ಇಪ್ಪತ್ತನೆಯ ಶತಮಾನದ ಆದಿಭಾಗವನ್ನು ನವೋದಯದ ಕಾಲವೆಂದು ನಾವು ಗುರುತಿಸಿಕೊಂಡಿದ್ದೇವೆ. ಸೂರ್ಯೋದಯದ ಪ್ರತಿಮೆಯನ್ನು ಇರಿಸಿಕೊಂಡು ಕತ್ತಲು ಹರಿದು ಮುಂಬೆಳಕು ಹರಡಿದ್ದನ್ನು ಸಂಭ್ರಮದಿಂದ ಆಗ ಹಾಡಿದರು. ಶತಮಾನ ಮುಗಿಯುವ ಹೊತ್ತಿಗೆ ಬಿಸಿಲೇರಿ ಇಳಿದಿನ ನಮ್ಮನ್ನು ಆವರಿಸತೊಡಗಿದೆಯೇ? ಏಕೆಂದರೆ ಕಳೆದ ದಶಕದಲ್ಲಿ ಮತ್ತೆ ಮತ್ತೆ ಕೇಳಲಾದ ಪ್ರಶ್ನೆಯೆಂದರೆ ಕನ್ನಡ ಸೃಜನಶೀಲ ಕ್ಷೇತ್ರ ಬರಡಾಗುತ್ತಿದೆಯೇ? ಮಹಾನ್ ಕೃತಿಗಳು ಏಕೆ ಈಗ ರಚಿತವಾಗುತ್ತಿಲ್ಲ? ಇದಕ್ಕೆ ಹಲವು ಬಗೆಯ ಉತ್ತರಗಳು ಕೇಳಿಬಂದಿದೆ. ಕೆಲವರೆನ್ನುವಂತೆ ಕನ್ನಡ ಸೃಜನಶೀಲ ಕ್ಷೇತ್ರದಲ್ಲಿ ಪ್ರತಿಭೆಯ ಕೊರತೆ ಆಗಾಧವಾಗಿದೆ. ಮತ್ತೆ ಕೆಲವರು ಬೆಳೆಯುತ್ತಿರುವ ಸಮೂಹ ಮಾಧ್ಯಮಗಳ ವಲಯವು ಕನ್ನಡ ಸೃಜನಶೀಲತೆಗೆ ಎದಿರೇಟು ಹಾಕಿದೆ. ಓದುವ ಹವ್ಯಾಸ ಕಡಿಮೆಯಾಗುತ್ತಿರುವುದು ಈ ಬರಗಾಲಕ್ಕೆ ಕಾರಣವೆಂದು ಮತ್ತೆ ಕೆಲವರ ವಿಶ್ಲೇಷಣೆ. ಸಮಾಜದಲ್ಲಿ ಉಂಟಾಗಿರುವ ಕ್ಷೋಭೆಯೇ ಕನ್ನಡ ಸೃಷ್ಟಿಶೀಲ ಬರವಣಿಗೆಗೆ ಅಡ್ಡಿಯಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು ‘ಈಗ ಬರುತ್ತಿರುವ ಬರವಣಿಗೆಯ ಮಹತ್ವವನ್ನು ವಿಮರ್ಶಕರು ಸರಿಯಾಗಿ ಗುರುತಿಸುತ್ತಿಲ್ಲ. ಹಳೆಯದರ ವ್ಯಾಮೋಹಕ್ಕೆ ಸಿಲುಕಿದ ವಿಮರ್ಶಕರು ಹೊಸದರ ಗುಣವನ್ನು ನೋಡಲು ಹಿಂಜರಿಯುತ್ತಿದ್ದಾರೆ.’ ಎನ್ನುತ್ತಾರೆ. ಈ ವಿವಾದದ ಮಾತು ಹಾಗಿರಲಿ. ಸರಿ ಸುಮಾರು ಈ ಹತ್ತು ವರ್ಷಗಳಲ್ಲಿ ವರ್ಷಕ್ಕೆ ಸರಾಸರಿ ಸಾವಿರದೈನೂರರಂತೆ ಹದಿನೈದು ಸಾವಿರಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ. ಅಂದಾಜಿನ ಮೇಲೆ ಹೇಳುವುದಾದರೆ ಹದಿನೈದು ಲಕ್ಷ ಪುಟಗಳು. ಇದೇನು ಉತ್ಪ್ರೇಕ್ಷೆಯ ಮಾತಲ್ಲ. ಇಷ್ಟು ಪ್ರಮಾಣದಲ್ಲಿ ಬರೆಹ ಪ್ರಕಟವಾಗುತ್ತಿದೆಯೆಂದರೆ ಅದರ ಅರ್ಥ ಓದುಗರು ಸಹಜವಾಗಿಯೇ ತಮ್ಮ ಓದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ಕೃತಿಗಳನ್ನು ಎಲ್ಲರೂ ಓದುವುದಿಲ್ಲ. ಓದುವುದು ಸಾಧ್ಯವೂ ಇಲ್ಲ. ಈ ಪರಿಸ್ಥಿತಿಯ ಫಲವಾಗಿ ಪ್ರತಿಯೊಂದು ತನ್ನ ಓದುಗರು ಯಾರು ಎಂಬುದನ್ನು ಮೊದಲಿಗೇ ಕಂಡಕೊಳ್ಳಬೇಕಾಗಿದೆ. ಈ ಓದುಗರ ಗುರುತಗಳ ಹಿಂದಿರುವ ಸಾಮಾಜಿಕ ಸಂಗತಿಗಳನ್ನು ಸುಲಭವಾಗಿ ಹೇಳಲು ಬರುವುದಿಲ್ಲ. ಕೆಲವೊಮ್ಮೆ ಅದು ಸಾಮಾಜಿಕ ಸಂರಚನೆಯಲ್ಲಿ ಆಗುತ್ತಿರುವ ಪರಿವರ್ತನೆಗಳನ್ನು ಸೂಚಿಸುತ್ತಿರಬಹುದು. ಮತ್ತೆ ಕೆಲವೊಮ್ಮೆ ಅದು ಸಾಮಾಜಿಕ ಸಂರಚನೆಯನ್ನು ಸೂಚಿಸುತ್ತಿರಬಹುದು ಮತ್ತೆ ಕೆಲವೊಮ್ಮೆ ಈವರೆಗೆ ತಲೆ ಮರೆಸಿಕೊಂಡಿದ್ದ ಹಲವು ಅಂತಸ್ಥ ವಿರೋಧಗಳು ಈಗ ಜೀವ ತಳೆದಿರುವುದರ ಪರಿಣಾಮವಿರಬಹುದು. ಅದೇನೇ ಇರಲಿ ಪ್ರತಿ ಬರೆಹವೂ ಈಗ ತನ್ನ ಓದುಗರನ್ನು ತಾನೇ ಗುರುತಿಸಕೊಳ್ಳಬೇಕಾದ ಕಾಲ ಬಂದಂತಿದೆ.

