ಬಿ.ಆರ್. ಪಂತುಲುಮನೆಮಾತು ತೆಲುಗು. ಕನ್ನಡದಲ್ಲಿ ಮತ್ತು ತಮಿಳಿನಲ್ಲಿ ಚಲನಚಿತ್ರಗಳನ್ನು ತಯಾರಿಸಿದರು. ನಾಟಕಗಳಲ್ಲಿ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದರು. ಕನ್ನಡದಲ್ಲಿ ಚಲನಚಿತ್ರಗಳನ್ನು ಮಾಡಲು ಅನೇಕರು ಹೆದರುತ್ತಿದ್ದಾಗ ಧೈರ್ಯವಾಗಿ ವರ್ತಿಸಿ ಕನ್ನಡ ಚಲನ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು.

 ಬಿ.ಆರ್. ಪಂತುಲು

ಚಲನಚಿತ್ರವನ್ನು ನೋಡದವರು ನಮ್ಮಲ್ಲಿ ಯಾರಿದ್ದಾರೆ? ತೆರೆಯಮೇಲೆ ನಡೆಯುವ ನಾಟಕವೇ ಚಲನಚಿತ್ರ. ಇದು ನಮ್ಮ ಮನಸ್ಸಿಗೆ ಸಂತೋಷ ನೀಡುತ್ತದೆ. ಇದರಿಂದ ಅನೇಕ ಹೊಸ ವಿಷಯಗಳು ತಿಳಿಯುತ್ತವೆ. ನಮ್ಮ ತಿಳಿವಳಿಕೆ ಹೆಚ್ಚುತ್ತದೆ.

ಆದರೆ ಒಂದು ಚಲನಚಿತ್ರವನ್ನು ತಯಾರಿಸುವುದು ಎಷ್ಟು ಕಷ್ಟವೆಂಬುದು ಅನೇಕರಿಗೆ ಗೊತ್ತಿಲ್ಲ. ಅದಕ್ಕೆ ತುಂಬ ಹಣ ಬೇಕು, ಬುದ್ಧಿಯೂ ಅನುಭವವೂ ಬೇಕು, ಕಥೆ ಬೇಕು, ಹಾಡು ಬರೆಯಿಸಬೇಕು, ಚೆನ್ನಾಗಿ ಅಭಿನಯಿಸುವವರು ಬೇಕು. ಕಥೆಯ ಘಟನೆಗಳು ಎಲ್ಲೆಲ್ಲಿ ನಡೆಯುತ್ತವೆಯೋ, ಸಾಧ್ಯವಾದ ಮಟ್ಟಿಗೆ ಅಲ್ಲಲ್ಲೇ ಚಿತ್ರ ತೆಗೆಯಬೇಕು. ಒಬ್ಬ ರಾಜನ ಕಥೆಯ ಚಲನಚಿತ್ರವಾದರೆ ಅರಮನೆಯಲ್ಲಿ ಚಿತ್ರ ತೆಗೆಯಬೇಕಾಗಬಹುದು. ಕಾಡಿನಲ್ಲಿ ನಡೆಯುವ ಘಟನೆಯೇನಾದರೂ ಕಥೆಯಲ್ಲಿದ್ದರೆ ಅಲ್ಲೇ ಚಿತ್ರ ತೆಗೆದರೆ ಚೆನ್ನ. ಕಥೆಯಲ್ಲಿ ಯುದ್ಧ ಬರಬಹುದು. ಆಗ ನಿಜವಾಗಿಯೂ ಯುದ್ಧ ನಡೆದಂತೆ ಚಿತ್ರ ತೆಗೆಯಬೇಕು. ಚಲನಚಿತ್ರಕ್ಕೆ ಬೇಕಾಗುವ ಧ್ವನಿಯನ್ನು ಮುದ್ರಿಸಿಕೊಳ್ಳಬೇಕು. ಛಾಯಾಚಿತ್ರದ ಜೊತೆಗೆ ಶಬ್ದ, ಸಂಗೀತ, ಸಂಭಾಷಣೆ ಎಲ್ಲವೂ ಕೂಡಬೇಕು. ಇದನ್ನೆಲ್ಲ ಸಾಧಿಸಬೇಕಾದರೆ ನಾನಾ ವಿಚಾರಗಳಲ್ಲಿ ಪಳಗಿದ ಅನೇಕ ಬಗೆಯ ಜನರ ಸಹಾಯ ಬೇಕು. ಇದಕ್ಕೆಲ್ಲ ಎಷ್ಟೊಂದು ಏರ್ಪಾಡು ಮಾಡಿಕೊಳ್ಳಬೇಕೆಂಬುದನ್ನು ನೀವೇ ಊಹಿಸಿಕೊಳ್ಳಿ. ಪ್ರತಿಯೊಂದೂ ಹೇಗೆ ಹೇಗೆ ಆಗಬೇಕೆಂಬುದನ್ನು ತೀರ್ಮಾನಿಸಿ ಅದಕ್ಕೆ ಬೇಕಾದ ಸಲಕರಣೆಗಳನ್ನೆಲ್ಲ ಸಿದ್ಧಪಡಿಸಿಕೊಂಡು ಚಿತ್ರ ತಯಾರಿಸುವುದು ಸುಲಭದ ಮಾತೇನೂ ಅಲ್ಲ.

ನಮ್ಮ ನಾಡಿನ ಸುಪ್ರಸಿದ್ಧ ಚಿತ್ರ ತಯಾರಕರೂ ಒಳ್ಳೆಯ ನಟರೂ ನಾಟಕಕಾರರೂ ಆಗಿದ್ದ ಬಿ.ಆರ್.ಪಂತುಲು ಅವರು ಕನ್ನಡದಲ್ಲೂ, ತಮಿಳಿನಲ್ಲೂ, ತೆಲುಗಿನಲ್ಲೂ, ಹಿಂದಿಯಲ್ಲೂ ಅನೇಕ ಒಳ್ಳೆಯ ಚಿತ್ರಗಳನ್ನು ತಯಾರಿಸಿದ ಸಾಹಸ ಪುರುಷರು. ಬಡತನದಲ್ಲಿ ಹುಟ್ಟಿ ಬೆಳೆದ ಪಂತುಲು ಅವರ ಜೀವನವೇ ಒಂದು ಚಲನಚಿತ್ರದ ಕಥೆಯ ಹಾಗಿದೆ.

ಒಂದು ಅನಿರೀಕ್ಷಿತ ಪ್ರಸಂಗ

ಚಿತ್ರ ತಯಾರಿಕೆಯಲ್ಲಿ ಎಂಥೆಂಥ ತೊಡಕುಗಳು ಬರಬಹುದೆಂಬುದಕ್ಕೆ ಪಂತುಲು ಅವರ ಅನುಭವಕ್ಕೆ ಬಂದ  ಒಂದು ಪ್ರಸಂಗವನ್ನು ನೋಡಿ.ಅವರು ತಯಾರಿಸಿದ ಚಿತ್ರಗಳ ಪೈಕಿ ‘ಶಭಾಸ್ ಮೀನಾ’ ಎಂಬುದೂ ಒಂದು. ಆ ಚಿತ್ರದಲ್ಲಿ ಹೆಗ್ಗಣಗಳು ಹಾವಳಿ ಮಾಡುವ ಒಂದು ದೃಶ್ಯವುಂಟು. ಕೊಠಡಿಯಲ್ಲಿ ಹೆಗ್ಗಣಗಳು ಓಡಾಡುತ್ತ ಲೂಟಿ ಮಾಡುವುದರ ಚಿತ್ರ ತೆಗೆಯುವುದಕ್ಕೆ ಎಲ್ಲವೂ ಸಿದ್ಧವಾಗಿತ್ತು. ಕೋಣೆಯಲ್ಲಿ ಬಿಡಲು ಒಂದು ಮೂಟೆಯ ತುಂಬ ಹೆಗ್ಗಣಗಳನ್ನು ಹಿಡಿಸಿ ತರಿಸಿದ್ದರು. ಕ್ಯಾಮೆರಾ ಸಿದ್ಧವಾಯಿತು. ಪ್ರಕಾಶಮಾನವಾದ ವಿದ್ಯುದ್ದೀಪಗಳು ಬೆಳಗುತ್ತಿದ್ದವು.

ಹೆಗ್ಗಣಗಳನ್ನು ತುಂಬಿದ್ದ ಚೀಲದ ಬಾಯನ್ನು ಬಿಚ್ಚಲಾಯಿತು. ಕೂಡಲೇ ಹೆಗ್ಗಣಗಳು ಸರಕ್ಕನೆ ಹೊರಬಂದು ಚೆಲ್ಲಾಪಿಲ್ಲಿಯಾಗಿ ಓಡಾಡುತ್ತವೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದರು.

ಆದರೆ ಆ ಚೀಲದಿಂದ ಒಂದು ಹೆಗ್ಗಣವೂ ಹೊರಕ್ಕೆ ಬರಲಿಲ್ಲ. ಕೆಲವು ಹೆಗ್ಗಣಗಳು ಚೀಲವನ್ನು ಕಡಿದು ತೂತು  ಕೊರೆದುಕೊಂಡು ಮೊದಲೇ ಪರಾರಿಯಾಗಿ ಬಿಟ್ಟಿದ್ದವು! ಉಳಿದವು ಉಸಿರು ಸಿಕ್ಕಿಕೊಂಡು ಚೀಲದ ಒಳಗೇ ಸತ್ತು ಬಿದ್ದಿದ್ದವು!

ಆಗ ಅವರು ಏನು ಮಾಡಬೇಕು? ಆ ದಿನ ಚಿತ್ರ ತೆಗೆಯುವುದು ಬೇಡ, ಇನ್ನೊಂದು ದಿವಸ ತೆಗೆಯೋಣವೆಂದರೆ ಅಂದು ಚಿತ್ರ ತೆಗೆಯುವುದಕ್ಕಾಗಿ ಮಾಡಿದ್ದ ಖರ್ಚೆಲ್ಲ ವ್ಯರ್ಥ. ಅಂದೇ ಚಿತ್ರ ತೆಗೆಯಲು ಹೆಗ್ಗಣಗಳೇ ಇಲ್ಲ.

ಬಂದವು ಹೆಗ್ಗಣಗಳು!

ಆಗ ಪಂತುಲು ಒಂದು ಉಪಾಯ ಹೂಡಿದರು. ಹೇಗಾದರೂ ಮಾಡಿ ಹೆಗ್ಗಣಗಳನ್ನು ಕೂಡಲೇ ಹಿಡಿದು ತರುವವರಿಗೆ ಬಹುಮಾನ ಕೊಡುವುದಾಗಿ ಹೇಳಿದರು. ಆದರೆ  ಅವನ್ನು ಚೀಲದಲ್ಲಿ ತರಬಾರದು, ಜಾಕಾಯಿ ಪೆಟ್ಟಿಗೆಯಲ್ಲಿ ತರಬೇಕು ಎಂದು ಎಚ್ಚರಿಸಿದರು. ಚೀಲದಲ್ಲಿ ತಂದಿದ್ದರಿಂದ ಅನುಭವಿಸಿದ ಕಷ್ಟ ನಷ್ಟಗಳನ್ನು ಅವರು ಮರೆಯುವುದು ಸಾಧ್ಯವೇ ಇರಲಿಲ್ಲ.

ಕೆಲಸಗಾರರು ಹೆಗ್ಗಣ ಹಿಡಿದು ತರಲು ನಾನಾ ದಿಕ್ಕುಗಳಲ್ಲಿ ಓಡಿದರು.

ಅಂತೂಇಂತೂ ಹೆಗ್ಗಣಗಳು ಬಂದವು. ಅವನ್ನು ನೋಡಿ ಅಲ್ಲಿದ್ದವರಿಗೆಲ್ಲ ಆದ ಆನಂದ ಅಷ್ಟಿಷ್ಟಲ್ಲ. ಅವನ್ನು ಕೊಠಡಿಯಲ್ಲಿ ಬಿಟ್ಟು, ಅಂದು ತೆಗೆಯಬೇಕಾಗಿದ್ದ ದೃಶ್ಯವನ್ನು ಚಿತ್ರೀಕರಿಸಿಕೊಂಡರು. ಆ ದೃಶ್ಯ ಬಲು ಸೊಗಸಾಗಿ ಬಂತು. ‘ಶಭಾಸ್ ಮೀನಾ’ ಚಿತ್ರವನ್ನು ನೋಡಿದವರೆಲ್ಲ ಆ ದೃಶ್ಯವನ್ನು ಕಂಡು ‘ಶಭಾಸ್’ ಎಂದರು.

