ಕನ್ನಡ ಸಾಹಿತ್ಯದ ಸೇವೆಯನ್ನು ಈಗ ಮಾಡುತ್ತಿರುವ, ಮುಂದೆ ಇನ್ನೂ ಹೆಚ್ಚಾಗಿ ಮಾಡುವವರಾಗಿರುವ ಹೊಸ ಕವಿಗಳಲ್ಲಿ ಪುಟ್ಟಪ್ಪನವರು ಹೆಸರುವಾಸಿ ಪಡೆದಿರತಕ್ಕವರು; ಪ್ರಮುಖರಾಗಿರತಕ್ಕವರು. ಅವರ ಕವನಗಳು, ಕಥೆ, ವಿಮರ್ಶೆ ಮೊದಲಾದುವುಗಳು ಈಗಾಗಲೇ ಅನೇಕವಾಗಿ ಪ್ರಕಟವಾಗಿವೆ. ಅವರ ಕವಿತಾಶಕ್ತಿಯನ್ನು ‘ಕೊಳಲಿ’ನ ಮುನ್ನುಡಿಯಲ್ಲಿ ಶ್ರೀಮಾನ್ ಬಿ. ಎಂ. ಶ್ರೀಕಂಠಯ್ಯನವರು ಅಧಿಕಾರಯುಕ್ತವಾದ ವಾಣಿಯಿಂದ ಪ್ರಶಂಸಿಸಿರುತ್ತಾರೆ. ಆದಕಾರಣ ಪುಟ್ಟಪ್ಪನವರ ಪರಿಚಯವನ್ನು ಕನ್ನಡ ಪಾಠಕರಿಗೆ ಹೊಸದಾಗಿ ಮಾಡಿಕೊಡಬೇಕಾದ ಆವಶ್ಯಕವಿಲ್ಲ. ಈ ಪುಸ್ತಕದಲ್ಲಿ ಸೇರಿಸಿರುವ ನಾಟಕಗಳನ್ನು ಕುರಿತು ಒಂದೆರಡು ಮಾತುಗಳನ್ನು ಇಲ್ಲಿ ಹೇಳಿದರೆ ಸಾಕೆಂದು ತೋರುತ್ತದೆ.

‘ಯಮನ ಸೋಲು’

[1] ಸುಪ್ರಸಿದ್ಧವಾದ ಸಾವಿತ್ರಿಯ ಕಥೆ; ‘ಬಿರುಗಾಳಿ’ ಷೇಕ್ಷ್‌ಪಿಯರ್ ಮಹಾಕವಿಯ ‘ಟೆಂಪೆಸ್ಟ್’ ಎಂಬ ನಾಟಕದ ಮೂಲಭಾವಗಳನ್ನೂ ಸನ್ನಿವೇಶಗಳನ್ನೂ ಅವಲಂಬಿಸಿ ರಚಿಸಿದ ನಾಟಕ. ಈ ಎರಡು ನಾಟಕಗಳೂ ಮಹಾರಾಜರ ಕಾಲೇಜಿನ ವಿದ್ಯಾರ್ಥಿಗಳು ಆಭಿನಯಿಸಿದುವು. ‘ಯಮನ ಸೋಲು’ ಈ ಮೊದಲೇ ‘ಪ್ರಬುದ್ಧ ಕರ್ಣಾಟಕ’ದಲ್ಲಿ ಪ್ರಕಟವಾಗಿತ್ತು. ಅಲ್ಲದೆ ಈ ನಾಟಕವನ್ನು ಬೆಂಗಳೂರು, ಕಲ್ಬುರ್ಗಿ, ಬಿಜಾಪುರ ಮೊದಲಾದ ಕೆಲವು ಸ್ಥಳಗಳಲ್ಲಿ ಆಡಿಯೂ ಇದ್ದಾರೆ. ‘ಬಿರುಗಾಳಿ’ ಪ್ರಕಟನವಾಗುವುದಕ್ಕೆ ಇದೇ ಮೊದಲು.

