷವಾದುದೂ ಉಂಟು. ಪದವನ್ನೆ ಅಲ್ಲ, ಪಂಕ್ತಿಯನ್ನೇ ಅಲ್ಲ, ಸಂಧಿಗಳನ್ನೂ ತೊಡೆದು ಹಾಕಿದ್ದರೆ ಅವನ ಖ್ಯಾತಿ ಹೆಚ್ಚುತ್ತಿತ್ತು, ಎಂದು.  ಆದರೂ ಯಾವೆಡೆಯಲ್ಲಿಯೂ ಅಯುಕ್ತ ಪದದ ಪ್ರಸಾರವಿಲ್ಲ ; ಅದಕ್ಕಾಗಿ ನಾವು ಕವಿಯನ್ನು ಹೊಗಳಲೇಬೇಕು. ಸಾವಿರಾರು ಮಾತುಗಳು ನಿರಂಕುಶವಾಗಿ ನಡೆದಿದ್ದರೂ ಸಮಯ ಸಂದರ್ಭಗಳಿಗೆ ವಿರೋಧವಾದ ಪ್ರಯೋಗಗಳು ಅಪರೂಪ, ಪ್ರಾಯಶಃ ಇಲ್ಲವೇ ಇಲ್ಲ. ಪಾತ್ರ ಸನ್ನಿವೇಶಗಳಿಗೆ ಅನುಚಿತವಾದ ರಾಗಾಲೋಚನೆಗಳು ಕೆಲವೆಡೆಯಲ್ಲಿ ಕಾಣಬರುತ್ತವೆ. ಆಗ ಕವಿಯ ನಿರ್ಮಾಣ ಕೌಶಲವು ಕಣ್ಣುಮುಚ್ಚಿತೂಕಡಿಸಿದ ಹಾಗೆ ತೋರುತ್ತದೆಯೇ ಹೊರತು ಕವಿಯ ನಾಲಗೆ ಕೊಂಕಿ ತೊದಲಿದಂತೆ ಭಾಸವಾಗುವುದಿಲ್ಲ.  ವಾಚಾಳಿಯಂತೆ ಕಾಣಿಸಿಕೊಂಡರೂ ವಸ್ತುತಃ ಅವನು ವಾಗ್ಮಿ. ಕವಿತೆಯ ಹೊದಿಕೆ ಹೆಚ್ಚು ಹೆಚ್ಚು ಮಡಿಕೆಗಳನ್ನು ಪ್ರಕಟಿಸಿದರೂ ಕಾವ್ಯಪುರುಷನ ದೇಹಕ್ಕೆ ಅವೆಲ್ಲವೂ ಹೇಗೋ ಹೊಂದಿಕೊಂಡುಬಿಟ್ಟಿವೆ. ಕುಮಾರವ್ಯಾಸನ ಭಾಷಾ ಪದ್ಧತಿ ಸ್ವತಂತ್ರವಾದದ್ದು, ಎಲ್ಲಿಯೂ ಅತಂತ್ರವಾಗಿಲ್ಲ. ಕುತಂತ್ರವಂತೂ ಅದಕ್ಕೆ ತೀರ ಹೊರಗು. ಸಂಧ್ಯಾಸಮಯ ಪಶ್ಚಿಮ ದಿಕ್ಕಿನಲ್ಲಿ ಬಣ್ಣಗಳ ಹರಹು ವಿಪರೀತ; ಸಾಗರದ ನೀವಲರ್ಣದ ನೀರಿನ ರಾಶಿ ವಿಪರೀತ; ವೈಶಾಖದಲ್ಲಿ ಅರಳಿಯ ಮರಕ್ಕೆ ಹಸಿರು ಎಲೆಗಳ ಸಮೃದ್ಧಿ ವಿಪರೀತ; ಹಾಗೆ ನಾರಣಪ್ಪನಲ್ಲಿ ವಚನ ವೈಭವ ವಿಪರೀತ.  ಪದಪ್ರಯೋಗದಲ್ಲಿ ಕುಮಾರವ್ಯಾಸ ಮೋಡಿಕಾರ, ಪದಪದಗಳಿಂದ ಭಾವ ಭಾಗೀರಥಿಯನ್ನು ಸೃಜಿಸಿ ನೆಲಕ್ಕೆ ಕರೆತರುವ ಕಲಾಭಗೀರಥನವನು. ಯಾವಯಾವ ಪದಗಳು ಎಂತೆಂತಹ ರಸದೊರತೆಯನ್ನು ಮಿಡಿಯಬಲ್ಲವೆಂಬುದು ಅವನಿಗೆ ಹುಟ್ಟರಿವು. ಈ ಕವಿಯ ಹೆಸರು ಹೇಳಿದವರಿಗೂ ಶಬ್ದ ದಾರಿದ್ರ್ಯಬಾರದು. ಕನ್ನಡದ ಭಂಡಾರವನ್ನು ಶ್ರೀಮಂತಗೊಳಿಸಿದ ಈ ಕವಿ ಸಿಕ್ಕಿದ ಕಡೆಯಿಂದೆಲ್ಲಾ ಪದಗಳನ್ನು -ರೂಪಕಗಳನ್ನೆಂತೋ ಹಾಗೆ-ಸೂರೆಗೊಂಡಿದ್ದಾನೆ. ಬೇರೆ ಸಂದರ್ಭದಲ್ಲಿ ಅಶ್ಲೀಲವೆಂದು ಹೇಳಬಹುದಾದ ಮಾತುಗಳನ್ನೂ ಈತ ತನ್ನ ಕಾವ್ಯದಲ್ಲಿ ಸುಂದರವಾಗಿ ಶಕ್ತಿಯುತವಾಗಿ ಬಳಸಿಕೊಂಡಿದ್ದಾನೆ: ‘ಗಂಡರೋ ನೀವ್ ಷಂಡರೋ ಹೇಳೆಂದಳಿಂದುಮುಖಿ’, ‘ಸದರಗಿದರವನರಿದು’, ‘ಒರಲಬೇಡವೊ ಕುನಿ’, ‘ಯಾದವರ ಬಡ ಕರುವೆ’, ‘ಈ ನಪುಂಸಕರೊಡನೆ ಹುಟ್ಟಿದ ನಾನು ಮೂಗುಳ್ಳವನೆ?’ ‘ಸತ್ಯದ ನುಡಿಗೆ ಹಾದರವಿಲ್ಲ’, ‘ರೋಷದ ಗೊಡ್ಡು ಗುರು ನಾನಾದೆ’, ‘ಪಾಂಡುಪುತ್ರರ ಬೊಡ್ಡಿ’. ಯಾವ ಪದವೂ ಮಹಾಕವಿಗೆ ಅಶ್ಲೀಲವಲ್ಲ. ಅಶ್ಲೀಲತೆ ಆವರಣದಿಂದ ಸೃಷ್ಟವಾಗುತ್ತದೆಯೇ ಹೊರತು ಒಂದು ಪದ ತನಗೆ ತಾನೆ ಸಂಪೂರ್ಣವಾಗಿ ಅಶ್ಲೀಲವಾಗಿರದು. ಮಹಾಕವಿ, ಆವರಣ ಸೃಷ್ಟಿಯಲ್ಲಿ, ಅದರ ಅಶ್ಲೀಲತೆಯನ್ನು ತೊಳೆದು ಅಪೂರ್ವತೆಯನ್ನು ಹೊಳೆಸುತ್ತಾನೆ. ಕುಮಾರವ್ಯಾಸನಿಗೆ ಈ ಪತಿತೋದ್ಧರಣಶಕ್ತಿ ಅದ್ಭುತವಾಗಿದೆ. ಹಾಗೆಯೆ ಸಾಧಾರಣ ಪದಗಳ ಅರ್ಥ ಸೀಮೆಯನ್ನು ಭಾವಶ್ರೀಮಂತಿಕೆಯನ್ನು ಹೆಚ್ಚಿಸುವ ಅದ್ಭುತ ಶಕ್ತಿಯೂ ಹೇರಳವಾಗಿದೆ.

