ಕನ್ನಡದಲ್ಲಿ ದೊರೆಯುವ ಜನಪದ ಕಥನಗೀತೆಗಳಲ್ಲಿ ಸಾಮಾಜಿಕ ಕಥನಗೀತೆಗಳದ್ದು ಸಿಂಹಪಾಲು, ಇಂಥ ಬಹಳಷ್ಟು ಗೀತೆಗಳು ಜನಪ್ರಿಯವಾಗಿದ್ದು, ಅನೇಕ ಪಾಠಾಂತರಗಳನ್ನು ಹೊಂದಿವೆ. ಕರ್ನಾಟಕದ ಪರಂಪರಾಗತ ಸಾಮಾಜಿಕ, ಸಾಂಸ್ಕೃತಿಕ ಜೀವನವನ್ನು ಅರಿಯಲು ಇವು ಸಹಾಯಕಾರಿಯಾಗಿವೆ.

ಸಮಾಜದಲ್ಲಿ ಬೇರೂರಿದ್ದ ಅನೇಕ ಅನಿಷ್ಟ ಸಂಪ್ರದಾಯಗಳು ಜನಪದ ಹೆಣ್ಣಿನ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದನ್ನು ಅನೇಕ ಕಥನ ಗೀತೆಗಳು ತಿಳಿಸುತ್ತವೆ. ಜೀವಂತವಾಗಿ ಸತ್ತ ಗಂಡನ ಚಿತೆಏರಿ, ತನ್ನ ಜೀವನವನ್ನೇ ಸುಟ್ಟುಕೊಳ್ಳುವ ಕ್ರೂರಪದ್ಧತಿ ಸತಿ ಆಚರಣೆಯಲ್ಲಿದೆ. ಇದಕ್ಕೆ ಬಲಿಯಾದವರು ಲೆಕ್ಕವಿಲ್ಲದಷ್ಟು ಹೆಣ್ಣುಮಕ್ಕಳು. ಒಂದು ಕಾಲದಲ್ಲಿ ಭಾರತದ ತುಂಬೆಲ್ಲ ಈ ಆಚರಣೆ ರೂಢಿಯಲ್ಲಿದ್ದಿತು. ಪ್ರವಾಸಿ ಬರಹಗಳು ಇಂಥ ಘಟನೆಗಳನ್ನು ಅಮಾನವೀಯ ವರ್ತನೆಯೆಂದು ಗುರುತಿಸಿ ಬಣ್ಣಿಸಿವೆ. ಈ ಸಂಕಲನದ “ಈರೋಬಿ’ ಅಂಥ ಒಂದು ಕಥನಗೀತೆ. ಗಂಡ ಸತ್ತಾಗ ಅವನ ಶವದೊಡನೆ ಜೀವಂತವಾಗಿ ಚಿತೆ ಏರುವುದಲ್ಲದೆ, ಸತ್ತ ಸುದ್ಧಿ ಬರಿದೆ ಕೇಳಿ, ಉರಿಯಕೊಂಡ ನಿರ್ಮಿಸಿ ಚಿತೆ ಹೋಗುವುದು ಮತ್ತೊಂದು ಬಗೆ. ಕೆಲವೊಮ್ಮೆ ಮದುವೆಯೇ ಆಗಿರಬೇಕೆಂದಿಲ್ಲ; ನಿಶ್ಚಿತಾರ್ಥವಾಗಿದ್ದರೂ ಸಾಕು, ಈ ಪದ್ಧತಿಯನ್ನು ಜಾರಿಗೊಳಿಸುತ್ತಿದ್ದರು. “ನಾಗವ್ವ’ ಅಂಥ ಒಂದು ಘಟನೆಯನ್ನು ಹೃದಯವಿದ್ರಾವಕವಾದ ರೀತಿಯಲ್ಲಿ ಬಣ್ಣಿಸುತ್ತದೆ. ತವರವರು ಅವಳನ್ನು ಕೊಂಡಕ್ಕೇ ಧಾರೆ ಎರೆದುಕೊಡುತ್ತಾರೆ.

ಮಧ್ಯಕಾಲೀನ ಯುಗದಲ್ಲಿ ಸತಿಪದ್ಧತಿ ಅತ್ಯಂತ ಪ್ರಚುರವಾಗಿತ್ತು ಮತ್ತು ಸಾಮಾಜಿಕ ಮನ್ನಣೆಯನ್ನೂ ಪಡೆದಿತ್ತು. ಸತಿಯಾದ ಹೆಣ್ಣು ಸತ್ತ ಗಂಡನೊಂದಿಗೆ ಸ್ವರ್ಗಸೇರಿ ಸರ್ವಸುಖವನ್ನು ಅನಂತಕಾಲ ಅನುಭವಿಸುತ್ತಾಳೆ ಎಂದು ನಂಬಿಸಲಾಗಿತ್ತು. ಒಲ್ಲದ ಹೆಣ್ಣುಗಳನ್ನು ಹಿಡಿದುತಂದು ಚಿತೆಗೆ ದೂಡಲಾಗಿತ್ತೆಂದೂ ಹೇಳಲಾಗುತ್ತದೆ. ಈ ಪದ್ಧತಿಗೆ ಸಂಬಂಧಿಸಿದ ಎಲ್ಲ ಕಥನಗೀತೆಗಳನ್ನು ಅಧ್ಯಯನ ಮಾಡಿದಾಗ, ಅಂಥ ದುರವಸ್ಥೆಗೆ ಈಡಾದ ಹೆಣ್ಣು ಮಕ್ಕಳ ಅಸಹಾಯಕತೆ ನಮ್ಮ ಕಣ್ಣಿಗೆ ಕಟ್ಟುತ್ತದೆ. ಅದನ್ನು ಅವರು ತಮ್ಮ ಮೌನದ ಮೂಲಕ, ಕೆಲವೊಮ್ಮೆ ಪ್ರತಿಭಟನೆಯ ಮಾತುಗಳ ಮೂಲಕ ವ್ಯಕ್ತಪಡಿಸಿದ್ದನ್ನು ಕಾಣುತ್ತೇವೆ. ಇಂಥ ಗೀತೆಗಳಲ್ಲಿಯ ತ್ಯಾಗವನ್ನು ವೈಭವೀಕರಿಸಿ, ಬಲಿದಾನದ ಗೀತೆಗಳು ಎನ್ನುವುದಕ್ಕಿಂತ, ದುರಂತ ಗೀತೆಗಳು ಎಂದು ಕರೆಯುವುದು ಹೆಚ್ಚು ಸಮಂಜಸ. ಹಾಡುಗಾರರ ಅಭಿಪ್ರಾಯವೂ ಅದೇ ರೀತಿಯಾಗಿದೆ. “ನಾಗವ್ವ’ ಕಥನಗೀತೆಯಲ್ಲಿ ಹಾಡುಗಾರ‍್ತಿ ಕೊನೆಯಲ್ಲಿ;

“ಹೆಣ್ಣೀಗೆ ಮಣ್ಣು ಬಿದ್ದೊ ಕಣ್ಣೀಗೆ ಸೆತ್ತೆ ಬಿದ್ದೊ
ಸಣ್ಣಸೀರೆಯಮ್ಯಾಲೆ ಕಿಡಿಬಿದ್ದೊ | ನಾಗವ್ವನ
ಹಣೆಗಂಟು ನಲುಗಿ ಉರಿದ್ಹೋದೋ ||’

ಎಂದು ನಿಟ್ಟುಸಿರು ಬಿಟ್ಟಿದ್ದಾಳೆ.

ಹೆಣ್ಣನ್ನು ಊರು, ಸಮಾಜ, ಇವುಗಳ ರಕ್ಷಣೆಗಾಗಿ ಬಲಿಕೊಡುವ ಪದ್ಧತಿ ಪ್ರಾಚೀನ ಕಾಲದಿಂದಲೂ ಬೆಳೆದುಬಂದಂತಿದೆ. ಗಂಡಿನ ಸ್ವಾರ್ಥ, ತಾನು ಸತ್ತ ನಂತರವೂ ತನ್ನ ಹೆಂಡತಿ ತನಗೆ ನಿಷ್ಠಳಾಗಿರಬೇಕು, ಅದಿಲ್ಲದಿದ್ದರೆ, ತನ್ನೊಂದಿಗೆ ಅವಳೂ ಜೀವನವನ್ನು ಕೊನೆಗೊಳಿಸಿಕೊಳ್ಳಬೇಕು ಎಂದು ಆಗ್ರಹಪಡಿಸುತ್ತದೆ. ಸತಿಪದ್ಧತಿಯಲ್ಲಿ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದರಂತೆ ಕೆರೆ, ಕೋಟೆಗಳ ರಕ್ಷಣೆಗೆ ಬಲಿಯಾಗಿ ಹೆಣ್ಣನ್ನೇ ಆಯ್ಕೆ ಮಾಡಿಕೊಂಡಿರುವುದು ಆಕಸ್ಮಿಕವೇನಲ್ಲ. “ಕೆರೆಗೆ ಹಾರ’, “ಕೋಟೆಕಿಲ್ಲೆ ಕಥೆ’ ಮುಂತಾದ ಕಥನಗೀತೆಗಳು ಈ ಅಂಶವನ್ನು ಹೊರಹಾಕುತ್ತವೆ. “ಕೆರೆಗೆ ಹಾರ’ ಅತ್ಯಂತ ಜನಪ್ರಿಯವಾದ ಒಂದು ಕಥನ ಗೀತೆ. ಸುಮಾರು ೨೫ಕ್ಕೂ ಹೆಚ್ಚು ಪಾಠಾಂತರಗಳು ಇದಕ್ಕೆ ಲಭ್ಯವಿವೆ. “ಮದಗದಕೆಂಚಮ್ಮ’, “ಕೆರೆ ಹೊನ್ನಮ್ಮ’ಗಳಂತಹ ಸುದೀರ್ಘಕಾವ್ಯಗಳೂ ಹುಟ್ಟಿಕೊಂಡಿವೆ. ಕೆರೆ, ಕೋಟೆಗಳ ಬಲಿಗಳಲ್ಲಿ ಒಂದರಲ್ಲಿ ನೀರು ಮಾಧ್ಯಮವಾದರೆ ಮತ್ತೊಂದರಲ್ಲಿ ಕಲ್ಲು, ಮಣ್ಣು ಮಾಧ್ಯಮ ಎಂಬುದನ್ನು ಬಿಟ್ಟರೆ ಬಲಿಯ ಆಶಯ ಎರಡರಲ್ಲೂ ಒಂದೇ ಆಗಿದೆ.

