ಖ್ಯಾತ ಅಮೇರಿಕನ್‌ ಶಿಕ್ಷಣ ಚಿಂತಕ ಜಾನ್‌ ಹೋಲ್ಟ್‌ ಅವರ ‘ಎಸ್ಕೇಪ್‌ ಫ್ರಂ ಚೈಲ್ಡ್‌ಹುಡ್‌’ (೨೦೦೩ ಭಾರತೀಯ ಆವೃತ್ತಿ) ಎಂಬ ಬಾಲ್ಯಾನುಭವಗಳ ಹಾಗೂ ಮಕ್ಕಳು ಸ್ಥಾಪಿಸಿಕೊಳ್ಳಲೇಬೇಕಾದ ಹಕ್ಕುಗಳ ಬಗೆಗಿನ ಲೇಖನ ಸಂಕಲನವನ್ನು ಓದುತ್ತ ಹೋದಂಥೆ ನನ್ನ ಬಾಲ್ಯದ ಹಾಗೂ ಹದಿಹರೆಯದ ದಿನಗಳು ಗರಿಬಿಚ್ಚಿದವು. ನನ್ನ ತಲೆಮಾರಿನ ಹಲವರು ಅನುಭವಿಸಿದ ಬಾಲ್ಯ ಹಾಗೂ ಕಣ್ಣಮುಂದಿನ ತಲೆಮಾರು ಅನುಭವಿಸುತ್ತಿರುವ ಬಾಲ್ಯ ಬಗೆಯ ಬಾಗಿಲಿಗೆ ಬಂದು ಮಾತಿನ ರೂಪದಲ್ಲಿ ತೆರೆದುಕೊಂಡಟಿತು. ನನ್ನ ಬಗೆತೆರೆದು ಆಡಿದ ಮಾತುಗಳನ್ನು ಬರೆಹರೂಪದಲ್ಲಿ ನಿಮ್ಮ ಮುಂದಿಡುತ್ತಿರುವೆ.  ನಮ್ಮ ಮಕ್ಕಳು ಬಾನಾಡಿಗಳಂತೆ. ಆ ಬಾನಾಡಿಗಳನ್ನು ಬಂಧಿಸಿ ಪಂಜರದಲ್ಲಿಟ್ಟು ಅವುಗಳ ಗರಿಯುದುರಿಸಿ ರೆಕ್ಕೆಪುಕ್ಕ ಕತ್ತರಿಸುವುದು ತರವಲ್ಲ. ಏಳಲಿ, ಬೀಳಲಿ, ಸಹಜಗತಿಯಲ್ಲಿ ಬಾನಾಡಿಗಳು ಬಾನಂಗಳದಲ್ಲಿ ಹಾರಾಡಲಿ ತೇಲಾಡಲಿ, ತಮ್ಮ ಬದುಕಿನ ಪಾಠಗಳನ್ನು ತಾವೇ ಕಲಿಯಲಿ. ತಮ್ಮ ಮುಂದಿನ ಗುಟುಕನ್ನು ತಾವೇ ಹುಡುಕಿಕೊಳ್ಳಲಿ. ಅದಕ್ಕೆ ನಾವು ಅಡ್ಡಿಪಡಿಸದೆ ಇಂಬಾಗೋಣ ಎಂಬುದೇ ‘ಬಾನಾಡಿಗೆ ಬಂಧನವೆ?’ ಎಂಬ ಕೃತಿಯ ಹಿಂದಿರುವ ಆಶಯ. ಎಂದಿನಂತೆ ಈ ಪುಸ್ತಕವನ್ನು ಪ್ರಕಟಿಸುತ್ತಿರುವ ನವಕರ್ನಾಟಕ ಪ್ರಕಾಶನದ ಶ್ರೀ ಆರ್.ಎಸ್‌. ರಾಜಾರಾಮ್‌ ಅವರಿಗೆ ನಾನು ಚಿರ ಋಣಿ. ಐವತ್ತರ ಸಡಗರ ಆಚರಿಸಿದ ನವಕರ್ನಾಟಕ ಪ್ರಕಾಶನ ನನ್ನನ್ನು ಲೇಖಕನೆಂದು ಗುರುತಿಸಿ ನಾಡಿಗೆ ಪರಿಚಯಿಸಿದೆ.  ನನ್ನನ್ನು ಬೆಳೆಸಿದೆ. ನನಗೊಂದು ಓದುಗ ವರ್ಗವನ್ನೂ ಕಲ್ಪಿಸಿದೆ. ನವಕರ್ನಾಟಕ ಪ್ರಕಾಶನ ಸದಭಿರುಚಿಯ ಪುಸ್ತಕಗಳನ್ನು ಪ್ರಕಟಿಸುತ್ತಾ ಮನುಕುಲದ ಸೇವೆ ಮಾಡುತ್ತಾ ನೂರುಕಾಲ ಬಾಳಲಿ.

ನವಕರ್ನಾಟಕದ ಎಲ್ಲ ಸಂಗಾತಿಗಳಿಗೆ ನಾನು ಅಭಾರಿಯಾಗಿದ್ದೇನೆ . ಈ ಕೃತಿಯನ್ನು ಬರೆಯುತ್ತಿರುವ ಕಾಲಕ್ಕೆ ನನ್ನ ಕಣ್ಮುಂದೆ ಬಂದ ನನ್ನ ತಂದೆ-ತಾಯಿ, ಬಂಧು-ಬಳಗ, ಮಡದಿ-ಮಗಳು, ಒಡನಾಡಿಗಳು ಎಲ್ಲರಿಗೂ ನಾನು ಋಣಿಯಾಗಿರುವೆ. ಏಕೆಂದರೆ ನನ್ನನ್ನು, ನನ್ನ ತಲೆಮಾರನ್ನು ನೋಡಿಕೊಳ್ಳಲು ಕನ್ನಡಿಯನ್ನು ಕೊಟ್ಟವರೇ ಅವರಲ್ಲವೆ?

ಮಹಾಬಲೇಶ್ವರ ರಾವ್
ಉಡುಪಿ