ಎರಡು ಉಜ್ವಲ ಬಾಳುಗಳು ತೆರೆಗೆ

ಬಿ.ಆರ್. ಪಂತುಲು ಅವರ ಜೀವನದಲ್ಲಿ ಇಂಥ ಸ್ವಾರಸ್ಯ ಪ್ರಸಂಗಗಳು ಎಷ್ಟೋ ಇವೆ. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಮಹಾವ್ಯಕ್ತಿಗಳ ಚಿತ್ರಗಳನ್ನು ತೆಗೆಯುವುದಕ್ಕಾಗಿ ಅವರು ಪಟ್ಟ ಸಾಹಸ ಬಲು ದೊಡ್ಡದು. ಬ್ರಿಟಿಷರು ಭಾರತಕ್ಕೆ ಬಂದು ಇಲ್ಲಿ ತಮ್ಮ ಆಡಳಿತವನ್ನು ಸ್ಥಾಪಿಸುತ್ತಿದ್ದಾಗ ಅವರ ವಿರುದ್ಧ ಅನೇಕ ವೀರರು ಹೋರಾಡಿದರು. ಅವರ ಪೈಕಿ ತಮಿಳು ನಾಡಿನ ಪಾಂಚಾಲದ ದೊರೆ ವೀರಪಾಂಡ್ಯ ಕಟ್ಟಬೊಮ್ಮನ್ ಒಬ್ಬ. ಕರ್ನಾಟಕದ ವೀರರಾಣಿ ಕಿತ್ತೂರು ಚೆನ್ನಮ್ಮ ಒಬ್ಬಳು. ಇವರಿಬ್ಬರ ಜೀವನಗಳನ್ನೂ ಬಿ.ಆರ್.ಪಂತುಲು ಅವರು ಚಿತ್ರೀಕರಿಸಿದರು. ಸುಮಾರು ಇನ್ನೂರು ವರ್ಷಗಳ ಹಿಂದೆ ನಡೆದಂತೆಯೇ ಘಟನೆಗಳನ್ನು ತೆರೆಯ ಮೇಲೆ ಮೂಡಿಸುವುದಕ್ಕೆ ಅಗಾಧ ಶ್ರಮವೂ ವೆಚ್ಚವೂ ಆದುವು. ಆಗಿನ ಕಾಲದ ವೇಷಭೂಷಣಗಳು ಸನ್ನಿವೇಶಗಳು ಎಲ್ಲವೂ ತದ್ವತ್ತಾಗಿ ಚಿತ್ರದಲ್ಲಿ ಕಾಣುವಂತೆ ಮಾಡಲು ಅವರು ಬಹಳ ಸಿದ್ಧತೆ ಮಾಡಿಕೊಂಡರು. ಬ್ರಿಟಿಷರಿಗೂ ವೀರಪಾಂಡ್ಯ ಕಟ್ಟಬೊಮ್ಮನ್‌ಗೂ ೧೭೯೯ ರಲ್ಲಿ ನಡೆದ ಘೋರ ಯುದ್ಧವನ್ನು ಚಿತ್ರಿಸಲು ಪಂತುಲು ಅವರು ತಮ್ಮ ತಂಡದೊಂದಿಗೆ ಜಯಪುರಕ್ಕೆ ಹೋದರು. ಅಲ್ಲಿಯ ಅರಮನೆಯನ್ನೇ ಬಾಡಿಗೆಗೆ ತೆಗೆದುಕೊಂಡರು. ಅದಕ್ಕೆ ದಿನಕ್ಕೆ   ಹತ್ತು ಸಾವಿರ ರೂಪಾಯಿ ಬಾಡಿಗೆ! ಕೋಟೆಯ ಮುಂದುಗಡೆ ಸಾವಿರಾರು ಸೈನಿಕರು ಯುದ್ಧದಲ್ಲಿ ಭಾಗವಹಿಸಿದಂತೆ ಚಿತ್ರ ತೆಗೆಯಲು ಲಕ್ಷಾಂತರ ರೂಪಾಯಿಗಳು ವೆಚ್ಚವಾದುವು. ಅವರಿಗೆಲ್ಲ ಸಮವಸ್ತ್ರ, ಕುದುರೆ, ಅಸ್ತ್ರ ಮುಂತಾದವುಗಳನ್ನು ದಕ್ಷಿಣ ಭಾರತದ ಮದರಾಸಿನಿಂದ ಉತ್ತರ ಭಾರತದ ಜಯಪುರಕ್ಕೆ ಸಾಗಿಸಿಕೊಂಡು ಹೋಗುವುದು ಎಷ್ಟು ಕಷ್ಟವೆಂಬುದನ್ನು ಊಹಿಸಿಕೊಳ್ಳಿ. ಅಂತೂ ಚಿತ್ರ ಬಲು ಚೆನ್ನಾಗಿ  ಬಂತು. ಇಲ್ಲದಿದ್ದರೆ ಅದಕ್ಕೆ ಹಾಕಿದ್ದ ಇಪ್ಪತ್ಮೂರು ಲಕ್ಷ ರೂಪಾಯಿಗಳಷ್ಟು ಹಣ ನಷ್ಟವಾಗುತ್ತಿತ್ತು. ಪಂತುಲು ಅವರು  ಸಾಲ ಮಾಡಿ ಇಷ್ಟೊಂದು ಹಣ ಒದಗಿಸಿಕೊಂಡಿದ್ದರು. ಅಂತೂ ಅವರು ಹಾಕಿದ್ದ ಹಣ ಮರಳಿ ಬಂತು.

ಕಿತ್ತೂರಿನ ರಾಣಿ ಚೆನ್ನಮ್ಮ ಕನ್ನಡತಿ. ಅವಳ ಹೋರಾಟದ ಕಥೆ ನಮ್ಮ ನಾಡಿನಲ್ಲಿ ಮನೆಮಾತಾಗಿದೆ. ಆದರೆ ಅದನ್ನು ಭವ್ಯವಾಗಿ ಚಿತ್ರಿಸುವುದು ಸಾಮಾನ್ಯವೆ? ಆಕೆಯ ಕಾಲದ ಬಗ್ಗೆ ವಿಶೇಷವಾದ ಅಧ್ಯಯನ ಮಾಡಿ, ಎಲ್ಲ ಮಾಹಿತಿಯನ್ನೂ ಸಂಗ್ರಹಿಸಿದರು. ಆ ಚಿತ್ರದಲ್ಲಿ ಪಾತ್ರ ವಹಿಸಲು ತಕ್ಕವರಾದ ನಟನಟಿಯರನ್ನು ಆರಿಸಿ ಗೊತ್ತುಮಾಡಿಕೊಂಡು, ಬೇಕಾದ ಎಲ್ಲ ಸಲಕರಣೆಗಳನ್ನೂ ಸಿದ್ಧಪಡಿಸಿಕೊಂಡು ಪಂತುಲು ಚಿತ್ರ ತೆಗೆದರು. ಶ್ರೀರಂಗಪಟ್ಟಣ ಮತ್ತು ತಿರುವಣ್ಣಾಮಲೈ ಸಮೀಪದ ಕೋಟೆಗಳಲ್ಲಿ ಚಿತ್ರ ತೆಗೆಯಲಾಯಿತು. ಯುದ್ಧದ ಚಿತ್ರಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಯಿತು.

ಆ ಚಿತ್ರಕ್ಕೂ ವಿಶೇಷವಾದ ಹೊಗಳಿಕೆ ಬಂತು. ಕನ್ನಡಿಗರು ಅದನ್ನು ನೋಡಿ ಅಭಿಮಾನದಿಂದ ಬೀಗಿದರು. ಆಕೆಯ ದುರಂತವನ್ನು ಕಂಡು ಕಣ್ಣೀರಿಟ್ಟರು. ಮೂರು ಭಾಷೆಗಳಲ್ಲಿ ತಯಾರಾಗಿದ್ದ ಆ ಚಿತ್ರವನ್ನು ಇತರ ಭಾಷೆಗಳವರೂ ನೋಡಿ ಭೇಷ್ ಅಂದರು. ಅದನ್ನು ನೋಡಿದಾಗ, ಹಿಂದೆ ನಡೆದುಹೋದ ಒಂದು ಘಟನೆ ಮತ್ತೆ ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆಯೇನೋ ಎನಿಸಿತು. ಈ ಚಿತ್ರಕ್ಕೆ ಭಾರತ ಸರ್ಕಾರದ ಬೆಳ್ಳಿಯ ಪದಕದ ಬಹುಮಾನ ಬಂತು.

ಪಂತುಲು ಅವರು ಚಿತ್ರಜಗತ್ತಿನಲ್ಲಿ ಮೆರೆದ ಇಂಥ ಎಷ್ಟೋ ಸಾಹಸಗಳನ್ನು ಹೇಳುತ್ತ ಹೋಗಬಹುದು. ಇವಕ್ಕೆ ಕೊನೆ ಮೊದಲೇ ಇಲ್ಲ. ಆದರೆ ಪಂತುಲು ಎಂಬುವರು ಯಾರು? ಇವರು ಕನ್ನಡಿಗರೆ, ತೆಲುಗರೆ, ತಮಿಳರೆ? ಇವರು ಹೇಗೆ ಚಿತ್ರಲೋಕದಲ್ಲಿ ಮುಂದೆ ಬಂದರು? ಎಂಬುದನ್ನೆಲ್ಲಾ ತಿಳಿದುಕೊಳ್ಳಬೇಡವೆ?

ರಾಮಕೃಷ್ಣಯ್ಯ ಪಂತುಲು’ ಆದರು

ಪಂತುಲು ಅವರ ತಂದೆ ವೆಂಕಟಾಚಲಯ್ಯ, ತಾಯಿ ವೆಂಕಟಲಕ್ಷ್ಮಮ್ಮ. ಅವರಿಗೆ ಪಂತುಲುವೇ ಕೊನೆಯ ಮಗು. ಪಂತುಲುವಿಗೆ ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕಂದಿರು.

ಮಗು ಹುಟ್ಟಿದಾಗ ತಂದೆ ತಾಯಿ ಅದನ್ನು ರಾಮಕೃಷ್ಣ ಎಂದು ಕರೆದರು. ಅಪ್ಪಟ ಕನ್ನಡ ಹೆಸರು. ಕೋಲಾರ ಜಿಲ್ಲೆಯಲ್ಲಿರುವ ಬುಡುಗೂರು ಇವರ ಊರು. ಬುಡುಗೂರು ರಾಮಕೃಷ್ಣಯ್ಯ ಎಂಬುದೇ ಹುಡುಗನಿಗೆ ಶಾಲೆಯಲ್ಲಿ ದಾಖಲಾದ ಹೆಸರು.

ಆದರೆ ರಾಮಕೃಷ್ಣಯ್ಯನವರು ಓದುವುದನ್ನು ಬಿಟ್ಟು ಸ್ವಲ್ಪಕಾಲ ಉಪಾಧ್ಯಾಯರಾಗಿ ಕೆಲಸ ಮಾಡಿ ಅನಂತರ ನಾಟಕ ಕಂಪನಿಯೊಂದನ್ನು ಸೇರಿದರು. ಅದು ಆಗಿನ ಕಾಲದಲ್ಲಿ ಸುಪ್ರಸಿದ್ಧ ನಟರಾಗಿದ್ದ ಮಹಮ್ಮದ್ ಪೀರ್ ಸಾಹೇಬರ ‘ಚಂದ್ರಕಲಾ ನಾಟಕ ಮಂಡಲಿ’. ಅದರಲ್ಲಿ ಟಿ.ಆರ್. ಕೃಷ್ಣರಾಯರೆಂಬುವರು ಹಾರ್ಮೋನಿಯಂ ನುಡಿಸುತ್ತಿದ್ದರು. ಕಂಪನಿಯಲ್ಲಿದ್ದವರಿಗೆ ಅವರು ಮಾರ್ಗದರ್ಶಕರಾಗಿದ್ದರು. ಆದ್ದರಿಂದ ಅವರನ್ನು ಎಲ್ಲರೂ ಗುರುಗಳೆಂದೇ ಕರೆಯುತ್ತಿದ್ದರು. ಗುರುಗಳಿಗೆ ರಾಮಕೃಷ್ಣಯ್ಯನಲ್ಲಿ ತುಂಬ ಪ್ರೀತಿ. ರಾಮಕೃಷ್ಣಯ್ಯನಿಗೆ ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳು ಬರುತ್ತಿದ್ದುವು. ತೆಲುಗು ಅವರ ಮನೆಮಾತು. ಆದ್ದರಿಂದ ಕಂಪನಿಯಲ್ಲಿದ್ದವರು ರಾಮಕೃಷ್ಣಯ್ಯನೊಂದಿಗೆ ತೆಲುಗಿನಲ್ಲೇ ಮಾತಾಡುತ್ತಿದ್ದರು.

