ದಿಢೀರ್ ನೆಂಟರು ಬಂದರೇ? ಶ್ಯಾವಿಗೆಗಾಗಿ ಅಂಗಡಿಗೆ ಓಡಬೇಡಿ. ತೋಟಕ್ಕೆ ಓಡಿ. ಬಾಳೆಕಾಯಿ ತಂದು ಶ್ಯಾವಿಗೆ ಮಾಡಿ. ಅದು ಪಾಯಸ, ಚಿತ್ರಾನ್ನ, ಕಾರಕಡ್ಡಿಗಳಿಗೆ ಕಚ್ಚಾವಸ್ತು. ಉಳಿದರೆ ಒಣಗಿಸಿ ಡಬ್ಬದಲ್ಲಿಡಿ.

“ಕದಳಿ ಬಾಳೆಕಾಯಿಯನ್ನು ಚಿಪ್ಪಿನೊಂದಿಗೆ ತನ್ನಿ. ಅರ್ಧ ಗಂಟೆ ಇಡ್ಲಿ ಬೇಯಿಸುವಂತೆ ಹಬೆಯಲ್ಲಿ ಬೇಯಿಸಿ. ಬಿಸಿಯಾಗಿರುವಾಗಲೇ ಸಿಪ್ಪೆ ತೆಗೆದು ಶ್ಯಾವಿಗೆ ಒತ್ತುಮಣೆಯಲ್ಲಿ ಒತ್ತಿ. ಶ್ಯಾವಿಗೆ  ಸಿದ್ಧ. ರುಚಿಗೆ ಸ್ವಲ್ಪ ಉಪ್ಪುನೀರು ಚಿಮುಕಿಸಿಕೊಳ್ಳಿ”, ಎನ್ನುತ್ತಲೇ ಪಾತನಡ್ಕ ಸುಶೀಲಾ ಎಸ್.ಎನ್. ಭಟ್ ಸ್ಯಾಂಪಲ್ ತಂದಿತ್ತರು. ‘ಬಾಳೆಕಾಯಿಯದ್ದು’ ಅಂತ. ನಾವು ನಂಬಿದೆವು, ನಾಲಗೆ ಒಪ್ಪಲಿಲ್ಲ.

ಬಿಸಿಬಿಸಿ ತಿಂದರೆ ಅಕ್ಕಿ ಶ್ಯಾವಿಗೆಯೇ! ಆರಿದಾಗ ಸ್ವಲ್ಪ ಗಟ್ಟಿ. ಸಿಪ್ಪೆಯ ಚೊಗರಿನ ಪ್ರಸಾದ – ಹದ ಕಪ್ಪು ಬಣ್ಣ. ರುಚಿ ಬದಲಾಗುವುದಿಲ್ಲ. ಒದಗು ಜಾಸ್ತಿ. ಬೆಳಗ್ಗೆ ಒತ್ತಿದ್ದು ರಾತ್ರಿಯ ವರೆಗೂ ಹಳಸುವುದಿಲ್ಲ.

ಇದೇ ಶ್ಯಾವಿಗೆಗೆ ಸುಶೀಲಾ ಭಟ್ಟರು ವಿವಿಧ ರೂಪ ಕೊಡುತ್ತಾರೆ. ಬೆಳಗ್ಗಿನ ಶ್ಯಾವಿಗೆ ಮಧ್ಯಾಹ್ನಕ್ಕೆ ಚಿತ್ರಾನ್ನ. ಸಂಜೆ ಒಗ್ಗರಣೆ ಮೆತ್ತಿಕೊಂಡು ಉಪ್ಪುಕರಿ. ಇನ್ನೂ ಉಳಿದರೆ ಎಣ್ಣೆ ಬಾಣಲೆಗೆ ಇಳಿದೇರಿ ಕುರುಕುರು ತಿಂಡಿ.

ನಾಲ್ಕು ಜನಕ್ಕೆ ಮೂರು ಚಿಪ್ಪು (೨೫ ಕಾಯಿ – ಒಂದೂವರೆ ಕಿಲೋ) ಸಾಕು. ‘ದಿಢೀರ್ ನೆಂಟರು ಬಂದರೆ ಹೊಸ ತಿಂಡಿ. ಸಂಜೆಯ ವರೆಗೂ ಅದುವೇ’, ಪತ್ನಿಯನ್ನು ಛೇಡಿಸುತ್ತಾರೆ ಶಂಕರನಾರಾಯಣ ಭಟ್.