ಕುಮಾರವ್ಯಾಸ ಎಷ್ಟು ವರ್ಣಿಸಿದರೂ ತೃಪ್ತಿಪಟ್ಟುಕೊಳ್ಳಲಾರ. ಅವನ ಯುದ್ಧ ವರ್ಣನೆಯೇ ಅದಕ್ಕೆ ಸಾಕ್ಷಿ. ಒಂದು ಯುದ್ಧದಂತೆ ಮತ್ತೊಂದು ಯುದ್ಧವಿಲ್ಲ; ಒಬ್ಬನ ಸಾಹಸದಂತೆ, ಶಪಥದಂತೆ ಮತ್ತೊಬ್ಬನ ಶಪಥ ಸಾಹಸ ಇರದು; ಅಷ್ಟೇ ಏಕೆ, ಅವನ ವೀರರಲ್ಲಿ ಒಬ್ಬೊಬ್ಬರೂ ಒಂದೊಂದು ಬಗೆಯಾಗಿ ಬೈಯುತ್ತಾರೆ. ಕುಮಾರವ್ಯಾಸನಲ್ಲಿ ಅವಹೇಳನವೂ ರೂಪಕ ಮಾಲೆಯಾಗುವುದರಿಂದ ವೀರರ ಬೈಗಳೂ ಕೂಡ ಗ್ರಾಮ್ಯವಾದರೂ ಬಹು ಸುಂದರ; ಈ ಬೈಗುಳನ್ನು ಕೇಳಬೇಕೆಂದು ಆಸೆ ಪಟ್ಟರೆ ಆಶ್ಚರ‍್ಯವೇನೂ ಅಲ್ಲ. ಈ ವೀರರ ಅಪಹಾಸ, ಕಟಕಿ, ಎಲ್ಲವೂ ವಿಶಿಷ್ಟವಾದುದು.

