ಕೃಷಿ ಋಷಿಯ ಬಗ್ಗೆ ಕೇಳಿದ್ದೆ. ಕೆಲವು ಬಾರಿ ನೋಡಿದ್ದೆ. ಒಂದಿಷ್ಟು ಗಳಿಗೆಯ ಸಂಸರ್ಗ ಅವಕಾಶವೂ ಸಿಕ್ಕಿತು. ಉಹಾ ಶೋಧದ ತರಬೇತಿಯ ನೆಪದಲ್ಲಿ ‘ಜನವಾಹಿನಿ’ ದೈನಿಕದ ವರದಿಗಾರನಾಗಿದ್ದಾಗ ಒಂದು ದಿನ ಪೂರ್ತಿ ಸೋನ್ಸ್‌ರೊಂದಿಗೆ, ಅವರ ತೋಟದಲ್ಲಿ ಕಳೆದಿದ್ದೆ. ಅವರ ಮರದ ಮನೆಯ ಬಗ್ಗೆ “ಮರದಲಿ ಮಾಡಿದ ಚಂದದ ಮನೆಯು” ಎಂದು ಲೇಖನ ಬರೆದಿದ್ದೆ. ಈಗ ಕಾಂತಾವರ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಮಾಲಿಕೆಯಲ್ಲಿ ಅವರನ್ನು ಪರಿಚಯಿಸುವ ಅವಕಾಶ ಸಿಕ್ಕಿದೆ. ಅದಕ್ಕಾಗಿ ‘ನೋಟ್ ಬುಕ್’ನ ವೀಡಿಯೋ ಬಳಸಿ ಒಂದು ಸುದೀರ್ಘ ಸಂದರ್ಶನ ನಡೆಸಲಾಯಿತು. ಸಂದರ್ಶನದ ಸಾರಾಂಶ ಹೀಗಿದೆ.

* ಭಾರತದಲ್ಲಿ ಕೃಷಿಗೆ ಉತ್ತಮ ಭವಿಷ್ಯವಿದೆಯಾ?

ಒಂದು ರೀತಿಯಲ್ಲಿ ಈ ಪ್ರಶ್ನೆಯೇ ಅಪ್ರಸ್ತುತ. ಒಂದು ಬಿಲಿಯಕ್ಕಿಂತ ಹೆಚ್ಚು ಜನ ಇರುವ ಕೃಷಿ ಪ್ರಧಾನ ದೇಶದಲ್ಲಿ ಕೃಷಿಗೆ ಭವಿಷ್ಯ ಇದ್ದೇ ಇದೆ. ಹಾಗಾಗಿ ಕೃಷಿಗೆ ಪ್ರಾಧಾನ್ಯತೆ ಕೊಡದೆ ಸಾಧ್ಯವೇ ಇಲ್ಲ. ಯಾವುದೇ ಸರ್ಕಾರ ಉಳಿಯಬೇಕಾದರೆ ಅದು ಕೃಷಿಗೊಂದು ಉತ್ತಮ ಭವಿಷ್ಯವನ್ನು ರೂಪಿಸಲೇಬೇಕಾಗುತ್ತದೆ. ಈಗ ಪರಿಸ್ಥಿತಿ ಉತ್ತಮವಾಗಿಲ್ಲದಿದ್ದರೂ ಭವಿಷ್ಯ ಉಜ್ವಲವಾಗಿಯೇ ಇದೆ. ಅದನ್ನು ನಾವು ಮುಂದುವರಿಸಬೇಕು. ತಂದೆಯವರ ಕಾಲ ಮತ್ತು ಈ ಕಾಲದ ನಡುವೆ ಸ್ವಲ್ಪ ಮಂಕು ಕವಿದಂತಹ ವಾತಾವರಣ ಇದ್ದುದು ನಿಜ. ಸಾಲ ಹೆಚ್ಚು ಪಡೆದುಕೊಂಡಿದ್ದಾರೆ. ಆದರೆ ಅದನ್ನು ಹಿಂತಿರುಗಿಸುವ ಆರ್ಥಿಕ ಚೈತನ್ಯ ಅದರಿಂದ ದೊರಕಲಿಲ್ಲ. ಕೆಲ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾಲಕ್ಕೆ 10-15 ಶೇಕಡಾ ಬಡ್ಡಿಯನ್ನು ಬ್ಯಾಂಕ್ ವಸೂಲಿ ಮಾಡುತ್ತಿದೆ. ಕೃಷಿಯಲ್ಲಿ ಕನಿಷ್ಠ 25 ಶೇಕಡಾ ಲಾಭ ಹುಟ್ಟಿಸದಿದ್ದರೆ ದುಡಿದ ಹಣದಿಂದ ಬ್ಯಾಂಕಿನವರನ್ನು ಸಾಕಿದ ಹಾಗೆ ಆಗುತ್ತದೆ. ಅವನಿಗೆ ಬದುಕಲು ಏನೂ ಉಳಿಯುವುದಿಲ್ಲ. ಈ ಪರಿಸ್ಥಿತಿ ಬದಲಾಗಬೇಕು.