ನಾಟಕದ ಅಭ್ಯಾಸಕ್ಕೆ ಒಂದು ದಿನ ರಾಮಕೃಷ್ಣಯ್ಯ ಸ್ವಲ್ಪ ತಡವಾಗಿ ಬಂದರು. ಆಗ ಕಂಪೆನಿ ಮನೆಯಲ್ಲಿ ಎಲ್ಲರೂ ಏನೋ ತಮಾಷೆ ಮಾತಾಡುತ್ತ ಇದ್ದರು. ಪೀರ್ ಸಾಹೇಬರೂ ಖುಷಿಯಾಗಿದ್ದರು. ಗುರುಗಳ ಮುಖದಲ್ಲೂ ನಗೆ ಮಿನುಗುತ್ತಿತ್ತು. ರಾಮಕೃಷ್ಣಯ್ಯನನ್ನು ಕಂಡೊಡನೇ ಗುರುಗಳು ತೆಲುಗಿನಲ್ಲಿ, ‘ರಾಂಡಿ, ಪಂತುಲುಗಾರು, ರಾಂಡಿ’ ಎಂದು ಹೇಳಿದರು. ಪಂತುಲು ಎಂಬುದು ತೆಲುಗಿನಲ್ಲಿ ಗೌರವದ ಸಂಬೋಧನೆ. ತಮಾಷೆಗೆ ಗುರುಗಳು ರಾಮಕೃಷ್ಣಯ್ಯನನ್ನು ‘ಪಂತುಲು’ ಎಂದು ಕರೆದದ್ದು ಶಾಶ್ವತವಾಯಿತು. ಅಪ್ಪ ಅಮ್ಮ ಇಟ್ಟ ರಾಮಕೃಷ್ಣಯ್ಯ ಎಂಬ ಹೆಸರಿನ ಬದಲು ಪಂತುಲು ಎಂಬುದೇ ಉಳಿದುಕೊಂಡಿತು. ಬುಡುಗೂರು ರಾಮಕೃಷ್ಣಯ್ಯ ಎಂಬ ಹೆಸರಿಗೆ ಪಂತುಲು ಎಂಬುದೂ ಸೇರಿಕೊಂಡಿತು. ಮೊದಲಿನ ಹೆಸರು ಹ್ರಸ್ವವಾಗಿ, ಬಿ.ಆರ್.ಎಂದಾಯಿತು. ಬಿ.ಆರ್.ಪಂತುಲು ಎಂದು ಅವರು ಪ್ರಸಿದ್ಧರಾದರು.

ಬಾಲ್ಯದಲ್ಲೆ ನಾಟಕದ ಮನೆ

ಪಂತುಲು ಅವರ ತಂದೆ, ತಾತ ದೊಡ್ಡ ಪಂಡಿತರು, ವೈದಿಕರು. ಅವರಿಗೆ ಕಲೆಯಲ್ಲಿ ತುಂಬ ಪ್ರೀತಿ. ಪಂತುಲು ಅವರ ತಂದೆ ಕಂಗುಂದಿ ದುರ್ಗದ ನಾಯಕರ ಬಳಿ ಕೆಲಸದಲ್ಲಿದ್ದರು. ಅವರಿಗೆ ಸಂಗೀತ, ಸಾಹಿತ್ಯ, ನೃತ್ಯ, ನಾಟಕ ಮುಂತಾದ ಕಲೆಗಳಲ್ಲಿ ಬಹಳ ಆಸಕ್ತಿಯಿತ್ತು. ತಮ್ಮ ಮಕ್ಕಳು ಇವನ್ನು ಕಲಿಯಲು ವಿಶೇಷವಾಗಿ ಉತ್ತೇಜನ ನೀಡುತ್ತಿದ್ದರು. ಇದರಿಂದ ಸಹಜವಾಗಿಯೇ ಪಂತುಲುವಿಗೂ ಚಿಕ್ಕಂದಿನಿಂದಲೂ ಇವುಗಳಲ್ಲಿ ಪ್ರೀತಿ ಬೆಳೆಯಿತು.

ತಂದೆಯವರು ನಾಯಕರ ಸೇವೆಯಿಂದ ನಿವೃತ್ತರಾದ ಮೇಲೆ ಅವರ ಶ್ರೀಮಂತಿಕೆ ಕಡಿಮೆಯಾಗತೊಡಗಿತು. ಅವರ ದೊಡ್ಡ ಸಂಸಾರ ಒಡೆಯಿತು. ತಮ್ಮ ಊರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಪಂತುಲು ಅವರು ಮುಂದೆ ಓದುವುದಕ್ಕೆ ಮದರಾಸಿಗೆ ಹೋಗಬೇಕಾಯಿತು. ಅಲ್ಲಿ ಪಂತುಲು ಅವರ ತಂದೆಯ ಸ್ನೇಹಿತರೂ ನೆಂಟರೂ ಇದ್ದರು. ಅಲ್ಲಿ ತೆಲುಗು ಶಾಲೆಯಲ್ಲಿ ಓದು ಮುಂದುವರಿಸಿದ ಪಂತುಲು ಅವರು ಶಾಲೆಯಲ್ಲಿ ಆಡಲಾಗುತ್ತಿದ್ದ ಅನೇಕ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಜೊತೆಗೆ ಅವರು ಮದರಾಸಿನಲ್ಲಿ ಅನೇಕ ತೆಲುಗು ನಾಟಕಗಳನ್ನು ನೋಡಿದರು.

ಕರ್ನಾಟಕದಲ್ಲಿ ಆಗಿನ ಕಾಲದಲ್ಲಿ ನಾಟಕಶಿರೋಮಣಿ ಎ.ವಿ. ವರದಾಚಾರ್ಯರ ಕಂಪನಿ ಬಹಳ ಪ್ರಸಿದ್ಧವಾಗಿತ್ತು. ಎ.ವಿ. ವರದಾಚಾರ್ಯರ ಅಭಿನಯವಂತೂ ಅದ್ಭುತವಾಗಿರುತ್ತಿತ್ತು.

ವರದಾಚಾರ್ಯರ ಕಂಪನಿ ಆಗ ಮದರಾಸಿಗೆ ಬಂತು. ಆಗ ಪಂತುಲುವಿಗೆ ಇನ್ನೂ ಒಂಬತ್ತೇ ವರ್ಷ. ವರದಾಚಾರ್ಯರ ನಾಟಕಗಳನ್ನು ಹುಡುಗ ನೋಡಿದ. ವರದಾಚಾರ್ಯರ ಅಭಿನಯಕ್ಕೆ ಮಾರುಹೋದ. ತಾನೂ ಅವರ ಹಾಗೇ ಒಳ್ಳೆಯ ನಟನಾಗಬೇಕು ಎನ್ನಿಸಿತು ಹುಡುಗನಿಗೆ. ವರದಾಚಾರ್ಯರ ದರ್ಶನ ಮಾಡಬೇಕು ಎಂದೂ ಆಸೆಯಾಯಿತು.

ಹುಡುಗನ ಸೋದರಮಾವ ಅಣ್ಣಾಜಿರಾಯರಿಗೂ ವರದಾಚಾರ್ಯರಿಗೂ ತುಂಬ ಸ್ನೇಹವಿತ್ತು. ತನ್ನನ್ನು ವರದಾಚಾರ್ಯರ ಹತ್ತಿರ ಕರೆದುಕೊಂಡು ಹೋಗಬೇಕೆಂದು ಅವರನ್ನು ಕೇಳಿಕೊಂಡ. ಅವರು ಆಗಲಿ ಎಂದು ಹೇಳಿ ಅವನನ್ನು ಕರೆದುಕೊಂಡು ಹೋದರು.

ಹುಡುಗ ಬಲು ಚೂಟಿಯಾಗಿದ್ದ. ವರದಾಚಾರ್ಯರು ಅವನ ಗಲ್ಲವನ್ನು ನೇವರಿಸಿ ಪ್ರೀತಿಯಿಂದ ವಿಚಾರಿಸಿದರು. ಅವನಿಗೆ ನಾಟಕ ಆಡಲು ಆಸೆ ಇದೆಯೆಂಬುದನ್ನು ಕೇಳಿ ಅವರಿಗೆ ಬಲು ಸಂತೋಷವಾಯಿತು. ಹುಡುಗನಿಗೆ ಕಲೆ ಒಲಿಯುತ್ತದೆಂದು ಆಚಾರ್ಯರಿಗೆ ಎನಿಸಿತು. ‘ನಾಟಕ ಆಡುವುದಕ್ಕೆ ಮುಂಚೆ ನೋಡಬೇಕು, ಅದೇ ಕಲಿಕೆಗೆ ಮೊದಲನೆಯ ಮೆಟ್ಟಿಲು’ ಎಂದು ಆಚಾರ್ಯರು ಉಪದೇಶ ಮಾಡಿದರು. ತಾವು ಆಡುವ ನಾಟಕಗಳನ್ನು ನೋಡುತ್ತಿರಬೇಕೆಂದು ಹೇಳಿದರು. ವರದಾಚಾರ್ಯರ ಕಂಪನಿ ಮದ್ರಾಸಿನಲ್ಲಿ ಇದ್ದಷ್ಟು ಕಾಲವೂ ಹುಡುಗ ಅವರ ನಾಟಕಗಳನ್ನು ನೋಡುತ್ತಿದ್ದ. ಒಂದೊಂದು ನಾಟಕವನ್ನೂ ಎಷ್ಟೆಷ್ಟೋ ಸಲ ನೋಡಿದ. ಕಲೆಯ ಗುಟ್ಟನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ.

ವರದಾಚಾರ್ಯರ ಕಂಪನಿಯ ನಾಟಕಗಳೇ ಅಲ್ಲದೆ ಇನ್ನೂ ಅನೇಕರ ನಾಟಕಗಳನ್ನು ಹುಡುಗ ಮದ್ರಾಸಿನಲ್ಲಿ ನೋಡಿದ. ತಮಿಳು ನಾಟಕಗಳ ಅನೇಕ ನಟರ ಅಭಿನಯವನ್ನು ಕಲಿಯುವ ಅವಕಾಶ ಅವನಿಗೆ ದೊರಕಿತು. ಮದರಾಸಿನಲ್ಲೇ ಪಂತುಲು ಅಭಿನಯವನ್ನು ಅಭ್ಯಾಸ ಮಾಡಿದ್ದು ಎಂದು ಹೇಳಬಹುದು.

ಉಪಾಧ್ಯಾಯ

ಆದರೆ ಕುಟುಂಬದ ತೊಂದರೆಯಿಂದಾಗಿ ಅವರು ಮದರಾಸಿನಲ್ಲಿ ಓದು ಮುಂದುವರಿಸಲಾಗಲಿಲ್ಲ. ಪಂತುಲು ಅವರು ತಮ್ಮ ಊರಿಗೆ ಹಿಂದಿರುಗಿದರು. ಅಲ್ಲೂ ಓದಲಾಗಲಿಲ್ಲ. ವಿದ್ಯಾಭ್ಯಾಸ ಅಷ್ಟಕ್ಕೆ ನಿಂತು ಹೋಯಿತು.

ಆದರೆ ಕೆಲಸವಿಲ್ಲದೆ ಸೋಮಾರಿಯಾಗಿ ಕಾಲ ಕಳೆಯುವುದಕ್ಕೆ ಅವರು ಇಷ್ಟಪಡಲಿಲ್ಲ. ಏನಾದರೂ ನೌಕರಿ ಹಿಡಿಯಬೇಕೆಂದು ಯೋಚಿಸಿದರು. ಅವರಿಗೆ ಕುಪ್ಪಮ್‌ನಲ್ಲಿ ಉಪಾಧ್ಯಾಯರ ಕೆಲಸ ಸಿಕ್ಕಿತು.