ಕುಮಾರವ್ಯಾಸ ಅರಿಯದ ಹಾಸ್ಯದ ಪ್ರಕಾರವು ಒಂದೂ ಇಲ್ಲ. ಕಟಕಿ, ಬಿರುನುಡಿ, ಕಿರಿನುಡಿ, ವ್ಯಂಗ್ಯ, ಹಾಸ್ಯ, ಸರಸ, ವಕ್ರೋಕ್ತಿ, ಜಾಣ್ನುಡಿ, ಪರಿಹಾಸ ಎಲ್ಲವೂ ಅವನ ಬತ್ತಳಿಕೆಯಲ್ಲಿ ಸಿದ್ಧವಾಗಿರುತ್ತವೆ. ಸರಸವಿನೋದಿಗಳ ಸಕಲ ಸನ್ನಾಹವೂ ಅವನಲ್ಲಿ ಸಿದ್ಧವಿದೆ. ತಾನಾಡದೆ, ಹೆಚ್ಚಾಗಿ ಆಡದೆ, ಆ ಆ ಪಾತ್ರಗಳ ಮೂಲಕ ಆಡಿಸಿ ನಗೆಗೇಡು ಮಾಡುವನು, ನಗೆಗೀಡು ಮಾಡುವನು. ಅದಲ್ಲದೆ ಶೃಂಗಾರ ವ್ಯಂಜಕವಾದ ಹಾಸ್ಯವೇ ರಂಜಕವಾಗಬಹುದೆಂಬ ಹಳೆಯ ಮಾರ್ಗವನ್ನು ಬಿಟ್ಟು ಹೊಸಹಾದಿಯನ್ನು ತುಳಿದಿರುವನು. ಕರುಣವು ಹಾಸ್ಯಕ್ಕೆ ವಿರೋಧಿ ಎಂಬ ಮಾತನ್ನು ಬಲ್ಲನಾದರೂ ತೋರಿಕೆಯ ಕರುಣದೊಳಗಿಂದ ನಿರರ್ಗಳವಾದ ನಿರಂತರವಾದ ನಿಸ್ಸೀಮವಾದ ಹಾಸ್ಯದ ಹೊನಲನ್ನು ಹರಿಯಿಸಿರುವನು.  ಇಷ್ಟು ಸರಸಿಯಾದ ಕವಿ ಆದರೇಕೋ ರಸವತ್ತಾಗಿ ಅಳಲರ ಎಂಬ ಭಾವನೆಗೆ ಪಕ್ಕಾಗಿದ್ದಾನೆ. ಅಳಲಾರ ಎಂದರೆ ಅಳಿಸಬಲ್ಲ ಎಂದು ಹೇಳಬೇಕಾಗುತ್ತದೆ. ಇವನಿಗಿಂತ ಶಕ್ತಿಪೂರ್ಣವಾಗಿ ಅಳಿಸಬಲ್ಲವರಾರು? ಕರುಣರಸದ ಮಹಾ ಸ್ರೋತವನ್ನು ಇವನಿಗಿಂತ ಶಕ್ತಿಯುತವಾಗಿ ಎಷ್ಟುಜನ ಹರಿಸಬಲ್ಲರು? ಇದಕ್ಕೆ ಅಭಿಮನ್ಯುವಿನ ವೀರಮರಣದ ಪ್ರಸಂಗ, ಕರ್ಣಾವಸಾನ ಪ್ರಸಂಗಗಳೇ ಸಾಕ್ಷಿ.