ಎಲ್ಲ ಕಾಲದಲ್ಲೂ ಇಂಥ ಪರಿಸ್ಥಿತಿ ಬೇರೆ ಬೇರೆ ರೂಪದಲ್ಲಿ ಇದ್ದಿರುವಂತೆ ತೋರುತ್ತದೆ. ಕನ್ನಡ ಕವಿಚರಿತ್ರೆ ಮತ್ತು ಅದಕ್ಕೆ ಪೂರಕವಾಗಿ ಬಂದಿರುವ ಹಲವು ಸೂಚಿಗಳನ್ನು ನೋಡಿದರೆ ಕನ್ನಡದಲ್ಲಿ ರಚನೆಯಾದ ಸಾಹಿತ್ಯದ ಪ್ರಮಾಣಕ್ಕೂ ಅದರಲ್ಲಿ ನಾವು ಈಗ ನಮ್ಮ ಸಾಹಿತ್ಯವೆಂದು ಪರಿಗ್ರಹಿಸಿ ಓದಿ ಚಿರ್ಚಿಸುತ್ತಿರುವ ಕೃತಿಗಳ ಪ್ರಮಾಣಕ್ಕೂ ಸಂಬಂಧವೇ ಇಲ್ಲ ನಾವೀಗ ಚಿರ್ಚಿಸುತ್ತಿರುವ ಕೃತಿಗಳ ಸಂಖ್ಯೆ ಒಟ್ಟು ಕೃತಿಗಳ ನೂರರಲ್ಲಿ ಒಂದು ಪಾಲೂ ಕೂಡ ಇಲ್ಲ. ಉಳಿದವು ನಾಮಮಾತ್ರವಾಗಿ ಉಳಿದಿವೆ. ಇದಕ್ಕೆ ಆ ಕೃತಿಗಳು ಮಾತ್ರ ಕಾರಣವಲ್ಲ. ನಾವು ನಮ್ಮ ಆಯ್ಕೆಗಳನ್ನು ರೂಪಿಸಿಕೊಂಡ ಕ್ರಮವೇ ಹಾಗಿದೆ. ಈ ಅಂಶವನ್ನು ಗಮನಿಸಿದರೆ ನಾವು ಕಳೆದ ಹತ್ತು ವರ್ಷದ ಸಾಹಿತ್ಯದಲ್ಲಿ ಗಟ್ಟಿ ಜಳ್ಳುಗಳ ಪ್ರಶ್ನೆಯನ್ನು ಹಾಕಿಕೊಳ್ಳುವ ಅವಶ್ಯಕತೆ ಇಲ್ಲವೆಂದೇ ತೋರುತ್ತದೆ.

ಕಳೆದ ದಶಕದಲ್ಲಿ ಸಾಹಿತ್ಯದ ಸ್ವರೂಪವನ್ನು ಕುರಿತಂತೆ ತೀವ್ರತರ ಮರುಚಿಂತನೆಗಳು ನಡೆದ ಕಾಲ. ಕೃತಿಯ ಅನುಭವ ಲೋಕ, ಕೃತಿಕಾರರಿಗೆ ದತ್ತವಾಗಿದ್ದ ಲೋಕ ದೃಷ್ಟಿ, ಅವರ ಚಿಂತನಾಕ್ರಮ, ಓದುಗರ ಅಪೇಕ್ಷೆ ಇತ್ಯಾದಿಗಳನ್ನು ಇಡಿಯಾಗಿ ಸಂಸ್ಕೃತಿಯ ಚೌಕಟ್ಟಿನಲ್ಲಿ ಇರಿಸಿ ನೋಡುವ ಪ್ರವೃತ್ತಿ ಹೆಚ್ಚಾಯಿತು. ಇದು ಸುಮಾರು ಎರಡೂವರೆ ದಶಕಗಳ ಹಿಂದಿನಿಂದ ಮೊದಲಾದ ವಿಧಾನ. ಕಳೆದ ದಶಕದಲ್ಲಿ ಸಾಹಿತ್ಯವನ್ನು ಬೇರೆಯದೇ ಅದ ಚಿಂತನ ಕ್ರಮಕ್ಕೆ ಹೊಂದಿಸಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸುತ್ತಿರುವುದು ಗೋಚರವಾಗುತ್ತದೆ. ಈ ಪ್ರವೃತ್ತಿಯನ್ನು ನಾನು ಬೇರೊಂದು ಕಡೆ ಹೊಸ ಪಾವಿತ್ರ್ಯಕ್ಕಾಗಿ ಹುಡುಕಾಟ ಎಂದು ಕರೆದಿದ್ದೇನೆ. ದಲಿತ ಬಂಡಾಯ ಚಿಂತನೆಗಳು ವಿಗ್ರಹಭಂಜಕ ಪ್ರವೃತ್ತಿಯಲ್ಲಿ ಶ್ರದ್ಧೆಗಳನ್ನು ನಂಬಿಕೆಗಳನ್ನು ಸ್ಫೋಟಿಸುವ ತವಕದಲ್ಲಿ ರೂಪಿಸಿಬಿಟ್ಟ ನಿರ್ವಾತವನ್ನು ಸಹಜವಾಗಿಯೇ ತುಂಬಿಕೊಳ್ಳುವ ಹೊಣೆ ಕಿರಿಯ ಬರೆಹಗಾರರಿಗೆ ಇದೆ. ಎಲ್ಲರು ಈ ಗುರುತರವಾದ ಜವಬ್ದಾರಿಯನ್ನು ಅರಿತ್ತಿದ್ದಾರೆಂದಲ್ಲ. ಹಾಗೆ ಅರಿತವರಿಗೂ ಮುಂದಿನ ದಾರಿ ಸ್ಪಷ್ಟಗೊಂಡಿದೆ ಎನ್ನುವಂತೆಯೂ ಇಲ್ಲ. ಕೆಲವರಿಗೆ ಮಾತ್ರ ಹೊಣೆ ಮತ್ತು ದಾರಿಗಳು ಮಸುಕಾಗಿಯಾದರೂ ಗುರುತಾಗುತ್ತಿದೆ. ಪಾವಿತ್ರ್ಯವನ್ನು ಛಿದ್ರಗೊಳಿಸಿದ ಮೇಲೆ ಹೊಸ ಪಾವಿತ್ರ್ಯಕ್ಕಾಗಿ ತೊಡಗಿಕೊಳ್ಳುವುದೆಂದರೆ ಅದನ್ನು ಪುನರುತ್ಥಾನದ ದಾರಿ ಎಂದು ತಿಳಿಯಬೇಕಿಲ್ಲ. ಹೀಗೆ ಹಣೆಪಟ್ಟಿ ಕಟ್ಟುವುದು ಸುಲಭ. ಆದರೆ ನಮ್ಮ ಬರೆಹಗಾರರು ತಮ್ಮದೇ ಆದ ಬಗೆಯಲ್ಲಿ ಈ ಸಮಸ್ಯೆಗೆ ಉತ್ತರಗಳನ್ನು ಕಂಡುಕೊಳ್ಳುತ್ತಾ ಇದ್ದಾರೆ.

ಓದುಗರ ಕೊರತೆಯನ್ನು ಕುರಿತು ಮತ್ತೆ ಮತ್ತೆ ನಮ್ಮ ಎದುರು ಚರ್ಚೆಗಳನ್ನು ಬೆಳೆಸುವುದುಂಟು. ಓದುಗರು ಏನು ಓದುತ್ತಾರೆ? ಈಗ, ಇಂದು ಪ್ರಕಟವಾದ ಕೃತಿಯನ್ನು ತಹತಹದಿಂದ ಕಾಯುತ್ತಾ ಕುಳಿತು ಓದುಗರು ಓದುತ್ತಾರೆ ಎಂದು ತಿಳಿಯುವುದು ಅಷ್ಟು ಸರಿಯಾದ ಚಿಂತನೆಯಲ್ಲ. ಓದುಗರು ನಮ ಕಾಲದ ಸಾಹಿತ್ಯವನ್ನು ಮಾತ್ರ ಓದುತ್ತ ಕೂರುವುದಿಲ್ಲ. ಎಂದೋ ಪ್ರಕಟಗೊಂಡ ನೆನಪಿನಿಂದ ಜಾರಿದ ಅಥವಾ ನಮಗಿನ್ನೂ ಓದಲು ಸಿಗದಿದ್ದ ಕೃತಿಗಳನ್ನು ನಾವು ಓದಲು ಬಯಸಬಹುದು. ಅಂದಂದಿನ ಕೃತಿಗಳಿಗೆ ಅಂದಂದಿನ ಓದುಗರು ಮಾತ್ರ ಇರುತ್ತಾರೆಂದು ತಿಳಿದರೆ ಕೃತಿಗಳ ಒಂದು ಧೀರ್ಘ ಪರಂಪರೆಯನ್ನು ಏನು ಮಾಡುವುದು? ಅಲ್ಲದೆ ಕೃತಿಗಳ ನಿಡುಗಾಲದ ಜೀವನಕ್ರಮವನ್ನು ಕುರಿತು ನಾವು ಮಾತಾಡುತ್ತೇವೆ. ಅಂದರೆ ಇಂದಿನ ಓದುಗರಿಗೆ ಇಂದು ರಚನೆಯಾಗಿ ಕೈಗೆ ದೊರಕುವ ಕೃತಿಗಳು ಮಾತ್ರವೇ ಲಭ್ಯ ಎಂದು ತಿಳಿಯುವಂತಿಲ್ಲ. ಬೇರೆ ಕಾಲದ ಕೃತಿಯೂ ಕೂಡ ನಮ್ಮ ಕಾಲಕ್ಕೆ ಬೇಕಾದ ಮಹತ್ವವನ್ನು ನಮಗೆ ತೋರಿಸಿಕೊಡುತ್ತದೆ ಎಂಬ ನಂಬಿಕೆಯವರು ನಾವು. ಹಾಗಾಗಿ ಈ ಕೃತಿಗಳನ್ನು ನಮ್ಮ ಓದಿನ ಭಾಗವಾಗಿ ಇರಿಸಿಕೊಳ್ಳುವುದು ಅನಿವಾರ್ಯ. ಹಾಗಾಗಿ ಈ ಹೊತ್ತಿನ ಕೃತಿಗಳಿಗೆ ಇಂದೇ ಓದುಗರು ಸಿಗಬೇಕೆಂದು ಅಪೇಕ್ಷಿಸುವುದು ಎಷ್ಟು ಸರಿ?

ಅಲ್ಲದೆ ಶತಮಾನದ ಕೊನೆಯ ಹೊತ್ತಿಗೆ ಕನ್ನಡ ಬರವಣಿಗೆಯ ಹರವು ಬಹು ವ್ಯಾಪಕವಾಗಿದೆ. ನಾವು ಸಾಮಾನ್ಯವಾಗಿ ಗರುತಿಸುವ ಸಾಹಿತ್ಯ ಪ್ರಕಾರಗಳ ಹೊರತಾಗಿ ಹಲವು ಹತ್ತು ಬಗೆಯ ವಲಯಗಳಲ್ಲಿ ಕನ್ನಡವನ್ನು ಬಳಸುವ ಬಗೆ ಬೆಳೆದಿದೆ. ಮಾಹಿತಿಗಾಗಿ ಕನ್ನಡದ ಬರೆವಣಿಗೆಯನ್ನು ಆಶ್ರಯಿಸುವುದು ಈಗ ಹೆಚ್ಚಾಗಿದೆ. ಆದ್ದರಿಂದ ಆ ವಲಯದ ಬರೆವಣಿಗೆ ಅಧಿಕ ಪ್ರಮಾಣದಲ್ಲಿ ಸಿದ್ಧಗೊಳ್ಳುತ್ತಿದೆ. ಇಂಗ್ಲಿಶ್ ಮತ್ತು ಕನ್ನಡಗಳನ್ನು ಭಿನ್ನ ಉದ್ದೇಶಗಳಿಗಾಗಿ ಬಳಸುತ್ತಿದ್ದ ದ್ವಿಭಾಷಿಕ ಸಮುದಾಯವೀಗ ಮರೆಯಾಗತೊಡಗಿದೆ. ಎಲ್ಲದಕ್ಕೂ ಕನ್ನಡವನ್ನೇ ಆಶ್ರಯಿಸುವ ಏಕಭಾಷಿಕರು ಸಂಖ್ಯೆಯಲ್ಲಿ ಮತ್ತು ಸಾಮಾಜಿಕ ವ್ಯಾಪ್ತಿಯಲ್ಲಿ ಹೆಚ್ಚಾಗತೊಡಗಿದ್ದಾರೆ. ಈ ಹೊಸ ಪರಿಸ್ಥಿತಿಯನ್ನು ಎದುರಿಸಲು ಕನ್ನಡದ ಬರಹಗಾರರು ಸನ್ನದ್ಧರಾಗುವುದೀಗ ಅತ್ಯವಶ್ಯ. ಇದರಿಂದಾಗಿಯೂ ನಮ್ಮ ಕಲ್ಪನೆಯ ಘನಕೃತಿಗಳು ಮಾತ್ರ ರಚನೆಗೊಳ್ಳಬೇಕೆಂದು ಹಾತೊರೆಯುವುದರಲ್ಲಿ ಅರ್ಥವಿಲ್ಲ.