* ಕೃಷಿ ಮಾಡಿ ಖುಷಿಯಿಂದ ಬದುಕುತ್ತಿದ್ದೀರಾ?

ಕೆಲವು ವಿಚಾರಗಳಲ್ಲಿ ಬಹಳ ಒಳ್ಳೆಯದುಂಟು. ಒಳ್ಳೆಯ ಪರಿಸರದಲ್ಲಿ ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಕೃಷಿಯಿಂದಾಗಿ ಬದುಕಿನಲ್ಲಿ ಕೆಲವೊಂದು ಹೊಡೆತವನ್ನು ತಿಂದಿದ್ದೇವೆ. ಒಳ್ಳೆಯ ಬೆಲೆ ಸಿಗುತ್ತದೆ ಎಂದು ರೈತರೆಲ್ಲಾ ವೆನಿಲ್ಲಾ ಬೆಳೆದೆವು. ಹತ್ತು ವರ್ಷಗಳಾಗುವಾಗ ಅದು ದುಸ್ವಪ್ನವಾಯಿತು. ಕೆಲವು ಸಲ ರೋಗ ಬಂದು ಬೆಳೆ ನಾಶವಾಗಿರಬಹುದು. ರೈತ ಬದುಕಬೇಕಾದರೆ, ತನ್ನ ಖುಷಿಯನ್ನು ಕಳಕೊಳ್ಳಬಾರದು ಎಂದಾದರೆ ಕೃಷಿಯಲ್ಲಿ ವೈವಿಧ್ಯತೆ ಬೇಕೆ ಬೇಕು. ರಾಜ್ಯದ ಕೆಲವು ಕಡೆ ರೈತರು ಆತ್ಮಹತ್ಯೆಗೆ ಶರಣಾಗಲು ಮುಖ್ಯ ಕಾರಣ. ಅವರು ಒಂದೇ ಬೆಳೆಯ ಮೇಲೆ ಹೊಂದಿಕೊಂಡಿರುವುದು.

ನಮ್ಮ ರೈತರು ತುಂಬಾ ಪ್ರಾಮಾಣಿಕರು. ಬೆಳೆಯಲ್ಲಿ ತೊಂದರೆಯಾಗಿ ಸಾಲ ಕಟ್ಟಲು ಸಾಧ್ಯವಾಗದ ಸ್ಥಿತಿಯಲ್ಲಿ ಪ್ರಾಣವನ್ನಾದರೂ ಬಿಡುತ್ತಾರೆ. ಆ ಪರಿಸ್ಥಿತಿಯಲ್ಲಿ ಬದುಕಲಾರರು. ಉದ್ಯಮಿಗಳಾದರೆ ಎಷ್ಟೇ ದೊಡ್ಡ ಸಾಲ ಮಾಡಿಯಾದರೂ ದೊಡ್ಡ ದೊಡ್ಡ ಕಾರಿನಲ್ಲಿ ತಿರುಗುತ್ತಾರೆ. ನಮ್ಮ ರೈತರು ಇನ್ನೂ ತುಂಬಾ ಪ್ರಾಮಾಣಿಕರಾಗಿದ್ದಾರೆ.