ತನ್ನ ಕೃತಿಯನ್ನು ವಿರಹಿಗಳ ಶೃಂಗಾರ ಎಂದ ಕವಿ ಕುಮಾರವ್ಯಾಸ ಉಳಿದ ಬಹಳ ಕವಿಗಳಂತೆ ಅತಿ ಶೃಂಗಾರ ಪ್ರೀತನಾಗದೆ ಹದವರಿತು ತನ್ನ ಕಾವ್ಯದಲ್ಲಿ ಆ ರಸವನ್ನು ಹರಿಸಿದ್ದಾನೆ. . . . . ಕುಮಾರವ್ಯಾಸ ಯೋಗಿಯ ಕಾವ್ಯಪದ್ಧತಿಯಲ್ಲಿ ಹಲವು ದೋಷಗಳಿರಬಹುದು. ಆದರೆ ಶೃಂಗಾರಪ್ರಿಯತೆಯಿಂದ ತನ್ನ ಕೃತಿಯನ್ನು ಹದಗೆಡಿಸಿದನೆಂದು ಮಾತ್ರ ಅವನನ್ನು ದೂರುವ ಹಾಗಿಲ್ಲ. ಮಿಕ್ಕ ಕವಿಗಳು ಕ್ಲೇಶಪಟ್ಟು ಸಾಧಿಸುವ ಹಲವು ವರ್ಣನೆಗಳಿಗೆ ಇಲ್ಲಿ ಸ್ಥಳವೇ ಸಿಕ್ಕಿಲ್ಲ. ಒಂದು ವೇಳೆ ಅಂಥ ವಿಷಯ ಬಂದರೂ ಸಂದರ್ಭೋಚಿತವಾಗಿರುತ್ತದೆ. . . . ಭಾರತದಲ್ಲಿ ಶೃಂಗಾರವು ಅಮುಖ್ಯವಾದ ರಸ. ಅದನ್ನು ಆ ಮೆಟ್ಟಲಲ್ಲೇ ನಿಲ್ಲಿಸಿದರೂ ನಿರೂಪಣೆಯನ್ನು ಲೋಕೋತ್ತರವಾಗಿ ನಿರ್ವಹಿಸುವ ಶಕ್ತಿ ಕುಮಾರವ್ಯಾಸನಂಥ ಮಹಾಕವಿಗೆ ಮಾತ್ರ ಸಾಧ್ಯ.