ಬಹುತೇಕ ಸಂದರ್ಭಗಳಲ್ಲಿ ಮನೆಯಲ್ಲಿ ಗಂಡನ ಅನುಪಸ್ಥಿತಿಯನ್ನು ಗಮನಿಸಿಯೇ, ಅವನು ದಂಡಿಗೆ ಹೋದ ಸನ್ನಿವೇಶದ ಲಾಭವನ್ನು ಪಡೆದೇ ಹೆಣ್ಣನ್ನು ಬಲಿಪಶುಮಾಡುವ ಕೆಲಸ ಕಾರ‍್ಯಗತವಾಗುವುದನ್ನು ಗುರುತಿಸಬಹುದು. ಆದರೆ ಮಾತೃಮೂಲೀಯ ಸಮಾಜ ವ್ಯವಸ್ಥೆ ಜಾರಿಯಲ್ಲಿರುವ ಅಥವಾ ಅದರ ಪ್ರಭಾವ ಸ್ವಲ್ಪಮಟ್ಟಿಗಾದರೂ ಉಳಿದಿರುವ ಸಾಮಾಜಿಕ ಪ್ರದೇಶದಲ್ಲಿ ಈ ಸ್ಥಿತಿಯಲ್ಲಿ ಸ್ವಲ್ಪ ಬದಲಾವಣೆಯನ್ನು ಕಾಣುತ್ತೇವೆ. “ನಿಗಳಬಲಿ’ ಕಥನ ಗೀತೆಯಲ್ಲಿ ಹೆಣ್ಣನ್ನು ಕೆರೆಗೆ ದೂಡಿದ್ದರೂ ಅಣ್ಣ ಹೋಗಿ ತಂಗಿಯನ್ನು ನಿಗಳದ ಕೈಯಿಂದ ಬಿಡಿಸಿಕೊಂಡು ಬಂದ ಚಿತ್ರಣವಿರುವುದು ಗಮನಾರ್ಹ.

ಒಂದು ಕಾಲದಲ್ಲಿ “ನರಬಲಿ’ ಅತ್ಯಂತ ವ್ಯಾಪಕವಾದ ಆಚರಣಾ ಪದ್ಧತಿಯಾಗಿತ್ತು. ಈ ಕುರಿತು ಅಪಾರವಾದ ನಂಬಿಕೆ ಹಾಗೂ ಭಯ ಜನರಲ್ಲಿತ್ತು. ಇದಕ್ಕೆ ನಿದರ್ಶನವಾಗಿ ಅಪೂರ್ವವಾದ ಗೀತೆಯೊಂದು ಕನ್ನಡ ಜಿಲ್ಲೆಯಲ್ಲಿ ದೊರೆತಿದೆ. “ಬಾರ್ಕೂರ ಹಿರಿಯಣ್ಣ ಶೆಟ್ರು’ ಗೀತೆಯಲ್ಲಿ ಹಡಗು ಚಲಿಸದೇ ಇದ್ದಾಗ, ಹಡಗಿನ ಆದೇಶದಂತೆ ಒಬ್ಬ ಹುಡುಗನನ್ನು ಬಲಿಕೊಡುವ ಪ್ರಯತ್ನ ಮಾಡಿದ್ದನ್ನು ಕಾಣುತ್ತೇವೆ. ಆದರೆ ಇಲ್ಲಿ ಆ ಹುಡುಗನ ಪೂರ್ಣ ಬಲಿಯಾಗದೇ ಅವನ ತೊಟ್ಟು ರಕ್ತದಿಂದಲೇ ಹಡಗು ಸಂತುಷ್ಟಗೊಂಡು ಚಲಿಸಿದ್ದನ್ನು ಅರುಹಲಾಗಿದೆ.

ಹೆಣ್ಣು ಬಲಿಯ ವಿಷಯದಲ್ಲಿ ಹೆಣ್ಣು, ಅದರಲ್ಲೂ ಗರ್ಭವತಿಯಾದ ಹೆಣ್ಣು ಬಲಿಗೆ ಶ್ರೇಷ್ಠ ಎಂಬ ಪರಿಕಲ್ಪನೆ ಬೆಳೆಸಿಕೊಂಡು ಬಂದಿರುವಾಗ, ಹಾಗೂ ಅವಳು ಪೂರ್ಣವಾಗಿ ಬಲಿ ಅಥವಾ ಹಾರವಾದಂತೆ ಚಿತ್ರಿತವಾಗಿದ್ದರೆ, ಗಂಡುಮಗುವಿನ ವಿಷಯದಲ್ಲಿ ತೊಟ್ಟು ರಕ್ತ ಸಾಕೆಂಬಂತೆ ಚಿತ್ರಿತವಾಗಿರುವುದು ಮತ್ತೆ ಪುರುಷಪ್ರಧಾನ ಸಮಾಜದ ಪಕ್ಷಪಾತ ದೃಷ್ಟಿಯೇ ಇಲ್ಲಿ ಕಾರ‍್ಯಗತವಾಗಿರುವುದು ಎದ್ದು ಕಾಣುತ್ತದೆ.

ಕೆರೆಯಲ್ಲಿ ನೀರು ಬಾರದಿದ್ದಾಗ ಹಾರ (ಆಹುತಿ) ನೀಡುವಂತೆ, ಹೊಳೆ-ನದಿಗಳಿಗೆ ನೆರೆ ಬಂದಾಗಲೂ ಆಹುತಿ ಕೊಡುವ (ಹೊಳೆ ಅಳೆಯುವ) ಪರಂಪರೆ ಇದ್ದುದು “ಗರತಿ ಗಂಗವ್ವ’ ಹಾಡಿನಿಂದ ತಿಳಿದುಬರುತ್ತದೆ. ನದಿ ಉಕ್ಕಿ ಬಂದಾಗ, ಅಡ್ಡ ನಿಂತು ಜೀವತೆತ್ತು ಊರನ್ನು ಉಳಿಸಿದವಳು ಗರತಿ ಗಂಗವ್ವ. ಹೆಣ್ಣಿನ ಶೀಲಶಂಕೆಯಿದ್ದಾಗಲೂ ಪಾತಿವ್ರತ್ಯದ ಪರೀಕ್ಷೆಯಾಗಿ ಅಳೆಯುವುದನ್ನು ಬಳಸಿಕೊಂಡಿರುವುದು “ಅತುಮವ್ವಿ’ ಹಾಗೂ ಅದರ ಪಾಠಾಂತರ ಕಥನ ಗೀತೆಗಳಲ್ಲಿ ಕಂಡುಬರುತ್ತದೆ.  ಮೊದಲು ಅನೇಕ ಅಸಾಧ್ಯ ಕೆಲಸಗಳನ್ನು ಹೆಣ್ಣಿಗೆ ಮಾಡಲು ಹೇಳಿ, ಅದನ್ನೆಲ್ಲ ಯಶಸ್ವಿಯಾಗಿ ಈಡೇರಿಸಿದಾಗ, ಕೊನೆಯಲ್ಲಿ ತೆರೆ ಅಳೆಯಲು ಹೇಳುವುದು ಈ ಎಲ್ಲ ಗೀತೆಗಳ ಸಮಾನ ಆಶಯ. ಗಂಡನ ಸಂಶಯ ಪ್ರವೃತ್ತಿಯಿಂದ ಮನನೊಂದ ಹೆಣ್ಣುಗಳು ತೆರೆ ಅಳೆಯುತ್ತಲೇ ಅದೃಶ್ಯರಾದ ದುರಂತ ಗಮನಾರ್ಹ. ಇದೊಂದು ರೀತಿಯ ಹೆಣ್ಣಿನ ಪ್ರತಿಭಟನೆಯ ಸ್ವರೂಪವೂ ಹೌದು.

“ಧರಣಿಮಂಡಲ ಮಧ್ಯದೊಳಗೆ’ ಎಂದು ಪ್ರಾರಂಭವಾಗುವ “ಗೋವಿನ ಹಾಡು’ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾದುದು. ಇದರೊಂದಿಗೆ ಅನೇಕ ಜನಪದ ಗೋವಿನ ಹಾಡುಗಳೂ ಪ್ರಚಲಿತವಿವೆ. ಕುಟ್ಟುವ, ಬೀಸುವ, ಮೊಸರು ಕಡೆಯುವ, ಕೋಲಾಟದ ಹೀಗೆ ನಾನಾ ಕ್ರಿಯೆಗಳಲ್ಲಿ ಬಳಸಿಕೊಳ್ಳುವ ವೈವಿಧ್ಯಮಯ ಧಾಟಿಯ ಕೌಲೆ ಹಾಡುಗಳನ್ನು ಇಲ್ಲಿ ಉಲ್ಲೇಖಿಸಬಹುದು. ಧಾಟಿಯ ಭಿನ್ನತೆಯೊಂದಿಗೆ, ಆಶಯ ಭಿನ್ನವಾಗಿರುವುದು ಇವುಗಳಲ್ಲಿ ಗಮನಿಸಬೇಕಾದ ಅಂಶವಾಗಿದೆ. “ಕವುಲಿ’ ಹಾಡಿನಲ್ಲಿ ಹುಲಿ ತಿನ್ನದೇ ಬಿಟ್ಟ ಹಸುವಿನ ಚಿತ್ರ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಕ್ರೂರತೆಯ ಬದಲಾಗಿ ಮೃದುತ್ವವನ್ನು ಅಂತಸ್ಥಗೊಳಿಸಿರುವುದು, ಮುಗ್ಧ, ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಸಂದ ಗೌರವವಾದರೆ, “ಸಿರಿಕವಲಿ’ಯಲ್ಲಿ ಹುಲಿತಿನ್ನದೇ ಬಿಟ್ಟರೂ, ಹಸಿರು ಹುಲ್ಲಿನ ಆಸೆಗಾಗಿ ಎತ್ತರದ ಗುಡ್ಡಕ್ಕೆ ಹೋಗಿ ಕಾಲುಜಾರಿ ಪ್ರಪಾತಕ್ಕೆ ಬಿದ್ದು, ಜೀವಕಳೆದುಕೊಳ್ಳುವುದು – “ವಿಧಿ’ಯನ್ನು ಕುರಿತು ಜನಪದರಿಗಿರುವ ಲೋಕದೃಷ್ಟಿಗೆ ನಿದರ್ಶನ. ಈ ಮೇಲಿನ ಎರಡು ಬಗೆಯ ಕತೆಗಿಂತಲೂ ಭಿನ್ನವಾದ ಘಟನೆ, “ಹೆಬ್ಬುಲಿಗೆ ನಾನು ಕೊಟ್ಟೆನು ಭಾಷೆ’ ಎಂಬ ಕಥನ ಗೀತೆಯಲ್ಲಿದೆ. ಇಲ್ಲಿ ಹಿಂತಿರುಗಿಬಂದ ಹಸುವನ್ನು ಹುಲಿ ತಿಂದು ಬಿಡುತ್ತದೆ. ಮುಗ್ಧ ಗೋವನ್ನು ನಾಶಮಾಡಿದ್ದಕ್ಕಾಗಿ ಹುಲಿಮರಿ ತಾಯಿಯನ್ನು ಆಕ್ಷೇಪಿಸುತ್ತದೆ. ಹಾಲು ಕುಡಿಸುತ್ತಿರುವಾಗ ಹೊಟ್ಟೆ ಬಗಿದು ತಾಯಿಯನ್ನೇ ಕೊಲ್ಲುತ್ತದೆ. ಅಷ್ಟೇ ಅಲ್ಲ; ತಬ್ಬಲಿ ಕರುವಿಗೆ ಸಮಾಧಾನ ಮಾಡಿ, ಹಿಂಡನ್ನು ಸೇರಿಕೊಳ್ಳಲು ಉಪದೇಶಿಸುತ್ತದೆ. ಹಿರಿಯರು ಮಾಡಿದ ಅನ್ಯಾಯವನ್ನು ಮುಂದುವರಿಸದೇ ಸರಿಪಡಿಸಲು ಮಾಡುವ ವಿಶಿಷ್ಟ ಪ್ರಯತ್ನ, ಈ ಪ್ರಾಣಿ ಲೋಕದ ಹಾಡಿನಲ್ಲಿದೆ.