ಅರಿವಿನ ಸ್ಫೋಟದ ಮಾತನ್ನು ನಾವು ಈಗೀಗ ಕೇಳುತ್ತಿದ್ದೇವೆ. ಇದು ಅರಿವಿನ ಸ್ಫೋಟವೋ ಅಥವಾ ಮಾಹಿತಿಯ ಸ್ಫೋಟವೋ ಇನ್ನೂ ಗೊತ್ತಾಗಬೇಕಿದೆ. ಏನೇ ಇರಲಿ. ಇದರಿಂದ ಆಗಿರುವ ಪರಿಣಾಮವೇನು? ಸಾಹಿತ್ಯಕ್ಕೆ ನಾವು ಆರೋಪಿಸಿಕೊಂಡಿದ್ದ ಕತ್ತಲಿನಿಂದ ಬೆಳಕಿನ ಕಡೆಗೆ ಒಯ್ಯುವ ಹೊಣೆಗಾರಿಕೆಯನ್ನು ನಾವೀಗ ಮರುಪರಿಶೀಲಿಸುವ ಹುಮ್ಮಸ್ಸಿನಲ್ಲಿದ್ದೇವೆ. ಏಕೆಂದರೆ ಈ ಕೆಲಸವನ್ನು ಮಾಹಿತಿಯ ಸರಬರಾಜಿನ ಮೂಲಕ ಬೇರೆ ಬೇರೆ ವಲಯಗಳು ಸಮರ್ಥವಾಗಿ ಮಾಡುತ್ತಿವೆ ಎನ್ನುವುದು ಪ್ರಚಲಿತವಾಗಿರುವ ನಂಬಿಕೆ. ಈ ಕಾರಣದಿಂದ ಕವಿತೆಯಂಥ ಪ್ರಕಾರ ತೀವ್ರ ಆಘಾತಕ್ಕೆ ಒಳಗಾಗಿರುವಂತೆ ತೋರುತ್ತದೆ. ಶತಮಾನದ ಮೊದಲ ದಶಕಗಳ ಕವಿಗಳಿಗೆ ಹಾಗೂ ಅನಂತರ ಬಂದ ಶೋಧಾಸಕ್ತಿಯ ಕವಿಗಳಿಗೆ ಇದ್ದ ಸೌಲಭ್ಯಗಳು ಮತ್ತು ಭಾಷೆಯ ಮಣಿತ ಈಗಿನ ಕವಿಗಳಿಗೆ ದೂರವಾಗಿವೆ. ಅಥವಾ ಅವರು ಕವಿತೆಗೆ ಇರುವ ಆ ಬಗೆಯ ಸಾಮರ್ಥ್ಯಗಳನ್ನು ಸ್ವತಃ ಅವರೇ ನಂಬುವವರಲ್ಲ. ಇದು ಮುಂದಿನ ದಿನಗಳಲ್ಲಿ ಯಾವ ದಿಕ್ಕಿಗೆ ಕರೆದೊಯ್ಯವುದೋ ಕಾಯ್ದು ನೋಡಬೇಕಾಗಿದೆ.