ಪ್ರಕೃತಿವರ್ಣನೆಯಲ್ಲಿ ಈ ಕವಿ ಅಂಧನಲ್ಲದಿದ್ದರೂ ಉದಾಸೀನ, ವಿರಕ್ತ.  ಅಂದರೆ ಪ್ರಕೃತಿಯನ್ನೇ ಆರಾಧ್ಯವಸ್ತುವನ್ನಾಗಿ ಮಾಡಿಕೊಂಡಿಲ್ಲವೆಂದಷ್ಟೆ. ಮಾನವ ಪ್ರಕೃತಿಯ ಚಿತ್ರಣಕ್ಕೆಷ್ಟು ಬೇಕೋ ಅಷ್ಟು ಮಾತ್ರ ಪ್ರಕೃತಿಯನ್ನು ಚಿತ್ರಿಸುತ್ತಾನೆ. ವಿರಹ ಹತ ಕೀಚಕನಿಗೆ ‘ಬಲಿದ ಚಂದ್ರಿಕೆ ಕರಗಿ ಕಡುಗಿದ ತವರವಾದುದು’ ಎನ್ನುತ್ತಾನೆ. ಭೀಷ್ಮಾವಸಾನದಲ್ಲಿ ಅಸ್ತಾಚಲಗತ ಸೂರ‍್ಯ ‘ಪಡುವಣ ಶೈಲ ವಿಪುಲಸ್ತಂಭ ದೀಪಿಕೆಯಂತೆ ’ ಮೆರೆದ ಎನ್ನುತ್ತಾನೆ. ಈ ಮಾತುಗಳಿಗೆ ದೀರ್ಘವಾದ ವ್ಯಾಖ್ಯಾನ ಬರೆಯಬಹುದು. ಇಷ್ಟಲ್ಲದೆ ರಮಣೀಯವಾದ ಆದರೆ ಮಿತವಾದ ಪ್ರಕೃತಿ ವರ್ಣನೆಯನ್ನು ನೋಡಿ: ವಸಂತಕಾಲ ಹೇಗಿತ್ತೆಂದರೆ ‘ತೆಗೆದುದಗ್ಗದ ತಂಪು, ನದಿ ಸರಸಿಗಳ ತಡಿಯಲಿ ಹೆಜ್ಜೆಯಾದುದು, ಹಗಲು ಹಾವಸೆ ಹರಿದು ಹೊಕ್ಕರಿಸಿದುದು ಹಿಮಜಲವ, ಸೊಗಸಿದವು ನೆಳಲುಗಳು, ದೂರಕೆ ಸೆಗಳಿಕೆಗಳೇರಿದವು, ತಂಗಾಳಿಗೆ ವಿಹಾರಿಸಿ ಮೈಯ ತೆತ್ತುದು ಕೂಡೆ ಜನ ನಿಕರ.’ ಮಳೆಗಾಲವನ್ನು ವರ್ಣಿಸುವ ಬಗೆ ಹೀಗೆ: ‘ಉಡುಗಣದೊಡ್ಡ ಕಾಣೆನು. ಮುಗಿಲ ಬೆನಕಗೆ ಲಡ್ಡುಗೆಗಳಾದುವು ಸಮಸ್ತ ಗ್ರಹ ಸುತಾರೆಗಳು’, ಸೂರ‍್ಯೋದಯ ತಾವರೆಯೆದೆಯ ಬೀಯಗವನ್ನು ತೆರೆಯುತ್ತದಂತೆ – ಇತ್ಯಾದಿ.

ಮಾನವ ಪ್ರಕೃತಿಯನ್ನು ಮಾತ್ರ ಇವನಂತೆ ಬಹಳ ಜನ ಚಿತ್ರಿಸಿಲ್ಲ.  ಪಶುವಿನಿಂದ ಸ್ಥಿತಪ್ರಜ್ಞನವರೆಗೆ ಕುಮಾರವ್ಯಾಸಯೋಗೀಂದ್ರ ಅರಿಯದ ಮನೋವೃತ್ತಿ ಇಲ್ಲ.  ಕೇವಲ ಬಾಹ್ಯವರ್ಣನೆಯಲ್ಲೆ – ವಿಭಾವಾನುಭಾವಗಳ ಚಿತ್ರಣದಲ್ಲೇ – ಪಾತ್ರಗಳ ಮನಃಸ್ಥಿತಿಯನ್ನು ಘನೀಕೃತವಾದಂತೆ ಚಿತ್ರಿಸಬಲ್ಲನು. ‘ಊಹೆದೆಗಹಿನ ಕಂಬನಿಯ ತನಿಮೋಹರದ ಘನಶೋಕ ವಹ್ನಿಯ ಮೇಹುಗಾಡಿನ ಮನದ ಕೌರವನಿತ್ತನೋಲಗವ’, ‘ಆರು ಮರುಗರು, ಘೋರ ವಿಷಮುನಿವರನ ಹೃದಯವ ಗೋರಿತೇನೆಂಬೆನು ಲತಾಂಗಿಯರಳಲ ಕಳವಳವ’, ‘ತನುವ ಮರೆದನು ಪುಳಕ ಜಲದಲಿ ನೆನೆದು ನಾರಾಯಣನ ಪದ ದರುಶನದ ಹರ್ಷಾರಣ್ಯದಲಿ ಮನ ಹೊಲಬುದಪ್ಪಿದನು’ ಹೀಗೆ ನೂರಾರು ಪಂಕ್ತಿಯನ್ನು ಉದಾಹರಿಸಬಹುದು.

ಕುಮಾರವ್ಯಾಸನ ಪಾತ್ರಗಳಲ್ಲಿ ಅದ್ಭುತಶಕ್ತಿಯ ಸಂಚಾರವನ್ನು ಕಾಣುತ್ತೇವೆ. ಅವನು ಸೃಷ್ಟಿಸಿದ ಭೀಮ, ದ್ರೌಪದಿ, ಅಭಿಮನ್ಯು, ಉತ್ತರ, ಕರ್ಣ, ಅರ್ಜುನ, ಕೃಷ್ಣ, ಭೀಷ್ಮ, ದ್ರೋಣ, ವಿದುರ, ಕೌರವರೇ ಇದಕ್ಕೆ ಸಾಕ್ಷಿ. ಇವರೆಲ್ಲ ಸಚೇತನ ಪಾತ್ರಗಳಾಗಿ ನಡೆದಾಡುತ್ತಾರೆ. ಜಿಗುಟಿದರೆ ರಕ್ತಸೋರುವ ಮಟ್ಟಿಗೆ ಪಾತ್ರಗಳು ತುಂಬುಜೀವಿಯಾಗಿವೆ. ಆದರೆ ಒಮ್ಮೊಮ್ಮೆ ಶಕ್ತಿಯ ಆಧಿಕ್ಯದಿಂದ ಮೇರೆಮೀರಿ ನಡೆಯುತ್ತಾರೆ. ನಾರಣಪ್ಪನ ಪಾತ್ರಗಳಲ್ಲಿ ಅದ್ಭುತಶಕ್ತಿಯ ಸಂಚಲನೆ ಇರುವಂತೆಯೆ ಸಂಯಮವೂ ಇದ್ದಿದ್ದರೆ ಪ್ರಪಂಚದ ಸಾಹಿತ್ಯದಲ್ಲಿ ನಮ್ಮ ಕವಿ ಅದ್ವಿತೀಯನಾಗುತ್ತಿದ್ದ. ಆತನಿಗೆ ಪಂಪನ ಸಂಯಮ ಬೇಕು ಎಂದು ಎಷ್ಟೋವೇಳೆ ಅನ್ನಿಸುತ್ತದೆ. ಇತರ ವರ್ಣನೆಗಳಲ್ಲಿ ಈ ಸಂಯಮವಿಲ್ಲದಿದ್ದರೆ ಚಿಂತೆ ಇಲ್ಲ; ಮಾನವ ವರ್ತನೆಯ ಚಿತ್ರಣದಲ್ಲಿ ಇದು ಬೇಕೇಬೇಕು. ಪಂಪನ ಭೀಷ್ಮರೂ ನಾರಣಪ್ಪನ ಭೀಷ್ಮರೂ ಸೇನಾಧಿಪತ್ಯ ಸ್ವೀಕರಣ ಸನ್ನಿವೇಶದಲ್ಲಿ ಕರ್ಣನ ವಿಚಾರವಾಗಿ ಹೇಗೆ ವರ್ತಿಸುತ್ತಾರೆ ಎಂಬುದನ್ನು ನೋಡಿದರೆ ಮೇಲಿನ ಮಾತಿನ ಸತ್ಯ ಗೋಚರಿಸುತ್ತದೆ. ಹೀಗಾಗಿ ಕುಮಾರವ್ಯಾಸನ ‘ಶೈಲಶಿಲ್ಪ’ಗಳಲ್ಲಿ ತೋಲ ತಪ್ಪುತ್ತದೆ. ಇದರಿಂದ ಒಂದು ಲಾಭವಾಗಿರುವುದೂ ಉಂಟು. ಅವನ ಪಾತ್ರಗಳಲ್ಲಿ ಪ್ರಾಕೃತ ಸಮೃದ್ಧಿ ಯಿರುವುದರಿಂದ ನಾವಲ್ಲಿ ‘ಪ್ರಾಕೃತಿಕ ರೂಕ್ಷತಾ ರಮಣೀಯತೆ’ಯನ್ನು ಕಾಣುತ್ತೇವೆ. ಹಾಗಾಗಿ ಅಲ್ಲಿ ಮಾನವ ಸ್ವಭಾವದ ಅತಿ ಸಹಜ ಸ್ವರೂಪದ ಅನುಭವ ಆಗುತ್ತದೆ.