“ಆದರ್ಶ ಗೆಣೆತನ’ ಅಪೂರ್ವವಾದುದು. ಅದನ್ನು ಕೊನೆಯತನಕ ನಿಭಾಯಿಸಲು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. “ಸೋಮರಾಯ ಭೀಮರಾಯ’ ಅಂಥ ಅಪರೂಪದ ಗೆಳೆತನವನ್ನು ಎತ್ತಿ ತೋರಿಸುವ ಕಥನಗೀತೆ. ತಾನು ಇಷ್ಟಪಟ್ಟ ಹೆಣ್ಣು, ಸ್ನೇಹಿತನ ಹೆಂಡತಿಯೇ ಎಂದು ತಿಳಿದಾಗ ಪಶ್ಚಾತ್ತಾಪಪಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಮುಂದೆ ಅದು ಸ್ನೇಹಿತನ ಹೆಂಡತಿಯ ಆತ್ಮಹತ್ಯೆಗೂ ಕಾರಣವಾಗುತ್ತದೆ. ದುರಂತದಲ್ಲಿ ಪರ‍್ಯವಸಾನವಾಗಬೇಕಾಗಿದ್ದ ಈ ಕಥನಗೀತೆಯಲ್ಲಿ ಶಿವಕೃಪೆಯ ಮೂಲಕ ಎಲ್ಲರೂ ಬದುಕಿಬರುತ್ತಾರೆ. ಇದು ಸ್ನೇಹಕ್ಕೆ ದೊರೆತ ನೈತಿಕ ಜಯವಾಗಿದೆ. ಜನ್ನನ ಅನಂತನಾಥ ಪುರಾಣದ ಚಂಡಶಾಸನ ಕಥೆಯನ್ನು ಹೋಲುವ ಈ ಕಥೆ, ಜನಪದ ಕಥಾಲೋಕದ ಒಂದು ಅಪೂರ್ವ ಕಥನಗೀತೆಯಾಗಿದೆ.

ಬಾಲ್ಯ ವಿವಾಹದ ದುಷ್ಪರಿಣಾಮವನ್ನು ಸಾರುವ ಕೆಲವು ಕಥನಗೀತೆಗಳು ಕನ್ನಡ ಜನಪದ ಸಾಹಿತ್ಯದಲ್ಲಿವೆ. ಪಾಳೆಯಗಾರರ ಆಡಳಿತ ಕಾಲದಲ್ಲಿ ಪ್ರತಿಯೊಂದು ಊರಿನಿಂದಲೂ ಕೆಲವರು ಸೈನ್ಯಕ್ಕೆ ಸೇರಬೇಕಾಗುತ್ತಿತ್ತು. ದಂಡಿಗೆ ಹೋಗುವ ಯುವಕರನ್ನು ಸಾಮಾನ್ಯವಾಗಿ ಮದುವೆ ಮಾಡಿ ಕಳಿಸುತ್ತಿದ್ದರು. ಮದುವೆಯ ಜವಾಬ್ದಾರಿಯಿಂದ ಅವರನ್ನು ನಿಯತ್ತಿನಲ್ಲಿರಿಸಬಹುದು ಎಂಬ ಭಾವನೆ ಇಂಥ ಮದುವೆಗಳ ಹಿನ್ನೆಲೆಯಲ್ಲಿ ಇದ್ದಂತಿದೆ. ದಂಡಿಗೆ ಹೋದವರು ದೀರ್ಘಕಾಲ ಹಿಂತಿರುಗಿ ಬರುತ್ತಿರಲಿಲ್ಲ. ಮದುವೆಯಾದ ಎಳೆಹೆಣ್ಣಿಗೆ ಗಂಡನ ಮುಖದ ಕಲ್ಪನೆಯೂ ಮೂಡಿರುತ್ತಿರಲಿಲ್ಲ. ಇದರಿಂದಾಗಿ ಅವನೇ ಸ್ವತಃ ಎದುರಿಗೆ ಬಂದು ನಿಂತರೂ ಗುರುತು ಹಿಡಿಯುವುದು ಸಾಧ್ಯವಾಗುತ್ತಿರಲಿಲ್ಲ. “ದಾಂಬ್ರಿವುವುS ಆಗಿ ಅವ್ಳು ವುಟ್ಟಿದ್ದಾಳೋS’ ಹಾಗೂ ಸಮಾನ ಆಶಯದ ಇನ್ನು ಕೆಲವು ಗೀತೆಗಳಲ್ಲಿ ಈ ಸಮಸ್ಯೆಯ ಭಿನ್ನ ಮುಖಗಳನ್ನು ಚಿತ್ರಿಸಲಾಗಿದೆ. ದಂಡಿಗೆ ಹೋದ ಗಂಡ ಹಿಂತಿರುಗಿಬಂದಾಗ ಗುರುತು ಹಿಡಿಯದೇ ಪುರುಷನೆಂದು ಭಾವಿಸಿ ಒರಟಾಗಿ ವರ್ತಿಸುತ್ತಾಳೆ. ನಿಜ ತಿಳಿಯುತ್ತಲೇ ನಾಚಿಕೆಯಿಂದ ವಾಸ್ತವವನ್ನು ಎದುರಿಸಲಾರದೇ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಬಾವಿಯಲ್ಲಿ ದಾಳಿಂಬರ ಹೂವಾಗಿ ಅರಳುತ್ತಾಳೆ. ದೈವಕೃಪೆಯಿಂದ ಹದಿನಾರರ ತರುಣಿಯಾಗಿ ಮಾರ್ಪಟ್ಟು ಗಂಡನೊಂದಿಗೆ ಸುಖಸಂಸಾರ ಮಾಡುತ್ತಾಳೆ.

ಪ್ರಾಚೀನ ಸಂಪ್ರದಾಯಗಳಲ್ಲಿ ಕೆಲವು ಕಟ್ಟು-ಕಟ್ಟಳೆಗಳು ವಿಚಿತ್ರವೆನ್ನಿಸುವಂತಿವೆ. ಕನ್ಯೆಗೆ ಮೈನೆರೆಯುವ ಮೊದಲೇ ಮದುವೆಮಾಡಬೇಕೆಂಬುದು ಅಂಥ ಒಂದು ಸಂಪ್ರದಾಯ. ಅಕಸ್ಮಾತ್ ಮುಂಚೆಯೇ ಮೈನೆರೆದರೆ, ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಅಟ್ಟಬೇಕೆಂದು ಕಟ್ಟಳೆ. ಇಂಥ ಕ್ರೂರ ಆಚರಣೆಯಿಂದ ಹೆಣ್ಣು ಮಕ್ಕಳು ಹಾಗೂ ಅವರ ಕುಟುಂಬ ಹೇಗೆ ದುಃಖ ಅನುಭವಿಸುತ್ತಿದ್ದರು ಎಂಬುದನ್ನು “ತೋಳನಿಗೆ ಬಲಿ’ ಕಥನಗೀತೆಯಲ್ಲಿ ಚಿತ್ರಿಸಲಾಗಿದೆ. ತಂಗಿಯ ಮೇಲೆ ಅತೀವ ಪ್ರೀತಿ-ವಾತ್ಸಲ್ಯವಿದ್ದ ಅಣ್ಣ ಯುಕ್ತ ಕಾಲಕ್ಕೆ ಮದುವೆ ಮಾಡದೇ ಅವಳು ಮೈನೆರೆದಾಗ, ಅನಿವಾರ‍್ಯವಾಗಿ ಕಾಡಿನಲ್ಲಿ ಬಿಟ್ಟು ಬರಬೇಕಾದ ದುರಂತ ಪ್ರಸಂಗ ಅದರಲ್ಲಿದೆ. ಕಾಡುಪಾಲಾದ ಆ ಹೆಣ್ಣು ತೋಳನಿಗೆ ಬಲಿಯಾಗುವುದು ಇಲ್ಲಿನ ದುರಂತ.

ಕೆಲವು ದುಷ್ಟ ಸಂಪ್ರದಾಯಗಳ ಹಿಂದೆ ಬಲವಾದ ನಂಬಿಕೆ ಇದೆ. ಗಂಡು ಮದುವೆಯಾಗದೇ ಸತ್ತರೆ ಸ್ವರ್ಗ ಸಿಗದೆಂಬುದು ಅಂಥ ಒಂದು ನಂಬಿಕೆ. ಅಕಸ್ಮಾತ್ ಯಾವುದಾದರೂ ಒಂದು ಕಾರಣಕ್ಕಾಗಿ ಗಂಡು ಮದುವೆಯಾಗದೇ ಸತ್ತರೆ, ಹೆಣ್ಣೊಂದನ್ನು ತಂದು ಶವಕ್ಕೆ ಮದುವೆಮಾಡಿಸುತ್ತಿದ್ದರು. “ಕರ್ತಿರಾಯ’ ಕಥನಗೀತೆಯಲ್ಲಿ ಶ್ರೀಮಂತ ಮಗ ಮಡಿದಾಗ, ಸಾಕಷ್ಟು ಹೊನ್ನು ಸುರಿದು ಬಡವನ ಮಗಳನ್ನು ತಂದು ಮದುವೆ ಮಾಡುತ್ತಾರೆ. ಆದರೆ, ಹೆಣ್ಣು ತನ್ನ ನಿಷ್ಠೆ ಸಾಮರ್ಥ್ಯಗಳಿಂದಾಗಿ ಸತ್ತ ಗಂಡನನ್ನು ಮರಳಿ ಪಡೆಯುತ್ತಾಳೆ. “ಕಾಳಿಂಗರಾಯನ ಹಾಡು’ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ. “ಸತ್ಯವಾನ ಸಾವಿತ್ರ’ ಪುರಾಣ ಕಥೆಯ ಆಶಯವೇ ಈ ಬಗೆಯ ಗೀತೆಗಳಲ್ಲಿದೆ.