‘ಇದಕ್ಕೇ ಉಪ್ಪುನೀರು ಚಿಮುಕಿಸಿ, ಮೂರು ಬಿಸಿಲು ಒಣಗಿಸಿ, ಕಟ್ಟಿ ಇಡಿ. ವರುಷವಾದರೂ ಹಾಳಾಗುವುದಿಲ್ಲ. ಎಣ್ಣೆಯಲ್ಲಿ ಹುರಿದು ತಿನ್ನಲು ರುಚಿ’, ಎನ್ನುತ್ತಾರೆ ಸುಶೀಲಾ. ಒಮ್ಮೆ ತಿಂದವರು ಮತ್ತೊಮ್ಮೆ ಕೈಯೊಡ್ಡುತ್ತಾರೆ.

ಪಾಯಸಕ್ಕೂ ಸೈ! ತೆಂಗಿನಕಾಯಿ ತುರಿದು ರುಬ್ಬಿ, ಬಟ್ಟೆಯಲ್ಲಿ ಸೋಸಿ. ಇದು ‘ಮೊದಲ ಹಾಲು’. ಪುನಃ ರುಬ್ಬಿ ಸೋಸಿದರೆ ‘ಎರಡನೆಯ ಹಾಲು’. ಈ ಹಾಲಿನೊಂದಿಗೆ ಕಾಲು ಕಿಲೋ ಶ್ಯಾವಿಗೆ ಹಾಕಿ ಕುದಿಸಿ. ಕುದಿಯುತ್ತಿದ್ದಂತೆ ಕಾಲು ಕಿಲೋ ಬೆಲ್ಲ ಹಾಕಿ. ಇಳಿಸಿದ ನಂತರ ‘ಮೊದಲ ಹಾಲು’ ಸೇರಿಸಿ ಮುಚ್ಚಿಡಿ. ಪರಿಮಳಕ್ಕೆ ಏಲಕ್ಕಿ ಯಾ ವೆನಿಲ್ಲಾ. ಪಾಯಸ ರೆಡಿ. ಬೆಲ್ಲದ ಬದಲು ಸಕ್ಕರೆ? ನಿಮ್ಮಿಷ್ಟ.

“ನಮಗೆ ಅಂಗಡಿ ಶ್ಯಾವಿಗೆಯ ಪಾಯಸ ತಿಂದೇ ರೂಢಿ. ಬೇಯುವಾಗ ಅದು ಬಹುತೇಕ ಕರಗುತ್ತದೆ. ಬಾಳೆಕಾಯಿಯದು ಹಾಗಲ್ಲ. ಸುಲಭದಲ್ಲಿ ಕರಗುವುದಿಲ್ಲ, ಜಗಿಯಲು ಸಿಗುತ್ತದೆ. ರುಚಿಗೆ ಸಕ್ಕರೆಗಿಂತ ಬೆಲ್ಲ ಒಳ್ಳೆಯದು”- ಎಸ್.ಎನ್.ಭಟ್ ಶಿಫಾರಸು.

ಸುಶೀಲಕ್ಕ ಕದಳಿ ಬಾಳೆಕಾಯಿಯ ಹಪ್ಪಳವನ್ನೂ ಮಾಡುತ್ತಾರೆ. ವಿಧಾನ ಹೀಗೆ: ಬೇಯಿಸಿ, ಸಿಪ್ಪೆ ತೆಗೆದು ಉಪ್ಪು, ಮೆಣಸು ಹಾಕಿ ರುಬ್ಬಿ. ನಂತರ ಹಪ್ಪಳ ಮಾಡುವ ಕ್ರಮ ಗೊತ್ತೇ ಇದೆ. ಈ ಹಪ್ಪಳ ನಸುಗಪ್ಪು. ‘ಹಲವರಿಗೆ ಕೊಟ್ಟಿದ್ದೇನೆ. ಬದಿಯಡ್ಕದ ‘ಮಹಿಳೋದಯ’ದಲ್ಲಿ ಮಾರಾಟಕ್ಕಿಟ್ಟಿದ್ದೆ. ಕೇಳಿ ಪಡೆದುಕೊಳ್ಳುತ್ತಾರೆ.’

ಯಂತ್ರಚಾಲಿತ ಒತ್ತುಮಣೆಯಿದ್ದರೆ ದೊಡ್ಡ ಪ್ರಮಾಣದಲ್ಲಿ ಶ್ಯಾವಿಗೆ ಮಾಡಬಹುದು.  ‘ಮ್ಯಾಗಿ ಸುಲಭದಲ್ಲಿ ಸಿಕ್ಕುವಾಗ ಇದು ಯಾರಿಗೆ ಬೇಕು’ ಮಾತಿನ ಮಧ್ಯೆ ಸುಶೀಲಕ್ಕನ ವಿಷಾದ. ದರ ಕಡಿಮೆಯಾದಾಗ ಮಹಿಳಾ ಸಂಘಗಳು ಸೇರಿ ಹೀಗೇಕೆ ಬಾಳೆಕಾಯಿಯ ಮೌಲ್ಯವರ್ಧನೆ ಮಾಡಬಾರದು?