ಸ್ಕೂಲ್ ಮಾಸ್ಟರಾಗಿ ಅವರು ಮಕ್ಕಳಿಗೆ ಓದು ಬರಹ ಕಲಿಸುತ್ತಿದ್ದರೂ ಅವರ ಮನಸ್ಸು ನಾಟಕ ಲೋಕದಲ್ಲೇ ವಿಹರಿಸುತ್ತಿತ್ತು. ಬಿಡುವಾದಾಗಲೆಲ್ಲ ಮಕ್ಕಳಿಗೂ ಇತರರಿಗೂ ನಾಟಕ ಹೇಳಿಕೊಡುವುದು, ಅವರಿಂದ ನಾಟಕ ಆಡಿಸುವುದು -ಇವೇ ಅವರ ಹವ್ಯಾಸವಾಯಿತು. ಇದು ಎಷ್ಟರಮಟ್ಟಿಗೆ ಬೆಳೆಯಿತೆಂದರೆ, ತನಿಖೆಗೆಂದು ಬಂದ ಮೇಲಧಿಕಾರಿಗಳು ಅವರ ಅತಿಯಾದ ನಾಟಕ ವ್ಯಾಮೋಹದಿಂದ ಅಸಮಾಧಾನಗೊಂಡರು.ಅವರು ಮಾಸ್ಟರ ಕೆಲಸವನ್ನೇ ಬಿಡಬೇಕಾಯಿತು. ಕೆಲಸವಿಲ್ಲದಿದ್ದರೂ ಚಿಂತೆಯಿಲ್ಲ. ನಾಟಕವನ್ನು ಬಿಡಲಾರೆ ಎನ್ನುವ ಮಟ್ಟಿಗೆ ಅವರಿಗೆ ಅದರ ಹುಚ್ಚು ಹತ್ತಿತ್ತು.

ಮುಂದೇನು ಮಾಡಬೇಕೆಂಬುದು ಅವರಿಗೆ ಸ್ವಲ್ಪ ಕಾಲ ತೋಚಲಿಲ್ಲ. ಕೊನೆಗೆ ಅಲ್ಲಿಂದ ಬೆಂಗಳೂರಿಗೆ ಹೊರಟುಬಿಟ್ಟರು. ಅಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದರು.

ಚಂದ್ರಕಲಾ ನಾಟಕ ಮಂಡಲಿ

ಬೆಂಗಳೂರಿನಲ್ಲಿ ಅಕ್ಕನ ಮನೆಯಲ್ಲಿ ಠಿಕಾಣಿ ಹೂಡಿದರು. ಯಾವುದಾದರೂ ನಾಟಕ ಕಂಪೆನಿ ಸೇರಬೇಕೆಂದು ಅವರ ನಿರ್ಧಾರ.

ಬೆಂಗಳೂರಿನ ಬೀದಿಯಲ್ಲಿ ನೆಂಟರೊಬ್ಬರು ಸಿಕ್ಕಿದರು. ಅವರ ಹೆಸರು ಪಾಪಯ್ಯ. ಪಂತುಲು ಅವರು ಪಾಪಯ್ಯ ನವರಲ್ಲಿ ತಮ್ಮ ಆಸೆಯನ್ನು ಹೇಳಿಕೊಂಡರು. ಪಾಪಯ್ಯನವರೇ ಅವರನ್ನು ಪೀರ್ ಸಾಹೇಬರ ಚಂದ್ರಕಲಾ ನಾಟಕ ಮಂಡಲಿಗೆ ಕರೆದುಕೊಂಡು ಹೋದದ್ದು. ಅಲ್ಲೇ ಅವರಿಗೆ ಪಂತುಲು ಎಂದು ನಾಮಕರಣವಾದದ್ದು.

ಪೀರ್ ಸಾಹೇಬರ ಚಂದ್ರಕಲಾ ನಾಟಕ ಮಂಡಲಿಯಲ್ಲಿ ಪಂತುಲು ಅವರು ಮೊದಮೊದಲು ಚಿಕ್ಕಪುಟ್ಟ ಪಾತ್ರಗಳನ್ನು ಅಭಿನಯಿಸುತ್ತಿದ್ದರು. ಆ ಮಂಡಲಿಯ ಸುಪ್ರಸಿದ್ಧ ನಾಟಕ ‘ಷಹಜಹಾನ್’, ಅದರಲ್ಲೇ ಅವರು ಮೊಟ್ಟಮೊದಲು ಪಾರ್ಟು ಮಾಡಿದ್ದು. ಕಂಪೆನಿಯಲ್ಲಿ ಅವರಿಗೆ ವಾರಕ್ಕೆ ಒಂದು ರೂಪಾಯಿ ಸಂಬಳ-ತಿಂಗಳಿಗೆ ನಾಲ್ಕು ರೂಪಾಯಿ.

ಬರಬರುತ್ತ ಪಂತುಲು ಅವರಿಗೆ ದೊಡ್ಡ ದೊಡ್ಡ ಪಾತ್ರಗಳು ದೊರಕಲಾರಂಭಿಸಿದುವು. ಯಾವುದೇ ನಾಟಕವಾಗಲಿ, ಅದರಲ್ಲಿ ಅವರಿಗೆ ಯಾವುದೇ ಪಾತ್ರವನ್ನು ಕೊಡಲಿ, ಅವರು ಎಲ್ಲ ನಾಟಕಗಳನ್ನೂ ಪೂರ್ತಿಯಾಗಿ ಬಾಯಿಪಾಠ ಮಾಡಿಕೊಂಡರು. ಸಮಯದಲ್ಲಿ ಯಾರಾದರೂ ನಟ ಇರದಿದ್ದರೆ ಅವರೇ ಆ ಪಾತ್ರವನ್ನು ಮಾಡುವ ಮಟ್ಟಿಗೆ ತಯಾರಾದರು. ಇದರಿಂದ ಪಂತುಲು ಅವರಿಗೆ ಮುಂದೆ ಒಳ್ಳೆಯದೇ ಆಯಿತು.

ಪೀರ್ ಸಾಹೇಬರ ನಾಟಕ ಮಂಡಲಿ ಮೊದಮೊದಲು ಬಲು ಚೆನ್ನಾಗಿ ನಡೆಯುತ್ತಿತ್ತು. ಆದರೆ ಅಮೇಲೆ ಕಷ್ಟ ಆರಂಭವಾಯಿತು. ನಾಟಕ ಕಂಪನಿ ನಡೆಸುವುದೆಂದರೆ ಸಾಮಾನ್ಯವಲ್ಲ. ನಾಟಕ ನೋಡಲು ಜನರು ಟಿಕೆಟ್ ಕೊಂಡು ಬರಲಿ ಬಿಡಲಿ, ನಟನಟಿಯರಿಗೆಲ್ಲ ಸಂಬಳ ಕೊಡಬೇಕು, ಅವರಿಗೆ ಊಟ ವಸತಿ ಎಲ್ಲವನ್ನೂ ನೋಡಿಕೊಳ್ಳಬೇಕು. ಕೆಲವು ಸಮಯಗಳಲ್ಲಿ ನಟನಟಿಯರು ಒಂದು ಕಂಪನಿಯನ್ನು ಬಿಟ್ಟು ಹೆಚ್ಚು ಸಂಬಳ ಸಿಗುವ ಕಂಪನಿಗೆ ಹೊರಟು ಹೋಗುತ್ತಿದ್ದರು. ಅಂಥ ಸಮಯದಲ್ಲಿ ಕಂಪನಿಯ ಯಜಮಾನರ ಪಾಡು ಹೇಳತೀರದು. ನಾಟಕ ನಡೆಸಲು ನಟರಿಲ್ಲ, ಆಡದಿದ್ದರೆ ಹಣವಿಲ್ಲ, ಇಂಥ ಸ್ಥಿತಿ.

ಕಂಪನಿಗಳು ಊರಿಂದೂರಿಗೆ ಸಂಚರಿಸುತ್ತಿರಬೇಕು. ಒಂದು ಊರಿನಲ್ಲಿ ನಾಟಕ ಶಾಲೆ ನಿರ್ಮಿಸಿ, ಕೆಲವು ದಿನಗಳ ಕಾಲ ನಾಟಕಗಳನ್ನಾಡಿದ ಮೇಲೆ ಇನ್ನೊಂದು ಊರಿಗೆ ಪ್ರಯಾಣ. ಅಲ್ಲೂ ಸಾಕಷ್ಟು ದಿನ ನಾಟಕಗಳನ್ನಾಡಿ ಆ ಊರನ್ನು ಬಿಟ್ಟು ಇನ್ನೊಂದು ಊರಿನಲ್ಲಿ ಮೊಕ್ಕಾಂ.

ಬಿಟ್ಟ ಕಂಪನಿಗೆ ಮತ್ತೆ

ಪಂತುಲು ಅವರು ಪೀರ್ ಕಂಪನಿಯಲ್ಲಿದ್ದಾಗ ಇನ್ನೊಂದು ಕಂಪನಿಯವರು ಅವರನ್ನು ಕರೆದರು. ಹೆಚ್ಚು ಸಂಬಳದ ಆಸೆ ತೋರಿಸಿದರು. ಅಕ್ಕಿಯ ಮೇಲೆ ಆಸೆ, ಪೀರ್ ಸಾಹೇಬರ ಮೇಲೆ ಪ್ರೀತಿ. ಕೊನೆಗೂ ಪಂತುಲು ಅವರು ಪೀರ್ ಕಂಪನಿಯನ್ನು ಬಿಟ್ಟು ಇನ್ನೊಂದು ಕಂಪನಿಗೆ ಹೋದರು. ಅಲ್ಲಿ ಸ್ವಲ್ಪ ದಿವಸ ಚೆನ್ನಾಗಿಯೇ ನಡೆಯಿತು. ಆದರೆ ಆ ಕಂಪನಿಯನ್ನು ನಡೆಸುತ್ತಿದ್ದವರಿಗೂ ಅದರಲ್ಲಿ ಹಣ ಹಾಕಿದ್ದವರಿಗೂ ಜಗಳ ಆಯಿತು. ಕಂಪನಿ ನಡೆಸುತ್ತಿದ್ದವರು ಬಿಟ್ಟು ಹೋದರು. ಅದರ ಮಾಲೀಕರಿಗೆ ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಕೊನೆಗೆ ಪಂತಲು ಅವರ ಮೇಲೆ ಅದರ ಮೇಲ್ವಿಚಾರಣೆಯ ಹೊಣೆಬಿತ್ತು. ಅವರು ಆ ಕೆಲಸವನ್ನು ಚೆನ್ನಾಗಿಯೇ ನಿರ್ವಹಿಸಿದರು. ಆದರೆ ನಾಟಕಗಳಿಂದ ಹಣ ಬರಲಿಲ್ಲ. ಕಂಪನಿ ನಷ್ಟ ಅನುಭವಿಸತೊಡಗಿತ್ತು. ನಾಟಕ ಆಡುವುದಕ್ಕೇ ಆಗದಂಥ ಸ್ಥಿತಿ ಬರುತ್ತಿತ್ತು. ಪಂತುಲು ಮತ್ತು ಇನ್ನೊಬ್ಬರನ್ನು ಬಿಟ್ಟು ಉಳಿದ ಕಲಾವಿದರೆಲ್ಲ ಹೊರಟು ಹೋದರು. ಕೊನೆಗೆ ಅವರು ನಾಟಕ ಮಂದಿರವನ್ನು ಇನ್ನೊಂದು ಕಂಪನಿಗೆ ಬಾಡಿಗೆಗೆ ಕೊಟ್ಟು ಇನ್ನೊಂದು ಊರಿಗೆ ಹೋದರು. ಅಲ್ಲೂ ಅವರಿಗೆ ನಷ್ಟವಾಯಿತು. ಬಾಡಿಗೆಗೆ ನಾಟಕ ಮಂದಿರವನ್ನು ತೆಗೆದುಕೊಂಡಿದ್ದ ಕಂಪನಿಯಿಂದ ಬಾಡಿಗೆಯ ಹಣವಾದರೂ ಬಂದರೆ ಅದರಿಂದ ಸ್ವಲ್ಪ ಕಾಲವನ್ನಾದರೂ ನೂಕಬಹುದೆಂದು ಯೋಚಿಸಿ ಅವರು ಆ  ಊರಿಗೆ ಹೋದರು. ಆ ಕಂಪನಿಯೂ ಮರಣಾವಸ್ಥೆಯಲ್ಲಿತ್ತು. ನಾಟಕ ಆಡೋಣವೆಂದರೆ ಆ ಕಂಪನಿಯಲ್ಲೂ ಕೆಲವರು ನಟರು ಚಕ್ಕರ್ ಹೊಡೆದಿದ್ದರು. ಅದರ ಮಾಲೀಕರೂ ಪತ್ತೆಯಿರಲಿಲ್ಲ. ನಕ್ಷತ್ರಿಕನಂತೆ ಬಾಕಿ ವಸೂಲಿಗೆಂದು ಅಲ್ಲಿಗೆ ಹೋಗಿದ್ದ ಪಂತುಲು ಅವರು ಆ ಕಂಪನಿಯ ಹರಿಶ್ಚಂದ್ರ ನಾಟಕದಲ್ಲಿ ವಸಿಷ್ಠನ ಪಾತ್ರ ವಹಿಸಿದರು. ಆದರೆ ಆ ನಾಟಕ ನೋಡಲು ಹೆಚ್ಚು ಜನ ಟಿಕೆಟ್ ಕೊಂಡು ಬಂದಿರಲಿಲ್ಲ. ಅವರಿಗೆ ಬಾಕಿ  ವಸೂಲಿ ಆಗಲಿಲ್ಲ. ಆ ಕಂಪನಿಯಲ್ಲಿ ಉಳಿದಿದ್ದ ನಟರು ಉಪವಾಸ ಮಾಡುತ್ತ ಮಾಲೀಕರು ಬರುವರೆಂದು ಕಾಯುತ್ತಿದ್ದರು. ಕೊನೆಗೆ ಪಂತುಲು ಅವರೇ ಆ ನಟರಿಗೆ ತಿಂಡಿ ತೆಗೆಸಿಕೊಟ್ಟು ಇದ್ದ ಹಣವನ್ನು ಖರ್ಚು ಮಾಡಿಕೊಂಡು ಊರಿಗೆ ಹಿಂದಿರುಗಿದರು.