ಹೆಣ್ಣಿನ ಬಂಜೆತನ ಮತ್ತೊಂದು ಶಾಪ. ಬಂಜೆತನದಲ್ಲಿ ಹೆಣ್ಣಿನ ಪಾಲು ಎಷ್ಟು ಎಂಬುದು ಪ್ರಶ್ನಾರ್ಹವಾಗಿದ್ದರೂ, ಸಮಾಜದಲ್ಲಿ ಹೆಣ್ಣನ್ನೇ ಹೆಚ್ಚಾಗಿ ದೂಷಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಗೊರವರ ಕಥೆಗಳಲ್ಲಿ ಗಂಡನ್ನೂ “ಬಂಜೆ’ ಎಂದು ಜರಿದದ್ದೂ ಇದೆ. ಆದರೂ ಸಾಮಾಜಿಕವಾಗಿ ತಿರಸ್ಕಾರಕ್ಕೆ ಒಳಗಾಗುವ ಬಂಜೆ ಹೆಣ್ಣಿನ ಮಾನಸಿಕವೇದನೆ ಕರುಣಾಪೂರಿತವಾದುದು. ಈ ಕೊರಗು ಕೆಲವೊಮ್ಮೆ ಹೆಣ್ಣಿನ ವರ್ತನೆಯನ್ನು ಕ್ರೂರವಾಗಿಯೂ, ಒರಟಾಗಿಯೂ ಪರಿವರ್ತಿಸುತ್ತದೆ. ಬಂಜೆತನಕ್ಕಾಗಿ ಸಮಾಜ ಅಂಥ ಹೆಣ್ಣನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿರುವುದಕ್ಕೆ ಸಾಂತ್ವನ ವ್ಯಕ್ತವಾದರೂ ಬಂಜೆಯ ದುಷ್ಟ ವರ್ತನೆಗಳು ಕಟು ಟೀಕೆಗೆ, ವಿಮರ್ಶೆಗೆ ಒಳಗಾಗಿವೆ. ಶಿವನೂ ಅಂಥ ಬಂಜೆಯನ್ನು ನಿಂದಿಸುತ್ತಾನೆ. “ಬಂಜೆ ಹೊನ್ನಮ್ಮ’ ಮತ್ತು ಈ ಆಶಯದ ಕಥನ ಕವನಗಳಲ್ಲೂ ಇಂಥ ವಿಚಾರಗಳು ಚರ್ಚಿತವಾಗಿದೆ.

“ಸೌಂಸಾತೇರಿ”ನಲ್ಲಿ ಬಂಜೆ ಹೆಣ್ಣೊಬ್ಬಳು ತನ್ನ ಸವತಿಯ ಮಗುವನ್ನು ಕುದಿಯುವ ಎಣ್ಣೆ ಕೊಪ್ಪರಿಗೆಯಲ್ಲಿ ಹಾಕಿ ಕೊಂದ ಘಟನೆ ಇದ್ದು,  ಹೆಣ್ಣಿನ ಕ್ರೂರತನಕ್ಕೆ ನಿದರ್ಶನವನ್ನು ಒದಗಿಸುತ್ತದೆ.

ಮದುವೆಯಾದ ಹೆಣ್ಣನ್ನು ಗಂಡು ಕೆಲವೊಮ್ಮೆ ಕೆಣಕುವ, ವಶಪಡಿಸಿಕೊಳ್ಳಲು ಪ್ರಯತ್ನಿಸುವ ನಾನಾ ಬಗೆಯ ಹುನ್ನಾರಗಳನ್ನು ಮಾಡುತ್ತಾನೆ. ಅವನೊಡ್ಡುವ ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ಪತಿಯ ಮೇಲಿನ ನಿಷ್ಠೆ, ದೃಢ ಮನಸ್ಸನ್ನು ಉಳಿಸಿಕೊಂಡವರು ಕೆಲವು ಲಲನಾಮಣಿಯರು. ಅಂಥ ಕಾಮುಕ ಗಂಡೊಬ್ಬನನ್ನು ಮುಲಾಜಿಲ್ಲದೇ ತರಾಟೆಗೆ ತೆಗೆದುಕೊಂಡಿದ್ದನ್ನು “ಒಬ್ಬರಿಗಟ್ಟುಡುಗೆ’ ಗೀತೆಯಲ್ಲಿ ಕಾಣಬಹುದು. “ಎಳ್ಳಮಾಸೆಯ ಹಾಡು’ ಕಾಮುಕನೊಬ್ಬನ ಹಿಡಿತದಿಂದ ಉಪಾಯವಾಗಿ ತಪ್ಪಿಸಿಕೊಂಡು ಬಂದುದನ್ನು ಕಲಾತ್ಮಕವಾಗಿ ನಿರೂಪಿಸುತ್ತದೆ.

ಹೆಣ್ಣು ಶೀಲಕ್ಕೆ ನೀಡುವ ಮಹತ್ವವನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಅರುಹುವ ಕಥನ ಗೀತೆ “ಕಡ್ಲಿಮಟ್ಟಿ ಕಾಶಿಬಾಯಿ ಹಾಡು’. ಹೆತ್ತ ಮಗುವನ್ನಾದರೂ ಬಲಿಕೊಟ್ಟು ಶೀಲವನ್ನು ಕಾಪಾಡಿಕೊಂಡ ಕಾಶಿಬಾಯಿಯ ಧೈರ‍್ಯಮೆಚ್ಚುವಂತಿದೆ. ಮದುವೆಯಾದ ಗಂಡು-ಹೆಣ್ಣು ಇಬ್ಬರೂ ಸಮಾನ ನೀತಿಯ ತಳಹದಿಯ ಮೇಲೆ ಬಾಳು ನಡೆಸಿದಾಗ ಅಂಥ ದಾಂಪತ್ಯ ಸುಖವಾಗಿರುತ್ತದೆ. ಅದರಲ್ಲಿ ಒಬ್ಬರು ದೂರ ಸರಿದರೂ ದಾಂಪತ್ಯ ರಥ ಒಗ್ಗಲಾಗುತ್ತದೆ. ಗಂಡು ಅಡ್ಡ ದಾರಿ ಹಿಡಿದಾಗ ಅವನನ್ನು ಹೇಗಾದರೂ ಸರಿ ದಾರಿಗೆ ತರುವ ಪ್ರಯತ್ನವನ್ನು ಹೆಣ್ಣು ಮಾಡುತ್ತಾಳೆ. “ಬಣಜಿಸೆಟ್ಟರ ಕಥೆ’ ಹಾಗೂ ಸಮಾನ ಆಶಯದ ಕಥನಗೀತೆಗಳು ಪರಸ್ತ್ರೀಯ ವ್ಯಾಮೋಹಕ್ಕೆ ಒಳಗಾದ ಗಂಡನ್ನು ಮತ್ತೆ ಪ್ರಯತ್ನಪಟ್ಟು ಮನೆಗೆ ಮರಳಿಸಿದ್ದನ್ನು ಅರುಹುತ್ತವೆ.

ಗಂಡು ಪರಸ್ತ್ರೀಯ ವ್ಯಾಮೋಹಕ್ಕೆ ಒಳಗಾದಾಗ ಆ ಸ್ತ್ರೀಯೇ ಮುಂದಾಗಲಿರುವ ಅಪಾಯ ತಪ್ಪಿಸಿ, ಅವನ ಹೆಂಡತಿಯ ಸಹಾಯದಿಂದ ಕುಟುಂಬ ಸೇರಿಸುವ ಪ್ರಯತ್ನ “ಕೊರಾತಿಕಂಚಿ’ ಕಥನ ಗೀತೆಯಲ್ಲಿದೆ. ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಘೋಷಣೆಗೆ ವಿರುದ್ಧವಾದ ಸೋದರಿತ್ವದ ಆಶಯ ಇಲ್ಲಿ ದಲಿತ ಹೆಣ್ಣೊಬ್ಬಳ ಮೂಲಕ ಪ್ರತಿಪಾದಿತವಾಗಿದೆ.

ತಾನು ಇಷ್ಟಪಟ್ಟದ್ದನ್ನು ಹೇಗಾದರೂ ಮಾಡಿ ಪಡೆಯುವ ಪ್ರಯತ್ನ, ಗಂಡಿನ ಸಾಹಸಗಳಲ್ಲಿರುತ್ತದೆ. “ಬೆದರೆಲೆ ಚದುರೆ’ ಕಥನಗೀತೆಯಲ್ಲಿ ತಮ್ಮ ರಾಮಯ್ಯ “ಬೆದರೆಲೆ ಚದುರೆ’ಯನ್ನು ಹೆಂಡತಿಯಾಗಿ ತರಬೇಕೆಂದು ಬಯಸಿ ಅಡವಿಗೆ ಹೋಗುತ್ತಾನೆ. ಅಜ್ಜಿಯೊಬ್ಬಳ ಸಹಾಯದಿಂದ ಅವಳನ್ನು ಪಡೆಯುತ್ತಾನೆ. ದಾರಿಯಲ್ಲಿ ಬಂದ ಕಷ್ಟಗಳನ್ನೆಲ್ಲ ನಿವಾರಣೆ ಮಾಡಿಕೊಂಡು ತನ್ನ ಕಾರ‍್ಯದಲ್ಲಿ ಯಶಸ್ಸು ಪಡೆಯುತ್ತಾನೆ. ಕಿರಿಯ ತಮ್ಮನ ಸಾಹಸ ಪ್ರದರ್ಶನದ ಜನಪದ ಆಶಯ ಇಲ್ಲಿದೆ.

