ಆರ್ಥಿಕವಾಗಿ ಬಹಳ ಕಷ್ಟದಲ್ಲಿದ್ದರೂ ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಎತ್ತರದಲ್ಲಿದ್ದ ಕುಟುಂಬದಲ್ಲಿ ೬-೭-೧೯೩೮ ರಂದು ಕೋಲಾರದಲ್ಲಿ ಸುಂದರರಾವ್‌ ಜನಿಸಿದರು. ಇವರ ತಾತ ಖಂಡೋಜಿರಾವ್‌, ತಂದೆ ಮುರಹರಿರಾವ್‌, ದೊಡ್ಡಪ್ಪ ಸಂತೋಜಿರಾವ್‌, ಚಿಕ್ಕಪ್ಪ ವೆಂಕೋಬರಾವ್‌ ಎಲ್ಲರೂ ಸಂಗೀತ ವಿದ್ವಾಂಸರೇ. ದೊಡ್ಡಪ್ಪ, ಚಿಕ್ಕಪ್ಪಂದಿರ ಮಾರ್ಗದರ್ಶನದಲ್ಲಿ ಗಾಯನವನ್ನು ಅಭ್ಯಸಿಸಿ ಮುಂದೆ ಅಂಬಳೆ ರಾಮಸ್ವಾಮಿ, ಎ. ಕೆ. ಸುಬ್ಬರಾವ್‌ ಹಾಗೂ ಎಸ್‌.ಪಿ. ನಟರಾಜನ್‌ ಅವರುಗಳಲ್ಲಿ ವೇಣು ವಾದನದಲ್ಲಿ ಸುಶಿಕ್ಷಿತರಾದರು. ಟಿ.ಆರ್. ಮಹಾಲಿಂಗಂ ಅವರಲ್ಲಿ ಗುರುಕುಲ ಪದ್ಧತಿಯಲ್ಲಿ ಪ್ರೌಢ ಶಿಕ್ಷಣ ಪಡೆದು ಗುರುಗಳ ಪೂರ್ಣಾನುಗ್ರಹವನ್ನು ಗಳಿಸಿ ಅವರೊಡನೆ ಫ್ರಾನ್ಸ್ ಗೆ ಹೋಗಿ ಅಲ್ಲಿ ಕಾರ್ಯಕ್ರಮಗಳನ್ನು ನೀಡಿ ಅಲ್ಲಿನ ಆಸಕ್ತರಿಗೆ ವೇಣುವಾದನ ಶಿಕ್ಷಣವನ್ನು ನೀಡಿದ್ದಾರೆ.

ಮಹಾಲಿಂಗಂ ಅವರ ನಿಧನಾನಂತರ ೧೯೮೬ರಲ್ಲಿ ಗುರುಗಳ ಸ್ಮರಣಾರ್ಥ ಸಂಗೀತ ಶಾಲೆಯನ್ನು ಪ್ರಾರಂಭಿಸಿ ಅಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಉಚಿತವಾಗಿ ವೇಣು ವಾದನದಲ್ಲಿ ಶಿಕ್ಷಣ ನೀಡುತ್ತಿದ್ದಾರೆ. ಕೊಳಲನ್ನು ತಯಾರಿಸುವುದರಲ್ಲಿಯೂ ನಿಷ್ಣಾತರಾಗಿರುವ ಸುಂದರರಾವ್‌ ಸಾಂಪ್ರದಾಯಿಕ ರೀತಿಯ ಹಾಗೂ ವಿನೂತನವಾದ ಕೊಳಲುಗಳನ್ನು ಸ್ವತಃ ತಯಾರಿಸಿ ಆರ್ಥಿಕವಾಗಿ ಹಿಂದುಳಿದಿರುವವರಿಗೆ ಉಚಿತವಾಗಿ ಕೊಡುತ್ತಿದ್ದಾರೆ.

ಇವರ ಪತ್ನಿ ಗಾಯಕಿ, ಪುತ್ರ ಮೃದಂಗ ವಾದಕ. ಇವರೊಡನೆ ಕಛೇರಿಗಳನ್ನು ನೀಡುತ್ತ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುತ್ತ ತಮ್ಮ ಜೀವನ ಹಾಗೂ ಸಮಯವನ್ನು ಸಾರ್ಥಕಗೊಳಿಸಿಕೊಳ್ಳುತ್ತಿರುವ ಶ್ರೀಯುತರಿಗೆ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ಇತ್ತು ಸನ್ಮಾನಿಸಿದೆ.