ವೆನಿಲ್ಲಾ ಬಂದಾಗ ಬೆಲೆ ಜಾಸ್ತಿಯಿದೆ ಎಂದು ನಾವು – ಕೃಷಿಕರು ಕೃಷಿ ವಿಸ್ತರಣೆ ಮಾಡಿದೆವು. ಆದರೆ ಬೆಲೆ ಅತಂತ್ರವಾದಾಗ ತೊಂದರೆಯಾಗಿದೆ. ಎಲ್ಲರೂ ನಷ್ಟ ಅನುಭವಿಸಬೇಕಾಯಿತು. ವೆನಿಲ್ಲಾ ಒಳ್ಳೆಯ ಬೆಳೆ-ಅದಕ್ಕೆ ಇಂದಲ್ಲ ನಾಳೆ ಬೆಲೆ ಬಂದೇ ಬರುತ್ತದೆ. ಯಾವುದೇ ಕೃಷಿಗೆ ಒಮ್ಮೆ ಹೆಚ್ಚು ಆಸಕ್ತಿ ತೋರಿ, ಒಮ್ಮೆಗೇ ಅದನ್ನು ಕೈಬಿಡುವುದೂ ಸರಿಯಲ್ಲ.

* ನಮ್ಮ ದೇಶಕ್ಕೂ ಅಲ್ಲಿಗೂ ವ್ಯತ್ಯಾಸವೇನು?

ಅಲ್ಲಿ ಸ್ವತಂತ್ರ ಜೀವನ. ಸಾಂಪ್ರದಾಯಿಕ ಜೀವನ ಕ್ರಮವಿಲ್ಲ. ನಮ್ಮಲ್ಲಿನ ಹಾಗೆ ಅವಿಭಜಿತ ಕುಟುಂಬ ಜೀವನವಿಲ್ಲ, ಎಲ್ಲರೂ ಬೇರೆ ಬೇರೆಯಾಗಿಯೇ ವಾಸಿಸುತ್ತಾರೆ. ಹೈಸ್ಕೂಲಿಗೆ ಬರುವಾಗಲೇ ದುಡಿದೇ ಶಿಕ್ಷಣ ಪಡೆಯುತ್ತಾರೆ. ಹಾಗಾಗಿ ಜವಾಬ್ದಾರಿಕೆ ಬೇಗನೆ ಬಂದು ಬಿಡುತ್ತದೆ. ಕೃಷಿಯ ವಿಷಯದಲ್ಲೂ ಅವರು ತುಂಬಾ ಪ್ರಯೋಗಶೀಲರು. ಯಂತ್ರ-ತಂತ್ರಗಳ ಬಳಕೆಯಿಂದ ಲಾಭದಾಯಕ ಕೃಷಿಯ ಯತ್ನ ಮಾಡುತ್ತಾರೆ.

* ನಿಮ್ಮ ಹವ್ಯಾಸಗಳೇನು?

ಕೃಷಿ ಅಲ್ಲದೆ ಪ್ರಕೃತಿ-ಪರಿಸರ ಪ್ರೀತಿಯ ಚಟುವಟಿಕೆಗಳು, ಓದು ಇತರ ಹವ್ಯಾಸಗಳು. ಊಹಾಶೋಧ, ಮಿಡಿಸಿನ್ ವೀಲ್, ಲ್ಯಾಬ್ರಿಂತ್ ಇವುಗಳಲ್ಲಿ ಹವ್ಯಾಸ ಪ್ರಯೋಗದ ಫಲವೇ ಹೌದು.

* ಈಗಿನ ಶಿಕ್ಷಣಕ್ಕೂ ಬ್ರಿಟಿಷರ ಕಾಲದ ಶಿಕ್ಷಣಕ್ಕೂ ವ್ಯತ್ಯಾಸವೇನು?

ಅಂದು ವಿಷಯಗಳ ಮೂಲಪಾಠಗಳನ್ನು ಬಹಳ ಚೆನ್ನಾಗಿ ಹೇಳಿಕೊಡಲಾಗುತ್ತಿತ್ತು. ಈಗ ಶಿಕ್ಷಣದ ಪದ್ಧತಿ ಅದೇ ಆದರೂ ಸಾಕಷ್ಟು ಬದಲಾವಣೆ ಆಗಿದೆ. ಈಗ ಮೂಲ ಪಾಠಕ್ಕಿಂತ ಜ್ಞಾನ ನೀಡಿಕೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಭಾಷೆ, ಗಣಿತ, ವಿಜ್ಞಾನ ಇತರ ವಿಷಯಗಳ ಮೂಲಪಾಠಗಳು ಸರಿಯಾಗಿ ನಡೆದರೆ ವಿದ್ಯಾರ್ಥಿಗಳಿಗೆ ಅನುಕೂಲ.