ಅತ್ತೆ-ಸೊಸೆಯ ಜಗಳ ಮಲತಾಯಿ ಧೋರಣೆ ಇವೆಲ್ಲ ಜನಪದ ಸಾಹಿತ್ಯದ ಮಹತ್ವದ ಆಶಯಗಳು. ಪುರುಷ ಪ್ರಧಾನ ಸಮಾಜ ಮೌಲ್ಯಗಳು ಇಂಥ ಪರಿಸ್ಥಿತಿಗೆ ಕಾರಣವಾಗಿರುವುದು ಸುವಿದಿತ. ಆರ್ಥಿಕತೆಯ ದೃಷ್ಟಿಯಿಂದ ಮಗನ ಮೇಲೆ ಅವಲಂಬಿತವಾಗುವ ತಾಯಿ, ತನ್ನ ಅಧಿಕಾರವನ್ನು ಚಲಾಯಿಸಿ ಸೊಸೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾಳೆ. ಈ ಹಿನ್ನೆಲೆಯಲ್ಲಿ ಅತ್ತೆ, ಅತ್ತಿಗೆ, ನಾದಿನಿಯರು ನೀಡುವ ನಾನಾ ಬಗೆಯ ಕಿರುಕುಳಗಳನ್ನು ಸೊಸೆ ಸಹಿಸಬೇಕಾಗುತ್ತದೆ. ಇದರ ಜೊತೆಗೆ ಅತ್ತೆಗೆ ಯಾವುದೇ ಕಾರಣಕ್ಕಾದರೂ ಸೊಸೆಯ ಮೇಲೆ ಸಂಶಯ ಬಂದರಂತೂ ಮುಗಿದೇ ಹೋಯಿತು. “ಉತ್ತರದೇವಿ’ಯಂತೆ ಮನೆ, ಜಗತ್ತುಗಳನ್ನು ತೊರೆಯಬೇಕಾಗುತ್ತದೆ. ಉತ್ತರದೇವಿ ಹಾಡು ಜನಪ್ರಿಯವಾದುದು. ಅತ್ತೆಗೆ ಬೇಡವಾದ ಸೊಸೆ, ಗಂಡ, ತಂದೆ, ತಾಯಿ, ಬಂಧು-ಬಳಗದವರಿಂದಲೂ ತಿರಸ್ಕೃತಳಾಗಿ ಕೊನೆಗೆ ಆತ್ಮಹತ್ಯೆಗೆ ಶರಣಾಗುವುದು ಈ ಕಥನ ಗೀತೆಯ ವಸ್ತು.

“ಹಾವಿನಪದ’ದಲ್ಲಿ ಹಾವು ಕಂಡು ಭಯಪಟ್ಟ ಸೊಸೆಗೆ, ಅತ್ತೆ, ಹಾವು ಹೊಡೆದು, ಅಡಿಗೆ ಮಾಡಲು ಹೇಳಿ ಅದನ್ನು ಸೊಸೆಯೇ ಉಣ್ಣುವಂತೆ ಮಾಡಿ, ಅವಳ ಸಾವಿಗೆ ಕಾರಣಳಾಗುತ್ತಾಳೆ. ಆದರೆ ಜನಪದ ಆಶಯದಂತೆ ಮುಗ್ಧರನ್ನು, ಪ್ರಾಮಾಣಿಕ ವ್ಯಕ್ತಿಗಳನ್ನು ದೈವಕೃಪೆ ಬದುಕಿಸಿಕೊಳ್ಳುತ್ತದೆ. ಆದರೂ ಅತ್ತೆಯ ದುಷ್ಟತನವನ್ನು ಇಲ್ಲಿ ಗುರುತಿಸಬೇಕಾಗುತ್ತದೆ.

ಅತ್ತೆ ಹಾಗೂ ಅವಳಿಗೆ ಸಹಾಯಕರಾಗಿ ಅತ್ತಿಗೆ, ನಾದಿನಿಯರು, ಕೆಲವೊಮ್ಮೆ ಸವತಿಯರು ಹೆಣ್ಣಿಗೆ ಕಿರುಕುಳ ಕೊಟ್ಟು ಅವಳ ಜೀವನವನ್ನು ದುರ್ಭರಗೊಳಿಸುತ್ತಾರೆ. “ತಂಗಿಮಾದಿ’ ಹಾಗೂ ತತ್ಸಮಾನ ಆಶಯದ ಕಥನ ಗೀತೆಗಳಲ್ಲಿ ಇಂಥ ಕಷ್ಟ ಕಂಡುಬರುತ್ತದೆ. ಕೊನೆಯಲ್ಲಿ ಕಷ್ಟಕೊಟ್ಟವರಿಗೆ ಶಿಕ್ಷೆ ದೊರೆತರೂ ಹೆಣ್ಣಿನ ದುಃಖಕ್ಕೆ ಕೊನೆ ಇಲ್ಲವೆನ್ನಿಸುತ್ತದೆ.

ರಕ್ತ ಸಂಬಂಧ ಬಹಳ ಗಾಢವಾದುದೆಂಬ ನಂಬಿಕೆ ಇದ್ದರೂ, ಅಣ್ಣ-ತಂಗಿಯರ ಸಂಬಂಧ ಮಧುರವೆಂದು ಭಾವಿಸಿದರೂ ಹಣ, ಈ ಬಗೆಯ ಸಂಬಂಧವನ್ನು ಹೊಸಕಿಹಾಕಬಲ್ಲದೆಂಬುದನ್ನು “ಸತ್ಯವಂತ ನಾಗಮಣಿ’ಯಂತಹ ಗೀತೆ ತಿಳಿಸಿಕೊಡುತ್ತದೆ. ತಂಗಿಯ ಆಭರಣದಾಸೆಗಾಗಿ, ಅಣ್ಣ ಆಕೆಯನ್ನು ಕೊಲ್ಲಬಯಸುತ್ತಾನೆ. ಇದಕ್ಕೆ ವ್ಯತಿರಿಕ್ತವಾಗಿ “ತಾಯಿ ತಂದಿ ಹೊಟ್ಟಿಲೆ ಮಹಾ ಒಬ್ಬಿದ್ದನೇಳ್ರಿ ಒಬ್ಬನ’ ಕಥನ ಗೀತೆಯಲ್ಲಿ ಅಕ್ಕ, ಹಣದಾಸೆಗಾಗಿ ತಮ್ಮನನ್ನು ಕೊಲ್ಲುತ್ತಾಳೆ. “ಸಣ್ಣ ಗಂಗೆ’ಯಲ್ಲಿ ದಂಡಿಗೆ ಹೋದ ಅಣ್ಣ ತನ್ನ ಅನುಪಸ್ಥಿತಿಯಲ್ಲಿ ತಂಗಿ ಮದುವೆಯಾದಳೆಂದು ಬೇಸರಗೊಂಡದ್ದುಂಟು. ತಾನು ದಂಡಿಗೆ ಹೋಗುವ ಮುನ್ನ ಪರಪುರುಷನ ಸಂಗಮಾಡಿದ ತಂಗಿಯನ್ನು ಕೊಂದ ಕತೆ “ಸಂಗವ ಮಾಡ್ಯಾಳೆ ನಿಮ್ಮ ತಂಗಿ’ಯಲ್ಲಿದೆ. ಅದೇ ರೀತಿ, ಅವಳಿಗೆ ಇಷ್ಟವಾದವನ ಜೊತೆಗೆ, ಮದುವೆ ಮಾಡಿದ ಅಪರೂಪದ ಅಣ್ಣನೂ ಇದ್ದಾನೆ.

ಅಣ್ಣ-ತಮ್ಮಂದಿರು ಹೊಡೆದಾಡಿ ತಮ್ಮ ಸತ್ತಾಗ, ತಾಯಿಯು ಬೇಸರಗೊಂಡು ಮಗನನ್ನು ಪೋಲೀಸರಿಗೊಪ್ಪಿಸಿದ್ದಾಳೆ. “ತಮ್ಮನ ಕೊಲೆ’ ಅಂಥ ಒಂದು ಗೀತೆ. ಕೊನೆಯಲ್ಲಿ ಜಿಗುಪ್ಸೆಗೊಂಡ ತಾಯಿ, ವಿಷ ಸೇವಿಸಿ ತಾನೂ ಸಾಯುತ್ತಾಳೆ.

ಜೀವನದ ಅದಮ್ಯ ಚೇತನ ಶಕ್ತಿಯಾಗಿರುವ ಕಾಮ, ಜನಪದ ಜೀವನದಲ್ಲಿ ಮಹತ್ವದ ಪಾತ್ರವಾಡಿರುವುದರಲ್ಲಿ ಸಂಶಯವಿಲ್ಲ. ಆದರೆ ಕುಟುಂಬದ ಚೌಕಟ್ಟಿನಲ್ಲಿ ಲೈಂಗಿಕ ಸಂಬಂಧಗಳಿಗೆ ಕೊಡುವ ಮಹತ್ವ ಸಾಂಪ್ರದಾಯಿಕ ಜೀವನದಲ್ಲಿ ಅನೈತಿಕ ಸಂಬಂಧಗಳಿಗೆ ಸಿಗಲಾರದು. ಗಂಡು-ಹೆಣ್ಣುಗಳ ಅನೈತಿಕ ಸಂಬಂಧಗಳು ದುರಂತದಲ್ಲಿ ಪರ‍್ಯವಸಾನವಾಗಿರುವುದು ಅನೇಕ ಕಥನ ಗೀತೆಗಳ ಅಧ್ಯಯನದಿಂದ ತಿಳಿದುಬರುತ್ತದೆ. ತಾನು ದಂಡಿಗೆ ಹೋದಾಗ ಹೆಂಡತಿ ಅನೈತಿಕ ಸಂಬಂಧ ಹೊಂದಿರುವ ವಿಷಯ ತಿಳಿದು, ಹಿಂತಿರುಗಿಬಂದ ಗಂಡ, ಅವಳನ್ನೂ ಅವಳ ಪ್ರಿಯಕರನನ್ನೂ ಕೊಂದ ವಿಷಯ “ಜಾಯುಮಾಯದ ಗಾಣಿಗ’ ಕಥನ ಗೀತೆಯಲ್ಲಿದೆ. ಕೆಲವೊಮ್ಮೆ ಮಕ್ಕಳು ವಿಷಯ ಬಹಿರಂಗ ಮಾಡುತ್ತಾರೆಂದು ಅವರನ್ನು, ಸಾಧ್ಯವಾದರೆ ಗಂಡನನ್ನು ಕೊಲ್ಲುವ ಹೆಣ್ಣುಗಳು ಕಥನ ಗೀತೆಗಳಲ್ಲಿ ಚಿತ್ರಿತರಾಗಿದ್ದಾರೆ. ಇಂಥ ದುಷ್ಟ ಹೆಣ್ಣನ್ನು ಕಂಡು ಪ್ರಿಯಕರನೇ ಅಸಹ್ಯಪಟ್ಟುಕೊಂಡ ಕತೆ “ಗಂಡ್ನ ಕೊಂದ ಹೊನ್ನಮ್ಮನ’ ಹಾಡಿನಲ್ಲಿದೆ. ದ್ರೋಹ ಬಗೆದ ಹೆಂಡತಿಯನ್ನು ಕೊಂದರೂ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಪರಪುರುಷನೊಂದಿಗೆ ಸಂಬಂಧ ಹೊಂದಿದ, ಹೆಣ್ಣೊಬ್ಬಳನ್ನು ಅವಳ ಗಂಡ, ಬಂಧುಗಳು ತಿರಸ್ಕರಿಸಿದಾಗ ನೇಣುಹಾಕಿಕೊಂಡು ಜೀವ ತೆತ್ತ ಹೆಣ್ಣಿನ ಕತೆ “ವಲ್ಲಣದೇವಿ’ ಯಲ್ಲಿದೆ.