ಭಕ್ತಕವಿಯಾದ ಕುಮಾರವ್ಯಾಸ ಭಗವಂತ ಮಹಿಮೆಯ ವರ್ಣನೆಯ ಅತಿರೇಕದಲ್ಲಿ ಮಾನವತೆಯನ್ನು ಮರೆಯುತ್ತಾನೆ ಎಂಬ; ಅವನು ಬರಿಯ ದೈವಚಾಲಿತ ಪಾತ್ರರನ್ನು ಚಿತ್ರಿಸಿದನೆ ವಿನಾ ಮಹಾಭಾರತದ ವೀರರನ್ನಲ್ಲ ಎಂಬ ಭ್ರಾಂತಿ ಬರುವುದುಂಟು. ಆದರೆ ಪೌರುಷದ ಪರಾಕಾಷ್ಠೆಯ ಚಿತ್ರವನ್ನು ಬೇಕಾದರಿಲ್ಲಿ ನೋಡಿ:

ಅಭಿಮನ್ಯು ಹೇಳುತ್ತಾನೆ:

ಬವರವಾದರೆ ಹರನ ವದನಕೆ ಬೆವರ ತಹೆನವಗಡಿಸಿದರೆ ವಾ
ಸವನ ಸದೆವೆನು ಹೊಕ್ಕಡಹುದೆನಿಸುವೆನು ಭಾರ್ಗವನ;
ಜವನ ಜವಗೆಡಿಸುವೆನು ಸಾಕಿನ್ನಿವರವರಲೇನರ್ಜುನನು ಮಾ
ಧವನು ಮುನಿದಡೆ ಗೆಲುವೆನಂಜದೆ ರಥವ ಹರಿಸೆಂದ

ಭೀಮ ಹೇಳುತ್ತಾನೆ-

‘ಭೀಮ ಕಷ್ಟವನೆಸಗಿದನು ಹಾಯೆಂದರಾದೊಡೆ ಮುಸುಡನಮರಾದ್ರಿಯಲಿ ತೇವೆನು ದೇವ ಸಂತತಿಯ’, ‘ಕೃಷ್ಣ ಹಾಯ್ದರೆ ಘನಮುರಾರಿಯ ಮೀರುವೆನು’ ಎಂದು. ಕೃಷ್ಣಪ್ರಿಯ ಅರ್ಜುನನ್ನು ಕೇಳಿ:

‘ಕುರುಬಲವ ಬಿಟ್ಟರೆ ಯುಧಿಷ್ಠಿರನರಮನೆಯ ಹೊಕ್ಕರೆ, ಮುರಾರಿಯ
ಶರಣುವೊಕ್ಕರೆ ಸರ್ವಥಾ ಕೊಲ್ವೆನು ಜಯದ್ರಥನ

ಇಲ್ಲೆಲ್ಲಾ ನಾವು ಕಾಣುವುದು ನಿರ್‌ಮಾನುಷತೆಯನ್ನಲ್ಲ, ಅಮಾನುಷತೆಯನ್ನೂ ಅಲ್ಲ; ಪರಮ ಪೌರುಷವನ್ನು. ಆದರೆ ಈ ಪೌರುಷ ಯಾವ ಮಿತಿಯಾಚೆಯಲ್ಲಿ ಅಪೌರುಷೇಯದ ಮುಂದೆ ಹೇಗೆ ತಲೆಬಾಗುತ್ತದೆಂಬುದನ್ನು, ಕುಮಾರವ್ಯಾಸ ಅದ್ಭುತವಾಗಿ ಕಂಡಿದ್ದಾನೆ.