* ನಿಮ್ಮ ಮೇಲೆ ಪ್ರಭಾವ ಬೀರಿದವರು ಯಾರು?

ಪ್ರಭಾವ ಬೀರಿದವರು ಒಬ್ಬರೇ ಎಂದು ಹೇಳುವುದಿಲ್ಲ. ತಂದೆ, ಶಿಕ್ಷಕಿಯರು ಬೇರೆ ಬೇರೆಯವರು ವಿವಿಧ ಸಂದರ್ಭದಲ್ಲಿ ಪ್ರೇರಣೆ ನೀಡಿದ್ದಾರೆ.

* ನಿಮ್ಮ ಆಹಾರ ಕ್ರಮ ಹೇಗೆ?

ಬೇಯಿಸಿದ ವಸ್ತುಗಳಿಗಿಂತ ಹೆಚ್ಚು ಮೊಳಕೆ ಬರಿಸಿದ ವಸ್ತುಗಳು ಇಷ್ಟ.

* ದಿನಚರಿ ಹೇಗೆ?

ಬೆಳಿಗ್ಗೆ 6.30ರಿಂದ ಆರಂಭ. ವೈಯಕ್ತಿಕ ಕೆಲಸಗಳಿಗೆ ಬಿಟ್ಟು ಉಳಿದೆಲ್ಲ ಸಮಯ ಕೃಷಿ ಚಟುವಟಿಕೆಗೆ ಮೀಸಲು.

* ಮುಂದಿನ ಯೋಜನೆಗಳು ಏನು?

ಕೃಷಿಯಲ್ಲಿ ತೊಡಗಿರುವ ಕೃಷಿಕರು ಅಭಿವೃದ್ಧಿ ಹೊಂದಿದ್ದಾರೆ. ತಮ್ಮ ಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡುವ ಬಗೆಗೆ ಅವರು, ನಾವೂ ಎಲ್ಲರೂ ಯೋಚನೆ ಮಾಡಿ ಯೋಜನೆ ರೂಪಿಸಬೇಕಾಗಿದೆ. ಕೆಲಸಗಾರರ ಕೊರತೆಯಿರುವುದರಿಂದ ಸಣ್ಣಮಟ್ಟದ ಸಂಸ್ಕರಣೆ ಪದ್ಧತಿಗಳಿಗೆ ಆದ್ಯತೆ ನೀಡಬೇಕು. ರೈತರು ಆದಷ್ಟು ನೇರವಾಗಿ ಗ್ರಾಹಕರಿಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಪ್ರಯತ್ನಿಸಬೇಕು. ಗ್ರಾಹಕರಿಗೂ-ರೈತರಿಗೂ ನೇರ ಸಂಪರ್ಕ ವ್ಯವಸ್ಥೆ ಬೇಕು. ಕೃಷಿಯಲ್ಲಿ ಯಾಂತ್ರೀಕರಣ ಈ ವಿಚಾರಗಳನ್ನು ಕಾರ್ಯಗತ ಗೊಳಿಸಲು ಏನು ಸಾಧ್ಯ ಎಂದು ಯೋಚಿಸುತ್ತಿದ್ದೇನೆ.

* ನೀವು ಇಂತಹ ಪ್ರಯತ್ನ ಮಾಡಿದ್ದೀರಾ?

ಖಂಡಿತಾ, ನಮ್ಮಲ್ಲಿಯೇ ಒಂದು ಮಾರಾಟ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಉಳಿದ ಹಣ್ಣುಗಳನ್ನು ಸಂಸ್ಕರಿಸಿ ಮಾರುತ್ತಿದ್ದೇವೆ. ಅನಾನಾಸು ಜಾಸ್ತಿಯಾದರೆ ಅದನ್ನು ಜಾಮ್ ಮಾಡುತ್ತೇವೆ. ಹಣ್ಣುಗಳನ್ನು ಸಂಸ್ಕರಿಸಲು ಒಂದು ಸಣ್ಣ ಉದ್ಯಮ ಸ್ಥಾಪಿಸಿದೆವು. ಆದರೆ ಸದ್ಯ ಅದನ್ನು ನಿಲ್ಲಿಸಿದ್ದೇವೆ. ಆದರೆ ಆ ವಿಷಯದಲ್ಲಿ ತಜ್ಞನಾದ ನನ್ನ ತಮ್ಮ ಐ.ವಿ. ಸೋನ್ಸ್ ಅವರ ಸಹಾಯ ಪಡೆಯುತ್ತೇವೆ.