ದಂಡಿಗೆ ಹೋದರೂ ವೇಷ ಮರೆಸಿ ಹಿಂತಿರುಗಿ ಬಂದು ಹೆಂಡತಿಯನ್ನು ಪರೀಕ್ಷೆ ಮಾಡುವ “ಕುಸುಮಾಲೆ’ಯಂತಹ ಕಥನಗೀತೆಗಳೂ ಇವೆ. “ರಡ್ಡೇರ ಅವ್ವಣ್ಣಿ’ ಗೀತೆಯಲ್ಲಿ ತಾನು ಪ್ರೀತಿಸಿದ ಹೆಣ್ಣು ಬೇರೊಬ್ಬನನ್ನು ಮದುವೆಯಾದರೂ ಆಳಬೇಕೆಂದು ಬಯಸಿದ ಗಂಡು ತಾಳ್ಮೆಯಿಂದಿದ್ದು, ಅವಳು ವಿಧವೆಯಾದಾಗ ಮತ್ತೆ ಹಿಂದಿನ ಪ್ರೀತಿಯನ್ನೇ ತೋರಿಸಿ, ಅವಳೊಂದಿಗೆ ಬಾಳ್ವೆ ಮಾಡುತ್ತಾನೆ. ಇಂಥ, ಪ್ರೇಮದ ಪರಾಕಾಷ್ಠೆಯನ್ನು ನಾವು “ಯಲುರಾಜನ ಮಡದಿ’ಯಲ್ಲಿ ನೋಡುತ್ತೇವೆ. ತಾನು ಅಪಾರವಾಗಿ ಪ್ರೀತಿಸುತ್ತಿದ್ದ ಹೆಂಡತಿ, ಪರಪುರುಷನ ಸಂಗ ಮಾಡಿದರೂ ವಿಚಲಿತನಾಗದೇ ಪ್ರಿಯಕರನೊಂದಿಗಿರುವ ಅವಕಾಶ ಮಾಡಿಕೊಟ್ಟು, ಅವಳು ಸತ್ತನಂತರ ಅವಳ ತಲೆಬುರುಡೆ ಪಡೆದು ಆರಾಧಿಸಿದ ವಿಶಿಷ್ಟ ಘಟನೆ “ಯಲುರಾಜನ ಮಡದಿ’ ಗೀತೆಯಲ್ಲಿದೆ.

ಪರಪುರುಷನೊಂದಿಗಿನ ಸಂಬಂಧಗಳಲ್ಲದೇ ಕುಟುಂಬದ ಒಳಗೂ ಗಂಡು-ಹೆಣ್ಣುಗಳ ನಡುವೆ ಅನೈತಿಕ ಸಂಬಂಧವೇರ್ಪಡುವುದಿದೆ. ಇಂಥ ಸಂಬಂಧಗಳೆಲ್ಲ ದುರಂತದಲ್ಲಿ ಪರ‍್ಯವಸಾನವಾಗಿರುವುದು ಗಮನಾರ್ಹ. “ಮಹಾದೇವಿ’ ಕಥನ ಗೀತೆಯಲ್ಲಿ ಅಣ್ಣ ದಂಡಿಗೆ ಹೋದಾಗ, ತಮ್ಮ ಅಣ್ಣನ ಹೆಂಡತಿಯನ್ನು ಬಯಸುತ್ತಾನೆ. ಸುದ್ದಿ ತಿಳಿದ ಅಣ್ಣ ದಂಡಿನಿಂದ ಬಂದು, ತಮ್ಮನನ್ನು ಉಪಾಯವಾಗಿ ಅರಣ್ಯಕ್ಕೆ ಕರೆದೊಯ್ದು ಕೊಲ್ಲುತ್ತಾನೆ. ಮೈದುನನ ಕಾಟ ತಾಳಲಾರದೇ ಉರುಲುಹಾಕಿಕೊಂಡು ಸತ್ತ ಘಟನೆ “ಏಟಕ ಏಳ ತುಂಡು ಆದ ಶಂಕರದೇವ’ದಲ್ಲಿದೆ. ಕೆಲವೊಮ್ಮೆ ಅತ್ತಿಗೆಯು ಮೈದುನನ್ನು ಪ್ರೀತಿಸಿ, ಅವನು ಒಪ್ಪದಿದ್ದಾಗ, ಬಲತ್ಕಾರದ ಸುಳ್ಳು ಆರೋಪ ಹೊರಿಸಿ, ಮೈದುನನನ್ನು ಕೊಲ್ಲಿಸಿದ್ದಿದೆ. ಆದರೆ ಸತ್ಯವಂತರಿಗೆ ಗೆಲವು ಎಂಬ ಜಾನಪದ ನೀತಿಯ ಪ್ರಕಾರ ಸತ್ತ ತಮ್ಮನನ್ನು ಮೂಕ ಪ್ರಾಣಿಗಳಾದ ಅವನ ಎತ್ತುಗಳು ಬದುಕಿಸಿಕೊಳ್ಳುತ್ತವೆ. “ಚಿತ್ತುರಾಣಿ’ ಅಂಥ ಒಂದು ಕಥನ ಕವನ. ಇಲ್ಲಿನ ತಪ್ಪಿತಸ್ಥರಿಗೆ ಕೊನೆಗೆ ಶಿಕ್ಷೆಯೂ ಆಗುತ್ತದೆ. ಕೆಲವೊಮ್ಮೆ ಹೆಂಡತಿ, ಹಾಗೂ ತಮ್ಮರ ಮೇಲೆ ಸಂಶಯಪಟ್ಟು ಅಣ್ಣ ಅವರಿಬ್ಬರನ್ನು ಕೊಂದದ್ದಿದೆ. ಹೆಂಡತಿ ಮೈದುನನ ಮೇಲೆ ಸಂಶಯಪಟ್ಟಾಗ ಸಮಾಧಾನ ಮಾಡಿದ ಗಂಡಂದಿರೂ ಇದ್ದಾರೆ. “ಆಳು ಕೂಗಿನ ಹಕ್ಕಿ’ಯಲ್ಲಿ ಅಣ್ಣಂದಿರು ತಮ್ಮನ ಹೆಂಡತಿಯನ್ನು ಬಯಸುವುದನ್ನು ಕಾಣುತ್ತೇವೆ. ತಮ್ಮನನ್ನು ನಾನಾ ರೀತಿಯಲ್ಲಿ ಹಿಂಸಿಸಿ ಕೊಂದರೂ, ಅವನು ಆಳು ಕೂಗಿನ ಹಕ್ಕಿಯಾಗಿ ಬಂದು ಅಣ್ಣ-ಅತ್ತಿಗೆಯರನ್ನು ಕೊಂದು ಸೇಡು ತೀರಿಸಿಕೊಳ್ಳುತ್ತಾನೆ. ಈ ಕತೆಯ ಆಶಯ ವಿಶಿಷ್ಟವಾಗಿದೆ.

ತಮ್ಮನ ಹೆಂಡತಿಯನ್ನು ಊರಿಗೆ ಕರೆದೊಯ್ಯುವ ನೆಪದಲ್ಲಿ ಅಣ್ಣ, ಮಾರ್ಗಮಧ್ಯದಲ್ಲಿ ಅವಳನ್ನು ಬಲಾತ್ಕಾರ ಮಾಡಿದ ಘಟನೆ “ನೀಲಗಂಗಾ’ನ ಹಾಡಿನಲ್ಲಿದೆ. ಆಘಾತಗೊಂಡ ಅವಳು ಮಡುವು ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

“ಬಯಲುಸೀಮೆಯ ಗೌಡನ ಮಗಳು’ ಹಾಡಿನಲ್ಲಿ ಗೌಡನ ಮಗಳು ಗೊಲ್ಲರ ಹುಡುಗನನ್ನು ಪ್ರೀತಿಸಿ, ತಿರಸ್ಕಾರಕ್ಕೆ ಒಳಗಾದಾಗ, ಗೊಲ್ಲರ ಹುಡುಗನನ್ನು ಕೊಲ್ಲಿಸಿ ಸೇಡುತೀರಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೆ ಗೊಲ್ಲನ ಹಸುಗಳು ತಂದೆ-ಮಗಳನ್ನು ಕೊಂದು ಗೊಲ್ಲನನ್ನು ಬದುಕಿಸಿಕೊಳ್ಳುತ್ತವೆ. ಅಧಿಕಾರ-ಸಂಪತ್ತಿನಿಂದ ಪ್ರೀತಿಯನ್ನು ಪಡೆಯಲು ಸಾಧ್ಯವಿಲ್ಲ. ಬದಲಾಗಿ ಸರ್ವನಾಶ ಖಂಡಿತ ಎಂಬುದನ್ನು ಈ ಕಥನಗೀತೆ ಪರ‍್ಯಾಯವಾಗಿ ಅರುಹುತ್ತದೆ. ಬೇಡರ ಹುಡುಗ ಬೊಮ್ಮಲಿಂಗ ಚಿಕ್ಕ ಹುಡುಗಿ ಹಿರಿದಿಮ್ಮಳನ್ನು ಕಾಡುತ್ತಾನೆ. ಬೇರೆಯವರೊಂದಿಗೆ ಅವಳ ಮದುವೆಯಾದಾಗ ಗಂಡನನ್ನೇ ಕೊಂದು ಅವಳನ್ನು ಪಡೆಯಬಯಸುತ್ತಾನೆ. ಉಪಾಯದಿಂದ ಅವನ ಇಂಗಿತವನ್ನರಿತ ಹಿರಿದಿಮ್ಮವ್ವ ಬೊಮ್ಮಲಿಂಗನನ್ನು ಕೊಂದು ತಾನು ಗಂಡನ ಚಿತೆ ಏರುತ್ತಾಳೆ. ಹೀಗೆ ದುರಂತದಲ್ಲಿ ಪರ‍್ಯವಸಾನಗೊಳ್ಳುವ ಕತೆ ಇದು.