  

ಕಚ್ಚಾ ಬಾಳೆಕಾಯಿಗಿಂತ ಅದನ್ನು ಉತ್ಪನ್ನ ಮಾಡಿ ಮಾರಿದರೆ ದುಪ್ಪಟ್ಟು ಆದಾಯವೆಂದು ಸುಶೀಲಕ್ಕ ಕಂಡುಕೊಂಡಿದ್ದಾರೆ. ಇವರ ತೋಟದ ಉತ್ಪನ್ನಗಳ ಒಂದು ಚಿಕ್ಕ ಭಾಗ ಹಪ್ಪಳ, ಜ್ಯೂಸ್ ಆಗಿಯೇ ಗೇಟಿನ ಹೊರಹೋಗುತ್ತದೆ.

ಹಾಲು-ಮಜ್ಜಿಗೆ ತುಪ್ಪ, ಉಪ್ಪಿನಕಾಯಿಯಿಂದ ತೊಡಗಿ ಜ್ಯಾಂ, ಜೆಲ್ಲಿ, ನೇರಳೆಹಣ್ಣು ಜ್ಯೂಸ್, ನೆಲ್ಲಿಕಾಯಿ ಜ್ಯೂಸ್, ಮಾಂಬಳ, ಕೂವೆಹುಡಿ, ವೀಳ್ಯದೆಲೆ, ಹಲ್ವ, ಸೆಂಡಿಗೆ, ಸೋಂಟೆ – ಹೀಗೆ ಮೂರು ವರುಷಗಳಿಂದ ತುಂಬಾ ಕೈಕೆಲಸ.  ಕೇಶರಂಜಿನಿ ಹರ್ಬಲ್ ಹೇರ್ ವಾಶ್ ಪೌಡರಿಗೆ ಮೊದಲ ಮಣೆ. (ಅಪ, ಸೆ., ೦೪) ಪತಿಯ ಪೂರ್ತಿ ಸಹಕಾರ. ಮನೆ ಉತ್ಪನ್ನಗಳಿಗೆ ಅದರದ್ದೇ ಆದ ಮಾರಾಟ ಜಾಲ. ಜನ ಹುಡುಕಿ ಬರುತ್ತಾರೆ.

“ಪುರುಸೊತ್ತಿಲ್ಲ, ಮಾರಾಟವಾಗುವುದಿಲ್ಲ ಎಂಬ ‘ಇಲ್ಲ’ಗಳಿಂದ ಹೊರಬನ್ನಿ” – ಮಹಿಳೆಯರಿಗೆ ಸುಶೀಲಕ್ಕನ ಕರೆ. “ಸಮಯವೆಂಬುದು ನಮ್ಮ ಕೈಯಲ್ಲಿದೆ. ಅದನ್ನು ಸರಿದೂಗಿಸುವವರೂ ನಾವೇ. ಹಾಗಾಗಿ ಮನೆಕೆಲಸ ಹೊರಾತಾಗಿ ಸಿಗುವ ಸಮಯವನ್ನು ‘ಮೌಲ್ಯವರ್ಧನೆ’ಗೆ ಬಳಸಿಕೊಂಡರೆ ಕೈಗಾಸಿಗೆ ತೊಂದರೆಯಿಲ್ಲ. ಮನಸ್ಸು ಬೇಕು ಅಷ್ಟೇ”.

ಸುಶೀಲಾ ಭಟ್ಟರ ಹುಮ್ಮಸ್ಸಿನ ಹಿಂದೆ ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರದ ಗೃಹವಿಜ್ಞಾನ ವಿಭಾಗದ ತಾಂತ್ರಿಕಾಧಿಕಾರಿ ಶ್ರೀಮತಿ ಸರಿತಾ ಹೆಗಡೆಯವರ ಬೆಂಬಲವಿದೆ.

ವಿಳಾಸ: ಸುಶೀಲಾ ಎಸ್.ಎನ್.ಭಟ್, ಪಾತನಡ್ಕ,
ಅಂಚೆ : ಕೋಟೂರು, ಕಾಸರಗೋಡು ಜಿಲ್ಲೆ – ೬೭೧ ೫೪೨
ದೂರವಾಣಿ: ೦೪೯೯೪-೨೫೦೩೩೬