ಸ್ವಂತ ಕಂಪನಿ ನಡೆಸಲು ಯತ್ನಿಸಿ ಕೈ ಸುಟ್ಟು ಕೊಂಡದ್ದಾಗಿತ್ತು. ಬೇರೇನು ಮಾಡಬೇಕೆಂದು ತೋಚದೆ ಇದ್ದಾಗ ಪೀರ್ ಸಾಹೇಬರು ಬಂದು ಅವರನ್ನು ಮತ್ತೆ ತಮ್ಮ ನಾಟಕ ಮಂಡಲಿಗೆ ಕರೆದರು. ಪಂತುಲು ಅವರಿಗೆ ಬೇರೆ ಮಾರ್ಗವೇ ಇರಲಿಲ್ಲ. ಅವರು ಮಂಡಲಿಯನ್ನು ಕೂಡಿಕೊಂಡು ಮತ್ತೆ ಅದರಲ್ಲಿ ನಟರಾಗಿ ಅಭಿನಯಿಸತೊಡಗಿದರು.

ಸ್ವಲ್ಪ ಕಾಲದ ಮೇಲೆ ಪಂತುಲು ಅವರು ಪೀರ್ ಮಂಡಲಿಯನ್ನು ಬಿಟ್ಟು, ನಾಟಕ ರತ್ನ ಗುಬ್ಬಿ ವೀರಣ್ಣನವರ ಕಂಪನಿ ಸೇರಿದರು. ಅಲ್ಲಿ ವೀರಣ್ಣ, ಕೆ.ಹಿರಣ್ಣಯ್ಯ, ಬಿ.ಜಯಮ್ಮ ಮುಂತಾದ ಅನೇಕ ಒಳ್ಳೆಯ ನಟನಟಿಯರು ಇದ್ದರು. ಅವರೊಂದಿಗೆ ಪಂತುಲು ಅವರೂ ನಾಟಕಗಳಲ್ಲಿ ಪಾತ್ರವಹಿಸಿ ತುಂಬ ಅನುಭವ ಪಡೆದುಕೊಂಡರು.

ಸ್ವಂತ ಕಂಪನಿಯ ಹಂಬಲ

ಸ್ವಂತ ಕಂಪೆನಿ ನಡೆಸಿ, ಕಷ್ಟ ನಷ್ಟ ಅನುಭವಿಸಿ ಮತ್ತೆ ನಟರಾಗಿ ಇತರರ ಕಂಪನಿಗಳಲ್ಲಿ ಅಭಿನಯಿಸುತ್ತಿದ್ದ ಪಂತುಲು ಅವರಿಗೆ ನೆಮ್ಮದಿ ಇರಲಿಲ್ಲ. ಮತ್ತೆ ತಮ್ಮದೇ ಆದ ಕಂಪನಿ ತೆಗೆಯಬೇಕೆಂದು ಅವರಿಗೆ ಆಸೆಯಾಯಿತು. ಆ ಆಸೆಯನ್ನು ಅದುಮಿಡಲು ಇನ್ನು ಸಾಧ್ಯವಿಲ್ಲವೆನಿಸಿದಾಗ ಅವರು ಮತ್ತೆ ಸ್ವಂತ ಮಂಡಲಿ ಆರಂಭಿಸಲು ತೀರ್ಮಾನ ಮಾಡಿಯೇ ಬಿಟ್ಟರು. ಅನೇಕ ಕಲಾವಿದರಿಗೆ ಪತ್ರ ಬರೆದು ಅವರನ್ನೆಲ್ಲ ಬೆಂಗಳೂರಿಗೆ ಬರಮಾಡಿಕೊಂಡರು.

ಆಸೆಯೇನೋ ಇತ್ತು. ಸಾಮರ್ಥ್ಯವು ಕಡಿಮೆ ಇರಲಿಲ್ಲ. ಅನುಭವ ಅಪಾರವಾಗಿ ಬಂದಿತ್ತು. ನಾನು ಗೆಲ್ಲುತ್ತೇನೆ ಎಂಬ ಆತ್ಮ ವಿಶ್ವಾಸವೂ ಇತ್ತು. ಆದರೆ ಕಂಪನಿ ನಡೆಸಲು ಹಣ?

ಆಗ ಅವರಿಗೆ ಪೈಲ್ವಾನ್ ಅಣ್ಣಯ್ಯಪ್ಪನವರೆಂಬ ಪರಿಚಯಸ್ಥರ ನೆನಪಾಯಿತು. ಪೈಲ್ವಾನರಿಗೆ ನಾಟಕದಲ್ಲಿ ತುಂಬ ಆಸಕ್ತಿ ಇತ್ತು. ಪಂತುಲು ಎಂದರೆ ಅವರಿಗೆ ಬಹಳ ಅಭಿಮಾನ .

ಪಂತುಲು ಅವರು ಅಣ್ಣಯ್ಯಪ್ಪನವರನ್ನು ನೋಡಿ ಅವರಿಗೆ ಎಲ್ಲ ವಿಷಯವನ್ನು ತಿಳಿಸಿದರು. ಅಣ್ಣಯ್ಯಪ್ಪನವರು ಕೂಡಲೇ ಅವರಿಗೆ ಸಹಾಯ ಮಾಡಲು ಒಪ್ಪಿದರು. ‘ಕಲಾ ಸೇವಾ ಮಂಡಲಿ’ ಆರಂಭವಾಗಿಯೇ ಬಿಟ್ಟಿತು. ಎಚ್.ಎಲ್.ಎನ್. ಸಿಂಹ, ಎಂ.ಎಸ್. ಮಾಧವರಾವ್, ಎಂ. ಮಾಧವರಾವ್, ಸುಬ್ರಹ್ಮಣ್ಯ ಶಾಸ್ತ್ರಿ ಮುಂತಾದ ಒಳ್ಳೊಳ್ಳೆಯ ಕಲಾವಿದರನ್ನೆಲ್ಲ ಸೇರಿಸಿಕೊಂಡು ಅವರು ‘ಸಂಸಾರ ನೌಕ’ ನಾಟಕವನ್ನು ಆಡಿದರು. ಅದನ್ನು ಅನೇಕರು ನೋಡಿ ಮೆಚ್ಚಿಕೊಂಡರು.

‘ಸಂಸಾರ ನೌಕ’ ಕ್ಕೆ ಹಣ ಬಂತು. ಅವರ ಕಂಪೆನಿಯೂ ಊರಿಂದೂರಿಗೆ ಹೋಗಿ ನಾಟಕಗಳನ್ನು ಆಡುತ್ತಿತ್ತು. ಕೆಲವು ಕಡೆ ಸಂಪಾದನೆ ಆಗುತ್ತಿತ್ತು. ಕೆಲವು ಕಡೆ ಅಷ್ಟಕ್ಕಷ್ಟೆ. ಅಂತೂ ಹಾಗೂ ಹೀಗೂ ಕಾಲ ತಳ್ಳುತ್ತಿತ್ತು.

ಒಂದು ಊರಿನಲ್ಲಿ ತಮಾಷೆಯ ಪ್ರಸಂಗವೊಂದು ನಡೆಯಿತು. ಆ ಊರಿನ ಹೆಸರು ವರ್ತೂರು. ಅಲ್ಲಿ ಪಂತುಲು ಅವರ ‘ಸಂಸಾರ ನೌಕ’  ನಾಟಕ ಅಷ್ಟೇನೂ ಜನಪ್ರಿಯವಾಗಲಿಲ್ಲ. ಯಾವುದಾದರೂ ಪೌರಾಣಿಕ ನಾಟಕ ಆಡಿದರೆ ಹಣ ಬಂದೇ ಬರುವುದೆಂಬುದು ಗೊತ್ತಿತ್ತು. ಆದರೆ ಅವರು ಪುರಾಣದ ಕಥೆಗಳ ನಾಟಕಗಳನ್ನು ಹೆಚ್ಚಾಗಿ ಆಡಿರಲಿಲ್ಲ. ಅಂತೂ ‘ಸಂಪೂರ್ಣ ರಾಮಾಯಣ’ ಆಡಬೇಕೆಂದು ಅವರು ತೀರ್ಮಾನಿಸಿಕೊಂಡರು. ಅದಕ್ಕೆ ಬೇಕಾದ ವೇಷಭೂಷಣಗಳೇ ಮುಂತಾದವನ್ನು ಹೊಂದಿಸಿಕೊಂಡದ್ದಾಯಿತು. ಪಂತುಲು ಅವರು ರಾವಣ.

ರಾವಣನಿಗೆ ಹತ್ತು ತಲೆ ಇರಬೇಕು, ಅಲ್ಲವೆ? ಮಣ್ಣಿನಲ್ಲಿ ಮಾಡಿದ ಹತ್ತು ತಲೆಗಳ ಸಾಲನ್ನು ಧರಿಸಿಕೊಂಡು ರಾವಣ ರಣರಂಗವನ್ನು ಪ್ರವೇಶಿಸಿದ. ಮಣ್ಣಿನಲ್ಲಿ ಮಾಡಿದ್ದಾದ್ದರಿಂದ ಅದು ಬಲು ಭಾರವಾಗಿತ್ತು. ಅದನ್ನು ಹೊತ್ತು ರಾವಣನಿಗೆ ನಿಲ್ಲಲಾಗಲಿಲ್ಲ. ರಾಮ ಬೇಗ ಬಾಣ ಬಿಡಬಾರದೆ? ಆದರೆ ಅವನು ನಿಧಾನವಾಗಿ ಹಾಡತೊಡಗಿದ. ಅವನು ಬಾಣ ಬಿಟ್ಟರೆ ಸಾಕೆಂದು ರಾವಣನ ತವಕ. ಕೊನೆಗೂ ಆ ಹಾಡು ಮುಗಿಯುವುದಕ್ಕೆ ಮುಂಚೆಯೇ ರಾವಣ ಬಿದ್ದು ಪ್ರಾಣ ಬಿಟ್ಟ. ರಾಮನಿಗೆ ಕೋಪ ಬಂತು. ‘ಏಳ್ರಿ, ಏಳ್ರಿ’ ಎಂದು ಮೆಲುದನಿಯಲ್ಲಿ ರಾಮ ಹೇಳಿದರೂ ರಾವಣ ಏಳಲಿಲ್ಲ. ಬಿದ್ದ ರಾವಣನಿಗೇ ರಾಮನು ಬಾಣ ಬಿಟ್ಟು ದೃಶ್ಯ ಮುಗಿಸಬೇಕಾಯಿತು! ಇಂಥ ಸ್ವಾರಸ್ಯದ ಪ್ರಸಂಗಗಳು ಎಷ್ಟೋ.

‘ಸಂಸಾರ ನೌಕ’ ದ ಕೀರ್ತಿ ತಮಿಳುನಾಡಿಗೂ ಹಬ್ಬಿತು. ಮದರಾಸಿನಲ್ಲಿ ಈ ಕಂಪನಿಯವರು ನಾಟಕ ಆಡಬೇಕೆಂದು ಅಲ್ಲಿಯ ಕೆಲವರು ಪಂತುಲು ಅವರನ್ನು ಕರೆದರು. ತಮಿಳು ನಾಡಿನಲ್ಲಿ ಕನ್ನಡ ನಾಟಕದ ವೈಭವವನ್ನು ಮೆರೆಯಿಸುವ ಅವಕಾಶ ಬಂದಿರುವಾಗ ಬೇಡ ಎನ್ನುವುದೇ? ಪಂತುಲು ಅವರು ತಮ್ಮ ಕಂಪನಿಯೊಂದಿಗೆ ಅಲ್ಲಿಗೆ ಹೋಗಿಯೇಬಿಟ್ಟರು.