ಜನಪದ ಸಂಸ್ಕೃತಿಯಲ್ಲಿಯೇ ಜಾತಿ ವ್ಯವಸ್ಥೆ ಆಳವಾಗಿ ಬೇರುಬಿಟ್ಟಿರುವಾಗ, ಭಿನ್ನ ಜಾತಿಯ ಗಂಡು-ಹೆಣ್ಣುಗಳು ಪರಸ್ಪರ ಪ್ರೀತಿಸಿ ವಿವಾಹವಾಗುವುದು ಒಂದು ಅಪರಾಧವೇ ಆಗಿರುತ್ತದೆ. ಇವುಗಳ ಪರಿಣಾಮ ದುರಂತವಾಗಿರುವುದೇ ಹೆಚ್ಚು. ಬೇರೆ ಜಾತಿಯ ಹೆಣ್ಣನ್ನು ಪ್ರೀತಿಸಿದ ಉಚ್ಛ ಕುಲದ ಗಂಡು, ಆ ಸಮಾಜದ ಕೋಪಕ್ಕೆ ಎರವಾಗಿ ಪ್ರಾಣಕಳೆದುಕೊಂಡ ದುರಂತ ಘಟನೆ, “ಎಳೆಯನು ಕೆಂಗಪ್ಪ ಎಳೆಗನಾತಗರಸಾಕಿ’ ಕಥನಗೀತೆಯಲ್ಲಿ ನೋಡಬಹುದು. ಪಂಥದಲ್ಲಿ ಗೆದ್ದ ಬಪ್ಪಿಂಗ ಎಂಬ ಬ್ರಾಹ್ಮಣ ಯುವಕನ ತಂಗಿಯನ್ನು ಬಮ್ಮಿಂಗ ಎಂಬ ಹೊಲೆಯರ ಯುವಕ ಮದುವೆಯಾಗುತ್ತಾನೆ. ಆದರೆ ತಂಗಿ ಅವನೊಂದಿಗೆ ಬಾಳಲಾರದೇ ಬಾವಿಗೆ ಹಾರಿ ಪ್ರಾಣಕಳೆದುಕೊಳ್ಳುತ್ತಾಳೆ. ಸ್ನೇಹದಲ್ಲಿ ಜಾತಿ ಅಡ್ಡ ಬರದಿದ್ದರೂ ವಿವಾಹ ಮತ್ತಿತರ ಸಂಬಂಧದಲ್ಲಿ ಜಾತಿಯ ಕಟ್ಟುಪಾಡುಗಳನ್ನು ಅನುಸರಿಸಲು ಸಾಧ್ಯವಾಗದ ಮಾನಸಿಕ ಸ್ಥಿತಿಯನ್ನು ಇಲ್ಲಿ ಗಮನಿಸುತ್ತೇವೆ.

ಸಾಮಾಜಿಕ ಕಟ್ಟು-ಕಟ್ಟಳೆಗಳು ಬಿಗಿಯಾಗಿ ಇದ್ದಾಗಲೂ ಅದನ್ನು ಮೀರಿ, ಯಾರಿಗೂ ತಿಳಿಯದಂತೆ, ಅನೈತಿಕ ಸಂಬಂಧಗಳನ್ನು ಇಟ್ಟುಕೊಂಡ ಹೆಣ್ಣುಗಳೂ ಸಮಾಜದಲ್ಲಿ ಇದ್ದಾರೆ. “ಸೂಳೇರ ಬ್ರಮ್ಮಣ್ಣ ಸತ್ತ ಸುದ್ದಿ ಕೇಳಿ’ ಗೀತೆಯಲ್ಲಿ ಪ್ರಿಯಕರ ಸತ್ತಾಗ ಕೊಡ ಒಡೆದ ನೆಪ ಮಾಡಿಕೊಂಡು ಹೆಣ್ಣೊಬ್ಬಳು “ಅತ್ತೆ ಕಾಣದಂತೆ ಮಾವ ನೋಡದಂತೆ ಯಾರೊಂದ ಕಾಣದಾಂಗ ಮಡಗಿದ್ದೆ’ “ಇಂದು ಆ ಕೊಡ ಒಡದೋಯ್ತು’ ಎಂದು ದುಃಖಿಸುವುದನ್ನು ಕಾಣುತ್ತೇವೆ.

ಮಾಟ ಮಂತ್ರಗಳ ಮೂಲಕ ಮುಗ್ದಹೆಣ್ಣುಗಳನ್ನು ವಶಪಡಿಸಿಕೊಳ್ಳುವ ಕಾಮುಕ ವ್ಯಕ್ತಿಗಳೂ ಈ ಸಮಾಜದಲ್ಲಿದ್ದಾರೆ. ಪೂಜೆ ಮಾಡಲು ಬಂದ ಗೊರವಯ್ಯ ಮನೆಸೊಸೆ ಕೋಮಲೆಯನ್ನು ಮಾಟ-ಮಂತ್ರದ ಮೂಲಕ ವಶಪಡಿಸಿಕೊಂಡದ್ದನ್ನು “ಗೊರವಯ್ಯ’ ಕಥನಗೀತೆಯಲ್ಲಿ ಕಾಣುತ್ತೇವೆ.

ಕೆಲವು ಹೆಣ್ಣುಗಳು ಜೋಗಿಯಂಥವರಿಗೆ ಮರುಳಾಗಿ ಗಂಡ ಮತ್ತು ಮಗುವನ್ನು ಬಿಟ್ಟು ಜೋಗಿಯ ಹಿಂದೆ ಹೋಗಿ ಕಷ್ಟಪಟ್ಟು ಕೊನೆಗೆ ಪಶ್ಚಾತ್ತಾಪಪಡುವುದನ್ನು “ಚಿಕ್ಕಿ ಉಂಗುರಕೆ ನಾರಿ ಮನಸೋತಳೋ’ ಮುಂತಾದ ಕಥನಗೀತೆಯಲ್ಲಿ ಕಾಣುತ್ತೇವೆ.

ದಂಡು ಊರಿನಲ್ಲಿ ಬೀಡು ಬಿಟ್ಟರೆ, ಊರ ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳುವುದು ಊರವರಿಗೆ ದೊಡ್ಡ ಸವಾಲೇ ಆಗುತ್ತಿತ್ತು. ದಂಡುನೋಡಲು ಹೊರಬಂದ ಸುಂದರವಾದ ಹುಡುಗಿಯೊಂದನ್ನು ದಂಡಿನ ಅಧಿಕಾರಿಗಳು ಬಲಾತ್ಕಾರದಿಂದ ಕೊಂಡೊಯ್ದು ಅತ್ಯಾಚಾರವೆಸಗಿ ಕೊಂದ ಅಮಾನವೀಯ   ಘಟನೆಯೊಂದನ್ನು “ದಂಡಬಂತವ್ವಾ ದಂಡು’ ಪರಿಣಾಮಕಾರಿಯಾಗಿ ಚಿತ್ರಿಸಿದೆ.

ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯನ್ನು ದಂಡಿಸುವ ಸೊಕ್ಕು, ಅಧಿಕಾರ ಮದದಲ್ಲಿರುವುದನ್ನು “ಹೂಗಿನ ಮಲ್ಲು’ ಕಥನ ಗೀತೆ ಎತ್ತಿ ತೋರಿಸುತ್ತದೆ. ಆನೆಯ ಸರಪಳಿ ದಾಟಿದಳೆಂದು ಆನೆಯಿಂದಲೇ ತುಳಿಸುವ ಶಿಕ್ಷೆ ಕೊಟ್ಟಾಗ, ಮಾಂತ್ರಿಕ ಶಕ್ತಿಯಿಂದ ಹೂಗಿನಮಲ್ಲು ಪಾರಾಗಿ ಬರುತ್ತಾಳೆ. ಮುಗ್ಥರನ್ನು ಕೊನೆಯಲ್ಲಿ ರಕ್ಷಿಸಲಾಗಿದೆ ಎಂಬುದು ಸಮಾಧಾನಕರ ಅಂಶ.

ಜನಪದ ಕವಿಗಳು ಬರಗಾಲವನ್ನೂ ಅದರಿಂದುಂಟಾದ ಬವಣೆಗಳನ್ನು ಚಿತ್ರಿಸಿರುವುದು ಮಹತ್ವದ ಸಂಗತಿ. ಬಡತನದ ಬವಣೆಯಿಂದ ಮೊದಲೇ ಕಂಗಾಲಾದ ಜೀವಗಳು ಬರಗಾಲದಿಂದ ಮತ್ತಷ್ಟು ಗತಿಗೆಟ್ಟು ಹೆಣವಾದ ದುರ್ಘಟನೆ, “ಬರಗಾಲದ ಬವಣೆ’ “ಬರದ ಹಾಡು’ಗಳಲ್ಲಿ ಮಾರ್ಮಿಕವಾಗಿ ಚಿತ್ರಿತವಾಗಿದೆ. ಬರಗಾಲದಲ್ಲಿ ವ್ಯಾಪಾರ ಮಾಡಲು ಹೋಗಿ ಆದ ನಷ್ಟದ ವರ್ಣನೆ, ಈ ಸಂದರ್ಭದಲ್ಲಿ ವ್ಯಾಪಾರಿಗಳು ತೋರಿದ ಮಾನವೀಯತೆ, “ಬರಗಾಲ ದೇಶದ ವ್ಯಾಪಾರ’ದಲ್ಲಿದೆ.

ಪರವೂರಿಗೆ ಓದಲು ಬಂದ ಶ್ರೀಮಂತ ಮನೆತನದ ಮುಗ್ಧ ಹುಡುಗನೊಬ್ಬನಿಗೆ ಮೋಸ ಮಾಡಿ, ಅವನ ಬಳಿ ಇರುವ ದುಡ್ಡು-ಆಭರಣ ಕಸಿದುಕೊಂಡು ಬಾವಿಗೆ ದೂಡಿದ ಘಟನೆ, “ತುಂಬಿದ ಬಳ್ಳಾರಿವಳಗೆ’ ಕಥನಗೀತೆಯಲ್ಲಿದೆ. ಹಣದ ಮುಂದೆ ಸಂಬಂಧಗಳೂ ಅಮುಖ್ಯವೆನ್ನುವ ವಾಸ್ತವತೆ ಈ ಘಟನೆಯ ಮೂಲಕ ಚಿತ್ರಿತವಾಗಿದೆ.

ಪುಂಡನೊಬ್ಬ ಪೋಲಿಯಾಗಿ ತಿರುಗುತ್ತ ಮನೆಗಳಲ್ಲಿ ಕದಿಯುತ್ತಾನೆ. ಆದರೆ ಎಲ್ಲಿಯೂ ಸಿಕ್ಕಿಬೀಳದೆ ಹಿಡಿಯಲು ಬಂದ ಪೋಲೀಸರನ್ನೇ ಮಣ್ಣು ಮುಕ್ಕಿಸುವ ಅವನ ಠಕ್ಕತನ “ಊರಪೋರ’ ಗೀತೆಯಲ್ಲಿ ನಿರೂಪಿತವಾಗಿದೆ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಕರಬಂದಿ ಚಳವಳಿಯಲ್ಲಿ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ವ್ಯಕ್ತಿಗಳು ಪ್ರಸಿದ್ಧಿಯನ್ನು ಹೊಂದಿ ಅವರಿಗೆ ಸಂಬಂಧಿಸಿದಂತೆ ಅನೇಕ ದಂತಕತೆಗಳು ಸೃಷ್ಟಿಯಾದಂತೆ ಸಮಾನ ಆಶಯ “ಊರ ಪೋರ’ ನಂತಹ ಕತೆಯಲ್ಲಿಯೂ ವ್ಯಕ್ತವಾಗಿದೆ.