ನಾಟಕವು ಸಂವಾದ ರೂಪವಾದ ಕಾವ್ಯ. ಆದಕಾರಣ ಅದು ನೈಜವಾಗಿ ಇರಬೇಕಾದದ್ದು ಗದ್ಯದಲ್ಲಿ – ಮಾತನಾಡುವ ಭಾಷೆಯಲ್ಲಿ. ಕೆಲವು ಸಂದರ್ಭಗಳಲ್ಲಿ ಭಾವೋದ್ರೇಕವನ್ನಾಗಲಿ ಭಾವಪರಿಪುಷ್ಟಿಯನ್ನಾಗಲಿ ಉಂಟುಮಾಡಲು ಛಂದೋಬದ್ಧವಾದ ಶೈಲಿಯಲ್ಲಿ ಹೆಚ್ಚು ಸೌಕರ್ಯಗಳುಂಟು. ಸಂಸ್ಕೃತ ನಾಟಕಗಳಲ್ಲಿ ಗದ್ಯವು ಪ್ರಧಾನವಾಗಿದ್ದು ಅಲ್ಲಲ್ಲಿ ಪದ್ಯಗಳು ಬರುತ್ತವೆ. ಇಂಗ್ಲಿಷ್ ನಾಟಕ ಕರ್ತೃಗಳಲ್ಲಿ ಪ್ರಖ್ಯಾತರಾದ ಕೆಲವರು ನಾಟಕಗಳನ್ನು ‘ಬ್ಲಾಂಕ್ ವರ್ಸ್’ ಎಂಬ ಪ್ರಾಸರಹಿತವಾದ ಪದ್ಯದಲ್ಲಿ ಬರೆಯುವ ಸಂಪ್ರದಾಯವನ್ನು ಪ್ರಚಾರಕ್ಕೆ ತಂದಿದ್ದಾರೆ. ಮೊದಮೊದಲು ಕನ್ನಡ ನಾಟಕಗಾರರು ಸಂಸ್ಕೃತ  ನಾಟಕಗಳ ಮಾದರಿಯನ್ನು ಅವಲಂಬಿಸಿದರು. ಈಗ ಪುಟ್ಟಪ್ಪನವರು ಈ ಇಂಗ್ಲಿಷ್ ಸಂಪ್ರಾದಾಯನ್ನು ಕನಡಕ್ಕೆ ತರಲು ಈ ನಾಟಕಗಳಲ್ಲಿ ಪ್ರಯತ್ನಿಸಿರುತ್ತಾರೆ. ‘ಬಿರುಗಾಳಿ’ ಯಲ್ಲಿ ಇಂಗ್ಲಿಷ್ ನಾಟಕಗಳಲ್ಲಿರುವಂತೆಯೇ ಅಲ್ಲಲ್ಲಿ – ಮಧ್ಯಮ ನೀಚ ಪಾತ್ರಗಳು ಸಂಭಾಷಣೆಯಲ್ಲಿ – ಗದ್ಯವನ್ನು ಉಪಯೋಗಿಸುತ್ತಾರೆ.

ಈ ನಾಟಕಗಳಲ್ಲಿರುವ ಪದ್ಯದ ಮೂಲವು ರಗಳೆಗಳಲ್ಲಿದೆ. ಲಲಿತ ರಗಳೆಯಲ್ಲಿ ಪ್ರತಿ ಪಾದದಲ್ಲಿಯೂ ಐದು ಮಾತ್ರೆಯ ನಾಲ್ಕು ಗಣಗಳಿರುತ್ತವೆ; ಪಾದದ ಆದ್ಯಂತಗಳಲ್ಲಿ ಪ್ರಾಸವಿರುತ್ತದೆ. ಈ ಪ್ರಾಸದ ಕಟ್ಟನ್ನು ತೆಗೆದುಹಾಕಿದರೆ ಪುಟ್ಟಪ್ಪನವರು ಬರೆದಿರುವ ಪದ್ಯದ ತಳಹದಿ ಸಿಕ್ಕುತ್ತದೆ. ಈ ಪ್ರಾಸರಹಿತವಾದ ರಗಳೆಯನ್ನು ‘ಸರಳ ರಗಳೆ’ ಎಂದು ಕರೆಯಬಹುದು.