* ಕೃಷಿಕರಿಗೆ ನಿಮ್ಮ ಸಲಹೆ ಏನು?

ಉತ್ತಮ ಕೃಷಿ ಮಾಡುವುದು ಪ್ರತಿಯೊಬ್ಬ ಕೃಷಿಕನ ಕರ್ತವ್ಯ. ಆದರೆ ವೈವಿಧ್ಯತೆ ಅತೀ ಅಗತ್ಯ ಎಂದುಕೊಂಡು ತಾನು ಸೋಲದಂತೆ ಒಂದೇ ಬೆಳೆಯನ್ನು ಅವಂಬಿಸುವ ಬದಲು ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯಬೇಕು. ಜೀವನ ನಿರ್ವಹಣೆಗೆ ಬೇಕಾದ ಸಾಮಗ್ರಿಗಳನ್ನು ಬೇಕಾದ ಪ್ರಮಾಣದಲ್ಲಿ ಬೆಳೆಯುವುದರಿಂದ ನಿರ್ವಹಣಾ ಖರ್ಚು ಕಡಿಮೆಯಾಗುತ್ತದೆ. ಎಲ್ಲದಕ್ಕೂ ಮಾರುಕಟ್ಟೆಯನ್ನು ಅವಲಂಬಿಸಿದರೆ ಜೀವನ ನಿರ್ವಹಣೆಯ ಮೇಲೆ ಪ್ರಭಾವ ಬೀರುತ್ತದೆ.

ಸರ್ಕಾರದ ಸಹಾಯ ಎಂದರೆ ನಮಗೆ ನೆನಪಾಗುವುದು ಸಬ್ಸಿಡಿ-ಸಹಾಯ ಧನ. ಅದರಲ್ಲಿ ಅವ್ಯವಹಾರಕ್ಕೆ ಅವಕಾಶ ಜಾಸ್ತಿ. ಹಾಗಾಗಿ ನಾವು ಮೂಲಭೂತ ಸೌಕರ್ಯಗಳ ಅಭಿವೃದ್ಧಿಯತ್ತ ಹೆಚ್ಚು ಗಮನ ಕೊಡುವಂತೆ ಸರ್ಕಾರಕ್ಕೆ ವಿನಂತಿ ಮಾಡಬೇಕು.

* ಹಣ್ಣುಗಳ ಪ್ರಯೋಗ ಪ್ರಿಯರೇ, ನಿಮ್ಮ ನೆಚ್ಚಿನ ಹಣ್ಣು ಯಾವುದು?

ಒಂದೇ ಹಣ್ಣು ನನ್ನ ಇಷ್ಟದ ಹಣ್ಣು ಎಂದು ಹೇಳಲಿಕ್ಕಾಗದು. ಬಾಲ್ಯದಿಂದಲೂ ತಿಂದುಕೊಂಡೇ ಬೆಳೆದಿರುವ ಮಾವಿನಹಣ್ಣು ಹೆಚ್ಚು ಗಮನ ಸೆಳೆದ ಹಣ್ಣು. ಮಾವಿನಲ್ಲಿ ಇರುವಷ್ಟು ವೈವಿಧ್ಯತೆ ಬೇರೆ ಹಣ್ಣಿನಲ್ಲಿ ಇರಲಾರದು. ಪದಾರ್ಥಕ್ಕೆ ಬಳಸುವ ಸಣ್ಣ ಹುಳಿ ಹಣ್ಣಿನಿಂದ ಹಿಡಿದು ಸಂಸ್ಕರಣೆಗೆ ಯೋಗ್ಯವಾದ ದೊಡ್ಡ ಹಣ್ಣಿನವರೆಗೆ ನೂರಾರು ಜಾತಿಯ, ಗಾತ್ರದ ಹಣ್ಣುಗಳಿವೆ.

* ಹವ್ಯಾಸಗಳೇನು?

ವಿದ್ಯಾರ್ಥಿ ಜೀವನದಿಂದಲೂ ಓದು ಹವ್ಯಾಸವಾಗಿದೆ. ಆಸಕ್ತಿದಾಯಕ ವಿಷಯಗಳನ್ನು ತಿಳಿಯಲು ಓದು ಮುಖ್ಯ ಸಾಧನ. ಅಗೋಚರ ಶಕ್ತಿ, ಊಹಾಶೋಧದಲ್ಲಿ ತಿಳಿವಳಿಕೆ ಪಡೆಯಲು ಈ ಹವ್ಯಾಸವೇ ಕಾರಣವಾಯಿತು.

* ಕೃಷಿ ಕ್ಷೇತ್ರದ ಅತಂತ್ರತೆಗೆ ಕಾರಣಗಳೇನು?

ಆದಾಯ ಸರಿಯಾಗಿ ಬರುತ್ತಿಲ್ಲ. ಭೂಮಿಗೆ ಹೆಚ್ಚಿನ ಬೆಲೆ ಸಿಗುವ ಸಾಧ್ಯತೆ ಗಳಿರುವುದರಿಂದ ಮಾರಾಟದ ಯೋಚನೆಯೇ ಪ್ರಬಲವಾಗತೊಡಗಿದೆ. ಎಲ್ಲರೂ ಒಂದು ಲಾಭದ ಬೆಳೆಯೆಂದು ಹೇಳಲಾಗುವುದರ ಹಿಂದೆ ಹೋಗುತ್ತಾರೆ. ಎಲ್ಲರೂ ಒಂದೇ ಕಡೆ ಗಮನ ಹರಿಸಿದಾಗ ಉತ್ಪಾದನೆ ಹೆಚ್ಚಾಗುತ್ತದೆ. ತಡವಾಗಿ ಆ ಕ್ಷೇತ್ರ ಪ್ರವೇಶಿಸಿದವರಿಗೆ ನಷ್ಟವಾಗುತ್ತದೆ. ನೇರ ಮಾರುಕಟ್ಟೆಯ ಬಗ್ಗೆ ಚಿಂತನೆ ಇನ್ನೂ ಹೆಚ್ಚು ಹೆಚ್ಚು ಆಗಬೇಕಾಗಿದೆ. ಮಧ್ಯವರ್ತಿಗಳು ಬೇಕು. ಆದರೆ ಎಲ್ಲದಕ್ಕೂ ಅವರನ್ನೇ ಹೊಂದಿಕೊಂಡರೆ ಆಗ ಎಲ್ಲವೂ ಅಯೋ ಮಯವಾಗುತ್ತದೆ.

* ನಿಮ್ಮ ಯಶಸ್ಸಿನ ಗುಟ್ಟು ಏನು?

ಶ್ರಮ, ನಂಬಿಕೆ, ನಿರಂತರ ಅಧ್ಯಯನ ಶೀಲತೆ. ಕೃಷಿಯಿಂದ ಉತ್ತಮ ಬದುಕನ್ನು ಸಾಗಿಸುತ್ತೇನೆ ಎಂಬ ನಂಬಿಕೆ.

* ಇಷ್ಟೆಲ್ಲ ಕಲಿತ್ರು ಸರ್ಕಾರಿ ಕೆಲಸ ಬಯಸಿಲ್ಲವೇಕೆ?

ಇತರರ ಮರ್ಜಿ ನೋಡುವ ಮಾಡುವ ಕೆಲಸಕ್ಕಿಂತ ಸ್ವಂತ ದುಡಿಮೆ ಇಷ್ಟ. ಅದು ನೆಮ್ಮದಿ ನೀಡುವ ಕೆಲಸ. ನಮ್ಮದೇ ತೋಟದಲ್ಲಿ ನಮಗಿಷ್ಟವಾದಂತೆ ಸ್ವತಂತ್ರವಾಗಿ ಸಂಶೋಧನೆ ನಡೆಸುವುದು ಹೆಚ್ಚು ಆಪ್ಯಾಯಮಾನವಾಗಿ ಕಂಡಿತು. ರಾಜಕೀಯದ ಒತ್ತಡದಲ್ಲಿ ಪ್ರತಿಭೆಗೆ ಬೆಲೆ ಸಿಗುವುದು ಕಷ್ಟ ಎಂದೆನಿಸಿತು.