“ಹಲಸಿನಹಕ್ಕಿ’ ಒಂದು ಚಿಕ್ಕ ಹಕ್ಕಿ. ದೊಡ್ಡ ವ್ಯಕ್ತಿಗೆ ಸೇರಿದ ಮರವೊಂದರ ಪೊಟರೆಯಲ್ಲಿ ಮರಿಗಳು ಸಿಲುಕಿಕೊಂಡಾಗ, ಹೊರತೆಗೆಯಲು ವಿಫಲವಾಗಿ, ಅನೇಕರನ್ನು ಬೇಡಿಕೊಂಡರೂ ಪ್ರಯೋಜನವಾಗದಿದ್ದಾಗ, ನೇರವಾಗಿ ಅರಸನಿಗೇ ಅವರ ವಿರುದ್ಧ ದೂರು ನೀಡುತ್ತದೆ. ಅದರ ಫಲವಾಗಿ ಕೊನೆಗೆ ಮರಿಗಳು ತಾಯ ರಕ್ಷಣೆ ಪಡೆಯುತ್ತವೆ. ಸಾಂಕೇತಿಕವಾದ ಕಥನಗೀತೆ ಇದಾಗಿದ್ದು, ದೊಡ್ಡವರ ತಂಟೆಗೆ ಹೋಗಬೇಕಾದರೆ ದೊಡ್ಡವರನ್ನೇ ಹಿಡಿಯಬೇಕು ಎಂಬ ತಂತ್ರವನ್ನು ಬೋಧಿಸುವಂತಿದೆ. ಇಲ್ಲಿ ಪುಟ್ಟಹಕ್ಕಿ ನಿರಂತರ ಪ್ರಯತ್ನ, ಧೈರ‍್ಯಗಳು ಮೆಚ್ಚುವಂತಿವೆ.

ಜನಪದ ನಿತ್ಯ ಜೀವನದಲ್ಲಿ ಹಾಸ್ಯಕ್ಕೆ ವಿಶಿಷ್ಟ ಸ್ಥಾನವಿದೆ. ಮನಸ್ಸನ್ನು ಅರಳಿಸುವ ನವಿರಾದ ಹಾಸ್ಯ, ಅವರಿಗೆ ಹೆಚ್ಚುಪ್ರಿಯ. ಹಾಸ್ಯ ಘಟನೆಗಳನ್ನು ಕುರಿತ ಕಥನಗೀತೆಗಳೂ ಜನಪದ ಸಾಹಿತ್ಯದಲ್ಲಿ ಸಾಕಷ್ಟಿವೆ. ಅತ್ತೆಯನ್ನು ಕೊಲ್ಲಲು ಸೊಸೆ ಪ್ರಯತ್ನಪಟ್ಟು, ಕೊನೆಗೆ ತಾನೇ ಆ ತಂತ್ರಕ್ಕೆ ಬಲಿಯಾದ ಸ್ವಾರಸ್ಯಕರ ಘಟನೆ “ಮಾಡಿದಾಕಿ ಉಣತಾಳ ಮಣಿಯಂತ ಕಡಬೂ’ನಲ್ಲಿ ನಿರೂಪಿತವಾಗಿದೆ. ಪ್ರೀತಿಯ ಹೆಂಡತಿ ನೂಲು ತೆಗೆಯಲಿ ಎಂದು ರಾಟೆ ಮತ್ತು ಇತರ ಸಾಮಗ್ರಿಗಳನ್ನು ಕಷ್ಟಪಟ್ಟು ಒದಗಿಸಿದರೆ, ಕೊನೆಯಲ್ಲಿ ಆಕೆಯಿಂದ ಬಂದ ಉತ್ತರ “ನೂಲಲ್ಲಿಕ್ಕೆ ಬರುವುದಿಲ್ಲ’ ಎಂಬುದು ! “ನೂಲೊಲ್ಯಾಕೆ ಚೆನ್ನಿ’ ಸಂವಾದದ ತಿರುಳು ಈ ಬಗೆಯದು. ಅದೇ ರೀತಿ “ಇಡ್ಲಿ ಮಾದಮ್ಮ’, “ಕಿವುಡರು’, “ಹೊಗೆಸೊಪ್ಪಿನ ತೆವಲು’, “ಮೀನಿನೆಸರು’, “ತ್ವಾಡನ್ಗೆ ತೋಳ ಬಂದಿ ಹೆಗ್ಗಣಕೆ ಎಡೆಕಟ್ಟು’ ಮುಂತಾದ ಕಥನಗೀತೆಗಳಲ್ಲಿ ತಿಳಿಯಾದ ಹಾಸ್ಯ, ನೀತಿ ಮುಂತಾದವು ಮನಂಬುಗುವಂತಿದೆ. ಕಾಟಿವಕ್ಕಲು ಕೊಣವೇಗೌಡನ ಹಾಡಿನಲ್ಲಿ ಅವನ ಹೊಟ್ಟೆಬಾಕತನವೇ ಅವನಿಗೆ ಮೃತ್ಯುವಾಗುತ್ತದೆ. ಹೊಸ್ಮಣ್ ನಾಯ್ಕನ ಕತೆಯಲ್ಲೂ ನವಿರಾದ ಹಾಸ್ಯವಿದೆ. ಹೀಗೆ ಜನಪದರು ಹಾಸ್ಯ ಮತ್ತು ನೀತಿ ಎರಡನ್ನೂ ಘಟನೆಯಲ್ಲಿ ಬೆರೆಸಿ, ಸ್ವಾರಸ್ಯಕರವಾಗಿ ಅಭಿವ್ಯಕ್ತಗೊಳಿಸುವುದನ್ನು ಹಾಸ್ಯಪ್ರಧಾನ ಕಥನ ಗೀತೆಗಳಲ್ಲಿ ನೋಡಬಹುದಾಗಿದೆ.

ಪ್ರಸ್ತುತ ಸಂಕಲನದ ಕಥನ ಗೀತೆಗಳ ಆಯ್ಕೆಗಾಗಿ ಕನ್ನಡದಲ್ಲಿ ಪ್ರಕಟವಾದ ಕಥನಗೀತ ಸಂಕಲನಗಳಲ್ಲಿ ಬಹಳಷ್ಟನ್ನು ಅವಲೋಕಿಸಲಾಗಿದೆ. ಪುಟಗಳ ಪರಿಮಿತಿಯಿಂದ ಕೆಲವು ಮಹತ್ವದ ಕಥನ ಗೀತೆಗೆ ಸಂಬಂಧಿಸಿದಂತೆ ಪಾಠಾಂತರಗಳನ್ನು ಹಾಗೂ ಸಮಾನ ಆಶಯದ ಕಥನಗೀತೆಗಳನ್ನು ಸಂಗ್ರಹಿಸಿ, ಅಧ್ಯಯನ ಮಾಡಿ, ವರ್ಗೀಕರಿಸಿಕೊಳ್ಳಲಾಗಿದೆ. ಗೀತೆಯೊಂದರ ಪಾಠಾಂತರ ಕವನಗಳ ಸಂಖ್ಯೆ ಕೆಲವೊಮ್ಮೆ ೨೫ ಕ್ಕೂ ಮೀರಿರುವುದು ಗಮನಾರ್ಹ.

ವರ್ಗೀಕರಣದಲ್ಲಿ ಸಾಹಿತ್ಯ ಮತ್ತು ಆಶಯ ನಿರೂಪಣೆಯ ದೃಷ್ಟಿಯಿಂದ ಮುಖ್ಯವೆನ್ನಿಸಿದ ಗೀತೆಯ ಪಾಠವನ್ನು ಪ್ರಧಾನವಾಗಿ ಇಟ್ಟುಕೊಂಡು, ಉಳಿದವುಗಳ ಆಕರ ವಿವರಗಳನ್ನು ಆ ಗೀತೆಯ ಪಾಠದ ಕೊನೆಯಲ್ಲಿ ಅಡಿಟಿಪ್ಪಣಿಯ ರೂಪದಲ್ಲಿ ನೀಡಲಾಗಿದೆ. ಇದರಿಂದ ವಿವಿಧ ಬಗೆಯ ಅಧ್ಯಯನ ಮಾಡಬಯಸುವ ಆಸಕ್ತರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆಂದು ಭಾವಿಸುತ್ತೇನೆ. ಗ್ರಂಥದ ಕೊನೆಯಲ್ಲಿ ಈ ಸಂಗ್ರಹಕ್ಕೆ ಬಳಸಿಕೊಂಡ ಎಪ್ಪತ್ತೊಂದು ಕಥನಗೀತೆಗಳ ಸಂಗ್ರಹ ಗ್ರಂಥ ಪಟ್ಟಿಯನ್ನು ನೀಡಲಾಗಿದೆ. ಆ ಸಂಗ್ರಹಗಳ ಸಂಪಾದಕರಿಗೆಲ್ಲ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಸಂಗ್ರಹಿಸಿದ ಕಥನ ಗೀತೆಗಳನ್ನು ಜೆರಾಕ್ಸ್ ಮಾಡಿಸಿ ಮುದ್ರಣಕ್ಕೆ ಸಜ್ಜುಗೊಳಿಸಲು ನೆರವಾದ ಸಂಶೋಧನಾ ವಿದ್ಯಾರ್ಥಿಗಳಿಗೆ, ಮುಖ್ಯವಾಗಿ ಶ್ರೀ ಎಸ್.ಜಿ. ಬಸವರಾಜು ಇವರಿಗೆ ವಿಶೇಷ ಕೃತಜ್ಞತೆಗಳು ಮತ್ತು ಇಂತಹ ಒಂದು ವ್ಯವಸ್ಥಿತ ಸಂಗ್ರಹಕ್ಕೆ ಅವಕಾಶ ಮಾಡಿಕೊಟ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲ ಅಧಿಕಾರಿಗಳಿಗೂ, ಪರಿಶೀಲನಾ ಸಮಿತಿಯವರಿಗೂ ಮುದ್ರಣಾಲಯ ಸಿಬ್ಬಂದಿಯವರಿಗೂ ನನ್ನ ಕೃತಜ್ಞತೆಗಳು.

– ಶಾಲಿನಿ ರಘುನಾಥ