ಆದ್ದರಿಂದಲೇ ಅವನು ಕಂಡರಿಸಿದ ಭಕ್ತರಾರೂ ಪೌರುಷವಿಹೀನರಲ್ಲ, ನಿರ್ಮಾನುಷರಲ್ಲ. ಅರ್ಜುನ, ಭೀಷ್ಮ, ಭೀಮ, ಧರ್ಮರಾಯ, ವಿದುರ, ದ್ರೌಪದಿ, (ಕರ್ಣ ಕೂಡ) ಅವನ ಭಕ್ತರಾದರೂ ಅವರಾರೂ ಮಾನುಷಶಕ್ತಿವಿರಾಮರಲ್ಲ. ತಮ್ಮೆಲ್ಲ ಶಕ್ತಿಯಿಂದ ಕಾದುತ್ತಾರೆ, ಏದುತ್ತಾರೆ, ತಮ್ಮ ಕೈಮೀರಿದಾಗ ಭಗವದ್‌ಶಕ್ತಿಯ ಮರೆಹೊಗುತ್ತಾರೆ. ಸೈಂಧವ ವಧೆಯಲ್ಲಿ ಶ್ರೀಕೃಷ್ಣನಿಗೆ ಮೊರೆಗೊಂಡ ಅರ್ಜುನನ ಬಗೆ ಇಂತಹದು. ಭಾರತ ಯುದ್ಧದಲ್ಲಿ ಕೈದುವನ್ನು ಹಿಡಿಯುವುದಿಲ್ಲವೆಂದು ಶಪಥಮಾಡಿದ್ದ ಶ್ರೀಕೃಷ್ಣನ ಕೈಯಲ್ಲಿ ಚಕ್ರ ಹಿಡಿಸಿದ ಭೀಷ್ಮ ಪೌರುಷ ಕೊನೆಗೆ ತನ್ನ ಭಕ್ತಿನಾರಾಯಣಾಸ್ತ್ರದಿಂದ ಚಕ್ರಧಾರಿಯನ್ನು ಗೆದ್ದಬಗೆ ಅಂತಹದು! ಎದೆಯನ್ನು ಭೇದಿಸಿದ್ದ ಬಾಣವು ಪ್ರಾಣಹೀರುತ್ತಿರುವಾಗ ಇನ್ನೂ ಅಹತನಾಗಿದ್ದ ತನ್ನ ಬಳಿಗೆಬಂದ ಬ್ರಾಹ್ಮಣ ವೇಷಧಾರಿ ಶ್ರೀಕೃಷ್ಣನಿಗೆ ತನ್ನ ಕರ್ಣಕುಂಡಲ, ಅಮೃತೋದಕಗಳನ್ನು ಧಾರೆಯೆರೆದ ಶ್ರೀಕರ್ಣನ ಮಹಾತ್ಯಾಗ ಪೌರುಷವು ಭಗವದರ್ಪಿತವಾದ ಮಹಾದ್ಭುತ ವಿಧಾನ ಅಂತಹದು. ಒಟ್ಟಿನಲ್ಲಿ ಮಹಾಕವಿ ಕುಮಾರವ್ಯಾಸನ ಪಾತ್ರಗಳು ಮಾನುಷ ದೈವಶಕ್ತಿಗಳ ರಂಗಸ್ಥಲವಾಗಿವೆ; ಸಂಗಮಸ್ಥಾನವೂ ಆಗಿವೆ.

ಮಹಾಭಾರತದ ಪ್ರಧಾನ ಪಾತ್ರಗಳನ್ನು ತನ್ನ ಕಾವ್ಯದ ಕೊನೆಯಲ್ಲಿ ಹೆಸರಿಸುವಾಗ ಪಂಪಕವಿ ಹೀಗೆನ್ನುತ್ತಾನೆ:

‘ಚಲದೊಳ್ ದುರ‍್ಯೋಧನಂ, ನನ್ನಿಯೊಳ್ ಇನತನಯಂ, ಗಂಡಿನೊಳ್ ಭೀಮಸೇನಂ,
ಬಲದೊಳ್ ಮದ್ರೇಶನ್, ಅತ್ಯುನ್ನತಿಯೊಳ್ ಅಮರಸಿಂಧೂದ್ಭವಂ, ಚಾಪವಿದ್ಯಾ
ಬಲದೊಳ್ ಕುಂಭೋದ್ಭವಂ, ಸಾಹಸದ ಮಹಿಮೆಯೊಳ್ ಫಲ್ಗುಣಂ, ಧರ್ಮದೊಳ್ ನಿ
ರ್ಮಲಚಿತ್ತಂ ಧರ್ಮಪುತ್ರಂ; ಮಿಗಿಲ್ ಇವರ್ಗಳಿನೀ ಭಾರತಂ ಲೋಕಪೂಜ್ಯಂ ’

ಕುಮಾರವ್ಯಾಸನ ಪಾತ್ರಸೃಷ್ಟಿಯನ್ನು ವಿವೇಚಿಸುವಾಗ ಈ ಮಾಲಿಕೆಯಲ್ಲಿ ಅವನವರೆ ಆದ, ವೈಶಿಷ್ಟ್ಯ ಪೂರ್ಣರಾದ, ಶ್ರೀಕೃಷ್ಣ, ದ್ರೌಪದಿ, ಅಭಿಮನ್ಯು, ಉತ್ತರಕುಮಾರರನ್ನು ಸೇರಿಸಬೇಕಾಗುತ್ತದೆ. ಒಂದರ್ಥದಲ್ಲಿ ಈ ಪಾತ್ರಗಳು ಕುಮಾರವ್ಯಾಸನಿಂದಲೆ ನಮಗಿಷ್ಟು ಪರಿಚಿತವಾಗಿರುವುದು ಎಂದರೂ ಸಲ್ಲುತ್ತದೆ.