ಈ ಸರಳ ರಗಳೆಯನ್ನು ಪುಟ್ಟಪ್ಪನವರು ಹೊಸದಾಗಿ ಕಲ್ಪಿಸಿಕೊಳ್ಳಲಿಲ್ಲ. ಅದು ಮೊದಲೇ ಪ್ರಚಾರಕ್ಕೆ ಬಂದಿತ್ತು. ಅದನ್ನು ಮೊದಲು ನಾಟಕಕ್ಕೆ ಬಳಸಿಕೊಂಡವರು ಪುಟ್ಟಪ್ಪನವರು. ಈ ‘ಸರಳ ರಗಳೆ’ ಇಂಗ್ಲಿಷ್ ‘ಬ್ಲಾಂಕ್ ವರ್ಸ’ನ್ನು ಬಹುಮಟ್ಟಿಗೆ ಹೋಲತ್ತದೆ ಇಷ್ಟೇ ಪಾದಗಳಿರಬೇಕೆಂಬ ನಿಯಮವಿಲ್ಲದಿರುವುದರಿಂದಲೂ ಪ್ರಾಸದ ನಿರ್ಬಂಧವು ಇಲ್ಲದಿರುವುದರಿಂದಲೂ ಗದ್ಯದಂತೆ ಇದು ಎಷ್ಟು ದೂರ ಬೇಕಾದರೂ ಹೋಗಬಲ್ಲದು. ಮನಸ್ಸಿನ ಭಾವಗಳನ್ನು ವ್ಯಕ್ತಗೊಳಿಸುವುದರಲ್ಲಿ ಮಾತಿನ ಭಾಷೆಗೆ ಒಂದು ಶಕ್ತಿ ಇದೆ; ಛಂದೋಬದ್ಧವಾದ ಭಾಷೆಗೆ ಒಂದು ಶಕ್ತಿ ಇದೆ. ಪುಟ್ಟಪ್ಪನವರು ಇವೆರಡನ್ನೂ ಒತ್ತಟ್ಟಿಗೆ ಸೇರಿಸಲು ಪ್ರಯತ್ನಿಸಿರುತ್ತಾರೆ. ಈ ಉದ್ದೇಶ ಸಾಧನೆಗಾಗಿ ಪದ್ಯರಚನೆಯಲ್ಲಿ ಹೆಚ್ಚು ಸ್ವಾತಂತ್ರ್ಯವನ್ನು ವಸಿರುತ್ತಾರೆ. ಗಣಕ್ಕೆ ಐದು ಮಾತ್ರ ಇರುವುದು ಅದರ ಲಕ್ಷಣವಾದರೆ ಕೆಲವು ವೇಳೆ ಎಂದರೆ ಸಂದರ್ಭಾನುಸಾರ ಗಣಕ್ಕೆ ಮೂರು, ನಾಲ್ಕು ಅಥವಾ ಆರು ಮಾತ್ರೆಗಳನ್ನು ಉಪಯೋಗಿಸುತ್ತಾರೆ. ಕೆಲವು ಪಾದಗಳಲ್ಲಿ ಗಣಗಳ ಸಂಖ್ಯೆಯೂ ಹೆಚ್ಚುಕಡಿಮೆಯಾಗುತ್ತದೆ. ಉಪಯೋಗಿಸುತ್ತಾರೆ. ಕೆಲವು ಪಾದಗಳಲ್ಲಿ ಗಣಗಳ ಸಂಖ್ಯೆಯೂ ಹೆಚ್ಚುಕಡಿಮೆಯಾಗುತ್ತದೆ.

ಹೀಗಾಗಿ ಪದ್ಯವನ್ನು ಓದುವ ಹಾಗೆ ಓದುವವರಿಗೆ ಅನೇಕ ವೇಳೆ ಎಡವಿದಂತೆ, ಮುಗ್ಗರಿಸಿದಂತೆ ಆಗುತ್ತದೆ. ಈ ‘ಛಂದೋಭಂಗ’ವು ಅಚಾತುರ್ಯದಿಂದ, ಅಜ್ಞತೆಯಿಂದ ಆದದ್ದಲ್ಲ. ಪದ್ಯರಚನೆಯಲ್ಲಿ ಪಳಗಿದ ಕೈಯುಳ್ಳ ಕವಿ ಉದ್ದೇಶಪೂರ್ವಕವಾಗಿ ನಾಟಕದಲ್ಲಿ ತಂದಿರುವುದು. ಛಂದಸ್ಸಿನ ಸಾಮಾನ್ಯ ನಿಯಮವನ್ನನುಸರಿಸಿದರೂ ಕೆಲವು ಮನೋಭಾವಗಳನ್ನು ಸುಸ್ಪಷ್ಟವಾಗಿ ತರಲಾಗುವುದಿಲ್ಲ. ಭಾವವ್ಯಂಜಕತೆಗೆ ಅಪೋಹ ಬಾರದಿರುವುದಕ್ಕಾಗಿ ಚಂದೋನಿಯಮವನ್ನು ಮೀರಿದೆ. ಛಂದಸ್ಸಿಗೆ ಕಡಿಮೆಯಾದದ್ದು ಅಥವಾ ಹೆಚ್ಚಾದದ್ದು ನಟರ ಬಾಯಿಂದ ಮಾತು ಹೊರಡುವಾಗ ಒತ್ತಿ ಉಚ್ಚಾರವಾಗುವದರಿಂದಲೋ ತಡೆದು ಅಥವಾ ವೇಗವಾಗಿ ಉಚ್ಚಾರವಾಗುವುದರಿಂದಲೋ ಹೊಂದಿಕೆಯಾದದ್ದಾಗಿ ಪರಿಣಮಿಸುತ್ತದೆ, ಎಂಬುದು ಲೇಖಕರ ಆಶಯ ಎಂಬುದನ್ನು ಪಾಠಕರು ಗಮನಿಸಬೇಕು. ಈ ಪ್ರಯೋಗ ಪರೀಕ್ಷೆಯು ಎಷ್ಟರ ಮಟ್ಟಿಗೆ ಸಫಲವಾದದ್ದೆಂಬುದು ಮುಂದೆ ಗೊತ್ತಾಗಬೇಕಾದದ್ದು. ಇಲ್ಲಿ ಈ ಸರಳ ರಗಳೆ ಹೇಗೆ ಪ್ರಯೋಗವಾಗಿದೆ ಎಂಬುದನ್ನು ಮಾತ್ರ ತಿಳಿಸಿದೆ.