ಚಲನಚಿತ್ರ, ಮತ್ತೆ ನಾಟಕ

ಮದರಾಸಿನಲ್ಲಿ ಅವರ ‘ಸಂಸಾರನೌಕ’ ನಾಟಕವನ್ನು ಅನೇಕರು ನೋಡಿ ಮೆಚ್ಚಿಕೊಂಡರು. ಅನೇಕ ದೊಡ್ಡ ಮನುಷ್ಯರು ಪಂತುಲು ಅವರ ಸ್ನೇಹಿತರಾದರು. ಅಲ್ಲಿಯ ದೇವಿ ಫಿಲ್ಮ್‌ಸ್ ಎಂಬ ಚಲನಚಿತ್ರ ಸಂಸ್ಥೆ ‘ಸಂಸಾರ ನೌಕ’  ನಾಟಕವನ್ನು ಚಲನಚಿತ್ರವಾಗಿ ಮಾಡಲು ಮುಂದೆ ಬಂತು. ‘ಸಂಸಾರನಾಕ’ ನಾಟಕವನ್ನು ಬರೆದ ಎಚ್.ಎಲ್.ಎನ್. ಸಿಂಹ ಅವರೇ ಚಿತ್ರಕ್ಕೆ ಸಂಭಾಷಣೆ ಬರೆದರು. ಅವರೇ ನಿರ್ದೇಶಕ. ಪಂತುಲು ಅವರಿಗೆ ಚಿತ್ರದಲ್ಲೂ ಸುಂದರನ ಪಾತ್ರ. ‘ಸಂಸಾರ ನೌಕ’  ಕನ್ನಡದ ಮೊದಲನೆಯ ಸಾಮಾಜಿಕ  ವಾಕ್ಚಿತ್ರ (೧೯೩೫).

‘ಸಂಸಾರನೌಕ’ದಿಂದ ಪಂತುಲು ಅವರು ನಾಟಕ ರಂಗದಿಂದ ಚಲನಚಿತ್ರಕ್ಕೆ ನೆಗೆದಿದ್ದರು. ಅವರಿಗೆ ಅಪಾರವಾದ ಕೀರ್ತಿ ಬಂತು. ಅನಂತರ ಅವರು ತಮಿಳಿನ ‘ರಾಜಭಕ್ತಿ’ ಎಂಬ ಚಿತ್ರದಲ್ಲಿ ದುರ್ಜಯನ ಪಾತ್ರ ವಹಿಸಿದರು. ಅದರಿಂದಲೂ ಪಂತುಲು ಅವರ ಖ್ಯಾತಿ ಬೆಳೆಯಿತು.

ಆದರೆ ಪಂತುಲು ಅವರಿಗೆ ನಾಟಕದ ಪ್ರೀತಿ ಕಡಿಮೆಯಾಗಲಿಲ್ಲ. ಮತ್ತೆ ನಾಟಕ ಕಂಪನಿ ಆರಂಭಿಸಬೇಕೆಂದು ಅವರು ಮನಸ್ಸು ಮಾಡಿದರು. ಬೆಂಗಳೂರಿಗೆ ಹಿಂದಿರುಗಿ ಮತ್ತೆ ಸ್ವಂತ ನಾಟಕ ಕಂಪನಿ ಕಟ್ಟಿದರು.

ಅದೇ ವೇಳೆಗೆ ಪಂತುಲು ಅವರ ಮದುವೆಯಾಯಿತು. ಅವರು ನಾಟಕಗಳನ್ನು ಆಡುವುದರ ಜೊತೆಗೆ ಪತ್ನಿ ಕಮಲಮ್ಮನವರೊಂದಿಗೆ ಸಂಸಾರವನ್ನೂ ಹೂಡಿದರು. ‘ಸಂಸಾರನೌಕ’ದ ಕೀರ್ತಿಯ ಫಲವಾಗಿ ನಾಟಕಗಳಿಗೆ ಕಲೆಕ್ಷನ್ ಚೆನ್ನಾಗಿ ಆಗುತ್ತಿತ್ತು. ಆಗ ಯಶಸ್ವಿಯಾದ ನಾಟಕಗಳ ಪೈಕಿ ‘ಕೀಚಕ’ವೂ ಒಂದು.

ಮತ್ತೆ ನಾಟಕಗಳ ಪ್ರದರ್ಶನ ಆರಂಭವಾಯಿತು. ಆದರೆ ಅದೃಷ್ಟ ಚೆನ್ನಾಗಿರಲಿಲ್ಲ. ಸಂಪಾದನೆ ಇಳಿಯಿತು. ಕಂಪನಿಯನ್ನು ಮತ್ತೆ ಮುಚ್ಚಬೇಕಾಯಿತು. ನೌಕರರಿಗೆ ಸಂಬಳದ ಬಾಕಿ ಕೊಡಲು ಇದ್ದಬದ್ದ ಹಣವೆಲ್ಲ ಖರ್ಚಾಯಿತು. ಮತ್ತೆ ಅವರದು ಬರಿಗೈ. ಅವರ ಜೊತೆಗಿದ್ದವರು ಅವರ ಹೆಂಡತಿ ಒಬ್ಬರೇ. ಕಷ್ಟಸುಖಗಳಲ್ಲಿ ನೆಳಲಾಗಿ ಹಿಂಬಾಲಿಸಿದವರು ಅವರೊಬ್ಬರೇ.

ತಮಿಳುನಾಡಿನಲ್ಲಿ

ಮತ್ತೆ ಪಂತುಲು ಅವರು ಮದರಾಸಿಗೆ ಹೋಗುವುದೆಂದು ತೀರ್ಮಾನಿಸಿದರು. ಈಗ ಅವರ ಜೊತೆಗೆ ಹೆಂಡತಿ ಇದ್ದರು. ಮೊದಲು ಬದುಕಬೇಕು; ಕಲೆಯ ಮೂಲಕವೇ ಬದುಕಬೇಕು. ಇದು ಅವರ ಸಂಕಲ್ಪ.

ತಮಿಳು ಗೆಳೆಯರ ಸಹಾಯದಿಂದ ಅವರು ತಮಿಳು ನಾಟಕ ಕಂಪನಿ ಕಟ್ಟಿ, ‘ಸಂಸಾರನೌಕ’, ‘ಆಶಾ ನಿರಾಶ’, ‘ವರದಕ್ಷಿಣೆ’  ನಾಟಕಗಳನ್ನು ತಮಿಳಿನಲ್ಲಿ ಅಭ್ಯಾಸಮಾಡಿ ಆಡಿದರು. ಕಂಪನಿಯ ಹೆಸರು ‘ಶ್ರೀ ರೇಣುಕಾದೇವಿ ನಾಟಕ ಮಂಡಲಿ’.

ಆ ನಾಟಕಗಳು ಅವರಿಗೆ ಕೀರ್ತಿಯನ್ನೂ ಹಣವನ್ನೂ ತಂದುವು. ಮದರಾಸೇ ಅಲ್ಲದೆ ತಮಿಳುನಾಡಿನ ಇತರ ಪ್ರಮುಖ ಸ್ಥಳಗಳಲ್ಲಿ ಅವರು ನಾಟಕ ಆಡಿದರು.

ಈ ಸಮಯದಲ್ಲೇ ಅವರಿಗೆ ತಮಿಳಿನ ‘ಲವಂಗಿ’ ಎಂಬ ಚಿತ್ರದಲ್ಲಿ ಪಾತ್ರ ವಹಿಸಲು ಕರೆ ಬಂತು. ಕನ್ನಡ ತಾರೆ ಬಿ. ಜಯಮ್ಮ ಲವಂಗಿ, ಪಂತುಲು ಷಹಜಹಾನ್.

ಅದೇ ವೇಳೆಗೆ ‘ಸಂಸಾರನೌಕ’ ಚಿತ್ರ ತಮಿಳಿನಲ್ಲೂ ಅವತಾರ ಹೊಂದಿತು. ಅನಂತರ ‘ವಿಜಯಲಕ್ಷ್ಮಿ’ ಎಂಬ ಇನ್ನೊಂದು ಚಿತ್ರ. ಅದು ಕನ್ನಡದ ‘ರಾಯರ ಸೊಸೆ’ ನಾಟಕದ ತಮಿಳು ರೂಪ. ಅದರಲ್ಲಿ ಎಂ.ವಿ. ರಾಜಮ್ಮನವರೊಂದಿಗೆ ಪಂತುಲು ಅವರ ಅಭಿನಯ.

ಪಂತುಲು ಅವರು ಆಡುತ್ತಿದ್ದ ‘ವೀ ಟೂ’ (ನಾವಿಬ್ಬರು) ಎಂಬ ತಮಿಳು ನಾಟಕವೂ ತೆರೆಗೆ ಬಂತು. ಇದರಲ್ಲಿ ಪಂತುಲು ಅವರೊಂದಿಗೆ ಟಿ.ಆರ್.ಮಹಾಲಿಂಗಂ, ಸಾರಂಗಪಾಣಿ ಮುಂತಾದವರು ನಟಿಸಿದರು.

ಈ ಚಿತ್ರದ ಮೂಲಕ ಪಂತುಲು ಅವರಿಗೂ ಮಹಾಲಿಂಗಂ ಅವರಿಗೂ ಸ್ನೇಹ ಬೆಳೆಯಿತು. ಅವರಿಬ್ಬರೂ ಸೇರಿ ‘ಸುಕುಮಾರ್ ಪ್ರೊಡಕ್ಷನ್ಸ್’ ಎಂಬ ಚಲನಚಿತ್ರ ಸಂಸ್ಥೆಯನ್ನು ಸ್ಥಾಪಿಸಿದರು. ತಮಿಳು ನಾಡಿನಲ್ಲಿ ತುಂಬ ಪ್ರಸಿದ್ಧವಾಗಿದ್ದ ‘ಮಚ್ಛರೇಖೆ’ ಎಂಬ ನಾಟಕವನ್ನು ಅವರು ಚಲನಚಿತ್ರವಾಗಿ ಮಾಡಬೇಕೆಂದು ಯೋಚಿಸಿದರು. ಆದರೆ ನಡುವೆ ಏನೇನೋ ತೊಂದರೆಗಳು ಬಂದುವು. ಅವರು ಮುಂದುವರಿಯಲಿಲ್ಲ. ಇನ್ನೊಬ್ಬರೊಂದಿಗೆ ಸೇರಿ ಇನ್ನೊಂದು ಚಲನಚಿತ್ರ ತಯಾರಿಕಾ ಸಂಸ್ಥೆ ಆರಂಭಿಸಬೇಕೆಂದು ಪ್ರಯತ್ನಪಟ್ಟರು. ಅದೂ ಸಫಲವಾಗಲಿಲ್ಲ.

ಪದ್ಮಿನಿ ಪಿಕ್ಚರ್ಸ್

ಕೊನೆಗೆ ಪಂತುಲು ಅವರು ಧೈರ್ಯ ಮಾಡಿ ತಮ್ಮದೇ ಆದ ಸಂಸ್ಥೆಯನ್ನು ಆರಂಭಿಸಿದರು. ಅದರ ಹೆಸರು ‘ಪದ್ಮಿನಿ ಪಿಕ್ಚರ್ಸ್’. (ಪದ್ಮಿನಿ ಪಂತುಲು ಅವರ ಮಗಳ ಹೆಸರು. ‘ಪದ್ಮಿನಿ’ ಎಂದರೆ ಲಕ್ಷ್ಮಿಯೂ ಹೌದು). ಪಂತುಲು ಅವರಿಗೆ ನೀಲಕಂಠನ್ ಎಂಬವರು ಜೊತೆಯಾಗಿ ನಿಂತರು.

ಪದ್ಮಿನಿ ಪಿಕ್ಚರ್ಸಿನ ಮೊದಲನೆಯ ಚಿತ್ರ ‘ಕಲ್ಯಾಣಂ ಪಣ್ಣಿಯುಂ ಬ್ರಹ್ಮಚಾರಿ’.  ಅದರಿಂದ ಹಣ ಬಂತು. ಪಂತುಲು ಅವರಿಗೆ ಧೈರ್ಯ ಬಂತು. ಕನ್ನಡ ಚಿತ್ರವನ್ನು ತೆಗೆಯಲು ಅವರು ಮುನ್ನುಗ್ಗಿದರು. ಅವರ ಸಂಸ್ಥೆಯ ಮೊದಲ ಕನ್ನಡ ಚಿತ್ರ ‘ಮೊದಲ ತೇದಿ’ – ಒಂದನೆಯ ತಾರೀಖು.