ಕಥನದ ಬಗೆಯೇ ಬೇರೆ. ಹಿಂದಿನಿಂದಲೂ ಕಳೆದ ಶತಮಾನದ ಕಥನದಲ್ಲಿ ಸಾಮಾಜಿಕ ಮಾನವಶಾಸ್ತ್ರದ ಹೊರಚಾಚು ಕನ್ನಡದಲ್ಲಿ ಇದ್ದೇ ಇದೆ. ಅಲ್ಲದೆ ಕಗ್ಗತ್ತಲ ಖಂಡಗಳನ್ನು ಬೆಳಕಿಗೆ ತರುವ ಯಾತ್ರಿಕರ ಹಾಗೆ ಮೈದುಂಬಿ ಬರೆಯುವವರು ನಮ್ಮಲ್ಲಿ ಹೆಚ್ಚು. ಅದನ್ನು ಬೆರಗುಗಣ್ಣುಗಳಿಂದ ನಮಗೆ ಕಾಣದ ಲೋಕಭಾವಗಳ ಪರಿಚಯವಾದವರಂತೆ ಸಂಭ್ರಮಿಸುವವರು ನಾವು. ಈ ಅವಕಾಶಗಳು ನಮ್ಮ ಕಥನ ಸಾಹಿತ್ಯಕ್ಕೆ ಇನ್ನೂ ಕಡಿಮೆಯಾಗಿಲ್ಲ. ಆದರೆ ಮನುಷ್ಯನ ಒಳಗಿನ ಜಗತ್ತಿನೊಳಗೆ ಇರುವ ಅನೂಹ್ಯಗಳ ಕಡೆಗೆ ಪಯಣ ನಡೆಸುವ ಆಸಕ್ತಿಗಳಿಗಿಂತ ಬೃಹದ್‌ ವ್ಯಾಪ್ತಿಯ ಲೋಕಗಮನಕ್ಕೆ ಈಗ ಒತ್ತು ಹೆಚ್ಚಾಗಿದೆ. ಅಲ್ಲಿನ ಅನೂಹ್ಯಗಳು ಈಗ ತೆರದುಕೊಳ್ಳುತ್ತಿವೆ.

ಸಾಹಿತ್ಯದ ಅಧ್ಯಯನದ ಆಸಕ್ತಿಗಳು ಮತ್ತು ಮಾದರಿಗಳು ಕಳೆದ ದಶಕದ ಹೊತ್ತಿಗೆ ಒಂದು ಬಗೆಯ ಏದುಬ್ಬಸವನ್ನು ತೋರತೊಡಗಿದವು. ಇದಕ್ಕೆ ಈ ಅಧ್ಯಯನ ಮಾದರಿಗಳು ತಮಗೆ ತಾವೇ ಕಲ್ಪಿಸಿಕೊಂಡ ಪರಿಭಾಷೆಯ ಇಕ್ಕಟ್ಟುಗಳೇ ಕಾರಣವಾಗಿವೆ. ಈ ಪರಿಭಾಷೆಗೆ ಹೊಸ ಸಂದರ್ಭದ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲ ಸಾಮರ್ಥ್ಯಗಳು ಕಡಿಮೆಯಾಗಿವೆ. ಇದನ್ನು ಎದರಿಸಲು ಪಶ್ಚಿಮದ ಮಡಿಲಿನಿಂದ ಏನನ್ನಾದರೂ ಹೆಕ್ಕಬಹುದು ಎಂಬ ತವಕವನ್ನುಳ್ಳ ಚಿಂತಕರಿಗೆ ಕಡಿಮೆ ಏನೂ ಇಲ್ಲ. ಆದರೆ ಅದು ತಾತ್ವಿಕ ಜಿಜ್ಞಾಸೆಗಳಿಗೆ ಅನುವು ಮಾಡಿಕೊಡುತ್ತಿದೆಯೇ ಹೊರತು ನಮ್ಮ ಕೃತಿಗಳನ್ನು ಅವು ಇಂದಿನವೇ ಇರಲಿ, ಎಂದಿನವೇ ಇರಲಿ ಅರಿಯಲು ತಕ್ಕ ಹಾದಿಗಳನ್ನು ತೆರೆಯುತ್ತಿಲ್ಲ. ಈ ಗ್ಲಾನಿಯಿಂದ ಬಿಡುಗಡೆಯಾಗದ ಹೊರತು ಸಾಹಿತ್ಯದ ಅಧ್ಯಯನವೆಂಬ ವಲಯಕ್ಕೆ ಹೊಸ ಚೈತನ್ಯ ಮೂಡುವುದು ಸಾಧ್ಯವಾಗದೆಂದೇ ತೋರುತ್ತದೆ.