‘ಬಿರುಗಾಳಿ’ ಷೇಕ್ಷಪಿಯರ್ ಕವಿಯ ‘ಟೆಂಪೆಸ್ಟ್‌’ ಎಂಬ ನಾಟಕದ ಮೂಲಭಾವಗಳನ್ನೂ ಸನ್ನಿವೇಶಗಳನ್ನೂ ಅನುಸರಿಸಿ ರಚಿತವಾಗಿದೆ ಎಂದು ಹಿಂದೆಯೇ ಹೇಳಿದೆ. ಒಂದು ಭಾಷೆಯಲ್ಲಿರುವ ನಾಟಕವನ್ನು ಇನ್ನೊಂದು ಭಾಷೆಗೆ ತರುವವರು ಮೂಲದಲ್ಲಿ ಇದ್ದುದನ್ನು ಇದ್ದಂತೆ ಶಬ್ದಶಃ ಭಾಷಾಂತರ ಮಾಡಬಹುದು; ಅಥವಾ ಮೂಲದಲ್ಲಿರುವುದನ್ನು ಹೆಚ್ಚು ಬದಲಾಯಿಸದೆ ಅದು ತಾವು ಬರೆಯುವ ಭಾಷೆಯನ್ನಾಡುವ ಜನರ ನಡೆನುಡಿಗೆ ಹೊಂದುವಂತೆ ಅವಶ್ಯಕವಾದಷ್ಟು ವ್ಯತ್ಯಾಸವನ್ನು ಮಾತ್ರ ಮಾಡಿಕೊಂಡು ಸ್ವಲ್ಪ ಹೆಚ್ಚು ಕಡಿಮೆ ಮೂಲನಾಟಕದ ಭಾವವೆಲ್ಲವೂ ಬರುವಂತೆ ಅನುವಾದಿಸಬಹುದು. ಪುಟ್ಟಪ್ಪನವರು ಈ ಎರಡು ವಿಧಾನಗಳನ್ನೂ ಅನುಸರಿಸಿಲ್ಲ. ಅವರು ಮೂಲ ಗ್ರಂಥವನ್ನು ಓದಿ, ಅದನ್ನು ಓದಿದ್ದರಿಂದ ತಮ್ಮ ಮನಸ್ಸಿನಲ್ಲಿ ಉಂಟಾದ ಮುಖ್ಯ ಮುಖ್ಯವಾದ ಚಿತ್ರಗಳನ್ನೂ ಭಾವಗಳನ್ನೂ ಆಧಾರವಾಗಿಟ್ಟುಕೊಂಡು ಒಂದು ಹೊಸ ನಾಟಕವನ್ನು ನಿರ್ಮಿಸಿರುತ್ತಾರೆ. ಇದನ್ನು ಮೂಲ ನಾಟಕದ ಭಾಷಾಂತರ ಅಥವಾ ಅನುವಾದ ಎಂದು ಹೇಳಲಾಗದು; ಆ ನಾಟಕವನ್ನು ಈ ನಾಟಕ ರಚನೆಗೆ ಪ್ರೇರಕವೆಂದು ಹೇಳಬಹುದು. ಅದರಲ್ಲಿರುವ ಅನೇಕ ಭಾವಗಳು ರೂಪಾಂತರವನ್ನು ಹೊಂದಿ ಇದರಲ್ಲಿ ಸೇರಿರುವುದು ಸ್ವಾಭಾವಿಕ.