ಈ ಚಿತ್ರ ತುಂಬ ಯಶಸ್ವಿಯಾಯಿತು. ಕನ್ನಡಿಗರು ಒಳ್ಳೆಯದನ್ನು ಮೆಚ್ಚಬಲ್ಲರು, ಮೆಚ್ಚುತ್ತಾರೆ – ಎಂದು ಪಂತುಲುರವರಿಗೆ ಸಂತೋಷ ಆಯಿತು. ಇದನ್ನು ಅವರು ತಮಿಳಿನಲ್ಲೂ ತಂದರು. ಆ ಚಿತ್ರವೂ ಜಯಭೇರಿ ಬಾರಿಸಿತು.

ಮೂರನೆಯ ಚಿತ್ರ ‘ಶಿವಶರಣೆ ನಂಬೆಕ್ಕ’. ಈ ಚಿತ್ರದಿಂದ ಹಣ ಬರಲಿಲ್ಲ. ನಷ್ಟವೇ ಆಯಿತು.

ಕನ್ನಡಿಗರು ಕೈಬಿಡುವುದಿಲ್ಲ

ಕನ್ನಡಿಗರು ಕೈ ಬಿಡುವುದಿಲ್ಲವೆಂದು ಪಂತುಲು ಅವರ ನಂಬಿಕೆ. ಒಂದರಲ್ಲಿ ನಷ್ಟವಾದರೆ ಇನ್ನೊಂದರಲ್ಲಿ ಅವರು ಅದನ್ನು ತುಂಬಿ ಕೊಡುತ್ತಾರೆ ಎಂಬ ಧೈರ್ಯ.

ಚಿತ್ರ ತಯಾರಿಕೆಯಲ್ಲಿ ಪಂತುಲು ಅವರೊಂದಿಗೆ ಸೇರಿದ್ದ ನೀಲಕಂಠನ್‌ಗೆ ಆ ನಂಬಿಕೆ ಇರಲಿಲ್ಲ. ‘ಕನ್ನಡದಲ್ಲಿ ಚಿತ್ರ ತಯಾರಿಸುವುದು ಬೇಡ. ಹಣ ಬರುವುದಿಲ್ಲ. ಲಾಭ ಬೇಕಾದರೆ ತಮಿಳಿನಲ್ಲಿ ತೆಗೆಯೋಣ’, ಎಂದರು ಅವರು.

ಪಂತುಲು ಅವರಿಗೆ ಇದರಿಂದ ಬಹಳ ದುಃಖವಾಯಿತು. ಕನ್ನಡದಲ್ಲಿ ಏನಿಲ್ಲ? ಕನ್ನಡಿಗನಾದ ನಾನು ಕನ್ನಡದಲ್ಲಿ ಚಿತ್ರ ತಯಾರಿಸಿ ನಮ್ಮವರಿಂದ ಭೇಷ್ ಎನಿಸಿಕೊಳ್ಳಬೇಕೆಂದೇ ಚಿತ್ರ ಸಂಸ್ಥೆ ತೆರೆದದ್ದು. ಪ್ರಪಂಚವೇ ಕೈಚಪ್ಪಾಳೆ ಇಕ್ಕಿದರೂ ಹೆತ್ತ ತಾಯಿ ಸಂತೋಷ ಪಡುವುದಕ್ಕೆ ಸಮನಾಗುವುದೇ?

ಪಂತುಲು ಅವರ ಧೈರ್ಯವನ್ನು ನೋಡಿ ನೀಲಕಂಠನ್ನರಿಗೆ ಹೆದರಿಕೆ ಆಯಿತು. ಅವರು ಬೇರೆಯಾದರು.

ಪಂತುಲು ಎದೆಗೆಡಲಿಲ್ಲ. ಏಕಾಂಗಿಯಾಗಿ ಮುಂದು ವರಿದರು. ಅದೊಂದು ಸತ್ತ ಪರೀಕ್ಷೆಯಾಗಿತ್ತು. ಕನ್ನಡದಲ್ಲಿ ಅವರಿಗಿದ್ದ ಪ್ರೇಮದ ಬಲದ ಪರೀಕ್ಷೆಯಾಗಿತ್ತು.

ಪಂತುಲು ಅವರಿಗೆ ನಮ್ಮದೇಶದ ಚರಿತ್ರೆಯೆಂದರೆ ತುಂಬ ಇಷ್ಟ. ಹಳೆಯ ಕಾಲದ ಕೋಟೆ ಕೊತ್ತಲಗಳೇ ಮುಂತಾದವನ್ನು ಅವರು ಹೋದೆಡೆಯಲ್ಲೆಲ್ಲ ಗಮನಿಸುತ್ತಿದ್ದರು. ನಾಡಿನ ಬಿಡುಗಡೆಗಾಗಿ ಹೋರಾಡಿದ ವೀರರಮಣಿ ಚೆನ್ನಮ್ಮ, ವೀರಪಾಂಡ್ಯ ಕಟ್ಟಬೊಮ್ಮನ್ ಇವರ ಜೀವನಗಳನ್ನು ಕುರಿತು ಅವರು ಚಿತ್ರ ತೆಗೆದ ವಿಷಯವನ್ನು ಆಗಲೇ ಹೇಳಿದೆ. ನೀಲಕಂಠನ್ ಅವರಿಂದ ಬೇರೆಯಾದ ಮೇಲೆ ಅವರು ತೆಗೆದ ಮೊದಲನೆಯ ಚಿತ್ರ ‘ರತ್ನಗಿರಿ ರಹಸ್ಯ’ ಇದು ಎಂಥ ಚಿತ್ರವೆಂಬುದನ್ನು ಇದರ ಹೆಸರೇ ಹೇಳುತ್ತದೆ. ಕೋಟೆ ಕೊತ್ತಲಗಳು, ಇತಿಹಾಸದ ಸನ್ನಿವೇಶ, ಹೋರಾಟ, ಸಾಹಸ ಎಲ್ಲವೂ ಈ ಚಿತ್ರದಲ್ಲಿ ಇದ್ದವು. ಆನೆಗಳಿಂದಲೂ ಇತರ ನಾನಾ ಮೃಗಗಳಿಂದಲೂ ತುಂಬಿದ ಕಾಡು. ಅದರ ನಡುವೆ ನಡೆಯುವ ಕಥೆ. ಪಂತುಲು ಅವರು ತಮ್ಮ ಪರಿವಾರದೊಂದಿಗೆ ಕಾಡಿನ ನಡುವೆಯೇ ಡೇರೆ ಹೊಡೆದು ಇಳಿದುಕೊಂಡಿದ್ದು ಈ ಚಿತ್ರವನ್ನು ತಯಾರಿಸಿದರು. ಇದರಲ್ಲಿ ಆನೆಯ ಅನುಭವ ಬಲು ಸುಂದರವಾಗಿತ್ತು.

ಪಂತುಲು ಅವರು ಕನ್ನಡಿಗರ ಅಭಿಮಾನದಲ್ಲಿ ಇಟ್ಟಿದ್ದ ನಂಬಿಕೆ ಸುಳ್ಳಾಗಲಿಲ್ಲ. ಕನ್ನಡ ನಾಡಿನ ಜನರು ಈ ಚಿತ್ರವನ್ನು ನೋಡಿ ಹೊಗಳಿದರು. ಪಂತುಲು ಅವರಿಗೆ ನಷ್ಟವಾಗಲಿಲ್ಲ. ಅವರಿಗೆ ಬಹಳ ಸಂತೋಷ ಆಯಿತು.

ಕನ್ನಡದವರು ನೋಡಿ ಸಂತೋಷಪಟ್ಟಿದ್ದನ್ನು ಇತರರೂ ನೋಡಲಿ ಎಂಬುದು ಪಂತುಲು ಅವರ ಆಸೆ. ಆದ್ದರಿಂದ ಈ ಚಿತ್ರವನ್ನು ಅವರು ತಮಿಳಿನಲ್ಲೂ ತಂದರು. ‘‘ತಂಗಮಲೈ ರಹಸ್ಯಂ’ ಎಂಬುದು ತಮಿಳು ಚಿತ್ರದ ಹೆಸರು. ಇದಾದ ಅನಂತರವೇ ಅವರು ‘ಶಭಾಸ್ ಮೀನಾ’ ಎಂಬ ಇನ್ನೊಂದು ತಮಿಳು ಚಿತ್ರವನ್ನು ತೆಗೆದದ್ದು. ಅದನ್ನು ಹಿಂದಿಯಲ್ಲೂ ತಂದರು.

ಮಕ್ಕಳ ಕಥೆಗಳು

ಪಂತುಲು ಅವರಿಗೆ ಕೀರ್ತಿ ತಂದುಕೊಟ್ಟ ಇನ್ನೊಂದು ಚಿತ್ರ ‘ಸ್ಕೂಲ್ ಮಾಸ್ಟರ್’. ಪಂತಲು ಅವರು ಮೊದಲು ಶಾಲೆಯೊಂದರಲ್ಲಿ ಉಪಾಧ್ಯಾಯರಾಗಿದ್ದರೆಂಬ ವಿಚಾರ ನಿಮಗೆ ಜ್ಞಾಪಕ ಇರಬಹುದು. ಅವರು ಒಳ್ಳೆಯ ಉಪಾಧ್ಯಾಯರು. ನಮ್ಮ ಮಕ್ಕಳ ವಿದ್ಯಾಭ್ಯಾಸದ ವಿಚಾರವನ್ನು ಕುರಿತು, ಜನರ ಕಷ್ಟಗಳನ್ನು ಕುರಿತು ಒಂದು ಸುಂದರವಾದ ಕಥೆಯನ್ನು ಹೆಣೆದು ಅದನ್ನು ಚಿತ್ರ ರೂಪದಲ್ಲಿ ಜನಕ್ಕೆ ಅರ್ಪಿಸಿದರು. ಕನ್ನಡಿಗರು ಇದನ್ನು ನೋಡಿ ಸಂತೋಷಪಟ್ಟರು, ಕಣ್ಣೀರು ಕರೆದರು. ಆಮೇಲೆ ಅವರು ತೆಗೆದ ಚಿತ್ರವೇ ‘ವೀರಪಾಂಡ್ಯ ಕಟ್ಟಬೊಮ್ಮನ್’. ಇದು ತಮಿಳಿನ ಮೊತ್ತ ಮೊದಲನೆಯ ವರ್ಣ ಚಿತ್ರ.

‘ಕಟ್ಟಬೊಮ್ಮನ್’ ಆ ವರ್ಷದ (೧೯೫೯) ಅತ್ಯುತ್ತಮ ಚಿತ್ರವೆಂದು ಭಾರತ ಸರಕಾರ ಪುರಸ್ಕರಿಸಿತು. ಈಜಿಪ್ಟ್ ದೇಶದ ರಾಜಧಾನಿಯಾದ ಕೈರೋ ನಗರದಲ್ಲಿ ಆಫ್ರಿಕಾ ಏಷ್ಯಾ ಖಂಡಗಳ ದೇಶಗಳ ಚಲನಚಿತ್ರಗಳ ಉತ್ಸವವೊಂದು ಆಗ ನಡೆಯಿತು. ಅದರಲ್ಲಿ ‘ಕಟ್ಟಬೊಮ್ಮನ್’  ಚಿತ್ರವೂ ಪ್ರದರ್ಶಿತವಾಗಲು ಭಾರತ ಸರಕಾರ ಅವಕಾಶ ನೀಡಿತು. ಪಂತುಲು ಆ ಉತ್ಸವದಲ್ಲಿ ಭಾಗವಹಿಸಲು ಅಲ್ಲಿಗೆ ಹೋಗಿದ್ದರು.

ಭಾರತಕ್ಕೆ ಹಿಂದಿರುಗಿದ ನಂತರ ‘ಮಕ್ಕಳ ರಾಜ್ಯ’ ವೆಂಬ ಚಿತ್ರ ತಯಾರಿಸಿದರು. ಇದು ಮಕ್ಕಳದೇ ಕಥೆ. ಇದರಲ್ಲಿ ಮಕ್ಕಳೇ ಮುಖ್ಯ ಪಾತ್ರಧಾರಿಗಳು. ಕನ್ನಡವೇ ಅಲ್ಲದೆ ತಮಿಳು, ತೆಲುಗು ಭಾಷೆಗಳಲ್ಲೂ ಇದನ್ನು ತೆಗೆದರು. ಇದರಲ್ಲಿ ಕತ್ತೆಯ ಪಾತ್ರವೂ ಇತ್ತು. ಕತ್ತೆಯನ್ನು ಹಿಡಿದು ಸಾಗಿಸುವುದಕ್ಕಾಗಿ ಅವರು ಬಹಳ ಕಷ್ಟಪಟ್ಟರಂತೆ. ಆ ಚಿತ್ರದಿಂದ ಹಣ ಬರಲಿಲ್ಲ.