ಕನ್ನಡ ಸಾಹಿತ್ಯಕ್ಕೆ ಒಂದು ಹಳೆಯ ಸಂಪ್ರದಾಯವಿದೆ. ಹೊಸ ಕವಿಗಳು ಅನೇಕರು ಕೇವಲ ಸಂಪ್ರದಾಯ ಶರಣರಾಗದೆ ತಮಗೆ ಯುಕ್ತವೆಂದು ತೋರಿದ ರೀತಿಯಿಂದ ಆ ಸಂಪ್ರದಾಯದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡು ಕಾವ್ಯರಚನೆ ಮಾಡುತ್ತಿದ್ದಾರೆ. ಪಾಶ್ಚಾತ್ಯ ಸಾಹಿತ್ಯದಲ್ಲಿರುವ ಕೆಲವು ಸಂಪ್ರದಾಯಗಳು ನಮ್ಮ ಸಾಹಿತ್ಯದ ಪುಷ್ಟಿಗೂ ಆವಶ್ಯಕವೆಂದು ತೋರಿದಾಗ ನಮ್ಮ ಸಂಪ್ರದಾಯಕ್ಕೆ ಅವನ್ನು ಹೊಂದಿಸಿಕೊಂಡು ಅನುಸರಿಸುತ್ತಿದ್ದಾರೆ. ಹಳೆಯದರಿಂದ ಹುಟ್ಟಿದ, ಆದರೆ ಅದರಿಂದ ಸ್ವಲ್ಪ ಭಿನ್ನವಾದ ಈ ಹೊಸ ಸಂಪ್ರದಾಯವು ಎಷ್ಟುಮಟ್ಟಿಗೆ ನಿಲ್ಲುತ್ತದೆಂಬುದು ಈ ಕವಿಗಳ ಶಕ್ತಿ ವರ್ಚಸ್ಸುಗಳನ್ನು ಅವಲಂಬಿಸುತ್ತದೆ. ಜೀವನದ ಪಥವು ಬದಲಾಯಿಸುತ್ತಿರುವ ಈ ಕಾಲದಲ್ಲಿ ಸಾಹಿತ್ಯದ ಪಥವೂ ಮಾರ್ಪಾಟನ್ನು ಹೊಂದುವುದು ಅನಿವಾರ್ಯ. ಕಾಲವೆಂಬ ಗಾಳಿ ತಾನಾಗಿ ತಾನೇ ಜಳ್ಳನ್ನು ತೂರುತ್ತದೆ; ಕಾಳು ಉಳಿಯುತ್ತದೆ. ಇದರಲ್ಲಿ ಕಾಳು ಯಾವುದು, ಜಳ್ಳು ಯಾವುದು ಎಂಬುದನ್ನು ಈಗ ಗ್ರಹಿಸಬೇಕಾದರೆ ವಿಶಾಲಭಾವವೂ ವಿಚಾರಯುಕ್ತವಾದ ಬುದ್ಧಿಯೂ ಸಹೃದಯರಿಗೆ ಸಹಜವಾದ ಸಹಾನುಭೂತಿಯೂ ಬೇಕು. ಈ ತೆರದ ಮನೋಧರ್ಮವು ಕನ್ನಡಿಗರಿಗೆ ಸ್ವಾಭಾವಿಕವಾದದ್ದೆಂಬುದನ್ನು ಕನ್ನಡ ಸಾಹಿತ್ಯ ಚರಿತ್ರೆಯನ್ನು ಓದಿದವರು ಅರಿಯದೆ ಇರಲಾರರು.

ಟಿ. ಎಸ್. ವೆಂಕಣ್ಣಯ್ಯ
ಮೈಸೂರು
ತಾ || ೨೪-೧೧-೧೯೩೦[1] ಈ ನಾಟಕ ಈಗ ಬೇರೆಯಾಗಿ ಪ್ರಕಟವಾಗಿದೆ. ಈ ಸಂಪುಟದಲ್ಲಿ ಸೇರಿಲ್ಲ.