ಹೊಸ ಚಿತ್ರಗಳು

ಸೋಲು-ಗೆಲುವುಗಳನ್ನು ಸಮಾನವೆಂದು ತಿಳಿಯುವುದನ್ನು ನಾವು ಕಲಿಯಬೇಕು. ಪಂತುಲು ಅವರು ಜೀವನದಲ್ಲಿ ಕಲಿತ ಪಾಠ ಇದು. ‘ಮಕ್ಕಳ ರಾಜ್ಯ’ ದ ಸೋಲಿನಿಂದ ಅವರು ಎದೆಗುಂದದೆ, ಕಿತ್ತೂರಿನ ವೀರರಾಣಿ ಚೆನ್ನಮ್ಮನ ಚಿತ್ರವನ್ನು ತೆಗೆಯಲು ಮುಂದುವರಿದರು.

ಕಿತ್ತೂರು ಚೆನ್ನಮ್ಮನ ಚಿತ್ರ ಅದ್ದೂರಿಯಾಗಿ ತಯಾರಾಯಿತು. ಅದನ್ನು ಕನ್ನಡಿಗರು ನೋಡಿ ಆನಂದಿಸಿದರು. ತಮ್ಮ ನಾಡಿನ  ಈ ಮಹಾ ಮಹಿಳೆಯ ಕಥೆಯನ್ನು ಪ್ರತ್ಯಕ್ಷವಾಗಿ ಕಂಡು ರೋಮಾಂಚನಗೊಂಡರು. ಭಾರತ ಸರ್ಕಾರ ಆ ಚಿತ್ರಕ್ಕೆ ಬೆಳ್ಳಿಯ ಪದಕ ನೀಡಿತು.

ಇದರ ನಂತರ ಪಂತುಲು ಅನೇಕ ಚಿತ್ರಗಳನ್ನು ಸಿದ್ಧಗೊಳಿಸಿದರು-‘ಕಪ್ಪಲೊಡಿಯ ತಮಿಳನ್’(ತಮಿಳಿನಲ್ಲಿ) ‘ಗಾಳಿಗೋಪುರ’  ‘ಭಲೆ ಪಾಂಡ್ಯ’ ‘ಸಾಕು ಮಗಳು’ ಮೊದಲಾದವು.

ಅನಂತರ ಬಂದದ್ದು ಮಹಾಭಾರತದ ‘ಕರ್ಣ’ ನ ಚಿತ್ರ (೧೯೬೩). ಇದು ತಮಿಳು ಚಿತ್ರ – ಈಸ್ಟ್‌ಮನ್ ಬಣ್ಣದ್ದು. ಇದಕ್ಕಾಗಿಯೂ ಪಂತುಲು ಅವರು ಧಾರಾಳವಾಗಿ ಹಣ ಖರ್ಚು ಮಾಡಿದರು. ಮಹಾಭಾರತದ ಕುರುಕ್ಷೇತ್ರದ ಯುದ್ಧದ ಚಿತ್ರವೇನು ಸಾಮಾನ್ಯವೆ? ಇದನ್ನು ಅವರು ಆಮೇಲೆ ಹಿಂದಿಯಲ್ಲೂ ತಂದರು. ಕನ್ನಡದಲ್ಲಿ ‘ಚಿನ್ನದ ಬೊಂಬೆ’ ಬಂತು. ಆಮೇಲೆ ಎಂ.ಜಿ.ರಾಮಚಂದ್ರನ್ ಅಭಿನಯಿಸಿದ ‘ಆಯಿರತ್ತಿಲ್ ಒರುವನ್’ ಎಂಬ ತಮಿಳು ಚಿತ್ರವನ್ನು ಅವರು ತಯಾರಿಸಿದರು (೧೯೭೨). ಕಾರವಾರದಲ್ಲಿ ಈ ಚಿತ್ರ ತೆಗೆಯಲು ಬಹಳ ಶ್ರಮಪಟ್ಟರು. ಒಂದು ಸಾರಿ ಅವರೂ ರಾಮಚಂದ್ರನ್ ಅವರೂ ಇದ್ದ ಹರಿಗೋಲು ಸಮುದ್ರದಲ್ಲಿ ಮಗುಚಿಕೊಳ್ಳುವುದರಲ್ಲಿತ್ತು. ಹತ್ತಿರದಲ್ಲಿದ್ದವರು ಎಳೆದು ನಿಲ್ಲಿಸಿದರು.

ಅನಂತರ ಅವರು ತೆಗೆದದ್ದು ‘ಕೃಷ್ಣದೇವರಾಯ’.  ಇದು  ವಿಜಯನಗರದ ಮಹಾ ಸಾಮ್ರಾಟನ ಕಥೆ. ಕನ್ನಡಿಗರ ವೈಭವದ ಇತಿಹಾಸದ ಒಂದು ಉಜ್ವಲ ಅಧ್ಯಾಯ. ಇದಕ್ಕಾಗಿ ಅವರು ಬೇಕಾದಷ್ಟು ಹಣ ಖರ್ಚು ಮಾಡಿದರು. ಚಲನಚಿತ್ರವನ್ನು ಕುರಿತು ಇಂಗ್ಲಿಷಿನಲ್ಲಿ ಪ್ರಕಟವಾಗುವ ‘ಫಿಲ್ಮ್‌ಫೇರ್’ ಎಂಬ ಪತ್ರಿಕೆ ಇದಕ್ಕೆ ಬಹುಮಾನ ನೀಡಿತು. ಇದರಲ್ಲಿ ಪಂತುಲು ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕಾಗಿ ಅವರಿಗೆ ರಾಜ್ಯಮಟ್ಟದ ಉತ್ತಮ ನಟ ಎಂದು ಬಹುಮಾನ ನೀಡಲಾಯಿತು.

ಅವರು ತಯಾರಿಸಿದ ಇನ್ನೊಂದು ಚಿತ್ರ ‘ನಾಡೋಡಿ’. ಇದು ತಮಿಳು ಸಾಮಾಜಿಕ ಚಿತ್ರ. ಆಮೇಲೆ ‘ದುಡ್ಡೇ ದೊಡ್ಡಪ್ಪ’, ‘ಎಮ್ಮೆ ತಮ್ಮಣ್ಣ’  ಅದರ ಹಿಂದೆಯೇ ಬಂದದ್ದು ‘ಗಂಗೆ-ಗೌರಿ’.

ಕಲೆಗಾಗಿಯೇ ಬದುಕಿದ್ದ ಪಂತುಲು ಅವರು ವ್ಯವಹಾರದಲ್ಲಿ ಮುಳುಗಿ ಏಳುತ್ತಿದ್ದರು. ಒಂದು ಚಿತ್ರ ಹಣ ತಂದುಕೊಟ್ಟರೆ, ಇನ್ನೊಂದು ಚಿತ್ರದಿಂದ ನಷ್ಟ ಆಗುತ್ತಿತ್ತು. ಅವರು ಸಾಲದಲ್ಲಿ ಮುಳುಗಿದ್ದರು. ಆದರೂ ಹೆದರದೆ ದೇವರ ಮೇಲೆ ಭಾರ ಹಾಕಿ ಮುನ್ನಡೆದರು.

ತಮಗೆ ಗೊತ್ತಿಲ್ಲದೆಯೇ ಪಂತುಲು ಅವರು ಮುದುಕರಾಗಿದ್ದರು. ಶರೀರಕ್ಕೆ ಮುಪ್ಪಾದರೇನು? ಮನಸ್ಸಿಗೆ ಮುಪ್ಪೇ? ಅವರು ಕಲೆಗಾಗಿ ದುಡಿತವನ್ನು ಮುಂದುವರಿಸಿದರು. ‘ಒಂದು ಹೆಣ್ಣಿನ ಕಥೆ’ ಬಂತು (೧೯೭೨). ಇದೇ ಪಂತುಲು ಅವರ ಕೊನೆಯ ಚಿತ್ರವಾಯಿತು.

ತಮಿಳಿನಲ್ಲಿ ‘ಮಧುರೈ ಮೀಟ್ಟಿಯ ಸುಂದರ ಪಾಂಡಿಯನ್’  ಚಿತ್ರವನ್ನೂ, ಕನ್ನಡದಲ್ಲಿ ಬಿ.ಜಿ.ಎಲ್. ಸ್ವಾಮಿಯವರು ಬರೆದ ಕಥೆಯಾದ ‘ಕಾಲೇಜು ರಂಗ’ ದ ಚಿತ್ರವನ್ನೂ ತಯಾರಿಸಲು ಅವರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಪಂತುಲು ಅವರು ತೀರಿಕೊಂಡರು (೧೯೭೪).

ಚಲನ ಚಿತ್ರರಂಗದ ಭೀಷ್ಮ

ಪಂತುಲು ಅವರು ಬಲು ಧೀರರು. ಸುಖಕ್ಕೆ ಹಿಗ್ಗದೆ, ದುಃಖದಿಂದ ಕುಗ್ಗದೆ, ತಾವು ನಂಬಿದ ಕಲೆಗಾಗಿ ಕೊನೆಯವರೆಗೂ ಕೆಲಸ ಮಾಡಿದರು. ಪಂತುಲು ಅವರಿಂದ ಕನ್ನಡ ನಾಟಕ, ಚಲನಚಿತ್ರ ಬಹಳವಾಗಿ ಮುಂದುವರಿದುವು. ಅವರಿಗೆ ಕನ್ನಡವೆಂದರೆ ಬಹಳ ಪ್ರೇಮ. ಆದರೆ ಇತರ ಭಾಷೆಗಳನ್ನು ದ್ವೇಷಿಸುತ್ತಿರಲಿಲ್ಲ. ಕನ್ನಡದಲ್ಲಿ ಒಳ್ಳೆಯ ಚಿತ್ರ ಬಂದರೆ ಇತರ ಭಾಷೆಗಳವರೂ ಅದನ್ನು ನೋಡಿ ಸಂತೋಷ ಪಡಲಿ ಎಂದು ಇತರ ಭಾಷೆಗಳಲ್ಲೂ ಅದನ್ನು ನಿರ್ಮಿಸಿದರು. ಕನ್ನಡದ ಅನೇಕ ಒಳ್ಳೆಯ ನಾಟಕಗಳನ್ನು ಅವರು ತಮಿಳಿನಲ್ಲಿಯೂ ಆಡಿದರು. ತಮಿಳಿನವರೂ ತೆಲುಗಿನವರೂ ಹಿಂದಿಯವರೂ ಅವರನ್ನು ಪ್ರೀತಿಯಿಂದ ಕಂಡರು. ಅವರು ಕನ್ನಡ ಚಿತ್ರ ಜಗತ್ತಿನಲ್ಲಿ ಹೊಸ ಹಾದಿ ನಿರ್ಮಿಸಿದರು. ಇಂದು ನಿರ್ದೇಶಕರಾಗಿರುವ ಕಣಗಾಲ್ ಪುಟ್ಟಣ್ಣ ಅವರನ್ನು ಮುಂದೆ ತಂದವರು ಪಂತುಲುರವರು. ಜಯಲಲಿತಾ, ಕಲ್ಪನಾ ಮುಂತಾದ ಅನೇಕರು ಮುಂದೆ ಬಂದದ್ದು ಪಂತುಲು ಅವರಿಂದ.

ಪಂತುಲು ಅವರು ಚಲನಚಿತ್ರರಂಗದ ಭೀಷ್ಮರಾಗಿದ್ದರು. ನಾಟಕದಿಂದ ಚಲನಚಿತ್ರಕ್ಕೆ ಅವರು ಕಳೆಯನ್ನು ತಂದರು. ಚಲನಚಿತ್ರದಿಂದ ಅವರು ನಾಟಕದ ಕಳೆಯನ್ನು ಹೆಚ್ಚಿಸಿದರು. ಕನ್ನಡ ನಾಟಕದ ಮತ್ತು ಭಾರತೀಯ ಚಲನಚಿತ್ರದ ಇತಿಹಾಸದಲ್ಲಿ ಪಂತುಲು ಅವರ ಹೆಸರು ಯಾವಾಗಲೂ ನಿಲ್ಲುವಂಥದು.